Thursday, August 13, 2015

10 ನಿಮಿಷದ ಸ್ಪರ್ಧೆಗಾಗಿ ಎರಡು ವರ್ಷ ತರಬೇತಿ ನಿರತರಾಗುವವರ ಮಧ್ಯೆ..

ಅಲ್‍ಝೈನ್ ತಾರಿಕ್
ಟಾಮ್ ಡಾಲಿ
    ಕಳೆದ ಜುಲೈ 18ರಂದು ಬ್ರಿಟನ್ನಿನ ಪ್ರಸಿದ್ಧ ಪತ್ರಿಕೆ ದಿ ಗಾರ್ಡಿಯನ್‍ನಲ್ಲಿ ಪ್ರಕಟವಾದ ಬರಹವೊಂದು ಓದುಗರ ನಡುವೆ ತೀವ್ರ ಚರ್ಚೆಗೆ ಕಾರಣವಾಯಿತು. ಪರ-ವಿರುದ್ಧ ಅಭಿಪ್ರಾಯಗಳು ಮೂಡಿಬಂದುವು. ಆ ಬರಹಕ್ಕೆ ನೀಡಿದ ಶೀರ್ಷಿಕೆಯನ್ನು ಒಂದು ಗುಂಪು ಬೆಂಬಲಿಸಿದರೆ ಇನ್ನೊಂದು ಗುಂಪು ಅದನ್ನು ವಿರೋಧಿಸಿತು. ಶೀರ್ಷಿಕೆಯು ಓದುಗರನ್ನು ಕೇಂದ್ರೀಕರಿಸಿರಬೇಕೋ ಅಥವಾ ಬರಹವನ್ನು ಕೇಂದ್ರೀಕರಿಸಿರಬೇಕೋ ಎಂಬ ಪ್ರಶ್ನೆಗಳೆದ್ದುವು. ಅಷ್ಟಕ್ಕೂ, Tom Daley: I always knew I was attracted to guys (ನಾನು ಹುಡುಗರಿಗೆ ಆಕರ್ಷಣೀಯವಾಗಿರುವೆನೆಂದು ನನಗೆ ಮೊದಲೇ ಗೊತ್ತಿತ್ತು - ಟಾಮ್ ಡಾಲಿ) ಎಂಬ ಶೀರ್ಷಿಕೆಯಲ್ಲಿ ಬ್ರಿಟನ್ನಿನ ಜನಪ್ರಿಯ ಈಜುಪಟು ಟಾಮ್ ಡಾಲಿಯ ಕುರಿತಂತೆ ಪ್ರಕಟವಾದ ಬರಹವೇ ಈ ಚರ್ಚೆಯ ಕೇಂದ್ರ ಬಿಂದು. ಸುಮಾರು 4 ಸಾವಿರ ಪದಗಳಷ್ಟು ದೀರ್ಘವಾದ ಈ ಬರಹದಲ್ಲಿ ಟಾಮ್ ಡಾಲಿ ಮನಬಿಚ್ಚಿ ಮಾತಾಡಿದ್ದರು. ಗಾರ್ಡಿಯನ್ ಪತ್ರಿಕೆಯು ಅವೆಲ್ಲವನ್ನೂ ಓದುಗರ ಮುಂದೆ ಸೊಗಸಾಗಿ ಮಂಡಿಸಿತ್ತು. ಬೆನ್ ಕ್ವಿಂಟನ್‍ರು ಪೋಟೋಗಳನ್ನು ಕ್ಲಿಕ್ಕಿಸಿದ್ದರು. ಗಾರ್ಡಿಯನ್ ಪತ್ರಿಕೆಯ ಸೈಮನ್ ಹಟ್ಟೆನ್ ಸ್ಟೋನ್‍ರು ಟಾಮ್ ಡಾಲಿಯ ಜೊತೆಗೆ ನಡೆಸಿದ ಈ ಮಾತು ಕತೆಯು ಎಷ್ಟು ಸೊಗಸಾಗಿದೆಯೆಂದರೆ, ಅದು ಒಂದೇ ಬಾರಿಗೆ ಓದಿಸಿ ಬಿಡುತ್ತದೆ. ನಮಗೆ ಗೊತ್ತಿಲ್ಲದ ಅಥವಾ ಗೊತ್ತು ಮಾಡಿಕೊಳ್ಳಲು ಆಸಕ್ತಿ ತೋರದ ಜಗತ್ತೊಂದನ್ನು ಅದು ಪರಿಚಯಿಸುತ್ತದೆ. ಅಂದಹಾಗೆ,
      2013ರಲ್ಲಿ ಯೂಟ್ಯೂಬ್‍ನಲ್ಲಿ ಕಾಣಿಸಿಕೊಂಡ ಟಾಮ್ ಡಾಲಿಯ ವೀಡಿಯೋವು ಅಂದು ಬ್ರಿಟನ್‍ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಅದಕ್ಕೆ ಕಾರಣವೂ ಇದೆ.
      ಟಾಮ್ ಡಾಲಿ ಮೊಟ್ಟಮೊದಲು ಜಗತ್ತಿನ ಗಮನಸೆಳೆದದ್ದು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ. ಆಗ ಟಾಮ್ ಡಾಲಿ 14ರ ಹುಡುಗ. ಬೀಜಿಂಗ್‍ನ ಈಜುಕೊಳವು ಆತನಿಂದಾಗಿ ಅಂದು ಜನಪ್ರಿಯವಾಗಿತ್ತು. ಭಾರೀ ಸಂಖ್ಯೆಯಲ್ಲಿ ವೀಕ್ಷಕರು ಈ ಮರಿ ವಿೂನನ್ನು ನೋಡುವುದಕ್ಕೆ ಕೊಳದ ಸುತ್ತ ಸೇರಿದ್ದರು. ಅದಕ್ಕೆ ತಕ್ಕಂತೆ ಆತ ಪ್ರದರ್ಶನವನ್ನೂ ನೀಡಿದ್ದ. ಡೈವಿಂಗ್ (ತಲೆ ಮೊದ ಲಾಗುವಂತೆ ಮೇಲಿನಿಂದ ಕೆಳಕ್ಕೆ ಧುಮುಕುವುದು) ವಿಭಾಗದಲ್ಲಿ ಆತನ ತಂಡ ಫೈನಲ್ ಹಂತಕ್ಕೆ ಪ್ರವೇಶಿಸಿತ್ತು. ಹಾಗೆ ಫೈನಲ್ ಪ್ರವೇಶಿಸಿದ ಬ್ರಿಟನ್ನಿನ ಅತ್ಯಂತ ಕಿರಿಯ ಸ್ಪರ್ಧಾಳು ಎಂಬ ಗೌರವಕ್ಕೆ ಆತ ಅಂದು ಪಾತ್ರನಾಗಿದ್ದ. ಫೈನಲ್‍ನಲ್ಲಿ ಈ ತಂಡ ಪದಕ ಪಡೆಯದಿದ್ದರೂ ಮತ್ತು ಪದಕ ಕೈ ತಪ್ಪುವುದಕ್ಕೆ ಟಾಮ್ ಡಾಲಿಯ ಕಳಪೆ ಪ್ರದರ್ಶನವೇ ಕಾರಣ ಎಂದು ಸಹ ಈಜುಗಾರ ಬ್ಲೇಕ್ ಆಲ್‍ಡ್ರಿಜ್ ಆರೋಪಿಸಿದರೂ ಜಗತ್ತು ಕಣ್ಣು ನೆಟ್ಟದ್ದು ಈ ಹುಡುಗನ ಮೇಲೆಯೇ. ಮಾಧ್ಯಮಗಳೂ ಈ ಎಳೆ ಹುಡುಗನ ಸುತ್ತ ನೆರೆದವು. ಆತನನ್ನು ಬ್ರಿಟನ್ನಿನ ಭವಿಷ್ಯದ ವಿೂನು ಎಂದು ಕರೆದುವು. ಹಾಗಂತ, 7 ವರ್ಷದ ಪೋರನಿರುವಾಗಲೇ ನೀರಿಗೆ ಡೈವ್ ಮಾಡುತ್ತಿದ್ದ ಮತ್ತು 8 ವರ್ಷ ಪ್ರಾಯದಲ್ಲೇ ಈಜು ಮತ್ತು ಡೈವಿಂಗ್ ತರಬೇತಿಯನ್ನು ಪಡೆಯಲು ಪ್ರಾರಂಭಿಸಿದ್ದ ಟಾಮ್ ಡಾಲಿಯಲ್ಲಿ ಅಸಾಮಾನ್ಯ ಪ್ರತಿಭೆಯಿತ್ತು. 9 ವರ್ಷದವನಾಗಿದ್ದಾಗ ಜೂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಯುರೋಪಿಯನ್ ಚಾಂಪಿಯನ್‍ಶಿಪ್ ಅನ್ನು ಗೆಲ್ಲುವಾಗ ಆತನಿಗೆ ಬರೇ 13 ವರ್ಷ. ಚಿನ್ನದ ಪದಕ ಪಡೆದ ಅತೀ ಕಿರಿಯ ಈಜುಪಟು ಎಂಬ ಗೌರವಕ್ಕೂ ಆತ ಪಾತ್ರನಾಗಿದ್ದ. 15ರ ಹರೆಯದಲ್ಲಿ ಆತ ಬ್ರಿಟನ್ನಿನ ಅತೀ ಕಿರಿಯ ವಿಶ್ವ ಚಾಂಪಿಯನ್ ಆಗಿ ಗುರುತಿಸಿಕೊಂಡ. ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಎರಡು ಚಿನ್ನದ ಪದಕ ಪಡೆಯುವಾಗ ಆತನ ಪ್ರಾಯ ಬರೇ 16 ವರ್ಷ. BBCಯು ಪ್ರತಿ ವರ್ಷ ನೀಡುವ ‘ಯುವ ಕ್ರೀಡಾಳು' ಪ್ರಶಸ್ತಿಯನ್ನು 3 ಬಾರಿ ಪಡಕೊಂಡವನೂ ಈತನೇ. ಇದರ ಬಳಿಕ 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ ನಲ್ಲಿ ಆತ ಕಂಚಿನ ಪದಕ ಪಡೆದ. ಆಗ ಆತನ ವಯಸ್ಸು 18. ಆದರೆ ಈ ಪದಕಗಳ ಹಾದಿ ಆತನ ಪಾಲಿಗೆ ತೀರಾ ಸಲೀಸಾಗಿರಲಿಲ್ಲ. ಎಲೆಕ್ಟ್ರಿಶಿಯನ್ ಆಗಿದ್ದ ಅಪ್ಪ ರಾಬ್‍ರು ಮಗನ ಪ್ರತಿಭೆಯನ್ನು ಕಂಡು ಕೆಲಸವನ್ನು ತ್ಯಜಿಸಿ ಮಗನಿಗೆ ಜೊತೆ ನೀಡಿದ್ದರು. ಆದರೆ ಬ್ರೈನ್ ಕ್ಯಾನ್ಸರ್‍ಗೆ ತುತ್ತಾಗಿ 2011ರಲ್ಲಿ ಅವರು ಸಾವಿಗೀಡಾದಾಗ ಟಾಮ್ ಡಾಲಿ 12ರ ಹುಡುಗ. ಒಂದು ಕಡೆ ಜೊತೆಗಿಲ್ಲದ ಅಪ್ಪ, ಇನ್ನೊಂದು ಕಡೆ ತರಬೇತಿ ಮತ್ತು ಪಂದ್ಯಾಟದ ಹೆಸರಲ್ಲಿ ತಿಂಗಳುಗಟ್ಟಲೆ ಮನೆಯಿಂದ ಹೊರಗಿರಬೇಕಾದ ಅನಿವಾರ್ಯತೆ- ಇವುಗಳಿಂದಾಗಿ ಹುಡುಗ ಟಾಮ್ ಡಾಲಿ ಕುಸಿದು ಹೋಗಿದ್ದ. ಕಿಟಕಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತರಬೇತುದಾರ ಆ್ಯಂಡಿ ಬ್ಯಾಂಕ್ಸ್ ಗೆ ಬೆದರಿಕೆ ಹಾಕುತ್ತಿದ್ದ. ಹೀಗೆ ಬೆಳೆದ ಟಾಮ್ ಡಾಲಿ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಪಡೆದ ಬಳಿಕ ಈಜುಕೊಳದಿಂದ ನಾಪತ್ತೆಯಾದ. ಅಪ್ಪಟ ಪ್ರತಿಭೆಯೊಂದು ದಿಢೀರ್ ಜನಪ್ರಿಯತೆ ಮತ್ತು ಹರೆಯದ ಆಕರ್ಷಣೆಯಿಂದಾಗಿ ಕಳೆದು ಹೋಗುತ್ತಿರುವ ಬಗ್ಗೆ ಅಲ್ಲಲ್ಲಿ ವಿಷಾದ ವ್ಯಕ್ತವಾಗುತ್ತಿತ್ತು. ಈಜುಕೊಳಕ್ಕಿಂತ ಟಿ.ವಿ. ಸ್ಟುಡಿಯೋಗಳು ಮತ್ತು ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದನ್ನೇ ಹೆಚ್ಚು ಇಷ್ಟಪಡುತ್ತಿದ್ದ ಹುಡುಗನ ಹುಡುಗಾಟಿಕೆಗೆ ವ್ಯಾಪಕ ಬೇಸರ ವ್ಯಕ್ತವಾಗಿತ್ತು. ಆ ಬಳಿಕ ಕೆಲವು ಸಮಯ ಮಾಧ್ಯಮ ಗಮನದಿಂದ ಹೊರಬಿದ್ದ ಆತ 2013ರಲ್ಲಿ ಯೂಟ್ಯೂಬ್ ನಲ್ಲಿ ಕಾಣಿಸಿಕೊಂಡ. ತಾನು ಪ್ರೇಮಪಾಶದಲ್ಲಿ ಬಿದ್ದಿದ್ದು; ಥಾಯಿಲೆಂಡ್, ಜಪಾನ್, ನ್ಯೂಝಿಲ್ಯಾಂಡ್, ಆಸ್ಟ್ರೇಲಿಯಾ, ಸ್ಪೈನ್, ಫ್ರಾನ್ಸ್, ಸ್ವಿಝರ್ಲ್ಯಾಂಡ್, ಮೊರಾಕ್ಕೊ, ಕ್ಯಾಲಿಫೋರ್ನಿಯಾ, ಟೆಕ್ಸಾಸ್, ಹೈಟಿ, ಜಮೈಕಾ, ಫ್ಲೋರಿಡಾ, ಮೆಕ್ಸಿಕೋ.. ಸಹಿತ ವಿವಿಧ ರಾಷ್ಟ್ರಗಳಿಗೆ ವಿಶ್ವ ಪರ್ಯಟನೆ ಮಾಡಿದ್ದು.. ಎಲ್ಲವನ್ನೂ ಹೇಳಿಕೊಂಡ. ಮಾಧ್ಯಮಗಳು ಮತ್ತೆ ಆತನ ಬಗ್ಗೆ ಸುದ್ದಿ ಬರೆಯತೊಡಗಿದುವು.    ಇದೀಗ ಆತ ಮತ್ತೆ ಈಜು ಕೊಳದತ್ತ ಮರಳಿದ್ದಾನೆ. ತಾನು ಹಿಂದಿಗಿಂತ ಪ್ರೌಢನಾಗಿದ್ದೇನೆ ಅನ್ನುತ್ತಿದ್ದಾನೆ. 2016ರ ರಿಯೋ ಒಲಿಂಪಿಕ್ಸ್ ಒಂದೇ ನನ್ನ ಮುಂದಿರುವ ಏಕೈಕ ಗುರಿ ಎಂದೂ ಹೇಳುತ್ತಿದ್ದಾನೆ. ಹಾಗಂತ, ಈ ಗುರಿಯನ್ನು ತಲುಪುವುದಕ್ಕಾಗಿ ಆತ ಪಡುತ್ತಿರುವ ಪರಿಶ್ರಮ ಅಚ್ಚರಿಯನ್ನು ಮೂಡಿಸುತ್ತದೆ.
     ನಿಜವಾಗಿ, ನೀರಿಗೆ ಡೈವ್ ಮಾಡುವುದೆಂದರೆ ಅದೊಂದು ಅಪಾಯಕಾರಿ ಸಾಹಸ. ಗಂಟೆಗೆ ಸುಮಾರು 35 ಮೈಲು ವೇಗದಲ್ಲಿ ಆತ ಈ ಹಿಂದೆ ನೀರಿಗೆ ಧುಮುಕುತ್ತಿದ್ದ. ಪ್ರತಿ ಬಾರಿ ಹಾಗೆ ನೀರಿಗೆ ಧುಮುಕುವಾಗಲೂ ಕಾರು ಢಿಕ್ಕಿ ಹೊಡೆದಂಥ ಅನುಭವವಾಗುತ್ತಿತ್ತಂತೆ. ಡೈವ್ ನೂರು ಶೇಕಡಾ ಯಶಸ್ವಿ ಮತ್ತು ಪರಿಪೂರ್ಣವೇ ಆಗಿರುತ್ತಿದ್ದರೂ ಪ್ರತಿ ಬಾರಿಯೂ ನೋವಾಗುತ್ತಿತ್ತಂತೆ. ಅಭ್ಯಾಸದ ನಿಮಿತ್ತ ಪ್ರತಿ ಬಾರಿ ಡೈವ್ ಮಾಡುವ ಬೋರ್ಡ್‍ಗೆ ಹತ್ತುವಾಗಲೂ ಭಯವಾಗುತ್ತಿತ್ತಂತೆ. ತಾನು ಕೆಲ ಸಮಯ ಈಜು ಕೊಳದಿಂದ ದೂರವಾಗಲು ಈ ಭಯವೂ ಕಾರಣವಾಗಿರಬಹುದು ಎಂಬುದು ಆತನ ನಂಬಿಕೆ. ಇವತ್ತು ಆತ ಅತ್ಯಂತ ಪ್ರೌಢ. ಯಾವ ಭಯವೂ ಇಲ್ಲ. ಬಿಡುವು ರಹಿತ ತರಬೇತಿಯಲ್ಲಿ ಟಾಮ್ ಡಾಲಿ ಮಗ್ನನಾಗಿದ್ದಾನೆ. ಒಂದು ವಾರದಲ್ಲಿ 11 ಅವಧಿಯ (ಸೆಶನ್ಸ್) ಅಭ್ಯಾಸ ಕ್ರಮ. ಪ್ರತಿ ಅವಧಿಯೂ 3ರಿಂದ 4 ಗಂಟೆಯಷ್ಟು ದೀರ್ಘವಿರುತ್ತದೆ. ಮತ್ತೆ ಕಠಿಣವಾದ ಪಥ್ಯಾಹಾರ (Diet). ಮೊಟ್ಟೆಯ ಬಿಳಿ ಭಾಗ, ಪಾಲಕ್ ಸೊಪ್ಪು ಮತ್ತು ಪಾತ್ರೆ ತುಂಬ ಗಂಜಿ ನೀರು - ಇದು ಬೆಳಗ್ಗಿನ ಆಹಾರ. ಕೋಳಿ ಮತ್ತು ದ್ವಿದಳ ಧಾನ್ಯಗಳು ಮಧ್ಯಾಹ್ನದ ಊಟಕ್ಕೆ. ಸಲ್‍ಮೋನ್ ಎಂಬ ವಿೂನು ಅಥವಾ ಚಿಕನ್ ಮತ್ತು ತರಕಾರಿಗಳನ್ನು ರಾತ್ರಿಯ ಊಟವಾಗಿ ಬಡಿಸಲಾಗುತ್ತದೆ. ಪ್ರತಿದಿನವೂ ಇದರದ್ದೇ ಕಾರುಬಾರು. ಅದೇ ಆಹಾರ. ಅದೇ ರುಚಿ. ಅದೇ ಅಭ್ಯಾಸ, ಅದೇ 10 ಗಂಟೆಗಳ ನಿದ್ದೆ. ಇದರ ನಡುವೆ ಭಾರ ಹೆಚ್ಚಾಗದಂತೆ, ಬೊಜ್ಜು ಬಾರದಂತೆ ಜಾಗರೂಕತೆ ಪಾಲಿಸಬೇಕು. ಮದುವೆ, ಮುಂಜಿ, ಸ್ನೇಹ ಕೂಟ ಮುಂತಾದವುಗಳನ್ನೆಲ್ಲ ತ್ಯಾಗ ಮಾಡಿಕೊಂಡು ಬರೇ ಈಜು, ಈಜು, ಈಜು ಎಂದು ಈಜುಕೊಳದತ್ತಲೇ ಸುಳಿದಾಡುತ್ತಿರಬೇಕಾಗುತ್ತದೆ. ಒಂದು ಬಗೆಯ ಜೈಲಿನ ಅನುಭವದೊಂದಿಗೆ ಅಭ್ಯಾಸನಿರತವಾಗಬೇಕಾಗುತ್ತದೆ. ಹಾಗಂತ, ಡೈವಿಂಗ್ ಎಂಬುದು ತೀರಾ ಅಪಾಯರಹಿತವೇನಲ್ಲ. ಟಾಮ್ ಡಾಲಿಯ ತಲೆ ಮುಂಭಾಗದಲ್ಲಿ ಇರುವ ಗಾಯಗಳೇ ಅದು ಎಷ್ಟು ಅಪಾಯಕಾರಿ ಎಂಬುದನ್ನು ಹೇಳುತ್ತದೆ. ಅಷ್ಟಕ್ಕೂ, ಕ್ರಿಕೆಟ್, ಫುಟ್ಬಾಲ್, ಟೆನ್ನಿಸ್‍ಗಳೇ ಹೆಚ್ಚಾಗಿ ಸದ್ದು ಮಾಡುವ ಇಂದಿನ ದಿನಗಳಲ್ಲಿ ಕ್ರೀಡಾಕೂಟಗಳು ಮತ್ತು ಅದರ ಅಭ್ಯಾಸ ಕ್ರಮಗಳು ಚರ್ಚೆಗೊಳಗಾಗುವುದು ತೀರಾ ಕಡಿಮೆ. ಒಲಿಂಪಿಕ್ಸ್ ನಡೆಯುವುದೇ 4 ವರ್ಷಗಳಿಗೊಮ್ಮೆ. ಆಗ ಕ್ರೀಡಾಪಟುಗಳ ವಿವಿಧ ಕಸರತ್ತುಗಳನ್ನು ನೋಡಿ ನಾವು ಬೆರಗಾಗುತ್ತೇವೆಯೇ ಹೊರತು ಆ ಕಸರತ್ತುಗಳ ಹಿಂದಿರುವ ದೀರ್ಘ ಶ್ರಮವನ್ನು ಅವಲೋಕಿಸುವುದಕ್ಕೆ ಅವಕಾಶಗಳು ಸಿಗುವುದಿಲ್ಲ. ಟೆನ್ನಿಸೋ ಕ್ರಿಕೆಟ್ಟೋ ನಮ್ಮ ಮುಂದೆ ಸದಾ ಇರುತ್ತದೆ. ಟಿ.ವಿ. ಚಾನೆಲ್ ತಿರುಗಿಸಿದರೆ ಒಂದಲ್ಲ ಒಂದು ಚಾನೆಲ್‍ನಲ್ಲಿ ಅವು ಇದ್ದೇ ಇರುತ್ತದೆ. ಆದರೆ ಲಾಂಗ್ ಜಂಪ್, ಓಟ, ಈಜು, ಮ್ಯಾರಥಾನ್ ಸಹಿತ ಒಂದು ದೊಡ್ಡ ಕ್ರೀಡಾ ಜಗತ್ತು ಬಹುತೇಕ ನಮ್ಮಿಂದ ಸದಾ ಮರೆಯಾಗಿರುತ್ತದೆ. ಅವನ್ನು ಚಾನೆಲ್‍ಗಳು ತೋರಿಸಬೇಕಾದರೆ ಒಲಿಂಪಿಕ್ಸೋ, ಕಾಮನ್‍ವೆಲ್ತೋ ಯುರೋಪಿಯನ್ ಪಂದ್ಯಾವಳಿಗಳೋ ಜರಗಬೇಕು. ಅಲ್ಲದೇ ಆ ಪಂದ್ಯಾವಳಿ ಮುಗಿದ ತಕ್ಷಣ ಟಿ.ವಿ.ಗಳಿಂದ ಅವು ನಾಪತ್ತೆಯಾಗಿ ಮತ್ತೆ ಆ ಜಾಗದಲ್ಲಿ ಅದೇ ಕ್ರಿಕೆಟ್ಟು.. ತುಂಬಿಕೊಳ್ಳುತ್ತದೆ. ಅಂದಹಾಗೆ, ಕ್ರೀಡಾಕೂಟಗಳು ನಾಲ್ಕು ವರ್ಷಕ್ಕೊಮ್ಮೆಯೋ ಎರಡು ವರ್ಷಕ್ಕೊಮ್ಮೆಯೋ ಜರುಗುವುದಾದರೂ ಸ್ಪರ್ಧಾಳುಗಳು ನೇರವಾಗಿ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲವಲ್ಲ. ಅವರ ಅಭ್ಯಾಸ ಪ್ರತಿದಿನವೂ ನಡೆಯುತ್ತಲೇ ಇರುತ್ತದೆ. ಬೆಳಿಗ್ಗೆ, ಸಂಜೆ.. ಎಂದು ಪ್ರತಿದಿನ ಬೆವರು ಹರಿಸುತ್ತಲೇ ಇರುತ್ತಾರೆ. ಅಂಥದ್ದೊಂದು ಕಠಿಣ ಅಭ್ಯಾಸದ ಬಳಿಕ ಒಲಿಂಪಿಕ್ಸ್ ನಲ್ಲಿ ಐದೋ ಹತ್ತೋ ನಿಮಿಷ ಈಜಿ ಬಳಿಕ ಮರೆಯಾಗುತ್ತಾರೆ. ಕೇವಲ 10 ನಿಮಿಷದ ಸ್ಪರ್ಧೆಗಾಗಿ ಎರಡು ವರ್ಷ ತರಬೇತಿ ನಿರತರಾಗುವ ಕ್ರೀಡಾಪಟುವನ್ನೊಮ್ಮೆ ಕಲ್ಪಿಸಿಕೊಳ್ಳಿ. ಅಲ್ಲಿ ಇರಬೇಕಾದ ಮಾನಸಿಕ ದೃಢತೆ, ಸಹನೆ, ಉತ್ಸಾಹ ಯಾವ ರೀತಿಯದ್ದಾಗಿರಬಹುದು? ಪದಕ ಕೈತಪ್ಪುವ ಕ್ರೀಡಾಪಟುವಿನ ಪರಿಸ್ಥಿತಿ ಹೇಗಿರಬಹುದು? ಆತ ಹೇಗೆ ತನ್ನನ್ನು ನಿಯಂತ್ರಿಸಿಕೊಳ್ಳಬಹುದು? ಅಷ್ಟಕ್ಕೂ, ಈ ಬಗೆಯ ಚಿಂತನೆಗೆ ಹಚ್ಚಬಹುದಾದ ಬರಹವೊಂದಕ್ಕೆ Tom Daley: I always knew I was attracted to guys ಎಂಬ ಶೀರ್ಷಿಕೆಯನ್ನು ಕೊಟ್ಟರೆ ಓದುಗರು ಪ್ರಶ್ನಿಸದಿರುತ್ತಾರೆಯೇ? ಇಡೀ ಬರಹದ ಎಲ್ಲೋ ಮಧ್ಯದಲ್ಲಿ ಒಂದು ಕಡೆ, ಮೂರ್ನಾಲ್ಕು ವಾಕ್ಯಗಳಲ್ಲಿ ಬಂದು ಮುಗಿದು ಹೋಗುವ ಅವರ ವೈಯಕ್ತಿಕ ವಿಷಯವನ್ನೇ ಶೀರ್ಷಿಕೆಯಾಗಿ ತಂದರೆ ಓದುಗರು ಕೆರಳದಿರುತ್ತಾರೆಯೇ? ಬರಹವೊಂದಕ್ಕೆ ಕೊಡುವ ಶೀರ್ಷಿಕೆಗೆ ಏನನ್ನು ಮಾನದಂಡವಾಗಿಸುತ್ತೀರಿ ಎಂದು ಪ್ರಶ್ನಿಸದಿರುತ್ತಾರೆಯೇ?
      ರಷ್ಯಾದಲ್ಲಿ ಸದ್ಯ ನಡೆಯುತ್ತಿರುವ ವಿಶ್ವ ಈಜು ಚಾಂಪಿಯನ್ ಶಿಪ್‍ನಲ್ಲಿ ಬಹರೈನ್‍ನ ಅಲ್‍ಝೈನ್ ತಾರಿಕ್ ಎಂಬ 10ರ ಬಾಲೆ ಈಜಿ ಜಾಗತಿಕ ಸುದ್ದಿಯಾಗಿರುವುದನ್ನು ಓದುತ್ತಿರುವಾಗ ಟಾಮ್ ಡಾಲಿ ಮತ್ತು ದಿ ಗಾರ್ಡಿಯನ್ ಪತ್ರಿಕೆಯ ಶೀರ್ಷಿಕೆ ನೆನಪಾದುವು.


