Wednesday, June 22, 2016

ಮಾಧ್ಯಮ ನಿಷ್ಠೆಯನ್ನು ಪ್ರಶ್ನಿಸಿದ ‘ಗುಜರಾತ್ ಫೈಲ್ಸ್’...

       ಖ್ಯಾತ ಸಾಹಿತಿ ಅರುಂಧತಿ ರಾಯ್, ರಘು ಕಾರ್ನಾಡ್, ಶುಧಬ್ರತ್ ಸೇನ್ ಗುಪ್ತಾ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ಕಾಂಗ್ರೆಸ್‍ನ ಅಹ್ಮದ್ ಪಟೇಲ್, ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್, ಸಂದೀಪ್ ದೀಕ್ಷಿತ್, ಜ್ಯೋತಿ ಮಲ್ಹೋತ್ರ ಮತ್ತು
        ಎನ್.ಡಿ.ಟಿ.ವಿ.ಯ ಬರ್ಖಾದತ್ತ್, ಲಂಡನ್ನಿನ ಟೆಲಿಗ್ರಾಫ್ ಪತ್ರಿಕೆಯ ಶಂಕರ್ ಶಾನ್ ಥಾಕೂರ್, ಇಂಡಿಯನ್ ಎಕ್ಸ್‍ಪ್ರೆಸ್‍ನ ಸೀಮಾ ಚಿಸ್ತಿ, ರಾಜ್ಯಸಭಾ ಟಿ.ವಿ.ಯ ಗಿರೀಶ್ ನಿಕಂ, ನ್ಯೂಸ್ ಲಾಂಡ್ರಿ ಆನ್‍ಲೈನ್ ಪತ್ರಿಕೆಯ ಅಭಿನಂದನ್ ಸೆಖ್ರಿ, ಟಿ.ವಿ. ಪತ್ರಕರ್ತ ಶೇಖರ್ ಗುಪ್ತಾ, ಸಭಾ ನಕ್ವಿ, ಅರ್ನಾಬ್ ಗೋಸ್ವಾಮಿಯ ಟೈಮ್ಸ್ ನೌ ಚಾನೆಲ್‍ನ ‘ನ್ಯೂಸ್ ಅವರ್’ ಕಾರ್ಯಕ್ರಮದಲ್ಲಿ ಸದಾ ಕಾಣಿಸಿಕೊಳ್ಳುವ ಜಾವೇದ್ ನಕ್ವಿ...
      ಮುಂತಾದ ಪ್ರಮುಖರೆಲ್ಲ ಒಂದೇ ಕಾರ್ಯಕ್ರಮದಲ್ಲಿ ಸೇರಿದರೆ, ಆ ಸಂದರ್ಭ ಹೇಗಿದ್ದೀತು? ಮಾಧ್ಯಮಗಳು ಈ ಕಾರ್ಯ ಕ್ರಮಕ್ಕೆ ಕೊಡುವ ಮಹತ್ವ ಎಷ್ಟಿರಬಹುದು? ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳು ಅವರನ್ನು ಮುತ್ತಿಕೊಂಡಾವು. ಚಾನೆಲ್‍ಗಳು ಅವರಿಂದ ಬೈಟ್ ಪಡಕೊಳ್ಳಬಹುದು. ಪತ್ರಿಕೆಗಳು ಸಂದರ್ಶನ ನಡೆಸಬಹುದು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮುಂತಾದ ವಿಷಯಗಳ ಮೇಲೆ ಅವರನ್ನು ಮಾತಿಗೆಳೆದು ಸುದ್ದಿ ಸ್ಫೋಟಕ್ಕೆ ಯತ್ನಿಸಬಹುದು. ಏನಾದರೂ ವಿವಾದಾಸ್ಪದವಾದುದು ಸಿಗುವುದೋ ಎಂದು ಕುಟುಕಿ ನೋಡಬಹುದು. ಒಟ್ಟಿನಲ್ಲಿ ಈ ಇಡೀ ಕಾರ್ಯಕ್ರಮವನ್ನು ಟಿ.ವಿ. ಮತ್ತು ಪತ್ರಿಕೆಗಳು ಮಹತ್ವ ಪೂರ್ಣವಾಗಿ ಪರಿಗಣಿಸಿ ಮುಖ್ಯ ಸುದ್ದಿಯಾಗಿಸಬಹುದು.. ಎಂದೆಲ್ಲಾ ಊಹಿಸುವುದು ಸಹಜ. ಆದರೆ, ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯನ್ನು ಹೊರತುಪಡಿಸಿ ಮುಖ್ಯವಾಹಿನಿಯ ಇನ್ನಾವ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳೂ ಈ ಕಾರ್ಯಕ್ರಮದ ಕುರಿತು ಒಂದಕ್ಷರವನ್ನೂ ಬರೆಯಲಿಲ್ಲ. ಒಂದಕ್ಷರವನ್ನೂ ಹೇಳಲಿಲ್ಲ!
      ಕಳೆದ ಮೇ 27ರಂದು ಶುಕ್ರವಾರ ಸಂಜೆ 6:30ಕ್ಕೆ ದೆಹಲಿಯ ಇಂಡಿಯಾ ಹ್ಯಾಬಿಟೆಂಟ್ ಸೆಂಟರ್‍ನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೇಲಿನ ಗಣ್ಯರೆಲ್ಲ ಭಾಗವಹಿಸಿದ್ದರು. ಪುಸ್ತಕದ ಹೆಸರು ‘ಗುಜರಾತ್ ಫೈಲ್ಸ್: ಅನಾಟೊಮಿ ಆಫ್ ಎ ಕವರ್ ಅಪ್’ (Gujarat Fails: Anatomy of a Coverup). ಬರೆದವರು ತೆಹಲ್ಕಾ ಪತ್ರಿಕೆಯ ಮಾಜಿ ಪತ್ರಕರ್ತೆ ರಾಣಾ ಅಯ್ಯೂಬ್. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ಮರುದಿನ ಕಾರವಾನ್ ಪತ್ರಿಕೆಯು ಈ ಕುರಿತಂತೆ ಸಂವಾದವೊಂದನ್ನು ಏರ್ಪಡಿಸಿತ್ತು. ಇಂಡಿಯಾ ಟುಡೇ ಟಿ.ವಿ.ಯ ರಾಜ್‍ದೀಪ್ ಸರ್ದೇಸಾಯಿ ಮತ್ತು ಖ್ಯಾತ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ರಾಣಾ ಅಯ್ಯೂಬ್‍ರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಯಾವ ಮಾಧ್ಯಮವೂ ಸುದ್ದಿಯಾಗಿಸದೇ ಇದ್ದುದೇಕೆ ಎಂದು ಸರ್ದೇಸಾಯಿ ಅವರಲ್ಲಿ ಪ್ರಶ್ನಿಸಲಾಯಿತು. ‘ಅಧಿಕಾರ ದಲ್ಲಿರುವವರ ಜೊತೆಗೆ ಮನಸ್ತಾಪದ ವಾತಾವರಣವನ್ನು ಮಾಧ್ಯಮಗಳು ಬಯಸುತ್ತಿಲ್ಲ’ ಎಂದವರು ಉತ್ತರಿಸಿದ್ದರು. ಅಷ್ಟಕ್ಕೂ,
ಇಂಡಿಯಾ ಹ್ಯಾಬಿಟೆಂಟ್ ಸೆಂಟರ್‍ನಲ್ಲಿ ಕಥಾ ಸಂಕಲನವೋ ಕಾದಂಬರಿಯೋ ಬಿಡುಗಡೆಗೊಳ್ಳುತ್ತಿದ್ದರೆ ಮಾಧ್ಯಮಗಳು ಖಂಡಿತ ಅದನ್ನು ಸುದ್ದಿಯಾಗಿ ಪರಿಗಣಿಸುತ್ತಿದ್ದುವು. ಅಷ್ಟರ ಮಟ್ಟಿಗೆ ರಾಣಾ ಅಯ್ಯೂಬ್ ಪರಿಚಿತ ಪತ್ರಕರ್ತೆ. ಆದರೆ ರಾಣಾ ಅಯ್ಯೂಬ್ ಬರೆದಿರುವುದು ಗುಜರಾತ್ ಹತ್ಯಾಕಾಂಡದ ಸುತ್ತ. ಅದರಲ್ಲೂ ‘ಗುಜರಾತ್ ಫೈಲ್ಸ್: ಅನಾಟೊಮಿ ಆಫ್ ಎ ಕವರ್ ಅಪ್’ ಎಂಬ ಶೀರ್ಷಿಕೆಯೇ ಅದೊಂದು ತನಿಖಾ ಪತ್ರಿಕೋದ್ಯಮಕ್ಕೆ ಸಂಬಂಧಿಸಿ ಪುಸ್ತಕ ಅನ್ನುವುದನ್ನು ಸ್ಪಷ್ಟಪಡಿಸುತ್ತದೆ. ಗುಜರಾತ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಕಲ್ಪಿತ ಕಾದಂಬರಿ ಬರೆಯುವುದಕ್ಕೂ ಆರೋಪಿತರನ್ನೇ ಸಂಪರ್ಕಿಸಿ ಅವರ ಅಭಿಪ್ರಾಯವನ್ನೇ ಪುಸ್ತಕ ರೂಪದಲ್ಲಿ ಪ್ರಕಟಿಸುವುದಕ್ಕೂ ಇರುವ ವ್ಯತ್ಯಾಸ ಮತ್ತು ಅದು ಬೀರುವ ಪರಿಣಾಮಗಳು ಏನೇನು ಎಂಬುದು ಮಾಧ್ಯಮದ ಮಂದಿಗೆ ಚೆನ್ನಾಗಿ ಗೊತ್ತು. ಆಳುವ ದೊರೆಗಳನ್ನು ಅದು ಕುಪಿತಗೊಳಿಸಬಹುದು. ಮಾಧ್ಯಮ ಕಚೇರಿಗಳಿಗೂ ಆಳುವವರಿಗೂ ನಡುವೆ ಇರುವ ಸಂಬಂಧ ಹದಗೆಡಬಹುದು. ಆದ್ದರಿಂದಲೇ, ಈ ತನಿಖಾ ಬರಹವನ್ನು ಪ್ರಕಟಿಸುವಂತೆ ತೆಹಲ್ಕಾದ ಸಂಪಾದಕ ತರುಣ್ ತೇಜ್‍ಪಾಲ್‍ರಲ್ಲಿ ರಾಣಾ ಅಯ್ಯೂಬ್ ಕೋರಿಕೊಂಡಾಗ ಅವರು ನಿರಾಕರಿಸಿದ್ದರು. ‘ಬಂಗಾರು ಲಕ್ಷ್ಮಣ್‍ರ ಕುರಿತು ಸ್ಟಿಂಗ್ ಆಪರೇಶನ್ ನಡೆಸಿದುದಕ್ಕಾಗಿ ಮೋದಿಯವರ ಪಕ್ಷ ನಮ್ಮ ಪತ್ರಿಕಾ ಕಚೇರಿಯನ್ನು ಧ್ವಂಸಗೊಳಿಸಿದೆ. ನಮ್ಮನ್ನು ಬೆನ್ನಟ್ಟಿದೆ. ಇನ್ನೊಮ್ಮೆ ಆ ಸಾಹಸ ಬೇಡ..’ ಎಂದಿದ್ದರು. ಈ ಕಾರಣದಿಂದಲೇ, ರಾಣಾ ಅಯ್ಯೂಬ್ ಅವರು ಈ ಕೃತಿಯನ್ನು ಸ್ವಯಂ ಪ್ರಕಟಿಸಿದರು. ನ್ಯೂಸ್ ಲಾಂಡ್ರಿಯಂಥ ಆನ್ ಲೈನ್ ಪತ್ರಿಕೆಗಳು ಕೃತಿಯ ಬಗ್ಗೆ ವಿಸ್ತೃತ ವಿಶ್ಲೇಷಣೆ ನಡೆಸಿದುವು. ರಾಣಾರ ಸಂದರ್ಶನ ನಡೆಸಿದುವು. ನಿಜವಾಗಿ,
       ‘ಗುಜರಾತ್ ಫೈಲ್ಸ್’ ಹುಟ್ಟಿಕೊಂಡದ್ದರಲ್ಲೇ ಒಂದು ರೋಚಕತೆಯಿದೆ. ಗುಜರಾತ್ ಹತ್ಯಾಕಾಂಡದ ಕುರಿತಂತೆ ತನಿಖೆ ನಡೆಸಬೇಕೆಂದು ತೀರ್ಮಾನಿಸಿದ ರಾಣಾ ಅಯ್ಯೂಬ್ ಅದಕ್ಕಾಗಿ ಕೆಲವು ಸಿದ್ಧತೆಗಳನ್ನು ನಡೆಸಿದರು. ತನ್ನ ಹೆಸರನ್ನು ಮೈಥಿಲಿ ತ್ಯಾಗಿ ಎಂದು ಬದಲಾಯಿಸಿದರು. ‘ವೈಬ್ರಾಂಟ್ ಗುಜರಾತ್’ನ ಕುರಿತಂತೆ ಸಿನಿಮಾ ನಿರ್ಮಿಸುವ ಉದ್ದೇಶದಿಂದ ಅಮೇರಿಕದಿಂದ ಬಂದಿರುವ ಅನಿವಾಸಿಯಾಗಿ ತನ್ನನ್ನು ಗುರುತಿಸಿಕೊಂಡರು. ಇವೆಲ್ಲ ನಡೆದುದು 2010ರಲ್ಲಿ. ಆಗ ರಾಣಾಗೆ 26 ವರ್ಷ. ತೆಹಲ್ಕಾದಲ್ಲಿ ಪತ್ರಕರ್ತೆಯಾಗಿದ್ದ ಆಕೆ ಸುದೀರ್ಘ 8 ತಿಂಗಳ ಕಾಲ ಗುಜರಾತ್‍ನಲ್ಲಿ ಸುತ್ತಾಡಿದರು. ತಾನು ಧರಿಸಿರುವ ರಿಸ್ಟ್ ವಾಚ್‍ನಲ್ಲಿ ಗುಪ್ತ ಕ್ಯಾಮರಾವನ್ನು ಅಳವಡಿಸಿಕೊಂಡು ಹಲವರನ್ನು ಸಂದರ್ಶಿಸಿದರು. ಅದರಲ್ಲಿ ನರೇಂದ್ರ ಮೋದಿಯವರೂ ಒಬ್ಬರು. ಮೋದಿಯವರ ಗಾಂಧಿ ನಗರದ ಅಧಿಕೃತ ನಿವಾಸದ ಎದುರು ಈ ಸಂದರ್ಶನಕ್ಕಾಗಿ ಒಂದು ಗಂಟೆ ಮೊದಲೇ ಅವರು ಕಾದು ಕುಳಿತರು. ತಾನು ವಾಚ್‍ನಲ್ಲಿ ಬಚ್ಚಿಟ್ಟಿರುವ ಗುಪ್ತ ಕ್ಯಾಮರಾವು ಸೆಕ್ಯುರಿಟಿ ಚೆಕ್‍ನ ಸಂದರ್ಭದಲ್ಲಿ ಎಲ್ಲಿ ಬಹಿರಂಗವಾಗಿ ಬಿಡುತ್ತೋ ಎಂಬ ಭಯ ಆಕೆಯನ್ನು ಆ ಒಂದು ಗಂಟೆಯ ಉದ್ದಕ್ಕೂ ಕಾಡಿತ್ತು. ಒಂದು ರೀತಿಯಲ್ಲಿ, ತನಿಖಾ ಪತ್ರಿಕೋದ್ಯಮವೆಂಬುದೇ ಒಂದು ಚಕ್ರವ್ಯೂಹ. ಅದಕ್ಕೆ ಅಪಾರ ಧೈರ್ಯ ಬೇಕು. ಆಯಾ ಸಂದರ್ಭಗಳನ್ನು ನಾಜೂಕಿನಿಂದ ದಾಟುವ ಕಲೆ ಗೊತ್ತಿರಬೇಕು. ಸನ್ನಿವೇಶವನ್ನು ಗ್ರಹಿಸುವ ಸೂಕ್ಷ್ಮತೆ ಇರಬೇಕು. ಕನ್ನಡದ ಚಿತ್ರನಟಿ ಮರಿಯಾ ಸುಸೈರಾಜ್ ಮತ್ತು ಗೆಳೆಯ ಸೇರಿಕೊಂಡು ನೀರಜ್ ಗ್ರೋವರ್ ಎಂಬವರನ್ನು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ ‘ಮುಂಬೈ ಮಿರರ್’ನ ಸಂಪಾದಕಿ ಮೀನಲ್ ಬೆಹಗಲ್ ಈ ರೀತಿಯದ್ದೇ ಸಾಹಸ ಕೈಗೊಂಡಿದ್ದರು. ಆ ಬಳಿಕ ‘ಡೆತ್ ಇನ್ ಮುಂಬೈ’ ಎಂಬ ಹೆಸರಲ್ಲಿ ಕೃತಿಯನ್ನೂ ಬರೆದಿದ್ದರು. ‘ಡೋಂಗ್ರಿ ಟು ದುಬೈ’, ‘ಬ್ಲ್ಯಾಕ್ ಫ್ರೈಡೇ’, ‘ಸಿಕ್ಸ್ ಡಿಕೇಡ್ಸ್ ಆಫ್ ದಿ ಮುಂಬೈ ಮಾಫಿಯ’, ‘ಮಾಫಿಯ ಕ್ವೀನ್ಸ್ ಆಫ್ ಮುಂಬೈ’, ‘ಮೈ ನೇಮ್ ಈಸ್ ಅಬೂಸಲೇಮ್’.. ಮುಂತಾದ ಕೃತಿಗಳನ್ನು ಬರೆದಿರುವ ಹುಸೇನ್ ಝಾಯಿದಿ ಕೂಡ ಇಂಥದ್ದೇ ಪತ್ರಿಕಾ ಸಾಹಸಕ್ಕೆ ಹೆಸರಾದವರು. ಯಾವ ಬಾಗಿಲನ್ನು ತಟ್ಟಿದರೆ ಅಪಾಯ ಖಚಿತ ಎಂದು ಭಾವಿಸಲಾಗಿರುತ್ತದೋ ಅದೇ ಬಾಗಿಲನ್ನು ತಟ್ಟುವ ಧೈರ್ಯ ತೋರುವವರು. ಝಾಯಿದಿ ಅಂತೂ ಸದ್ದಾಮ್ ಹುಸೇನ್‍ರ ಪತನದ ಬಳಿಕ ಇರಾಕ್ ತೆರಳಿದ ಸಾಹಸಿ. ಆ ಬಳಿಕ ಅಲ್ಲಿ ಅಪಹರಣಕ್ಕೊಳಗಾಗಿ ಬಿಡುಗಡೆಗೊಂಡು ಬಂದವರು. ರಾಣಾ ಅಯ್ಯೂಬ್‍ಳ ತನಿಖಾ ಪತ್ರಿಕೋದ್ಯಮವನ್ನು ಕೂಡ ನಾವು ಇವರಿಬ್ಬರ ಸಾಹಸಕ್ಕೆ ಹೋಲಿಸಬಹುದು. ಆಕೆ ನರೇಂದ್ರ ಮೋದಿಯವರನ್ನು ಭೇಟಿಯಾದರು. ಗುಜರಾತ್‍ನ ಮಾಜಿ ಗೃಹ ಸಚಿವ ಅಶೋಕ್ ನಾರಾಯಣ್, 2002ರಲ್ಲಿ ಗುಜರಾತ್ ಎಟಿಎಸ್‍ನ ಮುಖ್ಯಸ್ಥರಾಗಿದ್ದ ಜಿ.ಎಲ್. ಸಿಂಘಾಲ್, ಅಹ್ಮದಾಬಾದ್‍ನ ಪೊಲೀಸ್ ಕಮೀಷನರ್ ಆಗಿದ್ದ ಪಿ.ಸಿ. ಪಾಂಡೆ, ಗುಜರಾತ್‍ನ ಗುಪ್ತದಳದ ಮುಖ್ಯಸ್ಥರಾಗಿದ್ದ ಸಿ.ಸಿ. ರೈಗಾರ್, ರಾಜನ್ ಪ್ರಿಯದರ್ಶಿ, ವೈ.ಎ. ಶೇಖ್.. ಮುಂತಾದ ಹಲವರನ್ನು ಆಕೆ ಈ ಮಾರುವೇಷದಲ್ಲಿ ಭೇಟಿಯಾದರು. ಇಶ್ರತ್ ಜಹಾನ್, ಸೊಹ್ರಾಬು ದ್ದೀನ್ ಶೇಖ್, ಕೌಸರ್‍ಬೀ ಸಹಿತ ಹಲವು ಎನ್‍ಕೌಂಟರ್‍ಗಳ ಒಳಹೊರಗನ್ನು ತಿಳಿಯಲು 8 ತಿಂಗಳುಗಳ ಕಾಲ ಶ್ರಮಿಸಿದರು. ಗುಜರಾತ್‍ನಲ್ಲಿ ಹೇಗೆ ನಕಲಿ ಎನ್‍ಕೌಂಟರ್‍ಗಳನ್ನು ನಡೆಸಲಾಗಿದೆ ಮತ್ತು ಬಿಜೆಪಿ ನಾಯಕರಿಗಾಗಿ ಹೇಗೆ ಅದನ್ನು ಅಡಗಿಸಲಾಗಿದೆ ಎಂಬುದನ್ನು ಈ ಎಲ್ಲ ತನಿಖೆಯ ಬಳಿಕ ಆಕೆ ಅರಿತುಕೊಂಡರು. ಕೃತಿಯಲ್ಲಿ ದಾಖಲಿಸಿದರು. ನಕಲಿ ಎನ್‍ಕೌಂಟರ್‍ನಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕೈವಾಡ ಇರುವುದಕ್ಕೆ ತನ್ನ ಕೃತಿ ಯಲ್ಲಿ ಪುರಾವೆಗಳಿವೆ ಎಂದೂ ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಹೇಳಿದರು. ವಿಶೇಷ ಏನೆಂದರೆ,
       ರಾಣಾ ಅಯ್ಯೂಬ್ ತನ್ನ ‘ಗುಜರಾತ್ ಫೈಲ್ಸ್..’ ಕೃತಿಯನ್ನು ಬಿಡುಗಡೆಗೊಳಿಸುವುದಕ್ಕಿಂತ ಒಂದು ದಿನ ಮೊದಲು (ಮೇ 26) ಲಂಡನ್ನಿನ ‘ದಿ ಗಾರ್ಡಿಯನ್’ ಪತ್ರಿಕೆಯು ಓದುಗರೊಂದಿಗೆ ನಿಶ್ಶರ್ಥ ಕ್ಷಮೆ ಯಾಚಿಸುವ ಪ್ರಕಟಣೆಯನ್ನು ಹೊರಡಿಸಿತು. ಅಷ್ಟಕ್ಕೂ, ಭಾರತೀಯ ಮಾಧ್ಯಮಗಳಿಗೆ ಸಂಬಂಧಿಸಿ ಹೇಳುವುದಾದರೆ, ಅದು ಕ್ಷಮೆ ಯಾಚಿಸುವ ಪ್ರಕರಣವೇ ಆಗಿರಲಿಲ್ಲ. ಜೋಸೆಫ್ ಮೆಯ್‍ಟನ್ ಎಂಬ ಪತ್ರಕರ್ತ 2009ರಿಂದ ಗಾರ್ಡಿಯನ್ ಪತ್ರಿಕೆಗೆ ಬರೆಯುತ್ತಿದ್ದ. ಪತ್ರಿಕೆಯ ನ್ಯೂಯಾರ್ಕ್ ಪಟ್ಟಣದ ಪ್ರತಿನಿಧಿಯಾಗಿ ಸಂದರ್ಶನ, ವರದಿ, ಸುದ್ದಿಗಳನ್ನು ಪತ್ರಿಕೆಗೆ ಆಗಾಗ ರವಾನಿಸುತ್ತಿದ್ದ. ಆದರೆ, ಕಳೆದ ಫೆಬ್ರವರಿಯಲ್ಲಿ ಆತ ಕೃಷಿಯ ಕುರಿತಂತೆ ಮಾಡಿದ ವರದಿಯೊಂದು ಅನುಮಾನಕ್ಕೆ ಕಾರಣವಾಯಿತು. ಆತ ತನ್ನ ವರದಿಯಲ್ಲಿ, ಸಂದರ್ಶಿಸಿರುವುದಾಗಿ ಹೇಳಿದ ವ್ಯಕ್ತಿಗಳು ಪತ್ರಿಕಾ ಕಚೇರಿಗೆ ಕರೆ ಮಾಡಿ, ತಮ್ಮನ್ನು ಆತ ಭೇಟಿಯಾಗಿಯೇ ಇಲ್ಲ ಎಂದು ಹೇಳಿದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಗಾರ್ಡಿಯನ್ ಪತ್ರಿಕೆಯು, ತನಿಖಾ ತಂಡವನ್ನು ರಚಿಸಿತು. ಬಹುಶಃ ತನ್ನ ವರದಿಗಾರನ ವಿರುದ್ಧವೇ ತನಿಖೆ ನಡೆಸಿದ ಅಪರೂಪದ ಪ್ರಕರಣ ಇದು. 50 ಮಂದಿಯನ್ನು ಭೇಟಿಯಾದ ತನಿಖಾ ತಂಡಕ್ಕೆ ಆತ ತಪ್ಪೆಸಗಿರುವುದು ದೃಢಪಟ್ಟಿತು. ಎರಡು ಸಭೆಗಳಿಗೆ ಹಾಜರಾಗದೆಯೇ ಅದರ ವರದಿಯನ್ನು ಆತ ನಿರ್ವಹಿಸಿದ್ದ. ಅನೇಕ ವರದಿಗಳಲ್ಲಿ ಕೃತ್ರಿಮತೆ ಇತ್ತು. ವ್ಯಕ್ತಿಗಳನ್ನು ಭೇಟಿಯಾಗದೆಯೇ ಅವರ ಹೇಳಿಕೆಯನ್ನು ಕಲ್ಪಿಸಿಕೊಂಡು ಬರೆದಿದ್ದ. ತಾನು ನಡೆಸಿದ ಸಂದರ್ಶನದ ನಕಲು ಪ್ರತಿ, ಸಂದರ್ಶಕರ ದೂರವಾಣಿ ಸಂಖ್ಯೆ, ಇಮೇಲ್ ವಿಳಾಸ ಮತ್ತಿತರ ದಾಖಲೆಗಳನ್ನು ನೀಡಲು ವಿಫಲನಾದ ಆತನನ್ನು ಠಕ್ಕ ವರದಿಗಾರ ಎಂದು ಪತ್ರಿಕೆ ಪರಿಗಣಿಸಿತಲ್ಲದೇ ಆತನ 13  ನ್ಯೂಸ್ ಸ್ಟೋರಿಗಳನ್ನು ವೆಬ್‍ಸೈಟ್‍ನಿಂದ ಕಿತ್ತು ಹಾಕಿತು. ಗಾರ್ಡಿಯನ್ ಪತ್ರಿಕೆಯ ಅಮೇರಿಕನ್ ಆವೃತ್ತಿಯ ಸಂಪಾದಕಿ ಲೀ ಗ್ಲಾಡಿನ್ನಿಂಗ್ ಅವರು ಇದಕ್ಕಾಗಿ ಓದುಗರ ಕ್ಷಮೆ ಯಾಚಿಸಿದರಲ್ಲದೇ ಓದುಗರು ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ ಎಂದು ಹೇಳಿಕೊಂಡರು. ನಿಜವಾಗಿ, ಜೋಸೆಫ್ ಮೆಯ್‍ಟನ್‍ನ ವರದಿಯಲ್ಲಿ ಕೃತ್ರಿಮತೆ ಇದ್ದುವಾದರೂ ಅವು ಸಂಪೂರ್ಣ ಸುಳ್ಳುಗಳೇ ಆಗಿರಲಿಲ್ಲ. ಆತ ಅವರಿವರಿಂದ ಕೇಳಿ ಸುದ್ದಿ ತಯಾರಿಸುತ್ತಿದ್ದ. ಕೆಲವರನ್ನು ಭೇಟಿಯಾಗದೆಯೇ ಅವರ ಸಂಗ್ರಹಿತ ಅಭಿಪ್ರಾಯಗಳನ್ನು ವರದಿಯಲ್ಲಿ ಬಳಸಿಕೊಳ್ಳುತ್ತಿದ್ದ. ಆದರೆ, ಗಾರ್ಡಿಯನ್ ಪತ್ರಿಕೆಯು ಇಡೀ ಬರಹವನ್ನೇ ಕಿತ್ತು ಹಾಕುವ ಮೂಲಕ ಪಾರದರ್ಶಕತೆ ಮೆರೆಯಿತು. ಒಂದು ಕಡೆ, ಓದುಗರಿಗೆ ಮತ್ತು ಸತ್ಯಕ್ಕೆ ಅಪಾರ ನಿಷ್ಠೆಯನ್ನು ಪ್ರದರ್ಶಿಸುವ ಪತ್ರಿಕೆಯಾದರೆ ಇನ್ನೊಂದು ಕಡೆ, ರಾಜಕಾರಣಿಗಳಿಗೆ ಮತ್ತು ಸುಳ್ಳಿಗೆ ಪರಮ ನಿಷ್ಠೆಯನ್ನು ತೋರುವ ಮಾಧ್ಯಮಗಳು.. ಏನೆನ್ನಬೇಕು ಇದಕ್ಕೆ? ಇಷ್ಟಿದ್ದೂ,
       ಬಿಡುಗಡೆಗೊಂಡ ಒಂದೇ ವಾರದಲ್ಲಿ ‘ಗುಜರಾತ್ ಫೈಲ್ಸ್’ ಕೃತಿಯನ್ನು ದೇಶದಲ್ಲಿಯೇ ಅತ್ಯಂತ ಹೆಚ್ಚು ಮಾರಾಟಗೊಂಡ ಎರಡನೇ ಕೃತಿಯಾಗಿಸಿದ ಓದುಗರಿಗೆ ಮತ್ತು ಪ್ರಾಣವನ್ನೇ ಪಣಕ್ಕಿಟ್ಟು ಸತ್ಯವನ್ನು ಹುಡುಕಾಡಿದ ರಾಣಾ ಅಯ್ಯೂಬ್‍ರಿಗೆ ಧನ್ಯವಾದಗಳು.

