ಏ.ಕೆ. ಕುಕ್ಕಿಲ
1. ಮಣಿಪುರದಲ್ಲಿ ಮುಸ್ಲಿಮರಿದ್ದಾರಾ?
2. ಅವರಿಗೂ ಮಣಿಪುರಿಗಳಿಗೂ ನಡುವೆ ಸಂಬಂಧ ಹೇಗಿದೆ?
ಮಣಿಪುರ ಹಿಂಸಾಚಾರ ಚರ್ಚೆಯ ನಡುವೆ ಅತೀ ಹೆಚ್ಚು ಕೇಳಿ ಬಂದ ಪ್ರಶ್ನೆಗಳಲ್ಲಿ ಇವುಗಳೂ ಸೇರಿವೆ.
1993 ಮೇ 3. ಮಣಿಪುರದ ಮುಸ್ಲಿಮರ ಪಾಲಿಗೆ ಕರಾಳ ದಿನ. ಇವತ್ತಿಗೂ ಮಣಿಪುರದ ಮುಸ್ಲಿಮರು ಮೇ 3ನ್ನು ಕಪ್ಪು ದಿನವಾಗಿ ಪರಿಗಣಿಸುತ್ತಾರೆ. ಪಂಗಾಲ್ ಹತ್ಯಾಕಾಂಡ ನಡೆದ ದಿನ ಇದು. ಪಂಗಾಲ್ ಎಂಬುದು ಮುಸ್ಲಿಮರನ್ನು ಮೇತಿ ಭಾಷೆಯಲ್ಲಿ ಸಂಬೋಧಿಸುವ ಹೆಸರು. ಮೇತಿ ಪಂಗಾಲ್ ಎಂದು ಇರುವಂತೆಯೇ ಮೇತಿ ಹಿಂದೂ, ಮೇತಿ ಕ್ರೈಸ್ತ ಎಂದೂ ಇದೆ. ಮೇತಿ ಹಿಂದೂ ಮತ್ತು ಮೇತಿ ಪಂಗಾಲ್ ಅಥವಾ ಮುಸ್ಲಿಮರ ನಡುವಿನ ಈ ಘರ್ಷಣೆಯಲ್ಲಿ 100 ಮಂದಿಯ ಹತ್ಯೆಯಾಗಿದೆ ಎಂಬುದು ಸರಕಾರದ ಲೆಕ್ಕಾಚಾರ. ಸರಕಾರೇತರ ಸಂಸ್ಥೆಗಳ ಪ್ರಕಾರ 140ರಷ್ಟು ಮಂದಿಯ ಹತ್ಯೆಯಾಗಿದೆ. ಮುಸ್ಲಿಮರೇ ಪ್ರಯಾಣಿಸುತ್ತಿದ್ದ ಬಸ್ಸಿಗೆ ಬೆಂಕಿ ಕೊಡಲಾಗಿದೆ. ಭೂವಿವಾದ ಈ ಮುಸ್ಲಿಮ್ ಹತ್ಯಾಕಾಂಡಕ್ಕೆ ಕಾರಣವೆಂದು ಹೇಳಲಾಗುತ್ತಿದ್ದರೂ ಇನ್ನೂ ಹಲವು ಕಾರಣಗಳನ್ನು ಮುಂದಿಡಲಾಗುತ್ತಿದೆ. ಮುಖ್ಯವಾಗಿ, ಮೇತಿ ಹಿಂದೂ ಪ್ರತ್ಯೇಕತಾವಾದಿಗಳು ಮುಸ್ಲಿಮರಿಂದ ಬಲವಂತದಿಂದ ಹಣ ಸಂಗ್ರಹಕ್ಕೆ ಇಳಿದುದು ಮತ್ತು ಅವರಲ್ಲಿ ಓರ್ವನನ್ನು ಮುಸ್ಲಿಮರು ಹತ್ಯೆಗೈದುದು ಇದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ.