Tuesday, July 28, 2015

ಮರಣದಂಡನೆ ಎತ್ತಿರುವ ಪ್ರಶ್ನೆಗಳು..

ಯಾಕೂಬ್ ಮೇಮನ್
ರಾಮ್ ಜೇಠ್ಮಲಾನಿ
ಕೆ.ಟಿ.ಎಸ್. ತುಳಸಿ
ಗೋಪಾಲ್ ಸುಬ್ರಹ್ಮಣ್ಯಂ
ಹರೀಶ್ ಸಾಳ್ವೆ
ಮುಕುಲ್ ರೋಹ್ಟಗಿ..
ಮುಂತಾದವರ ಜೊತೆ ಎಂ.ಎಲ್. ಶರ್ಮಾ ಮತ್ತು ಎ.ಪಿ. ಸಿಂಗ್ ಎಂಬಿಬ್ಬರು ನ್ಯಾಯವಾದಿಗಳನ್ನು ಇಟ್ಟು ನೋಡಿ. ದೆಹಲಿಯ ನಿರ್ಭಯ ಪ್ರಕರಣದ ಆರೋಪಿಗಳಾದ ಅಕ್ಷಯ್ ಥಾಕುರ್, ವಿನಯ್ ಶರ್ಮಾ, ಪವನ್ ಗುಪ್ತಾ ಮತ್ತು ಮುಖೇಶ್ ಸಿಂಗ್‍ನ ಪರ ನ್ಯಾಯಾಲಯದಲ್ಲಿ ವಾದಿಸಿದ ನ್ಯಾಯವಾದಿಗಳು ಇವರು. ಇವರಿಬ್ಬರ ಹೇಳಿಕೆಗಳು ಲೆಸ್ಲಿ ವುಡ್‍ವಿನ್‍ರ ‘ಇಂಡಿಯಾಸ್ ಡಾಟರ್' ಎಂಬ ಸಾಕ್ಷ್ಯಚಿತ್ರದಲ್ಲಿ ದಾಖಲಾಗಿವೆ. “ಬೀದಿಯಲ್ಲಿ ಸ್ವೀಟ್ ಇಟ್ಟರೆ ನಾಯಿಗಳು ಬಂದು ತಿನ್ನುತ್ತವೆ. ಅಪರಾತ್ರಿಯಲ್ಲಿ ಯಾರೋ ಒಬ್ಬನ ಜೊತೆ ತನ್ನ ಮಗಳನ್ನು ನಿರ್ಭಯಳ ಹೆತ್ತವರು ಕಳುಹಿಸಿಕೊಟ್ಟದ್ದು ಯಾಕೆ..” ಎಂದು ಶರ್ಮಾ ಪ್ರಶ್ನಿಸಿದರೆ, “ನನ್ನ ಮಗಳು ಅಥವಾ ಸಹೋದರಿ ವಿವಾಹಪೂರ್ವ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಮನೆಗೊಯ್ದು ಪೆಟ್ರೋಲ್ ಸುರಿದು ಕುಟುಂಬದೆದುರೇ ಬೆಂಕಿ ಹಚ್ಚುವೆ..” ಎಂದು ಸಿಂಗ್ ಹೇಳುತ್ತಾರೆ. ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಕರಣದ ಆರೋಪಿಗಳ ಪರ ಇಂತಹ ವಕೀಲರು ವಾದಿಸಿದರೆ ಅದರ ಫಲಿತಾಂಶ ಏನಿದ್ದೀತು? ನ್ಯಾಯಾಧೀಶರು ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನಲ್ಲದೇ ಇನ್ನೇನನ್ನು ನೀಡಿಯಾರು? ಅಷ್ಟಕ್ಕೂ, ತೀರಾ ಸಾಮಾನ್ಯರಂತೆ ಮತ್ತು ಮಹಿಳಾ ಹಕ್ಕುಗಳ ಕುರಿತು ಅರಿವೇ ಇಲ್ಲದವರಂತೆ ಮಾತಾಡುವ ಇವರನ್ನು ನಿರ್ಭಯ ಆರೋಪಿಗಳು ತಮ್ಮ ವಕೀಲರನ್ನಾಗಿ ಆಯ್ಕೆ ಮಾಡಿಕೊಂಡದ್ದೇಕೆ? ಜೇಠ್ಮಲಾನಿ, ತುಳಸಿ, ಅಶೋಕ್ ದೇಸಾಯಿ, ಪರಾಸರನ್, ಪಿ.ಪಿ. ರಾವ್‍ರಂತಹ ಪ್ರಸಿದ್ಧ ನ್ಯಾಯವಾದಿಗಳು ಇದ್ದಾಗ್ಯೂ ನಿರ್ಭಯ ಆರೋಪಿಗಳು ಈ ಅಪರಿಚಿತರನ್ನೇ ಯಾಕೆ ನೇಮಿಸಿಕೊಂಡರು? ಇದು ಅವರ ಬಯಕೆಯೋ ಅಥವಾ ಅನಿವಾರ್ಯತೆಯೋ? 2009 ಅಕ್ಟೋಬರ್ 31ರಂದು ‘ದ ಎಕನಾಮಿಕ್ಸ್ ಟೈಂಸ್' ಪತ್ರಿಕೆಯು, ‘5 ನಿಮಿಷದ ಕೆಲಸಕ್ಕೆ 5 ಲಕ್ಷ ಪಡೆಯುವ ಪ್ರಮುಖ ವಕೀಲರು' ಎಂಬ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿತ್ತು. 5 ನಿಮಿಷದ ಕೋರ್ಟ್ ಹಾಜರಿಗೆ 3ರಿಂದ 5 ಲಕ್ಷ ರೂಪಾಯಿ ಪಡೆಯುವ ವಕೀಲರನ್ನು ಅದರಲ್ಲಿ ಹೆಸರಿಸಲಾಗಿತ್ತು. ಹರೀಶ್ ಸಾಳ್ವೆ, ಮುಕುಲ್ ರೋಹ್ಟಗಿ, ಅಶೋಕ್ ದೇಸಾಯಿ, ಕೆ.ಕೆ. ವೇಣುಗೋಪಾಲ್, ಅಭಿಷೇಕ್ ಸಿಂಘ್ವಿ.. ಮುಂತಾದವರ ಹೆಸರು ಆ ಪಟ್ಟಿಯಲ್ಲಿದ್ದುವು. ನಿಜವಾಗಿ, ಜೇಠ್ಮಲಾನಿಯವರು ಒಂದು ಪ್ರಕರಣಕ್ಕೆ 40 ಲಕ್ಷ ರೂಪಾಯಿಯನ್ನು ಪಡಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ನ್ಯಾಯವಾದಿಗಳ ವೃಂದದಲ್ಲಿಯೇ ಅವರಿಗೆ ಅಪಾರ ಅನುಭವ ಇದೆ. 2002ರ ಗುಜರಾತ್ ಹತ್ಯಾಕಾಂಡ ಪ್ರಕರಣದಲ್ಲಿ ಅವರು ಗುಜರಾತ್ ಸರಕಾರದ ಪರ ವಾದಿಸಿದ್ದಾರೆ, ಇಂದಿರಾ ಮತ್ತು ರಾಜೀವ್ ಗಾಂಧಿಯವರನ್ನು ಹತ್ಯೆಗೈದ ಆರೋಪಿಗಳ ಪರವೂ ವಾದಿಸಿದ್ದಾರೆ. ಅವರೊಂದು ಪ್ರಕರಣವನ್ನು ಎತ್ತಿಕೊಂಡರೆಂದರೆ, ಅದಕ್ಕೆ ಅಪಾರ ಮನ್ನಣೆ ಸಿಗುತ್ತದೆ. ಅವರ ವಾಕ್ಚಾತುರ್ಯ, ಅಧ್ಯಯನಶೀಲತೆ ಮತ್ತು ಅನುಭವಗಳು ಪ್ರಕರಣಕ್ಕೆ ವಿಶೇಷ ತಿರುವನ್ನು ಕೊಡುವಷ್ಟು ಆಳವಾಗಿದೆ. ಹರೀಶ್ ಸಾಳ್ವೆಯವರು ಇತ್ತೀಚೆಗಷ್ಟೇ ವೋಡಾಪೋನ್ ಪ್ರಕರಣದಲ್ಲಿ ಸರಕಾರದ ವಿರುದ್ಧ ತೀರ್ಪು ಬರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವೋಡಾಪೋನ್ 11 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟಬೇಕೆಂಬ ಸರಕಾರದ ಆದೇಶವನ್ನು ಕೋರ್ಟು ವಜಾ ಗೊಳಿಸಿದೆ. ಹಾಗಂತ, ಇವರಲ್ಲಿ ಯಾರಾದರೊಬ್ಬರು ನಿರ್ಭಯ ಪ್ರಕರಣದ ಆರೋಪಿಗಳ ಪರ ವಾದಿಸುವುದನ್ನೊಮ್ಮೆ ಊಹಿಸಿಕೊಳ್ಳಿ. ಇವರಿಗೆ ಫೀಸು ಕೊಟ್ಟು ತಮ್ಮ ವಕೀಲರನ್ನಾಗಿ ನೇಮಿಸಿಕೊಳ್ಳುವ ಸಾಮರ್ಥ್ಯ ಕೊಳಚೆಗೇರಿ ನಿವಾಸಿಗಳಾದ ಆ ಆರೋಪಿಗಳಿಗಿದೆಯೇ? ಅಂದಮೇಲೆ ಸಮಾನ ನ್ಯಾಯ ಎಂಬ ಪರಿಕಲ್ಪನೆಗೆ ಏನರ್ಥವಿದೆ? ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾನೂನು ಆಯೋಗದ ನೆರವಿನೊಂದಿಗೆ ನಡೆಸಿದ ಅಧ್ಯಯನದ ಪ್ರಕಾರ, ಮರಣ ದಂಡನೆಗೆ ಗುರಿಯಾದ ಶೇ. 75ರಷ್ಟು ಮಂದಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು ಹಾಗೂ ಆರ್ಥಿಕವಾಗಿ ತೀರಾ ದುರ್ಬಲರಾದವರು. “ನೂರರಲ್ಲಿ ಓರ್ವರಿಗಷ್ಟೇ ಸರಿಯಾದ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯ ಇದೆ..” ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಹೇಳುತ್ತಾರೆ. ಭಾರತದ ಕಾನೂನು ಆಯೋಗದ ಮುಖ್ಯಸ್ಥ ಮತ್ತು ದೆಹಲಿ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಎ.ಪಿ. ಶಾರ ಪ್ರಕಾರ, “ಭಾರತದಲ್ಲಿ ಬಡವರು ಮತ್ತು ತುಳಿತಕ್ಕೊಳಗಾದವರೇ ಗಲ್ಲಿಗೇರುತ್ತಿದ್ದಾರೆ..” ಇವೆಲ್ಲ ಏನು? ಒಂದು ಕಡೆ ಕಣ್ಣಿಗೆ ಬಟ್ಟೆ ಕಟ್ಟಿರುವ ನ್ಯಾಯದೇವತೆ ಇನ್ನೊಂದು ಕಡೆ, ದುರ್ಬಲ ಆರೋಪಿಗಳ ಕೈ-ಕಾಲುಗಳನ್ನು ಕಟ್ಟಿ ಹಾಕುವ ರೀತಿಯ ನ್ಯಾಯ ಪ್ರಕ್ರಿಯೆ - ಇದನ್ನು ಹೇಗೆ ವಿಶ್ಲೇಷಿಸಬಹುದು?
    2012 ನವೆಂಬರ್ 21ರಂದು ಅಜ್ಮಲ್ ಕಸಬ್‍ನನ್ನು ಗಲ್ಲಿ ಗೇರಿಸುವಾಗ ಆತನ ಮುಂದೆ ವಿವಿಧ ನ್ಯಾಯಾಲಯಗಳಿಂದ ಮರಣದಂಡನೆ ಶಿಕ್ಷೆಗೆ ಗುರಿಯಾದ ಸುಮಾರು 300ರಷ್ಟು ಮಂದಿ ಇದ್ದರು. ಅವರಲ್ಲಿ ಅಫ್ಝಲ್‍ಗುರು ಇದ್ದ. ಪಂಜಾಬ್ ಮುಖ್ಯಮಂತ್ರಿ ಬಿಯಂತ್ ಸಿಂಗ್‍ರನ್ನು ಹತ್ಯೆಗೈದ ಬಲ್ವಂತ್ ಸಿಂಗ್ ರಾಜೋನಾ, ಖಾಲಿಸ್ತಾನ್ ಲಿಬರೇಶನ್ ಫೋರ್ಸ್‍ನ ಭಯೋತ್ಪಾದಕ ದೇವಿಂದರ್ ಸಿಂಗ್ ಭುಲ್ಲರ್, ರಾಜೀವ್ ಗಾಂಧಿಯನ್ನು ಹತ್ಯೆಗೈದ ಮೂವರು ಆರೋಪಿಗಳು, ವೀರಪ್ಪನ್‍ನ 4 ಮಂದಿ ಸಹಚರರು.. ಎಲ್ಲರೂ ಆತನ ಮುಂದೆ ಇದ್ದರು. ಅನುಕ್ರಮವಾಗಿ ಗಲ್ಲಿಗೇರಿಸುವುದಾದರೆ ಕಸಬ್ ನ ಸರದಿ 25 ಮಂದಿಯ ಬಳಿಕ ಬರಬೇಕಿತ್ತು. ಆದರೆ ಆತನನ್ನು ಹಿಂದಿನಿಂದ ಎತ್ತಿ ಮುಂದಕ್ಕೆ ತಂದು ಗಲ್ಲಿಗೇರಿಸಲಾಯಿತು. ಇದಕ್ಕೆ ಕಾರಣ ಏನೆಂದರೆ, ಆತ ಪಾಕಿಸ್ತಾನಿ. ಆತನನ್ನು ಜೀವಂತ ಇರಿಸಿಕೊಳ್ಳಬೇಕಾದ ಯಾವ ರಾಜಕೀಯ ಒತ್ತಡವೂ ಇಲ್ಲಿಲ್ಲ. ಆದರೆ, ದೇವಿಂದರ್ ಸಿಂಗ್ ಭುಲ್ಲರ್‍ನ ಹಿಂದೆ ರಾಜಕೀಯ ಒತ್ತಡ ಇದೆ. ಆತನನ್ನು ಗಲ್ಲಿಗೇರಿಸುವುದರ ವಿರುದ್ಧ ಭಾವನಾತ್ಮಕ ಒತ್ತಡವನ್ನು ಹೇರಲಾಗುತ್ತಿದೆ. ನಿಜವಾಗಿ, ಯಾರನ್ನು ಗಲ್ಲಿಗೇರಿಸಬೇಕು, ಯಾರನ್ನು ಬಾರದು, ಯಾರ ಗಲ್ಲನ್ನು ಮುಂದೂಡಬೇಕು.. ಎಂಬುದೆಲ್ಲ ಇಲ್ಲಿ ಬರೇ ಕೋರ್ಟು, ಕಚೇರಿ, ರಾಷ್ಟ್ರಪತಿಗಳಿಂದ ಮಾತ್ರ ನಿರ್ಧರಿತವಾಗುವುದಲ್ಲ. ಅದನ್ನೂ ರಾಜಕೀಯವೇ ನಿರ್ಧರಿಸುತ್ತದೆ. ‘ಕಸಬ್‍ನನ್ನು ಬಿರಿಯಾನಿ ಕೊಟ್ಟು ಸಾಕಲಾಗುತ್ತಿದೆ..' ಎಂಬುದಾಗಿ ಬಿಜೆಪಿ ಈ ದೇಶದಲ್ಲಿ ಪ್ರಚಾರ ಮಾಡಿತ್ತು. ಮಾಧ್ಯಮದ ಒಂದು ವರ್ಗವೂ ಅದಕ್ಕೆ ಬೆಂಬಲ ನೀಡಿತ್ತು. ಅಷ್ಟಕ್ಕೂ, ಕಸಬ್‍ನಿಂದ ಕಾಂಗ್ರೆಸ್‍ಗಾಗಲೀ ಬಿಜೆಪಿಗಾಗಲೀ ಯಾವ ಲಾಭವೂ ಇಲ್ಲ. ಈ ದೇಶದವನೇ ಅಲ್ಲದ ಆತನನ್ನು ಗಲ್ಲಿಗೇರಿಸುವುದರಿಂದ ರಾಜಕೀಯವಾಗಿ ಕಳಕೊಳ್ಳುವುದಕ್ಕೇನೂ ಇಲ್ಲ. ಇದನ್ನರಿತೇ ತುರ್ತಾಗಿ ಆತನನ್ನು ಗಲ್ಲಿಗೆ ಕೊಡಲಾಯಿತು. ಆದರೆ ಇಂಥ ರಾಜಕೀಯ ಪ್ರೇರಿತ ಕ್ರಮಗಳು ಸಹಜವಾಗಿ ಕೆಲವಾರು ಆತಂಕಕಾರಿ ಅನುಮಾನಗಳನ್ನೂ ಮುಂದಿಡುತ್ತದೆ. ಮರಣ ದಂಡನೆಗೆ ಗುರಿಯಾಗುವ ದುರ್ಬಲ ವರ್ಗದವರಿಗೆ ರಾಜಕೀಯವಾಗಿ ಹೇಳಿಕೊಳ್ಳಬಹುದಾದ ಪ್ರಭಾವವಿರುವುದಿಲ್ಲವಲ್ಲ. ಅವರ ವಿರುದ್ಧ ಸಾಕ್ಷ್ಯಗಳನ್ನು ಒದಗಿಸುವ ಪೊಲೀಸ್ ವ್ಯವಸ್ಥೆಯಾದರೋ ಪರಮ ಭ್ರಷ್ಟಾಚಾರಿ. ಈ ದುರ್ಬಲರಿಂದ ನಕಲಿ ತಪ್ಪೊಪ್ಪಿಗೆಯನ್ನು ಪಡಕೊಳ್ಳುವುದಕ್ಕೆ ಪೊಲೀಸರಿಗೆ ಕಷ್ಟವೂ ಇಲ್ಲ. ಹಾಗಂತ, ಇವೆಲ್ಲವನ್ನೂ ಸಮರ್ಪಕವಾಗಿ ನ್ಯಾಯಾಧೀಶರ ಮುಂದೆ ನಿವೇದಿಸುವುದಕ್ಕೆ ಜೇಠ್ಮಲಾನಿ, ಹರೀಶ್ ಸಾಳ್ವೆ, ತುಳಸಿ..ಗಳೂ ಅವರಿಗೆ ಸಿಗುತ್ತಿಲ್ಲ. ಶ್ರೀಮಂತ ಮತ್ತು ಬಡವ ಮಾಡಿದ ಅಪರಾಧ ಒಂದೇ ಆಗಿದ್ದರೂ ತೀರ್ಪುಗಳು ಭಿನ್ನವಾಗಿ ಬರುವುದಕ್ಕೆ ಈ ಅಸಮಾನತೆ ಖಂಡಿತ ಅವಕಾಶ ಮಾಡಿಕೊಡುತ್ತದೆ. ಇಂಥ ಸ್ಥಿತಿಯಲ್ಲಿ, ‘ಗಲ್ಲು' ಶಿಕ್ಷೆ ಬೇಕೋ ಬೇಡವೋ ಎಂಬುದು ಮುಖ್ಯವಾಗುತ್ತದೆ. ಅಷ್ಟಕ್ಕೂ, ಗಲ್ಲು ಶಿಕ್ಷೆಯನ್ನು ಜಾರಿಗೊಳಿಸದಿರುವ ಕುರಿತಂತೆ  2007ರಲ್ಲಿ ವಿಶ್ವಸಂಸ್ಥೆಯಲ್ಲಿ ಮಂಡಿಸಲಾದ ಮಸೂದೆಗೆ ಭಾರತವು ವಿರೋಧ ವ್ಯಕ್ತಪಡಿಸಿರಬಹುದು. 2012 ನವೆಂಬರ್‍ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಂಡಿಸಿದ ‘ಗಲ್ಲುಶಿಕ್ಷೆ ನಿಷೇಧ' ಮಸೂದೆಯನ್ನು ಭಾರತ ತಿರಸ್ಕರಿಸಿರಬಹುದು. ಅಲ್ಲದೇ, ‘ಅಪರೂಪದಲ್ಲಿ ಅಪರೂಪದ’ ಪ್ರಕರಣಗಳಿಗೆ ಮಾತ್ರ ಮರಣದಂಡನೆ ವಿಧಿಸಬೇಕೆಂಬ 1983ರ ಸುಪ್ರೀಮ್ ಕೋರ್ಟ್‍ನ ನಿಲುವು ಪ್ರಶಂಸಾರ್ಹವಾದುದು ಎಂದೂ ಹೇಳಬಹುದು. ಆದರೆ, ನ್ಯಾಯವು ದುಡ್ಡಿದ್ದವರ ಪರ ಎಂಬ ವಾತಾರವಣ ನಿರ್ಮಾಣವಾಗಿರುವ ಕಡೆ ನೇಣು ಯಾವ ಪರಿಣಾಮವನ್ನು ಬೀರಬಲ್ಲುದು? 2001ರಲ್ಲಿ 83 ಮಂದಿ, 2002ರಲ್ಲಿ 23 ಮಂದಿ, 2005ರಲ್ಲಿ 77 ಮಂದಿ, 2006ರಲ್ಲಿ 40 ಮಂದಿ ಮತ್ತು 2007ರಲ್ಲಿ 100 ಮಂದಿಗೆ ದೇಶದ ವಿವಿಧ ನ್ಯಾಯಾಲಯಗಳು ನೇಣು ಶಿಕ್ಷೆಯನ್ನು ವಿಧಿಸಿದೆ (ಜಾರಿಗೊಳಿಸಿಲ್ಲ) ಎಂದು ಆಮ್ನೆಸ್ಟಿ ಇಂಟರ್‍ನ್ಯಾಶನಲ್‍ನ ಅಂಕಿ-ಅಂಶಗಳು ಹೇಳುವಾಗ, ಅದರಲ್ಲಿ ಹರೀಶ್ ಸಾಳ್ವೆ ವಾದಿಸಿದ ಪ್ರಕರಣಗಳು ಇದ್ದೀತೇ? ಜೇಠ್ಮಲಾನಿ ಪ್ರತಿನಿಧಿಸಿದ ಪ್ರಕರಣ ಎಷ್ಟಿರಬಹುದು? ಬಹುಶಃ, ಇಂಥದ್ದೊಂದು ಆತಂಕವೇ ಮರಣ ದಂಡನೆಯ ಬಗ್ಗೆ ಮತ್ತೆ ಮತ್ತೆ ಚರ್ಚೆಯ ಅಗತ್ಯವನ್ನು ಒತ್ತಿ ಹೇಳುತ್ತದೆ. ಸಮರ್ಥ ವಕೀಲರನ್ನು ನೇಮಿಸಿಕೊಳ್ಳುವ ಸಾಮರ್ಥ್ಯವಿಲ್ಲದ ಬಡ ಆರೋಪಿಗಳಿರುವ ದೇಶವೊಂದರಲ್ಲಿ ಮರಣದಂಡನೆ ಎಷ್ಟು ಸಮಂಜಸವಾದೀತು? ಅಫ್ಝಲ್ ಗುರುವಿಗೆ ಮರಣದಂಡನೆಯನ್ನು ವಿಧಿಸುವಾಗ, ‘ಇದರಲ್ಲಿ ಸಮಾಜದ ಭಾವನೆಯನ್ನು ಪರಿಗಣಿಸಲಾಗಿದೆ...’ ಎಂದು ಸುಪ್ರೀಮ್ ಕೋರ್ಟ್ ಹೇಳಿತ್ತು. ಅರುಂಧತಿ ರಾಯ್ ಸಹಿತ ಅನೇಕರು ಕೋರ್ಟ್‍ನ ಈ ವ್ಯಾಖ್ಯಾನವನ್ನು ಪ್ರಶ್ನಿಸಿದ್ದರು. ತೀರ್ಪುಗಳು ಭಾವನೆಯಿಂದ ಮುಕ್ತವಾಗಿರಬೇಕೆಂಬ ಅಭಿಪ್ರಾಯ ಹಲವರದ್ದಾಗಿತ್ತು. ನಿರ್ಭಯ ಪ್ರಕರಣಕ್ಕಿಂತ ಮೊದಲು ಅತ್ಯಾಚಾರವು ಈ ದೇಶದಲ್ಲಿ ಇವತ್ತಿನಷ್ಟು ಭಾವಾನಾತ್ಮಕವಾಗಿರಲಿಲ್ಲ. ಅಮೇರಿಕದ ಅವಳಿ ಕಟ್ಟಡಗಳ ಮೇಲೆ ದಾಳಿಯಾಗುವ ವರೆಗೆ ಬಾಂಬ್ ಭಯೋತ್ಪಾದನೆಯೂ ಇವತ್ತಿನ ರೀತಿಯಲ್ಲಿ ಸಾರ್ವಜನಿಕ ಗಮನವನ್ನು ಸೆಳೆದಿರಲಿಲ್ಲ. ಆದರೆ, ಇವತ್ತು ಅತ್ಯಾಚಾರ ಮತ್ತು ಭಯೋತ್ಪಾದನೆ ಈ ದೇಶದಲ್ಲಿ ಭಾವನಾತ್ಮಕ ವಾತಾವರಣವೊಂದನ್ನು ಹುಟ್ಟುಹಾಕಿದೆ. ಮಾಧ್ಯಮ ಕ್ರಾಂತಿಯಿಂದಾಗಿ ಸಾರ್ವಜನಿಕ ಅಭಿಪ್ರಾಯಗಳು ಕ್ಷಿಪ್ರವಾಗಿ ರೂಪುಗೊಳ್ಳುತ್ತಿವೆ. ಆದ್ದರಿಂದ ಇಂಥ ಪ್ರತಿ ಪ್ರಕರಣವೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವುದಕ್ಕೆ ಸಾಧ್ಯವಿದೆ. ಹೀಗಿರುವಾಗ, ರಾಮ್ ಜೇಠ್ಮಲಾನಿ ಪ್ರತಿನಿಧಿಸುವ ಪ್ರಕರಣಕ್ಕೂ ಎಂ.ಎಲ್. ಶರ್ಮ ಪ್ರತಿನಿಧಿಸುವ ಪ್ರಕಣಕ್ಕೂ ಫಲಿತಾಂಶದಲ್ಲಿ ವ್ಯತ್ಯಾಸಗಳುಂಟಾಗುವ ಸಾಧ್ಯತೆಯಿದೆ. ಅಲ್ಲದೇ, ಹಲವಾರು ವರ್ಷ ಜೈಲಿನಲ್ಲಿದ್ದು ಬಳಿಕ ನಿರಾಪರಾಧಿಯೆಂದು ಬಿಡುಗಡೆಗೊಂಡ ಪ್ರಕರಣಗಳು ಈ ದೇಶದಲ್ಲಿ ಧಾರಾಳ ನಡೆದಿವೆ. ನೇಣು ಕುಣಿಕೆಯವರೆಗೆ ಸಾಗಿ ಬಳಿಕ ಬಿಡುಗಡೆಗೊಂಡ ಉಪನ್ಯಾಸಕ ಎಸ್.ಎ.ಆರ್. ಗೀಲಾನಿಯೇ ಇದಕ್ಕೆ ಅತ್ಯುತ್ತಮ ಸಾಕ್ಷಿ. “ನನ್ನ ಜೈಲಿನ ಅನುಭವಗಳು” ಎಂಬ ಅವರ ಕೃತಿಯನ್ನು ಓದಿದ ಯಾರೇ ಆಗಲಿ ದಿಗ್ಭ್ರಮೆಗೊಂಡಾರು. ಸಾಕ್ಷ್ಯಗಳನ್ನು ಸೃಷ್ಟಿಸುವ ನಮ್ಮ ವ್ಯವಸ್ಥೆಯ ಸಾಮರ್ಥ್ಯಕ್ಕೆ ಬೆಚ್ಚಿ ಬಿದ್ದಾರು. ಇಂಥ ಸ್ಥಿತಿಯಲ್ಲಿ, ಮರಣದಂಡನೆಯನ್ನು ಸಾರಾಸಾಗಟ ಬೆಂಬಲಿಸುವುದು ಎಷ್ಟರ ಮಟ್ಟಿಗೆ ಸರಿ? ಅದು ಅಗತ್ಯವೇ? ಅದರ ಹೊರತಾದ ಶಿಕ್ಷೆ ಅಪರಿಪೂರ್ಣವೇ? ಬಹುಶಃ,
   “ಸುಪ್ರೀಮ್ ಕೋರ್ಟ್ ಹೇಳಿರುವ ಅಪರೂಪದಲ್ಲಿ ಅಪ ರೂಪದ ಪ್ರಕರಣ ಎಂಬ ವಿಭಾಗದಲ್ಲಿ ಯಾಕೂಬ್ ಮೇಮನ್ ಪ್ರಕರಣ ಒಳಪಡುತ್ತದೆಯೇ ಎಂಬುದು ಖಂಡಿತಕ್ಕೂ ಚರ್ಚಾರ್ಹ” (It is certainly debatable whether Yakub memon's case would fall in the category of the rarest of the rare..) ಎಂದು ದಿ ಹಿಂದೂ ಪತ್ರಿಕೆ ತನ್ನ ಸಂಪಾದಕೀಯದಲ್ಲಿ ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಂಡರೆ ಇಲ್ಲಿನ ಪ್ರಶ್ನೆಗಳು ಇನ್ನಷ್ಟು ಅರ್ಥಪೂರ್ಣವೆನಿಸಬಹುದು. 

