Friday, August 18, 2023

ಗ್ಯಾನ್‌ವಾಪಿ ಸರ್ವೇ ಯಾರ ಅಗತ್ಯ?



ಶಿವಮಂದಿರವನ್ನು ಒಡೆದು 1669ರಲ್ಲಿ ಔರಂಗಝೇಬ್ ಕಟ್ಟಿರುವನೆಂದು ಹೇಳಲಾಗುವ ವಾರಣಾಸಿಯ ಗ್ಯಾನ್‌ವಾಪಿ ಮಸೀದಿಯ  ಸರ್ವೇ ನಡೆದಿದೆ. ಪೂರ್ವದಲ್ಲಿ ಅದು ಏನಾಗಿತ್ತು, ಮಂದಿರದ ಕುರುಹುಗಳು ಅಲ್ಲಿ ಇದೆಯೇ ಎಂಬುದು ಸರ್ವೇಯ ಪ್ರಧಾನ ಗುರಿ.  ನಿಜಕ್ಕೂ, ಇಂಥ ಹುಡುಕಾಟ ಯಾರ ಅಗತ್ಯ? ಈ ಸರ್ವೇಯ ಫಲಿತಾಂಶದಿಂದ  ಸಂತಸಪಡುವವರು ಯಾರು- ರಾಜಕಾರಣಿಗಳೋ  ನಾಗರಿಕರೋ?

1669ಕ್ಕಿಂತಲೂ ಪೂರ್ವದಲ್ಲಿ ಅದು ಶಿವ ಮಂದಿರವಾಗಿತ್ತೋ ಇಲ್ಲವೋ; ಆದರೆ, ಅದಕ್ಕೂ ಈಗ ಆ ಮಸೀದಿಯಲ್ಲಿ ನಮಾಝï  ಮಾಡುತ್ತಿರುವವರಿಗೂ ಯಾವ ಸಂಬಂಧವೂ ಇಲ್ಲ.

ಒಂದುವೇಳೆ, 1669ರಲ್ಲಿ ಮಂದಿರವನ್ನು ಒಡೆದೇ ಈ ಮಸೀದಿಯನ್ನು ಕಟ್ಟಲಾಗಿದೆ ಎಂದು ವಾದಿಸಿದರೂ ಈಗ ಆ ಘಟನೆಗೆ 400  ವರ್ಷಗಳೇ ಕಳೆದಿವೆ. ರಾಜರುಗಳ ಕಾಲ ಕಳೆದು ಪ್ರಜೆಗಳ ಕಾಲ ಬಂದಿದೆ. ರಾಜರುಗಳ ಕಾಲದಲ್ಲಿ ಏನೇನು ಅನಾಹುತಗಳು ನಡೆದಿವೆ  ಎಂಬುದನ್ನು ಈ ಪ್ರಜೆಗಳ ಕಾಲದಲ್ಲಿ ಸಂಶೋಧನೆ ಮಾಡಿ ಸರಿಪಡಿಸುವುದು ಅಗತ್ಯವೇ? ಹಾಗೆ ಸರಿಪಡಿಸಲು ಹೊರಟರೆ ಈ ಮಣ್ಣಿನಲ್ಲಿ ಸರ್ವೇ ನಡೆಸಬೇಕಾದ ಪುರಾತನ ಕಟ್ಟಡಗಳು, ಮಂದಿರಗಳು, ಗುರುದ್ವಾರಗಳು ಎಷ್ಟಿದ್ದೀತು? ದೇಶ ವಿಭಜನೆಯ ವೇಳೆ ಪಂಜಾಬ್,  ಹರ್ಯಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ 50 ಸಾವಿರ ಮಸೀದಿಗಳನ್ನು ಒಂದೋ ಧ್ವಂಸ ಮಾಡಲಾಗಿದೆ ಅಥವಾ ಮಂದಿರವೋ  ಅಥವಾ ಗುರುದ್ವಾರವೋ ಆಗಿ ಬದಲಾಯಿಸಲಾಗಿದೆ. ಇವುಗಳನ್ನು ಮತ್ತೆ ಮುಸ್ಲಿಮರಿಗೆ ಮರಳಿಸಬೇಕು ಎಂದು ಆಗ್ರಹಿಸಿದರೆ ಅದು  ಸಾರ್ವಜನಿಕವಾಗಿ ಬೀರುವ ಪರಿಣಾಮಗಳು ಏನೇನು?

