Tuesday, January 8, 2013

ತಪ್ಪು ಮಾಡುವುದಕ್ಕಿಂತ ಮೊದಲು ಎಲ್ಲರೂ ಈ ತಾಯಿ - ಮಗನನ್ನು ಸ್ಮರಿಸಿಕೊಳ್ಳಿ..

ಅರ್‍ಪ್ಪುದಮ್ ಅಮ್ಮಾಳ್
ಪೇರರಿವಾಲನ್‍
  “ನನ್ನ ಮಗನ ಕೋಣೆಯನ್ನು ಕಂಡು ನಾನು ದಂಗಾಗಿ ಹೋಗಿದ್ದೆ. ಕರುಳು ಕಿತ್ತು ಬಂತು. ಕಣ್ಣು ತುಂಬಿಕೊಂಡವು. ಸರಿಯಾಗಿ ಕಾಲು ಚಾಚಿ ಮಲಗಲೂ ಸಾಧ್ಯವಿಲ್ಲದಂಥ ಚಿಕ್ಕ ಕೋಣೆ. 'ನೋಡಮ್ಮ ನನ್ನ ಮನೆಯನ್ನು..' ಅಂತ ಆತ ಹೇಳಿದಾಗ ನನ್ನ ಗಂಟಲು ಕಟ್ಟಿತ್ತು. 20 ವರ್ಷಗಳಿಂದ ಆತ ಈ ಕೋಣೆಯಲ್ಲಿ ಬದುಕುತ್ತಿದ್ದಾನಲ್ಲ, ಹೇಗೆ ಆ ಸಂಕಟವನ್ನು ವಿವರಿಸುವುದು? ಇಷ್ಟಕ್ಕೂ, ಬೆಲೆ ಎಂಬುದು ರಾಜೀವ್ ಗಾಂಧಿಯವರ ಜೀವಕ್ಕೆ ಮಾತ್ರ ಇರುವುದು ಅಲ್ಲವಲ್ಲ. ನನ್ನ ಮಗನದ್ದೂ ಜೀವವೇ ಅಲ್ಲವೇ? ಇದರರ್ಥ ಕೊಲೆಗಾರರಿಗೆ ಶಿಕ್ಷೆಯಾಗಬಾರದು ಎಂದಲ್ಲ. ಆಗಲೇಬೇಕು. ಆದರೆ ನಿರಪರಾಧಿಯಾದ ನನ್ನ ಮಗ ನನ್ನೇಕೆ ಈ ರೀತಿ ದಂಡಿಸುತ್ತಿದ್ದಾರೆ? ಆ ಇಡೀ ಷಡ್ಯಂತ್ರದ ಸೂತ್ರದಾರರನ್ನು ಪತ್ತೆ ಹಚ್ಚದೇ, ಯಾವ ರಾಜಕೀಯ ಬಲವೂ ಇಲ್ಲದ, ಶ್ರೀಮಂತರ ಸಾಲಿನಲ್ಲೂ ಗುರುತಿಸಿಕೊಳ್ಳದ ಬಡ ಗುಡಿಸಲಿನ ಮಕ್ಕಳನ್ನೇಕೆ ಶಿಕ್ಷಿಸಲಾಗುತ್ತದೆ? ಇವೆಲ್ಲವನ್ನು ನೋಡುವಾಗ, ದೇವನಲ್ಲಿ ವಿಶ್ವಾಸವಿಡದೇ ಇರುವ ನನ್ನ ನಿಲುವು ಸರಿಯೆಂದೇ ನನಗನಿಸುತ್ತದೆ. ದೇವನಿರುತ್ತಿದ್ದರೆ, ತಪ್ಪು ಮಾಡದ ನನ್ನ ಮಗ ಶಿಕ್ಷೆಗೊಳಗಾಗುತ್ತಿದ್ದನೇ? ನನ್ನ ಮಗ ಒಳ್ಳೆಯವನೆಂದು ನನಗೂ ನನ್ನ ಮನೆಯವರಿಗೂ ಮತ್ತು ಪರಿಸರದವರಿಗೂ ಗೊತ್ತಿದೆ. ದೇವನಿಗೇಕೆ ಗೊತ್ತಾಗುತ್ತಿಲ್ಲ? ಅಂದಹಾಗೆ ಈ ಜಗತ್ತಿನಲ್ಲಿ ಎಷ್ಟು ಮರಣ ದಂಡನೆಗಳು ಜಾರಿಯಾಗುತ್ತಿಲ್ಲ? ಹಾಗಂತ ಅಪರಾಧ ಕೃತ್ಯಗಳು ಕಡಿಮೆಯಾಗುತ್ತಿವೆಯೇ? ಮರಣ ದಂಡನೆಯಿಂದ ಅಪರಾಧ ಕೃತ್ಯಗಳನ್ನು ತಡೆಯಲು ಸಾಧ್ಯವಿಲ್ಲ. ಮನಸ್ಸಾಕ್ಷಿಯೆಂಬ ಕೋರ್ಟಿಗೆ ಭಯಪಡುವವರು ಮಾತ್ರ ಇತರರಿಗೆ ಅನ್ಯಾಯ ಮಾಡಲಾರರು..