Thursday, July 23, 2015

ಮೌಲಾನಾ ಫಝ್ಲುರ್ರಹ್ಮಾನ್, ಮಾಧ್ಯಮ ಮತ್ತು ಖಬರಿಸ್ತಾನದ ವಿಡಂಬನೆ

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ವಿಷಾದ ಪ್ರಕಟಣೆ
    “ಭೂಕಂಪಕ್ಕೆ ಜೀನ್ಸ್ ಧರಿಸುವ ಮಹಿಳೆಯರೇ ಕಾರಣ ಎಂದ ಮೌಲಾನಾ ಫಝ್ಲುರ್ರಹ್ಮಾನ್..” (Women wearing jeans are reason behind earthquekes- Jui-F chief maulana fazlur rehman) ಎಂಬ ಶೀರ್ಷಿಕೆಯಲ್ಲಿ ಕಳೆದ ಮೇ 30ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಸುದ್ದಿಯೊಂದನ್ನು ಪ್ರಕಟಿಸಿತು. ಮರುದಿನ ಮೇ 31ರಂದು (ಆದಿತ್ಯವಾರ) ವಿಜಯ ಕರ್ನಾಟಕ ಪತ್ರಿಕೆಯು, “ಭೂಕಂಪಕ್ಕೆ ಹೆಣ್ಣು ಮಕ್ಕಳ ಜೀನ್ಸ್ ಕಾರಣ” ಎಂಬ ಶೀರ್ಷಿಕೆಯಲ್ಲಿ ಅದೇ ಸುದ್ದಿಯನ್ನು ಪ್ರಕಟಿಸಿತು. “ಬೆಲೆ ಏರಿಕೆ, ಭಯೋತ್ಪಾದನೆ ಮತ್ತು ಭೂಕಂಪಗಳಿಗೆ ಜೀನ್ಸ್ ಧರಿಸುವ ಮಹಿಳೆಯರೇ ಕಾರಣ ಎಂದ ಪಾಕಿಸ್ತಾನದ ಧರ್ಮ ಗುರು” (Pakistan Cleric says women who wears jeans are behind earthquekes, terrorism and rising inflation) ಎಂಬ ಮೈಲುದ್ದದ ಶೀರ್ಷಿಕೆಯೊಂದಿಗೆ ಲಂಡನ್ನಿನ ಡೈಲಿ ಮೇಲ್ ಪತ್ರಿಕೆಯಲ್ಲಿ ಜೂನ್ 2ರಂದು ಅದೇ ಸುದ್ದಿ ಪ್ರಕಟವಾಯಿತು. ಟೈಮ್ಸ್ ಆಫ್ ಇಂಡಿಯಾ, ಡಿ.ಎನ್.ಎ., ಕನ್ನಡಪ್ರಭ ಸೇರಿದಂತೆ ಹೆಚ್ಚಿನೆಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳು ಈ ಸುದ್ದಿಯನ್ನು ಅತೀವ ಆಸಕ್ತಿಯಿಂದ ಪ್ರಕಟಿಸಿದವು. ಮೇ 30ರಿಂದ ಜೂನ್ 2ರ ನಡುವೆ ಪ್ರಕಟವಾದ ಈ ಸುದ್ದಿಗಳಿಗೆ ಓದುಗರ ಪ್ರತಿಕ್ರಿಯೆ ಎಷ್ಟು ಆವೇಶ ಭರಿತವಾಗಿತ್ತೆಂದರೆ ನಿಂದನೆ, ಭರ್ತ್ಸ್ಯನೆ, ವ್ಯಂಗ್ಯಗಳ ಮಹಾಪೂರವೇ ಹರಿಯಿತು. ಫಝ್ಲುರ್ರಹ್ಮಾನ್‍ರನ್ನು ಜೋಕರ್‍ನಂತೆ ಬಿಂಬಿಸಲಾಯಿತು. ‘ಕೂಪ ಮಂಡೂಕ ಮೌಲಾನಾ’ ಎಂದು ಕರೆಯಲಾಯಿತು. ಅಂದಹಾಗೆ, ಫಝ್ಲುರ್ರಹ್ಮಾನ್‍ರು ಪಾಕ್ ಪಾರ್ಲಿಮೆಂಟ್‍ನ ಸದಸ್ಯ. ಅವರ ಜವಿೂಯತೆ ಉಲೆಮಾ ಪಕ್ಷವು ಪ್ರಧಾನಿ ನವಾಝ್ ಶರೀಫ್‍ರ ಆಡಳಿತ ಮೈತ್ರಿಕೂಟದ ಭಾಗವಾಗಿದೆ. ಅಷ್ಟಕ್ಕೂ, ಫಝ್ಲುರ್ರಹ್ಮಾನ್‍ರು ನಿಜಕ್ಕೂ ಇಂಥದ್ದೊಂದು ಹೇಳಿಕೆಯನ್ನು ಕೊಟ್ಟಿರುತ್ತಿದ್ದರೆ ಟೀಕೆಗಳನ್ನು ಒಂದು ಹಂತದವರೆಗೆ ಸಮರ್ಥಿಸಿಕೊಳ್ಳಬಹುದಿತ್ತು. ಹಾಗಂತ, ಅವರು ಮಾದರಿ ಮೌಲಾನಾ ಎಂದು ಹೇಳುತ್ತಿಲ್ಲ. ಅವರು ಈ ಹಿಂದೆ ನೀಡಿರಬಹುದಾದ ವಿವಾದಾಸ್ಪದ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುತ್ತಲೂ ಇಲ್ಲ. ಆದರೆ, ಸುದ್ದಿಯನ್ನು ಪ್ರಕಟಿಸುವುದಕ್ಕಿಂತ ಮೊದಲು ಅದರ ಮೂಲವನ್ನು ಮಾಧ್ಯಮಗಳು ಪರಿಶೀಲಿಸಬೇಡವೇ? ಅದು ಫಝ್ಲುರ್ರಹ್ಮಾನ್‍ರ ಹೇಳಿಕೆ ಎಂಬುದಕ್ಕೆ ಅಧಿಕೃತ ದಾಖಲೆಗಳನ್ನೋ ಮಾಹಿತಿಯನ್ನೋ ಇಟ್ಟುಕೊಂಡಿರಬೇಡವೇ? ನಿಜವಾಗಿ, ಈ ಸುದ್ದಿ ಪಾಕಿಸ್ತಾನದ ಖಬರಿಸ್ತಾನ್ ಟೈಮ್ಸ್ ಡಾಟ್ ಕಾಮ್ ಎಂಬ ಇಂಟರ್‍ನೆಟ್ ಪತ್ರಿಕೆಯಲ್ಲಿ (Online) ಮೇ 22ರಂದು ಪ್ರಕಟವಾಗಿತ್ತು. ಅದೊಂದು ವಿಡಂಬನಾತ್ಮಕ (Satirical) ಪತ್ರಿಕೆ. ತಮಾಷೆ, ವ್ಯಂಗ್ಯ, ಪ್ರಹಸನಗಳೇ ಈ ಖಬರಿಸ್ತಾನದ ಬಂಡವಾಳ. ಅದು ಉತ್ಪ್ರೇಕ್ಷಿತ ಸುದ್ದಿಯನ್ನು ಕೊಡುತ್ತಿರುತ್ತದೆ. ನಿಜದಂತೆ ಕಾಣುವ ಆದರೆ ನಿಜವಲ್ಲದ ಅಪಹಾಸ್ಯದ ಸುದ್ದಿಗಳನ್ನು ಸೃಷ್ಟಿಸುತ್ತಿರುತ್ತದೆ. ಈ ಖಬರಿಸ್ತಾನ ಪ್ರಕಟಿಸಿದ ಇದೇ ಸುದ್ದಿಯು ಮೇ 26ರ ಬಳಿಕ ಇನ್ನಿತರ ಇಂಟರ್‍ನೆಟ್ ಪತ್ರಿಕೆಗಳಲ್ಲೂ ಕಾಣಿಸಿಕೊಂಡವು. ಕ್ಯಾಂಪಸ್ ಬಸ್ ಮ್ಯಾಗ್ ಎಂಬ ಇಂಟರ್‍ನೆಟ್ ಪತ್ರಿಕೆಯೂ ಇದರಲ್ಲೊಂದು. ಆದರೆ ಆ ಪತ್ರಿಕೆಗೆ ಅದು ವಿಡಂಬನಾತ್ಮಕ ಸುದ್ದಿಯೆಂದು ಗೊತ್ತಿತ್ತು. ಹಾಗೆಯೇ ಅದು ಬರೆದಿತ್ತು ಕೂಡ. ತಾನು ಈ ಸುದ್ದಿಯನ್ನು ಪಾಕಿಸ್ತಾನ್ ಟುಡೇಯಿಂದ ಆರಿಸಿಕೊಂಡಿರುವುದಾಗಿಯೂ ಅದು ಹೇಳಿಕೊಂಡಿತ್ತು. ವಿಶೇಷ ಏನೆಂದರೆ, ಪಾಕಿಸ್ತಾನ್ ಟುಡೆಯಲ್ಲಿ ಈ ಸುದ್ದಿ ಒಂದು ವರ್ಷದ ಹಿಂದೆ 2014, ಫೆಬ್ರವರಿ 1 ರಂದೇ ಪ್ರಕಟವಾಗಿತ್ತು. ಇದೂ ಅದರ ಸ್ವಂತ ಸುದ್ದಿಯಲ್ಲ. ಖಬರಿಸ್ತಾನದಿಂದಲೇ ಪಡಕೊಂಡ ಸುದ್ದಿಯಾಗಿತ್ತದು. ಹೀಗೆ ತನ್ನದೇ ಹಳೆ ಸುದ್ದಿಯನ್ನು ಖಬರಿಸ್ತಾನವು ಮೇ 22 ರಂದು ಮತ್ತೆ ಹೊಸ ಸುದ್ದಿಯಂತೆ ಮರು ಪ್ರಕಟಿಸಿತು. ಖಬರಿಸ್ತಾನದ ಪ್ರಕಾರ, ಶುಕ್ರವಾರದ ನಮಾಝ್‍ನ ಬಳಿಕ ಏರ್ಪಡಿಸಲಾದ ಪತ್ರಿಕಾಗೋಷ್ಠಿಯಲ್ಲಿ ಫಝ್ಲುರ್ರಹ್ಮಾನ್‍ರು ಈ ಹೇಳಿಕೆಯನ್ನು ಹೊರಡಿಸಿದ್ದಾರೆ. ಕ್ಯಾಂಪಸ್ ಬಸ್ ಮ್ಯಾಗ್‍ನ ಪ್ರಕಾರ, ಈ ಹೇಳಿಕೆ ಹೊರಡಿಸಿದ್ದು ಮಂಗಳವಾರ. ವಿಜಯ ಕರ್ನಾಟಕದ ಮಟ್ಟಿಗೆ ಈ ಪತ್ರಿಕಾಗೋಷ್ಠಿ ಏರ್ಪಟಾದದ್ದು ಶನಿವಾರ. ಒಂದು ಸುದ್ದಿಯನ್ನು ಸುಳ್ಳು ಎಂದು ತೀರ್ಮಾನಿಸುವುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆಗಳು ಇನ್ನೇನು ಬೇಕು? ನಿಜವಾಗಿ, ಸುದ್ದಿಯನ್ನು ಪರಿಶೀಲಿಸದೆಯೇ ಪ್ರಕಟಿಸುವುದರಿಂದ ಆಗುವ ಅನಾಹುತಗಳಿಗೆ ಉದಾಹರಣೆ ಇದು. ಇಲ್ಲಿ ಖಬರಿಸ್ತಾನವನ್ನು ದೂರಿ ಪ್ರಯೋಜನವಿಲ್ಲ. ಯಾಕೆಂದರೆ, ವಿಡಂಬನಾತ್ಮಕ ಪತ್ರಿಕೆಯಾಗಿಯೇ ಅದು ಗುರುತಿಸಿಕೊಂಡಿದೆ. ಆದ್ದರಿಂದಲೇ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯು ಈ ಸುದ್ದಿ ಪ್ರಕಟಿಸಿದುದಕ್ಕಾಗಿ ಬಳಿಕ ವಿಷಾದ ಸೂಚಿಸಿತು. ಲಂಡನ್ನಿನ ಡೈಲಿ ಮೇಲ್ ಪತ್ರಿಕೆಯು ತನ್ನ ಅನ್‍ಲೈನ್ ಆವೃತ್ತಿಯಿಂದ ಈ ಸುದ್ದಿಯನ್ನು ಕಿತ್ತಾಹಾಕಿತು. ಹಾಗಿದ್ದರೂ, ಕೆಲವು ಪ್ರಶ್ನೆಗಳಂತೂ ಕಾಡಿಯೇ ಕಾಡುತ್ತದೆ. ಮಾಧ್ಯಮದ ಜವಾಬ್ದಾರಿಗಳು ಏನೆಲ್ಲ? ಸುದ್ದಿಯನ್ನು ಪರಿಶೀಲನೆಗೆ ಒಳಪಡಿಸದೆಯೇ ಪ್ರಕಟಿಸುವುದು ಬರೇ ವಿಷಾದ ಸೂಚಿಸಿ ಮುಗಿಸುವಷ್ಟು ಸಣ್ಣ ವಿಚಾರವೇ? ವಿಷಾದ ಸೂಚಿಸುವುದಕ್ಕಿಂತ ಮೊದಲು ಆ ಸುದ್ದಿಯು ಲಕ್ಷಾಂತರ ಮಂದಿಯನ್ನು ತಲುಪಿರುತ್ತದೆ. ಓದುಗರು ಅದನ್ನು ಇತರರಲ್ಲಿ ಹಂಚಿಕೊಂಡಿರುತ್ತಾರೆ. ಅದನ್ನು ತಮ್ಮ ವಾದಕ್ಕೆ ಪುರಾವೆಯಾಗಿ ಮಂಡಿಸಿರುತ್ತಾರೆ. ಓರ್ವನನ್ನು ಭಯೋತ್ಪಾದಕನೆಂದೋ ದೇಶದ್ರೋಹಿಯೆಂದೋ ಸಾಬೀತುಪಡಿಸುವುದಕ್ಕೆ ಆ ಸುದ್ದಿಯು ಬಳಕೆಯಾಗಿರುತ್ತದೆ. ಇವೆಲ್ಲವೂ ಕಳೆದ ಮೇಲೆ ಪತ್ರಿಕೆಯ ಯಾವುದೋ ಒಂದು ಮೂಲೆಯಲ್ಲಿ ಅಥವಾ ಇಂಟರ್‍ನೆಟ್ ಆವೃತ್ತಿಯಲ್ಲಿ ವಿಷಾದ ಸೂಚಿಸುವುದರಿಂದ ಅದಾಗಲೇ ಆಗಿರುವ ಹಾನಿಯನ್ನು ತುಂಬಬಹುದೆ? ಅಷ್ಟಕ್ಕೂ, ಅವು ಪ್ರಕಟಿಸುವ ವಿಷಾದ ಎಷ್ಟು ಚಿಕ್ಕದಾಗಿರುತ್ತದೆಂದರೆ, ಹೆಚ್ಚಿನ ಬಾರಿ ವಿಷಾದಕ್ಕೆ ಕಾರಣಗಳೇನು ಎಂಬುದೇ ಓದುಗರಿಗೆ ಗೊತ್ತಾಗುವುದಿಲ್ಲ. ಮುಖಪುಟದಲ್ಲಿ ಪ್ರಕಟವಾದ ಒಂದು ತಪ್ಪು ಸುದ್ದಿಯ ಬಗ್ಗೆ ಸೂಚಿಸುವ ವಿಷಾದ ಹೇಳಿಕೆಯು ಒಳಪುಟದಲ್ಲಿ ಒಂದು ಗೆರೆಯಷ್ಟೂ ಇರುವುದಿಲ್ಲ.  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಕೂಡ, “ಈ ಸುದ್ದಿಯು ತಪ್ಪಾಗಿದ್ದು’ ಅದನ್ನು ಪಾಕಿಸ್ತಾನದ ವಿಡಂಬನಾತ್ಮಕ ವೆಬ್‍ಸೈಟ್‍ನ ವರದಿಯ ಆಧಾರದಲ್ಲಿ ಹೆಣೆಯಲಾಗಿತ್ತು. ತಪ್ಪಿಗಾಗಿ ವಿಷಾದಿಸುತ್ತೇವೆ” (This story is erroneous. It was based on reports over a satirical peace appeared on a Pakistani website  we regret the mistake) ಎಂದು ಬರೆಯಿತೇ ಹೊರತು ಆ ಸುದ್ದಿಯ ಹಿನ್ನೆಲೆ, ಸುದ್ದಿ ಹುಟ್ಟಿಕೊಂಡ ಬಗೆ ಮತ್ತು ವಾಸ್ತವಗಳ ಕುರಿತಂತೆ ಯಾವ ಮಾಹಿತಿಯನ್ನೂ ನೀಡಲಿಲ್ಲ. ಒಂದು ತಪ್ಪಾದ ಸುದ್ದಿಯನ್ನು ಓದಿದ ಓದುಗನಿಗೆ ಅದರ ಸರಿಯಾದ ಭಾಗವನ್ನು ಓದುವ ಹಕ್ಕು ಇದೆಯಲ್ಲವೇ? ಅದನ್ನು ಒದಗಿಸಬೇಕಾದದ್ದು ಯಾರು? ತಪ್ಪು ಸುದ್ದಿಯನ್ನು ಕೊಟ್ಟ ಪತ್ರಿಕೆಗಳು ಅದರ ಹೊಣೆಯನ್ನು ವಹಿಸಿಕೊಳ್ಳುವುದಿಲ್ಲವಾದರೆ ಅದನ್ನು ಏನೆಂದು ಪರಿಗಣಿಸಬೇಕು? ಬೇಜವಾಬ್ದಾರಿ, ನಿರ್ಲಕ್ಷ್ಯ, ನುಣುಚಿಕೊಳ್ಳುವಿಕೆ, ಪಲಾಯನ...
    ಇತ್ತೀಚೆಗೆ ಬಿ.ಬಿ.ಸಿ.ಯು ಒಂದು ಸುದ್ದಿಯನ್ನು ಸ್ಫೋಟಿಸಿತು. ನೈಜೀರಿಯಾದ ಅನಂಬ್ರದಲ್ಲಿರುವ ಒಂದು ಹೊಟೇಲ್‍ನಲ್ಲಿ ನರಮಾಂಸವನ್ನು ಬೇಯಿಸಿ ಗ್ರಾಹಕರಿಗೆ ನೀಡಲಾಗುತ್ತದೆ ಎಂಬುದೇ ಆ ಸುದ್ದಿ. ಈ ವಿಷಯ ಬಹಿರಂಗವಾದ ಬಳಿಕ ಆ ಹೊಟೇಲ್ ಅನ್ನು ಮುಚ್ಚಲಾಗಿದೆ ಎಂದೂ ಅದು ಪ್ರಕಟಿಸಿತು. ಈ ಸುದ್ದಿ ಪ್ರಕಟವಾದದ್ದು ಬಿಬಿಸಿಯ ಸ್ವಾಹಿಲಿ ಎಂಬ ಹೆಸರಿನ ಇಂಟರ್‍ನೆಟ್ ಪತ್ರಿಕೆಯಲ್ಲಿ. ಸ್ವಾಹಿಲಿ ಎಂಬುದು ಒಂದು ಭಾಷೆ. ತಾಂಝಾನಿಯಾ, ಬುರುಂಡಿ, ಕಾಂಗೋ, ನೈಜೀರಿಯಾ, ಅಮೇರಿಕ, ರುವಾಂಡ... ಮುಂತಾದ ರಾಷ್ಟ್ರಗಳಲ್ಲಿ ಈ ಭಾಷೆಯನ್ನಾಡುವ 5 ಮಿಲಿಯನ್ ಮಂದಿಯಿದ್ದಾರೆ ಎಂದು ಹೇಳಲಾಗುತ್ತದೆ. ಬಿ.ಬಿ.ಸಿ. ಪ್ರಕಟಿಸಿದ ಸುದ್ದಿ ಎಷ್ಟು ರೋಚಕವಾಗಿತ್ತೆಂದರೆ, ಅದರಲ್ಲಿ ಹಸಿಹಸಿ ವಿವರಣೆಗಳಿದ್ದುವು. “ಜನರು ಅನುಮಾನ ಬಂದು ಪೊಲೀಸರಿಗೆ ದೂರು ಕೊಟ್ಟರೆಂದೂ, ಪೊಲೀಸರು ಬಂದು ಪರಿಶೀಲಿಸಿದಾಗ ಆಗಷ್ಟೇ ಕೊಯ್ದ, ರಕ್ತ ತೊಟ್ಟಿಕ್ಕುತ್ತಿರುವ ಮಾನವ ತಲೆಗಳು ಕಂಡುಬಂದುವು ಎಂದೂ’ ಬರೆಯಲಾಗಿತ್ತು. ರಕ್ತವನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಲಾಗುತ್ತಿತ್ತಂತೆ. ಪೊಲೀಸರು ಹೆಚ್ಚಿನ ಪರಿಶೀಲನೆಗೆ ಒಳಪಡಿಸಿದಾಗ ಬಂದೂಕುಗಳು ಮತ್ತು ಗ್ರೆನೇಡ್‍ಗಳು ಸಿಕ್ಕವು..” ಎಂದೂ ಬಿ.ಬಿ.ಸಿ. ಬರೆಯಿತು. ಈ ಸುದ್ದಿಯನ್ನು ಲಂಡನ್ನಿನ ಪ್ರಸಿದ್ಧ ಪತ್ರಿಕೆಗಳಾದ ಡೈಲಿ ಮೇಲ್, ಟೆಲಿಗ್ರಾಫ್‍ಗಳೂ ಎತ್ತಿಕೊಂಡವು. ನೈಜೀರಿಯಾದ ಕೆಲವು ಪತ್ರಿಕೆಗಳೂ ಇದನ್ನು ಮುದ್ರಿಸಿದುವು. ಇದನ್ನು ಓದಿದ ಅನಂಬ್ರದ ಜನರು ಬೀದಿಗಿಳಿದರು. ಬಿ.ಬಿ.ಸಿ. ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ನೈಜೀರಿಯದ ಸಂಸ್ಕ್ರಿತಿ ಮತ್ತು ಪ್ರವಾಸೋದ್ಯಮ ಸಚಿವೆ ಮೇರಿ ಇಮೆಲ್ಡಾರು ಸುದ್ದಿಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದರು. ಇಷ್ಟೆಲ್ಲ ಅನಾಹುತಗಳು ಆದ ಬಳಿಕ ಮೇ 19ರಂದು ಬಿ.ಬಿ.ಸಿ.ಯು ವಿಷಾದ ವ್ಯಕ್ತಪಡಿಸಿ ಇಂಟರ್‍ನೆಟ್ ಆವೃತ್ತಿಯಿಂದ ಆ ಸುದ್ದಿಯನ್ನು ಹಿಂತೆಗೆದುಕೊಂಡಿತು. ‘ಸುದ್ದಿ ಮೂಲವನ್ನು ತನಿಖೆಗೊಳಪಡಿಸದೇ ಪ್ರಕಟಿಸಿದುದರಿಂದ ಆದ ಪ್ರಮಾದವಿದು..’ ಎಂಬ ಸ್ಪಷ್ಟೀಕರಣವನ್ನೂ ನೀಡಿತು. ನಿಜವಾಗಿ, `ಪ್ರಮಾದ' ಎಂಬ ಮೂರಕ್ಷರಕ್ಕೆ ಸೀಮಿತಗೊಳಿಸಿ ನೋಡಬಹುದಾದ ಪ್ರಕರಣ ಇದಲ್ಲ. ಯಾಕೆಂದರೆ, ಇಂಥ ಪ್ರಮಾದಗಳು ಏಶ್ಯನ್- ಆಫ್ರಿಕನ್ ರಾಷ್ಟ್ರಗಳ ಬಗ್ಗೆ ಮತ್ತು ಅಲ್ಲಿನ ಜನರ ಬಗ್ಗೆ ಪಾಶ್ಚಾತ್ಯ ಮಾಧ್ಯಮಗಳಿಂದ ನಿರಂತರ ನಡೆಯುತ್ತಲೇ ಬಂದಿದೆ. ಬಿ.ಬಿ.ಸಿ.ಯಿಂದ ಹಿಡಿದು `ದ ಲಾಸ್ಟ್ ಕಿಂಗ್ ಆಫ್ ಸ್ಕಾಟ್‍ಲ್ಯಾಂಡ್' ಎಂಬ ಸಿನಿಮಾದ ವರೆಗೆ ಎಲ್ಲವೂ ಆಫ್ರಿಕನ್ ನಾಗರಿಕರನ್ನು ಅನಾಗರಿಕರಂತೆ ಬಿಂಬಿಸುತ್ತಲೇ ಬಂದಿವೆ. ಉಗಾಂಡದ ಮಾಜಿ ಅಧ್ಯಕ್ಷ ಇದಿ ಅಮೀನ್‍ರನ್ನು ನರಮಾಂಸ ಭಕ್ಷಕ ಎಂದು ಅವು ಹೇಳಿದ್ದುವು. ಲಿಬಿಯದ ಗದ್ದಾಫಿ, ಇರಾಕ್‍ನ ಸದ್ದಾಮ್, ಇರಾನ್‍ನ ಖೊಮೇನಿ... ಸಹಿತ ಆಫ್ರಿಕನ್-ಅರಬ್ ರಾಷ್ಟ್ರಗಳ ನಾಯಕರ ದೊಡ್ಡದೊಂದು ಪಟ್ಟಿಯೇ ಇವರ ಪ್ರಮಾದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದಲೇ ಮಾಧ್ಯಮ ಪ್ರಾಮಾಣಿಕತೆ ಮತ್ತೆ ಮತ್ತೆ ಸಂದೇಹಕ್ಕೆ ಒಳಗಾಗುತ್ತಿರುವುದು. ವಿಷಾದ ಎಂಬುದು ನಿರ್ಲಕ್ಷ್ಯವನ್ನೋ ದುರುದ್ದೇಶವನ್ನೋ ಮುಚ್ಚಿಡುವುದಕ್ಕಾಗಿ ಬಳಸಬೇಕಾದ ಪದವಲ್ಲವಲ್ಲ. ಆ ಪದಕ್ಕೆ ಗೌರವವಿದೆ.We regret the mistake
   .
ತಪ್ಪೊಪ್ಪಿಕೊಂಡ BBC
ಎಂದು ಒಪ್ಪುವಾಗ, ಮತ್ತೆಂದೂ ಇಂಥದ್ದೊಂದು ಪ್ರಮಾದಕ್ಕೆ ಅವಕಾಶ ನೀಡುವುದಿಲ್ಲ ಎಂಬೊಂದು ಬದ್ಧತೆಯನ್ನೂ ಮಾಧ್ಯಮ ರಂಗ ಪ್ರದರ್ಶಿಸಬೇಕಾಗುತ್ತದೆ. ಈ ಬದ್ಧತೆಯನ್ನು ಮಾಧ್ಯಮ ರಂಗವು ಇವತ್ತು ಎಷ್ಟರ ಮಟ್ಟಿಗೆ ಕಾಪಾಡಿಕೊಂಡಿದೆ? ಈ ರಂಗ ಇವತ್ತು ನಮಗೆ ಒದಗಿಸುತ್ತಿರುವುದು ಸಂಪೂರ್ಣ ಪರಿಶೀಲನೆಗೊಳಪಡಿಸಿದ ಸುದ್ದಿಯನ್ನೋ? ಅವು ಪಕ್ಷಪಾತರಹಿತವೇ? ಧರ್ಮ, ಜಾತಿ, ಜನಾಂಗ, ಭಾಷೆಯನ್ನು ಮೀರಿದ ಆದರ್ಶವೊಂದು ‘ಸುದ್ದಿ ಮನೆ’(ಪತ್ರಿಕಾ ಕಚೇರಿ)ಗಳಲ್ಲಿವೆಯೇ? ಇದೆಯೆಂದಾದರೆ ಅದು ನಿಜಕ್ಕೂ ಸಕ್ರಿಯವಾಗಿದೆಯೇ? ಅಷ್ಟಕ್ಕೂ,
      ಫಝ್ಲುರ್ರಹ್ಮಾನ್‍ರ ಬಗ್ಗೆ ರೋಚಕ ಸುದ್ದಿಯನ್ನು ಕಟ್ಟಿಕೊಟ್ಟ ಕನ್ನಡ ಸಹಿತ ಹೆಚ್ಚಿನೆಲ್ಲ ಪತ್ರಿಕೆಗಳು ಕನಿಷ್ಠ ಆ ಬಗ್ಗೆ ಸ್ಪಷ್ಟೀಕರಣವನ್ನೋ ವಿಷಾದವನ್ನೋ ಈ ವರೆಗೂ ಸೂಚಿಸಿಲ್ಲ ಎಂಬುದೇ ಮಾಧ್ಯಮರಂಗದ ಆದರ್ಶ ಬದ್ಧತೆಯ ಮಿತಿಯನ್ನು ಸ್ಪಷ್ಟಪಡಿಸುತ್ತದೆ.  

Wednesday, July 8, 2015

ಇವೆಲ್ಲ ಆಕಸ್ಮಿಕವೋ ಪೂರ್ವಯೋಜಿತವೋ?

