Monday, March 2, 2020

ಆ ಆಮೆಗೆ ಹುಟ್ಟಿದೂರಿಗೆ ದಾರಿ ತೋರುವವನಾರೋ?



ಜಗತ್ತು ಎಷ್ಟು ಅದ್ಭುತ ಅನಿಸ್ತು.
ಮೊನ್ನೆ ಯೂಟ್ಯೂಬ್ ವೀಡಿಯೋಗಳ ಮೇಲೆ ಕಣ್ಣಾಡಿಸ್ತಾ ಇದ್ದಾಗ ಆ ಆಮೆ ಕಾಣಿಸಿಕೊಂಡ್ತು. ಆಮೆಯ ಬಗ್ಗೆ ವಿಪರೀತ ಕುತೂಹಲವೇನೂ ನನ್ನಲ್ಲಿ ಇರಲಿಲ್ಲ. ಆಮೆಗಳು ಸುಮಾರು 80 ವರ್ಷಗಳ  ವರೆಗೆ ಬದುಕ್ತವೆ ಎಂಬ ಮಾಹಿತಿಯನ್ನು ಹೊರತುಪಡಿಸಿ ಹೆಚ್ಚಿನ ವಿವರಗಳೂ ನನ್ನಲ್ಲಿರಲಿಲ್ಲ. ಕುತೂಹಲಕ್ಕೆಂದು ಆ ವೀಡಿಯೋವನ್ನು ವೀಕ್ಷಿಸುತ್ತಾ ಹೋದಂತೆ, ಕುತೂಹಲ ಇಮ್ಮಡಿ ಗೊಳ್ಳುತ್ತಾ  ಹೋಯಿತು. ಅತ್ಯಂತ ನಿಧಾನಗತಿಯಿಂದ ಚಲಿಸುವ ಮತ್ತು ಒಂದು ರೀತಿಯಲ್ಲಿ ಅತ್ಯಂತ ಉದಾಸೀನ ಪ್ರಾಣಿಯಂತೆ ಕಾಣುವ ಆಮೆಯು ತನ್ನ ಒಡಲಲ್ಲಿ ಇಷ್ಟೊಂದು ಒಳರಹಸ್ಯಗಳನ್ನು  ಹುದುಗಿಸಿಟ್ಟಿದೆಯೇ ಎಂದು ಆಶ್ಚರ್ಯವಾಯಿತು. ವೀಡಿಯೋ ವೀಕ್ಷಿಸುವುದನ್ನು ನಿಲ್ಲಿಸಿ ಆ ಆಮೆಯ ಬಗ್ಗೆ ಮಾಹಿತಿಗಳನ್ನು ಹುಡುಕತೊಡಗಿದೆ. ಆಶ್ಚರ್ಯ, ಅಚ್ಚರಿ, ಕುತೂಹಲಗಳ ಜೊತೆಜೊತೆಗೇ ಆಳ  ಚಿಂತನೆಗೆ ಹಚ್ಚುವ ವಿಶಿಷ್ಟ ಜೀವಿಯಾಗಿ ಆಮೆ ನನ್ನೊಳಗನ್ನು ಸೇರಿಕೊಂಡಿತು. ಚಿಂತನೆಗೆ ಹಚ್ಚಿತು. ನಾನು ವೀಕ್ಷಿಸಿದ ಆಮೆ ಒಮಾನ್ ದೇಶದ್ದು. ಅಲ್ಲಿನ ಅಲ್ ಜಿನ್ಝ್ ಎಂಬ ಪ್ರದೇಶದ ಬೀಚ್‍ನಲ್ಲಿ  ಕಾಣಿಸಿಕೊಳ್ಳುವ ಆಮೆ.
ಈ ಆಮೆಗಳ ಬದುಕೇ ಬಲು ವಿಚಿತ್ರ.
ತಡರಾತ್ರಿಯಾದ ಕೂಡಲೇ ಅಲ್ ಜಿನ್ಝ್ ಪ್ರದೇಶದ ಸಮುದ್ರ ದಿಂದ ಗರ್ಭಿಣಿ ಆಮೆಗಳು ತೀರ ಪ್ರದೇಶಕ್ಕೆ ತೆವಳಿಕೊಂಡಂತೆ ಬರುತ್ತವೆ. ಅದರ ಹೊಟ್ಟೆಯಲ್ಲಿ ಸುಮಾರು 100ರಷ್ಟು ಮೊಟ್ಟೆ ಗಳಿರುತ್ತವೆ.  ಆದ್ದರಿಂದಲೇ, ಗರ್ಭ ಧರಿಸಿರುವ ಮತ್ತು ಧರಿಸಿಲ್ಲದ ಆಮೆಗಳ ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಾಣಿಸುತ್ತವೆ. ಹೀಗೆ ತೆವಳಿಕೊಂಡಂತೆ ಬರುವ ಆಮೆ ದಾರಿಯುದ್ದಕ್ಕೂ ಕಣ್ಣನ್ನು ಅತ್ತಿತ್ತ ತಿರುಗಿಸುತ್ತಲೇ  ಇರುತ್ತದೆ. ಕೊನೆಗೆ ಅದು ಒಂದು ಸ್ಥಳದಲ್ಲಿ ನಿಲ್ಲುತ್ತದೆ. ಅತ್ತಿತ್ತ ನೋಡಿ ಮರಳನ್ನು ಅಗೆಯಲು ಪ್ರಾರಂಭಿಸುತ್ತದೆ. ಅನುಮಾನ ಬಂದಾಗಲೆಲ್ಲ ಅದು ಅಗೆಯುವುನ್ನು ನಿಲ್ಲಿಸಿ ಕಣ್ಣನ್ನು ಅತ್ತಿತ್ತ ಹೊರಳಿಸಿ  ಪರಿಶೀಲನೆ ನಡೆಸುವುದಿದೆ. ಹೀಗೆ ಪರಿಶೀಲಿಸುತ್ತಾ ಅಗೆಯುತ್ತಾ ಆಳ ಗುಂಡಿಯೊಂದು ನಿರ್ಮಾಣವಾದ ಬಳಿಕ ಮೊಟ್ಟೆಗಳನ್ನಿಡುತ್ತವೆ ಮತ್ತು ಅಗೆಯುವು ದಕ್ಕಿಂತ ಮೊದಲು ಆ ಸ್ಥಳ ಹೇಗಿತ್ತೋ ಅದೇ  ರೀತಿಯಲ್ಲಿ ಗುಂಡಿಯನ್ನು ಮರಳಿನಿಂದ ಮುಚ್ಚಿಬಿಡುತ್ತದೆ. ಆದರೆ, ಅಲ್ಲಿಗೇ ಅದರ ಕರ್ತವ್ಯ ಮುಗಿಯುವುದಿಲ್ಲ. ಇಲ್ಲೇ  ಇರುವುದು ಕುತೂಹಲ. ಅದು ಆ ಗುಂಡಿಯಿಂದ ತುಸು ದೂರದಲ್ಲಿ ಇಂಥದ್ದೇ   ಇನ್ನೊಂದು ಗುಂಡಿಯನ್ನು ತೋಡುತ್ತದೆ. ಅಷ್ಟಕ್ಕೂ, ಪುಟ್ಟ ಪುಟ್ಟ ಕಾಲುಗಳಿರುವ ಮತ್ತು ಭಾರ ದೇಹದ ಆಮೆಗೆ ಗುಂಡಿ ತೋಡುವುದು ಸುಲಭ ಅಲ್ಲ. ಮರಳನ್ನು ಸರಿಸಿ ಗುಂಡಿ ತೋಡುತ್ತಾ  ಹೋದಂತೆಲ್ಲಾ  ಸರಿಸಿದ ಮರಳು ಮತ್ತೆ ಮತ್ತೆ ಗುಂಡಿಯೊಳಗೆ ಜಾರಿ ಬೀಳುತ್ತಲೂ ಇರುತ್ತದೆ. ಅವನ್ನು ಸಹಿಸಿಕೊಳ್ಳುತ್ತಾ, ಹೊರ ಹಾಕುತ್ತಾ ಗುಂಡಿ ತೋಡಬೇಕು. ಗುಂಡಿ ಆಳವಾಗುತ್ತಾ ಹೋದಷ್ಟೂ  ಈ ಸಮಸ್ಯೆಯ ಪ್ರಮಾಣ ಹಿಗ್ಗುತ್ತಾ ಹೋಗುತ್ತದೆ. ಹೀಗೆ ಸೆಣಸಾಡಿ ಸೆಣಸಾಡಿ ಇನ್ನೊಂದು ಗುಂಡಿಯನ್ನು ಅದು ಸಿದ್ಧಪಡಿಸುತ್ತದೆ. ಆದರೆ ಈ ಗುಂಡಿಯನ್ನು ಅದು ಮೊದಲಿನ ಗುಂಡಿಯಂತೆ ಮರಳಿ ನಿಂದ ಮುಚ್ಚುವುದಿಲ್ಲ. ಬಾಹ್ಯದೃಷ್ಟಿಗೆ ಗೋಚರವಾಗುವಂತೆ ಆ ಗುಂಡಿಯನ್ನು ಹಾಗೆಯೇ ಇರಗೊಟ್ಟು ಸೂರ್ಯೋದಯಕ್ಕಿಂತ ಮೊದಲೇ ಅದು ಸಮುದ್ರ ಸೇರಿಕೊಳ್ಳುತ್ತದೆ.
ಇದೊಂದು ತಂತ್ರ
ಮೊಟ್ಟೆಯಿಟ್ಟ ಗುಂಡಿಯನ್ನು ಮುಚ್ಚಿ ಮೊಟ್ಟೆಯಿಡದ ಗುಂಡಿ ಯನ್ನು ಮುಚ್ಚದೇ ಬಿಟ್ಟು ಬಿಡುವುದರ ಹಿಂದೆ ತನ್ನ ಸಂತಾನ ವನ್ನು ಕಾಪಾಡುವ ಅಪಾರ ಕಾಳಜಿಯ ಕತೆಯಿದೆ. ಆಮೆಯ ಮೊಟ್ಟೆಯನ್ನು ತಿನ್ನುವುದಕ್ಕೆಂದೇ ನರಿ, ಸಮುದ್ರ ಹಕ್ಕಿ ಮತ್ತು ಏಡಿಗಳು ಕಾಯುತ್ತಿರುತ್ತವೆ. ಮರಳನ್ನು ಅಗೆದು ಗುಂಡಿ ತೋಡಿ ಆಮೆ ಮೊಟ್ಟೆ ಇಡುತ್ತದೆ ಎಂಬುದೂ ಅವಕ್ಕೆ ಗೊತ್ತಿದೆ. ಅದನ್ನು ಕಬಳಿಸುವುದಕ್ಕೆ ಅವು  ಕಾಯುತ್ತಲೂ ಇರುತ್ತವೆ. ಆದ್ದರಿಂದ ಅವನ್ನು ವಂಚಿಸುವುದಕ್ಕಾಗಿ ಆಮೆ ಕಂಡುಕೊಂಡ ಉಪಾಯವೇ ಈ ನಕಲಿ ಗುಂಡಿ. ಅವು ಈ ಗುಂಡಿಯಲ್ಲಿ ಮೊಟ್ಟೆಯನ್ನು ಹುಡುಕಿ ಹೊರಟು ಹೋಗಬೇಕೆಂಬುದು  ಆಮೆಯ ಬಯಕೆ. ವಿಶೇಷ ಏನೆಂದರೆ, ಇಡೀ ಪ್ರಕ್ರಿಯೆಯಲ್ಲಿ ಗಂಡು ಆಮೆಯ ಯಾವ ಪಾತ್ರವೂ ಇರುವುದಿಲ್ಲ. ಗರ್ಭಿಣಿ ಆಮೆ ತಡರಾತ್ರಿ ಸಮುದ್ರದಿಂದ ಹೊರಬಂದು ತೀರ ಪ್ರದೇಶಕ್ಕೆ ಸಾಗುವಾಗ  ಅದು ಕಾವಲು ನಿಲ್ಲುವುದೂ ಇಲ್ಲ. ಮೊಟ್ಟೆ ಇಡುವುದಕ್ಕೆಂದು ಗುಂಡಿ ಅಗೆಯುವಾಗ ನೆರವು ನೀಡುವುದೂ ಇಲ್ಲ. ಒಂಟಿಯಾಗಿಯೇ ಸಮುದ್ರದಿಂದ ಹೊರಬಂದು ತನ್ನ ಸಂತಾನವನ್ನು ಬೆಳೆಸುವ  ಪ್ರಕ್ರಿಯೆಯಲ್ಲಿ ಒಂಟಿಯಾಗಿಯೇ ತೊಡಗಿಸಿಕೊಂಡು ಕೊನೆಗೆ ಒಂಟಿಯಾಗಿಯೇ ಮರಳಿ ಸಮುದ್ರ ಸೇರುವ ಈ ಹೆಣ್ಣು ಆಮೆಗಳು ಪ್ರಕೃತಿಯ ಒಂದು ವಿಶಿಷ್ಟ ಜೀವಿ. ಹೆಣ್ಣಿನ ಸಾಮರ್ಥ್ಯ, ಬುದ್ಧಿವಂತಿಕೆ  ಮತ್ತು ಸಂತಾನದ ಕುರಿತಾದ ಕಾಳಜಿಗೆ ಅನ್ವರ್ಥ ಈ ಆಮೆ. ಆಮೆ ಎಂಬ ಒಂದಿಡೀ ಸಂತತಿಯ ಸಂತಾನವನ್ನು ಉಳಿಸಿ ಬೆಳೆಸುವ, ಕಾಪಾಡುವ ದೊಡ್ಡದೊಂದು ಹೊಣೆಗಾರಿಕೆಯನ್ನು ಅದು  ಒಂಟಿಯಾಗಿಯೇ ನಿರ್ವಹಿಸುತ್ತದೆ. ವೈರಿಗಳಿಂದ ತಪ್ಪಿಸಿ ಕೊಳ್ಳುವ ಚಾತುರ್ಯವೂ ಅದಕ್ಕಿದೆ. ಮೊಟ್ಟೆಗಳನ್ನು ಹೇಗೆ ಶತ್ರು ಗಳಿಂದ ರಕ್ಷಿಸಿಕೊಳ್ಳಬೇಕು ಎಂಬ ಸೂಕ್ಷ್ಮತೆಯೂ ಅದಕ್ಕೆ ಗೊತ್ತಿದೆ. ನಿಧಾನವಾಗಿ ಚಲಿಸುವ ತಾನು ಸಮುದ್ರದಿಂದ ಯಾವಾಗ ತೀರಕ್ಕೆ ಬರಬೇಕು ಮತ್ತು ಯಾವಾಗ ಸಮುದ್ರ ಸೇರಿಕೊಳ್ಳಬೇಕು ಎಂಬ ಸಮಯ ಪ್ರಜ್ಞೆಯೂ ಅದಕ್ಕಿದೆ. ಆದರೂ,
ಅದರಾಚೆಗಿನ ಮಹತ್ವದ ಜವಾಬ್ದಾರಿಯೊಂದನ್ನು ಅದು ನಿಭಾಯಿಸುವುದೇ ಇಲ್ಲ.
ಮರಳನ್ನು ಮೊಟ್ಟೆಯಲ್ಲಿ ಅಡಗಿಸಿಟ್ಟು ಹೊರಟು ಹೋಗುವ ಆಮೆ ಮರಳಿ ಮೊಟ್ಟೆಯನ್ನು ಪರಿಶೀಲಿಸುವುದಕ್ಕೋ ಅಥವಾ ಮರಿಗಳನ್ನು ಕರೆದುಕೊಂಡು ಹೋಗುವುದಕ್ಕೋ ಎಂದೂ ಬರುವುದೇ ಇಲ್ಲ.  ಅದರ ಕೆಲಸ ಗುಂಡಿ ತೋಡಿ ಮೊಟ್ಟೆ ಇಟ್ಟು ಮರಳಿ ಸಮುದ್ರ ಸೇರಿಕೊಳ್ಳುವಲ್ಲಿಗೆ ಮುಗಿದು ಹೋಗುತ್ತದೆ. ಆ ಬಳಿಕ ಬದುಕುಳಿಯುವ ಕೆಲಸವನ್ನು ಮೊಟ್ಟೆ ಮತ್ತು ಅದರಿಂದ ಹೊರಬರುವ ಮರಿಗಳು  ಸ್ವಯಂ ಹೊತ್ತುಕೊಳ್ಳಬೇಕು. ಸುಮಾರು 55 ದಿನಗಳ ವರೆಗೆ ಎಲ್ಲವೂ ಸಹಜವಾಗಿಯೇ ಇರುತ್ತದೆ. ಆದರೆ, 55 ದಿನಗಳ ಬಳಿಕ ಮೊಟ್ಟೆ ಇರುವ ಗುಂಡಿಯಲ್ಲಿ ಚಲನೆ ಕಾಣಿಸಿಕೊಳ್ಳುತ್ತದೆ. ಕ್ಪಣಮಾತ್ರದಲ್ಲಿ  ಒಂದೊಂದೇ ಮರಿ ಆಮೆಗಳು ಭೂಮಿಯೊಳಗಿನಿಂದ ಹೊರಬರಲು ಪ್ರಾರಂಭಿಸುತ್ತವೆ. ಹಾಗಂತ, ಈ ಮರಿಗಳಿಗೆ ಸಮುದ್ರದ ದಾರಿಯನ್ನು ತೋರಿಸುವುದಕ್ಕೆ ಅಮ್ಮ ಇಲ್ಲ. ಒಂದುವೇಳೆ ಸಮುದ್ರ  ಸೇರಿಕೊಳ್ಳದಿದ್ದರೆ ಅದು ಜೀವಂತ ಉಳಿಯುವುದಕ್ಕೆ ಸಾಧ್ಯವೂ ಇಲ್ಲ. ಅದನ್ನು ತಿನ್ನುವುದ ಕ್ಕೆಂದೇ ಶತ್ರುಗಳು ಹುಡುಕುತ್ತಾ ತಿರುಗುತ್ತಿರುವುದರಿಂದ ಅಪಾಯ ಬೆನ್ನ ಹಿಂದೆಯೇ ಇರುತ್ತದೆ. ನಿಜವಾಗಿ, ಇದು  ಅತ್ಯಂತ ಅಪಾಯಕಾರಿ ಸ್ಥಿತಿ. ಭೂಮಿಯೊಳಗಿನಿಂದ ಒಂಟಿಯಾಗಿಯೇ ಬಾಹ್ಯ ಜಗತ್ತನ್ನು ಪ್ರವೇಶಿಸುವ ಪುಟ್ಟ ಪುಟ್ಟ ಆಮೆಗಳು ಆ ಕ್ಷಣದಲ್ಲೇ  ಶತ್ರುಗಳಿಂದ ರಕ್ಷಿಸಿಕೊಳ್ಳುವ ಕಲೆಯನ್ನೂ ಕಲಿತುಕೊಳ್ಳಬೇಕು. ತಮ್ಮ ಸುರಕ್ಷಿತ ಜಾಗವನ್ನು ಆ ಶೈಶವಾವಸ್ಥೆಯಲ್ಲೇ  ಸ್ವತಃ ಕಷ್ಟಪಟ್ಟು ಕಂಡುಕೊಳ್ಳಬೇಕು. ವಿಸ್ಮಯ ಏನೆಂದರೆ, ಈ ಮರಿಗಳು ಭೂಮಿಯೊಳಗಿನಿಂದ ಹೊರಬರುವುದು ಸೂರ್ಯ ಮುಳುಗುವ  ಸಮಯದಲ್ಲಿ. ಪ್ರಕೃತಿಯ ವೈಶಿಷ್ಟ್ಯ ನೋಡಿ. ಸೂರ್ಯ ಮುಳುಗಿ ಚಂದ್ರನ ಪ್ರವೇಶವಾಗುತ್ತದೆ. ಚಂದ್ರನ ಬೆಳಕು ಸಮುದ್ರದ ಮೇಲೆ ಬಿದ್ದು ಆ ಬೆಳಕು ಮರಳಿನ ಮೇಲೆ ಪ್ರತಿಫಲನಗೊಳ್ಳತೊಡಗಿದಾಗ ಈ  ಮರಿಗಳು ಚುರುಕಾಗುತ್ತವೆ. ಸಮುದ್ರ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಆ ಮೂಲಕ ಅದು ಕಂಡುಕೊಳ್ಳುತ್ತವೆ. ಮಾತ್ರವಲ್ಲ, ಕ್ಷಣಮಾತ್ರದಲ್ಲಿ ಅವು ಸಾಲುಸಾಲಾಗಿ ಸಮುದ್ರದೆಡೆಗೆ ಧಾವಿಸುತ್ತವೆ. ಆದರೂ  ಅವು ಸಂಪೂರ್ಣ ಸುರಕ್ಷಿತವೆಂದೇನೂ ಅಲ್ಲ, ಈ ಎಚ್ಚರಿಕೆಯ ನಡೆಯ ನಡುವೆಯೂ ಈ ಮರಿಗಳು ಶತ್ರುಗಳ ದಾಳಿಗೆ ತುತ್ತಾಗುವುದಿದೆ. ಸಮುದ್ರ ಸೇರುವುದರ ಮಧ್ಯೆ ಶತ್ರುಗಳ ಆಹಾರವಾಗುವುದೂ  ಇದೆ. ಕುತೂ ಹಲದ ಸಂಗತಿ ಏನೆಂದರೆ, ಹೀಗೆ ಸಮುದ್ರ ಸೇರುವ ಮರಿಗಳು ಆ ಬಳಿಕ ದೀರ್ಘ ವಲಸೆಯೊಂದಕ್ಕೆ ಸಿದ್ಧವಾಗುತ್ತವೆ. ಈ ಆಮೆಗಳ 5 ಮುಖ್ಯ ಪ್ರಬೇಧಗಳಲ್ಲಿ ಕೆಲವು ಈಜಿಪ್ಟ್ ಗೆ ವಲಸೆ  ಹೋದರೆ ಇನ್ನು ಕೆಲವು ಮಾಲ್ದೀವ್ಸ್ ಗೆ ವಲಸೆ ಹೋಗುತ್ತವೆ. ಈ ಆಮೆಗಳು ಪ್ರೌಢಾವಸ್ಥೆಗೆ ಬರುವುದೇ 18ರಿಂದ 35 ವರ್ಷಗಳ ನಡುವೆ. ಆ ಬಳಿಕ ಅವು ತಾವು ಹುಟ್ಟಿದ ಅದೇ ಸ್ಥಳಕ್ಕೆ ಮರಳಿ  ಯಾತ್ರೆಯನ್ನು ಕೈಗೊಳ್ಳುತ್ತವೆ. ಅಲ್ಲಿ ಗಂಡು ಆಮೆಗಳೊಂದಿಗೆ ಸೇರಿಕೊಂಡು ಗರ್ಭ ಧರಿಸುತ್ತವೆ. ಜೊತೆಗೇ ಮೊಟ್ಟೆಯಿಡುವ ಪ್ರಕ್ರಿಯೆಗೆ ತನ್ನನ್ನು ಸಜ್ಜುಗೊಳಿಸತೊಡಗುತ್ತದೆ. ಪ್ರತಿ ಋತುವಿನಲ್ಲಿ ಏಳೆಂಟು  ಬಾರಿ ಅದು ಸಮುದ್ರ ತೀರಕ್ಕೆ ಬಂದು ಮರಳಲ್ಲಿ ಗುಂಡಿ ತೋಡುವ ಅಭ್ಯಾಸ ಮಾಡಿ ಮರಳಿ ಸಮುದ್ರಕ್ಕೆ ಹೋಗುತ್ತಿರುತ್ತದೆ. ಹೀಗೆ ಮೊಟ್ಟೆ ಇಡುವುದಕ್ಕೆ ಪೂರ್ವದಲ್ಲೇ  ಅದು ಅದಕ್ಕೆ ಬೇಕಾದ  ತಯಾರಿಯನ್ನು ಮಾಡಿಕೊಂಡಿರುತ್ತದೆ. ಸಾಮಾನ್ಯ ವಾಗಿ ಪ್ರತಿವರ್ಷ ಓಮಾನ್ ಸಮುದ್ರ ತೀರಕ್ಕೆ ಸುಮಾರು 20 ಸಾವಿರ ಭಿನ್ನ ಭಿನ್ನ ಜಾತಿಯ ಆಮೆಗಳು ಬರುತ್ತವೆ ಎಂದು ಹೇಳಲಾಗುತ್ತದೆ. ಇವು ಏ ನಿಲ್ಲವೆಂದರೂ ಸುಮಾರು 50ರಿಂದ 60 ಸಾವಿರ ಮೊಟ್ಟೆಗಳನ್ನಿಡುತ್ತವೆ... ಅಂದಹಾಗೆ,
ಆಮೆಯ ಈ ಅದ್ಭುತ ಜೀವನಗಾಥೆಯನ್ನು ಓದುತ್ತಾ ಹೋದಂತೆ ಜಗತ್ತು ಎಷ್ಟು ವೈಶಿಷ್ಟ್ಯಪೂರ್ಣ ಎಂದು ಅನಿಸಿತು. ಮಾತ್ರವಲ್ಲ, ಈ ಜಗತ್ತಿನಲ್ಲಿ ಮನುಷ್ಯ ಎಷ್ಟು ದುರ್ಬಲ ಎಂದೂ ತೋಚಿತು. ಮಾ ನವನ ಸಂತಾನ ಪ್ರಕ್ರಿಯೆಯೇ ಒಂದು ಸೋಜಿಗ. ಹೆಣ್ಣು ಗರ್ಭ ಧರಿಸುವಲ್ಲಿಂದಲೇ ಮಗುವಿನ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತದೆ. ಗರ್ಭಿಣಿಯ ಆರೋಗ್ಯದ ಮೇಲೆ ದಿನವಹಿ ನಿಗಾ ಇಡಲಾಗುತ್ತದೆ.  ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ, ವಿವಿಧ ಬಗೆಯ ಔಷಧಗಳು, ವಿಶೇಷ ಆಹಾರಗಳು, ಕೌನ್ಸಿಲಿಂಗ್‍ಗಳು ಇತ್ಯಾದಿ ಇತ್ಯಾದಿ ಹೆರಿಗೆಯವರೆಗೂ ನಡೆಯುತ್ತದೆ. ಆ ಬಳಿಕ ಬಾಣಂತಿ ಮತ್ತು ಮಗು  ಇಬ್ಬರಿಗೂ ಆರೈಕೆಯ ಅಗತ್ಯ ಬೀಳು ತ್ತದೆ. ಬಾಣಂತಿ ಕೆಲವು ಸಮಯದಲ್ಲೇ  ಸಹಜ ಸ್ಥಿತಿಗೆ ಮರಳಿದರೂ ಮಗು ದೀರ್ಘಕಾಲದ ಆರೈಕೆಯನ್ನು ಬಯಸುತ್ತದೆ. ಹುಟ್ಟಿದ ತಕ್ಷಣ ಅಳುವುದನ್ನು ಬಿಟ್ಟರೆ  ಮಗುವಿಗೆ ಬೇರೇನೂ ಮಾಡುವ ಸಾಮರ್ಥ್ಯ ಇರುವುದಿಲ್ಲ. ಸ್ವರಕ್ಷಣೆ ಗೊತ್ತಿಲ್ಲ. ಆಹಾರವನ್ನು ಸ್ವತಃ ಪಡೆಯುವುದು ಗೊತ್ತಿಲ್ಲ. ತನ್ನ ಅಗತ್ಯಗಳನ್ನು ತಾನೇ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ. ಇದೊಂದು  ಉದ್ದದ ಪಟ್ಟಿ. ಪ್ರೌಢಾವಸ್ಥೆಗೆ ಬರುವವರೆಗೆ ಮಗು ಇತರರನ್ನು ಅವಲಂಬಿಸಿಯೇ ಬದುಕುತ್ತಿರುತ್ತದೆ. ಆದರೆ, ಆಮೆ ಇದಕ್ಕೆ ತದ್ವಿರುದ್ಧ. ಬಹುಶಃ, ಈ ಜಗತ್ತಿನ ಅಸಂಖ್ಯ ವೈಶಿಷ್ಟ್ಯಗಳಲ್ಲಿ ಆಮೆ ಒಂದು ತುದಿ  ಮಾತ್ರ. ಒಂದುವೇಳೆ, ಅದರ ಇನ್ನೊಂದು ತುದಿಯವರೆಗೆ ಮನುಷ್ಯ ಸಂಚರಿಸಿ ಬಿಟ್ಟರೆ ಈ ಪ್ರಕೃತಿಯ ಮುಂದೆ ತಾನೆಷ್ಟು ಅಲ್ಪ ಅನ್ನುವುದು ಆತನಿಗೆ ಮನದಟ್ಟಾಗಬಹುದು. ಈ ಜಗತ್ತಿನಲ್ಲಿ ಕೋಟ್ಯಂತರ  ಜೀವಜಾಲಗಳಿವೆ. ಪ್ರತಿಯೊಂದರ ಹುಟ್ಟೂ ಭಿನ್ನ ಭಿನ್ನ. ಬದುಕೂ ಹಾಗೆಯೇ. ಹಾಗಿದ್ದರೆ ಈ ಪ್ರಕೃತಿಯನ್ನು ಸೃಷ್ಟಿಸಿದವ ಎಷ್ಟು ದೊಡ್ಡ ಕಲಾಕಾರನಾಗಿರಬಹುದು? ಅಷ್ಟಕ್ಕೂ,
ಮನುಷ್ಯ ಒಳ್ಳೆಯವನಾಗುವುದಕ್ಕೆ, ಪ್ರಾಕೃತಿಕ ಸತ್ಯಗಳಿಗೆ ಶರಣಾಗಿ ಬದುಕುವುದಕ್ಕೆ, ಬದುಕನ್ನು ಮೌಲ್ಯಯುತಗೊಳಿಸುವುದಕ್ಕೆ ಮತ್ತು ಅಹಂ, ಸ್ವಾರ್ಥ, ಅಸೂಯೆ, ಜಂಭ ಇತ್ಯಾದಿ ಇತ್ಯಾದಿಗಳಿಂದ  ಕಳಚಿಕೊಂಡು ಜೀವಿಸುವುದಕ್ಕೆ ಪುಸ್ತಕಗಳ ರಾಶಿಯ ಮೇಲೆ ಕುಳಿತು ಗಾಢ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕೆಂದೇನೂ ಇಲ್ಲ. ಪ್ರಕೃತಿಯೆಡೆಗೆ ಬೆರಗಿನಿಂದ ನೋಡಿದರೂ ಸಾಕು, ಒಳಗಣ್ಣು ತೆರೆಯುತ್ತಲೇ  ಹೋಗುತ್ತದೆ. 
‘ನೀವು ಭೂಮಿಯಲ್ಲಿ ಸಂಚರಿಸಿ ಮತ್ತು ಅಲ್ಲಾಹನು ಯಾವ ರೀತಿ ಸೃಷ್ಟಿ ಕಾರ್ಯವನ್ನು ಆರಂಭಿಸುತ್ತಾನೆ ಎಂಬುದನ್ನು ನೋಡಿ’ (ಅಧ್ಯಾಯ 29: 20) ಎಂಬ ಪವಿತ್ರ ಕುರ್ ಆನಿನ ವಚನದ  ತಾತ್ಪರ್ಯವೂ ಇದುವೇ. ಅಂದಹಾಗೆ,
ವಲಸೆ ಹೋದ ಆಮೆಗೆ ದಶಕಗಳ ಬಳಿಕ ಮರಳಿ ಹುಟ್ಟಿದೂರಿಗೆ ದಾರಿ ತೋರುವವನಾರೋ?

