ಧರ್ಮ
ಇವೆರಡರಲ್ಲಿ ನಿಮ್ಮ ಮೊದಲ ಆದ್ಯತೆ ಯಾವುದಕ್ಕೆ ಎಂಬ ಪ್ರಶ್ನೆಯನ್ನು ಮುಸ್ಲಿಮರ ಕಡೆಗೆ ಎಸೆದು ಕೆಲವರು ಸುಖ ಪಡುವುದಿದೆ. ಅಲ್ಲದೇ, ಈ ಪ್ರಶ್ನೆಗೆ ಲಭ್ಯವಾಗುವ ಉತ್ತರದ ಆಧಾರದಲ್ಲಿ ಓರ್ವರ ದೇಶಪ್ರೇಮವನ್ನು ಅವರು ತೀರ್ಮಾನಿಸು ವುದೂ ಇದೆ. ದೇಶ ಮೊದಲು ಎಂದವ ದೇಶಪ್ರೇಮಿ ಮತ್ತು ಧರ್ಮ ಮೊದಲು ಎಂದವ ದೇಶದ್ರೋಹಿ ಎಂದು ಷರಾ ಬರೆಯುವುದಕ್ಕೆ ಈ ಪ್ರಶ್ನೆಯನ್ನು ಬಳಸಿಕೊಳ್ಳುವುದೂ ಇದೆ.
ಒಂದು ಅಂಕಿ-ಅಂಶ ಕೊಡುತ್ತೇನೆ.
2021ರಲ್ಲಿ ಒಂದು ಲಕ್ಷದ 63 ಸಾವಿರ ಮಂದಿ ಭಾರತೀಯರು ತಮ್ಮ ಭಾರತೀಯ ಪೌರತ್ವವನ್ನು ತೊರೆದು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. ಇವರಲ್ಲಿ 78 ಸಾವಿರ ಮಂದಿ ಅಮೇರಿಕದ ಪೌರತ್ವವನ್ನು ಸ್ವೀಕರಿಸಿದ್ದಾರೆ. 2020ರಲ್ಲಿ ಒಟ್ಟು 85,256 ಮಂದಿ ಭಾರತೀಯರು ಭಾರತೀಯ ಪೌರತ್ವವನ್ನು ತೊರೆದು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. ಹಾಗೆಯೇ, 2019ರಲ್ಲಿ 1 ಲಕ್ಷದ 44 ಸಾವಿರ ಮಂದಿ ಭಾರತೀಯರು ಭಾರತೀಯ ಪೌರತ್ವವನ್ನು ತೊರೆದಿದ್ದಾರೆ ಮತ್ತು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. 2019ರಿಂದ 21ರ ನಡುವೆ ಒಟ್ಟು 3 ಲಕ್ಷದ 90 ಸಾವಿರ ಮಂದಿ ಈ ದೇಶದ ಪೌರತ್ವವನ್ನು ತೊರೆದು ವಿದೇಶಿ ಪೌರತ್ವವನ್ನು ಸ್ವೀಕರಿಸಿದ್ದಾರೆ. ಇವರಲ್ಲಿ 7046 ಮಂದಿ ಸಿಂಗಾಪುರ, 3,754 ಮಂದಿ ಸ್ವೀಡನ್, 170 ಮಂದಿ ಬಹ್ರೈನ್, 21 ಮಂದಿ ಇರಾನ್, 1400 ಮಂದಿ ಚೀನಾ, 48 ಮಂದಿ ಪಾಕಿಸ್ತಾನದ ಪೌರತ್ವವನ್ನು 2021ರಲ್ಲಿ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈಯವರು 2022ರಲ್ಲಿ ಪಾರ್ಲಿಮೆಂಟ್‌ಗೆ ಮಾಹಿತಿಯನ್ನು ನೀಡಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿದವರು ಬಿಎಸ್‌ಪಿ ಸಂಸದ ಹಾಜಿ ಫಝ್ಲರ‍್ರಹ್ಮಾನ್.
ನೆನಪಿರಲಿ
ಇವರು ಭಾರತೀಯ ನಾಗರಿಕತ್ವವನ್ನು ತೊರೆದಿದ್ದಾರೆಯೇ ಹೊರತು ಧರ್ಮವನ್ನಲ್ಲ. ಒಂದುವೇಳೆ, ದೇಶವೇ ಮೊದಲು ಮತ್ತು ಧರ್ಮ ಅನಂತರ ಎಂದು ವಾದಿಸುವುದಾದರೆ ಮತ್ತು ದೇಶ ಪ್ರೇಮವನ್ನು ನಿರ್ಧರಿಸುವ ಮಾನದಂಡ ಇದುವೇ ಆಗಿದ್ದರೆ 2019ರಿಂದ 21ರ ನಡುವೆ ದೇಶದ ಪೌರತ್ವವನ್ನು ತೊರೆದ ಮತ್ತು ಧರ್ಮವನ್ನು ತೊರೆಯದ 3 ಲಕ್ಷದ 90 ಸಾವಿರ ಮಂದಿಯನ್ನು ದೇಶದ್ರೋಹಿಗಳು ಎಂದು ಕರೆಯಬೇಕಾಗುತ್ತದೆ. ಮಾತ್ರವಲ್ಲ,
ಹೀಗೆ ದೇಶದ ಪೌರತ್ವವನ್ನು ತೊರೆದವರಲ್ಲಿ 99 ಶೇಕಡಾ ಮಂದಿ ಕೂಡಾ ಅರಬ್ ರಾಷ್ಟ್ರಗಳ ಪೌರತ್ವವನ್ನು ಸ್ವೀಕರಿಸಿಲ್ಲ ಎಂಬುದೂ ಗಮನಾರ್ಹ.
