1991 ಜೂನ್ 9
“ವೈಟ್ ಈಗಲ್ಸ್ ಪಡೆಯ ಮಿಲಾನ್ ಲುಕಿಕ್ ನಮ್ಮ ಅಪಾರ್ಟ್‍ಮೆಂಟ್‍ಗೆ ಬಂದ. ಡ್ರೀನಾ ನದಿ ಮತ್ತು ಸೆರ್ಬಿಯದ ಗಡಿಗೆ ತಾಗಿಕೊಂಡಂತೆ ಇದ್ದ ನಮ್ಮ ವಿಸ್‍ಗ್ರೇಡ್ ಪಟ್ಟಣವನ್ನು ಅದಾಗಲೇ ವೈಟ್ ಈಗಲ್ಸ್ ಪಡೆ ಸುತ್ತುವರಿದು ವಶಪಡಿಸಿಕೊಂಡಿದೆ ಎಂಬ ಸುದ್ದಿಯನ್ನು ನಾವು ಆಲಿಸಿದ್ದೆವು. ನನಗಾಗ 17 ವರ್ಷ. ತಂಗಿ ಎಮಿನಾಳಿಗೆ 15. ಹಾಗಂತ ಲುಕಿಕ್ ನಮಗೆ ಅಪರಿಚಿತ ವ್ಯಕ್ತಿಯೇನೂ ಆಗಿರಲಿಲ್ಲ. ಸ್ಥಳೀಯವಾಗಿ ಆತ ಪರಿಚಿತ ಮತ್ತು ವೈಟ್ ಈಗಲ್ಸ್ ನ ಪ್ರಮುಖ ವ್ಯಕ್ತಿಯಾಗಿಯೂ ಗುರುತಿಸಿಕೊಂಡಿದ್ದ. ಆತ ಮನೆಗೆ ಬಂದವನೇ, ತನ್ನ ಜೊತೆ ಬರುವಂತೆ ನಮ್ಮಿಬ್ಬರಿಗೂ ಆದೇಶಿಸಿದ. ಪೊಲೀಸ್ ಠಾಣೆಯಲ್ಲಿರುವ ಕೆಲವು ಯುವಕರ ಗುರುತು ಪತ್ತೆ ಹಚ್ಚಲು ನಿಮ್ಮ ನೆರವು ಬೇಕಾಗಿದೆಯೆಂದು ಹೇಳಿದ. ಅಮ್ಮ ತಡೆದಳು. ವೈಟ್ ಈಗಲ್ಸ್ ನ ಕಾರ್ಯಕರ್ತರು ಪಟ್ಟಣದಲ್ಲಿ ಅದಾಗಲೇ ಹತ್ಯೆ, ಹಲ್ಲೆಗಳಲ್ಲಿ ನಿರತರಾಗಿರುವ ಬಗ್ಗೆ, ಜನಾಂಗ ನಿರ್ಮೂಲನದ ಉದ್ದೇಶದೊಂದಿಗೆ ಅವರು ಪಟ್ಟಣವನ್ನು ಸುತ್ತುವರಿದಿರುವರೆಂಬ ಬಗ್ಗೆ.. ನಮ್ಮಲ್ಲಿ ಸುದ್ದಿಗಳು ಹಬ್ಬಿದ್ದುವು. ಆದ್ದರಿಂದಲೇ ಒಂದು ಬಗೆಯ ಆತಂಕ, ಅನುಮಾನ ನಮ್ಮ ಅಪಾರ್ಟ್‍ಮೆಂಟನ್ನು ಮಾತ್ರವಲ್ಲ ಇಡೀ ಪಟ್ಟಣವನ್ನೇ ಆವರಿಸಿತ್ತು. ಲುಕಿಕ್, ಜನಾಂಗ ನಿರ್ಮೂಲನದ ಪರ ಇದ್ದ ವ್ಯಕ್ತಿ. ಆದ್ದರಿಂದಲೇ ತಾಯಿ ಆತಂಕಿತರಾಗಿದ್ದರು. ಆದರೆ ಲುಕಿಕ್ ಘರ್ಜಿಸಿದ. ‘ನಾನೇ ಕಾನೂನು, ನಾನೇ ನ್ಯಾಯಾಂಗ’ ಎಂದು ಬೆದರಿಸಿದ. ನಾವಿಬ್ಬರೂ ಆತನ ಜೊತೆ ಕಾರಲ್ಲಿ ಕೂತೆವು. ಆದರೆ ಆತ ಮಾತು ಕೊಟ್ಟಂತೆ ನಮ್ಮನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಿಲ್ಲ. ನೇರ ಎಲಿನಾ ವ್ಲಾಸ್ ಎಂಬ ಹೊಟೇಲಿಗೆ ಕೊಂಡೊಯ್ದ. 20-30 ಕೋಣೆಗಳುಳ್ಳ ದೊಡ್ಡ ಹೊಟೇಲಾಗಿತ್ತದು. ನಾವು ಹೋಗುವಾಗ ಸ್ವಾಗತಕಾರಿಣಿಯರು ತಮಾಷೆ ಮಾಡಿ ನಗುತ್ತಿದ್ದರು. ನನ್ನನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಲಾದರೆ ತಂಗಿ ಎಮಿನಾಳನ್ನು ಇನ್ನೊಂದು ಕೋಣೆಯಲ್ಲಿ. ಕೆಲವು ಗಂಟೆಗಳ ಬಳಿಕ ಎಮಿನಾ ಅರಚುವ, ಬಿಕ್ಕಳಿಸುವ, ಅಂಗಲಾಚುವ ಶಬ್ದವನ್ನು ಆಲಿಸಿದೆ. ನನ್ನಿಂದ ತಡೆದುಕೊಳ್ಳಲಾಗಲಿಲ್ಲ. ಆಕೆ ನನಗೆ ಚಿಕ್ಕವಳಲ್ಲವೇ? ಆದರೆ ಆ ಬಳಿಕ ಎಂದೂ ನನ್ನ ತಂಗಿಯನ್ನು ನಾನು ನೋಡೇ ಇಲ್ಲ.
ಸ್ವಲ್ಪ ಸಮಯದ ಬಳಿಕ ಲುಕಿಕ್ ನನ್ನ ಕೋಣೆಗೆ ಬಂದ. ಬಾಗಿಲಿಗೆ ಎದುರಾಗಿ ಟೇಬಲನ್ನು ತಂದಿಟ್ಟ. ಬೆತ್ತಲೆಯಾಗು ಅಂದ. ನಾನು ಹಿಂಜರಿದೆ. ಆತ ಸಿಡುಕಿದ. ನೀನು ಸುರಕ್ಷಿತವಾಗಿ ತೆರಳಬೇಕಾದರೆ ನಾನು ಹೇಳಿದಂತೆ ಕೇಳಬೇಕು ಎಂದು ಬೆದರಿಸಿದ. ಬೆತ್ತಲೆ ಮಾಡಲು ನನಗೆ ಅವಕಾಶ ಮಾಡಿಕೊಡಬೇಡ, ಅದು ತುಂಬಾ ಹಿಂಸಾತ್ಮಕವಾಗಿರುತ್ತದೆ ಎಂದ. ನೀನು ನನ್ನ ಜೊತೆಗಿರುವುದು ನಿನ್ನ ಅದೃಷ್ಟ. ಇಲ್ಲದಿದ್ದರೆ ನಿನ್ನ ಸೊಂಟಕ್ಕೆ ಕಲ್ಲು ಕಟ್ಟಿ ಡ್ರೀನಾ ನದಿಗೆ ಎಸೆಯಲಾಗುತ್ತಿತ್ತು ಎಂದ. ನಾನು ಹೇಳಿದಂತೆ ಕೇಳದಿದ್ದರೆ ಹೊರಗಿನಿಂದ 10 ಯೋಧರನ್ನು ಕರೆಸ ಬೇಕಾಗುತ್ತದೆ ಎಂದೂ ಬೆದರಿಸಿದ. ನಿಜವಾಗಿ, ಇತರರಿಗೆ ಹೋಲಿಸಿದರೆ ನಾನು ಅದೃಷ್ಟವಂತಳಾಗಿದ್ದೆ. ಆತ ನನ್ನನ್ನು ಕೊಲ್ಲಲಿಲ್ಲ. ಒಂದು ದಿನ ನನ್ನನ್ನು ಬಿಟ್ಟು ಬಿಟ್ಟ. ಮನೆಗೆ ಬಂದಾಗ ತಾಯಿ ಮತ್ತೆ ಮತ್ತೆ ಎಮಿನಾಳ ಬಗ್ಗೆ ಪ್ರಶ್ನಿಸಿದರು. ನನ್ನನ್ನು ಸಾಂತ್ವನಿಸಿದರು. ಆದರೂ ನಾನು ನನ್ನ ಮೇಲಾದ ಅತ್ಯಾಚಾರದ ಬಗ್ಗೆ ಹೇಳಲೇ ಇಲ್ಲ. ನನ್ನಂತೆಯೇ ತಂಗಿಯೂ ಶೀಘ್ರ ಬರಬಹುದು ಎಂದು ನಂಬಿಸಿದೆ. ತಂಗಿಯನ್ನು ಹುಡುಕುತ್ತಾ ತಾಯಿ ಪದೇ ಪದೇ ಪೊಲೀಸು ಠಾಣೆಗೆ ಹೋದರು. ಒಂದು ದಿನ ಪೊಲೀಸ್ ಪೇದೆಯೊಬ್ಬ ತಾಯಿಯತ್ತ ಬಂದೂಕು ಎತ್ತಿದ. ಆಗ ಆತನ ಜೊತೆ ಲುಕಿಕ್‍ನೂ ಇದ್ದ. ಲುಕಿಕ್ ಹೇಳಿದನಂತೆ, ‘ಕನಿಷ್ಠ ಓರ್ವ ಮಗಳಾದರೂ ಹಿಂತಿರುಗಿದ್ದಾಳಲ್ಲ, ಇನ್ನೇನು ಬೇಕು ನಿಂಗೆ?’
ಜುಲೈಯಲ್ಲಿ ನಾವು ನಮ್ಮ ಹುಟ್ಟಿದೂರನ್ನು ತೊರೆದೆವು. ತಂಗಿಯನ್ನು ಸ್ಮರಿಸುತ್ತಾ, ಆಕೆ ಎಲ್ಲಾದರೂ ಸುರಕ್ಷಿತಳಾಗಿ ಇರುವಳೆಂಬ ನಿರೀಕ್ಷೆ ಇರಿಸುತ್ತಾ ಅಕ್ಕ ಮಲೀಹಾ ಈ ಮೊದಲೇ ಸೇರಿಕೊಂಡಿದ್ದ ಬೇರೊಂದು ಪಟ್ಟಣವನ್ನು ಸೇರಿಕೊಂಡೆವು. ನಾನು ರಾತ್ರಿ ಎದ್ದು ಚೀರಾಡುತ್ತೇನೆ. ಭಯ-ಭೀತಿಯಿಂದ ಜೋರಾಗಿ ಉಸಿರಾಡುತ್ತೇನೆ. ರಾತ್ರಿ ಎದ್ದು ಕೂರುತ್ತೇನೆ. ಆಗೆಲ್ಲಾ ಅಕ್ಕ ಸಮಾಧಾನಿಸುತ್ತಾಳೆ..”
‘ರೇಪ್ಸ್ ಇನ್ ಬೋಸ್ನಿಯಾ: ಎ ಮುಸ್ಲಿಮ್ ಸ್ಕೂಲ್ ಗರ್ಲ್ಸ್ ಅಕೌಂಟ್'' ಎಂಬ ಶೀರ್ಷಿಕೆಯಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು 1992 ಡಿಸೆಂಬರ್ 27ರಂದು ಪ್ರಕಟಿಸಿದ ಸಂದರ್ಶನದಲ್ಲಿ ಜಾಸ್ನಾ ಎಂಬ ಯುವತಿ ಹೇಳಿದ ಮಾತುಗಳಿವು. ಈ ಸಂದರ್ಶನದ ಆರಂಭದಲ್ಲಿ ಸುಮಾರು 45 ನಿಮಿಷಗಳ ವರೆಗೆ ತನ್ನ ಮೇಲಾದ ಅತ್ಯಾಚಾರದ ಬಗ್ಗೆ ಈ ಹುಡುಗಿ ಹೇಳಿಕೊಂಡೇ ಇರಲಿಲ್ಲ. 1991ರಿಂದ 95ರ ನಡುವೆ ಯುಗೋಸ್ಲಾವಿಯಾದಲ್ಲಿ ನಡೆದ ಆಂತರಿಕ ಯುದ್ಧ ಮತ್ತು ಹತ್ಯಾಕಾಂಡಗಳು ಅತ್ಯಂತ ಭೀಕರ ಕ್ರೌರ್ಯಗಳಲ್ಲಿ ಒಂದೆಂದು ಜಾಗತಿಕವಾಗಿಯೇ ಗುರುತಿಸಿಕೊಂಡಿದೆ. ಆ ಬಳಿಕ ಯುಗೋಸ್ಲಾವಿಯಾವು ಬೋಸ್ನಿಯಾ-ಹರ್ಝಗೋವಿನಾ, ಕ್ರೋವೇಶಿಯಾ, ಸೆರ್ಬಿಯ ಮುಂತಾದ ರಾಷ್ಟ್ರಗಳಾಗಿ ವಿಭಜನೆಗೊಂಡಿತು. ಬೋಸ್ನಿಯನ್ನರ ಮೇಲೆ ಸೆರ್ಬಿಯದ ಮಂದಿ ನಡೆಸಿದ ಕ್ರೌರ್ಯಗಳು ಎಷ್ಟು ಭೀಕರವಾಗಿತ್ತು ಅಂದರೆ, 30 ಸಾವಿರದಷ್ಟು ಮಂದಿ ಮಹಿಳೆಯರು ಅತ್ಯಾಚಾರಕ್ಕೆ ಒಳಗಾದರು ಎಂದು ಆ ಬಳಿಕದ ವರದಿಗಳೇ ಹೇಳಿದುವು. ಅವರಲ್ಲಿ ಜಾಸ್ನಾ ಕೂಡ ಓರ್ವಳು. ಅತ್ಯಾಚಾರಕ್ಕೀಡಾದವರು ಸಾಮಾಜಿಕ ವ್ಯವಸ್ಥೆಯ ಮೇಲೆಯೇ ವಿಶ್ವಾಸ ಕಳಕೊಂಡರು. ಪಾಶ್ಚಾತ್ಯ ಪತ್ರಕರ್ತರು ಮತ್ತು ಟಿ.ವಿ. ಚಾನೆಲ್‍ಗಳು ಬೋಸ್ನಿಯಾದ ಈ ಸಂತ್ರಸ್ತರನ್ನು ಭೇಟಿಯಾದಾಗಲೆಲ್ಲ ಅವರು ಮಾತಾಡಲು ನಿರಾಕರಿಸಿದರು. ಅವರ ಉದ್ದೇಶ ಶುದ್ಧಿಯನ್ನೇ ಪ್ರಶ್ನಿಸಿದರು. ಪಶ್ಚಿಮವು ತಮಗೆ ನ್ಯಾಯ ಕೊಡುವುದಕ್ಕಲ್ಲ, ಬರೇ ಅನುಭವಿಸಲು ಮತ್ತು ಮನರಂಜನೆಯ ವಿಷಯ ಒದಗಿಸಲಷ್ಟೇ ಆಸಕ್ತವಾಗಿವೆ ಎಂದು ಆರೋಪಿಸಿದರು. ಸೆರ್ಬಿಯವು ಆ ಬಳಿಕ ನಡೆಸಿದ ತನಿಖೆಗಳಲ್ಲಿ ಅತ್ಯಾಚಾರಿಗಳಲ್ಲಿದ್ದ ಭೀಭತ್ಸ ಆಲೋಚನೆಗಳೂ ಬೆಳಕಿಗೆ ಬಂದುವು. ಒಂದು ಸಮುದಾಯವನ್ನು ಅಪಮಾನಗೊಳಿಸುವುದಕ್ಕೆ ಅತ್ಯಾಚಾರವನ್ನು ಒಂದು ಉಪಕರಣವಾಗಿ ಅವರು ಪರಿಗಣಿಸಿದ್ದರು. ದ್ವೇಷದ ಮನಸ್ಥಿತಿಯನ್ನು ಅತ್ಯಾಚಾರಗಳು ತೃಪ್ತಗೊಳಿಸುತ್ತವೆ ಎಂದು ಅತ್ಯಾಚಾರಿಗಳು ಅಭಿಪ್ರಾಯಪಟ್ಟಿದ್ದರು.
ಅಷ್ಟಕ್ಕೂ, ಇದನ್ನು ಕೇವಲ ಬೋಸ್ನಿಯಾಕ್ಕೆ ಮಾತ್ರ ಸೀಮಿತಗೊಳಿಸಬೇಕಿಲ್ಲ.
