Wednesday, August 2, 2023

ಹಿಂಸಾಚಾರದಲ್ಲಿ ಹೆಣ್ಣೇಕೆ ಬೆತ್ತಲಾಗಬೇಕು?





‘My children would ask me, why go to court - Recalls Muzaffar Nagar Riots Gang Rape victim of her decade long ordeal- ನೀನೇಕೆ ಕೋರ್ಟಿಗೆ ಹೋಗುತ್ತಿ ಅಮ್ಮ ಎಂದು ನ ನ್ನ ಮಕ್ಕಳು ಕೇಳುತ್ತಾರೆ...:  ಹತ್ತು ವರ್ಷಗಳ ದೀರ್ಘ ಕಾನೂನು ಹೋರಾಟವನ್ನು ನೆನಪಿಸಿಕೊಂಡ ಮುಝಫ್ಫರ್ ನಗರ್ ಗ್ಯಾಂಗ್ ರೇಪ್‌ನ ಸಂತ್ರಸ್ತೆ...  ಎಂಬ ತಲೆಬರಹದೊಂದಿಗೆ 2023 ಮೇ 18ರ ಔಟ್‌ಲುಕ್ ಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿತ್ತು.

ಅದಕ್ಕೆ ಕಾರಣವೂ ಇತ್ತು


ಹಿಂದೂ ಮತ್ತು ಮುಸ್ಲಿಮ್ ಯುವಕರಿಬ್ಬರ ನಡುವೆ ನಡೆದ ಬೈಕ್ ಅಪಘಾತವೊಂದು 42 ಮುಸ್ಲಿಮ್ ಮತ್ತು 20 ಹಿಂದೂಗಳ ಹತ್ಯೆಗೆ,  93 ಮಂದಿಯ ಗಾಯಕ್ಕೆ ಮತ್ತು 50 ಸಾವಿರಕ್ಕಿಂತಲೂ ಅಧಿಕ ಮಂದಿ ಊರು ತೊರೆದು ಪಲಾಯನ (ಬಹುತೇಕ ಎಲ್ಲರೂ  ಮುಸ್ಲಿಮರೇ) ಮಾಡುವುದಕ್ಕೆ ಕಾರಣವಾದ ಬೃಹತ್ ಹಿಂಸಾಚಾರಕ್ಕೆ ಕಾರಣವಾಯಿತು. 2013 ಆಗಸ್ಟ್ ಕೊನೆಯಲ್ಲಿ ಆರಂಭವಾದ  ಹಿಂಸಾಚಾರವು ಸೆಪ್ಟೆಂಬರ್ ನಲ್ಲಿ ಕೊನೆಗೊಂಡಿತು. ಹಸ್ತಲಾಘವ ಮಾಡಿ ನಕ್ಕು ಮುಗಿಸಿ ಬಿಡಬಹುದಾಗಿದ್ದ ಅಪಘಾತ ಪ್ರಕರಣವು  ಪ್ರತಿಷ್ಠೆಯಾಗಿ ಮಾರ್ಪಟ್ಟು, ಯುವತಿಗೆ ಕಿರುಕುಳ ಎಂಬ ವದಂತಿಯೊಂದಿಗೆ ಊರೆಲ್ಲಾ ಸುತ್ತಾಡಿತು. ಆ ಬಳಿಕ ಅಪಘಾತದಲ್ಲಿ  ಭಾಗಿಯಾದ ಮುಸ್ಲಿಂ ಯುವಕ ಮತ್ತು ಕಿರುಕುಳವನ್ನು ಪ್ರಶ್ನಿಸಲು ಹೋದವರೆಂದು ಹೇಳಲಾದ ಹಿಂದೂ  ಯುವಕರ ಹತ್ಯೆಯೂ ನಡೆಯಿತು. ಆದರೆ ಈ  ಹತ್ಯೆಗೆ ಸಂಬಂಧಿಸಿದಂತೆ  ದಾಖಲಾದ ಎಫ್‌ಐಆರ್‌ನಲ್ಲಿ ಕಿರುಕುಳದ ಉಲ್ಲೇಖವೇ ಇಲ್ಲ ಎಂದೂ ವರದಿಯಿದೆ. ಅಂತೂ ಪುಟ್ಟ ಜಗಳ  ಮತ್ತು ವದಂತಿಯೊಂದರ ಮೇಲೆ ಹುಟ್ಟಿಕೊಂಡ ಕೋಮು ಬೆಂಕಿ ಉತ್ತರ ಪ್ರದೇಶದ ಮುಝಫ್ಫರ್ ನಗರ್ ಉದ್ದಕ್ಕೂ ಕಾಡ್ಗಿಚ್ಚಿನಂತೆ  ಹರಡಿತು. ಈ ಬೆಂಕಿಯಲ್ಲಿ ನೊಂದು ಬೆಂದ ಓರ್ವ ಮುಸ್ಲಿಮ್ ಮಹಿಳೆಯ ಒಡಲ ಧ್ವನಿಯೇ ಈ ಮೇಲಿನ ಔಟ್ ಲುಕ್ ಪತ್ರಿಕೆಯ  ಶೀರ್ಷಿಕೆ. 


‘ಹಿಂದೂ ಯುವಕರ ಹತ್ಯೆ ನಡೆಸಿದ ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳಿ’..  ಎಂದು ಲೌಡ್ ಸ್ಪೀಕರ್‌ನಲ್ಲಿ ಕರೆ ಕೇಳಿಸಿತು. 2013 ಸೆ ಪ್ಟೆಂಬರ್ 7ರ ಘಟನೆ ಇದು. ನನ್ನ ಪತಿ ಟೈಲರ್. ನಮಗೆ ಆಗ 5 ಮತ್ತು ಎರಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದರು. ಮರುದಿನ  ಸೆಪ್ಟೆಂಬರ್ 8ರಂದು ನನ್ನ ದೊಡ್ಡ ಮಗನಿಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಮಗನನ್ನು ಪತಿ ವೈದ್ಯರಲ್ಲಿಗೆ ಕೊಂಡು ಹೋದರು. ಇದಾಗಿ  ಒಂದು ಗಂಟೆಯೊಳಗೆ ಎಲ್ಲೆಲ್ಲೂ ಭಯವೇ ತುಂಬಿಕೊಳ್ಳತೊಡಗಿತು. ಹತ್ತಿರದ ಮಸೀದಿಯಲ್ಲಿ ಮುಸ್ಲಿಮ್ ವ್ಯಕ್ತಿಯ ಹತ್ಯೆಯಾಗಿದೆ ಎಂಬ  ಸುದ್ದಿ ಕೇಳಿ ಬಂತು. ಹಿಂಸೆ ಭುಗಿಲೆದ್ದಿರುವುದರಿಂದ ಶಮ್ಲಿ ಗ್ರಾಮಕ್ಕೆ ಪಲಾಯನ ಮಾಡು ವಂತೆ ಅಕ್ಕಪಕ್ಕದವರು ಸಲಹೆ ನೀಡಿದರು.  ಅವರ ಜೊತೆ ನಾನೂ ಹೊರಟೆ. ಶಮ್ಲಿಯಲ್ಲಿ ನನ್ನ ಸಂಬಂಧಿಕರೂ ಇದ್ದರು. ಕಬ್ಬಿನ ತೋಟದ ನಡುವೆ ನಾವೆಲ್ಲ ಭಯದಿಂದ  ಹೊರಟೆವು. ನನ್ನ ಜೊತೆ ಮಗನಿದ್ದ. ಕಬ್ಬಿನ ಗಿಡದ ಕತ್ತಿಯಲಗಿನಂಥ ಎಲೆಗಳು ಮಗನ ಮೈಗೆ ತಾಕುತ್ತಿದ್ದುದರಿಂದ ಆತ ಕಿರುಚುತ್ತಿದ್ದ.  ನನಗೆ ಆ ದಾರಿ ಹೊಸತು. ಆ ಕಬ್ಬಿನ ತೋಟದಲ್ಲಿ ನಾನೆಂದೂ ಈ ಮೊದಲು ನಡೆದಿರಲಿಲ್ಲ. ನಾನು ಗುಂಪಿನಿಂದ  ಹಿಂದೆ ಬಿದ್ದೆ. ಹೀಗೆ  2 ಕಿ.ಮೀಟರ್ ನಡೆದು ಮುಖ್ಯ ರಸ್ತೆಗೆ ಬಂದೆ. ಶಮ್ಲಿಗೆ ಹೋಗಲು ವಾಹನ ಸಿಗುತ್ತದೋ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ,

  ನನ್ನನ್ನು ಮಹೇಶ್ ವೀರ್, ಸಿಕಂದರ್ ಮತ್ತು ಕುಲ್ದೀಪ್ ಎಂಬ ಪರಿಚಿತರೇ ಆದ ಯುವಕರು ಹಿಡಿದರು. ಇವರೆಷ್ಟು ಪರಿ ಚಿತರೆಂದರೆ, ನನ್ನ ಗಂಡನ ಟೈಲರ್ ಶಾಪ್‌ಗೆ ಹೋಗುತ್ತಿದ್ದವರು  ಇವರು. ನನ್ನ ಮನೆಗೆ ಅನುಮತಿಯನ್ನೇ ಕೇಳದೇ ಪ್ರವೇಶಿಸುವಷ್ಟು ಸಲುಗೆಯಿಂದ ಇದ್ದವರು. ಅವರ ಕೈಯಲ್ಲಿ ಆಯುಧವಿತ್ತು. ಪಕ್ಕದ  ಕಬ್ಬಿನ ತೋಟಕ್ಕೆ ಎಳೆದುಕೊಂಡು ಹೋದ ಅವರು ನನ್ನ ಮಗುವಿನ ಕತ್ತಿಗೆ ತಲವಾರು ಇಟ್ಟು ಬೆದರಿಸಿದರು. ನನ್ನ ಮೇಲೆ ಅತ್ಯಾಚಾರ  ನಡೆಸಿದರು. ಇವೆಲ್ಲ ಫಗುನಾ ಎಂಬ ಪ್ರದೇಶದಲ್ಲಿ ನಡೆದಿತ್ತು..’

2023 ಮೇಯಲ್ಲಿ ಮುಝಫ್ಫರ್ ನಗರ್ ಜಿಲ್ಲಾ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ವೀರ್ ಮತ್ತು ಸಿಕಂದರ್  ಎಂಬಿಬ್ಬರಿಗೆ 20 ವರ್ಷಗಳ ಶಿಕ್ಷೆ ವಿಧಿಸಿದ ಬಳಿಕ ಈ ಮಹಿಳೆಯನ್ನು ಭೇಟಿಯಾಗಿ ಔಟ್‌ಲುಕ್, ದಿ ಕ್ವಿಂಟ್ ಸಹಿತ ವಿವಿಧ ಪತ್ರಿಕೆಗಳು  ಮಾಡಿದ ವರದಿಯ ಸಂಕ್ಷಿಪ್ತ ರೂಪ ಈ ಮೇಲಿನ ಹೇಳಿಕೆ. ಇನ್ನೋರ್ವ ಆರೋಪಿ ಕುಲ್ದೀಪ್ ವಿಚಾರಣಾ ಹಂತದಲ್ಲೇ  ಮೃತಪಟ್ಟಿದ್ದ. ಔಟ್‌ಲುಕ್ ಈಕೆಗೆ  ಶಮಾ ಎಂದು ಹೆಸರಿಟ್ಟಿದೆ. ಆದರೆ, ಇದು ನಿಜನಾಮವಲ್ಲ. ಹಾಗಂತ, ಈ ನ್ಯಾಯ ಪ್ರಕ್ರಿಯೆ ಸುಗಮವಾಗಿರಲಿಲ್ಲ. ಖ್ಯಾತ ನ್ಯಾಯವಾದಿ ವೃಂದಾ ಗ್ರೋವರ್ ಅವರ ಬಲ ಇಲ್ಲದೇ ಇರುತ್ತಿದ್ದರೆ ಅಪರಾಧಿಗಳಿಗೆ  ಈ ಶಿಕ್ಷೆ ಸಿಗುತ್ತಿತ್ತೋ, ಗೊತ್ತಿಲ್ಲ. ಪೊಲೀಸ್ ಠಾಣೆಯಲ್ಲಿ ತಣ್ಣಗೆ ಮಲಗಿದ್ದ ಈ ಪ್ರಕರಣಕ್ಕೆ ಜೀವ ತುಂಬಿದ್ದು ವೃಂದಾ ಗ್ರೋವರ್. ಅವರು  ಸುಪ್ರೀಮ್ ಕೋರ್ಟಿಗೆ ಹೋಗಿ ಪೊಲೀಸರಿಗೆ ಬಿಸಿ ಮುಟ್ಟಿಸಿದ್ದರು. ಅಷ್ಟಕ್ಕೂ,

ಮುಝಫ್ಫರ್ ನಗರ್ ಹಿಂಸಾಚಾರದಲ್ಲಿ ನಡೆದ ಏಕೈಕ ಅತ್ಯಾಚಾರ ಪ್ರಕರಣವೇನೂ ಇದಾಗಿರಲಿಲ್ಲ. ಈ ಶಮಾಳೂ ಸೇರಿ ಒಟ್ಟು 7  ಮಂದಿಯ ಮೇಲಿನ ಅತ್ಯಾಚಾರ ಬೆಳಕಿಗೆ ಬಂದಿತ್ತು. ಇದರಲ್ಲಿ 6 ಮಂದಿ ಪೊಲೀಸರಿಗೆ ದೂರು ನೀಡಿದರು. ಓರ್ವಳಂತೂ ದೂರು  ನೀಡುವುದಕ್ಕೂ ಹೋಗಿರಲಿಲ್ಲ. ಬೆದರಿಕೆ ಮತ್ತು ಹಣದ ಆಮಿಷದೊಂದಿಗೆ ಆಕೆಯನ್ನು ತಡೆಯಲಾಯಿತು ಎಂಬ ಆರೋಪವೂ ಇದೆ.  ಈ 6 ಮಂದಿಯ ದೂರಿನ ಮೇಲೆ ಎಫ್‌ಐಆರ್ ದಾಖಲಾಯಿತಾದರೂ ಕೋರ್ಟು ವಿಚಾರಣೆಯ ವೇಳೆ ಇವರಲ್ಲಿ ಶಮಾಳನ್ನು ಬಿಟ್ಟು  ಉಳಿದ 5 ಮಂದಿ ಸಂತ್ರಸ್ತರೂ ಹೇಳಿಕೆ ಬದಲಿಸಿದರು. ‘ನಮ್ಮ ಮೇಲೆ ಅತ್ಯಾಚಾರವೇ ನಡೆದಿಲ್ಲ’ ಎಂದು ನ್ಯಾಯಾಧೀಶರ ಮುಂದೆ  ಹೇಳಿಕೊಂಡರು. ಇದರಿಂದಾಗಿ 22 ಮಂದಿ ಅತ್ಯಾಚಾರಿ ಆರೋಪಿಗಳು ಬಚಾವಾದರು. ಅಂದಹಾಗೆ,


ಹೇಳಿಕೆ ಬದಲಿಸಿದ ಆ ಸಂತ್ರಸ್ತ ಮಹಿಳೆಯರ ಮೇಲೆ ತಕ್ಷಣಕ್ಕೆ ನಮ್ಮಲ್ಲಿ ಅಸಮಾಧಾನ ಮೂಡಬಹುದು. ತಮ್ಮ ಮೇಲೆ ಕ್ರೌರ್ಯವೆಸಗಿದ  ಅಪರಾಧಿಗಳನ್ನು ದಂಡಿಸುವ ಅವಕಾಶವನ್ನು ಅವರೇಕೆ ಕಳೆದುಕೊಂಡರು ಎಂಬ ಪ್ರಶ್ನೆಯೂ ಇರಬಹುದು. ಆದರೆ ಕೋಮು  ಹಿಂಸಾಚಾರದಲ್ಲಿ ನಡೆಯುವ ಅತ್ಯಾಚಾರಕ್ಕೂ ಸಹಜ ಸಂದರ್ಭದಲ್ಲಿ ನಡೆಯುವ ಅತ್ಯಾಚಾರಕ್ಕೂ ಬಹಳ ವ್ಯತ್ಯಾಸ ಇರುತ್ತದೆ.  ಹಿಂಸಾಚಾರದ ಅತ್ಯಾಚಾರ ಅತ್ಯಂತ ಸುರಕ್ಷಿತ. ಹಿಂಸಾಚಾರದಲ್ಲಿ ತೊಡಗಿದ ಸಮಾಜವೇ ಇಂಥ ಅತ್ಯಾಚಾರಿಗಳ ಪರ ನಿಲ್ಲುತ್ತದೆ. ಅವರ  ರಕ್ಷಣೆಗಾಗಿ ವಿವಿಧ ರೀತಿಯ ತಂತ್ರಗಳನ್ನು ಹೆಣೆಯುತ್ತದೆ. ಅದರಲ್ಲಿ ಜೀವ ಬೆದರಿಕೆ, ಬಹಿಷ್ಕಾರದ ಕರೆ, ಹಣದ ಆಮಿಷ ಇತ್ಯಾದಿಗಳೂ  ಸೇರಿರುತ್ತವೆ. ಪಲಾಯನ ಮಾಡಿರುವ ಸಂತ್ರಸ್ತೆ ಮತ್ತು ಅವರ ಕುಟುಂಬ ಸುರಕ್ಷಿತವಾಗಿ ಊರಿಗೆ ಮರಳಬೇಕಾದರೆ ‘ಕೇಸು’  ಹಿಂತೆಗೆದುಕೊಳ್ಳಬೇಕು ಎಂಬ ಷರತ್ತನ್ನು ಸಮಾಜ ವಿಧಿಸುತ್ತದೆ. ಈ ಐವರು ಮಹಿಳೆಯರ ಪ್ರಕರಣದಲ್ಲೂ ಇಂಥದ್ದೇ  ಬೆಳವಣಿಗೆ ನಡೆದಿದೆ.


ಹಿಂಸಾಚಾರದ ವೇಳೆ ಫಗುನಾ ಗ್ರಾಮದಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಈ ಐವರು ಮಹಿಳೆಯರು 22 ಮಂದಿಯ  ವಿರುದ್ಧ ದೂರು ಕೊಟ್ಟಿದ್ದರು. ಎಫ್‌ಐಆರ್ ದಾಖಲಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಈ ನಡುವೆ, 2014 ಜೂನ್‌ನಲ್ಲಿ ಧೋಲೆರಾ  ಎಂಬ ಗ್ರಾಮದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವುದಾಗಿ ಪ್ರಕರಣ ದಾಖಲಾಯಿತು. 10 ಮಂದಿ ಮುಸ್ಲಿಮರನ್ನು  ಆರೋಪಿಗಳೆಂದು ಹೆಸರಿಸಲಾಯಿತು. ಈ ಫಗುನಾ ಮತ್ತು ಧೋಲೆರಾ ಗ್ರಾಮಗಳು 20 ಕಿ.ಮೀಟರ್ ಅಂತರದಲ್ಲಿವೆ. ಈ ಘಟನೆ  ನಡೆದದ್ದೇ ತಡ, ಅತ್ಯಾಚಾರ ಪ್ರಕರಣಗಳಲ್ಲಿ ಮಹತ್ತರ ಬದಲಾವಣೆಗಳಾದುವು. ಪ್ರಕರಣಗಳನ್ನು ಹಿಂಪಡೆದು ರಾಜಿಯಲ್ಲಿ ಮುಗಿಸುವ  ಪ್ರಸ್ತಾಪಗಳಾದುವು. ಸಂತ್ರಸ್ತರಿಗೆ ಹಣವನ್ನು ನೀಡಲಾಗಿದೆ ಎಂಬ ವರದಿಯೂ ಇದೆ. ಈ ರಾಜಿ ಪಂಚಾತಿಕೆಯ ಹಿನ್ನೆಲೆಯಲ್ಲಿ ಹಿಂದೂ  ಮಹಿಳೆ ಮತ್ತು ಈ 5 ಮಂದಿ ಮುಸ್ಲಿಮ್ ಮಹಿಳೆಯರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ಬದಲಿಸಿದರು. ಆ ಮೂಲಕ ಒಟ್ಟು  32 ಮಂದಿ ಅಪರಾಧಿಗಳು ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಂಡರು. ಆದರೆ ಶಮಾ ಮಾತ್ರ ಯಾವ ಆಮಿಷಕ್ಕೂ, ರಾಜಿಗೂ  ತಯಾರಾಗಲಿಲ್ಲ. ಈ ಎಲ್ಲ ವಿವರವನ್ನು ‘Muzaffar Nagar riots: The deal that saved 32 alleged rapists’- ಮುಝಫ್ಫರ್ ನಗರ್ ಹಿಂಸಾಚಾರ: 32 ಮಂದಿ ಅತ್ಯಾಚಾರ ಆರೋಪಿಗಳನ್ನು ಬಚಾವ್ ಮಾಡಿದ ಒಪ್ಪಂದ- ಎಂಬ  ಶೀರ್ಷಿಕೆಯಲ್ಲಿ ಐಶ್ವರ್ಯ ಅಯ್ಯರ್ ಎಂಬ ಪತ್ರಕರ್ತೆ 2019 ಆಗಸ್ಟ್ 27ರಂದು ದಿ ಕ್ವಿಂಟ್ ವೆಬ್ ಪತ್ರಿಕೆಯಲ್ಲಿ ಬರೆದ ವರದಿಯಲ್ಲಿ  ನೀಡಲಾಗಿದೆ.

ಆದರೆ, ಶಮಾಳ ಪರಿಸ್ಥಿತಿ ಇಷ್ಟು ಸಹಜವಲ್ಲ.


ರಾಜಿಗೆ ಒಪ್ಪಿಕೊಳ್ಳದ ಆಕೆ ನಿರಂತರ ಬೆದರಿಕೆಯನ್ನೂ ಎದುರಿಸಿದಳು. ಊರನ್ನೂ ತೊರೆದಳು. ಇನ್ನೊಂದು ಕಡೆ, ಶಮ್ಲಿ ಗ್ರಾಮದಲ್ಲಿ  NGO  ಕಟ್ಟಿಕೊಟ್ಟ ಒಂದು ಕೋಣೆಯ ಪುಟ್ಟ ಮನೆಯಲ್ಲಿ ವಾಸವಿರುವ ಆಕೆಯನ್ನು ಅಕ್ಕಪಕ್ಕದವರೇ ಅಸ್ಪೃಶ್ಯಳಂತೆ ನೋಡತೊಡಗಿದರು.  ಆಕೆಯಿಂದ ಅಂತರ ಕಾಯ್ದುಕೊಂಡರು. ತಮ್ಮ ಮನೆಯ ಮಕ್ಕಳು ಆಕೆಯ ಮನೆಗೆ ಹೋಗದಂತೆ ತಡೆದರು. ತಾನು ಅತ್ಯಾಚಾರ ಸಂತ್ರಸ್ತೆ  ಎಂದು ಗೊತ್ತಾದ ಬಳಿಕ ಆದ ಬದಲಾವಣೆ ಇದು ಎಂದಾಕೆ ಹೇಳಿರುವುದನ್ನು ಔಟ್‌ಲುಕ್ ಪತ್ರಿಕೆಯ ವರದಿಯಲ್ಲಿ ಕಾಣಬಹುದು. ಆಕೆ  ಹೇಳಿರುವ ಇದಕ್ಕಿಂತಲೂ ದಾರುಣ ಸಂಗತಿಯೆಂದರೆ, ಆಕೆಯ ಮಕ್ಕಳ ಪ್ರಶ್ನೆ. ಪದೇ ಪದೇ ಯಾಕಮ್ಮ ಕೋರ್ಟಿಗೆ ಹೋಗುತ್ತಿ ಎಂದು  ಮಕ್ಕಳು ಪ್ರಶ್ನಿಸುತ್ತಾರೆ. ‘ಹಿಂಸಾಚಾರ ನಡೆದಿತ್ತಲ್ಲ, ಆಗ ನಮ್ಮ ಮನೆಗೆ ಬೆಂಕಿ ಕೊಡಲಾಗಿತ್ತು, ದರೋಡೆ ಮಾಡಲಾಗಿತ್ತು. ಆದ್ದರಿಂದ ನಮ್ಮ  ಭೂಮಿ ಇತರರ ಪಾಲಾಗಿದೆ. ಅದನ್ನು ಮರಳಿ ಪಡೆಯುವುದಕ್ಕಾಗಿ ಕೋರ್ಟಿಗೆ ಹೋಗುತ್ತಿದ್ದೇನೆ..’ ಎಂದು ಹೇಳುತ್ತಿದ್ದುದಾಗಿ ಶಮಾ  ಹೇಳಿರುವುದೂ ವರದಿಯಲ್ಲಿದೆ. ನಿಜವಾಗಿ,


ಅತ್ಯಾಚಾರ ಎಂಬುದು ಹೆಣ್ಣಿನ ಪಾಲಿಗೆ ಎರಡು ಅಲುಗಿನ ಕತ್ತಿ. ಒಂದು- ಅತ್ಯಾಚಾರವೆಂಬ ಇರಿತವಾದರೆ, ಇನ್ನೊಂದು-  ಅತ್ಯಾಚಾರಕ್ಕೀಡಾದವಳು ಎಂಬ ವಕ್ರ ದೃಷ್ಟಿಯ ಇರಿತ. ಇವೆರಡನ್ನೂ ಓರ್ವ ಸಂತ್ರಸ್ತ ಮಹಿಳೆ ಜೀವನದುದ್ದಕ್ಕೂ ಹೊತ್ತುಕೊಂಡೇ  ಬದುಕಬೇಕು. ಹಿಂಸಾಚಾರಕ್ಕೆ ಕಾರಣಗಳೇನೇ ಇರಲಿ, ಅಂತಿಮವಾಗಿ ಅದರ ನೋವುಣ್ಣುವುದು ಹೆಣ್ಣೇ. ಬೈಕ್ ಅಪಘಾತದಿಂದ ಹುಟ್ಟಿಕೊಂಡ ಮುಝಫ್ಫರ್ ನಗರ್ ಹಿಂಸೆ, ಮೀಸಲಾತಿ ನೆಪದಲ್ಲಿ ಸ್ಫೋಟಗೊಂಡ ಮಣಿಪುರ ಹಿಂಸೆ ಅಥವಾ ರೈಲಿಗೆ ಬೆಂಕಿ ಕೊಟ್ಟ ನೆಪದಲ್ಲಿ  ಭುಗಿಲೆದ್ದ ಗುಜರಾತ್ ಹಿಂಸಾಚಾರ- ಈ ಮೂರಕ್ಕೂ ಕಾರಣಕರ್ತರು ಪುರುಷರೇ. ಆದರೆ, ಅತ್ಯಂತ ಹೀನಾಯ ಕ್ರೌರ್ಯಕ್ಕೆ ತುತ್ತಾದದ್ದು  ಮಾತ್ರ ಮಹಿಳೆಯರು. 2016ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದ ವರದಿಗಳನ್ನು ಅಧ್ಯಯನ ನಡೆಸಿದರೂ ಲಭ್ಯವಾಗುವುದು  ಇದೇ ಫಲಿತಾಂಶ. ಈ ಕುರಿತಂತೆ ಆಸ್ಟ್ರೆಲಿಯಾ, ಕೆನಡ, ನಾರ್ವೆ, ಫಿಲಿಪ್ಪೀನ್ಸ್, ಬಾಂಗ್ಲಾದೇಶವನ್ನೊಳಗೊAಡ ತಜ್ಞರು ಮತ್ತು ಸಂಶೋಧಕರ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ‘Forced migration of Rohingya: The untold experiencde’- ಎಂಬ ಹೆಸರಲ್ಲಿ 2018 ಆಗಸ್ಟ್ ನಲ್ಲಿ  ಈ ಸಮಿತಿ ವರದಿಯನ್ನೂ ನೀಡಿತ್ತು. ಆ ವರದಿ ಎಷ್ಟು ಆಘಾತಕಾರಿಯಾಗಿತ್ತೆಂದರೆ, ಯಾವುದೇ ಮಹಿಳೆ ತಾನೇಕೆ ಮಹಿಳೆಯಾಗಿ ಹುಟ್ಟಿದೆ ಎಂದು ಪ್ರಶ್ನಿಸುವಷ್ಟು ಭೀಕರವಾಗಿತ್ತು. 18 ಸಾವಿರ  ರೋಹಿಂಗ್ಯ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಹಿಂಸೆ ಮತ್ತು ಅತ್ಯಾಚಾರ ನಡೆದಿದೆ ಎಂಬುದಾಗಿ ಆ ವರದಿಯಲ್ಲಿ  ಹೇಳಲಾಗಿತ್ತು. ಇದಲ್ಲದೇ, ದಿ ಇಂಡಿಪೆಂಡೆಂಟ್  ಪತ್ರಿಕೆಯು, 'Burmese military guilty of widespread rape of Rohingyan Muslims’- ಎಂಬ ಶೀರ್ಷಿಕೆಯಲ್ಲಿ 2017 ನವೆಂಬರ್ 16ರಂದು ಹೃದಯ ಕಲಕುವ ವರದಿಯನ್ನೂ ಪ್ರಕಟಿಸಿತ್ತು.  15 ವರ್ಷದ ಬಾಲಕಿಯನ್ನು 10 ಮಂದಿ ಮ್ಯಾನ್ಮಾರ್ ಸೈನಿಕರು ಅತ್ಯಾಚಾರ ಮಾಡಿರುವ ಹೃದಯ ವಿದ್ರಾವಕ ಕ್ರೌರ್ಯ.

