Tuesday, February 5, 2013

ಮುಸ್ಲಿಮರನ್ನು ನಿಂದಿಸುವುದಕ್ಕೆ ಯಾಕೆ ಅವಕಾಶ ಮಾಡಿಕೊಟ್ಟಿರಿ ಕಮಲ್?

ಫೈರ್
ಪರ್ಝಾನಿಯಾ
ಡಾ ವಿನ್ಸಿ ಕೋಡ್
ಆರಕ್ಷಣ್
ಒರೇ ಒರು ಗ್ರಾಮತ್ತಿಲ್..
  ಮುಂತಾದ ಸಿನಿಮಾಗಳೆಲ್ಲ ಈ ದೇಶದಲ್ಲಿ ಈ ಹಿಂದೆ ನಿಷೇಧಕ್ಕೆ ಒಳಗಾಗಿತ್ತಲ್ಲ, ಅದಕ್ಕೆ ಯಾರು ಕಾರಣ; ಮುಸ್ಲಿಮರೇ? ವಿಶ್ವರೂಪಮ್ ಸಿನಿಮಾದ ಸುತ್ತ ಎದ್ದಿರುವ ವಿವಾದದ ಹೊಣೆಯನ್ನು ಮುಸ್ಲಿಮರ ತಲೆಗೆ ಕಟ್ಟಿ, ಕಮಲ್ ಹಾಸನ್‍ರನ್ನು ದಿವಾಳಿಯ ಅಂಚಿಗೆ ನೂಕಿದ ಖಳರಂತೆ ಚಿತ್ರಿಸುವವರೆಲ್ಲ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ನೋಡಿದರೇನು? ಹಾಗಾದರೆ, ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಪ್ರಾರಂಭಿಸಲಾದ 'ಸೇತು ಸಮುದ್ರ' ಯೋಜನೆಯನ್ನು ಕೇಂದ್ರ ಸರಕಾರ ಕೈ ಬಿಟ್ಟಿರುವುದಕ್ಕೆ ಯಾವ ವ್ಯಾಖ್ಯಾನ ಕೊಡಬೇಕು? ಈ ದೇಶದ ಬೊಕ್ಕಸಕ್ಕೆ ಬಿಜೆಪಿ ಮತ್ತು ಪರಿವಾರವು ಕೋಟ್ಯಂತರ ರೂಪಾಯಿಗಳನ್ನು ನಷ್ಟ ಮಾಡಿದೆ ಎಂದು ಹೇಳಲಾದೀತೇ? ಇಷ್ಟಕ್ಕೂ, ವಿಶ್ವರೂಪಮ್ ಸಿನಿಮಾದ ವಿರುದ್ಧ ಮಾಡಲಾದ ಪ್ರತಿಭಟನೆ ಮತ್ತು ನಿಷೇಧದ ಕ್ರಮವನ್ನು, 'ತಾಲಿಬಾನ್ ಮನಸ್ಥಿತಿ' ಎಂದು ವ್ಯಾಖ್ಯಾನಿಸಿದ ಬಿಜೆಪಿಯು (ಸಂಸದ ತರುಣ್ ವಿಜಯ್) 1996ರಲ್ಲಿ ಮಾಡಿದ್ದಾದರೂ ಏನು?
  ಶಬಾನಾ ಆಝ್ಮಿ ಮತ್ತು ನಂದಿತಾ ದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ‘ಫೈರ್’ ಚಿತ್ರದ ವಿರುದ್ಧ 1996ರಲ್ಲಿ ಬಿಜೆಪಿ ಮತ್ತು ಶಿವಸೇನೆಗಳು ಬೀದಿಗಿಳಿದವು. ಚಿತ್ರವು ಸಲಿಂಗ ಕಾಮಕ್ಕೆ ಸಂಬಂಧಿಸಿದ್ದಾಗಿದ್ದು, ಇದು ಭಾರತೀಯತೆಗೆ ವಿರುದ್ಧ ಎಂದು ಅವು ಸಾರಿದುವು. ದೆಹಲಿ ಮತ್ತು ಮುಂಬೈಯ ಸಿನಿಮಾ ಮಂದಿರದೊಳಗೆ ನುಗ್ಗಿ ಅಲ್ಲಿರುವುದನ್ನೆಲ್ಲಾ ಧ್ವಂಸ ಮಾಡಿದುವು. ಫೆಬ್ರವರಿ 2000ದಲ್ಲಿ  ವಾರಣಾಸಿಯಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ  ದೀಪಾ ಮೆಹ್ತಾರ ವಾಟರ್ ಸಿನಿಮಾದ ವಿರುದ್ಧ ಇದೇ ಬಿಜೆಪಿ ಮತ್ತು ಸಂಘ ಪರಿವಾರದ ಮಂದಿ ಪ್ರತಿಭಟಿಸಿದರು. ಉತ್ತರ ಪ್ರದೇಶದ ಬಿಜೆಪಿ ಶಾಸಕ ಶ್ಯಾಮ್ ದೇವ್ ಚೌಧರಿ, ರಾಜ್ಯ ಘಟಕದ ಕೋಶಾಧಿಕಾರಿ ಅಶೋಕ್ ಧವನ್ ಮತ್ತು ಆಗಿನ ಉತ್ತರ ಪ್ರದೇಶ ಸರಕಾರದ ಹಣಕಾಸು ಸಚಿವರ ಪತ್ನಿ ಜ್ಯೋತ್ಸ್ನಾ ಶ್ರೀವಾಸ್ತವ್‍ರ ನೇತೃತ್ವದಲ್ಲಿದ್ದ 500 ಮಂದಿಯ ಗುಂಪು ವಾಟರ್ ಸಿನಿಮಾದ ಚಿತ್ರೀಕರಣಕ್ಕೆ ಅಡ್ಡಿಪಡಿಸಿತ್ತಲ್ಲದೇ, ಸೆಟ್ ಅನ್ನು ಧ್ವಂಸ ಮಾಡಿತು. ‘ಸಿನಿಮಾದ ಚಿತ್ರೀಕರಣವನ್ನು ನಿಲ್ಲಿಸದಿದ್ದರೆ ಶವವನ್ನು ಕೊಂಡೊಯ್ಯ ಬೇಕಾದೀತು’ ಎಂದು ವಿಹಿಂಪದ ನಾಯಕ ಅಶೋಕ್ ಸಿಂಘಾಲ್ ಎಚ್ಚರಿಸಿದರು. ಇವೆಲ್ಲ ಏನು, ಯಾವ ಮನಸ್ಥಿತಿ? ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಈ ಮಟ್ಟದ ದ್ವಂದ್ವವೇಕೆ?
  ಇದೊಂದೇ ಅಲ್ಲ,
ಒರೇ ಒರು ಗ್ರಾಮತ್ತಿಲ್ ಎಂಬ ಸಿನಿಮಾ 1989ರಲ್ಲಿ ಬಿಡುಗಡೆಯಾಗುತ್ತದೆ. ತಮಿಳುನಾಡಿನ ವಿದ್ಯಾಸಂಸ್ಥೆಗಳಲ್ಲಿರುವ ಜಾತಿಯಾಧಾರಿತ ಮೀಸಲಾತಿಯನ್ನು ಪ್ರಶ್ನಿಸುವ ಈ ಸಿನಿಮಾದ ವಿರುದ್ಧ ಅಂಬೇಡ್ಕರ್ ಪೀಪಲ್ಸ್ ಮೊವ್‍ಮೆಂಟ್ ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾಗಳು ತೀವ್ರ ಪ್ರತಿಭಟನೆ ನಡೆಸುತ್ತವೆ. ಸಿನಿಮಾಕ್ಕೆ ತಮಿಳುನಾಡಿನಲ್ಲಿ ನಿಷೇಧ ಹೇರಲಾಗುತ್ತದೆ. 2006ರಲ್ಲಿ ಡಾ ವಿನ್ಸಿ ಕೋಡ್ ಎಂಬ ಸಿನಿಮಾದ ವಿರುದ್ಧ ಕ್ರೈಸ್ತರು ಪ್ರತಿಭಟನೆ ನಡೆಸುತ್ತಾರೆ. ಟಾಮ್ ಹಾರಿಕ್ಸ್ ಮತ್ತು ಆಂಡ್ರಿ  ಟಾಟೂರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಈ ಸಿನಿಮಾವು ಕ್ರೈಸ್ತ ವಿರೋಧಿ ನಿಲುವನ್ನು ಹೊಂದಿದೆ ಎಂದು ಅವರು ಆರೋಪಿಸುತ್ತಾರೆ. ಈ ಕಾರಣದಿಂದಾಗಿಯೇ ಪಂಜಾಬ್, ಗೋವಾ, ನಾಗಾಲ್ಯಾಂಡ್, ಮೇಘಾಲಯ, ಮಹಾರಾಷ್ಟ್ರ, ತಮಿಳ್ನಾಡು, ಆಂಧ್ರಪ್ರದೇಶಗಳಲ್ಲಿ ಸಿನಿಮಾವನ್ನು ನಿಷೇಧಿಸಲಾಗುತ್ತದೆ. 2002ರಲ್ಲಿ ಬಿಡುಗಡೆಯಾದ ಮತ್ತು ಗುಜರಾತ್ ಹತ್ಯಾಕಾಂಡದ ಕತೆಯನ್ನೊಳಗೊಂಡ ಪರ್ಝಾನಿಯ ಚಿತ್ರವನ್ನು ಗುಜರಾತ್‍ನ ಮೋದಿ ಸರಕಾರ ನಿಷೇಧಿಸುತ್ತದೆ. ನಸೀರುದ್ದೀನ್ ಶಾ ಪ್ರಮುಖ ಪಾತ್ರದಲ್ಲಿದ್ದ ಈ ಸಿನಿಮಾದ ಮೇಲಿನ ನಿಷೇಧವನ್ನು ಬಿಜೆಪಿ ಮತ್ತು ಪರಿವಾರ ಸ್ವಾಗತಿಸುತ್ತದೆ. ಪ್ರಕಾಶ್ ಝಾ ನಿರ್ದೇಶಿಸಿದ ಮತ್ತು ಅಮಿತಾಬ್ ಬಚ್ಚನ್ ನಟಿಸಿದ್ದ ಆರಕ್ಷಣ್ ಸಿನಿಮಾವು 2011ರಲ್ಲಿ ವಿವಾದಕ್ಕೆ ಗುರಿಯಾಗುತ್ತದೆ. ಉದ್ಯೋಗ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಜಾತಿ ಆಧಾರಿತವಾಗಿ ನೀಡಲಾಗುವ ಮೀಸಲಾತಿಯನ್ನು ಸಿನಿಮಾ ವಿರೋಧಿಸುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಾರೆ. ಕೊನೆಗೆ ಉತ್ತರ ಪ್ರದೇಶ, ಆಂಧ್ರ, ಪಂಜಾಬ್‍ಗಳಲ್ಲಿ, 'ಆರಕ್ಷಣ್' ನಿಷೇಧಕ್ಕೆ ಒಳಗಾಗುತ್ತದೆ.. ಇವೆಲ್ಲ ಏನು? ಈ ಎಲ್ಲ ನಿಷೇಧಗಳಲ್ಲಿ ಮುಸ್ಲಿಮರ ಪಾತ್ರವಿತ್ತೇ? ಹೀಗಿದ್ದೂ, ವಿಶ್ವರೂಪಮ್ ಎಂಬ ಏಕೈಕ ಘಟನೆಯನ್ನು ಎತ್ತಿಕೊಂಡು; ಮುಸ್ಲಿಮರನ್ನು ಅಸಹಿಷ್ಣುಗಳಂತೆ, ವಾಕ್ ಸ್ವಾತಂತ್ರ್ಯದ ವೈರಿಗಳಂತೆ ಮಾಧ್ಯಮಗಳು ಬಿಂಬಿಸುತ್ತಿರುವುದಾದರೂ ಏತಕ್ಕೆ? ಈ ಹಿಂದೆ ಎಂದೂ ನಡೆಯದ 'ನಷ್ಟದ' ಚರ್ಚೆಗಳೆಲ್ಲ ಇವತ್ತು ನಡೆಯುತ್ತಿರುವುದೇಕೆ? ಕಮಲ್ ಹಾಸನ್‍ರಿಗೆ ಅಭಿಮಾನಿಗಳು ಚೆಕ್, ಡಿಡಿಗಳನ್ನು ಕಳುಹಿಸುತ್ತಿರುವ ಸುದ್ದಿಗೆ ಮತ್ತು ನಷ್ಟವನ್ನು ಭರಿಸುವುದಕ್ಕಾಗಿ ಕಮಲ್ ಸಿನಿಮಾದಲ್ಲಿ ಪುಕ್ಕಟೆಯಾಗಿ ನಟಿಸುವೆನೆಂದ ರಜನೀಕಾಂತ್‍ರ ಹೇಳಿಕೆಗಳಿಗೆ ಭಾರೀ ಕವರೇಜ್ ಕೊಡುವ ಮೂಲಕ ಮಾಧ್ಯಮಗಳು ಪ್ರಕರಣವನ್ನು ಭಾವನಾತ್ಮಕಗೊಳಿಸುತ್ತಿವೆಯೆಂಬುದು ಸುಳ್ಳೇ? ಅಂದಹಾಗೆ, ಕೋಟ್ಯಂತರ ರೂಪಾಯಿಗಳನ್ನು ಬಂಡವಾಳವಾಗಿ ಹೂಡಿರುವ ಸಿನಿಮಾವೊಂದು ನಿಗದಿತ ಯೋಜನೆಯಂತೆ ಬಿಡುಗಡೆಗೊಳ್ಳದಿದ್ದರೆ ನಷ್ಟಕ್ಕೆ ಒಳಗಾಗುತ್ತದೆ ಅನ್ನುವುದೇನು ಹೊಸ ಸಂಗತಿಯಲ್ಲ. ಸಿನಿಮಾ ಎಂದಲ್ಲ, ಉದ್ಯಮಕ್ಕೂ ಇದು ಅನ್ವಯಿಸುತ್ತದೆ. ಅಷ್ಟಕ್ಕೂ, ಇವತ್ತು ಇಡೀ ಸಿನಿಮಾ ಕ್ಷೇತ್ರವೇ ದೊಡ್ಡದೊಂಡು ಉದ್ಯಮವಾಗಿ ಮಾರ್ಪಟ್ಟಿಲ್ಲವೇ? ಉದ್ಯಮ ಕ್ಷೇತ್ರದಲ್ಲಿ ನಡೆಯುವ ಎಲ್ಲ ಬಗೆಯ ಲಾಭ-ನಷ್ಟದ ಲೆಕ್ಕಾಚಾರಗಳು ಈ ಕ್ಷೇತ್ರದಲ್ಲೂ ನಡೆಯುತ್ತದಲ್ಲವೇ? ಹೀಗಿರುವಾಗ ಕೆಲವೊಮ್ಮೆ ವಿವಾದಗಳ ಅಗತ್ಯವೂ ಬೀಳುತ್ತದೆ. ತೀರಾ ಕಳಪೆ ಚಿತ್ರವೊಂದು ವಿವಾದಗಳಿಂದಾಗಿಯೇ ದುಡ್ಡು ಬಾಚುವುದೂ ಇದೆ. ಹಾಗಂತ, ಕಮಲ್ ಹಾಸನ್ ಆ ವರ್ಗದ ನಟ ಅಲ್ಲದೇ ಇರಬಹುದು. ಆದರೆ, ಉದ್ಯಮ ಕ್ಷೇತ್ರದಿಂದ ಹೊರ ಬರುವ ಕಳಪೆ ವಸ್ತುಗಳಂತೆ ಸಿನಿಮಾ ಕ್ಷೇತ್ರದಿಂದಲೂ ಕಳಪೆ ಸಿನಿಮಾಗಳು ಬರುತ್ತಿರುವಾಗ, ಜನಸಾಮಾನ್ಯರಲ್ಲಿ ಅನುಮಾನಗಳು ಮೊಡಲಾರದೆಂದು ಹೇಗೆ ಹೇಳುವುದು? ಆದ್ದರಿಂದಲೇ, ವಿಶ್ವ ರೂಪಮ್ ವಿವಾದವನ್ನು ‘ಪ್ರಚಾರದ ಸ್ಟಂಟ್' ಎಂದು ಹೇಳುವ ಮಂದಿ ಸಮಾಜದಲ್ಲಿ ಧಾರಾಳ ಇರುವುದು. ಸಿನಿಮಾ ಕ್ಷೇತ್ರವು ತನ್ನ ಇಮೇಜನ್ನು ಈ ಮಟ್ಟದಲ್ಲಿ ಕೆಡಿಸಿಕೊಂಡಿರುವಾಗ ಕಮಲ್ ಹಾಸನ್‍ರು ಅದರಿಂದ ರಿಯಾಯಿತಿ ಬಯಸುವುದು ಎಷ್ಟು ಸರಿ? ಅಂದಹಾಗೆ, ಈ ದೇಶದಲ್ಲಿ ರಾಜ್ಯಗಳು ವಿಧಿಸುವ ನಿಷೇಧಕ್ಕೆ ಹೆಚ್ಚಿನ ವೇಳೆ ಸುಪ್ರೀಮ್ ಕೋರ್ಟು ಮನ್ನಣೆಯನ್ನೇ ಕೊಟ್ಟಿಲ್ಲ. ಒರೇ ಒರು ಗ್ರಾಮತ್ತಿಲ್, ಆರಕ್ಷಣ್, ಫೈರ್.. ಮುಂತಾದ ಎಲ್ಲ ಸಿನಿಮಾಗಳೂ ನಿಷೇಧವನ್ನು ಕಳಚಿಕೊಂಡು ಆ ಬಳಿಕ ಸಿನಿಮಾ ಮಂದಿರಗಳಲ್ಲಿ ಪ್ರದರ್ಶನಗೊಂಡಿವೆ. ವಿಶ್ವರೂಪಮ್‍ನ ವಿಷಯದಲ್ಲೂ ಹೀಗಾಗಬಹುದು. ಇದು ಕಮಲ್ ಹಾಸನ್‍ರಿಗೂ ಗೊತ್ತು,  ಅವರನ್ನು ಭಾವನಾತ್ಮಕವಾಗಿ ಕಟ್ಟಿಕೊಡುವ ಮಾಧ್ಯಮಗಳಿಗೂ ಗೊತ್ತು. ಒಂದು ರೀತಿಯಲ್ಲಿ ಈ ವಿವಾದದ ಮೂಲಕ ಮುಸ್ಲಿಮರನ್ನು ಅಸಹಿಷ್ಣುಗಳಂತೆ, ಭಯೋತ್ಪಾದಕರ ಬೆಂಬಲಿಗರಂತೆ ಚಿತ್ರಿಸಲು ನೆಪ ಹುಡುಕುತ್ತಿರುವವರಿಗೆ ಲಾಭವಾಗಿದೆ ಎಂದಷ್ಟೇ ಹೇಳಬಹುದೇನೋ.
   ಭಯೋತ್ಪಾದನೆಯ ವಿಷಯದಲ್ಲಿ ಇವತ್ತು ಜಾಗತಿಕವಾಗಿಯೇ ಅತ್ಯಂತ ಹೆಚ್ಚು ದೌರ್ಜನ್ಯಕ್ಕೆ ಒಳಗಾಗಿರುವುದು ಮುಸ್ಲಿಮರೇ. ಭಾರತೀಯ ಮುಸ್ಲಿಮರಂತೂ ಇಸ್ಲಾಮೋಫೋಬಿಯದಿಂದಾಗಿ ಹಲವು ಬಗೆಯ ನಿಂದನೆ, ಅನುಮಾನಗಳಿಗೆ ನಿತ್ಯ ಗುರಿಯಾಗುತ್ತಿದ್ದಾರೆ. ಎಲ್ಲೇ ಬಾಂಬ್ ಸ್ಫೋಟಗೊಂಡರೂ, 'ಅದನ್ನು ನಾವು ಖಂಡಿಸುತ್ತೇವೆ..' ಎಂಬ ಹೇಳಿಕೆಯನ್ನು ಭಾರತೀಯ ಮುಸ್ಲಿಮ್ ನಾಯಕರು ತಕ್ಷಣ ಹೊರಡಿಸುವ ಒತ್ತಡಕ್ಕೆ ಗುರಿಯಾಗಿದ್ದಾರೆ. ಖಂಡನೆ ವ್ಯಕ್ತಪಡಿಸುವುದಕ್ಕೆ ಒಂದು ದಿನ ತಡವಾದರೂ ಅದನ್ನು ಎತ್ತಿಕೊಂಡು, ಮುಸ್ಲಿಮರನ್ನು ಭಯೋತ್ಪಾದಕರ ಬೆಂಬಲಿಗರಂತೆ ಬಿಂಬಿಸುವ ಹೇಳಿಕೆಗಳು ಮಾಧ್ಯಮಗಳಲ್ಲಿ ತುಂಬಿಕೊಳ್ಳುತ್ತವೆ. ಮಾಲೆಗಾಂವ್, ಮಕ್ಕಾ ಮಸೀದಿ, ಸಮ್‍ಜೋತಾ ಎಕ್ಸ್ ಪ್ರೆಸ್.. ಸಹಿತ ಮಾಡದ ಹತ್ತಾರು ಭಯೋತ್ಪಾದನಾ ಸ್ಫೋಟಗಳ ಆರೋಪಗಳನ್ನು ಹೊತ್ತುಕೊಂಡು ಹಲವಾರು ವರ್ಷಗಳನ್ನು ಜೈಲಲ್ಲಿ ಕಳೆದಿರುವುದೂ ಮುಸ್ಲಿಮ್ ಯುವಕರೇ. ಈ ಎಲ್ಲ ಸಂದರ್ಭಗಳಲ್ಲಿ ಮುಸ್ಲಿಮ್ ಸಮುದಾಯದ ಮನಸ್ಥಿತಿ ಹೇಗಿತ್ತೆಂದರೆ, ತಪ್ಪು ಮಾಡಿ ಸಿಕ್ಕಿ ಬಿದ್ದ ಅಪರಾಧಿಯಂತೆ. ಯಾಕೆಂದರೆ, ಪ್ರತಿ ಸಂದರ್ಭದಲ್ಲೂ ಇಲ್ಲಿನ ಮಾಧ್ಯಮಗಳು ಮುಸ್ಲಿಮರನ್ನೇ ಬೊಟ್ಟು ಮಾಡುತ್ತಿದ್ದುವು. ಕುರ್ತಾ, ಪೈಜಾಮ ಧರಿಸಿ; ದಾಡಿ, ಕೂದಲು ಬಿಟ್ಟು; ಮುಂಡಾಸು ಕಟ್ಟಿ, ಹೆಗಲಿಗೊಂದು ಬಂದೂಕು ನೇತಾಡಿಸಿದ ಅಫಘಾನ್ ವ್ಯಕ್ತಿಯ ಚಿತ್ರವನ್ನು ತೋರಿಸಿ, ಇವನಿಗೂ ಭಾರತೀಯ ಮುಸ್ಲಿಮರಿಗೂ ವ್ಯತ್ಯಾಸವಿಲ್ಲ ಎಂಬ ಧಾಟಿಯಲ್ಲಿ ಮಾಧ್ಯಮಗಳು ಮಾತಾಡುತ್ತಿದ್ದುವು. ಅಫಘಾನಿನಲ್ಲೋ ಚೆಚನ್ಯಾ, ಇರಾಕ್‍ನಲ್ಲೋ ನಡೆದ ಘಟನೆಯನ್ನು ಎತ್ತಿಕೊಂಡು 'ಭಾರತೀಯ ಮುಸ್ಲಿಮರೇ ಏನಂತೀರಿ'.. ಎಂದು ಪ್ರಶ್ನಿಸುತ್ತಿದ್ದುವು. ಈ ಮಧ್ಯೆ ಹೇಮಂತ್ ಕರ್ಕರೆಯವರ ತಂಡ ಹಿಂದೂ ಹೆಸರಿನ ಭಯೋತ್ಪಾದಕತೆಯನ್ನು ಬಯಲಿಗೆಳೆದರೂ, ಮುಸ್ಲಿಮರನ್ನು ಅಪಮಾನಿಸುವ, ಸುಳ್ಳು ಆರೋಪವನ್ನು ಹೊರಿಸಿ ಜೈಲಿಗಟ್ಟುವ ಘಟನೆಗಳಿಗೇನೂ ತೆರೆ ಬೀಳಲಿಲ್ಲ. ಶಬಾನಾ ಆಜ್ಮಿ, ಸೈಫ್ ಆಲಿ ಖಾನ್‍ರಂಥ ಸುಪರಿಚಿತ ವ್ಯಕ್ತಿಗಳಿಗೇ ಮುಂಬೈಯಲ್ಲಿ ಬಾಡಿಗೆಗೆ ಮನೆ ಸಿಗುತ್ತಿಲ್ಲವೆಂದ ಮೇಲೆ ಜನಸಾಮಾನ್ಯರ ಬಗ್ಗೆ ಹೇಳುವುದಾದರೂ ಏನನ್ನು? ಅಧಿಕಾರಿಗಳು ತಪಾಸಣೆಯ ಹೆಸರಲ್ಲಿ ಬಟ್ಟೆಯನ್ನೆಲ್ಲಾ ಕಳಚಿದರೂ ಮಾತಾಡದಷ್ಟು ಮುಸ್ಲಿಮ್ ಸಮುದಾಯವನ್ನು ಅಪರಾಧಿ ಮನಸ್ಥಿತಿಗೆ ದೂಡಲಾಗಿತ್ತು. ಈ ಮಧ್ಯೆ ಮದ್ರಸಾಗಳ ಬಗ್ಗೆ ತೀವ್ರ ಅಪಪ್ರಚಾರಗಳು ನಡೆದುವು. ಮದ್ರಸಕ್ಕೆ ತೆರಳುವ ಮಕ್ಕಳ ಬ್ಯಾಗಿನಲ್ಲಿ ಆರ್‍ಡಿಎಕ್ಸ್ ಇದೆಯೋ ಎಂದು ಹುಡುಕುವ ಪ್ರಯತ್ನಕ್ಕೆ ಹಲವು ಪತ್ರಕರ್ತರು ಭಾರೀ ಉತ್ಸಾಹ ತೋರಿದರು. ಭಯೋತ್ಪಾದನೆಯ ಕುರಿತಂತೆ ಟಿ.ವಿ. ಚಾನೆಲ್‍ಗಳು ಕ್ರೈಮ್ ನ್ಯೂಸ್ ಪ್ರಸಾರ ಮಾಡುವಾಗ, ಅಲ್ಲಾಹು ಅಕ್ಬರ್.. ಎಂಬ ಆದಾನ್ ಕರೆಯನ್ನು ಹಿಮ್ಮೇಳದಲ್ಲಿ ನುಡಿಸುವಷ್ಟು ಮುಂದುವರಿದಿದ್ದುವು. ಈಗಲೂ ಪರಿಸ್ಥಿತಿ ಭಾರೀ ಭಿನ್ನವಾಗೇನೂ ಇಲ್ಲ. ಮುಸ್ಲಿಮ್ ಸಮುದಾಯದ ಸಾಕಷ್ಟು ಯುವಕರು ಭಯೋತ್ಪಾದನೆಯ ಆರೋಪ ಹೊತ್ತುಕೊಂಡು ಜೈಲಲ್ಲಿದ್ದಾರೆ.. ಆದ್ದರಿಂದಲೇ, ಇಂಥ ಸ್ಥಿತಿಯಲ್ಲಿ, ಮುಸ್ಲಿಮರು ಭಯೋತ್ಪಾದನೆಯಲ್ಲಿ ತೊಡಗಿರುವ ಕಥಾವಸ್ತುವನ್ನು ಇಟ್ಟುಕೊಂಡು ಕಮಲ್ ಹಾಸನ್ ಸಿನಿಮಾ ಮಾಡಬಾರದಿತ್ತು. ‘ಅಫಘನ್ನಿನ ಅಲ್‍ಕಾಯ್ದಾದ ಭಯೋತ್ಪಾದಕ ಉಮರ್‍ನು ತನ್ನ ಜೊತೆಗಾರ ಸಲೀಮ್ ಮತ್ತು ಅಂತಾರಾಷ್ಟ್ರೀಯ ಭಯೋತ್ಪಾದಕ ನೆಟ್‍ವರ್ಕ್ ನೊಂದಿಗೆ ಸೇರಿಕೊಂಡು ಅಮೇರಿಕದ ನ್ಯೂಯಾರ್ಕ್ ನಗರದ ಮೇಲೆ ಸೀಝಿಯಮ್ ಬಾಂಬು ದಾಳಿ ನಡೆಸಲು ಹಾಕುವ ಯೋಜನೆ ಮತ್ತು ಭಾರತದ ಗುಪ್ತಚರ ಸಂಸ್ಥೆಯ (ROW) ಏಜೆಂಟಾಗಿ ಅಮೇರಿಕಕ್ಕೆ ಹೋಗುವ ಕಮಲ್ ಹಾಸನ್ ಅದನ್ನು ಪತ್ತೆ ಹಚ್ಚುವ..’ ಕತೆಯುಳ್ಳ ವಿಶ್ವರೂಪಮ್ ಸಿನಿಮಾದಲ್ಲಿ ಬರೇ ಅಫಘಾನ್, ಅಮೇರಿಕಗಳಷ್ಟೇ ಇರುವುದಲ್ಲ. ಅದರಲ್ಲಿ ಭಾರತದ ಮಧುರೈ, ಕೊಯಂಬತ್ತೂರುಗಳೂ ಪ್ರಸ್ತಾಪವಾಗುತ್ತವೆ. ಉರ್ದು ಭಾಷೆಯ ಬಳಕೆಯಾಗುತ್ತದೆ. ಆದ್ದರಿಂದಲೇ ವಿಶ್ವ ರೂಪಮ್ ಸಿನಿಮಾದ ಬಗ್ಗೆ ಆತಂಕ ಮೂಡುವುದು. ವಿಶ್ವದಾದ್ಯಂತದ ಭಯೋತ್ಪಾದನೆಗೆ ಮುಸ್ಲಿಮರೇ ಕಾರಣ ಅನ್ನುವ ಸಂದೇಶವೊಂದು ವಿಶ್ವರೂಪಮ್‍ನ ಮೂಲಕ ಬಿತ್ತರಗೊಳ್ಳುವುದನ್ನು ಹೇಗೆ ಪ್ರೀತಿಯಿಂದ ಸ್ವಾಗತಿಸುವುದು? ‘..ತಾಲಿಬಾನ್‍ಗಳನ್ನು ಭಯೋತ್ಪಾದಕರೆಂದು ಕರೆದರೆ ಭಾರತೀಯ ಮುಸ್ಲಿಮರಿಗೇನು ತೊಂದರೆ..’ ಎಂಬ ಅರ್ಧಸತ್ಯವನ್ನು ಹೇಳುತ್ತಾ ಕೆಲವರು ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಪ್ರತ್ಯಕ್ಷಗೊಳ್ಳುತ್ತಿರುವುದಕ್ಕೆ ವಿಶ್ವರೂಪಮ್ ನೆಪವಾಗುತ್ತಿಲ್ಲವೇ? ಕುರ್ತಾ-ಪೈಜಾಮ ತೊಟ್ಟ, ಗಡ್ಡ ಬಿಟ್ಟ, ಟೊಪ್ಪಿ ಧರಿಸಿದ ಮುಸ್ಲಿಮ್ ಗುಂಪುಗಳನ್ನು ತೋರಿಸಿ, ಭಯೋತ್ಪಾದನೆಯ ಕತೆ ಹೇಳುವ ಅವಕಾಶವನ್ನು ಟಿ.ವಿ. ಚಾನೆಲ್‍ಗಳಿಗೆ ಮತ್ತೆ ಒದಗಿಸಿಕೊಟ್ಟದ್ದು ವಿಶ್ವರೂಪಮ್ ಅಲ್ಲವೇ? ಮುಸ್ಲಿಮ್ ವಿರೋಧವನ್ನೇ ತಮ್ಮ ಅಜೆಂಡಾವಾಗಿ ಒಪ್ಪಿಕೊಂಡಿರುವ ರಾಜಕೀಯ ಪಕ್ಷಗಳು ವಿಶ್ವ ರೂಪಮ್ ವಿವಾದದಿಂದ ಲಾಭ ಎತ್ತಲಾರವೇ..
  ಇಷ್ಟಿದ್ದೂ, ಬುದ್ಧಿವಂತ, ಜಾತ್ಯತೀತ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಕಮಲ್ ಹಾಸನ್‍ರೇ.. ನೀವು ಹೀಗೇಕೆ ಮಾಡಿದಿರಿ?

