Wednesday, April 15, 2015

ಬೀಫ್ ಫೆಸ್ಟ್ ಪ್ರತಿಭಟನೆ ಮತ್ತು ಆಹಾರದ ಹಕ್ಕಿನ ಪ್ರಶ್ನೆ

     ದನದ ಮಾಂಸ ಸೇವನೆಯು ಆಹಾರ ಹಕ್ಕಿನ ವ್ಯಾಪ್ತಿಗೆ ಒಳಪಡುತ್ತದೋ ಇಲ್ಲವೊ? ಓರ್ವರ ಆಹಾರವನ್ನು ನಿರ್ಧರಿಸುವ ಅಧಿಕಾರ ಯಾರಿಗಿದೆ? ಅದಕ್ಕಿರುವ ಮಾನದಂಡಗಳೇನು? ಓರ್ವ ಮಾಂಸಾಹಾರಿ, ಇನ್ನೋರ್ವ ಸಸ್ಯಾಹಾರಿ, ಮತ್ತೋರ್ವಳು ಉಭಯಾಹಾರಿ- ಇವರಲ್ಲಿ ಒಬ್ಬರನ್ನು ಸರಿ ಮತ್ತು ಮತ್ತಿಬ್ಬರನ್ನು ತಪ್ಪು ಎಂದು ವಿಂಗಡಿಸಬಹುದೆ? ಹಾಗೆ ವಿಂಗಡಿಸುವುದಾದರೆ ಅದಕ್ಕಿರುವ ಆಧಾರಗಳೇನು- ಧಾರ್ಮಿಕ ಗ್ರಂಥಗಳೇ, ಪುರಾಣಗಳೇ, ರಾಜಕೀಯವೇ, ಪರ-ವಿರೋಧಿಗಳ ಶೇಕಡಾವಾರು ಲೆಕ್ಕಾಚಾರಗಳೇ ಅಥವಾ ಆರೋಗ್ಯವೇ... ಇಂಥದ್ದೊಂದು ಜಿಜ್ಞಾಸೆ ಸಮಾಜವನ್ನು ಮತ್ತೆ ಕಾಡತೊಡಗಿದೆ. ನಿಜವಾಗಿ, ದನದ ಮಾಂಸವನ್ನು ನಿಷೇಧಿಸಬೇಕೆಂದು ಆಗ್ರಹಿಸುವವರ ವಾದವು ಎಷ್ಟು ಏಕಪಕ್ಷೀಯ ವಾಗಿದೆಯೆಂದರೆ ಅದು ನಟಿ ದೀಪಿಕಾ ಪಡುಕೋಣೆಯ ‘ಮೈ ಚಾಯ್ಸ್’ನಂತೆ ಕಾಣಿಸುತ್ತದೆ. ಮೈ ಚಾಯ್ಸ್ ನಲ್ಲಿ ದೀಪಿಕಾ ಕೆಲವು ಸೆಲೆಕ್ಟಿವ್ ವಿಷಯಗಳ ಬಗ್ಗೆ ಮಾತ್ರ ಮಾತಾಡುತ್ತಾಳೆ. ಸಿನಿಮಾ ರಂಗದಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಇರುವ ವೇತನ ತಾರತಮ್ಯದ ಬಗ್ಗೆ ಮೈ ಚಾಯ್ಸ್ ನಲ್ಲಿ ಏನೂ ಇಲ್ಲ. ಹೀರೋಗೆ ಸಮಾನವಾದ ವೇತನ ಪಡೆಯುವುದು ಹೀರೋಯಿನ್‍ಳ ಹಕ್ಕು ಎಂದಾಕೆ ಹೇಳುವುದಿಲ್ಲ. ಆರ್ಥಿಕ ಅಸಮಾನತೆಯ ಬಗ್ಗೆ ಮೈ ಚಾಯ್ಸ್ ಮೌನವಾಗುತ್ತದೆ. ಅತ್ಯಾಚಾರ, ಗೃಹಹಿಂಸೆ, ಉದ್ಯೋಗ ಮತ್ತು ಆರ್ಥಿಕ ಸ್ವಾತಂತ್ರ್ಯ ಮುಂತಾದವುಗಳ ಬಗ್ಗೆ ದೀಪಿಕಾ ಪಡಕೋಣೆಯಲ್ಲಿ ಯಾವ `ಚಾಯ್ಸೂ' ಇಲ್ಲ. ಒಂದು ರೀತಿಯಲ್ಲಿ, ದನದ ಮಾಂಸವನ್ನು