ಏ ಕೆ ಕುಕ್ಕಿಲ
ಸನ್ಮಾರ್ಗ ವಿಶೇಷ ವರದಿ
ಮಂಡ್ಯದ ಮದ್ದೂರು ಶಾಂತವಾಗಿದೆ. ನಾಲ್ಕು ದಿನಗಳ ಕಾಲ ಉರಿದ ಬಳಿಕ ಸುಸ್ತಾದಂತೆ ತಣ್ಣಗೆ ಮಲಗಿಕೊಂಡಿದೆ. ಕಲ್ಲೆಸೆತಕ್ಕೆ ಸಾಕ್ಷಿಯಾದ ರಾಮ್-ರಹೀಮ್ ಓಣಿಯ ‘ರಾಮ’ ಮತ್ತು ‘ರಹೀಮರು’ ಮತ್ತೆ ತಮ್ಮ ಎಂದಿನ ಕಾಯಕಕ್ಕೆ ಮರಳಿದ್ದಾರೆ. ಹಿಂಸಾಚಾರಕ್ಕೆ ಸಾಕ್ಷಿ ಯಾದ ಮತ್ತು ಸಾಕಷ್ಟು ಕಲ್ಲೆಸೆತಗಳನ್ನು ತಿಂದ ರಾಮ್-ರಹೀಮ್ ಓಣಿಯ ಅಬೂಬಕರ್ ಮಸೀದಿಯಿಂದ ಎಂದಿನಂತೆ ಅಝಾನ್ ಮೊಳಗುತ್ತಿದೆ. ಹಿಂಸೆಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಮತ್ತು ಹಿಂಸೆ ಮಾನವ ಕುಲದ ಶತ್ರು ಎಂದು ಬುದ್ಧಿ ಮಾತು ಹೇಳುವಂತೆ ಕಾಣಿಸುತ್ತಿದೆ. ಇದೇ ರಾಮ್-ರಹೀಮ್ ಓಣಿಯ ಪಕ್ಕದ ಓಣಿಯೇ ಹಗ್ಗದ ದೊಡ್ಡಿ ಓಣಿ. ಈ ಓಣಿಯಲ್ಲೇ ಈ ಬಾರಿ ಗಣೇಶನನ್ನು ಕೂರಿಸಲಾಗಿತ್ತು. ಪ್ರತಿ ವರ್ಷವೂ ಇಲ್ಲೇ ಗಣೇಶನನ್ನು ಕೂರಿಸಲಾಗುತ್ತದೆ. ಈ ಓಣಿಯೂ ಅಷ್ಟೇ. ಹಿಂಸೆ ಮತ್ತು ದ್ವೇಷಕ್ಕೆ ನನ್ನಲ್ಲಿ ಜಾಗವಿಲ್ಲ ಎಂಬಂತೆ ಸಹಜವಾಗಿದೆ. ಪಕ್ಕದ ಓಣಿಯ ಅಬೂಬಕರ್ ಮಸೀದಿಗೂ ತನ್ನಲ್ಲಿ ಕೂರಿಸಲಾದ ಗಣೇಶ ಮೂರ್ತಿಗೂ ನಡುವೆ ಯಾವ ತಕರಾರೂ ಇಲ್ಲ ಎಂದು ಸಾರಿ ಸಾರಿ ಹೇಳುವಂತೆ ಕಾಣಿಸುತ್ತಿದೆ.
ಸಾಮಾನ್ಯವಾಗಿ,
ಹಿಂಸಾಚಾರಕ್ಕೆ ಸಾಕ್ಷಿಯಾದ ಯಾವುದೇ ಊರು ಕೆಲವು ದಿನಗಳ ಮಟ್ಟಿಗಾದರೂ ಹಿಂದೂ-ಮುಸ್ಲಿಮ್ ಎಂದು ವಿಭಜನೆಗೊಂಡಿರು ತ್ತದೆ. ದಿನಾ ಮುಖಾಮುಖಿಯಾಗುತ್ತಿದ್ದ ಮತ್ತು ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿದ್ದವರು ಹಿಂಸೆಯ ಬೆಂಕಿಗೆ ಬಿಸಿಯಾದವರಂತೆ ನಡಕೊಳ್ಳು ವುದಿದೆ. ಮುಖಕ್ಕೆ ಮುಖ ಕೊಟ್ಟು ಮಾತಾಡುವುದಕ್ಕೆ ಹಿಂಜರಿಯುವುದಿದೆ. ಮಾತನಾಡಿದರೂ ಹಿಂಸೆಯ ಆರೋಪವನ್ನು ಒಬ್ಬರ ಮೇಲೊಬ್ಬರು ಹೊರಿಸಿ ಇನ್ನೊಂದು ಸುತ್ತಿನ ಘರ್ಷಣೆಗೆ ಪೂರಕ ವಾತಾವರಣ ನಿರ್ಮಿಸುವುದಿದೆ. ಮುಸ್ಲಿಮರ ಅಂಗಡಿಗೆ ಹಿಂದೂಗಳು ಹೋಗುವುದನ್ನು ಸ್ಥಗಿತಗೊಳಿಸುವುದಿದೆ. ಹಿಂದೂಗಳ ಅಂಗಡಿಗಳಿಗೆ ಮುಸ್ಲಿಮರು ಹೋಗುವುದನ್ನೂ ನಿಲ್ಲಿಸುವುದಿದೆ. ಹಿಂಸೆ ಮತ್ತು ಘರ್ಷಣೆಯ ನೆನಪು ಹಸಿಹಸಿ ಇರುವಾಗ ಇಂಥ ವಿಭಜನೆಗಳು ಬೇಡಬೇಡ ವೆಂದರೂ ಆಗುವುದು ಪರಿಸ್ಥಿತಿಯ ಸಹಜ ಭಾವವಾಗಿರುತ್ತದೆ.
