Thursday, July 27, 2023

ಮುಸ್ಲಿಮ್ ದ್ವೇಷವನ್ನೇ ಹೊದ್ದು ತಿರುಗುತ್ತಿರುವ ಸುಳ್ಳು ಸುದ್ದಿಗಳು1. ಕರ್ನಾಟಕದಲ್ಲಿ ನಡೆಯಬೇಕಿದ್ದ ಭಾರೀ ರೈಲು ಅವಘಡ ವೊಂದು ಸ್ವಲ್ಪದರಲ್ಲೇ  ತಪ್ಪಿದೆ. ರೈಲು ಸಂಚರಿಸುವಾಗ ಮುಸ್ಲಿಮನೊಬ್ಬ  ಹಳಿಯ ಮೇಲೆ ಎಲ್‌ಪಿಜಿ ಸಿಲಿಂಡರ್ ಎಸೆದಿದ್ದಾನೆ. ಅದೃಷ್ಟವಶಾತ್ ಸಿಲಿಂಡರ್ ಸ್ಫೋಟಗೊಂಡಿಲ್ಲ. ಒಂದುವೇಳೆ, ಸ್ಫೋಟಗೊಳ್ಳುತ್ತಿದ್ದರೆ ಸಾವಿರಾರು ಮಂದಿ ಹೆಣವಾಗುತ್ತಿದ್ದರು. ಅಂತಹ ದೊಡ್ಡ ಅನಾಹುತವನ್ನು ಜನರು ಮತ್ತು ರೈಲ್ವೆ ಸಿಬ್ಬಂದಿ ತಡೆದಿದ್ದಾರೆ. ಪ್ರಧಾನಿ  ನರೇಂದ್ರ ಮೋದಿಯವರಿಗೆ ಕೆಟ್ಟ ಹೆಸರು ತರಲೆಂದೇ ಹೀಗೆ ಮಾಡುತ್ತಿದ್ದಾರೆ.. ಎಂಬ ಒಕ್ಕಣೆಯುಳ್ಳ ಚಿತ್ರಸಹಿತ ಬರಹವನ್ನು ಅಥವಾ  ವೀಡಿಯೋವನ್ನು ನೀವು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿರಬಹುದು. ಈ ವೀಡಿಯೋ ಮತ್ತು ಚಿತ್ರಬರಹವು ಸೋಶಿಯಲ್  ಮೀಡಿಯಾಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿತ್ತು. ಮುಂದೆಯೂ ಇದು ಹಂಚಿಕೆಯಾಗುವ ಸಾಧ್ಯತೆ ಇಲ್ಲದಿಲ್ಲ. ಹಾಗಂತ, ಈ ಸುದ್ದಿ  ನಿಜವೇ?

ಸುಳ್ಳು

ನಿಜವಾಗಿ ಕರ್ನಾಟಕಕ್ಕೂ ಈ ಸುದ್ದಿಗೂ ಸಂಬಂಧವೇ ಇಲ್ಲ. ಇದು ಉತ್ತರ ಪ್ರದೇಶದ ಗುರುಗ್ರಾಮ ಜಿಲ್ಲೆಯ ಕಥಾಗೋದಾಮ್ ರೈಲು  ನಿಲ್ದಾಣಕ್ಕೆ ಸಂಬಂಧಿಸಿದ ವೀಡಿಯೋ. 2022 ಜುಲೈ 5ರಂದು ಈ ಘಟನೆ ನಡೆದಿತ್ತು. ಗಂಗಾರಾಮ್ ಎಂಬ ವ್ಯಕ್ತಿ ಖಾಲಿ ಸಿಲಿಂಡರ್  ಹೊತ್ತು ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಬಂದಿತ್ತು. ಆತ ಜೀವಭಯದಿಂದ ಸಿಲಿಂಡರ್ ಅಲ್ಲೇ  ಎಸೆದು ಓಡಿ ಹೋಗಿದ್ದ. ಇದನ್ನು  ಗಮನಿಸಿದ ರೈಲ್ವೆ ಪೊಲೀಸರು ರೈಲನ್ನು ತಡೆದು ನಿಲ್ಲಿಸಿದ್ದರು. ಆದರೆ ಅಷ್ಟರಲ್ಲಾಗಲೇ ಸಿಲಿಂಡರ್ ರೈಲು ಚಕ್ರಕ್ಕೆ ಸಿಲುಕಿ  ಚೂರುಚೂರಾಗಿತ್ತು. ನಂತರ ಗಂಗಾರಾಮ್‌ನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಬಗ್ಗೆ ರೈಲ್ವೆ ಪೊಲೀಸರೇ ಮಾಹಿತಿಯನ್ನು  ನೀಡಿದ್ದಾರೆ. ಈ ಎಲ್ಲ ಮಾಹಿತಿಯನ್ನು ದಿ ಕ್ವಿಂಟ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