ನಿಷೇಧಿಸಬೇಕೆನ್ನುವವರ ವಾದದಲ್ಲಿ ಮೈ ಚಾಯ್ಸ್ ನ ದೌರ್ಬಲ್ಯಗಳೆಲ್ಲ ಕಾಣಿಸುತ್ತವೆ. ಅಂದ ಹಾಗೆ, ಈ ದೇಶದ ದೊಡ್ಡದೊಂದು ಜನಸಂಖ್ಯೆಗೆ ಮಾಂಸವೇ ಆಹಾರ. ಆಹಾರ ಎಂಬುದು ತಿನ್ನುವವರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಅದು ಅಸಂಖ್ಯ ಮಂದಿಯನ್ನು ಸುತ್ತಿಕೊಂಡಿರುತ್ತದೆ. ನೀವು ಅಕ್ಕಿಯನ್ನು ನಿಷೇಧಿಸಿದರೆ ಅದು ಅನ್ನ ತಿನ್ನುವವರ ಸಮಸ್ಯೆಯಾಗಿಯಷ್ಟೇ ಗುರುತಿಸಿಕೊಳ್ಳುವುದಿಲ್ಲ. ಅದು ಗದ್ದೆಯ ಸಮಸ್ಯೆಯೂ ಹೌದು. ಎತ್ತುಗಳನ್ನು, ನೇಗಿಲು ತಯಾರಿಸುವವರನ್ನು, ಮರದ ವ್ಯಾಪಾರಿಗಳನ್ನು, ಟ್ರ್ಯಾಕ್ಟರ್ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಮಿಕರನ್ನು, ನೀರೆತ್ತುವ ಪಂಪ್ ಮತ್ತು ಅದರ ಉತ್ಪಾದಕ ಕೇಂದ್ರಗಳನ್ನು, ಕಾರ್ಮಿಕರನ್ನು.. ಹೀಗೆ ಅದು ಸಂಕೋಲೆಯಂತೆ ಉದ್ದಕ್ಕೂ ಬಾಧಿಸುತ್ತಾ ಹೋಗುತ್ತದೆ. ನೀವು ಅನ್ನಕ್ಕೆ ಬೆಂಕಿಕೊಟ್ಟರೆ ಆ ಬೆಂಕಿ ಕೊನೆಗೊಳ್ಳುವುದು ಇನ್ನೆಲ್ಲೋ ರೈತರ ಗದ್ದೆ-ನೇಗಿಲುಗಳಲ್ಲಿ. ಭತ್ತದ ಬಣವೆಗಳಲ್ಲಿ ಅಥವಾ ರಸಗೊಬ್ಬರವನ್ನೋ ನೇಗಿಲನ್ನೋ ತಯಾರಿಸುವ ಕಾರ್ಮಿಕರಲ್ಲಿ. ದನದ ಮಾಂಸ ನಿಷೇಧಕ್ಕೂ ಇದೇ ಬಗೆಯ ಮುಖ ಇದೆ. ಅದು ತಿನ್ನುವವರಿಗೆ ಮಾತ್ರ ಸಂಬಂಧಿಸಿರುವುದಲ್ಲ. ಮಾಂಸದ ವ್ಯಾಪಾರಿಗಳು, ಕಸಾಯಿಗಳು, ರೈತರು, ಮಧ್ಯವರ್ತಿಗಳು, ಚರ್ಮ ಉತ್ಪಾದನೆ ಮತ್ತು ಚರ್ಮೋದ್ಯಮದಲ್ಲಿ ತೊಡಗಿಸಿಕೊಂಡವರು.. ಎಲ್ಲರೂ ಅದರ ಅಡ್ಡ ಪರಿಣಾಮಕ್ಕೆ ಒಳಗಾಗುತ್ತಾರೆ. ಬ್ಯಾಗ್, ಪರ್ಸ್, ಶೂ, ಚಪ್ಪಲಿ ಮುಂತಾದವುಗಳಿಗೆ ದನ ಮತ್ತು ಎತ್ತಿನ ಚರ್ಮ ಅಗತ್ಯ. ಮಹಾರಾಷ್ಟ್ರದ ಧಾರಾವಿಯು ಏಷ್ಯದಲ್ಲೇ ಅತಿ ದೊಡ್ಡವಾದ ಚರ್ಮೋದ್ಯಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇಲ್ಲಿ 16 ಸಾವಿರದಷ್ಟು ಸಣ್ಣ ಸಣ್ಣ ಕೈಗಾರಿಕೆ ಗಳಿವೆ. 