Thursday, August 29, 2024

ಮನೆಯ ಹೊರಗೂ ಒಳಗೂ ದುಡಿಯುತ್ತಿದ್ದ ಆಕೆ ವಿಚ್ಛೇದನ ಪಡಕೊಂಡಳು





ತಾನೇಕೆ ವಿಚ್ಛೇದನಕ್ಕೆ ಅರ್ಜಿ ಹಾಕಿದೆ ಎಂಬುದನ್ನು ಇತ್ತೀಚೆಗೆ ಓರ್ವ ಮಹಿಳೆ ಹೀಗೆ ಹಂಚಿಕೊಂಡಿದ್ದರು,

‘ನಮ್ಮದು ಅವಿಭಕ್ತ ಕುಟುಂಬ. ನಾನು ಉದ್ಯೋಗಸ್ಥೆ ಮಹಿಳೆ. ಪ್ರತಿದಿನ ನಾನು 7 ಗಂಟೆ ಕೆಲಸ ಮಾಡುತ್ತೇನೆ ಮತ್ತು  ಪ್ರಯಾಣಕ್ಕಾಗಿ 4 ಗಂಟೆ ಉಪಯೋಗಿಸುತ್ತೇನೆ. ಅಂದರೆ, ಪ್ರತಿದಿನ 11 ಗಂಟೆಗಳು ಉದ್ಯೋಗ ನಿಮಿತ್ತ ಖರ್ಚಾಗುತ್ತವೆ.  ನನ್ನ ಗಂಡನಿಗೆ ರಾತ್ರಿ ಪಾಳಿಯ ಕೆಲಸ. ನಾನು ಕೆಲಸ ಮುಗಿಸಿ ಮನೆಗೆ ತಲುಪಿದ ಅರ್ಧಗಂಟೆಯೊಳಗೆ ನನ್ನ ಗಂಡ ಮನೆಯಿಂದ ಕೆಲಸಕ್ಕೆ ಹೊರಡುತ್ತಾರೆ. ನಾನು ಆದಷ್ಟು ಬೇಗ ಮನೆಗೆ ಬಂದು ಅಡುಗೆ ಮಾಡಿ ಬಳಸಿ, ಟಿಫಿನ್‌ಗೆ ಹಾಕಿ  ಕೊಡಬೇಕೆಂದು ನನ್ನ ಗಂಡ ಬಯಸುತ್ತಾನೆ. ನಾನು ಬೆಳಿಗ್ಗೆ 5 ಗಂಟೆಗೆ ಎದ್ದು ಬ್ರೇಕ್ ಫಾಸ್ಟ್ ಮತ್ತು ಲಂಚ್ ರೆಡಿ ಮಾಡಿ  ಗಂಡನಿಗೂ ಆತನ ಹೆತ್ತವರಿಗೂ ಮತ್ತು ಅಜ್ಜ-ಅಜ್ಜಿಗೂ ನೀಡುತ್ತೇನೆ. ಇದನ್ನು ನಾನು ಪ್ರತಿದಿನವೂ ಮಾಡುತ್ತೇನೆ ಮತ್ತು ಈ  ಬಗ್ಗೆ ನನ್ನಲ್ಲಿ ಆಕ್ಷೇಪಗಳೂ ಇಲ್ಲ. ಸಮಸ್ಯೆ ಇರೋದು ಸಮಯದಲ್ಲಿ ಮತ್ತು ನನಗಾಗುವ ಆಯಾಸ ದಲ್ಲಿ. ಅಂದಹಾಗೆ,