2. ಪಶ್ಚಿಮ ಬಂಗಾಳದ ಹಿಂದೂಗಳ ದುರಂತಮಯ ಪರಿಸ್ಥಿತಿಯನ್ನು ನೋಡಿ. ಹಿಂದೂಗಳಾದ ನಾವು ಒಗ್ಗಟ್ಟಾಗಿ ಹಿಂದೂಗಳನ್ನು  ಬೆಂಬಲಿಸುವ ಪಕ್ಷಕ್ಕೆ ಮತ ಹಾಕದೇ ಇದ್ದಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಮಕ್ಕಳ ಪರಿಸ್ಥಿತಿ ಇದೇ ಆಗಲಿದೆ. ಎಚ್ಚರ ಇರಲಿ. ಇದು  ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರಕಾರದ ಮುಸ್ಲಿಮ್ ಓಲೈಕೆಯ ದೃಶ್ಯ. ನಮ್ಮ ಹಿಂದೂಗಳ ಪರಿಸ್ಥಿತಿಯನ್ನೊಮ್ಮೆ  ನೋಡಿಕೊಳ್ಳಿ.. ಎಂಬ ಬರಹವುಳ್ಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಿದೆ. ಉತ್ತರ ಭಾರತದಲ್ಲಿ ಅತ್ಯಂತ ವ್ಯಾ ಪಕವಾಗಿ ಹರಿದಾಡಿದ ವೀಡಿಯೋ ಇದು. ಇಬ್ಬರು ಯುವಕರಿಗೆ ಹಲವು ಮಂದಿ ಸೇರಿ ಥಳಿಸುವ ದೃಶ್ಯ ಈ ವೀಡಿಯೋದಲ್ಲಿದೆ.  ಹಾಗಂತ, ಇದು ನಿಜವೇ?

ಸುಳ್ಳು

ನಿಜವಾಗಿ, ಈ ವೀಡಿಯೋ ಭಾರತದ್ದೇ  ಅಲ್ಲ. ಬಾಂಗ್ಲಾದೇಶದ ನ್ಯೂಸ್ ಮೀಡಿಯಾ ಬಾಂಗ್ಲಾ ಎಂಬ ಹೆಸರಿನ ವೆಬ್ ಪತ್ರಿಕೆಯು ಈ  ವೀಡಿಯೋವನ್ನು 2019 ಮಾರ್ಚ್ 24ರಂದು ತನ್ನ ವೆಬ್ ಪುಟದಲ್ಲಿ ಹಂಚಿಕೊಂಡಿತ್ತು. ಬಾಂಗ್ಲಾದೇಶದ ಇನ್ನಿತರ ಹಲವು ವೆಬ್  ಪತ್ರಿಕೆಗಳೂ ಈ ವೀಡಿಯೋವನ್ನು ಹಂಚಿಕೊಂಡಿವೆ. ‘ತುಂಬಾ ಕಷ್ಟಪಟ್ಟು ಈ ಆಟೋರಿಕ್ಷಾವನ್ನು ಖರೀದಿಸಿದ್ದೆ..’ ಎಂದು ಈ ಗುಂಪಿನ ಲ್ಲಿರುವ ವ್ಯಕ್ತಿಯೋರ್ವರು ಹೇಳುವುದು ಕೂಡಾ ವೀಡಿಯೋದಲ್ಲಿ ಕೇಳಿಸುತ್ತದೆ. ವಾಸ್ತವ ಏನೆಂದರೆ, ಆಟೋ ರಿಕ್ಷಾ ಕದ್ದು ಸಿಕ್ಕಿ ಬಿದ್ದ  ಇಬ್ಬರು ಯುವಕರನ್ನು ಥಳಿಸುವ ವೀಡಿಯೋ ಇದು. ಆದರೆ, ದುಷ್ಟ ಮನಸ್ಸುಗಳು ಈ ವೀಡಿಯೋಕ್ಕೆ ಸಂಬಂಧಿಸಿದ ಮಾಹಿತಿಗಳನ್ನು  ತಿರುಚಿ ಪಶ್ಚಿಮ ಬಂಗಾಳದ ಹಿಂದೂಗಳಿಗೆ ಥಳಿಸುತ್ತಿರುವ ಮುಸ್ಲಿಮರು ಎಂದು ಬಿಂಬಿಸಿವೆ. ಈ ಪ್ರಶಂಸಾರ್ಹ ಸತ್ಯ ಶೋಧನಾ  ಕೆಲಸವನ್ನು ದಿ ಕ್ವಿಂಟ್ ಪತ್ರಿಕೆ ನಡೆಸಿ ಪ್ರಕಟಿಸಿದೆ.

3. ದೇಶ ಬದಲಾಗುತ್ತಿದೆ. ಮುಸ್ಲಿಮ್ ಯುವಕನೊಬ್ಬ ಹೆಸರು ಬದಲಾಯಿಸಿಕೊಂಡು ಹಿಂದೂ ಯುವತಿಯನ್ನು ಪ್ರೀತಿಸಿ ಅವಳನ್ನು ಅ ಪಹರಣ ಮಾಡುವ ಯತ್ನ ನಡೆಸಿದ್ದಾನೆ. ಆದರೆ, ಈ ಪ್ರಯತ್ನದಲ್ಲಿ ವಿಫಲಗೊಂಡು ಹಿಂದೂ ಸಮಾಜದ ಮಹಿಳೆಯರಿಗೆ ಸಿಕ್ಕಿ ಬಿ ದ್ದಿದ್ದಾನೆ. ಈಗ ಅವನಿಗಾದ ಪರಿಸ್ಥಿತಿಯನ್ನು ನೋಡಿ. ಹಿಂದೂ ಸಮಾಜ ಜಾಗೃತವಾಗುತ್ತಿದೆ.. ಎಂಬ ಅಡಿ ಬರಹವಿರುವ ವೀಡಿಯೋ  ನಿಮಗೂ ತಲುಪಿರ ಬಹುದು. ಬಹುತೇಕ ಉತ್ತರ ಭಾರತದಲ್ಲಿ ಸಾಕಷ್ಟು ಹಂಚಿಕೆಯಾಗಿ ರುವ ವೀಡಿಯೋ ಇದು. ಹಾಗಂತ, ಇದು  ನಿಜವೇ?

