Monday, July 10, 2023

ಗೋಡ್ಸೆ: ಇತಿಹಾಸದ ತಪ್ಪಿಗೆ ವರ್ತಮಾನ ಹೊಣೆಯೇ?

 
1. ಹಲಾಲ್ ಆಹಾರ ಕ್ರಮವನ್ನು ಬ್ಯಾನ್ ಮಾಡಬೇಕು, ಇದು ಎಕನಾಮಿಕ್ ಜಿಹಾದ್: ಬಿಜೆಪಿ ನಾಯಕ ಸಿಟಿ ರವಿ - ಮಾರ್ಚ್ 30,  2022


2. ನೀವು ಲವ್ ಜಿಹಾದ್‌ನ ಬಗ್ಗೆ ಮಾತಾಡಿ. ಚರಂಡಿ, ಕುಡಿಯುವ ನೀರು, ಮೂಲ ಸೌಲಭ್ಯಗಳ ಬಗ್ಗೆ ಮಾತಾಡಬೇಡಿ:
ಬಿಜೆಪಿ ರಾಜ್ಯಾಧ್ಯಕ್ಷ  ನಳಿನ್ ಕುಮಾರ್ ಕಟೀಲ್.

3. ಕಾಂಗ್ರೆಸ್‌ನಲ್ಲಿರುವ ಮುಸ್ಲಿಮರು ಕೊಲೆಗಾರರು, ಆದರೆ ಬಿಜೆಪಿಯಲ್ಲಿರುವ ಮುಸ್ಲಿಮರು ಒಳ್ಳೆಯವರು: ಬಿಜೆಪಿ ನಾಯಕ ಕೆ.ಎಸ್.  ಈಶ್ವರಪ್ಪ - ಫೆಬ್ರವರಿ 1, 2018

4. ನಿಮಗೆ ಹಿಜಾಬ್ ಬೇಕಿದ್ರೆ ಪಾಕಿಸ್ತಾನಕ್ಕೆ ಹೋಗಿ; ಇಲ್ಲಿರುವ ಉರ್ದು ಶಾಲೆ ಮತ್ತು ಮದ್ರಸಾಗಳನ್ನು ಮುಚ್ಚಬೇಕು: ಬಿಜೆಪಿ ನಾಯಕ  ಬಸವರಾಜ ಪಾಟೀಲ್ ಯತ್ನಾಳ್ - ಫೆಬ್ರವರಿ 5, 2022

5. ಮುಸ್ಲಿಮರ ಎದೆ ಬಗೆದರೆ ಎರಡಕ್ಷರ ಸಿಗಲ್ಲ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ

6. ಮುಸ್ಲಿಮರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡುವುದಿಲ್ಲ: ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ - ಎಪ್ರಿಲ್ 2, 2019