   65 ವರ್ಷದ ಅರ್‍ಪ್ಪುದಮ್ ಅಮ್ಮಾಳ್ ಹೇಳುತ್ತಾ ಹೋಗುತ್ತಾರೆ. ಅವರ ಮಾತಿನಲ್ಲಿ ಗೊಂದಲ, ವಿಷಾದ, ಸಿಟ್ಟು, ನಿರೀಕ್ಷೆ.. ಎಲ್ಲವೂ ವ್ಯಕ್ತವಾಗುತ್ತಲೇ ಇರುತ್ತದೆ. ರಾಜೀವ್ ಗಾಂಧಿಯವರ ಹತ್ಯೆಯಲ್ಲಿ ಭಾಗಿಯಾದ ಆರೋಪದೊಂದಿಗೆ ಮರಣ ದಂಡನೆ ಶಿಕ್ಷೆಗೀಡಾಗಿ ಸದ್ಯ ವೆಲ್ಲೂರು ಜೈಲಿನಲ್ಲಿರುವ ಪೇರರಿವಾಲನ್‍ನ ತಾಯಿ ಈ ಅರ್‍ಪ್ಪುದಮ್ ಅಮ್ಮಾಳ್. ತನ್ನ ಮಗನನ್ನು ಉಳಿಸಿಕೊಳ್ಳುವುದಕ್ಕಾಗಿ ಕಳೆದ 21 ವರ್ಷಗಳಿಂದ ಅವರು ಹತ್ತದ ಬಸ್‍ಗಳಿಲ್ಲ. ಏರದ ಕಚೇರಿ ಮೆಟ್ಟಿಲುಗಳಿಲ್ಲ. ಭೇಟಿಯಾಗದ ರಾಜಕಾರಣಿಗಳು, ನ್ಯಾಯವಾದಿಗಳಿಲ್ಲ. 1991 ಜೂನ್ 11ರಂದು ತನ್ನ ಕೈಯಾರೆ ಪೇರರಿವಾಲನ್‍ನನ್ನು ಪೊಲೀಸರ ಕೈಗೊಪ್ಪಿಸಿದ ಈ ತಾಯಿ ಅಂದಿನಿಂದ ಈ ವರೆಗೂ ಮಗನಿಗಾಗಿ ಕಾಯುತ್ತಿದ್ದಾರೆ..