ಚೇತನ್ ಭಗತ್
ಅಮರ್ತ್ಯ ಸೇನ್
ಸಲ್ಮಾನ್ ರುಶ್ದಿ
ತಸ್ಲೀಮಾ ನಸ್ರೀನ್
    ಮುಂತಾದವರಂತೆ, ಪರಾಂಜಯ್ ಗುಹಾ ತಾಕುರ್ತಾ, ಸುಬಿರ್ ಘೋಷ್, ಜ್ಯೋತಿರ್ಮಯಿ ಚೌಧರಿ, ಮ್ಯಾಟ್ ಕೆನ್ನಾರ್ಡ್, ಆ್ಯಂಡ್ರೆ ವಾಲ್ಚೆಕ್.. ಇವರೆಲ್ಲ ಸುದ್ದಿಗೀಡಾದವರಲ್ಲ. ಹಾಗಂತ, ಇವರೂ ಬರಹಗಾರರೇ. ಆದರೆ ಇವರು ಬರಹಕ್ಕಾಗಿ ಆಯ್ದುಕೊಳ್ಳುವ ವಿಷಯಗಳು ಇವರನ್ನು ಖ್ಯಾತನಾಮರಿಂದ ಹೊರಗಿರಿಸಿವೆ. ಇವರ ಕುತೂಹಲಗಳನ್ನು ಜಾಣತನದಿಂದ ನಿರ್ಲಕ್ಷಿಸಲಾಗಿದೆ. ಸುದ್ದಿಗೆ ಮತ್ತು ಚರ್ಚೆಗೆ ಒಳಗಾಗಲೇಬೇಕಿದ್ದ ಇವರ ಬರಹಗಳನ್ನು ಸುದ್ದಿಗೀಡಾಗದಂತೆ ನೋಡಿಕೊಳ್ಳ     ಲಾಗಿದೆ. ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ. ಮಾನಸಿಕವಾಗಿ ಹಿಂಸಿಸಲಾಗಿದೆ, ಅಗೌರವಿಸಲಾಗಿದೆ. ಅಷ್ಟಕ್ಕೂ, ರುಶ್ದಿಯಂತೆಯೋ ತಸ್ಲೀಮಾರಂತೆಯೋ ಇವರು ಯಾರ ಧಾರ್ಮಿಕ ಭಾವನೆಯನ್ನೂ ಘಾಸಿಗೊಳಿಸಿಲ್ಲ. ಜನರ ಆಚಾರ-ವಿಚಾರಗಳನ್ನು ಪ್ರಶ್ನಿಸಿಲ್ಲ. ಅವರು, ‘ಜಗತ್ತಿನ ಹೆಚ್ಚಿನ ಸಂಪತ್ತು ಕೇವಲ 85 ಮಂದಿ ಶ್ರೀಮಂತರಲ್ಲೇ ಯಾಕೆ ಸುತ್ತುತ್ತಿವೆ’ ಎಂದು ಅನುಮಾನಿಸಿದರು. ಆ ಕುರಿತಂತೆ ಅಧ್ಯಯನ ನಡೆಸಿದರು. ‘ಜಗತ್ತಿನ ಹೆಚ್ಚಿನೆಲ್ಲ ಅತಿಕ್ರಮಣಗಳು ಮತ್ತು ದಾಳಿಗಳು ನಿರ್ದಿಷ್ಟ ಸಂದರ್ಭವೊಂದರಲ್ಲೇ ಯಾಕೆ ಘಟಿಸುತ್ತಿವೆ..’ ಎಂದು ಕುತೂಹಲಗೊಂಡು ಹುಡುಕಾಡಿದರು. ಈ ಹುಡುಕಾಟವೇ ಇವರನ್ನು ಕಪ್ಪು ಪಟ್ಟಿಯಲ್ಲಿರಿಸುವುದಕ್ಕೆ ಕಾರಣವಾದುವು.
    ದಿ ಗಾರ್ಡಿಯನ್, ನ್ಯೂಯಾರ್ಕ್ ಟೈಮ್ಸ್, ಫೈನಾನ್ಶಿಯಲ್ ಟೈಮ್ಸ್.. ಮುಂತಾದ ಪ್ರಸಿದ್ಧ ಪತ್ರಿಕೆಗಳಿಗೆ ನಿರಂತರವಾಗಿ ಬರೆಯುತ್ತಿದ್ದ ಖ್ಯಾತ ಪತ್ರಕರ್ತ ಮ್ಯಾಟ್ ಕೆನ್ನಾರ್ಡ್‍ರು ಒಮ್ಮೆ ಫೈನಾನ್ಶಿಯಲ್ ಟೈಮ್ಸ್ ಗೆ ಈಜಿಪ್ಟ್ ನ ಸರ್ವಾಧಿಕಾರಿ ಮುಬಾರಕ್‍ರ ಬಗ್ಗೆ ಒಂದು ಲೇಖನ ಬರೆದರು. ಇಸ್ರೇಲ್‍ನ ನಂತರ ಅಮೇರಿಕದಿಂದ ಅತ್ಯಂತ ಹೆಚ್ಚು ನೆರವು ಪಡೆಯುತ್ತಿರುವ ರಾಷ್ಟ್ರ ಈಜಿಪ್ಟ್. ಈ ಹಿನ್ನೆಲೆಯಿಂದಲೇ ಅವರು ‘ಅಮೇರಿಕ ಬೆಂಬಲಿತ’ (US backed ) ಎಂಬ ಪದವನ್ನು ಲೇಖನದ ಮಧ್ಯೆ ಬಳಸಿದರು. ಆದರೆ ಸಂಪಾದಕರು ಆ ಪದವನ್ನು ಕಿತ್ತು ಹಾಕಿದರು. ಇನ್ನೊಮ್ಮೆ, ಲೆಬನಾನ್‍ನಲ್ಲಿ ಅಸ್ತಿತ್ವದಲ್ಲಿರುವ ಹಿಝ್ಬುಲ್ಲಾದ ಬಗ್ಗೆ ಅದೇ ಫೈನಾನ್ಶಿಯಲ್ ಟೈಮ್ಸ್ ಗೆ ಲೇಖನವೊಂದನ್ನು ಬರೆದುಕೊಟ್ಟರು. ‘ಹಿಝ್ಬುಲ್ಲಾಗೆ ಇರಾನ್ ನೆರವಾಗುತ್ತಿದೆ’ (Iranian backed ) ಎಂದೂ ಬರೆದರು. ಆದರೆ ಆ ಪದವನ್ನು ಸಂಪಾದಕರು ಹಾಗೆಯೇ ಉಳಿಸಿಕೊಂಡರು. ಮಾಧ್ಯಮಗಳು ಮತ್ತು ಅವುಗಳ ಭಾಷೆಯನ್ನು ಮೂರನೇ ಶಕ್ತಿಯೊಂದು ಸದಾ ನಿಯಂತ್ರಿಸುತ್ತಿರುತ್ತದೆ ಎಂಬ ತನ್ನ ಅಧ್ಯಯನಾತ್ಮಕ ಬರಹದಲ್ಲಿ ಒಂದು ಉದಾಹರಣೆಯಾಗಿ ಕೆನ್ನಾರ್ಡ್‍ರು ಈ ಘಟನೆಯನ್ನು ಉಲ್ಲೇಖಿಸಿದರು. ಜಗತ್ತಿನಲ್ಲಿ ದೊಡ್ಡದೊಂದು ಜನಸಂಖ್ಯೆ ಹಸಿವಿನಿಂದ ಸಾಯುತ್ತಿರುವಾಗ ಕೆಲವೇ ಕೆಲವು ಶ್ರೀಮಂತರ ಗುಂಪಿನಲ್ಲಿ ಜಗತ್ತಿನ ಸಂಪತ್ತೆಲ್ಲ  ಸೇರಿಕೊಂಡಿರುವುದು ಆಕಸ್ಮಿಕವಲ್ಲ ಎಂದೇ ಅವರು ತನ್ನ ಹೊಸ ಪುಸ್ತಕ ‘The rocket: A Rouge Reporters V/s The Masters of the
ಕಾರ್ಯಾಚರಣೆಗೆ ಸಿದ್ಧವಾಗುತ್ತಿರುವ ಕರ್ಕರೆ
 Universe’ದಲ್ಲಿ ವಾದಿಸಿದರು. ಮಾಧ್ಯಮಗಳು ಈ ಶ್ರೀಮಂತರ ದಂಧೆಯನ್ನು ಪ್ರಶ್ನಿಸುವ ಸಾಮರ್ಥ್ಯವನ್ನು ಕಳಕೊಂಡಿವೆ ಎಂದು ಹಲವಾರು ಉದಾಹರಣೆಗಳ ಮೂಲಕ ಸಾದರಪಡಿಸಿದರು. ಇದಕ್ಕಿಂತ ಮೊದಲು, 2014 ಎಪ್ರಿಲ್ 15ರಂದು ‘ಗ್ಯಾಸ್ ವಾರ್ಸ್: ಕ್ರೋನಿ ಕ್ಯಾಪಿಟಾಲಿಸಂ ಆ್ಯಂಡ್ ದಿ ಅಂಬಾನೀಸ್' ಎಂಬ ಕೃತಿಯೊಂದು ಬಿಡುಗಡೆಯಾಯಿತು. ಪರಾಂಜಯ್ ಗುಹಾ, ಸುಬಿರ್ ಮತ್ತು ಜ್ಯೋತಿರ್ಮಯಿ ಎಂಬ ಮೂವರು ಸಂಶೋಧನಾ ನಿರತ ಬರಹಗಾರರು ಒಟ್ಟು ಸೇರಿ ಈ ಕೃತಿಯನ್ನು ರಚಿಸಿದ್ದರು. ವಿಶೇಷ ಏನೆಂದರೆ, ಅವರು ಈ ಕೃತಿಯ ಪ್ರಕಟಣೆಗಾಗಿ ಎರಡ್ಮೂರು ಪ್ರಕಾಶನ ಸಂಸ್ಥೆಗಳನ್ನು ಸಂಪರ್ಕಿಸಿದ್ದರು. ಅವು ಒಪ್ಪಿಕೊಳ್ಳದೇ ಹೋದಾಗ ಸ್ವಯಂ ಪ್ರಕಟಣೆಗೆ ಮುಂದಾದರು. ಬಿಡುಗಡೆಯಾದ ಎರಡೇ ದಿನಗಳೊಳಗೆ ಅಂಬಾನಿಗಳ ವಕೀಲರಿಂದ ನೋಟೀಸ್ ಬಂತು. ಎಪ್ರಿಲ್ 23ರಂದು ಮತ್ತೊಂದು ನೋಟೀಸು ಬಂತು. 100 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುವುದಾಗಿ ಬೆದರಿಸಲಾದ ನೋಟೀಸ್. ಕೇಂದ್ರ ಸರಕಾರದ ನೀತಿಗಳು ಹೇಗೆ ಅಂಬಾನಿ ಪರವಾಗಿವೆ ಎಂಬುದನ್ನು ‘ಗ್ಯಾಸ್ ವಾರ್..’ ಕೃತಿಯಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿತ್ತು. ಕೃಷ್ಣ ಮತ್ತು ಗೋದಾವರಿ ನದಿ ತಟದಲ್ಲಿ ತೈಲ ಎತ್ತುವಿಕೆಗೆ ಮತ್ತು ತೈಲ ಬೆಲೆಗೆ ಸಂಬಂಧಿಸಿ ಅನಿಲ್ ಮತ್ತು ಮುಖೇಶ್ ಅಂಬಾನಿ ನಡುವೆ ಇರುವ ತಗಾದೆಗಳು ಕೃತಿಯಲ್ಲಿ ಉಲ್ಲೇಖಿತವಾಗಿದ್ದುವು. ಸರಕಾರವು ರಿಲಯನ್ಸ್ ಪರ ಇರುವುದನ್ನು ಮತ್ತು ಆ ಕಾರಣದಿಂದಲೇ ಈ ಹಿಂದೆ ಪೆಟ್ರೋಲಿಯಂ ಸಚಿವರನ್ನು ಸರಕಾರ ಬದಲಿಸಿರುವುದನ್ನೂ ಕೃತಿಯಲ್ಲಿ ಪುರಾವೆಯಾಗಿ ಮಂಡಿಸಲಾಗಿತ್ತು. ರಾಜಕೀಯ ಪಕ್ಷಗಳಿಗೆ ರಿಲಯನ್ಸ್ ದೇಣಿಗೆ ನೀಡುತ್ತಿದೆ ಮತ್ತು ಪ್ರತಿಯಾಗಿ ವಿವಿಧ ತೈಲ ಮತ್ತಿತರ ಗುತ್ತಿಗೆಗಳನ್ನು ಪಡಕೊಂಡು ಅದು ಶ್ರೀಮಂತವಾಗುತ್ತಾ ಹೋಗುತ್ತಿದೆ ಎಂದೂ ಹೇಳಲಾಗಿತ್ತು.
    ಅಷ್ಟಕ್ಕೂ, ಮ್ಯಾಗಿ ನೂಡಲ್ಸನ್ನು ಸರಕಾರಗಳು ನಿಷೇಧಿಸುವುದಕ್ಕಿಂತ ಮೊದಲು ದೇಶದಲ್ಲಿ ಅದರ ವ್ಯಾಪ್ತಿ, ಮಾರಾಟ, ಬಜೆಟ್ ಇವೆಲ್ಲ ಎಷ್ಟು ಮಂದಿಗೆ ಗೊತ್ತಿತ್ತು? ‘ಮ್ಯಾಗಿ ಮಾರುಕಟ್ಟೆಯಲ್ಲಿ ಸಿಗುತ್ತದೆ, ನಾವು ತಿನ್ನುತ್ತೇವೆ..’ ಎಂಬುದಕ್ಕಿಂತ ಹೊರತಾಗಿ ಅದರ ತಯಾರಿಯ ಬಗ್ಗೆ ನಾವೆಷ್ಟು ತಲೆ ಕೆಡಿಸಿಕೊಂಡಿದ್ದೆವು? ಮ್ಯಾಗಿಯನ್ನು ನಮಗೆ ಇಷ್ಟದ ಆಹಾರವಾಗಿ ಪರಿಚಯಿಸಿದ್ದು ಜಾಹೀರಾತುಗಳೇ. ಕೇವಲ ಕಳೆದ ಒಂದೇ ವರ್ಷದಲ್ಲಿ ಭಾರತದಲ್ಲಿ ಮ್ಯಾಗಿಯ ಪ್ರಚಾರಕ್ಕಾಗಿ 445 ಕೋಟಿ ರೂಪಾಯಿಯನ್ನು ಬಳಸಲಾಗಿದೆ. ಹಾಗಂತ, ಇದರ ತಪಾಸಣೆಗೆ ಕಂಪೆನಿ ವ್ಯಯಿಸಿದ್ದು ಬರೇ 19 ಕೋಟಿ ರೂಪಾಯಿ. ಶ್ರೀಮಂತ ಕಂಪೆನಿಗಳು ಮತ್ತು ವ್ಯಕ್ತಿಗಳು ತಮ್ಮ ಖಜಾನೆಯನ್ನು ತುಂಬಿಸುವುದಕ್ಕಾಗಿ ಮರುಳು ಮಾಡುವ ತಂತ್ರಗಳನ್ನು ಹೆಣೆಯುತ್ತಲೇ ಇರುತ್ತಾರೆ. ರಾಷ್ಟ್ರಗಳು ಕೂಡ ಇದರಿಂದ ಹೊರತಾಗಿಲ್ಲ. ಅವು ತಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕೆ ನಿರ್ದಿಷ್ಟ ಸಂದರ್ಭಗಳಿಗಾಗಿ ಕಾಯುತ್ತಿರುತ್ತವೆ. 1994ರ  ವಿಶ್ವಕಪ್ ಫುಟ್ಬಾಲ್ ಫೈನಲ್‍ನಲ್ಲಿ ಇಟಲಿ ಆಡುತ್ತಿರುವ ದಿನದಂದೇ ಇಟಲಿಯ ಅಧ್ಯಕ್ಷ ಸಿಲ್ವಿಯೋ ಬೆರ್ಲಸ್ಕೋನಿಯವರು ವಿವಾದಾತ್ಮಕ ಆದೇಶವೊಂದನ್ನು ಹೊರಡಿಸಿದರು. ಭ್ರಷ್ಟ ರಾಜಕಾರಣಿಗಳು ಜೈಲು ಪಾಲಾಗುವುದನ್ನು ತಡೆಯುವ ಉದ್ದೇಶದ ಆದೇಶವಾಗಿತ್ತದು. 2008ರಲ್ಲಿ ರಷ್ಯಾವು ಜಾರ್ಜಿಯಾದ ಮೇಲೆ ಆಕ್ರಮಣ ನಡೆಸುವಾಗ ಬೀಜಿಂಗ್‍ನಲ್ಲಿ ಒಲಿಂಪಿಕ್ಸ್ ನಡೆಯುತ್ತಿತ್ತು. ನಿಜವಾಗಿ, ಮಾಧ್ಯಮಗಳ ಗಮನವಷ್ಟೇ ಅಲ್ಲ, ಜಗತ್ತಿನ ಗಮನವೂ ಇದ್ದದ್ದು ಬೀಜಿಂಗ್‍ನಲ್ಲೇ. ಅಷ್ಟಕ್ಕೂ, ಇಂಥ ಘಟನೆಗಳು ಆಕಸ್ಮಿಕ ಅಲ್ಲ ಎಂಬುದಕ್ಕೆ - Read ದಿ study: Attack when the World is not watching? International media and the Israel-Palestinian conflict' (ಜಗತ್ತು ಗಮನಿಸದಿರುವಾಗ ನಡೆಸುವ ಆಕ್ರಮಣ, ಇಸ್ರೇಲ್-ಫೆಲೆಸ್ತೀನ್ ವಿವಾದ ಮತ್ತು ಅಂತಾರಾಷ್ಟ್ರೀಯ ಮಾಧ್ಯಮ) ಎಂಬ ರಾಬಿನ್ ಡ್ಯುರಾಂಟ್ ಮತ್ತು ಎಕತರಿನ್ ಝರಾವ್‍ಸ್ಕಾಯ ಎಂಬವರ ಸಂಶೋಧನಾತ್ಮಕ ಬರಹ ಧಾರಾಳ ಪುರಾವೆಗಳನ್ನು ಒದಗಿಸುತ್ತದೆ. ಪ್ಯಾರಿಸ್‍ನ ಪೊ ಯುನಿವರ್ಸಿಟಿ ಮತ್ತು ಪ್ಯಾರಿಸ್ ಸ್ಕೂಲ್ ಆಫ್ ಇಕನಾಮಿಕ್ಸ್ ನಲ್ಲಿ ಪ್ರೊಫೆಸರ್‍ಗಳಾಗಿರುವ ಇವರು, ‘ಮಾಧ್ಯಮಗಳು ಇತರ ಸುದ್ದಿಗಳಲ್ಲಿ ಬ್ಯುಸಿಯಾಗಿರುವ ಸಂದರ್ಭವನ್ನು ವಿವಿಧ ರಾಷ್ಟ್ರಗಳು ಹೇಗೆ ಆಕ್ರಮಣಕ್ಕೆ ಬಳಸಿಕೊಳ್ಳುತ್ತವೆ.. ’ ಎಂಬುದನ್ನು ವಿವರವಾಗಿ ಕೃತಿಯಲ್ಲಿ ತೆರೆದಿಟ್ಟರು. 2000ದಿಂದ 2011ರ ವರೆಗಿನ 11 ವರ್ಷಗಳ ಅವಧಿಯ ಇಸ್ರೇಲ್-ಫೆಲೆಸ್ತೀನ್ ಸಂಘರ್ಷವನ್ನು ಈ ಲೇಖಕರು ತಮ್ಮ ಅಧ್ಯಯನಕ್ಕೆ ಒಳಪಡಿಸಿದರು. ಇಸ್ರೇಲ್-ಫೆಲೆಸ್ತೀನ್ ನಡುವಿನ ಸಂಘರ್ಷ ಮತ್ತು ಆ ಸಂದರ್ಭದಲ್ಲಿ ಅಮೇರಿಕದ ಪ್ರಮುಖ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸುದ್ದಿಗಳನ್ನು ಪರಸ್ಪರ ಹೋಲಿಸಿ ನೋಡಿಕೊಂಡರು. 2001 ಸೆ. 11ರಂದು ಜಗತ್ತಿನ ಗಮನವೆಲ್ಲ ಅಮೇರಿಕದತ್ತ ನೆಟ್ಟಿತ್ತು. ಎರಡು ನಾಗರಿಕ ವಿಮಾನಗಳು ಅಲ್ಲಿನ ಅವಳಿ ಗೋಪುರವನ್ನು ಹೊಡೆದುರುಳಿಸಿದ ಭಯಾನಕ ಘಟನೆಗೆ ಜಗತ್ತು ತಲ್ಲಣಗೊಂಡಿತ್ತು. ಮಾಧ್ಯಮಗಳು ಮಾತ್ರವಲ್ಲ, ಜಗತ್ತಿನ ಎಲ್ಲರೂ ಅಮೇರಿಕದತ್ತ ಗಮನ ಕೇಂದ್ರೀಕರಿಸಿದ್ದರು. ಇದೇ ಸಂದರ್ಭವನ್ನು ನೋಡಿಕೊಂಡು ಇಸ್ರೇಲ್‍ನ ಪ್ರಧಾನಿ ಏರಿಯಲ್ ಶೆರೋನ್‍ರು ಫೆಲೆಸ್ತೀನ್‍ನ ಗಾಝಾದ ಮೇಲೆ ಹೆಲಿಕಾಪ್ಟರ್ ದಾಳಿ ನಡೆಸಿದರು. ಪಶ್ಚಿಮ ದಂಡೆಯ ಮೇಲೆ ಸೇನೆಯ ಮೂಲಕ ಆಕ್ರಮಣ ನಡೆಸಿದರು. ಇದೊಂದೇ ಅಲ್ಲ, Exposing the lies of the Empire (ಸಾಮ್ರಾಜ್ಯದ ಸುಳ್ಳುಗಳ ಅನಾವರಣ) ಎಂಬ ಆ್ಯಂಡ್ರೆ ವಾಲ್ಚೆಕ್‍ರ ಕೃತಿಯಲ್ಲೂ ಇಂಥ ಮೋಸಗಳ ವಿವರಗಳಿವೆ. ಇರಾಕ್‍ನ ಮೇಲೆ ಅಮೇರಿಕ ನಡೆಸಿದ ಆಕ್ರಮಣದ ಸುತ್ತ ಹೆಣೆಯಲಾದ ಈ ಕೃತಿಯಲ್ಲಿ ಅಮೇರಿಕನ್ ಸುಳ್ಳುಗಳ ದೊಡ್ಡದೊಂದು ಮೂಟೆಯನ್ನೇ ಬಿಚ್ಚಿಡಲಾಗಿದೆ. ಕಾದಂಬರಿಕಾರ, ಸಿನಿಮಾ ನಿರ್ದೇಶಕ ಮತ್ತು ಪತ್ರಕರ್ತರೂ ಆಗಿರುವ ಆ್ಯಂಡ್ರೆ ವಾಲ್ಚೆಕ್‍ರು ಇದೀಗ ಈ ಕೃತಿಯ ದ್ವಿತೀಯ ಭಾಗವನ್ನು ತರುವ ಉಮೇದಿನಲ್ಲಿದ್ದಾರೆ. ಅವರ ವಿಶೇಷತೆ ಏನೆಂದರೆ, ಅವರು ಸುದ್ದಿಗಳ ಮೂಲವನ್ನು ಹುಡುಕಿಕೊಂಡು ಹೋಗುತ್ತಾರೆ. ‘ಚೀನಾದಲ್ಲಿ ಸಮಾಜವಾದ ಸತ್ತಿದೆ..’ ಎಂಬ ಪಾಶ್ಚಾತ್ಯ ಮಾಧ್ಯಮಗಳ ಅಭಿಪ್ರಾಯವನ್ನು ದೃಢಪಡಿಸಿಕೊಳ್ಳುವುದಕ್ಕಾಗಿ ಅವರು ಬೀಜಿಂಗ್‍ನಲ್ಲಿ ನೆಲೆಸಿದರು. ಜಿಂಬಾಬ್ವೆಯ ವಿರುದ್ಧ ಇಕನಾಮಿಕ್ಸ್ ಟೈಮ್ಸ್, ಬಿಬಿಸಿಯಂಥ ಮಾಧ್ಯಮಗಳು ಅಕ್ಷರ ದಾಳಿಯನ್ನು ಪ್ರಾರಂಭಿಸಿದಾಗ ಅವರು ಜಿಂಬಾಬ್ವೆಗೆ ತೆರಳಿದರು. ‘ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಒಂದೇ ಒಂದು ಆಸ್ಪತ್ರೆ ಇಲ್ಲ..’ ಎಂಬಲ್ಲಿವರೆಗೆ ಈ ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿದ್ದುವು. ಒಂದು ಕಾಲದಲ್ಲಿ ಬಿಳಿಯ ರಾಷ್ಟ್ರಗಳ ಅತಿಕ್ರಮಣಕ್ಕೀಡಾಗಿ ಬಸವಳಿದಿದ್ದ ಮತ್ತು ರಾಬರ್ಟ್ ಮುಗಾಬೆಯವರ ನೇತೃತ್ವದಲ್ಲಿ ಕರಿಯರು ಒಟ್ಟು ಸೇರಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಇತಿಹಾಸ ಜಿಂಬಾಬ್ವೆಗಿದೆ. ಬಿಬಿಸಿ ಮತ್ತು ಇಕನಾಮಿಕ್ಸ್ ಗಳು ಹೇಳಿದ್ದು ಪರಮ ಸುಳ್ಳು ಎಂಬುದನ್ನು ವಾಲ್ಚೆಕ್ ಸಾಬೀತುಪಡಿಸಿದರು. ನಿಜವಾಗಿ, ಇಂಥ ಬರಹಗಳಿಗೆ ಮಾಧ್ಯಮಗಳಲ್ಲಿ ಜಾಗ ಸಿಗುವುದು ಕಡಿಮೆ. ಜುಜುಬಿ 85 ಮಂದಿಯ ಕೈಯಲ್ಲಿ ಇಷ್ಟು ದೊಡ್ಡ ಜಗತ್ತಿನ ಹೆಚ್ಚಿನ ಸಂಪತ್ತುಗಳು ಯಾಕೆ ಕೇಂದ್ರೀಕೃತವಾಗಿವೆ ಎಂಬ ಪ್ರಶ್ನೆಯನ್ನು ಕೇಳುವ ಸಾಮರ್ಥ್ಯ ಮುಖ್ಯವಾಹಿನಿಯ ಮಾಧ್ಯಮಗಳಿರುವುದಿಲ್ಲ. ಯಾಕೆಂದರೆ, ಈ ಮಾಧ್ಯಮವನ್ನು ನಿಯಂತ್ರಿಸುತ್ತಿರುವುದೇ ಈ ಶ್ರೀಮಂತರು. ಭಾರತದ ಪ್ರಮುಖ ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳು ಯಾರ ನಿಯಂತ್ರಣದಲ್ಲಿವೆ ಎಂಬ ಅಧ್ಯಯನಕ್ಕೆ ಇಳಿದಾಗ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಸರಕಾರಗಳಿಗೂ ಅವರನ್ನು ಎದುರು ಹಾಕಿಕೊಳ್ಳುವ ಸಾಮರ್ಥ್ಯ ಬಹುತೇಕ ಇರುವುದಿಲ್ಲ. ಅವರಿಲ್ಲದಿದ್ದರೆ ಪಕ್ಷ ನಡೆಯದಂಥ ಸ್ಥಿತಿ ಇರುತ್ತದೆ. ಅವರಿಗಾಗಿ ನೀತಿ-ನಿಯಮಗಳನ್ನು ಒಂದೋ ಸಡಿಲಿಸಬೇಕಾಗುತ್ತದೆ ಅಥವಾ ಪಕ್ಷಪಾತ ತೋರಬೇಕಾಗುತ್ತದೆ. ಹೀಗೆ ಶ್ರೀಮಂತರೇ ಶ್ರೀಮಂತರಾಗುತ್ತಾರೆ. ಅಷ್ಟಕ್ಕೂ, 
   ರಕ್ಷಣಾ ಹಗರಣದಿಂದಾಗಿ ವಾಜಪೇಯಿ ನೇತೃತ್ವದ ಎನ್‍ಡಿಎ ಸರಕಾರವು ತೀವ್ರ ಮುಜುಗರ ಅನುಭವಿಸುತ್ತಿದ್ದ ಸಂದರ್ಭದಲ್ಲೇ ಪಾರ್ಲಿಮೆಂಟ್ ನ ಮೇಲೆ ದಾಳಿಯಾಗುವುದು ಮತ್ತು ಕರ್ಕರೆ, ಸಾಲಸ್ಕರ್‍ರಂಥ ಪ್ರಮುಖ ಮೂವರು ಪೊಲೀಸಧಿಕಾರಿಗಳು ಆಶ್ಚರ್ಯಕರ ರೀತಿಯಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಸಾವಿಗೀಡಾಗುವುದನ್ನು ಹೇಗೆ ಅನುಮಾನಿಸದಿರಲು ಸಾಧ್ಯ?




Thursday, July 2, 2015

ರೋಮ್ ಮಾರ್ಚ್, ರಥಯಾತ್ರೆ ಮತ್ತು ಮೋದಿ..

