Thursday, August 29, 2024

ಆರೆಸ್ಸೆಸ್‌ನ ತದ್ರೂಪವೇ ಜಮಾಅತೆ ಇಸ್ಲಾಮೀ ಹಿಂದ್?




ಜಮಾಅತೆ ಇಸ್ಲಾಮೀ ಹಿಂದ್ ಎಂಬುದು ಆರೆಸ್ಸೆಸ್‌ನಂಥದ್ದೇ  ಒಂದು ಕೋಮುವಾದಿ ಮತ್ತು ಜನಾಂಗದ್ವೇಷಿ ಸಂಘಟನೆ ಎಂಬ ಅಭಿಪ್ರಾಯ ಅನೇಕರಲ್ಲಿದೆ. ಇವರಲ್ಲಿ ಜಾತ್ಯತೀತ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುವವರು ಮತ್ತು ಕೋಮುವಾದವನ್ನು ಖಂಡತುಂಡವಾಗಿ ವಿರೋಧಿಸುವವರೂ ಧಾರಾಳ ಇದ್ದಾರೆ. ಜಮಾಅತೆ ಇಸ್ಲಾಮಿಯನ್ನು ಆರೆಸ್ಸೆಸ್‌ನ ತದ್ರೂಪದಂತೆ ವಾದಿಸುವುದಕ್ಕೆ ಇವರು ಕೆಲವು ಕಾರಣಗಳನ್ನು ಕೊಡುತ್ತಾರೆ.

1. 1948ರಲ್ಲಿ ಉಪಪ್ರಧಾನಿ ವಲ್ಲಭಬಾಯಿ ಪಟೇಲ್‌ರು ಆರೆಸ್ಸೆಸ್ಸನ್ನು ನಿಷೇಧಿಸುವಾಗ ಜಮಾಅತೆ ಇಸ್ಲಾಮೀ ಹಿಂದನ್ನೂ ನಿಷೇಧಿಸಿದ್ದರು.
2. ಆರೆಸ್ಸೆಸ್ ಚಟುವಟಿಕೆಯಲ್ಲಿ ಸರಕಾರಿ ನೌಕರರು ಭಾಗಿಯಾಗಬಾರದು ಎಂದು 1966ರಲ್ಲಿ ಇಂದಿರಾ ಗಾಂಧಿ ಹೊರಡಿಸಿದ ಆದೇಶದ ಸಂದರ್ಭದಲ್ಲೂ ಈ ನಿಷೇಧವನ್ನು ಜಮಾಅತೆ ಇಸ್ಲಾಮೀ ಹಿಂದ್‌ಗೂ ಅನ್ವಯಿಸಿದ್ದರು.
3. ಜಮಾಅತೆ ಇಸ್ಲಾಮೀ ಹಿಂದ್ ಎಂಬ ಹೆಸರೇ ಅದು ಮುಸ್ಲಿಮ್ ಕೋಮುವಾದವನ್ನು ಪ್ರೇರೇಪಿಸುವ ಸಂಘಟನೆ ಎಂಬುದಕ್ಕೆ ಪುರಾವೆಯಾಗಿದೆ.
4. ಜಮಾಅತೆ ಇಸ್ಲಾಮೀ ಹಿಂದ್ ಹಿಂದೂಗಳನ್ನು ಇಸ್ಲಾಮ್ ಧರ್ಮಕ್ಕೆ ಮತಾಂತರ ಮಾಡುವ ಗುರಿಯನ್ನು ಹೊಂದಿದೆ.
5. ಮುಸ್ಲಿಮ್ ಕೋಮುವಾದಕ್ಕೆ ಇದು ಬೆಂಬಲವಾಗಿ ನಿಲ್ಲುತ್ತದೆ.
6. ಜಮಾಅತೆ ಇಸ್ಲಾಮೀ ಹಿಂದ್‌ನ ಸ್ಥಾಪಕ ಮೌಲಾನಾ ಮೌದೂದಿ ಓರ್ವ ಪಾಕಿಸ್ತಾನಿ ವ್ಯಕ್ತಿಯಾಗಿದ್ದಾರೆ.
7. ಜಮಾಅತೆ ಇಸ್ಲಾಮೀ ಹಿಂದನ್ನು ಬಾಂಗ್ಲಾದೇಶದಲ್ಲಿ ನಿಷೇಧಿಸಲಾಗಿದೆ.
8. ಜಮಾಅತೆ ಇಸ್ಲಾಮೀ ಹಿಂದ್ ಹಿಂದೂ ವಿರೋಧಿ

ನಿಜವಾಗಿ,

ಕ್ರಮಸಂಖ್ಯೆ 2ನ್ನು ಬಿಟ್ಟರೆ ಉಳಿದೆಲ್ಲ ಅಂಶಗಳೂ ಅಪ್ಪಟ ಸುಳ್ಳಿನಿಂದ ಕೂಡಿವೆ. ಜಮಾಅತೆ ಇಸ್ಲಾಮೀ ಹಿಂದ್‌ಗೂ ಈ ಎಲ್ಲ ಅಭಿಪ್ರಾಯಗಳಿಗೂ ಯಾವುದೇ ಸಂಬಂಧ ಇಲ್ಲ. 1948ರಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಸ್ಥಾಪನೆಯೇ ಆಗಿರಲಿಲ್ಲ.  1948ರಲ್ಲಿ ಆರೆಸ್ಸೆಸ್ ಅನ್ನು ನಿಷೇಧಿಸುವಾಗ ಉಪಪ್ರಧಾನಿ ವಲ್ಲಭ ಭಾಯಿ ಪಟೇಲ್ ಅವರು ಹೀಗೆ ಹೇಳಿದ್ದರು, 

     ‘.... ನಾವು ಆರೆಸ್ಸೆಸ್‌ನೊಂದಿಗೆ ಮಾತಾಡಿದ್ದೇವೆ. ಹಿಂದೂ ರಾಜ್ಯ ಅಥವಾ ಹಿಂದೂ ಸಂಸ್ಕೃತಿಯನ್ನು ಬಲವಂತವಾಗಿ ಹೇರಲು ಅವರು ಬಯಸುತ್ತಾರೆ. ಇದನ್ನು ಯಾವ ಸರಕಾರವೂ ಸಹಿಸುವುದಿಲ್ಲ. ಈ ದೇಶದಲ್ಲಿ ವಿಭಜನೆಯಾದ ಭಾಗದಷ್ಟು ಮುಸ್ಲಿಮರು ಈಗಲೂ ಇದ್ದಾರೆ. ನಾವು ಅವರನ್ನು ಓಡಿಸುವುದಿಲ್ಲ. ವಿಭಜನೆ ಮತ್ತು ಏನೇ ಆದರೂ ನಾವು ಆ ಆಟವನ್ನು ಪ್ರಾರಂಭಿಸಿದರೆ ಅದು ಕೆಟ್ಟ ದಿನವಾಗಿರುತ್ತದೆ. ಅವರು ಇಲ್ಲೇ ಇರುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಮತ್ತು ಇದು ಅವರ ದೇಶ ಎಂಬ ಭಾವನೆ ಮೂಡಿಸುವುದು ನಮ್ಮ ಜವಾಬ್ದಾರಿಯಾಗಿದೆ. ಮತ್ತೊಂದೆಡೆ, ಈ ದೇಶದ ನಾಗರಿಕರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದು ಅವರ ಜವಾಬ್ದಾರಿಯಾಗಿದೆ. ದೇಶ ವಿಭಜನೆ ಮುಗಿದ ಅಧ್ಯಾಯ ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು’... 

