Tuesday, May 21, 2019

ಕ್ಲಾಸ್ ರಿಲೋಷಿಯಸ್‍ನಿಂದ ನಾವು ಕಲಿಯಬಹುದಾದದ್ದು ಏನು?



ಏಳೆಂಟು ವರ್ಷಗಳೊಳಗೆ ಪ್ರಸಿದ್ಧಿ ಮತ್ತು ಕುಪ್ರಸಿದ್ಧಿ ಎರಡನ್ನೂ ತನ್ನದಾಗಿಸಿಕೊಂಡ ಪತ್ರಕರ್ತನೆಂದರೆ, ಜರ್ಮನಿಯ ಕ್ಲಾಸ್ ರಿಲೋಷಿಯಸ್.
ಸ್ವಿಝರ್ಲಾ೦ಡಿನ ನ ರಿಪೋರ್ಟೆಗೆನ್ ಮ್ಯಾಗಸಿನ್‍ಗೆ ಬರೆದ ವಿಶಿಷ್ಟ ಲೇಖನಕ್ಕಾಗಿ 2014ರಲ್ಲಿ ಈತ ಜರ್ಮನ್ ಭಾಷೆಯ ‘ವರ್ಷದ CNN ಪತ್ರಕರ್ತ’ ಎಂಬ ಪ್ರಶಸ್ತಿಗೆ ಭಾಜನನಾದ. 2017ರಲ್ಲಿ ಯುರೋಪಿಯನ್ ಪ್ರೆಸ್ ಪ್ರೈಝನ್ನು ಗಿಟ್ಟಿಸಿಕೊಂಡ. ಐಸಿಸ್  ಭಯೋತ್ಪಾದಕ ಪಡೆಯು ಇರಾಕಿ ಮಗುವನ್ನು ಅಪಹರಿಸಿ ಕೊಂಡೊಯ್ದ ಘಟನೆಯ ಮೇಲೆ ಬರೆದ ಲೇಖನ; ಕ್ಯೂಬಾದ ಗ್ವಾಂಟನಾಮೊ ಬೇ ಜೈಲಿನಲ್ಲಿರುವ ಯಮನ್‍ನ ಕೈದಿಯ ಮೇಲೆ ಬರೆದ ಲೇಖನ, ಟರ್ಕಿಯಲ್ಲಿ ಗುಲಾಮರಾಗಿ ಜೀವನ  ನಡೆಸುತ್ತಿರುವ ಸಿರಿಯದ ಅಲೆಪ್ಪೊ ನಗರದ ಅನಾಥರ ಕುರಿತಾದ ಬರಹ, NFL ಫುಟ್ಬಾಲ್ ಸ್ಟಾರ್ ಕಾಲಿನ್ ಕೆಪೇಮಿಕ್‍ರ ಹೆತ್ತವರೊಂದಿಗೆ ನಡೆಸಲಾದ ಸಂದರ್ಶನ ಮತ್ತು ಅಮೇರಿಕದ ಚುನಾವಣೆಯ ಸಮಯದಲ್ಲಿ ಮಿನ್ನೆಸೋಟದ ಫರ್ಗುಸ್  ಫಾಲ್ಸ್ ನಲ್ಲಿ ಡೊನಾಲ್ಡ್ ಟ್ರಂಪ್‍ಗಿರುವ ಭಾರೀ ಜನಬೆಂಬಲದ ಹಿನ್ನೆಲೆಯನ್ನು ಕೆದಕಿ ಬರೆದ ಲೇಖನ ಇತ್ಯಾದಿಗಳು ಕ್ಲಾಸ್ ರಿಲೋಷಿಯಸ್‍ಗೆ ಭಾರೀ ಜನಪ್ರೀತಿಯನ್ನು ಗಳಿಸಿಕೊಟ್ಟವು. ಜರ್ಮನಿಯ ಪ್ರತಿಷ್ಠಿತ Dextscher Reporterpreis ಬಹುಮಾನವು ನಾಲ್ಕು ಬಾರಿ ಈತನನ್ನು ಹುಡುಕಿಕೊಂಡು ಬಂದವು. ಇವರ ಲೇಖನದಲ್ಲಿರುವ ಕಾವ್ಯಾತ್ಮಕ ಗುಣ, ಪ್ರಸ್ತುತತೆ ಮತ್ತು ಒಳನೋಟವು ಅದ್ಭುತ ವಾದುದೆಂದು ಪ್ರತಿ ಪ್ರಶಸ್ತಿಗಳೂ ಭುಜ ತಟ್ಟಿದುವು. ಆದರೆ,
2018ರ ಕೊನೆಯಲ್ಲಿ ಜರ್ಮನಿಯ ಪ್ರಸಿದ್ಧ ಮ್ಯಾಗಸಿನ್ ಡೇರ್ ಸ್ಪಿಂಜಲ್ ಆತನನ್ನು ಕೆಲಸದಿಂದ ಕಿತ್ತು ಹಾಕಿತು. ಮಾತ್ರ ವಲ್ಲ, ಪ್ರತಿವಾರ 7,25,600 ಕ್ಕಿಂತ ಅಧಿಕ ಪ್ರತಿಗಳು ಮಾರಾಟ ವಾಗುವ ಮತ್ತು 6.5 ಮಿಲಿಯನ್ ಆನ್‍ಲೈನ್ ಓದುಗರಿರುವ ಈ  ಪತ್ರಿಕೆಯು ಈತನ ವಿರುದ್ಧ ಕ್ರಿಮಿನಲ್ ಖಟ್ಲೆ ಹೂಡಿತು.
ವಿಷಯ ಇಷ್ಟೇ.
ಆತ ತನ್ನ ಲೇಖನದ ನಡುನಡುವೆ ಕಲ್ಪಿತ ಕಥೆಗಳನ್ನು ಪೋಣಿಸಿದ್ದ. ಇಲ್ಲದ್ದನ್ನು ಸೇರಿಸಿದ್ದ. 2018 ಡಿಸೆಂಬರ್ 9ರಂದು ಡೇರ್ ಸ್ಪಿಂಜಲ್ ಅತೀವ ಅವಮಾನದೊಂದಿಗೆ ತನ್ನ ವರದಿಗಾರನ ತಪ್ಪನ್ನು ಒಪ್ಪಿಕೊಂಡಿತು. ಆದರೆ ಡೇರ್ ಸ್ಪಿಂಜಲ್‍ಗೆ ಹಾಗೆ ತ ಪ್ಪೊಪ್ಪಿಕೊಳ್ಳುವುದು ಮತ್ತು ತನ್ನ ಪತ್ರಿಕೆಯಲ್ಲಿ ಸತ್ಯದ ಮುಖ ವಾಡದಲ್ಲಿ ಸುಳ್ಳು ಕತೆಗಳು ಪ್ರಕಟವಾಗಿದ್ದುವು ಎಂದು ಒಪ್ಪಿಕೊಳ್ಳುವುದು ಸುಲಭವಾಗಿರಲಿಲ್ಲ. ಅದಾಗಲೇ ಕ್ಲಾಸ್ ರಿಲೋಷಿಯಸ್ ಡೇರ್ ಸ್ಪಿಂಜಲ್ ಅನ್ನೂ ಮೀರಿ ಬೆಳೆದಿದ್ದ. ತನಿಖಾ  ಬರಹ ಮತ್ತು ಕುತೂಹಲಕಾರಿ ವರದಿಗಾರಿಕೆಗಾಗಿ ಜರ್ಮನಿಯಾದ್ಯಂತ ಪ್ರಸಿದ್ಧನಾಗಿದ್ದ. 1985ರಲ್ಲಿ ಹುಟ್ಟಿ 2011ರಲ್ಲಿ ಫ್ರಿಲ್ಯಾನ್ಸ್ ಪತ್ರಕರ್ತನಾಗಿ ಪರಿವರ್ತಿತನಾದ ಆತನ ಬರಹವನ್ನು ಜರ್ಮನಿಯಲ್ಲಿ ಪ್ರಕಟಿಸದ ಪತ್ರಿಕೆಗಳೇ ಇಲ್ಲ. 2017ರಲ್ಲಿ ಡೇರ್  ಸ್ಪಿಂಜಲ್ ಪತ್ರಿಕೆಯಲ್ಲಿ ಖಾಯಂ ಕೆಲಸ ಗಿಟ್ಟಿಸಿಕೊಳ್ಳುವ ಮೊದಲು ಫ್ರಾಂಕ್ ಫಾರ್ಟವರ್, ಫಿನಾನ್ಶಿಯಲ್ ಟೈಮ್ಸ್, ಡೈ ವೆಲ್ಟ್, ಝೈಲ್ ಆನ್‍ಲೈನ್, ಡೇರ್ ಸ್ಪಿಂಜಲ್, ರಿಪೋರ್ಟೆಗೆನ್ ಸಹಿತ ಅನೇಕಾರು ಪತ್ರಿಕೆಗಳಿಗೆ ಫ್ರಿಲ್ಯಾನ್ಸ್ ಆಗಿ ಬರೆಯುತ್ತಿದ್ದ.  2011ರಿಂದ 2018ರ ನಡುವೆ ಕೇವಲ ಡೇರ್ ಸ್ಪಿಂಜಲ್ ಪತ್ರಿಕೆಯೊಂದಕ್ಕೆ 60ರಷ್ಟು ಅಪರೂಪದ ವರದಿಗಳನ್ನು ಮಾಡಿದ್ದ. ಅತ್ಯಂತ ಸಂಕೀರ್ಣವಾದ ಮತ್ತು ಸಾರ್ವಜನಿಕ ಗಮನ ಸೆಳೆಯಬಲ್ಲ ಸುದ್ದಿಗಳ ಹಿಂದೆ ಹುಡುಕಾಡಲು ಡೇರ್ ಸ್ಪಿಂಜಲ್ ಸಹಿತ  ವಿವಿಧ ಪತ್ರಿಕೆಗಳಿಗೆ ನೆನಪಿಗೆ ಬರುತ್ತಿ ದ್ದುದೇ ಕ್ಲಾಸ್ ರಿಲೋಷಿಯಸ್. ಆತ ಆ ಕೆಲಸವನ್ನು ಒಪ್ಪಿಕೊಂಡನೆಂದರೆ, ಅದೊಂದು ಭಾರೀ ಗಮನ ಸೆಳೆಯಬಲ್ಲ ಬರಹವಾಗುತ್ತದೆಂಬ ನಂಬಿಕೆ ಜರ್ಮನಿಯ ಪತ್ರಿಕಾ ಜಗತ್ತಿನಲ್ಲಿತ್ತು. ಅಂಥದ್ದೊಂದು ಬರಹ  ಕಲೆ ಮತ್ತು ವರದಿಗಾರಿಕೆಯ ಕೌಶಲ್ಯ ಆತನಲ್ಲಿದೆಯೆಂದು ಪತ್ರಿಕೆಗಳು ನಂಬಿದ್ದುವು. ಬಹುಶಃ ಈ ನಂಬಿಕೆಯ ಭಾರವು ಆತನೊಳಗೆ ಒತ್ತಡವೊಂದನ್ನು ಹುಟ್ಟುಹಾಕಿತ್ತೋ ಏನೋ? ಅಸಾಮಾನ್ಯವಾದ ಏನಾದರೊಂದನ್ನು ತನ್ನ ಬರಹದಲ್ಲಿ ಉಲ್ಲೇಖಿಸದೇ  ಹೋದರೆ ತನಗಿರುವ ಮಾರ್ಕೆಟ್ ಬಿದ್ದು ಹೋಗಬಹುದು ಎಂದು ಆತ ಭಾವಿಸಿದ್ದನೋ ಏನೋ? ಅಂತೂ ಆತ ತನ್ನ ವರದಿಯಲ್ಲಿ ಕಲ್ಪಿತ ಕತೆಗಳನ್ನು ಸೃಷ್ಟಿಸತೊಡಗಿದ. ಇದು ಬಹಿರಂಗವಾದದ್ದು ಟ್ರಂಪ್ ಕುರಿತಾದ 2017ರ ವರದಿಯ ಬಳಿಕ.  ಅರಿಝೋನಾದ ಅಮೇರಿಕ-ಮೆಕ್ಸಿಕೋ ಗಡಿಯಲ್ಲಿ ಟ್ರಂಪ್ ಬೆಂಬಲಿಗ ಗುಂಪು ಕಾವಲು ಕಾಯುತ್ತಿದೆ ಎಂದು ಆತ ವರದಿಯಲ್ಲಿ ಬರೆದನಲ್ಲದೇ Keep Mexico Out ಎಂಬ ಪ್ಲಕಾರ್ಡನ್ನು ಅದಕ್ಕೆ ಪುರಾವೆಯಾಗಿ ಮಂಡಿಸಿದ್ದ. ವಿಶೇಷ ಏನೆಂದರೆ, ಈ ಬಗ್ಗೆ ಮೊದಲು ಅನುಮಾನ ವ್ಯಕ್ತಪಡಿಸಿದ್ದು ಅಮೇರಿಕದಲ್ಲಿ ಆತನಿಗೆ ವರದಿಗಾರಿಕೆಗೆ ನೆರವಾದ ಜುವಾನ್ ಮೊರೆನೊ ಎಂಬವ. ರಿಲೋಷಿಯಸ್ ತನ್ನ ವರದಿಯಲ್ಲಿ ಉಲ್ಲೇಖಿಸಿದ್ದ ಇಬ್ಬರು ವ್ಯಕ್ತಿಗಳನ್ನು ಜುವಾನ್ ಮೊರೆನೊ ಸಂಪರ್ಕಿಸಿದ.  ಆದರೆ ಅವರು ತಮ್ಮನ್ನು ರಿಲೋಷಿಯಸ್ ಸಂಪರ್ಕಿಸಿಯೇ ಇಲ್ಲ ಎಂದು ಹೇಳಿದರು. ರಿಲೋಷಿಯಸ್‍ನ ವರದಿಗಾರಿಕೆಯ ವಿಶ್ವಾಸಾರ್ಹತೆಗೆ ಬಿದ್ದ ಮೊದಲ ಹೊಡೆತ ಇದು. ಅಷ್ಟಕ್ಕೇ ಡೇರ್ ಸ್ಪಿಂಜಲ್ ಪತ್ರಿಕೆ ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ. ಅದು ತನಿಖೆಗೆ ಸಮಿತಿಯನ್ನು ರಚಿಸಿತು. ಆಗ ಒಂದೊಂದೇ ಸುಳ್ಳುಗಳು ಹೊರಬಿದ್ದುವು. ಆತನಿಗೆ ಪ್ರಶಸ್ತಿಯನ್ನು ತಂದುಕೊಟ್ಟ ವರದಿಗಳು ಸಂಪೂರ್ಣ ಸತ್ಯವಲ್ಲ ಎಂಬುದು ಪತ್ತೆಯಾಯಿತು. ಅಮೇರಿಕದ ಫುಟ್ಬಾಲ್ ಸ್ಟಾರ್ ಆಟಗಾರ ಕಾಲಿನ್‍ರ ಹೆತ್ತವರನ್ನು  ಈತ ಸಂದರ್ಶಿಸಿಯೇ ಇರಲಿಲ್ಲ. ಬರೇ ಕಲ್ಪಿಸಿಕೊಂಡು ಬರೆದಿದ್ದ. ಒಟ್ಟು 60 ವರದಿ ಗಳಲ್ಲಿ 14 ವರದಿಗಳು ಅಸತ್ಯದಿಂದ ಕೂಡಿವೆ ಎಂದು ತನಿಖಾ ಸಮಿತಿಯು ಹೇಳಿಕೊಂಡಿತು. ಅದರಲ್ಲಿ ಗ್ವಾಂಟನಾಮೋ ಬೇಯಲ್ಲಿದ್ದ ಯಮನ್ ವ್ಯಕ್ತಿಯ ಬಗೆಗಿನ  ವರದಿ, ಇರಾಕಿನ ಮಗುವನ್ನು ಐಸಿಸ್‍ನ ಗುಂಪು ಅಪಹರಿಸಿದ ವರದಿ, ಸಿರಿಯಾದ ಅಲೆಪ್ಪೊದ ಅನಾಥ ಮಕ್ಕಳು ಟರ್ಕಿಯಲ್ಲಿ ಗುಲಾಮರಾಗಿ ಬದುಕುತ್ತಿರುವ ವರದಿ ಇತ್ಯಾದಿ ಬಹುಮಾನ ವಿಜೇತ ಬರಹಗಳೂ ಸೇರಿದ್ದುವು. ವರದಿಯ ನಡುನಡುವೆ  ತನ್ನದೇ ಕಲ್ಪಿತ ಕತೆಗಳನ್ನು ಸೇರಿಸುವ ಮೂಲಕ ರಿಲೋಷಿಯಸ್ ಪತ್ರಿಕೋದ್ಯಮಕ್ಕೆ ಕಳಂಕ ತಂದಿದ್ದಾನೆ ಎಂದು ಡೇರ್ ಸ್ಪಿಂಜಲ್ ದೂಷಿಸಿತು.
ಇವೆಲ್ಲವನ್ನೂ ಇಲ್ಲಿ ಸ್ಮರಿಸಿಕೊಳ್ಳುವುದಕ್ಕೆ ಕಾರಣ ಇದೆ.
ಕಳೆದ ಎರಡು ತಿಂಗಳುಗಳಲ್ಲಿ ರಾಜ್ಯವು ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಅತ್ಯಂತ ಕೆಟ್ಟದಾಗಿ ಗುರುತಿಸಿಕೊಂಡಿತು. ಇತ್ತೀಚಿನ ಘಟನೆ ಏನೆಂದರೆ, ನಟಿ ರಮ್ಯಾರ ಕುರಿತು ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡದ್ದಕ್ಕಾಗಿ ವಿಶ್ವವಾಣಿಯ  ಮಾಜಿ ಪತ್ರಕರ್ತನೋರ್ವನ ಮೇಲೆ ಎಫ್‍ಐಆರ್ ದಾಖಲಾಯಿತು. ಇದರ ಜೊತೆಜೊತೆಗೇ, ಕಾಶ್ಮೀರದ ಲೇಹ್‍ನ ಪತ್ರಕರ್ತರು ಬಿಜೆಪಿಯಿಂದ ಹಣ ಸ್ವೀಕರಿಸಿದ್ದಾರೆ ಅನ್ನುವ ಆರೋಪಕ್ಕೆ ತುತ್ತಾದರು. ಪತ್ರಕರ್ತರ ಕೈಗೆ ಬಿಜೆಪಿ ನಾಯಕರು ಕವರ್  ನೀಡುತ್ತಿರುವ ವೀಡಿಯೋ ಬಿಡುಗಡೆಗೊಂಡಿತು. ಈ ಬಗ್ಗೆ ಓರ್ವ ಪತ್ರಕರ್ತೆ ಸಾಕ್ಷ್ಯವನ್ನೂ ನುಡಿದರು. ಇದಕ್ಕಿಂತ ತಿಂಗಳ ಹಿಂದೆ ನಮ್ಮ ರಾಜ್ಯದಲ್ಲಿ ಹಲವು ಪತ್ರಕರ್ತರು ಪತ್ರಿಕಾ ವೃತ್ತಿಗೆ ದ್ರೋಹ ಬಗೆದುದಕ್ಕಾಗಿ ಸುದ್ದಿಗೀಡಾದರು. ಇದರಲ್ಲಿ ಫೋಕಸ್  ಟಿ.ವಿ.ಗಾಗಿ ಕೆಲಸ ಮಾಡುತ್ತಿದ್ದ ಪತ್ರಕರ್ತರೂ ಒಬ್ಬರು. ಅವರು ತಿರುಚಿದ ವೀಡಿಯೋ ದೃಶ್ಯಾವಳಿಯನ್ನು ಇಟ್ಟುಕೊಂಡು ಬಿಜೆಪಿ ಶಾಸಕರನ್ನು ಬ್ಲ್ಯಾಕ್‍ಮೇಲ್ ಮಾಡಿದರು ಎಂಬ ಆರೋಪವನ್ನು ಹೊತ್ತುಕೊಂಡು ಬಂಧನಕ್ಕೆ ಒಳಗಾಗಿದ್ದಾರೆ. ಸಚಿವ  ಎಂ.ಬಿ. ಪಾಟೀಲರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದಿರುವರೆಂದು ಹೇಳಲಾದ ಪತ್ರವೊಂದನ್ನು ಲೋಕಸಭಾ ಚುನಾವಣೆಯ ಆರಂಭ ಹಂತದಲ್ಲಿ ವಿಜಯವಾಣಿ ಪತ್ರಿಕೆಯು ಪ್ರಕಟಿಸಿತ್ತು. ಅದು ನಕಲಿಯೆಂದು ಪತ್ತೆಯಾದ ಬಳಿಕ  ಅದರ ಆರೋಪದಲ್ಲಿ ಉದಯ್ ಇಂಡಿಯಾದ ವಿಶೇಷ ವರದಿಗಾರರನ್ನು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಂಧಿಸಲಾಯಿತು. ಈ ವ್ಯಕ್ತಿಯ ಜೊತೆಗೇ ಇದೇ ಪ್ರಕರಣಕ್ಕೆ ಸಂಬಂಧಿಸಿ ಪೋಸ್ಟ್ ಕಾರ್ಡ್ ಎಂಬ ವೆಬ್‍ಸೈಟ್‍ನ ಸಂಪಾದಕ ವಿಕ್ರಂ  ಹೆಗ್ಡೆಯನ್ನು ಬಂಧಿಸಲಾಯಿತು. ಪಬ್ಲಿಕ್ ಟಿ.ವಿ.ಯ ವರದಿಗಾರನೋರ್ವ ಸಮಯ ನ್ಯೂಸ್ ವರದಿಗಾರನ ಜೊತೆ ಸೇರಿಕೊಂಡು ವೈದ್ಯರೊಬ್ಬರನ್ನು ಬ್ಲ್ಯಾಕ್‍ಮೇಲ್ ಮಾಡಿ 50 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ ಘಟನೆ ನಡೆಯಿತು. ಆತನ ಬಂಧನವೂ  ಆಯಿತು. ವಿಜಯಪುರದಲ್ಲೂ ಇಂಥದ್ದೇ  ಘಟನೆಯೊಂದು ನಡೆಯಿತು. ಇಲ್ಲೂ ಬ್ಲ್ಯಾಕ್‍ಮೇಲ್‍ಗೆ ಒಳಗಾದದ್ದು ಓರ್ವ ವೈದ್ಯ. ಬೆದರಿಸಿದ್ದು ಟಿ.ವಿ. ಚಾನೆಲ್‍ನ ಕ್ಯಾಮರಾಮೆನ್. ಆತನನ್ನೂ ಬಂಧಿಸಲಾಯಿತು. ಇವು ಬೆಳಕಿಗೆ ಬಂದ ಇತ್ತೀಚಿನ ಘಟನೆಗಳು. ಹಾಗಂತ, ಬೆಳಕಿಗೆ ಬಾರದವುಗಳು ಇನ್ನೂ ಇರಬಹುದು. ಪ್ರಶ್ನೆಯಿರುವುದು ಎಷ್ಟು ಪ್ರಕರಣಗಳು ದಾಖಲಾದುವು ಎಂದಲ್ಲ. ಯಾಕೆ ಹೀಗಾಗುತ್ತಿದೆ ಮತ್ತು ಇದರಿಂದ ಮಾಧ್ಯಮ ವಿಶ್ವಾಸಾರ್ಹತೆಯ ಮೇಲೆ ಆಗುವ ಪರಿಣಾಮಗಳು ಏನೇನು  ಎಂಬುದರಲ್ಲಿ. ಸಾಮಾಜಿಕ ಜಾಲತಾಣಗಳು ಇವತ್ತು ಪರ್ಯಾಯ ಮಾಧ್ಯಮವಾಗಿ ಗಟ್ಟಿಯಾಗಿ ತಳವೂರುತ್ತಿವೆ. ಇವುಗಳ ಅನುಪಸ್ಥಿತಿಯ ಕಾಲದಲ್ಲಿ ಮಾಧ್ಯಮಗಳು ನಡೆದದ್ದೇ  ದಾರಿ, ಆಡಿದ್ದೇ  ಮಾತು ಎಂಬ ವಾತಾವರಣ ಇತ್ತು. ಇವತ್ತು ಹಾಗಿಲ್ಲ.  ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಪ್ರತಿ ಸಣ್ಣ ತಪ್ಪನ್ನೂ ದುರ್ಬೀನು ಹಿಡಿದು ನೋಡುವ ಮತ್ತು ಧೈರ್ಯದಿಂದ ಹೇಳುವ ಸನ್ನಿವೇಶ ನಿರ್ಮಾಣ ವಾಗಿದೆ. ನಿಜವಾಗಿ, ಮುದ್ರಣ ಮತ್ತು ದೃಶ್ಯ ಮಾಧ್ಯಮ ಕ್ಷೇತ್ರಕ್ಕೆ ಸವಾಲು ಎದುರಾದದ್ದೇ  ಸಾಮಾಜಿಕ  ಜಾಲತಾಣದಿಂದ. ಜನರು ಸುದ್ದಿಗಳಿಗಾಗಿ ನಿರ್ದಿಷ್ಟ ಪತ್ರಿಕೆ ಮತ್ತು ನಿರ್ದಿಷ್ಟ ಟಿ.ವಿ. ಚಾನೆಲ್ ಗಳನ್ನು ಅವಲಂಬಿಸಬೇಕಾದ ಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳು ಬದಲಿಸಿದವು. ಬೆರಳ ತುದಿಯಲ್ಲಿ ಕ್ಷಣಮಾತ್ರದಲ್ಲಿ ಹತ್ತಾರು ಸುದ್ದಿಗಳನ್ನು ಓದುವ  ಮತ್ತು ಹಂಚಿಕೊಳ್ಳುವ ಸುಲಭ ಅವಕಾಶವನ್ನು ಇಂಟರ್‍ನೆಟ್ ಮಾಧ್ಯಮ ಸೃಷ್ಟಿ ಮಾಡಿತು. ಬಹುಶಃ, ಆವರೆಗೆ ಸುದ್ದಿಗಳಿಗಾಗಿ ಮುದ್ರಣ ಮತ್ತು ದೃಶ್ಯ ಮಾಧ್ಯಮವನ್ನೇ ಅವ ಲಂಬಿಸಿಕೊಂಡಿದ್ದ ಜನರು ಹೀಗೆ ಇನ್ನಿತರ ಮೂಲಗಳ ಮೂಲಕ ಅವನ್ನು  ಪಡೆಯಲು ಪ್ರಾರಂಭಿಸಿದಾಗ ಈ ಮಾಧ್ಯಮಗಳಿಗೆ ಅಸ್ತಿತ್ವದ ಪ್ರಶ್ನೆ ಉದ್ಭವವಾಗುವುದು ಸಹಜ. ಸದ್ಯ ಅಂಥದ್ದೊಂದು  ಬಿಕ್ಕಟ್ಟು ಸೃಷ್ಟಿಯಾದಂತಿದೆ. ಪತ್ರಕರ್ತರು ಯಾವಾಗ ಬೇಕಾದರೂ ಕೆಲಸ ಕಳೆದುಕೊಳ್ಳಬಹುದಾದ ಇಕ್ಕಟ್ಟಿನ ಸ್ಥಿತಿಯಲ್ಲಿದ್ದಾರೆ. ವೇತನವೂ ಈ ಹಿಂದಿನಂತೆ ನಿರೀಕ್ಷಿಸಿದಷ್ಟು ಲಭ್ಯವಾಗುತ್ತಿಲ್ಲ. ಒಂದು ಪ್ರದೇಶದ ವರದಿಗಾಗಿ ಇವತ್ತು ಆ ಪ್ರದೇಶದ ವರದಿಗಾರನನ್ನೇ ಕಾಯುತ್ತಾ ಕೂರುವ ಸಂದರ್ಭ ಕಡಿಮೆಯಾಗಿದೆ. ವಾಟ್ಯಾಪ್‍ಗಳು ಕ್ಷಣಮಾತ್ರದಲ್ಲಿ ಸುದ್ದಿಗಳನ್ನು ರವಾನಿಸುತ್ತಿವೆ.  ಪತ್ರಕರ್ತನೋರ್ವನ ಕೆಲಸವನ್ನು ಇನ್ನಾವುದೋ ವ್ಯಕ್ತಿ ತನ್ನ ಮೊಬೈಲ್‍ನ ಮೂಲಕ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂಟರ್‍ನೆಟ್ ಮಾಧ್ಯಮವು ಸುದ್ದಿ ತಯಾರಿ ಕ್ಷೇತ್ರದಲ್ಲಿ ತೆರೆದಿರುವ ವಿಫುಲ ಅವಕಾಶಗಳು ಪತ್ರಕರ್ತರ ಅವಕಾಶವನ್ನು  ಕಬಳಿಸಿ ಬಿಟ್ಟಿದೆ. ಬಹುಶಃ, ಇಂಥ ವಾತಾವರಣವು ಪತ್ರಕರ್ತರನ್ನು ತಪ್ಪು ದಾರಿಯಲ್ಲಿ ಕೊಂಡೊಯ್ಯುವುದಕ್ಕೆ ಸಾಧ್ಯವೂ ಇದೆ.
ಅಂತೂ, ಕಳೆದ ಒಂದೂವರೆ-ಎರಡು ತಿಂಗಳು ಕನ್ನಡ ಪತ್ರಿಕೋದ್ಯಮದ ಮಟ್ಟಿಗೆ ಅತ್ಯಂತ ಸವಾಲಿನ ತಿಂಗಳುಗಳು. ಪತ್ರಿಕೋದ್ಯಮ ನಿಂತಿರುವುದು ವಿಶ್ವಾಸಾರ್ಹತೆಯ ಮೇಲೆ. ಆ ವಿಶ್ವಾಸಾರ್ಹತೆಗೆ ಭಂಗ ಬರುವುದೆಂದರೆ, ಈ ಕ್ಷೇತ್ರದ ಅವಸಾನಕ್ಕೆ  ಮೊಳೆ ಹೊಡೆದಂತೆ. ಪತ್ರಿಕೋದ್ಯಮದ ಮೇಲೆ ಜನರು ವಿಶ್ವಾಸ ಕಳಕೊಂಡ ದಿನ ಆ ಕ್ಷೇತ್ರ ಖಂಡಿತ ಸಾವಿನಂಚಿಗೆ ತಲುಪುತ್ತದೆ. ಪರ್ಯಾಯ ಮಾಧ್ಯಮವಾಗಿ ಇಂಟರ್‍ನೆಟ್ ಮಾಧ್ಯಮವು ಜನಪ್ರಿಯವಾಗುತ್ತಿರುವ ಇಂದಿನ ದಿನಗಳಲ್ಲಂತೂ ದೃಶ್ಯ  ಮತ್ತು ಮುದ್ರಣ ಮಾಧ್ಯಮವು ಒಂದು ಗೇಣು ಹೆಚ್ಚೇ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಓದುಗ ಮತ್ತು ವೀಕ್ಷಕ ವೃಂದವನ್ನು ಕ್ಲಾಸ್ ರಿಲೋಷಿಯಸ್‍ನಂತೆ ಕಡೆಗಣಿಸಿದರೆ ಅಂತಿಮವಾಗಿ ಇಡೀ ಪತ್ರಿಕೋದ್ಯಮವೇ ಅದಕ್ಕೆ ಬೆಲೆ ತೆರಬೇಕಾದೀತು.

ಗರೀಬಿ ಹಠಾವೋ, ಅಚ್ಛೇ ದಿನ್ ಮತ್ತು ಖಾಲಿತನ



1971
1977
1989
2014
ಭಾರತೀಯ ಪ್ರಜಾತಂತ್ರ ಈವರೆಗೆ ಸಾಗಿ ಬಂದ ಹಾದಿಯನ್ನು ಹೀಗೆ ನಾಲ್ಕು ಘಟ್ಟಗಳಾಗಿ ವಿಂಗಡಿಸಬಹುದು. 1970ರ ವರೆಗೆ ‘ಜನಪ್ರಿಯ ರಾಜಕಾರಣ’ ಎಂಬುದು ಇರಲಿಲ್ಲ. ಜನಪ್ರಿಯ ರಾಜ ಕಾರಣವೆಂದರೆ- ಒಂದೇ ವಿಷಯದ ಮೇಲೆ ಜನರ  ಗಮನವನ್ನು ಸೆಳೆಯುವುದು, ಆ ವಿಷಯವನ್ನು ಚರ್ಚೆಯಲ್ಲಿಡುವುದು ಮತ್ತು ಅದನ್ನು ಜನರ ಧ್ವನಿಯಾಗಿ ಪರಿವರ್ತಿಸುವುದು. ಉದಾಹರಣೆಗೆ, 2014ರ ಅಚ್ಛೇ ದಿನ್ ಘೋಷವಾಕ್ಯ.
ಗಾಂಧೀಜಿ ಮತ್ತು ನೆಹರೂ ಇಬ್ಬರೂ ಅತ್ಯಂತ ವರ್ಚಸ್ವೀ ವ್ಯಕ್ತಿಗಳಾಗಿದ್ದರೂ ‘ಜನಪ್ರಿಯ ಚಳವಳಿ’ ಮತ್ತು ‘ಜನಪ್ರಿಯ ರಾಜಕಾರಣ’ವನ್ನು ಆಶ್ರಯಿಸಿ ಬದುಕಲಿಲ್ಲ. ಅಸಹಕಾರ ಚಳವಳಿಯ ಭಾಗವಾಗಿ ಚೌರಿಚೌರಾದಲ್ಲಿ ಜನರು ಪೊಲೀಸ್ ಠಾಣೆಗೆ ಬೆಂಕಿ  ಕೊಟ್ಟು 22 ಪೊಲೀಸರನ್ನು ಸಾಯಿಸಿದಾಗ ಗಾಂಧೀಜಿ ಎಷ್ಟು ವ್ಯಗ್ರಗೊಂಡರೆಂದರೆ ತಾನೇ ಕರೆಕೊಟ್ಟ ಅಸಹಕಾರ ಚಳವಳಿಯನ್ನೇ ರದ್ದುಗೊಳಿಸಿದರು. ಈ ನಿರ್ಧಾರವು ನೆಹರೂ ಮತ್ತು ಭಗತ್ ಸಿಂಗ್‍ರಂಥ ಅಂದಿನ ಪ್ರಮುಖ ನಾಯಕರಲ್ಲೇ  ಅಸಮಾಧಾನವನ್ನು ತರಿಸಿತ್ತು. ನೆಹರೂ ಅಂತೂ ಈ ನಿರ್ಧಾರವನ್ನು ಹಿನ್ನಡೆ ಎಂದು ಕರೆದರು. ನಿಜವಾಗಿ, ಆ ಬೆಂಕಿ ಕೊಟ್ಟ ಘಟನೆ ಯನ್ನೇ ವೈಭವೀಕರಿಸಿ ಮತ್ತು ಆ ಸಂದರ್ಭದಲ್ಲಿ ಪೊಲೀಸರು ಹಾರಿಸಿದ ಗುಂಡಿಗೆ ಬಲಿಯಾದ ಮೂವರು  ಚಳವಳಿಗಾರರನ್ನು ಹುತಾತ್ಮರೆಂದು ಬಣ್ಣಿಸಿ ಗಾಂಧೀಜಿಯವರಿಗೆ ದೇಶದಾದ್ಯಂತ ಪ್ರತಿ ಚಳವಳಿಯನ್ನು ಹುಟ್ಟು ಹಾಕಬಹುದಿತ್ತು. ತನ್ನ ಅಸಹಕಾರ ಚಳವಳಿಯನ್ನು ಇನ್ನಷ್ಟು ತೀಕ್ಷ್ಣ  ಮತ್ತು ಕ್ರಿಯಾಶೀಲಗೊಳಿಸುವುದಕ್ಕೆ ಚೌರಿಚೌರಾ ಘಟನೆಯನ್ನು  ಬಳಸಿಕೊಳ್ಳಬಹುದಿತ್ತು. 2014ರಲ್ಲಿ ನರೇಂದ್ರ ಮೋದಿಯವರು ಅಚ್ಛೇ ದಿನ್ ಅನ್ನುವ ಘೋಷವಾಕ್ಯವನ್ನು ಹೇಗೆ ಜನರ ಘೋಷವಾಕ್ಯವಾಗಿಸಿದರೋ ಹಾಗೆಯೇ ಚೌರಿಚೌರಾವನ್ನು ಜನರ ಆಡು ಮಾತಾಗಿಸಿ ಇಡೀ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ  ರೂಪವನ್ನು ಕೊಡಬಹುದಿತ್ತು. ಆದರೆ ಗಾಂಧೀಜಿ ಈ ಜನಪ್ರಿಯ ನೀತಿಯನ್ನು ಕೈಬಿಟ್ಟು ತಾನು ನಂಬಿರುವ ಅಹಿಂಸಾ ಸಿದ್ಧಾಂತಕ್ಕೆ ಮಹತ್ವ ನೀಡಿದರು. ನೆಹರೂ ಕೂಡ ಇದೇ ದಾರಿಯನ್ನು ಆಯ್ಕೆ ಮಾಡಿಕೊಂಡರು. ಅವರು ಜನಪ್ರಿಯ  ರಾಜಕಾರಣವೆಂಬ ಥಿಯರಿಯನ್ನು ನೆಚ್ಚಿಕೊಳ್ಳಲಿಲ್ಲ. ‘ಮುಸ್ಲಿಮ್ ಪಾಕಿಸ್ತಾನ’ದಂತೆ ‘ಹಿಂದೂ ಭಾರತ’ದ ಬೇಡಿಕೆಯು ಆ ಕಾಲದಲ್ಲಿ ಬಲವಾಗಿ ಕೇಳಿ ಬಂದಾಗಲೂ ಅವರು ಸೆಕ್ಯುಲರ್ ಭಾರತಕ್ಕೆ ಒತ್ತು ಕೊಟ್ಟರು. ಒಂದುವೇಳೆ, ಭಾರತವನ್ನು ಹಿಂದೂ  ಭಾರತವನ್ನಾಗಿಸುವುದರ ಪರ ಅವರು ನಿಲ್ಲುತ್ತಿದ್ದರೆ ಅದು ಅವರಿಗೆ ಈ ಸೆಕ್ಯುಲರ್‍ಗಿಂತ ಹೆಚ್ಚಿನ ಜನಪ್ರಿಯತೆ ಒದಗಿಸಿಕೊಡುವ ಎಲ್ಲ ಸಾಧ್ಯತೆಗಳೂ ಇದ್ದುವು. ಅಲ್ಲದೇ ಮುಸ್ಲಿಮ್ ಪಾಕಿಸ್ತಾನಕ್ಕೆ ಹಿಂದೂ ಭಾರತ ಎಂಬ ನುಡಿಗಟ್ಟನ್ನು ರಚಿಸಿ ದೇಶದಾದ್ಯಂತ ಮಾರುವುದಕ್ಕೆ ಮತ್ತು ತನ್ನ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವು ದಕ್ಕೆ ಅದು ದಾರಿ ತೆರೆದು ಕೊಡಬಹುದಿತ್ತು. ಮಾತ್ರವಲ್ಲ, ಇಂಥದ್ದೊಂದು  ತೀರ್ಮಾನಕ್ಕೆ ಎದುರಾಗಬಹುದಾದ ವಿರೋಧವನ್ನು ಮುಸ್ಲಿಮ್ ಪಾಕಿಸ್ತಾನವನ್ನು ತೋರಿಸಿ  ತಿರಸ್ಕರಿಸುವುದೂ ಅವರಿಗೆ ಕಷ್ಟವಾಗುತ್ತಿರಲಿಲ್ಲ. ಆದರೆ ನೆಹರೂ ಸೆಕ್ಯುಲರ್ ಭಾರತ ಮತ್ತು ವಿಜ್ಞಾನ ಭಾರತವನ್ನು ಆಯ್ದುಕೊಂಡರು. ಅಂಧಶ್ರದ್ಧೆ, ಮೂಢ ನಂಬಿಕೆ, ಕಟ್ಟುಕತೆಗಳೇ ಪ್ರಾಬಲ್ಯ ಸ್ಥಾಪಿಸಿದ್ದ ಕಾಲದಲ್ಲಿ ಮತ್ತು ಅವಕ್ಕೆಲ್ಲ ಧರ್ಮದ ಕವಚವನ್ನು  ತೊಡಿಸಿ ಜನರನ್ನು ಶೋಷಿಸುತ್ತಿದ್ದ ದಿನಗಳಲ್ಲಿ ನೆಹರೂ ಅವರು ವೈಜ್ಞಾನಿಕ ಲಾಭಗಳನ್ನು ಜನರಿಗೆ ತಲುಪಿಸಬಯಸಿದರು. ಅಂಧಶ್ರದ್ಧೆಗೆ ಎದುರಾಗಿ ಆರೋಗ್ಯ ಕೇಂದ್ರಗಳನ್ನು ತೆರೆದರು. ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಸ್ಥಾಪನೆಗೆ ಮುನ್ನುಡಿ  ಇಟ್ಟರು. ಜನರನ್ನು ಆಲೋಚನೆಗೆ ಹಚ್ಚುವುದು ಮತ್ತು ಅದರ ಆಧಾರದಲ್ಲಿ ಮೌಢ್ಯಗಳಿಂದ ಹೊರತರುವುದು ಅವರ ಉದ್ದೇಶವಾಗಿತ್ತು. ಒಂದು ರೀತಿಯಲ್ಲಿ ಇದು ಕಠಿಣ ಕೆಲಸ. ಜನರ ಭಾವನೆಗೆ ವಿರುದ್ಧವಾಗಿ ನಿಲ್ಲುವ ಭಂಡ ಧೈರ್ಯ. ಆದರೆ ಇವರ  ಮಗಳು ಇಂದಿರಾ ಗಾಂಧಿ ಭಿನ್ನ ಹಾದಿಯನ್ನು ತುಳಿದರು.
1971ರಲ್ಲಿ ಗರೀಬಿ ಹಠಾವೋ ಅನ್ನುವ ಘೋಷವಾಕ್ಯವನ್ನು ಉರುಳಿಸಿ ಅದನ್ನು ಅವರು ಜನರ ಧ್ವನಿಯಾಗಿಸಿದರು. ತನ್ನ ವಿರೋಧಿಗಳನ್ನು ಕೇವಲ ಈ ಒಂದೇ ಘೋಷವಾಕ್ಯದಿಂದ ಮೆಟ್ಟಿನಿಂತರು. ಭಾರತದಲ್ಲಿ ಜನಪ್ರಿಯ ರಾಜಕಾರಣವು ಇಲ್ಲಿಂದ  ಪ್ರಾರಂಭವಾಯಿತು ಎಂದು ಹೇಳಬಹುದು. ಜನರು ಆವರೆಗೆ ಗ್ರಹಿಸದೇ ಇದ್ದ ಘೋಷವಾಕ್ಯವೊಂದನ್ನು ಸೃಷ್ಟಿಸುವಲ್ಲಿ ಮತ್ತು ಬಹುಸಂಖ್ಯಾತ ಜನರ ಧ್ವನಿಯಾಗಿ ಅದನ್ನು ಮಾರ್ಪಡಿಸುವಲ್ಲಿ ಇಂದಿರಾ ಯಶಸ್ವಿಯಾದರು. ಇದರ ಜೊತೆಗೇ ಇಂದಿರಾ  ಎಂದರೆ ಇಂಡಿಯಾ ಅನ್ನುವ ಘೋಷವಾಕ್ಯವೂ ಜನಪ್ರಿಯ ವಾಯಿತು. ಇದಾದ ಬಳಿಕ ಜಯಪ್ರಕಾಶ್ ನಾರಾಯಣ್ ಅವರು 1977ರಲ್ಲಿ ತುರ್ತು ಪರಿಸ್ಥಿತಿ ವಿರೋಧಿ ಐಕಾನ್ ಆಗಿ ಮೂಡಿಬಂದರು. ಗರೀಬಿ ಹಠಾವೋ ಎಂಬ ಘೋಷವಾಕ್ಯವನ್ನು  ಉರುಳಿಸಿದ ಇಂದಿರಾ ಗಾಂಧಿಗೆ ಕೇವಲ 6 ವರ್ಷಗಳಲ್ಲಿ ಎದುರಾದ ಪ್ರಬಲ ಪ್ರತಿರೋಧ ಅಂದರೆ, ಜಯಪ್ರಕಾಶ್ ನಾರಾಯಣ್. ಅವರು ಪ್ರಜಾತಂತ್ರ ಮತ್ತು ಸಂವಿಧಾನದ ನಿಜ ರಕ್ಷಕನಂತೆ ಗೋಚರಿಸಿದರು. ಇಂದಿರಾ ಇವೆರಡರ ವಿರೋಧಿಯಾಗಿ  ಬಿಂಬಿತವಾದರು. ಜಯಪ್ರಕಾಶ್‍ರ ಮೇಲೆ ಈ ದೇಶ ಭಾರೀ ಭರವಸೆಯನ್ನು ವ್ಯಕ್ತಪಡಿಸಿತು. ಅಂದಿನ ಬಹುಸಂಖ್ಯಾತ ಭಾರತೀಯರ ಧ್ವನಿಗೆ ಜಯಪ್ರಕಾಶ್ ವೇದಿಕೆಯಾದರು. ಅವರು ತಮ್ಮ ಧ್ವನಿಯನ್ನು ಜನರ ಧ್ವನಿಯಾಗಿ ಪರಿವರ್ತಿಸಿದರು.
1989ರಲ್ಲಿ ವಿ.ಪಿ. ಸಿಂಗ್ ಮೂಲಕ ಮೂರನೇ ಘಟ್ಟದ ‘ಜನಪ್ರಿಯ ರಾಜಕಾರಣ’ ಯಶಸ್ಸು ಪಡೆಯಿತು. ಅವರಂತೂ ಭ್ರಷ್ಟಾಚಾರ ವಿರೋಧಿ ಮಸೀಹನಂತೆ ಕಂಡುಬಂದರು. ಅಂದು ಅವರು ಭ್ರಷ್ಟಾಚಾರವನ್ನು ಜನರಿಗೆ ಅರ್ಥ ಮಾಡಿಸುವುದಕ್ಕಾಗಿ  ಬೆಂಕಿ ಪೆಟ್ಟಿಗೆ, ಬ್ಲೇಡು ಸಹಿತ ಜನರ ದಿನನಿತ್ಯದ ಬಳಕೆಯ ವಸ್ತುಗಳನ್ನು ರೂಪಕವಾಗಿ ಎತ್ತಿಕೊಂಡರು. ಬೆಂಕಿಪೆಟ್ಟಿಗೆಗೆ ವ್ಯಯಿಸುವ ಹಣದ ಒಂದು ಪಾಲನ್ನು ರಾಜೀವ್ ಗಾಂಧಿ ಕಬಳಿಸಿದ್ದಾರೆ ಎಂಬರ್ಥದಲ್ಲಿ ಮಾತಾಡಿದರು. ‘ಗಲೀ ಗಲೀ ಮೆ ಶೋರ್  ಹೈ, ರಾಜೀವ್ ಗಾಂಧಿ ಚೋರ್ ಹೈ’ ಎಂಬ ನುಡಿಗಟ್ಟನ್ನು ರಚಿಸಿಕೊಂಡು ಬೋಫೋರ್ಸ್ ಹಗರಣವನ್ನು ಜನರಿಗೆ ಪರಿಚಯಿಸಿದರು. ಜನರಿಗೆ ಆ ನುಡಿಗಟ್ಟು ಇಷ್ಟ ವಾಯಿತು. ಬರಬರುತ್ತಾ ಅದು ಬಹುಜನರ ಆಡುಮಾತಾಗಿ ಪರಿವರ್ತಿತವಾಯಿತು.  ಇದರ ಬಳಿಕ ಜನಪ್ರಿಯ ರಾಜಕಾರಣದಲ್ಲಿ ಬೆಳಗಿದವರು ನರೇಂದ್ರ ಮೋದಿ. 2014ರಲ್ಲಿ ಅವರ ಭಾಷಣ, ಆಂಗಿಕ ಅಭಿನಯಗಳು ಭಾರತೀಯರಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದುವು. ಅಚ್ಛೇದಿನ್ ಆಯೇಗಾ ಎಂಬ ಮಾತನ್ನು ಅವರು  ಉದುರಿಸಿದರು. ಹಿಂದೂ ಹೃದಯ ಸಾಮ್ರಾಟ್ ಎಂಬುದಾಗಿ ಅವರನ್ನು ಬಿಂಬಿಸಲಾಯಿತು. ಗುಜರಾತ್ ಮಾದರಿಯನ್ನು ಅವರ ಬೆನ್ನಿಗೆ ಅಂಟಿಸಲಾಯಿತು. ಅಭಿವೃದ್ಧಿಯ ಹರಿಕಾರನಾಗಿ, ಬಡವರಿಗೆ ಚಾಯ್‍ವಾಲಾ ಆಗಿ, ನಗರ ಮತ್ತು ಗ್ರಾಮೀಣ  ಪ್ರದೇಶದ ಜನರ ಭರವಸೆಯಾಗಿ ಅವರು ಮೂಡಿಬಂದರು. ಹಾಗಂತ, ಈ ಅಲೆಗೆ ಪ್ರತಿಯಾಗಿ ವಿರೋಧ ಪP್ಷÀವಾದ ಕಾಂಗ್ರೆಸ್‍ನಲ್ಲಿ ಯಾವ ಅಸ್ತ್ರವೂ ಇರಲಿಲ್ಲ. ಅಚ್ಛೇ ದಿನ್‍ಗೆ ಪರ್ಯಾಯವಾಗಿ ಒಂದು ಘೋಷವಾಕ್ಯವನ್ನು ರಚಿಸುವ ಉಮೇದೂ  ಕಾಂಗ್ರೆಸ್‍ನಲ್ಲಿ ಕಾಣಿಸಲಿಲ್ಲ. ನರೇಂದ್ರ ಮೋದಿಯವರ ಭಾಷಣ ಚಾತುರ್ಯಕ್ಕೆ ಎದುರಾಗಿ ಕಾಂಗ್ರೆಸ್ ಓರ್ವ ಭಾಷಣ ಚತುರನನ್ನೂ ಪರಿಚಯಿಸಲಿಲ್ಲ. ಇಂತಹ ಸ್ಥಿತಿಯಲ್ಲಿ ಸಹಜವಾದುದೇ ಘಟಿಸಿತು. ನರೇಂದ್ರ ಮೋದಿಯವರ ಅಚ್ಛೇದಿನ್ ಆಯೇಗಾ  ಘೋಷವಾಕ್ಯ ಜನರ ಘೋಷವಾಕ್ಯವಾಗಿ ಬದಲಾಯಿತು.
ಸದ್ಯದ ಸ್ಥಿತಿ ಏನೆಂದರೆ, ಬಿಜೆಪಿಯ ಬತ್ತಳಿಕೆಯಲ್ಲಿರುವ ಘೋಷವಾಕ್ಯಗಳೆಲ್ಲವೂ ಖಾಲಿಯಾಗಿವೆ. ಈ ಬಾರಿ ಎಲ್ಲೂ ಅಚ್ಛೇದಿನ್‍ನ ಪ್ರಸ್ತಾಪವಿಲ್ಲ. ಗುಜರಾತ್ ಮಾದರಿಯ ಉಲ್ಲೇಖ ಇಲ್ಲ. ಕಪ್ಪು ಹಣ ಸದ್ದು ಮಾಡುತ್ತಿಲ್ಲ. ರಾಮಮಂದಿರ ಇಲ್ಲ.  ಅಂದಹಾಗೆ, 2014ರಲ್ಲಿದ್ದ ಮತ್ತು 2019ರಲ್ಲೂ ಚಾಲ್ತಿಯಲ್ಲಿ  ರುವ ಏಕೈಕ ವಿಷಯವೆಂದರೆ, ಪಾಕಿಸ್ತಾನ ಮಾತ್ರ. ನಿಜವಾಗಿ, 2014ರಲ್ಲಿ ನರೇಂದ್ರ ಮೋದಿಯವರು ಒಂದು ಕನಸಷ್ಟೇ ಆಗಿದ್ದರು. ಅವರನ್ನು ಗುಜರಾತ್ ಬಿಟ್ಟರೆ ಉಳಿದಂತೆ ಭಾರತವು  ಆಡಳಿತಗಾರನಾಗಿ ನೋಡಿರಲಿಲ್ಲ. ಮಾತ್ರವಲ್ಲ, ಅವರಾಡುವ ಮಾತುಗಳು, ಬಳಸುವ ಉಪಮೆಗಳು, ಪಟ್ಟುಗಳು ಇತ್ಯಾದಿ ಎಲ್ಲವೂ ಮನ್‍ಮೋಹನ್ ಸಿಂಗ್‍ಗೆ ಹೋಲಿಸಿದರೆ ಆಕರ್ಷಕ ವಾಗಿದ್ದುವು. ಜೊತೆಗೇ ಗುಜರಾತ್ ಮಾದರಿಯ ಬಗ್ಗೆ ಚಿತ್ರ-ವಿಚಿತ್ರ  ವಾದಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದುವು. ಜನರು ಮೋದಿಯವರಲ್ಲಿ ವಿಶ್ವಾಸವನ್ನು ಹೊಂದುವುದಕ್ಕೆ ಅವು ಧಾರಾಳ ಸಾಕಾಗಿತ್ತು. ಆದರೆ, 2019 ಹಾಗಿಲ್ಲ. ಇವತ್ತು ನರೇಂದ್ರ ಮೋದಿ ಪರಿಚಿತ ವ್ಯಕ್ತಿ. ಅವರ ಮಾತನ್ನು ಮಾತ್ರವಲ್ಲ, 5 ವರ್ಷಗಳ  ಆಡಳಿತವನ್ನೂ ಜನರು ಅನುಭವಿಸಿದ್ದಾರೆ. ಅವರ ಮಾತಿಗೂ ಆಡಳಿತಕ್ಕೂ ನಡುವೆ ಇರುವ ಸರಿ-ತಪ್ಪುಗಳನ್ನು ಜನರು ಇವತ್ತು ಲೆಕ್ಕ ಹಾಕಬಲ್ಲರು. ನಿರುದ್ಯೋಗ ಸಮಸ್ಯೆಯು ಕಳೆದ 40 ವರ್ಷಗಳಲ್ಲೇ  ಅತ್ಯಧಿಕ ಮಟ್ಟದಲ್ಲಿದೆ ಎಂಬುದು ಬರೇ ಮಾಧ್ಯಮ  ವರದಿಯಷ್ಟೇ ಅಲ್ಲ, ಪ್ರತಿ ಮನೆಗಳ ವಾಸ್ತವವೂ ಹೌದು. ಬೆಲೆ ಏರಿಕೆಯಲ್ಲಿ ಇಳಿತವಾಗಿಲ್ಲ. ಆಧಾರ್ ವ್ಯವಸ್ಥೆಯನ್ನು ಸರಳೀಕರಿಸಲಾಗಿಲ್ಲ. ಗ್ಯಾಸ್ ಸಬ್ಸಿಡಿಗಾಗಿ ಆಧಾರ್ ಕಾರ್ಡನ್ನು ಬ್ಯಾಂಕ್ ಖಾತೆಗೆ ಜೋಡಿಸುವ ನಿಯಮವನ್ನು ರದ್ದುಪಡಿಸಲಾಗಿಲ್ಲ.  ತೈಲ ಬೆಲೆಯು 2014ಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ರೈತ ಆತ್ಮಹತ್ಯೆ, ಹಿಂಸಾಚಾರ, ಭಯೋತ್ಪಾದನೆ, ಭ್ರಷ್ಟಾಚಾರ ಇತ್ಯಾದಿ ವಿಷಯ ಗಳಲ್ಲಿ 2014ಕ್ಕೂ 2019ಕ್ಕೂ ಭಾರೀ ಅನ್ನಬಹುದಾದ ವ್ಯತ್ಯಾಸಗಳಿಲ್ಲ. ಒಂದುಕಡೆ ರಫೇಲ್ ಸದ್ದು ಮಾಡಿದರೆ, ಇ ನ್ನೊಂದು ಕಡೆ ಭಯೋತ್ಪಾದಕರು ಉರಿ, ಪಠಾಣ್‍ಕೋಟ್ ಮತ್ತು ಪುಲ್ವಾಮದಲ್ಲಿ ದಾಳಿ ನಡೆಸಿದರು. ಭಾರೀ ಭದ್ರತಾ ತಪಾಸಣೆಯಿರುವ ಪುಲ್ವಾಮ ಒಂದರಲ್ಲೇ  ಭಯೋತ್ಪಾದಕರು 40ರಷ್ಟು ಯೋಧರನ್ನು ಸಾಯಿಸಿದರು. ನಕ್ಸಲ್ ಹಿಂಸಾಚಾರವಂತೂ  ನೋಟ್‍ಬ್ಯಾನ್‍ನ ಬಳಿಕವೂ ಮುಂದುವರಿಯಿತು. ಕಾಶ್ಮೀರವು 1990ರ ಬಳಿಕ ಇದೇ ಮೊದಲ ಬಾರಿ ಹಿಂಸಾಚಾರದ ಚರಮ ಸೀಮಿಗೆ ತಲುಪಿತು. ತಿಂಗಳುಗಳ ಕಾಲ ಕಾಶ್ಮೀರಿ ನಾಗರಿಕರು ‘ಕಲ್ಲೆಸೆತ ಪ್ರತಿಭಟನೆ’ ನಡೆಸಿದರು. ಯೋಜನಾ ಆಯೋಗವ ನ್ನು ರದ್ದುಗೊಳಿಸಿ ಅದರ ಸ್ಥಾನದಲ್ಲಿ ಆಸ್ಥಾನ ವಿದೂಷಕನಂತಿರುವ ನೀತಿ ಆಯೋಗವನ್ನು ಜಾರಿಗೆ ತರಲಾಯಿತು. ಜಿಎಸ್‍ಟಿ ಮತ್ತು ನೋಟ್‍ಬ್ಯಾನ್‍ಗಳು ಸಣ್ಣ ಮತ್ತು ಮಧ್ಯಮ ಉದ್ಯಮವನ್ನೇ ನಾಶ ಮಾಡಿದುವು. ಆಡಳಿತ ವಿಭಾಗದಲ್ಲಿ ಒಂದೇ  ವಿಚಾರಧಾರೆಯ ವ್ಯಕ್ತಿಗಳನ್ನು ಕೂರಿಸುವ ಮತ್ತು ಆರಿಸುವ ಶ್ರಮಗಳು ನಡೆದುವು. ಆಡಳಿತ ವಿರೋಧಿ ಧ್ವನಿಗಳನ್ನು ದೇಶವಿರೋಧಿ ಧ್ವನಿಗಳೆಂದು ಬಿಂಬಿಸಲಾಯಿತು. ಧಾರ್ಮಿಕ ಅಸಹಿಷ್ಣುತೆ ತೀವ್ರವಾಯಿತು. ಗೋವಿನ ಹೆಸರಲ್ಲಿ ಒಂದು ನಿರ್ದಿಷ್ಟ  ಧರ್ಮದವರನ್ನು ಗುರಿಯಾಗಿಸಿ ಥಳಿತ ಮತ್ತು ಹತ್ಯೆಗಳು ನಡೆದುವು. ಹಿಂದಿ ಮತ್ತು ಸಂಸ್ಕøತವನ್ನು ಬಲವಂತದಿಂದ ಹೇರುವುದಕ್ಕೆ ಪ್ರಯತ್ನಿಸಲಾಯಿತು. ಮೋದಿ ಸಂಪುಟದ ಹಲವು ಸಚಿವರು ಅತ್ಯಂತ ಅಗೌರವಾರ್ಹ ಮಾತುಗಳಿಗಾಗಿ ಗುರುತಿಸಿ  ಕೊಂಡರು. ಸಂವಿಧಾನವನ್ನೇ ಬದಲಾಯಿಸುವೆವು ಅನ್ನುವ ಮಟ್ಟಕ್ಕೆ ಅವರ ಮಾತುಗಳು ಹಳಿತಪ್ಪಿ ಹೋದುವು.
ಒಂದುರೀತಿಯಲ್ಲಿ, 2014ರ ಬಿಜೆಪಿ ಕಳೆದುಹೋಗಿದೆ. ಈಗಿರುವುದು ವಚನಭ್ರಷ್ಟ ಬಿಜೆಪಿ. ಈ ಬಿಜೆಪಿಗೆ 2014ರ ತನ್ನದೇ ಆಶ್ವಾಸನೆಗಳಲ್ಲಿ ಒಂದೂ ನೆನಪಿಲ್ಲ. ಒಂದುವೇಳೆ, ಮತದಾರರಿಗೂ ಇದೇ ರೀತಿಯ ಮರೆವು ಬಾಧಿಸಿದರೆ ಮಾತ್ರ ಈ ಬಾರಿ  ಬಿಜೆಪಿ ಮರಳಿ ಗೆಲ್ಲಬಹುದು. ಈ ವಾರದ ಸನ್ಮಾರ್ಗದಲ್ಲಿ 

