Friday, July 26, 2024

ಮುಸ್ಲಿಮ್ ದ್ವೇಷಿ ರಾಜಕೀಯಕ್ಕೆ ಟಾಟಾ ಹೇಳುತ್ತಿದ್ದಾರೆಯೇ ಮತದಾರರು?






1. ಕರ್ನಾಟಕ
2. ಉತ್ತರ ಪ್ರದೇಶ
3. ಪಶ್ಚಿಮ ಬಂಗಾಳ
4. ಮಹಾರಾಷ್ಟ್ರ 
5. ಹರ್ಯಾಣ

ತೀವ್ರ ಮುಸ್ಲಿಮ್ ದ್ವೇಷವು ಎಲ್ಲಿಯ ವರೆಗೆ ಕೈ ಹಿಡಿಯುತ್ತೆ ಎಂಬ ಪ್ರಶ್ನೆಯನ್ನು ಈ ಬಾರಿಯ ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ಸ್ವಯಂ ಕೇಳಿಕೊಂಡಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಂಥದ್ದೊಂದು  ಪ್ರಶ್ನೆಯನ್ನು  ಕೇಳಿಕೊಳ್ಳಬೇಕಾದ ಮತ್ತು ಆತ್ಮಾವಲೋಕನಕ್ಕೆ ಸಿದ್ಧವಾಗಲೇಬೇಕಾದ ಜರೂರತ್ತು ಬಿಜೆಪಿಗೆ ಎದುರಾಗಿದೆ ಎಂಬುದಂತೂ   ಸ್ಪಷ್ಟ. 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 28 ಸ್ಥಾನಗಳ ಪೈಕಿ 25ರಲ್ಲಿ ಗೆಲುವು ಸಾಧಿಸಿತ್ತು.  ಕಾಂಗ್ರೆಸ್‌ಗೆ ದಕ್ಕಿದ್ದು ಬರೇ ಒಂದು ಸೀಟು. ಮಾತ್ರವಲ್ಲ, ಆ ಬಳಿಕ 2023ರ ವರೆಗೆ ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ  ಬಿಜೆಪಿಯೇ ಆಳ್ವಿಕೆಯನ್ನೂ ನಡೆಸಿತು. ಆರಂಭದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಬಳಿಕ ಬೊಮ್ಮಾಯಿ  ಮುಖ್ಯಮಂತ್ರಿಯಾದರು. ಮುಖ್ಯವಾಗಿ,

