‘My children would ask me, why go to court - Recalls Muzaffar Nagar Riots Gang Rape victim of her decade long ordeal- ನೀನೇಕೆ ಕೋರ್ಟಿಗೆ ಹೋಗುತ್ತಿ ಅಮ್ಮ ಎಂದು ನ ನ್ನ ಮಕ್ಕಳು ಕೇಳುತ್ತಾರೆ...: ಹತ್ತು ವರ್ಷಗಳ ದೀರ್ಘ ಕಾನೂನು ಹೋರಾಟವನ್ನು ನೆನಪಿಸಿಕೊಂಡ ಮುಝಫ್ಫರ್ ನಗರ್ ಗ್ಯಾಂಗ್ ರೇಪ್‌ನ ಸಂತ್ರಸ್ತೆ... ಎಂಬ ತಲೆಬರಹದೊಂದಿಗೆ 2023 ಮೇ 18ರ ಔಟ್‌ಲುಕ್ ಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿತ್ತು.
ಅದಕ್ಕೆ ಕಾರಣವೂ ಇತ್ತು
ಹಿಂದೂ ಮತ್ತು ಮುಸ್ಲಿಮ್ ಯುವಕರಿಬ್ಬರ ನಡುವೆ ನಡೆದ ಬೈಕ್ ಅಪಘಾತವೊಂದು 42 ಮುಸ್ಲಿಮ್ ಮತ್ತು 20 ಹಿಂದೂಗಳ ಹತ್ಯೆಗೆ, 93 ಮಂದಿಯ ಗಾಯಕ್ಕೆ ಮತ್ತು 50 ಸಾವಿರಕ್ಕಿಂತಲೂ ಅಧಿಕ ಮಂದಿ ಊರು ತೊರೆದು ಪಲಾಯನ (ಬಹುತೇಕ ಎಲ್ಲರೂ ಮುಸ್ಲಿಮರೇ) ಮಾಡುವುದಕ್ಕೆ ಕಾರಣವಾದ ಬೃಹತ್ ಹಿಂಸಾಚಾರಕ್ಕೆ ಕಾರಣವಾಯಿತು. 2013 ಆಗಸ್ಟ್ ಕೊನೆಯಲ್ಲಿ ಆರಂಭವಾದ ಹಿಂಸಾಚಾರವು ಸೆಪ್ಟೆಂಬರ್ ನಲ್ಲಿ ಕೊನೆಗೊಂಡಿತು. ಹಸ್ತಲಾಘವ ಮಾಡಿ ನಕ್ಕು ಮುಗಿಸಿ ಬಿಡಬಹುದಾಗಿದ್ದ ಅಪಘಾತ ಪ್ರಕರಣವು ಪ್ರತಿಷ್ಠೆಯಾಗಿ ಮಾರ್ಪಟ್ಟು, ಯುವತಿಗೆ ಕಿರುಕುಳ ಎಂಬ ವದಂತಿಯೊಂದಿಗೆ ಊರೆಲ್ಲಾ ಸುತ್ತಾಡಿತು. ಆ ಬಳಿಕ ಅಪಘಾತದಲ್ಲಿ ಭಾಗಿಯಾದ ಮುಸ್ಲಿಂ ಯುವಕ ಮತ್ತು ಕಿರುಕುಳವನ್ನು ಪ್ರಶ್ನಿಸಲು ಹೋದವರೆಂದು ಹೇಳಲಾದ ಹಿಂದೂ ಯುವಕರ ಹತ್ಯೆಯೂ ನಡೆಯಿತು. ಆದರೆ ಈ ಹತ್ಯೆಗೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನಲ್ಲಿ ಕಿರುಕುಳದ ಉಲ್ಲೇಖವೇ ಇಲ್ಲ ಎಂದೂ ವರದಿಯಿದೆ. ಅಂತೂ ಪುಟ್ಟ ಜಗಳ ಮತ್ತು ವದಂತಿಯೊಂದರ ಮೇಲೆ ಹುಟ್ಟಿಕೊಂಡ ಕೋಮು ಬೆಂಕಿ ಉತ್ತರ ಪ್ರದೇಶದ ಮುಝಫ್ಫರ್ ನಗರ್ ಉದ್ದಕ್ಕೂ ಕಾಡ್ಗಿಚ್ಚಿನಂತೆ ಹರಡಿತು. ಈ ಬೆಂಕಿಯಲ್ಲಿ ನೊಂದು ಬೆಂದ ಓರ್ವ ಮುಸ್ಲಿಮ್ ಮಹಿಳೆಯ ಒಡಲ ಧ್ವನಿಯೇ ಈ ಮೇಲಿನ ಔಟ್ ಲುಕ್ ಪತ್ರಿಕೆಯ ಶೀರ್ಷಿಕೆ.