Wednesday, April 24, 2019

ಚೌರಿಚೌರಾದ ಗಾಂಧಿ ಮತ್ತು ಗುಜರಾತ್‍ನ ಮೋದಿ



ಪ್ರಧಾನಿ ಮೋದಿಯವರು ತನ್ನ ಸಾಧನೆಗಳ ಬದಲು ಹಿಂದೂಸ್ತಾನ್-ಪಾಕಿಸ್ತಾನ್‍ಗಳನ್ನು ಹೇಳಿಕೊಂಡು ಯಾಕೆ ಮತ ಯಾಚಿಸುತ್ತಾರೆ ಅನ್ನುವ ಪ್ರಶ್ನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರಲ್ಲಿ ಉತ್ತರ ಇದೆ.

   ಎಪ್ರಿಲ್ 9ರಂದು ಇಸ್ರೇಲ್‍ನ ಪಾರ್ಲಿಮೆಂಟ್‍ಗೆ ನಡೆದ ಚುನಾವಣೆಯಲ್ಲಿ ನೇತನ್ಯಾಹು ಅವರ ಲಿಕುಡ್ ಪಕ್ಷ ಸತತ ನಾಲ್ಕನೇ ಬಾರಿ ಜಯ ಗಳಿಸಿತು. ಈ ಬಾರಿ ಸೋಲು ಖಚಿತ ಎಂಬಂತಿದ್ದ ನೇತನ್ಯಾಹುರಿಗೆ ಜನರು ಮತ್ತೆ ಮತ ಚಲಾಯಿಸಿದರು.  ನರೇಂದ್ರ ಮೋದಿಯವರನ್ನು ರಫೇಲ್ ಹಗರಣ ಹೇಗೆ ಸುತ್ತಿ ಕೊಂಡಿದೆಯೋ ಅದಕ್ಕಿಂತಲೂ ಬಿಗಿಯಾಗಿ ನೇತನ್ಯಾಹುರನ್ನು ಭ್ರಷ್ಟಾಚಾರದ ಬಳ್ಳಿ ಸುತ್ತಿಕೊಂಡಿದೆ. ಖುದ್ದು ಅವರ ಅಟಾರ್ನಿ ಜನರಲ್ ಅವರೇ ಲಂಚ ಮತ್ತು ವಂಚನೆಯ ಆರೋಪ  ಹೊರಿಸಿದ್ದಾರೆ. ಇನ್ನಿತರ ಪ್ರಕರಣಗಳೂ ಅವರ ಮೇಲಿವೆ. ಮೋದಿಯವರ ಪಕ್ಕ ಪಾಕಿಸ್ತಾನ ಇದ್ದರೆ ನೇತನ್ಯಾಹುರ ಪಕ್ಕ ಫೆಲೆಸ್ತೀನ್ ಇದೆ. ಚುನಾವಣೆಯ ಸಮಯದಲ್ಲಿ ನೇತನ್ಯಾಹು ಮಾತಾಡಿದ್ದು  ಫೆಲೆಸ್ತೀನ್‍ನ ಬಗ್ಗೆ. 2018 ಜುಲೈಯಲ್ಲಿ ಅತ್ಯಂತ  ವಿವಾದಾತ್ಮಕ ಕಾನೂನೊಂದನ್ನು ನೇತನ್ಯಾಹು ಪಾಸು ಮಾಡಿ ಕೊಂಡರು. ಅದರ ಪ್ರಕಾರ, ‘ಇಸ್ರೇಲ್ ಯಹೂದಿಯರ ರಾಷ್ಟ್ರ. ಜೆರೂಸಲೇಮ್ ಅದರ ರಾಜಧಾನಿ. ಹಿಬ್ರೂ ಅದರ ರಾಷ್ಟ್ರ ಭಾಷೆ. ಇಸ್ರೇಲನ್ನು ಆಳುವ ಹಕ್ಕು ಯಹೂದಿಯರಿಗೆ ಮಾತ್ರ  ಇದೆ..’ ಹೀಗೆ ಸಾಗುತ್ತದೆ ಆ ಕಾಯ್ದೆ. ಒಂದು ರೀತಿಯಲ್ಲಿ, ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಿರುವ ಪೌರತ್ವ ಕಾಯ್ದೆಯ ಹಾಗೆ ಇದು. ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಎನ್.ಆರ್.ಸಿ. ಯನ್ನು ಜಾರಿಗೆ ತರುವುದಾಗಿ ಬಿಜೆಪಿ  ಹೇಳಿಕೊಂಡಿದೆ. ನೇತನ್ಯಾಹು ಅವರು ಚುನಾವಣಾ ಪ್ರಚಾರದ ಉದ್ದಕ್ಕೂ ತೀವ್ರ ರಾಷ್ಟ್ರವಾದವನ್ನು ಪ್ರತಿಪಾದಿಸಿದರು. ತಾನು ಎಂದೂ ಫೆಲೆಸ್ತೀನ್ ರಾಷ್ಟ್ರವನ್ನು ಅನುಮತಿಸುವುದಿಲ್ಲ ಎಂದು ಘೋಷಿಸಿದರು. ಇವರಿಗೆ ಬೆಂಬಲವಾಗಿ ನಿಂತದ್ದೂ ಯಾರು  ಗೊತ್ತೇ? ಅಮೇರಿಕದ ಟ್ರಂಪ್, ರಷ್ಯಾದ ವ್ಲಾದಿಮಿರ್ ಪುಟಿನ್ ಮತ್ತು ಬ್ರೆಝಿಲ್‍ನ ಅಧ್ಯಕ್ಷ ಜೈರೋ ಬೋಲ್ಸನಾರೋ. ಇವರಲ್ಲಿ ಬೋಲ್ಸನಾರೋ ಅಂತು ತಾನು ಸೆಕ್ಯುಲರಿಸಂ ವಿರೋಧಿ ಎಂದು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾರೆ. ಎಡವಿರೋಧಿ  ಮತ್ತು ವಲಸೆ ವಿರೋಧಿಯಾಗಿ ಗುರುತಿಸಿಕೊಂಡಿರುವ ಅವರನ್ನು ಬ್ರೆಝಿಲ್‍ನ ಪ್ರಮುಖ ಪತ್ರಕರ್ತ ಗ್ಲೇನ್ ಗ್ರೀಸ್‍ವಲ್ಡ್, ಸಂಶೋಧಕರಾದ ಫೆಡ್ರಿಕೋ ಫಿನ್‍ಚೆಲ್‍ಸ್ಟೈನ್ ಮತ್ತು ಆಗಸ್ಟೋ ಪಿನೋಚೆಟ್ ಮುಂತಾದವರು ಫ್ಯಾಸಿಸ್ಟ್ ಎಂದು ಕರೆದಿದ್ದಾರೆ.  1964ರಿಂದ 1985ರ ವರೆಗೆ ಬ್ರೆಝಿಲ್‍ನಲ್ಲಿ ಮಿಲಿಟರಿ ಆಡಳಿತವಿತ್ತು. ಜೈರೋ ಬೊಲ್ಸನಾರೋ ಆ ಸರ್ವಾಧಿ ಕಾರವನ್ನು ಸಮರ್ಥಿಸುತ್ತಾರೆ. ಬ್ರಿಟನ್ನಿನ The Economic ಪತ್ರಿಕೆಯು ರಾಡಿಕಲ್-ರಿಲೀಜಿಯಸ್-ನ್ಯಾಶನಲಿಸ್ಟ್ ಎಂದು ಜೈರೋರನ್ನು  ಉಲ್ಲೇಖಿಸಿದೆ. ಸದ್ಯ ಇದೊಂದು ಬಗೆಯ ಟ್ರೆಂಡ್. ಹಂಗರಿಯ ಪ್ರಧಾನಿ ವಿಕ್ಟರ್ ಓರ್ಬಾನ್ ಕೂಡ ಇವರಲ್ಲಿ ಒಬ್ಬರು. ಪ್ರಧಾನಿ ಮೋದಿಯಾಗಲಿ, ಟ್ರಂಪ್ ಆಗಲಿ, ನೇತನ್ಯಾಹು ಅವರಾಗಲಿ ಯಾರೂ ತಮ್ಮ ಸಾಧನೆಗಳನ್ನು ಹೇಳಿಕೊಳ್ಳುವುದಿಲ್ಲ.  ರಾಷ್ಟ್ರೀಯವಾದಿ ರಾಜಕಾರಣದಲ್ಲಿ ಸಾಧನೆಗಳು ಮುಖ್ಯವೇ ಅಲ್ಲ. ರಾಷ್ಟ್ರವೇ ಮುಖ್ಯ. ತನ್ನ ಎಲ್ಲ ಕ್ರೌರ್ಯ, ಭ್ರಷ್ಟಾಚಾರ, ತಪ್ಪು ಗಳನ್ನು ರಾಷ್ಟ್ರದ ಹೆಸರಲ್ಲಿ ಮರೆಸಿ ಬಿಡುವುದು ಅದರ ಶೈಲಿ. ಟ್ರಂಪ್ ಅವರು ಪದೇ ಪದೇ ಮೆಕ್ಸಿಕೋದಿಂದ ಅಮೇರಿಕಕ್ಕೆ  ಬರುವ ವಲಸಿಗರನ್ನು ತೋರಿಸುತ್ತಾರೆ. ಆಗಾಗ ಉತ್ತರ ಕೊರಿಯ, ಇರಾನ್, ಚೀನಾಗಳನ್ನು ಕಟುವಾಗಿ ಟೀಕಿಸುತ್ತಾರೆ. ನರೇಂದ್ರ ಮೋದಿಯವರು ಇದಕ್ಕಿಂತ ಭಿನ್ನವಲ್ಲ. ಅವರು ಪಾಕಿಸ್ತಾನವನ್ನು ತೋರಿಸುತ್ತಾರೆ. ನೇತನ್ಯಾಹು ಫೆಲೆಸ್ತೀನನ್ನು  ತೋರಿಸುತ್ತಾರೆ. ತಮಾಷೆ ಏನೆಂದರೆ,