ಅದುಮಿಟ್ಟ ಅತೃಪ್ತಿಯನ್ನು ಸ್ಫೋಟಿಸುವುದಕ್ಕೆ ಆ ಅಝೀಝ್ ನೆಪವಷ್ಟೇ ಆಗಿದ್ದ



ಚುನಾಯಿತ ಸರಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸಿ ಜನರು ಬೀದಿಗಿಳಿಯುವುದು 2019 ಡಿಸೆಂಬರ್ ನಲ್ಲಿ ದಿಢೀರನೇ ಪ್ರತ್ಯಕ್ಷವಾದ ಹೊಸ ಪ್ರಾಕಾರ ಏನಲ್ಲ. ಪ್ರಭುತ್ವದ ಆದೇಶಗಳನ್ನು  ಉಲ್ಲಂಘಿಸುವಂತೆ ಕರೆ ಕೊಡುವುದೂ ಹೊಸತಲ್ಲ. 1975 ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಈ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೊದಲಿನ ವಾತಾವರಣ  ಸರಿಸುಮಾರು ಈಗಿನ ವಾತಾವರಣದಂತೆಯೇ ಇತ್ತು. 1974ರಲ್ಲಿ ಪ್ರಭುತ್ವ ವಿರೋಧಿ ಕಿಡಿಯೊಂದು ಗುಜರಾತ್‍ನಲ್ಲಿ ಹುಟ್ಟಿಕೊಂಡಿತು. ವಿದ್ಯಾರ್ಥಿಗಳು ಇದಕ್ಕೆ ನೇತೃತ್ವ ನೀಡಿದ್ದರು. ಆ ಕಿಡಿ ಗುರಿಯಿರಿಸಿ  ಕೊಂಡಿದ್ದು ಆಗಿನ ಗುಜರಾತ್‍ನಲ್ಲಿದ್ದ ಕಾಂಗ್ರೆಸ್ ಸರಕಾರವನ್ನು. ಸರಕಾರ ಈ ಕಿಡಿಯನ್ನು ದಮನಿಸಲು ನೋಡಿತು. ಆಗ ಆ ಕಿಡಿ ಬಿಹಾರಕ್ಕೂ ವ್ಯಾಪಿಸಿತು. ನೋಡನೋಡುತ್ತಲೇ ಪ್ರತಿಭಟನೆಯು  ಸಂಘರ್ಷ, ಬೆಂಕಿ ಹಚ್ಚುವಿಕೆಯ ಹಂತಕ್ಕೆ ತಲುಪಿತು. ಪ್ರಾಣಾಹುತಿಯಾಯಿತು. ಈ ಹಂತದಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಜನ ಚಳವಳಿಯ ನೇತೃತ್ವವನ್ನು ವಹಿಸಿಕೊಂಡರು. ನೇತೃತ್ವ  ಅವರದ್ದಾಗಿದ್ದರೂ ಅವರ ಜೊತೆಗಿದ್ದುದು ವಿದ್ಯಾರ್ಥಿಗಳು. ಪ್ರತಿಭಟನಾಕಾರರ ಬೇಡಿಕೆಗಳ ಪಟ್ಟಿ ಉದ್ದವಾಯಿತು. ‘ನಿಮಗೆ ಸರಿ ಕಾಣದ ಪ್ರಭುತ್ವದ ಆದೇಶಗಳನ್ನು ಉಲ್ಲಂಘಿಸಿ ಬಿಡಿ’ ಎಂದು ಜೆ.ಪಿ.ಯವರು ಆ  ಸಂದರ್ಭದಲ್ಲಿ ಭಾರತೀಯರಿಗೆ ಕರೆ ಕೊಟ್ಟರು. ಆದ್ದರಿಂದ,

2019 ಡಿಸೆಂಬರ್ ಮಧ್ಯಭಾಗದಿಂದ ಹಿಡಿದು ಈವರೆಗೆ ಭಾರತೀಯರು ಬೀದಿಯಲ್ಲಿರುವುದಾದರೆ ಮತ್ತು ಪ್ರಭುತ್ವವನ್ನು ಪ್ರಶ್ನಿಸಿ ಪ್ರತಿದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾದರೆ ಅದಕ್ಕೆ  ಹುಬ್ಬೇರಿಸಬೇಕಿಲ್ಲ. ‘ಕೇಂದ್ರ ಸರಕಾರದ ಎನ್‍ಪಿಆರ್ ನೀತಿಯನ್ನು ಬಹಿಷ್ಕರಿಸಿ’ ಎಂಬ ನಾಗರಿಕ ಧ್ವನಿಯನ್ನು ದೇಶದ್ರೋಹಿಯಾಗಿ ಕಾಣಬೇಕಾಗಿಯೂ ಇಲ್ಲ. ಅಂದಹಾಗೆ, 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ದೇಶದಲ್ಲಿ ಹುಟ್ಟಿಕೊಂಡಿರುವ ಚಳವಳಿ ಸ್ವರೂಪದ ಪ್ರತಿಭಟನೆಗಳಿಗೆ ಸಿಎಎ ಒಂದೇ ಕಾರಣ ಅಲ್ಲ. ಸಿಡಿಯಲು ಸಿದ್ಧವಾಗಿದ್ದ ನಾಗರಿಕರ  ಅತೃಪ್ತಿಗೆ ಅದೊಂದು ದಾಳವಾಗಿ ಬಳಕೆಯಾಗಿದೆ ಅಷ್ಟೇ. ನಿಜವಾಗಿ,

2010 ಡಿಸೆಂಬರ್ 17ರಂದು ಮುಹಮ್ಮದ್ ಅಜೀಜ್ ಅನ್ನುವ 26 ವರ್ಷದ ಯುವಕ ನಗರ ಪಾಲಿಕೆಯ ಎದುರು ಆತ್ಮಾಹುತಿಗೆ ಶ್ರಮಿಸಿದ್ದೇ  ಟುನೀಶ್ಯನ್ ಕ್ರಾಂತಿಗೆ ಮತ್ತು ಅಧ್ಯಕ್ಷ ಝೈನುಲ್ ಆಬಿದೀನ್ ಬಿನ್ ಅಲಿಯವರ ಪದತ್ಯಾಗಕ್ಕೆ ಏಕೈಕ ಕಾರಣ ಆಗಿರಲಿಲ್ಲ. ಪ್ರಭುತ್ವದ ವಿರುದ್ಧ ತಮ್ಮ ಅತೃಪ್ತಿಯನ್ನು ಸೂಚಿಸುವುದಕ್ಕೆ ನಾಗರಿಕರಿಗೆ ಒದಗಿದ ಸೂಕ್ತ ಟೂಲ್ ಅದಾಗಿತ್ತು. ಟುನೀಶ್ಯಾದ ನಿರುದ್ಯೋಗದ  ಪ್ರಮಾಣ ತೀವ್ರ ಮಟ್ಟದಲ್ಲಿ ಏರಿಕೆಯಾಗಿತ್ತು. ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಬಡತನದ ಪ್ರಮಾಣವೂ ದಿನನಿತ್ಯ ಏರುಗತಿಯಲ್ಲೇ  ಸಾಗುತ್ತಿತ್ತು. ಜನರು ಅತೃಪ್ತಿಯಿಂದ ಕುದಿಯುತ್ತಿದ್ದರು. ಇಂಥ  ಸಂದರ್ಭದಲ್ಲಿ ಮುಹಮ್ಮದ್ ಅಝೀಝ್ ನ ಆತ್ಮಾಹುತಿ ಯತ್ನ ಅವರನ್ನು ಪ್ರಚೋದಿಸಿತು. ಪದವಿ ಶಿಕ್ಷಣ ಪಡೆದೂ ಕಲಿಕೆಗೆ ತಕ್ಕ ಉದ್ಯೋಗ ಲಭಿಸದೇ ತಳ್ಳುಗಾಡಿಯಲ್ಲಿ ಹಣ್ಣು-ಹಂಪಲು ಮಾರುತ್ತಿದ್ದ  ಅಝೀಝನಿಗೆ ಅದರಲ್ಲೂ ಸುಖವಿರಲಿಲ್ಲ. ಲಂಚಕ್ಕಾಗಿ ಅಧಿಕಾರಿಗಳು ನಿರಂತರ ಪೀಡಿಸುತ್ತಿದ್ದರು. ಇದರಿಂದ ಬೇಸತ್ತು ಆತ ಆತ್ಮಾಹುತಿಗೆ ಯತ್ನಿಸಿದ್ದು ಟುನೀಶ್ಯನ್ ನಾಗರಿಕರನ್ನು ಕೆರಳಿಸಿತು. ನಿರಂತರ  28 ದಿನಗಳ ಕಾಲ ಟುನೀಶ್ಯಾದಾದ್ಯಂತ ಪ್ರತಿಭಟನೆಗಳು ನಡೆದುವು. ನಿಜವಾಗಿ,

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ವ್ಯಕ್ತವಾಗುತ್ತಿರುವುದೂ ಇದುವೇ. 2012ರ ನಿರ್ಭಯ ಪ್ರಕರಣ ಮತ್ತು ಅಣ್ಣಾ ಹಜಾರೆ ನೇತೃತ್ವದಲ್ಲಿ 2013ರಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಗಳು ಮನ್‍ಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರದ ವರ್ಚಸ್ಸಿಗೆ ಭಾರೀ ಹೊಡೆತ ನೀಡಿದ್ದುವು. ಕಾಮನ್‍ವೆಲ್ತ್ ಹಗರಣ, ಕಲ್ಲಿದ್ದಲು ಹಗರಣ ಮತ್ತು ಟೆಲಿಕಾಂ ಹಗರಣಗಳು ಮನ್‍ಮೋಹನ್ ಸಿಂಗ್  ಸರಕಾರವನ್ನು ಇನ್ನಿಲ್ಲದಂತೆ ಕಾಡಿದ್ದುವು. ಆಗ ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಜನರು ಸಹಜವಾಗಿ ಕನಸು ಕಂಡರು. ಗುಜರಾತ್ ಮಾಡೆಲ್ ಮುನ್ನೆಲೆಗೆ ಬಂದದ್ದೂ ಆ ಸಂದರ್ಭದಲ್ಲೇ. ಗುಜರಾತ್  ಎಂಬುದು ದೇಶದಲ್ಲೇ  ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ಮತ್ತು ಭ್ರಷ್ಟಾಚಾರ ರಹಿತವಾದ ರಾಜ್ಯ ಎಂಬ ರೀತಿಯಲ್ಲಿ ಪ್ರಚಾರ ಪಡೆಯಿತು. ನರೇಂದ್ರ ಮೋದಿಯವರು ಸಹಜವಾಗಿ ಪರ್ಯಾಯ  ನಾಯಕರಾಗಿ ಬೆಳೆದು ಬಂದರು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಜನರು ಚುನಾಯಿಸಿದ್ದರೆ, ಅದರ ಹಿಂದೆ ಜನಪರ ಆಡಳಿತದ ಬಯಕೆ ಇತ್ತೇ ಹೊರತು ಇನ್ನೇನೂ ಅಲ್ಲ. ಆದ್ದರಿಂದಲೇ, 2016ರ ಒಂದು ಮಧ್ಯರಾತ್ರಿಯಂದು ಅವರು ನೋಟು ನಿಷೇಧ ಮಾಡಿದಾಗಲೂ ಜನರು ದೊಡ್ಡ ಮಟ್ಟದಲ್ಲಿ ಬೀದಿಗಿಳಿಯಲಿಲ್ಲ. ಬ್ಯಾಂಕ್‍ನ ಮುಂದೆ ಸರತಿಯಲ್ಲಿ ನಿಂತು ನೂರಕ್ಕಿಂತಲೂ ಅಧಿಕ ಮಂದಿ ಪ್ರಾಣ ತೆತ್ತಾಗಲೂ ಜನರು ಅದಕ್ಕೊಂದು ಚಳವಳಿಯ ಸ್ವರೂಪ ಕೊಡಲು ಮುಂದಾಗಲಿಲ್ಲ. ಪ್ರಧಾನಿಯವರು ತನ್ನ ತಾಯಿಯನ್ನೇ ಸರತಿಯಲ್ಲಿ ನಿಲ್ಲಿಸಿ ತಾನು ಎಷ್ಟು ಪ್ರಾಮಾಣಿಕ ಎಂಬುದನ್ನು ಒಪ್ಪಿಸಲು ಯತ್ನಿಸಿದರು. ದೇಶದ ಅರ್ಥವ್ಯವಸ್ಥೆಗೆ ಅನುಕೂಲ ಆಗುವುದಾದರೆ ಸಹನೆ ವಹಿಸೋಣ ಅನ್ನುವ ಭಾವದಲ್ಲಿ ನಾಗರಿಕರು ಅನನುಕೂಲತೆಯನ್ನು ಸಹಿಸಿಕೊಂಡರು. ಆ ಬಳಿಕ ಜಿಎಸ್‍ಟಿ ಜಾರಿಯಾಯಿತು. ಅದು ಉದ್ಯಮ ವಲಯದ ಮೇಲೆ ಕಡು ಕೆಟ್ಟ ಪರಿಣಾಮವನ್ನು ಬೀರಿತು. ಅಲ್ಲಲ್ಲಿ ಅಸಹನೆ ವ್ಯಕ್ತವಾದರೂ ಜನ ಸಹಿಸಿಕೊಂಡರು. ಸರಕಾರಕ್ಕೆ  ಇನ್ನಷ್ಟು ಕಾಲಾವಕಾಶದ ಅಗತ್ಯ ಇದೆ ಎಂದು ಸುಮ್ಮನಾದರು. ಇವೆರಡನ್ನೂ ಪ್ರಧಾನಿಯವರ ಬೆಂಬಲಿಗರು ಪೊಲಿಟಿಕಲ್ ಮಾಸ್ಟರ್ ಸ್ಟ್ರೋಕ್ ಎಂದು ಸಮರ್ಥಿಸಿಕೊಂಡರು. ಆದರೆ,

2019ರಲ್ಲಿ ಮರಳಿ ಬಹುಮತವನ್ನು ಪಡೆದುಕೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ತುರ್ತು ನಿರ್ಧಾರಗಳು ಅವರ ಮೇಲಿನ ಎಲ್ಲ ಭರವಸೆಗೂ ಮಂಕು ಕವಿಯುವಂತೆ  ಮಾಡಿತು. ಅಂದಹಾಗೆ, 2014ರಿಂದ 2019ರ ನಡುವಿನ ಈ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಮಾತುಗಾರಿಕೆಯಲ್ಲಿ ಮಿಂಚಿದ್ದರೇ ಹೊರತು ಆಡಳಿತಾತ್ಮಕ ನೀತಿಯ ಮಟ್ಟಿಗೆ  ದಯನೀಯ ವೈಫಲ್ಯವನ್ನು ಕಂಡಿದ್ದರು. ಏರುತ್ತಿರುವ ನಿರುದ್ಯೋಗಿಗಳ ಸಂಖ್ಯೆಗೆ ಅವರಲ್ಲಿ ಉತ್ತರ ಇರಲಿಲ್ಲ. ಕುಸಿಯುತ್ತಿರುವ ಜಿಡಿಪಿಯನ್ನು ಮೇಲೆತ್ತುವುದಕ್ಕೆ ಅವರಲ್ಲಿ ಯೋಜನೆಗಳಿರಲಿಲ್ಲ.  ರೈತರಂತೂ ದೆಹಲಿಗೆ ಬಂದು ತಿಂಗಳುಗಟ್ಟಲೆ ಚಪ್ಪರ ಹಾಕಿ ಕುಳಿತರು. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳೆರಡಕ್ಕೂ ಜೊಂಪು ಹತ್ತಿತು. ಅಗತ್ಯ ವಸ್ತುಗಳು ಮತ್ತು ತೈಲದ ಬೆಲೆ ಏರಿಕೆಯನ್ನು ನಿಯಂತ್ರಿಸುವ  ಯಾವ ತಂತ್ರವೂ ಅವರಲ್ಲಿರಲಿಲ್ಲ. ಲೋಕಸಭಾ ಚುನಾವಣೆಗಿಂತ ತುಸು ಮೊದಲು ಪುಲ್ವಾಮಾ ಘಟನೆ ನಡೆಯದೇ ಇರುತ್ತಿದ್ದರೆ ಮೋದಿಯವರು ಮರಳಿ ಅಧಿಕಾರಕ್ಕೇರುವ ಸಾಧ್ಯತೆ ಕಡಿಮೆ ಇತ್ತು ಎಂಬ  ವಿಶ್ಲೇಷಣೆಗೆ ಕಾರಣ ಈ ಸಮಸ್ಯೆಗಳೇ. ಆದ್ದರಿಂದಲೇ, 

2019 ಮೇ ಬಳಿಕದ ನರೇಂದ್ರ ಮೋದಿಯನ್ನು ಜನರು ಭಿನ್ನವಾಗಿ ನೋಡಬಯಸಿದ್ದರು. 2014ರಿಂದ 19ರ ವರೆಗಿನ ಮೋದಿಯಲ್ಲಿ ಅವರು  ನಿರೀಕ್ಷಿಸಿದ್ದೇನೂ ಸಿಕ್ಕಿರಲಿಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠ ಭಾರತವನ್ನು ನಿರ್ಮಿಸುವ ಮೋದಿ ಭಾರತೀಯರಿಗೆ ಬೇಕಾಗಿತ್ತು. ಉದ್ಯೋಗ, ವಿದೇಶಿ ಹೂಡಿಕೆ, ರೈತರ ಸಮಸ್ಯೆಗೆ ಪರಿಹಾರ,  ಕೈಗಾರಿಕೆಗಳ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಹಾಗೂ ಭ್ರಷ್ಟಾಚಾರವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು ಇತ್ಯಾದಿಗಳೇ ಗುಜರಾತ್ ಮಾಡೆಲ್‍ನ ಮಾದರಿಗಳಾಗಿದ್ದುದರಿಂದ ಅದನ್ನು  ಪ್ರಧಾನಿ ಮೋದಿಯಲ್ಲೂ ಅವರು ನಿರೀಕ್ಷಿಸಿದ್ದರು. ಆದರೆ, ಮರಳಿ ಅಧಿಕಾರಕ್ಕೆ ಬಂದ ಆರೇ ತಿಂಗಳೊಳಗೆ ಅವರು ತೆಗೆದುಕೊಂಡ ಮೂರ್ನಾಲ್ಕು ನಿರ್ಧಾರಗಳು ನಾಗರಿಕರ ನಿರೀಕ್ಷೆಯನ್ನು ಸಂಪೂರ್ಣವಾಗಿ ಧರಾಶಾಹಿ ಮಾಡಿಬಿಟ್ಟಿತು. ಆರಂಭದಲ್ಲಿ ಅವರು ತ್ರಿವಳಿ ತಲಾಕನ್ನು ಕ್ರಿಮಿನಲ್ ಕೃತ್ಯವಾಗಿ ಪರಿಗಣಿಸುವ ಕಾನೂನನ್ನು ಜಾರಿಗೆ ತಂದರು. ನಿಜವಾಗಿ, ಇದು ಸುಪ್ರೀಮ್ ಕೋರ್ಟ್‍ನ ಬೇಡಿಕೆ  ಆಗಿರಲಿಲ್ಲ. ತ್ರಿವಳಿ ತಲಾಕನ್ನು ಸುಪ್ರೀಮ್ಕೋರ್ಟು ಅಸಿಂಧುಗೊಳಿಸಿತ್ತೇ ಹೊರತು ಅದನ್ನು ಕ್ರಿಮಿನಲ್ ಕೃತ್ಯವೆಂದು ಸಾರಿ 3 ವರ್ಷಗಳ ತನಕ ಜೈಲು ಶಿಕ್ಷೆಗೆ ಅರ್ಹಗೊಳಿಸುವ ಅಪರಾಧವಾಗಿ ವ್ಯಾಖ್ಯಾನಿಸಿರಲಿಲ್ಲ. ಅದರ ಬಳಿಕ ಮೋದಿಯು  ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದರು. ಬಳಿಕ ದೇಶದಾದ್ಯಂತ ಎನ್‍ಆರ್ ಸಿ ಮಾಡುವುದಾಗಿಯೂ ಅದಕ್ಕಿಂತ ಮೊದಲು ಎನ್‍ಪಿಆರ್ ಕೈಗೊಳ್ಳುವುದಾಗಿಯೂ ಘೋಷಿಸಿದರು. ಅಲ್ಲದೇ,  ತರಾತುರಿಯಿಂದ ಸಿಎಎಯನ್ನೂ ಕಾನೂನಾಗಿ ಜಾರಿಗೊಳಿಸಿದರು. ತಕ್ಷಣ ಜನರು ಬೀದಿಗಿಳಿದರು. ಒಂದು ರೀತಿಯಲ್ಲಿ,