Wednesday, June 15, 2016

ಅಮೆರಿಕದ ಒಂದು ಗೊರಿಲ್ಲಾಕ್ಕೆ ಅಮೆರಿಕೇತರ ಎಷ್ಟು ಮನುಷ್ಯರು ಸಮ ಅಧ್ಯಕ್ಷರೇ?

        1. ಬರಾಕ್ ಒಬಾಮ
  2. ಜಸ್ಟಿನ್ ಟ್ರುಡೇವ್
  3. ಹರಾಂಬೆ
  ಇವುಗಳಲ್ಲಿ ಮೊದಲಿನ ಎರಡು ಹೆಸರುಗಳು ಮನುಷ್ಯರದ್ದಾದರೆ ಮೂರನೆಯದ್ದು ಗೊರಿಲ್ಲಾದ ಹೆಸರು. ಕಳೆದ ಮೇ 27ರಿಂದ ಸುಮಾರು ಎರಡು ವಾರಗಳ ತನಕ ಈ ಮೂರೂ ಹೆಸರುಗಳು ಜಾಗತಿಕವಾಗಿ ಸಾಕಷ್ಟು ಚರ್ಚೆಗೆ ಒಳಗಾದುವು. ಅಮೇರಿಕದ ಹಿಪಾಕ್ರಸಿಗೆ ಅತ್ಯುತ್ತಮ ಉದಾಹರಣೆಯಾಗಿ ಒಬಾಮ ಮತ್ತು ಹರಾಂಬೆಯನ್ನು ಅನೇಕರು ಎತ್ತಿ ತೋರಿಸಿದರು. ಜಪಾನ್‍ನ ಹಿರೋಶಿಮಾ ಮತ್ತು ನಾಗಸಾಕಿಯಲ್ಲಿ ಕನಿಷ್ಠ ಎರಡೂವರೆ ಲಕ್ಷ ಮಂದಿಯನ್ನು ಅಣು ಬಾಂಬ್ ಸುರಿಸಿ ಕೊಂದು ಹಾಕಿದುದಕ್ಕಾಗಿ ಕ್ಷಮೆ ಯಾಚಿಸದ ಒಬಾಮರ ನಾಡು ಯಕಶ್ಚಿತ್ ಗೊರಿಲ್ಲಾವೊಂದರ ಹತ್ಯೆಗಾಗಿ ಆಕ್ರೋಶಿತಗೊಂಡಿದೆ ಎಂದು ಹಲವರು ಕಟಕಿಯಾಡಿದರು. ಅಷ್ಟಕ್ಕೂ,
  ಮೇ 29ರಂದು ಅಮೇರಿಕದ ಸಿನ್‍ಸಿನಾಟಿ ಮೃಗಾಲಯದಲ್ಲಿ 4 ವರ್ಷದ ಮಗುವೊಂದು ಹರಾಂಬೆ ಹೆಸರಿನ ಗೊರಿಲ್ಲಾ ಇರುವ ಕಂದಕಕ್ಕೆ ಉರುಳಿ ಬಿತ್ತು. ಕಂದಕದಲ್ಲಿ ಮಗುವಿನ ಸೊಂಟದೆತ್ತರಕ್ಕೆ ಬರುವಷ್ಟು ನೀರಿದ್ದುದರಿಂದ ಮಗುವಿಗೆ ಗಾಯವೇನೂ ಆಗಲಿಲ್ಲ. ಆದರೆ 17 ವರ್ಷ ಪ್ರಾಯದ ಮತ್ತು 400 ಪೌಂಡ್ ಭಾರ ಇರುವ ಹರಾಂಬೆ ಮಗುವಿನ ಹತ್ತಿರ ಬಂತು. ಮಗುವನ್ನು ಎತ್ತಿಕೊಂಡಿತು. ನೀರಿನಲ್ಲಿ ಅತ್ತಿಂದಿತ್ತ ಎಳೆದುಕೊಂಡು ಹೋಯಿತು. ಸುಮಾರು 10ರಿಂದ 15 ನಿಮಿಷಗಳ ಕಾಲ ಮಗು ಗೊರಿಲ್ಲಾದ ಜೊತೆಗಿತ್ತು. ವರ್ಷದಲ್ಲಿ ಸುಮಾರು 15 ಲಕ್ಷ ಮಂದಿ ಭೇಟಿ ಕೊಡುವ ಪ್ರಸಿದ್ಧ ಮೃಗಾಲಯದಲ್ಲಿ ಭಯಭೀತ ವಾತಾವರಣ. ಜನರು ಬೊಬ್ಬೆ ಹಾಕುತ್ತಿದ್ದರು. ತೆಂಗಿನ ಕಾಯಿಯನ್ನು ಹಲ್ಲಿನಿಂದ ಕಚ್ಚಿ ಪುಡಿ ಮಾಡುವಷ್ಟು ಬಲಶಾಲಿಯಾಗಿರುವ ಹರಾಂಬೆಯ ಕೈಯಿಂದ ಮಗುವನ್ನು ರಕ್ಷಿಸಿ ಎಂದು ಕೂಗಾಡಿದರು. ಕೊನೆಗೆ ಮೃಗಾಲಯದ ಅಧಿಕಾರಿಗಳು ಹರಾಂಬೆಯನ್ನು ಗುಂಡಿಟ್ಟು ಕೊಂದು ಮಗುವನ್ನು ರಕ್ಷಿಸಿದರು. 15 ನಿಮಿಷಗಳಲ್ಲಿ ನಡೆದು ಹೋದ ಈ ಘಟನೆ ಅಮೇರಿಕದಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟು ಹಾಕಿತು. ಘಟನೆಯ ವೀಡಿಯೋ ವೈರಲ್ ಆಯಿತು. ಅಮೇರಿಕದಲ್ಲಿ ಪರ ಮತ್ತು ವಿರುದ್ಧ ವಾದಗಳು ನಡೆದುವು. ಮಗುವಿನ ತಾಯಿಯ ನಿರ್ಲಕ್ಷ್ಯ ತನಕ್ಕೆ ಹರಾಂಬೆಗೆ ಶಿಕ್ಷೆ ಕೊಟ್ಟದ್ದೇಕೆ ಎಂದು ಅನೇಕರು ಪ್ರಶ್ನಿಸಿದರು. ತಾಯಿಯ ಮೇಲೆ ಮೊಕದ್ದಮೆ ಹೂಡಿ ಎಂದೂ ಆಗ್ರಹಿಸಿದರು. ಹರಾಂಬೆಯ ಪುತ್ಥಳಿಗೆ ಹೂಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು. ಜಸ್ಟಿಸ್ ಫಾರ್ ಹರಾಂಬೆ (ಹರಾಂಬೆಗೆ ನ್ಯಾಯ ಸಿಗಲಿ) ಎಂಬ ಹೆಸರಲ್ಲಿ ಫೇಸ್‍ಬುಕ್‍ನಲ್ಲಿ ಒಂದು ಪುಟವೇ ತೆರೆಯಿತು. ಒಂದೇ ದಿನದೊಳಗೆ 11 ಸಾವಿರ ಲೈಕ್‍ಗಳನ್ನು ಅದು ಗಿಟ್ಟಿಸಿಕೊಂಡಿತು. ಹರಾಂಬೆಯಂಥ ಪ್ರಾಣಿಗಳ ರಕ್ಷಣೆಗಾಗಿ ಕಾನೂನು ಜಾರಿ ಮಾಡಬೇಕೆಂದು ಆಗ್ರ ಹಿಸಿ Petitiononcharge.org  ಎಂಬ ನೆಟ್ ತಾಣವನ್ನು ಆರಂಭಿಸಲಾಯಿತು. ಇದಕ್ಕೆ ಮೂರು ದಿನಗಳಲ್ಲಿ 4 ಲಕ್ಷ ಸಹಿ ಸಂಗ್ರಹವಾಯಿತು. ಪ್ರಾಣಿ ದಯಾ ಸಂಘವಾದ PETA (People for ethical treatment of animals)ವು ಸಿನ್‍ಸಿನಾಟಿ ಮೃಗಾಲಯಕ್ಕೆ ಇನ್ನೊಂದು ಸುತ್ತು ಬೇಲಿ ಹಾಕುವಂತೆ ಒತ್ತಾಯಿಸಿತು. ಈ ನಡುವೆ ಅಮೇರಿಕದ ಲಾಸ್ ಏಂಜಲೀಸ್‍ನಿಂದ ಪ್ರಸಾರವಾಗುವ ರೇಡಿಯೋ ಕಾರ್ಯಕ್ರಮದಲ್ಲಿ ಪ್ರತಿದಿನ ಲೈವ್ ಕಾರ್ಯಕ್ರಮವನ್ನು ಏರ್ಪಡಿಸುವ ಪ್ರಸಿದ್ಧ ರೇಡಿಯೋ ನಿರೂಪಕ ಡೆನ್ನಿಸ್ ಪ್ರಾಗರ್ ಅವರು ಈ ಘಟನೆಗೆ ತಾಳೆಯಾಗುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ರೇಡಿಯೋ ಕೇಳುಗರಲ್ಲಿ ಅವರ ಪ್ರಶ್ನೆ ಹೀಗಿತ್ತು:
  “ಅಪರಿಚಿತ ಮನುಷ್ಯ ಮತ್ತು ನಿಮ್ಮ ಪ್ರೀತಿಪಾತ್ರ ಪ್ರಾಣಿ ನೀರಿಗೆ ಬಿದ್ದು ಮುಳುಗುತ್ತಿದ್ದರೆ ಮತ್ತು ನೀವು ಅವೆರಡರಲ್ಲಿ ಒಂದನ್ನು ಮಾತ್ರ ರಕ್ಷಿಸುವ ಅವಕಾಶವನ್ನು ಹೊಂದಿದ್ದರೆ ನೀವು ಯಾರನ್ನು ರಕ್ಷಿಸುವಿರಿ?”
  ಅಚ್ಚರಿಯ ವಿಷಯ ಏನೆಂದರೆ, ಕೇಳುಗರಲ್ಲಿ ಒಂದು ದೊಡ್ಡ ಗುಂಪು ಪ್ರಾಣಿಯನ್ನು ಎಂದು ಉತ್ತರಿಸಿತು. 1999ರಿಂದ ರೇಡಿಯೋದಲ್ಲಿ ಪ್ರತಿದಿನ ಲೈವ್ ಕಾರ್ಯಕ್ರಮವನ್ನು ಕೊಡುತ್ತಿರುವ, ‘ಹ್ಯಾಪಿನೆಸ್ ಈಸ್ ಸೀರಿಯಸ್ ಪ್ರಾಬ್ಲಮ್’, ‘ಥಿಂಕ್ ಎ ಸೆಕೆಂಡ್ ಟೈಮ್’ನಂಥ ಪ್ರಸಿದ್ಧ ಕೃತಿಗಳನ್ನು ಬರೆದಿರುವ ಮತ್ತು ವಿಶ್ವದ 7 ರಾಷ್ಟ್ರಗಳಲ್ಲಿ ಉಪನ್ಯಾಸ ನೀಡಿರುವ, ಟಿ.ವಿ. ಶೋಗಳನ್ನು ನಡೆಸಿ ಕೊಟ್ಟಿರುವ ಡೆನ್ನಿಸ್ ಪ್ರಾಗರ್ ಅವರು ಈ ಉತ್ತರವನ್ನು ಕೇಳಿ ಒಮ್ಮೆ ಅವಾಕ್ಕಾದರು. ನಿಜವಾಗಿ, ಅಮೇರಿಕನ್ನರ ಮನಸ್ಥಿತಿಯಿಂದ ಆಘಾತಗೊಂಡಿದ್ದು ಡೆನ್ನಿಸ್ ಪ್ರಾಗರ್ ಮಾತ್ರ ಅಲ್ಲ, ಜಗತ್ತಿನ ಅಸಂಖ್ಯಾತ ಮಂದಿ ಸೋಶಿಯಲ್ ಮೀಡಿಯಾಗಳು ಮತ್ತು ಮಾಧ್ಯಮಗಳ ಮೂಲಕ ಅಮೇರಿಕನ್ ಮನಸ್ಥಿತಿಗೆ ಖಾರವಾಗಿ ಪ್ರತಿಕ್ರಿಯಿಸಿದರು. ಜಪಾನ್‍ನ ಜನರಂತೂ ಅತ್ಯಂತ ಕಟು ಭಾಷೆಯಲ್ಲಿ ಅಮೇರಿಕನ್ ಮನಸ್ಥಿತಿಯನ್ನು ಖಂಡಿಸಿದರು. ಇದಕ್ಕೆ ಕಾರಣವೂ ಇದೆ.
  ಗೊರಿಲ್ಲಾ ಘಟನೆಗಿಂತ ಎರಡು ದಿನಗಳ ಮೊದಲು (ಮೇ 27) ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಜಪಾನ್‍ಗೆ ಐತಿಹಾಸಿಕ ಭೇಟಿ ಕೊಟ್ಟಿದ್ದರು. 1945 ಆಗಸ್ಟ್ 6 ಮತ್ತು 9ರಂದು ಜಪಾನ್‍ನ ಹಿರೋಶಿಮಾ ಮತ್ತು ನಾಗಸಾಕಿಗೆ ಅಮೇರಿಕದ ಯುದ್ಧ ವಿಮಾನಗಳು ಅಣುಬಾಂಬ್ ಸುರಿಸುವಾಗ ಅಮೆರಿಕದ ಅಧ್ಯಕ್ಷರಾಗಿದ್ದುದು ಹ್ಯಾರಿ ಟ್ರೂಮನ್. ಆ ಬಳಿಕ ಅಮೇರಿಕವು 11 ಮಂದಿ ಅಧ್ಯಕ್ಷರುಗಳನ್ನು ಕಂಡಿದೆ. ಆದರೆ ಒಬ್ಬನೇ ಒಬ್ಬ ಅಧ್ಯಕ್ಷ ಜಪಾನ್‍ಗೆ ಈ ವರೆಗೂ ಭೇಟಿ ಕೊಟ್ಟಿಲ್ಲ. ಅತ್ಯಂತ ಪ್ರಭಾವಶಾಲಿ ಮತ್ತು ಧೈರ್ಯಶಾಲಿಗಳಾಗಿ ಗುರುತಿಸಿಕೊಂಡಿದ್ದ ಕೆನಡಿ, ಬುಶ್, ಕ್ಲಿಂಟನ್ ಸಹಿತ ಯಾವ ಅಧ್ಯಕ್ಷರೂ ಜಪಾನ್‍ನ ಮಣ್ಣನ್ನು ತುಳಿಯುವ ಧೈರ್ಯ ತೋರಿಸಿರಲಿಲ್ಲ. ಜಪಾನ್‍ಗೆ ಕಾಲಿಟ್ಟರೆ ಎಲ್ಲಿ ಅಣುಬಾಂಬ್ ಹತ್ಯೆಗಾಗಿ ಕ್ಷಮೆ ಯಾಚಿಸಬೇಕಾದೀತೋ ಎಂಬೊಂದು ಅಳುಕು ಅವರನ್ನು ಕಾಡಿತ್ತು. ಆದ್ದರಿಂದಲೇ, ಆ ಅಣುಬಾಂಬ್ ಕ್ರೌರ್ಯಕ್ಕೆ 71 ವರ್ಷಗಳು ಸಂದ ಈ ಸಂದರ್ಭದಲ್ಲಿ ಒಬಾಮ ಜಪಾನ್‍ಗೆ ಭೇಟಿ ಕೊಡುತ್ತಿರುವುದು ಸಹಜವಾಗಿಯೇ ಜಗತ್ತಿನ ಕುತೂಹಲವನ್ನು ಕೆರಳಿಸಿತ್ತು. ಜಪಾನಿಗರಂತೂ ಅತ್ಯಂತ ಆಸಕ್ತಿಯಿಂದ ಒಬಾಮರ ಭೇಟಿಯನ್ನು ನಿರೀಕ್ಷಿಸುತ್ತಿದ್ದರು. ದ್ವಿತೀಯ ವಿಶ್ವ ಯುದ್ಧದ ಸಮಯದಲ್ಲಿ ಕೊರಿಯನ್ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿ ಬಳಸಿಕೊಂಡಿರುವುದಕ್ಕಾಗಿ ಜಪಾನಿನ ಹಾಲಿ ಪ್ರಧಾನಿ ಶಿನ್ಝೊ ಅಬೆಯವರು ಕಳೆದ ಡಿಸೆಂಬರ್ (2015)ನಲ್ಲಿ ಕ್ಷಮೆ ಯಾಚಿಸಿದುದು ಒಬಾಮರ ಮೇಲಿನ ನಿರೀಕ್ಷೆಗೆ ಇನ್ನೊಂದು ಕಾರಣವೂ ಆಗಿತ್ತು. ಒಬಾಮ ಭೇಟಿಗಿಂತ ದಿನಗಳ ಮೊದಲು ಜಪಾನ್‍ನಲ್ಲಿ ಬಿರುಸಿನ ಚಟುವಟಿಕೆಗಳು ನಡೆದುವು. ಹಿರೋಶಿಮಾ ಶಾಂತಿ ಕಾರ್ಯಕರ್ತರು ಒಬಾಮ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿ ರಾಲಿ ನಡೆಸಿದರು. ಅಣುಬಾಂಬ್‍ನಿಂದ ಸಂತ್ರಸ್ತರಾದ ಕೈಕೋ ಒಗುರಾ, ಪಾರ್ಕ್ ನಮ್ಜೂ, ಸುನಾವೊ ತ್ಸುಬಿ, ಶಿಗೇಕೆ ಮಿರಿ, ಮಿಸ್ಕಾವೊ ಕಟನಿ.. ಮುಂತಾದ ವಯೋವೃದ್ಧರ ಅಭಿಪ್ರಾಯಗಳನ್ನು ಮಾಧ್ಯಮಗಳು ದಿನಂಪ್ರತಿಯೆಂಬಂತೆ ಪೋಟೋ ಸಹಿತ ಪ್ರಕಟಿಸಿದುವು. ಒಬಾಮ ಕ್ಷಮೆ ಯಾಚಿಸಬೇಕೆಂಬುದು ಅವರೆಲ್ಲರ ಆಗ್ರಹವಾಗಿತ್ತು. ತೆರುಮಿ ಕನಕ ಎಂಬವರ ಜೀವನಗಾಥೆಯಂತೂ ಅತ್ಯಂತ ಕರುಣಾಜನಕ. ಆಗಸ್ಟ್ 9, 1945ರಂದು