ಕುತ್ಬುದ್ದೀನ್ ಅನ್ಸಾರಿ
ಅಶೋಕ್ ಮೋಚಿ
2002ರ ಗುಜರಾತ್ ಹತ್ಯಾಕಾಂಡದ ಪ್ರಸ್ತಾಪವಾದಾಗಲೆಲ್ಲ ಈ ಎರಡು ಮುಖಗಳು ಸದಾ ನಮ್ಮ ಮುಂದೆ ಸುಳಿದು ಹೋಗುತ್ತವೆ. ತನ್ನೆರಡು ಕೈಗಳನ್ನು ಜೋಡಿಸಿ, ಕಣ್ಣಲ್ಲಿ ನೀರು ತುಂಬಿಕೊಂಡು, ‘ರಕ್ಷಿಸಿ’ ಎಂದು ಬೇಡುವ ಕುತ್ಬುದ್ದೀನ್ ಅನ್ಸಾರಿ ಮತ್ತು, ಒಂದು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು, ತಲೆಗೆ ಕೇಸರಿ ಪಟ್ಟಿಯನ್ನು ಕಟ್ಟಿ ವಿಜಯೋತ್ಸವ ಅಚರಿಸುವ ಅಶೋಕ್ ಭವನ್‍ಭಾಯಿ ಪರ್‍ಮಾರ್ ಅಥವಾ ಅಶೋಕ್ ಮೋಚಿ. ಗುಜರಾತ್ ಹತ್ಯಾಕಾಂಡ ನಡೆದು 12 ವರ್ಷಗಳು ಕಳೆದರೂ ಈ ಎರಡು ಪೊಟೋಗಳಿಗೆ ಬೇಡಿಕೆ ಕುಂದಿಲ್ಲ. ಇವರಿಬ್ಬರನ್ನು ಹೊರತುಪಡಿಸಿ ಗುಜರಾತ್ ಹತ್ಯಾಕಾಂಡವನ್ನು ವ್ಯಾಖ್ಯಾನಿಸದಷ್ಟು ಇವರು ಆ ಘಟನೆಯ ಭಾಗವಾಗಿದ್ದಾರೆ. ಅಸಂಖ್ಯ ಬಾರಿ ಇವರ ಪೋಟೋಗಳನ್ನು ಮಾಧ್ಯಮಗಳು ಬಳಸಿಕೊಂಡಿವೆ. ಹತ್ಯಾಕಾಂಡದ ಭಯಾನಕತೆ ಮತ್ತು ಅಸಹಾಯಕತೆಯ ಎರಡು ಸಾಕ್ಷ್ಯಗಳಾಗಿ ಇವು ಜಾಗತಿಕವಾಗಿಯೇ ಇವತ್ತು ಗುರುತಿಗೀಡಾಗಿವೆ. ಗುಜರಾತ್‍ನ ನರೋಡ ಪಾಟಿಯಾದಲ್ಲಿರುವ ತನ್ನ ಮನೆಯ ಮೇಲಂತಸ್ತಿನಲ್ಲಿದ್ದ ಕುತ್ಬುದ್ದೀನ್ ಅನ್ಸಾರಿ ಮತ್ತು ಆತನ ಕುಟುಂಬವನ್ನು ಗಲಭೆಕೋರರು ಸುತ್ತವರಿದಿದ್ದರು. ಇನ್ನೇನು ಸಾವು ಖಚಿತ ಎಂದು ಅನಿಸುತ್ತಿರುವಾಗಲೇ ಅಲ್ಲಿಗೆ ಕ್ಷಿಪ್ರ ಕಾರ್ಯಾಚರಣಾ ಪಡೆ (Rapid Action Force) ಧಾವಿಸಿತ್ತು. ತಮ್ಮನ್ನು ‘ರಕ್ಷಿಸಿ’ ಎಂದು ಆತ ಸೇನೆಯೊಂದಿಗೆ ಕೈ ಮುಗಿದು ಬೇಡಿಕೊಳ್ಳುತ್ತಿರುವುದನ್ನು ಮುಂಬೈ ಮಿರರ್ ಪತ್ರಿಕೆಯ ಅರ್ಕೋ ದತ್ತ ಸೆರೆಹಿಡಿದಿದ್ದರು. ಹೀಗೆ ಕ್ಲಿಕ್ಕಿಸುವಾಗ, ಈ ಪೋಟೋ ಗುಜರಾತ್ ಹತ್ಯಾಕಾಂಡವನ್ನು ವ್ಯಾಖ್ಯಾನಿಸುವ ಮೈಲುಗಲ್ಲಾಗುತ್ತದೆ ಎಂದು ಅವರು ಅಂದುಕೊಂಡಿರಲಿಲ್ಲ. ಕುತ್ಬುದ್ದೀನ್‍ನ ನೀರು ತುಂಬಿದ ಕಣ್ಣು, ಕೈ, ಗಾಯಗೊಂಡ ಕೆನ್ನೆ, ಬಟ್ಟೆಯಲ್ಲಿ ಹರಡಿರುವ ರಕ್ತ... ಎಲ್ಲವೂ ಗುಜರಾತ್ ಹತ್ಯಾಕಾಂಡದ ಒಂದೊಂದು ಸಾಕ್ಷ್ಯವಾಗಿ ಆ ಬಳಿಕ ಜನರನ್ನು ತಟ್ಟಿದುವು. ಸರಕಾರ ಅಥವಾ ಮಾಧ್ಯಮಗಳು ಹೇಳುವುದಕ್ಕಿಂತ ಹೆಚ್ಚಿನದನ್ನು ಆ ಒಂದು ಪೋಟೋ ಅದ್ಭುತವಾಗಿ ಕಟ್ಟಿಕೊಟ್ಟಿತು. ಹಾಗೆಯೇ ಚಮ್ಮಾರನಾದ ಅಶೋಕ್ ಮೋಚಿಯ ಪೋಟೋವನ್ನು ಅಹ್ಮದಾಬಾದ್‍ನ ಮಧೇಶ್ವರ್‍ನ ಗಲಭೆ ಪೀಡಿತ ಪ್ರದೇಶದಲ್ಲಿ ಮುಂಬೈ ಮಿರರ್ ಪತ್ರಿಕೆಯ ಸೆಬಾಸ್ಟಿಯನ್ ಡಿಸೋಜ ಸೆರೆಹಿಡಿದರು.ಒಂದು ರೀತಿಯಲ್ಲಿ, ಗುಜರಾತ್ ಹತ್ಯಾಕಾಂಡದ ಕ್ರೌರ್ಯ, ರಕ್ತದಾಹವನ್ನು ಗ್ರಹಿಸಿಕೊಳ್ಳುವುದಕ್ಕೆ ಮೋಚಿಯ ಪೋಟೋವೊಂದೇ ಧಾರಾಳ ಸಾಕು. ವಿಶೇಷ ಏನೆಂದರೆ, ಮೊನ್ನೆ ಮಾರ್ಚ್ 4ರಂದು ಕೇರಳದ ಕಣ್ಣೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇವರಿಬ್ಬರೂ ಒಟ್ಟಾದರು. ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಟೈಲರ್ ಆಗಿರುವ 40 ವರ್ಷದ ಕುತ್ಬುದ್ದೀನ್‍ಗೆ ಮೋಚಿ ಹೂವನ್ನು ನೀಡಿದ. ತನ್ನ ಕೃತ್ಯಕ್ಕಾಗಿ ಕ್ಷಮೆಯಾಚಿಸಿದ. ಮೋದಿ ಆಡಳಿತದ ಬಗ್ಗೆ, ಗಲಭೆಯನ್ನು ಪ್ರಾಯೋಜಿಸಿದವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ. ತಾನೀಗ ಅವರೆಲ್ಲರ ಸಂಪರ್ಕವನ್ನು ಕಡಿದು ನೈಜ ಮನುಷ್ಯನಾಗಿದ್ದೇನೆ ಅಂದ. ಹತ್ಯಾಕಾಂಡಕ್ಕಾಗಿ ತಾನು ತೀವ್ರ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಘೋಷಿಸಿ ಕುತ್ಬುದ್ದೀನನ್ನು ಅಪ್ಪಿಕೊಂಡ.