  ಅದೊಂದು ದಿನ
ಈಗ ವಿಚಾರಣೆ ನಡೆಸಿ ಸಂಜೆಯ ಹೊತ್ತಿಗೆ ಬಿಡುತ್ತೇವೆ ಎಂದು ಭರವಸೆ ನೀಡಿ ಪೇರರಿವಾಲನ್‍ನನ್ನು ಕರಕೊಂಡು ಹೋಗಿದ್ದ ಪೊಲೀಸರು ಮರುದಿನವಾದರೂ ಬಿಡಲಿಲ್ಲ. ನಾವು ಹೋದಾಗ ಮಗನನ್ನು ಭೇಟಿಯಾಗಲೂ ಬಿಡಲಿಲ್ಲ. ವಿಚಾರಣೆ ಮುಗಿದಿಲ್ಲ, ನಾಳೆ ಬಿಡುತ್ತೇವೆ ಎಂದರು. ಮರುದಿನವೂ ಬಿಡಲಿಲ್ಲ. ಹೀಗೆ ದಿನಗಳು ಉರುಳಿದ ಬಳಿಕ ಒಂದು ದಿನ ಯಾರನ್ನಾದರೂ ವಕೀಲರನ್ನು ಕರಕೊಂಡು ಬನ್ನಿ ಎಂದು ಪೊಲೀಸರೇ ಸಲಹೆ ಕೊಟ್ಟರು. ನಮಗೆ ಭಯ ಶುರುವಾಯಿತು. ದ್ರಾವಿಡ ಕಳಗಂ (ಡಿ.ಕೆ.) ಪಕ್ಷದ ವಕೀಲ ದೊರೆ ಸ್ವಾಮಿಯವರಲ್ಲಿ ನಾವು ಕೇಳಿಕೊಂಡೆವು. ನಿಜವಾಗಿ, ನನ್ನ ಗಂಡ ತನ್ನ 8ನೇ ವಯಸ್ಸಿನಿಂದಲೇ ಈ ಪಕ್ಷದ ಕಾರ್ಯಕರ್ತರು. ಪೆರಿಯಾರ್ ಚಿಂತನೆಯೊಂದಿಗೆ ನಮಗೆ ಬಲವಾದ ನಂಟಿತ್ತಾದ್ದರಿಂದ ಮತ್ತು ಅವರ ಸಿದ್ಧಾಂತದಡಿಯಲ್ಲೇ ಡಿ.ಕೆ. ಪಕ್ಷ  ಸ್ಥಾಪಿತವಾದ್ದರಿಂದ ನಮ್ಮ ಸಂಬಂಧ ಸಹಜವಾಗಿತ್ತು. ಅಲ್ಲದೇ 1991ರಲ್ಲಿ ಇಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೋಮಾ ಮಾಡಿ ಪಾರ್ಟ್ ಟೈಮಲ್ಲಿ ಎಂಜಿನಿಯರಿಂಗ್ ಕಲಿಯಲಿಕ್ಕಾಗಿ ಚೆನ್ನೈಗೆ ತೆರಳಿದ್ದ ಪೇರರಿವಾಲನ್ ವಾಸಿಸುತ್ತಿದ್ದುದು ಇದೇ ಪಕ್ಷದ ಕಚೇರಿಯಲ್ಲಿ. ಈ ಪಕ್ಷದ ಮುಖವಾಣಿಯಾದ ವಿಡುತಲೈ ಪತ್ರಿಕೆಯಲ್ಲಿ ಪಾರ್ಟ್ ಟೈಂ ಕೆಲಸವನ್ನೂ ಮಾಡುತ್ತಿದ್ದ. ಇಷ್ಟಿದ್ದೂ ಮಗನ ಬಂಧನದ ಬಳಿಕ ಇದೇ ಪತ್ರಿಕೆ, ಡಿ.