ಒಂದುಕಾಲದಲ್ಲಿ ಇಂದಿನ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ವಿಸ್ತಾರ ಭೂಭಾಗದಲ್ಲಿ ಜೈನ ಧರ್ಮವು ಸೊಂಪಾಗಿ ಬೆಳೆದಿತ್ತು. ಕ್ರಿಸ್ತ ಪೂರ್ವದಲ್ಲಿ ಹುಟ್ಟಿ ಈ ಮಣ್ಣಿನಲ್ಲಿ ಅಪಾರ ಜನಾಕರ್ಷಣೆಯನ್ನು ಪಡೆದು ಕ್ರಿಸ್ತಶಕ 13ನೇ ಶತಮಾನದವರೆಗೆ ದೊಡ್ಡಮಟ್ಟದ ಸಂಚಲನೆಯನ್ನು ಸೃಷ್ಟಿಸಿದ ಧರ್ಮ ಇದು. ತೆಲಂಗಾಣದ ಕಾಕತಿಯಾಗಳು ಮತ್ತು ಆಂಧ್ರದ ವೆಂಕಿ ಚಾಲುಕ್ಯರು ಜೈನ ಧರ್ಮದ ಅನುಯಾಯಿಗಳಾಗಿದ್ದರು. ಜೈನರ ಮೊದಲ ತೀರ್ಥಂಕರ ಮತ್ತು ಜೈನಧರ್ಮದ ಸ್ಥಾಪಕ ರಿಶಭನ ಮಗ ಬಾಹುಬಲಿಯ ರಾಜಧಾನಿ  ಪೊಡಾಣ್ ಆಗಿತ್ತು. ಇವತ್ತು ಅದು ನಿಝಾಮಾಬಾದ್‌ನ ಹತ್ತಿರದ ಪ್ರದೇಶವಾಗಿ ಗುರುತಿಸಿ ಕೊಂಡಿದೆ. ಆದರೆ ಕ್ರಿ.ಶ. 13ನೇ ಶತಮಾ ನದವರೆಗೆ ಈ ಭಾಗದಲ್ಲಿ ಅತ್ಯಂತ ಉಜ್ವಲವಾಗಿದ್ದ ಜೈನ ಧರ್ಮವು ಇವತ್ತು ಈ ಭಾಗದಲ್ಲಿ ಹುಡುಕಿದರೂ ಸಿಗದಷ್ಟು ಅಪರೂಪವಾಗಿದೆ.  ಈ ಎರಡೂ ರಾಜ್ಯಗಳಲ್ಲಿ ಇವತ್ತು ಕೇವಲ 42 ಜೈನ ಸ್ಮಾರಕಗಳಷ್ಟೇ ಉಳಿದುಕೊಂಡಿವೆ. ಪ್ರಸಿದ್ಧ ಹಿಂದೂ ಮಂದಿರಗಳಾದ  ವೇಮುಲವಾಡ, ಲಸರ್‌ನ ಪ್ರಸಿದ್ಧ ಸರಸ್ವತಿ ಮಂದಿರ ಮತ್ತು ಪದ್ಮಾಕ್ಷಿ ಮಂದಿರಗಳು ಒಂದು ಕಾಲದಲ್ಲಿ ಜೈನಬಸದಿಗಳಾಗಿದ್ದುವು ಎಂದು  ಹೇಳಲಾಗುತ್ತಿದೆ. 13ನೇ ಶತಮಾನದಲ್ಲಿ ವೀರಶೈವ ಚಿಂತನೆಯು ಅತ್ಯಂತ ಆಕ್ರಮಣಕಾರಿಯಾಗಿ ಈ ಭಾಗದಲ್ಲಿ ಪ್ರಚಾರ  ಪಡೆಯುವುದರೊಂದಿಗೆ ಜೈನ ಧರ್ಮದ ಅವನತಿಯ ಆರಂಭವಾಯಿತು. ಅದರ ಜೊತೆಗೆ ಬಸದಿಗಳು, ಸ್ಮಾರಕಗಳು ಕೂಡ  ಬದಲಾದುವು. ಅಂದಹಾಗೆ,