ಅಮೇರಿಕವು ನಾಗಸಾಕಿಯ ಮೇಲೆ ಬಾಂಬ್ ಸುರಿಸಿದಾಗ ತೆರುಮಿ ಕನಕ ಅವರು ನಾಗಸಾಕಿಗಿಂತ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದರು. ಆ ಕ್ಷಣದಲ್ಲಿ ಅವರು ಪ್ರಜ್ಞಾಶೂನ್ಯರಾದರು. ಆದರೆ ಜೀವಕ್ಕೇನೂ ಹಾನಿ ತಟ್ಟಲಿಲ್ಲ. ಅವರು ಮತ್ತು ನಾಗಾಸಾಕಿಯ ಮಧ್ಯೆ ಹಲವಾರು ಬೆಟ್ಟ-ಗುಡ್ಡಗಳಿದ್ದುದು ಇದಕ್ಕೆ ಕಾರಣವಾಗಿತ್ತು. ಆದರೆ ಅವರ ಕುಟುಂಬದ 5 ಮಂದಿ ಸ್ಥಳದಲ್ಲೇ ಸುಟ್ಟು ಕರಕಲಾಗಿ ಹೋದರು. ತನ್ನ ಮನೆಯ ಹೊರಾಂಗಣದಲ್ಲಿ ಅತ್ತೆ ಮತ್ತು ಮಕ್ಕಳು ಸುಟ್ಟು ಇದ್ದಲಿನಂತೆ ಕರ್ರಗಾಗಿ ಬಿಟ್ಟಿದ್ದರು. ಇನ್ನೋರ್ವ ಅತ್ತೆ ತೀವ್ರ ಸುಟ್ಟ ಗಾಯಗಳಿಂದ ಕೂಗಾಡುತ್ತಿದ್ದರು. ಕೆಲವು ದಿನಗಳಲ್ಲಿ ಆಕೆಯೂ ಸತ್ತು ಹೋದರು. ದಫನ ಮಾಡುವುದಕ್ಕೂ ಜನರಿರಲಿಲ್ಲ. ಸ್ವತಃ ಕನಕ ಅವರೇ ಅವರನ್ನು ದಫನ ಮಾಡಿದ್ದರು. ಇಂಥ ಕಣ್ಣೀರ ಕತೆಗಳು ದಿನಂಪ್ರತಿ ಪ್ರಕಟವಾಗುತ್ತಿರುವುದರ ಮಧ್ಯೆಯೇ ಮೇ 27ರಂದು ಒಬಾಮ ಜಪಾನ್‍ಗೆ ಭೇಟಿ ಕೊಟ್ಟರು. ಹಿರೋಶಿಮಾ ಸಂದರ್ಶಿಸಿದರು. ಆದರೆ ಒಬಾಮ ಎಲ್ಲೂ ಕ್ಷಮೆ ಯಾಚಿಸಲೇ ಇಲ್ಲ. ಅತ್ಯಂತ ಕಾವ್ಯಾತ್ಮಕ ಶೈಲಿಯಲ್ಲಿ 71 ವರ್ಷಗಳ ಹಿಂದಿನ ಕ್ರೌರ್ಯವನ್ನು ವಿವರಿಸಿದುದನ್ನು ಬಿಟ್ಟರೆ ಇನ್ನಾವ ಹೇಳಿಕೆಯೂ ಅವರಿಂದ ಹೊರಬೀಳಲಿಲ್ಲ. ಒಂದು ಗೊರಿಲ್ಲಾದ ಹತ್ಯೆಗೆ ಮರುಗುವ ಮತ್ತು ಅಸಂಖ್ಯ ಸಂಖ್ಯೆಯಲ್ಲಿ ಸಹಿ ಸಂಗ್ರಹವಾಗುವ ದೇಶವೊಂದರ ಅಧ್ಯಕ್ಷ ಲಕ್ಷಾಂತರ ಮಂದಿಯನ್ನು ಬಾಂಬಿಟ್ಟು ಸಾಯಿಸಿದುದಕ್ಕಾಗಿ ಕ್ಷಮೆ ಯಾಚಿಸುತ್ತಿಲ್ಲ ಅನ್ನುವುದಕ್ಕೆ ಜಾಗತಿಕ ವಾಗಿಯೇ ಅಚ್ಚರಿ ವ್ಯಕ್ತವಾಯಿತು. ಲಕ್ಷಾಂತರ ಜಪಾನಿಗರ ಜೀವ ಅಮೇರಿಕದ ಒಂದು ಗೊರಿಲ್ಲಾಕ್ಕೂ ಸಮಾನವಲ್ಲವೇ ಎಂಬೊಂದು ಪ್ರಶ್ನೆಯೂ ಹುಟ್ಟಿಕೊಂಡಿತು. ಆದರೆ ಅಮೇರಿಕದ ಕೆಲವರು ಒಬಾಮರನ್ನು ಎಷ್ಟು ಹಾಸ್ಯಾಸ್ಪವಾಗಿ ಸಮರ್ಥಿಸಿ ಕೊಂಡರೆಂದರೆ, ಅಣುಬಾಂಬ್‍ನ ಬದಲು ಅಮೇರಿಕವು ಜಪಾನ್‍ನಲ್ಲಿ ಸೇನಾ ಕಾರ್ಯಾಚರಣೆಗೆ ಇಳಿದಿರುತ್ತಿದ್ದರೆ ಮಿಲಿಯನ್‍ಗಿಂತಲೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದರು ಎಂದರು. ಅದಕ್ಕೆ ಹೋಲಿಸಿದರೆ ಅಣುಬಾಂಬ್‍ನಿಂದಾದ ಅನಾಹುತ ಚಿಕ್ಕದು ಎಂದೂ ವಾದಿಸಿದರು. ಅಮೇರಿಕ ಬಾಬ್ ಹಾಕುವುದಕ್ಕಿಂತ ಮೊದಲೇ ದಕ್ಷಿಣ ಏಷ್ಯಾ ಮತ್ತು ಚೀನಾದಲ್ಲಿ 20 ಮಿಲಿಯನ್ ಮಂದಿಯನ್ನು ಜಪಾನ್ ಪ್ರಭುತ್ವವು ಕೊಂದು ಹಾಕಿದೆ ಎಂದೂ ಹೇಳಿದರು. ಅಮೇರಿಕವು ತನ್ನಲ್ಲಿ ಅತೀ ಹೆಚ್ಚು ಅಣ್ವಸ್ತ್ರ
ದಾಸ್ತಾನಿರಿಸಿಕೊಂಡಿದ್ದರೂ ಜಪಾನ್‍ನ ನಂತರ ಇನ್ನಾವ ರಾಷ್ಟ್ರದ ಮೇಲೂ ಅದು ಅಣ್ವಸ್ತ್ರವನ್ನು ಬಳಸಿಲ್ಲ ಎಂದೂ ಅಮೇರಿಕವನ್ನು ನಿರ್ಲಜ್ಜವಾಗಿ ಸಮರ್ಥಿಸಿಕೊಂಡರು. 20ನೇ ಶತಮಾನದ ಕೊನೆ ಮತ್ತು 21ನೇ ಶತಮಾನದ ಆರಂಭದಲ್ಲಿ ಅಣುಬಾಂಬ್ ಉಪಯೋಗಿಸಬೇಕಾದ ಅಗತ್ಯ ಕಂಡುಬಂದರೂ ಅಮೇರಿಕ ಅದನ್ನು ಉಪಯೋಗಿಸದಿರುವುದು ಏನನ್ನು ಸೂಚಿಸುತ್ತದೆ ಎಂದೂ ಪ್ರಶ್ನಿಸಿದರು. ನ್ಯೂಕ್ಲಿಯರ್ ನಾನ್ ಪ್ರೊಲಿಫಿಕೇಶನ್‍ಗೆ ಮೊಟ್ಟಮೊದಲು ಒತ್ತಾಯಿಸಿದವರೇ ಅಮೇರಿಕದ ಅಧ್ಯಕ್ಷ ಕೆನಡಿ ಎಂದೂ ಹೇಳಿಕೊಂಡರು. ಈ ಪರ-ವಿರೋಧಿ ಚರ್ಚೆಗಳ ನಡುವೆಯೇ ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೇವ್ ಅವರು ಕೆನಡದ ಸಿಕ್ಖ್ ಸಮುದಾಯದ ಕ್ಷಮೆ ಯಾಚಿಸಿದುದನ್ನು ಯಾರೋ ಉಲ್ಲೇಖಿಸಿದರು. ಸಣ್ಣ ಸಂಗತಿಯಂತೆ ಕಳೆದು ಹೋಗಿದ್ದ ಕ್ಷಮೆಯೊಂದು ಹೀಗೆ ಹರಾಂಬೆ ಮತ್ತು ಒಬಾಮರಿಂದಾಗಿ ಮುನ್ನೆಲೆಗೆ ಬಂದಿತು. ಒಬಾಮರಿಗಿಂತ 6 ದಿನಗಳ ಮೊದಲೇ ಮೇ 18 ರಂದು ಕೆನಡದ ಪ್ರಧಾನಿ ಪಾರ್ಲಿಮೆಂಟ್‍ನಲ್ಲಿ 17 ಸಿಕ್ಖ್ ಸಂಸದರ ಸಹಿತ ಎಲ್ಲರೆದುರು ನಿಶ್ಶರ್ಥ ಕ್ಷಮೆ ಯಾಚಿಸಿದ್ದರು.  
          ಅಂದಹಾಗೆ, ಹಿರೋಶಿಮಾ-ನಾಗಸಾಕಿಗೆ ಹೋಲಿಸಿದರೆ ಏನೇನೂ ಅಲ್ಲದ 1914 ಮೇ 18ರ ಘಟನೆ ಅದು. ಅಂದು ಕೆನಡದಲ್ಲಿ ಭಾರತೀಯ ಮೂಲದ ಸಿಕ್ಖರು ಧಾರಾಳ ಸಂಖ್ಯೆಯಲ್ಲಿ ದ್ದರು. ಭಾರತೀಯ ವಲಸಿಗರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರು ವಂತೆಯೇ ಕೆನಡದಲ್ಲಿ ಅಸಮಾಧಾನಗಳೂ ಭುಗಿಲೆದ್ದುವು. ಈ ಕಾರಣದಿಂದಾಗಿ 1907ರಲ್ಲಿ ಕೆನಡಿಯನ್ ಸರಕಾರವು ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿತು. ಭಾರತೀಯರಿಗೆ ಮತದಾನ ಮಾಡುವ ಹಕ್ಕನ್ನು ರದ್ದುಪಡಿಸಿತು. ಭಾರತೀಯರು ಸರಕಾರಿ ಅಧಿಕಾರಿಗಳಾಗುವುದನ್ನು, ನ್ಯಾಯಾಧೀಶರು, ವಕೀಲರು, ಲೆಕ್ಕ ಪರಿಶೋಧಕರು ಮತ್ತು ವೈದ್ಯರಾಗುವುದನ್ನು ತಡೆಯಿತು. ಇಂಥ ಸಮಯದಲ್ಲೇ ಉದ್ಯಮಿ ಗುರುದಿತ್ ಸಿಂಗ್ ಎಂಬವರು ಕಮಗತ ಮರು ಎಂಬ ಜಪಾನಿ ಹಡಗನ್ನು ಬಾಡಿಗೆಗೆ ಪಡೆದು 376 ಮಂದಿ ಭಾರತೀಯ ವಲಸಿಗರನ್ನು ಕೆನಡಕ್ಕೆ ತಲುಪಿಸುವ ಸಾಹಸಕ್ಕೆ ಕೈ ಹಾಕಿದರು. ಈ ವಲಸಿಗರಲ್ಲಿ 340 ಮಂದಿ ಸಿಖ್ಖರು, 24 ಮಂದಿ ಮುಸ್ಲಿಮರು ಮತ್ತು 12 ಮಂದಿ ಹಿಂದುಗಳಿದ್ದರು. ಒಂದು ರೀತಿಯಲ್ಲಿ, ಈ ಸಾಹಸ ಕೆನಡಿಯನ್ ಸರಕಾರಕ್ಕೆ ಎಸಗಿದ ಬಹಿರಂಗ ಸವಾಲು ಆಗಿತ್ತು. ಈ ಹಡಗು ಹಾಂಗ್‍ಕಾಂಗ್‍ನಿಂದ ಹೊರಟು ಜಪಾನ್‍ನಲ್ಲಿ ತಂಗಿ ಬಳಿಕ ಕೆನಡಕ್ಕೆ ಹೊರಟಿತು. ಆದರೆ ಈ ಸುದ್ದಿಯನ್ನು ಜರ್ಮನ್ ಕೇಬಲ್ ಕಂಪೆನಿಯು ಜರ್ಮನ್ ಪ್ರೆಸ್‍ಗೆ ತಿಳಿಸಿತು. ಅಲ್ಲಿಂದ ಬ್ರಿಟಿಷ್ ಪ್ರೆಸ್ ಅದನ್ನು ಎತ್ತಿಕೊಂಡು ಅಲ್ಲಿಂದ ಕೆನಡದ ದಿ ವ್ಯಾಂಕೋವರ್ ಡೈಲಿಯುBoats loads of Hindus on way to Vancover (ಹಿಂದೂಗಳನ್ನು ತುಂಬಿಕೊಂಡ ಹಡಗು ವ್ಯಾಂಕೋವರ್‍ಗೆ) ಎಂಬ ಉದ್ರೇಕಕಾರಿ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಿತು. ಇನ್ನೊಂದು ಕಡೆ ‘ಹಿಂದೂ ಇನ್ವೇಷನ್ ಆಫ್ ಕೆನಡ’ ಎಂಬ ಶೀರ್ಷಿಕೆಯಲ್ಲೂ ಸುದ್ದಿ ಪ್ರಕಟವಾಯಿತು. ಕೆನಡದಲ್ಲಿರುವ ಸಿಖ್ಖರಂತೂ ಈ ಹಡಗನ್ನು ಸ್ವಾಗತಿಸಲು ಗುರುದ್ವಾರಗಳಲ್ಲಿ ಸಭೆ ನಡೆಸಿದರು. ಚಂದಾ ಸಂಗ್ರಹಿಸಿದರು. ಈ ಮಧ್ಯೆ, 1914 ಮೇ 23ರಂದು ಕಮಗತ ಮರು ಹಡಗು ಕೆನಡದ ವ್ಯಾಂಕೋವರ್ ಬಂದರ್‍ಗೆ ತಲುಪಿತು. ಆದರೆ ಹಡಗಿನಿಂದ ಯಾರನ್ನೂ ಇಳಿಯಲು ಅಧಿಕಾರಿಗಳು ಬಿಡಲಿಲ್ಲ. 2 ತಿಂಗಳ ವರೆಗೆ ಭಾರತೀಯ ಸಮುದಾಯ ಮತ್ತು ಕೆನಡಿಯನ್ ಅಧಿಕಾರಿಗಳ ಮಧ್ಯೆ ನ್ಯಾಯಾಂಗ ಸಮರ ನಡೆಯಿತು. ಕೊನೆಗೆ ಈ 376 ಮಂದಿಯಲ್ಲಿ ಕೇವಲ 24 ಮಂದಿಗಷ್ಟೇ ಕೆನಡ ಪ್ರವೇಶಿಸಲು ಅವಕಾಶ ನೀಡಲಾಯಿತು. 1914 ಜುಲೈ 23ರಂದು ವ್ಯಾಂಕೋವರ್ ಬಂದರ್‍ನಿಂದ ಸಮಗತ ಮರುವನ್ನು ಹೊರಗಟ್ಟಲಾಯಿತು. 1914 ಸೆ. 26ರಂದು ಇದು ಕೊಲ್ಕತ್ತಾಕ್ಕೆ ತಲುಪುವ ಮೊದಲೇ ಭಾರತದ ಬ್ರಿಟಿಷ್ ಆಡಳಿತ ಈ ಹಡಗನ್ನು ಸಮುದ್ರ ಮಧ್ಯದಲ್ಲೇ ತಡೆದಿರಿಸಿತು. ವಲಸಿಗರಿಗೂ ಅಧಿಕಾರಿಗಳಿಗೂ ನಡುವೆ ಜಟಾಪಟಿಯಾಗಿ 29 ಮಂದಿ ಸಾವಿಗೀಡಾಡದರು. ಹೀಗೆ ವಲಸಿಗರನ್ನು ಸಮುದ್ರ ಮಧ್ಯದಲ್ಲಿ 2 ತಿಂಗಳ ಕಾಲ ಕಟ್ಟಿ ಹಾಕಿದ ಮತ್ತು ಹಿಂತಿರುಗಿಸಿದ ತಪ್ಪಿಗಾಗಿ ಮೊನ್ನೆ ಜಸ್ಟಿನ್ ಟ್ರುಡೇವ್ ಸಿಖ್ಖರ ಕ್ಷಮೆ ಯಾಚಿಸಿದರು. ಆದ್ದರಿಂದಲೇ ಲಕ್ಷಾಂತರ ಮಂದಿಯ ಹತ್ಯೆಗೆ ಕಾರಣವಾಗಿಯೂ ಕ್ಷಮೆಯಾಚಿಸಿದ ಒಬಾಮರ ಎದುರು ಅನೇಕರು ಜಸ್ಟಿನ್ ಟ್ರುಡೇವ್‍ರನ್ನು ಇಟ್ಟು ಪರಸ್ಪರ ಹೋಲಿಸಿದರು. ಕ್ಷಮೆಯಾಚನೆಯಿಂದ ಯಾರೂ ಸಣ್ಣವರಾಗಲ್ಲ ಎಂದು ಕುಟುಕಿದರು. ವಲಸಿಗರ ಹಡಗನ್ನು ಸ್ವಾಗತಿಸದೇ ಇದ್ದುದಕ್ಕೆ ಕ್ಷಮೆಯಾಚಿಸುವ ಜಸ್ಟಿನ್‍ರ ಎದುರು ಒಬಾಮ ತೀರಾ ಸಣ್ಣವರು ಎಂದು ಗೇಲಿ ಮಾಡಿದರು. ಅಷ್ಟಕ್ಕೂ           
           ‘ಮನುಷ್ಯನ ಬದಲು ಸಾಕು ಪ್ರಾಣಿಯನ್ನು ರಕ್ಷಿಸುವೆ’ ಅನ್ನುವ ದೇಶದಲ್ಲಿ ಗೊರಿಲ್ಲಾವಲ್ಲದೇ ಮನುಷ್ಯ ಮುಖ್ಯವಾಗುವುದಾದರೂ ಹೇಗೆ?




Thursday, May 26, 2016

ಅಂತಕರಣವನ್ನು ಮೀಟುವ 'ಕರೆ'..

      ಬಸ್ ನಿಲ್ದಾಣ. ಅಲ್ಲೇ  ಪಕ್ಕದಲ್ಲಿ ಬಿಳಿ ಟೊಪ್ಪಿ ಧರಿಸಿರುವ ಗಡ್ಡಧಾರಿ ಯುವಕನೊಬ್ಬ ಪತ್ರಿಕೆಗಳನ್ನು ಅಚ್ಚುಕಟ್ಟಾಗಿ ಇಡುತ್ತಿರುತ್ತಾನೆ. ಒಬ್ಬಿಬ್ಬರನ್ನು ಬಿಟ್ಟರೆ ಬಸ್ ನಿಲ್ದಾಣದಲ್ಲಿ ಜನರೇ ಇಲ್ಲ. ಒಂದು ಬಗೆಯ ನೀರವ ಮೌನ. ತುಸು ದೂರದಲ್ಲಿ ಗಟ್ಟಿಮುಟ್ಟಾದ ಯುವಕನೊಬ್ಬ ಮೊಬೈಲ್‍ನಲ್ಲಿ ಬಿಝಿಯಾಗಿದ್ದಾನೆ. ಕಿವಿಗಳನ್ನು ಇಯರ್‍ಫೋನ್ ಮುತ್ತಿಕೊಂಡಿದೆ. ಆತನ ಹಾವಭಾವ, ಉಡುಗೆ-ತೊಡುಗೆ, ನಡಿಗೆಯ ಶೈಲಿ, ಬ್ಯಾಗು.. ಎಲ್ಲವೂ ಆತನನ್ನು ಓರ್ವ ವಿದ್ಯಾವಂತ ಯುವಕನಂತೆ ತೋರಿಸುತ್ತಿದೆ. ಅದೇ ವೇಳೆ, ಓರ್ವ ಮಧ್ಯ ವಯಸ್ಕ ಬೈಕ್‍ನಲ್ಲಿ ಬರುತ್ತಾನೆ. ಬೈಕನ್ನು ಒಂದು ಕಡೆ ನಿಲ್ಲಿಸಿ ಜೇಬಿನಿಂದ ಮೊಬೈಲ್ ಎತ್ತಿ ಕರೆ ಸ್ವೀಕರಿಸುತ್ತಾನೆ. ಆದರೆ, ಕರೆ ಸರಿಯಾಗಿ ಕೇಳಿಸುವುದಿಲ್ಲ. ಮೊಬೈಲ್  ಕೈಕೊಟ್ಟಿದೆ ಎಂದು ಆತನಿಗೆ ಸ್ಪಷ್ಟವಾಗುತ್ತದೆ. ಬಹುಶಃ ಚಾರ್ಜ್ ಮುಗಿದಿರಬೇಕು. ಆತ ಆ ವಿದ್ಯಾವಂತ ಯುವಕನ ಬಳಿ ಸಾಗಿ ಒಮ್ಮೆ ಮೊಬೈಲ್ ಕೊಡಬಹುದಾ, ತುರ್ತು ಕರೆ ಮಾಡಬೇಕಿತ್ತು.. ಎಂದು ವಿನಂತಿಸುತ್ತಾನೆ. ಯುವಕ ಕಿವಿಯಿಂದ ವಯರ್ ಅನ್ನು ಕಿತ್ತು ಏನು ಎಂಬಂತೆ ಒಂದು ಬಗೆಯ ತಿರಸ್ಕಾರ ಭಾವದಿಂದ ಪ್ರಶ್ನಿಸುತ್ತಾನೆ. ‘ಹೋಗಯ್ಯ, ಜಮಾನಾ ಖರಾಬ್ ಸಾಬ್..' ಎಂದು ನಿರಾಕರಿಸುತ್ತಾನೆ. ಮಧ್ಯವಯಸ್ಕ ಮೊಬೈಲ್‍ಗಾಗಿ ಬಸ್ ನಿಲ್ದಾಣದಲ್ಲಿರುವವರಲ್ಲಿ ವಿನಂತಿಸುತ್ತಾ ಹೋಗುತ್ತಾನೆ. ಯಾರೂ ಕೊಡಲ್ಲ. ಆತನಿಗೆ ತೀವ್ರ ನಿರಾಶೆಯಾಗುತ್ತದೆ. ಮುಖದಲ್ಲಿ ದುಃಖದ ಕಡಲು. ಏನೂ ತೋಚದಂತಾಗಿ ಆತ ಮಂಜಾದ ಕಣ್ಣಿನೊಂದಿಗೆ ಬಸ್ ನಿಲ್ದಾಣದಲ್ಲಿ ಕೂರುತ್ತಾನೆ. ಇದೇ ವೇಳೆ ಇವೆಲ್ಲವನ್ನೂ ವೀಕ್ಷಿಸುತ್ತಿದ್ದ ಗಡ್ಡಧಾರಿ ಪತ್ರಿಕಾ ಮಾರಾಟಗಾರ ಯುವಕ ಆತನ ಬಳಿ ಸಾಗಿ ಮೊಬೈಲ್ ಕೊಡುತ್ತಾನೆ. ಆತ ಅತೀವ ತುರ್ತಿನೊಂದಿಗೆ ಮೊಬೈಲ್ ಸ್ವೀಕರಿಸಿ ಕರೆ ಮಾಡುತ್ತಾನೆ. ‘ಹೇಳು ಪ್ರಿಯಾ, ಏನಾಯ್ತು...' ಎಂದು ಕೇಳುತ್ತಾನೆ. ಬಳಿಕ ನಿಧಾನಕ್ಕೆ ಕಣ್ಣೀರು ಹರಿಯತೊಡಗುತ್ತದೆ. ಮಾತು ತಡ ವರಿಸುತ್ತದೆ. ಈ ಮೊದಲು ಮೊಬೈಲ್ ಕೊಡಲು ನಿರಾಕರಿಸಿದವರು ಹತ್ತಿರ ಬರುತ್ತಾರೆ. ಕಣ್ಣೀರಿನ ಕಾರಣಗಳನ್ನು ಕೇಳುತ್ತಾರೆ. ಆದರೆ ಆತನಿಗಾದರೋ ಬಾಯಿ ಕಟ್ಟಿರುವಷ್ಟು ದುಃಖ. ತನ್ನ ಮಗಳು ಮನೆಯ ಮಾಡಿನಿಂದ ಬಿದ್ದದ್ದು, ಕೊನೆಯುಸಿರಿಗಿಂತ ಮೊದಲು ತಂದೆಯೊಂದಿಗೆ ಮಾತಾಡಬೇಕೆಂದು ಬಯಸಿದ್ದು ಹಾಗೂ ಹಾಗೇ ಮಾತಾಡುವ ಸಂದರ್ಭದಲ್ಲೇ ತನ್ನ ಮೊಬೈಲ್ ಕೈ ಕೊಟ್ಟಿದ್ದು.. ಆತ ಹೇಳುತ್ತಾ ಹೋಗುವಾಗ ಸುತ್ತಲಿನವರ ಹೃದಯಕ್ಕೆ ಚುಚ್ಚಿದ ಅನುಭವವಾಗುತ್ತದೆ. ಒಂದು ವೇಳೆ, ನೀವು ನನಗೆ ಮೊಬೈಲ್ ಕೊಡುತ್ತಿದ್ದರೆ ಮಗಳೊಂದಿಗೆ ಕೊನೆಯ ಬಾರಿ ಮಾತಾಡುತ್ತಿದ್ದೆ, ಆಕೆಯ ಕಟ್ಟಕಡೆಯ ಆಸೆಯನ್ನು ಪೂರೈಸುತ್ತಿದ್ದೆ.. ಅನ್ನುತ್ತಾ ಬಿಕ್ಕುತ್ತಾನೆ. ಸುತ್ತಲೂ ಮೌನ ಆವರಿಸುತ್ತದೆ.
  ಗೆಳೆಯ ಶೌಕತ್ ಅಲಿ ಅವರು ನಿರ್ದೇಶಿಸಿರುವ ನಾಲ್ಕು ನಿಮಿಷಗಳ ‘Only One Cal  Plz..' (ಒಂದೇ ಒಂದು ಕರೆ -ದಯವಿಟ್ಟು) ಎಂಬ ಈ ಕಿರುಚಿತ್ರ ಇಷ್ಟವಾಗುವುದು ಮಾನವ ಸಂಬಂಧಗಳ ಕುರಿತಾದ ಅದರ ಕಳಕಳಿಯಿಂದಾಗಿ.. ಮನುಷ್ಯನಿಗೆ ಮನುಷ್ಯನ ಮೇಲೆ ಇರುವಷ್ಟು ಅಪನಂಬಿಕೆ ಇವತ್ತು ಯಂತ್ರಗಳ ಮೇಲೂ ಇರದಷ್ಟು ಈ ಕ್ಷೇತ್ರ ಹದಗೆಟ್ಟು ಹೋಗುತ್ತಿದೆ. ಇವತ್ತು ಟೊಪ್ಪಿ ಧರಿಸಿದ ಗಡ್ಡಧಾರಿ ವ್ಯಕ್ತಿಯನ್ನು ಅಥವಾ ಉದ್ದ ನಾಮ ಹಾಕಿದ ಮತ್ತು ಕೈಯಲ್ಲಿ ಕೇಸರಿ ನೂಲುಗಳನ್ನು ಧರಿಸಿರುವ ವ್ಯಕ್ತಿಯನ್ನು ಇಲ್ಲವೇ ಬುರ್ಖಾ ಅಥವಾ ಕೇಸರಿ ಉಡುಪು ಧರಿಸಿರುವವರನ್ನು ಅನೇಕರು ನೋಡುವುದೇ ಅನುಮಾನದ ಕಣ್ಣಿನಿಂದ. ಒಂದು ಕಡೆ ಬುರ್ಖಾ, ಗಡ್ಡ, ಟೊಪ್ಪಿ, ನೂಲು, ಕೇಸರಿ ಉಡುಪು.. ಮುಂತಾದ ಧಾರ್ಮಿಕ ಎನ್ನಬಹುದಾದ ಕುರುಹುಗಳು. ಇನ್ನೊಂದು ಕಡೆ, ಇವೇ ಕುರುಹುಗಳು ಮನುಷ್ಯರನ್ನು ಪ್ರತ್ಯೇಕಿಸುವ ಸಂಕೇತ ಗಳೂ ಆಗುತ್ತಿವೆ. ಇದಕ್ಕಿರುವ ಕಾರಣಗಳು ಏನು? ಈ ಕಿರುಚಿತ್ರದಲ್ಲಿರುವ ಮಧ್ಯ ವಯಸ್ಕ ವ್ಯಕ್ತಿಯಲ್ಲೂ ಈ ಮನೋಭಾವ ಅಸ್ಪಷ್ಟವಾಗಿ ಕಾಣಿಸುತ್ತದೆ. ಆತ ಒಂದು ಕರೆಗಾಗಿ ಎಲ್ಲರನ್ನೂ ಸಂಪರ್ಕಿಸುತ್ತಾನೆ. ಆದರೆ ಟೊಪ್ಪಿಧಾರಿ ಅಲ್ಲೇ ಇದ್ದರೂ ಸಂಪರ್ಕಿಸುವುದಿಲ್ಲ. ಆದರೆ ಅಂತಿಮವಾಗಿ ಮಧ್ಯ ವಯಸ್ಕನ  ಮೇಲೆ ವಿಶ್ವಾಸವಿಟ್ಟು ಮೊಬೈಲ್ ಕೊಡುವುದು ಆ ಪತ್ರಿಕಾ ಮಾರಾಟಗಾರನೇ. ಅಂತಃಕರಣ ಒಣಗಿ ಹೋಗಿರುವ ಆಧುನಿಕ ಜಗತ್ತಿನ ಮನುಷ್ಯರ ಕುರಿತಂತೆ ಈ ಕಿರುಚಿತ್ರ ಮತ್ತೆ ಮತ್ತೆ ಎಚ್ಚರಿಸುತ್ತದೆ. ನಿಜವಾಗಿ, ಆ ಮಧ್ಯ ವಯಸ್ಕನಿಗಿಂತಲೂ ನಮ್ಮನ್ನು ಕಾಡಬೇಕಾದ ಪಾತ್ರ ಆ ಟೊಪ್ಪಿಧಾರಿ ಯುವಕನದ್ದು. ಆತ ಮನುಷ್ಯ ಸಂಬಂಧದ ಗಿಲೀಟುತನವನ್ನು ಬಿಚ್ಚಿಡುತ್ತಾನೆ. ಒಂದಿಡೀ ಕರುಣಕತೆಗೆ ಸಾಕ್ಷಿಯಾಗುತ್ತಾನೆ. ವೇಷ-ಭೂಷಣಗಳ ಆಧಾರದಲ್ಲಿ ನಿರ್ಮಿತವಾಗಿರುವ ಮಾನವ ಸಂಬಂಧಗಳ ಪೊಳ್ಳುತನವನ್ನು ಪ್ರಶ್ನಿಸುತ್ತಾನೆ. ಆದ್ದರಿಂದಲೇ, ಆತ ಕೊಡುವ ಮೊಬೈಲ್ ಬರೇ ಕರೆಗಾಗಿರುವ ಒಂದು ಸಂಪರ್ಕ ಸಾಧನವಾಗಿಯಷ್ಟೇ ಕಾಣುವುದಿಲ್ಲ, ಬದಲಾಗಿ ಪ್ರಚಲಿತ ಜಗತ್ತಿಗೆ ಹಿಡಿಯುವ ಭೂತಗನ್ನಡಿಯಾಗಿಯೂ ಗೋಚರಿಸುತ್ತದೆ..
  ತಮಾಷೆ ಏನೆಂದರೆ, ಆಧುನಿಕ ತಂತ್ರಜ್ಞಾನಗಳು ಮನುಷ್ಯರನ್ನು ಹತ್ತಿರವಿದ್ದೂ ದೂರಗೊಳಿಸುತ್ತವೆ ಎಂಬುದನ್ನು ಹೇಳುವುದಕ್ಕೆ ಇವತ್ತು ಬಳಕೆಯಾಗುತ್ತಿರುವ ಮಾಧ್ಯಮವೂ ಆಧುನಿಕ ತಂತ್ರಜ್ಞಾನಗಳೇ ಎಂಬುದು. ಕಿರುಚಿತ್ರಗಳು ಇವತ್ತು ಎಷ್ಟು ಪ್ರಭಾವಶಾಲಿ ಮಾಧ್ಯಮವೆಂದರೆ, ಮೂರು ಗಂಟೆಯ ಸಿನಿಮಾ ಹೇಳುವುದಕ್ಕಿಂತಲೂ ಹೆಚ್ಚಿನದನ್ನು ನಾಲ್ಕೈದು ನಿಮಿಷಗಳ ಕಿರುಚಿತ್ರಗಳು ಅತ್ಯಂತ ಪರಿಣಾಮಕಾರಿಯಾಗಿ ಹೇಳಿಬಿಡುತ್ತವೆ. ಸಿನಿಮಾಗಳಿಗಾದರೋ ಕೋಟ್ಯಂತರ ರೂಪಾಯಿಗಳ ಬಜೆಟ್ ಬೇಕು. ಹೀರೋ ಬೇಕು. ಹೀರೋಯಿನ್ ಬೇಕು. ವಿಲನ್ ಬೇಕು. ಹಾಡು, ಕುಣಿತ, ಫೈಟು, ನಗು, ರೋಮ್ಯಾನ್ಸ್, ದೃಶ್ಯ ವೈಭವ ಮುಂತಾಗಿ ಎಲ್ಲವೂ ಬೇಕು. ಸೆಕೆಂಡ್‍ಗಳಲ್ಲಿ ತೀರಾ ಮನಮುಟ್ಟುವಂತೆ ಹೇಳಬಹುದಾದುದನ್ನು ನಿಮಿಷಗಳ ವರೆಗೆ ಎಳೆದಾಡಬೇಕಾದ ಅನಿವಾರ್ಯತೆಯೊಂದು ಅಲ್ಲಿರುತ್ತದೆ. ಅದೊಂದು ಭಿನ್ನ ಕ್ಷೇತ್ರ. ಅದಕ್ಕೆ ಹೋಲಿಸಿದರೆ ಕಿರುಚಿತ್ರಗಳ ಜಗತ್ತಿನ ಸೊಗಸೇ ಬೇರೆ. ಇಲ್ಲಿ ಪಾತ್ರಗಳ ವೈಭವೀಕರಣ ಇಲ್ಲ. ಎಲಾಸ್ಟಿಕ್ ನೀತಿಗೆ ಸಮಯವೂ ಇಲ್ಲ. ವಿಲನ್, ಹೀರೋ, ಹೀರೋಯಿನ್, ಹಾಡು ಯಾವುದರ ಅಗತ್ಯವೂ ಇಲ್ಲದೇ ನೇರಾತಿನೇರವಾಗಿ ಕೆಲವೇ ನಿಮಿಷಗಳಲ್ಲಿ ವಿಷಯವನ್ನು ಮಂಡಿಸುವ ವಿಧಾನ ವೀಕ್ಷಕರನ್ನು ಬೇಗನೇ ತಟ್ಟುತ್ತದೆ. ಒಂದು ಸಣ್ಣ ಕಿರುಚಿತ್ರ ದೊಡ್ಡ ಬಜೆಟ್ಟಿನ ಸಿನಿಮಾಗಿಂತಲೂ ಪ್ರಭಾವಶಾಲಿಯಾಗಬಹುದಾದ ಎಲ್ಲ ಸಾಧ್ಯತೆಗಳೂ ಇವೆ. 19 ವರ್ಷದ ಗುಲ್‍ಮೆಹರ್ ಕೌರ್ ಎಂಬ ಯುವತಿಯ ಕಿರುಚಿತ್ರವನ್ನು ಈ ನಿಟ್ಟಿನಲ್ಲಿ  ಉಲ್ಲೇಖಿಸಬಹುದು. ಈಕೆ ಪಂಜಾಬ್‍ನ ಜಾಲಂಧರ್ ನವಳು. ಈ ಯುವತಿಯ ಬದುಕಿಗೊಂದು ನೋವಿನ ಹಿನ್ನಲೆಯಿದೆ. 1999ರ ಕಾರ್ಗಿಲ್ ಸಮರದಲ್ಲಿ ಈಕೆಯ ತಂದೆ ಕ್ಯಾಪ್ಟನ್ ಮನ್‍ದೀಪ್ ಸಿಂಗ್ ಸಾವಿಗೀಡಾದರು. ಆ ಘಟನೆ ಗುರ್‍ಮೆಹರ್‍ಳ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಆಕೆ 6 ವರ್ಷದವಳಿದ್ದಾಗ ಓರ್ವ ಬುರ್ಖಾಧಾರಿಗೆ ಇರಿಯಲು ಯತ್ನಿಸಿದಳು. ಯಾಕೆ ಹಾಗೆ ಮಾಡಿದಳೆಂದರೆ, ತನ್ನ ತಂದೆಯನ್ನು ಹತ್ಯೆ ಮಾಡಿದವರು ಮುಸ್ಲಿಮರು ಎಂಬ ಕಾರಣದಿಂದ. ಎಲ್ಲ ಮುಸ್ಲಿಮರನ್ನು ಆಕೆ ದ್ವೇಷಿಸುತ್ತಿದ್ದಳು. ಆದರೆ ತಾಯಿ ತಿದ್ದಿದರು. ಕ್ರಮೇಣ ಗುರ್‍ಮೆಹರ್ ಕೌರ್ ಎಲ್ಲವನ್ನೂ ತೆರೆದ ಮನಸ್ಸಿನಿಂದ ನೋಡತೊಡಗಿದಳು. ತಾನು ದ್ವೇಷಿಸಬೇಕಾದದ್ದು ಪಾಕಿಸ್ತಾನವನ್ನಲ್ಲ, ಯುದ್ಧವನ್ನು ಎಂಬುದಾಗಿ ತಿಳಿದುಕೊಂಡಳು. ಎರಡು ವಿಶ್ವ ಯುದ್ಧಗಳಲ್ಲಿ ವೈರಿಗಳಾಗಿ ಸೆಣಸಾಡಿದ ಜರ್ಮನಿ ಮತ್ತು ಫ್ರಾನ್ಸ್ ಗಳು ಇವತ್ತು ಗೆಳೆಯರಾಗಿ ಬದುಕಬಹುದಾದರೆ ಭಾರತ ಮತ್ತು ಪಾಕಿಸ್ತಾನಗಳಿಗೇಕೆ ಇದು ಸಾಧ್ಯವಿಲ್ಲ ಎಂಬುದು ಆಕೆಯ ಪ್ರಶ್ನೆ. ತನ್ನ ಮೇಲೆ ಎರಡು ಅಣುಬಾಂಬ್‍ಗಳನ್ನು ಸುರಿಸಿದ ಹೊರತಾಗಿಯೂ ಅಮೇರಿಕದೊಂದಿಗೆ ಜಪಾನ್ ಸೌಹಾರ್ದ ಸಂಬಂಧ ಬೆಳೆಸಬಹುದಾದರೆ ನಮಗೇಕೆ ಅಸಾಧ್ಯ ಎಂದು ಪ್ರಶ್ನಿಸುತ್ತಾಳೆ ಆಕೆ. ‘ಸಾಕು ಮಾಡಿ ದ್ವೇಷವನ್ನು, ಸರಕಾರಿ ಭಯೋತ್ಪಾದನೆಯನ್ನು ಮತ್ತು ಗಡಿಯಲ್ಲಿನ ಸಾವನ್ನು..’ ಹೀಗೆ ಆ ಯುವತಿ ಕಿರುಚಿತ್ರದಲ್ಲಿ ಆಕ್ರೋಶಿಸುತ್ತಾಳೆ. ‘#Profileforpeace’ ಎಂಬ ಹೆಸರಿನ ಈ ಪುಟ್ಟ ಕಿರುಚಿತ್ರದ ವಿಶೇಷತೆ ಏನೆಂದರೆ, ಇದರಲ್ಲಿ ಮಾತುಗಳೇ ಇಲ್ಲ. ಎಲ್ಲವೂ ಮೌನ. ಆಕೆ ಇವೆಲ್ಲವನ್ನೂ ಹೇಳುವುದಕ್ಕೆ Placardಗಳನ್ನಷ್ಟೇ ಬಳಸುತ್ತಾಳೆ. ಸುಮಾರು 30ರಷ್ಟು ಪ್ಲಕಾರ್ಡ್‍ಗಳು ಈ ಇಡೀ ವಿಷಯವನ್ನು ಪುಟ್ಟಪುಟ್ಟದಾಗಿ ವಿವರಿಸುತ್ತವೆ. ಕುರ್ಚಿಯಲ್ಲಿ ಕೂತು ಒಂದೊಂದೇ ಪ್ಲಕಾರ್ಡನ್ನು ಎತ್ತಿ ತೋರಿಸಿ, ಪಕ್ಕಕ್ಕಿಟ್ಟು ಇನ್ನೊಂದನ್ನು ಎತ್ತಿಕೊಳ್ಳುವ ಆಕೆ ಕೊನೆಯದಾಗಿ ಎದ್ದು ಹೋಗುವಾಗ ಸ್ಕ್ರೀನ್‍ನಲ್ಲಿ, ‘ನೀವು ಶಾಂತಿಯನ್ನು ಬಯಸುವಿರಾದರೆ ಇದನ್ನು ಶೇರ್ ಮಾಡಿ..’ ಎಂಬೊಂದು ವಾಕ್ಯ ಹರಿದಾಡುತ್ತದೆ. ಖಾಲಿ ಕುರ್ಚಿ ಮತ್ತು 30 ಪ್ಲಕಾರ್ಡ್‍ಗಳ ಭಾರವನ್ನು ಹೊತ್ತುಕೊಂಡ ಮೇಜು ಆ ಯುವತಿಯ ಅನುಪಸ್ಥಿತಿಯಲ್ಲೂ ನಮ್ಮನ್ನು ತೀವ್ರವಾಗಿ ಕಾಡುತ್ತದೆ. ಅಂದಹಾಗೆ, ಶಾಂತಿ ಮತ್ತು ದ್ವೇಷದ ಪಾಠವನ್ನು ಓರ್ವ ಯೋಧನ ಕುಟುಂಬಕ್ಕಿಂತ ಚೆನ್ನಾಗಿ ಯಾರೂ ಮಾಡಲಾರರು. ಯಾಕೆಂದರೆ, ಗಡಿಯಲ್ಲಿ ರಾಜಕಾರಣಿಗಳಿರುವುದಿಲ್ಲ. ಅವರ ಮಕ್ಕಳೂ ಇರುವುದಿಲ್ಲ. ‘ಗಡಿಯಲ್ಲಿ ಅಪ್ರಚೋದಿತ ಗುಂಡು’, ‘ಒಳನುಸುಳುವಿಕೆ’, ‘ಯುದ್ಧ’, ‘ಉಗ್ರ ಕಾರ್ಯಾಚರಣೆ..’ ಎಂಬೆಲ್ಲ ಪದಪುಂಜಗಳಲ್ಲಿ ಸುದ್ದಿಯನ್ನು ಕಟ್ಟಿಕೊಡುವ ಪತ್ರಕರ್ತರೂ ಗಡಿಯಲ್ಲಿ ಕಾದಾಡಿರುವುದಿಲ್ಲ. ಆದ್ದರಿಂದಲೇ, ಗುರ್‍ಮೆಹರ್ ಕೌರ್‍ಳ ಕಿರುಚಿತ್ರ ಹೃದಯವನ್ನು ತಟ್ಟುವುದು. ಫೇಸ್‍ಬುಕ್‍ನಲ್ಲಿ ಈ ಕಿರುಚಿತ್ರವನ್ನು ಮಿಲಿಯಾಂತರ ಮಂದಿ ವೀಕ್ಷಿಸಿದರು. ಕೌರ್‍ಳನ್ನು ಬೆಂಬಲಿಸಿದರು. ಎರಡೂ ದೇಶಗಳ ರಾಜಕಾರಣಿಗಳಿಗಾಗಿ ಜೀವ ತೆರುತ್ತಿರುವ ಮನ್‍ದೀಪ್ ಸಿಂಗ್‍ರಂಥ ಅಪ್ಪಂದಿರಿಗಾಗಿ ಮತ್ತು ಗುರ್‍ಮೆಹರ್ ಕೌರ್‍ಳಂಥ ಮಕ್ಕಳಿಗಾಗಿ ದುಃಖಪಟ್ಟರು.  
Only One Cal  Plz.
       ನಿಜವಾಗಿ, ಮನುಷ್ಯರನ್ನು ದೂರಗೊಳಿಸುತ್ತಿರುವುದು ಆಧುನಿಕ ತಂತ್ರಜ್ಞಾನಗಳಲ್ಲ. ಅವು ಮನುಷ್ಯ ವಿರೋಧಿಗಳೂ ಅಲ್ಲ. ‘Mother asked why she didnt have abortion - answer touches hearts of her critics ..’ ಎಂಬ ಹೃದ್ಯ ಕಿರುಚಿತ್ರವನ್ನು ಸಾಧ್ಯವಾಗಿಸಿದ್ದು ಇವೇ ತಂತ್ರಜ್ಞಾನಗಳು. ನೀವು ಕಿರುಚಿತ್ರಗಳ ಜಗತ್ತಿಗೊಮ್ಮೆ ಪ್ರವೇಶಿಸಿದರೆ ಹೃದಯವನ್ನು ಕಣ್ಣೀರಿನಲ್ಲಿ ಅದ್ದಿ ತೆಗೆಯಬಲ್ಲಷ್ಟು ಪ್ರಖರವಾದ ದೃಶ್ಯಗಳಿವೆ. ಹುಟ್ಟುವಾಗಲೇ ಎರಡೂ ಕಣ್ಣು ಕಾಣದ ಮತ್ತು ಕಣ್ಣಿನ ಭಾಗ ಭಯಪಡುವಷ್ಟು ವಿಕಾರವಾಗಿರುವ ಮಗುವನ್ನು ಅಕ್ಕರೆಯಿಂದ ಪೋಷಿಸುವ ಕ್ರಿಸ್ ಬುಕಾನನ್ ಮತ್ತು ಲೇಸಿ ಬುಕಾನನ್ ಎಂಬ ಹೆತ್ತವರನ್ನು ನೋಡಿದರೆ ನೀವು ಮೂಕರಾಗುವಿರಿ. ಇಂಥ ಅಸಂಖ್ಯ ಕಿರು ಚಿತ್ರಗಳು ಇವತ್ತು ಆಧುನಿಕ ತಂತ್ರಜ್ಞಾನಗಳಿಂದಾಗಿ ವೀಕ್ಷಕರಿಗೆ ಲಭ್ಯವಾಗುತ್ತಿವೆ. ಮಾತ್ರವಲ್ಲ, ನಮ್ಮೊಳಗಿನ ಸರ್ವ ಕಲ್ಮಷಗಳಿಗೂ ಒಂದೇಟು ಕೊಟ್ಟು ನಡುಗಿಸುವ ಸಾಮರ್ಥ್ಯವನ್ನೂ ಅವು ಹೊಂದಿವೆ. ದಿನೇ ದಿನೇ ಯಂತ್ರಕ್ಕೆ ಹತ್ತಿರವಾಗುತ್ತಿರುವ ಮತ್ತು ಹಣವನ್ನು ಬೆಂಬತ್ತುವ ತುರ್ತಿನಲ್ಲಿ ಪಕ್ಕದಲ್ಲಿರುವವರನ್ನೂ ಗುರುತಿಸದಷ್ಟು ಬ್ಯುಝಿಯಾಗಿರುವ ಮನುಷ್ಯ ತಾನೆಲ್ಲಿ ಕಳೆದು ಹೋಗುತ್ತಿದ್ದೇನೆ ಎಂಬ ಬಗ್ಗೆ ಅವಲೋಕನ ನಡೆಸಬೇಕು. ತಂತ್ರಜ್ಞಾನಗಳನ್ನು ದೂರುವುದು ಇದಕ್ಕೆ ಉತ್ತರವಲ್ಲ. ಮನುಷ್ಯರ ನಡುವೆ ನಂಬಿಕೆ ಮತ್ತು ವಿಶ್ವಾಸ ಬಹಳ ಪವಿತ್ರವಾದುದು. ಅದಕ್ಕೆ ಧಕ್ಕೆಯಾಗದಂಥ ವಾತಾವರಣವನ್ನು ಎಲ್ಲರೂ ಸೇರಿ ಬೆಳೆಸಬೇಕು. ಈ ಕಾರಣದಿಂದಲೇ,
  ‘Only One Cal  Plz..' ಮತ್ತು  #Profileforpeace ಕಿರುಚಿತ್ರಗಳು ಮುಖ್ಯವಾಗುತ್ತವೆ.

Wednesday, May 18, 2016

ನೇಣಿಗೆ ಅರ್ಹರಾದವರೆಲ್ಲ ವಿರೋಧ ಪಕ್ಷಗಳಲ್ಲೇ ಏಕಿದ್ದಾರೆ ಬೇಗಂ?

