Wednesday, July 8, 2020

ವಿರೋಧಿಸುವ ಮೊದಲೊಮ್ಮೆ ಓದಿಕೊಳ್ಳಿ...



ಅಬೂತಾಲಿಬ್
ಇಸ್ಲಾಮನ್ನು ಅತ್ಯಂತ ಚೆನ್ನಾಗಿ ಮತ್ತು ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸುವ ಹೆಸರು ಇದು. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ ಎಂಬ ಪವಿತ್ರ ಕುರ್‍ಆನಿನ ಸಂದೇಶದ ಪ್ರಾಯೋಗಿಕ ನೆಲೆ-ಬೆಲೆಯ ಕುರಿತು  ಯಾರಿಗಾದರೂ ಸಂದೇಹವಿದ್ದರೆ, ಅವರು ಅಬೂತಾಲಿಬ್‍ರ ಬದುಕನ್ನು ಅಧ್ಯಯನ ನಡೆಸಬೇಕು. ಉದಾರವಾದ ಮತ್ತು ಇಸ್ಲಾಮನ್ನು ಬೇರೆ ಬೇರೆ ತಟ್ಟೆಯಲ್ಲಿಟ್ಟು ತೂಗುವವರ ಪಾಲಿಗೆ ಅಬೂತಾಲಿಬ್  ಒಂದೊಳ್ಳೆಯ ಸರಕು. ಕುತೂಹಲಕಾರಿ ಹೆಸರು.
ಇನ್ನೊಂದು
ಐತಿಹಾಸಿಕ ಮದೀನ ಒಡಂಬಡಿಕೆ. ಪ್ರವಾದಿ ಮುಹಮ್ಮದ್‍ರು(ಸ) ಮಕ್ಕಾದಲ್ಲಿ 13 ವರ್ಷಗಳ ಕಾಲ ತನ್ನ ವಿಚಾರಧಾರೆಯನ್ನು ಜನರ ಮುಂದಿಟ್ಟು ಆ ಬಳಿಕ ಮದೀನಕ್ಕೆ ವಲಸೆ ಹೋಗಿ ಅಲ್ಲಿನ ಧಾರ್ಮಿಕ  ಮತ್ತು ರಾಜಕೀಯದ ನೇತೃತ್ವ ಸ್ಥಾನಕ್ಕೆ ತಲುಪುತ್ತಾರೆ. ಅಲ್ಲಿಯ ಬಹುಸಂಖ್ಯಾತರು ಯಹೂದಿಗಳು. ಆದ್ದರಿಂದ ಅವರೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲು ಪ್ರವಾದಿ ತೀರ್ಮಾನಿಸುತ್ತಾರೆ. ಒಡಂಬಡಿಕೆಯ  ಕರಡು ರಚಿಸುತ್ತಾರೆ. ಆ ಒಡಂಬಡಿಕೆಯ ಮುಖ್ಯ ಅಂಶಗಳು ಹೀಗಿವೆ:
1. ಕೈದಿಗಳನ್ನು ಬಿಡಿಸಿಕೊಳ್ಳುವ ವಿಷಯದಲ್ಲಿ ಮುಸ್ಲಿಮರು ಮತ್ತು ಮುಸ್ಲಿಮೇತರರಲ್ಲಿ ಈಗಾಗಲೇ ವಾಡಿಕೆಯಲ್ಲಿರುವ ಕ್ರಮ ಮುಂದುವರಿಯುತ್ತದೆ. ತಮ್ಮ ಹಿಂದಿನ ಪದ್ಧತಿಯಂತೆಯೇ ಮುಸ್ಲಿಮರು ಮತ್ತು  ಮುಸ್ಲಿಮೇತರರಿಗೆ ನಡೆದುಕೊಳ್ಳುವುದಕ್ಕೆ ಅನುಮತಿ ಇದೆ.