ಈ ಹೇಳಿಕೆಗಳಲ್ಲದೇ,

ಈ ರಾಜ್ಯದಲ್ಲಿ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹೇರಲಾಯಿತು, ಪ್ರೇಮ ವಿವಾಹವನ್ನು ಲವ್ ಜಿಹಾದ್ ಎಂದು ಅಣಕಿಸಲಾಯಿತು,  ಭಯೋತ್ಪಾದ ಕರು ಎಂದು ಹಂಗಿಸಲಾಯಿತು. ಅದಾನನ್ನು ಬ್ಯಾನ್ ಮಾಡುವಂತೆ ಚಳವಳಿ ನಡೆಸಲಾಯಿತು, ಮುಸ್ಲಿಮ್ ವಿದ್ಯಾರ್ಥಿನಿಯರ ಹಿಜಾಬನ್ನು ವಿರೋ ಧಿಸಲಾಯಿತು, ಮುಸ್ಲಿಮರ ಹತ್ಯೆಯನ್ನು ಸಮ ರ್ಥಿಸಲಾಯಿತು, ಅನೈತಿಕ ಪೊಲೀಸ್‌ಗಿರಿಯನ್ನು ಕ್ರಿಯೆ- ಪ್ರತಿಕ್ರಿಯೆಗಳೆಂದು ಹೇಳಿ ಒಪ್ಪಿಸಲಾಯಿತು, ತಬ್ಲೀಗಿ ವೈರಸ್ ಎಂದು ಜರೆಯಲಾಯಿತು... ಒಟ್ಟಿನಲ್ಲಿ ಮುಸ್ಲಿಮರ ಆಹಾರ, ಆಚಾರ,  ಸಂಸ್ಕೃತಿ, ವೇಷಭೂಷಣ, ಆರಾಧನೆ.. ಇತ್ಯಾದಿಗಳನ್ನೆಲ್ಲಾ ತಮಾಷೆ-ವ್ಯಂಗ್ಯ-ಚುಚ್ಚುವಿಕೆಗಳಿಗೆ ಬಳಸಲಾಯಿತು. ಈ ಎಲ್ಲ ಸಂದರ್ಭಗಳನ್ನೂ ಬಿಜೆಪಿ ನೇರವಾಗಿಯೋ  ಪರೋಕ್ಷವಾಗಿಯೋ ಬೆಂಬಲಿಸಿತು ಮತ್ತು ಆನಂದಿಸಿತು. ಅದರ ಮುಂಚೂಣಿ ನಾಯಕರೇ ಇಂಥ ಬೆಳವಣಿಗೆಯನ್ನು ಬೆಂಬಲಿಸಿ  ಮಾತಾಡಿದರು. ತನ್ನ ಬೆಂಬಲಿಗ ಸಂಘಟನೆಗಳು ಮುಸ್ಲಿಮರಿಗೆ ನೋವಾಗುವಂತೆ ಆಡುತ್ತಿರುವ ಮಾತುಗಳನ್ನೆಲ್ಲ ಕೆಲವೊಮ್ಮೆ ಮೌನವಾಗಿ  ಮತ್ತು ಇನ್ನು ಕೆಲವೊಮ್ಮೆ ಬಹಿರಂಗ ವಾಗಿಯೇ ಸಮರ್ಥಿಸಿದರು. ಮುಸ್ಲಿಮರನ್ನು ಬಾಬರನ ಸಂತಾನ ಗಳು ಎಂದರು. ಜಿಹಾದಿಗಳು  ಎಂದರು. ದೇಶದ್ರೋಹಿಗಳು ಎಂದರು. ವಿದೇಶಕ್ಕೆ ನಿಷ್ಠೆಯುಳ್ಳವರು ಎಂದರು. ಹಿಂದೂ ಧಾರ್ಮಿಕ ಕ್ಷೇತ್ರಕ್ಕೆ ಮಾಡುವ ಯಾತ್ರೆಗೆ  ಸಬ್ಸಿಡಿಯನ್ನು ಘೋಷಿಸುತ್ತಲೇ ಹಜ್ಜ್ ಯಾತ್ರೆಯ ಸಬ್ಸಿಡಿಯನ್ನು ಲೇವಡಿ ಮಾಡಿದರು. ರದ್ದುಪಡಿಸುವಂತೆ ಒತ್ತಾಯಿಸಿದರು. ಗೋ  ಸಾಗಾಟದ ನೆಪದಲ್ಲಿ ಮುಸ್ಲಿಮ್ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸಿದರು. ಕುರ್‌ಆನನ್ನೇ ಪ್ರಶ್ನಿಸಿದರು. ಅದು ದ್ವೇಷವನ್ನು  ಹರಡುತ್ತದೆ ಎಂದೂ ಸಾರ್ವಜನಿಕವಾಗಿಯೇ ಘೋಷಿಸಿದರು.
ಆದರೆ,

ಇದೀಗ ಇದೇ ಬಿಜೆಪಿ ನಾಯಕರು ಕುಮಾರಸ್ವಾಮಿಯವರ ಬ್ರಾಹ್ಮಣ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತಿದ್ದಾರೆ. ಬಿಜೆಪಿಯ  ಪಂಚಾಯತ್ ಮಟ್ಟದ ನಾಯಕನಿಂದ ಹಿಡಿದು ರಾಜ್ಯಾಧ್ಯಕ್ಷರ ವರೆಗೆ, ಮುಖ್ಯಮಂತ್ರಿಯಿಂದ  ಹಿಡಿದು ಸಚಿವರ ವರೆಗೆ ಪ್ರತಿಯೊಬ್ಬರೂ  ಪ್ರತ್ಯಪ್ರತ್ಯೇಕವಾಗಿ ತಮ್ಮ ಕಡುಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ, ಕುಮಾರಸ್ವಾಮಿ ಹೇಳಿದ್ದೇನು?

