ಇಟಲಿಯ ಬರಹಗಾರ್ತಿ ಇಗೆನಿಯ ಪೌಲಿಸೆಲ್ಲಿಯವರು ತಮ್ಮ ‘ಇನ್ ಫ್ಯಾಶನ್ ಅಂಡರ್ ಫ್ಯಾಸಿಸಂ: ಬಿಯಾಂಡ್ ದಿ ಬ್ಲ್ಯಾಕ್ ಶರ್ಟ್’ ಎಂಬ ಬಹುಚರ್ಚಿತ ಕೃತಿಯಲ್ಲಿ ಫ್ಯಾಸಿಸಂನ ಕುರಿತಂತೆ ಒಳನೋಟವನ್ನು ಹರಿಸಿದ್ದಾರೆ. ಇಟಲಿಯ ಉಡುಪು ವಿನ್ಯಾಸಗಳು ಹೇಗೆ ಫ್ಯಾಸಿಸಂನಿಂದ ಪ್ರಭಾವಿತವಾಗಿವೆ ಎಂಬುದನ್ನು ಪ್ರಸಿದ್ಧ ಉಡುಪು ವಿನ್ಯಾಸಕಾರ ಫರ್ನಾಂಡೋ ಗಟ್ಟಿನೋನಿ ಮತ್ತು ಮೈಕಲ್ ಫಂಟಾನಾ ಅವರ ಜೊತೆ ನಡೆಸಿದ ಮಾತುಕತೆಯಿಂದಲೂ ಅವರು ಹೆಕ್ಕಿ ತೋರಿಸಿದ್ದಾರೆ. ಇಟಲಿಯ ಪ್ರಸಿದ್ಧ ಬಟ್ಟೆ ಬ್ರಾಂಡ್‍ಗಳಾದ Gucci, Max, Mara, Prada.. ಮುಂತಾದುವುಗಳಲ್ಲಿ ಅವರು ಫ್ಯಾಸಿಸಂನ ಛಾಯೆಯನ್ನು ಹುಡುಕಿದ್ದಾರೆ. ಚರ್ಚೆಗೊಡ್ಡಿದ್ದಾರೆ. ಅಂದಹಾಗೆ, ಅವರು ಬಟ್ಟೆಯ ಮೇಲೆ ಇಂಥದ್ದೊಂದು ಪತ್ತೆ ಕಾರ್ಯ ನಡೆಸುವುದಕ್ಕೆ ಪ್ರಮುಖ ಕಾರಣ ಇದೆ. ಅದೆಂದರೆ ಮುಸೊಲೋನಿ. 1920ರ ದಶಕದಲ್ಲಿ ಮುಸೊಲೋನಿ ಇಟಲಿಯ ಮೇಲೆ ಪ್ರಾಬಲ್ಯ ಸ್ಥಾಪಿಸಿದ್ದ. ಆತ ಅತ್ಯುತ್ತಮ ಮಾತುಗಾರ. ಸಂಘಟಕ. ಆತನ ‘ರಾಷ್ಟ್ರೀಯ ಫ್ಯಾಸಿಸ್ಟ್ ಪಾರ್ಟಿ’ಯ ಸ್ವಯಂ ಸೇವಕರನ್ನು ಬ್ಲ್ಯಾಕ್ ಶರ್ಟ್ಸ್ ಎಂದು ಕರೆಯಲಾಗುತ್ತಿತ್ತು. ಕಪ್ಪು ಶರ್ಟು ಅವರ ಸಮವಸ್ತ್ರ. ಮುಸೊಲೋನಿ ನಿರ್ಗಮಿಸಿದ್ದರೂ ಆತನ ವಿಚಾರಧಾರೆಯ ಕುರುಹು ಈಗಿನ ಬಟ್ಟೆ ವಿನ್ಯಾಸಗಳಲ್ಲಿ ಗೋಚರಿಸುತ್ತವೆ ಎಂಬುದು ಇಗೊನಿಯರ ಅಭಿಪ್ರಾಯ. ನಿಜವಾಗಿ, ಫ್ಯಾಸಿಸಂ ಎಂಬುದು ಒಂದು ವಿಚಾರಧಾರೆ. ಅದಕ್ಕೆ ಶಾಶ್ವತ ಅಳಿವು ಎಂಬುದಿಲ್ಲ. ಆ ವಿಚಾರಧಾರೆಗೆ ಅಧಿಕಾರ ಕೈ ತಪ್ಪಿ ಹೋದ ತಕ್ಷಣ ಅದರ ನಿಧನ ವಾರ್ತೆಯನ್ನು ಶಾಶ್ವತಗೊಳಿಸಬೇಕಾದ ಅಗತ್ಯವೂ ಇಲ್ಲ. ಅದು ವಿವಿಧ ರೀತಿಯಲ್ಲಿ ಪುಟಿಯಲು ಸಿದ್ಧವಾಗುತ್ತಲೇ ಇರುತ್ತದೆ. ಉಡುಪು ಅದರ ಬಹು ದೊಡ್ಡ ಮಾಧ್ಯಮ. ಉಡುಪಿಗೆ ಅದ್ಭುತ ಸಾಮರ್ಥ್ಯ ಇದೆ. ಅದು ಸಮಾಜವನ್ನು ಆಕರ್ಷಿಸುತ್ತದೆ. ಒಂದು ಫ್ಯಾಶನ್ ಸಮಾಜದ ಭಾಗವಾಗುವುದೆಂದರೆ, ಅದು ಬರೇ ಫ್ಯಾಶನ್‍ಗೇ ಸೀಮಿತಗೊಳ್ಳುವುದಿಲ್ಲ. ಆ ಫ್ಯಾಶನ್ ಏನನ್ನು ಅಭಿವ್ಯಕ್ತಿಸುತ್ತದೋ ಅದನ್ನು ಅದರ ಗ್ರಾಹಕರು ಪ್ರತಿನಿಧಿಸುತ್ತಾರೆ. ಖಾಕಿ ಬಟ್ಟೆಯು ಹೊರನೋಟಕ್ಕೆ ಬರೇ ಒಂದು ಉಡುಪು ಮಾತ್ರ. ಹಾಗಂತ, ಆ ಉಡುಪನ್ನು ಎಲ್ಲರೂ ಧರಿಸುವುದಿಲ್ಲ. ಸಾಮಾನ್ಯವಾಗಿ ಪೊಲೀಸರು ಖಾಕಿಯನ್ನು ಧರಿಸುತ್ತಾರೆ. ಖಾಕಿಗೂ ಪೊಲೀಸರಿಗೂ ನಡುವೆ ಸಂಬಂಧ ಎಷ್ಟು ಪ್ರಬಲವಾಗಿದೆಯೆಂದರೆ, ಬಟ್ಟೆಯಂಗಡಿಯಲ್ಲಿ ಅಪ್ಪಿ-ತಪ್ಪಿ ವಿತರ ಕರು ಖಾಕಿಯನ್ನು ತೋರಿಸಿದರೆ, ‘ನಾನು ಪೊಲೀಸ್ ಇಲಾಖೆ ಯಲ್ಲಿ ಇಲ್ಲ’ ಎಂಬ ಉತ್ತರವನ್ನು ಗ್ರಾಹಕರು ಕೊಡುವುದಿದೆ. ಖಾಕಿ ಎಂದರೆ ಪೊಲೀಸ್ ಇಲಾಖೆ ಎಂದಾಗಿದೆ. ಪೊಲೀಸರು ಯಾರೆಂದರೆ, ಒಂದು ನಿರ್ದಿಷ್ಟ ಕಾನೂನನ್ನು ಮತ್ತು ಸಂವಿಧಾನ ವನ್ನು ಪ್ರತಿನಿಧಿಸುವವರು. ಪೊಲೀಸರಿಂದ ಕಾನೂನು ಭಂಗ ವಾಗಿ ಬಿಟ್ಟರೆ ಸಮಾಜ ಅದನ್ನು ಬಹಳ ದೊಡ್ಡ ಅನ್ಯಾಯವಾಗಿ ಪರಿಗಣಿಸುತ್ತದೆ. ಅದೇ ಕಾನೂನುಭಂಗವನ್ನು ಓರ್ವ ಸಾಮಾನ್ಯ ನಾಗರಿಕ ಮಾಡಿದರೆ ಅದು ಅಷ್ಟು ಸುದ್ದಿಯಾಗುವುದಿಲ್ಲ. ಇದಕ್ಕಿರುವ ಕಾರಣ ಏನೆಂದರೆ, ಪೊಲೀಸರು ಧರಿಸುವ ಖಾಕಿ ಬಟ್ಟೆಯು ಬರೇ ಸಮವಸ್ತ್ರವಷ್ಟೇ ಅಲ್ಲ, ಒಂದು ನಿರ್ದಿಷ್ಟ ವಿಚಾರಧಾರೆ ಅಥವಾ ನಿಯಮ ಸಂಹಿತೆಯನ್ನು ಅದು ಪ್ರತಿಬಿಂಬಿಸುತ್ತದೆ. ಇಟಲಿಯ Gucci, Max, Mara, Prada.. ಬ್ರಾಂಡುಗಳಲ್ಲಿ ಮುಸೊಲೋನಿಯ ಫ್ಯಾಸಿಸ್ಟ್ ವಿಚಾರಧಾರೆಯ ಪ್ರಭಾವವಿದೆ ಎಂಬ ಇಗೆನಿಯರ ಮಾತು ಮುಖ್ಯವಾಗುವುದು ಇಲ್ಲೇ. ಮುಸೊಲೋನಿ ತನ್ನ ಬ್ಲ್ಯಾಕ್ ಶರ್ಟ್ಸ್ ನ ಬೆಂಬಲಿಗರಿಂದ ಇಟಲಿಯಾದ್ಯಂತ ಪೆರೇಡ್ ನಡೆಸುತ್ತಿದ್ದ. ಆತನ ಸುತ್ತ-ಮುತ್ತ ಇದ್ದುದು ಬ್ಲ್ಯಾಕ್ ಶರ್ಟ್‍ಗಳೇ. ಅವನ ಬೆಂಬಲಿಗರು ಬ್ಲ್ಯಾಕ್ ಶರ್ಟ್ ಧರಿಸುವುದನ್ನು ಫ್ಯಾಶನ್ ಆಗಿಸಿಕೊಳ್ಳತೊಡಗಿದರು. ಇಟಲಿಯ ಎಲ್ಲೆಡೆಗೂ ಬ್ಲ್ಯಾಕ್ ಹರಡತೊಡಗಿತು. ನಿಜವಾಗಿ, ಕಪ್ಪು ಎಂಬುದು ಮುಸೊಲೋನಿಯ ವಿಚಾರಧಾರೆಯನ್ನು ಪ್ರತಿನಿಧಿಸುವ ಬಣ್ಣ. ರಸ್ತೆಯಲ್ಲಿ ನೂರೋ ಸಾವಿರವೋ ಮಂದಿ ಶಿಸ್ತುಬದ್ಧವಾಗಿ ಕಪ್ಪು ಸಮವಸ್ತ್ರದೊಂದಿಗೆ ನಡೆಯುವುದೆಂದರೆ, ಅದು ಬರೇ ನಡತೆಯಷ್ಟೇ ಆಗಿರುವುದಿಲ್ಲ. ಆ ಶಿಸ್ತು ಮತ್ತು ಸಮವಸ್ತ್ರವು ಸಮಾಜದಲ್ಲಿ ಭಯ ಮತ್ತು ಬಲವಂತದ ಮೌನವನ್ನು ಉತ್ಪಾದಿಸುತ್ತದೆ. ಹಿಟ್ಲರ್ ಕೂಡ ಕಪ್ಪನ್ನು ಸಮವಸ್ತ್ರವನ್ನಾಗಿ ಬಳಸಿಕೊಂಡಿದ್ದ. ಆ ಸಮವಸ್ತ್ರದಲ್ಲಿ ಪೆರೇಡನ್ನೂ ನಡೆಸುತ್ತಿದ್ದ. ಸಮಾಜದ ಮೇಲೆ ಪ್ರಭಾವ ಬೀರುವುದಕ್ಕೆ ಇಟಲಿ ಮತ್ತು ಜರ್ಮನಿಯ ಫ್ಯಾಸಿಸ್ಟ್ ವಿಚಾರಧಾರೆಗಳು ಪ್ರಮುಖ ಮಾಧ್ಯಮವಾಗಿ ಬಳಸಿಕೊಂಡದ್ದೇ ಬಟ್ಟೆಯನ್ನು. ಸದ್ಯ ಪ್ರಧಾನಿ ನರೇಂದ್ರ ಮೋದಿಯವರು ಇಂಥದ್ದೊಂದು ಪ್ರಯತ್ನದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಂತಿದೆ. ‘ಮೋದಿ ಜಾಕೆಟ್’ (MJ) ಎಂಬುದು ಅವರ ಬೆಂಬಲಿಗರ ನೆಚ್ಚಿನ ವಿನ್ಯಾಸವಾಗತೊಡಗಿದೆ. ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‍ರೂ ಮೋದಿ ಜಾಕೆಟ್ ಧರಿಸುವವರಲ್ಲಿ ಓರ್ವರು ಎಂಬುದೇ ಅದು ಬರೇ ಫ್ಯಾಶನ್ ಅಲ್ಲ ಎಂಬುದಕ್ಕಿರುವ ಪುರಾವೆಯಾಗಿದೆ. ಜಾಕೆಟ್ ಒಂದು ವಿಚಾರಧಾರೆಯ ಪ್ರತಿನಿಧಿ. ನರೇಂದ್ರ ಮೋದಿಯವರೇ ಆ ವಿಚಾರಧಾರೆ. ದೇಶದ ಪ್ರತಿ ನಗರ, ಗ್ರಾಮ ಮತ್ತು ಹಳ್ಳಿ ಪ್ರದೇಶಗಳಲ್ಲಿ ಮೋದಿ ಜಾಕೆಟ್ ಜನಪ್ರಿಯವಾಗುವುದನ್ನು ಕಲ್ಪಿಸಿಕೊಳ್ಳಿ. ಪ್ರತಿ ಹೆಣ್ಣು ಮತ್ತು ಗಂಡು ತಮ್ಮ ಬಟ್ಟೆಗೆ ಮೇಲುಡುಗೆಯಾಗಿ ಜಾಕೆಟ್ ಧರಿಸುವ ಸಂದರ್ಭವನ್ನೊಮ್ಮೆ ಊಹಿಸಿ. ಒಂದು ವ್ಯಕ್ತಿತ್ವ ಮತ್ತು ಒಂದು ವಿಚಾರಧಾರೆಯನ್ನು ಪ್ರತಿಷ್ಠಾಪಿಸುವುದಕ್ಕೆ ಸುಲಭ ದಾರಿಯಿದು. ಇತ್ತೀಚೆಗೆ ಬರೋಡಾಕ್ಕೆ ಕಾರ್ಯನಿಮಿತ್ತ ಹೋಗಿದ್ದ ಪ್ರೊಫೆಸರ್ ಸದಾನಂದ ಮೇನನ್ ಅವರು ಈ ಆತಂಕವನ್ನು ತೋಡಿಕೊಂಡಿದ್ದರು. ಬರೋಡದ ಎಲ್ಲೆಡೆಯೂ ಮೋದಿ ಜಾಕೆಟ್ ರಾರಾಜಿಸುತ್ತಿದೆ ಎಂದವರು ಹೇಳಿದ್ದರು. ಪ್ರತಿ ಅಂಗಡಿ, ಮನೆ, ರಸ್ತೆ, ಪಾರ್ಕ್, ಮೈದಾನ, ಚೌಕಿ ಎಲ್ಲೆಂದರಲ್ಲಿ ಮೋದಿ ಜಾಕೆಟ್ ತುಂಬಿ ಹೋಗಿರುವುದನ್ನು ಹಂಚಿಕೊಂಡಿದ್ದರು. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಮೋದಿಯವರು ದೇಶವನ್ನುದ್ದೇಶಿಸಿ ಮಾತಾಡುವಾಗ ಧರಿಸಿದ್ದ ಉಡುಪು ವಿಶಿಷ್ಟವಾಗಿತ್ತು. ಅಂಥ ಉಡುಪನ್ನು ಈ ಹಿಂದಿನ ಪ್ರಧಾನಿಗಳಾರೂ ಧರಿಸಿರಲಿಲ್ಲ. ಈ ಹಿಂದಿನ ಎಲ್ಲ ಪ್ರಧಾನಿಗಳಿಗಿಂತಲೂ ವಿಭಿನ್ನವಾಗಿ ಅವರು ಕೆಂಪು ಕೋಟೆಯಿಂದ ಜನರೊಂದಿಗೆ ಮಾತಾಡಿದರು. ಪ್ರಧಾನಿಯವರ ಸ್ವಾತಂತ್ರ್ಯೋತ್ಸವದ ಭಾಷಣ ಎಂದ ತಕ್ಷಣ ಮೋದಿಯವರ ಮುಖಕ್ಕಿಂತಲೂ ಮೊದಲು ಅವರ ತಲೆಯ ಮುಂಡಾಸು ಮತ್ತು ಅದರ ಬಣ್ಣ ಎದುರು ಬರುತ್ತದೆ. ಉಳಿದ ಪ್ರಧಾನಿಗಳ ಮಟ್ಟಿಗೆ ಅವರ ಮುಖವೇ ಅವರ ಗುರುತು. ಮೋದಿಯವರ ಮಟ್ಟಿಗೆ ಅವರ ಉಡುಪೇ ಅವರ ಗುರುತು. ಇಟಲಿಯ ಮುಸೊಲೋನಿಯಿಂದ ಅತ್ಯಂತ ಹೆಚ್ಚು ಪ್ರಭಾವಿತ ಗೊಂಡ ಸಂಘಟನೆ ಎಂಬ ನೆಲೆಯಲ್ಲಿ ಆರೆಸ್ಸೆಸ್‍ನ ಸಮವಸ್ತ್ರವನ್ನು ಇಲ್ಲಿ ಎತ್ತಿಕೊಳ್ಳಬಹುದು. ನಿರ್ದಿಷ್ಟ ಸಮವಸ್ತ್ರ ಮತ್ತು ಶಿಸ್ತಿನೊಂದಿಗೆ ಅದು ಪೆರೇಡ್ ನಡೆಸುತ್ತದೆ. ಖಾಕಿ ಚಡ್ಡಿ, ಬಿಳಿ ಶರ್ಟು ಮತ್ತು ಟೊಪ್ಪಿ ಧರಿಸಿದವರನ್ನು ಸಾಮಾನ್ಯ ಜನರೂ ಆರೆಸ್ಸೆಸ್ಸಿನವರಾಗಿ ಪರಿಗಣಿಸುತ್ತಾರೆ. ಅದು ಎಷ್ಟರ ಮಟ್ಟಿಗೆ ಆ ಸಂಘಟನೆಯ ಬ್ರ್ಯಾಂಡ್ ಆಗಿಬಿಟ್ಟಿದೆಯೆಂದರೆ, ಆರೆಸ್ಸೆಸ್ಸಿ ಗನಲ್ಲದವನನ್ನೂ ಆ ಉಡುಪು ಆರೆಸ್ಸೆಸ್ಸಿಗನನ್ನಾಗಿ ಮಾಡಿಸುತ್ತದೆ. ನಿಜವಾಗಿ, ಖಾಕಿ ಮತ್ತು ಬಿಳಿ ಬಣ್ಣಗಳು ಹಲವು ಬಣ್ಣಗಳಲ್ಲಿ ಒಂದು ಬಣ್ಣವೇ ಹೊರತು ಅದಕ್ಕೆ ಇನ್ನಾವ ವೈಶಿಷ್ಟ್ಯವೂ ಇಲ್ಲ. ಆದರೆ ಇದನ್ನು ನಿರ್ದಿಷ್ಟ ಆಕಾರದಲ್ಲಿ ಮತ್ತು ನಿರ್ದಿಷ್ಟ ವಿನ್ಯಾಸದೊಂದಿಗೆ ಧರಿಸುವಾಗ ಅದೊಂದು ವಿಚಾರಧಾರೆಯಾಗಿ ಮಾರ್ಪಡುತ್ತದೆ.
ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಖಾದಿ ಮತ್ತು ಬಿಳಿ ಟೋಪಿಗೆ ಬಹು ಬೇಡಿಕೆಯಿತ್ತು. ಭಾರತೀಯರು ಭಾರೀ ಸಂಖ್ಯೆಯಲ್ಲಿ ಅದನ್ನು ಧರಿಸಿದರು. ಅದನ್ನು ವಿಮೋಚನೆ ಮತ್ತು ಸ್ವಾಭಿಮಾನದ ಸಂಕೇತವಾಗಿ ಬಳಸಿದರು. ಆ ಸಮಯದಲ್ಲಿ ಅದು ಫ್ಯಾಶನ್ ಆಗಿತ್ತು. ಅದೊಂದು ವಿಮೋಚನಾ ವಿಚಾರಧಾರೆ. ಅದರಲ್ಲಿ ಮನುಷ್ಯ ವಿರೋಧಿಯಾದ ಯಾವುದನ್ನೂ ಯಾರೂ ಕಂಡಿರಲಿಲ್ಲ. ಇವತ್ತಿಗೂ ಸರಕಾರಗಳು ಖಾದಿ ಬಟ್ಟೆಯನ್ನು ಜನಪ್ರಿಯಗೊಳಿಸಲು ಪ್ರಯ ತ್ನಿಸುತ್ತಿವೆ. ಆದರೆ ಮೋದಿಯವರ ಜಾಕೆಟ್‍ಗೆ ಇಂಥದ್ದೊಂದು ಹಿನ್ನೆಲೆ ಇದೆಯೇ? ಅವರು ಬೆಳೆದು ಬಂದ ಸಂಘಟನೆಯ ವಿಚಾರಧಾರೆಯು ಈ ದೇಶದ ಬಹುತ್ವಕ್ಕೆ ಅಪಾಯಕಾರಿ ಎಂಬ ನಿಲುವು ಬಹುಸಂಖ್ಯಾತ ಜನರಲ್ಲಿದೆ. ನರೇಂದ್ರ ಮೋದಿಯವರ ನಿಲುವೂ ಅನೇಕ ಬಾರಿ ಈ ದೇಶದಲ್ಲಿ ಪ್ರಶ್ನಾರ್ಹಗೊಂಡಿದೆ. ಬಹುತ್ವವನ್ನು ಒಪ್ಪದ ಮತ್ತು ಫ್ಯಾಸಿಸ್ಟ್ ವಿಚಾರಧಾರೆಯನ್ನು ಪ್ರತಿನಿಧಿಸುವ ಧಾಟಿಯಲ್ಲೇ ಅವರು ಮಾತು, ಪ್ರತಿಕ್ರಿಯೆಗಳಿರುತ್ತವೆ. ಆದ್ದರಿಂದಲೇ ಅವರ ಜಾಕೆಟ್ ಆರೆಸ್ಸೆಸ್‍ನ ಸಮವಸ್ತ್ರಕ್ಕೆ ಹತ್ತಿರವಾಗಬಹುದೇ ಹೊರತು ಸ್ವಾತಂತ್ರ್ಯ ಹೋರಾಟದ ಖಾದಿ, ಬಿಳಿ ಟೋಪಿಗಲ್ಲ. ಇಂದಿನ ಸಮಾಜಕ್ಕೆ ಪ್ರಧಾನಿ ನರೇಂದ್ರ ಮೋದಿ ಯಾರು ಮತ್ತು ಮೋದಿ ಜಾಕೆಟ್ ಏನು ಅನ್ನುವುದು ಗೊತ್ತು. ಆದರೆ ಮೋದಿಯನ್ನು ನೋಡೇ ಇಲ್ಲದ ಮುಂದಿನ ತಲೆಮಾರಿನ ಪಾಲಿಗೆ ಜಾಕೆಟ್ ಎಂಬುದು ಮೋದಿಯವರನ್ನು ನೆನಪಿಸುವ ಒಂದು ಸ್ಮರಣಿಕೆ. ಜಾಕೆಟ್ ಒಂದು ಫ್ಯಾಶನ್ ಆಗಿ ಸಮಾಜದಲ್ಲಿ ಚಲಾವಣೆಯಲ್ಲಿರುವುದೆಂದರೆ, ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಆ ವಿಚಾರಧಾರೆಯನ್ನು ಚಲಾವಣೆಯಲ್ಲಿ ಇಟ್ಟಂತೆ ಆಗುತ್ತದೆ. ಆ ಜಾಕೆಟ್ ಅನ್ನು ಧರಿಸುವ ಹೆಣ್ಣು ಮತ್ತು ಗಂಡು ಮೋದಿ ಯನ್ನು ನೆನಪಿಸಿಕೊಳ್ಳುವುದಕ್ಕೆ ಅವಕಾಶ ಒದಗುತ್ತದೆ. ಬಟ್ಟೆ ಅಂಗಡಿಗೆ ತೆರಳಿ ಮೋದಿ ಜಾಕೆಟ್ ಕೊಡಿ ಎಂದು ಕೇಳುವಾಗ ಜಾಕೆಟ್ ಮಾತ್ರ ಮಾರಾಟವಾಗುವುದಲ್ಲ, ಮೋದಿಯೂ ಮಾರಾಟವಾಗುತ್ತಾರೆ. ಹಾಗೆ ಜಾಕೆಟ್ ಖರೀದಿಸಿದವರಲ್ಲಿ ಮತ್ತು ಅದನ್ನು ಖರೀದಿಸದಿದ್ದರೂ ಅದನ್ನು ಧರಿಸಿದವರನ್ನು ನೋಡಿದವರಲ್ಲಿ ಮೋದಿಯವರ ಬಗ್ಗೆ ಕುತೂಹಲ ಹುಟ್ಟಬಾರದೆಂದೇನಿಲ್ಲ. ಗಾಂಧಿ ಟೋಪಿ ಧರಿಸಿದವರಲ್ಲಿ ಗಾಂಧಿಯ ಬಗ್ಗೆ ಹೇಗೆ ಜಿಜ್ಞಾಸೆ ಮೂಡಬಹುದೋ ಹಾಗೆಯೇ ಇದು. ಆ ಕುತೂಹಲ ಕೊನೆಗೆ ಮೋದಿಯವರ ಬಗ್ಗೆ ತಿಳಿದುಕೊಳ್ಳುವುದಕ್ಕೂ ಅವರನ್ನು ಬೆಳೆಸಿದ ಸಂಘಟನೆಯ ವಿಚಾರಧಾರೆಯನ್ನು ಅಧ್ಯಯನ ನಡೆಸುವುದಕ್ಕೂ ಕಾರಣವಾಗಬಹುದು. ಒಂದು ವಿಚಾರಧಾರೆಯನ್ನು ಜನರ ಬಳಿಗೆ ತಲುಪಿಸುವ ಬುದ್ಧಿವಂತಿಕೆಯ ವಿಧಾನ ಇದು. ಮೋದಿ ಜಾಕೆಟ್ ಅನ್ನು ಧರಿಸಿದ ಗುಜರಾತ್‍ನ ಒಂದು ಡಜನ್‍ನಷ್ಟು ಸಚಿವರು ಒಟ್ಟಾಗಿ ನಿಂತಿರುವ ಫೋಟೋವನ್ನು ಬರೋಡ ಭೇಟಿಯ ವೇಳೆ ದಿನ ಪತ್ರಿಕೆಯೊಂದರಲ್ಲಿ ತಾನು ನೋಡಿರುವುದಾಗಿ ಪ್ರೊಫೆಸರ್ ಸದಾನಂದ ಮೆನನ್ ಹೇಳಿಕೊಂಡಿದ್ದರು. ಜಾಕೆಟ್ ಬರೇ ಮೋದಿಯವರ ಖಾಸಗಿ ಉಡುಪಾಗಿಯಷ್ಟೇ ಪರಿಗಣಿತವಾಗಿಲ್ಲ ಎಂಬುದಕ್ಕೆ ಪುರಾವೆ ಇದು. ಬಿಜೆಪಿ ಇದನ್ನು ರಾಜಕೀಯವಾಗಿ ಪ್ರತಿಷ್ಠಾಪಿಸಬಯಸಿದೆ. ತನ್ನ ವಿಚಾರಧಾರೆಯನ್ನು ಜಾಕೆಟ್‍ನ ಮೂಲಕ ಹಂಚಬಯಸಿದೆ. ಆದ್ದರಿಂದಲೇ ಇದು ಆತಂಕಕಾರಿ.

No comments:
Post a Comment