ಬಹುಶಃ

ಹೆಣ್ಣಿನ ದೇಹವನ್ನು ಬಲವಂತದಿಂದ  ಅನುಭವಿಸಬಯಸುವ ಪುರುಷರೇ ಈ ‘ಹಿಂಸಾಚಾರ’ ಎಂಬ ಕಾನ್ಸೆಪ್ಟನ್ನು ಸೃಷ್ಟಿ ಮಾಡಿರಬೇಕು.  ಸಹಜ ಸಂದರ್ಭದಲ್ಲಿ ಅತ್ಯಾಚಾರ ಮಾಡಲು ಹಿಂಜರಿಯುವ ಪುರುಷ ಹಿಂಸಾಚಾರದ ವೇಳೆ ಅತ್ಯಾಚಾರವನ್ನು ಸಹಜಗೊಳಿಸುತ್ತಾನೆ.  ಹೆಣ್ಣನ್ನು ಹುಡುಕಿ ಹುಡುಕಿ ಕ್ರೌರ್ಯವೆಸಗುತ್ತಾನೆ. ಆಕೆಯ ದೇಹವನ್ನು ಬೆತ್ತಲೆಗೊಳಿಸುತ್ತಾನೆ. ಇಂಚಿಂಚೂ  ಇರಿಯುತ್ತಾನೆ. ಸಾಯಿಸುತ್ತಾನೆ  ಮತ್ತು ಯಾವ ಪಾಪಭಾರವೂ ಇಲ್ಲದೇ ಸಮಾಜದ ಭಾಗವಾಗಿ ಬದುಕುತ್ತಾನೆ. ಅಷ್ಟಕ್ಕೂ,

ಕೋಮು ಹಿಂಸಾಚಾರವೆಂಬುದು ಎರಡೂ ಧರ್ಮಾನುಯಾಯಿಗಳ ನಡುವಿನ ದ್ವೇಷ ಸಾಧನೆಯೇ ಆಗಿರುತ್ತಿದ್ದರೆ, ಹೆಣ್ಣೇಕೆ  ಅತ್ಯಾಚಾರಕ್ಕೆ ಒಳಗಾಗಬೇಕು? ಘರ್ಷಣೆಯ ಭಾಗವಾಗದೇ ತಮ್ಮ ಪಾಡಿಗಿರುವ ಹೆಣ್ಣೇಕೆ ಬೆತ್ತಲೆಯಾಗಬೇಕು? ಅವಳು ಮಾಡಿರುವ  ಅಪರಾಧವೇನು?

Thursday, July 27, 2023

ಮುಸ್ಲಿಮ್ ದ್ವೇಷವನ್ನೇ ಹೊದ್ದು ತಿರುಗುತ್ತಿರುವ ಸುಳ್ಳು ಸುದ್ದಿಗಳು



1. ಕರ್ನಾಟಕದಲ್ಲಿ ನಡೆಯಬೇಕಿದ್ದ ಭಾರೀ ರೈಲು ಅವಘಡ ವೊಂದು ಸ್ವಲ್ಪದರಲ್ಲೇ  ತಪ್ಪಿದೆ. ರೈಲು ಸಂಚರಿಸುವಾಗ ಮುಸ್ಲಿಮನೊಬ್ಬ  ಹಳಿಯ ಮೇಲೆ ಎಲ್‌ಪಿಜಿ ಸಿಲಿಂಡರ್ ಎಸೆದಿದ್ದಾನೆ. ಅದೃಷ್ಟವಶಾತ್ ಸಿಲಿಂಡರ್ ಸ್ಫೋಟಗೊಂಡಿಲ್ಲ. ಒಂದುವೇಳೆ, ಸ್ಫೋಟಗೊಳ್ಳುತ್ತಿದ್ದರೆ ಸಾವಿರಾರು ಮಂದಿ ಹೆಣವಾಗುತ್ತಿದ್ದರು. ಅಂತಹ ದೊಡ್ಡ ಅನಾಹುತವನ್ನು ಜನರು ಮತ್ತು ರೈಲ್ವೆ ಸಿಬ್ಬಂದಿ ತಡೆದಿದ್ದಾರೆ. ಪ್ರಧಾನಿ  ನರೇಂದ್ರ ಮೋದಿಯವರಿಗೆ ಕೆಟ್ಟ ಹೆಸರು ತರಲೆಂದೇ ಹೀಗೆ ಮಾಡುತ್ತಿದ್ದಾರೆ.. ಎಂಬ ಒಕ್ಕಣೆಯುಳ್ಳ ಚಿತ್ರಸಹಿತ ಬರಹವನ್ನು ಅಥವಾ  ವೀಡಿಯೋವನ್ನು ನೀವು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿರಬಹುದು. ಈ ವೀಡಿಯೋ ಮತ್ತು ಚಿತ್ರಬರಹವು ಸೋಶಿಯಲ್  ಮೀಡಿಯಾಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿತ್ತು. ಮುಂದೆಯೂ ಇದು ಹಂಚಿಕೆಯಾಗುವ ಸಾಧ್ಯತೆ ಇಲ್ಲದಿಲ್ಲ. ಹಾಗಂತ, ಈ ಸುದ್ದಿ  ನಿಜವೇ?

ಸುಳ್ಳು

ನಿಜವಾಗಿ ಕರ್ನಾಟಕಕ್ಕೂ ಈ ಸುದ್ದಿಗೂ ಸಂಬಂಧವೇ ಇಲ್ಲ. ಇದು ಉತ್ತರ ಪ್ರದೇಶದ ಗುರುಗ್ರಾಮ ಜಿಲ್ಲೆಯ ಕಥಾಗೋದಾಮ್ ರೈಲು  ನಿಲ್ದಾಣಕ್ಕೆ ಸಂಬಂಧಿಸಿದ ವೀಡಿಯೋ. 2022 ಜುಲೈ 5ರಂದು ಈ ಘಟನೆ ನಡೆದಿತ್ತು. ಗಂಗಾರಾಮ್ ಎಂಬ ವ್ಯಕ್ತಿ ಖಾಲಿ ಸಿಲಿಂಡರ್  ಹೊತ್ತು ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಬಂದಿತ್ತು. ಆತ ಜೀವಭಯದಿಂದ ಸಿಲಿಂಡರ್ ಅಲ್ಲೇ  ಎಸೆದು ಓಡಿ ಹೋಗಿದ್ದ. ಇದನ್ನು  ಗಮನಿಸಿದ ರೈಲ್ವೆ ಪೊಲೀಸರು ರೈಲನ್ನು ತಡೆದು ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸಿಲಿಂಡರ್ ರೈಲು ಚಕ್ರಕ್ಕೆ ಸಿಲುಕಿ  ಚೂರುಚೂರಾಗಿತ್ತು. ನಂತರ ಗಂಗಾರಾಮ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ರೈಲ್ವೆ ಪೊಲೀಸರೇ ಮಾಹಿತಿಯನ್ನು  ನೀಡಿದ್ದಾರೆ. ಈ ಎಲ್ಲ ಮಾಹಿತಿಯನ್ನು ದಿ ಕ್ವಿಂಟ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

2. ಪಶ್ಚಿಮ ಬಂಗಾಳದ ಹಿಂದೂಗಳ ದುರಂತಮಯ ಪರಿಸ್ಥಿತಿಯನ್ನು ನೋಡಿ. ಹಿಂದೂಗಳಾದ ನಾವು ಒಗ್ಗಟ್ಟಾಗಿ ಹಿಂದೂಗಳನ್ನು  ಬೆಂಬಲಿಸುವ ಪಕ್ಷಕ್ಕೆ ಮತ ಹಾಕದೇ ಇದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಮಕ್ಕಳ ಪರಿಸ್ಥಿತಿ ಇದೇ ಆಗಲಿದೆ. ಎಚ್ಚರ ಇರಲಿ. ಇದು  ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರಕಾರದ ಮುಸ್ಲಿಮ್ ಓಲೈಕೆಯ ದೃಶ್ಯ. ನಮ್ಮ ಹಿಂದೂಗಳ ಪರಿಸ್ಥಿತಿಯನ್ನೊಮ್ಮೆ  ನೋಡಿಕೊಳ್ಳಿ.. ಎಂಬ ಬರಹವುಳ್ಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿದೆ. ಉತ್ತರ ಭಾರತದಲ್ಲಿ ಅತ್ಯಂತ ವ್ಯಾ ಪಕವಾಗಿ ಹರಿದಾಡಿದ ವೀಡಿಯೋ ಇದು. ಇಬ್ಬರು ಯುವಕರಿಗೆ ಹಲವು ಮಂದಿ ಸೇರಿ ಥಳಿಸುವ ದೃಶ್ಯ ಈ ವೀಡಿಯೋದಲ್ಲಿದೆ.  ಹಾಗಂತ, ಇದು ನಿಜವೇ?

ಸುಳ್ಳು

ನಿಜವಾಗಿ, ಈ ವೀಡಿಯೋ ಭಾರತದ್ದೇ  ಅಲ್ಲ. ಬಾಂಗ್ಲಾದೇಶದ ನ್ಯೂಸ್ ಮೀಡಿಯಾ ಬಾಂಗ್ಲಾ ಎಂಬ ಹೆಸರಿನ ವೆಬ್ ಪತ್ರಿಕೆಯು ಈ  ವೀಡಿಯೋವನ್ನು 2019 ಮಾರ್ಚ್ 24ರಂದು ತನ್ನ ವೆಬ್ ಪುಟದಲ್ಲಿ ಹಂಚಿಕೊಂಡಿತ್ತು. ಬಾಂಗ್ಲಾದೇಶದ ಇನ್ನಿತರ ಹಲವು ವೆಬ್  ಪತ್ರಿಕೆಗಳೂ ಈ ವೀಡಿಯೋವನ್ನು ಹಂಚಿಕೊಂಡಿವೆ. ‘ತುಂಬಾ ಕಷ್ಟಪಟ್ಟು ಈ ಆಟೋರಿಕ್ಷಾವನ್ನು ಖರೀದಿಸಿದ್ದೆ..’ ಎಂದು ಈ ಗುಂಪಿನ ಲ್ಲಿರುವ ವ್ಯಕ್ತಿಯೋರ್ವರು ಹೇಳುವುದು ಕೂಡಾ ವೀಡಿಯೋದಲ್ಲಿ ಕೇಳಿಸುತ್ತದೆ. ವಾಸ್ತವ ಏನೆಂದರೆ, ಆಟೋ ರಿಕ್ಷಾ ಕದ್ದು ಸಿಕ್ಕಿ ಬಿದ್ದ  ಇಬ್ಬರು ಯುವಕರನ್ನು ಥಳಿಸುವ ವೀಡಿಯೋ ಇದು. ಆದರೆ, ದುಷ್ಟ ಮನಸ್ಸುಗಳು ಈ ವೀಡಿಯೋಕ್ಕೆ ಸಂಬಂಧಿಸಿದ ಮಾಹಿತಿಗಳನ್ನು  ತಿರುಚಿ ಪಶ್ಚಿಮ ಬಂಗಾಳದ ಹಿಂದೂಗಳಿಗೆ ಥಳಿಸುತ್ತಿರುವ ಮುಸ್ಲಿಮರು ಎಂದು ಬಿಂಬಿಸಿವೆ. ಈ ಪ್ರಶಂಸಾರ್ಹ ಸತ್ಯ ಶೋಧನಾ  ಕೆಲಸವನ್ನು ದಿ ಕ್ವಿಂಟ್ ಪತ್ರಿಕೆ ನಡೆಸಿ ಪ್ರಕಟಿಸಿದೆ.

3. ದೇಶ ಬದಲಾಗುತ್ತಿದೆ. ಮುಸ್ಲಿಮ್ ಯುವಕನೊಬ್ಬ ಹೆಸರು ಬದಲಾಯಿಸಿಕೊಂಡು ಹಿಂದೂ ಯುವತಿಯನ್ನು ಪ್ರೀತಿಸಿ ಅವಳನ್ನು ಅ ಪಹರಣ ಮಾಡುವ ಯತ್ನ ನಡೆಸಿದ್ದಾನೆ. ಆದರೆ, ಈ ಪ್ರಯತ್ನದಲ್ಲಿ ವಿಫಲಗೊಂಡು ಹಿಂದೂ ಸಮಾಜದ ಮಹಿಳೆಯರಿಗೆ ಸಿಕ್ಕಿ ಬಿ ದ್ದಿದ್ದಾನೆ. ಈಗ ಅವನಿಗಾದ ಪರಿಸ್ಥಿತಿಯನ್ನು ನೋಡಿ. ಹಿಂದೂ ಸಮಾಜ ಜಾಗೃತವಾಗುತ್ತಿದೆ.. ಎಂಬ ಅಡಿ ಬರಹವಿರುವ ವೀಡಿಯೋ  ನಿಮಗೂ ತಲುಪಿರ ಬಹುದು. ಬಹುತೇಕ ಉತ್ತರ ಭಾರತದಲ್ಲಿ ಸಾಕಷ್ಟು ಹಂಚಿಕೆಯಾಗಿ ರುವ ವೀಡಿಯೋ ಇದು. ಹಾಗಂತ, ಇದು  ನಿಜವೇ?

ಸುಳ್ಳು

ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು 2020 ಜನವರಿ 20ರಂದು ವರದಿಯನ್ನು ಪ್ರಕಟಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಈತ  ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದಕ್ಕೆ ಕುಪಿತಗೊಂಡು ಮಹಿಳೆಯರು ಆತನನ್ನು ನಗ್ನವಾಗಿಸಿ ಥಳಿಸಿದ್ದಾರೆ. ಇದು ನಡೆ ದಿರುವುದು ಹರ್ಯಾಣದ ಅಂಬಾಲದಲ್ಲಿ ಎಂದು ಪತ್ರಿಕಾ ವರದಿಯಲ್ಲಿ ಹೇಳಲಾಗಿದೆ. ಪವನ್ ಎಂಬುದು ಈತನ ಹೆಸರಾಗಿದ್ದು, ಶಾಲಾ  ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಆ ಮಕ್ಕಳ ಹೆತ್ತವರೂ ಈತನಿಗೆ ಥಳಿಸಿದವರಲ್ಲಿ ಸೇರಿದ್ದಾರೆ ಎಂದೂ ವರದಿಯಲ್ಲಿ  ಹೇಳಲಾಗಿದೆ. ಅಲ್ಲದೇ ಈತನ ವಿರುದ್ಧ ಇಂಡಿಯನ್ ಪೀನಲ್ ಕೋಡ್‌ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ,  ಈ ಘಟನೆಯ ಬಗ್ಗೆ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸುನೀತಾ ಎಂಬವರು ಮಾಹಿತಿ ನೀಡಿರುವ ವೀಡಿಯೋ ಕೂಡ  ಲಭ್ಯವಿದೆ. ಆದರೆ ಈ ಎಲ್ಲ ಮಾಹಿತಿಯನ್ನು ತಿರುಚಿ ಹಿಂದೂ ಯುವತಿಯನ್ನು ಪ್ರೀತಿಸಿ ಅಪಹರಣ ಮಾಡಲು ಯತ್ನಿಸಿದ ಮುಸ್ಲಿಮ್  ಯುವಕ ಎಂದು ಸುಳ್ಳು ಬರೆಯಲಾಗಿದೆ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ಮಾಹಿತಿ ನೀಡಿದೆ.

4. ಗುಂಪೊಂದು  ಮಹಿಳೆಯನ್ನು ಹಿಂಸಿಸಿ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡುವ ವೀಡಿಯೋವನ್ನು ನೀವು ವೀಕ್ಷಿಸಿರುವಿರೋ ಗೊತ್ತಿಲ್ಲ.  ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿರುವ ವೀಡಿಯೋ ಇದು. ಕರ್ನಾಟಕವೂ ಸೇರಿದಂತೆ ಉತ್ತರ ಭಾರತದ  ದೊಡ್ಡದೊಂಡು ಸಮೂಹಕ್ಕೆ ಈ ವೀಡಿಯೋ ತಲುಪಿದೆ. ಇದು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಭಯಾನಕ ದೃಶ್ಯ  ಎಂಬ ವಿವರವನ್ನು ಈ ವೀಡಿಯೋದ ಜೊತೆ ಹಂಚಿಕೊಳ್ಳಲಾಗಿದೆ. ಈ ಹೆಣ್ಮಗಳು ಮಣಿಪುರದ ಹಿಂದೂ ಮೈತಿ ಸಮುದಾಯಕ್ಕೆ  ಸೇರಿದವಳಾಗಿದ್ದಾಳೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ಇದೇ ಪರಿಸ್ಥಿತಿ ಎದುರಾಗಲಿದೆ. ಕರ್ನಾಟಕದಲ್ಲೂ ಮತಾಂತರ ನಿಷೇಧ  ಕಾಯ್ದೆಯನ್ನು ಹಿಂಪಡೆಯಲಾಗುತ್ತಿದೆ. ಕರ್ನಾಟಕದಲ್ಲೂ ಹಿಂದೂಗಳಿಗೆ ಇದೇ ಪರಿಸ್ಥಿತಿ ಬಂದೊದಗಲಿದೆ.. ಎಂಬ ವಿವರವನ್ನು ಈ  ವೀಡಿಯೋದ ಜೊತೆ ನೀಡಲಾಗಿದೆ.
ಹಾಗಂತ, ಈ ವಿವರ ನಿಜವೇ?

ಸುಳ್ಳು

ಈ ಘಟನೆ ನಡೆದಿರುವುದು ನಿಜ. 2022 ಡಿಸೆಂಬರ್ 8ರಂದು ಮ್ಯಾನ್ಮಾರ್‌ನಲ್ಲಿ ನಡೆದಿದೆ. ಈ ಕುರಿತಂತೆ ಮ್ಯಾನ್ಮಾರ್‌ನ ಮಿಜ್ಜಿಮಾ ಎಂಬ  ಸುದ್ದಿ ಸಂಸ್ಥೆ ವರದಿಯನ್ನೂ ಮಾಡಿದೆ. ಮ್ಯಾನ್ಮಾರ್‌ನಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ ಮತ್ತು ವಿರೋಧಿ ಪಿಡಿಎಫ್  ಪಕ್ಷಗಳ ನಡುವಿನ ಘರ್ಷ ಣೆಯ ಫಲಿತಾಂಶ ಈ ಹತ್ಯೆ. ಈಕೆ ಆಂಗ್ ಸಾನ್ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷಕ್ಕೆ ತಮ್ಮ ಕುರಿತು  ಮಾಹಿತಿಯನ್ನು ನೀಡಿದ್ದಾಳೆ ಎಂದು ಕುದಿಗೊಂಡು ಪಿಡಿಎಫ್ ಪಕ್ಷದವರು ಈ ಹತ್ಯೆ ನಡೆಸಿದ್ದಾರೆ ಎಂದು ಮಿಜ್ಜಿಮಾ ಸುದ್ದಿ ಸಂಸ್ಥೆಯ  ವರದಿ ಯಲ್ಲಿ ಹೇಳಲಾಗಿದೆ. ಭಾರತದ ಮಣಿಪುರಕ್ಕೂ ಈ ವೀಡಿಯೋಕ್ಕೂ ಸಂಬಂಧ ಇಲ್ಲ ಎಂದು ಆಲ್ಟ್ ನ್ಯೂಸ್ ಸಂಸ್ಥೆಯ ಫ್ಯಾಕ್ಟ್  ಚೆಕ್ ವರದಿಯಲ್ಲಿ ತಿಳಿಸಲಾಗಿದೆ. ಅಂದಹಾಗೆ,

ಸುಳ್ಳು ಸುದ್ದಿಗಳ ಭರಾಟೆ ಮತ್ತು ಹಂಚಿಕೆಯಾಗುತ್ತಿರುವ ವೇಗವನ್ನು ನೋಡಿದರೆ, ಸತ್ಯವನ್ನು ತಿಳಿಸುವ ಫ್ಯಾಕ್ಟ್ ಚೆಕ್ ವರದಿಗಳು ಕಡಿಮೆ  ಪ್ರಮಾಣದಲ್ಲಿವೆ ಮತ್ತು ಹಂಚಿಕೆಯೂ ನಿಧಾನಗತಿಯಲ್ಲಿವೆ. ಸುಳ್ಳನ್ನು ಸೃಷ್ಟಿಸುವುದು ಸುಲಭ. ಹಂಚಿಕೆ ಅದಕ್ಕಿಂತಲೂ ಸುಲಭ. ಆದರೆ  ಫ್ಯಾಕ್ಟ್ ಚೆಕ್ ಹಾಗಲ್ಲ. ಸುಳ್ಳು ಸುದ್ದಿಯ ಮೂಲವನ್ನು ಹುಡುಕುವುದಕ್ಕೆ ತಾಳ್ಮೆ, ಶ್ರಮ ಮತ್ತು
ಬದ್ಧತೆಯ ಅಗತ್ಯವಿರುತ್ತದೆ. ಎಂದೋ ಯಾವಾಗಲೋ ಪ್ರಕಟವಾದ ಒಂದು ಚಿತ್ರ ಅಥವಾ ಹಂಚಿಕೆಯಾದ ಒಂದು ವೀಡಿಯೋವನ್ನು  ತನಗೆ ಬೇಕಾದಂತೆ ತಿರುಚಿ ಸುಳ್ಳುಗಾರ ಹಂಚಿಕೊಂಡಿರುತ್ತಾನೆ. ಆದರೆ ಸತ್ಯದ ಹುಡುಕಾಟದಲ್ಲಿರುವವ ಅದನ್ನು ಹುಡುಕುತ್ತಾ ಹುಡುಕುತ್ತಾ  ಗಂಟೆ, ದಿನಗಳು, ತಿಂಗಳುಗಳನ್ನು ಕಳೆಯಬೇಕಾಗುತ್ತದೆ. ಅಷ್ಟರಲ್ಲಿ ಆ ಸುಳ್ಳು ಸುದ್ದಿ ತಲುಪಬೇಕಾದಲ್ಲಿಗೆಲ್ಲ ತಲುಪಿ ಮಾಡ ಬೇಕಾದ ಅ ನಾಹುತಗಳನ್ನೆಲ್ಲ ಮಾಡಿಯಾಗಿರುತ್ತದೆ. ಆ ಬಳಿಕ ಬರುವ ಫ್ಯಾಕ್ಟ್ ಚೆಕ್‌ನಲ್ಲಿ ಅಷ್ಟು ವೇಗ ಇರುವುದಿಲ್ಲ. ಸುಳ್ಳು ಸುದ್ದಿಗಳ ಶಕ್ತಿಯೇ ಇದು.  ನಿಜವಾಗಿ,

ಸುಳ್ಳು ಸುದ್ದಿ ಎಂಬ ಪದವು 1890ರಲ್ಲಿ ಮೊದಲ ಬಾರಿ ಬಳಕೆಯಾಗಿದೆ ಎಂದು The long and brutal  of fake news
ತಲೆಬರಹದಲ್ಲಿ ಜಾಕೊಬ್ ಸಾಲ್ ಎಂಬವರು 2016ರಲ್ಲಿ ಬರೆದ ಲೇಖನದಲ್ಲಿ ಆಧಾರ ಸಹಿತ ವಿವರಿಸಿದ್ದಾರೆ. ಹಾಗಂತ, ಪದ 1890ರಲ್ಲಿ ಹುಟ್ಟಿಕೊಂಡಿದ್ದರೂ ಸುಳ್ಳು ಸುದ್ದಿಗಳ ಪ್ರಚಾರ 1475ರಲ್ಲೇ  ನಡೆದಿತ್ತು ಎಂಬುದನ್ನು ಇತಿಹಾಸ  ಹೇಳುತ್ತದೆ. ಇಟಲಿಯ ಸಿಮೋನಿಯೋ ಎಂಬ ಎರಡೂವರೆ ವರ್ಷದ ಬಾಲಕ 1475ರ ಈಸ್ಟರ್ ಹಬ್ಬದ ದಿನದಂದು ಕಾಣೆಯಾಗುತ್ತಾನೆ. ಅದು ಯಹೂದಿಯರ ಬಗ್ಗೆ ಕ್ರೈಸ್ತರಲ್ಲಿ ಅಸಹನೆಯಿದ್ದ ಕಾಲ. ಈ ಬಾಲಕನನ್ನು ಯಹೂದಿಯರು ಅಪಹರಣ ಮಾಡಿ  ಹತ್ಯೆ ಮಾಡಿದ್ದು, ಆತನ ರಕ್ತವನ್ನು ಕುಡಿದು ಹಬ್ಬ ಆಚರಿಸಿದ್ದಾರೆ ಎಂದು ಕ್ರೈಸ್ತ ಪಾದ್ರಿ ಬರ್ನಾಡಿನೋ ಡಫೆಲ್ಟೊ ಎಂಬವ ಸರಣಿ ಉಪ ನ್ಯಾಸ ನೀಡತೊಡಗುತ್ತಾನೆ. ಸುದ್ದಿ ಬಾಯಿಂದ ಬಾಯಿಗೆ ರವಾನೆಯಾಗಿ ಆಕ್ರೋಶ ಮಡುಗಟ್ಟುತ್ತದೆ. ಘಟನೆ ನಡೆದಿರುವ ಟ್ರೆಂಟ್ ನಗರದ  ಮುಖ್ಯ ಬಿಷಪ್ ಜೊಹಾನ್ಸನ್ ಹಿಂಡರ್‌ಬ್ಯಾಚ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ನಗರದ ಎಲ್ಲಾ  ಯಹೂದಿಯನ್ನು ಬಂಧಿಸಿ ದೌರ್ಜನ್ಯ  ನಡೆಸಲು ಆದೇಶಿಸುತ್ತಾರೆ. ಇವರಲ್ಲಿ 15 ಮಂದಿಯನ್ನು ಅಪರಾಧಿಗಳೆಂದು ಗುರುತಿಸಿ ಜೀವಂತ ಸುಟ್ಟು ಹಾಕಲಾಗುತ್ತದೆ. ಅಲ್ಲದೇ, ಈ  ಸುದ್ದಿಯಿಂದಾಗಿ ಟ್ರೆಂಟ್‌ನ ಅಕ್ಕ ಪಕ್ಕದ ಊರುಗಳಲ್ಲಿದ್ದ ಯಹೂದಿಗಳನ್ನೆಲ್ಲ ತೀವ್ರವಾಗಿ ಹಿಂಸಿಸಿ ದೌರ್ಜನ್ಯ ಎಸಗಲಾಗುತ್ತದೆ. ಅಷ್ಟಕ್ಕೂ,  ಸಿಮೋನಿಯೋ ಎಂಬ ಬಾಲಕ ಸಾವಿಗೀಡಾಗಿದ್ದುದು ನಿಜ. ಆದರೆ, ಆತನಿಗೆ ಸಂಬAಧಿ ಸಿದ ಉಳಿದೆಲ್ಲ ಸುದ್ದಿಗಳು ಸುಳ್ಳಾಗಿತ್ತು.