1974ರಲ್ಲಿ ವಿದ್ಯಾರ್ಥಿಗಳು ಹೇಗೆ ಪ್ರಭುತ್ವದ ವಿರುದ್ಧ ಬೀದಿಗಿಳಿದರೋ ಅದೇ ರೀತಿಯಲ್ಲಿ ವಿದ್ಯಾರ್ಥಿಗಳೇ ಈಗಿನ ಚಳವಳಿಯಲ್ಲೂ ಮುಂಚೂಣಿಯಲ್ಲಿದ್ದಾರೆ. ಅಲಿಗಢ ವಿಶ್ವವಿದ್ಯಾಲಯದಲ್ಲಿ  ಆರಂಭವಾದ ವಿದ್ಯಾರ್ಥಿ ಪ್ರತಿಭಟನೆಯು ಜಾಮಿಯ ಮಿಲ್ಲಿಯ ವಿವಿ ಘಟನೆಯ ಬಳಿಕ ದೇಶದಾದ್ಯಂತ ವಿಸ್ತರಿಸಿದೆ. ಪ್ರತಿಭಟನೆ, ರ್ಯಾಲಿ, ಧರಣಿ, ಮುಷ್ಕರ, ಭಾರತ್ ಬಂದ್ ಇತ್ಯಾದಿಗಳೊಂದಿಗೆ ಈ  ಚಳವಳಿ ಬೆಳೆಯುತ್ತಲೇ ಇದೆ. ನಾಟಕ, ಹಾಡು, ಭಾಷಣ, ಚಿತ್ರಕಲೆ, ಧರಣಿ.. ಹೀಗೆ ಭಿನ್ನ ರೀತಿಯಲ್ಲಿ ಇದು ಸಾಗುತ್ತಲೂ ಇದೆ. ದೆಹಲಿಯ ಶಾಹೀನ್‍ಬಾಗ್, ಕೊಲ್ಕತ್ತಾದ ಪಾರ್ಕ್ ಸರ್ಕಸ್,  ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ, ಬೆಂಗಳೂರಿನ ಟೌನ್‍ಹಾನ್ ಎಂದು ಮುಂತಾಗಿ ಎಲ್ಲೆಡೆಯೂ ಪ್ರತಿರೋಧದ ಕಾವು ಹೆಚ್ಚುತ್ತಿದೆ. ಸರ್ ಅಲ್ಲಾಮಾ ಇಕ್ಬಾಲ್‍ರ ಸಾರೇ ಜಹಾಂಸೆ ಅಚ್ಚಾ,  ಫೈಝ್ ಅಹ್ಮದ್ ಫೈಝ್ರ ಹಮ್ ದೇಖೇಂಗೆ, ರವೀಂದ್ರನಾಥ್ ಠಾಗೂರರ ಜನಗಣಮನ ಹಾಡುಗಳು ಮತ್ತು ಆಝಾದಿ ಕೂಗು, ಇಂಕ್ವಿಲಾಬ್ ಜಿಂದಾಬಾದ್, ಸ್ವರಾಜ್ ಘೋಷಣೆಗಳು ಪ್ರತಿ ಗಲ್ಲಿಗಲ್ಲಿಯಲ್ಲೂ ಕೇಳಿ ಬರತೊಡಗಿವೆ. ರಾಷ್ಟ್ರಗೀತೆ ಹಾಡುತ್ತಾ, ರಾಷ್ಟ್ರಧ್ವಜವನ್ನು ಹಾರಿಸುತ್ತಾ ಮತ್ತು ಸಂವಿಧಾನದ ಪ್ರಸ್ತಾವನೆಗಳನ್ನು ಓದುತ್ತಾ ಭಾರತೀಯರು ಬೀದಿಯಲ್ಲಿ ಸೇರುತ್ತಿದ್ದಾರೆ. ಗಾಂಧಿ, ಅಂಬೇಡ್ಕರ್  ಭಾವಚಿತ್ರಗಳನ್ನು ಎದೆಗಪ್ಪಿ ಹಿಡಿದಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವ ಮತ್ತು ಜನವರಿ 30ರ ಗಾಂಧಿ ಹುತಾತ್ಮ ದಿನವು ಈ ದೇಶದಲ್ಲಿ ಮೊದಲ ಬಾರಿ ಪ್ರಭುತ್ವವನ್ನು ವಿರೋಧಿಸುವ ದಿನವಾಗಿ  ಆಚರಣೆಗೆ ಒಳಗಾಗಿದೆ. ವಿಶೇಷ ಏನೆಂದರೆ, 

ಮುಸ್ಲಿಮ್ ಮಹಿಳೆಯರು ಬಹುಸಂಖ್ಯೆಯಲ್ಲಿ ಚಳವಳಿಯಲ್ಲಿ ತೊಡಗಿಸಿಕೊಂಡಿರುವುದು. ತ್ರಿವಳಿ ತಲಾಕ್ ಕಾನೂನನ್ನು ಜಾರಿಗೊಳಿಸಲಾದ ಸಂದರ್ಭದಲ್ಲೂ  ಇಷ್ಟು ವ್ಯಾಪಕ ಪ್ರಮಾಣದಲ್ಲಿ ಮುಸ್ಲಿಮ್ ಮಹಿಳೆಯರು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿರಲಿಲ್ಲ. ಮಾತ್ರವಲ್ಲ, ಆ ಕಾನೂನಿನ ಪರ ಮತ್ತು ವಿರುದ್ಧ ಧ್ವನಿಗಳು ಮುಸ್ಲಿಮ್ ಮಹಿಳೆಯರ ಒಳಗಿನಿಂದಲೇ ಕೇಳಿ  ಬಂದಿತ್ತು. ಆದರೆ, ಈ ಬಾರಿ ಕೇಂದ್ರ ಸರಕಾರದ ಪರ ಧ್ವನಿಗಳೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಂತೂ ಡಿಸೆಂಬರ್ 10ರ ಬಳಿಕ ನಿರಂತರ ಸಿಎಎ ಸುತ್ತ ಚರ್ಚೆಯಾಗುತ್ತಲೇ ಇದೆ. ಪ್ರಭುತ್ವದ ವಿರುದ್ಧ  ಒಂದೇ ವಿಷಯದ ಮೇಲೆ ಇಷ್ಟು ದೀರ್ಘ ಅವಧಿ ವರೆಗೆ ಚರ್ಚೆಯಾಗುತ್ತಿರುವುದು ಬಹುಶಃ ಇದುವೇ ಮೊದಲು. ಅಲ್ಲದೇ, ಈ ಚಳವಳಿಯ ನೇತೃತ್ವವನ್ನು ಯಾವ ರಾಜಕೀಯ ಪಕ್ಷಕ್ಕೂ ಜನರು ಬಿಟ್ಟು  ಕೊಟ್ಟಿಲ್ಲ. ಪ್ರತಿಭಟನಾಕಾರರು ಕಾಂಗ್ರೆಸ್ಸನ್ನೂ ಲೆಕ್ಕಿಸುತ್ತಿಲ್ಲ. ಬಿಜೆಪಿಯನ್ನೂ ಬಿಡುತ್ತಿಲ್ಲ. ಸಣ್ಣ ಸಣ್ಣ ನಗರಗಳಲ್ಲಿ ಏರ್ಪಡುವ ಪ್ರತಿಭಟನಾ ಸಭೆಯಲ್ಲೂ ಸಾವಿರಾರು ಮಂದಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರಧ್ವಜವ ನ್ನು ಹಾರಿಸುತ್ತಾರೆ. ರಾಷ್ಟ್ರಗೀತೆಯನ್ನು ಹಾಡುತ್ತಾರೆ. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಜಾಗದಲ್ಲಿ ಇನ್ನಾವ ಧ್ವಜವನ್ನೂ ಗೀತೆಯನ್ನೂ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.  ನಿಜವಾಗಿ,
ಪ್ರಧಾನಿ ಮೋದಿಯು ತನ್ನ ಐದೂವರೆ ವರ್ಷಗಳ ಆಡಳಿತಾವಧಿಯಲ್ಲಿ ಎದುರಿಸಿದ ಅತಿದೊಡ್ಡ ಪ್ರತಿರೋಧ ಇದು. ಆದ್ದರಿಂದ,

1975 ಮರಳಿ ಬಂದರೂ ಆಶ್ಚರ್ಯವಿಲ್ಲ.

ಇಂದಿನ ‘ಶತ್ರು’ಗಳ ನಡುವೆ ಗಾಂಧಿ ಮತ್ತು ಅಂಬೇಡ್ಕರ್



1. ಅವರಿಬ್ಬರೂ ಪ್ರಜಾತಂತ್ರ ಮತ್ತು ಸ್ವತಂತ್ರ ಭಾರತವನ್ನು ಬಯಸಿದ್ದರು.
2. ಬ್ರಿಟಿಷ್ ಆಡಳಿತದ ವಿರುದ್ಧ ಅವರಿಬ್ಬರೂ ಹೋರಾಡಿದ್ದರು. ಆದರೆ ರೀತಿ ಬೇರೆ ಬೇರೆಯಾಗಿತ್ತು.
3. ಇಬ್ಬರೂ ಉನ್ನತ ವಿದ್ಯಾಭ್ಯಾಸವನ್ನು ಪಡೆದವರು ಮತ್ತು ವಕೀಲರಾಗಿದ್ದರು.
4. ತಾವಿರುವ ಸಾಮಾಜಿಕ, ರಾಜಕೀಯ ಪರಿಸ್ಥಿತಿಯ ಬಗ್ಗೆ ಅತ್ಯುತ್ತಮ ಮಟ್ಟದ ತಿಳುವಳಿಕೆಯನ್ನು ಹೊಂದಿದ್ದರು.
5. ಭಾರತದ ಸ್ವಾತಂತ್ರ್ಯ ಹೋರಾಟದ ವಿಷಯದಲ್ಲಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ.
6. ಬಂದೂಕಿನ ಮೂಲಕ ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಲಾರೆವು ಎಂಬ ಬಗ್ಗೆ ಅವರಿಬ್ಬರಲ್ಲಿ ಖಚಿತ ಅಭಿಪ್ರಾಯವಿತ್ತು.
7. ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ಅವರಿಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಇತ್ತು. ಆದರೂ ಅವರು ಪರಸ್ಪರರನ್ನು ದ್ವೇಷಿಸುತ್ತಿರಲಿಲ್ಲ.

ಇವರೇ ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್. 1947 ಆಗಸ್ಟ್ 29ರಿಂದ ತೊಡಗಿ 2 ವರ್ಷ, 11 ತಿಂಗಳು ಮತ್ತು 18 ದಿನಗಳ ಕಾಲ ತೀವ್ರ ಪರಿಶ್ರಮ ಪಟ್ಟು ವಿಶ್ವದಲ್ಲಿಯೇ ಅತೀ ಬೃಹತ್ತಾದ ಮತ್ತು ಅತ್ಯುತ್ತಮವಾದ ಸಂವಿಧಾನವನ್ನು ರಚಿಸಿಕೊಟ್ಟವರು ಅಂಬೇಡ್ಕರ್‍ರಾದರೆ, ಸತ್ಯಾಗ್ರಹವೆಂಬ ಹೊಸ ಪರಿಕಲ್ಪನೆಯ ಮೂಲಕ ಹೋರಾಟದ ಹೊಸ ಸಾಧ್ಯತೆಯನ್ನು ಆವಿಷ್ಕರಿಸಿಕೊಟ್ಟವರು ಗಾಂಧೀಜಿ. 1949 ನವೆಂಬರ್ 26 ರಂದು ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ಒಪ್ಪಿಸುವ ಮೊದಲು ಮಾಡಿರುವ ಅಧ್ಯಯನ, ಸಂಶೋಧನೆ, ವ್ಯಯಿಸಿದ ಶ್ರಮ, ಬದ್ಧತೆ ಇತ್ಯಾದಿಗಳನ್ನು ಅಭ್ಯಸಿಸುವಾಗ ಅಚ್ಚರಿಯಾಗುತ್ತದೆ. ಅಸ್ಪೃಶ್ಯತೆ ಮತ್ತು ಅವಹೇಳನದ ಕಟು ಅನುಭವವನ್ನು ಹೊಂದಿರುವ ಅಂಬೇಡ್ಕರ್ ರಂತಹ ವ್ಯಕ್ತಿಯ ಹೊರತು ಬೇರೆ ಯಾರೇ ಆಗಿದ್ದರೂ ಇಂಥದ್ದೊಂದು ವಿಶಿಷ್ಟ ಸಂವಿಧಾನವನ್ನು ರಚಿಸಲು ಸಾಧ್ಯವಿರಲಿಲ್ಲವೇನೋ ಎಂದೇ ಅನಿಸುತ್ತದೆ. ಒಂದುವೇಳೆ, ಗಾಂಧೀಜಿಯ ನೇತೃತ್ವದಲ್ಲೇ ಇದು ನಡೆದಿರುತ್ತಿದ್ದರೂ ಇಂಥದ್ದೊಂದು ಸಂವಿಧಾನ ರಚನೆಯ ಸಾಧ್ಯತೆ ತೀರಾ ತೀರಾ ಕಡಿಮೆಯಿತ್ತು. ಯಾಕೆಂದರೆ, ಗಾಂಧೀಜಿ ಸ್ವತಃ ಅಸ್ಪೃಶ್ಯತೆಯನ್ನು ಅನುಭವಿಸಿರಲಿಲ್ಲ. ಕಂಡದ್ದು ಮತ್ತು ಕೇಳಿದ್ದೇ ಅವರ ಅನುಭವವಾಗಿತ್ತು. ಆದರೆ, ಗಾಂಧೀಜಿಯವರು ಕಂಡಿದ್ದ ಮತ್ತು ಕೇಳಿದ್ದ ಸಂಗತಿಯನ್ನು ಅಂಬೇಡ್ಕರ್ ಸ್ವತಃ ಅನುಭವಿಸಿದ್ದರು. ಮಾತ್ರವಲ್ಲ, ಗಾಂಧಿ ಕಂಡಿರದ ಮತ್ತು ಕೇಳಿರದ ಅಸ್ಪೃಶ್ಯತೆಯ ಅತಿ ಕ್ರೂರ ದೌರ್ಜನ್ಯಗಳನ್ನು ಅಂಬೇಡ್ಕರ್ ಸ್ವತಃ ಉಂಡಿದ್ದರು. ಆದ್ದರಿಂದಲೇ,

ಅಸ್ಪೃಶ್ಯತೆಯನ್ನು ನಿರ್ಮೂಲನ ಮಾಡುವ ವಿಷಯದಲ್ಲಿ ಅಂಬೇಡ್ಕರ್ ಅವರು ಅತಿ ಉಗ್ರತಮ ನಿಲುವನ್ನು ಪ್ರದರ್ಶಿಸುತ್ತಿದ್ದರು. ದಲಿತರಿಗೆ ಪ್ರತ್ಯೇಕ ಚುನಾವಣೆ ಬೇಕೆಂಬ ಅವರ ವಾದದಲ್ಲಿ ನಮಗೆ ಇದನ್ನು ದರ್ಶಿಸಬಹುದು. ಪೂನಾ ಒಪ್ಪಂದದ ಮೂಲಕ ಗಾಂಧಿಯವರು ಈ ಆಗ್ರಹಕ್ಕೆ ತಡೆ ನೀಡುವಲ್ಲಿ ಯಶಸ್ವಿಯಾದರೂ ಅಂಬೇಡ್ಕರ್ ಆಂತರಿಕವಾಗಿ ಈ ವಾದವನ್ನು ಬಿಟ್ಟು ಕೊಟ್ಟಿರಲಿಲ್ಲ. ಅಸ್ಪೃಶ್ಯತೆಯ ನಿವಾರಣೆಯ ಕುರಿತಂತೆ ಮಹಾತ್ಮಾ ಗಾಂಧಿಯವರ ನಿಲುವನ್ನು ಅವರು ಸೋಗಿನದೆಂಬಂತೆ ಕಂಡರು. ಗಾಂಧಿಯವರ ಸಹನೆ, ತಾಳ್ಮೆ ಮತ್ತು ಹೋರಾಟ ನೀತಿ ಅಂಬೇಡ್ಕರ್ ರಿಗೆ ಪಥ್ಯವಾಗಿರಲೇ ಇಲ್ಲ. ‘ಹರಿಜನ’ ಎಂಬ ಗಾಂಧಿ ಸಂಶೋಧಿತ ಪದಪುಂಜವನ್ನೇ ಅಂಬೇಡ್ಕರ್ ವಿರೋಧಿಸಿದರು. ಜಾತಿ ವ್ಯವಸ್ಥೆಯನ್ನು ಊರ್ಜಿತ ದಲ್ಲಿಡುವ ತಂತ್ರದ ಭಾಗವಾಗಿ ಅವರು ಈ ‘ಹರಿಜನ’ ಪದವನ್ನು ಪರಿಗಣಿಸಿದರು. ಇದಕ್ಕೆ ಕಾರಣವೂ ಇದೆ.

ಅಸ್ಪೃಶ್ಯತೆಯ ನಿರ್ಮೂಲನದ ವಿಷಯದಲ್ಲಿ ಗಾಂಧಿ ಮತ್ತು ಅಂಬೇಡ್ಕರ್‍ರ ನಡುವೆ ತೀವ್ರ ಭಿನ್ನಾಭಿಪ್ರಾಯವಿತ್ತು ಎಂಬುದು ಅವರಿಬ್ಬರ ಮಾತು-ಕೃತಿಗಳಿಂದ ಸ್ಪಷ್ಟವಾಗುತ್ತದೆ. ಹುಟ್ಟಿನಿಂದಲೇ ಅಸ್ಪೃಶ್ಯತೆಯ ಕರಾಳ ಅನುಭವಗಳನ್ನು ಪಡೆಯುತ್ತಲೇ ಬೆಳೆದ ಅಂಬೇಡ್ಕರ್ ರು, ಆ ಕಾರಣದಿಂದಲೋ ಏನೋ ಮಾತಿನಲ್ಲಿ ಖಂಡಿತವಾದಿಯಾಗಿದ್ದರು. ನೇರ ಮತ್ತು ನಿಖರ ಮಾತು ಅವರದಾಗಿತ್ತು. ಜಾತಿ ವ್ಯವಸ್ಥೆ ನಾಶವಾಗದೇ ಅಸ್ಪೃಶ್ಯತೆ ನಾಶವಾಗದು ಎಂಬುದು ಅವರ ಖಚಿತ ಧ್ವನಿಯಾದರೆ ಗಾಂಧಿ ಇಷ್ಟೊಂದು ಖಚಿತವಾಗಿ ಮಾತಾಡಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಅಸ್ಪೃಶ್ಯತೆಯನ್ನು ಅವರು ಪ್ರಬಲವಾಗಿ ವಿರೋಧಿಸುತ್ತಿದ್ದರು. ಆದರೆ, ಜಾತಿ ವ್ಯವಸ್ಥೆಯ ನಿರ್ಮೂಲನದ ಬಗ್ಗೆ ಅವೇ ನಿಲುವನ್ನು ಅವರು ಎಲ್ಲೂ ವ್ಯಕ್ತಪಡಿಸಲಿಲ್ಲ. ಹಿಂದೂ ಸಮುದಾಯವನ್ನು ಒಗ್ಗೂಡಿಸುವುದಕ್ಕೆ ಜಾತಿ ವ್ಯವಸ್ಥೆಯ ಅಗತ್ಯ ಇದೆ ಎಂದು ಅವರು ನಂಬಿದ್ದರು ಎಂಬ ಆರೋಪ ಇದೆ. ಅಸ್ಪೃಶ್ಯರ ಕೆಲಸ ಎಂದು ಸ್ಪೃಶ್ಯ ಸಮಾಜ ಯಾವುದನ್ನೆಲ್ಲ ವಿಂಗಡಿಸಿತ್ತೋ ಅವನ್ನು ಸ್ವತಃ ಮಾಡುವ ಮೂಲಕ ಸ್ಪೃಶ್ಯ ಮನಸ್ಥಿತಿಗೆ ಅವರು ಹೊಡೆತವನ್ನೂ ನೀಡಿದ್ದರು. ಶೌಚಾಲಯ ಶುಚಿಗೊಳಿಸುವ ಕೆಲಸವನ್ನು ಸ್ವತಃ ಗಾಂಧಿಯೇ ಮಾಡಿದರು. ಮಲ ಎತ್ತುವುದು ಅಸ್ಪೃಶ್ಯರ ಕೆಲಸ ಎಂದು ನಂಬಿದ್ದ ಜಾತಿ ಮೇಲ್ಮೆಯ ಮನಸ್ಥಿತಿಗೆ ಕೊಟ್ಟ ಏಟೆಂದು ಇದನ್ನು ವ್ಯಾಖ್ಯಾನಿಸಲಾಗುತ್ತದೆ. ಪ್ಲೇಗ್‍ನ ಸಮಯದಲ್ಲಿ ಅವರು ಮನೆ ಮನೆ ಸಂದರ್ಶಿಸಿದ್ದು ಮತ್ತು ಜಾತಿಯಲ್ಲಿ ಶ್ರೇಷ್ಠರಾಗಿದ್ದವರ ಮನೆಗಳು ದುರ್ವಾಸನೆಯಿಂದ ಕೂಡಿದ್ದುದನ್ನೂ ಅವರು ತಮ್ಮ ಆತ್ಮಕತೆಯಲ್ಲಿ ವಿವರಿಸಿದ್ದಾರೆ. ಗ್ರಾಮ ಸ್ವರಾಜ್ಯವೆಂಬ ಗಾಂಧಿಯವರ ಪರಿಕಲ್ಪನೆಗೆ ತೀರಾ ಭಿನ್ನವಾದ ಪರಿಕಲ್ಪನೆ ಅಂಬೇಡ್ಕರ್ ಗಿತ್ತು. ದಲಿತರು ಗ್ರಾಮ ದಲ್ಲೇ ಉಳಿದು ಆರ್ಥಿಕವಾಗಿ ಬಲಿಷ್ಠರಾಗುವ ಬಗ್ಗೆ ಗಾಂಧಿ ವಾದಿಸಿದರೆ, ದಲಿತರು ನಗರಕ್ಕೆ ವಲಸೆ ಬರಬೇಕು ಮತ್ತು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಗಿಟ್ಟಿಸಿಕೊಂಡು ಸಬಲರಾಗಬೇಕು ಎಂಬುದು ಅಂಬೇಡ್ಕರ್ ವಾದವಾಗಿತ್ತು. ಸತ್ಯಾಗ್ರಹದಲ್ಲಿ ಬಲವಾದ ನಂಬಿಕೆಯನ್ನಿಟ್ಟಿದ್ದ ಗಾಂಧೀಜಿಯದ್ದು ಒಂದು ತುದಿಯಾದರೆ ಅಂಬೇಡ್ಕರ್ ರದ್ದು ಅದರ ಇನ್ನೊಂದು ತುದಿ. ಅಸ್ಪೃಶ್ಯತೆಯನ್ನು ಸತ್ಯಾಗ್ರಹದ ಮೂಲಕ ನಿಭಾಯಿಸಲು ಸಾಧ್ಯವಿಲ್ಲ ಎಂದವರು ಬಲವಾಗಿ ನಂಬಿದ್ದರು. ಆದರೆ,

ಮಂದಿರದ ಬಾಗಿಲನ್ನು ಅಸ್ಪೃಶ್ಯರಿಗೆ ತೆರೆದು ಕೊಡುವುದರಿಂದ ಬದಲಾವಣೆ ಸಾಧ್ಯ ಎಂದು ಗಾಂಧೀಜಿ ನಂಬಿದ್ದರು. ಮಾತ್ರವಲ್ಲ, ಹಿಂದೂ ಧರ್ಮದ ಮೇಲ್ಜಾತಿಯಿಂದ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯ ಎಂದೂ ನಂಬಿದ್ದರು. ಆದರೆ, ದಲಿತರು ಶಿಕ್ಷಣ ಪಡೆಯುವುದೇ ಅಸ್ಪೃಶ್ಯತೆಗೆ ಔಷಧ ಎಂಬುದು ಅಂಬೇಡ್ಕರ್ ರ ವಾದವಾಗಿತ್ತು.

“ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು. ಶಿಕ್ಷಣ ಖಡ್ಗದಂತೆ. ಖಡ್ಗಕ್ಕೆ ಪ್ರತಿಯೊಬ್ಬರೂ ಹೆದರುತ್ತಾರೆ. ಇಂದು ನಾವು ಕೋರ್ಟು-ಕಚೇರಿಗೆ ಹೋದರೆ ನಿಮಗೆ ಕಾಣಿಸುವುದೇನು? ನ್ಯಾಯಾಧೀಶ ಬ್ರಾಹ್ಮಣ. ಗುಮಾಸ್ತ ಬ್ರಾಹ್ಮಣ. ಫೌಜಿದಾರ ಬ್ರಾಹ್ಮಣ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಖಟ್ಲೆಯ ನ್ಯಾಯಕ್ಕಾಗಿ ಕೋರ್ಟು ಕಟ್ಟೆ ಏರಿದರೆ ನ್ಯಾಯ ಸಿಗಬಹುದೇ? ಎಷ್ಟೋ ಖಟ್ಲೆಯ ನಿರ್ಣಯದಲ್ಲಿ ನ್ಯಾಯಾಧೀಶರು ಮಹಾರರ (ಅಸ್ಪೃಶ್ಯ ಜಾತಿ) ಪರವಾಗಿ ಮಹಾರ ಸಾಕ್ಷಿದಾರನಾಗಿರುವುದರಿಂದ ಆ ಸಾಕ್ಷ್ಯವನ್ನು ನಂಬುವಂತಿಲ್ಲ ಎಂದು ತಿರಸ್ಕರಿಸಿದ್ದಾರೆ. ಆದರೆ ಸ್ಪೃಶ್ಯ (ಮೇಲ್ಜಾತಿ) ಜಾತಿಯ ಪರವಾಗಿ ಸ್ಪೃಶ್ಯ ಜಾತಿಯ ಸಾಕ್ಷಿದಾರನಿದ್ದರೆ ನ್ಯಾಯಾಧೀಶರು ಆಕ್ಷೇಪವೆತ್ತುವುದಿಲ್ಲ” ಎಂದು ಅವರು ಭಾಷಣದಲ್ಲಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಅಂಬೇಡ್ಕರ್ ಭಾಷಣ ಮತ್ತು ಬರಹಗಳ ಸಂಪುಟ) ಹೇಳಿದ್ದಿದೆ. ಹಾಗಂತ,

ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಪರಸ್ಪರ ವೈರಿಗಳಂತಿದ್ದರು ಎಂದು ಇದರರ್ಥವಲ್ಲ.

1953ರ ‘ಹಿಂದುಳಿದ ಜಾತಿ ಮತ್ತು ವರ್ಗಗಳ ಆಯುಕ್ತರ ವರದಿ’ಯ ಮೇಲೆ 1954 ಸೆಪ್ಟೆಂಬರ್ 6ರಂದು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಅಂಬೇಡ್ಕರ್ ಆಡಿರುವ ಮಾತು ಇದಕ್ಕೊಂದು ಉತ್ತಮ ಉದಾಹರಣೆ.