25 ಸಾವಿರಕ್ಕಿಂತ ಅಧಿಕ ಮಂದಿ ಇಲ್ಲಿ ದುಡಿಯುತ್ತಿದ್ದಾರೆ. ಅಲ್ಲದೆ, ಮಾಂಸಾಹಾರವು ಹೊಟೇಲ್ ವ್ಯವಹಾರಗಳಲ್ಲಿ ದೊಡ್ಡದೊಂದು ಪಾತ್ರ ನಿರ್ವಹಿಸುತ್ತಿದೆ. ಕಳೆದ ಆರ್ಥಿಕ ವರ್ಷದಲ್ಲಿ 17,500 ಕೋಟಿ ರೂಪಾಯಿ ಬೆಲೆಬಾಳುವ 18 ಲಕ್ಷ ಟನ್ ದನದ ಮಾಂಸವನ್ನು ಈ ದೇಶವು ರಫ್ತು ಮಾಡಿದೆ. ಆದರೆ `ಮಾಂಸ ನಿಷೇಧಿಸಿ' ಅನ್ನುವವರು ಈ ವಿಷಯಗಳನ್ನು ತಮ್ಮ ಚರ್ಚಾವ್ಯಾಪ್ತಿಗೆ ತೆಗೆದುಕೊಳ್ಳುವುದೇ ಇಲ್ಲ. ಮುದಿ ಹಸು-ಎತ್ತುಗಳ ಕುರಿತೂ ಅವರಲ್ಲಿ ಯೋಜನೆಗಳೇ ಇಲ್ಲ. “ಜಾನುವಾರು ಹತ್ಯೆಗೆ ನಿಷೇಧ ಇರುವ ಮಧ್ಯ ಪ್ರದೇಶದಲ್ಲಿ- ಹಾಲುಕೊಡದ, ಉಳುಮೆಗೆ ಬಾರದ ಹಸು-ಎತ್ತುಗಳ ಸಹಿತ ಧಾರಾಳ ಜಾನುವಾರು ಗಳು ಪ್ಲಾಸ್ಟಿಕ್ ತಿನ್ನುತ್ತಾ, ಮಾಲಿನ್ಯದ ನೀರು ಕುಡಿಯುತ್ತಾ ರಸ್ತೆಯಲ್ಲಿ ಕೊನೆಯುಸಿರೆಳೆಯುತ್ತಿವೆ..” ಎಂದು ಅನುಷಾ ನಾರಾಯಣ್ ದಿ ಹಿಂದೂ ಪತ್ರಿಕೆಯಲ್ಲಿ (05-05-2013) ಬರೆದಿರುವುದಕ್ಕೂ ಅವರು ಪ್ರತಿಕ್ರಿಯಿಸುವುದಿಲ್ಲ. ಅವರ ಚರ್ಚೆ ಏನಿದ್ದರೂ `ಪವಿತ್ರ'ತೆಯ ಸುತ್ತಲೇ ತಿರುಗುತ್ತಿರುತ್ತದೆ. ಮಾಂಸ ನಿಷೇಧವನ್ನು ಪ್ರತಿಭಟಿಸಿ ಮೊನ್ನೆ ಎಪ್ರಿಲ್ 9ರಂದು ಬೆಂಗಳೂರಿನಲ್ಲಿ ಏರ್ಪಡಿಸಲಾದ ‘ಬೀಫ್ ಫೆಸ್ಟ್ ಕಾರ್ಯಕ್ರಮ’ ಇದೀಗ ವಿವಾದಕ್ಕೆ ಒಳಗಾಗಿದೆ. ಸಾರ್ವಜನಿಕವಾಗಿ ಬೀಫ್ ಭೋಜನ ಮಾಡಲಾದ ಈ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಗಿರೀಶ್ ಕಾರ್ನಾಡ್ ಮತ್ತು ಕೆ. ಮರುಳ ಸಿದ್ಧಪ್ಪ ಭಾಗವಹಿಸಿರುವುದರ ಸುತ್ತ ಚರ್ಚೆಗಳು ಎದ್ದಿವೆ.  