ಒಂದು  ಕಾಲದಲ್ಲಿ ಬೌದ್ಧ ಮತ್ತು ಜೈನ ಧರ್ಮಗಳು ಈ ಮಣ್ಣಿನಲ್ಲಿ ಎಷ್ಟು ಸಮೃದ್ಧವಾಗಿ ಬೆಳೆದಿದ್ದುವು ಎಂದರೆ, ಅದು ರಾಜ ಧರ್ಮವೇ  ಆಗಿತ್ತು. ಈ ಎರಡು ಧರ್ಮಗಳಲ್ಲಿ ಹಲವು ರಾಜವಂಶಗಳೇ ಆಗಿಹೋಗಿವೆ. ಸಾಮ್ರಾಟ ಅಶೋಕ ಅವರಲ್ಲಿ ಒಬ್ಬ.  ಇಷ್ಟೊಂದು  ಭವ್ಯ ಇತಿಹಾಸವನ್ನು ಹೊಂದಿರುವ ಈ ಎರಡೂ ಧರ್ಮಗಳ ಕುರುಹುಗಳೂ ಅಷ್ಟೇ ಸಮೃದ್ಧವಾಗಿರ ಬೇಕಾದುದು ಅಗತ್ಯ. ಆದರೆ,  ಜೈನ ಬಸದಿ ಮತ್ತು ಬೌದ್ಧ ಸ್ತೂಪಗಳು ಬಹುತೇಕ ಈ ದೇಶದಿಂದ ಕಾಣೆಯಾಗಿವೆ. ಹಾಗಿದ್ದರೆ ಅವು ಎಲ್ಲಿವೆ? ಏನಾಗಿವೆ? ಅವು  ಸಹಜವಾಗಿ ಧ್ವಂಸಗೊಂಡಿವೆಯೋ ಅಥವಾ ಮಂದಿರವಾಗಿ ಪರಿವರ್ತನೆಯಾಗಿವೆಯೋ?
ಹಾಗಂತ, ಇಂಥದ್ದೊಂದು  ಪ್ರಶ್ನೆಯನ್ನು ಇಟ್ಟುಕೊಂಡು ಭೂಮಿಯನ್ನು ಅಗೆಯಲು ಹೊರಟರೆ ಅದರಿಂದ ಈ ಸಮಾಜಕ್ಕಾಗುವ  ಲಾಭವೇನು?

ಅಷ್ಟಕ್ಕೂ, ಇತಿಹಾಸ ಏಕಮುಖವಾಗಿಲ್ಲ.

