Monday, April 8, 2013

ಯುವಕರತ್ತ ಗುರಿ ಮಾಡಿದ್ದ ಬಂದೂಕು ಯುವತಿಯರತ್ತ ತಿರುಗಿತೇಕೆ?

   ಜಿಐಓ (ಗಲ್ರ್ಸ್ ಇಸ್ಲಾಮಿಕ್ ಆರ್ಗನೈಝೇಶನ್)ನ ಮೇಲೆ ನಿಗಾ ಇಡುವಂತೆ ಮಹಾರಾಷ್ಟ್ರದ ಎಲ್ಲಾ ಪೊಲೀಸ್  ಠಾಣೆಗಳಿಗೆ  ಮುಂಬೈಯ ಗುಪ್ತಚರ ಸಂಸ್ಥೆಗಳು ಸುತ್ತೋಲೆ ಹೊರಡಿಸಿರುವುದನ್ನು, Erroreous memo puts Mumbai cops in spot-  ಎಂಬ ಶೀರ್ಷಿಕೆಯಲ್ಲಿ ಪಿಟಿಐ ಕಳೆದವಾರ ವರದಿ ಮಾಡಿತು. Mumbai police shocker: Muslim institute is enrolling for Jihad  ಎಂಬ ಹೆಡ್‍ಲೈನ್‍ನಲ್ಲಿ NDTV ಸುದ್ದಿ ಪ್ರಕಟಿಸಿದರೆ;  Storm after cop memo leak over Girls Islamic Organisation ಎಂದು ದಿ ಟೆಲಿಗ್ರಾಫ್ ಪತ್ರಿಕೆ ಸುದ್ದಿ ಬರೆಯಿತು. ಎಪ್ರಿಲ್ ಒಂದರಂದು ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ಸುದ್ದಿ ಮರುದಿನ ಹೆಚ್ಚಿನೆಲ್ಲಾ ಆಂಗ್ಲ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗಿ ಪ್ರಕಟವಾಯಿತು. ಸುತ್ತೋಲೆಯಲ್ಲಿ,
   ‘ಜಮಾಅತೆ ಇಸ್ಲಾಮೀ  ಹಿಂದ್‍ನ ಅಂಗಸಂಸ್ಥೆಯಾದ ಜಿಐಓವು ಮಹಾರಾಷ್ಟ್ರದಲ್ಲಿ 40 ಹೈಸ್ಕೂಲ್ ಮತ್ತು 3 ಜೂನಿಯರ್ ಕಾಲೇಜುಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿನಿಯರ ಬ್ರೈನ್‍ವಾಶ್ ಮಾಡುತ್ತಿದೆ. ಅವರಿಗೆ ಜಿಹಾದ್‍ನ ತರಬೇತಿ ನೀಡುತ್ತಿದೆ. ಸಂಘಟನೆಯ ಸ್ವಾಲಿಹಾ ಬಾಜಿ ಮತ್ತು ಸುಮಯ್ಯ ಎಂಬಿಬ್ಬರು ಈ ವಿಷಯದಲ್ಲಿ ತುಂಬಾ ಮುಂದಿದ್ದಾರೆ. ಅವರ ಬಗ್ಗೆ ವಿಶೇಷ ಗಮನವಿಡಬೇಕು. ಇಸ್ಲಾಮಿನಂತೆ ಬದುಕಲು ಯುವತಿಯರನ್ನು ಪ್ರಚೋದಿಸುತ್ತಾ, ಅವರಲ್ಲಿ ಜಿಹಾದಿ ಪ್ರಜ್ಞೆಯನ್ನು ಅದು ತುಂಬುತ್ತಿದೆ..' ಎಂದೆಲ್ಲಾ ಹೇಳಲಾಗಿತ್ತು. ಆನ್‍ಲೈನ್‍ನಲ್ಲಿ ಈ ಕುರಿತಂತೆ ಧಾರಾಳ ಚರ್ಚೆಗಳು ನಡೆದುವು. ಅಲ್ಲದೇ,
   'ಜನರು ಇವತ್ತು ವಿಜ್ಞಾನದೆಡೆಗೆ ಹೆಚ್ಚೆಚ್ಚು ಆಕರ್ಷಿತರಾಗುತ್ತಿರುವಾಗ, ಈ ಸಂಘಟನೆಯು ಯುವತಿಯರನ್ನು ಬುರ್ಖಾ ಧರಿಸುವಂತೆ ಮತ್ತು ಇಸ್ಲಾಮನ್ನು ಅಧ್ಯಯನ ಮಾಡುವಂತೆ ಪ್ರೇರೇಪಿಸುತ್ತಿದೆ. ಆದ್ದರಿಂದಲೇ ನಾವು ಇವರ ಬಗ್ಗೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೇವೆ..' ಎಂದು ಗುಪ್ತಚರ ಸಂಸ್ಥೆಯ ವಿಶೇಷ ದಳದ ಮುಖ್ಯಸ್ಥ ಸಂಜಯ್ ಶಿಂತ್ರೆ ಪತ್ರಕರ್ತರೊಂದಿಗೆ ಹೇಳಿಕೊಂಡದ್ದು ಚರ್ಚೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿತು. ‘ವೈಜ್ಞಾನಿಕ ಆಲೋಚನೆಗಳನ್ನು ಹೊಂದುವುದೆಂದರೆ ಬಟ್ಟೆಗಳನ್ನೆಲ್ಲಾ ಕಳಚುವುದು ಎಂದರ್ಥವೇ..’ ಎಂದು ಚರ್ಚೆಯಲ್ಲಿ ಭಾಗವಹಿಸಿದ ಒಬ್ಬರು ಪ್ರಶ್ನಿಸಿದರೆ, 'ಮೈ ಮುಚ್ಚುವ ಬಟ್ಟೆ ಧರಿಸುವುದು ವಿಜ್ಞಾನಕ್ಕೆ ವಿರುದ್ಧವೇ'..  ಎಂದು ಇನ್ನೊಬ್ಬರು ಪ್ರಶ್ನಿಸಿದರು. Leaked information is secondary, but how that Mumbai police has issued such an internal notice where an organisation is working for the good cause. Is the police is blind as they cant differentiate between good and bad...  It is very clear that the Mumbai police is acting as per the script written by the RSS and VHP -  ಗುಪ್ತಚರ ಇಲಾಖೆಯು ಹೊರಡಿಸಿದ ಸುತ್ತೋಲೆ ಹೇಗೆ ಸೋರಿಕೆಯಾಯಿತು ಎಂಬುದು ಮುಖ್ಯವಲ್ಲ, ಬದಲು ಒಳಿತಿಗಾಗಿ ಕೆಲಸ ಮಾಡುತ್ತಿರುವ ಸಂಘಟನೆಯ ವಿರುದ್ಧ ಪೊಲೀಸರು ಇಂಥದ್ದೊಂದು ಸುತ್ತೋಲೆ ಹೊರಡಿಸಿದ್ದಾದರೂ ಹೇಗೆ? ಒಳಿತು ಮತ್ತು ಕೆಡುಕಿನ ನಡುವೆ ಇರುವ ವ್ಯತ್ಯಾಸವನ್ನು ತಿಳಿಯದಷ್ಟು ಅವರು ಕುರುಡಾಗಿ ಬಿಟ್ಟರೇ? ಇದಕ್ಕೆ ಪೊಲೀಸರು ಕ್ಷಮೆ ಯಾಚಿಸುವುದು ಪರಿಹಾರವಲ್ಲ. ಅವರು ತಕ್ಷಣ ಈ ಸುತ್ತೋಲೆಯನ್ನು ಹಿಂಪಡೆದು ಜಿಐಓನ ಮೇಲೆ ನಿಗಾ ಇಡುವುದನ್ನು ನಿಲ್ಲಿಸಬೇಕು. ಈ ಬೆಳವಣಿಗೆಯನ್ನು ನೋಡುವಾಗ ಮುಂಬೈ ಪೊಲೀಸರು ಆರೆಸ್ಸೆಸ್ ಮತ್ತು ವಿಹಿಂಪದ ಕಾರ್ಯಸೂಚಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆಂಬುದು ಸ್ಪಷ್ಟವಾಗುತ್ತಿದೆ..’ ಅಂತ ಚೆನ್ನೈಯ ಯೂನುಸ್ ಎಂಬವರು ಬರೆದರೆ; ಅಮೇರಿಕದಲ್ಲಿರುವ ಸುರೇಶ್ ಎಂಬವರು,
   ‘ತನಿಖಾ ಸಂಸ್ಥೆಗಳು ವ್ಯಕ್ತಿ ಅಥವಾ ಸಂಘಟನೆಗಳ ವಿರುದ್ಧ ಅನುಮಾನಗೊಂಡಾಗ ಅದರ ವಿರುದ್ಧ ಮುಗಿ ಬೀಳುವುದು ಸರಿಯಲ್ಲ. ಅವರು ತನಿಖೆ ನಡೆಸಲಿ. ದೇಶದ ಸದ್ಯದ ಪರಿಸ್ಥಿತಿಯಲ್ಲಿ ನಿಗಾ ವಹಿಸುವುದು, ಅನುಮಾನಗೊಳ್ಳುವುದೆಲ್ಲ ಅಸಹಜ ಅಲ್ಲ. ದೇಶದ ತನಿಖಾ ಸಂಸ್ಥೆಗಳನ್ನು ಎಲ್ಲ ಬಾಹ್ಯ ಒತ್ತಡಗಳಿಂದ ಮುಕ್ತಗೊಳಿಸುವುದು ಮತ್ತು ತೀರಾ ಸಣ್ಣ ವಿಷಯದಲ್ಲೂ ತನಿಖೆಗೆ ಪೂರ್ಣ ಸ್ವಾತಂತ್ರ್ಯ ಕೊಡುವುದು ನಮ್ಮ ಅಗತ್ಯವಾಗಿದೆ..' ಎಂದು ಬರೆದರು. ಹೀಗೆ ಚರ್ಚೆಗಳು ಸಾಗುತ್ತಿರುವಂತೆಯೇ ಪ್ರಕರಣದ ಎರಡು ದಿನಗಳ ಬಳಿಕ ಮುಂಬೈ ಪೊಲೀಸರು ಕ್ಷಮೆ ಯಾಚಿಸಿದರು. ಜಮಾಅತ್‍ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ  ಮುಹಮ್ಮದ್ ಅಸ್ಲಮ್ ಖಾನ್ ನೇತೃತ್ವದ ನಿಯೋಗಕ್ಕೆ ತನಿಖೆ ನಡೆಸುವ ಭರವಸೆ ನೀಡಿದರು. ಆದರೆ ಕ್ಷಮೆ, ತನಿಖಾ ಭರವಸೆಗಳೇನೇ ಇರಲಿ, ಸುತ್ತೋಲೆಯು ಸಾರ್ವಜನಿಕವಾಗಿ ಕೆಲವು ಅನುಮಾನಗಳನ್ನಂತೂ ಹುಟ್ಟು ಹಾಕಿದೆ. ಭಯೋತ್ಪಾದನೆಯ ಹೆಸರಲ್ಲಿ ಅಮಾಯಕ ಮುಸ್ಲಿಮ್ ಯುವಕರ ಬಂಧನದ ಕುರಿತಂತೆ ತನಿಖೆ ನಡೆಸಲು ತ್ವರಿತ ನ್ಯಾಯಾಲಯಗಳನ್ನು ರಚಿಸಲಾಗುವುದೆಂದು ಗೃಹ ಸಚಿವ ಶಿಂಧೆಯವರು ಘೋಷಿಸಿದ ಬೆನ್ನಲ್ಲೇ ಮುಸ್ಲಿಮ್ ಯುವತಿಯರ ಮಧ್ಯೆಯೂ 'ಜಿಹಾದಿ' ತರಬೇತಿಗಳು ನಡೆಯುತ್ತಿವೆಯೆಂಬ ಸುದ್ದಿಯನ್ನು ಹರಿಬಿಡುವುದಕ್ಕೆ ಕಾರಣವೇನು? ಇದು ಕಾಕತಾಳೀಯವೇ (Co- inside) ಅಥವಾ ಇದರ ಹಿಂದೆ ನಿಗೂಢ ಉದ್ದೇಶಗಳಿವೆಯೇ? ಜಿಐಓನ ವಿರುದ್ಧ ಒಂದೇ ಒಂದು ಕೇಸು ದಾಖಲಾಗಿಲ್ಲ ಎಂದು ಮುಂಬೈ ಪೊಲೀಸ್ ಮುಖ್ಯಸ್ಥರೇ ಒಪ್ಪಿಕೊಂಡಿದ್ದಾರೆ. ಅಲ್ಲದೇ ಇಸ್ಲಾಮಿನಂತೆ ಬದುಕಲು ಮುಸ್ಲಿಮ್ ಯುವತಿಯರನ್ನು ಜಿಐಓ ಪ್ರೇರೇಪಿಸುತ್ತಿದೆ ಎಂದೂ ಹೇಳುತ್ತಿದ್ದಾರೆ. ಇದೇನು ದೇಶ ವಿರೋಧಿ ಕೃತ್ಯವೇ? ಈ ದೇಶದ ಸಂವಿಧಾನವೇ ಒದಗಿಸಿರುವ ಸ್ವಾತಂತ್ರ್ಯವನ್ನು ಭಯೋತ್ಪಾದನಾ ಚಟುವಟಿಕೆಯಂತೆ, ನಿಗಾ ಇಡುವಷ್ಟು ಉಗ್ರ ಕೃತ್ಯದಂತೆ ಯಾಕೆ ನೋಡಬೇಕು? ಜಿಐಓನ ಚಟುವಟಿಕೆಗಳೇನೂ ಭೂಗತವಾಗಿ ನಡೆಯುತ್ತಿಲ್ಲವಲ್ಲ. ಅದರ ಸಂವಿಧಾನ ಎಲ್ಲರಿಗೂ ಸಿಗುವಷ್ಟು ಮುಕ್ತವಾಗಿದೆ. ಅದರ ಕಚೇರಿಗಳು ಕೂಡ ವಿಳಾಸ ಸಮೇತ ಸಾರ್ವಜನಿಕರಿಗೆ ಲಭ್ಯವಿವೆ. ಯಾರಿಗೆ ಬೇಕಾದರೂ ಅದರ ಚಟುವಟಿಕೆಗಳನ್ನು ವೀಕ್ಷಿಸುವ, ಪಾಲುಗೊಳ್ಳುವ ಅವಕಾಶಗಳೂ ಇವೆ. ಹೀಗಿರುತ್ತಾ, ಜಿಐಓವನ್ನು ಶಂಕಿತಗೊಳಿಸುವ ಸುತ್ತೋಲೆಯೊಂದು ಹೊರಡುತ್ತದೆಂದರೆ ಅದನ್ನು ಕಡೆಗಣಿಸುವುದಾದರೂ ಹೇಗೆ? ಇಷ್ಟಕ್ಕೂ ಈ ದೇಶದಲ್ಲಿ ಜಿಐಓ ಎಂಬ ಸಂಘಟನೆ ಇರುವುದು ಮಹಾರಾಷ್ಟ್ರದಲ್ಲಿ ಮಾತ್ರ ಅಲ್ಲ, ದೇಶದಾದ್ಯಂತ ಇದೆ. ಅಲ್ಲದೆ, ಅದರ ಸಂವಿಧಾನ, ಕಾರ್ಯವಿಧಾನ, ಗುರಿ, ಉದ್ದೇಶಗಳೆಲ್ಲವೂ ದೇಶದಾದ್ಯಂತ ಒಂದೇ. www.giomsz.blogspot.com  ಎಂಬ ಲಿಂಕ್‍ಗೆ ಕ್ಲಿಕ್ ಮಾಡಿದರೆ ಮುಂಬೈಯ ಜಿಐಓ ಘಟಕವು ಈ ವರೆಗೆ ಏನೆಲ್ಲ ಚಟುವಟಿಕೆಗಳನ್ನು ನಡೆಸಿದೆ, ಅದರ ವಿಶೇಷತೆಯೇನು, ಅದರ ಕಾರ್ಯವಿಧಾನ ದೇಶಕ್ಕೆ ಮಾರಕವೋ ಪೂರಕವೋ.. ಎಂಬಿತ್ಯಾದಿಗಳನ್ನೆಲ್ಲ ಗುಪ್ತಚರ ಇಲಾಖೆಯ ಸಹಿತ ಯಾರಿಗೆ ಬೇಕಾದರೂ ಮನವರಿಕೆ ಮಾಡಿಕೊಳ್ಳಬಹುದು. ಇಷ್ಟಿದ್ದೂ ನೈತಿಕತೆ ಅಳವಡಿಸಿಕೊಳ್ಳುವಂತೆ, ಧರ್ಮದ ಪ್ರಕಾರ ಬದುಕುವಂತೆ ಪ್ರೇರೇಪಿಸುವುದನ್ನು ಸುತ್ತೋಲೆಯಲ್ಲಿ ಅಪರಾಧವಾಗಿ ಪರಿಗಣಿಸಿರುವುದು ಮತ್ತು ಪೊಲೀಸ್ ಇಲಾಖೆಯ ಒಳಗೇ ಸುತ್ತಬೇಕಾದ ಈ ಸುತ್ತೋಲೆಯನ್ನು ಶಿವಸೇನೆಯ ಸಾಮ್ನಾ ಪತ್ರಿಕೆಗೆ ಮೊದಲು ಸೋರಿಕೆ ಮಾಡಿರುವುದು ಏನನ್ನು ಸೂಚಿಸುತ್ತದೆ? ಜಿಐಓ ಮತ್ತು ಆ ಮೂಲಕ ಜಮಾಅತ್‍ನ ಮೇಲೆ ಸಾರ್ವಜನಿಕರಲ್ಲಿ ಒಂದು ಬಗೆಯ ಅನುಮಾನವನ್ನು ಮೂಡಿಸುವ ಉದ್ದೇಶ ಇದರ ಹಿಂದೆ ಇಲ್ಲ ಅನ್ನುತ್ತೀರಾ? ಬಂಗ್ಲಾದೇಶದ ಜಮಾಅತೆ ಇಸ್ಲಾಮಿಯ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ತಾಳೆ ಮಾಡಿ ನೋಡಿಕೊಳ್ಳಿ. ಪೊಲೀಸರ ಉದ್ದೇಶ ಶುದ್ಧಿಯ ಬಗ್ಗೆ ಅನುಮಾನ ಬರುವುದಿಲ್ಲವೇ? ಬಂದೂಕು ಹಿಡಿದ ಬುರ್ಖಾಧಾರಿ ಮಹಿಳೆಯರ ಪೊಟೋದ ಜೊತೆ ಈ ಸುದ್ದಿಯನ್ನು ಪ್ರಕಟಿಸುವುದಕ್ಕೆ ಸಾಮ್ನಾ ಪತ್ರಿಕೆಗೆ ಅವಕಾಶ ಮಾಡಿಕೊಟ್ಟದ್ದಾದರೂ ಯಾರು? ಸುತ್ತೋಲೆಯು ಯಾಕೆ ಮುಸ್ಲಿಮ್ ವಿರೋಧಿ ಧೋರಣೆಯುಳ್ಳ ಸಾಮ್ನಾಕ್ಕೇ ಪ್ರಥಮವಾಗಿ ಸೋರಿಕೆಯಾಗಬೇಕು? ಜಿಐಓವು ಯುವತಿಯರಿಗೆ ಬಂದೂಕಿಗೆ ತರಬೇತಿ ಕೊಡುತ್ತಿದೆ ಎಂಬ ಸುಳ್ಳು ಸಂದೇಶವನ್ನು ಸಾರ್ವಜನಿಕವಾಗಿ ಬಿತ್ತುವುದಕ್ಕೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಸಾಮ್ನಾದ ಮುಖಾಂತರ ನಡೆಸಿರುವ ಸಂಚು ಇದಾಗಿರಬಾರದೇಕೆ? ಅಂದಹಾಗೆ,
  1. ಒಳಿತಿನ ಅಭಿವೃದ್ಧಿ ಮತ್ತು ಕೆಡುಕಿನ ನಿರ್ಮೂಲನಕ್ಕಾಗಿ ಯುವತಿಯರನ್ನು ಪ್ರೇರೇಪಿಸುವುದು.
  2. ಸಮಾಜದಲ್ಲಿರುವ ಕೆಡುಕುಗಳ ನಿರ್ಮೂಲನಕ್ಕಾಗಿ ಪ್ರಯತ್ನಿಸುವುದು.
  3. ಇಸ್ಲಾಮೀ  ಜೀವನ ಕ್ರಮದ ಆಧಾರದಲ್ಲಿ ಕುಟುಂಬ ನಿರ್ಮಾಣಕ್ಕಾಗಿ ಯುವತಿಯರನ್ನು ತಯಾರುಗೊಳಿಸುವುದು.
  4. ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಮೌಲ್ಯಗಳನ್ನು ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಉತ್ತಮ ಚಾರಿತ್ರ್ಯ ಹಾಗೂ ಉನ್ನತ ಶಿಷ್ಟಾಚಾರಗಳನ್ನು ಬೆಳೆಸುವುದು.
  5. ನೈತಿಕ ಮೇರೆಗಳನ್ನು ಪಾಲಿಸುತ್ತಾ, ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯ ಆಧಾರದಲ್ಲಿ ಕೋಮು ದ್ವೇಷ, ಅಶಾಂತಿಗೆ ಕಾರಣವಾಗುವ ವಿಧಾನಗಳಿಂದ ದೂರವಿದ್ದುಕೊಂಡು ರಚನಾತ್ಮಕ ರೂಪದಲ್ಲಿ ಇವುಗಳ ಜಾರಿಗಾಗಿ ಪ್ರಯತ್ನಿಸುವುದು..
   ಮುಂತಾದ ಅಂಶಗಳಿರುವ ಜಿಐಓನ ಸಂವಿಧಾನದಲ್ಲಿ ದೇಶದ ಸಮಗ್ರತೆಗೆ, ಶಾಂತಿಯುತ ವ್ಯವಸ್ಥೆಗೆ ಭಂಗ ತರುವಂಥದ್ದು ಏನಿದೆ? ಇಸ್ಲಾಮಿನಂತೆ ಜೀವಿಸಿ ಎಂದು ಕರೆಕೊಟ್ಟು, ಅದಕ್ಕಾಗಿ ಪ್ರಯತ್ನಿಸುವುದು ಶಂಕಿತ ಚಟುವಟಿಕೆಯೇ? ಮುಂಬೈಯ ಜಿಐಓವಂತೂ, ‘ಪರೀಕ್ಷೆಯನ್ನು ಎದುರಿಸುವುದು ಹೇಗೆ; ಪ್ರಬಂಧ, ಸಂವಾದ, ಪೈಂಟಿಂಗ್ಸ್ ಸ್ಪರ್ಧೆಗಳು, ಇಸ್ಲಾಮೀ  ರಜಾದಿನ ಶಿಬಿರ (VIC), ಕ್ಯಾರಿಯರ್ ಗೈಡೆನ್ಸ್, ಸೆಮಿನಾರ್, ಅಧ್ಯಯನ ತರಗತಿಗಳು, ಗೆಟ್ ಟುಗೆದರ್.. ಮುಂತಾದ ವಿವಿಧ                ಕಾರ್ಯಕ್ರಮಗಳನ್ನು ನಡೆಸಿರುವುದಾಗಿ ಬ್ಲಾಗ್‍ನಲ್ಲಿಯೇ ಹೇಳಿಕೊಂಡಿದೆ. ಇದರಲ್ಲಿ ಭಯೋತ್ಪಾದನೆಗೆ ಪೂರಕವಾಗಿರುವುದು ಯಾವುದಿದೆ? ಅಲ್ಲದೇ, ದೇಶದಾದ್ಯಂತ ಜಿಐಓ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ. ತಮಿಳುನಾಡಿನ ಕುಡಂಕುಲಮ್‍ನಲ್ಲಿ ನಿರ್ಮಾಣವಾಗುತ್ತಿರುವ ಅಣುವಿದ್ಯುತ್ ಸ್ಥಾವರದ ವಿರುದ್ಧ ಮರಳಿನಲ್ಲಿ ಸ್ವಯಂ ಅರ್ಧ ಹೂತುಕೊಂಡು ಪ್ರತಿಭಟಿಸಿ ದೇಶದ ಗಮನ ಸೆಳೆದಿದ್ದರೆ ಅದು ಜಿಐಓ ಮಾತ್ರ. ದೆಹಲಿ ಅತ್ಯಾಚಾರದ ವಿರುದ್ಧ ಜಿಐಓ ರಾಲಿ, ಪ್ರತಿಭಟನೆ, ಸೆಮಿನಾರ್‍ಗಳನ್ನು ನಡೆಸಿದೆ. ಕರ್ನಾಟಕದ ಜಿಐಓ ಘಟಕವಂತೂ ಇತ್ತೀಚೆಗಷ್ಟೇ, 'ಲಜ್ಜೆ- ನನ್ನ ಜೀವನದ ಪ್ರತಿಬಿಂಬ '- ಎಂಬ ವಿಷಯದಲ್ಲಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುವತಿಯರಲ್ಲಿ ನೈತಿಕ ಮೇರೆಗಳನ್ನು ಪಾಲಿಸುವಂತೆ ಕರೆ ಕೊಡುವ ಕ್ಯಾಂಪಸ್ ಉಪನ್ಯಾಸಗಳನ್ನು ನಡೆಸುತ್ತಿದೆ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಅವರ ಧರ್ಮ ನೋಡದೇ ಬಹುಮಾನ ಕೊಟ್ಟು ಪ್ರೋತ್ಸಾಹಿಸುತ್ತಿದೆ. ಇವೆಲ್ಲ ಶಂಕಿತ ಚಟುವಟಿಕೆಗಳು ಎಂದಾದರೆ ಅಶಂಕಿತ ಚಟುವಟಿಕೆಗಳಾದರೂ ಯಾವುದು? ನಿಜವಾಗಿ, ಇವತ್ತು ದೇಶದಲ್ಲಿ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವುದೇ ಯುವತಿಯರು. ಅತ್ಯಾಚಾರದ ಸುದ್ದಿಗಳು ಸುದ್ದಿ-ಮಾಧ್ಯಮಗಳನ್ನಿಡೀ ತುಂಬಿಕೊಂಡು ಭೀತಿಯ ವಾತಾವರಣ ನಿರ್ಮಾಣವಾಗಿರುವ ಸನ್ನಿವೇಶ ಇವತ್ತಿನದು. ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸುವ ಬಗ್ಗೆ ಕಾನೂನೇ ನಿರ್ಮಾಣವಾಗಿದ್ದರೂ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಇದರ ಜೊತೆಗೇ ಅತ್ಯಾಚಾರಕ್ಕೆ ಪ್ರಚೋದಕವಾಗುವ ಹೆಣ್ಣಿನ ವರ್ತನೆಗಳೂ ಸಾರ್ವಜನಿಕವಾಗಿ ಚರ್ಚೆಯಲ್ಲಿವೆ. ನೈತಿಕ-ಅನೈತಿಕಗಳು ವಿವಿಧ ಸೆಮಿನಾರ್‍ಗಳ, ಪತ್ರಿಕಾ ಬರಹಗಳ ವಸ್ತುವಾಗುತ್ತಿವೆ. ಇಂಥ ಹೊತ್ತಲ್ಲಿ, ಅತ್ಯಾಚಾರಿಗಳ ಬದಲು ನೈತಿಕ ಮೇರೆಗಳ ಬಗ್ಗೆ ಜಾಗೃತಿ ಮೂಡಿಸುವ ಯುವತಿಯರು ಶಂಕಿತಗೊಳ್ಳುವುದಕ್ಕೆ ಏನೆನ್ನಬೇಕು? ಅಂಥ ಸುತ್ತೋಲೆಯನ್ನು ತಯಾರುಗೊಳಿಸಿ ಸೋರಿಕೆ ಮಾಡಿದವರ ಉದ್ದೇಶ ಏನಿರಬಹುದು? ಈ ಸೋರಿಕೆ ಆಕಸ್ಮಿಕವೋ ಉದ್ದೇಶಪೂರ್ವಕವೋ?
   ಮುಸ್ಲಿಮ್ ಯುವಕರತ್ತ ಗುರಿ ಮಾಡಿದ್ದ ವ್ಯವಸ್ಥೆಯ ಬಂದೂಕು ಇದೀಗ ಯುವತಿಯರತ್ತ ತಿರುಗಿರುವುದಕ್ಕೆ ಖಂಡಿತ ಶಂಕಿತ ಉದ್ದೇಶವೊಂದು ಇರಲೇಬೇಕು.

Tuesday, April 2, 2013

ಕುದಿಯುವ ಅಪ್ಪನಿಂದ ತಣ್ಣನೆಯ ಮಗಳು ಹೇಗೆ ಸೃಷ್ಟಿಯಾದಾಳು ಹೇಳಿ?

