Wednesday, August 27, 2014

ಬರಹ ಜಗತ್ತಿನ ‘ನೂರ್’

   ಮಲಯಾಳಂ ಸಿನಿಮಾಗಳು ಕನ್ನಡಕ್ಕೆ (ರಿಮೇಕ್) ಬರುತ್ತಿರುವಷ್ಟೇ ವೇಗವಾಗಿ ಮಲಯಾಳಂ ಸಾಹಿತ್ಯ ಕೃತಿಗಳು ಕನ್ನಡಕ್ಕೆ ಬರುತ್ತಿರುವುದು ಕಡಿಮೆ. ವೈಕಂ ಮುಹಮ್ಮದ್ ಬಶೀರ್, ಎಂ.ಟಿ. ವಾಸುದೇವ ನಾಯರ್, ತಕಳಿ ಶಿವಶಂಕರ್ ಪಿಳ್ಳೆ, ರಾಧಾಕೃಷ್ಣನ್, ಎಂ. ಮುಕುಂದನ್, ಓ.ವಿ. ವಿಜಯನ್, ನಾರಾಯಣ ಮೆನನ್.. ಮುಂತಾದ ಕೆಲವೇ ಸಾಹಿತಿಗಳು ಮತ್ತು ಸಾಹಿತ್ಯಗಳನ್ನು ಹೊರತು ಪಡಿಸಿದರೆ ಉಳಿದಂತೆ ದೊಡ್ಡದೊಂದು ಗುಂಪು ನಮ್ಮ ಪರಿಚಿತ ವಲಯದಿಂದ ಈಗಲೂ ಹೊರಗಿವೆ. ಪಾರ್ವತಿ ಜಿ. ಐತಾಳ್, ಕೆ.ಕೆ. ಗಂಗಾಧರನ್, ಫಕೀರ್ ಮುಹಮ್ಮದ್ ಕಟ್ಪಾಡಿಯಂಥ ಕೆಲವೇ ಮಂದಿ ಮಲಯಾಳಂನ ಕಂಪನ್ನು ಕನ್ನಡಿಗರ ಮನೆಮನೆ ತಲುಪಿಸುವಲ್ಲಿ ದುಡಿದಿದ್ದಾರೆ. ಅಷ್ಟಕ್ಕೂ, ಇದು ಮಲಯಾಳಂ ಸಾಹಿತ್ಯದ ಒಂದು ಮಗ್ಗುಲು ಮಾತ್ರ. ಆ ಸಾಹಿತ್ಯ ಪ್ರಪಂಚಕ್ಕೆ ಇನ್ನೊಂದು ಮಗ್ಗುಲೂ ಇದೆ. ಅದುವೇ ಇಸ್ಲಾವಿೂ ಸಾಹಿತ್ಯ. ಫಕೀರ್ ಮುಹಮ್ಮದ್ ಕಟ್ಪಾಡಿಯಾಗಲಿ, ಗಂಗಾಧರನ್ ಆಗಲಿ ಮುಟ್ಟದ ಈ ಸಾಹಿತ್ಯ ಕ್ಷೇತ್ರ ಎಷ್ಟು ವಿಸ್ತಾರವಾಗಿ ಬೆಳೆದಿದೆಯೆಂದರೆ, ಎಂ.ಟಿ. ವಾಸುದೇವ ನಾಯರ್ ಪ್ರತಿನಿಧಿಸುವ ಸಾಹಿತ್ಯ ಜಗತ್ತಿಗೆ ಪೈಪೋಟಿ ನೀಡುವಷ್ಟು. ಮುಸ್ಲಿಮರ ಕುರಿತಂತೆ ಮುಸ್ಲಿಮೇತರರಲ್ಲಿರುವ ತಪ್ಪು ತಿಳುವಳಿಕೆಗಳು, ಕುರ್‍ಆನಿನ ಕೆಲವಾರು ಪದಪ್ರಯೋಗಗಳ ಬಗೆಗಿನ ಭೀತಿ, ಮುಸ್ಲಿಮರ ವಿವಿಧ ಆಚರಣೆ-ಅನುಷ್ಠಾನಗಳ ಕುರಿತಂತೆ ಗಲಿಬಿಲಿ.. ಮುಂತಾದ ಎಲ್ಲವುಗಳನ್ನೂ ವಸ್ತುವಾಗಿಸಿಕೊಂಡು ಅತ್ಯಂತ ಅಧಿಕಾರಯುತವಾಗಿ ಬರೆಯಲಾದ ಸಾಹಿತ್ಯ ಕೃತಿಗಳು ಈ ಕ್ಷೇತ್ರದಲ್ಲಿ ಪ್ರಕಟವಾಗುತ್ತಿವೆ. ಮಹಿಳೆಯನ್ನು ಮನೆಯೊಳಗೆ, ಶಾಲೆಯಿಂದ ಹೊರಗೆ.. ಇಡುವುದನ್ನೇ ಧಾರ್ಮಿಕತೆ ಎಂದು ತಪ್ಪಾಗಿ ಅಂದುಕೊಂಡಿದ್ದ ಸಮಾಜವನ್ನು ತಿದ್ದುವ ಸಾಹಿತ್ಯಗಳೂ ಪ್ರಕಟವಾಗುತ್ತಿವೆ. ಆದರೆ ಕನ್ನಡ ನಾಡಿನ ಪಾಲಿಗೆ ತೀರಾ ಅಗತ್ಯವಿದ್ದ ಮತ್ತು ಕನ್ನಡಿಗರು ಓದಲೇಬೇಕಾಗಿದ್ದ ಇಂಥ ಅನೇಕಾರು ಸಾಹಿತ್ಯ ಕೃತಿಗಳು ಅನುವಾದಕರ ಕೊರತೆಯಿಂದಲೋ ಅಥವಾ ಇತರೇ ಕಾರಣಗಳಿಂದಲೋ ಕನ್ನಡಿಗರಿಂದ ದೂರವೇ ಉಳಿದಿತ್ತು. ಇಂಥ ಸಂದರ್ಭದಲ್ಲಿ ಅನುವಾದ ಪ್ರಪಂಚಕ್ಕೆ ಕಾಲಿಟ್ಟವರೇ ಪಿ. ನೂರ್(ಪ್ರಕಾಶ) ಮುಹಮ್ಮದ್. 1970ರ ದಶಕದಲ್ಲಿ ಇವರು ಮಲಯಾಳಂನ ಇಸ್ಲಾವಿೂ ಸಾಹಿತ್ಯ ಜಗತ್ತಿನೊಳಗೆ ಪ್ರವೇಶಿಸಿದ ಬಳಿಕ ಮೊನ್ನೆ ಆಗಸ್ಟ್ 19ರಂದು ನಿಧನರಾಗುವ ವರೆಗೂ ಆ ಪ್ರಪಂಚದಲ್ಲಿ ಧಾರಾಳ ಸುತ್ತಾಡಿದರು. ಅಲ್ಲಿ ಬೆಳಕು ಕಾಣುತ್ತಿದ್ದ ಪ್ರತಿ ಕೃತಿಗಳನ್ನೂ ಬಹುತೇಕ ಓದಿದರು. ಕನ್ನಡಿಗರಿಗೆ ಕೊಡಲೆಂದು ತೆಗೆದಿಟ್ಟರು. ಅನುವಾದಿಸಿದರು. ಅನುವಾದದ ಕುರಿತಂತೆ ಅವರಲ್ಲಿ ಎಷ್ಟರ ಮಟ್ಟಿಗೆ ಉತ್ಸಾಹ ಇತ್ತೆಂದರೆ, ಇನ್ನೋರ್ವ ಅನುವಾದಕರ ಬಗ್ಗೆ ಓದುಗರು ಆಲೋಚನೆಯನ್ನೇ ಮಾಡದಷ್ಟು.
   1978 ಎಪ್ರಿಲ್ 23ರಂದು ಪ್ರಾರಂಭವಾದ ಸನ್ಮಾರ್ಗ ವಾರ ಪತ್ರಿಕೆಯ ಸ್ಥಾಪಕ ಸಂಪಾದಕೀಯ ಮಂಡಳಿಯಲ್ಲಿ ಸೇರಿಕೊಳ್ಳುವುದಕ್ಕಿಂತ ಮೊದಲೇ ನೂರ್ ಮುಹಮ್ಮದ್‍ರು ಒಂದೆರಡು ಸಾಹಿತ್ಯ ಕೃತಿಗಳನ್ನು ರಚಿಸಿದ್ದರು. ಅವರು ಪತ್ರಿಕೋದ್ಯಮ ವಿದ್ಯಾರ್ಥಿಯಲ್ಲ. ಬಿ.ಎಸ್ಸಿ. ಪದವೀಧರ. ಅಂದಿನ ಕಾಲದಲ್ಲಿ ಕೆಲಸಗಳು ಹುಡುಕಿಕೊಂಡು ಬರಬಹುದಾಗಿದ್ದ ಭಾರೀ ತೂಕದ ಪದವಿಯೊಂದನ್ನು ಪಡೆದುಕೊಂಡಿದ್ದ ಅವರು, ಸನ್ಮಾರ್ಗ ವಾರಪತ್ರಿಕೆ ಮತ್ತು ಅನುವಾದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ನಿರ್ಧರಿಸಿದುದಕ್ಕೆ ಕಾರಣ, ಅಂದಿನ ಸಾಮಾಜಿಕ ವಾತಾವರಣ ಎನ್ನಬಹುದು. ಅಂದು, ಇಸ್ಲಾಮ್‍ನ ಬಗ್ಗೆ ಮುಸ್ಲಿಮೇತರರಲ್ಲಿ ಮಾತ್ರ ತಿಳುವಳಿಕೆಯ ಕೊರತೆ ಇದ್ದುದಲ್ಲ, ಸ್ವತಃ ಮುಸ್ಲಿಮರಲ್ಲೇ ಬೆಟ್ಟದಷ್ಟು ಸುಳ್ಳು ನಂಬುಗೆಗಳಿದ್ದುವು. ಅಜ್ಞಾನಜನ್ಯ ಆಚರಣೆಗಳಿದ್ದುವು. ಕಾಫಿರ್ ಎಂಬ ಪದ ಮುಸ್ಲಿಮರಿಗೆ ಗೊತ್ತಿತ್ತೇ ಹೊರತು ಅದನ್ನು ಯಾರ ಮೇಲೆ, ಹೇಗೆ, ಯಾವಾಗ, ಯಾಕೆ ಪ್ರಯೋಗಿಸಬೇಕೆಂಬ ಬಗ್ಗೆ ಏನೇನೂ ತಿಳುವಳಿಕೆ ಇರಲಿಲ್ಲ. ಆದ್ದರಿಂದ ಅದನ್ನು ತಪ್ಪಾಗಿ ಪ್ರಯೋಗಿಸಿ ಮುಸ್ಲಿಮೇತರರಿಂದ ಬೇರ್ಪಟ್ಟು ಕೊಂಡಿದ್ದರು. ಮುಸ್ಲಿಮರ ನಮಾಝ್, ಅವರ ಉಪವಾಸ, ಅವರ ಮಸೀದಿ, ಸಲಾಮ್, ಆರಾಧನೆ.. ಎಲ್ಲವೂ ಮುಸ್ಲಿಮೇತರರ ಪಾಲಿಗೆ ತೀರಾ ಅಪರಿಚಿತ ಮಾತ್ರವಲ್ಲ, ಮುಸ್ಲಿಮೇತರ ಸಮಾಜದಲ್ಲಿ ಈ ಬಗ್ಗೆ ಧಾರಾಳ ಅನುಮಾನಗಳಿದ್ದುವು. ಮುಸ್ಲಿಮ್ ಮಹಿಳಾ ಜಗತ್ತಂತೂ ಇನ್ನಷ್ಟು ಕತ್ತಲೆಯಲ್ಲಿತ್ತು. ತಲಾಕ್‍ನ ಬಗ್ಗೆ, ಪರ್ದಾದ ಬಗ್ಗೆ, ಮಹಿಳಾ ಸ್ವಾತಂತ್ರ್ಯ, ಸಮಾನತೆ, ಹಕ್ಕುಗಳ ಬಗ್ಗೆ.. ಮುಖ್ಯವಾಹಿನಿಯ ಮಾಧ್ಯಮಗಳಲ್ಲೇ ತೀರಾ ಕಡಿಮೆ ವಿಷಯಗಳು ಬರುತ್ತಿದ್ದ ಸಂದರ್ಭಗಳಾಗಿದ್ದುವು. ಇಂಥ ಹೊತ್ತಲ್ಲಿ ಬಿ.ಎಸ್ಸಿ. ಪದವೀಧರನಾದ ನೂರ್ ಮುಹಮ್ಮದ್‍ರು ಸರಕಾರಿಯೋ ಖಾಸಗಿಯೋ ನೌಕರ ಆಗುವುದಕ್ಕಿಂತ ಜ್ಞಾನ ಕ್ಷೇತ್ರದಲ್ಲಿರುವ ಈ ಕತ್ತಲೆಗೆ ಬೆಳಕು ಚೆಲ್ಲುವ ಲೇಖಕ ಆಗಲು ನಿರ್ಧರಿಸಿದರು. ಅದಕ್ಕಾಗಿ ಸನ್ಮಾರ್ಗ ಪತ್ರಿಕೆಯನ್ನು ದೀವಟಿಕೆಯಾಗಿ ಬಳಸಿಕೊಂಡರು. ಸನ್ಮಾರ್ಗ ಪತ್ರಿಕೆಯ ಆರಂಭದ ಐದು ವರ್ಷಗಳಲ್ಲಿ ಅವರು ಸಂಬಳವನ್ನೇ ಪಡೆದಿರಲಿಲ್ಲ. ಪವಿತ್ರ ಕುರ್‍ಆನಿನ ಮೇಲೆ ಅವರಿಗೆಷ್ಟು ಪ್ರೀತಿಯಿತ್ತು ಮತ್ತು ಸಮಾಜಕ್ಕೆ ಅದನ್ನು ತಲುಪಿಸಬೇಕೆಂಬ ಕಾಳಜಿಯಿತ್ತು ಅಂದರೆ, ಮೊನ್ನೆ ನಿಧನರಾಗುವ ವೇಳೆ ಕುರ್‍ಆನ್ ವ್ಯಾಖ್ಯಾನದ (ತಫ್ಹೀಮುಲ್ ಕುರ್‍ಆನ್) 5ನೇ ಭಾಗದ ಅನುವಾದದಲ್ಲಿದ್ದರು. ಮಂಗಳೂರಿನ ಪ್ರಕಾಶನ ಸಂಸ್ಥೆಯಾದ ಶಾಂತಿ ಪ್ರಕಾಶನಕ್ಕಾಗಿ ಅವರು ಅನುವಾದಿಸಿದ 50 ಕೃತಿಗಳಲ್ಲಿ, 1. ವೇದ ಗ್ರಂಥಗಳಲ್ಲಿ ಪ್ರವಾದಿ ಮುಹಮ್ಮದ್, 2. ಇಸ್ಲಾಮ್ ಸಂಶಯಗಳ ಸುಳಿಯಲ್ಲಿ, 3. ಭಾರತೀಯ ಸಂಸ್ಕ್ರಿತಿಯ ಅಂತರ್ಧಾರೆಗಳು, 4. ಮಹಿಳೆ ಇಸ್ಲಾಮಿನಲ್ಲಿ, 5. ತಲಾಕ್, 6. ಸತ್ಯ ವಿಶ್ವಾಸ ಮುಂತಾದುವುಗಳೂ ಸೇರಿವೆ. ಅವರ ಬರಹವಿಲ್ಲದೇ ಸನ್ಮಾರ್ಗ ಪತ್ರಿಕೆಯ ಒಂದೇ ಒಂದು ಸಂಚಿಕೆ ಕಳೆದ 37 ವರ್ಷಗಳಲ್ಲಿ ಈ ವರೆಗೂ ಪ್ರಕಟವಾಗಿಲ್ಲ ಎಂಬುದೇ ಅವರ ಅಕ್ಷರ ಪ್ರೇಮಕ್ಕೆ ಮತ್ತು ಸಾಮಾಜಿಕ ಬದ್ಧತೆಗೆ ನೀಡಬಹುದಾದ ಬಹುದೊಡ್ಡ ಪುರಾವೆ.
   ಭಾಷೆಯ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸುತ್ತಿದ್ದವರು ನೂರ್ ಮುಹಮ್ಮದ್. ಕನ್ನಡ ಭಾಷೆಯಲ್ಲಿ ಅವರಿಗೆಷ್ಟು ಪ್ರಭುತ್ವ ಇತ್ತೋ ಅಷ್ಟೇ ಮಲಯಾಳಂ ಭಾಷೆಯಲ್ಲಿ ಪಾಂಡಿತ್ಯವೂ ಇತ್ತು. ಕನ್ನಡ ಭಾಷೆಯನ್ನು ಅತ್ಯಂತ ಖಚಿತವಾಗಿ ಮತ್ತ ನಿಖರವಾಗಿ ಹೇಗೆ ಬಳಸಬಹುದು ಎಂಬುದಕ್ಕೆ ನೂರ್ ಮುಹಮ್ಮದ್ ಒಂದು ಅತ್ಯುತ್ತಮ ಉದಾಹರಣೆ. ಅವರು ಕನ್ನಡಕ್ಕೆ ಹಲವಾರು ಪದಗಳನ್ನು ಪರಿಚಯಿಸಿದರು. ಮಲಯಾಳಂನ ಪದವೊಂದಕ್ಕೆ ಅಷ್ಟೇ ಚೆಲುವಾದ ಪದವೊಂದು ಅವರ ಜ್ಞಾನಕೋಶದಲ್ಲಿ ಅರಳದೇ ಹೋದರೆ, ಸಂಪಾದಕೀಯ ಮಂಡಳಿಯ ಇತರ ಸಹೋದ್ಯೋಗಿಗಳಲ್ಲಿ ವಿಚಾರಿಸಿಕೊಳ್ಳುತ್ತಿದ್ದರು. ಸನ್ಮಾರ್ಗ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ತಪ್ಪು ಪದಗಳನ್ನು ಹೆಕ್ಕಿ, ಎತ್ತಿ ಹೇಳಿ ನಿಖರತೆಗೆ ಮತ್ತು ಸ್ಪಷ್ಟತೆಗೆ ಒತ್ತು ಕೊಡುವಂತೆ ಎಚ್ಚರಿಸುತ್ತಿದ್ದರು. ಅನುವಾದವೆಂಬುದು ಬರೇ ಪದಗಳ ಕನ್ನಡೀಕರಣವಲ್ಲ, ಅಲ್ಲಿ ಭಾವ, ಆವೇಶ, ಸ್ಪಷ್ಟತೆ ಮತ್ತು ಖಚಿತತೆ ಇರಬೇಕು ಅನ್ನುತ್ತಿದ್ದರು. ಯಾವುದೇ ಬರಹವನ್ನು ಅನುವಾದಿಸುವ ಮೊದಲು ಇಡೀ ಬರಹವನ್ನು ಪೂರ್ಣವಾಗಿ ಓದಿಕೊಳ್ಳಬೇಕು ಎಂದು ಹೇಳುತ್ತಿದ್ದರು. ಅನುವಾದದ ಸಂದರ್ಭದಲ್ಲಿ ಮೂಲ ಕೃತಿಗೆ ಚ್ಯುತಿ ಬರದಂತೆ, ಅದರ ಸೌಂದರ್ಯಕ್ಕೆ ಹಾನಿ ತಟ್ಟದಂತೆ ಜಾಗರೂಕರಾಗಿರಬೇಕು ಎಂದು ತಿದ್ದುತ್ತಿದ್ದರು. ಅವರ ಅನುವಾದದಲ್ಲಿ ಯಾವಾಗಲೂ ಈ ಶಿಷ್ಟತೆ ಸದಾ ಇರುತ್ತಿದ್ದುವು. ಅನುವಾದ ಕ್ಷೇತ್ರದಲ್ಲಿ ತರಬೇತಿ ಪಡೆದು, ಪದವಿಯ ಮೇಲೆ ಪದವಿ ಪಡೆದು ಬಂದವರನ್ನು ಅಚ್ಚರಿ ಗೊಳಿಸುವಷ್ಟು ಅವರಲ್ಲಿ ಪದ ಸಂಪತ್ತು ಮತ್ತು ಪದ ಸೌಂದರ್ಯವಿತ್ತು. ಅವರು ಅನುವಾದದಲ್ಲಿ ‘ನೂರ್’ತನ(ತಮ್ಮತನ) ವನ್ನು ಸೃಷ್ಟಿಸಿದ್ದರು. ‘ಇದು ನೂರ್ ಮುಹಮ್ಮದ್‍ರ ಅನುವಾದ' ಎಂದು ಹೇಳಬಹುದಾದಷ್ಟು ವಿಶಿಷ್ಟತೆ ಅವರ ಅನುವಾದಕ್ಕಿತ್ತು. ‘ಭಾರತೀಯ ಸಂಸ್ಕøತಿಯ ಅಂತರ್ಧಾರೆಗಳು’ ಎಂಬ ಕೃತಿಯನ್ನು ಬಿಡುಗಡೆಗೊಳಿಸುತ್ತಾ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ  ಡಾ| ಸಿದ್ಧಲಿಂಗಯ್ಯ ಕಳೆದ ವರ್ಷ ಬೆಂಗಳೂರಿನಲ್ಲಿ ‘ನೂರ್’ತನವನ್ನು ಹೀಗೆ ವರ್ಣಿಸಿದ್ದರು,