ಆದರೆ,
ಮದ್ದೂರಿನ ರಾಮ್-ರಹೀಮ್ ಓಣಿಯಲ್ಲಾಗಲಿ ಅಥವಾ ಗಣೇಶನನ್ನು ಕೂರಿಸಿದ ಹಗ್ಗದ ದೊಡ್ಡಿ ಓಣಿಯಲ್ಲಾಗಲಿ ಸನ್ಮಾರ್ಗ ತಂಡಕ್ಕೆ ಈ ವಿಭಜನೆ ಕಾಣಿಸಲೇ ಇಲ್ಲ. ಕಲ್ಲೆಸೆತ ನಡೆದು ಮೂರು ದಿನಗಳ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಸನ್ಮಾರ್ಗ ತಂಡಕ್ಕೆ ಈ ಎರಡೂ ಓಣಿಗಳು ನಿರೀಕ್ಷೆಯನ್ನೇ ಬುಡಮೇಲುಗೊಳಿಸುವಂತೆ ಪ್ರೀತಿ ಯಿಂದಲೇ ಸ್ವಾಗತಿಸಿದುವು. ತಪ್ಪಿತಸ್ತರಿಗೆ ಶಿಕ್ಷೆ ಕೊಡಿ ಎಂದು ಈ ಎರಡೂ ಓಣಿಗಳು ಆಗ್ರಹಿಸಿದುವೇ ಹೊರತು ಪ್ರತಿಭಟನೆಯ ವೇಳೆ ಜ್ಯೋತಿ ಎಂಬ ಪೆಟ್ರೋಲ್ ಪಂಪ್ ಉದ್ಯೋಗಿ ಆಡಿದ ಅವಾಚ್ಯ ಬೈಗುಳವನ್ನಾಗಲಿ ರಾಜಕಾರಣಿ ಗಳ ದ್ವೇಷ ಉಗುಳುವ ಮಾತುಗಳನ್ನಾಗಲಿ ಸಮರ್ಥಿಸಲೇ ಇಲ್ಲ. ಪ್ರತಿಭಟನೆಯ ನೆಪದಲ್ಲಿ ಹೊರಗಿನಿಂದ ಬಂದು ಉಗುಳಿದ ಧರ್ಮದ್ವೇಷದ ಮಾತುಗಳನ್ನು ಈ ಎರಡೂ ಓಣಿಗಳು ಹೊರ ಗಡೆಯೇ ಇಟ್ಟವು. ಮುಸ್ಲಿಮ್ ಮುಖಂಡರೂ ಅತ್ಯಂತ ವಿವೇಕದಿಂದ ಮಾತಾಡಿದರು. ಕಲ್ಲೆಸೆತದ ಆರೋಪ ತನ್ನ ಸಮುದಾಯದ ಯುವಕರ ಮೇಲಿದೆ ಎಂಬುದನ್ನು ಅವರು ನಿರಾಕರಿಸಲಿಲ್ಲ. ಅದಕ್ಕಿಂತಲೂ ಮುಖ್ಯವಾಗಿ, ಆರೋಪಿಗಳ ಬೆಂಬಲಕ್ಕೂ ನಿಲ್ಲಲಿಲ್ಲ. ಮಾತ್ರವಲ್ಲ, ತನಿಖೆ ಯಿಂದ ಸತ್ಯ ಹೊರಬರುವುದಕ್ಕಿಂತ ಮೊದಲು ಷರಾ ಬರೆದು ಬಿಡುವುದರ ಅಪಾಯದ ಬಗ್ಗೆಯೂ ಅವರಲ್ಲಿ ಎಚ್ಚರಿಕೆ ಇರುವುದು ಸ್ಪಷ್ಟ ವಾಗಿತ್ತು. ಹಿಂಸೆ ಧರ್ಮದ ಭಾಗವಲ್ಲ ಮತ್ತು ಸಮುದಾಯ ಎಂದೂ ಹಿಂಸೆಯ ವಿರೋಧಿ ಎಂದು ಹೇಳುತ್ತಲೇ ಕಲ್ಲೆಸೆತ ನಡೆದ ಜಾಗ, ಆ ಬಳಿಕದ ಬಂಧನ ಮತ್ತು ಅದಕ್ಕಿಂತಲೂ ಮೊದಲು ಮ್ಯಾಪ್ ರೂಟಲ್ಲೇ ಇಲ್ಲದ ರಸ್ತೆಯ ಮೂಲಕ ಗಣೇಶ ಮೆರವಣಿಗೆ ಸಾಗಿ ಬಂದ ಬಗ್ಗೆ ಅವರಲ್ಲಿ ಮತ್ತು ಸ್ಥಳೀಯರಲ್ಲಿ ಪ್ರಶ್ನೆ, ಸಂದೇಹ ಮತ್ತು ಷಡ್ಯಂತ್ರದ ಅನುಮಾನಗಳೂ ಇದ್ದೇ ಇದ್ದುವು.
ನಡೆದದ್ದೇನು?