ತೀರ್ಥಹಳ್ಳಿಯ ಘಟನೆ
   ಮೇಜಿನ ಮೇಲೆ ಚಿಕ್ಕದೊಂದು ಫೈಲು. ಅದರ ಪಕ್ಕ ಆ ಅಪ್ಪ ಕೂತಿದ್ದಾರೆ. ಬ್ಯುಝಿ ಇರ್ಬೇಕು, ಫೈಲನ್ನು ಭಾರೀ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಏನೋ ಬರೆಯುವುದು, ತುಸು ಹೊತ್ತು ನಿಂತು, ಆಲೋಚಿಸಿ ಪುನಃ ಬರೆಯೋದು.. ಹೀಗೆ ನಡೆಯುತ್ತಿರುತ್ತದೆ. 8 ವರ್ಷದ ಆ ಮಗಳಿಗೆ ಅಪ್ಪ ಅಂದರೆ ಇಷ್ಟ. ಅಪ್ಪನಿಗೂ ಮಗಳೆಂದರೆ ಇಷ್ಟವೇ. ಅಪ್ಪ ಬರೆಯುವಾಗ ಆಕೆ
ಪೆನ್ನು ಕೇಳುವಳು. ಲೈಟು ಆಫ್ ಮಾಡುವಳು. ಅಪ್ಪ ಸಿಟ್ಟಾದರೆ ಸುಮ್ಮನೆ ನಗುವಳು. ತನ್ನ ಬ್ಯಾಗ್‍ನಿಂದ ಪುಸ್ತಕ ತೆಗೆದು ಫೈಲಿನ ಮೇಲಿಟ್ಟು ತಂಟೆ ಕೊಡುವಳು. ಅಪ್ಪನ ಮಡಿಲಲ್ಲಿ ಬಂದು ಕೂರುವಳು. ‘ಅಸಾಧ್ಯ ತುಂಟಿ ನನ್ನ ಪುಟ್ಟಿ’ ಎಂದು ಅಪ್ಪ ಮುದ್ದು ಮಾಡಿ ಪಕ್ಕಕ್ಕೆ ಕೂರಿಸುವರು. ಹೀಗಿರುತ್ತಾ 3ನೇ ಕ್ಲಾಸಿನ ವಾರ್ಷಿಕ ಪರೀಕ್ಷೆಯ ಸಮಯ ಹತ್ತಿರ ಬಂತು. ‘ಚೆನ್ನಾಗಿ ಕಲಿತು ಹೆಚ್ಚು ಅಂಕ ಪಡೆದು ಪಾಸಾದರೆ ಗಿಫ್ಟ್ ಕೊಡುತ್ತೇನೆ’ ಮಗಳೇ'.. ಎಂದು ಅಪ್ಪ ಶಾಲೆಯ ಆರಂಭದಲ್ಲಿ ಹೇಳಿದ್ದು ಆಕೆಗಿನ್ನೂ ನೆನಪಿತ್ತು. ಹಾಗಂತ ಆಕೆಯೇನೂ ದಡ್ಡಿಯಲ್ಲ. ಮೊದಲ ನಾಲ್ಕೈದು ರಾಂಕುಗಳಲ್ಲಿ ಯಾವಾಗಲೂ ಒಂದು ಆಕೆಗೇ ಮೀಸಲಿರುತ್ತಿತ್ತು. ಆದರೆ ಅಂತಿಮ ಪರೀಕ್ಷೆಗೆ ತಯಾರಿ ನಡೆಸುವ ಹೊತ್ತಿನಲ್ಲೇ ಆರೋಗ್ಯ ಕೈಕೊಟ್ಟಿತು. ಹುಡುಗಿ ತೀವ್ರ ಅಸ್ವಸ್ಥಳಾದಳು. ಅಪ್ಪ ಅಧೀರನಾಗಿಬಿಟ್ಟ. ಮಗಳನ್ನು ಉಳಿಸಿಕೊಳ್ಳಬೇಕಾದರೆ ದೊಡ್ಡದೊಂದು ತ್ಯಾಗಕ್ಕೆ ಆತ ಸಿದ್ಧನಾಗಬೇಕಿತ್ತು. ಅಪ್ಪ ಸಿದ್ಧನಾದ. ಮಗಳು ಚೇತರಿಸಿಕೊಂಡಳು. ತಂಟೆ, ತಕರಾರು, ಮುದ್ದು, ಲವಲವಿಕೆ.. ಎಲ್ಲವನ್ನೂ ಕಳಕೊಂಡು ಆಸ್ಪತ್ರೆಯ ಮಂಚದಲ್ಲಿ ಮುದುಡಿ ಮಲಗಿದ್ದ ಮಗಳು ಮತ್ತೆ ಅವೆಲ್ಲವನ್ನೂ ಪಡಕೊಂಡಳು. ಪರೀಕ್ಷೆ ಬರೆದಳು. ಒಂದು ದಿನ ಸಂಜೆ ಅಪ್ಪನನ್ನೇ ಕಾಯುತ್ತಾ ಗೇಟಿನಲ್ಲಿ ನಿಂತಿದ್ದ ಅವಳು ಓಡೋಡಿ ಅಪ್ಪನ ಕೈ ಹಿಡಿದಳು. ಗಿಫ್ಟ್ ಕೊಡಿ ಅಂದಳು. ಅಪ್ಪ ಆಕೆಯನ್ನು ಎತ್ತಿ ಮುದ್ದಿಸಿ ಬೆನ್ನು ತಟ್ಟಿದರು. ಡ್ರೆಸ್ಸು ಬದಲಿಸಿ, ನೀರು ಕುಡಿಯುತ್ತಿದ್ದ ಅಪ್ಪನ ಮಡಿಲಲ್ಲಿ ಕೂತ ಮಗಳು ಮತ್ತೆ ಪ್ರಶ್ನಿಸಿದಳು,
  ಅಪ್ಪ, ಏನು ಗಿಫ್ಟ್ ಕೊಡುತ್ತೀರಿ?
ಅಪ್ಪ ಮಗಳನ್ನೇ ನೋಡಿದರು. ಆಸ್ಪತ್ರೆಯ ಮಂಚದಲ್ಲಿ ಸಾವು-ಬದುಕಿನ ಹೋರಾಟದಲ್ಲಿ ಅಸಾಧ್ಯ ಸಂಕಟ ಅನುಭವಿಸುತ್ತಿದ್ದ ಮಗಳನ್ನು ನೋಡಲಾರದೇ ಕಣ್ಣೀರಿಳಿಸಿದ್ದು, ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದದ್ದು, ಸಿಕ್ಕ-ಸಿಕ್ಕ ವೈದ್ಯರನ್ನು ಸಂಪರ್ಕಿಸಿದ್ದು, ಪ್ರಾರ್ಥಿಸಿದ್ದು.. ಎಲ್ಲವೂ ನೆನಪಿಗೆ ಬಂತು. ಅವರು ಮಗಳನ್ನು ಸಂತೈಸುತ್ತಾ ಹೇಳಿದರು,
  ನಿನಗೆ ಈಗಾಗಲೇ ದೊಡ್ಡದೊಂದು ಗಿಫ್ಟ್ ಕೊಟ್ಟಿದ್ದೇನೆ ಮಗೂ.
  ಏನಪ್ಪ ಅದು?
  ಕಿಡ್ನಿ
  ಕಿಡ್ನಿಯಾ? ಎಲ್ಲಿದೆ ಅದು?
  ನಿನ್ನ ಹೊಟ್ಟೆಯೊಳಗಿದೆ ಪುಟ್ಟಿ
  ಹೋಗಪ್ಪ ನೀನು. ಹೊಟ್ಟೆಯೊಳಗಿಟ್ಟು ಏನು ಪ್ರಯೋಜನ? ನೀನೇ ಅದನ್ನು ತಗೊ. ನನಗೆ ಬೇರೆಯದೇ ಗಿಫ್ಟ್ ಕೊಡಪ್ಪಾ..
  ಅವರು ಮೃದುವಾಗಿ ನಕ್ಕು ಮಗಳನ್ನು ಎತ್ತಿಕೊಂಡರು. ಮುತ್ತು ಕೊಟ್ಟರು. ಕಣ್ಣು ಮಂಜಾಗುತ್ತಿತ್ತು.
ಸೋನಂ
   ಅಪ್ಪ-ಮಕ್ಕಳ ನಡುವಿನ ಸಂಬಂಧ, ಮಕ್ಕಳ ಬೆಳವಣಿಗೆಯಲ್ಲಿ ಯಾರ ಪಾತ್ರ ಮೇಲು- ಅಪ್ಪನದ್ದೋ  ಅಮ್ಮನದ್ದೋ ಎಂಬೆಲ್ಲಾ ಚರ್ಚೆಗಳು ಈ ಸಮಾಜದಲ್ಲಿ ಧಾರಾಳ ನಡೆದಿವೆ. ಹೆಚ್ಚಿನ ಚರ್ಚೆಗಳ ಕೇಂದ್ರ ಬಿಂದು ಅಮ್ಮನೇ. ಅಮ್ಮನ ಪಾತ್ರವನ್ನೇ ಮುಖ್ಯ ವಾಗಿಸಿ, ‘ಅಮ್ಮ ಹೇಗಿರುತ್ತಾಳೋ ಹಾಗೆಯೇ ಮಕ್ಕಳು' ಎಂಬಲ್ಲಿಗೆ ಹೆಚ್ಚಿನ ಚರ್ಚೆಗಳು ಮುಕ್ತಾಯಗೊಳ್ಳುತ್ತವೆ. ಇದು ತಪ್ಪು ಎಂದಲ್ಲ. ಆದರೆ, ಕಿಡ್ನಿ ಕೊಟ್ಟೂ ಅದರ ಮಹತ್ವವನ್ನು ಮನದಟ್ಟಾಗಿಸಲು ಚಡಪಡಿಸುವ, ಒತ್ತಿ ಬರುವ ಕಣ್ಣೀರನ್ನು ಮುಖ ತೊಳೆದೊ, ನೆಪ ಹೇಳಿಯೋ ಅಡಗಿಸುವ, ಮಕ್ಕಳಿಗೆ ಪತ್ನಿ ಏಟು ಕೊಡುತ್ತಿದ್ದರೆ ಒಳಗೊಳಗೇ ಕರುಬುವ ಅಪ್ಪ.. ಚರ್ಚೆಯ ವ್ಯಾಪ್ತಿಗೆ ಬರುವುದೇ ಕಡಿಮೆ. ಅಮ್ಮನಿಗೆ ಕಣ್ಣೀರಿಳಿಸಲು ಬರುತ್ತದೆ; ತನ್ನ ಭಾವನೆಗಳನ್ನು ಎಲ್ಲರೆದುರು ವ್ಯಕ್ತಪಡಿಸುವುದಕ್ಕೂ ಆಗುತ್ತದೆ. ಆದರೆ, ಅಪ್ಪ ಈ ವಿಷಯಗಳಲ್ಲಿ ತೀರಾ ಕಂಜೂಸು. ಕಣ್ಣೀರಿಳಿಸಲು ಬರುತ್ತದಾದರೂ ಎಲ್ಲರೆದುರು ಕಣ್ಣೀರಿಳಿಸುವುದಕ್ಕೆ, ಮಕ್ಕಳ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಅಷ್ಟೇ ತೀವ್ರತನದಿಂದ ವ್ಯಕ್ತಪಡಿಸುವುದಕ್ಕೆ ಆತನಿಗೆ ಬರುವುದಿಲ್ಲ. ಸ್ನಾನ ಗೃಹದಲ್ಲಿ, ಕತ್ತಲ ಕೋಣೆಯಲ್ಲಿ ಒಂಟಿಯಾಗಿ ಕಣ್ಣೀರಿಳಿಸಿ, ಹೊರಗೆ ಆತ ನಗು ನಗುತ್ತಾ ಬದುಕುತ್ತಾನೆ. ಈ ದೌರ್ಬಲ್ಯವೇ ಆತನನ್ನು ‘ಅಮುಖ್ಯ' ವ್ಯಕ್ತಿಯಾಗಿ ಪರಿಗಣಿಸುವುದಕ್ಕೆ ಮುಖ್ಯ ಕಾರಣವಾಗಿದೆ. ಇಷ್ಟಕ್ಕೂ, ಟಿ.ವಿ. ಜಾಹೀರಾತಿನಲ್ಲಿ ಬರುವ ಸೂಪರ್ ವೇಗದಲ್ಲಿ ಓಡುವ ಬೈಕನ್ನು ತೋರಿಸಿ, ‘ನೀನು ಹಾಗೆ ಓಡಿಸಬಲ್ಲೆಯಾ..’ ಎಂದು ಮಕ್ಕಳು ಕೇಳುವುದು ಅಪ್ಪನಲ್ಲೇ. ಸೂಪರ್‍ಮ್ಯಾನ್, ಸ್ಪೈಡರ್‍ಮ್ಯಾನ್‍ಗಳನ್ನೆಲ್ಲಾ ಯಾವ ಮಕ್ಕಳೇ ಆದರೂ ತಾಯಿಗೆ ಹೋಲಿಸಿ ನೋಡುತ್ತಾರಾ? ಮುಖ್ಯವಾಗಿ, ಹೆಣ್ಣು ಮಕ್ಕಳ ಪಾಲಿಗೆ ಅಪ್ಪ ಯಾವಾಗಲೂ ಹೀರೋನೇ. ಶಾಲೆಗೆ ಹೋಗುವ ಪುಟ್ಟ ಮಕ್ಕಳು ಪರಸ್ಪರ ತಂದೆಯಂದಿರನ್ನು ಹೋಲಿಸಿಕೊಂಡು ಜಗಳ ಮಾಡುತ್ತಾರೆ. ನನ್ನ ಅಪ್ಪ ಅಷ್ಟು ಸ್ಪೀಡ್ ಬೈಕ್ ಓಡಿಸ್ತಾರೆ, ನನ್ನ ಅಪ್ಪನಲ್ಲಿ ಅಂಥ ಕಾರಿದೆ, ನನ್ನ ಅಪ್ಪ ಅಷ್ಟು ಎತ್ತರ ಇದ್ದಾರೆ, ಅವರು ಹಾಗೆ, ಅವರು ಹೀಗೆ.. ಎಂದೆಲ್ಲಾ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಇಂಥ ಸಂದರ್ಭಗಳಲ್ಲೆಲ್ಲಾ ತಾಯಿಯ ಪ್ರಸ್ತಾಪವಾಗುವುದು ಕಡಿಮೆ. ಹಾಗಂತ ತಾಯಿ ಅಮುಖ್ಯ ಎಂದಲ್ಲ. ತಾಯಿ ಯಾವಾಗಲೂ ತಾಯಿಯೇ. ಅಪ್ಪ ಆಕೆಯನ್ನು ಸರಿಗಟ್ಟಲಾರ. ಆದರೂ, ಮಕ್ಕಳ ಪಾಲಿಗೆ ಹೀರೋ ಪಾತ್ರವೊಂದರ ಅಗತ್ಯವಿರುತ್ತದೆ. ಯಾವಾಗಲೂ ಮಕ್ಕಳು ತಾಯಿಯನ್ನು ಅತಿಯಾಗಿ ಅವಲಂಬಿಸುವುದಾದರೂ ತಂದೆಯ ವರ್ಚಸ್ಸನ್ನು ಪಡೆದುಕೊಳ್ಳಲು ಹಂಬಲಿಸುತ್ತವೆ. ಅದರಲ್ಲೂ ಹೆಣ್ಣು ಮಕ್ಕಳು ತಂದೆಯಿಂದ ಹೆಚ್ಚು ಪ್ರಭಾವಿತವಾಗುತ್ತವೆ. ತಂದೆಗೆ ಮನೆಯಲ್ಲಿ ಸಿಗುವ ಗೌರವ, ಉಪಚಾರ, ಅವರ ಮಾತಿಗಿರುವ ಮನ್ನಣೆಗಳನ್ನೆಲ್ಲಾ ಮಗು ಅತ್ಯಂತ ಆಸಕ್ತಿಯಿಂದ ಅಭ್ಯಸಿಸುತ್ತದೆ. ಅಪ್ಪ ಮಾತಾಡುವ ಶೈಲಿಯಲ್ಲಲ್ಲ ಅಮ್ಮ ಮಾತಾಡುವುದು. ಬೈಕಲ್ಲಿ ಝುಯ್ಯನೆ ಹೋಗಿ ಇಷ್ಟದ ವಸ್ತುಗಳನ್ನು ತಂದುಕೊಡುವುದು ಅಪ್ಪನೇ ಹೊರತು ಅಮ್ಮನಲ್ಲ. ಪೇಟೆಗೆ ಹೋದರೂ ಅಪ್ಪನದ್ದೇ ಕಾರುಬಾರು. ಒಂದು ರೀತಿಯಲ್ಲಿ ದೈಹಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಅಪ್ಪನನ್ನು ತುಂಬಿ ಕೊಂಡೇ ಮಕ್ಕಳು ಬೆಳೆಯುತ್ತವೆ. ಆದ್ದರಿಂದಲೇ ಇವತ್ತಿನ ದಿನಗಳಲ್ಲಿ ಮಾಧ್ಯಮ ಸುದ್ದಿಗಳನ್ನು ಓದುವಾಗ ಆಘಾತವಾಗುವುದು, ಹತ್ತು-ಹಲವು ಪ್ರಶ್ನೆಗಳು ಮೂಡುವುದು.
    ಆತ್ಮಹತ್ಯೆಯ ಸುದ್ದಿಯನ್ನು ಕೇಳದ, ಓದದ ಒಂದೇ ಒಂದು ದಿನವಾದರೂ ಇವತ್ತಿದೆಯೇ? ಮುಖ್ಯವಾಗಿ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾಗುವ ಸುದ್ದಿಗಳು ಎಷ್ಟಿಲ್ಲ ಹೇಳಿ? ಕೊಲೆಗಾರ ಯುವಕರೂ ಧಾರಾಳ ಇದ್ದಾರಲ್ಲವೇ? ಎಲ್ಲೋ ದೂರದಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆಂದು ಹೋದ ಮಗಳು ಕೊಲೆಗೀಡಾಗಿಯೋ ಸ್ವಯಂ ಜೀವ ಕಳಕೊಂಡೋ ಸುದ್ದಿ ಮಾಡುತ್ತಿರುವುದು ಇವತ್ತಿನ ದಿನಗಳಲ್ಲಿ ಮಾಮೂಲಿ ಆಗುತ್ತಿರುವುದೇಕೆ? ಅದಕ್ಕೆ ಲವ್ ಅಫೇರು, ಅದು-ಇದುಗಳನ್ನು ಕಾರಣವಾಗಿ ಕೊಡಬಹುದಾದರೂ ಅವು ಸಾಯುವಷ್ಟು ಮತ್ತು ಸಾಯಿಸುವಷ್ಟು ಭೀಕರ ಅಪರಾಧಗಳೇ? ಅಷ್ಟಕ್ಕೂ ‘ಸಾಯುವ' ಮನಸ್ಥಿತಿಯನ್ನು ಮಕ್ಕಳಲ್ಲಿ ತುಂಬಿದ ಪ್ರಚೋದನೆಗಳು ಯಾವುದಿರಬಹುದು? ಅವರನ್ನು ಅಷ್ಟು ಕಟು ತೀರ್ಮಾನಕ್ಕೆ ದೂಡುವಲ್ಲಿ ಅವರು ಬಾಲ್ಯದಲ್ಲಿ ಕಂಡುಂಡ ಸಂಗತಿಗಳು ಕಾರಣವಾಗಿರಬಹುದೇ? ಮನೆಯ ವಾತಾವರಣ, ಹೆತ್ತವರ ವರ್ತನೆಗಳು ಒಂದು ಹಂತದ ವರೆಗೆ ಮಕ್ಕಳ ನಿರ್ಧಾರದ ಮೇಲೆ ಪ್ರಭಾವ ಬೀರಿರಬಹುದೇ?
   ನಿಜವಾಗಿ, ಓರ್ವ ಹೆಣ್ಣು ಮಗಳಿಗೆ ‘ಗಂಡಿನ' ಪರಿಚಯ ಆಗುವುದೇ ತಂದೆಯಿಂದ. ಹಾಗೆಯೇ ಹೆಣ್ಣಿನ ಪರಿಚಯ ಆಗುವುದು ತಾಯಿಯಿಂದ. ಹೆಣ್ಣು ಅಂದರೆ ಹೀಗಿರಬೇಕು ಮತ್ತು ಗಂಡು ಅಂದರೆ ಹೀಗಿರಬೇಕು ಅನ್ನುವುದನ್ನು ಇವರಿಬ್ಬರ ಮಾತು, ವರ್ತನೆ, ನಗು, ತಮಾಷೆ, ಭಾವ-ಭಂಗಿಗಳಿಂದ ಹೆಣ್ಣು ಮಗು ಕಲಿತುಕೊಳ್ಳಲು ಪ್ರಾರಂಭಿಸುತ್ತದೆ. ಅಪ್ಪ ಮನೆಯಲ್ಲಿ ಪಾಸಿಟಿವ್ ಆಗಿದ್ದರೆ ಮಗಳು ಪಾಸಿಟಿವ್ ಆಗುತ್ತಾಳೆ. ಅಮ್ಮನಿಗಿಂತ ಹೆಚ್ಚು ಆಸಕ್ತಿಯಿಂದ ಅಪ್ಪನನ್ನು ನೋಡುವ ಮಗಳಿಗೆ ಅಪ್ಪ ದೊಡ್ಡದೊಂದು ರೋಲ್ ಮಾಡೆಲ್. ಅಪ್ಪ ಸಿಡುಕನಾದರೆ, ಕ್ರಮೇಣ ಮಗಳೂ ಸಿಡುಕುತನವನ್ನು ಅಳವಡಿಸಿಕೊಳ್ಳುತ್ತಾಳೆ. ಅಪ್ಪ ಸುಳ್ಳುಗಾರನಾದರೆ, ಮಗಳಿಗೂ ಅದು ಅಂಟಿಕೊಂಡುಬಿಡುತ್ತದೆ. ಸದಾ ಸಂಶಯ ಸ್ವಭಾವದ ಅಪ್ಪನಿಂದ ಮಗಳು ಕಲಿತುಕೊಳ್ಳುವುದು ಅನುಮಾನಗಳನ್ನೇ. ಅಪ್ಪನಲ್ಲಿ ಯಾವ ಕ್ವಾಲಿಟಿಯಿದೆಯೋ ಅದು ಮಗನಿಗಿಂತ ಹೆಚ್ಚು ವರ್ಗಾವಣೆಯಾಗುವುದು ಮಗಳಿಗೆ. ಆದ್ದರಿಂದಲೇ, ವಿವಾಹ ವಿಚ್ಛೇದನಗಳಲ್ಲಿ, ಆತ್ಮಹತ್ಯೆಗಳಲ್ಲಿ, ಇನ್ನಿತರ ಅನಾಹುತಕಾರಿ ನಿರ್ಧಾರಗಳಲ್ಲಿ ಹೆಣ್ಣಿನ ಪಾತ್ರ ಏನಿದೆಯೋ ಅವುಗಳ ಮೇಲೆ ತಂದೆಯ ಪ್ರಭಾವವಿರುತ್ತದೆ ಎಂದು ಮನಃಶಾಸ್ತ್ರಜ್ಞರು ಹೇಳುವುದು. ಹೆಣ್ಣು ದಿಢೀರ್ ನಿರ್ಧಾರ ಕೈಗೊಳ್ಳುವ, ಮುಂಗೋಪದ ಮನಸ್ಥಿತಿಯವಳಾಗಿದ್ದರೆ ಅದಕ್ಕೆ ಆಕೆಯಷ್ಟೇ ಕಾರಣ ಅಲ್ಲ, ಬಾಲ್ಯದಲ್ಲಿ ಆಕೆಯ ‘ಅಪ್ಪ' ನಿರ್ವಹಿಸಿದ ಪಾತ್ರವೂ ಕಾರಣವಾಗಿರುತ್ತದೆ. ಅನೇಕ ಬಾರಿ, ‘ನೀನೇಕೆ ಗಂಡು ಮಕ್ಕಳಂತೆ ವರ್ತಿಸುತ್ತಿ..' ಎಂದು ಹೆತ್ತವರು ಮಗಳನ್ನು ತರಾಟೆಗೆ ಎತ್ತಿಕೊಳ್ಳುವುದಿದೆ. ‘ಹೆಣ್ಣು ಹೆಣ್ಣಿನಂತೆ ಇರಬೇಕು' ಎಂಬ ಬುದ್ಧಿವಾದವೂ ಇರುತ್ತದೆ. ನಿಜವಾಗಿ, ಹೆಣ್ಣು ಗಂಡಿನಂತೆ ವರ್ತಿಸುವುದಕ್ಕೆ ಕಾರಣ, ಗಂಡು ಎಂಬ ಅಪ್ಪ ಆಕೆಯನ್ನು ಪ್ರಭಾವಿಸಿದ್ದು. ಇಷ್ಟಕ್ಕೂ, ಯಾವ ಮಕ್ಕಳೂ ದಿಢೀರ್ ಆಗಿ ಬೆಳೆಯುವುದಿಲ್ಲವಲ್ಲ. ಹೆಣ್ಣು ಮಕ್ಕಳಾಗಲಿ, ಗಂಡು ಮಕ್ಕಳಾಗಲಿ ಅಮ್ಮ-ಅಪ್ಪ ಎಂಬ ಹೆಣ್ಣು-ಗಂಡನ್ನು ನೋಡುತ್ತಾ, ಅಭ್ಯಸಿಸುತ್ತಾ ಬೆಳೆಯುತ್ತಾರೆ. ಮನೆಯಲ್ಲಿ ಅಪ್ಪನ ಚಟುವಟಿಕೆಗಳನ್ನು ಹತ್ತಿರದಿಂದ ವೀಕ್ಷಿಸುತ್ತಾರೆ. ಅಮ್ಮ ಎಂಬ ಹೆಣ್ಣು- ಮಕ್ಕಳ ಚಾಕರಿ ಮಾಡುತ್ತಾ, ಅಡುಗೆ ಮಾಡುತ್ತಾ, ಬಟ್ಟೆ ಒಗೆಯುತ್ತಾ, ನೆಲ ಗುಡಿಸುತ್ತಾ, ಪಾತ್ರೆ ತೊಳೆಯುತ್ತಾ, ಇಸ್ತ್ರಿ ಹಾಕುತ್ತಾ.. ಹೀಗೆ ತನ್ನನ್ನು ಗುರುತಿಸಿಕೊಳ್ಳುವಾಗ ಅಪ್ಪ ಎಂಬ ಗಂಡು ಅದಕ್ಕೆ ಭಿನ್ನವಾಗಿ ಗುರುತಿಸಿಕೊಳ್ಳುತ್ತಾನೆ. ಆತನದು ನೀಟಾಗಿ ಪ್ಯಾಂಟು ಧರಿಸುವ, ಸಂಜೆ ಮನೆಗೆ ಬಂದು ಯಜಮಾನಿಕೆ ಪ್ರದರ್ಶಿಸುವ, ಸೇವೆ ಮಾಡಿಸಿಕೊಳ್ಳುವ.. ಪಾತ್ರ. ಹೀಗಿರುವಾಗ ಮಕ್ಕಳ ಮೇಲೆ ಅಪ್ಪ ಎಂಬ ಈ ಗಂಡಿನ ಪಾತ್ರ ಪ್ರಭಾವ ಬೀರದೆಂದು ಹೇಗೆ ಹೇಳುವುದು? ಮಕ್ಕಳಿಗೆ ಒಂದೊಮ್ಮೆ ಆಯ್ಕೆಯ ಅವಕಾಶ ಕೊಟ್ಟರೆ, ಅವರು ಪಾತ್ರೆ ತೊಳೆಯುವ ಪಾತ್ರಕ್ಕಿಂತ ಯಜಮಾನಿಕೆ ಪ್ರದರ್ಶಿಸುವ ಪಾತ್ರವನ್ನೇ ಆಯ್ದುಕೊಳ್ಳಲಾರರೇ? ಒಂದು ರೀತಿಯಲ್ಲಿ ಹೆಣ್ಣು ಮತ್ತು ಗಂಡಿನ ತಪ್ಪಾದ ಇಮೇಜನ್ನು ಅಮ್ಮ ಮತ್ತು ಅಪ್ಪ ಮನೆಯಲ್ಲಿ ದಿನಂಪ್ರತಿ ಮಕ್ಕಳಿಗೆ ನೀಡುತ್ತಿರುವಾಗ, ಮಕ್ಕಳು ಅದರಿಂದ ಪ್ರಭಾವಿತವಾಗಬಾರದೆಂದು ಬಯಸುವುದಕ್ಕೆ ಏನರ್ಥವಿದೆ? ಅಪ್ಪ ಎಂಬ ಗಂಡು ಅಮ್ಮ ಎಂಬ ಹೆಣ್ಣನ್ನು ದ್ವಿತೀಯ ದರ್ಜೆಗೆ ಇಳಿಸದೇ ಇದ್ದರೆ, ಮನೆ ಗೆಲಸದಲ್ಲಿ ತಾನೂ ಭಾಗಿಯಾದರೆ, ಯಜಮಾನಿಕೆಯ ದರ್ಪವನ್ನು ಕೈಬಿಟ್ಟು ಬದುಕಿದರೆ, ಪಾತ್ರೆ ತೊಳೆಯುವ, ಮನೆ ಗುಡಿಸುವ ಕೆಲಸಗಳನ್ನು ತಾನೂ ನಿರ್ವಹಿಸಿದರೆ.. ಪತ್ನಿ ಸಂತೃಪ್ತಳಾಗುವುದಷ್ಟೇ ಅಲ್ಲ, ಮಕ್ಕಳೂ ಸಂತುಲಿತವಾಗಿ ಬೆಳೆಯುತ್ತಾರೆ. ಬೆಳೆದ ಮಗಳು ದುಡುಕಿದಳೆಂದೋ ತಪ್ಪು ಹೆಜ್ಜೆ ಇಟ್ಟಳೆಂದೋ ಮನೆ ಬಿಟ್ಟಳೆಂದೋ ದೂರುವ ಮೊದಲು, ಆಕೆಯ ಬಾಲ್ಯ ಹೇಗಿತ್ತೆಂಬುದರ ಬಗ್ಗೆ ಪ್ರತಿ ಹೆತ್ತವರೂ ಅವಲೋಕನ ನಡೆಸಬೇಕು. ಬಾಲ್ಯದಲ್ಲಿ ಅಪ್ಪನ ಪಾತ್ರ ದುಡುಕಿನದ್ದಾದರೆ, ಜೋರು ಮಾಡಿ ಬಾಯಿ ಮುಚ್ಚಿಸುವ ರೂಪದ್ದಾದರೆ, ಔಟ್ ಗೋಯಿಂಗ್ ಮಾತ್ರ ಎಂಬ ರೀತಿಯದ್ದಾದರೆ, ಅದರ ಪ್ರಭಾವ ಮಕ್ಕಳ ಮೇಲೆ ಬಿದ್ದಿರುವುದಕ್ಕೆ ಖಂಡಿತ ಸಾಧ್ಯವಿದೆ. ಮಕ್ಕಳು ಕೀಳರಿಮೆ, ನಿರುತ್ಸಾಹಿ, ಪರಾವಲಂಬನೆಯವರಾಗಿದ್ದರೆ, ಅದರಲ್ಲಿ ಅವರ ಬಾಲ್ಯದ ಮಾದರಿಗಳ ಪಾತ್ರ ದೊಡ್ಡದಿದೆ ಎಂದೇ ಅರ್ಥ. ಅಂದಹಾಗೆ, ಪ್ರವಾದಿ ಮುಹಮ್ಮದ್(ಸ) ಎಂಬ ಗಂಡು ನಿರ್ವಹಿಸಿದ ಮಾದರಿ ಅಪ್ಪನ ಪಾತ್ರ ದಿಂದಾಗಿಯೇ ಅಲ್ಲವೇ ಫಾತಿಮಾ(ರ) ಎಂಬ ಮಾದರಿ ಹೆಣ್ಣು ಮಗಳು ಸಮಾಜಕ್ಕೆ ದಕ್ಕಿದ್ದು? ಮುಹಮ್ಮದುಲ್ ಗಝ್ಝಾಲಿ ಎಂಬ ಅಪ್ಪನ ಮಾದರಿ ವ್ಯಕ್ತಿತ್ವವಲ್ಲದಿದ್ದರೆ ಝೈನಬುಲ್ ಗಝ್ಝಾಲಿ ಎಂಬ ಧೀರ ಮಹಿಳೆ ಸೃಷ್ಟಿಯಾಗಲು ಸಾಧ್ಯವಿತ್ತೇ?
  
ಲವ್‍ನ ಕಾರಣಕ್ಕಾಗಿ ಮಾರ್ಚ್ 28ರಂದು ಸೋನಂ ಎಂಬ ಕಾಲೇಜು ತರುಣಿಯನ್ನು ತೀರ್ಥಹಳ್ಳಿಯ ನಡುಬೀದಿಯಲ್ಲಿ ವಿದ್ಯಾರ್ಥಿ ಗಳೆದುರೇ ಇರಿದು ಕೊಂದು ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ ಯುವಕನ ಸುದ್ದಿಯನ್ನು ಓದುತ್ತಾ ಇವೆಲ್ಲ ನೆನಪಾಯಿತು..

Monday, March 25, 2013

ಪೊಲೀಸ್ ಠಾಣೆಯಲ್ಲಿರುವ ಎತ್ತು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಿ..

   ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯು ತನ್ನ ಭದ್ರ ನೆಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ನೆಲ ಕಚ್ಚಿದ್ದೇಕೆ ಎಂಬ ಪ್ರಶ್ನೆಗೆ; ಕಲ್ಲಡ್ಕ ಪ್ರಭಾಕರ ಭಟ್ಟರ ಸರ್ವಾಧಿಕಾರಿ ನಿಲುವು, ಬಿಜೆಪಿಯ ಒಳಜಗಳ, ಭ್ರಷ್ಟಾಚಾರ, ಯಡಿಯೂರಪ್ಪ ಫ್ಯಾಕ್ಟರ್.. ಮುಂತಾದ ಕಾರಣಗಳನ್ನು ಕೊಡುತ್ತಾ ಹೋದರೆ ಈ ಜಿಲ್ಲೆಗಳ ಸಾಮಾನ್ಯ ಮಂದಿ ಸುಮ್ಮನೆ ನಗುತ್ತಾರೆ. ಯಾಕೆಂದರೆ, ಇವನ್ನೆಲ್ಲಾ ಕಾರಣ ಎಂದು ಅವರು ಒಪ್ಪುವುದೇ ಇಲ್ಲ. ಅವರು ಕೊಡುವ ಕಾರಣವೇ ಬೇರೆ,
   ಕೋಮುಗಲಭೆ ಆಗಿಲ್ಲ..
  ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ರಾಜ್ಯವನ್ನಾಳುತ್ತಿದ್ದ ಸಂದರ್ಭ. 2006 ಅಕ್ಟೋಬರ್ 5ರಂದು ಮಂಗಳೂರು ಬಂದ್‍ಗೆ ಸಂಘಪರಿವಾರ ಕರೆ ಕೊಡುತ್ತದೆ. ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಕ್ವಾಲಿಸ್ ವಾಹನವೊಂದನ್ನು ಮಂಗಳೂರಿನ ಸಂಘಪರಿವಾರದ ಕಾರ್ಯಕರ್ತರು ಬೆನ್ನಟ್ಟಿದಾಗ ಅದು ಮಹಿಳೆಗೆ ಢಿಕ್ಕಿ ಹೊಡೆದು, ಗಂಭೀರವಾಗಿ ಗಾಯಗೊಳಿಸಿ ಪರಾರಿಯಾಗಿದೆ ಅನ್ನುವ ಕಾರಣಕ್ಕಾಗಿ ಬಂದ್‍ಗೆ ಕರೆ ಕೊಡಲಾಗಿತ್ತು. ಶಶಿಧರ್ ಭಟ್ ಅನ್ನುವ ವ್ಯಕ್ತಿ ಸಾವಿಗೀಡಾಗಿದ್ದಾರೆ ಅನ್ನುವ ಸುದ್ದಿಯನ್ನು ಪತ್ರಿಕೆಯೊಂದು ಇದೇ ಸಂದರ್ಭದಲ್ಲಿ ತೇಲಿ ಬಿಟ್ಟಿತ್ತು. ನಿಜವಾಗಿ, ಮಹಿಳೆಗೆ ಢಿಕ್ಕಿ ಹೊಡೆದದ್ದಾಗಲಿ, ಭಟ್ ಸಾವಿಗೀಡಾದದ್ದಾಗಲಿ ನಡೆದೇ ಇಲ್ಲ ಎಂದು ಅಕ್ಟೋಬರ್ 5ರಂದು ಜಿಲ್ಲಾ  ಎಸ್.ಪಿ.ಯವರು ಮಾಧ್ಯಮದೆದುರು ಘೋಷಿಸಿದರೂ ದೊಂಬಿ ಜಿಲ್ಲೆಯನ್ನಿಡೀ ಆವರಿಸಿಬಿಟ್ಟಿತ್ತು. ತೊಕ್ಕೊಟ್ಟು, ಸುರತ್ಕಲ್, ನಂತೂರು, ಫರಂಗಿಪೇಟೆ, ಕಣ್ಣೂರು, ಕೃಷ್ಣಾಪುರ, ಬಿ.ಸಿ. ರೋಡ್, ಸಿದ್ಧಕಟ್ಟೆ, ಮೆಲ್ಕಾರ್, ಕಲ್ಲಡ್ಕ.. ಮುಂತಾದ ಹತ್ತಾರು ಪ್ರದೇಶಗಳು ಹೊತ್ತಿ ಉರಿದುವು. ಅಬ್ದುಲ್ ಗಫೂರ್ ಮದನಿ ಮತ್ತು ಇಬ್ರಾಹೀಮ್ ಬೋಳಿಯಾರ್ ಎಂಬಿಬ್ಬರನ್ನು ಇರಿದು ಕೊಲ್ಲಲಾಯಿತು. ಮುಸ್ಲಿಮರ ಅಂಗಡಿ-ಮುಂಗಟ್ಟುಗಳು ಅತ್ಯಂತ ಯೋಜಿತ ರೀತಿಯಲ್ಲಿ ಆಕ್ರಮಣಕ್ಕೆ ತುತ್ತಾದುವು. ಮುಂದಿನ ಐದಾರು ವರ್ಷಗಳ ವರೆಗೆ ಮುಸ್ಲಿಮರು ಆರ್ಥಿಕವಾಗಿ ತಲೆ ಎತ್ತದಂಥ ‘ಪಾಠ ಕಲಿಸಿ' ಬಂದ್ ಕೊನೆಗೊಂಡಿತು. ಮುಂದಿನ ಒಂದು ವರ್ಷದ ಅವಧಿಯಲ್ಲಿ (2008) ವಿಧಾನ ಸಭೆಗೆ ಚುನಾವಣೆ ಘೋಷಣೆಯಾದಾಗ ಈ ಗಲಭೆಯ ಕಾವು ಇನ್ನೂ ಆರಿರಲಿಲ್ಲ. ಒಂದು ಹಂತದ ವರೆಗೆ ‘ಗಲಭೆಯ ವಾತಾವರಣವನ್ನು' ಉಳಿಸಿಕೊಳ್ಳುವುದಕ್ಕೆ ಬಿಜೆಪಿ ಯಶಸ್ವಿಯಾಗಿತ್ತು. ಇಲ್ಲದಿದ್ದರೆ ಮಲ್ಲಿಕಾ ಪ್ರಸಾದ್ ಎಂಬ ‘ಅಡುಗೆಮ್ಮ’ ಪುತ್ತೂರಿನಿಂದ ಗೆದ್ದು ಬರಲು ಸಾಧ್ಯವಿತ್ತೇ? ವಿಧಾನಸಭೆಗೆ ಆಯ್ಕೆಯಾದ ಮಹಿಳಾ ಜನಪ್ರತಿನಿಧಿಗಳಲ್ಲೇ ಅತ್ಯಂತ ಹೆಚ್ಚು ಚಟುವಟಿಕೆಯಿಂದಿದ್ದ, ಕ್ಷೇತ್ರದ ಸಮಸ್ಯೆಯನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಸದಾ ಗಮನ ಸೆಳೆಯುತ್ತಿದ್ದ ಮಾತುಗಾರ್ತಿ, ಶಕುಂತಳಾ ಶೆಟ್ಟಿಯೆದುರು ಮಾತೇ ಬಾರದ ಮಲ್ಲಿಕಾ ಗೆಲ್ಲುವುದೆಂದರೇನು? ಹಾಲಿ ಶಾಸಕಿಯಾಗಿದ್ದ ಶಕುಂತಳಾರಿಗೆ ಬಿಜೆಪಿ ಟಿಕೇಟು ನಿರಾಕರಿಸಿದಾಗ ಅವರು ಬಂಡಾಯವೆದ್ದಿದ್ದರು. ನಿಜವಾಗಿ, ಇಲ್ಲಿನ ಸಮಸ್ಯೆ ಬಂಡಾಯವಲ್ಲ. ಈ ಜಿಲ್ಲೆಗಳಲ್ಲಿ ಒಂದು ‘ಎಲೆಕ್ಟ್ರಿಕ್ ಕಂಭ' ಅಭ್ಯರ್ಥಿಯಾಗಿ ನಿಂತರೂ ಗೆಲುವು ಶತಸಿದ್ಧ ಅನ್ನುವ ವಾತಾವರಣ ವೊಂದನ್ನು ಕಟ್ಟಿ ಬೆಳೆಸುವಲ್ಲಿ ಬಿಜೆಪಿ ಇಂದು ಯಶಸ್ವಿಯಾಗಿದೆ. ಅದಕ್ಕೆ ಪೂರಕವಾಗಿ ಕೋಮುಗಲಭೆಗಳನ್ನು ‘ಉತ್ಪಾದಿಸಲಾಗುತ್ತದೆ’.
   2013 ಮಾರ್ಚ್ 19
  ಉಡುಪಿ ಜಿಲ್ಲೆಯ ಅಡ್ಡಬೆಂಗ್ರೆಯಲ್ಲಿ ಜಾವೀದ್ ಎಂಬವರ ಮನೆಯಿದೆ. ಅವರೇನೂ ಗೋ ವ್ಯಾಪಾರಿಯಲ್ಲ. ರಿಯಲ್ ಎಸ್ಟೇಟ್ ಮತ್ತು ವಾಹನ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಅವರ ಮನೆಗೆ ಮೊನ್ನೆ ಮಾರ್ಚ್ 19ರಂದು ಸಂಜೆ ಸಂಘಪರಿವಾರದ ಸುಮಾರು 60-70ರಷ್ಟು ಮಂದಿ ಪೊಲೀಸರ ಜೊತೆ ಬಂದರಲ್ಲದೇ, ಮನೆಯಲ್ಲಿದ್ದ ಒಂದೂವರೆ ವರ್ಷದ ಎತ್ತನ್ನು ಠಾಣೆಗೆ ಎತ್ತಿಕೊಂಡು ಹೋದರು. ಅಕ್ರಮ ಗೋಸಾಗಾಟದಲ್ಲಿ ಜಾವೀದ್ ಭಾಗಿಯಾಗಿದ್ದಾರೆ ಅನ್ನುವ ವದಂತಿಯನ್ನು ಅದರ ಜೊತೆಗೇ ಹಬ್ಬಿಸಿದರು. ವದಂತಿಯಲ್ಲಿ ಎತ್ತು, ಗೋವಾಗಿ ಪರಿವರ್ತನೆಯಾಗಿತ್ತು. ನಿಜವಾಗಿ, ಜಾವೀದ್‍ರು ಕುರ್ಬಾನಿಗಾಗಿ ಎತ್ತು ಖರೀದಿಸಿ ತರುತ್ತಿದ್ದರು. ಸ್ವಯಂ ಕುರ್ಬಾನಿಯನ್ನೂ ಮಾಡುತ್ತಿದ್ದರು. ಅಲ್ಲದೇ ಕುರ್ಬಾನಿಯ ಸಂದರ್ಭದಲ್ಲಿ ಎತ್ತುಗಳನ್ನು ಮಾರುವುದೂ ಇತ್ತು. ಅಕ್ರಮ ಗೋಸಾಗಾಟಕ್ಕೂ ಕುರ್ಬಾನಿಗಾಗಿ ಎತ್ತು ಸಾಕುವುದಕ್ಕೂ ವ್ಯತ್ಯಾಸ ಇಲ್ಲವೇ? ಮುಸ್ಲಿಮರ ಮನೆಯಲ್ಲಿ ಎತ್ತು ಅಥವಾ ಗೋವು ಇದ್ದರೆ, ಅದನ್ನು ‘ಅಕ್ರಮ ಚಟುವಟಿಕೆ'ಯಂತೆ ಕಾಣುವ ಸಂಘ ಪರಿವಾರದ ಮನಸ್ಥಿತಿಗೆ ಏನೆನ್ನಬೇಕು? ಮುಸ್ಲಿಮರು ಎತ್ತು ಸಾಕುವುದನ್ನು ಸಾಂವಿಧಾನಿಕವಾಗಿ ನಿಷಿದ್ಧಗೊಳಿಸಲಾಗಿದೆಯೇ? ಆದರೆ ಇಂಥ ಪ್ರಶ್ನೆಗಳನ್ನೆಲ್ಲಾ ಸುಳ್ಳು ವ್ಯಾಖ್ಯಾನದ ಆರ್ಭಟದಲ್ಲಿ ಹತ್ತಿಕ್ಕುವುದನ್ನು ಸಂಘಪರಿವಾರ ಚೆನ್ನಾಗಿ ಕಲಿತುಕೊಂಡಿದೆ. 40-50ರಷ್ಟಿದ್ದ ಸಂಘ ಪರಿವಾರದ ಮಂದಿ ರಾತ್ರಿ ಪುನಃ ಬಂದರಲ್ಲದೇ ನಮಾಝ್‍ಗೆ ಬಂದವರ ಟೊಪ್ಪಿಯನ್ನು ಎಳೆದರು. ಪಾಕಿಸ್ತಾನ್ ಮುರ್ದಾಬಾದ್, ಅಲ್ಲಾಹ್ ಮುರ್ದಾಬಾದ್.. ಘೋಷಣೆ ಗಳನ್ನು ಕೂಗಿದರು. ಮರುದಿನ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಪೊಲೀಸರ ಸಮ್ಮುಖದಲ್ಲೇ ಜಾವೀದ್‍ರ ಮನೆಗೆ ಕಲ್ಲೆಸೆಯಲಾಯಿತು. ಬಾಗಿಲಿಗೆ ಹಾನಿ ಮಾಡಿ, ಮನೆಯ ಟಿ.ವಿ. ಮತ್ತಿತರ ವಸ್ತುಗಳನ್ನು ಧ್ವಂಸ ಮಾಡಲಾಯಿತು..
   ಇಷ್ಟಕ್ಕೂ ಪಡಿತರ ಚೀಟಿ, ಮತದಾನದ ಗುರುತು ಚೀಟಿ ಸಹಿತ ಈ ದೇಶದ ನಾಗರಿಕನೆಂದು ಗುರುತಿಸಿಕೊಳ್ಳುವುದಕ್ಕೆ ಎಲ್ಲವೂ ಇರುವ ಓರ್ವ ವ್ಯಕ್ತಿ ಎತ್ತು ಸಾಕುವುದನ್ನು ಈ ಮಟ್ಟದ ಅಪರಾಧವಾಗಿ ಪರಿಗಣಿಸಲು ಆತ ಮುಸ್ಲಿಮ್ ಆಗಿರುವುದರ ಹೊರತು ಇನ್ನಾವುದನ್ನಾದರೂ ಕಾರಣವಾಗಿ ಹೇಳಲು ಸಾಧ್ಯವಾ? ನಿಜವಾಗಿ ಈ ಎರಡು ಜಿಲ್ಲೆಗಳಲ್ಲಿ ಮುಸ್ಲಿಮರು ದನ ಸಾಕುವುದು, ದನದ ವ್ಯಾಪಾರ ಮಾಡುವುದನ್ನೆಲ್ಲಾ ಅಪರಾಧದ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂಥ ‘ಅಪರಾಧ' ಮಾಡುವವರನ್ನು ಥಳಿಸುವುದು ಸರಿ ಅನ್ನುವ ಭಾವನೆಯನ್ನು ಬಿತ್ತುವ ಪ್ರಯತ್ನಗಳು ನಡೆಯುತ್ತಲೇ ಇವೆ. ಬಿಜೆಪಿಯ ಇಮೇಜಿಗೆ ತುಸು ಮುಕ್ಕಾದರೆ ಈ ಜಿಲ್ಲೆ ಗಳಲ್ಲಿ ‘ಗೋವು' ಸುದ್ದಿ ಮಾಡುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 4 ದಶಕಗಳ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಶಾಸಕ ರಘುಪತಿ ಭಟ್ಟರ ಕ್ಷೇತ್ರವಾದ ಉಡುಪಿ ನಗರ ಸಭೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಸದ್ಯ ಒಂದು ಕೋಮುಗಲಭೆಯ ಹೊರತು ಈ ಎರಡು ಜಿಲ್ಲೆಗಳಲ್ಲಿ ಬಿಜೆಪಿಯನ್ನು ಹಳಿಗೆ ತರುವ ಸಾಧ್ಯತೆಯಂತೂ ಕಾಣುತ್ತಿಲ್ಲ. ಹೀಗಿರುವಾಗ ಜಾವೀದ್‍ರ ಮನೆಯ ಎತ್ತನ್ನು ಏ.ಕೆ. 47ನಂತೆ ಬಿಂಬಿಸುವುದು ಪರಿವಾರದ ತುರ್ತು ಅಗತ್ಯವಾಗಿತ್ತು.
   2005 ಮಾರ್ಚ್ 13
   ಆದಿ ಉಡುಪಿಯ 60 ವರ್ಷದ ಹಾಜಬ್ಬ ಮತ್ತು ಅವರ ಮಗ 28 ವರ್ಷದ ಹಸನಬ್ಬ ಎಂಬಿಬ್ಬರನ್ನು ಇಲ್ಲಿಯ ಮೈದಾನಕ್ಕೆ ಪರಿವಾರದ ಮಂದಿ ಸಂಜೆ 7ರ ಸುಮಾರಿಗೆ ಎಳೆದು ತಂದರು. ದನದ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದಾರೆ ಅನ್ನುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು. ದನದ ವ್ಯಾಪಾರ ಮಾಡುವ ಮುಸಲ್ಮಾನರನ್ನು ಬೆತ್ತಲೆ ಮಾಡಿದರೂ, ಥಳಿಸಿದರೂ ಅವಮಾನಿಸಿದರೂ ಅದು ಅಪರಾಧವಲ್ಲ ಅನ್ನುವ ವಾತಾವರಣವನ್ನು ಅದಾಗಲೇ ಜಿಲ್ಲೆಯಲ್ಲಿ ಒಂದು ಹಂತದ ವರೆಗೆ ಬಿತ್ತಲಾಗಿತ್ತು. ನಿಜವಾಗಿ ಅವರು ದನದ ವ್ಯಾಪಾರಿಗಳಾಗಿದ್ದರೂ ಗೋಮಾಂಸದ ವ್ಯಾಪಾರಿಗಳಾಗಿರಲಿಲ್ಲ. ದನ ಕರುಗಳನ್ನು ಖರೀದಿಸಿ ಮಾರಾಟ ಮಾಡುವ ದಲ್ಲಾಳಿ ಕೆಲಸವನ್ನು ಅವರಿಬ್ಬರೂ ನಿರ್ವಹಿಸುತ್ತಿದ್ದರು. ನಿಜವಾಗಿ ಕರಾವಳಿ ವಲಯದಲ್ಲಿ ಇದೊಂದು ಉಪವೃತ್ತಿ. ಈ ವ್ಯವಹಾರ ಮಾಡುವ ಹಿಂದೂಗಳೂ ಇದ್ದಾರೆ. ಆದರೆ ಅವರಿಬ್ಬರನ್ನು ಮೈದಾನಕ್ಕೆ ತಂದವರು ಬೆತ್ತಲೆಗೊಳಿಸಿದರು. ಅವರ ಹೊಡೆತ, ಬಡಿತವನ್ನು ತಾಳಲಾರದೇ ತಂದೆ-ಮಗ ಬೆತ್ತಲೆಯಾಗಿ ಮೈದಾನದಲ್ಲಿ ಓಡುವುದು, ತರುಣರು ಅವರನ್ನು ಅಟ್ಟಿಸಿಕೊಂಡು ಥಳಿಸುವುದು.. ಇದು ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ಮೈದಾನದಲ್ಲಿ 500-600 ಜನ ಈ ವಿಕಟ ವಿನೋದವನ್ನು ನೋಡುತ್ತಾ ನಿಂತಿದ್ದರು. ಒಂದು ವೇಳೆ ಅವರಿಬ್ಬರು ಬೆತ್ತಲಾಗಿ ಕೂತಿರುವ ಮತ್ತು ಹಸನಬ್ಬರ ತಲೆಗೂದಲನ್ನು ಒಬ್ಬ ಎತ್ತಿ ಹಿಡಿದಿರುವ ಪೊಟೋವೊಂದನ್ನು ಮಾರ್ಚ್ 15ರ ಪತ್ರಿಕೆಯೊಂದು ಪ್ರಕಟಿಸದೇ ಇರುತ್ತಿದ್ದರೆ ಈ ಘಟನೆಯೂ ಹತ್ತರಲ್ಲಿ ಹನ್ನೊಂದಾಗಿ ಬಿಡುವ ಎಲ್ಲ ಸಾಧ್ಯತೆಯೂ ಇತ್ತು. ಆಘಾತದ ಸಂಗತಿಯೆಂದರೆ, ಅಲ್ಲಿ ನೆರೆದಿರುವವರ ಮೌನ ಮನಸ್ಥಿತಿ. ಅವರೆಲ್ಲ ಪರಿವಾರದ ಬೆಂಬಲಿಗರೆಂದಲ್ಲ. ಆದರೆ ಮುಸ್ಲಿಮರ ವಿರುದ್ಧ ದ್ವೇಷ ಮತ್ತು ಸಂಶಯದ ಭಾವನೆಗಳನ್ನು ಬಿಜೆಪಿಯೇತರ ಮಂದಿಯಲ್ಲಿ ಕೂಡ ಬಿತ್ತಿ ಬೆಳೆಸಲು ಅದಕ್ಕೆ ಸಾಧ್ಯವಾಗಿತ್ತು. ಹಾಗಂತ, ನೋಡುಗರಿಗೆಲ್ಲ ಮುಸ್ಲಿಮರ ಬಗ್ಗೆ ಅಸಾಧ್ಯ ದ್ವೇಷ ಇತ್ತು ಎಂದಲ್ಲ. ಆದರೆ ಅವರನ್ನು ಥಳಿಸುವುದು, ಅವಮಾನಿಸುವುದೆಲ್ಲ ‘ನಾವು ಪ್ರತಿಭಟಿಸುವಷ್ಟು' ಗಂಭೀರ ಪ್ರಕರಣ ಅಲ್ಲ ಎಂಬ ಭಾವನೆಯೊಂದನ್ನು ಪರಿವಾರ ಈ ಜಿಲ್ಲೆಗಳಲ್ಲಿ ಒಂದು ಹಂತದ ವರೆಗೆ ಬಿತ್ತಿ ಬಿಟ್ಟಿದೆ. ಜರ್ಮನಿಯಲ್ಲಿ ಯಹೂದಿಯರ ಮೇಲೆ ಸೇನೆಯು ನಡೆಸುತ್ತಿದ್ದ ನರಮೇಧವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದ ಜರ್ಮನಿಯ ಜನಸಾಮಾನ್ಯರ ಬಗ್ಗೆ ಬರೆಯುತ್ತಾ ಖ್ಯಾತ ಲೇಖಕ ಗುಂಥರ್‍ಗ್ರಾಸ್,             ‘ಅವರು ಯಾರೂ ಅಸಾಧ್ಯ ದುಷ್ಟರಾಗಿರಲಿಲ್ಲ. ಅವರೆಲ್ಲ ಭಾನುವಾರ ಸಂಜೆ ತಮ್ಮ ಮಕ್ಕಳನ್ನು ಪಾರ್ಕಿಗೆ ಕರಕೊಂಡು ಹೋಗಿ ಐಸ್‍ಕ್ರೀಮ್ ಕೊಡಿಸುವ ಸದ್ಗೃಹಸ್ಥರಾಗಿದ್ದರು..' ಎಂದಿದ್ದಾರೆ. ಪರಿವಾರ ಈ ಜಿಲ್ಲೆಗಳಲ್ಲಿ ಇಂಥದ್ದೊಂದು ಸದ್ಗೃಹಸ್ಥ ಸಮೂಹವನ್ನು ಕಟ್ಟಲು ಆರಂಭದಿಂದಲೂ ಯತ್ನಿಸಿದೆ. ಅನ್ಯ ಧರ್ಮೀಯ ಹೆಣ್ಣು-ಗಂಡು ಮಾತಾಡಿದ ನೆಪದಲ್ಲಿ ಥಳಿಸುವುದು; ಹೊಟೇಲು-ಪಬ್‍ಗಳಿಗೆ ದಿಢೀರ್ ದಾಳಿ, ಅಕ್ರಮ ಗೋಸಾಗಾಟ, ಲವ್ ಜಿಹಾದ್..ನ ಹೆಸರಲ್ಲಿ ಆಗುವ ಹಿಂಸೆಗಳನ್ನು ನಾಗರಿಕ ಸಮೂಹ ಬಹುತೇಕ ಮೌನದಿಂದ ನೋಡುತ್ತದೆಯೇ ಹೊರತು, ಅದನ್ನು ತಡೆಯುವಲ್ಲಿ ಮುತುವರ್ಜಿ ವಹಿಸಿದ್ದು ಇಲ್ಲವೇ ಇಲ್ಲ.  
      ಕರಾವಳಿಯಲ್ಲಿ ಸಂಘ ಪರಿವಾರ ನಡೆಸುತ್ತಿರುವ ದ್ವೇಷದ ಪ್ರಚಾರಕ್ಕೂ ಈ ಮೌನಕ್ಕೂ ಖಂಡಿತ ಆಳ ಸಂಬಂಧ ಇದೆ. ಆ ದ್ವೇಷದ ಪ್ರಚಾರವನ್ನು ಬಿಜೆಪಿಯೇತರ ಮಂದಿಯೂ ನಂಬುವಷ್ಟರ ಮಟ್ಟಿಗೆ ಅತ್ಯಂತ ಯೋಜಿತವಾಗಿ ಹರಡಿ ಬಿಡಲಾಗುತ್ತಿದೆ. ಹುಬ್ಬಳ್ಳಿಯ ಈದ್ಗಾ ಮೈದಾನವನ್ನು ಚೆನ್ನಮ್ಮ ಮೈದಾನವೆಂದು ಕರೆದು, ‘ರಾಷ್ಟ್ರ ಧ್ವಜ ಗೌರವ ಸಂರಕ್ಷಣಾ ಸಮಿತಿ’ ಎಂಬ ತಂಡವನ್ನು ಕಟ್ಟಿಕೊಂಡು ಗಲಭೆಯೆಬ್ಬಿಸಿ ಕರ್ನಾಟಕದ ಉತ್ತರ ಭಾಗವನ್ನು ಬಿಜೆಪಿಯ ತೆಕ್ಕೆಗೆ ಸೆಳೆಯಲು ಪ್ರಹ್ಲಾದ್ ಜೋಷಿ 1992ರ ಬಳಿಕ ನಡೆಸಿದ ತಂತ್ರ ಮತ್ತು ಬುಡನ್‍ಗಿರಿಯನ್ನು ವಿವಾದಿತ ಕೇಂದ್ರವನ್ನಾಗಿಸಿ ಹಿಂದೂ-ಮುಸ್ಲಿಮರನ್ನು ವಿಭಜಿಸಿದ್ದು.. ಎಲ್ಲವೂ ಚುನಾವಣೆಯಲ್ಲಿ ಬಿಜೆಪಿಗೆ ಧಾರಾಳ ಫಲ ಕೊಟ್ಟಿದೆ. ಅದೇ ಪ್ರಹ್ಲಾದ್ ಜೋಷಿ ಈಗ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದಾರೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಮತ್ತೆ ಸಣ್ಣ-ಪುಟ್ಟ ಪ್ರಕರಣಗಳು ನಡೆಯತೊಡಗಿವೆ. ಅಡ್ಡ ಬೆಂಗ್ರೆಯ ಎತ್ತು ಪೊಲೀಸು ಠಾಣೆ ಹತ್ತಿರುವುದು ಅದರ ಒಂದು ಸೂಚನೆ ಅಷ್ಟೇ. ಕೋಮುಗಲಭೆಯಿಲ್ಲದೇ ಚುನಾವಣೆಗೆ ಹೋಗುವುದೆಂದರೆ ಬಿಜೆಪಿಯ ಮಟ್ಟಿಗೆ ಆಯುಧವಿಲ್ಲದೇ ರಣಾಂಗಣಕ್ಕೆ ಇಳಿದಂತೆ. ಅಂಥದ್ದೊಂದು ಸಾಹಸಕ್ಕೆ ಕೈ ಹಾಕಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಈಗಾಗಲೇ ಕೈ ಸುಟ್ಟುಕೊಂಡಿದೆ. ಆದ್ದರಿಂದ ಮುಂದೆ ಅಸೆಂಬ್ಲಿ ಚುನಾವಣೆಯಲ್ಲೂ ಇದನ್ನೇ ಮುಂದುವರಿಸಿಕೊಂಡು ಹೋಗುತ್ತದೆಂಬ ಬಗ್ಗೆ ಕರಾವಳಿಯಲ್ಲಿ ಯಾರಿಗೂ ನಂಬುಗೆಯಿಲ್ಲ. ಎತ್ತು, ಕರುಗಳೆಲ್ಲ ಮತ್ತೆ ಸುದ್ದಿ ಮಾಡಲು ಪ್ರಾರಂಭಿಸಿರುವುದು ಅವರ ಅನುಮಾನವನ್ನು ಬಲಗೊಳಿಸುತ್ತಿದೆ. ಆದ್ದರಿಂದಲೇ,
ಅಡ್ಡಬೆಂಗ್ರೆಯ ಎತ್ತು ಪೊಲೀಸು ಠಾಣೆಯಿಂದ ತಪ್ಪಿಸಿಕೊಂಡು ಊರಿಗೆ ಬರದಿರಲಿ ಎಂದೇ ಜನಸಾಮಾನ್ಯರು ಪ್ರಾರ್ಥಿಸುತ್ತಿದ್ದಾರೆ..

Tuesday, March 19, 2013

'ದೆವ್ವದ' ವಿರುದ್ಧ ಅಮೆರಿಕನ್ನರೇ ದಂಗೆ ಏಳುವ ದಿನಗಳೂ ಬರಬಹುದಲ್ಲವೇ?