   “ಇದು ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಲಾದ ಕೃತಿ ಎಂದು ಅನಿಸುತ್ತಲೇ ಇಲ್ಲ. ಕನ್ನಡದಲ್ಲೇ ಸ್ವತಂತ್ರವಾಗಿ ರಚಿತಗೊಂಡ ಕೃತಿಯಂತೆ ಭಾಸವಾಗುತ್ತಿದೆ. ಮಲಯಾಳಂ ಭಾಷೆಯ ಛಾಪು ಇಲ್ಲದ, ಅಚ್ಚ ಕನ್ನಡ ಶೈಲಿಯಲ್ಲಿ ಪ್ರಕಟಗೊಂಡಿರುವ ಕೃತಿ ಇದು” ಎಂದಿದ್ದರು.
   ಅನುವಾದ ಜಗತ್ತು ತೀರಾ ಹಳೆಯದು. ಕ್ರಿಸ್ತಪೂರ್ವ 3-1ನೇ ಶತಮಾನದ ಆರಂಭದಲ್ಲೇ ಯಹೂದಿ ಧರ್ಮಗ್ರಂಥವು ಅಲೆಕ್ಸಾಂಡ್ರಿಯಾದಲ್ಲಿ ಗ್ರೀಕ್ ಭಾಷೆಗೆ ಅನುವಾದಗೊಂಡಿದೆ ಎಂದು ಹೇಳಲಾಗುತ್ತಿದೆ. ಯಹೂದಿಯರಲ್ಲಿ ತಮ್ಮ ಪರಂಪರಾಗತ ಭಾಷೆ ಕಾಣೆಯಾಗುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು. ಆ ನಂತರ ಬೌದ್ಧರು ಮತ್ತು ಅರಬರು ಈ ಅನುವಾದ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟರು. ಬೌದ್ಧರ ತಾಂಗುಟ್ ಸಾಮ್ರಾಜ್ಯವಂತೂ ಈ ಕೆಲಸವನ್ನು ಅತ್ಯಂತ ಮುತುವರ್ಜಿಯಿಂದ ನಡೆಸಿತು. 13ನೇ ಶತಮಾನದಲ್ಲಿ ಅಲ್ಫಾನ್ಸೋ ರಾಜನು ಸ್ಪೇನ್‍ನ ಟೊಲೊಡೋದಲ್ಲಿ ‘ಸ್ಕೂಲ್ ಆಫ್ ಟ್ರಾನ್ಸ್‍ಲೇಶನ್’ ಅನ್ನು ಸ್ಥಾಪಿಸಿದ. ಇದೇ ಸಂದರ್ಭದಲ್ಲಿ ಕಾರ್ಡೋವಾದಲ್ಲಿ ಇಸ್ಲಾವಿೂ ಫಿಲಾಸಫಿಯನ್ನು ಲ್ಯಾಟಿನ್ ಭಾಷೆಗೆ ಅನುವಾದಿಸುವ ಪ್ರಯತ್ನಗಳೂ ನಡೆದುವು. ಇಂಥ ಅನುವಾದಗಳೇ ಯುರೋಪಿನ ವೈಜ್ಞಾನಿಕ ಮತ್ತು ಸಾಂಸ್ಕøತಿಕ ಬೆಳವಣಿಗೆಗೆ ದೇಣಿಗೆಯನ್ನು ನೀಡಿದುವು. 1453ರಲ್ಲೇ ಅನುವಾದದಲ್ಲಿ ಬಳಕೆಯಾಗಬೇಕಾದ ಭಾಷೆ, ಶೈಲಿಗಳ ಬಗ್ಗೆ ಚರ್ಚೆಗಳೆದ್ದಿದ್ದುವು. ಪ್ಲೇಟೋ, ಅರಿಸ್ಟಾಟಲ್‍ರ ಸಾಹಿತ್ಯಿಕ ಭಾಷೆಗೆ ಅನುವಾದಿತ ಭಾಷೆಯಲ್ಲಿ ನ್ಯಾಯ ಕೊಡಬೇಕೆಂಬ ಬಗ್ಗೆ ಓದುಗ ವೃಂದದಿಂದ ಆಗ್ರಹಗಳು ಕೇಳಿಬಂದಿದ್ದುವು. 20ನೇ ಶತಮಾನದಲ್ಲಿ ಬೆಂಜಮಿನ್ ಜ್ಯೂವೆಟ್ ಎಂಬವರು ಪ್ಲೇಟೋರನ್ನು ಸರಳ ಭಾಷೆಯಲ್ಲಿ ಅನುವಾದಿಸಿದರು. ಅವರು ಭಾಷಾ ಶೈಲಿಗಿಂತ ನಿಖರತೆಗೆ ಒತ್ತು ಕೊಟ್ಟರು. ನಿಜವಾಗಿ, ರಶ್ಯನ್ ಮೂಲದ ರೋಮನ್ ಜಾಕೊಬ್ಸ್ ಎಂಬವರು 1959ರಲ್ಲಿ ಮಂಡಿಸಿದ ‘ಆನ್ ಲಿಂಗ್ವಿಸ್ಟಿಕ್ ಆಸ್ಪೆಕ್ಟ್ಸ್ ಆಫ್ ಟ್ರಾನ್ಸ್‍ಲೇಶನ್’ ಎಂಬ ಪ್ರಬಂಧವಾಗಲಿ, ಜೇಮ್ಸ್ ಮೆರಿಲ್‍ರ ‘ಲೋಸ್ಟ್ ಇನ್ ಟ್ರಾನ್ಸ್‍ಲೇಶನ್’ ಎಂಬ ಬರಹವಾಗಲಿ ಅಥವಾ 1997ರಲ್ಲಿ ಡಗ್ಲಾಸ್ ಹೋಪ್‍ಸ್ಟೌಡ್‍ಚರ್ ಅವರು ಬರೆದ ಕೃತಿಯಾಗಲಿ ಎಲ್ಲವೂ ಅನುವಾದದ ಬಗೆಗಿನ ಸಮಸ್ಯೆಗಳ ಕುರಿತೇ ಆಗಿತ್ತು. ಒಂದು ಭಾಷೆಯ ಕೃತಿಯು ಇನ್ನೊಂದು ಭಾಷೆಗೆ ತರ್ಜುಮೆಗೊಳ್ಳುವಾಗ ಮೂಲ ಕೃತಿಗೆ ಸಂಪೂರ್ಣ ನ್ಯಾಯ ಸಲ್ಲಿಸಲು ಸಾಧ್ಯವೇ ಎಂಬ ಚರ್ಚೆ, ಸಂವಾದಗಳು ಅಂದಿನಿಂದ ಇಂದಿನವರೆಗೂ ನಡೆಯುತ್ತಿವೆ. ಇಂಥ ಅನುಮಾನಗಳನ್ನು ಸಮರ್ಥಿಸುವಂತೆ ಅನೇಕಾರು ಬರಹಗಳೂ ಪ್ರಕಟಗೊಂಡಿವೆ. 1143ರಲ್ಲಿ ಪವಿತ್ರ ಕುರ್‍ಆನನ್ನು ರಾಬರ್ಟಸ್ ಕೆಟನ್ಸಿಸ್ ಎಂಬವ ಲ್ಯಾಟಿನ್ ಭಾಷೆಗೆ ಅನುವಾದಿಸಿದ್ದನ್ನು ಸಾಮಾನ್ಯವಾಗಿ ಇದಕ್ಕೆ ಉದಾಹರಣೆಯಾಗಿ ನೀಡಲಾಗುತ್ತದೆ. ಆತ ಅತ್ಯಂತ ತಪ್ಪುತಪ್ಪಾಗಿ ಮತ್ತು ತದ್ವಿರುದ್ಧ ಅರ್ಥ ಬರುವಂತೆ ಕುರ್‍ಆನನ್ನು ಅನುವಾದಿಸಿದ್ದ. ಆ ಅನುವಾದದ ಆಧಾರದಲ್ಲೇ ಯುರೋಪಿಯನ್ ಅನುವಾದಕರು ಪವಿತ್ರ ಕುರ್‍ಆನನ್ನು ಇತರ ಭಾಷೆಗಳಿಗೆ ಅನುವಾದಿಸಿದ್ದೂ ನಡೆಯಿತು. ರೋಮ್‍ನಲ್ಲಿ ಶಿಕ್ಷಕನಾಗಿದ್ದ ಲುಡವಿಕೋ ಮ್ಯಾರ್ರಾಸ್ಸಿ ಕೂಡ ಅವರಲ್ಲಿ ಒಬ್ಬ. ಒಂದು ರೀತಿಯಲ್ಲಿ, ಅನುವಾದಿತ ಕೃತಿಗಳ ಮೇಲೆ ಮತ್ತು ಅವು ಬೀರಬಹುದಾದ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳ ಮೇಲೆ ಜಾಗತಿಕ ಸಾಹಿತ್ಯ ಕ್ಷೇತ್ರವು ನಡೆಸಿದ ಚರ್ಚೆಯನ್ನು ಎದುರಿಟ್ಟುಕೊಂಡು ನೋಡಿದರೆ, ನೂರ್ ಮುಹಮ್ಮದ್‍ರು ಆ ಚರ್ಚೆಯ ವ್ಯಾಪ್ತಿಯೊಳಗೆ ಸೇರಿಕೊಳ್ಳಲೇಬೇಕಾದ ಮತ್ತು ಅವರಿಲ್ಲದ ಚರ್ಚೆಯು ಅಪೂರ್ಣ ಅನ್ನಬಹುದಾದ ವ್ಯಕ್ತಿತ್ವವಾಗಿ ಕಾಣಿಸುತ್ತಾರೆ. ಅವರು ಅನುವಾದವನ್ನು ಒಂದು ಧ್ಯಾನವಾಗಿ ಸ್ವೀಕರಿಸಿದವರು. ಅದರಲ್ಲೇ ಆಧ್ಯಾತ್ಮ ಮತ್ತು ತಾಧ್ಯಾತ್ಮವನ್ನು ಕಂಡುಕೊಂಡವರು. ಅದಕ್ಕೊಂದು ನಿಖರತೆ ಮತ್ತು ಖಚಿತತೆಯನ್ನು ದೊರಕಿಸಿಕೊಟ್ಟವರು. ಅನುವಾದವೆಂಬುದು ಭಾಷಾ ಬದಲಾವಣೆಯಲ್ಲ ಎಂಬುದಾಗಿ ಅಧಿಕಾರಯುತವಾಗಿ ಘೋಷಿಸಿದವರು. ಅವರು ಅನುವಾದಕ್ಕಾಗಿ ಅನುವಾದ ಮಾಡುತ್ತಿದ್ದುದಲ್ಲ. ಅದವರ ತತ್ವವಾಗಿತ್ತು. ಸಿದ್ಧಾಂತವಾಗಿತ್ತು. ಜೀವನದ ಗುರಿಯಾಗಿತ್ತು. ಅವರು ಅನುವಾದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಕೃತಿಯು ಆಯಾಕಾಲದ ಸಾಮಾಜಿಕ ಅಗತ್ಯಗಳಾಗಿರುತ್ತಿತ್ತು. ದುಡ್ಡಿಗಾಗಿಯೋ ಪ್ರಶಂಸೆಗಾಗಿಯೋ ಅವರು ಲೇಖನಿ ಎತ್ತಿಕೊಂಡದ್ದೇ ಇಲ್ಲ. ವೇದಿಕೆ ಹತ್ತಿದ್ದಿಲ್ಲ. ಪ್ರಶಸ್ತಿ-ಪುರಸ್ಕಾರಗಳಿಗೆ ಕೊರಳೊಡ್ಡಿದ್ದಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ನಾಲ್ಕು ದಶಕಗಳಿಂದ ಅವಿರತವಾಗಿ ದುಡಿದಿದ್ದರೂ ಸಾಹಿತ್ಯ ವೇದಿಕೆಯ ಪೋಟೋ ಆಲ್ಬಂಗಳಲ್ಲಿ ಅವರಿಲ್ಲ. ಅವರೇ ಅನುವಾದಿಸಿದ ಕೃತಿಗಳೆಲ್ಲ ವಿವಿಧ ವೇದಿಕೆಗಳಲ್ಲಿ ವಿವಿಧ ಸಾಹಿತಿಗಳ ಕೈಯಲ್ಲಿ ಬಿಡುಗಡೆಗೊಳ್ಳುತ್ತಿರುವಾಗಲೆಲ್ಲಾ ವೇದಿಕೆಯ ಕೆಳಗೆ ಕೂತು ತಣ್ಣಗೆ ಮತ್ತು ಮೌನವಾಗಿ ಅವನ್ನೆಲ್ಲ ಕಣ್ತುಂಬಿಕೊಂಡು ಅಪರಿಚಿತರಂತೆ ಹೊರಟು ಹೋಗುವರು. ‘ತಾನು ಮೃತಪಟ್ಟರೆ ಸಂತಾಪ ಸೂಚಕ ಸಭೆ ನಡೆಸಬಾರದು’ ಎಂದು ಉಯಿಲು ಹೇಳುವಷ್ಟು ಸಾಮಾನ್ಯ ವ್ಯಕ್ತಿತ್ವ ಅವರದು. ಅವರು ಏನೆಲ್ಲ ಬರೆದರೋ ಅವನ್ನೇ ಉಂಡರು, ಬದುಕಿದರು. ಬಿಳಿ ಶರ್ಟು, ಬಿಳಿ ಪಂಚೆ, ಬಿಳಿ ಗಡ್ಡ, ಕನ್ನಡಕ, ಭರವಸೆಯ ಕಣ್ಣು, ಖಚಿತ ಮಾತು.. ಇವೇ ನೂರ್ ಮುಹಮ್ಮದ್. ಅವರೋರ್ವ ಪ್ರಖರ ಸಿದ್ಧಾಂತವಾದಿ. ಬರೆದಂತೆ ಬದುಕಿದರು.
   ಇಂದಿನ ಸಾಹಿತ್ಯಿಕ ಪ್ರಪಂಚದಲ್ಲಿ ಅನುವಾದಕರ ಪಟ್ಟಿ ಬಹಳ ಉದ್ದವಿದೆ. ಆದರೆ, ಇವರಲ್ಲಿ ‘ನೂರ್ ಮುಹಮ್ಮದ್'ರನ್ನು ಹುಡುಕ ಹೊರಟರೆ ವಿಷಾದವೇ ಎದುರಾಗುತ್ತದೆ. ನಿಜವಾಗಿ, ನೂರ್ ಮುಹಮ್ಮದ್‍ರ ವಿಶೇಷತೆಯೇ ಇದು. ಎಲ್ಲರೂ ಅನುವಾದಕರೇ. ಆದರೆ ಎಲ್ಲರೂ ನೂರ್ ಮುಹಮ್ಮದ್ ಅಲ್ಲ. ಆದ್ದರಿಂದಲೇ, ನೂರ್ ಮುಹಮ್ಮದ್‍ರ ಹೆಸರಲ್ಲಿ ರಾಜ್ಯ ಸರಕಾರವು ಅನುವಾದ ಪ್ರಶಸ್ತಿಯೊಂದನ್ನು ಸ್ಥಾಪಿಸುವ ಅಗತ್ಯವಿದೆ. ಇಂಥ ಓರ್ವ ಅನುವಾದಕ ಈ ಜಗತ್ತಿನಲ್ಲಿ ಇದ್ದು ಹೊರಟು ಹೋಗಿದ್ದಾರೆ ಎಂಬುದನ್ನು ಹೊಸ ತಲೆಮಾರಿನ ಅನುವಾದಕರಿಗೆ ಗೊತ್ತು ಮಾಡಬೇಕಾಗಿದೆ. ಪಂಚೆ, ಷರ್ಟು, ಮನಸ್ಸು, ಲೇಖನಿ, ಭಾಷೆ, ಮಾತು.. ಎಲ್ಲವೂ ಯಾವ ಸಂದರ್ಭದಲ್ಲೂ ಬಿಕರಿಗೊಳ್ಳಲು ಸಿದ್ಧವಾಗಿರುವ ಮತ್ತು ಬಿಕರಿಯಾಗುತ್ತಿರುವ ಇಂದಿನ ದಿನಗಳಲ್ಲಿ ‘ಬಿಕರಿಯಾಗದೇ’ ಹೊರಟುಹೋದ ಅವರನ್ನು ಸಾಹಿತ್ಯಿಕ ಜಗತ್ತಿನಲ್ಲಿ ನಾವು ಸದಾ ಉಳಿಸಿಕೊಳ್ಳಬೇಕಾಗಿದೆ. ನೂರ್ ಮುಹಮ್ಮದ್‍ರನ್ನು ಉಳಿಸಿಕೊಳ್ಳುವುದೆಂದರೆ ನಾವು ಮಾರಾಟವಾಗದೇ ಇರುವುದು; ನಮ್ಮ ಲೇಖನಿ ಮತ್ತು ಮನಸ್ಸು ‘ಬಿಕರಿ’ ಪ್ರಪಂಚವನ್ನು ಧಿಕ್ಕರಿಸಿ ಬದುಕುವುದು. ಇದು ಅಸಾಧ್ಯವಲ್ಲ. ಯಾಕೆಂದರೆ, ನೂರ್ ಮುಹಮ್ಮದ್ ಇದನ್ನು ಸಾಧಿಸಿ ತೋರಿಸಿದ್ದಾರೆ. 