2. ಔಸ್ ಗೋತ್ರದ ಯಹೂದಿಗಳು ಮತ್ತು ಮುಸ್ಲಿಮರು ಒಂದೇ ಜನಾಂಗವೆಂದು (ರಾಜಕೀಯ ಏಕತೆ) ಪರಿಗಣಿಸಲ್ಪಡುವರು. ಯಹೂದಿಗಳು ಮತ್ತು ಮುಸ್ಲಿಮರು ತಂತಮ್ಮ ಧರ್ಮದಂತೆ ಬಾಳಲು  ಸ್ವತಂತ್ರರಾಗಿದ್ದಾರೆ. .
3. ಯಹೂದಿಗಳು ತಮ್ಮ ಖರ್ಚಿಗೆ ಮತ್ತು ಮುಸ್ಲಿಮರು ತಮ್ಮ ಖರ್ಚಿಗೆ ಹೊಣೆಗಾರರಾಗಿದ್ದಾರೆ.
4. ಈ ಸಂವಿಧಾನವನ್ನು ಒಪ್ಪುವವರ ವಿರುದ್ಧ ಯಾರೇ ಯುದ್ಧ ಹೂಡಿದರೂ ಆ ಯುದ್ಧದಾಹಿಗಳ ವಿರುದ್ಧ ಯಹೂದಿ ಮತ್ತು ಮುಸ್ಲಿಮರು ಪರಸ್ಪರ ಒಬ್ಬರಿಗೊಬ್ಬರು ನೆರವಾಗಬೇಕು.
5. ಯಾರಾದರೂ ಮದೀನದ ಮೇಲೆ ಆಕ್ರಮಣ ನಡೆಸಿ ದರೆ, ಯಹೂದಿಗಳು ಮತ್ತು ಮುಸ್ಲಿಮರು ಪರಸ್ಪರರಿಗೆ ನೆರವಾಗುವುದು ಕಡ್ಡಾಯ.
6. ಯಹೂದಿಗಳು ಯಾರೊಂದಿಗಾದರೂ ಶಾಂತಿ ಒಪ್ಪಂದ ವನ್ನು ಮಾಡಿಕೊಂಡು ಮುಸ್ಲಿಮರನ್ನೂ ಅದರಲ್ಲಿ ಸೇರಿಕೊಳ್ಳುವಂತೆ ಆಹ್ವಾನಿಸಿದರೆ ಮುಸ್ಲಿಮರು ಆ ಆಹ್ವಾನವನ್ನು ಸ್ವೀಕರಿಸುವುದು  ಕಡ್ಡಾಯವಾಗಿದೆ. ಹಾಗೆಯೇ ಮುಸ್ಲಿಮರು ಯಾರೊಂದಿಗಾದರೂ ಶಾಂತಿ ಒಪ್ಪಂದವನ್ನು ಮಾಡಿಕೊಂಡು ಯಹೂದಿಯರನ್ನು ಆಹ್ವಾನಿಸಿದರೆ ಅವರೂ ಆ ಆಹ್ವಾನವನ್ನು ಸ್ವೀಕರಿಸುವುದು  ಕಡ್ಡಾಯವಾಗಿದೆ.
7. ಪ್ರತಿಯೊಂದು ವರ್ಗವೂ ತನ್ನ ಗಡಿ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು.
8. ಈ ಒಡಂಬಡಿಕೆಯು ಯಾವುದೇ ಅಕ್ರಮಿ ಅಥವಾ ಅಪರಾಧಿಯ ಪಾಲಿಗೆ ರಕ್ಷಾ ಕವಚವಲ್ಲ. ಅಕ್ರಮಿಯು ಮುಸ್ಲಿಮ್ ಆದರೂ ಯಹೂದಿ ಆದರೂ ಆತ ಕೇವಲ ಅಕ್ರಮಿ. ಆತನನ್ನು ಧರ್ಮದ  ಕಾರಣಕ್ಕಾಗಿ ಈ ಒಪ್ಪಂದ ರಕ್ಷಿಸುವುದಿಲ್ಲ.
ಅಥವಾ
ಮದೀನಾದಲ್ಲಿರುವ ಎಲ್ಲರೂ ಶಾಂತಿಯುತ ಜೀವನ ಸಾಗಿಸುವುದು, ಪ್ರತಿಯೊಬ್ಬ ನಾಗರಿಕನಿಗೂ ಅವನ/ಳ ವಿಶ್ವಾಸ ಮತ್ತು ಆಚಾರ-ವಿಚಾರಗಳ ಸ್ವಾತಂತ್ರ್ಯ ನೀಡುವುದು, ಹಿಂಸೆ ಮತ್ತು ಕ್ಷೋಭೆಯ ಎಲ್ಲ  ದಾರಿಗಳನ್ನೂ ಮುಚ್ಚುವುದು ಹಾಗೂ ಹೊರಗಿನ ಆಕ್ರಮವನ್ನು ಎಲ್ಲರೂ ಒಟ್ಟಾಗಿ ಎದುರಿಸುವುದು- ಹೀಗೆ ಈ ಒಡಂಬಡಿಕೆಯನ್ನು ಸಂಕ್ಷೇಪಗೊಳಿಸಿಯೂ ಓದಬಹುದು. ಅಂದಹಾಗೆ,
ಈ ಒಡಂಬಡಿಕೆಯೇ ಮುಂದೆ ಮದೀನಾದ ಪ್ರಪ್ರಥಮ ಸಂವಿಧಾನವಾಗಿಯೂ ಗುರುತಿಗೀಡಾಯಿತು. ವಿಶೇಷ ಏನೆಂದರೆ, ಈ ಸಂವಿಧಾನ ರಚನೆಯಾದುದು ಧರ್ಮದ ಆಧಾರದಲ್ಲಿ ಅಲ್ಲ, ಪೌರತ್ವದ  ಆಧಾರದಲ್ಲಿ. ನಾಗರಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿರುವ ಸಂವಿಧಾನ ಇದು. ಪ್ರವಾದಿ ಮುಹಮ್ಮದರು(ಸ) ಮದೀನಾಕ್ಕೆ ಬರುವುದಕ್ಕಿಂತ ಮೊದಲೇ, ಅವರ ಅನುಯಾಯಿಗಳು ಮಕ್ಕಾದಿಂದ ಮದೀನಕ್ಕೆ  ಬಂದಿದ್ದರು. ಇವರ ಬದುಕು ಮತ್ತು ವಿಚಾರಧಾರೆಯಿಂದ ಪ್ರಭಾವಿತರಾಗಿ ಅನೇಕ ಮದೀನಾ ನಾಗರಿಕರು ಇವರೊಂದಿಗೆ ಸೇರಿಕೊಂಡಿದ್ದರು. ಹಾಗಂತ, ಮದೀನಾದಲ್ಲಿ ಯಹೂದಿಗಳೇನೂ ಏಕ ಸಮುದಾಯ ಆಗಿರಲಿಲ್ಲ. ಕೈನುಕಾ, ನಝೀರ್, ಕುರೈಝಾ ಎಂದು ಮುಂತಾಗಿ ಬೇರೆ ಬೇರೆ ಗೋತ್ರ ಗಳಲ್ಲಿ  ಹಂಚಿಹೋಗಿದ್ದರು. ಅವರೆಲ್ಲರನ್ನೂ ಒಟ್ಟು ಸೇರಿಸಿ ಪ್ರವಾದಿ ಮುಹಮ್ಮದ್(ಸ) ಈ ಸಂವಿಧಾನವನ್ನು ರಚಿಸಿದ್ದರು. ನಿಜವಾಗಿ,
ಇದು ಮದೀನಕ್ಕಾಗಿ ಮಾತ್ರ ಸಿದ್ಧಗೊಂಡ ಸಂವಿಧಾನ ಆಗಿರಲಿಲ್ಲ. ಅವರ ಮಕ್ಕಾದ ಬದುಕೂ ಹಾಗೆಯೇ ಇತ್ತು.
