Tuesday, July 15, 2014

ರದ್ದಿಯಾಗುವ ಸುದ್ದಿಗಳ ಮಧ್ಯೆ ಕಳೆದುಹೋದ ಮಾಧ್ಯಮ ವಿಶ್ವಾಸಾರ್ಹತೆ

    “ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡು (AIMPLB) ಈ ದೇಶದಲ್ಲಿ ಪರ್ಯಾಯ ನ್ಯಾಯಾಂಗ ವ್ಯವಸ್ಥೆಯನ್ನು ಸ್ಥಾಪಿಸಲು ಯತ್ನಿಸುತ್ತಿದ್ದು, ಅದರಿಂದಾಗಿ ಮುಸ್ಲಿಮ್ ಮಹಿಳೆಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಮಾತ್ರವಲ್ಲ, ಶರೀಅತ್‍ನಂತೆ ನ್ಯಾಯ ತೀರ್ಮಾನ ಮಾಡಲಿಕ್ಕಾಗಿ ಕಾಝಿ ಮತ್ತು ಸಹಾಯಕ ಕಾಝಿಗಳ ತರಬೇತಿಗೆ ಶಿಬಿರಗಳೂ ಏರ್ಪಾಡಾಗುತ್ತಿವೆ. ದಾರುಲ್ ಕಝಾವು (ಇತ್ಯರ್ಥ ಗೃಹ) ಶರೀಅತ್‍ನ ಪ್ರಕಾರ ಈಗಾಗಲೇ ತೀರ್ಮಾನಗಳನ್ನು ಮಾಡುತ್ತಿದೆ. ಆದ್ದರಿಂದ ದಾರುಲ್ ಕಝಾ ಮತ್ತು ಶರೀಅತ್ ಕೋರ್ಟ್‍ಗಳನ್ನು ನ್ಯಾಯಬಾಹಿರ (absolutely illegal) ಮತ್ತು ಸಂವಿಧಾನ ವಿರೋಧಿ (unconstitutional) ಎಂದು ಮಾನ್ಯ ನ್ಯಾಯಾಲಯವು ಘೋಷಿಸಬೇಕು ಮತ್ತು ಇವುಗಳ ಮೇಲೆ ನಿಷೇಧ ಹೇರಬೇಕು. ಇವನ್ನು ತೊಲಗಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆಯೇ ಇವು ಹೊರಡಿಸುವ ಫತ್ವಗಳನ್ನು ನಿಷೇಧಿಸಬೇಕು..” ಎಂದು ವಿಶ್ವಲೋಚನ್ ಮದನ್ ಎಂಬ ವಕೀಲರೋರ್ವರು 2005ರಲ್ಲಿ ಸುಪ್ರೀಮ್ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಚಂದ್ರಮೌಳಿ ಕೃಷ್ಣಪ್ರಸಾದ್ ಮತ್ತು ಪಿನಕಿ ಚಂದ್ರ ಘೋಷ್‍ರನ್ನೊಳಗೊಂಡ ದ್ವಿ ಸದಸ್ಯ ನ್ಯಾಯ ಪೀಠವು ಅರ್ಜಿಯನ್ನು ತಿರಸ್ಕರಿಸುತ್ತಾ (we dispose off the writ petition) ಕಳೆದ ವಾರ ತೀರ್ಪಿತ್ತಿದ್ದು ಹೀಗೆ:
    ‘ದಾರುಲ್ ಕಝಾಗಳು ಪರ್ಯಾಯ ನ್ಯಾಯಾಲಯಗಳಾಗಿ ಕಾರ್ಯಾಚರಿಸುತ್ತಿವೆ ಎಂದು ಅರ್ಜಿದಾರರು ಹೇಳಿರುವುದು ತಪ್ಪುಗ್ರಹಿಕೆ ಮತ್ತು ಅಪಾರ್ಥವಾಗಿದೆ. ದಾರುಲ್ ಕಝಾಗಳ ಅಸ್ತಿತ್ವವಾಗಲಿ ಅದು ಹೊರಡಿಸುವ ಫತ್ವಾಗಳಾಗಲಿ ಕಾನೂನುಬಾಹಿರವಲ್ಲ. ಅದನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದನ್ನು ಸಂಬಂಧ ಪಟ್ಟವರ ವಿವೇಚನೆಗೆ ಬಿಡಲಾಗಿದೆ..’