   ಈ ಮೂವರು ತೋರಿಸುವ ರಾಷ್ಟ್ರಗಳೂ ದುರ್ಬಲವಾದವು. ಇಸ್ರೇಲ್ ಎದುರು ಫೆಲೆಸ್ತೀನ್ ಏನೂ ಅಲ್ಲ. ಭಾರತದೆದುರು ಪಾಕಿಸ್ತಾನವೂ ಅಷ್ಟೇ. ಅಮೇರಿಕಕ್ಕಂತೂ ಮೆಕ್ಸಿಕೋ ಆಗಲಿ ಉತ್ತರ ಕೊರಿಯಾ, ಇರಾನ್  ಆಗಲಿ ಯಾವುದೂ ಪ್ರತಿ ಸ್ಪರ್ಧಿಗಳೇ ಅಲ್ಲ. ಆದರೆ ರಾಷ್ಟ್ರದ ಭದ್ರತೆಗೆ ಈ ಅಕ್ಕ-ಪಕ್ಕದ ರಾಷ್ಟ್ರಗಳು ಅಪಾಯಕಾರಿ ಎಂದು ನಂಬಿಸುವುದು ಮತ್ತು ಜನರ ಗಮನವನ್ನು ಅದರ ಸುತ್ತಲೇ ಗಿರಕಿ ಹೊಡೆಸುವುದು ರಾಷ್ಟೀಯವಾದಿ ರಾಜಕಾರಣದ  ಹೆಚ್ಚುಗಾರಿಕೆ. ನಿಜವಾಗಿ, ಪುಲ್ವಾಮ ಘಟನೆ- ಸರಕಾರದ ಬಹುದೊಡ್ಡ ವೈಫಲ್ಯ. ಉರಿ ಭಯೋತ್ಪಾದನಾ ದಾಳಿಯೂ ಇಂಥದ್ದೊಂದು ವೈಫಲ್ಯದ ಭಾಗ. ಅಚ್ಚರಿ ಏನೆಂದರೆ, ಮುಂಬೈಯ ಮೇಲೆ ನಡೆದ ಭಯೋತ್ಪಾದನಾ ದಾಳಿಗೆ ಮನ್‍ಮೋಹನ್  ಸಿಂಗ್ ಸರಕಾರವನ್ನು ನೇರವಾಗಿ ಹೊಣೆ ಮಾಡಿದ್ದ ಮತ್ತು ಗುಪ್ತಚರ ವೈಫಲ್ಯಕ್ಕಾಗಿ ಟೀಕಿಸಿದ್ದ ಇದೇ ಬಿಜೆಪಿ ಇವತ್ತು ಪುಲ್ವಾಮದ ಹೆಸರಲ್ಲಿಯೇ ಮತ ಯಾಚಿಸುತ್ತಿದೆ. ಹಾಗಂತ, ಮುಂಬೈ ದಾಳಿಗೆ ಮನ್‍ಮೋಹನ್ ಸಿಂಗ್ ಹೊಣೆ ಎಂದಾದರೆ  ಪುಲ್ವಾಮದಲ್ಲಿ ಯೋಧರ ಮೇಲಾದ ದಾಳಿಗೆ ಮೋದಿ ಹೊಣೆಯಲ್ಲವೇ ಎಂದು ಪ್ರಶ್ನಿಸಬಹುದು. ಉರಿಯಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಯಾಕೆ ಮೋದಿಯವರ ವೈಫಲ್ಯ ಎಂದು ಹೇಳಬಾರದು ಎಂದೂ ಪ್ರಶ್ನಿಸ ಬಹುದು. ಮುಂಬೈ  ದಾಳಿಗೆ ಗುಪ್ತಚರ ವಿಭಾಗವನ್ನು ಹೊಣೆ ಮಾಡುವುದಾದರೆ ಪುಲ್ವಾಮ ಮತ್ತು ಉರಿ ದಾಳಿಗೂ ಗುಪ್ತಚರ ವಿಭಾಗವನ್ನು ಹೊಣೆ ಮಾಡಬಹುದು ಎಂದೂ ವಾದಿಸಬಹುದು. ಆದರೆ ಈ ವಾದವನ್ನು ಮೀರಿ ಬೆಳೆಯುವುದು ಮತ್ತು ಆ ಬಗೆಯ ವಾದವನ್ನೇ ದೇಶದ್ರೋಹಿಯಾಗಿ ಬಿಂಬಿಸುವುದು ರಾಷ್ಟ್ರವಾದಿ ರಾಜಕಾರಣದ ವೈಶಿಷ್ಟ್ಯ. ಹಿಟ್ಲರ್ ಇದೇ ತಂತ್ರವನ್ನು ಪ್ರಯೋಗಿಸಿದ್ದ. ಸುಳ್ಳು ಮತ್ತು ಭ್ರಮೆ ಇವೆರಡೂ ಈ ರಾಜ ಕಾರಣದ ಪ್ರಬಲ ಆಯುಧಗಳು. ಇನ್ನೊಂದು- ಬೆದರಿಕೆ.
 1922 ಫೆಬ್ರವರಿ 5ರಂದು ಈಗಿನ ಉತ್ತರ ಪ್ರದೇಶದ ಘೋರಕ್‍ಪುರದಲ್ಲಿ ಜನರು ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡಿದ್ದರು. ಗಾಂಧೀಜಿಯವರು ಕರೆಕೊಟ್ಟ ಅಸಹಕಾರ ಚಳುವಳಿಯ ಭಾಗವಾಗಿ ಅವರೆಲ್ಲ ಅಲ್ಲಿ ಸೇರಿದ್ದರು. ಜನರ ಸಂಖ್ಯೆ  ಹೆಚ್ಚಾದಂತೆಯೇ ಆಯೋಜಕರ ನಿಯಂತ್ರಣವೇ ತಪ್ಪಿ ಹೋಯಿತು. ಪೊಲೀಸರು ಮತ್ತು ಜನರ ನಡುವೆ ಘರ್ಷಣೆ ಉಂಟಾಯಿತು. ಪೊಲೀಸರು ಬಂದೂಕು ಸಿಡಿಸಿದರು. ಸಿಟ್ಟಿಗೆದ್ದ ಜನರು ಪೊಲೀಸ್ ಠಾಣೆಗೇ ಬೆಂಕಿಕೊಟ್ಟರು. ಇದರಿಂದಾಗಿ 22  ಪೊಲೀಸರು ಮತ್ತು ಮೂವರು ನಾಗರಿಕರು ಸಾವಿಗೀಡಾದರು. ಓರ್ವ ನಾಯಕನ ಮಟ್ಟಿಗೆ ಆತನಲ್ಲಿರುವ ಮುತ್ಸದ್ದಿತನ ಮತ್ತು ಅವಕಾಶವಾದಿತನ ಎರಡಕ್ಕೂ ಸಮಾನ ಅವಕಾಶ ಇರುವ ಸಂದರ್ಭ ಅದು. ಗಾಂಧೀಜಿಯವರ ಮುಂದೆ ಎರಡು  ಆಯ್ಕೆಗಳಿದ್ದುವು. 1. ಬೆಂಕಿಯನ್ನು ಸಮರ್ಥಿಸು ವುದು. ಬ್ರಿಟಿಷ್ ಸರಕಾರದ ದೌರ್ಜನ್ಯಗಳೇ ಜನರು ಕೆರಳಲು ಕಾರಣ ಎಂದು ಹೇಳುವುದು. ಪೊಲೀಸು ಠಾಣೆಗೆ ಬೆಂಕಿ ಕೊಟ್ಟ ತನ್ನ ಅನುಯಾಯಿಗಳನ್ನು ದೇಶಪ್ರೇಮಿಗಳು ಎಂದು ಕೊಂಡಾಡು ವುದು.  2. ಆ ಕೃತ್ಯವನ್ನು ಮಾನವತೆಯ ವಿರುದ್ಧವಾಗಿ ಕಾಣುವುದು. ಹಿಂಸೆ ಮತ್ತು ಅಹಿಂಸೆಗಳ ನಡುವಿನ ಮುಖಾಮುಖಿಯಲ್ಲಿ ತಾನು ಎಂದೂ ಅಹಿಂಸೆಯ ಜೊತೆಯೇ ಇರುತ್ತೇನೆ ಎಂದು ಸಾರುವುದು. ತಪ್ಪುಗಾರರು ತನ್ನ ಅನುಯಾಯಿಗಳೆಂಬ  ಕಾರಣಕ್ಕೆ ಅವರನ್ನು ಸಮರ್ಥಿಸಲಾರೆ ಎಂದು ಹೇಳಿಬಿಡುವುದು. ಗಾಂಧೀಜಿ ಯವರಿಗೆ ಆ ಘಟನೆಯನ್ನು ಸಮರ್ಥಿಸಿಕೊಳ್ಳುವುದರಿಂದ ಲಾಭ ಇತ್ತು. ಅಲ್ಲಿ ಸೇರಿದ್ದ ಅನುಯಾಯಿಗಳೆಲ್ಲ ಅವರನ್ನು ಇನ್ನಷ್ಟು ಪ್ರೀತಿಸುತ್ತಿದ್ದರು. ಕೆಚ್ಚೆದೆಯ ನಾಯಕನಾಗಿ  ಗುರುತಿಸಿಕೊಳ್ಳುವುದಕ್ಕೆ ಅದು ಅವಕಾಶ ಮಾಡಿಕೊಡುತ್ತಿತ್ತು. ಆದರೆ ಗಾಂಧೀಜಿ ಈ ಜನಪ್ರಿಯ ದಾರಿಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ. ತಾನೇ ಕರೆ ಕೊಟ್ಟ ಚಳವಳಿಯಾದರೂ ಮತ್ತು ತನ್ನ ಆ ಕರೆಯನ್ನು ಆಲಿಸಿಯೇ ಅಲ್ಲಿ ಜನರು  ಸೇರಿಕೊಂಡಿದ್ದರೂ ಹಿಂಸೆಗೆ ತನ್ನ ಬೆಂಬಲವಿಲ್ಲ ಎಂದರು. ಈ ವಿಷಯದಲ್ಲಿ ಅವರು ಎಷ್ಟು ನಿಷ್ಠುರರಾಗಿದ್ದರೆಂದರೆ 1922 ಫೆ. 12ರಂದು ಅಸಹಕಾರ ಚಳ ವಳಿಯನ್ನೇ ಹಿಂತೆಗೆದುಕೊಂಡರು. 5 ದಿನ ಉಪವಾಸ ಸತ್ಯಾಗ್ರಹ ನಡೆಸಿದರು. ತನ್ನ ಅ ನುಯಾಯಿಗಳನ್ನು ಅಹಿಂಸೆಯ ವಿಷಯದಲ್ಲಿ ಇನ್ನಷ್ಟು ತರಬೇತುಗೊಳಿಸಬೇಕಾಗಿದೆ ಎಂದು ಸಾರಿದರು. ತಾನು ನಂಬಿದ ಅಹಿಂಸೆಯ ಸಿದ್ಧಾಂತಕ್ಕೆ ಗಾಂಧೀಜಿ ತೋರಿದ ಬದ್ಧತೆ ಇದು. ನೇತನ್ಯಾಹು, ನರೇಂದ್ರ ಮೋದಿ, ಟ್ರಂಪ್‍ಗಳೆಲ್ಲ ಬೆತ್ತಲಾಗು ವುದು  ಇಲ್ಲೇ. ಗುಜರಾತ್ ಹತ್ಯಾಕಾಂಡದ ವೇಳೆ ನರೇಂದ್ರ ಮೋದಿಯವರು ತನ್ನವರ ತಪ್ಪುಗಳನ್ನೆಲ್ಲ ಪರೋಕ್ಷವಾಗಿ ಸಮರ್ಥಿಸಿಕೊಂಡರು. ಹತ್ಯಾಕಾಂಡಕ್ಕೆ ಸಹಕರಿಸಿದ ಆರೋಪದಲ್ಲಿ ಬಂಧಿತರಾದ ಪೊಲೀಸ್ ಅಧಿಕಾರಿಗಳ ರಕ್ಷಣೆಗೆ ನಿಂತರು. ಗುಜರಾತ್  ಹತ್ಯಾ ಕಾಂಡಕ್ಕೆ ಸಂಬಂಧಿಸಿ ಮಾಡಲಾದ ಮಾಧ್ಯಮ ಸಂದರ್ಶನ ಮತ್ತು ಕೇಳಲಾದ ಪ್ರಶ್ನೆಗಳಿಗೆಲ್ಲ ಅವರು ಕೊಟ್ಟಿರುವ ಉತ್ತರಗಳು ಎಷ್ಟು ನಿರ್ಲಿಪ್ತಭಾವದಿಂದ ಕೂಡಿವೆಯೆಂದರೆ, ಅವು ಗಾಂಧೀಜಿಯ ಸಮೀಪಕ್ಕೂ ಸುಳಿಯುವುದಿಲ್ಲ. ಜಮ್ಮುವಿನ  ಕಥುವಾದಲ್ಲಿ ಬಾಲೆಯೊಬ್ಬಳ ಮೇಲೆ ನಡೆದ ಅತ್ಯಾಚಾರ ಮತ್ತು ಅದನ್ನು ಬೆಂಬಲಿಸಿ ತನ್ನ ಪಕ್ಷದ ಮುಖಂಡರೇ ನಡೆಸಿದ ರ್ಯಾಲಿಯ ಬಗೆಗೂ ಮೋದಿ ವ್ಯಕ್ತಪಡಿಸಿದ್ದು ದಿವ್ಯ ಮೌನವನ್ನೇ. ಆ ಬಾಲೆಯ ಪರ ಸಹಾನುಭೂತಿ ವ್ಯಕ್ತಪಡಿಸಲಿಲ್ಲ.
 2014ರಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆರಿಸುವಲ್ಲಿ ಎರಡು ಪ್ರಮುಖ ಗುಂಪುಗಳು ಮುಖ್ಯ ಪಾತ್ರ ವಹಿಸಿದ್ದುವು. ಒಂದು- ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ವಾದರೆ, ಇನ್ನೊಂದು- ಕಾರ್ಪೋರೇಟ್ ಮತ್ತು ಉನ್ನತ ವರ್ಗ. ಮ ನ್‍ಮೋಹನ್ ಸಿಂಗ್ ಸರಕಾರದ ಮೇಲೆ ಕಾರ್ಪೋರೇಟ್ ಮತ್ತು ಶ್ರೀಮಂತ ಗುಂಪಿಗೆ ಅಸಮಾಧಾನಗಳಿದ್ದುವು. ಅದಕ್ಕೆ ಮುಖ್ಯ ಕಾರಣ- ಮನ್‍ಮೋಹನ್ ಸಿಂಗ್ ಸರಕಾರ ತಂದ ಕೆಲವು ಕ್ರಾಂತಿಕಾರಿ ನಿರ್ಧಾರಗಳಾಗಿದ್ದವು. ಇವುಗಳಲ್ಲಿ ಮಹಾತ್ಮಾ  ಗಾಂಧಿ ಗ್ರಾಮೀಣ ಉದ್ಯೋಗ ಯೋಜನೆ (MNREGA ), ಮಾಹಿತಿ ಹಕ್ಕು ಕಾಯ್ದೆ (RTI), ಶಿಕ್ಷಣ ಹಕ್ಕು ಕಾಯ್ದೆ (RTE) ಮತ್ತು ಭೂಸ್ವಾಧೀನ ಕಾಯ್ದೆ 2013 ಮುಖ್ಯವಾದವು. ಇನ್ನು, ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗವು ಹಗರಣಗಳನ್ನು  ವಿಪರೀತವಾಗಿ ತಲೆಗೆ ಹಚ್ಚಿಕೊಂಡವು. ಇಂಥ ಸನ್ನಿವೇಶದಲ್ಲಿ ಈ ಗುಂಪು ತಮ್ಮ ಪಾಲಿನ ಮಸೀಹನಾಗಿ ಮೋದಿಯನ್ನು ಆಯ್ಕೆ ಮಾಡಿಕೊಂಡಿತು. ಅವರ ಭಾಷಣಗಳಲ್ಲಿ ಭರವಸೆ ಇಟ್ಟಿತು. ಭ್ರಷ್ಟಾಚಾರ ರಹಿತ ಮತ್ತು ಕಾರ್ಪೋರೇಟ್ ಪ್ರೇಮಿ  ಮಾತುಗಳನ್ನು ಮೋದಿಯವರು ಎಗ್ಗಿಲ್ಲದೇ ಹರಿಯಬಿಟ್ಟರು. ಸಬ್ಕಾ ವಿಕಾಸ್ ಎಂಬ ಘೋಷಣೆಯು ಜನಸಾಮಾನ್ಯರಲ್ಲಿ ಹೊಸ ಭರವಸೆಯನ್ನು ಮೂಡಿಸಿತು. ಈಗ ಆ 2014 ಕಳೆದು ಈ 2019ರಲ್ಲಿ ನಾವಿದ್ದೇವೆ. ಮೋದಿ ಮಾಡಿರುವ ಬಹುದೊಡ್ಡ  ಸಾಧನೆ ಏನೆಂದರೆ, ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ಧಿಯನ್ನು ಅಳೆಯುವ ವಿಧಾನವನ್ನೇ ಬದಲಿಸಿರುವುದು. ಮನ್‍ಮೋಹನ್ ಸಿಂಗ್ ಅವಧಿಯಲ್ಲಿ ಜಿಡಿಪಿ ಲೆಕ್ಕಾಚಾರಕ್ಕೆ ಯಾವ ಮೆಥಡೋಲಜಿ ಯನ್ನು  ಬಳಸಲಾಗುತ್ತಿತ್ತೋ ಅದನ್ನೇ ತಾರುಮಾರುಗೊಳಿಸಿರುವುದು. ಮೋದಿ ಸರಕಾರವು ಇವತ್ತು ತನಗೆ ತೋಚಿದಂತೆ ಅಭಿವೃದ್ಧಿ ದರಗಳನ್ನು ಹೇಳುತ್ತಾ ತಿರುಗುತ್ತಿದೆ. ಒಬ್ಬರು 10 ಕೋಟಿ ಉದ್ಯೋಗ ಸೃಷ್ಟಿಸಿದ್ದೇವೆಂದು ಹೇಳುವಾಗ ಇನ್ನೊಬ್ಬರು 5 ಕೋಟಿ  ಅನ್ನುತ್ತಾರೆ. ದತ್ತಾಂಶ ಅಳೆಯುವ ಮೂಲ ರೀತಿಯನ್ನೇ ಧ್ವಂಸ ಮಾಡಿರುವುದರ ಪರಿಣಾಮ ಇದು. ಅಭಿವೃದ್ಧಿಯ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಮೋದಿಯು ಅಂತಿಮವಾಗಿ ಅಭಿವೃದ್ಧಿಯನ್ನು ಅಳೆಯುವ ವಿಧಾನವನ್ನೇ ಅಸ್ತವ್ಯಸ್ತಗೊಳಿಸಿದ  ಕತೆ ಇದು. ಇದರಾಚೆಗೆ ಹೇಳಿಕೊಳ್ಳುವುದಕ್ಕೆ ಅವರಲ್ಲೇನೂ ಇಲ್ಲ. ಈ ವಾರದ ಅಂಕಣ

ಬದಲಾದ ಮುಸ್ಲಿಮ್ ಸಮುದಾಯದ ಎರಡು ಚಿತ್ರಗಳು



ಘಟನೆ-1
ಮಸೀದಿಯಿಂದ ಹೊರಗೆ ಬಂದೆ. ಓರ್ವ ಯುವಕ ಚಿಂತಾಕ್ರಾಂತನಾಗಿ ನಿಂತಿದ್ದ. ಏನು ಎಂದು ಪ್ರಶ್ನಿಸಿದೆ. ತಾನು ಬೆಂಬಲಿಸುವ ಪಕ್ಷದ ವಿರುದ್ಧ ವಾಟ್ಸಾಪ್‍ನಲ್ಲಿ ಏನೇನೋ ಬರೆಯಲಾಗಿದೆ. ಅದಕ್ಕೆ ಉತ್ತರ ಕೊಡಬೇಕಲ್ಲ ಎಂದ.
ಘಟನೆ-2
ಶುಕ್ರವಾರ ಮಸೀದಿಯಿಂದ ಹೊರಬಂದೆ. ರಕ್ತದಾನ ಶಿಬಿರ ಏರ್ಪಡಿಸಿರುವ ನೋಟೀಸನ್ನು ಹೊರಗಡೆ ವಿತರಿಸಲಾಗುತ್ತಿತ್ತು. ಇಂತಿಂಥ ಸಂಘಟನೆಯು ತನ್ನ ಇಷ್ಟನೇ ವರ್ಷದ ನೆನಪಲ್ಲಿ ಇಷ್ಟನೇ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿದೆ ಎಂದೂ  ಅದರಲ್ಲಿ ಬರೆದಿತ್ತು.

ಈ ಎರಡೂ ಘಟನೆಗಳಲ್ಲಿ ಮುಸ್ಲಿಮ್ ಸಮುದಾಯ ಸಾಗಿಬಂದ ಹೆಜ್ಜೆಗುರುತುಗಳಿವೆ. ಎರಡ್ಮೂರು ದಶಕಗಳ ಹಿಂದೆ ಮುಸ್ಲಿಮ್ ಸಮುದಾಯದ ಮಸೀದಿಗಳು ಹೇಗಿದ್ದುವು ಮತ್ತು ಮುಸ್ಲಿಮರು ಹೇಗಿದ್ದರು ಎಂಬುದನ್ನು ಅವಲೋಕಿಸುವಾಗ ಈ  ಎರಡೂ ಘಟನೆಗಳು ಅಭೂತಪೂರ್ವವಾಗಿ ಕಾಣಬಹುದು. 3 ದಶಕಗಳ ಹಿಂದೆ ಮಸೀದಿಗಳು ಕೇವಲ ಆರಾಧನೆಗೆ ಮಾತ್ರ ಸೀಮಿತವಾಗಿದ್ದುವು. ಧಾರ್ಮಿಕ ಮತ ಪ್ರವಚನಗಳು ನಡೆಯುತ್ತಿದ್ದುವು. ಮಲಯಾಳಂ ಮತ್ತು ಉರ್ದು ಭಾಷೆಗಳ ಹೊರತು  ಉಳಿದ ಭಾಷೆಗಳು ಮಸೀದಿಗಳಿಗೆ ಅನ್ಯವಾಗಿದ್ದುವು. ಮತದಾನದ ಬಗ್ಗೆ ಮಸೀದಿಗಳಲ್ಲಿ ಘೋಷಣೆ ನಡೆಯುತ್ತಿರಲಿಲ್ಲ. ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಕರೆ ನೀಡುತ್ತಿರಲಿಲ್ಲ. ಪಡಿತರ ಚೀಟಿ ಮಾಡಿಕೊಳ್ಳುವ ಬಗ್ಗೆ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಬಗ್ಗೆ, ಕುಡಿಯುವ ನೀರಿನ ಜಾಗೃತಿಯ ಬಗ್ಗೆ.. ಹೀಗೆ ಯಾವುದರ ಬಗ್ಗೆಯೂ ಮಸೀದಿಗಳು ಮಾತಾಡುತ್ತಿರಲಿಲ್ಲ. ನಮಾಝï, ದುಆ, ಪ್ರವಚನ ಇತ್ಯಾದಿಗಳ ಹೊರತಾಗಿ ಮಸೀದಿಗಳು ದೀರ್ಘ ಮೌನಕ್ಕೆ ಜಾರಿದ್ದುವು. ಆದರೆ,  ಈ ಕಳೆದ ದಶಕದಲ್ಲಿ ಆಗಿರುವ ಬದಲಾವಣೆ ಖಂಡಿತ ಮಹತ್ವ ಪೂರ್ಣವಾದುದು. ಇವತ್ತು ಮಸೀದಿ ಬರೇ ನಮಾಝï ಇತ್ಯಾದಿ ಆರಾಧನಾ ಕರ್ಮಗಳ ಕೇಂದ್ರವಾಗಿಯಷ್ಟೇ ಉಳಿದಿಲ್ಲ. ರಾಜಕೀಯ ಬೆಳವಣಿಗೆಗಳ ಬಗ್ಗೆ ಚಿಂತಾಕ್ರಾಂತನಾದ ವ್ಯಕ್ತಿ  ಮಸೀದಿಯಲ್ಲಿ ಸಿಗಬಲ್ಲ ಎಂದಷ್ಟೇ ಅಲ್ಲ, ಮಸೀದಿಯಲ್ಲಿ ನಿಂತುಕೊಂಡೇ ಅದನ್ನು ಇತರರೊಂದಿಗೆ ಹಂಚಿಕೊಳ್ಳಬಲ್ಲ. ಮಸೀದಿಯ ಹೊರಗಡೆ ಮಸೀದಿಗೆ ಯಾವ ರೀತಿಯಲ್ಲೂ ಸಂಬಂಧಿಸಿಲ್ಲದ ರಕ್ತದಾನ ಶಿಬಿರದ ಬಗ್ಗೆ ನಾಗರಿಕರಲ್ಲಿ ಜಾಗೃತಿ  ಮೂಡಿಸುವ ನೋಟೀಸು ಹಂಚಬಲ್ಲ.