ಪ್ರವಾದಿ ಮುಹಮ್ಮದ್ ಹುಟ್ಟುವುದಕ್ಕಿಂತ ಮೊದಲೇ ಅವರ ತಂದೆ ನಿಧನರಾಗಿದ್ದರು. ಅವರಿಗೆ ಆರು ವರ್ಷವಾದಾಗ ತಾಯಿಯೂ ನಿಧನರಾದರು. ಹೀಗೆ ಅನಾಥ ಮುಹಮ್ಮದ್‍ರನ್ನು ಸಾಕುವ ಹೊಣೆಯ ನ್ನು ಅವರ ದೊಡ್ಡಪ್ಪ (ತಂದೆಯ ಅಣ್ಣ) ಅಬೂತಾಲಿಬ್ ವಹಿಸಿಕೊಂಡರು. ಅದು ಆಗಿನ ಕಾಲದ ಸಂಪ್ರದಾಯವೂ ಆಗಿತ್ತು. ಆದರೆ 40 ವರ್ಷವಾದಾಗ ತಾನು ಪ್ರವಾದಿ ಎಂದು ಮುಹಮ್ಮದ್‍ರು(ಸ)  ಘೋಷಿಸಿದರು. ಜೊತೆಗೇ ತನ್ನ ದೊಡ್ಡಪ್ಪ ಅಬೂತಾಲಿಬ್, ಚಿಕ್ಕಪ್ಪ ಅಬೂಲಹಬ್, ಸಂಬಂಧಿಕರು, ಆಪ್ತರು ಮುಂತಾದ ಎಲ್ಲರ ವಿಚಾರಧಾರೆಗಳೊಂದಿಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಕ್ಕಾದ  ಪಾಲಿಗೆ ಪ್ರವಾದಿ ಮುಹಮ್ಮದರ ವಿಚಾರಧಾರೆ ಹೊಸತು. ಆವರೆಗೆ ಮಕ್ಕಾದ ಮಂದಿ ಹೇಗೆ ಬದುಕುತ್ತಿದ್ದರೋ ಯಾವ ರೀತಿಯಲ್ಲಿ ಆರಾಧನೆ, ಆಚರಣೆ, ವ್ಯಾಪಾರ, ಮದುವೆ, ವಿಚ್ಛೇದನ, ಆಸ್ತಿ  ವಿಲೇವಾರಿ, ಮನರಂಜನೆ, ರಿವಾಜುಗಳು ಇತ್ಯಾದಿಗಳನ್ನು ಮಾಡುತ್ತಿದ್ದರೋ ಅವುಗಳ ಕುರಿತಂತೆ ಪ್ರವಾದಿ ಮುಹಮ್ಮದ್ ಆಕ್ಷೇಪಗಳನ್ನು ಎತ್ತತೊಡಗಿದರು. ಅವುಗಳಲ್ಲಿರುವ ಲೋಪಗಳ ಬಗ್ಗೆ  ಮಾತಾಡಿದರು. ಆದರೆ, ಇದನ್ನು ಅವರ ಕುಟುಂಬಿಕರು ಸಹಿತ ಮಕ್ಕಾದ ಮಂದಿ ವಿರೋಧಿಸಿದರು. ಅವರ ರಕ್ಷಣೆಯ ಹೊಣೆ ಹೊತ್ತ ಅಬೂತಾಲಿಬ್‍ರ ಮೇಲೆ ಒತ್ತಡವನ್ನು ಹೇರ ತೊಡಗಿದರು.  ‘ಅವರನ್ನು ನಿಮ್ಮ ರಕ್ಷಣೆಯಿಂದ ಮುಕ್ತಗೊಳಿಸಿ, ಅವರಿಗೆ ನಾವು ಬುದ್ಧಿ ಕಲಿಸುತ್ತೇವೆ’ ಎಂದು ಧಮಕಿ ಹಾಕಿದರು. ಅಷ್ಟಕ್ಕೂ, ಅಬೂತಾಲಿಬ್‍ರು ಪ್ರವಾದಿ ಮುಹಮ್ಮದ್‍ರ ವಿಚಾರಧಾರೆಯನ್ನು  ಒಪ್ಪಿಕೊಳ್ಳುತ್ತಿರಲಿಲ್ಲವಾದರೂ ಅವರನ್ನು ವಿರೋಧಿಗಳ ಕೈಗೆ ಒಪ್ಪಿಸುವುದಕ್ಕೋ ಅವರನ್ನು ತನ್ನ ರಕ್ಷಣಾ ವ್ಯಾಪ್ತಿಯಿಂದ ಹೊರಗಟ್ಟುವುದಕ್ಕೋ ಸಿದ್ಧರಾಗಲಿಲ್ಲ. ಇದರ ಪರಿಣಾಮವಾಗಿ ಪ್ರವಾದಿ  ಮುಹಮ್ಮದರ ವಿರೋಧಿಗಳು ಅಬೂತಾಲಿಬ್ ಮತ್ತು ಅವರ ಸಂಗಡಿಗರು ಬದುಕುತ್ತಿದ್ದ ಪ್ರದೇಶಕ್ಕೆ ಸಾಮಾಜಿಕ ಬಹಿ ಷ್ಕಾರವನ್ನು ಹಾಕಿದರು. ಮೂರು ವರ್ಷಗಳ ಕಾಲ ಈ ಬಹಿಷ್ಕಾರ  ಮುಂದುವರಿಯಿತು. ಬದುಕು ದುಸ್ತರವಾಯಿತು. ಆದರೂ ಪ್ರವಾದಿ ಮುಹಮ್ಮದ್ ತನ್ನ ವಿಚಾರಧಾರೆಯನ್ನು ಬಿಟ್ಟುಕೊಡಲಿಲ್ಲ. ಹಾಗಂತ, ಈ ಬಹಿಷ್ಕಾರದಿಂದಾಗಿ ಎಲೆ ತಿಂದು ಬದುಕ ಬೇಕಾದ ಸ್ಥಿತಿಗೆ  ತಲುಪಿದರೂ ಅಬೂತಾಲಿಬ್‍ರು ಅವರ ವಿಚಾರ ಧಾರೆಯನ್ನು ಒಪ್ಪಿಕೊಳ್ಳಲೂ ಇಲ್ಲ. ಎಲ್ಲಿಯ ವರೆಗೆಂದರೆ, ಮೃತಪಡುವ ವೇಳೆಯಲ್ಲೂ ಅವರು ಪ್ರವಾದಿ ಮುಹಮ್ಮದರ ವಿಚಾರಧಾರೆಯೊಂದಿಗೆ ಭಿ ನ್ನಮತವನ್ನು ಉಳಿಸಿ ಕೊಂಡೇ ಮೃತಪಟ್ಟರು. ಒಂದುವೇಳೆ,
ಪ್ರವಾದಿಯ ವಿಚಾರಧಾರೆಯಲ್ಲಿ ಬಲವಂತ ಇರುತ್ತಿದ್ದರೆ ಅದು ಮೊಟ್ಟಮೊದಲು ಪ್ರಯೋಗವಾಗಬೇಕಿದ್ದುದು ಅಬೂತಾಲಿಬ್‍ರ ಮೇಲೆ. ನಿಜವಾಗಿ, ಪ್ರವಾದಿ ಮದೀನದಲ್ಲಿ ಯಾವ ಒಪ್ಪಂದವನ್ನು  ಮಾಡಿಕೊಂಡರೋ ಅದನ್ನು ಮಕ್ಕಾದ ಅವರ ಬದುಕಿನಲ್ಲೇ ದರ್ಶಿಸಬಹುದಿತ್ತು. ಅವರ ವಿಚಾರಧಾರೆ ಉದಾರವಾದುದಾಗಿತ್ತು. ಅದರಲ್ಲಿ ಬಲವಂತ ಇರಲಿಲ್ಲ. ಅದು ಭಿನ್ನ ವಿಚಾರಧಾರೆಯ ಮೇಲೆ ಏರಿ  