ಅಂಬೇಡ್ಕರ್ ಜನ್ಮದಿನವಾದ ಎಪ್ರಿಲ್ 14 ರಂದು ಚೆನ್ನೈ ಮತ್ತು ಬೆಂಗಳೂರಿನಲ್ಲಿ ದನದಮಾಂಸದ ಬಿರಿಯಾನಿಯನ್ನು (ಬೀಫ್ ಫೆಸ್ಟ್) ಸಾರ್ವಜನಿಕವಾಗಿಯೇ ಸೇವಿಸಲಾಗಿದೆ. ಹೀಗೆ ಆಹಾರದ ಹಕ್ಕಿನ ಬದಲು ಬೀಫ್ ಫೆಸ್ಟ್ ಚರ್ಚಾ ವಸ್ತುವಾಗುತ್ತಿದೆ. ಅಷ್ಟಕ್ಕೂ ಬೀಫ್ ಫೆಸ್ಟ್ ನೈತಿಕವೋ ಅನೈತಿಕವೋ ಎಂಬುದು ಚರ್ಚಾ ವಸ್ತುವಾದರೆ ಮುಖ್ಯ ವಿಷಯ ಬದಿಗೆ ಸರಿಯುತ್ತದೆ ಎಂಬುದು ಆಹಾರದ ಹಕ್ಕನ್ನು ವಿರೋಧಿಸುವವರಿಗೆ ಚೆನ್ನಾಗಿ ಗೊತ್ತು.
    ನಿಜವಾಗಿ, ಪ್ರತಿಯೊಂದಕ್ಕೂ ಕೆಲವು ಮೇರೆಗಳಿವೆ. ಈ ಮೇರೆಗಳನ್ನು ನಿರ್ಲಕ್ಷಿಸಿ ಪ್ರತಿಭಟನೆಯನ್ನೋ ಇನ್ನೇನನ್ನೋ ಹಮ್ಮಿಕೊಂಡಾಗ ಅವುಗಳ ಉದ್ದೇಶಶುದ್ದಿಯೇ ಸಾರ್ವಜನಿಕವಾಗಿ ಪ್ರಶ್ನೆಗೊಳಗಾಗುತ್ತದೆ. ಹಾಗಾದರೆ ಪ್ರತಿಭಟನೆಯ ಮೂಲ ಉದ್ದೇಶವೇ ಚರ್ಚೆಯ ವ್ಯಾಪ್ತಿಯಿಂದ ಹೊರಬಿದ್ದು ಪ್ರತಿಭಟನೆ ನೈತಿಕವೋ ಅನೈತಿಕವೋ ಎಂಬುದರ ಸುತ್ತವೇ ಇಡೀ ಚರ್ಚೆ ಕೇಂದ್ರೀಕೃತಗೊಳ್ಳುತ್ತದೆ. ಆಹಾರದ ಹಕ್ಕನ್ನು ಆಗ್ರಹಿಸಿ ಏರ್ಪಡಿಸಲಾದ ಬೀಫ್ ಫೆಸ್ಟ್ ಕಾರ್ಯಕ್ರಮ ಇಲ್ಲೆಲ್ಲೋ ಎಡವಿದೆ ಎಂದು ಅನಿಸುವುದು ಈ ಕಾರಣದಿಂದಲೇ. ಮಾಂಸಾಹಾರವನ್ನು ಬಹಿರಂಗವಾಗಿ ಸೇವಿಸುವುದು ಸೇವಿಸುವವರ ಹಕ್ಕೇ ಆಗಿರಬಹುದು. ಅಂಥ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿರಲೂಬಹುದು. ಆದರೂ ದನವನ್ನು ಈ ದೇಶದಲ್ಲಿ ಪೂಜಿಸುವವರಿದ್ದಾರೆ. ಅದಕ್ಕೆ ಪವಿತ್ರತೆಯನ್ನು ಕಲ್ಪಿಸಿದವರಿದ್ದಾರೆ. ಅದು ಮಾಂಸಕ್ಕಾಗಿ ಬಳಕೆಯಾಗಬಾರದೆಂದು ಪ್ರಾಮಾಣಿಕವಾಗಿ ಬಯಸುವವರೂ ಇದ್ದಾರೆ. ಇಂಥ ಸಂದರ್ಭದಲ್ಲಿ, ದನವನ್ನು ಸುತ್ತುವರಿದಿರುವ ಮಿಥ್ಯೆಗಳು ಮತ್ತು ರಾಜಕೀಯ ಸ್ವಾರ್ಥವನ್ನು ಇಂಥವರಿಗೆ ತಿಳಿಯಪಡಿಸುವುದಕ್ಕೆ ಉದ್ರೇಕಕಾರಿಯಲ್ಲದ ವಿಧಾನವನ್ನೇ ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ದನದ ಮಾಂಸವನ್ನು ಬಹಿರಂಗವಾಗಿ (ಅದೂ ಒಂದು ಹಬ್ಬಂದಂತೆ) ಸೇವಿಸುವುದರಲ್ಲಿ ಒಂದು ಉಗ್ರವಾದವಿದೆ. ಈ ಉಗ್ರವಾದವನ್ನು ‘ದನದ ರಾಜಕೀಯ’ದಲ್ಲಿ ತೊಡಗಿರುವವರು ಹೆಚ್ಚು ಇಷ್ಟಪಡುತ್ತಾರೆ. ಇಂಥ ಉಗ್ರವಾದವೇ ಅವರ ಮಾರುಕಟ್ಟೆ. ಬಹಿರಂಗವಾಗಿ ಮಾಂಸ ಭೋಜನ ಮಾಡುವವರು ಧರ್ಮ ವಿರೋಧಿಗಳು, ಹಿಂದೂ ವಿರೋಧಿಗಳು ಎಂದೆಲ್ಲಾ ಹೇಳಿ ತಮ್ಮ ಬೆಂಬಲಿಗ ವಲಯವನ್ನು ಅವರು ವಿಸ್ತರಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಬೀಫ್ ಫೆಸ್ಟ್ ಕಾರ್ಯಕ್ರಮ ಒಂದು ಅನುಚಿತ ಪ್ರತಿಭಟನಾ ವಿಧಾನ. ಆದರೂ ಈ ಕಾರಣವೊಂದನ್ನೇ ನೆಪವಾಗಿಟ್ಟುಕೊಂಡು ಆಹಾರ ಹಕ್ಕು ಪ್ರತಿಭಟನೆಯ ಪ್ರಸ್ತುತತೆಯನ್ನು ನಾವು ನಿರಾಕರಿಸಬೇಕಿಲ್ಲ. ಈ ಫೆಸ್ಟ್ ನ ನೈತಿಕ-ಅನೈತಿಕತೆಯನ್ನು ಚರ್ಚಿಸುವ ಬದಲು ಅಂಥದ್ದೊಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳುವಂತೆ ಬಲವಂತಪಡಿಸಿದ ವ್ಯವಸ್ಥೆಯ ಫ್ಯಾಸಿಸ್ಟ್ ಧೋರಣೆಯನ್ನು ನಾವು ವಿಶ್ಲೇಷಿಸಬೇಕಾಗುತ್ತದೆ. ಇತ್ತೀಚೆಗೆ, ಸುಪ್ರೀಮ್ ಕೋರ್ಟಿನ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಮುಖ್ಯ ನ್ಯಾಯಮೂರ್ತಿ ಕೆ.ಎಲ್. ದತ್ತು ಅವರಿಗೆ ಬರೆದ ಪತ್ರವೊಂದು ಇದೇ ರೀತಿಯಲ್ಲಿ ಚರ್ಚೆಗೆ ಒಳಗಾಗಿತ್ತು. ಗುಡ್ ಫ್ರೈಡೆಯೆಂದು ನ್ಯಾಯಾಧೀಶರುಗಳ ಸಭೆ ಏರ್ಪಡಿಸಿದುದರ ಔಚಿತ್ಯವನ್ನು ಪ್ರಶ್ನಿಸಿ ದತ್ತು ಅವರಿಗೆ ಮಾರ್ಚ್ 18ರಂದು ಕುರಿಯನ್ ಪತ್ರ ಬರೆದಿದ್ದರು. ರಜಾದಿನದಂದು ಸಭೆ ಇಟ್ಟದ್ದು ಸರಿಯಲ್ಲ ಅಂದಿದ್ದರು. ಆದರೆ ಸಭೆಯನ್ನು ಸಮರ್ಥಿಸಿ ದತ್ತು ಅವರು ಮಾರ್ಚ್ 20ರಂದು ಉತ್ತರ ಬರೆದರು. 2007ರಲ್ಲಿ ವಾಲ್ಮೀಕಿ ಜಯಂತಿಯಂದು ಮತ್ತು 2009ರಲ್ಲಿ ಸ್ವಾತಂತ್ರ್ಯೋತ್ಸವದಂದು ಮುಖ್ಯ ನ್ಯಾಯಮೂರ್ತಿಗಳ ಸಭೆಯನ್ನು ಇಡಲಾಗಿತ್ತು ಎಂದೂ ಸಮರ್ಥಿಸಿಕೊಂಡರು. ಇದಕ್ಕೆ ಉತ್ತರವಾಗಿ ಎಪ್ರಿಲ್ ಒಂದರಂದು ಕುರಿಯನ್ ಮತ್ತೊಂದು ಪತ್ರ ಬರೆದರು. ಈ ಕುರಿತಂತೆ ಸಾಕಷ್ಟು ಚರ್ಚೆಗಳೂ ನಡೆದುವು. ನಿಜವಾಗಿ, ಕುರಿಯನ್ ಅವರ ಪತ್ರದ ಒಳಾರ್ಥವನ್ನು ಅರ್ಥೈಸದೇ ಹೋದರೆ ಅವರನ್ನು ಟೀಕೆಗೊಳಪಡಿಸುವುದು ತೀರಾ ಸುಲಭ. ಅಮೇರಿಕದಲ್ಲಿ ಗುಡ್‍ಫ್ರೈಡೆಯಂದು ನ್ಯಾಯಾಂಗ ಕಲಾಪಗಳು ನಡೆಯುತ್ತವೆ ಎಂದು ನಮಗೆ ವಾದಿಸಬಹುದು. 18ನೇ ಶತಮಾನದಲ್ಲಿ ಬ್ರಿಟನ್ನಿನ ಮುಖ್ಯ ನ್ಯಾಯಾಧೀಶರಾಗಿದ್ದ ಲಾರ್ಡ್ ಮ್ಯಾನ್ ಫೀಲ್ಡ್‍ರು ನ್ಯಾಯಾಂಗ ವಿಚಾರಣೆಯನ್ನು ಮರುದಿನಕ್ಕೆ ನಿಗದಿಪಡಿಸಿದಾಗ ವಕೀಲರಾದ ಸಾರ್ಜೆಂಟ್ ಡೆವಿ ಎಂಬವರು, ‘ನಾಳೆ  ಗುಡ್‍ಫ್ರೈಡೆ’ ಅಂದಿದ್ದರು. ಅದಕ್ಕೆ, ‘ಚಿಂತಿಲ್ಲ, ಒಳ್ಳೆಯ ದಿನ, ಒಳ್ಳೆಯ ಉದ್ದೇಶ..’ ಎಂದು ಮ್ಯಾನ್ ಫೀಲ್ಡ್ ಪ್ರತಿಕ್ರಿಯಿಸಿದ್ದನ್ನು ಉದಾಹರಣೆಯಾಗಿ ಬಳಸಿಕೊಳ್ಳಬಹುದು. ‘ಹಿಂದುಗಳಲ್ಲಿ ಸುಮಾರು 100ರಷ್ಟು ಪವಿತ್ರ ದಿನಗಳಿದ್ದರೂ ಸರಕಾರ ಅದನ್ನು 10-15ಕ್ಕೆ ಇಳಿಸಿದೆ ಮತ್ತು ಖಾಸಗಿ ಕಂಪೆನಿಗಳಂತೂ 5ಕ್ಕೆ ಇಳಿಸಿವೆ. ಆದರೂ ನಮ್ಮ ತಕರಾರಿಲ್ಲ, ನಿಮ್ಮದೇನು’ ಎಂದೂ ಕುರಿಯನ್‍ರನ್ನು ಟೀಕಿಸಬಹುದು. ನಿಜವಾಗಿ, ಕುರಿಯನ್ ಅವರ ತಕರಾರು ಗುಡ್‍ಫ್ರೈಡೇ ದಿನದ ಸಭೆಯದ್ದಲ್ಲ, ಅಂಥ ದಿನಗಳನ್ನು ಕಡೆಗಣಿಸಲು ಒತ್ತಾಯಿಸುವ ಫ್ಯಾಸಿಸಂನ ಕುರಿತಾದ್ದು. ಅವರು ತಮ್ಮ ಪತ್ರದಲ್ಲಿ ಸೆಕ್ಯುಲರಿಸಂ ಕಡೆಗಣನೆಗೆ ಒಳಗಾಗುತ್ತಿರುವ ಬಗ್ಗೆ ಭೀತಿಯನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಮತ್ತು ಅವರ ಬೆಂಬಲಿಗ ತಂಡವು ಈ ದೇಶದಲ್ಲಿ ಇವತ್ತು ವರ್ತಿಸುತ್ತಿರುವ ರೀತಿಯನ್ನು ನೋಡಿದರೆ ಕುರಿಯನ್‍ರ ತಕರಾರು ಏನು ಎಂಬುದು ಅರ್ಥವಾಗುತ್ತದೆ. ಸೆಕ್ಯುಲರಿಸಂನ ಮೇಲೆ ವೈಚಾರಿಕವಾಗಿ ಮತ್ತು ಆಡಳಿತಾತ್ಮಕವಾಗಿ ನಿರಂತರ ಹಲ್ಲೆಗಳಾಗುತ್ತಿರುವ ಇಂದಿನ ದಿನಗಳಲ್ಲಿ ಆಹಾರ ಹಕ್ಕಿನ ನಿಷೇಧದ ಚರ್ಚೆ ಅಥವಾ ಕುರಿಯನ್‍ರ ಪತ್ರದ ಮೇಲಿನ ಚರ್ಚೆ ಹೇಗೆ ಸಾಗಬೇಕು ಮತ್ತು ಹೇಗೆ ಸಾಗುತ್ತಿದೆಯೆಂಬುದು ಬಹಳ ಮುಖ್ಯ. ಫ್ಯಾಸಿಸಂ ಅಂದರೆ ನಾವು ಈಗಲೂ ಜರ್ಮನಿ, ಇಟಲಿ, ಸ್ಪೈನ್ ಕಡೆಗೆ ನೋಡುತ್ತೇವೆ. ಹಿಟ್ಲರ್, ಮುಸೋಲೊನಿ, ಫ್ರಾಂಕೊ ಮುಂತಾದವರೇ ನಮ್ಮ ಕಣ್ಣ ಮುಂದೆ ಸುಳಿಯುತ್ತಾರೆ. ಆದರೆ ಹಿಟ್ಲರ್‍ನ ಮೈನ್‍ಕ್ಯಾಂಪ್‍ಗಿಂತಲೂ ಅಪಾಯಕಾರಿಯಾದ ವಿಚಾರಧಾರೆಗಳು ಈ ದೇಶದಲ್ಲಿ ಹರಿದಾಡುತ್ತಿವೆ ಎಂಬುದನ್ನು ಇಂಥ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. 4 ಸಾವಿರಕ್ಕಿಂತಲೂ ಅಧಿಕ ಜಾತಿ ಬುಡಕಟ್ಟುಗಳಿರುವ, 325 ಭಾಷೆಗಳು, ಬೇರೆ ಬೇರೆ ರಾಜ್ಯಗಳು ಮತ್ತು ಅದರದೇ ಆದ ಭಿನ್ನ ಸಂಸ್ಕøತಿಗಳಿರುವ ದೇಶವನ್ನು ಒಂದೇ ವಿಚಾರಧಾರೆಯೊಳಗೆ ಮತ್ತು ಒಂದೇ ಸಂಸ್ಕøತಿಯೊಳಗೆ ತಂದು ನಿಲ್ಲಿಸುವ ತಂತ್ರಗಳು ನಮ್ಮನ್ನು ಜಾಗೃತಿಗೊಳಿಸುತ್ತಲೂ ಇಲ್ಲ. ಮೋದಿಯರ ಚುನಾವಣಾ ವಿಜಯದ ಕುರಿತು Democratically Elected Totalitarian Government ಎಂದು ಅರುಂಧತಿ ರಾಯ್ ತನ್ನ ಫೇಸ್‍ಬುಕ್‍ನಲ್ಲಿ ಬರೆದಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.