“ಗಾಂಧಿಯವರ ಸ್ಮರಣೆಗೋಸ್ಕರ ಈ ದೇಶದಲ್ಲಿ ಉಪ್ಪಿಗೆ ತೆರಿಗೆಯನ್ನು ನಿಷೇಧಿಸಲಾಗಿದೆ. ಗಾಂಧಿಯವರನ್ನು ನಾನು ಗೌರ ವಿಸುತ್ತೇನೆ. ಆದರೆ ನನ್ನ ನಿಲುವು ಏನೆಂದರೆ, ಸರಕಾರ ಉಪ್ಪಿಗೆ ತೆರಿಗೆ ವಿಧಿಸಬೇಕು ಮತ್ತು ತೆರಿಗೆಯಿಂದ ಸಂಗ್ರಹವಾದ ಮೊತ್ತ ವನ್ನು ಗಾಂಧಿಯ ಹೆಸರಲ್ಲಿ ಸ್ಥಾಪಿತವಾದ ನಿಧಿಗೆ ವರ್ಗಾಯಿಸಿ, ಅದನ್ನು ದಲಿತರ ಅಭಿವೃದ್ಧಿಗೆ ಬಳಸಬೇಕು” ಎಂದಿದ್ದರು. “ಇದು ಸ್ವರ್ಗದಲ್ಲಿರುವ ಗಾಂಧಿಗೆ ಅತ್ಯಂತ ಸಂತಸ ಕೊಡುವ ಕೆಲಸವಾಗ ಬಹುದು” ಎಂದೂ ಹೇಳಿದ್ದರು. ಇನ್ನೊಂದು ಸಂದರ್ಭದಲ್ಲಿ,

ಗಾಂಧಿಯ ಸತ್ಯ ಮತ್ತು ಅಹಿಂಸೆ ಎಂಬ ತತ್ವವನ್ನು ಲೇವಡಿಗೂ ಒಳಪಡಿಸಿದ್ದರು. 1955ರಲ್ಲಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಗಾಂಧಿಯನ್ನು ಇಬ್ಬಗೆ ಧೋರಣೆಯ ವ್ಯಕ್ತಿ ಎಂದು ಟೀಕಿಸಿದ್ದರು. ಇಂಗ್ಲಿಷ್ ಭಾಷೆಯ ಪತ್ರಿಕೆಗಳಲ್ಲಿ ಜಾತಿ ವ್ಯವಸ್ಥೆಗೆದುರಾಗಿ ಬರೆಯುವ ಗಾಂಧಿ, ಗುಜರಾತಿ ಭಾಷೆಯ ಪತ್ರಿಕೆಯಲ್ಲಿ ಜಾತಿ ವ್ಯವಸ್ಥೆಯನ್ನು ಬೆಂಬಲಿಸಿ ಬರೆಯುತ್ತಾರೆ ಎಂದೂ ದೂರಿದ್ದರು. ಆದರೆ,

ಈ ಭಿನ್ನಾಭಿಪ್ರಾಯಗಳ ಹೊರತಾಗಿಯೂ ದೇಶದ ಪ್ರಥಮ ಕಾನೂನು ಸಚಿವರಾಗುವಂತೆ ಅಂಬೇಡ್ಕರ್ ರನ್ನು ಆಹ್ವಾನಿಸಿದ್ದು ಇದೇ ಗಾಂಧೀಜಿಯ ಕಾಂಗ್ರೆಸ್. ಅಂಬೇಡ್ಕರ್ ರು ಕಾನೂನು ಸಚಿವರಾದುದು ಮತ್ತು ಬಳಿಕ ಸಂವಿಧಾನ ರಚನಾ ಸಮಿತಿಯ ನೇತೃತ್ವ ವಹಿಸಿಕೊಂಡದ್ದು ಇದೇ ಗಾಂಧಿಯ ಕಣ್ಣೆದುರಲ್ಲೇ. ಅಂಬೇಡ್ಕರ್ ಅವರು ಈ ಹೊಣೆಗಾರಿಕೆಯನ್ನು ಎಷ್ಟು ಬದ್ಧತೆಯಿಂದ ನಿರ್ವಹಿಸಿದರೆಂದರೆ, 395 ವಿಧಿಗಳು, 8 ಅನುಸೂಚಿಗಳು ಮತ್ತು 8 ಭಾಗಗಳನ್ನೊಳಗೊಂಡ ಸಂವಿಧಾನವೇ ಇದಕ್ಕೆ ಸಾಕ್ಷಿ. ಈ ಸಂವಿಧಾನವನ್ನು ರಚಿಸುವುದಕ್ಕಾಗಿ ಅವರು ಮತ್ತು ತಂಡವು ಬ್ರಿಟನ್, ಅಮೇರಿಕ, ಐರ್ಲೆಂಡ್, ಫ್ರಾನ್ಸ್, ಕೆನಡ, ಆಸ್ಟ್ರೇಲಿಯಾ, ರಷ್ಯಾ, ಜಪಾನ್ ಮುಂತಾದ ರಾಷ್ಟ್ರಗಳ ಸಂವಿಧಾನವನ್ನು ಅಭ್ಯಸಿಸಿತು. ವಿದೇಶಗಳಿಗೆ ತೆರಳಿ ಅಲ್ಲಿನ ತಜ್ಞರೊಂದಿಗೆ ಸಮಾಲೋಚನೆ ನಡೆಸಿತು. ಸಂವಿಧಾನ ತಜ್ಞರಿಂದ ಸಲಹೆಗಳನ್ನು ಪಡೆಯಿತು. ಮುಖ್ಯವಾಗಿ ಜಪಾನ್‍ನ ಸಂವಿಧಾನದ ಪ್ರೇರಣೆಯಿಂದ ಸುಪ್ರೀಮ್ ಕೋರ್ಟಿನ ಕಾರ್ಯಕಲಾಪಗಳ ವಿಧಾನವನ್ನು ರಚಿಸಲಾಯಿತು. ಪಂಚವಾರ್ಷಿಕ ಯೋಜನೆ ರೂಪು ತಳೆದದ್ದು ರಷ್ಯಾದ ಪ್ರೇರಣೆಯಿಂದ. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಪರಿಕಲ್ಪನೆಯನ್ನು ಫ್ರಾನ್ಸ್ ನಿಂದ ಹೆಕ್ಕಿಕೊಳ್ಳಲಾಯಿತು. ಹೀಗೆ ದೀರ್ಘ ಅಧ್ಯಯನದ ಬಳಿಕ ತಯಾರಿಸಲಾದ ಕರಡು ಪ್ರತಿಯನ್ನು 1949 ನವೆಂಬರ್ 26ರಂದು ಸಲ್ಲಿಸಲಾಯಿತು. 1950 ಜನವರಿ 26ರಂದು ಇದನ್ನು ಅಂಗೀಕರಿಸಿ ಮಾನ್ಯ ಮಾಡಲಾಯಿತು. ನಿಜವಾಗಿ,

ಸ್ವತಂತ್ರ ಭಾರತದ ಎರಡು ವಿಶಿಷ್ಯ ಚೇತನಗಳಾಗಿ ನಾವು ಗಾಂಧಿ ಮತ್ತು ಅಂಬೇಡ್ಕರ್ ರನ್ನು ಗುರುತಿಸಬಹುದು. ತಾವು ಬೆಳೆದು ಬಂದ ರೀತಿ, ಹಿನ್ನೆಲೆ, ಆಗಿನ ಸಾಮಾಜಿಕ ಪರಿಸ್ಥಿತಿ...  ಇತ್ಯಾದಿಗಳ ಪಡಿಯಚ್ಚಾಗಿ ಅವರಿಬ್ಬರೂ ಮಾತಾಡಿದರು. ಬದುಕಿದರು. ಗಾಂಧಿ ಬೆಳೆದ ರೀತಿಯೇ ಬೇರೆ. ಅಂಬೇಡ್ಕರ್ ಬೆಳೆದ ರೀತಿಯೇ ಬೇರೆ. ಆದ್ದರಿಂದ ಸಮಸ್ಯೆಯೊಂದರ ಬಗ್ಗೆ ಅವರಿಬ್ಬರ ನಿಲುವುಗಳಲ್ಲಿ ವ್ಯತ್ಯಾಸ ಇರುವುದು ಅಸಹಜವೂ ಅಲ್ಲ, ಅನುಮಾನಾಸ್ಪದವೂ ಅಲ್ಲ. ಸದ್ಯದ ಭಾರತದಲ್ಲಿ ಇವರಿಬ್ಬರೂ ಚರ್ಚೆಗೊಳಗಾಗಬೇಕಾದ ತುರ್ತು ಅಗತ್ಯ ಇದೆ. ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳಲಾರದ ಮತ್ತು ಅಭಿಪ್ರಾಯಗಳನ್ನು ದೇಶದ ಪರ ಇಲ್ಲವೇ ವಿರುದ್ಧ ಎಂಬ ಎರಡೇ ಎರಡು ವಿಭಾಗಗಳಾಗಿ ವಿಭಜಿಸಿ ದಮನಿಸುವ ರೀತಿಯ ವಾತಾವರಣದ ಮಧ್ಯೆ ಗಾಂಧಿ ಮತ್ತು ಅಂಬೇಡ್ಕರ್ ರನ್ನು ಮುಖಾಮುಖಿಗೊಳಿಸಿ ಸಾರ್ವಜನಿಕ ಚರ್ಚೆಗೆ ಒಳಗಾಗಿಸಬೇಕಾಗಿದೆ. ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಶತ್ರುತ್ವಕ್ಕೆ ಕಾರಣವಾಗಿರಲಿಲ್ಲ. ಗಾಂಧಿಯನ್ನು ಕಂಡರಾಗದು ಅನ್ನುವ ಸ್ಥಿತಿ ಅಂಬೇಡ್ಕರ್ ರದ್ದಾ ಗಿರಲಿಲ್ಲ. ಗಾಂಧಿಯ ವಿಚಾರಧಾರೆಗಳ ಜೊತೆಗೆ ಅವರಿಗೆ ತಕರಾರಿತ್ತೇ ಹೊರತು ಗಾಂಧಿಯ ಜೊತೆಗಲ್ಲ. ಭಿನ್ನಾಭಿಪ್ರಾಯವನ್ನು ಮೀರಿದ ಸ್ನೇಹ ಸಂವಾದ ಅವರಿಂದ ಸಾಧ್ಯವಾಗಿತ್ತು.

ಸಂವಿಧಾನವನ್ನು ಒಪ್ಪಿಕೊಂಡು 70 ವರ್ಷಗಳಾಗಿರುವ ಮತ್ತು ಎಲ್ಲೆಲ್ಲೂ "ಶತ್ರು"ಗಳೇ ತುಂಬಿ ಹೋಗಿರುವ ಈ ಹೊತ್ತಿನಲ್ಲಿ ಈ ದೇಶದ ನಾಗರಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು.

Saturday, January 25, 2020

ಪೌರತ್ವ ಕಾಯ್ದೆ ಮತ್ತು ವಲಸಿಗರ ಧರ್ಮ



1. ಎಸ್. ರಾಮದಾಸ್ ಅವರ ಪಟ್ಟಾಳಿ ಮಕ್ಕಳ ಕಾಚ್ಚಿ
2. ಅನುಪ್ರಿಯ ಪಟೇಲ್ ಅವರ ಅಪ್ನಾ ದಳ್
3. ರಾಮದಾಸ್ ಅಠವಳೆ ಅವರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ
ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದಲ್ಲಿರುವ 13 ಮಿತ್ರ ಪಕ್ಷಗಳ ಪೈಕಿ ಸಿಎಎ, ಎನ್‍ಆರ್ ಸಿ ಮತ್ತು ಎನ್‍ಪಿಆರ್ ಅನ್ನು ಬೆಂಬಲಿಸುತ್ತಿರುವ ಪಕ್ಷಗಳು ಈ ಮೇಲಿನ ಮೂರೇ ಮೂರು. ಉಳಿದ 10  ಪಕ್ಷಗಳೂ ಒಂದಲ್ಲ ಒಂದು ಕಾರಣವನ್ನು ಮುಂದೊಡ್ಡಿ ಪೌರತ್ವ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್ ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‍ಪಿಆರ್)ಯನ್ನು  ವಿರೋಧಿಸುತ್ತಿವೆ. ಕಳೆದ 5 ವರ್ಷಗಳಲ್ಲಿ ಸುಮಾರು 2,021 ಕೋಟಿ ರೂಪಾಯಿಯನ್ನು ಖರ್ಚು ಮಾಡಿ 93 ರಷ್ಟು ವಿದೇಶ ಯಾತ್ರೆಯನ್ನು ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಸದ್ಯ  ಒಂಟಿಯಾಗಿದ್ದಾರೆ. ಈ 2020ರಲ್ಲಿ ಈ ದೇಶಗಳು ಅವರ ಬೆಂಬಲಕ್ಕೆ ನಿಲ್ಲುವುದು ಬಿಡಿ, ಅವರ ಬಗ್ಗೆ ಒಂದೊಂದಾಗಿ ಅಸಮಾಧಾನವನ್ನು ಸೂಚಿಸ ತೊಡಗಿವೆ. 2019ರಲ್ಲಿ ಮೋದಿಯವರು ಮರಳಿ ಅಧಿಕಾರಕ್ಕೇರಿದ ಬಳಿಕ ಜಾರಿಗೆ ತಂದ ತ್ರಿವಳಿ ತಲಾಕ್ ಕಾನೂನು, ಕಾಶ್ಮೀರದ 370ನೇ ವಿಧಿ ರದ್ದು ಮತ್ತು ಸಿಎಎಗಳು ಈ ಮಿತ್ರರನ್ನೆಲ್ಲ ಮುನಿಸಿಕೊಳ್ಳುವಂತೆ ಮಾಡಿವೆ. 2014 ರಿಂದ 2019 ಎಪ್ರಿಲ್‍ನ  ವರೆಗೆ 93 ದೇಶ ಸುತ್ತಿ ಸಂಬಂಧ ಸುಧಾರಣೆಗೆ ಮಾಡಿದ ಪ್ರಯತ್ನಗಳನ್ನೆಲ್ಲಾ 2019 ಮೇ ಬಳಿಕದ ಮೋದಿಯವರ ನೀತಿಗಳು ಆಪೋಶನ ಪಡೆದುಕೊಂಡಿವೆ. ಮಲೇಶ್ಯಾ ತನ್ನ ಅಸಮಾಧಾನವನ್ನು  ಬಹಿರಂಗ ವಾಗಿಯೇ ಹೊರಹಾಕಿದೆ. ಪ್ರಧಾನಿ ಮೋದಿಯವರ ಜೊತೆ ನಡೆಸಬೇಕಿದ್ದ ಮಾತುಕತೆಯನ್ನು ಜಪಾನಿನ ಪ್ರಧಾನಿ ಮುಂದೂಡಿದ್ದಾರೆ. 

ಮೋದಿಯವರ ಮಟ್ಟಿಗೆ ಆಪ್ತರೆನಿಸಿದ್ದ ಬೇಗಂ ಹಸೀನಾ  ಅವರ ಬಾಂಗ್ಲಾದೇಶ ಈಗ ಮಾರು ದೂರ ನಿಂತಿದೆ. ಅಲ್ಲಿನ ವಿದೇಶಾಂಗ ಸಚಿವ ಮತ್ತು ಗೃಹಸಚಿವರ ಭಾರತ ಭೇಟಿ ರದ್ದಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಅನ್ನುವ ಭಾರತದ ಆರೋಪಕ್ಕೆ ಅದು ಅಸಮಾಧಾನ ಸೂಚಿಸಿದೆ. 1971ರ ಬಳಿಕ ವಿಶ್ವಸಂಸ್ಥೆಯಲ್ಲಿ ಬಹುತೇಕ ನಿರ್ಜೀವಾವಸ್ಥೆಯಲ್ಲಿದ್ದ ಕಾಶ್ಮೀರದ ವಿವಾದವು ಇದೀಗ ಮತ್ತೆ ಜೀವವನ್ನು ಪಡೆದುಕೊಂಡಿದೆ.  ಭದ್ರತಾ ಮಂಡಳಿಯಲ್ಲಿ ಚರ್ಚಿಸುವ ಹಂತಕ್ಕೆ ಕಾಶ್ಮೀರವನ್ನು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸಲು ಪಾಕ್ ಯಶಸ್ವಿಯಾಗಿದೆ. 370ನೇ ವಿಧಿ ರದ್ಧತಿಯೇ ಇದಕ್ಕೆ ಕಾರಣ. ಅಮೇರಿಕ ಮತ್ತು ಬ್ರಿಟನ್‍ಗಳು ಈಗಾಗಲೇ ಭಾರತದ ಬೆಳವಣಿಗೆಗಳಿಗೆ ಕಳವಳವನ್ನು ಸೂಚಿಸಿವೆ. ಇನ್ನು, ನೆರೆಕರೆಯ ಪೈಕಿ ಭಾರತದೊಂದಿಗೆ ಅತ್ಯುತ್ತಮ ಸಂಬಂಧವನ್ನು ಇಟ್ಟುಕೊಂಡ ರಾಷ್ಟ್ರಗಳು ಒಂದೂ ಕಾಣಿಸುತ್ತಿಲ್ಲ.  ಶ್ರೀಲಂಕಾವಾಗಲಿ, ನೇಪಾಳ, ಭೂತಾನ್ ಅಥವಾ ಮ್ಯಾನ್ಮಾರ್ ಆಗಲಿ ಎಲ್ಲವೂ ಚೀನಾದ ಕಡೆಗೆ ಮುಖ ಮಾಡಿ ಮಲಗಿವೆ. ಈ ಎಲ್ಲ ರಾಷ್ಟ್ರಗಳಲ್ಲಿ ಚೀನಾದ ಹೂಡಿಕೆಯ ಗಾತ್ರವನ್ನು ಪರಿಗಣಿಸಿದರೆ ಭಾರತ  ಜುಜುಬಿ. ಇನ್ನೊಂದೆಡೆ 5 ಟ್ರಿಲಿಯನ್ ಡಾಲರ್ ಮೊತ್ತದ ಅರ್ಥವ್ಯವಸ್ಥೆಯಾಗಿ ಮಾರ್ಪಡಲು ಹೊರಟು ಅದರ ಅರ್ಧದಷ್ಟನ್ನೂ ತಲುಪಲಾಗದ ದೈನೇಸಿ ಸ್ಥಿತಿ ಯಲ್ಲಿದೆ ಭಾರತದೆ. ಕಳೆದ ನಾಲ್ಕು ದ ಶಕಗಳಲ್ಲೇ ನಿರುದ್ಯೋಗದ ಪ್ರಮಾಣ ಅತ್ಯಧಿಕವಾಗಿದೆ. ನೋಟು ನಿಷೇಧ ಮತ್ತು ಅತ್ಯಂತ ಅಸಮರ್ಪಕ ರೀತಿಯಲ್ಲಿ ಜಾರಿಗೊಳಿಸಲಾದ ಜಿಎಸ್‍ಟಿಯಿಂದಾಗಿ ಆಗಿರುವ ಅನಾಹುತಗಳ ಫಲಿತಾಂಶ  ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಸರಕಾರಿ ಸಂಸ್ಥೆಗಳನ್ನು ಮಾರಾಟ ಮಾಡಲಾಗುತ್ತಿದೆ. ಏರ್ ಇಂಡಿಯಾವೂ ಮಾರಾಟವಾಗಿದೆ. ರೈಲ್ವೆಯನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ಆಡಳಿತಾತ್ಮಕ  ಖರ್ಚು-ವೆಚ್ಚಗಳನ್ನು ನಿಭಾಯಿಸುವುದಕ್ಕೆ ಹಣದ ಕೊರತೆ ಎದುರಾಗಿ ಆರ್‍ಬಿಐನಿಂದ ಮೀಸಲು ನಿಧಿಯನ್ನು ಪಡೆದುಕೊಳ್ಳಲಾಗಿದೆ. ಭಾರತದ ಅರ್ಥವ್ಯವಸ್ಥೆಯ ಮಟ್ಟಿಗೆ ‘ಬಂಗಾರದ ಮೊಟ್ಟೆ’ ಎಂದು  ವಿಶೇಷಣವುಳ್ಳ ಭಾರತ್ ಪೆಟ್ರೋಲಿಯಮನ್ನೂ ಮಾರಾಟದ ಪಟ್ಟಿಯಲ್ಲಿಡಲಾಗಿದೆ. ನಷ್ಟದಲ್ಲಿರುವ ಸರಕಾರಿ ಸಂಸ್ಥೆಗಳಿಗೆ ಚೇತರಿಕೆಯ ದೃಷ್ಟಿಯಿಂದ ಸ್ವಲ್ಪ ಮೊತ್ತವನ್ನು ಕೊಟ್ಟು ಕೊನೆಗೆ ಅವನ್ನೆಲ್ಲಾ  ಖಾಸಗಿಗಳಿಗೆ ಮಾರಾಟ ಮಾಡುವ ತಂತ್ರ ನಡೆಯುತ್ತಿದೆ. ಈ ನಡುವೆ ಬ್ಯಾಂಕುಗಳ ವಿಲೀನವಾಗಿದೆ. 9% ಇದ್ದ ಜಿಡಿಪಿಯು ಕುಸಿಯುತ್ತಾ ಬಂದು ಈಗ 4% ರ ಆಸುಪಾಸಿನಲ್ಲಿದೆ. ನಿರ್ಮಾಣ  ಕಾಮಗಾರಿಗಳು ನಿಧಾನವಾಗಿವೆ. ಹೂಡಿಕೆಗೆ ಯಾರೂ ಮುಂದೆ ಬರುತ್ತಿಲ್ಲ. ವಿದೇಶಿ ಮತ್ತು ಸ್ವದೇಶಿ ಶ್ರೀಮಂತರು ದೇಶದಲ್ಲಿ ಹಣ ಹೂಡಲು ಹಿಂದೇಟು ಹಾಕುತ್ತಿದ್ದಾರೆ. ದೇಶದೊಳಗಿನ ಅಭದ್ರತೆಯ  ವಾತಾವರಣವು ಹೂಡಿಕೆದಾರರನ್ನು ಅನಿಶ್ಚಿತತೆಗೆ ದೂಡಿದೆ. ಬೆಲೆ ಯಲ್ಲಿ ಏರಿಕೆ ಮತ್ತು ಪ್ರವಾಸೋದ್ಯಾಮದಲ್ಲಿ ಇಳಿಕೆಯಾಗುತ್ತಿದೆ. ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಕಾಶ್ಮೀರವಂತೂ  ಬರಡಾಗಿ ಮಲಗಿದೆ. ಆದರೂ,
ಕೇಂದ್ರ ಸರಕಾರ ತನ್ನ ಕುದುರೆಗೆ ಮೂರೇ ಕಾಲು ಎಂದು ಸಮರ್ಥಿಸುತ್ತಿದೆ.

2015ರಲ್ಲಿ ಇದೇ ಮೋದಿ ನೇತೃತ್ವದ ಕೇಂದ್ರ ಸರಕಾರವು ದೀರ್ಘಾವಧಿಯ ವೀಸಾಕ್ಕಾಗಿ ವಲಸಿಗರಿಂದ ಅರ್ಜಿಯನ್ನು ಆಹ್ವಾನಿಸಿತ್ತು. ಆಗ ತಾವು ಧಾರ್ಮಿಕ ದಮನದ ಕಾರಣಕ್ಕಾಗಿ ಭಾರತಕ್ಕೆ ಬಂದಿದ್ದೇವೆಂದು ವಾದಿಸಿ ವೀಸಾಕ್ಕಾಗಿ ಅರ್ಜಿ ಹಾಕದವರ ಸಂಖ್ಯೆ ಬರೇ 31,313. ಹೀಗೆಂದು ಕೇಂದ್ರ ಸರಕಾರದ ಗುಪ್ತಚರ ವರದಿಗಳೇ ಹೇಳುತ್ತಿವೆ. ಇನ್ನೊಂದು ಅಂಕಿ ಅಂಶದ ಪ್ರಕಾರ, ವಿಭಜನೆಯ  ತರುವಾಯ 4 ವರ್ಷಗಳಲ್ಲಿ ಭಾರತದಿಂದ ಸುಮಾರು 80 ಲಕ್ಷದಷ್ಟು ಮಂದಿ ಪಾಕಿಸ್ತಾನಕ್ಕೂ ಪಾಕಿಸ್ತಾನದಿಂದ ಸರಿಸುಮಾರು ಅಷ್ಟೇ ಸಂಖ್ಯೆಯ ಮಂದಿ ಭಾರತಕ್ಕೂ ಬಂದಿದ್ದಾರೆ ಎನ್ನಲಾಗುತ್ತಿದೆ.  ಉಳಿದಂತೆ ವಲಸಿಗರ ಬಗ್ಗೆ ಕೆಲವು ಭ್ರಮೆಗಳು ಮತ್ತು ವದಂತಿಗಳಷ್ಟೇ ಚಾಲ್ತಿಯಲ್ಲಿವೆ. ಈ ವದಂತಿಗಳನ್ನು ಹರಡುವಲ್ಲಿ ಬಿಜೆಪಿಯ ಪಾತ್ರ ಬಹಳ ದೊಡ್ಡದು. ಅಸ್ಸಾಮ್ ಒಂದರಲ್ಲೇ ಒಂದೂವರೆ ಕೋಟಿಯಷ್ಟು ಅಕ್ರಮ ವಲಸಿಗರಿದ್ದಾರೆಂದು ಬಿಜೆಪಿ  ಹೇಳಿಕೊಂಡಿತ್ತು. ಆದರೆ, 2019 ಆಗಸ್ಟ್ ನಲ್ಲಿ ಬಿಡುಗಡೆ ಗೊಳಿಸಲಾದ ಅಂತಿಮ ಎನ್‍ಆರ್ ಸಿ ಪಟ್ಟಿಯಲ್ಲಿ ಕೇವಲ 19 ಲಕ್ಷ ಮಂದಿಯಷ್ಟೇ ಅಕ್ರಮ ವಲಸಿಗರಾಗಿ ಗುರುತಿಗೀಡಾಗಿದ್ದಾರೆ. ಹಾಗಂತ,