ಶಂಕರ್ ಗುಹಾ ನಿಯೋಗಿ
    ನರೇಂದ್ರ ಮೋದಿಯವರು ಪ್ರಧಾನಿಯಾದ ಕೆಲವೇ ವಾರಗಳಲ್ಲಿ, “ಭಾರತದ ಅಭಿವೃದ್ಧಿ ಯೋಜನೆಗಳನ್ನು ತಡೆಯಲು ವಿದೇಶಿ ದೇಣಿಗೆ ಪಡೆಯುವ ಎನ್‍ಜಿಓ(ಸರಕಾರೇತರ ಸಂಸ್ಥೆ)ಗಳ ಸಂಚು” (Concerted efforts by select foreign funded NGOs to take down Indian development projects) ಎಂಬ ಶೀರ್ಷಿಕೆಯಲ್ಲಿ ಭಾರತದ ಗುಪ್ತಚರ ಇಲಾಖೆಯು (IB) 21 ಪುಟಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಿತು. ಸುಮನ್ ಸಹಾಯ್, ವಂದನಾ ಶಿವ, ಕವಿತಾ ಕುರುಗಂತಿ, ಉದಯ ಕುಮಾರ್, ಅರುಣಾ ರಾಡ್ರಿಗಸ್, ಸ್ವಾಮಿ ಅಗ್ನಿವೇಶ್.. ಮುಂತಾದ ಸಾಮಾಜಿಕ ಕಾರ್ಯಕರ್ತರ ಮೇಲೆ ಈ ವರದಿ ಶಂಕೆ ವ್ಯಕ್ತ ಪಡಿಸಿತು. ಗ್ರೀನ್‍ಪೀಸ್, ಆ್ಯಕ್ಷನ್ ಏಡ್, ಆಶಾ.. ಮುಂತಾದ ಎನ್‍ಜಿಓಗಳೂ ಶಂಕೆಗೊಳಗಾದವು. ಅದರಲ್ಲೂ ಗ್ರೀನ್‍ಪೀಸ್‍ನ ಮೇಲೆ ಮೋದಿ ಸರಕಾರ ಎಷ್ಟರ ಮಟ್ಟಿಗೆ ದ್ವೇಷದಿಂದ ವರ್ತಿಸಿ ತೆಂದರೆ, ಅದರ ಪ್ರಮುಖ ಕಾರ್ಯಕರ್ತೆ ಪ್ರಿಯಾ ಪಿಳ್ಳೆಯನ್ನು ಲಂಡನ್‍ಗೆ ತೆರಳದಂತೆ ಭಾರತದ ವಿಮಾನ ನಿಲ್ದಾಣದಲ್ಲೇ ತಡೆಹಿಡಿಯಲಾಯಿತು. ಮಧ್ಯ ಪ್ರದೇಶದ ಮಹನ್ ಎಂಬಲ್ಲಿ ಕಲ್ಲಿದ್ದಲು ಆಧಾರಿತ ವಿದ್ಯುತ್ ಯೋಜನೆಯಿಂದ ನಿರ್ಗತಿಕರಾಗುವ ಆದಿವಾಸಿಗಳ ಕುರಿತಂತೆ ಬ್ರಿಟಿಷ್ ಪಾರ್ಲಿಮೆಂಟ್‍ನಲ್ಲಿ ವಿಷಯ ಮಂಡಿಸುವುದು ಪ್ರಿಯಾ ಪಿಳ್ಳೆಯ ಪ್ರಯಾಣದ ಉದ್ದೇಶವಾಗಿತ್ತು. 40 ರಾಷ್ಟ್ರಗಳಲ್ಲಿ ಚಟುವಟಿಕೆಯಲ್ಲಿರುವ ಗ್ರೀನ್‍ಪೀಸ್, ಜಗತ್ತಿನಲ್ಲಿಯೇ ಅತಿ ದೊಡ್ಡ ಸರಕಾರೇತರ ಸಂಸ್ಥೆ. ಕಲ್ಲಿದ್ದಲು ಮತ್ತು ಪರಮಾಣು ಆಧಾರಿತ ವಿದ್ಯುತ್ ಯೋಜನೆಗಳೇ ಅದರ ಮುಖ್ಯ ಗುರಿ. ಇಂಥ ಬೃಹತ್ ಯೋಜನೆಗಳಿಂದ ಆಗಬಹುದಾದ ಪರಿಸರ ನಾಶ, ನಿರ್ವಸಿತರು, ಕೃಷಿ ಭೂಮಿ.. ಸಹಿತ ಒಟ್ಟು ಹಾನಿಗಳ ಬಗ್ಗೆ ಅದು ಜನಜಾಗೃತಿ ಮೂಡಿಸುವುದನ್ನು ಈವರೆಗೂ ಮಾಡುತ್ತಾ ಬಂದಿದೆ. ನಿಜವಾಗಿ, ಮೋದಿಯವರ ಕಾಕದೃಷ್ಟಿ ಗ್ರೀನ್‍ಪೀಸ್‍ನ ಮೇಲೆ ಬೀಳುವುದಕ್ಕೆ ಇನ್ನೊಂದು ಕಾರಣವೂ ಇದೆ- ಅದುವೇ ಅದಾನಿ. ‘Research breaking: Adani's record of environmental destruction and non compliance with regulations’ (ಅದಾನಿ ಕಂಪೆನಿ ನಡೆಸಿರುವ ಪರಿಸರ ನಾಶ ಮತ್ತು ಕಾನೂನು ಉಲ್ಲಂಘನೆಯ ಅಧ್ಯಯನಾತ್ಮಕ ವರದಿ) ಎಂಬ ಹೆಸರಲ್ಲಿ 2014 ಮಾರ್ಚ್‍ನಲ್ಲಿ ಗ್ರೀನ್‍ಪೀಸ್ ಸಂಸ್ಥೆಯು ವಿಸ್ತೃತ ವರದಿಯನ್ನು ಬಿಡುಗಡೆಗೊಳಿಸಿತ್ತು. ಮೋದಿಯವರ ಪರಮಾಪ್ತರಾದ ಅದಾನಿಯವರ ‘ಕೋಲ್ ಇಂಡಿಯಾ ಕಂಪೆನಿ’ಗೆ ಪರಿಸರ ನಾಶದಲ್ಲಿ ದೀರ್ಘ ಇತಿಹಾಸವಿರುವುದನ್ನು ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅನಧಿಕೃತ ನಿರ್ಮಾಣ, ತೆರಿಗೆ ವಂಚನೆ ಮತ್ತು ಅಧಿಕಾರಿಗಳಿಗೆ ಲಂಚ ನೀಡಿದ್ದೂ ಸೇರಿದಂತೆ ಅದಾನಿ ಕಂಪೆನಿಯ ನಡೆಯನ್ನು ಅದರಲ್ಲಿ ಉಲ್ಲೇಖಿಸಿ ಪ್ರಶ್ನಿಸಲಾಗಿತ್ತು. ಅದಾನಿಯವರ ಕೋಲ್ ಇಂಡಿಯಾ ಕಂಪೆನಿಯು ಜಗತ್ತಿನಲ್ಲಿಯೇ ಪ್ರಮುಖ ಕಲ್ಲಿದ್ದಲು ಸಂಸ್ಥೆ. ಆಸ್ಟ್ರೇಲಿಯಾದಲ್ಲಿ ಅದು 16.5 ಬಿಲಿಯನ್ ಡಾಲರ್ ಮೊತ್ತದ ಕಲ್ಲಿದ್ದಲು ಗುತ್ತಿಗೆಯನ್ನು ಪಡಕೊಂಡದ್ದು ಮತ್ತು ಅಲ್ಲಿನ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಆ ಮೊದಲೇ ಪಾರ್ಟಿ ಫಂಡ್ ನೀಡಿದ್ದು ಈ ಹಿಂದೆ ಸುದ್ದಿಯಾಗಿತ್ತು. ನಿಜವಾಗಿ, ಗ್ರೀನ್‍ಪೀಸ್‍ನ ಮೇಲೆ ಕ್ರಮ ಕೈಗೊಂಡರೆ ಅದು ಜಾಗತಿಕವಾಗಿ ಸಂಚಲನ ಸೃಷ್ಟಿಸಲಾರದೆಂಬುದು ಮೋದಿಯವರಿಗೆ ಖಚಿತವಾಗಿ ಗೊತ್ತಿತ್ತು. ಯಾಕೆಂದರೆ, ಅದು ಬೃಹತ್ ಅಭಿವೃದ್ಧಿ ಯೋಜನೆಗಳನ್ನು ವಿಶ್ವದಾದ್ಯಂತ ಪ್ರಶ್ನಿಸುತ್ತಿದೆ. ಅಂಥವುಗಳನ್ನು ಖಂಡಿಸಿ ಪ್ರತಿಭಟಿಸುತ್ತಿದೆ. ಫೋಸ್ಕೋ, ವೇದಾಂತ, ಪರಮಾಣು ವಿದ್ಯುತ್ ಸ್ಥಾವರಗಳು, ನರ್ಮದಾ ಯೋಜನೆ.. ಸಹಿತ ಎಲ್ಲವೂ ಅದರ ವಿರೋಧಕ್ಕೆ ಗುರಿಯಾಗಿದೆ. ಇವುಗಳಿಂದಾಗಿ ನಿರ್ವಸಿತರಾಗುವ ಜನರಿಗೆ ಅದು ಧ್ವನಿಯನ್ನು ಕೊಡುತ್ತಿದೆ. ಈ ಹಿಂದೆ ಫ್ರಾನ್ಸ್ ಸರಕಾರವು ಮೊರುರಾದಲ್ಲಿ ಅಣು ಪರೀಕ್ಷೆ ನಡೆಸಿದ್ದನ್ನು ಗ್ರೀನ್‍ಪೀಸ್ ಪ್ರತಿಭಟಿಸಿದಾಗ ಫ್ರಾನ್ಸ್ ಅದರ ಕತ್ತು ಹಿಸುಕಿತ್ತು. ಹಾಗಂತ, ಈ ವಿಷಯದಲ್ಲಿ ಮೋದಿ ಒಂಟಿಯಲ್ಲ.    ಪುರುಷೋತ್ತಮ್ ದಾಸ್ ಕುದಾಲ್‍ರ ನೇತೃತ್ವದಲ್ಲಿ 1982ರಲ್ಲಿ ಇಂದಿರಾ ಗಾಂಧಿಯವರು ಎನ್‍ಜಿಓಗಳ ತನಿಖೆಗಾಗಿ ಸಮಿತಿಯನ್ನು ರಚಿಸಿದ್ದರು. 1975ರಲ್ಲಿ ತುರ್ತು ಪರಿಸ್ಥತಿಯನ್ನು ಹೇರಿ ಆ ಬಳಿಕ ಜನತಾ ಸರಕಾರ ಅಧಿಕಾರಕ್ಕೆ ಬಂದು ಮುಂದಿನ ಚುನಾವಣೆಯಲ್ಲಿ ಮತ್ತೆ ಇಂದಿರಾ ಗಾಂಧಿಯವರೇ ಅಧಿಕಾರಕ್ಕೇರಿದ ಸಂದರ್ಭವಾಗಿತ್ತದು. ಜನತಾ ಸರಕಾರದ ಗೆಲುವಿನಲ್ಲಿ ಎನ್‍ಜಿಓಗಳ ಪಾತ್ರವಿದೆ ಎಂಬುದು ಅವರ ಅನುಮಾನವಾಗಿತ್ತು. 'ಎನ್‍ಜಿಓಗಳಿಗೆ ಅಮೇರಿಕದ ಗುಪ್ತಚರ ಸಂಸ್ಥೆ ಸಿಐಎ  ದೇಣಿಗೆ ನೀಡಿದೆ ಮತ್ತು ಇದರಲ್ಲಿ ಸಂಘಪರಿವಾರದ ನಾಯಕರೂ ಭಾಗಿಯಾಗಿದ್ದಾರೆ'...  ಎಂದೂ ವರದಿಯಲ್ಲಿ ಹೇಳಲಾಗಿತ್ತು.    ನಿಜವಾಗಿ, ಸರ್ವಾಧಿಕಾರಿ ಮನಸ್ಥಿತಿಯ ಮಂದಿಯೇ ಹೀಗೆ. ಅದು ಇಂದಿರಾ ಆಗಿರಬಹುದು ಅಥವಾ ಮೋದಿ ಆಗಿರಬಹುದು - ಅವರು ಸದಾ ಭೀತಿಯಲ್ಲೇ ಬದುಕುತ್ತಿರುತ್ತಾರೆ. ವಿರೋಧಿ ಧ್ವನಿಗಳನ್ನು ಮಟ್ಟ ಹಾಕುತ್ತಾರೆ. ತನಿಖೆಯ ಹೆಸರಲ್ಲಿ ಹಿಂಸೆ ಕೊಡುತ್ತಾರೆ. ಒಮ್ಮೆ ಅಧಿಕಾರಕ್ಕೇರಿದ ಬಳಿಕ ಮತ್ತೆಂದೂ ಅಧಿಕಾರ ಬಿಟ್ಟು ಕೊಡಲು ಒಪ್ಪದ ಅಸಮರ್ಪಕ ರಾಜಕೀಯ ಮನಸ್ಥಿತಿ ಭಾರತದ್ದು. ಪ್ರಿಯಾ ಪಿಳ್ಳೆಯನ್ನು ದೇಶವಿರೋಧಿಯಂತೆ ನಡೆಸಿಕೊಂಡ
 
ರೋಮ್ ಮಾರ್ಚ್
ಮೋದಿಯವರಂತೆಯೇ 1977ರಲ್ಲಿ ಅಂದಿನ ಜನತಾ ಸರಕಾರವು ಶಂಕರ್ ಗುಹಾ ನಿಯೋಗಿಯನ್ನೂ ನಡೆಸಿ ಕೊಂಡಿತ್ತು. ಛತ್ತೀಸ್‍ಗಢದ ರಾಜಹೋರಾ ಕಲ್ಲಿದ್ದಲು ಗಣಿಯಲ್ಲಿ ಗುಲಾಮರಂತೆ ಜೀವಿಸುತ್ತಿದ್ದ ಆದಿವಾಸಿಗಳ ಪರ ಪ್ರತಿಭಟನೆ ಹಮ್ಮಿಕೊಂಡದ್ದಕ್ಕಾಗಿ ಅಂದಿನ ಮಧ್ಯಪ್ರದೇಶ ಸರಕಾರ ಅವರನ್ನು 1977 ಜೂನ್ 2ರಂದು ಬಂಧಿಸಿತ್ತು. ‘ರಷ್ಯಾದ ಸಹಾಯದಿಂದ ನಡೆಸಲಾಗುವ ಈ ಗಣಿಗಾರಿಕೆಯ ವಿರುದ್ಧ ಅಮೇರಿಕದ ಸಿಐಎ ಯು ನಿಯೋಗಿಯ ಮೂಲಕ ಸಂಚು ನಡೆಸಿದೆ..’ ಎಂದು ಸರಕಾರ ವಾದಿಸಿತ್ತು. ಒಂದು ರೀತಿಯಲ್ಲಿ, 1975ರಲ್ಲಿ ಈ ದೇಶದ ಮೇಲೆ ಮೊದಲ ಬಾರಿಗೆ ತುರ್ತು ಸ್ಥಿತಿಯನ್ನು ಹೇರಲಾಯಿತಾದರೂ ಅದು ಎರಡು ವರ್ಷಗಳಲ್ಲೇ ಅಧಿಕೃತವಾಗಿ ಕೊನೆಗೊಂಡಿದೆ. ಆದರೆ 1991ರ ಬಳಿಕ ಈ ದೇಶದಲ್ಲಿ ಅನಧಿಕೃತ ಮತ್ತು ಅಘೋಷಿತ ತುರ್ತು ಸ್ಥಿತಿಯೊಂದು ಹೆಚ್ಚೂ-ಕಡಿಮೆ ಜಾರಿಯಲ್ಲಿದೆ. 1922 ಅಕ್ಟೋಬರ್ 22ರಿಂದ 29ರ ವರೆಗೆ ಇಟಲಿಯ ಸರ್ವಾಧಿಕಾರಿ ಬೆನಿಟೋ ಮುಸಲೋನಿಯು ‘ರೋಮ್ ಮಾರ್ಚ್' ಎಂಬ ರಾಲಿಯನ್ನು ಹಮ್ಮಿಕೊಂಡಿದ್ದರು. ‘ನಮಗೆ ಅಧಿಕಾರ ಕೊಡಿ’ ಎಂಬ ಘೋಷಣೆಯೊಂದಿಗೆ ಸುಮಾರು 60 ಸಾವಿರ ಕಪ್ಪು ಶರ್ಟ್ ಧರಿಸಿದ ಅವರ ಬೆಂಬಲಿಗರು ಇಟಲಿಯಾದ್ಯಂತ ರಾಲಿಯಲ್ಲಿ ತೆರಳಿದ್ದರು. 90ರ ದಶಕದಲ್ಲಿ ಅಡ್ವಾಣಿಯವರ ನೇತೃತ್ವದಲ್ಲಿ ನಡೆದ ರಥಯಾತ್ರೆ ಅದನ್ನೇ ಹೋಲುತ್ತದೆ. ಆ ಬಳಿಕ ಈ ದೇಶದಲ್ಲಿ ಭೀತಿಯ ರಾಜಕೀಯವೊಂದು ನಡೆಯುತ್ತಿದೆ. ರಥ ತೆರಳಿದಲ್ಲೆಲ್ಲಾ ಕೋಮು ವಿಭಜನೆ, ರಕ್ತಪಾತ ನಡೆಯಿತು. ಮಂಡಲ್ ವಿರೋಧಿ ಚಳವಳಿ, ರಾಜೀವ್ ಗಾಂಧಿ ಹತ್ಯೆ, ನವ ಉದಾರೀಕರಣದ ಪ್ರವೇಶ.. ಎಲ್ಲವೂ 90ರ ಬಳಿಕದ ಘಟನೆಗಳಾಗಿವೆ. ತುರ್ತು ಸ್ಥಿತಿಯಲ್ಲಿ ಕಾಣಿಸಿಕೊಳ್ಳುವ ಭೀತಿಯು 90ರ ಬಳಿಕ ರಾಜಕಾರಣದಲ್ಲಿ ಧಾರಾಳವಾಗಿ ಕಾಣಸಿಗುತ್ತದೆ. ಪ್ರತಿ ಚುನಾವಣೆಯ ಸಂದರ್ಭದಲ್ಲೂ ಜಾತ್ಯತೀತತೆ, ಜಾತೀಯತೆ, ಕೋಮುವಾದ, ಬಾಯಿಮುಚ್ಚಿ, ಪಾಕ್‍ಗೆ ಹೋಗಿ, ಸಮುದ್ರಕ್ಕೆ ಹಾರಿ.. ಎಂಬಂತಹ ಭೀತಿಕಾರಕ ಹೇಳಿಕೆಗಳು ಮಾಮೂಲಾಗುತ್ತಿವೆ. ತುರ್ತುಸ್ಥಿತಿ ಎಂಬ ಪದವನ್ನು ಪ್ರಯೋಗಿಸದೆಯೇ ಅದನ್ನು ಅನಧಿಕೃತವಾಗಿ ಜಾರಿಯಲ್ಲಿಡುವುದಕ್ಕೆ ಪ್ರಯತ್ನಗಳು ನಡೆಯುತ್ತಿವೆ. 1971ರಲ್ಲಿ ಕಾಂಗ್ರೆಸ್ ವಿಭಜನೆಗೊಂಡ ನಂತರ ಗರೀಬಿ ಹಠಾವೊ ಮತ್ತು ಬ್ಯಾಂಕ್ ರಾಷ್ಟ್ರೀಕರಣದಂಥ ಇಶ್ಯೂಗಳನ್ನು ಮುಂದಿಟ್ಟುಕೊಂಡು ಇಂದಿರಾಗಾಂಧಿಯವರು ಚುನಾವಣೆಯನ್ನು ಎದುರಿಸಿದರು. ಮಾತ್ರವಲ್ಲ, 352 ಸ್ಥಾನಗಳನ್ನು ಗಳಿಸಿದರು. ಅದೇ ವರ್ಷದ ಕೊನೆಯಲ್ಲಿ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿ ಬಾಂಗ್ಲಾವನ್ನು ವಿಮೋಚನೆಗೊಳಿಸಿದರು. ಅದಕ್ಕಾಗಿ ವಾಜಪೇಯಿಯವರಿಂದ ‘ದುರ್ಗೆ' ಎಂಬ ಬಿರುದನ್ನೂ ಗಿಟ್ಟಿಸಿಕೊಂಡರು. ಆದರೆ, ಇದಾಗಿ ಕೇವಲ 3 ವರ್ಷಗಳೊಳಗೆ ಇಂದಿರಾ ಎಂತಹ ಪಾತಾಳಕ್ಕೆ ಕುಸಿದರೆಂದರೆ, ಅವರು ತುರ್ತುಸ್ಥಿತಿಯ ಮೊರೆ ಹೋದರು. 1973ರಲ್ಲಿ ನಡೆದ ಅರಬ್-ಇಸ್ರೇಲ್ ಯುದ್ಧವು ಭಾರತೀಯ ಅರ್ಥವ್ಯವಸ್ಥೆಯನ್ನು ತೀವ್ರವಾಗಿ ಬಾಧಿಸಿತ್ತು. ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗಿದ್ದರು. ಗುಜರಾತ್‍ನ ಎಲ್.ಡಿ. ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಟೀನ್ ಆಹಾರಕ್ಕೆ 20% ಬೆಲೆ ಏರಿಸಿದ್ದನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನೆ ಆ ಬಳಿಕ ಇತರ ರಾಜ್ಯಗಳಿಗೂ ಹಮ್ಮಿಕೊಂಡು ಚಳವಳಿಯ ರೂಪ ಪಡೆಯಿತು. 1974 ಜನವರಿಯಲ್ಲಿ ಗುಜರಾತ್‍ನಲ್ಲಿ ನಡೆದ ಪ್ರತಿಭಟನೆಯ ವಿರುದ್ಧ ಸರಕಾರ ಕೈಗೊಂಡ ಕಾರ್ಯಾಚರಣೆಯಲ್ಲಿ 100ರಷ್ಟು ಮಂದಿ ಸಾವಿಗೀಡಾದರು. ಸರಕಾರಿ ಉದ್ಯೋಗಿಗಳೂ, ಕಾರ್ಮಿಕರೂ ಪ್ರತಿಭಟನೆಯಲ್ಲಿ ಭಾಗವಹಿಸತೊಡಗಿದರು. ಇಂದಿರಾ ತುರ್ತು ಸ್ಥಿತಿಯನ್ನು ಹೇರಿದರು.    1984ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, “ಯಾವ ಕಾರಣಕ್ಕಾಗಿ ನೀವು ಕೆಲವರ ವಾಹನಗಳಲ್ಲಿ ಪ್ರಯಾಣಿಸುವಾಗ ಭಯ ಪಡುತ್ತೀರಿ..” ಎಂಬ ಜಾಹೀರಾತನ್ನು ಕಾಂಗ್ರೆಸ್ ಪ್ರಕಟಿಸಿತ್ತು. ಆ ಜಾಹೀರಾತಿನಲ್ಲಿ ‘ಸಿಕ್ಖ್ ಡ್ರೈವರ್’ನಂತೆ ಕಾಣುವ ವ್ಯಕ್ತಿಯ ರೇಖಾಚಿತ್ರವೂ ಇತ್ತು. ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ನಡೆದ ಆ ಚುನಾವಣೆಯ ಈ ಜಾಹೀರಾತನ್ನು ಮುಖ್ಯವಾಹಿನಿಯ ಪತ್ರಿಕೆಗಳೆಲ್ಲವೂ ಮುದ್ರಿಸಿದ್ದುವು. ಬಹುಶಃ, ಇವತ್ತು ಈ ಜಾಹೀರಾತನ್ನು ನಗಣ್ಯವಾಗಿಸುವಂತೆ ಹೇಳಿಕೆಗಳು ಕೇಳಿ ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಪಕ್ಷೀಯರು ಮತ್ತು ಬೆಂಬಲಿಗರೇ ಇಂಥ ಹೇಳಿಕೆಗಳನ್ನು ಹೊರಡಿಸುತ್ತಿದ್ದರೂ ಅವರು ಮಾತಾಡುತ್ತಿಲ್ಲ. ನಿಜವಾಗಿ, ಇಂದಿರಾ ಗಾಂಧಿಯವರು ತುರ್ತು ಸ್ಥಿತಿಯನ್ನು ಹೇರಲು ಮುಂದಾದದ್ದೇ ಸವಾಲುಗಳು ಎದುರಾದಾಗ ಮತ್ತು ಅದನ್ನು ಸಹಜ ಪ್ರಜಾತಾಂತ್ರಿಕ ರೀತಿಯಲ್ಲಿ ಎದುರಿಸಲು ಅಶಕ್ತರಾದಾಗ. ನರೇಂದ್ರ ಮೋದಿಯವರು ತನ್ನ ಬೇಕಾಬಿಟ್ಟಿ ಅಭಿವೃದ್ಧಿ ಯೋಜನೆಗೆ NGO ಗಳು ತಡೆ ಎಂಬುದನ್ನು ಪರಿಗಣಿಸಿಯೇ ಅವುಗಳನ್ನು ಶಂಕಿತ ಪಟ್ಟಿಯಲ್ಲಿರಿಸಿದರು. ಚುನಾವಣೆಯ ಸಂದರ್ಭದಲ್ಲಿ ಅವರು ಹುಟ್ಟಿಸಿದ ಭರವಸೆಯು ಒಂದೊಂದಾಗಿ ಕಳಚಿಕೊಳ್ಳುತ್ತಾ ಬರುತ್ತಿರುವಂತೆಯೇ ಸ್ವಚ್ಛ ಭಾರತ್ ಮತ್ತು ಯೋಗ ದಿನವನ್ನು ಆಚರಿಸಿದರು. ಇದೀಗ ಅಧಿಕಾರದ ಒಂದು ವರ್ಷ ಪೂರ್ತಿಯಾಗುತ್ತಿರುವ ಸಂದರ್ಭದಲ್ಲೇ ಆಂತರಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಷ್ಟಕ್ಕೂ, ಅವರ ಆಡಳಿತಾತ್ಮಕ ರೀತಿಯೇ ಸರ್ವಾಧಿಕಾರಿ ಸ್ವರೂಪದ್ದು. ಸಚಿವ ಸಂಪುಟವನ್ನು ತೆರೆಮರೆಗೆ ಸರಿಸಿ ಎಲ್ಲದರಲ್ಲೂ ‘ತಾನೇ' ಕಾಣಿಸಿಕೊಳ್ಳುವ ತವಕ. ಪಾಕ್‍ನ ಮೇಲೆ ಇಂದಿರಾ ದಾಳಿ ಮಾಡಿದಂತೆಯೇ ಮ್ಯಾನ್ಮಾರ್‍ನ ಗಡಿಯೊಳಕ್ಕೆ ನುಗ್ಗಿರುವುದನ್ನು ಮಹಾನ್ ಸಾಧನೆಯಾಗಿ ಅವರ ಪಕ್ಷ ಬಿಂಬಿಸಿಕೊಳ್ಳುತ್ತಿದೆ. ಇಂದಿರಾರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷವು ವ್ಯಕ್ತಿ ಕೇಂದ್ರಿತವಾಗಿತ್ತು. ಮೋದಿ ನಾಯಕತ್ವದಲ್ಲಿ ಬಿಜೆಪಿಯೂ ವ್ಯಕ್ತಿ ಕೇಂದ್ರಿತವಾಗುತ್ತಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂಥ ಬದಲಾವಣೆ ಯಾವತ್ತೂ ಅಪಾಯಕಾರಿಯೇ.
     ಹಾಗಂತ, ಸುಮಾರು 8,875ರಷ್ಟು NGO ಗಳ ಪರವಾನಿಗೆಯನ್ನು ರದ್ದುಗೊಳಿಸಿರುವ ನರೇಂದ್ರ ಮೋದಿಯವರನ್ನು ಅನುಮಾನಿಸುವುದಕ್ಕೆ ಕಾರಣಗಳು ಇನ್ನೂ ಇವೆ. 






