Tuesday, March 31, 2015

ನ್ಯೂಸ್ ಚಾನೆಲ್‍ಗಳು ನಡೆಸುವ `ಹತ್ಯೆಯ' ತನಿಖೆಯನ್ನು ಯಾರಿಗೆ ಒಪ್ಪಿಸೋಣ?

    ವೃಂದಾ ಗ್ರೋವರ್, ಸುಧಾ ರಾಮಲಿಂಗಂ, ಪಮೇಲ ಪಿಲಿಪೋನ್, ಅರುಣಾ ರಾಯ್, ಅಂಜಲಿ ಭಾರಧ್ವಾಜ್, ಕವಿತಾ ಕೃಷ್ಣನ್, ಕವಿತಾ ಶ್ರೀವಾಸ್ತವ.. ಇವರೆಲ್ಲ ಫೆ. 26ರಂದು ಟೈಮ್ಸ್ ನೌ ಟಿ.ವಿ. ಚಾನೆಲ್‍ನ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಬಹಿರಂಗ ಪತ್ರವೊಂದನ್ನು ಬರೆದರು. ‘ನಮ್ಮ ವಿರುದ್ಧದ ದ್ವೇಷ ಭಾಷಣವನ್ನು ನಿಲ್ಲಿಸು’ (Stop fostering hate speech against us) ಎಂಬ ಶೀರ್ಷಿಕೆಯಲ್ಲಿದ್ದ ಆ ಪತ್ರದಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳಿದ್ದುವು. ಮಾಧ್ಯಮ ನೀತಿ ಸಂಹಿತೆಯು ನ್ಯೂಸ್‍ರೂಮ್‍ನಿಂದ ನಾಪತ್ತೆಯಾಗಿರುವ ಬಗ್ಗೆ ಆಕ್ಷೇಪಗಳಿದ್ದುವು. ಸುಪ್ರೀಮ್ ಕೋರ್ಟಿನ ನ್ಯಾಯವಾದಿಗಳೂ, ಆರ್.ಟಿ.ಐ. ಕಾರ್ಯಕರ್ತರೂ, ನಾಗರಿಕ ಹಕ್ಕು ಹೋರಾಟಗಾರರೂ, ಹಿರಿಯ ಪತ್ರಕರ್ತರೂ ಆಗಿರುವ ಇವರೆಲ್ಲ ಅರ್ನಾಬ್ ಗೋಸ್ವಾಮಿಯ ಆ್ಯಂಕರಿಂಗ್ ವಿಧಾನವನ್ನು ಪ್ರಶ್ನಿಸಿದರು. ಪ್ರತಿದಿನ ರಾತ್ರಿ 9 ಗಂಟೆಗೆ ಅವರು ನಡೆಸಿಕೊಡುವ ‘ನ್ಯೂಸ್ ಅವರ್' (News hour ) ಚರ್ಚಾ ಕಾರ್ಯಕ್ರಮವು ಹೇಗೆ ನ್ಯಾಶನಲ್ ಬ್ರಾಡ್‍ಕಾಸ್ಟಿಂಗ್ ಅಥಾರಿಟಿಯ (NBC) ನೀತಿ ಸಂಹಿತೆಗೆ ವಿರುದ್ಧವಾಗಿದೆ ಎಂಬುದನ್ನು ಬೊಟ್ಟು ಮಾಡಿದರು. ತನ್ನ ನಿಲುವಿಗೆ ವಿರುದ್ಧವಾಗಿರುವವರನ್ನು ಕಡೆಗಣಿಸುವ ಅಥವಾ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡದೇ ಇರುವ ಅರ್ನಾಬ್‍ರ ಅಬ್ಬರದ ವರ್ತನೆಯನ್ನು ಖಂಡಿಸಿದರು. ಇದಕ್ಕೆ ಉದಾಹರಣೆಯಾಗಿ ಅವರು ಫೆ. 