ಸುಳ್ಳು

ಈ ಕುರಿತು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು 2020 ಜನವರಿ 20ರಂದು ವರದಿಯನ್ನು ಪ್ರಕಟಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಈತ  ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದಕ್ಕೆ ಕುಪಿತಗೊಂಡು ಮಹಿಳೆಯರು ಆತನನ್ನು ನಗ್ನವಾಗಿಸಿ ಥಳಿಸಿದ್ದಾರೆ. ಇದು ನಡೆ ದಿರುವುದು ಹರ್ಯಾಣದ ಅಂಬಾಲದಲ್ಲಿ ಎಂದು ಪತ್ರಿಕಾ ವರದಿಯಲ್ಲಿ ಹೇಳಲಾಗಿದೆ. ಪವನ್ ಎಂಬುದು ಈತನ ಹೆಸರಾಗಿದ್ದು, ಶಾಲಾ  ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಆ ಮಕ್ಕಳ ಹೆತ್ತವರೂ ಈತನಿಗೆ ಥಳಿಸಿದವರಲ್ಲಿ ಸೇರಿದ್ದಾರೆ ಎಂದೂ ವರದಿಯಲ್ಲಿ  ಹೇಳಲಾಗಿದೆ. ಅಲ್ಲದೇ ಈತನ ವಿರುದ್ಧ ಇಂಡಿಯನ್ ಪೀನಲ್ ಕೋಡ್‌ನ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ,  ಈ ಘಟನೆಯ ಬಗ್ಗೆ ಮಹಿಳಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸುನೀತಾ ಎಂಬವರು ಮಾಹಿತಿ ನೀಡಿರುವ ವೀಡಿಯೋ ಕೂಡ  ಲಭ್ಯವಿದೆ. ಆದರೆ ಈ ಎಲ್ಲ ಮಾಹಿತಿಯನ್ನು ತಿರುಚಿ ಹಿಂದೂ ಯುವತಿಯನ್ನು ಪ್ರೀತಿಸಿ ಅಪಹರಣ ಮಾಡಲು ಯತ್ನಿಸಿದ ಮುಸ್ಲಿಮ್  ಯುವಕ ಎಂದು ಸುಳ್ಳು ಬರೆಯಲಾಗಿದೆ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ಮಾಹಿತಿ ನೀಡಿದೆ.

4. ಗುಂಪೊಂದು  ಮಹಿಳೆಯನ್ನು ಹಿಂಸಿಸಿ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡುವ ವೀಡಿಯೋವನ್ನು ನೀವು ವೀಕ್ಷಿಸಿರುವಿರೋ ಗೊತ್ತಿಲ್ಲ.  ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿರುವ ವೀಡಿಯೋ ಇದು. ಕರ್ನಾಟಕವೂ ಸೇರಿದಂತೆ ಉತ್ತರ ಭಾರತದ  ದೊಡ್ಡದೊಂಡು ಸಮೂಹಕ್ಕೆ ಈ ವೀಡಿಯೋ ತಲುಪಿದೆ. ಇದು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಭಯಾನಕ ದೃಶ್ಯ  ಎಂಬ ವಿವರವನ್ನು ಈ ವೀಡಿಯೋದ ಜೊತೆ ಹಂಚಿಕೊಳ್ಳಲಾಗಿದೆ. ಈ ಹೆಣ್ಮಗಳು ಮಣಿಪುರದ ಹಿಂದೂ ಮೈತಿ ಸಮುದಾಯಕ್ಕೆ  ಸೇರಿದವಳಾಗಿದ್ದಾಳೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ಇದೇ ಪರಿಸ್ಥಿತಿ ಎದುರಾಗಲಿದೆ. ಕರ್ನಾಟಕದಲ್ಲೂ ಮತಾಂತರ ನಿಷೇಧ  ಕಾಯ್ದೆಯನ್ನು ಹಿಂಪಡೆಯಲಾಗುತ್ತಿದೆ. ಕರ್ನಾಟಕದಲ್ಲೂ ಹಿಂದೂಗಳಿಗೆ ಇದೇ ಪರಿಸ್ಥಿತಿ ಬಂದೊದಗಲಿದೆ.. ಎಂಬ ವಿವರವನ್ನು ಈ  ವೀಡಿಯೋದ ಜೊತೆ ನೀಡಲಾಗಿದೆ.
ಹಾಗಂತ, ಈ ವಿವರ ನಿಜವೇ?

ಸುಳ್ಳು

ಈ ಘಟನೆ ನಡೆದಿರುವುದು ನಿಜ. 2022 ಡಿಸೆಂಬರ್ 8ರಂದು ಮ್ಯಾನ್ಮಾರ್‌ನಲ್ಲಿ ನಡೆದಿದೆ. ಈ ಕುರಿತಂತೆ ಮ್ಯಾನ್ಮಾರ್‌ನ ಮಿಜ್ಜಿಮಾ ಎಂಬ  ಸುದ್ದಿ ಸಂಸ್ಥೆ ವರದಿಯನ್ನೂ ಮಾಡಿದೆ. ಮ್ಯಾನ್ಮಾರ್‌ನಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ ಮತ್ತು ವಿರೋಧಿ ಪಿಡಿಎಫ್  ಪಕ್ಷಗಳ ನಡುವಿನ ಘರ್ಷ ಣೆಯ ಫಲಿತಾಂಶ ಈ ಹತ್ಯೆ. ಈಕೆ ಆಂಗ್ ಸಾನ್ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷಕ್ಕೆ ತಮ್ಮ ಕುರಿತು  ಮಾಹಿತಿಯನ್ನು ನೀಡಿದ್ದಾಳೆ ಎಂದು ಕುದಿಗೊಂಡು ಪಿಡಿಎಫ್ ಪಕ್ಷದವರು ಈ ಹತ್ಯೆ ನಡೆಸಿದ್ದಾರೆ ಎಂದು ಮಿಜ್ಜಿಮಾ ಸುದ್ದಿ ಸಂಸ್ಥೆಯ  ವರದಿ ಯಲ್ಲಿ ಹೇಳಲಾಗಿದೆ. ಭಾರತದ ಮಣಿಪುರಕ್ಕೂ ಈ ವೀಡಿಯೋಕ್ಕೂ ಸಂಬಂಧ ಇಲ್ಲ ಎಂದು ಆಲ್ಟ್ ನ್ಯೂಸ್ ಸಂಸ್ಥೆಯ ಫ್ಯಾಕ್ಟ್  ಚೆಕ್ ವರದಿಯಲ್ಲಿ ತಿಳಿಸಲಾಗಿದೆ. ಅಂದಹಾಗೆ,

ಸುಳ್ಳು ಸುದ್ದಿಗಳ ಭರಾಟೆ ಮತ್ತು ಹಂಚಿಕೆಯಾಗುತ್ತಿರುವ ವೇಗವನ್ನು ನೋಡಿದರೆ, ಸತ್ಯವನ್ನು ತಿಳಿಸುವ ಫ್ಯಾಕ್ಟ್ ಚೆಕ್ ವರದಿಗಳು ಕಡಿಮೆ  ಪ್ರಮಾಣದಲ್ಲಿವೆ ಮತ್ತು ಹಂಚಿಕೆಯೂ ನಿಧಾನಗತಿಯಲ್ಲಿವೆ. ಸುಳ್ಳನ್ನು ಸೃಷ್ಟಿಸುವುದು ಸುಲಭ. ಹಂಚಿಕೆ ಅದಕ್ಕಿಂತಲೂ ಸುಲಭ. ಆದರೆ  ಫ್ಯಾಕ್ಟ್ ಚೆಕ್ ಹಾಗಲ್ಲ. ಸುಳ್ಳು ಸುದ್ದಿಯ ಮೂಲವನ್ನು ಹುಡುಕುವುದಕ್ಕೆ ತಾಳ್ಮೆ, ಶ್ರಮ ಮತ್ತು
ಬದ್ಧತೆಯ ಅಗತ್ಯವಿರುತ್ತದೆ. ಎಂದೋ ಯಾವಾಗಲೋ ಪ್ರಕಟವಾದ ಒಂದು ಚಿತ್ರ ಅಥವಾ ಹಂಚಿಕೆಯಾದ ಒಂದು ವೀಡಿಯೋವನ್ನು  ತನಗೆ ಬೇಕಾದಂತೆ ತಿರುಚಿ ಸುಳ್ಳುಗಾರ ಹಂಚಿಕೊಂಡಿರುತ್ತಾನೆ. ಆದರೆ ಸತ್ಯದ ಹುಡುಕಾಟದಲ್ಲಿರುವವ ಅದನ್ನು ಹುಡುಕುತ್ತಾ ಹುಡುಕುತ್ತಾ  ಗಂಟೆ, ದಿನಗಳು, ತಿಂಗಳುಗಳನ್ನು ಕಳೆಯಬೇಕಾಗುತ್ತದೆ. ಅಷ್ಟರಲ್ಲಿ ಆ ಸುಳ್ಳು ಸುದ್ದಿ ತಲುಪಬೇಕಾದಲ್ಲಿಗೆಲ್ಲ ತಲುಪಿ ಮಾಡ ಬೇಕಾದ ಅ ನಾಹುತಗಳನ್ನೆಲ್ಲ ಮಾಡಿಯಾಗಿರುತ್ತದೆ. ಆ ಬಳಿಕ ಬರುವ ಫ್ಯಾಕ್ಟ್ ಚೆಕ್‌ನಲ್ಲಿ ಅಷ್ಟು ವೇಗ ಇರುವುದಿಲ್ಲ. ಸುಳ್ಳು ಸುದ್ದಿಗಳ ಶಕ್ತಿಯೇ ಇದು.  ನಿಜವಾಗಿ,