ಬೊಮ್ಮಾಯಿ ಆಡಳಿತದ ಸಮಯದಲ್ಲಿ ಮುಸ್ಲಿಮ್ ದ್ವೇಷ ಪ್ರಕರಣಗಳು ತೀವ್ರಗೊಂಡವು. ಸ್ವತಃ ಮುಖ್ಯಮಂತ್ರಿಯವರೇ  ಅದರ ನೇತೃತ್ವ ವಹಿಸಿಕೊಂಡಂತೆ  ಆಡತೊಡಗಿದರು. ಅನೈತಿಕ ಪೊಲೀಸ್‌ಗಿರಿಯನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂಬ ಹೆಸರಲ್ಲಿ  ಸಮರ್ಥಿಸಿಕೊಂಡರು. ಕರಾವಳಿಯಲ್ಲಿ ಒಂದೇ ತಿಂಗಳೊಳಗೆ ನಡೆದ ಮೂವರು ಯುವಕರ ಹತ್ಯೆಯಲ್ಲಿ ಅತ್ಯಂತ  ಏಕಮುಖವಾಗಿ ನಡಕೊಂಡರು. ಇಬ್ಬರು ಮುಸ್ಲಿಮ್ ಯುವಕರ ಕುಟುಂಬಗಳಿಗೆ ನಯಾಪೈಸೆ ಪರಿಹಾರವನ್ನೂ ನೀಡಲಿಲ್ಲ.  ಆದರೆ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ್ದಲ್ಲದೇ, 25 ಲಕ್ಷ ಪರಿಹಾರವನ್ನೂ ನೆಟ್ಟಾರು ಪತ್ನಿಗೆ ಉದ್ಯೋಗವನ್ನೂ  ದೊರಕಿಸಿಕೊಟ್ಟರು. ಆದರೆ ಅಲ್ಲೇ  ಪಕ್ಕದಲ್ಲಿದ್ದ ಮಸೂದ್ ಎಂಬ ಯುವಕನ ಸಂತ್ರಸ್ತ ತಾಯಿಯನ್ನು ಭೇಟಿ ಮಾಡಿ  ಸಾಂತ್ವನಿಸುವ ಕನಿಷ್ಠ ಸೌಜನ್ಯವನ್ನೂ ಅವರು ತೋರಲಿಲ್ಲ. ಅಧಿಕಾರದ ಕೊನೆಯ ದಿನಗಳಲ್ಲಿ ಮುಸ್ಲಿಮ್ ಮೀಸಲಾತಿಯನ್ನು  ಏಕಾಏಕಿ ಕಿತ್ತುಹಾಕಿದರು. ಸ್ಥಳೀಯ ವಾಗಿ ಪರಿಹರಿಸಬಹುದಾಗಿದ್ದ ಹಿಜಾಬ್ ವಿಷಯವನ್ನು ಮತ ಧ್ರುವೀಕರಣಕ್ಕಾಗಿ  ಬಳಸಿಕೊಂಡರು. ಮುಸ್ಲಿಮರ  ಬಗ್ಗೆ ಅತ್ಯಂತ ನಕಾರಾತ್ಮಕವಾಗಿ ಮತ್ತು ತೀರಾ ದ್ವೇಷಮಯವಾಗಿ ನಡಕೊಂಡರು. ಇದರ  ನಡುವೆಯೇ ಹಲಾಲ್ ಕಟ್, ಜಟ್ಕಾ ಕಟ್, ಮುಸ್ಲಿಮ್ ವ್ಯಾಪಾರಿಗಳಿಗೆ ಜಾತ್ರೆಗಳಲ್ಲಿ ನಿಷೇಧ ಇತ್ಯಾದಿಗಳ ಮೂಲಕ  ಮುಸ್ಲಿಮ್ ದ್ವೇಷವನ್ನು ಜೀವಂತ ಉಳಿಸಿಕೊಳ್ಳಲಾಯಿತು. ಗೋಸಾಗಾಟದ ಹೆಸರಲ್ಲಿ ಹಲವು ಕಡೆ ಮುಸ್ಲಿಮರನ್ನು ಗುರಿ  ಮಾಡಿ ಥಳಿಸಲಾಯಿತು. ಒಂದುರೀತಿಯಲ್ಲಿ,