ಹಾಗಂತ, ಇಂಥದ್ದೊಂದು  ಸಮರ್ಥನೆಯನ್ನು 1966ರಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಅನ್ನು ನಿಷೇಧಿಸುವಾಗ ಇಂದಿರಾ ಗಾಂಧೀ ನೀಡಿಯೇ ಇರಲಿಲ್ಲ. ಅರೆಸ್ಸೆಸ್ಸನ್ನು ನಿಷೇಧಿಸುವಾಗ ಜೊತೆಗೊಂದು ಮುಸ್ಲಿಂ ಸಂಘಟನೆ ಬೇಕು ಎಂಬ ಕಾರಣವಷ್ಟೇ ಜಮಾಅತ್ ಅನ್ನು ನಿಷೇಧಿಸುವುದಕ್ಕೆ ಕಾರಣವಾಗಿತ್ತು.   ಸಮತೋಲನ ನೀತಿಯನ್ನು ಅನುಸರಿಸಿದರು. ಆರೆಸ್ಸೆಸ್ ಚಟುವಟಿಕೆಯಲ್ಲಿ ಸರಕಾರಿ ನೌಕರರು ಭಾಗಿಯಾಗಬಾರದು ಎಂಬ ಆದೇಶವನ್ನು ಜಮಾಅತೆ ಇಸ್ಲಾಮೀ ಹಿಂದ್‌ಗೂ ಅನ್ವಯಿಸಿದ್ದರು. ಹಿಂದೂಗಳನ್ನು ತೃಪ್ತಿಪಡಿಸುವುದು ಇದರ ಹಿಂದಿತ್ತೇ ಹೊರತು ಇನ್ನಾವ ಕಾರಣಗಳೂ ಈ ನಿಯಂತ್ರಣಕ್ಕೆ ಇರಲಿಲ್ಲ.

3. ಜಮಾಅತೆ ಇಸ್ಲಾಮೀ ಹಿಂದ್ ಅಂದರೆ ದೇಶವನ್ನು ಇಸ್ಲಾಮ್‌ಮಯಗೊಳಿಸಲು ಹುಟ್ಟಿಕೊಂಡಿರುವ ಸಂಘಟನೆ ಎಂದು ಅರ್ಥವಲ್ಲ. ಭಾರತದ ಇಸ್ಲಾಮೀ ಸಂಘಟನೆ ಎಂದಷ್ಟೇ ಇದರರ್ಥ. ಅದರಾಚೆಗೆ ಇನ್ನಾವ ಕಲ್ಪಿತ ಅರ್ಥಕ್ಕೂ ಅವಕಾಶ ಇಲ್ಲ. ದೇಶದಲ್ಲಿ ಈ ಬಗೆಯ ನೂರಾರು ಸಂಘಟನೆಗಳಿವೆ. ಒಕ್ಕಲಿಗ, ಕುರುಬ, ಲಿಂಗಾಯತ, ದಲಿತ, ಬ್ರಾಹ್ಮಣ, ಜಾಟ್.. ಹೀಗೆ ತಂತಮ್ಮ ಐಡೆಂಟಿಟಿಯ ಹೆಸರಲ್ಲಿ ಗುರುತಿಸುವ ಸಂಘಟನೆಗಳು ಅನೇಕ. ಇಸ್ಲಾಮ್ ಧರ್ಮದಲ್ಲಿ ಈ ರೀತಿಯಾಗಿ ಜಾತಿ ವಿಂಗಡನೆ ಇಲ್ಲದೇ ಇರುವುದರಿಂದ ಭಾರತದ ಇಸ್ಲಾಮೀ ಸಂಘಟನೆ ಎಂದೇ ಹೆಸರಿಸಲಾಗಿದೆ. ಗಮನಿಸಿ, ಅದರ ಹೆಸರಿನ ಕೊನೆಯಲ್ಲಿ ಹಿಂದ್ ಎಂದಿದೆ. ಅಂದರೆ, ಹಿಂದೂಸ್ತಾನದ ಸಂಘಟನೆ ಎಂದು ಅರ್ಥ. ಇದರಲ್ಲಿ ಕೋಮುವಾದ ಹೇಗೆ ಬಂತು ಎಂದು ಗೊತ್ತಾಗುವುದಿಲ್ಲ. ಇಸ್ಲಾಮ್ ಎಂಬ ಹೆಸರು ಕೋಮುವಾದದ ಸಂಕೇತವಲ್ಲ. ಅದೊಂದು ಧರ್ಮಸೂಚಕ ಪದ. ಇಸ್ಲಾಮ್ ಅಂದರೆ ಶಾಂತಿ ಎಂದು ಅರ್ಥ. ಹಿಂದೂ ಎಂಬ ಪದ ಹೇಗೆ ಕೋಮುವಾದದ ಸೂಚಕ ಅಲ್ಲವೋ ಕ್ರೈಸ್ತ, ಸಿಕ್ಖ್, ಯಹೂದಿ, ಬೌದ್ಧ ಇತ್ಯಾದಿ ಪದಗಳು ಹೇಗೆ ಕೋಮುವಾದಿ ಅಲ್ಲವೋ ಹಾಗೆಯೇ ಇಸ್ಲಾಮ್ ಕೂಡಾ ಕೋಮುವಾದಿ ಪದ ಅಲ್ಲ ಎಂದಷ್ಟೇ ಈ ಸಂದರ್ಭದಲ್ಲಿ ಹೇಳಬಲ್ಲೆ.

