ಆಕೆಯ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಹೇಳುವುದೋ ಬೇಡವೋ ಎಂಬ ಅನುಮಾನ. ಹೇಳಿಬಿಟ್ಟರೆ ಎಲ್ಲಿ ತನ್ನನ್ನು ತರಾಟೆಗೆತ್ತಿ ಕೊಳ್ಳುತ್ತಾರೋ ಎಂಬ ಭೀತಿ. ಕೊನೆಗೆ ಆಕೆ ಹೇಳಿಯೇ ಬಿಟ್ಟಳು-
‘ಈ ವರೆಗೂ ನಾನು ನಿಮ್ಮಿಂದ ಮುಚ್ಚಿಟ್ಟಿದ್ದೆ. ನನ್ನನ್ನು ಕ್ಷಮಿಸಿ. ನಿಜವಾಗಿ, ನಿನ್ನೆಯೇ ನಾನು ಗರ್ಭ ಕರಗಿಸುವ ಮದ್ದು ಸೇವಿಸಿದ್ದೇನೆ..’
ದುರ್ಬಲ ಗುಡಿಸಲು
ತಂದೆ(ಮಲ), ತಾಯಿ, ತಮ್ಮ(ಮಲ) ಮತ್ತು ಆಕೆ ಆ ದುರ್ಬಲ ಗುಡಿಸಲಿನಲ್ಲಿ ವಾಸವಾಗಿದ್ದಾರೆ. ತಂದೆ ಬಹುತೇಕ ಕಿವುಡರಾಗಿದ್ದು, ದುಡಿಯುವ ಸಾಮರ್ಥ್ಯ ಅಷ್ಟಕ್ಕಷ್ಟೇ. ತಾಯಿ ಅವರಿವರ ಮನೆಯಲ್ಲಿ ಮನೆಗೆಲಸ ಮಾಡುತ್ತಾರೆ. ತಮ್ಮ ದುಡಿಯುವ ಪ್ರಾಯಕ್ಕೆ ಇನ್ನೂ ತಲುಪಿಲ್ಲ. 6ರ ಒಳಗಿನ ಇಬ್ಬರು ಮಕ್ಕಳನ್ನು ಜೊತೆಯಲ್ಲಿಟ್ಟುಕೊಂಡು ಅತ್ತ ಶೌಚಾಲಯವೂ ಇಲ್ಲದ, ಗಾಳಿ ಜೋರಾಗಿ ಬೀಸಿದರೆ ಹಾರಿ ಹೋಗುವಂತಿರುವ ಗುಡಿಸಲಿನಲ್ಲಿ ಆಕೆ ಬೀಡಿ ಕಟ್ಟುತ್ತಾ ಬದುಕುತ್ತಿದ್ದಾಳೆ. ತನ್ನ ಇಬ್ಬರು ಪುಟ್ಟ ಮಕ್ಕಳ ಮೇಲೆ ಅಪಾರ ಭರವಸೆ ಆಕೆಗೆ. ಇಷ್ಟಕ್ಕೂ, ಅವರ ಮೇಲಲ್ಲದೇ ಆಕೆ ಭರವಸೆ ಇಟ್ಟುಕೊಳ್ಳುವುದಾದರೂ ಬೇರೆ ಯಾರ ಮೇಲೆ? ತಂದೆ ತೀರಿ ಹೋಗಿರುವ, ಮಲ ತಂದೆ ಮತ್ತು ಅವರ ಕಿರಿಪ್ರಾಯದ ಮಗನ ಆಶ್ರಯದಲ್ಲಿರುವ ಓರ್ವ ಹೆಣ್ಣು ಮಗಳಿಗೆ ಸಾಮಾಜಿಕವಾಗಿ ಇರುವ ಭದ್ರತೆಯಾದರೂ ಏನು? ಯಾವ ಸಮಯದಲ್ಲೂ ಮನೆಯಿಂದ ಹೊರದಬ್ಬಿಸಿಕೊಳ್ಳ ಬಹುದಾದ ಭೀತಿಯಲ್ಲಿ ಸದಾ ಬದುಕುತ್ತಿರುವ ಇಂಥ ಹೆಣ್ಣು ಮಕ್ಕಳು ನಮ್ಮ ಸಮಾಜದಲ್ಲಿ ಎಷ್ಟಿಲ್ಲ ಹೇಳಿ? ವಿಶೇಷ ಏನೆಂದರೆ, ದಕ್ಷಿಣ ಕನ್ನಡ ಜಿಲ್ಲೆಯ ಈ ಹೆಣ್ಣು ಮಗಳನ್ನು ಮದುವೆ ಮಾಡಿ ಕೊಟ್ಟಿರುವುದು ದೂರದ ಘಟ್ಟ ಪ್ರದೇಶದ ಹಾಸನಕ್ಕೆ. ಇದೊಂದೇ ಅಲ್ಲ, ಈ ಜಿಲ್ಲೆಯಿಂದ ಹಲವಾರು ಹೆಣ್ಣು ಮಕ್ಕಳನ್ನು ಗುಜರಾತ್‍ಗೂ ಮದುವೆ ಮಾಡಿ ಕೊಡಲಾಗಿದೆ. ಹಾಗಂತ, ಈ ಹೆಣ್ಣು ಮಕ್ಕಳ ಮೇಲೆ ಹೆತ್ತವರಿಗೆ ದ್ವೇಷವಿತ್ತು ಎಂದಲ್ಲ. ಊರಿನಲ್ಲಿ, ಕೈಗೆಟಕುವ ದರದಲ್ಲಿ ಯುವಕರು ಸಿಗದೇ ಇರುವಾಗ ಬಡ ಹೆತ್ತವರ ಮುಂದೆ ಬೇರೆ ಆಯ್ಕೆಗಳಾದರೂ ಯಾವುದಿರುತ್ತದೆ? ಅಲ್ಲದೇ, ಯುವಕರೆಲ್ಲಾ ಹೀಗೆ ದರ ನಿಗದಿಪಡಿಸಿಕೊಂಡು ಓಡಾಡುತ್ತಿರುವಾಗ ಬಡ ಹೆತ್ತವರಿಗೆ ದರದ ಹೊರತು ಗುಣನಡತೆಯನ್ನು ಆಯ್ಕೆಯ ಮಾನದಂಡವನ್ನಾಗಿ ಮಾಡಿಕೊಳ್ಳುವುದಕ್ಕೂ ಆಗುವುದಿಲ್ಲವಲ್ಲವೇ? ನಿಜವಾಗಿ, ಯಾವ ಹೆತ್ತವರಿಗೂ ತಮ್ಮ ಮಗಳನ್ನು ದೂರದೂರಿಗೆ ಕಳುಹಿಸಿಕೊಡಲು ಇಷ್ಟವಿರುವುದಿಲ್ಲ. ಯಾಕೆಂದರೆ, ಹೆಣ್ಣು ಮಕ್ಕಳು, ಗಂಡು ಮಕ್ಕಳಂತೆ ಅಲ್ಲವಲ್ಲ. ಅವರು ಮನೆಯ ಎಲ್ಲವೂ ಆಗಿರುತ್ತಾರೆ. ಗಂಡು ಮಕ್ಕಳು ಬೆಳೆದಂತೆ ಮನೆಯೊಂದಿಗಿನ ಸಂಪರ್ಕವನ್ನು ಕಡಿಮೆಗೊಳಿಸುತ್ತಾ ಹೋದರೆ ಹೆಣ್ಣು ಮಕ್ಕಳು ಬೆಳೆದಂತೆ ಇಡೀ ಮನೆಯನ್ನೇ ಆವರಿಸುತ್ತಾ ಹೋಗುತ್ತಾರೆ. ಬೆಳಗ್ಗೆ ಮನೆಯಿಂದ ಅಣ್ಣನೋ ತಂದೆಯೋ ಕೆಲಸದ ನಿಮಿತ್ತ ಹೊರಗೆ ಹೋಗುವಾಗ ಅವರನ್ನು ಬಾಗಿಲ ವರೆಗೆ ಬೀಳ್ಕೊಡುವುದು ಹೆಣ್ಣು ಮಕ್ಕಳೇ. ಮನೆಯಲ್ಲಿ ಒಬ್ಬಳು ತಂಗಿಯಿದ್ದರೆ ಅಣ್ಣನಿಗೆ ಬೇರೆ ಪರ್ಸನಲ್ ಸೆಕ್ರೆಟರಿಯ ಅಗತ್ಯವೇ ಇರುವುದಿಲ್ಲ. ಬೆಳಗ್ಗೆ ಬ್ರಶ್ ಮಾಡಿ ಬರುವ ಅಣ್ಣನ ಮುಂದೆ ನೀಟಾಗಿ ಇಸ್ತ್ರಿ ಹಾಕಿದ ಬಟ್ಟೆ ಇರುತ್ತದೆ. ಶೂವಿಗೆ ಪಾಲಿಶ್ ಹಾಕಿರುತ್ತದೆ. ಅಣ್ಣನ ಪೆನ್ನು, ದುಡ್ಡು, ಕರ್ಚೀಪು.. ಎಲ್ಲವನ್ನೂ ತಂಗಿ ಅಚ್ಚುಕಟ್ಟಾಗಿ ಜೋಡಿಸಿಟ್ಟಿರುತ್ತಾಳೆ. ಟೇಬಲ್ಲಿನ ಮುಂದೆ ಬಂದು ಕೂತರೆ ಆರ್ಡರ್ ಮಾಡುವುದಕ್ಕಿಂತ ಮೊದಲೇ ಆಕೆ ಆಹಾರವನ್ನು ತಂದಿಡುತ್ತಾಳೆ. ಡ್ರೆಸ್ ಸೆನ್ಸ್ ಇಲ್ಲದ ಅಣ್ಣನನ್ನು ತರಾಟೆಗೆತ್ತಿಕೊಂಡು, ‘ಇಂಥ ಪ್ಯಾಂಟ್‍ಗೆ ಇಂಥ ಷರಟು ಹಾಕು.. ಅಂಥ ಬಲವಂತಪಡಿಸುವುದು ಅವಳೇ. ಅಣ್ಣನಿಗೆ ಜ್ವರ ಬಂದರೆ, ತಂದೆಯ ಆರೋಗ್ಯದಲ್ಲಿ ಏರು-ಪೇರಾದರೆ ವೈದ್ಯರಂತೆ ಶುಶ್ರೂಷೆ ನಡೆಸುವುದು ಹೆಣ್ಣು ಮಕ್ಕಳೇ. ಬೆಳಗ್ಗೆ ಹೊರಟು ನಿಂತ ಅಪ್ಪನಿಗೆ ಅದು ತಗೊಂಡ್ರಾ, ಇದು ಅಗತ್ಯವಿದೆಯಾ, ಏನಾದ್ರೂ ಮರೆತು ಬಿಟ್ರಾ.. ಎಂದೆಲ್ಲಾ ನೆನಪಿಸಿಕೊಡುವ ಹೊಣೆಗಾರಿಕೆಯನ್ನು ಮಗಳೇ ವಹಿಸಿಕೊಂಡಿರುತ್ತಾಳೆ. ಅಪ್ಪನ ಮೊಬೈಲು, ಕನ್ನಡಕ, ವಾಚು, ಪರ್ಸು.. ಎಲ್ಲವನ್ನೂ ಒಂದೇ ಕಡೆ ಜೋಡಿಸಿಟ್ಟು, ಪ್ರತಿದಿನ ಸೇವಿಸುವ ಔಷಧಿಯನ್ನು ಸಮಯಕ್ಕೆ ಸರಿಯಾಗಿ ಕೊಡುವ ಜವಾಬ್ದಾರಿಯೂ ಮಗಳದ್ದೇ. ಒಂದು ರೀತಿಯಲ್ಲಿ, ಬೆಳಗ್ಗಿನಿಂದ ಹಿಡಿದು ರಾತ್ರಿಯ ವರೆಗೆ ಹೆಣ್ಣು ಮಕ್ಕಳು ಮನೆಯ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರಿರುತ್ತಾರೆ. ಅವರಿಲ್ಲದ ಊಟವಿಲ್ಲ, ಮಾತುಕತೆಯಿಲ್ಲ, ತಮಾಷೆಯಿಲ್ಲ, ಆಟವಿಲ್ಲ, ಕಾರ್ಯಕ್ರಮವಿಲ್ಲ.. ಅಣ್ಣ, ತಮ್ಮ, ಅಪ್ಪ, ಅಮ್ಮ.. ಎಲ್ಲರಿಗೂ ‘ಮಗಳು’ ಬೇಕೇ ಬೇಕು ಅಥವಾ ಇವರೆಲ್ಲರ ಬದುಕು ‘ಮಗಳನ್ನು' ಅವಲಂಬಿಸಿಕೊಂಡೇ ಇರುತ್ತದೆ. ಹೀಗಿರುತ್ತಾ ಯಾವ ಹೆತ್ತವರು ತಾನೇ ತಮ್ಮ ಹೆಣ್ಣು ಮಕ್ಕಳನ್ನು ದೂರದೂರಿಗೆ ಕೊಡಲು ಇಚ್ಛಿಸುತ್ತಾರೆ? ಆರಂಭದಲ್ಲಿ ಉಲ್ಲೇಖಿಸಲಾದ ಹೆಣ್ಣು ಮಗಳ ಹೆತ್ತವರ ಎದುರೂ ಈ ಸವಾಲಿತ್ತು. ಹಾಗಂತ, ಬೆಳೆದ ಹೆಣ್ಣು ಮಗಳನ್ನು ಮನೆಯಲ್ಲಿಟ್ಟುಕೊಳ್ಳಲು ಆಗುವುದಿಲ್ಲವಲ್ಲವೇ? ಊರಿನ ಯುವಕರಂತೂ ಸಿಕ್ಕಾಪಟ್ಟೆ ತುಟ್ಟಿ. ಆದ್ದರಿಂದಲೇ ಕಡಿಮೆ ಬೆಲೆಗೆ ಸಿಕ್ಕ ಹಾಸನದ ಯುವಕನಿಗೆ ಆಕೆಯನ್ನು ಮದುವೆ ಮಾಡಿಸಿಕೊಟ್ಟರು. ಆದರೆ ಆತನ ಬೆಲೆ ಮಾತ್ರ ಕಡಿಮೆ ಅಲ್ಲ, ಆತನ ಸ್ವಭಾವದಲ್ಲೂ ಕೊರತೆಯಿದೆ ಅನ್ನುವುದು ಆ ಬಳಿಕ ಅವರಿಗೆ ಗೊತ್ತಾಯಿತು. ಆತ ಕುಡುಕನಾಗಿದ್ದ. ಹೇಗೂ ಎರಡು ಮಕ್ಕಳಾಗುವ ವರೆಗೆ ಸಹಿಸಿದ ಆಕೆ ಕೊನೆಗೆ, ತಿರುಗಿ ತಾಯಿ ಮನೆಗೆ ಬಂದಳು. ಆ ಬಳಿಕ ಆತ ಯಾವಾಗಲಾದರೊಮ್ಮೆ ಆಕೆಯ ಬಳಿಗೆ ಬರುತ್ತಿದ್ದ..
ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್‍ನ ಸಮಾಜ ಸೇವಾ ಘಟಕದ ಸದಸ್ಯರಾದ ನನ್ನ ಮಿತ್ರರು ಆಕೆಯ ಮನೆಗೆ ತೆರಳಿ ನೋವು, ಸಂಕಟಗಳನ್ನು ಆಲಿಸಿದರು. ಶೌಚಾಲಯ ಕಟ್ಟಿಸಿ ಕೊಡುವ ಭರವಸೆ ನೀಡಿದರು. ಈ ನಡುವೆ, ಆಕೆ 3ನೇ ಮಗುವಿನ ಗರ್ಭ ಹೊತ್ತಿರುವ ಸಂಗತಿ ಸೂಚ್ಯವಾಗಿ ಪ್ರಸ್ತಾಪವಾಯಿತು. ಮಾತ್ರವಲ್ಲ, ಇಬ್ಬರು ಮಕ್ಕಳನ್ನೇ ಸಾಕಲು ಅಸಾಧ್ಯವಾಗಿರುವಾಗ ಮೂರನೆಯದೊಂದನ್ನು ಸಾಕುವುದಾದರೂ ಹೇಗೆ ಅನ್ನುವ ಧಾಟಿಯ ಮಾತುಗಳೂ ತೇಲಿ ಬಂದುವು. ಆಗ ಘಟಕದ ಸದಸ್ಯರು ಆ ಹೆಣ್ಣು ಮಗಳನ್ನು ಸಾಂತ್ವನಿಸಿದರು. ಔಷಧ ಮತ್ತು ಆಹಾರದ ವ್ಯವಸ್ಥೆ ಮಾಡುವುದಾಗಿಯೂ ಒಂದು ವೇಳೆ ಮಗು ಬೇಡವೆಂದಾದರೆ, ಮಕ್ಕಳು ಇಲ್ಲದವರಿಗೆ ಮಗುವನ್ನು ಕೊಡುವ ವ್ಯವಸ್ಥೆ ಮಾಡುತ್ತೇವೆಂದೂ ಅವರು ಭರವಸೆ ನೀಡಿದರು. ಆಗ, ಆಕೆಗೆ ತನ್ನೊಳಗಿನ ಸಂಕಟವನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಣ್ಣು ತುಂಬಿ ಬಂತು. ಆಗಲೇ ಆಕೆ ಸತ್ಯ ಹೇಳಿದ್ದು,
‘ನಿನ್ನೆಯೇ ಔಷಧಿ ಸೇವಿಸಿದ್ದೇನೆ..'
ಇಷ್ಟಕ್ಕೂ, ಈ ಒಂಟಿ ಘಟನೆಯನ್ನು ಎತ್ತಿಕೊಂಡು ಇಡೀ ಮುಸ್ಲಿಮ್ ಸಮುದಾಯವೇ ಹೀಗೆ ಎಂದು ಖಂಡಿತ ಹೇಳುತ್ತಿಲ್ಲ. ಒಂಟಿ ಘಟನೆಯನ್ನು ಸಾರ್ವತ್ರೀಕರಣಗೊಳಿಸಬೇಕಾದ (ಜನರಲೈಸ್) ಅಗತ್ಯವೂ ಇಲ್ಲ. ಹಾಗಂತ, ಇಂಥದ್ದು ಮುಸ್ಲಿಮ್ ಸಮುದಾಯದಲ್ಲಿ ಬೇರೆ ಇರಲು ಸಾಧ್ಯವೇ ಇಲ್ಲ ಎಂದೂ ಯಾರಾದರೂ ಹೇಳುತ್ತಾರಾ? ಇದು ಬಿಡಿ, ಇದಕ್ಕಿಂತಲೂ ಕ್ರೂರ ಸಂಗತಿಗಳು ಮುಸ್ಲಿಮ್ ಸಮುದಾಯದಲ್ಲಿವೆ ಅನ್ನುವುದನ್ನು ತಿರಸ್ಕರಿಸಲು ಸಾಧ್ಯವೇ? ಅಂದಹಾಗೆ, ಬಡತನದ ಕಾರಣದಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿ, ಅವರಿಗೂ ನಿಮಗೂ ಅಲ್ಲಾಹನೇ ಆಹಾರ ಕೊಡುತ್ತಾನೆ (17:31) ಎಂಬ ಪವಿತ್ರ ಕುರ್‍ಆನಿನ ವಚನವನ್ನು ಈ ಸಮುದಾಯ ಎಷ್ಟು ಬಾರಿ ಕೇಳಿಲ್ಲ? ಭಾಷಣ, ಬರಹಗಳ ಮೂಲಕ ಇಂಥ ವಚನಗಳು ಸಮುದಾಯದ ಬಳಿಗೆ ಎಷ್ಟು ಬಾರಿ ತಲುಪಿಲ್ಲ? ಹೀಗಿದ್ದೂ ಸಮುದಾಯದ ಮೇಲೆ ಪರಿಣಾಮ ಬೀರುವಲ್ಲಿ ಇವೆಲ್ಲ ಯಾಕೆ ವಿಫಲವಾಗುತ್ತಿವೆ? ನಿಜವಾಗಿ, ಸಮುದಾಯದಲ್ಲಿ ಮಸೀದಿಗಳ ಕೊರತೆಯಿಲ್ಲ. ಸಂಘಟನೆಗಳಿಗೂ ಕೊರತೆಯಿಲ್ಲ. ವಿದ್ವಾಂಸರೂ ಧಾರಾಳ ಇದ್ದಾರೆ. ಆದರೂ ಸಮುದಾಯದಲ್ಲಿ ತಳಮಟ್ಟದ ಸಮಸ್ಯೆಗಳೇಕೆ ಬಗೆಹರಿಯುತ್ತಿಲ್ಲ?