ಸಾಮಾನ್ಯವಾಗಿ, ಮಣಿಪುರದ ಮುಸ್ಲಿಮರ ಇತಿಹಾಸವನ್ನು 1604ರಿಂದ ಲೆಕ್ಕ ಹಾಕಲಾಗುತ್ತದೆ. ಮಣಿಪುರವನ್ನು ಆಳುತ್ತಿದ್ದ ಖಾಗೆಂಬ ಎಂಬ ರಾಜನ ಜೊತೆ ಆತನ ಸಹೋದರ ಸೆನೆಂಗ್ ಬಾನಿಗೆ ಭಿನ್ನಾಭಿಪ್ರಾಯ ತಲೆದೋರುತ್ತದೆ. ಆದ್ದರಿಂದ ತನ್ನ ಸಹೋದರನನ್ನು ಮಣಿಸುವುದಕ್ಕಾಗಿ ಸೈನಿಕ ನೆರವು ನೀಡುವಂತೆ ಕಚಾರಿ ರಾಜ ದಿಮ್‌ಶಾ ಪ್ರಸಾಪಿಲ್‌ಗೆ ಈ ಸೆನೆಂಗ್‌ಬಾ ಮನವಿ ಮಾಡುತ್ತಾನೆ. ಆದರೆ ಖಾಗೆಂಬಾನ ಸಾಮರ್ಥ್ಯ ಗೊತ್ತಿದ್ದ ದಿಮ್‌ಶಾ, ತಾನೋರ್ವನೇ ದಂಡೆತ್ತಿ ಹೋದರೆ ಗೆಲುವು ಸಾಧ್ಯವಿಲ್ಲ ಎಂದು ಅಂದುಕೊಳ್ಳುತ್ತಾನೆ ಮತ್ತು ತರಫ್ ಪ್ರದೇಶದ ರಾಜ ಮುಹಮ್ಮದ್ ನಝೀರ್‌ನನ್ನು ನೆರವಾಗುವಂತೆ ಕೋರುತ್ತಾನೆ. ಹೀಗೆ ನಝೀರ್ ತನ್ನ ಸಹೋದರ ಮುಹಮ್ಮದ್ ಸಾನಿಯ ನೇತೃತ್ವದಲ್ಲಿ ಸೇನಾಪಡೆಯನ್ನು ಕಳುಹಿಸಿಕೊಡುತ್ತಾನೆ. ಆದರೆ,
ಈ ಸೇನೆಗೆ ರಾಜ ಖಾಗೆಂಬಾ ಪಡೆಯನ್ನು ಸೋಲಿಸಲು ಸಾಧ್ಯವಾಗುವುದಿಲ್ಲ ಮತ್ತು ಮುಹಮ್ಮದ್ ಸಾನಿ ಮತ್ತು 1000 ಸೈನಿಕರನ್ನು ಬಂಧಿಸಲಾಗುತ್ತದೆ. ಬಳಿಕ ಮಣಿಪುರದಲ್ಲೇ ಉಳಕೊಳ್ಳಲು ಈ ಸೈನಿಕರಿಗೆ ರಾಜ ಖಾಗೆಂಬಾ ಅನುಮತಿಯನ್ನು ನೀಡುತ್ತಾನೆ. ಈ ನಡುವೆ ಬರ್ಮಾದ ರಾಜ ಮಣಿಪುರದ ಮೇಲೆ ದಾಳಿ ಮಾಡುತ್ತಾನೆ. ಆಗ ರಾಜ ಖಾಗೆಂಬಾ ಈ 1000 ಸೈನಿಕರಲ್ಲಿ ನೆರವಾಗುವಂತೆ ವಿನಂತಿಸುತ್ತಾನೆ. ಹೀಗೆ ಮೇತಿ ಸೇನೆಯ ಜೊತೆ ಸೇರಿ ಬರ್ಮಾ ಸೇನೆಯ ವಿರುದ್ಧ ಈ 1000 ಸೈನಿಕರು ಹೋರಾಡಿ ಜಯ ತಂದು ಕೊಡುತ್ತಾರೆ. ಈ ಗೆಲುವು ರಾಜನಲ್ಲಿ ಅಪಾರ ಸಂತಸವನ್ನು ತರುತ್ತದೆ ಮತ್ತು ಈ 1000 ಸೈನಿಕರನ್ನು ಪಂಗಾಲ್ ಎಂದು ಕರೆಯುತ್ತಾನೆ. ಪಂಗಾಲ್ ಎಂದರೆ ಮೇತಿ ಭಾಷೆಯಲ್ಲಿ ಶಕ್ತಿ ಎಂದೂ ಅರ್ಥವಿದೆ. ಮಾತ್ರವಲ್ಲ, ಆವರೆಗೆ ಬರೇ ಉಳಕೊಳ್ಳುವುದಕ್ಕಷ್ಟೇ ಸ್ವಾತಂತ್ರ‍್ಯವನ್ನು ಪಡೆದಿದ್ದ ಈ ಪಂಗಾಲ್‌ಗಳಿಗೆ ಮೇತಿ ಹಿಂದೂಗಳನ್ನು ಮದುವೆಯಾಗುವ ಮತ್ತು ಭೂಮಿ ಹೊಂದುವ ಸ್ವಾತಂತ್ರ‍್ಯವನ್ನೂ ನೀಡುತ್ತಾನೆ. ಹೀಗೆ ಪಂಗಾಲ್‌ಗಳು ಅಥವಾ ಮುಸ್ಲಿಮರು ಮಣಿಪುರದ ಭಾಗವಾಗುತ್ತಾರೆ ಎಂಬ ವರದಿಯೂ ಇದೆ. ಹಾಗೆಯೇ,
ಮೊಘಲ್ ದೊರೆ ಔರಂಗಝೇಬ್ ನಿಂದ ತಪ್ಪಿಸಿಕೊಂಡು ಬಂದಿದ್ದ ಶಾ ಶುಜಾ ಎಂಬವನು ಇದೇ ಮಣಿಪುರದಲ್ಲಿ ಆಶ್ರಯ ಪಡೆದಿದ್ದ ಎಂಬ ವಿವರವೂ ಇದೆ. ಔರಂಗಝೇಬನ ಸಹೋದರ ಈ ಶಾ ಶುಜಾ. ಈತ ಮೊದಲು ಬರ್ಮಾದ ಅರ್ಕಾನ್‌ಗೆ ಬಂದ. ಆದರೆ ಬರ್ಮಾದ ರಾಜ ಈತನಿಗೆ ಆಶ್ರಯ ಕೊಡಲು ವಿಫಲವಾದಾಗ ತ್ರಿಪುರ ಪ್ರವೇಶಿಸಿದ. ಆದರೆ ಆತನನ್ನು ಒಪ್ಪಿಸುವಂತೆ ತ್ರಿಪುರ ರಾಜನ ಮೇಲೆ ಔರಂಗಝೇಬ್ ಒತ್ತಡ ಹಾಕಿದುದನ್ನು ಅರಿತುಕೊಂಡ ಶಾ ಶುಜ ಅಂತಿಮವಾಗಿ ಮಣಿಪುರದಲ್ಲಿ ಆಶ್ರಯ ಪಡೆದ ಎಂದೂ ಹೇಳಲಾಗುತ್ತಿದೆ. ಹಾಗಂತ, ಶಾ ಶುಜಾ ಒಬ್ಬನೇ ಇಲ್ಲಿಗೆ ಬಂದಿರಲಿಲ್ಲ. ಆತನ ಜೊತೆ ಕುಟುಂಬ-ಪರಿವಾರವೂ ಇತ್ತು. ಇವರನ್ನೆಲ್ಲ ಮಂಗಲ್ಸ್ ಅಥವಾ ಮಂಗ್‌ಕೋನ್ ಎಂದು ಕರೆಯಲಾಗುತ್ತಿತ್ತು ಮತ್ತು ಇವರ ಪೀಳಿಗೆ ಮಕಕ್ ಮಯೂಮ್ ವಂಶವಾಗಿ ಬೆಳೆಯಿತು. ಮಣಿಪುರ ರಾಜನ ಆಸ್ಥಾನದಲ್ಲಿ ಇವರಿಗೆ ಮಂಗಲ್ ಸಂಗ್ಲೇನ್ ಎಂಬ ಹೆಸರಿನಲ್ಲಿ ಪ್ರತ್ಯೇಕ ಕಚೇರಿಯೂ ಇತ್ತು ಎಂದೂ ಹೇಳಲಾಗುತ್ತಿದೆ.