4. ಇನ್ನು, ಜಮಾಅತೆ ಇಸ್ಲಾಮೀ ಹಿಂದ್ ಯಾವುದೇ ಮತಾಂತರ ಕಾರ್ಯದಲ್ಲಿ ತೊಡಗಿಸಿಕೊಂಡಿಲ್ಲ. ‘ಮತಾಂತರ ಮಾಡುವುದು’ ಎಂಬ ಪದದಲ್ಲಿಯೇ ಪರೋP್ಷÀವಾಗಿ ಬಲವಂತ ಎಂಬುದನ್ನು ಪರೋಕ್ಷ ವಾಗಿ ಧ್ವನಿಸುತ್ತದೆ. ಮತಾಂತರ ಮಾಡುವುದಕ್ಕೆ ಈ ದೇಶದ ಸಂವಿಧಾನ ಅನುಮತಿಸುವುದೂ ಇಲ್ಲ. ಅದೇವೇಳೆ, ಧರ್ಮ ಪ್ರಚಾರಕ್ಕೆ ಮತ್ತು ಯಾರಿಗಾದರೂ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಆಗಬೇಕೆಂದು ಇದ್ದರೆ ಅದಕ್ಕೆ ಈ ದೇಶದ ಸಂವಿಧಾನ ಅನುಮತಿಸುತ್ತದೆ. ಜಮಾಅತೆ ಇಸ್ಲಾಮೀ ಹಿಂದ್ ಈ ದೇಶದ ಸಂವಿಧಾನಕ್ಕೆ ಬದ್ಧವಾಗಿದ್ದುಕೊಂಡು ಮತ್ತು ಅದರ ಅಡಿಯಲ್ಲಿ ಕಾರ್ಯಾಚರಿಸುವ ಸಂಘಟನೆ. ಅದರ ಯಾವ ಕೆಲಸ ಕಾರ್ಯಗಳೂ ನಿಗೂಢವಾಗಿಲ್ಲ. ಅದಕ್ಕೊಂದು ಸಂವಿಧಾನವಿದೆ. ಅದು ಸಾರ್ವಜನಿಕವಾಗಿ ಲಭ್ಯವಿದೆ. ನೋಂದಾಯಿತ ಸದಸ್ಯರಿದ್ದಾರೆ. ಕಾರ್ಯಕರ್ತರಿದ್ದಾರೆ. ಅದರ ಚಟುವಟಿಕೆಗಳೂ ಬಹಿರಂಗವಾಗಿಯೇ ಇವೆ. ಅದರ ಕಾರ್ಯಾಲಯ ಕೂಡಾ ಬೋರ್ಡ್ ಅಂಟಿಸಿಕೊಂಡು  ಬಹಿರಂಗವಾಗಿಯೇ ಇದೆ. ಜಮಾಅತೆ ಇಸ್ಲಾಮೀ ಹಿಂದ್ ಈ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಇಸ್ಲಾಮ್ ಧರ್ಮದ ಮೌಲ್ಯಗಳನ್ನು ಅದು ಸಾರ್ವಜನಿಕ ವೇದಿಕೆಗಳನ್ನು ಕಟ್ಟಿ ಪ್ರತಿಪಾದಿಸುತ್ತದೆ. ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು, ಮೌಢ್ಯಗಳನ್ನು ದೂರೀಕರಿಸಲು, ಕೆಡುಕುಗಳನ್ನು ಇಲ್ಲವಾಗಿಸಲು, ಕೋಮು ಸೌಹಾರ್ದವನ್ನು ಸ್ಥಾಪಿಸಲು ಅದು ನಿರಂತರ ಕೆಲಸ ಮಾಡುತ್ತಿದೆ. ಹಿಂದೂ-ಮುಸ್ಲಿಮರನ್ನು ಜೊತೆಗೂಡಿಸಿಕೊಂಡು ‘ಸದ್ಭಾವನಾ ಮಂಚ್’ ಎಂಬ ವೇದಿಕೆಯನ್ನು ಕಟ್ಟಿ ದೇಶಾದ್ಯಂತ ಕೋಮು ಸೌಹಾರ್ದಕ್ಕಾಗಿ ಕೆಲಸ ಮಾಡುತ್ತಿದೆ. ಸ್ವಾಮೀಜಿಗಳು ಮತ್ತು ಮುಸ್ಲಿಮ್ ಧರ್ಮಗುರುಗಳನ್ನು ಒಂದೇ ವೇದಿಕೆಯಲ್ಲಿ ತಂದು ‘ಸೌಹಾರ್ದ ಸಮಾಜ’ ಕಟ್ಟುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆ. ಮುಸ್ಲಿಮರಲ್ಲಿ ಸುಧಾರಣೆಯನ್ನು ಉಂಟು ಮಾಡುವುದಕ್ಕೆ ಹತ್ತು ಹಲವು ಅಭಿಯಾನಗಳನ್ನು ಕೈಗೊಳ್ಳುತ್ತಿದೆ. ವರದಕ್ಷಿಣೆ ವಿರೋಧಿ ಅಭಿಯಾನ, ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಅಭಿಯಾನ, ಹೆಣ್ಣು ಶಿಶು ಹತ್ಯೆ ವಿರೋಧಿ ಅಭಿಯಾನ, ಮಾದಕ ವಸ್ತು ವಿರೋಧಿ ಜನಜಾಗೃತಿ ಅಭಿಯಾನ, ಕೋಮು ಸೌಹಾರ್ದಕ್ಕಾಗಿ ಅಭಿಯಾನಗಳನ್ನು ಆಗಾಗ ನಡೆಸುತ್ತಾ ಬಂದಿದೆ. ಜೊತೆಗೇ ತನ್ನದೇ ವಿವಿಧ ವಿಭಾಗಗಳ ಮೂಲಕ ಸಮಾಜ ಸೇವೆಯಲ್ಲೂ ನಿರತವಾಗಿದೆ. ಪ್ರವಾಹ, ಭೂಕುಸಿತ, ಕೋಮುಗಲಭೆ ಇತ್ಯಾದಿಗಳ ಸಂದರ್ಭದಲ್ಲಿ ತನ್ನ ಸ್ವಯಂ ಸೇವಕರ ಮೂಲಕ ಜನರ ನೆರವಿಗೆ ಧಾವಿಸುತ್ತಿದೆ. ಕಳೆದ 7 ದಶಕಗಳಲ್ಲಿ ಇಂಥ ಸಾವಿರಾರು ಸೇವೆಗಳನ್ನು ಜಮಾಅತೆ ಇಸ್ಲಾಮೀ ಹಿಂದ್ ನಡೆಸಿದೆ ಮತ್ತು ನಡೆಸುತ್ತಲೂ ಇದೆ.

5. ಜಮಾಅತೆ ಇಸ್ಲಾಮೀ ಹಿಂದ್ ಎಂದೂ ಕೋಮುವಾದವನ್ನು ಬೆಂಬಲಿಸಿಲ್ಲ ಮತ್ತು ಬೆಂಬಲಿಸುವುದಿಲ್ಲ. ‘ಕೋಮುವಾದಿ ಮುಸ್ಲಿಮ್ ಅಲ್ಲ’ ಎಂಬ ಪ್ರವಾದಿ ವಚನವನ್ನು ಬಲವಾಗಿ ಪ್ರತಿಪಾದಿಸುವ ಸಂಘಟನೆ ಇದು. ತನ್ನ ಪ್ರತಿ ಕಾರ್ಯಕ್ರಮದಲ್ಲೂ ಸಭೆಯಲ್ಲೂ ಅದು ಕೋಮುವಾದದ ವಿರುದ್ಧ ಮಾತಾಡುತ್ತಾ ಬಂದಿದೆ. ಕೋಮುಗಲಭೆ ನಡೆದಾಗ ಅಲ್ಲಿಯ ಜನರನ್ನು ಸೇರಿಸಿ ಕೋಮುವಾದದ ಕರಾಳತೆಯನ್ನು ಹೇಳುವ ಸಂಘಟನೆಯಾಗಿ ಜಮಾಅತೆ ಇಸ್ಲಾಮೀ ಹಿಂದ್ ಗುರುತಿಸಿಕೊಂಡಿದೆ. ಕೋಮುಗಲಭೆಯ ಆರೋಪದಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ಒಬ್ಬನೇ ಒಬ್ಬ ಸದಸ್ಯನನ್ನು ಈವರೆಗೆ ಬಂಧಿಸಿಲ್ಲ ಎಂಬುದೇ ಜಮಾಅತ್ ಏನೆಂಬುದಕ್ಕೆ ಸಾಕ್ಷ್ಯವಾಗಿದೆ. ಈಗಲೂ ಅದರ ದಾಖಲೆಯನ್ನು ಪರಿಶೀಲಿಸಿ ಈ ಬಗ್ಗೆ ಸ್ಪಷ್ಟಪಡಿಸಿಕೊಳ್ಳಲು ಮುಕ್ತ ಅವಕಾಶವಿದೆ.