ಸೆಪ್ಟೆಂಬರ್ 7 ಆದಿತ್ಯವಾರ. ಸಂಜೆ 7ರಿಂದ 8 ಗಂಟೆಯ ನಡುವೆ ಪಕ್ಕದ ಹಗ್ಗದ ದೊಡ್ಡಿಯ ಓಣಿಯಿಂದ ಹೊರಟ ಗಣೇಶ ವಿಸರ್ಜನಾ ಮೆರವಣಿಗೆಯು ರಾಮ್-ರಹೀಮ್ ಓಣಿಯ ಅಬೂಬಕರ್ ಮಸೀದಿಯನ್ನು ದಾಟಿ 100 ಮೀಟರ್ ದೂರ ಹೋದಾಗ ಮೆರವಣಿಗೆಯ ಮೇಲೆ ಕಲ್ಲೆಸೆತ ನಡೆದಿದೆ. ಅಬೂಬಕರ್ ಮಸೀದಿಯಲ್ಲಿ ಮಗ್ರಿಬ್ (ಇಳಿಸಂಜೆ) ನಮಾಜ್ ಮುಗಿದು ಇನ್ನೂ ಜನರು ಸಂಪೂರ್ಣ ಚದುರಿರಲಿಲ್ಲ. ಈ ಹೊತ್ತಲ್ಲೇ ಈ ಕಲ್ಲೆಸೆತ ನಡೆದಿದೆ. ಕಲ್ಲೆಸೆತದಿಂದ ಮೆರವಣಿಗೆ ಪ್ರಕ್ಷುಬ್ಧ ವಾಗಿದೆ. ಭಕ್ತರು ಆಕ್ರೋಶಗೊಂಡಿದ್ದಾರೆ. 100 ಮೀಟರ್ ಹಿಂದೆ ಇರುವ ಅಬೂಬಕರ್ ಮಸೀದಿಗೆ ಅವರು ಪ್ರತಿಯಾಗಿ ಕಲ್ಲೆಸೆದಿದ್ದಾರೆ. ಈ ಕಲ್ಲೆಸೆತವು ಆಗಷ್ಟೇ ನಮಾಝï ಮುಗಿಸಿ ಮನೆಗೆ ತೆರಳಲು ಸಿದ್ಧರಾದವರನ್ನು ಕೆರಳಿಸಿದೆ. ಅನಿರೀಕ್ಷಿತ ಕಲ್ಲೆಸೆತಕ್ಕೆ ಅವರೂ ಪ್ರತಿಕಲ್ಲು ಎಸೆದಿದ್ದಾರೆ. ಕಲ್ಲಿಗೆ ಕಲ್ಲು ಎಂಬ ಕ್ರಿಯೆ-ಪ್ರತಿಕ್ರಿಯೆಯಲ್ಲಿ 6 ಮಂದಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಇದರಲ್ಲಿ ಓರ್ವ ಹಿಂದೂ ಮತ್ತು ಓರ್ವ ಮುಸ್ಲಿಮ್. ಇಬ್ಬರು ಪೊಲೀಸರು ಮತ್ತು ಇಬ್ಬರು ಹೋಮ್ ಗಾರ್ಡ್ ಗಳು. ಹಿಂದೂ-ಮುಸ್ಲಿಮ್ ನಡುವೆ ಹೊಡೆದಾಟ-ಬಡಿದಾಟಗಳೂ ನಡೆದಿವೆ. ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದ ವ್ಯಕ್ತಿಯ ಮೇಲೆ ಕೈ ಮಾಡಲಾಗಿದೆ. ಸುಮಾರು 25 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲರೂ ಮುಸ್ಲಿಮರೇ. ಈ ಬಂಧಿತರಲ್ಲಿ ಕಲ್ಲೆಸೆತದ ಆರೋಪಿಗಳು ಇರುವಂತೆಯೇ ಘಟನೆಯನ್ನು ಸೆರೆ ಹಿಡಿಯುತ್ತಿದ್ದ ವ್ಯಕ್ತಿಯ ಮೇಲೆ ಕೈ ಮಾಡಿದ ಆರೋಪದಲ್ಲಿ ಬಂಧನಕ್ಕೀಡಾದವರೂ ಇದ್ದಾರೆ.
ಗಮನಿಸಬೇಕಾದ ಸಂಗತಿ
ಮದ್ದೂರಿನ ಈ ರಾಮ್-ರಹೀಮ್ ಓಣಿಯಾಗಲಿ ಅಥವಾ ಪಕ್ಕದ ಹಗ್ಗದ ದೊಡ್ಡಿ ಓಣಿಯಾಗಲಿ ಈ ಹಿಂದೆ ಕೋಮು ಘರ್ಷಣೆಗೆ ಸುದ್ದಿಯಾದ ಉದಾಹರಣೆಗಳಿಲ್ಲ. ಕಳೆದವರ್ಷ ಸೆಪ್ಟೆಂಬರ್ 11ರಂದು ಇದೇ ಮಂಡ್ಯದ ನಾಗಮಂಗಲವು ಹಿಂದೂ-ಮುಸ್ಲಿಮ್ ಘರ್ಷಣೆಯ ಕಾರಣಕ್ಕಾಗಿ ಸುದ್ದಿಯಾಗಿತ್ತು. ಇಲ್ಲಿನ ಬದರಿ ಕೊಪ್ಪದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯು ಕಲ್ಲೆಸೆತದ ಕಾರಣಕ್ಕಾಗಿ ವ್ಯಾಪಕ ಚರ್ಚೆಗೆ ಒಳಗಾಗಿತ್ತು. ಈ ಮೆರವಣಿಗೆಗಿಂತ ಮೊದಲು ಎರಡೂ ಸಮುದಾಯಗಳ ಮುಖಂಡರನ್ನು ಕರೆದು ಪೊಲೀಸರು ಸಭೆ ನಡೆಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ಪಾಲಿಸಿದ್ದರು. ಆದರೆ ಪೊಲೀಸರಿಗೆ ನೀಡಿದ ರೂಟ್ ಮ್ಯಾಪನ್ನು ಅನುಸರಿಸದೇ ಮೆರವಣಿಗೆಯು ಭಿನ್ನ ದಾರಿಯಲ್ಲಿ ಸಾಗಿದೆ ಎಂಬ ಆರೋಪ ಆಗ ಕೇಳಿ ಬಂದಿತ್ತು. ದರ್ಗಾದ ಬಳಿ ತುಂಬಾ ಹೊತ್ತು ಮೆರವಣಿಗೆಯನ್ನು ನಿಲ್ಲಿಸಿ ಡ್ಯಾನ್ಸ್ ಮಾಡಲಾಗಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು. ಈ ಆರೋಪವನ್ನು ಅಲ್ಲಗಳೆದೂ ಸಮರ್ಥಿಸಿಯೂ ಸ್ಥಳೀಯರು ಅಭಿಪ್ರಾಯಪಟ್ಟಿದ್ದರು. ಇದೇ ಸಂದರ್ಭದಲ್ಲಿ ಘರ್ಷಣೆ ಉಂಟಾಗಿತ್ತು. ಸೆಪ್ಟೆಂಬರ್ 12ರಂದು ಸ್ಥಳೀಯ ಶಾಲಾ ಕಾಲೇಜುಗಳಿಗೆ ರಜೆ ಸಾರುವಷ್ಟು ಘರ್ಷಣೆ ಕಾವು ಪಡೆದಿತ್ತು.
ನಾಗಮಂಗಲಕ್ಕೂ ಮದ್ದೂರಿಗೂ ಏನು ಸಂಬಂಧ?
2024 ಸೆಪ್ಟಂಬರ್ 11ರಂದು ಘರ್ಷಣೆಗೆ ತುತ್ತಾದ ನಾಗ ಮಂಗಲ ಮತ್ತು 2025 ಸೆಪ್ಟೆಂಬರ್ 7ರಂದು ಘರ್ಷಣೆ ಉಂಟಾದ ಮದ್ದೂರು- ಇವೆರಡೂ ಅಕ್ಕಪಕ್ಕದ ತಾಲೂಕುಗಳು. ಅವಳಿ-ಜವಳಿ ಎನ್ನಬಹುದಾದಷ್ಟು ಸಂಬAಧ ಮತ್ತು ಸಹಬಾಳ್ವೆಯ ಇತಿಹಾಸವನ್ನು ಇವೆರಡೂ ಹೊಂದಿವೆ. ನಾಗಮಂಗಲದಲ್ಲಿ 2023ರಲ್ಲೂ ಕಲ್ಲೆಸೆತದ ಘಟನೆ ನಡೆದಿದೆ ಎಂಬ ಅಭಿಪ್ರಾಯವಿದೆ. ಆದರೆ ಅದು ಸುದ್ದಿಯಾಗಲಿಲ್ಲ. ಆದರೆ ಮದ್ದೂರು ಹಾಗಲ್ಲ. ಇದೀಗ ಕಲ್ಲೆಸೆತದ ಕಾರಣಕ್ಕೆ ಸುದ್ದಿಗೀಡಾದ ರಾಮ್-ರಹೀಮ್ ಓಣಿಯೂ ಹಾಗಲ್ಲ. ಸಕ್ಕರೆಯ ನಾಡು ಎಂಬ ಮಂಡ್ಯದ ಹೆಸರಿನ ಅನ್ವರ್ಥವಾಗಿ ಸಕ್ಕರೆಯಂಥ ಸುದ್ದಿಯನ್ನಷ್ಟೇ ಈವರೆಗೆ ನೀಡುತ್ತಾ ಬಂದ ಊರು ಇದು. ಈ ನಾಗಮಂಗಲ ಮತ್ತು ಮದ್ದೂರಿನ ನಡುವೆ 60 ಕಿ.ಮೀಟರ್‌ಗಳಷ್ಟು ಅಂತರವಷ್ಟೇ ಇದೆ. ಆದ್ದರಿಂದಲೇ, ನಾಗಮಂಗಲದಲ್ಲಿ ಏನು ನಡೆಯುತ್ತದೋ ಅದರ ಪ್ರಭಾವ ಮತ್ತು ನೆರಳು ಮದ್ದೂರಿನ ಮೇಲೂ ಬೀಳಬಹುದಾದ ಸಾಧ್ಯತೆಯಂತೂ ಇದ್ದೇ ಇದೆ. ಅಕ್ಕಪಕ್ಕದ ತಾಲೂಕುಗಳೆಂದರೆ ಜನರ ಓಡಾಟ-ಮಾತುಕತೆ, ವ್ಯವಹಾರ ಇತ್ಯಾದಿಗಳೆಲ್ಲ ಪರಸ್ಪರ ಸಹಜ. ಬಹುತೇಕ ಭಾವನೆಗಳ ವಿನಿಮಯವೂ ಆಗುತ್ತಿರುತ್ತದೆ. ವೈವಾಹಿಕ ಸಂಬಂಧಗಳೂ ನಡೆಯುತ್ತಿರುತ್ತವೆ. ಮದ್ದೂರು ಮತ್ತು ನಾಗಮಂಗಲದ ಜನರ ನಡುವೆ ಇಂಥದ್ದೊಂದು ಕೊಡು-ಕೊಳ್ಳುವಿಕೆಗಳ ಸಂಬಂಧ ಇದ್ದೇ ಇರಬಹುದು.
