Friday, July 8, 2016

ಟ್ರಂಪ್, ಜಾನ್ಸನ್, ಹುಕುಂ ಸಿಂಗ್ ಮತ್ತು ಫ್ಯಾಕ್ಟ್ ಚೆಕ್

         ದಿ ಹಿಂದೂ
  ವಾಷಿಂಗ್ಟನ್ ಪೋಸ್ಟ್
  ಎಬಿಪಿ ನ್ಯೂಸ್
  ಮಿಲ್ಲಿ ಗಝೆಟ್
  ಮುಂತಾದ ಪತ್ರಿಕೆಗಳು ಮತ್ತು ನ್ಯೂಸ್ ಲ್ಯಾಂಡ್ರಿಯಂಥ ವೆಬ್ ಪತ್ರಿಕೆಗಳು ತಮ್ಮ ವಿಶಿಷ್ಟ ಪ್ರಯತ್ನಕ್ಕಾಗಿ ವಾರಗಳ ಹಿಂದೆ ಸಾರ್ವತ್ರಿಕ ಶ್ಲಾಘನೆಗೆ ಒಳಗಾದುವು. ಸತ್ಯದ ದೃಢೀಕರಣ (Fact check) ಎಂಬ ಹೆಸರಲ್ಲಿ ಅವು ನಡೆಸಿದ ಪ್ರಯತ್ನವನ್ನು ಅನೇಕರು ಮೆಚ್ಚಿಕೊಂಡರು. ಮಾಧ್ಯಮಗಳ ಜವಾಬ್ದಾರಿ, ಪಾರ ದರ್ಶಕತೆ, ನ್ಯಾಯನಿಷ್ಠೆ... ಮುಂತಾದುವುಗಳ ಕುರಿತಂತೆ ಸಾರ್ವ ಜನಿಕವಾಗಿ ಇರುವ ದೂರುಗಳ ಪ್ರಮಾಣವನ್ನು ತುಸುವಾದರೂ ತಗ್ಗಿಸುವುದಕ್ಕೆ ಇಂಥ ಪ್ರಯತ್ನಗಳು ಯಶಸ್ವಿಯಾದಾವು ಎಂದು ಅನೇಕರು ಕೊಂಡಾಡಿದರು.
  ‘ಉತ್ತರ ಪ್ರದೇಶದ ಕೈರಾನ ನಗರದ ಹಿಂದೂಗಳು ಬಲ ವಂತದ ವಲಸೆಗೆ ತುತ್ತಾಗಿದ್ದಾರೆ..’ ಎಂದು ಬಿಜೆಪಿ ಸಂಸದ ಹುಕುಂ ಸಿಂಗ್ ವಾರಗಳ ಹಿಂದೆ ಸುದ್ದಿ ಸ್ಫೋಟಿಸಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈ ಹೇಳಿಕೆಯನ್ನು ಅತ್ಯಂತ ಮಹತ್ವಪೂರ್ಣ ಸುದ್ದಿಯಾಗಿ ಎತ್ತಿ ಹೇಳಿದ್ದರು. ಮುಸ್ಲಿಮರಿಂದಾಗಿ ಹಿಂದೂಗಳು ವಲಸೆ ಹೋಗಿದ್ದಾರೆ ಎಂಬ ಧಾಟಿಯಲ್ಲಿ ಅವರು ಮತ್ತು ಇನ್ನಷ್ಟು ಬಿಜೆಪಿ ನಾಯಕರು ಮಾತಾಡಿದ್ದರು. ಉತ್ತರ ಪ್ರದೇಶದಲ್ಲಿ 2017ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ವಲಸೆಯನ್ನು ಪ್ರಮುಖ ಇಶ್ಯೂ ಆಗಿ ಎತ್ತಿಕೊಳ್ಳುವ ಎಲ್ಲ ಸೂಚನೆಯನ್ನೂ ಬಿಜೆಪಿ ನೀಡತೊಡಗಿತು. ಈ ನಡುವೆ ಕೈರಾನದಿಂದ ವಲಸೆ ಹೋದ 346ರಷ್ಟು ಹಿಂದೂ ಕುಟುಂಬಗಳ ಹೆಸರು ಮತ್ತು ವಿಳಾಸವನ್ನು ಹುಕುಂ ಸಿಂಗ್ ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದರು. ಹುಕುಂ ಸಿಂಗ್‍ರ ಈ ಮಾಹಿತಿಯನ್ನೇ ಅಧಿಕೃತ ಮತ್ತು ಅಂತಿಮ ಸತ್ಯವೆಂದು ನಂಬಿ ಚರ್ಚೆಗಳೂ ಆರಂಭವಾದುವು. ಪತ್ರಿಕೆಗಳಲ್ಲಿ ವಿಶ್ಲೇಷಣೆಗಳೂ ನಡೆದುವು. ಇದೇ ವೇಳೆ, ದಿ ಹಿಂದೂ ಪತ್ರಿಕೆಯು ಸತ್ಯದ ದೃಢೀಕರಣಕ್ಕೆ(Fact check) ಮುಂದಾಯಿತು. ಅದು ತನ್ನ ವರದಿಗಾರರನ್ನು ಕೈರಾನಾಕ್ಕೆ ಕಳುಹಿಸಿ ಸತ್ಯದ ಬೆನ್ನಟ್ಟಿತು. ಮಾತ್ರವಲ್ಲ, ಜೂನ್ 14ರಂದು, ‘MPs claim of ಫೊರ್ಸ್ಡ್ migration disputed’ ಎಂಬ ಶೀರ್ಷಿಕೆಯಲ್ಲಿ ವರದಿಯನ್ನು ಪ್ರಕಟಿಸಿತು. ಹುಕುಂ ಸಿಂಗ್ ಬಿಡುಗಡೆಗೊಳಿಸಿದ ಪಟ್ಟಿಯಲ್ಲಿರುವವರು ಈಗಲೂ ಕೈರಾನದಲ್ಲೇ ವಾಸಿಸುತ್ತಿರುವುದನ್ನು ದಾಖಲೆ ಸಮೇತ ಓದುಗರ ಮುಂದಿಟ್ಟಿತು. ಜೂನ್ 16ರಂದು A heart warming truth in the heap of lies about exodes’ ಎಂಬ ಶೀರ್ಷಿಕೆಯಲ್ಲಿ ಇನ್ನೊಂದು ಸುದ್ದಿಯನ್ನು ಪ್ರಕಟಿಸಿತು. ಕೈರಾನಾದ ಹಿಂದೂ-ಮುಸ್ಲಿಮ್ ಧರ್ಮಗುರುಗಳು ಒಟ್ಟಾಗಿ ಮೆರವಣಿಗೆ ನಡೆಸಿದುದನ್ನೂ ‘ಬಲ ವಂತದ ವಲಸೆ’ ಎಂಬ ವಾದದ ಪರಮ ಸುಳ್ಳನ್ನೂ ಅದು ತೆರೆದಿಟ್ಟಿತು. ಇಷ್ಟಿದ್ದೂ, ಬಿಜೆಪಿ ಮತ್ತೆ ಅದೇ ಹಳೆಯ ಸುಳ್ಳಿಯ ಮೇಲೆಯೇ ಇನ್ನೂ ವಿಶ್ವಾಸವಿಟ್ಟಿರುವುದನ್ನು ಖಂಡಿಸಿ ಜೂನ್ 17ರಂದು ಇನ್ನೊಂದು ವರದಿಯನ್ನೂ ಪ್ರಕಟಿಸಿತು. ‘ಬಲವಂತದ ವಲಸೆಯು ಸುಳ್ಳು ಎಂದು ಅಧಿಕೃತವಾಗಿ ಸಾಬೀತಾದ ಬಳಿಕವೂ ಸುಳ್ಳಿನ ಮೇಲೆ ದೃಢವಾಗಿ ನಿಂತ ಬಿಜೆಪಿ..’ ಎಂಬ ನಿಖರ ಶೀರ್ಷಿಕೆಯನ್ನು ಆ ವರದಿಗೆ ಅದು ನೀಡಿತ್ತು. ಇದೇ ವೇಳೆ ಮಿಲ್ಲಿ ಗಝೆಟ್ ಪತ್ರಿಕೆಯು ಎರಡು ವಾರಗಳ ತನಕ ಕೈರಾನದಲ್ಲಿ ಸುತ್ತಾಡಿ ಸತ್ಯವನ್ನು ತೆರೆದಿಡಲು ಪ್ರಯತ್ನಿಸಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
  ನಿಜವಾಗಿ, ಸತ್ಯದ ದೃಢೀಕರಣ ಎಂಬುದು ವಿದೇಶಿ ಪತ್ರಿಕಾ ಓದುಗರ ಪಾಲಿಗೆ ತೀರಾ ಹೊಸತಲ್ಲ. ಈ ಮೊದಲು ಲಂಡನ್ನಿನ ಗಾರ್ಡಿಯನ್ ಪತ್ರಿಕೆ ತನ್ನದೇ ವರದಿಗಾರನ ಬಗ್ಗೆ ಸತ್ಯಶೋಧನಾ ತಂಡವನ್ನು ರಚಿಸಿತ್ತು. ಎರಡು ವಾರಗಳ ಹಿಂದೆ ಬಿಬಿಸಿ ಇಂಥ ದ್ದೊಂದು ಪ್ರಯತ್ನ ನಡೆಸಿತು. ಯುರೋಪಿಯನ್ ಯೂನಿಯನ್ ನಿಂದ (ಇ.ಯು.) ಬ್ರಿಟನ್ ಹೊರ ಬರಬೇಕೋ ಬೇಡವೋ ಎಂಬ ವಿಷಯದಲ್ಲಿ ಅಲ್ಲಿ ನಡೆಯುತ್ತಿದ್ದ ತುರುಸಿನ ಚರ್ಚೆಗಳು ಮತ್ತು ಪರ-ವಿರುದ್ಧ ವಾದಿಗಳ ಹೇಳಿಕೆಗಳು ಅತ್ಯಂತ ತಾರಕ ಮಟ್ಟದಲ್ಲಿದ್ದುವು. ಒಕ್ಕೂಟದಿಂದ ಬ್ರಿಟನ್ ಹೊರಬರಲಿ ಎಂದು ಒತ್ತಾಯಿಸುವ ‘ಲೀವ್ ಕ್ಯಾಂಪೇನ್’ ಎಂಬ ಹೆಸರಿನ ಚಳವಳಿಯು ಜನರನ್ನು ಆಕರ್ಷಿಸಲು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿತ್ತು. ಅದರ ಪ್ರಮುಖ ನಾಯಕರಾದ ಬೋರಿಸ್ ಜಾನ್ಸನ್, ಆ್ಯಂಡ್ರೆ ಲೆಡ್ಸಂ, ಗಿಸೇಲಾ ಸ್ಟುವರ್ಟ್ ಮುಂತಾದವರು ಹೇಳಿಕೆಗಳ ಮೇಲೆ ಹೇಳಿಕೆಗಳನ್ನು ನೀಡುತ್ತಿದ್ದರು. ಇಂಥ ಸನ್ನಿವೇಶದಲ್ಲಿ ಇವರ ಹೇಳಿಕೆ ಗಳನ್ನು ದೃಢಪಡಿಸಿಕೊಳ್ಳುವ ಸಾಹಸಕ್ಕೆ ಬಿಬಿಸಿ ಮುಂದಾಯಿತು.