ಹೋಗುವಂಥದ್ದೂ ಆಗಿರಲಿಲ್ಲ. ಪ್ರವಾದಿ ಮುಹಮ್ಮದರ ವಿಚಾರಧಾರೆಯನ್ನು ಅಬೂತಾಲಿಬ್ ಹೇಗೆ ಒಪ್ಪಿಕೊಳ್ಳಲಿಲ್ಲವೋ ಹಾಗೆಯೇ ತನ್ನ ಆಶ್ರಯದಾತ, ದೊಡ್ಡಪ್ಪ, ಕಷ್ಟಕಾಲದಲ್ಲಿ ಕಾವಲು ನಿಂತ ಮಹಾ ನುಭಾವ ಎಂಬ ವಾಸ್ತವದ ಹೊರತಾಗಿಯೂ ಪ್ರವಾದಿ ಮುಹಮ್ಮದ್(ಸ)ರು ತನ್ನ ದೊಡ್ಡಪ್ಪನಿಗಾಗಿ ತನ್ನ ವಿಚಾರ ಧಾರೆಯನ್ನು ಬಿಟ್ಟುಕೊಡಲೂ ಇಲ್ಲ. ಸೈದ್ಧಾಂತಿಕ ಭಿನ್ನಮತವು ಪರಸ್ಪರ ಪ್ರೀತಿ, ವಿಶ್ವಾಸ,  ಸಹಜ ಬದುಕಿಗೆ ಅಡ್ಡಿಯಲ್ಲ ಎಂಬುದನ್ನು ಸಾರಿದ ಸಂದರ್ಭ ಇದು. ದುರಂತ ಏನೆಂದರೆ,
ಪ್ರವಾದಿ ಮುಹಮ್ಮದರ ಕಾಲಾನಂತರ ಅವರ ಅನುಯಾಯಿಗಳು ಮಾಡಿರಬಹುದಾದ ವ್ಯಕ್ತಿಗತ ತಪ್ಪುಗಳನ್ನು ಅವರ ವಿಚಾರಧಾರೆಯ ತಪ್ಪುಗಳೆಂಬಂತೆ ಬಿಂಬಿಸಲು ನಮ್ಮ ನಡುವಿನ ಅನೇಕರು  ಶ್ರಮಿಸುತ್ತಿರುವುದು. ಸಿರಿಯಾದ ಡಮಾಸ್ಕಸ್‍ನಲ್ಲಿರುವ ಮುಸ್ಲಿಮರು ಮತ್ತು ಕ್ರೈಸ್ತರು ಸುಮಾರು 7 ದಶಕಗಳ ಕಾಲ ಒಂದೇ ಕಟ್ಟಡ ದಲ್ಲಿ ಆರಾಧನೆ ನಡೆಸುತ್ತಿದ್ದರು ಎಂದು ಅಲ್ ಬಿದಾಯ ವನ್ನಿಹಾಯ  ಎಂಬ ಬಹುಪ್ರಸಿದ್ಧ ಗ್ರಂಥದಲ್ಲಿ ಇಬ್ನು ಕಸೀರ್ ಎಂಬ ವಿದ್ವಾಂಸರು ದಾಖಲಿಸಿದ್ದಾರೆ. ಕಟ್ಟಡದ ಅರ್ಧಭಾಗ ಮಸೀದಿಯಾಗಿ ಬಳಕೆಯಾಗುತ್ತಿದ್ದರೆ ಉಳಿದರ್ಧ ಭಾಗ ಚರ್ಚ್ ಆಗಿತ್ತು. ಒಂದೇ ಬಾಗಿಲಿನ  ಮೂಲಕ ಎರಡೂ ಧರ್ಮಗಳ ಅನುಯಾಯಿಗಳು ಕಟ್ಟಡ ಪ್ರವೇಶಿಸುತ್ತಿದ್ದರು. ಹಿ.ಶಕ. 86ರಲ್ಲಿ ಇಲ್ಲಿ ಬೇರೆ ಬೇರೆ ಪ್ರಾರ್ಥನಾಲಯಗಳು ನಿರ್ಮಾಣವಾದುವು ಎಂದು ದಾಖಲಾಗಿದೆ.
ಇದೊಂದು ಉದಾಹರಣೆ ಅಷ್ಟೇ.