ಕೆ. ಪಕ್ಷಕ್ಕೂ ನನ್ನ ಮಗನಿಗೂ ಯಾವುದೇ ಸಂಬಂಧ ಇಲ್ಲ ಎಂದು ಸಂಪಾದಕೀಯದಲ್ಲೇ ಬರೆದುಬಿಟ್ಟಿತು. ಅದು ಬಿಡಿ, ಮಗನ ಬಿಡುಗಡೆಗಾಗಿ ಚೆನ್ನೈಯಲ್ಲಿ ಕಾದು ಕಾದು ಸುಸ್ತಾದ ನಾವು ಕೊನೆಗೆ ನಮ್ಮ ಊರಾದ ಜೋಲಾರ್ ಪೇಟೆಗೆ ಮರಳಿದೆವು. ಬಳಿಕ ಮಗನನ್ನು ಚೆಂಗಲ್ ಪೇಟೆಯ ಕೋರ್ಟಿಗೆ ಹಾಜರುಪಡಿಸಿದಾಗ ಕುಟುಂಬದ ಜೊತೆ ಕೋರ್ಟಿಗೆ ಹೋದೆವು. ಕೋರ್ಟಿನಲ್ಲಿ ಅವನನ್ನು ನೋಡಲೋ ಮಾತಾಡಲೋ ಪೊಲೀಸರು ಬಿಡಲಿಲ್ಲ. ಅಷ್ಟಕ್ಕೂ ಮುಖ ಮುಚ್ಚಿದ ಹಲವು ವ್ಯಕ್ತಿಗಳಲ್ಲಿ ನನ್ನ ಮಗ ಯಾರೆಂದು ಪತ್ತೆ ಹಚ್ಚುವುದಾದರೂ ಹೇಗೆ? ನಾವು ಹೊರಗಿನಿಂದ ಮಗನ ಹೆಸರು ಕೂಗುತ್ತಿದ್ದೆವು. ಕಣ್ಣೀರು ಒತ್ತಿ ಬರುತ್ತಿತ್ತು. ರಾಬರ್ಟ್ ಪಾಯಸ್, ಷಣ್ಮುಗಂ ಮತ್ತು ನನ್ನ ಮಗನನ್ನು ಅವತ್ತು ಕೋರ್ಟಿಗೆ ಹಾಜರುಪಡಿಸಿದ್ದರಲ್ಲವೇ? ಷಣ್ಮುಗನನ್ನೇ ನಾವು ಪೇರರಿವಾಲನ್ ಎಂದು ಭ್ರಮಿಸಿ ಕೂಗುತ್ತಿದ್ದೆವು.
   ನೀವೇ ಹೇಳಿ, ತಪ್ಪು ಒಪ್ಪಿಕೊಳ್ಳದಿದ್ದರೆ ನಿನ್ನ ತಂಗಿ ಮತ್ತು ಅಕ್ಕಳನ್ನು ಅತ್ಯಾಚಾರ ಮಾಡುತ್ತೇವೆಂದು 19 ವರ್ಷದ ಯುವಕನನ್ನು ಬೆದರಿಸಿದರೆ ಆತ ಏನು ತಾನೇ ಮಾಡಿಯಾನು? ತಪ್ಪು ಒಪ್ಪಿಕೊಂಡರೆ ಭವಿಷ್ಯದಲ್ಲಿ ಏನಾಗಬಹುದೆಂದು ಆಲೋಚಿಸುವಷ್ಟು ಅನುಭವಸ್ಥ ಪ್ರಾಯ ಅದಲ್ಲವಲ್ಲ. ಆತನಿಗೆ ಕೊಟ್ಟ ಹಿಂಸೆಯನ್ನು ನೆನಪಿಸುವಾಗ ಹೃದಯ ತುಂಬಿ ಬರುತ್ತದೆ. ನನ್ನ ನಿರಪರಾಧಿ ಮಗನನ್ನು ಆ ಪೊಲೀಸರು ಮನ ಬಂದಂತೆ ನಡೆಸಿಕೊಂಡರಲ್ಲ, ನಾನು ಹೇಗೆ ಅದನ್ನು ಸಹಿಸಲಿ?