ಪ್ರಶ್ನೆಗಳೇನು?
ಘಟನೆ ನಡೆದಿರುವ ರಾಮ್-ರಹೀಮ್ ಪ್ರದೇಶದಲ್ಲಿ ಹಿಂದೂಗಳ ಜನಸಂಖ್ಯೆಯೇ ಹೆಚ್ಚಿದೆ. ಸರಾಸರಿ ಮೂರು ಹಿಂದೂ ಮನೆಗಳಿಗೆ ಒಂದು ಮುಸ್ಲಿಮ್ ಮನೆ ಇರಬಹುದು ಎಂದು ಸ್ಥಳೀಯರು ಹೇಳುತ್ತಾರೆ. ಅಬೂಬಕರ್ ಮಸೀದಿಯನ್ನು ದಾಟಿ 100 ಮೀಟರ್ ದೂರ ಹೋದಾಗ ಮೆರವಣಿಗೆಯ ಮೇಲೆ ಕಲ್ಲೆಸೆತ ನಡೆದಿದೆ. ಆ ಸಂದರ್ಭದಲ್ಲಿ ಅಲ್ಲಿ ಬೀದಿದೀಪ ಉರಿಯುತ್ತಿರಲಿಲ್ಲ. ಕತ್ತಲಾಗಿತ್ತು. ಆದ್ದರಿಂದಲೇ ಕೆಲವು ಪ್ರಶ್ನೆಗಳೂ ಏಳುತ್ತವೆ. ಈ ಕೃತ್ಯ ಪೂರ್ವನಿಯೋಜಿತವಾಗಿತ್ತೇ? ಆ ನಿರ್ದಿಷ್ಟ ಸ್ಥಳದಲ್ಲಿ ಅದರಲ್ಲೂ ಮಸೀದಿಯ ತುಸು ದೂರದಲ್ಲೇ ಈ ಷಡ್ಯಂತ್ರದ ಸ್ಪಾಟ್ ಹೆಣೆದವರು ಯಾರು? ಮಸೀದಿಯ ಹತ್ತಿರವೇ ರಸ್ತೆದೀಪ ವನ್ನು ಆರಿಸಿ ಕಲ್ಲೆಸೆದರೆ ಅದರಿಂದ ಮುಸ್ಲಿಮರ ಮೇಲೆಯೇ ಅನುಮಾನ ಬರುವುದು ಸಹಜ ಎಂದು ಷಡ್ಯಂತ್ರ ಹೆಣೆದವರಿಗೆ ಗೊತ್ತೇ ಇರಬೇಕಲ್ಲವೇ? ಇಷ್ಟು ಗೊತ್ತಿದ್ದೂ ಮುಸ್ಲಿಮರು ಇದೇ ಸ್ಥಳವನ್ನು ಕಲ್ಲೆಸೆಯಲು ಆಯ್ಕೆ ಮಾಡಿಕೊಂಡರೇ? ಕಲ್ಲೆಸೆಯಲೂ ಸಿದ್ಧ, ಬಂಧನಕ್ಕೂ ಬದ್ಧ ಎಂಬ ನಿಲುವಿಗೆ ಅವರು ಬಂದಿದ್ದರೇ? ಒಂದುವೇಳೆ ಇದುವೇ ನಿಜ ಎಂದಾದರೆ, ಅವರು ಪೊಲೀಸರಿಗೆ ನೇರವಾಗಿ ಶರಣಾಗಬೇಕಿತ್ತಲ್ಲವೇ? ಅವರೇಕೆ ಹಾಗೆ ಮಾಡಲಿಲ್ಲ? ಅಥವಾ ಈ ಕಲ್ಲೆಸೆತದ ಹಿಂದೆ ಬೇರೇನಾದರೂ ಷಡ್ಯಂತ್ರ ನಡೆದಿದೆಯೇ? ಮುಸ್ಲಿಮರ ಮೇಲೆ ಅನುಮಾನ ಬರುವಂತೆ ಮಾಡುವ ಉದ್ದೇಶದಿಂದಲೇ ಆ ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಯಿತೇ?