ಈ ದೇಶದ ಪೌರತ್ವವನ್ನು ತೊರೆದವರು ಅಮೇರಿಕ, ಕೆನಡ, ಬ್ರಿಟನ್, ಸಿಂಗಾಪುರ, ಚೀನಾ, ಸ್ವೀಡನ್, ಜಪಾನ್ ಇತ್ಯಾದಿ ದೇಶಗಳ ಪೌರತ್ವವನ್ನು ಸ್ವೀಕರಿಸಿದ್ದಾರೆ. ಆದರೆ, ಅವರಾರೂ ತಮ್ಮ ಧರ್ಮವನ್ನು ತೊರೆದಿಲ್ಲ ಮತ್ತು ಭಾರತದಲ್ಲಿರುವ ತಮ್ಮ ಕುಟುಂಬಿಕರೊಂದಿಗಿನ ಸಂಬಂಧವನ್ನು ಕಡಿದುಕೊಂಡೂ ಇಲ್ಲ. ಹಬ್ಬ-ಹರಿದಿನಗಳಲ್ಲಿ ಅವರು ಕುಟುಂಬ ಸಮೇತ ಭಾರತಕ್ಕೆ ಬಂದು ಇಷ್ಟ ದೇವರ ಪೂಜೆ-ಪುನಸ್ಕಾರ ಮಾಡಿ ಸಂಭ್ರಮಿಸುತ್ತಿರಬಹುದು. ತಮ್ಮ ಇಷ್ಟದ ಮಂದಿರ-ಬಸದಿ, ಚರ್ಚ್, ಮಸೀದಿಗಳಿಗೆ ಭೇಟಿ ನೀಡಿ ಮನ ತಣಿಸಿಕೊಳ್ಳುತ್ತಿರಬಹುದು. ಭಾರತದಲ್ಲಿರುವ ಕುಟುಂಬಿಕರಿಗೆ ಕಾಲಕಾಲಕ್ಕೆ ಹಣ ಕಳುಹಿಸುತ್ತಿರಬಹುದು. ತಂದೆ-ತಾಯಿ ಭಾರತದಲ್ಲಿದ್ದು ಭಾರತೀಯ ನಾಗರಿಕರಾಗಿ ಜೀವಿಸುತ್ತಿರುವಾಗ ಮಗ ಅಥವಾ ಮಗಳು ಅಮೇರಿಕ ದಲ್ಲಿದ್ದು, ಅಮೇರಿಕನ್ ಪೌರರಾಗಿ ಬದುಕುತ್ತಿರಬಹುದು.
ಹಾಗಂತ,
ಅಮೇರಿಕದಲ್ಲಿರುವ ಮಗ ಅಥವಾ ಮಗಳು ಭಾರತೀಯ ಪೌರತ್ವವನ್ನು ತೊರೆದು ಅಮೇರಿಕನ್ ಪೌರತ್ವವನ್ನು ಸ್ವೀಕರಿಸುವಾಗ ಹಿಂದೂ ಧರ್ಮವನ್ನು ತೊರೆದು ಅಮೇರಿಕದ ಕ್ರೈಸ್ತ ಧರ್ಮವನ್ನು ಸ್ವೀಕರಿಸುವುದಿಲ್ಲ. ಬಹರೇನ್, ಯುಎಇ, ಸೌದಿ, ಮಂಗೋಲಿಯಾಕ್ಕೆ ಸಂಬಂಧಿಸಿಯೂ ಇದೇ ಮಾತು ಅನ್ವಯಿಸುತ್ತದೆ. ಇವರೆಲ್ಲ ದೇಶವನ್ನು ಬದಲಾಯಿಸುತ್ತಾರೆಯೇ ಹೊರತು ಧರ್ಮವನ್ನಲ್ಲ. ಯಾಕೆಂದರೆ,
ದೇಶ ಮತ್ತು ಧರ್ಮ ಬೇರೆ ಬೇರೆ.
ದೇಶಕ್ಕೆ ಗಡಿಯೆಂಬ ಬೇಲಿಯಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗಿನ ಭೂಭೂಗವೇ ಭಾರತ. ಈ ಗಡಿಯ ಹೊರಗಿನ ಮಂದಿ ಭಾರತೀಯರಲ್ಲ. ಪಾಕಿಸ್ತಾನಕ್ಕೂ, ಚೀನಾಕ್ಕೂ, ಅಮೇರಿಕಕ್ಕೂ ಮತ್ತು ಸೌದಿ ಅರೇಬಿಯಾಕ್ಕೂ ಇಂಥದ್ದೇ ಗಡಿಗಳಿವೆ ಮತ್ತು ಇಂಥದ್ದೇ ಅಸ್ಮಿತೆಗಳಿವೆ. ಇನ್ನು,
ಭಾರತದ ಒಳಗೂ ಹಲವು ಅಸ್ಮಿತೆಗಳಿವೆ.