ಇಲ್ಲಿ, ಮಂದಿರವನ್ನು ಒಡೆದ ಮುಸ್ಲಿಮ್ ರಾಜನಷ್ಟೇ ಇರುವುದಲ್ಲ, ಹಿಂದೂ ರಾಜನೂ ಇದ್ದಾನೆ. ಮಂದಿರಕ್ಕೆ ಭೂದಾನ ಮಾಡಿದ  ಮುಸ್ಲಿಮ್ ದೊರೆ ಇರುವಂತೆಯೇ ಮಂದಿರವನ್ನೇ ಒಡೆದು ವಿಗ್ರಹ ದೋಚಿದ ಹಿಂದೂ ರಾಜನೂ ಇದ್ದಾನೆ. ಮುಸ್ಲಿಮ್ ರಾಜನನ್ನು  ಸೋಲಿಸುವುದಕ್ಕಾಗಿ ಹಿಂದೂ ರಾಜನೊಂದಿಗೆ ಕೈಜೋಡಿಸಿದ ಮುಸ್ಲಿಮ್ ದೊರೆಗಳೂ ಇದ್ದಾರೆ. ಟಿಪ್ಪು ಸುಲ್ತಾನ್‌ನನ್ನು ಬ್ರಿಟಿಷರು  ಮಣಿಸಿದ್ದೇ  ನಿಜಾಮರ ಸಹಕಾರದಿಂದ. ಕ್ರೂರಿ, ವಿಗ್ರಹಭಂಜಕ, ಮತಾಂತರಿ ಎಂದೆಲ್ಲಾ ದೂಷಣೆಗೆ ಒಳಗಾಗಿರುವ ಔರಂಗಝೇಬನು  ಮಂದಿರಗಳಿಗೆ ಕಾವಲಾಗಿದ್ದ ಮತ್ತು ಹಿಂದೂ ಸಂತರನ್ನು ಗೌರವಿಸಿದ್ದ ಎಂಬ ದಾಖಲೆಯೂ ಇದೆ. 1669ರಲ್ಲಿ ಬನಾರಸ್‌ನ ಆತನ ಅ ಧಿಕಾರಿಗಳು ಹೊರಡಿಸಿದ ರಾಜಾದೇಶ ಹೀಗಿವೆ:

‘ಬನಾರಸ್‌ನ ಆಸುಪಾಸಿನಲ್ಲಿರುವ ಹಿಂದೂಗಳ ಮೇಲೆ ದೌರ್ಜನ್ಯವಾಗಿದೆ, ಅದರಲ್ಲೂ ಮಂದಿರದಲ್ಲಿ ಪೂಜಾ ಕೈಂಕರ್ಯದಲ್ಲಿ
ತೊಡಗಿರುವ ಬ್ರಾಹ್ಮಣರ ಮೇಲೆ ಅನ್ಯಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಮಂದಿರ ಕಾಯುವ ಹೊಣೆಗಾರಿಕೆಯಿಂದ ಈ  ಬ್ರಾಹ್ಮಣರನ್ನು ಹೊರಹಾಕುವುದು ಈ ದೌರ್ಜನ್ಯಕೋರರ ಉದ್ದೇಶವಾಗಿದೆ. ಇದು ಅಸಾಧುವಾದುದು. ಆದ್ದರಿಂದ ಈ ಪತ್ರ ತಲುಪಿದ  ತಕ್ಷಣ ಯಾರೂ ನ್ಯಾಯಬಾಹಿರವಾಗಿ ನಡಕೊಳ್ಳದಂತೆ ಮತ್ತು ಬ್ರಾಹ್ಮಣ ಪೂಜಾರಿಗಳ ಕರ್ತವ್ಯಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು  ಮತ್ತು ಮಂದಿರದ ಪಾವಿತ್ರ‍್ಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು..’ ಅಂದಹಾಗೆ,