        ಡಾ| ಚಂದ್ರ ಮುಝಫ್ಫರ್
  ತಲ್ಹಾ ಅಹ್ಮದ್  
        ರೋನಕ್ ದೇಸಾಯಿ
  ಇವರೆಲ್ಲ ಬಾಂಗ್ಲಾದೇಶದ ಪ್ರಧಾನಿ ಬೇಗಮ್ ಹಸೀನಾರಂತೆ ಅಪ್ಪಟ ಪ್ರಗತಿಪರರು ಮತ್ತು ಹಸೀನಾರ ಭಾಷೆಯಲ್ಲಿ ಹೇಳುವುದಾದರೆ ‘ಮೂಲಭೂತವಾದಿ' ಮುಸ್ಲಿಮರಲ್ಲ. ಆದರೂ ಇವರೆಲ್ಲ ಬಾಂಗ್ಲಾ ದೇಶದ ಯುದ್ಧಾಪರಾಧಿ ನ್ಯಾಯ ಪ್ರಕ್ರಿಯೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲಿನ ‘ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ’(International Crime Tribunal - ICT)ದ ನ್ಯಾಯ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದ್ದಾರೆ. ಈ ನ್ಯಾಯಾಲಯಕ್ಕೆ ಸಂಬಂಧಿಸಿ ಕತೆ-ಚಿತ್ರಕತೆ, ನಿರ್ದೇಶನ, ನಿರ್ಮಾಣ.. ಎಲ್ಲವನ್ನೂ ಹಸೀನಾರೇ ನಿರ್ವಹಿಸುತ್ತಿರುವರೇನೋ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಹಾಗಂತ, ಇವರೇನೂ ಬಾಂಗ್ಲಾದೇಶದ ಜಮಾಅತೆ ಇಸ್ಲಾಮೀ ಅಥವಾ ವಿರೋಧ ಪಕ್ಷವಾದ ಖಲೀದಾ ಝಿಯಾರ ಬಂಗ್ಲಾದೇಶ್ ನ್ಯಾಶನಲಿಸ್ಟ್ ಪಾರ್ಟಿಯ ಕಾರ್ಯಕರ್ತರಲ್ಲ. ಮಲೇಶ್ಯ ಕೇಂದ್ರಿತ ಇಂಟರ್‍ನ್ಯಾಶನಲ್ ಮೂವ್‍ಮೆಂಟ್ ಫಾರ್ ಎ ಜಸ್ಟ್ ವರ್ಲ್ಡ್ ಎಂಬ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ| ಚಂದ್ರ ಮುಝಫ್ಫರ್ ಅವರು, ‘ನಿಝಾಮಿಯವರ ಗಲ್ಲು ಮತ್ತು ರಾಜಕೀಯದ ಮೇಲಿನ ಹಿಡಿತ' (The Hanging of Nizami and grip on Political Power) ಎಂಬ ಶೀರ್ಷಿಕೆಯಲ್ಲಿ ಕಳೆದ ವಾರ ಲೇಖನ ಬರೆದಿದ್ದಾರೆ. ಮುಸ್ಲಿಮ್ ಕೌನ್ಸಿಲ್ ಆಫ್ ಬ್ರಿಟನ್‍ನ ಸಂಚಾಲಕ ಹಾಗೂ ನ್ಯಾಯವಾದಿ, ಉಪನ್ಯಾಸಕರೂ ಆಗಿರುವ ತಲ್ಹಾ ಅಹ್ಮದ್ ಅವರು, The Politicalisation of Bangladesh's War Criminal Tribunal (ಬಾಂಗ್ಲಾದೇಶದ ಯುದ್ಧಾಪರಾಧಿ ನ್ಯಾಯಾಲಯದ ರಾಜಕೀಕರಣ) ಎಂಬ ಶೀರ್ಷಿಕೆಯಲ್ಲಿ ಮತ್ತು ಹಾರ್ವರ್ಡ್ ಯುನಿವರ್ಸಿಟಿಯ ರೋನಕ್ ದೇಸಾಯಿಯವರು,A Justice Denied as Bangladesh Prosecutes War Crime ಎಂಬ ಹೆಸರಲ್ಲಿ ಲೇಖನಗಳನ್ನು ಬರೆದಿದ್ದಾರೆ. ‘ನ್ಯಾಯದ ಹೊರತು ಶಾಂತಿಯಿಲ್ಲ' (No Peace without Justice ) ಎಂಬ ಹೆಸರಿನ ಇಟಲಿಯ ರಾಜಕೀಯೇತರ ಸಂಸ್ಥೆಯೊಂದು ಬಾಂಗ್ಲಾದೇಶದ ಯುದ್ಧಾಪರಾಧಿ ನ್ಯಾಯಾಲಯ ವನ್ನು ತೀವ್ರವಾಗಿ ಖಂಡಿಸಿದೆ. ‘ಅದರ ತೀರ್ಪುಗಳು ರಾಜಕೀಯ ಪ್ರೇರಿತ ಮತ್ತು ವಿರೋಧ ಪಕ್ಷಗಳನ್ನು ದಮನಿಸುವ ಉದ್ದೇಶವನ್ನಷ್ಟೇ ಹೊಂದಿವೆ..’ ಎಂದು ಅದು ಟೀಕಿಸಿದೆ. ಆಮ್ನೆಸ್ಟಿ ಇಂಟರ್‍ನ್ಯಾಶನಲ್ ಕೂಡ ಬಾಂಗ್ಲಾದೇಶದ ಬೆಳವಣಿಗೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದೆ. ಟರ್ಕಿ ತನ್ನ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿದೆ. ಅಂದಹಾಗೆ, ಯುದ್ಧಾಪರಾಧಗಳ ತನಿಖೆಯ ನೆಪದಲ್ಲಿ ಬಾಂಗ್ಲಾ ದೇಶದಲ್ಲಿ ನಿರ್ದಿಷ್ಟ ಮಂದಿಯನ್ನು ಬೆನ್ನಟ್ಟಿ ಕೊಲ್ಲುವ ಕಾರ್ಯಾಚರಣೆ ನಡೆಯುತ್ತಿದೆಯೇ? ವಿರೋಧ ಪಕ್ಷಗಳನ್ನು ದಮನಿಸುವುದು ಇದರ ಗುರಿಯೇ? ಇಲ್ಲದಿದ್ದರೆ 1971ರಲ್ಲಿ ನಡೆದಿದೆಯೆನ್ನಲಾದ ಯುದ್ಧಾಪರಾಧಗಳ ತನಿಖೆಗೆ 2010ರಲ್ಲಿ ದಿಢೀರಾಗಿ ಟ್ರಿಬ್ಯೂನಲ್ ಒಂದನ್ನು ರಚಿಸುವುದು ಮತ್ತು ವಿರೋಧ ಪಕ್ಷಗಳ ಐವರು ಪ್ರಮುಖ ನಾಯಕರನ್ನು ಗಲ್ಲಿಗೇರಿಸುವುದೆಲ್ಲ ಏನು? ಯುದ್ಧಾಪರಾಧಿಗಳೆಲ್ಲ ವಿರೋಧ ಪಕ್ಷಗಳಾದ ಜಮಾಅತೆ ಇಸ್ಲಾಮೀ ಮತ್ತು ಬಾಂಗ್ಲಾದೇಶ್ ನ್ಯಾಶನಲ್ ಪಾರ್ಟಿ(BNP)ಯಲ್ಲೇ ತುಂಬಿಕೊಂಡಿದ್ದಾರೆಯೇ? ಶೇಖ್ ಹಸೀನಾರ ಅವಾಮಿ ಲೀಗ್ ಪರಿಶುದ್ಧವೇ? ನಿಜಕ್ಕೂ, ಈ ನ್ಯಾಯ ಪ್ರಕ್ರಿಯೆ ಪಾರದರ್ಶಕವಾಗಿದೆಯೇ?
  ಕಳೆದವಾರ ಗಲ್ಲಿಗೇರಿಸಲ್ಪಟ್ಟ ಮುತೀಉರ್ರಹ್ಮಾನ್ ನಿಝಾಮಿ ಯವರು ಯುದ್ಧಾಪರಾಧದ ಆರೋಪದಲ್ಲಿ ಗಲ್ಲಿಗೇರಿಸಲಾದ 5ನೇ ವ್ಯಕ್ತಿ. ಈ ಮೊದಲು ಇದೇ ಆರೋಪದಲ್ಲಿ ಅಲ್ ಅಹ್ಸನ್ ಮುಹಮ್ಮದ್ ಮುಜಾಹಿದ್, ಸಲಾಹುದ್ದೀನ್ ಚೌಧರಿ, ಕಮರು ಝ್ಝಮಾನ್, ಅಬ್ದುಲ್ ಕಾದಿರ್ ಮುಲ್ಲಾರನ್ನು ಗಲ್ಲಿಗೇರಿಸಲಾಗಿತ್ತು. ಇವರಲ್ಲಿ ಸಲಾಹುದ್ದೀನ್ ಚೌಧರಿ(BNP)ಯವರನ್ನು ಬಿಟ್ಟರೆ ಉಳಿದ ನಾಲ್ವರೂ ಜಮಾಅತೆ ಇಸ್ಲಾಮೀ ಎಂಬ ರಾಜಕೀಯ ಪಕ್ಷಕ್ಕೆ ಸೇರಿದವರು. ಜಮಾಅತೆ ಇಸ್ಲಾಮಿಯ ಪ್ರಭಾವಿ ನಾಯಕರಾದ ಗುಲಾಮ್ ಆಝಮ್ ಮತ್ತು ದಿಲಾವರ್ ಹುಸೇನ್ ಸಈದಿಯವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಇಲ್ಲಿ ಒಬ್ಬೊಬ್ಬರದ್ದೂ ಬಹುತೇಕ ಒಂದೇ ಕತೆ. ಬಾಂಗ್ಲಾದೇಶದ ಸಂಸತ್ತಿಗೆ 7 ಬಾರಿ ಆಯ್ಕೆಯಾಗಿದ್ದ ಮತ್ತು ಖಲೀದಾ ಝಿಯಾ ಸರಕಾರದಲ್ಲಿ ಮುಖ್ಯ ಸಲಹಾಕಾರರಾಗಿ ಕಾರ್ಯನಿರ್ವಹಿಸಿದ್ದ ಸಲಾಹುದ್ದೀನ್ ಚೌಧರಿಯವರ ವಿಚಾರಣಾ ಪ್ರಕ್ರಿಯೆಯೇ ಒಂದು ಸೋಜಿಗ. ಪಾಕಿಸ್ತಾನದಿಂದ ಬಾಂಗ್ಲಾದೇಶವು ಸ್ವತಂತ್ರಗೊಳ್ಳುವ ಮುನ್ನಾದಿನ ಮತ್ತು ಮರುದಿನ ನಡೆದ ಹಿಂದೂಗಳ ಮೇಲಿನ ದಾಳಿಯ ಸಹಿತ ಇತರ ಅಪರಾಧ ಕೃತ್ಯಗಳಲ್ಲಿ ಪಾಲುಗೊಂಡ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ತಮಾಷೆ ಏನೆಂದರೆ, ‘ಆ ದಿನಗಳಲ್ಲಿ ಅವರು ಪಶ್ಚಿಮ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾ) ಇರಲೇ ಇಲ್ಲ ಮತ್ತು ಅವರು ತನ್ನೊಂದಿಗೆ ಪಂಜಾಬ್ ಯುನಿವರ್ಸಿಟಿಯಲ್ಲಿದ್ದರು’ ಎಂದು ಬಾಂಗ್ಲಾದ ಹಾಲಿ ಸುಪ್ರೀಮ್ ಕೋರ್ಟ್‍ನ ನ್ಯಾಯಾಧೀಶರೇ ಟ್ರಿಬ್ಯೂನಲ್‍ಗೆ ಪತ್ರ ಬರೆದಿದ್ದರು. ‘ನ್ಯಾಯಾಧೀಶನೆಂಬ ನೆಲೆಯಲ್ಲಿ ತಾಂತ್ರಿಕ ತೊಂದರೆಗಳಲ್ಲದೇ ಹೋಗಿದ್ದರೆ ತಾನು ಟ್ರಿಬ್ಯೂನಲ್‍ನಲ್ಲಿ ಬಂದು ಸಾಕ್ಷ್ಯ ನುಡಿಯುತ್ತಿದ್ದೆ’ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದರು. ಚೌಧರಿಯವರ ವಿರುದ್ಧ 41 ಸಾಕ್ಷಿಗಳನ್ನು ಕೋರ್ಟ್‍ನಲ್ಲಿ ಹಾಜರುಪಡಿಸಲಾಗಿತ್ತು. ಆದರೆ ಚೌಧರಿಯವರ ಪರ ಬರೇ 4 ಮಂದಿ ಸಾಕ್ಷಿಗಳಿಗೆ ಮಾತ್ರ ಅನುಮತಿ ನೀಡಲಾಯಿತು. ಚೌಧರಿಯವರ ವಿರುದ್ಧ 41 ಮಂದಿ ಆರೋಪ ಹೊರಿಸುವಾಗ ಅವರ ಪರವಾಗಿ ಬರೇ 4 ಮಂದಿ ಸಾಕ್ಷ್ಯ ನುಡಿಯುವ ಸನ್ನಿವೇಶವನ್ನೊಮ್ಮೆ ಊಹಿಸಿ. ಆ ವಿಚಾರಣಾ ಪ್ರಕ್ರಿಯೆ ಹೇಗಿದ್ದೀತು? ಅಲ್ಲದೇ ಚೌಧರಿಯವರ ಪರ ಸಾಕ್ಷ್ಯ ನುಡಿಯುವುದಾಗಿ ಪಾಕಿಸ್ತಾನ ಮಾಜಿ ಪ್ರಧಾನಿ ಮತ್ತು ಮಾಜಿ ಅಮೇರಿಕನ್ ರಾಯಭಾರಿಯವರು ಕೇಳಿಕೊಂಡರೂ ಟ್ರಿಬ್ಯೂನಲ್ ಅವಕಾಶ ನೀಡಲಿಲ್ಲ. ಅದೇ ವೇಳೆ ಇಂಟರ್‍ನೆಟ್‍ನ ಮೂಲಕ ಸೋರಿಕೆಯಾದ ತೀರ್ಪಿನ ಪ್ರತಿಯು ಇಡೀ ನ್ಯಾಯ ಪ್ರಕ್ರಿಯೆಯನ್ನೇ ಬೋಗಸ್ ಎಂದು ಬಹಿರಂಗವಾಗಿಯೇ ಸಾಬೀತುಪಡಿಸಿತ್ತು. ಚೌಧರಿಯವರಿಗೆ ಟ್ರಿಬ್ಯೂನಲ್ ಗಲ್ಲು ಶಿಕ್ಷೆ ಘೋಷಿಸುವುದಕ್ಕಿಂತ ಮೊದಲೇ ಆ ತೀರ್ಪಿನ ಪ್ರತಿ ಇಂಟರ್‍ನೆಟ್‍ನಲ್ಲಿ ಸೋರಿಕೆಯಾಗಿತ್ತು. ಮರುದಿನ ನ್ಯಾಯಾಧೀಶರು ಓದಿದ ತೀರ್ಪೂ ನೆಟ್‍ನಲ್ಲಿ ಸೋರಿಕೆಯಾದ ತೀರ್ಪೂ ಸಂಪೂರ್ಣ ತಾಳೆಯಾಗುತ್ತಿತ್ತು. ಹಸೀನಾ ಸರಕಾರದ ಮಂತ್ರಿಯೋರ್ವರು ಬರೆದುಕೊಟ್ಟ ತೀರ್ಪನ್ನು ನ್ಯಾಯಾಧೀಶರು ಓದಿದ್ದಾರೆ ಎಂದೇ ಅದನ್ನು ವ್ಯಾಖ್ಯಾನಿಸಲಾಗಿತ್ತು. ನಿಜವಾಗಿ, ಬಾಂಗ್ಲಾದೇಶದ ಅಪರಾಧ ಟ್ರಿಬ್ಯೂನಲ್‍ನ ವಿಚಾರಣೆಯ ಬಗ್ಗೆ, ಅದು 2010ರಲ್ಲಿ ದಿಢೀರ್ ಆಗಿ ಹುಟ್ಟಿಕೊಂಡ ಬಗ್ಗೆ ಮತ್ತು ವಿರೋಧ ಪಕ್ಷಗಳನ್ನೇ ಗುರಿಯಾಗಿಸಿ ಅದು ನೀಡುತ್ತಿರುವ ಗಲ್ಲು ಶಿಕ್ಷೆಗಳ ಬಗ್ಗೆ ನಾವು ಅನುಮಾನಿಸಬೇಕಾದದ್ದು ಇವು ಮತ್ತು ಇಂತಹ ಅನೇಕಾರು ಕಾರಣಗಳಿಂದಲೇ. ಕಳೆದವಾರ ಗಲ್ಲಿಗೇರಿಸಲಾದ ಮುತೀಉರ್ರಹ್ಮಾನ್ ನಿಝಾಮಿಯರನ್ನೇ ಎತ್ತಿಕೊಳ್ಳಿ. ಅವರು ಜಮಾಅತೆ ಇಸ್ಲಾಮೀ ಎಂಬ ರಾಜಕೀಯ ಪಕ್ಷದ ಪ್ರಭಾವಿ ನಾಯಕರಾಗಿದ್ದುದಷ್ಟೇ ಅಲ್ಲ, 2009ರ ವರೆಗೆ ಖಲೀದಾ ಝಿಯ ಸರಕಾರದಲ್ಲಿ ಕೃಷಿ ಸಚಿವರಾಗಿ ಜನಪ್ರಿಯರಾಗಿದ್ದರು. ಬಳಿಕ ಕೈಗಾರಿಕಾ ಸಚಿವರಾದರು. ಢಾಕಾ ಯುನಿವರ್ಸಿಟಿಯಿಂದ ಪದವಿ ಪಡೆದರು. ಇಸ್ಲಾಮ್‍ಗೆ ಸಂಬಂಧಿಸಿ ಆಳ ಜ್ಞಾನವನ್ನು ಪಡೆದವರಾಗಿಯೂ ಗುರುತಿಸಿಕೊಂಡಿದ್ದರು. ಅಮೇರಿಕದ ಇಸ್ಲಾಮೀ ಚಿಂತಕರ ಸಭೆಯು 2009ರಲ್ಲಿ ನಿಝಾಮಿಯವರನ್ನು ವಿಶ್ವದ ಪ್ರಭಾವಿ 50 ಮುಸ್ಲಿಮರಲ್ಲಿ ಓರ್ವರೆಂದು ಗುರುತಿಸಿತ್ತು. ಅವರು ಎರಡು ಬಾರಿ ಬಾಂಗ್ಲಾದೇಶದ ಸಂಸತ್ತಿಗೆ ಆಯ್ಕೆಯಾಗಿದ್ದರು. ಹಾಗಂತ, ಇವೆಲ್ಲ ಓರ್ವ ವ್ಯಕ್ತಿಯ ಪ್ರಾಮಾಣಿಕತೆಯನ್ನು ಸಾರುವ ಪುರಾವೆಗಳು ಎಂದಲ್ಲ ಅಥವಾ ಅವರ ಮೇಲೆ ಹೊರಿಸಲಾಗುವ ಆರೋಪಗಳನ್ನು ಸುಳ್ಳು ಎಂದು ಸಾರುವುದಕ್ಕೆ ಇರುವ ಸಮರ್ಥನೆಗಳೂ ಅಲ್ಲ. ಆದರೆ ಕಲ್ಪಿತ ಆರೋಪಗಳನ್ನೇ ನಿಜ ಎಂದು ಸಾರಲು ವ್ಯವಸ್ಥೆ ಮತ್ತು ಕೋರ್ಟು ತುದಿಗಾಲಲ್ಲಿ ನಿಲ್ಲುವುದಾದರೆ ಆ ಬೆಳವಣಿಗೆಗೆ ಏನೆನ್ನಬೇಕು? ಬಾಂಗ್ಲಾದೇಶದ ಈಗಿನ ಅಧ್ಯಕ್ಷೆ ಶೇಖ್ ಹಸೀನಾ ಪ್ರಧಾನಿಯಾದದ್ದು ಇದೇ ಮೊದಲಲ್ಲ. 1996-2001ರಲ್ಲೂ ಅವರು ಪ್ರಧಾನಿಯಾಗಿದ್ದರು. 1971ರಲ್ಲಿ ಅವರ ತಂದೆ ಮುಜೀಬುರ್ರಹ್ಮಾನ್ ಪ್ರಧಾನಿಯಾಗಿದ್ದರು. ಒಂದು ವೇಳೆ ಯುದ್ಧಾಪರಾಧಗಳ ಕುರಿತಂತೆ ಟ್ರಿಬ್ಯೂನಲ್ ರಚಿಸಬೇಕಾದ ಅನಿವಾರ್ಯತೆ ಎದುರಾಗಿದ್ದರೆ ಅದು ಮುಜೀಬುರ್ರಹ್ಮಾನ್‍ರ ಅವಧಿಯಲ್ಲಿ. ಆದರೆ ಅವರು ಯುದ್ಧಾಪರಾಧಿಗಳಿಗೆ ಸಾರ್ವತ್ರಿಕ ಕ್ಷಮೆಯನ್ನು ಘೋಷಿಸಿದರು. ಇದಾಗಿ ದೀರ್ಘ 45 ವರ್ಷಗಳ ಬಳಿಕ 2010ರಲ್ಲಿ ಹಸೀನಾರು ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯ (ಟ್ರಿಬ್ಯೂನಲ್)ವನ್ನು ಸ್ಥಾಪಿಸಿದರು. ಪ್ರಮುಖ ವಿರೋಧ ಪಕ್ಷವಾದ ಜಮಾಅತೆ ಇಸ್ಲಾಮಿಯ ಮೇಲೆ 2014ರಲ್ಲಿ ನಿಷೇಧ ಹೇರಿದರು. ವಿರೋಧ ಪಕ್ಷಗಳ ಪ್ರಮುಖ ನಾಯಕರ ಮೇಲೆಲ್ಲ ವಿವಿಧ ಆರೋಪಗಳನ್ನು ಹೊರಿಸಿ ವಿಚಾರಣೆ ಆರಂಭಿಸಿದರು. ನಿಝಾಮಿಯವರ ವಿಚಾರಣಾ ಪ್ರಕ್ರಿಯೆ ಎಷ್ಟು ಹಾಸ್ಯಾಸ್ಪದವಾಗಿತ್ತೆಂದರೆ, ಅವರ ವಿರುದ್ಧ ಸಾಕ್ಷ್ಯ ನುಡಿಯುವುದಕ್ಕೆ 22 ಮಂದಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರ ಪರ ಕೇವಲ 4 ಮಂದಿಗೆ ಮಾತ್ರ ಸಾಕ್ಷ್ಯ ನುಡಿಯಲು ಅನುಮತಿಯನ್ನು ನೀಡಲಾಗಿತ್ತು. ಅದರಲ್ಲೂ ನಿಝಾಮಿಯವರ ವಿರುದ್ಧ ಸಾಕ್ಷ್ಯ ನುಡಿದವರನ್ನು ಪ್ರಶ್ನೆಗೊಳಪಡಿಸಲು (ಕ್ರಾಸ್ ಕ್ವಶ್ಚನ್) ವಕೀಲರಿಗೆ ನ್ಯಾಯಾಲಯ ಅವಕಾಶವನ್ನೇ ನೀಡಲಿಲ್ಲ. ನಿಜವಾಗಿ, ಯಾವುದೇ ಒಂದು ನ್ಯಾಯ ಪ್ರಕ್ರಿಯೆಯ ಅತ್ಯಂತ ಮಹತ್ವದ ಘಟ್ಟ ಸಾಕ್ಷಿಗಳನ್ನು ಪ್ರತಿಪ್ರಶ್ನೆಗೆ ಒಳಪಡಿಸುವುದು. ಅವರು ನುಡಿದ ಸಾಕ್ಷ್ಯ ನಿಜವೋ ಸುಳ್ಳೋ ಎಂಬುದನ್ನು ಖಚಿತಪಡಿಸುವ ನಿರ್ಣಾಯಕ ಸಂದರ್ಭವದು. ಆದರೆ ಬಾಂಗ್ಲಾ ದೇಶದ ಟ್ರಿಬ್ಯೂನಲ್ ನಿಝಾಮಿಯವರಿಗೆ ಈ ಅವಕಾಶವನ್ನೇ ಒದಗಿಸಲಿಲ್ಲ. ಹೀಗಿರುತ್ತಾ, 22 ಸಾಕ್ಷಿದಾರರ ಸಾಕ್ಷ್ಯದ ಎದುರು 4 ಮಂದಿ ಸಾಕ್ಷಿಗಳ ಸಾಕ್ಷ್ಯ ಪರಿಣಾಮಕಾರಿಯಾಗುವ ಯಾವ ಸಾಧ್ಯತೆಯೂ ಇರಲಿಲ್ಲ. ಅದರ ಜೊತೆಗೇ, ವಿಚಾರಣಾ ಪ್ರಕ್ರಿಯೆಗೆ ಸಿದ್ಧವಾಗುವುದಕ್ಕಾಗಿ ಪ್ರಾಸಿಕ್ಯೂಶನ್‍ಗೆ ನ್ಯಾಯಾಲಯವು 22 ತಿಂಗಳ ದೀರ್ಘ ಅವಧಿಯನ್ನು ನೀಡಿದ್ದರೆ ನಿಝಾಮಿಯವರಿಗೆ ಕೇವಲ 3 ವಾರಗಳನ್ನಷ್ಟೇ ನೀಡಲಾಗಿತ್ತು. ಅಷ್ಟಕ್ಕೂ,
  ಅಂತಾರಾಷ್ಟ್ರೀಯ ಅಪರಾಧ ಟ್ರಿಬ್ಯೂನಲ್ (ICT) ಎಂಬುದು ಅಂತಾರಾಷ್ಟ್ರೀಯ ನ್ಯಾವೇತ್ತರನ್ನು ಒಳಗೊಂಡ ಸರ್ವಮಾನ್ಯ ವಿಚಾರಣಾ ಸಮಿತಿಯಲ್ಲ. ಅಂತಾರಾಷ್ಟ್ರೀಯ ಎಂಬ ಹೆಸರನ್ನು ಅದು ತಗುಲಿಸಿಕೊಂಡಿದ್ದರೂ ಅಂತಾರಾಷ್ಟ್ರೀಯಕ್ಕೂ ಅಂತಾರಾಷ್ಟ್ರೀಯ ಅಪರಾಧ ನಿಯಮಗಳಿಗೂ ಯಾವ ಸಂಬಂಧವೂ ಇಲ್ಲದಷ್ಟು ಈ ಟ್ರಿಬ್ಯೂನಲ್ ಏಕಪಕ್ಷೀಯವಾಗಿದೆ ಮತ್ತು ಸ್ಥಳೀಯರಿಂದ ತುಂಬಿಕೊಂಡಿದೆ . ಆದ್ದರಿಂದಲೇ ಅಂತಾರಾಷ್ಟ್ರೀಯ ಸಮುದಾಯವು ಈ ಟ್ರಿಬ್ಯೂನಲ್‍ನ ಗಲ್ಲು ಪ್ರೇಮವನ್ನು ಆಗಿಂದಾಗ್ಗೆ ಪ್ರಶ್ನೆಗೊಳಪಡಿಸುತ್ತಲೇ ಬಂದಿದೆ. ಬಹುಶಃ, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದಲ್ಲಿ ನಡೆಯುತ್ತಿರುವ ಪ್ರಗತಿಪರ ಚಿಂತಕರು ಮತ್ತು ಬ್ಲಾಗರ್‍ಗಳ ಹತ್ಯೆಗೂ ಅಲ್ಲಿನ ವ್ಯವಸ್ಥೆಗೂ ಸಂಬಂಧ ಇರಬಹುದೇ ಎಂಬ ಅನುಮಾನಗಳೂ ಮೂಡುತ್ತಿವೆ. ಹಸೀನಾ ಪ್ರಗತಿಪರ ಗುಂಪಿನೊಂದಿಗೆ ಗುರುತಿಸಿಕೊಂಡವರು. ಜೊತೆಗೇ ಜಮಾಅತೆ ಇಸ್ಲಾಮೀ ಮತ್ತು ಬಿಎನ್‍ಪಿ ಪಕ್ಷಗಳನ್ನು ಪ್ರಗತಿ ವಿರೋಧಿ ಮೂಲಭೂತವಾದಿಗಳಾಗಿ ಬಿಂಬಿಸುತ್ತಲೂ ಇದ್ದಾರೆ. ಇಂಥ ಸ್ಥಿತಿಯಲ್ಲಿ, ಓರ್ವ ಪ್ರಗತಿಪರನ ಹತ್ಯೆ ಹಸೀನಾರ ಪಾಲಿಗೆ ಆನೆಬಲವನ್ನು ತುಂಬಬಲ್ಲುದು. ಟ್ರಿಬ್ಯೂನಲ್ ನೀಡುವ ಗಲ್ಲು ತೀರ್ಪನ್ನು ಸಮಾಜ ಸ್ವಾಗತಿಸುವುದಕ್ಕೆ ಇಂಥ ಹತ್ಯೆಗಳು ದೊಡ್ಡದೊಂದು ಪಾತ್ರವನ್ನು ನಿರ್ವಹಿಸಬಹುದು. ನಿಜವಾಗಿ, ನಿಝಾಮಿಯವರ ಹತ್ಯೆ ಸಾರ್ವತ್ರಿಕ ಚರ್ಚೆಗೆ ಒಳಪಡಬೇಕಾದದ್ದು ಅವರು ಜಮಾಅತೆ ಇಸ್ಲಾಮಿಯವರೋ ಅಥವಾ ಮಾಜಿ ಸಚಿವರೋ ಎಂಬ ಕಾರಣಕ್ಕಾಗಿ ಅಲ್ಲ. ಅವರು ನಿಜಕ್ಕೂ ಆ ಶಿಕ್ಷೆಗೆ ಅರ್ಹರೋ ಅಥವಾ ಅವರನ್ನು ರಾಜಕೀಯ ಕಾರಣಗಳಿಗಾಗಿ ಶಿಕ್ಷೆಗೆ ಅರ್ಹಗೊಳಿಸಲಾಯಿತೋ ಎಂಬುದಕ್ಕಾಗಿ. ಹಸೀನಾರ ಅಧಿಕಾರ ದಾಹ ಅಥವಾ ರಾಜಕೀಯ ಪ್ರತೀಕಾರವು ಈ ಗಲ್ಲುಗಳ ಹಿಂದೆ ಕೆಲಸ ಮಾಡಿದೆಯೇ? ಟ್ರಿಬ್ಯೂನಲ್ ಆ ಉದ್ದೇಶಕ್ಕಾಗಿಯೇ ಹುಟ್ಟುಹಾಕಲಾದ ನಕಲಿ ನ್ಯಾಯಾಲಯವೇ? ಈ ಹಿಂದೆ ಈ ಟ್ರಿಬ್ಯೂನಲ್‍ನ ನ್ಯಾಯಾಧೀಶರು ಮತ್ತು ಯುದ್ಧಾಪರಾಧ ವಿಚಾರಣೆಯನ್ನು ಬೆಂಬಲಿಸುವ ಕಾರ್ಯಕರ್ತರ ನಡುವೆ ನಡೆದ ಮಾತುಕತೆಗಳ ವಿವರಗಳು ಸೋರಿಕೆಯಾಗಿದ್ದು ಮತ್ತು ಇಡೀ ವಿಚಾರಣಾ ಪ್ರಕ್ರಿಯೆಯೇ ಒಂದು ನಾಟಕ ಎಂಬುದಾಗಿ ಬಹಿರಂಗವಾದದ್ದನ್ನು ಮುಖಾಮುಖಿಯಾಗಿಟ್ಟು ನೋಡಿ. ಏನನಿಸುತ್ತದೆ? ಅಷ್ಟಕ್ಕೂ,
  ಹಸೀನಾರ ‘ಗಲ್ಲು' ರಾಜಕೀಯವನ್ನು ಪ್ರಧಾನಿ ನರೇಂದ್ರ ಮೋದಿ ಸರಕಾರವು ಬೆಂಬಲಿಸಿದ ಎರಡು ದಿನಗಳ ಬಳಿಕ ಸಾಧ್ವಿ ಪ್ರಜ್ಞಾಸಿಂಗ್ ಮತ್ತವರ ತಂಡವು ಆರೋಪಮುಕ್ತವಾಗಿರುವುದು ಕಾಕತಾಳೀಯವೋ..?


Wednesday, May 11, 2016

ಕನ್ನಡವನ್ನು ಮಿಸ್ ಮಾಡಿಕೊಳ್ಳುವ ಮುಸ್ಲಿಂ ಮಕ್ಕಳ ಸುತ್ತ...