ವರದಕ್ಷಿಣೆ
ಬಡತನ
ನಿರುದ್ಯೋಗ
ಕಂದಾಚಾರಗಳು
ಕೊಲೆ, ದರೋಡೆ
ಕೆಡುಕುಗಳು..
..ಪಟ್ಟಿ ಇನ್ನೂ ಉದ್ದ ಇದೆ. ಅಲ್ಲದೇ, ಹೆಚ್ಚುವರಿಯಾಗಿ ಭಯೋತ್ಪಾದನೆಯ ಆರೋಪಕ್ಕೂ ಈ ಸಮುದಾಯ ಗುರಿಯಾಗಿ ಬಿಟ್ಟಿದೆ. ಫರ್ಲಾಂಗು ಫರ್ಲಾಂಗಿಗೂ ಮಸೀದಿ ಇರುವ ಮತ್ತು ಯಾವುದಾದರೊಂದು ಮಸೀದಿಯೊಂದಿಗೆ ಗುರುತಿಸಿಕೊಂಡು ಸಂಘಟಿತವಾಗಿರುವ ಮುಸ್ಲಿಮ್ ಸಮುದಾಯಕ್ಕೆ ತನ್ನ ಕೊರತೆಗಳನ್ನು ನಿವಾರಿಸಿಕೊಳ್ಳುವುದಕ್ಕೇಕೆ ಸಾಧ್ಯವಾಗುತ್ತಿಲ್ಲ? ಹಾಗೆ ನೋಡಿದರೆ, ಇಡೀ ಜಗತ್ತಿನಲ್ಲಿಯೇ ಅತ್ಯಂತ ಸಂಘಟಿತವಾಗಿರುವುದು ಮುಸ್ಲಿಮ್ ಸಮುದಾಯವೇ. ಮುಸ್ಲಿಮರು ವಾರಕ್ಕೊಮ್ಮೆಯಾದರೂ ಕಡ್ಡಾಯವಾಗಿ ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ಅಲ್ಲಿ ವಿದ್ವಾಂಸರಿಂದ ಧಾರ್ಮಿಕ ಹಿತವಚನಗಳನ್ನು ಆಲಿಸುತ್ತಾರೆ. ಮಸೀದಿಗೆ ತಿಂಗಳು ತಿಂಗಳು ವಂತಿಗೆ ಕೊಡುತ್ತಾರೆ. ಅಲ್ಲದೇ, ಒಂದು ಮಸೀದಿಯ ವ್ಯಾಪ್ತಿಯಲ್ಲಿ ಬರುವವರ ಹೆಸರು, ಮನೆಯ ಸದಸ್ಯರ ಸಂಖ್ಯೆ, ಗಂಡು-ಹೆಣ್ಣಿನ ವಿವರ.. ಎಲ್ಲವೂ ಆಯಾ ಮಸೀದಿಯಲ್ಲಿ ಬಹುತೇಕ ನಮೂದಾಗಿರುತ್ತವೆ. ಯಾವ ಮನೆಯಲ್ಲಿ ಮದುವೆ ಪ್ರಾಯದ ಎಷ್ಟು ಯುವತಿಯರಿದ್ದಾರೆ, ಎಷ್ಟು ವಿಧವೆಯರಿದ್ದಾರೆ, ರೋಗಿಗಳೆಷ್ಟು, ದುಡಿಯುವವರೆಷ್ಟು, ಮಕ್ಕಳೆಷ್ಟು.. ಎಂಬುದೆಲ್ಲಾ ಒಂದು ಮಸೀದಿಗೆ ಒಳಪಟ್ಟವರಲ್ಲಿ ಹೆಚ್ಚಿನವರಿಗೆ ಗೊತ್ತಿರುತ್ತದೆ. ಮಸೀದಿಯ ಆಡಳಿತ ಸಮಿತಿಯು ಒಂದೊಂದು ಮನೆಯ ಸಾಮರ್ಥ್ಯವನ್ನು ತಿಳಿದುಕೊಂಡೇ ವಂತಿಗೆಯನ್ನು ನಿಗದಿಪಡಿಸುತ್ತದೆ. ಒಂದು ರೀತಿಯಲ್ಲಿ, ಮಸೀದಿಯ ಆಡಳಿತ ಸಮಿತಿಗೆ ತನ್ನ ವ್ಯಾಪ್ತಿಯೊಳಗಿನ ಮನೆಗಳ ಪರಿಸ್ಥಿತಿಯ ಬಗ್ಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಹೀಗಿರುವಾಗ, ಮಸೀದಿಯ ಆಡಳಿತ ಮಂಡಳಿಯು ತುಸು