    ತನ್ನ ದೇಶದಲ್ಲಿ ವರ್ಣಬೇಧ ಮಾನಸಿಕತೆ ಇದೆ ಎಂದು ಒಪ್ಪಿಕೊಳ್ಳುವ ಪ್ರಾಮಾಣಿಕತೆ ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋರಲ್ಲಿ ಈಗಲೂ ಇದೆ. ಇರುವ ಕೆಡುಕನ್ನು ಇದೆ ಎಂದು ಒಪ್ಪಿಕೊಳ್ಳುವುದು ಅರ್ಧ ಪರಿಹಾರವನ್ನು ಕಂಡುಕೊಂಡಂತೆ. ಆದರೆ ಈ ದೇಶದಲ್ಲಿ ಇವತ್ತು ಎಲ್ಲವನ್ನೂ ನಿರಾಕರಿಸುವ ಮನಸ್ಥಿತಿಯೊಂದು ಗಟ್ಟಿಗೊಳ್ಳುತ್ತಿದೆ. `ಇಲ್ಲಿ ಎಂದೂ ಅಸ್ಪ್ರಿಶ್ಯತೆ ಇರಲಿಲ್ಲ, ಗೋಹತ್ಯೆ ಇರಲಿಲ್ಲ, ಶ್ರೇಣೀಕೃತ ವ್ಯವಸ್ಥೆ ಇರಲಿಲ್ಲ, ಮಡೆಸ್ನಾನ ಸರಿ, ಪಂಕ್ತಿಭೋಜನ ಸರಿ, ಆರ್ಯರು ಹೊರಗಿನವರಲ್ಲ..’ ಹೀಗೆ ಹಿಂದಿನ ತಪ್ಪುಗಳನ್ನು ಹೊಸ ವ್ಯಾಖ್ಯಾನದೊಂದಿಗೆ ಅನುಕೂಲಕ್ಕೆ ಬಳಸಿಕೊಳ್ಳುವ ವಿಚಾರಧಾರೆಯೊಂದು ವೇಗವಾಗಿ ಪ್ರಸಾರವಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಕುರಿಯನ್‍ರ ಪತ್ರ ಮತ್ತು ಆಹಾರದ ಹಕ್ಕು ಪ್ರತಿಭಟನೆಗಳು ಮುಖ್ಯವಾಗುತ್ತವೆ. ಅಂದಹಾಗೆ, ದನದ ಮಾಂಸವನ್ನು ಆಹಾರವಾಗಿ ಪರಿಗಣಿಸುವವರು ಯಾರ ಮತ್ತು ಯಾವ ಧರ್ಮದ ವಿರೋಧಿಗಳೂ ಅಲ್ಲ ಎಂಬುದನ್ನು ಸಮಾಜಕ್ಕೆ ಸ್ಪಷ್ಟವಾಗಿ ಗೊತ್ತುಪಡಿಸಬೇಕಾಗಿದೆ. ಅದನ್ನು ಒಂದು ಆಹಾರದ ಇಶ್ಯೂ ಆಗಿ ಪರಿಗಣಿಸಬೇಕೆ ಹೊರತು ಧರ್ಮದ ವಿಷಯವಾಗಿ ಖಂಡಿತ ಅಲ್ಲ. ಆಹಾರವು ಸಮಾಜವನ್ನು ವಿಂಗಡಿಸುವುದರ ಮಾನದಂಡ ಅಲ್ಲ, ಆಗಲೂ ಬಾರದು.

No comments:

Post a Comment