Tuesday, January 15, 2013

ಪ್ರವಾದಿ ಪ್ರೇಮಿಗಳೇ, ಕರಗುವ ಕಂದಮ್ಮಗಳ ದಾವೆಗೆ ಏನುತ್ತರ ಕೊಡುತ್ತೀರಿ?

  ಆಕೆಯ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಹೇಳುವುದೋ ಬೇಡವೋ ಎಂಬ ಅನುಮಾನ. ಹೇಳಿಬಿಟ್ಟರೆ ಎಲ್ಲಿ ತನ್ನನ್ನು ತರಾಟೆಗೆತ್ತಿ ಕೊಳ್ಳುತ್ತಾರೋ ಎಂಬ ಭೀತಿ. ಕೊನೆಗೆ ಆಕೆ ಹೇಳಿಯೇ ಬಿಟ್ಟಳು-
  ‘ಈ ವರೆಗೂ ನಾನು ನಿಮ್ಮಿಂದ ಮುಚ್ಚಿಟ್ಟಿದ್ದೆ. ನನ್ನನ್ನು ಕ್ಷಮಿಸಿ. ನಿಜವಾಗಿ, ನಿನ್ನೆಯೇ ನಾನು ಗರ್ಭ ಕರಗಿಸುವ ಮದ್ದು ಸೇವಿಸಿದ್ದೇನೆ..’
  ದುರ್ಬಲ ಗುಡಿಸಲು
ತಂದೆ(ಮಲ), ತಾಯಿ, ತಮ್ಮ(ಮಲ) ಮತ್ತು ಆಕೆ ಆ ದುರ್ಬಲ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ತಂದೆ ಬಹುತೇಕ ಕಿವುಡರಾಗಿದ್ದು, ದುಡಿಯುವ ಸಾಮರ್ಥ್ಯ ಅಷ್ಟಕ್ಕಷ್ಟೇ. ತಾಯಿ ಅವರಿವರ ಮನೆಯಲ್ಲಿ ಮನೆಗೆಲಸ ಮಾಡುತ್ತಾರೆ. ತಮ್ಮ ದುಡಿಯುವ ಪ್ರಾಯಕ್ಕೆ ಇನ್ನೂ ತಲುಪಿಲ್ಲ. 6ರ ಒಳಗಿನ ಇಬ್ಬರು ಮಕ್ಕಳನ್ನು ಜೊತೆಯಲ್ಲಿಟ್ಟುಕೊಂಡು ಅತ್ತ  ಶೌಚಾಲಯವೂ ಇಲ್ಲದ, ಗಾಳಿ ಜೋರಾಗಿ ಬೀಸಿದರೆ ಹಾರಿ ಹೋಗುವಂತಿರುವ ಗುಡಿಸಲಿನಲ್ಲಿ ಆಕೆ ಬೀಡಿ ಕಟ್ಟುತ್ತಾ ಬದುಕುತ್ತಿದ್ದಾಳೆ. ತನ್ನ ಇಬ್ಬರು ಪುಟ್ಟ ಮಕ್ಕಳ ಮೇಲೆ ಅಪಾರ ಭರವಸೆ ಆಕೆಗೆ. ಇಷ್ಟಕ್ಕೂ, ಅವರ ಮೇಲಲ್ಲದೇ ಆಕೆ ಭರವಸೆ ಇಟ್ಟುಕೊಳ್ಳುವುದಾದರೂ ಬೇರೆ ಯಾರ ಮೇಲೆ? ತಂದೆ ತೀರಿ ಹೋಗಿರುವ, ಮಲ ತಂದೆ ಮತ್ತು ಅವರ ಕಿರಿಪ್ರಾಯದ ಮಗನ ಆಶ್ರಯದಲ್ಲಿರುವ ಓರ್ವ ಹೆಣ್ಣು ಮಗಳಿಗೆ ಸಾಮಾಜಿಕವಾಗಿ ಇರುವ ಭದ್ರತೆಯಾದರೂ ಏನು? ಯಾವ ಸಮಯದಲ್ಲೂ ಮನೆಯಿಂದ ಹೊರದಬ್ಬಿಸಿಕೊಳ್ಳ ಬಹುದಾದ ಭೀತಿಯಲ್ಲಿ ಸದಾ ಬದುಕುತ್ತಿರುವ ಇಂಥ ಹೆಣ್ಣು ಮಕ್ಕಳು ನಮ್ಮ ಸಮಾಜದಲ್ಲಿ ಎಷ್ಟಿಲ್ಲ ಹೇಳಿ? ವಿಶೇಷ ಏನೆಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಈ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಟ್ಟಿರುವುದು ದೂರದ ಘಟ್ಟ ಪ್ರದೇಶದ ಹಾಸನಕ್ಕೆ. ಇದೊಂದೇ ಅಲ್ಲ, ಈ ಜಿಲ್ಲೆಯಿಂದ ಹಲವಾರು ಹೆಣ್ಣು ಮಕ್ಕಳನ್ನು ಗುಜರಾತ್‍ಗೂ ಮದುವೆ ಮಾಡಿ ಕೊಡಲಾಗಿದೆ. ಹಾಗಂತ, ಈ ಹೆಣ್ಣು ಮಕ್ಕಳ ಮೇಲೆ ಹೆತ್ತವರಿಗೆ ದ್ವೇಷವಿತ್ತು ಎಂದಲ್ಲ. ಊರಿನಲ್ಲಿ, ಕೈಗೆಟಕುವ ದರದಲ್ಲಿ ಯುವಕರು ಸಿಗದೇ ಇರುವಾಗ ಬಡ ಹೆತ್ತವರ ಮುಂದೆ ಬೇರೆ ಆಯ್ಕೆಗಳಾದರೂ ಯಾವುದಿರುತ್ತದೆ? ಅಲ್ಲದೇ, ಯುವಕರೆಲ್ಲಾ ಹೀಗೆ ದರ ನಿಗದಿಪಡಿಸಿಕೊಂಡು ಓಡಾಡುತ್ತಿರುವಾಗ ಬಡ ಹೆತ್ತವರಿಗೆ ದರದ ಹೊರತು ಗುಣನಡತೆಯನ್ನು ಆಯ್ಕೆಯ ಮಾನದಂಡವನ್ನಾಗಿ ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲವಲ್ಲವೇ? ನಿಜವಾಗಿ, ಯಾವ ಹೆತ್ತವರಿಗೂ ತಮ್ಮ ಮಗಳನ್ನು ದೂರದೂರಿಗೆ ಕಳುಹಿಸಿಕೊಡಲು ಇಷ್ಟವಿರುವುದಿಲ್ಲ. ಯಾಕೆಂದರೆ, ಹೆಣ್ಣು ಮಕ್ಕಳು, ಗಂಡು ಮಕ್ಕಳಂತೆ ಅಲ್ಲವಲ್ಲ. ಅವರು ಮನೆಯ ಎಲ್ಲವೂ ಆಗಿರುತ್ತಾರೆ. ಗಂಡು ಮಕ್ಕಳು ಬೆಳೆದಂತೆ ಮನೆಯೊಂದಿಗಿನ ಸಂಪರ್ಕವನ್ನು ಕಡಿಮೆಗೊಳಿಸುತ್ತಾ ಹೋದರೆ ಹೆಣ್ಣು ಮಕ್ಕಳು ಬೆಳೆದಂತೆ ಇಡೀ ಮನೆಯನ್ನೇ ಆವರಿಸುತ್ತಾ ಹೋಗುತ್ತಾರೆ. ಬೆಳಗ್ಗೆ ಮನೆಯಿಂದ ಅಣ್ಣನೋ ತಂದೆಯೋ ಕೆಲಸದ ನಿಮಿತ್ತ ಹೊರಗೆ ಹೋಗುವಾಗ ಅವರನ್ನು ಬಾಗಿಲ ವರೆಗೆ ಬೀಳ್ಕೊಡುವುದು ಹೆಣ್ಣು ಮಕ್ಕಳೇ. ಮನೆಯಲ್ಲಿ ಒಬ್ಬಳು ತಂಗಿಯಿದ್ದರೆ ಅಣ್ಣನಿಗೆ ಬೇರೆ ಪರ್ಸನಲ್ ಸೆಕ್ರೆಟರಿಯ ಅಗತ್ಯವೇ ಇರುವುದಿಲ್ಲ. ಬೆಳಗ್ಗೆ ಬ್ರಶ್ ಮಾಡಿ ಬರುವ ಅಣ್ಣನ ಮುಂದೆ ನೀಟಾಗಿ ಇಸ್ತ್ರಿ ಹಾಕಿದ ಬಟ್ಟೆ ಇರುತ್ತದೆ. ಶೂವಿಗೆ ಪಾಲಿಶ್ ಹಾಕಿರುತ್ತದೆ. ಅಣ್ಣನ ಪೆನ್ನು, ದುಡ್ಡು, ಕರ್ಚೀಪು.. ಎಲ್ಲವನ್ನೂ ತಂಗಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿರುತ್ತಾಳೆ. ಟೇಬಲ್ಲಿನ ಮುಂದೆ ಬಂದು ಕೂತರೆ ಆರ್ಡರ್ ಮಾಡುವುದಕ್ಕಿಂತ ಮೊದಲೇ ಆಕೆ ಆಹಾರವನ್ನು ತಂದಿಡುತ್ತಾಳೆ. ಡ್ರೆಸ್ ಸೆನ್ಸ್ ಇಲ್ಲದ ಅಣ್ಣನನ್ನು ತರಾಟೆಗೆತ್ತಿಕೊಂಡು, ‘ಇಂಥ ಪ್ಯಾಂಟ್‍ಗೆ ಇಂಥ ಷರಟು ಹಾಕು.. ಅಂಥ ಬಲವಂತಪಡಿಸುವುದು ಅವಳೇ. ಅಣ್ಣನಿಗೆ ಜ್ವರ ಬಂದರೆ, ತಂದೆಯ ಆರೋಗ್ಯದಲ್ಲಿ ಏರು-ಪೇರಾದರೆ ವೈದ್ಯರಂತೆ ಶುಶ್ರೂಷೆ ನಡೆಸುವುದು ಹೆಣ್ಣು ಮಕ್ಕಳೇ. ಬೆಳಗ್ಗೆ ಹೊರಟು ನಿಂತ ಅಪ್ಪನಿಗೆ ಅದು ತಗೊಂಡ್ರಾ, ಇದು ಅಗತ್ಯವಿದೆಯಾ, ಏನಾದ್ರೂ ಮರೆತು ಬಿಟ್ರಾ.. ಎಂದೆಲ್ಲಾ ನೆನಪಿಸಿಕೊಡುವ ಹೊಣೆಗಾರಿಕೆಯನ್ನು ಮಗಳೇ ವಹಿಸಿಕೊಂಡಿರುತ್ತಾಳೆ. ಅಪ್ಪನ ಮೊಬೈಲು, ಕನ್ನಡಕ, ವಾಚು, ಪರ್ಸು.. ಎಲ್ಲವನ್ನೂ ಒಂದೇ ಕಡೆ ಜೋಡಿಸಿಟ್ಟು, ಪ್ರತಿದಿನ ಸೇವಿಸುವ ಔಷಧಿಯನ್ನು ಸಮಯಕ್ಕೆ ಸರಿಯಾಗಿ ಕೊಡುವ ಜವಾಬ್ದಾರಿಯೂ ಮಗಳದ್ದೇ. ಒಂದು ರೀತಿಯಲ್ಲಿ, ಬೆಳಗ್ಗಿನಿಂದ ಹಿಡಿದು ರಾತ್ರಿಯ ವರೆಗೆ ಹೆಣ್ಣು ಮಕ್ಕಳು ಮನೆಯ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರಿರುತ್ತಾರೆ. ಅವರಿಲ್ಲದ ಊಟವಿಲ್ಲ, ಮಾತುಕತೆಯಿಲ್ಲ, ತಮಾಷೆಯಿಲ್ಲ, ಆಟವಿಲ್ಲ, ಕಾರ್ಯಕ್ರಮವಿಲ್ಲ.. ಅಣ್ಣ, ತಮ್ಮ, ಅಪ್ಪ, ಅಮ್ಮ.. ಎಲ್ಲರಿಗೂ ‘ಮಗಳು’ ಬೇಕೇ ಬೇಕು ಅಥವಾ ಇವರೆಲ್ಲರ ಬದುಕು ‘ಮಗಳನ್ನು' ಅವಲಂಬಿಸಿಕೊಂಡೇ ಇರುತ್ತದೆ. ಹೀಗಿರುತ್ತಾ ಯಾವ ಹೆತ್ತವರು ತಾನೇ ತಮ್ಮ ಹೆಣ್ಣು ಮಕ್ಕಳನ್ನು ದೂರದೂರಿಗೆ ಕೊಡಲು ಇಚ್ಛಿಸುತ್ತಾರೆ? ಆರಂಭದಲ್ಲಿ ಉಲ್ಲೇಖಿಸಲಾದ ಹೆಣ್ಣು ಮಗಳ ಹೆತ್ತವರ ಎದುರೂ ಈ ಸವಾಲಿತ್ತು. ಹಾಗಂತ, ಬೆಳೆದ ಹೆಣ್ಣು ಮಗಳನ್ನು ಮನೆಯಲ್ಲಿಟ್ಟುಕೊಳ್ಳಲು ಆಗುವುದಿಲ್ಲವಲ್ಲವೇ? ಊರಿನ ಯುವಕರಂತೂ ಸಿಕ್ಕಾಪಟ್ಟೆ ತುಟ್ಟಿ. ಆದ್ದರಿಂದಲೇ ಕಡಿಮೆ ಬೆಲೆಗೆ ಸಿಕ್ಕ ಹಾಸನದ ಯುವಕನಿಗೆ ಆಕೆಯನ್ನು ಮದುವೆ ಮಾಡಿಸಿಕೊಟ್ಟರು. ಆದರೆ ಆತನ ಬೆಲೆ ಮಾತ್ರ ಕಡಿಮೆ ಅಲ್ಲ, ಆತನ ಸ್ವಭಾವದಲ್ಲೂ ಕೊರತೆಯಿದೆ ಅನ್ನುವುದು ಆ ಬಳಿಕ ಅವರಿಗೆ ಗೊತ್ತಾಯಿತು. ಆತ ಕುಡುಕನಾಗಿದ್ದ. ಹೇಗೂ ಎರಡು ಮಕ್ಕಳಾಗುವ ವರೆಗೆ ಸಹಿಸಿದ ಆಕೆ ಕೊನೆಗೆ, ತಿರುಗಿ ತಾಯಿ ಮನೆಗೆ ಬಂದಳು. ಆ ಬಳಿಕ ಆತ ಯಾವಾಗಲಾದರೊಮ್ಮೆ ಆಕೆಯ ಬಳಿಗೆ ಬರುತ್ತಿದ್ದ..
  ಮಂಗಳೂರು ಜಮಾಅತೆ ಇಸ್ಲಾಮೀ  ಹಿಂದ್‍ನ ಸಮಾಜ ಸೇವಾ ಘಟಕದ ಸದಸ್ಯರಾದ ನನ್ನ ಮಿತ್ರರು ಆಕೆಯ ಮನೆಗೆ ತೆರಳಿ ನೋವು, ಸಂಕಟಗಳನ್ನು ಆಲಿಸಿದರು. ಶೌಚಾಲಯ ಕಟ್ಟಿಸಿ ಕೊಡುವ ಭರವಸೆ ನೀಡಿದರು. ಈ ನಡುವೆ, ಆಕೆ 3ನೇ ಮಗುವಿನ ಗರ್ಭ ಹೊತ್ತಿರುವ ಸಂಗತಿ ಸೂಚ್ಯವಾಗಿ ಪ್ರಸ್ತಾಪವಾಯಿತು. ಮಾತ್ರವಲ್ಲ, ಇಬ್ಬರು ಮಕ್ಕಳನ್ನೇ ಸಾಕಲು ಅಸಾಧ್ಯವಾಗಿರುವಾಗ ಮೂರನೆಯದೊಂದನ್ನು ಸಾಕುವುದಾದರೂ ಹೇಗೆ ಅನ್ನುವ ಧಾಟಿಯ ಮಾತುಗಳೂ ತೇಲಿ ಬಂದುವು. ಆಗ ಘಟಕದ ಸದಸ್ಯರು ಆ ಹೆಣ್ಣು ಮಗಳನ್ನು ಸಾಂತ್ವನಿಸಿದರು. ಔಷಧ ಮತ್ತು ಆಹಾರದ ವ್ಯವಸ್ಥೆ ಮಾಡುವುದಾಗಿಯೂ ಒಂದು ವೇಳೆ ಮಗು ಬೇಡವೆಂದಾದರೆ, ಮಕ್ಕಳು ಇಲ್ಲದವರಿಗೆ ಮಗುವನ್ನು ಕೊಡುವ ವ್ಯವಸ್ಥೆ ಮಾಡುತ್ತೇವೆಂದೂ ಅವರು ಭರವಸೆ ನೀಡಿದರು. ಆಗ, ಆಕೆಗೆ ತನ್ನೊಳಗಿನ ಸಂಕಟವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಣ್ಣು ತುಂಬಿ ಬಂತು. ಆಗಲೇ ಆಕೆ ಸತ್ಯ ಹೇಳಿದ್ದು,
  ‘ನಿನ್ನೆಯೇ ಔಷಧಿ ಸೇವಿಸಿದ್ದೇನೆ..'
ಇಷ್ಟಕ್ಕೂ, ಈ ಒಂಟಿ ಘಟನೆಯನ್ನು ಎತ್ತಿಕೊಂಡು ಇಡೀ ಮುಸ್ಲಿಮ್ ಸಮುದಾಯವೇ ಹೀಗೆ ಎಂದು ಖಂಡಿತ ಹೇಳುತ್ತಿಲ್ಲ. ಒಂಟಿ ಘಟನೆಯನ್ನು ಸಾರ್ವತ್ರೀಕರಣಗೊಳಿಸಬೇಕಾದ (ಜನರಲೈಸ್) ಅಗತ್ಯವೂ ಇಲ್ಲ. ಹಾಗಂತ, ಇಂಥದ್ದು ಮುಸ್ಲಿಮ್ ಸಮುದಾಯದಲ್ಲಿ ಬೇರೆ ಇರಲು ಸಾಧ್ಯವೇ ಇಲ್ಲ ಎಂದೂ ಯಾರಾದರೂ ಹೇಳುತ್ತಾರಾ? ಇದು ಬಿಡಿ, ಇದಕ್ಕಿಂತಲೂ ಕ್ರೂರ ಸಂಗತಿಗಳು ಮುಸ್ಲಿಮ್ ಸಮುದಾಯದಲ್ಲಿವೆ ಅನ್ನುವುದನ್ನು ತಿರಸ್ಕರಿಸಲು ಸಾಧ್ಯವೇ? ಅಂದಹಾಗೆ, ಬಡತನದ ಕಾರಣದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ, ಅವರಿಗೂ ನಿಮಗೂ ಅಲ್ಲಾಹನೇ ಆಹಾರ ಕೊಡುತ್ತಾನೆ (17:31) ಎಂಬ ಪವಿತ್ರ ಕುರ್‍ಆನಿನ ವಚನವನ್ನು ಈ ಸಮುದಾಯ ಎಷ್ಟು ಬಾರಿ ಕೇಳಿಲ್ಲ? ಭಾಷಣ, ಬರಹಗಳ ಮೂಲಕ ಇಂಥ ವಚನಗಳು ಸಮುದಾಯದ ಬಳಿಗೆ ಎಷ್ಟು ಬಾರಿ ತಲುಪಿಲ್ಲ? ಹೀಗಿದ್ದೂ ಸಮುದಾಯದ ಮೇಲೆ ಪರಿಣಾಮ ಬೀರುವಲ್ಲಿ ಇವೆಲ್ಲ ಯಾಕೆ ವಿಫಲವಾಗುತ್ತಿವೆ? ನಿಜವಾಗಿ, ಸಮುದಾಯದಲ್ಲಿ ಮಸೀದಿಗಳ ಕೊರತೆಯಿಲ್ಲ. ಸಂಘಟನೆಗಳಿಗೂ ಕೊರತೆಯಿಲ್ಲ. ವಿದ್ವಾಂಸರೂ ಧಾರಾಳ ಇದ್ದಾರೆ. ಆದರೂ ಸಮುದಾಯದಲ್ಲಿ ತಳಮಟ್ಟದ ಸಮಸ್ಯೆಗಳೇಕೆ ಬಗೆಹರಿಯುತ್ತಿಲ್ಲ?
  ವರದಕ್ಷಿಣೆ
  ಬಡತನ
  ನಿರುದ್ಯೋಗ
  ಕಂದಾಚಾರಗಳು
  ಕೊಲೆ, ದರೋಡೆ
  ಕೆಡುಕುಗಳು..
..ಪಟ್ಟಿ ಇನ್ನೂ ಉದ್ದ ಇದೆ. ಅಲ್ಲದೇ, ಹೆಚ್ಚುವರಿಯಾಗಿ ಭಯೋತ್ಪಾದನೆಯ ಆರೋಪಕ್ಕೂ ಈ ಸಮುದಾಯ ಗುರಿಯಾಗಿ ಬಿಟ್ಟಿದೆ. ಫರ್ಲಾಂಗು ಫರ್ಲಾಂಗಿಗೂ ಮಸೀದಿ ಇರುವ ಮತ್ತು ಯಾವುದಾದರೊಂದು ಮಸೀದಿಯೊಂದಿಗೆ ಗುರುತಿಸಿಕೊಂಡು ಸಂಘಟಿತವಾಗಿರುವ ಮುಸ್ಲಿಮ್ ಸಮುದಾಯಕ್ಕೆ ತನ್ನ ಕೊರತೆಗಳನ್ನು ನಿವಾರಿಸಿಕೊಳ್ಳುವುದಕ್ಕೇಕೆ ಸಾಧ್ಯವಾಗುತ್ತಿಲ್ಲ? ಹಾಗೆ ನೋಡಿದರೆ, ಇಡೀ ಜಗತ್ತಿನಲ್ಲಿಯೇ ಅತ್ಯಂತ ಸಂಘಟಿತವಾಗಿರುವುದು ಮುಸ್ಲಿಮ್ ಸಮುದಾಯವೇ. ಮುಸ್ಲಿಮರು ವಾರಕ್ಕೊಮ್ಮೆಯಾದರೂ ಕಡ್ಡಾಯವಾಗಿ ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ಅಲ್ಲಿ ವಿದ್ವಾಂಸರಿಂದ ಧಾರ್ಮಿಕ ಹಿತವಚನಗಳನ್ನು ಆಲಿಸುತ್ತಾರೆ. ಮಸೀದಿಗೆ ತಿಂಗಳು ತಿಂಗಳು ವಂತಿಗೆ ಕೊಡುತ್ತಾರೆ. ಅಲ್ಲದೇ, ಒಂದು ಮಸೀದಿಯ ವ್ಯಾಪ್ತಿಯಲ್ಲಿ ಬರುವವರ ಹೆಸರು, ಮನೆಯ ಸದಸ್ಯರ ಸಂಖ್ಯೆ, ಗಂಡು-ಹೆಣ್ಣಿನ ವಿವರ.. ಎಲ್ಲವೂ ಆಯಾ ಮಸೀದಿಯಲ್ಲಿ ಬಹುತೇಕ ನಮೂದಾಗಿರುತ್ತವೆ. ಯಾವ ಮನೆಯಲ್ಲಿ ಮದುವೆ ಪ್ರಾಯದ ಎಷ್ಟು ಯುವತಿಯರಿದ್ದಾರೆ, ಎಷ್ಟು ವಿಧವೆಯರಿದ್ದಾರೆ, ರೋಗಿಗಳೆಷ್ಟು, ದುಡಿಯುವವರೆಷ್ಟು, ಮಕ್ಕಳೆಷ್ಟು.. ಎಂಬುದೆಲ್ಲಾ ಒಂದು ಮಸೀದಿಗೆ ಒಳಪಟ್ಟವರಲ್ಲಿ ಹೆಚ್ಚಿನವರಿಗೆ ಗೊತ್ತಿರುತ್ತದೆ. ಮಸೀದಿಯ ಆಡಳಿತ ಸಮಿತಿಯು ಒಂದೊಂದು ಮನೆಯ ಸಾಮರ್ಥ್ಯವನ್ನು ತಿಳಿದುಕೊಂಡೇ ವಂತಿಗೆಯನ್ನು ನಿಗದಿಪಡಿಸುತ್ತದೆ. ಒಂದು ರೀತಿಯಲ್ಲಿ, ಮಸೀದಿಯ ಆಡಳಿತ ಸಮಿತಿಗೆ ತನ್ನ ವ್ಯಾಪ್ತಿಯೊಳಗಿನ ಮನೆಗಳ ಪರಿಸ್ಥಿತಿಯ ಬಗ್ಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಹೀಗಿರುವಾಗ, ಮಸೀದಿಯ ಆಡಳಿತ ಮಂಡಳಿಯು ತುಸು ಜಾಗೃತವಾದರೂ ಸಾಕು, ಅವಕಾಶಗಳ ದೊಡ್ಡದೊಂಡು ಬಾಗಿಲೇ ತೆರೆದು ಬಿಡುವ ಸಾಧ್ಯತೆಯಿದೆ. ಇವತ್ತು ಸಮುದಾಯದಲ್ಲಿ ದಾನಿಗಳಿಗೆ ಕೊರತೆಯೇನೂ ಇಲ್ಲ. ಕೊರತೆ ಇರುವುದು ಇಚ್ಛಾಶಕ್ತಿಯದ್ದು ಮಾತ್ರ. ನಿಜವಾಗಿ, ನೆರವಿಗೆ ಅರ್ಹರಾದವರನ್ನು ಗುರುತಿಸುವ ಮತ್ತು ದಾನವನ್ನು ಅವರಿಗೆ ತಲುಪಿಸುವ ಪ್ರಯತ್ನಗಳು ಬಹುತೇಕ ಆಗುತ್ತಲೇ ಇಲ್ಲ. ಒಂದು ವೇಳೆ ಪ್ರತಿ ಜಮಾಅತ್ ತನ್ನ ವ್ಯಾಪ್ತಿಯಲ್ಲಿರುವ ಬಡ ಮನೆಗಳ ಪಟ್ಟಿಯೊಂದನ್ನು ತಯಾರಿಸಿ ದಾನಿಗಳನ್ನೋ ಸಮಾಜ ಸೇವಾ ಸಂಘಟನೆಗಳನ್ನೋ ಸಂಪರ್ಕಿಸಿದರೆ, ಹೊಟ್ಟೆಯಲ್ಲೇ ಮಗುವನ್ನು ಕರಗಿಸುವ ತಾಯಂದಿರ ಸಂಖ್ಯೆ ಖಂಡಿತ ಕಡಿಮೆಯಾಗಬಹುದು. ಅಂದಹಾಗೆ, ಪ್ರತಿ ಮಸೀದಿಯ ಜಮಾಅತ್‍ನಲ್ಲೂ ಶ್ರೀಮಂತರು, ವಿದೇಶದಲ್ಲಿ ಉದ್ಯೋಗದಲ್ಲಿರುವವರು ಖಂಡಿತ ಇರುತ್ತಾರೆ. ಹಾಗಂತ, ತಮ್ಮ ಮಸೀದಿಯಲ್ಲಿರುವ ಬಡವರ ಕುರಿತಂತೆ ಅವರಿಗೆ ಅಷ್ಟಾಗಿ ಮಾಹಿತಿ ಇರಬೇಕೆಂದೇನೂ ಇಲ್ಲ. ಒಂದು ವೇಳೆ ಇದ್ದರೂ ನೆರವು ನೀಡಬೇಕಾದುದು ತನ್ನ ಧಾರ್ಮಿಕ ಕರ್ತವ್ಯ ಎಂಬ ಪ್ರಜ್ಞೆ ಅವರಲ್ಲಿ ಇಲ್ಲದಿರಲೂಬಹುದು. ವರ್ಷಕ್ಕೊಮ್ಮೆ ನಡೆಯುವ 'ಗಂಭೀರ' ಮತ ಪ್ರವಚನಕ್ಕೆ ಇಲ್ಲವೇ ಇನ್ನಿತರ 'ವಾರ್ಷಿಕ'ಗಳಿಗೆ ದುಡ್ಡು ಕೊಡುವುದರಿಂದ ತನ್ನ ಹೊಣೆಗಾರಿಕೆ ಮುಗಿಯಿತೆಂದು ಅವರು ಭಾವಿಸಿರಲೂ ಬಹುದು. ಇಂಥವರಿಗೆ ದಾನದ ಮತ್ತು ಝಕಾತ್‍ನ ಮಹತ್ವವನ್ನು ತಿಳಿಸಿಕೊಡುವ ಹೊಣೆಗಾರಿಕೆ ಮಸೀದಿಯ ಉಸ್ತಾದ್‍ರದ್ದು. ಇದು ಕೇವಲ ಭಾಷಣಗಳ ಮುಖಾಂತರ ಆಗಬೇಕಾದ್ದಲ್ಲ. ತನ್ನ ವ್ಯಾಪ್ತಿಯ ಬಡವರ ಪಟ್ಟಿಯನ್ನು ಹಿಡಿದು ಈ ಶ್ರೀಮಂತರನ್ನು ಮುಖತಃ ಭೇಟಿಯಾಗಿ ಅವರ ಹೊಣೆಗಾರಿಕೆಯನ್ನು ಉಸ್ತಾದರು ಮನವರಿಕೆ ಮಾಡಿಸಿದರೆ, ಎಷ್ಟೇ ಜಿಪುಣನಾದರೂ ನೆರವು ನೀಡಲು ಮುಂದಾಗುವ ಸಾಧ್ಯತೆಯಿದೆ. ಮಸೀದಿಯ ಉಸ್ತಾದರು ಮತ್ತು ಆಡಳಿತ ಸಮಿತಿಯು ಒಂದು ವೇಳೆ ಪ್ರತಿ ಮನೆಯ ಸಮಸ್ಯೆಯನ್ನೂ ತಮ್ಮದೇ ಸಮಸ್ಯೆ ಎಂದು ಭಾವಿಸಿ ಕಾರ್ಯಪ್ರವೃತ್ತವಾದರೆ ಸಮುದಾಯ ಯಾರ ಮುಂದೆಯೂ ತಲೆ ತಗ್ಗಿಸಿ ನಿಲ್ಲಬೇಕಾದ ಅಗತ್ಯವೇ ಇಲ್ಲ.
  ಅಲ್ಲದೇ
ಸಮುದಾಯದಲ್ಲಿ ದೊಡ್ಡದೊಂದು  ಯುವ ಪಡೆಯಿದೆ. ಮಾತ್ರವಲ್ಲ, ಇವತ್ತು ಈ ಯುವ ಪಡೆಯ ಮೇಲಿರುವ ದೊಡ್ಡ ಆರೋಪ ಏನೆಂದರೆ, ಸಮಾಜಬಾಹಿರ ಕೃತ್ಯಗಳಲ್ಲಿ ಇವರ ಹೆಸರೇ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದೆ ಎಂಬುದು. ನಿಜವಾಗಿ, ಮಸೀದಿಯು ಸಕ್ರಿಯವಾದರೆ ಸಮುದಾಯದ ಯುವಕರನ್ನು ಸಂಪನ್ಮೂಲವಾಗಿ ಬದಲಿಸಲು ಖಂಡಿತ ಸಾಧ್ಯವಿದೆ. ಯುವಕರು ಎಷ್ಟೇ ಕೆಟ್ಟವರಾಗಿದ್ದರೂ ಮಸೀದಿಯ ಉಸ್ತಾದರನ್ನು ಗೌರವಿಸುತ್ತಾರೆ. ಆದ್ದರಿಂದ, ಯುವಕರೊಂದಿಗೆ ಸಲುಗೆ ಬೆಳೆಸಿ, ಅವರನ್ನು ಮಸೀದಿಯಲ್ಲಿ ಒಟ್ಟುಗೂಡಿಸಿ, ಅವರನ್ನು ಪ್ರಯೋಜನಕಾರಿ ಕೆಲಸಗಳಲ್ಲಿ ತೊಡಗಿಸುವಂತೆ ಮಾಡಲು ಉಸ್ತಾದರಿಗೆ ಸಾಧ್ಯವಿದೆ. ಮುಖ್ಯವಾಗಿ, ಮಸೀದಿಯ ವ್ಯಾಪ್ತಿಗೊಳಪಟ್ಟ ಪ್ರತಿ ಮನೆಗಳ ಸರ್ವೇ ನಡೆಸುವುದಕ್ಕೆ ಒಂದು ತಂಡ; ರೋಗಿಗಳು, ವಿಧವೆಯರು, ಯುವತಿಯರ ಪಟ್ಟಿ ತಯಾರಿಸುವುದಕ್ಕೆ ಇನ್ನೊಂದು ತಂಡ; ಪಟ್ಟಣಗಳಲ್ಲಿನ ದಾನಿಗಳು ಮತ್ತು ಸಮಾಜ ಸೇವಾ ಸಂಘಟನೆಗಳನ್ನು ಸಂಪರ್ಕಿಸುವುದಕ್ಕೆ ಮತ್ತೊಂದು ತಂಡ.. ಹೀಗೆ ಮೊರ್ನಾಲ್ಕು ಯುವಕರ ಬೇರೆ ಬೇರೆ ತಂಡಗಳನ್ನು ರಚಿಸಿ, ಆಯಾ ತಂಡಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟರೆ ಮತ್ತು ಉಸ್ತಾದರು ಸಕ್ರಿಯವಾಗಿ ಈ ಇಡೀ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ದೊಡ್ಡದೊಂದು  ಬದಲಾವಣೆ ಸಾಧ್ಯವಾದೀತು. ಮಾತ್ರವಲ್ಲ, ಯುವಕರನ್ನು ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿದ ಪ್ರತಿಫಲವೂ ಸಿಕ್ಕೀತು..
  ಅಂದಹಾಗೆ, ಪ್ರವಾದಿ ಮುಹಮ್ಮದ್‍ರನ್ನು(ಸ) ಪ್ರೀತಿಸುವ ನೆಪದಲ್ಲಿ ಭಾರೀ ಮೆರವಣಿಗೆಗಳು; ಹಾಡು, ಭಾಷಣ, ತಳಿರು-ತೋರಣಗಳ ಭರ್ಜರಿ ಸಿದ್ಧತೆಯಲ್ಲಿ ಬಿಝಿಯಾಗಿರುವ ಮಂದಿ, ಹೊಟ್ಟೆಯಲ್ಲೇ ಮಗುವನ್ನು ಕರಗಿಸುವಂಥ ತಾಯಂದಿರನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಪ್ರವಾದಿಯವರನ್ನು ಪ್ರೀತಿಸಬೇಕೆಂದು ಭಾಷಣ ಮಾಡುವ ಉಸ್ತಾದ್ ಮತ್ತು ಅದಕ್ಕೆ ವೇದಿಕೆ ಸಜ್ಜುಗೊಳಿಸುವ ಮಸೀದಿಯ ಆಡಳಿತ ಸಮಿತಿಯು ಪ್ರವಾದಿ ಪ್ರೇಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದಕ್ಕೆ ಯೋಜನೆಯನ್ನು ಸಿದ್ಧಪಡಿಸಬೇಕು. ಮುಂದಿನ ರಬೀಉಲ್ ಅವ್ವಲ್‍ನ ಒಳಗೆ ತಮ್ಮ ಮಸೀದಿಯ ವ್ಯಾಪ್ತಿಯಲ್ಲಿರುವ ಬಡವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಕ್ರಾಂತಿಕಾರಿ ನೀಲನಕ್ಷೆಯನ್ನು ರೂಪಿಸಬೇಕು. ಈ ಯೋಜನೆ ಜಾರಿಗೊಳ್ಳಬೇಕಾದರೆ ಯಾರ್ಯಾರನ್ನು ಸಂಪರ್ಕಿಸಬೇಕು, ಎಷ್ಟು ತಂಡಗಳನ್ನು ರೂಪಿಸಬೇಕು ಎಂಬ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಬೇಕು. ಪ್ರವಾದಿಯನ್ನು ಪ್ರೀತಿಸುವುದೆಂದರೆ, ವರದಕ್ಷಿಣೆ ರಹಿತ ಮದುವೆಯನ್ನು ಜಾರಿಗೆ ತರುವುದು; ಬಡತನದಿಂದ ಜನರನ್ನು ಮುಕ್ತಗೊಳಿಸುವುದು; ಕೆಡುಕುಗಳಿಂದ ಸಮಾಜವನ್ನು ರಕ್ಷಿಸುವುದು; ರೋಗಿಗಳಿಗೆ ನೆರವಾಗುವುದು; ದೇವ ಮತ್ತು ವ್ಯಕ್ತಿಯ ನಡುವಿನ ವಿಶ್ವಾಸವನ್ನು ಬಲಿಷ್ಠಗೊಳಿಸುವುದು; ದೇಶಬಾಂಧವರಿಗೆ ಪ್ರವಾದಿಯನ್ನು ಪರಿಚಯಿಸುವುದು.. ಮುಂತಾದ ಸ್ಪಷ್ಟ ಸಂದೇಶ ಎಲ್ಲ ಮಸೀದಿಗಳಿಂದಲೂ ಹೊರಡುವಂತಾಗಬೇಕು..
  ಇಲ್ಲದಿದ್ದರೆ, ಹೊಟ್ಟೆಯಲ್ಲೇ  ಕರಗಿ ಹೋಗುವ ಪುಟ್ಟ ಕಂದಮ್ಮಗಳು ನಾಳೆ ಈ ಉಸ್ತಾದರು ಮತ್ತು ಈ ಪ್ರವಾದಿ ಪ್ರೇಮಿಗಳ ವಿರುದ್ಧ ಅಲ್ಲಾಹನ ನ್ಯಾಯಾಲಯದಲ್ಲಿ ದಾವೆ ಹೂಡಬಹುದು..