‘ಹಿಂದೂ ಯುವಕರ ಹತ್ಯೆ ನಡೆಸಿದ ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳಿ’.. ಎಂದು ಲೌಡ್ ಸ್ಪೀಕರ್‌ನಲ್ಲಿ ಕರೆ ಕೇಳಿಸಿತು. 2013 ಸೆ ಪ್ಟೆಂಬರ್ 7ರ ಘಟನೆ ಇದು. ನನ್ನ ಪತಿ ಟೈಲರ್. ನಮಗೆ ಆಗ 5 ಮತ್ತು ಎರಡು ವರ್ಷದ ಇಬ್ಬರು ಗಂಡು ಮಕ್ಕಳಿದ್ದರು. ಮರುದಿನ ಸೆಪ್ಟೆಂಬರ್ 8ರಂದು ನನ್ನ ದೊಡ್ಡ ಮಗನಿಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಮಗನನ್ನು ಪತಿ ವೈದ್ಯರಲ್ಲಿಗೆ ಕೊಂಡು ಹೋದರು. ಇದಾಗಿ ಒಂದು ಗಂಟೆಯೊಳಗೆ ಎಲ್ಲೆಲ್ಲೂ ಭಯವೇ ತುಂಬಿಕೊಳ್ಳತೊಡಗಿತು. ಹತ್ತಿರದ ಮಸೀದಿಯಲ್ಲಿ ಮುಸ್ಲಿಮ್ ವ್ಯಕ್ತಿಯ ಹತ್ಯೆಯಾಗಿದೆ ಎಂಬ ಸುದ್ದಿ ಕೇಳಿ ಬಂತು. ಹಿಂಸೆ ಭುಗಿಲೆದ್ದಿರುವುದರಿಂದ ಶಮ್ಲಿ ಗ್ರಾಮಕ್ಕೆ ಪಲಾಯನ ಮಾಡು ವಂತೆ ಅಕ್ಕಪಕ್ಕದವರು ಸಲಹೆ ನೀಡಿದರು. ಅವರ ಜೊತೆ ನಾನೂ ಹೊರಟೆ. ಶಮ್ಲಿಯಲ್ಲಿ ನನ್ನ ಸಂಬಂಧಿಕರೂ ಇದ್ದರು. ಕಬ್ಬಿನ ತೋಟದ ನಡುವೆ ನಾವೆಲ್ಲ ಭಯದಿಂದ ಹೊರಟೆವು. ನನ್ನ ಜೊತೆ ಮಗನಿದ್ದ. ಕಬ್ಬಿನ ಗಿಡದ ಕತ್ತಿಯಲಗಿನಂಥ ಎಲೆಗಳು ಮಗನ ಮೈಗೆ ತಾಕುತ್ತಿದ್ದುದರಿಂದ ಆತ ಕಿರುಚುತ್ತಿದ್ದ. ನನಗೆ ಆ ದಾರಿ ಹೊಸತು. ಆ ಕಬ್ಬಿನ ತೋಟದಲ್ಲಿ ನಾನೆಂದೂ ಈ ಮೊದಲು ನಡೆದಿರಲಿಲ್ಲ. ನಾನು ಗುಂಪಿನಿಂದ ಹಿಂದೆ ಬಿದ್ದೆ. ಹೀಗೆ 2 ಕಿ.ಮೀಟರ್ ನಡೆದು ಮುಖ್ಯ ರಸ್ತೆಗೆ ಬಂದೆ. ಶಮ್ಲಿಗೆ ಹೋಗಲು ವಾಹನ ಸಿಗುತ್ತದೋ ಎಂಬುದು ನನ್ನ ನಿರೀಕ್ಷೆಯಾಗಿತ್ತು. ಆದರೆ,