  ‘ಬಾಲ್ಕನ್‍ನಲ್ಲಿ ನಡೆಯುತ್ತಿದ್ದ ಯುದ್ಧ ಮತ್ತು ಸಾವುಗಳನ್ನು ತಪ್ಪಿಸುವ ಬದಲು ಅದರಿಂದ ದೂರ ನಿಂತ ಒಕ್ಕೂಟವಾಗಿದೆ ಯುರೋಪ್. ಆ ಯುದ್ಧದಲ್ಲಿ ಒಂದು ಬಿಲಿಯನ್ ಮಂದಿ ಸಾವಿಗೀಡಾಗಿದ್ದರು. ಯುರೋಪ್ ಒಕ್ಕೂಟ ಅತ್ಯಂತ ಸ್ವಾರ್ಥಿ..’ ಎಂಬರ್ಥದಲ್ಲಿ ಬೋರಿಸ್ ಜಾನ್ಸನ್ ಅವರು ವಾದಿಸಿದ್ದರು. ಅಂದಹಾಗೆ, ಬಾಲ್ಕನ್ ಎಂಬುದು ಯುಗೋಸ್ಲಾವಿಯಾ ಯುದ್ಧಕ್ಕೆ ಸಂಬಂಧಿಸಿ ಉಲ್ಲೇಖಿಸುವ ಹೆಸರು. 1990ರ ದಶಕದಲ್ಲಿ ನಾಲ್ಕು ವರ್ಷಗಳ ಕಾಲ ಯುಗೋಸ್ಲಾವಿಯಾದಲ್ಲಿ ನಡೆದ ಆಂತರಿಕ ಯುದ್ಧವು ಅತ್ಯಂತ ಭೀಕರವಾಗಿತ್ತು. ಪ್ರಥಮ ಜಾಗತಿಕ ಯುದ್ಧದ ಮೊದಲು ಯುಗೋಸ್ಲಾವಿಯ ಎಂಬ ಏಕರಾಷ್ಟ್ರ ಇರಲಿಲ್ಲ. ಅದು ಕಿಂಗ್‍ಡಂ ಆಫ್ ಸೆರ್ಬ್, ಕ್ರೋಟ್ಸ್ ಮತ್ತು ಸ್ಲೋವನ್ಸ್ ಆಗಿ ಗುರುತಿಸಿಕೊಂಡಿತ್ತು. 1929ರಲ್ಲಿ ಇವೆಲ್ಲವೂ ಯುಗೋಸ್ಲಾವಿಯಾ ಎಂಬ ಏಕರಾಷ್ಟ್ರದ ಹೆಸರಲ್ಲಿ ಒಕ್ಕೂಟವಾಗಿ ಬದಲಾಯಿತು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಯುಗೋಸ್ಲಾವಿಯಾದ ಕ್ರೋಟ್ಸ್‍ಗಳು ಜರ್ಮನಿಯ ನಾಝಿಗಳ ಪರ ನಿಂತಾಗ ಆಂತರಿಕ ಸಂಘರ್ಷ ಭುಗಿಲೆದ್ದಿತು. ಸೆರ್ಬ್ ಮತ್ತು ಇತರರನ್ನು ಯುಗೋ ಸ್ಲಾವಿಯಾದಿಂದ ಹೊರಹಾಕುವ ಉದ್ದೇಶದಿಂದ ಮಾಡಲಾದ ಈ ನಿರ್ಧಾರವು ಪರಸ್ಪರ ಶಸ್ತ್ರಾಸ್ತ್ರ ಹೋರಾಟಕ್ಕೆ ನಾಂದಿ ಹಾಡಿತ್ತು. ಬಳಿಕ ಜೋಸೆಫ್ ಟಿಟೋ ಎಂಬವರು ಯುಗೋಸ್ಲಾವಿಯಾವನ್ನು ಒಕ್ಕೂಟವಾಗಿ ಉಳಿಸಿಕೊಳ್ಳಲು ಮತ್ತೆ ಯಶಸ್ವಿಯಾದರು. ಆದರೆ ಸೋವಿಯತ್ ಯೂನಿಯನ್‍ನ ಪತನಾನಂತರ ಮತ್ತೊಮ್ಮೆ ಯುಗೋಸ್ಲಾವಿಯಾದಲ್ಲಿ ಭಿನ್ನಮತ ಸ್ಫೋಟಿಸಿತು. 