ಇವತ್ತು ಮಸೀದಿಗಳಲ್ಲಿ ನಡೆಯುವ ಪ್ರವಚನಗಳ ವಿಷಯ ಮತ್ತು ಅದನ್ನು ಮಂಡಿಸುವ ರೀತಿಯನ್ನೊಮ್ಮೆ ಪರಿಶೀಲಿಸಿ ನೋಡಿ. ಮಸೀದಿಯಲ್ಲಿ ಶುಕ್ರವಾರದ ಖುತುಬಾವನ್ನು ಅರಬಿ ಭಾಷೆಯಲ್ಲೇ  ನಿರ್ವಹಿಸಬೇಕೆಂಬ ವಾದದಲ್ಲಿ ಭಾರೀ ಸಡಿಲಿಕೆ  ಉಂಟಾಗಿಲ್ಲವಾದರೂ ಅರಬೇತರ ಭಾಷೆಯ ಮಹತ್ವವನ್ನು ಅರಿತ ಅಸಂಖ್ಯಾತ ಮಸೀದಿ ಮತ್ತು ಮೌಲಾನಾಗಳು ಇವತ್ತಿದ್ದಾರೆ. ಅರಬಿಯಲ್ಲೇ  ಖುತುಬಾ ನೀಡಿದರೂ ಆಬಳಿಕ ಅದೇ ಖುತುಬಾವನ್ನು ವಿವರಿಸುವ ನೆಪದಲ್ಲಿ ಜನಪರವಾದ ಮತ್ತು  ಸಾಮಾಜಿಕ ಕಾಳಜಿಯುಳ್ಳ ಪ್ರವಚನವನ್ನು ಅನೇಕ ಮೌಲಾನಾಗಳು ನೀಡುತ್ತಿದ್ದಾರೆ. ದಶಕಗಳ ಹಿಂದೆ ಈ ಸಾಧ್ಯತೆಯೇ ನಾಸ್ತಿಯಾಗಿತ್ತು. ಅಲ್ಲದೇ ಇಂಥ ನಾಸ್ತಿಯಾದ ಸಾಧ್ಯತೆಗಳು ಇನ್ನೂ ಅನೇಕ ಇದ್ದುವು. ಹೆಣ್ಣು ಮಕ್ಕಳ ಶಿಕ್ಷಣ, ವರದಕ್ಷಿಣೆ,  ತಲಾಕ್, ಬಹುಪತ್ನಿತ್ವ ಇತ್ಯಾದಿಗಳ ವಿಷಯದಲ್ಲಿ ಇವತ್ತಿನ ಹೊಸ ಪೀಳಿಗೆಯಲ್ಲಿ ಅಪಾರ ವಾದ ತಿಳುವಳಿಕೆಗಳು ಇವೆ. ಹೆಣ್ಣು ಮಕ್ಕಳಂತೂ ಶಿಕ್ಷಣ ಕ್ಷೇತ್ರದಲ್ಲಿ ಏರಿರುವ ಎತ್ತರ ಬಹಳ ಮೇಲಿನದು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸರಣಿ ಯೋಜನೆಗಳು  ಮುಸ್ಲಿಮ್ ಸಮುದಾಯದ ಒಳಗಡೆಯೇ ಭಾರೀ ಪೈಪೋಟಿಯಿಂದ ನಡೆಯುತ್ತಿದೆ. ದಶಕಗಳ ಹಿಂದೆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣದ ಬಗ್ಗೆ ಉದಾಸೀನಭಾವದಿಂದ ಉತ್ತರಿಸುತ್ತಿದ್ದ ಇದೇ ಸಮುದಾಯ ಇವತ್ತು ಸೂಕ್ತ ಶಿಕ್ಷಣ ಸಂಸ್ಥೆ ಯಾವುದು  ಎಂಬ ತಲಾಶೆಯಲ್ಲಿದೆ. ಇದು ಸಣ್ಣ ಬದಲಾವಣೆಯಲ್ಲ. ಹೆಣ್ಣಿಗೆ ವಿವಾಹ ಮಾಡಿಕೊಡುವುದೇ ಹೆತ್ತವರ ಬಹುಮುಖ್ಯ ಕರ್ತವ್ಯ ಎಂಬ ಭಾವವು ಶಿಕ್ಷಣ ಒದಗಿಸಿ ಕೊಡುವುದೇ ಬಹುಮುಖ್ಯ ಕರ್ತವ್ಯ ಎಂಬಂತೆ ಇವತ್ತು ಬದಲಾಗಿ ಬಿಟ್ಟಿದೆ. ಮುಸ್ಲಿಮ್  ಹೆಣ್ಣು ಮಕ್ಕಳು ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿ ಮಿಂಚುತ್ತಿದ್ದಾರೆ. ಮುಸ್ಲಿಮ್ ಹೆಣ್ಣು ಮಗಳು ಪಿಹೆಚ್‍ಡಿ, ಮುಸ್ಲಿಮ್ ಹೆಣ್ಣು ಮಗಳು ಪಿಯುಸಿಯಲ್ಲಿ ಟಾಪರ್, ಐಎಎಸ್‍ನಲ್ಲಿ ಇಷ್ಟನೇ ರಾಂಕ್ ನಲ್ಲಿ ಉತ್ತೀರ್ಣ, ಇಂತಿಂಥ  ವಿಷಯಗಳಲ್ಲಿ ಅಮೇರಿಕ, ಬ್ರಿಟನ್, ಫ್ರಾನ್ಸ್ ಇತ್ಯಾದಿ ರಾಷ್ಟ್ರಗಳಲ್ಲಿ ಮಹಾಪ್ರಬಂಧ ಮಂಡನೆ, ವೈಜ್ಞಾನಿಕ ಸಂಶೋಧನೆಯಲ್ಲಿ ಇಂತಿಂಥ ಮುಸ್ಲಿಮ್ ಹೆಣ್ಣು ಮಗಳು ಭಾಗಿ, ಮುಸ್ಲಿಮ್ ಹೆಣ್ಣು ಮಗಳ ಕಾದಂಬರಿ, ಕತೆ, ಕವನ ಸಂಕಲನಗಳ ಬಿಡುಗಡೆ  ಹೀಗೆ ಪ್ರತಿದಿನ ಸುದ್ದಿಗಳು ಬರುವಷ್ಟು ಬದಲಾವಣೆಗಳು ನಡೆದಿವೆ. 3 ದಶಕಗಳ ಹಿಂದೆ ಮುಸ್ಲಿಮ್ ಗಂಡು ಮಕ್ಕಳ ಮುಂದೆ ವಿದ್ಯಾಭ್ಯಾಸದ ಕೇಂದ್ರಗಳಾಗಿ ಕಾಣಿಸುತ್ತಿದ್ದುದು ಕೇರಳದಲ್ಲಿ ಸ್ಥಾಪಿತವಾಗಿರುವ ಧಾರ್ಮಿಕ ಶಿಕ್ಷಣ ಕೇಂದ್ರಗಳು ಮಾತ್ರ. ಗಂಡು  ಮಕ್ಕಳು ಊರಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕಲಿತು ಮತ್ತು ಅಲ್ಲಿಗೇ ಶಿಕ್ಷಣವನ್ನು ಕೊನೆಗೊಳಿಸಿ ಮುಂದಿನ ಶಿಕ್ಷಣಕ್ಕಾಗಿ ಕೇರಳ ಮತ್ತಿತರ ಕಡೆ ಇರುವ ಧಾರ್ಮಿಕ ಶಿಕ್ಷಣ ಸಂಸ್ಥೆಗಳಿಗೆ ಸೇರ್ಪಡೆ ಗೊಳ್ಳುತ್ತಿದ್ದರು. ಅಲ್ಲಿ ಕೌಶಲ್ಯ ಅಭಿವೃದ್ಧಿಗೆ ಬೇಕಾದ  ಪರಿಕರ ಗಳು ಇದ್ದುದು ಕಡಿಮೆ. ಅಲ್ಲಿ ಕಲಿತು ಬಲಿತು ಬಂದ ಬಳಿಕ ಸರಕಾರಿ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುವ ಹಾಗಿರಲಿಲ್ಲ. ಯಾಕೆಂದರೆ, ಅಲ್ಲಿ ಲಭ್ಯವಾಗುವ ಸರ್ಟಿಫಿಕೇಟ್‍ಗಳು ಮಸೀದಿ-ಮದ್ರಸಾಗಳಲ್ಲಿ ಉದ್ಯೋಗಿಯಾಗುವುದಕ್ಕೆ ಪೂರಕವೇ  ಹೊರತು ಸರಕಾರಿ ಉದ್ಯೋಗಿ ಯಾಗುವುದಕ್ಕೆ ಅಲ್ಲ. ಹೆಣ್ಣು ಮಕ್ಕಳಂತೂ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರ್ತಿಗೊಳಿಸಿದರೆ ಅದುವೇ ದೊಡ್ಡದು. ಹೀಗೆ ಮುಸ್ಲಿಮ್ ಸಮುದಾಯದ ಗಂಡು ಮತ್ತು ಹೆಣ್ಣು ಮಕ್ಕಳು ಕೌಶಲ್ಯ ಅಭಿವೃದ್ಧಿ ಮತ್ತು  ಸರಕಾರಿ ಉದ್ಯೋಗ ಗಳಲ್ಲಿ ಭಾಗಿಯಾಗದೇ ಉಳಿಯಬಹುದಾದಂಥ ವಾತಾವರಣ ವೊಂದು ನಿರ್ಮಾಣವಾಗಿತ್ತು. ಹಾಗಂತ,
ಇದಕ್ಕೆ ಅಪವಾದಗಳು ಇರಲಿಲ್ಲ ಎಂದಲ್ಲ. ಎಲ್ಲ ಮನೆಯ ಎಲ್ಲ ಗಂಡು ಮಕ್ಕಳೂ ಧಾರ್ಮಿಕ ಶಿಕ್ಷಣಕ್ಕಾಗಿ ಊರು ಬಿಟ್ಟು ಹೋದರು ಎಂದೂ ಅಲ್ಲ. ಇಂಥ ವಾತಾವರಣದಲ್ಲೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷವಾದುದನ್ನು ಸಾಧಿಸಿದವರಿದ್ದಾರೆ. ಉನ್ನತ  ಶಿಕ್ಷಣವನ್ನು ಪಡೆದು ಸರಕಾರದ ಆಯಕಟ್ಟಿನ ಜಾಗದಲ್ಲಿ ಸೇರಿಕೊಂಡವರಿದ್ದಾರೆ. ಸರಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಂಡವರಿದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಂಖ್ಯೆ ಕಡಿಮೆಯಾದರೂ ಶೂನ್ಯವೇನೂ  ಆಗಿರಲಿಲ್ಲ. ಅವರೂ ಪದವಿ ಮತ್ತು ಉನ್ನತ ಶಿಕ್ಷಣ ಪಡೆದದ್ದಿದೆ. ಶೈಕ್ಷಣಿಕ ಕ್ಷೇತ್ರದ ಮೇಲೆ ಅಜ್ಞಾನದಿಂದ ಕಟ್ಟಲಾಗಿದ್ದ ಬೇಲಿಯನ್ನು ದಾಟಿ ಉನ್ನತ ಶಿಕ್ಷಣ ಕೇಂದ್ರಗಳಲ್ಲಿ ಕಲಿತದ್ದಿದೆ. ಆದರೂ ಈ ಸಂಖ್ಯೆ ತೀರಾ ಸಣ್ಣದು. ಜೋರಾಗಿ ಉಸಿರಾಡಿದರೆ  ಚೆಲ್ಲಾಪಿಲ್ಲಿ ಯಾಗುವಷ್ಟು ಅಲ್ಪಸಂಖ್ಯಾತ ವಾದದ್ದು. ಅಂದಿನ ಆ ವಾತಾವರಣಕ್ಕೆ ಇಂದಿನ ದಿನಗಳನ್ನು ಮುಖಾಮುಖಿಗೊಳಿಸಿದರೆ, ಅಚ್ಚರಿ ಮತ್ತು ಅನೂಹ್ಯ ಭಾವವೊಂದು ನಿರ್ಮಾಣವಾಗುತ್ತದೆ. ಸಾಮಾಜಿಕ ಚಿಂತನಾ ಗತಿಯಲ್ಲಿ ಎಷ್ಟು ಬೇಗ  ಬದಲಾವಣೆಗಳಾಗಿ ಬಿಟ್ಟವು ಎಂದು ಅಚ್ಚರಿಯಾಗುತ್ತದೆ. ಈ ಬದಲಾವಣೆಯಲ್ಲಿ ದೊಡ್ಡ ಪಾತ್ರ ನಿರ್ವಹಿಸಿರುವುದು ಕಳೆದ ಒಂದೂವರೆ ದಶಕಗಳು. ಈ ದಶಕ ಮುಸ್ಲಿಮ್ ಸಮುದಾಯದ ಪಾಲಿಗೆ ಅತ್ಯಂತ ಸ್ಮರಣೀಯ. ಮಸೀದಿಯ ಹೊರಗಡೆ  ಚಿಂತಾಕ್ರಾಂತನಾಗಿ ನಿಂತ ಆ ಯುವಕ ಮತ್ತು ಮಸೀದಿಯ ಹೊರಗಡೆ ಹಂಚಲಾಗುತ್ತಿದ್ದ ರಕ್ತದಾನ ಶಿಬಿರದ ಆ ನೋಟೀಸು ಈ ದಶಕಗಳ ಕೊಡುಗೆ. ರಾಜಕೀಯದ ಕಾರಣಕ್ಕಾಗಿ ಮಸೀದಿ ಜಗಲಿಯಲ್ಲಿ ಚಿಂತಾಕ್ರಾಂತನಾಗಿ ನಿಂತ ಯುವಕನನ್ನು 3  ದಶಕಗಳ ಹಿಂದೆ ಗ್ರಹಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ರಕ್ತದಾನ ಶಿಬಿರದ ನೋಟೀಸು ಬಿಡಿ, ಮುಸ್ಲಿಮ್ ಸಮುದಾಯ ರಕ್ತದಾನ ಶಿಬಿರವನ್ನು ಏರ್ಪಡಿಸುವುದೇ ಒಂದು ಅಚ್ಚರಿಯ ಸಂಗತಿಯಾಗಿರುತ್ತಿತ್ತು. ಆದರೆ ಇವತ್ತು ಆಮೂಲಾಗ್ರ  ಸುಧಾರಣೆಯಾಗಿದೆ. ಇದರ ಹಿಂದೆ ಸಂಪರ್ಕ ಮಾಧ್ಯಮದಲ್ಲಾದ ಅಮೋಘವಾದ ಕ್ರಾಂತಿಗೆ ದೊಡ್ಡ ಪಾತ್ರ ಇದೆ ಎಂದು ಅನಿಸುತ್ತದೆ.
ಹಿಂದೆ ಆಗಿದ್ದರೆ ಶಿಕ್ಷಣ ಸುಲಭವಾಗಿರಲಿಲ್ಲ. ಅದರಲ್ಲೂ ಪ್ರಾಥಮಿಕ ಶಿಕ್ಷಣವನ್ನು ದಾಟಿ ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಪಡೆಯಬೇಕೆಂದರೆ, ಹತ್ತಾರು ಕಿಲೋ ಮೀಟರ್ ದೂರ ಹೋಗಬೇಕಿತ್ತು. ಅಲ್ಲದೇ, ಈಗಿನಂತೆ ರಸ್ತೆಯಾಗಲಿ ವಾಹನ  ಸೌಲಭ್ಯಗಳಾಗಲಿ ಇರಲಿಲ್ಲ. ಈಗಿನಂತೆ ಸ್ಕಾಲರ್‍ಶಿಪ್‍ಗಳು, ಕಲಿಕೆಗಾಗಿ ನೆರವು ನೀಡುವ ಸಂಘಟನೆಗಳೂ ಇರಲಿಲ್ಲ. ಊರಲ್ಲಿ ಸರಕಾರಿ ಉನ್ನತ ಶಿಕ್ಷಣ ಸಂಸ್ಥೆಗಳು ಇಲ್ಲದೇ ಇರುವುದು ಮತ್ತು ಶೈಕ್ಷಣಿಕ ನೆರವು ನೀಡಬಲ್ಲ ಸಂಘಸಂಸ್ಥೆಗಳು ಬಹುತೇಕ  ಶೂನ್ಯವಾಗಿದ್ದುದು ಮುಸ್ಲಿಮ್ ಸಮುದಾಯದ ಗಂಡು ಮತ್ತು ಹೆಣ್ಣು ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿಯಲು ಕಾರಣವಾಯಿತು. ಜೊತೆಗೇ ಧಾರ್ಮಿಕ ಶಿಕ್ಷಣವು ಬಹುತೇಕ ಉಚಿತವಾಗಿ ನಡೆಯುವ ಪ್ರಕ್ರಿಯೆಯಾದ್ದರಿಂದ ಅದರೆಡೆಗೆ ಸೆಳೆತವೂ  ಉಂಟಾಯಿತು. ಆದರೆ ಯಾವಾಗ ಮಾಧ್ಯಮ ಮತ್ತು ರಸ್ತೆ ಸಂಪರ್ಕ ಕ್ಷೇತ್ರದಲ್ಲಿ ಬದಲಾವಣೆಗಳಾದುವೋ ಸಮುದಾಯದಲ್ಲಿ ಅದರ ಗರಿಷ್ಠ ಪ್ರತಿಫಲನ ಕಾಣಿಸಿಕೊಂಡಿತು. ಹಳ್ಳಿ ಕೇರಿಗಳಿಗೂ ನಗರ ಗಳಿಗೂ ರಸ್ತೆ ಸಂಪರ್ಕ ಮತ್ತು ವಾಹನ  ಸೌಲಭ್ಯಗಳು ಏರ್ಪಟ್ಟ ಮೇಲೆ ಸಮುದಾಯದ ಶೈಕ್ಷಣಿಕ ನಿಲುವಿನಲ್ಲಿ ಅಪೂರ್ವ ಪಲ್ಲಟ ಗಳು ನಡೆದುಹೋದವು. ಇದರ ಜೊತೆಗೇ ಇಂಟರ್ ನೆಟ್ ಸೌಲಭ್ಯ ಮತ್ತು ಮೊಬೈಲ್ ಕ್ರಾಂತಿಯು ಸಮುದಾಯದ ಆಲೋಚನಾ ಗತಿಯನ್ನೇ ತಿರುಗಿಸಿದುವು.  ಜ್ಞಾನದ ಹೊಸ ಕವಾಟಗಳು ಈ ಮೂಲಕ ತೆರೆದುಕೊಂಡವು. ಈ ಹಿಂದೆ ಜ್ಞಾನದ ಒರತೆಯಾಗಿ ಮೌಲಾನಾಗಳು ಮಾತ್ರವೇ ಇದ್ದರೆ ಈಗ ಆ ಒರತೆ ಎಲ್ಲೆಲ್ಲೂ ಕಾಣಿಸಿಕೊಳ್ಳತೊಡಗಿದುವು. ಧಾರ್ಮಿಕ, ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಆರ್ಥಿಕ  ಹೀಗೆ ಪ್ರತಿ ವಿಷಯಗಳ ಮೇಲೂ ಧಾರ್ಮಿಕ ಜ್ಞಾನವನ್ನು ಗೂಗಲ್ ನೀಡತೊಡಗಿತು. ಸಮುದಾಯದ ಯುವಪೀಳಿಗೆಯು ಧರ್ಮ ಜ್ಞಾನಕ್ಕೆ ಗೂಗಲ್ ಅನ್ನು ಮೌಲಾನಾರಿಗೆ ಪರ್ಯಾಯವಾಗಿ ಬಳಸಿಕೊಳ್ಳತೊಡಗಿದುವು. ಇದರಿಂದಾಗಿ ಧಾರ್ಮಿಕ  ಜ್ಞಾನಕ್ಕಾಗಿ ಮೌಲಾನಾಗಳ ಅವಲಂಬನೆ ಕಡಿಮೆಯಾಗ ತೊಡಗಿತು. ಯಾವುದೇ ವಿಷಯದ ಬಗ್ಗೆ ಧರ್ಮದ ಅಭಿಪ್ರಾಯವೇನು ಎಂಬುದನ್ನು ಮೌಲಾನಾಗಳಲ್ಲಿ ವಿಚಾರಿಸುವ ಮೊದಲು ಆ ಬಗ್ಗೆ ಗೂಗಲ್‍ನಲ್ಲಿ ಜಾಲಾಡಿ ಪೂರ್ವಜ್ಞಾನ ಪಡೆದುಕೊಂಡು  ಹೋಗುವ ವಾತಾವರಣ ನಿರ್ಮಾಣವಾಗತೊಡಗಿತು. ಸಂವಹನ ಕ್ಷೇತ್ರದಲ್ಲಿ ಆಗುತ್ತಿರುವ ಈ ಬದಲಾವಣೆಗಳಿಗೆ ನಿಧಾನವಾಗಿ ಮಸೀದಿಗಳು ಮತ್ತು ಅಲ್ಲಿನ ಮೌಲಾನಾಗಳು ಸ್ಪಂದಿಸದೇ ಬೇರೆ ದಾರಿಯಿರಲಿಲ್ಲ. ಒಂದುವೇಳೆ, ಇಂಟರ್ ನೆಟ್ ಕ್ರಾಂತಿಯು  ತಂದ ಬದಲಾವಣೆಗೆ ಒಗ್ಗಿಕೊಳ್ಳದಿದ್ದರೆ ಮತ್ತು ತಮ್ಮ ಪರಂಪರಾಗತ ನಿಲುವಿನಲ್ಲಿ ತಿದ್ದುಪಡಿ ಮಾಡಿಕೊಳ್ಳದೇ ಹೋದರೆ ತಾವು ಹಿಂದುಳಿಯಬೇಕಾದೀತು ಎಂಬ ಭಾವ ಅವರಲ್ಲಿ ಮೂಡ ತೊಡಗಿತು. ಅದರ ಪರಿಣಾಮವೇ ಮಸೀದಿಗಳಲ್ಲಿ ಶುಕ್ರವಾರದಂದು ಜನಪರ ಮತ್ತು ಸಾಮಾಜಿಕ  ಕಾಳಜಿಯುಳ್ಳ ಪ್ರವಚನಗಳು ನಡೆಯತೊಡಗಿರುವುದು. ಶೈಕ್ಷಣಿಕ, ರಾಜಕೀಯ ಮತ್ತು ಸಾಮಾಜಿಕ ವಿಷಯಗಳ ಮೇಲೆ ಜನಜಾಗೃತಿ ಮೂಡಿಸುವ ಹೊಣೆಯನ್ನು ಹೊತ್ತಂತೆ ಮಸೀದಿಗಳು ವರ್ತಿಸುತ್ತಿರುವುದು. ಅಂದಹಾಗೆ, ವಾಟ್ಸಾಪಿ ನಲ್ಲಿ ಬಂದಿರುವ  ರಾಜಕೀಯ ಚರ್ಚೆಯ ಬಗ್ಗೆ ಚಿಂತಾಕ್ರಾಂತನಾಗಿ ನಿಂತಿರುವ ಯುವಕ ಕೂಡ ಇದೇ ಸಂಪರ್ಕ ಕ್ರಾಂತಿಯ ಸೃಷ್ಟಿ.
ಮಸೀದಿ ಹೊರಗಡೆ ಎದುರಾದ ರಕ್ತದಾನ ಶಿಬಿರದ ನೋಟೀಸು ಮತ್ತು ಆ ಯುವಕ- ಬದಲಾದ ಮುಸ್ಲಿಮ್ ಸಮುದಾಯದ ಚಿತ್ರಗಳಂತೆ ನನಗೆ ಕಂಡರು.