ಕನ್ನಡಿಗ, ತಮಿಳಿಗ, ಗುಜರಾತಿ, ಮಲಯಾಳಿ, ಬಂಗಾಳಿ, ಅಸ್ಸಾಮಿ... ಹೀಗೆ ಭಾರತೀಯರಿಗೂ ವಿವಿಧ ಗುರುತುಗಳಿವೆ. ಅಲ್ಲದೇ, ಈ ರಾಜ್ಯವಾರು ಗುರುತುಗಳಲ್ಲದೇ, ಜಿಲ್ಲಾವಾರು ಗುರುತುಗಳು ಮತ್ತು ತಾಲೂಕುವಾರು ಗುರುತುಗಳಿಂದಲೂ ವ್ಯಕ್ತಿ ಗುರುತಿಸಲ್ಪಡುತ್ತಾನೆ/ಳೆ. ಕೋಲಾರದವ, ಬೆಳಗಾವಿ, ಹುಬ್ಬಳ್ಳಿಯವ ಅಥವಾ ಬಂಟ್ವಾಳದವ, ತೀರ್ಥಹಳ್ಳಿ, ಕೊಳ್ಳೆಗಾಲದವ ಎಂದೆಲ್ಲಾ ಗುರುತು ಮಾಡಲಾಗುತ್ತದೆ. ಆದರೆ ಧರ್ಮಕ್ಕೆ ಸಂಬಂಧಿಸಿ ಈ ಒಳಗುರುತುಗಳಿರುವುದಿಲ್ಲ. ಹಿಂದೂ-ಮುಸ್ಲಿಮ್, ಕ್ರೈಸ್ತ, ಬೌದ್ಧ, ಸಿಕ್ಖ್ ಎಂಬ ಗುರುತಿನಿಂದ ಗುರುತಿಸಲಾಗುತ್ತದೆಯೇ ಹೊರತು ದಕ್ಷಿಣ ಕನ್ನಡದ ಮುಸ್ಲಿಮ್, ಬೆಂಗಳೂರಿನ ಮುಸ್ಲಿಮ್, ದೆಹಲಿಯ ಮುಸ್ಲಿಮ್ ಎಂದೆಲ್ಲಾ ವಿಭಜಿಸಿ ಹೇಳುವ ಕ್ರಮವಿಲ್ಲ. ಯಾಕೆಂದರೆ,
ಧರ್ಮವು ದೇಶ, ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಇತ್ಯಾದಿಗಳನ್ನು ಮೀರಿದ ಯುನಿವರ್ಸಲ್ ಗುರುತು. ಅದು ಸಾರ್ವತ್ರಿಕ. ಸರ್ವವ್ಯಾಪಿ.
ಹಿಂದೂ ಧರ್ಮದನುಸಾರ ಓರ್ವ ಹಿಂದೂ ಭಾರತದಲ್ಲೂ ಬದುಕಬಲ್ಲ, ಅಮೇರಿಕ, ಸ್ವೀಡನ್, ಆಫ್ರಿಕಾದಲ್ಲೂ ಬದುಕಬಲ್ಲ. ಓರ್ವ ಮುಸ್ಲಿಮ್ ಅಥವಾ ಸಿಕ್ಖ್ ಗೆ ಸಂಬಂಧಿಸಿಯೂ ಇವೇ ಮಾತು ಅನ್ವಯವಾಗುತ್ತದೆ. ಯಾಕೆಂದರೆ, ಧರ್ಮ ಸ್ಥಾವರ ಅಲ್ಲ, ಜಂಗಮ. ಅದಕ್ಕೆ ಗಡಿ, ಬೇಲಿಗಳಿಲ್ಲ. ಭಾಷೆಯ ಹಂಗಿಲ್ಲ. ಅದು ಜಪಾನ್‌ಗೂ ಹೊಂದಿಕೊಳ್ಳುತ್ತದೆ. ಅಮೇರಿಕಕ್ಕೂ ಹೊಂದಿಕೊಳ್ಳುತ್ತದೆ. ಆದರೆ ಭಾರತೀಯನೋರ್ವ ಕಿನ್ಯಾದ ಭಾಷೆಗೆ ತಕ್ಷಣ ಹೊಂದಿಕೊಳ್ಳಲಾರ. ಗಲ್ಫ್ ರಾಷ್ಟ್ರಕ್ಕೆ ತೆರಳಿದ ಭಾರತೀಯನೋರ್ವ ಅಲ್ಲಿನ ಅರಬಿ ಭಾಷೆಗೆ ತಳಮಳಗೊಳ್ಳಬಲ್ಲ. ಹಾಗಂತ, ಇದನ್ನು ಭಾರತೀಯರಿಗೆ ಸಂಬಂಧಿಸಿ ಮಾತ್ರ ಹೇಳಬೇಕಿಲ್ಲ. ಚೀನಿಯನೋರ್ವ ಅಥವಾ ಜಿಂಬಾಬ್ವೆಯ ವ್ಯಕ್ತಿಯೋರ್ವ ಭಾರತಕ್ಕೆ ಬಂದರೂ ಇದೇ ಗಲಿಬಿಲಿ ಮತ್ತು ತಳಮಳವನ್ನು ಹೊಂದಬಲ್ಲ.
ಆದರೆ,
ಧರ್ಮವನ್ನು ಆಚರಿಸುವ ವಿಷಯಕ್ಕೆ ಸಂಬಂಧಿಸಿ ಈ ಯಾವ ಗೊಂದಲ ಮತ್ತು ತಳಮಳ ಇವರಾರಿಗೂ ಆಗುವುದಕ್ಕೆ ಸಾಧ್ಯವೇ ಇಲ್ಲ. ಮುಸ್ಲಿಮನೋರ್ವ ಅಮೇರಿಕದ ಮಣ್ಣಿಗೆ ಇಳಿದ ಬಳಿಕ ಯಾವ ಗೊಂದಲವೂ ಇಲ್ಲದೆ ತನ್ನ ಕೋಣೆ ಸೇರಿ ನಮಾಝï ಮಾಡಬಲ್ಲ ಅಥವಾ ಮಸೀದಿ ಇದ್ದರೆ ಅಲ್ಲೂ ನಮಾಝï ನೆರವೇರಿಸಬಲ್ಲ. ಅಲ್ಲಿ ಭಾಷೆಯ ಸಮಸ್ಯೆ ಉದ್ಭವಿಸುವುದೇ ಇಲ್ಲ. ಉಪವಾಸ ಆಚರಿಸುವುದಕ್ಕೂ ಯಾವ ತಡೆಯೂ ಎದುರಾಗುವುದಿಲ್ಲ. ಹಿಂದೂಗೆ ಸಂಬಂಧಿಸಿಯೂ ಇವೇ ಮಾತನ್ನು ಹೇಳಬಹುದು. ಕೋಣೆಯೊಳಗೆ ವಿಗ್ರಹವನ್ನಿಟ್ಟು ಪೂಜೆ ಮಾಡುವುದಕ್ಕೋ ಜಪ-ತಪ ನಿರ್ವಹಿಸುವುದಕ್ಕೋ ಯಾವ ಅಡ್ಡಿಯೂ ಎದುರಾಗುವುದಿಲ್ಲ. ನಿಜವಾಗಿ,
ಧರ್ಮದ ಈ ಯುನಿವರ್ಸಲ್ ಗುಣವನ್ನು ದೇಶ ಎಂಬ ಸೀಮಿತ ಗಡಿಗುರುತಿನೊಂದಿಗೆ ಹೋಲಿಕೆ ಮಾಡುವುದೇ ತಪ್ಪು.