1991ರಲ್ಲಿ ಯುಗೋಸ್ಲಾವಿಯದಿಂದ ಕ್ರೋಟ್ಸ್‍ಗಳು ಮತ್ತು ಸ್ಲೋವನ್‍ಗಳು ಸ್ವಾತಂತ್ರ್ಯ ಘೋಷಿಸಿದರು. ಆದರೆ ಇದನ್ನು ಸೆರ್ಬ್‍ಗಳು ವಿರೋ ಧಿಸಿದರು. ಇದು ಪೂರ್ಣ ಪ್ರಮಾಣದ ಯುದ್ಧಕ್ಕೆ ವೇದಿಕೆ ಒದಗಿಸಿತು. ಸುಮಾರು 10 ಸಾವಿರ ಮಂದಿ ಈ ಯುದ್ಧದಲ್ಲಿ ಸಾವಿಗೀಡಾದರು. ವಿಶ್ವಸಂಸ್ಥೆಯಿಂದ ಯುಗೋಸ್ಲಾವಿಯಾವನ್ನು ಹೊರಹಾಕಲಾಯಿತು. ಆದರೆ ಬೋರಿಸ್ ಜಾನ್ಸನ್ ಅವರು ಇಡೀ ಘಟನೆಗೆ ತೀರಾ ಸಂಕುಚಿತ ವ್ಯಾಖ್ಯಾನ ನೀಡಿದರಲ್ಲದೇ ಸಾವಿಗೀಡಾದವರ ಸಂಖ್ಯೆಯನ್ನು 10 ಸಾವಿರದ ಬದಲು 1 ಮಿಲಿಯನ್ ಎಂದು ಅತಿಯಾಗಿ ಉಬ್ಬಿಸಿ ಹೇಳಿದರು. ಬಿಬಿಸಿ ಅತ್ಯಂತ ಸವಿವರವಾಗಿ ಬಾಲ್ಕನ್ ವಿಷಯವನ್ನು ಜನರ ಮುಂದಿಟ್ಟಿತು. ಇದೇ ವೇಳೆ, ‘2025ರ ವೇಳೆಗೆ ಯುರೋಪಿಯನ್ ಒಕ್ಕೂಟದ ಎಲ್ಲ 28 ದೇಶಗಳ ಆದಾಯ ಮತ್ತು ರಾಜಕೀಯದ ಮೇಲಿನ ಹೊಣೆಗಾರಿಕೆಯನ್ನು ಒಕ್ಕೂಟವೇ ನೋಡಿಕೊಳ್ಳಲಿದೆ..’ ಎಂದು ಲೀವ್ ಕ್ಯಾಪೇನ್‍ನ ಇನ್ನೋರ್ವ ನಾಯಕ ಆ್ಯಂಡ್ರೆ ಲೆಡ್‍ಸಂ ಹೇಳಿರುವುದನ್ನು ಬಿಬಿಸಿ ಸತ್ಯ ದೃಢೀಕರಣಕ್ಕೆ ಒಳ ಪಡಿಸಿತು. ನಿಜವಾಗಿ, ಈ ಹೇಳಿಕೆ ಅಪ್ಪಟ ಸುಳ್ಳಾಗಿತ್ತು. ಯುರೋ ಝೋನ್ ರಾಷ್ಟ್ರಗಳ ನಡುವೆ ಒಂದು ಪ್ರಸ್ತಾಪವಾಗಿ ಈ ಅಭಿಪ್ರಾಯ ಇತ್ತೇ ಹೊರತು 28 ರಾಷ್ಟ್ರಗಳ ಯುರೋಪಿಯನ್ ಒಕ್ಕೂಟಕ್ಕೂ ಇದಕ್ಕೂ ಸಂಬಂಧವೇ ಇರಲಿಲ್ಲ. ಸತ್ಯದ ದೃಢೀಕರಣಕ್ಕೆ ಒಳಪಟ್ಟ ಇನ್ನೊಂದು ಹೇಳಿಕೆ ಯಾವುದೆಂದರೆ, ‘ಯುರೋಪಿಯನ್ ಯೂನಿಯನ್‍ಗೆ ಬ್ರಿಟನ್ ನೀಡುವ 1.9 ಬಿಲಿಯನ್ ಪೌಂಡ್ ಮೊತ್ತವನ್ನು ಕೇವಲ ಟರ್ಕಿಯ ಅಭಿವೃದ್ಧಿಗೆ ಬಳಸಲಾಗುತ್ತಿದೆ’ ಎಂಬುದು. ಇದನ್ನು ಹೇಳಿದ್ದು ‘ಲೀವ್ ಕ್ಯಾಂಪೇನ್’ನ ಮತ್ತೋರ್ವ ನಾಯಕ ಗೀಸೆಲಾ ಸ್ಟುವರ್ಟ್. ನಿಜ ಏನೆಂದರೆ, 2014ರಿಂದ 2020ರ ನಡುವೆ ಯುರೋಪಿಯನ್ ಯೂನಿಯನ್‍ಗೆ ಬ್ರಿಟನ್ 1.2 ಬಿಲಿಯನ್ ಪೌಂಡನ್ನು ಕೊಡಬೇಕಾಗಿದೆ. ಅದನ್ನು ಅಲ್ಬೇನಿಯಾ, ಮೆಸಡೋನಿಯಾ, ಮಾಂಟನಿಗ್ರೋ, ಸೆರ್ಬಿಯ, ಟರ್ಕಿ, ಬೋಸ್ನಿಯಾ, ಹರ್ಝಗೋವಿನಾ ಮತ್ತು ಕೊಸೋವೊ ಎಂಬ 7 ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಾಗಿ ಬಳಸಲಾಗುತ್ತದೆ.
  ಇದೇ ವೇಳೆ ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಸತ್ಯ ದೃಢೀಕರಣಕ್ಕೆ ಒಳಪಡಿಸುವ ಶ್ರಮವನ್ನು ಅಮೇರಿಕದ ವಾಷಿಂಗ್ಟನ್ ಪೋಸ್ಟ್ ಕೈಗೊಂಡಿತು. ‘ಹಿಲರಿ ಕ್ಲಿಂಟನ್ ಅವರು ಅಮೇರಿಕದ ರಾಜ್ಯ ಕಾರ್ಯದರ್ಶಿ ಯಾಗಿದ್ದ ಸಂದರ್ಭದಲ್ಲಿ ಬ್ರೂನಿ ಸರಕಾರದಿಂದ 58 ಸಾವಿರ ಡಾಲರ್ ಮೊತ್ತದ ಜ್ಯುವೆಲ್ಲರಿ ಮತ್ತು ತಮ್ಮ ಸಂಸ್ಥೆಗಾಗಿ ಮಿಲಿಯಾಂತರ ಡಾಲರ್ ಅನ್ನು ಪಡೆದುಕೊಂಡಿದ್ದಾರೆ..’ ಎಂದವರು ಆರೋಪಿಸಿದ್ದರು. ಅಂದಹಾಗೆ, ವಾಷಿಂಗ್ಟನ್ ಪೋಸ್ಟ್ ನ ಸತ್ಯಶೋಧನೆಯಲ್ಲಿ ಇದು ತಿರುಚಿದ ಮತ್ತು ತಪ್ಪು ಸಂದೇಶ ರವಾನಿಸುವ ಹೇಳಿಕೆ ಎಂಬುದು ಸಾಬೀತಾಯಿತು. ಹಿಲರಿ ಕ್ಲಿಂಟನ್ ಅವರು ಒಂದು ಡೈಮಂಡ್ ನೆಕ್ಲೆಸ್, ಒಂದು ನೀಲ ರತ್ನ ಮತ್ತು ಚಿನ್ನವನ್ನು ಉಡುಗೊರೆಯಾಗಿ ಸ್ವೀಕರಿಸಿದ್ದು ನಿಜ. ಆದರೆ ಅದು ಸರಕಾರದಿಂದ ಅಲ್ಲ, ಬ್ರೂನಿಯ ರಾಣಿಯಿಂದ. ಅಮೇರಿಕದ ಆಡಳಿತಾತ್ಮಕ ನೀತಿಯ ಪ್ರಕಾರವೇ ಅವರು ಆ ಕೊಡುಗೆಯನ್ನು ಸ್ವೀಕರಿಸಿದ್ದರು ಮತ್ತು ಅವುಗಳನ್ನು ಸರಕಾರಕ್ಕೆ ಸಲ್ಲಿಸಿದ್ದರು. ಟ್ರಂಪ್ ಈ ಸತ್ಯವನ್ನು ಹೇಳಿರಲಿಲ್ಲ. ಜನರನ್ನು ಗೊಂದಲಕ್ಕೆ ಸಿಲುಕಿಸುವ ಈ ಮಾತಿನ ಧಾಟಿಯನ್ನು ವಾಷಿಂಗ್ಟನ್ ಪೋಸ್ಟ್ ತನ್ನ ಫ್ಯಾಕ್ಟ್ ಚೆಕ್ ವಿಧಾನದ ಮೂಲಕ ಖಂಡಿಸಿತು. ಇದಲ್ಲದೇ, ಇದೇ ಬಗೆಯ ಸತ್ಯ ದೃಢೀಕರಣ ಪ್ರಕ್ರಿಯೆಗೆ ಕಳೆದವಾರ ನ್ಯೂಸ್‍ಲ್ಯಾಂಡ್ರಿ ಎಂಬ ವೆಬ್ ಪತ್ರಿಕೆಯು ಕೈಹಾಕಿತು. ಟೈಮ್ಸ್ ನೌ ನ್ಯೂಸ್ ಚಾನೆಲ್‍ನಲ್ಲಿ ಪ್ರಸಾರವಾದ ಪ್ರಧಾನಿ ನರೇಂದ್ರ ಮೋದಿಯವರ ಸಂದರ್ಶನವನ್ನು ಅದು ಸತ್ಯ ದೃಢೀಕರಣಕ್ಕೆ ಒಳಪಡಿಸಿತು. ಅರ್ನಾಬ್ ಗೋಸ್ವಾಮಿಯವರ ಪ್ರಶ್ನೆಗೆ ನರೇಂದ್ರ ಮೋದಿಯವರು ನೀಡಿರುವ ಉತ್ತರಗಳನ್ನು ಅದು ಅವರದೇ ಈ ಹಿಂದಿನ ಹೇಳಿಕೆಗಳೊಂದಿಗೆ ಹೋಲಿಸಿ ತಪ್ಪುಗಳನ್ನು ಪತ್ತೆ ಹಚ್ಚಿತು. ಎಬಿಪಿ ನ್ಯೂಸ್ ಅಂತೂ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಸುದ್ದಿಗಳ ಬಗ್ಗೆ ಸತ್ಯ ದೃಢೀಕರಣದ ಹೊಸ ಪ್ರಯತ್ನಕ್ಕೆ ಮುಂದಾಯಿತು. ‘ವೈರಲ್ ಸಚ್’ ಡಾಟ್ ಕಾಮ್ ಎಂಬ ಹೆಸರಲ್ಲಿ ಅದು ಸರಣಿ ಪತ್ತೆ ಕಾರ್ಯವನ್ನು ನಡೆಸಿತು. ವಿಶೇಷ ಏನೆಂದರೆ, ಈ ಹಿಂದೆ ತಾನೇ ಪ್ರಕಟಿಸಿದ ಸುದ್ದಿಯೇ ಸುಳ್ಳೆಂಬುದು ಅದರ ಗಮನಕ್ಕೆ ಬಂತಲ್ಲದೇ ‘Vairal sach- Fact checker of ABP news itself become a lier’ ಎಂಬ ಶೀರ್ಷಿಕೆಯಲ್ಲಿ ಅದನ್ನು ಓದುಗರೊಂದಿಗೆ ಹಂಚಿಕೊಂಡಿತು. ‘ಅನಾರೋಗ್ಯಕ್ಕೀಡಾದ ನರೇಂದ್ರ ಮೋದಿಯವರ ತಾಯಿಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ..’ ಎಂಬ ಶೀರ್ಷಿಕೆಯಲ್ಲಿ ಚಿತ್ರಸಹಿತ ಅದು ಈ ಹಿಂದೆ ಸುದ್ದಿ ಪ್ರಕಟಿಸಿತ್ತು. ಆದರೆ ಅದು ನಿಜ ವಾಗಿರಲಿಲ್ಲ. ಪೋಟೋದಲ್ಲಿದ್ದ ವೃದ್ಧ ಮಹಿಳೆ ನರೇಂದ್ರ ಮೋದಿಯವರ ತಾಯಿಯೂ ಆಗಿರಲಿಲ್ಲ.