     ಇಷ್ಟು ಸ್ಪಷ್ಟವಾಗಿರುವ ತೀರ್ಪಿನ ಮೇಲೆ ಮಾಧ್ಯಮಗಳು ಹೇಗೆ ಸುದ್ದಿ ಹೆಣೆಯಬೇಕಿತ್ತು, ಹೇಗೆ ಶೀರ್ಷಿಕೆ ಕೊಡಬೇಕಿತ್ತು ಮತ್ತು ಯಾವ ವಿಷಯಕ್ಕೆ ಪ್ರಾಶಸ್ತ್ಯ ನೀಡಬೇಕಿತ್ತು? ಈ ತೀರ್ಪಿನ ಮರುದಿನ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ನಿರೀಕ್ಷಣಾ ಜಾವಿೂನು ಅರ್ಜಿಯನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿತು. ‘ಕಾಶಪ್ಪನವರ್: ಜಾವಿೂನು ನಿರಾಕರಣೆ' ಎಂಬ ಶೀರ್ಷಿಕೆಯಲ್ಲಿ ಮರುದಿನ ಈ ಸುದ್ದಿಯನ್ನು ಪ್ರಕಟಿಸಿದ ಮಾಧ್ಯಮಗಳು ವಿಶ್ವ ಲೋಚನ್ ಮದನ್ ಅವರ ಅರ್ಜಿಯನ್ನು ಸುಪ್ರೀಮ್ ಕೋರ್ಟು ತಿರಸ್ಕರಿಸಿದ ಸುದ್ದಿಯನ್ನು ಹೇಗೆ ಪ್ರಕಟಿಸಬೇಕಿತ್ತು? ಯಾವ ಶೀರ್ಷಿಕೆಯನ್ನು ಕೊಡಬೇಕಿತ್ತು? 'ಶರಿಯತ್ ನಿಷೇಧ: ವಿಶ್ವಮೋಚನ್ ಮದನ್ ಬೇಡಿಕೆಗೆ ಸುಪ್ರೀಮ್ ಕೋರ್ಟ್ ನಕಾರ ಅಥವಾ ಬೇಡಿಕೆ ನಿರಾಕರಣೆ ಅಥವಾ ಅರ್ಜಿ ತಿರಸ್ಕ್ರತ.. ಎಂದಾಗಬೇಕಿತ್ತಲ್ಲವೇ? ಆದರೆ ಅವು ಕೊಟ್ಟ ಶೀರ್ಷಿಕೆಗಳು ಹೇಗಿದ್ದುವು?
ವಿಶ್ವಲೋಚನ್ ಮದನ್
    ‘ಶರಿಯಾಗೇ ಫತ್ವಾ' ಎಂದು ಕನ್ನಡ ಪ್ರಭ ಮುಖಪುಟದಲ್ಲೇ ಬರೆದರೆ, ‘ಶರಿಯಾ ಕೋರ್ಟು ಅಮಾನ್ಯ: ಸುಪ್ರೀಮ್ ಕೋರ್ಟ್' ಎಂದು ಉದಯವಾಣಿ ಪ್ರಕಟಿಸಿತು. Sharia court not legal, cant enforce Fatwas ಎಂದು ಹಿಂದುಸ್ತಾನ್ ಟೈಮ್ಸ್, Fatwas have no legal standing: supreme court ಎಂದು ಟೈಮ್ಸ್ ಆಫ್ ಇಂಡಿಯಾ, Fatwas not binding on anyone: SC ಎಂದು ಪಿಟಿಐ, Fatwas not legal, says SC ಎಂದು ದಿ ಹಿಂದೂ ಪತ್ರಿಕೆ ಶೀರ್ಷಿಕೆಗಳನ್ನು ಕೊಟ್ಟವು. ಟಿ.ವಿ. ಚಾನೆಲ್‍ಗಳ ಶೀರ್ಷಿಕೆಗಳಂತೂ ಭೀಕರವಾಗಿದ್ದುವು. ‘ಶರಿಯಾ ಕೋರ್ಟುಗಳ ಬಗ್ಗೆ ಸುಪ್ರೀಮ್ ಕೋರ್ಟ್‍ನ ತೀರ್ಪು: ಇದು ಧರ್ಮದ ಗುತ್ತಿಗೆದಾರರ ಮೇಲೆ ಪರಿಣಾಮ ಬೀರಬಹುದೇ' ಎಂಬ ಶೀರ್ಷಿಕೆಯಲ್ಲಿ CNN-IBN ಚಾನೆಲ್ ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಂಡರೆ, ‘ಶರೀಅತ್ ಕೋರ್ಟೋ ಕಾಂಗಾರು ಕೋರ್ಟೋ ಎಂಬ ಶೀರ್ಷಿಕೆಯಲ್ಲಿ NDTV  ಕಾರ್ಯಕ್ರಮವನ್ನು ಪ್ರಸಾರ ಮಾಡಿತು. ಫತ್ವಾಗಳನ್ನು ಬಲವಂತವಾಗಿ ಹೇರುವಂತಿಲ್ಲ' ಎಂಬ ಹೆಸರಲ್ಲಿ ಟೈಮ್ಸ್ ನೌ ಕಾರ್ಯಕ್ರಮವನ್ನು ಬಿತ್ತರಿಸಿತು.