ಖಾಲಿದ್ ಮಿಶ್‍ಅಲ್
    1997 ಸೆ. 25
  ಜೋರ್ಡಾನ್‍ನ ರಾಜಧಾನಿ ಅಮ್ಮಾನ್‍ನಲ್ಲಿರುವ ತಮ್ಮ ಕಚೇರಿಗೆ ಹಮಾಸ್‍ನ ನಾಯಕ ಖಾಲಿದ್ ಮಿಶ್‍ಅಲ್ ಬರುತ್ತಿ ದ್ದರು. ಆಗ ಇಸ್ರೇಲ್‍ನ ಪ್ರಧಾನ ಮಂತ್ರಿಯಾಗಿದ್ದುದು ಬೆಂಜಮಿನ್ ನೇತನ್ಯಾಹು. ಬಾಲ್ಯದಲ್ಲೇ ಫೆಲೆಸ್ತೀನಿನಿಂದ ಕುವೈಟ್‍ಗೆ ವಲಸೆ ಹೋಗಿ, ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದಿದ್ದ ಮಿಶ್‍ಅಲ್‍ರು 1984ರಿಂದ ಹಮಾಸ್‍ನ ಪೂರ್ಣಕಾಲಿಕ ಕಾರ್ಯಕರ್ತರಾಗಿ ನಿಯುಕ್ತರಾಗಿದ್ದರು. 1991ರ ಗಲ್ಫ್ ಯುದ್ಧದ ಸಂದರ್ಭದಲ್ಲಿ ಕುವೈಟ್‍ನಿಂದ ಜೋರ್ಡಾನ್‍ಗೆ ತೆರಳಿದ ಅವರು ಅಲ್ಲೂ ಹಮಾಸ್ ಪರ ಚಟುವಟಿಕೆಯ ನಡೆಸುತ್ತಿರುವುದು ನೇತನ್ಯಾಹುರನ್ನು ಸಿಟ್ಟುಗೆಬ್ಬಿಸಿತು. ಅವರು ಮೊಸಾದ್‍ನ (ಇಸ್ರೇಲ್ ನ ಗುಪ್ತ ಚರ ಸಂಸ್ಥೆ) ಜೊತೆ ಸೇರಿ ಮಿಶ್‍ಅಲ್‍ರ ಹತ್ಯೆಗೆ ಷಡ್ಯಂತ್ರ ರೂಪಿಸಿದರು. ಅದರಂತೆ ಮೊಸಾದ್‍ನ ಇಬ್ಬರು ಏಜಂಟರನ್ನು ಕೆನಡದ ನಕಲಿ ಪಾಸ್ ಪೋರ್ಟ್ ನೊಂದಿಗೆ ಜೋರ್ಡಾನ್‍ಗೆ ಕಳುಹಿಸಲಾಯಿತು. 1997 ಸೆ. 25ರಂದು ತನ್ನ ಕಚೇರಿಯ ಕಡೆಗೆ ಮಿಶ್‍ಅಲ್‍ರು ನಡೆದು ಬರುತ್ತಿರುವಂತೆಯೇ ಹಿಂದಿನಿಂದ ಬಂದ ಓರ್ವ ಮೊಸಾದ್ ಏಜೆಂಟ್, ಅವರ ಎಡಕಿವಿಯ ಕಡೆಗೆ ಒಂದು ವಸ್ತುವನ್ನು ಹಿಡಿದ. ಅಪಾಯಕಾರಿ ವಿಷವನ್ನು ದೇಹಕ್ಕೆ ವರ್ಗಾಯಿಸುವ ಉಪಕರಣವಾಗಿತ್ತು ಅದು. ಬಳಿಕ ಮುಹಮ್ಮದ್ ಅಬೂ ಸೈಫ್ ಎಂಬ ಅಂಗರಕ್ಷಕನ ನೆರವಿನೊಂದಿಗೆ ಆ ಇಬ್ಬರು ಏಜಂಟರನ್ನೂ ಬಂಧಿಸಲಾಯಿತು. ತಕ್ಷಣ ಜೋರ್ಡಾನಿನ ಅಧ್ಯಕ್ಷ ಕಿಂಗ್ ಹುಸೈನ್‍ರು ಆ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಕಿಂಗ್ ಹುಸೈನ್ ಮೆಡಿಕಲ್ ಸೆಂಟರ್‍ನಲ್ಲಿ ಕೋಮಾ ಸ್ಥಿತಿಯಲ್ಲಿ ಮಲಗಿರುವ ಮಿಶ್‍ಅಲ್‍ರಿಗೆ ಚಿಕಿತ್ಸೆ ನೀಡಲು ಪ್ರತ್ಯೌಷಧ (Antidote) ಕಳುಹಿಸಿಕೊಡುವಂತೆ  ನೇತನ್ಯಾಹುರನ್ನು ಆಗ್ರಹಿಸಿದರು. ಇಲ್ಲದಿದ್ದರೆ, ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಳ್ಳುವ ಮತ್ತು ಇಬ್ಬರು ಮೊಸಾದ್ ಏಜಂಟರನ್ನು ಕಠಿಣವಾಗಿ ಶಿಕ್ಷಿಸುವ ಬೆದರಿಕೆ ಹಾಕಿದರು. ಆರಂಭದಲ್ಲಿ ನೇತನ್ಯಾಹು ತನ್ನ ಕೈವಾಡವನ್ನು ಒಪ್ಪಿಕೊಳ್ಳಲಿಲ್ಲ. ಆದರೆ ಪ್ರಕರಣವು ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿರುವಂತೆಯೇ ಅಮೇರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಮಧ್ಯೆ ಪ್ರವೇಶಿಸಿದರಲ್ಲದೇ, ಪ್ರತ್ಯೌಷಧ ಕೊಡುವಂತೆ ನೇತನ್ಯಾಹುರನ್ನು ಬಲವಂತಪಡಿಸಿದರು. ಹೀಗೆ ನೇತನ್ಯಾಹುರ ಆದೇಶದಂತೆ ಮೊಸಾದ್‍ನ ಮುಖ್ಯಸ್ಥ ಡ್ಯಾನಿ ಯತೂಮ್(Danny yatom )ರು ಔಷಧಿಯೊಂದಿಗೆ ಜೋರ್ಡಾನಿಗೆ ಪ್ರಯಾಣಿಸಿದರು. ಆದರೆ ಅದಾಗಲೇ ಕಿಂಗ್ ಹುಸೈನ್ ಆಸ್ಪತ್ರೆಯ ವೈದ್ಯರು ವಿಷದ (Opioid) ಲಕ್ಷಣಗಳನ್ನು ಪತ್ತೆಹಚ್ಚಿ ಚಿಕಿತ್ಸೆ (Narcan) ಪ್ರಾರಂಭಿಸಿದ್ದರು. ಒಂದು ರೀತಿಯಲ್ಲಿ ಇಸ್ರೇಲ್‍ನ ವರ್ಚಸ್ಸು ಜಾಗತಿಕ ಮಟ್ಟದಲ್ಲೇ ಮಬ್ಬಾದ ಪ್ರಕರಣ ಅದು. ನೇತನ್ಯಾಹು ತೀವ್ರ ಮುಖಭಂಗಕ್ಕೆ ಒಳಗಾದರು. ಮಾತ್ರವಲ್ಲ, ಹಮಾಸ್‍ನ ಬೆಳವಣಿಗೆಗೆ ಈ ಘಟನೆಯು ಭಾರೀ ಸಹಕಾರಿಯಾಯಿತು. ಮೊಸಾದ್‍ನ ಆ ಇಬ್ಬರು ಏಜೆಂಟರನ್ನು ಜೋರ್ಡಾನ್ ಗಡೀಪಾರು ಮಾಡಿತಲ್ಲದೇ ಇಸ್ರೇಲ್‍ನ ವಶದಲ್ಲಿದ್ದ ಅನೇಕಾರು ಫೆಲೆಸ್ತೀನಿ ಕೈದಿಗಳನ್ನು  ಬಿಡಿಸಿಕೊಂಡಿತು..
  ಆದ್ದರಿಂದಲೇ,
ಅಮೆರಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್‍ರನ್ನು ‘ದೆವ್ವ’ ಎಂದು ವಿಶ್ವಸಂಸ್ಥೆಯಲ್ಲಿ ಎಲ್ಲರೆದುರೇ ಕರೆದ, ಬುಶ್‍ರ ಎದುರು ಹಿಟ್ಲರನು ‘ಎದೆಹಾಲುಣ್ಣುವ ಸಣ್ಣ ಮಗು’ ಎಂದು ಕುಟುಕಿದ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೊಲಿಸಾ ರೈಸ್‍ರನ್ನು ‘ಓ ಪುಟ್ಟ ಬಾಲಕಿ’ ಎಂದು ಟೀಕಿಸಿದ ಮತ್ತು ಅಮೆರಿಕನ್ ಸಾಮ್ರಾಜ್ಯಶಾಹಿತ್ವಕ್ಕೆ ಸಡ್ಡು ಹೊಡೆಯುವಂತೆ ದಕ್ಷಿಣ ಅಮೆರಿಕನ್ ರಾಷ್ಟ್ರಗಳನ್ನು ಕಟ್ಟಲು ಶ್ರಮಿಸಿದ ವೆನೆಜುವೇಲದ ಅಧ್ಯಕ್ಷ ಹ್ಯೂಗೋ ಚಾವೇಝ್‍ರ ಸಾವಿನಲ್ಲೂ ಅನುಮಾನಗಳು ಮೂಡುವುದು. ಅಷ್ಟಕ್ಕೂ,
  1. ಫರ್ನಾಂಡೋ ಲುಗೊ
  2. ಲೂಯಿಸ್ ಇನಾಸಿಯೊ ಲುಲ ಡ ಸಿಲ್ವ
  3. ಹ್ಯೂಗೋ ಚಾವೇಝ್
  4. ಕ್ರಿಸ್ಟಿನಾ ಫೆರ್ನಾಂಡಿಸ್ ಡೆ ಕಿರ್ಚ್ ನರ್
ಎಂಬ ದಕ್ಷಿಣ ಅಮೆರಿಕದ ಈ ನಾಲ್ವರು ಸಮಾಜವಾದಿ (ಕಮ್ಯೂನಿಸ್ಟ್) ನಾಯಕರು ಬೆನ್ನು ಬೆನ್ನಿಗೆ ಕ್ಯಾನ್ಸರ್‍ಗೆ ತುತ್ತಾಗಿ ರುವುದೇಕೆ? ಕಳೆದ 20 ತಿಂಗಳ ಅವಧಿಯೊಳಗೆ ಈ ನಾಲ್ವರು ನಾಯಕರಲ್ಲಿ ಕ್ಯಾನ್ಸರ್  ಕಾಣಿಸಿಕೊಂಡಿರುವುದು ಬರೇ ಆಕಸ್ಮಿಕವೇ ಅಥವಾ The disease may be a new wepon of the empaire to eliminate unwanted leaders  (ತನಗಿಷ್ಟವಿಲ್ಲದ ನಾಯಕರನ್ನು ನಾಶಪಡಿಸಲು ಅಮೆರಿಕವು ಈ ರೋಗವನ್ನು ಅಭಿವೃದ್ಧಿಪಡಿಸಿರ ಬಹುದು) ಎಂಬ ಚಾವೇಝ್‍ರ ಮಾತೇ ನಿಜವಾಗಿರಬಹುದೇ? ಇಲ್ಲದಿದ್ದರೆ ಚಾವೇಝ್‍ರ ನಿಧನ ವಾರ್ತೆಯನ್ನು ಘೋಷಿಸುವುದಕ್ಕಿಂತ ಗಂಟೆಗಳ ಮೊದಲು ಇಬ್ಬರು ಅಮೇರಿಕನ್ ರಾಜತಾಂತ್ರಿಕರನ್ನು ವೆನೆಝವೇಲ ತನ್ನ ದೇಶದಿಂದ ಉಚ್ಛಾಟಿಸಿದ್ದೇಕೆ? ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಮಾಜಿ ಅಧ್ಯಕ್ಷ ಆಲ್ಟನ್ ಓಸ್ಚನರನ್ನು ಬಳಸಿಕೊಂಡು 1970ರಲ್ಲಿ ‘ಡರ್ಟ್ ಗನ್ನನ್ನು’ (ಇದು ಹೃದಯಾಘಾತಕ್ಕೆ ಸಂಬಂಧಿಸಿದ್ದು) ನಿರ್ಮಿಸಿ ವಿರೋಧಿಗಳ ಮೇಲೆ ಪ್ರಯೋಗಿಸಿದ್ದ CIA, (ಅಮೆರಿಕದ ಗುಪ್ತಚರ ಸಂಸ್ಥೆ) ಈ 20ನೇ ಶತಮಾನದಲ್ಲಿ ಸುಮ್ಮನಿರುವುದಕ್ಕೆ ಸಾಧ್ಯವೇ?
    2008ರಲ್ಲಿ ದಕ್ಷಿಣ ಅಮೆರಿಕದ ಸಮಾಜವಾದಿ ರಾಷ್ಟ್ರವಾದ ಪರಾಗ್ವೆಯಲ್ಲಿ ಚುನಾವಣೆಯ ತಯಾರಿ ನಡೆಯುತ್ತಿತ್ತು. ಎಲ್ಲ 4 ಮಂದಿ ಅಧ್ಯಕ್ಷೀಯ ಅಭ್ಯರ್ಥಿಗಳ ಬಯೋಡಾಟಾ, DNA ಮಾಹಿತಿಗಳನ್ನು ಸಂಗ್ರಹಿಸಿ ಕಳುಹಿಸಿಕೊಡುವಂತೆ CIAಯು ಅಲ್ಲಿನ ಅಮೆರಿಕನ್ ರಾಯಭಾರಿಯಲ್ಲಿ ಕೇಳಿಕೊಂಡಿರುವುದನ್ನು ಇತ್ತೀಚೆಗೆ ವಿಕಿಲೀಕ್ಸ್ ಬಹಿರಂಗಪಡಿಸಿತ್ತು. ಆ ಬಳಿಕ ಫರ್ನಾಂಡೋ ಲುಗೋ ಅಧ್ಯಕ್ಷರಾಗಿ ಆಯ್ಕೆಯಾದರು. 60 ವರ್ಷದ ಲುಗೋ 2010ರಲ್ಲಿ ಕ್ಯಾನ್ಸರ್ ಗಡ್ಡೆಗಾಗಿ ಚಿಕಿತ್ಸೆಗೆ ಒಳಗಾದರು. ಬ್ರೆಝಿಲ್‍ನ ಮಾಜಿ ಅಧ್ಯಕ್ಷ 66 ವರ್ಷದ ಲುಲ ಡ ಸಿಲ್ವ 2011ರಲ್ಲಿ ಲಂಗ್ಸ್ ಕ್ಯಾನ್ಸರ್‍ಗೆ ತುತ್ತಾದರು. ಈ ಕಾರಣದಿಂದಲೇ ತನ್ನ ಹುದ್ದೆಯನ್ನು ಡೆಲ್ಮ ರಸ್ಸೆಫ್‍ಗೆ ವರ್ಗಾಯಿಸಿದರು. ನಿಜವಾಗಿ ಅಮೆರಿಕಕ್ಕೆ ತಲೆಬಾಗದೆಯೇ ದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂಬುದನ್ನು ಮೊದಲಾಗಿ ಸಾಧಿಸಿ ತೋರಿಸಿದ್ದೇ ಲುಲ ಡ ಸಿಲ್ವ. ಬ್ರೆಝಿಲನ್ನು ಜಾಗತಿಕವಾಗಿಯೇ ಪ್ರಬಲ ಆರ್ಥಿಕ ಶಕ್ತಿಯಾಗಿ ಮಾರ್ಪಡಿಸಿದ್ದು ಅವರ ಅಮೋಘ ಸಾಧನೆಯಾಗಿತ್ತು. ಇದೀಗ ಡೆಲ್ಮಾ ರಸ್ಸೆಫ್‍ರೂ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದಾರೆ. 2011ರಲ್ಲಿ ವೆನೆಝುವೇಲದ ಹ್ಯೂಗೋ ಚಾವೇಝ್ ಮೊದಲ ಬಾರಿ ಕ್ಯೂಬಾದ ಹವಾನದಲ್ಲಿ ಕ್ಯಾನ್ಸರ್‍ಗಾಗಿ ಚಿಕಿತ್ಸೆ ಪಡೆದರು. ಅರ್ಜಂಟೀನಾದ ಅಧ್ಯಕ್ಷೆ ಕ್ರಿಸ್ಟಿನಾ 2012ರ ಜನವರಿಯಲ್ಲಿ ಥೈರಾಯಿಡ್ ಗ್ರಂಥಿಯ ಕ್ಯಾನ್ಸರ್ ಗಾಗಿ ಸರ್ಜರಿಗೆ ಒಳಗಾಗಿದ್ದಾರೆ. ಈ ಮೊದಲು ಅರ್ಜಂಟೀನಾದ ಅಧ್ಯಕ್ಷರಾಗಿದ್ದ ಅವರ ಪತಿ ನೆಸ್ಟರ್ ಕಿರ್ಚನರ್ ರು 2010ರಲ್ಲಿ ಕ್ಯಾನ್ಸರ್ ಗೆ ತುತ್ತಾಗಿ ಆ ಬಳಿಕ ಸಾವಿಗೀಡಾಗಿದ್ದರು. ದಕ್ಷಿಣ ಅಮೇರಿಕದ ಇನ್ನೊಂದು ಸಮಾಜವಾದಿ ರಾಷ್ಟ್ರವಾದ ಪೆರುವಿನ ಅಧ್ಯಕ್ಷ ಒಲ್ಲಂಟ ಹುಮಾಲ 2011ರಲ್ಲಿ ಕ್ಯಾನ್ಸರ್ ಗಡ್ಡೆಯ ನಿವಾರಣೆಗಾಗಿ ಚಿಕಿತ್ಸೆ ಪಡೆದಿದ್ದಾರೆ.
   ಅಮೆರಿಕದ ದಬ್ಬಾಳಿಕೆ, ಸಾಮ್ರಾಜ್ಯಶಾಹಿ ನೀತಿಗಳೇನೇ ಇರಲಿ, ಅದರ ದಕ್ಷಿಣಕ್ಕಿರುವ ಸುಮಾರು 20ರಷ್ಟು ರಾಷ್ಟ್ರಗಳು ಅಮೆರಿಕವನ್ನು ಅನುಮಾನಿಸಿದ್ದೇ ಹೆಚ್ಚು. ಅಮೆರಿಕ ತನ್ನ ದೊಡ್ಡತನವನ್ನು ಪ್ರದರ್ಶಿಸಿದಂತೆಲ್ಲಾ ಈ ರಾಷ್ಟ್ರಗಳು ಹೆಚ್ಚೆಚ್ಚು ಸಮಾಜವಾದಿ ವಿಚಾರಧಾರೆಗೆ ಆಕರ್ಷಿತವಾಗುತ್ತಾ ಹೋದುವು. ಕ್ಯೂಬಾದ ಫಿಡೆಲ್ ಕ್ಯಾಸ್ಟ್ರೊ, ವೆನೆಝುವೇಲದ ಚಾವೇಝ್, ಬ್ರೆಝಿಲ್‍ನ ಲುಲ ಡ ಸಿಲ್ವ... ಸಹಿತ ಪ್ರಮುಖ ನಾಯಕರು ದಕ್ಷಿಣ ಅಮೆರಿಕವನ್ನು ಸಾಮ್ರಾಜ್ಯಶಾಹಿ ವಿರೋಧಿಯಾಗಿ ಕಟ್ಟ ತೊಡಗಿದರು. ನಿಜವಾಗಿ, ಈ ದೇಶಗಳು ಅಮೆರಿಕದ ವಿರುದ್ಧ ವಷ್ಟೇ ಒಂದುಗೂಡಿದ್ದಲ್ಲ, ಇಸ್ರೇಲ್‍ನ ವಿರುದ್ಧವೂ ಇವು ಬಹುತೇಕ ಒಂದೇ ದನಿಯಲ್ಲಿ ಮಾತಾಡಿವೆ. ಫೆಲೆಸ್ತೀನ್‍ನ ಸಾರ್ವ ಭೌಮತೆಯನ್ನು ಬಹಿರಂಗವಾಗಿ ಘೋಷಿಸಿದ್ದು ಈ ರಾಷ್ಟ್ರಗಳೇ. ಅಲ್ಲದೆ, ಚಾವೇಝ್‍ರಂತೂ ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳ ಸಂಬಂಧವನ್ನು ಆಫ್ರಿಕ ಮತ್ತು ಅರಬ್  ಜಗತ್ತಿನೊಂದಿಗೆ ಬೆಳೆಸಲು ತೀವ್ರವಾಗಿ ಶ್ರಮಿಸಿದ್ದರು. ಆದ್ದರಿಂದಲೇ, Chavez take care. These people have developed technology. You are very careless. Take care what you eat. What they give you to eat. A little needle and they inject you with. I dont know what.  (ಚಾವೇಝ್ ಜಾಗ್ರತೆ, ಅವರು (ಅಮೆರಿಕ) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ನೀನು ತುಂಬಾ ಅಜಾಗರೂಕತೆಯ ವ್ಯಕ್ತಿ. ನೀನು ತಿನ್ನುವಾಗಲೂ ತುಂಬಾ ಜಾಗರೂಕನಾಗಿರಬೇಕು. ತಿನ್ನುವ ಆಹಾರದ ಮೂಲಕವೂ ಅವರು ನಿನಗೆ ಸಣ್ಣ ಸೂಜಿಯನ್ನು ಚುಚ್ಚಬಹುದು) ಎಂದು ಕ್ಯಾಸ್ಟ್ರೊ ಆಗಾಗ ಚಾವೇಝ್‍ರನ್ನು ಎಚ್ಚರಿಸುತ್ತಿದ್ದರು. ಸ್ವತಃ ಫಿಡೆಲ್ ಕ್ಯಾಸ್ಟ್ರೋರ ಮೇಲೆ 900ರಷ್ಟು ಬಾರಿ ಹತ್ಯಾ ಯತ್ನಗಳು ನಡೆದಿವೆ ಎಂದು ಖ್ಯಾತ ಬರಹಗಾರ ಲೂಯಿಸ್ ಬ್ರಿಟ್ಟೊ ಗಾರ್ಸಿಯ ಇತ್ತೀಚೆಗೆ ಬರೆದಿದ್ದರು. ಅಂದ ಹಾಗೆ, ಮೆದುಳು ಆಘಾತದಿಂದ 2004ರಲ್ಲಿ ಮೃತಪಟ್ಟ ಫೆಲೆಸ್ತೀನಿನ ಅಧ್ಯಕ್ಷ ಯಾಸಿರ್ ಅರಫಾತ್‍ರ ಸಾವಿನ ಹಿಂದೆ ಇಸ್ರೇಲ್‍ನ ಕೈವಾಡ ಇದೆ ಎಂಬುದು ಇವತ್ತು ಗುಟ್ಟಾಗಿಲ್ಲವಲ್ಲ.
   ಒಂದು ರೀತಿಯಲ್ಲಿ ಅಮೆರಿಕದ ಅಪ್ಪಣೆಯನ್ನು ಶಿರಸಾ ಪಾಲಿಸುವ ರಾಷ್ಟ್ರಗಳು ಜಗತ್ತಿನಲ್ಲಿ ಅನೇಕಾರು ಇದ್ದರೂ ಅಮೆರಿಕದ ಸುತ್ತಮುತ್ತಲಿನ ಕೆಲವು ರಾಷ್ಟ್ರಗಳು ಅದರ ಹಂಗಿಲ್ಲದೇ ಬದುಕುವ ಪಣತೊಟ್ಟದ್ದು, ಅದಕ್ಕಾಗಿ ಶ್ರಮಿಸಿದ್ದು ಆ ರಾಷ್ಟ್ರಗಳ ನಾಯಕರಿಗೆ ಕ್ಯಾನ್ಸರ್ ಹರಡಲು ಕಾರಣ ಎಂದು ನಂಬುವಂತಹ ವಾತಾವರಣ ಇವತ್ತು ಸೃಷ್ಟಿಯಾಗಿದೆ. ಚಾವೇಝ್ ಅಂತೂ ಅಂಥ ಅನುಮಾನವನ್ನು ವ್ಯಕ್ತಪಡಿಸಿಯೇ ಸಾವಿಗೆ ತುತ್ತಾದರು. ಒಂದು ವೇಳೆ ಇನ್ನೊಂದು ಹತ್ತು ವರ್ಷ ಅವರು ಬದುಕಿರುತ್ತಿದ್ದರೆ ದಕ್ಷಿಣ ಅಮೆರಿಕದ ಒಟ್ಟು ಭೂಪಟವೇ ಬದಲಾಗಿ ಬಿಡುವ ಸಾಧ್ಯತೆಯಿತ್ತು. ಅವರು 2008ರಲ್ಲಿ 12 ರಾಷ್ಟ್ರಗಳ ದಕ್ಷಿಣ ಅಮೆರಿಕನ್ ಒಕ್ಕೂಟವನ್ನು ರಚಿಸಿದರು. ಮಾತ್ರವಲ್ಲ, ಈ ಒಕ್ಕೂಟವನ್ನು ಯುರೋಪಿಯನ್ ಯೂನಿಯನ್‍ಗೆ ಸಡ್ಡು ಹೊಡೆಯುವಂತೆ ಕಟ್ಟುವಲ್ಲಿ ನಿರತರಾದರು. ಈ ಒಕ್ಕೂಟದ ಸದಸ್ಯ ರಾಷ್ಟ್ರಗಳು ಪರಸ್ಪರ ಆರ್ಥಿಕ, ವೈಜ್ಞಾನಿಕ, ರಾಜಕೀಯ ಸಹಕಾರದೊಂದಿಗೆ ಸಮೃದ್ಧವಾಗಿ ಬೆಳೆಯುವುದಕ್ಕೆ ನೀಲನಕ್ಷೆ ರೂಪಿಸಿದರು. ಆದ್ದರಿಂದಲೇ ಈ ರಾಷ್ಟ್ರಗಳು ತಮ್ಮ ಅಗತ್ಯಗಳಿಗೆ ಅಮೆರಿಕವನ್ನು ಅಲಂಬಿಸುವುದರ ಬದಲು, ಪರಸ್ಪರ ಅವಲಂಬಿಸುವ ಹೊಸ ದಾರಿಯನ್ನು ಕಂಡುಕೊಂಡವು. ವಿಶ್ವ ಬ್ಯಾಂಕ್‍ಗೆ ಪರ್ಯಾಯವಾಗಿ ದಿ ಬ್ಯಾಂಕ್ ಆಫ್ ಸೌತ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಬಹುಶಃ ಅಮೆರಿಕವನ್ನು ಮತ್ತು ಅದರ ನೆರವನ್ನು ಅವಲಂಬಿಸದೇ ಬದುಕುವ ಹೊಸ ಸಾಧ್ಯತೆಯನ್ನು ನಿಜಗೊಳಿಸುವತ್ತ ಅವರು ಯಶಸ್ವಿಯಾಗುತ್ತಿರುವುದನ್ನು ಮನಗಂಡೇ 2009ರಲ್ಲಿ ಅವರನ್ನು ಮತ್ತು ಬೊಲಿವಿಯನ್‍ನ ಅಧ್ಯಕ್ಷ ಇವೊ ಮಾರೆಲ್ಸ್ ರನ್ನು ಕೊಲ್ಲಲು CIA  ಶ್ರಮಿಸಿರಬೇಕು. ವಿಮಾನದಲ್ಲಿ ಇವರಿಬ್ಬರು ಸಾಲ್ವಡೋರ್‍ಗೆ ಪ್ರಯಾಣಿಸುತ್ತಿದ್ದಾಗ ಪೊಸಾಡ ಕ್ಯಾರಿಲ್ಸ್ ಎಂಬ ಲಾಂಚರ್ ತಜ್ಞನ ಮುಖಾಂತರ ರಾಕೆಟ್ ಹಾರಿಸಿ ವಿಮಾನವನ್ನು ಉರುಳಿಸಲು CIA ಪ್ರಯತ್ನಿ ಸಿತ್ತು. ಅಲ್ಲದೇ 2002ರಲ್ಲಿ ವೆನೆಜುವೇಲದ ಕೆಲವು ಅತೃಪ್ತ ಮಿಲಿಟರಿ ಅಧಿಕಾರಿಗಳು ಚಾವೇಝ್‍ರನ್ನು 48 ಗಂಟೆಗಳ ಕಾಲ ದಿಗ್ಬಂಧನದಲ್ಲಿರಿಸಿ ಕ್ಷಿಪ್ರ ಕ್ರಾಂತಿಗೆ ಮುಂದಾದಾಗ, ಅಷ್ಟು ಸಣ್ಣ ಅವಧಿಯೊಳಗೆ ಅಮೆರಿಕ ಮತ್ತು IMF  ಆ ಹೊಸ ಸರಕಾರಕ್ಕೆ ಬೆಂಬಲ ಸಾರಿತ್ತು. ಆದರೆ ಆ ಬಳಿಕ ವೆನೆಝುವೇಲದ ಜನರೇ ದಂಗೆಯೆದ್ದು ಕ್ಷಿಪ್ರಕ್ರಾಂತಿಯನ್ನು ವಿಫಲಗೊಳಿಸಿದ್ದರು.
   ಹೀಗಿರುವಾಗ,
ಮುಂದೊಂದು ದಿನ ಅಮೆರಿಕದ ಜನರೇ ದಂಗೆಯೆದ್ದು ಚಾವೇಝ್‍ರ ‘ದೆವ್ವ’(ಅಮೆರಿಕನ್  ಸಾಮ್ರಾಜ್ಯಶಾಹಿ ನೀತಿ)ವನ್ನು ಪದಚ್ಯುತಗೊಳಿಸಲೂಬಹುದಲ್ಲವೇ? ಯಾರಿಗೆ ಗೊತ್ತು?

Tuesday, March 5, 2013

ಈ ಬ್ಲ್ಯಾಕ್ ನ ಎದುರು ಆ ಯೆಲ್ಲೋ ಏನೇನೂ ಅಲ್ಲ..