ಮುಸ್ಲಿಮರನ್ನೇ ಗುರಿಮಾಡಿದ ಆಡಳಿತ ನೀತಿಯನ್ನು ಬೊಮ್ಮಾಯಿ ಸರಕಾರ ಉದ್ದಕ್ಕೂ ನಿರ್ವಹಿಸುತ್ತಾ ಬಂತು. ಮುಸ್ಲಿಮ್  ವಿರೋಧಿ ಭಾಷಣಗಳು ಸಾಮಾನ್ಯ ಎನ್ನುವಂತಾಯಿತು. ಸರಕಾರದ ಧೋರಣೆಯನ್ನೇ ಕನ್ನಡದ ಮುಂಚೂಣಿ ಟಿ.ವಿ. ಚಾ ನೆಲ್‌ಗಳೂ ತಳೆದುವು. 24 ಗಂಟೆ ಮುಸ್ಲಿಮ್ ದ್ವೇಷವನ್ನು ಉಗುಳುವ ಮತ್ತು ಮುಸ್ಲಿಮರನ್ನೇ ಕಟಕಟೆಯಲ್ಲಿ ನಿಲ್ಲಿಸಿ  ವಿಚಾರಣೆ ನಡೆಸುವ ರೀತಿಯಲ್ಲಿ ಕಾರ್ಯಕ್ರಮಗಳು ಪ್ರಸಾರವಾದುವು. ಮುಸ್ಲಿಮರನ್ನು ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ  ವಿರೋಧಿಸಿದರೆ ಮತ್ತು ದ್ವೇಷಭಾವವನ್ನು ಪ್ರಚೋದಿಸಿದರೆ ಮರಳಿ ಗೆಲ್ಲಬಹುದು ಎಂಬ ನಂಬಿಕೆ ಬೊಮ್ಮಾಯಿ ಸಹಿತ  ಕೇಂದ್ರ ಹೈಕಮಾಂಡ್‌ನಲ್ಲೂ ಇದ್ದಂತಿತ್ತು. ಆದರೆ, ಲೋಕಸಭಾ ಚುನಾವಣೆಗಿಂತ ಮೊದಲು ನಡೆದ ವಿಧಾನಸಭಾ ಚು ನಾವಣೆಯಲ್ಲಿ ರಾಜ್ಯದ ಮತದಾರರು ಬೊಮ್ಮಾಯಿ ಸರಕಾರವನ್ನು ತಿರಸ್ಕರಿಸಿದರು. ಮುಸ್ಲಿಮರನ್ನು ದ್ವೇಷಿಸುವುದರಿಂದ  ಹಿಂದೂ ಮತದಾರರನ್ನು ಧ್ರುವೀಕರಿಸಬಹುದು ಎಂಬ ನಂಬಿಕೆಗೆ ಬಿದ್ದ ಪ್ರಬಲ ಏಟು ಇದಾಗಿತ್ತು. ಇದಾಗಿ ಒಂದು  ವರ್ಷದ ಬಳಿಕ ಮೊನ್ನೆ ಲೋಕಸಭಾ ಚುನಾವಣೆ ನಡೆಯಿತು. ದುರಂತ ಏನೆಂದರೆ,