ಇನ್ನೊಂದು ಘಟನೆ ಹೀಗಿದೆ,

1761ರಲ್ಲಿ ಮಾರ್ಕ್ ಅಂಟಾನಿಯೋ ಕಲಾಸ್ ಎಂಬ 22 ವರ್ಷದ ಯುವಕ ಫ್ರಾನ್ಸ್ನ ಟೇಲೋಸ್ ಎಂಬಲ್ಲಿ ಆತ್ಮಹತ್ಯೆ  ಮಾಡಿಕೊಳ್ಳುತ್ತಾನೆ. ಈತ ಪ್ರೊಟೆಸ್ಟೆಂಟ್ ಜೀನ್ ಕಲಾಸ್ ಪ್ರಸಿದ್ಧ ವ್ಯಾಪಾರಿಯ ಮಗ. ಆದರೆ, ಈ ಆತ್ಮಹತ್ಯೆಗೆ ಕ್ಯಾಥೋಲಿಕ್  ಪಂಥದವರು ‘ಹತ್ಯೆ’ ಎಂಬ ತಿರುವನ್ನು ಕೊಟ್ಟು ಪ್ರಚಾರ ಮಾಡಿ ದರು. ಮಗ ಕ್ಯಾಥೋಲಿಕ್ ಪಂಥಕ್ಕೆ ಪರಿವರ್ತನೆ ಆಗುವವನಿದ್ದ.  ಇದನ್ನು ಸಹಿಸದೇ ಅಪ್ಪನೇ ಹತ್ಯೆ ನಡೆಸಿದ್ದಾನೆ ಎಂದು ವದಂತಿ ಹಬ್ಬಿಸಿದರು. ಈ ವದಂತಿ ಎಷ್ಟು ಪ್ರಬಲವಾಗಿತ್ತೆಂದರೆ, ಈ ಅಪ್ಪನನ್ನು  ಹಿಂಸಿಸಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.
ಸುಳ್ಳಿನ ಶಕ್ತಿ ಅಗಾಧವಾದುದು.

Thursday, July 20, 2023

50 ಲಕ್ಷ ಅಭಿಪ್ರಾಯಗಳು ಮತ್ತು ಸಮಾನ ನಾಗರಿಕ ಸಂಹಿತೆ

ಏ ಕೆ ಕುಕ್ಕಿಲ 
1. 1985 - ಶಾಬಾನೋ ಪ್ರಕರಣ
2. 1998 - ಸರಳಾ ಮುದ್ಗಲ್ ಪ್ರಕರಣ
3. 2003 - ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರ ಪೀಠದ ಹೇಳಿಕೆ

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಸುಪ್ರೀಮ್ ಕೋರ್ಟು ಈ ಮೂರೂ ಸಂದರ್ಭಗಳಲ್ಲಿ ಹೇಳಿರು ವುದನ್ನು  ನಾಗರಿಕ ಸಂಹಿತೆಯ ಸಮರ್ಥಕರು ತಮ್ಮ ವಾದಕ್ಕೆ ಆಧಾರವಾಗಿ ನೀಡುತ್ತಿದ್ದಾರೆ. ಅಲ್ಲದೇ, ಸಂವಿಧಾನದ ಮಾರ್ಗ ದರ್ಶಿ ಸೂತ್ರಗಳಲ್ಲಿ  ಈ ಬಗ್ಗೆ ಒತ್ತಿ ಹೇಳಲಾಗಿದೆ ಎಂಬ ಕಡೆಗೂ ಬೊಟ್ಟು ಮಾಡುತ್ತಾರೆ. ಇದೂ ನಿಜವೇ.
ಸಂವಿಧಾನದ 4ನೇ ಭಾಗದಲ್ಲಿ 36ನೇ ಅನುಚ್ಛೇದದಿಂದ 51ನೇ ಅನುಚ್ಛೇದದ ವರೆಗೆ ‘ಕಾನೂನಿನ ಮೂಲಕ ಅನುಷ್ಠಾನ ಗೊಳಿಸಬೇಕಾದ  ಮೌಲ್ಯಗಳ ಬಗ್ಗೆ’ ಹೇಳಲಾಗಿದೆ. ಅದರಲ್ಲಿ ಏಕರೂಪ ನಾಗರಿಕ ಸಂಹಿತೆಯೂ ಒಂದು. ಹಾಗಂತ, ಅದುವೇ ಏಕೈಕ ಅಲ್ಲ. ಈ 36ರಿಂದ  51ರ ವರೆಗಿನ ಅನುಚ್ಛೇದದಲ್ಲಿ ಪಾನ ನಿಷೇಧದ ಬಗ್ಗೆಯೂ ಸೂಚಿಸಲಾಗಿದೆ. ಅಸಮಾನತೆಯ ನಿರ್ಮೂಲನೆ, ಸಮಾನ ಮತ್ತು ಉಚಿತ  ನ್ಯಾಯ, ಸಮಾನ ವೇತನ, ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಮಾಲಕರೊಂದಿಗೆ ಸಹಭಾಗಿತ್ವ.. ಇತ್ಯಾದಿಗಳ ಬಗ್ಗೆಯೂ ಸೂಚಿಸಲಾಗಿದೆ.  ಆದರೆ, ಏಕರೂಪ ನಾಗರಿಕ ಸಂಹಿತೆಯ ಹೊರತಾಗಿ ಸಂವಿಧಾನ ಮಾರ್ಗದರ್ಶಿ ಸೂತ್ರಗಳಲ್ಲಿ ಬೇರೇನೂ ಹೇಳಿಯೇ ಇಲ್ಲ ಎಂಬಂತೆ   ನಟಿಸುತ್ತಿರುವವರ ದ್ವಂದ್ವವನ್ನು ಪಕ್ಕಕ್ಕಿಟ್ಟು ನೋಡಿದರೆ, ಪ್ರಸ್ತಾವಿತ ಈಗಿನ ಏಕರೂಪ ನಾಗರಿಕ ಸಂಹಿತೆಯು 2024ರ ಲೋಕಸಭಾ  ಚುನಾವಣೆಯ ಸರಕಲ್ಲದೇ ಮತ್ತೇನಲ್ಲ ಎಂದು ಅನಿಸುತ್ತದೆ.

 ಅಷ್ಟಕ್ಕೂ,

ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದೇ ಆದರೆ, ಅದರ ಸ್ವರೂಪ ಏನು? ದೇಶದಲ್ಲಿ ಈಗ ಭಾರತೀಯ  ವಾರಸುದಾರಿಕೆ ಕಾಯ್ದೆ, ಹಿಂದೂ ವಾರಸುದಾರಿಕೆ ಕಾಯ್ದೆ, ಕ್ರೈಸ್ತ ವಾರಸುದಾರಿಕೆ ಕಾಯ್ದೆ, ಜೈನ ವಾರಸುದಾರಿಕೆ ಕಾಯ್ದೆ ಅಸ್ತಿತ್ವದಲ್ಲಿದೆ.  ಬೌದ್ಧರು, ಸಿಕ್ಖರು ಹಿಂದೂ ವಾರಸುದಾರಿಕೆ ಕಾಯ್ದೆಯಡಿಯಲ್ಲಿ ಬರುವಾಗ ಬುಡಕಟ್ಟುಗಳು, ಪರಿಶಿಷ್ಟ ಜಾತಿ-ಪಂಗಡಗಳು ಭಾರತೀಯ  ವಾರಸುದಾರಿಕೆ ಕಾಯ್ದೆಯಡಿಯಲ್ಲಿ ಬರುತ್ತಾರೆ ಎಂದು ಹೇಳಲಾಗುತ್ತಿದೆ. ವಿವಾಹ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿಯೂ ಇವೆರಡೂ  ಕಾಯ್ದೆಗಳಲ್ಲಿ ಕೇಂದ್ರ ಸರಕಾರ ತರಬಯಸುವ ಏಕರೂಪ ಯಾವುದು ಎಂಬ ಪ್ರಶ್ನೆಯಿದೆ. ಇದು ಕೇವಲ ಮುಸ್ಲಿಮರಿಗೆ ಸಂಬಂಧಿಸಿದ  ವಿಷಯವಲ್ಲ. ಆದ್ದರಿಂದಲೇ, ನಾಗಾಲ್ಯಾಂಡ್, ಮೇಘಾಲಯ, ಛತ್ತೀಸ್‌ಗಢ್ ಸಹಿತ ಈಶಾನ್ಯ ಭಾರತದ ಬುಡಕಟ್ಟು ಸಮುದಾಯಗಳು  ಏಕರೂಪ ನಾಗರಿಕ ಸಂಹಿತೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಕ್ರೈಸ್ತರೂ ವಿರೋ ಧಿಸುತ್ತಿದ್ದಾರೆ. 

ಅಂದಹಾಗೆ,

ಹಲವು ಧರ್ಮ, ಸಂಸ್ಕೃತಿ, ಆಚರಣೆಗಳುಳ್ಳ ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯ ಅಗತ್ಯವಿದೆಯೇ, ಅದು ಪರಿ ಣಾಮಕಾರಿಯೇ  ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಆ ಮೂಲಕ ಬೆಳೆಸಬಹುದೇ ಎಂಬ ಪ್ರಶ್ನೆ ಮತ್ತು ಚರ್ಚೆ ಈ 2023ರಲ್ಲಿ ದುತ್ತನೆ  ಆರಂಭವಾದದ್ದಲ್ಲ. ಅಂಬೇಡ್ಕರ್ ಅವರೇ ಈ ಏಕರೂಪ ನಾಗರಿಕ ಸಂಹಿತೆಯ ಪರ ಮಾತಾಡಿದ್ದರು. ಸಂವಿಧಾನದ ಮಾರ್ಗದರ್ಶಿ  ಸೂತ್ರಗಳಲ್ಲಿ ಅದಕ್ಕೆ ಜಾಗವನ್ನೂ ಕೊಟ್ಟಿದ್ದರು. ಮಾತ್ರವಲ್ಲ, 1940ರಿಂದ 1973ರ ವರೆಗೆ ದೀರ್ಘ 33 ವರ್ಷಗಳ ಕಾಲ ಆರೆಸ್ಸೆಸ್  ಸರಸಂಘ ಚಾಲಕರಾಗಿದ್ದ ಮಾಧವ್ ಸದಾಶಿವ್ ಗೋಲ್ವಾಲ್ಕರ್ ಅವರನ್ನೂ ಈ ಚರ್ಚೆಯ ಕಾವು ತಟ್ಟಿತ್ತು. 1972 ಆಗಸ್ಟ್ 23ರ  ಸಂಚಿಕೆಯಲ್ಲಿ ಆರೆಸ್ಸೆಸ್ ಮುಖವಾಣಿ ಆರ್ಗನೈಝರ್ ಪತ್ರಿಕೆ ಅವರ ಸಂದರ್ಶನವನ್ನೂ ಪ್ರಕಟಿಸಿತ್ತು. ಸಂದರ್ಶನ ನಡೆಸಿದವರು ಸಂಪಾದಕ ಕೆ.ಆರ್. ಮಲ್ಕಾನಿ. ಆ ಸಂದರ್ಶನದ ಒಂದು ಪ್ರಶ್ನೆ ಮತ್ತು ಉತ್ತರ ಹೀಗಿತ್ತು:

ಮಲ್ಕಾನಿ: Dont you agree that uniformity is needed to promote national unity?- ರಾಷ್ಟ್ರೀಯ  ಏಕತೆಯನ್ನು ಉತ್ತೇಜಿಸುವುದಕ್ಕಾಗಿ ಏಕರೂಪತೆ ಅಗತ್ಯ ಎಂಬುದನ್ನು ನೀವು ಒಪ್ಪುವುದಿಲ್ಲವೇ?

ಗೋಲ್ವಾಲ್ಕರ್: Harmony and uniformity are two different things. For harmony, uniformity is not necessary. There ಹಾವೇ alwayas been limitless diversities in India. Inspite of this our nation has remined strong and well organised since ancient time. For unity, we need harmony, not uniformity - ಮತ್ತು ಏಕರೂಪ- ಇವೆರಡೂ  ಬೇರೆ ಬೇರೆ ವಿಷಯಗಳು. ಸಾಮರಸ್ಯಕ್ಕೆ ಏಕರೂಪದ ಅಗತ್ಯವಿಲ್ಲ. ಭಾರತವು ಅಗಣಿತದ ವೈವಿಧ್ಯತೆಯನ್ನು ಹೊಂದಿರುವ ದೇಶ. ಇದರ  ಹೊರತಾಗಿಯೂ ದೇಶವು ಪುರಾತನ ಕಾಲದಿಂದಲೇ ಬಲಿಷ್ಠವಾಗಿಯೇ ಉಳಿದಿದೆ. ಏಕತೆಗಾಗಿ ಸಾಮರಸ್ಯದ ಅಗತ್ಯವಿದೆಯೇ ಹೊರತು  ಏಕರೂಪ ಅಲ್ಲ. (Guruji Golwalkar- Collected works volume 9, Page 165) ಈ ಕುರಿತಾದ  ಪೂರ್ಣ ಸಂದರ್ಶನದ ವಿವರವನ್ನು ದಿ ಕ್ವಿಂಟ್ ಅಂತರ್ಜಾಲ ಪತ್ರಿಕೆಯು 2020 ಫೆಬ್ರವರಿಯಲ್ಲಿ ಪ್ರಕಟಿಸಿತ್ತು ಮತ್ತು 2023 ಜುಲೈ  2ರಂದು ಮರು ಪ್ರಕಟಿಸಿದೆ. ಅಂದಹಾಗೆ,

ಈ ಕಾಯ್ದೆಯನ್ನು ಬೆಂಬಲಿಸುವವರಲ್ಲಿ ಎರಡು ವರ್ಗವಿದೆ.

1. ಇದು ಮುಸ್ಲಿಮ್ ವಿರೋಧಿ ಕಾಯ್ದೆ ಎಂದು ಭಾವಿಸಿರುವ ಮತ್ತು ಮುಸ್ಲಿಮರಿಗೆ ತಕ್ಕ ಶಾಸ್ತಿ ಆಗಲೇಬೇಕು ಎಂದು  ಅಂದುಕೊಂಡಿರುವ ವರ್ಗ.

2. ತಾವು ಬೆಂಬಲಿಸುವ ಪಕ್ಷ  ಜಾರಿಗೆ ತರುವ ಯಾವುದೇ ಕಾಯ್ದೆಯು ದೇಶದ ಹಿತದಿಂದಲೇ ಕೂಡಿರುತ್ತದೆ ಮತ್ತು ಅದನ್ನು ಬೆಂಬಲಿಸಲೇಬೇಕು ಎಂದು ನಂಬಿರುವ ವರ್ಗ.

ನಿಜವಾಗಿ, ಏಕರೂಪ ನಾಗರಿಕ ಸಂಹಿತೆಯ ಕರಡು ಪ್ರತಿ ಇನ್ನೂ ರಚನೆಯಾಗಿಲ್ಲದಿದ್ದರೂ ಅದು ಮುಖ್ಯವಾಗಿ ವಿವಾಹ, ವಿಚ್ಛೇದನ,  ವಾರಸುದಾರಿಕೆ, ದತ್ತು ಸ್ವೀಕಾರ.. ಇತ್ಯಾದಿಗಳನ್ನು ಒಳಗೊಂಡಿರಲಿದೆ ಎಂಬ ಅಂಶವನ್ನು ತೇಲಿ ಬಿಡಲಾಗಿದೆ. ಏಕರೂಪ ನಾಗರಿಕ  ಸಂಹಿತೆಯ ಬಗ್ಗೆ ರಾಷ್ಟ್ರೀಯ ಕಾನೂನು ಆಯೋಗವು ಸಾರ್ವಜನಿಕರು, ಧಾರ್ಮಿಕ ಸಂಸ್ಥೆಗಳು ಮತ್ತಿ ತರರಿಂದ ಅಭಿಪ್ರಾಯ  ಸಂಗ್ರಹಕ್ಕೂ ಇಳಿದಿದೆ. ಈಗಾಗಲೇ 50 ಲಕ್ಷಕ್ಕಿಂತಲೂ ಅಧಿಕ ಅಭಿಪ್ರಾಯಗಳು ಸಲ್ಲಿಕೆಯಾಗಿವೆ. ಹಾಗಂತ, ಈ ಅಭಿಪ್ರಾಯಗಳನ್ನು  ಆಧರಿಸಿ ಏಕರೂಪ ನಾಗರಿಕ ಸಂಹಿ ತೆಯ ಕರಡನ್ನು ರಚಿಸಲಾಗುತ್ತದೋ ಅಥವಾ ಮುಚ್ಚಿದ ಕೋಣೆಯಲ್ಲಿ ಈಗಾಗಲೇ  ರಚಿಸಲಾಗಿರುವ ಕರಡು ಪ್ರತಿಗೆ ಅಧಿಕೃತ ಮೊಹರು ಒತ್ತಲು ಈ ಅಭಿಪ್ರಾಯವನ್ನು ಅಪೇಕ್ಷಿಸಲಾಗಿದೆಯೋ, ಗೊತ್ತಿಲ್ಲ. 

ಒಂದುವೇಳೆ,

ಸಾರ್ವಜನಿಕ ಅಭಿಪ್ರಾಯವನ್ನು ಆಧರಿಸಿಯೇ ಈ ಏಕರೂಪ ನಾಗರಿಕ ಸಂಹಿತೆಯ ಕರಡನ್ನು ರಚಿಸಲಾಗುವುದಾದರೆ ಅದು ದೇಶವನ್ನು  ಆಂತರಿಕ ಸಂಘರ್ಷಕ್ಕೆ ದೂಡುವುದು ನಿಶ್ಚಿತ. ಯಾಕೆಂದರೆ, ಸಮಾಜದ ಸೌಖ್ಯಕ್ಕೆ ಇವತ್ತು ಸವಾಲಾಗಿರುವುದು ಮುಸ್ಲಿಮರ ಮದುವೆ,  ವಿಚ್ಛೇದನ, ವಾರೀಸು ಸೊತ್ತು ವಿತರಣೆಗಳಲ್ಲ. ಅದು ಸಾರ್ವಜನಿಕವಾಗಿ ಇವತ್ತು ಸುದ್ದಿಯಲ್ಲೇ  ಇಲ್ಲ. ಕೋರ್ಟು-ಕಚೇರಿಗಳಲ್ಲೂ  ಇವುಗಳಿಗೆ ಸಂಬಂಧಿಸಿದಂತೆ  ಅತ್ಯಂತ ವಿರಳ ದಾವೆಗಳಷ್ಟೇ ಇವೆ. ಆದರೆ, ದೇಶದಲ್ಲಿ ಪ್ರತಿ ನಿತ್ಯವೆಂವೆಂಬ ಒಂದಲ್ಲ ಒಂದು ಕಡೆ  ಅಸಮಾನತೆ, ಅಸ್ಪೃಶ್ಯತೆ ಯನ್ನು ಪ್ರಶ್ನಿಸಿ ಪ್ರತಿಭಟನೆ ನಡೆಯುತ್ತಿದೆ. ಪ್ರಕರಣಗಳು ದಾಖಲಾಗುತ್ತಿವೆ. ಮಂದಿರ ಪ್ರವೇಶಕ್ಕೆ ನಿರಾಕರಣೆ, ದ ಲಿತರ ಶವ ಸಂಸ್ಕಾರಕ್ಕೆ ಅಡ್ಡಿ, ದಲಿತ ಮದುಮಗ ಕುದುರೆ ಮೇಲೆ ಸಾಗುವುದಕ್ಕೆ ವಿರೋಧ, ಅಂತರ್ಜಾತಿ ವಿವಾಹಕ್ಕೆ ತಡೆ-ಹತ್ಯೆ, ದಲಿತರಿಗೆ ಆರ್ಥಿಕ-ಸಾಮಾಜಿಕ ಬಹಿಷ್ಕಾರ.. ಇತ್ಯಾದಿ ಘಟನೆ ಗಳು ದಿನನಿತ್ಯ ವರದಿಯಾಗುತ್ತಿವೆ. ಮೀಸಲಾತಿಯನ್ನೇ ಕಿತ್ತು ಹಾಕಬೇಕು  ಎಂದು ವಾದಿಸುವ ಗುಂಪೂ ದೇಶದಲ್ಲಿದೆ. ತಮ್ಮದೇ ಆದ ವಿವಾಹ, ವಿಚ್ಛೇದನ, ವಾರೀಸುದಾರಿಕೆಯನ್ನು ಹೊಂದಿರುವ ಬುಡಕಟ್ಟುಗಳು,  ಪರಿಶಿಷ್ಟ ಜಾತಿ-ಪಂಗಡಗಳು ಈ ದೇಶದ ಉದ್ದಕ್ಕೂ ಇವೆ. ಮಲೆಕುಡಿಯ ಎಂಬ ಅತಿ ಹಿಂದುಳಿತ ಕರಾವಳಿ ಭಾಗದ ಸಮುದಾಯದ  ಒಟ್ಟು ಜೀವಿತಾವಧಿ 45-50 ವರ್ಷಗಳ ಒಳಗಿದ್ದು, ಇವರಿಗೆ ಮದುವೆಯ ವಯಸ್ಸಿನಲ್ಲಿ ರಿಯಾಯಿತಿ ಕೊಡದಿದ್ದರೆ ಆ  ಸಮುದಾಯವೇ ಅಳಿದು ಹೋಗಬಹುದು ಎಂಬ ಬೇಡಿಕೆ ಬಲವಾಗಿಯೇ ಇದೆ. ಹೆಣ್ಣಿಗೆ 18 ಮತ್ತು ಗಂಡಿಗೆ 21 ಎಂಬ ಈಗಿನ  ಮದುವೆ ವಯಸ್ಸಿನ ಮಿತಿಯನ್ನು ಮಲೆ ಕುಡಿಯರಿಗೆ ಕಡ್ಡಾಯವಾಗಿಸದೇ ಬೇಗನೇ ಮದುವೆಯಾಗುವ ಮತ್ತು ಆ ಮೂಲಕ ಸಂತಾನ  ವೃದ್ಧಿ ಮಾಡುವ ಅವಕಾಶ ನೀಡಬೇಕು ಎಂಬ ಬೇಡಿಕೆಗೆ ತಜ್ಞರ ಬೆಂಬಲವೂ ಇದೆ.