    ಅಷ್ಟಕ್ಕೂ, ಶರಿಯಾ ಕೋರ್ಟುಗಳು ಮತ್ತು ಅವು ಹೊರಡಿಸುವ ಫತ್ವಾಗಳು ಕಾನೂನುಬದ್ಧವಾಗಿವೆ ಎಂದು ವಾದಿಸಿದವರು ಯಾರು? ವಿಶ್ವಲೋಚನ್ ಮದನ್ ಅವರ ಅರ್ಜಿಯ ವಿಚಾರಣೆಯ ವೇಳೆ ಈ ವಿಷಯದಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುವಂತೆ- ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್, ಭಾರತ ಸರಕಾರ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ಸರಕಾರಗಳೊಂದಿಗೆ ಸುಪ್ರೀಮ್ ಕೋರ್ಟ್ ಕೇಳಿಕೊಂಡಿತ್ತು. ಆಗ, ‘ಅದಕ್ಕೆ ಯಾವುದೇ ಕಾನೂನು ಮಾನ್ಯತೆ ಇಲ್ಲ, ಬರೇ ಅಭಿಪ್ರಾಯವನ್ನು ಹೇಳಬಲ್ಲ ಆದರೆ ಜಾರಿ ಮಾಡುವ ಅಧಿಕಾರ ಇಲ್ಲದ ಮತ್ತು ಭಾರತೀಯ ನ್ಯಾಯಾಂಗಕ್ಕೆ ಪರ್ಯಾಯವಲ್ಲದ ಒಂದು ಅನೌಪಚಾರಿಕ ವ್ಯವಸ್ಥೆ' ಎಂದೇ ಅವೆಲ್ಲ ಹೇಳಿದ್ದುವು. ಇದನ್ನು ಕೋರ್ಟೂ ಒಪ್ಪಿಕೊಂಡಿತು. ಹೀಗಿರುತ್ತಾ ಮಾಧ್ಯಮಗಳು, 'ಶರಿಯಾ ಅಮಾನ್ಯ..' ಎಂದೆಲ್ಲಾ ಬರೆದುವೇಕೆ? ಅವು ಕಾನೂನುಬದ್ಧ ಎಂದು ಯಾರೂ ವಾದಿಸಿಯೇ ಇಲ್ಲದಿರುವಾಗ ಅಂಥದ್ದೊಂದು ಶೀರ್ಷಿಕೆಯ ಉದ್ದೇಶ ಏನು? ಶರೀಅತ್ ಕೋರ್ಟು ಅಥವಾ ಫತ್ವಾಗಳ ಬಗ್ಗೆ ಪತ್ರಕರ್ತರಲ್ಲಿರುವ ಅರಿವಿನ ಕೊರತೆ ಇದಕ್ಕೆ ಕಾರಣವೇ ಅಥವಾ ಮಾಧ್ಯಮ ಜಗತ್ತಿನಲ್ಲಿರುವ ಸಹಜ ಪೈಪೋಟಿಯೇ? ಸೆನ್ಸೇಷನಲಿಸಮ್ಮೇ? ಭಯೋತ್ಪಾದನಾ ಪ್ರಕರಣಗಳ ಸಂದರ್ಭಗಳಲ್ಲೂ ಮಾಧ್ಯಮ ಜಗತ್ತಿನಲ್ಲಿ ಇಂಥ ತಪ್ಪುಗಳು ಧಾರಾಳ ಆಗಿವೆ. ಮಾತ್ರವಲ್ಲ, ಅಂಥ ತಪ್ಪುಗಳು ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಲೂ ಇವೆ. ಯಾಕೆ ಹೀಗೆ? ಶರಿಯಾ ಕೋರ್ಟುಗಳು ಮತ್ತು ಫತ್ವಗಳ ಮೇಲೆ ನಿಷೇಧ ಹೇರಲು ಕೋರ್ಟ್ ನಿರಾಕರಿಸಿರುವುದನ್ನು ಮುಖ್ಯ ಸುದ್ದಿಯಾಗಿಸದೇ ಅವುಗಳಿಗೆ ಕಾನೂನು ಮಾನ್ಯತೆಯಿಲ್ಲ ಎಂಬ ಎಲ್ಲರಿಗೂ ಗೊತ್ತಿರುವ ಮತ್ತು ಒಪ್ಪಿರುವ ಸಾಮಾನ್ಯ ಸುದ್ದಿಗೆ ಒತ್ತು ಕೊಟ್ಟುದೇಕೆ? ಅದರ ಹಿಂದಿನ ಉದ್ದೇಶವೇನು? ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದ 282 ಸ್ಥಾನಗಳಿಗೆ ಒತ್ತು ಕೊಡದೇ, ‘ಬಿಜೆಪಿ ಬರೇ 31% ಓಟು ಪಡೆಯಿತು' ಎಂಬ ಮುಖ್ಯ ಶೀರ್ಷಿಕೆಯಲ್ಲಿ ಒಟ್ಟು ಚುನಾವಣಾ ಫಲಿತಾಂಶವನ್ನು ಮಾಧ್ಯಮಗಳು ಪ್ರಕಟಿಸಿರುತ್ತಿದ್ದರೆ ಏನಾಗುತ್ತಿತ್ತು? ಮೋದಿ ವಿರೋಧಿ, ಬಿಜೆಪಿ ವಿರೋಧಿಯಾಗಿ ಅವು ಗುರುತಿಸುತ್ತಿರಲಿಲ್ಲವೇ? ಮಾಧ್ಯಮಗಳ ನಕಾರಾತ್ಮಕ ನಿಲುವಿಗೆ ಸರ್ವತ್ರ ಖಂಡನೆಗಳು ವ್ಯಕ್ತವಾಗುತ್ತಿರಲಿಲ್ಲವೇ?
   ಶರೀಅತ್ ಅಥವಾ ದಾರುಲ್ ಕಝಾಗಳೆಂದರೆ ನ್ಯಾಯಾಲಯಗಳೂ ಅಲ್ಲ, ಫತ್ವಾಗಳೆಂದರೆ ಕಾನೂನುಗಳೂ ಅಲ್ಲ. ಫತ್ವಾ ಎಂಬ ಹೆಸರಲ್ಲಿ ಮಾಧ್ಯಮಗಳಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುವ ಸುದ್ದಿಗಳು ಎಷ್ಟು ಹಾಸ್ಯಾಸ್ಪದವಾಗಿರುತ್ತವೆಂದರೆ, ಅದನ್ನು ಹೊರಡಿಸಿದವರು ಆರೋಗ್ಯಪೂರ್ಣವಾಗಿರುವರೇ ಎಂದೇ ಅನುಮಾನ ಮೂಡುತ್ತದೆ. ಆದ್ದರಿಂದಲೇ ಮಾಧ್ಯಮಗಳಲ್ಲಿ ಪ್ರಕಟ ವಾಗುವ ‘ಫತ್ವಗಳು' ಸಾರ್ವಜನಿಕವಾಗಿ ಹೆಚ್ಚು ತಮಾಷೆಗೇ ಒಳಗಾಗಿವೆ. ಮುಸ್ಲಿಮರು ಅದನ್ನು ಗಂಭೀರವಾಗಿ ಪರಿಗಣಿಸುತ್ತಲೂ ಇಲ್ಲ. ಇದಕ್ಕೆ ಇಮ್ರಾನಾ ಪ್ರಕರಣವೇ ಅತ್ಯುತ್ತಮ ಉದಾಹರಣೆ. ಫತ್ವಾಗಳನ್ನು ನಿಷೇಧಿಸಬೇಕೆಂಬ ತನ್ನ ಬೇಡಿಕೆಗೆ ಪುರಾವೆಯಾಗಿ ವಿಶ್ವಲೋಚನ್ ಮದನ್ ಅವರು ಕೋರ್ಟಿನ ಮುಂದೆ ಇಮ್ರಾನಾ ಪ್ರಕರಣವನ್ನು ಉಲ್ಲೇಖಿಸಿಯೂ ಇದ್ದರು. ಉತ್ತರ ಪ್ರದೇಶದ ಮುಝಫ್ಫರ್ ನಗರ್ ಜಿಲ್ಲೆಯ ಚರ್ತವಾಲ್ ಗ್ರಾಮದ ಇಮ್ರಾನಾ ಎಂಬ 5 ಮಕ್ಕಳ ತಾಯಿಯ ಮೇಲೆ ಜೂನ್ 6, 2005ರಂದು ಮಾವ ಅಲಿ ಮಹ್ಮೂದ್ ಅತ್ಯಾಚಾರ ಮಾಡಿದ. ಸ್ಥಳೀಯ ಹಿರಿಯರು ಸಭೆ ಸೇರಿದರು. ಅತ್ಯಾಚಾರದಿಂದಾಗಿ ಇಮ್ರಾನಾ ಮತ್ತು ಪತಿ ನೂರ್ ಇಲಾಹಿಯ ವೈವಾಹಿಕ ಸಂಬಂಧ ಅನೂರ್ಜಿತಗೊಂಡಿದೆ, ಆಕೆ ಇನ್ನು ಪತಿಯನ್ನು ಮಗನಂತೆ ಕಾಣಬೇಕು ಮತ್ತು ಮಾವನನ್ನು ಗಂಡನಾಗಿ ಸ್ವೀಕರಿಸಿ ಒಟ್ಟಿಗೇ ಬಾಳಬೇಕು. ಇಲಾಹಿ ಮತ್ತು ಮಕ್ಕಳನ್ನು ದೂರ ಮಾಡಬೇಕು.. ಎಂದು ಸಭೆ ಫತ್ವ ಹೊರಡಿಸಿರುವುದಾಗಿ ಮಾಧ್ಯಮಗಳು ಬರೆದವು. ಈ ಫತ್ವನ್ನು ದಾರುಲ್ ಉಲೂಮ್ ದೇವ್‍ಬಂದ್ ಮಾನ್ಯ ಮಾಡಿರುವುದಾಗಿಯೂ ಅವು ಹೇಳಿದುವು. ಆದರೆ ಕೇವಲ ಸಾಮಾನ್ಯ ಗೃಹಿಣಿಯಷ್ಟೇ ಆಗಿದ್ದ ಮತ್ತು ಕಾಲೇಜು ಮೆಟ್ಟಿಲನ್ನೂ ಹತ್ತಿಲ್ಲದ ಆಕೆ, ಆ ಫತ್ವವನ್ನು ತಿರಸ್ಕರಿಸಿದಳು. ಮಾವನ ವಿರುದ್ಧ ಕೋರ್ಟಿನಲ್ಲಿ ಸಾಕ್ಷ್ಯ  ನುಡಿದು ಆತನಿಗೆ ಅಕ್ಟೋಬರ್ 19, 2006ರಂದು ಹತ್ತು ವರ್ಷಗಳ ಶಿಕ್ಷೆ ಆಗುವಂತೆ ನೋಡಿಕೊಂಡಳು. ಈಗಲೂ ಪತಿ ಇಲಾಹಿಯೊಂದಿಗೇ ಆಕೆ ಬಾಳುತ್ತಿದ್ದಾಳೆ. ನಿಜವಾಗಿ, ಫತ್ವಾಗಳ ಸಾಮರ್ಥ್ಯ ಇಷ್ಟೇ. ಅದನ್ನು ನೀಡುವವರ ಸ್ಥಾನ-ಮಾನ ಏನು, ಅವರಲ್ಲಿ ತಿಳುವಳಿಕೆ ಎಷ್ಟಿದೆ, ನಿರ್ದಿಷ್ಟ ವಿಷಯಗಳ ಮೇಲೆ ‘ಫತ್ವಾ' ಹೊರಡಿಸುವಷ್ಟು ಅವರು ಪ್ರಬುದ್ಧರಾಗಿರುವರೇ.. ಎಂದು ಮುಂತಾಗಿ ಮಾಧ್ಯಮಗಳು ಚರ್ಚಿಸುವುದಿಲ್ಲ. ಹೇಳಿದ್ದು ಮುಲ್ಲಾ ಎಂದಾದರೆ ಅದು ಫತ್ವಾ ಆಗುತ್ತದೆ ಮತ್ತು ಇಡೀ ಮುಸ್ಲಿಮ್ ಸಮಾಜ ಅದನ್ನು ತಲೆಬಾಗಿ ಅನುಸರಿಸಲೇ ಬೇಕಾಗುತ್ತದೆ ಎಂಬ ಹುಸಿ ಸನ್ನಿವೇಶವನ್ನಷ್ಟೇ ಅವು  ನಿರ್ಮಾಣ ಮಾಡುತ್ತಿವೆ.