1. ಗಾಬರಿ ಹುಟ್ಟಿಸುವ, ತಪ್ಪು ದಾರಿಗೆಳೆಯುವ ಶೀರ್ಷಿಕೆಗಳು.
2. ಅನಗತ್ಯವಾಗಿ ಮತ್ತು ಧಾರಾಳವಾಗಿ ಚಿತ್ರಗಳನ್ನು ಬಳಸುವುದು.
3. ಸುಳ್ಳು ಸುದ್ದಿಗಳನ್ನು ಕಲ್ಪಿತ ವಿವರಣೆಗಳೊಂದಿಗೆ ಕೊಡುವುದು.
4. ಸುದ್ದಿಗಳು ಉತ್ಪ್ರೇಕ್ಷಿತವಾಗಿ ಅತಿ ಭಾವುಕತೆಯಿಂದ ಕೂಡಿರುವುದು.
   ಯೆಲ್ಲೋ ಜರ್ನಲಿಝಮ್ (Yellow journalism - ಪೀತ ಪತ್ರಿಕೋದ್ಯಮ) ಎಂಬ ಪದ ಪ್ರಯೋಗವಾದಾಗಲೆಲ್ಲಾ ಅಮೇರಿಕದ ಫ್ರಾಂಕ್ ಲುದರ್‍ಮೋಟ್ ನೆನಪಾಗುತ್ತಾನೆ. ಪುಲಿಟ್ಝರ್ ಪ್ರಶಸ್ತಿ ವಿಜೇತ ಪತ್ರಕರ್ತನಾಗಿರುವ ಈತ, ಪೀತ ಪತ್ರಿಕೋದ್ಯಮದ ಲಕ್ಷಣಗಳನ್ನು ಮೊತ್ತಮೊದಲು ಪಟ್ಟಿ ಮಾಡಿದಾತ. ಆವರೆಗೆ ಯೆಲ್ಲೋ ಜರ್ನಲಿಝಮ್ ಎಂಬ ಪದ ಅಷ್ಟಾಗಿ ಚಾಲ್ತಿಯಲ್ಲಿರಲಿಲ್ಲ. ಓದುಗರಲ್ಲೂ ಆ ಬಗ್ಗೆ ಖಚಿತ ಅಭಿಪ್ರಾಯವಿರಲಿಲ್ಲ. ನಿಜವಾದ ಪತ್ರಿಕೋದ್ಯಮವೆಂದರೆ ‘ಇದು’ ಮತ್ತು ‘ಇದಲ್ಲ’ ಎಂದು ದೃಢವಾಗಿ ಹೇಳುವಂಥ ಪ್ರಯತ್ನಗಳೂ ಆ ವರೆಗೆ ನಡೆದಿರಲಿಲ್ಲ. ಆದರೆ 1896ರ ಬಳಿಕ ಅಮೇರಿಕದಲ್ಲಿ ಕಾಣಿಸಿಕೊಂಡ ಈ ಯೆಲ್ಲೋ ಜರ್ನಲಿಝಮನ್ನು ಅತ್ಯಂತ ಆಸಕ್ತಿಯಿಂದ ಗಮನಿಸಿಕೊಂಡು ಬಂದ ಫ್ರಾಂಕ್, 1941ರಲ್ಲಿ ಮೇಲಿನಂತೆ ಅದರ ಲಕ್ಷಣಗಳನ್ನು ಪಟ್ಟಿ ಮಾಡಿದ. ಅದು ವ್ಯವಸ್ಥೆ ಮತ್ತು ಸಮಾಜದ ಮೇಲೆ ಬೀರುವ ಅಡ್ಡ ಪರಿಣಾಮಗಳ ಬಗ್ಗೆಯೂ ವಿವರಿಸಿದ. ಆತನ ಈ ಅಧ್ಯಯನಕ್ಕೆ ಕಾರಣವೂ ಇದೆ..
1 ಜೋಸೆಫ್ ಪುಲಿಟ್ಝರ್
2 ವಿಲಿಯಂ ರ್ಯಾಂಡಲ್ಪ್ ಹಸ್ರ್ಟ್
   ಯೆಲ್ಲೋ ಜರ್ನಲಿಝಮ್‍ಗೆ ಜನ್ಮ ಕೊಟ್ಟದ್ದೇ ಈ ಇಬ್ಬರು ಅಮೇರಿಕದ ಪತ್ರಿಕೋದ್ಯಮಿಗಳು. 1883ರಲ್ಲಿ ದಿ ನ್ಯೂಯಾರ್ಕ್ ವರ್ಲ್ದ್  ಎಂಬ ಪತ್ರಿಕೆಯನ್ನು ಜೋಸೆಫ್ ಪುಲಿಟ್ಝರ್ ಖರೀದಿಸಿದ. ಆಗ ಆ ಪತ್ರಿಕೆಯ ಪ್ರಸಾರ ಸಂಖ್ಯೆ ತೀರಾ ತಳಮಟ್ಟದಲ್ಲಿತ್ತು. ಆತ ಪತ್ರಿಕೆಯ ಇಡೀ ಸ್ವರೂಪವನ್ನೇ ಬದಲಿಸಲು ತೀರ್ಮಾನಿಸಿದ. ಪತ್ರಿಕೆಯ ದರವನ್ನು ಇಳಿಸಿದ. ಪುಟಗಳನ್ನು 12ಕ್ಕೆ ಏರಿಸಿದ. ಆವತ್ತು ಇತರ ಪತ್ರಿಕೆಗಳು ಅಷ್ಟೇ ದರದಲ್ಲಿ ಕೇವಲ 4 ಪುಟಗಳನ್ನಷ್ಟೇ ನೀಡುತ್ತಿದ್ದವು. ಅಲ್ಲದೇ ಪತ್ರಿಕೆಯಲ್ಲಿ ಕ್ರೈಮ್ ನ್ಯೂಸ್‍ಗಳಿಗೆ ಮುಖಪುಟದಲ್ಲೇ ಜಾಗ ಕೊಟ್ಟ. ರಸವತ್ತಾದ, ಮಸಾಲೆಭರಿತ ಸುದ್ದಿಗಳನ್ನು ಧಾರಾಳ ಕೊಡತೊಡಗಿದ. ಈ ಮೂಲಕ ಓದುಗರಲ್ಲಿ ಒಂದು ಬಗೆಯ ಥ್ರಿಲ್ ಅನ್ನು ಹುಟ್ಟಿಸಲು ಪುಲಿಟ್ಝರ್ ಯಶಸ್ವಿಯಾದ. ಹೀಗೆ ಕೇವಲ ಎರಡೇ ವರ್ಷಗಳಲ್ಲಿ ಇಡೀ ನ್ಯೂಯಾರ್ಕ್ ನಗರದಲ್ಲೇ ಅತ್ಯಂತ ಹೆಚ್ಚು ಖರ್ಚಾಗುವ ಪತ್ರಿಕೆಯಾಗಿ ನ್ಯೂಯಾರ್ಕ್ ವರ್ಲ್ದ್  ಅನ್ನು ತಂದು ನಿಲ್ಲಿಸಿದ. ನಿಜವಾಗಿ, ಸಮಸ್ಯೆ ಪ್ರಾರಂಭವಾದದ್ದೇ ಇಲ್ಲಿ. ಹಾರ್ವರ್ಡ್ ಯುನಿವರ್ಸಿಟಿಯಲ್ಲಿ ಕಲಿಯುತ್ತಿದ್ದ ವಿಲಿಯಂ ರಾಂಡಲ್ಪ್ ಹರ್ಸ್ಟ್  ಎಂಬ ವಿದ್ಯಾರ್ಥಿ ಈ ಬೆಳವಣಿಗೆಯನ್ನು ಆಸಕ್ತಿಯಿಂದ ಗಮನಿಸುತ್ತಿದ್ದ. ಸಣ್ಣ ಅವಧಿಯಲ್ಲಿ ಪುಲಿಟ್ಝರ್ ಏರಿದ ಎತ್ತರ ಆತನನ್ನು ಚಕಿತಗೊಳಿಸಿತ್ತು. ಅಲ್ಲದೇ ಹರ್ಸ್ಟ್ ನ ತಂದೆಯು ‘ಸ್ಯಾನ್ ಫ್ರಾನ್ಸಿಸ್ಕೋ ಎಕ್ಸಾಮಿನರ್’ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದುದರಿಂದ ಆತನ ಕುತೂಹಲ ಸಹಜವೂ ಆಗಿತ್ತು. ಅಪ್ಪನಿಂದ ‘ಎಕ್ಸಾಮಿನರ್’ ಪತ್ರಿಕೆಯನ್ನು ಪಡಕೊಂಡ ಆತ, ಶೇ. 25ರಷ್ಟು ಜಾಗವನ್ನು ಕ್ರೈಮ್ ನ್ಯೂಸ್‍ಗೇ ಮೀಸಲಿಟ್ಟ. ಇದರ ಮಧ್ಯೆಯೇ, ದಿ ನ್ಯೂಯಾರ್ಕ್ ಜರ್ನಲ್ ಎಂಬ ಪತ್ರಿಕೆಯನ್ನು 1895ರಲ್ಲಿ ಖರೀದಿಸಿದ. ಮಾತ್ರವಲ್ಲ, ನ್ಯೂಯಾರ್ಕ್ ವರ್ಲ್ದ್ ನೊಂದಿಗೆ ಸೆಣಸುವುದಕ್ಕಾಗಿ ದರ ಸಮರಕ್ಕಿಳಿದ. ಪತ್ರಿಕೆಯ ಬೆಲೆಯನ್ನು ಇಳಿಸಿದ. ಭಾವುಕ ಶೀರ್ಷಿಕೆ, ನೈತಿಕ-ಅನೈತಿಕತೆಯನ್ನು ಪರಿಗಣಿಸದ ಚಿತ್ರಗಳು ಮತ್ತು ಮಸಾಲೆ ಲೇಪಿತ ವಿವರಗಳನ್ನು ಪತ್ರಿಕೆಯಲ್ಲಿ ಕೊಡತೊಡಗಿದ. ಎರಡೇ ವರ್ಷಗಳಲ್ಲಿ ನ್ಯೂಯಾರ್ಕ್ ಜರ್ನಲ್‍ನ ಪ್ರಸಾರ ಸಂಖ್ಯೆಯು ನ್ಯೂಯಾರ್ಕ್ ವರ್ಲ್ದ್ ನ  ಪ್ರಸಾರ ಸಂಖ್ಯೆಗೆ ಸಮವಾಗುವಷ್ಟರ ಮಟ್ಟಿಗೆ ಏರಿಬಿಟ್ಟಿತು. ಒಂದು ರೀತಿಯಲ್ಲಿ ಯೆಲ್ಲೋ ಜರ್ನಲಿಝಮ್ ಹುಟ್ಟು ಪಡೆದದ್ದೇ ಇಲ್ಲಿ. ಆದರೆ ಅದು ಅಷ್ಟಕ್ಕೇ ನಿಲ್ಲಲಿಲ್ಲ.
   ಅಮೇರಿಕ - ಸ್ಪೈನ್ ನಡುವೆ ಯುದ್ಧ..
ಬಹುತೇಕ 1800ರಲ್ಲಿಯೇ ಕ್ಯೂಬಾವು ಸ್ಪೈನ್‍ನ ವಸಾಹತು ಆಗಿತ್ತು. ಈ ವಸಾಹತಿನ ವಿರುದ್ಧ ಕ್ಯೂಬಾದಲ್ಲಿ ಬಂಡಾಯವೂ ಕಾಣಿಸಿಕೊಂಡಿತ್ತು. ಆದರೆ ಸ್ಪೈನ್ ಸುಲಭದಲ್ಲಿ ಈ ಬಂಡಾಯಕ್ಕೆ ಮಣಿಯುವಂತೆ ಕಾಣುತ್ತಿರಲಿಲ್ಲ. ತನ್ನ ನೆರೆಯಲ್ಲಿ ನಡೆಯುತ್ತಿದ್ದ ಈ ಬೆಳವಣಿಗೆಯನ್ನು ಅಮೇರಿಕ ಆಸಕ್ತಿಯಿಂದ ಗಮನಿಸುತ್ತಿತ್ತು. ಕ್ಯೂಬಾದ ಮೇಲೆ ಸ್ಪೈನ್ ಹಕ್ಕು ಸಾಧಿಸುವುದು ಅಮೇರಿಕಕ್ಕೆ ಎಳ್ಳಷ್ಟೂ ಇಷ್ಟವಿರಲಿಲ್ಲ. 1823ರಲ್ಲೇ ಸ್ಪೈನ್‍ಗೆ ಅದು ಎಚ್ಚರಿಕೆಯನ್ನೂ ಕೊಟ್ಟಿತ್ತು. ಈ ಮಧ್ಯೆ 1898ರಲ್ಲಿ ಅಮೇರಿಕದ USS ಮೈನೆ ಎಂಬ ಹಡಗು ಕ್ಯೂಬಾದ ಹವಾನಾ ಬಂದರಿನಲ್ಲಿ ಅನುಮಾನಾಸ್ಪದವಾಗಿ ಮುಳುಗಿಬಿಟ್ಟಿತು. ಅದಾಗಲೇ ಬದ್ಧ ವೈರಿಗಳಂತೆ ಕಾದಾಟದಲ್ಲಿ ತೊಡಗಿದ್ದ ನ್ಯೂಯಾರ್ಕ್ ಜರ್ನಲ್ ಮತ್ತು ನ್ಯೂಯಾರ್ಕ್ ವರ್ಲ್ದ್ ಗಳು ಈ ಸುದ್ದಿಗೆ ತಮ್ಮಿಷ್ಟದ ವ್ಯಾಖ್ಯಾನಗಳನ್ನು ಕೊಡತೊಡಗಿದುವು. ಹಡಗನ್ನು ಯಾರು ಮುಳುಗಿಸಿರಬಹುದು ಎಂಬ ಚರ್ಚೆಯನ್ನು ಪ್ರಾರಂಭಿಸಿ ಕಪೋಲ ಕಲ್ಪಿತ ವಿವರಗಳನ್ನು ಸೃಷ್ಟಿ ಮಾಡಿದುವು. ಅಮೇರಿಕದ ಅಧ್ಯಕ್ಷ  ವಿಲಿಯಂ ಮೆಕಿನ್ಲೆಗೆ ಗೊತ್ತಿಲ್ಲದ ಗುಪ್ತ ಮಾಹಿತಿಗಳನ್ನು ಅವು ಪ್ರಕಟಿಸಿದುವು. ಇಷ್ಟಕ್ಕೂ, ಆ ವರದಿಗಳಿಗೆ  ಆಧಾರಗಳಿತ್ತು ಎಂದಲ್ಲ. ಆಧಾರಗಳಿರುವ ಸುದ್ದಿಗಳನ್ನು ಮಾತ್ರ ಪ್ರಕಟಿಸಬೇಕೆಂಬ ಮೂಲ ತತ್ವಗಳಿಂದ ಅವೆರಡೂ ಯಾವಾಗಲೋ ಹೊರಹೋಗಿತ್ತು. ಆದ್ದರಿಂದಲೇ ರಂಗುರಂಗಾದ, ಕುತೂಹಲಕರ ಸುದ್ದಿ, ವಿಶ್ಲೇಷಣೆ ಗಳು ದಿನಾ ಬರತೊಡಗಿದುವು. ಹಡಗನ್ನು ಮುಳುಗಿಸಿದ್ದು ಸ್ಪೈನ್ ಎಂದು ಅವು ಸ್ವತಃ ಕಂಡಂತೆ ಬರೆದುವು. ಸ್ಪೈನ್‍ನ ದಬ್ಬಾಳಿಕೆ, ಕ್ಯೂಬನ್ನರ ಅಸಹಾಯಕತೆಯ ಕತೆಗಳು ಧಾರಾಳ ಅಚ್ಚಾಗತೊಡಗಿದುವು. ಪತ್ರಿಕೆಗಳ ಸುದ್ದಿಗಳಿಂದ ಪ್ರಭಾವಿತರಾದ ಅಮೇರಿಕನ್ನರು ಸ್ಪೈನ್ ವಿರುದ್ಧ ಸಿಟ್ಟಾಗತೊಡಗಿದರು. ಕೊನೆಗೆ ಸಾರ್ವಜನಿಕ ಒತ್ತಡಕ್ಕೆ ಮಣಿದು ಅಧ್ಯಕ್ಷ  ಮೆಕಿನ್ಲೆ, ಸ್ಪೈನ್‍ನ ವಿರುದ್ಧ ಯುದ್ಧ ಸಾರಬೇಕಾಯಿತು. ಯುದ್ಧದ ಸಚಿತ್ರ ವರದಿ, ಪೋಟೋಗಳನ್ನು ಪಡಕೊಳ್ಳುವುದಕ್ಕಾಗಿ ಎರಡೂ ಪತ್ರಿಕೆಗಳು ತಮ್ಮ ವರದಿಗಾರರನ್ನು ಕಳುಹಿಸಿದುವು. ಅವರಲ್ಲಿ ನ್ಯೂಯಾರ್ಕ್ ಜರ್ನಲ್‍ನ ಫೆಡ್ರಿಕ್ ರೆಮಿಂಗ್ಟನ್ ಎಂಬ ಕಲಾವಿದನೂ (ಕುಂಚದಲ್ಲಿ ಯುದ್ಧದ ಚಿತ್ರ ಬಿಡಿಸುವವ) ಸೇರಿದ್ದ. ಆತ ಅಲ್ಲಿಗೆ ಹೋಗಿ ನೋಡುವಾಗ, ಪತ್ರಿಕೆಯಲ್ಲಿ ಪ್ರಕಟವಾದಂಥ ಸನ್ನಿವೇಶವೇನೂ ಕಾಣಿಸಲಿಲ್ಲ. ಪತ್ರಿಕೆಯಲ್ಲಿ ಏನೆಲ್ಲ ಪ್ರಕಟವಾಗುತ್ತಿತ್ತೋ ಅವೆಲ್ಲ ಕಲ್ಪಿತ ಎನ್ನುವುದು ಆತನಿಗೆ ಮನವರಿಕೆಯಾಗಿ ಬಿಟ್ಟಿತ್ತು. ವರದಿ ಮಾಡಲು ಕುತೂಹಲ ಕಾರಿಯಾದಂಥ ಏನೊಂದೂ ಇಲ್ಲವೆಂದ ಮೇಲೆ ಆತ ಅಲ್ಲಿರುವ ಅಗತ್ಯವಾದರೂ ಏನಿರುತ್ತದೆ? ಆದ್ದರಿಂದ ಆತ, 'ನನ್ನನ್ನು ಹಿಂದಕ್ಕೆ ಕರೆಸಿಕೊಳ್ಳಿ, ಇಲ್ಲಿ ಯುದ್ಧವೇ ನಡೀತಿಲ್ಲ..' ಎಂದು ಹರ್ಸ್ಟ್ ಗೆ ಟೆಲಿಗ್ರಾಮ್ ಕಳುಹಿಸಿದ. ಆದರೆ, 'ನೀನು ಅಲ್ಲೇ ಇದ್ದು ನನಗೆ ಚಿತ್ರವನ್ನು (ಯುದ್ಧದ ಕಲ್ಪಿತ ಚಿತ್ರ) ಒದಗಿಸು,  ನಾನು ಯುದ್ಧ ವನ್ನು ಒದಗಿಸುತ್ತೇನೆ' (you furnish the pictures and i will furnish the war) ಎಂದು ಹರ್ಸ್ಟ್ ಮರಳಿ ಉತ್ತರ ಕೊಟ್ಟ.
   ಹೀಗೆ ತನ್ನ ಸುಳ್ಳು, ಉತ್ಪ್ರೇಕ್ಷಿತ ಪತ್ರಿಕೋದ್ಯಮದ (ಯೆಲ್ಲೋ ಜರ್ನಲಿಝಂ) ಮೂಲಕ ಅಮೇರಿಕವನ್ನು ಯುದ್ಧಕ್ಕೆ ದೂಡುವಲ್ಲಿ ಮತ್ತು ಪತ್ರಿಕೆಯ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ ಹರ್ಸ್ಟ್  ಯಶಸ್ವಿಯಾದ. ಅಂದಹಾಗೆ,
   ಇಂಥ ಪತ್ರಿಕೋದ್ಯಮ 19ನೇ ಶತಮಾನದ ಪಿಡುಗಾಗಿಯಷ್ಟೇ ಇವತ್ತು ಉಳಿದಿದೆಯೇ? ಮೊನ್ನೆಯ ಹೈದಬಾರಾದ್ ಸ್ಫೋಟದ ಸಮಯದಲ್ಲಿ ಹೆಚ್ಚಿನ ಪತ್ರಿಕೆ ಮತ್ತು ಚಾನೆಲ್‍ಗಳು ಕಾಯ್ದುಕೊಂಡ ಸಂಯಮವನ್ನು ಈ ಹಿಂದಿನ ಎಷ್ಟು ಸಂದರ್ಭಗಳಲ್ಲಿ ಕಾಯ್ದುಕೊಂಡಿವೆ? ಈ ಹಿಂದೆ ಅವು ಪ್ರಕಟಿಸಿದ ಚಿತ್ರಗಳು, ವಿಶ್ಲೇಷಣೆಗಳು, ಮುಖಪುಟ ಶೀರ್ಷಿಕೆಗಳೆಲ್ಲ ಯಾವ ಯೆಲ್ಲೋ ಜರ್ನಲಿಝಮ್‍ಗಿಂತ ಕಡಿಮೆಯಿದ್ದುವು? 6 ತಿಂಗಳ ಹಿಂದೆ ಪತ್ರಕರ್ತ ಮುತೀಉರ್ರಹ್ಮಾನ್ ಸಹಿತ ಕೆಲವು ಯುವಕರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದರಲ್ಲ, ಆ ಸಂದರ್ಭದಲ್ಲಿ ಮಾಧ್ಯಮಗಳು ವರ್ತಿಸಿದ ರೀತಿ ಹೇಗಿತ್ತು? 19ನೇ ಶತಮಾನದ ನ್ಯೂಯಾರ್ಕ್ ವರ್ಲ್ದ್  ಮತ್ತು ಜರ್ನಲ್‍ಗಳನ್ನು ನಾಚಿಸುವಷ್ಟು ಅವು ಯೆಲ್ಲೋ  ಪೀಡಿತವಾಗಿರಲಿಲ್ಲವೇ? ವಿಲಿಯಂ ಹರ್ಸ್ಟ್  ಮತ್ತು ಪುಲಿಟ್ಝರ್‍ನನ್ನೂ ಮೀರಿಸುವ ಸಾಹಸವನ್ನು ನಮ್ಮ ಕೆಲವು ಪತ್ರಕರ್ತರು ಮಾಡಿದ್ದನ್ನು ಮರೆಯಲಾದೀತೇ? 19ನೇ ಶತಮಾನದಲ್ಲಿ ಪ್ರಾರಂಭವಾದ ಈ ಯೆಲ್ಲೋ ಜರ್ನಲಿಝಮ್ ಈ 21ನೇ ಶತಮಾನದಲ್ಲೂ ಮುಂದುವರಿಯುತ್ತದೆಂದರೆ ಮತ್ತು ಅದನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳಲಾಗುತ್ತದೆಂದರೆ, ಅದಕ್ಕೆ ಏನೆನ್ನ ಬೇಕು? ಮಾಧ್ಯಮಗಳನ್ನು ನಿಯಂತ್ರಿಸುವುದಕ್ಕೂ ಒಂದು ಸಂಸ್ಥೆಯಿರಬೇಕು ಎಂಬ ಒತ್ತಾಯಕ್ಕೆ ಇಂಥ ಘಟನೆಗಳನ್ನು ಯಾಕೆ ಆಧಾರವಾಗಿ ಎತ್ತಿಕೊಳ್ಳಬಾರದು? ಇಷ್ಟಕ್ಕೂ, ಇವತ್ತು ಹೆಚ್ಚಿನ ಮಾಧ್ಯಮಗಳು ಉದ್ದಿಮೆದಾರರ ಕೈಯಲ್ಲೇ ಇವೆ. ಲಾಭವೇ ಇವರ ಮುಖ್ಯ ಗುರಿ. ಅದು ತಪ್ಪು ಎಂದಲ್ಲ. ಆದರೆ ಅದಕ್ಕಾಗಿ ಸಮಾಜವನ್ನು ಪೀಡಿಸಿ, ಬೆತ್ತಲೆಗೊಳಿಸಿ, ಅವಮಾನಿಸುವುದನ್ನು ಯಾಕೆ ಸಹಿಸಬೇಕು? ಮಾಧ್ಯಮ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಕ್ಷೇತ್ರಗಳನ್ನು ಒಮ್ಮೆ ಅವಲೋಕಿಸಿಕೊಳ್ಳಿ. ನ್ಯಾಯವಾದಿಗಳು ತಮ್ಮ ವೃತ್ತಿ ಬದುಕಿನಲ್ಲಿ ತಪ್ಪು ಮಾಡಿದರೆ ಅವರ ಲೈಸೆನ್ಸನ್ನು ರದ್ದುಪಡಿಸುವ ಅಥವಾ ಅಮಾನತ್ತಿನಲ್ಲಿಡುವ ಅಧಿಕಾರ ಬಾರ್ ಕೌನ್ಸಿಲ್‍ಗಿದೆ. ಸುಪ್ರೀಮ್ ಕೋರ್ಟ್‍ ನ  ನ್ಯಾಯಾಧೀಶರು ಅಥವಾ ಹೈಕೋರ್ಟಿನ ನ್ಯಾಯಾಧೀಶರು 'ಕ್ರಮ' ತಪ್ಪಿದರೆ ಪಾರ್ಲಿಮೆಂಟ್  ವಾಗ್ದಂಡನೆ (Impeachment) ವಿಧಿಸುತ್ತದೆ. ಇದೇ ರೀತಿ ವೈದ್ಯರು, ಚಾರ್ಟರ್ಡ್ ಅಕೌನ್ ಟೆನ್ಸ್ ಗಳೆಲ್ಲ ವೃತ್ತಿ ಬದುಕಿನ ಗೌರವವನ್ನು ಕಾಪಾಡದಿದ್ದರೆ ಸಂಬಂಧಿತ ಸಂಸ್ಥೆಗಳು ಕ್ರಮ ಜರುಗಿಸುತ್ತವೆ. ಹಾಗಂತ ಮಾಧ್ಯಮ ಕ್ಷೇತ್ರದಲ್ಲಿ ಇಂಥದ್ದೊಂದು ಸಂಸ್ಥೆ ಇರದಿರುವುದಕ್ಕೆ ಕಾರಣವೇನು? ಮಾಧ್ಯಮಗಳು ತಮ್ಮನ್ನು ಸ್ವಯಂ ನಿಯಂತ್ರಿಸಿಕೊಳ್ಳಲಾರವು ಎಂಬುದಕ್ಕೆ 'ಸ್ಫೋಟ' ಪ್ರಕರಣಗಳ ಸಂದರ್ಭಗಳಲ್ಲಿ ಪ್ರಕಟವಾಗುವ ಸುದ್ದಿಗಳೇ ಪುರಾವೆಯಲ್ಲವೇ? ಇಷ್ಟಿದ್ದೂ, ಮಾಧ್ಯಮ ಪ್ರಮುಖರೇಕೆ 'ಸ್ವನಿಯಂತ್ರಣ' ಹಕ್ಕಿನ ಬಗ್ಗೆ ವಾದಿಸುತ್ತಿದ್ದಾರೆ? ಇತರೆಲ್ಲ ಕ್ಷೇತ್ರಗಳಿಗೆ ಸಾಧ್ಯವಾಗದ ಸ್ವನಿಯಂತ್ರಣವು ಮಾಧ್ಯಮ ಕ್ಷೇತ್ರಕ್ಕೆ ಸಾಧ್ಯ ಎಂದು - ಅದೂ ಇಷ್ಟೆಲ್ಲಾ ವೈಫಲ್ಯಗಳ ಬಳಿಕವೂ - ವಾದಿಸುವುದು ಎಷ್ಟು ಸರಿ? ಈ ದೇಶದಲ್ಲಿ ಕಳ್ಳತನಕ್ಕೆ ಪ್ರತ್ಯೇಕವಾದ ದಂಡಸಂಹಿತೆ ಇದೆ. ಅತ್ಯಾಚಾರಕ್ಕೆ, ಮೋಸಕ್ಕೆ, ಕೊಲೆ.. ಹೀಗೆ ಎಲ್ಲದಕ್ಕೂ ಬೇರೆ ಬೇರೆ ಕಾನೂನುಗಳಿವೆ. ಹಾಗಂತ, ಈ ದಂಡಸಂಹಿತೆಗಳನ್ನೆಲ್ಲಾ ರದ್ದುಪಡಿಸಿಬಿಡಿ, ನಾವು ಸ್ವಯಂ ನಿಯಂತ್ರಣ ಮಾಡಿಕೊಳ್ಳುತ್ತೇವೆ ಎಂದು ಕಳ್ಳರು, ಅತ್ಯಾಚಾರಿಗಳು, ವಂಚಕರು ಹೇಳಿದರೆ ಅದನ್ನು ಒಪ್ಪಿಕೊಳ್ಳಲಾಗುತ್ತಾ?
   ವಿಲಿಯಂ ಹರ್ಸ್ಟ್  ಮತ್ತು ಪುಲಿಟ್ಝರ್ 19ನೇ ಶತಮಾನದಲ್ಲಿ ಪ್ರಾರಂಭಿಸಿದ ಯೆಲ್ಲೋ ಜರ್ನಲಿಝಮನ್ನು ಇವತ್ತು ಹೆಚ್ಚಿನೆಲ್ಲಾ ಮಾಧ್ಯಮ ಕೇಂದ್ರಗಳೂ ಗೌರವಪೂರ್ವಕ ನೆಚ್ಚಿಕೊಂಡಿವೆ. ಉತ್ಪ್ರೇಕ್ಷಿತ, ಕಪೋಲ ಕಲ್ಪಿತ, ಸುಳ್ಳು ಸುದ್ದಿಗಳು ಮತ್ತು ಶೀರ್ಷಿಕೆಗಳನ್ನೇ ಹೆಚ್ಚಿನ ಪತ್ರಿಕೆಗಳು ತಮ್ಮ ಮಾರಾಟ ತಂತ್ರವಾಗಿ ಅಳವಡಿಸಿಕೊಂಡಿವೆ. ಇಂಥ ಹೊತ್ತಲ್ಲಿ, 19ನೇ ಶತಮಾನದ ಹರ್ಸ್ಟ್ ನನ್ನೋ ಪುಲಿಟ್ಝರ್ ನನ್ನೋ ದೂರಿ ಪ್ರಯೋಜನವಿಲ್ಲ. ಬುದ್ಧಿವಂತಿಕೆ, ಸುದ್ದಿ ಸೃಷ್ಟಿಸುವಿಕೆ, ಮಾರಾಟ ತಂತ್ರದಲ್ಲಿ ಅವರಿಬ್ಬರನ್ನೂ ಮೀರಿಸುವ ನಿಪುಣರು ಇವತ್ತು ಮಾಧ್ಯಮ ಕೇಂದ್ರದಲ್ಲಿ ಕೂತಿದ್ದಾರೆ. ಬಹುಶಃ ಈಗಿನ ಪತ್ರಿಕೋದ್ಯಮಕ್ಕೆ ಯೆಲ್ಲೋದ ಬದಲು ಬ್ಲ್ಯಾಕ್ (ಕರಾಳ) ಜರ್ನಲಿಝಮ್ ಎಂಬ ಹೆಸರು ಸೂಕ್ತವಾದೀತೇನೋ?

Tuesday, February 26, 2013

ಆ ಸುದ್ದಿಯನ್ನು ಓದಿದ ಬಳಿಕ ಅವರ ಬಗ್ಗೆ ಬರೆಯಬೇಕೆನಿಸಿತು..