6. ಇದೂ ಸುಳ್ಳು. ಜಮಾಅತೆ ಇಸ್ಲಾಮೀ ಹಿಂದ್‌ನ ಸ್ಥಾಪಕ ಮೌದೂದಿ ಅಲ್ಲ. ಅವರು ಜಮಾಅತೆ ಇಸ್ಲಾಮಿಯ ಸ್ಥಾಪಕ. ಅವರು ಈ ಸಂಘಟನೆಯನ್ನು ಸ್ವಾತಂತ್ರ‍್ಯಪೂರ್ವದಲ್ಲಿ 1941ರಲ್ಲಿ ಸ್ಥಾಪಿಸಿದ್ದಾರೆ. ಇಸ್ಲಾಮ್‌ನ ಹೆಸರಲ್ಲಿ ನಡೆಯುತ್ತಿರುವ ಕಂದಾಚಾರ, ಮೌಢ್ಯ, ಅಧರ್ಮಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಅವರು ಈ ಸಂಘಟನೆ ಸ್ಥಾಪಿಸಿದ್ದರು. ಅದರ ಕೇಂದ್ರ ಕಚೇರಿ ಪಂಜಾಬ್‌ನಲ್ಲಿತ್ತು. ಅವರೂ ಅದೇ ಪಂಜಾಬ್‌ನಲ್ಲಿಯೇ ಕುಟುಂಬ ಸಮೇತ ವಾಸಿಸುತ್ತಿದ್ದರು. ಭಾರತ ಇಬ್ಭಾಗವಾಗುವುದನ್ನು ಪ್ರಬಲವಾಗಿ ವಿರೋಧಿಸಿದವರಲ್ಲಿ ಈ ಮೌದೂದಿ ಕೂಡಾ ಒಬ್ಬರು. ಆದರೆ ಎಲ್ಲರ ಬಯಕೆಯನ್ನೂ ಮೀರಿ ಭಾರತ ಇಬ್ಭಾಗವಾದಾಗ ಅವರಿದ್ದ ಪಂಜಾಬ್‌ನ ಭಾಗ ಪಾಕಿಸ್ತಾನದ ಪಾಲಾಯಿತು. ಆ ಮೂಲಕ ಅವರು ಪಾಕಿಸ್ತಾನದ ಭಾಗವಾದರು. ಅದರಾಚೆಗೆ ಅವರು ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋದವರಲ್ಲ. ಅವರಿದ್ದ ಮನೆಯೇ ಪಾಕಿಸ್ತಾನವಾದಾಗ ಅವರು ಸಹಜವಾಗಿಯೇ ಪಾಕಿಸ್ತಾನಿಯಾದರು. ಉತ್ತರ ಭಾರತದಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋದ ಮುಸ್ಲಿಮ್ ಕುಟುಂಬಗಳಲ್ಲಿ ಅವರಿಲ್ಲ. ಆದರೆ, ಅನೇಕರು ಈ ಸತ್ಯವನ್ನು ಮರೆಮಾಚಿ ಅವರನ್ನು ಪಾಕಿಸ್ತಾನಕ್ಕೆ ವಲಸೆ ಹೋದ ಕುಟುಂಬದAತೆ ಸುಳ್ಳನ್ನು ಹರಡುತ್ತಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ 1948ರಲ್ಲಿ ಭಾರತದಲ್ಲಿ ಮರುರೂಪೀಕರಣಗೊಂಡ ಸಂಘಟನೆ ಎಂಬುದು ನಿಜ. ಅದರಾಚೆಗಿನ ಎಲ್ಲವೂ ಸುಳ್ಳು.