ಮಂದಿರಗಳ ಮೇಲೆ ದಾಳಿ ಮಾಡುವ ಯೋಜನೆಯನ್ನು ಕಾಶ್ಮೀರದ ರಾಜ ಸುಲ್ತಾನ್ ಸಿಕಂದರ್ (1489-1517) ಕೈಗೊಂಡಾಗ ಅದನ್ನು  ಕಾಶ್ಮೀರದ ಮುಂಚೂಣಿ ಸೂಫಿಗಳಾದ ಹಝ್ರತ್ ನೂರುದ್ದೀನ್ ನೂರಾನಿಯವರು ತೀವ್ರವಾಗಿ ಪ್ರತಿಭಟಿಸಿದ್ದೂ ಇತಿಹಾಸದಲ್ಲಿದೆ.  ‘ಇಸ್ಲಾಮ್‌ನಲ್ಲಿ ಈ ದಾಳಿಗೆ ಅವಕಾಶ ಇಲ್ಲ’ ಎಂದು ಅವರು ಘಂಟಾಘೋಷವಾಗಿ ಹೇಳಿದ್ದನ್ನು ಇತರ ಉಲೆಮಾಗಳೂ ಬೆಂಬಲಿಸಿದರು.  ನಿಜವಾಗಿ, ಈ ಮಣ್ಣಿನ ಯಾವುದೇ ಮಂದಿರವನ್ನು ಮುಸ್ಲಿಮ್ ನಾಗರಿಕರು ಧ್ವಂಸಗೊಳಿಸಿದ ಇತಿಹಾಸ ಇಲ್ಲವೇ ಇಲ್ಲ. ಮಂದಿರವನ್ನೋ ಬಸದಿ,  ಸ್ತೂಪವನ್ನೋ ಧ್ವಂಸಗೊಳಿಸುವ ಕೃತ್ಯವು ರಾಜರುಗಳಿಂದ ರಾಜರುಗಳಿಗಾಗಿ ನಡೆಯುತ್ತಿತ್ತೇ ಹೊರತು ಅದಕ್ಕೂ ನಾಗರಿಕರಿಗೂ  ಸಂಬಂಧವೇ ಇರಲಿಲ್ಲ. ಆದ್ದರಿಂದಲೇ, ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ. ಯಾಕೆ ಹೀಗೆ? ರಾಜರುಗಳು ಮಾತ್ರ ಧರ್ಮಶ್ರದ್ಧೆಯುಳ್ಳವರಾಗಿದ್ದರೆ ಅಥವಾ ಧರ್ಮಶ್ರದ್ಧೆಗೂ ಈ ಧ್ವಂಸ ಕೃತ್ಯಕ್ಕೂ ಸಂಬಂಧ  ಇರಲಿಲ್ಲವೇ? ಒಂದು ಮಂದಿರವನ್ನು ಧ್ವಂಸಗೊಳಿಸಿದ ಅದೇ ರಾಜ  ಇನ್ನೊಂದು ಕಡೆ ಮಂದಿರವನ್ನು ಕಟ್ಟಿಸಿದ ಮತ್ತು ಮಂದಿರಕ್ಕೆ ಭೂದಾನ ಮಾಡಿದ ದಾಖಲೆಗಳೂ ಇತಿಹಾಸದಲ್ಲಿ ವಿಫುಲವಾಗಿ ಇವೆ.  ಔರಂಗಝೇಬನೂ ಇವರಲ್ಲಿ ಒಬ್ಬ. ಟಿಪ್ಪು ಸುಲ್ತಾನನ ಮೇಲೆ ದೇಗುಲ ಭಂಜನೆಯ ಆರೋಪವಷ್ಟೇ ಇರುವುದಲ್ಲ, ದೇಗುಲಕ್ಕೆ  ಭೂಮಿಯನ್ನು ಉಂಬಳಿಯಾಗಿ ಕೊಟ್ಟ, ಮಂದಿರಕ್ಕೆ ಕಾವಲು ನಿಂತ ಮತ್ತು ಮಂದಿರ ನಿರ್ಮಿಸಿದ ಶ್ಲಾಘನೆಯೂ ಇದೆ. ಆದ್ದರಿಂದ,  ರಾಜರುಗಳ ಕ್ರಮವನ್ನು ಧರ್ಮದ ಕನ್ನಡಕದಿಂದ ನೋಡುವುದಕ್ಕಿಂತ ರಾಜಕೀಯ ಕನ್ನಡಕದಿಂದ ನೋಡುವುದೇ  ಹೆಚ್ಚು ಸೂಕ್ತ ಎಂದು  ಅನಿಸುತ್ತದೆ. ಧ್ವಂಸಗೊಂಡ  ಅಥವಾ ದರೋಡೆಗೊಂಡ ಹೆಚ್ಚಿನ ಮಂದಿರಗಳನ್ನು ಪರಿಶೀಲಿಸಿದರೆ, ಅಚ್ಚರಿಯ ಫಲಿತಾಂಶವೊಂದು   ಸಿಗುತ್ತದೆ. ಅರಮನೆಯ ಮಂದಿರವಾಗಿ ಗುರುತಿಸಿಕೊಂಡವುಗಳೇ ಇವುಗಳಲ್ಲಿ ಹೆಚ್ಚಿವೆ. ಇದಕ್ಕೆ ಈ ಮಂದಿರಗಳಲ್ಲಿ ಅಪಾರವಾದ  ವಜ್ರ-ವೈಢೂರ್ಯಗಳಿರುವುದು ಒಂದು ಕಾರಣವಾದರೆ, ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿ ಅವು ಗುರುತಿಸಿಕೊಂಡಿರುವುದು  ಕೂಡ ಇನ್ನೊಂದು ಕಾರಣವಾಗಿದೆ. ಗೆದ್ದ ರಾಜ ಸೋತ ರಾಜನ ರಾಜಧಾನಿಯಲ್ಲಿರುವ ಧಾರ್ಮಿಕ ಕ್ಷೇತ್ರವನ್ನು ಲೂಟಿಗೈದು ತಮ್ಮ  ಪರಾಕ್ರಮದ ಸಂದೇಶವನ್ನು ಜನರಿಗೆ ತಲುಪಿಸುವ ಗುರಿಯೂ ಇದರ ಹಿಂದಿರುತ್ತದೆ. ಆದ್ದರಿಂದಲೇ, ಹಿಂದೂ-ಮುಸ್ಲಿಮ್ ಎಂಬ ಭೇದ  ಇಲ್ಲದೇ ರಾಜರುಗಳು ಇಂಥ ಲೂಟಿಯಲ್ಲಿ ಭಾಗಿಯಾಗಿದ್ದಾರೆ.

ಕೆಲವು ಉದಾಹರಣೆಗಳು ಹೀಗಿವೆ;

1. 7ನೇ ಶತಮಾನದಲ್ಲಿ ಪಲ್ಲವ ರಾಜ ಒಂದನೇ ನರಸಿಂಹ ವರ್ಮನ್ ಎಂಬವ ಚಾಲುಕ್ಯರ ಮೇಲೆ ವಿಜಯ ಸಾಧಿಸಿದ ಬಳಿಕ  ರಾಜಧಾನಿ ವಾತಾಪಿಯ ಮಂದಿರದ ಮೇಲೆ ದಾಳಿ ಮಾಡಿದ. ಅಲ್ಲಿದ್ದ ಗಣೇಶ ವಿಗ್ರಹವನ್ನು ಎತ್ತಿಕೊಂಡು ಹೋದ.

2. ತನ್ನ ಶತ್ರು ರಾಜ ಕಾಶ್ಮೀರದ ಲಲಿತಾದಿತ್ಯನ ವಿರುದ್ಧ ಸೇಡು ತೀರಿಸಿಕೊಳ್ಳುವ ಭಾಗವಾಗಿ ಬಂಗಾಳದ ಹಿಂದೂ ಸೇನೆಯು ವಿಷ್ಣುವಿನ  ವಿಗ್ರಹವನ್ನು ಧ್ವಂಸಗೊಳಿಸಿತು. ಇದು ನಡೆದುದು 8ನೇ ಶತಮಾನದಲ್ಲಿ.

3. 10ನೇ ಶತಮಾನದಲ್ಲಿ ಹಿಂದೂ ರಾಜ ಹರಂಬಪಾಲ ಮತ್ತು ಕೋಗ್ರಾದ ಹಿಂದೂ ರಾಜನ ನಡುವೆ ಯುದ್ಧ ನಡೆಯಿತು. ಇದರಲ್ಲಿ  ಕೋಗ್ರಾದ ರಾಜ ಸೋಲೊಪ್ಪಿಕೊಂಡ. ಆ ಬಳಿಕ ಅರಮನೆಯ ವಿಷ್ಣು ಮಂದಿರವನ್ನು ಲೂಟಿ ಮಾಡಲಾಯಿತು. ಬಂಗಾರದ  ವಿಗ್ರಹಗಳನ್ನು ದರೋಡೆ ಮಾಡಿ ಕೊಂಡೊಯ್ಯಲಾಯಿತು.

