Monday, October 23, 2017

ಕ್ರಿಸ್ಟಾಫ್‍ರ ಉತ್ತರ ಕೊರಿಯದಿಂದ ನಾಂದೇಡ್‍ನ ಭಾರತದ ವರೆಗೆ

        ಅಮೇರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಗಾರ ನಿಕೋಲಸ್ ಕ್ರಿಸ್ಟಾಫ್‍ರು (Nicholas Kristof) ಇತ್ತೀಚೆಗೆ ಉತ್ತರ ಕೊರಿಯಾಕ್ಕೆ ಭೇಟಿ ನೀಡಿ ಕಂಡುಕೊಂಡ ಅನುಭವಗಳು ಮತ್ತು ಕಳೆದವಾರ ಪ್ರಕಟವಾದ ಮಹಾರಾಷ್ಟ್ರದ ನಾಂದೇಡ್-ವಾಘಾಲ ಸಿಟಿ ಮುನ್ಸಿಪಲ್ ಕಾರ್ಪೋರೇಶನ್‍ಗೆ ನಡೆದ ಚುನಾ ವಣೆಯ ಫಲಿತಾಂಶಗಳ ನಡುವೆ ನೇರ ಸಂಬಂಧ ಇಲ್ಲದೇ ಇದ್ದರೂ ಇವೆರಡೂ ಯಾವುದೋ ಒಂದು ಬಿಂದುವಿನಲ್ಲಿ ಜೊತೆಗೂಡುವಂತೆ ಕಂಡವು. ಉತ್ತರ ಕೊರಿಯಕ್ಕೆ ಐದು ದಿನಗಳ ಭೇಟಿ ನೀಡಿರುವ ನಿಕೋಲಸ್ ಕ್ರಿಸ್ಟಾಫ್, ಆ ಕುರಿತಂತೆ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಸರಣಿ ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ Inside North Korea, and feeling the drums of war ಎಂಬುದೂ ಒಂದು. ಅದರಲ್ಲಿ ಉತ್ತರ ಕೊರಿಯದ ವಿವಿಧ ಅಧಿಕಾರಿಗಳು ಮತ್ತು ಜನರೊಂದಿಗೆ ನಡೆಸಿದ ವೀಡಿಯೋ ಸಂದರ್ಶನವೂ ಇದೆ. ಚಿತ್ರಗಳಿವೆ. ಇವನ್ನು ಓದುತ್ತಾ ಮತ್ತು ವೀಕ್ಷಿಸುತ್ತಾ ಹೋದಂತೆ ನನಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಭಕ್ತರು ನೆನಪಾದರು. ಭಕ್ತರು ಎಂಬ ಪದವನ್ನು ನಾನಿಲ್ಲಿ ಉದ್ದೇಶಪೂರ್ವಕವಾಗಿಯೇ ಬಳಸಿದ್ದೇನೆ. ಭಕ್ತರು ಮತ್ತು ಬೆಂಬಲಿಗರ ನಡುವೆ ಒಂದು ಸೂಕ್ಷ್ಮ ವ್ಯತ್ಯಾಸ ಇದೆ. ಭಕ್ತರು ಬದಲಾಗುವುದು ಕಡಿಮೆ. ಅಲ್ಲೊಂದು ಸ್ವಾಮಿನಿಷ್ಠೆಯಿದೆ. ಆ ನಿಷ್ಠೆ ಹೆಚ್ಚಿನ ಬಾರಿ ಎಷ್ಟು ಅಂಧವಾಗಿ ಇರುತ್ತದೆಂದರೆ, ವಾಸ್ತವವನ್ನೂ ಒಪ್ಪಿಕೊಳ್ಳದಷ್ಟು. ಆದರೆ ಬೆಂಬಲಿಗರು