         ಮುಸ್ಲಿಮ್ ಸಮುದಾಯದ ಮಕ್ಕಳ ಕನ್ನಡ ಹೇಗಿದೆ? ಕನ್ನಡದಲ್ಲಿ ಅವರೆಷ್ಟು ಪ್ರಾವೀಣ್ಯತೆಯನ್ನು ಪಡೆದಿದ್ದಾರೆ? ಅವರಲ್ಲಿ ಕನ್ನಡದ ಬಗ್ಗೆ ಆಸಕ್ತಿ, ಆಕರ್ಷಣೆ ಎಷ್ಟರ ಮಟ್ಟಿಗಿದೆ? ಅವರಲ್ಲಿ ಕನ್ನಡವನ್ನು ಸಲೀಸಾಗಿ ಮಾತಾಡುವ, ಓದುವ ಮತ್ತು ಅರ್ಥೈಸುವ ಸಾಮರ್ಥ್ಯದಲ್ಲಿ ಹೆಚ್ಚಳ ಆಗುತ್ತಿದೆಯೇ ಅಥವಾ ಕುಸಿತವೇ? ಮುಸ್ಲಿಮ್ ಸಮುದಾಯದ ಆಧುನಿಕ ತಲೆಮಾರಿಗೂ ಕನ್ನಡಕ್ಕೂ ನಡುವೆ ಇರುವ ಸಂಬಂಧ ಯಾವ ಬಗೆಯದು? ಬಲಿಷ್ಠವೇ, ಸಮಾಧಾನಕರವೇ ಅಥವಾ ಆತಂಕಕಾರಕವೇ?
  ಕಳೆದವಾರ ಬೇಸಿಗೆ ಶಿಬಿರವೊಂದರಲ್ಲಿ ಅತಿಥಿಯಾಗಿ ಭಾಗವಹಿಸಿದ ಬಳಿಕ ನನ್ನನ್ನು ಬೆಂಬಿಡದೇ ಕಾಡುತ್ತಿರುವ ಪ್ರಶ್ನೆ ಇದು. ಕನ್ನಡದಲ್ಲಿ ಮಾತಾಡಲು ಪ್ರಾರಂಭಿಸಿದ ನನ್ನನ್ನು ಮಕ್ಕಳು ಭಾಷೆ ಜೀರ್ಣವಾಗಲ್ಲ ಅಂದರು. ಒಂದೋ ತಾಯ್ನುಡಿ (ಬ್ಯಾರಿ) ಇಲ್ಲವೇ ಇಂಗ್ಲಿಷ್‍ನಲ್ಲಿ ಮಾತಾಡಿ ಎಂದು ವಿನಂತಿಸಿದರು. ಅಷ್ಟಕ್ಕೂ, ಈ ಬೆಳವಣಿಗೆ ಅಪಾಯಕಾರಿಯೇ? ಕರ್ನಾಟಕದಲ್ಲಿರುವ ಪ್ರತಿಯೊಬ್ಬರಿಗೂ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತಾಡಲು ಬರಲೇಬೇಕೇ? ಬರದೇ ಇರುವುದು ಅಪರಾಧವೇ? ಸಂವಹನ ಮಾಧ್ಯಮವಾಗಿರುವ ಭಾಷೆಯೊಂದಕ್ಕೆ ಗಡಿಯ ಚೌಕಟ್ಟೊಂದನ್ನು ನಿರ್ಮಿಸಿ, ಭಾವನೆಗಳನ್ನು ತುಂಬಿ, ಆರಾಧನಾ ಭಾವದಿಂದ ಕಾಣಲಾಗುತ್ತಿದೆಯೇ? ಕನ್ನಡ ಭಾಷೆಯನ್ನು ಈ ಚೌಕಟ್ಟಿನಿಂದ ಹೊರತಂದು ಇಂಗ್ಲಿಷ್‍ನಂತೆ ಸಹಜವಾಗಿ ಬದುಕಲು ಬಿಡಬೇಕೇ? ಹಾಗಂತ, ಕರ್ನಾಟಕದಲ್ಲಿ ಕನ್ನಡ ಎಷ್ಟು ಮಕ್ಕಳ ತಾಯ್ನುಡಿ? 6 ಕೋಟಿ ಕನ್ನಡಿಗರಿದ್ದಾರೆಂದು ನಾವು ಲೆಕ್ಕ ಕೊಡುತ್ತಿದ್ದರೂ ಈ 6 ಕೋಟಿಯಲ್ಲಿ ಕನ್ನಡ ತಾಯ್ನುಡಿಯಾಗಿರುವವರು ಎಷ್ಟು ಮಂದಿ? ಕಲಿಕೆ ತಾಯ್ನುಡಿಯಲ್ಲಿರಲಿ ಎಂದು ವಾದಿಸುವಾಗಲೂ ಕನ್ನಡ ಎಷ್ಟು ಮಕ್ಕಳ ತಾಯ್ನುಡಿ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಕರಾವಳಿ ಕರ್ನಾಟಕದ ಮುಸ್ಲಿಮರ ತಾಯ್ನುಡಿ ಬ್ಯಾರಿ, ಉರ್ದು. ಹಿಂದೂಗಳ ತಾಯ್ನುಡಿ ತುಳು ಮತ್ತು ಕೊಂಕಣಿ. ರಾಜ್ಯದ ಇತರ ಪ್ರದೇಶಗಳಿಗೆ ಸಂಬಂಧಿಸಿ ಹೇಳುವಾಗಲೂ ತಾಯ್ನುಡಿಯಲ್ಲಿ ಈ ಬಗೆಯ ವ್ಯತ್ಯಾಸಗಳಿವೆ. ಲಂಬಾಣಿಯಂಥ ತಾಯ್ನುಡಿ ಭಾಷೆಗಳಿವೆ. ಹೀಗಿರುವಾಗ ತಾಯ್ನುಡಿಯಲ್ಲಿ ಶಿಕ್ಷಣ ಎಂಬ ವಾದವೇ ಚರ್ಚಾರ್ಹವಾಗುತ್ತದೆ. ಮನೆಯಲ್ಲಿ ಬ್ಯಾರಿ ಭಾಷೆ ಮಾತಾಡುತ್ತಾ ಬೆಳೆದ ಮಗುವಿಗೆ ಕನ್ನಡವೂ ಇಂಗ್ಲಿಷೂ ಎರಡೂ ಅನ್ಯ ಭಾಷೆಯೇ. ‘ಎರಡು ಬಾಳೆ ಹಣ್ಣಿಗೆ ಇನ್ನೆರಡು ಸೇರಿಸಿದರೆ ಎಷ್ಟು' ಎಂದು ಬ್ಯಾರಿ ಭಾಷೆಯನ್ನಾಡುವ LKGಯ ಮಗುವಿನಲ್ಲಿ ಕೇಳಿದರೂ ಅಥವಾ ‘ಎರಡು ಕ್ರಾಸ್ ಬೆರ್ರಿಗೆ ಇನ್ನೆರಡು ಸೇರಿಸಿದರೆ ಎಷ್ಟು' ಎಂದು ಕೇಳಿದರೂ ಅದರ ಮುಖಭಾವದಲ್ಲಿ ವ್ಯತ್ಯಾಸಗಳೇನೂ ಆಗಲ್ಲ. ಯಾಕೆಂದರೆ, ಅದರ ಪಾಲಿಗೆ ಬಾಳೆ ಹಣ್ಣೂ ಅಪರಿಚಿತ, ಕ್ರಾಸ್ ಬೆರ್ರಿಯೂ ಅಪರಿಚಿತ. ಆದ್ದರಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಯಾವ ಮಕ್ಕಳನ್ನೂ ಸಾರಾಸಗಟಾಗಿ ಅವು ತಮಗೆ ಗೊತ್ತಿಲ್ಲದ ನುಡಿಯಲ್ಲಿ ಕಲಿಯುತ್ತಿವೆ ಎಂದು ಷರಾ ಬರೆಯುವುದು ತಪ್ಪಾಗುತ್ತದೆ. ಕನ್ನಡ ತಾಯ್ನುಡಿಯಲ್ಲದ ಮಗುವಿನ ಪಾಲಿಗೆ ಕನ್ನಡವೂ ಇಂಗ್ಲಿಷ್‍ನಂತೆಯೇ ಗೊತ್ತಿಲ್ಲದ ಭಾಷೆಯೇ. ಅನೇಕ ಬಾರಿ ಕನ್ನಡ ಪರ ಹೋರಾಟಗಳು ಜನರನ್ನು ತಟ್ಟದೇ ಇರುವುದು ಈ ವಾಸ್ತವವನ್ನು ನಿರ್ಲಕ್ಷಿಸಿರುವುದರಿಂದಲೇ. ಕೇರಳದಲ್ಲಿ ಮಲಯಾಳಂ ಬಹುತೇಕ ಎಲ್ಲ ಕೇರಳಿಗರ ತಾಯ್ನುಡಿ. ಭಾಷೆಯ ಉಚ್ಛಾರದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ತುಸು ವ್ಯತ್ಯಾಸಗಳಿದ್ದರೂ ಎಲ್ಲರೂ ಮಾತಾಡುವ ಭಾಷೆ ಮಲಯಾಳಂ ಒಂದೇ. ಈ ರಾಜ್ಯಕ್ಕೆ ಸಂಬಂಧಿಸಿ ಯುನೆಸ್ಕೋ ವ್ಯಕ್ತಪಡಿಸಿರುವ ಆತಂಕವನ್ನು ಪರಿಗಣಿಸಬಹುದು. ‘ಗೊತ್ತಿಲ್ಲದ ಭಾಷೆಯನ್ನು ಮಗುವಿಗೆ ಕಲಿಸುವುದನ್ನು ಈಜು ಬರದ ಮಗುವನ್ನು ನೀರಿಗೆ ಹಾಕಿದಂತೆ’ ಎಂದು ಅದು ಹೇಳಿರುವುದನ್ನು ಸಮರ್ಥಿಸಿ ವಾದಿಸಬಹುದು. ಅಂದಹಾಗೆ, ಶಿಶು ಪ್ರಾಯದಿಂದ ತೊಡಗಿ LKGಗೆ ಸೇರ್ಪಡೆಗೊಳ್ಳುವವರೆಗೆ ಒಂದು ಮಗುವಿನ ಮೇಲೆ ತಾಯ್ನುಡಿಯೇ ಪ್ರಾಬಲ್ಯ ಸ್ಥಾಪಿಸಿರುತ್ತದೆ ಎಂಬುದು ನಿಸ್ಸಂಶಯ. ತಾಯಿ ಮತ್ತು ತಂದೆಯ ನುಡಿ ಇಂಗ್ಲಿಷ್ ಆಗಿದ್ದರೆ ಮಗು ಬಾಳೆ ಹಣ್ಣು, ತೆಂಗಿನ ಕಾಯಿ, ಮಾವಿನ ಕಾಯಿ, ಮೆಟ್ಟು, ನೀರುಳ್ಳಿ, ಕಣ್ಣೀರು, ಅಳು, ಸಂತೋಷ.. ಎಲ್ಲಕ್ಕೂ ಇಂಗ್ಲಿಷ್ ಪದಗಳನ್ನೇ ಬಳಸುತ್ತದೆ. ಅದರ ಪಾಲಿಗೆ ತಾಯ್ನುಡಿ ಇಂಗ್ಲಿಷ್. ಅಂಥ ಹೆತ್ತವರಿಗೆ ಇಂಗ್ಲಿಷ್ ಮಾಧ್ಯಮ ಮೊದಲ ಆದ್ಯತೆಯಾಗುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಇನ್ನು, ಬ್ಯಾರಿ, ತುಳು, ಕೊಂಕಣಿ, ಲಂಬಾಣಿ ಸಹಿತ ಲಿಪಿ ಇಲ್ಲದ ಭಾಷೆಯನ್ನಾಡುವ ಮಗುವಿಗೂ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಎಂಬೆರಡು ಆಯ್ಕೆಗಳನ್ನು ಮುಕ್ತವಾಗಿಯೇ ಇಡಬೇಕಾಗುತ್ತದೆ. ಅವೆರಡೂ ಮಗುವಿನ ಪಾಲಿಗೆ ಗೊತ್ತಿಲ್ಲದ ಭಾಷೆಗಳೇ. ಇಸ್ರೇಲ್‍ನಲ್ಲಿ ಹಿಬ್ರೂ ಭಾಷೆಯಲ್ಲಿ ಕಲಿಸಲಾಗುತ್ತದೆ. ಈ ಭಾಷೆಯಲ್ಲಿ ಕಲಿತವರೇ ಮುಂದೆ ಆ ದೇಶದ ಮಹಾನ್ ವಿಜ್ಞಾನಿಗಳು, ಸಂಶೋಧಕರು, ಸಾಧಕರೂ ಆಗಿದ್ದಾರೆ,  70ರಷ್ಟು ನೋಬೆಲ್ ಪ್ರಶಸ್ತಿಗಳು ಆ ದೇಶಕ್ಕೆ ಲಭ್ಯವಾಗಿವೆ ಎಂದು ಹೇಳಲಾಗುತ್ತದೆ. ತಾಯ್ನುಡಿಯಲ್ಲಿ ಮೊದಲ ಹಂತದ ಕಲಿಕೆಯು ಮಗುವಿನ ಮಾನಸಿಕ ಬೆಳವಣಿಗೆಗೂ ಅದರ ಆಲೋಚನಾ ಶಕ್ತಿಯನ್ನು ಹಿಗ್ಗಿಸುವುದಕ್ಕೂ ಸಹಕಾರಿಯಾಗುತ್ತದೆಂದು ವಿಶ್ವಸಂಸ್ಥೆಯೂ ಹೇಳಿದೆ. ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲೆಲ್ಲಾ ಮಗುವಿನ ಮೊದಲ ಹಂತದ ಶಿಕ್ಷಣ ತಾಯ್ನುಡಿ ಯಲ್ಲೇ  ನಡೆಯುತ್ತಿದೆ. ಬ್ರಿಟಿಷರಿಂದ ಆಳ್ವಿಕೆಗೊಳಪಟ್ಟ ಭಾರತ ಮತ್ತು ಆಫ್ರಿಕಾ ಖಂಡವನ್ನು ಬಿಟ್ಟರೆ ಉಳಿದಂತೆ ಇಂಗ್ಲಿಷ್ ಮಾಧ್ಯಮವನ್ನು ಆರಾಧನಾ ಭಾವದಿಂದ ಕಾಣುವ ರಾಷ್ಟ್ರಗಳು ನಗಣ್ಯ ಅನ್ನುವಷ್ಟು ಕಡಿಮೆ. ತಾಯ್ನುಡಿಯಲ್ಲಿ ಕಲಿತ ಮಕ್ಕಳು ಗಣಿತದಲ್ಲಿ ಮುಂದಿರುತ್ತಾರೆ ಎಂದು ಆಂಧ್ರಪ್ರದೇಶ ಮತ್ತು ತೆಲಂಗಾಣದ 233 ಶಾಲೆಗಳ 900ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಿದ ಯುನಿಸೆಫ್‍ನ ಸಲಹಾಕಾರರಾಗಿರುವ ಶ್ರೀಕುಮಾರ್ ನಾಯರ್ ಅವರು ತಮ್ಮ Does medium of instruction affect learning outcomes? ಎಂಬ ಸಂಶೋಧನಾ ವರದಿಯಲ್ಲಿ ವಾದಿಸಿದ್ದಾರೆ. ಅಲ್ಲದೇ, ಎಳವೆಯಲ್ಲಿ ಮಗುವಿನ ಕೈ ಹಿಡಿದು ನಡೆಯಲು ಕಲಿಸುವ ರೀತಿಯನ್ನು ಕೆಲವರು ತಾಯ್ನುಡಿ ಕಲಿಕೆಗೆ ಆಧಾರವಾಗಿ ಮುಂದಿಡುತ್ತಾರೆ. ಮಕ್ಕಳು ನಡೆಯುವುದನ್ನು ಕಲಿಯುವುದಕ್ಕೆ ಮೊದಲು ಕೆಲವು ತಿಂಗಳು ಹೆತ್ತವರು ಕೈ ಹಿಡಿದು ನಡೆಸಬೇಕಾಗುತ್ತದೆ. ನಂತರ ಮಗು ತಾನೇ ನಡೆಯುತ್ತದೆ. ಹೀಗೆಯೇ ಕಲಿಕೆಯ ವಿಷಯಗಳನ್ನು ಗ್ರಹಿಸಲು ಮಗುವಿಗೆ ಆರಂಭದಲ್ಲಿ ತಾಯ್ನುಡಿಯ ಅಗತ್ಯವಿರುತ್ತದೆ. ತಾಯ್ನುಡಿಯು ಮೊದಲ ಹಂತದ ಕಲಿಕೆಯಲ್ಲಿ ಮಗುವನ್ನು ಕೈ ಹಿಡಿದು ನಡೆಸುತ್ತದೆ. ಬಳಿಕ ಈ ಕಲಿಕೆಯ ಆಧಾರದಲ್ಲಿ ಮಗು ಇತರ ಭಾಷೆಯನ್ನು ಮತ್ತು ಅದರ ಸೌಂದರ್ಯವನ್ನು ಅನುಭವಿಸಲು ಶಕ್ತವಾಗುತ್ತದೆ. ಇನ್ಫೋಸಿಸ್‍ನ ನಾರಾಯಣ ಮೂರ್ತಿ, ವಿಜ್ಞಾನಿಗಳಾದ ಯು.ಆರ್. ರಾವ್, ಸಿ.ಎನ್.ಆರ್. ರಾವ್ ಮುಂತಾದವರೆಲ್ಲ ತಾಯ್ನುಡಿಯಲ್ಲೇ ಕಲಿತು ಸಾಧನೆ ಮಾಡಿರುವುದಾಗಿ ಸಮರ್ಥಿಸಲಾಗುತ್ತದೆ..
  ಇರಬಹುದು. ಆದರೆ, ಈ ವಾದಗಳ ಸಮಸ್ಯೆ ಏನೆಂದರೆ, ಕನ್ನಡವು ಇಲ್ಲಿನ 6 ಕೋಟಿ ಕನ್ನಡಿಗರ ತಾಯ್ನುಡಿ ಎಂದು ಸಾರ್ವತ್ರೀಕರಿಸುವುದು ಅಥವಾ ಆ ಧಾಟಿಯಲ್ಲಿ ವಾದಿಸುವುದು. ನಿಜವಾಗಿ, ಈ ತಪ್ಪನ್ನು ಒಪ್ಪಿಕೊಂಡೇ ಮತ್ತು ತಿದ್ದಿಕೊಳ್ಳುವ ವಿಶಾಲ ಮನಸ್ಸಿನಿಂದಲೇ ಈ ಚರ್ಚೆಯನ್ನು ಮುಂದುವರಿಸಬೇಕಾಗಿದೆ. ಹಾಗಂತ,
  ನಮ್ಮ ತಾಯ್ನುಡಿ ಬ್ಯಾರಿ, ಲಂಬಾಣಿ, ಉರ್ದು ಅಥವಾ ತುಳು ಭಾಷೆ.. ಎಂಬ ಮಾತ್ರಕ್ಕೇ ಕನ್ನಡವನ್ನು ನಿರ್ಲಕ್ಷಿಸಬೇಕಾಗಿಲ್ಲ. ಕನ್ನಡವೆಂಬುದು ಈ ಮಣ್ಣಿಗೆ ಇಂಗ್ಲಿಷ್‍ನಂತೆ ಅನ್ಯಭಾಷೆಯಲ್ಲ. ಸಂವಹನ ಮಾಧ್ಯಮವಾಗಿ ಇಂಗ್ಲಿಷ್ ಜಾಗತಿಕ ಮನ್ನಣೆ ಪಡೆದಿರಬಹುದು. ಆದರೆ ಅದಕ್ಕೆ ಸ್ಥಳೀಯತೆ ಇಲ್ಲ. ಆದ್ದರಿಂದಲೇ ಬೇಂದ್ರೆಯವರ ಪ್ರೇಮ ಪದ್ಯಗಳನ್ನು ಅದೇ ಭಾವ ಮತ್ತು ತಾದಾತ್ಮ್ಯದಲ್ಲಿ ಇಂಗ್ಲಿಷ್‍ಗೆ ಅನುವಾದಿಸಲು ಸಾಧ್ಯವಾಗದಿರುವುದು. ಇದು ಬೇಂದ್ರೆಯವರ ಸಾಹಿತ್ಯಕ್ಕೆ ಮಾತ್ರ ಸೀಮಿತವಲ್ಲ. ಕನ್ನಡಕ್ಕೆ ಮತ್ತು ಅದರ ಸಾಹಿತ್ಯಿಕ ಸೌಂದರ್ಯಕ್ಕೆ ಅದರದೇ ಆದ ಪ್ರತ್ಯೇಕತೆಯಿದೆ. ಕನ್ನಡದಲ್ಲಿ ಲಲಿತ ಪ್ರಬಂಧ ಎಂಬ ಸಾಹಿತ್ಯಿಕ ಪ್ರಕಾರವಿದೆ. ಅದು ಅತ್ತ ಹಾಸ್ಯ ಬರಹವೂ ಅಲ್ಲ, ಇತ್ತ ನಗೆಬುಗ್ಗೆಯೂ ಅಲ್ಲ. ಅದು ಹಾಸ್ಯ, ಕೌತುಕ, ಚರ್ಚೆ, ಕಚಗುಳಿಗಳ ಮಿಶ್ರಣ. ಆದರೆ ಈ ಪ್ರಕಾರವನ್ನು ಅಷ್ಟೇ ಸೊಗಸಾಗಿ ಕಟ್ಟಿ ಕೊಡುವ ಇಂಗ್ಲಿಷ್ ಪದವೇ ಇಲ್ಲ. ಇಂಗ್ಲಿಷ್‍ನಲ್ಲಿ ಇದನ್ನು Essay  ಅಥವಾ Lighter Essay  ಎಂದಷ್ಟೇ ಕರೆಯಲಾಗುತ್ತದೆ. ಲಲಿತ ಪ್ರಬಂಧ ಮತ್ತು Lighter Essayಯನ್ನು ಎದುರು ಬದುರಾಗಿ ಇಟ್ಟು ನೋಡಿ. ಲಲಿತ ಪ್ರಬಂಧ ಅನ್ನುವ ಪದದಲ್ಲಿರುವ ಲಾಲಿತ್ಯ Lighter Essayಯಲ್ಲಿ ವ್ಯಕ್ತವಾಗುವುದೇ ಇಲ್ಲ. ಕನ್ನಡ ಭಾಷೆಯಲ್ಲಿ ಅನಂತ ಮೂರ್ತಿ, ತೇಜಸ್ವಿ, ಶಿವರಾಮ ಕಾರಂತ, ಕುವೆಂಪು, ಭೈರಪ್ಪ, ಕಾರ್ನಾಡ್.... ಮುಂತಾದ ಶ್ರೇಷ್ಠ ಸಾಹಿತಿಗಳಿದ್ದಾರೆ. ಅಸಂಖ್ಯ ಸಾಹಿತ್ಯ ಕೃತಿಗಳಿವೆ. ಪತ್ರಿಕೆಗಳು, ಪಾಕ್ಷಿಕಗಳು, ಕಾವ್ಯಗಳಿವೆ. ಇಲ್ಲಿಯ ಮಣ್ಣಿನಲ್ಲೇ  ಹುಟ್ಟಿದ ಪದಗಳು ಮತ್ತು ನುಡಿಗಟ್ಟುಗಳಿವೆ. ಪಾಡ್ದನಗಳಿವೆ. ಸ್ಥಳೀಯವಾದ ಅನೇಕಾರು ಆಚರಣೆಗಳಿವೆ. ಈ ರಾಜ್ಯದಲ್ಲಿ ಮಾತ್ರವೇ ಲಭ್ಯವಾಗುವ ತರಕಾರಿಗಳಿವೆ. ವಿಶೇಷ ರೀತಿಯ ಮರಗಳಿವೆ. ಬಳ್ಳಿಗಳಿವೆ. ಹಣ್ಣುಗಳಿವೆ. ಇಂಗ್ಲಿಷ್ ಪದಗಳಿಗೆ ಸಿಕ್ಕದ ತಿನಿಸುಗಳಿವೆ. ಇಲ್ಲಿಯ ಸಾಂಸ್ಕ್ರತಿಕ ವೈವಿಧ್ಯತೆಯನ್ನು ಬಿಂಬಿಸುವ ಕಟ್ಟಡಗಳಿವೆ. ನಂಬಿಕೆಗಳು ಮತ್ತು ಆಚರಣೆಗಳಿವೆ. ಔಷಧೀಯ ಗುಣಗಳುಳ್ಳ ಸಸ್ಯಗಳು ಅನೇಕ ಇವೆ ಮತ್ತು ಅದಕ್ಕೆ ಇಂಗ್ಲಿಷ್‍ನಲ್ಲಿ ಸ್ಪಷ್ಟ ಪದಗಳು ಈವರೆಗೂ ಹುಟ್ಟಿಕೊಂಡಿಲ್ಲ. ಇಂಗ್ಲಿಷ್‍ನಲ್ಲಿ ಸ್ಪಷ್ಟವಾಗಿ ಬರೆಯಲಾಗದ ಮತ್ತು ಉಚ್ಛರಿಸಲಾಗದ ಮಾನವ ಹೆಸರುಗಳೂ ಇಲ್ಲಿವೆ. ಹಾಗಂತ, ಇದನ್ನು ಕನ್ನಡ ಭಾಷೆಯ ಹೆಚ್ಚುಗಾರಿಕೆಯಾಗಿಯೋ ಅಥವಾ ಇಂಗ್ಲಿಷ್ ಭಾಷೆಯ ದೌರ್ಬಲ್ಯವಾಗಿಯೋ ಕಾಣಬೇಕಿಲ್ಲ. ಪ್ರತಿ ಭಾಷೆಗೂ ಸ್ಥಳೀಯತೆ ಇದೆ. ಭಾಷೆಯೊಂದು ಎಲ್ಲಿ ಜನ್ಮ ತಳೆದಿದೆಯೋ ಅಲ್ಲಿಯ ಮಟ್ಟಿಗೆ ಅದು ಅತ್ಯಂತ ಶ್ರೀಮಂತ ಭಾಷೆ. ಕನ್ನಡವನ್ನು ನಾವು ಕಲಿಯಬೇಕಾದದ್ದು ಮತ್ತು ಇದರಲ್ಲಿ ಪ್ರಾವೀಣ್ಯತೆಯನ್ನು ಪಡೆಯಲು ಶ್ರಮಿಸಬೇಕಾದದ್ದು ಈ ಕಾರಣಕ್ಕಾಗಿ. ಕನ್ನಡವನ್ನು ಕಲಿಯದೇ ಇರುವುದರಿಂದ ನಾವು ಭಾಷೆಯೊಂದನ್ನಷ್ಟೇ ಮಿಸ್ ಮಾಡಿಕೊಳ್ಳುವುದಲ್ಲ, ಆ ಭಾಷೆ ಒಳಗೊಂಡಿರುವ ಸರ್ವದರಿಂದಲೂ ವಂಚಿತರಾಗುತ್ತೇವೆ. ಜನಪದೀಯ ಹಾಡುಗಳು, ಅಜ್ಜಿ ಕತೆಗಳು, ನರಿ, ಕೋಳಿ, ಸಿಂಹ, ಆನೆ.. ಮುಂತಾದುವುಗಳ ಸುತ್ತ ಹುಟ್ಟಿಕೊಂಡಿರುವ ಕೌತುಕಮಯ ಸಂಗತಿಗಳು, ಧರಣಿ ಮಂಡಲ ಹಾಡು.. ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತೇವೆ. ಸಂವಹನದ ದೃಷ್ಟಿಯಿಂದ ಇಂಗ್ಲಿಷ್ ಅನಿವಾರ್ಯವಾಗಿರಬಹುದು. ಅದರರ್ಥ ಅದೊಂದೇ ಭಾಷೆ ಸಾಕು ಮತ್ತು ಅದುವೇ ಪರಮ ಪವಿತ್ರ ಎಂದಲ್ಲ. ಅಲ್ಲದೇ ಭಾಷೆ ಸಂಸ್ಕಾರವನ್ನು ಕಲಿಸುತ್ತದೆ. ಸಾಂಸ್ಕ್ರತಿಕವಾಗಿ ಜನಮನವನ್ನು ಜೋಡಿಸುತ್ತದೆ. ತಾಯ್ನುಡಿಯು ಬ್ಯಾರಿ, ತುಳು, ಉರ್ದು ಅಥವಾ ಇನ್ನೇನೇ ಆಗಿರಬಹುದು. ಆದರೆ ಈ ಎಲ್ಲ ಭಾಷೆಗಳು ಕನ್ನಡದೊಂದಿಗೆ ಒಂದು ರೀತಿಯಲ್ಲಿ ಸಂಬಂಧವನ್ನು ಹೊಂದಿದೆ ಅಥವಾ ಸಂಬಂಧ ಹೊಂದಿರಬೇಕಾದ ಭೌಗೋಳಿಕ ಪರಿಸ್ಥಿತಿಯಿದೆ. ಆದ್ದರಿಂದ ಕನ್ನಡವನ್ನು ಒಂದು ಭಾಷೆ ಎಂದು ಕೇವಲವಾಗಿ ನೋಡಬೇಕಿಲ್ಲ. ಈ ಭಾಷೆ ನಮ್ಮನ್ನು ಸುತ್ತುವರಿದಿದೆ ಮತ್ತು ಕ್ಷಣಕ್ಷಣಕ್ಕೂ ನಮ್ಮೊಂದಿಗೆ ಮಾತಾಡಬಯಸುತ್ತದೆ. ಈ ಮಾತನ್ನು ಕೇಳಿಸಿಕೊಳ್ಳದೇ ಹೋಗುವುದರಿಂದ ಭಾಷೆಗೆ ನಷ್ಟವಿದೆಯೋ ಇಲ್ಲವೋ ಕೇಳುಗರಿಗಂತೂ ನಷ್ಟವಿದೆ..
  ಮುಸ್ಲಿಮ್ ಸಮುದಾಯದಲ್ಲಿ ಈ ಬಗ್ಗೆ ಗಂಭೀರ ಅವಲೋಕನ ನಡೆಯಬೇಕಾಗಿದೆ.

Wednesday, May 4, 2016

.ಅಣು ಕುಟುಂಬದ ಅನಾಹುತಕ್ಕೆ ಸಾಕ್ಷ್ಯವಾಗುವಳೇ ಸಿಮಿ?