4. ತನ್ನ ಶತ್ರುಗಳಾದ ಚಾಲಕ್ಯ ಪಾಲ ಮತ್ತು ಕಳಿಂಗರ ವಿರುದ್ಧ ಚೋಳ ದೊರೆ ಒಂದನೇ ರಾಜೇಂದ್ರ ಯುದ್ಧ ಹೂಡಿದ. ಗೆದ್ದ. ಬಳಿಕ  ಶತ್ರು ರಾಜರ ಮಂದಿರಗಳಿಂದ  ತಂದ ವಿಗ್ರಹಗಳಿಗೆ ತನ್ನ ನಾಡಿನಲ್ಲಿ ಪ್ರತಿಷ್ಠಾಪನಾ ಕಾರ್ಯ ಮಾಡಿದ.

5. 16ನೇ ಶತಮಾನದಲ್ಲಿ ವಿಜಯನಗರದ ದೊರೆ ಕೃಷ್ಟದೇವರಾಯ ಉದಯಗಿರಿಯ ಮೇಲೆ ದಾಳಿ ಮಾಡಿ ಕೃಷ್ಣ ವಿಗ್ರಹವನ್ನು  ಎತ್ತಿಕೊಂಡು ಬಂದ. ಪಂದಾರ್‌ಪುರ್ ಮಂದಿರದಿಂದ  ವಿಠ್ಠಲ ವಿಗ್ರಹವನ್ನೂ ಲೂಟಿ ಮಾಡಿ ತಂದ.

6. 10ನೇ ಶತಮಾನದಲ್ಲಿ ರಾಷ್ಟ್ರ ಕೂಟರ ದೊರೆ ಮೂರನೇ ಇಂದ್ರನು ತನ್ನ ಶತ್ರುವಾದ ಹಿಂದೂ ರಾಜನನ್ನು ಮಣಿಸಿದ ಬಳಿಕ ಕಲ್ಪದಲ್ಲಿರುವ ಕಲಪ್ರಿಯ ಮಂದಿರವನ್ನು ಧ್ವಂಸ ಮಾಡಿದ. ತಮಿಳು ಭಾಗದಲ್ಲಿ ಅನೇಕ ಮಂದಿರಗಳನ್ನು ಒಡಿಸ್ಸಾ ಸೂರ್ಯವಂಶ  ಗಜಪತಿ ಸಾಮ್ರಾಜ್ಯದ ಸ್ಥಾಪಕ ಕಪಿಲೇಂದ್ರ ಧ್ವಂಸ ಮಾಡಿದ. ಹಾಗೆಯೇ  ಗೋಲ್ಕೊಂಡಾ ಸುಲ್ತಾನರ ಸೇನಾಧಿ ಪತಿಯಾಗಿದ್ದ ಮರಾಠಿ  ಬ್ರಾಹ್ಮಣ ಮುರಹರಿ ರಾವ್ ಎಂಬವ ಕೃಷ್ಣಾ ನದಿ ಪ್ರದೇಶವನ್ನು ಸುಲ್ತಾನರ ಅಧೀನಕ್ಕೆ ತಂದ ಬಳಿಕ ಅಹೋಬಿಮ್ ಮಂದಿರದ ಮೇಲೆ  ದಾಳಿ ಮಾಡಿ ಅಲ್ಲಿನ ವಿಗ್ರಹ ವನ್ನು ಸುಲ್ತಾನರಿಗೆ ಪಾರಿತೋಷಕವಾಗಿ ಸಮರ್ಪಿಸಿದ ಎಂಬ ಇತಿಹಾಸವೂ ಇದೆ. ಈ ಬಗ್ಗೆ,  sanctified vandalism as a political tool  ಎಂಬ ಶೀರ್ಷಿಕೆಯಲ್ಲಿ ಔಟ್‌ಲುಕ್ ಪತ್ರಿಕೆಯಲ್ಲಿ ಪ್ರಕಟವಾದ  ಬರಹದಲ್ಲಿ ಇನ್ನಷ್ಟು ವಿವರಗಳೂ ಇವೆ.