ಇದೇವೇಳೆ,

ಮೀಸಲಾತಿಗೆ ಸಮಾಜದ ಒಂದು ವರ್ಗದಿಂದ ಇರುವ ವಿರೋಧವೂ ಗುಟ್ಟೇನಲ್ಲ. ಮಣಿಪುರವನ್ನು ಹೊತ್ತಿ ಉರಿಸಿರುವುದರ ಹಿಂದೆ ಈ  ಮೀಸಲಾತಿಗೂ ಪಾತ್ರವಿದೆ. ಸ್ವಾತಂತ್ರ‍್ಯದ 75 ವರ್ಷಗಳ ಬಳಿಕವೂ ಈ ಮೀಸಲಾತಿಯನ್ನು ಉಳಿಸಿಕೊಳ್ಳುವುದಕ್ಕೆ ಅರ್ಥವಿಲ್ಲ ಎಂದು  ಟೀಕಿಸುವವರ ಸಂಖ್ಯೆ ಸಣ್ಣದೇನಲ್ಲ. ಶೈಕ್ಷಣಿಕ ವ್ಯವಸ್ಥೆಯ ಕುರಿತೂ ಸಾರ್ವಜನಿಕವಾಗಿ ಅಸಮಾಧಾನವಿದೆ. ಬಡವರು-ಹಿಂದುಳಿದವರು  ಸರಕಾರಿ ಶಾಲೆಯಲ್ಲಿ ಕಲಿಯುತ್ತಿದ್ದರೆ, ಶ್ರೀಮಂತರು ದುಬಾರಿ ಫೀಸು ತೆತ್ತು ಸಕಲ ಸೌಲಭ್ಯಗಳುಳ್ಳ ಉನ್ನತ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.  ಹಾಗೆಯೇ, ಹಿಂದೂ-ಮುಸ್ಲಿಮ್, ಕ್ರೈಸ್ತ, ಜೈನ, ಸಿಕ್ಖ್ ಮಾಲಿಕತ್ವದ ಶಾಲೆಗಳನ್ನು ಆಯಾ ಧರ್ಮದ ಮಂದಿ ಆಯ್ಕೆ  ಮಾಡಿಕೊಳ್ಳುತ್ತಿರುವುದೂ ನಡೆಯುತ್ತಿದೆ. ಇದು ಸಮಾಜವನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಧಾರ್ಮಿಕವಾಗಿ ವಿಭಜಿಸುತ್ತಿದೆ  ಎಂಬ ಭಾವವೂ ಜನರಲ್ಲಿದೆ. ಆರೋಗ್ಯಕ್ಕೆ ಸಂಬಂಧಿಸಿಯೂ ಈ ಅಸಮಾಧಾನವನ್ನು ವಿಸ್ತರಿಸಿ ನೋಡಬಹುದು. ಬಡವರು,  ಹಿಂದುಳಿದವರು, ದುರ್ಬಲರು ಸರಕಾರಿ ಆಸ್ಪತ್ರೆಗಳನ್ನು ಅವಲಂಬಿಸುವಾಗ ಶ್ರೀಮಂತರು ದುಬಾರಿ, ಐಶಾರಾಮಿ ಶಾಸಗಿ ಆಸ್ಪತ್ರೆ ಗಳನ್ನು  ಅವಲಂಬಿಸುತ್ತಾರೆ. ಸರಕಾರಿ ಆಸ್ಪತ್ರೆಗಳ ಸೇವೆ ಮತ್ತು ಸೌಲಭ್ಯಗಳಿಗೆ ಹೋಲಿಸಿದರೆ ಖಾಸಗಿ ಆಸ್ಪತ್ರೆಗಳು ಎಷ್ಟೋ ಮಿಗಿಲು.  ಆದ್ದರಿಂದಲೇ, ಬಡವರು ಮತ್ತು ಹಿಂದುಳಿದವರು ಸರಿಯಾದ ಚಿಕಿತ್ಸೆ ದೊರೆಯದೇ ಸರಕಾರಿ ಅಸ್ಪತ್ರೆಗಳಲ್ಲಿ ಸಾವನ್ನಪ್ಪುವಾಗ  ಶ್ರೀಮಂತರು ಸುಖವಾಗಿರುತ್ತಾರೆ. ದೇಶದಲ್ಲಿ ನಡೆಯುವ ಹೆರಿಗೆ ಸಾವುಗಳಲ್ಲಿ ಅತ್ಯಧಿಕವೂ ಸರಕಾರಿ ಆಸ್ಪತ್ರೆಗಳಲ್ಲೇ  ನಡೆಯುತ್ತಿದೆ ಎಂಬ  ವಾದವೂ ಇದೆ. 

ಒಂದುವೇಳೆ,

ತನಗೆ ಸಲ್ಲಿಕೆಯಾದ ಸಾರ್ವಜನಿಕ ಅಭಿಪ್ರಾಯಗಳ ಆಧಾರದಲ್ಲೇ  ರಾಷ್ಟ್ರೀಯ ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ  ಕರಡನ್ನು ರೂಪಿಸಲು ಹೊರಡುವುದಾದರೆ ಇಂಥ ಅಸಮಾನತೆಯನ್ನು ಪ್ರಶ್ನಿಸುವ ಮತ್ತು ಇವುಗಳಲ್ಲಿ ಸಮಾನತೆ ಯನ್ನು ತರುವಂತೆ  ಆಗ್ರಹಿಸುವ ಅತೀ ಹೆಚ್ಚು ಅಭಿಪ್ರಾಯಗಳಿಗೆ ಮುಖಾಮುಖಿಯಾಗಬೇಕಾದುದು ಖಂಡಿತ. ಈಗ ಆಯೋ ಗಕ್ಕೆ ಸಲ್ಲಿಕೆಯಾಗಿರುವ 50  ಲಕ್ಷ ಅಭಿಪ್ರಾಯಗಳಲ್ಲಿ ವಿವಾಹ, ವಿಚ್ಛೇದನ, ವಾರಿಸುದಾರಿಕೆಗಳಿಗೆ ಸಂಬಂಧಿಸಿದಂತೆ  ಸಮಾನತೆ ಯನ್ನು ಜಾರಿಗೊಳಿಸಿ ಎಂದು  ಆಗ್ರಹಿಸಿದ ಅಭಿಪ್ರಾಯಗಳು ಒಂದು ಶೇಕಡಾ ಕೂಡಾ ಇರಲಾರದು. ಯಾಕೆಂದರೆ, ನಿತ್ಯದ ಬದುಕಿನಲ್ಲಿ ಇವು ಇವತ್ತು ಸವಾಲುಗಳೇ ಅಲ್ಲ. ಮುಸ್ಲಿಮರ ವೈಯಕ್ತಿಕ ಕಾನೂನುಗಳಿಂದ ತಮಗೆ  ತೊಂದರೆಯಾಗಿದೆ ಎಂದು ಹೇಳಿ ಹಿಂದೂ ಗಳೋ ಕ್ರೈಸ್ತರೋ ಜೈನರೋ ಪ್ರತಿಭಟಿಸಿದ್ದು ಈ ವರೆಗೂ ನಡೆದಿಲ್ಲ. ಹಿಂದೂ  ವಾರಸುದಾರಿಕೆ ಕಾಯ್ದೆ ಅಥವಾ ಕ್ರೈಸ್ತ ವಾರಸುದಾರಿಕೆ ಕಾಯ್ದೆಯಿಂದ ತಮಗೆ ಅನನುಕೂಲವಾಗಿದೆ ಎಂದು ಹೇಳಿ ಮುಸ್ಲಿಮರೂ  ಪ್ರತಿಭಟಿಸಿದ್ದಿಲ್ಲ. ಆದರೆ, ಈ ದೇಶದಲ್ಲಿರುವ ಅಸ್ಪೃಶ್ಯತೆ, ಉಳ್ಳವರಿಗೆ ಸುಲಭವಾಗಿ ಎಟಕುವ ದುಬಾರಿ ನ್ಯಾಯ ಪ್ರಕ್ರಿಯೆ, ಅಸಮಾನ ಶಿಕ್ಷಣ  ಮತ್ತು ಆರೋಗ್ಯ ನೀತಿ ಇತ್ಯಾದಿಗಳ ಬಗ್ಗೆ ಈ ದೇಶದಲ್ಲಿ ಪ್ರತಿಭಟನೆ ಮತ್ತು ಧರಣಿ ನಡೆಸಿರುವುದಕ್ಕೆ ಲೆಕ್ಕಮಿತಿಯಿಲ್ಲ. ಆದ್ದರಿಂದ  ಸಾರ್ವಜನಿಕ ಅಭಿಪ್ರಾಯಗಳನ್ನೇ ಆಧರಿಸಿ ರಾಷ್ಟ್ರೀಯ ಕಾನೂನು ಆಯೋಗವು ಕರಡು ರೂಪಿಸುವುದಾದರೆ, ಅದು ಯಾರ ವೈಯಕ್ತಿಕ  ಕಾನೂನುಗಳನ್ನು ಸ್ಪರ್ಶಿ ಸದೇ, ಒಟ್ಟು ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಸಂಬಂಧಿಸಿ ಏಕರೂಪವನ್ನು ತರಲೇಬೇಕಾದ  ಒತ್ತಡಕ್ಕೆ ಖಂಡಿತ ಸಿಲುಕುತ್ತದೆ. ಈ ಹಿನ್ನೆಲೆಯಲ್ಲೇ ,

ರಾಷ್ಟ್ರೀಯ ಕಾನೂನು ಆಯೋಗವು ಸಾರ್ವಜನಿಕರಿಂದ ಅಪೇಕ್ಷಿಸಿರುವ ಅಭಿಪ್ರಾಯಕ್ಕೂ ಅದು ತಯಾರಿಸಲಿರುವ ಏಕರೂಪ ನಾಗರಿಕ  ಸಂಹಿತೆಗೂ ಸಂಬಂಧ ಇರಬಹುದು ಎಂದು ಅನಿಸುತ್ತಿಲ್ಲ. ಅದು ಈಗಾಗಲೇ ಒಂದು ಕರಡನ್ನು ಸಿದ್ಧಪಡಿಸಿರಬಹುದು ಅಥವಾ  2024ರ ಚುನಾವಣೆಗಾಗಿ ಬರೇ ಗದ್ದಲವನ್ನಷ್ಟೇ ಎಬ್ಬಿಸಿ ಸುಮ್ಮನಾಗಬಹುದು. ಅಷ್ಟೇ.

Monday, July 10, 2023

ದೇಶ, ಧರ್ಮದ ಬಗ್ಗೆ ಪ್ರವಾದಿ(ಸ) ಪರಿಕಲ್ಪನೆ: ದೇಶ ಮೊದಲೋ ಧರ್ಮ ಮೊದಲೋ?


ದೇಶ
ಧರ್ಮ

ಇವೆರಡರಲ್ಲಿ ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ ಎಂಬ ಪ್ರಶ್ನೆಯನ್ನು ಮುಸ್ಲಿಮರ ಕಡೆಗೆ ಎಸೆದು ಕೆಲವರು ಸುಖ ಪಡುವುದಿದೆ.  ಅಲ್ಲದೇ, ಈ ಪ್ರಶ್ನೆಗೆ ಲಭ್ಯವಾಗುವ ಉತ್ತರದ ಆಧಾರದಲ್ಲಿ ಓರ್ವರ ದೇಶಪ್ರೇಮವನ್ನು ಅವರು ತೀರ್ಮಾನಿಸು ವುದೂ ಇದೆ. ದೇಶ  ಮೊದಲು ಎಂದವ ದೇಶಪ್ರೇಮಿ ಮತ್ತು ಧರ್ಮ ಮೊದಲು ಎಂದವ ದೇಶದ್ರೋಹಿ ಎಂದು ಷರಾ ಬರೆಯುವುದಕ್ಕೆ ಈ ಪ್ರಶ್ನೆಯನ್ನು  ಬಳಸಿಕೊಳ್ಳುವುದೂ ಇದೆ.

ಒಂದು ಅಂಕಿ-ಅಂಶ  ಕೊಡುತ್ತೇನೆ.

2021ರಲ್ಲಿ ಒಂದು ಲಕ್ಷದ 63 ಸಾವಿರ ಮಂದಿ ಭಾರತೀಯರು ತಮ್ಮ ಭಾರತೀಯ ಪೌರತ್ವವನ್ನು ತೊರೆದು ವಿದೇಶಿ ಪೌರತ್ವವನ್ನು  ಸ್ವೀಕರಿಸಿದ್ದಾರೆ. ಇವರಲ್ಲಿ 78 ಸಾವಿರ ಮಂದಿ ಅಮೇರಿಕದ ಪೌರತ್ವವನ್ನು ಸ್ವೀಕರಿಸಿದ್ದಾರೆ. 2020ರಲ್ಲಿ ಒಟ್ಟು 85,256 ಮಂದಿ  ಭಾರತೀಯರು ಭಾರತೀಯ ಪೌರತ್ವವನ್ನು ತೊರೆದು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. ಹಾಗೆಯೇ, 2019ರಲ್ಲಿ 1 ಲಕ್ಷದ 44  ಸಾವಿರ ಮಂದಿ ಭಾರತೀಯರು ಭಾರತೀಯ ಪೌರತ್ವವನ್ನು ತೊರೆದಿದ್ದಾರೆ ಮತ್ತು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. 2019ರಿಂದ  21ರ ನಡುವೆ ಒಟ್ಟು 3 ಲಕ್ಷದ 90 ಸಾವಿರ ಮಂದಿ ಈ ದೇಶದ ಪೌರತ್ವವನ್ನು ತೊರೆದು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. ಇವರಲ್ಲಿ  7046 ಮಂದಿ ಸಿಂಗಾಪುರ, 3,754 ಮಂದಿ ಸ್ವೀಡನ್, 170 ಮಂದಿ ಬಹ್ರೈನ್, 21 ಮಂದಿ ಇರಾನ್, 1400 ಮಂದಿ ಚೀನಾ, 48  ಮಂದಿ ಪಾಕಿಸ್ತಾನದ ಪೌರತ್ವವನ್ನು 2021ರಲ್ಲಿ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈಯವರು  2022ರಲ್ಲಿ ಪಾರ್ಲಿಮೆಂಟ್‌ಗೆ ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದವರು ಬಿಎಸ್‌ಪಿ ಸಂಸದ ಹಾಜಿ ಫಝ್ಲರ‍್ರಹ್ಮಾನ್.

ನೆನಪಿರಲಿ

ಇವರು ಭಾರತೀಯ ನಾಗರಿಕತ್ವವನ್ನು ತೊರೆದಿದ್ದಾರೆಯೇ ಹೊರತು ಧರ್ಮವನ್ನಲ್ಲ. ಒಂದುವೇಳೆ, ದೇಶವೇ ಮೊದಲು ಮತ್ತು ಧರ್ಮ  ಅನಂತರ ಎಂದು ವಾದಿಸುವುದಾದರೆ ಮತ್ತು ದೇಶ ಪ್ರೇಮವನ್ನು ನಿರ್ಧರಿಸುವ ಮಾನದಂಡ ಇದುವೇ ಆಗಿದ್ದರೆ 2019ರಿಂದ 21ರ  ನಡುವೆ ದೇಶದ ಪೌರತ್ವವನ್ನು ತೊರೆದ ಮತ್ತು ಧರ್ಮವನ್ನು ತೊರೆಯದ 3 ಲಕ್ಷದ 90 ಸಾವಿರ ಮಂದಿಯನ್ನು ದೇಶದ್ರೋಹಿಗಳು  ಎಂದು ಕರೆಯಬೇಕಾಗುತ್ತದೆ. ಮಾತ್ರವಲ್ಲ,

ಹೀಗೆ ದೇಶದ ಪೌರತ್ವವನ್ನು ತೊರೆದವರಲ್ಲಿ 99 ಶೇಕಡಾ ಮಂದಿ ಕೂಡಾ ಅರಬ್ ರಾಷ್ಟ್ರಗಳ ಪೌರತ್ವವನ್ನು ಸ್ವೀಕರಿಸಿಲ್ಲ ಎಂಬುದೂ  ಗಮನಾರ್ಹ.

ಈ ದೇಶದ ಪೌರತ್ವವನ್ನು ತೊರೆದವರು ಅಮೇರಿಕ, ಕೆನಡ, ಬ್ರಿಟನ್, ಸಿಂಗಾಪುರ, ಚೀನಾ, ಸ್ವೀಡನ್, ಜಪಾನ್ ಇತ್ಯಾದಿ ದೇಶಗಳ  ಪೌರತ್ವವನ್ನು ಸ್ವೀಕರಿಸಿದ್ದಾರೆ. ಆದರೆ, ಅವರಾರೂ ತಮ್ಮ ಧರ್ಮವನ್ನು ತೊರೆದಿಲ್ಲ ಮತ್ತು ಭಾರತದಲ್ಲಿರುವ ತಮ್ಮ ಕುಟುಂಬಿಕರೊಂದಿಗಿನ ಸಂಬಂಧವನ್ನು ಕಡಿದುಕೊಂಡೂ ಇಲ್ಲ. ಹಬ್ಬ-ಹರಿದಿನಗಳಲ್ಲಿ ಅವರು ಕುಟುಂಬ ಸಮೇತ ಭಾರತಕ್ಕೆ ಬಂದು ಇಷ್ಟ ದೇವರ  ಪೂಜೆ-ಪುನಸ್ಕಾರ ಮಾಡಿ ಸಂಭ್ರಮಿಸುತ್ತಿರಬಹುದು. ತಮ್ಮ ಇಷ್ಟದ ಮಂದಿರ-ಬಸದಿ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ಮನ  ತಣಿಸಿಕೊಳ್ಳುತ್ತಿರಬಹುದು. ಭಾರತದಲ್ಲಿರುವ ಕುಟುಂಬಿಕರಿಗೆ ಕಾಲಕಾಲಕ್ಕೆ ಹಣ ಕಳುಹಿಸುತ್ತಿರಬಹುದು. ತಂದೆ-ತಾಯಿ ಭಾರತದಲ್ಲಿದ್ದು  ಭಾರತೀಯ ನಾಗರಿಕರಾಗಿ ಜೀವಿಸುತ್ತಿರುವಾಗ ಮಗ ಅಥವಾ ಮಗಳು ಅಮೇರಿಕ ದಲ್ಲಿದ್ದು, ಅಮೇರಿಕನ್ ಪೌರರಾಗಿ  ಬದುಕುತ್ತಿರಬಹುದು.

 ಹಾಗಂತ,

ಅಮೇರಿಕದಲ್ಲಿರುವ  ಮಗ ಅಥವಾ ಮಗಳು ಭಾರತೀಯ ಪೌರತ್ವವನ್ನು ತೊರೆದು ಅಮೇರಿಕನ್ ಪೌರತ್ವವನ್ನು ಸ್ವೀಕರಿಸುವಾಗ ಹಿಂದೂ  ಧರ್ಮವನ್ನು ತೊರೆದು ಅಮೇರಿಕದ ಕ್ರೈಸ್ತ ಧರ್ಮವನ್ನು ಸ್ವೀಕರಿಸುವುದಿಲ್ಲ. ಬಹರೇನ್, ಯುಎಇ, ಸೌದಿ, ಮಂಗೋಲಿಯಾಕ್ಕೆ ಸಂಬಂಧಿಸಿಯೂ ಇದೇ ಮಾತು ಅನ್ವಯಿಸುತ್ತದೆ. ಇವರೆಲ್ಲ ದೇಶವನ್ನು ಬದಲಾಯಿಸುತ್ತಾರೆಯೇ ಹೊರತು ಧರ್ಮವನ್ನಲ್ಲ. ಯಾಕೆಂದರೆ,

ದೇಶ ಮತ್ತು ಧರ್ಮ ಬೇರೆ ಬೇರೆ.

ದೇಶಕ್ಕೆ ಗಡಿಯೆಂಬ ಬೇಲಿಯಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ ಭೂಭೂಗವೇ ಭಾರತ. ಈ ಗಡಿಯ ಹೊರಗಿನ ಮಂದಿ  ಭಾರತೀಯರಲ್ಲ. ಪಾಕಿಸ್ತಾನಕ್ಕೂ, ಚೀನಾಕ್ಕೂ, ಅಮೇರಿಕಕ್ಕೂ ಮತ್ತು ಸೌದಿ ಅರೇಬಿಯಾಕ್ಕೂ ಇಂಥದ್ದೇ  ಗಡಿಗಳಿವೆ ಮತ್ತು ಇಂಥದ್ದೇ   ಅಸ್ಮಿತೆಗಳಿವೆ. ಇನ್ನು,

ಭಾರತದ ಒಳಗೂ ಹಲವು ಅಸ್ಮಿತೆಗಳಿವೆ.

ಕನ್ನಡಿಗ, ತಮಿಳಿಗ, ಗುಜರಾತಿ, ಮಲಯಾಳಿ, ಬಂಗಾಳಿ, ಅಸ್ಸಾಮಿ... ಹೀಗೆ ಭಾರತೀಯರಿಗೂ ವಿವಿಧ ಗುರುತುಗಳಿವೆ. ಅಲ್ಲದೇ, ಈ  ರಾಜ್ಯವಾರು ಗುರುತುಗಳಲ್ಲದೇ, ಜಿಲ್ಲಾವಾರು ಗುರುತುಗಳು ಮತ್ತು ತಾಲೂಕುವಾರು ಗುರುತುಗಳಿಂದಲೂ ವ್ಯಕ್ತಿ ಗುರುತಿಸಲ್ಪಡುತ್ತಾನೆ/ಳೆ. ಕೋಲಾರದವ, ಬೆಳಗಾವಿ, ಹುಬ್ಬಳ್ಳಿಯವ ಅಥವಾ ಬಂಟ್ವಾಳದವ, ತೀರ್ಥಹಳ್ಳಿ, ಕೊಳ್ಳೆಗಾಲದವ ಎಂದೆಲ್ಲಾ ಗುರುತು  ಮಾಡಲಾಗುತ್ತದೆ. ಆದರೆ ಧರ್ಮಕ್ಕೆ ಸಂಬಂಧಿಸಿ ಈ ಒಳಗುರುತುಗಳಿರುವುದಿಲ್ಲ. ಹಿಂದೂ-ಮುಸ್ಲಿಮ್, ಕ್ರೈಸ್ತ, ಬೌದ್ಧ, ಸಿಕ್ಖ್ ಎಂಬ  ಗುರುತಿನಿಂದ ಗುರುತಿಸಲಾಗುತ್ತದೆಯೇ ಹೊರತು ದಕ್ಷಿಣ ಕನ್ನಡದ ಮುಸ್ಲಿಮ್, ಬೆಂಗಳೂರಿನ ಮುಸ್ಲಿಮ್, ದೆಹಲಿಯ ಮುಸ್ಲಿಮ್  ಎಂದೆಲ್ಲಾ ವಿಭಜಿಸಿ ಹೇಳುವ ಕ್ರಮವಿಲ್ಲ. ಯಾಕೆಂದರೆ,

ಧರ್ಮವು ದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಇತ್ಯಾದಿಗಳನ್ನು ಮೀರಿದ ಯುನಿವರ್ಸಲ್ ಗುರುತು. ಅದು ಸಾರ್ವತ್ರಿಕ. ಸರ್ವವ್ಯಾಪಿ.

ಹಿಂದೂ ಧರ್ಮದನುಸಾರ ಓರ್ವ ಹಿಂದೂ ಭಾರತದಲ್ಲೂ ಬದುಕಬಲ್ಲ, ಅಮೇರಿಕ, ಸ್ವೀಡನ್, ಆಫ್ರಿಕಾದಲ್ಲೂ ಬದುಕಬಲ್ಲ. ಓರ್ವ  ಮುಸ್ಲಿಮ್ ಅಥವಾ ಸಿಕ್ಖ್ ಗೆ  ಸಂಬಂಧಿಸಿಯೂ ಇವೇ ಮಾತು ಅನ್ವಯವಾಗುತ್ತದೆ. ಯಾಕೆಂದರೆ, ಧರ್ಮ ಸ್ಥಾವರ ಅಲ್ಲ, ಜಂಗಮ.  ಅದಕ್ಕೆ ಗಡಿ, ಬೇಲಿಗಳಿಲ್ಲ. ಭಾಷೆಯ ಹಂಗಿಲ್ಲ. ಅದು ಜಪಾನ್‌ಗೂ ಹೊಂದಿಕೊಳ್ಳುತ್ತದೆ. ಅಮೇರಿಕಕ್ಕೂ ಹೊಂದಿಕೊಳ್ಳುತ್ತದೆ. ಆದರೆ  ಭಾರತೀಯನೋರ್ವ ಕಿನ್ಯಾದ ಭಾಷೆಗೆ ತಕ್ಷಣ ಹೊಂದಿಕೊಳ್ಳಲಾರ. ಗಲ್ಫ್ ರಾಷ್ಟ್ರಕ್ಕೆ ತೆರಳಿದ ಭಾರತೀಯನೋರ್ವ ಅಲ್ಲಿನ ಅರಬಿ  ಭಾಷೆಗೆ ತಳಮಳಗೊಳ್ಳಬಲ್ಲ. ಹಾಗಂತ, ಇದನ್ನು ಭಾರತೀಯರಿಗೆ ಸಂಬಂಧಿಸಿ ಮಾತ್ರ ಹೇಳಬೇಕಿಲ್ಲ. ಚೀನಿಯನೋರ್ವ ಅಥವಾ  ಜಿಂಬಾಬ್ವೆಯ ವ್ಯಕ್ತಿಯೋರ್ವ ಭಾರತಕ್ಕೆ ಬಂದರೂ ಇದೇ ಗಲಿಬಿಲಿ ಮತ್ತು ತಳಮಳವನ್ನು ಹೊಂದಬಲ್ಲ. 

