ಕಾಲ್ಪನಿಕ ಚಿತ್ರ |
ಮುಡಿಪು
ಉಳ್ಳಾಲ
ಬೋಳಂತೂರು
ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರದೇಶಗಳು ಕಳೆದ ಎರಡ್ಮೂರು ವಾರಗಳಿಂದ ಸುದ್ದಿಯಲ್ಲಿವೆ. ಹಾಗಂತ, ಈ ಪ್ರದೇಶಗಳಿಗೆ ಬೃಹತ್ ಕೈಗಾರಿಕೆಗಳೋ, ಪರಮಾಣು ವಿದ್ಯುತ್ ಸ್ಥಾವರಗಳೋ ಬರುತ್ತಿಲ್ಲ. ರಾಜ್ಯ ಸರಕಾರ ಮೊನ್ನೆ ವಿಧಾನ ಸಭೆಯಲ್ಲಿ ಮಂಡಿಸಿದ ಬಜೆಟ್‍ನಲ್ಲಿ ಈ ಪ್ರದೇಶಗಳಿಗೆ ವಿಶೇಷ ಯೋಜನೆಗಳನ್ನೂ ಪ್ರಸ್ತಾಪಿಸಿಲ್ಲ. ಅದೇ ಗುಳಿ ಬಿದ್ದ ರಸ್ತೆಗಳು, ‘ಕಾಮಗಾರಿ ಪ್ರಗತಿಯಲ್ಲಿದೆ’ ಎನ್ನುವ ಬೋರ್ಡ್‍ಗಳು, ನೀರು- ವಿದ್ಯುತ್, ಗ್ಯಾಸ್ ವಿತರಣೆಯ ಸಮಸ್ಯೆಗಳು.. ಎಲ್ಲವೂ ಈ ಪ್ರದೇಶಗಳಲ್ಲಿ ಸಾಮಾನ್ಯವಾಗಿವೆ. ವಿಚಿತ್ರ ಏನೆಂದರೆ, ಈ ಪ್ರದೇಶಗಳು ಸುದ್ದಿಯಲ್ಲಿರುವುದು ಈ ಮೂಲಭೂತ ಸಮಸ್ಯೆಗಳ ಕಾರಣದಿಂದಾಗಿ ಅಲ್ಲ. ಹೆಣ್ಣು ಗಂಡಿನ ಕಾರಣಕ್ಕಾಗಿ, ಅನೈತಿಕ ಪೊಲೀಸ್‍ಗಿರಿಯ ಕಾರಣಕ್ಕಾಗಿ, ಅತ್ಯಾಚಾರದ ಕಾರಣಕ್ಕಾಗಿ. ಇಲ್ಲಿ ನಡೆಯುವ ಪ್ರತಿಭಟನೆಗಳು ಎಷ್ಟು ಧರ್ಮವಿರೋಧಿ ಸ್ವರೂಪದಲ್ಲಿರುತ್ತವೆಯೆಂದರೆ, ಅಪರಾಧವನ್ನು ನೋಡುವ ಬದಲು ಆರೋಪಿಯ ಧರ್ಮವನ್ನು ನೋಡಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಈ ವಿಷಯದಲ್ಲಿ ಪ್ರಥಮ ಬಹುಮಾನವನ್ನು ಸಂಘಪರಿವಾರಕ್ಕೆ ನೀಡಬೇಕು. ಶಿಕ್ಷಕಿಯೋರ್ವರು ಸ್ನಾನ ಮಾಡುತ್ತಿದ್ದಾಗ ಅದನ್ನು ವಿಡಿಯೋ ಚಿತ್ರೀಕರಿಸಿದ ಘಟನೆ ವಾರಗಳ ಹಿಂದೆ ಬೋಳಂತೂರಿನಲ್ಲಿ ನಡೆಯಿತು. ಮಹಿಳೆ ಹಿಂದೂ ಧರ್ಮದವರಾದರೆ, ಚಿತ್ರೀಕರಿಸಿದವ ಇಸ್ಲಾಮ್ ಧರ್ಮದವ. ಈ ಕೃತ್ಯವನ್ನು ಖಂಡಿಸಿ ಸಂಘಪರಿವಾರವು ಆ ವಲಯದಲ್ಲಿ ಈ ವರೆಗೆ ನಡೆಯದಷ್ಟು ದೊಡ್ಡ ಮಟ್ಟದ ಪ್ರತಿಭಟನಾ ಸಭೆಯನ್ನು ಏರ್ಪಡಿಸಿತು. ರಾಲಿಯನ್ನು ಹಮ್ಮಿಕೊಂಡಿತು. ಸಂಘದ ಪ್ರಮುಖ ನಾಯಕರು ಆ ಪ್ರದೇಶದಲ್ಲಿ ಸೇರಿ ಇಡೀ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಆ ಯುವಕನ ನೆಪದಲ್ಲಿ ಆತನ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಇದಾದ ಬಳಿಕ ಉಳ್ಳಾಲದಲ್ಲಿ 3ರ ಹರೆಯದ ಬಾಲೆಯ ಮೇಲೆ ಅತ್ಯಾಚಾರ ನಡೆಯಿತು. (ಇದು ಬಹುತೇಕ ದೃಢಪಟ್ಟಿದೆ). ಬಾಲೆ ಮುಸ್ಲಿಮ್ ಸಮುದಾಯಕ್ಕೆ ಸೇರಿದವಳಾದರೆ ಅತ್ಯಾಚಾರದ ಆರೋಪ ಹೊತ್ತವ ಹಿಂದೂ ಸಮುದಾಯಕ್ಕೆ ಸೇರಿದವ. ವಿಷಾದ ಏನೆಂದರೆ, ಬೋಳಂತೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡವರು ಈ ಬಾಲೆಯ ಮೇಲಿನ ಅತ್ಯಾಚಾರವನ್ನು ವಿರೋಧಿಸಿ ಪ್ರತಿಭಟಿಸುವುದು ಬಿಡಿ, ಒಂದು ಗೆರೆಯ ಖಂಡನಾ ಹೇಳಿಕೆಯನ್ನೂ ಹೊರಡಿಸಲಿಲ್ಲ. ತೀರ್ಥಹಳ್ಳಿಯ ನಂದಿತಾ ಎಂಬ ಬಾಲಕಿಯ ಸಾವನ್ನು ಮುಂದಿಟ್ಟುಕೊಂಡು ತೀವ್ರ ಪ್ರತಿಭಟನೆಯನ್ನು ನಡೆಸಿದ ಮತ್ತು ಹೆಣ್ಣಿನ ಮಾನದ ಬಗ್ಗೆ ಹತ್ತು-ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ ಸಂಘಪರಿವಾರವು ಈ ಬಾಲೆಗೆ ಬೆಂಬಲ ಸೂಚಿಸುವ ಮತ್ತು ಅಪರಾಧವನ್ನು ಖಂಡಿಸುವ ಸಣ್ಣ ಪ್ರಯತ್ನವನ್ನೂ ನಡೆಸಲಿಲ್ಲ. ಬೋಳಂತೂರು ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಮಂದಿ ಆರೋಪಿಯ ವಿರುದ್ಧ ಕನಿಷ್ಠ ಆಕ್ರೋಶವನ್ನಾದರೂ ವ್ಯಕ್ತಪಡಿಸಿದ್ದರು. ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿದ್ದರು.(ಇಷ್ಟು ಸಾಕು ಎಂದಲ್ಲ). ಆದರೆ, ಕನಿಷ್ಠ ಈ ಮಟ್ಟದ ಪ್ರತಿಕ್ರಿಯೆ ಕೂಡಾ ಉಳ್ಳಾಲ ಪ್ರಕರಣದಲ್ಲಿ ಸಂಘಪರಿವಾರದಿಂದ ವ್ಯಕ್ತವಾಗಿಲ್ಲ. ಏನಿವೆಲ್ಲ? ಯಾಕೆ ಈ ಬಗೆಯ ಆಷಾಡಭೂತಿತನದ ಪ್ರಕಿಯೆಗಳು ನಡೆಯುತ್ತಿವೆ? ನಾಗರಿಕ ಸಮಾಜವೇಕೆ ಈ ಬಗೆಯ ಹಿಪಾಕ್ರಸಿಯನ್ನು ಪ್ರಶ್ನಿಸುವ ಉಮೇದು ತೋರಿಸುತ್ತಿಲ್ಲ?