ಜಾಗೃತವಾದರೂ ಸಾಕು, ಅವಕಾಶಗಳ ದೊಡ್ಡದೊಂಡು ಬಾಗಿಲೇ ತೆರೆದು ಬಿಡುವ ಸಾಧ್ಯತೆಯಿದೆ. ಇವತ್ತು ಸಮುದಾಯದಲ್ಲಿ ದಾನಿಗಳಿಗೆ ಕೊರತೆಯೇನೂ ಇಲ್ಲ. ಕೊರತೆ ಇರುವುದು ಇಚ್ಛಾಶಕ್ತಿಯದ್ದು ಮಾತ್ರ. ನಿಜವಾಗಿ, ನೆರವಿಗೆ ಅರ್ಹರಾದವರನ್ನು ಗುರುತಿಸುವ ಮತ್ತು ದಾನವನ್ನು ಅವರಿಗೆ ತಲುಪಿಸುವ ಪ್ರಯತ್ನಗಳು ಬಹುತೇಕ ಆಗುತ್ತಲೇ ಇಲ್ಲ. ಒಂದು ವೇಳೆ ಪ್ರತಿ ಜಮಾಅತ್ ತನ್ನ ವ್ಯಾಪ್ತಿಯಲ್ಲಿರುವ ಬಡ ಮನೆಗಳ ಪಟ್ಟಿಯೊಂದನ್ನು ತಯಾರಿಸಿ ದಾನಿಗಳನ್ನೋ ಸಮಾಜ ಸೇವಾ ಸಂಘಟನೆಗಳನ್ನೋ ಸಂಪರ್ಕಿಸಿದರೆ, ಹೊಟ್ಟೆಯಲ್ಲೇ ಮಗುವನ್ನು ಕರಗಿಸುವ ತಾಯಂದಿರ ಸಂಖ್ಯೆ ಖಂಡಿತ ಕಡಿಮೆಯಾಗಬಹುದು. ಅಂದಹಾಗೆ, ಪ್ರತಿ ಮಸೀದಿಯ ಜಮಾಅತ್‍ನಲ್ಲೂ ಶ್ರೀಮಂತರು, ವಿದೇಶದಲ್ಲಿ ಉದ್ಯೋಗದಲ್ಲಿರುವವರು ಖಂಡಿತ ಇರುತ್ತಾರೆ. ಹಾಗಂತ, ತಮ್ಮ ಮಸೀದಿಯಲ್ಲಿರುವ ಬಡವರ ಕುರಿತಂತೆ ಅವರಿಗೆ ಅಷ್ಟಾಗಿ ಮಾಹಿತಿ ಇರಬೇಕೆಂದೇನೂ ಇಲ್ಲ. ಒಂದು ವೇಳೆ ಇದ್ದರೂ ನೆರವು ನೀಡಬೇಕಾದುದು ತನ್ನ ಧಾರ್ಮಿಕ ಕರ್ತವ್ಯ ಎಂಬ ಪ್ರಜ್ಞೆ ಅವರಲ್ಲಿ ಇಲ್ಲದಿರಲೂಬಹುದು. ವರ್ಷಕ್ಕೊಮ್ಮೆ ನಡೆಯುವ 'ಗಂಭೀರ' ಮತ ಪ್ರವಚನಕ್ಕೆ ಇಲ್ಲವೇ ಇನ್ನಿತರ 'ವಾರ್ಷಿಕ'ಗಳಿಗೆ ದುಡ್ಡು ಕೊಡುವುದರಿಂದ ತನ್ನ ಹೊಣೆಗಾರಿಕೆ ಮುಗಿಯಿತೆಂದು ಅವರು ಭಾವಿಸಿರಲೂ ಬಹುದು. ಇಂಥವರಿಗೆ ದಾನದ ಮತ್ತು ಝಕಾತ್‍ನ ಮಹತ್ವವನ್ನು ತಿಳಿಸಿಕೊಡುವ ಹೊಣೆಗಾರಿಕೆ ಮಸೀದಿಯ ಉಸ್ತಾದ್‍ರದ್ದು. ಇದು ಕೇವಲ ಭಾಷಣಗಳ ಮುಖಾಂತರ ಆಗಬೇಕಾದ್ದಲ್ಲ. ತನ್ನ ವ್ಯಾಪ್ತಿಯ ಬಡವರ ಪಟ್ಟಿಯನ್ನು ಹಿಡಿದು ಈ ಶ್ರೀಮಂತರನ್ನು ಮುಖತಃ ಭೇಟಿಯಾಗಿ ಅವರ ಹೊಣೆಗಾರಿಕೆಯನ್ನು ಉಸ್ತಾದರು ಮನವರಿಕೆ ಮಾಡಿಸಿದರೆ, ಎಷ್ಟೇ ಜಿಪುಣನಾದರೂ ನೆರವು ನೀಡಲು ಮುಂದಾಗುವ ಸಾಧ್ಯತೆಯಿದೆ. ಮಸೀದಿಯ ಉಸ್ತಾದರು ಮತ್ತು ಆಡಳಿತ ಸಮಿತಿಯು ಒಂದು ವೇಳೆ ಪ್ರತಿ ಮನೆಯ ಸಮಸ್ಯೆಯನ್ನೂ ತಮ್ಮದೇ ಸಮಸ್ಯೆ ಎಂದು ಭಾವಿಸಿ ಕಾರ್ಯಪ್ರವೃತ್ತವಾದರೆ ಸಮುದಾಯ ಯಾರ ಮುಂದೆಯೂ ತಲೆ ತಗ್ಗಿಸಿ ನಿಲ್ಲಬೇಕಾದ ಅಗತ್ಯವೇ ಇಲ್ಲ.
