ಆಫ್ರಿಕಾದ ವರ್ಣಭೇದ ನೀತಿಯ ಸುತ್ತ ಬ್ಯಾರಿ ನ್ಯೂಡ್ ಬರೆದಿರುವ ಕತೆಯನ್ನಾಧರಿಸಿ ಕ್ರೈ ಆಫ್ ರೀಸನ್; ಏಡ್ಸ್ ಪೀಡಿತ ರನ್ನು ಎದುರಿಟ್ಟುಕೊಂಡು ‘ಎ ಕ್ಲೋಸರ್ ವಾಕ್' ಹಾಗೂ ಇರಾಕ್ , ಅಫಘಾನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಮೇರಿಕನ್ ಯೋಧರ ಮಾನಸಿಕ ಸ್ಥಿತಿಯನ್ನಾಧರಿಸಿ ಚಿತ್ರ ತೆಗೆಯಲು ಮುಂದಾಗಿರುವ ರಾಬರ್ಟ್ ಬೆಲ್‍ಹೇಮರ್‍ರು; Not My Life ಅನ್ನು 13 ದೇಶಗಳಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಬೇನಿಯಾ, ಬ್ರೆಝಿಲ್, ಕಾಂಬೋಡಿಯಾ, ಭಾರತ, ಘಾನಾ, ಗ್ವಾಟಮಾಲ, ಇಟಲಿ, ಅಮೇರಿಕ, ನೇಪಾಲ, ರುಮಾನಿಯಾ ಮುಂತಾದ ದೇಶಗಳ ಮಕ್ಕಳು ಡಾಕ್ಯುಮೆಂಟರಿಯ ಉದ್ದಕ್ಕೂ ಮನಸ್ಸಿಗೆ ಚುಚ್ಚುತ್ತಾರೆ. ಅಮೇರಿಕದ ಶೈಲಾವೈಟ್ ಶ್ರೀಮಂತ ಮನೆತನದ ಹುಡುಗಿ. ಮನೆಯಿಂದ ತಪ್ಪಿಸಿಕೊಂಡ ಆಕೆ ತಲುಪಿದ್ದು ವೇಶ್ಯಾಗೃಹಕ್ಕೆ. ಆಕೆಯ ಕತೆಯನ್ನು ಕೇಳಿ ಪ್ರಭಾವಿತಗೊಂಡು ‘ಕ್ಲಿಂಟನ್ ಗ್ಲೋಬಲ್ ಇನಿಶಿಯೇಟಿವ್’ ಕಾರ್ಯಕ್ರಮದಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಆಕೆಯನ್ನು ಪ್ರಸ್ತಾಪಿಸಿದ್ದರು. ಘಾನಾದಲ್ಲಿ ಸುಮಾರು 10 ಸಾವಿರದಷ್ಟು ಮಕ್ಕಳು ವಿೂನುಗಾರಿಕೆಯಲ್ಲಿ ತೊಡಗಿದ್ದಾರೆ. ಪ್ರತಿದಿನ 14 ಗಂಟೆಗಳಷ್ಟು ಕಾಲ ದುಡಿತ. ತೀರಾ ಬಡತನದಿಂದಾಗಿ ಹೆತ್ತವರು ಮಕ್ಕಳನ್ನು ಮಧ್ಯವರ್ತಿಗಳ ಕೈಗೊಪ್ಪಿಸುತ್ತಾರೆ. ತಮ್ಮ ಮಕ್ಕಳು ಇತರ ಕಡೆ ಸುಖವಾಗಿರಲೆಂದು ಆಸೆ ಪಡುವ ಅವರಿಗೆ ನವಿರಾದ ಸುಳ್ಳುಗಳ ಮೂಲಕ ಭರವಸೆ ತುಂಬಲಾಗುತ್ತದೆ. ಒಮ್ಮೆ ಮಕ್ಕಳು ತಮ್ಮ ಮನೆಯವರಿಂದ ಪ್ರತ್ಯೇಕಗೊಂಡರೆಂದರೆ ಆ ಬಳಿಕ ಅವರ ಬದುಕು ನರಕಸದೃಶವಾಗುತ್ತದೆ. ತಪ್ಪಿಸಿಕೊಳ್ಳುವಂತಿಲ್ಲ. ತಮ್ಮ ನೋವುಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದಕ್ಕೆ ಅವಕಾಶಗಳೂ ಕಡಿಮೆ. ಮಾಧ್ಯಮಗಳ ಕೃಪೆಯೂ ಇರುವುದಿಲ್ಲ. ಯಾವುದಾದರೂ ಎನ್‍ಜಿಓ, ಸಂಘ-ಸಂಸ್ಥೆಗಳು ಈ ಮಕ್ಕಳ ಕೂಗಿಗೆ ಕಿವಿಯಾಗುವವರೆಗೆ ತಮ್ಮದಲ್ಲದ ಬದುಕನ್ನು (Not My Life) ಅವರು ಬದುಕುತ್ತಿರುತ್ತಾರೆ.