Tuesday, January 8, 2013

ತಪ್ಪು ಮಾಡುವುದಕ್ಕಿಂತ ಮೊದಲು ಎಲ್ಲರೂ ಈ ತಾಯಿ - ಮಗನನ್ನು ಸ್ಮರಿಸಿಕೊಳ್ಳಿ..

ಅರ್‍ಪ್ಪುದಮ್ ಅಮ್ಮಾಳ್
ಪೇರರಿವಾಲನ್‍
  “ನನ್ನ ಮಗನ ಕೋಣೆಯನ್ನು ಕಂಡು ನಾನು ದಂಗಾಗಿ ಹೋಗಿದ್ದೆ. ಕರುಳು ಕಿತ್ತು ಬಂತು. ಕಣ್ಣು ತುಂಬಿಕೊಂಡವು. ಸರಿಯಾಗಿ ಕಾಲು ಚಾಚಿ ಮಲಗಲೂ ಸಾಧ್ಯವಿಲ್ಲದಂಥ ಚಿಕ್ಕ ಕೋಣೆ. 'ನೋಡಮ್ಮ ನನ್ನ ಮನೆಯನ್ನು..' ಅಂತ ಆತ ಹೇಳಿದಾಗ ನನ್ನ ಗಂಟಲು ಕಟ್ಟಿತ್ತು. 20 ವರ್ಷಗಳಿಂದ ಆತ ಈ ಕೋಣೆಯಲ್ಲಿ ಬದುಕುತ್ತಿದ್ದಾನಲ್ಲ, ಹೇಗೆ ಆ ಸಂಕಟವನ್ನು ವಿವರಿಸುವುದು? ಇಷ್ಟಕ್ಕೂ, ಬೆಲೆ ಎಂಬುದು ರಾಜೀವ್ ಗಾಂಧಿಯವರ ಜೀವಕ್ಕೆ ಮಾತ್ರ ಇರುವುದು ಅಲ್ಲವಲ್ಲ. ನನ್ನ ಮಗನದ್ದೂ ಜೀವವೇ ಅಲ್ಲವೇ? ಇದರರ್ಥ ಕೊಲೆಗಾರರಿಗೆ ಶಿಕ್ಷೆಯಾಗಬಾರದು ಎಂದಲ್ಲ. ಆಗಲೇಬೇಕು. ಆದರೆ ನಿರಪರಾಧಿಯಾದ ನನ್ನ ಮಗ ನನ್ನೇಕೆ ಈ ರೀತಿ ದಂಡಿಸುತ್ತಿದ್ದಾರೆ? ಆ ಇಡೀ ಷಡ್ಯಂತ್ರದ ಸೂತ್ರದಾರರನ್ನು ಪತ್ತೆ ಹಚ್ಚದೇ, ಯಾವ ರಾಜಕೀಯ ಬಲವೂ ಇಲ್ಲದ, ಶ್ರೀಮಂತರ ಸಾಲಿನಲ್ಲೂ ಗುರುತಿಸಿಕೊಳ್ಳದ ಬಡ ಗುಡಿಸಲಿನ ಮಕ್ಕಳನ್ನೇಕೆ ಶಿಕ್ಷಿಸಲಾಗುತ್ತದೆ? ಇವೆಲ್ಲವನ್ನು ನೋಡುವಾಗ, ದೇವನಲ್ಲಿ ವಿಶ್ವಾಸವಿಡದೇ ಇರುವ ನನ್ನ ನಿಲುವು ಸರಿಯೆಂದೇ ನನಗನಿಸುತ್ತದೆ. ದೇವನಿರುತ್ತಿದ್ದರೆ, ತಪ್ಪು ಮಾಡದ ನನ್ನ ಮಗ ಶಿಕ್ಷೆಗೊಳಗಾಗುತ್ತಿದ್ದನೇ? ನನ್ನ ಮಗ ಒಳ್ಳೆಯವನೆಂದು ನನಗೂ ನನ್ನ ಮನೆಯವರಿಗೂ ಮತ್ತು ಪರಿಸರದವರಿಗೂ ಗೊತ್ತಿದೆ. ದೇವನಿಗೇಕೆ ಗೊತ್ತಾಗುತ್ತಿಲ್ಲ? ಅಂದಹಾಗೆ ಈ ಜಗತ್ತಿನಲ್ಲಿ ಎಷ್ಟು ಮರಣ ದಂಡನೆಗಳು ಜಾರಿಯಾಗುತ್ತಿಲ್ಲ? ಹಾಗಂತ ಅಪರಾಧ ಕೃತ್ಯಗಳು ಕಡಿಮೆಯಾಗುತ್ತಿವೆಯೇ? ಮರಣ ದಂಡನೆಯಿಂದ ಅಪರಾಧ ಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲ. ಮನಸ್ಸಾಕ್ಷಿಯೆಂಬ ಕೋರ್ಟಿಗೆ ಭಯಪಡುವವರು ಮಾತ್ರ ಇತರರಿಗೆ ಅನ್ಯಾಯ ಮಾಡಲಾರರು..
   65 ವರ್ಷದ ಅರ್‍ಪ್ಪುದಮ್ ಅಮ್ಮಾಳ್ ಹೇಳುತ್ತಾ ಹೋಗುತ್ತಾರೆ. ಅವರ ಮಾತಿನಲ್ಲಿ ಗೊಂದಲ, ವಿಷಾದ, ಸಿಟ್ಟು, ನಿರೀಕ್ಷೆ.. ಎಲ್ಲವೂ ವ್ಯಕ್ತವಾಗುತ್ತಲೇ ಇರುತ್ತದೆ. ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾದ ಆರೋಪದೊಂದಿಗೆ ಮರಣ ದಂಡನೆ ಶಿಕ್ಷೆಗೀಡಾಗಿ ಸದ್ಯ ವೆಲ್ಲೂರು ಜೈಲಿನಲ್ಲಿರುವ ಪೇರರಿವಾಲನ್‍ನ ತಾಯಿ ಈ ಅರ್‍ಪ್ಪುದಮ್ ಅಮ್ಮಾಳ್. ತನ್ನ ಮಗನನ್ನು ಉಳಿಸಿಕೊಳ್ಳುವುದಕ್ಕಾಗಿ ಕಳೆದ 21 ವರ್ಷಗಳಿಂದ ಅವರು ಹತ್ತದ ಬಸ್‍ಗಳಿಲ್ಲ. ಏರದ ಕಚೇರಿ ಮೆಟ್ಟಿಲುಗಳಿಲ್ಲ. ಭೇಟಿಯಾಗದ ರಾಜಕಾರಣಿಗಳು, ನ್ಯಾಯವಾದಿಗಳಿಲ್ಲ. 1991 ಜೂನ್ 11ರಂದು ತನ್ನ ಕೈಯಾರೆ ಪೇರರಿವಾಲನ್‍ನನ್ನು ಪೊಲೀಸರ ಕೈಗೊಪ್ಪಿಸಿದ ಈ ತಾಯಿ ಅಂದಿನಿಂದ ಈ ವರೆಗೂ ಮಗನಿಗಾಗಿ ಕಾಯುತ್ತಿದ್ದಾರೆ..
  ಅದೊಂದು ದಿನ
ಈಗ ವಿಚಾರಣೆ ನಡೆಸಿ ಸಂಜೆಯ ಹೊತ್ತಿಗೆ ಬಿಡುತ್ತೇವೆ ಎಂದು ಭರವಸೆ ನೀಡಿ ಪೇರರಿವಾಲನ್‍ನನ್ನು ಕರಕೊಂಡು ಹೋಗಿದ್ದ ಪೊಲೀಸರು ಮರುದಿನವಾದರೂ ಬಿಡಲಿಲ್ಲ. ನಾವು ಹೋದಾಗ ಮಗನನ್ನು ಭೇಟಿಯಾಗಲೂ ಬಿಡಲಿಲ್ಲ. ವಿಚಾರಣೆ ಮುಗಿದಿಲ್ಲ, ನಾಳೆ ಬಿಡುತ್ತೇವೆ ಎಂದರು. ಮರುದಿನವೂ ಬಿಡಲಿಲ್ಲ. ಹೀಗೆ ದಿನಗಳು ಉರುಳಿದ ಬಳಿಕ ಒಂದು ದಿನ ಯಾರನ್ನಾದರೂ ವಕೀಲರನ್ನು ಕರಕೊಂಡು ಬನ್ನಿ ಎಂದು ಪೊಲೀಸರೇ ಸಲಹೆ ಕೊಟ್ಟರು. ನಮಗೆ ಭಯ ಶುರುವಾಯಿತು. ದ್ರಾವಿಡ ಕಳಗಂ (ಡಿ.ಕೆ.) ಪಕ್ಷದ ವಕೀಲ ದೊರೆ ಸ್ವಾಮಿಯವರಲ್ಲಿ ನಾವು ಕೇಳಿಕೊಂಡೆವು. ನಿಜವಾಗಿ, ನನ್ನ ಗಂಡ ತನ್ನ 8ನೇ ವಯಸ್ಸಿನಿಂದಲೇ ಈ ಪಕ್ಷದ ಕಾರ್ಯಕರ್ತರು. ಪೆರಿಯಾರ್ ಚಿಂತನೆಯೊಂದಿಗೆ ನಮಗೆ ಬಲವಾದ ನಂಟಿತ್ತಾದ್ದರಿಂದ ಮತ್ತು ಅವರ ಸಿದ್ಧಾಂತದಡಿಯಲ್ಲೇ ಡಿ.ಕೆ. ಪಕ್ಷ  ಸ್ಥಾಪಿತವಾದ್ದರಿಂದ ನಮ್ಮ ಸಂಬಂಧ ಸಹಜವಾಗಿತ್ತು. ಅಲ್ಲದೇ 1991ರಲ್ಲಿ ಇಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೋಮಾ ಮಾಡಿ ಪಾರ್ಟ್ ಟೈಮಲ್ಲಿ ಎಂಜಿನಿಯರಿಂಗ್ ಕಲಿಯಲಿಕ್ಕಾಗಿ ಚೆನ್ನೈಗೆ ತೆರಳಿದ್ದ ಪೇರರಿವಾಲನ್ ವಾಸಿಸುತ್ತಿದ್ದುದು ಇದೇ ಪಕ್ಷದ ಕಚೇರಿಯಲ್ಲಿ. ಈ ಪಕ್ಷದ ಮುಖವಾಣಿಯಾದ ವಿಡುತಲೈ ಪತ್ರಿಕೆಯಲ್ಲಿ ಪಾರ್ಟ್ ಟೈಂ ಕೆಲಸವನ್ನೂ ಮಾಡುತ್ತಿದ್ದ. ಇಷ್ಟಿದ್ದೂ ಮಗನ ಬಂಧನದ ಬಳಿಕ ಇದೇ ಪತ್ರಿಕೆ, ಡಿ.ಕೆ. ಪಕ್ಷಕ್ಕೂ ನನ್ನ ಮಗನಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಂಪಾದಕೀಯದಲ್ಲೇ ಬರೆದುಬಿಟ್ಟಿತು. ಅದು ಬಿಡಿ, ಮಗನ ಬಿಡುಗಡೆಗಾಗಿ ಚೆನ್ನೈಯಲ್ಲಿ ಕಾದು ಕಾದು ಸುಸ್ತಾದ ನಾವು ಕೊನೆಗೆ ನಮ್ಮ ಊರಾದ ಜೋಲಾರ್ ಪೇಟೆಗೆ ಮರಳಿದೆವು. ಬಳಿಕ ಮಗನನ್ನು ಚೆಂಗಲ್ ಪೇಟೆಯ ಕೋರ್ಟಿಗೆ ಹಾಜರುಪಡಿಸಿದಾಗ ಕುಟುಂಬದ ಜೊತೆ ಕೋರ್ಟಿಗೆ ಹೋದೆವು. ಕೋರ್ಟಿನಲ್ಲಿ ಅವನನ್ನು ನೋಡಲೋ ಮಾತಾಡಲೋ ಪೊಲೀಸರು ಬಿಡಲಿಲ್ಲ. ಅಷ್ಟಕ್ಕೂ ಮುಖ ಮುಚ್ಚಿದ ಹಲವು ವ್ಯಕ್ತಿಗಳಲ್ಲಿ ನನ್ನ ಮಗ ಯಾರೆಂದು ಪತ್ತೆ ಹಚ್ಚುವುದಾದರೂ ಹೇಗೆ? ನಾವು ಹೊರಗಿನಿಂದ ಮಗನ ಹೆಸರು ಕೂಗುತ್ತಿದ್ದೆವು. ಕಣ್ಣೀರು ಒತ್ತಿ ಬರುತ್ತಿತ್ತು. ರಾಬರ್ಟ್ ಪಾಯಸ್, ಷಣ್ಮುಗಂ ಮತ್ತು ನನ್ನ ಮಗನನ್ನು ಅವತ್ತು ಕೋರ್ಟಿಗೆ ಹಾಜರುಪಡಿಸಿದ್ದರಲ್ಲವೇ? ಷಣ್ಮುಗನನ್ನೇ ನಾವು ಪೇರರಿವಾಲನ್ ಎಂದು ಭ್ರಮಿಸಿ ಕೂಗುತ್ತಿದ್ದೆವು.
   ನೀವೇ ಹೇಳಿ, ತಪ್ಪು ಒಪ್ಪಿಕೊಳ್ಳದಿದ್ದರೆ ನಿನ್ನ ತಂಗಿ ಮತ್ತು ಅಕ್ಕಳನ್ನು ಅತ್ಯಾಚಾರ ಮಾಡುತ್ತೇವೆಂದು 19 ವರ್ಷದ ಯುವಕನನ್ನು ಬೆದರಿಸಿದರೆ ಆತ ಏನು ತಾನೇ ಮಾಡಿಯಾನು? ತಪ್ಪು ಒಪ್ಪಿಕೊಂಡರೆ ಭವಿಷ್ಯದಲ್ಲಿ ಏನಾಗಬಹುದೆಂದು ಆಲೋಚಿಸುವಷ್ಟು ಅನುಭವಸ್ಥ ಪ್ರಾಯ ಅದಲ್ಲವಲ್ಲ. ಆತನಿಗೆ ಕೊಟ್ಟ ಹಿಂಸೆಯನ್ನು ನೆನಪಿಸುವಾಗ ಹೃದಯ ತುಂಬಿ ಬರುತ್ತದೆ. ನನ್ನ ನಿರಪರಾಧಿ ಮಗನನ್ನು ಆ ಪೊಲೀಸರು ಮನ ಬಂದಂತೆ ನಡೆಸಿಕೊಂಡರಲ್ಲ, ನಾನು ಹೇಗೆ ಅದನ್ನು ಸಹಿಸಲಿ?
ರಾಜೀವ್ ಗಾಂಧಿಯನ್ನು ಕೊಂದ ಆರೋಪಿ ಶಿವರಸನ್‍ಗೆ ಬ್ಯಾಟರಿಯನ್ನು ಖರೀದಿಸಿಕೊಟ್ಟ ಆರೋಪವನ್ನು ಪೊಲೀಸರು ನನ್ನ ಮಗನ ಮೇಲೆ ಹೊರಿಸಿದ್ದಾರೆ. ಹೀಗೆ ಬ್ಯಾಟರಿ ಖರೀದಿಸಿ ಕೊಟ್ಟದ್ದು ನನ್ನ ಮಗನೊಬ್ಬನೇ ಅಲ್ಲ, ರವಿಚಂದ್ರನ್ ಎಂಬವನೂ ಬ್ಯಾಟರಿ ಖರೀದಿಸಿಕೊಟ್ಟಿದ್ದಾನೆ. ಆದರೆ ಅವನಿಗೆ ಈ ದೇಶದ ನ್ಯಾಯಾಲಯ ವಿಧಿಸಿದ್ದು ಜೀವಾವಧಿ ಶಿಕ್ಷೆ. ನನ್ನ ಮಗನಿಗೆ ಮಾತ್ರ ಮರಣ ದಂಡನೆ. ಇದು ಯಾವ ಬಗೆಯ ನ್ಯಾಯ? ಶಿವರಸನ್ ನನ್ನ ಮಗ ಖರೀದಿಸಿಕೊಟ್ಟ ಬ್ಯಾಟರಿಯನ್ನೇ ಉಪಯೋಗಿಸಿದ್ದಾನೆ ಎಂದು ಯಾವ ಆಧಾರದಲ್ಲಿ ಹೇಳುವುದು? ಅದಕ್ಕೇ ನಾನು ಹೇಳ್ತಾ ಇರುವುದು, ಇಡೀ ಪ್ರಕರಣದ ವಿಚಾರಣೆ ಮುಕ್ತವಾಗಿ ನಡೆಯಲಿ ಎಂದು. ದೇಶದ ಮಾಜಿ ಪ್ರಧಾನಿಯ ಕೊಲೆಯ ವಿಚಾರಣೆಯನ್ನು ಯಾಕೆ ರಹಸ್ಯವಾಗಿ ನಡೆಸಬೇಕು? ಯಾಕೆ ನನ್ನ ಮಗನ ಮೇಲಿನ ಆರೋಪ ಮತ್ತು ಅದರ ವಿಚಾರಣೆಯನ್ನು ನಾನು ಆಲಿಸಬಾರದು? ಇಷ್ಟಕ್ಕೂ ಟಾಡಾ ಕೋರ್ಟಿನಲ್ಲಿ ವಿಚಾರಣೆ ಹೇಗೆ ನಡೆಯುತ್ತದೆಂಬುದು ನಿಮಗೂ ಗೊತ್ತಲ್ಲವೇ? ನ್ಯಾಯಾಂಗ ಕಸ್ಟಡಿಯಲ್ಲಿ ಆರೋಪಿಯಿಂದ ಪಡಕೊಂಡ ತಪ್ಪೊಪ್ಪಿಗೆಯನ್ನೇ ಅಲ್ಲಿ ಪುರಾವೆಯೆಂದು ಪರಿಗಣಿಸಲಾಗುತ್ತದಲ್ಲವೇ? ನನ್ನ ಮಗ ಈ ವರೆಗೆ ಆರು ಬಾರಿ ನೇಣುಗಂಭದ ಹತ್ತಿರ ಬಂದು ಪಾರಾಗಿದ್ದಾನೆ. ಪ್ರತಿ ಸಂದರ್ಭವೂ ಅದು ನನ್ನ ಪಾಲಿನ ನೇಣುಗಂಭವೇ ಆಗಿತ್ತು. ನಾನೇ ನೇಣಿಗೆ ಕೊರಳೊಡ್ಡಿದಂತೆ ಪ್ರತಿ ಸಂದರ್ಭವನ್ನೂ ಅನುಭವಿಸಿದ್ದೇನೆ. ಒಂದು ರೀತಿಯಲ್ಲಿ ಸಾಯುತ್ತಾ ಬದುಕುತ್ತಿರುವ ಓರ್ವ ಅಮ್ಮ ನಾನು. 2011ರಲ್ಲಿ ವೆಲ್ಲೂರು ಜೈಲಿನಿಂದ ಪತ್ರವೊಂದು ಬಂದಿತ್ತು. ‘ಮಗನನ್ನು ಸೆ. 9ಕ್ಕೆ ನೇಣಿಗೇರಿಸಲಾಗುವುದು, ಮೃತದೇಹವನ್ನು ಪಡಕೊಳ್ಳಿ..' ಎಂದು ಅದರಲ್ಲಿ ತಿಳಿಸಲಾಗಿತ್ತು. ಓರ್ವ ಅಮ್ಮನಾಗಿ ಆ ಪತ್ರವನ್ನು ನಾನು ಹೇಗೆ ಓದಲಿ? ಕೈಯಾರೆ ಬೆಳೆಸಿದ ಮಗ ನೇಣಿಗೇರುವುದನ್ನು ಕಲ್ಪಿಸಿ ಕೊಳ್ಳುವುದಾದರೂ ಹೇಗೆ? ಜಯಲಲಿತಾರು ವಿಧಾನಸಭೆಯಲ್ಲಿ ವಿಶೇಷ ಪ್ರಸ್ತಾವನೆಯನ್ನು ಮಂಡಿಸಿದ್ದರಿಂದ ಸದ್ಯ ಮಗ ನೇಣುಗಂಭದಿಂದ ಪಾರಾಗಿದ್ದಾನೆ. ಆದರೂ ನನ್ನಲ್ಲಿ ಭರವಸೆ ಕ್ಷೀಣಿಸುತ್ತಾ ಇದೆ. ನ್ಯಾಯದ ಬಗ್ಗೆಯೇ ಜಿಗುಪ್ಸೆ ಮೂಡತೊಡಗಿದೆ. ಅಂದಹಾಗೆ, ನನ್ನ ಮಗನಿಗೆ ಮರಣ ದಂಡನೆ ವಿಧಿಸಿರುವುದನ್ನು ಪ್ರಸಿದ್ಧ ನ್ಯಾಯವಾದಿ ಕೃಷ್ಣಯ್ಯರ್ ಅವರೇ ಪ್ರಶ್ನಿಸಿದ್ದಾರೆ. ಅವರಿಗೆ ಗೊತ್ತಿಲ್ಲದ ನ್ಯಾಯ ಇನ್ನಾರಿಗೆ ಗೊತ್ತಿದೆ..
    ಒಂದು ಕಡೆ ಮಗನನ್ನು ತಪ್ಪಿತಸ್ಥ ಎಂದು ಎಲ್ಲೋ ಒಂದು ಕಡೆ ಒಪ್ಪಿಕೊಳ್ಳುತ್ತಲೇ ಇನ್ನೊಂದು ಕಡೆ ನಿರಪರಾಧಿ ಎಂದು ಹೇಳುತ್ತಾ ಹೋಗುವ ಆ ಅಮ್ಮನ ಬಗ್ಗೆ ಮರುಕವಾಗುತ್ತದೆ. ಎಲ್‍ಟಿಟಿಇಯ ಪ್ರಭಾಕರನ್‍ನನ್ನು ಬೆಂಬಲಿಸುತ್ತಿದ್ದ, ಅವನ ಪೋಟೋವನ್ನು ಟಿ.ವಿ. ಮೇಲೆ ಸದಾ ಇಟ್ಟಿರುತ್ತಿದ್ದ ಮನೆಯಾಗಿತ್ತು ಈ ಅರ್‍ಪ್ಪುದಮ್ ಅಮ್ಮಾಳ್‍ರದ್ದು. ಮರಣದಂಡನೆ ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಇಳಿಸಲಾದ ನಳಿನಿಯ ಸಹೋದರ ಭಾಗ್ಯನಾಥನಿಗೂ ಅಮ್ಮಾಳ್‍ರ ಕುಟುಂಬಕ್ಕೂ ಉತ್ತಮ ಸಂಬಂಧವಿತ್ತು..
  ಪೂಂದಮಲ್ಲಿ ವಿಶೇಷ ಕೋರ್ಟಿನಲ್ಲಿ ಮಗನ ವಿಚಾರಣೆ ನಡೆಯುತ್ತಿತ್ತು. ಜೈಲಿನ ಬಳಿಯೇ ವಿಶೇಷ ಕೋರ್ಟು. ಅಲ್ಲಿಗೆ ಹೋಗಲು ನಮಗಾರಿಗೂ ಅವಕಾಶ ಇರಲಿಲ್ಲ. ನಾನು ಮನಸ್ಸಾದಾಗಲೆಲ್ಲ ಪೂಂದಮಲ್ಲಿಗೆ ಹೋಗುತ್ತಿದ್ದೆ. ಮಗನನ್ನು ತೋರಿಸದಿದ್ದರೆ ಕೂಗಾಡುತ್ತಿದ್ದೆ. ಅಲ್ಲೇ ಕೂರುತ್ತಿದ್ದೆ. ಜಗಳ ಮಾಡುತ್ತಿದ್ದೆ. ಪೊಲೀಸರನ್ನು ಕೆಟ್ಟ ಪದಗಳಿಂದ ಬೈಯುತ್ತಿದ್ದೆ. ಹೀಗೆ 8 ವರ್ಷಗಳ ವರೆಗೆ ನನಗೆ ಆತನನ್ನು ಸರಿಯಾಗಿ ನೋಡಲು ಅವಕಾಶವೇ ಸಿಗಲಿಲ್ಲ. ನನ್ನನ್ನು ಅತ್ಯಂತ ಸಂಕಟಕ್ಕೆ ಒಳಪಡಿಸಿದ್ದು ಯಾವುದು ಗೊತ್ತೇ, ಬಂಧನದ ದಿನದಿಂದಲೇ ನನ್ನ ಮಗನಿಗೆ ಕೈದಿಯ  ಉಡುಪು (ಬಿಳಿ) ತೊಡಿಸಿದ್ದು. ಆ ವೇಷದಲ್ಲಿ ನನ್ನ ಮಗನನ್ನು ನೋಡಿ ನಾನು ಅತ್ತು ಬಿಟ್ಟೆ. ದೂರು ಕೊಟ್ಟ ಮೇಲೆ ಮಗನಿಗೆ ಸಾಮಾನ್ಯ ಉಡುಪು ಸಿಕ್ಕಿತು. ಪೂಂದಮಲ್ಲಿ ಜೈಲಿನಲ್ಲಿ ನಾನು ಮತ್ತು ನನ್ನ ಮಗ ಭೇಟಿಯಾಗುತ್ತಿದ್ದುದು ಫೈಬರ್ ಗ್ಲಾಸಿನ ಆಚೆ-ಈಚೆ. ಪರಸ್ಪರ ಮಾತು ಕೇಳುತ್ತಿಲ್ಲವಾದ್ದರಿಂದ ಫೋನಿನಲ್ಲಿ ಮಾತಾಡಬೇಕಿತ್ತು. ನಾನು ದೂರು ಕೊಟ್ಟ ಬಳಿಕ ಫೈಬರ್ ಗ್ಲಾಸಿನಲ್ಲಿ ಸಣ್ಣದೊಂದು ತೂತು ಕೊರೆಯಲಾಯಿತು. ಅದರ ಮೂಲಕ ಆತನ ಬೆರಳನ್ನು ಮುಟ್ಟಲು ಮಾತ್ರ ನನಗೆ ಸಾಧ್ಯವಾಗುತ್ತಿತ್ತು. ಮತ್ತೆ ದೂರು ಕೊಟ್ಟೆವು. ಬಳಿಕ ಜೈಲರ್ ಕೋಣೆಯ ಮಾಡಿನಿಂದ ಕೆಳಕ್ಕೆ ನೋಡಿ ಮಾತಾಡುವುದಕ್ಕೆ ಮಗನಿಗೆ ಅವಕಾಶ ಸಿಕ್ಕಿತು. ನಾನು ನೆಲದಿಂದ ಮೇಲಕ್ಕೆ ನೋಡಿ ಮಾತಾಡುತ್ತಿದ್ದೆ.. 8 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ನನ್ನ ಮಗನಿಗೆ ಕೋರ್ಟು ಮರಣ ದಂಡನೆಯನ್ನು ವಿಧಿಸಿತು. ನಾನು ಮೇಲ್ಮನವಿ ಸಲ್ಲಿಸಿದೆ. ಅದನ್ನು ಎತ್ತಿಕೊಂಡದ್ದೂ ಮರಣದಂಡನೆ ವಿಧಿಸಿದ ನ್ಯಾಯಾಧೀಶರೇ. ಆದ್ದರಿಂದ ಅವರು ಭಿನ್ನ ತೀರ್ಪು ಕೊಡುವುದಕ್ಕೆ ಸಾಧ್ಯವೂ ಇರಲಿಲ್ಲ. ಆದರೂ ಒಂದು ಮಾತು ಹೇಳಲೇಬೇಕು,
   ನಾನು ಜೈಲಿಗೆ ಭೇಟಿ ಕೊಡುವಾಗ ನನ್ನ ಮಗಳ ಮಗಳನ್ನೂ ಎಷ್ಟೋ ಬಾರಿ ಕರಕೊಂಡು ಹೋದದ್ದಿದೆ. ಆಗೆಲ್ಲಾ 'ಮಾಮ (ಪೇರರಿವಾಲನ್) ಯಾವಾಗ ಬರುತ್ತಾರೆ..' ಎಂದು ಆಕೆ ಕೇಳುತ್ತಿದ್ದಳು. ಮುಂದಿನ ವರ್ಷ ಮಗಳೇ ಅನ್ನುತ್ತಿದ್ದೆ. ಆದರೆ ಕ್ರಮೇಣ ಅವಳು ಕೇಳುವುದನ್ನೇ ಬಿಟ್ಟುಬಿಟ್ಟಳು. ಅಜ್ಜಿ ಸುಳ್ಳು ಹೇಳುತ್ತಿದ್ದಾಳೆ ಎಂದು ದೂರ ತೊಡಗಿದಳು. ಅಷ್ಟಕ್ಕೂ ಈ ಸ್ಥಿತಿಯಲ್ಲಿ ನೀವಿರುತ್ತಿದ್ದರೆ ನೀವಾದರೂ ಏನು ಹೇಳುತ್ತಿದ್ದಿರಿ? ಇದು ಸುಳ್ಳಲ್ಲ ಮಗಳೇ, ತಾಯಿಯೋರ್ವಳ ಭರವಸೆ.. ಎಂದು ಹೇಳಲು ಪ್ರಯತ್ನಿಸುತ್ತಿದ್ದಿರಲ್ಲವೇ? ನಾನೂ ಪ್ರಯತ್ನಿಸಿದ್ದೇನೆ. ಆದರೆ ಕಟ್ಟಿ ಬರುವ ಗಂಟಲು, ಪದಗಳನ್ನು ಅರ್ಧದಲ್ಲೇ ತಡೆದಿರಿಸುತ್ತದೆ. ನಾನು ಇನ್ನಾವ ರೀತಿಯಲ್ಲಿ ಮಗಳಿಗೆ ಉತ್ತರ ಕೊಡಲಿ..'
   ಅರ್‍ಪ್ಪುದಮ್ ಅಮ್ಮಾಳ್‍ರನ್ನು ಆಲಿಸುವಾಗ ಮರಣ ದಂಡನೆಗೆ ಒಳಗಾದ ಮಗನ ತಾಯಿಯ ಸಂಕಟ ಅರ್ಥವಾಗುತ್ತಾ ಹೋಗುತ್ತದೆ. ಮಾತ್ರವಲ್ಲ, ಮಕ್ಕಳ ತಪ್ಪುಗಳು ಹೆತ್ತವರನ್ನು ಹೇಗೆ ಪ್ರತಿದಿನವೂ ಸಾಯಿಸುತ್ತಿರುತ್ತವೆ ಅನ್ನುವುದೂ ಗೊತ್ತಾಗುತ್ತದೆ. ಅಂದಹಾಗೆ,
  'ಅತ್ಯಾಚಾರಿಗಳಿಗೆ ಮರಣ ದಂಡನೆಯಾಗಲಿ' ಎಂಬ ಆಗ್ರಹಗಳು ಬಲವಾಗಿ ಕೇಳಿ ಬರುತ್ತಿರುವ ಈ ದಿನಗಳಲ್ಲಿ, 'ತಪ್ಪು' ಮಾಡುವುದಕ್ಕಿಂತ ಮೊದಲು ಸರ್ವರೂ ಈ ತಾಯಿ  ಮತ್ತು ಮಗನನ್ನು ನೆನಪಿಸಿಕೊಳ್ಳುವುದು ಉತ್ತಮವೆನಿಸುತ್ತದೆ, ಅಲ್ಲವೇ?