ಸಿಮಿ
    ಬೇಬಿ ಬ್ಲೂವ್ಸ್ ಗೂ (Baby blues) ವಿಭಕ್ತ ಕುಟುಂಬ ಪದ್ಧತಿಗೂ ಸಂಬಂಧ ಇದೆಯೇ? ಪ್ರಸವಾನಂತರದ ಖಿನ್ನತೆ (Post partum Depression - PPD)ಯ ಕಾರಣಗಳನ್ನು ಅಣು ಕುಟುಂಬ ಪದ್ಧತಿಯಲ್ಲಿ ಹುಡುಕಬಹುದೇ? ಪ್ರಸವಾನಂತರದ ಖಿನ್ನತೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದಕ್ಕೆ ಕಾರಣಗಳೇನು? ದೇಶದ 20% ಮಹಿಳೆಯರು PPD ಯಿಂದ ಬಳಲುತ್ತಿದ್ದಾರೆ ಎಂಬುದು ಏನನ್ನು ಮತ್ತು ಯಾವುದನ್ನು ಸೂಚಿಸುತ್ತದೆ? ಸ್ವತಃ ತಾಯಿಯೇ ಮಗುವನ್ನು ಕೊಲೆಗೈದ ಅಥವಾ ಅದಕ್ಕಾಗಿ ಪ್ರಯತ್ನ ಪಟ್ಟ, ಮಗುವಿನೊಂದಿಗೆ ಹಿಂಸಾತ್ಮಕವಾಗಿ ನಡಕೊಂಡ ಅಥವಾ ಸ್ವತಃ ಬಾಣಂತಿ ತಾಯಿಯೇ ಆತ್ಮಹತ್ಯೆಗೈದ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಿರುವುದಕ್ಕೂ ನಮ್ಮ ಕೌಟುಂಬಿಕ ಜೀವನ ಶೈಲಿಗೂ ಸಂಬಂಧ ಕಲ್ಪಿಸಬಹುದೇ?
  ಇದು ಭಾರತೀಯರ ಪ್ರಶ್ನೆಯಷ್ಟೇ ಅಲ್ಲ, ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಎಲ್ಲ ರಾಷ್ಟ್ರಗಳನ್ನೂ ತೀವ್ರವಾಗಿ ಕಾಡತೊಡಗಿದೆ. ಟರ್ಕಿಯಲ್ಲಿ ಈ ಕುರಿತಂತೆ ಗಂಭೀರ ಸಂಶೋಧನೆ ಮತ್ತು ಅಧ್ಯಯನಗಳೂ ನಡೆದಿವೆ. ಯುರೋಪಿಯನ್ ಯೂನಿಯನ್‍ನ ಭಾಗವಾಗುವ ಮೂಲಕ ಗಡಿಗಳಿಲ್ಲದ ರಾಷ್ಟ್ರ ಕಲ್ಪನೆಯನ್ನು ಅದು ಬಹುತೇಕ ಸಾಧ್ಯವಾಗಿಸಿಕೊಂಡರೂ ಅದರ ಜೊತೆಗೇ ಸಾಂಸ್ಕೃತಿಕ ಆಮದು-ರಫ್ತುಗಳಿಗೂ ಸ್ಪೇಸ್ ನೀಡಬೇಕಾಯಿತು. ಅಜ್ಜ-ಅಜ್ಜಿ, ತಂದೆ-ತಾಯಿ, ಅಣ್ಣ-ಅಕ್ಕ, ತಂಗಿ-ತಮ್ಮ ಮುಂತಾದವರೆಲ್ಲ ಒಂದೇ ಮನೆಯಲ್ಲಿದ್ದುಕೊಂಡು ಬದುಕುವ ಅವಿಭಕ್ತ ಕುಟುಂಬ ಪದ್ಧತಿಯು ಯುರೋಪಿಯನ್ ನ್ಯೂಕ್ಲಿಯರ್ ಕುಟುಂಬ ಪದ್ಧತಿಯಿಂದ ಪ್ರಭಾವಿತವಾಯಿತು. ಅಣು ಕುಟುಂಬಗಳು ಹೆಚ್ಚಾಗತೊಡಗಿದುವು. ಅದರ ಜೊತೆಗೇ ಬೇಬಿ ಬ್ಲೂವ್ಸ್ ಮತ್ತು ಪಿಪಿಡಿಗಳ ಪ್ರಮಾಣದಲ್ಲೂ ಹೆಚ್ಚಳ ಕಂಡುಬಂದುವು. ಅಷ್ಟಕ್ಕೂ, ಬೇಬಿ ಬ್ಲೂವ್ಸ್ ಎಂಬುದು ಅಣು ಕುಟುಂಬ (ಪತಿ-ಪತ್ನಿ-ಮಗು)ದಲ್ಲಿ ಮಾತ್ರ ಕಾಣಿಸಿಕೊಳ್ಳಬೇಕಾದ ಅಥವಾ ಕಾಣಿಸಿಕೊಳ್ಳುವ ಕಾಯಿಲೆಯೇನಲ್ಲ. ಬಹುತೇಕ 80% ಬಾಣಂತಿಯರಲ್ಲಿ ಈ ಖಿನ್ನತೆ ಕಾಣಿಸಿಕೊಳ್ಳುತ್ತದೆ. ಬೇಸರ, ಆತಂಕ, ಸಿಟ್ಟು, ನಿದ್ದೆರಹಿತ ರಾತ್ರಿ ಇದರ ಸಾಮಾನ್ಯ ಲಕ್ಷಣ. ನಿಜವಾಗಿ, ಗರ್ಭಧಾರಣೆಯೆಂಬುದೇ ಓರ್ವ ಹೆಣ್ಣಿನ ಪಾಲಿಗೆ ಸಹಜ ಬದುಕಿನಿಂದ ಅತ್ಯಂತ ಅಪರಿಚಿತ ಮತ್ತು ಅಸಹಜವಾದ ಬದುಕಿಗೆ ಮಾಡುವ ಮುಖಾಮುಖಿ. ಮನೆ, ಪರಿಸರ, ಗಂಡ, ಅತ್ತೆ, ಮಾವ, ಅಭಿರುಚಿ, ದುಡಿಮೆ.. ಮುಂತಾದ ಅನೇಕ ಅಂಶಗಳು ಓರ್ವ ಗರ್ಭಿಣಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಧಾರಣೆಯ ಬಗ್ಗೆ ನೂರಾರು ಕನಸುಗಳನ್ನು ಕಟ್ಟಿಕೊಂಡವರಿಗೆ  ತಮ್ಮ ಆ  ಕನಸುಗಳ ಪರಿಧಿಯೊಳಗೆ ಬರದ ಅನುಭವಗಳು ಎದುರಾಗತೊಡಗಿದಾಗ ತಳಮಳಗೊಳ್ಳುವುದು ಸಹಜ. ಬಹುಶಃ, ಅಣು ಕುಟುಂಬಗಳ ತಾಕಲಾಟ ಬಹುತೇಕ ಪ್ರಾರಂಭವಾಗುವುದು ಇಲ್ಲೇ. ಒಂದು ಕಡೆ ಅತ್ತೆ, ಮಾವ ಎಂಬ ಕೂಡು ಕುಟುಂಬದಿಂದ ದೂರವಾಗಿ ತಾನು ಮತ್ತು ಗಂಡ ಎಂಬ ತನ್ನದೇ ಗೂಡು ಕಟ್ಟಿಕೊಂಡಿದ್ದರೆ ಇನ್ನೊಂದು ಕಡೆ ಉದ್ಯೋಗ ಮತ್ತು ಮನೆವಾರ್ತೆಯ ಒತ್ತಡ ಇರುತ್ತದೆ. ಇದೇ ವೇಳೆ ಗರ್ಭಧಾರಣೆಯು ಈ ವಾತಾವರಣದಲ್ಲಿ ಬದಲಾವಣೆಯನ್ನು ಬಯಸುತ್ತದೆ. ದೈಹಿಕ ಮತ್ತು ಮಾನಸಿಕ ವಿಶ್ರಾಂತಿಯ ಅಗತ್ಯವಿರುತ್ತದೆ. ಮದರ್‍ಹುಡ್ ಅನ್ನು ವಿವಿಧ ರೀತಿಯಲ್ಲಿ ಬಣ್ಣಿಸುವ ಮತ್ತು ಅದಕ್ಕಾಗಿ ಹಂಬಲಿಸುವವರನ್ನು ಕಂಡಿರುವ ಈಕೆಗೆ ಗರ್ಭಧಾರಣೆ ಆ ದಾರಿಯಲ್ಲಿ ಮೊದಲ ಸವಾಲು. ಅಪರಿಚಿತವಾಗಿರುವ ಈ 9 ತಿಂಗಳನ್ನು ಅಣು ಕುಟುಂಬದ ಓರ್ವ ಹೆಣ್ಣು ಮತ್ತು ಅವಿಭಕ್ತ ಕುಟುಂಬದ ಓರ್ವ ಹೆಣ್ಣು ಹೇಗೆ ನಿಭಾಯಿಸುತ್ತಾರೆ ಎಂಬುದರೊಂದಿಗೆ ಬಾಣಂತನದ ಖಿನ್ನತೆಯು ಜೋಡಿಕೊಂಡಿರುತ್ತದೆ. ಅವಿಭಕ್ತ ಕುಟುಂಬದಲ್ಲಿ ಒಂಟಿತನ ಕಡಿಮೆ. ಪ್ರತಿ ಹಂತದಲ್ಲೂ ಕೇರಿಂಗ್ ಎಂಬುದು ಇರುತ್ತದೆ. ಅಕ್ಕ-ಪಕ್ಕದವರು ಭೇಟಿ ಕೊಡುತ್ತಿರುತ್ತಾರೆ. ಗರ್ಭಿಣಿಯನ್ನು ಸಂತೈಸುತ್ತಾರೆ. ಕುಶಲೋಪರಿ ವಿಚಾರಿಸಿ ಸಲಹೆ-ಸೂಚನೆಗಳನ್ನು ಕೊಡುತ್ತಾರೆ. ಹಂತಹಂತಕ್ಕೂ ಧೈರ್ಯ ತುಂಬುವ ಮತ್ತು ಒತ್ತಡವಿಲ್ಲದ ವಾತಾವರಣ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಇದಕ್ಕೆ ಹೋಲಿಸಿದರೆ ಅಣು ಕುಟುಂಬದ ವಾತಾವರಣ ತೀರಾ ಭಿನ್ನ. ಉದ್ಯೋಗ, ಮನೆವಾರ್ತೆ, ಅದೂ-ಇದೂಗಳ ಒತ್ತಡದ ಪಟ್ಟಿಗೆ ಗರ್ಭಧಾರಣೆಯು ಇನ್ನೊಂದು ಒತ್ತಡವಾಗಿ ಸೇರ್ಪಡೆಗೊಳ್ಳುವುದೇ ಹೆಚ್ಚು. ಪತಿಯನ್ನು ಬಿಟ್ಟರೆ ಇನ್ನಾರೂ ಇಲ್ಲ ಎಂಬ ಸ್ಥಿತಿಯಲ್ಲಿ ಒಂದು ಬಗೆಯ ಅಪರಿಚಿತತೆ ಮನೆ ಮಾಡಿರುತ್ತದೆ. ಪರಿಸರದವರ ಭೇಟಿ, ಗರ್ಭಿಣಿಗೆ ಇಷ್ಟದ ತಿಂಡಿಗಳನ್ನು ತಯಾರಿಸಿ ತರುವುದು, ಧೈರ್ಯ ತುಂಬುವುದು, ತಮಾಷೆ-ಹಾಸ್ಯಗಳ ವಿನಿಮಯವಾಗುವು ದೆಲ್ಲ ಇಲ್ಲಿ ತೀರಾ ತೀರಾ ಕಡಿಮೆ. ಇಂಥ ಸ್ಥಿತಿಯಲ್ಲಿ ಪ್ರಸವಕ್ಕೆ ಸಿದ್ಧವಾಗುವ ಮತ್ತು ತಾಯ್ತನದ ಹೊಸ ಅನುಭವಕ್ಕೆ ಜಾರುವು ದನ್ನೊಮ್ಮೆ ಕಲ್ಪಿಸಿಕೊಳ್ಳಿ. ತಾಯ್ತನವೆಂಬುದು ಸಂಪೂರ್ಣವಾಗಿ ದÉೈಹಿಕ, ಮಾನಸಿಕ ಮತ್ತು ಸಾಮಾಜಿಕ ಆಯಾಮವುಳ್ಳದ್ದು. ಹುಟ್ಟಲಿರುವ ಮಗುವಿನ ತೂಕ, ಬಣ್ಣ, ಆಕಾರ, ಲಿಂಗ ಮುಂತಾ ದುವುಗಳ ಬಗ್ಗೆ ಸುಂದರ ಕನಸುಗಳನ್ನಿಟ್ಟು ಕೊಂಡವಳಿಗೆ ಆ ನಿರೀಕ್ಷಿತ ಮಗು ಲಭ್ಯವಾಗದೇ ಹೋದರೆ ಕ್ಷಣ ಆಘಾತವಾಗುವುದಕ್ಕೆ ಅವಕಾಶವಿದೆ. ಇದು ಅಣು ಕುಟುಂಬ ಮತ್ತು ಅವಿಭಕ್ತ ಕುಟುಂಬ ಎರಡರಲ್ಲೂ ಸಂಭವಿಸಬಹುದಾದರೂ ಅವಿಭಕ್ತಕ್ಕೆ ಹೋಲಿಸಿದರೆ ಅಣು ಕುಟುಂಬದಲ್ಲಿ ಹೆಚ್ಚು ಅಪಾಯಕಾರಿ. ಭಾವನಾತ್ಮಕ ಬೆಂಬಲವನ್ನು ಗಳಿಸಲು ಕಡಿಮೆ ಅವಕಾಶಗಳಿರುವ ಅಣು ಕುಟುಂಬವು ಇಂಥ ವಾತಾವರಣದಲ್ಲಿ ಬೇಗ ನಿರಾಶವಾಗುವುದೇ ಹೆಚ್ಚು. ಅವಿಭಕ್ತ ಕುಟುಂಬದ ಬಾಣಂತಿ ಇಂಥ ಸ್ಥಿತಿಯಲ್ಲಿ ಕನಿಷ್ಠ ಇನ್ನೊಂದು ಮಗುವಿನ ಕನಸನ್ನಾದರೂ ಕಾಣಬಲ್ಲಳು. ಅವರಿವರ ಮಾತುಕತೆಯಲ್ಲಿ ಆಘಾತದಿಂದ ಚೇತರಿಸಿಕೊಳ್ಳಬಲ್ಲಳು. ಆದರೆ ಇನ್ನೊಂದು ಮಗುವಿನ ಬಗ್ಗೆ ಅಣು ಕುಟುಂಬದ ಬಾಣಂತಿಗೆ ಅವಿಭಕ್ತ ಕುಟುಂಬದ ಬಾಣಂತಿಯಲ್ಲಿರುವಷ್ಟು ಆಯ್ಕೆಗಳೋ ಅವಕಾಶಗಳೋ ಇರುವುದಿಲ್ಲ. ಮೊದಲನೆಯದಾಗಿ ಮನೆಯಲ್ಲಿ ಗಂಡನನ್ನು ಬಿಟ್ಟರೆ ಇನ್ನಾರೂ ಇಲ್ಲ. ಮಗುವನ್ನು ತಾನೇ ನೋಡಿಕೊಳ್ಳಬೇಕು. ಕೆಲವೊಮ್ಮೆ ಅದಕ್ಕಾಗಿ ಉದ್ಯೋಗದ ಒಂದು ವರ್ಷವನ್ನು ತೆರಬೇಕಾದೀತು ಅಥವಾ ಲಭ್ಯವಾಗುವ ರಜೆಯನ್ನು ಮುಗಿಸಿ ಮಗುವನ್ನು ಶಿಶುಪಾಲನಾ ಕೇಂದ್ರಕ್ಕೋ ಅಥವಾ ಇನ್ನಾವುದಾದರೂ ಕೇರಿಂಗ್ ಸೆಂಟರ್‍ಗೋ ಒಪ್ಪಿಸಿ ಉದ್ಯೋಗಕ್ಕೆ ಸೇರಬೇಕಾದೀತು. ಉದ್ಯೋಗವು ಅಣು ಕುಟುಂಬದ ತೀರಾ ಅಗತ್ಯವಾದುದರಿಂದ ಅದನ್ನು ನಿರ್ಲಕ್ಷಿಸಿ ಬದುಕುವುದು ದುಬಾರಿ ಜಗತ್ತಿನಲ್ಲಿ ಸುಲಭವಲ್ಲ. ಹೀಗಿರುವಾಗ ಇನ್ನೊಮ್ಮೆ ಗರ್ಭಿಣಿಯಾಗು ವುದು ಮತ್ತು ಪ್ರಸವಿಸುವುದೆಲ್ಲ ಕಷ್ಟ ಎಂಬ ಭಾವನೆ ಅಣು ಕುಟುಂಬದಲ್ಲಿ ಸಹಜವಾಗಿಯೇ ಗಟ್ಟಿಯಾಗಿರುತ್ತದೆ. ತಾಯಿ ಯಾಗುವುದಕ್ಕೆ ಸಮಯವಿಲ್ಲ ಮತ್ತು ಮಗುವಿನ ಆರೈಕೆಗೆ ಸೂಕ್ತ ವ್ಯವಸ್ಥೆಯಿಲ್ಲ ಎಂಬುದು ಅಂತಿಮವಾಗಿ ಒಂದೇ ಮಗು ಎಂಬಲ್ಲಿಗೆ ತಂದು ನಿಲ್ಲಿಸುತ್ತದೆ. ಈ ಕಾರಣದಿಂದಲೇ ಮೊದಲ ಪ್ರಸವದಲ್ಲಿ ಆಕೆಗೆ ನಿರೀಕ್ಷಿತ ಮಗು ದಕ್ಕದೇ ಹೋದಾಗ ಅಥವಾ ತಾಯ್ತನದ ಕೆಲವು ಅನಿವಾರ್ಯ ‘ರಾಜಿ'ಗಳಿಗೆ ಮನಸು ಒಗ್ಗಿಕೊಳ್ಳದೇ ಹೋದಾಗ ಬೇಬಿ ಬ್ಲೂವ್ಸ್ ಕಾಣಿಸಿಕೊಳ್ಳುತ್ತದೆ. ಸೂಕ್ತ ಪರಿಚಾರಿಕೆ, ಸಾಂತ್ವನ ಲಭ್ಯವಾಗದೇ ಹೋದರೆ ಇದುವೇ ಮುಂದೆ
ಗಂಭೀರ ಡಿಪ್ರೆಶನ್ ಆಗಿ ಬದಲಾಗಿ ಬಿಡುತ್ತದೆ. ಸಾಮಾನ್ಯವಾಗಿ ಈ ಆರೋಗ್ಯ ಸಮಸ್ಯೆಯನ್ನು ತಾಯ್ತನದ ಅನನುಭವ ಅಥವಾ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳದೇ ಇರುವುದರಿಂದ ಆಗುವ ಪರಿಣಾಮ ಎಂದು ನಾವು ವ್ಯಾಖ್ಯಾನಿಸಬಹುದಾದರೂ ಆಂತರಿಕವಾಗಿ ಇದರ ಜೊತೆ ನಮ್ಮ ಬದಲಾದ ಜೀವನ ಶೈಲಿಗೆ ಬಲವಾದ ಸಂಬಂಧವಿದೆ. ಮಕ್ಕಳ ಸಂಖ್ಯೆಯ ಬಗ್ಗೆ ಅವಿಭಕ್ತ ಮತ್ತು ವಿಭಕ್ತ ಕುಟುಂಬಗಳಲ್ಲಿ ಭಿನ್ನ ಲೆಕ್ಕಾಚಾರವಿದೆ. ಪತಿ ಮತ್ತು ಪತ್ನಿ ಇಬ್ಬರು ಉದ್ಯೋಗಸ್ಥರಾಗಿರು ವಲ್ಲಿ ಒಂದೇ ಮಗು ಸಿದ್ಧಾಂತ ಹೆಚ್ಚು ಪ್ರಾಬಲ್ಯವನ್ನು ಪಡೆಯುತ್ತದೆ. ಆದರೆ ಹಾಗಿಲ್ಲದ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆಯ ಬಗ್ಗೆ ಇಷ್ಟು ಕಟ್ಟುನಿಟ್ಟಿಲ್ಲ. ಈ ದೇಶದಲ್ಲಿ ಜನಸಂಖ್ಯೆಯ ಕುರಿತಂತೆ ಸರಕಾರ ಎಷ್ಟೇ ಭೀತಿಯನ್ನು ಹರಡಲಿ, ದೇಶದ ಒಟ್ಟು ಫಲವತ್ತತೆಯ ಪ್ರಮಾಣ(TFR)ದಲ್ಲಿ ತೀವ್ರ ಇಳಿಮುಖವಾಗುತ್ತಿರುವುದಾಗಿ ಇತ್ತೀಚಿನ ಅಂಕಿ ಸಂಖ್ಯೆಗಳು ಸ್ಪಷ್ಟವಾಗಿ ವಿವರಿಸುತ್ತಿವೆ.
  ಕಳೆದವಾರ ಜಪಾನಿನ ಪ್ರತಿನಿಧಿಗಳು ಸುಮಾರು 4 ಲಕ್ಷ ನೌಕರರ ಬೇಡಿಕೆಯೊಂದಿಗೆ ಈ ದೇಶಕ್ಕೆ ಬಂದಿದ್ದರು. ಜಪಾನಿನಲ್ಲಿ ಒಟ್ಟು ಫಲವತ್ತತೆಯ ಪ್ರಮಾಣ (TFR) ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ. ಅದು ಈಗ 1.41ರಲ್ಲಿದೆ. ಈ ಪ್ರಮಾಣದಲ್ಲಿ ಒಂದಿಷ್ಟು ಇಳಿಮುಖವಾದರೂ ಮುಂದೆ ಸರಿಪಡಿಸಿಕೊಳ್ಳಲಾಗದ ಸ್ಥಿತಿಗೆ ಜಪಾನ್ ತಲುಪಲಿದೆ ಎಂದು ಹೇಳಲಾಗುತ್ತದೆ. ಭಾರತ ದಲ್ಲಿ ಜನಸಂಖ್ಯೆಯ ಸಮತೋಲನ ಮಟ್ಟವನ್ನು 2.1 ಎಂದು ನಿಗದಿಪಡಿಸಲಾಗಿದೆ. ಆಂಧ್ರ, ತಮಿಳುನಾಡು, ಕೇರಳ, ಗೋವಾ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಸಿಕ್ಕಿಮ್, ತ್ರಿಪುರ, ದೆಹಲಿ, ಲಕ್ಷದ್ವೀಪ, ಅಂಡಮಾನ್-ನಿಕೋಬಾರ್, ದಿಯು ಮತ್ತು ದಾಮನ್ ಮುಂತಾದುವು ಈಗಾಗಲೇ ನಿಗದಿತ 2.1ರ ಪ್ರಮಾಣದಿಂದ ಕೆಳಗಿಳಿದು 1.9 ಮತ್ತು 1.7ರ ನಡುವೆ ತೂಗಾಡುತ್ತಿದೆ. ಕರ್ನಾಟಕದ ಒಟ್ಟು ಫಲವತ್ತತೆಯ ಪ್ರಮಾಣ 1.8. ಕೊಲ್ಕತ್ತಾವಂತೂ ಭಾರತದಲ್ಲೇ ಅತ್ಯಂತ ಕಡಿಮೆ ಫಲವತ್ತತೆಯನ್ನು ಹೊಂದಿದ ನಗರವಾಗಿ ಗುರುತಿಸಿಕೊಂಡಿದೆ. ಚೀನಾದ ಫಲವತ್ತತೆಯ ಪ್ರಮಾಣ 1.5 ಆದರೆ ಯುರೋಪಿಯನ್ ಯೂನಿಯನ್‍ನ ಪ್ರಮಾಣ 1.6. ಇದೇ ವೇಳೆ 2011ರ ಗಣತಿಯ ಪ್ರಕಾರ ಕೋಲ್ಕತ್ತಾದ ಫಲ ವತ್ತತೆಯ ಪ್ರಮಾಣ 1.2. ಚೆನ್ನೈ ಮತ್ತು ಮುಂಬೈಯ ಪ್ರಮಾಣ 1.4, ಹÉೈದರಾಬಾದ್ 1.6 ಮತ್ತು ಬೆಂಗಳೂರು 1.7. ನಿಜವಾಗಿ ನಮ್ಮ ಕುಟುಂಬ ವ್ಯವಸ್ಥೆಗೂ ಮತ್ತು ಫಲವತ್ತತೆ ಹಾಗೂ ಪ್ರಸವಾ ನಂತರದ ಖಿನ್ನತೆಗೂ ಆಂತರಿಕವಾದ ಸಂಬಂಧ ಇದೆ. ನಗರಗಳಲ್ಲಿ ಫಲವತ್ತತೆಯ ಪ್ರಮಾಣ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿರುವುದನ್ನು ಮಾಧ್ಯಮಗಳಾಗಲಿ ಸರಕಾರಗಳಾಗಲಿ ಇವತ್ತು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅದರ ಬದಲು ಬಿಹಾರ, ಗುಜರಾತ್, ಅಸ್ಸಾಮ್, ಒಡಿಸ್ಸಾ ಮುಂತಾದ ರಾಜ್ಯಗಳಲ್ಲಿ ಫಲವತ್ತತೆಯ ಪ್ರಮಾಣ 2.2ರಿಂದ 2.3ರ ನಡುವೆ ಇರುವುದನ್ನು ಆತಂಕಕಾರಿಯೆಂದು ಬಿಂಬಿಸುವ ಯತ್ನಗಳು ನಡೆಯುತ್ತಿವೆ. ಹಾಗಂತ,
  ಈ ಎಲ್ಲ ರಾಜ್ಯಗಳಲ್ಲೂ ಫಲವತ್ತತೆಯ ಪ್ರಮಾಣ 2.1ಕ್ಕೆ ಬಂದು ತಲುಪಿತೆಂದೇ ಇಟ್ಟುಕೊಳ್ಳಿ. ಅದು ಅಲ್ಲಿಗೇ ನಿಲ್ಲಬಹುದೇ? ಈಗಾಗಲೇ ಫಲವತ್ತತೆಯ ಪ್ರಮಾಣ ನಗರಗಳಲ್ಲಂತೂ ತೀವ್ರಗತಿಯಲ್ಲಿ ಇಳಿಮುಖವಾಗುತ್ತಲೇ ಇದೆ. ಅದು ಉಳಿದ ಪ್ರದೇಶಗಳಿಗೂ ಇದೇ ಪ್ರಮಾಣದಲ್ಲಿ ಹಬ್ಬದೇ ಇರುವುದಕ್ಕೆ ಯಾವ ಕಾರಣವೂ ಇಲ್ಲ. ಹೀಗಿರುವಾಗ ಈ ಇಳಿಕೆಯನ್ನು ತಡೆಯುವುದಕ್ಕೆ ನಮ್ಮಲ್ಲಿ ಯಾವ ಮಂತ್ರದಂಡವಿದೆ? ಚೀನಾ, ಜಪಾನ್, ಇಟಲಿಯಂಥ ರಾಷ್ಟ್ರಗಳು ಈಗಾಗಲೇ ‘ವೃದ್ಧ ದೇಶ'ದ ಭೀತಿಯಿಂದ ಥರಗುಟ್ಟುತ್ತಿವೆ. ಮಕ್ಕಳನ್ನು ಹೊಂದುವಂತೆ ದಂಪತಿಗಳಿಗೆ ಒತ್ತಾಯಿಸುತ್ತಿವೆ. ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರಂತೂ ಎಲ್ಲ ದಂಪತಿಯರೂ ಎರಡು ಮಕ್ಕಳನ್ನು ಹೊಂದುವಂತೆ ಕರೆ ಕೊಟ್ಟಿದ್ದಾರೆ. ನಿಜವಾಗಿ, ನಗರ ಜೀವನ ಜನಪ್ರಿಯವಾಗುತ್ತಿರುವ ಇಂದಿನ ದಿನಗಳಲ್ಲಿ ಫಲವತ್ತತೆಯ ಪ್ರಮಾಣವನ್ನು ಇಳಿಸುವ ಪ್ರಯತ್ನವು ಜನಸಂಖ್ಯಾ ಸಮತೋಲನವನ್ನು ದಿಕ್ಕು ತಪ್ಪಿಸುವ ಅಪಾಯಕಾರಿ ಸೂಚನೆಯನ್ನು ನೀಡುವುದಷ್ಟೇ ಅಲ್ಲ, ಬೇಬಿ ಬ್ಲೂವ್ಸ್ ಮತ್ತು ಪಿಪಿಡಿಯಲ್ಲಿ ಏರಿಕೆಯನ್ನೂ ಉಂಟು ಮಾಡಲಾರದೇ? ನಗರ ಜೀವನದ ಒತ್ತಡದಲ್ಲಿ ಒಂದು ಮಗುವೇ ಭಾರವಾಗಬಹುದಾದ ಇಂದಿನ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ ಮತ್ತು ಈ ಜೀವನಕ್ರಮದ ಉಪ ಉತ್ಪತ್ತಿಯಾದ ಖಿನ್ನತೆ(ಪಿಪಿಡಿ)ಯನ್ನು ಎದುರಿಟ್ಟುನೋಡಿ. ಏನನಿಸುತ್ತದೆ?
        ಕಳೆದ ವಾರ ಕೇರಳದ ಕಣ್ಣೂರಿನ ಪೆರಿಯಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಐದನೇ ಮಹಡಿಯಿಂದ ಬಾಣಂತಿ ಮಹಿಳೆ ಸಿಮಿ ಎಂಬವರು ಖಿನ್ನತೆಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿರುವ ಸುದ್ದಿಯನ್ನು ಓದುತ್ತಾ ಇವೆಲ್ಲ ನೆನಪಾಯಿತು

Wednesday, April 27, 2016

ಈ 'ಅನ್ಯ'ತನ ಎಲ್ಲಿಯವರೆಗೆ?