ಸುಳ್ಳು ಸುದ್ದಿ ಎಂಬ ಪದವು 1890ರಲ್ಲಿ ಮೊದಲ ಬಾರಿ ಬಳಕೆಯಾಗಿದೆ ಎಂದು The long and brutal  of fake news
ತಲೆಬರಹದಲ್ಲಿ ಜಾಕೊಬ್ ಸಾಲ್ ಎಂಬವರು 2016ರಲ್ಲಿ ಬರೆದ ಲೇಖನದಲ್ಲಿ ಆಧಾರ ಸಹಿತ ವಿವರಿಸಿದ್ದಾರೆ. ಹಾಗಂತ, ಪದ 1890ರಲ್ಲಿ ಹುಟ್ಟಿಕೊಂಡಿದ್ದರೂ ಸುಳ್ಳು ಸುದ್ದಿಗಳ ಪ್ರಚಾರ 1475ರಲ್ಲೇ  ನಡೆದಿತ್ತು ಎಂಬುದನ್ನು ಇತಿಹಾಸ  ಹೇಳುತ್ತದೆ. ಇಟಲಿಯ ಸಿಮೋನಿಯೋ ಎಂಬ ಎರಡೂವರೆ ವರ್ಷದ ಬಾಲಕ 1475ರ ಈಸ್ಟರ್ ಹಬ್ಬದ ದಿನದಂದು ಕಾಣೆಯಾಗುತ್ತಾನೆ. ಅದು ಯಹೂದಿಯರ ಬಗ್ಗೆ ಕ್ರೈಸ್ತರಲ್ಲಿ ಅಸಹನೆಯಿದ್ದ ಕಾಲ. ಈ ಬಾಲಕನನ್ನು ಯಹೂದಿಯರು ಅಪಹರಣ ಮಾಡಿ  ಹತ್ಯೆ ಮಾಡಿದ್ದು, ಆತನ ರಕ್ತವನ್ನು ಕುಡಿದು ಹಬ್ಬ ಆಚರಿಸಿದ್ದಾರೆ ಎಂದು ಕ್ರೈಸ್ತ ಪಾದ್ರಿ ಬರ್ನಾಡಿನೋ ಡಫೆಲ್ಟೊ ಎಂಬವ ಸರಣಿ ಉಪ ನ್ಯಾಸ ನೀಡತೊಡಗುತ್ತಾನೆ. ಸುದ್ದಿ ಬಾಯಿಂದ ಬಾಯಿಗೆ ರವಾನೆಯಾಗಿ ಆಕ್ರೋಶ ಮಡುಗಟ್ಟುತ್ತದೆ. ಘಟನೆ ನಡೆದಿರುವ ಟ್ರೆಂಟ್ ನಗರದ  ಮುಖ್ಯ ಬಿಷಪ್ ಜೊಹಾನ್ಸನ್ ಹಿಂಡರ್‌ಬ್ಯಾಚ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ನಗರದ ಎಲ್ಲಾ  ಯಹೂದಿಯನ್ನು ಬಂಧಿಸಿ ದೌರ್ಜನ್ಯ  ನಡೆಸಲು ಆದೇಶಿಸುತ್ತಾರೆ. ಇವರಲ್ಲಿ 15 ಮಂದಿಯನ್ನು ಅಪರಾಧಿಗಳೆಂದು ಗುರುತಿಸಿ ಜೀವಂತ ಸುಟ್ಟು ಹಾಕಲಾಗುತ್ತದೆ. ಅಲ್ಲದೇ, ಈ  ಸುದ್ದಿಯಿಂದಾಗಿ ಟ್ರೆಂಟ್‌ನ ಅಕ್ಕ ಪಕ್ಕದ ಊರುಗಳಲ್ಲಿದ್ದ ಯಹೂದಿಗಳನ್ನೆಲ್ಲ ತೀವ್ರವಾಗಿ ಹಿಂಸಿಸಿ ದೌರ್ಜನ್ಯ ಎಸಗಲಾಗುತ್ತದೆ. ಅಷ್ಟಕ್ಕೂ,  ಸಿಮೋನಿಯೋ ಎಂಬ ಬಾಲಕ ಸಾವಿಗೀಡಾಗಿದ್ದುದು ನಿಜ. ಆದರೆ, ಆತನಿಗೆ ಸಂಬAಧಿ ಸಿದ ಉಳಿದೆಲ್ಲ ಸುದ್ದಿಗಳು ಸುಳ್ಳಾಗಿತ್ತು.