Tuesday, August 12, 2014

ಮುಹಮ್ಮದ್ ಮುಸ್ಲಿಯಾರ್ ರ ಮಗಳ ಮದುವೆ

   “ನನ್ನ ಮಗಳಿಗೆ ವಿವಾಹ ನಿಶ್ಚಯ ಆಗಿದೆ ಇವನೇ” - ಕಳೆದವಾರ ಉಭಯ ಕುಶಲೋಪರಿಯ ಮಧ್ಯೆ ಮುಹಮ್ಮದ್
ಮುಸ್ಲಿಯಾರ್ (ಹೆಸರು ಬದಲಿಸಲಾಗಿದೆ) ನನ್ನೊಂದಿಗೆ ಹೇಳಿದರು. ನಾವಿಬ್ಬರೂ ಅಚಾನಕ್ ಆಗಿ ಮಧ್ಯಾಹ್ನ ಹೊಟೇಲಿನಲ್ಲಿ ಭೇಟಿಯಾಗಿದ್ದೆವು. ಸಂಬಂಧದಲ್ಲಿ ಅವರು ನನಗೆ ಮಾವ ಆಗುತ್ತಾರೆ. ಅಭಿನಂದಿಸಿದೆ. ಆದರೆ ನನ್ನ ಅಭಿನಂದನೆಯನ್ನು ಅಷ್ಟೇ ಸ್ಫೂರ್ತಿಯಿಂದ ಸ್ವೀಕರಿಸುವ ಉತ್ಸಾಹ ಅವರಲ್ಲಿ ಕಾಣಿಸಲಿಲ್ಲ. ಖುಷಿ ಮತ್ತು ಬೇಸರ ಎರಡೂ ಬೆರೆತ ಮುಖಭಾವ. ನನ್ನ ಅಚ್ಚರಿಯನ್ನು ಗುರುತಿಸಿದವರಂತೆ, ‘ಇಪ್ಪತ್ತು ಪವನ್ ಕೊಡಬೇಕು ಕಾದರ್' ಅಂದರು. ನಾನು ತುಸು ಪ್ರತಿಭಟನೆಯ ಧನಿಯಲ್ಲಿ ಮಾತಾಡಿದೆ. ‘ಈ ಕಾಲದಲ್ಲಿ ವರದಕ್ಷಿಣೆಯಾ? ಯಾಕೆ ಒಪ್ಪಿಕೊಂಡಿರಿ ನೀವು' ಎಂದೆ. ಅವರು ಹೇಳಿದರು, ‘ಒಪ್ಪಿಕೊಳ್ಳದೇ ಇನ್ನೇನು ಮಾಡಕ್ಕಾಗುತ್ತೆ ಇವನೇ? ಬಡವರ ಮನೆಯ ಮಕ್ಕಳಿಗೆ ಹೆಚ್ಚು ಅವಕಾಶಗಳು ಇಲ್ಲವಲ್ಲ. ಶ್ರೀಮಂತರ ಮಧ್ಯೆ ಇಂಥ ತಾಪತ್ರಯಗಳು ಕಡಿಮೆ. ಅಲ್ಲಿ ಪ್ರತಿಭಟನೆ, ನಿರಾಕರಣೆಗಳಿಗೆ ಅವಕಾಶವೂ ಇರುತ್ತೆ. ಆದರೆ ನಮ್ಮಂಥವರು ಒಪ್ಪಿಕೊಳ್ಳದಿದ್ದರೆ ಹೆಣ್ಣು ಮಕ್ಕಳು ಮನೆಯಲ್ಲೇ ಇರಬೇಕಾಗುತ್ತೆ ನೋಡು. ಹಾಗಂತ, ಜಮಾಅತೆ ಇಸ್ಲಾವಿೂ, ಸಲಫಿಗಳಲ್ಲಿರುವ ಧೈರ್ಯ (ವರದಕ್ಷಿಣೆರಹಿತ ವಿವಾಹವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವುದು) ನಮ್ಮಲ್ಲಿ ಎಲ್ಲಿದೆ ಹೇಳು?”
   ನಿಜವಾಗಿ, ಈ ವಾರ ವರದಕ್ಷಿಣೆಯ ಕುರಿತಾಗಿ ಲೇಖನ ಬರೆಯಲು ನಾನು ಉದ್ದೇಶಿಸಿಯೇ ಇರಲಿಲ್ಲ. ವರದಕ್ಷಿಣೆಯ ಸುತ್ತ ಈ ಸಮಾಜದಲ್ಲಿ ಈಗಾಗಲೇ ಅನೇಕಾರು ಚರ್ಚೆಗಳಾಗಿವೆ. ಸಭೆ, ವಿಚಾರಗೋಷ್ಠಿ, ಸಂವಾದಗಳು ನಡೆದಿವೆ. ವರದಕ್ಷಿಣೆಯನ್ನು ಖಂಡಿಸಿ ಜಾಥಾಗಳು ನಡೆದಿವೆ. ಮಹರ್ ವ್ಯವಸ್ಥೆಯನ್ನು ಜಾಗೃತಗೊಳಿಸುವ ಕಾರ್ಯಕ್ರಮಗಳೂ ನಡೆದಿವೆ. ‘ಸನ್ಮಾರ್ಗ’ದಲ್ಲೇ ವರದಕ್ಷಿಣೆಯ ಸುತ್ತ ಓದುಗರ ಚರ್ಚೆಯನ್ನು ನಡೆಸಲಾಗಿದೆ. ಅನೇಕಾರು ಬರಹಗಳನ್ನೂ ಪ್ರಕಟಿಸಲಾಗಿದೆ. ಆದರೂ, ಈ ಪಿಡುಗು ಸಮಾಜದಿಂದ ತೊಲಗುತ್ತಿಲ್ಲ ಅಂದರೆ ಏನೆನ್ನಬೇಕು? ಅಂದಹಾಗೆ, ಉಸ್ತಾದರಿಗೂ (ಮುಸ್ಲಿಯಾರ್) ಜನಸಾಮಾನ್ಯರಿಗೂ ನಡುವೆ ಖಂಡಿತ ವ್ಯತ್ಯಾಸ ಇದೆ. ಉಸ್ತಾದರಿಗೆ ಸಮಾಜದಲ್ಲಿ ಒಂದು ಬಗೆಯ ವಿಶೇಷ ಗೌರವವಿದೆ. ಇತರರಿಗೆ ಸಲಾಮ್ ಹೇಳದವರು ಕೂಡ ಉಸ್ತಾದರನ್ನು ಕಂಡ ಕೂಡಲೇ ಸಲಾಮ್ ಹೇಳುತ್ತಾರೆ. ಎದ್ದು ನಿಲ್ಲುತ್ತಾರೆ. ಮುಖಭಾವಗಳು ಬದಲಾಗುತ್ತವೆ. ಇಸ್ಲಾಮಿನ ತಿಳುವಳಿಕೆಯಿರುವ ಮತ್ತು ಸಮಾಜಕ್ಕೆ ಮಾರ್ಗದರ್ಶನ ಮಾಡುವವರೆಂಬ ನೆಲೆಯಲ್ಲಿ ಸಮಾಜ ಅವರನ್ನು ಅತ್ಯಂತ ಎತ್ತರದ ಸ್ಥಾನದಲ್ಲಿಟ್ಟು ಗೌರವಿಸುತ್ತದೆ. ಆದರೆ ಅಂಥವರಲ್ಲೇ ವರದಕ್ಷಿಣೆಯ ಬೇಡಿಕೆ ಇಡಲಾಗುತ್ತದೆಂದರೆ? ಅವರ ಧಾರ್ಮಿಕ ಜ್ಞಾನ ಮತ್ತು ಸಾಮಾಜಿಕ ಸ್ಥಾನ-ಮಾನವನ್ನು ಓರ್ವ ‘ವರ' ಮಣ್ಣುಪಾಲು
ಮಾಡುತ್ತಾನೆಂದರೆ? ಸಾಮಾಜಿಕ ಅನಿಷ್ಠಗಳ ಬಗ್ಗೆ ಧಾರಾಳ ಮಾತಾಡಿದ ಉಸ್ತಾದರನ್ನೇ ಒಂದು ‘ಅನಿಷ್ಠ’ ಅಸಹಾಯಕ ವಾಗಿಸಿ ಬಿಡುತ್ತದೆಂದರೆ? ಯಾರು ಇದಕ್ಕೆ ಕಾರಣ? ಹೆಣ್ಣಿನ ತಂದೆ ಎನಿಸಿಕೊಳ್ಳುವುದು ಸಾಮಾಜಿಕ ಗೌರವವನ್ನೇ ಕುಗ್ಗಿಸುವಷ್ಟು ಭೀಕರ ಅಪರಾಧವೇ? ಯಾರು ಇಂಥದ್ದೊಂದು ವಾತಾವರಣವನ್ನು ಸಮಾಜದಲ್ಲಿ ಸೃಷ್ಟಿಸಿರುವುದು? ಜನಸಾಮಾನ್ಯರೇ, ಶ್ರೀಮಂತರೇ, ಉಸ್ತಾದರೇ, ಕಾಝಿಗಳೇ, ಸಂಘಟನೆಗಳೇ? ಒಂದು ಕಡೆ ಭ್ರೂಣಹತ್ಯೆಯ ವಿರುದ್ಧ ನಮ್ಮ ಮಸೀದಿಯ ಮೈಕುಗಳು ಧಾರಾಳ ಮಾತಾಡುತ್ತವೆ. ಭ್ರೂಣಹತ್ಯೆಗೀಡಾದ ಮಗುವಿನಲ್ಲಿ ನಾಳೆ ಅಲ್ಲಾಹನು ಅದಕ್ಕೆ ಕಾರಣರಾದವರ ಹೆಸರು ಹೇಳಿಸಿ ಶಿಕ್ಷಿಸುತ್ತಾನೆ (ಪವಿತ್ರ ಕುರ್‍ಆನ್: 81:8) ಎಂದು ಬೆದರಿಸಲಾಗುತ್ತದೆ. ಹೆಣ್ಣು ಸಮಾಜಕ್ಕೆ ಎಷ್ಟು ಪ್ರಯೋಜನಕಾರಿ ಎಂಬ ವ್ಯಾಖ್ಯಾನಗಳೂ ನಡೆಯುತ್ತಿವೆ. ಇಬ್ಬರು ಹೆಣ್ಣು ಮಕ್ಕಳನ್ನು ಉತ್ತಮ ಸಂಸ್ಕಾರ ಕೊಟ್ಟು ಬೆಳೆಸಿ, ವಿವಾಹ ಮಾಡಿಸಿಕೊಡುವ ಹೆತ್ತವರಿಗೆ ಸ್ವರ್ಗದ ವಾಗ್ದಾನವಿದೆ ಎಂದು ಹೇಳಲಾಗುತ್ತದೆ. ಪ್ರವಾದಿ ಮುಹಮ್ಮದ್‍ರಿಗೆ(ಸ) ಹೆಣ್ಣು ಮಕ್ಕಳು ಮಾತ್ರವೇ ಇದ್ದುದನ್ನು ನೆನಪಿಸಿ, ಹೆಣ್ಣು ಮಕ್ಕಳಿಗಾಗಿ ಸಂತಸಪಡಿ ಎನ್ನಲಾಗುತ್ತದೆ. ಆದರೆ, ಇನ್ನೊಂದು ಕಡೆ ಹೆಣ್ಣನ್ನು ಹೊರೆ ಎಂದೇ ಪರಿಗಣಿಸಲಾಗುತ್ತಿದೆ. ಹೆಣ್ಣು ಮಗು ಹುಟ್ಟಿದ ಕೂಡಲೇ ಅದರ ಮದುವೆಗಾಗಿ ಹಣ ಸಂಗ್ರಹಿಸತೊಡಗಬೇಕಾದ ಒತ್ತಡವನ್ನು ಹೆತ್ತವರ ಮೇಲೆ ಹೊರಿಸಲಾಗುತ್ತಿದೆ. ಯಾಕೆ ಈ ದ್ವಂದ್ವ? ನಮ್ಮ ಭಾಷಣಗಳಿಗೂ ವರ್ತನೆಗಳಿಗೂ ಯಾಕಿಷ್ಟು ಅಂತರ? ಭಾಷಣಗಳು ಎಷ್ಟು ಕರ್ಣಾನಂದಕರವೋ ಪ್ರಾಯೋಗಿಕವಾಗಿ ಅದು ಅಷ್ಟೇ ಕರ್ಕಶವೆನಿಸಿರುವುದೇಕೆ? ಹೀಗೆ ಭಾಷಣ ಮಾಡುವ ಉಸ್ತಾದರನ್ನೇ ಹೆಣ್ಣು ಬೇಟೆಯಾಡುತ್ತಿರುವುದೇಕೆ? ಹೆಣ್ಣು ಮಕ್ಕಳನ್ನು ಪ್ರೀತಿಸಿದ ಪ್ರವಾದಿಯವರ ಅನುಯಾಯಿಗಳಿಗೆ ಹೆಣ್ಣು ಮಕ್ಕಳು ಭಾರ ಅನಿಸಿರುವುದು ಯಾವುದರ ಸೂಚನೆ? ಇವೆಲ್ಲವನ್ನು ಇಟ್ಟುಕೊಂಡು ನಾವು, ಭ್ರೂಣಹತ್ಯೆ ಮಾಡಬೇಡಿ ಎಂದು ಕರೆ ಕೊಡುತ್ತೇವಲ್ಲ, ಹತ್ಯೆಗೀಡಾದ ಮಗುವಿನಲ್ಲೇ ಈ ಬಗ್ಗೆ ಪ್ರಶ್ನಿಸಿ ಶಿಕ್ಷೆ ನೀಡಲಾಗುತ್ತದೆ ಅನ್ನುತ್ತೇವಲ್ಲ ಮತ್ತು ಜೀವಂತವಾಗಿ ಹೆಣ್ಣು ಮಕ್ಕಳನ್ನು ಹೂಳುತ್ತಿದ್ದ ಅರಬರನ್ನು ಅಜ್ಞಾನಿಗಳು ಎಂದು ಟೀಕಿಸುತ್ತೇವಲ್ಲ, ಎಷ್ಟು ಹಾಸ್ಯಾಸ್ಪದ? ಓರ್ವ ಮಗಳ ವಿವಾಹವೇ ಉಸ್ತಾದರಿಗೆ ಇಷ್ಟು ಭಾರವಾಗಿರುವಾಗ ಒಂದಕ್ಕಿಂತ ಹೆಚ್ಚು ಹೆಣ್ಣು ಮಕ್ಕಳಿರುವ ಹೆತ್ತವರು ಏನು ಮಾಡಬೇಕು? ಕುರ್‍ಆನಿನ ಸೂಕ್ತಗಳನ್ನೋ ಪ್ರವಾದಿಯ(ಸ) ಮಾತುಗಳನ್ನೋ ಆಚರಣೆಗೆ ತರದ ಸಮಾಜದಲ್ಲಿ ಈ ಹೆತ್ತವರು ಇಸ್ಲಾಮಿನ ಈ ಪಾವನ ಮೌಲ್ಯಗಳಲ್ಲಿ ಎಲ್ಲಿಯವರೆಗೆ ನಂಬಿಕೆ ಇಟ್ಟುಕೊಂಡು ಮುಂದುವರಿಯಬಲ್ಲರು? ಹೆಣ್ಣು ಭ್ರೂಣಹತ್ಯೆ ಮಾಡಬೇಡಿ ಎಂದು ಅವರಲ್ಲಿ ಹೇಳುವುದಕ್ಕೆ ಈ ಸಮಾಜಕ್ಕೆ ಏನು ಅರ್ಹತೆಯಿದೆ? ಒಂದು ವೇಳೆ, ಅವರು ಅಂಥ ಹತ್ಯೆಗೆ ಮುಂದಾದರೆಂದರೆ, ಅದಕ್ಕಾಗಿ ಅಲ್ಲಾಹನು ಅವರನ್ನು ಮಾತ್ರ ಹಿಡಿಯುವನೇ? ಅಂಥ ಪಾಪ ಕೃತ್ಯವನ್ನು ಅವರಿಗೆ ಅನಿವಾರ್ಯಗೊಳಿಸಿದ ನಮ್ಮ-ನಿಮ್ಮನ್ನು ಆತ ತಪ್ಪಿತಸ್ಥರೆಂದು ಪರಿಗಣಿಸಲಾರನೇ?
     ಸಾಮಾನ್ಯವಾಗಿ, ಮುಸ್ಲಿಯಾರ್‍ಗಳಲ್ಲಿ ಹೆಚ್ಚಿನವರೂ ಬಡವರೇ. ಸಾಮಾನ್ಯ ಮಂದಿ ಎದುರಿಸುವ ಸಕಲ ಸಮಸ್ಯೆಗಳನ್ನು ಅವರೂ ಬಹುತೇಕ ಎದುರಿಸುತ್ತಾರೆ. ಅವರ ಮಕ್ಕಳು ಹೋಗುವುದು ಸರಕಾರಿ ಶಾಲೆಗೆ. ಸುಣ್ಣ-ಬಣ್ಣದ ಸಾಮಾನ್ಯ ಮನೆಗಳಲ್ಲಿ ಅವರು ಮತ್ತು ಅವರ ಕುಟುಂಬ ಬದುಕುತ್ತಿರುತ್ತದೆ. ಅವರದ್ದು ಸರಕಾರಿ ಉದ್ಯೋಗ ಅಲ್ಲವಾದ್ದರಿಂದ ಕೈ ತುಂಬ ಸಂಬಳವೂ ಸಿಗುವುದಿಲ್ಲ. ಪತಿಗೆ ಆರ್ಥಿಕವಾಗಿ ನೆರವಾಗುವುದಕ್ಕಾಗಿ ಮನೆಯಲ್ಲಿ ಬೀಡಿಯನ್ನೋ ಇತರ ಆರ್ಥಿಕ ಮೂಲಗಳನ್ನೋ ಪತ್ನಿ ಅವಲಂಬಿಸಿರುತ್ತಾರೆ. ಅಂದಹಾಗೆ, ಮುಸ್ಲಿಯಾರ್‍ಗಳ ಮಕ್ಕಳು ಮುಸ್ಲಿಯಾರ್ ಆಗದೇ ಇರುವುದಕ್ಕೆ ಮುಖ್ಯ ಕಾರಣ ಈ ಆರ್ಥಿಕ ದುಃಸ್ಥಿತಿಯೇ. ಅವರ ಉದ್ಯೋಗ ಸದಾ ಅನಿಶ್ಚಿತವಾಗಿರುತ್ತದೆ. ಅನೇಕ ಸಂದರ್ಭಗಳಲ್ಲಿ, ಸಾಮಾಜಿಕ ಅನಿಷ್ಠಗಳಿಗೆ  ಅಥವಾ ತಪ್ಪು ಆಚರಣೆಗಳಿಗೆ  ಬಹಿರಂಗವಾಗಿ ವಿರೋಧ ವ್ಯಕ್ತಪಡಿಸದಷ್ಟು  ಔದ್ಯೋಗಿಕ ಅಭದ್ರತೆ ಕಾಡುತ್ತಿರುತ್ತದೆ. ಮಸೀದಿ ಆಡಳಿತ ಮಂಡಳಿಯಲ್ಲಿರುವವರಿಗೆ ಅಸಂತೃಪ್ತಿಯಾಗಬಹುದಾದ ಯಾವುದನ್ನೂ ಹೇಳದಂಥ ಮತ್ತು ಸದಾ ಅವರ ತೃಪ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರವಚನ ನೀಡಬೇಕಾದಂಥ ವಾತಾವರಣ ಇರುತ್ತದೆ. ಹೀಗೆ, ‘ರಾಜಿ ಮನಸ್ಥಿತಿ'ಯ ಹೊರತು ಅನ್ಯ ದಾರಿಯಿಲ್ಲದ ಸಂದರ್ಭವೊಂದು ಅನೇಕ ಮುಸ್ಲಿಯಾರ್‍ಗಳನ್ನು ಇವತ್ತು ಕಾಡುತ್ತಿದೆ. ಆದರೂ ಸಮಾಜ ಅವರ ಮೇಲೆ ಹೊರಿಸುತ್ತಿರುವ ಆರೋಪಗಳಿಗೆ  ಈ ಕಾರಣಗಳೆಲ್ಲ ಉತ್ತರವಾಗುವುದಿಲ್ಲ ನಿಜ. ಅನಿಷ್ಠಗಳ ವಿರುದ್ಧ ಜನಜಾಗೃತಿ ಮೂಡಿಸ ಬೇಕಾದ ವರ್ಗವೊಂದು ವೈಯಕ್ತಿಕ ಕಾರಣಗಳಿಗಾಗಿಯೋ ಮುಲಾಜಿಗಾಗಿಯೋ ಆ ಹೊಣೆಗಾರಿಕೆಯಿಂದ ನುಣುಚಿಕೊಂಡರೆ ಅದರ ದುಷ್ಫಲವನ್ನು ಇಡೀ ಸಮಾಜವೇ ಹೊರಬೇಕಾಗುತ್ತದಲ್ಲವೇ? ಅಂಥ ಸಂದರ್ಭಗಳಲ್ಲಿ ಆ ದುಷ್ಫಲ ಸ್ವತಃ ಆ ವರ್ಗವನ್ನೂ ಕಾಡುತ್ತದೆ. ಒಂದು ವೇಳೆ ಸಂಘಟನಾತ್ಮಕ ಭಿನ್ನಾಭಿಪ್ರಾಯಗಳ ಕಾರಣಕ್ಕಾಗಿ ಇವತ್ತು ಏರ್ಪಡುತ್ತಿರುವ ಪ್ರವಚನ, ವಾದ-ಪ್ರತಿ ವಾದದಂಥ ಕಾರ್ಯಕ್ರಮಗಳ ಅರ್ಧದಷ್ಟನ್ನಾದರೂ ವರದಕ್ಷಿಣೆಯ ವಿರೋಧಕ್ಕಾಗಿ ವಿೂಸಲಿರಿಸುತ್ತಿದ್ದರೆ ಸಮಾಜದ ಪರಿಸ್ಥಿತಿಯೇ ಬೇರೆಯಿರುತ್ತಿತ್ತು. ವರದಕ್ಷಿಣೆಯ ಮದುವೆಯನ್ನು ನಡೆಸಿಕೊಡುವುದಿಲ್ಲವೆಂದು ಪ್ರತಿ ಮಸೀದಿ ಮತ್ತು ಉಸ್ತಾದರು ತೀರ್ಮಾನಿಸುವುದಾದರೆ ಹಾಗೂ ಕಾಝಿಗಳು ಈ ಬಗ್ಗೆ ಫತ್ವಾ ಹೊರಡಿಸುವುದಾದರೆ ಮುಹಮ್ಮದ್ ಮುಸ್ಲಿಯಾರ್‍ರಂಥ ‘ಬಡವರು' ಜಮಾಅತೆ ಇಸ್ಲಾಮಿಯ ಕಡೆಗೋ ಸಲಫಿಗಳ ಕಡೆಗೋ ಮೆಚ್ಚುಗೆಯ ನೋಟ ಬೀರುವುದಕ್ಕೂ ಅವಕಾಶವಿರುತ್ತಿರಲಿಲ್ಲ.
   ಒಂದು ರೀತಿಯಲ್ಲಿ, ಮುಹಮ್ಮದ್ ಮುಸ್ಲಿಯಾರ್‍ರ ಆತಂಕವನ್ನು ನಾವು ಇನ್ನೊಂದು ಕಾರಣಕ್ಕಾಗಿಯೂ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಇವತ್ತು ರೇಶನ್ ಕಾರ್ಡ್ ಮಾಡಿಸಬೇಕೆಂದರೆ ಅದಕ್ಕೆಂದೇ ಒಂದು ವ್ಯವಸ್ಥೆಯಿದೆ. ಇಂತಿಂಥ ಸ್ಥಳಗಳಿಗೆ, ನಿರ್ದಿಷ್ಟ ದಾಖಲಾತಿಗಳೊಂದಿಗೆ ಹೋದರೆ ರೇಶನ್‍ಕಾರ್ಡ್ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಶೀತ-ನೆಗಡಿಯಾದರೆ ಎಲ್ಲಿಗೆ ಹೋಗಬೇಕು ಎಂಬುದು ಸಮಾಜಕ್ಕೆ ಚೆನ್ನಾಗಿ ಗೊತ್ತು. ಇದೊಂದೇ ಅಲ್ಲ; ಡ್ರೈವಿಂಗ್ ಲೈಸೆನ್ಸ್, ಹಾಲು, ತರಕಾರಿ, ಮಾಂಸ.. ಇವೆಲ್ಲಕ್ಕೂ ನಿರ್ದಿಷ್ಟ ಜಾಗಗಳಿವೆ ಮತ್ತು ಅಲ್ಲಿಗೆ ತೆರಳಿದರೆ ಅವನ್ನು ಖರೀದಿಸುವ ಅವಕಾಶಗಳೂ ಮುಕ್ತವಾಗಿರುತ್ತವೆ. ಆದರೆ, ಮದುವೆ ಸಂಬಂಧವನ್ನು ಕುದುರಿಸುವುದಕ್ಕೆ ನಮ್ಮಲ್ಲಿ ಏನು ವ್ಯವಸ್ಥೆಯಿದೆ? ಹೆಣ್ಣು ಅಥವಾ ಗಂಡಿನ ಹೆತ್ತವರು ಯಾರನ್ನು ಸಂಪರ್ಕಿಸಬೇಕು? ಸಿಕ್ಕ-ಸಿಕ್ಕವರಲ್ಲಿ ಮದುವೆ ಸಂಬಂಧಕ್ಕೆ ಮೊರೆ ಇಡುತ್ತಾ, ಎಲ್ಲಾದರೂ ಅಂಥ ಅವಕಾಶಗಳಿವೆಯೇ ಎಂದು ಪತ್ರಿಕೆ ಇನ್ನಿತರ ಕಡೆ ಹುಡುಕುತ್ತಾ, ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಸಿಕ್ಕವರೊಡನೆ ಗುಟ್ಟಿನಲ್ಲೆಂಬಂತೆ  ಕೇಳಿಕೊಳ್ಳುತ್ತಾ ಬದುಕುವ ಸ್ಥಿತಿಯ ಹೊರತು ಈ ವರೆಗೆ ಇದಕ್ಕೆ ಬೇರೆ ಯಾವ ಪರ್ಯಾಯ ವ್ಯವಸ್ಥೆಯನ್ನು ಮಾಡಲು ನಮಗೆ ಸಾಧ್ಯವಾಗಿದೆ? ಹೆಣ್ಣು ಮತ್ತು ಗಂಡಿನ ವಿವರವುಳ್ಳ ಸಮಗ್ರ ಮ್ಯಾರೇಜ್ ಬ್ಯೂರೋವೊಂದನ್ನು ಸ್ಥಾಪಿಸುವುದು ನಮ್ಮ ಆದ್ಯತೆಯ ಪಟ್ಟಿಯಲ್ಲಿ ಈವರೆಗೂ ಸ್ಥಾನ ಪಡೆದಿಲ್ಲವೇಕೆ? ಮದುವೆ ಸಂಬಂಧ ಎಂಬುದು ಗುಟ್ಟಿನಲ್ಲಿ, ಅವರಿವರಲ್ಲಿ ಮುಚ್ಚುಮರೆಯೊಂದಿಗೆ ಹೇಳಿಕೊಳ್ಳಬೇಕಾದ ಸಂಗತಿಯೇ? ತನ್ನ ಹೆಣ್ಣು ಮಗಳು ಮದುವೆ ಪ್ರಾಯಕ್ಕೆ ಬಂದಿರುವಳೆಂಬುದಕ್ಕಾಗಿ ಓರ್ವ ತಂದೆ ಅಥವಾ ತಾಯಿ ಮುಜುಗರ ಪಟ್ಟುಕೊಳ್ಳಬೇಕೇ? ಸೂಕ್ತ ವರ ಅಥವಾ ವಧುವಿಗಾಗಿ ಅವರು ಅವರಿವರಲ್ಲಿ ಬೇಡುತ್ತಿರಬೇಕೇ? ತನಗೆ ಸೂಕ್ತ ವರನನ್ನು ಸ್ವಯಂ ತಾನೇ ಹುಡುಕಿ ನಿರ್ಧರಿಸುವ ಸ್ವಾತಂತ್ರ್ಯ ಮತ್ತು ಅವಕಾಶ ಹೆಣ್ಣಿಗೆ ಇಲ್ಲವೆಂದಾದರೆ ಅದಕ್ಕಾಗಿ ಆಕೆಗೆ ಅತ್ಯಂತ ಪಾರದರ್ಶಕ ವ್ಯವಸ್ಥೆಯೊಂದನ್ನು ಮಾಡಿ ಕೊಡಬೇಕಾದ ಹೊಣೆಗಾರಿಕೆ ಯಾರದು? ನಮ್ಮದಲ್ಲವೇ? ಆ ಹೊಣೆಗಾರಿಕೆಯನ್ನು ನಾವೆಷ್ಟರ ಮಟ್ಟಿಗೆ ನಿಭಾಯಿಸಿದ್ದೇವೆ? ಮುಹಮ್ಮದ್ ಮುಸ್ಲಿಯಾರರ ಭೀತಿ ಕೂಡ ಇದುವೇ. ಮದುವೆ ಸಂಬಂಧ ಕೂಡಿ ಬರುವುದೇ ತುಂಬಾ ಕಷ್ಟದಲ್ಲಿ. ಅದಕ್ಕಾಗಿ ಎಷ್ಟೋ ನಿದ್ದೆಗಳನ್ನು ಕಳೆಯಬೇಕಾಗುತ್ತದೆ.
ಓಡಾಡಬೇಕಾಗುತ್ತದೆ. ಕೆಲವಾರು ನಿರಾಶೆಯ ಉತ್ತರಗಳನ್ನೂ ಆಲಿಸಬೇಕಾಗುತ್ತದೆ. ಹೀಗಿರುವಾಗ, ಕೂಡಿ ಬಂದಿರುವ ಈ ಸಂಬಂಧವನ್ನೇ ವರದಕ್ಷಿಣೆಯ ಕಾರಣಕ್ಕಾಗಿ ತಿರಸ್ಕರಿಸಿ ಬಿಟ್ಟರೆ ಹೊಸ ಸಂಬಂಧವನ್ನು ಹುಡುಕುವುದು ಹೇಗೆ? ಒಂದು ವೇಳೆ ಈ ಅವ್ಯವಸ್ಥಿತ ಮೆಟ್ರಿಮೋನಿಯಲ್ ಜಗತ್ತಿನಲ್ಲಿ ತನ್ನ ಮಗಳು ಒಂಟಿಯಾದರೆ? ಸೂಕ್ತ ವರ ಸಿಗದೇ ಹೋದರೆ?
   ‘ಪ್ಲೀಸ್ ವರದಕ್ಷಿಣೆ ಪಡೆದ ಮದುವೆಯ ಆಮಂತ್ರಣವನ್ನು ನಮಗೆ ನೀಡದಿರಿ. ಅದರಲ್ಲಿ ಹೆಣ್ಣು ಹೆತ್ತವರ ಕಣ್ಣೀರ ಹನಿಗಳಿವೆ' ಎಂಬ ಸ್ಟಿಕ್ಕರ್ ಅನ್ನು ತಯಾರಿಸಿ ಮಿತ್ರ ಸಿದ್ದೀಕ್ ಜಕ್ರಿಬೆಟ್ಟು ಅವರು ವರ್ಷಗಳ ಹಿಂದೆ ಹಲವು ಕಡೆ ಹಂಚಿದ್ದರು. ಇದೀಗ ಅದರ ಪ್ರತ್ಯಕ್ಷ  ಸಂಕೇತವಾಗಿ ಮುಹಮ್ಮದ್ ಮುಸ್ಲಿಯಾರ್ ನಮ್ಮ ಮುಂದಿದ್ದಾರೆ. ಅವರ ನೋವಿಗೆ ಸಾಂತ್ವನ ಹೇಳುತ್ತಲೇ, ವರದಕ್ಷಿಣೆರಹಿತ ಮದುವೆ ವಾತಾವರಣವೊಂದನ್ನು ನಾವೆಲ್ಲ ನಿರ್ಮಿಸಬೇಕಿದೆ.