ರಾಹುಲ್
ಮೋಹಿತ್
ಸುಧೀರ್
ಅರವಿಂದ್
ವಾರಗಳ ಹಿಂದೆ ಔಟ್‍ಲುಕ್ ವಾರಪತ್ರಿಕೆಯು ಪ್ರಕಟಿಸಿದ ಮುಝಫ್ಫರ್ ನಗರ್ ಗಲಭೆಯಲ್ಲಿ ಅತ್ಯಾಚಾರಕ್ಕೀಡಾದವರ ಕುರಿತಾದ ತನಿಖಾ ಬರಹದಲ್ಲಿ ಕಾಣಿಸಿಕೊಂಡ ಅತ್ಯಾಚಾರಿಗಳ ಹೆಸರುಗಳಿವು. ಈ ಪಟ್ಟಿಯಲ್ಲಿ ಇನ್ನೂ ಕೆಲವು ಹೆಸರುಗಳಿವೆ. ಅತ್ಯಾಚಾರದ ದೂರನ್ನು ದಾಖಲಿಸಿರುವ 7 ಮಂದಿ ಸಂತ್ರಸ್ತೆಯರ ಒಡಲ ಮಾತನ್ನು ಪತ್ರಕರ್ತೆ ನೇಹಾ ದೀಕ್ಷಿತ್ ಇದರಲ್ಲಿ ದಾಖಲಿಸಿದ್ದಾರೆ. ಈ ಸಂತ್ರಸ್ತೆಯರಿಗೆ ಈ ಮೇಲಿನ ಅತ್ಯಾಚಾರಿಗಳೇನೂ ಅಪರಿಚಿತರಾಗಿರಲಿಲ್ಲ. ಮಿಲಾನ್ ಲುಕಿಕ್‍ನಂತೆ ಒಂದು ಹಂತದ ವರೆಗೆ ಪರಿಚಿತರೇ. ಅವರ ಹೊಲಗಳಲ್ಲಿ ಈ ಸಂತ್ರಸ್ತೆಯರು ದುಡಿದಿದ್ದಾರೆ. ಕೂಲಿ ಕೊಡುವ ಮೊದಲು ಜಿಮಾರ್ ಮತ್ತು ಚಾಮರ್ ಜಾತಿಯ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುವುದು ಸಾಮಾನ್ಯವಂತೆ. ಈ ಮಹಿಳೆಯರು ಅದಕ್ಕೆ ಒಪ್ಪಿಕೊಳ್ಳದಿದ್ದಾಗ ಕಡಿಮೆ ಕೂಲಿ ಕೊಡಲಾಗುತ್ತಿತ್ತು. ಆ ದ್ವೇಷವನ್ನು ಗಲಭೆಯ ವೇಳೆ ತೀರಿಸಲಾಗಿದೆ ಎಂದು ಸಂತ್ರಸ್ತೆಯರು ಹೇಳಿರುವುದನ್ನು ನೇಹಾ ಬರೆದಿದ್ದಾರೆ. ಈ ಹಿಂದೆ 1992ರಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ಗುಜರಾತ್‍ನ ಸೂರತ್‍ನಲ್ಲಿ ನಡೆದ ಗಲಭೆಯ ವೇಳೆ ಸಾಮೂಹಿಕ ಅತ್ಯಾಚಾರ ಮತ್ತು ವೀಡಿಯೋ ಚಿತ್ರೀಕರಣಗಳು ನಡೆದಿದ್ದವು. ಹಾಗಂತ ಅದೇನೂ ಕದ್ದು ಮುಚ್ಚಿ ನಡೆಸಲಾದ ಚಿತ್ರೀಕರಣ ಆಗಿರಲಿಲ್ಲ. ವಿದ್ಯುತ್ ತಂತಿಯನ್ನು ಕಡಿತಗೊಳಿಸಿ ಸುತ್ತ-ಮುತ್ತಲಿನ ಪ್ರದೇಶಗಳನ್ನು ಕತ್ತಲುಮಯಗೊಳಿಸಿದ ಬಳಿಕ ಹೊನಲು ಬೆಳಕಿನಲ್ಲಿ ಸಂಪೂರ್ಣ ಯೋಜಿತವಾಗಿಯೇ ಚಿತ್ರೀಕರಣ ನಡೆಸ ಲಾಗಿತ್ತು ಎಂದು ಆ ನಂತರದ ವರದಿಗಳು ಸ್ಪಷ್ಟಪಡಿಸಿದ್ದುವು. (ಇಂಡಿಯಾ ಯುನೈಟೆಡ್ ಅಗೈನ್‍ಸ್ಟ್ ಫ್ಯಾಸಿಝಂ 2013 ನವೆಂಬರ್ 26). 