  ಮಾಧ್ಯಮಗಳ ಹೊಣೆಗಾರಿಕೆ ಮತ್ತು ಸತ್ಯದ ಮೇಲಿನ ಬದ್ಧತೆಯು ಸೋಶಿಯಲ್ ಮೀಡಿಯಾಗಳ ಮೂಲಕ ಪದೇ ಪದೇ ಫ್ಯಾಕ್ಟ್ ಚೆಕ್‍ಗೆ ಒಳಗಾಗುತ್ತಲೇ ಇದೆ. ಪತ್ರಿಕೆಗಳು ಈ ಹಿಂದೆಂದಿಗಿಂತಲೂ ಹೆಚ್ಚು ಜಾಗೃತವಾಗಿರಬೇಕಾದ ಸಂದರ್ಭ ಇದು. ಏನನ್ನೋ ಬರೆದು ದಕ್ಕಿಸಿಕೊಳ್ಳಬಹುದಾದ ಕಾಲ ಇದಲ್ಲ. ಪ್ರತಿಯೊಂದೂ ಪ್ರಶ್ನೆಗೊಳಗಾಗುತ್ತಿದೆ. ಪ್ರತಿಯೊಬ್ಬರೂ ಪ್ರಶ್ನೆ ಗೊಳಗಾಗುತ್ತಿದ್ದಾರೆ. ಸಂಪಾದಕ, ವರದಿಗಾರ, ಪತ್ರಕರ್ತ, ಮಾಲಿಕ, ಅಂಕಣಗಾರ.. ಎಲ್ಲರ ಮೇಲೂ ಅನುಮಾನದ ತೂಗುಗತ್ತಿ ಸದಾ ನೇತಾಡುತ್ತಿದೆ. ಆದ್ದರಿಂದ ಖಚಿತವಲ್ಲದ ಮತ್ತು ಪಕ್ಷಪಾತಿ ಯಾದ ಸುದ್ದಿಯ ಬಗ್ಗೆ ಪತ್ರಿಕೆಗಳು ಎಚ್ಚರ ವಹಿಸಬೇಕಾಗಿದೆ. ವಾಷಿಂಗ್ಟನ್ ಪೋಸ್ಟ್, ಬಿಬಿಸಿ, ಎಬಿಪಿ ನ್ಯೂಸ್‍ನಂತೆ ಸುದ್ದಿಯ ಸತ್ಯಾಸತ್ಯತೆಯನ್ನು ದೃಢೀಕರಿಸಿಕೊಳ್ಳುವ ಮತ್ತು ಅದನ್ನು ತಮ್ಮದೇ ಪತ್ರಿಕೆಯಲ್ಲಿ ಹೇಳಿಕೊಳ್ಳುವ ಪ್ರಾಮಾಣಿಕತೆಯನ್ನು ಪ್ರದರ್ಶಿಸಬೇಕಾಗಿದೆ. ಇಲ್ಲದಿದ್ದರೆ,
  ಓದುಗರೇ ಪತ್ರಿಕೆಗಳನ್ನು ‘ಫ್ಯಾಕ್ಟ್ ಚೆಕ್’ಗೆ ಒಳಪಡಿಸಿಯಾರು.

No comments:

Post a Comment