   ನಿಜವಾಗಿ, ಶರೀಅತ್ ಕೋರ್ಟ್‍ಗಳೆಂಬುದು ಕುರ್‍ಆನ್ ಮತ್ತು ಪ್ರವಾದಿಯವರ ಬದುಕಿನ ಆಧಾರದಲ್ಲಿ ಹಾಗೂ ವಿವಿಧ ವಿದ್ವಾಂಸರುಗಳ ಅಭಿಪ್ರಾಯಗಳನ್ನು ಮುಂದಿಟ್ಟುಕೊಂಡು ಜನರ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಕೇಂದ್ರಗಳಷ್ಟೇ ಆಗಿವೆ. ಅವೇ ಅಂತಿಮ ಎಂದಲ್ಲ. ಅಲ್ಲಿ ತಪ್ಪು-ಒಪ್ಪು ಎರಡೂ ಇರಬಹುದು. ಅವು ಪರಿಹಾರವನ್ನು ಸೂಚಿಸಲು ಅಳವಡಿಸಿಕೊಂಡ ವಿಧಾನ, ಆಧಾರ ಪ್ರಮಾಣಗಳ ಬಗ್ಗೆ ಭಿನ್ನಾಭಿಪ್ರಾಯ ಇರಬಹುದು. ಅದನ್ನು ಪ್ರಶ್ನಿಸಲೂ ಬಹುದು. ಆದ್ದರಿಂದಲೇ, ದಾರುಲ್ ಉಲೂಮ್ ದೇವ್‍ಬಂದ್‍ನ ಎಲ್ಲ ಫತ್ವಾಗಳ ಕೊನೆಯಲ್ಲೂ ‘ಅಲ್ಲಾಹನೇ ಚೆನ್ನಾಗಿ ಬಲ್ಲ' ಎಂಬ ವಾಕ್ಯವೊಂದು ಕಡ್ಡಾಯವಾಗಿ ಇರುತ್ತದೆ. ಅಷ್ಟಕ್ಕೂ, ಫತ್ವಾಗಳ ಹೆಸರಲ್ಲಿ ಪ್ರಕಟವಾಗುವ ಹೆಚ್ಚಿನ ಸುದ್ದಿಗಳು ಕೆಲವು ಮುಲ್ಲಾಗಳ ವೈಯಕ್ತಿಕ ಅಭಿಪ್ರಾಯವಷ್ಟೇ ಆಗಿರುತ್ತದೆ. ಅಲ್ಲದೇ ಫತ್ವಾಗಳನ್ನು ಕೊಡುವುದಕ್ಕಾಗಿ ಅವರು ವ್ಯವಸ್ಥಿತ ತರಬೇತಿಯನ್ನೂ ಪಡೆದಿರುವುದಿಲ್ಲ. ಯಾರಾದರೂ ಏನನ್ನಾದರೂ ಕೇಳಿದಾಗ ತಕ್ಷಣ ಏನು ಅನಿಸುತ್ತದೋ ಅದನ್ನೇ ಹೇಳಿ ಬಿಡುವ ಸಂದರ್ಭಗಳೂ ಧಾರಾಳ ಇವೆ. ಇಮ್ರಾನಾ ಪ್ರಕರಣಕ್ಕೆ ಸಂಬಂಧಿಸಿ ದಾರುಲ್ ಉಲೂಮ್ ದೇವ್‍ಬಂದ್‍ನ ವಿದ್ವಾಂಸರಲ್ಲಿ ಓರ್ವ ಪತ್ರಕರ್ತ ದಿಢೀರ್ ಪ್ರಶ್ನೆ ಕೇಳಿದ್ದು ಮತ್ತು ಅವರು ಅಷ್ಟೇ ದಿಢೀರ್ ಆಗಿ ಉತ್ತರಿಸಿದ್ದೇ  ಆ ಬಳಿಕ ಫತ್ವಾದ ಹೆಸರಲ್ಲಿ ದೇಶಾದ್ಯಂತ ಸುದ್ದಿಯಾಯಿತು. ಫತ್ವಾಗಳ ಸಂದರ್ಭದಲ್ಲಿ ಪಾಲಿಸಲೇ ಬೇಕಾದ ಸಂಯಮ, ನಿಯಮ, ಸಮಾಲೋಚನೆಗಳು ಹೆಚ್ಚಿನ ಬಾರಿ ನಡೆದೇ ಇರುವುದಿಲ್ಲ. ಫತ್ವಾ ನೀಡಲು ಯೋಗ್ಯರಾದ ವಿದ್ವಾಂಸರನ್ನು ಆಯ್ಕೆ ಮಾಡಿ, ಅವರಿಗೆ ವ್ಯವಸ್ಥಿತವಾಗಿ ತರಬೇತಿ ಕೊಡುವ ವ್ಯವಸ್ಥೆಗಳೂ ಜಾರಿಯಲ್ಲಿಲ್ಲ. ಬಹುಶಃ ಇಂಥ ಹಲವಾರು ಕೊರತೆಗಳು ಫತ್ವಾಗಳ ಔಚಿತ್ಯವನ್ನೇ ಕೆಲವೊಮ್ಮೆ ಪ್ರಶ್ನೆಗೀಡು ಮಾಡುತ್ತಿವೆ. ಅದನ್ನು ನೀಡುವವರ ಯೋಗ್ಯತೆಯನ್ನು ಮತ್ತು ಅವರ ಧರ್ಮವನ್ನು ತೇಜೋವಧೆಗೀಡು ಮಾಡಲು ಕಾರಣವಾಗುತ್ತಿವೆ. ಸೆನ್ಸೇಶನಲ್ ಸುದ್ದಿಗಾಗಿ ಕಾಯುತ್ತಿರುವ ಮಾಧ್ಯಮಗಳು ಇಂಥ ಕೊರತೆಗಳ ಭರಪೂರ ಲಾಭವನ್ನು ಪಡಕೊಳ್ಳುತ್ತಲೂ ಇವೆ.