Wednesday, June 17, 2015

ಯೋಗದ ಧರ್ಮ ಯಾವುದು?

    ಅಮೇರಿಕದ ಲಾಸ್ ಏಂಜಲೀಸ್‍ನಲ್ಲಿ ನೆಲೆಸಿರುವ ಭಾರತ ಮೂಲದ ವಿಕ್ರಮ್ ಚೌಧರಿ ಎಂಬವರು ಯೋಗಾಸನದ ಮೇಲೆ ಅಮೇರಿಕದಿಂದ ಪೇಟೆಂಟ್ ಪಡಕೊಂಡಿರುವುದಕ್ಕೆ 2007ರಲ್ಲಿ ಭಾರತದ ಪಾರ್ಲಿಮೆಂಟ್‍ನಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತದೆ. ಅಮೇರಿಕದ ನಡೆಯು ಅತಿರೇಕದ್ದು ಎಂದು ಸದಸ್ಯರು ಟೀಕಿಸುತ್ತಾರೆ. ‘ವಿಕ್ರಮ್ ಯೋಗ ಎಂಪಯರ್' ಎಂಬ ಹೆಸರಲ್ಲಿ ಅಮೇರಿಕದಲ್ಲಿ ಯೋಗ ಕೇಂದ್ರಗಳನ್ನು ಹೊಂದಿರುವ ವಿಕ್ರಮ್‍ರು, ಯೋಗದ 26 ಆಸನಗಳ ಪೇಟೆಂಟ್, ಕಾಪಿರೈಟ್ ಮತ್ತು ಟ್ರೇಡ್ ಮಾರ್ಕ್ ಗಳ ಹಕ್ಕುಗಳನ್ನು ಪಡೆದುಕೊಂಡಿದ್ದರು. ಈ 26 ಆಸನಗಳನ್ನು ತಾನೇ ಸಂಶೋಧಿಸಿದ್ದಾಗಿ ಅವರು ಹೇಳಿಕೊಂಡಿದ್ದರು. ಇದರ ವಿರುದ್ಧ ಅಂದಿನ ಬಿಜೆಪಿ ವಕ್ತಾರ ವಿಜಯ್ ಕುಮಾರ್ ಮಲ್ಹೋತ್ರಾ ಮಾಧ್ಯಮಗಳ ಮುಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರಲ್ಲದೇ ಯೋಗಕ್ಕೆ 5 ಸಾವಿರಗಳಷ್ಟು ಪುರಾತನ ಭಾರತೀಯ ಇತಿಹಾಸವಿದ್ದು, ವಿಕ್ರಮ್‍ರ ವಾದ ಅಸತ್ಯದಿಂದ ಕೂಡಿದ್ದು ಎಂದು ಹೇಳುತ್ತಾರೆ. ‘ಇಂಡಿಯನ್ ಗವರ್ನ್‍ಮೆಂಟ್ ಇನ್ ನಾಟ್ಸ್ ಓವರ್ ಯು.ಎಸ್. ಯೋಗ ಪೇಟೆಂಟ್ಸ್..’ ಎಂಬ ಹೆಸರಲ್ಲಿ ABC ನ್ಯೂಸ್ 2007 ಮೇ 22ರಂದು ಈ ಸುದ್ದಿಯನ್ನು ಪ್ರಕಟಿಸುತ್ತದೆ. ಇದರ ನಂತರ ಕೇಂದ್ರ ಸರಕಾರವು ಈ ಕುರಿತಂತೆ ಗಂಭೀರ ಕ್ರಮಗಳಿಗೆ ಮುಂದಾಗುತ್ತದೆ. 9 ಯೋಗ ಕೇಂದ್ರಗಳ ಯೋಗ ಗುರುಗಳು ಮತ್ತು ಕೌನ್ಸಿಲ್ ಆಫ್  ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR)ನ ಸುಮಾರು 200ರಷ್ಟು ವಿಜ್ಞಾನಿಗಳ ತಂಡವನ್ನು ರಚಿಸಿ ಪುರಾತನ ಯೋಗ ಆಸನಗಳನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ವಹಿಸುತ್ತದೆ. ಮಹಾಭಾರತ, ಭಗವದ್ಗೀತೆ ಮತ್ತು ಪತಂಜಲಿ ಯೋಗ ಸೂತ್ರಗಳೂ ಸೇರಿದಂತೆ ಪುರಾತನವಾದ 35 ಮೂಲ ಗ್ರಂಥಗಳಿಂದ ಯೋಗ ಆಸನಗಳನ್ನು ಸ್ಕ್ಯಾನ್ (Scan) ಮಾಡಿ ದಾಖಲಿಸಿಕೊಳ್ಳುವ ಏರ್ಪಾಡು ಮಾಡುತ್ತದೆ. 2009ರೊಳಗೆ 1500 ಯೋಗ ಆಸನಗಳ ದಾಖಲೀಕರಣ ಆಗಬಹುದು ಎಂದು CSIRನ ಮುಖ್ಯಸ್ಥ ಡಾ| ಗುಪ್ತಾ ಹೇಳುತ್ತಾರೆ. ಲಂಡನ್ನಿನ ದಿ ಟೆಲಿಗ್ರಾಫ್ ಪತ್ರಿಕೆಯು ಈ ಕುರಿತಂತೆ 2009 ಫೆ. 23ರಂದು ವಿವರಣಾತ್ಮಕ ಸುದ್ದಿಯನ್ನು ಪ್ರಕಟಿಸುತ್ತದೆ.
 ಅಷ್ಟಕ್ಕೂ, ಯೋಗ ‘ಧರ್ಮರಹಿತ'ವೇ ಆಗಿರುತ್ತಿದ್ದರೆ ಯೋಗದ ಆಸನಗಳನ್ನು ಮಹಾಭಾರತ, ಭಗವದ್ಗೀತೆಯಂತಹ ಹಿಂದೂ ಧರ್ಮಗ್ರಂಥಗಳಿಂದ ಸ್ಕ್ಯಾನ್ ಮಾಡಿ ದಾಖಲಿಸಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ. ಭಗವದ್ಗೀತೆಯು ಶ್ರೀ ಕೃಷ್ಣರ ಬೋಧನೆಗಳಾಗಿ ಗುರುತಿಸಿಕೊಂಡಿದೆ. ಈ ಗೀತೆಯಲ್ಲಿ ಕರ್ಮಯೋಗ, ಭಕ್ತಿಯೋಗ ಮತ್ತು ಜ್ಞಾನ ಯೋಗ ಎಂಬ ಮೂರು ರೀತಿಯ ಯೋಗವನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಲಾಗುತ್ತದೆ. ಭಗವದ್ಗೀತೆಯಲ್ಲಿ 18 ಅಧ್ಯಾಯಗಳು ಮತ್ತು 700 ವಚನ(ಶ್ಲೋಕ)ಗಳಿವೆ. ಪ್ರತಿ ಅಧ್ಯಾಯಗಳಿಗೂ ವಿಭಿನ್ನ ಯೋಗದ ಹೆಸರುಗಳನ್ನು ನೀಡಲಾಗಿದೆ ಎಂದು ನಂಬಲಾಗುತ್ತಿದೆ. ಕೆಲವು ತತ್ವಶಾಸ್ತ್ರಜ್ಞರು ಭಗವದ್ಗೀತೆಯನ್ನು 3 ಭಾಗಗಳಾಗಿ ವಿಂಗಡಿಸಿದ್ದು, ಮೊದಲ 6 ಅಧ್ಯಾಯಗಳು ಮತ್ತು ಅದರ 280 ವಚನಗಳು ಕರ್ಮಯೋಗಕ್ಕೆ ಸಂಬಂಧಿಸಿದವು ಎಂದು ಹೇಳುತ್ತಾರೆ. ಮಧ್ಯದ 6 ಅಧ್ಯಾಯಗಳು ಮತ್ತು 209 ವಚನಗಳು ಭಕ್ತಿಯೋಗ ಹಾಗೂ ಕೊನೆಯ 6 ಅಧ್ಯಾಯಗಳು ಮತ್ತು 211 ವಚನಗಳು ಜ್ಞಾನಯೋಗಕ್ಕೆ ಸಂಬಂಧಿಸಿದವು ಎಂದು ಹೇಳುತ್ತಾರೆ. ಮಹಾಭಾರತದ 12ನೇ ಅಧ್ಯಾಯದಲ್ಲಿ ನಿರೋಧ ಯೋಗದ ಪ್ರಸ್ತಾಪವಿದೆಯೆಂದು ಹೇಳಲಾಗುತ್ತದೆ. 'ಪತಂಜಲಿ'ಯ ಯೋಗ ಸೂತ್ರಕ್ಕಿಂತ ಮೊದಲೇ ಮೈತ್ರಾಯನಿಯ ಉಪನಿಷತ್‍ನಲ್ಲಿ ಪ್ರಾಣಾಯಾಮ, ಪ್ರತ್ಯಹರ, ಧ್ಯಾನ, ಧರಣಿ, ತರ್ಕ ಮತ್ತು ಸಮಾಧಿ ಯೋಗಗಳ ಪ್ರಸ್ತಾಪವಿರುವುದನ್ನು ವಿದ್ವಾಂಸರು ಉಲ್ಲೇಖಿಸುತ್ತಾರೆ. ಬೃಹದಾರಣ್ಯಕ ಉಪನಿಷತ್ ಮತ್ತು ಚಂದೋಗ್ಯ ಉಪನಿಷತ್‍ಗಳಲ್ಲಿ ಇವುಗಳ ಬಗ್ಗೆ ವಿವರಿಸಿರುವುದಾಗಿ ಹೇಳಲಾಗುತ್ತದೆ. ನಿಜವಾಗಿ, ಯೋಗ ಎಂಬ ಪದ ಮೊತ್ತ ಮೊದಲು ಬಳಕೆಯಾದುದೇ ಋಗ್ವೇದದಲ್ಲಿ. ‘ಸೂರ್ಯ ದೇವನಿಗೆ' ಮುಂಜಾನೆ ತನ್ನನ್ನು ಅರ್ಪಿಸಿಕೊಳ್ಳುವ ರೀತಿಯಲ್ಲಿ ಆ ಪದವನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. ಪತಂಜಲಿ ಯೋಗ ಸೂತ್ರವನ್ನು ಹಿಂದೂ ತತ್ವಶಾಸ್ತ್ರದ ಕೇಂದ್ರೀಯ ಭಾಗವೆಂದು ಉಲ್ಲೇಖಿಸಲಾಗುತ್ತಿದೆ. ಜ್ಞಾನ ಯೋಗ, ಭಕ್ತಿ ಯೋಗ, ಹಠ ಯೋಗ, ಲಯ ಯೋಗ, ಅಷ್ಟಾಂಗ ಯೋಗ.. ಹೀಗೆ ಯೋಗಗಳ ಪ್ರಕಾರಗಳಿಗೂ ಹಿಂದೂ ಧಾರ್ಮಿಕ ಗ್ರಂಥಗಳು ಮತ್ತು ಆರಾಧನೆಗಳಿಗೂ ಬಿಡಿಸಲಾಗದ ನಂಟಿರುವುದು ರಹಸ್ಯವೇನೂ ಅಲ್ಲ. ಅಲ್ಲದೇ, ಯೋಗ ಎಂಬ ಸಂಸ್ಕ್ರಿತ ಪದಕ್ಕೆ ಸಂಪರ್ಕ ಎಂಬ ಅರ್ಥವೂ ಇದೆ. ದೇವರುಗಳೊಂದಿಗೆ `ಸಂಪರ್ಕ’ ಸಾಧಿಸುವ ಆರಾಧನೆಯೇ ಯೋಗ. ಹೀಗಿದ್ದೂ, ಯೋಗವನ್ನು ಕೇವಲ ವ್ಯಾಯಾಮವೆಂಬಂತೆ ಅಥವಾ ಅದಕ್ಕೂ ಧರ್ಮಕ್ಕೂ ಸಂಬಂಧವಿಲ್ಲವೆಂಬಂತೆ ಬಿಂಬಿಸು ವುದರ ಉದ್ದೇಶವೇನು? ಯೋಗ ಅಮೇರಿಕದಲ್ಲಿರಬಹುದು, ಇರಾನ್‍ನಲ್ಲಿ 200ರಷ್ಟು ಯೋಗ ಕೇಂದ್ರಗಳಿರಬಹುದು, ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸುವ ವಿಶ್ವಸಂಸ್ಥೆಯ ನಿಲುವನ್ನು 47ರಷ್ಟು ಮುಸ್ಲಿಮ್ ರಾಷ್ಟ್ರಗಳು ಬೆಂಬಲಿಸಿರಬಹುದು.. ಅದರರ್ಥ ಯೋಗ ಧರ್ಮರಹಿತ, ಜಾತ್ಯತೀತ ಮತ್ತು ಲೋಪರಹಿತ ಎಂದೇ? ಫೆ. 14ನ್ನು ಪ್ರೇಮಿಗಳ ದಿನವನ್ನಾಗಿ ಘೋಷಿಸಿದ್ದೂ ವಿಶ್ವಸಂಸ್ಥೆಯೇ. ವಿಶ್ವ ರಾಷ್ಟ್ರಗಳು ಇದನ್ನೂ ಬೆಂಬಲಿಸಿವೆ. ಹಾಗಂತ, ಅದು ಲೋಪ ರಹಿತವೇ, ಸರ್ವರೂ ಕಡ್ಡಾಯವಾಗಿ ಪಾಲಿಸಲೇಬೇಕಾದ ಆಚರಣೆಯೇ? ನಿಜ, ಯೋಗ ಇವತ್ತು ವ್ಯಾಪಾರೀಕರಣಗೊಂಡಿದೆ. 1960-70ರ ಬಳಿಕ ಯೋಗ ಭಾರತದಿಂದ ವಿದೇಶಕ್ಕೆ ಭಾರೀ ಪ್ರಮಾಣದಲ್ಲಿ ರಫ್ತಾಗಿದೆ. ಜಾರ್ಜ್ ಹ್ಯಾರಿಸನ್ ನಂತಹ ಸಂಗೀತಜ್ಞರು ಯುರೋಪಿಯನ್ ರಾಷ್ಟ್ರಗಳಲ್ಲಿ ಯೋಗದ ಪ್ರಚಾರಕ್ಕೆ ಧಾರಾಳ ಕೊಡುಗೆಯನ್ನು ನೀಡಿದ್ದಾರೆ. ಅಮೇರಿಕ ಮತ್ತು ಯುರೋಪ್‍ಗಳಲ್ಲಿ ಯೋಗ ಇವತ್ತು ದೊಡ್ಡದೊಂದು ಬಿಸಿನೆಸ್. ಅದರ ಆಸನಗಳು ಬದಲಾಗಿವೆ, ಮಂತ್ರಗಳು ಬದಲಾಗಿವೆ, ಭಗವದ್ಗೀತೆ, ಮಹಾಭಾರತ ಮತ್ತು ಪುರಾತನ ಭಾರತದ ಮೂಲ ಗ್ರಂಥಗಳ ಆಸನಗಳನ್ನು ತುಸು ಬದಲಿಸಿಯೋ ಅಥವಾ ಅದನ್ನೇ ನಕಲು ಮಾಡಿಯೋ ತಮ್ಮ ಸಂಶೋಧನೆಯೆಂಬಂತೆ ಹೇಳಿಕೊಂಡು ಪೇಟೆಂಟ್ ಪಡೆಯುವ ಸಂದರ್ಭಗಳು ಧಾರಾಳ ಸೃಷ್ಟಿಯಾಗುತ್ತಿವೆ. ಅಮೇರಿಕವೊಂದರಲ್ಲೇ ಯೋಗಕ್ಕೆ ಸಂಬಂಧಿಸಿದಂತೆ 130 ಪೇಟೆಂಟ್‍ಗಳು, 150 ಕಾಪಿರೈಟ್‍ಗಳು ಮತ್ತು 2300 ಟ್ರೇಡ್ ಮಾರ್ಕ್‍ಗಳ ಹಕ್ಕು ಸ್ವಾಮ್ಯತೆಯನ್ನು 2009ರಲ್ಲೇ ಪಡೆಯಲಾಗಿದೆ. ಭಾರತದಲ್ಲಿ ನಡೆಯುವಂತೆ ಪಾರ್ಕ್‍ಗಳಲ್ಲೋ ಸಾರ್ವಜನಿಕ ಸ್ಥಳಗಳಲ್ಲೋ ಉಚಿತವಾಗಿ ಪ್ರಾಣಾಯಾಮ, ಸೂರ್ಯ ನಮಸ್ಕಾರಗಳು ಈ ರಾಷ್ಟ್ರಗಳಲ್ಲಿ ನಡೆಯುತ್ತಿಲ್ಲ. ಅವರಿಗೆ ಅದೊಂದು ಮಿಲಿಯನ್ ಡಾಲರ್ ಬ್ಯುಸಿನೆಸ್. ವ್ಯಾಯಾಮದ ಹೆಸರಲ್ಲಿ ಯೋಗವನ್ನು ಅವರು ವಿವಿಧ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಾವೂ, ಯೋಗವನ್ನು ವ್ಯಾಖ್ಯಾನಿಸುವುದಕ್ಕೆ ಈ ವಿದೇಶಿ ಮಾನದಂಡವನ್ನೇ ಆಶ್ರಯಿಸಬೇಕೇ? ಯೋಗವನ್ನು ವ್ಯಾಯಾಮ ಎಂದು ಹೇಳುವವರಿಗೆ ಅದೊಂದು ವ್ಯಾಯಾಮ. ಇದು ಕೇವಲ ಯೋಗಾಸನಕ್ಕೆ ಮಾತ್ರ ಸಂಬಂಧಿಸಿ ಹೇಳಬೇಕಾದ್ದಲ್ಲ. ಹೆಚ್ಚಿನೆಲ್ಲ ಧಾರ್ಮಿಕ ಆಚರಣೆ, ಆರಾಧನೆಗಳಲ್ಲೂ ಈ ಬಗೆಯ ವ್ಯಾಯಾಮಗಳಿವೆ. ನಾವು ಅದನ್ನು ವ್ಯಾಯಾಮ ಎಂದು ವ್ಯಾಖ್ಯಾನಿಸಿದರೆ ಅದು ವ್ಯಾಯಾಮ. ಮುಸ್ಲಿಮರ ನಮಾಝನ್ನೂ ಈ ಬಗೆಯಲ್ಲಿ ವ್ಯಾಖ್ಯಾನಿಸಬಹುದು. ಶೃದ್ಧಾವಂತ ಮುಸ್ಲಿಮರಿಗೆ ನಮಾಝ್ ಎಂಬುದು ವ್ಯಾಯಾಮ ಅಲ್ಲ ಅಥವಾ ವ್ಯಾಯಾಮ ಎಂಬ ನೆಲೆಯಲ್ಲಿ ಅವರು ನಮಾಝ್ ಮಾಡುತ್ತಲೂ ಇಲ್ಲ. ಅದವರ ಆರಾಧನೆ. ಆದರೆ ವ್ಯಾಪಾರಿ ಮನೋಭಾವದವರಿಗೆ ಅದನ್ನು ವ್ಯಾಯಾಮದ ಸರಕಾಗಿ ಪರಿಚಯಿಸಬಹುದು. ಅದರ ಆಸನಗಳನ್ನು ಅದೇ ರೀತಿಯಲ್ಲೋ ಅಥವಾ ತುಸು ತಿರುವು-ಮುರುವು ಮಾಡಿಕೊಂಡೋ ಪ್ರಸ್ತುತಪಡಿಸಬಹುದು. ಅರಬಿಯಲ್ಲಿ ಹೇಳುವ ವಚನಗಳ ಬದಲಿಗೆ ಅವರವರದೇ ಆದ ಭಾಷೆಯಲ್ಲಿ, ಭಾವನೆಯಲ್ಲಿ ಅವರವರ ಇಷ್ಟ ಮಂತ್ರವನ್ನು ಜಪಿಸುವಂತೆ ಹೇಳಬಹುದು. ಅಲ್ಲದೇ ಯಾರಾದರೂ ಪೇಟೆಂಟ್ ಮಾಡಿಕೊಂಡು ಅದನ್ನು ಧರ್ಮರಹಿತಗೊಳಿಸಲೂಬಹುದು. ಬಹುಶಃ, ಯೋಗವನ್ನು ವ್ಯಾಯಾಮ ಎಂದು ಹೇಳುವವರು ಈ ಸೂಕ್ಷ್ಮ ಮತ್ತು ಬಹು ಮುಖ್ಯ ಅಂಶವನ್ನು ನಿರ್ಲಕ್ಷಿಸಿರುವಂತೆ ಕಾಣಿಸುತ್ತಿದೆ. ಹಿಂದೂಗಳಲ್ಲಿ ಯೋಗವನ್ನು ವ್ಯಾಯಾಮವಾಗಿ ಪರಿಗಣಿಸಿದವರಿರಬಹುದು. ಆದರೆ ಹೆಚ್ಚಿನವರು ‘ಯೋಗಿ’ಗಳಾಗುವುದಕ್ಕೆ ಧಾರ್ಮಿಕವಾದ ಅದರ ಹಿನ್ನೆಲೆಯೇ ಕಾರಣ. ಭಗವದ್ಗೀತೆಯಲ್ಲಿ ಯೋಗವಿದೆ, ಮಹಾಭಾರತದಲ್ಲಿ ಯೋಗದ ಪ್ರಸ್ತಾಪವಿದೆ, ಋಗ್ವೇದದಲ್ಲಿ ಅದು ಬಂದಿದೆ, ಹಿಂದೂ ದೇವರುಗಳ ವಿವಿಧ ಭಂಗಿಗಳಲ್ಲಿ ಯೋಗವಿದೆ.. ಹೀಗೆ ಆಧ್ಯಾತ್ಮಿಕವಾದ ಕಾರಣಗಳೊಂದಿಗೆ ಯೋಗವನ್ನು ಪ್ರೀತಿಸುವ ಮತ್ತು ಆಚರಿಸುವ ಮಂದಿಯೇ ಭಾರತದಲ್ಲಿ ಹೆಚ್ಚಿದ್ದಾರೆ. ನಿಜವಾಗಿ, ಯೋಗವು ಹಿಂದೂ ಧರ್ಮದೊಂದಿಗೆ ಮಾತ್ರ ಸಂಬಂಧವನ್ನು ಜೋಡಿಸಿಕೊಂಡಿರುವ ಆರಾಧನಾ ಪದ್ಧತಿ. ಯೋಗ ಎಂಬುದು ಬರೇ ಆಸನಗಳಲ್ಲ. ಅದರಲ್ಲಿ ಭಾವನಾತ್ಮಕತೆಯಿದೆ, ಆಧ್ಯಾತ್ಮಿಕ ಸಂವೇದನೆಯಿದೆ, ಹಿಂದೂ ಧರ್ಮದ ಆರಾಧನಾ ಚೈತನ್ಯವಿದೆ. ಆದರೆ, ಯೋಗವನ್ನು ಬರೇ ವ್ಯಾಯಾಮ ಎಂದು ಹೇಳುವವರು ಮೂಲಭೂತವಾದ ಈ ಸತ್ಯವನ್ನು ಅಡಗಿಸುತ್ತಿದ್ದಾರೆ. ಹಾಗಂತ, ಹಿಂದೂ ಧರ್ಮದಲ್ಲಿ ಗುರುತಿಸಿಕೊಳ್ಳದವರು ಯೋಗ ಮಾಡಬಾರದು ಎಂದಲ್ಲ. ಅದು ಅವರವರ ಆಯ್ಕೆ. ಆದರೆ ಯೋಗವನ್ನು ಸರ್ವರ ಮೇಲೆ ಹೇರುವುದಕ್ಕಾಗಿ ಅದನ್ನು ವ್ಯಾಯಾಮ ಎಂದು ಬಿಂಬಿಸುವುದರ ಬಗೆಗಷ್ಟೇ ನನ್ನ ತಕರಾರಿದೆ. ಹಾಗೆ ನೋಡಿದರೆ, ಮುಸ್ಲಿಮರ ನಮಾಝ್ ಕೂಡ ಸೂರ್ಯನ ಚಲನೆಯನ್ನು ಅವಲಂಬಿಸಿಕೊಂಡಿದೆ. ಸೂರ್ಯೋದಯದ ಮೊದಲು ಮತ್ತು ಸೂರ್ಯಾಸ್ತಮಾನದ ಬಳಿಕ ಹೀಗೆ ಎರಡು ನಮಾಝ್‍ಗಳಿವೆ. ಸೂರ್ಯ ನಡು ನೆತ್ತಿಗೇರಿದಾಗ ಒಂದು ನಮಾಝ್ ಇದೆ. ಸಂಜೆಯಾದಾಗಲೂ ಒಂದು ನಮಾಝ್ ಇದೆ. ಇದನ್ನು ಎತ್ತಿಕೊಂಡು ಇಸ್ಲಾಮಿನಲ್ಲಿ ಸೂರ್ಯಾರಾಧನೆಯಿದೆ ಎಂದು ವಾದಿಸಿದರೆ ಹೇಗಾಗಬಹುದು ಅಥವಾ ನಮಾಝï ಎಂಬುದು ಪ್ರಕೃತಿಯ ಚಲನೆಗಳಿಗೆ ಪೂರಕವಾಗಿ ಅಳವಡಿಸಿಕೊಳ್ಳಲಾದ ವ್ಯಾಯಾಮ ಎಂದು ವ್ಯಾಖ್ಯಾನಿಸಿದರೆ ಏನನಿಸಬಹುದು? ನಮಾಝನ್ನು ಬ್ಯುಸಿನೆಸ್ ಮಾಡಬಯಸುವವರಿಗೆ ಇಂಥ ಅವಕಾಶಗಳು ಧಾರಾಳ ಇವೆ. ಆದರೆ ನಿಜವಾಗಿಯೂ ನಮಾಝ್ ಹಾಗೆಯೋ? ಖಂಡಿತ ಅಲ್ಲ. ಇಲ್ಲಿ ಸೂರ್ಯನು ಸಮಯವನ್ನು ನಿರ್ಧರಿಸುವುದಕ್ಕಿರುವ ಒಂದು ಮಾಪಕವೇ ಹೊರತು ಆರಾಧನೆಗೂ ಅದಕ್ಕೂ ಯಾವ ಸಂಬಂಧವೂ ಇಲ್ಲ. ಹಾಗೆಯೇ, ಯೋಗದ ಭಾಗವಾದ ಸೂರ್ಯ ನಮಸ್ಕಾರವೂ ವ್ಯಾಯಾಮ ಅಲ್ಲ ಎಂಬುದಕ್ಕೆ ಸಮರ್ಥನೆ ಸಿಗುವುದೂ ಇಲ್ಲೇ. ಸೂರ್ಯ ಇಲ್ಲಿ ಮಾಪಕ ಅಲ್ಲ, ಅದು ಆರಾಧನಾ ಕ್ರಮದ ಒಂದು ಬಹುಮುಖ್ಯ ಭಾಗ. ಸೂರ್ಯ ನಮಸ್ಕಾರದಲ್ಲಿ ಸೂರ್ಯನನ್ನೇ ಆರಾಧಿಸಲಾಗುತ್ತದೆ. ಅಲ್ಲಿ ಸೂರ್ಯ ಭಕ್ತಿಯಿದೆ, ಶ್ರದ್ಧೆಯಿದೆ. ಈ ಶ್ರದ್ಧೆ ಮತ್ತು ಭಕ್ತಿಗೆ ಧಾರ್ಮಿಕ ಸ್ಫೂರ್ತಿಯೇ ಕಾರಣವಾಗಿದೆ. ಆದ್ದರಿಂದಲೇ,
    ಯೋಗದಿಂದ ಸೂರ್ಯ ನಮಸ್ಕಾರವನ್ನು ಕೈಬಿಟ್ಟ ಕೂಡಲೇ ಯೋಗ ಧರ್ಮರಹಿತವಾಗುವುದಿಲ್ಲ. ಬದಲು ಅಂಥ ಕ್ರಮಗಳು ಯೋಗ ದಿನದ ಬಗ್ಗೆ ಮತ್ತು ಅದನ್ನು ಆಚರಿಸುವಂತೆ ಒತ್ತಡ ಹೇರುತ್ತಿರುವುದರ ಬಗ್ಗೆ ಅನುಮಾನಗಳನ್ನಷ್ಟೇ ಹೆಚ್ಚಿಸುತ್ತದೆ. ಅದರಲ್ಲೂ ಬಹುಸಂಖ್ಯಾತರ ಪ್ರಧಾನಿ ಎಂಬಂತೆ ನಡಕೊಳ್ಳುತ್ತಿರುವ ಮತ್ತು ಭಗವದ್ಗೀತೆಯನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡುತ್ತಿರುವ ನರೇಂದ್ರ ಮೋದಿಯವರು ಈ ಪ್ರಕ್ರಿಯೆಯ ಹಿಂದಿರುವುದು ಈ ಅನುಮಾನಗಳಿಗೆ ಇನ್ನಷ್ಟು ಬಲವನ್ನೂ ತುಂಬುತ್ತಿದೆ.