ರಜಾದಿನದಂದೂ  ನನಗೆ ಬಿಡುವಿಲ್ಲ. ಈ ದಿನಗಳಂದು ನನ್ನ ಅತ್ತೆ ಹಾಸಿಗೆಯಿಂದ ಏಳುವುದೇ ಇಲ್ಲ. ಕೇಳಿದರೆ, ಆರೋಗ್ಯ  ಸರಿ ಇಲ್ಲ ಅನ್ನುತ್ತಾರೆ. ಆದ್ದರಿಂದ ಅವರಿರುವಲ್ಲಿಗೆ ನಾನು ಎಲ್ಲವನ್ನೂ ತಲುಪಿಸಬೇಕು. ಆದರೆ, ಅದೇ ಬೆಡ್‌ನಲ್ಲಿ ಕುಳಿತು  ಅತ್ತೆ ನನ್ನದುರೇ ಗಂಟೆಗಟ್ಟಲೆ ತನ್ನವರೊಂದಿಗೆ ಫೋನ್‌ನಲ್ಲಿ ಮಾತಾಡುತ್ತಾರೆ. ನನ್ನ ಗಂಡನಾದರೋ ಪರಮ ಉದಾಸೀನ  ವ್ಯಕ್ತಿ. ರಜಾ ದಿನದಂದು ಅಂಗಡಿಗೆ ತೆರಳಿ ದಿನಸಿ ವಸ್ತುಗಳನ್ನು ತರುವುದಿಲ್ಲ. ಅದನ್ನೂ ನಾನೇ ತರುತ್ತೇನೆ. ಜೊತೆಗೆ ಸ್ವಚ್ಛತಾ  ಕೆಲಸವನ್ನೂ ನಾನೇ ಮಾಡಬೇಕು. ನಾನೇನೂ ಮೆಶಿನ್ ಅಲ್ಲವಲ್ಲ. ಆದರೆ ಮನೆಯವರಿಗೆ ಇದು ಅರ್ಥವೇ ಆಗುತ್ತಿಲ್ಲ.  ಅವರು ಮನೆ ಕ್ಲೀನ್ ಇಲ್ಲ ಎಂದು ನನ್ನನ್ನೇ ದೂರುತ್ತಾರೆ. ಕೆಲಸಕ್ಕೆ ಹೋಗುವ ಮೊದಲು ಗುಡಿಸಿ, ಒರೆಸಿ ಹೋಗಲಿಕ್ಕೇನು  ಧಾಡಿ ಎಂದು ಮೈಮೇಲೆ ಬೀಳುತ್ತಾರೆ.

ಒಂದು ದಿನ ಅತ್ತೆ-ಮಾವಂದಿರ ಎದುರೇ ನನ್ನ ಗಂಡ ನನ್ನನ್ನು ಥಳಿಸಿದರು. ನನ್ನ ಮೈಮೇಲೆ ಗಾಯಗಳಾದುವು. ಗಂಡ  ನನ್ನನ್ನು ಥಳಿಸುತ್ತಿದ್ದರೂ ಮನೆಯವರಾರೂ ಅದನ್ನು ತಡೆಯಲಿಲ್ಲ ಅಥವಾ ಥಳಿಸದಂತೆ ಮಗನನ್ನು ಆಕ್ಷೇಪಿಸಲೂ ಇಲ್ಲ.  ನೀನು ಕೆಲಸಕ್ಕೆ ರಾಜೀನಾಮೆ ಕೊಡು ಎಂಬುದು ಗಂಡನ ಆಗ್ರಹವಾಗಿತ್ತು. ಮರುದಿನ ನಾನು ನನ್ನ ಕಚೇರಿ ಮುಖ್ಯಸ್ಥರಿಗೆ  ಕೆಲಸ ಬಿಡುವುದಾಗಿ ಹೇಳಿದೆ. ಆದರೆ ಅವರು ತಕ್ಷಣ ಕೆಲಸದಿಂದ ಬಿಡುಗಡೆಗೊಳಿಸಲು ಒಪ್ಪಿಕೊಳ್ಳಲಿಲ್ಲ. ಕನಿಷ್ಠ ಎರಡು  ತಿಂಗಳಾದರೂ ಕೆಲಸ ಮಾಡಬೇಕು ಎಂಬ ಷರತ್ತು ವಿಧಿಸಿದರು. ನನಗೆ ಭತ್ಯೆ, ಪಿಂಚಣಿ ಸಿಗಬೇಕಾದರೆ ಈ ಷರತ್ತಿಗೆ ನಾನು  ತಲೆಬಾಗಲೇಬೇಕಿತ್ತು. ನಾನು ಈ ವಿಷಯವನ್ನು ಗಂಡನಲ್ಲಿ ಹೇಳಿದೆ. ಆತ ರೌದ್ರಾವತಾರ ತಾಳಿದ. ಬೆಲ್ಟ್ನಿಂದ ಹೊಡೆದ.  ನಿಜವಾಗಿ, ಆತನಿಗೆ ನಾನು ಕೆಲಸ ಬಿಡುವುದು ಬೇಕಿರಲಿಲ್ಲ. ಯಾಕೆಂದರೆ, ಆತ ನಗರದ ಅನೇಕ ಜನರಿಂದ ಸಾಲ  ಪಡಕೊಂಡಿದ್ದ. ಫೈನಾನ್ಸ್ ಗಳಿಂದಲೂ ಸಾಲ ಪಡಕೊಂಡಿದ್ದ. ಇದು ನನಗೆ ಗೊತ್ತಿರಲಿಲ್ಲ. ನನ್ನ ಸಂಬಳವನ್ನು  ತೆಗೆದುಕೊಳ್ಳುತ್ತಿದ್ದ ಆತ, ಅದನ್ನು ಯಾವುದಕ್ಕೆ ಖರ್ಚು ಮಾಡುತ್ತಿದ್ದೇನೆ ಎಂಬ ಸಣ್ಣ ಸುಳಿವನ್ನೂ ಕೊಟ್ಟಿರಲಿಲ್ಲ. ನಿಜ ಏ ನೆಂದರೆ,