ನಿಜವಾಗಿ, ‘ದ್ವೇಷಕ್ಕೆ ದೀರ್ಘ ಆಯುಷ್ಯವಿಲ್ಲ’ ಎಂಬುದನ್ನು ಅತ್ಯಂತ ಬಲವಾಗಿ ಸಾರುವ ಘಟನೆ ಇದು. 2002ರಲ್ಲಿ ಮೋಚಿ ಬಲಾಢ್ಯತೆಯ ಸಂಕೇತವಾಗಿದ್ದ. ಕ್ರೌರ್ಯವೇ ಪರಿಹಾರ ಎಂಬ ಸಂದೇಶದ ಪ್ರತಿಬಿಂಬವಾಗಿದ್ದ. ತನ್ನ ಧರ್ಮಕ್ಕೆ ಹೊರತಾದವರನ್ನು ಕೊಲ್ಲುವುದು ಗೌರವಾರ್ಹ ಎಂದು ಅಂದುಕೊಂಡವರ ರಾಯಭಾರಿಯಾಗಿದ್ದ. ಅದೇ ವೇಳೆ ಕುತ್ಬುದ್ದೀನ್ ಅಸಹಾಯಕತೆಯ ಪ್ರತಿರೂಪ. ಆದರೆ 12 ವರ್ಷಗಳ ಬಳಿಕ ಈ 2014ರಲ್ಲಿ ಅವರಿಬ್ಬರೂ ಮುಖಾಮುಖಿಯಾದಾಗ ಒಟ್ಟು ಚಿತ್ರಣವೇ ಬದಲಾಗಿ ಬಿಟ್ಟಿದೆ. ಕ್ರೌರ್ಯವೇ ಪರಿಹಾರ ಅನ್ನುತ್ತಿದ್ದವ ಕ್ಷಮೆಯಾಚಿಸುತ್ತಿದ್ದಾನೆ. ಅಸಹಾಯಕನಾಗಿದ್ದವ ಕ್ಷಮೆ ನೀಡುವಷ್ಟು ಬಲಾಢ್ಯನಾಗಿದ್ದಾನೆ. ಅನ್ಸಾರಿಗೆ ಮದುವೆಯಾಗಿ ಮೂರು ಮಕ್ಕಳಿದ್ದರೆ ಮೋಚಿ ಇನ್ನೂ ಮದುವೆಯಾಗಿಲ್ಲ. ಹಲೀಮ್ ನಿಕಾಡಿ ಎಂಬ ರಸ್ತೆ ಬದಿಯಲ್ಲಿ ಆತ ಈಗಲೂ ಚಮ್ಮಾರ ವೃತ್ತಿಯನ್ನು ಮಾಡುತ್ತಿದ್ದಾನೆ. ತಾನು ಗಲಭೆಯಲ್ಲಿ ಸೂತ್ರಧಾರಿಗಳ ದಾಳವಾಗಿ ಬಳಕೆಗೀಡಾಗಿದ್ದೇನೆ ಅನ್ನುವ ಪಶ್ಚಾತ್ತಾಪದ ಭಾವ ಆತನ ಪ್ರತಿ ನಡೆಯಲ್ಲೂ ವ್ಯಕ್ತವಾಗುತ್ತಿದೆ.
ಇಷ್ಟಕ್ಕೂ, ಕುತ್ಬುದ್ದೀನ್ ಮತ್ತು ಮೋಚಿ ಸಮಾಗಮದ ಬಗ್ಗೆ ಮಾಧ್ಯಮಗಳೇಕೆ ನಿರ್ಲಕ್ಷ್ಯ ತಾಳಿದುವು? ಈ ಘಟನೆಯನ್ನು ಎತ್ತಿಕೊಂಡು ಗಂಭೀರ ಚರ್ಚೆ ನಡೆಸುವುದಕ್ಕೆ ಮತ್ತು ಸಮಾಜಕ್ಕೆ ಒಂದೊಳ್ಳೆಯ ಸಂದೇಶವನ್ನು ಸಾರುವುದಕ್ಕೆ ಮುಖ್ಯವಾಹಿನಿಯ ಮಾಧ್ಯಮಗಳೇಕೆ ಪ್ರಯತ್ನಿಸಲಿಲ್ಲ? ದೆಹಲಿಯಲ್ಲಿ ನಡೆಯುವ ಘಟನೆಯನ್ನು ಮಾತ್ರ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸುತ್ತವೆ ಎಂಬ ಆರೋಪವನ್ನು ನಿಜಗೊಳಿಸುವಂತೆ ಅವು ವರ್ತಿಸಿದ್ದೇಕೆ? ನಿರ್ಭಯ ಪ್ರಕರಣದ ಸಂದರ್ಭದಲ್ಲೂ ಇಂಥದ್ದೊಂದು ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿತ್ತು. ಕ್ರೌರ್ಯವೊಂದರ ಪ್ರತಿರೂಪವಾದ ವ್ಯಕ್ತಿ ತನ್ನ ಕೃತ್ಯಕ್ಕಾಗಿ ಪಶ್ಚಾತ್ತಾಪ ಪಡುವುದು ಮತ್ತು ಸಂತ್ರಸ್ತನಲ್ಲಿ ಕ್ಷಮೆಯಾಚಿಸುವುದೆಲ್ಲ ಸಣ್ಣ ಸಂಗತಿ ಅಲ್ಲವಲ್ಲ. ಮೋಚಿಯನ್ನು ಅಭಿಮಾನದಿಂದ ನೋಡುವ ಒಂದು ವರ್ಗ ಈ ದೇಶದಲ್ಲಿ ಇವತ್ತು ಖಂಡಿತ ಇದೆ. ಒಂದು ಸಮುದಾಯಕ್ಕೆ ಪಾಠ ಕಲಿಸಿದ ಹೀರೋ ಎಂಬಂತೆ ಆತನನ್ನು ಬಿಂಬಿಸುವ ಮಂದಿಯೂ ಇದ್ದಾರೆ. ಅಲ್ಲದೇ ಚುನಾವಣೆಯ ಈ ಸಂದರ್ಭದಲ್ಲಿ ದ್ವೇಷದ ವಾತಾವರಣವನ್ನು ಹುಟ್ಟು ಹಾಕುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಮಾಧ್ಯಮಗಳು ಮೋಚಿಯನ್ನು ಎದುರಿಟ್ಟುಕೊಂಡು ಚರ್ಚಿಸಿರುತ್ತಿದ್ದರೆ ಅದು ಸಮಾಜದ ಮೇಲೆ ಪ್ರಭಾವ ಬೀರುತ್ತಿತ್ತಲ್ಲವೇ? ಕ್ರೌರ್ಯದ ವಿಫಲ ಮುಖವಾಗಿ ಆತ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ದೇಶಾದ್ಯಂತ ಅದು ಗಟ್ಟಿ ಸಂದೇಶ ರವಾನಿಸುತ್ತಿತ್ತಲ್ಲವೇ? ನಿಜವಾಗಿ, ಕೋಮುವಾದದ ಮಾತುಗಳು ಮತ್ತೆ ಸದ್ದು ಮಾಡುತ್ತಿರುವ ಇಂದಿನ ದಿನಗಳಲ್ಲಿ ಮೋಚಿ ಬ್ರೇಕಿಂಗ್ ನ್ಯೂಸ್ ಆಗಬೇಕಾದ ತುರ್ತು ಅಗತ್ಯ ಇದೆ. ಲೋಕಸಭಾ ಚುನಾವಣೆಯನ್ನು ಎದುರಿಟ್ಟುಕೊಂಡು ಟಿ.ವಿ. ಚಾನೆಲ್‍ಗಳು ಈಗಾಗಲೇ ಚರ್ಚೆಯನ್ನು ಪ್ರಾರಂಭ ಮಾಡಿವೆ. ಮೋದಿ ಮತ್ತು ರಾಹುಲ್‍ರ ದೌರ್ಬಲ್ಯ-ಪ್ರಾಬಲ್ಯದ ಬಗ್ಗೆ ಅವು ಗಂಟೆಗಟ್ಟಲೆ ಚರ್ಚೆಯನ್ನು ಪ್ರಸಾರ ಮಾಡುತ್ತಿವೆ. ಆಮ್ ಆದ್ಮಿ ಪಕ್ಷ, ತೃತೀಯ ರಂಗ, ಮಮತಾ ಮತ್ತು ಜಯಲಲಿತಾರ ಫೆಡರಲ್ ಒಕ್ಕೂಟ... ಎಲ್ಲದರ ಬಗ್ಗೆಯೂ ಚರ್ಚಿಸುವುದಕ್ಕೆ ಅವು ಧಾರಾಳ ಸಮಯವನ್ನು ವಿೂಸಲಿಡುತ್ತಿವೆ. ಹಾಗಂತ, ಇವೆಲ್ಲ ತಪ್ಪು ಎಂದಲ್ಲ. ಆದರೆ, ನಮ್ಮ ಮುಖ್ಯವಾಹಿನಿಯ ಟಿ.