ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೇನು? ಅದರ ಮಿತಿಗಳು ಏನೆಲ್ಲ? ಯಾವೆಲ್ಲ ಸಂಗತಿಗಳು ಈ ಸ್ವಾತಂತ್ರ್ಯದ ಅಡಿಯಲ್ಲಿ ಬರುತ್ತವೆ? ಕಳೆದ ವರ್ಷ ಢುಂಢಿ ಎಂಬ ಕಾದಂಬರಿ ಇಂಥದ್ದೊಂದು ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಕಾದಂಬರಿ ಹಿಂದೂ ಭಾವನೆಗಳನ್ನು ನೋಯಿಸುತ್ತದೆ ಎಂದು ಹಿಂದೂ ಸಂಘಟನೆಗಳು ಪ್ರತಿಭಟಿಸಿದುವು. ಕೋರ್ಟ ನಲ್ಲಿ ದಾವೆ ಹೂಡಿದುವು. ಕಾದಂಬರಿಕಾರ ಯೋಗೇಶ್ ಮಾಸ್ಟರ್‍ರನ್ನು ಬೆಂಬಲಿಸುವ ಮತ್ತು ಖಂಡಿಸುವ ಗುಂಪುಗಳು ಸೃಷ್ಟಿಯಾದುವು. ಈ ಮಧ್ಯೆ 2013 ಆಗಸ್ಟ್ 29ರಂದು ಯೋಗೇಶ್ ಮಾಸ್ಟರ್‍ರನ್ನು ಬಂಧಿಸಲಾಯಿತು. ಢುಂಢಿಗೆ ನಿಷೇಧವೂ ಬಿತ್ತು. 2009ರಲ್ಲಿ ಬಿಜೆಪಿಯ ಜಸ್ವಂತ್ ಸಿಂಗ್ ಅವರು, 'ಜಿನ್ನ: ಇಂಡಿಯಾ, ಪಾರ್ಟಿಸನ್, ಇಂಡಿಪೆಂಡೆನ್ಸ್' ಎಂಬ ಕೃತಿ ಬರೆದಾಗಲೂ ಇದೇ ಸಮಸ್ಯೆ ಸೃಷ್ಟಿಯಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಜಸ್ವಂತ್ ಸಿಂಗ್‍ರು ಆ ಕೃತಿಯನ್ನು ಸಮರ್ಥಿಸುವಾಗ ನರೇಂದ್ರ ಮೋದಿಯವರ ಗುಜರಾತ್ ಸರಕಾರ ಕೃತಿಯನ್ನು ನಿಷೇಧಿಸಿತು. ಸರ್ದಾರ್ ಪಟೇಲ್‍ರ ವ್ಯಕ್ತಿತ್ವಕ್ಕೆ ಕೃತಿಯಲ್ಲಿ ಅವಮಾನ ಮಾಡಲಾಗಿದೆ ಎಂಬ ಕಾರಣವನ್ನೂ ನೀಡಿತು. ಬಿಜೆಪಿಯು ಜಸ್ವಂತ್‍ರನ್ನು ಪಕ್ಷದಿಂದಲೇ ಉಚ್ಛಾಟಿಸಿತು. ಆದರೆ 2009 ಸೆ. 4ರಂದು ಗುಜರಾತ್ ಹೈಕೋರ್ಟು ಕೃತಿಯ ಮೇಲಿನ ನಿಷೇಧವನ್ನು ರದ್ದುಪಡಿಸಿತು.
ಇದೀಗ, ‘ದಿ ಹಿಂದೂಸ್: ಆನ್ ಆಲ್ಟರ್‍ನೇಟಿವ್ ಹಿಸ್ಟರಿ' ಎಂಬ ಕೃತಿಯು ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿ-ಮಿತಿಗಳನ್ನು ಮತ್ತೊಮ್ಮೆ ಚರ್ಚೆಗೆ ಒಳಪಡಿಸಿದೆ.