ಮಹಾರಾಷ್ಟ್ರ  ಭಾಗಕ್ಕೆ ಸೇರಿದ ಪೇಶ್ವೆ ವರ್ಗದ ಚಿತ್ಪಾವನ ಬ್ರಾಹ್ಮಣರು ಶೃಂಗೇರಿ ಮಠವನ್ನು ಒಡೆದವರಾಗಿದ್ದಾರೆ. ಮಠದ ವಿಗ್ರಹಗಳನ್ನು  ಅವರು ಧ್ವಂಸ ಮಾಡಿದ್ದಾರೆ. ಗಾಂಧೀಜಿಯನ್ನು ಕೊಂದ ಗೋಡ್ಸೆಯೂ ಇದೇ ವರ್ಗಕ್ಕೆ ಸೇರಿದವ. ಆದರೆ ಹಳೇ ಕರ್ನಾಟಕದ  ಬ್ರಾಹ್ಮಣರು ಹಾಗಲ್ಲ. ಒಳ್ಳೆಯವರು. ಸರ್ವೇ ಜನ ಸುಖಿನೋ ಭವಂತು ಅನ್ನುವರು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲದೇ,  ಬಿಜೆಪಿ ಸಂಸದ ಪ್ರಹ್ಲಾದ್ ಜೋಷಿ ಪೇಶ್ವೆ ವರ್ಗಕ್ಕೆ ಸೇರಿದ ಮತ್ತು ಶೃಂಗೇರಿ ಮಠಕ್ಕೆ ದಾಳಿ ಮಾಡಿದ ಚಿತ್ಪಾವನ ಬ್ರಾಹ್ಮಣ  ಸಮುದಾಯಕ್ಕೆ ಸೇರಿದವರು. ಅವರನ್ನೇ ಮುಂದಿನ ಮುಖ್ಯಮಂತ್ರಿ ಮಾಡುವ ಹುನ್ನಾರ ನಡೆಯುತ್ತಿದೆ ಎಂದೂ ಅವರು ಹೇಳಿದ್ದಾರೆ.

ಅಂದಹಾಗೆ,

ಒಳ್ಳೆಯವರು ಮತ್ತು ಕೆಟ್ಟವರನ್ನು ಸಮುದಾಯದ ಆಧಾರದಲ್ಲಿ ಹೀಗೆ ವರ್ಗೀಕರಿಸುವುದೇ ತಪ್ಪು. ಬ್ರಾಹ್ಮಣರಲ್ಲಿ ನೂರಾರು ಪಂಗಡಗಳಿವೆ  ಮತ್ತು ಇವರೆಲ್ಲರ ಆಹಾರ ಕ್ರಮಗಳೂ ಭಿನ್ನಭಿನ್ನವಾಗಿವೆ. ಮುಖ್ಯವಾಗಿ ಶಿವನನ್ನು ಆರಾಧಿಸುವ ಶೈವರು, ವಿಷ್ಣುವನ್ನು ಆರಾಧಿಸುವ  ವೈಷ್ಣವರು ಮತ್ತು ಶಿವ ಮತ್ತು ವಿಷ್ಣು ಇಬ್ಬರನ್ನೂ ಆರಾಧಿಸುವ ಸ್ಮಾರ್ತರು ಎಂದು ಇವರನ್ನು ಗುರುತಿಸಬಹುದಾಗಿದೆ. ಶೃಂಗೇರಿ  ಮಠಕ್ಕೆ ನಡಕೊಳ್ಳುವವರನ್ನು ಸ್ಮಾರ್ತರು ಅಥವಾ ಹವ್ಯಕರು ಎಂದು ಗುರುತಿಸಲಾಗುತ್ತದೆ. ಕವಿ ದ.ರಾ. ಬೇಂದ್ರೆ ಚಿತ್ಪಾವನ ಪಂಗಡಕ್ಕೆ  ಸೇರಿದವರು. ಚಿತ್ಪಾವನರು ಅಥವಾ ದೇಶಸ್ತರು ಮಹಾರಾಷ್ಟ್ರದ ಕರಾವಳಿ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರ ಪರಂಪರೆ ಕರ್ನಾಟಕದಲ್ಲೂ ಇದೆ. ಬಂಗಾಳ, ಬಿಹಾರ, ಒಡಿಸ್ಸಾ, ಕಾಶ್ಮೀರ, ಗೋವಾ, ಹಿಮಾಚಲ ಪ್ರದೇಶಗಳಲ್ಲಿರುವ ಬ್ರಾಹ್ಮಣರಲ್ಲಿ  ಮಾಂಸಾಹಾರಿಗಳೂ ಧಾರಾಳ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ದಕ್ಷಿಣ ಭಾರತಕ್ಕೆ ಸಂಬಂಧಿಸಿ ಹೇಳುವುದಾದರೆ,  ಬ್ರಾಹ್ಮಣರಲ್ಲಿ ಮಾಂಸಾಹಾರಿಗಳು ಬಹಳ ಕಡಿಮೆ. ಕರ್ನಾಟಕದಲ್ಲಿ ಮುಖ್ಯವಾಗಿ ಚಿತ್ಪಾವನರು, ಹವ್ಯಕರು, ಶಿವಳ್ಳಿ ಬ್ರಾಹ್ಮಣ, ಸಾರಸ್ವತ  ಬ್ರಾಹ್ಮಣ, ಕೋಟಾ ಬ್ರಾಹ್ಮಣ ಪಂಗಡಕ್ಕೆ ಸೇರಿದವರಿದ್ದಾರೆ. ಮುಸ್ಲಿಮರಲ್ಲೂ ಈ ಬಗೆಯ ಪಂಗಡಗಳಿವೆ.

 ಸುನ್ನಿಗಳು, ಬರೇಲ್ವಿಗಳು,  ದೇವ್‌ಬಂಧಿಗಳು, ಸಲಫಿಗಳು, ತಬ್ಲೀಗಿಗಳು ಇತ್ಯಾದಿಯಾಗಿ ಇವು ಗುರುತಿಸಿಕೊಳ್ಳುತ್ತವೆ. ವೈಚಾರಿಕ ಭಿನ್ನಮತದಿಂದಾಗಿ ಹುಟ್ಟಿಕೊಂಡ  ಪಂಗಡಗಳಿವು. ಹಾಗೆಯೇ, ವೃತ್ತಿಯಾಧಾರಿತವಾಗಿ ಗುರುತಿಸಿಕೊಂಡ ಪಂಗಡಗಳೂ ಇವೆ. ತೋಟಗಾರಿಕೆಯಲ್ಲಿ ತೊಡಗಿರುವ  ಮುಸ್ಲಿಮರು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಭಾಗವಾನ ಎಂದು ಗುರುತಿಸಿಕೊಳ್ಳುತ್ತಾರೆ. ಕೃಷಿಯಲ್ಲಿ ತೊಡಗಿಸಿಕೊಂಡಿರುವ ಈ  ಗುಂಪು ಸಂತೆಯಲ್ಲಿ ತಮ್ಮ ಉತ್ಪನ್ನವನ್ನು ಮಾರಾಟ ಮಾಡುತ್ತಾ ಬದುಕು ಸಾಗಿಸುತ್ತಿವೆ. ಇನ್ನೊಂದು ಬಹುದೊಡ್ಡ ಪಂಗಡ ಪಿಂಜಾರ  ಎಂಬುದು. ಹತ್ತಿಯನ್ನು ಹಿಂಜುವವರು ಎಂದರ್ಥದಲ್ಲಿ ಹುಟ್ಟಿಕೊಂಡ ಹಿಂಜಾರ ಎಂಬ ಪದ ಮುಂದಕ್ಕೆ ಪಿಂಜಾರ ಆಗಿ ಬದಲಾಗಿದೆ.  ಹಾಸಿಗೆಯ ಮೇಲಿನ ಮೆತ್ತನೆ ರಚನೆಯನ್ನು ಮಾಡುವ ವೃತ್ತಿ ಇವರದು. ಅದಕ್ಕಾಗಿ ಹತ್ತಿಯನ್ನು ಹಿಂಜಬೇಕಾಗಿದ್ದು, ಈ ಕಲೆಯಲ್ಲಿ ಈ  ಪಂಗಡ ನಿಷ್ಣಾತವಾಗಿದೆ. ಇದೇ ಪಂಗಡಕ್ಕೆ ನದಾಫ, ಮನ್ಸೂರಿ ಎಂಬ ಹೆಸರೂ ಇದೆ. ಮನ್ಸೂರಿಗಳು ಮುಖ್ಯವಾಗಿ ಕಾಶ್ಮೀರದಲ್ಲಿ ಹೆಚ್ಚು  ಕಂಡುಬರುತ್ತಾರೆ. ಇನ್ನೊಂದು ಗುಂಪು ಮಕಾನ್‌ದಾರ್ ಎಂಬ ಹೆಸರಲ್ಲಿ ಗುರುತಿಸಿಕೊಂಡಿದೆ. ಮೃತದೇಹವನ್ನು ಹೂಳುವುದಕ್ಕಾಗಿ  ಗೋರಿ ಅಗೆಯುವ ವೃತ್ತಿಯಲ್ಲಿ ತೊಡಗಿಸಿಕೊಂಡವರು ಎಂದರ್ಥ. ಗೋರಿ ತೋಡುವ ವೃತ್ತಿಯಾ ದುದರಿಂದ ಮಕಾನ್ ಅಥವಾ ಮನೆ  ಕಟ್ಟುವವರು ಎಂಬ ಹೆಸರು ಇವರಿಗೆ ದಕ್ಕಿದೆ. ಆದರೆ ಮುಸ್ಲಿಮರ ಈ ಯಾವ ಪಂಗಡಗಳಲ್ಲೂ ಆರಾಧನೆಯಲ್ಲಿ ವ್ಯತ್ಯಾಸ ಇಲ್ಲ.  ನಮಾಜ್, ಉಪವಾಸ, ಧರ್ಮಗ್ರಂಥ, ಹಜ್ಜ್ ಯಾತ್ರೆ ಇತ್ಯಾದಿಗಳನ್ನೆಲ್ಲ ಎಲ್ಲ ಪಂಗಡಗಳೂ ಏಕಪ್ರಕಾರವಾಗಿ ಅನುಸರಿಸುತ್ತವೆ.  ಅಷ್ಟಕ್ಕೂ,