Tuesday, March 19, 2019

ಚುನಾವಣಾ ವಿಶ್ಲೇಷಣೆ: ಸೆಮಿಫೈನಲ್, ಕ್ವಾರ್ಟರ್ ಫೈನಲ್ ಇತ್ಯಾದಿಗಳು...



2014ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತ್ತು ಆ ಬಳಿಕದಿಂದ ಮೊನ್ನೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ  ವರೆಗೆ ಬಿಜೆಪಿಯ ಪ್ರಮುಖ ನಾಯಕರು ಮಾಡಿರುವ ಭಾಷಣಗಳನ್ನೊಮ್ಮೆ ಪರಿಶೀಲಿಸಿ ನೋಡಿ. ಏನನಿಸುತ್ತದೆ? ಮುಖ್ಯಮಂತ್ರಿ ನರೇಂದ್ರ  ಮೋದಿ ಆಡುತ್ತಿದ್ದ ಚುನಾವಣಾ ಸಭೆಯ ಮಾತುಗಳಿಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡುತ್ತಿರುವ ಚುನಾವಣಾ ಭಾಷಣಗಳಿಗೂ  ಏನು ವ್ಯತ್ಯಾಸ ಇದೆ? ಘೋರಕ್‍ಪುರದ ಸಂಸದನಾಗಿ ಯೋಗಿ ಆದಿತ್ಯನಾಥ್ ಆಡುತ್ತಿದ್ದ ಮಾತುಗಳು ಹೇಗಿದ್ದುವು? ಮುಖ್ಯಮಂತ್ರಿ ಆದಿತ್ಯನಾಥ್ ಮಾಡುತ್ತಿರುವ ಭಾಷಣಗಳು ಹೇಗಿವೆ? ಗುಜರಾತ್‍ನ ಗೃಹಮಂತ್ರಿಯಾಗಿ ಅಮಿತ್ ಷಾ ಆಡುತ್ತಿದ್ದ ಮಾತುಗಳಲ್ಲಿ ಏನೇನು  ಇದ್ದುವು? ಬಿಜೆಪಿಯ ಅಧ್ಯಕ್ಷನಾಗಿ ಅಮಿತ್ ಶಾರ ಭಾಷಣಗಳು ಹೇಗಿವೆ? ಅಂದಹಾಗೆ, ಬಿಜೆಪಿಯ ಬಗ್ಗೆ ಷರಾ ಬರೆಯುವುದಕ್ಕೆ ಈ ಬಗೆಯ ಲೆಕ್ಕಾಚಾರವೇ ಧಾರಾಳ ಸಾಕು. ಮಧ್ಯಪ್ರದೇಶದ ಚುನಾವಣಾ ಪ್ರಚಾರದ ವೇಳೆ ಯೋಗಿ ಆದಿತ್ಯನಾಥ್‍ರ ಭಾಷಣ ಹೀಗಿತ್ತು:
`ಕಾಂಗ್ರೆಸ್‍ನ ಜೊತೆ ಅಲಿ ಇದ್ದರೆ ಬಿಜೆಪಿಯ ಜೊತೆ ಬಜರಂಗಬಲಿ ಇದ್ದಾನೆ.'
ತೆಲಂಗಾಣದಲ್ಲಿ ಅವರು ಹೇಳಿದ್ದು ಹೀಗೆ:
ಅಧಿಕಾರಕ್ಕೆ ಬಂದರೆ ಒವೈಸಿ ಸೋದರನ್ನು ನಾವು ಪಾಕಿಸ್ತಾನಕ್ಕೆ ಅಟ್ಟುತ್ತೇವೆ.’
ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ನೇಂದ್ರ ಮೋದಿಯವರು ಇದೇ ಧಾಟಿಯಲ್ಲಿ ಮಾತಾಡಿದ್ದರು. ‘ನೀವು ಕಾಂಗ್ರೆಸ್‍ಗೆ ಮತ  ಹಾಕಿದರೆ, ಅವರು ಮುಸ್ಲಿಮನನ್ನು ನಿಮಗೆ ಮುಖ್ಯಮಂತ್ರಿಯಾಗಿ ಕೊಡುತ್ತಾರೆ.' ಅಲ್ಲದೇ, 'ಮನ್‍ಮೋಹನ್ ಸಿಂಗ್ ಅವರು ಪಾಕಿಸ್ತಾನದೊಂದಿಗೆ  ಕೈಜೋಡಿಸಿದ್ದಾರೆ’ ಎಂದಿದ್ದರು. ಅಮಿತ್ ಷಾರ ಭಾಷಣ ಎಷ್ಟು ಕೆಟ್ಟದ್ದಾಗಿತ್ತೆಂದರೆ, ಚುನಾವಣಾ ಆಯೋಗ ಒಮ್ಮೆ ಅವರ ಮೇಲೆ ನಿಷೇಧವನ್ನು ಹೇರಿತ್ತು. 2014 ಮತ್ತು ಆ ಬಳಿಕ ನಡೆದ ವಿಧಾನಸಭಾ ಚುನಾವಣೆಗಳು ಹಾಗೂ ಉಪಚುನಾವಣೆಗಳಲ್ಲಿ ಬಿಜೆಪಿ ನಾಯಕರು  ಮಾಡಿದ ಭಾಷಣಗಳನ್ನು ಹರವಿ ಹಾಕಿ ಪರಿಶೀಲಿಸತೊಡಗಿದರೆ, ಎಲ್ಲದರಲ್ಲೂ ಏಕರೂಪತೆ ಕಾಣಬಹುದು. ಅದರಲ್ಲಿ ಒಂದು: ಮುಸ್ಲಿಮ್  ವಿರೋಧ 2. ಕಾಂಗ್ರೆಸ್ ವಿರೋಧ.  3. ಪಾಕಿಸ್ತಾನ.
ಅಷ್ಟಕ್ಕೂ,
ಕಳೆದ ನಾಲ್ಕೂವರೆ ವರ್ಷಗಳಲ್ಲಿ ಈ ದೇಶಕ್ಕೆ ಎದುರಾದ ಸವಾಲುಗಳೇ ಇವು? ಬಿಜೆಪಿ ಯಾಕೆ ಮತ್ತೆ ಮತ್ತೆ ಇವೇ ವಿಷಯಗಳ  ಸುತ್ತ ಗಿರಕಿ ಹೊಡೆಯುತ್ತಿದೆ? 2014ರಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಈ ದೇಶದ ಮತದಾರರು ಬೆಂಬಲಿಸಿರುವುದಕ್ಕೆ ಅವರ  ಮಾತಿನ ಶೈಲಿ, ನೀಡಿದ ಭರವಸೆಗಳು ಮತ್ತು ಮನ್‍ಮೋಹನ್ ಸಿಂಗ್ ಸರಕಾರದ ಮೇಲೆ ಕೇಳಿ ಬಂದಿದ್ದ ಭ್ರಷ್ಟಾಚಾರದ ಆರೋಪಗಳು  ಪ್ರಮುಖ ಕಾರಣವಾಗಿದ್ದುವು. ಆಗ, ಅವರೆಂದೂ ನೋಟು ನಿಷೇಧ ಮಾಡುವ ಭರವಸೆ ನೀಡಿರಲಿಲ್ಲ. ಆದರೆ, ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದರು. ಭ್ರಷ್ಟಾಚಾರದ ನಿರ್ಮೂಲನೆಗಾಗಿ ಲೋಕಪಾಲವನ್ನು ಜಾರಿಗೊಳಿಸುವುದಾಗಿ ಹೇಳಿದ್ದರು. ರೈತರ ಬೆಳೆಯನ್ನು ಕಾಪಾಡುವ ಉದ್ದೇಶದಿ೦ದ ಏಕ ಮಾರುಕಟ್ಟೆಯನ್ನು ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ವರ್ಷದಲ್ಲಿ ಎರಡು ಕೋಟಿ  ಉದ್ಯೋಗ ಸೃಷ್ಟಿಯೂ ಅವರ ಭರವಸೆಗಳಲ್ಲಿ ಒಂದು. ತೈಲ ಬೆಲೆ ಇಳಿಕೆಯೂ ಅದರಲ್ಲಿ ಒಂದು. ವಿಷಾದ ಏನೆಂದರೆ, ಮಧ್ಯಪ್ರದೇಶದಲ್ಲಿ  2004 ರಿಂದ 2016ರ ನಡುವೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 16,932. ಅಂದರೆ ದಿನವೊಂದಕ್ಕೆ 3 ಕ್ಕಿಂತಲೂ ಅಧಿಕ. ಇದೇ  ಅವಧಿಯಲ್ಲಿ ಛತ್ತೀಸ್‍ಗಢದಲ್ಲಿ 12,979 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ದಿನಕ್ಕೆ ಮೂವರು ರೈತರು. ರಾಜಸ್ತಾನದಲ್ಲಿ ಈ  ಆತ್ಮಹತ್ಯೆಯ ಸಂಖ್ಯೆ- 5582. ಇವತ್ತಿಗೂ ರೈತರ ಉತ್ಪನ್ನಗಳನ್ನು ದಾಸ್ತಾನು ಇರಿಸಲು ಸರಿಯಾದ ಗೋದಾಮುಗಳಿಲ್ಲ. ಬೆಂಬಲ ಬೆಲೆಯಲ್ಲಿ  ಸ್ಪಷ್ಟತೆಯಿಲ್ಲ. ಕಾರ್ಪೋರೇಟ್ ಸಂಸ್ಥೆಗಳ 3.5 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವುದಕ್ಕೆ ಯಾವ ಹಿಂಜರಿಕೆಯನ್ನೂ ತೋರದ ಕೇಂದ್ರ ಸರಕಾರ ರೈತರ  ಸಾಲವನ್ನು ಮನ್ನಾ ಮಾಡಲು ಅಸಾಧ್ಯ ಎಂದೇ ಹೇಳುತ್ತಿದೆ. 2014ರಲ್ಲಿ ಈ ದೇಶದ ಮಂದಿ ಮತದಾನ ಮಾಡುವಾಗ ಬಿಜೆಪಿ ಹೀಗಿರಲಿಲ್ಲ.
ಆದರೆ,
ಆ ಬಳಿಕ ಒಂದು ರಾತ್ರಿ ದಿಢೀರ್ ಆಗಿ ನೋಟು ನಿಷೇಧ ಗೊಳಿಸಿತು. ಶ್ರೀಮಂತರಿಂದ ಹಣ ಪಡೆದು ಬಡವರಿಗೆ ಕೊಡುವ ಕ್ರಮ  ಎಂದು ಪ್ರಧಾನಿಯವರು ಅದನ್ನು ಸಮರ್ಥಿಸಿಕೊಂಡರೂ ಬಡವರಿಗೆ ಯಾವ ರೀತಿಯಲ್ಲೂ ಅದು ಉಪಯೋಗಕ್ಕೆ ಬರಲಿಲ್ಲ. ನಿಜವಾಗಿ,  ಚಲಾವಣೆಯಲ್ಲಿರುವ 86% ನೋಟುಗಳನ್ನು ನಿಷೇಧ ಮಾಡುವುದೆಂದರೆ, ಅದು ಮಕ್ಕಳಾಟಿಕೆಯಲ್ಲ. ಆ ನೋಟುಗಳು ಈ ದೇಶದ  ಕೋಟ್ಯಾಂತರ ಜನರ ಬದುಕನ್ನು ಕಟ್ಟಿದ್ದುವು. ದಿಢೀರ್ ಆಗಿ ಆ ನೋಟುಗಳು ಅಮಾನ್ಯಗೊಳ್ಳುವುದೆಂದರೆ, ಮಾರುಕಟ್ಟೆ ಸ್ತಬ್ಧಗೊಂಡಂತೆ.  ಆದ್ದರಿಂದಲೇ 100 ಕ್ಕಿಂತಲೂ ಅಧಿಕ ಮಂದಿ ಬೇರೆ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಂಡರು. 15 ಕೋಟಿ ಜನರ ಪಾರಂಪರಿಕ  ಉದ್ಯೋಗಗಳಿಗೆ ಅದು ಎರವಾಯಿತು. ಅತ್ತ ನೋಟು ನಿಷೇಧದಿಂದ ಕಪ್ಪು ಹಣವನ್ನು ನಿಯಂತ್ರಿಸುವುದಕ್ಕೂ ಸಾಧ್ಯವಾಗಲಿಲ್ಲ ಮತ್ತು ಇತ್ತ  ಚಲನೆರಹಿತಗೊಂಡ ಮಾರುಕಟ್ಟೆಯನ್ನು ಸುಸ್ಥಿತಿಯಲ್ಲಿ ಇರಿಸುವುದಕ್ಕೂ ಸಾಧ್ಯವಾಗಲಿಲ್ಲ. ಇದು ನೋಟು ನಿಷೇಧದ ಬಹುದೊಡ್ಡ ವೈಫಲ್ಯ.  ಯುವ ಸಮೂಹದಲ್ಲಿ ಮಾತ್ರವಲ್ಲ, ಸಣ್ಣ ಸಣ್ಣ ಉದ್ದಿಮೆದಾರರಲ್ಲೂ ಬಿಜೆಪಿಯ ಬಗ್ಗೆ ತೀವ್ರ ಅಸಂತೋಷ ವ್ಯಕ್ತವಾಗತೊಡಗಿತು. ಒಂದುವೇಳೆ, ವರ್ಷದಲ್ಲಿ ಎರಡು ಕೋಟಿ ಉದ್ಯೋಗವನ್ನು ಸೃಷ್ಟಿಸುವಲ್ಲಿ ಮೋದಿಯವರು ಯಶಸ್ವಿಯಾಗಿರುತ್ತಿದ್ದರೆ, ನೋಟು ನಿಷೇಧದ ಸಂಕಷ್ಟವನ್ನು  ಜನರು ಮರೆಯುತ್ತಿದ್ದರೇನೋ. ಆದರೆ,
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 15 ರಿಂದ 24 ವರ್ಷ ಗಳೊಳಗಿನ ಪ್ರಾಯದವರ 72 ಲಕ್ಷ   ಉದ್ಯೋಗ ಅವಕಾಶಗಳನ್ನು ನೋಟು ನಿಷೇಧ ಕಸಿದುಕೊಂಡಿತು. ಇದರ ಜೊತೆ ಜೊತೆಗೇ ತೈಲ ಬೆಲೆಯಲ್ಲಿ ವಿಪರೀತ ಏರಿಕೆ  ಉಂಟಾಯಿತು. ಬಿಜೆಪಿ ನಾಯಕರು ಏನೇ ಸಮರ್ಥಿಸಿಕೊಳ್ಳಲಿ, 2004 ರಿಂದ 2014ರ ವರೆಗಿನ ಮನ್‍ಮೋಹನ್ ಸಿಂಗ್ ಸರಕಾರದ  ಅವಧಿಗೆ ಹೋಲಿಸಿದರೆ, ಬಿಜೆಪಿ ಎಲ್ಲಿ ಎಡವಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಅವಧಿಯಲ್ಲಿ ಮನ್ ಮೋಹನ್ ಸಿಂಗ್ ಸರಕಾರವು 14  ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತಂದಿದೆ ಎಂಬುದು ಅಧಿಕೃತ ಅಂಕಿಅಂಶ. ರಾಜೀವ್ ಗಾಂಧಿ ಗ್ರಾಮೀಣ ರೊಜ್‍ಗಾರ್  ಯೋಜನೆ ಈ ಸಾಲಿನಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿತ್ತು. ಗ್ರಾಮೀಣ ಜನರಿಗೆ ತಿಂಗಳಲ್ಲಿ ಇಂತಿಷ್ಟು ಕೆಲಸವನ್ನು ಒದಗಿಸುವ  ಅದ್ಭುತ ಯೋಜನೆ ಇದು. ಈ ಯೋಜನೆಯ ಮೇಲೆ ಮ್‍ಮೋಹನ್ ಸಿಂಗ್ ತೀವ್ರ ಗಮನವನ್ನು ಹರಿಸಿದ್ದರು. ಆದರೆ ಮೋದಿ ಆಡಳಿತದಲ್ಲಿ ಈ ಯೋಜನೆ ಬಹುತೇಕ ನಿಷ್ಕ್ರೀಯಗೊಂಡಿತು. ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ಕೃಷಿ ಉತ್ಪನ್ನಗಳ ರಫ್ತು 5  ಪಟ್ಟು ಹೆಚ್ಚಳಗೊಂಡಿತ್ತು. ಈಗ ಅದು 21% ಕುಸಿದಿದೆ. ಇದೇವೇಳೆ, ಕೃಷಿ ಉತ್ಪನ್ನಗಳ ಆಮದು ಪ್ರಮಾಣ ಇವತ್ತು 60%ಕ್ಕೆ ಹೆಚ್ಚಿದೆ. 70%  ರೈತರಿರುವ ದೇಶವೊಂದರಲ್ಲಿ ಕೃಷಿ ಉತ್ಪನ್ನಗಳ ಆಮದು ಪ್ರಮಾಣ ಹೆಚ್ಚಳಗೊಳ್ಳುವುದೂ ಮತ್ತು ರಫ್ತು ಪ್ರಮಾಣದಲ್ಲಿ ಇಳಿಕೆಯಾಗುವುದೂ  ಎಂದರೆ, ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದೇ ಅರ್ಥ. ಇದರ ಜೊತೆಗೆ ಪ್ರತಿಯೊಂದನ್ನೂ  ಡಿಜಿಟಲ್ ಮಾಡುವ ಹುಚ್ಚುತನವನ್ನೂ  ಕೇಂದ್ರ  ಸರಕಾರ ಪ್ರದರ್ಶಿಸಿತು. ಪ್ರತಿಯೊಬ್ಬ ಭಾರತೀಯನೂ ಬ್ಯಾಂಕ್ ಖಾತೆ ತೆರೆಯಬೇಕೆಂದು ಒತ್ತಾಯಿಸಲಾಯಿತಲ್ಲದೇ ಜನ್‍ಧನ್ ಎಂದು  ನಂಬಿಸಲಾಯಿತು. ನಿಜವಾಗಿ, ಬ್ಯಾಂಕುಗಳೇ ಇಲ್ಲದ ಗ್ರಾಮೀಣ ಭಾರತದಲ್ಲಿ ಕ್ಯಾಶ್‍ಲೆಸ್ ಅತ್ಯಂತ ಬೇಜವಾಬ್ದಾರಿ ಕ್ರಮ. ಜನರನ್ನು ಮತ್ತೆ  ಬ್ಯಾಂಕಿನ ಮುಂದೆ ನಿಲ್ಲಿಸಿ ಅವರಿಂದ ಕನಿಷ್ಠ ಮೊತ್ತದಲ್ಲಿ ಬ್ಯಾಂಕ್ ಖಾತೆಯನ್ನು ಪ್ರಾರಂಭಿಸುವ ಅಭಿಯಾನ ನಡೆಯಿತು. ತಮಾಶೆ  ಏನೆಂದರೆ, ಈ ಪ್ರಕ್ರಿಯೆಗಾಗಿ ಜನರು ತಮ್ಮ ನಿತ್ಯದ ಕೆಲಸವನ್ನು ಕೈಬಿಟ್ಟು ತೊಡಗಿಸಿಕೊಳ್ಳುತ್ತಿರುವಾಗಲೇ ಮಿನಿಮಮ್ ಬ್ಯಾಲೆನ್ಸ್ ನ ಹೆಸರಲ್ಲಿ  ಬ್ಯಾಂಕುಗಳು ಅದೇ ಖಾತೆಯಿಂದ ದಂಡ ವಸೂಲು ಮಾಡತೊಡಗಿದುವು.
ನಿಜವಾಗಿ, ಪಂಚರಾಜ್ಯಗಳಲ್ಲಿ ಬಿಜೆಪಿಗಾದ ಸೋಲನ್ನು ಆಘಾತಕಾರಿಯಾಗಿ ನೋಡಬೇಕಿಲ್ಲ. ಮಾಧ್ಯಮಗಳು ಸೆಮಿಫೈನಲ್ ಎಂದು  ಬಿಂಬಿಸಿದ ಕಾರಣಕ್ಕಾಗಿ ಈ ಸೋಲಿಗೆ ಮಹತ್ವ ಲಭ್ಯವಾಗಿದೆಯೇ ಹೊರತು ಬಿಜೆಪಿಯ ಜನಪ್ರಿಯತೆ ಕುಸಿಯು ತ್ತಿರುವುದನ್ನು ಈ  ಮೊದಲಿನ ಚುನಾವಣೆಗಳೇ ಕೂಗಿ ಹೇಳಿದ್ದುವು. ಇದಕ್ಕೆ ಪ್ರಥಮ ಉದಾಹರಣೆ- ಗುಜರಾತ್ ವಿಧಾನ ಸಭಾ ಚನಾವಣೆ. ಆ ಬಳಿಕ  ಕರ್ನಾಟಕ. ಇದರ ಜೊತೆಗೇ ವಿವಿಧ ರಾಜ್ಯಗಳಲ್ಲಿ ವಿವಿಧ ಸಂದರ್ಭಗಳಲ್ಲಿ ನಡೆದ ಉಪ ಚುನಾವಣೆಗಳು. ಇವೆಲ್ಲವೂ ಬಿಜೆಪಿಯ ನಿರಾಶಾಜನಕ ಭವಿಷ್ಯವನ್ನೇ ಹೇಳಿದ್ದುವು. ಆದರೆ, ಮಾಧ್ಯಮಗಳಿಗೆ ಈ ಸೂಚನೆ ಅರ್ಥವಾಗಲಿಲ್ಲ ಅಥವಾ ಅರ್ಥವಾಗದಂತೆ ನಟಿಸಿದುವು.  ಅಂದಹಾಗೆ, ಸೆಮಿಫೈನಲ್ ಎಂದರೇನು? ಚುನಾವಣೆಯಲ್ಲಿ ಸೆಮಿಫೈನಲ್, ಫೈನಲ್, ಕ್ವಾರ್ಟರ್ ಫೈನಲ್, ಪ್ಲೆ ಆಫ್ ಎಂದೆಲ್ಲಾ ಇದೆಯೇ?  ಅದನ್ನು ನಿರ್ಧರಿಸುವುದು ಹೇಗೆ? ಬಿಜೆಪಿಗೆ ಅನು ಕೂಲವಾಗಲೆಂದೇ ಯಾರೋ ಈ ಬಾರಿ ಸೆಮಿಫೈನಲ್ ಕಾನ್ಸೆಪ್ಟನ್ನು ಹುಟ್ಟು  ಹಾಕಿರುವರೇನೋ ಎಂದು ಅನಿಸುತ್ತದೆ. ಬಿಜೆಪಿ ಸೋತರೂ ಬಿಜೆಪಿಯನ್ನೇ ಕೇಂದ್ರೀಯ ಸ್ಥಾನಲ್ಲಿ ಕೂರಿಸಿ ಚರ್ಚಿಸುವುದಕ್ಕೆ, ಪ್ರಧಾನಿ  ನರೇಂದ್ರ ಮೋದಿಯವರ ಭಾಷಣ ಮತ್ತೆ ಮತ್ತೆ ಪ್ರಸಾರ ಮಾಡಿ ಸೋಲಿನಲ್ಲೂ ಅವರ ಇಮೇಜನ್ನು ಎತ್ತಿಹಿಡಿಯುವುದಕ್ಕೆ ಹುಡುಕಿಕೊಂಡ  ತಂತ್ರ ಇದು ಎಂದೇ ಹೇಳಬೇಕಾಗುತ್ತದೆ. ಅಲ್ಲ ಎಂದಾದರೆ, ಬಿಜೆಪಿ ಸೋತ ಬಳಿಕವೂ ಚರ್ಚೆಯಲ್ಲಿ ಬಿಜೆಪಿಯೇ ಕೇಂದ್ರ ಸ್ಥಾನವನ್ನು  ಪಡೆದುಕೊಳ್ಳಲು ಕಾರಣವೇನು?
ಐಡಿಯಾಲಜಿಯ ಆಧಾರದಲ್ಲಿ ನಡೆಯಬೇಕಾಗಿದ್ದ ಚುನಾವಣೆಯನ್ನು ವಸ್ತು ರೂಪಕ್ಕಿಳಿಸಿದುದರಲ್ಲಿ ರಾಜಕೀಯ ಪಕ್ಷಗಳಿಗೆ ಪಾತ್ರ  ಇರುವಂತೆಯೇ ಮಾಧ್ಯಮಗಳಿಗೂ ಪಾತ್ರ ಇದೆ. ಈಗ ಚುನಾವಣಾ ಪ್ರಣಾಳಿಕೆಯ ವಿಶ್ಲೇಷಣೆ ನಡೆಯುವುದು ಹೇಗೆಂದರೆ, ಮುಸ್ಲಿಮರಿಗೆ  ಎಷ್ಟು, ಹಿಂದೂಗಳಿಗೆ ಎಷ್ಟು, ದಲಿತರಿಗೆ ಎಷ್ಟು, ರೈತರಿಗೆ ಎಷ್ಟು ಹೀಗೆ ವಸ್ತು ರೂಪದಲ್ಲಿ. ಚುನಾವಣೆ ಪ್ರಣಾಳಿಕೆಯಲ್ಲಿ ಪ್ರತಿಯೊಬ್ಬರೂ  ತಂತಮ್ಮ ಪಾಲನ್ನು ಲೆಕ್ಕ ಹಾಕಿ  ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಪಕ್ಷದ ಪ್ರಣಾಳಿಕೆ ಯಾವ ಐಡಿಯಾಲಜಿಯನ್ನು ಪ್ರತಿನಿಧಿಸುತ್ತದೆ, ಒಂದು ದೇಶವೆಂಬ ನೆಲೆಯಲ್ಲಿ ಅದು ಜನರನ್ನು ಹೇಗೆ ಪರಿಗಣಿಸುತ್ತದೆ, ದೇಶದ ಸಮಗ್ರ ಬೆಳವಣಿಗೆಯ ಬಗ್ಗೆ ಪ್ರಣಾಳಿಕೆಯ ನಿಲುವು ಏನು ಇತ್ಯಾದಿಗಳ ಸುತ್ತ ವಿಶ್ಲೇಷಣೆ ನಡೆಸುವ ಸೂಕ್ಷ್ಮತೆಯನ್ನು ಮಾಧ್ಯಮಗಳು ಇವತ್ತು ಬಹುತೇಕ ಕಳಕೊಂಡು ಬಿಟ್ಟಿವೆ. ಅಷ್ಟಕ್ಕೂ,
ಕಾಂಗ್ರೆಸನ್ನು ಪ್ರಬಲ ವಿರೋಧ ಪಕ್ಷವಾಗಿ ಎತ್ತಿ ನಿಲ್ಲಿಸಿದ ಚುನಾವಣೆ ಎಂಬ ನೆಲೆಯಲ್ಲಿ ಪಂಚರಾಜ್ಯ ಫಲಿತಾಂಶಕ್ಕೆ ಮಹತ್ವ ವಿದೆ. ಈ  ಚುನಾವಣೆಗಿಂತ ಮೊದಲು ವಿರೋಧ ಪಕ್ಷಗಳ ನಾಯಕತ್ವ ಯಾರಲ್ಲಿರಬೇಕು ಎಂಬ ಬಗ್ಗೆ ಭಿನ್ನ ನಿಲುವುಗಳಿದ್ದುವು. ಕಾಂಗ್ರೆಸ್‍ನ ¸ ಸಾಮರ್ಥ್ಯದ ಬಗ್ಗೆ ಅನುಮಾನಗಳಿದ್ದುವು. ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಸನ್ನು ಬೆದರಿಸುವ ಮತ್ತು ಸಾಮಾನ್ಯ ಪಕ್ಷವಾಗಿ ಕಾಣುವ ಹಂತಕ್ಕೆ  ತಲುಪಿದ್ದುವು. ಇದೀಗ ಸ್ಥಿತಿ ಬದಲಾಗಿದೆ. ವಿರೋಧ ಪಕ್ಷಗಳ ನಾಯಕತ್ವ ಕಾಂಗ್ರೆಸ್‍ಗೆ ಮರಳಿದೆ. ಬಿಜೆಪಿ ನೇತೃತ್ವದಲ್ಲಿ ಎನ್‍ಡಿಎ  ರಚನೆಗೊಂಡಂತೆ, ಕಾಂಗ್ರೆಸ್‍ನ ನೇತೃತ್ವದಲ್ಲೇ ವಿರೋಧ ಪಕ್ಷಗಳ ಒಕ್ಕೂಟ ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ. ನಿಜವಾಗಿ,
ಪಂಚ ರಾಜ್ಯ ಫಲಿತಾಂಶದ ಬಳಿಕದ ಸ್ಥಿತಿ ಇದು.

ಈ ಬಿಡಾರದಲ್ಲಿ ತುಂಬು ಕುಟುಂಬವೊಂದು ವಾಸವಿತ್ತು...