ರಾಜ್ಯದಲ್ಲಿ ಈಗಾಗಲೇ ಪ್ರಯೋಗಿಸಿ ವಿಫಲಗೊಂಡಿದ್ದ ಅದೇ ಸೂತ್ರವನ್ನು ಕೇಂದ್ರ ನಾಯಕರು ಮತ್ತೆ ರಾಜ್ಯದಲ್ಲೂ ಮತ್ತು  ದೇಶದುದ್ದಗಲಕ್ಕೂ ಪ್ರಯೋಗಿಸಿದರು. ಮುಸ್ಲಿಮ್ ಮೀಸಲಾತಿ ಕಿತ್ತು ಹಾಕಿರುವುದನ್ನು ಬೆಂಬಲಿಸಿದರು. ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿ ಎಂದು ಖುದ್ದು ಪ್ರಧಾನಿಯೇ ಕರೆಕೊಟ್ಟರು. ಹುಬ್ಬಳ್ಳಿಯ ನೇಹಾ ಹತ್ಯೆಯನ್ನು ಮುಸ್ಲಿಮ್ ವಿರೋಧಿ  ಭಾವನೆ ಕೆರಳಿಸಲು ಬಳಸಿಕೊಂಡರು. ಅದೇ ಸಂದರ್ಭದಲ್ಲಿ ಅದೇ ಹುಬ್ಬಳ್ಳಿ ಮತ್ತು ಕೊಡಗಿನ ಸೋಮವಾರಪೇಟೆಯಲ್ಲಿ  ನಡೆದ ಅಂಥದ್ದೇ  ಹತ್ಯೆಗಳ ಬಗ್ಗೆ ಮೌನವಹಿಸಿದರು. ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಹೇಗೆ ತೀವ್ರ ಮುಸ್ಲಿಮ್  ದ್ವೇಷವನ್ನು ನೀತಿಯಾಗಿ ಪಾಲಿಸಲಾಯಿತೋ ಅದೇ ಬಗೆಯ ನೀತಿಯನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ  ಪಾಲಿಸಿದರು. ಸಮಾಜವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದರಿಂದ ತನ್ನ ಮತದಾರರು ಕೈತಪ್ಪಲಾರರು  ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿತ್ತು. ಆ ಕಾರಣಕ್ಕಾಗಿಯೇ ಅದು ಒಬ್ಬನೇ ಒಬ್ಬ ಮುಸ್ಲಿಮ್ ವ್ಯಕ್ತಿಗೂ ಟಿಕೆಟ್ ನೀಡಲಿಲ್ಲ. ಆದರೆ ಜನರು ತೀವ್ರ ಮುಸ್ಲಿಮ್ ದ್ವೇಷಿ ನೀತಿಯನ್ನು ಪುನಃ ತಿರಸ್ಕರಿಸಿದರು. 2019ರಲ್ಲಿ 25 ಲೋಕಸಭಾ ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ 17 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. 2019ರಲ್ಲಿ ಏಕೈಕ ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ 9 ಸ್ಥಾನಗಳನ್ನು ಗೆದ್ದುಕೊಂಡಿತು. ಹಾಗಂತ,

ಈ ಬದಲಾವಣೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ.