Monday, August 4, 2014

ಜುಟ್ಟು ಹಿಡಿದು ಅತ್ಯಾಚಾರ ನಡೆಸಬಯಸುವವರ ಸುತ್ತ...

 1991 ಜೂನ್ 9
   “ವೈಟ್ ಈಗಲ್ಸ್ ಪಡೆಯ ಮಿಲಾನ್ ಲುಕಿಕ್ ನಮ್ಮ ಅಪಾರ್ಟ್‍ಮೆಂಟ್‍ಗೆ ಬಂದ. ಡ್ರೀನಾ ನದಿ ಮತ್ತು ಸೆರ್ಬಿಯದ ಗಡಿಗೆ ತಾಗಿಕೊಂಡಂತೆ ಇದ್ದ ನಮ್ಮ ವಿಸ್‍ಗ್ರೇಡ್ ಪಟ್ಟಣವನ್ನು ಅದಾಗಲೇ ವೈಟ್ ಈಗಲ್ಸ್ ಪಡೆ ಸುತ್ತುವರಿದು ವಶಪಡಿಸಿಕೊಂಡಿದೆ ಎಂಬ ಸುದ್ದಿಯನ್ನು ನಾವು ಆಲಿಸಿದ್ದೆವು. ನನಗಾಗ 17 ವರ್ಷ. ತಂಗಿ ಎಮಿನಾಳಿಗೆ 15. ಹಾಗಂತ ಲುಕಿಕ್ ನಮಗೆ ಅಪರಿಚಿತ ವ್ಯಕ್ತಿಯೇನೂ ಆಗಿರಲಿಲ್ಲ. ಸ್ಥಳೀಯವಾಗಿ ಆತ ಪರಿಚಿತ ಮತ್ತು ವೈಟ್ ಈಗಲ್ಸ್ ನ ಪ್ರಮುಖ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದ. ಆತ ಮನೆಗೆ ಬಂದವನೇ, ತನ್ನ ಜೊತೆ ಬರುವಂತೆ ನಮ್ಮಿಬ್ಬರಿಗೂ ಆದೇಶಿಸಿದ. ಪೊಲೀಸ್ ಠಾಣೆಯಲ್ಲಿರುವ ಕೆಲವು ಯುವಕರ ಗುರುತು ಪತ್ತೆ ಹಚ್ಚಲು ನಿಮ್ಮ ನೆರವು ಬೇಕಾಗಿದೆಯೆಂದು ಹೇಳಿದ. ಅಮ್ಮ ತಡೆದಳು. ವೈಟ್ ಈಗಲ್ಸ್ ನ ಕಾರ್ಯಕರ್ತರು ಪಟ್ಟಣದಲ್ಲಿ ಅದಾಗಲೇ ಹತ್ಯೆ, ಹಲ್ಲೆಗಳಲ್ಲಿ ನಿರತರಾಗಿರುವ ಬಗ್ಗೆ, ಜನಾಂಗ ನಿರ್ಮೂಲನದ ಉದ್ದೇಶದೊಂದಿಗೆ ಅವರು ಪಟ್ಟಣವನ್ನು ಸುತ್ತುವರಿದಿರುವರೆಂಬ ಬಗ್ಗೆ.. ನಮ್ಮಲ್ಲಿ ಸುದ್ದಿಗಳು ಹಬ್ಬಿದ್ದುವು. ಆದ್ದರಿಂದಲೇ ಒಂದು ಬಗೆಯ ಆತಂಕ, ಅನುಮಾನ ನಮ್ಮ ಅಪಾರ್ಟ್‍ಮೆಂಟನ್ನು ಮಾತ್ರವಲ್ಲ ಇಡೀ ಪಟ್ಟಣವನ್ನೇ ಆವರಿಸಿತ್ತು. ಲುಕಿಕ್, ಜನಾಂಗ ನಿರ್ಮೂಲನದ ಪರ ಇದ್ದ ವ್ಯಕ್ತಿ. ಆದ್ದರಿಂದಲೇ ತಾಯಿ ಆತಂಕಿತರಾಗಿದ್ದರು. ಆದರೆ ಲುಕಿಕ್ ಘರ್ಜಿಸಿದ. ‘ನಾನೇ ಕಾನೂನು, ನಾನೇ ನ್ಯಾಯಾಂಗ’ ಎಂದು ಬೆದರಿಸಿದ. ನಾವಿಬ್ಬರೂ ಆತನ ಜೊತೆ ಕಾರಲ್ಲಿ ಕೂತೆವು. ಆದರೆ ಆತ ಮಾತು ಕೊಟ್ಟಂತೆ ನಮ್ಮನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಿಲ್ಲ. ನೇರ ಎಲಿನಾ ವ್ಲಾಸ್ ಎಂಬ ಹೊಟೇಲಿಗೆ ಕೊಂಡೊಯ್ದ. 20-30 ಕೋಣೆಗಳುಳ್ಳ ದೊಡ್ಡ ಹೊಟೇಲಾಗಿತ್ತದು. ನಾವು ಹೋಗುವಾಗ ಸ್ವಾಗತಕಾರಿಣಿಯರು ತಮಾಷೆ ಮಾಡಿ ನಗುತ್ತಿದ್ದರು. ನನ್ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಲಾದರೆ ತಂಗಿ ಎಮಿನಾಳನ್ನು ಇನ್ನೊಂದು ಕೋಣೆಯಲ್ಲಿ. ಕೆಲವು ಗಂಟೆಗಳ ಬಳಿಕ ಎಮಿನಾ ಅರಚುವ, ಬಿಕ್ಕಳಿಸುವ, ಅಂಗಲಾಚುವ ಶಬ್ದವನ್ನು ಆಲಿಸಿದೆ. ನನ್ನಿಂದ ತಡೆದುಕೊಳ್ಳಲಾಗಲಿಲ್ಲ. ಆಕೆ ನನಗೆ ಚಿಕ್ಕವಳಲ್ಲವೇ? ಆದರೆ ಆ ಬಳಿಕ ಎಂದೂ ನನ್ನ ತಂಗಿಯನ್ನು ನಾನು ನೋಡೇ ಇಲ್ಲ.
    ಸ್ವಲ್ಪ ಸಮಯದ ಬಳಿಕ ಲುಕಿಕ್ ನನ್ನ ಕೋಣೆಗೆ ಬಂದ. ಬಾಗಿಲಿಗೆ ಎದುರಾಗಿ ಟೇಬಲನ್ನು ತಂದಿಟ್ಟ. ಬೆತ್ತಲೆಯಾಗು ಅಂದ. ನಾನು ಹಿಂಜರಿದೆ. ಆತ ಸಿಡುಕಿದ. ನೀನು ಸುರಕ್ಷಿತವಾಗಿ ತೆರಳಬೇಕಾದರೆ ನಾನು ಹೇಳಿದಂತೆ ಕೇಳಬೇಕು ಎಂದು ಬೆದರಿಸಿದ. ಬೆತ್ತಲೆ ಮಾಡಲು ನನಗೆ ಅವಕಾಶ ಮಾಡಿಕೊಡಬೇಡ, ಅದು ತುಂಬಾ ಹಿಂಸಾತ್ಮಕವಾಗಿರುತ್ತದೆ ಎಂದ. ನೀನು ನನ್ನ ಜೊತೆಗಿರುವುದು ನಿನ್ನ ಅದೃಷ್ಟ. ಇಲ್ಲದಿದ್ದರೆ ನಿನ್ನ ಸೊಂಟಕ್ಕೆ ಕಲ್ಲು ಕಟ್ಟಿ ಡ್ರೀನಾ ನದಿಗೆ ಎಸೆಯಲಾಗುತ್ತಿತ್ತು ಎಂದ. ನಾನು ಹೇಳಿದಂತೆ ಕೇಳದಿದ್ದರೆ ಹೊರಗಿನಿಂದ 10 ಯೋಧರನ್ನು ಕರೆಸ ಬೇಕಾಗುತ್ತದೆ ಎಂದೂ ಬೆದರಿಸಿದ. ನಿಜವಾಗಿ, ಇತರರಿಗೆ ಹೋಲಿಸಿದರೆ ನಾನು ಅದೃಷ್ಟವಂತಳಾಗಿದ್ದೆ. ಆತ ನನ್ನನ್ನು ಕೊಲ್ಲಲಿಲ್ಲ. ಒಂದು ದಿನ ನನ್ನನ್ನು ಬಿಟ್ಟು ಬಿಟ್ಟ. ಮನೆಗೆ ಬಂದಾಗ ತಾಯಿ ಮತ್ತೆ ಮತ್ತೆ ಎಮಿನಾಳ ಬಗ್ಗೆ ಪ್ರಶ್ನಿಸಿದರು. ನನ್ನನ್ನು ಸಾಂತ್ವನಿಸಿದರು. ಆದರೂ ನಾನು ನನ್ನ ಮೇಲಾದ ಅತ್ಯಾಚಾರದ ಬಗ್ಗೆ ಹೇಳಲೇ ಇಲ್ಲ. ನನ್ನಂತೆಯೇ ತಂಗಿಯೂ ಶೀಘ್ರ ಬರಬಹುದು ಎಂದು ನಂಬಿಸಿದೆ. ತಂಗಿಯನ್ನು ಹುಡುಕುತ್ತಾ ತಾಯಿ ಪದೇ ಪದೇ ಪೊಲೀಸು ಠಾಣೆಗೆ ಹೋದರು. ಒಂದು ದಿನ ಪೊಲೀಸ್ ಪೇದೆಯೊಬ್ಬ ತಾಯಿಯತ್ತ ಬಂದೂಕು ಎತ್ತಿದ. ಆಗ ಆತನ ಜೊತೆ ಲುಕಿಕ್‍ನೂ ಇದ್ದ. ಲುಕಿಕ್  ಹೇಳಿದನಂತೆ, ‘ಕನಿಷ್ಠ ಓರ್ವ ಮಗಳಾದರೂ ಹಿಂತಿರುಗಿದ್ದಾಳಲ್ಲ, ಇನ್ನೇನು ಬೇಕು ನಿಂಗೆ?’
ಜುಲೈಯಲ್ಲಿ ನಾವು ನಮ್ಮ ಹುಟ್ಟಿದೂರನ್ನು ತೊರೆದೆವು. ತಂಗಿಯನ್ನು ಸ್ಮರಿಸುತ್ತಾ, ಆಕೆ ಎಲ್ಲಾದರೂ ಸುರಕ್ಷಿತಳಾಗಿ ಇರುವಳೆಂಬ ನಿರೀಕ್ಷೆ ಇರಿಸುತ್ತಾ ಅಕ್ಕ ಮಲೀಹಾ ಈ ಮೊದಲೇ ಸೇರಿಕೊಂಡಿದ್ದ ಬೇರೊಂದು ಪಟ್ಟಣವನ್ನು ಸೇರಿಕೊಂಡೆವು. ನಾನು ರಾತ್ರಿ ಎದ್ದು ಚೀರಾಡುತ್ತೇನೆ. ಭಯ-ಭೀತಿಯಿಂದ ಜೋರಾಗಿ ಉಸಿರಾಡುತ್ತೇನೆ. ರಾತ್ರಿ ಎದ್ದು ಕೂರುತ್ತೇನೆ. ಆಗೆಲ್ಲಾ ಅಕ್ಕ ಸಮಾಧಾನಿಸುತ್ತಾಳೆ..”
    ‘ರೇಪ್ಸ್ ಇನ್ ಬೋಸ್ನಿಯಾ: ಎ ಮುಸ್ಲಿಮ್ ಸ್ಕೂಲ್ ಗರ್ಲ್ಸ್ ಅಕೌಂಟ್'' ಎಂಬ ಶೀರ್ಷಿಕೆಯಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು 1992 ಡಿಸೆಂಬರ್ 27ರಂದು ಪ್ರಕಟಿಸಿದ ಸಂದರ್ಶನದಲ್ಲಿ ಜಾಸ್ನಾ ಎಂಬ ಯುವತಿ ಹೇಳಿದ ಮಾತುಗಳಿವು. ಈ ಸಂದರ್ಶನದ ಆರಂಭದಲ್ಲಿ ಸುಮಾರು 45 ನಿಮಿಷಗಳ ವರೆಗೆ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಈ ಹುಡುಗಿ ಹೇಳಿಕೊಂಡೇ ಇರಲಿಲ್ಲ. 1991ರಿಂದ 95ರ ನಡುವೆ ಯುಗೋಸ್ಲಾವಿಯಾದಲ್ಲಿ ನಡೆದ ಆಂತರಿಕ ಯುದ್ಧ ಮತ್ತು ಹತ್ಯಾಕಾಂಡಗಳು ಅತ್ಯಂತ ಭೀಕರ ಕ್ರೌರ್ಯಗಳಲ್ಲಿ ಒಂದೆಂದು ಜಾಗತಿಕವಾಗಿಯೇ ಗುರುತಿಸಿಕೊಂಡಿದೆ. ಆ ಬಳಿಕ ಯುಗೋಸ್ಲಾವಿಯಾವು ಬೋಸ್ನಿಯಾ-ಹರ್ಝಗೋವಿನಾ, ಕ್ರೋವೇಶಿಯಾ, ಸೆರ್ಬಿಯ ಮುಂತಾದ ರಾಷ್ಟ್ರಗಳಾಗಿ ವಿಭಜನೆಗೊಂಡಿತು. ಬೋಸ್ನಿಯನ್ನರ ಮೇಲೆ ಸೆರ್ಬಿಯದ ಮಂದಿ ನಡೆಸಿದ ಕ್ರೌರ್ಯಗಳು ಎಷ್ಟು ಭೀಕರವಾಗಿತ್ತು ಅಂದರೆ, 30 ಸಾವಿರದಷ್ಟು ಮಂದಿ ಮಹಿಳೆಯರು ಅತ್ಯಾಚಾರಕ್ಕೆ ಒಳಗಾದರು ಎಂದು ಆ ಬಳಿಕದ ವರದಿಗಳೇ ಹೇಳಿದುವು. ಅವರಲ್ಲಿ ಜಾಸ್ನಾ ಕೂಡ ಓರ್ವಳು. ಅತ್ಯಾಚಾರಕ್ಕೀಡಾದವರು ಸಾಮಾಜಿಕ ವ್ಯವಸ್ಥೆಯ ಮೇಲೆಯೇ ವಿಶ್ವಾಸ ಕಳಕೊಂಡರು. ಪಾಶ್ಚಾತ್ಯ ಪತ್ರಕರ್ತರು ಮತ್ತು ಟಿ.ವಿ. ಚಾನೆಲ್‍ಗಳು ಬೋಸ್ನಿಯಾದ ಈ ಸಂತ್ರಸ್ತರನ್ನು ಭೇಟಿಯಾದಾಗಲೆಲ್ಲ ಅವರು ಮಾತಾಡಲು ನಿರಾಕರಿಸಿದರು. ಅವರ ಉದ್ದೇಶ ಶುದ್ಧಿಯನ್ನೇ ಪ್ರಶ್ನಿಸಿದರು. ಪಶ್ಚಿಮವು ತಮಗೆ ನ್ಯಾಯ ಕೊಡುವುದಕ್ಕಲ್ಲ, ಬರೇ ಅನುಭವಿಸಲು ಮತ್ತು ಮನರಂಜನೆಯ ವಿಷಯ ಒದಗಿಸಲಷ್ಟೇ ಆಸಕ್ತವಾಗಿವೆ ಎಂದು ಆರೋಪಿಸಿದರು. ಸೆರ್ಬಿಯವು ಆ ಬಳಿಕ ನಡೆಸಿದ ತನಿಖೆಗಳಲ್ಲಿ ಅತ್ಯಾಚಾರಿಗಳಲ್ಲಿದ್ದ ಭೀಭತ್ಸ ಆಲೋಚನೆಗಳೂ ಬೆಳಕಿಗೆ ಬಂದುವು. ಒಂದು ಸಮುದಾಯವನ್ನು ಅಪಮಾನಗೊಳಿಸುವುದಕ್ಕೆ ಅತ್ಯಾಚಾರವನ್ನು ಒಂದು ಉಪಕರಣವಾಗಿ ಅವರು ಪರಿಗಣಿಸಿದ್ದರು. ದ್ವೇಷದ ಮನಸ್ಥಿತಿಯನ್ನು ಅತ್ಯಾಚಾರಗಳು ತೃಪ್ತಗೊಳಿಸುತ್ತವೆ ಎಂದು ಅತ್ಯಾಚಾರಿಗಳು ಅಭಿಪ್ರಾಯಪಟ್ಟಿದ್ದರು.
   ಅಷ್ಟಕ್ಕೂ, ಇದನ್ನು ಕೇವಲ ಬೋಸ್ನಿಯಾಕ್ಕೆ ಮಾತ್ರ ಸೀಮಿತಗೊಳಿಸಬೇಕಿಲ್ಲ.
ರಾಹುಲ್
ಮೋಹಿತ್
ಸುಧೀರ್
ಅರವಿಂದ್
   ವಾರಗಳ ಹಿಂದೆ ಔಟ್‍ಲುಕ್ ವಾರಪತ್ರಿಕೆಯು ಪ್ರಕಟಿಸಿದ ಮುಝಫ್ಫರ್ ನಗರ್ ಗಲಭೆಯಲ್ಲಿ ಅತ್ಯಾಚಾರಕ್ಕೀಡಾದವರ ಕುರಿತಾದ ತನಿಖಾ ಬರಹದಲ್ಲಿ ಕಾಣಿಸಿಕೊಂಡ ಅತ್ಯಾಚಾರಿಗಳ ಹೆಸರುಗಳಿವು. ಈ ಪಟ್ಟಿಯಲ್ಲಿ ಇನ್ನೂ ಕೆಲವು ಹೆಸರುಗಳಿವೆ. ಅತ್ಯಾಚಾರದ ದೂರನ್ನು ದಾಖಲಿಸಿರುವ 7 ಮಂದಿ ಸಂತ್ರಸ್ತೆಯರ ಒಡಲ ಮಾತನ್ನು ಪತ್ರಕರ್ತೆ ನೇಹಾ ದೀಕ್ಷಿತ್ ಇದರಲ್ಲಿ ದಾಖಲಿಸಿದ್ದಾರೆ. ಈ ಸಂತ್ರಸ್ತೆಯರಿಗೆ ಈ ಮೇಲಿನ ಅತ್ಯಾಚಾರಿಗಳೇನೂ ಅಪರಿಚಿತರಾಗಿರಲಿಲ್ಲ. ಮಿಲಾನ್ ಲುಕಿಕ್‍ನಂತೆ ಒಂದು ಹಂತದ ವರೆಗೆ ಪರಿಚಿತರೇ. ಅವರ ಹೊಲಗಳಲ್ಲಿ ಈ ಸಂತ್ರಸ್ತೆಯರು ದುಡಿದಿದ್ದಾರೆ. ಕೂಲಿ ಕೊಡುವ ಮೊದಲು ಜಿಮಾರ್ ಮತ್ತು ಚಾಮರ್ ಜಾತಿಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದು ಸಾಮಾನ್ಯವಂತೆ. ಈ ಮಹಿಳೆಯರು ಅದಕ್ಕೆ ಒಪ್ಪಿಕೊಳ್ಳದಿದ್ದಾಗ ಕಡಿಮೆ ಕೂಲಿ ಕೊಡಲಾಗುತ್ತಿತ್ತು. ಆ ದ್ವೇಷವನ್ನು ಗಲಭೆಯ ವೇಳೆ ತೀರಿಸಲಾಗಿದೆ ಎಂದು ಸಂತ್ರಸ್ತೆಯರು ಹೇಳಿರುವುದನ್ನು ನೇಹಾ ಬರೆದಿದ್ದಾರೆ. ಈ ಹಿಂದೆ 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಗುಜರಾತ್‍ನ ಸೂರತ್‍ನಲ್ಲಿ ನಡೆದ ಗಲಭೆಯ ವೇಳೆ ಸಾಮೂಹಿಕ ಅತ್ಯಾಚಾರ ಮತ್ತು ವೀಡಿಯೋ ಚಿತ್ರೀಕರಣಗಳು ನಡೆದಿದ್ದವು. ಹಾಗಂತ ಅದೇನೂ ಕದ್ದು ಮುಚ್ಚಿ ನಡೆಸಲಾದ ಚಿತ್ರೀಕರಣ ಆಗಿರಲಿಲ್ಲ. ವಿದ್ಯುತ್ ತಂತಿಯನ್ನು ಕಡಿತಗೊಳಿಸಿ ಸುತ್ತ-ಮುತ್ತಲಿನ ಪ್ರದೇಶಗಳನ್ನು ಕತ್ತಲುಮಯಗೊಳಿಸಿದ ಬಳಿಕ ಹೊನಲು ಬೆಳಕಿನಲ್ಲಿ ಸಂಪೂರ್ಣ ಯೋಜಿತವಾಗಿಯೇ ಚಿತ್ರೀಕರಣ ನಡೆಸ ಲಾಗಿತ್ತು ಎಂದು ಆ ನಂತರದ ವರದಿಗಳು ಸ್ಪಷ್ಟಪಡಿಸಿದ್ದುವು. (ಇಂಡಿಯಾ ಯುನೈಟೆಡ್ ಅಗೈನ್‍ಸ್ಟ್ ಫ್ಯಾಸಿಝಂ 2013 ನವೆಂಬರ್ 26). 2002ರ ಗುಜರಾತ್ ಹತ್ಯಾಕಾಂಡದಲ್ಲೂ ಅತ್ಯಾಚಾರವು ಪ್ರಮುಖ ಆಯುಧವಾಗಿ ಬಳಕೆಯಾಗಿತ್ತು. ಸಂತ್ರಸ್ತೆಯರಲ್ಲಿ ಬಿಲ್ಕಿಸ್ ಬಾನೋ ಓರ್ವರಾಗಿದ್ದರು. 2007ರಲ್ಲಿ ಒಡಿಸ್ಸಾದ ಕಂಧಮಲ್‍ನಲ್ಲಿ ನಡೆದ ಕ್ರೈಸ್ತ ವಿರೋಧಿ ಹತ್ಯಾಕಾಂಡದಲ್ಲೂ ಅತ್ಯಾಚಾರ ನಡೆದಿತ್ತು. ಸಿಸ್ಟರ್ ವಿೂನಾರ ಮೇಲಿನ ಅತ್ಯಾಚಾರವು ರಾಷ್ಟ್ರಮಟ್ಟದಲ್ಲೇ  ಸುದ್ದಿಗೀಡಾಗಿತ್ತು. ಕಂಧಮಲ್‍ನಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಗುಜರಾತ್‍ನ ಅತ್ಯಾಚಾರಗಳಿಗೆ ಹೋಲುತ್ತವೆ ಎಂದು ಆ ಸಂದರ್ಭದಲ್ಲಿ ಹರ್ಷಮಂದರ್ ಬರೆದಿದ್ದರು.
   ನಿಜವಾಗಿ, ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಬೋಸ್ನಿಯಾದಿಂದ ಹಿಡಿದು ಮುಝಫ್ಫರ್ ನಗರದವರೆಗೆ ಒಂದು ಸಮಾನತೆಯಿದೆ. ಅದುವೇ ದ್ವೇಷ. ಪುರುಷ ತನ್ನ ದ್ವೇಷವನ್ನು ತೀರಿಸಿಕೊಳ್ಳುವುದಕ್ಕೆ ಹೆಣ್ಣಿನ ದೇಹವನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾನೆ ಅನ್ನುವುದನ್ನು ಇವೆಲ್ಲ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿವೆ. ಹೆಣ್ಣನ್ನು ಅತ್ಯಾಚಾರಕ್ಕೀಡು ಮಾಡುವ ಮೂಲಕ ತಮ್ಮ ದ್ವೇಷವನ್ನು ದಮನಗೊಳಿಸುವ ಮಂದಿ ಪುರುಷ ಸಮಾಜದಲ್ಲಿದ್ದಾರೆ. ಬೆಂಗಳೂರಿನ ವಿಬ್‍ಗಯಾರ್ ಪ್ರಕರಣದಲ್ಲೂ ಇದು ಸ್ಪಷ್ಟವಾಗಿದೆ. 6ರ ಬಾಲೆಯ ಮೇಲಿನ ದ್ವೇಷವೇ ಸಾಮೂಹಿಕ ಅತ್ಯಾಚಾರಕ್ಕೆ ಕಾರಣ ಎಂಬುದನ್ನು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದುವು. ಆದ್ದರಿಂದಲೇ, ಈ ಮನಸ್ಥಿತಿಯ ಬಗ್ಗೆ ಗಂಭೀರ ಚರ್ಚೆಗಳಾಗಬೇಕಾದ ಅಗತ್ಯವಿದೆ. ಅಂದಹಾಗೆ, ಇಂಥ ಮನಸ್ಥಿತಿ ನಿರ್ದಿಷ್ಟ ಧರ್ಮೀಯರಲ್ಲಿ ಮಾತ್ರ ಇರಬೇಕೆಂದೇನೂ ಇಲ್ಲ. ವಿಬ್‍ಗಯಾರ್‍ನ ಆರೋಪಿಗಳು ಹಿಂದೂಗಳೂ ಅಲ್ಲ. ಅತ್ಯಾಚಾರಿಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸದೇ, ಆ ಮನಸ್ಥಿತಿಯ ಕರಾಳತೆಯ ಸುತ್ತ ಮಾಧ್ಯಮಗಳಲ್ಲಿ ವಿಸ್ತೃತ ಚರ್ಚೆಗಳಾಗಬೇಕಿದೆ. ಒಂದು ಕಡೆ ಅತ್ಯಾಚಾರದ ವಿರುದ್ಧ ಕಾನೂನಿನ ಮೇಲೆ ಕಾನೂನುಗಳು ಜಾರಿಯಾಗುತ್ತಿವೆ. ಗಲ್ಲು ಶಿಕ್ಷೆಯ ಬೇಡಿಕೆಯನ್ನೂ ಮುಂದಿಡಲಾಗುತ್ತಿದೆ. ಆದರೂ ಅತ್ಯಾಚಾರಗಳು ಕಡಿಮೆಯಾಗುತ್ತಿಲ್ಲ. ಯಾಕೆ ಹೀಗೆ? ಇದರ ಹಿಂದೆ ಬರೇ ದೈಹಿಕ ತೃಪ್ತಿಯ ಉದ್ದೇಶವಷ್ಟೇ ಇದೆಯೇ ಅಥವಾ ಕ್ರೌರ್ಯದ ಮನಸ್ಥಿತಿಯೊಂದು ಕೆಲಸ ಮಾಡುತ್ತಿದೆಯೇ? ಹೆಣ್ಣನ್ನು ಗುಲಾಮಳು ಎಂದು ಬಗೆವ, ತನ್ನ ಇಚ್ಛೆಯನ್ನು ಪೂರೈಸಬೇಕಾದವಳು ಎಂದು ನಂಬಿರುವ ಪುರುಷ ಯಜಮಾನಿಕೆಯು ಈ ಭಯರಹಿತ ವಾತಾವರಣಕ್ಕೆ ಕಾರಣವೇ? ಅಂಥ ಮನಸ್ಥಿತಿಯು ಹುಟ್ಟು ಪಡೆಯುವುದು ಎಲ್ಲಿ? ಮನೆಯಲ್ಲೇ? ಶಾಲೆ-ಕಾಲೇಜು, ಉದ್ಯೋಗ ಸ್ಥಳಗಳಲ್ಲೇ? ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಮನಸ್ಥಿತಿಯಿರುವ ಮನೆಯಲ್ಲಿ ಬೆಳೆದವರು ಇಂಥ ಪ್ರಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆಯೇ? ಹೆಣ್ಣಿನ ಧ್ವನಿಯನ್ನು ಅಡಗಿಸುವುದಕ್ಕೆ, ಆಕೆಯ ಭಿನ್ನ ಅಭಿಪ್ರಾಯವನ್ನು ಖಂಡಿಸುವುದಕ್ಕೆ, ಆಕೆಯ ಪ್ರತಿಭೆಯನ್ನು ಚಿವುಟುವುದಕ್ಕೆ ಅತ್ಯಾಚಾರಗಳು ಟೂಲ್ ಆಗುತ್ತಿವೆಯೇ? ಈ ಮನಸ್ಥಿತಿಯ ಮಂದಿ ಮನೆಯಲ್ಲಿ ತಮ್ಮ ತಾಯಿ, ಪತ್ನಿ, ತಂಗಿ, ಅಕ್ಕ, ಅತ್ತಿಗೆಯರೊಂದಿಗೆ ಹೇಗೆ ವರ್ತಿಸುತ್ತಾರೆ? ಅವರೆಲ್ಲರೊಂದಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ರೀತಿ ಹೇಗಿವೆ? ಭಾಷೆ ಹೇಗಿದೆ?
    ಪ್ರಭಾ ಎನ್. ಬೆಳವಂಗಳ ಅವರ ಫೇಸ್‍ಬುಕ್ ಬರಹಕ್ಕೆ, ‘ಪ್ರಭಾರ ಜುಟ್ಟು ಹಿಡಿದು ಅತ್ಯಾಚಾರ ನಡೆಸಿದರೆ ಅವರು ಸರಿಯಾಗುತ್ತಾರೆ..' ಎಂಬ ಉತ್ತರವನ್ನು ನೀಡಿದ ವಿ.ಆರ್. ಭಟ್ ಎಂಬವರ ಮನಸ್ಥಿತಿಯ ಸುತ್ತ ಆಲೋಚಿಸುತ್ತಾ ಹೋದಂತೆ ಇವೆಲ್ಲ ನೆನಪಾದುವು.

Wednesday, July 30, 2014

ನ್ಯೂಯಾರ್ಕ್‍ನಲ್ಲಿ ಇಸ್ರೇಲನ್ನು ಸ್ಥಾಪಿಸಿರುತ್ತಿದ್ದರೆ ಅಮೇರಿಕಕ್ಕೂ ಫೆಲೆಸ್ತೀನ್ ಅರ್ಥವಾಗುತ್ತಿತ್ತು..

   “ವಸಾಹತುಶಾಹಿತ್ವಕ್ಕೆ ಬದ್ಧವಾಗಿರುವ ಮತ್ತು ಮಾನವ ಹಕ್ಕು ಉಲ್ಲಂಘನೆಗಳನ್ನು ಎಗ್ಗಿಲ್ಲದೇ ನಡೆಸುತ್ತಿರುವ ಇಸ್ರೇಲ್‍ನೊಂದಿಗೆ ಬ್ರಿಟನ್ನಿನ ಕಂಪೆನಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಸಂಬಂಧವನ್ನು ಕಡಿದುಕೊಳ್ಳಬೇಕು. ಡೇವಿಡ್ ಕ್ಯಾಮರೂನ್ ನೇತೃತ್ವದ ಸರಕಾರವು ಇಸ್ರೇಲ್‍ಗೆ ದಿಗ್ಬಂಧನ ವಿಧಿಸಬೇಕು..” ಎಂದು ಬ್ರಿಟನ್ನಿನ ಖ್ಯಾತ ಪತ್ರಕರ್ತ ಬೆನ್ ವೈಟ್ ಕಳೆದ ವಾರ ಆಗ್ರಹಿಸಿದ್ದರು. ‘ಇಸ್ರೇಲಿ ಅಪಾರ್ಥೀಡ್: ಎ ಬೆಗಿನ್ನರ್ಸ್ ಗೈಡ್’ ಮತ್ತು 'ಪೆsಲೆಸ್ತೀನಿಯನ್ಸ್ ಇನ್ ಇಸ್ರೇಲ್: ಸೆಗ್ರೆಗೇಶನ್, ಡಿಸ್‍ಕ್ರಿಮಿನೇಶನ್ ಆ್ಯಂಡ್ ಡೆಮಾಕ್ರಸಿ' ಎಂಬೆರಡು ಪುಸ್ತಕಗಳಲ್ಲಿ ಅವರು ಇಸ್ರೇಲಿ ಆಕ್ರಮಿತ ಪಶ್ಚಿಮ ದಂಡೆ ಮತ್ತು ಪೂರ್ವ ಜೆರೋಸಲೇಮ್‍ನಲ್ಲಿ ಫೆಲೆಸ್ತೀನಿಯರ ಬದುಕು-ಬವಣೆಗಳನ್ನು ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆ. 1967ರ ಅರಬ್ ಯುದ್ಧದಲ್ಲಿ ಈ ಪ್ರದೇಶಗಳನ್ನು ಆಕ್ರಮಿಸಿಕೊಂಡ ಇಸ್ರೇಲ್, ಇವತ್ತು ಅಲ್ಲಿನ ಫೆಲೆಸ್ತೀನಿಯರನ್ನು ಹೊರಕ್ಕಟ್ಟಿ ಯಹೂದಿಗಳನ್ನು ಕೂರಿಸುತ್ತಿರುವ ಬಗ್ಗೆ, 1970ರ ಮಧ್ಯದಲ್ಲೇ ಸುಮಾರು 70% ಫೆಲೆಸ್ತೀನಿಯರು ತಮ್ಮ ಭೂಮಿಯನ್ನು ಕಳಕೊಂಡ ಬಗ್ಗೆ.. ಅವರು ವಿವರವಾಗಿ ಬರೆದಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿದ್ದ ವರ್ಣಭೇದ ಸರಕಾರಕ್ಕಿಂತ ಇಸ್ರೇಲ್‍ನ ಪ್ರಜಾತಂತ್ರ ಸರಕಾರವೇ ಅತಿ ಕ್ರೂರವಾದದ್ದು ಎಂದಿದ್ದಾರೆ. ಅಷ್ಟಕ್ಕೂ, ಹಾಲೋಕಾಸ್ಟ್ ನಡೆಸಿದ್ದು ಫೆಲೆಸ್ತೀನಿಯರಲ್ಲ. ರಶ್ಯಾದಲ್ಲಿ ನಡೆದ ಕಿಶಿನೋವ್ ಹತ್ಯಾಕಾಂಡಕ್ಕೂ ಅವರು ಕಾರಣರಲ್ಲ. 1492ರಲ್ಲಿ ಸ್ಪೈನ್, 1904-14ರ ಆಸುಪಾಸಿನಲ್ಲಿ ರಶ್ಯಾ, ಲಿಥುವೇನಿಯಾ, ಜರ್ಮನಿ.. ಮುಂತಾದ ರಾಷ್ಟ್ರಗಳಲ್ಲಿ ಯಹೂದಿಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದಾಗ ಅರಬ್ ರಾಷ್ಟ್ರಗಳಲ್ಲಿದ್ದ ಯಹೂದಿಯರು ಸುಖವಾಗಿದ್ದರು. 1881ರಲ್ಲಿ ದಕ್ಷಿಣ ಯುರೋಪ್‍ನಲ್ಲಿ ಯಹೂದಿಯರ ಮೇಲೆ ದಬ್ಬಾಳಿಕೆ ನಡೆದು ರಬ್ಬಿ ಎಲಿಜಾ ಬೆನ್ ಸುಲೇಮಾನ್‍ರ ನೇತೃತ್ವದಲ್ಲಿ ಯಹೂದಿಯರ ಒಂದು ತಂಡ ಫೆಲೆಸ್ತೀನ್‍ಗೆ ಆಗಮಿಸಿದಾಗ ಅವರು ವಿರೋಧಿಸಲಿಲ್ಲ. 1492ರಲ್ಲಿ ರಬ್ಬಿ ಯಹೂದ ಹಚ್‍ಸಿಡ್ ಎಂಬಾತ ಸ್ಪೈನ್‍ನಿಂದ 1500 ಯಹೂದಿಯರನ್ನು ಪೆsಲೆಸ್ತೀನ್‍ಗೆ ಕರೆತಂದಾಗಲೂ ಅವರು ಪ್ರತಿಭಟಿಸಲಿಲ್ಲ. ಆದರೆ ಬರಬರುತ್ತಾ ಈ ವಲಸೆ ಹೆಚ್ಚಾಯಿತು. ಫೆಲೆಸ್ತೀನ್‍ನಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯಶಾಹಿತ್ವವು ಈ ವಲಸೆ ಪ್ರಕ್ರಿಯೆ ಹಿಂದಿದೆ ಎಂಬುದು ಬಹಿರಂಗವಾಗುತ್ತಲೇ ಹಲವು ಅನುಮಾನಗಳೂ  ಹುಟ್ಟಿಕೊಂಡವು. ಆಸ್ಟ್ರೇಲಿಯನ್-ಹಂಗೇರಿಯನ್ ಪತ್ರಕರ್ತ ಥಿಯೋಡರ್ ಹರ್ಝಲ್‍ನ ಕನಸಾಗಿರುವ ಇಸ್ರೇಲ್ ರಾಷ್ಟ್ರದ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಸಂಶಯ ಮೂಡತೊಡಗಿದುವು. ಇದನ್ನು ಸಮರ್ಥಿಸುವಂತೆ 1904-14ರ ಮಧ್ಯೆ 40 ಸಾವಿರ ಯಹೂದಿಗಳು ಫೆಲೆಸ್ತೀನ್‍ಗೆ ವಲಸೆ ಬಂದರು. 1919-29ರ ಮಧ್ಯೆ ಒಂದು ಲಕ್ಷದಷ್ಟು ಯಹೂದಿಯರು ಫೆಲೆಸ್ತೀನ್‍ಗೆ ಆಗಮಿಸಿದರು. ಬಳಿಕ ನಾಝಿಝಮ್ ಮತ್ತಿತರ ಕಾರಣಗಳಿಂದ 1930ರ ಬಳಿಕ ಸಾವಿರಾರು ಯಹೂದಿಯರು ಫೆಲೆಸ್ತೀನ್ ಸೇರಿಕೊಂಡರು. ಫೆಲೆಸ್ತೀನಿಯರು ಅಥವಾ ಅರಬರನ್ನು ಸಿಟ್ಟಿಗೆಬ್ಬಿಸಿದ್ದು ಈ ಪ್ರಕ್ರಿಯೆಗಳೇ. ದೌರ್ಜನ್ಯಕ್ಕೀಡಾಗಿರುವ ಜನರಿಗೆ ಆಶ್ರಯ ಒದಗಿಸುವುದು ಬೇರೆ, ಪ್ರತ್ಯೇಕ ರಾಷ್ಟ್ರ ನಿರ್ಮಾಣದ ಉದ್ದೇಶದಿಂದಲೇ ನಿರ್ದಿಷ್ಟ ಧರ್ಮೀಯರನ್ನು ಒಂದೆಡೆ ಕಲೆ ಹಾಕುವುದು ಬೇರೆ. ಆದ್ದರಿಂದಲೇ 1936ರಲ್ಲಿ ಫೆಲೆಸ್ತೀನಿಯರು ಈ ಬೆಳವಣಿಗೆಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯು ಚಳವಳಿಯ ರೂಪ ಪಡೆದು ಮುಂದುವರಿದಾಗ ಯಹೂದಿ ವಲಸೆಗೆ ನಿಯಂತ್ರಣ ಹೇರುವ ಕಾನೂನನ್ನು 1939ರಲ್ಲಿ ಬ್ರಿಟಿಷ್ ಸರಕಾರವು ಜಾರಿಗೊಳಿಸಿತು. ಆದರೂ ತೆರೆಮರೆಯಲ್ಲಿ ವಲಸೆ ನಡೆಯುತ್ತಲೇ ಇತ್ತು. ಇಷ್ಟಿದ್ದೂ ಇರ್ಗುನ್ ಮತ್ತು ಲೆಹಿ ಎಂಬ ಯಹೂದಿ ಸಶಸ್ತ್ರ ಗುಂಪಿನಂತೆ ಫೆಲೆಸ್ತೀನಿಯರು ಬ್ರಿಟಿಷ್ ಸರಕಾರದ ಮೇಲೆ ದಾಳಿ ನಡೆಸಲಿಲ್ಲ. ಅವರು ಬ್ರಿಟಿಷ್ ಸರಕಾರದಿಂದ ನ್ಯಾಯವನ್ನು ನಿರೀಕ್ಷಿಸಿದರು. ಒಂದು ವೇಳೆ ಭಾರತದ ಅರುಣಾಚಲ ಪ್ರದೇಶಕ್ಕೆ ಜಪಾನ್‍ನಿಂದಲೋ ಟಿಬೆಟ್‍ನಿಂದಲೋ ಬೌದ್ಧರನ್ನು ಕರೆ ತರುತ್ತಿದ್ದರೆ ನಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು? ಫೆಲೆಸ್ತೀನಿನಲ್ಲಿರುವ ಯಹೂದಿಯರ ಬಗ್ಗೆ ಚರ್ಚಿಸುವುದಕ್ಕೆ 1947 ಮೇ 15ರಂದು ವಿಶ್ವಸಂಸ್ಥೆಯು ಸಮಿತಿ ರಚಿಸಿದಂತೆ (UNSCOP) ಈ ಬೌದ್ಧರ ಬಗ್ಗೆ ಚರ್ಚಿಸುವುದಕ್ಕೂ ವಿಶ್ವಸಂಸ್ಥೆ ಸಮಿತಿ ರೂಪಿಸುತ್ತಿದ್ದರೆ ನಮ್ಮ ನಿಲುವು ಏನಿರುತ್ತಿತ್ತು? ಫೆಲೆಸ್ತೀನನ್ನು ಫೆಲೆಸ್ತೀನ್, ಯಹೂದಿ ಮತ್ತು ಸಿಟಿ ಆಫ್ ಜೆರುಸಲೇಮ್ ಎಂಬ ಮೂರು ಪ್ರತ್ಯೇಕ ರಾಷ್ಟ್ರಗಳನ್ನಾಗಿ ವಿಭಜಿಸಬೇಕೆಂದು 1947 ಸೆ. 3ರಂದು ವಿಶ್ವಸಂಸ್ಥೆಗೆ ಆ ಸಮಿತಿ ವರದಿ ಕೊಟ್ಟಂತೆಯೇ, ಭಾರತದ ಬಗ್ಗೆಯೂ ಕೊಡುವಂತಾಗಿದ್ದರೆ ಏನಾಗುತ್ತಿತ್ತು? ‘ಯಹೂದಿ ಏಜೆನ್ಸಿ'ಯ ನಾಯಕ ಡೇವಿಡ್ ಬೆನ್‍ಗುರಿಯನ್ 1948 ಮೇ 14ರಂದು ಸ್ವತಂತ್ರ ಯಹೂದಿ ರಾಷ್ಟ್ರ ಘೋಷಿಸಿದಂತೆಯೇ ಇಲ್ಲಿ ಪ್ರತ್ಯೇಕ ಬೌದ್ಧ ರಾಷ್ಟ್ರ ಘೋಷಿಸಿರುತ್ತಿದ್ದರೆ ನಾವೇನು ಮಾಡುತ್ತಿದ್ದೆವು? 1949 ಮೇ 1ರಂದು ವಿಶ್ವಸಂಸ್ಥೆಯು ಇಸ್ರೇಲ್‍ಗೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನ ಕೊಟ್ಟಂತೆಯೇ ಅರುಣಾಚಲ ಪ್ರದೇಶಕ್ಕೂ ಕೊಡುತ್ತಿದ್ದರೆ ನಾವು ಸುಮ್ಮನಿರುತ್ತಿದ್ದೆವೇ? ನಮ್ಮ ಪ್ರತಿಭಟನೆಯನ್ನು ಈ ಬೌದ್ಧ ರಾಷ್ಟ್ರವು ಭಯೋತ್ಪಾದನೆಯೆಂದು ಕರೆಯುತ್ತಿದ್ದರೆ ನಾವದನ್ನು ಒಪ್ಪಿಕೊಳ್ಳುತ್ತಿದ್ದೆವೇ? ಸುಭಾಶ್ ಚಂದ್ರ ಬೋಸ್, ಭಗತ್‍ಸಿಂಗ್‍ರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಕರೆಯುವ ನಾವು ಮತ್ತೇಕೆ ಶೈಕ್ ಯಾಸೀನ್, ರಂತೀಸಿ, ಜಅïಬರಿಯನ್ನು ಭಯೋತ್ಪಾದಕರೆಂದು ಕರೆಯುತ್ತಿದ್ದೇವೆ? ಬ್ರಿಟಿಷ್ ಆಡಳಿತವಿದ್ದ ಭಾರತದಲ್ಲಿ ಕಾಂಗ್ರೆಸ್ ಪಕ್ಷ  ನಡೆಸಿರುವುದು ಸ್ವಾತಂತ್ರ್ಯ ಹೋರಾಟವೆಂದಾದರೆ ಮತ್ತೇಕೆ ಇಸ್ರೇಲ್ ಆಡಳಿತದ ಫೆಲೆಸ್ತೀನ್‍ನಲ್ಲಿ ಹಮಾಸ್‍ನ ಹೋರಾಟವು ಭಯೋತ್ಪಾದನೆಯಾಗಬೇಕು?
   1993: ಓಸ್ಲೋ ಒಪ್ಪಂದ
   2000 ಜುಲೈ: ಕ್ಯಾಂಪ್-ಡೇವಿಡ್ ಒಪ್ಪಂದ
   2001 ಜನವರಿ: ತಾಬಾ ಸಭೆ
   2002 ಸೆ. 7: ಶಾಂತಿಗಾಗಿ ನೀಲನಕ್ಷೆ
   2002 ಮಾರ್ಚ್: ಬೈರೂತ್ ಶಾಂತಿ ಸಭೆ
   2007 : ರಿಯಾದ್ ಶಾಂತಿ ಸಭೆ
1948ರ ಬಳಿಕ ಇಂಥ ಹತ್ತು-ಹಲವು ಸಭೆ, ಕರಾರುಗಳು ನಡೆದಿವೆ. ಅಮೇರಿಕ, ರಶ್ಯ ಯುರೋಪಿಯನ್ ಯೂನಿಯನ್, ಸೌದಿ ಅರೇಬಿಯಾ, ಈಜಿಪ್ಟ್, ವಿಶ್ವಸಂಸ್ಥೆಗಳು ಮಧ್ಯಸ್ಥಿಕೆಯನ್ನೂ ವಹಿಸಿವೆ. ಯಾಸರ್ ಅರಾಫತ್, ಯಹೂದ್ ಬರಾಕ್, ಇಝಾಕ್ ರಬಿನ್, ರಾಜಕುಮಾರ ಅಬ್ದುಲ್ಲಾ, ಏರಿಯಲ್ ಶರೋನ್ ಮುಂತಾದವರು ಫೆಲೆಸ್ತೀನ್ ಸಮಸ್ಯೆಯ ಸುತ್ತ ಚರ್ಚೆಯನ್ನೂ ನಡೆಸಿದ್ದಾರೆ. 1967ರಲ್ಲಿ ಇಸ್ರೇಲ್ ವಶಪಡಿಸಿಕೊಂಡ ಅರಬ್ ಭೂಮಿಯಲ್ಲಿ ಯಹೂದಿಯರಿಗಾಗಿ ವಸತಿ ನಿರ್ಮಿಸುವುದನ್ನು ಯುರೋಪಿಯನ್ ಯೂನಿಯನ್ ಈ ಹಿಂದೆಯೇ ಖಂಡಿಸಿದೆ. 2011ರಲ್ಲಿ ವಿಶ್ವಸಂಸ್ಥೆಯೂ ವಿರೋಧಿಸಿತು. ಇದು ಶಾಂತಿ ಮಾತುಕತೆ ಮತ್ತು ಸಮಸ್ಯೆ ಬಗೆಹರಿಯುವ ನಿಟ್ಟಿನಲ್ಲಿ ಅಡ್ಡಿಯಾಗುತ್ತಿದೆ ಎಂದಿತು. ಇದನ್ನು ಕಡೆಗಣಿಸಿ 2012ರಲ್ಲಿ ಇಸ್ರೇಲ್ ಮತ್ತೆ ವಸತಿ ನಿರ್ಮಾಣಕ್ಕೆ ಮುಂದಾದಾಗ ಅಂತಾರಾಷ್ಟ್ರೀಯ ಸಮುದಾಯವೇ ತೀವ್ರ ಆಕ್ರೋಶ ವ್ಯಕ್ತಪಡಿಸಿತು. ಇಸ್ರೇಲ್‍ನ ಕ್ರಮವು ಈ ಹಿಂದಿನ ರೋಡ್‍ಮ್ಯಾಪ್‍ಗೆ ವಿರುದ್ಧ ಎಂದು ಬ್ರಿಟನ್ ಪ್ರತಿಭಟಿಸಿತು. ಆದರೂ ಇಸ್ರೇಲನ್ನು ನಿಯಂತ್ರಿಸಲು ಈ ಯಾವ ರಾಷ್ಟ್ರಗಳಿಗೂ ಸಾಧ್ಯವಾಗುತ್ತಿಲ್ಲ ಅಂದರೆ ಏನೆನ್ನಬೇಕು? ಪ್ರತ್ಯೇಕ ಇಸ್ರೇಲ್‍ನಂತೆ ಪ್ರತ್ಯೇಕ ಫೆಲೆಸ್ತೀನ್ ರಾಷ್ಟ್ರಕ್ಕೂ UNSCOP ಸಮಿತಿಯು ಶಿಫಾರಸ್ಸು ಮಾಡಿದ್ದನ್ನು ವಿಶ್ವಸಂಸ್ಥೆಯೇಕೆ ಈ ವರೆಗೂ ಜಾರಿಗೊಳಿಸಿಲ್ಲ? ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೋದ ನೆರವಿನೊಂದಿಗೆ ಫೆಲೆಸ್ತೀನ್‍ನಲ್ಲಿ ಮಕ್ಕಳ ಮ್ಯಾಗಸಿನ್ ಪ್ರಕಟವಾಗುತ್ತಿತ್ತು. ಫೆಲೆಸ್ತೀನ್ ಅಥಾರಿಟಿಯ (PLO)  ಬೆಂಬಲವೂ ಅದಕ್ಕಿತ್ತು. ಒಮ್ಮೆ ಅದರಲ್ಲಿ ಹಿಟ್ಲರ್‍ನನ್ನು ಮೆಚ್ಚಿಕೊಂಡು ಲೇಖನವೊಂದು ಪ್ರಕಟವಾಯಿತು. ತಕ್ಷಣ ಯುನೆಸ್ಕೋ ಎಷ್ಟು ಸಿಟ್ಟಾಯಿತೆಂದರೆ ತನ್ನ ನೆರವನ್ನೇ ರದ್ದುಪಡಿಸಿತ್ತು. ಕೇವಲ ಲೇಖನವೊಂದಕ್ಕೆ ಈ ಪರಿ ಪ್ರತಿಕ್ರಿಯೆಯನ್ನು ನೀಡಬಲ್ಲಷ್ಟು ಸೂಕ್ಷ್ಮತೆ ಮತ್ತು ಎಚ್ಚರಿಕೆಯುಳ್ಳ ವಿಶ್ವಸಂಸ್ಥೆಗೆ, ಇಸ್ರೇಲ್‍ನ ನಿಯಮೋಲ್ಲಂಘನೆಯೇಕೆ ಕಾಣಿಸುತ್ತಿಲ್ಲ?
   1948ಕ್ಕಿಂತ ಮೊದಲು ಜಾಗತಿಕ ಭೂಪಟದಲ್ಲಿ ಇಸ್ರೇಲ್ ಎಂಬ ರಾಷ್ಟ್ರವೇ ಇರಲಿಲ್ಲ. ಆದರೆ ಫೆಲೆಸ್ತೀನ್ ಇತ್ತು. ಯಹೂದಿಗಳು ಅತ್ಯಂತ ಹೆಚ್ಚಿದ್ದುದು ಜರ್ಮನಿಯಲ್ಲಿ. ಪಶ್ಚಿಮೇಶ್ಯದಲ್ಲಿ ಅವರ ಸಂಖ್ಯೆ ತೀರಾ ಕಡಿಮೆಯಿತ್ತು. ಆದರೆ ಇವತ್ತು ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ ಇಸ್ರೇಲ್ ಇದೆ, ಫೆಲೆಸ್ತೀನ್ ಇಲ್ಲ. ಆದರೂ ಫೆಲೆಸ್ತೀನಿಯರನ್ನೇ ಭಯೋತ್ಪಾದಕರೆಂದು ಕರೆಯಲಾಗುತ್ತಿದೆ. ಸ್ವತಂತ್ರ ರಾಷ್ಟ್ರವನ್ನು ಹೊಂದುವ ಅವರ ಕನಸನ್ನು ಉಗ್ರವಾದಿ ಕನಸು ಎನ್ನಲಾಗುತ್ತಿದೆ. ನಿಜವಾಗಿ, ಯಹೂದಿಯರಿಗೆ ಅವರದೇ ಆದ ರಾಷ್ಟ್ರವೊಂದರ ಅಗತ್ಯ ಇದೆ ಎಂದಾಗಿದ್ದರೆ, ಅದಕ್ಕೆ ಎಲ್ಲ ರೀತಿಯಲ್ಲೂ ಜರ್ಮನಿಯೇ ಅತ್ಯಂತ ಸೂಕ್ತ ಜಾಗವಾಗಿತ್ತು. ಯಾಕೆಂದರೆ, ಹಾಲೋಕಾಸ್ಟ್ ನಡೆದಿರುವುದು ಅಲ್ಲೇ. ಯಹೂದಿಯರ ಸಂಖ್ಯೆ ಅತ್ಯಂತ ಹೆಚ್ಚಿದ್ದುದೂ ಅಲ್ಲೇ. ಇಷ್ಟಕ್ಕೂ ಇರಾಕಿನಲ್ಲಿರುವ ಕುರ್ದ್‍ಗಳಿಗೆ ಬ್ರಿಟನ್‍ನಲ್ಲಿ ಒಂದು ರಾಷ್ಟ್ರ ಸ್ಥಾಪಿಸಿ ಕೊಡುವುದಕ್ಕೆ ಆ ದೇಶ ಒಪ್ಪಿಕೊಂಡೀತೇ? ಇರಾಕ್‍ನ ಸುನ್ನಿಗಳಿಗೆ ಅಮೇರಿಕದಲ್ಲಿ ಒಂದು ರಾಷ್ಟ್ರ ಸ್ಥಾಪಿಸಿಕೊಡಬಹುದೇ? ಇರಾಕನ್ನು ವಿಭಜಿಸಿ ಕುರ್ದ್, ಸುನ್ನಿ ಮತ್ತು ಶಿಯಾ ರಾಷ್ಟ್ರಗಳನ್ನಾಗಿ ಮಾಡಬೇಕೆಂದು ಪಾಶ್ಚಾತ್ಯ ರಾಷ್ಟ್ರಗಳು ಚರ್ಚಿಸುತ್ತಿವೆಯಾದರೂ ಅವು ತಮ್ಮ ನೆಲದಲ್ಲಿ ಅವರಿಗಾಗಿ ಒಂದು ರಾಷ್ಟ್ರವನ್ನು ಸ್ಥಾಪಿಸುತ್ತಿಲ್ಲ. ಇರಾಕನ್ನೇ ಅದಕ್ಕಾಗಿ ವಿಭಜಿಸುವ ಮಾತಾಡುತ್ತಿವೆ. ಮತ್ತೇಕೆ ಇಸ್ರೇಲನ್ನು ತಂದು ಫೆಲೆಸ್ತೀನ್‍ನಲ್ಲಿ ಸ್ಥಾಪಿಸಲಾಗಿದೆ? ಜರ್ಮನಿಯನ್ನೇ ವಿಭಜಿಸಿ ಒಂದು ಇಸ್ರೇಲ್ ರಾಷ್ಟ್ರ ಮಾಡಬಹುದಿತ್ತಲ್ಲವೇ? ಕುರ್ದ್, ಸುನ್ನಿ, ಶಿಯಾಗಳ ಸಮಸ್ಯೆಗೆ ಕಂಡುಕೊಳ್ಳುವ ಪರಿಹಾರವನ್ನು ಯಹೂದಿಗಳ ವಿಷಯದಲ್ಲೇಕೆ ಕಡೆಗಣಿಸಲಾಯಿತು?
   ಕಳೆದ ಜೂನ್ 24ರಂದು ಹಮಾಸ್‍ನ ಅಲ್ ಅಖ್ಸಾ ಟಿವಿ ಚಾನೆಲ್ ಕೆಲವು ದೃಶ್ಯಗಳನ್ನು ಪ್ರಸಾರ ಮಾಡಿತು. ಹಮಾಸ್‍ನ ಸೇನಾ ವಿಭಾಗವು ಚಾಲಕ ರಹಿತ ಅಬಾಬೀಲ್ 1ಎ, ಅಬಾಬೀಲ್ 1ಬಿ ಎಂಬ ವಿಮಾನವನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದಾಗಿ ಅದು ಘೋಷಿಸಿತು. ಇದು ಇಸ್ರೇಲ್‍ನ ರಕ್ಷಣಾ ಸಚಿವಾಲಯದ ಮೇಲೆ ಹಾರಿ ದೃಶ್ಯಗಳನ್ನು ಸೆರೆ ಹಿಡಿದಿರುವುದಾಗಿಯೂ ಹೇಳಿಕೊಂಡಿತಲ್ಲದೇ ಕೆಲವು ದೃಶ್ಯಗಳ ಪ್ರಸಾರವನ್ನೂ ಮಾಡಿತು. ಕ್ಯಾಮರಾ ಮತ್ತು ರಾಕೆಟ್ ಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಚಾಲಕ ರಹಿತ ವಿಮಾನವೊಂದನ್ನು ಅಶ್ಕಲೋನ್‍ನಲ್ಲಿ ತಾನು ಹೊಡೆದುರುಳಿಸಿರುವುದಾಗಿ ಆ ಬಳಿಕ ಇಸ್ರೇಲ್ ಹೇಳಿಕೊಂಡಿತ್ತು. ಗಾಝಾದಿಂದ ನೂರು ಕಿಲೋ ವಿೂಟರ್ ದೂರ ಇರುವ ಟೆಲ್‍ಅವೀವ್‍ಗೆ 2012ರಲ್ಲಿ 3 ರಾಕೆಟ್‍ಗಳನ್ನು ಹಾರಿಸಿದ್ದ ಹಮಾಸ್ ಈ ಬಾರಿ 130 ಕಿ.ವಿೂ. ದೂರದ ವಾಣಿಜ್ಯ ನಗರ ಹೈಫಕ್ಕೂ ರಾಕೆಟ್‍ಗಳನ್ನು ಹಾರಿಸಿತು. ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೂ ರಾಕೆಟ್ ಆಕ್ರಮಣದ ಬೆದರಿಕೆ ಉಂಟಾಯಿತಲ್ಲದೇ, ವಿಮಾನ ನಿಲ್ದಾಣವನ್ನು ಮುಚ್ಚಲಾಯಿತು. 2012ರಲ್ಲಿ ಸಾವಿಗೀಡಾದ ಖಸ್ಸಾಂ ಬ್ರಿಗೇಡ್‍ನ ಕಮಾಂಡರ್ ಅಹ್ಮದ್ ಜಅïಬರಿಯ ಹೆಸರಿನಲ್ಲಿ ರೂಪಿಸಲಾದ ಜೆ. 80 ಎಂಬ ರಾಕೆಟ್‍ಗಳನ್ನು ಟೆಲ್ ಅವೀವ್, ಹೈಫ ಮತ್ತು ಪರಮಾಣು ಸ್ಥಾವರ ಇರುವ ದಿಮೋನ್‍ಗೂ ಹಾರಿಸಲಾಯಿತು. ಈ ಮೊದಲಾಗಿದ್ದರೆ ಗಾಝಾದ ಸವಿೂಪವಿರುವ ಅಶ್ಕಲೋನ್, ಅಶ್‍ದೋದ್, ಸೆದ್‍ರೋತ್ ಮುಂತಾದ ನಗರಗಳಿಗಷ್ಟೇ ಹಮಾಸ್‍ನ ರಾಕೆಟ್‍ಗಳು ಹಾರಬಲ್ಲವಾಗಿದ್ದುವು. ನಿಜವಾಗಿ, ಇಸ್ರೇಲ್‍ನ ದಿಗ್ಬಂಧನ ಕಠಿಣವಾದಂತೆಲ್ಲ ಹಮಾಸ್‍ನ ಪ್ರತಿರೋಧ ಸಾಮರ್ಥ್ಯವೂ ವೃದ್ಧಿಸುತ್ತಿದೆ. ಇದು ಇಸ್ರೇಲ್‍ಗೂ ಗೊತ್ತಾಗಿದೆ. ಆದ್ದರಿಂದಲೇ, ಅದು ಭೂದಾಳಿಗೆ ಮುಂದಾಗಿದೆ. ಒಂದು ವೇಳೆ,
   ಅಮೇರಿಕದ ನ್ಯೂಯಾರ್ಕ್‍ನಲ್ಲೋ ಬ್ರಿಟನ್ನಿನ ಲಂಡನ್ನಿನಲ್ಲೋ ಅಥವಾ ಸೌದಿ ಅರೇಬಿಯಾದ ರಿಯಾದ್‍ನಲ್ಲೋ ಇಸ್ರೇಲ್‍ನ ಸ್ಥಾಪನೆಯಾಗಿರುತ್ತಿದ್ದರೆ ಅವುಗಳಿಗೂ ಫೆಲೆಸ್ತೀನ್‍ನ ನೋವು ಅರ್ಥವಾಗುತ್ತಿತ್ತು.