ಆದರೆ,

ಧರ್ಮವನ್ನು ಆಚರಿಸುವ ವಿಷಯಕ್ಕೆ ಸಂಬಂಧಿಸಿ ಈ ಯಾವ ಗೊಂದಲ ಮತ್ತು ತಳಮಳ ಇವರಾರಿಗೂ ಆಗುವುದಕ್ಕೆ ಸಾಧ್ಯವೇ ಇಲ್ಲ.  ಮುಸ್ಲಿಮನೋರ್ವ ಅಮೇರಿಕದ ಮಣ್ಣಿಗೆ ಇಳಿದ ಬಳಿಕ ಯಾವ ಗೊಂದಲವೂ ಇಲ್ಲದೆ ತನ್ನ ಕೋಣೆ ಸೇರಿ ನಮಾಝï ಮಾಡಬಲ್ಲ  ಅಥವಾ ಮಸೀದಿ ಇದ್ದರೆ ಅಲ್ಲೂ ನಮಾಝï ನೆರವೇರಿಸಬಲ್ಲ. ಅಲ್ಲಿ ಭಾಷೆಯ ಸಮಸ್ಯೆ ಉದ್ಭವಿಸುವುದೇ ಇಲ್ಲ. ಉಪವಾಸ ಆಚರಿಸುವುದಕ್ಕೂ ಯಾವ ತಡೆಯೂ ಎದುರಾಗುವುದಿಲ್ಲ.  ಹಿಂದೂಗೆ ಸಂಬಂಧಿಸಿಯೂ ಇವೇ ಮಾತನ್ನು ಹೇಳಬಹುದು. ಕೋಣೆಯೊಳಗೆ ವಿಗ್ರಹವನ್ನಿಟ್ಟು ಪೂಜೆ ಮಾಡುವುದಕ್ಕೋ ಜಪ-ತಪ  ನಿರ್ವಹಿಸುವುದಕ್ಕೋ ಯಾವ ಅಡ್ಡಿಯೂ ಎದುರಾಗುವುದಿಲ್ಲ. ನಿಜವಾಗಿ,

ಧರ್ಮದ ಈ ಯುನಿವರ್ಸಲ್ ಗುಣವನ್ನು ದೇಶ ಎಂಬ ಸೀಮಿತ ಗಡಿಗುರುತಿನೊಂದಿಗೆ ಹೋಲಿಕೆ ಮಾಡುವುದೇ ತಪ್ಪು.
ದೇಶ ಮತ್ತು ಧರ್ಮದ ಬಗ್ಗೆ ಚರ್ಚಿಸುವಾಗ ಈ ಸ್ಪಷ್ಟತೆ ಇಲ್ಲದೇ ಹೋದರೆ ಆ ಚರ್ಚೆ ದೇಶಪ್ರೇಮಿ ಮತ್ತು ದೇಶ ದ್ರೋಹಿಗಳನ್ನು  ತೀರ್ಮಾನಿಸುವ ನ್ಯಾಯಾಲಯವಾಗಿ ಪರಿವರ್ತನೆಯಾಗುತ್ತದೆ. ಸದ್ಯದ ಮಟ್ಟಿಗೆ ದೇಶದಲ್ಲಿ ಇಂಥದ್ದೊಂದು  ಸ್ಥಿತಿಯಿದೆ.

ಪ್ರವಾದಿ ಮುಹಮ್ಮದ್(ಸ) ಮುಖ್ಯವಾಗುವುದೇ ಇಲ್ಲಿ.

ಮಕ್ಕಾದ ಜನರ ದೌರ್ಜನ್ಯ, ಹಿಂಸೆ, ಕಿರುಕುಳಗಳನ್ನು ತಾಳಲಾರದೇ ಹುಟ್ಟಿ ಬೆಳೆದು 53 ವರ್ಷಗಳ ವರೆಗೆ ಬದುಕಿದ ಮಣ್ಣನ್ನು ಬಿಟ್ಟು  ಅವರು ಮದೀನಾಕ್ಕೆ ವಲಸೆ ಹೋಗಲು ನಿರ್ಬಂಧಿತರಾಗುತ್ತಾರೆ. ಇಂಥ ಅನಿವಾರ್ಯ ಸ್ಥಿತಿಯಲ್ಲೂ ಅವರು ಮಕ್ಕಾವನ್ನು ಉದ್ದೇಶಿಸಿ  ಹೇಳಿದ ಮಾತನ್ನು ತಿರ್ಮಿದಿ ಎಂಬ ಗ್ರಂಥದ ಕ್ರಮ ಸಂಖ್ಯೆ 3926ರಲ್ಲಿ ಹೀಗೆ ಉಲ್ಲೇಖಿಸಲಾಗಿದೆ-
‘ನೀನು ನನಗೆಷ್ಟು ಆಪ್ತ ಮತ್ತು ಪ್ರೀತಿಯ ನೆಲ ಎಂದರೆ, ನನ್ನವರು ನನ್ನನ್ನು ಇಲ್ಲಿಂದ ಹೊರಹಾಕದಿರುತ್ತಿದ್ದರೆ ನಾನು
ನಿನ್ನನ್ನು ಬಿಟ್ಟು ಇನ್ನೆಲ್ಲೂ ಹೋಗುತ್ತಿರಲಿಲ್ಲ..’ ಇದೇವೇಳೆ,

ಇರಾನ್‌ನ ಸಲ್ಮಾನ್, ರೋಮ್‌ನ ಬಿಳಿಯ ವ್ಯಕ್ತಿ ಶುಹೈಬ್ ಮತ್ತು ಇತಿಯೋಪಿಯಾದ ಕಪ್ಪು ಮೈಬಣ್ಣದ ಬಿಲಾಲ್‌ರ ಜೊತೆ ಪ್ರವಾದಿ ಸಭೆ  ನಡೆಸುತ್ತಿರುವಾಗ ಅಲ್ಲಿಗೆ ಗಿಯಾಸ್ ಎಂಬ ಅರಬ್ ವ್ಯಕ್ತಿ ಬಂದರು. ಇವರನ್ನು ನೋಡಿ, ‘ಓ ವಿದೇಶಿಗರೇ’ ಎಂದು ಕರೆದರು. ಆದರೆ  ಪ್ರವಾದಿ ಆ ಗಡಿಪ್ರೇರಿತ ಮತ್ತು ಜನಾಂಗೀಯ ಪ್ರೇರಿತ ಸಂಬೋಧನೆಯನ್ನು ವಿರೋಧಿಸಿದರು. ಮನುಷ್ಯರನ್ನು ದೇಶ ಮತ್ತು ಜನಾಂಗದ  ಆಧಾರದಲ್ಲಿ ವಿಭಜಿಸುವುದನ್ನು ನಿರುತ್ತೇಜಿಸಿದರು. ‘ನಾವೆಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳು...’ ಎಂದು ತಿದ್ದಿದರು. ಅರೇಬಿಯನ್,  ಇತಿಯೋಪಿಯನ್ ಅಥವಾ ಪರ್ಷಿಯನ್ ಎಂದು ಮಾನವರನ್ನು ವಿಭಜಿಸಿ ನೋಡುವುದು ಮಾನವ ಸಹಜ ಸಹೋದರ ಸಂಬಂಧಕ್ಕೆ  ಧಕ್ಕೆ ತರಬಲ್ಲುದು ಎಂಬ ದೂರದೃಷ್ಟಿಯ ನಿಲುವು ಅವರದಾಗಿತ್ತು.

ಪವಿತ್ರ ಕುರ್‌ಆನ್ ಕೂಡ ಇದನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಿದೆ-

ಸೃಷ್ಟಿಕರ್ತನು ನಿಮ್ಮನ್ನು ಒಬ್ಬ ಪುರುಷ ಮತ್ತು ಸ್ತ್ರೀಯಿಂದ ಉಂಟು ಮಾಡಿದ್ದಾನೆ. ಬಳಿಕ ನೀವು ಪರಸ್ಪರ ಪರಿಚಯಪಟ್ಟುಕೊಳ್ಳಲಿಕ್ಕಾಗಿ  ನಿಮ್ಮಲ್ಲಿ ಜನಾಂಗಗಳನ್ನೂ ಬುಡಕಟ್ಟುಗಳನ್ನೂ ಮಾಡಿದ್ದಾನೆ. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಸೃಷ್ಟಿಕರ್ತನ ಬಳಿ ಅತೀ  ಹೆಚ್ಚು ಗೌರವಕ್ಕೆ ಪಾತ್ರನು.
(ಪವಿತ್ರ ಕುರ್‌ಆನ್, ಅಧ್ಯಾಯ 49, ವಚನ 13)

ಹಾಗೆಯೇ, 

ಪ್ರವಾದಿ ಹಜ್ಜ್ ಕರ್ಮವನ್ನು ನಿರ್ವಹಿಸಿ ಮಾಡಿದ ಐತಿ ಹಾಸಿಕ ಭಾಷಣ ಕೂಡ ಗಮನಾರ್ಹ-
‘ಅರಬನಿಗೆ ಅರಬೇತರನಿಗಿಂತ, ಬಿಳಿಯನಿಗೆ ಕರಿಯನಿಗಿಂತ, ಶ್ರೀಮಂತರಿಗೆ ಬಡವರಿಗಿಂತ ಯಾವ ಮೇಲ್ಮೆಯಾಗಲಿ ಹೆಚ್ಚು  ಗಾರಿಕೆಯಾಗಲಿ ಇಲ್ಲ. ನಿಮ್ಮಲ್ಲಿ ಯಾರು ಒಳಿತಿನಲ್ಲಿ ಮುಂದಿರುತ್ತಾರೋ ಅವರೇ ಉತ್ತಮರು.’

ಅಂದಹಾಗೆ,

ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದರು ದೇಶ ಮತ್ತು ಧರ್ಮದ ಪರಿಕಲ್ಪನೆಯನ್ನು ಇಲ್ಲಿ ನಿಕಷಕ್ಕೆ ಒಡ್ಡಿದ್ದಾರೆ. ದೇಶ ಎಂಬುದು  ಭಾವನಾತ್ಮಕ ಸಂಗತಿ. ತಾನಿರುವ ದೇಶವನ್ನು ಪ್ರೀತಿಸುವುದು ಮತ್ತು ಅದರ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವುದು ಪ್ರತಿಯೊಬ್ಬನ  ಕರ್ತವ್ಯ. ಪ್ರವಾದಿ ಮಕ್ಕಾವನ್ನು ತೊರೆದುದು ಅತ್ಯಂತ ಅನಿವಾರ್ಯ ಸ್ಥಿತಿ ಎದುರಾದಾಗ. ಇನ್ನು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ  ಸೃಷ್ಟಿಯಾದಾಗ ಭಾವುಕ ಹೃದಯದೊಂದಿಗೆ ಅವರು ಮಕ್ಕಾಕ್ಕೆ ವಿದಾಯ ಕೋರಿದರು. ಹಾಗೇ ವಿದಾಯ ಕೋರುವಾಗಲೂ, ಮಕ್ಕಾದ  ಮಣ್ಣಿನೊಂದಿಗೆ ತನಗಿರುವ ಭಾವನಾತ್ಮಕ ನಂಟನ್ನು ನೆನಪಿಸಿ ಕೊಂಡರು. ಯಾಕೆಂದರೆ,

ಹುಟ್ಟಿದಂದಿನಿಂದ  ಮಕ್ಕಾವನ್ನು ತೊರೆಯಬೇಕಾಗಿ ಬಂದ 53ನೇ ವರ್ಷದ ವರೆಗೆ ಮಕ್ಕಾದ ಸರ್ವತೋಮುಖ ಅಭಿವೃದ್ಧಿ ಮತ್ತು  ಶಾಂತಿಗಾಗಿ ಪ್ರವಾದಿ ಶ್ರಮಿಸಿದ್ದರು. ಹಜರುಲ್ ಅಸ್ವದ್ ಎಂಬ ಕಪ್ಪು ಶಿಲೆಯ ಹೆಸರಲ್ಲಿ ಸಂಘರ್ಷವೊಂದು  ಹುಟ್ಟಿ ಕೊಳ್ಳುವ ಸಾಧ್ಯತೆ  ಎದುರಾದಾಗ, ಅದನ್ನು ಚಾಣಾಕ್ಷತನ ದಿಂದ ತಪ್ಪಿಸಿದ್ದು ಇದೇ ಪ್ರವಾದಿ. ಅವರನ್ನು ಕಲ್ಲೆಸೆದು ರಕ್ತ ಹರಿಯುವಂತೆ  ಗಾಯಗೊಳಿಸಿದಾಗಲೂ ತನ್ನ ಜನರ ಮೇಲೆ ಶಾಪ ಪ್ರಾರ್ಥನೆ ಮಾಡದೆ ಇದ್ದುದು ಕೂಡಾ ಇದೇ ಪ್ರವಾದಿ. ಪ್ರವಾದಿತ್ವದ 40ರಿಂದ 53  ವರ್ಷಗಳ ಅವಧಿಯಲ್ಲಿ ತೀವ್ರ ಹಿಂಸೆಯನ್ನು ಎದುರಿಸಿದ ಹೊರತಾಗಿಯೂ ಮಕ್ಕಾದ ಜನರ ವಿರುದ್ಧ ಯುದ್ಧ ಘೋಷಣೆ ಮಾಡದೇ  ಇದ್ದುದೂ ಇದೇ ಪ್ರವಾದಿ. ಮಾತ್ರವಲ್ಲ, ತೀರ್ಥಯಾತ್ರೆಯ ಉದ್ದೇಶವನ್ನಿಟ್ಟು ಮದೀನಾದಿಂದ ಮಕ್ಕಾಕ್ಕೆ ಹೊರಟವರನ್ನು  ಅರ್ಧದಾರಿಯಲ್ಲೇ  ತಡೆದ ಮಕ್ಕಾದ ಜನರೊಂದಿಗೆ ಯುದ್ಧ ಘೋಷಿಸದೇ ಮರಳಿ ಮದೀನಾ ಸೇರಿಕೊಂಡದ್ದೂ ಇದೇ ಪ್ರವಾದಿ.

ಒಂದು ರೀತಿಯಲ್ಲಿ,

ತನ್ನ ತಾಯ್ನಾಡು ಸಂಘರ್ಷಭರಿತವಾಗುವುದನ್ನು ಮತ್ತು ತನ್ನ ತಾಯ್ನಾಡಿನ ಜನರು ಸಂಕಷ್ಟಕ್ಕೆ ಒಳಗಾಗುವುದನ್ನು ಪ್ರವಾದಿ ಎಂದೂ  ಬಯಸಿರಲಿಲ್ಲ. ಇದಕ್ಕೆ ತಾನು ಹುಟ್ಟಿದೂರು ಎಂಬ ಪ್ರೀತಿಯೇ ಕಾರಣವಿರಬೇಕು. ತನ್ನ ಜನರು, ತನ್ನ ದೇಶ, ತಾನು ಹುಟ್ಟಿ, ಬೆಳೆದ,  ಆಡಿದ ಮಣ್ಣು ಎಂಬ ಭಾವನಾತ್ಮಕ ನಂಟೇ ಅವರನ್ನು ಈ ಎಲ್ಲ ಅವಮಾನಗಳನ್ನು ಸಹಿಸಿಕೊಳ್ಳುವುದಕ್ಕೆ ಪ್ರೇರಣೆ ನೀಡಿರಬೇಕು. ತನ್ನ  ತಾಯ್ನಾಡು ಶಾಂತಿಯುತವಾಗಿರಬೇಕು ಎಂಬ ಮಹದಾಸೆ ಅವರ ಈ ಎಲ್ಲ ನಿಲುವುಗಳಲ್ಲಿ ಎದ್ದು ಕಾಣುತ್ತದೆ.

ಇದೇವೇಳೆ,

ದೇಶಪ್ರೇಮವೆಂಬುದು ಜನಾಂಗೀಯವಾದವಾಗಿ ಮತ್ತು ಇತರರನ್ನು ದ್ವೇಷಿಸುವ ಚಿಂತನೆಯಾಗಿ ಬದಲಾಗಬಾರದೆಂದೂ ಅವರು  ಬಯಸಿದ್ದರು. ಸಲ್ಮಾನ್, ಶುಹೈಬ್ ಮತ್ತು ಬಿಲಾಲ್‌ರನ್ನು ಹೊರಗಿನವರು ಎಂದು ತನ್ನದೇ ಅನುಯಾಯಿ ಗಿಯಾಸ್ ವಿಭಜಿಸಿದಾಗ  ಪ್ರವಾದಿ ಅದನ್ನು ವಿರೋಧಿಸಿದ್ದು ಇದೇ ಕಾರಣದಿಂದ. ಅಂಥ ವಿಭಜನೆ ಅಂತಿಮವಾಗಿ ಜನಾಂಗೀಯ ವಿಭಜನೆಯೆಡೆಗೆ  ಕೊಂಡೊಯ್ಯುತ್ತದೆ. ಹಿಟ್ಲರ್ ಇದನ್ನೇ ಮಾಡಿದ. ಆರ್ಯರು ಮತ್ತು ಆರ್ಯೇತರರು ಎಂದು ತನ್ನದೇ ಜನರನ್ನು ವಿಭಜಿಸಿದ. ಆರ್ಯರು  ಶ್ರೇಷ್ಠರು ಎಂದ. ಚೆಕೊಸ್ಲಾವಿಯಾ, ರುವಾಂಡ ಮತ್ತು ಮ್ಯಾನ್ಮಾರ್‌ನಲ್ಲೂ ಇಂಥದ್ದೇ  ವಿಭಜನೆ ನಡೆದಿದೆ. ಅಂತಿಮವಾಗಿ ಬಹುದೊಡ್ಡ ಜನಾಂಗೀಯ ಹತ್ಯಾಕಾಂಡಕ್ಕೆ ಇದು ಮುನ್ನುಡಿ ಬರೆದದ್ದನ್ನೂ ಜಗತ್ತು ಕಂಡಿದೆ. ಭಾರತದಲ್ಲೂ ಇಂಥದ್ದೊಂದು  ವಿಭಜನೆಗೆ ಪ್ರಯತ್ನ  ನಡೆಸುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಸ್ವದೇಶೀಯರು ಮತ್ತು ವಿದೇಶಿಯರು ಎಂಬ ಗೆರೆಯೊಂದನ್ನು ಎಳೆಯುವುದು ಮತ್ತು  ಸ್ವದೇಶಿ ಧರ್ಮ, ಆಹಾರ, ಸಂಸ್ಕೃತಿ, ಆರಾಧನೆ, ಕಲೆ, ಸಾಹಿತ್ಯ ಇತ್ಯಾದಿಗಳನ್ನು ಶ್ರೇಷ್ಠವೆಂದು ಸಾರಿ ವಿದೇಶಿಯರು ಎಂದು ಹಣೆಪಟ್ಟಿ  ಹಚ್ಚಲಾದವರ ಧರ್ಮ, ಕಲೆ, ಸಂಸ್ಕೃತಿ, ಆಹಾರ ಕ್ರಮ ಇತ್ಯಾದಿಗಳನ್ನು ಪದೇಪದೇ ಪ್ರಶ್ನಿಸುತ್ತಾ ನಿಂದಿಸುತ್ತಾ ಬರುವುದು ಇದಕ್ಕೆ ಪುರಾವೆ.  ಇದು ಅಂತಿಮವಾಗಿ ಜನಾಂಗೀಯ ಸಂಘರ್ಷ ಮತ್ತು ಜನಾಂಗೀಯ ಹತ್ಯಾಕಾಂಡದೆಡೆಗೆ ತಲುಪಿಸುತ್ತದೆ.

ಅಷ್ಟಕ್ಕೂ,

ಮಕ್ಕಾದ ಕಿರುಕುಳ ತಾಳಲಾರದೇ ಮದೀನಾಕ್ಕೆ ತೆರಳಿದ ಪ್ರವಾದಿಯವರು ಅಲ್ಲಿನ ಬಹುಸಂಖ್ಯಾತ ಯಹೂದಿ ಮತ್ತು ಬಹುದೇವಾರಾಧಕ  ಸಮುದಾಯದೊಂದಿಗೆ ಬೆರೆತು ಬದುಕಿದ್ದರು. ಅಲ್ಲಿನ ಕೈನುಕಾ, ನಝೀರ್ ಮತ್ತು ಕುರೈಝಾ ಎಂಬ ಪ್ರಬಲ ಯಹೂದಿ ಬುಡಕಟ್ಟುಗಳು  ಮತ್ತು ಬಹುದೇವಾರಾಧಕ ಗುಂಪುಗಳೊಂದಿಗೆ ಅವರು ಐತಿಹಾಸಿಕ ಒಡಂಬಡಿಕೆಯೊಂದನ್ನು ಮಾಡಿಕೊಂಡರು. ಇದನ್ನು ಮದೀನಾದ  ಮೊದಲು ಸಂವಿಧಾನ ಎಂದು ಕರೆಯಲಾಗುತ್ತದೆ. ಸುಮಾರು 40ರಷ್ಟು ಸೆಕ್ಷನ್‌ಗಳನ್ನು ಹೊಂದಿರುವ ಆ ಸಂವಿಧಾನದ ಪ್ರಮುಖ ಅಂ ಶಗಳು ಹೀಗಿವೆ:

1. ಮದೀನಾದ ಮೇಲೆ ಯಾರಾದರೂ ದಾಳಿ ಮಾಡಿದರೆ, ನಾವೆಲ್ಲ ಒಟ್ಟಾಗಿ ಆ ದಾಳಿಯನ್ನು ಎದುರಿಸುವೆವು.

2. ಎಲ್ಲರೂ ತಂತಮ್ಮ ಧರ್ಮವನ್ನು ಪಾಲಿಸಲು ಸ್ವತಂತ್ರರು.

3. ಯಾವುದೇ ಅಕ್ರಮಿ ಅಥವಾ ಅಪರಾಧಿಯನ್ನು ಅವರ ಧರ್ಮ ನೋಡಿ ರಕ್ಷಿಸುವ ಪ್ರಮೇಯವೇ ಇಲ್ಲ.

4. ಇಲ್ಲಿನ ಎಲ್ಲರೂ ತಮ್ಮ ದೇಶದ ಗಡಿಯನ್ನು ರಕ್ಷಿಸಲು ಬಾಧ್ಯಸ್ಥರು.

5. ಈ ಒಡಂಬಡಿಕೆಯಲ್ಲಿ ಸೇರಿದವರ ಮಟ್ಟಿಗೆ ಮದೀನಾ ನಗರವು ಪವಿತ್ರವೂ ಗೌರವಾರ್ಹವೂ ಆಗಿರುತ್ತದೆ.

6. ಈ ಒಡಂಬಡಿಕೆಯಲ್ಲಿ ಪಾಲುಗೊಂಡ ಯಹೂದಿಯರ ಸಹಿತ ಯಾರ ವಿರುದ್ಧ ಯಾರು ಯುದ್ಧ ಸಾರಿದರೂ ಇವರು ಪರಸ್ಪರ  ನೆರವಾಗುವರು. ನಿಜವಾಗಿ,

ಮುಸ್ಲಿಮರಿಗೆ ಇತರ ಧರ್ಮದೊಂದಿಗೆ ಬೆರೆತು ಬದುಕುವುದಕ್ಕೆ ಗೊತ್ತಿಲ್ಲ ಎಂಬ ವಾದದ ಬಣ್ಣವನ್ನು ಈ ಒಡಂಬಡಿಕೆ ಬಯ ಲಿಗೆಳೆಯುತ್ತದೆ. ಯಹೂದಿ ಮತ್ತು ಬಹುದೇವಾರಾಧಕರ ಧರ್ಮೀಯರೊಂದಿಗೆ ಪ್ರವಾದಿ ಮಾಡಿಕೊಂಡ ಒಡಂಬಡಿಕೆ ಇದು. ಈ  ಒಡಂಬಡಿಕೆಗೆ ಬದ್ಧವಾಗಿಯೇ ಪ್ರವಾದಿ ಮತ್ತು ಅವರ ಅನುಯಾಯಿಗಳು ಬದುಕಿದ್ದಾರೆ. ಮಾತ್ರವಲ್ಲ, ಅವರು ವಾಸಿಸುವ ಮದೀನಾದ  ಗಡಿಯನ್ನು ರಕ್ಷಿಸುವುದಕ್ಕೆ ಬದ್ಧ ಮತ್ತು ಮದೀನಾ ನಗರವು ಗೌರವಾರ್ಹ ಮತ್ತು ಪವಿತ್ರ ಎಂದೂ ಅವರು ಸಾರಿದ್ದಾರೆ.

ಇದರಾಚೆಗೆ,

ಇಸ್ಲಾಮಿನ ದೇಶ ಮತ್ತು ಧರ್ಮದ ಪರಿಕಲ್ಪನೆಯ ಬಗ್ಗೆ ವಿವರಣೆಯ ಅಗತ್ಯವಿಲ್ಲ ಅನಿಸುತ್ತದೆ. ಮುಸ್ಲಿಮರಲ್ಲಿ ದೇಶ ಪ್ರೇಮ  ಇರಬೇಕಾದುದಷ್ಟೇ ಅಲ್ಲ, ಆ ದೇಶವನ್ನು ರಕ್ಷಿಸಲೂ ಅವರು ಬದ್ಧರಾಗಿರಬೇಕು ಮತ್ತು ಆ ದೇಶ ಅವರಿಗೆ ಗೌರವಾರ್ಹವೂ  ಆಗಿರಬೇಕು. ಅದೇವೇಳೆ, ಈ ದೇಶಪ್ರೇಮವು ಜನಾಂಗೀಯ ವಿಭಜನೆಗೋ ಸ್ವದೇಶಿ-ವಿದೇಶಿ ಎಂಬ ತಾರತಮ್ಯಕ್ಕೋ ಪ್ರೇರಕ  ವಾಗಬಾರದು. ಎಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳಾಗಿದ್ದು, ಅವರವರ ಧರ್ಮವನ್ನು ಅವರವರು ಪಾಲಿಸಲು ಸ್ವತಂತ್ರರಾಗಿರಬೇಕು. ಪ್ರವಾದಿ(ಸ) ಮಕ್ಕಾದಲ್ಲಿದ್ದಾಗಲೂ ಮದೀನಾದಲ್ಲಿದ್ದಾಗಲೂ ಧರ್ಮ ಬದಲಾಗಿಲ್ಲ. ಆದರೆ ದೇಶನಿಷ್ಠೆ ಬದಲಾಗಿದೆ. ಜನ್ಮಭೂಮಿಯಾದ ಮಕ್ಕಾವನ್ನು ಅಪಾರವಾಗಿ ಪ್ರೀತಿಸಿದ ಪ್ರವಾದಿಯವರು(ಸ) ಮದೀನಾಕ್ಕೆ ವಾಸ ಬದಲಿಸಲೇಬೇಕಾದ ಅನಿವಾರ್ಯತೆ  ಎದುರಾದಾಗ ಮದೀನಾಕ್ಕೆ ನಿಷ್ಠೆಯನ್ನು ತೋರಿದರು. ಅದರ ಗಡಿಯನ್ನು ರಕ್ಷಿಸುವ ಪಣತೊಟ್ಟರು. ಅದನ್ನು ಪವಿತ್ರ ಭೂಮಿ ಎಂದೂ  ಪರಿಗಣಿಸಿದರು. ಅದೇವೇಳೆ, ತನ್ನ ಹುಟ್ಟೂರು ಮಕ್ಕಾವನ್ನು ಎಂದೂ ದ್ವೇಷಿಸಲಿಲ್ಲ.