2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ ಬಿಜೆಪಿಯ ಕೈ ಹಿಡಿದಿತ್ತು. 80 ಲೋಕಸಭಾ ಸ್ಥಾನಗಳ ಪೈಕಿ 64  ಸ್ಥಾನಗಳಲ್ಲಿ ಮತದಾರರು ಬಿಜೆಪಿಯನ್ನೇ ಗೆಲ್ಲಿಸಿದರು. ಕೇಂದ್ರದಲ್ಲಿ ಯಾವ ಸರಕಾರ ಇರಬೇಕು ಎಂಬುದನ್ನು  ನಿರ್ಧರಿಸುವುದಕ್ಕೆ ಉತ್ತರ ಪ್ರದೇಶದ ಫಲಿತಾಂಶ ನಿರ್ಣಾಯಕ. ಆದ್ದರಿಂದಲೇ, ಬಿಜೆಪಿಯ ರಾಷ್ಟ್ರೀಯ ನಾಯಕರು ಉತ್ತರ  ಪ್ರದೇಶಕ್ಕೆ ಅತೀ ಹೆಚ್ಚಿನ ಮಹತ್ವ ನೀಡುತ್ತಾರೆ. ಪ್ರಧಾನಿ ಮೋದಿಯವರು ತಮ್ಮ ತವರು ರಾಜ್ಯವಾದ ಗುಜರಾತನ್ನು ಬಿಟ್ಟು  ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸ್ಪರ್ಧಿಸುವುದಕ್ಕೆ ಕಾರಣವೂ ಇದುವೇ. ತನ್ನ ಸ್ಪರ್ಧೆಯು ಉತ್ತರ ಪ್ರದೇಶದ ಉಳಿದ 79  ಕ್ಷೇತ್ರಗಳ ಮೇಲೆ ಪರಿಣಾಮ ಬೀರಬೇಕು ಎಂಬ ತಂತ್ರವೂ ಇದರ ಹಿಂದಿದೆ. ಈ ಬಾರಿಯ ಲೋಕಸಭಾ ಚುನಾವಣೆಯ  ಮೊದಲು ತರಾತುರಿಯಿಂದ ರಾಮಮಂದಿರವನ್ನು ಉದ್ಘಾಟಿಸಲಾಯಿತು. ಮಾತ್ರವಲ್ಲ, ಆ ಇಡೀ ಪ್ರಕ್ರಿಯೆಯಲ್ಲಿ ಮುಸ್ಲಿಮ್  ವಿರೋಧಿ ಭಾವವನ್ನು ಬಡಿದೆಬ್ಬಿಸಲಾಯಿತು. ಮುಸ್ಲಿಮರನ್ನು ಸತಾಯಿಸುವ ಶೈಲಿಯನ್ನು ರಾಜನೀತಿಯಾಗಿ  ಬಿಂಬಿಸಲಾಯಿತು. ‘ಉತ್ತರ ಪ್ರದೇಶದ ರಸ್ತೆಯಲ್ಲಿ ಈಗ ನಮಾಝï ನಡೆಯುತ್ತಿಲ್ಲ, ಮೈಕ್‌ಗಳಲ್ಲಿ ಬಾಂಗ್ ಕೇಳಿಸುತ್ತಿಲ್ಲ..’  ಎಂದು ರಾಜಸ್ಥಾನದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೆಮ್ಮೆಯಿಂದ  ಹೇಳಿಕೊಂಡರು. ಪ್ರಧಾನಿ ಮೋದಿಯಂತೂ ಹಿಂದಿ ರಾಜ್ಯಗಳಲ್ಲಿ ಮಾಡಿದ ಭಾಷಣ ಗಳಲ್ಲಿ ಮುಸ್ಲಿಮರೇ ಕೇಂದ್ರೀಯ  ಸ್ಥಾನದಲ್ಲಿದ್ದರು. ನುಸುಳುಕೋರರು, ಹೆಚ್ಚು ಮಕ್ಕಳನ್ನು ಹುಟ್ಟಿಸುವವರು, ದೇಶದ ಸಂಪತ್ತಿನ ಮೊದಲ ಹಕ್ಕುದಾರರು,  ಮಾಂಗಲ್ಯ ಕಸಿಯುವವರು.. ಎಂಬೆಲ್ಲಾ ರೀತಿಯಲ್ಲಿ ಹೀನೈಸಿ ಮಾತಾಡಿದರು. ಹಿಂದಿ ರಾಜ್ಯದ ಮತದಾರರು ಮುಸ್ಲಿಮ್  ದ್ವೇಷವನ್ನು ಇಷ್ಟಪಡುತ್ತಾರೆ ಮತ್ತು ಮುಸ್ಲಿಮರನ್ನು ದ್ವೇಷಿಸಿದಷ್ಟೂ ತಮ್ಮ ಓಟ್ ಬ್ಯಾಂಕ್ ವೃದ್ಧಿಸುತ್ತದೆ ಎಂಬ ಭಾವದಲ್ಲಿ  ಪ್ರಧಾನಿಯಿಂದ ಹಿಡಿದು ಉಳಿದ ನಾಯಕರ ವರೆಗೆ ಎಲ್ಲರೂ ವಿವಿಧ ಪ್ರಚಾರ ಸಭೆಗಳಲ್ಲಿ ನಡಕೊಂಡರು. ಆದರೆ,
ಉತ್ತರ ಪ್ರದೇಶದ ಮತದಾರರು ಈ ದ್ವೇಷಕ್ಕೆ ಮರುಳಾಗಲಿಲ್ಲ. ಬರೇ 33 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ, 37 ಕ್ಷೇತ್ರಗಳಲ್ಲಿ  ಅಖಿಲೇಶ್ ಯಾದವ್‌ರ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದರು. ಅಸ್ತಿತ್ವವೇ ಕಳೆದುಹೋಗಿದ್ದ ಕಾಂಗ್ರೆಸನ್ನು 6 ಕ್ಷೇತ್ರಗಳಲ್ಲಿ  ಗೆಲ್ಲಿಸಿದರು.