   2002 ಜೂನ್ 18
   “ತಿಹಾರ್ ಜೈಲಿನ ‘ವಿಚಾರಣಾಧೀನ ಕೈದಿ'ಗಳ ಕೋಣೆಗೆ ನನ್ನನ್ನು ಕೊಂಡು ಹೋದರು. ಅಲ್ಲೊಂದು ಮೇಜು. ಅದರ ಬಳಿ ಜೈಲು ವರಿಷ್ಠಾಧಿಕಾರಿ ಕುಳಿತಿದ್ದರು. ಅಲ್ಲದೇ ಆ ಕೋಣೆಯಲ್ಲಿ 10-12 ಮಂದಿಯೂ ಇದ್ದರು. ವರಿಷ್ಠಾಧಿಕಾರಿ ನನ್ನ ಹೆಸರು ಕೇಳಿದರು. ನಾನು ಹೇಳಿ ಮುಗಿಸುವುದಕ್ಕಿಂತ ಮೊದಲೇ ಓರ್ವ ನನ್ನ ಕಪಾಳಕ್ಕೆ ಹೊಡೆದ. ಅದರ ಬೆನ್ನಿಗೇ ಏಟುಗಳ ಸುರಿಮಳೆಯಾಯಿತು. ತುಳಿದರು. ಒಬ್ಬಾತ ನನ್ನ ತಲೆಗೂದಲನ್ನು ಹಿಡಿದು ನನ್ನ ಮುಖವನ್ನು ಮೇಜಿಗೆ ಗುದ್ದಿದ. ಕಿವಿ, ಬಾಯಿ, ಮೂಗುಗಳಿಂದ ರಕ್ತ ಸುರಿಯಲಾರಂಭಿಸಿತು. ‘ಸಾಲಾ, ಗದ್ದಾರ್, ಪಾಕಿಸ್ತಾನಿ.. ನಿನ್ನಂಥವರನ್ನು ಬದುಕಿರಲು ಬಿಡಬಾರದು. ದೇಶದ್ರೋಹಿಗಳನ್ನು ಗಲ್ಲಿಗೇರಿಸಬೇಕು..' ಎಂದೆಲ್ಲಾ ಕಿರುಚಾಡಿದರು. ಸುಮಾರು ಅರ್ಧಗಂಟೆಗಳ ಕಾಲ ನಡೆದ ಸಾಮೂಹಿಕ ದೌರ್ಜನ್ಯದಲ್ಲಿ ನಾನು ಪ್ರಜ್ಞೆ ತಪ್ಪಿ ಬಿದ್ದೆ. ಎಚ್ಚರವಾದಾಗ ಮುಖದ ತುಂಬಾ ರಕ್ತದ ಕಲೆಗಳಿದ್ದವು. ಮುಖ ತೊಳೆದು ಬರುವಂತೆ ಆಜ್ಞಾಪಿಸಲಾಯಿತು. ಜೊತೆಗೇ ಇನ್ನೊಂದು ಆಜ್ಞೆ - ಪಾಯಿಖಾನೆ ಸ್ವಚ್ಛ ಮಾಡು. ಆ ಪಾಯಿಖಾನೆ ಎಷ್ಟು ಕೊಳಕಾಗಿತ್ತೆಂದರೆ ಬಸ್ ನಿಲ್ದಾಣಗಳಲ್ಲಿರುವ ಸಾರ್ವಜನಿಕ ಪಾಯಿಖಾನೆಗಳಿಗಿಂತಲೂ ಹೆಚ್ಚು. ಸ್ವಚ್ಛ ಮಾಡುವುದಕ್ಕೆ ಒಂದು ತುಂಡು ಬಟ್ಟೆಗಾಗಿ ಅತ್ತಿತ್ತ ನೋಡಿದೆ. ಶರ್ಟು ಬಿಚ್ಚಿ ಸ್ವಚ್ಛ ಮಾಡು ಎಂಬ ಇನ್ನೊಂದು ಆಜ್ಞೆ ಬಂತು. ಮಾಡದೇ ವಿಧಿ ಇರಲಿಲ್ಲ. ಸ್ವಚ್ಛತಾ ಕಾರ್ಯ ಪೂರ್ಣಗೊಳ್ಳುವುದಕ್ಕೆ ಒಂದು ಗಂಟೆಯಷ್ಟು ದೀರ್ಘ ಕಾಲ ಹಿಡಿಯಿತು. ಬಳಿಕ ನನ್ನನ್ನು ಜೈಲಿನ ವೈದ್ಯನ ಬಳಿಗೆ ಕರೆತರಲಾಯಿತು. ಆತನ ಕೆಲಸ ಏನೆಂದರೆ, ನನ್ನ ದೇಹದ ಮೇಲೆ ಏನಾದರೂ ಗಾಯಗಳಾಗಿದ್ದರೆ ಅದನ್ನು ದಾಖಲಿಸುವುದು. ವೈದ್ಯನು ತನ್ನ ಹತ್ತಿರ ಇದ್ದ ವ್ಯಕ್ತಿಯಲ್ಲಿ, ನನ್ನ ಅಪರಾಧವೇನೆಂದು ಕೇಳಿದ. ಐಎಸ್‍ಐ ಏಜೆಂಟ್ ಎಂದು ಆತ ಉತ್ತರಿಸಿದಾಗ ವೈದ್ಯನೂ ಥಳಿಸಿದ. ಬಳಿಕ ಪಾಯಿಖಾನೆ ಸ್ವಚ್ಛ ಮಾಡಿದ ಅದೇ ಶರ್ಟನ್ನು ಧರಿಸಿಕೊಳ್ಳುವಂತೆ ಆದೇಶಿಸಿದ. ಇಷ್ಟಕ್ಕೂ, ಧರಿಸುವುದು ಬಿಡಿ, ಹತ್ತಿರ ಇಟ್ಟುಕೊಳ್ಳುವುದಕ್ಕೂ ಆ ಶರ್ಟು ಅಯೋಗ್ಯವಾಗಿತ್ತು. ನಾನು ಮೂರು ದಿನಗಳ ಕಾಲ ಅದನ್ನೇ ಧರಿಸಿದೆ. ಜೈಲಿನಲ್ಲಿ ನನ್ನ ದಿನಚರಿ ಹೇಗಿರಬೇಕೆಂದು ಅಧಿಕಾರಿಗಳು ನಿರ್ಧರಿಸಿದ್ದರು. ಬೆಳಗ್ಗೆದ್ದು ಎಲ್ಲ ಸಾಮಾನ್ಯ ಪಾಯಿಖಾನೆಗಳನ್ನೂ ಸ್ವಚ್ಛಗೊಳಿಸಬೇಕು. ಬಳಿಕ ಸ್ನಾನದ ಕೋಣೆ ಮತ್ತು ನೆಲವನ್ನು ಗುಡಿಸಿ ಚೊಕ್ಕವಾಗಿಡಬೇಕು. ಇಷ್ಟೇ ಅಲ್ಲ, ಊಟದ ಬಳಿಕ ಉಳಿದೆಲ್ಲ ಕೈದಿಗಳನ್ನು ಅವರವರ ಕೋಣೆಯಲ್ಲಿ ಕೂಡಿ ಹಾಕಿ ವಿಶ್ರಾಂತಿ ಪಡೆಯಲು ಬಿಡಲಾಗುತ್ತಿದ್ದರೆ, ನನಗೆ ಅದಕ್ಕೂ ಅವಕಾಶ ಇರಲಿಲ್ಲ. ನನ್ನನ್ನು ಮತ್ತು ಇತರ ಕೆಲವು ಮಂದಿಯನ್ನು ಜೈಲಿನೊಳಗಿನ ಕಾಂಕ್ರೀಟು ಕಟ್ಟಡವೊಂದರ ನಿರ್ಮಾಣ ಕೆಲಸದಲ್ಲಿ ದುಡಿಸಲಾಗುತ್ತಿತ್ತು. ಕೈ ತುಂಬಾ ಗಾಯಗಳು.. ಗೀರುಗಳು.. ಬಹುಶಃ ನನಗೆ ಎಷ್ಟು ಕಷ್ಟ ಕೊಡಲು ಸಾಧ್ಯವೋ ಅಷ್ಟನ್ನೂ ಕೊಡಬೇಕೆಂದು ಅಧಿಕಾರಿಗಳಿಗೆ ಯಾರೋ ನಿರ್ದೇಶಿಸಿದಂತೆ ಕಾಣುತ್ತಿತ್ತು..
   ಪತ್ರಕರ್ತ ಇಫ್ತಿಕಾರ್ ಗೀಲಾನಿಯ ಬರಹವನ್ನು ಓದುತ್ತಾ ಹೋದಂತೆ ವ್ಯವಸ್ಥೆಯ ದಾರುಣ ಮುಖವೊಂದು ಅನಾವರಣಗೊಳ್ಳುತ್ತಾ ಹೋಗುತ್ತದೆ.
   2002 ಜೂನ್ 9 - ರವಿವಾರ
ಸಂಸತ್ತಿನ ಮೇಲೆ ದಾಳಿ ನಡೆದು ಐದಾರು ತಿಂಗಳುಗಳಷ್ಟೇ ಆಗಿತ್ತು. ಜೂನ್ 9ರಂದು ಮುಂಜಾನೆ ಆದಾಯ ತೆರಿಗೆ ವಿಭಾಗದ ಅಧಿಕಾರಿಗಳ ವೇಷದಲ್ಲಿ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಬಾಗಿಲು ತಟ್ಟಿದರು. ದೆಹಲಿಯ ಸಣ್ಣ ಫ್ಲಾಟೊಂದರಲ್ಲಿ ಬದುಕುತ್ತಿದ್ದ ನಾನು ಮತ್ತು ಪತ್ನಿ ಅನಿಸಾ, ಬಾಗಿಲು ತೆರೆದೆವು. ತಕ್ಷಣ ನನ್ನೆಡೆಗೆ ಬಂದೂಕು ತೋರಿಸಿ ಅಧಿಕಾರಿಗಳು ಒಳಗಡೆ ಬಂದರು. ಮನೆಯನ್ನಿಡೀ ಜಾಲಾಡಿದರು. ಬೇಕಾದ ಯಾವ ವಸ್ತುವೂ ಸಿಗದೇ ಇದ್ದದ್ದು ಅವರ ಚಿಂತೆಯನ್ನು ಹೆಚ್ಚಿಸಿತು. ಆದರೆ ದಾಳಿಯ ಸುದ್ದಿ ಎಲ್ಲೆಡೆಯೂ ಹಬ್ಬಿರುವುದರಿಂದ ಏನಾದರೂ ಮಾಡಲೇ ಬೇಕೆಂದು ಅಧಿಕಾರಿಗಳು ಪರಸ್ಪರ ಮಾತಾಡುತ್ತಿದ್ದರು. ಒಂದು ರೀತಿಯಲ್ಲಿ, ಯಾವುದೋ ಒಂದು ಯೋಜನೆಯನ್ನು ಇಟ್ಟುಕೊಂಡೇ ಬಂದಿರಬೇಕೆಂದು ಭಾವಿಸುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸುತ್ತಿದ್ದರು. ಕೊನೆಗೆ ದಾಳಿಯ ತಂಡದ ನಾಯಕ ನನ್ನ ಕಾರಿನ ಕೀ ಕೇಳಿದ. ನಾನು ಮೇಜಿನ ಮೇಲಿದ್ದ ಬಸ್ ಪಾಸನ್ನು ನೀಡಿದೆ. ಆತ ತಬ್ಬಿಬ್ಬಾದ. ನನ್ನಲ್ಲಿ ಕಾರಿಲ್ಲ, ದೆಹಲಿ ಸಂಚಾರ ನಿಗಮದ ಬಸ್‍ಗಳಲ್ಲಿ ನನ್ನ ಪ್ರಯಾಣ ಅನ್ನುವುದನ್ನು ಆತ ನಂಬಲಿಲ್ಲ. ಅಕ್ಕಪಕ್ಕದ ಮನೆ ಗಳಲ್ಲಿ ಈ ಬಗ್ಗೆ ವಿಚಾರಿಸುವಂತೆ ಅಧಿಕಾರಿಗಳನ್ನು ಕಳುಹಿಸಿದ. ಬಳಿಕ ಮೊಬೈಲ್ ಕೇಳಿದ. ಅದೂ ನನ್ನಲ್ಲಿರಲಿಲ್ಲ. ನನ್ನ ಪತ್ನಿಯಲ್ಲಿ ಆಭರಣ ತೋರಿಸುವಂತೆ ವಿನಂತಿಸಿದರು. ಆಕೆ ಕಪಾಟನನ್ನು ತೆರೆದು ಸಣ್ಣದೊಂದು ಆಭರಣವನ್ನು ಅವರ ಕೈಗಿತ್ತಳು. ಅವರಿಗೆ ನಂಬಲಾಗಲಿಲ್ಲ. ನನ್ನ ಇಂಟರ್‍ನೆಟ್ ಪಾಸ್‍ವರ್ಡನ್ನೂ ಕೇಳಿದರು. ಕೊಟ್ಟೆ. ನನ್ನ ಮನೆಯನ್ನಿಡೀ ಜಾಲಾಡಿದ ಬಳಿಕ ಅವರಿಗೆ ಸಿಕ್ಕಿದ್ದು ಬರೇ 3,650 ರೂಪಾಯಿ. ಬೆಳಗ್ಗಿನಿಂದ ಸಂಜೆಯ ವರೆಗೆ ನಮ್ಮಿಬ್ಬರನ್ನು ಮನೆಯಲ್ಲೇ ಕೂಡಿ ಹಾಕಿ ತಪಾಸಿಸಿದ ಸುಮಾರು 60 ಮಂದಿಯ ತಂಡ ಸಂಜೆ 7ರ ಹೊತ್ತಿಗೆ ಮನೆಯ ಟಿ.ವಿ.ಯನ್ನು ಚಾಲನೆಗೊಳಿಸಿತು. ನನ್ನ ಮನೆ ಮೇಲೆ ನಡೆದ ದಾಳಿಯ ವಿವರಗಳು ವಿವಿಧ ಚಾನೆಲ್‍ಗಳಲ್ಲಿ ಬಿತ್ತರವಾಗುತ್ತಿತ್ತು. ನನ್ನ ಮನೆ ಮುಂದೆ ನಿಂತ ಆಜ್‍ತಕ್ ಚಾನೆಲ್‍ನ ದೀಪಕ್ ಚೌರಾಸಿಯ, ನಾನು ತಪ್ಪಿತಸ್ಥನೆಂದು ವರದಿ ಮಾಡುತ್ತಿದ್ದ. ನನ್ನ ಅಪರಾಧವನ್ನು ಸಾಬೀತು ಪಡಿಸಬಲ್ಲಂಥ ಸಾಕ್ಷ್ಯಾಧಾರಗಳಿರುವ ಲ್ಯಾಪ್‍ಟಾಪನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆಂದು ಘೋಷಿಸುತ್ತಿದ್ದ. ನಿಜವಾಗಿ ನನ್ನಲ್ಲಿ ಲ್ಯಾಪ್‍ಟಾಪೇ ಇರಲಿಲ್ಲ. ಪೊಲೀಸರು ದಾಖಲೆಗಳನ್ನೂ ವಶಪಡಿಸಿ ಕೊಂಡಿರಲಿಲ್ಲ. ಅಧಿಕಾರಿಗಳು ಹೇಗೆ ಮಾಧ್ಯಮ ಮಿತ್ರರನ್ನು ದಾರಿ ತಪ್ಪಿಸುವರೆಂಬುದನ್ನು ನೋಡಿ ದಿಗ್ಮೂಢನಾದೆ..
   ಮೈ ಡೇಸ್ ಇನ್ ಪ್ರಿಝನ್ (ನನ್ನ ಜೈಲಿನ ದಿನಗಳು) ಎಂಬ ತನ್ನ ಕೃತಿಯಲ್ಲಿ ಗೀಲಾನಿ ಹೇಳುತ್ತಾ ಹೋಗುತ್ತಾರೆ.
   ಇಷ್ಟಕ್ಕೂ, ಇಫ್ತಿಕಾರ್ ಗೀಲಾನಿಗೂ ಸಂಸತ್‍ನ ಮೇಲೆ ದಾಳಿ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಎಸ್.ಎ.ಆರ್. ಗೀಲಾನಿಗೂ ಯಾವ ಸಂಬಂಧವೂ ಇಲ್ಲ. ಇಫ್ತಿಕಾರ್ ಗೀಲಾನಿ ಕಳೆದ 16 ವರ್ಷಗಳಿಂದಲೂ ದೆಹಲಿಯಲ್ಲಿ ಪ್ರಮುಖ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಬಂಧನದ ಸಂದರ್ಭದಲ್ಲಿ ಅವರು ಕಾಶ್ಮೀರ್ ಟೈಮ್ಸ್ ನ ದೆಹಲಿಯ ಬ್ಯೂರೋದ ಮುಖ್ಯಸ್ಥರಾಗಿದ್ದರು. ಅಲ್ಲದೇ ಡೈಲಿ ಟೈಮ್ಸ್ ಮತ್ತು ಫ್ರೈಡೇ ಟೈಮ್ಸ್ ಎಂಬೆರಡು ಪಾಕಿಸ್ತಾನಿ ಪತ್ರಿಕೆಗಳ ಭಾರತದ ವರದಿಗಾರರೂ ಆಗಿದ್ದರು. ಜೊತೆಗೇ ಡಾಯ್ಜಿವೆಲ್ ಎಂಬ ರೇಡಿಯೋಕ್ಕೂ ವರದಿಗಾರರಾಗಿ ದ್ದರು. ಹುರಿಯತ್ ಕಾನ್ಫರೆನ್ಸನ ನೇತಾರ ಸಯ್ಯದ್ ಅಲಿಷಾ ಗೀಲಾನಿಯವರ ಮಗಳು ಅನಿಸಾರನ್ನು ಮದುವೆಯಾಗಿರುವ ಗೀಲಾನಿಯ ಮೇಲೆ ಪೊಲೀಸರು ಸಿಟ್ಟಾಗುವುದಕ್ಕೆ ಕೆಲವು ಕಾರಣಗಳಿದ್ದವು. ಮುಖ್ಯವಾಗಿ, ಗೀಲಾನಿ  ಕೆಲಸ ಮಾಡುತ್ತಿದ್ದ ಕಾಶ್ಮೀರ್ ಟೈಮ್ಸ್ ಪತ್ರಿಕೆಯು ಕಾಶ್ಮೀರದಲ್ಲಿ ಪೊಲೀಸರ ನಡೆಸುತ್ತಿದ್ದ  ದೌರ್ಜನ್ಯಗಳನ್ನು ಯಾವ ಮುಲಾಜೂ ಇಲ್ಲದೆ ಬಹಿರಂಗಪಡಿಸುತ್ತಿತ್ತು. ಗುಪ್ತಚರ ವಿಭಾಗದ ಮಟ್ಟಿಗೆ ಕಾಶ್ಮೀರ್ ಟೈಮ್ಸ್ ಎಂಬುದು ಪ್ರತಿಸ್ಪರ್ಧಿಯಾಗಿ ಬಿಟ್ಟಿತ್ತು. ಟೈಮ್ಸ್ ಪ್ರಕಟಿಸಿದ ಹತ್ತಾರು ಸತ್ಯ ಘಟನೆಗಳು ವ್ಯವಸ್ಥೆಯ ಇನ್ನೊಂದು ಮುಖವನ್ನು ದೇಶದ ಮುಂದಿಟ್ಟಿತ್ತು. ಆದ್ದರಿಂದಲೇ ಪತ್ರಿಕೆಯ ಸಂಪಾದಕ ವೇದ್ ಬಾಸಿನ್‍ರಿಗೆ ಜೀವ ಬೆದರಿಕೆಯ ಕರೆಗಳೂ  ಬರುತ್ತಿದ್ದುವು. ಕಾಶ್ಮೀರದಲ್ಲಾಗುವ ಮಾನವ ಹಕ್ಕುಗಳ ಹರಣದ ಬಗ್ಗೆ, ಅದರಲ್ಲಿ ಪೊಲೀಸ್ ಮತ್ತು ಸೇನೆಯ  ಪಾತ್ರದ ಬಗ್ಗೆ ಕಾಶ್ಮೀರ್ ಟೈಮ್ಸ್ ಹತ್ತು-ಹಲವು ವರದಿಗಳನ್ನು ಪ್ರಕಟಿಸುತ್ತಲೇ ಇತ್ತು. ಇಂಥ ಪತ್ರಿಕೆಯನ್ನು ಹದ್ದುಬಸ್ತಿನಲ್ಲಿಡಬೇಕಾದರೆ ಯಾರನ್ನಾದರೂ ‘ಫಿಕ್ಸ್' ಮಾಡಲೇಬೇಕಾದುದು ವ್ಯವಸ್ಥೆಯ ತುರ್ತು ಅಗತ್ಯವಾಗಿತ್ತು. ಎರಡನೆಯದಾಗಿ, ಪ್ರತ್ಯೇಕತಾವಾದದ ಪ್ರಬಲ ಪ್ರತಿಪಾದಕ ಸಯ್ಯದ್ ಅಲಿಷಾ ಗೀಲಾನಿಯ ಮೇಲೆ ಒತ್ತಡ ಹೇರುವುದಕ್ಕಾಗಿ ಇಫ್ತಿಕಾರ್ ಗೀಲಾನಿಯನ್ನು ‘ಫಿಕ್ಸ್' ಮಾಡುವ ಅಗತ್ಯವೂ ವ್ಯವಸ್ಥೆಗಿತ್ತು.
   ಆದ್ದರಿಂದಲೇ,
    14 ವರ್ಷ ಜೈಲಲ್ಲೇ ಕೊಳೆಯಿಸಬಹುದಾದ, ‘ಅಧಿಕೃತ ರಹಸ್ಯ ಕಾಯ್ದೆ 1923’ರ ಸೆಕ್ಷನ್ 3 ಮತ್ತು 9ರನ್ವಯ ಪೊಲೀಸರು ನನ್ನ ಮೇಲೆ ಕೇಸು ಹಾಕಿದರು. ‘ಪಡೆಗಳು’ (FORCESS ) ಎಂಬ ಹೆಸರಿನಲ್ಲಿ ನಾನು ಕಂಪ್ಯೂಟರಿನಲ್ಲಿ ಡೌನ್ ಲೋಡ್ ಮಾಡಿ ಇಟ್ಟುಕೊಂಡಿದ್ದ ದಾಖಲೆಗಳನ್ನು ನನ್ನ ದೇಶದ್ರೋಹಿತನಕ್ಕೆ ಪುರಾವೆಯಾಗಿ ಮಂಡಿಸಲು ಅವರು ನಿರ್ಧರಿಸಿದರು. ನಿಜವಾಗಿ, ನಾನು ಸಂಗ್ರಹಿಸಿಟ್ಟುಕೊಂಡಿದ್ದ ಆ ದಾಖಲೆಗಳು 48 ಪುಟಗಳದ್ದಾಗಿದ್ದು, 10 ಅಧ್ಯಾಯಗಳು ಮತ್ತು 7 ಅನುಬಂಧಗಳಿಂದ
ಕೂಡಿದ್ದಾಗಿತ್ತು. ಇಷ್ಟಕ್ಕೂ, ಅದೇನೂ ರಹಸ್ಯ ದಾಖಲೆ ಆಗಿರಲಿಲ್ಲ. ಕಾಶ್ಮೀರದಲ್ಲಾಗುತ್ತಿರುವ ಮಾನವ ಹಕ್ಕುಗಳ ದಮನ, ಅಲ್ಲಿ ನಿಯೋಗಿಸಲಾಗಿರುವ ಸೇನಾ ವಿವರ, ನಾಪತ್ತೆಯಾಗಿರುವವರ ಸಹಿತ ಹತ್ತಾರು ಮಾಹಿತಿಗಳುಳ್ಳ ಈ ದಾಖಲೆಗಳನ್ನು ಇನ್‍ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್ ಸಂಸ್ಥೆಯು 1996ರಲ್ಲಿ ಕಿರು ಹೊತ್ತಗೆಯ ರೂಪದಲ್ಲಿ ಪ್ರಕಟಿಸಿತ್ತು. ಮಾತ್ರವಲ್ಲ, ಇಂಟರ್‍ನೆಟ್‍ನಲ್ಲೂ ಹಾಕಿತ್ತು. ಆದರೆ ನನ್ನನ್ನು ಮತ್ತು ಪತ್ನಿಯನ್ನು ಮನೆಯ ಕೋಣೆಯಲ್ಲಿ ಕೂಡಿ ಹಾಕಿದ ಪೊಲೀಸರು, ನನ್ನ ಆ ದಾಖಲೆಯನ್ನು ಸೂಕ್ಷ್ಮವಾಗಿ ತಿದ್ದಿದರು. ಆ ದಾಖಲೆಯ ಆರಂಭದಲ್ಲಿ, ‘ಕೇವಲ ಉಲ್ಲೇಖದ ಉದ್ದೇಶಕ್ಕೆ ಮಾತ್ರ, ಪ್ರಕಟಣೆ ಅಥವಾ ಪ್ರಸಾರ ಕಡ್ಡಾಯವಾಗಿ ನಿಷಿದ್ಧ..’ ಎಂಬ ವಾಕ್ಯವನ್ನು ಸೇರಿಸಿದರು. ಭಾರತದ ಅಧೀನದಲ್ಲಿರುವ ಕಾಶ್ಮೀರ (ಐ.ಎಚ್.ಕೆ.) ಎಂಬಲ್ಲಿ ಜಮ್ಮು ಕಾಶ್ಮೀರ ಎಂದು ತಿದ್ದಿದರು. ಅಲ್ಲದೇ ಏಳು ಅನುಬಂಧಗಳಲ್ಲಿ ಮೂರನ್ನು ಮಾತ್ರ ಉಳಿಸಿ ಉಳಿದವುಗಳನ್ನು ಅಳಿಸಿಬಿಟ್ಟರು. ಹಾಗೆ ತಿದ್ದಿದ ದಾಖಲೆಗಳ ಭಾಗವನ್ನು ಮಾತ್ರ ಪರಿಶೀಲಿಸುವಾಗ ಅದೊಂದು ರಹಸ್ಯ ದಾಖಲೆಯಂತೆ ಮೇಲುನೋಟಕ್ಕೆ ಕಾಣುವ ಸಾಧ್ಯತೆ ಖಂಡಿತ ಇತ್ತು. ಮಾತ್ರವಲ್ಲ, ಇದರ ಒಂದು ಪ್ರತಿಯನ್ನು ಕಾಶ್ಮೀರದಲ್ಲಿರುವ ನನ್ನ ಮಾವ ಅಲಿಷಾ ಗೀಲಾನಿಯವರ ಮನೆಯಲ್ಲೂ ಇರಿಸಿದರು. ಆ ಮೂಲಕ ನಮ್ಮಿಬ್ಬರ ಮಧ್ಯೆ ಯಾವುದೋ ಗುಪ್ತ ಸಂಬಂಧ ಇರುವುದನ್ನು ಸಾಬೀತುಪಡಿಸಲು ಯತ್ನಿಸಿದರು. ಪೊಲೀಸರು ನನ್ನ ಮೇಲೆ ಹೊರಿಸಿದ ಆರೋಪ ಏನೆಂದರೆ- ನಾನೋರ್ವ ಐಎಸ್‍ಐ ಗೂಢಚರನಾಗಿದ್ದು, ಕಾಶ್ಮೀರದಲ್ಲಿರುವ ಭೂಸೇನೆಯ ಮಾಹಿತಿಗಳನ್ನು ಐಎಸ್‍ಐಗೆ ರವಾನಿಸುತ್ತಿದ್ದೇನೆ, ಹಿಜ್ಬುಲ್ ಮುಜಾಹಿದೀನ್‍ನ ಅಂತರಂಗದ ಸದಸ್ಯನಾಗಿದ್ದೇನೆ.. ಎಂಬುದಾಗಿತ್ತು. ಅಲ್ಲದೇ ನನ್ನ ಬ್ಯಾಂಕ್ ಖಾತೆಯಲ್ಲಿ 1.40 ಕೋಟಿ ರೂ. ಮತ್ತು ಪತ್ನಿಯ ಖಾತೆಯಲ್ಲಿ 1.50 ಕೋಟಿ ರೂ.ಗಳಿವೆಯೆಂದೂ ಹೇಳಲಾಯಿತು. ಆ ಬಗ್ಗೆ ಕೂಡಲೇ ತನಿಖೆಯಾಗಬೇಕೆಂದು ನಾನು ನ್ಯಾಯಾಲಯದಲ್ಲಿ ಕೋರಿದೆ. ತಕ್ಷಣ, ಆರೋಪಗಳೆಲ್ಲ ಅದೃಶ್ಯವಾಗಿ ಬಿಟ್ಟವು. ಅಲ್ಲದೇ ಪಾಕ್‍ನ ಎರಡು ಪತ್ರಿಕೆಗಳಿಗೆ ನಾನು ವರದಿಗಾರನಾಗಿರುವುದರಿಂದ ಸಹಜವಾಗಿ ಕರೆ ಮಾಡುತ್ತಿದ್ದೆ. ಆ ಕರೆಯ ನಕಲು ಪ್ರತಿಯನ್ನು ನ್ಯಾಯಾಲಯಕ್ಕೆ ಹಾಜರುಗೊಳಿಸಿ ನನ್ನ ಮತ್ತು ಪಾಕ್‍ನ ಗುಪ್ತ ಸಂಬಂಧಕ್ಕೆ ಪುರಾವೆ ಹುಡುಕಲಾಯಿತು. ವಿಶೇಷ ಏನೆಂದರೆ, ಪೊಲೀಸರ ಈ ಷಡ್ಯಂತ್ರಕ್ಕೆ ನನ್ನ ಮಾಧ್ಯಮ ಮಿತ್ರರು ಬಲಿಯಾದದ್ದು. ಪತ್ರಿಕಾ ವರದಿಗಳು ಹೇಗಿತ್ತೆಂದರೆ- ನನ್ನ ಬಳಿ ಅಪಾರ ಪ್ರಮಾಣದ ವಿದೇಶಿ ಹಣವಿತ್ತು. ನಾನು ವಾಲ್ ಮೀಡಿಯಾ ಪ್ರೊಡಕ್ಷನ್ ಎಂಬ ಸಂಸ್ಥೆಯೊಂದರ ಮಾಲಿಕ. 13 ಲಕ್ಷ  ರೂಪಾಯಿ ತೆತ್ತು ಮೂರು ಬೆಡ್‍ರೂಮಿನ ಫ್ಲಾಟನ್ನು ಖರೀದಿಸಿದ್ದೇನೆ. 22 ಲಕ್ಷ  ರೂಪಾಯಿ ಅನಧಿಕೃತ ಆಸ್ತಿ ಸಂಪಾದಿಸಿದ್ದೇನೆ. 79 ಲಕ್ಷ  ರೂ. ಆದಾಯ ತೆರಿಗೆಯನ್ನು ತಪ್ಪಿಸಿದ್ದೇನೆ. ನನ್ನ ಹೆಸರಲ್ಲಿದ್ದ ಬ್ಯಾಂಕ್ ಅಕೌಂಟ್‍ಗಳಿಗೆ ಆಗಾಗ ಅಪಾರ ದುಡ್ಡು ಬರುತ್ತಿತ್ತು.. ಹೀಗೆ. ಒಂದು ಪ್ರಮುಖ ಇಂಗ್ಲಿಷ್ ಪತ್ರಿಕೆಯ ವರದಿಗಾರ್ತಿಯಂತೂ ಅಪ್ಪಟ ಸುಳ್ಳುಗಳನ್ನೇ ಬರೆದಿದ್ದಳು. ‘ಜಿಹಾದ್ ಧ್ಯೇಯಕ್ಕೆ ನಾನು ತೋರಿಸಿದ ಸಮರ್ಪಣಾ ಮನೋಭಾವನೆಯಿಂದ ನನ್ನ ಮಾವ ಎಷ್ಟು ಪ್ರಭಾವಿತರಾದರೆಂದರೆ ತನ್ನ ಮಗಳನ್ನೇ ನನಗೆ ಮದುವೆ ಮಾಡಿ ಕೊಟ್ಟರು. ನನಗೆ ಅನೇಕ ಐಎಸ್‍ಐ ಬೇಹುಗಾರರ ಸಂಪರ್ಕವಿತ್ತು, ಅವರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದೆ..’ ಎಂದೆಲ್ಲ  ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿರುವುದಾಗಿ ಆಕೆ ಬರೆದಿದ್ದಳು. ನಿಜವಾಗಿ, ಆ ಸಂದರ್ಭದಲ್ಲಿ ಪೊಲೀಸರು ತನಿಖೆಯನ್ನೇ ಆರಂಭಿಸಿರಲಿಲ್ಲ. ಗುಪ್ತಚರ ವಿಭಾಗವು ಮಾಧ್ಯಮ ಮಿತ್ರರನ್ನು ಹೇಗೆ ದಾರಿ ತಪ್ಪಿಸುತ್ತದೆ ಎಂಬುದಕ್ಕೆ ಇದೊಂದು ಒಳ್ಳೆಯ ಪುರಾವೆ. ಕೊನೆಗೂ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ತಿದ್ದಲ್ಪಟ್ಟ ದಾಖಲೆಗಳು ರಹಸ್ಯವಲ್ಲವೆಂದೂ ಅದು ಈ ಮೊದಲೇ ಅಸಲಿ ರೂಪದಲ್ಲಿ ಪ್ರಕಟವಾಗಿತ್ತೆಂದೂ ನನ್ನ ವಕೀಲರು ನ್ಯಾಯಾಲಯದಲ್ಲಿ ಹೇಳಿದಾಗ ಮತ್ತು ಅದನ್ನು ಹಾಜರುಪಡಿಸುವ ಮಾತನ್ನಾಡಿದಾಗ ಗುಪ್ತಚರ ವಿಭಾಗದಲ್ಲಿ ಚಡಪಡಿಕೆ ಪ್ರಾರಂಭವಾಯಿತು. ವ್ಯವಸ್ಥೆಯ ಸುಳ್ಳುಗಳನ್ನು ಒಂದು ಹಂತದ ವರೆಗೆ ನಂಬಿದ್ದ ನ್ಯಾಯಾಲಯ, ಇಲಾಖೆಗೆ ನೋಟೀಸ್ ಜಾರಿಗೊಳಿಸಿತು. ಈ ಮಧ್ಯೆ ರಕ್ಷಣಾ ಮಂತ್ರಿಯಾಗಿದ್ದ ಜಾರ್ಜ್ ಫರ್ನಾಂಡಿಸ್ ಮತ್ತಿತರರು ನನ್ನ ಪರವಾಗಿ ಗೃಹ ಸಚಿವ ಅಡ್ವಾಣಿಯವರ ಮೇಲೆ ತೀವ್ರ ಒತ್ತಡ ತಂದರು. ಕೊನೆಗೂ ಸರಕಾರ ನನ್ನ ವಿರುದ್ಧದ ಮೊಕದ್ದಮೆಯನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿತು. ಹೀಗೆ ಯಾವ ತಪ್ಪನ್ನೂ ಮಾಡದೇ ತಿಹಾರ್ ಜೈಲಿನಲ್ಲಿ 7 ತಿಂಗಳನ್ನು ಕಳೆದು ನಾನು ಬಿಡುಗಡೆಗೊಂಡೆ..”
..ಹೀಗೆ ಇಫ್ತಿಕಾರ್ ಗೀಲಾನಿ ಬರೆಯುತ್ತಾ ಹೋಗುತ್ತಾರೆ..
   ಅಂದಹಾಗೆ, ಗೀಲಾನಿಯಂಥ ಪ್ರಭಾವಿ ಪತ್ರಕರ್ತನನ್ನೇ ವ್ಯವಸ್ಥೆಗೆ ಈ ಮಟ್ಟದಲ್ಲಿ ನಡೆಸಿಕೊಳ್ಳಲು ಸಾಧ್ಯವೆಂದ ಮೇಲೆ, ಇತರರ ಬಗ್ಗೆ ಹೇಳುವುದಾದರೂ ಏನು? ಯಾರನ್ನೂ 'ಫಿಕ್ಸ್' ಮಾಡುವ ಸಾಮರ್ಥ್ಯ  ವ್ಯವಸ್ಥೆಗಿದೆ ಎಂದಲ್ಲವೇ ಇದರರ್ಥ? ತನ್ನ ತಪ್ಪುಗಳನ್ನು ಬಹಿರಂಗಪಡಿಸುವವರಿಗೆ ಒಂದು ಎಚ್ಚರಿಕೆಯ ಕ್ರಮವಾಗಿ ವ್ಯವಸ್ಥೆ ಈ 'ಫಿಕ್ಸ್'ನ್ನು ನಡೆಸುತ್ತಾ ಬಂದಿರಬಹುದಲ್ಲವೇ? ಈಗ ಬಂಧಿತರಾಗಿರುವವರಲ್ಲಿ ಎಷ್ಟು ಮಂದಿ ಇಂಥ ‘ಫಿಕ್ಸ್'ನಲ್ಲಿ ಸಿಲುಕಿರಬಹುದು? ಮುಂದಿನ ದಿನಗಳಲ್ಲಿ ಯಾರೆಲ್ಲ ಬಲಿಯಾಗಬಹುದು?
   ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ ದಿನದಂದು ಇಫ್ತಿಕಾರ್ ಗೀಲಾನಿಯನ್ನು 5 ಗಂಟೆಗಳ ಕಾಲ ದೆಹಲಿ ಪೊಲೀಸರು ಗೃಹ ಬಂಧನದಲ್ಲಿರಿಸಿದ ಸುದ್ದಿಯನ್ನು ಓದುತ್ತಾ ಅವರ ಬಗ್ಗೆ ಬರೆಯಬೇಕೆನಿಸಿತು.

Tuesday, February 19, 2013

ಆತ್ಮೀಯ ಮಿತ್ರರೇ, ನೀವು ಈ ಆಂದೋಲನದಲ್ಲಿ ಏನಾಗಿದ್ದೀರಿ?