ಪಾಕ್ ಮತ್ತು ಬಾಂಗ್ಲಾಗಳ ಗಡಿಗೆ ತಾಗಿಕೊಂಡಿರುವ ಅಸ್ಸಾಮ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ವಲಸಿಗರಿರುವುದು ಅಸಹಜವೇನಲ್ಲ. ಒಂದೇ ಭೂಮಿಯಾಗಿದ್ದ ಭಾರತವನ್ನು ಕತ್ತರಿಸಿ  ಎರಡು ತುಂಡನ್ನಾಗಿ ಮತ್ತು ಆ ತುಂಡಿನಿಂದ ಇನ್ನೊಂದು ಭಾಗವನ್ನು ಕತ್ತರಿಸಿ ದೂರ ಸರಿಸಿದಾಕ್ಷಣ ಮಾನವ ಸಂಬಂಧಗಳು ಕತ್ತರಿಸಿ ಹೋಗಬೇಕೆಂದೇನೂ ಇಲ್ಲವಲ್ಲ. ಭೂಮಿಯನ್ನು ಕತ್ತರಿಸುವುದು ದೇಶ ಎಂಬ ಪರಿಕಲ್ಪನೆಯ ಪೂರ್ಣತೆಗೆ ಅನಿವಾರ್ಯ ಇರಬಹುದು. ಆದರೆ, ಜನರ ಸಂಬಂಧ ಅದರಿಂದಾಗಿ ಕತ್ತರಿಸಿ ಹೋಗುವುದಿಲ್ಲ. ಜನರು ಆ ಬಳಿಕವೂ ಗಡಿಯ ಆಚೆಗೆ ಮತ್ತು ಈಚೆಗೆ  ಹೋಗುತ್ತಲೂ ಬರುತ್ತಲೂ ಇರುತ್ತಾರೆ. ಕೌಟುಂಬಿಕ ಸಂಬಂಧವನ್ನು ಬೆಳೆಸುತ್ತಿರುತ್ತಾರೆ. ಗಡಿಯ ಈ ಭಾಗದವರನು ಗಡಿಯ ಆ ಭಾಗದ ವಧುವನ್ನು ಮದುವೆಯಾಗುವುದು ಗಡಿಗಿಂತ ಸಾವಿರಾರು  ಕಿಲೋ ಮೀಟರ್ ದೂರ ಇರುವ ನಮಗೆ ಹೊಸತೇ ಹೊರತು ಗಡಿಭಾಗಕ್ಕಲ್ಲ. ಈ ಬಗೆಯ ಸಂಬಂಧಗಳ ಕಾರಣಕ್ಕಾಗಿಯೂ ಭಾರತದಲ್ಲಿ ಬಂದು ನೆಲೆಸಿದವರಿದ್ದಾರೆ. ಇವರಲ್ಲಿ ಹಿಂದೂಗಳೂ ಇದ್ದಾರೆ,  ಮುಸ್ಲಿಮರೂ ಇದ್ದಾರೆ. ವಲಸೆಗೆ ಇನ್ನೊಂದು ಬಹುಮುಖ್ಯ ಕಾರಣ- ಉದ್ಯೋಗ.
ಯಾವ ದೇಶದ ಆರ್ಥಿಕ ಸ್ಥಿತಿ ಪ್ರಬಲವಾಗಿರುತ್ತೋ ಅಲ್ಲಿಗೆ ನಿರುದ್ಯೋಗಿಗಳ ದಂಡು ಲಗ್ಗೆ ಇಡುವುದು ಸಾರ್ವಕಾಲಿಕ ಸತ್ಯ. ಮೆಕ್ಸಿಕೋದ ಗಡಿಯನ್ನು ಮುಚ್ಚುವಂತೆ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್  ಟ್ರಂಪ್ ಆದೇಶಿಸಿದ್ದು ಇದೇ ಕಾರಣದಿಂದ. ಸಂಪನ್ನ ದೇಶವಾದ ಅಮೇರಿಕಾಕ್ಕೆ ಪಕ್ಕದ ಮೆಕ್ಸಿಕೋದಿಂದ ಉದ್ಯೋಗವನ್ನರಸಿಕೊಂಡು ಜನರು ಬರುವುದು ಅಸಹಜವಲ್ಲ. ಇವನ್ನೆಲ್ಲ ನಿಭಾಯಿಸುವುದಕ್ಕೆ  ಆಯಾ ದೇಶಗಳಲ್ಲಿ ವಲಸೆ ವಿರೋಧಿ ಕಾನೂನುಗಳಿವೆ. ಆದರೆ,
ಕೇಂದ್ರ ಸರಕಾರ ಇಂಥ ವಲಸೆಯನ್ನೇ ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಹೊರಟಿದೆ. ಈಶಾನ್ಯ ಭಾರತದ ವಲಸೆ ಸಮಸ್ಯೆಯನ್ನು ಇಡೀ ಭಾರತದ ಸಮಸ್ಯೆಯೆಂಬಂತೆ ಬಿಂಬಿಸಿರುವುದು ಬಿಜೆಪಿಯ  ಒಂದು ತಪ್ಪಾದರೆ, ಪೌರತ್ವ ಮತ್ತು ವಲಸೆಯನ್ನು ಏಕೀಕರಿಸಿ ಜನರನ್ನು ಗೊಂದಲಕ್ಕೆ ದೂಡಿರುವುದು ಇನ್ನೊಂದು ತಪ್ಪು. ಗಡಿಭಾಗದ ರಾಜ್ಯಗಳ ವಲಸೆ ಸಮಸ್ಯೆಗೆ ಇಡೀ ಭಾರತದ 130 ಕೋಟಿ ಮಂದಿಯನ್ನೂ ಶಂಕಿತ ನಾಗರಿಕರನ್ನಾಗಿಸುವುದು ಮತ್ತು ಅವರಿಂದ ದಾಖಲೆ ಪತ್ರಗಳನ್ನು ಪಡೆದುಕೊಳ್ಳುವುದು ಮೂರ್ಖತನದ ಪರಮಾವಧಿ. ಅಸ್ಸಾಮ್‍ನ 3 ಕೋಟಿಯಷ್ಟು ಜನಸಂಖ್ಯೆಯ ಪೈಕಿ ಅಕ್ರಮ  ವಲಸಿಗರೆಷ್ಟು ಎಂಬುದನ್ನು ಪತ್ತೆ ಹಚ್ಚುವ ಪ್ರಕ್ರಿಯೆ 2015ರಲ್ಲಿ ಪ್ರಾರಂಭವಾಗಿ 2019 ಆಗಸ್ಟ್ ನಲ್ಲಿ ಕೊನೆಗೊಂಡಾಗ ಆದ ಆವಾಂತರಗಳೇನು? ಸುಮಾರು ಒಂದೂವರೆ ಸಾವಿರ ಕೋಟಿ ರೂಪಾಯಿ  ಖರ್ಚಿನಲ್ಲಿ 52 ಸಾವಿರ ಸರಕಾರಿ ಅಧಿಕಾರಿಗಳ ಮೂಲಕ 4 ವರ್ಷಗಳ ಕಾಲ ನಡೆದ ಆ ಎನ್‍ಆರ್ ಸಿಯು ಅಂತಿಮವಾಗಿ ಪತ್ತೆಹಚ್ಚಿದ್ದು ಬರೇ 19 ಲಕ್ಷ ಮಂದಿಯನ್ನು. ಅದರಲ್ಲಿ ಸುಮಾರು 15 ಲಕ್ಷ  ಮಂದಿಯೂ ಹಿಂದೂಗಳೇ. ಒಂದೂವರೆ ಕೋಟಿ ಅಕ್ರಮ ವಲಸಿಗರಿದ್ದಾರೆ ಎಂದು ಬಿಜೆಪಿ ಪ್ರಚಾರ ಮಾಡಿದ ರಾಜ್ಯವೊಂದರ ಸ್ಥಿತಿ ಇದು. ಹಾಗಂತ, ಈ 15 ಲಕ್ಷ ಮಂದಿ ಹಿಂದೂಗಳಲ್ಲಿ ಎಲ್ಲರೂ  ಧಾರ್ಮಿಕ ದೌರ್ಜನ್ಯ ದಿಂದಾಗಿ ಭಾರತಕ್ಕೆ ಬಂದವರು ಎಂದಲ್ಲವಲ್ಲ. ಇವರಲ್ಲಿ ತೀರಾ ತೀರಾ ಸಣ್ಣ ಭಾಗವೊಂದು ಮಾತ್ರ ಧಾರ್ಮಿಕ ದೌರ್ಜನ್ಯದ ಲಾಭದಲ್ಲಿ ಪೌರತ್ವವನ್ನು ಗಿಟ್ಟಿಸಿಕೊಳ್ಳಬಹುದು. ಆದರೆ  ಉಳಿದ ಬೃಹತ್ ಪ್ರಮಾಣದ ಹಿಂದೂ ವಲಸಿಗರ ಪಾಡೇನು? ಮುಸ್ಲಿಮರ ಜೊತೆಗೆ ಅವರೂ ಬಂಧನ ಕೇಂದ್ರದಲ್ಲಿ ಬದುಕಬೇಕಲ್ಲವೇ? ಅಸ್ಸಾಮ್‍ನ ಬಂಧನ ಕೇಂದ್ರಗಳಲ್ಲಿ ಈಗಾಗಲೇ ಸಾವಿಗೀಡಾದ  29 ಮಂದಿಯಲ್ಲಿ ಹಿಂದೂಗಳೇ ಹೆಚ್ಚಿದ್ದಾರೆ. ಮೊನ್ನೆ ಮೊನ್ನೆಯಂತೆ ಸುರೇಶ್ ಕೊಂಚ್ ಎಂಬವ ಬಂಧನ ಕೇಂದ್ರದಲ್ಲಿ ಸಾವಿಗೀಡಾದ. ಹೀಗಿರುವಾಗ ಎನ್‍ಆರ್ ಸಿ ಯಾರ ಉಪಯೋಗಕ್ಕೆ?

ವಲಸಿಗರಿಗೆ ಪೌರತ್ವ ಕೊಡುವುದನ್ನು ಯಾರೂ ವಿರೋಧಿಸುತ್ತಿಲ್ಲ. ಆದರೆ ವಲಸಿಗರನ್ನು ಹಿಂದೂ ಮುಸ್ಲಿಮ್ ಎಂದು ವಿಭಜಿಸಿ, ಮುಸ್ಲಿಮರನ್ನು ಮಾತ್ರ ಪೌರತ್ವದಿಂದ ಹೊರಗಿಡುವುದಿದೆಯಲ್ಲ, ಅದಕ್ಕೆ  ಆಕ್ಷೇಪ. ವಲಸಿಗರಲ್ಲಿ ಮುಸ್ಲಿಮ್ ವಲಸಿಗರ ಸಂಖ್ಯೆ ಎಷ್ಟು ಸಣ್ಣದು ಎಂಬುದನ್ನು ಅಸ್ಸಾಮ್‍ನ ಎನ್‍ಆರ್ ಸಿಯೇ ಸ್ಪಷ್ಟ ಪಡಿಸುತ್ತದೆ. ಅಲ್ಲದೇ, ಪಾಕ್ ಮತ್ತು ಬಾಂಗ್ಲಾದಿಂದ ಭಾರತಕ್ಕೆ ಬಂದಿರುವ  ವಲಸಿಗರನ್ನು ಮೆಕ್ಸಿಕೋದಿಂದ ಅಮೇರಿಕಾಕ್ಕೆ ವಲಸೆ ಹೋದವರಿಗೆ ಹೋಲಿಸಲಾಗದು. ಭಾರತಕ್ಕೂ ಮತ್ತು ಪಾಕ್-ಬಾಂಗ್ಲಾಕ್ಕೂ ನಡುವೆ ಕರುಳಬಳ್ಳಿ ಸಂಬಂಧ ಇದೆ. ಈ ಸಂಬಂಧವೇ ಗಡಿ ಮೀರಿದ  ವಲಸೆಗೆ ಕಾರಣವಾಗಿದೆ. ಹೀಗಿರುವಾಗ, ವಲಸಿಗರನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸದೇ ಮಾನವೀಯ ನೆಲೆಯಲ್ಲಿ ನೋಡುವುದು ಉತ್ತಮವಲ್ಲವೇ? ವಲಸೆಯನ್ನು ವಲಸೆಯೆಂದೇ  ಪರಿಗಣಿಸುವುದಕ್ಕೆ ಏನು ತೊಂದರೆಯಿದೆ? ಅವರ ನಡುವೆ ಹಿಂದೂ-ಮುಸ್ಲಿಮ್ ಎಂಬ ದುರ್ಬೀನನ್ನು ಏಕೆ ತಂದಿಡುತ್ತೀರಿ? ಬೃಹತ್ ಸಂಖ್ಯೆಯಲ್ಲಿರುವ ಮುಸ್ಲಿಮೇತರ ವಲಸಿಗರಿಗೆ ಪೌರತ್ವ  ಕೊಡುವಾಗ ಇಲ್ಲಿನ ಉದ್ಯೋಗ, ಸಂಸ್ಕøತಿ, ಭಾಷೆ, ಭೌಗೋಳಿ ಪರಂಪರೆಗೆ ತೊಂದರೆ ಎದುರಾಗುವುದಿಲ್ಲವೆಂದಾದರೆ ಇಲ್ಲಿನವರೇ ಆಗಿದ್ದ ತೀರಾ ಸಣ್ಣ ಪ್ರಮಾಣದಲ್ಲಿರುವ ಮುಸ್ಲಿಮರಿಗೆ ಪೌರತ್ವ  ಕೊಡುವಾಗ ಏನು ತೊಂದರೆ? ಯಾಕೆ ಹುಯಿಲು?