ವಿ. ಚಾನೆಲ್‍ಗಳಲ್ಲಿ ಮೋಚಿ ಒಂದರ್ಧ ಗಂಟೆ ಬ್ರೇಕಿಂಗ್ ನ್ಯೂಸ್ ಆಗುವುದನ್ನೊಮ್ಮೆ ಕಲ್ಪಿಸಿಕೊಳ್ಳಿ. ರಾಜ್‍ದೀಪ್ ಸರ್ದೇಸಾೈ, ಬರ್ಖಾದತ್, ಅರ್ನಾಬ್ ಗೋಸ್ವಾಮಿ ಅಥವಾ ಕನ್ನಡದ ವಿವಿಧ ಚಾನೆಲ್‍ಗಳ ಆ್ಯಂಕರ್‍ಗಳು ಆತನನ್ನು ಕುಳ್ಳಿರಿಸಿ ಸಂದರ್ಶಿಸುವ ವಾತಾವರಣವನ್ನೊಮ್ಮೆ ಊಹಿಸಿ. ಅದು ಎಷ್ಟು ಪ್ರಭಾವಶಾಲಿಯಾಗುತ್ತಿತ್ತು? ಧರ್ಮದ ನೆಲೆಯಲ್ಲಿ ಸಮಾಜದ ವಿಭಜನೆಯನ್ನು ಬಯಸುವ; ದ್ವೇಷ, ಕ್ರೌರ್ಯದ ಭಾಷೆಯಲ್ಲಿ ಮಾತನಾಡುವ ಮಂದಿಯ ಪಾಲಿಗೆ ಪಶ್ಚಾತ್ತಾಪ ಪಡುವ ಮೋಚಿ ಅತಿ ದೊಡ್ಡ ಎದುರಾಳಿ. ಆತ ತನ್ನ ಕೃತ್ಯಕ್ಕಾಗಿ ಕ್ಷಮೆ ಯಾಚಿಸಿದಷ್ಟೂ ಈ ಮಂದಿಯ ಯೋಜನೆ ವಿಫಲವಾಗುತ್ತಲೇ ಹೋಗುತ್ತದೆ. ಆತ ಹೆಚ್ಚೆಚ್ಚು ಮಾತಾಡಿದಂತೆಲ್ಲ ಈ ಮಂದಿಯ ಭಾಷಣ, ಪ್ರಚಾರಗಳು ಕಡಿಮೆಯಾಗುತ್ತಾ ಹೋಗುತ್ತವೆ. ಕುತ್ಬುದ್ದೀನ್‍ನ ಹೆಗಲಿಗೆ ಆತ ಕೈಯಿರಿಸಿ ಸಹೋದರತ್ವ ಪ್ರದರ್ಶಿಸುವುದನ್ನು ಈ ಮಂದಿ ಸಹಿಸುವುದಕ್ಕೆ ಸಾಧ್ಯವೇ ಇಲ್ಲ. ಆದರೆ, ಈ ದೇಶದ ಇವತ್ತಿನ ತುರ್ತು ಅಗತ್ಯ ಇದು. ಮೋಚಿ ಹೆಚ್ಚೆಚ್ಚು ಮಾತಾಡಬೇಕು. ಕುತ್ಬುದ್ದೀನ್ ಮತ್ತು ಆತನ ಸಮುದಾಯವನ್ನು ಕ್ರೂರವಾಗಿ ನಡೆಸಿಕೊಂಡ ತನ್ನ ಕೃತ್ಯಕ್ಕೆ ಆತ ಪಶ್ಚಾತ್ತಾಪ ಪಡುತ್ತಾ, ಕೋಮುವಾದದ ಪೊಳ್ಳುತನವನ್ನು ಬಯಲಿಗೆಳೆಯಬೇಕು. ಆದ್ದರಿಂದಲೇ ಮಾಧ್ಯಮಗಳು ಆತನಿಗೆ ಕವರೇಜ್ ಕೊಡಬೇಕಿತ್ತೆಂದು ಅನಿಸಿದ್ದು. ಆತನನ್ನು ಕೂರಿಸಿ ಮಾತಾಡಿಸಬೇಕಿತ್ತೆಂದು ಬಯಸಿದ್ದು.