ರಾಜೀವ್ ಗಾಂಧಿಯನ್ನು ಕೊಂದ ಆರೋಪಿ ಶಿವರಸನ್‍ಗೆ ಬ್ಯಾಟರಿಯನ್ನು ಖರೀದಿಸಿಕೊಟ್ಟ ಆರೋಪವನ್ನು ಪೊಲೀಸರು ನನ್ನ ಮಗನ ಮೇಲೆ ಹೊರಿಸಿದ್ದಾರೆ. ಹೀಗೆ ಬ್ಯಾಟರಿ ಖರೀದಿಸಿ ಕೊಟ್ಟದ್ದು ನನ್ನ ಮಗನೊಬ್ಬನೇ ಅಲ್ಲ, ರವಿಚಂದ್ರನ್ ಎಂಬವನೂ ಬ್ಯಾಟರಿ ಖರೀದಿಸಿಕೊಟ್ಟಿದ್ದಾನೆ. ಆದರೆ ಅವನಿಗೆ ಈ ದೇಶದ ನ್ಯಾಯಾಲಯ ವಿಧಿಸಿದ್ದು ಜೀವಾವಧಿ ಶಿಕ್ಷೆ. ನನ್ನ ಮಗನಿಗೆ ಮಾತ್ರ ಮರಣ ದಂಡನೆ. ಇದು ಯಾವ ಬಗೆಯ ನ್ಯಾಯ? ಶಿವರಸನ್ ನನ್ನ ಮಗ ಖರೀದಿಸಿಕೊಟ್ಟ ಬ್ಯಾಟರಿಯನ್ನೇ ಉಪಯೋಗಿಸಿದ್ದಾನೆ ಎಂದು ಯಾವ ಆಧಾರದಲ್ಲಿ ಹೇಳುವುದು? ಅದಕ್ಕೇ ನಾನು ಹೇಳ್ತಾ ಇರುವುದು, ಇಡೀ ಪ್ರಕರಣದ ವಿಚಾರಣೆ ಮುಕ್ತವಾಗಿ ನಡೆಯಲಿ ಎಂದು. ದೇಶದ ಮಾಜಿ ಪ್ರಧಾನಿಯ ಕೊಲೆಯ ವಿಚಾರಣೆಯನ್ನು ಯಾಕೆ ರಹಸ್ಯವಾಗಿ ನಡೆಸಬೇಕು? ಯಾಕೆ ನನ್ನ ಮಗನ ಮೇಲಿನ ಆರೋಪ ಮತ್ತು ಅದರ ವಿಚಾರಣೆಯನ್ನು ನಾನು ಆಲಿಸಬಾರದು? ಇಷ್ಟಕ್ಕೂ ಟಾಡಾ ಕೋರ್ಟಿನಲ್ಲಿ ವಿಚಾರಣೆ ಹೇಗೆ ನಡೆಯುತ್ತದೆಂಬುದು ನಿಮಗೂ ಗೊತ್ತಲ್ಲವೇ? ನ್ಯಾಯಾಂಗ ಕಸ್ಟಡಿಯಲ್ಲಿ ಆರೋಪಿಯಿಂದ ಪಡಕೊಂಡ ತಪ್ಪೊಪ್ಪಿಗೆಯನ್ನೇ ಅಲ್ಲಿ ಪುರಾವೆಯೆಂದು ಪರಿಗಣಿಸಲಾಗುತ್ತದಲ್ಲವೇ? ನನ್ನ ಮಗ ಈ ವರೆಗೆ ಆರು ಬಾರಿ ನೇಣುಗಂಭದ ಹತ್ತಿರ ಬಂದು ಪಾರಾಗಿದ್ದಾನೆ. ಪ್ರತಿ ಸಂದರ್ಭವೂ ಅದು ನನ್ನ ಪಾಲಿನ ನೇಣುಗಂಭವೇ ಆಗಿತ್ತು. ನಾನೇ ನೇಣಿಗೆ ಕೊರಳೊಡ್ಡಿದಂತೆ ಪ್ರತಿ ಸಂದರ್ಭವನ್ನೂ ಅನುಭವಿಸಿದ್ದೇನೆ. ಒಂದು ರೀತಿಯಲ್ಲಿ ಸಾಯುತ್ತಾ ಬದುಕುತ್ತಿರುವ ಓರ್ವ ಅಮ್ಮ ನಾನು. 