ಹಾಗಲ್ಲ. ಅವರ ಬೆಂಬಲವು ಸಂದರ್ಭ, ಸನ್ನಿವೇಶ ಮತ್ತು ಪರಿಸ್ಥಿತಿಗಳಿಗೆ ಹೊಂದಿಕೊಂಡು ಬದಲಾಗುತ್ತಲೇ ಇರುತ್ತದೆ. ನಿಕೋಲಸ್ ಕ್ರಿಸ್ಟಾಫ್‍ರ ಲೇಖನಗಳು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಹೊತ್ತಿನಲ್ಲೇ  ಮಹಾ ರಾಷ್ಟ್ರದ ನಾಂದೇಡ್ ಮುನ್ಸಿಪಲ್ ಕಾರ್ಪೋರೇಶನ್‍ಗೆ ನಡೆದ ಚುನಾವಣೆಯ ಫಲಿತಾಂಶಗಳೂ ಪ್ರಕಟವಾದುವು. ಅಚ್ಚರಿ ಏನೆಂದರೆ, ಒಟ್ಟು 81 ಸ್ಥಾನಗಳಲ್ಲಿ 73 ಸ್ಥಾನಗಳನ್ನು ‘ರಾಹುಲ್ ಗಾಂಧಿ’ಯ ಕಾಂಗ್ರೆಸ್ ಪಡೆದಿದೆ. ಬಿಜೆಪಿಗೆ ದಕ್ಕಿದ್ದು ಬರೇ 6. ಕಳೆದ ಚುನಾವಣೆಯಲ್ಲಿ 11 ಸ್ಥಾನಗಳನ್ನು ಪಡೆದಿದ್ದ ಓವೈಸಿಯ ಪಕ್ಪವು ಈ ಬಾರಿ ಶೂನ್ಯ ಸಾಧನೆಯನ್ನು ಮಾಡಿದೆ. ಅಂದ ಹಾಗೆ, 578 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದ, 60% ಮತದಾನವಾಗಿದ್ದ ಮತ್ತು ಚುನಾವಣಾ ಆಯೋಗವು ಮೊದಲ ಬಾರಿ 32 ವಾರ್ಡುಗಳಲ್ಲಿ VVPAT  (Voter verifiable paper audit trail )ಯನ್ನು ಅಳವಡಿಸಿದ್ದ ಚುನಾವಣೆ ಎಂಬ ನೆಲೆಯಲ್ಲಿ ಮಾತ್ರ ಈ ಫಲಿತಾಂಶ ಮುಖ್ಯವಲ್ಲ, ಈ ಹಿಂದೆ 16 ಮುನ್ಸಿಪಲ್ ಕಾರ್ಪೋರೇಶನ್‍ಗಳಿಗೆ ನಡೆದ ಚುನಾವಣೆಯಲ್ಲಿ 13ನ್ನು ಗೆದ್ದ ಬಿಜೆಪಿಯ ಫಡ್ನವಿಸ್ ಸರಕಾರಕ್ಕೆ ನೋಟ್ ನಿಷೇಧ ಮತ್ತು ಜಿಎಸ್‍ಟಿಯ ಬಳಿಕ ಎದುರಾದ ಮೊದಲ ಹಿನ್ನಡೆ ಎಂಬ ಕಾರಣಕ್ಕಾಗಿಯೂ ಮುಖ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸರಕಾರಕ್ಕೆ 3 ವರ್ಷಗಳು ತುಂಬಿವೆ. ಅಧಿ ಕಾರ ನಡೆಸುವ ಪಕ್ಷ ಎಂಬ ನೆಲೆಯಲ್ಲಿ ಜನರು ಲೆಕ್ಕಾಚಾರ ನಡೆಸುವ ಸಂದರ್ಭ ಇದು. ಚುನಾವಣೆಯ ಸಮಯದಲ್ಲಿ ನರೇಂದ್ರ ಮೋದಿಯವರು ಕೊಟ್ಟಿರುವ ಆಶ್ವಾಸನೆ, ಮೂಡಿಸಿದ ಭರವಸೆ ಮತ್ತು ಮಾತಿನ ವಾಗ್ವೈಖರಿಗಳನ್ನೆಲ್ಲ ಒಂದು