Monday, December 31, 2012

ಇಸ್ಲಾಮಿ ಕಾನೂನುಗಳನ್ನು ಭಾರತದಲ್ಲಿ ಯಾಕೆ ಪ್ರಯೋಗಿಸಿ ನೋಡಬಾರದು?

   ಯುವಕರೇ ಮತ್ತು ಯುವತಿಯರೇ,
ನಿಮ್ಮ ಗೆಳೆಯ ವರದಕ್ಷಿಣೆ ಪಡೆದುಕೊಂಡು ಓರ್ವ ಹೆಣ್ಣನ್ನು ಪತ್ನಿಯಾಗಿ ಸ್ವೀಕರಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು, ಪ್ರತಿಭಟಿಸಿದ್ದೀರಾ? ಇದು ತಪ್ಪು ಅಂದಿದ್ದೀರಾ? ನಿನ್ನ ಮದುವೆಗೆ ಬರಲಾರೆ ಅಂತ ಮುಖಕ್ಕೆ ಮುಖ ಕೊಟ್ಟು ಹೇಳಿದ್ದೀರಾ? ಅದೇ ಹಣದಿಂದ ಆತ ಬೈಕ್ ಖರೀದಿಸಿ ತಂದಾಗ ನೀವು ಹೇಗೆ ಪ್ರತಿಕ್ರಿಯಿಸಿದ್ದಿರಿ? ಬೈಕ್‍ನಲ್ಲಿ ಪೇಟೆಗೆ ಒಂದು ಸುತ್ತು ಬಂದು, ಪರ್‍ಫೆಕ್ಟ್ ಸೆಲೆ ಕ್ಷನ್ ಅಂತ ಶಹಬ್ಬಾಸ್‍ಗಿರಿ ಕೊಟ್ಟದ್ದು ನೀವೇ ಅಲ್ಲವೇ? ಮದುವೆಯ ದಿನ ನಗುಮುಖದಿಂದ ಸ್ವಾಗತಿಸುತ್ತಿದ್ದ ವಧುವಿನ ತಂದೆಯನ್ನು ನೋಡಿ ನೀವೂ ಮಂದಹಾಸ ಬೀರಿದ್ದಲ್ಲದೇ ಅವರ ನಗುವಿನ ಹಿಂದೆ ಇರುವ ವಿಷಾದವನ್ನು, ಆ ವಿಷಾದಕ್ಕಿರುವ ಕಾರಣವನ್ನು ಅರಿತುಕೊಳ್ಳಲು ನೀವು ಪ್ರಯತ್ನಿಸಿದ್ದಿರೇ? ಹೇಳಿದಷ್ಟು ಚಿನ್ನ ಹಾಕಲಿಲ್ಲ ಎಂದು ಆಪಾದಿಸಿ ಪತ್ನಿಯನ್ನು ತವರಿಗೆ ಅಟ್ಟಿದ ನಿಮ್ಮ ಗೆಳೆಯನನ್ನು ನೀವು ತರಾಟೆಗೆ ತೆಗೆದುಕೊಂಡಿದ್ದಿರೆ? ಹೆಣ್ಣು ಶಿಶುವಿಗೆ ಜನ್ಮ ನೀಡಿದ ಪತ್ನಿಯನ್ನು ನಿಂದಿಸಿ ಶಿಶುವಿನ ಮುಖವನ್ನೂ ನೋಡದೆ ಹಿಂತಿರುಗಿದ ನಿಮ್ಮ ಗೆಳೆಯನಿಗೆ ನೀವು ಉಪದೇಶಿಸಿದ್ದೀರಾ? ಮೊದಲನೆಯದ್ದು ಗಂಡಾಗಲಿ ಕಣೇ ಎಂದ ಗೆಳತಿಗೆ, ‘ನೀನೂ ಹೆಣ್ಣಲ್ಲವೇ' ಎಂದು ನೆನಪಿಸಿದ್ದೀರಾ? ಆರತಿಗೊಂದು ಕೀರುತಿಗೊಂದು ಎಂಬ ಪದಪ್ರಯೋಗಕ್ಕೆ ವಿರೋಧ ವ್ಯಕ್ತಪಡಿಸಿ, ಹೆಣ್ಣಿನಿಂದಲೂ ಕೀರ್ತಿ ಸಾಧ್ಯ ಎಂದು ತಿದ್ದಲು ಪ್ರಯತ್ನಿಸಿದ್ದೀರಾ? ಸಹೋದರನಿಗೆ ವಧುವನ್ನು ಹುಡುಕುತ್ತಿದ್ದಿರಲ್ಲ, ಆಗ ಆಯ್ಕೆಯ ಮಾನದಂಡಗಳಾದರೂ ಯಾವುದಿತ್ತು? ಹೆಣ್ಣಿಗೆ ಅವಮಾನವಾಗುವ ರೀತಿಯಲ್ಲಿ ನೀವು ನಡಕೊಂಡಿದ್ದಿರೇ? ಎಷ್ಟು ಹೆಣ್ಣು ಮಕ್ಕಳ ಕಣ್ಣೀರಿಗೆ ನಿಮ್ಮ ಆಯ್ಕೆ ವಿಧಾನ ಕಾರಣವಾಗಿತ್ತು? ಅಣ್ಣನ ಪತ್ನಿಯಾಗಿ ನಿಮ್ಮ ಮನೆಗೆ ಬಂದ ಹೆಣ್ಣು ಮಗಳೊಂದಿಗೆ ಓರ್ವ ನಾದಿನಿಯೆಂಬ ನೆಲೆಯಲ್ಲಿ ನೀವು ಹೇಗೆ ವರ್ತಿಸಿದ್ದೀರಿ? ಹೆಣ್ಣನ್ನು, ಚಿಕ್‍ನೀ ಚಮೇಲಿ, ಹಲ್ಕಟ್ ಜವಾನಿ.. ಎಂದೋ ಅಥವಾ ಇನ್ನಿತರ ರೂಪದಲ್ಲೋ ಅವಮಾನಿಸುವ ಧಾಟಿಯಲ್ಲಿರುವ ಹಾಡುಗಳನ್ನು ಪುರುಷ ಗಾಯಕನ ಜೊತೆ ಭಾರೀ ಉತ್ಸಾಹದಿಂದ ನೀವು ಹಾಡಿಲ್ಲವೇ? ಆಗೆಲ್ಲ ನಿಮಗೆ, ದುಡ್ಡಿಗಾಗಿ ಹೆಣ್ಣಿನ ಸ್ಥಾನ ಮಾನ ಬಿಕರಿಯಾಗುತ್ತಿದೆ ಎಂಬ ಪ್ರಜ್ಞೆ ಕಾಡಿತ್ತೇ? ಹೆಣ್ಣಿನ ದೇಹದ ಇಂಚಿಂಚನ್ನೂ ಮನರಂಜನೆಯ ಹೆಸರಲ್ಲಿ ಸೇಲ್‍ಗೆ ಇಡುವ ನಿರ್ದೇಶಕನನ್ನು ನೀವು ತರಾಟೆಗೆ ತೆಗೆದುಕೊಂಡಿದ್ದೀರಾ? ಹೆಣ್ಣು ಮನರಂಜನೆಯ ಸರಕೇ ಎಂದು ಪ್ರಶ್ನಿಸಿದ್ದೀರಾ? ಹೆಣ್ಣಿನ ದೇಹ ಮನವನ್ನು ರಂಜಿಸುವಂಥದ್ದು ಎಂದು ಹೇಳುವ ಸಿನಿಮಾ ನಿರ್ದೇಶಕ ಮತ್ತು ಅದರಿಂದ ಪ್ರಚೋದಿತನಾಗುವವನ ಮಧ್ಯೆ ಏನು ವ್ಯತ್ಯಾಸ ಇದೆ ಎಂಬ ಜಿಜ್ಞಾಸೆ ನಿಮ್ಮಲ್ಲಿ ಎಂದಾದರೂ ಮೊಡಿದ್ದಿದೆಯೇ? ಈ ವಿಷಯವಾಗಿ ನೀವು ಎಷ್ಟು ಸೆಮಿನಾರ್ ಗಳನ್ನು ಆಯೋಜಿಸಿದ್ದೀರಿ? ಎಷ್ಟು ಪ್ರತಿಭಟನೆಗಳನ್ನು ಮಾಡಿದ್ದೀರಿ? ಯುವತಿಯರನ್ನು ಚುಡಾಯಿಸುವುದಕ್ಕೆಂದೇ ನೀವು ಮಾಲ್‍ಗಳ ಮುಂದೆಯೋ ಬಸ್ ನಿಲ್ದಾಣಗಳಲ್ಲೋ  ನಿಂತಿದ್ದಿಲ್ಲವೇ? ಇವೆಲ್ಲ ಸುಮ್ಮನೆ ತಮಾಷೆಗೆ ಎಂದು ಸಮರ್ಥಿಸಿದ್ದೂ ಇಲ್ಲವೇ? ಹೆಣ್ಣನ್ನು ತಮಾಷೆಯ ವಸ್ತುವಿನಿಂತೆ ಕಾಣುವುದನ್ನು ಪ್ರತಿಭಟಿಸಬೇಕೆಂದು ನಿಮಗೆಂದಾದರೂ ಅನಿಸಿದ್ದಿದೆಯೇ? ನಿಮ್ಮ ತಂಗಿಯ ಬಯಕೆಗೆ ವಿರುದ್ಧವಾಗಿ ತಂದೆ ಮದುವೆ ಮಾಡಲು ಮುಂದಾದಾಗ ನೀವು ಅದಕ್ಕೆ ಸಹಕರಿಸಿಲ್ಲವೇ? ಹೆಣ್ಣಿಗೆ ಅಷ್ಟು ತಿಳುವಳಿಕೆಯಿಲ್ಲ ಎಂಬ ಕಾರಣವನ್ನು ನೀವು ಅದಕ್ಕೆ ಸಮರ್ಥನೆಯಾಗಿ ಬಳಸಿಕೊಂಡಿಲ್ಲವೇ? ಓರ್ವ ಹೆಣ್ಣು ಮಗಳು ತನಗಿಷ್ಟವಾದ ಮೈಮುಚ್ಚುವ ಬಟ್ಟೆ ಧರಿಸಿ ಕಾಲೇಜಿಗೆ ಬಂದಾಗ ಅವಳಿಗೆ ನೀವು ಅಡ್ಡ ಹೆಸರಿಟ್ಟು ಚುಡಾಯಿಸಿದ್ದು ನೆನಪಿದೆಯೇ? ದಲಿತರು ಮತ್ತು ಬುಡಕಟ್ಟು ಜನಾಂಗದ ಯುವತಿಯರನ್ನು ಈ ದೇಶದ ಪೊಲೀಸರು ಮತ್ತು ಸೈನಿಕರು ಸಾಮೂಹಿಕ ಅತ್ಯಾಚಾರಕ್ಕೆ ಒಳಪಡಿಸಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು? ನೀವು ಪ್ರತಿಭಟಿಸಿದ್ದೀರಾ? ಪ್ಲೇ ಕಾರ್ಡುಗಳನ್ನು ಹಿಡಿದಿದ್ದೀರಾ? ಗುಜರಾತ್‍ನಲ್ಲಿ 10 ವರ್ಷಗಳ ಹಿಂದೆ ಯುವತಿಯರ, ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದುವಲ್ಲ, ಕನಿಷ್ಠ ನಿಮ್ಮ ಮನಸ್ಸಿನಲ್ಲಾದರೂ ಆ ಬಗ್ಗೆ ಸಿಟ್ಟು ವ್ಯಕ್ತವಾಗಿತ್ತೇ? ನೀವು ಭಾಗವಹಿಸಿದ ಸಭೆ, ಸಮಾರಂಭಗಳಲ್ಲಿ, ವಿಚಾರಗೋಷ್ಠಿಗಳಲ್ಲಿ ಆ ಅತ್ಯಾಚಾರಗಳನ್ನು ಖಂಡಿಸಿ ಮಾತಾಡಿದ್ದೀರಾ? ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದೀರಾ? ಆ ಸಂತ್ರಸ್ತರಿಗೆ ಯಾವ ಬಗೆಯ ಚಿಕಿತ್ಸೆ ದೊರಕಿದೆ, ಅವರ ಸದ್ಯದ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲು ಒಮ್ಮೆಯಾದರೂ ಯತ್ನಿಸಿದ್ದೀರಾ? ಅಂದಹಾಗೆ, ನಿಮ್ಮಂತೆಯೇ ಎರಡು ಕಣ್ಣು, ಕೈ, ಕಾಲುಗಳಿದ್ದರೂ ಮತ್ತು ನಿಮ್ಮಂತೆಯೇ ಅವೂ ಸ್ವಸ್ಥಾನದಲ್ಲಿದ್ದರೂ ದಲಿತೆ ಎಂಬ ಕಾರಣಕ್ಕಾಗಿ ನಿಮ್ಮ ಗೆಳತಿಯರು ಆಕೆಯನ್ನು ಮುಟ್ಟಿಸಿಕೊಳ್ಳದೇ ಇದ್ದಾಗ ನೀವು ಮುಟ್ಟಿಸಿಕೊಳ್ಳುವ ಧೈರ್ಯ ಮಾಡಿದ್ದೀರಾ? ಆಕೆಯನ್ನು ತಮ್ಮ ಬಳಿ ಕೂರಿಸಿ ನೀನೂ ನಮ್ಮಂತೆಯೇ ಮನುಷ್ಯಳು ಎಂದು ಹೇಳುವ ಧೈರ್ಯವನ್ನು ನೀವು ಮಾಡಿಲ್ಲವಲ್ಲವೇ? ಈ ಕಾರಣದಿಂದಾಗಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಾಗ, ನಿಮ್ಮ ಗೆಳತಿಯರು ತೀರಾ ತುಚ್ಛವಾಗಿ ಮಾತಾಡಿಕೊಂಡದ್ದನ್ನು ಕೇಳಿಸಿಯೂ ನೀವು ಮೌನವಹಿಸಿದ್ದಿರಲ್ಲ, ಅದು ಸರಿಯೆಂದು ಹೇಳುತ್ತೀರಾ? ಬಡತನದಿಂದಾಗಿ ಮಾಸಿದ ಬಟ್ಟೆ ಧರಿಸಿ ಕಾಲೇಜಿಗೆ ಬರುತ್ತಿದ್ದ ಯುವತಿಯನ್ನು ನಿಮ್ಮ ಗೆಳತಿಯರು ದೂರ ಇಡುತ್ತಿದ್ದಾಗ ನಿಮ್ಮ ಪ್ರತಿಕ್ರಿಯೆ ಏನಾಗಿತ್ತು? ಆಕೆಯನ್ನು ಸಾಂತ್ವನಿಸುವ ಪ್ರಯತ್ನ ಮಾಡಿದ್ದೀರಾ? ಫೀಸು ಕಟ್ಟಲು ಸಾಧ್ಯವಿಲ್ಲವೆಂದು ಹೇಳಿ ನಿಮ್ಮ ಗೆಳತಿ ಕಾಲೇಜು ವಿದ್ಯಾ ಭ್ಯಾಸವನ್ನು ಮೊಟಕುಗೊಳಿಸಿದಾಗ ಶ್ರೀಮಂತ ವಿದ್ಯಾರ್ಥಿಗಳ ಗುಂಪಿನಲ್ಲಿದ್ದೂ ನೀವು ಹೇಗೆ ಪ್ರತಿಕ್ರಿಯಿಸಿದ್ದಿರಿ? ನಿರ್ಲಕ್ಷ್ಯವೇ ನಿಮ್ಮ ಉತ್ತರವಾಗಿತ್ತಲ್ಲವೇ? ಇಷ್ಟಕ್ಕೂ ಈ ದೇಶದಲ್ಲಿ ಪ್ರತಿವರ್ಷ ಅಸಂಖ್ಯ ಹೆಣ್ಣು ಶಿಶುಗಳು ಹುಟ್ಟುವುದಕ್ಕಿಂತ ಮೊದಲೇ ಕ್ರೂರವಾಗಿ ಹತ್ಯೆಗೀಡಾಗುತ್ತಿದ್ದರೂ ನೀವು ಮಾತೇ ಆಡಿಲ್ಲವಲ್ಲ, ಯಾಕೆ? ಕಣ್ಣು ಬಿಡುವ ಮೊದಲೇ ಕಂದಮ್ಮಗಳನ್ನು ಕೊಲ್ಲುವುದು ಅತ್ಯಾಚಾರಕ್ಕಿಂತಲೂ ಆಘಾತಕಾರಿ ಎಂದು ಘೋಷಿಸುವ ಅವಕಾಶವನ್ನು ನೀವು ಬಳಸಿಕೊಳ್ಳಲಿಲ್ಲವೇಕೆ? ಮಹಿಳಾ ಉದ್ಯೋಗಿಯನ್ನು ನಿಮ್ಮ ಬಾಸ್ ತುಚ್ಛವಾಗಿ ಕಂಡಾಗ ನೀವು ಪ್ರತಿಭಟಿಸಿದ್ದೀರಾ? ಮಾತೆತ್ತಿದರೆ ಎಲ್ಲಿ ಕೆಲಸಕ್ಕೆ ಕುತ್ತು ಬರುತ್ತೋ ಎಂದು ಅಂಜಿ; ಸಹಿಸಿಕೋ, ಎಲ್ಲ ಬಾಸ್‍ಗಳೂ ಹೀಗೆಯೇ.. ಎಂದು ಸಾಂತ್ವನಿಸಿದ್ದಿರಲ್ಲವೇ? ಹೆಣ್ಣೆಂಬ ಕಾರಣಕ್ಕಾಗಿ ಮಹಿಳೆಗೆ ಕಡಿಮೆ ಸಂಬಳ ಕೊಡುತ್ತಿರುವುದನ್ನು ಕಣ್ಣಾರೆ ನೋಡಿಯೂ ನೀವು ಸುಮ್ಮನೆ ಕೂತಿದ್ದು ಸುಳ್ಳೇ? ನಿಮ್ಮ ತಂದೆ ಮನೆಕೆಲಸದಾಕೆಗೆ ಕ್ಷುಲ್ಲಕ ಕಾರಣಕ್ಕಾಗಿ ಏಟು ಕೊಟ್ಟಾಗ ನೀವು ಪ್ರತಿಭಟಿಸಿದ್ದೀರಾ? ಅಪ್ಪನದ್ದು ತಪ್ಪು ಎಂದು ಗೊತ್ತಿದ್ದೂ ಅಪ್ಪನ ಪರವೇ ವಾದ ಮಾಡಿ ಕೆಲಸದಾಕೆಯ ಕಣ್ಣೀರಿಗೆ ಕಾರಣವಾಗಿದ್ದು ನೆನಪಿದೆಯೇ?..
  ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಯುವ ಸಮೋಹದ  ಮುಂದೆ ಇಡಲು ಇನ್ನೂ ಇಂಥ ಅನೇಕ ಪ್ರಶ್ನೆಗಳಿವೆ. ಅವರಿಗೀಗ ತಕ್ಷಣ ನ್ಯಾಯ ಬೇಕಾಗಿದೆ. ಅತ್ಯಾಚಾರಿಗಳನ್ನು ನೇಣಿಗೇರಿಸಿದರೆ, ಕಠಿಣ ಶಿಕ್ಷೆಗೆ ಒಳಪಡಿಸಿದರೆ ಇಂಥ ಕೃತ್ಯಗಳು ಶಾಶ್ವತವಾಗಿ ಕಣ್ಮರೆಯಾದೀತು ಎಂಬ ಧಾಟಿಯಲ್ಲಿ ಅವರು ಮಾತಾಡುತ್ತಿದ್ದಾರೆ. ನಿಜವಾಗಿ, ಮರಣದಂಡನೆಯೊಂದರಿಂದಲೇ ಅತ್ಯಾಚಾರಗಳನ್ನು ಕಡಿಮೆಗೊಳಿಸಲು ಖಂಡಿತ ಸಾಧ್ಯವಿಲ್ಲ. ಅಷ್ಟಕ್ಕೂ, ದೆಹಲಿ ಅತ್ಯಾಚಾರ ಪ್ರಕರಣದ ಮರುದಿನದಿಂದ ಈ ವರೆಗೂ ಪತ್ರಿಕೆಗಳ ತುಂಬ ಅತ್ಯಾಚಾರ ಪ್ರಕರಣಗಳ ಸುದ್ದಿಗಳೇ ತುಂಬಿ ಹೋಗಿರುವುದು ಏನನ್ನು ಸೂಚಿಸುತ್ತದೆ? ಪ್ರತಿಭಟನೆ, ಮರಣದಂಡನೆಯ ಬೆದರಿಕೆಗಳೆಲ್ಲ ಅತ್ಯಾಚಾರಿಗಳ ಮೇಲೆ ಪ್ರಭಾವ ಬೀರುತ್ತಿಲ್ಲ ಎಂಬುದನ್ನೇ ಅಲ್ಲವೇ? ಹೀಗಿರುವಾಗ ಬರೇ ಮರಣದಂಡನೆಯೊಂದನ್ನೇ ಏಕೈಕ ಪರಿಹಾರವಾಗಿ ಬಿಂಬಿಸುವುದು ಎಷ್ಟು ಸರಿ? ಹಾಗಂತ ಮರಣದಂಡನೆ ಬೇಡ ಎಂದಲ್ಲ. ಆದರೆ ಅದಕ್ಕಿಂದಲೂ ಮೊದಲು ಸಾಮಾಜಿಕವಾಗಿ ಆಗಲೇಬೇಕಾದ ಜಾಗೃತಿಯನ್ನು ಕಡೆಗಣಿಸಿದರೆ ಹೇಗೆ? ಶಿಶುವಿನಿಂದ ತೊಡಗಿ ಬಾಲ್ಯ, ಯೌವನ, ವೃದ್ಧಾಪ್ಯ.. ಹೀಗೆ ಎಲ್ಲ ಸ್ಥಿತಿಯಲ್ಲೂ ಹೆಣ್ಣನ್ನು ದ್ವಿತೀಯ ದರ್ಜೆಯವಳಂತೆ, ಚುಡಾವಣೆ, ಮನರಂಜನೆಯ ವಸ್ತುವಿನಂತೆ ಕಾಣುವ ಮನಸ್ಥಿತಿಯನ್ನು ಬದಲಾಯಿಸಲು ಪ್ರಯತ್ನಿಸದೇ ಕೇವಲ ನೇಣುಗಂಭವನ್ನು ತೋರಿಸುವುದರಿಂದ ಭಾರೀ ಬದಲಾವಣೆ ತರಲು ಸಾಧ್ಯವೇ? ದೆಹಲಿಯಲ್ಲಾಗುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತಂತೆ ಸ್ಥಳೀಯ ಪತ್ರಿಕೆಯೊಂದು ಇತ್ತೀಚೆಗೆ ಸಮೀಕ್ಷೆ ನಡೆಸಿತ್ತು. ಅದರ ಪ್ರಕಾರ,
  ..‘90% ಮಹಿಳೆಯರು ತಾವಾಗಿಯೇ ಅತ್ಯಾಚಾರವನ್ನು ಆಹ್ವಾನಿಸುತ್ತಾರೆ, ಅವರು ಧರಿಸುವ ಬಟ್ಟೆ ಅತ್ಯಾಚಾರಕ್ಕೆ ಆಹ್ವಾನಿ ಸುವಂತಿರುತ್ತದೆ, ರಾತ್ರಿ ವೇಳೆ ಅವರು ಒಂಟಿಯಾಗಿ ಹೊರಗೆ ಹೋಗಬಾರದು, ನಿರ್ದಿಷ್ಟ ಫ್ಯಾಶನ್ನಿನ ಡ್ರೆಸ್ ತೊಡುತ್ತಾ, ನೋಡುಗರ ಕಣ್ಣಿನಲ್ಲಿ ತೊಂದರೆ ಹುಡುಕುವುದು ಸರಿಯಲ್ಲ.. ಎಂದೆಲ್ಲಾ ದೆಹಲಿಯ ಪ್ರಮುಖ ಪೊಲೀಸ್ ಅಧಿಕಾರಿಗಳೇ ಸಮೀಕ್ಷಕರೊಂದಿಗೆ ಹೇಳಿರುವುದನ್ನು ಇತ್ತೀಚೆಗೆ ಟಿ.ವಿ. ಚಾನೆಲ್‍ನಲ್ಲಿ ಓರ್ವ ಪೊಲೀಸ್ ಅಧಿಕಾರಿಯೇ ವಿವರಿಸಿದ್ದರು..             (ದಿ ಹಿಂದೂ, 2012 ಡಿ. 25, ಊರ್ವಶಿ ಬುಟಾಲಿಯ).
  ಅಂದಹಾಗೆ, ಬಟ್ಟೆಯೊಂದೇ ಅತ್ಯಾಚಾರಕ್ಕೆ ಕಾರಣವಲ್ಲ, ನಿಜ. ಆದರೆ ಅತ್ಯಾಚಾರಕ್ಕೆ ಅದೂ ಒಂದು ಕಾರಣ ಎಂದು ವಾದಿಸುವುದನ್ನು ಮೂಲಭೂತ ವಾದದಂತೆ, ಮಹಿಳಾ ವಿರೋಧಿ ಧ್ವನಿಯಂತೆ ಯಾಕೆ ಪರಿಗಣಿಸಬೇಕು? ಅತ್ಯಾಚಾರವನ್ನು ತಡೆಗಟ್ಟಲು ಪರಿಹಾರಗಳನ್ನು ಸೂಚಿಸುವವರೆಲ್ಲ ಬಟ್ಟೆಯ ಬಗ್ಗೆ ಮಾತೇ ಆಡುವುದಿಲ್ಲ. ಎಲ್ಲಿ ಮಹಿಳಾವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಬಿಡುತ್ತೇವೋ ಅನ್ನುವ ಅನುಮಾನ ಅವರೆಲ್ಲರನ್ನೂ ಕಾಡುತ್ತಿರಬೇಕು. ಒಂದು ವೇಳೆ  ಶಿಕ್ಷಣ, ಕಠಿಣ ಕಾನೂನು, ಆಧುನಿಕ ಆಲೋಚನೆಗಳೆಲ್ಲ ಅತ್ಯಾಚಾರಗಳನ್ನು ನಿಯಂತ್ರಿಸುತ್ತವೆ ಅನ್ನುವುದಾದರೆ ಅಮೇರಿಕ, ಬ್ರಿಟನ್, ಸ್ವೀಡನ್, ಜರ್ಮನಿಗಳೆಲ್ಲ ಅತ್ಯಾಚಾರ ರಹಿತ ರಾಷ್ಟ್ರಗಳಾಗಿ ಗುರುತಿಸಿಕೊಳ್ಳ ಬೇಕಾಗಿತ್ತಲ್ಲವೇ? ದಿ ಹಿಂದೂ ಪತ್ರಿಕೆಯ ಪ್ರಕಾರ, 2000ದಲ್ಲಿ ನಡೆಸಲಾದ ಸಮೀಕ್ಷೆಯಂತೆ ಬ್ರಿಟನ್‍ನಲ್ಲಿ 4.9% ಮಂದಿ ಲೈಂಗಿಕ ದೌರ್ಜನ್ಯಕ್ಕೆ ಅಥವಾ ಅತ್ಯಾಚಾರಕ್ಕೆ ಒಳಗಾಗಿದ್ದರು. ಇತ್ತೀಚಿನ ಸಮೀಕ್ಷೆಯ ಪ್ರಕಾರ ಇದರ ಪ್ರಮಾಣ ಶೇ. 10ಕ್ಕೆ ತಲುಪಿದೆ. ಐರ್ಲೆಂಡ್, ಜರ್ಮನಿ, ಸ್ವೀಡನ್‍ಗಳಲ್ಲಿ ಲೈಂಗಿಕ ದೌರ್ಜನ್ಯದ ಪ್ರಮಾಣವು ಶೇ. 25ರಿಂದ ಶೇ. 34ಕ್ಕೆ ಏರಿದೆ. ಅಮೇರಿಕವೂ ಅತ್ಯಾಚಾರ ಪ್ರಕರಣಗಳಿಂದ ಹೊರತಾಗಿಲ್ಲ. ಪ್ರತಿ 2 ನಿಮಿಷಗಳಿಗೊಮ್ಮೆ ಓರ್ವರು ಅಲ್ಲಿ ಲೈಂಗಿಕ ಹಿಂಸೆಗೆ ಗುರಿಯಾಗುತ್ತಾರೆ. ಅದರಲ್ಲೂ ಅಮೇರಿಕದ ಪ್ರತಿ 100 ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ 46 ಪ್ರಕರಣಗಳಷ್ಟೇ ಸುದ್ದಿಯಾಗುತ್ತವೆ. ಇವುಗಳಲ್ಲಿ ಸರಾಸರಿ 12 ಮಂದಿ ಆರೋಪಿಗಳು ಮಾತ್ರ ಬಂಧನಕ್ಕೆ ಒಳಗಾಗುತ್ತಾರೆ. ಅಂದರೆ, 4 ಅತ್ಯಾಚಾರ ಪ್ರಕರಣಗಳಲ್ಲಿ ಓರ್ವನನ್ನು ಮಾತ್ರ ಬಂಧಿಸಿದಂತಾಗುತ್ತದೆ. ಕೊನೆಗೆ ಸರಾಸರಿ ಮೊವರಿಗೆ ಶಿಕ್ಷೆಯಾಗುತ್ತದೆ.. (ದಿ ಹಿಂದೂ, ಡಿ. 27, 2012, ಪ್ರವೀಣ್ ಸ್ವಾಮಿ). ಒಂದು ರೀತಿಯಲ್ಲಿ, 46 ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಶಿಕ್ಷೆಯಾಗುವುದು ಬರೇ ಮೊವರಿಗೆ! ಮುಂದುವರಿದ ಅಮೇರಿಕದ ಸ್ಥಿತಿಯೇ ಹೀಗಿರುವಾಗ ಇನ್ನು ಅದನ್ನೇ ಅನುಸರಿಸುತ್ತಿರುವ ಭಾರತದ ಸ್ಥಿತಿ ಭಿನ್ನವಾಗುವುದಾದರೂ ಹೇಗೆ? ಅಷ್ಟಕ್ಕೂ ಅತ್ಯಾಚಾರಿಗಳಿಗೆ ಮರಣ ದಂಡನೆಯಾಗಬೇಕೆಂದು ಆಗ್ರಹಿಸುತ್ತಿರುವ ವಿದ್ಯಾರ್ಥಿಗಳೆಲ್ಲ ತಮ್ಮ ಸಂಸ್ಕ್ರಿತಿ, ಜೀವನ ಕ್ರಮ, ಆಲೋಚನೆ, ಉಡುಪುಗಳ ಕುರಿತಂತೆ ಪುನರ್ ವಿಮರ್ಶೆಗೆ ಮುಂದಾದರೇನು? ಆಧುನಿಕ ಮತ್ತು ಪಾಶ್ಚಾತ್ಯ ಪ್ರೇರಿತ ಜೀವನ ಕ್ರಮಗಳಿಗೂ ಲೈಂಗಿಕ ದೌರ್ಜನ್ಯಗಳಿಗೂ ಸಂಬಂಧವಿದೆಯೇ ಎಂದು ಆಲೋಚಿಸಿದರೇನು? ಇಂಥ ದೌರ್ಜನ್ಯಗಳನ್ನು ತಡೆಗಟ್ಟುವುದಕ್ಕೆ ಧಾರ್ಮಿಕ ಚಿಂತನೆಗಳಲ್ಲಿ ಏನು ಪರಿಹಾರವಿದೆ ಮತ್ತು ಅವೆಷ್ಟು ಪ್ರಾಯೋಗಿಕ ಎಂದು ಚರ್ಚಿಸಿದರೇನು?
  ಆದ್ದರಿಂದಲೇ,
ಹೆಣ್ಣು-ಗಂಡು ಮುಕ್ತವಾಗಿ ಬೆರೆಯಬಾರದು; ಹೆಣ್ಣು ತನ್ನ ದೇಹ ಪ್ರದರ್ಶಿಸಬಾರದು; ಗಂಡು ತನ್ನ ದೃಷ್ಟಿಯನ್ನು ಕೆಳಗಿರಿಸಬೇಕು (ಪವಿತ್ರ ಕುರ್‍ಆನ್: 24: 30-31); ಹೆಣ್ಣಿನ ಕುರಿತಂತೆ ಓರ್ವ ಗಂಡು ನಿಂದಿಸುವುದಿರಲಿ, ಛೆ ಎಂಬ ಪದವನ್ನೂ ಬಳಸಬಾರದು (ಪವಿತ್ರ ಕುರ್‍ಆನ್: 17: 23); ಓರ್ವನು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಉತ್ತಮ ರೀತಿಯಲ್ಲಿ ಸಾಕಿ ಮದುವೆ ಮಾಡಿಸಿಕೊಟ್ಟರೆ ಆತ ಸ್ವರ್ಗಕ್ಕೆ ಹೋಗುತ್ತಾನೆ; ಹೆಣ್ಣನ್ನು ಗೌರವಿಸಿ, ಸೇವೆ ಮಾಡಿದರೆ ಸ್ವರ್ಗವಿದೆ; ಅತ್ಯಾ ಚಾರಕ್ಕೆ ಅಥವಾ ವ್ಯಭಿಚಾರಕ್ಕೆ ಮರಣ ದಂಡನೆಯಿದೆ (ಪವಿತ್ರ ಕುರ್‍ಆನ್: 4: 25, 24: 2); ನಿಮ್ಮ ಮನೆಯ ಮಹಿಳೆಯರೊಂದಿಗೆ ಉತ್ತಮವಾಗಿ ವರ್ತಿಸುವವನೇ ಅತ್ಯುತ್ತಮ ವ್ಯಕ್ತಿ; ಪತಿ ಮತ್ತು ಪತ್ನಿ ಪರಸ್ಪರ ಉಡುಪಾಗಿದ್ದಾರೆ (ಸಮಾನ) (ಪವಿತ್ರ ಕುರ್‍ಆನ್: 2: 187); ಕೊಲೆಗೀಡಾದ ಶಿಶುವಿನಲ್ಲೇ ನಾಳೆ ದೇವನು ಅದರ ಕಾರಣವನ್ನು ಕೇಳಿ ಅಪರಾಧಿ ಹೆತ್ತವರನ್ನು ಶಿಕ್ಷಿಸುವನು (ಪವಿತ್ರ ಕುರ್‍ಆನ್: 181: 8-9); ವರದಕ್ಷಿಣೆ ನಿಷಿದ್ಧವಾಗಿದೆ (ಪವಿತ್ರ ಕುರ್‍ಆನ್: 4:4, 2:188).. ಎಂದು ಮುಂತಾಗಿ ಸಮಾಜವನ್ನು ತಳಮಟ್ಟದಿಂದಲೇ ತಿದ್ದಿದ ಮತ್ತು ಅದರ ಆಧಾರದಲ್ಲೇ  ಒಂದು ಮಾದರಿ ಸಮಾಜವನ್ನು ಪ್ರಾಯೋಗಿಕವಾಗಿ ರಚಿಸಿ ತೋರಿಸಿದ ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಮುಹಮ್ಮದ್(ಸ) ಇಷ್ಟವಾಗುವುದು. ಅಂದಹಾಗೆ,
  ‘ಉತ್ತಮ ಚಿಕಿತ್ಸೆಗಾಗಿ ಅತ್ಯಾಚಾರಕ್ಕೀಡಾದ ಯುವತಿಯನ್ನು  ಸಿಂಗಾಪುರಕ್ಕೆ ಕಳುಹಿಸಬಹುದಾದರೆ ಉತ್ತಮ ನ್ಯಾಯಕ್ಕಾಗಿ ಆರೋಪಿಗಳನ್ನು ಯಾಕೆ ಸೌದಿ ಅರೇಬಿಯಾಕ್ಕೆ ಕಳುಹಿಸಬಾರದು...' ಎಂದು ಸಿನೆಮಾ ನಿರ್ದೇಶಕ ಸಂದೀಪ್ ಮಲಾನಿ ಕಳೆದ ವಾರ ಫೇಸ್ ಬುಕ್‍ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಇನ್ನೂ ಒಂದು ವಾಕ್ಯವನ್ನು ಸೇರಿಸಬಹುದು,
  ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಇಸ್ಲಾಮೀ  ಕಾನೂನುಗಳನ್ನು ಭಾರತ ಯಾಕೆ ಅಳವಡಿಸಿಕೊಳ್ಳಬಾರದು?

Tuesday, December 25, 2012

ಕಳಪೆ ವಸ್ತುಗಳ ಮಾರಾಟಗಾರ ಥಳಿತಕ್ಕೆ ಒಳಗಾಗಿದ್ದಾನೆಯೇ ಹೊರತು ಸನ್ಮಾನಕ್ಕಲ್ಲ..