ನಿಜವಾಗಿ ಅಪರಾಧಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದೇ ದೊಡ್ಡ ತಪ್ಪು. ‘ಅತ್ಯಾಚಾರ ಮಾಡಿದ ಹಿಂದೂ’, ‘ವೀಡಿಯೋ ಚಿತ್ರೀಕರಿಸಿದ ಮುಸ್ಲಿಮ್..’ ಎಂದೆಲ್ಲಾ ಹೇಳುವುದೇ ಅನೈತಿಕವಾದದ್ದು. ಅಪರಾಧಗಳನ್ನು ಧರ್ಮಗಳ ಮೇಲೆ ಹೇರುವುದಕ್ಕೆ ನನ್ನ ಪ್ರಬಲ ವಿರೋಧವಿದೆ. ಆದರೂ, ಈ ಲೇಖನದ ಆರಂಭದಲ್ಲಿ ಹಿಂದೂ-ಮುಸ್ಲಿಮ್ ಎಂಬ ಪದಗಳನ್ನು ಬಳಸಿದ್ದೇನೆ. ಇದು ಸಂಘಪರಿವಾರದ ಹಿಪಾಕ್ರಸಿಯನ್ನು ಸ್ಪಷ್ಟಪಡಿಸುವುದಕ್ಕೆ ಮಾಡಲಾದ ಉಲ್ಲೇಖವೇ ಹೊರತು ಇದರಲ್ಲಿ ಇನ್ನಾವ ಉದ್ದೇಶವೂ ಅಲ್ಲ. ನಿಜವಾಗಿ, ಅಪರಾಧಿಗಳಿಗೆ ಯಾವ ಧರ್ಮವೂ ಇಲ್ಲ. ಹಿಂದೂ ಅತ್ಯಾಚಾರಿ, ಮುಸ್ಲಿಮ್ ಕೋಮುವಾದಿ, ಕ್ರೈಸ್ತ ಭ್ರಷ್ಟಾಚಾರಿ.. ಎಂಬ ಪದಗಳೇ ಅನ್ಯಾಯದ್ದು. ಈ ಪದಗಳಾಚೆಗೆ ಸಮಾಜದ ಮನಸ್ಥಿತಿಯನ್ನು ಬೆಳೆಸುವ ಪ್ರಯತ್ನಗಳು ನಡೆಯಬೇಕಾಗಿದೆ. ದುರಂತ ಏನೆಂದರೆ, ಸಂಘಪರಿವಾರವು ಸಮಾಜವನ್ನು ಈ ರೀತಿಯಲ್ಲಿ ವಿಭಜಿಸಲು ಶ್ರಮಪಡುತ್ತಿದೆ. ಅದು ಅತ್ಯಾಚಾರವನ್ನೋ, ವೀಡಿಯೋ ಚಿತ್ರೀಕರಣವನ್ನೋ ಪ್ರಶ್ನಿಸುತ್ತಿಲ್ಲ. ಚಿತ್ರಿಸಿದವನ ಧರ್ಮವನ್ನು ನೋಡಿ ಅದು ಪ್ರತಿಭಟನೆ ಹಮ್ಮಿಕೊಳ್ಳಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತದೆ. ಅಂದರೆ ಸಂಘಪರಿವಾರಕ್ಕೆ ಹೆಣ್ಣಿನ ಮಾನವಾಗಲಿ, ಸುರಕ್ಷಿತತೆಯಾಗಲಿ ಮುಖ್ಯವಲ್ಲ. ಒಂದು ವೇಳೆ ಅದಾಗಿರುತ್ತಿದ್ದರೆ 3ರ ಬಾಲೆಯ ಬದುಕು ಅದಕ್ಕೆ ಮುಖ್ಯವಾಗ ಬೇಕಿತ್ತು. ಆರೋಪಿಯ ಧರ್ಮ ನೋಡದೇ ಆ ಬಾಲೆಯ ಪರ ಮಾತಾಡುವ ಮತ್ತು ಆ ಕುಟುಂಬಕ್ಕೆ ಸಾಂತ್ವನ ಹೇಳುವ ಪ್ರಯತ್ನ ನಡೆಸಬೇಕಿತ್ತು. ಸುಳ್ಳಿನ ಕತೆ ಕಟ್ಟಿದ ಶಾಲಾಡಳಿತದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಿತ್ತು. ಆದರೆ, ಈ ಬಾಲೆಯ ಪ್ರಕರಣ ಎಂದಲ್ಲ, ಇದಕ್ಕೆ ಸಮಾನವಾದ ಯಾವ ಪ್ರಕಣಗಳಲ್ಲೂ ಸಂಘಪರಿವಾರ ಮಾತಾಡಿದ್ದೇ ಇಲ್ಲ. ಅಷ್ಟಕ್ಕೂ, ಈ ಪ್ರಕರಣದ ಪಾತ್ರಧಾರಿಗಳು ಅದಲು ಬದಲಾಗಿರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಸಂಘಪರಿವಾರದ ಪ್ರತಿಕ್ರಿಯೆ ಏನಾಗಿರುತ್ತಿತ್ತು?