ದುಡಿಯುವ ಮಹಿಳೆಯಾಗಿಯೂ ನನಗೆ ಬೇಕಾದಷ್ಟು ಬಟೆ ಖರೀದಿಸುವುದಕ್ಕೂ ಸ್ವಾತಂತ್ರ್ಯ  ಇರಲಿಲ್ಲ. ನನ್ನ ಸೀರೆ ಹರಿದಿರುವುದು ಗೊತ್ತಾಗದಿರಲೆಂದು ಕನಿಷ್ಠ 3 ಪಿನ್‌ಗಳನ್ನಾದರೂ ಚುಚ್ಚುತ್ತಿದ್ದೆ. ಆದರೂ ನನ್ನ ಬಗ್ಗೆ ಗಂಡ ಮತ್ತು ಮ ನೆಯವರು ಯಾವ ಕಾಳಜಿಯನ್ನೂ ತೋರುತ್ತಿರಲಿಲ್ಲ. ಅಲ್ಲದೇ, ನನ್ನ ಹೆತ್ತವರ ಜೊತೆ ಮಾತಾಡಲೂ ಗಂಡ ಬಿಡುತ್ತಿರಲಿಲ್ಲ.  ಆ ಕಾರಣದಿಂದಾಗಿ ನಾನು ಕಚೇರಿ ತಲುಪಿದ ಬಳಿಕ ಕರೆ ಮಾಡುತ್ತಿದ್ದೆ. ಮನೆಯಲ್ಲಿ ಏನಾದರೂ ಭಿನ್ನಾಭಿಪ್ರಾಯ  ತಲೆದೋರಿದರೆ ಅಥವಾ ನ್ಯಾಯದ ಬಗ್ಗೆ ನಾನು ಮಾತನಾಡಿದರೆ, ತಕ್ಷಣ ನನ್ನ ಗಂಡ ಮತ್ತು ಅತ್ತೆ ನನ್ನ ಹೆತ್ತವರಿಗೆ ಕರೆ  ಮಾಡಿ ಬೆದರಿಸುತ್ತಿದ್ದರು. ನನ್ನ ಹೆತ್ತವರನ್ನು ಅತೀ ಕನಿಷ್ಠ ಪದಗಳಿಂದ ಗಂಡ ಬೈಯುತ್ತಿದ್ದ..’