ಹಾಗೆಯೇ,

ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ 2019ರಲ್ಲಿ ಕೇವಲ ಬಿಜೆಪಿಯೊಂದೇ 23 ಸ್ಥಾನಗಳನ್ನು ಗೆದ್ದುಕೊಂಡಿತ್ತು.  ಎನ್‌ಡಿಎಗೆ ಒಟ್ಟು 41 ಸ್ಥಾನಗಳು ದಕ್ಕಿತ್ತು. ಆದರೆ ಈ ಬಾರಿ ಜನರು ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ತಿರಸ್ಕರಿಸಿದರು.  ಬಿಜೆಪಿಗೆ ಕೇವಲ 9 ಸ್ಥಾನಗಳನ್ನು ನೀಡಿದ ಮಹಾರಾಷ್ಟ್ರದ ಮತದಾರರು ಶಿಂಧೆ ಬಣಕ್ಕೆ 7 ಮತ್ತು ಅಜಿತ್ ಪವಾರ್ ಬಣಕ್ಕೆ  ಕೇವಲ ಒಂದು ಸ್ಥಾನವನ್ನು ಕೊಟ್ಟು ದ್ವೇಷ ರಾಜಕೀಯಕ್ಕೆ ನಾವಿಲ್ಲ ಎಂಬುದನ್ನು ತಿಳಿ ಹೇಳಿದರು. ಈ ಬಾರಿ ಎನ್‌ಡಿಎಗೆ  17 ಸ್ಥಾನಗಳಷ್ಟೇ ಸಿಕ್ಕರೆ ಇಂಡಿಯಾ ಕೂಟಕ್ಕೆ 31 ಸ್ಥಾನಗಳು ಸಿಕ್ಕವು. ನಾಮಾವಶೇಷವಾಗಿದ್ದ ಕಾಂಗ್ರೆಸ್‌ನ ಕೈ ಹಿಡಿದ  ಮತದಾರರು 13 ಕ್ಷೇತ್ರಗಳಲ್ಲಿ ಗೆಲ್ಲಿಸಿದರು. ಠಾಕ್ರೆ ಮತ್ತು ಶರದ್ ಪವಾರ್ ಪಕ್ಷಕ್ಕೆ ತಲಾ 8 ಮಂದಿಯ ಬಲ ನೀಡಿದರು.  ಅಂದಹಾಗೆ,
ಉಳಿದ ರಾಜ್ಯಗಳೆಂದರೆ, ಹರ್ಯಾಣ, ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ. 2019ರಲ್ಲಿ ಹರ್ಯಾಣದಲ್ಲಿ ಬಿಜೆಪಿ ಎಲ್ಲಾ 10  ಸ್ಥಾನಗಳನ್ನೂ ಗೆದ್ದುಕೊಂಡಿತ್ತು. ಈ ಬಾರಿ ಬಿಜೆಪಿಗೆ 5 ಸ್ಥಾನಗಳನ್ನಷ್ಟೇ ಕೊಟ್ಟ ಮತದಾರರು ಉಳಿದ 5ರಲ್ಲಿ ಕಾಂಗ್ರೆಸನ್ನು  ಗೆಲ್ಲಿಸಿದರು. 2019ರಲ್ಲಿ ರಾಜಸ್ಥಾನದ ಎಲ್ಲಾ 25 ಸ್ಥಾನಗಳೂ ಬಿಜೆಪಿಯ ಪಾಲಾಗಿತ್ತು. ಆದರೆ ಈ ಬಾರಿ ಅಲ್ಲೂ ಜನ  ಬಿಜೆಪಿಯ ಮುಸ್ಲಿಮ್ ದ್ವೇಷ ರಾಜಕೀಯವನ್ನು ತಿರಸ್ಕರಿಸಿದರು. ಬಿಜೆಪಿಗೆ 14 ಸ್ಥಾನಗಳನ್ನು ಕೊಟ್ಟ ರಾಜಸ್ಥಾನಿಯರು 8  ಸ್ಥಾನಗಳಲ್ಲಿ ಕಾಂಗ್ರೆಸನ್ನು ಗೆಲ್ಲಿಸಿದರು. ಪಶ್ಚಿಮ ಬಂಗಾಳವಂತೂ  ಬಿಜೆಪಿಗೆ ಇನ್ನಿಲ್ಲದ ನಿರಾಸೆಯನ್ನು ತಂದಿಕ್ಕಿತ್ತು. 2019ರಲ್ಲಿ  18 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿ ಈ ಬಾರಿ 12 ಸ್ಥಾನಗಳಿಗೆ ತೃಪ್ತಿಪಡಬೇಕಾಯಿತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ  ಸುಮಾರು 28 ಸ್ಥಾನಗಳ ನಿರೀಕ್ಷೆಯಲ್ಲಿತ್ತು. ಅದಕ್ಕಾಗಿ ತೀವ್ರ ಮುಸ್ಲಿಮ್ ದ್ವೇಷಿ ಭಾಷಣಗಳನ್ನೂ ಮಾಡಿತ್ತು. ವರ್ತನೆಯೂ  ಏಕಮುಖವಾಗಿತ್ತು. ಪಶ್ಚಿಮ ಬಂಗಾಳವನ್ನು ಮುಸ್ಲಿಮ್ ರಾಜ್ಯವನ್ನಾಗಿ ಮಾಡಲು ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ  ಎಂಬಲ್ಲಿಂದ ಹಿಡಿದು ಎನ್‌ಆರ್‌ಸಿ ಜಾರಿಗೆ ತಂದು ಮುಸ್ಲಿಮ್ ನುಸುಳುಕೋರರನ್ನು ಹೊರಗಟ್ಟುತ್ತೇವೆ ಎಂಬಲ್ಲಿ ವರೆಗೆ  ವಿವಿಧ ರೀತಿಯಲ್ಲಿ ಮುಸ್ಲಿಮ್ ಕೇಂದ್ರಿತ ದ್ವೇಷದ ಮಾತುಗಳನ್ನು ವಿವಿಧ ನಾಯಕರು ಆಡಿದರು. ಆದರೆ, ಮತದಾರರು  ಈ ದ್ವೇಷ ಭಾಷೆಯನ್ನು ತಿರಸ್ಕರಿಸಿದರು. ಒಂದುರೀತಿಯಲ್ಲಿ,