ದೇಶ ಮತ್ತು ಧರ್ಮದ ಬಗ್ಗೆ ಚರ್ಚಿಸುವಾಗ ಈ ಸ್ಪಷ್ಟತೆ ಇಲ್ಲದೇ ಹೋದರೆ ಆ ಚರ್ಚೆ ದೇಶಪ್ರೇಮಿ ಮತ್ತು ದೇಶ ದ್ರೋಹಿಗಳನ್ನು ತೀರ್ಮಾನಿಸುವ ನ್ಯಾಯಾಲಯವಾಗಿ ಪರಿವರ್ತನೆಯಾಗುತ್ತದೆ. ಸದ್ಯದ ಮಟ್ಟಿಗೆ ದೇಶದಲ್ಲಿ ಇಂಥದ್ದೊಂದು ಸ್ಥಿತಿಯಿದೆ.
ದೇಶ ಮತ್ತು ಧರ್ಮದ ಬಗ್ಗೆ ಚರ್ಚಿಸುವಾಗ ಈ ಸ್ಪಷ್ಟತೆ ಇಲ್ಲದೇ ಹೋದರೆ ಆ ಚರ್ಚೆ ದೇಶಪ್ರೇಮಿ ಮತ್ತು ದೇಶ ದ್ರೋಹಿಗಳನ್ನು ತೀರ್ಮಾನಿಸುವ ನ್ಯಾಯಾಲಯವಾಗಿ ಪರಿವರ್ತನೆಯಾಗುತ್ತದೆ. ಸದ್ಯದ ಮಟ್ಟಿಗೆ ದೇಶದಲ್ಲಿ ಇಂಥದ್ದೊಂದು ಸ್ಥಿತಿಯಿದೆ.
ಪ್ರವಾದಿ ಮುಹಮ್ಮದ್(ಸ) ಮುಖ್ಯವಾಗುವುದೇ ಇಲ್ಲಿ.
ಮಕ್ಕಾದ ಜನರ ದೌರ್ಜನ್ಯ, ಹಿಂಸೆ, ಕಿರುಕುಳಗಳನ್ನು ತಾಳಲಾರದೇ ಹುಟ್ಟಿ ಬೆಳೆದು 53 ವರ್ಷಗಳ ವರೆಗೆ ಬದುಕಿದ ಮಣ್ಣನ್ನು ಬಿಟ್ಟು ಅವರು ಮದೀನಾಕ್ಕೆ ವಲಸೆ ಹೋಗಲು ನಿರ್ಬಂಧಿತರಾಗುತ್ತಾರೆ. ಇಂಥ ಅನಿವಾರ್ಯ ಸ್ಥಿತಿಯಲ್ಲೂ ಅವರು ಮಕ್ಕಾವನ್ನು ಉದ್ದೇಶಿಸಿ ಹೇಳಿದ ಮಾತನ್ನು ತಿರ್ಮಿದಿ ಎಂಬ ಗ್ರಂಥದ ಕ್ರಮ ಸಂಖ್ಯೆ 3926ರಲ್ಲಿ ಹೀಗೆ ಉಲ್ಲೇಖಿಸಲಾಗಿದೆ-
‘ನೀನು ನನಗೆಷ್ಟು ಆಪ್ತ ಮತ್ತು ಪ್ರೀತಿಯ ನೆಲ ಎಂದರೆ, ನನ್ನವರು ನನ್ನನ್ನು ಇಲ್ಲಿಂದ ಹೊರಹಾಕದಿರುತ್ತಿದ್ದರೆ ನಾನು
ನಿನ್ನನ್ನು ಬಿಟ್ಟು ಇನ್ನೆಲ್ಲೂ ಹೋಗುತ್ತಿರಲಿಲ್ಲ..’ ಇದೇವೇಳೆ,
‘ನೀನು ನನಗೆಷ್ಟು ಆಪ್ತ ಮತ್ತು ಪ್ರೀತಿಯ ನೆಲ ಎಂದರೆ, ನನ್ನವರು ನನ್ನನ್ನು ಇಲ್ಲಿಂದ ಹೊರಹಾಕದಿರುತ್ತಿದ್ದರೆ ನಾನು
ನಿನ್ನನ್ನು ಬಿಟ್ಟು ಇನ್ನೆಲ್ಲೂ ಹೋಗುತ್ತಿರಲಿಲ್ಲ..’ ಇದೇವೇಳೆ,
ಇರಾನ್‌ನ ಸಲ್ಮಾನ್, ರೋಮ್‌ನ ಬಿಳಿಯ ವ್ಯಕ್ತಿ ಶುಹೈಬ್ ಮತ್ತು ಇತಿಯೋಪಿಯಾದ ಕಪ್ಪು ಮೈಬಣ್ಣದ ಬಿಲಾಲ್‌ರ ಜೊತೆ ಪ್ರವಾದಿ ಸಭೆ ನಡೆಸುತ್ತಿರುವಾಗ ಅಲ್ಲಿಗೆ ಗಿಯಾಸ್ ಎಂಬ ಅರಬ್ ವ್ಯಕ್ತಿ ಬಂದರು. ಇವರನ್ನು ನೋಡಿ, ‘ಓ ವಿದೇಶಿಗರೇ’ ಎಂದು ಕರೆದರು. ಆದರೆ ಪ್ರವಾದಿ ಆ ಗಡಿಪ್ರೇರಿತ ಮತ್ತು ಜನಾಂಗೀಯ ಪ್ರೇರಿತ ಸಂಬೋಧನೆಯನ್ನು ವಿರೋಧಿಸಿದರು. ಮನುಷ್ಯರನ್ನು ದೇಶ ಮತ್ತು ಜನಾಂಗದ ಆಧಾರದಲ್ಲಿ ವಿಭಜಿಸುವುದನ್ನು ನಿರುತ್ತೇಜಿಸಿದರು. ‘ನಾವೆಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳು...’ ಎಂದು ತಿದ್ದಿದರು. ಅರೇಬಿಯನ್, ಇತಿಯೋಪಿಯನ್ ಅಥವಾ ಪರ್ಷಿಯನ್ ಎಂದು ಮಾನವರನ್ನು ವಿಭಜಿಸಿ ನೋಡುವುದು ಮಾನವ ಸಹಜ ಸಹೋದರ ಸಂಬಂಧಕ್ಕೆ ಧಕ್ಕೆ ತರಬಲ್ಲುದು ಎಂಬ ದೂರದೃಷ್ಟಿಯ ನಿಲುವು ಅವರದಾಗಿತ್ತು.
ಪವಿತ್ರ ಕುರ್‌ಆನ್ ಕೂಡ ಇದನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಿದೆ-
ಸೃಷ್ಟಿಕರ್ತನು ನಿಮ್ಮನ್ನು ಒಬ್ಬ ಪುರುಷ ಮತ್ತು ಸ್ತ್ರೀಯಿಂದ ಉಂಟು ಮಾಡಿದ್ದಾನೆ. ಬಳಿಕ ನೀವು ಪರಸ್ಪರ ಪರಿಚಯಪಟ್ಟುಕೊಳ್ಳಲಿಕ್ಕಾಗಿ ನಿಮ್ಮಲ್ಲಿ ಜನಾಂಗಗಳನ್ನೂ ಬುಡಕಟ್ಟುಗಳನ್ನೂ ಮಾಡಿದ್ದಾನೆ. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಸೃಷ್ಟಿಕರ್ತನ ಬಳಿ ಅತೀ ಹೆಚ್ಚು ಗೌರವಕ್ಕೆ ಪಾತ್ರನು.
(ಪವಿತ್ರ ಕುರ್‌ಆನ್, ಅಧ್ಯಾಯ 49, ವಚನ 13)
(ಪವಿತ್ರ ಕುರ್‌ಆನ್, ಅಧ್ಯಾಯ 49, ವಚನ 13)
ಹಾಗೆಯೇ,
ಪ್ರವಾದಿ ಹಜ್ಜ್ ಕರ್ಮವನ್ನು ನಿರ್ವಹಿಸಿ ಮಾಡಿದ ಐತಿ ಹಾಸಿಕ ಭಾಷಣ ಕೂಡ ಗಮನಾರ್ಹ-
‘ಅರಬನಿಗೆ ಅರಬೇತರನಿಗಿಂತ, ಬಿಳಿಯನಿಗೆ ಕರಿಯನಿಗಿಂತ, ಶ್ರೀಮಂತರಿಗೆ ಬಡವರಿಗಿಂತ ಯಾವ ಮೇಲ್ಮೆಯಾಗಲಿ ಹೆಚ್ಚು ಗಾರಿಕೆಯಾಗಲಿ ಇಲ್ಲ. ನಿಮ್ಮಲ್ಲಿ ಯಾರು ಒಳಿತಿನಲ್ಲಿ ಮುಂದಿರುತ್ತಾರೋ ಅವರೇ ಉತ್ತಮರು.’