17 ಮತ್ತು 18ರಂದು ನಡೆದ ‘ನ್ಯೂಸ್ ಅವರ್’ ಕಾರ್ಯಕ್ರಮವನ್ನು ಉಲ್ಲೇಖಿಸಿದರು. ಮಧ್ಯ ಪ್ರದೇಶದ ಮಹಾನ್ ಎಂಬಲ್ಲಿ ಎಸ್ಸಾರ್ (Essar) ಬಹುರಾಷ್ಟ್ರೀಯ ಕಂಪೆನಿಯು ನಡೆಸುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳ ಕುರಿತಂತೆ ಬ್ರಿಟನ್ನಿನ ಪಾರ್ಲಿಮೆಂಟ್ ಸದಸ್ಯರಿಗೆ ಮನವರಿಕೆ ಮಾಡಿಸಲು ಗ್ರೀನ್‍ಪೀಸ್ ಸಂಘಟನೆಯ ಪ್ರಿಯಾ ಪಿಳ್ಳೆ ಬ್ರಿಟನ್‍ಗೆ ಹೋಗುವುದರಲ್ಲಿದ್ದರು. ಇದನ್ನು ಅರಿತ ಕೇಂದ್ರ ಸರಕಾರ ಅವರ ಪ್ರಯಾಣವನ್ನು ತಡೆಹಿಡಿಯಿತು. ಅವರ ಪಾಸ್‍ಪೋರ್ಟ್ ನ್ನು ಮುಟ್ಟುಗೋಲು ಹಾಕಿಕೊಂಡಿತು. ನಿಜವಾಗಿ, ಎಸ್ಸಾರ್ ಕಂಪೆನಿಯ ಮುಖ್ಯ ಕೇಂದ್ರವಿರುವುದು ಬ್ರಿಟನ್‍ನಲ್ಲಿ. ಆ ಹಿನ್ನೆಲೆಯಲ್ಲಿ ಪ್ರಿಯಾ ಪಿಳ್ಳೆಯವರ ಬ್ರಿಟನ್ ಪ್ರವಾಸ ಯಾವ ರೀತಿಯಲ್ಲೂ ಅನುಚಿತವಾಗಿರಲಿಲ್ಲ. ಇದೇ ವಿಷಯವನ್ನು ಎತ್ತಿಕೊಂಡು ಅರ್ನಾಬ್ ಗೋಸ್ವಾಮಿ ಫೆ. 17ರಂದು ತನ್ನ ‘ನ್ಯೂಸ್ ಅವರ್’ ಕಾರ್ಯಕ್ರಮದಲ್ಲಿ ಚರ್ಚಿಸಿದರು. ಆದರೆ ಚರ್ಚೆ ಎಷ್ಟು ಏಕಮುಖವಾಗಿತ್ತೆಂದರೆ, ಅವರು ಆ್ಯಕ್ಟಿವಿಸ್ಟ್ ಗಳನ್ನು ಟೆರರಿಸ್ಟ್ ಎಂದರು. ದೇಶವಿರೋಧಿಗಳೆಂದರು. ಗ್ರೀನ್‍ಪೀಸನ್ನು ಖಂಡಿಸುವ ಅಭಿಪ್ರಾಯಗಳಿಗೆ ಧಾರಾಳ ಸಮಯಾವಕಾಶ ಕೊಟ್ಟ ಅವರು ಅದನ್ನು ಸಮರ್ಥಿಸುವವರಿಗೆ ಏನನ್ನೂ ಕೊಡಲಿಲ್ಲ. ಆ್ಯಕ್ಟಿವಿಸ್ಟ್ ಗಳನ್ನು ಟೆರರಿಸ್ಟ್ ಗಳು, ದೇಶವಿರೋಧಿಗಳು, ನಕ್ಸಲೈಟ್ ಬೆಂಬಲಿಗರು ಎಂದು ಕರೆಯುವುದಕ್ಕೆ ಅರ್ನಾಬ್‍ಗೆ ಏನು ಹಕ್ಕಿದೆ? ಒಂದು ಚಾನೆಲ್ ಹೀಗೆ ಬೇಕಾಬಿಟ್ಟಿಯಾಗಿ ಜನರನ್ನು ವಿಭಜಿಸುವುದು ಬೇಜವಾಬ್ದಾರಿತನದ್ದು. ಕಾರ್ಯಕ್ರಮವನ್ನು ನಡೆಸಿಕೊಡುವ ವ್ಯಕ್ತಿಯೆಂಬ (ಆ್ಯಂಕರ್) ನೆಲೆಯಲ್ಲಿ ಇರಲೇಬೇಕಾದ ತಟಸ್ಥ ನಿಲುವು, ನ್ಯಾಯ, ನಿಷ್ಪಪಕ್ಷಪಾತತನ ಮುಂತಾದ ಮೌಲ್ಯಗಳು ಅರ್ನಾಬ್‍ರಲ್ಲಿ ಕಾಣೆಯಾಗಿರುವುದಕ್ಕಾಗಿ ನಾವು ಟೈಮ್ಸ್ ನೌಗೆ ಬಹಿಷ್ಕಾರ ಹಾಕಿದ್ದೇವೆ ಎಂದು ಪತ್ರದಲ್ಲಿ ಅವರು ಘೋಷಿಸಿದರು.
    ನಿಜವಾಗಿ, ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಪತ್ರ ಬಹಳ ಮುಖ್ಯವಾದುದು. ಇದೇ ವೇಳೆ ಡಿ.ಕೆ. ರವಿಯ ಸಾವನ್ನು ಎದುರಿಟ್ಟುಕೊಂಡು ಕನ್ನಡದ ನ್ಯೂಸ್ ಚಾನೆಲ್‍ಗಳು ನಡೆಸಿದ ಚರ್ಚೆಯ ಸ್ವರೂಪವನ್ನೂ ಇಲ್ಲಿ ಎತ್ತಿಕೊಳ್ಳಬಹುದು. 1976ರಲ್ಲಿ ಆಸ್ಕರ್ ಪ್ರಶಸ್ತಿ ವಿಜೇತರಾದ ಪೀಟರ್ ಫಿಂಚ್  ಹೇಳಿದಂತೆ, “ಟಿ.ವಿ. ಎಂಬುದು ಅಮ್ಯೂಸ್‍ಮೆಂಟ್ ಪಾರ್ಕೇ? ಅದೊಂದು ಸರ್ಕಸ್ ಕಂಪೆನಿಯೇ? ದೊಂಬರಾಟದವರ ಗುಂಪೇ? ಅದನ್ನು ಮತ್ತು ಅದರಲ್ಲಿ ಪ್ರಸಾರವಾಗುವುದನ್ನು ವೀಕ್ಷಕರು ಸೀರಿಯಸ್ಸಾಗಿ ಪರಿಗಣಿಸಬಾರದೇ?..” ಇಂಥ ಅನುಮಾನ ಇವತ್ತಿನ ದಿನಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತಿದೆ. ಬೇಕಾದರೆ, ಟೈಮ್ಸ್ ನೌನ ‘ನ್ಯೂಸ್ ಅವರ್’ ಕಾರ್ಯಕ್ರಮವನ್ನೇ ಎತ್ತಿಕೊಳ್ಳಿ. ಆ ದಿನದ ಪ್ರಮುಖ ಇಶ್ಯೂವನ್ನು ಎತ್ತಿಕೊಂಡು ಅರ್ನಾಬ್ ಗೋಸ್ವಾಮಿ ರಾತ್ರಿ 9 ಗಂಟೆಗೆ ಕಾಣಿಸಿಕೊಳ್ಳುತ್ತಾರೆ. ಚಾನೆಲ್‍ನಲ್ಲಿ 10-12 ಮಂದಿಯನ್ನು ಕೂರಿಸಿ ಚರ್ಚೆ ಆರಂಭಿಸುತ್ತಾರೆ. ಯಾರನ್ನೂ ಅವರು ಮಾತಾಡಲು ಬಿಡುವುದಿಲ್ಲ. ಅವರು ಪ್ರಶ್ನೆ ಎಸೆಯುತ್ತಾರೆ. ಉತ್ತರ ಬರುವ ಮೊದಲೇ ಮತ್ತೆ ಮಾತಾಡಿ ತನ್ನ ಅಭಿಪ್ರಾಯವನ್ನೇ ಅಂತಿಮ ಗೊಳಿಸುತ್ತಾರೆ. ಆದ್ದರಿಂದಲೇ, ಚರ್ಚೆಯಲ್ಲಿ ಭಾಗವಹಿಸಿದವರೆಲ್ಲ ಟಿ.