 ಘಟನೆ 1
ಹೆಣ್ಣು, ಗಂಡು ಮತ್ತು ಮಕ್ಕಳೂ ಸೇರಿರುವ ಉದ್ದದ ಸಾಲು. ಕೈಯಲ್ಲಿ ಪಾತ್ರೆಯನ್ನು ಹಿಡಿದು ಕೊಂಡಿರುವ ಆ ಸಾಲಿಗೆ ಧರ್ಮವಿಲ್ಲ.  ಹಸಿವೇ ಧರ್ಮ. ಮತ್ತೂ ಹುಡುಕಿದರೆ ಹಿಂದೂ, ಮುಸ್ಲಿಮ್, ಕ್ರೈಸ್ತ ಎಲ್ಲರೂ ಈ ಸಾಲಿನಲ್ಲಿ ಸಿಗುತ್ತಾರೆ. ಸಂಜೆ 6 ಗಂಟೆಗೆ ಈ ಸಾಲು ಸೇರುತ್ತದೆ. ಸಮಯಕ್ಕೆ ಸರಿಯಾಗಿ ವಾಹನವೊಂದು ಬಂದು ನಿಲ್ಲುವುದೂ ಅದರಿಂದ ಇಡ್ಲಿ ಮತ್ತು ಬೇಳೆಸಾರುಗಳುಳ್ಳ ದೊಡ್ಡ ಪಾತ್ರೆಗಳನ್ನು  ಇಳಿಸುವುದೂ ನಡೆಯುತ್ತದೆ. ಬಳಿಕ ನಡೆಯುವುದು ಹೃದಯವನ್ನು ಮೀಟುವ ಕ್ರಿಯೆ. ಸಾಲಿ ನಲ್ಲಿ ನಿಂತ ಸುಮಾರು 400-450 ಮಂದಿಗೆ  ಇದನ್ನು ಹಂಚುವ ಪ್ರಕ್ರಿಯೆ. ಒಬ್ಬೊಬ್ಬರಿಗೆ ಮೂರು ಇಡ್ಲಿ ಮತ್ತು ಸಾಂಬಾರು ಅಥವಾ ಮೂರು ಚಪಾತಿ ಮತ್ತು ಪದಾರ್ಥವನ್ನು ಹಂಚಲಾಗುತ್ತದೆ. ಈ ಸಾಲಿನಿಂದ ವ್ಯಕ್ತವಾಗುವ ಮಂದಹಾಸ ಮತ್ತು ಧನ್ಯತಾಭಾವವೇ ಈ ದಾನ ಎಷ್ಟು ಅಮೂಲ್ಯ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಘಟನೆ 2
ಆರು ಮಕ್ಕಳು ಮತ್ತು ತಾಯಿಯಿರುವ ಕುಟುಂಬ. ಮಕ್ಕಳ ಅಪ್ಪ ಈ ಮೊದಲೇ ತೀರಿ ಹೋಗಿದ್ದಾರೆ. ನಾಲ್ಕು ಪುಟ್ಟ ಮಕ್ಕಳು ಶಾಲೆಗೆ  ಹೋಗುತ್ತಿವೆ. ಓರ್ವ ಹೆಣ್ಣು ಮಗಳು ಮದುವೆ ಪ್ರಾಯಕ್ಕೆ ತಲುಪಿದ್ದಾಳೆ. ಇನ್ನೋರ್ವ ಎಳೆ ಪ್ರಾಯದ ಮಗನ ಮೇಲೆ ಮನೆ ನಡೆಸುವ  ಆನೆಭಾರ ಬಿದ್ದಿದೆ. ಟರ್ಪಾಲು ಹಾಸಿದ ಮನೆಯಲ್ಲಿ ಈ ಕುಟುಂಬದ ವಾಸ. ನಗರ ಪ್ರದೇಶದ ಬಹುಮಹಡಿ ಕಟ್ಟಡ ಗಳಲ್ಲಿ ವಾಸಿಸುವ  ಮಂದಿ ಅದನ್ನು ಮನೆ ಎಂದು ಒಪ್ಪುವುದು ಬಿಡಿ ಮನುಷ್ಯರು ವಾಸಿಸುವುದಕ್ಕೆ ಯೋಗ್ಯವಾದ ಜೋಪಡಿ ಎಂದೂ ಒಪ್ಪಲಾರರು. ವರ್ಷಗಳ  ಹಿಂದೆ ಈ ಜೋಪಡಿಗೆ ಸರಕಾರದ ವತಿಯಿಂದ ಹಕ್ಕು ಪತ್ರ ಸಿಕ್ಕರೂ ಅದನ್ನು ಪಡೆದುಕೊಳ್ಳುವುದಕ್ಕೆ ಅಸಮರ್ಥವಾದ ಕುಟುಂಬ ಇದು.  ಹಕ್ಕು ಪತ್ರ ಪಡಕೊಳ್ಳಬೇಕಾದರೆ 10 ಸಾವಿರ ರೂಪಾಯಿಯನ್ನು ಸರಕಾರಕ್ಕೆ ಪಾವತಿಸಬೇಕು. ಅಷ್ಟೊಂದು ಹಣವಿದ್ದರೆ ಹಳೆ ಟರ್ಪಾಲನ್ನು  ಕಳಚಿ ಹೊಸದನ್ನು ಹೊದೆಸಬಹುದಿತ್ತು ಎಂದು ಅಂದುಕೊಂಡ ಕುಟುಂಬ. ಈ ಪರಿಸ್ಥಿತಿಯಿಂದಾಗಿ ಹಕ್ಕು ಪತ್ರವೂ ದಕ್ಕದ ಸ್ಥಿತಿ. ಇದನ್ನು  ಕಂಡು ಮರುಗಿದ ಸಂಘಟನೆಯೊಂದು ಈ ಕುಟುಂಬಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಲು ಪಣ ತೊಟ್ಟಿತು. ದಾನಿಗಳನ್ನು ಸಂಪರ್ಕಿಸಿತು.  ಪ್ರತಿ ತಿಂಗಳೂ ಅಗತ್ಯದ ಆಹಾರ ವಸ್ತುಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಿತು. ಆದರೆ, ಹಸಿವು ತಣಿಯುವುದೊಂದೇ ಆ ಕುಟುಂಬದ ಮೂಲಭೂತ ಅಗತ್ಯ ಆಗಿರಲಿಲ್ಲ. ಬೆಳೆದ ಮಗಳು, ಮಗ ಮತ್ತು ಮಕ್ಕಳಿರುವ ಕುಟುಂಬಕ್ಕೆ ಖಾಸಗಿತನವನ್ನು ಕಾಪಾಡಿಕೊಳ್ಳಲು ಕನಿಷ್ಠ  ಏರ್ಪಾಡನ್ನು ಮಾಡಬೇಕಿತ್ತು. ಆದ್ದರಿಂದ ಹತ್ತು ಸಾವಿರ ರೂಪಾಯಿಯನ್ನು ಪಾವತಿಸಿ ಹಕ್ಕು ಪತ್ರವನ್ನು ಪಡೆದುಕೊಳ್ಳಲಾಯಿತು.  ಟರ್ಪಾಲು ಹಾಸಿದ ಗುಡಿಸಲಿನ ಬದಲು ಚಂದದ ಮನೆಯೊಂದನ್ನು ಕಟ್ಟಿ ಕೊಡಲು ನಿರ್ಧರಿಸಲಾಯಿತು. ಮೊನ್ನೆ ಮೊನ್ನೆ ಆ ಕುಟುಂಬ  ಹೊಸ ಮನೆಯಲ್ಲಿ ಹೊಸ ಬದುಕನ್ನು ಆರಂಭಿಸಿದೆ. ಮನೆಗೆ ಬೇಕಾಗಿರುವ ಮಂಚ, ಕುರ್ಚಿ, ಹಾಸಿಗೆ ಇತ್ಯಾದಿ ಮೂಲಭೂತ ಸವಲತ್ತುಗಳನ್ನು ಒದಗಿಸಿಕೊಡಲಾಗಿದೆ.
ಮೊದಲ ಘಟನೆ ದ.ಕ. ಜಿಲ್ಲೆಯ ಮಂಗಳೂರಿನ ಹೃದಯ ಭಾಗದಲ್ಲಿರುವ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯದ್ದಾದರೆ ಎರಡನೇ ಘಟನೆ ಮಂಗಳೂರಿನ ಹೊರ ವಲಯದ ಅಡ್ಡೂರು-ಪುಂಚಮಿಯ ಕಿನ್ನಿಗುಡ್ಡೆಯದ್ದು. ಮೊದಲು ಘಟನೆಯ ನೇತೃತ್ವವನ್ನು ಎಂ. ಫ್ರೆಂಡ್ಸ್ ಎಂಬ ತಂಡವು  ವಹಿಸಿಕೊಂಡಿದ್ದರೆ ಎರಡನೇ ಘಟನೆಯ ನೇತೃತ್ವವನ್ನು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕವು ವಹಿಸಿಕೊಂಡಿದೆ.  ಅಂದಹಾಗೆ, ಈ ಎರಡೂ ಘಟನೆಗಳ ನೇತೃತ್ವವನ್ನು ವಹಿಸಿಕೊಂಡವರು ಬೇರೆ ಬೇರೆ ಎಂಬುದನ್ನು ಬಿಟ್ಟರೆ ಉಳಿದಂತೆ ಸೇವೆ ಒಂದೇ.
ಜಗತ್ತಿನಲ್ಲಿ ಎರಡು ಬಗೆಯ ಬದುಕು ಇದೆ. ಒಂದು- ಬಯಸಿದ್ದೆಲ್ಲವನ್ನೂ ಅನುಭವಿಸುವ ಬದುಕಾದರೆ ಇನ್ನೊಂದು ಯಾವುದನ್ನೂ ಬಯಸದೆಯೇ ಇರುವ ಬದುಕು. ವಿಶೇಷ ಏನೆಂದರೆ, ಈ ಎರಡೂ ರೀತಿಯ ಬದುಕನ್ನು ಬದುಕುತ್ತಿರುವರು ಮನುಷ್ಯರೇ. ಹಾಗಂತ,  ಇವರಿಬ್ಬರೂ ವೈರಿಗಳಲ್ಲ. ಸ್ಪರ್ಧಿಗಳೂ ಅಲ್ಲ. ಅಲ್ಲದೇ, ಇವರಿಬ್ಬರ ನಡುವೆ ಅನೇಕ ವೇಳೆ ಭೇಟಿಯೂ ಆಗಿರುವುದಿಲ್ಲ. ಇಬ್ಬರೂ  ಒಂದೊಂದು ಮೂಲೆಯಲ್ಲಿ ತಮ್ಮದೇ ಕೋಟೆ ಮತ್ತು ಜೋಪಡಿಯನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ. ಇದೊಂದು ರೀತಿಯಲ್ಲಿ ಆರ್ಥಿಕ  ಅಸಮತೋಲನ. ಉಳ್ಳವರು ಮತ್ತು ಇಲ್ಲದವರ ನಡುವೆ ಕೊಂಡಿಯೊಂದನ್ನು ಜೋಡಿಸದೇ ಇರುವುದರ ಫಲಿತಾಂಶ. ನಿಜವಾಗಿ, ಉಳ್ಳವರ  ಬಗ್ಗೆ ಇಲ್ಲದವರಲ್ಲಿ ಅಭಿಮಾನ ಮತ್ತು ಗೌರವ ಮೂಡುವುದು ಯಾವಾಗ ಎಂದರೆ, ಉಳ್ಳವರು ತಮ್ಮ ಸಂಪತ್ತಿನಲ್ಲಿ ಒಂದಷ್ಟು ಪಾಲನ್ನು  ಇಲ್ಲದವರಿಗೆ ನೀಡುವಾಗ. ಇದನ್ನು ಇಸ್ಲಾಮ್ ಝಕಾತ್ (ಕಡ್ಡಾಯ ದಾನ) ಎಂಬ ಪದಪ್ರಯೋಗದೊಂದಿಗೆ ಗುರುತಿಸಿದೆ. ನಿಜವಾಗಿ,  ಇದೊಂದು ರೀತಿಯ ಕ್ರಾಂತಿಕಾರಿ ಪರಿಕಲ್ಪನೆ. ಉಳ್ಳವರನ್ನು ಮತ್ತು ಇಲ್ಲದವರನ್ನು ಒಂದೇ ಬಿಂದುವಿನಲ್ಲಿ ಸೇರಿಸುವ ಮತ್ತು ಪರಸ್ಪರ  ಅವಲಂಬಿಗಳನ್ನಾಗಿಸುವ ಕ್ರಿಯೆ. ಓರ್ವರಲ್ಲಿ ಖರ್ಚು-ವೆಚ್ಚಗಳೆಲ್ಲ ಮುಗಿದು ವರ್ಷದ ಕೊನೆಯಲ್ಲಿ ಹತ್ತೂವರೆ ಪವನ್ ಬಂಗಾರ ಅಥವಾ  ಅದಕ್ಕೆ ಸಮನಾದ ಮೊತ್ತಕ್ಕಿಂತ ಮಿಕ್ಕಿ ಉಳಿಕೆಯಾಗಿದ್ದರೆ ಅವರು ಅದರ ಮೇಲೆ ಎರಡೂವರೆ ಶೇಕಡಾ ಮೊತ್ತವನ್ನು ಕಡ್ಡಾಯವಾಗಿ  ಇಲ್ಲದವರಲ್ಲಿ ಹಂಚಬೇಕು. ಇದು ಮುಸ್ಲಿಮರ ಮಟ್ಟಿಗೆ ನಮಾಝ, ಉಪವಾಸದಂತೆಯೇ ಕಡ್ಡಾಯ. ಇದನ್ನು ಒಂದಷ್ಟು ಸಾವಧಾನದೊಂದಿಗೆ ಅವಲೋಕಿಸಿ ನೋಡಿ. ಒಂದು ಗ್ರಾಮದಲ್ಲಿ ಹೀಗೆ ಕಡ್ಡಾಯ ದಾನ ಮಾಡಲು ಅರ್ಹರಾಗಿರುವ 20 ಮಂದಿ ಇದ್ದಾರೆ  ಎಂದಿಟ್ಟುಕೊಳ್ಳಿ. ಮಾತ್ರವಲ್ಲ, ಅವರು ತಮ್ಮ ಕಡ್ಡಾಯ ದಾನವನ್ನು ನೀಡಲು ಸಿದ್ಧರೂ ಇದ್ದಾರೆ. ಈಗ ಆಗಬೇಕಾಗಿರುವ ತುರ್ತು ಕೆಲಸ  ಏನೆಂದರೆ, ಅದನ್ನು ಸಂಗ್ರಹಿಸುವುದು ಮತ್ತು ಆ ಊರು ಮತ್ತು ಪರ ಊರಿನಲ್ಲಿ  ಇರಬಹುದಾದ ಕಡು ಬಡವರನ್ನು ಗುರುತಿಸಿ ಅವರ ಸಮಗ್ರ ಸಬಲೀಕರಣಕ್ಕಾಗಿ ಅದನ್ನು ವಿನಿಯೋಗಿಸುವುದು. ಇದೊಂದು ರೀತಿಯ ಚಳವಳಿ. ಉಳ್ಳವರಿಂದ ಝಕಾತನ್ನು ಸಂಗ್ರಹಿಸುವುದು  ಮತ್ತು ಸಾಧ್ಯವಾದರೆ ಅವರನ್ನು ಜೊತೆಯಿಟ್ಟು ಕೊಂಡೇ ಇಲ್ಲದವರ ಜೋಪಡಿಗೆ ತೆರಳಿ ಅವರನ್ನು ಆ ಸ್ಥಿತಿಯಿಂದ ಮೇಲೆತ್ತುವುದಕ್ಕೆ  ಯೋಜನೆಗಳನ್ನು ರೂಪಿಸುವುದು. ಇದು ಚಳವಳಿಯ ರೂಪದಲ್ಲಿ ನಡೆದರೆ ಸಾಮಾಜಿಕ ಅಸಮಾನತೆಗೆ ಬಹುದೊಡ್ಡ ತಡೆಯನ್ನು ಒಡ್ಡಬಹುದು.
ನಮ್ಮ ನಡುವೆ ಇರುವ ಎಲ್ಲ ಸಿದ್ಧಾಂತಗಳೂ ಬಡವನ ಮನೆಯ ಬಳಿ ಬಂದು ನಿಂತಾಗ ಮೌನವಾಗುತ್ತವೆ. ಕಮ್ಯುನಿಸಂ ಆಗಲಿ, ಬಂಡವಾಳಶಾಹಿಯಾಗಲಿ ಎರಡೂ ಬಡತನ ನಿರ್ಮೂಲನೆಗೆ ಮಂಡಿಸುವ ವಿಚಾರಗಳಲ್ಲಿ ಅಪೂರ್ಣತೆ ಇದೆ. ಅನಾದಿ ಕಾಲದಲ್ಲಿ ಬಡತನವನ್ನು ಶಾಪದ ಫಲವೆಂಬಂತೆ ಕಾಣಲಾಗುತ್ತಿದ್ದರೆ ಆಧುನಿಕ ಕಾಲದಲ್ಲಿ ಅವಮಾನವಾಗಿ ಕಾಣಲಾಗುತ್ತದೆ. ಆದ್ದರಿಂದಲೇ, ಸರಕಾರಗಳು  ಬಡವರ ಸಂಖ್ಯೆಯನ್ನು ಕಡಿಮೆಗೊಳಿಸಿ ತೋರಿಸಲು ಪ್ರಯತ್ನಿಸುತ್ತಿವೆ. ನಿಜವಾಗಿ, ಇದಕ್ಕೆ ಪರಿಹಾರ ಝಕಾತ್ ಎಂಬ ಪರಿಕಲ್ಪನೆ.  ಒಂದುವೇಳೆ, ಇಸ್ಲಾಮ್‍ನ ಬದಲು ಬಂಡವಾಳಶಾಹಿತ್ವ ಅಥವಾ ಕಮ್ಯುನಿಸಂ ಸಿದ್ಧಾಂತವು ಝಕಾತನ್ನು ಪರಿಚಯಿಸಿರುತ್ತಿದ್ದರೆ ಅದಕ್ಕೆ ಇವತ್ತು  ಸಾಕಷ್ಟು ಸಾಮಾಜಿಕ ಮನ್ನಣೆ ಸಿಗುತ್ತಿತ್ತೇನೋ? ಆರ್ಥಿಕ ಅಸಮತೋಲನ ಮತ್ತು ಸಾಮಾಜಿಕ ಅಸಮಾನತೆಯನ್ನು ತೊಲಗಿಸಲು ಸಮರ್ಪಕ ಆಯುಧವಾಗಿ ಬಿಂಬಿತಗೊಳ್ಳುತ್ತಿತ್ತೇನೋ? ಅಂದಹಾಗೆ,
ದೇವ ಮತ್ತು ಮಾನವನ ನಡುವಿನ ಸಂಭಾಷಣೆಯ ಎಳೆಯೊಂದನ್ನು ಪ್ರವಾದಿ ಮುಹಮ್ಮದ್(ಸ) ಹೀಗೆ ಹಂಚಿ ಕೊಂಡಿದ್ದಾರೆ;
ಸತ್ತು ಮತ್ತೆ ಎಬ್ಬಿಸಲ್ಪಟ್ಟು ವಿಚಾರಣೆಗೆ ತಯಾರಾದ ಮಾನವನೊಂದಿಗೆ ದೇವನು ಕೇಳುತ್ತಾನೆ,
ನಾನು ರೋಗಿಯಾಗಿದ್ದೆ, ಆದರೆ ನೀನು ನನ್ನನ್ನು ವಿಚಾರಿಸಲು ಬರಲಿಲ್ಲ.
ಮಾನವನಿಗೆ ಆಶ್ಚರ್ಯವಾಗುತ್ತದೆ. ಎಲ್ಲಿಯ ಮಾನವ. ಎಲ್ಲಿಯ  ದೇವ. ನಿನಗೆ ರೋಗವಾ? ನೀನು ದೇವನಲ್ಲವೇ ಎಂದು ಪ್ರಶ್ನಿಸುತ್ತಾನೆ. ಆಗ ದೇವನು, ನನ್ನ ಇಂತಿಂಥ ದಾಸ ರೋಗಿಯಾಗಿದ್ದ. ನೀನು  ಅವನನ್ನು ಸಂದರ್ಶಿಸಿರುತ್ತಿದ್ದರೆ ನನ್ನನ್ನು ಸಂದರ್ಶಿಸಿದಂತಾಗುತ್ತಿತ್ತು ಎನ್ನುತ್ತಾನೆ. ಆ ಬಳಿಕ ದೇವನು ಹೇಳುತ್ತಾನೆ, ನಾನು ಊಟ ಕೇಳಿದೆ.  ಆದರೆ ನೀನು ಉಣಿಸಲಿಲ್ಲ. ಮಾನವನಿಗೆ ಮತ್ತದೇ ಆಶ್ಚರ್ಯ. ನಿನಗೆ ಹಸಿವೇ? ದೇವನೂ ಹಸಿಯುತ್ತಾನಾ? ದೇವನ ಉತ್ತರ ಏನೆಂದರೆ,  ಇಂತಿಂಥ ಮನುಷ್ಯ ನಿನ್ನಲ್ಲಿ ಊಟ ಕೇಳಿದ್ದ.   ನೀನು ಆತನಿಗೆ ಊಟ ನೀಡಿರುತ್ತಿದ್ದರೆ ನನಗೆ ನೀಡಿದಂತಾಗುತ್ತಿತ್ತು. ಮೂರನೆಯದಾಗಿ  ದೇವನು ಹೇಳುತ್ತಾನೆ, ಇಂತಿಂಥ ವ್ಯಕ್ತಿ ನಿನ್ನಲ್ಲಿ ದಾಹ ತಣಿಸುವಂತೆ ಕೇಳಿಕೊಂಡಿದ್ದ. ಆದರೆ ನೀನು ಆತನಿಗೆ ನೀರನ್ನು ಕೊಡಲಿಲ್ಲ.  ಕೊಟ್ಟಿರುತ್ತಿದ್ದರೆ ಅದು ನನಗೆ ಕೊಟ್ಟಂತಾಗುತ್ತಿತ್ತು.
ಇದೊಂದು ಮಾರ್ಮಿಕ ಮಾತುಕತೆ. ದೇವನು ಮನುಷ್ಯರೊಂದಿಗೆ ಮನುಷ್ಯ ಭಾವದಲ್ಲಿ ಮಾತಾಡುತ್ತಾನೆ. ದೇವನಿಗೆ ಕೊಡುವುದು ಎಂದರೆ  ಮನುಷ್ಯನಿಗೆ ಕೊಡುವುದು ಎಂದರ್ಥ ಎಂಬ ರೀತಿಯಲ್ಲಿ ವಿವರಿಸುತ್ತಾನೆ. ಇದೊಂದೇ ಅಲ್ಲ, ಪಾಪ ಗಳಿಗೆ ಪ್ರಾಯಶ್ಚಿತ್ತವಾಗಿ ಪವಿತ್ರ  ಕುರ್‍ಆನ್ ಪ್ರಸ್ತಾಪಿಸುವ ವಿವರಗಳೂ ಅಚ್ಚರಿಯದ್ದು. ದೇವನೊಂದಿಗಿನ ಕರ್ತವ್ಯದಲ್ಲಿ ಚ್ಯುತಿ ಉಂಟಾಗುವುದನ್ನು ದೇವನು ಹೇಗೆ  ನೋಡುತ್ತಾನೆಂದರೆ, ಅದು ಮನುಷ್ಯರಿಗೆ ಮಾಡಲಾದ ದ್ರೋಹ ಎಂಬಂತೆ. ರಮಝಾನ್ ತಿಂಗಳ ಉಪವಾಸ ಆಚರಿಸಲು ಅಶಕ್ತರಾದವರು  ಬಡವನಿಗೆ ಎರಡು ಹೊತ್ತಿನ ಊಟವನ್ನು ನೀಡಬೇಕು (2:185) ಎಂದು ಪವಿತ್ರ ಕುರ್‍ಆನ್‍ನಲ್ಲಿ ಹೇಳಲಾಗಿದೆ. ದೇವನಿಗಾಗಿ ಕಡ್ಡಾಯ  ಉಪವಾಸ ಆಚರಿಸುವ ವೇಳೆ ಉಂಟಾಗಿರಬಹುದಾದ ಲೋಪ-ದೋಷಗಳಿಗೆ ಪರಿಹಾರ ಏನೆಂದರೆ, ಬಡವರಿಗೆ ಫಿತ್ರ್ ಝಕಾತ್ ನೀಡುವುದು. ಈ ಹಿಂದೆ ಪ್ರವಾದಿಯವರ ಕಾಲದಲ್ಲಿ ಪತ್ನಿಯನ್ನು ತಾಯಿಯಂತೆ ಎಂದು ಪತಿ ಹೇಳುವ ಕ್ರಮ (ಝಿಹಾರ್) ಇತ್ತು. ಪತ್ನಿಯ ಜೊತೆ ಜಗಳವಾಡಿದ ಪತಿ, ನೀನು ಇನ್ನು ಮುಂದಕ್ಕೆ ನನಗೆ ತಾಯಿಗೆ ಸಮಾನ ಎಂದು ಹೇಳುತ್ತಿದ್ದ. ಆ ಬಳಿಕ ಆಕೆ ಆತನಿಗೆ ನಿಷಿದ್ಧವಾಗುತ್ತಿದ್ದಳು.  ಅತ್ತ ವಿಚ್ಛೇದನವೂ ಇಲ್ಲ, ಇತ್ತ ಪತ್ನಿಯಾಗಿಯೂ ಇಲ್ಲದ ತ್ರಿಶಂಕು ಸ್ಥಿತಿ. ಗಂಡಿನ ಈ ತಪ್ಪಿಗೆ ಅಲ್ಲಾಹನು ಪ್ರಾಯಶ್ಚಿತ್ತವಾಗಿ ನಿಗದಿಪಡಿಸಿರುವು ದೇನೆಂದರೆ, 60 ಮಂದಿ ದರಿದ್ರರಿಗೆ ಊಟ ಹಾಕುವುದು (ಪವಿತ್ರ ಕುರ್‍ಆನ್ 58:3). ಶಪಥವನ್ನು ಉಲ್ಲಂಘಿಸುವವರಿಗೆ  ಪ್ರಾಯಶ್ಚಿತ್ತವಾಗಿ 10 ಮಂದಿ ದರಿದ್ರರಿಗೆ ಊಟ ಕೊಡಬೇಕೆಂದು (5:59) ಪವಿತ್ರ ಕುರ್‍ಆನ್ ಒಂದು ಕಡೆ ಹೇಳುವಾಗ, ಇನ್ನೊಂದು ಕಡೆ  ಬಡವರಿಗೆ ಉಣಿಸುವುದು ಸಜ್ಜನ ದಾಸರ ಗುಣಸ್ವಭಾವ (76: 9-10) ಎಂದೂ ಹೇಳುತ್ತದೆ. ನಿಜವಾಗಿ, 
ಬದುಕನ್ನು ಪರೀಕ್ಷೆ ಎಂದು ನಂಬುವವರು ಇರುವಂತೆಯೇ ಹಾಗೆ ನಂಬದವರೂ ಈ ಜಗತ್ತಿನಲ್ಲಿದ್ದಾರೆ. ಹೀಗಿದ್ದರೂ, ಕೌತುಕ ಗಳು ಈ  ಜಗತ್ತಿನಲ್ಲಿ ನಡೆಯುತ್ತಲೇ ಇರುತ್ತವೆ. ಅತ್ಯಂತ ಆರೋಗ್ಯವಂತ ಮತ್ತು ಕಟ್ಟುಮಸ್ತಾದ ವ್ಯಕ್ತಿ ಒಂದು ದಿನ ಇದ್ದಕ್ಕಿ ದ್ದಂತೆ  ಅನಾರೋಗ್ಯಕ್ಕೀಡಾಗುತ್ತಾನೆ. ದೇಹ ನಿಶ್ಶಕ್ತಿಗೀಡಾಗುತ್ತದೆ. ಬಡವನೋರ್ವ ನೋಡನೋಡುತ್ತಲೇ ಶ್ರೀಮಂತನಾಗಿ ಬದಲಾಗುತ್ತಾನೆ.  ಶ್ರೀಮಂತನ ಸಂಪತ್ತು ಕರಗುತ್ತಾ ಕರಗುತ್ತಾ ನಿಧಾನಕ್ಕೆ ನಿರ್ವಾತ ಉಂಟಾಗುತ್ತದೆ. 50 ವರ್ಷಕ್ಕೇ ಇಷ್ಟು ಸಾಕು ಎಂದು ನಿಟ್ಟುಸಿರು  ಬಿಡುವವರೂ 90 ವರ್ಷವಾದರೂ ಅಪಾರ ಜೀವನ ಪ್ರೀತಿಯಿಂದ ಬದುಕುವವರೂ ಇಲ್ಲಿದ್ದಾರೆ. ಬಹುಶಃ ಇದೊಂದು ಜೀವನ ಚಕ್ರ. ಈ  ಚಕ್ರ ತಿರುಗುತ್ತಲೇ ಇರುತ್ತದೆ. ಚಕ್ರದ ತಳಭಾಗ ದಲ್ಲಿ ಇರುವವರು ಶಾಶ್ವತವಾಗಿ ತಳಭಾಗದಲ್ಲೇ  ಇರುವುದಿಲ್ಲ. ಒಂದು ಕಾಲದಲ್ಲಿ ಆತ ಮೇಲೇರಬೇಕಾಗುತ್ತದೆ. ಮೇಲ್ಭಾಗದಲ್ಲಿರುವವರು ಶಾಶ್ವತವಾಗಿ ಮೇಲ್ಭಾಗದಲ್ಲೇ  ಇರುವುದೂ ಇಲ್ಲ. ಅವರು ತಳಭಾಗವನ್ನು ಸ್ಪರ್ಶಿಸಲಿದ್ದಾರೆ.  ಹೀಗೆ ತಿರುಗುವ ಚಕ್ರದಲ್ಲಿ ಸಿಲುಕಿಕೊಂಡಿರುವ ಮಾನವರೆಲ್ಲರೂ ಪರಸ್ಪರರನ್ನು ಅವಲಂಬಿಸಿ ಮತ್ತು ಆಧರಿಸಿಕೊಂಡು ಬದುಕಬೇಕು  ಅನ್ನುವುದು ಸೃಷ್ಟಿಕರ್ತನ ಬಯಕೆ. ಮೇಲ್ಭಾಗದಲ್ಲಿರುವವರು ತಳಭಾಗದಲ್ಲಿರುವವರನ್ನು ಆಧರಿಸಬೇಕು. ತನ್ನಲ್ಲಿರುವುದರಿಂದ ಸ್ವಲ್ಪಂಶವನ್ನು  ಕೆಳಭಾಗದಲ್ಲಿರು ವವರಿಗೆ ನೀಡಿ ಅವರಲ್ಲಿ ಜೀವನ ಪ್ರೇಮವನ್ನು ಹುಟ್ಟಿಸಬೇಕು. ತಳಭಾಗದವ ಮೇಲ್ಭಾಗದವರನ್ನು ಗೌರವದಿಂದ ಕಾಣಬೇಕು. ಆದ್ದರಿಂದಲೇ ದೇವನ ಜೊತೆಗಿನ ಕರ್ತವ್ಯಚ್ಯುತಿಯನ್ನು ಮನುಷ್ಯರ ಜೊತೆಗಿನ ಕರ್ತವ್ಯ ಚ್ಯುತಿಯಾಗಿ ಮತ್ತು ಅವರಿಗೆ ಉಣಿಸುವ  ಮೂಲಕ ಅದಕ್ಕಿರುವ ಪ್ರಾಯಶ್ಚಿತ್ತವಾಗಿ ದೇವನು ಪರಿಗಣಿಸಿರುವುದು. ಆಳವಾಗಿ ಯೋಚಿಸಿದರೆ ಇದೊಂದು ಅದ್ಭುತ ಪರಿಕಲ್ಪನೆ.  ಶ್ರೀಮಂತರು ಮತ್ತು ಬಡವರನ್ನು ಜೋಡಿಸುವ ಮತ್ತು ಬಂಧುಗಳನ್ನಾಗಿಸುವ ಹೊಸ ಬಗೆಯ ಚಿಂತನೆ.

 ಆರಂಭದಲ್ಲಿ ಹೇಳಲಾದ ಎರಡೂ ಘಟನೆಗಳು ಇದಕ್ಕೆ ಉದಾಹರಣೆ, ಅಷ್ಟೇ.