ನನ್ನನ್ನು ಮಹೇಶ್ ವೀರ್, ಸಿಕಂದರ್ ಮತ್ತು ಕುಲ್ದೀಪ್ ಎಂಬ ಪರಿಚಿತರೇ ಆದ ಯುವಕರು ಹಿಡಿದರು. ಇವರೆಷ್ಟು ಪರಿ ಚಿತರೆಂದರೆ, ನನ್ನ ಗಂಡನ ಟೈಲರ್ ಶಾಪ್‌ಗೆ ಹೋಗುತ್ತಿದ್ದವರು ಇವರು. ನನ್ನ ಮನೆಗೆ ಅನುಮತಿಯನ್ನೇ ಕೇಳದೇ ಪ್ರವೇಶಿಸುವಷ್ಟು ಸಲುಗೆಯಿಂದ ಇದ್ದವರು. ಅವರ ಕೈಯಲ್ಲಿ ಆಯುಧವಿತ್ತು. ಪಕ್ಕದ ಕಬ್ಬಿನ ತೋಟಕ್ಕೆ ಎಳೆದುಕೊಂಡು ಹೋದ ಅವರು ನನ್ನ ಮಗುವಿನ ಕತ್ತಿಗೆ ತಲವಾರು ಇಟ್ಟು ಬೆದರಿಸಿದರು. ನನ್ನ ಮೇಲೆ ಅತ್ಯಾಚಾರ ನಡೆಸಿದರು. ಇವೆಲ್ಲ ಫಗುನಾ ಎಂಬ ಪ್ರದೇಶದಲ್ಲಿ ನಡೆದಿತ್ತು..’
2023 ಮೇಯಲ್ಲಿ ಮುಝಫ್ಫರ್ ನಗರ್ ಜಿಲ್ಲಾ ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿ ಮಹೇಶ್ ವೀರ್ ಮತ್ತು ಸಿಕಂದರ್ ಎಂಬಿಬ್ಬರಿಗೆ 20 ವರ್ಷಗಳ ಶಿಕ್ಷೆ ವಿಧಿಸಿದ ಬಳಿಕ ಈ ಮಹಿಳೆಯನ್ನು ಭೇಟಿಯಾಗಿ ಔಟ್‌ಲುಕ್, ದಿ ಕ್ವಿಂಟ್ ಸಹಿತ ವಿವಿಧ ಪತ್ರಿಕೆಗಳು ಮಾಡಿದ ವರದಿಯ ಸಂಕ್ಷಿಪ್ತ ರೂಪ ಈ ಮೇಲಿನ ಹೇಳಿಕೆ. ಇನ್ನೋರ್ವ ಆರೋಪಿ ಕುಲ್ದೀಪ್ ವಿಚಾರಣಾ ಹಂತದಲ್ಲೇ ಮೃತಪಟ್ಟಿದ್ದ. ಔಟ್‌ಲುಕ್ ಈಕೆಗೆ ಶಮಾ ಎಂದು ಹೆಸರಿಟ್ಟಿದೆ. ಆದರೆ, ಇದು ನಿಜನಾಮವಲ್ಲ. ಹಾಗಂತ, ಈ ನ್ಯಾಯ ಪ್ರಕ್ರಿಯೆ ಸುಗಮವಾಗಿರಲಿಲ್ಲ. ಖ್ಯಾತ ನ್ಯಾಯವಾದಿ ವೃಂದಾ ಗ್ರೋವರ್ ಅವರ ಬಲ ಇಲ್ಲದೇ ಇರುತ್ತಿದ್ದರೆ ಅಪರಾಧಿಗಳಿಗೆ ಈ ಶಿಕ್ಷೆ ಸಿಗುತ್ತಿತ್ತೋ, ಗೊತ್ತಿಲ್ಲ. ಪೊಲೀಸ್ ಠಾಣೆಯಲ್ಲಿ ತಣ್ಣಗೆ ಮಲಗಿದ್ದ ಈ ಪ್ರಕರಣಕ್ಕೆ ಜೀವ ತುಂಬಿದ್ದು ವೃಂದಾ ಗ್ರೋವರ್. ಅವರು ಸುಪ್ರೀಮ್ ಕೋರ್ಟಿಗೆ ಹೋಗಿ ಪೊಲೀಸರಿಗೆ ಬಿಸಿ ಮುಟ್ಟಿಸಿದ್ದರು. ಅಷ್ಟಕ್ಕೂ,