ಆದರೆ,
2011 ಮೇ 17ರಂದು ಮಣಿಪುರ ರಾಜಧಾನಿ ಇಂಫಾಲ್‌ನ ಕ್ಲಾಸಿಕ್ ಹೊಟೇಲ್ ಸಭಾಂಗಣದಲ್ಲಿ ಬಿಡುಗಡೆಯಾದ ‘ಮಣಿಪುರಿ ಮುಸ್ಲಿಮ್ಸ್: ಹಿಸ್ಟಾರಿಕಲ್ ಪರ್ಸ್ಪೆಕ್ಟಿವ್ಸ್ 615-2000’ ಎಂಬ ಕೃತಿಯು ಈ ಮೇಲಿನ ವಿವರಗಳಿಗಿಂತ ಪೂರ್ವದಲ್ಲಿ ನಡೆದ ಬೆಳವಣಿಗೆಯನ್ನು ಅತ್ಯಂತ ಅಧಿಕಾರಯುತವಾಗಿ ಮತ್ತು ದಾಖಲೆಗಳ ಸಹಿತ ವಿವರಿಸುತ್ತದೆ.
ನಿಜವಾಗಿ, ಇಸ್ಲಾಮ್ ಮಣಿಪುರಕ್ಕೆ ಬಂದಿರುವುದು 1600ರಲ್ಲಲ್ಲ. ಅದಕ್ಕಿಂತ ಸಾವಿರ ವರ್ಷಗಳ ಹಿಂದೆ 615ರಲ್ಲಿ ಎಂಬುದನ್ನು ಈ ಕೃತಿ ವಿವರವಾಗಿ ಮುಂದಿಡುತ್ತದೆ. ಮಣಿಪುರದಲ್ಲಿ ಅರಿಬಮ್ ಎಂಬ ಮುಸ್ಲಿಮ್ ಮನೆತನ ಇದೆ. ಇದನ್ನು ಸೆಗಾಯ್ ಎಂದೂ ಕರೆಯುತ್ತಾರೆ. ಈ ಮನೆತನದ ಜೈವಿಕ ವಂಶಾವಳಿಯು ಪ್ರವಾದಿ(ಸ) ಚಿಕ್ಕಪ್ಪ ಹಂಝ(ರ) ಮತ್ತು ಸಅದ್ ಬಿನ್ ಅಬೀ ವಕ್ಕಾಸ್‌ರಲ್ಲಿಗೆ (ರ) ಹೋಗಿ ತಲುಪುತ್ತದೆ. ಅರಿಬಮ್ ಎಂಬುದು ಅರಿಬಾಅï ಎಂಬ ಮೂಲ ಅರೇಬಿಕ್ ಪದದ ಅಪಭ್ರಂಶ ಪದ. ಶುದ್ಧ ಅರಬಿಗಳು ಎಂದು ಇದರರ್ಥ ಎಂದು ಈ ಕೃತಿಯಲ್ಲಿ ಫಾರೂಖ್ ಅಹ್ಮದ್ ವಿವರಿಸುತ್ತಾರೆ.