ನಿಜವಾಗಿ, ಯಾವುದೋ ಒಂದು ಕಾಲದಲ್ಲಿ ಮಂದಿರವೊಂದು  ಮಸೀದಿಯಾಗಿ ಮಾರ್ಪಟ್ಟಿದ್ದರೆ ಅಥವಾ ಬಸದಿಯೋ ಸ್ತೂಪವೋ  ಮಂದಿರವಾಗಿ ಬದಲಾಗಿದ್ದರೆ ಅದಕ್ಕೆ ಧಾರ್ಮಿಕ ಉದ್ದೇಶಕ್ಕಿಂತ ರಾಜಕೀಯ ಉದ್ದೇಶಗಳೇ ಮುಖ್ಯವಾಗಿದ್ದುವು. ರಾಜ ಧರ್ಮಭೀರುವಾಗಿರುವುದು ಕಡಿಮೆ. ಧರ್ಮಭೀರುವಾಗಿರುವ ರಾಜ ಇನ್ನೊಂದು ಧರ್ಮ ಸಂಕೇತಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳೂ  ಕಡಿಮೆ. ಅದರಲ್ಲೂ ಮುಸ್ಲಿಮ್ ದೊರೆಗಳಂತೂ ಧರ್ಮದ ಕಾರಣಕ್ಕಾಗಿ ಮಂದಿರಗಳ ಮೇಲೆ ದಾಳಿ ಮಾಡುವುದು ಮತ್ತೂ ಕಡಿಮೆ.  ಯಾಕೆಂದರೆ, ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರದಲ್ಲಿರಬೇಕಾದುದು ತನ್ನ ಅಸ್ತಿತ್ವ ಉಳಿವಿನ  ದೃಷ್ಟಿಯಿಂದ ಅವರಿಗೆ ಬಹಳ ಮುಖ್ಯ. ಆದರೆ ಗೆದ್ದ ರಾಜ ಸೋತ ರಾಜನ ರಾಜಧಾನಿಯ ಮಂದಿರವನ್ನು ಲೂಟಿ ಮಾಡುವುದು ಆ  ಕಾಲದ ಸಂಪ್ರದಾಯವೇ ಆಗಿರಬೇಕು. ಸಂಪತ್ತನ್ನು ದೋಚುವುದೇ ಅದರ ಮುಖ್ಯ ಗುರಿಯಾಗಿರಬೇಕು. ಇದು ನಾಗರಿಕರಿಗೂ ಚೆನ್ನಾಗಿ  ಗೊತ್ತಿರಬೇಕು. ಆದ್ದರಿಂದಲೇ, ಯಾವುದೇ ರಾಜನ ಮಂದಿರ ದರೋಡೆಗೆ ನಾಗರಿಕರಿಂದ ಪ್ರತಿರೋಧ ವ್ಯಕ್ತವಾದ ಉದಾಹರಣೆ ಇಲ್ಲವೇ  ಇಲ್ಲ. ಆದರೆ, ಮಸೀದಿಗಳಲ್ಲಿ ಸಂಪತ್ತನ್ನು ಕಾಪಿಡುವ ಪದ್ಧತಿ ಇಲ್ಲದೇ ಇರುವುದರಿಂದ ಅವು ದಾಳಿಗಳಿಂದ ಸುರಕ್ಷಿತವಾಗಿರುವ  ಸಾಧ್ಯತೆಯೂ ಇದೆ. ಅಂದಹಾಗೆ,

ಗ್ಯಾನ್‌ವಾಪಿ ವಿವಾದದ ಹಿಂದಿರುವುದೂ ರಾಜಕೀಯ ಹಿತಾಸಕ್ತಿಯೇ ಹೊರತು ಇನ್ನೇನಲ್ಲ.

No comments:

Post a Comment