ಇನ್ನೊಂದು ಘಟನೆ ಹೀಗಿದೆ,

1761ರಲ್ಲಿ ಮಾರ್ಕ್ ಅಂಟಾನಿಯೋ ಕಲಾಸ್ ಎಂಬ 22 ವರ್ಷದ ಯುವಕ ಫ್ರಾನ್ಸ್ನ ಟೇಲೋಸ್ ಎಂಬಲ್ಲಿ ಆತ್ಮಹತ್ಯೆ  ಮಾಡಿಕೊಳ್ಳುತ್ತಾನೆ. ಈತ ಪ್ರೊಟೆಸ್ಟೆಂಟ್ ಜೀನ್ ಕಲಾಸ್ ಪ್ರಸಿದ್ಧ ವ್ಯಾಪಾರಿಯ ಮಗ. ಆದರೆ, ಈ ಆತ್ಮಹತ್ಯೆಗೆ ಕ್ಯಾಥೋಲಿಕ್  ಪಂಥದವರು ‘ಹತ್ಯೆ’ ಎಂಬ ತಿರುವನ್ನು ಕೊಟ್ಟು ಪ್ರಚಾರ ಮಾಡಿ ದರು. ಮಗ ಕ್ಯಾಥೋಲಿಕ್ ಪಂಥಕ್ಕೆ ಪರಿವರ್ತನೆ ಆಗುವವನಿದ್ದ.  ಇದನ್ನು ಸಹಿಸದೇ ಅಪ್ಪನೇ ಹತ್ಯೆ ನಡೆಸಿದ್ದಾನೆ ಎಂದು ವದಂತಿ ಹಬ್ಬಿಸಿದರು. ಈ ವದಂತಿ ಎಷ್ಟು ಪ್ರಬಲವಾಗಿತ್ತೆಂದರೆ, ಈ ಅಪ್ಪನನ್ನು  ಹಿಂಸಿಸಿ ಸಾರ್ವಜನಿಕವಾಗಿ ಗಲ್ಲಿಗೇರಿಸಲಾಯಿತು.
ಸುಳ್ಳಿನ ಶಕ್ತಿ ಅಗಾಧವಾದುದು.

No comments:

Post a Comment