Tuesday, July 15, 2014

ರದ್ದಿಯಾಗುವ ಸುದ್ದಿಗಳ ಮಧ್ಯೆ ಕಳೆದುಹೋದ ಮಾಧ್ಯಮ ವಿಶ್ವಾಸಾರ್ಹತೆ

    “ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡು (AIMPLB) ಈ ದೇಶದಲ್ಲಿ ಪರ್ಯಾಯ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸಲು ಯತ್ನಿಸುತ್ತಿದ್ದು, ಅದರಿಂದಾಗಿ ಮುಸ್ಲಿಮ್ ಮಹಿಳೆಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಮಾತ್ರವಲ್ಲ, ಶರೀಅತ್‍ನಂತೆ ನ್ಯಾಯ ತೀರ್ಮಾನ ಮಾಡಲಿಕ್ಕಾಗಿ ಕಾಝಿ ಮತ್ತು ಸಹಾಯಕ ಕಾಝಿಗಳ ತರಬೇತಿಗೆ ಶಿಬಿರಗಳೂ ಏರ್ಪಾಡಾಗುತ್ತಿವೆ. ದಾರುಲ್ ಕಝಾವು (ಇತ್ಯರ್ಥ ಗೃಹ) ಶರೀಅತ್‍ನ ಪ್ರಕಾರ ಈಗಾಗಲೇ ತೀರ್ಮಾನಗಳನ್ನು ಮಾಡುತ್ತಿದೆ. ಆದ್ದರಿಂದ ದಾರುಲ್ ಕಝಾ ಮತ್ತು ಶರೀಅತ್ ಕೋರ್ಟ್‍ಗಳನ್ನು ನ್ಯಾಯಬಾಹಿರ (absolutely illegal) ಮತ್ತು ಸಂವಿಧಾನ ವಿರೋಧಿ (unconstitutional) ಎಂದು ಮಾನ್ಯ ನ್ಯಾಯಾಲಯವು ಘೋಷಿಸಬೇಕು ಮತ್ತು ಇವುಗಳ ಮೇಲೆ ನಿಷೇಧ ಹೇರಬೇಕು. ಇವನ್ನು ತೊಲಗಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆಯೇ ಇವು ಹೊರಡಿಸುವ ಫತ್ವಗಳನ್ನು ನಿಷೇಧಿಸಬೇಕು..” ಎಂದು ವಿಶ್ವಲೋಚನ್ ಮದನ್ ಎಂಬ ವಕೀಲರೋರ್ವರು 2005ರಲ್ಲಿ ಸುಪ್ರೀಮ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಚಂದ್ರಮೌಳಿ ಕೃಷ್ಣಪ್ರಸಾದ್ ಮತ್ತು ಪಿನಕಿ ಚಂದ್ರ ಘೋಷ್‍ರನ್ನೊಳಗೊಂಡ ದ್ವಿ ಸದಸ್ಯ ನ್ಯಾಯ ಪೀಠವು ಅರ್ಜಿಯನ್ನು ತಿರಸ್ಕರಿಸುತ್ತಾ (we dispose off the writ petition) ಕಳೆದ ವಾರ ತೀರ್ಪಿತ್ತಿದ್ದು ಹೀಗೆ:
    ‘ದಾರುಲ್ ಕಝಾಗಳು ಪರ್ಯಾಯ ನ್ಯಾಯಾಲಯಗಳಾಗಿ ಕಾರ್ಯಾಚರಿಸುತ್ತಿವೆ ಎಂದು ಅರ್ಜಿದಾರರು ಹೇಳಿರುವುದು ತಪ್ಪುಗ್ರಹಿಕೆ ಮತ್ತು ಅಪಾರ್ಥವಾಗಿದೆ. ದಾರುಲ್ ಕಝಾಗಳ ಅಸ್ತಿತ್ವವಾಗಲಿ ಅದು ಹೊರಡಿಸುವ ಫತ್ವಾಗಳಾಗಲಿ ಕಾನೂನುಬಾಹಿರವಲ್ಲ. ಅದನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದನ್ನು ಸಂಬಂಧ ಪಟ್ಟವರ ವಿವೇಚನೆಗೆ ಬಿಡಲಾಗಿದೆ..’
     ಇಷ್ಟು ಸ್ಪಷ್ಟವಾಗಿರುವ ತೀರ್ಪಿನ ಮೇಲೆ ಮಾಧ್ಯಮಗಳು ಹೇಗೆ ಸುದ್ದಿ ಹೆಣೆಯಬೇಕಿತ್ತು, ಹೇಗೆ ಶೀರ್ಷಿಕೆ ಕೊಡಬೇಕಿತ್ತು ಮತ್ತು ಯಾವ ವಿಷಯಕ್ಕೆ ಪ್ರಾಶಸ್ತ್ಯ ನೀಡಬೇಕಿತ್ತು? ಈ ತೀರ್ಪಿನ ಮರುದಿನ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ನಿರೀಕ್ಷಣಾ ಜಾವಿೂನು ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿತು. ‘ಕಾಶಪ್ಪನವರ್: ಜಾವಿೂನು ನಿರಾಕರಣೆ' ಎಂಬ ಶೀರ್ಷಿಕೆಯಲ್ಲಿ ಮರುದಿನ ಈ ಸುದ್ದಿಯನ್ನು ಪ್ರಕಟಿಸಿದ ಮಾಧ್ಯಮಗಳು ವಿಶ್ವ ಲೋಚನ್ ಮದನ್ ಅವರ ಅರ್ಜಿಯನ್ನು ಸುಪ್ರೀಮ್ ಕೋರ್ಟು ತಿರಸ್ಕರಿಸಿದ ಸುದ್ದಿಯನ್ನು ಹೇಗೆ ಪ್ರಕಟಿಸಬೇಕಿತ್ತು? ಯಾವ ಶೀರ್ಷಿಕೆಯನ್ನು ಕೊಡಬೇಕಿತ್ತು? 'ಶರಿಯತ್ ನಿಷೇಧ: ವಿಶ್ವಮೋಚನ್ ಮದನ್ ಬೇಡಿಕೆಗೆ ಸುಪ್ರೀಮ್ ಕೋರ್ಟ್ ನಕಾರ ಅಥವಾ ಬೇಡಿಕೆ ನಿರಾಕರಣೆ ಅಥವಾ ಅರ್ಜಿ ತಿರಸ್ಕ್ರತ.. ಎಂದಾಗಬೇಕಿತ್ತಲ್ಲವೇ? ಆದರೆ ಅವು ಕೊಟ್ಟ ಶೀರ್ಷಿಕೆಗಳು ಹೇಗಿದ್ದುವು?
ವಿಶ್ವಲೋಚನ್ ಮದನ್
    ‘ಶರಿಯಾಗೇ ಫತ್ವಾ' ಎಂದು ಕನ್ನಡ ಪ್ರಭ ಮುಖಪುಟದಲ್ಲೇ ಬರೆದರೆ, ‘ಶರಿಯಾ ಕೋರ್ಟು ಅಮಾನ್ಯ: ಸುಪ್ರೀಮ್ ಕೋರ್ಟ್' ಎಂದು ಉದಯವಾಣಿ ಪ್ರಕಟಿಸಿತು. Sharia court not legal, cant enforce Fatwas ಎಂದು ಹಿಂದುಸ್ತಾನ್ ಟೈಮ್ಸ್, Fatwas have no legal standing: supreme court ಎಂದು ಟೈಮ್ಸ್ ಆಫ್ ಇಂಡಿಯಾ, Fatwas not binding on anyone: SC ಎಂದು ಪಿಟಿಐ, Fatwas not legal, says SC ಎಂದು ದಿ ಹಿಂದೂ ಪತ್ರಿಕೆ ಶೀರ್ಷಿಕೆಗಳನ್ನು ಕೊಟ್ಟವು. ಟಿ.ವಿ. ಚಾನೆಲ್‍ಗಳ ಶೀರ್ಷಿಕೆಗಳಂತೂ ಭೀಕರವಾಗಿದ್ದುವು. ‘ಶರಿಯಾ ಕೋರ್ಟುಗಳ ಬಗ್ಗೆ ಸುಪ್ರೀಮ್ ಕೋರ್ಟ್‍ನ ತೀರ್ಪು: ಇದು ಧರ್ಮದ ಗುತ್ತಿಗೆದಾರರ ಮೇಲೆ ಪರಿಣಾಮ ಬೀರಬಹುದೇ' ಎಂಬ ಶೀರ್ಷಿಕೆಯಲ್ಲಿ CNN-IBN ಚಾನೆಲ್ ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಂಡರೆ, ‘ಶರೀಅತ್ ಕೋರ್ಟೋ ಕಾಂಗಾರು ಕೋರ್ಟೋ ಎಂಬ ಶೀರ್ಷಿಕೆಯಲ್ಲಿ NDTV  ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಫತ್ವಾಗಳನ್ನು ಬಲವಂತವಾಗಿ ಹೇರುವಂತಿಲ್ಲ' ಎಂಬ ಹೆಸರಲ್ಲಿ ಟೈಮ್ಸ್ ನೌ ಕಾರ್ಯಕ್ರಮವನ್ನು ಬಿತ್ತರಿಸಿತು.
    ಅಷ್ಟಕ್ಕೂ, ಶರಿಯಾ ಕೋರ್ಟುಗಳು ಮತ್ತು ಅವು ಹೊರಡಿಸುವ ಫತ್ವಾಗಳು ಕಾನೂನುಬದ್ಧವಾಗಿವೆ ಎಂದು ವಾದಿಸಿದವರು ಯಾರು? ವಿಶ್ವಲೋಚನ್ ಮದನ್ ಅವರ ಅರ್ಜಿಯ ವಿಚಾರಣೆಯ ವೇಳೆ ಈ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುವಂತೆ- ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್, ಭಾರತ ಸರಕಾರ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಸರಕಾರಗಳೊಂದಿಗೆ ಸುಪ್ರೀಮ್ ಕೋರ್ಟ್ ಕೇಳಿಕೊಂಡಿತ್ತು. ಆಗ, ‘ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ, ಬರೇ ಅಭಿಪ್ರಾಯವನ್ನು ಹೇಳಬಲ್ಲ ಆದರೆ ಜಾರಿ ಮಾಡುವ ಅಧಿಕಾರ ಇಲ್ಲದ ಮತ್ತು ಭಾರತೀಯ ನ್ಯಾಯಾಂಗಕ್ಕೆ ಪರ್ಯಾಯವಲ್ಲದ ಒಂದು ಅನೌಪಚಾರಿಕ ವ್ಯವಸ್ಥೆ' ಎಂದೇ ಅವೆಲ್ಲ ಹೇಳಿದ್ದುವು. ಇದನ್ನು ಕೋರ್ಟೂ ಒಪ್ಪಿಕೊಂಡಿತು. ಹೀಗಿರುತ್ತಾ ಮಾಧ್ಯಮಗಳು, 'ಶರಿಯಾ ಅಮಾನ್ಯ..' ಎಂದೆಲ್ಲಾ ಬರೆದುವೇಕೆ? ಅವು ಕಾನೂನುಬದ್ಧ ಎಂದು ಯಾರೂ ವಾದಿಸಿಯೇ ಇಲ್ಲದಿರುವಾಗ ಅಂಥದ್ದೊಂದು ಶೀರ್ಷಿಕೆಯ ಉದ್ದೇಶ ಏನು? ಶರೀಅತ್ ಕೋರ್ಟು ಅಥವಾ ಫತ್ವಾಗಳ ಬಗ್ಗೆ ಪತ್ರಕರ್ತರಲ್ಲಿರುವ ಅರಿವಿನ ಕೊರತೆ ಇದಕ್ಕೆ ಕಾರಣವೇ ಅಥವಾ ಮಾಧ್ಯಮ ಜಗತ್ತಿನಲ್ಲಿರುವ ಸಹಜ ಪೈಪೋಟಿಯೇ? ಸೆನ್ಸೇಷನಲಿಸಮ್ಮೇ? ಭಯೋತ್ಪಾದನಾ ಪ್ರಕರಣಗಳ ಸಂದರ್ಭಗಳಲ್ಲೂ ಮಾಧ್ಯಮ ಜಗತ್ತಿನಲ್ಲಿ ಇಂಥ ತಪ್ಪುಗಳು ಧಾರಾಳ ಆಗಿವೆ. ಮಾತ್ರವಲ್ಲ, ಅಂಥ ತಪ್ಪುಗಳು ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಲೂ ಇವೆ. ಯಾಕೆ ಹೀಗೆ? ಶರಿಯಾ ಕೋರ್ಟುಗಳು ಮತ್ತು ಫತ್ವಗಳ ಮೇಲೆ ನಿಷೇಧ ಹೇರಲು ಕೋರ್ಟ್ ನಿರಾಕರಿಸಿರುವುದನ್ನು ಮುಖ್ಯ ಸುದ್ದಿಯಾಗಿಸದೇ ಅವುಗಳಿಗೆ ಕಾನೂನು ಮಾನ್ಯತೆಯಿಲ್ಲ ಎಂಬ ಎಲ್ಲರಿಗೂ ಗೊತ್ತಿರುವ ಮತ್ತು ಒಪ್ಪಿರುವ ಸಾಮಾನ್ಯ ಸುದ್ದಿಗೆ ಒತ್ತು ಕೊಟ್ಟುದೇಕೆ? ಅದರ ಹಿಂದಿನ ಉದ್ದೇಶವೇನು? ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ 282 ಸ್ಥಾನಗಳಿಗೆ ಒತ್ತು ಕೊಡದೇ, ‘ಬಿಜೆಪಿ ಬರೇ 31% ಓಟು ಪಡೆಯಿತು' ಎಂಬ ಮುಖ್ಯ ಶೀರ್ಷಿಕೆಯಲ್ಲಿ ಒಟ್ಟು ಚುನಾವಣಾ ಫಲಿತಾಂಶವನ್ನು ಮಾಧ್ಯಮಗಳು ಪ್ರಕಟಿಸಿರುತ್ತಿದ್ದರೆ ಏನಾಗುತ್ತಿತ್ತು? ಮೋದಿ ವಿರೋಧಿ, ಬಿಜೆಪಿ ವಿರೋಧಿಯಾಗಿ ಅವು ಗುರುತಿಸುತ್ತಿರಲಿಲ್ಲವೇ? ಮಾಧ್ಯಮಗಳ ನಕಾರಾತ್ಮಕ ನಿಲುವಿಗೆ ಸರ್ವತ್ರ ಖಂಡನೆಗಳು ವ್ಯಕ್ತವಾಗುತ್ತಿರಲಿಲ್ಲವೇ?
   ಶರೀಅತ್ ಅಥವಾ ದಾರುಲ್ ಕಝಾಗಳೆಂದರೆ ನ್ಯಾಯಾಲಯಗಳೂ ಅಲ್ಲ, ಫತ್ವಾಗಳೆಂದರೆ ಕಾನೂನುಗಳೂ ಅಲ್ಲ. ಫತ್ವಾ ಎಂಬ ಹೆಸರಲ್ಲಿ ಮಾಧ್ಯಮಗಳಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುವ ಸುದ್ದಿಗಳು ಎಷ್ಟು ಹಾಸ್ಯಾಸ್ಪದವಾಗಿರುತ್ತವೆಂದರೆ, ಅದನ್ನು ಹೊರಡಿಸಿದವರು ಆರೋಗ್ಯಪೂರ್ಣವಾಗಿರುವರೇ ಎಂದೇ ಅನುಮಾನ ಮೂಡುತ್ತದೆ. ಆದ್ದರಿಂದಲೇ ಮಾಧ್ಯಮಗಳಲ್ಲಿ ಪ್ರಕಟ ವಾಗುವ ‘ಫತ್ವಗಳು' ಸಾರ್ವಜನಿಕವಾಗಿ ಹೆಚ್ಚು ತಮಾಷೆಗೇ ಒಳಗಾಗಿವೆ. ಮುಸ್ಲಿಮರು ಅದನ್ನು ಗಂಭೀರವಾಗಿ ಪರಿಗಣಿಸುತ್ತಲೂ ಇಲ್ಲ. ಇದಕ್ಕೆ ಇಮ್ರಾನಾ ಪ್ರಕರಣವೇ ಅತ್ಯುತ್ತಮ ಉದಾಹರಣೆ. ಫತ್ವಾಗಳನ್ನು ನಿಷೇಧಿಸಬೇಕೆಂಬ ತನ್ನ ಬೇಡಿಕೆಗೆ ಪುರಾವೆಯಾಗಿ ವಿಶ್ವಲೋಚನ್ ಮದನ್ ಅವರು ಕೋರ್ಟಿನ ಮುಂದೆ ಇಮ್ರಾನಾ ಪ್ರಕರಣವನ್ನು ಉಲ್ಲೇಖಿಸಿಯೂ ಇದ್ದರು. ಉತ್ತರ ಪ್ರದೇಶದ ಮುಝಫ್ಫರ್ ನಗರ್ ಜಿಲ್ಲೆಯ ಚರ್ತವಾಲ್ ಗ್ರಾಮದ ಇಮ್ರಾನಾ ಎಂಬ 5 ಮಕ್ಕಳ ತಾಯಿಯ ಮೇಲೆ ಜೂನ್ 6, 2005ರಂದು ಮಾವ ಅಲಿ ಮಹ್ಮೂದ್ ಅತ್ಯಾಚಾರ ಮಾಡಿದ. ಸ್ಥಳೀಯ ಹಿರಿಯರು ಸಭೆ ಸೇರಿದರು. ಅತ್ಯಾಚಾರದಿಂದಾಗಿ ಇಮ್ರಾನಾ ಮತ್ತು ಪತಿ ನೂರ್ ಇಲಾಹಿಯ ವೈವಾಹಿಕ ಸಂಬಂಧ ಅನೂರ್ಜಿತಗೊಂಡಿದೆ, ಆಕೆ ಇನ್ನು ಪತಿಯನ್ನು ಮಗನಂತೆ ಕಾಣಬೇಕು ಮತ್ತು ಮಾವನನ್ನು ಗಂಡನಾಗಿ ಸ್ವೀಕರಿಸಿ ಒಟ್ಟಿಗೇ ಬಾಳಬೇಕು. ಇಲಾಹಿ ಮತ್ತು ಮಕ್ಕಳನ್ನು ದೂರ ಮಾಡಬೇಕು.. ಎಂದು ಸಭೆ ಫತ್ವ ಹೊರಡಿಸಿರುವುದಾಗಿ ಮಾಧ್ಯಮಗಳು ಬರೆದವು. ಈ ಫತ್ವನ್ನು ದಾರುಲ್ ಉಲೂಮ್ ದೇವ್‍ಬಂದ್ ಮಾನ್ಯ ಮಾಡಿರುವುದಾಗಿಯೂ ಅವು ಹೇಳಿದುವು. ಆದರೆ ಕೇವಲ ಸಾಮಾನ್ಯ ಗೃಹಿಣಿಯಷ್ಟೇ ಆಗಿದ್ದ ಮತ್ತು ಕಾಲೇಜು ಮೆಟ್ಟಿಲನ್ನೂ ಹತ್ತಿಲ್ಲದ ಆಕೆ, ಆ ಫತ್ವವನ್ನು ತಿರಸ್ಕರಿಸಿದಳು. ಮಾವನ ವಿರುದ್ಧ ಕೋರ್ಟಿನಲ್ಲಿ ಸಾಕ್ಷ್ಯ  ನುಡಿದು ಆತನಿಗೆ ಅಕ್ಟೋಬರ್ 19, 2006ರಂದು ಹತ್ತು ವರ್ಷಗಳ ಶಿಕ್ಷೆ ಆಗುವಂತೆ ನೋಡಿಕೊಂಡಳು. ಈಗಲೂ ಪತಿ ಇಲಾಹಿಯೊಂದಿಗೇ ಆಕೆ ಬಾಳುತ್ತಿದ್ದಾಳೆ. ನಿಜವಾಗಿ, ಫತ್ವಾಗಳ ಸಾಮರ್ಥ್ಯ ಇಷ್ಟೇ. ಅದನ್ನು ನೀಡುವವರ ಸ್ಥಾನ-ಮಾನ ಏನು, ಅವರಲ್ಲಿ ತಿಳುವಳಿಕೆ ಎಷ್ಟಿದೆ, ನಿರ್ದಿಷ್ಟ ವಿಷಯಗಳ ಮೇಲೆ ‘ಫತ್ವಾ' ಹೊರಡಿಸುವಷ್ಟು ಅವರು ಪ್ರಬುದ್ಧರಾಗಿರುವರೇ.. ಎಂದು ಮುಂತಾಗಿ ಮಾಧ್ಯಮಗಳು ಚರ್ಚಿಸುವುದಿಲ್ಲ. ಹೇಳಿದ್ದು ಮುಲ್ಲಾ ಎಂದಾದರೆ ಅದು ಫತ್ವಾ ಆಗುತ್ತದೆ ಮತ್ತು ಇಡೀ ಮುಸ್ಲಿಮ್ ಸಮಾಜ ಅದನ್ನು ತಲೆಬಾಗಿ ಅನುಸರಿಸಲೇ ಬೇಕಾಗುತ್ತದೆ ಎಂಬ ಹುಸಿ ಸನ್ನಿವೇಶವನ್ನಷ್ಟೇ ಅವು  ನಿರ್ಮಾಣ ಮಾಡುತ್ತಿವೆ.
   ನಿಜವಾಗಿ, ಶರೀಅತ್ ಕೋರ್ಟ್‍ಗಳೆಂಬುದು ಕುರ್‍ಆನ್ ಮತ್ತು ಪ್ರವಾದಿಯವರ ಬದುಕಿನ ಆಧಾರದಲ್ಲಿ ಹಾಗೂ ವಿವಿಧ ವಿದ್ವಾಂಸರುಗಳ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಜನರ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಕೇಂದ್ರಗಳಷ್ಟೇ ಆಗಿವೆ. ಅವೇ ಅಂತಿಮ ಎಂದಲ್ಲ. ಅಲ್ಲಿ ತಪ್ಪು-ಒಪ್ಪು ಎರಡೂ ಇರಬಹುದು. ಅವು ಪರಿಹಾರವನ್ನು ಸೂಚಿಸಲು ಅಳವಡಿಸಿಕೊಂಡ ವಿಧಾನ, ಆಧಾರ ಪ್ರಮಾಣಗಳ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಪ್ರಶ್ನಿಸಲೂ ಬಹುದು. ಆದ್ದರಿಂದಲೇ, ದಾರುಲ್ ಉಲೂಮ್ ದೇವ್‍ಬಂದ್‍ನ ಎಲ್ಲ ಫತ್ವಾಗಳ ಕೊನೆಯಲ್ಲೂ ‘ಅಲ್ಲಾಹನೇ ಚೆನ್ನಾಗಿ ಬಲ್ಲ' ಎಂಬ ವಾಕ್ಯವೊಂದು ಕಡ್ಡಾಯವಾಗಿ ಇರುತ್ತದೆ. ಅಷ್ಟಕ್ಕೂ, ಫತ್ವಾಗಳ ಹೆಸರಲ್ಲಿ ಪ್ರಕಟವಾಗುವ ಹೆಚ್ಚಿನ ಸುದ್ದಿಗಳು ಕೆಲವು ಮುಲ್ಲಾಗಳ ವೈಯಕ್ತಿಕ ಅಭಿಪ್ರಾಯವಷ್ಟೇ ಆಗಿರುತ್ತದೆ. ಅಲ್ಲದೇ ಫತ್ವಾಗಳನ್ನು ಕೊಡುವುದಕ್ಕಾಗಿ ಅವರು ವ್ಯವಸ್ಥಿತ ತರಬೇತಿಯನ್ನೂ ಪಡೆದಿರುವುದಿಲ್ಲ. ಯಾರಾದರೂ ಏನನ್ನಾದರೂ ಕೇಳಿದಾಗ ತಕ್ಷಣ ಏನು ಅನಿಸುತ್ತದೋ ಅದನ್ನೇ ಹೇಳಿ ಬಿಡುವ ಸಂದರ್ಭಗಳೂ ಧಾರಾಳ ಇವೆ. ಇಮ್ರಾನಾ ಪ್ರಕರಣಕ್ಕೆ ಸಂಬಂಧಿಸಿ ದಾರುಲ್ ಉಲೂಮ್ ದೇವ್‍ಬಂದ್‍ನ ವಿದ್ವಾಂಸರಲ್ಲಿ ಓರ್ವ ಪತ್ರಕರ್ತ ದಿಢೀರ್ ಪ್ರಶ್ನೆ ಕೇಳಿದ್ದು ಮತ್ತು ಅವರು ಅಷ್ಟೇ ದಿಢೀರ್ ಆಗಿ ಉತ್ತರಿಸಿದ್ದೇ  ಆ ಬಳಿಕ ಫತ್ವಾದ ಹೆಸರಲ್ಲಿ ದೇಶಾದ್ಯಂತ ಸುದ್ದಿಯಾಯಿತು. ಫತ್ವಾಗಳ ಸಂದರ್ಭದಲ್ಲಿ ಪಾಲಿಸಲೇ ಬೇಕಾದ ಸಂಯಮ, ನಿಯಮ, ಸಮಾಲೋಚನೆಗಳು ಹೆಚ್ಚಿನ ಬಾರಿ ನಡೆದೇ ಇರುವುದಿಲ್ಲ. ಫತ್ವಾ ನೀಡಲು ಯೋಗ್ಯರಾದ ವಿದ್ವಾಂಸರನ್ನು ಆಯ್ಕೆ ಮಾಡಿ, ಅವರಿಗೆ ವ್ಯವಸ್ಥಿತವಾಗಿ ತರಬೇತಿ ಕೊಡುವ ವ್ಯವಸ್ಥೆಗಳೂ ಜಾರಿಯಲ್ಲಿಲ್ಲ. ಬಹುಶಃ ಇಂಥ ಹಲವಾರು ಕೊರತೆಗಳು ಫತ್ವಾಗಳ ಔಚಿತ್ಯವನ್ನೇ ಕೆಲವೊಮ್ಮೆ ಪ್ರಶ್ನೆಗೀಡು ಮಾಡುತ್ತಿವೆ. ಅದನ್ನು ನೀಡುವವರ ಯೋಗ್ಯತೆಯನ್ನು ಮತ್ತು ಅವರ ಧರ್ಮವನ್ನು ತೇಜೋವಧೆಗೀಡು ಮಾಡಲು ಕಾರಣವಾಗುತ್ತಿವೆ. ಸೆನ್ಸೇಶನಲ್ ಸುದ್ದಿಗಾಗಿ ಕಾಯುತ್ತಿರುವ ಮಾಧ್ಯಮಗಳು ಇಂಥ ಕೊರತೆಗಳ ಭರಪೂರ ಲಾಭವನ್ನು ಪಡಕೊಳ್ಳುತ್ತಲೂ ಇವೆ.
   2007 ಎಪ್ರಿಲ್‍ನಲ್ಲಿ ಕೇವಲ ಫತ್ವಾಗಳಿಗಾಗಿಯೇ www.darulifta-deoband.org (ದಾರುಲ್ ಇಫ್ತಾ) ಎಂಬ ವೆಬ್‍ಸೈಟನ್ನು ದಾರುಲ್ ಉಲೂಮ್ ದೇವ್‍ಬಂದ್ ಆರಂಭಿಸಿತು. ಇದಾಗಿ ಕೇವಲ 3 ವರ್ಷಗಳಲ್ಲಿ 11,395 ಫತ್ವಾಗಳನ್ನೂ ಪ್ರಕಟಿಸಿತು. ಅಂದರೆ ತಿಂಗಳಿಗೆ 308 ಫತ್ವಾಗಳು ಅಥವಾ ದಿನಕ್ಕೆ 10 ಫತ್ವಾಗಳು. ದಾರುಲ್ ಇಫ್ತಾಗೆ ಪ್ರತಿದಿನ 30ರಿಂದ 40 ಪ್ರಶ್ನೆಗಳು ಬರುತ್ತಿದ್ದು, ಅದು ವಾರದಲ್ಲಿ ನಾಲ್ಕು ದಿನ ಕಾರ್ಯಾಚರಿಸುತ್ತದೆಯಂತೆ. ‘ಮಗ್ರಿಬ್ ನಮಾಝ್‍ನ ಬಳಿಕ ತಲೆ ಬಾಚಬಹುದೇ ಎಂಬಲ್ಲಿಂದ ಹಿಡಿದು ear bud ನಿಂದ ಕಿವಿ ಶುಚಿಗೊಳಿಸಬಹುದೇ ಎಂಬಲ್ಲಿ ವರೆಗೆ.. ವಿವಿಧ ರೀತಿಯ ಪ್ರಶ್ನೆಗಳೂ ಉತ್ತರಗಳೂ ವೆಬ್‍ಸೈಟ್‍ನಲ್ಲಿವೆ. ಹೆಚ್ಚಿನ ಉತ್ತರಗಳು ನಾಲ್ಕೈದು ವಾಕ್ಯಗಳಿಗಿಂತ ಹೆಚ್ಚಿರುವುದೂ ಇಲ್ಲ. ವಿಶೇಷ ಏನೆಂದರೆ, ಈ 11 ಸಾವಿರದಷ್ಟು ಫತ್ವಾಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿರುವ ಫತ್ವಾಗಳು 2% ಮಾತ್ರ. ಅದರಲ್ಲೂ ಕನಸಿನ ಬಗ್ಗೆ, ಹೆಸರಿನ ಬಗ್ಗೆ, ವೈಯಕ್ತಿಕ ವಿಷಯಗಳ ಕುರಿತೇ ಹೆಚ್ಚು ಪ್ರಶ್ನೆಗಳಿವೆ. ಇಷ್ಟಿದ್ದೂ, ಫತ್ವಾಗಳಿಂದ ಮಹಿಳೆಯರೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿಶ್ವಲೋಚನ್ ಮದನ್ ಅವರು ಸುಪ್ರೀಮ್ ಕೋರ್ಟಿನ ಮುಂದೆ ಹೇಳಿಕೊಂಡಿದ್ದರು. ಬಹುಶಃ ಕೋರ್ಟು ಅವರ ವಾದವನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಈ ಅಂಕಿ ಅಂಶಗಳೇ ಕಾರಣ ಆಗಿರಬಹುದು. ಒಂದು ವೇಳೆ, ಫತ್ವಾಗಳ ಕುರಿತಂತೆ ಸಕಾರಾತ್ಮಕ ಸುದ್ದಿಯನ್ನು ಪ್ರಕಟಿಸಬೇಕೆಂದು ಮಾಧ್ಯಮಗಳು ಬಯಸುತ್ತದಾದರೆ ಅದಕ್ಕೆ ಪೂರಕವಾದ ಫತ್ವಾಗಳೂ ದಾರುಲ್ ಇಫ್ತಾದಲ್ಲಿ ಧಾರಾಳ ಇವೆ. ‘ಶಿಕ್ಷಣಕ್ಕಾಗಿ ಬಡ್ಡಿಯಾಧಾರಿತ ಸಾಲ ಪಡಕೊಳ್ಳಬಹುದು’, ‘ಪತ್ನಿಯನ್ನು ದೈಹಿಕವಾಗಿ ದಂಡಿಸುವುದು ತಪ್ಪು’, ‘ಸಹ ಶಿಕ್ಷಣವಾದರೂ ಸರಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇಬೇಕು’, ‘ಬ್ಯಾಂಕಿನ ಬಡ್ಡಿಯ ಬಗ್ಗೆ ಮೃದು ನಿಲುವು’, ‘ತಾಯಿಯ ಜೀವ ಉಳಿಸುವುದಕ್ಕಾಗಿ ಗರ್ಭಪಾತಕ್ಕೆ ಅನುಮತಿ..’ ಸಹಿತ ಅನೇಕ ಫತ್ವಾಗಳು ದಾರುಲ್ ಇಫ್ತಾನಲ್ಲಿ ಇವೆ. ಆದರೆ ಇವಾವುವೂ ಮಾಧ್ಯಮಗಳಲ್ಲಿ ಸುದ್ದಿ ಯಾಗುತ್ತಿಲ್ಲ. ‘ಪ್ರಗತಿಪರ ಫತ್ವಾಗಳು’ ಎಂಬ ಹೆಸರಲ್ಲಿ ಇವು ಶೀರ್ಷಿಕೆಗಳನ್ನೂ ಪಡಕೊಳ್ಳುತ್ತಿಲ್ಲ. ಮಾಧ್ಯಮಗಳು ರೋಚಕತೆಯನ್ನಷ್ಟೇ ಬಯಸುತ್ತವೆ. ಸುದ್ದಿ ಸಕಾರಾತ್ಮಕವಾಗಿದ್ದರೂ ನಕಾರಾತ್ಮಕ ಶೀರ್ಷಿಕೆ ಕೊಟ್ಟು ಆಟ ಆಡುತ್ತವೆ. ಅದರಿಂದಾಗಿ ರವಾನೆಯಾಗಬಹುದಾದ ಸಂದೇಶಗಳ ಬಗ್ಗೆ ಅವು ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೆಳಗ್ಗಿನ ಸುದ್ದಿ ಸಂಜೆಯಾಗುವಾಗ ರದ್ದಿಯಾಗುತ್ತದೆ ಎಂದೇ ಅವು ಬಲವಾಗಿ ನಂಬಿವೆ. ಆದರೆ ಕೆಲವೊಮ್ಮೆ ಸುದ್ದಿಗಳಲ್ಲ ಮಾಧ್ಯಮಗಳು ಮತ್ತು ಅವುಗಳ ವಿಶ್ವಾಸಾರ್ಹತೆಗಳೇ ರದ್ದಿಯಾಗಬಲ್ಲವು ಎಂಬುದಕ್ಕೆ ಕಳೆದ ವಾರದ ತೀರ್ಪೇ ಅತ್ಯುತ್ತಮ ಪುರಾವೆಯಾಗಿದೆ. ಇಷ್ಟಿದ್ದೂ,
      ''ಇಸ್ಲಾಮೀ ಕೋರ್ಟುಗಳ ಮೇಲಿನ ನಿಷೇಧದ ಬೇಡಿಕೆಯನ್ನು ತಳ್ಳಿಹಾಕಿದ ಭಾರತ (India rejects ban on Islamic courts)'' ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿ ನ್ಯಾಯ ನಿಷ್ಠೆಗೆ ಬಲವಾಗಿ ಅಂಟಿಕೊಂಡ ಆಲ್ ಜಸೀರ (Al Jazeera)   ಚಾನೆಲ್ ಅನ್ನು  ಮೆಚ್ಚಿಕೊಳ್ಳುತ್ತಲೇ, ಮಾಧ್ಯಮಗಳ ನಕಾರಾತ್ಮಕ ಮುಖವನ್ನು ವಿಶ್ಲೇಷಣೆಗೆ ಒಡ್ಡಲು ಅವಕಾಶವನ್ನು ಒದಗಿಸಿಕೊಟ್ಟ ವಿಶ್ವಲೋಚನ್ ಮದನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ.




Tuesday, July 8, 2014

ಅವರು ಬಿಡಿಸುವ ಚಿತ್ರದಲ್ಲಿ ‘ನಾವು’ ಹೇಗಿರಬಹುದು?