ಅಂದಹಾಗೆ,

ಇದು ಒಂದು ಮುಖ ಮಾತ್ರ. ಒಂದುವೇಳೆ ಈಕೆಯ ಗಂಡನನ್ನು ಪ್ರಶ್ನಿಸಿದರೆ ಆತನಲ್ಲಿ ಸಮರ್ಥನೆಯ ನೂರು  ವಾದಗಳಿರಬಹುದು. ಅಂತೂ ದೇಶದಲ್ಲಿ ವಿಚ್ಚೇದನ ಅಥವಾ ತಲಾಕ್ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಏರುತ್ತಿವೆ  ಎಂಬುದಂತೂ  ನಿಜ. ಹಾಗಂತ, ಇದು ಕೇವಲ ಭಾರತಕ್ಕೆ ಸಂಬಂಧಿಸಿದ ಮಾಹಿತಿ ಮಾತ್ರ ಅಲ್ಲ. ಜಾಗತಿಕವಾಗಿಯೇ  ಇಂಥದ್ದೊಂದು  ಸ್ಥಿತಿಯಿದೆ. ಜಗತ್ತಿನಲ್ಲಿಯೇ ಅತ್ಯಧಿಕ ವಿಚ್ಛೇದನ ಗಳು ನಡೆಯುತ್ತಿರುವುದು ಮಾಲ್ದೀವ್ಸ್ ನಲ್ಲಿ. ಪ್ರತಿ ಸಾವಿರ  ಮದುವೆಯಲ್ಲಿ 5ರಿಂದ 6 ಮದುವೆಗಳು ಅಲ್ಲಿ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿವೆ. ಕಝಕಿಸ್ತಾನದಲ್ಲಿ ನಡೆಯುವ ಸಾವಿರ  ಮದುವೆ ಗಳಲ್ಲಿ 4ರಿಂದ 5ರಷ್ಟು ಮದುವೆಗಳು ವಿಚ್ಛೇದನಕ್ಕೆ ಒಳಗಾಗುತ್ತಿವೆ. ರಶ್ಯಾದಲ್ಲಿ 3ರಿಂದ 4 ಮದುವೆಗಳು ಹೀಗೆ  ಕೊನೆಗೊಳ್ಳುತ್ತಿದ್ದರೆ, ಅಮೇರಿಕದಲ್ಲಿ ಪ್ರತಿ ಸಾವಿರದಲ್ಲಿ 5ರಷ್ಟು ಮದುವೆಗಳು ತಲಾಕ್‌ಗೆ ಒಳಗಾಗುತ್ತಿವೆ. ಅಮೇರಿಕದ ಅರ್ಕಿ ನ್ಸಾಸ್ ರಾಜ್ಯವಂತೂ ವಿಶ್ವದಲ್ಲಿಯೇ ಅತ್ಯಧಿಕ ತಲಾಕ್‌ಗಳಾಗುವ ರಾಜ್ಯವಾಗಿ ಗುರುತಿಸಿ ಕೊಂಡಿದೆ. ಇಲ್ಲಿ ನಡೆಯುವ ಪ್ರತಿ  1000 ಮದುವೆಗಳಲ್ಲಿ 24ರಷ್ಟು ಮದುವೆಗಳು ದೀರ್ಘ ಬಾಳಿಕೆ ಬರುವುದೇ ಇಲ್ಲ. ಈ ಎಲ್ಲಾ ರಾಷ್ಟ್ರಗಳಿಗೆ ಹೋಲಿಸಿದರೆ  ಭಾರತ ಉತ್ತಮ ಸ್ಥಿತಿಯಲ್ಲಿದೆ. ನಮ್ಮಲ್ಲಿ ನಡೆಯುವ ಪ್ರತಿ ಸಾವಿರ ಮದುವೆಗಳ ಪೈಕಿ ವಿಚ್ಛೇದನದಲ್ಲಿ ಕೊನೆಗೊಳ್ಳುವುದು  ಒಂದರಿಂದ  ಎರಡರಷ್ಟು ವಿವಾಹಗಳು ಮಾತ್ರ. ಆದರೆ, ನಮಗಿಂತಲೂ ಕಡಿಮೆ ಪ್ರಮಾಣದಲ್ಲಿ ವಿಚ್ಛೇದನಗಳಾಗುತ್ತಿರುವುದು  ಶ್ರೀಲಂಕಾದಲ್ಲಿ. ಜಗತ್ತಿನಲ್ಲಿಯೇ ವಿಚ್ಛೇದನ ಪ್ರಕರಣಗಳು ಶ್ರೀಲಂಕಾದಲ್ಲಿ ಅತೀ ಕಡಿಮೆ ಎಂದು ಲೆಕ್ಕ ಹಾಕಲಾಗಿದೆ. ಇಲ್ಲಿ  ನಡೆಯುವ ಪ್ರತಿ 10 ಸಾವಿರ ಮದುವೆಗಳ ಪೈಕಿ ಒಂದು ಮದುವೆಯಷ್ಟೇ ತಲಾಕ್‌ನಲ್ಲಿ ಕೊನೆ ಗೊಳ್ಳುತ್ತವೆ. ಆ ಬಳಿಕದ  ಸ್ಥಾನ ವಿಯೆಟ್ನಾಂ ಮತ್ತು ಗ್ವಾಟೆ ಮಾಲಾಗಳ ಪಾಲಾಗಿದೆ. ವಿಶೇಷ ಏನೆಂದರೆ, ಫಿಲಿಪ್ಪೀನ್‌ನಲ್ಲಿ ಈ ವರ್ಷದ ಆರಂಭದ  ವರೆಗೆ ವಿಚ್ಚೇದನವೇ ಕಾನೂನುಬಾಹಿರವಾಗಿತ್ತು. ಪರಸ್ಪರ ತಿಳುವಳಿಕೆಯಿಂದ ವಿಚ್ಚೇದನಗಳು ನಡೆಯುತ್ತಿದ್ದುವಾದರೂ ಅವು ಕಾನೂನುಬದ್ಧ  ಆಗಿರಲೂ ಇಲ್ಲ. ಆದರೆ, 2024 ಮೇಯಲ್ಲಿ ವಿಚ್ಛೇದನವನ್ನು ಕಾನೂನುಬದ್ಧಗೊಳಿಸುವ ಮಸೂದೆಯನ್ನು ಅಲ್ಲಿನ ಪಾರ್ಲಿಮಂಟ್‌ನಲ್ಲಿ ಮಂಡಿಸಲಾಗಿದೆ. ಅಷ್ಟಕ್ಕೂ,