ಸುನ್ನಿ ಅಥವಾ ಶಿಯಾ ವಿಭಾಗಕ್ಕೆ ಸೇರಿದ ಯಾವನೋ ಅರಸ ಅಥವಾ ವ್ಯಕ್ತಿ ದೇವಸ್ಥಾನವನ್ನು ಒಡೆದರೆ ಅಥವಾ ಹಿಂದೂ  ಸಮುದಾಯದ ನಂಬಿಕೆಗಳನ್ನು ಅವಹೇಳನಗೊಳಿಸಿದರೆ ಅದನ್ನು ಇಡೀ ಸುನ್ನಿ ಸಮುದಾಯದ ಅಪರಾಧವಾಗಿ ಕಾಣುವುದು ಎಷ್ಟು ಸರಿ? ರಾಜ  ಮಾಡಿದ ಅಪರಾಧವನ್ನು ಆತನ ಸಮುದಾಯದ ಮೇಲೆ ಹೊರಿಸುವುದು ಯಾವ ನ್ಯಾಯ? ನದಾಫ, ಪಿಂಜಾರ, ಭಾಗವಾನ ಅಥವಾ ಇನ್ನಿತರ  ಮುಸ್ಲಿಮ್ ಪಂಗಡಗಳಿಗೆ ಸೇರಿದ ವ್ಯಕ್ತಿಗಳ ತಪ್ಪುಗಳನ್ನು ಆಯಾ ಸಮುದಾಯದ ಮೇಲೆ ಹೊರಿಸುವುದು ಎಷ್ಟು ನ್ಯಾಯಬದ್ಧ?  ಗೋಡ್ಸೆಗೆ ಸಂಬಂಧಿಸಿಯೂ ನಾವು ಇದೇ ಮಾತನ್ನು ಹೇಳಬೇಕು. ಪೇಶ್ವೆಗಳಿಗೆ ಸಂಬಂಧಿಸಿಯೂ ಹೇಳ ಬೇಕಾದುದು ಇದನ್ನೇ.  ಒಂದುವೇಳೆ,