7. ಜಮಾಅತೆ ಇಸ್ಲಾಮೀ ಹಿಂದನ್ನು ಬಾಂಗ್ಲಾದೇಶದಲ್ಲಿ ನಿಷೇಧಿಸಲಾಗಿಲ್ಲ. ಜಮಾಅತೆ ಇಸ್ಲಾಮೀ ಹಿಂದನ್ನು ಭಾರತದ ಹೊರತು ಇನ್ನಾವ ರಾಷ್ಟçಕ್ಕೂ ನಿಷೇಧಿಸಲು ಸಾಧ್ಯವೂ ಇಲ್ಲ. ಯಾಕೆಂದರೆ, ಜಮಾಅತೆ ಇಸ್ಲಾಮೀ ಹಿಂದ್ ಅಂದರೆ ಭಾರತದ ಇಸ್ಲಾಮೀ ಸಂಘಟನೆ ಎಂದು ಅರ್ಥ. ಅದನ್ನು ಬಾಂಗ್ಲಾದೇಶ ನಿಷೇಧಿಸುವುದು ಹೇಗೆ? ಬಾಂಗ್ಲಾದೇಶವು ಬಾಂಗ್ಲಾದೇಶದ ಜಮಾಅತೆ ಇಸ್ಲಾಮಿಯನ್ನು ನಿಷೇಧಿಸಿದೆ. ಅದಕ್ಕೆ ರಾಜಕೀಯವೇ ಕಾರಣವಾಗಿದೆ. ಬೇಗಂ ಖಾಲಿದಾ ಝಿಯಾ ಅವರನ್ನು ಬೆಂಬಲಿಸುತ್ತಿದ್ದ ಬಾಂಗ್ಲಾದೇಶದ ಜಮಾಅತೆ ಇಸ್ಲಾಮಿಯು ಹಸೀನಾರ ವಿರುದ್ಧ ಕೆಲಸ ಮಾಡುತ್ತಿತ್ತು. ಅಲ್ಲಿ ಅದು ರಾಜಕೀಯ ಪಕ್ಷವಾಗಿಯೇ ಗುರುತಿಸಿಕೊಂಡಿದೆ. ಅಲ್ಲಿನ ರಾಜಕೀಯ ಇತಿಹಾಸವನ್ನು ಅಧ್ಯಯನ ನಡೆಸಿದರೆ ಇದಕ್ಕೆ ಸೂಕ್ತ ಉತ್ತರ ಲಭಿಸಬಹುದು.