ಆಯ್ಕೆಯ ಸ್ವಾತಂತ್ರ್ಯ ಮತ್ತು ಖದೀಜ ರೆಹಮಾನ್



  
ಆಯ್ಕೆಯ ಸ್ವಾತಂತ್ರ್ಯ ಅಂದರೇನು? ಯಾವುದು ಆಯ್ಕೆ ಮತ್ತು ಯಾವುದು ಆಯ್ಕೆ ಅಲ್ಲ ಎಂದು  ತೀರ್ಮಾನಿಸಬೇಕಾದವರು ಯಾರು? ನಟಿ ಕರೀನಾ ಕಪೂರ್ ಸಿನಿಮಾದಲ್ಲಿ ಧರಿಸುವ ಉಡುಪು ಆಕೆಯ  ಆಯ್ಕೆಯೋ ಅಥವಾ ಸಿನಿಮಾ ನಿರ್ದೇಶಕರ ಆಯ್ಕೆಯೋ? ಆಕೆ ಸಿನಿಮಾದ ಹೊರಗೆ ನಿಜ ಜೀವನದಲ್ಲಿ ಧರಿಸುವ  ಉಡುಪಿನ ಆಯ್ಕೆ ಯಾರದು? ಪತಿಯದ್ದೋ, ತಂದೆಯದ್ದೋ, ಗೆಳತಿಯದ್ದೋ, ವಿನ್ಯಾಸಕಾರನದ್ದೋ,  ತಾಯಿಯದ್ದೋ? ಸಂಗೀತ ನಿರ್ದೇಶಕ ಏ.ಆರ್. ರೆಹಮಾನ್‍ರ ಮಗಳು ಖತೀಜ ರೆಹಮಾನ್ ನಕಾಬ್  ಧರಿಸಿದುದಕ್ಕೆ ಆಕ್ಷೇಪ ವ್ಯಕ್ತಪಡಿಸಿದವರು ಆಯ್ಕೆಯ ಸ್ವಾತಂತ್ರ್ಯಕ್ಕೆ ಕೊಡುವ ವಿವರಣೆಗಳೇನು? ನಕಾಬ್ ಧರಿಸುವುದು  ಪ್ರಗತಿ ವಿರೋಧಿಯೇ? ಆಯ್ಕೆಯ ಸ್ವಾತಂತ್ರ್ಯದ ಅಡಿಯಲ್ಲಿ ನಕಾಬ್, ಬುರ್ಖಾ, ಹಿಜಾಬ್, ಗಡ್ಡ ಇತ್ಯಾದಿಗಳು  ಬರುವುದಿಲ್ಲವೇ? ಮಹಿಳೆಯೋರ್ವಳು ನಕಾಬೋ ಬುರ್ಖಾವೋ ಧರಿಸಿದರೆ ಅದನ್ನು ಪುರುಷರ ಬಲವಂತದ  ಹೇರಿಕೆ ಎಂದು ವ್ಯಾಖ್ಯಾನಿಸುವವರು, ಪುರುಷ ಪ್ಯಾಂಟ್-ಶರ್ಟ್ ಧರಿಸುವುದನ್ನು; ಲುಂಗಿ-ಬನಿಯನ್ನು,  ಕುರ್ತಾ-ಪೈಜಾಮ, ಬರ್ಮುಡಾ ಚಡ್ಡಿ ಇತ್ಯಾದಿ ಧರಿಸುವುದರಲ್ಲಿ ಯಾಕೆ ಬಲ ವಂತದ ಹೇರಿಕೆಯನ್ನು  ಕಾಣುವುದಿಲ್ಲ? ಪುರುಷನ ಮೇಲೆ ಮಹಿಳೆ ಈ ಉಡುಪುಗಳನ್ನು ಯಾಕೆ ಹೇರಿರಬಾರದು? ಯಾಕೆ ಇವುಗಳು  ಪುರುಷರ ಸಹಜ ಆಯ್ಕೆಯಾಗಿರಬೇಕು? ಮಹಿಳೆ ನಕಾಬ್ ಧರಿಸಿದರೆ ಬಲವಂತದ ಹೇರಿಕೆ, ಅದೇ ಪುರುಷ  ಪ್ಯಾಂಟು ಧರಿಸಿದರೆ ಸಹಜ ಆಯ್ಕೆ- ಏನಿದೆಲ್ಲ? ಆಯ್ಕೆಯ ಸ್ವಾತಂತ್ರ್ಯ ಎಂಬುದು ಯಾರು ಯಾವ ಉಡುಪನ್ನು  ಧರಿಸುತ್ತಾರೆ ಎಂಬುದನ್ನು ಅವಲಂಬಿಸಿಕೊಂಡಿದೆ ಎಂಬ ರೀತಿಯಲ್ಲಿ ಪ್ರತಿ ಬಾರಿಯೂ  ಚರ್ಚೆಗಳಾಗುತ್ತಿರುವುದು ಯಾಕಾಗಿ? ಓರ್ವರು ಪ್ರಗತಿಪರರೋ ಪ್ರಗತಿರಹಿತರೋ ಎಂಬುದನ್ನು  ತೀರ್ಮಾನಿಸಬೇಕಾದುದು ಯಾವುದರ ಆಧಾರದಲ್ಲಿ? ಅವರು ಧರಿಸಿರುವ ಉಡುಪು, ಬಿಟ್ಟಿರುವ ಗಡ್ಡ,  ಧರಿಸಿರಬಹುದಾದ ಮುಂಡಾಸು ಮತ್ತು ಚಪ್ಪಲಿಗಳು ಇದನ್ನು ನಿರ್ಧರಿಸಬಲ್ಲುದೇ?
ಹಿಜಾಬ್, ಬುರ್ಖಾ, ನಕಾಬ್, ಚಾದ್ರಿ ಇತ್ಯಾದಿಗಳೆಲ್ಲ ಬೇರೆ ಬೇರೆ. ಬುರ್ಖಾ ಎಂಬುದು ಹಿಜಾಬ್‍ನ ಪರ್ಯಾಯ  ಪದ ಅಲ್ಲ. ನಕಾಬ್ ಅಂದರೆ ಬುರ್ಖಾವೂ ಅಲ್ಲ. ಮುಖದ ಸಹಿತ ಇಡೀ ದೇಹವನ್ನು ಮರೆಸುವ ಉಡುಪಿಗೆ  ಸಾಮಾನ್ಯವಾಗಿ ಬುರ್ಖಾ ಅನ್ನುತ್ತಾರೆ. ಇದರಲ್ಲಿ ಕಣ್ಣಿನ ಭಾಗ ತೆರೆದಿರುವುದಿಲ್ಲ. ಅದರ ಬದಲು ತೆಳುವಾದ  ಬಟ್ಟೆಯನ್ನು ಮುಖದ ಮೇಲೆ ಹಾಸಲಾಗುತ್ತದೆ. ಅಫಘಾನ್, ಆಫ್ರಿಕನ್ ರಾಷ್ಟ್ರಗಳಲ್ಲಿ ಈ ಬಗೆಯ ಉಡುಪು ಹೆಚ್ಚು  ಪ್ರಚಲಿತದಲ್ಲಿದೆ. ಅಫಘಾನ್‍ನ ಪಶ್ತೂನ್ ಬುಡಕಟ್ಟುಗಳಲ್ಲಿ ಈ ಬಗೆಯ ಉಡುಪಿಗೆ ಚಾದ್ರಿ ಎಂದು ಕರೆಯುತ್ತಾರೆ.  ಪ್ರವಾದಿ ಮುಹಮ್ಮದರ ಜನನಕ್ಕಿಂತ ಮುಂಚೆಯೇ ಪಶ್ತೂನ್‍ಗಳು ಈ ಬಗೆಯ ಉಡುಪನ್ನು ಧರಿಸುತ್ತಿದ್ದರು ಎಂದೂ  ಹೇಳಲಾಗುತ್ತದೆ. ಇನ್ನು, ನಕಾಬ್ ಎಂಬುದು ಮುಖವನ್ನು ಮರೆಸುವ ವಸ್ತ್ರದ ಹೆಸರು. ಆಸ್ಕರ್ ವಿಜೇತ ಸಿನಿಮಾ  ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದ 10ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಏ.ಆರ್. ರೆಹಮಾನ್‍ರ ಮಗಳು ಖತೀಜ ರೆಹಮಾನ್ ಧರಿಸಿದ್ದು ಇದೇ ನಕಾಬನ್ನು. ಆಕೆ ಅಪ್ಪಟ ಭಾರತೀಯ  ಮಹಿಳೆಯರಂತೆ ಸೀರೆ ಉಟ್ಟಿದ್ದರು ಮತ್ತು ಮುಖವನ್ನು ಮರೆಸುವ ನಕಾಬನ್ನು ಧರಿಸಿದ್ದರು. ಇನ್ನೊಂದು, ಹಿಜಾಬ್.  ಸರಳವಾಗಿ ಹೇಳಬೇಕೆಂದರೆ, ಮೈ ಮುಚ್ಚುವ ಉಡುಪು. ದೈಹಿಕ ಅವಯವಗಳು ಬಹಿರಂಗವಾಗಿ ಕಾಣದಂತೆ  ತಡೆಯುವ ವಸ್ತ್ರ. ಇದಕ್ಕೆ ನಿರ್ದಿಷ್ಟ ವಿನ್ಯಾಸ ಎಂಬುದಿಲ್ಲ. ನಿರ್ದಿಷ್ಟ ಬಣ್ಣ ಇಲ್ಲ. ನಿರ್ದಿಷ್ಟ ಬಟ್ಟೆಯೂ ಇಲ್ಲ. ಉಡುಪು  ಯಾವುದೇ ಇರಬಹುದು ಮತ್ತು ಅದರ ಬಣ್ಣ ಹಾಗೂ ವಿನ್ಯಾಸ ಏನೇ ಇರಬಹುದು, ಅದನ್ನು ಧರಿಸಿದವರ ದೈಹಿಕ  ಅವಯವಗಳನ್ನು ಅದು ಬಹಿರಂಗವಾಗಿ ಕಾಣಬಾರದು ಎಂಬುದಷ್ಟೇ ಷರತ್ತು. ದುರಂತ ಏನೆಂದರೆ,
  99% ಮಾಧ್ಯಮ ಸಂಸ್ಥೆಗಳಿಗೂ ಹಿಜಾಬ್, ನಕಾಬ್, ಬುರ್ಖಾ ಇತ್ಯಾದಿಗಳ ನಡುವೆ ಇರುವ ವ್ಯತ್ಯಾಸ ಗೊತ್ತೇ ಇಲ್ಲ.  ನಕಾಬನ್ನೇ ಅವು ಹಿಜಾಬ್ ಅನ್ನುತ್ತಿವೆ. ಆಸ್ಟ್ರಿಯಾ, ಕೆನಡಾ, ಕ್ಯೂಬೆಕ್, ಡೆನ್ಮಾರ್ಕ್, ಫ್ರಾನ್ಸ್, ಬೆಲ್ಜಿಯಂ, ತಜಕಿಸ್ತಾನ್,  ಬಲ್ಗೇರಿಯಾ, ಕ್ಯಾಮರೂನ್, ಚಾಡ್, ನೆದರ್ಲಾಂಡ್, ಚೀನಾ ಇತ್ಯಾದಿ ರಾಷ್ಟ್ರಗಳಲ್ಲಿ ನಕಾಬ್‍ಗೆ ಇರುವ ನಿಷೇಧವನ್ನು  ‘ಹಿಜಾಬ್‍ಗೆ ನಿಷೇಧ’ ಎಂಬ ರೀತಿಯಲ್ಲಿ ಅವು ಸುದ್ದಿ ಬಿತ್ತರಿಸುತ್ತಿವೆ. ನಿಷೇಧ ಇರುವುದು ಮುಖ ಮುಚ್ಚುವ  ಬುರ್ಖಾಕ್ಕೆ ಅಥವಾ ನಕಾಬ್‍ಗೆ. ಹಿಜಾಬ್‍ಗೆ ನಿಷೇಧ ವಿಧಿಸಲು ಸಾಧ್ಯವೇ ಇಲ್ಲ. ಖದೀಜ ರೆಹಮಾನ್  ಧರಿಸಿರುವುದು ಹಿಜಾಬ್ ಮತ್ತು ನಕಾಬ್. ಹಾಗಂತ, ನಕಾಬ್ ಅಗತ್ಯವೋ ಅಲ್ಲವೋ ಅನ್ನುವುದನ್ನು  ಚರ್ಚಿಸಬಹುದು. ಅದರಿಂದಾಗಬಹುದಾದ ತೊಂದರೆಗಳ ಪಟ್ಟಿ ಮಾಡಬಹುದು. ಆದರೆ, ನಕಾಬನ್ನೇ ಪ್ರಗತಿ  ವಿರೋಧಿ ಎಂದು ಬಣ್ಣಿಸುವುದೇಕೆ? ಪ್ರಗತಿಪರತೆಯನ್ನು ಬಟ್ಟೆಯ ಉದ್ದಳತೆಗೆ ಸೀಮಿತಗೊಳಿಸಿ ನೋಡುವುದು  ಏಕೆ?
ಉಡುಪಿಗೆ ಮಾನವನಷ್ಟೇ ಪುರಾತನ ಇತಿಹಾಸವಿದೆ. ಆದಿಪಿತ ಆದಮ್ ಮತ್ತು ಹವ್ವಾರು ಮರದ ಎಲೆಗಳನ್ನು ಬಳಸಿ  ಮೈ ಮುಚ್ಚಿಕೊಂಡರು ಎಂದು ಪವಿತ್ರ ಕುರ್‍ಆನ್ ಹೇಳುತ್ತದೆ. ಬರಬರುತ್ತಾ ಮಾನವ ಎಲೆಗಳಿಂದ ಹೊರಬಂದ.  ಬಟ್ಟೆಯನ್ನು ಸಂಶೋಧಿಸಿದ. ಕಾಲ ಕಳೆದಂತೆ ಬಟ್ಟೆಯಲ್ಲಿ ವಿವಿಧ ವಿನ್ಯಾಸಗಳನ್ನು ಮಾಡಲು ಕಲಿತ. ಈ ವಿನ್ಯಾಸ  ಪ್ರಕ್ರಿಯೆಯು ಉಡುಪನ್ನು ಬಹುದೊಡ್ಡ ಮಾರುಕಟ್ಟೆಯಾಗಿ ಬದಲಿಸಿಬಿಟ್ಟಿತು. ಬಟ್ಟೆಗಳಲ್ಲಿ ವಿವಿಧ ಬಣ್ಣಗಳನ್ನು  ಬಳಸುವ ಕ್ರಮ ಜಾರಿಗೆ ಬಂತು. ಮನುಷ್ಯ ಕಲರ್‍ಫುಲ್ ಆದ. ತಮಾಷೆ ಏನೆಂದರೆ, ಎಲೆಗಳಿಂದ ಪಾರಾಗು  ವುದಕ್ಕಾಗಿ ಬಳಕೆಗೆ ಬಂದ ಬಟ್ಟೆಯು ಇವತ್ತು ಮರಳಿ ಮನುಷ್ಯನನ್ನು ಎಲೆಗಳ ಕಾಲಕ್ಕೆ ಕೊಂಡೊಯ್ಯುತ್ತಿದೆ  ಎಂಬುದು. ಕಲೆ ಮತ್ತು ಮನರಂಜನೆಯ ಹೆಸರಲ್ಲಿ ಮನುಷ್ಯ ಇವತ್ತು ಬಹುತೇಕ ಬೆತ್ತಲೆಯಾಗುತ್ತಿದ್ದಾನೆ. ನಿಜವಾಗಿ,  ಸ್ವತಃ ಅವರು ಬಯಸಿಯೇ ಹೀಗೆ ಬೆತ್ತಲೆಯಾಗುತ್ತಿದ್ದಾರೆ ಎಂದು ಹೇಳುವಂತಿಲ್ಲ. ಬೆತ್ತಲೆಯೂ ಒಂದು ಮಾರುಕಟ್ಟೆ.  ಹೊಸ ವಿನ್ಯಾಸದ ದಿರಿಸೊಂದು ಮಾರುಕಟ್ಟೆಗೆ ಬರುವ ಮೊದಲು ಅದನ್ನು ಕ್ಯಾಟ್‍ವಾಕ್‍ನಲ್ಲಿ ಪ್ರದರ್ಶಿಸಲಾಗುತ್ತದೆ.  ಅದನ್ನು ಧರಿಸಿ ಹೆಣ್ಣೋ ಗಂಡೋ ಕ್ಯಾಟ್ ವಾಕ್ ನಡೆಸುತ್ತಾರೆ. ಕೆಳಗೆ ಕುಳಿತ ತೀರ್ಪುಗಾರರು ಅದಕ್ಕೆ ಅಂಕ  ನೀಡುತ್ತಾರೆ. ಇದು ಹಲವು ರೀತಿಯ ಪ್ರಚಾರ ತಂತ್ರಗಳಲ್ಲಿ ಒಂದು ತಂತ್ರ ಮಾತ್ರ. ಸಮುದ್ರ ದಂಡೆಯಲ್ಲಿ ಅತ್ಯಂತ  ಕನಿಷ್ಠ ಬಟ್ಟೆಯಲ್ಲಿ ಹೆಣ್ಣನ್ನು ನಿಲ್ಲಿಸಿ ನೂರಾರು ಕೋನಗಳಲ್ಲಿ ಫೋಟೋ ತೆಗೆದು ಉಡುಪಿನ ಪ್ರೊಮೋಶನ್  ನಡೆಸುವ ಕಂಪೆನಿಗಳಿವೆ. ಒಂದು ನಿಮಿಷದ ಉಡುಪಿನ ಜಾಹೀರಾತಿಗಾಗಿ ಕಂಪೆನಿಗಳು ಕೋಟ್ಯಾಂತರ  ರೂಪಾಯಿಗಳನ್ನು ಖರ್ಚು ಮಾಡುತ್ತವೆ. ಆ ಜಾಹೀರಾತಿನಲ್ಲಿ ನಟಿಸುವ ಹೆಣ್ಣು ಮತ್ತು ಗಂಡುಗಳು ಸ್ವ ಇಚ್ಛೆಯಿಂದ  ನಟಿಸಿದ್ದಾರೆ ಎಂದು ಹೇಳುವಂತಿಲ್ಲ. ಆ ನಟನೆಯು ಅವರ ಆಯ್ಕೆ ಆಗಿರಬೇಕಿಲ್ಲ. ಅವರ ನಗು ಅವರ ಆಯ್ಕೆಯ  ನಗುವಾಗಿರಬೇಕಿಲ್ಲ. ಅವರು ಹೇಳುವ ಡಯಲಾಗ್‍ಗಳು ಅವರದ್ದಾಗಿರಬೇಕಿಲ್ಲ. ಅದು ಇನ್ನಾರದೋ  ಆಯ್ಕೆಯಾಗಿರಬಹುದು. ಅವರ ಬಯಕೆಯಂತೆ ಇವರು ನಟಿಸುತ್ತಿರಬಹುದು. ದುರಂತ ಏನೆಂದರೆ, ತಮ್ಮದಲ್ಲದ  ನಗು, ತಮ್ಮದಲ್ಲದ ಅಳು, ತಮ್ಮದಲ್ಲದ ಉಡುಪು, ತಮ್ಮದಲ್ಲದ ನಟನೆ, ತಮ್ಮದಲ್ಲದ ಅಪ್ಪುಗೆ, ತಮ್ಮದಲ್ಲದ  ಡಯಲಾಗ್... ಇತ್ಯಾದಿಗಳನ್ನು ಮಾಡುವವರ ಬಗ್ಗೆ ಇಲ್ಲಿ ಯಾವ ಪ್ರಶ್ನೆಗಳೂ ಹುಟ್ಟಿಕೊಳ್ಳುವುದಿಲ್ಲ. ಖದೀಜ  ರೆಹಮಾನ್‍ರ ನಕಾಬನ್ನು ಬಲವಂತದ ಹೇರಿಕೆ ಎಂದು ಆಕ್ಷೇಪಿಸುವವರು ನಟ-ನಟಿಯರ ಉಡುಪುಗಳಲ್ಲಿ  ಬಲವಂತವನ್ನು ಕಾಣುವುದಿಲ್ಲ. ಮೈಮುಚ್ಚುವ ಉಡುಪಿನಲ್ಲಿ ಪ್ರಗತಿ ವಿರೋಧವನ್ನು ಕಾಣುವವರು ಮೈ ತೆರೆದು  ತೋರಿಸುವ ಬಟ್ಟೆಯಲ್ಲಿ ಪ್ರಗತಿ ವಿರೋಧವನ್ನು ಕಾಣುವುದಿಲ್ಲ. ಒಂದುವೇಳೆ, ಖದೀಜ ರೆಹಮಾನ್‍ರ ಉಡುಪು ತಪ್ಪು  ಎಂದಾದರೆ, ಕರೀನಾ ಕಪೂರ್‍ರ ಉಡುಪು ಏಕೆ ಸರಿ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ ಅಥವಾ ಈ  ಸರಿ ತಪ್ಪುಗಳ ಮಾನದಂಡವು ಮುಚ್ಚುವುದು ಮತ್ತು ತೆರೆಯುವುದನ್ನು ಅವಲಂಬಿಸಿದೆ ಎಂದೇ ನಂಬಬೇಕಾಗುತ್ತದೆ.  ನಿಜವಾಗಿ,
ಸಮಸ್ಯೆ ಇರುವುದು ಬಟ್ಟೆಯ ಉದ್ದಳತೆಯಲ್ಲಲ್ಲ. ನಮ್ಮ ವಿಚಾರಧಾರೆಯಲ್ಲಿ. ಮುಚ್ಚುವುದು ತಪ್ಪು ಮತ್ತು  ತೆರೆಯುವುದು ಸರಿ ಎಂಬ ನಮ್ಮ ನಿಲುವಿಗೆ ಆಧಾರ ಏನು ಅನ್ನುವುದರ ಬಗ್ಗೆ ಒಂದು ಅವಲೋಕನ ನಡೆಯಬೇಕು.  ಫ್ಯಾಶನ್ ಡಿಸೈನಿಂಗ್ ಯಾವಾಗ ಬೃಹತ್ ಮಾರುಕಟ್ಟೆಯಾಗಿ ರೂಪಾಂತರ ಪಡೆಯಿತೋ ಆವಾಗಲೇ ಹೆಣ್ಣು ಅದರ  ಪ್ರಮುಖ ರಾಯಭಾರಿಯಾಗಿ ಆಯ್ಕೆಯಾದಳು. ಉಡುಪು ಉದ್ಯಮಕ್ಕೆ ಸಂಬಂಧಿಸಿ 90%ಕ್ಕಿಂತಲೂ ಅಧಿಕ  ಜಾಹೀರಾತುಗಳಲ್ಲಿ ರೂಪದರ್ಶಿಯಾಗಿರುವುದು ಹೆಣ್ಣೇ. ಹಿಜಾಬ್ ಮತ್ತು ಮುಖ ತೆರೆದಿರುವ ಬುರ್ಖಾಗಳಲ್ಲಿ ಈ  ಉದ್ಯಮಕ್ಕೆ ಭಾರೀ ಅವಕಾಶಗಳಿಲ್ಲ ಅಥವಾ ಸಾಕಷ್ಟು ಮಿತಿಗಳಿವೆ. ಆದ್ದರಿಂದ ಹೆಣ್ಣನ್ನು ಈ ಮಿತಿಯಿಂದ  ಹೊರತರಬೇಕು. ಹಾಗೆ ತರಬೇಕೆಂದರೆ, ಮೊಟ್ಟ ಮೊದಲನೆಯದಾಗಿ, ಹೆಣ್ಣಿನ ಉಡುಪಿನ ಕುರಿತಂತೆ ಇರುವ  ನಿಲುವುಗಳಲ್ಲಿ ಸಡಿಲಿಕೆಯನ್ನು ತರಬೇಕು. ಹಿಜಾಬ್, ಬುರ್ಖಾ, ನಕಾಬ್ ಇತ್ಯಾದಿ ಇತ್ಯಾದಿಗಳ ಬಗ್ಗೆ ನಕಾರಾತ್ಮಕ  ಪ್ರಚಾರಗಳನ್ನು ಕೈಗೊಳ್ಳಬೇಕು. ಅದಕ್ಕಿರುವ ಉತ್ತಮ ದಾರಿ ಏನೆಂದರೆ, ಈ ಉಡುಪುಗಳ ಬದಲು ಅದನ್ನು ಧರಿಸು  ವವರನ್ನು ಗುರಿ ಮಾಡಿ ವಿಮರ್ಶಿಸುವುದು. ಯಾರು ಬುರ್ಖಾ ಧರಿಸುತ್ತಾರೋ ಅವರು ಪುರಾತನ  ಮನಸ್ಥಿತಿಯವರು ಮತ್ತು ಧರ್ಮಾಂಧರು ಎಂದು ಪ್ರಚಾರ ಮಾಡುವುದು. ಬುರ್ಖಾ ಎಂಬ ಉಡುಪಿನ ಬದಲು  ಬುರ್ಖಾ ಧರಿಸಿದವರನ್ನು ಗುರಿ ಮಾಡುವುದರಿಂದ ಸಾಮಾಜಿಕ ಸಂಘರ್ಷವೊಂದು ನಿರ್ಮಾಣ ವಾಗುತ್ತದೆ. ಬರೇ  ಬುರ್ಖಾವನ್ನು ವಿಮರ್ಶಿಸಲು ಹೊರಟರೆ, ಬುರ್ಖಾ ಮಾತ್ರ ಚರ್ಚೆಗೊಳಗಾಗುತ್ತದೆಯೇ ಹೊರತು ಅದನ್ನು  ಧರಿಸಿದವರ ಧರ್ಮ, ತಿಳುವಳಿಕೆ, ಸ್ಥಾನ-ಮಾನಗಳಲ್ಲ. ಆದರೆ ಧರಿಸಿದವರನ್ನೇ ಕೇಂದ್ರ ಸ್ಥಾನದಲ್ಲಿಟ್ಟು ಚರ್ಚಿಸಿದರೆ,  ನಿಧಾನಕ್ಕೆ ಆ ಉಡುಪಿನ ಬಗ್ಗೆ ಇತರರಲ್ಲಿ ಆಕರ್ಷಣೆ ಕಡಿಮೆಯಾಗುತ್ತದೆ. ಸಾಮಾಜಿಕ ಅವಹೇಳನದ ಮತ್ತು  ಪ್ರಗತಿರಹಿತತೆಯ ಭಾವವೊಂದು ಅವರಲ್ಲಿ ಚಿಗುರಿ ಅದರಿಂದ ವಿಮುಖರಾಗುವಂತೆ ನೋಡಿಕೊಳ್ಳುತ್ತದೆ. ಬಹುಶಃ,
ಫ್ಯಾಶನ್ ಡಿಸೈನಿಂಗ್ ಎಂಬುದು ಮಾರುಕಟ್ಟೆ ಸ್ವರೂಪವನ್ನು ಪಡೆದುಕೊಂಡು ಹೇಗೆ ವಿದೇಶದಿಂದ ಭಾರತಕ್ಕೆ  ಆಗಮಿಸಿತೋ ಹಾಗೆಯೇ ಮೈಮುಚ್ಚುವುದು ತಪ್ಪು ಮತ್ತು ತೆರೆಯುವುದು ಸರಿ ಎಂಬುದೂ ಅಲ್ಲಿಂದಲೇ  ಬಂದಿರಬಹುದು ಅನಿಸುತ್ತದೆ. ಬುರ್ಖಾ ಮತ್ತು ನಕಾಬ್ ಧರಿಸಿದವರನ್ನು ಗುರಿ ಮಾಡುವ ಕ್ರಮವಂತೂ ನೇರವಾಗಿ  ಅಲ್ಲಿಂದಲೇ ಬಂತು. ‘ಏ.ಆರ್. ರೆಹಮಾನ್‍ರ ಮಗಳ ಉಡುಪು ಹೀಗೆಯೇ’ ಎಂದು ಅಚ್ಚರಿ ಪಟ್ಟವರಾರೂ ಪ್ರಕಾಶ್  ಪಡುಕೋಣೆಯವರ ಮಗಳ ಉಡುಪು ಹೀಗೆಯೇ ಎಂದು ಅಚ್ಚರಿ ಪಟ್ಟಿಲ್ಲ. ಪಡುವುದೂ ಇಲ್ಲ. ಯಾಕೆಂದರೆ,  ಪಡುಕೋಣೆ ಯವರ ಮಗಳ ಉಡುಪನ್ನು ಸಜವೆಂದು ಒಪ್ಪಿಸಲಾಗಿದೆ. ಆ ಉಡುಪು ಬೃಹತ್ ಮಾರುಕಟ್ಟೆಯ  ಭಾಗ. ಪ್ರತಿದಿನ ಆ ಉಡುಪಿನ ಬಗ್ಗೆ ಮತ್ತು ಅದನ್ನು ಧರಿಸಿದವರು ಸುಂದರಿಯರಾಗಿ ಪರಿವರ್ತನೆಯಾಗುವುದರ  ಬಗ್ಗೆ ಜಾಹೀರಾತುಗಳನ್ನು ನೀಡಿ ನಂಬಿಸಲಾಗುತ್ತದೆ. ಪ್ರತಿನಿತ್ಯ ಕೋಟ್ಯಾಂತರ ರೂಪಾಯಿಗಳನ್ನು ಆ ಉಡುಪು  ಅದರ ಮಾಲಿಕನಿಗೆ ಒದಗಿಸುತ್ತಿದೆ. ಈ ಪ್ರಕ್ರಿಯೆಯನ್ನು ಹೀಗೆಯೇ ಉಳಿಸಿಕೊಳ್ಳುವುದು ಆತನ ಅಗತ್ಯ. ಹಾಗಂತ,  ಇಂಥ ಕಂಪೆನಿಗಳು ಮಾರುಕಟ್ಟೆಯಲ್ಲಿ ಇದೊಂದೇ ಅಲ್ಲ. ನೂರಾರು ಇವೆ. ಅವುಗಳಿಗೆ ಅವುಗಳದ್ದೇ  ಆದ  ವಿನ್ಯಾಸಗಳಿವೆ. ಅದನ್ನು ಧರಿಸಿ ಪ್ರದರ್ಶಿಸುವವರೂ ಇದ್ದಾರೆ. ಟಿ.ವಿ.ಗಳಲ್ಲಿ, ಬೃಹತ್ ಹೋರ್ಡಿಂಗ್‍ಗಳಲ್ಲಿ, ಸಿನಿಮಾ,  ಧಾರಾವಾಹಿಗಳಲ್ಲಿ ಅವುಗಳು ಜಾಹೀರಾತುಗಳ ರೂಪದಲ್ಲಿ ನಮ್ಮನ್ನು ಒಪ್ಪಿಸುತ್ತಲೂ ಇರುತ್ತವೆ. ಅದನ್ನು  ನೋಡುತ್ತಾ ನೋಡುತ್ತಾ ನಾವು ಒಗ್ಗಿಕೊಳ್ಳುತ್ತೇವೆ. ಅದಕ್ಕೊಂದು ಸಹಜತೆಯ ಮೊಹರು ಒತ್ತುತ್ತೇವೆ. ಬರಬರುತ್ತಾ  ಇದಕ್ಕೆ ವಿರುದ್ಧ ದಿಕ್ಕಿನಲ್ಲಿರುವ ಉಡುಪು ನಮ್ಮೊಳಗೆ ಅಸಹಜತೆಯನ್ನು ಹುಟ್ಟು ಹಾಕತೊಡಗುತ್ತದೆ. ಅದು  ಮೂಲಭೂತವಾದ, ಧರ್ಮಾಂಧತೆ, ಪ್ರಗತಿರಹಿತದಂತೆ ಅನಿಸತೊಡಗುತ್ತದೆ. ಕೊನೆಗೆ, ಬುರ್ಖಾ, ಹಿಜಾಬ್, ನಕಾಬ್  ಧರಿಸದಿರುವುದು ಹೇಗೆ ಆಯ್ಕೆಯ ಸ್ವಾತಂತ್ರ್ಯವೋ ಅದನ್ನು ಧರಿಸುವುದೂ ಆಯ್ಕೆಯ ಸ್ವಾತಂತ್ರ್ಯ ಎಂಬುದೇ ಮರೆತು  ಹೋಗುತ್ತದೆ. ಮಾತ್ರವಲ್ಲ, ಬುರ್ಖಾ ಧರಿಸುವವರನ್ನು ದ್ವೇಷಿಸುವಲ್ಲಿಗೆ ಇದು ಕೊಂಡೊಯ್ಯುತ್ತದೆ.
ಖದೀಜ ರೆಹಮಾನ್ ಪ್ರಕರಣದಲ್ಲಿ ಆಗಿರುವುದೂ ಇದುವೇ.