ಗೋಡ್ಸೆ ಮಾಡಿದ ಅಪರಾಧವನ್ನು ಆತನ ಚಿತ್ಪಾವನ ಬ್ರಾಹ್ಮಣ ಸಮುದಾಯ ಒಕ್ಕೊರಳಿನಿಂದ ಬೆಂಬಲಿಸಿದ್ದರೆ ಮತ್ತು ಸಮರ್ಥಿಸಿದ್ದರೆ,  ಹಾಗೆ ಸಮರ್ಥಿಸಿದ ಕಾಲದ ಸಮರ್ಥಕರನ್ನು ತಪ್ಪಿತಸ್ಥರು ಎಂದು ಹೇಳಬೇಕೇ ಹೊರತು ಆ ಕಾಲಕ್ಕೆ ಸಂಬಂಧಿಸಿಯೇ ಇಲ್ಲದ ಮತ್ತು  ಬೆಂಬಲಿಸಿಯೇ ಇಲ್ಲದವರನ್ನಲ್ಲ. ಗೋಡ್ಸೆ ಕಾಲವಾಗಿ ಆರು ದಶಕಗಳೇ ಕಳೆದಿವೆ. ಪೇಶ್ವೆಯ ಕಾಲಕ್ಕೂ ಈ ಕಾಲಕ್ಕೂ ಸಂಬಂಧವೇ  ಇಲ್ಲದಷ್ಟು ಈ ಮಣ್ಣು ಬದಲಾಗಿದೆ. ಹೀಗಿರುವಾಗ ಪೇಶ್ವೆಗಳ ತಪ್ಪನ್ನು ಈಗಿನ ಚಿತ್ಪಾವನ ಬ್ರಾಹ್ಮಣರ ತಲೆಗೆ ಕಟ್ಟಿ ಅವರು ಕೆಟ್ಟವರು,  ಉಳಿದವರು ಒಳ್ಳೆಯವರು ಎಂದು ವರ್ಗೀಕರಿಸುವುದು ಅತ್ಯಂತ ತಪ್ಪಾದ ವಿಶ್ಲೇಷಣೆ. ಚಿತ್ಪಾವನ ಬ್ರಾಹ್ಮಣ ಸಮುದಾಯದ ವ್ಯಕ್ತಿಗಳು  ಈ ಹಿಂದೆ ಈ ದೇಶದ ಮೂಲ ನಿವಾಸಿಗಳನ್ನೋ ಅಥವಾ ದುರ್ಬಲ ವರ್ಗದವರನ್ನೋ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎಂದು  ಹೇಳುವ ಉದ್ದೇಶ ಕುಮಾರಸ್ವಾಮಿಯದ್ದಾದರೆ ಅದನ್ನು ನೇರವಾಗಿ ಹೇಳಬೇಕೇ ಹೊರತು ಇಂದಿನ ಸಮುದಾಯವನ್ನು ಅಪರಾಧಿ  ಸ್ಥಾನದಲ್ಲಿ ನಿಲ್ಲಿಸುವುದಲ್ಲ. ವ್ಯಕ್ತಿಗಳ ತಪ್ಪು ವ್ಯಕ್ತಿಗಳಿಗೆ ಸೀಮಿತವೇ ಹೊರತು ಸಮುದಾಯಕ್ಕಲ್ಲ. ಸಮುದಾಯದಲ್ಲಿ ಆ ವ್ಯಕ್ತಿಯ ತಪ್ಪನ್ನು  ಖಂಡಿಸುವವರೂ ಇದ್ದಾರೆ, ಬೆಂಬಲಿಸುವವರೂ ಇದ್ದಾರೆ. ಮಾತಾಡುವಾಗ ಪ್ರತಿಯೊಬ್ಬರೂ ಈ ಎಚ್ಚರಿಕೆಯನ್ನು ಗಮನದಲ್ಲಿಟ್ಟಿರಬೇಕು.
ಆದರೆ,

ಕುಮಾರಸ್ವಾಮಿಯವರು ಈ ಎಚ್ಚರಿಕೆಯನ್ನು ಪ್ರದರ್ಶಿಸಲಿಲ್ಲ ಎಂಬುದು ಸ್ಪಷ್ಟ. ಅನಗತ್ಯ ಮಾತನ್ನಾಡಿದರು. ಆದರೆ, ಈ ಮಾತನ್ನು  ಎತ್ತಿಕೊಂಡು ಬಿಜೆಪಿ ಮಾಡಿದ ಗದ್ದಲ ಸಣ್ಣದಲ್ಲ. ಕುಮಾರಸ್ವಾಮಿ ಕ್ಷಮೆ ಕೋರಬೇಕು ಎಂದು ಅದು ಒತ್ತಾಯಿಸಿತು. ಅಪಾರ ಆಕ್ರೋ ಶವನ್ನು ವ್ಯಕ್ತಪಡಿಸಿತು. ದುರಂತ ಏನೆಂದರೆ, ಇದೇ ಬಿಜೆಪಿ ನಾಯಕರು ದಿನ ಬೆಳಗಾದರೆ ಮುಸ್ಲಿಮರನ್ನು ಟೀಕಿಸಿ, ನಿಂದಿಸಿ, ಅಪಹಾಸ್ಯ  ಮಾಡಿ ನೀಡಿದ ಹೇಳಿಕೆಗಳು ಎಷ್ಟಿಲ್ಲ? ಟಿಪ್ಪು ಸುಲ್ತಾನನ್ನು ಎತ್ತಿಕೊಂಡು ಮುಸ್ಲಿಮರನ್ನು ಪರೋಕ್ಷವಾಗಿ ತಿವಿದ ಮಾತುಗಳು ಎಷ್ಟಿಲ್ಲ?  ಇತಿಹಾಸದ ಸಕಲ ಅಪದ್ಧಗಳಿಗೂ ವರ್ತಮಾನದ ಮುಸ್ಲಿಮರೇ ಹೊಣೆಗಾರರು ಎಂಬಂಥ  ಮಾತನ್ನು ಎಷ್ಟು ಟನ್ನು ಆಡಿಲ್ಲ?  ಮುಸ್ಲಿಮರನ್ನೆಲ್ಲಾ ಗೋಕಳ್ಳರು ಎಂಬಂತೆ  ಎಷ್ಟು ಬಾರಿ ಬಿಂಬಿಸಿಲ್ಲ? ಮಸೀದಿಗಳನ್ನು ಭಯೋತ್ಪಾದಕ ಅಡಗು ತಾಣಗಳಾಗಿ ಚಿತ್ರಿಸಿ ಎಷ್ಟು  ಹೇಳಿಕೆಗಳನ್ನು ನೀಡಿಲ್ಲ? ತಾಲಿಬಾನ್‌ಗಳ ಅನಾಗರಿಕತೆಗೆ ಭಾರತೀಯ ಮುಸ್ಲಿಮರಲ್ಲಿ ಎಷ್ಟು ಬಾರಿ ಉತ್ತರ ಕೇಳಿಲ್ಲ? ತಾಲಿಬಾನ್‌ಗಳ  ಬುರ್ಖಾ, ಅವರ ಮುಂಡಾಸು, ಗಡ್ಡ-ಪೈಜಾಮ ಮತ್ತು ತಿಕ್ಕಲು ಕಾನೂನುಗಳನ್ನು ಎತ್ತಿಕೊಂಡು ಭಾರತೀಯ ಮುಸ್ಲಿಮರಿಗೆ ಎಷ್ಟು ಬಾರಿ  ಅವಮಾನ ಮಾಡಿಲ್ಲ?

ಪ್ರಶ್ನಿಸುವುದಕ್ಕೆ ಬೇಕಾದಷ್ಟಿದೆ.

ನಿಜವಾಗಿ, ಕುಮಾರಸ್ವಾಮಿ ಹೇಳಿಕೆಯನ್ನು ಬ್ರಾಹ್ಮಣ ಸಮುದಾಯದ ನಾಯಕರೋರ್ವರು ಪ್ರಶ್ನಿಸುವುದಕ್ಕೂ ಬಿಜೆಪಿ ರಾಜ ಕಾರಣಿ  ಪ್ರಶ್ನಿಸುವುದಕ್ಕೂ ವ್ಯತ್ಯಾಸವಿದೆ. ಬ್ರಾಹ್ಮಣ ಸಮುದಾಯದ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಲೇಬೇಕಾದ ಹೇಳಿಕೆ ಕುಮಾರಸ್ವಾಮಿಯದ್ದು.  ಒಂದು ಸಮುದಾಯವಾಗಿ ಬ್ರಾಹ್ಮಣರಿಗಾದ ನೋವನ್ನು ಮುಸ್ಲಿಮರಷ್ಟು ಚೆನ್ನಾಗಿ ಇನ್ನಾರೂ ಅರ್ಥೈಸಲಾರರು ಅನ್ನಿಸುತ್ತದೆ. ಚಿತ್ಪಾವನರೇ ಹೀಗೆ ಎಂದು ಹೇಳುವುದಕ್ಕೂ ಗೋಡ್ಸೆ ಹೀಗೆ ಎಂದು ಹೇಳುವುದಕ್ಕೂ ವ್ಯತ್ಯಾಸವಿದೆ. ಹಾಗೆಯೇ ಮುಸ್ಲಿಮ್ ಸಮುದಾಯವೇ  ಹೀಗೆ ಎಂದು ಹೇಳುವುದಕ್ಕೂ ಶುದ್ಧಿ ಚಳುವಳಿಯ ಸ್ವಾಮಿ ಶ್ರದ್ಧಾನಂದರನ್ನು ಹತ್ಯೆಗೈದ ರಶೀದ್ ಹೀಗೆ ಎಂದು ಹೇಳುವುದಕ್ಕೂ  ವ್ಯತ್ಯಾಸವಿದೆ. ಅಬ್ದುಲ್ ರಶೀದ್‌ನನ್ನು ಮುಸ್ಲಿಮ್ ಸಮುದಾಯದ ಐಕಾನ್ ಎಂದು ಮುಸ್ಲಿಮರಾರೂ ಹೇಳುವುದಿಲ್ಲ. ಆತ ಮುಸ್ಲಿಮ್  ಸಮುದಾಯದಲ್ಲಿ ಸಂತನಾಗಿಯೂ ಗುರುತಿಸಿಕೊಂಡಿಲ್ಲ. ಆತನ ಹೆಸರಲ್ಲಿ ಮಸೀದಿಯನ್ನೂ ಕಟ್ಟಲಾಗಿಲ್ಲ. ಆತ ಯಾರು, ಎಲ್ಲಿಯವ, ಎಲ್ಲಿದ್ದ ಮತ್ತು ಹೇಗೆ ತೀರಿಕೊಂಡ ಎಂಬ ಬಗ್ಗೆ ವರ್ತಮಾನ ಕಾಲದ ಮುಸ್ಲಿಮರು ಬಿಡಿ, 1926ರ ಕಾಲದ ಮುಸ್ಲಿಮ್ ಸಮುದಾಯಕ್ಕೇ  ಗೊತ್ತಿರುವ ಸಾಧ್ಯತೆ ಇಲ್ಲ. ಅಷ್ಟರ ಮಟ್ಟಿಗೆ ಓರ್ವ ಹಿಂದೂ ಸಾಧುವಿನ ಹತ್ಯೆಕೋರನ ವಿರುದ್ಧ ಮುಸ್ಲಿಮ್ ಸಮುದಾಯ ತಿರುಗಿ ಬಿದ್ದಿದೆ.  ಗೋಡ್ಸೆಯನ್ನು ಕೂಡಾ ಚಿತ್ಪಾವನ ಬ್ರಾಹ್ಮಣ ಸಮುದಾಯವಾಗಲಿ, ಒಟ್ಟು ಬ್ರಾಹ್ಮಣ ಸಮುದಾಯವಾಗಲಿ ನಮ್ಮವರು ಎಂದು ಹೆಮ್ಮೆ  ಪಟ್ಟುಕೊಂಡಿಲ್ಲ. ಆತನನ್ನು ಬೆಂಬಲಿಸುವ ಒಂಟಿ ಹೇಳಿಕೆಗಳು ಇರಬಹುದು. ವ್ಯಕ್ತಿಗಳೂ ಇರಬಹುದು. ಆದರೆ ಒಂದು  ಸಮುದಾಯವಾಗಿ ಗೋಡ್ಸೆ ಈಗಲೂ ಹೊಸ್ತಿಲ ಹೊರಗಡೆಯೇ ಇದ್ದಾನೆ. ವ್ಯಕ್ತಿಗಳ ತಪ್ಪುಗಳನ್ನು ಸಮುದಾಯದ ಮೇಲೆ  ಹೊರಿಸಬಾರದು ಎಂಬ ಆಗ್ರಹಕ್ಕೆ ಬಲ ಬರುವುದೂ ಇಂಥ ವಿವೇಕಪೂರ್ಣ ನಡವಳಿಕೆಗಳಿಂದಲೇ.