8. ಇದು ದೊಡ್ಡ ಸುಳ್ಳು. ಹಿಂದೂ-ಮುಸ್ಲಿಮರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿರುವ ಈ ದೇಶದ ಪ್ರಮುಖ ಸಂಘಟನೆಗಳಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕೂಡಾ ಒಂದು. ಹಿಂದೂಗಳನ್ನು ಸೇರಿಸಿ ಸದ್ಭಾವನಾ ಮಂಚ್ ಮಾಡಿರೋದು ಈ ದೇಶದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮಾತ್ರ. ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮಗುರುಗಳನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಅವರವರ ಧರ್ಮದ ಮೌಲ್ಯಗಳನ್ನು ಸಭಿಕರಿಗೆ ಹೇಳುವ ವೇದಿಕೆ ಸೃಷ್ಟಿಸುತ್ತಿರುವುದೂ ಜಮಾಅತೆ ಇಸ್ಲಾಮೀ ಹಿಂದ್ ಮಾತ್ರ. ಈ ದೇಶದ ಸ್ವಾಮೀಜಿಗಳೊಂದಿಗೆ ಅತ್ಯಂತ ನಿಕಟ ಸಂಬಂಧವನ್ನು ಇಟ್ಟುಕೊಂಡಿರುವುದೂ ಜಮಾಅತೆ ಇಸ್ಲಾಮೀ ಹಿಂದ್ ಮಾತ್ರ. ಜಮಾಅತ್‌ನ ಸಾವಿರಾರು ಪುಸ್ತಕಗಳೇ ಅದು ಏನು ಅನ್ನುವುದನ್ನು ತಿಳಿದುಕೊಳ್ಳುವುದಕ್ಕೆ ಧಾರಾಳ ಸಾಕು. ಅದರ ಸಾಹಿತ್ಯ ದೇಶದ ಎಲ್ಲ ಭಾಷೆಗಳಲ್ಲೂ ಲಭ್ಯ ಇದೆ. ಕುರ್‌ಆನನ್ನು ಕನ್ನಡ ಸಹಿತ ಎಲ್ಲ ಭಾಷೆಗಳಿಗೂ ಅನುವಾದಿಸಿ ಮೊಟ್ಟಮೊದಲು ಹಂಚಿದ್ದೂ ಜಮಾಅತೆ ಇಸ್ಲಾಮೀ ಹಿಂದ್. ಅದು ಹಿಂದೂಗಳನ್ನು ಎಂದೂ ವಿರೋಧಿಸಿಲ್ಲ. ವಿರೋಧಿಸುವುದು ಅದರ ಸಿದ್ಧಾಂತವೇ ಅಲ್ಲ. ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಬೇಕಾದರೆ ಶಾಂತಿ ಪ್ರಕಾಶನ ಎಂಬ ಪ್ರಕಾಶನ ಸಂಸ್ಥೆಯ ಪುಸ್ತಕಗಳನ್ನು ಓದಬಹುದು. ಆದ್ದರಿಂದ ಜಮಾಅತೆ ಇಸ್ಲಾಮೀ ಹಿಂದನ್ನು ಆರೆಸ್ಸೆಸ್‌ನೊಂದಿಗೆ ಜೋಡಿಸುವುದು ಅಥವಾ ಅದನ್ನು ಕೋಮುವಾದಿ, ಹಿಂದೂ ವಿರೋಧಿ ಮತ್ತು ಮತಾಂತರಿಯಂತೆ  ಕಾಣುವುದು ಸರ್ವಥಾ ಸರಿಯಲ್ಲ.
ಅಂದಹಾಗೆ, 

ಆರೆಸ್ಸೆಸ್ ಚಟುವಟಿಕೆಯಲ್ಲಿ ಭಾಗವಹಿಸುವುದಕ್ಕೆ ಸರಕಾರಿ ನೌಕರರಿಗಿದ್ದ ನಿಷೇಧವನ್ನು ಮೊನ್ನೆ ಕೇಂದ್ರ ಸರಕಾರ ಹಿಂಪಡೆದ ಬಳಿಕ ಉಂಟಾದ ಆರೆಸ್ಸೆಸ್-ಜಮಾಅತೆ ಇಸ್ಲಾಮೀ ಹಿಂದ್ ಚರ್ಚೆಯನ್ನು ಗಮನಿಸಿ ಈ ಎಲ್ಲವನ್ನೂ ಹೇಳಬೇಕಾಯಿತು.

No comments:

Post a Comment