ಅಮೇರಿಕದ ಚಿಕಾಗೋ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವ ವೆಂಡಿ ಡೊನಿಗರ್ ಅವರ ‘ದಿ ಹಿಂದೂಸ್..' ಕೃತಿಯು 2010ರಲ್ಲಿ ಭಾರತದಲ್ಲಿ ಬಿಡುಗಡೆಗೊಂಡಿತ್ತು. ಶಿಕ್ಷಾ ಬಚಾವೋ ಆಂದೋಲನ್ ಎಂಬ ಸಂಘಪರಿವಾರದ ಅಂಗಸಂಸ್ಥೆಯೊಂದು 2011ರಲ್ಲಿ ಈ ಕೃತಿಯ ವಿರುದ್ಧ ಮೊಕದ್ದಮೆ ಹೂಡಿತು. ಹಿಂದೂಗಳ ಭಾವನೆಗಳನ್ನು ಈ ಕೃತಿಯಲ್ಲಿ ಅವಮಾನಿಸಲಾಗಿದೆ ಎಂದು ದಾವೆಯಲ್ಲಿ ಆರೋಪಿಸಲಾಯಿತು. ದಿ ಸೆಟಾನಿಕ್ ವರ್ಸಸ್‍ನಂಥ ವಿವಾದಾತ್ಮಕ ಕೃತಿಗಳನ್ನು ಪ್ರಕಟಿಸಿರುವ ಲಂಡನ್ನಿನ ಪ್ರಸಿದ್ಧ ಪೆಂಗ್ವಿನ್ ಪ್ರಕಾಶನ ಸಂಸ್ಥೆಯು ಈ ಕೃತಿಯನ್ನು ಪ್ರಕಟಿಸಿರುವುದರಿಂದ ಈ ದಾವೆಯ ಬಗ್ಗೆ ಒಂದು ರೀತಿಯ ಕುತೂಹಲ ಸಾಹಿತ್ಯಿಕ ವಲಯದಲ್ಲಂತೂ ಖಂಡಿತ ಇತ್ತು. 1989-90ರಲ್ಲಿ ಸೆಟಾನಿಕ್ ವರ್ಸಸ್‍ನ ವಿರುದ್ಧ ಜಾಗತಿಕವಾಗಿಯೇ ಪ್ರತಿಭಟನೆ ಎದ್ದಿದ್ದರೂ ಆ ಕೃತಿಯನ್ನು ಜಾಗತಿಕ ಮಾರುಕಟ್ಟೆಯಿಂದ 'ಪೆಂಗ್ವಿನ್' ಹಿಂತೆಗೆದುಕೊಂಡಿರಲಿಲ್ಲ. ಇರಾನ್, ಸೌದಿ ಅರೇಬಿಯಾ, ಇರಾಕ್‍ನಂಥ ಮುಸ್ಲಿಮ್ ರಾಷ್ಟ್ರಗಳನ್ನು ಬಿಡಿ; ವೆನೆಝುವೇಲಾ, ಥೈಲೆಂಡ್, ತಾಂಜಾನಿಯಾ, ಸಿಂಗಾಪುರದಂಥ ಪ್ರಮುಖ ಸೆಕ್ಯುಲರ್ ರಾಷ್ಟ್ರಗಳೂ ಈ ಕೃತಿಯ ವಿರುದ್ಧ ನಿಷೇಧ ಹೇರಿದಾಗಲೂ ‘ಪೆಂಗ್ವಿನ್' ತನ್ನ ನಿಲುವನ್ನು ಬದಲಿಸಿರಲಿಲ್ಲ. ಅದರ ನಿರ್ದೇಶಕ ಪೀಟರ್ ಮೇಯರ್‍ರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಸಲ್ಮಾನ್ ರುಶ್ದಿಯನ್ನು ಸಮರ್ಥಿಸಿಕೊಂಡಿದ್ದರು. ಇರಾನಿನ ಆಧ್ಯಾತ್ಮ ನಾಯಕ ಆಯತುಲ್ಲಾ ಖೊಮೇನಿಯವರು ರುಶ್ದಿಯ ವಿರುದ್ಧ ಹತ್ಯಾ ಘೋಷಣೆ ಮಾಡಿದಾಗಲೂ ಪೆಂಗ್ವಿನ್ ರುಶ್ದಿಯ ಪರವೇ ನಿಂತಿತ್ತು. ಆದ್ದರಿಂದಲೇ, ದಿ ಹಿಂದೂಸ್.. ಕೃತಿಯ ಕುರಿತಂತೆ ಪೆಂಗ್ವಿನ್ ಯಾವ ನಿಲುವನ್ನು ತಳೆಯುತ್ತದೆ ಅನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ, ಭಾರತದ ಮಾರುಕಟ್ಟೆಯಿಂದ ಈ ಕೃತಿಗಳನ್ನು ಹಿಂತೆಗೆದುಕೊಳ್ಳುವುದಾಗಿ ಪೆಂಗ್ವಿನ್ ಕಳೆದ ವಾರ ಘೋಷಿಸಿದೆ. ಶಿಕ್ಷಾ ಬಚಾವೋ ಆಂದೋಲನ್‍ನ ಪ್ರತಿನಿಧಿ ದೀನಾನಾಥ್ ಬಾತ್ರಾ ಮತ್ತು ಪೆಂಗ್ವಿನ್‍ನ ನಡುವೆ ಕೋರ್ಟಿನ ಹೊರಗೆ ನಡೆದ ಈ ರಾಜಿ ಒಪ್ಪಂದವು ಅರುಂಧತಿ ರಾಯ್ ರಂಥವರನ್ನು ಸಿಟ್ಟಿಗೆಬ್ಬಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪೆಂಗ್ವಿನ್ ಕಡೆಗಣಿಸಿದೆ ಎಂಬ ಆರೋಪದೊಂದಿಗೆ ರಾಯ್ ಪತ್ರ ಬರೆದಿದ್ದಾರೆ. ನಿಜವಾಗಿ, 1988ರಲ್ಲಿ ಸೆಟಾನಿಕ್ ವರ್ಸಸ್ ಕೃತಿಯ ಕರಡು ಪ್ರತಿಯನ್ನು ಓದಿದ ಪೆಂಗ್ವಿನ್‍ನ ಸಂಪಾದಕೀಯ ಮಂಡಳಿಯು, ಇದು ವಿವಾದಾತ್ಮಕವಾಗಬಹುದು ಎಂದು ಅನುಮಾನ ವ್ಯಕ್ತಪಡಿಸಿತ್ತು. ಈ ಅನುಮಾನವನ್ನು ಕೃತಿ ಪ್ರಕಟಣೆಗಿಂತ ಮೊದಲೇ ಸಲ್ಮಾನ್ ರುಶ್ದಿಗೂ ತಿಳಿಸಲಾಗಿತ್ತು. ಆಗ ಅವರು ಅದನ್ನು ಕಡೆಗಣಿಸಿ ಹೀಗೆ ಹೇಳಿದ್ದರು,
‘ಕೆಲವು ಮುಲ್ಲಾಗಳಿಗೆ ಅಸಮಾಧಾನ ಉಂಟಾಗಬಹುದು. ಅವರು ನನ್ನ ಉದ್ದೇಶ ಶುದ್ಧಿಯನ್ನು ಪ್ರಶ್ನಿಸಬಹುದು. ಆದರೆ ನಾನು ಸಾರ್ವಜನಿಕವಾಗಿ ಈ ಕೃತಿಯನ್ನು ಸಮರ್ಥಿಸಿಕೊಳ್ಳುವೆ.'
ಅಷ್ಟಕ್ಕೂ, ಓರ್ವ ವ್ಯಕ್ತಿ ಒಂದು ಕೃತಿಯನ್ನು, ಸಿನಿಮಾ, ನಾಟಕ ಅಥವಾ ಕಲಾಕೃತಿಯನ್ನು ರಚಿಸುವುದು ಯಾವ ಉದ್ದೇಶದಿಂದ? ಕೇವಲ ಕೃತಿಕಾರನ ಆತ್ಮತೃಪ್ತಿಗೋಸ್ಕರ ಕೃತಿಯೊಂದು ರಚನೆಗೊಳ್ಳುತ್ತದೆಂದಾದರೆ ಅದನ್ನು ಪ್ರಕಟಿಸುವ ಅಗತ್ಯ ಇಲ್ಲವಲ್ಲವೇ? ಒಂದು ಕೃತಿಯೋ ಸಿನಿಮಾವೋ ಪ್ರಕಟಗೊಂಡ ಬಳಿಕ ಅದು ಅವರದ್ದಾಗಿಯಷ್ಟೇ ಉಳಿಯುವುದಿಲ್ಲ. ಅದನ್ನು ಕೊಂಡು ಓದಿದವರು ಮತ್ತು ವೀಕ್ಷಿಸಿದವರಿಗೂ ಅದು ಅನ್ವಯವಾಗುತ್ತದೆ. ಅದರಲ್ಲಿರುವ ಅಂಶಗಳನ್ನು ಓದುಗ ತನ್ನ ಭಾವನೆಗಳಿಗೆ ಸಮೀಕರಿಸಿ ನೋಡುತ್ತಾನೆ. ತನ್ನ ಆಲೋಚನೆಯೊಂದಿಗೆ ಮುಖಾಮುಖಿಗೊಳಿಸುತ್ತಾನೆ. ತನ್ನೊಳಗಿನ ವಿಚಾರಗಳಿಗೆ ಢಿಕ್ಕಿ ಹೊಡೆಸುತ್ತಾನೆ. ಅಲ್ಲದೇ ಕೃತಿಕಾರನ ನಿರೂಪಣಾ ಶೈಲಿ, ಕಥಾಹಂದರ, ಪ್ರಚಲಿತ ಜಗತ್ತಿನೊಂದಿಗೆ ಕೃತಿಗೆ ಇರುವ ಹೋಲಿಕೆಗಳಷ್ಟೇ ಅಲ್ಲಿ ವಿಮರ್ಶೆಗೆ ಒಳಗಾಗುವುದಲ್ಲ. ಆ ಕೃತಿ ಬಳಸಿದ ಭಾಷೆ, ಚರ್ಚಿಸುತ್ತಿರುವ ವಿಷಯ, ಅದರ ವಾಸ್ತವತೆ.. ಎಲ್ಲವೂ ಚರ್ಚೆಗೊಳಗಾಗುತ್ತದೆ. ನಿಜವಾಗಿ, ಓರ್ವ ವ್ಯಕ್ತಿ ಯಾರೂ ಇಲ್ಲದ ಕಡೆ ಕೈಯಲ್ಲಿರುವ ಬೆತ್ತವನ್ನು ಬೀಸುವುದು ಬೇರೆ, ಗುಂಪಿನಲ್ಲಿರುವಾಗ ಬೀಸುವುದು ಬೇರೆ. ಒಂಟಿಯಾಗಿರುವಾಗ ಬೀಸುವುದರಿಂದ ಯಾರಿಗೂ ಯಾವ ತೊಂದರೆಯೂ ಆಗುವುದಿಲ್ಲ. ಆದರೆ ಗುಂಪಿನಲ್ಲಿರುವಾಗ ಸಾಕಷ್ಟು ಜಾಗರೂಕತೆ ಪಾಲಿಸಬೇಕಾಗು ತ್ತದೆ. ತನ್ನ ಬೀಸುವ ಸ್ವಾತಂತ್ರ್ಯಕ್ಕೆ ಮಿತಿಯನ್ನು ಹೇರಿಕೊಳ್ಳಬೇಕಾಗುತ್ತದೆ. ಒಂಟಿಯಾಗಿರುವಾಗ ಬೀಸಿದಂತೆಯೇ ಗುಂಪಿನಲ್ಲಿರುವಾಗಲೂ ಬೀಸುವೆ ಎಂದು ಹಠ ತೊಟ್ಟರೆ ಇತರರಿಗೆ ಅದರಿಂದ ತೊಂದರೆಯಾಗಬಹುದು. ಅದರಿಂದಾಗಿ ಕೆಲವರು ಗಾಯಗೊಳ್ಳಬಹುದು. ಕೆಲವರು ಭೀತಿಗೆ ಒಳಗಾಗಬಹುದು. ಕೆಲವರು ಗುಂಪಿನಿಂದ ಪ್ರತ್ಯೇಕಗೊಳ್ಳಬಹುದು. ನಿಜವಾಗಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಸೂಕ್ಷ್ಮ ಗೆರೆಗಳನ್ನು ನಾವು ಇಲ್ಲೆಲ್ಲೋ ಹುಡುಕಬೇಕಾಗಿದೆ. 1975ರಲ್ಲಿ ಬಿಡುಗಡೆಗೊಂಡ ಡೆಸ್ಮಂಡ್ ಸ್ಟುವರ್ಟ್ ರ - ಅರ್ಲಿ ಇಸ್ಲಾಮ್ ಆಗಲಿ, ಚಾರ್ಲ್ಸ್ ಬೆತ್ಲೆಹೆಮ್‍ರ- ಇಂಡಿಯನ್ ಇಂಡಿಪೆಂಡೆಂಟ್, ಲಾರೆನ್ಸ್ ಡಿ ಸಲ್ವಾಡೋರ್ ಅವರ- ಹೂ ಕಿಲ್ಲ್ದ್ ಗಾಂಧಿ, ಮ್ಯಾಕ್ಸ್ ವೈಲಿ ಅವರ- ಹಿಂದೂ ಹೆವನ್ ಆಗಲಿ.. ಎಲ್ಲವೂ ಈ ದೇಶದಲ್ಲಿ ನಿಷೇಧಕ್ಕೆ ಒಳಗಾಗಿರುವುದು ಅವುಗಳು ಚರ್ಚಿಸಿರುವ ಸೂಕ್ಷ್ಮ ಭಾಷೆ, ವಿಷಯಗಳಿಂದಲೇ.