“ನನ್ನ, ಗುಜರಾತ್ ಪ್ರವಾಸದ ಬಗ್ಗೆ ಪ್ರತಿಕ್ರಿಯೆ ನೀಡಿದವರಿಗೆ, ನನ್ನನ್ನು ಮನಸ್ಸಿಗೆ ಬಂದಂತೆ ಬೈದವರಿಗೆ, ತಮ್ಮ ಮನಸ್ಸಿನ ವಿಕಾರವನ್ನು ಹೊರ ಹಾಕಿ ವಿಜೃಂಭಿಸಿದವರಿಗೆ, ಗುಜರಾತಿಗೆ ಹುಡುಗಿಯನ್ನು ಕರಕೊಂಡು ಹೋಗಿದ್ದೆಯಾ ಎಂದು ಪ್ರಶ್ನಿಸುವ ಮೊಲಕ ತಮ್ಮ ಮನಸ್ಸಿನ ಆಲೋಚನೆಯನ್ನು ಹೊರಹಾಕಿದ ಮಹಾತ್ಮರಿಗೆ ಎಲ್ಲರಿಗೂ ಕೃತಜ್ಞತೆಗಳು. ನಮ್ಮ ಮಾತು ನಮ್ಮ ಸಂಸ್ಕ್ರಿತಿಯನ್ನು ಹೊರ ಹಾಕುತ್ತದೆ ಎಂಬ ಮಾತಿಗೆ ನನಗೆ ಮತ್ತೊಮ್ಮೆ ಪುರಾವೆ ದೊರಕಿದೆ. ಹಾಗೆ ಮೋದಿಯವರ ಉಗ್ರ ಅಭಿಮಾನಿಗಳ ಮನಸ್ಸು ಹೇಗಿದೆ ಎಂಬುದು ನನಗೆ ಮತ್ತೊಮ್ಮೆ ಅರ್ಥವಾಗಿದೆ. ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೊರಗೆ ಹಾಕಿ ಬೆತ್ತಲೆಯಾದ ಎಲ್ಲರಿಗೂ ಮತ್ತೊಮ್ಮೆ ಕೃತಜ್ಞತೆಗಳು...”
  ಹಾಗಂತ ಕನ್ನಡದ ಖ್ಯಾತ ಪತ್ರಕರ್ತರೂ ಸಮಯ ಟಿ.ವಿ. ಚಾನೆಲ್‍ನಲ್ಲಿ ಈ ಹಿಂದೆ ಸಂಪಾದಕರೂ ಆಗಿದ್ದ ಶಶಿಧರ್ ಭಟ್ರು 2012, ಡಿ. 17ರಂದು ತಮ್ಮ ಫೇಸ್‍ಬುಕ್‍ನಲ್ಲಿ ಬರೆದಿದ್ದರು. ಅದಕ್ಕೆ ಕಾರಣವೂ ಇದೆ.
  ಅವರು ಇತ್ತೀಚೆಗೆ ಎರಡು ದಿನಗಳ ಕಾಲ ಗುಜರಾತ್‍ಗೆ ಭೇಟಿ ನೀಡಿದ್ದರು. ಆಗ ತಮ್ಮ ಅನುಭವಕ್ಕೆ ಬಂದದ್ದನ್ನು, ‘ಮೋದಿಯ ನಾಡಿನಲ್ಲಿ ಎರಡು ದಿನ ಕಂಡದ್ದು, ಕೇಳಿದ್ದು..’ ಎಂಬ ಶೀರ್ಷಿಕೆಯಲ್ಲಿ ಲೇಖನ ಬರೆದಿದ್ದರು. ಇವರ ಗಡ್ಡವನ್ನು ನೋಡಿ ಮುಸ್ಲಿಮ್ ಎಂದು ಭಾವಿಸಿದ ಅಹ್ಮದಾಬಾದ್‍ನ ಹೊಟೇಲ್‍ನ ಮಾಲಿಕ ರೂಮ್ ಕೊಡಲು ನಿರಾಕರಿಸಿದ್ದು, ಆತ ಮೋದಿಯ ಅಭಿವೃದ್ಧಿಯ ಬಗ್ಗೆ ಹೊಗಳಿದ್ದು, ಯಾವ ಅಭಿವೃದ್ಧಿ ಎಂದು ಇವರು ಪ್ರಶ್ನಿಸಿದಾಗ ಉತ್ತರಕ್ಕಾಗಿ ತಡಕಾಡಿದ್ದು... ಎಲ್ಲವನ್ನೂ ಭಟ್ರು ವಿಸ್ತ್ರತವಾಗಿ ಬರೆದಿದ್ದರು. ಮಾತ್ರವಲ್ಲ, ಇಂಥ ರಾಜ್ಯಕ್ಕೆ ಧಿಕ್ಕಾರವಿರಲಿ ಎಂದೂ ಸೇರಿಸಿದ್ದರು. ಡಿ. 15ರಂದು ಬರೆದ ಈ ಲೇಖನಕ್ಕೆ ಕೇವಲ ಎರಡೇ ದಿನಗಳಲ್ಲಿ ಓದುಗರಿಂದ 188 ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದುವು. ಹೆಚ್ಚಿನ ಪ್ರತಿಕ್ರಿಯೆಗಳೂ ಭಟ್ರನ್ನು ಹೀಯಾಳಿಸುವ ಮತ್ತು ಮೋದಿಯನ್ನು ಸಂತನಂತೆ ಹೊಗಳುವ ಧಾಟಿಯಲ್ಲಿತ್ತು. ನಿಜವಾಗಿ, ಇದು ಶಶಿಧರ ಭಟ್ ಎಂಬ ಓರ್ವ ಪತ್ರಕರ್ತರಿಗಾದ ಅನುಭವವಷ್ಟೇ ಅಲ್ಲ, ಮೋದಿಯನ್ನು ಟೀಕಿಸುವ ಪ್ರತಿಯೊಬ್ಬರನ್ನೂ ಇವತ್ತು ಇಂಥ ಹೀಯಾಳಿಕೆಗಳು ಬೆನ್ನಟ್ಟುತ್ತಾ ಬರುತ್ತಿವೆ. ಮೋದಿಯ ಕುರಿತಂತೆ ಒಂದು ಬಗೆಯ ಭ್ರಮೆ ಮತ್ತು ಭ್ರಾಂತಿಯನ್ನು ತುಂಬಿಕೊಂಡ ಯುವ ಸಮೂಹ ವೊಂದು ಈ ದೇಶದಲ್ಲಿ ತಲೆ ಎತ್ತುತ್ತಾ ಇದೆ. ಮೋದಿಯನ್ನು ‘ಅಭಿವೃದ್ಧಿಯ ಹರಿಕಾರ’, ‘ಹಿಂದೂ ಹೃದಯ ಸಾಮ್ರಾಟ..’ ಎಂದೆಲ್ಲಾ ಈ ಗುಂಪು ಹಾಡಿ ಹೊಗಳುತ್ತಾ ಇದೆ. ‘ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದ ಅತುಲ್ ಸೂದ್ ಸೇರಿದಂತೆ 10 ಮಂದಿ ಪ್ರಮುಖ ಸಂಶೋಧಕರು ಇತ್ತೀಚೆಗೆ ಗುಜರಾತ್‍ನಾದ್ಯಂತ ಸುತ್ತಾಡಿ ತಯಾರಿಸಿದ, ‘ಅಭಿವೃದ್ಧಿಯ ನಡುವೆ ಬಡತನ: ಗುಜರಾತ್‍ನ ಅಭಿವೃದ್ಧಿಯ ದುರಂತ’ (Poverty Amidst Prosperity: Essays on the Trujectory of Development in Gujrat) ಎಂಬ ಅಧ್ಯಯನಾತ್ಮಕ ಪ್ರಬಂಧದ ಅಂಕಿ ಅಂಶಗಳನ್ನು ಮುಂದಿಟ್ಟು ಚರ್ಚಿಸಿದರೂ ಈ ಗುಂಪು, ಆ ಸಂಶೋಧಕರನ್ನೇ ಹಿಂದೂ ವಿರೋಧಿಗಳು ಅನ್ನುತ್ತವೆ. ಮೋದಿಯನ್ನು ಟೀಕಿಸುವುದು ಹಿಂದೂಗಳನ್ನು ಟೀಕಿಸಿದಂತೆ ಎಂಬೊಂದು ಸುಳ್ಳನ್ನು ಹರಡಲು ಈ ಗುಂಪು ತೀವ್ರವಾಗಿ ಶ್ರಮಿಸುತ್ತಿದೆ. ಅಡ್ವಾಣಿಯನ್ನೊ ಸುಶ್ಮಾ, ಜೈಟ್ಲಿಯನ್ನೋ ಟೀಕಿಸಿದರೆ ಸುಮ್ಮನಿರುವ ಈ ಫ್ಯಾನ್ ಕ್ಲಬ್, ಮೋದಿಯನ್ನು ಟೀಕಿಸಿದ ಕೂಡಲೇ ಜಾಗೃತಗೊಳ್ಳುತ್ತದೆ. ಮೋದಿ ಟೀಕಾತೀತ, ಅವರು ದೇಶಕ್ಕೇ ರೋಲ್ ಮಾಡೆಲ್ ಎಂಬುದನ್ನು ಮಾಧ್ಯಮಗಳ ಮುಖಾಂತರ ನಿರಂತರವಾಗಿ ಸಾರ್ವಜನಿಕರಿಗೆ ಮುಟ್ಟಿಸುವ ಶ್ರಮದಲ್ಲಿ ಈ ಮಂದಿ ನಿರತರಾಗಿದ್ದಾರೆ. ಮಾಧ್ಯಮಗಳೂ ಇದರಲ್ಲಿ ಭಾಗಿಯಾಗಿವೆ. ಪುರಾವೆ ಬೇಕಾದರೆ, ಗುಜರಾತ್ ಚುನಾವಣೆಯ ಫಲಿತಾಂಶಕ್ಕೆ ಕನ್ನಡ ಪತ್ರಿಕೆಗಳು ಕೊಟ್ಟ ಶೀರ್ಷಿಕೆಗಳನ್ನೇ ಎತ್ತಿಕೊಳ್ಳಿ. ‘ಮೋದಿಗೆ ಹ್ಯಾಟ್ರಿಕ್ ಗೆಲುವು..’ (Hat - trick for Narendra Modi ..) ಎಂಬ ಸಹಜ ಮತ್ತು ಉತ್ಪ್ರೇಕ್ಷೆಯಿಲ್ಲದ ಶೈಲಿಯ ಶೀರ್ಷಿಕೆಯಲ್ಲಿ ದಿ ಹಿಂದೂ ಮತ್ತು ಟೈಮ್ಸ್ ಆಫ್ ಇಂಡಿಯಾದಂಥ ಆಂಗ್ಲ ಪತ್ರಿಕೆಗಳು ವರದಿ ಪ್ರಕಟಿಸಿದ್ದರೆ, ಕನ್ನಡಪ್ರಭ ಪತ್ರಿಕೆಯು-ನಮೋ ನಮಃ ‘ವೀರಭದ್ರ’ ಎಂದೂ, ಉದಯವಾಣಿ- ಮೋದಿ ಮೋಡಿ ಮುಮ್ಮಡಿ ಎಂದೂ ಹೊಸದಿಂಗತ- ನಮೋ ಗುಜರಾತ್ ಎಂದೂ ಶೀರ್ಷಿಕೆ ಕೊಟ್ಟಿದ್ದುವು. ಮೋದಿಯನ್ನು ದೈವತ್ವಕ್ಕೇರಿಸುವ ಶೈಲಿಯ ಇಂಥ ಶೀರ್ಷಿಕೆಗಳು ಕೊಡುವ ಸೂಚನೆಯಾದರೂ ಏನು? ಜನ ಸಾಮಾನ್ಯರ ಮೇಲೆ ಇಂಥ ಶೀರ್ಷಿಕೆಗಳು ಯಾವ ಬಗೆಯ ಪರಿಣಾಮವನ್ನು ಬೀರಿಯಾವು? ಅಂದಹಾಗೆ, ಸುದ್ದಿಯೊಂದರ ಶೀರ್ಷಿಕೆಗೂ ಲೇಖನವೊಂದರ ಶೀರ್ಷಿಕೆಗೂ ವ್ಯತ್ಯಾಸ ಇದೆಯಲ್ಲವೇ? ಮೋದಿಯನ್ನು ಆರಾಧಿಸುವ ಪತ್ರಕರ್ತರು ಮಾಧ್ಯಮಗಳಲ್ಲಿದ್ದರೆ ಸುದ್ದಿ ಹೇಗೆ ತಿರುಚಿಕೊಳ್ಳಬಹುದು ಎನ್ನುವುದಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕೆ?
ಅಕ್ಟೋಬರ್ 9
  ‘..ಸಂಜೆ 7 ಗಂಟೆಗೆ ಅಹ್ಮದಾಬಾದ್‍ನಲ್ಲಿ ಮೋದಿಯ ಚುನಾವಣಾ ಭಾಷಣ ಏರ್ಪಾಡಾಗಿತ್ತು. ಆದರೆ ಮೋದಿ ಆಗಮಿಸಿದ್ದು 10 ಗಂಟೆಗೆ. 7 ಗಂಟೆಗೆ ಬಂದು ಮೋದಿಯನ್ನು ಕಾಯುತ್ತಿದ್ದ ಜನರಿಗೆ ಬಿಜೆಪಿ ನಾಯಕರು ಮೋದಿಯ ಮುಖವಾಡ, ಪೋಸ್ಟರ್ಸ್, ಮೋದಿಯ ಗ್ಲೌವ್ಸ್, ಮೋದಿ ಟೀಶರ್ಟ್, ಶಾಲು... ಎಲ್ಲವನ್ನೂ ಹಂಚತೊಡಗಿದರು. ಸಾಮಾನ್ಯ ವ್ಯಕ್ತಿಯೊಬ್ಬ ಸಭೆಯತ್ತ ನೋಡಿದರೆ ಕಾಣಿಸುವುದು ಎಲ್ಲೆಲ್ಲೂ ಮೋದಿಯೇ. ಆ ಬಳಿಕ ಮೋದಿ ಮತ್ತು ಗುಜರಾತನ್ನು ಹೊಗಳುವ ಹಾಡು, ನರ್ತನಗಳು ಆರಂಭವಾದುವು. ಮೋದಿಯನ್ನು ಶಿವಾಜಿ, ಪೃಥ್ವಿರಾಜ್ ಚೌಹಾಣ್ ಮತ್ತು ವಿವೇಕಾನಂದರಿಗೆ ಹೋಲಿಕೆ ಮಾಡಿ ಗಾಯಕನೋರ್ವ ಹಾಡತೊಡಗಿದ. ರಾಜ್ಯ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಮೋದಿಯ ಸ್ತುತಿ ಮಾಡತೊಡಗಿದರು. ಆ ಬಳಿಕ ಬಿಜೆಪಿ ಕಾರ್ಯಕರ್ತರು ಮೋದಿಯ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆರಂಭಿಸಿದರು. ನೆರೆದ ಮಂದಿ, ಮೋದಿ ಇದಲ್ಲ, ಇದಲ್ಲ ಮೋದಿ.. ಎಂದು ಬೊಬ್ಬೆ ಹಾಕುತ್ತಿದ್ದರೆ, ಇಡೀ ಸಭೆಯಲ್ಲೇ ರೋಮಾಂಚನ, ಕುತೂಹಲ. ಕೊನೆಗೆ ಮೋದಿ ಬಂದರು..’ (ವಿದ್ಯಾ ಸುಬ್ರಹ್ಮಣ್ಯಂ, 2012 ಡಿ. 13. ದಿ ಹಿಂದೂ). ನಿಜವಾಗಿ ಮೋದಿಗೆ ಪ್ರಚಾರದ ಕಲೆ ಚೆನ್ನಾಗಿ ಗೊತ್ತು. ‘2012ರ ನವೆಂಬರ್ ನಲ್ಲಿ ಮೋದಿಯ 50 ಸಾವಿರ ಮುಖವಾಡಗಳನ್ನು ಖರೀದಿಸಲಾಗಿತ್ತು. ಆದರೆ ಆ ಮುಖವಾಡ ಸೂಕ್ತವಾಗಿಲ್ಲ, ಮುಖವಾಡದಲ್ಲಿ ಚರ್ಮ ಜೋತು ಬಿದ್ದಿದೆ, ವೃದ್ಧರಂತೆ ಕಾಣುತ್ತದೆಂದು ಹೇಳಿ ಅವನ್ನು ತಿರಸ್ಕರಿಸಲಾಯಿತಲ್ಲದೇ, 3 ಲಕ್ಷ ಹೊಸ ಮುಖವಾಡಕ್ಕೆ ಆದೇಶ ನೀಡಲಾಯಿತು.’ (ದಿ ಹಿಂದೂ, ಡಿ. 20, 2012) ಇದಲ್ಲದೇ ಮೋದಿಯ ಮುಗಿಲೆತ್ತರದ ಕಟೌಟುಗಳನ್ನು ಬ್ಯುಝಿ ಟ್ರಾಫಿಕ್‍ನ ಹತ್ತಿರ, ಮಾಲ್‍ಗಳ ಬಳಿ, ಸರ್ಕಲ್‍ಗಳಲ್ಲಿ ಧಾರಾಳ ತೂಗು ಹಾಕಲಾಗಿದೆ. ಉರಿಯುತ್ತಿದ್ದ ರೈಲಿನ ಪ್ರತಿಕೃತಿಯೊಂದಿಗೆ 2002ರಲ್ಲಿ ಮೋದಿ ಚುನಾವಣಾ ಪ್ರಚಾರ ನಡೆಸಿದ್ದರೆ, 2007ರ ಚುನಾವಣೆಯಲ್ಲಿ ಮೋದಿ ರೈಲನ್ನು ಕೈಬಿಟ್ಟು 6 ಕೋಟಿ ಗುಜರಾತಿಯನ್ನರ ‘ಅಸ್ಮಿತೆ’ ಯನ್ನು (ಗೌರವ) ಎತ್ತಿಕೊಂಡರು. ಮೌತ್‍ಕಾ ಸೌಧಾಗರ್ ಎಂದು ಸೋನಿಯಾ ಗಾಂಧಿ ಹೇಳಿದ್ದನ್ನೇ ಅಸ್ತ್ರವಾಗಿ ಬಳಸಿ ಕೊಂಡರು. ಆದರೆ ಈ 2012ರಲ್ಲಿ ಮೋದಿಗೆ ಆ ಕೋಮು ಅಜೆಂಡಾವೋ, ಅಸ್ಮಿತೆಯೋ ಅಗತ್ಯವಿರಲಿಲ್ಲ. ಅವರು ಅಭಿವೃದ್ಧಿಯ ಮಾತುಗಳನ್ನಾಡಿದರು. 3ಡಿ ತಂತ್ರಜ್ಞಾನದ ಮುಖಾಂತರ 5 ದಿನಗಳಲ್ಲಿ 106 ಕಡೆ ಚುನಾವಣಾ ಭಾಷಣಗಳನ್ನು ನೀಡಿದರು. ಮೋದಿಯ ಅಭಿವೃದ್ಧಿ ಮಂತ್ರ ಪೊಳ್ಳು ಎಂಬುದನ್ನು ಅಂಕಿ-ಸಂಖ್ಯೆಗಳ ಆಧಾರದಲ್ಲಿ ಸಮೀಕ್ಷರು ಎಷ್ಟೇ ಹೇಳಿದರೂ, 3ಡಿ ತಂತ್ರಜ್ಞಾನದಲ್ಲಿ ಕಾಣಿಸಿಕೊಳ್ಳುವ ಮೋದಿಯ ಬಗ್ಗೆ ಜನಸಾಮಾನ್ಯರು ಆಕರ್ಷಿತರಾಗಲಾರರೆಂದು ಹೇಗೆ ಹೇಳುವುದು? ಮೋದಿ ಗುಜರಾತ್‍ಗಾಗಿ ಏನೋ ಅದ್ಭುತವಾದುದನ್ನು ಮಾಡುತ್ತಿದ್ದಾರೆ ಎಂದು ಜನಸಾಮಾನ್ಯರು ಅಂದುಕೊಳ್ಳುವುದಕ್ಕೆ ಮುಖವಾಡ, ಕಟೌಟ್‍ಗಳು, 3ಡಿಗಳಂಥ ಗಿಮಿಕ್‍ಗಳು ಪ್ರೇರಕವಾಗಲಾರದೇ? ಗುಜರಾತ್‍ನ ಗಲ್ಲಿಗಳಲ್ಲಿ, ಬೀದಿ, ಸಭೆಗಳಲ್ಲಿ.. ಹೀಗೆ ಮೋದಿಯ ಮುಖವಾಡವನ್ನು ಧರಿಸಿದ ಮಂದಿ ಎಲ್ಲೆಲ್ಲೂ ಕಾಣಿಸಿಕೊಳ್ಳುವಾಗ ಒಂದು ಬಗೆಯ ಭ್ರಮೆಗೆ ಸಾರ್ವಜನಿಕರು ಒಳಗಾಗುವ ಸಾಧ್ಯತೆ ಖಂಡಿತ ಇದೆ. ಇಷ್ಟಕ್ಕೂ, 2009ರಲ್ಲೇ ಮೋದಿ ಬ್ಲಾಗು ಆರಂಭಿಸಿದ್ದಾರೆ. ಅವರು ಪ್ರತಿದಿನ ಟ್ವೀಟ್ ಮಾಡುತ್ತಾರೆ. ಫೇಸ್‍ಬುಕ್‍ನಲ್ಲಿದ್ದಾರೆ. ನಿಜವಾಗಿ ಇವತ್ತಿನ ದಿನಗಳಲ್ಲಿ ಯಾವೆಲ್ಲ ಮಾಧ್ಯಮಗಳನ್ನು ಪ್ರಚಾರಕ್ಕಾಗಿ ಬಳಸಲು ಸಾಧ್ಯವಿದೆಯೋ ಅವೆಲ್ಲವನ್ನೂ ಮೋದಿ ಬಳಸುತ್ತಿದ್ದಾರೆ. 2007ರ ಚುನಾವಣೆಯ ಸಂದರ್ಭದಲ್ಲಿ ಮಿಯಾಂ ಮುಶರ್ರಫ್ ಎಂದು ಪಾಕಿಸ್ತಾನದ ಮುಶರ್ರಫ್‍ರನ್ನು ಛೇಡಿಸುತ್ತಾ, ಆ ಮುಖಾಂತರ ಪರೋಕ್ಷವಾಗಿ ಮುಸ್ಲಿಮರನ್ನು ವ್ಯಂಗ್ಯಕ್ಕೆ ಒಳಪಡಿಸಿದ್ದರೆ ಈ ಬಾರಿ ಸೋನಿಯಾರ ಆಪ್ತ ಕಾರ್ಯದರ್ಶಿ ಗುಜರಾತ್‍ನ ಅಹ್ಮದ್ ಪಟೇಲ್‍ರನ್ನು ಅಹ್ಮದ್ ಭಾಯಿ ಎಂದು ಸಂಬೋಧಿಸುತ್ತಾ, ಬಿಜೆಪಿ ಸೋತರೆ ಓರ್ವ ಮುಸ್ಲಿಮ್ ವ್ಯಕ್ತಿ  ಗುಜರಾತ್‍ನ ಮುಖ್ಯಮಂತ್ರಿ ಆಗುತ್ತಾರೆ ಎಂಬಂತೆ ಬಿಂಬಿಸುತ್ತಾರೆ. ಅಲ್ಲೂ ಪಟೇಲ್ ಎಂಬ ಪದವನ್ನು ಬೇಕೆಂದೇ ಅಡಗಿಸುತ್ತಾರೆ. ನಿಜವಾಗಿ ಗುಜರಾತ್‍ನ ಮುಖ್ಯಮಂತ್ರಿ. ಅಭ್ಯರ್ಥಿಯನ್ನು ಕಾಂಗ್ರೆಸ್ ಘೋಷಿಸಿಯೇ ಇರಲಿಲ್ಲ. ಮಾತ್ರವಲ್ಲ ಅಹ್ಮದ್ ಪಟೇಲ್‍ರು ಅಲ್ಲಿನ ಮುಖ್ಯಮಂತ್ರಿ ಆಗುವ ಸಾಧ್ಯತೆಯೂ ಇರಲಿಲ್ಲ. ಆದರೆ, ಇಲ್ಲದ ಸಾಧ್ಯತೆಯನ್ನು ಇದ್ದಂತೆ ತೋರಿಸಿ ಜನರನ್ನು ದಿಕ್ಕು ತಪ್ಪಿಸುವ, ಮುಸ್ಲಿಮ್ ವ್ಯಕ್ತಿ ಮುಖ್ಯಮಂತ್ರಿಯಾಗುವುದು ಅಪಾಯಕಾರಿ ಎಂಬ ಸೂಚನೆ ರವಾನಿಸುವ ತಂತ್ರವನ್ನು ಮೋದಿ ಹೆಣೆದರು. ಅಪ್ಪಟ ಸುಳ್ಳು, ಕೋಮುವಾದಿ ಭಾಷೆ ಮತ್ತು ಜನಾಂಗದ್ವೇಷಿ ವಿಚಾರಗಳನ್ನು ಹರಡುತ್ತಾ, ತನ್ನ ವಿರುದ್ಧ ಬರುವ ಆರೋಪಗಳನ್ನೆಲ್ಲಾ ‘ಹಿಂದೂ ವಿರೋಧಿ’ ಎಂಬಂತೆ ಚಿತ್ರಿಸಲು ಒಂದು ಹಂತದವರೆಗೆ ಮೋದಿ ಯಶಸ್ವಿಯಾಗಿದ್ದಾರೆ. ಅವರ ಫೇಸ್‍ಬುಕ್‍ನಲ್ಲಿ ಇರುವ ಪೋಸ್ಟ್ ಗಳಲ್ಲಿ ಹೆಚ್ಚಿನವು ಅವರು ವಿಶ್ವದ ನಾನಾ ಉದ್ಯಮಿಗಳು, ರಾಜತಾಂತ್ರಿಕರು, ಚಿಂತಕರ ಜೊತೆಗಿರುವಂಥವು. ‘ನಿರುದ್ಯೋಗ, ಅಸಮಾನತೆ, ಬಡತನ, ಅಪೌಷ್ಟಿಕತೆ, ಶಿಶು ಮರಣ, ಆರೋಗ್ಯ ಮತ್ತು ಶಿಕ್ಷಣಾ ಕ್ಷೇತ್ರಗಳಲ್ಲಿ ಗುಜರಾತ್‍ನ ಸದ್ಯದ ಸಾಧನೆ ತೀರಾ ಕಳಪೆಯಾಗಿದ್ದರೂ’ (ಅತುಲ್ ಸೂದ್, ದಿ ಹಿಂದೂ 2012, ನ. 30) ಅಹ್ಮದಾಬಾದ್‍ನ ಶಾಪಿಂಗ್ ಮಾಲ್‍ಗಳನ್ನೂ, ಶೋ ರೂಮ್‍ಗಳನ್ನೂ, ಸೂಪರ್ ಹೈವೇ, ಸುಂದರವಾಗಿರುವ ಸಬರಮತಿ ನದಿಯನ್ನೂ ತೋರಿಸಿ ಮೋದಿ ಅಭಿವೃದ್ಧಿ ಅನ್ನುತ್ತಿದ್ದಾರೆ. ಒಂದು ರೀತಿಯಲ್ಲಿ, ಗುಜರಾತ್‍ನಾದ್ಯಂತ ಒಂದು ಬಗೆಯ ಭ್ರಮೆಯಿದೆ. ಭ್ರಾಂತಿ ಮತ್ತು ಭೀತಿಯೂ ಇದೆ.  ಮೋದಿಯ ಸುಳ್ಳಿನ ಪ್ರಚಾರದ ಅಬ್ಬರವನ್ನು ನೋಡಿ, ಗುಜರಾತ್‍ನಲ್ಲಿ ಏನೋ ಆಗುತ್ತಿದೆ ಎಂದು ಜನಸಾಮಾನ್ಯರು ಅಂದುಕೊಳ್ಳುವಂಥ ವಾತಾವರಣ ಖಂಡಿತ ಇದೆ. ತಮ್ಮ ಕೇರಿಯಲ್ಲಿ ಅಲ್ಲದಿದ್ದರೂ ಇತರ ಕಡೆ ಭಾರೀ ಅಭಿವೃದ್ಧಿ ಆಗಿರಬೇಕು ಎಂದು ನಂಬುವಂಥ ಸ್ಥಿತಿಯನ್ನು ಮೋದಿ ಮತ್ತು ಅವರ ಬೆಂಬಲಿಗರು ನಿರ್ಮಿಸಿದ್ದಾರೆ.
ಜಮೀಅತೆ ಉಲಮಾಯೆ ಹಿಂದ್
ಆಲ್ ಇಂಡಿಯಾ ಮಜ್ಲಿಸೆ ಮುಶಾವರತ್
ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್
ಮರ್ಕಝಿ ಜಮೀಅತೆ ಅಹ್ಲೆ ಹದೀಸ್
ಇಮಾರತೆ ಶರಿಯಾ..
ಮುಂತಾದ 10 ಸಂಘಟನೆಗಳು 2012 ನವೆಂಬರ್ 23ರಂದು ಸಭೆ ಸೇರಿ ಮುಸ್ಲಿಮ್ ಸಬಲೀಕರಣಕ್ಕಾಗಿರುವ ಜಂಟಿ ಸಮಿತಿ(JCMOE)ಯನ್ನು ರಚಿಸಿತಲ್ಲದೇ, 2002ರ ಗುಜರಾತ್ ಹತ್ಯಾಕಾಂಡಕ್ಕಾಗಿ ಮೋದಿ ಕ್ಷಮೆಯಾಚಿಸಿ ತನ್ನ ವರ್ತನೆಯಲ್ಲಿ ಬದಲಾವಣೆ ತೋರ್ಪಡಿಸಿದರೆ, ಗುಜರಾತ್‍ನ ಪುನರ್ ನಿರ್ಮಾಣದಲ್ಲಿ ಮುಸ್ಲಿಮರು ಸಹಕರಿಸುವುದಾಗಿ ಘೋಷಿಸಿತ್ತು. ಮುಸ್ಲಿಮರು ಹೆಚ್ಚಿರುವ ಚುನಾವಣಾ ಕ್ಷೇತ್ರಗಳಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಮೋದಿ ಮುಸ್ಲಿಮರಿಗೆ ನೀಡಬೇಕು ಎಂದೂ ಅದು ಆಗ್ರಹಿಸಿತ್ತು. ಆದರೆ ಗುಜರಾತ್‍ನ 182 ಕ್ಷೇತ್ರಗಳ ಪೈಕಿ ಒಂದೇ ಒಂದು ಕ್ಷೇತ್ರದಲ್ಲಿ ಮುಸ್ಲಿಮರಿಗೆ ಮೋದಿ ಟಿಕೇಟು ನೀಡಲಿಲ್ಲ. ಸದ್ಬಾವನಾ ಯಾತ್ರೆಯಲ್ಲಿ ಮುಸ್ಲಿಮರ ಜೊತೆ ನಿಂತು ಪೋಸ್ ಕೊಟ್ಟರೂ ಒಂದು ಸೆಕೆಂಡು ತಲೆಯಲ್ಲಿಟ್ಟು ಕೆಳಗಿಡಬಹುದಾಗಿದ್ದ ಮುಸ್ಲಿಮ್ ಟೋಪಿಯನ್ನೂ ಅವರು ಸ್ವೀಕರಿಸಲಿಲ್ಲ. ನಿಜವಾಗಿ, ಮುಸ್ಲಿಮ್ ವಿರೋಧಿ ಎಂಬ ಇಮೇಜನ್ನು ಕಳಚಿಕೊಳ್ಳಲು ಮೋದಿಗೆ ಎಳ್ಳಷ್ಟೂ ಇಷ್ಟವಿಲ್ಲ. ಮೋದಿಯ ವೇದಿಕೆಗೆ ಮುಸ್ಲಿಮ್ ವಿದ್ವಾಂಸರೇ ಬರಲಿ, ಇರ್ಫಾನ್ ಪಠಾಣೇ ಬರಲಿ, ಎಲ್ಲವನ್ನೂ ಅವರು ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಮುಸ್ಲಿಮರಿಗೆ ಪಾಠ ಕಲಿಸಿದ್ದೇನೆ ಎಂಬ ಹಮ್ಮು ಈಗಲೂ ಅವರಲ್ಲಿದೆ. ..‘ಈ ವರ್ಷ ಗುಜರಾತ್‍ನ ಸೌರಾಷ್ಟ್ರವು ಮಳೆ ಇಲ್ಲದೇ ಸಂಕಷ್ಟಕ್ಕೆ ಒಳಗಾದಾಗ, ಸೌರಾಷ್ಟ್ರವನ್ನು ಅವರು ಬರಗಾಲ ಪೀಡಿತ ಪ್ರದೇಶ ಎಂದು ಘೋಷಿಸಲಿಲ್ಲ. ಯಾಕೆಂದರೆ, ಹಾಗೆ ಘೋಷಿಸುವುದರಿಂದ ಗುಜರಾತ್‍ನ ಬಗ್ಗೆ ತಾನು ಕಟ್ಟಿ ಬೆಳೆಸಿದ ಸುಳ್ಳು ಇಮೇಜಿಗೆ ಎಲ್ಲಿ ಧಕ್ಕೆ ಬಂದೀತೋ ಎಂಬ ಭೀತಿ. ಅಭಿವೃದ್ಧಿಯ ಮಂತ್ರ ಜಪಿಸುತ್ತಿರುವ ಗುಜರಾತ್‍ನಲ್ಲಿ ಅಪೌಷ್ಠಿಕತೆಯ ಪ್ರಮಾಣ ಹೆಚ್ಚಿದೆಯಲ್ಲವೇ ಎಂದು ಈ ವರ್ಷದ ಆರಂಭದಲ್ಲಿ ಅಮೇರಿಕದ ವಾಲ್‍ಸ್ಟ್ರೀಟ್ ಜರ್ನಲ್ ಪತ್ರಿಕೆಯ ಪತ್ರಕರ್ತನೋರ್ವ ಮೋದಿಯನ್ನು ಪ್ರಶ್ನಿಸಿದ್ದ. ಹೆಣ್ಣು ಮಕ್ಕಳಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚಾಗಿರುವುದೇ (ಸ್ಲಿಮ್) ಇದಕ್ಕೆ ಕಾರಣ ಎಂದು ಅವರು ಹೇಳಿದ್ದರು:’ (ದಿ ಹಿಂದೂ, ಸ್ಮಿತಾಗುಪ್ತಾ, ಡಿ. 20, 2012) ಹೀಗೆ ಮೋದಿ ಉದ್ದಕ್ಕೂ ಸತ್ಯವನ್ನು ಮುಚ್ಚಿಡುತ್ತಲೇ ಹೋಗುತ್ತಿದ್ದಾರೆ. ನುಣುಪಾದ ರಸ್ತೆ, ಶಾಪಿಂಗ್ ಮಾಲ್‍ಗಳನ್ನು ತೋರಿಸಿ, ವಿವಿಧ ಗಿಮಿಕ್‍ಗಳನ್ನು ಮಾಡಿ, ಗುಜರಾತಿಯನ್ನರನ್ನು ಒಂದು ಬಗೆಯ ಭ್ರಮೆಗೆ ಅವರು ಒಳಪಡಿಸಿದ್ದಾರೆ. ಒಂದು ರೀತಿಯಲ್ಲಿ, ಮೋದಿ ಒಬ್ಬ ಅತ್ಯುತ್ತಮ ಸೇಲ್ಸ್ ಮನ್. ಅವರು 2001ರಲ್ಲಿ ಮುಖ್ಯಮಂತ್ರಿ ಆಗುವಾಗ ಗುಜರಾತ್‍ನಲ್ಲಿ ಬಿಜೆಪಿಯ ಸ್ಥಿತಿ ದಯನೀಯವಾಗಿತ್ತು. ಆದ್ದರಿಂದ ಹಿಂದೂ ಕೋಮುವಾದವನ್ನು ಅವರು ಮಾರಾಟ ಮಾಡಲೇ ಬೇಕಾಗಿತ್ತು. ಹೀಗಾಗಿ 2002ರಲ್ಲಿ ಅವರು ಕೋಮುಗಲಭೆಯನ್ನು ಮಾರಾಟ ಮಾಡಿದರು. ಆದರೆ ಈಗ ಅದೇ ವಸ್ತುವನ್ನು ಅವರು ಮತ್ತೆ ಮಾರಾಟ ಮಾಡುತ್ತಿಲ್ಲ. ಯಾಕೆಂದರೆ, 2002ರಲ್ಲಿ ಅವರು ಮಾರಿದ್ದು ಕಳಪೆ ವಸ್ತು ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಮತ್ತೊಮ್ಮೆ ಅದನ್ನು ಮಾರಾಟಕ್ಕಿಟ್ಟರೆ ಗಿರಾಕಿಗಳು ಸಿಗಲಿಕ್ಕಿಲ್ಲ ಅನ್ನುವುದೂ ಅವರಿಗೆ ಗೊತ್ತು. ಆದ್ದರಿಂದಲೇ, ಈ ಬಾರಿ ಅವರು ‘ಅಭಿವೃದ್ಧಿ’ಯನ್ನು ಮಾರಾಟಕ್ಕಿಟ್ಟಿದ್ದಾರೆ.
  ಅಂದಹಾಗೆ, ಕಳಪೆ ವಸ್ತುಗಳನ್ನು ಮಾರಾಟ ಮಾಡುತ್ತಾ ಜೇಬು ತುಂಬಿಸುತ್ತಿರುವವರನ್ನು ಕೊನೆಗೊಂದು ದಿನ ಆ ಗಿರಾಕಿಗಳೇ ಹಿಡಿದು ಥಳಿಸಿ, ಮುಖವಾಡ ಬಯಲುಗೊಳಿಸಿದ ಧಾರಾಳ ಉದಾಹರಣೆಗಳು ಈ ದೇಶದಲ್ಲಿ ನಡೆದಿದೆಯಲ್ಲವೇ?


Tuesday, December 11, 2012

ಅಬ್ದುಲ್ ನಾರಾಯಣ್ ಡಿ' ಸೋಜ ಎಂಬ ಸೌಹಾರ್ದಪ್ರೇಮಿ?