ಬಚ್‍ಪನ್ ಬಚಾವೋ ಆಂದೋಲನದ ಮುಖ್ಯಸ್ಥ ಕೈಲಾಶ್ ಸನ್ಯಾರ್ಥಿ ಹೇಳುತ್ತಾರೆ;
‘ಒಂದು ದಿನ ಓರ್ವ ಹೆಣ್ಣು ಮಗಳು ನನ್ನಲ್ಲಿ ಪ್ರಶ್ನಿಸಿದಳು,
ಹಾಲು ಕೊಡುವ ಹಸುವಿಗೆ ಎಷ್ಟು ಬೆಲೆಯಿದೆ ಅಂಕಲ್!
ಸುಮಾರು 50ರಿಂದ ಒಂದು ಲಕ್ಷದ ವರೆಗೆ ಇರಬಹುದು ಎಂದೆ. ಅವಳಂದಳು,
ನಾನು 5 ಸಾವಿರ ರೂಪಾಯಿಗೆ ಮಾರಾಟವಾದವಳು ಅಂಕಲ್.
ಭಾರತದಲ್ಲಿ ಪ್ರತಿ 8 ನಿಮಿಷಕ್ಕೊಮ್ಮೆ ಮಗುವೊಂದು ಕಾಣೆಯಾಗುತ್ತದೆ. ಅಂಥ ಮಕ್ಕಳನ್ನು ಕಾರ್ಖಾನೆ, ವೇಶ್ಯಾಗೃಹಗಳಲ್ಲಿ ಗುಲಾಮಗಿರಿಗೆ ದೂಡಲಾಗುತ್ತದೆ. ಭಿಕ್ಷಾಟನೆಯಲ್ಲೂ ತೊಡಗಿಸಲಾಗುತ್ತದೆ. ಜಾಗತಿಕವಾಗಿ ಇದೊಂದು ದೊಡ್ಡ ಉದ್ಯಮ. ಮಿಲಿಯಾಂತರ ಮಕ್ಕಳನ್ನು ಹೀಗೆ ಪ್ರತಿದಿನ ಅಪಹರಿಸಿಯೋ, ಖರೀದಿಸಿಯೋ ತಂದು ಕೆಲಸಕ್ಕೆ, ಸೆಕ್ಸ್ ಟೂರಿಸಂಗೆ ಬಳಸಲಾಗುತ್ತದೆ. ದೆಹಲಿಯಲ್ಲಿ ಗಾಝಿಪುರ ಎಂಬ ವಿಷಕಾರಿ ಪ್ರದೇಶವಿದೆ. ಮಕ್ಕಳು ಆ ಪ್ರದೇಶಕ್ಕೆ ಕಾಲಿಡಬಾರದೆಂದು ನಿಯಮವೂ ಇದೆ. ಆದರೆ ಈ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದು ಮಕ್ಕಳೇ. ಪ್ರತಿದಿನ ನಾಲ್ಕೂವರೆ ಟನ್‍ಗಳಷ್ಟು ಕಸವನ್ನು ಈ ಪ್ರದೇಶ ಉತ್ಪಾದಿಸುತ್ತದೆ. ಮಕ್ಕಳು ಬೆಳಗ್ಗಿನಿಂದ ರಾತ್ರಿಯ ವರೆಗೆ ಜುಜುಬಿ ಮೊತ್ತಕ್ಕಾಗಿ ದುಡಿಯುತ್ತಾರೆ. ರಕ್ತಹೀನತೆ, ಅಂಗ ಊನತೆ, ಚರ್ಮದ ಕಾಯಿಲೆಗಳಿಂದ ಮಕ್ಕಳು ಬಳಲಿ, ಬೆಂಡಾಗಿ ಕೊನೆಗೊಮ್ಮೆ ಕಾಣೆಯಾಗುತ್ತಾರೆ. ಈ ದೇಶದಲ್ಲಿ ಸುಮಾರು ಹತ್ತು ಲಕ್ಷ ಮಕ್ಕಳು ವೇಶ್ಯಾ ಗೃಹದಲ್ಲಿದ್ದಾರೆ ಎಂಬ ಅಂದಾಜಿದೆ. ಹಾಗಂತ, ಇವರೆಲ್ಲ ಸ್ವಯಂ ಆಸಕ್ತಿಯಿಂದ ಇಲ್ಲಿಗೆ ಬಂದವರಲ್ಲ. ಅವರನ್ನು ಅಪಹರಿಸಿಯೋ ಖರೀದಿಸಿಯೋ ಅಲ್ಲಿಗೆ ಕರೆತರಲಾಗಿದೆ. ಜೊತೆಗೇ ಭೂತಾನ್, ನೇಪಾಲ್, ಬಂಗ್ಲಾದೇಶಗಳಿಂದ ಇಂಥ ವೇಶ್ಯಾಗೃಹಗಳಿಗೆ ಮಕ್ಕಳನ್ನು ಸರಬರಾಜು ಮಾಡಲಾಗುತ್ತಿದೆ. ಕೆಲವು ಕ್ಷಣಗಳ ಸುಖಕ್ಕಾಗಿ ಕೆಲವು ನಿಮಿಷಗಳನ್ನು ಕಳೆಯುವ ಪುರುಷರು ದುಡ್ಡು ಕೊಟ್ಟು ಹೊರಟು ಹೋಗುತ್ತಾರೆ. ಆದರೆ ಆ ಕ್ಷಣ ಮತ್ತು ನಿಮಿಷಗಳನ್ನು ಜೀರ್ಣಿಸಿಕೊಳ್ಳುವ ವಯಸ್ಸು ಮಕ್ಕಳದ್ದಲ್ಲವಲ್ಲ. ಮಕ್ಕಳಿಗೂ ದೊಡ್ಡವರಿಗೂ ನಡುವೆ ಪ್ರಾಯದಲ್ಲಿ ವ್ಯತ್ಯಾಸ ಇರುವ ಹಾಗೆಯೇ ಮಾನಸಿಕ ಸ್ಥಿತಿಯಲ್ಲೂ ವ್ಯತ್ಯಾಸವಿರುತ್ತದೆ. ಆ ಕೆಲವು ಕ್ಷಣಗಳು ಮಕ್ಕಳ ಮೇಲೆ ಆಘಾತಕಾರಿ ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ತಮ್ಮದಲ್ಲದ ಇಂಥ ಅಸಂಖ್ಯ ‘ಕ್ಷಣ'ಗಳನ್ನು ಕಳೆಯಬೇಕಾದ ಮಕ್ಕಳ ಸ್ಥಿತಿ ಹೇಗಿರಬಹುದು? ಅವರೊಳಗಿನ ತಳಮಳ, ಸಂಕಟಗಳಿಗೆ ಯಾರು ಮಾಧ್ಯಮವಾಗಬೇಕು? ತಮ್ಮದಲ್ಲದ ಬದುಕನ್ನು (Not My Life) ಬದುಕುವುದೆಂದರೆ ಅದು ಪ್ರತಿಕ್ಷಣವೂ ಹಿಂಸೆ. ಅದು ಅವರು ಇಚ್ಛಿಸಿದ ಬದುಕಲ್ಲ. ಹೊರ ಪ್ರಪಂಚಕ್ಕೆ ವೇಶ್ಯಾಗೃಹದಲ್ಲಿರುವ ಬಾಲಕಿ, ಇಟ್ಟಿಗೆ ಹೊರುವ ಬಾಲಕ, ಚಿಂದಿ ಆಯುವ ಹುಡುಗ, ಭಿಕ್ಷೆ ಬೇಡುವ ಮಗು, ಗ್ಲಾಸು ತೊಳೆಯುವ ಹುಡುಗ... ಎಲ್ಲರೂ ಮನುಷ್ಯರೇ. ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಾರೆ ಎಂಬ ಉಡಾಫೆಯ ಮಾತುಗಳೂ ನಮ್ಮಿಂದ ಹೊರಡುವುದಿದೆ. ಆದರೆ ಆ ಮಕ್ಕಳು ಹಿರಿಯರಾದ ನಮ್ಮನ್ನು ಏನೆಂದು ಪರಿಗಣಿಸಿಯಾರು? ಮನುಷ್ಯರೆಂದೇ? ಮನುಷ್ಯರೆಂದಾದರೆ ಯಾವ ಪ್ರಕಾರದ ಮನುಷ್ಯರು? ಈ ಮನುಷ್ಯರ ಚಿತ್ರವನ್ನು ಅವರು ಹೇಗೆ ಬಿಡಿಸಬಹುದು? ಆ ಚಿತ್ರದಲ್ಲಿ ಹೃದಯವಿದ್ದೀತೇ? ಇದ್ದರೂ ಅದರ ಹೆಸರು ಏನಿದ್ದೀತು? ಹಲ್ಲುಗಳು ಈಗಿನಂತೆ ಬಿಳಿ-ಸುಂದರವಾಗಿ ಇದ್ದೀತೆ ಅಥವಾ ಕೋರೆ ಹಲ್ಲುಗಳಾಗಿರಬಹುದೇ? ಎಷ್ಟು ಕೈಗಳಿರಬಹುದು? ಎರಡೇ, ನಾಲ್ಕೇ ಅಥವಾ? ಉಗುರುಗಳು ಹೇಗಿರಬಹುದು? ಉದ್ದಕ್ಕೆ ಬಾಗಿಕೊಂಡು ರಕ್ತ ಹೀರುವ ರೂಪದಲ್ಲಿ ಇರಬಹುದೇ? ಕಣ್ಣು? ಅದರಲ್ಲಿ ಕಣ್ಣೀರು ಉಕ್ಕುತ್ತಿರಬಹುದೇ ಅಥವಾ ಕ್ರೌರ್ಯವೇ? ಬಾಯಿಯನ್ನು ಹೇಗೆ ಬಿಡಿಸಬಹುದು? ಪ್ಲಾಸ್ಟರು ಸುತ್ತಬಹುದೇ? ಮೆದುಳು? ವೇಶ್ಯಾ ಗೃಹ, ಇಟ್ಟಿಗೆ ಕಾರ್ಖಾನೆ, ವಿೂನುಗಾರಿಕೆಗಳನ್ನೆಲ್ಲಾ ಸಂಶೋಧಿಸಿದ ದಡ್ಡ ವಸ್ತು ಎಂದಾಗಿರಬಹುದೇ? ಸಣ್ಣವರ ಸಂಕಟಗಳನ್ನು ಗ್ರಹಿಸುವ ಸಾಮರ್ಥ್ಯ ಇಲ್ಲದ ಮತ್ತು ದೊಡ್ಡವರ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಕ್ಷೇಮಕ್ಕಾಗಿ ಮಾತ್ರ ಕೆಲಸ ಮಾಡುವ ಕ್ರೂರಿ ಅಂಗ ಎಂದೇ?
‘ನಮ್ಮ ಮಕ್ಕಳನ್ನು ನಾವಲ್ಲದೇ ಇನ್ನಾರು ರಕ್ಷಿಸಬೇಕು -If we dont protect our children, who will?’- ಎಂಬ ಪ್ರಶ್ನೆಯೊಂದಿಗೆ ಕೊನೆಗೊಳ್ಳುವ Not My Life ಡಾಕ್ಯುಮೆಂಟರಿ ನಮ್ಮನ್ನೇ ಚುಚ್ಚುತ್ತದೆ, ಕಣ್ಣನ್ನು ಆರ್ದ್ರಗೊಳಿಸುತ್ತದೆ.
No comments:
Post a Comment