ವಿ. ಸ್ಕ್ರೀನ್‍ನಲ್ಲಿ ಆಗಾಗ ಇಣುಕಿ ಮಾಯವಾಗುತ್ತಾರೆ. ಅಷ್ಟಕ್ಕೂ, ಮಾಧ್ಯಮಗಳಿಗೆ ಕೆಲವು ನೀತಿ ಸಂಹಿತೆಗಳಿವೆ. ""TV News channels must provide for neutrality by offering equality for all affected parties, players and actors in any dispute or conflict to present their point of view. News channels must strive to ensure that allegations are not portrayed as fact and charges are not conveyed as an act of guilt." "... avoid... broadcasting content that is malicious, biased, regressive, knowingly inaccurate, hurtful, misleading...." NBA..." ಯ ಈ ನೀತಿ ಸಂಹಿತೆಯನ್ನು ಟೈಮ್ಸ್ ನೌ ಸಹಿತ ಈ ದೇಶದಲ್ಲಿರುವ ಸುಮಾರು 400ರಷ್ಟು ಸುದ್ದಿ ಚಾನೆಲ್‍ಗಳಲ್ಲಿ ಎಷ್ಟು ಚಾನೆಲ್‍ಗಳು ಪಾಲಿಸುತ್ತಿವೆ? ಇವತ್ತು ಅರ್ನಾಬ್ ಒಂಟಿಯಲ್ಲ. ಮಾಧ್ಯಮ ನೀತಿ ಸಂಹಿತೆಯನ್ನೆಲ್ಲ ಗಾಳಿಗೆ ತೂರಿ ತಾನೇ ಸರಿ ಎಂಬ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ಅರ್ನಾಬ್‍ರಿಂದ ಪ್ರಭಾವಿತರಾದವರು ಇವತ್ತು ವಿವಿಧ ಚಾನೆಲ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನ್ಯೂಸ್‍ಎಕ್ಸ್ ನಲ್ಲಿ ರಾಹುಲ್ ಶಿವಶಂಕರ್ ಅನ್ನುವ ಆ್ಯಂಕರ್ ಅರ್ನಾಬ್‍ರನ್ನೇ ಕಾಪಿ ಮಾಡುತ್ತಿದ್ದಾರೆ. ಝೀ ಬಿಸಿನೆಸ್‍ನಲ್ಲಿ ಅಮಿಶ್ ದೇವಗನ್, ಹೆಡ್‍ಲೈನ್ ಟುಡೇಯಲ್ಲಿ ಗೌರವ್ ಸಾವಂತ್‍ರೆಲ್ಲ ಅರ್ನಾಬ್‍ಗೆ ಸ್ಪರ್ಧೆ ಒಡ್ಡುತ್ತಿದ್ದಾರೆ. ಕನ್ನಡದ ಒಂದೆರಡು ನ್ಯೂಸ್ ಚಾನೆಲ್‍ಗಳಲ್ಲೂ ಈ ಬಗೆಯ ಆ್ಯಂಕರ್‍ಗಳಿದ್ದಾರೆ. ವಿರೋಧಿ ದನಿಯನ್ನು ಮಟ್ಟ ಹಾಕುವುದೇ ಆ್ಯಂಕರ್‍ನ ಕೆಲಸ ಎಂದು ನಂಬಿರುವವರ ಮಧ್ಯೆ ಪಾರದರ್ಶಕ, ತಟಸ್ಥ, ನ್ಯಾಯಯುತ.. ಮುಂತಾದ ಮೌಲ್ಯಗಳೆಲ್ಲ ಗೌರವ ಗಿಟ್ಟಿಸಿಕೊಳ್ಳುವುದು ಹೇಗೆ? ಅಸ್ಸಾಮ್‍ನಲ್ಲಿ ಹುಟ್ಟಿ ಆಕ್ಸ್ ಫರ್ಡ್‍ನಲ್ಲಿ ಕಲಿತಿರುವ ಅರ್ನಾಬ್‍ರ ಮೇಲೆ ಅಮೇರಿಕದ ಫಾಕ್ಸ್ ನ್ಯೂಸ್ ಮತ್ತು MSNBC ಗಳು ಪ್ರಭಾವ ಬೀರಿರಬಹುದು. ಫಾಕ್ಸ್ ನ್ಯೂಸ್‍ನ ಬಿಲ್ ರೈಲಿಯನ್ನು ಅರ್ನಾಬ್ ಅನುಸರಿಸುತ್ತಿದ್ದಾರೆ ಎಂಬ ಆರೋಪ ನಿಜವಿರಲೂಬಹುದು. ಲೆಸ್ಲಿ ಉಡ್ವಿನ್‍ರ ‘ಇಂಡಿಯಾಸ್ ಡಾಟರ್’ ಸಾಕ್ಷ್ಯ ಚಿತ್ರವನ್ನು ನಿಷೇಧಿಸಬೇಕೆಂದು ಅರ್ನಾಬ್ ಆಗ್ರಹಿಸಿದುದಕ್ಕೂ ಅವರ ತಂದೆ ಕರ್ನಲ್ ಮನೋರಂಜನ್‍ರು ಬಿಜೆಪಿ ಸದಸ್ಯರಾಗಿರುವುದಕ್ಕೂ ಮತ್ತು 1998ರಲ್ಲಿ ಅವರು ಗುವಾಹಟಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿದುದಕ್ಕೂ ಸಂಬಂಧ ಇಲ್ಲದೇ ಇರಬಹುದು. ಆದರೂ ಓರ್ವ ವ್ಯಕ್ತಿಯಾಗಿ ಮತ್ತು ಚಾನೆಲ್‍ನ ಮುಖ್ಯಸ್ಥರಾಗಿ ಅರ್ನಾಬ್‍ರಿಗೆ ಸಾಮಾಜಿಕ ಜವಾಬ್ದಾರಿ ಇರಬೇಡವೇ? ಇದು ಕೇವಲ ಅರ್ನಾಬ್‍ರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ಟೈಮ್ಸ್ ನೌ ಎಂಬುದು ಇಂಗ್ಲಿಷ್ ಚಾನೆಲ್ ಆದುದರಿಂದ ಅದರ ಪ್ರತಿ ಕಾರ್ಯಕ್ರಮಗಳೂ ಸುದ್ದಿಗೀಡಾಗುತ್ತವೆ. ವೀಕ್ಷಕರೂ ದೊಡ್ಡ ಮಟ್ಟದಲ್ಲಿರುತ್ತಾರೆ. ಹಾಗಂತ, ಅರ್ನಾಬ್‍ರಂತೆ ಏಕಮುಖವಾಗಿ ಕಾರ್ಯಕ್ರಮ ಪ್ರಸಾರ ಮಾಡುವ ಚಾನೆಲ್‍ಗಳು ಕನ್ನಡದಲ್ಲೂ ಇವೆ. ಡಿ.