ಸಂಪಾದಕರೇ,
  ನಾನು ಕೆಎಸ್‍ಆರ್‍ಟಿಸಿಯಲ್ಲಿ ನೌಕರ. ಕಳೆದ ದೀಪಾವಳಿಯ ಸಂದರ್ಭದಲ್ಲಿ ಸಹೋದ್ಯೋಗಿಗಳು ನನ್ನಲ್ಲಿ ಚಂದಾ ಕೇಳಿದರು. ನಾನು ನಯವಾಗಿ ನಿರಾಕರಿಸಿದೆ. ಇಸ್ಲಾಮಿನಲ್ಲಿ ವಿಗ್ರಹ ಪೂಜೆ ಮಾಡುವುದು ಮತ್ತು ಅದಕ್ಕೆ ಪ್ರೋತ್ಸಾಹ ಕೊಡುವುದು ನಿಷಿದ್ಧ ಎಂದೆ. ಸಹೋದ್ಯೋಗಿಗಳಿಗೆ ಇಷ್ಟವಾದಂತೆ ಕಾಣಿಸಲಿಲ್ಲ. ಬಳಿಕ, ಬಸ್ಸಿಗೆ ಹೂಹಾರ ಹಾಕುವಂತೆ ಒತ್ತಾಯಿಸಿದರು. ಆಗಲೂ ನಾನು ನಿರಾಕರಿಸಿದೆ. ಇಸ್ಲಾಮಿನಲ್ಲಿ ಇಂಥ ಆಚರಣೆಗಳಿಗೆ ಅವಕಾಶ ಇಲ್ಲ. ಇದು ಹಿಂದೂ ಧರ್ಮದ ಆಚರಣೆ. ನೀವು ಆಚರಿಸಿ. ಆದರೆ ನನ್ನನ್ನು ಬಲವಂತಪಡಿಸಬೇಡಿ ಎಂದೆ. ಅವರು ಒಪ್ಪಿಕೊಳ್ಳಲಿಲ್ಲ. ನನ್ನನ್ನು ಕೋಮುವಾದಿಯಂತೆ, ಸೌಹಾರ್ದದ ವಿರೋಧಿಯಂತೆ ಬಿಂಬಿಸಿದರು. ಮೇಲಧಿಕಾರಿಗಳಿಗೆ ದೂರು ಕೊಟ್ಟರು. ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಿ ಕೆಲಸದಿಂದ ವಜಾ ಮಾಡುವುದಕ್ಕಾಗಿ ಪಿತೂರಿ ನಡೆಸಿದರು. ಹೀಗಾಗಿ ನಾನು ಸಾಕಷ್ಟು ನೊಂದಿದ್ದೇನೆ. ಇನ್ನೊಂದು ಧರ್ಮವನ್ನು ಗೌರವಿಸುತ್ತಾ, ನನ್ನ ಧರ್ಮಕ್ಕೆ ನಾನು ನಿಷ್ಠನಾಗುವುದು ಯಾಕೆ ಸೌಹಾರ್ದದ ವಿರೋಧಿ ಅನ್ನಿಸಿಕೊಳ್ಳುತ್ತದೆ ಅನ್ನುವುದು ಇನ್ನೂ ನನಗೆ ಅರ್ಥವಾಗಿಲ್ಲ. ನಾನು ತಪ್ಪು ಮಾಡಿದ್ದೇನೆಯೇ ತಿಳಿಸಿ..
  ಹಾಗಂತ ನನ್ನ ದೂರದ ಗೆಳೆಯನೊಬ್ಬ ದೂರವಾಣಿ ಕರೆ ಮಾಡಿ ಇತ್ತೀಚೆಗೆ ವಿನಂತಿಸಿದ್ದ..
ಇಷ್ಟಕ್ಕೂ, ಸೌಹಾರ್ದ ಅಂದರೇನು? ಯಾವುದನ್ನೆಲ್ಲಾ ನಾವು ಸೌಹಾರ್ದ ಅಂತ ಕರೆಯಬಹುದು? ಹಿಂದೂ ವಿಧಿಯಂತೆ ಮುಸ್ಲಿಮರು ವಿವಾಹವಾಗುವುದು ಅಥವಾ ಇಸ್ಲಾಮೀ  ವಿಧಿಯಂತೆ ಹಿಂದೂಗಳು ವಿವಾಹವಾಗುವುದು ಸೌಹಾರ್ದವಾಗಬಹುದೇ? ಹಿಂದೂಗಳದ್ದೋ ಕ್ರೈಸ್ತರದ್ದೋ ಕೆಲವು ಆಚರಣೆಗಳನ್ನು ಮುಸ್ಲಿಮರು ಮಾಡುವುದು ಮತ್ತು ಮುಸ್ಲಿಮರ ಕೆಲವು ಆಚರಣೆಗಳನ್ನು ಹಿಂದೂಗಳು ಮಾಡುವುದನ್ನೆಲ್ಲಾ ಸೌಹಾರ್ದವಾಗಿ ಪರಿಗಣಿಸಬಹುದಾ? ನಿಜವಾಗಿ, ಮಾಧ್ಯಮಗಳ ಹಿಡಿತ ಈ ಸಮಾಜದ ಮೇಲೆ ಬಲವಾಗಿರುವುದರಿಂದ ಅವು ಏನೆಲ್ಲ ಹೇಳುತ್ತವೋ ಅಥವಾ ಯಾವುದನ್ನು ಅನುಕರಣೀಯ ಅಂಥ ಬೋಧಿಸುತ್ತವೋ ಅವನ್ನೇ ಸರಿ ಎಂದು ಸಮಾಜ ತೀರ್ಮಾನಿಸಿಬಿಡುತ್ತದೆ. ಮುಸ್ಲಿಮನೋರ್ವ ಇರುಮುಡಿ ಕಟ್ಟಿ ಅಯ್ಯಪ್ಪ ವ್ರತಧಾರಿಯಾಗುವುದು ಇವತ್ತಿನ ಮಾಧ್ಯಮಗಳ ಮಟ್ಟಿಗೆ ಸೌಹಾರ್ದದ ಸಂಕೇತ. ದರ್ಗಾಕ್ಕೆ ಹಿಂದೂವೊಬ್ಬ ನಡೆದುಕೊಳ್ಳುವುದು ಕೂಡಾ ಮಾಧ್ಯಮಗಳ ಕಣ್ಣಿನಲ್ಲಿ ಸೌಹಾರ್ದವಾಗುತ್ತದೆ. ‘ಕಾರಣಿಕದ’ ಜಾಗಕ್ಕೆ ಮುಸ್ಲಿಮನೋರ್ವ ನಡೆದುಕೊಂಡರೆ, ಅಂತರ್ಜಾತಿ ವಿವಾಹವಾದರೆ ಅಥವಾ ಇನ್ನೇನೋ ಅಸಂಗತಗಳು ನಡೆದರೆ ಅವಕ್ಕೆಲ್ಲಾ ಸೌಹಾರ್ದದ ಬಿರುದು ಕೊಟ್ಟು ಸಾರ್ವಜನಿಕವಾಗಿ, ‘ಇಂಥದ್ದು ಮಾತ್ರ ಸೌಹಾರ್ದ’ ಎಂಬೊಂದು ತಿಳುವಳಿಕೆಯನ್ನು ಹುಟ್ಟಿಸುವಲ್ಲಿ ಮಾಧ್ಯಮಗಳು ಬಹುವಂಶ ಇವತ್ತು ಯಶಸ್ವಿಯಾಗಿವೆ. ಆದ್ದರಿಂದಲೇ, ಚಂದಾ ಕೊಡಲು ನಿರಾಕರಿಸಿದ ನನ್ನ ಗೆಳೆಯ ಕೋಮುವಾದಿಯಾಗಿ ಬಿಂಬಿತಗೊಂಡದ್ದು.
  ಅಂದ ಹಾಗೆ, ಇಸ್ಲಾಮ್‍ನಲ್ಲಿ ಮದುವೆಯಾಗುವುದಕ್ಕೆ ನಿಶ್ಚಿತವಾದ ವಿಧಾನವಿದೆ. ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ವರ ಮತ್ತು ವಧುವಿನ ತಂದೆ ಇಲ್ಲವೇ ವಾರೀಸುದಾರರು ವಿಧಿಗಳನ್ನು ನೆರವೇರಿಸುತ್ತಾರೆ. ಅದೇ ವೇಳೆ ಹಿಂದೂಗಳ ಮದುವೆಯು ಅಗ್ನಿಸಾಕ್ಷಿಯಾಗಿ ನೆರವೇರುತ್ತದೆ. ಮಾತ್ರವಲ್ಲ, ಇಸ್ಲಾಮ್ ಪ್ರಬಲವಾಗಿ ನಿಷೇಧಿಸಿರುವ ಬಹುದೇವಾರಾಧನೆ, ವಿಗ್ರಹಾರಾಧನೆಯ ವಿಧಿ-ವಿಧಾನಗಳೂ ಬಳಕೆಯಲ್ಲಿವೆ. ಹೀಗಿರುವಾಗ, ಮುಸ್ಲಿಮನೊಬ್ಬ ಹಿಂದೂ ಧಾರ್ಮಿಕ ವಿಧಿಯಂತೆ ಮದುವೆಯಾಗುವುದಾದರೆ, ಅದು ಹಿಂದೂಗಳ ಮಟ್ಟಿಗೆ ಸೌಹಾರ್ದವಾಗಿ ಕಾಣಬಹುದು. ಆದರೆ ಮುಸ್ಲಿಮರು ಅದನ್ನು ಧರ್ಮದ್ರೋಹವೆಂದಲ್ಲದೆ ಸೌಹಾರ್ದವಾಗಿ ಪರಿಗಣಿಸಲು ಸಾಧ್ಯವೇ? ಒಂದು ಧರ್ಮಕ್ಕೆ ಅಪಚಾರವೆಸಗಿ ಮಾಡಲಾಗುವ ಯಾವುದೇ ಬಗೆಯ ಸೌಹಾರ್ದತೆಯು ಸಾಮಾಜಿಕವಾಗಿ ಒಗ್ಗಟ್ಟನ್ನು ತಂದೀತೇ? ಆದ್ದರಿಂದಲೇ ಪ್ರವಾದಿ ಮುಹಮ್ಮದರು(ಸ) ಇಂಥ ಆಲೋಚನೆಗಳನ್ನು ಬಲವಾಗಿ ತಿರಸ್ಕರಿಸಿದ್ದು. "ಒಂದು ವರ್ಷ ನೀವು ನಮ್ಮ ವಿಗ್ರಹಗಳನ್ನು ಪೂಜಿಸಿದರೆ ಇನ್ನೊಂದು ವರ್ಷ ನಿಮ್ಮ ಅಲ್ಲಾಹನನ್ನು ನಾವು ಪೂಜಿಸುತ್ತೇವೆ" ಎಂದು ಪ್ರವಾದಿಯವರಲ್ಲಿ ಮಕ್ಕಾದ ವಿರೋಧಿಗಳು ವಿನಂತಿಸಿದ್ದರು. ಒಂದು ವೇಳೆ ಪ್ರವಾದಿಯವರು  ಆ ಬೇಡಿಕೆಯನ್ನು ಒಪ್ಪಿಕೊಳ್ಳುತ್ತಿದ್ದರೆ ಅವರ ಮತ್ತು ಅವರ ಅನುಯಾಯಿಗಳ ಮೇಲೆ ನಡೆಯುತ್ತಿದ್ದ ಹಿಂಸೆ, ದೌರ್ಜನ್ಯ, ಬಹಿಷ್ಕಾರಗಳಿಗೆಲ್ಲಾ ತೆರೆ ಬೀಳುತ್ತಿತ್ತು. ಇಷ್ಟಿದ್ದೂ ಪ್ರವಾದಿ(ಸ) ಹೇಳಿದ್ದು, ‘ನಿಮಗೆ ನಿಮ್ಮ ಧರ್ಮ ಮತ್ತು ನಮಗೆ ನಮ್ಮ ಧರ್ಮ.’ ‘ಧರ್ಮದ ವಿಷಯದಲ್ಲಿ ಬಲಾತ್ಕಾರ ಸರಿಯಲ್ಲ.’ (ಪವಿತ್ರ ಕುರ್‍ಆನ್: 2: 256) (109: 6)
  ನಿಜವಾಗಿ, ಇಂಥದ್ದೊಂದು ಕಲಬೆರಕೆಯ ಸೌಹಾರ್ದತೆಯು ಆಚರಣೆಯಲ್ಲಿರಬೇಕಾದುದು ಕೊಳ್ಳುಬಾಕ ಸಂಸ್ಕ್ರತಿಯ ಮಟ್ಟಿಗೆ ಬಹಳ ಅಗತ್ಯ. ಧರ್ಮವನ್ನು ತೀರಾ ಸರಳವಾಗಿ ವ್ಯಾಖ್ಯಾನಿಸುತ್ತಾ ಬದುಕುವ ಸಮೂಹವೊಂದರ ಅಗತ್ಯ ಜಾಗತೀಕರಣಕ್ಕೆ ಮತ್ತು ಸಾಮ್ರಾಜ್ಯಶಾಹಿ ಆಲೋಚನೆಗಳಿಗೆ ತುರ್ತಾಗಿ ಬೇಕಾಗಿದೆ. ಒಂದು ಕಡೆ ಅಪ್ಪಟ ಭೌತಿಕ ವಾದಿಗಳನ್ನು ಅದು ತಯಾರಿಸುತ್ತಿರುವ ಹಾಗೆಯೇ ಇನ್ನೊಂದು ಕಡೆ, ಧರ್ಮನಿಷ್ಠರನ್ನು ಅಪಾಯಕಾರಿಗಳಂತೆ ಬಿಂಬಿಸುವುದಕ್ಕೆ ಅದು ತನ್ನ ಸರ್ವಸಾಧ್ಯ ಕಾಣಿಕೆಗಳನ್ನು ನೀಡುತ್ತಿದೆ. ಜಗತ್ತಿನ ಕೆಲವು ಕುಬೇರ ಕಂಪೆನಿಗಳು ಉತ್ಪನ್ನಗಳನ್ನು ತಯಾರಿಸಿ, ಅದಕ್ಕೆ ತಕ್ಕಂತೆ ಮಾಧ್ಯಮಗಳನ್ನು ಬಳಸಿ ಜನರನ್ನು ಭ್ರಮಾಲೋಕದಲ್ಲಿ ತೇಲುವಂತೆ ಮಾಡುತ್ತಿವೆ. ಜನರು ಈ ಉತ್ಪನ್ನಗಳನ್ನು ಮನೆ ತುಂಬಿಸಿಕೊಳ್ಳುವುದೇ ನಿಜವಾದ ಪ್ರೆಸ್ಟೀಜು ಎಂದು ಭಾವಿಸುವ ಮೂಲಕ ಅದಕ್ಕಾಗಿ ಹಗಲಿರುಳು, ನ್ಯಾಯ-ಅನ್ಯಾಯವೆನ್ನದೆ ದುಡಿಯುತ್ತಾರೆ. ದೇಶದ ಒಟ್ಟು ವ್ಯವಸ್ಥೆ ಇವತ್ತು ಭ್ರಷ್ಟವಾಗಿದ್ದರೆ, ಜನರಲ್ಲಿ ತುಂಬಲಾದ ಈ ದುರಾಸೆಗೆ ಪ್ರಥಮ ಸ್ಥಾನವಿದೆ.
  ಇದರ ಇನ್ನೊಂದು ಮುಖ, ಈ ತೀವ್ರ ಭೌತಿಕವಾದವನ್ನು ಒಪ್ಪದವರನ್ನು ಅಪಾಯಕಾರಿಗಳಂತೆ ಬಿಂಬಿಸುವುದು. ಇವತ್ತು ಸಾಮ್ರಾಜ್ಯಶಾಹಿತ್ವದ ಪ್ರಥಮ ಶತ್ರು ಯಾವುದೇ ಒಂದು ರಾಷ್ಟ್ರವಲ್ಲ ಅಥವಾ ಸರ್ವಾಧಿಕಾರಿಯೋ ಯಾವುದಾದರೊಂದು ನಿರ್ದಿಷ್ಟ ಪಕ್ಷವೋ ಅಲ್ಲ. ಧರ್ಮವನ್ನು ಅದರ ನಿಜವಾದ ಅರ್ಥದಲ್ಲಿ ಯಾರೆಲ್ಲ ಪಾಲಿಸುತ್ತಾರೋ ಅವರ ಬಗ್ಗೆ ಸಾಮ್ರಾಜ್ಯಶಾಹಿತ್ವಕ್ಕೆ ತೀವ್ರ ಸಿಟ್ಟಿದೆ. ತಮ್ಮ ಭ್ರಮಾ ಜಗತ್ತಿನೊಳಗೆ ಅವರನ್ನು ಸೆಳೆಯಲು ಸಾಧ್ಯವಿಲ್ಲ ಎಂದು ತಿಳಿದುಕೊಂಡಿರುವ ಅದು ಇವರು ತಮ್ಮ ವಿರುದ್ಧ ಧ್ವನಿಯೆತ್ತದಂತೆ ತಡೆಯುವುದಕ್ಕಾಗಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ತಂತ್ರಗಳನ್ನು ಹೆಣೆದುಕೊಂಡಿದೆ. ಭಾರತದಂಥ ದೇಶಗಳಲ್ಲಿ ಧರ್ಮಗಳ ನಡುವೆ ಸಂಘರ್ಷ ಉಂಟಾಗುವಂಥ ವಾತಾವರಣವನ್ನು ನಿರ್ಮಿಸಿದ್ದರೆ, ಇರಾಕ್ ಮತ್ತಿತರ ಕಡೆ ಸುನ್ನಿ-ಶಿಯಾ ಭಿನ್ನಾಭಿಪ್ರಾಯವನ್ನು, ಜನಾಂಗೀಯ ಮತ್ತು ಪ್ರಾದೇಶಿಕ ವಾದವನ್ನು ಸಂಘರ್ಷದ ವಿಷಯವಾಗಿ ತೂರಿಬಿಟ್ಟಿದೆ. ಸಾಮ್ರಾಜ್ಯಶಾಹಿತ್ವವನ್ನು ಮತ್ತು ಕಲಬೆರಕೆ ಧಾರ್ಮಿಕತೆ ಯನ್ನು ಬಲವಾಗಿ ವಿರೋಧಿಸುತ್ತಿದ್ದ ಈಜಿಪ್ಟ್ ನ ಮುಸ್ಲಿಮ್ ಬ್ರದರ್‍ಹುಡ್ ಅನ್ನು ಹುಸ್ನಿ ಮುಬಾರಕ್ ಎಂಬ ಸರ್ವಾಧಿಕಾರಿಯ ಮುಖಾಂತರ 40 ವರ್ಷಗಳವರೆಗೆ ದಮನಿಸಿದ್ದು ಇದೇ ಸಾಮ್ರಾಜ್ಯಶಾಹಿತ್ವ. ಇಲ್ಲದಿದ್ದರೆ ಫೆಲೆಸ್ತೀನ್, ಈಜಿಪ್ಟ್, ಸಿರಿಯ, ಜೋರ್ಡಾನ್, ಲೆಬನಾನ್.. ಮುಂತಾದ ರಾಷ್ಟ್ರಗಳ ಭೂಪ್ರದೇಶವನ್ನು ಆಕ್ರಮಿಸಿರುವ ಇಸ್ರೇಲ್‍ನ ವಿರುದ್ಧ ಒಂದಾಗುವುದರ ಬದಲು, ಲಿಬಿಯದ ಗದ್ದಾಫಿ, ಟ್ಯುನೀಶಿಯಾದ ಝೈನುಲ್ ಆಬಿದೀನ್, ಈಜಿಪ್ಟ್ ನ ಮುಬಾರಕ್, ಜೋರ್ಡಾನ್‍ನ ಸಾಲಿಹ್, ಸಿರಿಯದ ಅಸದ್..ರೆಲ್ಲ ತಮ್ಮದೇ ದೇಶದ ‘ಮುಸ್ಲಿಮ್ ಬ್ರದರ್‍ಹುಡ್’ಗಳ ವಿರುದ್ಧ ಒಂದಾಗುತ್ತಿದ್ದರೆ? ನಿಜವಾಗಿ, ಇಂಥ ಧರ್ಮದ ಇಂತಿಂಥ ಚಟುವಟಿಕೆಗಳು ಅಮಾನವೀಯವಾದದ್ದು, ಕ್ರೌರ್ಯದ್ದು ಎಂದು ಮಾಧ್ಯಮಗಳನ್ನು ಬಳಸಿ ಸಾಮ್ರಾಜ್ಯಶಾಹಿತ್ವವು ಗದ್ದಲವೆಬ್ಬಿಸುತ್ತದೆ. ಮಾತ್ರವಲ್ಲ, ಅದು ಹೇಗೆ ಇತರ ಧರ್ಮಗಳಿಗೆ ಅಪಾಯಕಾರಿ ಎಂಬುದನ್ನು ಸಿನಿಮಾ, ಕಾರ್ಟೂನ್ ಅಥವಾ ಇನ್ನಾವುದಾದರೂ ವಿಧಾನದ ಮೂಲಕ ಹೇಳುತ್ತಲೇ ಇರುತ್ತವೆ. ಹೀಗೆ ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ತೆರೆಯ ಹಿಂದೆ ನಿಂತು ಅತ್ಯಂತ ಅಚ್ಚುಕಟ್ಟಾಗಿ ಅವು ಮಾಡುತ್ತಲೇ ಇರುತ್ತವೆ. ಆದ್ದರಿಂದಲೇ, ನನ್ನ ಮಿತ್ರನ ಧರ್ಮನಿಷ್ಠೆ ಆತನ ಸಹೋದ್ಯೋಗಿಗಳಿಗೆ ಕೋಮುವಾದದಂತೆ ಕಾಣಿಸಿದ್ದು. ಯಾಕೆಂದರೆ, ಕೋಮುವಾದ, ಸೌಹಾರ್ದತೆ.. ಎಂಬುದನ್ನೆಲ್ಲಾ ನಾವು ಇವತ್ತು ಕಲಿತದ್ದು ಧರ್ಮಗ್ರಂಥಗಳಿಂದಲ್ಲ, ಮಾಧ್ಯಮ ಜಾಹೀರಾತುಗಳಿಂದ. ನಿಜವಾಗಿ, ತನ್ನ ಧರ್ಮಕ್ಕೆ ನಿಷ್ಠವಾಗಿರುವುದು ಕೋಮುವಾದವಲ್ಲ. ತನ್ನ ಧರ್ಮದವನ ಅಪರಾಧವನ್ನು, ‘ತನ್ನ ಧರ್ಮದವ’ ಎಂಬ ಕಾರಣಕ್ಕಾಗಿ ಬೆಂಬಲಿಸುವುದೇ ಕೋಮುವಾದ. ಆದರೆ ಇವತ್ತಿನ ಸ್ಥಿತಿಯಾದರೂ ಹೇಗಿದೆ? ಸಮಾಜದಲ್ಲಿ ಕಳ್ಳಭಟ್ಟಿ ಇದೆ. ಮದ್ಯ ಇದೆ. ಲಾಟರಿ ಇದೆ. ಜೂಜು ಇದೆ.. ಹೀಗೆ ಧರ್ಮಗಳು ವಿರೋಧಿಸಿದ ಕೆಡುಕಿನ ಸಾವಿರ ಸಾವಿರ ಪ್ರಕಾರಗಳು ಇವೆ. ಆದರೆ, ಈ ಕುರಿತಂತೆ ಎಲ್ಲಾದರೂ ಗಲಭೆ ನಡೆಯುತ್ತದೆಯೇ? ಕಳ್ಳಭಟ್ಟಿ ತಯಾರಿಸುವವ ಇನ್ನೊಬ್ಬ ಕಳ್ಳಭಟ್ಟಿ ತಯಾರಕನ ಮೇಲೆ ಮುಗಿ ಬೀಳುತ್ತಾನಾ? ಒಂದು ಮದ್ಯದಂಗಡಿಯ ಮಾಲಿಕ ಇನ್ನೋರ್ವ ಮದ್ಯದಂಗಡಿ ಮಾಲಿಕನನ್ನು ಕೊಲ್ಲುತ್ತಾನಾ? ಸಿಕ್ಕಿಮ್ ಲಾಟರಿಯು ನಾಗಾಲ್ಯಾಂಡ್ ಲಾಟರಿಯನ್ನು ಮುಗಿಸಲು ನೋಡುವುದಿದೆಯೇ? ನಿಜವಾಗಿ ಎಲ್ಲ ಕೆಡುಕುಗಳ ಸ್ಥಿತಿಯೂ ಹೀಗೆಯೇ. ಒಂದು ರೀತಿಯಲ್ಲಿ, ಧರ್ಮಾನುಯಾಯಿಗಳು ಈ ಎಲ್ಲ ಕೆಡುಕುಗಳ ವಿರುದ್ಧ ಹೋರಾಡಬೇಕಿತ್ತು. ಆದರೆ ಇದು ಆಗುವ ಬದಲು; ಒಂದು ಪ್ರದೇಶಕ್ಕೆ ತೀರಾ ಕಂಟಕವಾಗಿರುವ ಹಿಂದೂ ಸಹೋದರನ ಮಾಲಿಕತ್ವದ ಮದ್ಯ ದಂಗಡಿಯ ವಿರುದ್ಧ ಮುಸ್ಲಿಮರು ಪ್ರತಿಭಟನೆ ನಡೆಸಿದರೆ, ಆ ಮದ್ಯದಂಗಡಿ ಹಿಂದೂವಿಗೆ ಸೇರಿದ್ದು ಎಂಬ ಏಕೈಕ ಕಾರಣಕ್ಕಾಗಿ ಅದರ ಪರ ಹಿಂದೂಗಳು ಒಟ್ಟು ಸೇರುವಂಥ ಘೋರ ವಿಪರ್ಯಾಸಗಳು ನಡೆಯುತ್ತಿವೆ. ಅದೇ ರೀತಿ, ಅಕ್ರಮ ಕಸಾಯಿಖಾನೆ ಒಂದು ಕಡೆ ನಡೆಯುತ್ತಿದ್ದರೆ ಮತ್ತು ಅದರ ವಿರುದ್ಧ ಹಿಂದೂಗಳು ಪ್ರತಿಭಟನೆ ನಡೆಸಿದರೆ ಅದು ಮುಸ್ಲಿಮರಿಗೆ ಸೇರಿದ್ದೆಂಬ ಕಾರಣಕ್ಕಾಗಿ ಆ ಅಕ್ರಮ ಕಸಾಯಿಖಾನೆಯನ್ನು ಮುಸ್ಲಿಮರು ಬೆಂಬಲಿಸುವಂಥ ಧರ್ಮವಿರೋಧಿ ಕೃತ್ಯಗಳು ನಡೆಯುತ್ತಿವೆ. ನಿಜವಾಗಿ, ಕೋಮುವಾದ ಅಂದರೆ ಇದುವೇ. ಇದಕ್ಕೆ ಧರ್ಮಾನುಯಾಯಿಗಳ ಅಜ್ಞಾನ ಕಾರಣವೇ ಹೊರತು ಧರ್ಮ ಅಲ್ಲ. ಆದರೆ, ಇಂಥದ್ದೊಂದು ಅಜ್ಞಾನ ಸಮಾಜದಲ್ಲಿ ಗಟ್ಟಿಯಾಗಿ ಬೇರೂರುವುದನ್ನು ಸಾಮ್ರಾಜ್ಯಶಾಹಿ ಮತ್ತು ಮಾರುಕಟ್ಟೆ ದೊರೆಗಳು ಯಾವಾಗಲೂ ಬಯಸುತ್ತಲೇ ಇರುತ್ತಾರೆ. ಹೀಗಾದರೆ, ದೇಶದ ಬಹುದೊಡ್ಡ ಜನಸಂಖ್ಯೆಯನ್ನು ತಮ್ಮ ಉತ್ಪನ್ನಗಳ ಹಿಂದೆಯೇ ಬೀಳುವಂತೆ ಮಾಡುವುದಕ್ಕೆ ಈ ಮಾರುಕಟ್ಟೆ ದೊರೆಗಳಿಗೆ ಸುಲಭವಾಗುತ್ತದೆ. ನಿಜವಾಗಿ, ಇವತ್ತು ಯಾವುದೇ ಧರ್ಮಾನುಯಾಯಿ ಸಾಮ್ರಾಜ್ಯ ಶಾಹಿತ್ವದ ಬಗ್ಗೆ ಸರಿಯಾಗಿ ಅರಿತುಕೊಂಡರೆ ಆತ ಖಂಡಿತ ಇನ್ನೊಂದು ಧರ್ಮವನ್ನು ದ್ವೇಷಿಸುವ ಬದಲು ಸಾಮ್ರಾಜ್ಯಶಾಹಿತ್ವ ಹುಟ್ಟು ಹಾಕುತ್ತಿರುವ ಭ್ರಮೆಗಳ ಮತ್ತು ಅವುಗಳಿಂದಾಗಿ ಜನರು ಸ್ವೇಚ್ಛಾಚಾರಿಗಳಾಗುತ್ತಿರುವುದರ ವಿರುದ್ಧ ಹೋರಾಡುತ್ತಿದ್ದ.
  ಅಂದಹಾಗೆ, ಸೌಹಾರ್ದಕ್ಕೆ ವ್ಯಾಖ್ಯಾನವಾದರೂ ಏನು? ಇನ್ನೊಬ್ಬರಿಗೆ ಖುಷಿಯಾಗಲಿ ಎಂದು ತನ್ನ ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸೌಹಾರ್ದವಾಗುತ್ತದೆ? ತನ್ನ ಧರ್ಮ ವಿರೋಧಿಸಿದ್ದರೂ ತನ್ನ ಸಹೋದ್ಯೋಗಿಗಳಿಗೆ ನೋವಾಗದಿರಲಿ ಎಂಬುದಕ್ಕಾಗಿ ಓರ್ವ ಮದ್ಯ ಸೇವಿಸಬಹುದೇ? ಭ್ರಷ್ಟಾಚಾರದಲ್ಲಿ ಭಾಗಿಯಾಗಬಹುದೇ? ಕಳ್ಳತನಕ್ಕೆ ಸಹಕರಿಸಬಹುದೇ? ಏಕದೇವನದ್ದೋ ವಿಗ್ರಹದ್ದೋ ಪೂಜೆ ಮಾಡಬಹುದೇ.. ನಿಜವಾಗಿ, ಹೀಗೆಲ್ಲ ಮಾಡುವುದು ಸೌಹಾರ್ದವಾಗುತ್ತದೆಂದಾದರೆ ಸೌಹಾರ್ದದ ಅರ್ಥವೇ ‘ವಂಚನೆ’ ಎಂದಾಗಿ ಬಿಡುತ್ತದೆ. ಯಾಕೆಂದರೆ, ಆತ ಹೀಗೆಲ್ಲ ಮಾಡುವುದು ಆತನ ಇಷ್ಟದಂತೆ ಅಲ್ಲ, ಇನ್ನಾರದೋ ಖುಷಿಗಾಗಿ. ಇದು ಎಷ್ಟು ಅಪಾಯಕಾರಿ ಎಂದರೆ, ಓರ್ವ ಅಬ್ದುಲ್ ನಾರಾಯಣ್ ಡಿಸೋಜ ಎಂದು ತನ್ನನ್ನು ಕರೆದುಕೊಂಡಂತೆ. ಮುಸ್ಲಿಮರಲ್ಲಿ ಆತ ಅಬ್ದುಲ್ಲ ಎಂದು ಗುರುತಿಸಿಕೊಳ್ಳುತ್ತಾನೆ. ಹಿಂದೂಗಳು ಸಿಕ್ಕರೆ ನಾರಾಯಣ್ ಎಂದೂ ಕ್ರೈಸ್ತರನ್ನು ಕಂಡರೆ ಡಿಸೋಜ ಎಂದೂ ಪರಿಚಯಿಸಿ ಕೊಳ್ಳುತ್ತಾನೆ. ನಿಜವಾಗಿ, ಆತ ಮಾಡುತ್ತಿರುವುದು ವಂಚನೆ. ಪರಿಸ್ಥಿತಿಯ ಲಾಭ ಪಡಕೊಳ್ಳುವುದಕ್ಕಾಗಿ ಆತ ವಿವಿಧ ವೇಷ ತೊಡುತ್ತಿರುತ್ತಾನೆ. ಒಂದು ರೀತಿಯಲ್ಲಿ, ಈತನಷ್ಟು ಅಪಾಯಕಾರಿಗಳು ಇನ್ನಾರೂ ಇರುವುದಿಲ್ಲ. ಸಮಾಜದಲ್ಲಿ ಇವತ್ತು ಕೆಲವರು ಒತ್ತಾಯಪಡಿಸುತ್ತಿರುವುದು ಈ ಬಗೆಯ ಸೌಹಾರ್ದವನ್ನು. ಮುಸ್ಲಿಮನೊಬ್ಬ ಗಣಪತಿಗೆ ಪೂಜೆ ಮಾಡಿದರೆ, ಕೃಷ್ಣಾಷ್ಟಮಿಯಲ್ಲಿ ವೇಷ ಹಾಕಿದರೆ ಅಥವಾ ಹಿಂದೂವೊಬ್ಬ ದರ್ಗಾಕ್ಕೋ ಇನ್ನಾವುದಕ್ಕೋ ನಡಕೊಂಡರೆ.. ಅದು ಸೌಹಾರ್ದ ಖಂಡಿತ ಅಲ್ಲ. ಅದೊಂದು ಬಗೆಯ ನಕಲಿ ಧಾರ್ಮಿಕತೆ. ಸೌಹಾರ್ದ ಅಂದರೆ ತನ್ನ ಧರ್ಮ ವಿರೋಧಿಸಿದ ಕಾರ್ಯಗಳನ್ನು ಮಾಡುವುದಲ್ಲ, ಬದಲು ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಇನ್ನೊಂದು ಧರ್ಮವನ್ನು ಮತ್ತು ಅದರ ಆಚರಣೆಗಳನ್ನು ಗೌರವಿಸುವುದು. ಆದ್ದರಿಂದಲೇ ಧರ್ಮನಿಷ್ಠ ವ್ಯಕ್ತಿ ಎಂದೂ ಕೋಮುವಾದಿಯಾಗುವುದಿಲ್ಲ. ಸೌಹಾರ್ದ ವಿರೋಧಿಯೂ ಆಗುವುದಿಲ್ಲ. ಆದರೆ ಇವತ್ತು ಕೋಮುವಾದ ಮತ್ತು ಸೌಹಾರ್ದದ ಅರ್ಥವನ್ನೇ ಕೆಲವರು ಕೆಡಿಸಿಬಿಟ್ಟಿರುವುದರಿಂದ ಧರ್ಮಿಷ್ಟರೇ ಇವತ್ತು ಕೋಮುವಾದಿಗಳು ಮತ್ತು ಸೌಹಾರ್ದ ವಿರೋಧಿಗಳಾಗಿ ಗುರುತಿಗೀಡಾಗುತ್ತಿದ್ದಾರೆ.
  ಮಿತ್ರನ ಸಂಕಟ ಕೂಡಾ ಇದುವೇ..