ಇಂಥ ನೂರಾರು ಉದಾಹರಣೆಗಳು ಚಾರಿತ್ರಿಕವಾಗಿ ದಾಖಲಾಗಿವೆ. ಪ್ರವಾದಿ ಮುಹಮ್ಮದರು ತನ್ನ ವಿಚಾರಧಾರೆಯನ್ನು ಒಪ್ಪದವರೊಂದಿಗೆ ಆರ್ಥಿಕ ವ್ಯವಹಾರವನ್ನು ಇಟ್ಟುಕೊಂಡಿದ್ದರು. ಮೃತಪಡುವ  ವೇಳೆ ಅವರ ಯುದ್ಧಕವಚ ಓರ್ವ ಯಹೂದಿ ಶ್ರೀಮಂತನ ಬಳಿ ಅಡವಿಟ್ಟ ರೂಪದಲ್ಲಿತ್ತು. ಹಿ.ಶಕ 9ರಲ್ಲಿ ನಜ್ರಾನ್‍ನಿಂದ ಆಗಮಿಸಿದ ಕ್ರೈಸ್ತ ನಿಯೋಗಕ್ಕೆ ಅವರು ಮಸೀದಿಯಲ್ಲಿ ಆಶ್ರಯ ಒದಗಿಸಿದರು.  ಧರ್ಮ, ಗೋತ್ರ ನೋಡದೆಯೇ ರೋಗಿ ಗಳನ್ನು ಭೇಟಿಯಾದರು. ಮುಸ್ಲಿಮೇತರರ ಶವವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುವ ವೇಳೆ ಗೌರವಪೂರ್ವಕ ಎದ್ದು ನಿಂತರು. ತಾನು ಸಾಗುವ ದಾರಿಯಲ್ಲಿ  ಪ್ರತಿದಿನ ಕಸ ಎಸೆದು ತನ್ನ ವಿರೋಧವನ್ನು ವ್ಯಕ್ತಪಡಿಸುತ್ತಿದ್ದ ಮಹಿಳೆ ಕಾಯಿಲೆ ಬಿದ್ದಾಗ ಆಕೆಯನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ನಿಜವಾಗಿ,
ಪ್ರವಾದಿ ಮುಹಮ್ಮದರು ಈ ಜಗತ್ತಿಗೆ ಪರಿಚಯಿಸಿದ್ದು ಉದಾರವಾದಿ ಸಿದ್ಧಾಂತವನ್ನು. ಅದು ಎಂದೂ ಯಾರ ಮೇಲೆಯೂ ಬಲವಂತವನ್ನು ಒಪ್ಪುವುದಿಲ್ಲ. ಹಾಗಂತ, ಅದು ವಿಚಾರದ ಬಲವಂತ ಮಾತ್ರ  ಅಲ್ಲ, ಬಡತನದ ಕಾರಣದಿಂದ ಓರ್ವನನ್ನು ಗುಲಾಮನಂತೆ ದುಡಿಸುವುದನ್ನು, ಸಾಲಕ್ಕೆ ಬಲವಂತ ದಿಂದ ಹೆಚ್ಚುವರಿ ಹಣ ಪಡೆಯುವುದನ್ನು, ಹೆಣ್ಣಿನ ಒಪ್ಪಿಗೆಯಿಲ್ಲದ ವರನೊಂದಿಗೆ ಬಲವಂತದಿಂದ  ಮದುವೆ ಮಾಡಿಸುವುದನ್ನು, ಹೆಣ್ಣು ಮಕ್ಕಳ ಆಸ್ತಿಯ ಹಕ್ಕನ್ನು ಬಲವಂತದಿಂದ ಕಸಿದುಕೊಳ್ಳುವು ದನ್ನು.. ಹೀಗೆ ಬಲವಂತದಿಂದಾಗುವ ಯಾವುದನ್ನೂ ಒಪ್ಪುವುದಿಲ್ಲ. ಅದು ಕೆಡುಕನ್ನು ಮಾತ್ರ ಬಲವಂತ ದಿಂದ ತಡೆಯುತ್ತದೆ. ಹಾಗಂತ, ಅದು ಪ್ರವಾದಿ ಮುಹಮ್ಮದರ ನಿಲುವಷ್ಟೇ ಅಲ್ಲ, ಇವತ್ತಿನ ಎಲ್ಲ ಪ್ರಜಾತಂತ್ರ ರಾಷ್ಟ್ರಗಳೂ ಕೆಡುಕನ್ನು ಬಲವಂತದಿಂದಲೇ ತಡೆಯುತ್ತಿವೆ. ಆದ್ದರಿಂದ,
ಸದ್ಯದ ಅಗತ್ಯ ಅವರನ್ನು ಅರಿಯುವುದು, ಜರೆಯುವುದಲ್ಲ.

No comments:

Post a Comment