ಮುಝಫ್ಫರ್ ನಗರ್ ಹಿಂಸಾಚಾರದಲ್ಲಿ ನಡೆದ ಏಕೈಕ ಅತ್ಯಾಚಾರ ಪ್ರಕರಣವೇನೂ ಇದಾಗಿರಲಿಲ್ಲ. ಈ ಶಮಾಳೂ ಸೇರಿ ಒಟ್ಟು 7 ಮಂದಿಯ ಮೇಲಿನ ಅತ್ಯಾಚಾರ ಬೆಳಕಿಗೆ ಬಂದಿತ್ತು. ಇದರಲ್ಲಿ 6 ಮಂದಿ ಪೊಲೀಸರಿಗೆ ದೂರು ನೀಡಿದರು. ಓರ್ವಳಂತೂ ದೂರು ನೀಡುವುದಕ್ಕೂ ಹೋಗಿರಲಿಲ್ಲ. ಬೆದರಿಕೆ ಮತ್ತು ಹಣದ ಆಮಿಷದೊಂದಿಗೆ ಆಕೆಯನ್ನು ತಡೆಯಲಾಯಿತು ಎಂಬ ಆರೋಪವೂ ಇದೆ. ಈ 6 ಮಂದಿಯ ದೂರಿನ ಮೇಲೆ ಎಫ್‌ಐಆರ್ ದಾಖಲಾಯಿತಾದರೂ ಕೋರ್ಟು ವಿಚಾರಣೆಯ ವೇಳೆ ಇವರಲ್ಲಿ ಶಮಾಳನ್ನು ಬಿಟ್ಟು ಉಳಿದ 5 ಮಂದಿ ಸಂತ್ರಸ್ತರೂ ಹೇಳಿಕೆ ಬದಲಿಸಿದರು. ‘ನಮ್ಮ ಮೇಲೆ ಅತ್ಯಾಚಾರವೇ ನಡೆದಿಲ್ಲ’ ಎಂದು ನ್ಯಾಯಾಧೀಶರ ಮುಂದೆ ಹೇಳಿಕೊಂಡರು. ಇದರಿಂದಾಗಿ 22 ಮಂದಿ ಅತ್ಯಾಚಾರಿ ಆರೋಪಿಗಳು ಬಚಾವಾದರು. ಅಂದಹಾಗೆ,
ಹೇಳಿಕೆ ಬದಲಿಸಿದ ಆ ಸಂತ್ರಸ್ತ ಮಹಿಳೆಯರ ಮೇಲೆ ತಕ್ಷಣಕ್ಕೆ ನಮ್ಮಲ್ಲಿ ಅಸಮಾಧಾನ ಮೂಡಬಹುದು. ತಮ್ಮ ಮೇಲೆ ಕ್ರೌರ್ಯವೆಸಗಿದ ಅಪರಾಧಿಗಳನ್ನು ದಂಡಿಸುವ ಅವಕಾಶವನ್ನು ಅವರೇಕೆ ಕಳೆದುಕೊಂಡರು ಎಂಬ ಪ್ರಶ್ನೆಯೂ ಇರಬಹುದು. ಆದರೆ ಕೋಮು ಹಿಂಸಾಚಾರದಲ್ಲಿ ನಡೆಯುವ ಅತ್ಯಾಚಾರಕ್ಕೂ ಸಹಜ ಸಂದರ್ಭದಲ್ಲಿ ನಡೆಯುವ ಅತ್ಯಾಚಾರಕ್ಕೂ ಬಹಳ ವ್ಯತ್ಯಾಸ ಇರುತ್ತದೆ. ಹಿಂಸಾಚಾರದ ಅತ್ಯಾಚಾರ ಅತ್ಯಂತ ಸುರಕ್ಷಿತ. ಹಿಂಸಾಚಾರದಲ್ಲಿ ತೊಡಗಿದ ಸಮಾಜವೇ ಇಂಥ ಅತ್ಯಾಚಾರಿಗಳ ಪರ ನಿಲ್ಲುತ್ತದೆ. ಅವರ ರಕ್ಷಣೆಗಾಗಿ ವಿವಿಧ ರೀತಿಯ ತಂತ್ರಗಳನ್ನು ಹೆಣೆಯುತ್ತದೆ. ಅದರಲ್ಲಿ ಜೀವ ಬೆದರಿಕೆ, ಬಹಿಷ್ಕಾರದ ಕರೆ, ಹಣದ ಆಮಿಷ ಇತ್ಯಾದಿಗಳೂ ಸೇರಿರುತ್ತವೆ. ಪಲಾಯನ ಮಾಡಿರುವ ಸಂತ್ರಸ್ತೆ ಮತ್ತು ಅವರ ಕುಟುಂಬ ಸುರಕ್ಷಿತವಾಗಿ ಊರಿಗೆ ಮರಳಬೇಕಾದರೆ ‘ಕೇಸು’ ಹಿಂತೆಗೆದುಕೊಳ್ಳಬೇಕು ಎಂಬ ಷರತ್ತನ್ನು ಸಮಾಜ ವಿಧಿಸುತ್ತದೆ. ಈ ಐವರು ಮಹಿಳೆಯರ ಪ್ರಕರಣದಲ್ಲೂ ಇಂಥದ್ದೇ ಬೆಳವಣಿಗೆ ನಡೆದಿದೆ.
ಹಿಂಸಾಚಾರದ ವೇಳೆ ಫಗುನಾ ಗ್ರಾಮದಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಈ ಐವರು ಮಹಿಳೆಯರು 22 ಮಂದಿಯ ವಿರುದ್ಧ ದೂರು ಕೊಟ್ಟಿದ್ದರು. ಎಫ್‌ಐಆರ್ ದಾಖಲಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು. ಈ ನಡುವೆ, 2014 ಜೂನ್‌ನಲ್ಲಿ ಧೋಲೆರಾ ಎಂಬ ಗ್ರಾಮದಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿರುವುದಾಗಿ ಪ್ರಕರಣ ದಾಖಲಾಯಿತು. 10 ಮಂದಿ ಮುಸ್ಲಿಮರನ್ನು ಆರೋಪಿಗಳೆಂದು ಹೆಸರಿಸಲಾಯಿತು. ಈ ಫಗುನಾ ಮತ್ತು ಧೋಲೆರಾ ಗ್ರಾಮಗಳು 20 ಕಿ.ಮೀಟರ್ ಅಂತರದಲ್ಲಿವೆ. ಈ ಘಟನೆ ನಡೆದದ್ದೇ ತಡ, ಅತ್ಯಾಚಾರ ಪ್ರಕರಣಗಳಲ್ಲಿ ಮಹತ್ತರ ಬದಲಾವಣೆಗಳಾದುವು. ಪ್ರಕರಣಗಳನ್ನು ಹಿಂಪಡೆದು ರಾಜಿಯಲ್ಲಿ ಮುಗಿಸುವ ಪ್ರಸ್ತಾಪಗಳಾದುವು. ಸಂತ್ರಸ್ತರಿಗೆ ಹಣವನ್ನು ನೀಡಲಾಗಿದೆ ಎಂಬ ವರದಿಯೂ ಇದೆ. ಈ ರಾಜಿ ಪಂಚಾತಿಕೆಯ ಹಿನ್ನೆಲೆಯಲ್ಲಿ ಹಿಂದೂ ಮಹಿಳೆ ಮತ್ತು ಈ 5 ಮಂದಿ ಮುಸ್ಲಿಮ್ ಮಹಿಳೆಯರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಯನ್ನು ಬದಲಿಸಿದರು. ಆ ಮೂಲಕ ಒಟ್ಟು 32 ಮಂದಿ ಅಪರಾಧಿಗಳು ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಂಡರು. ಆದರೆ ಶಮಾ ಮಾತ್ರ ಯಾವ ಆಮಿಷಕ್ಕೂ, ರಾಜಿಗೂ ತಯಾರಾಗಲಿಲ್ಲ. ಈ ಎಲ್ಲ ವಿವರವನ್ನು ‘Muzaffar Nagar riots: The deal that saved 32 alleged rapists’- ಮುಝಫ್ಫರ್ ನಗರ್ ಹಿಂಸಾಚಾರ: 32 ಮಂದಿ ಅತ್ಯಾಚಾರ ಆರೋಪಿಗಳನ್ನು ಬಚಾವ್ ಮಾಡಿದ ಒಪ್ಪಂದ- ಎಂಬ ಶೀರ್ಷಿಕೆಯಲ್ಲಿ ಐಶ್ವರ್ಯ ಅಯ್ಯರ್ ಎಂಬ ಪತ್ರಕರ್ತೆ 2019 ಆಗಸ್ಟ್ 27ರಂದು ದಿ ಕ್ವಿಂಟ್ ವೆಬ್ ಪತ್ರಿಕೆಯಲ್ಲಿ ಬರೆದ ವರದಿಯಲ್ಲಿ ನೀಡಲಾಗಿದೆ.
ಆದರೆ, ಶಮಾಳ ಪರಿಸ್ಥಿತಿ ಇಷ್ಟು ಸಹಜವಲ್ಲ.
ರಾಜಿಗೆ ಒಪ್ಪಿಕೊಳ್ಳದ ಆಕೆ ನಿರಂತರ ಬೆದರಿಕೆಯನ್ನೂ ಎದುರಿಸಿದಳು. ಊರನ್ನೂ ತೊರೆದಳು. ಇನ್ನೊಂದು ಕಡೆ, ಶಮ್ಲಿ ಗ್ರಾಮದಲ್ಲಿ NGO ಕಟ್ಟಿಕೊಟ್ಟ ಒಂದು ಕೋಣೆಯ ಪುಟ್ಟ ಮನೆಯಲ್ಲಿ ವಾಸವಿರುವ ಆಕೆಯನ್ನು ಅಕ್ಕಪಕ್ಕದವರೇ ಅಸ್ಪೃಶ್ಯಳಂತೆ ನೋಡತೊಡಗಿದರು. ಆಕೆಯಿಂದ ಅಂತರ ಕಾಯ್ದುಕೊಂಡರು. ತಮ್ಮ ಮನೆಯ ಮಕ್ಕಳು ಆಕೆಯ ಮನೆಗೆ ಹೋಗದಂತೆ ತಡೆದರು. ತಾನು ಅತ್ಯಾಚಾರ ಸಂತ್ರಸ್ತೆ ಎಂದು ಗೊತ್ತಾದ ಬಳಿಕ ಆದ ಬದಲಾವಣೆ ಇದು ಎಂದಾಕೆ ಹೇಳಿರುವುದನ್ನು ಔಟ್‌ಲುಕ್ ಪತ್ರಿಕೆಯ ವರದಿಯಲ್ಲಿ ಕಾಣಬಹುದು. ಆಕೆ ಹೇಳಿರುವ ಇದಕ್ಕಿಂತಲೂ ದಾರುಣ ಸಂಗತಿಯೆಂದರೆ, ಆಕೆಯ ಮಕ್ಕಳ ಪ್ರಶ್ನೆ. ಪದೇ ಪದೇ ಯಾಕಮ್ಮ ಕೋರ್ಟಿಗೆ ಹೋಗುತ್ತಿ ಎಂದು ಮಕ್ಕಳು ಪ್ರಶ್ನಿಸುತ್ತಾರೆ. ‘ಹಿಂಸಾಚಾರ ನಡೆದಿತ್ತಲ್ಲ, ಆಗ ನಮ್ಮ ಮನೆಗೆ ಬೆಂಕಿ ಕೊಡಲಾಗಿತ್ತು, ದರೋಡೆ ಮಾಡಲಾಗಿತ್ತು. ಆದ್ದರಿಂದ ನಮ್ಮ ಭೂಮಿ ಇತರರ ಪಾಲಾಗಿದೆ. ಅದನ್ನು ಮರಳಿ ಪಡೆಯುವುದಕ್ಕಾಗಿ ಕೋರ್ಟಿಗೆ ಹೋಗುತ್ತಿದ್ದೇನೆ..’ ಎಂದು ಹೇಳುತ್ತಿದ್ದುದಾಗಿ ಶಮಾ ಹೇಳಿರುವುದೂ ವರದಿಯಲ್ಲಿದೆ. ನಿಜವಾಗಿ,