ಪ್ರವಾದಿ ಚಿಕ್ಕಪ್ಪ ಹಂಝ ಅವರು ಇಸವಿ 610ರಲ್ಲಿ ಮಣಿಪುರ ಪ್ರವೇಶಿಸುತ್ತಾರೆ. ಆದರೆ ಸಅದ್ ಬಿನ್ ಅಬೀ ವಕ್ಕಾಸ್‌ರು ಹಂಝರ ಜೊತೆ ಬಂದಿರುವುದಿಲ್ಲ. ಇಸವಿ 615ರಲ್ಲಿ ಮೂವರು ಸಂಗಾತಿಗಳೊಂದಿಗೆ ಸಅದ್ ಬಿನ್ ಅಬೀ ವಕ್ಕಾಸ್‌ರು ಚೀನಾದತ್ತ ಮುಖ ಮಾಡಿ ಅಬಿಸೀನಿಯಾದಿಂದ ಹೊರಡುತ್ತಾರೆ ಮತ್ತು ಈಗಿನ ಬಾಂಗ್ಲಾದ ಚಿತ್ತಗಾಂಗ್ ಮೂಲಕ ಮಣಿಪುರ ಪ್ರವೇಶಿಸುತ್ತಾರೆ. ಹಾಗೆಯೇ ಇನ್ನೊಂದು ಭೇಟಿಯೂ ಮಣಿಪುರಕ್ಕೆ ನಡೆಯುತ್ತದೆ. ಅದು ಇಸ್ಲಾಮಿನ ನಾಲ್ಕನೇ ಖಲೀಫಾ ಅಲಿಯವರ ಎರಡನೇ ಪತ್ನಿ ಕೌಲ ಬಿಂತಿ ಜಾಫರ್ ಅವರ ಇಬ್ಬರು ಮಕ್ಕಳಲ್ಲಿ ಹಿರಿಯವರಾದ ಮುಹಮ್ಮದ್ ಹನೀಫಾ ಅವರ ಭೇಟಿ. ಇಸವಿ 680ರಲ್ಲಿ ಇವರು ಮಣಿಪುರಕ್ಕೆ ಬರುತ್ತಾರೆ. ಖಿಲಾಫತ್‌ನ ವಿಷಯದಲ್ಲಿ ನಡೆದ ವಿವಾದದ ಬಳಿಕ ಅವರು ಒಂದು ಗುಂಪಿನೊಂದಿಗೆ ಮ್ಯಾನ್ಮಾರ್‌ನ ರಾಕೈನ್ ಬಂದು ನೆಲೆಸುತ್ತಾರೆ ಮತ್ತು ಆ ಬಳಿಕ ಮಣಿಪುರಕ್ಕೆ ಭೇಟಿ ಕೊಡುತ್ತಾರೆ ಎಂದೂ ಹೇಳಲಾಗುತ್ತಿದೆ.
ಅದೇವೇಳೆ,
7ನೇ ಶತಮಾನದಲ್ಲಿ ಮಣಿಪುರವನ್ನು ಆಳುತ್ತಿದ್ದ ಸಫಾಂಗ್ಬಾ ರಾಜನ ಕಾಲದಲ್ಲಿ ಮುಸ್ಲಿಮ್ ಸಂತನೋರ್ವ ಭಾಷಣ ಮಾಡಿರು ವುದಾಗಿ ಸ್ಥಳೀಯ ಭಾಷೆಯಲ್ಲಿ ಬರೆಯಲ್ಪಟ್ಟಿರುವ ದಾಖಲೆಯೂ ಇದೆ. ಈ ರಾಜ ಇಸವಿ 624ರ ವರೆಗೆ ರಾಜ್ಯಭಾರ ಮಾಡಿರು ವುದರಿಂದ ಆ ಸಂತ ಒಂದೋ ಹಂಝ(ರ) ಅಥವಾ ಸಅದ್ ಬಿನ್ ಅಬೀ ವಕ್ಕಾಸ್ ಎಂಬ ಅಭಿಪ್ರಾಯವೂ ಇದೆ. ಆದರೆ ಹಂಝ ಅವರು ಮಣಿ ಪುರದಲ್ಲೇ ನೆಲೆಸುವುದಿಲ್ಲ. ಅವರು ಮರಳಿ ಮದೀನಾಕ್ಕೆ ಹೋಗುತ್ತಾರಲ್ಲದೇ, ಇಸವಿ 625ರಲ್ಲಿ ಉಹುದ್ ಕಾಳಗದಲ್ಲಿ ಹುತಾತ್ಮರಾಗುತ್ತಾರೆ. ಒಂದುವೇಳೆ,