1989 ಫೆ. 14ರಂದು ರುಶ್ದಿಯ ವಿರುದ್ಧ ಇರಾನಿನ ಖೊಮೇನಿ ಹತ್ಯಾ ಘೋಷಣೆ ಮಾಡಿದ 7 ದಿನಗಳ ಬಳಿಕ ಫೆ. 21ರಂದು ಲಂಡನ್ನಿನ ಕಿಂಗ್‍ಸ್ಟನ್ ಯುನಿವರ್ಸಿಟಿಯಲ್ಲಿ ಕಾರ್ಯಕ್ರಮವೊಂದು ಏರ್ಪಾಟಾಗಿತ್ತು. ಖ್ಯಾತ ಗಾಯಕ ಕ್ಯಾಟ್ ಸ್ಟೀವನ್ಸ್ ಅದರಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸೆಟಾನಿಕ್ ವರ್ಸಸ್ ಕೃತಿಯ ಬಗ್ಗೆ ಮತ್ತು ಖೊಮೇನಿಯ ಹೇಳಿಕೆಯ ಬಗ್ಗೆ ಅವರಲ್ಲಿ ಪ್ರಶ್ನಿಸಲಾಯಿತು. ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗದ ಬಗ್ಗೆ ವಿಷಾದಿಸಿದ್ದರು. ಕುರ್‍ಆನ್ ಮತ್ತು ಬೈಬಲ್‍ಗಳು ಧರ್ಮನಿಂದನೆಯನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬಹುದಾದ ಅಪರಾಧವಾಗಿ ಪರಿಗಣಿಸಿರುವುದನ್ನು ಅವರು ಉಲ್ಲೇಖಿಸಿದ್ದರು. ಆದರೆ ಮರುದಿನ ಪತ್ರಿಕೆಗಳು, 'Cat says, kill Rushdie '(ರುಶ್ದಿಯನ್ನು ಕೊಲ್ಲುವಂತೆ ಕ್ಯಾಟ್ ಕರೆ) ಎಂದು ಬರೆದು ವಿವಾದ ಎಬ್ಬಿಸಿದ್ದುವು.BBC ಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳೂ ಚರ್ಚೆಗೆ ಒಳಗಾಗಿದ್ದುವು. 'ಒಂದು ವೇಳೆ ನನಗೆ ರುಶ್ದಿ ಎದುರಾದರೆ ನಾನು ಖೊಮೇನಿಗೆ ಫೋನ್ ಮಾಡಿ ತಿಳಿಸುವೆ..' ಎಂಬ ಅವರ ಮಾತನ್ನು ಎತ್ತಿಕೊಂಡು ಮಾಧ್ಯಮಗಳು ಟೀಕಿಸಿದ್ದುವು. ಹೀಗೆ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಬಗೆಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗುತ್ತಲೇ ಬಂದಿದೆ. ಕ್ಯಾಟ್ ಸ್ಟೀವನ್ಸ್‍ಗೆ ಸೆಟಾನಿಕ್ ವರ್ಸಸ್ ಕೃತಿಯು ಧರ್ಮನಿಂದೆಯ ಕೃತಿಯಾಗಿ ಕಾಣಿಸಿದರೆ, BBCಯ ನಿರೂಪಕ ಜೆಫ್ರಿ ರಾಬರ್ಟ್ಸನ್ ಅದನ್ನು ಆ ರೀತಿಯಾಗಿ ಪರಿಗಣಿಸುವುದೇ ಇಲ್ಲ. ಶಿಕ್ಷಾ ಬಚಾವೋ ಆಂದೋಲನ್‍ನ ದೀನಾನಾಥ್ ಬಾತ್ರರಿಗೆ 'ದಿ ಹಿಂದೂಸ್' ಆನ್ ಆಲ್ಟರ್‍ನೇಟಿವ್ ಹಿಸ್ಟರಿ'ಯು ಧರ್ಮನಿಂದೆಯಾಗಿ ಕಾಣಿಸುವಾಗ ಅರುಂಧತಿ ರಾಯ್‍ರಿಗೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಕೇತವಾಗಿ ಕಾಣಿಸುತ್ತದೆ.