ಅತ್ಯಾಚಾರ ಎಂಬುದು ಹೆಣ್ಣಿನ ಪಾಲಿಗೆ ಎರಡು ಅಲುಗಿನ ಕತ್ತಿ. ಒಂದು- ಅತ್ಯಾಚಾರವೆಂಬ ಇರಿತವಾದರೆ, ಇನ್ನೊಂದು- ಅತ್ಯಾಚಾರಕ್ಕೀಡಾದವಳು ಎಂಬ ವಕ್ರ ದೃಷ್ಟಿಯ ಇರಿತ. ಇವೆರಡನ್ನೂ ಓರ್ವ ಸಂತ್ರಸ್ತ ಮಹಿಳೆ ಜೀವನದುದ್ದಕ್ಕೂ ಹೊತ್ತುಕೊಂಡೇ ಬದುಕಬೇಕು. ಹಿಂಸಾಚಾರಕ್ಕೆ ಕಾರಣಗಳೇನೇ ಇರಲಿ, ಅಂತಿಮವಾಗಿ ಅದರ ನೋವುಣ್ಣುವುದು ಹೆಣ್ಣೇ. ಬೈಕ್ ಅಪಘಾತದಿಂದ ಹುಟ್ಟಿಕೊಂಡ ಮುಝಫ್ಫರ್ ನಗರ್ ಹಿಂಸೆ, ಮೀಸಲಾತಿ ನೆಪದಲ್ಲಿ ಸ್ಫೋಟಗೊಂಡ ಮಣಿಪುರ ಹಿಂಸೆ ಅಥವಾ ರೈಲಿಗೆ ಬೆಂಕಿ ಕೊಟ್ಟ ನೆಪದಲ್ಲಿ ಭುಗಿಲೆದ್ದ ಗುಜರಾತ್ ಹಿಂಸಾಚಾರ- ಈ ಮೂರಕ್ಕೂ ಕಾರಣಕರ್ತರು ಪುರುಷರೇ. ಆದರೆ, ಅತ್ಯಂತ ಹೀನಾಯ ಕ್ರೌರ್ಯಕ್ಕೆ ತುತ್ತಾದದ್ದು ಮಾತ್ರ ಮಹಿಳೆಯರು. 2016ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದ ವರದಿಗಳನ್ನು ಅಧ್ಯಯನ ನಡೆಸಿದರೂ ಲಭ್ಯವಾಗುವುದು ಇದೇ ಫಲಿತಾಂಶ. ಈ ಕುರಿತಂತೆ ಆಸ್ಟ್ರೆಲಿಯಾ, ಕೆನಡ, ನಾರ್ವೆ, ಫಿಲಿಪ್ಪೀನ್ಸ್, ಬಾಂಗ್ಲಾದೇಶವನ್ನೊಳಗೊAಡ ತಜ್ಞರು ಮತ್ತು ಸಂಶೋಧಕರ ಸತ್ಯಶೋಧನಾ ಸಮಿತಿಯನ್ನು ರಚಿಸಲಾಗಿತ್ತು. ‘Forced migration of Rohingya: The untold experiencde’- ಎಂಬ ಹೆಸರಲ್ಲಿ 2018 ಆಗಸ್ಟ್ ನಲ್ಲಿ ಈ ಸಮಿತಿ ವರದಿಯನ್ನೂ ನೀಡಿತ್ತು. ಆ ವರದಿ ಎಷ್ಟು ಆಘಾತಕಾರಿಯಾಗಿತ್ತೆಂದರೆ, ಯಾವುದೇ ಮಹಿಳೆ ತಾನೇಕೆ ಮಹಿಳೆಯಾಗಿ ಹುಟ್ಟಿದೆ ಎಂದು ಪ್ರಶ್ನಿಸುವಷ್ಟು ಭೀಕರವಾಗಿತ್ತು. 