Thursday, January 23, 2020

ನಿಮಗೇಕೆ ಆತಂಕ ಎಂದು ಪ್ರಶ್ನಿಸುತ್ತೀರಲ್ಲ, ಕೇಳಿ



 ‘ವಂಶ ಮತ್ತು ಧರ್ಮ ಸಂಬಂಧಿ ಸರ್ವ ತಾರತಮ್ಯವನ್ನೂ ವಿರೋಧಿಸುವ 1969ರ ಅಂತಾರಾಷ್ಟ್ರೀಯ ಒಡಂಬಡಿಕೆ’  (International
convention on the elimination of all forms of Racial discrimination) ಮತ್ತು ‘ದೇಶದ ನಾಗರಿಕರ ಹಕ್ಕುಗಳನ್ನು ದೃಢಪಡಿಸುವ ಅಂತಾರಾಷ್ಟ್ರೀಯ ಒಡಂಬಡಿಕೆ’  (International Covenant on civil and political rights)-- ಈ ಎರಡಕ್ಕೂ ಭಾರತ ಸಹಿ ಹಾಕಿದೆ. ವಂಶ ಮತ್ತು ಧರ್ಮದ ಹೆಸರಲ್ಲಿ ನಾಗರಿಕರ ನಡುವೆ ಬೇಧ- ಭಾವ ತೋರಲಾರೆ ಮತ್ತು ನಾಗರಿಕರ ಹಕ್ಕುಗಳನ್ನು ದಮನಿಸಲಾರೆ ಎಂಬುದನ್ನು ವಿಶ್ವಸಂಸ್ಥೆಯಲ್ಲಿ ಒಪ್ಪಿಕೊಂಡಿರುವ ದೇಶ ಭಾರತ. ವರ್ಷದ ಹಿಂದೆ ಹಂಗೇರಿಗೂ ಯುರೋಪಿಯನ್ ಯೂನಿಯನ್  ಒಕ್ಕೂಟ ರಾಷ್ಟ್ರಗಳಿಗೂ ನಡುವೆ ತಕರಾರು ಉಂಟಾಯಿತು. ಯುರೋಪಿಯನ್ ಯೂನಿಯನ್‍ನ ಸದಸ್ಯ ರಾಷ್ಟ್ರವಾಗಿರುವ ಹಂಗೇರಿಯು ತನ್ನ ದೇಶದ ಚಿಂತಕರು, ನ್ಯಾಯಾಧೀಶರು, ಅಲ್ಪಸಂಖ್ಯಾತರು ಮತ್ತು ಮಾನವ ಹಕ್ಕು ಗುಂಪುಗಳ ಮೇಲೆ ನಿರ್ಬಂಧವನ್ನು ಹೇರಿದೆ ಮತ್ತು ಅವುಗಳ ಸ್ವಾತಂತ್ರ್ಯಕ್ಕೆ ತಡೆ ಒಡ್ಡಿದೆ ಎಂದು ದೂರಲಾಯಿತು. 1992ರಲ್ಲಿ ಅಸ್ತಿತ್ವಕ್ಕೆ ಬಂದ ಯುರೋಪಿಯನ್ ಯೂನಿಯನ್  ಒಡಂಬಡಿಕೆಯ ಭಾಗ-2ರಲ್ಲಿ ಮಾನವನ ಅಂತಸ್ತು, ಸಮಾನತೆ, ಸ್ವಾತಂತ್ರ್ಯವನ್ನು ಗೌರವಿಸುವುದು ಮತ್ತು ಅಲ್ಪಸಂಖ್ಯಾತರ ಸಹಿತ ಎಲ್ಲ ವಿಭಾಗಗಳ ಮಾನವ ಹಕ್ಕುಗಳನ್ನು ರಕ್ಷಿಸುವುದಾಗಿ ಹೇಳಲಾಗಿದೆ.  ಈ ನಿಯಮಗಳನ್ನು ಉಲ್ಲಂಘಿಸುವ ಸದಸ್ಯ ರಾಷ್ಟ್ರಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಒಡಂಬಡಿಕೆಯ ಭಾಗ-7ರಲ್ಲಿ ಹೇಳಲಾಗಿದೆ. ಆದ್ದರಿಂದ ಹಂಗೇರಿ ಪ್ರಕರಣವು ಯುರೋಪಿಯನ್  ಯೂನಿಯನ್ ಸಂಸತ್ತಿನಲ್ಲಿ ಚರ್ಚೆಗೆ ಒಳಗಾಯಿತು. ತನ್ನ ದೇಶದ ಅಲ್ಪಸಂಖ್ಯಾತರು ಮತ್ತು ಹೋರಾಟ ಗಾರರನ್ನು ಹಂಗೇರಿಯು ತಾರತಮ್ಯದಿಂದ ನೋಡುತ್ತಿದೆ ಎಂಬುದು ಗಂಭೀರ ಚರ್ಚೆಗೆ ಕಾರಣವಾಯಿತಲ್ಲದೇ, ಪ್ರಕರಣವನ್ನು ಮತಕ್ಕೂ ಹಾಕಲಾಯಿತು. ಆಗ ಹಂಗೇರಿಯ ವಿರುದ್ಧ 448 ಮತಗಳು ಮತ್ತು ಪರ 197 ಮತಗಳೂ ಬಿದ್ದುವು. ಧರ್ಮ ಮತ್ತು ವಂಶದ ಹೆಸರಲ್ಲಿ ನಾಗರಿಕರನ್ನು  ಬೇಧ-ಭಾವದಿಂದ ನೋಡುವುದನ್ನು ವಿಶ್ವಸಂಸ್ಥೆಯಾಗಲಿ ಯುರೋಪಿಯನ್ ಒಕ್ಕೂಟವಾಗಲಿ ಮಾನ್ಯ ಮಾಡುವುದಿಲ್ಲ ಅನ್ನುವುದಕ್ಕೆ ಉದಾಹರಣೆ ಇದು. ಹಾಗಂತ, ನಾಗರಿಕರ ಜೊತೆ ಬೇಧ-ಭಾವ  ತೋರುವ ಪ್ರಕರಣಗಳು ನಡೆದಿಲ್ಲ ಮತ್ತು ನಡೆಯುತ್ತಿಲ್ಲ ಎಂದಲ್ಲ,
1982ರಲ್ಲಿ ಮ್ಯಾನ್ಮಾರ್ ನ ಸೇನಾಡಳಿತವು ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯು ಮ್ಯಾನ್ಮಾರ್ ನ ನಾಗರಿಕರನ್ನು ಮೂರು ರೀತಿಯಲ್ಲಿ ವಿಭಜಿಸಿತು.
1. ನಿಜವಾದ ನಾಗರಿಕರು
2. ಸಹ ನಾಗರಿಕರು
3. ಪೌರತ್ವ ನೀಡಲಾಗಿರುವ ವಿದೇಶಿ ನಾಗರಿಕರು.
ಮ್ಯಾನ್ಮಾರ್ ನ ನಿಜವಾದ ಪೌರರನ್ನು ಗುರುತಿಸುವ ಅಂತಿಮ ವರ್ಷವಾಗಿ (cut off year) 1824ನ್ನು ಈ ಪೌರತ್ವ ಕಾಯ್ದೆಯು ನಿಗದಿಪಡಿಸಿತು. ಅಸ್ಸಾಮಿಗರಿಗೆ 1971 ಮಾರ್ಚ್ 24 ಹೇಗೋ ಹಾಗೆಯೇ ಇದು. 1825ರಲ್ಲಿ ಹಳೆಯ ಬರ್ಮಾದ (ಈಗಿನ ಮ್ಯಾನ್ಮಾರ್) ಮೇಲೆ ದಾಳಿ ಮಾಡಿದ ಬ್ರಿಟಿಷರು ಅದನ್ನು ವಶಪಡಿಸಿಕೊಂಡಿದ್ದರು. ಈ ದಾಳಿಗಿಂತ ಮೊದಲು ಬರ್ಮಾದಲ್ಲಿ ವಾಸವಿದ್ದವರಿಗೆ  ಮತ್ತು ಅವರ ನಂತರದ ಪೀಳಿಗೆಗೆ ಮಾತ್ರ ಪೂರ್ಣ ಪೌರತ್ವವನ್ನು ನೀಡಲಾಗುವುದು ಎಂದು ಕಾಯ್ದೆ ಹೇಳುತ್ತದೆ. ಒಂದು ರೀತಿಯಲ್ಲಿ, ಭಾರತದ ಎನ್‍ಆರ್ ಸಿ ಹೇಗೆಯೋ ಅದೇ ರೀತಿಯ ಕಾಯ್ದೆ- ಕಲಮುಗಳನ್ನು ಮ್ಯಾನ್ಮಾರ್ ನ ಪೌರತ್ವ ಕಾಯ್ದೆಯೂ ಒಳಗೊಂಡಿತ್ತು. ಎಲ್ಲ ನಾಗರಿಕರಿಗೂ ಪೌರತ್ವದ ಗುರುತಿನ ಚೀಟಿಯನ್ನು ಮ್ಯಾನ್ಮಾರ್ ಕಡ್ಡಾಯಗೊಳಿಸಿತು. ಈ ಪ್ರಕ್ರಿಯೆಯನ್ನು ಎಷ್ಟು  ನಿಷ್ಕರುಣೆಯಿಂದ ಮಾಡಲಾಯಿತೆಂದರೆ, ಮ್ಯಾನ್ಮಾರ್ ನಲ್ಲಿ ಬಹು ಹಿಂದಿನಿಂದಲೂ ಬದುಕುತ್ತಾ ಬಂದವರ ಮೇಲೂ ಸೇನಾಡಳಿತ ದಯೆ ತೋರಲಿಲ್ಲ. ಪೌರತ್ವ ಕಾಯ್ದೆಯು ಪಟ್ಟಿಮಾಡಿರುವ ಎಲ್ಲ  ದಾಖಲೆಗಳನ್ನು ಸಮರ್ಪಿಸದವರಿಗೆ ಒಂದೋ ವಿದೇಶಿ ನೋಂದಣಿ ಕಾರ್ಡ್(FRC)ಗಳನ್ನು ನೀಡಿ ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವುದು ಅಥವಾ ದೇಶದಿಂದ ಹೊರಹಾಕುವುದು- ಈ  ಎರಡನ್ನು ನಿಯಮವಾಗಿ ಪೌರತ್ವ ಕಾಯ್ದೆಯಲ್ಲಿ ಹೇಳಲಾಗಿದೆ. ದುರಂತ ಏನೆಂದರೆ, 
ಈ ಕಾಯ್ದೆಯ ನೇರ ಪರಿಣಾಮವನ್ನು ಅರಕ್ಕಾನ್ (ರಾಖೈನ್) ರಾಜ್ಯದ ರೋಹಿಂಗ್ಯನ್ನರು ಎದುರಿಸಬೇಕಾಯಿತು.  ರೋಹಿಂಗ್ಯನ್ ವಂಶಜರಿಗೆ ಬರ್ಮಾದಲ್ಲಿ ಒಂದು ದೀರ್ಘ ಇತಿಹಾಸವಿದೆ. 15ನೇ ಶತಮಾನದಿಂದಲೂ ಅರಕ್ಕಾನ್ ಎಂಬ ಪ್ರದೇಶದಲ್ಲಿ ಇವರು ವಾಸಿಸುತ್ತಾ ಬಂದಿದ್ದಾರೆ ಎಂಬುದಾಗಿ ಇತಿಹಾಸ  ಹೇಳುತ್ತದೆ. ಅಂದು ಅರಕ್ಕಾನ್ ಪ್ರದೇಶವು ಬಂಗಾಳಿ ಸುಲ್ತಾನರ ಆಳ್ವಿಕೆಗೆ ಒಳಪಟ್ಟಿತ್ತು. ಅರಕ್ಕಾನ್ ಆ ಬಳಿಕ ಸ್ವತಂತ್ರ ರಾಷ್ಟ್ರವಾಯಿತು. ಆ ಸ್ವತಂತ್ರ ಅರಕ್ಕಾನ್ ರಾಷ್ಟ್ರದ ದೊರೆಯು ಸುಲ್ತಾನ್ ಎಂಬ  ಹೆಸರಿನಿಂದ ಗುರುತಿಸಿಕೊಂಡಿದ್ದ. ಆಡಳಿತ ಮತ್ತು ಸೇನೆಯಲ್ಲಿ ಅತ್ಯಂತ ಮುಂಚೂಣಿಯಲ್ಲಿದ್ದುದು ಇದೇ ರೋಹಿಂಗ್ಯನ್ ವಂಶಜರು. 1785ರಲ್ಲಿ ಅರಕ್ಕಾನ್ ರಾಷ್ಟ್ರವು ಬರ್ಮಾದ ಭಾಗವಾಯಿತು. ಆಗಲೂ  ಆಡಳಿತ ಮತ್ತು ಸೇನೆಯಲ್ಲಿ ರೋಹಿಂಗ್ಯನ್ನರಿಗೆ ಮುಖ್ಯ ಪಾತ್ರವೇ ಇತ್ತು. 1825ರಲ್ಲಿ ಬ್ರಿಟಿಷರು ಮತ್ತು ಬರ್ಮಾದ ನಡುವೆ ಮೊದಲ ಯುದ್ಧ ನಡೆಯಿತು. ಇದರಲ್ಲಿ ಬರ್ಮಾ ಪರಾಜಯ ಹೊಂದಿತಲ್ಲದೇ,  ಈಸ್ಟ್ ಇಂಡಿಯಾ ಕಂಪೆನಿಯ ಅಧೀನಕ್ಕೆ ಬರ್ಮಾವೂ ಸೇರ್ಪಡೆಗೊಂಡಿತು. ಈ ನಡುವೆ ಅರಕ್ಕಾನ್ ಪ್ರದೇಶದ ರೋಹಿಂಗ್ಯನ್ ವಂಶಜರ ಜನಸಂಖ್ಯೆಯಲ್ಲಿ ಆಗುತ್ತಿರುವ ವೃದ್ಧಿ ಮತ್ತು ಆಡಳಿತ ಮತ್ತು  ಸಾಮಾಜಿಕ ವಿಷಯಗಳಲ್ಲಿ ಅವರು ಹೊಂದುತ್ತಿರುವ ಪ್ರಾಬಲ್ಯವು ಬೌದ್ಧ ಧರ್ಮೀಯರಲ್ಲಿ ಆತಂಕವನ್ನು ಹುಟ್ಟು ಹಾಕತೊಡಗಿತು. ಇದು ಸಂಘರ್ಷಕ್ಕೂ ಕಾರಣವಾಯಿತು. ಎಲ್ಲಿಯ ವರೆಗೆಂದರೆ, ಈ  ವಿಷಯವನ್ನು ಪರಿಶೀಲಿಸುವುದಕ್ಕಾಗಿ ಬ್ರಿಟಿಷರು ತನಿಖಾ ತಂಡವನ್ನೂ ರಚಿಸಿದ್ದರು. ಅಂತಿಮವಾಗಿ 1937ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪೆನಿಯಿಂದ ಬರ್ಮಾವನ್ನು ಪ್ರತ್ಯೇಕಗೊಳಿಸಿದರು. 1948ರಲ್ಲಿ ಬರ್ಮಾದ ಗಡಿ ಗುರುತೂ ನಡೆಯಿತು. ಈ ನಡುವೆ ಬೌದ್ಧ ರಾಷ್ಟ್ರವಾದ ಜಪಾನ್ ಸೇನೆಯು ಬರ್ಮಾದ ಮೇಲೆ ದಾಳಿ ಮಾಡಿತು. ಆಗ ಅರಕ್ಕಾನ್‍ನಲ್ಲಿ ಎರಡು ಗುಂಪುಗಳಾದುವು. ಬೌದ್ಧರು ಜಪಾನ್ ಸೇನೆಯ ಪರ ನಿಂತರು. ಆದರೆ ರೋಹಿಂಗ್ಯನ್ನರನ್ನು ಬ್ರಿಟಿಷರು ತಮ್ಮ ಜೊತೆ ಸೇರಿಕೊಳ್ಳುವಂತೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಇದು ಎರಡೂ ಸಮುದಾಯದ ನಡುವಿನ ಜಗಳಕ್ಕೆ ಇನ್ನಷ್ಟು ಉರಿಯನ್ನು ಹಚ್ಚಿಬಿಟ್ಟಿತು. 1962ರಲ್ಲಿ ಅಧಿಕಾರಕ್ಕೆ ಬಂದ ಜನರಲ್ ನೇ ವಿನ್ ಅವರು ರೋಹಿಂಗ್ಯನ್ನರ ದಮನಕ್ಕೆ ನೀಲನಕ್ಷೆಯನ್ನು ರೂಪಿಸಿದರು. ರಾಖೈನ್ ರಾಜ್ಯವು 288 ಗ್ರಾಮಗಳನ್ನು ಹೊಂದಿರುವ ವಿಶಾಲ ಪ್ರದೇಶ. ಆಡಳಿತಾತ್ಮಕವಾಗಿ ಮತ್ತು ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಸಕ್ರಿಯರಾಗಿದ್ದ ಇವರನ್ನು ದಮನಗೊಳಿಸುವುದಕ್ಕಾಗಿಯೇ ಸೇನಾಡಳಿತವು ಪೌರತ್ವ ಕಾಯ್ದೆಯನ್ನು ಜಾರಿಗೆ  ತಂದಿತು. ಅರಕ್ಕಾನ್ ಪ್ರದೇಶದಲ್ಲಿ ವಾಸಿಸುತ್ತಿದ್ದ ಸುಮಾರು 12 ಲಕ್ಷ ಮುಸ್ಲಿಮರನ್ನು ರೋಹಿಂಗ್ಯನ್ ಎಂದು ಉಲ್ಲೇಖಿಸಲೂ ಮ್ಯಾನ್ಮಾರ್ ಆಡಳಿತ ಒಪ್ಪಿಕೊಳ್ಳಲಿಲ್ಲ. ಅವರನ್ನು ಬಂಗಾಳಿಗಳು ಎಂದು  ಕರೆಯಿತು. ಮಾತ್ರವಲ್ಲ, ಪೌರತ್ವ ಕಾಯ್ದೆಯನ್ನು ಅವರ ಮೇಲೆ ನಿರ್ದಯವಾಗಿ ಜಾರಿಗೊಳಿಸಿತು. ಅದರ ಪ್ರಕಾರ ರೋಹಿಂಗ್ಯನ್ನರು ಪೌರತ್ವ ನಿರಾಕರಣೆಗೆ ಒಳಗಾದರು. ಅವರಿಂದ ಸರಕಾರಿ ಉದ್ಯೋಗ,  ಮತದಾನದ ಹಕ್ಕನ್ನು ಕಸಿಯಲಾಯಿತಲ್ಲದೇ ಸಂಚಾರಕ್ಕೂ, ಶೈಕ್ಷಣಿಕ ಸೌಲಭ್ಯಕ್ಕೂ ನಿರ್ಬಂಧ ಹೇರಲಾಯಿತು. 2017ರಲ್ಲಿ ಸೇನೆ ಕೈಗೊಂಡ ವಂಶನಾಶ ಕ್ರೌರ್ಯದಲ್ಲಿ (ಕ್ಲಿಯರೆನ್ಸ್ ಆಪರೇಶನ್) 730  ಮಕ್ಕಳೂ ಸೇರಿದಂತೆ 6,700 ಮಂದಿಯ ಹತ್ಯೆಯಾಗಿದೆ ಎಂದು ಹೇಳಲಾಗುತ್ತದೆ. ರಾಖೈನ್ ರಾಜ್ಯದ 288 ಗ್ರಾಮಗಳಿಗೆ ಪೂರ್ಣವಾಗಿ ಅಥವಾ ಭಾಗಶಃ ಬೆಂಕಿ ಹಚ್ಚಲಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳ ವರದಿಗಳು ಹೇಳುತ್ತಿವೆ. ಸುಮಾರು 9 ಲಕ್ಷ ರೋಹಿಂಗ್ಯನ್ನರು ಬಾಂಗ್ಲಾದೇಶದಲ್ಲಿ ಇವತ್ತು ನಿರಾಶ್ರಿತ ಜೀವನವನ್ನು ನಡೆಸುತ್ತಿದ್ದಾರೆ. ಹಾಗೆಯೇ, 
2018 ಜುಲೈ 19ರಂದು ಇಸ್ರೇಲ್‍ನ ಪಾರ್ಲಿಮೆಂಟು (ನೆಸೆಟ್) ಒಂದು ಮಸೂದೆಯನ್ನು ಅಂಗೀಕರಿಸಿತು. ಇಸ್ರೇಲನ್ನು ಸಂಪೂರ್ಣ ಯಹೂದಿ ರಾಷ್ಟ್ರವಾಗಿ ಘೋಷಿಸುವ ಈ ಮಸೂದೆಯ ಪರ 62  ಮತಗಳು ಬಿದ್ದರೆ ವಿರೋಧವಾಗಿ 55 ಮತಗಳು ಬಿದ್ದುವು. ಆ ಬಳಿಕ ಸುಪ್ರೀಮ್ ಕೋರ್ಟಿನಿಂದಲೂ ಇದಕ್ಕೆ ಅಂಗೀಕಾರ ದೊರೆಯಿತು. ‘ಇಸ್ರೇಲ್ ಐತಿಹಾಸಿಕವಾಗಿಯೇ ಯಹೂದಿಯರ ಜನ್ಮಭೂಮಿಯಾಗಿದ್ದು, ಸ್ವನಿರ್ಣಯ ಅಧಿಕಾರವು ಯಹೂದಿಯರಿಗೆ ಮಾತ್ರ ಸೀಮಿತ’ವೆಂದು ಈ ಮಸೂದೆಯು ಹೇಳುತ್ತದೆ. ಅಧಿಕೃತ ಭಾಷೆಯಾಗಿ ಗುರುತಿಸಿಕೊಂಡಿದ್ದ ಅರಬಿಯನ್ನು ಕೈಬಿಟ್ಟು ಹಿಬ್ರೂವನ್ನು ಮಾತ್ರ ಅಧಿಕೃತ ಪಟ್ಟಿಯಲ್ಲಿ ಸೇರಿಸಲಾಯಿತು. ಆದರೆ, ಈ ಬದಲಾವಣೆಗೆ ವ್ಯಾಪಕ ವಿರೋಧ ವ್ಯಕ್ತವಾದ ಮೇಲೆ ಅರಬಿ ಭಾಷೆಗೆ ವಿಶೇಷ ಗೌರವವನ್ನು ನೀಡಲಾಯಿತು. ಯಹೂದಿ ಧರ್ಮಕ್ಕೆ ಸಂಬಂಧಿಸಿದ ಕುರುಹುಗಳನ್ನು ಇಸ್ರೇಲ್‍ನ ಸಂಕೇತಗಳಾಗಿ ಮಾರ್ಪಡಿಸಲಾಯಿತು. ನಿಜವಾಗಿ, ಇಸ್ರೇಲ್‍ನ ಒಟ್ಟು 80 ಲಕ್ಷ ಜನಸಂಖ್ಯೆಯಲ್ಲಿ 18 ಲಕ್ಷ  ಮಂದಿ (20%) ಅರಬಿಗಳಿದ್ದಾರೆ. ಅವರು ಪರಂಪರಾಗತವಾಗಿ ಅಲ್ಲಿಯದೇ ನಿವಾಸಿಗಳು. ಈ ನಿವಾಸಿಗಳು ಮತ್ತು ಅತಿಕ್ರಮಣದ ಮೂಲಕ ಇಸ್ರೇಲ್ ವಶಪಡಿಸಿಕೊಂಡ ಫೆಲೆಸ್ತೀನಿಗಳ ನಡುವೆ ಬೇಧ-ಭಾವ ತೋರುವ 65 ನಿಯಮಗಳನ್ನು ಕಳೆದ 7  ವರ್ಷಗಳಲ್ಲಿ ಇಸ್ರೇಲ್ ರೂಪಿಸಿದೆ ಮತ್ತು ತನ್ನ ಭೂಮಿ ಯಿಂದ ಹೊರದಬ್ಬಿದ ಮುಸ್ಲಿಮರಿಗೆ ಮರಳಿ ಬರುವ ಅವಕಾಶವನ್ನೂ ಇಸ್ರೇಲ್ ನಿರಾಕರಿಸಿದೆ.
ಇದರ ಜೊತೆಗೇ 1935 ಅಕ್ಟೋಬರ್ ನಲ್ಲಿ ಹಿಟ್ಲರ್ ಜಾರಿಗೆ ತಂದ ಪೌರತ್ವ ಕಾಯ್ದೆಯನ್ನೂ ನಾವು ಇಟ್ಟು ನೋಡಬೇಕು. ಅಂದಹಾಗೆ,
ಎನ್‍ಆರ್ ಸಿ ಮತ್ತು ಸಿಎಎಗಳು ಆಳದಲ್ಲಿ ಯಾವ ಹುನ್ನಾರವನ್ನು ಹೊಂದಿರಬಹುದು ಮತ್ತು ಅಂತಿಮವಾಗಿ ಅದು ಯಾವ ಅಪಾಯವನ್ನು ತಂದೊಡ್ಡಬಹುದು ಅನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕಾಗಿ ಮ್ಯಾನ್ಮಾರ್, ಇಸ್ರೇಲ್ ಮತ್ತು ಜರ್ಮನಿಯ ಈ ಉದಾಹರಣೆಗಳು ನಮಗೆ ಧಾರಾಳ ಸಾಕು. ಆಘಾತಕಾರಿ ಸಂಗತಿ ಏನೆಂದರೆ, ಸಿಎಎಯ ವಿಷಯದಲ್ಲಿ ಕೇಂದ್ರ ಸರಕಾರವು ದಿನಕ್ಕೊಂದರಂತೆ ಮಾತಾಡುತ್ತಿದೆ ಅನ್ನುವುದು. ಪಾಕ್, ಬಾಂಗ್ಲಾ ಮತ್ತು ಅಫಘಾನ್‍ನಿಂದ ‘ಧಾರ್ಮಿಕ ದೌರ್ಜನ್ಯ’ಕ್ಕೆ ಒಳಗಾಗಿ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಪೌರತ್ವ ಕೊಡುವ ಕಾಯ್ದೆಯೇ ಸಿಎಎ  ಎಂದು ಕೇಂದ್ರ ಸರಕಾರ ಪಾರ್ಲಿಮೆಂಟ್ ನಲ್ಲಿ ಹೇಳಿಕೊಂಡಿತ್ತು. ಈಗಲೂ ಹೇಳುತ್ತಿದೆ. ಆದರೆ, ಸಿಎಎ ಕಾಯ್ದೆಯಲ್ಲಿ ‘ಧಾರ್ಮಿಕ ದೌರ್ಜನ್ಯ’ ಎಂಬ ಪದವನ್ನೇ ಬಳಸಲಾಗಿಲ್ಲ ಎಂದು ಪ್ರಜಾವಾಣಿ ಪತ್ರಿಕೆ  (2020 ಜನವರಿ 2, ಪುಟ 6) ಮತ್ತು 2019 ಡಿಸೆಂಬರ್ 23ರ ಇಂಡಿಯಾ ಟುಡೆಯಲ್ಲಿ ಕೌಶಿಕ್ ದೇರಾ ಬರೆದ Everything you wanted to know about the CAA and NRC ಎಂಬ ಶೀರ್ಷಿಕೆಯ ಲೇಖನದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ಮೇಲಿನ ಮೂರೂ ರಾಷ್ಟ್ರಗಳಿಂದ ಭಾರತಕ್ಕೆ ಬಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಕೊಡುವುದಾಗಿ ಕಾಯ್ದೆಯಲ್ಲಿ  ಹೇಳಲಾಗಿದೆ. ಆದರೆ, ಮುಸ್ಲಿಮ್ ವಲಸಿಗರನ್ನು ಮಾತ್ರ ಹೊರಗಿಡಲಾಗಿದೆ. ನಿಜವಾಗಿ, ಸರಕಾರದ ಈ ಇಬ್ಬಂದಿತನವೇ ಸಿಎಎ ಮತ್ತು ಎನ್‍ಆರ್ ಸಿಯ ಅಪಾಯವನ್ನು ಸ್ಪಷ್ಟಪಡಿಸುತ್ತದೆ. ಹೊರನೋಟಕ್ಕೆ  ಹೇಳುವಷ್ಟು ಸರಳ ಮತ್ತು ಸಾಮಾನ್ಯವಲ್ಲ ಈ ಪ್ರಕ್ರಿಯೆ. ಇದರ ಹಿಂದೆ ಇನ್ನೇನೋ ಉದ್ದೇಶವಿರುವಂತಿದೆ. ಅಷ್ಟಕ್ಕೂ, 
2010ರಿಂದ 17ರ ನಡುವೆ ಅಮೇರಿಕದಲ್ಲಿ 35 ಲಕ್ಷ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು 2019 ಡಿಸೆಂಬರ್ 1ರಂದು ಪ್ರಕಟಿಸಿದ The overlooked undocumented immigrants: From India, China, Brazil ಎಂಬ ಶೀರ್ಷಿಕೆಯ ಲೇಖನದಲ್ಲಿ ವಿವರಿಸಿತ್ತು. ಇವರಲ್ಲಿ ಹೆಚ್ಚಿನವರು ಭಾರತೀಯರು  ಎಂದು ಲೇಖನ ಬರೆದಿರುವ ಮರಿಯಮ್ ಜೋರ್ಡಾನ್ ಅವರು ಹೇಳಿದ್ದರು. ಆದರೆ ಈ ಅಕ್ರಮ ವಲಸಿಗರನ್ನು ಹೊರಗಟ್ಟುವುದಕ್ಕೆ ಅಮೇರಿಕ ಸಿಎಎಯನ್ನೋ ಎನ್‍ಆರ್ ಸಿಯನ್ನೋ ಜಾರಿಗೆ ತರಲಿಲ್ಲ.  ಯಾಕೆಂದರೆ, ಇದು ಅನಗತ್ಯ. ಸಾಮಾನ್ಯ ಕಾಯ್ದೆಯೇ ಇದನ್ನು ನಿಭಾಯಿಸುವುದಕ್ಕೆ ಧಾರಾಳ ಸಾಕಾಗುತ್ತದೆ. ಹಾಗೆಯೇ, ಅಮೇರಿಕವು 150 ಮಂದಿ ಭಾರತೀಯರನ್ನು ಗಡೀಪಾರುಗೊಳಿಸಿರುವ ಸು ದ್ದಿಯನ್ನು 2019 ನವೆಂಬರ್ 20ರಂದು ಪ್ರಕಟವಾದ ದ ಎಕನಾಮಿಕ್ ಟೈಮ್ಸ್ ಪತ್ರಿಕೆಯು ವರದಿ ಮಾಡಿತ್ತು (150 Indians deported
from America). ಇದು ಸಹಜ ಕ್ರಿಯೆ.  ಭಾರತಕ್ಕೂ ಇದು ಸಾಧ್ಯವಿದೆ. ಇದಕ್ಕಾಗಿ ಎನ್‍ಆರ್ ಸಿ ಮತ್ತು ಸಿಎಎಯ ಅಗತ್ಯವೇ ಇಲ್ಲ. ೧೩೦ ಕೋಟಿ ಭಾರತೀಯರನ್ನು ಕಚೇರಿಗಳ ಎದುರು ಸರತಿ ನಿಲ್ಲಿಸಬೇಕಾದ ಯಾವ ಅಗತ್ಯವೂ ಇಲ್ಲ. ಆದ್ದರಿಂದಲೇ,
ಎನ್‍ಪಿಆರ್, ಎನ್‍ಆರ್ ಸಿ ಮತ್ತು ಸಿಎಎಯ ಬಗ್ಗೆ ಆತಂಕ. ಆಳುವವರು ಏನೇ ಹೇಳಲಿ.

Monday, January 6, 2020

ಅವರಲ್ಲಿ ವಲಸಿಗರು ಯಾರು, ನುಸುಳುಕೋರರು ಯಾರು?



While exercising its Right of reply at the 38th session of the UN Human Rights Council, in 2018, the Indian representative said of the Pakistan’s stand: “In its obsession with puritanism, it has unleashed systematic persecution against its own muslim minorities including Shias, Ahmadiyas, Ismilia and Hazaras, who have been reduced to second class citizens.

“ಪಾಕಿಸ್ತಾನವು ತನ್ನದೇ ಬಹುಸಂಖ್ಯಾತ ಸಮುದಾಯದ ಅಲ್ಪಸಂಖ್ಯಾತ ಪಂಗಡಗಳಾದ ಶಿಯಾ, ಅಹ್ಮದಿಯಾ, ಇಸ್ಮಾಯಿಲಿಯಾ ಮತ್ತು ಹಝಾರಗಳ ಮೇಲೆ ದೌರ್ಜನ್ಯ ಎಸಗುತ್ತಿದೆ ಮತ್ತು ಅವರನ್ನು  ದ್ವಿತೀಯ ದರ್ಜೆಯ ನಾಗರಿಕರಂತೆ ನೋಡಿ ಕೊಳ್ಳುತ್ತಿದೆ...” ಎಂದು 2018ರಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗದ 38ನೇ ಸಭೆಯಲ್ಲಿ ಮೋದಿ ಸರಕಾರ ವಾದಿಸಿತ್ತು ಎಂಬುದಾಗಿ 2019  ಡಿಸೆಂಬರ್ 26ರ ದಿ ಹಿಂದೂ ಪತ್ರಿಕೆ ಬಹಿರಂಗಪಡಿಸಿದೆ. ನಿಜವಾಗಿ,
ಸಿಎಎಯ ವಿಷಯದಲ್ಲಿ ಕೇಂದ್ರ ಸರಕಾರದ ಈ ವರೆಗಿನ ವಾದಗಳನ್ನೆಲ್ಲ ಪುಡಿಗಟ್ಟುವ ದಾಖಲೆ ಇದು. ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿರುವ ಹಿಂದೂಗಳ ಮೇಲೆ ಧಾರ್ಮಿಕ  ದಮನ ನಡೆಯುತ್ತಿದೆ ಮತ್ತು ಆ ಕಾರಣಕ್ಕಾಗಿ ಪೌರತ್ವ ತಿದ್ದುಪಡಿ ಕಾನೂನನ್ನು ಜಾರಿಗೆ ತರುತ್ತಿದ್ದೇವೆ ಎಂಬುದು ಕೇಂದ್ರದ ವಾದ. ಧಾರ್ಮಿಕ ದೌರ್ಜನ್ಯದಿಂದ ಪಾರಾಗಿ ಭಾರತಕ್ಕೆ ಬಂದಿರುವ  ಮುಸ್ಲಿಮೇತರರಿಗೆ ಭಾರತೀಯ ಪೌರತ್ವವನ್ನು ಕೊಡುವುದು ಸಿಎಎಯ ಉದ್ದೇಶ ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಮೇಲಿನ ಮೂರೂ ರಾಷ್ಟ್ರಗಳಲ್ಲಿ ಮುಸ್ಲಿಮರೇ ಬಹುಸಂಖ್ಯಾತವಾಗಿರುವುದರಿಂದ  ಮುಸ್ಲಿಮರ ಮೇಲೆ ಧಾರ್ಮಿಕ ದೌರ್ಜನ್ಯ ಅಸಾಧ್ಯ ಮತ್ತು ಆ ಕಾರಣಕ್ಕಾಗಿ ನಾವು ಪೌರತ್ವ ಕಾನೂನಿನಿಂದ ಮುಸ್ಲಿಮರನ್ನು ಹೊರಗಿಟ್ಟಿದ್ದೇವೆ ಎಂದೂ ಕೇಂದ್ರ ತನ್ನನ್ನು ಸಮರ್ಥಿಸಿಕೊಳ್ಳುತ್ತಿದೆ. ಇದೇವೇಳೆ,  ಪಾಕಿಸ್ತಾನದಲ್ಲಿ ಇಸ್ಮಾಯಿಲಿಯ, ಅಹ್ಮದಿಯಾ, ಹಝಾರ ಮತ್ತು ಶಿಯಾ ಪಂಗಡಗಳ ಮೇಲೆ ಧಾರ್ಮಿಕ ದೌರ್ಜನ್ಯ ನಡೆಯುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಇದೇ ಸರಕಾರದ ಪ್ರತಿನಿಧಿಗಳು ವಾದಿಸುತ್ತಾರೆ. ಈ ಇಬ್ಬಂದಿತನಕ್ಕೆ ಏನೆಂದು ಹೇಳಬೇಕು? ಹಾಗಿದ್ದರೆ ಧಾರ್ಮಿಕ ದೌರ್ಜನ್ಯದಿಂದಾಗಿ ಪಾಕ್‍ನಿಂದ ಮುಸ್ಲಿಮೇತರರು ಭಾರತಕ್ಕೆ ಬಂದಿರುವಂತೆಯೇ ಶಿಯಾ, ಅಹ್ಮದಿಯಾ, ಹಝಾರ, ಇಸ್ಮಾ ಯಿಲಿಯ್ಯ  ಪಂಗಡದ ಮುಸ್ಲಿಮರೂ ಬಂದಿರಬಾರದೇಕೆ? ಅವರಿಗೆ ಪೌರತ್ವ ಕೊಡಬಾರದೇಕೆ? ಅಷ್ಟಕ್ಕೂ,
ಮೇಲಿನ ಮೂರೂ ರಾಷ್ಟ್ರಗಳಿಂದ ಭಾರತಕ್ಕೆ ಬಂದಿರುವ ಮುಸ್ಲಿಮೇತರರ ಪೈಕಿ ಎಷ್ಟು ಮಂದಿ ಧಾರ್ಮಿಕ ದೌರ್ಜನ್ಯವನ್ನು ಎದುರಿಸುದ್ದಾರೆ ಮತ್ತು ಎಷ್ಟು ಮಂದಿ ಉದ್ಯೋಗ ಮತ್ತಿತರ ಅವಕಾಶಗಳನ್ನು  ಹುಡುಕಿಕೊಂಡು ಭಾರತಕ್ಕೆ ಬಂದಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ನಮ್ಮಲ್ಲಿ ಯಾವ ಪ್ಯಾರಾಮೀಟರ್ ಇದೆ? ಪಾಕ್, ಅಫಘಾನ್ ಮತ್ತು ಬಾಂಗ್ಲಾದಿಂದ ಭಾರತ ಪ್ರವೇಶಿಸಿರುವ ಎಲ್ಲ ಮುಸ್ಲಿಮೇತರರ ಮೇಲೂ ಧಾರ್ಮಿಕ ದೌರ್ಜನ್ಯ ನಡೆದಿದೆ ಎಂಬುದು ನಿಜವೇ? ಅವರೆಲ್ಲ ಧಾರ್ಮಿಕ ದೌರ್ಜನ್ಯದಿಂದಾಗಿ ಮಾತ್ರ ಭಾರತ ಪ್ರವೇಶಿಸಿದ ವಲಸಿಗರೇ? ಮುಸ್ಲಿಮರು ಮಾತ್ರ ಈ ಯಾವುದನ್ನೂ ಎದುರಿಸದೇ  ಭಾರತ ಪ್ರವೇಶಿಸಿದ ನುಸುಳುಕೋರರೇ? ಮುಸ್ಲಿಮೇತರರನ್ನು ವಲಸಿಗರು ಮತ್ತು ಮುಸ್ಲಿಮರನ್ನು ನುಸುಳುಕೋರರು ಎಂಬುದಾಗಿ ವಿಭಜಿಸುವುದಕ್ಕೆ ಏನು ಆಧಾರವಿದೆ? ಉದ್ಯೋಗ ಮತ್ತಿತರ ಅವಕಾಶಗಳನ್ನು ಹುಡುಕಿಕೊಂಡು ಮುಸ್ಲಿಮೇತರರೂ ಯಾಕೆ ಭಾರತಕ್ಕೆ ನುಸುಳಿರ ಬಾರದು? ಮುಸ್ಲಿಮರು ಮಾತ್ರ ಯಾಕೆ ನುಸುಳುಕೋರರಾಗುತ್ತಾರೆ, ಅವರೇಕೆ ವಲಸಿಗರಾಗುವುದಿಲ್ಲ? ಧಾರ್ಮಿಕ ದೌರ್ಜನ್ಯ ಮತ್ತು ಉದ್ಯೋಗ ಹುಡುಕಾಟ ಎಂಬೆರಡು ಸಮಾನ ಕಾರಣಗಳಿಗಾಗಿ ಮುಸ್ಲಿಮರು ಮತ್ತು ಮುಸ್ಲಿಮೇತರರೂ ಭಾರತ ಪ್ರವೇಶಿಸಿರುವ ಸಾಧ್ಯತೆಯೇ ಅಧಿಕವಿದ್ದರೂ ಯಾಕೆ ಮುಸ್ಲಿಮರನ್ನು ನುಸುಳುಕೋರರು ಮತ್ತು ಮುಸ್ಲಿಮೇತರರನ್ನು ವಲಸಿಗರು ಎಂದು ಕರೆಯಲಾಗುತ್ತದೆ? ನುಸುಳುಕೋರರು ಎಂಬ ಪದದಲ್ಲಿಯೇ ಕಾನೂನು ಬಾಹಿರವಾಗಿ ಪ್ರವೇಶಿಸಿದವರು ಎಂಬ ಧ್ವನಿಯಿದೆ. ಆದರೆ ವಲಸಿಗರು ಅನ್ನುವ ಪದದಲ್ಲಿ ಈ ಅಪರಾಧಿ ಭಾವವಿಲ್ಲ. ಅಂದಹಾಗೆ,
ಪಾಕ್, ಬಾಂಗ್ಲಾ ಮತ್ತು ಅಫಘಾನ್‍ನಿಂದ ಭಾರತ ಪ್ರವೇಶಿಸಿದ ಮುಸ್ಲಿಮೇತರರೆಲ್ಲರ ಮೇಲೂ ಧಾರ್ಮಿಕ ದೌರ್ಜನ್ಯ ನಡೆದಿದೆ ಎಂಬ ವಾದವನ್ನು ಒಪ್ಪಲು ಸಾಧ್ಯವೇ ಇಲ್ಲ. ಹಾಗಂತ, ಪಾಕ್, ಅಫಘಾನ್  ಮತ್ತು ಬಾಂಗ್ಲಾದಲ್ಲಿ ಮುಸ್ಲಿಮೇತರರ ಮೇಲೆ ಧಾರ್ಮಿಕ ದೌರ್ಜನ್ಯ ನಡೆದಿದೆ ಅನ್ನುವುದು ಸುಳ್ಳಲ್ಲ. ಕ್ರಿಕೆಟಿಗ ಶುಐಬ್ ಅಖ್ತರ್ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಕ್ರಿಕೆಟಿಗ ದಾನಿಶ್ ಕನೇರಿಯಾ ಅವರ ಮೇಲೆ ಧಾರ್ಮಿಕ ತಾರ ತಮ್ಯ ನಡೆದಿತ್ತು ಎಂದವರು ಹೇಳಿರುವುದೂ ಮತ್ತು ಕನೇರಿಯಾ ಅದನ್ನು ಒಪ್ಪಿಕೊಂಡಿರುವುದೂ ನಡೆದಿದೆ. ಪಾಕಿಸ್ತಾನದ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಂಡ  ಎರಡನೇ ಹಿಂದೂ ಕ್ರಿಕೆಟಿಗ ಕನೇರಿಯಾ. ಅಷ್ಟೊಂದು ಉನ್ನತ ಮಟ್ಟದಲ್ಲೂ ಧಾರ್ಮಿಕ ತಾರತಮ್ಯ ನಡೆದಿದೆ ಎಂಬುದು ಆಘಾತಕಾರಿ ಮತ್ತು ಖಂಡನಾರ್ಹ. ಆದರೂ ಪಾಕ್‍ನಲ್ಲಿ ನಡೆಯುತ್ತಿರುವ  ಧಾರ್ಮಿಕ ತಾರತಮ್ಯದ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಗೃಹಸಚಿವ ಅಮಿತ್ ಶಾ ಅವರು ನೀಡಿರುವ ಲೆಕ್ಕಾಚಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅವರ ಪ್ರಕಾರ, 1951ರಲ್ಲಿ ಪಾಕಿಸ್ತಾನದಲ್ಲಿ ಮುಸ್ಲಿಮೇತರ  ಸಮುದಾಯದ ಜನಸಂಖ್ಯೆ 23% ಇತ್ತು. ಈಗ ಅದು 3.7ಕ್ಕೆ ಕುಸಿದಿದೆ. ಅಂದ ಹಾಗೆ, ಇದು ನಿಜವಲ್ಲ. 1951ರಲ್ಲಿ ಬಾಂಗ್ಲಾದೇಶದ ಉದಯವಾಗಿರಲಿಲ್ಲ. ಈಗಿನ ಬಾಂಗ್ಲಾದೇಶವು ಆಗಿನ ಪೂರ್ವ  ಪಾಕಿಸ್ತಾನದ ಭಾಗವಾಗಿತ್ತು. ಆ ಪೂರ್ವ ಭಾಗದಲ್ಲಿ ಮುಸ್ಲಿಮರ ಸಂಖ್ಯೆ 23% ಇತ್ತೇ ಹೊರತು ಇಡೀ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಪೈಕಿ ಮುಸ್ಲಿಮೇತರರ ಜನಸಂಖ್ಯೆ 23% ಇರಲಿಲ್ಲ. ಆಗ ಇದ್ದುದು ಬರೇ 3.5%. ಒಂದುವೇಳೆ, ಕಾಶ್ಮೀರದಲ್ಲಿರುವ ಮುಸ್ಲಿಮರ ಜನಸಂಖ್ಯೆಯ ಶೇಕಡಾವಾರು ಲೆಕ್ಕವನ್ನು ಎತ್ತಿಕೊಂಡು ಇಡೀ ಭಾರತಕ್ಕೆ ಅದನ್ನು ಅನ್ವಯಿಸಿ ಹೇಳಿದರೆ ಹೇಗಿದ್ದೀತು? ಭಾರತದಲ್ಲಿ  60% ಮುಸ್ಲಿಮರಿದ್ದಾರೆ ಎಂದು ಹೇಳುವುದು ಹೇಗೆ ತಪ್ಪೋ ಹಾಗೆಯೇ ಪಾಕಿಸ್ತಾನದಲ್ಲಿ 1951ರ ಜನಗಣತಿ ಪ್ರಕಾರ 23% ಮುಸ್ಲಿಮೇತರರಿದ್ದರು ಎಂದು ಹೇಳುವುದೂ ಅಷ್ಟೇ ತಪ್ಪು. ಪಾಕ್‍ನಲ್ಲಿ  ವರ್ಷಂಪ್ರತಿ ಮುಸ್ಲಿಮೇತರರ ಜನಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂಬುದನ್ನು ಒಪ್ಪಿಕೊಂಡರೂ 23% ದಿಂದ 3.7%ಕ್ಕೆ ಇಳಿಯಿತು ಎಂಬ ಉತ್ಪ್ರೇಕ್ಷಿತ ಸುಳ್ಳನ್ನು ಒಪ್ಪಿಕೊಳ್ಳಬೇಕಾಗಿಲ್ಲ. ಅದೇವೇಳೆ, 1951ರ  ಜನಗಣತಿಯಂತೆ ಬಾಂಗ್ಲಾದಲ್ಲಿ ಮುಸ್ಲಿಮೇತರರ ಜನಸಂಖ್ಯೆ 23.20%ದಷ್ಟಿತ್ತು ಮತ್ತು 2011ರ ಜನಗಣತಿ ಪ್ರಕಾರ ಈ ಅನುಪಾತ 9.40%ಕ್ಕೆ ಕುಸಿದಿದೆ. ನಿಜವಾಗಿ,
ವಿಭಜನೆಯು ಭಾರತ ಮತ್ತು ಪಾಕ್‍ಗಳ ನಡುವೆ ಅತಿದೊಡ್ಡ ವಲಸೆಗೆ ಕಾರಣವಾಯಿತು. ಒಂದು ಅಂದಾಜಿನ ಪ್ರಕಾರ, 72.3 ಲಕ್ಷ ಮುಸ್ಲಿಮರು ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ ಮತ್ತು 72.49 ಲಕ್ಷ  ಹಿಂದೂಗಳು ಭಾರತಕ್ಕೆ ವಲಸೆ ಬಂದಿದ್ದಾರೆ. ಅಷ್ಟಕ್ಕೂ, ಭೂಪಟದ ಮಧ್ಯೆ ಗೆರೆಯೊಂದನ್ನು ಎಳೆದ ತಕ್ಷಣ ಭೂಪಟದಲ್ಲಿ ವಿಭಜನೆ ಉಂಟಾದೀತೇ ಹೊರತು ಜೊತೆಯಾಗಿದ್ದ ಜನರ ನಡುವಿನ  ಸಂಬಂಧದಲ್ಲಿ ಬಿರುಕು ಉಂಟಾಗಲು ಸಾಧ್ಯವಿಲ್ಲವಲ್ಲ. ಎರಡೂ ರಾಷ್ಟ್ರಗಳ ವಿಭಜನೆಯಿಂದಾಗಿ ಅಣ್ಣ ಪಾಕ್‍ನಲ್ಲಿ ಮತ್ತು ತಮ್ಮ ಭಾರತದಲ್ಲಿ ಎಂಬಂತಹ ಸ್ಥಿತಿ ತಲೆದೋರಿತು. ಗಡಿ ಗುರುತು ಏನೇ  ಇದ್ದರೂ ಈ ಸಂಬಂಧಗಳು ಪರಸ್ಪರ ನಾಡುಗಳಿಗೆ ವಲಸೆ ಹೋಗುವುದಕ್ಕೂ ಕಾರಣವಾಯಿತು. ಭಾರತದ ಗಡಿ ಪ್ರದೇಶಗಳಲ್ಲಿ ತಮ್ಮ ಸಂಬಂಧಿಕರಿದ್ದಾರೆ ಮತ್ತು ಉದ್ಯೋಗ ಹುಡುಕಲು ಅವರು  ನೆರವಾಗುತ್ತಾರೆ ಎಂಬ ಧೈರ್ಯದಿಂದ ಪಾಕ್ ಮತ್ತು ಬಾಂಗ್ಲಾದಿಂದ ಭಾರತಕ್ಕೆ ವಲಸೆ ಬಂದವರ ಸಂಖ್ಯೆ ದೊಡ್ಡದಿರಬಹುದು. ಹಾಗೆಯೇ ಧಾರ್ಮಿಕ ದೌರ್ಜನ್ಯವೂ ಹೀಗೆ ವಲಸೆ ಬರುವುದಕ್ಕೆ ಕಾರಣ  ಇರ ಬಹುದು. ಅಸ್ಸಾಮ್‍ನ ಮೇಲೆ ಈ ವಲಸೆ ದೊಡ್ಡಮಟ್ಟದ ಪರಿಣಾಮವನ್ನು ಬೀರಿತು. ಅಸ್ಸಾಮ್‍ಗೆ ಹೀಗೆ ವಲಸೆ ಬಂದವರಲ್ಲಿ ಮುಸ್ಲಿಮರೂ ಮತ್ತು ಮುಸ್ಲಿಮೇತರರೂ ಇದ್ದರು. ಈ ವಲಸೆ  ಅಸ್ಸಾಮ್‍ನಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು. ವಲಸೆಯ ವಿರುದ್ಧ ಜನಾಂದೋಲನಗಳೇ ನಡೆದುವು. ಸುಮಾರು 2000ಕ್ಕಿಂತಲೂ ಅಧಿಕ ಮಂದಿಯ ಸಾವಿಗೆ ಕಾರಣವಾದ ನೆಲ್ಲಿ ಹತ್ಯಾಕಾಂಡಕ್ಕೆ ಈ  ವಲಸೆ ವಿರೋಧಿ ಚಳವಳಿಯೇ ಕಾರಣ. ಆದ್ದರಿಂದಲೇ, ಅಸ್ಸಾಮ್‍ನ ಎನ್‍ಆರ್ ಸಿಗೆ ವಿಶೇಷ ಮಹತ್ವವಿದೆ. 1971 ಮಾರ್ಚ್ 24ರ ಬಳಿಕ ವಲಸೆ ಬಂದ ಎಲ್ಲರನ್ನೂ ಅಸ್ಸಾಮ್‍ನಿಂದ  ಹೊರಹಾಕಬೇಕೆಂಬುದು ಅಸ್ಸಾಮ್ ಎನ್‍ಆರ್ ಸಿಯ ಮುಖ್ಯ ಉದ್ದೇಶ. 1971 ಮಾರ್ಚ್ 24ಕ್ಕಿಂತ ಮೊದಲಿನ ಜನನ ದಾಖಲೆ, ಮತದಾರರ ಪಟ್ಟಿಯಲ್ಲಿ ಹೆಸರು, ಎಲ್‍ಐಸಿ ಪ್ರಮಾಣ ಪತ್ರ, ಪಾಸ್ ಪೋರ್ಟ್, ಬ್ಯಾಂಕ್ ಖಾತೆ ಇತ್ಯಾದಿ 14 ದಾಖಲೆಗಳನ್ನು ಅಸ್ಸಾಮಿಗರು ತಮ್ಮ ನಾಗರಿಕತ್ವದ ಪುರಾವೆಯಾಗಿ ಮಂಡಿಸಬೇಕಿದೆ. ಇದಿಲ್ಲದವರು ತಮ್ಮ ಹೆತ್ತವರ ಪೌರತ್ವ ದಾಖಲೆಗಳೂ ಸೇರಿದಂತೆ 8  ದಾಖಲೆಗಳನ್ನಾದರೂ ತೋರಿಸಲೇಬೇಕು. ಇದೂ ಸಾಧ್ಯವಾಗದವರು ವಿದೇಶಿ ಟ್ರಿಬ್ಯೂನಲ್‍ನ ಬಾಗಿಲು ತಟ್ಟಬೇಕು. ಆದರೆ, ಭಾರತದ ಒಟ್ಟು ಜನಸಂಖ್ಯೆಯ ಪೈಕಿ ಕೇವಲ 58% ಜನರಲ್ಲಿ ಮಾತ್ರ ಜನನ ನೋಂದಣಿ ದಾಖಲೆ ಇದೆ ಎಂದು ಯುನಿಸೆಫ್ ಹೇಳುತ್ತದೆ. ಆದ್ದರಿಂದಲೇ,
 ಅಸ್ಸಾಮ್‍ನ ಜನರು ತಮ್ಮ ದಾಖಲೆಗಳನ್ನು ಪಡಕೊಳ್ಳುವುದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿದರು. ಅವರು ಹಣ  ಹೊಂದಿಸುವುದಕ್ಕಾಗಿ ತಮ್ಮ ಭೂಮಿ ಮಾರಿದರು. ಉದ್ಯೋಗಕ್ಕೆ ರಜೆ ಹಾಕಿದರು. ಉಳುಮೆ ಕೈ ಬಿಟ್ಟರು. ಕೇವಲ ಅಸ್ಸಾಮ್ ಸರಕಾರವೊಂದೇ ಇಡೀ ಎನ್‍ಆರ್ ಸಿ ಪ್ರಕ್ರಿಯೆಗಾಗಿ 11 ಕೋಟಿ 82 ಲಕ್ಷ  ರೂಪಾಯಿಯನ್ನು ಖರ್ಚು ಮಾಡಿದೆ ಎಂದು ಅಧಿಕೃತವಾಗಿಯೇ ಘೋಷಿಸಲಾಗಿದೆ. ಅಂದರೆ, ಒಬ್ಬೊಬ್ಬ ವ್ಯಕ್ತಿಗೂ 19,064 ರೂಪಾಯಿ ಖರ್ಚು ಮಾಡಿದಂತಾಗಿದೆ. 2017ರಲ್ಲಿ ಅಸ್ಸಾಮ್‍ನ ಒಟ್ಟು ಜನಸಂಖ್ಯೆಯಲ್ಲಿ 1.2 ಕೋಟಿ ಮಂದಿ ವಿದೇಶಿಗರು ಎಂದು ಘೋಷಿಸಲಾಯಿತು. 2018 ಜುಲೈನಲ್ಲಿ ಈ ವಿದೇಶಿಯರ ಸಂಖ್ಯೆ 44 ಲಕ್ಷಕ್ಕೆ ಕುಸಿಯಿತು. 2019ರಲ್ಲಿ ಈ ಸಂಖ್ಯೆ ಮತ್ತೂ ಕುಸಿದು 19 ಲಕ್ಷಕ್ಕೆ  ಬಂದು ನಿಂತಿತು. ತಮಾಷೆ ಏನೆಂದರೆ, ಈ ಖರ್ಚು, ಅಲೆದಾಟ, ಸಂಕಟಗಳೆಲ್ಲ ಭಾರತೀಯನೊಬ್ಬ ಭಾರತೀಯ ಎಂದು ಸಾಬೀತುಪಡಿಸುವುದಕ್ಕಾಗಿ ಮಾಡಲಾಗಿದೆ ಎಂಬುದು. ಅಂದಹಾಗೆ,
ಎನ್‍ಆರ್ ಸಿ ಪ್ರಕಾರ, ಈ ದೇಶದ ಮುಸ್ಲಿಮರು ಮತ್ತು ಮುಸ್ಲಿಮೇತರರೆಲ್ಲರೂ ತಮ್ಮ ಪೌರತ್ವ ಸಾಬೀತುಪಡಿಸುವುದಕ್ಕಾಗಿ ದಾಖಲೆ ಸಲ್ಲಿಸಬೇಕಾಗುತ್ತದೆ. ಹೀಗೆ ದಾಖಲೆಗಳನ್ನು ಸಲ್ಲಿಸ ಬೇಕೆಂದರೆ,  ಮೊದಲಾಗಿ ಅವುಗಳನ್ನು ಸಂಗ್ರಹಿಸಬೇಕು. ಅದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಬೇಕು. ಭಾರತೀಯ ನಾಗರಿಕರು ತಮ್ಮ ನಾಗರಿಕತ್ವವನ್ನು ಸಾಬೀತುಪಡಿಸುವುದಕ್ಕಾಗಿ ಪಡುವ ಸಂಕಟ ಇದು. ಅಸ್ಸಾಮ್‍ನ ಮಂದಿ ಈ ಎಲ್ಲ ಸಂಕಟಗಳಿಗೆ ತುತ್ತಾಗಿ ಬಸವಳಿದಿದ್ದಾರೆ. ಇಷ್ಟೆಲ್ಲಾ ಆದ ಮೇಲೂ ಅಸ್ಸಾಮ್‍ನಲ್ಲಿ ಸಿಕ್ಕಿದ್ದು ಬರೇ 19 ಲಕ್ಷ ಮಂದಿ. ಇದೂ ಅಂತಿಮ ಅಲ್ಲ. ಈ 19 ಲಕ್ಷ ಮಂದಿಗೂ ವಿದೇಶಿ  ಟ್ರಿಬ್ಯೂನಲ್‍ಗೆ ಹೋಗಿ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಅವಕಾಶ ಇದೆ. ಅಲ್ಲೂ ನ್ಯಾಯ ಸಿಗದಿದ್ದರೆ ಮತ್ತೆ ನ್ಯಾಯಾಲಯವನ್ನು ಸಮೀಪಿಸಬಹುದು. ಸದ್ಯ,
ದೇಶದಾದ್ಯಂತ ನಡೆಸಲಾಗುವುದೆಂದು ಹೇಳಲಾಗುತ್ತಿರುವ ಎನ್‍ಆರ್ ಸಿ ಮತ್ತು ಸಿಎಎಗೆ ಅಗತ್ಯವಿರುವ ದಾಖಲೆಗಳು ಏನೇನು ಎಂಬುದನ್ನು ಕೇಂದ್ರ ಸರಕಾರ ಈವರೆಗೂ ಹೇಳಿಯೇ ಇಲ್ಲ. ಆದ್ದರಿಂದ,  ಅಸ್ಸಾಮ್‍ನ ಮಾದರಿಯಲ್ಲೇ ದೇಶದಾದ್ಯಂತ ಎನ್‍ಆರ್ ಸಿ ನಡೆಸಲಾಗುತ್ತದೆ ಎಂದು ಅಂದುಕೊಳ್ಳಬೇಕಾಗುತ್ತದೆ. ಹೀಗಾದರೆ 130 ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ಯುದ್ಧಸ್ಥಿತಿ ನಿರ್ಮಾಣವಾದೀತು. ಸರಕಾರಿ ಕಚೇರಿಗಳಲ್ಲಿ ಜನದಟ್ಟಣೆಯಿಂದಾಗಿ ಗೋಲಿಬಾರ್, ಲಾಠಿ ಚಾರ್ಜ್‍ಗಳು ನಿತ್ಯದ ಸುದ್ದಿಯಾದೀತು.

Tuesday, December 31, 2019

ಸಮುದಾಯ ಬಹಿಷ್ಕರಿಸಬೇಕಾದದ್ದು ಎನ್‍ ಆರ್ ಸಿಯನ್ನೋ ಅಲ್ಲ, ದಾಖಲೆ ಪತ್ರಗಳನ್ನೋ?



1. ದಾಖಲೆ ಪತ್ರಗಳನ್ನು ಸರಿಪಡಿಸಿಟ್ಟುಕೊಳ್ಳುವಂತೆ ಮುಸ್ಲಿಮ್ ಸಮುದಾಯದಲ್ಲಿ ಈಗಿಂದೀಗಲೇ ಜಾಗೃತಿ ಅಭಿಯಾನವೊಂದು ಪ್ರಾರಂಭವಾಗಬೇಕು.
2. ಮುಸ್ಲಿಮರು ಎನ್‍ ಆರ್ ಸಿಯನ್ನು ಬಹಿಷ್ಕರಿಸಬೇಕು.
ಈ ಎರಡೂ ಅಭಿಪ್ರಾಯಗಳು ಮುಸ್ಲಿಮ್ ಸಮುದಾಯದಲ್ಲಿ ಸದ್ಯ ಚರ್ಚೆಯಲ್ಲಿದೆ. ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಮಸೂದೆಯು ಈಗಾಗಲೇ ಕಾನೂನಾಗಿ ಪರಿವರ್ತನೆಯಾಗಿದೆ. ಈಗದು CAB ಅಲ್ಲ CAA (Citizen Amendment Act). ಇನ್ನೊಂದು ಎನ್‍ ಆರ್ ಸಿ (ರಾಷ್ಟ್ರೀಯ ಪೌರತ್ವ ನೋಂದಣಿ). ಇವೆರಡನ್ನೂ ಜೊತೆಜೊತೆಯಾಗಿಯೇ ಜಾರಿಗೆ ತರುವ ಉದ್ದೇಶವನ್ನು ನೇರವಾಗಿಯೋ ಪರೋಕ್ಷವಾಗಿಯೋ ಕೇಂದ್ರ ಸರಕಾರ ಈಗಾಗಲೇ ವ್ಯಕ್ತಪಡಿಸಿದೆ. 2014 ಡಿಸೆಂಬರ್ 31ರ ಒಳಗಡೆ ಭಾರತದಲ್ಲಿ ವಾಸಿಸಿದ ದಾಖಲೆಯನ್ನು ಸಲ್ಲಿಸುವ ಮುಸ್ಲಿಮೇತರ ಎಲ್ಲ ಧರ್ಮೀಯರಿಗೂ ಪೌರತ್ವ ತಿದ್ದುಪಡಿ ಕಾನೂನಿನ ಪ್ರಕಾರ ಭಾರತೀಯ ಪೌರತ್ವ ಲಭ್ಯವಾಗಲಿದೆ. ಆದರೆ, ಮುಸ್ಲಿಮರಿಗೆ ಈ ಅವಕಾಶ ಇಲ್ಲ. ಪಾಕ್, ಬಾಂಗ್ಲಾ ಮತ್ತು ಅಫಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮರಿಗೆ ಭಾರತೀಯ ನಾಗರಿಕತೆ ನಿರಾಕರಿಸುವುದು ಮತ್ತು ಧಾರ್ಮಿಕ ದೌರ್ಜನ್ಯದಿಂದಾಗಿ ಭಾರತಕ್ಕೆ ಬಂದ ಮುಸ್ಲಿಮೇತರರಿಗೆ ಪೌರತ್ವ ಒದಗಿಸುವುದು ಪೌರತ್ವ ಕಾನೂನಿನ ಉದ್ದೇಶವಾಗಿದೆಯೆಂದು ಕೇಂದ್ರ ಸರಕಾರ ಹೇಳುತ್ತಿದ್ದರೂ ಅಲ್ಲೂ ಗೊಂದಲಗಳಿವೆ. ಮೇಲಿನ ಮೂರೂ ರಾಷ್ಟ್ರಗಳಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಲ್ಲಿ ಧಾರ್ಮಿಕ ದೌರ್ಜನ್ಯದಿಂದ ಬಂದವರೆಷ್ಟು ಮತ್ತು ಉದ್ಯೋಗವನ್ನರಸಿಕೊಂಡು ಬಂದವರೆಷ್ಟು ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಅನ್ನುವ ಪ್ರಶ್ನೆಗೆ ಕೇಂದ್ರ ಸರಕಾರ ಈವರೆಗೂ ಉತ್ತರಿಸಿಲ್ಲ. ಅದು ಸುಲಭವೂ ಅಲ್ಲ. ನಿಜವಾಗಿ, ಧಾರ್ಮಿಕ ದೌರ್ಜನ್ಯ ಎಂಬುದು ಅತ್ಯಂತ ಜಾಣತನದಿಂದ ಆಯ್ಕೆ ಮಾಡಿದ ಪದ. ಈ ಮೂಲಕ ಒಂದೇ ಕಲ್ಲಿನಿಂದ ಎರಡು ಹಣ್ಣುಗಳನ್ನು ಉರುಳಿಸುವ ಉದ್ದೇಶ ಕೇಂದ್ರ ಸರಕಾರಕ್ಕಿದೆ.
1. ನೆರೆಯ ಮೂರೂ ರಾಷ್ಟ್ರಗಳಲ್ಲಿ ಭಾರೀ ಪ್ರಮಾಣದಲ್ಲಿ ಮುಸ್ಲಿಮೇತರರ ಮೇಲೆ ಧಾರ್ಮಿಕ ದೌರ್ಜನ್ಯವಾಗುತ್ತಿದೆ, ಆ ದೌರ್ಜನ್ಯವನ್ನು ತಡೆಯಲಾಗದೇ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮೇತರರು ಭಾರತಕ್ಕೆ ವಲಸೆ ಬಂದಿದ್ದಾರೆ.
2. ಇಸ್ಲಾಮಿಕ್ ರಾಷ್ಟ್ರಗಳೆಂದರೆ ಮುಸ್ಲಿಮೇತರರ ವಿರೋಧಿ. ಅಲ್ಲಿ ಮುಸ್ಲಿಮೇತರರ ಬದುಕು ಸುರಕ್ಷಿತವಲ್ಲ.
ಧಾರ್ಮಿಕ ದೌರ್ಜನ್ಯ ಎಂಬ ಪದವು ಈ ಎರಡೂ ಸಂದೇಶವನ್ನು ಸೂಚ್ಯವಾಗಿ ರವಾನಿಸುತ್ತದೆ ಮತ್ತು ದೇಶದ ನಾಗರಿಕರಲ್ಲಿ ಮುಸ್ಲಿಮ್ ವಿರೋಧಿ ಭಾವವೊಂದನ್ನು ಅದು ತಾನಾಗಿಯೇ ಸೃಷ್ಟಿಸುತ್ತದೆ. ನಿಜವಾಗಿ, ಇಂಥದ್ದೊಂದು ಧ್ರುವೀಕರಣ ವನ್ನು ಸಾಧಿಸುವುದೇ ಈ ಕಾನೂನಿನ ಮೊದಲ ಗುರಿ. ಇದು ಯಶಸ್ವಿಯಾದರೆ ಆ ಬಳಿಕ ವಲಸಿಗ ಮುಸ್ಲಿಮರಿಗೇಕೆ ಪೌರತ್ವ ಕೊಡುವುದಿಲ್ಲ ಎಂಬ ಪ್ರಶ್ನೆಯೇ ದೇಶದ್ರೋಹಿ ಎನಿಸಿಕೊಳ್ಳುತ್ತದೆ. ಮುಸ್ಲಿಮೇತರರನ್ನು ಹಿಂಸಿಸಿದ ನಾಡಿನಿಂದ ಬಂದವರಿಗೆ ಪೌರತ್ವ ಕೊಡುವುದು ತಪ್ಪು ಎಂದು ಮಾತ್ರವಲ್ಲ, ಹಾಗೆ ಭಾರತಕ್ಕೆ ಬಂದ ಮುಸ್ಲಿಮರೆಲ್ಲ ಮುಸ್ಲಿಮೇತರರಿಗೆ ಹಿಂಸೆ ಕೊಟ್ಟ ಅಪರಾಧಿಗಳು ಎಂಬ ಭಾವ ಹುಟ್ಟಿಕೊಳ್ಳುತ್ತದೆ. ಭಾರತಕ್ಕೆ ಬಂದವರಲ್ಲಿ ಮುಸ್ಲಿಮೇತರರನ್ನು ವಲಸಿಗರು ಎಂಬ ಅನುಕಂಪದ ಪದದಿಂದ ಗುರುತಿಸುವುದು ಮತ್ತು ಮುಸ್ಲಿಮರನ್ನು ಅಕ್ರಮ ನುಸುಳುಕೋರರು ಮತ್ತು ಉಗ್ರರು ಎಂಬ ರಕ್ತದೊತ್ತಡ ಏರಿಸುವ ಪದದಿಂದ ಕರೆಯುವುದೂ ನಡೆಯುತ್ತದೆ. ಮಾತ್ರವಲ್ಲ, ಕ್ರಮೇಣ ಭಾರತಕ್ಕೆ ಬಂದ ಮುಸ್ಲಿಮೇತರರನ್ನು- ಧಾರ್ಮಿಕ ದೌರ್ಜನ್ಯಕ್ಕಾಗಿ ಮತ್ತು ಉದ್ಯೋಗಕ್ಕಾಗಿ- ಎಂಬೆರಡು ವರ್ಗೀಕರಣವನ್ನು ಇದು ಅಳಿಸಿ ಹಾಕುತ್ತದಲ್ಲದೇ ಎಲ್ಲರನ್ನೂ ಧಾರ್ಮಿಕ ದೌರ್ಜನ್ಯದ ಸಂತ್ರಸ್ತರ ಪಟ್ಟಿಗೆ ಸೇರಿಸುತ್ತದೆ. ಸದ್ಯ ಈ ತಂತ್ರ ಬಹುತೇಕ ಯಶಸ್ವಿಯಾಗಿದೆ. ಮುಸ್ಲಿಮ್ ವಲಸಿಗರು ಮಾತ್ರ ಈಗ ಚರ್ಚೆಯಲ್ಲಿದ್ದಾರೆಯೇ ಹೊರತು ಭಾರತಕ್ಕೆ ಬಂದಿರುವ ಮುಸ್ಲಿಮೇತರರಲ್ಲಿ ನಿಜಕ್ಕೂ ಧಾರ್ಮಿಕ ದೌರ್ಜನ್ಯದಿಂದ ಬಂದವರೆಷ್ಟು ಎಂಬ ಬಗ್ಗೆ ಪ್ರಶ್ನೆ ಗಳೇ ಏಳುತ್ತಿಲ್ಲ. ಉದ್ಯೋಗವನ್ನರಸಿಕೊಂಡು ಬಂದವರನ್ನು ಹೇಗೆ ಪತ್ತೆ ಹಚ್ಚುತ್ತೀರಿ ಮತ್ತು ಅವರನ್ನು ಎಲ್ಲಿಗೆ ಕಳುಹಿಸುತ್ತೀರಿ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿಲ್ಲ. ನಿಜವಾಗಿ,
ಪಾಕ್, ಬಾಂಗ್ಲಾ ಮತ್ತು ಅಫಘಾನ್‍ಗಳಿಂದ ಭಾರತಕ್ಕೆ ಬಂದವರಲ್ಲಿ ಉದ್ಯೋಗವನ್ನು ಅರಸಿಕೊಂಡು ಬಂದಿರುವವರ ಸಂಖ್ಯೆಯೇ ಹೆಚ್ಚಿರುವುದು ಖಂಡಿತ. ಭಾರತಕ್ಕೆ ಹೋಲಿಸಿದರೆ ಪಾಕ್, ಬಾಂಗ್ಲಾ ಮತ್ತು ಅಫಘಾನ್‍ಗಳು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ರಾಷ್ಟ್ರಗಳು. ನೇಪಾಲ, ಮ್ಯಾನ್ಮಾರ್, ಲಂಕಾಗಳನ್ನೂ ಇವೇ ಸಾಲಿಗೆ ಸೇರಿಸಬಹುದು. ಅಂದಹಾಗೆ, ದುರ್ಬಲ ರಾಷ್ಟ್ರಗಳಿಂದ ಪ್ರಬಲ ರಾಷ್ಟ್ರಗಳಿಗೆ ವಲಸೆ ಹೋಗುವುದು ಇತಿಹಾಸದ ಅದ್ಭುತವೇನೂ ಅಲ್ಲ. ಇತ್ತೀಚೆಗೆ ಅಮೇರಿಕವು ತನ್ನ ಮೆಕ್ಸಿಕೋ ಗಡಿಯನ್ನು ಮುಚ್ಚುವುದಕ್ಕೆ ಮುಂದಾಯಿತು. ಇದಕ್ಕೆ ಕಾರಣ ವಲಸೆ. ಆರ್ಥಿಕವಾಗಿ ಹಿಂದುಳಿದಿರುವ ಮೆಕ್ಸಿಕೋ ದಿಂದ ಜನರು ನೆರೆಯ ಅಮೇರಿಕಕ್ಕೆ ಉದ್ಯೋಗವನ್ನರಸಿಕೊಂಡು ವಲಸೆ ಹೋಗುತ್ತಿದ್ದಾರೆ. ಹಾಗೆಯೇ, ಉದ್ಯೋಗವನ್ನರಸಿಕೊಂಡು ಅಮೇರಿಕ, ಬ್ರಿಟನ್, ಜರ್ಮನಿ, ಅರಬ್ ರಾಷ್ಟ್ರಗಳ ಸಹಿತ ಜಗತ್ತಿನೆಲ್ಲೆಡೆಗೆ ಭಾರತೀಯರು ಹೊರಟು ಹೋಗಿರುವುದು ಮತ್ತು ಇವರಲ್ಲಿ ಅಸಂಖ್ಯ ಮಂದಿ ಆಯಾ ರಾಷ್ಟ್ರಗಳ ಪೌರತ್ವಕ್ಕಾಗಿ ಅರ್ಜಿ ಹಾಕಿ ಪೌರತ್ವ ಪಡೆದುಕೊಂಡಿರುವುದೂ ಇಂಥದ್ದೇ ಒಂದು ಪ್ರಕ್ರಿಯೆ. ಅಷ್ಟಕ್ಕೂ,
ಕೇಂದ್ರ ಸರಕಾರಕ್ಕೆ ಇವೆಲ್ಲ ಗೊತ್ತಿಲ್ಲ ಎಂದಲ್ಲ. ಗೊತ್ತಿದ್ದೇ ಅದು ಈ ಮಸೂದೆಯನ್ನು ಕಾನೂನಾಗಿಸಿದೆ. ಮಾತ್ರವಲ್ಲ, ಪೌರತ್ವ ರದ್ದಾಗುವವರ ಪಟ್ಟಿಯಲ್ಲಿ ಮುಸ್ಲಿಮರ ಹೆಸರು   ಮಾತ್ರ ಇರುವಂತೆ ನೋಡಿಕೊಂಡಿರುವುದರಲ್ಲೂ ಜಾಣತನವಿದೆ. ಅದು ಏನೆಂದರೆ,
ಬಿಜೆಪಿಗೂ ಮುಸ್ಲಿಮರಿಗೂ ನಡುವೆ ಸಂಬಂಧ ಅಷ್ಟಕ್ಕಷ್ಟೇ ತಾನೇ. ಅದು ಬಿಜೆಪಿಯನ್ನು ಬೆಂಬಲಿಸುವವರಿಗೂ ಬೆಂಬಲಿಸ ದವರಿಗೂ ಜೆನ್ನಾಗಿ ಗೊತ್ತಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ಅದು ರಾಜಕೀಯ ಮಾಡುತ್ತಲೂ ಇದೆ. ಮುಸ್ಲಿಮರನ್ನು ಗೋಳು ಹೊಯ್ದುಕೊಂಡಷ್ಟೂ ತನ್ನ ಮತಪೆಟ್ಟಿಗೆ ತುಂಬುತ್ತದೆ ಅನ್ನುವ ಮನೋಭಾವ ಅದರದು. ನಿಜವಾಗಿ, ಹಿಂದೂಗಳಿಗೆ ಭಾರತ ಬಿಟ್ಟು ಅನ್ಯ ದೇಶವಿಲ್ಲ ಎಂಬ ಕೇಂದ್ರ ಸರಕಾರದ ವಾದವು ಪ್ರಾಮಾಣಿಕವೇ ಆಗಿರುತ್ತಿದ್ದರೆ ಪಾಕ್, ಬಾಂಗ್ಲಾ, ಅಫಘಾನ್‍ನಿಂದ ಭಾರತಕ್ಕೆ ಬಂದವರ ಪೈಕಿ ಹಿಂದೂಗಳಿಗೆ ಮಾತ್ರ ಪೌರತ್ವವನ್ನು ಕೊಡಬೇಕಿತ್ತು. ಜೊತೆಗೇ ಫಾರ್ಸಿಗಳಿಗೂ. ಹಾಗಂತ, ಬೌದ್ಧ ಧರ್ಮವನ್ನೇ ಪಾಲಿಸುವ ಹಲವು ರಾಷ್ಟ್ರಗಳು ಭಾರತದ ಸುತ್ತ-ಮುತ್ತಲೇ ಇವೆ. ಥಾೈಲೆಂಡ್, ಮ್ಯಾನ್ಮಾರ್, ಭೂತಾನ್, ಲಂಕಾ, ಮಂಗೋಲಿಯಾ ಇತ್ಯಾದಿ ರಾಷ್ಟ್ರಗಳಲ್ಲಿ ಬೌದ್ಧರು ಬಹುಸಂಖ್ಯಾತರು. ಕ್ರೈಸ್ತರಿಗಂತೂ ಇಂಗ್ಲಂಡ್, ಗ್ರೀಸ್, ಐರ್ಲೆಂಡ್ ಸೇರಿದಂತೆ 15ರಿಂದ ಇಪ್ಪತ್ತರಷ್ಟು ಕ್ರೈಸ್ತ ಧರ್ಮ ಪಾಲನಾ ರಾಷ್ಟ್ರಗಳಿವೆ. ಹೀಗಿರುವಾಗ, ವಲಸೆ ಬಂದ ಬೌದ್ಧರಿಗೂ ಮತ್ತು ಕ್ರೈಸ್ತರಿಗೂ ಹೋಗುವುದಕ್ಕೆ ಬೇರೆ ರಾಷ್ಟ್ರಗಳಿವೆ ಎಂದು ಹೇಳುವುದನ್ನು ಬಿಟ್ಟು (ಇದು ಈ ಲೇಖಕನ ಬಯಕೆಯಲ್ಲ) ಅವರೆಲ್ಲರಿಗೂ ಭಾರತೀಯ ಪೌರತ್ವವನ್ನು ಕೊಡುವುದು ಮತ್ತು ಮುಸ್ಲಿಮರನ್ನು ಮಾತ್ರ ಅದರಿಂದ ಹೊರಗಿಡುವುದು ಅಕ್ಷಮ್ಯವೆನಿಸುತ್ತದೆ. ಒಂದುವೇಳೆ,
ವಲಸಿಗ ಹಿಂದೂಗಳಿಗೆ ಮಾತ್ರ ಪೌರತ್ವದ ಅವಕಾಶವನ್ನು ಕೊಟ್ಟು ಉಳಿದೆಲ್ಲರಿಗೂ ಪೌರತ್ವವನ್ನು ನಿರಾಕರಿಸಿರುತ್ತಿದ್ದರೆ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸಂಚಲನೆಯನ್ನು ಸೃಷ್ಟಿಸುತ್ತಿತ್ತು. ಬ್ರಿಟನ್, ಅಮೇರಿಕ, ಜಪಾನ್, ಚೀನಾದಂತಹ ರಾಷ್ಟ್ರಗಳು ಪ್ರತಿ ಭಟಿಸುತ್ತಿದ್ದವು. ಟ್ರಂಪ್ ದಿಗ್ಬಂಧನದ ಭಾಷೆಯಲ್ಲಿ ಮಾತಾಡುತ್ತಿದ್ದರು. ಅಮಿತ್ ಷಾ ಸಹಿತ ಕೇಂದ್ರ ಸಚಿವ ಸಂಪುಟದ ಹಲವರಿಗೆ ಅಮೇರಿಕ ಮತ್ತಿತರ ರಾಷ್ಟ್ರಗಳು ದಿಗ್ಬಂಧನ ವಿಧಿಸುವ ಸಾಧ್ಯತೆಗಳೂ ಇದ್ದುವು. ವಿದೇಶದಲ್ಲಿರುವ ಭಾರತೀಯ ಹಿಂದೂ ಸಮುದಾಯದ ಉದ್ಯೋಗಿಗಳ ಮೇಲೆ ಮಾನಸಿಕ ಮತ್ತು ದೈಹಿಕ ಆಕ್ರಮಣಗಳೂ ನಡೆಯುತ್ತಿದ್ದುವು. ಅವರ ಉದ್ಯೋಗವು ಅನಿಶ್ಚಿತ ಸ್ಥಿತಿಗೆ ತಲುಪು ವುದಕ್ಕೂ ಅವಕಾಶ ಇತ್ತು. ಅದರ ಜೊತೆಗೇ ಭಾರತದಲ್ಲಿನ ಸ್ಥಿತಿಗತಿಗಳಲ್ಲೂ ವ್ಯತ್ಯಾಸಗಳಾಗುತ್ತಿತ್ತು. ಪೌರತ್ವ ಕಾಯ್ದೆಯನ್ನು ವಿರೋಧಿಸುವವರ ಗುಂಪಿನಲ್ಲಿ ಮುಸ್ಲಿಮ್, ಬೌದ್ಧ, ಕ್ರೈಸ್ತ ಇತ್ಯಾದಿ ವೈವಿಧ್ಯತೆಗಳಿರುತ್ತಿತ್ತು. ಪ್ರತಿಭಟನೆಗಳು ಈಗಿನದಕ್ಕಿಂತ ಹೆಚ್ಚು ವ್ಯಾಪಕವೂ ವೈವಿಧ್ಯವೂ ಆಗಿರುತ್ತಿತ್ತು. ಈ ಎಲ್ಲ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ಕೇಂದ್ರ ಸರಕಾರ ಪೌರತ್ವ ಕಾಯ್ದೆಯನ್ನು ರೂಪಿಸಿದೆ. ಮುಸ್ಲಿಮರನ್ನು ಮಾತ್ರ ಪೌರತ್ವ ಪಟ್ಟಿಯಿಂದ ಹೊರಗಿಡುವುದರಿಂದ ಅಪಾಯ ಕಡಿಮೆ ಮತ್ತು ರಾಜಕೀಯ ಲಾಭಗಳು ಹೆಚ್ಚು ಎಂಬುದಾಗಿ ಅದು ಲೆಕ್ಕ ಹಾಕಿದೆ. ಆದ್ದರಿಂದ,
ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡೇ ಪೌರತ್ವ ಮತ್ತು ಎನ್‍ಆರ್‍ಸಿಗೆ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆ ಹೇಗಿರಬೇಕು ಎಂಬುದನ್ನು ಚಿಂತಿಸಬೇಕಾಗಿದೆ. ಮುಸ್ಲಿಮರು ದಾಖಲೆಗಳನ್ನು ಸರಿಪಡಿಸಿಟ್ಟುಕೊಳ್ಳುವುದು ಬೇರೆ ಮತ್ತು ಎನ್‍ಆರ್‍ಸಿಗಾಗಿ ದಾಖಲೆ ಪತ್ರಗಳನ್ನು ಸಲ್ಲಿಸದಿರುವುದೇ ಬೇರೆ. ಇವೆರಡನ್ನೂ ಒಂದೇ ಎಂದು ವ್ಯಾಖ್ಯಾನಿಸಿ ದಾಖಲೆ ಪತ್ರಗಳ ಬಗ್ಗೆ ನಿರ್ಲಕ್ಷ್ಯ ತೋರುವುದರಲ್ಲಿ ಅಪಾಯ ಹೆಚ್ಚು. ಎನ್‍ ಆರ್ ಸಿಗಾಗಿ ದಾಖಲೆ ಪತ್ರಗಳನ್ನು ಸಲ್ಲಿಸಬೇಕೋ ಅಥವಾ ಬಹಿಷ್ಕರಿಸಬೇಕೋ ಎಂಬುದು ನಂತರದ ವಿಚಾರ. ಎನ್‍ ಆರ್ ಸಿಗೆ ಅಲ್ಲದಿದ್ದರೂ ಸರಿಯಾದ ದಾಖಲೆ ಪತ್ರಗಳು ನಾಗರಿಕರ ಜೊತೆಯಿರಬೇಕಾದುದು ಕಾನೂನಾತ್ಮಕವಾಗಿಯೂ ಅಗತ್ಯ. ಸರಿಯಾದ ದಾಖಲೆ ಪತ್ರ ಗಳೇ ಇಲ್ಲದಿದ್ದರೆ ಯಾವ ಸಂದರ್ಭದಲ್ಲೂ ಪ್ರಭುತ್ವ ನಿಮ್ಮನ್ನು ಗುರಿ ಮಾಡಬಹುದು. ಅದಕ್ಕೆ ಎನ್‍ಆರ್‍ಸಿಯೇ ಬೇಕೆಂದಿಲ್ಲ. ನಗರ ಪ್ರದೇಶದಲ್ಲಿ ವಾಸಿಸುವ ಮುಸ್ಲಿಮರ ಪೈಕಿ ಹೆಚ್ಚಿನವರಿಗೆ ದಾಖಲೆ ಪತ್ರಗಳ ಮಹತ್ವ ಗೊತ್ತಿದೆ. ಹೆಚ್ಚಿನವರಲ್ಲಿ ಸರಿಯಾದ ದಾಖಲೆಪತ್ರಗಳೂ ಇವೆ. ಆದರೆ ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಮುಸ್ಲಿಮರಲ್ಲಿ ಈ ತಿಳುವಳಿಕೆ ಇಲ್ಲ. ಅವರಲ್ಲಿ ದಾಖಲೆ ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳದವರೂ ಇದ್ದಾರೆ. ಇರುವ ದಾಖಲೆ ಪತ್ರಗಳಲ್ಲೂ ಕ್ರಮಬದ್ಧತೆ ಇಲ್ಲ. ರೇಶನ್ ಕಾರ್ಡ್, ಆಧಾರ್ ಕಾರ್ಡ್, ಮತದಾನದ ಚೀಟಿ, ಜನನ ಸರ್ಟಿಫಿಕೇಟ್ ಇತ್ಯಾದಿ ಇತ್ಯಾದಿಗಳು ಇಲ್ಲದವರೂ ಇರಬಹುದು ಅಥವಾ ಇದ್ದರೂ ಒಂದಕ್ಕೊಂದು ತಾಳೆಯಾಗದ ರೀತಿಯಲ್ಲಿ ಇರುವವುಗಳೂ ಇರಬಹುದು. ಆದ್ದರಿಂದ ‘ಎನ್‍ಆರ್‍ಸಿಯನ್ನು ಬಹಿಷ್ಕರಿಸೋಣ ಮತ್ತು ಯಾರೂ ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳಬೇಡಿ’ ಎಂಬ ಕರೆಯು ಜನಪ್ರಿಯ ಘೋಷಣೆಯಾಗಿ ಬಿಡಬಹುದೇ ಹೊರತು ದೂರದೃಷ್ಟಿಯದ್ದಾಗದು. ಅಲ್ಲದೇ,
ಪ್ರಭುತ್ವದ ಉರುಳು ಬಿಗಿಯಾದಂತೆಯೇ ಸಮುದಾಯದಲ್ಲಿ ಬಿರುಕು ಮೂಡುವುದಕ್ಕೂ ಅವಕಾಶವಿದೆ. ಪ್ರಭುತ್ವವು ಸಮು ದಾಯವನ್ನು ವಿಭಜಿಸುವ ಮೂಲಕ ಸಮುದಾಯದ ಬಹಿ ಷ್ಕಾರದ ಧೋರಣೆಯಲ್ಲಿ ಕಂದಕ ತೋಡುವುದಕ್ಕೂ ಸಾಧ್ಯ  ವಿದೆ. ಎನ್‍ ಆರ್ ಸಿಯಲ್ಲಿ ಭಾಗವಹಿಸದಿದ್ದರೆ ಶಾಲೆಗಳು, ಉದ್ಯಮಗಳು, ಆಸ್ಪತ್ರೆಗಳು ಸಹಿತ ಸಮುದಾಯದ ಮಂದಿ ನಡೆಸುವ ಸರ್ವವೂ ಸ್ಥಗಿತಗೊಳ್ಳುವ ಅಥವಾ ಅವುಗಳಿಗೆ ಬೀಗಮುದ್ರೆ ಹಾಕುವ ಒತ್ತಡದ ಸ್ಥಿತಿಯನ್ನು ಪ್ರಭುತ್ವ ತಂದಿಟ್ಟರೆ ಮತ್ತು ಆ ಕಾರಣದಿಂದ ಸಮುದಾಯದ ಧೋರಣೆಯಲ್ಲಿ ಸಡಿಲಿಕೆ ಉಂಟಾದರೆ, ಅದರ ನೇರ ಪರಿಣಾಮವನ್ನು ಎದುರಿಸ ಬೇಕಾಗಿರುವುದು ಹಳ್ಳಿ ಮತ್ತು ಗ್ರಾಮೀಣ ಪ್ರದೇಶದ ಬಡ ಮುಸ್ಲಿಮರೇ ಹೊರತು ಸರಿಯಾದ ದಾಖಲೆ ಪತ್ರಗಳನ್ನು ಇಟ್ಟುಕೊಂಡಿರುವ ನಗರ ಪ್ರದೇಶದವರಲ್ಲ.
ಹಾಗೆಯೇ, ಕೊನೆಯ ಗಳಿಗೆಯಲ್ಲಿ ಎನ್‍ ಆರ್ ಸಿ ಬಹಿಷ್ಕಾರದಿಂದ ಮುಸ್ಲಿಮ್ ಸಮುದಾಯ ಹೊರಬಂದರೂ ಅದರ ಅಡ್ಡ ಪರಿಣಾಮಕ್ಕೆ ತುತ್ತಾಗುವುದೂ ಈ ಬಡವರೇ. ಯಾಕೆಂದರೆ, ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಅವರು ಆ ಬಳಿಕದಿಂದ ಪ್ರಾರಂಭಿಸಬೇಕು. ಆ ಸಮಯದಲ್ಲಿ ಅದಕ್ಕೆ ಅವಕಾಶ ಇದೆಯೋ ಇಲ್ಲವೋ ಅನ್ನುವುದೂ ಈಗ ಸ್ಪಷ್ಟವಿಲ್ಲ. ಎನ್‍ ಆರ್ ಸಿಯ ಕೊನೆ ದಿನಾಂಕ ಮುಗಿಯುವುದರ ಒಳಗಾಗಿ ಅವರಿಗೆ ಸರಿಯಾದ ದಾಖಲೆ ಪತ್ರಗಳನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಈಗ ಹೇಳುವಂತೆಯೂ ಇಲ್ಲ. ಆದರೆ, ನಗರ ಪ್ರದೇಶದ ಮಂದಿಗೆ ಈ ಯಾವ ಸಮಸ್ಯೆಗಳೂ ಎದುರಾಗುವುದಿಲ್ಲ. ಆದ್ದರಿಂದ,
ಒಂದುಕಡೆ ಮುಸ್ಲಿಮ್ ಸಮುದಾಯದ ದಾಖಲೆ ಪತ್ರಗಳನ್ನು ಸರಿಪಡಿಸಿಕೊಳ್ಳುವ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳುತ್ತಲೇ ಇನ್ನೊಂದು ಕಡೆ ಎನ್‍ ಆರ್ ಸಿಯನ್ನು ಬಹಿಷ್ಕರಿಸಬೇಕೋ ಬೇಡವೋ ಎಂಬ ಚರ್ಚೆಗಳು ನಡೆಯುವುದೇ ಸರಿ. ಸರಿಯಾದ ದಾಖಲೆ ಪತ್ರಗಳು ಮುಸ್ಲಿಮ್ ಸಮುದಾಯದ ಎಲ್ಲರ ಜೊತೆಗೂ ಇರಲಿ. ಎನ್‍ ಆರ್ ಸಿಯನ್ನು ಬಹಿಷ್ಕರಿಸುವುದಕ್ಕೂ ಬಹಿಷ್ಕರಿಸದೇ ಇರುವುದಕ್ಕೂ ಮತ್ತು ಈ ದಾಖಲೆ ಪತ್ರಗಳನ್ನು ಸರಿಪಡಿಸುವುದಕ್ಕೂ ಸಂಬಂಧ ಕಲ್ಪಿಸದೇ ಇರೋಣ. ಇವೆರಡೂ ಬೇರೆ ಬೇರೆ. ಇಲ್ಲದಿದ್ದರೆ ಸಮುದಾಯದ ಬಡ ಮತ್ತು ದುರ್ಬಲ ಮುಸ್ಲಿಮರನ್ನು ಹಳ್ಳಕ್ಕೆ ತಳ್ಳಿದಂತಾದೀತು.