   2007 ಎಪ್ರಿಲ್‍ನಲ್ಲಿ ಕೇವಲ ಫತ್ವಾಗಳಿಗಾಗಿಯೇ www.darulifta-deoband.org (ದಾರುಲ್ ಇಫ್ತಾ) ಎಂಬ ವೆಬ್‍ಸೈಟನ್ನು ದಾರುಲ್ ಉಲೂಮ್ ದೇವ್‍ಬಂದ್ ಆರಂಭಿಸಿತು. ಇದಾಗಿ ಕೇವಲ 3 ವರ್ಷಗಳಲ್ಲಿ 11,395 ಫತ್ವಾಗಳನ್ನೂ ಪ್ರಕಟಿಸಿತು. ಅಂದರೆ ತಿಂಗಳಿಗೆ 308 ಫತ್ವಾಗಳು ಅಥವಾ ದಿನಕ್ಕೆ 10 ಫತ್ವಾಗಳು. ದಾರುಲ್ ಇಫ್ತಾಗೆ ಪ್ರತಿದಿನ 30ರಿಂದ 40 ಪ್ರಶ್ನೆಗಳು ಬರುತ್ತಿದ್ದು, ಅದು ವಾರದಲ್ಲಿ ನಾಲ್ಕು ದಿನ ಕಾರ್ಯಾಚರಿಸುತ್ತದೆಯಂತೆ. ‘ಮಗ್ರಿಬ್ ನಮಾಝ್‍ನ ಬಳಿಕ ತಲೆ ಬಾಚಬಹುದೇ ಎಂಬಲ್ಲಿಂದ ಹಿಡಿದು ear bud ನಿಂದ ಕಿವಿ ಶುಚಿಗೊಳಿಸಬಹುದೇ ಎಂಬಲ್ಲಿ ವರೆಗೆ.. ವಿವಿಧ ರೀತಿಯ ಪ್ರಶ್ನೆಗಳೂ ಉತ್ತರಗಳೂ ವೆಬ್‍ಸೈಟ್‍ನಲ್ಲಿವೆ. ಹೆಚ್ಚಿನ ಉತ್ತರಗಳು ನಾಲ್ಕೈದು ವಾಕ್ಯಗಳಿಗಿಂತ ಹೆಚ್ಚಿರುವುದೂ ಇಲ್ಲ. ವಿಶೇಷ ಏನೆಂದರೆ, ಈ 11 ಸಾವಿರದಷ್ಟು ಫತ್ವಾಗಳಲ್ಲಿ ಮಹಿಳೆಯರಿಗೆ ಸಂಬಂಧಿಸಿರುವ ಫತ್ವಾಗಳು 2% ಮಾತ್ರ. ಅದರಲ್ಲೂ ಕನಸಿನ ಬಗ್ಗೆ, ಹೆಸರಿನ ಬಗ್ಗೆ, ವೈಯಕ್ತಿಕ ವಿಷಯಗಳ ಕುರಿತೇ ಹೆಚ್ಚು ಪ್ರಶ್ನೆಗಳಿವೆ. ಇಷ್ಟಿದ್ದೂ, ಫತ್ವಾಗಳಿಂದ ಮಹಿಳೆಯರೇ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿಶ್ವಲೋಚನ್ ಮದನ್ ಅವರು ಸುಪ್ರೀಮ್ ಕೋರ್ಟಿನ ಮುಂದೆ ಹೇಳಿಕೊಂಡಿದ್ದರು. ಬಹುಶಃ ಕೋರ್ಟು ಅವರ ವಾದವನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಈ ಅಂಕಿ ಅಂಶಗಳೇ ಕಾರಣ ಆಗಿರಬಹುದು. ಒಂದು ವೇಳೆ, ಫತ್ವಾಗಳ ಕುರಿತಂತೆ ಸಕಾರಾತ್ಮಕ ಸುದ್ದಿಯನ್ನು ಪ್ರಕಟಿಸಬೇಕೆಂದು ಮಾಧ್ಯಮಗಳು ಬಯಸುತ್ತದಾದರೆ ಅದಕ್ಕೆ ಪೂರಕವಾದ ಫತ್ವಾಗಳೂ ದಾರುಲ್ ಇಫ್ತಾದಲ್ಲಿ ಧಾರಾಳ ಇವೆ. ‘ಶಿಕ್ಷಣಕ್ಕಾಗಿ ಬಡ್ಡಿಯಾಧಾರಿತ ಸಾಲ ಪಡಕೊಳ್ಳಬಹುದು’, ‘ಪತ್ನಿಯನ್ನು