18 ಸಾವಿರ ರೋಹಿಂಗ್ಯ ಮಹಿಳೆ ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಹಿಂಸೆ ಮತ್ತು ಅತ್ಯಾಚಾರ ನಡೆದಿದೆ ಎಂಬುದಾಗಿ ಆ ವರದಿಯಲ್ಲಿ ಹೇಳಲಾಗಿತ್ತು. ಇದಲ್ಲದೇ, ದಿ ಇಂಡಿಪೆಂಡೆಂಟ್ ಪತ್ರಿಕೆಯು, 'Burmese military guilty of widespread rape of Rohingyan Muslims’- ಎಂಬ ಶೀರ್ಷಿಕೆಯಲ್ಲಿ 2017 ನವೆಂಬರ್ 16ರಂದು ಹೃದಯ ಕಲಕುವ ವರದಿಯನ್ನೂ ಪ್ರಕಟಿಸಿತ್ತು. 15 ವರ್ಷದ ಬಾಲಕಿಯನ್ನು 10 ಮಂದಿ ಮ್ಯಾನ್ಮಾರ್ ಸೈನಿಕರು ಅತ್ಯಾಚಾರ ಮಾಡಿರುವ ಹೃದಯ ವಿದ್ರಾವಕ ಕ್ರೌರ್ಯ.
ಬಹುಶಃ
ಹೆಣ್ಣಿನ ದೇಹವನ್ನು ಬಲವಂತದಿಂದ ಅನುಭವಿಸಬಯಸುವ ಪುರುಷರೇ ಈ ‘ಹಿಂಸಾಚಾರ’ ಎಂಬ ಕಾನ್ಸೆಪ್ಟನ್ನು ಸೃಷ್ಟಿ ಮಾಡಿರಬೇಕು. ಸಹಜ ಸಂದರ್ಭದಲ್ಲಿ ಅತ್ಯಾಚಾರ ಮಾಡಲು ಹಿಂಜರಿಯುವ ಪುರುಷ ಹಿಂಸಾಚಾರದ ವೇಳೆ ಅತ್ಯಾಚಾರವನ್ನು ಸಹಜಗೊಳಿಸುತ್ತಾನೆ. ಹೆಣ್ಣನ್ನು ಹುಡುಕಿ ಹುಡುಕಿ ಕ್ರೌರ್ಯವೆಸಗುತ್ತಾನೆ. ಆಕೆಯ ದೇಹವನ್ನು ಬೆತ್ತಲೆಗೊಳಿಸುತ್ತಾನೆ. ಇಂಚಿಂಚೂ ಇರಿಯುತ್ತಾನೆ. ಸಾಯಿಸುತ್ತಾನೆ ಮತ್ತು ಯಾವ ಪಾಪಭಾರವೂ ಇಲ್ಲದೇ ಸಮಾಜದ ಭಾಗವಾಗಿ ಬದುಕುತ್ತಾನೆ. ಅಷ್ಟಕ್ಕೂ,
ಕೋಮು ಹಿಂಸಾಚಾರವೆಂಬುದು ಎರಡೂ ಧರ್ಮಾನುಯಾಯಿಗಳ ನಡುವಿನ ದ್ವೇಷ ಸಾಧನೆಯೇ ಆಗಿರುತ್ತಿದ್ದರೆ, ಹೆಣ್ಣೇಕೆ ಅತ್ಯಾಚಾರಕ್ಕೆ ಒಳಗಾಗಬೇಕು? ಘರ್ಷಣೆಯ ಭಾಗವಾಗದೇ ತಮ್ಮ ಪಾಡಿಗಿರುವ ಹೆಣ್ಣೇಕೆ ಬೆತ್ತಲೆಯಾಗಬೇಕು? ಅವಳು ಮಾಡಿರುವ ಅಪರಾಧವೇನು?
No comments:
Post a Comment