ಇತ್ತೀಚಿನ ಒಂದೆರಡು ದಶಕಗಳಲ್ಲಿ ವಿಚ್ಛೇದನ ಪ್ರಕರಣ ವೇಗವನ್ನು ಪಡೆಯಲು ಕಾರಣವೇನು ಎಂಬ ಪ್ರಶ್ನೆ ಸಹಜ. ಈ  ಕುರಿತಂತೆ ಹಲವು ಬಗೆಯ ಸರ್ವೇಗಳು ನಡೆದಿವೆ ಮತ್ತು ಸಮಸ್ಯೆಯ ಆಳವನ್ನು ಸ್ಪರ್ಶಿಸಲು ಅನೇಕ ತಜ್ಞರು  ಪ್ರಯತ್ನಿಸಿದ್ದಾರೆ. ಕಳೆದೊಂದು ದಶಕದಲ್ಲಿ ವಿಚ್ಛೇದನ ಪ್ರಕರಣಗಳಲ್ಲಿ ಆಗಿರುವ ಭಾರೀ ಪ್ರಮಾಣದ ಏರಿಕೆಯನ್ನು  ನೋಡಿದರೆ, ಸಮಾಜ ಗಂಭೀರವಾಗಿ ಆಲೋಚಿಸಬೇಕಾದ ಕ್ಷೇತ್ರ ಇದು ಎಂದೇ ಅನಿಸುತ್ತದೆ. ಸಾಮಾನ್ಯವಾಗಿ, ಹತ್ಯೆ,  ಹಲ್ಲೆ, ಅತ್ಯಾಚಾರ, ದ್ವೇಷಭಾಷಣ ಇತ್ಯಾದಿಗಳು ಸುದ್ದಿಯಾಗುವಂತೆ ವಿಚ್ಛೇದನ ಪ್ರಕರಣಗಳು ಮಾಧ್ಯಮಗಳಲ್ಲಿ ಸುದ್ದಿಯಾಗುವುದಿಲ್ಲ. ಹಲವು ಪ್ರಕರಣಗಳು ಮಾತುಕತೆಯಲ್ಲಿ, ಇನ್ನು ಹಲವು ಕೌಟುಂಬಿಕ ನ್ಯಾಯಾಲಯಗಳಲ್ಲಿ ಮತ್ತೂ  ಹಲವು ಸಾಮಾನ್ಯ ನ್ಯಾಯಾಲಯಗಳಲ್ಲಿ ವಿಚ್ಛೇದನ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತವೆ. ಇಂಥ ಅಸಂಖ್ಯ ಪ್ರಕರಣಗಳ  ಪೈಕಿ ಅಲ್ಲೊಂದು  ಇಲ್ಲೊಂದು  ಮಾಧ್ಯಮಗಳಲ್ಲಿ ವರದಿಯಾಗುವುದನ್ನು ಬಿಟ್ಟರೆ ಉಳಿದಂತೆ ಈ ಕ್ಷೇತ್ರವು ಗಾಢ ಮೌನವನ್ನೇ  ಹೊದ್ದುಕೊಂಡಿವೆ. ಈ ಮೌನವೇ ಈ ಕ್ಷೇತ್ರದಲ್ಲಾಗುವ ತಲ್ಲಣಗಳು ಹೊರಜಗತ್ತಿನಲ್ಲಿ ಚರ್ಚೆಯಾಗದಂತೆಯೂ  ನೋಡಿಕೊಳ್ಳುತ್ತವೆ. ನಿಜವಾಗಿ, ವಿಚ್ಛೇದನ ಪ್ರಕರಣದ ಏರುಗತಿಗೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಆಗಿರುವ  ಬದಲಾವಣೆಗೂ ನೇರ ಸಂಬಂಧ  ಇದೆ. ಮುಖ್ಯವಾಗಿ, ವಿಚ್ಛೇದನಕ್ಕೆ ಕೆಲವು ಮುಖ್ಯ ಕಾರಣಗಳನ್ನು ಹೀಗೆ ಪಟ್ಟಿ  ಮಾಡಬಹುದು.