    ತನಿಖಾ ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿರುವ ಬುಕಾರೆಸ್ಟ್ ನ ಪೌಲ್ ರಾಡೊ, ಕ್ಯಾಥರಿನ್ ಜೋನ್, ಈಜಿಪ್ಟ್ ನ ಮಾಜಿ ಅಧ್ಯಕ್ಷ ಮುಬಾರಕ್‍ರ ಪತ್ನಿ ಸುಝಾನ್ನೆ, ರುಮೇನಿಯಾದ ಇಮಾನ, ಯೂನಿಸೆಫ್‍ನ ನಿಕೊಲಸ್ ಅಲಿಪುಯಿ... ಮುಂತಾದ 50 ಪ್ರಸಿದ್ಧ ವ್ಯಕ್ತಿಗಳ ಸಂದರ್ಶನವನ್ನು ಒಳಗೊಂಡ ‘Not My Life' ಎಂಬ ಡಾಕ್ಯುಮೆಂಟರಿಯೊಂದು ಕಳೆದವಾರ ದೂರದರ್ಶನದಲ್ಲಿ ಪ್ರಸಾರವಾಯಿತು. ಅದರಲ್ಲಿ ಶೈಲಾ ವೈಟ್ ಅನ್ನುವ ಅಮೇರಿಕದ ಕಪ್ಪು ಮಹಿಳೆ ಮಾತಾಡಿದಳು. ಮಾತಾಡುತ್ತಾ ಕಣ್ಣೀರಿಳಿಸಿದಳು. ಆಂಜಿ ಅನ್ನುವ ಬಿಳಿ ಯುವತಿ ತನ್ನ ಬದುಕನ್ನು ತೆರೆದಿಟ್ಟಳು. ಇನ್ನೂ ನಾಪತ್ತೆ ಆಗಿರುವ ತನ್ನ ಗೆಳತಿಯನ್ನು ಸ್ಮರಿಸಿ ಕಣ್ಣೀರಾದಳು. ಉಗಾಂಡದ ಗ್ರೇಸ್‍ಳದ್ದು ಇನ್ನೊಂದು ಕತೆ. ಉಗಾಂಡ ದೇಶದ ‘ಲಾರ್ಡ್ಸ್  ರೆಸಿಸ್ಟೆನ್ಸ್ ಆರ್ಮಿ'ಯು ಸೈಂಟ್ ಮೇರೀಸ್ ಶಾಲೆಯಿಂದ ಈಕೆಯನ್ನು ಮತ್ತು ಗೆಳತಿ ಮರಿಯಂಳನ್ನು ಅಪಹರಿಸಿತ್ತಲ್ಲದೇ ಬಾಲ ಯೋಧೆಯನ್ನಾಗಿ ನಿಯುಕ್ತಗೊಳಿಸಿತ್ತು. 7 ತಿಂಗಳ ಬಳಿಕ ಈಕೆ ತಪ್ಪಿಸಿಕೊಂಡರೂ ಮರಿಯಂಳಿಗೆ ಈವರೆಗೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಗ್ರೇಸ್‍ಗೆ ಮದುವೆಯಾಗಿ ಈಗ ಮಕ್ಕಳಾಗಿವೆ. ಮಕ್ಕಳ ಶಿಕ್ಷಣ, ಅವರ ಸಂರಕ್ಷಣೆಗಾಗಿ ಆಕೆ ಕೆಲಸ ಮಾಡುತ್ತಿದ್ದಾರೆ. ‘ಗರ್ಲ್ ಸೋಲ್ಜರ್ಸ್: ಎ ಸ್ಟೋರಿ ಆಫ್ ಹೋಪ್ ಫಾರ್ ನಾರ್ದರ್ನ್ ಉಗಾಂಡಾಸ್ ಚಿಲ್ಡ್ರನ್’ ಎಂಬ ಕೃತಿಯನ್ನು ಆಕೆ ಬರೆದಿದ್ದಾರೆ. ಆಕೆ ತನ್ನ ಬದುಕನ್ನು ಬಿಚ್ಚಿಡುತ್ತಾ ಹೋದಂತೆ ವೀಕ್ಷಕರ ಹೃದಯ ಚಡಪಡಿಸುತ್ತಾ ಹೋಗುತ್ತದೆ. ಮಕ್ಕಳ ಜಗತ್ತಿನ ಯಾತನೆಗಳು ಮತ್ತು ಬರ್ಬರತೆಗಳು ಎಷ್ಟು ನಿಶ್ಶಬ್ದವಾಗಿವೆ ಎಂಬ ಅಚ್ಚರಿಯ ಜೊತೆಗೇ ನಮ್ಮ ಬಗ್ಗೆ ಅಸಹ್ಯವೂ ಆಗುತ್ತದೆ. ಮಕ್ಕಳ ಜಗತ್ತನ್ನು ನಾವೆಷ್ಟು ಅರ್ಥ ಮಾಡಿಕೊಂಡಿದ್ದೇವೆ, ಅವರ ಮೇಲಿನ ದೌರ್ಜನ್ಯಗಳಿಗೆ ನಮ್ಮ ಪೆನ್ನು, ಕ್ಯಾಮರಾ, ಮೈಕು, ವಿಧಾನಸಭೆ, ಲೋಕಸಭೆ, ನ್ಯಾಯಾಲಯಗಳು.. ಎಷ್ಟು ಸ್ಪಂದಿಸಿವೆ, ವಿಜಯಾನಂದ ಕಾಶಪ್ಪನವರ್ ಅವರಿಗೆ, ಶಿರ್ಡಿ ಬಾಬಾರನ್ನು ಎತ್ತಿಕೊಂಡು ವಿವಾದ ಹುಟ್ಟುಹಾಕಿದ ಸ್ವಾವಿೂಜಿಯವರಿಗೆ, ಬ್ರೆಜಿಲ್‍ನ ನೈಮಾರ್, ಅರ್ಜೆಂಟೀನಾದ ಮೆಸ್ಸಿ, ಕೊಲಂಬಿಯಾದ ರಾಡ್ರಿಗಸ್‍ಗೆ ಸಿಕ್ಕ ಮತ್ತು ಸಿಗುತ್ತಿರುವ ಪ್ರಚಾರದ ಎಷ್ಟಂಶ ಮಕ್ಕಳಿಗೆ ಸಿಗುತ್ತಿವೆ? ವರ್ಷದ 365 ದಿನಗಳಲ್ಲಿ ನಾವು ಮಕ್ಕಳ ಮೇಲಿನ ಗಂಭೀರ ಚರ್ಚೆಗೆ ಎಷ್ಟು ದಿನಗಳನ್ನು ವಿೂಸಲಿಡುತ್ತೇವೆ? ಹಿರಿಯರ ಕಡೆಗೆ ತಿರುಗಿಸಿಟ್ಟಿರುವ ಕ್ಯಾಮರಾ ಮತ್ತು ಮೈಕ್‍ಗಳನ್ನು ಮಾಧ್ಯಮ ಮಿತ್ರರು ಮಕ್ಕಳ ಕಡೆಗೆ ತಿರುಗಿಸಬೇಕಾದರೆ ಒಂದೋ ಅವರು ಕೊಳವೆ ಬಾವಿಗೆ ಬೀಳಬೇಕು ಅಥವಾ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆಯಬೇಕು ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆಯಲ್ಲ, ಯಾಕೆ? ಹಾಗಂತ, ಸಮಸ್ಯೆ ಕೊಳವೆ ಬಾವಿಯೊಂದರದ್ದೇ ಅಲ್ಲವಲ್ಲ. ಅದರಾಚೆಗೆ ಮಕ್ಕಳ ಜಗತ್ತಿನಲ್ಲಿ ನೂರಾರು ಸಮಸ್ಯೆಗಳಿವೆ. ಕಾಶಪ್ಪರನ್ನೋ ಸ್ವಾವಿೂಜಿಯನ್ನೋ ಒಳಪುಟಕ್ಕೆ ತಳ್ಳಿಬಿಡಬೇಕಾದಷ್ಟು ಭೀಕರ ಕ್ರೌರ್ಯಗಳ ಕತೆ ಮಕ್ಕಳ ಜಗತ್ತಿನಲ್ಲಿ ಇವೆ ಎಂಬುದೂ ನಿಜವಲ್ಲವೇ? ಪಟ್ಟಣಗಳಲ್ಲಿ ಭಿಕ್ಷೆ ಬೇಡುವ ಒಂದೊಂದು ಮಗುವೂ ಒಂದೊಂದು ಧಾರಾವಾಹಿಯಂತೆ. ಚಿಂದಿ ಆಯಲು ಪ್ಲಾಸ್ಟಿಕ್ ಚೀಲಗಳನ್ನು ಹಿಡಿದು ಓಡುವ ಪ್ರತಿ ಮಕ್ಕಳಲ್ಲಿ ಹತ್ತಾರು ಎಪಿಸೋಡ್‍ಗಳಿಗೆ ಸಾಕಾಗುವಷ್ಟು ಕತೆಗಳಿವೆ. ಓದಿನಲ್ಲಿ ನಿರಾಸಕ್ತಿ ತೋರುವ ಹೆಣ್ಣು ಮಗುವಿನಲ್ಲಿ ಪುರುಷ ಜಗತ್ತಿನ ಅಸಹ್ಯಕರ ಅನುಭವಗಳಿರಬಹುದು. ಭಯ್ಯಾ ಮತ್ತು ಅಂಕಲ್‍ಗಳನ್ನು ಭೀತಿಯಿಂದಲೇ ಮಾತಾಡಿಸುವ ಮಕ್ಕಳು ಅಸಂಖ್ಯ ಇದ್ದಾರೆ. ಹೊಟೇಲು, ಕಲ್ಲಿನ ಕೋರೆ, ಇಟ್ಟಿಗೆ ಕಾರ್ಖಾನೆ, ವಿೂನುಗಾರಿಕೆ, ವೇಶ್ಯಾವಾಟಿಕೆಗಳಲ್ಲಿ ಕಂಡುಬರುವ ಬಾಲ/ಲೆಯರ ಎದೆಗೂಡಿನಲ್ಲಿ ಮನ ಮಿಡಿಯುವ ಕತೆಗಳಿವೆ. ಆದರೂ ಇವುಗಳನ್ನೆಲ್ಲಾ ಹುಡುಕಿ ಸಮಾಜದ ಮುಂದಿಡುವ ಪ್ರಯತ್ನಗಳು ಗಂಭೀರವಾಗಿ ನಡೆದಿರುವುದು ತೀರಾ ಕಡಿಮೆ. ಬಾಲ ಕಾರ್ಮಿಕರ ದಿನದಂದು ಇಟ್ಟಿಗೆ ಹೊರುವ ಮಗುವಿನ ಪೋಟೋವನ್ನು ಫೇಸ್‍ಬುಕ್‍ನಲ್ಲಿ ತುಂಬಿದರೆ ಇಪ್ಪತ್ತು ಲೈಕ್‍ಗಳು ಮತ್ತು ಹತ್ತಾರು ಕಮೆಂಟ್‍ಗಳು ಬರುತ್ತವೆ. ಅದರಾಚೆಗೆ ಮಗು ಮುಖ್ಯವಾಗುವುದೇ ಇಲ್ಲ. ಆದ್ದರಿಂದಲೇ, Human traffickers are earning billions of Dollars on the backs and in the beds of our children (ನಮ್ಮ ಮಕ್ಕಳ ‘ಬೆನ್ನು’ ಮತ್ತು ‘ಹಾಸಿಗೆ’ಯಿಂದ ಮಾನವ ಕಳ್ಳಸಾಗಾಣಿಕೆದಾರರು ಬಿಲಿಯಾಂತರ ಡಾಲರ್ ಸಂಪಾದಿಸುತ್ತಿದ್ದಾರೆ) ಅನ್ನುವ Not My Life ನ ನಿರ್ದೇಶಕ ರಾಬರ್ಟ್ ಬೆಲ್‍ಹೇಮರ್ರ  ಮಾತು ಮುಖ್ಯವಾಗುತ್ತದೆ. ಆದ್ದರಿಂದಲೇ, ಬಲವಂತದಿಂದ ವೇಶ್ಯಾಗೃಹಕ್ಕೆ ತಳ್ಳಲ್ಪಟ್ಟ ಆಂಜಿ, ಮೆಲಿಸಾ, ಶೈಲಾರೆಲ್ಲ ಮತ್ತೆ ಮತ್ತೆ ಕಾಡುತ್ತಾರೆ. 83 ನಿಮಿಷಗಳ ಈ ಡಾಕ್ಯುಮೆಂಟರಿಯ ಉದ್ದಕ್ಕೂ ಹೃದಯವನ್ನು ಆರ್ದ್ರಗೊಳಿಸುವ ಸನ್ನಿವೇಶಗಳಿವೆ. ಆಂಜಿ ಹೇಳುತ್ತಾಳೆ, ಆಕೆ ಪ್ರತಿದಿನ 40 ವಿಟಪುರುಷರನ್ನು ತೃಪ್ತಿಪಡಿಸಬೇಕಿತ್ತಂತೆ. ಸೆಕ್ಸ್ ನ ವಿವಿಧ ಪ್ರಕಾರಗಳಿಗೆ ತಕ್ಕಂತೆ 50, 60, 70 ಡಾಲರ್‍ಗಳನ್ನು ಆಕೆಗೆ ನಿಗದಿ ಮಾಡಲಾಗುತ್ತಿತ್ತಂತೆ. ತಗಾದೆ ತೆಗೆದರೆ ಥಳಿತ, ಹಿಂಸೆ. ಒಮ್ಮೆ ಓರ್ವ ಡ್ರೈವರ್‍ನಿಂದ ಆಕೆ ದುಡ್ಡು ಕದ್ದಳು. ಕದಿಯುವ ಭರದಲ್ಲಿ ಆತನ ಜೇಬಿನಿಂದ ಒಂದೆರಡು ಪೋಟೋ ಗಳೂ ಸಿಕ್ಕವು. ಅದು ಆತನ ಮೊಮ್ಮಕ್ಕಳದು. ಆ ಬಳಿಕ ಆಕೆ ಈ ವಿಷಯವನ್ನು ಮೆಲಿಸಾಳೊಂದಿಗೆ ಹಂಚಿಕೊಂಡಾಗ ಆಕೆ ಹೇಳಿದಳಂತೆ, ಆತ ನಮಗೆ ಅಜ್ಜ ಆಗಬಹುದಲ್ವೇ.
   ಆಫ್ರಿಕಾದ ವರ್ಣಭೇದ ನೀತಿಯ ಸುತ್ತ ಬ್ಯಾರಿ ನ್ಯೂಡ್ ಬರೆದಿರುವ ಕತೆಯನ್ನಾಧರಿಸಿ ಕ್ರೈ ಆಫ್  ರೀಸನ್; ಏಡ್ಸ್ ಪೀಡಿತ ರನ್ನು ಎದುರಿಟ್ಟುಕೊಂಡು ‘ಎ ಕ್ಲೋಸರ್ ವಾಕ್' ಹಾಗೂ ಇರಾಕ್ , ಅಫಘಾನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಮೇರಿಕನ್ ಯೋಧರ ಮಾನಸಿಕ ಸ್ಥಿತಿಯನ್ನಾಧರಿಸಿ ಚಿತ್ರ ತೆಗೆಯಲು ಮುಂದಾಗಿರುವ ರಾಬರ್ಟ್ ಬೆಲ್‍ಹೇಮರ್‍ರು; Not My Life ಅನ್ನು 13 ದೇಶಗಳಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಬೇನಿಯಾ, ಬ್ರೆಝಿಲ್, ಕಾಂಬೋಡಿಯಾ, ಭಾರತ, ಘಾನಾ, ಗ್ವಾಟಮಾಲ, ಇಟಲಿ, ಅಮೇರಿಕ, ನೇಪಾಲ, ರುಮಾನಿಯಾ ಮುಂತಾದ ದೇಶಗಳ ಮಕ್ಕಳು ಡಾಕ್ಯುಮೆಂಟರಿಯ ಉದ್ದಕ್ಕೂ ಮನಸ್ಸಿಗೆ ಚುಚ್ಚುತ್ತಾರೆ. ಅಮೇರಿಕದ ಶೈಲಾವೈಟ್  ಶ್ರೀಮಂತ ಮನೆತನದ ಹುಡುಗಿ. ಮನೆಯಿಂದ ತಪ್ಪಿಸಿಕೊಂಡ ಆಕೆ ತಲುಪಿದ್ದು ವೇಶ್ಯಾಗೃಹಕ್ಕೆ. ಆಕೆಯ ಕತೆಯನ್ನು ಕೇಳಿ ಪ್ರಭಾವಿತಗೊಂಡು ‘ಕ್ಲಿಂಟನ್ ಗ್ಲೋಬಲ್ ಇನಿಶಿಯೇಟಿವ್’ ಕಾರ್ಯಕ್ರಮದಲ್ಲಿ ಅಮೇರಿಕದ ಅಧ್ಯಕ್ಷ  ಬರಾಕ್ ಒಬಾಮ ಆಕೆಯನ್ನು ಪ್ರಸ್ತಾಪಿಸಿದ್ದರು. ಘಾನಾದಲ್ಲಿ ಸುಮಾರು 10 ಸಾವಿರದಷ್ಟು ಮಕ್ಕಳು ವಿೂನುಗಾರಿಕೆಯಲ್ಲಿ ತೊಡಗಿದ್ದಾರೆ. ಪ್ರತಿದಿನ 14 ಗಂಟೆಗಳಷ್ಟು ಕಾಲ ದುಡಿತ. ತೀರಾ ಬಡತನದಿಂದಾಗಿ ಹೆತ್ತವರು ಮಕ್ಕಳನ್ನು ಮಧ್ಯವರ್ತಿಗಳ ಕೈಗೊಪ್ಪಿಸುತ್ತಾರೆ. ತಮ್ಮ ಮಕ್ಕಳು ಇತರ ಕಡೆ ಸುಖವಾಗಿರಲೆಂದು ಆಸೆ ಪಡುವ ಅವರಿಗೆ ನವಿರಾದ ಸುಳ್ಳುಗಳ ಮೂಲಕ ಭರವಸೆ ತುಂಬಲಾಗುತ್ತದೆ. ಒಮ್ಮೆ ಮಕ್ಕಳು ತಮ್ಮ ಮನೆಯವರಿಂದ ಪ್ರತ್ಯೇಕಗೊಂಡರೆಂದರೆ ಆ ಬಳಿಕ ಅವರ ಬದುಕು ನರಕಸದೃಶವಾಗುತ್ತದೆ. ತಪ್ಪಿಸಿಕೊಳ್ಳುವಂತಿಲ್ಲ. ತಮ್ಮ ನೋವುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶಗಳೂ ಕಡಿಮೆ. ಮಾಧ್ಯಮಗಳ ಕೃಪೆಯೂ ಇರುವುದಿಲ್ಲ. ಯಾವುದಾದರೂ ಎನ್‍ಜಿಓ, ಸಂಘ-ಸಂಸ್ಥೆಗಳು ಈ ಮಕ್ಕಳ ಕೂಗಿಗೆ ಕಿವಿಯಾಗುವವರೆಗೆ ತಮ್ಮದಲ್ಲದ ಬದುಕನ್ನು (Not My Life) ಅವರು ಬದುಕುತ್ತಿರುತ್ತಾರೆ.
   ಬಚ್‍ಪನ್ ಬಚಾವೋ ಆಂದೋಲನದ ಮುಖ್ಯಸ್ಥ ಕೈಲಾಶ್ ಸನ್ಯಾರ್ಥಿ ಹೇಳುತ್ತಾರೆ;
  ‘ಒಂದು ದಿನ ಓರ್ವ ಹೆಣ್ಣು ಮಗಳು ನನ್ನಲ್ಲಿ ಪ್ರಶ್ನಿಸಿದಳು,
ಹಾಲು ಕೊಡುವ ಹಸುವಿಗೆ ಎಷ್ಟು ಬೆಲೆಯಿದೆ ಅಂಕಲ್!
ಸುಮಾರು 50ರಿಂದ ಒಂದು ಲಕ್ಷದ ವರೆಗೆ ಇರಬಹುದು ಎಂದೆ. ಅವಳಂದಳು,
ನಾನು 5 ಸಾವಿರ ರೂಪಾಯಿಗೆ ಮಾರಾಟವಾದವಳು ಅಂಕಲ್.
   ಭಾರತದಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ಮಗುವೊಂದು ಕಾಣೆಯಾಗುತ್ತದೆ. ಅಂಥ ಮಕ್ಕಳನ್ನು ಕಾರ್ಖಾನೆ, ವೇಶ್ಯಾಗೃಹಗಳಲ್ಲಿ ಗುಲಾಮಗಿರಿಗೆ ದೂಡಲಾಗುತ್ತದೆ. ಭಿಕ್ಷಾಟನೆಯಲ್ಲೂ ತೊಡಗಿಸಲಾಗುತ್ತದೆ. ಜಾಗತಿಕವಾಗಿ ಇದೊಂದು ದೊಡ್ಡ ಉದ್ಯಮ. ಮಿಲಿಯಾಂತರ ಮಕ್ಕಳನ್ನು ಹೀಗೆ ಪ್ರತಿದಿನ ಅಪಹರಿಸಿಯೋ, ಖರೀದಿಸಿಯೋ ತಂದು ಕೆಲಸಕ್ಕೆ, ಸೆಕ್ಸ್ ಟೂರಿಸಂಗೆ ಬಳಸಲಾಗುತ್ತದೆ. ದೆಹಲಿಯಲ್ಲಿ ಗಾಝಿಪುರ ಎಂಬ ವಿಷಕಾರಿ ಪ್ರದೇಶವಿದೆ. ಮಕ್ಕಳು ಆ ಪ್ರದೇಶಕ್ಕೆ ಕಾಲಿಡಬಾರದೆಂದು ನಿಯಮವೂ ಇದೆ. ಆದರೆ ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಮಕ್ಕಳೇ. ಪ್ರತಿದಿನ ನಾಲ್ಕೂವರೆ ಟನ್‍ಗಳಷ್ಟು ಕಸವನ್ನು ಈ ಪ್ರದೇಶ ಉತ್ಪಾದಿಸುತ್ತದೆ. ಮಕ್ಕಳು ಬೆಳಗ್ಗಿನಿಂದ ರಾತ್ರಿಯ ವರೆಗೆ ಜುಜುಬಿ ಮೊತ್ತಕ್ಕಾಗಿ ದುಡಿಯುತ್ತಾರೆ. ರಕ್ತಹೀನತೆ, ಅಂಗ ಊನತೆ, ಚರ್ಮದ ಕಾಯಿಲೆಗಳಿಂದ ಮಕ್ಕಳು ಬಳಲಿ, ಬೆಂಡಾಗಿ ಕೊನೆಗೊಮ್ಮೆ ಕಾಣೆಯಾಗುತ್ತಾರೆ. ಈ ದೇಶದಲ್ಲಿ ಸುಮಾರು ಹತ್ತು ಲಕ್ಷ  ಮಕ್ಕಳು ವೇಶ್ಯಾ ಗೃಹದಲ್ಲಿದ್ದಾರೆ ಎಂಬ ಅಂದಾಜಿದೆ. ಹಾಗಂತ, ಇವರೆಲ್ಲ ಸ್ವಯಂ ಆಸಕ್ತಿಯಿಂದ ಇಲ್ಲಿಗೆ ಬಂದವರಲ್ಲ. ಅವರನ್ನು ಅಪಹರಿಸಿಯೋ ಖರೀದಿಸಿಯೋ ಅಲ್ಲಿಗೆ ಕರೆತರಲಾಗಿದೆ. ಜೊತೆಗೇ ಭೂತಾನ್, ನೇಪಾಲ್, ಬಂಗ್ಲಾದೇಶಗಳಿಂದ ಇಂಥ ವೇಶ್ಯಾಗೃಹಗಳಿಗೆ ಮಕ್ಕಳನ್ನು ಸರಬರಾಜು ಮಾಡಲಾಗುತ್ತಿದೆ. ಕೆಲವು ಕ್ಷಣಗಳ ಸುಖಕ್ಕಾಗಿ ಕೆಲವು ನಿಮಿಷಗಳನ್ನು ಕಳೆಯುವ ಪುರುಷರು ದುಡ್ಡು ಕೊಟ್ಟು ಹೊರಟು ಹೋಗುತ್ತಾರೆ. ಆದರೆ ಆ ಕ್ಷಣ ಮತ್ತು ನಿಮಿಷಗಳನ್ನು ಜೀರ್ಣಿಸಿಕೊಳ್ಳುವ ವಯಸ್ಸು ಮಕ್ಕಳದ್ದಲ್ಲವಲ್ಲ. ಮಕ್ಕಳಿಗೂ ದೊಡ್ಡವರಿಗೂ ನಡುವೆ ಪ್ರಾಯದಲ್ಲಿ ವ್ಯತ್ಯಾಸ ಇರುವ ಹಾಗೆಯೇ ಮಾನಸಿಕ ಸ್ಥಿತಿಯಲ್ಲೂ ವ್ಯತ್ಯಾಸವಿರುತ್ತದೆ. ಆ ಕೆಲವು ಕ್ಷಣಗಳು ಮಕ್ಕಳ ಮೇಲೆ ಆಘಾತಕಾರಿ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ತಮ್ಮದಲ್ಲದ ಇಂಥ ಅಸಂಖ್ಯ ‘ಕ್ಷಣ'ಗಳನ್ನು ಕಳೆಯಬೇಕಾದ ಮಕ್ಕಳ ಸ್ಥಿತಿ ಹೇಗಿರಬಹುದು? ಅವರೊಳಗಿನ ತಳಮಳ, ಸಂಕಟಗಳಿಗೆ ಯಾರು ಮಾಧ್ಯಮವಾಗಬೇಕು? ತಮ್ಮದಲ್ಲದ ಬದುಕನ್ನು (Not My Life) ಬದುಕುವುದೆಂದರೆ ಅದು ಪ್ರತಿಕ್ಷಣವೂ ಹಿಂಸೆ. ಅದು ಅವರು ಇಚ್ಛಿಸಿದ ಬದುಕಲ್ಲ. ಹೊರ ಪ್ರಪಂಚಕ್ಕೆ ವೇಶ್ಯಾಗೃಹದಲ್ಲಿರುವ ಬಾಲಕಿ, ಇಟ್ಟಿಗೆ ಹೊರುವ ಬಾಲಕ, ಚಿಂದಿ ಆಯುವ ಹುಡುಗ, ಭಿಕ್ಷೆ ಬೇಡುವ ಮಗು, ಗ್ಲಾಸು ತೊಳೆಯುವ ಹುಡುಗ... ಎಲ್ಲರೂ ಮನುಷ್ಯರೇ. ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಾರೆ ಎಂಬ ಉಡಾಫೆಯ ಮಾತುಗಳೂ ನಮ್ಮಿಂದ ಹೊರಡುವುದಿದೆ. ಆದರೆ ಆ ಮಕ್ಕಳು ಹಿರಿಯರಾದ ನಮ್ಮನ್ನು ಏನೆಂದು ಪರಿಗಣಿಸಿಯಾರು? ಮನುಷ್ಯರೆಂದೇ? ಮನುಷ್ಯರೆಂದಾದರೆ ಯಾವ ಪ್ರಕಾರದ ಮನುಷ್ಯರು? ಈ ಮನುಷ್ಯರ ಚಿತ್ರವನ್ನು ಅವರು ಹೇಗೆ ಬಿಡಿಸಬಹುದು? ಆ ಚಿತ್ರದಲ್ಲಿ ಹೃದಯವಿದ್ದೀತೇ? ಇದ್ದರೂ ಅದರ ಹೆಸರು ಏನಿದ್ದೀತು? ಹಲ್ಲುಗಳು ಈಗಿನಂತೆ ಬಿಳಿ-ಸುಂದರವಾಗಿ ಇದ್ದೀತೆ ಅಥವಾ ಕೋರೆ ಹಲ್ಲುಗಳಾಗಿರಬಹುದೇ? ಎಷ್ಟು ಕೈಗಳಿರಬಹುದು? ಎರಡೇ, ನಾಲ್ಕೇ ಅಥವಾ? ಉಗುರುಗಳು ಹೇಗಿರಬಹುದು? ಉದ್ದಕ್ಕೆ ಬಾಗಿಕೊಂಡು ರಕ್ತ ಹೀರುವ ರೂಪದಲ್ಲಿ ಇರಬಹುದೇ? ಕಣ್ಣು? ಅದರಲ್ಲಿ ಕಣ್ಣೀರು ಉಕ್ಕುತ್ತಿರಬಹುದೇ ಅಥವಾ ಕ್ರೌರ್ಯವೇ? ಬಾಯಿಯನ್ನು ಹೇಗೆ ಬಿಡಿಸಬಹುದು? ಪ್ಲಾಸ್ಟರು ಸುತ್ತಬಹುದೇ? ಮೆದುಳು? ವೇಶ್ಯಾ ಗೃಹ, ಇಟ್ಟಿಗೆ ಕಾರ್ಖಾನೆ, ವಿೂನುಗಾರಿಕೆಗಳನ್ನೆಲ್ಲಾ ಸಂಶೋಧಿಸಿದ ದಡ್ಡ ವಸ್ತು ಎಂದಾಗಿರಬಹುದೇ? ಸಣ್ಣವರ ಸಂಕಟಗಳನ್ನು ಗ್ರಹಿಸುವ ಸಾಮರ್ಥ್ಯ  ಇಲ್ಲದ ಮತ್ತು ದೊಡ್ಡವರ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಕ್ಷೇಮಕ್ಕಾಗಿ ಮಾತ್ರ ಕೆಲಸ ಮಾಡುವ ಕ್ರೂರಿ ಅಂಗ ಎಂದೇ?
   ‘ನಮ್ಮ ಮಕ್ಕಳನ್ನು ನಾವಲ್ಲದೇ ಇನ್ನಾರು ರಕ್ಷಿಸಬೇಕು -If we dont protect our children, who will?’- ಎಂಬ ಪ್ರಶ್ನೆಯೊಂದಿಗೆ ಕೊನೆಗೊಳ್ಳುವ Not My Life ಡಾಕ್ಯುಮೆಂಟರಿ ನಮ್ಮನ್ನೇ ಚುಚ್ಚುತ್ತದೆ, ಕಣ್ಣನ್ನು ಆರ್ದ್ರಗೊಳಿಸುತ್ತದೆ.

Monday, June 16, 2014

ಗಾಝಿ ಪಾರ್ಕ್, ವಿಶ್ವಕಪ್ ಫುಟ್ಬಾಲ್ ಮತ್ತು ಪೌಲೋ ಇಟೋರ ಆ ಮಗು..