ಅಲ್ಲದೇ
ಸಮುದಾಯದಲ್ಲಿ ದೊಡ್ಡದೊಂದು ಯುವ ಪಡೆಯಿದೆ. ಮಾತ್ರವಲ್ಲ, ಇವತ್ತು ಈ ಯುವ ಪಡೆಯ ಮೇಲಿರುವ ದೊಡ್ಡ ಆರೋಪ ಏನೆಂದರೆ, ಸಮಾಜಬಾಹಿರ ಕೃತ್ಯಗಳಲ್ಲಿ ಇವರ ಹೆಸರೇ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದೆ ಎಂಬುದು. ನಿಜವಾಗಿ, ಮಸೀದಿಯು ಸಕ್ರಿಯವಾದರೆ ಸಮುದಾಯದ ಯುವಕರನ್ನು ಸಂಪನ್ಮೂಲವಾಗಿ ಬದಲಿಸಲು ಖಂಡಿತ ಸಾಧ್ಯವಿದೆ. ಯುವಕರು ಎಷ್ಟೇ ಕೆಟ್ಟವರಾಗಿದ್ದರೂ ಮಸೀದಿಯ ಉಸ್ತಾದರನ್ನು ಗೌರವಿಸುತ್ತಾರೆ. ಆದ್ದರಿಂದ, ಯುವಕರೊಂದಿಗೆ ಸಲುಗೆ ಬೆಳೆಸಿ, ಅವರನ್ನು ಮಸೀದಿಯಲ್ಲಿ ಒಟ್ಟುಗೂಡಿಸಿ, ಅವರನ್ನು ಪ್ರಯೋಜನಕಾರಿ ಕೆಲಸಗಳಲ್ಲಿ ತೊಡಗಿಸುವಂತೆ ಮಾಡಲು ಉಸ್ತಾದರಿಗೆ ಸಾಧ್ಯವಿದೆ. ಮುಖ್ಯವಾಗಿ, ಮಸೀದಿಯ ವ್ಯಾಪ್ತಿಗೊಳಪಟ್ಟ ಪ್ರತಿ ಮನೆಗಳ ಸರ್ವೇ ನಡೆಸುವುದಕ್ಕೆ ಒಂದು ತಂಡ; ರೋಗಿಗಳು, ವಿಧವೆಯರು, ಯುವತಿಯರ ಪಟ್ಟಿ ತಯಾರಿಸುವುದಕ್ಕೆ ಇನ್ನೊಂದು ತಂಡ; ಪಟ್ಟಣಗಳಲ್ಲಿನ ದಾನಿಗಳು ಮತ್ತು ಸಮಾಜ ಸೇವಾ ಸಂಘಟನೆಗಳನ್ನು ಸಂಪರ್ಕಿಸುವುದಕ್ಕೆ ಮತ್ತೊಂದು ತಂಡ.. ಹೀಗೆ ಮೊರ್ನಾಲ್ಕು ಯುವಕರ ಬೇರೆ ಬೇರೆ ತಂಡಗಳನ್ನು ರಚಿಸಿ, ಆಯಾ ತಂಡಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟರೆ ಮತ್ತು ಉಸ್ತಾದರು ಸಕ್ರಿಯವಾಗಿ ಈ ಇಡೀ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ದೊಡ್ಡದೊಂದು ಬದಲಾವಣೆ ಸಾಧ್ಯವಾದೀತು. ಮಾತ್ರವಲ್ಲ, ಯುವಕರನ್ನು ಸಮಾಜಮುಖೀ ಕೆಲಸಗಳಲ್ಲಿ ತೊಡಗಿಸಿದ ಪ್ರತಿಫಲವೂ ಸಿಕ್ಕೀತು..