1. ಮಹಿಳಾ ಸಬಲೀಕರಣ: ಮಹಿಳೆಯರು ಹೆಚ್ಚೆಚ್ಚು ಶಿಕ್ಷಿತರಾಗುತ್ತಿದ್ದಾರೆ ಮತ್ತು ಉದ್ಯೋಗಕ್ಕೂ ಸೇರುತ್ತಿದ್ದಾರೆ. ಸ್ವಾವಲಂಬಿ  ಬದುಕು ಸಹಜವಾಗಿಯೇ ಅವರೊಳಗೆ ಧೈರ್ಯ, ಸ್ವಾಭಿಮಾನ ಮತ್ತು ಭರವಸೆಯನ್ನು ತುಂಬಿದೆ. ಪತಿಯದ್ದೋ  ಅಥವಾ  ಪತಿ ಮನೆಯವರದ್ದೋ  ಹೀನೈಕೆ, ಅವಮಾನ, ದೌರ್ಜನ್ಯ, ಹಿಂಸೆಯನ್ನು ಪ್ರತಿಭಟಿಸಲು ಮತ್ತು ಸಂಬಂಧವನ್ನೇ ಮುರಿದು  ಹೊರಬರಲು ಶಿಕ್ಷಣ ಅವರಲ್ಲಿ ಛಲವನ್ನು ಒದಗಿಸಿದೆ.

2. ನಗರ ಜೀವನ: ಗ್ರಾಮ ಭಾರತ ಬದಲಾಗಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ನಗರಕ್ಕೆ ಬರುತ್ತಿದ್ದಾರೆ. ನಗರದ ಜೀವನ  ವಾದರೋ ಇನ್ನೂ ವಿಚಿತ್ರ. ಇಲ್ಲಿ ಕೆಲಸದ ಅವಧಿ ಹೆಚ್ಚಿರುತ್ತದಷ್ಟೇ ಅಲ್ಲ, ನೈಟ್ ಶಿಫ್ಟ್, ಡೇ ಶಿಫ್ಟ್ ಕೂಡಾ ಇರುತ್ತದೆ.  ಇದರಿಂದಾಗಿ ಕುಟುಂಬಕ್ಕೆ ಸಮಯ ಕೊಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡವೂ ಅಧಿಕವಿರುತ್ತದೆ. ಅಲ್ಲದೇ,  ಕುಟುಂಬದಲ್ಲಿ ಬಿರುಕು ಮೂಡುವುದಕ್ಕೆ ಪೂರಕ ಸುದ್ದಿಗಳನ್ನು ಓದುವುದಕ್ಕೆ ಅವಕಾಶಗಳಿರುವುದೂ ಕೌಟುಂಬಿಕ ಸಂಬಂಧದ  ಭದ್ರತೆಯನ್ನು ತೆಳುವಾಗಿಸುತ್ತದೆ.

3. ಅತಿಯಾದ ನಿರೀಕ್ಷೆ: ದಂಪತಿಗಳು ಅತಿಯಾದ ನಿರೀಕ್ಷೆಯನ್ನು ಹೊಂದುವುದು ಮತ್ತು ಅದು ಕೈಗೂಡುವ ಲಕ್ಷಣ  ಕಾಣಿಸದೇ ಹೋದಾಗ ಮನಸ್ತಾಪ ಉಂಟಾಗುವುದೂ ನಡೆಯುತ್ತಿದೆ. ದಂಪತಿಗಳು ಸ್ವಸಂತೋಷಕ್ಕೆ, ಸ್ವಗುರಿ ಮತ್ತು ಸ್ವಂತ  ಐಡೆಂಟಿಟಿಗಾಗಿ ಸೆಣಸುವುದು ಕೂಡಾ ಕೌಟುಂಬಿಕ ಬದುಕಿನ ಮೇಲೆ ಅಡ್ಡ ಪರಿಣಾಮಗಳನ್ನು ಬೀರುತ್ತಿವೆ.