ಅಂದಹಾಗೆ, ಗುಜರಾತ್ ಹತ್ಯಾಕಾಂಡದ ಸಮಯದಲ್ಲಿ ಮೋಚಿಗೆ 27 ವರ್ಷ. ಬಹುಶಃ ಕುತ್ಬುದ್ದೀನ್ ಸಮುದಾಯದ ಬಗ್ಗೆ ಹರಡಲಾಗಿರುವ ಸುಳ್ಳುಗಳನ್ನು ಒರೆಗೆ ತಿಕ್ಕಿ ನೋಡುವಷ್ಟು ಪ್ರೌಢ ವಯಸ್ಸು ಅದಲ್ಲ. ಅಲ್ಲದೇ ಹಾಗೆ ನೋಡಬೇಕಾದ ಅಗತ್ಯವನ್ನು ಚಮ್ಮಾರನಾಗಿರುವ ಆತನ ಸುತ್ತ-ಮುತ್ತಲಿನ ವಾತಾವರಣ ಒತ್ತಾಯಿಸುವ ಸಾಧ್ಯತೆಯೂ ಇಲ್ಲ. ನಿಜವಾಗಿ, ಧರ್ಮದ ಹೆಸರಲ್ಲಿ ರಕ್ತ ಹರಿಸಲು ಸಿದ್ಧವಾಗುವ ಗುಂಪಿನ ದೌರ್ಬಲ್ಯ ಇದು. ಮೊದಲನೆಯದಾಗಿ, ಅವರಿಗೆ ನಿರ್ದಿಷ್ಟ ಉದ್ಯೋಗ ಇರುವುದಿಲ್ಲ. ಮಾತ್ರವಲ್ಲ, ಇರುವ ಉದ್ಯೋಗವೂ ಭದ್ರವಾಗಿರುವುದಿಲ್ಲ. ಯಾವುದು ಸುಳ್ಳು, ಯಾವುದು ಸತ್ಯ, ಏಕೆ ದ್ವೇಷಿಸಬೇಕು, ಏಕೆ ಕೊಳ್ಳಿಯಿಡಬೇಕು.. ಎಂಬಿತ್ಯಾದಿಯಾಗಿ ಆಲೋಚಿಸುವಷ್ಟು ಪ್ರೌಢತೆಯಾಗಲಿ, ವೈಚಾರಿಕ ಒಳನೋಟವಾಗಲಿ ಇರುವುದಿಲ್ಲ. ತಾವು ಸೂತ್ರದ ಗೊಂಬೆಗಳಾಗುತ್ತಿದ್ದೇವೋ ಎಂಬುದಾಗಿ ವಿಮರ್ಶಿಸಿಕೊಳ್ಳುವಷ್ಟು ಸಹನೆಯೂ ಇರುವುದಿಲ್ಲ. ಹೀಗೆ ಅರಿವಿಲ್ಲದೆಯೋ ಅಥವಾ ಹುಂಬತನದಿಂದಲೋ ಕ್ರೌರ್ಯದಲ್ಲಿ ಪಾಲ್ಗೊಂಡು ಬಳಿಕ ‘ಯೂಸ್ ಏಂಡ್ ತ್ರೊ’ ಆಗುವ ಎಲ್ಲರಿಗೂ ಮೋಚಿ ದೊಡ್ಡದೊಂದು ಪಾಠ ಹೇಳಿ ಕೊಟ್ಟಿದ್ದಾನೆ. ಈ ಪಾಠ ದ್ವೇಷದ್ದಲ್ಲ, ಪ್ರೀತಿಯದ್ದು. ವಿಭಜನೆಯದ್ದಲ್ಲ ಆಲಿಂಗನದ್ದು. ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಭುಜಕ್ಕೆ ಕೈಯಿಟ್ಟು ಸಹೋದರರಂತೆ ಬದುಕಬೇಕಾದವರೆಂಬ ನೀತಿಯದ್ದು. ಈ ಪಾಠಕ್ಕೆ ಜಯವಾಗಲಿ. ಗುಜರಾತ್ ಹತ್ಯಾಕಾಂಡವನ್ನು ‘ಮಾದರಿ’ಯೆಂದು ನಂಬಿರುವವರಿಗೆ ಪಶ್ಚಾತ್ತಾಪ ಪಡುವ ಮೋಚಿ ಮಾದರಿಯಾಗಲಿ.

No comments:
Post a Comment