ಮಗುವಿನ ಮನಸ್ಸು ಶುಭ್ರವಾದುದು. ಅದಕ್ಕೆ ಹಿಂದೂವೋ ಮುಸ್ಲಿಮೋ ಗೊತ್ತಿಲ್ಲ. ತನ್ನನ್ನು ಕರೆದೊಯ್ಯುವ ವ್ಯಕ್ತಿಯನ್ನು ಅಂಕಲ್ ಎಂದು ಕರೆಯಬಲ್ಲುದೆ ಹೊರತು ಮುಸ್ಲಿಮ್ ಅಂಕಲ್ ಎಂದೋ ಹಿಂದೂ ಅಂಕಲ್ ಎಂದೋ ಅದು ಕರೆಯಲಾರದು. ಆದರೆ, ಸರಿ ಮತ್ತು ತಪ್ಪು, ಧರ್ಮ ಮತ್ತು ಅಧರ್ಮ, ನೈತಿಕತೆ ಮತ್ತು ಅನೈತಿಕ.. ಎಂಬುದನ್ನೆಲ್ಲ ಚೆನ್ನಾಗಿ ಬಲ್ಲ ಪ್ರೌಢ ಹೆಣ್ಣು ಮತ್ತು ಗಂಡುಗಳಿಬ್ಬರು ಪರಸ್ಪರ ಮಾತಾಡಿದರೆಂಬ ಕಾರಣಕ್ಕಾಗಿ ಹಲ್ಲೆ ನಡೆಸುವ ಮಂದಿ ಇಂಥ ನೈತಿಕ-ಅನೈತಿಕತೆಗಳ ಬಗ್ಗೆ ಏನೊಂದೂ ಗೊತ್ತಿಲ್ಲದ ಬಾಲೆಗಾಗಿ ಯಾವ ಪೊಲೀಸ್‍ಗಿರಿಯನ್ನೂ ಮಾಡಿಲ್ಲ ಮತ್ತು ಮಾಡುತ್ತಿಲ್ಲ ಅನ್ನುವುದು ಅತ್ಯಂತ ವಿಷಾದನೀಯವಾದುದು. ಪ್ರತಿಯೊಂದನ್ನೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸುತ್ತಾ ಹೋಗುವುದಕ್ಕೆ ಯಾವ ಅರ್ಥವೂ ಇಲ್ಲ. ಆದರೂ ಈ ಜಿಲ್ಲೆಯಲ್ಲಿ ಸದ್ಯ ಇಂಥದ್ದೊಂದು ಅಪಾಯಕಾರಿ ವಾತಾವರಣ ನಿರ್ಮಾಣವಾಗಿದೆ. ಮುಸ್ಲಿಮರ ವಿರುದ್ಧ ಹಿಂದೂ ಏನು ಮಾಡಿದರೂ ಸರಿ ಮತ್ತು ಸಮರ್ಥನೀಯ ಎಂಬ ಅಪಾಯಕಾರಿ ವೈರಸ್ ಎಲ್ಲೆಡೆ ಹಬ್ಬುತ್ತಿದೆ. ಇದು ಮುಸ್ಲಿಮರ ಮೇಲೂ ಪ್ರಭಾವ ಬೀರುತ್ತಿದೆ. ಅವರಲ್ಲೂ ಅದೇ ರೀತಿಯಾಗಿ ಆಲೋಚಿಸುವವರ ಸಂಖ್ಯೆ ವೃದ್ಧಿಸುತ್ತಿದೆ. ಇಂಥವರಿಗೆ ಹೆಣ್ಣಿನ ಮಾನ, ಗೌರವ, ಯಾವುದೂ ಮುಖ್ಯ ಅಲ್ಲ. ಹೆಣ್ಣು ಅವರಿಗೆ ಒಂದು ಸರಕು ಮಾತ್ರ. ಇನ್ನೊಂದು ಧರ್ಮದವರನ್ನು ದ್ವೇಷಿಸುವುದಕ್ಕೆ ಮಾತ್ರ ಬಳಕೆಗೀಡಾಗುವ ಸರಕು. ಆ ಉದ್ದೇಶ ಈಡೇರಿದ ಬಳಿಕ ಆ ಹೆಣ್ಣಿಗೂ ಅವರಿಗೂ ಯಾವ ಸಂಬಂಧವೂ ಇರುವುದಿಲ್ಲ. ಇದಕ್ಕೆ, ಅನೈತಿಕ ಪೊಲೀಸ್‍ಗಿರಿಯಲ್ಲಿ ಅವಮಾನಕ್ಕೆ ಒಳಗಾದ ಹೆಣ್ಣು ಮಕ್ಕಳೇ ಅತ್ಯುತ್ತಮ ಪುರಾವೆ. ಆದ್ದರಿಂದ, ಮಹಿಳಾ ವಿರೋಧಿ, ಧರ್ಮ ವಿರೋಧಿ ಮತ್ತು ಮನುಷ್ಯ ವಿರೋಧಿಯಾದ ಈ ಮಾನಸಿಕತೆಯಿಂದ ಜಿಲ್ಲೆಯನ್ನು ಪಾರು ಮಾಡುವ ಬಗ್ಗೆ ಸರ್ವಧರ್ಮೀಯರೂ (ಮುಖ್ಯವಾಗಿ ಧಾರ್ಮಿಕ ಮುಖಂಡರು) ಗಂಭೀರವಾಗಿ ಆಲೋಚಿಸಬೇಕಾಗಿದೆ. ಈ ಬಗೆಯ ಮಾನಸಿಕತೆ ಹಿಂದೂ-ಮುಸ್ಲಿಮ್ ಯಾರಲ್ಲೇ ಇರಲಿ, ಅವರನ್ನೆಲ್ಲ ಬಹಿರಂಗವಾಗಿ ತರಾಟೆಗೆ ಎತ್ತಿಕೊಳ್ಳುವ ಹಾಗೂ ಮನುಷ್ಯರನ್ನು ಮತ್ತು ಅವರ ಅಪರಾಧಗಳನ್ನು ಧರ್ಮದ ನೆಲೆಯಲ್ಲಿ ವಿಭಜಿಸದೇ ಪರಾಮರ್ಶಿಸುವ ವಾತಾವರಣವನ್ನು ಬೆಳೆಸಬೇಕಾಗಿದೆ. ಉಳ್ಳಾಲದ ಬಾಲೆಯೂ, ಬೋಳಂತೂರಿನ ಶಿಕ್ಷಕಿಯೂ ಮುಡಿಪುವಿನ ಶಾಲಾ ವಿದ್ಯಾರ್ಥಿಗಳೂ.. ಎಲ್ಲರೂ ನಮ್ಮವರೇ. ಅವರ ಮೇಲೆ ಆದ ಅನ್ಯಾಯವನ್ನು ಧರ್ಮ-ಜಾತಿಗಳ ಹಂಗಿಲ್ಲದೇ ಖಂಡಿಸೋಣ. ಆರೋಪಿಗಳನ್ನು ಯಾವ ಧರ್ಮಕ್ಕೂ ಸೇರಿಸದೆ ಬರೇ ಆರೋಪಿಗಳಾಗಿಯೇ ಕಾಣೋಣ. ನಮಗೆ ಶಿಕ್ಷಕಿಯ ಮಾನ ಮತ್ತು ಬಾಲೆಯ ಪ್ರಾಣ ಎರಡೂ ಮುಖ್ಯ. ಅದಕ್ಕೆ ಅಪಚಾರ ಎಸಗಿದವರಿಗೆ ಧರ್ಮವಿಲ್ಲ. ಅವರನ್ನು ನೆಪವಾಗಿಸಿಕೊಂಡು ಮನುಷ್ಯರನ್ನು ವಿಂಗಡಿಸಿದವರಿಗೂ ಧರ್ಮವಿಲ್ಲ. ಅವರು ಧರ್ಮ ರಕ್ಷಕರಾಗುವುದಕ್ಕೆ ಅರ್ಹರೂ ಅಲ್ಲ.
ಕರಾವಳಿಯಲ್ಲಿ ಅವ್ಯಾಹತವಾಗಿ ಹಬ್ಬುತ್ತಿರುವ ಈ ಸಾಂಕ್ರಾಮಿಕ ರೋಗದ ವಿರುದ್ದ ಗಟ್ಟಿ ದ್ವನಿಯೊಂದು ಮೊಳಗದಿದ್ದರೆ ಶಾಂತಿ ನೆಮ್ಮದಿ ಬಯಸುವ ನಾಗರಿಕ ಸಮಾಜಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ....
ReplyDeleteಕಣ್ಣು ತೆರೆಸಬಹುದಾದ ಲೇಖನಕ್ಕೆ ಹಾಟ್ಸ್ ಆಫ್ !
https://nenapinasanchi.wordpress.com