ಇನ್ನೊಂದು ಪ್ರಶ್ನೆ ಏನೆಂದರೆ,
ಪ್ರತಿವರ್ಷ ಸಾಗುತ್ತಿದ್ದ ಮೆರವಣಿಗೆಯ ದಾರಿಯನ್ನು ಈ ವರ್ಷ ಬದಲಿಸಲಾಗಿದೆ ಎಂಬುದು ಸ್ಥಳೀಯರ ಆರೋಪ. ಪ್ರತೀವರ್ಷ ಮಸೀದಿ ಮುಂದಿನ ದಾರಿಯಾಗಿ ಮೆರವಣಿಗೆ ಸಾಗುತ್ತಾ ಇರಲಿಲ್ಲ. ಮಸೀದಿಗಿಂತ ನೂರು ಮೀಟರ್ ಮೊದಲೇ ಸಿಗುವ ಬಲಬದಿ ತಿರುವಿನ ಮೂಲಕ ಗಣೇಶ ವಿಸರ್ಜನಾ ಮೆರವಣಿಗೆ ಸಾಗುವುದು ರೂಢಿಯಾಗಿತ್ತು. ಈ ಬಾರಿಯೂ ಅದೇ ದಾರಿಯಾಗಿ ಮೆರವಣಿಗೆ ಸಾಗಲಿದೆ ಎಂದೇ ಪೊಲೀಸರಿಗೂ ತಿಳಿಸಲಾಗಿತ್ತು ಎಂದೂ ಅಭಿಪ್ರಾಯವಿದೆ. ಪೊಲೀಸರಿಗೆ ನೀಡಿದ ರೂಟ್ ಮ್ಯಾಪಲ್ಲಿ ಈ ಮಸೀದಿ ರಸ್ತೆಯ ಉಲ್ಲೇಖ ಇರಲಿಲ್ಲ ಎಂದೂ ಹೇಳಲಾಗುತ್ತಿದೆ. ಆದ್ದರಿಂದಲೇ, ಈ ರಸ್ತೆಯಲ್ಲಿ ಪೊಲೀಸ್ ಕಣ್ಗಾವಲೂ ಇರಲಿಲ್ಲ. ಅಗತ್ಯ ಪೊಲೀಸರ ನಿಯೋಜನೆಯೂ ಇರಲಿಲ್ಲ. ಇಬ್ಬರು ಹೋಮ್‌ಗಾರ್ಡ್ಗಳು ಮತ್ತು ಓರ್ವ ಪೊಲೀಸರು ಮಾತ್ರ ಇಲ್ಲಿದ್ದರು ಎಂಬ ಮಾಹಿತಿಯಿದೆ. ಆದ್ದರಿಂದಲೇ, ಘರ್ಷಣೆಯನ್ನು ಆರಂಭದಲ್ಲಿ ತಡೆಯಲು ಅವರಿಂದ ಸಾಧ್ಯವಾಗಲಿಲ್ಲ. ಮಾತ್ರವಲ್ಲ, ಘರ್ಷಣೆಯಲ್ಲಿ ಅವರು ಗಾಯಗೊಂಡವರ ಪಟ್ಟಿಯಲ್ಲಿದ್ದಾರೆ. ತಕ್ಷಣ ಹೆಚ್ಚುವರಿ ಪೊಲೀಸರು ಬರದೇ ಇರುತ್ತಿದ್ದರೆ ಇನ್ನಷ್ಟು ಅನಾಹುತಗಳಾಗುತ್ತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯ.
ಸಾಧ್ಯತೆಗಳು
ರಾಮ್-ರಹೀಮ್ ಓಣಿ ಮತ್ತು ಹಗ್ಗದ ದೊಡ್ಡಿ ಓಣಿಗಳೆರಡೂ ಅಕ್ಕ-ಪಕ್ಕ ಓಣಿಗಳು. ಸಹೋದರ ಓಣಿಗಳೆಂದರೂ ತಪ್ಪಿಲ್ಲ. ದಿನಾ ಮಾತಾಡುವ, ಮುಖ ಮುಖ ನೋಡುವ ಮತ್ತು ವ್ಯವಹಾರ ನಡೆಸುವ ಜನರ ಮಧ್ಯೆ ಬರೇ ಸೌಹಾರ್ದವಷ್ಟೇ ಇರುವುದಿಲ್ಲ. ಜಗಳಗಳೂ ನಡೆಯುತ್ತವೆ. ಮನಸ್ತಾಪ, ಹಗೆತನಗಳೂ ಇರುವುದಿದೆ. ಇಂಥ ಮನಸ್ತಾಪಗಳೇ ಈ ಘಟನೆಗೆ ಕಾರಣವಾಗಿರುವ ಸಾಧ್ಯತೆ ಇದೆಯಾ? ನಿತ್ಯ ನೋಡುವವರೇ ಆಗಿರುವುದರಿಂದ ಗುರುತು ಸಿಗದಿರಲಿ ಎಂದು ಬೀದಿ ದೀಪವನ್ನು ಆರಿಸಿ ಕಲ್ಲೆಸೆತ ನಡೆಸಿರಬಹುದಾ? ಇಲ್ಲಿನ ಜನರಲ್ಲಿ ಶ್ರೀಮಂತರು ಕಡಿಮೆ. ಆದ್ದರಿಂದಲೇ ಕಾರುಗಳ ಸಂಖ್ಯೆಯೂ ಕಡಿಮೆ. ದೊಡ್ಡ ದೊಡ್ಡ ಮನೆಗಳ ಸಂಖ್ಯೆಯೂ ಕಡಿಮೆ. ದ್ವಿಚಕ್ರ ವಾಹನಗಳದ್ದೇ ಇಲ್ಲಿ ಪಾರಮ್ಯ. ಸೈಕಲ್ಲು, ತಳ್ಳುಗಾಡಿಗಳೂ ಧಾರಾಳ ಇವೆ. ಇಲ್ಲಿನವರು ತರಕಾರಿ ಬೆಳೆದು ಮಾರಾಟ ಮಾಡುವವರು, ಹೊಟೇಲಲ್ಲಿ ಕೆಲಸ ಮಾಡುವವರು, ಕೂಲಿ ಕೆಲಸ ಮತ್ತು ಬೀದಿಬದಿ ತಳ್ಳುಗಾಡಿಯಿಟ್ಟು ವ್ಯಾಪಾರ ನಡೆಸುವವರೇ ಹೆಚ್ಚಿದ್ದಾರೆ. ಅಂದರೆ, ಇಲ್ಲಿನವರು ಸ್ಥಳೀಯವಾಗಿಯೇ ದುಡಿಯುತ್ತಿದ್ದು, ಒಪ್ಪೊತ್ತಿನ ಊಟವನ್ನು ಹೋರಾಡಿಯೇ ಗಳಿಸುತ್ತಿದ್ದಾರೆ. ಆದ್ದರಿಂದ, ಇಲ್ಲಿನವರಲ್ಲಿ ಹೆಚ್ಚಿನವರು ದಿನಾ ಮುಖತಃ ಭೇಟಿಯಾಗುತ್ತಿರುವವರೂ ಮಾತುಕತೆ ನಡೆಸುತ್ತಿರುವವರೂ ಆಗಿರುವ ಸಾಧ್ಯತೆಯೇ ಅಧಿಕ ಇದೆ. ಇಂಥ ಸಂದರ್ಭಗಳಲ್ಲಿ ಜಗಳ, ಘರ್ಷಣೆ, ಮನಸ್ತಾಪದ ಮಾತುಗಳಿಗೆ ಅವಕಾಶವೂ ಹೆಚ್ಚು.