ದೇಶಪ್ರೇಮ ಮತ್ತು ಧರ್ಮಪ್ರೇಮ ಅಂದರೆ ಇಷ್ಟೇ.  

ಗೋಡ್ಸೆ: ಇತಿಹಾಸದ ತಪ್ಪಿಗೆ ವರ್ತಮಾನ ಹೊಣೆಯೇ?

 




1. ಹಲಾಲ್ ಆಹಾರ ಕ್ರಮವನ್ನು ಬ್ಯಾನ್ ಮಾಡಬೇಕು, ಇದು ಎಕನಾಮಿಕ್ ಜಿಹಾದ್: ಬಿಜೆಪಿ ನಾಯಕ ಸಿಟಿ ರವಿ - ಮಾರ್ಚ್ 30,  2022


2. ನೀವು ಲವ್ ಜಿಹಾದ್‌ನ ಬಗ್ಗೆ ಮಾತಾಡಿ. ಚರಂಡಿ, ಕುಡಿಯುವ ನೀರು, ಮೂಲ ಸೌಲಭ್ಯಗಳ ಬಗ್ಗೆ ಮಾತಾಡಬೇಡಿ:
ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್.

3. ಕಾಂಗ್ರೆಸ್‌ನಲ್ಲಿರುವ ಮುಸ್ಲಿಮರು ಕೊಲೆಗಾರರು, ಆದರೆ ಬಿಜೆಪಿಯಲ್ಲಿರುವ ಮುಸ್ಲಿಮರು ಒಳ್ಳೆಯವರು: ಬಿಜೆಪಿ ನಾಯಕ ಕೆ.ಎಸ್.  ಈಶ್ವರಪ್ಪ - ಫೆಬ್ರವರಿ 1, 2018

4. ನಿಮಗೆ ಹಿಜಾಬ್ ಬೇಕಿದ್ರೆ ಪಾಕಿಸ್ತಾನಕ್ಕೆ ಹೋಗಿ; ಇಲ್ಲಿರುವ ಉರ್ದು ಶಾಲೆ ಮತ್ತು ಮದ್ರಸಾಗಳನ್ನು ಮುಚ್ಚಬೇಕು: ಬಿಜೆಪಿ ನಾಯಕ  ಬಸವರಾಜ ಪಾಟೀಲ್ ಯತ್ನಾಳ್ - ಫೆಬ್ರವರಿ 5, 2022

5. ಮುಸ್ಲಿಮರ ಎದೆ ಬಗೆದರೆ ಎರಡಕ್ಷರ ಸಿಗಲ್ಲ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ

6. ಮುಸ್ಲಿಮರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವುದಿಲ್ಲ: ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ - ಎಪ್ರಿಲ್ 2, 2019

ಈ ಹೇಳಿಕೆಗಳಲ್ಲದೇ,

ಈ ರಾಜ್ಯದಲ್ಲಿ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹೇರಲಾಯಿತು, ಪ್ರೇಮ ವಿವಾಹವನ್ನು ಲವ್ ಜಿಹಾದ್ ಎಂದು ಅಣಕಿಸಲಾಯಿತು,  ಭಯೋತ್ಪಾದ ಕರು ಎಂದು ಹಂಗಿಸಲಾಯಿತು. ಅದಾನನ್ನು ಬ್ಯಾನ್ ಮಾಡುವಂತೆ ಚಳವಳಿ ನಡೆಸಲಾಯಿತು, ಮುಸ್ಲಿಮ್ ವಿದ್ಯಾರ್ಥಿನಿಯರ ಹಿಜಾಬನ್ನು ವಿರೋ ಧಿಸಲಾಯಿತು, ಮುಸ್ಲಿಮರ ಹತ್ಯೆಯನ್ನು ಸಮ ರ್ಥಿಸಲಾಯಿತು, ಅನೈತಿಕ ಪೊಲೀಸ್‌ಗಿರಿಯನ್ನು ಕ್ರಿಯೆ- ಪ್ರತಿಕ್ರಿಯೆಗಳೆಂದು ಹೇಳಿ ಒಪ್ಪಿಸಲಾಯಿತು, ತಬ್ಲೀಗಿ ವೈರಸ್ ಎಂದು ಜರೆಯಲಾಯಿತು... ಒಟ್ಟಿನಲ್ಲಿ ಮುಸ್ಲಿಮರ ಆಹಾರ, ಆಚಾರ,  ಸಂಸ್ಕೃತಿ, ವೇಷಭೂಷಣ, ಆರಾಧನೆ.. ಇತ್ಯಾದಿಗಳನ್ನೆಲ್ಲಾ ತಮಾಷೆ-ವ್ಯಂಗ್ಯ-ಚುಚ್ಚುವಿಕೆಗಳಿಗೆ ಬಳಸಲಾಯಿತು. ಈ ಎಲ್ಲ ಸಂದರ್ಭಗಳನ್ನೂ ಬಿಜೆಪಿ ನೇರವಾಗಿಯೋ  ಪರೋಕ್ಷವಾಗಿಯೋ ಬೆಂಬಲಿಸಿತು ಮತ್ತು ಆನಂದಿಸಿತು. ಅದರ ಮುಂಚೂಣಿ ನಾಯಕರೇ ಇಂಥ ಬೆಳವಣಿಗೆಯನ್ನು ಬೆಂಬಲಿಸಿ  ಮಾತಾಡಿದರು. ತನ್ನ ಬೆಂಬಲಿಗ ಸಂಘಟನೆಗಳು ಮುಸ್ಲಿಮರಿಗೆ ನೋವಾಗುವಂತೆ ಆಡುತ್ತಿರುವ ಮಾತುಗಳನ್ನೆಲ್ಲ ಕೆಲವೊಮ್ಮೆ ಮೌನವಾಗಿ  ಮತ್ತು ಇನ್ನು ಕೆಲವೊಮ್ಮೆ ಬಹಿರಂಗ ವಾಗಿಯೇ ಸಮರ್ಥಿಸಿದರು. ಮುಸ್ಲಿಮರನ್ನು ಬಾಬರನ ಸಂತಾನ ಗಳು ಎಂದರು. ಜಿಹಾದಿಗಳು  ಎಂದರು. ದೇಶದ್ರೋಹಿಗಳು ಎಂದರು. ವಿದೇಶಕ್ಕೆ ನಿಷ್ಠೆಯುಳ್ಳವರು ಎಂದರು. ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಮಾಡುವ ಯಾತ್ರೆಗೆ  ಸಬ್ಸಿಡಿಯನ್ನು ಘೋಷಿಸುತ್ತಲೇ ಹಜ್ಜ್ ಯಾತ್ರೆಯ ಸಬ್ಸಿಡಿಯನ್ನು ಲೇವಡಿ ಮಾಡಿದರು. ರದ್ದುಪಡಿಸುವಂತೆ ಒತ್ತಾಯಿಸಿದರು. ಗೋ  ಸಾಗಾಟದ ನೆಪದಲ್ಲಿ ಮುಸ್ಲಿಮ್ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸಿದರು. ಕುರ್‌ಆನನ್ನೇ ಪ್ರಶ್ನಿಸಿದರು. ಅದು ದ್ವೇಷವನ್ನು  ಹರಡುತ್ತದೆ ಎಂದೂ ಸಾರ್ವಜನಿಕವಾಗಿಯೇ ಘೋಷಿಸಿದರು.
ಆದರೆ,

ಇದೀಗ ಇದೇ ಬಿಜೆಪಿ ನಾಯಕರು ಕುಮಾರಸ್ವಾಮಿಯವರ ಬ್ರಾಹ್ಮಣ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತಿದ್ದಾರೆ. ಬಿಜೆಪಿಯ  ಪಂಚಾಯತ್ ಮಟ್ಟದ ನಾಯಕನಿಂದ ಹಿಡಿದು ರಾಜ್ಯಾಧ್ಯಕ್ಷರ ವರೆಗೆ, ಮುಖ್ಯಮಂತ್ರಿಯಿಂದ  ಹಿಡಿದು ಸಚಿವರ ವರೆಗೆ ಪ್ರತಿಯೊಬ್ಬರೂ  ಪ್ರತ್ಯಪ್ರತ್ಯೇಕವಾಗಿ ತಮ್ಮ ಕಡುಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ, ಕುಮಾರಸ್ವಾಮಿ ಹೇಳಿದ್ದೇನು?

ಮಹಾರಾಷ್ಟ್ರ  ಭಾಗಕ್ಕೆ ಸೇರಿದ ಪೇಶ್ವೆ ವರ್ಗದ ಚಿತ್ಪಾವನ ಬ್ರಾಹ್ಮಣರು ಶೃಂಗೇರಿ ಮಠವನ್ನು ಒಡೆದವರಾಗಿದ್ದಾರೆ. ಮಠದ ವಿಗ್ರಹಗಳನ್ನು  ಅವರು ಧ್ವಂಸ ಮಾಡಿದ್ದಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆಯೂ ಇದೇ ವರ್ಗಕ್ಕೆ ಸೇರಿದವ. ಆದರೆ ಹಳೇ ಕರ್ನಾಟಕದ  ಬ್ರಾಹ್ಮಣರು ಹಾಗಲ್ಲ. ಒಳ್ಳೆಯವರು. ಸರ್ವೇ ಜನ ಸುಖಿನೋ ಭವಂತು ಅನ್ನುವರು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ,  ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಪೇಶ್ವೆ ವರ್ಗಕ್ಕೆ ಸೇರಿದ ಮತ್ತು ಶೃಂಗೇರಿ ಮಠಕ್ಕೆ ದಾಳಿ ಮಾಡಿದ ಚಿತ್ಪಾವನ ಬ್ರಾಹ್ಮಣ  ಸಮುದಾಯಕ್ಕೆ ಸೇರಿದವರು. ಅವರನ್ನೇ ಮುಂದಿನ ಮುಖ್ಯಮಂತ್ರಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

ಅಂದಹಾಗೆ,

ಒಳ್ಳೆಯವರು ಮತ್ತು ಕೆಟ್ಟವರನ್ನು ಸಮುದಾಯದ ಆಧಾರದಲ್ಲಿ ಹೀಗೆ ವರ್ಗೀಕರಿಸುವುದೇ ತಪ್ಪು. ಬ್ರಾಹ್ಮಣರಲ್ಲಿ ನೂರಾರು ಪಂಗಡಗಳಿವೆ  ಮತ್ತು ಇವರೆಲ್ಲರ ಆಹಾರ ಕ್ರಮಗಳೂ ಭಿನ್ನಭಿನ್ನವಾಗಿವೆ. ಮುಖ್ಯವಾಗಿ ಶಿವನನ್ನು ಆರಾಧಿಸುವ ಶೈವರು, ವಿಷ್ಣುವನ್ನು ಆರಾಧಿಸುವ  ವೈಷ್ಣವರು ಮತ್ತು ಶಿವ ಮತ್ತು ವಿಷ್ಣು ಇಬ್ಬರನ್ನೂ ಆರಾಧಿಸುವ ಸ್ಮಾರ್ತರು ಎಂದು ಇವರನ್ನು ಗುರುತಿಸಬಹುದಾಗಿದೆ. ಶೃಂಗೇರಿ  ಮಠಕ್ಕೆ ನಡಕೊಳ್ಳುವವರನ್ನು ಸ್ಮಾರ್ತರು ಅಥವಾ ಹವ್ಯಕರು ಎಂದು ಗುರುತಿಸಲಾಗುತ್ತದೆ. ಕವಿ ದ.ರಾ. ಬೇಂದ್ರೆ ಚಿತ್ಪಾವನ ಪಂಗಡಕ್ಕೆ  ಸೇರಿದವರು. ಚಿತ್ಪಾವನರು ಅಥವಾ ದೇಶಸ್ತರು ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಪರಂಪರೆ ಕರ್ನಾಟಕದಲ್ಲೂ ಇದೆ. ಬಂಗಾಳ, ಬಿಹಾರ, ಒಡಿಸ್ಸಾ, ಕಾಶ್ಮೀರ, ಗೋವಾ, ಹಿಮಾಚಲ ಪ್ರದೇಶಗಳಲ್ಲಿರುವ ಬ್ರಾಹ್ಮಣರಲ್ಲಿ  ಮಾಂಸಾಹಾರಿಗಳೂ ಧಾರಾಳ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ದಕ್ಷಿಣ ಭಾರತಕ್ಕೆ ಸಂಬಂಧಿಸಿ ಹೇಳುವುದಾದರೆ,  ಬ್ರಾಹ್ಮಣರಲ್ಲಿ ಮಾಂಸಾಹಾರಿಗಳು ಬಹಳ ಕಡಿಮೆ. ಕರ್ನಾಟಕದಲ್ಲಿ ಮುಖ್ಯವಾಗಿ ಚಿತ್ಪಾವನರು, ಹವ್ಯಕರು, ಶಿವಳ್ಳಿ ಬ್ರಾಹ್ಮಣ, ಸಾರಸ್ವತ  ಬ್ರಾಹ್ಮಣ, ಕೋಟಾ ಬ್ರಾಹ್ಮಣ ಪಂಗಡಕ್ಕೆ ಸೇರಿದವರಿದ್ದಾರೆ. ಮುಸ್ಲಿಮರಲ್ಲೂ ಈ ಬಗೆಯ ಪಂಗಡಗಳಿವೆ.

 ಸುನ್ನಿಗಳು, ಬರೇಲ್ವಿಗಳು,  ದೇವ್‌ಬಂಧಿಗಳು, ಸಲಫಿಗಳು, ತಬ್ಲೀಗಿಗಳು ಇತ್ಯಾದಿಯಾಗಿ ಇವು ಗುರುತಿಸಿಕೊಳ್ಳುತ್ತವೆ. ವೈಚಾರಿಕ ಭಿನ್ನಮತದಿಂದಾಗಿ ಹುಟ್ಟಿಕೊಂಡ  ಪಂಗಡಗಳಿವು. ಹಾಗೆಯೇ, ವೃತ್ತಿಯಾಧಾರಿತವಾಗಿ ಗುರುತಿಸಿಕೊಂಡ ಪಂಗಡಗಳೂ ಇವೆ. ತೋಟಗಾರಿಕೆಯಲ್ಲಿ ತೊಡಗಿರುವ  ಮುಸ್ಲಿಮರು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಭಾಗವಾನ ಎಂದು ಗುರುತಿಸಿಕೊಳ್ಳುತ್ತಾರೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಈ  ಗುಂಪು ಸಂತೆಯಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡುತ್ತಾ ಬದುಕು ಸಾಗಿಸುತ್ತಿವೆ. ಇನ್ನೊಂದು ಬಹುದೊಡ್ಡ ಪಂಗಡ ಪಿಂಜಾರ  ಎಂಬುದು. ಹತ್ತಿಯನ್ನು ಹಿಂಜುವವರು ಎಂದರ್ಥದಲ್ಲಿ ಹುಟ್ಟಿಕೊಂಡ ಹಿಂಜಾರ ಎಂಬ ಪದ ಮುಂದಕ್ಕೆ ಪಿಂಜಾರ ಆಗಿ ಬದಲಾಗಿದೆ.  ಹಾಸಿಗೆಯ ಮೇಲಿನ ಮೆತ್ತನೆ ರಚನೆಯನ್ನು ಮಾಡುವ ವೃತ್ತಿ ಇವರದು. ಅದಕ್ಕಾಗಿ ಹತ್ತಿಯನ್ನು ಹಿಂಜಬೇಕಾಗಿದ್ದು, ಈ ಕಲೆಯಲ್ಲಿ ಈ  ಪಂಗಡ ನಿಷ್ಣಾತವಾಗಿದೆ. ಇದೇ ಪಂಗಡಕ್ಕೆ ನದಾಫ, ಮನ್ಸೂರಿ ಎಂಬ ಹೆಸರೂ ಇದೆ. ಮನ್ಸೂರಿಗಳು ಮುಖ್ಯವಾಗಿ ಕಾಶ್ಮೀರದಲ್ಲಿ ಹೆಚ್ಚು  ಕಂಡುಬರುತ್ತಾರೆ. ಇನ್ನೊಂದು ಗುಂಪು ಮಕಾನ್‌ದಾರ್ ಎಂಬ ಹೆಸರಲ್ಲಿ ಗುರುತಿಸಿಕೊಂಡಿದೆ. ಮೃತದೇಹವನ್ನು ಹೂಳುವುದಕ್ಕಾಗಿ  ಗೋರಿ ಅಗೆಯುವ ವೃತ್ತಿಯಲ್ಲಿ ತೊಡಗಿಸಿಕೊಂಡವರು ಎಂದರ್ಥ. ಗೋರಿ ತೋಡುವ ವೃತ್ತಿಯಾ ದುದರಿಂದ ಮಕಾನ್ ಅಥವಾ ಮನೆ  ಕಟ್ಟುವವರು ಎಂಬ ಹೆಸರು ಇವರಿಗೆ ದಕ್ಕಿದೆ. ಆದರೆ ಮುಸ್ಲಿಮರ ಈ ಯಾವ ಪಂಗಡಗಳಲ್ಲೂ ಆರಾಧನೆಯಲ್ಲಿ ವ್ಯತ್ಯಾಸ ಇಲ್ಲ.  ನಮಾಜ್, ಉಪವಾಸ, ಧರ್ಮಗ್ರಂಥ, ಹಜ್ಜ್ ಯಾತ್ರೆ ಇತ್ಯಾದಿಗಳನ್ನೆಲ್ಲ ಎಲ್ಲ ಪಂಗಡಗಳೂ ಏಕಪ್ರಕಾರವಾಗಿ ಅನುಸರಿಸುತ್ತವೆ.  ಅಷ್ಟಕ್ಕೂ,

ಸುನ್ನಿ ಅಥವಾ ಶಿಯಾ ವಿಭಾಗಕ್ಕೆ ಸೇರಿದ ಯಾವನೋ ಅರಸ ಅಥವಾ ವ್ಯಕ್ತಿ ದೇವಸ್ಥಾನವನ್ನು ಒಡೆದರೆ ಅಥವಾ ಹಿಂದೂ  ಸಮುದಾಯದ ನಂಬಿಕೆಗಳನ್ನು ಅವಹೇಳನಗೊಳಿಸಿದರೆ ಅದನ್ನು ಇಡೀ ಸುನ್ನಿ ಸಮುದಾಯದ ಅಪರಾಧವಾಗಿ ಕಾಣುವುದು ಎಷ್ಟು ಸರಿ? ರಾಜ  ಮಾಡಿದ ಅಪರಾಧವನ್ನು ಆತನ ಸಮುದಾಯದ ಮೇಲೆ ಹೊರಿಸುವುದು ಯಾವ ನ್ಯಾಯ? ನದಾಫ, ಪಿಂಜಾರ, ಭಾಗವಾನ ಅಥವಾ ಇನ್ನಿತರ  ಮುಸ್ಲಿಮ್ ಪಂಗಡಗಳಿಗೆ ಸೇರಿದ ವ್ಯಕ್ತಿಗಳ ತಪ್ಪುಗಳನ್ನು ಆಯಾ ಸಮುದಾಯದ ಮೇಲೆ ಹೊರಿಸುವುದು ಎಷ್ಟು ನ್ಯಾಯಬದ್ಧ?  ಗೋಡ್ಸೆಗೆ ಸಂಬಂಧಿಸಿಯೂ ನಾವು ಇದೇ ಮಾತನ್ನು ಹೇಳಬೇಕು. ಪೇಶ್ವೆಗಳಿಗೆ ಸಂಬಂಧಿಸಿಯೂ ಹೇಳ ಬೇಕಾದುದು ಇದನ್ನೇ.  ಒಂದುವೇಳೆ,

ಗೋಡ್ಸೆ ಮಾಡಿದ ಅಪರಾಧವನ್ನು ಆತನ ಚಿತ್ಪಾವನ ಬ್ರಾಹ್ಮಣ ಸಮುದಾಯ ಒಕ್ಕೊರಳಿನಿಂದ ಬೆಂಬಲಿಸಿದ್ದರೆ ಮತ್ತು ಸಮರ್ಥಿಸಿದ್ದರೆ,  ಹಾಗೆ ಸಮರ್ಥಿಸಿದ ಕಾಲದ ಸಮರ್ಥಕರನ್ನು ತಪ್ಪಿತಸ್ಥರು ಎಂದು ಹೇಳಬೇಕೇ ಹೊರತು ಆ ಕಾಲಕ್ಕೆ ಸಂಬಂಧಿಸಿಯೇ ಇಲ್ಲದ ಮತ್ತು  ಬೆಂಬಲಿಸಿಯೇ ಇಲ್ಲದವರನ್ನಲ್ಲ. ಗೋಡ್ಸೆ ಕಾಲವಾಗಿ ಆರು ದಶಕಗಳೇ ಕಳೆದಿವೆ. ಪೇಶ್ವೆಯ ಕಾಲಕ್ಕೂ ಈ ಕಾಲಕ್ಕೂ ಸಂಬಂಧವೇ  ಇಲ್ಲದಷ್ಟು ಈ ಮಣ್ಣು ಬದಲಾಗಿದೆ. ಹೀಗಿರುವಾಗ ಪೇಶ್ವೆಗಳ ತಪ್ಪನ್ನು ಈಗಿನ ಚಿತ್ಪಾವನ ಬ್ರಾಹ್ಮಣರ ತಲೆಗೆ ಕಟ್ಟಿ ಅವರು ಕೆಟ್ಟವರು,  ಉಳಿದವರು ಒಳ್ಳೆಯವರು ಎಂದು ವರ್ಗೀಕರಿಸುವುದು ಅತ್ಯಂತ ತಪ್ಪಾದ ವಿಶ್ಲೇಷಣೆ. ಚಿತ್ಪಾವನ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳು  ಈ ಹಿಂದೆ ಈ ದೇಶದ ಮೂಲ ನಿವಾಸಿಗಳನ್ನೋ ಅಥವಾ ದುರ್ಬಲ ವರ್ಗದವರನ್ನೋ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು  ಹೇಳುವ ಉದ್ದೇಶ ಕುಮಾರಸ್ವಾಮಿಯದ್ದಾದರೆ ಅದನ್ನು ನೇರವಾಗಿ ಹೇಳಬೇಕೇ ಹೊರತು ಇಂದಿನ ಸಮುದಾಯವನ್ನು ಅಪರಾಧಿ  ಸ್ಥಾನದಲ್ಲಿ ನಿಲ್ಲಿಸುವುದಲ್ಲ. ವ್ಯಕ್ತಿಗಳ ತಪ್ಪು ವ್ಯಕ್ತಿಗಳಿಗೆ ಸೀಮಿತವೇ ಹೊರತು ಸಮುದಾಯಕ್ಕಲ್ಲ. ಸಮುದಾಯದಲ್ಲಿ ಆ ವ್ಯಕ್ತಿಯ ತಪ್ಪನ್ನು  ಖಂಡಿಸುವವರೂ ಇದ್ದಾರೆ, ಬೆಂಬಲಿಸುವವರೂ ಇದ್ದಾರೆ. ಮಾತಾಡುವಾಗ ಪ್ರತಿಯೊಬ್ಬರೂ ಈ ಎಚ್ಚರಿಕೆಯನ್ನು ಗಮನದಲ್ಲಿಟ್ಟಿರಬೇಕು.
ಆದರೆ,

ಕುಮಾರಸ್ವಾಮಿಯವರು ಈ ಎಚ್ಚರಿಕೆಯನ್ನು ಪ್ರದರ್ಶಿಸಲಿಲ್ಲ ಎಂಬುದು ಸ್ಪಷ್ಟ. ಅನಗತ್ಯ ಮಾತನ್ನಾಡಿದರು. ಆದರೆ, ಈ ಮಾತನ್ನು  ಎತ್ತಿಕೊಂಡು ಬಿಜೆಪಿ ಮಾಡಿದ ಗದ್ದಲ ಸಣ್ಣದಲ್ಲ. ಕುಮಾರಸ್ವಾಮಿ ಕ್ಷಮೆ ಕೋರಬೇಕು ಎಂದು ಅದು ಒತ್ತಾಯಿಸಿತು. ಅಪಾರ ಆಕ್ರೋ ಶವನ್ನು ವ್ಯಕ್ತಪಡಿಸಿತು. ದುರಂತ ಏನೆಂದರೆ, ಇದೇ ಬಿಜೆಪಿ ನಾಯಕರು ದಿನ ಬೆಳಗಾದರೆ ಮುಸ್ಲಿಮರನ್ನು ಟೀಕಿಸಿ, ನಿಂದಿಸಿ, ಅಪಹಾಸ್ಯ  ಮಾಡಿ ನೀಡಿದ ಹೇಳಿಕೆಗಳು ಎಷ್ಟಿಲ್ಲ? ಟಿಪ್ಪು ಸುಲ್ತಾನನ್ನು ಎತ್ತಿಕೊಂಡು ಮುಸ್ಲಿಮರನ್ನು ಪರೋಕ್ಷವಾಗಿ ತಿವಿದ ಮಾತುಗಳು ಎಷ್ಟಿಲ್ಲ?  ಇತಿಹಾಸದ ಸಕಲ ಅಪದ್ಧಗಳಿಗೂ ವರ್ತಮಾನದ ಮುಸ್ಲಿಮರೇ ಹೊಣೆಗಾರರು ಎಂಬಂಥ  ಮಾತನ್ನು ಎಷ್ಟು ಟನ್ನು ಆಡಿಲ್ಲ?  ಮುಸ್ಲಿಮರನ್ನೆಲ್ಲಾ ಗೋಕಳ್ಳರು ಎಂಬಂತೆ  ಎಷ್ಟು ಬಾರಿ ಬಿಂಬಿಸಿಲ್ಲ? ಮಸೀದಿಗಳನ್ನು ಭಯೋತ್ಪಾದಕ ಅಡಗು ತಾಣಗಳಾಗಿ ಚಿತ್ರಿಸಿ ಎಷ್ಟು  ಹೇಳಿಕೆಗಳನ್ನು ನೀಡಿಲ್ಲ? ತಾಲಿಬಾನ್‌ಗಳ ಅನಾಗರಿಕತೆಗೆ ಭಾರತೀಯ ಮುಸ್ಲಿಮರಲ್ಲಿ ಎಷ್ಟು ಬಾರಿ ಉತ್ತರ ಕೇಳಿಲ್ಲ? ತಾಲಿಬಾನ್‌ಗಳ  ಬುರ್ಖಾ, ಅವರ ಮುಂಡಾಸು, ಗಡ್ಡ-ಪೈಜಾಮ ಮತ್ತು ತಿಕ್ಕಲು ಕಾನೂನುಗಳನ್ನು ಎತ್ತಿಕೊಂಡು ಭಾರತೀಯ ಮುಸ್ಲಿಮರಿಗೆ ಎಷ್ಟು ಬಾರಿ  ಅವಮಾನ ಮಾಡಿಲ್ಲ?

ಪ್ರಶ್ನಿಸುವುದಕ್ಕೆ ಬೇಕಾದಷ್ಟಿದೆ.

ನಿಜವಾಗಿ, ಕುಮಾರಸ್ವಾಮಿ ಹೇಳಿಕೆಯನ್ನು ಬ್ರಾಹ್ಮಣ ಸಮುದಾಯದ ನಾಯಕರೋರ್ವರು ಪ್ರಶ್ನಿಸುವುದಕ್ಕೂ ಬಿಜೆಪಿ ರಾಜ ಕಾರಣಿ  ಪ್ರಶ್ನಿಸುವುದಕ್ಕೂ ವ್ಯತ್ಯಾಸವಿದೆ. ಬ್ರಾಹ್ಮಣ ಸಮುದಾಯದ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಲೇಬೇಕಾದ ಹೇಳಿಕೆ ಕುಮಾರಸ್ವಾಮಿಯದ್ದು.  ಒಂದು ಸಮುದಾಯವಾಗಿ ಬ್ರಾಹ್ಮಣರಿಗಾದ ನೋವನ್ನು ಮುಸ್ಲಿಮರಷ್ಟು ಚೆನ್ನಾಗಿ ಇನ್ನಾರೂ ಅರ್ಥೈಸಲಾರರು ಅನ್ನಿಸುತ್ತದೆ. ಚಿತ್ಪಾವನರೇ ಹೀಗೆ ಎಂದು ಹೇಳುವುದಕ್ಕೂ ಗೋಡ್ಸೆ ಹೀಗೆ ಎಂದು ಹೇಳುವುದಕ್ಕೂ ವ್ಯತ್ಯಾಸವಿದೆ. ಹಾಗೆಯೇ ಮುಸ್ಲಿಮ್ ಸಮುದಾಯವೇ  ಹೀಗೆ ಎಂದು ಹೇಳುವುದಕ್ಕೂ ಶುದ್ಧಿ ಚಳುವಳಿಯ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆಗೈದ ರಶೀದ್ ಹೀಗೆ ಎಂದು ಹೇಳುವುದಕ್ಕೂ  ವ್ಯತ್ಯಾಸವಿದೆ. ಅಬ್ದುಲ್ ರಶೀದ್‌ನನ್ನು ಮುಸ್ಲಿಮ್ ಸಮುದಾಯದ ಐಕಾನ್ ಎಂದು ಮುಸ್ಲಿಮರಾರೂ ಹೇಳುವುದಿಲ್ಲ. ಆತ ಮುಸ್ಲಿಮ್  ಸಮುದಾಯದಲ್ಲಿ ಸಂತನಾಗಿಯೂ ಗುರುತಿಸಿಕೊಂಡಿಲ್ಲ. ಆತನ ಹೆಸರಲ್ಲಿ ಮಸೀದಿಯನ್ನೂ ಕಟ್ಟಲಾಗಿಲ್ಲ. ಆತ ಯಾರು, ಎಲ್ಲಿಯವ, ಎಲ್ಲಿದ್ದ ಮತ್ತು ಹೇಗೆ ತೀರಿಕೊಂಡ ಎಂಬ ಬಗ್ಗೆ ವರ್ತಮಾನ ಕಾಲದ ಮುಸ್ಲಿಮರು ಬಿಡಿ, 1926ರ ಕಾಲದ ಮುಸ್ಲಿಮ್ ಸಮುದಾಯಕ್ಕೇ  ಗೊತ್ತಿರುವ ಸಾಧ್ಯತೆ ಇಲ್ಲ. ಅಷ್ಟರ ಮಟ್ಟಿಗೆ ಓರ್ವ ಹಿಂದೂ ಸಾಧುವಿನ ಹತ್ಯೆಕೋರನ ವಿರುದ್ಧ ಮುಸ್ಲಿಮ್ ಸಮುದಾಯ ತಿರುಗಿ ಬಿದ್ದಿದೆ.  ಗೋಡ್ಸೆಯನ್ನು ಕೂಡಾ ಚಿತ್ಪಾವನ ಬ್ರಾಹ್ಮಣ ಸಮುದಾಯವಾಗಲಿ, ಒಟ್ಟು ಬ್ರಾಹ್ಮಣ ಸಮುದಾಯವಾಗಲಿ ನಮ್ಮವರು ಎಂದು ಹೆಮ್ಮೆ  ಪಟ್ಟುಕೊಂಡಿಲ್ಲ. ಆತನನ್ನು ಬೆಂಬಲಿಸುವ ಒಂಟಿ ಹೇಳಿಕೆಗಳು ಇರಬಹುದು. ವ್ಯಕ್ತಿಗಳೂ ಇರಬಹುದು. ಆದರೆ ಒಂದು  ಸಮುದಾಯವಾಗಿ ಗೋಡ್ಸೆ ಈಗಲೂ ಹೊಸ್ತಿಲ ಹೊರಗಡೆಯೇ ಇದ್ದಾನೆ. ವ್ಯಕ್ತಿಗಳ ತಪ್ಪುಗಳನ್ನು ಸಮುದಾಯದ ಮೇಲೆ  ಹೊರಿಸಬಾರದು ಎಂಬ ಆಗ್ರಹಕ್ಕೆ ಬಲ ಬರುವುದೂ ಇಂಥ ವಿವೇಕಪೂರ್ಣ ನಡವಳಿಕೆಗಳಿಂದಲೇ.

ಆದರೆ, ಪ್ರತಿದಿನ ಮುಸ್ಲಿಮರನ್ನು, ಅವರ ಗುರುತುಗಳನ್ನು ಜರೆಯುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಮತ್ತು ಮುಸ್ಲಿಮ್ ದ್ವೇಷದ  ಮಾತುಗಳಿಂದಲೇ ಹೊಟ್ಟೆ ತುಂಬಿಸಿಕೊಳ್ಳುವಂತೆ  ಆಡುತ್ತಿರುವ ಬಿಜೆಪಿ ಪಕ್ಷದ ನಾಯಕರು ಕುಮಾರಸ್ವಾಮಿ ಹೇಳಿಕೆಯ ವಿರುದ್ಧ ಕುದಿಗೊಳ್ಳುವುದೆಂದರೆ, ಅದು ಅಪ್ರಾಮಾಣಿಕತೆ ಮತ್ತು ಅನೈತಿಕ ನಡವಳಿಕೆ. ಇದು ಪ್ರಶ್ನಾರ್ಹ. ಒಂದು ಸಮುದಾಯಕ್ಕೆ ನಿರಂತರ  ಗಾಯವನ್ನು ಮಾಡುತ್ತಲೇ ಇನ್ನೊಂದು ಸಮುದಾಯದ ಗಾಯದ ಬಗ್ಗೆ ಕರುಬುವುದು ದ್ವಂದ್ವತನ. ಆಷಾಢಭೂತಿ ನಡವಳಿಕೆ.  ಅದರಾಚೆಗೆ,

ಬ್ರಾಹ್ಮಣದ ಸಮುದಾಯದ ಪ್ರತಿಭಟನೆಗೆ ಖಂಡಿತ ಮುಸ್ಲಿಮ್ ಸಮುದಾಯದ ಬೆಂಬಲವಿದೆ. ಅವಮಾನದಿಂದಾಗುವ ಗಾಯದ ತೀವ್ರತೆ  ಮುಸ್ಲಿಮ್ ಸಮುದಾಯಕ್ಕೆ ಚೆನ್ನಾಗಿ ಗೊತ್ತು.

Thursday, September 8, 2022

ನನ್ನ ಮೂವರು ಗುರುಗಳೂ ಪೆನ್ನು ಕೆಳಗಿಟ್ಟರು




ಇಬ್ರಾಹೀಮ್ ಸಈದ್
ನೂರ್ ಮುಹಮ್ಮದ್
ಎಂ. ಸಾದುಲ್ಲಾ 
ಈ ತ್ರಿಮೂರ್ತಿಗಳು ಸನ್ಮಾರ್ಗದ ಆರಂಭ ಕಾಲದಿಂದಲೇ ಜೊತೆಯಾದವರು. ಬಹುತೇಕ ಸಮಪ್ರಾಯದವರೂ ಹೌದು. ಕಾಲಚಕ್ರದ  ಬೇರೆ ಬೇರೆ ತಿರುವಿನಲ್ಲಿ ಇವರೆಲ್ಲ ಒಂಟಿ ಒಂಟಿಯಾಗಿ ಇಳಿದು ಹೋದರು. ಸನ್ಮಾರ್ಗಕ್ಕೆ 29 (ಮೇ 27, 2007) ವರ್ಷಗಳಾದಾಗ  ‘ಇನ್ನು ಸಾಕು’ ಎಂಬಂತೆ ಇಬ್ರಾಹೀಮ್ ಸಈದ್ ಮೊದಲಿಗರಾಗಿ ಪೆನ್ನು ಕೆಳಗಿಟ್ಟರು. ಆ ಬಳಿಕ ನೂರ್ ಮುಹಮ್ಮದ್ ಸಾಬ್‌ರ ಸರದಿ.  ಸನ್ಮಾರ್ಗಕ್ಕೆ 36 ವರ್ಷಗಳಾದಾಗ (ಆಗಸ್ಟ್ 19, 2014) ಅವರೂ ಪೆನ್ನು ಕೆಳಗಿಟ್ಟರು. ಅದರಲ್ಲೂ ನೂರ್ ಮುಹಮ್ಮದ್ ಅವರ  ವಿದಾಯವಂತೂ ದಿಢೀರ್ ಆಗಿತ್ತು. ಮಸೀದಿಯಲ್ಲಿ ಇಶಾ ನಮಾಝನ್ನು ಮುಗಿಸಿ ತನ್ನ ದ್ವಿಚಕ್ರದಲ್ಲಿ ಮನೆಯತ್ತ ಮರಳುತ್ತಿದ್ದಾಗ ಅಜ್ಞಾತ  ವಾಹನವೊಂದು ಅವರನ್ನು ನೆಲಕ್ಕೆ ಕೆಡವಿ ಪರಾರಿಯಾಗಿತ್ತು. ಅವರು ಪೆನ್ನು ಕೆಳಗಿಡುವುದಕ್ಕೆ ಭೌತಿಕ ಕಾರಣವಾಗಿ ನಮ್ಮಲ್ಲಿರುವುದು  ಇದೊಂದೇ. ಈ ಮೂಲಕ ಇಬ್ರಾಹೀಮ್ ಸಈದ್ ಬಿಟ್ಟು ಹೋದ ನಿರ್ವಾತ ವನ್ನು ತುಂಬಲು ಶಕ್ತಿಮೀರಿ ಶ್ರಮಿಸುತ್ತಿದ್ದ ಇನ್ನೊಂದು ಪೆ ನ್ನೂ ನಿಶ್ಚಲವಾಯಿತು. ಬಹುಶಃ, ತನ್ನಿಬ್ಬರು ಸಂಗಾತಿಗಳು ತನ್ನ ಕಣ್ಣೆದುರೇ ಮರಳಿ ಮಣ್ಣು ಸೇರಿದುದನ್ನು ಸಾದುಲ್ಲಾ  ಸಾಬ್ ಹೇಗೆ  ಸ್ವೀಕರಿಸಿರಬಹುದು ಮತ್ತು ಅವರ ಮೇಲೆ ಅದು ಬೀರಿರ ಬಹುದಾದ ಒತ್ತಡಗಳೇನಿರಬಹುದು ಎಂದು, ಮೊನ್ನೆ ಸಾದುಲ್ಲಾರನ್ನು ಮರಳಿ  ಮಣ್ಣಿಗೆ ಸೇರಿಸಿ ನೇರ ಕಚೇರಿಗೆ ಬಂದು ಅವರು ಸದಾ ಕುಳಿತುಕೊಳ್ಳುತ್ತಿದ್ದ ಕುರ್ಚಿ ಮತ್ತು ಮೇಜಿನ ಫೋಟೋ ಕ್ಲಿಕ್ಕಿಸುತ್ತಾ  ಆಲೋಚಿಸಿದೆ. ಇನ್ನು ನನ್ನ ಪಾಲಿಗೆ ಚೈತನ್ಯವಾಗಿ ಉಳಿದಿರುವುದು ಈ ಫೋಟೋ ಮಾತ್ರ. ಅಂದಹಾಗೆ,

ತನ್ನಿಬ್ಬರು ಜೊತೆಗಾರರು ವಿದಾಯ ಕೋರಿದಾಗಲೂ ಸಾದುಲ್ಲಾ  ಸಾಬ್ ಅಧೀರರಾದುದನ್ನೋ ಶೂನ್ಯವಾಗಿ ಕುಳಿತುದನ್ನೋ ನಾನು  ಕಂಡಿಲ್ಲ. ಇದರರ್ಥ ಆ ಇಬ್ಬರ ವಿದಾಯ ಅವರ ಮೇಲೆ ಪರಿಣಾಮ ಬೀರಿಲ್ಲ ಎಂದಲ್ಲ. ಅವರಿದ್ದುದೇ ಹಾಗೆ. ತನ್ನೊಳಗೆ  ಮಹಾಭಾರತವೇ ನಡೆಯುತ್ತಿದ್ದರೂ (ಯುದ್ಧ ಎಂಬರ್ಥದಲ್ಲಿ ತೆಗೆದುಕೊಳ್ಳಿ) ಅವರು ಬಾಹ್ಯವಾಗಿ ಅದನ್ನು ಪ್ರಕಟಿಸುತ್ತಿರಲಿಲ್ಲ. ನಿಷ್ಪಾಪಿ  ಮುಗುಳ್ನಗೆಯನ್ನು ತುಟಿಯಲ್ಲಿಟ್ಟುಕೊಂಡೇ ಅವರು ತಿರುಗುತ್ತಿದ್ದರು. ಅವರನ್ನು ಭೇಟಿಯಾಗುವ ಯಾರೇ ಆಗಲಿ, ಅವರಿಗಿರಬಹುದಾದ  ಕಾರ್ಯಭಾರ, ತುರ್ತು, ವೈಯಕ್ತಿಕ ಸಮಸ್ಯೆಗಳನ್ನು ಗುರುತಿಸಲಾಗದಷ್ಟು ಅವರು ಸಹಜವಾಗಿರುತ್ತಿದ್ದರು.

ನಾನು ಫೆಬ್ರವರಿ 14, 2000ನೇ ಇಸವಿಯಲ್ಲಿ ಸನ್ಮಾರ್ಗ ಸೇರಿಕೊಂಡೆ. ನನ್ನ ಇಂಟರ್‌ವ್ಯೂವ್ ನಡೆಸಿದ್ದು ಸಂಪಾದಕರಾದ ಇಬ್ರಾಹೀಮ್  ಸಈದ್. ಬಹುಶಃ ಐದಾರು ನಿಮಿಷಗಳಲ್ಲೇ  ನನ್ನ ಇಂಟರ್‌ವ್ಯೂವ್ ಮುಗಿದಿತ್ತು. ‘ಜಾತ್ಯತೀತ ಎಂದು ಬರೆಯಬಲ್ಲಿರಾ?’ ಎಂದು ಅವರು  ಪ್ರಶ್ನಿಸಿದ್ದರು. ಬರೆದು ತೋರಿಸಿದ್ದೆ. ನಾನು ಬರೆದುದೇ ತಪ್ಪಾಗಿತ್ತು. ಇಬ್ರಾಹೀಮ್ ಸಈದ್ ಮುಗುಳ್ನಕ್ಕರು ಮತ್ತು ನಾಳೆಯಿಂದ ನೀವು  ಸಂಪಾದಕೀಯ ಬಳಗದ ಸದಸ್ಯರಾಗಿ ಸೇರಿಕೊಳ್ಳಿ ಎಂದು ಹೇಳಿದ್ದರು. ಸಂಪಾದಕರ ಕೊಠಡಿಯಿಂದ ಹೊರಬರುವಾಗ ಕುರ್ಚಿಯ  ಮುಂದೆ ಟೇಬಲನ್ನು ಹರಡಿಕೊಂಡು ಕುಳಿತಿದ್ದ ಸಣ್ಣ ದೇಹಾಕೃತಿ ಮತ್ತು ಬಿಳಿ ಶರ್ಟು ಧರಿಸಿದ್ದ ವ್ಯಕ್ತಿ ನನ್ನನ್ನು ಹತ್ತಿರ ಕರೆದು  ಕೂರಿಸಿದರು. ಸನ್ಮಾರ್ಗ ಕಚೇರಿಗೆ ಅದು ನನ್ನ ಮೊದಲ ಭೇಟಿಯಾದುದರಿಂದ ಅವರು ಸಾದುಲ್ಲಾ ಎಂದು ನನಗೆ ಗೊತ್ತಿರಲಿಲ್ಲ. ‘ನಿನ್ನ  ಸಮ್ಮಂಧವನ್ನು ಕಟ್ ಮಾಡಿ ಮಾಡಿ ನನಗೆ ಸಾಕಾಗಿ ಹೋಯ್ತು...’ ಎಂದು ಅವರು ನಕ್ಕರು. ನಾನು ಅರ್ಥವಾಗದೇ ಅವರ ಮುಖವ ನ್ನೇ ನೋಡಿದ್ದೆ. ಮೊದಲೇ ಹೊಸ ಮುಖ. ಕಚೇರಿಯೂ ಹೊಸತೇ. ಈ ನಡುವೆ ಇವರ ಜೋಕು ಬೇರೆ. ವಿಷಯ ಏನೆಂದರೆ, ನನ್ನ  ಹಲವು ಕತೆಗಳು ಸನ್ಮಾರ್ಗದಲ್ಲಿ ಆ ಮೊದಲೇ ಪ್ರಕಟವಾಗಿದ್ದುವು. ಸನ್ಮಾರ್ಗ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನೂ  ಪಡೆದಿದ್ದೆ. ಆದರೆ ನಾನು ‘ಸಂಬಂಧ’ ಎಂಬ ಪದವನ್ನು ಸಮ್ಮಂಧ ಎಂದೇ ಬರೆಯುತ್ತಿದ್ದೆ. ಈ ತಪ್ಪನ್ನೇ ಅವರು ಜೋಕ್ ಮೂಲಕ ನನ್ನ  ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಅಷ್ಟಕ್ಕೂ,

ತಪ್ಪಾಗಿ ಬರೆದವನನ್ನೇ ಇಬ್ರಾಹೀಮ್ ಸಈದ್ ಸಂಪಾದ ಕೀಯ ಬಳಗಕ್ಕೆ ಆಯ್ಕೆ ಮಾಡಿದರೆ, ನನ್ನ ತಪ್ಪನ್ನು ಹಾಸ್ಯದ ಮೂಲಕ  ಸಾದುಲ್ಲಾ ಸಾಬ್ ಎಂಬ ಆ ಅಪರಿಚಿತ ಮಹಾನು ಭಾವ ತಿದ್ದಿದ್ದರು.

ನೂರ್ ಮುಹಮ್ಮದ್ ಮತ್ತು ಸಾದುಲ್ಲಾ ಸಾಬ್‌ರಿಗೆ ಹೋಲಿಸಿದರೆ ಇಬ್ರಾಹೀಮ್ ಸಈದ್‌ರೊಂದಿಗೆ ನನ್ನ ಒಡನಾಟ ಕಡಿಮೆ. ಸನ್ಮಾರ್ಗಕ್ಕೆ  ಸೇರಿದ ಆರಂಭದಲ್ಲಿ ನನ್ನಲ್ಲಿ ಸಹಜ ಅಳುಕು ಮತ್ತು ಭಯ ಮಿಶ್ರಿತ ಆದರಭಾವವು ಅವರ ಜೊತೆ ಸಹಜವಾಗಿ ಬೆರೆಯುವುದಕ್ಕೆ ಅಡ್ಡಿ ಪಡಿಸಿದರೆ, ಆ ಬಳಿಕ ಅವರು ಜಮಾಅತ್‌ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ ಬೆಂಗಳೂರು ಸೇರಿ ಕೊಂಡುದೂ ಇದಕ್ಕೆ ಕಾರಣ.  ಆದ್ದರಿಂದ, ನಾನು ಸಂಪಾದಕೀಯ ಬಳಗದಲ್ಲಿ ಹಿರಿಯರಾಗಿದ್ದ ನೂರ್ ಮುಹಮ್ಮದ್ ಮತ್ತು ಸಾದುಲ್ಲಾ ಸಾಬ್‌ರಿಗೆ ಹತ್ತಿರವಾದೆ.  ಇವರಿಬ್ಬರದ್ದೂ ತದ್ವಿರುದ್ಧ ಗುಣಸ್ವಭಾವ. ನೂರ್ ಮುಹಮ್ಮದ್ ಸಾಬ್ ಖಡಕ್ ನಿಷ್ಠುರಿ. ಶಿಸ್ತಿನ ಸಿಪಾಯಿ. ಸರಿ ಕಾಣದ್ದನ್ನು ತಕ್ಷಣವೇ  ಹಿಂದು-ಮುಂದು  ನೋಡದೇ ಹೇಳಿ ಬಿಡುವುದು ಅವರ ಅಭ್ಯಾಸ. ಸದಾ ಗಂಭೀರ. ಆದರೆ ಸಾದುಲ್ಲಾ ಸಾಬ್ ಇದಕ್ಕೆ ತೀರಾ ಭಿನ್ನ.  ಅವರು ಸಹನಾಮಯಿ. ಸಿಟ್ಟು ಕಡಿಮೆ. ಹೇಳಬೇಕಾದುದನ್ನು ಅಳೆದೂ ತೂಗಿ ಹೇಳುವಷ್ಟು ಮತ್ತು ನಗುತ್ತಲೇ ಹೇಳುವಷ್ಟು ಭಿನ್ನ ವ್ಯಕ್ತಿ.  ವಿಶೇಷ ಏನೆಂದರೆ,

ಇವರಿಬ್ಬರೂ ಸಂಪಾದಕೀಯ ಬಳಗದಲ್ಲಿ ಅಕ್ಕ-ಪಕ್ಕವೇ ಕುಳಿತಿರುತ್ತಿದ್ದರು. ಸಾದುಲ್ಲಾ ಸಾಬ್‌ಗೆ ಜೋಕ್ ಹೇಳುವ ಅಭ್ಯಾಸ ಹೆಚ್ಚು. ಅನುವಾದಿಸುತ್ತಲೋ ಲೇಖನಗಳನ್ನು ತಿದ್ದುತ್ತಲೋ ಸಾದುಲ್ಲಾ ಸಾಬ್ ಹಾಸ್ಯ ಚಟಾಕಿ ಹಾರಿಸಿದರೆ, ಬಿಳಿ ಹಲ್ಲು ಕಾಣುವಂತೆ ನೂರ್  ಮುಹಮ್ಮದ್ ಬರೆಯುತ್ತಲೇ ನಗುತ್ತಿದ್ದರು. ಅವರಿಬ್ಬರ ಗುಣಸ್ವಭಾವಗಳು ಭಿನ್ನವಾಗಿದ್ದರೂ ಅವರಿಬ್ಬರ ನಡುವೆ ಮಾತಿಗೆ ಮಾತು  ಬೆಳೆದದ್ದನ್ನೋ ಸಿಟ್ಟು ಮಾಡಿಕೊಂಡದ್ದನ್ನೋ ನಾನು ಕಂಡಿಲ್ಲ. ನೂರ್ ಮುಹಮ್ಮದ್ ಸಾಬ್ ವಾರ ದಲ್ಲಿ ಎರಡು ಬಾರಿ ಕಚೇರಿಗೆ  ಬರುತ್ತಿದ್ದರೆ, ಸಾದುಲ್ಲಾ  ಸಾಬ್ ಕಚೇರಿಯನ್ನೇ ಮನೆ ಮಾಡಿಕೊಂಡಿದ್ದರು. ಯಾರು ಯಾವ ಸಮಯದಲ್ಲೇ  ಕಚೇರಿಗೆ ಬಂದರೂ  ಅವರನ್ನು ಸ್ವಾಗತಿಸಲು ಸಾದುಲ್ಲಾ  ಸಾಬ್ ಇರುತ್ತಿದ್ದರು ಎಂಬುದೇ ಅವರ ನಿಸ್ವಾರ್ಥತೆ ಮತ್ತು ತ್ಯಾಗ ಜೀವನಕ್ಕೆ ಬಲುದೊಡ್ಡ ಪುರಾವೆ.  ನಿಜವಾಗಿ,

ಇವರಿಬ್ಬರೂ ಜೊತೆ ಸೇರಿ ನನ್ನನ್ನು ಬೆಳೆಸಿದರು.