ಕಡೆ ರಾಶಿ ಹಾಕಿ ಫಲಿತಾಂಶ ಹುಡುಕುವ ಸಮಯವೂ ಹೌದು. ನಾಂದೇಡ್ ನಗರ ಪಾಲಿಕೆಯ ಚುನಾವಣಾ ಫಲಿತಾಂಶವನ್ನು ಬಿಜೆಪಿ ಮತ್ತು ಅದರ ಬೆಂಬಲಿಗರು ಈ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೋ ಅನ್ನುವ ಕುತೂಹಲವೊಂದು ಎಲ್ಲರಂತೆ ನನ್ನಲ್ಲೂ ಇತ್ತು. ಸಾಮಾನ್ಯವಾಗಿ ಆಡಳಿತ ಪಕ್ಷವು ಸ್ಥಳೀಯ ಚುನಾವಣೆಯಲ್ಲಿ ಮೇಲುಗೈ ಸಾಧಿಸುವುದೇ ಹೆಚ್ಚು. ನಾಂದೇಡ್‍ನಲ್ಲಂತೂ ಖುದ್ದು ಮುಖ್ಯಮಂತ್ರಿ ಫಡ್ನವಿಸ್‍ರೇ ರಾಲಿ ನಡೆಸಿದ್ದರು. ಸರಕಾರವೇ ಒಂದಷ್ಟು ದಿನ ನಾಂದೇಡ್‍ನಲ್ಲೇ ಠಿಕಾಣಿ ಹೂಡಿದಂಥ ವಾತಾವರಣವೂ ಸೃಷ್ಟಿಯಾಗಿತ್ತು. ಇಷ್ಟಿದ್ದೂ, ಕಳೆದ ಬಾರಿ ಅಧಿಕಾರವಿದ್ದೂ 40 ಸ್ಥಾನಗಳನ್ನಷ್ಟೇ ಪಡೆದಿದ್ದ ಕಾಂಗ್ರೆಸ್ ಈ ಬಾರಿ 73 ಸ್ಥಾನಗಳನ್ನು ಪಡೆದುದಕ್ಕೆ ಏನು ಕಾರಣ? ಇದು ಪ್ರಧಾನಿ ಮೋದಿಯವರ ಜನಪ್ರಿಯತೆ ಕುಸಿಯುತ್ತಿರುವುದರ ಸೂಚನೆಯೇ? 2014ರ ಬಿಜೆಪಿ 2017ರ ಕೊನೆಯಲ್ಲಿ ಮಸುಕಾಗಲು ಪ್ರಾರಂಭಿಸಿತೇ? ದುರಂತ ಏನೆಂದರೆ, ಇಂಥದ್ದೊಂದು ಚರ್ಚೆಗೆ ಮುಖಾಮುಖಿಯಾಗುವುದಕ್ಕೇ ಬಿಜೆಪಿಯ ನಿಷ್ಠಾವಂತ ಬೆಂಬಲಿಗರು ಸಿದ್ಧರಾಗುತ್ತಿಲ್ಲ. ಉತ್ತರ ಕೊರಿಯಾದ ಈಗಿನ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‍ರ ಬಗ್ಗೆ ಅಲ್ಲಿನ ಜನರ ಅಭಿಪ್ರಾಯಗಳು ಯಾವ ಮಾದರಿಯವೋ ಬಹುತೇಕ ಅವನ್ನೇ ಹೋಲುವಷ್ಟು ಅಂಧ ಅಭಿಮಾನವೊಂದು ಅವರಲ್ಲಿ ವ್ಯಕ್ತವಾಗುತ್ತಿದೆ. ಅಲ್ಲಿನ ಸರ್ಕಾರಿ ಮಾಧ್ಯಮಗಳು ಕಿಮ್ ಜಾಂಗ್ ಉನ್‍ರನ್ನು ಅಪ್ರತಿಮ ಬುದ್ಧಿಮತ್ತೆಯುಳ್ಳವ, ಸೇನಾ ಚತುರ, ಸರಿಸಾಟಿಯಿಲ್ಲದ ಶೂರ ಮತ್ತು ಅದ್ವಿತೀಯ ನಾಯಕತ್ವ ಕೌಶಲ ಇರುವವ (The state media are worshipful about his brilliant intelligence, military