ದೈಹಿಕವಾಗಿ ದಂಡಿಸುವುದು ತಪ್ಪು’, ‘ಸಹ ಶಿಕ್ಷಣವಾದರೂ ಸರಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲೇಬೇಕು’, ‘ಬ್ಯಾಂಕಿನ ಬಡ್ಡಿಯ ಬಗ್ಗೆ ಮೃದು ನಿಲುವು’, ‘ತಾಯಿಯ ಜೀವ ಉಳಿಸುವುದಕ್ಕಾಗಿ ಗರ್ಭಪಾತಕ್ಕೆ ಅನುಮತಿ..’ ಸಹಿತ ಅನೇಕ ಫತ್ವಾಗಳು ದಾರುಲ್ ಇಫ್ತಾನಲ್ಲಿ ಇವೆ. ಆದರೆ ಇವಾವುವೂ ಮಾಧ್ಯಮಗಳಲ್ಲಿ ಸುದ್ದಿ ಯಾಗುತ್ತಿಲ್ಲ. ‘ಪ್ರಗತಿಪರ ಫತ್ವಾಗಳು’ ಎಂಬ ಹೆಸರಲ್ಲಿ ಇವು ಶೀರ್ಷಿಕೆಗಳನ್ನೂ ಪಡಕೊಳ್ಳುತ್ತಿಲ್ಲ. ಮಾಧ್ಯಮಗಳು ರೋಚಕತೆಯನ್ನಷ್ಟೇ ಬಯಸುತ್ತವೆ. ಸುದ್ದಿ ಸಕಾರಾತ್ಮಕವಾಗಿದ್ದರೂ ನಕಾರಾತ್ಮಕ ಶೀರ್ಷಿಕೆ ಕೊಟ್ಟು ಆಟ ಆಡುತ್ತವೆ. ಅದರಿಂದಾಗಿ ರವಾನೆಯಾಗಬಹುದಾದ ಸಂದೇಶಗಳ ಬಗ್ಗೆ ಅವು ತಲೆ ಕೆಡಿಸಿಕೊಳ್ಳುತ್ತಿಲ್ಲ. ಬೆಳಗ್ಗಿನ ಸುದ್ದಿ ಸಂಜೆಯಾಗುವಾಗ ರದ್ದಿಯಾಗುತ್ತದೆ ಎಂದೇ ಅವು ಬಲವಾಗಿ ನಂಬಿವೆ. ಆದರೆ ಕೆಲವೊಮ್ಮೆ ಸುದ್ದಿಗಳಲ್ಲ ಮಾಧ್ಯಮಗಳು ಮತ್ತು ಅವುಗಳ ವಿಶ್ವಾಸಾರ್ಹತೆಗಳೇ ರದ್ದಿಯಾಗಬಲ್ಲವು ಎಂಬುದಕ್ಕೆ ಕಳೆದ ವಾರದ ತೀರ್ಪೇ ಅತ್ಯುತ್ತಮ ಪುರಾವೆಯಾಗಿದೆ. ಇಷ್ಟಿದ್ದೂ,
      ''ಇಸ್ಲಾಮೀ ಕೋರ್ಟುಗಳ ಮೇಲಿನ ನಿಷೇಧದ ಬೇಡಿಕೆಯನ್ನು ತಳ್ಳಿಹಾಕಿದ ಭಾರತ (India rejects ban on Islamic courts)'' ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿ ನ್ಯಾಯ ನಿಷ್ಠೆಗೆ ಬಲವಾಗಿ ಅಂಟಿಕೊಂಡ ಆಲ್ ಜಸೀರ (Al Jazeera)   ಚಾನೆಲ್ ಅನ್ನು  ಮೆಚ್ಚಿಕೊಳ್ಳುತ್ತಲೇ, ಮಾಧ್ಯಮಗಳ ನಕಾರಾತ್ಮಕ ಮುಖವನ್ನು ವಿಶ್ಲೇಷಣೆಗೆ ಒಡ್ಡಲು ಅವಕಾಶವನ್ನು ಒದಗಿಸಿಕೊಟ್ಟ ವಿಶ್ವಲೋಚನ್ ಮದನ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸೋಣ.




No comments:

Post a Comment