ಪ್ರತಿಭಟನೆ ಮತ್ತು ನಂತರ
ಕಲ್ಲೆಸೆತದ ಬಳಿಕ ಪ್ರತಿಭಟನೆ ನಡೆದಿದೆ. ಬಿಜೆಪಿಯ ರಾಜ್ಯ ನಾಯಕರು ಭಾಗವಹಿಸಿದ್ದಾರೆ. ಬಿಜೆಪಿ ನಾಯಕರಾದ ಶಾಸಕ ಸಿಟಿ ರವಿಯಿಂದ ಹಿಡಿದು ಯತ್ನಾಳ್ ವರೆಗೆ ಮತ್ತು ಮಾಜಿ ಸಂಸದ ಪ್ರತಾಪ ಸಿಂಹರಿಂದ ಹಿಡಿದು ವಿರೋಧಪಕ್ಷದ ನಾಯಕ ಅಶೋಕ್ ವರೆಗೆ ಎಲ್ಲರೂ ಬೆಂಕಿ ಭಾಷಣ ಮಾಡಿದ್ದಾರೆ. ಜ್ಯೋತಿ ಎಂಬ ಪೆಟ್ರೋಲ್ ಪಂಪ್ ಉದ್ಯೋಗಿ ಮುಸ್ಲಿಮ್ ತಾಯಂದಿರನ್ನು ಅವಾಚ್ಯವಾಗಿ ಬೈದಿದ್ದಾಳೆ. ಪೊಲೀಸರು ಹೇರಿದ ೧೪೪ ಸೆಕ್ಷನ್ ಅನ್ನು ಲೆಕ್ಕಿಸದೆಯೇ ಬೃಹತ್ ಮೆರವಣಿಗೆ, ಪ್ರತಿಭಟನೆಗಳಾಗಿವೆ. ಆದರೆ,
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ರಾಜಕೀಯ ನಾಯಕರಾರೂ ಈ ರಾಮ್-ರಹೀಮ್ ಮತ್ತು ಹಗ್ಗದ ದೊಡ್ಡಿ ಓಣಿ ವಾಸಿಗಳನ್ನು ಮಾತಾಡಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅವರನ್ನು ವಿಶ್ವಾಸಕ್ಕೆ ಪಡಕೊಂಡದ್ದಾಗಲಿ ಅವರ ಬದುಕು-ಭಾವಗಳಿಗೆ ಕಿವಿಯಾದದ್ದಾಗಲಿ ನಡೆಸಿಲ್ಲ ಎಂಬ ನೋವೂ ಸ್ಥಳೀಯರಲ್ಲಿದೆ. ವಿಶೇಷ ಏನೆಂದರೆ, ಸರಕಾರ ಕೊಟ್ಟ ಭೂಮಿಯಲ್ಲಿ ಈ ರಾಮ್-ರಹೀಮ್ ಓಣಿಯವರು ವಾಸಿಸುತ್ತಿದ್ದಾರೆ. ಸಾಕಷ್ಟು ಮಂದಿಗೆ ಇನ್ನೂ ಪಟ್ಟಾ ಸಿಕ್ಕಿಲ್ಲ. ತಿಂಗಳಿಗೆ 12-15 ಸಾವಿರ ರೂಪಾಯಿ ಸಂಪಾದಿಸುವವರೇ ಇವರಲ್ಲಿ ಹೆಚ್ಚಿದ್ದಾರೆ. ಈ ಓಣಿಯಲ್ಲಿ ಬಹು ಸಂಖ್ಯಾತರು ಹಿಂದೂಗಳೇ ಆಗಿದ್ದರೂ ಇವರನ್ನು ಭೇಟಿಯಾಗು ವುದಕ್ಕಾಗಲಿ, ಭೂಮಿಯ ಪಟ್ಟಾವನ್ನು ಒದಗಿಸಿಕೊಡುವುದಕ್ಕಾಗಲಿ ಪ್ರತಿಭಟನಾಕಾರರು ಗಮನಿಸಿಯೇ ಇಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ. ರಾಜಕೀಯ ಲಾಭ ಪಡಕೊಳ್ಳುವುದಕ್ಕಷ್ಟೇ ಈ ಘಟನೆಯನ್ನು ಬಳಸಿಕೊಳ್ಳಲಾಗಿದೆ. ದುರ್ಬಲರು ಮತ್ತು ಹಿಂದು ಳಿದವರೇ ಹೆಚ್ಚಿರುವ ಈ ಓಣಿಗಳು ಆಗಬಾರದ ಕಾರಣಕ್ಕೆ ಸುದ್ದಿಗೀಡಾಗಿ ಒಮ್ಮೆ ರಾಷ್ಟ್ರಮಟ್ಟದಲ್ಲಿ ಮಿಂಚಿ ಮತ್ತದೇ ಹಳೆಯ ಸ್ಥಿತಿಗೆ ಮರಳಿದೆ ಎಂಬಂತಾಗಿದೆ.