ಕೆ. ರವಿ ಸಾವಿನ ವಿಷಯದಲ್ಲಿ ಕನ್ನಡದ ಪ್ರಮುಖ ಚಾನೆಲ್‍ಗಳು ವರ್ತಿಸಿದ್ದು ಬಹುತೇಕ ಅರ್ನಾಬ್‍ರಂತೆಯೇ. CBI ಯ ಹೊರತಾದ ಯಾವ ತನಿಖೆಯೂ ಸೂಕ್ತವಲ್ಲ ಎಂದು ಅವೆಲ್ಲ ಇಡೀ ದಿನ ವಾದಿಸಿದುವು. ರವಿ ಸಾವನ್ನು ಕೊಲೆ ಎಂದು ಸಾಬೀತುಪಡಿಸುವುದಕ್ಕಾಗಿ ವದಂತಿಗಳಿಗೆ ರೆಕ್ಕೆ-ಪುಕ್ಕ ಸೇರಿಸಿ ಸುದ್ದಿ ರೂಪದಲ್ಲಿ ಕೊಟ್ಟವು. ಈ ಸಂದರ್ಭದಲ್ಲಿ ಚಾನೆಲ್‍ಗಳ ಶೈಲಿ ಎಷ್ಟು ಏಕಪಕ್ಷೀಯವಾಗಿತ್ತೆಂದರೆ ಕೊಲೆಯಲ್ಲದ ಇನ್ನಾವುದನ್ನು ಊಹಿಸುವುದೂ ಅಪರಾಧವಾದೀತೋ ಎಂಬ ರೀತಿಯಲ್ಲಿತ್ತು. ಇದೇ ವೇಳೆ, ಹಿರಿಯ ಪತ್ರಕರ್ತ ದಿನೇಶ್ ಅವಿೂನ್ ಮಟ್ಟು ಅವರು ಚಾನೆಲ್‍ಗಳ ಈ ‘ಅರ್ನಾಬ್ ಕಾಯಿಲೆ’ಯನ್ನು ಟೀಕಿಸುತ್ತಾ, “ಮುಂದೊಂದು ದಿನ ಕೇಂದ್ರ ಸರ್ಕಾರಕ್ಕೆ ಸೇರಿದ ಅಧಿಕಾರಿಯೊಬ್ಬರ ಆತ್ಮಹತ್ಯೆಯೋ ಕೊಲೆಯೋ ನಡೆದರೆ ತನಿಖೆಯನ್ನು ಯಾರಿಗೆ ಒಪ್ಪಿಸುತ್ತೀರಿ? ಸಿಬಿಐಗೆ? ಅದು ಕೇಂದ್ರದ ಅಧೀನದಲ್ಲಿದೆಯಲ್ಲ? ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ತನಿಖೆ ಬೇಡ ಅನ್ನುವುದಾದರೆ ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಬಿಐಯು ತನಿಖೆ ನಡೆಸಲಿ ಎಂದು ಹೇಗೆ ಹೇಳಲು ಸಾಧ್ಯ? ಹಾಗಿದ್ದರೆ ಅಂತಹ ಪ್ರಕರಣಗಳ ತನಿಖೆ ಯಾರಿಂದ ನಡೆಸುವುದು? ಎಫ್.ಬಿ.ಐ., ಇಂಟರ್‍ಪೋಲ್, ವಿಶ್ವಸಂಸ್ಥೆ?..” ಎಂಬ ಪ್ರಶ್ನೆಯನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ಹಾಗಂತ, ರವಿ ಪ್ರಕರಣ ಮೊದಲನೆಯದ್ದಲ್ಲ. ಬಾಂಬ್ ಸ್ಫೋಟದ ಸಂದರ್ಭದಲ್ಲಿ ಈ ಬಗೆಯ ತಪ್ಪುಗಳನ್ನು ಹೆಚ್ಚಿನೆಲ್ಲ ಚಾನೆಲ್‍ಗಳೂ ಮಾಡಿವೆ. ಬೆಂಗಳೂರಿನಲ್ಲಿ ಕೆಲವು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವರೆಂದು ಆರೋಪಿಸಿ ಮುತೀಉರ್ರಹ್ಮಾನ್ ಎಂಬ ಡೆಕ್ಕನ್ ಹೆರಾಲ್ಡ್ ನ ಪತ್ರಕರ್ತನ ಸಹಿತ ಕೆಲವರ ಬಂಧನವಾದಾಗ ಇವೇ ಚಾನೆಲ್‍ಗಳು ಆ ಸುದ್ದಿಯನ್ನು ಹಬ್ಬದಂತೆ ಆಚರಿಸಿದ್ದುವು. ಪತ್ರಿಕೆಗಳಲ್ಲೂ ‘ಅರ್ನಾಬ್ ಪ್ರೇರಿತ’ ಸುದ್ದಿಗಳು ಪ್ರಕಟವಾಗಿದ್ದುವು. ಹಾಗಾದರೆ ಸುದ್ದಿ ಮಾಧ್ಯಮಗಳನ್ನು ಈ ಕಾಯಿಲೆಯಿಂದ ಮುಕ್ತಗೊಳಿಸುವುದು ಹೇಗೆ? ಅದಕ್ಕೆ ಸಾಮಾಜಿಕ ಜವಾಬ್ದಾರಿಯನ್ನು ನೆನಪಿಸುವ ವಿಧಾನ ಯಾವುದು? ಹಾಗಂತ ಟೈಮ್ಸ್ ನೌ ಅನ್ನೇ ವೀಕ್ಷಿಸಬೇಕು ಎಂಬ ಒತ್ತಾಯವನ್ನು ಯಾರೂ ಹೇರುತ್ತಿಲ್ಲ ನಿಜ. ವೀಕ್ಷಕರ ಮುಂದೆ ಇವತ್ತು ಧಾರಾಳ ಆಯ್ಕೆಗಳಿವೆ. ಪಬ್ಲಿಕ್ ಬೇಡ ಅಂದರೆ TV 9 ಇದೆ, ಸುವರ್ಣ ಇದೆ, BTV  ಇದೆ. ಆದರೆ ಇದು ಕಾಯಿಲೆಗಿರುವ ಮದ್ದೇ? ಇವತ್ತು ಈ ದೇಶದಲ್ಲಿ ಅತ್ಯಂತ ಹೆಚ್ಚು TRP ಗಳಿಸುತ್ತಿರುವುದು ಅರ್ನಾಬ್‍ರ ‘ನ್ಯೂಸ್ ಅವರ್’ ಕಾರ್ಯಕ್ರಮ. ಒಂದು ಕಡೆ ಪ್ರಮುಖ ವ್ಯಕ್ತಿತ್ವಗಳಿಂದ ಅರ್ನಾಬ್ ತೀವ್ರ ಟೀಕೆಯನ್ನು ಎದುರಿಸುತ್ತಿದ್ದರೂ ಇನ್ನೊಂದು ಕಡೆ ವೀಕ್ಷಕರನ್ನು ಸೆಳೆಯುತ್ತಿದ್ದಾರೆ. ಹೀಗಿರುವಾಗ ಈ ಆಯ್ಕೆಗಳು ನಿರ್ದಿಷ್ಟ ಚಾನೆಲ್‍ಗಳ ಮೇಲೆ ಯಾವ ಪರಿಣಾಮ ಬೀರಬಹುದು? ಜನಪ್ರಿಯತೆಯ ಆಧಾರದಲ್ಲಿ ಹೇಳುವುದಾದರೆ ಅರ್ನಾಬ್ ಇವತ್ತು ಅತ್ಯುತ್ತಮ ಆ್ಯಂಕರ್. ಆದರೆ ಜನಪ್ರಿಯತೆಯೊಂದೇ ಒಂದು ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವುದಕ್ಕಿರುವ ಮಾನದಂಡವೆ? ಆ ಜನಪ್ರಿಯತೆಗಾಗಿ ಅವರು ಅನುಸರಿಸಿದ ಕಾರ್ಯ ವಿಧಾನಗಳನ್ನು ನಾವು ಪರಿಶೀಲನೆಗೆ ಒಳಪಡಿಸಬೇಡವೇ? ಇಲ್ಲದಿದ್ದರೆ ಅನಂತ ಮೂರ್ತಿಗಿಂತ ಭೈರಪ್ಪ ಶ್ರೇಷ್ಠ ಎಂದೋ ಅಥವಾ ಗಾಂಧೀಜಿಗಿಂತ ಮೋದಿ ಶ್ರೇಷ್ಠ ಎಂದೋ ಹೇಳಬೇಕಾದೀತಲ್ಲವೇ?