        “ದಿನಾಂಕ 19-4-2016ರಿಂದ 23-4-2016ರ ತನಕ ನಡೆಯುವ ಶ್ರೀ ಮಹಾ ಗಣಪತಿ ದೇವಸ್ಥಾನ ಗಣೇಶಪುರ, ಕಾಟಿಪಳ್ಳ, ಇದರ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ವಠಾರದಲ್ಲಿ ಹಿಂದೂಯೇತರ ಬಂಧುಗಳು ಯಾವುದೇ ಅಂಗಡಿ ಅಥವಾ ವ್ಯಾಪಾರ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ..”
  ಏನೆನ್ನಬೇಕು ಇದಕ್ಕೆ? ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಹಾಕಲಾದ ಈ ಬ್ಯಾನರ್ ಎಷ್ಟು ಸಂವಿಧಾನಬದ್ಧ? ಇದಕ್ಕೆ ನ್ಯಾಯಾಂಗದ ಸಮ್ಮತಿ ಇದೆಯೇ? ಶ್ರೀ ಮಹಾ ಗಣಪತಿ ದೇವಸ್ಥಾನದ ಒಪ್ಪಿಗೆಯಿದೆಯೇ? ಜಿಲ್ಲಾಡಳಿತ ಏನು ಹೇಳುತ್ತೆ? ರಾಜಕೀಯ ಪಕ್ಷಗಳ ಅದರಲ್ಲೂ ಬಿಜೆಪಿಯ ಪ್ರತಿಕ್ರಿಯೆ ಏನು? ಬಿಡಿ, ಮಹಾ ಗಣಪತಿ ದೇವಸ್ಥಾನದ ಹೊಣೆಗಾರರು ಅಥವಾ ಸಮಾಜದ ದುರೀಣರು ಏನು ಹೇಳುತ್ತಾರೋ ಬಿಡುತ್ತಾರೋ ಭಾರತೀಯನಾಗಿ ಓರ್ವ ಇದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು? ಜಾತ್ಯತೀತ ರಾಷ್ಟ್ರದಲ್ಲಿ ಇಂಥದ್ದೊಂದು ಬ್ಯಾನರ್‍ನ ಮಹತ್ವವೇನು? ಇದನ್ನು ಜನಬೆಂಬಲವಿಲ್ಲದ ಸಂಘಟನೆಯೊಂದರ ಕಿತಾಪತಿ ಎಂದು ಸಾಮಾನ್ಯೀಕರಿಸಿ ನಿರ್ಲಕ್ಷಿಸಬಹುದೇ ಅಥವಾ ಈ ಸಂಘಟನೆಯ ಮೂಲಕ ಇನ್ನಾವುದೋ ಬಲಶಾಲಿ ಗುಂಪು ಹೆಣೆದ ತಂತ್ರವಾಗಿ ಕಾಣಬಹುದೇ?
  ದಕ್ಷಿಣ ಕನ್ನಡ ಜಿಲ್ಲೆಗೆ ಒಳಪಟ್ಟ ಕಾಟಿಪಳ್ಳದಲ್ಲಿ ಕಾಣಿಸಿಕೊಂಡ ಈ ಬ್ಯಾನರ್‍ಗಿಂತ ಕೆಲವು ದಿನಗಳ ಮೊದಲು ಇದೇ ಜಿಲ್ಲೆಯ ಪುತ್ತೂರು ಎಂಬಲ್ಲಿಯ ಮಹಾಲಿಂಗೇಶ್ವರ ದೇವ ಸ್ಥಾನದ ಜಾತ್ರೋತ್ಸವವು ರಾಷ್ಟ್ರಮಟ್ಟದಲ್ಲಿ ಸುದ್ದಿಗೀಡಾಗಿತ್ತು. ದ.ಕ. ಜಿಲ್ಲೆಯ ಜಿಲ್ಲಾಧಿಕಾರಿ ಮುಸ್ಲಿಮ್ ಆಗಿರುವುದರಿಂದ ಅವರನ್ನು ಆಮಂತ್ರಣ ಪತ್ರಿಕೆಯಲ್ಲಿ ಸೇರಿಸಬಾರದು ಎಂದು ಅಲ್ಲಿ ತಗಾದೆ ಎತ್ತಲಾಗಿತ್ತು. ತಾಂತ್ರಿಕ ಕಾರಣಗಳು ಈ ವಾದಕ್ಕೆ ಪುಷ್ಠಿ ನೀಡು ತ್ತವೆ ಎಂಬುದನ್ನು ಬಿಟ್ಟರೆ, ಉಳಿದಂತೆ ಈ ವಾದ ಅತ್ಯಂತ ಅಸಹಿಷ್ಣು ಎಂಬುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಅಂಬೇಡ್ಕರ್ ಸಂವಿಧಾನಕ್ಕೆ ಪ್ರಾಯ ಸಲ್ಲುತ್ತಾ ಹೋದಂತೆ ಮನುಷ್ಯ ವಿಭಜನೆಯ ಚಿಂತನೆಗಳೇಕೆ ಬಲ ಪಡೆಯುತ್ತಾ ಹೋಗುತ್ತಿವೆ? ಈ ಬ್ಯಾನರ್ ಹಾಕಲಾದ ಕಾಟಿಪಳ್ಳ ಪರಿಸರದ ಪಕ್ಕದೂರಿನ ದೇವಸ್ಥಾನದಲ್ಲಿ ಕೆಲವು ವರ್ಷಗಳ ಹಿಂದೆ ಜಮಾಅತೆ ಇಸ್ಲಾಮೀ ಹಿಂದ್‍ನ ಯೂತ್‍ವಿಂಗ್ ವಿಭಾಗವು ರಮಝಾನಿನಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಗೀಡಾಗಿತ್ತು. ಮುಸ್ಲಿಮರನ್ನು ಈ ಮಟ್ಟದಲ್ಲಿ ಸ್ವಾಗತಿಸಿದ ದೇವಸ್ಥಾನದ ಪರಿಸರವು ಇವತ್ತು ಇಂಥದ್ದೊಂದು ಬ್ಯಾನರ್‍ನ ಮೂಲಕ ಗುರುತಿಸಿಕೊಂಡಿರುವುದಕ್ಕೆ ಏನು ಕಾರಣ? ಇದು ಸಾರ್ವಜನಿಕ ಭಾವನೆಯೇ? ನಿಜವಾಗಿ, ಹಬ್ಬ, ಜಾತ್ರೆ, ಹರಿದಿನ ಮುಂತಾದ ಖುಷಿಯ ಸಂದರ್ಭಗಳೆಲ್ಲ ನಿರ್ದಿಷ್ಟ ಧರ್ಮದ ಆಚರಣೆಗಳಷ್ಟೇ ಅಲ್ಲ, ವಿವಿಧ ಧರ್ಮಗಳಿರುವ ಸಮಾಜದಲ್ಲಿ ಅದಕ್ಕೆ ಸಾರ್ವಜನಿಕವೆಂಬ ಇನ್ನೊಂದು ಮುಖವೂ ಇರುತ್ತದೆ ಮತ್ತು ಇರಬೇಕು ಕೂಡ. ಒಂದೇ ಧರ್ಮ ಇರುವಲ್ಲಿ ಆಚರಿಸುವ ಆಚರಣೆಗೂ ವಿವಿಧ ಧರ್ಮಗಳಿರುವಲ್ಲಿ ಆಚರಿಸುವ ಆಚರಣೆಗೂ ಸಾಂಸ್ಕ್ರತಿಕವಾಗಿಯೇ ವ್ಯತ್ಯಾಸ ಇರುತ್ತದೆ. ಅಷ್ಟಕ್ಕೂ, ಹಿಂದೂಗಳು ಗಣೇಶ ಚತುರ್ಥಿಯನ್ನು ಹಿಂದೂಗಳಿಗೆ ಮಾತ್ರ ಸೀಮಿತಗೊಳಿಸಿ ಆಚರಿಸಬಹುದು ಅಥವಾ ದಲಿತರು ಕೋಲ ವನ್ನು ಅಥವಾ ಬ್ರಾಹ್ಮಣರು ಕೃಷ್ಣಾಷ್ಟಮಿಯನ್ನು ಅಥವಾ ಇತರ ಜಾತಿ-ಉಪಜಾತಿಗಳು ತಮ್ಮದೇ ಆದ ಖುಷಿಯ ಕ್ಷಣಗಳನ್ನು ತಮ್ಮವರ ನಡುವೆಯೇ ಆಚರಿಸಬಹುದು. ಮುಸ್ಲಿಮರಿಗೂ ಕೂಡ ಅಂಥದ್ದೊಂದು ಹಕ್ಕು ಖಂಡಿತ ಇದೆ. ಆದರೆ ಇಂಥ ಗೆಟ್ಟೋಯಿಸಂ ನೀತಿಯು ಬೀರುವ ಪರಿಣಾಮಗಳು ಏನೇನು? ಮುಖ್ಯವಾಗಿ ಇದರಿಂದ ಸಮಾಜ ಒಡೆಯುತ್ತದೆ. ನಮ್ಮ ಹಬ್ಬ - ಅವರ ಹಬ್ಬ, ಅವರ ಸಂಸ್ಕøತಿ - ನಮ್ಮ ಸಂಸ್ಕ್ರತಿ, ಅವರ ಕ್ರೀಡೆ - ನಮ್ಮ ಕ್ರೀಡೆ, ಅವರ ಮದುವೆ - ನಮ್ಮ ಮದುವೆ, ಅವರ ಸಾವು - ನಮ್ಮವರ ಸಾವು, ಅವರ ದುಃಖ - ನಮ್ಮ ದುಃಖ.. ಹೀಗೆ ಪ್ರತಿಯೊಂದನ್ನೂ ವಿಭಜಿಸಿ ಅನುಭವಿಸುವ ವಾತಾವರಣ ಸೃಷ್ಟಿಯಾಗುತ್ತದೆ. ಹೀಗೆ ಇದನ್ನೇ ನೋಡಿಕೊಂಡು ಮತ್ತು ‘ಧರ್ಮ ಅಂದರೆ ಇದುವೇ ಇರಬೇಕು’ ಎಂದು ನಂಬಿಕೊಂಡು ಬೆಳೆಯುವ ಒಂದು ಯುವ ತಲೆಮಾರನ್ನು ಎದುರಿಟ್ಟು ನೋಡಿ. ಆ ಪೀಳಿಗೆಯ ಆಲೋಚನೆಗಳು ಏನಿರಬಹುದು? ನಮ್ಮವರಲ್ಲದ ಇತರರ ಬಗ್ಗೆ ಅವರು ಯಾವ ಅಭಿಪ್ರಾಯವನ್ನು ಹೊಂದಬಹುದು? ನಮ್ಮ ಮೈದಾನಗಳು, ಶಾಲೆಗಳು, ಆಸ್ಪತ್ರೆಗಳು, ಸಾಂಸ್ಕøತಿಕ ಚಟುವಟಿಕೆಗಳೆಲ್ಲ ನಮ್ಮವು ಮತ್ತು ಅವರವು ಎಂದು ವಿಭಜನೆಯಾಗಲಾರದೇ? ಹೀಗಾದರೆ ಸಂಖ್ಯೆಯಲ್ಲಿ ಬಲಾಢ್ಯರಾದ ‘ನಾವು’ ಸಂಖ್ಯೆಯಲ್ಲಿ ದುರ್ಬಲರಾದ ‘ಅವರನ್ನು’ ಬಯಸಿದಂತೆ ನಡೆಸಿಕೊಳ್ಳಬಹುದಲ್ಲವೇ? ನಮ್ಮ ವ್ಯಾಪ್ತಿ ಪ್ರದೇಶದಲ್ಲಿ ಉಳಿಸಿಕೊಳ್ಳುವ ಅಥವಾ ವ್ಯಾಪ್ತಿಯಾಚೆಗೆ ತಳ್ಳುವ ಅವಕಾಶವನ್ನು ಸೃಷ್ಟಿಸಿಕೊಳ್ಳಬಹುದಲ್ಲವೇ? ರಾಜಕೀಯವಾಗಿ ನಮ್ಮವರೇ ಸದಾಕಾಲ ಅಧಿಕಾರದಲ್ಲಿರುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಇನ್ನಾವುದಿದ್ದೀತು? ನಿಜವಾಗಿ, ಅಭಿವೃದ್ಧಿ ಕಾರ್ಯಗಳಿಂದ ಜನರನ್ನು ತೃಪ್ತಿಪಡಿಸುವುದು ಅಷ್ಟು ಸುಲಭವಲ್ಲ. ಎಷ್ಟೇ ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಒಂದೇ ಒಂದು ‘ಸಿ.ಡಿ.ಗೆ’ ಎಲ್ಲವನ್ನೂ ನುಂಗುವಂತೆ ಮಾಡುವ ಸಾಮರ್ಥ್ಯವಿದೆ. ನೀರು, ವಿದ್ಯುತ್, ವಸತಿ, ಆಹಾರ, ಮೂಲ ಸೌಲಭ್ಯಗಳೆಲ್ಲ ಸರ್ವರಿಗೂ ಸಹಜವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕಾದರೆ ಅದಕ್ಕೆ ಅಪಾರ ಶ್ರಮ ಮತ್ತು ಬದ್ಧತೆಯ ಅಗತ್ಯವೂ ಇದೆ. ಆದರೆ ಈ ಯಾವ ಪರಿಶ್ರಮವೂ ಇಲ್ಲದೇ ಜನರನ್ನು ಒಲಿಸಿಕೊಳ್ಳುವ ಸಾಮರ್ಥ್ಯವಿದ್ದರೆ ಅದು ವಿಭಜನೆಗೆ ಮಾತ್ರ. ಒಂದು ಪುಟ್ಟ ಬ್ಯಾನರ್ ಕೆಲವೊಮ್ಮೆ ನೂರಾರು ಕೋಟಿ ರೂಪಾಯಿ ಯೋಜನೆಗಿಂತ ಪ್ರಭಾವಶಾಲಿಯಾಗಿ ಕೆಲಸ ನಿರ್ವಹಿಸಬಹುದು. ಅಷ್ಟಕ್ಕೂ,
ಮನುಷ್ಯರನ್ನು ವಿಭಜಿಸುವುದು ಮತ್ತು ಅದನ್ನೇ ಆಡಳಿತ ನೀತಿಯಾಗಿ ಅಂಗೀಕರಿಸುವುದೆಲ್ಲ ಬ್ರಿಟಿಷರಿಂದ ಆರಂಭವಾದದ್ದೇನೂ ಅಲ್ಲ. ಅದಕ್ಕೆ ಪುರಾತನವಾದ ಇತಿಹಾಸವಿದೆ. ಟ್ರೈನೋ ಬೊಕಲಿನಿಯವರ ‘ದಿ ಆರ್ಟ್ ಆಫ್ ವಾರ್', ಫ್ಲಾವಿಸ್ ಜೋಸೆಫ್‍ರ ‘ದಿ ವಾರ್ ಆಫ್ ದಿ ಜ್ಯೂಯಿಸ್' ಮತ್ತು ಜಿಯಾಗ್ರಫಿ ಇತ್ಯಾದಿ ಕೃತಿಗಳಲ್ಲಿ ಸಾಮಾಜಿಕ ವಿಭಜನೆಯ ದಟ್ಟ ವಿವರಣೆಗಳಿವೆ. ಒಂದು ಸಮಾಜದ ಮೇಲೆ ಹಿಡಿತ ಸಾಧಿಸಬೇಕಾದರೆ ಅನುಸರಿಸಬೇಕಾದ ಕ್ರಮಗಳು ಮತ್ತು ಅದರಿಂದಾಗಿ ಆಗಬಹುದಾದ ಪರಿಣಾಮಗಳನ್ನು ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಮೆಸಿಡೋನಿಯದ ರಾಜ ಎರಡನೇ ಫಿಲಿಪ್ ಅವರು ಈ ‘ವಿಭಜಿಸಿ ಆಳು’ ನೀತಿಯನ್ನು ಪ್ರಥಮವಾಗಿ ಜಾರಿಗೆ ತಂದರು ಎಂದು ಹೇಳಲಾಗುತ್ತದೆ. ಬಳಿಕ ರೋಮನ್ ಚಕ್ರವರ್ತಿ ಸೀಸರ್ ಮತ್ತು ಫ್ರೆಂಚ್ ಚಕ್ರವರ್ತಿ ನೆಪೋಲಿಯನ್ ಈ ನೀತಿಯಂತೆ ಆಡಳಿತ ನಡೆಸಿದರು ಎಂಬುದಾಗಿ ಇತಿಹಾಸ ಹೇಳುತ್ತದೆ. ಧರ್ಮ, ಚರ್ಮ, ವರ್ಣ, ಭಾಷೆ, ಸಂಸ್ಕøತಿ.. ಇವೆಲ್ಲ ಶತಮಾನಗಳ ಹಿಂದೆಯೇ ಭಾರತೀಯ ನಾಗರಿಕತೆಗೆ ದೊಡ್ಡದೊಂದು ಸವಾಲಾಗಿತ್ತು. ಚರ್ಮವನ್ನು ಮನುಷ್ಯನ ಶ್ರೇಷ್ಠತೆಯ ಮಾನದಂಡವಾಗಿಟ್ಟುಕೊಂಡು, ಆ ಶ್ರೇಷ್ಠತೆಯ ವ್ಯಾಪ್ತಿಗೆ ಒಳಪಡದವರನ್ನು ನಿರಂತರವಾಗಿ ದಮನಿಸುತ್ತಾ ಬರಲಾದ ಒಂದು ದೀರ್ಘ ಕಣ್ಣೀರ ಇತಿಹಾಸ ಈ ಮಣ್ಣಿಗಿದೆ. ಅಸಂಖ್ಯಾತ ಜೀವಗಳು ಈ ಕಾರಣದಿಂದಾಗಿ ಮಣ್ಣಾಗಿದೆ. ಇವತ್ತಿಗೂ ಆ ಸರಪಳಿ ಮುಂದುವರಿದಿದೆ. ನಿಜವಾಗಿ, ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಅಥವಾ ಮುಸ್ಲಿಮರನ್ನು ಹಿಂದೂಗಳ ವಿರುದ್ಧ ಬ್ರಿಟಿಷರು ಎತ್ತಿ ಕಟ್ಟಿರಬಹುದು. ಪರಸ್ಪರ ದ್ವೇಷ ಮತ್ತು ವಿಭಜನೆಯ ಮನಸ್ಥಿತಿಗೆ ಅವರು ಇಂಬು ನೀಡಿರಬಹುದು. ಮಿಲ್, ವಿಲ್ಸನ್ ಅಥವಾ ವಾರ್ಡ್‍ರಂಥ ಫಿಲಾಸಫರ್‍ಗಳು, ಬರಹಗಾರರು ಬಿಳಿಚರ್ಮ ಶ್ರೇಷ್ಠತೆಗೆ ಒತ್ತುಕೊಟ್ಟು ಬರೆದಿರಬಹುದು. ಆದರೆ ಜನಾಂಗೀಯ ಶ್ರೇಷ್ಠತೆಯನ್ನು ಈ ದೇಶ ಕಲಿತುಕೊಂಡದ್ದು ಬ್ರಿಟಿಷರಿಂದಲ್ಲ. ಅದು ಈ ದೇಶದಲ್ಲಿ ಎಷ್ಟೋ ವರ್ಷಗಳ ಹಿಂದಿನಿಂದಲೇ ಜಾರಿಯಲ್ಲಿತ್ತು. ಬ್ರಿಟಿಷರು ಅದರಿಂದ ಲಾಭ ಎತ್ತಿಕೊಳ್ಳುವ ಪ್ರಯತ್ನವನ್ನಷ್ಟೇ ಮಾಡಿದರು. ಆದರೆ ಅಂಬೇಡ್ಕರ್ ಸಂವಿಧಾನ ಈ ಕ್ರೌರ್ಯವನ್ನು ತೀವ್ರವಾಗಿ ಪ್ರಶ್ನಿಸಿತು. ಇದರ ನಿರ್ಮೂಲನೆಗಾಗಿ ವಿವಿಧ ಉಪಕ್ರಮಗಳನ್ನು ಪರಿಚಯಿಸಿತು. ಸಾಮಾಜಿಕ, ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕವಾಗಿ ಜನರ ನಡುವೆ ಇರುವ ವÉೈವಿಧ್ಯತೆಯನ್ನು ಉಳಿಸಿಕೊಂಡೇ ಸಮಾನ ಸ್ವಾತಂತ್ರ್ಯ, ಹಕ್ಕು, ಕರ್ತವ್ಯಗಳೊಂದಿಗೆ ಬದುಕುವ ಅವಕಾಶವನ್ನು ಪ್ರತಿಪಾದಿ ಸಿತು. ಆದರೆ ಈ ಬಗ್ಗೆ ಒಂದು ವರ್ಗದ ಅಸಮಾಧಾನ ಅಂದೇ ವ್ಯಕ್ತವಾಗಿತ್ತು. ದಲಿತ ನ್ಯಾಯಾಧೀಶರು ನಿವೃತ್ತಿಯಾದ ಬಳಿಕ ಆ ಜಾಗಕ್ಕೆ ಬಂದ ಉಚ್ಚ ಜಾತಿಯ ನ್ಯಾಯಾಧೀಶರು ಗಂಗಾಜಲ ಸಿಂಪಡಿಸಿ ಕುರ್ಚಿ ವಹಿಸಿಕೊಂಡ ನಿದರ್ಶನ ಈ ದೇಶಕ್ಕಿದೆ. ಧರ್ಮ ಮತ್ತು ಚರ್ಮದ ಕಾರಣಕ್ಕಾಗಿ ಹತ್ಯೆ ಮತ್ತು ಹತ್ಯಾಕಾಂಡಗಳು ಅವತ್ತಿನಿಂದ ಈವತ್ತಿನ ವರೆಗೆ ಧಾರಾಳ ನಡೆದಿವೆ. ಆಘಾತಕಾರಿ ಅಂಶ ಏನೆಂದರೆ, ಸಂವಿಧಾನಕ್ಕೆ ವೃದ್ಧಾಪ್ಯ ಆವರಿಸುತ್ತಾ ಬರುತ್ತಿರುವಂತೆಯೇ ಹಳೆಕಾಲದ ಮನುಷ್ಯ ವಿರೋಧಿ ಚಿಂತನೆಗಳು ಪ್ರಬಲವಾಗುತ್ತಾ ಹೋಗುತ್ತಿವೆ ಎಂಬುದು. ಮನುಷ್ಯರನ್ನು ಅನ್ಯರಾಗಿಸುವ ಪ್ರಯತ್ನಗಳು ಇವತ್ತು ಧರ್ಮದ ಹೆಸರಿನಲ್ಲೇ ನಡೆಯುತ್ತಿವೆ. ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಹಿಂದೂ ಗ್ರಾಮಗಳು ಮಾತ್ರ ಇರುವುದಲ್ಲ, ಜಾತ್ರೆಗಳು ಕೂಡ ಮುಸ್ಲಿಮ್ ರಹಿತವಾಗಿ ನಡೆಯುತ್ತಿವೆ. ಫ್ಲ್ಯಾಟುಗಳಲ್ಲಿ ‘ಮುಸ್ಲಿಮರಿಗೆ ಅವಕಾಶವಿಲ್ಲ’ ಎಂಬ ಬೋರ್ಡ್‍ಗಳನ್ನು ತೂಗು ಹಾಕಲಾಗುತ್ತಿದೆ. ಮುಸ್ಲಿಮ್ ವಿರೋಧಿ ಹೇಳಿಕೆಗಳನ್ನು ಜನಪ್ರತಿನಿಧಿ ಗಳೇ ನೀಡತೊಡಗಿದ್ದಾರೆ. ಒಂದು ಬಗೆಯ ಸಾಂಸ್ಕ್ರತಿಕ ಧ್ರುವೀಕರಣದ ಸೂಚನೆಗಳು ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗುತ್ತಿದೆ. ಮುಸ್ಲಿಮರೆಂದರೆ ಹಿಂದೂ ವಿರೋಧಿಗಳು ಎಂಬ ಭಾವನೆ ಉಂಟಾಗುವಂತೆ ಮಾಡಲಾಗುವ ಈ ಪ್ರಕ್ರಿಯೆಯ ದೂರಗಾಮಿ ಪರಿಣಾಮಗಳೇನಾಗಬಹುದು? ಈಗಾಗಲೇ ಈ ದೇಶದ ದಲಿತರು ಅನುಭವಿಸುತ್ತಿರುವ ‘ಅನ್ಯ'ತನಕ್ಕೆ ಮುಸ್ಲಿಮರನ್ನು ಸೇರ್ಪಡೆಗೊಳಿಸುವುದು ಇದರ ಉದ್ದೇಶವೇ? ದೇಶದಲ್ಲಿ ಮುಸ್ಲಿಮರನ್ನು ದಲಿತರ ಸ್ಥಿತಿಗೆ ತಂದು ವ್ಯವಸ್ಥಿತವಾಗಿ ತುಳಿಯುವ ಷಡ್ಯಂತ್ರ ಇದರ ಹಿಂದಿರಬಹುದೇ? ದಲಿತರನ್ನು ಹಿಂದೂ ವಲಯಕ್ಕೆ ಸೇರಿಸಿಕೊಂಡು ಮುಸ್ಲಿಮರಿಂದ ಆ ಜಾಗವನ್ನು ತುಂಬಿಸುವ ತಂತ್ರಗಳು ನಡೆಯುತ್ತಿವೆಯೇ? ಮುಸ್ಲಿಮರನ್ನು ನಿಧಾನವಾಗಿ ಸಾರ್ವಜನಿಕ ವಲಯದಲ್ಲಿ ಒಂಟಿಯಾಗಿಸುತ್ತಾ, ಜಾತ್ರೆ, ಸಂಸ್ಕ್ರತಿ, ಆರಾಧನೆಯ ಹೆಸರಲ್ಲಿ ಬಹಿಷ್ಕಾರ ಹೇರುತ್ತಾ ಮತ್ತು ನಿರಂತರವಾಗಿ ಮುಸ್ಲಿಮರ ವಿರುದ್ಧ ವದಂತಿಗಳನ್ನು ಹಬ್ಬಿಸುತ್ತಾ ‘ಅನ್ಯ'ರಾಗಿಸುವುದು ಇದರ ಹಿಂದಿನ ಮರ್ಮವೇ? ಇವತ್ತು ಜಾತ್ರೆಯಿಂದ ಮುಸ್ಲಿಮರನ್ನು ಹೊರಗಿಟ್ಟ
ವರು ನಾಳೆ, ಹಿಂದೂಗಳು ನಡೆಸುವ ಶಾಲೆಗಳಿಂದ, ಶಾಪ್ ಗಳಿಂದ, ಕ್ಲಿನಿಕ್‍ಗಳಿಂದ ಹೊರಗಿಡುವ ಬ್ಯಾನರ್‍ಗಳನ್ನು ತೂಗುಹಾಕಲಾರರು ಎಂದು ಹೇಗೆ ಹೇಳುವುದು? ಅದರ ಪರಿಣಾಮ ಏನಾದೀತು?