ಈ ಬಾರಿಯ ಲೋಕಸಭಾ ಚುನಾವಣೆಯು ಮುಸ್ಲಿಮ್ ದ್ವೇಷಿ ರಾಜನೀತಿ ಮತ್ತು ಅಭಿವೃದ್ಧಿ ರಾಜನೀತಿಯ ನಡುವಿನ  ಹಣಾಹಣಿಯಂತಿತ್ತು. ಮಧ್ಯಪ್ರದೇಶ, ಗುಜರಾತ್, ಅಸ್ಸಾಮ್‌ನಲ್ಲಿ ದ್ವೇಷ ರಾಜನೀತಿಗೆ ಬೆಂಬಲ ಸಿಕ್ಕಿವೆಯಾದರೂ ದೇಶದ  ಉಳಿದ ಭಾಗಗಳಲ್ಲಿ ಇದಕ್ಕೆ ಪ್ರಬಲ ಪ್ರತಿರೋಧ ಎದುರಾಗಿದೆ. ಜನರು ಮುಸ್ಲಿಮ್ ದ್ವೇಷಿ ರಾಜಕೀಯದಿಂದ ರೋಸಿ  ಹೋಗತೊಡಗಿದ್ದಾರೆ. ಕಳೆದ 10 ವರ್ಷಗಳಲ್ಲಿ ವರ್ಕ್ಔಟ್ ಆಗಿದ್ದ ಪ್ರಚಾರ ತಂತ್ರವು ನಿಧಾನಕ್ಕೆ ಕೈಕೊಡತೊಡಗಿದೆ.  ಪದೇಪದೇ ಮುಸ್ಲಿಮರನ್ನು ಸತಾಯಿಸುವುದು, ಅವರ ಮಸೀದಿ, ಗಡ್ಡ, ನಮಾಝï, ಅಝಾನ್, ಆಹಾರ, ಮದುವೆ,  ವಿಚ್ಛೇದನ, ವ್ಯಾಪಾರ-ವಹಿವಾಟುಗಳನ್ನೇ ಗುರಿಮಾಡಿಕೊಂಡು ಮಾತಾಡುವುದು ಜನರಿಗೂ ಈಗ ಬೇಸರ ತರಿಸಿದೆ.  ಮುಸ್ಲಿಮರನ್ನೇ ಕೇಂದ್ರೀಕರಿಸಿ 24 ಗಂಟೆ ರಾಜಕೀಯ ಮಾಡುವುದಕ್ಕೆ ಅವರೂ ಮುಖ ತಿರುಗಿಸತೊಡಗಿದ್ದಾರೆ. ಆದರೆ,  ಬಿಜೆಪಿಗೆ ಮುಸ್ಲಿಮ್ ಕೇಂದ್ರಿತ ರಾಜಕೀಯದ ಹೊರತಾಗಿ ಬೇರೆ ವಿಧಾನದಲ್ಲಿ ಹಿಡಿತ ಇಲ್ಲ. ಅಭಿವೃದ್ಧಿ ರಾಜಕಾರಣದ ಬಗ್ಗೆ  ಮಾತಾಡುವಂಥ ಏನನ್ನೂ ಅದು ಮಾಡಿಯೂ ಇಲ್ಲ. ನಿರುದ್ಯೋಗ ಮತ್ತು ಬೆಲೆಯೇರಿಕೆಗಳು ಬಿಜೆಪಿಯನ್ನು ಹೋದಲ್ಲಿ  ಬಂದಲ್ಲಿ ಮುಜುಗರಕ್ಕೆ ಒಳಪಡಿಸುತ್ತಲೂ ಇದೆ. ಆದ್ದರಿಂದ, ಮುಸ್ಲಿಮ್ ದ್ವೇಷವನ್ನು ನೆಚ್ಚಿಕೊಳ್ಳದ ಹೊರತು ಅನ್ಯದಾರಿಯಿಲ್ಲ  ಎಂಬ ಸ್ಥಿತಿಗೆ ಅದು ಬಂದು ತಲುಪಿದೆ. ಆದರೆ, ಜನರು ಈ ದ್ವೇಷ ರಾಜಕೀಯಕ್ಕೆ ವಿದಾಯ ಹೇಳಲು ನಿರ್ಧರಿಸಿದಂತೆ  ಕಾಣುತ್ತಿದೆ. ಆದರೆ,

ವಿದಾಯ ಹೇಳಲಾಗದ ಸ್ಥಿತಿಯಲ್ಲಿ ಬಿಜೆಪಿಯಿದೆ.

No comments:

Post a Comment