2002ರ ಗುಜರಾತ್ ಹತ್ಯಾಕಾಂಡದಲ್ಲೂ ಅತ್ಯಾಚಾರವು ಪ್ರಮುಖ ಆಯುಧವಾಗಿ ಬಳಕೆಯಾಗಿತ್ತು. ಸಂತ್ರಸ್ತೆಯರಲ್ಲಿ ಬಿಲ್ಕಿಸ್ ಬಾನೋ ಓರ್ವರಾಗಿದ್ದರು. 2007ರಲ್ಲಿ ಒಡಿಸ್ಸಾದ ಕಂಧಮಲ್‍ನಲ್ಲಿ ನಡೆದ ಕ್ರೈಸ್ತ ವಿರೋಧಿ ಹತ್ಯಾಕಾಂಡದಲ್ಲೂ ಅತ್ಯಾಚಾರ ನಡೆದಿತ್ತು. ಸಿಸ್ಟರ್ ವಿೂನಾರ ಮೇಲಿನ ಅತ್ಯಾಚಾರವು ರಾಷ್ಟ್ರಮಟ್ಟದಲ್ಲೇ ಸುದ್ದಿಗೀಡಾಗಿತ್ತು. ಕಂಧಮಲ್‍ನಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಗುಜರಾತ್‍ನ ಅತ್ಯಾಚಾರಗಳಿಗೆ ಹೋಲುತ್ತವೆ ಎಂದು ಆ ಸಂದರ್ಭದಲ್ಲಿ ಹರ್ಷಮಂದರ್ ಬರೆದಿದ್ದರು.
ನಿಜವಾಗಿ, ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಬೋಸ್ನಿಯಾದಿಂದ ಹಿಡಿದು ಮುಝಫ್ಫರ್ ನಗರದವರೆಗೆ ಒಂದು ಸಮಾನತೆಯಿದೆ. ಅದುವೇ ದ್ವೇಷ. ಪುರುಷ ತನ್ನ ದ್ವೇಷವನ್ನು ತೀರಿಸಿಕೊಳ್ಳುವುದಕ್ಕೆ ಹೆಣ್ಣಿನ ದೇಹವನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಿದ್ದಾನೆ ಅನ್ನುವುದನ್ನು ಇವೆಲ್ಲ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿವೆ. ಹೆಣ್ಣನ್ನು ಅತ್ಯಾಚಾರಕ್ಕೀಡು ಮಾಡುವ ಮೂಲಕ ತಮ್ಮ ದ್ವೇಷವನ್ನು ದಮನಗೊಳಿಸುವ ಮಂದಿ ಪುರುಷ ಸಮಾಜದಲ್ಲಿದ್ದಾರೆ. ಬೆಂಗಳೂರಿನ ವಿಬ್‍ಗಯಾರ್ ಪ್ರಕರಣದಲ್ಲೂ ಇದು ಸ್ಪಷ್ಟವಾಗಿದೆ. 6ರ ಬಾಲೆಯ ಮೇಲಿನ ದ್ವೇಷವೇ ಸಾಮೂಹಿಕ ಅತ್ಯಾಚಾರಕ್ಕೆ ಕಾರಣ ಎಂಬುದನ್ನು ಆರೋಪಿಗಳು ಒಪ್ಪಿಕೊಂಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದುವು. ಆದ್ದರಿಂದಲೇ, ಈ ಮನಸ್ಥಿತಿಯ ಬಗ್ಗೆ ಗಂಭೀರ ಚರ್ಚೆಗಳಾಗಬೇಕಾದ ಅಗತ್ಯವಿದೆ. ಅಂದಹಾಗೆ, ಇಂಥ ಮನಸ್ಥಿತಿ ನಿರ್ದಿಷ್ಟ ಧರ್ಮೀಯರಲ್ಲಿ ಮಾತ್ರ ಇರಬೇಕೆಂದೇನೂ ಇಲ್ಲ. ವಿಬ್‍ಗಯಾರ್‍ನ ಆರೋಪಿಗಳು ಹಿಂದೂಗಳೂ ಅಲ್ಲ. ಅತ್ಯಾಚಾರಿಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸದೇ, ಆ ಮನಸ್ಥಿತಿಯ ಕರಾಳತೆಯ ಸುತ್ತ ಮಾಧ್ಯಮಗಳಲ್ಲಿ ವಿಸ್ತೃತ ಚರ್ಚೆಗಳಾಗಬೇಕಿದೆ. ಒಂದು ಕಡೆ ಅತ್ಯಾಚಾರದ ವಿರುದ್ಧ ಕಾನೂನಿನ ಮೇಲೆ ಕಾನೂನುಗಳು ಜಾರಿಯಾಗುತ್ತಿವೆ. ಗಲ್ಲು ಶಿಕ್ಷೆಯ ಬೇಡಿಕೆಯನ್ನೂ ಮುಂದಿಡಲಾಗುತ್ತಿದೆ. ಆದರೂ ಅತ್ಯಾಚಾರಗಳು ಕಡಿಮೆಯಾಗುತ್ತಿಲ್ಲ. ಯಾಕೆ ಹೀಗೆ? ಇದರ ಹಿಂದೆ ಬರೇ ದೈಹಿಕ ತೃಪ್ತಿಯ ಉದ್ದೇಶವಷ್ಟೇ ಇದೆಯೇ ಅಥವಾ ಕ್ರೌರ್ಯದ ಮನಸ್ಥಿತಿಯೊಂದು ಕೆಲಸ ಮಾಡುತ್ತಿದೆಯೇ? ಹೆಣ್ಣನ್ನು ಗುಲಾಮಳು ಎಂದು ಬಗೆವ, ತನ್ನ ಇಚ್ಛೆಯನ್ನು ಪೂರೈಸಬೇಕಾದವಳು ಎಂದು ನಂಬಿರುವ ಪುರುಷ ಯಜಮಾನಿಕೆಯು ಈ ಭಯರಹಿತ ವಾತಾವರಣಕ್ಕೆ ಕಾರಣವೇ? ಅಂಥ ಮನಸ್ಥಿತಿಯು ಹುಟ್ಟು ಪಡೆಯುವುದು ಎಲ್ಲಿ? ಮನೆಯಲ್ಲೇ? ಶಾಲೆ-ಕಾಲೇಜು, ಉದ್ಯೋಗ ಸ್ಥಳಗಳಲ್ಲೇ? ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಮನಸ್ಥಿತಿಯಿರುವ ಮನೆಯಲ್ಲಿ ಬೆಳೆದವರು ಇಂಥ ಪ್ರಕರಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆಯೇ? ಹೆಣ್ಣಿನ ಧ್ವನಿಯನ್ನು ಅಡಗಿಸುವುದಕ್ಕೆ, ಆಕೆಯ ಭಿನ್ನ ಅಭಿಪ್ರಾಯವನ್ನು ಖಂಡಿಸುವುದಕ್ಕೆ, ಆಕೆಯ ಪ್ರತಿಭೆಯನ್ನು ಚಿವುಟುವುದಕ್ಕೆ ಅತ್ಯಾಚಾರಗಳು ಟೂಲ್ ಆಗುತ್ತಿವೆಯೇ? ಈ ಮನಸ್ಥಿತಿಯ ಮಂದಿ ಮನೆಯಲ್ಲಿ ತಮ್ಮ ತಾಯಿ, ಪತ್ನಿ, ತಂಗಿ, ಅಕ್ಕ, ಅತ್ತಿಗೆಯರೊಂದಿಗೆ ಹೇಗೆ ವರ್ತಿಸುತ್ತಾರೆ? ಅವರೆಲ್ಲರೊಂದಿಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸುವ ರೀತಿ ಹೇಗಿವೆ? ಭಾಷೆ ಹೇಗಿದೆ?
ಪ್ರಭಾ ಎನ್. ಬೆಳವಂಗಳ ಅವರ ಫೇಸ್‍ಬುಕ್ ಬರಹಕ್ಕೆ, ‘ಪ್ರಭಾರ ಜುಟ್ಟು ಹಿಡಿದು ಅತ್ಯಾಚಾರ ನಡೆಸಿದರೆ ಅವರು ಸರಿಯಾಗುತ್ತಾರೆ..' ಎಂಬ ಉತ್ತರವನ್ನು ನೀಡಿದ ವಿ.ಆರ್. ಭಟ್ ಎಂಬವರ ಮನಸ್ಥಿತಿಯ ಸುತ್ತ ಆಲೋಚಿಸುತ್ತಾ ಹೋದಂತೆ ಇವೆಲ್ಲ ನೆನಪಾದುವು.

No comments:
Post a Comment