1. ನೈನ್ ಅವರ್ಸ್ ಟು ರಾಮ
2. ಆನ್ ಏರಿಯಾ ಆಫ್ ಡಾರ್ಕ ನೆಸ್
3. ದಿ ಮೂರ್ಸ್ ಲಾಸ್ಟ್ ಸೈ
4. ದಿ ಟ್ರೂ ಫುರ್ಕಾನ್
5. ಡ ವಿನ್ಸಿ ಕೋಡ್
ಮುಂತಾದ ಹಲವಾರು ಕೃತಿಗಳು ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ನಿಷೇಧಕ್ಕೆ ಒಳಗಾಗಿದೆ. ಜೇಮ್ಸ್ ಲೈನೆ ಅವರ ‘ಶಿವಾಜಿ: ಹಿಂದೂ ಕಿಂಗ್ ಇನ್ ಇಸ್ಲಾಮಿಕ್ ಇಂಡಿಯಾ’ ಎಂಬ ಕೃತಿಯ ವಿರುದ್ಧ ಶಿವ ಸೈನಿಕರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಭಂಡಾರ್ಕರ್ ಓರಿಯಂಟಲ್ ಇನ್ಸಿಟ್ಯೂಟ್‍ನ ಮೇಲೆ ದಾಳಿ ನಡೆಸಿದ್ದರು. ತಸ್ಲೀಮಾ ನಸ್ರೀನ್‍ರ ದ್ವಿಖಂಡಿತೋದ ವಿರುದ್ಧ ಕೊಲ್ಕತ್ತಾದಲ್ಲಿ ಪ್ರತಿಭಟನೆ ನಡೆದಿತ್ತು. ಒಂದು ರೀತಿಯಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಕಾಲಕಾಲಕ್ಕೂ ಈ ದೇಶದಲ್ಲಿ ಮುಖಾ ಮುಖಿಯನ್ನು ಎದುರಿಸುತ್ತಲೇ ಬಂದಿದೆ. ಹಾಗಂತ, ಪಾಶ್ಚಾತ್ಯ ರಾಷ್ಟ್ರಗಳು ಪ್ರಸ್ತುತಪಡಿಸುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾದರಿಯೇ ಕಟ್ಟಕಡೆಯದೇ? ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಪಾಶ್ಚಾತ್ಯ ರಾಷ್ಟ್ರಗಳು ಕೊಡುವ ವ್ಯಾಖ್ಯಾನಕ್ಕಿಂತ ಬೇರೆ ವ್ಯಾಖ್ಯಾನಗಳು ಇರಬಾರದೆಂದಿದೆಯೇ? ಧಾರ್ಮಿಕತೆಗೆ ಬಹಳ ಕಡಿಮೆ ಮಹತ್ವ ಇರುವ ಈ ರಾಷ್ಟ್ರಗಳ ಮಾದರಿಯನ್ನೇ ಇತರೆಲ್ಲ ರಾಷ್ಟ್ರಗಳು ಯಾಕೆ ಅನುಸರಿಸಬೇಕು? ಸೆಟಾನಿಕ್ ವರ್ಸಸ್‍ಗೆ ಇಂಗ್ಲೆಂಡ್, ಅಮೇರಿಕ, ಫ್ರಾನ್ಸ್, ಕೆನಡಾಗಳು ನಿಷೇಧ ಹೇರಿಲ್ಲ ಎಂಬ ಕಾರಣಕ್ಕಾಗಿ ಅಥವಾ 'ದಿ ಹಿಂದೂಸ್..' ಕೃತಿಯನ್ನು ಅಭಿವ್ಯಕ್ತಿಯ ಹೆಸರಲ್ಲಿ ಈ ರಾಷ್ಟ್ರಗಳು ಸಮರ್ಥಿಸುತ್ತಿವೆ ಎಂಬ ಕಾರಣಕ್ಕಾಗಿ ನಾವೂ ಅದನ್ನು ಬೆಂಬಲಿಸಬೇಕೇ? ನಿಂದನೆ, ಅಪಹಾಸ್ಯ, ಅವಹೇಳನಗಳು ಯಾಕೆ ಅಭಿವ್ಯಕ್ತಿ ಸ್ವಾತಂತ್ರ್ಯದಡಿಯಲ್ಲಿ ಸಮರ್ಥನೆಗೆ ಒಳಗಾಗಬೇಕು? ಹಾಗಂತ, ಪ್ರವಾದಿ ಮುಹಮ್ಮದ್‍ರನ್ನು(ಸ) ಅಥವಾ ಶ್ರೀಕೃಷ್ಣರನ್ನು ವಿಶ್ಲೇಷಣೆಗೆ ಒಳಪಡಿಸುವುದು ಖಂಡಿತ ತಪ್ಪಲ್ಲ. ಯಾರು ಹೆಚ್ಚೆಚ್ಚು ವಿಮರ್ಶೆಗೆ ಒಳಗಾಗುತ್ತಾರೋ ಅವರು ಜನರಿಗೆ ಹೆಚ್ಚೆಚ್ಚು ಹತ್ತಿರವಾಗುತ್ತಾರೆ. ಆದರೆ ನಿಂದನೆ, ಅಪಹಾಸ್ಯಗಳು ವಿಮರ್ಶೆ ಹೇಗಾಗುತ್ತವೆ? ಇಂಥವುಗಳನ್ನು ಬಳಸದೆಯೇ ಓರ್ವ ವ್ಯಕ್ತಿಯನ್ನು, ಒಂದು ಧರ್ಮವನ್ನು, ಅದರ ಆರಾಧನಾ ಕ್ರಮಗಳನ್ನು ವಿಶ್ಲೇಷಿಸುವುದಕ್ಕೆ ಸಾಧ್ಯವಿಲ್ಲವೇ? ಈ ಜಗತ್ತಿನಲ್ಲಿ ಧರ್ಮಗಳನ್ನು ಪ್ರಶ್ನಿಸುವ ಪ್ರಯತ್ನಗಳು ಅನೇಕ ಬಾರಿ ನಡೆದಿವೆ. ಧರ್ಮಗಳು ಪ್ರತಿಪಾದಿಸುವ ವಿಚಾರಗಳು ಕಟು ಚರ್ಚೆಗೆ ಒಳಗಾಗಿವೆ. ಯಾರೂ ಅಂಥ ಪ್ರಯತ್ನಗಳನ್ನು ತಪ್ಪೂ ಅಂದಿಲ್ಲ. ಚಲನಶೀಲ ಧರ್ಮವೊಂದು ತಾನು ವಿಮರ್ಶೆಗೆ ಒಳಗಾಗುವುದನ್ನು ಅಸಹನೆಯಿಂದ ನೋಡುವುದಕ್ಕೆ ಸಾಧ್ಯವೂ ಇಲ್ಲ. ಆದರೆ ಅಪಹಾಸ್ಯದ ಉದ್ದೇಶದಿಂದಲೇ ಅಂಥ ಪ್ರಯತ್ನಗಳು ನಡೆದರೆ, ನಿಂದನೆಯ ಗುರಿ ಇಟ್ಟುಕೊಂಡೇ ವಿಮರ್ಶೆಗೆ ಮುಂದಾದರೆ..
ಸೆಟಾನಿಕ್ ವರ್ಸಸ್ ಆಗಲಿ, ‘ದಿ ಹಿಂದೂಸ್: ಆ್ಯನ್ ಆಲ್ಟರ್‍ನೇಟಿವ್ ಹಿಸ್ಟರಿ' ಆಗಲಿ ಎತ್ತಿರುವುದು ಇವೇ ಪ್ರಶ್ನೆಯನ್ನು.

No comments:
Post a Comment