ಇವು ಏನೇ ಇರಲಿ,
ಅನ್ಯಾಯಕ್ಕೆ ಹಿಂದೂ-ಮುಸ್ಲಿಮ್ ಎಂಬ ಬೇಧ ಇಲ್ಲ. ಅನ್ಯಾಯ ಯಾರು ಮಾಡಿದರೂ ಅದು ಅನ್ಯಾಯವೇ. ಅಂಥವರಿಗೆ ಧರ್ಮ-ಜಾತಿ ನೋಡದೇ ಶಿಕ್ಷೆ ಸಿಗುವಂತಾಗ ಬೇಕು. ಮಸೀದಿಯ ಮುಂದೆ ಗಣಪತಿ ಮೆರವಣಿಗೆ ಹೋಗುವುದರಿಂದ ಮಸೀದಿಗಾಗಲಿ ಇಸ್ಲಾಮ್‌ಗಾಗಲಿ ಯಾವ ತೊಂದರೆಯೂ ಇಲ್ಲ. ಈ ದೇಶದ ಯಾವ ಮಸೀದಿಯೇ ಆಗಲಿ ಮಂದಿರವೇ ಆಗಲಿ ಯಾವ ಧರ್ಮದ ಯಾವ ಮೆರವಣಿಗೆಯನ್ನೂ ತಡೆಯುವ ಹಾಗಿಲ್ಲ. ಅದರ ಬಗ್ಗೆ ದ್ವೇಷ ಸಾಧಿಸುವ ಹಾಗಿಲ್ಲ. ಹಾಗೆ ಮಾಡುವುದು ನ್ಯಾಯ ವಿರೋಧ. ಹಬ್ಬ-ಹರಿದಿನಗಳು ಯಥೇಚ್ಛವಾಗಿರುವ ಈ ದೇಶದಲ್ಲಿ ಹಿಂದೂ-ಮುಸ್ಲಿಮರು ಜೊತೆಯಾಗಿ ಬಾಳ ಬೇಕಾದವರು. ಒಬ್ಬರನ್ನೊಬ್ಬರು ಅರಿತು ಬದುಕಬೇಕಾದವರು. ತನ್ನ ಧರ್ಮವನ್ನು ಪಾಲಿಸುತ್ತಾ ಇತರ ಧರ್ಮವನ್ನು ಗೌರವಿಸುವುದನ್ನೇ ಎಲ್ಲ ಧರ್ಮಗಳೂ ಕಲಿಸಿವೆ. ಇದಕ್ಕೆ ಒಗ್ಗದವರನ್ನು ಕಾನೂನು ಶಿಕ್ಷಿಸಲಿ. ಇದೇವೇಳೆ,
ಉದ್ದೇಶಪೂರ್ವಕವಾಗಿ ಹಿಂಸೆಗೆ ಪ್ರಚೋದಿಸುವವರ ಬಗ್ಗೆಯೂ ಕಾನೂನು ಕಣ್ಣಿಡಲಿ. ಮಸೀದಿ ಮುಂದೆ ಪ್ರಚೋದನಾತ್ಮಕವಾಗಿ ಕುಣಿಯುವುದು, ಡಿಜೆ ಬಾರಿಸುವುದು ಇತ್ಯಾದಿಗಳನ್ನು ಯಾರೇ ಮಾಡಿದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಬೇಕು. ಈ ಬಗೆಯ ನಡವಳಿಕೆ ಧರ್ಮದ ಭಾಗವಲ್ಲ. ಆಚರಣೆಯ ಭಾಗವೂ ಅಲ್ಲ. ದುಷ್ಕರ್ಮಿಗಳನ್ನು ಧರ್ಮಾಧಾರಿತವಾಗಿ ವಿಭಜಿಸದೇ ದುಷ್ಕರ್ಮಿಗಳೆಂದೇ ಪರಿಗಣಿಸಿ ಕಾನೂನಿನ ಕೈಗೆ ಒಪ್ಪಿಸುವ ವಿವೇಕವನ್ನು ಹಿಂದೂ-ಮುಸ್ಲಿಮರು ತೋರಿದರೆ ಸಮಾಜಘಾತುಕರು ತನ್ನಿಂತಾನೇ ಕಡಿಮೆಯಾಗುತ್ತಾರೆ. ಹಾಗಾಗಲಿ ಎಂದು ಹಾರೈಕೆ.
No comments:
Post a Comment