ನೂರ್ ಮುಹಮ್ಮದ್ ಸಾಬ್‌ರಿಗೆ ನಾನು ಬೆಳೆಯಬೇಕು ಮತ್ತು ಹೀಗೆಯೇ  ಬೆಳೆಯಬೇಕು ಎಂಬ ನಿರ್ದಿಷ್ಟ ಗುರಿ ಹಾಗೂ ಕಾಳಜಿಯಿತ್ತು.  ಆದ್ದರಿಂದಲೋ ಏನೋ ಇಬ್ರಾಹೀಮ್ ಸಈದ್ ಮತ್ತು ಸಾದುಲ್ಲಾ  ಸಾಬ್‌ರು 25ರ ತರುಣನಾದ ನನ್ನನ್ನು ‘ನೀವು’ ಎಂದು ಬಹುವಚ ನದಲ್ಲಿ ಸಂಬೋಧಿಸುತ್ತಿದ್ದಾಗ ನೂರ್ ಮುಹಮ್ಮದ್ ಸಾಬ್‌ರು ‘ನೀನು’ ಎಂದೇ ಸಂಬೋಧಿಸಿದರು. ಅವರು ನನ್ನನ್ನು ಮಗನಂತೆ  ನಡೆಸಿಕೊಂಡರು. ಪ್ರೀತಿಸಿದರು. ತಪ್ಪಾದಾಗ ಗದರಿದರು. ಅವರಿಗೆ ಸನ್ಮಾರ್ಗ ಎಂಬುದು ಆಮ್ಲಜನಕದಂತೆ ಇತ್ತು. ‘ಪತ್ರಿಕೆಯಲ್ಲಿ ಒಂದು  ತಪ್ಪೂ ಬರ‍್ಬಾರ್ದು, ಅನಗತ್ಯ ಅನ್ನಬಹುದಾದ ಒಂದು ಬರಹ ಬಿಡಿ, ಒಂದು ಗೆರೆ ವಾಕ್ಯ ಕೂಡಾ ಬರ‍್ಬಾರ್ದು, ಎಡಿಟಿಂಗ್‌ನಲ್ಲಿ  ನಿಷ್ಠುರವಾಗಿರಬೇಕು..’ ಎಂಬಿತ್ಯಾದಿ ಬಿಗು ನಿಲುವು ಅವರದಾಗಿತ್ತು. ಒಂದು ವಾಕ್ಯದಲ್ಲಿ ಒಂದೇ ಒಂದು ಶಬ್ದ ಹೆಚ್ಚುವರಿಯಾಗಿ  ಕಾಣಿಸಿದರೂ ಅದನ್ನು ಮುಲಾಜಿಲ್ಲದೇ ಕಿತ್ತು ಹಾಕಬೇಕು ಎಂಬುದು ಅವರ ಎಡಿಟಿಂಗ್ ಶೈಲಿಯಾಗಿತ್ತು.

ಒಂದು ಬಾರಿ ಹೀಗೂ ನಡೆಯಿತು.

ಮಲಯಾಳಂ ಪತ್ರಿಕೆಯ ಲೇಖನವೊಂದನ್ನು ಮುಂದಿಟ್ಟ ಅವರು ಅನುವಾದಿಸುವಂತೆ ನನ್ನಲ್ಲಿ ಹೇಳಿದರು. ಕತೆ ಬರೆದು ಗೊತ್ತಿದ್ದ ನನಗೆ  ಅನುವಾದ ಹೊಸತು. ನನ್ನ ಕಿಸೆಯಿಂದ ಸಾಕಷ್ಟು ಪದಗಳನ್ನು ಹಾಕಿ ಅನುವಾದಿಸಿ ಕೊಟ್ಟಿದ್ದೆ. ಅವರು ನನ್ನ ಅನುವಾದದಲ್ಲಿರುವ ತ ಪ್ಪುಗಳನ್ನು ಎತ್ತಿ ತೋರಿಸಿದರು. ಬಳಿಕ ನನ್ನೆದುರೇ ಯಾವ ಮುಲಾಜೂ ಇಲ್ಲದೇ ಹರಿದು ಬುಟ್ಟಿಗೆ ಹಾಕಿದರು. ಬಹುಶಃ ಸಾದುಲ್ಲಾ  ಸಾಬ್‌ರಿಗೆ ಅದನ್ನೇ ನಾನು ಕೊಡುತ್ತಿದ್ದರೆ ಸರಿಪಡಿಸಿ ಬಳಸಿಕೊಳ್ಳುತ್ತಿದ್ದರೋ ಏನೋ? ಆದರೆ, ನೂರ್ ಮುಹಮ್ಮದ್ ಹಾಗಲ್ಲ. ಅವರು  ಖಡಕ್. ಎಡಿಟಿಂಗ್‌ನ ವೇಳೆ ನನ್ನಲ್ಲಿ ಮುಲಾಜುತನ ಇರಬಾರದು ಎಂಬ ಪಾಠವನ್ನು ಅವರು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ  ಸದಾ ರವಾನಿಸುತ್ತಲೇ ಇದ್ದರು. ನಾನೂ ಅವರ ಪ್ರತಿ ನಿಷ್ಠುರ ನಡೆಯನ್ನೂ ಸಕಾರಾತ್ಮಕವಾಗಿ ಸ್ವೀಕರಿಸುತ್ತಾ ಹೋದೆ. ಅಂದಹಾಗೆ, ಸದಾ  ಗಂಭೀರವಾಗಿರುತ್ತಿದ್ದ ಅವರು ಬರೆಯುತ್ತಲೇ ಅಪರೂಪ ಕ್ಕೊಮ್ಮೆ ಜೋಕ್ ಹೇಳುವುದೂ ಇತ್ತು. ಹಾಗೇ ಜೋಕ್ ಹೇಳುವಾಗಲೂ  ಅವರ ಮುಖ ಗಂಭೀರವಾಗಿಯೇ ಇರುತ್ತಿತ್ತು. ಅವರು ನಗುತ್ತಾರೋ ಎಂದು ನೋಡಿ, ಅವರು ನಕ್ಕ ಮೇಲೆ ನಾನು ನಗುವುದೂ ಇತ್ತು.

ನನ್ನ ಬರಹಕ್ಕೆ ಶಿಸ್ತಿನ ಚೌಕಟ್ಟನ್ನು ತಂದುಕೊಟ್ಟವರೇ  ನೂರ್ ಮುಹಮ್ಮದ್ ಸಾಬ್. ಎಡಿಟಿಂಗ್ ಪಾಠವನ್ನು ನಾನು ಅವರಿಂದಲೇ ಕಲಿತೆ.  ಕತೆ ಮತ್ತು ಲೇಖನಗಳ ನಡುವೆ ಇರುವ ವ್ಯತ್ಯಾಸವನ್ನೂ ಲೇಖನ ಬರೆಯುವಾಗ ಇರಬೇಕಾದ ಎಚ್ಚರಿಕೆಯನ್ನೂ ನಾನು ಕ ಲಿತುಕೊಂಡದ್ದು ನೂರ್ ಮುಹಮ್ಮದ್ ಸಾಬ್‌ರಿಂದ. ‘ನೀನು ತುಂಬಾ ಚೆನ್ನಾಗಿ ಎಡಿಟಿಂಗ್ ಮಾಡುತ್ತೀ...’ ಎಂದು ಒಂದು ಬಾರಿ  ಸಾದುಲ್ಲಾ ಸಾಬ್ ನನ್ನಲ್ಲಿ ಹೇಳಿದ್ದೂ ಇದೆ.

ಸಾದುಲ್ಲಾ  ಸಾಬ್ ನನ್ನಲ್ಲಿ ಮಾತಾಡುವಾಗಲೆಲ್ಲ ಅವರು ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದಾರೆ ಎಂಬ ಭಾವ ನನ್ನೊಳಗೆ ಯಾವಾಗಲೂ  ಉಂಟಾಗುತ್ತಿತ್ತು. ಅವರು ನನ್ನನ್ನು ಗದರಿಸಿದ್ದು ಇಲ್ಲವೇ ಇಲ್ಲ. ಹಾಗಂತ, ನಾನು ತಪ್ಪು ಮಾಡಿಲ್ಲ ಎಂದಲ್ಲ. ನನ್ನ ಮುಲಾಜುರಹಿತ  ಎಡಿಟಿಂಗ್‌ನ ಬಗ್ಗೆ ನನ್ನ ಸಹೋದ್ಯೋಗಿಯೇ ಒಮ್ಮೆ ಆಕ್ಷೇಪ ಎತ್ತಿದ್ದರು. ಆ ಪ್ರಕರಣ ಸಾದುಲ್ಲಾ ಸಾಬ್‌ರ ಬಳಿಗೂ ಹೋಗಿತ್ತು. ನನ್ನ  ಸಹೋದ್ಯೋಗಿಯ ಆಕ್ಷೇಪದಲ್ಲಿ ಹುರುಳಿತ್ತಾದರೂ ಮತ್ತು ನನ್ನ ಸಮರ್ಥನೆ ಅಸಮಂಜಸವಾಗಿ ತ್ತಾದರೂ ಸಾದುಲ್ಲಾ ಸಾಬ್ ಆ  ಸಂದರ್ಭದಲ್ಲಿ ನನ್ನನ್ನು ತರಾಟೆಗೆ ಎತ್ತಿಕೊಂಡಿರಲಿಲ್ಲ. ಆ ಬಳಿಕ ನನ್ನನ್ನು ಕರೆದೋ ಅಥವಾ ಹತ್ತಿರ ಬಂದೋ ತಿಳಿ ಹೇಳಿದ್ದರು.  ನಿಜವಾಗಿ,

ಎರಡು ರೀತಿಯ ಸಾದುಲ್ಲಾ  ಸಾಬ್‌ರನ್ನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಒಂದು- ನಾನು ಸಂಪಾದಕನಾಗುವ ಮೊದಲಿನ ಸಾದುಲ್ಲಾ  ಸಾಬ್. ಇನ್ನೊಂದು- ಸಂಪಾದಕನಾದ ಬಳಿಕದ ಸಾದುಲ್ಲಾ ಸಾಬ್. ಅವರು ಕಚೇರಿಗೆ ಪ್ರವೇಶಿಸಿದ ಕೂಡಲೇ ಪ್ರತಿಯೊಬ್ಬರ ಬಳಿಗೂ  ತೆರಳಿ ಪ್ರತ್ಯಪ್ರತ್ಯೇಕವಾಗಿ ಸಲಾಂ ಹೇಳುತ್ತಾ, ಹಸ್ತಲಾಘವ ಮಾಡುವುದು ರೂಢಿ. ಇದನ್ನು ಅತ್ಯಂತ ನಿಷ್ಠೆಯಿಂದ ಬದುಕಿನ ಕೊ ನೆಯವರೆಗೂ ಅವರು ಪಾಲಿಸುತ್ತಾ ಬಂದಿದ್ದರು. ಅಂದಹಾಗೆ,

ನಾನು ಉಪಸಂಪಾದಕನಾಗಿದ್ದಾಗ, ನನ್ನ ಬರಹವನ್ನು ಅವರಿದ್ದಲ್ಲಿಗೆ ಕೊಂಡು ಹೋಗಿ ಕೊಡುತ್ತಿದ್ದೆ. ನೂರ್ ಮುಹಮ್ಮದ್ ಸಾಬ್  ವಾರದಲ್ಲಿ ಎರಡು ಬಾರಿ ಮಾತ್ರ ಕಚೇರಿಗೆ ಬರುತ್ತಿದ್ದುದರಿಂದ ನನ್ನ ಬರಹದ ಪರಿಶೀಲನೆ ಬಹುತೇಕ ಸಾದುಲ್ಲಾ  ಸಾಬ್‌ರದ್ದೇ  ಆಗಿತ್ತು. ಯಾವಾಗ ನಾನು ಸಂಪಾದಕನಾಗಿ ಆಯ್ಕೆಯಾದೆನೋ ಸಾದುಲ್ಲಾ  ಸಾಬ್‌ರ ವರ್ತನೆಯಲ್ಲೂ ಬದಲಾವಣೆಯಾಯಿತು. ನಾನು ಸಂಪಾದಕರ ಕುರ್ಚಿಯಲ್ಲಿ ಕುಳಿತಿದ್ದರೆ ಅವರು ನನ್ನೆದುರಿನ ಕುರ್ಚಿಯಲ್ಲಿ ಸಾಮಾನ್ಯರಂತೆ ಕುಳಿತುಕೊಳ್ಳುತ್ತಿದ್ದರು. ಆರಂಭದಲ್ಲಿ ನಾನು ಎದ್ದು ನಿಲ್ಲುತ್ತಿದ್ದೆ. ಯಾಕೆಂದರೆ, ಅವರ ಕಣ್ಣೆದುರಲ್ಲೇ  ಬೆಳೆದ ವ್ಯಕ್ತಿ ನಾನು. ನಾನು ಸನ್ಮಾರ್ಗಕ್ಕೆ ಸೇರ್ಪಡೆಗೊಳ್ಳುವಾಗಲೇ ಅವರು ಸಂಪಾದಕೀಯ ಬಳಗದ ಸದಸ್ಯರಾಗಿ ಮತ್ತು ಪತ್ರಿಕೆಯ ಪ್ರಕಾಶಕರಾಗಿ ಹೊಣೆ ನಿಭಾ ಯಿಸುತ್ತಿದ್ದರು. ನಾನು ಅವರೆದುರು ತೀರಾ ಎಳೆಯ ವ್ಯಕ್ತಿ. ಆದರೆ, ನಾನು ಎದ್ದು ನಿಲ್ಲುವುದು ಅವರಿಗೆ ಇಷ್ಟವಿರಲಿಲ್ಲ. ಈ ಮೊದಲು ನಾನು ಅವರಿದ್ದಲ್ಲಿಗೆ ನನ್ನ ಬರಹವನ್ನು ಮುಟ್ಟಿಸುತ್ತಿದ್ದರೆ ಈಗ ಅವರೇ ಅವರ ಬರಹವನ್ನು ನನ್ನ ಬಳಿಗೆ ತಂದು ಕೊಡುತ್ತಿದ್ದರು. ಮಾತ್ರವಲ್ಲ, ‘ಇಷ್ಟವಾಗದಿದ್ದರೆ ಹತ್ತಿರದಲ್ಲಿರುವ ‘ಕಸಬು’ಗೆ (ಕಸದ ಬುಟ್ಟಿ) ಹಾಕು’ ಎಂದು ಮುಗುಳ್ನಗೆ ಯೊಂದಿಗೆ ಹೇಳುತ್ತಿದ್ದರು. ಎಲ್ಲಿಯ ವರೆಗೆಂದರೆ,

ಸನ್ಮಾರ್ಗದ ಬಹು ಜನಪ್ರಿಯ ಕಾಲಂ ಆದ ‘ಕೇಳಿದಿರಾ ಕೇಳಿ’ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದುದು ಅವರೇ ಆಗಿದ್ದರೂ ಎಲ್ಲೂ ಅವರು ತನ್ನ ಹೆಸರನ್ನು ಹಾಕಿಕೊಂಡೇ ಇರಲಿಲ್ಲ. ಮುಜೀಬ್ (ಉತ್ತರಿಸುವವ) ಎಂಬ ಹೆಸರಿನಲ್ಲಿ ಅವರು ನೀಡುತ್ತಿದ್ದ ಉತ್ತರಗಳು ಅಸಂಖ್ಯ ಮಂದಿಯ ಬಾಳಿಗೆ ಬೆಳಕಾಗಿದ್ದುವು. ಹಾಗಂತ, ಈ ಕಾಲಂ ಅನ್ನು ನಿಭಾಯಿಸುವುದು ಸುಲಭ ವಾಗಿರಲಿಲ್ಲ. ಪ್ರತಿ ಪ್ರಶ್ನೆಗೂ ಕುರ್‌ಆನ್, ಹದೀಸ್ ಮತ್ತು ಸಹಾಬಿಗಳ ಬದುಕನ್ನು ಉದಾಹರಿಸಿ ಉತ್ತರಿಸಬೇಕಿತ್ತು. ಅಲ್ಲದೇ, ಆಧುನಿಕ ವಿದ್ವಾಂಸರ ಫತ್ವಗಳ ಬಗ್ಗೆ ಅರಿವಿರಬೇಕಿತ್ತು. ಕೆಲವೊಮ್ಮೆ ಕುರ್‌ಆನ್-ಹದೀಸ್‌ನ ಆಧಾರದಲ್ಲಿ ಚಿಂತನ-ಮಂಥನ ನಡೆಸಿ ತನ್ನ ಜ್ಞಾನದಾಧಾರದಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆಯೂ ಎದುರಾಗುತ್ತಿತ್ತು. ಇದು ಅತ್ಯಂತ ಸೂಕ್ಷ್ಮ  ಕಾಲಂ. ತುಸು ಎಡವಟ್ಟಾದರೂ ಮುಸ್ಲಿಮ್ ಸಮುದಾಯವೇ ಸನ್ಮಾರ್ಗವನ್ನು ಕಟಕಟೆಯಲ್ಲಿ ನಿಲ್ಲಿಸಬಹುದಾದ ಇಕ್ಕಟ್ಟಿನ ಕಾಲಂ. ಆದ್ದರಿಂದಲೇ, ಸಾದುಲ್ಲಾ  ಸಾಬ್ ಮೈಯೆಲ್ಲಾ  ಕಣ್ಣಾಗಿದ್ದುಕೊಂಡು ಮತ್ತು ಅಪಾರ ತಾಳ್ಮೆ ಹಾಗೂ ಅಧ್ಯಯನದ ಆಧಾರದಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಒಂದು ಪುಟದ ಉತ್ತರಕ್ಕಾಗಿ ಗಂಟೆಗಟ್ಟಲೆ ಅಧ್ಯಯನ ನಡೆಸಬೇಕಿತ್ತು. ಒಂದು ಗೆರೆಯ ಪ್ರಶ್ನೆಗೆ ಪುಟಗಟ್ಟಲೆ ಉತ್ತರಿಸಬೇಕಾದ ಸನ್ನಿವೇಶವೂ ಎದುರಾಗುತ್ತಿತ್ತು. ಆದರೆ ಇಷ್ಟೆಲ್ಲಾ  ಶ್ರಮವಹಿಸಿ ಬರೆದಾದ ಬಳಿಕ ಅವರು ಉತ್ತರದ ಪ್ರತಿಯನ್ನು ನನ್ನ ಬಳಿಗೆ ತಂದು ಕೊಡುತ್ತಿದ್ದರು. ಬಳಿಕ ಅದೇ ಡಯಲಾಗ್- ‘ಇಷ್ಟವಾಗದಿದ್ದರೆ ಹತ್ತಿರದಲ್ಲಿರುವ ‘ಕಸಬು’ಗೆ ಹಾಕು’. ಆಗೆಲ್ಲ ನಾನು ಮುಜುಗರದಿಂದ ಹಿಡಿ ಯಷ್ಟಾಗುತ್ತಿದ್ದೆ. ನನ್ನ ಸ್ಥಾನಕ್ಕೆ ಅವರು ನೀಡುತ್ತಿದ್ದ ಗೌರವ ವನ್ನು ಕಂಡು ಒಳಗೊಳಗೇ ಅಳುತ್ತಿದ್ದೆ. ಇಂಥ ಸಾವಿರಾರು ಉತ್ತರಗಳನ್ನು ಅವರು ‘ಕೇಳಿದಿರಾ ಕೇಳಿ’ ವಿಭಾಗದಲ್ಲಿ ಪ್ರಕಟಿಸಿದ್ದಾರೆ. ನಿಜವಾಗಿ, ಅಲ್ಲಾಹನು ಅವರನ್ನು ಪ್ರೀತಿಸುವುದಕ್ಕೆ ಈ ಉತ್ತರಗಳೇ ಧಾರಾಳ ಸಾಕು. ಅಂದಹಾಗೆ,

ಕುರ್‌ಆನ್ ಮತ್ತು ಹದೀಸ್‌ನ ಬಗ್ಗೆ ಅಪಾರ ಪಾಂಡಿತ್ಯವಿದ್ದ ಅವರು ನನ್ನ ಪಾಲಿಗೆ ಅಮೂಲ್ಯ ಆಸ್ತಿಯಾಗಿದ್ದರು. ಲೇಖನ ಬರೆಯುತ್ತಾ ಬರೆ ಯುತ್ತಾ ಕೆಲವೊಮ್ಮೆ ನನಗೆ ಕುರ್‌ಆನ್‌ನ ವಚನಗಳ ಕನ್ನಡಾನುವಾದ ನೆನಪಾಗುವುದಿದೆ. ಅದರ ಅರೇಬಿಕ್ ರೂಪ ಏನು ಅನ್ನುವುದೂ ಗೊತ್ತಿರುವುದಿಲ್ಲ. ನಾನು ನೇರ ಸಾದುಲ್ಲಾ  ಸಾಬ್‌ರ ಬಳಿಗೆ ಹೋಗಿ ನನಗೆ ಗೊತ್ತಿರುವ ಕನ್ನಡ ವಚನವನ್ನು ಅರ್ಧಂಬರ್ಧ ಹೇಳುತ್ತಿದ್ದೆ. ಇದು ಯಾವ ಅಧ್ಯಾಯದ, ಯಾವ ವಚನ ಎಂಬುದು ನನ್ನ ಪ್ರಶ್ನೆಯಾಗಿರುತ್ತಿತ್ತು. ಆದರೆ ಬಹುತೇಕ ಬಾರಿ ಅದು ಇಷ್ಟನೇ ಅಧ್ಯಾಯದ ಇಷ್ಟನೇ ವಚನ ಎಂದು ತಕ್ಷಣವೇ ಅವರು ಹೇಳಿ ಬಿಡುತ್ತಿದ್ದರು. ಕುರ್‌ಆನ್‌ಗೆ ಸಂಬಂಧಿಸಿ ಅವರು ನಡೆದಾಡುವ ಡಿಕ್ಷನರಿ. ಕೆಲವೊಮ್ಮೆ ನಾನು ಹದೀಸನ್ನು ಕುರ್‌ಆನ್ ವಚನವೆಂದು ತಪ್ಪಾಗಿ ತಿಳಿದುಕೊಂಡು, ಆ ವಚನ ಎಲ್ಲಿದೆ ಎಂದು ಕೇಳಿದ್ದೂ ಇದೆ. ಅವರಿಗೆ ಕುರ್‌ಆನ್ ಮತ್ತು ಹದೀಸ್‌ನ ಬಗ್ಗೆ ಅತ್ಯಂತ ಸ್ಪಷ್ಟ ಜ್ಞಾನವಿತ್ತು. ಬಹುಶಃ ಕೇಳಿದಿರಾ ಕೇಳಿ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ಅವರು ನಡೆಸಿರಬಹುದಾದ ಅಧ್ಯಯನವೇ ಅವರನ್ನು ಕುರ್‌ಆನ್ ಮತ್ತು ಹದೀಸ್‌ನ ಮೇಲೆ ಅಪಾರ ಪಾಂಡಿತ್ಯವನ್ನು ಹೊಂದುವುದಕ್ಕೆ ನೆರವಾಗಿರಬಹುದು ಎಂದೇ ಅನಿಸುತ್ತದೆ.

ನೂರ್ ಮುಹಮ್ಮದ್ ಸಾಬ್ ನನ್ನ ಪಾಲಿಗೆ ಓರ್ವ ಶಾಲಾ ಅಧ್ಯಾಪಕರಾದರೆ ಸಾದುಲ್ಲಾ  ಸಾಬ್ ಓರ್ವ ಆಪ್ತ ಗುರು. ನೂರ್ ಮುಹಮ್ಮದ್ ಸಾಬ್ ಶಿಸ್ತು ಮತ್ತು ನಿಷ್ಠುರತೆಯ ಪ್ರತೀಕವಾದರೆ, ಸಾದುಲ್ಲಾ ಸಾಬ್ ಸಹನೆ ಮತ್ತು ಸೌಜನ್ಯದ ಪ್ರತೀಕ. ಅವರಿಬ್ಬರ ಮಿತಿಯಿಲ್ಲದ ಪ್ರೀತಿ ಮತ್ತು ಬೆಂಬಲವನ್ನು ಪಡೆದುಕೊಂಡೇ ನಾನು ಬೆಳೆದೆ. ಇವರಿಬ್ಬರೂ ಬಿಟ್ಟು ಹೋದ ಬಲುದೊಡ್ಡ ಪಾಠ ಏನೆಂದರೆ, ಜನರೊಂದಿಗೆ ಅಂತರವಿಟ್ಟುಕೊಳ್ಳದೇ ಬೆರೆಯಬೇಕು ಎಂಬುದು. ನಿಮ್ಮ ಹುದ್ದೆಯು ಜನರೊಂದಿಗೆ ಬೆರೆಯುವುದಕ್ಕೆ ತಡೆಯಾಗಬಾರದು ಎಂಬುದು. ಇಬ್ರಾಹೀಮ್ ಸಈದ್, ನೂರ್ ಮತ್ತು ಸಾದುಲ್ಲಾ ಸಾಬ್- ಈ ಮೂವರೂ ಇದೇ ರೀತಿಯಲ್ಲಿ ಬದುಕಿದರು. ಒಂದು ರೀತಿ ಯಲ್ಲಿ ಬರಹವನ್ನೇ ಬದುಕಿದರು. ಬದುಕಿದ್ದನ್ನೇ ಬರೆದರು. ಇವರ ವಿಚಾರಧಾರೆಯನ್ನು ಒಪ್ಪದವರು ಕೂಡ ಅವರ ಪ್ರಾಮಾಣಿಕತೆ, ಪಾರದರ್ಶಕತೆ, ಪಾಂಡಿತ್ಯ ಮತ್ತು ಆರಾಧನಾ ನಿಷ್ಠೆಯನ್ನು ಕೊಂಡಾ ಡುವಂತೆ ಬದುಕಿದರು. ಎಲ್ಲಿಯ ವರೆಗೆಂದರೆ,

ಖ್ಯಾತ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಯವರು ತಮ್ಮ ಆತ್ಮಕತೆ ‘ಮೋನುಸ್ಮೃತಿ’ ಯನ್ನು ಬರೆಯುತ್ತಿದ್ದ ವೇಳೆ ನನಗೆ ಕರೆ ಮಾಡಿದ್ದರು. ಇಬ್ರಾಹೀಮ್ ಸಈದ್‌ರ ಕುಟುಂಬದ ವಿವರ ಅವರಿಗೆ ಬೇಕಾಗಿತ್ತು. ಅವರು ಕಾರ್ಕಳದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ವೇಳೆ ಬ್ಯಾಂಕ್‌ಗೆ ತೆರಳಿ ಇದೇ ಇಬ್ರಾಹೀಮ್ ಸಈದ್ ಕುರ್‌ಆನ್‌ನ ಕನ್ನಡಾನುವಾದ ನೀಡಿದ್ದರಂತೆ. ಮಾತಾಡುತ್ತಾ ಅವರು ನನ್ನೊಂದಿಗೆ ಹೇಳಿದ್ದು ಹೀಗೆ: 

‘ಇಬ್ರಾಹೀಮ್ ಸಈದ್ ತನ್ನ ಬರಹ ಮತ್ತು ಭಾಷಣದಂತೆಯೇ ಬದುಕಿದರು. ಅದು ಅಷ್ಟು ಸುಲಭ ಅಲ್ಲ.’

ಪೆನ್ನು ಕೆಳಗಿಟ್ಟು ಹೋದ ಈ ಮೂವರನ್ನು ಅಲ್ಲಾಹನು ಪ್ರೀತಿಸಲಿ.