acumen, matchless courage , and outstanding art of command ..) ಎಂದು ಹೊಗಳುತ್ತಿವೆ ಎಂದು ನಿಕೋಲಸ್ ಕ್ರಿಸ್ಟಾಫ್ ಹೇಳುತ್ತಾರೆ. ಒಂದು ವೇಳೆ ಕ್ರಿಸ್ಟಾಫ್‍ರು ಭಾರತಕ್ಕೆ ಭೇಟಿ ನೀಡಿರುತ್ತಿದ್ದರೆ ಕೊರಿಯದ ಸರಕಾರಿ ಮಾಧ್ಯಮದ ಕೆಲಸವನ್ನು ಇಲ್ಲಿನ ಖಾಸಗಿ ಮಾಧ್ಯಮಗಳು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ ಎಂದು ಬರೆಯುತ್ತಿದ್ದರೋ ಏನೋ. ಇಡೀ ಕೊರಿಯಾದಲ್ಲಿ ಜನರು ಅಧ್ಯಕ್ಷ ಕಿಮ್ ಜಾಂಗ್ ಉನ್‍ರ ಬಗ್ಗೆ ಅವಾಸ್ತವಿಕ ಮತ್ತು ಅಪೌರುಶೇಯ ಭ್ರಮೆಯಲ್ಲಿ ಮುಳುಗಿ ಹೋಗಿದ್ದಾರೆ. ಉನ್‍ರು ಅಮೇರಿಕವನ್ನು ಚಿಂದಿ ಉಡಾಯಿಸುವ ಕನಸನ್ನು ಅವರು ಕಾಣುತ್ತಿದ್ದಾರೆ. ಸೇನಾ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಅಲ್ಲಿ ಪ್ರತಿದಿನ ಪಥಸಂಚಲನ ನಡೆಸುತ್ತಾರೆ ಮತ್ತು ಅಮೇರಿಕವನ್ನು ಖಂಡಿಸುತ್ತಾರೆ ಎಂದು ಕ್ರಿಸ್ಟಾಫ್ ಬರೆಯುತ್ತಾರೆ. ಉತ್ತರ ಕೊರಿಯಾದ ಕ್ಷಿಪಣಿ ಅಮೇರಿ ಕಕ್ಕೆ ಅಪ್ಪಳಿಸಿ ರಾಷ್ಟ್ರಧ್ವಜವನ್ನು ಧ್ವಂಸ ಮಾಡುವ ಭಿತ್ತಿ ಚಿತ್ರ ಗಳು ರಸ್ತೆಯಂಚಿನಲ್ಲಿವೆ. ಕ್ಷಿಪಣಿಗಳ ಚಿತ್ರಗಳು ಅಲ್ಲಿನ ಶಿಶು ವಿಹಾರ ಮೈದಾನಗಳಲ್ಲಿ, ಪ್ರದರ್ಶನ ತಾಣಗಳಲ್ಲಿ, ಟಿ.ವಿ.ಗಳಲ್ಲಿ ರಾರಾಜಿಸುತ್ತಿವೆ ಎನ್ನುತ್ತಾರೆ ಕ್ರಿಸ್ಟಾಫ್. ಅಮೇರಿಕವನ್ನು ತೀವ್ರವಾಗಿ ವಿರೋಧಿಸುವ ವಾತಾವರಣವೊಂದು ಉತ್ತರ ಕೊರಿಯದಲ್ಲಿದೆ. ಅದನ್ನು ಅತ್ಯಂತ ಬುದ್ಧಿವಂತಿಕೆಯಿಂದ ಅಲ್ಲಿನ ನಾಯಕತ್ವ ಜೀವಂತವಾಗಿಯೂ ಇಡುತ್ತಿದೆ. ಅಮೇರಿಕ ವಿರೋಧಿ ಮನೋ ಭಾವವನ್ನು ಅಲ್ಲಿ ಎಲ್ಲಿಯ ವರೆಗೆ ಬೆಳೆಸಲಾಗಿದೆ ಎಂಬುದಕ್ಕೆ ಒಟ್ಟೋ ವರ್‍ಂಬಿಯರ್ (Votto Warmbier) ಎಂಬ 22ರ ಅಮೇರಿಕನ್ ವಿದ್ಯಾರ್ಥಿಯೇ ಉದಾಹರಣೆ. ಉತ್ತರ ಕೊರಿಯಾಕ್ಕೆ ಭೇಟಿ ನೀಡುವುದಕ್ಕೆ ಅಮೇರಿಕದಲ್ಲಿ ನಿರ್ಬಂಧವಿದೆ. ಈ ಕಾರಣದಿಂದಾಗಿ ಒಟ್ಟೋ ವರ್‍ಂಬಿಯರ್ ಚೀನಾದ ಮೂಲಕ ಉತ್ತರ ಕೊರಿಯಾಕ್ಕೆ 2015ರ ಕೊನೆಯಲ್ಲಿ ತೆರಳುತ್ತಾನೆ. ಆದರೆ ಆತನನ್ನು ಯಾಂಗೂನ್ ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗು ತ್ತದೆ. ಶತ್ರು ಕಾಯ್ದೆಯಡಿ ಕೇಸು ದಾಖಲಾಗುತ್ತದೆ. ಇದಾದ ಎರಡು ತಿಂಗಳ ಬಳಿಕ ಭಿತ್ತಿ ಚಿತ್ರವೊಂದನ್ನು ಕದ್ದ ಆರೋಪದಲ್ಲಿ 15 ವರ್ಷಗಳ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಆತನ ಬಗ್ಗೆ ನಡೆದ ಒಂದು ಗಂಟೆಯ ವಿಚಾರಣೆಯನ್ನು ಅಲ್ಲಿನ ಟಿ.ವಿ.ಯಲ್ಲಿ ಬಿತ್ತರಿಸಲಾಗುತ್ತದೆ. ಆತ ಕಣ್ಣೀರಿನೊಂದಿಗೆ ತಪ್ಪೊಪ್ಪಿಕೊಳ್ಳುವ ದೃಶ್ಯ ಪ್ರಸಾರವಾಗುತ್ತದೆ. ಇದಾಗಿ 17 ತಿಂಗಳ ಬಳಿಕ ಕಳೆದ ಜೂನ್‍ನಲ್ಲಿ ಆತನನ್ನು ಬಹುತೇಕ ನಿರ್ಜೀವ ಸ್ಥಿತಿಯಲ್ಲಿ ಅಮೇರಿಕಕ್ಕೆ ಮರಳಿಸಲಾಗುತ್ತದೆ ಮತ್ತು ಇದಾಗಿ ಒಂದೇ ವಾರದೊಳಗೆ ಆತ ಸಾವಿಗೀಡಾಗುತ್ತಾನೆ. ಆತನ ಮೆದುಳಿಗೆ ಆಘಾತವಾಗಿರುವುದು ಮತ್ತು ಕಳೆದ ಒಂದು ವರ್ಷದಿಂದ ಆತ ಕೋಮಾದಲ್ಲಿರುವುದೂ ಬೆಳಕಿಗೆ ಬರುತ್ತದೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕೊರಿಯಾದ ಅಧಿಕಾರಿಗಳು ಯಾವ ಬೇಸರವನ್ನೂ ವ್ಯಕ್ತಪಡಿಸದಿರುವುದನ್ನು ಅತ್ಯಂತ ಅಚ್ಚರಿಯಿಂದ ಕ್ರಿಸ್ಟಾಫ್ ಬರೆಯುತ್ತಾರೆ. ಆತನ ಚಿಕಿತ್ಸೆಗೆ ವೆಚ್ಚ ಮಾಡಿ ದುದನ್ನು ಅಮೇರಿಕ ಮರಳಿಸಬೇಕು ಎಂಬ ರೀತಿಯ ಅಲ್ಲಿನ ಅಧಿಕಾರಿಗಳ ವಾದಕ್ಕೆ ಚಕಿತರಾಗುತ್ತಾರೆ. ನಿಜವಾಗಿ ಇದೊಂದು ರೀತಿಯ ಭ್ರಮೆ. ವ್ಯವಸ್ಥೆಯೊಂದು ಜನರನ್ನು ಎಷ್ಟರ ಮಟ್ಟಿಗೆ ತೀವ್ರವಾದಿಗಳಾಗಿಸಬಹುದು ಅನ್ನುವುದಕ್ಕೆ ಉದಾಹರಣೆ. ನಮ್ಮಲ್ಲೇ  ಗೌರಿ ಲಂಕೇಶ್‍ರ ಹತ್ಯೆಗೆ, ಅನಂತಮೂರ್ತಿ, ಕಲ್ಬುರ್ಗಿಯವರ ಹತ್ಯೆಗೆಲ್ಲ ವ್ಯಕ್ತವಾದ ಪ್ರತಿಕ್ರಿಯೆಗಳನ್ನೊಮ್ಮೆ ಅವಲೋಕಿಸಿಕೊಳ್ಳಿ. ಭಿತ್ತಿಪತ್ರವನ್ನು ಕದ್ದ ವ್ಯಕ್ತಿಯನ್ನು ಜೀವಚ್ಛವವಾಗಿ ಮಾಡಿದುದರ ಬಗ್ಗೆ ಪಶ್ಚಾತ್ತಾಪಪಡದ ಮತ್ತು ಚಿಕಿತ್ಸೆಗೆ ಮಾಡಿದ ವೆಚ್ಚದ ಬಗ್ಗೆ ಚಿಂತಿತರಾದ ಉತ್ತರ ಕೊರಿಯನ್ನರಿಗೆ ಹೋಲುವ ರೀತಿಯಲ್ಲಿ ಇಲ್ಲೂ ಪ್ರತಿಕ್ರಿಯೆಗಳು ವ್ಯಕ್ತವಾಗಿತ್ತಲ್ಲವೇ? ಆ ಪ್ರತಿಕ್ರಿಯೆಗಳ ಮೂಲ ಎಲ್ಲಿತ್ತು? ಪ್ರತಿಕ್ರಿಯಿಸಿದವರು ಯಾರ ಬೆಂಬಲಿಗರಾಗಿದ್ದರು? ಈ ದೇಶದವರೇ ಆದ ಆದರೆ ಪ್ರಧಾನಿ ಮೋದಿಯವರ ವಿಚಾರಧಾರೆಯನ್ನು ಒಪ್ಪದ ಕನ್ಹಯ್ಯ, ಹಾರ್ದಿಕ್ ಪಟೇಲ್, ಜಿಗ್ನೇಶ್, ಪ್ರಕಾಶ್ ರೈ ಅವರ ಬಗ್ಗೆ ಇಲ್ಲಿ ವ್ಯಕ್ತವಾಗುತ್ತಿರುವ ವಿರೋಧಗಳು ಯಾವ ಮಟ್ಟಿನವು? ಒಟ್ಟೋನ ಮೇಲೆ ಶತ್ರು ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿದಂತೆಯೇ ಕನ್ಹಯ್ಯನ ಮೇಲೆ ದೇಶದ್ರೋಹಿ ಕಾಯ್ದೆಯಡಿ ಕೇಸು ದಾಖಲಿಸಲಾಯಿತು. ಮಾತ್ರವಲ್ಲ, ಒಂದಿಡೀ ಮಾಧ್ಯಮ ಗುಂಪು ಆತನ ಮೇಲೆ ಎರಗಿತು. ಬಿಜೆಪಿ ಪ್ರಣೀತ ವಿಚಾರಧಾರೆಯನ್ನೇ ಏಕೈಕ ಮತ್ತು ಪರ್ಯಾಯವಿಲ್ಲದ ವಿಚಾರಧಾರೆಯಾಗಿ ಮಂಡಿಸಲು ಅವೆಲ್ಲ ಹೆಣಗಿದುವು. ಉತ್ತರ ಕೊರಿಯಾದಲ್ಲಿ ಅಮೇರಿಕದ ವಿರುದ್ಧ ಯಾವ ಬಗೆಯ ಅಭಿಪ್ರಾಯವನ್ನು ರೂಪಿಸಲಾಗಿದೆಯೋ ಪ್ರಜಾತಂತ್ರ ಭಾರತದಲ್ಲೂ ಬಿಜೆಪಿ ವಿಚಾರಧಾರೆಯೇ ಸರಿ ಮತ್ತು ಪರಿಪೂರ್ಣ ಎಂಬ ಧಾಟಿಯಲ್ಲಿ ಮಾಧ್ಯಮಗಳ ಒಂದು ಗುಂಪು ಅತ್ಯಂತ ಪ್ರಬಲವಾಗಿ ವಾದಿಸಿತು. ವಿರೋಧಿ ಧ್ವನಿಯನ್ನು ಮೆಟ್ಟುವ ಪ್ರಯತ್ನ ನಡೆಯಿತು. ಆದರೆ,