4. ಕಾನೂನು ತಿಳುವಳಿಕೆ: ಶೈಕ್ಷಣಿಕವಾಗಿ ಹೇಗೆ ಹೆಣ್ಣು ಮಕ್ಕಳು ಮುಂದೆ ಬಂದರೋ ಅವರಿಗೆ ಮದುವೆ ಮತ್ತು ವಿಚ್ಛೇದನಗಳ ಕುರಿತಾದ ಕಾನೂನಿನ ತಿಳುವಳಿಕೆಯೂ ಹೆಚ್ಚಾಯಿತು. ವಿಚ್ಛೇದನ ಪಡಕೊಳ್ಳುವುದಕ್ಕೆ ಏನೇನು ಮಾಡಬೇಕು, ಎಷ್ಟು  ಸಮಯದಲ್ಲಿ ವಿಚ್ಛೇದನ ಸಿಗಬಹುದು, ಅದಕ್ಕಿರುವ ಪ್ರಕ್ರಿಯೆ ಗಳು ಏನೇನು ಎಂಬುದನ್ನೆಲ್ಲ ತಿಳಿದುಕೊಂಡಿರುವ ಪತಿ  ಮತ್ತು ಪತ್ನಿ ವಿಚ್ಛೇದನಕ್ಕೆ ಹೆದರಬೇಕಾಗಿಲ್ಲ ಎಂಬ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ.
5. ಅಣು ಕುಟುಂಬಗಳ ಹೆಚ್ಚಳ: ಅವಿಭಕ್ತ ಕುಟುಂಬಗಳಲ್ಲಿ ಸಿಗುವ ಕೌಟುಂಬಿಕ ಬೆಂಬಲವು ಅಣು ಕುಟುಂಬಗಳಲ್ಲಿ  ಸಿಗುವುದಿಲ್ಲ. ಪತಿ-ಪತ್ನಿ ನಡುವೆ ಉಂಟಾಗುವ ಮನಸ್ತಾಪವನ್ನು ಹೆತ್ತವರು ಮಧ್ಯಪ್ರವೇಶಿಸಿ ಬಗೆಹರಿಸುವುದು ಅವಿಭಕ್ತ  ಕುಟುಂಬಗಳಲ್ಲಿ ಸಾಧ್ಯ. ನಾಲ್ಕು ಬುದ್ಧಿ ಮಾತು ಹೇಳಿ ಅವರು ಮನಸ್ತಾಪಕ್ಕೆ ಮುಲಾಮು ಹಚ್ಚುತ್ತಾರೆ. ಆದರೆ, ಪತಿ-ಪತ್ನಿ  ಮಾತ್ರ ಇರುವಲ್ಲಿ ಭಿನ್ನಾಭಿಪ್ರಾಯ ದಿನೇ ದಿನೇ ಬೆಳೆಯುತ್ತ ಬೆಟ್ಟವಾಗುತ್ತಾ ಹೋಗುವುದಕ್ಕೆ ಅವಕಾಶ ಹೆಚ್ಚಿದೆ ಮತ್ತು  ಇಬ್ಬರನ್ನೂ ಅಹಂ ನಿಯಂತ್ರಿಸುವುದಕ್ಕೆ ಸಾಧ್ಯವೂ ಇದೆ. ಹಾಗಂತ,