    ಮಾರ್ಚ್ 23ರ ಔಟ್‍ಲುಕ್ ಪತ್ರಿಕೆಯು ಅರ್ನಾಬ್ ಗೋಸ್ವಾಮಿಯನ್ನು ಮುಖಪುಟದಲ್ಲಿ ಕೂರಿಸಿ, ‘TV ನ್ಯೂಸ್‍ನ ಕೊಲೆಗಾರ (THE MAN, WHO KILLED TV NEWS)’ ಎಂಬ ಶೀರ್ಷಿಕೆಯಲ್ಲಿ ಲೇಖನವನ್ನು ಪ್ರಕಟಿಸಿದೆ. ಒಂದು ವೇಳೆ ಡಿ.ಕೆ. ರವಿಯ ವಿಷಯದಲ್ಲಿ ಇದೇ ಮಾನದಂಡವನ್ನು ಕನ್ನಡ ಚಾನೆಲ್‍ಗಳಿಗೆ ಅನ್ವಯಿಸಿದರೆ ಶೀರ್ಷಿಕೆ ಹೇಗಿರಬಹುದು?

1 comment:

  1. ಕುಕ್ಕಿಲ ಅವರಿಗೆ-- ಅರ್ನಾಬ್ ಗೋಸ್ವಾಮಿ ಅವರ news hour ಕಾರ್ಯಕ್ರಮ ಏಕಪಕ್ಷೀಯವಾಗಿರುತ್ತದೆ ಎಂಬ ತಮ್ಮ ಅಭಿಪ್ರಾಯವನ್ನು ಒಪ್ಪಲು ಸ್ವಲ್ಪ ಕಷ್ಟ. ಆತ ಆ ಕಾರ್ಯಕ್ರಮದಲ್ಲಿ ಕೊಡುವ facts and figuresಗಳು ಚರ್ಚೆಯಲ್ಲಿ ಪಾಲ್ಗೊಂಡವರು ನಿರಾಕರಿಸಲಾಗದಂತೆ ಇರುತ್ತವೆ. ಅರ್ನಾಬ್ ಅವರು ಸುಳ್ಳು ಹೇಳುತ್ತಿದ್ದರೆ ಅದನ್ನು ಆ discussionನಲ್ಲಿ ಪಾಲ್ಗೊಂಡವರು ಹೇಳಬಹುದಲ್ಲ. ಯಾಕೆ ಹೇಳುವುದಿಲ್ಲ? ಹೋಗಲಿ ಅದೂ ಬೇಡ ಎಲ್ಲಾ ರಾಜಕೀಯ ಪಕ್ಷಗಳೂ ,N G O ಗಳೂ ಮತ್ತು R T I activistsಗಳೂ ಅರ್ನಾಬ್ ಅವರ ಆ ಕಾರ್ಯಕ್ರಮವನ್ನೇ ಬಹಿಸ್ಕರಿಸಿದರೆ ಸಮಸ್ಯೆ ನಿವಾರಣೆ ಆಯಿತಲ್ಲ. ಅದನ್ನು ಮಾಡಿದರಾಯಿತು. ಇದೇ ಮಾತು ನಮ್ಮ ಕನ್ನಡದ ಸುದ್ದಿವಾಹಿನಿಗಳ ಪ್ಯಾನೆಲ್ ಡಿಸ್ಕಶನ್ ಗೂ ಮತ್ತು ಅದರಲ್ಲಿ ಭಾಗವಹಿಸುವವರಿಗೂ ಅನ್ವಯಿಸುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. -----ಎಂ ಎ ಶ್ರೀರಂಗ

    ReplyDelete