2011ರಲ್ಲಿ ವೆಲ್ಲೂರು ಜೈಲಿನಿಂದ ಪತ್ರವೊಂದು ಬಂದಿತ್ತು. ‘ಮಗನನ್ನು ಸೆ. 9ಕ್ಕೆ ನೇಣಿಗೇರಿಸಲಾಗುವುದು, ಮೃತದೇಹವನ್ನು ಪಡಕೊಳ್ಳಿ..' ಎಂದು ಅದರಲ್ಲಿ ತಿಳಿಸಲಾಗಿತ್ತು. ಓರ್ವ ಅಮ್ಮನಾಗಿ ಆ ಪತ್ರವನ್ನು ನಾನು ಹೇಗೆ ಓದಲಿ? ಕೈಯಾರೆ ಬೆಳೆಸಿದ ಮಗ ನೇಣಿಗೇರುವುದನ್ನು ಕಲ್ಪಿಸಿ ಕೊಳ್ಳುವುದಾದರೂ ಹೇಗೆ? ಜಯಲಲಿತಾರು ವಿಧಾನಸಭೆಯಲ್ಲಿ ವಿಶೇಷ ಪ್ರಸ್ತಾವನೆಯನ್ನು ಮಂಡಿಸಿದ್ದರಿಂದ ಸದ್ಯ ಮಗ ನೇಣುಗಂಭದಿಂದ ಪಾರಾಗಿದ್ದಾನೆ. ಆದರೂ ನನ್ನಲ್ಲಿ ಭರವಸೆ ಕ್ಷೀಣಿಸುತ್ತಾ ಇದೆ. ನ್ಯಾಯದ ಬಗ್ಗೆಯೇ ಜಿಗುಪ್ಸೆ ಮೂಡತೊಡಗಿದೆ. ಅಂದಹಾಗೆ, ನನ್ನ ಮಗನಿಗೆ ಮರಣ ದಂಡನೆ ವಿಧಿಸಿರುವುದನ್ನು ಪ್ರಸಿದ್ಧ ನ್ಯಾಯವಾದಿ ಕೃಷ್ಣಯ್ಯರ್ ಅವರೇ ಪ್ರಶ್ನಿಸಿದ್ದಾರೆ. ಅವರಿಗೆ ಗೊತ್ತಿಲ್ಲದ ನ್ಯಾಯ ಇನ್ನಾರಿಗೆ ಗೊತ್ತಿದೆ..
    ಒಂದು ಕಡೆ ಮಗನನ್ನು ತಪ್ಪಿತಸ್ಥ ಎಂದು ಎಲ್ಲೋ ಒಂದು ಕಡೆ ಒಪ್ಪಿಕೊಳ್ಳುತ್ತಲೇ ಇನ್ನೊಂದು ಕಡೆ ನಿರಪರಾಧಿ ಎಂದು ಹೇಳುತ್ತಾ ಹೋಗುವ ಆ ಅಮ್ಮನ ಬಗ್ಗೆ ಮರುಕವಾಗುತ್ತದೆ. ಎಲ್‍ಟಿಟಿಇಯ ಪ್ರಭಾಕರನ್‍ನನ್ನು ಬೆಂಬಲಿಸುತ್ತಿದ್ದ, ಅವನ ಪೋಟೋವನ್ನು ಟಿ.ವಿ. ಮೇಲೆ ಸದಾ ಇಟ್ಟಿರುತ್ತಿದ್ದ ಮನೆಯಾಗಿತ್ತು ಈ ಅರ್‍ಪ್ಪುದಮ್ ಅಮ್ಮಾಳ್‍ರದ್ದು. ಮರಣದಂಡನೆ ಶಿಕ್ಷೆಯಿಂದ ಜೀವಾವಧಿ ಶಿಕ್ಷೆಗೆ ಇಳಿಸಲಾದ ನಳಿನಿಯ ಸಹೋದರ ಭಾಗ್ಯನಾಥನಿಗೂ ಅಮ್ಮಾಳ್‍ರ ಕುಟುಂಬಕ್ಕೂ ಉತ್ತಮ ಸಂಬಂಧವಿತ್ತು..