ಈ ಪರಿಸ್ಥಿತಿಯಿಂದ ಹೊರಬರುವುದಕ್ಕೆ ಸಾಧ್ಯವೇ ಇಲ್ಲ ಎಂದಲ್ಲ. ಪತಿ ಮತ್ತು ಪತ್ನಿ ಮನಸ್ಸು ಮಾಡಿದರೆ ಮತ್ತು ಅಹಂ  ಅನ್ನು ತೊರೆದು ಪರಸ್ಪರರನ್ನು ಗೌರವಿಸುವ ಬುದ್ಧಿವಂತಿಕೆಯನ್ನು ತೋರಿದರೆ, ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು  ಉಂಟಾಗ ಬಹುದು. ಮದುವೆಗೆ ಮುಂಚೆ ವಧೂ-ವರರನ್ನು ಕೌನ್ಸಿಲಿಂಗ್‌ಗೆ ಒಳಪಡಿಸುವುದು ಇದರಲ್ಲಿ ಬಹಳ ಮುಖ್ಯ.  ಅವರಿಬ್ಬರೂ ಪರಸ್ಪರ ಬಯಕೆ, ನಿರೀಕ್ಷೆ, ಆರ್ಥಿಕ ಸಾಮರ್ಥ್ಯಗಳನ್ನು ಅರಿತುಕೊಳ್ಳುವುದರಿಂದ ಮದುವೆ ಬಳಿಕದ ಬದುಕ ನ್ನು ಹೆಚ್ಚು ನಿಖರವಾಗಿ ನಡೆಸಲು ಅನುಕೂಲವಾಗಬಹುದು. ಪರಸ್ಪರ ಮಾತುಕತೆ ನಡೆಸುವುದು, ತಪ್ಪುಗಳನ್ನು ತಿದ್ದಿಕೊಳ್ಳುವುದು, ಕ್ಷಮೆ ಕೇಳಿಕೊಳ್ಳುವುದು, ವಾರದ ರಜೆಯಲ್ಲೋ  ಅಥವಾ ರಜೆ ಪಡೆದುಕೊಂಡೋ ದೂರ ಪ್ರಯಾಣ  ಬೆಳೆಸುವುದು, ಕೆಲವೊಮ್ಮೆ ರಾತ್ರಿಯ ಊಟವನ್ನು ಮನೆಯ ಹೊರಗೆ ಮಾಡುವುದು, ಸಂಬಂಧಿಕರ ಮನೆಗೆ ಜೊತೆಯಾಗಿ  ಹೋಗುವುದು ಇತ್ಯಾದಿಗಳನ್ನು ಮಾಡುವುದೂ ಉತ್ತಮ. ಭಿನ್ನಾಭಿಪ್ರಾಯವನ್ನು ಬೆಟ್ಟವಾಗಿಸದೇ ಕ್ಷಮಿಸುವ ಮತ್ತು  ಮರೆಯುವ ಕೌಶಲ್ಯವನ್ನು ಇಬ್ಬರೂ ಬೆಳೆಸಿಕೊಳ್ಳಬೇಕು. ಪರಸ್ಪರರ ಪ್ರತಿಭೆಗಳನ್ನು ಒಪ್ಪಿಕೊಳ್ಳುವ, ಗೌರವಿಸುವ ಮತ್ತು  ಮೆಚ್ಚಿಕೊಳ್ಳುವ ಗುಣವನ್ನೂ ಅಳವಡಿಸಿಕೊಳ್ಳಬೇಕು. ಪತಿ ಮತ್ತು ಪತ್ನಿ ಎಂಥದ್ದೇ  ಉದ್ಯೋಗದಲ್ಲಿದ್ದರೂ ಪರಸ್ಪರರಿಗೆ  ಸಮಯ ಕೊಡುವಷ್ಟು ಬಿಡುವು ಮಾಡಿಕೊಳ್ಳಲೇಬೇಕು. ಮನೆಯೊಳಗಿನ ಜವಾಬ್ದಾರಿಯನ್ನು ಇಬ್ಬರೂ ಹಂಚಿಕೊಳ್ಳಬೇಕು.  ಹಾಗಂತ,

ಇವಿಷ್ಟನ್ನು ಮಾಡಿದರೆ ಮುಂದೆ ವಿಚ್ಛೇದನಗಳೇ ನಡೆಯಲ್ಲ ಎಂದು ಹೇಳುತ್ತಿಲ್ಲ. ಇವೆಲ್ಲ ಟಿಪ್ಸ್ ಗಳಷ್ಟೇ. ವಿಚ್ಚೇದನ  ಪ್ರಮಾಣವನ್ನು ಕಡಿಮೆ ಗೊಳಿಸುವುದಕ್ಕಷ್ಟೇ ಈ ಟಿಪ್ಸ್ ಗಳಿಗೆ ಸಾಧ್ಯವಾಗಬಹುದು. ಅದರಾಚೆಗೆ, ಮದುವೆ ಎಲ್ಲಿಯವರೆಗೆ  ಭೂಮಿಯಲ್ಲಿ ಅಸ್ತಿತ್ವದಲ್ಲಿರುತ್ತದೋ ಅಲ್ಲಿಯವರೆಗೆ ವಿಚ್ಛೇ ದನವೂ ಇದ್ದೇ  ಇರುತ್ತದೆ.

No comments:

Post a Comment