   1941 ಆಗಸ್ಟ್ 26ರಂದು ಸೈಯದ್ ಮೌದೂದಿ ಸಹಿತ 75 ಮಂದಿ ವಿದ್ವಾಂಸರು ಒಟ್ಟು ಸೇರಿ ಜಮಾಅತೆ ಇಸ್ಲಾಮಿಯನ್ನು ಸ್ಥಾಪಿಸುವುದಕ್ಕೆ ಬಲವಾದ ಕಾರಣ ಇತ್ತು.
   ಬ್ರಿಟಿಷರು ಭಾರತಕ್ಕೆ ಬಂದು ಅದಾಗಲೇ 200 ವರ್ಷಗಳು ಕಳೆದಿತ್ತು. ಆದ್ದರಿಂದಲೇ ಅವರ ಇಂಗ್ಲಿಷು, ಅವರ ಪ್ಯಾಂಟು, ಶರ್ಟು, ಆಲೋಚನೆ, ಸಿದ್ಧಾಂತಗಳೆಲ್ಲ ಭಾರತೀಯ ಮುಸ್ಲಿಮರ ಮೇಲೆ ಗಾಢ ಪ್ರಭಾವವನ್ನು ಬೀರತೊಡಗಿದ್ದುವು. ದೇಹ ಭಾರತದ್ದಾದರೂ ಬ್ರಿಟಿಷ್ ಮನಸನ್ನು ಹೊಂದಿದ ಹುಸೇನ್, ಸಾರಾರು ತಯಾರಾಗತೊಡಗಿದರು. ಇವರಿಗೆ ಇಸ್ಲಾಮಿನೊಂದಿಗೆ ದ್ವೇಷ ಇತ್ತು ಎಂದಲ್ಲ. ಆದರೆ ಜಾತ್ಯತೀತತೆ, ಸಮಾಜವಾದ, ಕಮ್ಯುನಿಝಮ್, ಬಂಡವಾಳಶಾಹಿತ್ವದಂಥ ಆಧುನಿಕ ಸಿದ್ಧಾಂತಗಳ ಮುಂದೆ ಇಸ್ಲಾಮ್ ಎಂಬುದು ತೀರಾ ಕಾಲಬಾಹಿರ ಮತ್ತು ಪುರಾತನ ಸಿದ್ಧಾಂತದಂತೆ ಅವರಿಗೆ ಕಾಣತೊಡಗಿತು. ಬಡ್ಡಿಯನ್ನು ಪ್ರಬಲವಾಗಿ ಪ್ರತಿಪಾದಿಸುವ ಬಂಡವಾಳಶಾಹಿತ್ವ, ಜಾತ್ಯತೀತ ಸಿದ್ಧಾಂತಗಳ ಎದುರು ಬಡ್ಡಿಯನ್ನು ಹರಾಮ್ ಎಂದು ಘೋಷಿಸುವುದು ಅಜ್ಞಾನದಂತೆ, ಅವಮಾನದಂತೆ ಅನಿಸತೊಡಗಿತು. ಬ್ರಿಟಿಷರ ಸಂಸ್ಕ್ರಿತಿಯೇ ಕುಡಿಯುವುದು, ಮಾತ್ರವಲ್ಲ ಭಾರತದಲ್ಲೂ ಅದು ನಿಷಿದ್ಧವಲ್ಲ. ಹೀಗಿರುವಾಗ ಅದರ ವಿರುದ್ಧ ಮಾತಾಡುವುದರಿಂದ ತಮ್ಮ ಇಮೇಜಿಗೆ ಎಲ್ಲಿ  ಧಕ್ಕೆ ಬಂದೀತೋ ಅಂತ ಮುಸ್ಲಿಮರು ಅಂದುಕೊಳ್ಳತೊಡಗಿದರು. ಒಂದು ರೀತಿಯಲ್ಲಿ ನಮಾಝ್‍ಗೆ, ಉಪವಾಸಕ್ಕೆ, ಮದುವೆಗೆ, ಕೆಲವು ತಸ್ಬೀಹ್‍ಗೆ, ಹಜ್ಜ್ ಗೆ ಇಸ್ಲಾಮನ್ನು ಸೀಮಿತಗೊಳಿಸಿ ಬದುಕಿನ ಉಳಿದ ಚಟುವಟಿಕೆಗಳಿಗೆ ಕಮ್ಯುನಿಝಮನ್ನು, ಜಾತ್ಯತೀತ ಸಿದ್ಧಾಂತವನ್ನು ಆಶ್ರಯಿಸತೊಡಗಿದರು. ಹೆಸರು ಮುಹಮ್ಮದ್, ಉಮರ್, ಇಬ್ರಾಹೀಮ್ ಅಂತ ಇದ್ದರೂ ಗಣೇಶ, ನವೀನ, ಮೋತಿಲಾಲ್‍ಗಿಂತ ಭಿನ್ನವಾದ ಬದುಕೇನೂ ಇವರದ್ದಾಗಿರಲಿಲ್ಲ. ಅವರು ದೇವಾಲಯಕ್ಕೆ ಹೋಗುವಾಗ ಇವರು ಮಸೀದಿಗೆ ಹೋಗುತ್ತಿದ್ದರು. ಉಳಿದಂತೆ ಇವರ ವ್ಯಾಪಾರ, ಮಾತು, ಆಟ, ಆಲೋಚನೆಗಳೆಲ್ಲ್ಲಾ ಸಮಾನವಾಗಿತ್ತು. ಭಾರತೀಯ ಸಮಾಜದಲ್ಲಿದ್ದ ಜಾತಿಪದ್ಧತಿ ಮುಸ್ಲಿಮರ ಮೇಲೆ ಎಷ್ಟರ ಮಟ್ಟಿನ ಪ್ರಭಾವ ಬೀರಿತ್ತೆಂದರೆ ಶಾಫಿಈ, ಹನಫಿ, ಹಂಬಲಿ, ಮಾಲಿಕಿ ಗಳೆಲ್ಲ ಒಂದೊಂದು ಜಾತಿಯಾಗಿ, ಪರಸ್ಪರ ಮದುವೆ ಸಂಬಂಧ ಏರ್ಪಡಿಸಲಾರದಷ್ಟು ಅವರ ಮಧ್ಯೆ ಅಂತರ ಏರ್ಪಟ್ಟಿದ್ದುವು.
   ಹೀಗಿರುವಾಗ ರಂಗೀಲಾ ರಸೂಲ್ ಅನ್ನುವ ಕೃತಿಯೊಂದು ಪ್ರಕಟವಾಯಿತು.
ರಾಜಪಾಲ್ ಅನ್ನುವ ವ್ಯಕ್ತಿಯೊಬ್ಬ ಅದನ್ನು ಪ್ರಕಟಿಸಿದ್ದ. ಪ್ರವಾದಿಯವರನ್ನು(ಸ) ನಿಂದಿಸುವ, ಗೇಲಿ ಮಾಡುವ ಆ ಕೃತಿಯನ್ನು ಬರೆದಿರುವುದು ಸ್ವಾಮಿ ಶ್ರದ್ಧಾನಂದ ಅನ್ನುವ ಅನುಮಾನವೊಂದು ಎಲ್ಲೆಡೆ ಕಾಣಿಸತೊಡಗಿತು. ಮುಸ್ಲಿಮರನ್ನು ಶುದ್ಧಗೊಳಿಸಿ ಹಿಂದೂ ಧರ್ಮಕ್ಕೆ ಮತಾಂತರಿಸುವ 'ಶುದ್ಧಿ  ಚಳವಳಿ'ಗೆ ಅವರು ನೇತೃತ್ವ ನೀಡಿರುವುದು ಈ ಅನುಮಾನವನ್ನು ಇನ್ನಷ್ಟು ಬಲಗೊಳಿಸಿತು. ಇದಕ್ಕಿಂತ ಎರಡು ವರ್ಷಗಳ ಹಿಂದೆ 1923ರಲ್ಲಿ 'ಯಾರು ಹಿಂದು' ಅನ್ನುವ ವಿಷಪೂರಿತ ಕೃತಿಯೊಂದನ್ನು ಹಿಂದೂ ಮಹಾಸಭಾದ ನಾಯಕ ವಿ.ಡಿ. ಸಾವರ್ಕರ್ ಹೊರ ತಂದಿದ್ದರು. ಮುಸ್ಲಿಮರನ್ನು ನಿಂದಿಸುವ, ಅವರ ವಿರುದ್ಧ ಹಿಂದೂಗಳನ್ನು ಎತ್ತಿ ಕಟ್ಟುವ ಪ್ರಯತ್ನವೊಂದು ಹೀಗೆ ಬಹಿರಂಗವಾಗಿ ನಡೆಯುತ್ತಿರುವಾಗಲೇ, ಅಬ್ದುರ್ರಶೀದ್ ಅನ್ನುವ ವ್ಯಕ್ತಿಯೊಬ್ಬ 1926ರಲ್ಲಿ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆ ಮಾಡಿದ. ಇದು ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ಒಡೆಯುವುದಕ್ಕೆ ಕಾರಣವಾಯಿತು. ಮುಸ್ಲಿಮರನ್ನು ಜಿಹಾದಿಗಳು, ಅಸಹಿಷ್ಣುಗಳು, ಅತಿಕ್ರಮಣಕೋರರು, ಜಗಳಗಂಟರು.. ಎಂದೆಲ್ಲಾ ಟೀಕಿಸುವ, ಅವರ ವಿಶ್ವಾಸವನ್ನು ಪ್ರಶ್ನಿಸುವ ಪ್ರಯತ್ನಗಳು ಧಾರಾಳ ನಡೆದುವು. 1927 ಎಪ್ರಿಲ್‍ನಲ್ಲಿ ನಾಗ್ಪುರದಲ್ಲಿ ಕೋಮುಗಲಭೆ ಸ್ಫೋಟಿಸಿತು. ಆ ಬಳಿಕ ಅದು ಇಡೀ ದೇಶಕ್ಕೇ ಹರಡಿತು. ಇಸ್ಲಾಮಿನ ಜಿಹಾದ್‍ನ ಕಾನ್ಸೆಪ್ಟನ್ನು ಕ್ರೂರ, ಸಮಾಜದ್ರೋಹಿ ಎಂದು ಟೀಕಿಸಲಾಯಿತಲ್ಲದೇ ಅದನ್ನು ಮುಸ್ಲಿಮರು ಕೈಬಿಡಬೇಕೆಂದು ಬಲವಾಗಿ ಒತ್ತಾಯಿಸಲಾಯಿತು. ಈ ಹಂತದಲ್ಲಿ 'ಜಿಹಾದ್' ಅಂದರೆ ಏನು ಎಂಬುದನ್ನು ಈ ದೇಶಬಾಂಧವರಿಗೆ ಸ್ಪಷ್ಟವಾಗಿ ತಿಳಿಸುವ ಸಣ್ಣ ಕೃತಿ ಕೂಡ ಈ ಸಮುದಾಯದಲ್ಲಿರಲಿಲ್ಲ. ಇದನ್ನೇ ಸವಾಲಾಗಿ ಸ್ವೀಕರಿಸಿದ 24ರ ಹರೆಯದ ಸೈಯದ್ ಮೌದೂದಿ, 'ಇಸ್ಲಾಮ್‍ನಲ್ಲಿ ಜಿಹಾದ್' ಅನ್ನುವ ಕೃತಿಯನ್ನು ಬರೆದು ದೇಶದ ಮುಂದಿಟ್ಟರು. ಅದೆಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಜಿಹಾದನ್ನು ಮುಂದಿಟ್ಟು ಮುಸ್ಲಿಮರನ್ನು ನಿಂದಿಸುತ್ತಿದ್ದವರೆಲ್ಲ ಆ ವಿಷಯವನ್ನೇ ಕೈಬಿಟ್ಟು ಇತರ ಸಂಗತಿಗಳನ್ನು ಆಯ್ದುಕೊಳ್ಳಬೇಕಾಯಿತು.
   ಇಸ್ಲಾಮನ್ನು ಸಮಗ್ರ ಜೀವನ ಕ್ರಮ ಎಂದು ಈ ದೇಶದಲ್ಲಿ ಮೊತ್ತಮೊದಲು ಘೋಷಿಸಿದ್ದೇ ಜಮಾಅತೆ ಇಸ್ಲಾಮೀ .
   ಅಖಂಡ ಭಾರತ ಇಬ್ಭಾಗಗೊಂಡಾಗ ಭಾರತದಲ್ಲಿ ಉಳಿದುಕೊಂಡ ಜಮಾಅತ್‍ನ ಕಾರ್ಯಕರ್ತರು ಒಟ್ಟು ಸೇರಿ 1948 ಎಪ್ರಿಲ್ 15ರಂದು ಜಮಾಅತೆ ಇಸ್ಲಾಮೀ  ಹಿಂದನ್ನು (ಭಾರತದ ಇಸ್ಲಾಮೀ  ಸಂಘಟನೆ) ರಚಿಸಿದಾಗ ಈ ದೇಶದಲ್ಲಿ ಕೋಮುಭಾವನೆ ಅತ್ಯಂತ ಭೀಕರ ಸ್ವರೂಪದಲ್ಲಿತ್ತು. ಇಸ್ಲಾಮ್ ಧರ್ಮವು ಕೋಮು ಸೌಹಾರ್ದತೆಗೆ ವಿರುದ್ಧ ಅನ್ನುವ ಭಾವನೆಯು ಈ ದೇಶದಲ್ಲಿ ಸಾರ್ವತ್ರಿಕವಾಗಿತ್ತು. ಇಂಥ ವಾತಾವರಣದಲ್ಲಿ, ಮುಸ್ಲಿಮರು ಮತ್ತು ಹಿಂದೂಗಳು ಜೊತೆಯಾಗಿ ಬದುಕಬಹುದು ಮತ್ತು ಇಸ್ಲಾಮ್ ಬಹು ಸಂಸ್ಕ್ರಿತಿಯನ್ನು ಪ್ರೀತಿಸುವ, ಗೌರವಿಸುವ ಧರ್ಮ ಎಂದು ಈ ದೇಶದಲ್ಲಿ ಜಮಾಅತೆ ಇಸ್ಲಾಮೀ  ಹಿಂದ್ ಅತ್ಯಂತ ಪ್ರಬಲವಾಗಿ ಪ್ರತಿಪಾದಿಸಿತು. 65 ವರ್ಷಗಳ ಹಿಂದೆ ಇಂಥದ್ದೊಂದು ಪ್ರಯತ್ನ ನಡೆಸುವುದು, ಕೋಮು ಸೌಹಾರ್ದತೆಯ ಕುರಿತಂತೆ ಕುರ್‍ಆನ್-ಹದೀಸ್‍ಗಳನ್ನು ಉಲ್ಲೇಖಿಸಿಕೊಂಡು ಸಮುದಾಯವನ್ನು ಜಾಗೃತಗೊಳಿಸುವುದೆಲ್ಲ  ಸಣ್ಣ ಸವಾಲೇನೂ ಆಗಿರಲಿಲ್ಲ. ಹಿಂದೂ ಕೋಮುವಾದಕ್ಕೆ ಮುಸ್ಲಿಮ್ ಕೋಮುವಾದ ಮದ್ದು ಎಂದು ಅಂದುಕೊಂಡವರು; ಅವರ ತಲವಾರಿಗೆ, ನಮ್ಮ ತಲವಾರು ತಕ್ಕ ಉತ್ತರ ಅಂತ ವಾದಿಸುವವರು ಮುಸ್ಲಿಮರಲ್ಲಿ ದ್ದರು. ಹಾಗೆಯೇ ಮುಸ್ಲಿಮರನ್ನು ಅಸಹಿಷ್ಣುಗಳು, ದೇಶದ್ರೋಹಿಗಳೆಂದೂ, ಪ್ರವಾದಿಯನ್ನು(ಸ) ಈ ಎಲ್ಲದರ ಪ್ರಚೋದಕ ಎಂದೂ ಪ್ರಚಾರ ಮಾಡುವ ಹಿಂದೂಗಳಿದ್ದರು. ಇಂಥ ವೇಳೆ ಜಮಾಅತ್, ಏಟಿಗೆ ಪ್ರತಿಯೇಟು ಅನ್ನುವ ನಿಲುವನ್ನು ವಿರೋಧಿಸಿತು. 'ಮುಸ್ಲಿಮ್ ವ್ಯಕ್ತಿಯೊಬ್ಬ ತನ್ನ ಬಳಿ ಕೆಲಸಕ್ಕಿರುವ ಮುಸ್ಲಿಮೇತರರನ್ನು ಅವಧಿಗಿಂತ ಒಂದು ಸೆಕೆಂಡ್ ಹೆಚ್ಚು ದುಡಿಸಿದರೂ ನಾನು ಪರಲೋಕದಲ್ಲಿ ಆ ಮುಸ್ಲಿಮೇತರನ ಪರ ನಿಲ್ಲುವೆ.. ' ಎಂದ ಕರುಣಾಮಯಿ ಪ್ರವಾದಿಯನ್ನು ಜಮಾಅತ್ ಸಮಾಜಕ್ಕೆ ಪರಿಚಯಿಸಿತು. 'ನಾವೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು, ಪರಸ್ಪರ ಸಹೋದರರು.. ' ಎಂದ ಮನುಷ್ಯ ಪ್ರೇಮಿಯನ್ನು(ಸ) ಸಮಾಜದ ಮುಂದಿಟ್ಟಿತು. ಅನ್ಯರ ಆರಾಧ್ಯರನ್ನು, ಅವರ ಆರಾಧನಾಲಯಗಳನ್ನು ತೆಗಳಬಾರದು ಎಂದ ಕುರ್‍ಆನನ್ನು, ಕೋಮುವಾದಿ ನನ್ನವನಲ್ಲ ಎಂದ ಮುಹಮ್ಮದ್‍ರನ್ನು(ಸ), ಮುಸ್ಲಿಮೇತರರ ಶವವನ್ನು ಕೊಂಡೊಯ್ಯುತ್ತಿದ್ದಾಗ ಎದ್ದು ನಿಂತು ಗೌರವಿಸಿದ ಪ್ರವಾದಿಯನ್ನು..  ಸಮಾಜಕ್ಕೆ ಮಾಡೆಲ್ ಆಗಿ ತೋರಿಸಿತು. ನಿಜವಾಗಿ, ಆವತ್ತು ಆ ಸಮಾಜದ ಪಾಲಿಗೆ ಅದು ಹೊಚ್ಚ ಹೊಸತಾದ ಕಾನ್ಸೆಪ್ಟು. ಮುಸ್ಲಿಮರು ಬಹುಸಂಸ್ಕ್ರಿತಿಯನ್ನು ಸಹಿಸುವುದಿಲ್ಲ, ಕಾಫಿರರನ್ನು (ಹಿಂದೂಗಳನ್ನು) ಕೊಲ್ಲುವುದನ್ನು ಜಿಹಾದ್ ಅನ್ನುತ್ತಾರೆ, ಮತಾಂತರ ಮಾಡುತ್ತಾರೆ ಎಂಬೆಲ್ಲಾ ಪ್ರಚಾರಗಳಿದ್ದ ಸಂದರ್ಭದಲ್ಲಿ ಜಮಾಅತ್ ಕಾಫಿರ್‍ಗೆ, ಜಿಹಾದ್‍ಗೆ, ಮತಾಂತರಕ್ಕೆ ಇಸ್ಲಾಮೀ  ಹಿನ್ನೆಲೆಯಲ್ಲಿ ಸ್ಪಷ್ಟ ವ್ಯಾಖ್ಯಾನವನ್ನು ಕೊಟ್ಟು, ದೊಡ್ಡದೊಂದು ಅನುಮಾನದ ವಾತಾವರಣವನ್ನು ತಿಳಿಗೊಳಿಸುವಲ್ಲಿ ಅಪಾರ ಯಶಸ್ಸು ಪಡೆಯಿತು. ಆ ಕುರಿತಂತೆ ಅನೇಕ ಕೃತಿಗಳನ್ನು ಪ್ರಕಟಿಸಿತು. ಕುರ್‍ಆನನ್ನು ಕೊಲೆಪಾತಕ ಎಂಬಂತೆ ಕಾಣು ತ್ತಿದ್ದ, ಅರ್ಥವಾಗದ ಅರಬಿ ಲಿಪಿ ಮತ್ತು ಭಾಷೆಯನ್ನು ಅನು ಮಾನದಿಂದ ನೋಡುತ್ತಿದ್ದ ಈ ದೇಶದ ಮಂದಿಗೆ ಅವರ ಭಾಷೆಯಲ್ಲಿ ಕುರ್‍ಆನನ್ನು ಅನುವಾದಿಸಿ ಕೊಟ್ಟು ಕಣ್ಣು ತೆರೆಸಿದ್ದೇ ಜಮಾಅತೆ ಇಸ್ಲಾಮೀ . ಆ ವರೆಗೆ ಕುರ್‍ಆನನ್ನು ರಾಗಬದ್ಧವಾಗಿ ಓದಲು, ಚುಂಬಿಸಿ ಮನೆಯ ಎತ್ತರದ ಜಾಗದಲ್ಲಿಟ್ಟು ಕಾಪಾಡಲು ಬಳಸುತ್ತಿದ್ದ ಮುಸ್ಲಿಮ್ ಸಮೂಹ, ಮೊತ್ತಮೊದಲು ಅದರ ಅರ್ಥವನ್ನು ಓದಿ ರೋಮಾಂಚನಗೊಂಡಿತು. ಪ್ರವಾದಿ ಮತ್ತು ಅವರ ಅನುಯಾಯಿಗಳ ಕುರಿತಂತೆ ನೂರಾರು ಪುಸ್ತಕಗಳನ್ನು ಜಮಾಅತ್ ಸಮಾಜದ ಮುಂದಿಟ್ಟಾಗ ಇಸ್ಲಾಮನ್ನು ಪ್ರೀತಿಸುವ ವರ್ಗವೊಂದು ಬೆಳೆಯತೊಡಗಿತು. ದೇಶಬಾಂಧವರು ಮಾತ್ರವಲ್ಲ, ಸ್ವತಃ ಮುಸ್ಲಿಮರೇ ಆ ವರೆಗೆ ಪ್ರವಾದಿಯವರನ್ನು ನಮಾಝ್, ಉಪವಾಸ ಇತ್ಯಾದಿಗಳನ್ನು ಕಲಿಸಿದ ಓರ್ವ ಧಾರ್ಮಿಕ ನಾಯಕ ಎಂದಷ್ಟೇ ಅಂದುಕೊಂಡಿದ್ದರು. ಆದರೆ ನೆರೆಯವರನ್ನು ಅವರ ಧರ್ಮ ನೋಡದೇ ಪ್ರೀತಿಸಲು ಕಲಿಸಿದ ಪ್ರವಾದಿ, ಬಡ್ಡಿಮುಕ್ತ ಅರ್ಥವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಪ್ರವಾದಿ; ಮದ್ಯಮುಕ್ತ, ಭ್ರಷ್ಟ ಮುಕ್ತ ಆಡಳಿತ ವ್ಯವಸ್ಥೆಯೊಂದನ್ನು ಜಾರಿಗೊಳಿಸಿದ ಆಡಳಿತಾಧಿಕಾರಿ.. ಹೀಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದ ಸಮಗ್ರ ನಾಯಕರಾಗಿ ಮೊತ್ತಮೊದಲು ಪ್ರವಾದಿಯನ್ನು ಜಮಾಅತೆ ಇಸ್ಲಾಮೀ  ಸಮಾಜಕ್ಕೆ ಪರಿಚಯಿಸಿತು. ಆದರೆ ಈ ಸಂದರ್ಭದಲ್ಲಿ ಪತ್ರಿಕೆಗಳ ದೊಡ್ಡದೊಂದು ಅಭಾವ ಸಮಾಜದಲ್ಲಿತ್ತು. ಈ ಸಮಾಜದಲ್ಲಿ ದಿನಂಪ್ರತಿ ನಡೆಯುವ ವಿದ್ಯಮಾನಗಳಿಗೆ ತಕ್ಷಣ ಇಸ್ಲಾಮೀ  ಆಧಾರದಲ್ಲಿ ಪರಿಹಾರವನ್ನು ಸೂಚಿಸುವ ಭಾರೀ ಅಗತ್ಯ ಕಂಡುಬಂತು. ಆದ್ದರಿಂದಲೇ ಎಲ್ಲ ಭಾಷೆಗಳಲ್ಲೂ ಪತ್ರಿಕೆಗಳನ್ನು ಹೊರತರಲು ಜಮಾಅತ್ ನಿರ್ಧರಿಸಿತು. ಆ ಮೂಲಕ ಸಮುದಾಯದಲ್ಲಿ ಬರಹಗಾರರನ್ನು ತಯಾರಿಸಲೂ ಮುಂದಡಿಯಿಟ್ಟಿತು. ನಿಜವಾಗಿ, 65 ವರ್ಷಗಳ ಹಿಂದೆ ಮುಸ್ಲಿಮ್ ಸಮುದಾಯದಲ್ಲಿ ಬರಹಗಾರರು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ ಸಂಖ್ಯೆಯಲ್ಲಿದ್ದರು. ಇರುವ ಬರಹಗಾರರಾದರೋ ಸೆಕ್ಯಲರ್ ಮತ್ತು ಕಮ್ಯುನಿಸ್ಟ್ ಸಿದ್ಧಾಂತದಿಂದ ಪ್ರಭಾವಿತರಾಗಿದ್ದರು. ಆದ್ದರಿಂದಲೇ ಇಸ್ಲಾಮಿನ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುಳ್ಳು ಸುದ್ದಿಗಳಿಗೆ ಬರಹಗಳ ಮೂಲಕವೇ ಸಮರ್ಪಕ ಉತ್ತರಕೊಡುವ ಇಸ್ಲಾಮೀ  ಬರಹಗಾರರಿಗಾಗಿ ಸಮುದಾಯ ಕಾತರದಿಂದ ಕಾಯುತ್ತಿತ್ತು. ಇಂಥ ಸಮಯದಲ್ಲಿ ಜಮಾಅತ್ ಬರಹಗಾರರ ಸೃಷ್ಟಿಗೆ ತಯಾರಿ ನಡೆಸಿತು. ಮಾಧ್ಯಮ ಕ್ಷೇತ್ರದಲ್ಲಿ ಮುಸ್ಲಿಮ್ ಬರಹಗಾರರ ಶೂನ್ಯ ಪಾತ್ರವನ್ನು ಇಲ್ಲವಾಗಿಸಬೇಕೆಂದು ಪಣ ತೊಟ್ಟಿತು. ಇದರ ಭಾಗವಾಗಿಯೇ 35 ವರ್ಷಗಳ ಹಿಂದೆ ಕನ್ನಡಿಗರಿಗಾಗಿ ಸನ್ಮಾರ್ಗ ವಾರಪತ್ರಿಕೆಯನ್ನು ಜಮಾಅತ್ ಹುಟ್ಟುಹಾಕಿತು. ಮುಸ್ಲಿಮ್ ಸಮುದಾಯವನ್ನು  ತರಬೇತುಗೊಳಿಸುವುದು ಮತ್ತು ದೇಶಬಾಂಧವರಿಗೆ ಇಸ್ಲಾಂನ ಸರಿಯಾದ ಸಂದೇಶವನ್ನು ಪರಿಚಯ ಪಡಿಸುವುದು ಪತ್ರಿಕೆಯ ಉದ್ದೇಶವಾಗಿತ್ತು. ಅಲ್ಲದೆ ಈ ಮೂಲಕ ಮುಸ್ಲಿಮ್ ಸಮುದಾಯದಲ್ಲಿ ಕನ್ನಡ ಬರಹಗಾರರನ್ನು ತಯಾರಿಸುವ ಗುರಿಯನ್ನೂ ಇಟ್ಟುಕೊಂಡಿತು. ಇಬ್ರಾಹೀಮ್ ಸಈದ್ ಪತ್ರಿಕೆಯ ಪ್ರಥಮ ಸಂಪಾದಕರಾದರು. ಅದರ ಬೆನ್ನಲ್ಲೇ ಶಾಂತಿ ಪ್ರಕಾಶನ ಎಂಬ ಕನ್ನಡ ಸಾಹಿತ್ಯ ಪ್ರಕಾಶನ ಸಂಸ್ಥೆಯನ್ನು ಜಮಾಅತ್ ಸ್ಥಾಪಿಸಿತು. ಈಗಾಗಲೇ ಶಾಂತಿ ಪ್ರಕಾಶನದಿಂದ 250ರಷ್ಟು ಕೃತಿಗಳು ಪ್ರಕಟವಾಗಿವೆ. ಲಕ್ಷಾಂತರ ಇಸ್ಲಾಮೀ  ಸಾಹಿತ್ಯ ಕೃತಿಗಳು ಮಾರಾಟವಾಗಿವೆ. ಎರಡು ಸಂಚಾರಿ ವಾಹನಗಳು ರಾಜ್ಯದಾದ್ಯಂತ ಇಸ್ಲಾಮೀ  ಸಾಹಿತ್ಯವನ್ನು ಜನರ ಬಳಿಗೆ ತಲುಪಿಸುವಲ್ಲಿ ನಿರತವಾಗಿವೆ. ಹಾಗೆಯೇ ಇದೀಗ ಕಳೆದ 11 ವರ್ಷಗಳಿಂದ ಮಹಿಳೆಯರಿಗಾಗಿಯೇ ‘ಅನುಪಮ’ ಮಾಸಿಕವನ್ನು ಜಮಾಅತ್  ಹೊರತರುತ್ತಿದೆ. ಇದಲ್ಲದೇ, ಮಂಗಳೂರಿನಲ್ಲಿ ‘ಹಿರಾ ಮೀಡಿಯಾ’ ಎಂಬ ಭವಿಷ್ಯದ ಟಿ.ವಿ. ಚಾನೆಲ್‍ಗಾಗಿ 2012ರಲ್ಲಿ ರಾಜ್ಯ ಘಟಕಾಧ್ಯಕ್ಷ ಅಬ್ದುಲ್ಲಾ ಜಾವೇದ್‍ರು ಚಾಲನೆ ಕೊಟ್ಟಿದ್ದಾರೆ. ನೆರೆಯ ರಾಜ್ಯವಾದ ಕೇರಳದಲ್ಲಿ ಈಗಾಗಲೇ ಮೀಡಿಯಾ ಒನ್ ಎಂಬ ಹೆಸರಿನಲ್ಲಿ ಟಿ.ವಿ. ಚಾನೆಲ್ ಪ್ರಾರಂಭವಾಗಿದೆ. ಮಾಧ್ಯಮಂ ಅನ್ನುವ ದಿನ ಪತ್ರಿಕೆಯು ಕಳೆದ 10 ವರ್ಷಗಳಿಂದ ಕೇರಳದಲ್ಲಿ ಯಶಸ್ವಿಯಾಗಿ ಪ್ರಕಟವಾಗುತ್ತಿವೆ. ಒಂದು ಕಾಲದಲ್ಲಿ ಇಸ್ಲಾಮೀ ವಿಚಾರಧಾರೆಗಳನ್ನೊಳಗೊಂಡ ಪತ್ರಿಕೆಗಳು ಬಿಡಿ, ಇಸ್ಲಾಮೀ  ಬರಹಗಾರರೇ ಇಲ್ಲದ ಸಮಯದಲ್ಲಿ ಪತ್ರಿಕೆಗಳನ್ನು ಹುಟ್ಟು ಹಾಕುವ ಮೂಲಕ ಜಮಾಅತ್, ಪತ್ರಿಕೆಗಳನ್ನಷ್ಟೇ ಅಲ್ಲ, ಬರಹಗಾರರನ್ನೂ ಸೃಷ್ಟಿಸಿತು. ಇವತ್ತು ವಿವಿಧ ದಿನ ಪತ್ರಿಕೆ, ಟಿ.ವಿ. ಚಾನೆಲ್‍ಗಳಲ್ಲಿ ಜಮಾಅತ್ ತಯಾರಿಸಿದ ಬರಹಗಾರರು ಕೆಲಸ ಮಾಡುತ್ತಿದ್ದಾರೆ ಅನ್ನುವುದು ಅತ್ಯಂತ ಹೆಮ್ಮೆಯ ಸಂಗತಿ.
   80ರ ದಶಕದಲ್ಲಿ ಇಸ್ಲಾಮೀ  ಶರೀಅತ್‍ನ ಬಗ್ಗೆ ಈ ದೇಶದಲ್ಲಿ ವ್ಯಾಪಕ ಚರ್ಚೆ ಹುಟ್ಟಿಕೊಂಡಿತು. ಶಬಾನೋ ಪ್ರಕರಣ ಇದಕ್ಕೆ ಮೂಲ ಕಾರಣವಾಗಿತ್ತು. ಶರೀಅತ್‍ನ ಮೇಲೆ ಸವಾರಿ ಮಾಡುವುದಕ್ಕೆ ಈ ಪ್ರಕರಣವನ್ನು ಮಾಧ್ಯಮಗಳು ನೆಪವಾಗಿ ಬಳಸಿಕೊಂಡವು. ಶರೀಅತ್ ಎಂಬುದು ಈ ಕಾಲಕ್ಕೆ ಸಲ್ಲದ, ಪುರಾತನ ಕಾಲದ ಕಾನೂನು ಎಂದು ಅವು ವ್ಯಾಖ್ಯಾನಿಸಿದುವು. ಅಂಥ ಹೊತ್ತಲ್ಲಿ, ಇಸ್ಲಾಮೀ  ಶರೀಅತ್ ಅಂದರೆ ಏನು, ಅದಕ್ಕಿರುವ ಮಹತ್ವ, ಅದರ ಸಾರ್ವಕಾಲಿಕತೆಯ ಬಗ್ಗೆ ತಾರ್ಕಿಕವಾಗಿ ಮತ್ತು ಅತ್ಯಂತ ಆಧುನಿಕ ರೂಪದಲ್ಲಿ ಈ ದೇಶಕ್ಕೆ ಮನವರಿಕೆ ಮಾಡಿಸಿದ್ದೇ ಜಮಾಅತೆ ಇಸ್ಲಾಮೀ  ಹಿಂದ್.  ಶರೀಅತ್ ಎಂಬುದು ಕಾಲ ಬಾಹಿರ ಸಿದ್ಧಾಂತ ಎಂದು ಮುಸ್ಲಿಮರೂ ನಂಬುವಂತಾಗಿದ್ದ ಮತ್ತು ಶರೀಅತ್‍ನ ಕುರಿತಂತೆ ಯಾರಾದರೂ ಟೀಕೆಯ ಮಾತಾಡಿದರೆ ಅದಕ್ಕೆ ಉತ್ತರ ಕೊಡಲು ಏನೇನೂ ಜ್ಞಾನವಿಲ್ಲದ ಮುಸ್ಲಿಮ್ ಸಮುದಾಯದಲ್ಲಿ ಶರೀಅತ್‍ನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಜಮಾಅತ್ ತೀವ್ರವಾಗಿ ಶ್ರಮಿಸಿತು. ಮಾತ್ರವಲ್ಲ, ಈ ದೇಶದಲ್ಲಿ ಶರೀಅತ್‍ನ ಕುರಿತಂತೆ ಹರಡಲಾಗಿದ್ದ ಸುಳ್ಳುಗಳ ಪರದೆಯನ್ನು ಬಹುವಂಶ ಹರಿದು ಹಾಕುವಲ್ಲಿ ಯಶಸ್ವಿಯಾಯಿತು. ಒಂದು ಕಾಲದಲ್ಲಿ, ಶರೀಅತ್ ಅಂದರೆ ತಲೆ, ಕೈ, ಕಾಲು ತುಂಡರಿಸುವ ಶಿಕ್ಷೆಯೊಂದರ ಹೆಸರು ಎಂದು ವಾದಿಸುವಷ್ಟರ ಮಟ್ಟಿಗೆ ಅಜ್ಞಾನಿಯಾಗಿದ್ದ ಮುಸ್ಲಿಮ್ ಸಮುದಾಯವನ್ನು, ಶರೀಅತ್ ಕಾನೂನುಗಳ ಅಗತ್ಯ  ಈ ದೇಶಕ್ಕೆ ಇದೆ ಎಂದು ಸಾರ್ವಜನಿಕ ವೇದಿಕೆಗಳಲ್ಲಿ ನಿಂತು ಆಗ್ರಹಿಸುವಷ್ಟರ ಮಟ್ಟಿಗೆ ಜ್ಞಾನಿಯಾಗಿಸಿದ ಕೀರ್ತಿ ಜಮಾಅತ್‍ಗೆ ಸಲ್ಲುತ್ತದೆ. ಇದರ ಜೊತೆಗೇ ಶರೀಅತ್ ಕಾನೂನುಗಳ ರಕ್ಷಣೆಗಾಗಿಯೇ ರಾಷ್ಟ್ರಮಟ್ಟದಲ್ಲಿ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ ನ  ಸ್ಥಾಪನೆಗಾಗಿ ಮುಂಚೂಣಿಯಲ್ಲಿ ನಿಂತು ಜಮಾಅತ್ ಶ್ರಮಿಸಿತಲ್ಲದೇ ಇವತ್ತೂ ಅದರ ಚಾಲಕ  ಶಕ್ತಿಯಾಗಿ ಕೆಲಸ ಮಾಡುತ್ತಿದೆ. ಹಲವು ಪಂಗಡ, ಗುಂಪುಗಳಲ್ಲಿ ವಿಭಜಿಸಿ ಹೋಗಿರುವ ಮುಸ್ಲಿಮ್ ಸಮುದಾಯವನ್ನು ಒಟ್ಟು ಸೇರಿಸಿ, ಅವುಗಳೊಳಗೆ ಐಕ್ಯತೆಯನ್ನು ಸೃಷ್ಟಿ ಮಾಡುವುದಕ್ಕಾಗಿ ಮುಸ್ಲಿಮ್ ಮಜ್ಲಿಸೆ ಮುಶಾವರತನ್ನು ಜಮಾಅತ್ ಹುಟ್ಟು ಹಾಕಿತು.