ಅಂದಹಾಗೆ,
ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದರು ದೇಶ ಮತ್ತು ಧರ್ಮದ ಪರಿಕಲ್ಪನೆಯನ್ನು ಇಲ್ಲಿ ನಿಕಷಕ್ಕೆ ಒಡ್ಡಿದ್ದಾರೆ. ದೇಶ ಎಂಬುದು ಭಾವನಾತ್ಮಕ ಸಂಗತಿ. ತಾನಿರುವ ದೇಶವನ್ನು ಪ್ರೀತಿಸುವುದು ಮತ್ತು ಅದರ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸುವುದು ಪ್ರತಿಯೊಬ್ಬನ ಕರ್ತವ್ಯ. ಪ್ರವಾದಿ ಮಕ್ಕಾವನ್ನು ತೊರೆದುದು ಅತ್ಯಂತ ಅನಿವಾರ್ಯ ಸ್ಥಿತಿ ಎದುರಾದಾಗ. ಇನ್ನು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ಸೃಷ್ಟಿಯಾದಾಗ ಭಾವುಕ ಹೃದಯದೊಂದಿಗೆ ಅವರು ಮಕ್ಕಾಕ್ಕೆ ವಿದಾಯ ಕೋರಿದರು. ಹಾಗೇ ವಿದಾಯ ಕೋರುವಾಗಲೂ, ಮಕ್ಕಾದ ಮಣ್ಣಿನೊಂದಿಗೆ ತನಗಿರುವ ಭಾವನಾತ್ಮಕ ನಂಟನ್ನು ನೆನಪಿಸಿ ಕೊಂಡರು. ಯಾಕೆಂದರೆ,
ಹುಟ್ಟಿದಂದಿನಿಂದ ಮಕ್ಕಾವನ್ನು ತೊರೆಯಬೇಕಾಗಿ ಬಂದ 53ನೇ ವರ್ಷದ ವರೆಗೆ ಮಕ್ಕಾದ ಸರ್ವತೋಮುಖ ಅಭಿವೃದ್ಧಿ ಮತ್ತು ಶಾಂತಿಗಾಗಿ ಪ್ರವಾದಿ ಶ್ರಮಿಸಿದ್ದರು. ಹಜರುಲ್ ಅಸ್ವದ್ ಎಂಬ ಕಪ್ಪು ಶಿಲೆಯ ಹೆಸರಲ್ಲಿ ಸಂಘರ್ಷವೊಂದು ಹುಟ್ಟಿ ಕೊಳ್ಳುವ ಸಾಧ್ಯತೆ ಎದುರಾದಾಗ, ಅದನ್ನು ಚಾಣಾಕ್ಷತನ ದಿಂದ ತಪ್ಪಿಸಿದ್ದು ಇದೇ ಪ್ರವಾದಿ. ಅವರನ್ನು ಕಲ್ಲೆಸೆದು ರಕ್ತ ಹರಿಯುವಂತೆ ಗಾಯಗೊಳಿಸಿದಾಗಲೂ ತನ್ನ ಜನರ ಮೇಲೆ ಶಾಪ ಪ್ರಾರ್ಥನೆ ಮಾಡದೆ ಇದ್ದುದು ಕೂಡಾ ಇದೇ ಪ್ರವಾದಿ. ಪ್ರವಾದಿತ್ವದ 40ರಿಂದ 53 ವರ್ಷಗಳ ಅವಧಿಯಲ್ಲಿ ತೀವ್ರ ಹಿಂಸೆಯನ್ನು ಎದುರಿಸಿದ ಹೊರತಾಗಿಯೂ ಮಕ್ಕಾದ ಜನರ ವಿರುದ್ಧ ಯುದ್ಧ ಘೋಷಣೆ ಮಾಡದೇ ಇದ್ದುದೂ ಇದೇ ಪ್ರವಾದಿ. ಮಾತ್ರವಲ್ಲ, ತೀರ್ಥಯಾತ್ರೆಯ ಉದ್ದೇಶವನ್ನಿಟ್ಟು ಮದೀನಾದಿಂದ ಮಕ್ಕಾಕ್ಕೆ ಹೊರಟವರನ್ನು ಅರ್ಧದಾರಿಯಲ್ಲೇ ತಡೆದ ಮಕ್ಕಾದ ಜನರೊಂದಿಗೆ ಯುದ್ಧ ಘೋಷಿಸದೇ ಮರಳಿ ಮದೀನಾ ಸೇರಿಕೊಂಡದ್ದೂ ಇದೇ ಪ್ರವಾದಿ.
ಒಂದು ರೀತಿಯಲ್ಲಿ,
ತನ್ನ ತಾಯ್ನಾಡು ಸಂಘರ್ಷಭರಿತವಾಗುವುದನ್ನು ಮತ್ತು ತನ್ನ ತಾಯ್ನಾಡಿನ ಜನರು ಸಂಕಷ್ಟಕ್ಕೆ ಒಳಗಾಗುವುದನ್ನು ಪ್ರವಾದಿ ಎಂದೂ ಬಯಸಿರಲಿಲ್ಲ. ಇದಕ್ಕೆ ತಾನು ಹುಟ್ಟಿದೂರು ಎಂಬ ಪ್ರೀತಿಯೇ ಕಾರಣವಿರಬೇಕು. ತನ್ನ ಜನರು, ತನ್ನ ದೇಶ, ತಾನು ಹುಟ್ಟಿ, ಬೆಳೆದ, ಆಡಿದ ಮಣ್ಣು ಎಂಬ ಭಾವನಾತ್ಮಕ ನಂಟೇ ಅವರನ್ನು ಈ ಎಲ್ಲ ಅವಮಾನಗಳನ್ನು ಸಹಿಸಿಕೊಳ್ಳುವುದಕ್ಕೆ ಪ್ರೇರಣೆ ನೀಡಿರಬೇಕು. ತನ್ನ ತಾಯ್ನಾಡು ಶಾಂತಿಯುತವಾಗಿರಬೇಕು ಎಂಬ ಮಹದಾಸೆ ಅವರ ಈ ಎಲ್ಲ ನಿಲುವುಗಳಲ್ಲಿ ಎದ್ದು ಕಾಣುತ್ತದೆ.