  ಪೂಂದಮಲ್ಲಿ ವಿಶೇಷ ಕೋರ್ಟಿನಲ್ಲಿ ಮಗನ ವಿಚಾರಣೆ ನಡೆಯುತ್ತಿತ್ತು. ಜೈಲಿನ ಬಳಿಯೇ ವಿಶೇಷ ಕೋರ್ಟು. ಅಲ್ಲಿಗೆ ಹೋಗಲು ನಮಗಾರಿಗೂ ಅವಕಾಶ ಇರಲಿಲ್ಲ. ನಾನು ಮನಸ್ಸಾದಾಗಲೆಲ್ಲ ಪೂಂದಮಲ್ಲಿಗೆ ಹೋಗುತ್ತಿದ್ದೆ. ಮಗನನ್ನು ತೋರಿಸದಿದ್ದರೆ ಕೂಗಾಡುತ್ತಿದ್ದೆ. ಅಲ್ಲೇ ಕೂರುತ್ತಿದ್ದೆ. ಜಗಳ ಮಾಡುತ್ತಿದ್ದೆ. ಪೊಲೀಸರನ್ನು ಕೆಟ್ಟ ಪದಗಳಿಂದ ಬೈಯುತ್ತಿದ್ದೆ. ಹೀಗೆ 8 ವರ್ಷಗಳ ವರೆಗೆ ನನಗೆ ಆತನನ್ನು ಸರಿಯಾಗಿ ನೋಡಲು ಅವಕಾಶವೇ ಸಿಗಲಿಲ್ಲ. ನನ್ನನ್ನು ಅತ್ಯಂತ ಸಂಕಟಕ್ಕೆ ಒಳಪಡಿಸಿದ್ದು ಯಾವುದು ಗೊತ್ತೇ, ಬಂಧನದ ದಿನದಿಂದಲೇ ನನ್ನ ಮಗನಿಗೆ ಕೈದಿಯ  ಉಡುಪು (ಬಿಳಿ) ತೊಡಿಸಿದ್ದು. ಆ ವೇಷದಲ್ಲಿ ನನ್ನ ಮಗನನ್ನು ನೋಡಿ ನಾನು ಅತ್ತು ಬಿಟ್ಟೆ. ದೂರು ಕೊಟ್ಟ ಮೇಲೆ ಮಗನಿಗೆ ಸಾಮಾನ್ಯ ಉಡುಪು ಸಿಕ್ಕಿತು. ಪೂಂದಮಲ್ಲಿ ಜೈಲಿನಲ್ಲಿ ನಾನು ಮತ್ತು ನನ್ನ ಮಗ ಭೇಟಿಯಾಗುತ್ತಿದ್ದುದು ಫೈಬರ್ ಗ್ಲಾಸಿನ ಆಚೆ-ಈಚೆ. ಪರಸ್ಪರ ಮಾತು ಕೇಳುತ್ತಿಲ್ಲವಾದ್ದರಿಂದ ಫೋನಿನಲ್ಲಿ ಮಾತಾಡಬೇಕಿತ್ತು. ನಾನು ದೂರು ಕೊಟ್ಟ ಬಳಿಕ ಫೈಬರ್ ಗ್ಲಾಸಿನಲ್ಲಿ ಸಣ್ಣದೊಂದು ತೂತು ಕೊರೆಯಲಾಯಿತು. ಅದರ ಮೂಲಕ ಆತನ ಬೆರಳನ್ನು ಮುಟ್ಟಲು ಮಾತ್ರ ನನಗೆ ಸಾಧ್ಯವಾಗುತ್ತಿತ್ತು. ಮತ್ತೆ ದೂರು ಕೊಟ್ಟೆವು. ಬಳಿಕ ಜೈಲರ್ ಕೋಣೆಯ ಮಾಡಿನಿಂದ ಕೆಳಕ್ಕೆ ನೋಡಿ ಮಾತಾಡುವುದಕ್ಕೆ ಮಗನಿಗೆ ಅವಕಾಶ ಸಿಕ್ಕಿತು. ನಾನು ನೆಲದಿಂದ ಮೇಲಕ್ಕೆ ನೋಡಿ ಮಾತಾಡುತ್ತಿದ್ದೆ.. 8 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ನನ್ನ ಮಗನಿಗೆ ಕೋರ್ಟು ಮರಣ ದಂಡನೆಯನ್ನು ವಿಧಿಸಿತು. ನಾನು ಮೇಲ್ಮನವಿ ಸಲ್ಲಿಸಿದೆ. ಅದನ್ನು ಎತ್ತಿಕೊಂಡದ್ದೂ ಮರಣದಂಡನೆ ವಿಧಿಸಿದ ನ್ಯಾಯಾಧೀಶರೇ. ಆದ್ದರಿಂದ ಅವರು ಭಿನ್ನ ತೀರ್ಪು ಕೊಡುವುದಕ್ಕೆ ಸಾಧ್ಯವೂ ಇರಲಿಲ್ಲ. ಆದರೂ ಒಂದು ಮಾತು ಹೇಳಲೇಬೇಕು,