ಆದರೆ, ಪ್ರತಿದಿನ ಮುಸ್ಲಿಮರನ್ನು, ಅವರ ಗುರುತುಗಳನ್ನು ಜರೆಯುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಮತ್ತು ಮುಸ್ಲಿಮ್ ದ್ವೇಷದ  ಮಾತುಗಳಿಂದಲೇ ಹೊಟ್ಟೆ ತುಂಬಿಸಿಕೊಳ್ಳುವಂತೆ  ಆಡುತ್ತಿರುವ ಬಿಜೆಪಿ ಪಕ್ಷದ ನಾಯಕರು ಕುಮಾರಸ್ವಾಮಿ ಹೇಳಿಕೆಯ ವಿರುದ್ಧ ಕುದಿಗೊಳ್ಳುವುದೆಂದರೆ, ಅದು ಅಪ್ರಾಮಾಣಿಕತೆ ಮತ್ತು ಅನೈತಿಕ ನಡವಳಿಕೆ. ಇದು ಪ್ರಶ್ನಾರ್ಹ. ಒಂದು ಸಮುದಾಯಕ್ಕೆ ನಿರಂತರ  ಗಾಯವನ್ನು ಮಾಡುತ್ತಲೇ ಇನ್ನೊಂದು ಸಮುದಾಯದ ಗಾಯದ ಬಗ್ಗೆ ಕರುಬುವುದು ದ್ವಂದ್ವತನ. ಆಷಾಢಭೂತಿ ನಡವಳಿಕೆ.  ಅದರಾಚೆಗೆ,

ಬ್ರಾಹ್ಮಣದ ಸಮುದಾಯದ ಪ್ರತಿಭಟನೆಗೆ ಖಂಡಿತ ಮುಸ್ಲಿಮ್ ಸಮುದಾಯದ ಬೆಂಬಲವಿದೆ. ಅವಮಾನದಿಂದಾಗುವ ಗಾಯದ ತೀವ್ರತೆ  ಮುಸ್ಲಿಮ್ ಸಮುದಾಯಕ್ಕೆ ಚೆನ್ನಾಗಿ ಗೊತ್ತು.

No comments:

Post a Comment