ಇದೇವೇಳೆ,
ದೇಶಪ್ರೇಮವೆಂಬುದು ಜನಾಂಗೀಯವಾದವಾಗಿ ಮತ್ತು ಇತರರನ್ನು ದ್ವೇಷಿಸುವ ಚಿಂತನೆಯಾಗಿ ಬದಲಾಗಬಾರದೆಂದೂ ಅವರು ಬಯಸಿದ್ದರು. ಸಲ್ಮಾನ್, ಶುಹೈಬ್ ಮತ್ತು ಬಿಲಾಲ್‌ರನ್ನು ಹೊರಗಿನವರು ಎಂದು ತನ್ನದೇ ಅನುಯಾಯಿ ಗಿಯಾಸ್ ವಿಭಜಿಸಿದಾಗ ಪ್ರವಾದಿ ಅದನ್ನು ವಿರೋಧಿಸಿದ್ದು ಇದೇ ಕಾರಣದಿಂದ. ಅಂಥ ವಿಭಜನೆ ಅಂತಿಮವಾಗಿ ಜನಾಂಗೀಯ ವಿಭಜನೆಯೆಡೆಗೆ ಕೊಂಡೊಯ್ಯುತ್ತದೆ. ಹಿಟ್ಲರ್ ಇದನ್ನೇ ಮಾಡಿದ. ಆರ್ಯರು ಮತ್ತು ಆರ್ಯೇತರರು ಎಂದು ತನ್ನದೇ ಜನರನ್ನು ವಿಭಜಿಸಿದ. ಆರ್ಯರು ಶ್ರೇಷ್ಠರು ಎಂದ. ಚೆಕೊಸ್ಲಾವಿಯಾ, ರುವಾಂಡ ಮತ್ತು ಮ್ಯಾನ್ಮಾರ್‌ನಲ್ಲೂ ಇಂಥದ್ದೇ ವಿಭಜನೆ ನಡೆದಿದೆ. ಅಂತಿಮವಾಗಿ ಬಹುದೊಡ್ಡ ಜನಾಂಗೀಯ ಹತ್ಯಾಕಾಂಡಕ್ಕೆ ಇದು ಮುನ್ನುಡಿ ಬರೆದದ್ದನ್ನೂ ಜಗತ್ತು ಕಂಡಿದೆ. ಭಾರತದಲ್ಲೂ ಇಂಥದ್ದೊಂದು ವಿಭಜನೆಗೆ ಪ್ರಯತ್ನ ನಡೆಸುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಸ್ವದೇಶೀಯರು ಮತ್ತು ವಿದೇಶಿಯರು ಎಂಬ ಗೆರೆಯೊಂದನ್ನು ಎಳೆಯುವುದು ಮತ್ತು ಸ್ವದೇಶಿ ಧರ್ಮ, ಆಹಾರ, ಸಂಸ್ಕೃತಿ, ಆರಾಧನೆ, ಕಲೆ, ಸಾಹಿತ್ಯ ಇತ್ಯಾದಿಗಳನ್ನು ಶ್ರೇಷ್ಠವೆಂದು ಸಾರಿ ವಿದೇಶಿಯರು ಎಂದು ಹಣೆಪಟ್ಟಿ ಹಚ್ಚಲಾದವರ ಧರ್ಮ, ಕಲೆ, ಸಂಸ್ಕೃತಿ, ಆಹಾರ ಕ್ರಮ ಇತ್ಯಾದಿಗಳನ್ನು ಪದೇಪದೇ ಪ್ರಶ್ನಿಸುತ್ತಾ ನಿಂದಿಸುತ್ತಾ ಬರುವುದು ಇದಕ್ಕೆ ಪುರಾವೆ. ಇದು ಅಂತಿಮವಾಗಿ ಜನಾಂಗೀಯ ಸಂಘರ್ಷ ಮತ್ತು ಜನಾಂಗೀಯ ಹತ್ಯಾಕಾಂಡದೆಡೆಗೆ ತಲುಪಿಸುತ್ತದೆ.
ಅಷ್ಟಕ್ಕೂ,
ಮಕ್ಕಾದ ಕಿರುಕುಳ ತಾಳಲಾರದೇ ಮದೀನಾಕ್ಕೆ ತೆರಳಿದ ಪ್ರವಾದಿಯವರು ಅಲ್ಲಿನ ಬಹುಸಂಖ್ಯಾತ ಯಹೂದಿ ಮತ್ತು ಬಹುದೇವಾರಾಧಕ ಸಮುದಾಯದೊಂದಿಗೆ ಬೆರೆತು ಬದುಕಿದ್ದರು. ಅಲ್ಲಿನ ಕೈನುಕಾ, ನಝೀರ್ ಮತ್ತು ಕುರೈಝಾ ಎಂಬ ಪ್ರಬಲ ಯಹೂದಿ ಬುಡಕಟ್ಟುಗಳು ಮತ್ತು ಬಹುದೇವಾರಾಧಕ ಗುಂಪುಗಳೊಂದಿಗೆ ಅವರು ಐತಿಹಾಸಿಕ ಒಡಂಬಡಿಕೆಯೊಂದನ್ನು ಮಾಡಿಕೊಂಡರು. ಇದನ್ನು ಮದೀನಾದ ಮೊದಲು ಸಂವಿಧಾನ ಎಂದು ಕರೆಯಲಾಗುತ್ತದೆ. ಸುಮಾರು 40ರಷ್ಟು ಸೆಕ್ಷನ್‌ಗಳನ್ನು ಹೊಂದಿರುವ ಆ ಸಂವಿಧಾನದ ಪ್ರಮುಖ ಅಂ ಶಗಳು ಹೀಗಿವೆ:
1. ಮದೀನಾದ ಮೇಲೆ ಯಾರಾದರೂ ದಾಳಿ ಮಾಡಿದರೆ, ನಾವೆಲ್ಲ ಒಟ್ಟಾಗಿ ಆ ದಾಳಿಯನ್ನು ಎದುರಿಸುವೆವು.
2. ಎಲ್ಲರೂ ತಂತಮ್ಮ ಧರ್ಮವನ್ನು ಪಾಲಿಸಲು ಸ್ವತಂತ್ರರು.
3. ಯಾವುದೇ ಅಕ್ರಮಿ ಅಥವಾ ಅಪರಾಧಿಯನ್ನು ಅವರ ಧರ್ಮ ನೋಡಿ ರಕ್ಷಿಸುವ ಪ್ರಮೇಯವೇ ಇಲ್ಲ.
4. ಇಲ್ಲಿನ ಎಲ್ಲರೂ ತಮ್ಮ ದೇಶದ ಗಡಿಯನ್ನು ರಕ್ಷಿಸಲು ಬಾಧ್ಯಸ್ಥರು.