ಆ ಭಾಷಣ ಮಾಡಿದ ಸಂತ ಹಂಝ ಅಲ್ಲದೇ ಇದ್ದರೆ ಸಅದ್ ಬಿನ್ ಅಬೀ ವಕ್ಕಾಸ್ ಆಗಿರುವ ಸಾಧ್ಯತೆಯೂ ಇದೆ. ಯಾಕೆಂದರೆ, ಸಅದ್ ಬಿನ್ ಅಬೀ ವಕ್ಕಾಸ್‌ರು ಬೇ ಆಫ್ ಬೆಂಗಾಲ್ ಅಥವಾ ಸಮುದ್ರ ಮಾರ್ಗ ಮೂಲಕ ಇಸವಿ 615ರಲ್ಲಿ ಮಣಿಪುರಕ್ಕೆ ಬಂದಿದ್ದಾರೆ. ಹೀಗೆ ಬಂದ ಅವರು ಕೂಡಾ ಅಲ್ಲೇ ನೆಲೆ ನಿಲ್ಲಲಿಲ್ಲ. ಮರಳಿ ಅರಬ್ ದೇಶಕ್ಕೆ ಹೊರಟು ಹೋದವರು ಬರೋಬ್ಬರಿ 27 ವರ್ಷಗಳ ಬಳಿಕ ಮತ್ತೆ ಚೀನಾ ಕರಾವಳಿ ಪ್ರದೇಶಕ್ಕೆ ಮರಳಿ ಬರುತ್ತಾರೆ ಮತ್ತು ಹೀಗೆ ಬರುವಾಗ ಅವರು ಕುರ್‌ಆನ್ ಪ್ರತಿಯನ್ನೂ ತರುತ್ತಾರೆ. ಚೀನಿ ಮುಸ್ಲಿಮರು ಅಥವಾ ಹುಯಿ ಮುಸ್ಲಿಮರ ಪ್ರಕಾರ ಸಅದ್ ಬಿನ್ ಅಬೀ ವಕ್ಕಾಸ್ ಅಲ್ಲೇ ನಿಧನರಾಗಿದ್ದು ಅವರ ಸಮಾಧಿಯೂ ಅಲ್ಲೇ ಇದೆ. ಆದರೆ, ಈ ಬಗ್ಗೆ ಸ್ಪಷ್ಟತೆಯಿಲ್ಲ ಎಂದೂ ಹೇಳಲಾಗುತ್ತದೆ. ಅದು ಸಅದ್ ಬಿನ್ ಅಬೀ ವಕ್ಕಾಸ್ ಅವರ ಪುತ್ರನ ಸಮಾಧಿಯಾಗಿದ್ದು, ಅವರು ಅಲ್ಲೇ ಮದುವೆಯಾಗಿ ಅಲ್ಲೇ ನಿಧನರಾಗಿದ್ದಾರೆ ಎಂಬ ಮಾಹಿತಿಯನ್ನೂ ಪುಸ್ತಕ ನೀಡುತ್ತದೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಣಿಪುರ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಹಲೀಮ್ ಚೌಧರಿ ಮುಖ್ಯ ಅತಿಥಿಯಾಗಿದ್ದರು ಮತ್ತು ಮಿಲ್ಲಿ ಗಝೆಟ್‌ನ ಸಂಪಾದಕ ಡಾ| ಝಫರುಲ್ ಇಸ್ಲಾಮ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಅಂದಹಾಗೆ,
2011ರ ಜನಗಣತಿ ಪ್ರಕಾರ, ಮಣಿಪುರದಲ್ಲಿ 2,39,886 ಮುಸ್ಲಿಮರಿದ್ದಾರೆ. 2011ರ ಬಳಿಕ ಜನಗಣತಿ ನಡೆಯದೇ ಇರುವು ದರಿಂದ, ಪ್ರಸಕ್ತ ವಿವರಗಳು ಲಭ್ಯವಿಲ್ಲ. ಇದು ಮಣಿಪುರದ ಒಟ್ಟು ಜನಸಂಖ್ಯೆಯ ಕೇವಲ 8.4% ಮಾತ್ರ. ಹೆಚ್ಚಿನ ಮುಸ್ಲಿಮರು ಇಂಫಾಲ್ ಮತ್ತು ತೌಬಾಲ್‌ನಲ್ಲಿ ವಾಸಿಸುತ್ತಿದ್ದಾರೆ. ಹಾಗೆಯೇ, ಮಣಿಪುರಿ ಮುಸ್ಲಿಮರು ಅಸ್ಸಾಮ್‌ನ ಕಚಾರ್ ಮತ್ತು ಹೊಬಾಯ್, ತ್ರಿಪುರಾದ ಕೊಮಾಲ್ ಪುರ್‌ನಲ್ಲೂ ವಾಸವಿದ್ದಾರೆ. 1815ರಲ್ಲಿ ಬರ್ಮಾದ ರಾಜನು ಮಣಿಪುರದ ಮೇಲೆ ದಾಳಿ ಮಾಡಿದ್ದು, ಆಗ ತಪ್ಪಿಸಿಕೊಂಡು ಹೋದ ಮುಸ್ಲಿಮರು ಈ ಎರಡು ರಾಜ್ಯಗಳಲ್ಲಿ ಹಂಚಿಹೋಗಿದ್ದಾರೆ ಎಂಬ ಮಾಹಿತಿಗಳೂ ಸಿಗುತ್ತವೆ.