ಅಂದಹಾಗೆ, ಪ್ರವಾದಿ ಮುಹಮ್ಮದ್‍ರನ್ನು(ಸ) ಪ್ರೀತಿಸುವ ನೆಪದಲ್ಲಿ ಭಾರೀ ಮೆರವಣಿಗೆಗಳು; ಹಾಡು, ಭಾಷಣ, ತಳಿರು-ತೋರಣಗಳ ಭರ್ಜರಿ ಸಿದ್ಧತೆಯಲ್ಲಿ ಬಿಝಿಯಾಗಿರುವ ಮಂದಿ, ಹೊಟ್ಟೆಯಲ್ಲೇ ಮಗುವನ್ನು ಕರಗಿಸುವಂಥ ತಾಯಂದಿರನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಪ್ರವಾದಿಯವರನ್ನು ಪ್ರೀತಿಸಬೇಕೆಂದು ಭಾಷಣ ಮಾಡುವ ಉಸ್ತಾದ್ ಮತ್ತು ಅದಕ್ಕೆ ವೇದಿಕೆ ಸಜ್ಜುಗೊಳಿಸುವ ಮಸೀದಿಯ ಆಡಳಿತ ಸಮಿತಿಯು ಪ್ರವಾದಿ ಪ್ರೇಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸುವುದಕ್ಕೆ ಯೋಜನೆಯನ್ನು ಸಿದ್ಧಪಡಿಸಬೇಕು. ಮುಂದಿನ ರಬೀಉಲ್ ಅವ್ವಲ್‍ನ ಒಳಗೆ ತಮ್ಮ ಮಸೀದಿಯ ವ್ಯಾಪ್ತಿಯಲ್ಲಿರುವ ಬಡವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವ ಕ್ರಾಂತಿಕಾರಿ ನೀಲನಕ್ಷೆಯನ್ನು ರೂಪಿಸಬೇಕು. ಈ ಯೋಜನೆ ಜಾರಿಗೊಳ್ಳಬೇಕಾದರೆ ಯಾರ್ಯಾರನ್ನು ಸಂಪರ್ಕಿಸಬೇಕು, ಎಷ್ಟು ತಂಡಗಳನ್ನು ರೂಪಿಸಬೇಕು ಎಂಬ ಬಗ್ಗೆ ತೀರ್ಮಾನಗಳನ್ನು ಕೈಗೊಳ್ಳಬೇಕು. ಪ್ರವಾದಿಯನ್ನು ಪ್ರೀತಿಸುವುದೆಂದರೆ, ವರದಕ್ಷಿಣೆ ರಹಿತ ಮದುವೆಯನ್ನು ಜಾರಿಗೆ ತರುವುದು; ಬಡತನದಿಂದ ಜನರನ್ನು ಮುಕ್ತಗೊಳಿಸುವುದು; ಕೆಡುಕುಗಳಿಂದ ಸಮಾಜವನ್ನು ರಕ್ಷಿಸುವುದು; ರೋಗಿಗಳಿಗೆ ನೆರವಾಗುವುದು; ದೇವ ಮತ್ತು ವ್ಯಕ್ತಿಯ ನಡುವಿನ ವಿಶ್ವಾಸವನ್ನು ಬಲಿಷ್ಠಗೊಳಿಸುವುದು; ದೇಶಬಾಂಧವರಿಗೆ ಪ್ರವಾದಿಯನ್ನು ಪರಿಚಯಿಸುವುದು.. ಮುಂತಾದ ಸ್ಪಷ್ಟ ಸಂದೇಶ ಎಲ್ಲ ಮಸೀದಿಗಳಿಂದಲೂ ಹೊರಡುವಂತಾಗಬೇಕು..
ಇಲ್ಲದಿದ್ದರೆ, ಹೊಟ್ಟೆಯಲ್ಲೇ ಕರಗಿ ಹೋಗುವ ಪುಟ್ಟ ಕಂದಮ್ಮಗಳು ನಾಳೆ ಈ ಉಸ್ತಾದರು ಮತ್ತು ಈ ಪ್ರವಾದಿ ಪ್ರೇಮಿಗಳ ವಿರುದ್ಧ ಅಲ್ಲಾಹನ ನ್ಯಾಯಾಲಯದಲ್ಲಿ ದಾವೆ ಹೂಡಬಹುದು..

Mr. Kukkila,
ReplyDeleteOnce again hats off to your article. Unfortunately, those who do nuisance things in the name of Prophet Muhammad(S.A.W), will not read your article, they are too busy in celebrating!!!! May Allah open their heart and eyes towards the facts of our social life...
Thanks for wonderful Article...
Sulthan Mansoor