Monday, November 26, 2012

ಇರ್ಶಾದ್ ಅಲಿಯ ಪತ್ರವೂ ನಾಪತ್ತೆಯಾಗುವ ಮೌಲ್ವಿಯೋ

2008. ದೆಹಲಿಯ ಬಟ್ಲಾ ಹೌಸ್‍ನಲ್ಲಿ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ದಳದಿಂದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಯುತ್ತದೆ. ಇಬ್ಬರು ಶಂಕಿತ ಯುವಕರು ಮತ್ತು ಓರ್ವ ಪೊಲೀಸಧಿಕಾರಿ ಕಾರ್ಯಾಚರಣೆಯಲ್ಲಿ ಸಾವಿಗೀಡಾಗುತ್ತಾರೆ. ಸಾವಿಗೀಡಾದವರಲ್ಲಿ ದೆಹಲಿಯ ಜಾಮಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯೂ ಇದ್ದ. ಆ ಕಾರ್ಯಾಚರಣೆಯ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸುತ್ತಾರೆ. ಅದೊಂದು ನಕಲಿ ಕಾರ್ಯಾಚರಣೆಯೆಂದು ದಿಗ್ವಿಜಯ್ ಸಿಂಗ್ ಆರೋಪಿಸುತ್ತಾರೆ. ಜಾಮಿಯಾ ವಿಶ್ವವಿದ್ಯಾಲಯದಲ್ಲೂ ಈ ಕುರಿತಂತೆ ಸಾಕಷ್ಟು ಚರ್ಚೆ, ಸಮಾಲೋಚನೆಗಳು ನಡೆಯುತ್ತವೆ. ಈ ಮಧ್ಯೆ ಪೊಲೀಸ್ ಮೂಲಗಳ ಹೆಸರನ್ನಿಟ್ಟುಕೊಂಡು ಮುಸ್ಲಿಮ್ ಉಗ್ರವಾದದ ಕತೆಗಳು ದಿನಂಪ್ರತಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ದೆಹಲಿಯ ಆಸುಪಾಸಿನಿಂದ ಮುಸ್ಲಿಮ್ ಯುವಕರನ್ನು ಬಂಧಿಸಿರುವ ಬಗ್ಗೆ, ಅವರಿಗೂ ಪಾಕ್ ಮೂಲದ ಹುಜಿಯೋ ಲಷ್ಕರೋ, ಜೈಶೋ ಅಥವಾ ಇನ್ನಾವುದಾದರೂ ಉಗ್ರವಾದಿ ಸಂಘಟನೆಗಳಿಗೂ ಇರುವ ಸಂಬಂಧದ ಬಗ್ಗೆ ವರದಿಗಳು ಬರುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಜಾಮಿಯಾ ಉಪಾಧ್ಯಾಯರ ಏಕತಾ ಸಂಘ(Jamia Teachers Solidarity Association - JTSA)ವನ್ನು ಸ್ಥಾಪಿಸಲಾಗುತ್ತದಲ್ಲದೇ ಭಯೋತ್ಪಾದನೆಯ ಆರೋಪದಲ್ಲಿ ಬಂಧನಕ್ಕೀಡಾಗುತ್ತಿರುವವರ ಬಗ್ಗೆ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗುತ್ತದೆ.
  ಜಸ್ಟಿಸ್ ರಾಜಿಂದರ್ ಸಾಚಾರ್
  ಅರುಂಧತಿ ರಾಯ್
  ಜವಾಹರ್ ರೋಜಾ
  ಮನೀಶ್ ಸೇಥಿ..
ಮುಂತಾದ 8 ಮಂದಿ ಪ್ರಭಾವಿಗಳ ತಂಡ 4 ವರ್ಷಗಳ ಕಾಲ ಸಮೀಕ್ಷೆ ನಡೆಸಿ 2012 ಸೆ. 18ರಂದು ದೆಹಲಿಯಲ್ಲಿ ವರದಿಯನ್ನು ಬಿಡುಗಡೆಗೊಳಿಸುತ್ತದೆ. 'Framed, Damned, Acquitted - 'Dossiers of a Very Special Cell ' ಎಂಬ 200 ಪುಟಗಳ ಈ ವರದಿಯನ್ನು ಬಿಡುಗಡೆಗೊಳಿಸುತ್ತಾ ಅರುಂಧತಿ ರಾಯ್ ಹೀಗೆ ಹೇಳುತ್ತಾರೆ:
  ಬಾಬರೀ ಮಸೀದಿಯ ಬೀಗವನ್ನು ತೆರೆದ ಈ ದೇಶದ ವ್ಯವಸ್ಥೆಯು ಆ ಬಳಿಕ ಭಾರತದ ಮಾರುಕಟ್ಟೆಯನ್ನು ವಿದೇಶಿ ಕಂಪೆನಿಗಳಿಗೆ ಮುಕ್ತವಾಗಿಸಿಬಿಟ್ಟಿತು. ಮಾತ್ರವಲ್ಲ, ಅಮೇರಿಕ ಮತ್ತು ಇಸ್ರೇಲ್‍ನ ಜೊತೆ ಆಪ್ತ ಸಂಬಂಧವನ್ನೂ ಬೆಳೆಸಿಕೊಂಡಿತು. ನಿಜವಾಗಿ ಈ ದೇಶವನ್ನು ಮಿಲಿಟರೀಕರಣಗೊಳಿಸುವುದಕ್ಕಾಗಿ ಇಲ್ಲಿನ ವ್ಯವಸ್ಥೆಯು ಇಸ್ಲಾಮಿಕ್ ಟೆರರಿಸಮ್ ಮತ್ತು ಮಾವೋಯಿಸ್ಟ್ ಟೆರರಿಸಮ್ ಎಂಬ ಗುಮ್ಮವನ್ನು ಸೃಷ್ಟಿಸಿದೆ..’
  ಹಾಗಂತ, ಅರುಂಧತಿ ರಾಯ್‍ರ ಆರೋಪವನ್ನು ಅಲ್ಲಗಳೆಯುವುದಾದರೂ ಹೇಗೆ?
ಉಪಾಧ್ಯಾಯರ ಸಂಘ (JTSA) ಬಿಡುಗಡೆಗೊಳಿಸಿದ 200 ಪುಟಗಳ ವರದಿಯಲ್ಲಿ, ಭಯೋತ್ಪಾದನೆಯ ಆರೋಪ ಹೊತ್ತು ಕೆಲವಾರು ವರ್ಷಗಳನ್ನು ಜೈಲಲ್ಲಿ ಕಳೆದು ನಿರಪರಾಧಿಯೆಂದು ಬಿಡುಗಡೆಗೊಂಡ 16 ಮುಸ್ಲಿಮ್ ಯುವಕರ ದಾರುಣ ವಿವರಗಳಿವೆ. 14 ವರ್ಷಗಳ ಕಾಲ ತಿಹಾರ್ ಜೈಲಲ್ಲಿದ್ದು, ಬಳಿಕ ಅಮಾಯಕನೆಂದು ಬಿಡುಗಡೆಗೊಂಡ ಅಮೀರ್ ಅಲಿ, 5 ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡ ಇರ್ಷಾದ್ ಅಲಿ.. ಸಹಿತ ಎಲ್ಲರದ್ದೂ ಒಂದೊಂದು ಕತೆ-ವ್ಯಥೆ. ಇರ್ಷಾದ್ ಅಲಿಯಂತೂ ದೆಹಲಿಯ ವಿಶೇಷ ಪೊಲೀಸ್ ದಳಕ್ಕೆ ಮಾಹಿತಿದಾರನಾಗಿದ್ದವ. ಆದರೆ ಪೊಲೀಸರು ವಹಿಸಿದ ಕೆಲಸವೊಂದನ್ನು ನಿರ್ವಹಿಸಲು ಒಪ್ಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ ಆತನನ್ನು 2006ರಲ್ಲಿ ಬಂಧಿಸಿ ತಿಹಾರ್ ಜೈಲಿನಲ್ಲಿಟ್ಟಿದ್ದರು. ಆತ ಅಲ್ಲಿಂದಲೇ ಪ್ರಧಾನಿ ಮನ್ ಮೋಹನ್ ಸಿಂಗ್‍ರಿಗೆ ಪತ್ರ ಬರೆದಿದ್ದ. ಆ ಪತ್ರದ ವಿವರಣೆಯೂ JTSA  ವರದಿಯಲ್ಲಿದೆ.
‘..ಭಯೋತ್ಪಾದಕರ ಕುರಿತಂತೆ ದೆಹಲಿ ಪೆÇಲೀಸರು ಏನೇನು  ಹೇಳುತ್ತಿರುತ್ತಾರೋ ಅವೆಲ್ಲ ಸತ್ಯವಲ್ಲ. ನಿಜವಾಗಿ ಭಯೋತ್ಪಾದಕರನ್ನು ಸೃಷ್ಟಿಸುವುದು ಪೊಲೀಸರೇ. ಭಡ್ತಿಗೆ ಮತ್ತು ಪುರಸ್ಕಾರಕ್ಕಾಗಿ ಅವರೇ ಭಯೋತ್ಪಾದಕರನ್ನು ಸೃಷ್ಟಿಸುತ್ತಾರೆ. ಇಸ್ಲಾಮಿನ ಬಗ್ಗೆ ಒಂದಷ್ಟು ತಿಳಿದುಕೊಂಡ ಯುವಕರನ್ನು ಪೊಲೀಸರು ತಮ್ಮ ಮಾಹಿತಿದಾರರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರಲ್ಲದೇ ಅವರಿಗೆ ಇಸ್ಲಾಮೀ  ಚಿಹ್ನೆಯಾದ ಗಡ್ಡ ಮತ್ತು ಡ್ರೆಸ್ ತೊಡುವಂತೆ ಆದೇಶಿಸುತ್ತಾರೆ. ಅದಕ್ಕಾಗಿ ದುಡ್ಡೂ ಕೊಡುತ್ತಾರೆ. ಮಾತ್ರವಲ್ಲ, ಮೌಲ್ವಿ ಎಂಬ ಗುರುತನ್ನು ಹಚ್ಚಿ ಬಾಡಿಗೆ ಮನೆಗಳಲ್ಲಿ ಇರಿಸುತ್ತಾರೆ. ಈ ನಕಲಿ ಮೌಲ್ವಿಗಳು ನಮಾಝ್‍ಗಾಗಿ ಮಸೀದಿಗೆ ಹೋಗುವುದು, ಭಾರೀ ಆಧ್ಯಾತ್ಮಿಕತೆಯನ್ನು ಪ್ರದರ್ಶಿಸುವುದೆಲ್ಲ ನಡೆಯುತ್ತಿರುತ್ತದೆ. ಕ್ರಮೇಣ ಸುತ್ತಮುತ್ತಲ ಜನರ ಸ್ನೇಹ ಬೆಳೆಸುತ್ತಾರೆ. ಇಸ್ಲಾಮಿಗೆ ತ್ಯಾಗ ಮನೋಭಾವದ ಯುವಕರ ಅಗತ್ಯ ಎಷ್ಟಿದೆ ಎಂಬುದನ್ನು ಮುಸ್ಲಿಮರ ಕರುಣಾಜನಕ ಕತೆಗಳನ್ನು ಹೇಳುತ್ತಾ ಮನವರಿಕೆ ಮಾಡಿಸುತ್ತಾರೆ. ಯುವಕರು ಆತನ ಮಾತಿಗೆ ಮರುಳಾಗಿರುವರೆಂದು ಖಚಿತವಾದ ಬಳಿಕ ಆತ ತಾನು ಲಷ್ಕರೋ, ಹುಜಿಯೋ ಅಥವಾ ಇನ್ನಾವುದೋ ಸಂಘಟನೆಯ ಕಮಾಂಡರ್ ಎಂದು ಪರಿಚಯಿಸಿಕೊಳ್ಳುತ್ತಾನೆ. ಭಯೋ ತ್ಪಾದನೆಯ ಯೋಜನೆಗಳನ್ನು ಯುವಕರ ಜೊತೆ ಸೇರಿಕೊಂಡು ರೂಪಿಸುತ್ತಾನೆ. ಬಳಿಕ ಪೊಲೀಸರೇ ನೀಡುವ ಕೆಲವೊಂದು ಶಸ್ತ್ರಾಸ್ತ್ರಗಳನ್ನು ಗುಂಪಿಗೆ ವಿತರಿಸುತ್ತಾನೆ. ಸಣ್ಣ ಮಟ್ಟಿನ ತರಬೇತಿಯನ್ನೂ ನೀಡುತ್ತಾನೆ. ಆ ಬಳಿಕ ಆ ಯುವಕರ ಪ್ರತಿ ಚಲನ ವಲನಗಳನ್ನೂ ಪೊಲೀಸರಿಗೆ ಒಪ್ಪಿಸುತ್ತಿರುತ್ತಾನೆ. ಅಂತಿಮವಾಗಿ ಉಗ್ರ ಕೃತ್ಯಕ್ಕೆ ಅವರನ್ನು ಕಳುಹಿಸಿ, ಅದರ ಮಾಹಿತಿಯನ್ನು ಪೊಲೀಸರಿಗೆ ನೀಡಿ ಪೊಲೀಸರು ಬಂಧಿಸುವಂತೆ ನೋಡಿಕೊಳ್ಳುತ್ತಾನೆ. ಮಾತ್ರವಲ್ಲ, ಆತ ಅಲ್ಲಿಂದ ನಾಪತ್ತೆಯಾಗಿ ಇನ್ನೊಂದು ಪ್ರದೇಶಕ್ಕೆ ಹೋಗುತ್ತಾನಲ್ಲದೇ, ಪೊಲೀಸರ ನಿರ್ದೇಶನದಂತೆ ಬೇರೊಂದು ಕಾರ್ಯಾಚರಣೆಯಲ್ಲಿ ತೊಡಗುತ್ತಾನೆ..'
  ಇರ್ಷಾದ್ ಅಲಿ ಬರೆದಿರುವ ಈ ಪತ್ರ ಇನ್ನೂ ದೀರ್ಘವಿದೆ. ಭದ್ರತಾ ಸಂಸ್ಥೆಗಳು ದೇಶವನ್ನು ರಕ್ಷಿಸುತ್ತಿಲ್ಲ, ಬದಲು ಅಭದ್ರತೆಗೆ ತಳ್ಳುತ್ತಿವೆ, ಆದ್ದರಿಂದ ಈ ಕುರಿತಂತೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್‍ರಿಗೆ ಬರೆದ ಪತ್ರದಲ್ಲಿ ಆತ ಮನವಿ ಮಾಡಿಕೊಂಡಿದ್ದಾನೆ.
ಇರ್ಷಾದ್ ಅಲಿ
  ಅಂದಹಾಗೆ, ಭಯೋತ್ಪಾದನಾ ಯೋಜನೆಯನ್ನು ಬೇಧಿಸಿದ್ದಾಗಿ ಹೇಳಿಕೊಳ್ಳುವ ಪೊಲೀಸರು, 'ಪ್ರಮುಖ ರೂವಾರಿ ಮೌಲ್ವಿ ನಾಪತ್ತೆ' ಎಂದು ಘೋಷಿಸುವುದಿದೆ. 3 ವರ್ಷಗಳ ಹಿಂದೆ ದೆಹಲಿ ಪೊಲೀಸರು ಮಂಗಳೂರು ಸುತ್ತಮುತ್ತ ದಾಳಿ ನಡೆಸಿ ಮೊರ್ನಾಲ್ಕು ಮಂದಿಯನ್ನು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಿದಾಗಲೂ, 'ಮೌಲ್ವಿ ನಾಪತ್ತೆಯಾಗಿರುವುದನ್ನು' ಮಾಧ್ಯಮಗಳಲ್ಲಿ ತೇಲಿಸಿ ಬಿಟ್ಟಿದ್ದರು. ಬಹುಶಃ ಇರ್ಷಾದ್ ಅಲಿಯ ಪತ್ರ ಒಂದಷ್ಟು ನಂಬಿಕೆಗೆ ಅರ್ಹ ಅನ್ನಿಸುವುದು ಈ ಕಾರಣದಿಂದಲೇ. ನಿಜವಾಗಿ, ಭಯೋತ್ಪಾದನೆಯ ಆರೋಪ ಹೊತ್ತುಕೊಂಡು ಬಂಧನಕ್ಕೀಡಾಗುವುದಕ್ಕೂ ಕಳ್ಳತನದ ಆರೋಪಕ್ಕೂ ತುಂಬಾ ವ್ಯತ್ಯಾಸ ಇದೆ. ಭಯೋತ್ಪಾದನೆಯ ಕುರಿತಂತೆ ಮಾಧ್ಯಮಗಳು ಈ ದೇಶದಲ್ಲಿ ಎಂಥ ಅಪಾಯಕಾರಿ ವಾತಾವರಣವನ್ನು ನಿರ್ಮಿಸಿ ಬಿಟ್ಟಿವೆಯೆಂದರೆ, ಆರೋಪಗಳ ಬಗ್ಗೆ ಅನುಮಾನಿಸುವುದಕ್ಕೂ ಭಯಪಡುವಷ್ಟು. ಬಂಧಿತ ಯುವಕರ ಅಮಾಯಕತೆಯ ಬಗ್ಗೆ ಯಾರಾದರೂ ಮಾತಾಡಿಬಿಟ್ಟರೆ ಭಯೋತ್ಪಾದಕರ ಬೆಂಬಲಿಗರು ಎಂಬ ಹಣೆಪಟ್ಟಿಯನ್ನು ಅವು ಹಚ್ಚಿ ಬಿಡುತ್ತವೆ. ಆದ್ದರಿಂದಲೇ, ಕಸಬ್‍ನನ್ನು ಗಲ್ಲಿಗೇರಿಸಿದ ಸುದ್ದಿಯ ಪಕ್ಕದಲ್ಲೇ, 'ಅಫ್ಝಲ್ ಗುರು ಯಾವಾಗ?' ಎಂಬ ಶೀರ್ಷಿಕೆಯಲ್ಲಿ ಕೆಲವು ಕನ್ನಡ ಪತ್ರಿಕೆಗಳು ಸುದ್ದಿ ಪ್ರಕಟಿಸಿರುವುದು. ಇವೆರಡೂ ಭಿನ್ನ ಪ್ರಕರಣಗಳು ಎಂಬುದು ಗೊತ್ತಿದ್ದೂ ಅವು ಸುದ್ದಿಯನ್ನು ಭಾವುಕಗೊಳಿಸಿದುವು. ಇರ್ಷಾದ್ ಅಲಿಯಂತೆ ಅಫ್ಝಲ್ ಗುರುವೂ ಪೊಲೀಸ್ ಮಾಹಿತಿದಾರನಾಗಿದ್ದ. ಪಾರ್ಲಿಮೆಂಟ್ ದಾಳಿಯಲ್ಲಿ ಆತನ ಪಾತ್ರದ ಬಗ್ಗೆ, ಅದರ ಹಿಂದಿರಬಹುದಾದ ರಾಜಕೀಯ ಕೈವಾಡದ ಬಗ್ಗೆ ಅರುಂಧತಿ ರಾಯ್ ಸಹಿತ ಕೆಲವಾರು ಮಂದಿ ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಸುಪ್ರೀಮ್ ಕೋರ್ಟು ಕೂಡಾ, 'ಈ ದೇಶದ ನಾಗರಿಕರ ಭಾವನೆಗಳನ್ನು ಪರಿಗಣಿಸಿ ಅಫ್ಝಲ್ ಗುರುವಿಗೆ ಗಲ್ಲು ವಿಧಿಸುತ್ತಿದ್ದೇವೆ' ಎಂದು ಹೇಳಿದೆಯೇ ಹೊರತು, ಪೂರ್ಣ ಸಾಕ್ಷ್ಯಗಳ ಆಧಾರದಲ್ಲಿ ಅಲ್ಲ. ಅಂದಹಾಗೆ, ಹೀಗೆಂದ ಮಾತ್ರಕ್ಕೇ, ಅಫ್ಝಲ್ ಗುರು ನಿರಪರಾಧಿಯೆಂದೋ ಆತನಿಗೆ ಗಲ್ಲು ವಿಧಿಸಬಾರದೆಂದೋ ಹೇಳುತ್ತಿಲ್ಲ. ಅದನ್ನು ಸುಪ್ರೀಮ್ ಕೋರ್ಟು ಈಗಾಗಲೇ ತೀರ್ಮಾನಿಸಿಬಿಟ್ಟಿದೆ. ಆದರೆ ಆತನನ್ನು ಮುಸ್ಲಿಮರ ಪ್ರತಿನಿಧಿಯೆಂಬಂತೆ ಬಿಂಬಿಸಿ ಮುಸ್ಲಿಮರನ್ನು ಪರೋಕ್ಷವಾಗಿ ಭಯೋತ್ಪಾದಕರೆಂದು ಛೇಡಿಸುವ ಯತ್ನವನ್ನು ಪತ್ರಿಕೆಗಳು ಮಾಡಿದ್ದಿಲ್ಲವೇ? ಕಸಬ್‍ನನ್ನು ಗಲ್ಲಿಗೇರಿಸಿದ ಲಾಭವನ್ನು ಕಾಂಗ್ರೆಸ್ ಪಕ್ಷ  ಪಡೆದುಕೊಳ್ಳದಿರಲಿ ಎಂಬ ಉದ್ದೇಶದಿಂದ ಕಸಬ್‍ನ ಜೊತೆಗೇ ಅಫ್ಝಲ್‍ನ ಗಲ್ಲು ಸುದ್ದಿಯನ್ನು ಅವು ತೇಲಿಸಿ ಬಿಟ್ಟಿವೆ ಎಂದು ಅನ್ನಿಸುವುದಿಲ್ಲವೇ? ಇಷ್ಟಕ್ಕೂ, ಕಸಬ್‍ನನ್ನು ಮುಂದಿಟ್ಟುಕೊಂಡು ಅಫ್ಝಲ್ ಯಾವಾಗ ಎಂದು ಕೇಳಿದ ಇವೇ ಪತ್ರಿಕೆಗಳು ಗುಜರಾತ್‍ನ ಮಾಯಾ ಕೊಡ್ನಾನಿಯನ್ನು ಎದುರಿಟ್ಟುಕೊಂಡು ಮೋದಿ ಯಾವಾಗ ಎಂದು ಕೇಳಿಲ್ಲವಲ್ಲ, ಯಾಕೆ? ಸಾಧ್ವಿ ಪ್ರಜ್ಞಾ ಸಿಂಗ್‍ಳನ್ನು ಮುಂದಿಟ್ಟು, ತೊಗಾಡಿಯಾ ಯಾವಾಗ ಎಂದು ಕೇಳಬಹುದಿತ್ತಲ್ಲವೇ? ನಾಗರಾಜ್ ಜಂಬಗಿಯ ಬಂಧನದ ಸುದ್ದಿಯೊಂದಿಗೆ ಮುತಾಲಿಕ್ ಯಾವಾಗ ಎಂದು ಪ್ರಶ್ನಿಸುವ ಅವಕಾಶವೂ ಇತ್ತಲ್ಲವೇ? ಮನುಷ್ಯರನ್ನು ಬಾಂಬಿಟ್ಟು ಕೊಲ್ಲುವುದು ಮಾತ್ರ ಭಯೋತ್ಪಾದನೆ, ಉಳಿದಂತೆ ಪೆಟ್ರೋಲ್ ಸುರಿದೋ ತಲವಾರಿನಿಂದ ಇರಿದೋ ಸಾಮೂಹಿಕವಾಗಿ ಕೊಲ್ಲುವುದೆಲ್ಲ ದೇಶಪ್ರೇಮಿ ಕೃತ್ಯಗಳು ಎಂದು ಇವು ಭಾವಿಸಿವೆಯೇ?
  ಬಹುಶಃ,
1. ಸುಪ್ರೀಮ್ ಕೋರ್ಟು ಯಾರನ್ನು ಅಮಾಯಕರೆಂದು ಹೇಳಿ ಬಿಡುಗಡೆಗೊಳಿಸಿದೆಯೋ ಅವರಿಗೆ ಸೂಕ್ತ ಪರಿಹಾರವನ್ನು ಕೊಡಬೇಕು.
2. ಸರಕಾರ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು.
3. ಅಮಾಯಕರ ವಿರುದ್ಧ ವಿವಿಧ ಕತೆಗಳನ್ನು ಹೆಣೆದು ಭಯೋತ್ಪಾದಕರಾಗಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ಮತ್ತು ಸಿಬಿಐ ಅಥವಾ ಸಿಐಡಿಯಿಂದ ತನಿಖೆ ನಡೆಸಬೇಕು.
4. ಹೀಗೆ ತಪ್ಪಾಗಿ ಜೈಲಲ್ಲಿರುವವರನ್ನು ಪತ್ತೆ ಹಚ್ಚುವುದಕ್ಕಾಗಿ ರಾಷ್ಟ್ರೀಯ ತನಿಖಾ ಆಯೋಗದ ರಚನೆಯಾಗಬೇಕು..
  ಎಂದು ಮುಂತಾಗಿ 8 ಬೇಡಿಕೆಗಳನ್ನು ಮುಂದಿಟ್ಟ JTSA ಯ ಬೇಡಿಕೆಗಳಿಗೆ ಬಹುಶಃ ಈ ಮನಸ್ಥಿತಿಯಿಂದಾಗಿಯೇ ಪತ್ರಿಕೆಗಳಲ್ಲಿ ಪ್ರಚಾರ ಸಿಗದಿದ್ದುದು. ಇಲ್ಲದಿದ್ದರೆ, ಸಾಚಾರ್, ರಾಯ್, ರೋಜಾ ರಂಥ ಪ್ರಮುಖರಿದ್ದೂ,  'Framed, Damned, Acquitted - 'Dossiers of a Very Special Cell ' ಎಂಬ ಸಮೀಕ್ಷಾ ವರದಿಯು ಸುದ್ದಿಯಾಗಲಿಲ್ಲ ಅಂದರೆ ಏನರ್ಥ?
  1996ರಲ್ಲಿ ದೆಹಲಿಯ ಲಜ್‍ಪತ್ ನಗರದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಮುಹಮ್ಮದ್ ಅಲಿ ಭಟ್ ಮತ್ತು ಮಿರ್ಝಾ ನಿಸಾರ್ ಹುಸೈನ್‍ರಿಗೆ ಕೆಳಕೋರ್ಟು ನೀಡಿದ್ದ ಮರಣ ದಂಡನೆಯನ್ನು ರದ್ದುಪಡಿಸಿ ಅವರನ್ನು ಅಮಾಯಕರೆಂದು ದೆಹಲಿ ಹೈಕೋರ್ಟು  ಬಿಡುಗಡೆಗೊಳಿಸಿದ ಸುದ್ದಿಯನ್ನು (ದಿ ಹಿಂದೂ 2012, ನವೆಂಬರ್ 23) ಓದುತ್ತಾ ಇವೆಲ್ಲ ನೆನಪಾಯಿತು. ಅಷ್ಟಕ್ಕೂ ಈ ಪ್ರಕರಣವನ್ನು ನಿರ್ವಹಿಸಿದ್ದೂ ದೆಹಲಿ ಪೊಲೀಸರೇ.