    ಇಷ್ಟಕ್ಕೂ 6 ದಶಕಗಳ ಹಿಂದೆ ಮುಸ್ಲಿಮ್ ಸಮುದಾಯದಲ್ಲಿ ಮಹಿಳೆಯ ಸ್ಥಾನ-ಮಾನ ಭಾರೀ ಆಧುನಿಕವಾಗಿಯೇನೂ ಇದ್ದಿರಲಿಲ್ಲ. ಮಹಿಳೆಯರನ್ನು ಮಸೀದಿಯಿಂದ ಶಾಲೆಯಿಂದ, ಉದ್ಯೋಗದಿಂದ ಮತ್ತು ಸಂಘಟನೆಗಳಿಂದ ಸಮುದಾಯಿ ದೂರ ಇಟ್ಟಿತ್ತು. ಮಹಿಳೆ ‘ಮನೆಯಿಂದ ಹೊರಬರುವುದು ಫಿತ್ನಕ್ಕೆ ದಾರಿಯಾಗುತ್ತದೆ' ಎಂದು ಬಲವಾಗಿ ನಂಬಿದ್ದ ಉಲೆಮಾಗಳು ಧಾರಾಳ ಇದ್ದರು. ಇಂಥ ಹೊತ್ತಲ್ಲಿ ಜಮಾಅತ್ ಮಹಿಳೆಯರ ನಿಜವಾದ ಸ್ಥಾನ-ಮಾನವನ್ನು ಇಸ್ಲಾಮಿನ ಅಧಿಕೃತ ಪುರಾವೆಗಳೊಂದಿಗೆ ಸಮಾಜದ ಮುಂದಿರಿಸಿತು. ಮಹಿಳೆಯಿಲ್ಲದೆ ಸಮುದಾಯದ ಅಭಿವೃದ್ಧಿ ಮತ್ತು ಬೌದ್ಧಿಕ ಬೆಳವಣಿಗೆ ಸಾಧ್ಯವಾಗಲಾರದು ಎಂದು ಜಮಾಅತ್ ಪ್ರತಿಪಾದಿಸಿತು. ಆಕೆಗೆ ಮನೆ ನಿರ್ವಹಣೆಯ ಜೊತೆಗೇ ಸಮಾಜ ನಿರ್ವಹಣೆಯಲ್ಲೂ ಪಾತ್ರ ಇದೆ ಎಂದು ಬಹಿರಂಗವಾಗಿ ಪ್ರತಿಪಾದಿಸಿತು. ಅಂದಿನ ವಾತಾವರಣದಲ್ಲಿ ಇಂಥದ್ದೊಂದು ಕರೆ ಸುಲಭದ್ದಾಗಿರಲಿಲ್ಲ. ಜಮಾಅತನ್ನು ಬಂಡುಕೋರ ಸಂಘಟನೆ’ ಎಂದು ಮೂದಲಿಸುವುದರಿಂದ ಹಿಡಿದು, ಹತ್ತು ಹಲವು ಆರೋಪಗಳಿಗೆ ಗುರಿ ಮಾಡಬಹುದಾದ ದೊಡ್ಡದೊಂದು ಸವಾಲು ಅದಾಗಿತ್ತು. ಆದರೆ ಜಮಾಅತ್ ಹಿಂಜರಿಯಲಿಲ್ಲ. ಸಮುದಾಯದಲ್ಲಿ ಮುಸ್ಲಿಮ್ ಮಹಿಳೆಯ ಸಬಲೀಕರಣಕ್ಕಾಗಿ, ಅವರಿಗೆ ಇಸ್ಲಾಮ್ ಒದಗಿಸಿರುವ ಗೌರವಾರ್ಹ ಸ್ಥಾನ-ಮಾನವನ್ನು ದೊರಕಿಸುವುದಕ್ಕಾಗಿ ನಿರಂತರವಾಗಿ ಶ್ರಮಿಸಿತು. ಇಸ್ಲಾಮಿನಲ್ಲಿ ಹೆಣ್ಣು ಹೇಗಿರಬೇಕು, ಆಕೆಯ ಕಾರ್ಯಕ್ಷೇತ್ರ ಯಾವುದು, ಪರ್ದಾದ ಅಗತ್ಯ, ವ್ಯಾಖ್ಯಾನಗಳೇನು.. ಎಂದು ಮುಂತಾಗಿ ಸಮಾಜವನ್ನು ತಿದ್ದುವ ತೀವ್ರ ಪ್ರಯತ್ನವನ್ನೂ ನಡೆಸಿತು. ಹೆಣ್ಣು ಮಕ್ಕಳಿಗಾಗಿಯೇ ಶಿಕ್ಷಣ ಸಂಸ್ಥೆಗಳನ್ನು ತೆರೆಯಿತು. ಲೌಕಿಕ ಮತ್ತು ಧಾರ್ಮಿಕ ಶಿಕ್ಷಣಗಳನ್ನು ಶಾಲಾ-ಕಾಲೇಜುಗಳಲ್ಲಿ ಜೊತೆಯಾಗಿ ಕೊಡುವ ಮೂಲಕ ಸಮಾಜಕ್ಕೆ ಹೊಸ ಮಾದರಿಯೊಂದನ್ನು ತೋರಿಸಿತು. ಇವೆಲ್ಲದರ ಪರಿಣಾಮವಾಗಿ ಕ್ರಮೇಣ ಮುಸ್ಲಿಮ್ ಸಮುದಾಯದಲ್ಲಿ ಮಾದರಿ ಮಹಿಳೆಯರು ತಯಾರಾಗ ತೊಡಗಿದರು. ಶಿಕ್ಷಿತ ಹೆಣ್ಣು ಮಕ್ಕಳು ಬೆಳೆಯ ತೊಡಗಿದರು. ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಅತ್ತೆಯಾಗಿ... ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾದರಿ ಹೆಣ್ಣು ಮಕ್ಕಳನ್ನು ತಯಾರಿಸಿ ಜಮಾಅತ್ ಸಮಾಜದ ಮುಂದಿಟ್ಟಿತು. ಜಮಾಅತ್‍ನ ಈ ಪ್ರಯತ್ನಗಳು ಸಮುದಾಯದ ಮೇಲೆ ಯಾವ ಬಗೆಯ ಪರಿಣಾಮ ಬೀರಿತೆಂದರೆ, ಜಮಾಅತನ್ನು ಒಪ್ಪದ ಸಂಘಟನೆಗಳು ಕೂಡ ಇದೇ ಮಾದರಿಯನ್ನು ಕ್ರಮೇಣ ಅವಳಡಿಸಿಕೊಂಡವು. ಸೆಕ್ಯುಲರ್ ಶಾಲೆಗಳು ಕೂಡ ಜಮಾಅತ್‍ನ ಶೈಕ್ಷಣಿಕ ಕಾರ್ಯ ಸೂಚಿಯನ್ನು ನಕಲು ಮಾಡಿಕೊಂಡವು.
   ಅಂದ ಹಾಗೆ, ಜಮಾಅತ್ ದೇಶೀಯವಾಗಿ ಮಾತ್ರ ಗಮನಹರಿಸಿದ್ದಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಾಗುವ ಸಕಲ ಬೆಳವಣಿಗೆಗಳ ಬಗ್ಗೆಯೂ ಜಮಾಅತ್ ಸದಾ ವೀಕ್ಷಿಸುತ್ತಲೇ ಕಾರ್ಯವೆಸಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ಇಸ್ಲಾಮೀ  ಸಂಘಟನೆಗಳೊಂದಿಗೆ ಜಮಾಅತ್‍ಗೆ ಅತ್ಯುತ್ತಮ ಸಂಬಂಧ ಇದೆ. ಇಖ್ವಾನುಲ್ ಮುಸ್ಲಿಮೂನ್, ಟ್ಯುನೀಶ್ಯಾದ ಅನ್ನಹ್ದ್, ಟರ್ಕಿಯ ಏ.ಕೆ. ಪಾರ್ಟಿ.. ಸಹಿತ ಜಗತ್ತಿನ ಎಲ್ಲ ಇಸ್ಲಾಮೀ  ವಿಚಾರಧಾರೆಗಳುಳ್ಳ ಪಕ್ಷ ಮತ್ತು ವ್ಯಕ್ತಿಗಳೊಂದಿಗೆ ಜಮಾಅತ್ ವಿಚಾರ- ವಿನಿಮಯಗಳನ್ನು ನಡೆಸುತ್ತಿದೆ. ಫೆಲೆಸ್ತೀನ್, ಇರಾಕ್, ಸಿರಿಯಾ, ಇರಾನ್, ಅಮೇರಿಕ, ಬ್ರಿಟನ್... ಮುಂತಾಗಿ ಜಗತ್ತಿನ ಎಲ್ಲೇ ಮಾನವ ಹಕ್ಕುಗಳ ಮೇಲೆ ಹಲ್ಲೆ ನಡೆದರೂ ಜಮಾಅತ್  ತಕ್ಷಣ ಪ್ರತಿಭಟನೆ ಸಲ್ಲಿಸುತ್ತದೆ. ಮೌಲ್ಯಗಳ ಪ್ರತಿಪಾದನೆಯಲ್ಲಿ ಜಮಾಅತ್‍ಗೆ ಅತ್ಯಂತ ಎತ್ತರದ ಸ್ಥಾನವಿದೆ. ಒಂದು ರೀತಿಯಲ್ಲಿ, ಜಮಾಅತ್ ಈ ದೇಶದ ಮುಸ್ಲಿಮರಷ್ಟೇ ಅಲ್ಲ, ಸರ್ವ ಧರ್ಮೀಯರೂ ಮೆಚ್ಚುವ ಪ್ರಭಾವಿ ಸಂಘಟನೆಯಾಗಿ ಇವತ್ತು ಬೆಳೆದು ನಿಂತಿದೆ. ಅದರ ಸಂವಿಧಾನ ಅತ್ಯಂತ ಪಾರದರ್ಶಕವಾಗಿದೆ. ಸರ್ವರಿಗೂ ಓದಲು ಸಿಗುವಷ್ಟು ಮುಕ್ತವಾಗಿದೆ. ಅದರಲ್ಲಿ ನಿಗೂಢವೆಂಬುದು ಯಾವುದೂ ಇಲ್ಲ. ಆದ್ದರಿಂದಲೇ, ಈ ದೇಶದ ಎಲ್ಲಾ ಧರ್ಮೀಯರೂ ಜಮಾಅತನ್ನು ಮುಂಚೂಣಿಯ ಸಂಘಟನೆಯಾಗಿ ಇವತ್ತು ಪರಿಗಣಿಸುತ್ತಿರುವುದು.ಈ ದೇಶಕ್ಕೆ ಪರ್ಯಾಯ ರಾಜಕೀಯ ವ್ಯವಸ್ಥೆಯೊಂದನ್ನು ಶಿಫಾರಸ್ಸು ಮಾಡಿದ ಸಂಘಟನೆಯಿದ್ದರೆ ಅದು ಜಮಾಅತೆ ಇಸ್ಲಾಮೀ  ಹಿಂದ್ ಮಾತ್ರ. ಆರ್ಥಿಕ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಕೌಟುಂಬಿಕ, ನೈತಿಕ... ಮುಂತಾದ ಎಲ್ಲಾ ಕ್ಷೇತ್ರಗಳಿಗೂ ಇಸ್ಲಾಮೀ  ವಿಚಾರಧಾರೆಗಳನ್ನೊಳಗೊಂಡ ಪರ್ಯಾಯ ವ್ಯವಸ್ಥೆಯನ್ನು ಅತಿ ಪ್ರಬಲವಾಗಿ ಮಂಡಿಸಲು ಜಮಾಅತ್‍ಗೆ ಸಾಧ್ಯವಾಗಿದೆ. ಇಸ್ಲಾಮ್ 1500 ವರ್ಷಗಳ ಹಿಂದಿನ ಕಾಲಕ್ಕೆ ಮಾತ್ರವಲ್ಲ ಈ 21ನೇ ಶತನಮಾನಕ್ಕೂ ಅತ್ಯಂತ ಯೋಗ್ಯ, ಅತ್ಯಂತ ಪ್ರಸ್ತುತ ಮತ್ತು ಅತ್ಯಂತ ಅನಿವಾರ್ಯವೆಂದು ಪುರಾವೆಗಳ ಮೂಲಕ ಸಾಬೀತುಪಡಿಸುವ ಶ್ರಮದಲ್ಲಿ ಜಮಾಅತ್ ಇವತ್ತು ಸಫಲವಾಗಿದೆ. ವಿಚಾರಗೋಷ್ಠಿ, ಸಂವಾದಗಳು, ನಾಟಕ, ಬರಹಗಳು.. ಮುಂತಾದ ವಿವಿಧ ಮಾಧ್ಯಮಗಳನ್ನು ಬಳಸಿ ಅದು ಕಳೆದ 65 ವರ್ಷಗಳಿಂದ ಇಸ್ಲಾಮಿನ ಸಂದೇಶವನ್ನು ನೀಡುತ್ತಾ ಬಂದಿರುವುದು ಇವತ್ತಿನ ದಿನಗಳಲ್ಲಿ ಭಾರೀ ಫಲವನ್ನು ಕೊಡುತ್ತಿದೆ. ನಮ್ಮ ವೇದಿಕೆಗಳಿಗೆ ಬರುತ್ತಿರುವ ಸಮಾಜದ ಪ್ರಭಾವಿ ವ್ಯಕ್ತಿಗಳೇ ಒಂದು ಹಂತದವರೆಗೆ ಇಸ್ಲಾಮೀ  ಪರ್ಯಾಯವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬಡ್ಡಿ ಮುಕ್ತ ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿವಿಧ ರಾಜ್ಯಗಳಲ್ಲಿ ಸಣ್ಣ ಮಟ್ಟದಲ್ಲಾದರೂ ಪ್ರಾಯೋಗಿಕವಾಗಿ ಜಾರಿಗೊಳಿಸಿ ಯಶಸ್ವಿಯಾಗಿರುವುದನ್ನು ಕಂಡು ಅಸಂಖ್ಯಾತ ಮಂದಿ ಬೆರಗಾಗಿದ್ದಾರೆ. ಬಡ್ಡಿಮುಕ್ತ ವ್ಯವಸ್ಥೆ ಸಾಧ್ಯವೇ ಇಲ್ಲ ಅನ್ನುವ ವಾತಾವರಣದಲ್ಲಿ ಅದು ಸಾಧ್ಯ ಎಂದು ವಾದಿಸಿದ್ದಲ್ಲದೇ ಪ್ರಾಯೋಗಿಕವಾಗಿ ತೋರಿಸಿಕೊಡುವಲ್ಲೂ ಜಮಾಅತ್ ಸಫಲವಾಗಿರುವುದು ಸಮಾಜವನ್ನು ಆಕರ್ಷಿಸಿದೆ. ಆದ್ದರಿಂದಲೇ ಮದ್ಯ ಮುಕ್ತ, ಜೂಜು ಮುಕ್ತ, ಅನೈತಿಕತೆ ಮುಕ್ತ, ಅತ್ಯಾಚಾರ ಮುಕ್ತ.. ಮುಂತಾದ ಕೆಡುಕು ಮುಕ್ತ ಸಮಾಜದ ಕಲ್ಪನೆಯನ್ನು ಜಮಾಅತ್ ಮುಂದಿಟ್ಟಾಗ ಸಮಾಜದಿಂದ ಭಾರೀ ಬೆಂಬಲ ಸಿಕ್ಕಿದ್ದು. ಇವೆಲ್ಲ ಜಮಾಅತ್‍ನ ಕಳೆದ 65 ವರ್ಷಗಳ ನಿರಂತರ ಪ್ರಾಮಾಣಿಕ, ಪಾರದರ್ಶಕ ನಡೆ-ನುಡಿಗಳಿಂದ ಸಾಧ್ಯವಾಯಿತು ಅನ್ನುವುದರಲ್ಲಿ ಅನುಮಾನಗಳಿಲ್ಲ.
   ಅಷ್ಟೇ ಅಲ್ಲ
   ಮದೀನಕ್ಕೆ ಹೋಗುವಂತೆ ಪ್ರವಾದಿಯವರನ್ನು ನಿರ್ಬಂಧಿಸಿದ, ತರತರದ ಹಿಂಸೆ ಕೊಟ್ಟ ಅದೇ ಮಕ್ಕಾದ ಮಂದಿ ಬರಗಾಲಕ್ಕೆ ತುತ್ತಾದಾಗ ಅವರಿಗೆ ಆಹಾರ ಧಾನ್ಯಗಳನ್ನು ಕಳುಹಿಸಿ ಕೊಟ್ಟ ಕರುಣಾಮಯಿ ಪ್ರವಾದಿಯವರ ನಿಲುವನ್ನು ಮಾದರಿಯಾಗಿಟ್ಟುಕೊಂಡು ಜಮಾಅತ್ ಈ ದೇಶದಲ್ಲಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಅದು ಪ್ರವಾದಿಯನ್ನು ಎಲ್ಲರ ಪ್ರವಾದಿ ಎಂದು ಪರಿಚಯಿಸುವಂತೆಯೇ , ಸೇವೆಯನ್ನು ಕೂಡಾ ಎಲ್ಲರ ಸೇವೆ ಎಂದೇ ಪರಿಚಯಿಸಿತು. ನಿಜವಾಗಿ 6 ದಶಕಗಳ ಹಿಂದೆ ಮುಸ್ಲಿಮ್ ಸಮುದಾಯದಲ್ಲಿ ಸಮಾಜಸೇವೆಯ ಕಲ್ಪನೆ ಬಹುತೇಕ ಇದ್ದಿರಲೇ ಇಲ್ಲ. ಒಂದು ಕಡೆ, ಸಮುದಾಯವು ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದರೆ ಇನ್ನೊಂದು ಕಡೆ, ಸಮುದಾಯದ ಶ್ರೀಮಂತರು ತಮ್ಮ ಪಾಡಿಗೆ ತಾವಿದ್ದರು. ತಮಗೂ ಸಮುದಾಯಕ್ಕೂ ಏನಾದರೂ ಸಂಬಂಧ ಇದೆ ಎಂಬ ಪ್ರಜ್ಞೆ ಬಹುತೇಕ ಅವರಲ್ಲಿ ಸತ್ತುಹೋಗಿತ್ತು. ಇಂಥ ಹೊತ್ತಲ್ಲಿ ಸಮಾಜ ಸೇವೆಯ ಬಗ್ಗೆ, ಝಕಾತ್‍ನ ಕುರಿತಂತೆ ದೊಡ್ಡ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಜಮಾಅತ್ ಹಮ್ಮಿಕೊಂಡಿತು. ಝಕಾತ್‍ನ ನಿಜವಾದ ಪರಿಚಯವನ್ನು ಸಮುದಾಯಕ್ಕೆ ತಿಳಿಯಪಡಿಸಿತು. ಶ್ರೀಮಂತರ ದುಡ್ಡಿನಲ್ಲಿ ಬಡವರಿಗೆ ಕಡ್ಡಾಯವಾದ ಪಾಲು ಇದೆ ಅನ್ನುವ ಸಿದ್ಧಾಂತವನ್ನು ಸಮುದಾಯದ ಮುಂದಿಟ್ಟಾಗ ಮೊದ ಮೊದಲು ಮುಸ್ಲಿಮ್ ಸಮುದಾಯ ಇದನ್ನು ಹೊಸ ವಿಚಾರವೆಂಬಂತೆ ಅಚ್ಚರಿಯಿಂದ ನೋಡಿತ್ತು. ಝಕಾತನ್ನು  ಸಮುದಾಯದಲ್ಲಿ ಹೇಗೆ ಸದುಪಯೋಗಪಡಿಸಬಹುದು ಎಂಬುದನ್ನು ಅತ್ಯಂತ ಕ್ರಾಂತಿಕಾರಿ ರೂಪದಲ್ಲಿ ಈ ದೇಶದಲ್ಲಿ ವ್ಯಾಖ್ಯಾನಿಸಿದ್ದೇ ಜಮಾಅತೆ ಇಸ್ಲಾಮೀ . ಆ ವರೆಗೆ ಝಕಾತ್ ಎಂಬುದನ್ನು ಸಮುದಾಯದ ಶ್ರೀಮಂತರು ಸುನ್ನತ್‍ನಂತೆ ಪರಿಗಣಿಸಿದ್ದರು. ರಮಝಾನ್‍ನಲ್ಲಿ ಭಿಕ್ಷುಕರಿಗೆ ಕೊಡುವ ದುಡ್ಡನ್ನೇ ಝಕಾತ್ ಎಂದು ನಂಬಿದ್ದರು. ಜಮಾಅತ್ ಝಕಾತ್‍ನ ನಿಜವಾದ ಪರಿಚಯವನ್ನು ಬರಹ, ಭಾಷಣಗಳ ಮೂಲಕ ದೇಶಾದ್ಯಂತ ಮಾಡಿತಲ್ಲದೆ ಸಮಾಜ ಸೇವಾ ವಿಭಾಗವನ್ನು ದೇಶದೆಲ್ಲೆಡೆ ತೆರೆದು ಆಪದ್ಬಾಂದವನ ಪಾತ್ರ ನಿರ್ವಹಿಸಿತು. ಇವತ್ತಿಗೂ ಇದು ಮುಂದುವರಿಯುತ್ತಿದೆ. 21ನೇ ಶತನಮಾನದಲ್ಲಿ ಜಮಾಅತ್‍ನ ಅತಿದೊಡ್ಡ ಸೇವಾ ಯೋಜನೆಯೆಂದರೆ ವಿಷನ್ 2016. ಇದು 5000 ಕೋಟಿ ರೂಪಾಯಿಯ ಯೋಜನೆ ಆಗಿದ್ದು ಈ ಮೂಲಕ ಸಮುದಾಯವನ್ನು ಸರ್ವ ರೀತಿಯಲ್ಲೂ ಸಬಲೀಕರಣಗೊಳಿಸಲು ಜಮಾಅತ್ ತೀವ್ರವಾಗಿ ಶ್ರಮಿಸುತ್ತಿದೆ. ಶಾಲೆ, ಆಸ್ಪತ್ರೆ, ಮನೆ ಮುಂತಾದವುಗಳ ನಿರ್ಮಾಣ ಕಾರ್ಯಕ್ಕಾಗಿ ಈ ಯೋಜನೆಯ ಮೂಲಕ ಪ್ರಯತ್ನಿಸಲಾಗುತ್ತಿದೆ. 
    ಸಣ್ಣ ಪುಟ್ಟ ದೌರ್ಬಲ್ಯಗಳಿದ್ದರೂ ಪ್ರವಾದಿಯನ್ನು ಅತ್ಯಂತ ಸಮಗ್ರವಾಗಿ ಅನುಸರಿಸುವ ಮಾದರಿ ತಂಡವೊಂದನ್ನು ಕಟ್ಟಲು ಜಮಾಅತೆ ಇಸ್ಲಾಮೀ  ಹಿಂದ್‍ಗೆ ಇವತ್ತು ಸಾಧ್ಯವಾಗಿದೆ ಎಂಬುದು ಹೆಮ್ಮೆಯ ಸಂಗತಿ.
   ಬಡ್ಡಿ ವ್ಯವಹಾರ ಮಾಡುವ, ವರದಕ್ಷಿಣೆ ಪಡೆಯುವ, ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಒಬ್ಬನೇ ಒಬ್ಬ ಸದಸ್ಯ ಜಮಾಅತ್‍ನಲ್ಲಿಲ್ಲ. ಅದು ಮಾದರಿ ಸಮಾಜವೊಂದನ್ನು ಕಟ್ಟುವ ಗುರಿಯೊಂದಿಗೆ ಸ್ಥಾಪನೆಗೊಂಡಿದೆ. ಮದೀನದ 80% ಯಹೂದಿಯರು 20% ಇದ್ದ ಮುಸ್ಲಿಮರನ್ನು ಪ್ರೀತಿಸಿದ್ದರೆ, ಪ್ರವಾದಿಯನ್ನು ತಮ್ಮ ಆಡಳಿತಾಧಿಕಾರಿಯಾಗಿ ಅವರು ನೇಮಿಸಿದ್ದರೆ ಅದು ಈ ದೇಶದಲ್ಲೂ ಸಾಧ್ಯ ಎಂದು ಜಮಾಅತ್ ಬಲವಾಗಿ ನಂಬುತ್ತದೆ. ಅಂದು ಯಹೂದಿಯರು ಮುಸ್ಲಿಮರನ್ನು ಪ್ರೀತಿಸಿದ್ದು ಅವರ ಮಾದರಿ ಬದುಕಿಗಾಗಿ. ಅವರನ್ನು ಆಡಳಿತ ನಡೆಸುವಂತೆ ಆಹ್ವಾನಿಸಿದ್ದು ಭ್ರಷ್ಟ ಮುಕ್ತ ಜೀವನ ಕ್ರಮಕ್ಕಾಗಿ. 20% ಇದ್ದ ಮುಸ್ಲಿಮರು 80% ಇದ್ದ ಯಹೂದಿಯರ ವಿರುದ್ಧ ಅಂದು ಬಾಂಬ್ ಸ್ಫೋಟಿಸಿದ್ದಾಗಲಿ, ಕೋಮುಗಲಭೆ ನಡೆಸಿದ್ದಾಗಲಿ ಒಮ್ಮೆಯೂ ನಡೆದಿಲ್ಲ. ಇದನ್ನೇ ಈ ದೇಶಕ್ಕೆ ಮಾದರಿ ಎಂದು ಜಮಾಅತ್ ಪ್ರತಿಪಾದಿಸುತ್ತದೆ. ನಿಜವಾಗಿ ಸಮಾಜವನ್ನು ಪ್ರವಾದಿಯವರು(ಸ) ಸಬಲೀಕರಣಗೊಳಿಸಿದ ವಿಧಾನ ಅದು. ಜಮಾಅತ್ ಆ ವಿಧಾನವನ್ನೇ ಅಳವಡಿಸಿಕೊಂಡಿದೆ. ಮುಸ್ಲಿಮರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಧಾರ್ಮಿಕವಾಗಿ ಸುಶಿಕ್ಷಿತರು ಮತ್ತು ಪ್ರಬಲರಾದಾಗ ಮಾತ್ರ ಅವರಿಂದ ಆರೋಗ್ಯಪೂರ್ಣ ವರ್ತನೆಯನ್ನು ನಿರೀಕ್ಷಿಸಲು ಸಾಧ್ಯ ಎಂದು ಅದು ನಂಬುತ್ತದೆ. ಆರ್ಥಿಕವಾಗಿ ತೀರಾ ದುರ್ಬಲವಾಗಿರುವ, ಧಾರ್ಮಿಕವಾಗಿ ಅತ್ಯಲ್ಪವಷ್ಟೇ ತಿಳಿದಿರುವ ಮತ್ತು ಸಾಮಾಜಿಕವಾಗಿ ಕುಸಿದು ಹೋಗಿರುವ ಸಮೂಹವೊಂದನ್ನು ಕೇವಲ ರಾಜಕೀಯವಾಗಿ ಮೇಲೆತ್ತಲು ಯತ್ನಿಸುವುದು ಅವೈಜ್ಞಾನಿಕ ಎಂದು ಜಮಾಅತ್ ಪ್ರತಿಪಾದಿಸುತ್ತದೆ. ಆದ್ದರಿಂದಲೇ ಜಮಾಅತ್ ಆರ್ಥಿಕ ಕ್ಷೇತ್ರದ ಸಬಲೀಕರಣಕ್ಕಾಗಿ ಬಡ್ಡಿಮುಕ್ತ ಸಾಲ ನಿಧಿಗಳನ್ನು, ಅಸಂಖ್ಯ ಶಿಕ್ಷಣ ಸಂಸ್ಥೆಗಳನ್ನು, ಧಾರ್ಮಿಕ ಜಾಗೃತಿಯನ್ನು ಒಟ್ಟೊಟ್ಟಿಗೆ ಬೆಳೆಸುತ್ತಾ, ಈ ಎಲ್ಲ ರಂಗಗಳಲ್ಲಿ ಸಬಲರಾಗುವ ಜೊತೆಜೊತೆಗೇ ರಾಜಕೀಯ ರಂಗದಲ್ಲೂ ಪ್ರಜ್ಞಾವಂತರಾಗುವ ಸಮೂಹವೊಂದನ್ನು ಕಟ್ಟಲು ಶ್ರಮಿಸುತ್ತಿದೆ.
    ನಿಜವಾಗಿ, ಮುಸ್ಲಿಮರು ಅಲ್ಪಸಂಖ್ಯಾತರಾಗಿರುವ ದೇಶದಲ್ಲಿ ಶಾಂತಿಯ ವಾತಾವರಣ ಇದ್ದರಷ್ಟೇ ಅವರಿಗೆ ಅಲ್ಲಾಹನ ಧರ್ಮವನ್ನು, ಅವನ ಪ್ರವಾದಿಯನ್ನು ಪರಿಚಯಿಸಲು ಸಾಧ್ಯ ಎಂಬುದು ಜಮಾಅತ್‍ನ ನಿಲುವು. ಹುದೈಬಿಯಾ ಒಪ್ಪಂದದ ಸಂದರ್ಭದಲ್ಲಿ ಬಿಸ್ಮಿಲ್ಲಾಹಿರ್ರಹ್‍ಮಾನಿರ್ರಹೀಮ್ ಮತ್ತು ಮುಹಮ್ಮದು ರ್ರಸೂಲುಲ್ಲಾಹ್ ಎಂಬೆರಡು ಪದಗಳನ್ನು ಒಪ್ಪಂದ ಪತ್ರದಲ್ಲಿ ಬರೆಯುವುದನ್ನು ವಿರೋಧಿಗಳು ನಿರಾಕರಿಸಿದಾಗ ಪ್ರವಾದಿ ಅವೆರಡೂ ಪದಗಳನ್ನು ಕಾಗದದಿಂದ ಅಳಿಸಿ ಹಾಕಿದ್ದರು. ನಿಜವಾಗಿ ಆ ಎರಡು ಪದಗಳನ್ನು  ಭೂಮಿಯಲ್ಲಿ ನೆಲೆ ನಿಲ್ಲಿಸುವುದಕ್ಕಾಗಿಯೇ ಆಗಮಿಸಿದ್ದ ಪ್ರವಾದಿ, ಶಾಂತಿಯ ವಾತಾವರಣದ ನಿರ್ಮಾಣಕ್ಕಾಗಿ ಒಂದು ಹಂತದ ವರೆಗೆ ಅದರಲ್ಲಿ ರಾಜಿಯಾಗಲು ಮುಂದಾದರು. ಆ ರಾಜಿ ಆ ಬಳಿಕ ಅಭೂತ ಪೂರ್ವ ಬದಲಾವಣೆಗೆ ನಾಂದಿ ಹಾಡಿತು. ಇಸ್ಲಾಮನ್ನು ಅರಿತುಕೊಳ್ಳುವುದಕ್ಕೆ ವಿರೋಧಿಗಳಿಗೆ ಶಾಂತಿಯ ವಾತಾವರಣ ಅವಕಾಶ ಒದಗಿಸಿತು. ಇದನ್ನೇ ಅಲ್ಲಾಹನು ಸ್ಪಷ್ಟವಾದ ವಿಜಯ ಎಂದು ಸಾರಿದ್ದು. (48:1) ಜಮಾಅತೆ ಇಸ್ಲಾಮೀ  ಹಿಂದ್ ಇಂಥದ್ದೊಂದು ವಾತಾವರಣದಲ್ಲಿ ಕೆಲಸ ಮಾಡಲು ಬಯಸುತ್ತದೆ. ಇಸ್ಲಾಮನ್ನು ಪರಿಚಯಿಸಲು, ಮದೀನದ ಯಹೂದಿ ಸಮೂಹದಂಥ ಇಸ್ಲಾಮ್ ಪ್ರೇಮಿ ಸಮಾಜ ಇಲ್ಲಿ ಬೆಳೆದು ಬರಲು ಬಿಗುವಿನ ವಾತಾವರಣಕ್ಕಿಂತ ಶಾಂತ ವಾತಾವರಣ ಯೋಗ್ಯ ಎಂದು ಅದು ನಂಬುತ್ತದೆ. ಆ ಮಾದರಿಯನ್ನು ಎದುರಿಟ್ಟು ಕೊಂಡೇ ಅದು ಯೋಜನೆಯನ್ನು ರೂಪಿಸುತ್ತದೆ.
   ಏನೇ ಆಗಲಿ, ಜಮಾಅತೆ ಇಸ್ಲಾಮೀ  ಹಿಂದ್ ಎಂಬ ಭಾರತದ ಇಸ್ಲಾಮೀ  ಸಂಘಟನೆಯು ಇವತ್ತು ಈ ದೇಶದ ಸರಕಾರಕ್ಕೇ ಸಲಹೆ ಕೊಡುವಷ್ಟು, ಈ ದೇಶದ ಮುಸ್ಲಿಮ್ ಸಂಘಟನೆಗಳಿಗೆ ನೇತೃತ್ವ ಕೊಡುವಷ್ಟು, ದೇಶದ ನಾಗರಿಕರ ಮುಂದೆ ಇಸ್ಲಾಮೀ  ವಿಚಾರಧಾರೆಗಳನ್ನು ಸಮರ್ಥ ಪರ್ಯಾಯವಾಗಿ ಬಿಂಬಿಸುವಷ್ಟು ಬೃಹತ್ತಾಗಿ ಬೆಳೆದು ನಿಂತಿದೆ. ಈ ಸಮುದಾಯದ ಸಬಲೀಕರಣದ ಪ್ರಶ್ನೆ ಬಂದಾಗ, ಕೋಮು ಸಾಮರಸ್ಯದ ಬಗ್ಗೆ ಪ್ರಶ್ನೆಗಳು ಎದ್ದಾಗ, ಸಾಮಾಜಿಕ, ನೈತಿಕ ಪಿಡುಗುಗಳ ಬಗ್ಗೆ ಚರ್ಚೆ ಉದ್ಭವವಾದಾಗ.. ಹೀಗೆ ಎಲ್ಲ ಸಂದರ್ಭಗಳಲ್ಲೂ ಜಮಾಅತ್ ಮಂಡಿಸುವ ಅಭಿಪ್ರಾಯಗಳಿಗಾಗಿ ದೇಶದ ಮಂದಿ ಕಾಯುವಷ್ಟು ತನ್ನ ಇಮೇಜನ್ನು ಜಮಾಅತೆ ಇಸ್ಲಾಮೀ  ಹಿಂದ್ ವೃದ್ಧಿಸಿಕೊಂಡಿದೆ. ಭ್ರಷ್ಟಾಚಾರ ಮುಕ್ತ, ವರದಕ್ಷಿಣೆ ಮುಕ್ತ, ಮದ್ಯ, ಬಡ್ಡಿ, ಜೂಜು ಮುಕ್ತ.. ಬೃಹತ್ ಕಾರ್ಯಕರ್ತರ ಗುಂಪನ್ನು ಜಮಾಅತ್ ಇವತ್ತು ಈ ದೇಶದಾದ್ಯಂತ ತಯಾರಿಸಿದೆ. ಅಂಥದ್ದೊಂದು ಮಾದರಿ ಗುಂಪನ್ನು ಈ ದೇಶದಲ್ಲಿ ಇತರ ಯಾವ ಸಂಘಟನೆಗಳಿಗೂ ತಯಾರಿಸಲು ಈ ವರೆಗೂ ಸಾಧ್ಯವಾಗಿಲ್ಲ  ಎಂಬುದೇ ಜಮಾಅತ್‍ನ ಹೆಗ್ಗಳಿಕೆ. ಈ ಕಾರಣದಿಂದಲೇ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಲಯದಲ್ಲೂ ಇದು ಸಾಧ್ಯ ಎಂದು ಜಮಾಅತ್ ಪ್ರತಿಪಾದಿಸುವುದು. ದೇವಭಯವನ್ನು ವ್ಯವಸ್ಥೆಯ ಅಡಿಗಲ್ಲಾಗಿ ಒಪ್ಪಿಕೊಂಡು ದೇವ ನಿಯಮಗಳನ್ನು ಪಾಲಿಸುವ ವ್ಯವಸ್ಥೆಯೊಂದು ಜಾರಿಗೆ ಬಂದರೆ, ಸರ್ವ ಕೆಡುಕುಗಳಿಂದಲೂ ಮುಕ್ತವಾದ ಕಲ್ಯಾಣ ರಾಷ್ಟ್ರವೊಂದು ನಿರ್ಮಾಣವಾಗಲು ಸಾಧ್ಯ ಎಂದು ಜಮಾಅತ್ ಪ್ರತಿಪಾದಿಸುತ್ತಾ ಬಂದಿದೆ. ಮುಂದೆಯೂ ಅದರ ನಿಲುವು ಇದುವೇ.