   2013 ಮೇ 28ರಂದು ಬೆಳಿಗ್ಗೆ ಟರ್ಕಿಯ ತಕ್ಸಿಮ್ ಗಾಝಿ ಪಾರ್ಕ್‍ನಲ್ಲಿ 50 ಮಂದಿ ಪರಿಸರಪ್ರಿಯರು ಪ್ರತಿಭಟನೆಗೆ ಕುಳಿತಾಗ ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮುಂದೆ ಈ ಪ್ರತಿಭಟನೆಯು ಇಡೀ ಟರ್ಕಿಯಾದ್ಯಂತ ಚರ್ಚೆಗೊಳಗಾಗುತ್ತದೆ ಮತ್ತು ಅಮೇರಿಕದ ನ್ಯೂಯಾರ್ಕ್ ಟೈಮ್ಸ್, ದಿ ಟೈಮ್ಸ್ ನಂಥ ಪ್ರಮುಖ ಪತ್ರಿಕೆಗಳು ಈ ಪ್ರತಿಭಟನೆಗಾಗಿ ಪುಟಗಟ್ಟಲೆ ಜಾಗ ವಿೂಸಲಿಡುತ್ತವೆ ಎಂದು ನಿರೀಕ್ಷಿಸುವುದಕ್ಕೆ ಏನೂ ಅಲ್ಲಿರಲಿಲ್ಲ. ಆದರೆ, ಪ್ರತಿಭಟನೆ ಮೇ 29ರಂದೂ ಮುಂದುವರಿಯಿತು. 50 ಮಂದಿಯ ಗುಂಪು ಐನೂರು, ಸಾವಿರವಾಗಿ ಬೆಳೆಯತೊಡಗಿತು. ಪುರಾತನ ಗಾಝಿ ಪಾರ್ಕನ್ನು ಕೆಡವಿ ಶಾಪಿಂಗ್ ಮಾಲ್ ಮತ್ತು ವಸತಿ ನಿರ್ಮಾಣಕ್ಕೆ ಮುಂದಾಗಿದ್ದ ಟರ್ಕಿ ಸರಕಾರದ ನಿಲುವನ್ನು ಖಂಡಿಸುವುದಕ್ಕಾಗಿ ಆರಂಭದಲ್ಲಿ ಒಟ್ಟು ಸೇರಿದ್ದ ಪ್ರತಿಭಟನಾಕಾರರು ದಿನ ಕಳೆದಂತೆಯೇ ತಮ್ಮ ಬೇಡಿಕೆಯ ಪಟ್ಟಿಯನ್ನು ವಿಸ್ತರಿಸತೊಡಗಿದರು. 2002ರಿಂದ ಅಧಿಕಾರದಲ್ಲಿರುವ ರಜಬ್ ತಯ್ಯಿಬ್ ಉರ್ದುಗಾನ್‍ರ ಸರಕಾರವು ಟರ್ಕಿಯನ್ನು ಇಸ್ಲಾವಿೂಕರಿಸುತ್ತಿದೆ ಎಂದು ಅವರು ಆರೋಪಿಸಿದರು. ವಿಶ್ವವಿದ್ಯಾಲಯಗಳ ಕ್ಯಾಂಪಸ್‍ನಲ್ಲಿ ಮದ್ಯ ಮಾರಾಟಕ್ಕೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಇಸ್ಲಾವಿೂ ವಿಚಾರಧಾರೆಗಳನ್ನು ಕಲಿಸುವುದಕ್ಕಾಗಿ 2012ರಲ್ಲಿ ‘ಪಠ್ಯಪುಸ್ತಕಗಳ ಸುಧಾರಣಾ ಮಸೂದೆಯನ್ನು’ ಪಾರ್ಲಿಮೆಂಟ್‍ನಲ್ಲಿ ಮಂಡಿಸಿ ಅನುಮೋದಿಸಿರುವುದನ್ನು ಖಂಡಿಸಿದರು. ‘ದೈವಭಕ್ತ ಪೀಳಿಗೆ’(Pious generation)ಯನ್ನು ಟರ್ಕಿಯಲ್ಲಿ ಕಾಣಬಯಸುವೆ' ಎಂದ ಉರ್ದುಗಾನ್‍ರನ್ನು ಟೀಕಿಸಿದರು. 2002, 2007 ಮತ್ತು 2011ರ ಚುನಾವಣೆಯಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಉರ್ದುಗಾನ್‍ರ ಸರಕಾರವು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು. ಹೀಗೆ ಗಾಝಿ ಪಾರ್ಕ್‍ನಲ್ಲಿ ಆರಂಭವಾದ ಪ್ರತಿಭಟನೆಯು ಬಳಿಕ ಝವಿೂರ್, ಬರ್ಸಾ, ಅಂಟಾಲಿಯಾ, ಎಸ್ಕಿಸ್, ಯಹಿರ್, ಕಸೀರ್, ಎಡಿರ್ನೆ, ಮೆರ್ಸಿನ್.. ಮುಂತಾದ ಹತ್ತಾರು ನಗರಗಳಿಗೆ ಹಬ್ಬಿಕೊಂಡಿತಲ್ಲದೇ ಯುರೋಪ್, ಅಮೇರಿಕ ಸಹಿತ ಇತರ ರಾಷ್ಟ್ರಗಳಲ್ಲೂ ಕಾಣಿಸಿಕೊಂಡಿತು. ಪ್ರತಿಭಟನಾಕಾರರನ್ನು ಗಾಝಿ ಪಾರ್ಕ್‍ನಿಂದ ಬಲವಂತವಾಗಿ ತೆರವುಗೊಳಿಸಲಾಯಿತಾದರೂ ಪ್ರತಿರೋಧ ನಿಲ್ಲಲಿಲ್ಲ. ಈ ಮಧ್ಯೆ, What's Happening in Turkey (ಟರ್ಕಿಯಲ್ಲಿ ನಡೆಯುತ್ತಿರುವುದೇನು?) ಎಂಬ ಶೀರ್ಷಿಕೆಯಲ್ಲಿ 2013 ಜೂನ್ 7ರಂದು ನ್ಯೂಯಾಕ್ ಟೈಮ್ಸ್ ನಲ್ಲಿ ಒಂದು ಪುಟದ ಜಾಹೀರಾತು ಪ್ರಕಟವಾಯಿತು. ಪ್ರತಿಭಟನಾಕಾರರನ್ನು ಬೆಂಬಲಿಸಿ ಮತ್ತು ಉರ್ದುಗಾನ್ ರನ್ನು ಖಂಡಿಸಿ ಪ್ರಕಟವಾದ ಆ ಜಾಹೀರಾತಿನ ಸರಿಸುಮಾರು ಒಂದೂವರೆ ತಿಂಗಳ ಬಳಿಕ ಜುಲೈ 24ರಂದು ದಿ ಟೈಮ್ಸ್ ಮ್ಯಾಗಸಿನ್ ಪತ್ರಿಕೆಯು  ಒಂದು ಪುಟದ ಬಹಿರಂಗ ಪತ್ರವನ್ನು ಪ್ರಕಟಿಸಿತು. ಆ ಪ್ರಕಟಣೆ ಎಷ್ಟು ಪ್ರಚೋದಕವಾಗಿತ್ತೆಂದರೆ, ಪತ್ರಿಕೆಯ ವಿರುದ್ಧ ಮೊಕದ್ದಮೆ ಹೂಡುವುದಾಗಿ ಉರ್ದುಗಾನ್ ಬೆದರಿಸಿದರು. ನಿಜವಾಗಿ, ಟರ್ಕಿಯ ಜಿಡಿಪಿಯು ಪಾತಾಳ ಕಂಡಿದ್ದ ಸಮಯದಲ್ಲಿ ಅಧಿಕಾರಕ್ಕೆ ಬಂದವರು ಉರ್ದುಗಾನ್. ಆ ಬಳಿಕ ಟರ್ಕಿಯ ಆರ್ಥಿಕ ಪ್ರಗತಿಯಲ್ಲಿ ಯಾವ ಮಟ್ಟದ ಏರಿಕೆಯಾಯಿತೆಂದರೆ, 2011ರ ಅಂಕಿ-ಅಂಶದಂತೆ ಜಿಡಿಪಿಯಲ್ಲಿ ಶೇ. 12ಕ್ಕಿಂತಲೂ ಅಧಿಕ ದರವನ್ನು ದಾಖಲಿಸಿತು. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಮತ್ತು ಜಗತ್ತಿನ ಜನಪ್ರಿಯ ಪ್ರವಾಸಿ ತಾಣಗಳುಳ್ಳ ರಾಷ್ಟ್ರಗಳಲ್ಲಿ 6ನೇ ಸ್ಥಾನದಲ್ಲಿರುವ ಟರ್ಕಿಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದ ಗೌರವ ಉರ್ದುಗಾನ್‍ರಿಗಿದೆ. ಅವರು ವಿದೇಶಿ ಹೂಡಿಕೆಯನ್ನು ಆಕರ್ಷಿಸಿದರು. ಹೊಸ ಹೊಸ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡರು. ಆಧುನಿಕ ಅಭಿವೃದ್ಧಿ ಕಲ್ಪನೆಗಳ ಬಗ್ಗೆ ಅವರಲ್ಲಿರುವ ಸಂತುಲಿತ ನಿಲುವೇ ಅವರನ್ನು ಜನಪ್ರಿಯ ನಾಯಕನನ್ನಾಗಿ ಮಾರ್ಪಡಿಸಿತ್ತು. ಆದರೆ ಮೇ 28 ರಂದು ಪ್ರಾರಂಭವಾದ ಪ್ರತಿಭಟನೆಯು ಇಡೀ ಪ್ರವಾಸೋದ್ಯಮವನ್ನೇ ಕೆಡಿಸಿಬಿಟ್ಟಿತು. ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆ ಉಂಟಾಯಿತು. ಆದಾಯ ಸ್ಥಗಿತಗೊಂಡಿತು. ಆದರೂ ಪ್ರತಿಭಟನೆ ನಿಲ್ಲದೇ ಹೋದಾಗ ಉರ್ದುಗಾನ್ ಇಡೀ ಪ್ರತಿಭಟನೆಯ ಕುರಿತೇ ಅನು ಮಾನಗೊಂಡರು. ಆಗ ಅವರಿಗೆ ಸಿಕ್ಕಿದ್ದೇ ಅಮೇರಿಕದ ಪೆನ್ಸಿಲ್ವೇನಿಯಾದಲ್ಲಿ ನೆಲೆಸಿರುವ ಫತ್‍ಹುಲ್ಲ ಗುಲಾನ್. ಒಂದೊಮ್ಮೆ ಟರ್ಕಿಯಲ್ಲಿ ನೆಲೆಸಿ ಹಿಸ್ಮತ್ ಆಂದೋಲನವನ್ನು ಹುಟ್ಟು ಹಾಕಿದ್ದ ಗುಲಾನ್‍ರು ಗಾಝಿ ಪಾರ್ಕ್‍ನ ನೆಪದಲ್ಲಿ ತನ್ನ ವಿರುದ್ಧ ಪ್ರತಿಭಟನೆಯನ್ನು ಏರ್ಪಡಿಸಿದ್ದಾರೆ ಎಂಬುದು ಖಚಿತಗೊಳ್ಳುತ್ತಲೇ ಉರ್ದುಗಾನ್ ಚುರುಕಾದರು. ಪ್ರತಿಭಟನಾಕಾರರ ವಿರುದ್ಧ ನಿಷ್ಠುರ ಕ್ರಮ ಕೈಗೊಂಡರು. ನಾಲ್ಕೈದು ತಿಂಗಳುಗಳ ಕಾಲ ನಡೆದ ಈ ಪ್ರತಿಭಟನೆಯ ದಟ್ಟ ನೆರಳಿನಲ್ಲಿಯೇ 2014 ಮಾರ್ಚ್‍ನಲ್ಲಿ ಪ್ರಾದೇಶಿಕ ಸಂಸ್ಥೆಗಳಿಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಉರ್ದುಗಾನ್‍ರ ಏ.ಕೆ.ಪಿ. ಪಕ್ಷವು ಸೋಲುತ್ತದೆಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಶೇ. 40ರಷ್ಟು ಮತಗಳನ್ನು ಪಡೆಯುವ ಮೂಲಕ ಉರ್ದುಗಾನ್‍ರ ಪಕ್ಷವು ಈ ಹಿಂದಿನ ಸಾಧನೆಯನ್ನೂ ವಿೂರಿ ಬೆಳೆಯಿತು..
   ಇದೀಗ ಬ್ರೆಝಿಲ್‍ನಲ್ಲೂ ಇಂಥದ್ದೇ ಪ್ರತಿಭಟನೆ ಪ್ರಾರಂಭವಾಗಿದೆ..
1500 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ವಿಶ್ವಕಪ್ ಫುಟ್ಬಾಲ್‍ಗಾಗಿ ಖರ್ಚು ಮಾಡುತ್ತಿರುವ ಬ್ರೆಝಿಲ್ ಸರಕಾರದ ವಿರುದ್ಧ ಅಲ್ಲಿನ ಜನರು ಬೀದಿಗಿಳಿದಿದ್ದಾರೆ. ಹಿಂದಿನ ಮೂರು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗಳಿಗೆ ಖರ್ಚು ಮಾಡಲಾದ ಒಟ್ಟು ಮೊತ್ತವನ್ನು ಈ ವಿಶ್ವಕಪ್‍ಗೆ ಖರ್ಚು ಮಾಡುತ್ತಿರುವ ಸರಕಾರದ ನಿಲುವನ್ನು ಅವರು ಖಂಡಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಈ ಮೊತ್ತವನ್ನು ಖರ್ಚು ಮಾಡಿ ಎಂದವರು ಒತ್ತಾಯಿಸುತ್ತಿದ್ದಾರೆ. ಬ್ರೆಝಿಲ್‍ನ ಪ್ರಸಿದ್ಧ ಕಲಾವಿದ ಪೌಲೋ ಇಟೋ ಎನ್ನುವವ ಮೇ 10ರಂದು ಸಾವೋ ಪೌಲೋ ನಗರದ ಶಾಲೆಯೊಂದರ ಗೋಡೆಯಲ್ಲಿ ಒಂದು ಚಿತ್ರವನ್ನು ಬಿಡಿಸಿದ್ದ. ತನ್ನೆದುರಿನ ಬಟ್ಟಲಿನಲ್ಲಿ ಫುಟ್ಬಾಲನ್ನು ಇಟ್ಟುಕೊಂಡಿರುವ ಬಡ ಹುಡುಗನೋರ್ವ ಆಹಾರಕ್ಕಾಗಿ ಅಂಗಲಾಚುತ್ತಿರುವ ದೃಶ್ಯ. ಈ ಚಿತ್ರ ಎಷ್ಟು ಪ್ರಸಿದ್ಧ ವಾಯಿತೆಂದರೆ ಜಾಗತಿಕ ಮಾಧ್ಯಮಗಳು ಈ ಚಿತ್ರಕ್ಕೆ ವ್ಯಾಪಕ ಪ್ರಚಾರ ಕೊಟ್ಟವು. ಫುಟ್ಬಾಲ್ ಪಂದ್ಯಾವಳಿಗೆ ಹಣ ಹೊಂದಿಸುವುದಕ್ಕಾಗಿ ಬಸ್ಸು, ರೈಲು, ಆಹಾರ ವಸ್ತುಗಳಿಗೆ ಬೆಲೆ ಏರಿಸಿದುದನ್ನು ಖಂಡಿಸಿ 2014 ಮೇ 22ರಂದು ಪ್ರಾರಂಭಗೊಂಡ ಪ್ರತಿಭಟನೆಯು ಎಡಪಂಥೀಯ ಅಧ್ಯಕ್ಷೆ ಡೆಲ್ಮಾ ರುಸ್ಸೆಫ್‍ರನ್ನು ಕಂಗೆಡಿಸುವಷ್ಟು ಪ್ರಮಾಣದಲ್ಲಿ ವ್ಯಾಪಕಗೊಂಡಿತು. ಫುಟ್ಬಾಲ್ ಕ್ರೇಝೆ ಇಲ್ಲದ ಮನಾಸ್ ಮತ್ತು ಕುಯಿಬ ಎಂಬ ನಗರಗಳಲ್ಲೂ ಬೃಹತ್ ಮೈದಾನಗಳನ್ನು ನಿರ್ಮಿಸಲಾಗಿದ್ದು ವಿಶ್ವಕಪ್ ಮುಗಿದ ಬಳಿಕ ಇವು ನಿಷ್ಪ್ರಯೋಜಕವಾಗಲಿದೆ ಎಂಬ ಆರೋಪವೂ ಕೇಳಿಬಂತು. ಅಂದಹಾಗೆ, ಫುಟ್ಬಾಲ್ ಸ್ಟೇಡಿಯಂನಿಂದ ವಿಮಾನ ನಿಲ್ದಾಣಕ್ಕೆ ಹೋಗಲು ಅದ್ದೂರಿ ರಸ್ತೆಗಳನ್ನು ನಿರ್ಮಿಸಲಾಗಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಬೃಹತ್ ಅಕ್ವೇರಿಯಂಗಳ ಸಹಿತ ಹತ್ತಾರು ಯೋಜನೆಗಳನ್ನು ಜಾರಿಮಾಡಲಾಗಿದೆ. ಈಗಾಗಲೇ 2 ಲಕ್ಷದಷ್ಟು ಮಂದಿಯನ್ನು ತೆರವುಗೊಳಿಸಲಾಗಿದ್ದು, ಪಟ್ಟಣವನ್ನು ಸುಂದರಗೊಳಿಸುವುದಕ್ಕಾಗಿ ಸ್ಲಂಗಳನ್ನು, ಬಡವರನ್ನು ಬೇರೆ ಕಡೆಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಎಲ್ಲ ಮೈದಾನಗಳ ಸುತ್ತಲಿನ 2 ಕಿಲೋ ವಿೂಟರ್ ಪ್ರದೇಶವು 'exclusion  zone' ಆಗಿರುತ್ತದೆ. ಆ ಪ್ರದೇಶವು ಸಂಪೂರ್ಣವಾಗಿ FIFAದ(ವಿಶ್ವ ಫುಟ್ಬಾಲ್ ಸಂಸ್ಥೆ)  ನಿಯಂತ್ರಣದಲ್ಲಿರುತ್ತದೆ. FIFA ಯಾವ ಶಾಪ್, ಮಳಿಗೆ, ಉತ್ಪನ್ನಗಳಿಗೆ ಅನುಮತಿ ನೀಡುತ್ತದೋ ಅವನ್ನು ಮಾತ್ರ ಆ ಪ್ರದೇಶದಲ್ಲಿ ಮಾರಾಟ ಮಾಡಬಹುದು. 2010ರಲ್ಲಿ ಆಫ್ರಿಕಾದಲ್ಲಿ ನಡೆದ ಫುಟ್ಬಾಲ್ ವಿಶ್ವಕಪ್‍ನ ವೇಳೆಯಲ್ಲೂ ಬೀದಿ ವ್ಯಾಪಾರಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. FIFAದ ನಿಯಮದಿಂದಾಗಿ ಒಂದು ಲಕ್ಷದಷ್ಟಿರುವ ತಮ್ಮ ಆದಾಯಕ್ಕೆ ಪೆಟ್ಟು ಬಿದ್ದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
   ಹಾಗಿದ್ದರೂ, ಫುಟ್ಬಾಲನ್ನೇ ತಿನ್ನುವ, ಕುಡಿಯುವ, ಮಲಗುವ ದೇಶವೊಂದರಲ್ಲಿ ಇಂಥದ್ದೊಂದು ಪ್ರತಿಭಟನೆ
  
ಹುಟ್ಟಿಕೊಂಡಿರುವುದಕ್ಕೆ ಅಚ್ಚರಿಪಡುವವರು ಅಸಂಖ್ಯ ಮಂದಿಯಿದ್ದಾರೆ. ಬ್ರೆಝಿಲ್ ಎಂದಲ್ಲ, ಯುರೋಪ್ ಮತ್ತು ಆಫ್ರಿಕಾ ಖಂಡಗಳಲ್ಲಿ ಫುಟ್ಬಾಲ್ ಬರೇ ಆಟ ಮಾತ್ರವೇ ಅಲ್ಲ; ವಿಮೋಚನೆ, ಪ್ರತೀಕಾರ, ಜಿದ್ದಿನ ಸಂಕೇತ ಕೂಡ. ಆಫ್ರಿಕನ್ ರಾಷ್ಟ್ರಗಳಂತೂ ಫುಟ್ಬಾಲ್ ಅನ್ನು ಆಟಕ್ಕಿಂತ ಹೆಚ್ಚು ಪ್ರತೀಕಾರದ ದೃಷ್ಟಿಯಿಂದಲೇ ಆಡುತ್ತಿದೆ. ಫುಟ್ಬಾಲ್, ಆಫ್ರಿಕನ್ ಖಂಡದ ಆಟವಲ್ಲ. ಅವರಿಗೆ ಯುರೋಪಿನ ಸಾಮ್ರಾಜ್ಯಶಾಹಿ ಶಕ್ತಿಗಳು ಅದನ್ನು ಪರಿಚಯಿಸಿವೆ. ಇವತ್ತು ಆಫ್ರಿಕನ್ ರಾಷ್ಟ್ರಗಳು ತಮ್ಮನ್ನು ಶೋಷಿಸಿದವರ ವಿರುದ್ಧ ಸೇಡು ತೀರಿಸುವ ರೂಪಕವಾಗಿಯೂ ಫುಟ್ಬಾಲನ್ನು ಆಡುತ್ತಿದ್ದಾರೆ. 2012ರ ಯೂರೋ ಕಪ್ ಫುಟ್ಬಾಲ್‍ನಲ್ಲಿ ವರ್ಣ ಮತ್ತು ಜನಾಂಗ ದ್ವೇಷವು ತೀವ್ರ ಚರ್ಚೆಗೆ ಕಾರಣವಾಗಿತ್ತು. ಕರಿಯ ಆಟಗಾರರ ಬಗ್ಗೆ ತೀರಾ ಬಾಲಿಶತನದಿಂದ ನಡೆದುಕೊಂಡ ಬಗ್ಗೆ ವರದಿಗಳಿದ್ದುವು. ಆ ಪಂದ್ಯಾವಳಿಯಲ್ಲಿ ಇಟಲಿ ತಂಡದ ಆಫ್ರಿಕನ್ ಮೂಲದ ಆಟಗಾರ ಮಾರಿಯೋ ಬಾಲೊಟ್ಟೆಲ್ಲಿಯವರು ಗೋಲು ಬಾರಿಸಿದ ಬಳಿಕ ತನ್ನ ಜರ್ಸಿಯನ್ನು (ಅಂಗಿ) ಕಿತ್ತೆಸೆದು ತನ್ನ ಕಪ್ಪು ದೇಹಕ್ಕೆ ಬೊಟ್ಟು ಮಾಡುತ್ತಾ ಮೈದಾನವಿಡೀ ಓಡಾಡಿದ್ದರು. ಒಂದು ಕಾಲದಲ್ಲಿ ಫ್ರಾನ್ಸ್ ನ ವಸಾಹತು ಆಗಿದ್ದ ಸೆನೆಗಲ್ ದೇಶವು 2007ರ ವಿಶ್ವಕಪ್‍ನಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸನ್ನು ಸೋಲಿಸಿ ಅದರ ಪ್ರಶಸ್ತಿಯ ಕನಸನ್ನೇ ಚಿವುಟಿ ಹಾಕಿದ್ದನ್ನು ಆಫ್ರಿಕನ್ ಮಂದಿ ಸಡಗರದಿಂದ ಸ್ವಾಗತಿಸಿದ್ದರು. ಕ್ಯಾಮರೂನ್ ದೇಶದ ರೋಜರ್ ಮಿಲ್ಲ 1990 ರಲ್ಲಿ ತೋರಿದ ಹೋರಾಟ ಮನೋಭಾವಕ್ಕೆ ಇಡೀ ಆಫ್ರಿಕನ್ ಖಂಡವೇ ಭಾವೋದ್ವೇಗದಿಂದ ಪ್ರತಿಕ್ರಿಯಿಸಿತ್ತು. ಇರಾನ್ ಮತ್ತು ಅಮೇರಿಕ; ಬ್ರೆಝಿಲ್- ಅರ್ಜೆಂಟೀನಾ ಮುಂತಾದ ರಾಷ್ಟ್ರಗಳು ಮುಖಾಮುಖಿಯಾಗುವಾಗ ಆಟಕ್ಕಿಂತ ಹೊರತಾದ ಕಾರಣಗಳೂ ಪ್ರಮುಖವಾಗಿರುತ್ತವೆ. ಇಷ್ಟಿದ್ದೂ, ‘ಬ್ರೆಝಿಲ್ಸ್ ಡಾನ್ಸ್ ವಿದ್ ದಿ ಡೆವಿಲ್ಸ್' ಎಂಬಂಥ ಕೃತಿಗಳು ಪ್ರಕಟವಾಗುವುದು ಮತ್ತು ‘FIFA- We want quality Hospitals ಅಂಡ್ schools Not quality stadiums ’ ಎಂಬ ಫಲಕಗಳು ಬ್ರೆಝಿಲ್‍ನಲ್ಲಿ ಕಾಣಿಸಿಕೊಳ್ಳುತ್ತಿರುವುದನ್ನು ಏನೆಂದು ಪರಿಗಣಿಸಬೇಕು? ಬ್ರೆಝಿಲ್‍ನ ಪ್ರತಿ 10 ಮಂದಿಯಲ್ಲಿ 6 ಮಂದಿ ಫುಟ್ಬಾಲ್ ಪ್ರಾಯೋಜಕತ್ವದ ವಿರುದ್ಧ ಇದ್ದಾರೆ ಎಂಬ ಜನಮತ ಸಂಗ್ರಹವನ್ನು ಅಮೇರಿಕದ ಫ್ಯೂ ರಿಸರ್ಚ್ ಸೆಂಟರ್ ಬಿಡುಗಡೆಗೊಳಿಸಿರುವುದರ ಹಿನ್ನೆಲೆ ಏನಿರಬಹುದು? ಪೀಲೆ, ರೊನಾಲ್ಡೊ, ರೋಮಾರಿಯೋ, ಗರಿಚೊ.. ಮೊದಲಾದ ದಿಗ್ಗಜರನ್ನು ಜಗತ್ತಿಗೆ ಕೊಟ್ಟ ದೇಶದಲ್ಲಿ ಇವತ್ತು ಫುಟ್ಬಾಲ್ ಪ್ರಾಯೋಜಕತ್ವವನ್ನು ದ್ವೇಷಿಸುವವರೇ ಹೆಚ್ಚಿರಬಹುದೇ? 2022ರ ವಿಶ್ವಕಪ್ ಪ್ರಾಯೋಜಕತ್ವವನ್ನು ಪಡಕೊಳ್ಳುವುದಕ್ಕಾಗಿ ಕತರ್‍ನ ಅಧಿಕಾರಿಯೋರ್ವರು FIFAಕ್ಕೆ 5 ಮಿಲಿಯನ್ ಡಾಲರ್ ಲಂಚ ನೀಡಿರುವರೆಂಬ ಮಾಹಿತಿಯನ್ನು ಇದೇ ಸಂದರ್ಭದಲ್ಲಿ ಅಮೇರಿಕದ ಸಂಡೇ ಟೈಮ್ಸ್ ಬಿಡುಗಡೆಗೊಳಿಸಿರುವುದು ಬರೇ ಸದುದ್ದೇಶದಿಂದಲೇ ಅಥವಾ ಬ್ರೆಝಿಲ್‍ನ ಈಗಿನ ಪ್ರತಿಭಟನೆಯನ್ನು ಎದುರಿಟ್ಟುಕೊಂಡೇ?
         ಬ್ರೆಝಿಲ್‍ನ ಪ್ರತಿಭಟನೆಯು ಟರ್ಕಿಯ ಪ್ರತಿಭಟನೆಯನ್ನೇ ಹೋಲುತ್ತಿದೆ ಎಂದು ಉರ್ದುಗಾನ್ ಇತ್ತೀಚೆಗೆ ಹೇಳಿರುವುದನ್ನು ನೋಡುವಾಗ ಅನುಮಾನ ಬಂದೇ ಬರುತ್ತದೆ.