   ನಾನು ಜೈಲಿಗೆ ಭೇಟಿ ಕೊಡುವಾಗ ನನ್ನ ಮಗಳ ಮಗಳನ್ನೂ ಎಷ್ಟೋ ಬಾರಿ ಕರಕೊಂಡು ಹೋದದ್ದಿದೆ. ಆಗೆಲ್ಲಾ 'ಮಾಮ (ಪೇರರಿವಾಲನ್) ಯಾವಾಗ ಬರುತ್ತಾರೆ..' ಎಂದು ಆಕೆ ಕೇಳುತ್ತಿದ್ದಳು. ಮುಂದಿನ ವರ್ಷ ಮಗಳೇ ಅನ್ನುತ್ತಿದ್ದೆ. ಆದರೆ ಕ್ರಮೇಣ ಅವಳು ಕೇಳುವುದನ್ನೇ ಬಿಟ್ಟುಬಿಟ್ಟಳು. ಅಜ್ಜಿ ಸುಳ್ಳು ಹೇಳುತ್ತಿದ್ದಾಳೆ ಎಂದು ದೂರ ತೊಡಗಿದಳು. ಅಷ್ಟಕ್ಕೂ ಈ ಸ್ಥಿತಿಯಲ್ಲಿ ನೀವಿರುತ್ತಿದ್ದರೆ ನೀವಾದರೂ ಏನು ಹೇಳುತ್ತಿದ್ದಿರಿ? ಇದು ಸುಳ್ಳಲ್ಲ ಮಗಳೇ, ತಾಯಿಯೋರ್ವಳ ಭರವಸೆ.. ಎಂದು ಹೇಳಲು ಪ್ರಯತ್ನಿಸುತ್ತಿದ್ದಿರಲ್ಲವೇ? ನಾನೂ ಪ್ರಯತ್ನಿಸಿದ್ದೇನೆ. ಆದರೆ ಕಟ್ಟಿ ಬರುವ ಗಂಟಲು, ಪದಗಳನ್ನು ಅರ್ಧದಲ್ಲೇ ತಡೆದಿರಿಸುತ್ತದೆ. ನಾನು ಇನ್ನಾವ ರೀತಿಯಲ್ಲಿ ಮಗಳಿಗೆ ಉತ್ತರ ಕೊಡಲಿ..'
   ಅರ್‍ಪ್ಪುದಮ್ ಅಮ್ಮಾಳ್‍ರನ್ನು ಆಲಿಸುವಾಗ ಮರಣ ದಂಡನೆಗೆ ಒಳಗಾದ ಮಗನ ತಾಯಿಯ ಸಂಕಟ ಅರ್ಥವಾಗುತ್ತಾ ಹೋಗುತ್ತದೆ. ಮಾತ್ರವಲ್ಲ, ಮಕ್ಕಳ ತಪ್ಪುಗಳು ಹೆತ್ತವರನ್ನು ಹೇಗೆ ಪ್ರತಿದಿನವೂ ಸಾಯಿಸುತ್ತಿರುತ್ತವೆ ಅನ್ನುವುದೂ ಗೊತ್ತಾಗುತ್ತದೆ. ಅಂದಹಾಗೆ,
  'ಅತ್ಯಾಚಾರಿಗಳಿಗೆ ಮರಣ ದಂಡನೆಯಾಗಲಿ' ಎಂಬ ಆಗ್ರಹಗಳು ಬಲವಾಗಿ ಕೇಳಿ ಬರುತ್ತಿರುವ ಈ ದಿನಗಳಲ್ಲಿ, 'ತಪ್ಪು' ಮಾಡುವುದಕ್ಕಿಂತ ಮೊದಲು ಸರ್ವರೂ ಈ ತಾಯಿ  ಮತ್ತು ಮಗನನ್ನು ನೆನಪಿಸಿಕೊಳ್ಳುವುದು ಉತ್ತಮವೆನಿಸುತ್ತದೆ, ಅಲ್ಲವೇ?

No comments:

Post a Comment