ಮಣಿಪುರಿ ಮುಸ್ಲಿಮ್ ಪುರುಷರು ಸಾಂಪ್ರದಾಯಿಕವಾಗಿ ಲುಂಗಿ ಮತ್ತು ಪೈಜಾಮ ಧರಿಸುತ್ತಾರೆ. ಮಹಿಳೆಯರು ಸಲ್ವಾರ್ ಕಮೀಝï ಮತ್ತು ಫಾನೆಕ್ ಧರಿಸುತ್ತಾರೆ. ಹಾಗಂತ, ಮೇತಿ ಪಂಗಲ್ ಎಂಬ ಹೆಸರಲ್ಲಿ ಮುಸ್ಲಿಮರು ಒಂದು ಸಮುದಾಯವಾಗಿ ಗುರುತಿಸಿಕೊಳ್ಳುತ್ತಿದ್ದರೂ ಇವರೆಲ್ಲ ಆಂತರಿಕವಾಗಿ ಬೇರೆ ಬೇರೆ ಮನೆತನದೊಂದಿಗೆ ಜೋಡಿಕೊಂಡಿದ್ದಾರೆ. ಆದರೆ,
ದೇಶದ ಸದ್ಯದ ದ್ವೇಷ ರಾಜಕಾರಣದ ಪ್ರಭಾವದಿಂದ ಮಣಿಪುರ ಮುಸ್ಲಿಮರೂ ಹೊರತಾಗಿಲ್ಲ. ಇಸ್ಲಾಮೋಫೋಬಿಯಾದ ಪ್ರಭಾವ ಇಲ್ಲೂ ಇದೆ. ಮುಸ್ಲಿಮರನ್ನು ಕಳ್ಳರು, ಮಾದಕ ವಸ್ತು ಸಾಗಾಟಗಾರರು, ಸಮಾಜ ವಿರೋಧಿಗಳು ಎಂದು ಮುಂತಾಗಿ ಬಿಂಬಿಸುವ ಶ್ರಮಗಳು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಮುಹಮ್ಮದ್ ಫಾರೂಕ್ ಖಾನ್ ಎಂಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ಥಳಿಸಿರುವ ವೀಡಿಯೋ 2018ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆತ ಸ್ಕೂಟರ್ ಕದ್ದಿದ್ದಾನೆ ಎಂಬ ಆರೋಪದಲ್ಲಿ ಈ ಕೃತ್ಯ ಎಸಗಲಾಗಿತ್ತು. ಆದರೆ, ಬಳಿಕ ಆತ ಕಳ್ಳನಲ್ಲ, ತಪ್ಪಾಗಿ ಆತನನ್ನು ಲಿಂಚಿಂಗ್ ಮಾಡಲಾಗಿದೆ ಎಂಬುದು ಬಹಿರಂಗವಾಯಿತು. 2017ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಮುಸ್ಲಿಮರ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವ ಮತ್ತು ವ್ಯವಸ್ಥಿತವಾಗಿ ಅಂಚಿಗೆ ತಳ್ಳುವ ಪ್ರಯತ್ನಗಳು ನಡೆಯುತ್ತಲೇ ಇದ್ದುವು. ಸರಕಾರಿ ಸಂಸ್ಥೆಗಳಲ್ಲಿ ಮತ್ತು ಶಾಸನ ಸಭೆಗಳಲ್ಲಿ ಮುಸ್ಲಿಮರಿಗೆ ಅತ್ಯಂತ ಕಡಿಮೆ ಪ್ರಾತಿ ನಿಧ್ಯವಷ್ಟೇ ಇದೆ. ಸರ್ವ ಶಿಕ್ಷಣ್ ಅಭಿಯಾನ್ ಯೋಜನೆಯಡಿ ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿ ಹೆಚ್ಚಿನವುಗಳನ್ನು ಮೇತಿ ಹಿಂದೂ ಸಮುದಾಯಗಳು ಇರುವ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪವೂ ಇದೆ. 