5. ಈ ಒಡಂಬಡಿಕೆಯಲ್ಲಿ ಸೇರಿದವರ ಮಟ್ಟಿಗೆ ಮದೀನಾ ನಗರವು ಪವಿತ್ರವೂ ಗೌರವಾರ್ಹವೂ ಆಗಿರುತ್ತದೆ.
6. ಈ ಒಡಂಬಡಿಕೆಯಲ್ಲಿ ಪಾಲುಗೊಂಡ ಯಹೂದಿಯರ ಸಹಿತ ಯಾರ ವಿರುದ್ಧ ಯಾರು ಯುದ್ಧ ಸಾರಿದರೂ ಇವರು ಪರಸ್ಪರ ನೆರವಾಗುವರು. ನಿಜವಾಗಿ,
ಮುಸ್ಲಿಮರಿಗೆ ಇತರ ಧರ್ಮದೊಂದಿಗೆ ಬೆರೆತು ಬದುಕುವುದಕ್ಕೆ ಗೊತ್ತಿಲ್ಲ ಎಂಬ ವಾದದ ಬಣ್ಣವನ್ನು ಈ ಒಡಂಬಡಿಕೆ ಬಯ ಲಿಗೆಳೆಯುತ್ತದೆ. ಯಹೂದಿ ಮತ್ತು ಬಹುದೇವಾರಾಧಕರ ಧರ್ಮೀಯರೊಂದಿಗೆ ಪ್ರವಾದಿ ಮಾಡಿಕೊಂಡ ಒಡಂಬಡಿಕೆ ಇದು. ಈ ಒಡಂಬಡಿಕೆಗೆ ಬದ್ಧವಾಗಿಯೇ ಪ್ರವಾದಿ ಮತ್ತು ಅವರ ಅನುಯಾಯಿಗಳು ಬದುಕಿದ್ದಾರೆ. ಮಾತ್ರವಲ್ಲ, ಅವರು ವಾಸಿಸುವ ಮದೀನಾದ ಗಡಿಯನ್ನು ರಕ್ಷಿಸುವುದಕ್ಕೆ ಬದ್ಧ ಮತ್ತು ಮದೀನಾ ನಗರವು ಗೌರವಾರ್ಹ ಮತ್ತು ಪವಿತ್ರ ಎಂದೂ ಅವರು ಸಾರಿದ್ದಾರೆ.
ಇದರಾಚೆಗೆ,
ಇಸ್ಲಾಮಿನ ದೇಶ ಮತ್ತು ಧರ್ಮದ ಪರಿಕಲ್ಪನೆಯ ಬಗ್ಗೆ ವಿವರಣೆಯ ಅಗತ್ಯವಿಲ್ಲ ಅನಿಸುತ್ತದೆ. ಮುಸ್ಲಿಮರಲ್ಲಿ ದೇಶ ಪ್ರೇಮ ಇರಬೇಕಾದುದಷ್ಟೇ ಅಲ್ಲ, ಆ ದೇಶವನ್ನು ರಕ್ಷಿಸಲೂ ಅವರು ಬದ್ಧರಾಗಿರಬೇಕು ಮತ್ತು ಆ ದೇಶ ಅವರಿಗೆ ಗೌರವಾರ್ಹವೂ ಆಗಿರಬೇಕು. ಅದೇವೇಳೆ, ಈ ದೇಶಪ್ರೇಮವು ಜನಾಂಗೀಯ ವಿಭಜನೆಗೋ ಸ್ವದೇಶಿ-ವಿದೇಶಿ ಎಂಬ ತಾರತಮ್ಯಕ್ಕೋ ಪ್ರೇರಕ ವಾಗಬಾರದು. ಎಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳಾಗಿದ್ದು, ಅವರವರ ಧರ್ಮವನ್ನು ಅವರವರು ಪಾಲಿಸಲು ಸ್ವತಂತ್ರರಾಗಿರಬೇಕು. ಪ್ರವಾದಿ(ಸ) ಮಕ್ಕಾದಲ್ಲಿದ್ದಾಗಲೂ ಮದೀನಾದಲ್ಲಿದ್ದಾಗಲೂ ಧರ್ಮ ಬದಲಾಗಿಲ್ಲ. ಆದರೆ ದೇಶನಿಷ್ಠೆ ಬದಲಾಗಿದೆ. ಜನ್ಮಭೂಮಿಯಾದ ಮಕ್ಕಾವನ್ನು ಅಪಾರವಾಗಿ ಪ್ರೀತಿಸಿದ ಪ್ರವಾದಿಯವರು(ಸ) ಮದೀನಾಕ್ಕೆ ವಾಸ ಬದಲಿಸಲೇಬೇಕಾದ ಅನಿವಾರ್ಯತೆ ಎದುರಾದಾಗ ಮದೀನಾಕ್ಕೆ ನಿಷ್ಠೆಯನ್ನು ತೋರಿದರು. ಅದರ ಗಡಿಯನ್ನು ರಕ್ಷಿಸುವ ಪಣತೊಟ್ಟರು. ಅದನ್ನು ಪವಿತ್ರ ಭೂಮಿ ಎಂದೂ ಪರಿಗಣಿಸಿದರು. ಅದೇವೇಳೆ, ತನ್ನ ಹುಟ್ಟೂರು ಮಕ್ಕಾವನ್ನು ಎಂದೂ ದ್ವೇಷಿಸಲಿಲ್ಲ.
ದೇಶಪ್ರೇಮ ಮತ್ತು ಧರ್ಮಪ್ರೇಮ ಅಂದರೆ ಇಷ್ಟೇ.
No comments:
Post a Comment