ನಾಂದೇಡ್ ನಗರ ಪಾಲಿಕಾ ಚುನಾವಣೆಯ ಫಲಿತಾಂಶವು ಈ ವಿಚಾರಧಾರೆಯ ಪ್ರಭಾವ ಕುಸಿಯುತ್ತಿರುವುದನ್ನು ಸೂಚಿಸು ವಂತಿದೆ. ಕಳೆದ 3 ವರ್ಷಗಳಲ್ಲಿ ಪ್ರಾಬಲ್ಯ ಸ್ಥಾಪಿಸಿದ್ದ ವಿಚಾರ ಧಾರೆಗೆ ಎದುರಾದ ಪ್ರಬಲ ಸವಾಲು ಇದು. ವ್ಯಕ್ತಿ ವರ್ಚಸ್ಸು ಎಂಬುದು ಸರ್ವಾಧಿಕಾರಿ ಪ್ರಭುತ್ವವೊಂದರಲ್ಲಿ ಸದಾ ಕಾಯ್ದುಕೊಳ್ಳಬಹುದಾದ ಸಂಗತಿಯೇ ಹೊರತು ಪ್ರಜಾತಂತ್ರ ರಾಷ್ಟ್ರದಲ್ಲಲ್ಲ. ಪ್ರಜಾತಂತ್ರ ರಾಷ್ಟ್ರದಲ್ಲಿ ವ್ಯಕ್ತಿ ವರ್ಚಸ್ಸು ಒಂದು ಹಂತವನ್ನು ದಾಟಿದ ಬಳಿಕ ಸವಾಲಿಗೆ ಮುಖಾಮುಖಿಯಾಗಲೇ ಬೇಕಾಗುತ್ತದೆ. ಆ ಮುಖಾಮುಖಿಯಲ್ಲಿ ಗೆಲುವು ಪಡೆಯಬೇಕಾದರೆ ಸಾಧನೆ ಇರಬೇಕಾಗುತ್ತದೆ. ಜನಸ್ನೇಹಿಯಾಗಿ ಗುರುತಿಸಿರಬೇಕಾಗುತ್ತದೆ. ಕೃತಿಯಲ್ಲಿ ಜನರ ಹೃದಯವನ್ನು ತಟ್ಟಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ 3 ವರ್ಷಗಳು ಪ್ರಧಾನಿ ಮೋದಿಯವರನ್ನು ಅವರ ವ್ಯಕ್ತಿ ವರ್ಚಸ್ಸು ಗೆಲ್ಲಿಸುತ್ತಾ ಬಂತು. ಆದರೆ ಈ ಗೆಲುವನ್ನು ಆ ಪಕ್ಷ ತಪ್ಪಾಗಿ ಅರ್ಥೈಸಿತೋ ಎಂಬ ಅನುಮಾನವನ್ನು ನಾಂದೇಡ್ ಫಲಿತಾಂಶವು ಮುಂದಿಡುತ್ತಿದೆ. ಅಷ್ಟಕ್ಕೂ, ಸ್ಥಳೀಯ ಚುನಾವಣೆಯ ಮೇಲೆ ಸ್ಥಳೀಯವಾದ ಅಂಶಗಳು ಮತ್ತು ರಾಜ್ಯ ಸರಕಾರದ ನೀತಿಗಳು ಪ್ರಭಾವ ಬೀರಿರುತ್ತವೆಯೇ ಹೊರತು ಕೇಂದ್ರ ಸರಕಾರದ್ದಲ್ಲ ಎಂದು ವಾದಿಸಬಹುದು. ಬಾಹ್ಯನೋಟಕ್ಕೆ ಅದು ಸರಿಯೆಂದೂ ಅನಿಸಬಹುದು. ಆದರೆ ಇವತ್ತು ಈ ದೇಶದಲ್ಲಿ ಪಂಚಾಯತಿ ಚುನಾವಣೆಯಿಂದ ಹಿಡಿದು ಸಂಸತ್ ಚುನಾವಣೆಯ ವರೆಗೆ ಬಿಜೆಪಿ ಮತ ಯಾಚಿಸುವುದೇ ಪ್ರಧಾನಿ ನರೇಂದ್ರ ಮೋದಿಯವರನ್ನು ಎದುರಿಟ್ಟುಕೊಂಡು. ಅವರ ಹೊರತಾಗಿ ಅದಕ್ಕೆ ವಿಷಯಗಳೂ ಇಲ್ಲ. ಸಾಧನೆಗಳೂ ಇಲ್ಲ. ಆದ್ದರಿಂದಲೇ ನಾಂದೇಡ್ ಫಲಿತಾಂಶ ಮುಖ್ಯವಾಗುವುದು. ಏನೇ ಆಗಲಿ,
    ಭಾರತ ಭ್ರಮೆಯಿಂದ ಕಳಚಿಕೊಳ್ಳುತ್ತಿದೆ. ಭ್ರಮೆಯಲ್ಲಿರುವ ಮಂದಿ ಈ ಬದಲಾವಣೆಯನ್ನು ಒಪ್ಪಿಕೊಂಡರೂ ಇಲ್ಲದಿದ್ದರೂ..

No comments:

Post a Comment