2018ರಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕವಂತೂ ಮುಸ್ಲಿಮ್ ವಿರೋಧಿ ಪ್ರಚಾರಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. 2018ರಲ್ಲಿ ರಚಿಸಲಾದ ‘ಪ್ರೊಟೆಕ್ಷನ್ ಆಫ್ ಮಣಿಪುರ್ ಪೀಪಲ್’ ಮಸೂದೆಯ ಕರಡು ರಚನಾ ಸಮಿತಿಯಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯವನ್ನೇ ನಿರಾಕರಿಸಲಾಗಿತ್ತು. ಮೇತಿ ಮುಸ್ಲಿಮರು ರೋಹಿಂಗ್ಯನ್ನರಿಗೆ ಆಶ್ರಯ ಕೊಡುತ್ತಿದ್ದಾರೆ ಎಂಬ ಸುಳ್ಳು ಸು ದ್ದಿಯನ್ನು ಅತ್ಯಂತ ವ್ಯವಸ್ಥಿತವಾಗಿ ಹರಡಲಾಗುತ್ತಿದೆ. ಅಷ್ಟಕ್ಕೂ,
‘ಮಣಿಪುರ ಹಿಂಸೆಯ ಗುರಿ ಕ್ರೈರಾಗಿರಲಿಲ್ಲ, ಮುಸ್ಲಿಮರಾಗಿದ್ದರು. ಆದರೆ, ಕೊನೆಹಂತದಲ್ಲಿ ಇದರಲ್ಲಿ ಕೆಲವು ಬದಲಾವಣೆಗಳನ್ನು ತರಲಾಯಿತು ಮತ್ತು ಕ್ರೈಸ್ತರನ್ನು ಗುರಿ ಮಾಡಲಾಯಿತು. ಭೂಮಿ ವಶಪಡಿಸಿಕೊಳ್ಳುವ ಉದ್ದೇಶವೇ ಈ ಹಿಂಸಾಚಾರದ ಹಿಂದಿತ್ತು. ಮಣಿಪುರ ಇತಿಹಾಸದಲ್ಲಿ ಎಂದೂ ಮೇತಿ ಹಿಂದೂಗಳು ಮತ್ತು ಕುಕಿಗಳ ನಡುವೆ ಘರ್ಷಣೆ ನಡೆದೇ ಇಲ್ಲ..’ ಎಂದು ಕಳೆದವಾರ ಮಣಿಪುರಕ್ಕೆ ಭೇಟಿ ನೀಡಿ ಮರಳಿದ ಫಾದರ್ ಜಾನ್ಸನ್ ಹೇಳಿರುವುದೇ ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತದೆ. ಅಚ್ಚರಿ ಏನೆಂದರೆ,
1993 ಮೇ 3ರಂದು ಪಂಗಾಲ್ ಹತ್ಯಾಕಾಂಡ ನಡೆದಿತ್ತು. ಇದೀಗ 2023 ಮೇ 3ರಂದು ಮಣಿಪುರ ಮತ್ತೆ ಉರಿದಿದೆ. ಇದು ಕಾಕತಾಳೀಯವೋ ಅಥವಾ ಯೋಜನಾಬದ್ಧವೋ?
No comments:
Post a Comment