Tuesday, June 2, 2015

ಮನ್‍ಕಿ ಬಾತ್ ನಿಂದ ಸೆಲ್ಫಿಯವರೆಗೆ..

   ಧಾಮಿನಿ ಶಾ, ಚಾರ್ಲೆಟ್ ಥಾಮಸ್, ಎ.ಎಸ್. ಬಂದೂಕುವಾಲಾ, ರಾಫೀ ಮಲಿಕ್, ಜಮೀಲಾ ಖಾನ್.. ಇವರೆಲ್ಲ ಗೆಳೆಯರಲ್ಲ. ಪರಸ್ಪರ ಭೇಟಿಯಾಗಿರುವ ಸಾಧ್ಯತೆಯೂ ಕಡಿಮೆ. ಆದರೆ ಇವರೆಲ್ಲ ತೋಡಿಕೊಳ್ಳುವ ನೋವು ಒಂದೇ. ಅವರ ಮಾತುಗಳಲ್ಲಿ ಸ್ಪಷ್ಟತೆ ಮತ್ತು ನಿಖರತೆಯಿದೆ. ಹಸಿ ಹಸಿ ಅನುಭವಗಳಿವೆ. ಗುಜರಾತ್ ವಿದ್ಯಾಪೀಠ ಯುನಿವರ್ಸಿಟಿಯ ಪ್ರೊಫೆಸರ್ ಆದ ಧಾಮಿನಿ ಶಾ ಅವರು ಗುಜರಾತ್‍ನ ಮುಸ್ಲಿಮ್ ಬಾಹುಳ್ಯ ಪ್ರದೇಶಗಳಾದ ಆನಂದ್, ಅಹ್ಮದಾಬಾದ್ ಮತ್ತು ಸಬರ್‍ಕಾಂತ್‍ಗಳಲ್ಲಿ ಅಧ್ಯಯನ ನಡೆಸುತ್ತಾರೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಗೊಳಿಸಲಾದ ಅಧ್ಯಯನದ ವರದಿಯಲ್ಲಿ ಹೇಳಿರುವುದೇನೆಂದರೆ, ‘ಈ ಮೂರು ಪ್ರದೇಶಗಳ 92% ಮುಸ್ಲಿಮರಿಗೆ ಹಿಂದುಗಳೊಂದಿಗೆ ಸಂಪರ್ಕವೇ ಇಲ್ಲ. 93% ಮುಸ್ಲಿಮರು ಆರ್ಥಿಕ ಸಂಕಷ್ಟ ಮತ್ತು ಉದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗುಜರಾತ್ ಗಲಭೆಯಲ್ಲಿ ನಿರ್ವಸಿತರಾಗಿ ಇಲ್ಲಿ ಸೇರಿಕೊಂಡಿರುವವರಲ್ಲಿ 85% ಮಂದಿ ಮುಸ್ಲಿಮರು ಮರಳಿ ಹೋಗಲು ಪ್ರಯತ್ನಿಸಿಲ್ಲ..’ ಎಂದಾಗಿತ್ತು. ಫ್ರಾನ್ಸ್ ನ ಸೈನ್ಸ್ ಪೋ ಯುನಿವರ್ಸಿಟಿಯ ಥಾಮಸ್‍ರು ಗುಜರಾತ್‍ನಲ್ಲಿ 6 ವರ್ಷಗಳ ಕಾಲ ಅಧ್ಯಯನ ನಡೆಸಿದರು. ಮುಖ್ಯವಾಗಿ ಜುಹಾಪುರ ಮತ್ತು ಅಹ್ಮದಾಬಾದ್‍ಗಳಲ್ಲಿ ನಡೆಸಿದ ಅಧ್ಯಯನ ವರದಿಯನ್ನು ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದರು. ‘ಮುಸ್ಲಿಮರು ಸಾಲ ಮಂಜೂರಾತಿ, ಶಾಲಾ ದಾಖಲಾತಿ ಮತ್ತು ಪೊಲೀಸು ಠಾಣೆಗಳಲ್ಲಿ ದೂರು ದಾಖಲಾತಿ.. ಎಲ್ಲದಲ್ಲೂ ಅಡಚಣೆ ಮತ್ತು ಅಸಮಾನತೆಯನ್ನು ಎದುರಿಸುತ್ತಿದ್ದಾರೆ..’ ಎಂದು ಬರೆದರು. ಬಂದೂಕುವಾಲರು ನಿವೃತ್ತ ಪ್ರೊಫೆಸರ್. ರಾಫೀ ಮಲಿಕ್‍ರು ನಗರ ಯೋಜನೆಗೆ ಸಂಬಂಧಿಸಿದ ಸಂಸ್ಥೆಯೊಂದರ ಮುಖ್ಯಸ್ಥ. ಜವಿೂಲಾ ಖಾನ್ ಸಮಾಜ ಕಾರ್ಯಕರ್ತೆ. (ದಿ ಹಿಂದೂ ಮೇ 25, 2015) ಇವರೆಲ್ಲರ ಕ್ಷೇತ್ರ ಬೇರೆ ಬೇರೆಯಾಗಿದ್ದರೂ ಇವರ ಮಾತು, ದುಗುಡ, ಅಭಿಪ್ರಾಯಗಳೆಲ್ಲ ಒಂದೇ ಆಗಿರಲು ಏನು ಕಾರಣ, ಯಾರು ಕಾರಣ? ಹಾಗಂತ ಪ್ರಧಾನಿ ನರೇಂದ್ರ ಮೋದಿಯವರ ಒಂದು ವರ್ಷದ ಆಡಳಿತವನ್ನು ವಿಶ್ಲೇಷಿಸುವುದಕ್ಕೆ ಗುಜರಾತನ್ನು ಮಾನದಂಡವಾಗಿ ಬಳಸಬೇಕಿಲ್ಲ. ಮುಖ್ಯಮಂತ್ರಿ ನರೇಂದ್ರ ಮೋದಿ ಈಗ ಇತಿಹಾಸ. ಅವರ ಸ್ಥಾನದಲ್ಲಿ ಆನಂದಿ ಬೆನ್ ಇದ್ದಾರೆ. ಗುಜರಾತ್‍ನ ವಿಭಜನಾಕಾರಿ ವಾತಾವರಣಕ್ಕೆ ಮುಖ್ಯಮಂತ್ರಿ ಮೋದಿಯವರ ಆಡಳಿತಾವಧಿಯೇ ಕಾರಣ ಎಂಬುದು ಕಟು ವಾಸ್ತವವೇ ಆಗಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ಒಂದು ವರ್ಷವನ್ನು ಅದರಿಂದ ಹೊರಗಿಟ್ಟೂ ನೋಡಬಹುದಾಗಿದೆ. ಪ್ರಧಾನ ಮಂತ್ರಿ ಜನ್‍ಧನ್ ಯೋಜನಾ (ಬ್ಯಾಂಕ್ ಖಾತೆ), ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಯೋಜನಾ (ಜೀವ ವಿಮೆ), ‘ಪ್ರಧಾನಮಂತ್ರಿ ಸುರಕ್ಷಾ’ ಬೀಮಾ ಯೋಜನಾ (ಅಪಘಾತ ವಿಮೆ), ಅಟಲ್ ಪೆನ್ಶನ್ ಯೋಜನಾ (ಅಸಂಘಟಿತ ವಲಯಕ್ಕೆ ಪಿಂಚಣಿ) ಮುಂತಾದ ಹೊಸತನ್ನು ಅವರು ಈ ಒಂದು ವರ್ಷದಲ್ಲಿ ದೇಶಕ್ಕೆ ಪರಿಚಯಿಸಿದ್ದಾರೆ. ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಿಸುವಂತೆ ವಿಶ್ವಸಂಸ್ಥೆಯ ಮನವೊಲಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಅಮೇರಿಕದ ಅಧ್ಯಕ್ಷ ಒಬಾಮ ಅತಿಥಿಯಾಗುವಂತೆ ನೋಡಿಕೊಂಡಿದ್ದಾರೆ. ‘ಬ್ರಿಕ್ಸ್ ಅಭಿವೃದ್ಧಿ ಬ್ಯಾಂಕ್’ ಸ್ಥಾಪಿತವಾಗುವುದಕ್ಕೆ ಕಾರಣಕರ್ತರಾಗಿದ್ದಾರೆ. ಆದರೂ ಮೋದಿಯವರ 365 ದಿನಗಳೆಂದರೆ ಇಷ್ಟೇ ಅಲ್ಲ- ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ, ಪಂಚಾಯಿತಿ ರಾಜ್ ಸಂಸ್ಥೆಗಳು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಯೋಜನೆಗಳು.. ಸಹಿತ ಹಲವಾರು ಬಡವಸ್ನೇಹಿ ಯೋಜನೆಗಳ ಅನುದಾನವನ್ನು ಕಡಿತಗೊಳಿಸಿದ್ದೂ ಪ್ರಧಾನಿ ಮೋದಿಯೇ. ಇದರ ಮೊತ್ತವೇ 1.75 ಲಕ್ಷ ಕೋಟಿ ರೂಪಾಯಿ. ಈ ಕಡಿತ ಎಷ್ಟು ಏಕಪಕ್ಷೀಯವಾಗಿತ್ತೆಂದರೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿಯವರೇ ಅಪಸ್ವರ ಎತ್ತುವಷ್ಟು. ಭೂಸ್ವಾಧೀನ ಕಾಯ್ದೆ, ಪರಿಸರ ಯೋಜನೆಗಳಿಗೆ ತುರ್ತು ಅನುಮತಿ ಮತ್ತು ಮಾಧ್ಯಮಗಳೊಂದಿಗೆ ಶೂನ್ಯ ಸಂವಾದವು ಅವರ ಒಂದು ವರ್ಷದ ಅವಧಿಯ ಗುರುತುಗಳಾಗಿವೆ. ನಿಜವಾಗಿ, ಮೋದಿಯವರು ಮನ್‍ಮೋಹನ್ ಸಿಂಗ್‍ರನ್ನು ಒಂದಷ್ಟು ಹೆಚ್ಚೇ ಅನುಸರಿಸಿದ್ದಾರೆ. ರಕ್ಷಣಾ ಕ್ಷೇತ್ರ, ಮಾಧ್ಯಮ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಯನ್ನು ಮೋದಿಯವರ ಪಕ್ಷ ಈ ಹಿಂದೆ ಬಲವಾಗಿ ವಿರೋಧಿಸಿತ್ತು. ಪಾಕ್ ಮತ್ತು ಚೀನಾದ ಜೊತೆಗಿನ ಮನ್‍ಮೋಹನ್ ಸಿಂಗ್‍ರ ಸಂಬಂಧವನ್ನು ಬಿಜೆಪಿ ಆಗಾಗ ವಿಮರ್ಶಿಸುತ್ತಿತ್ತು. ಗಡಿ ತಂಟೆಗಾಗಿ ಅವೆರಡೂ ರಾಷ್ಟ್ರಗಳನ್ನು ವೈರಿ ಪಟ್ಟದಲ್ಲಿಟ್ಟಿದ್ದು ಬಿಜೆಪಿಯೇ. ಆದರೆ, ತನ್ನ ಪ್ರಮಾಣ ವಚನದ ಸಂದರ್ಭದಲ್ಲಿ ಪಾಕ್ ಪ್ರಧಾನಿಯನ್ನು ಆಹ್ವಾನಿಸಿದ ಮೋದಿಯವರು ಚೀನಾದೊಂದಿಗೆ ಇತ್ತೀಚೆಗಷ್ಟೇ 1000 ಕೋಟಿ ಡಾಲರ್‍ಗಳ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಯಾವ ಸಂದರ್ಭದಲ್ಲೆಂದರೆ, ಅವರು ಚೀನಾಕ್ಕೆ ಭೇಟಿಕೊಟ್ಟಾಗ ಅಲ್ಲಿನ ಪ್ರಮುಖ ಸರಕಾರಿ ಪತ್ರಿಕೆಯು ಅರುಣಾಚಲ ರಹಿತ ಭಾರತದ ಭೂಪಟವನ್ನು ಪ್ರಕಟಿಸಿತ್ತು. ಬಾಂಗ್ಲಾ ದೇಶಕ್ಕೆ 500 ಎಕರೆಯಷ್ಟು ಭಾರತೀಯ ಭೂಮಿಯನ್ನು ಕೊಟ್ಟು ಮೋದಿಯವರು ಗಡಿ ನಿರ್ಣಯಕ್ಕೆ ಮುಂದಾದರು. ಒಂದು ವೇಳೆ, ಮನ್‍ಮೋಹನ್ ಸಿಂಗ್ ಸರಕಾರವು ಇಂಥ ನಿರ್ಧಾರ ಕೈಗೊಳ್ಳುತ್ತಿದ್ದರೆ ‘ಒಂದಿಂಚು ಭೂಮಿಯನ್ನೂ ಬಿಡೆವು’ ಎಂಬ ಘೋಷಣೆಯೊಂದಿಗೆ ಬಿಜೆಪಿ ದೇಶವ್ಯಾಪಿ ಪ್ರತಿಭಟನೆ ಕೈಗೊಳ್ಳುತ್ತಿತ್ತು. ಮೋದಿಯವರ ಒಂದು ವರ್ಷದ ಅವಧಿಯಲ್ಲಿ ಗ್ರೀನ್‍ಪೀಸ್, ಫೋರ್ಡ್ ಫಂಡೇಶನ್ ಸಹಿತ ಅನೇಕಾರು ಎನ್‍ಜಿಓಗಳ ಲೈಸನ್ಸ್ ಗಳು ಒಂದೋ ರದ್ದಾದವು ಅಥವಾ ಶಂಕಿತಗೊಂಡವು.
   1.    ಭಾರತೀಯ ಇತಿಹಾಸ ಸಂಶೋಧನಾ ಸಂಸ್ಥೆ (ICHR)
   2.    ಸಮಾಜ-ವಿಜ್ಞಾನ ಸಂಶೋಧನಾ ಸಂಸ್ಥೆ (ICSSR)
   3.    ನೆಹರೂ ಮೆಮೊರಿಯಲ್ ಮ್ಯೂಸಿಯಂ ಮತ್ತು ಗ್ರಂಥಾಲಯ (NMML)
   4.    ಲಲಿತ ಕಲಾ ಅಕಾಡೆಮಿ
   5.    ಸೆನ್ಸಾರ್ ಮಂಡಳಿ
   6.    ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (NCERT)
ಮುಂತಾದುವುಗಳಲ್ಲಿ ಈಗಾಗಲೇ ಸಂಘಪರಿವಾರದ ಚಿಂತಕರನ್ನು ತುಂಬಲಾಗಿದೆ. ಮೋದಿಯವರು ಪ್ರಧಾನಿಯಾದ ಒಂದು ವಾರದಲ್ಲೇ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮ್ರ್ರಿತಿ ಇರಾನಿಯವರೊಂದಿಗೆ ಸಂಘಪರಿವಾರವು ಸಭೆ ನಡೆಸಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸಲಾಗುತ್ತಿರುವ ‘ತಿರುಚಿದ’ ಇತಿಹಾಸವನ್ನು ಸರಿಪಡಿಸುವ ಬಗ್ಗೆ ಆ ಸಭೆಯಲ್ಲಿ ಚರ್ಚಿಸಲಾಗಿತ್ತು. ಒಂದು ರೀತಿಯಲ್ಲಿ, ಸೃಜನಶೀಲತೆ ಮತ್ತು ವೈವಿಧ್ಯತೆಗಳನ್ನು ಶೈಕ್ಷಣಿಕ ಪಠ್ಯಕ್ರಮಗಳಿಂದ ಅಳಿಸುವ ಹಾಗೂ ಸಂಘದ ಚಿಂತಕ ದೀನನಾಥ್ ಬಾತ್ರಾರ ‘ತಿರುಚಿದ’ ಇತಿಹಾಸವನ್ನು ಮಕ್ಕಳಿಗೆ ಬೋಧಿಸುವ ಪ್ರಯತ್ನಗಳಿಗೆ ಈಗಾಗಲೇ ಚಾಲನೆಯನ್ನು ನೀಡಲಾಗಿದೆ. ವೆಂಡಿ ಡೊನಿಗರ್ ಎಂಬ ಇತಿಹಾಸದ ಸಂಶೋಧಕಿಯು ತನ್ನ ‘ಹಿಂದೂ’ ಕೃತಿಯನ್ನು ಮಾರುಕಟ್ಟೆಯಿಂದ ಹಿಂಪಡೆದದ್ದು ಮೋದಿಯವರ ಅವಧಿಯಲ್ಲೇ. ಇತಿಹಾಸ, ಪುರಾಣ, ಐತಿಹ್ಯಗಳಿಗೆ ವಿಜ್ಞಾನದ ಸುಂದರ ಅಂಗಿ ತೊಡಿಸುವ ಶ್ರಮವಂತೂ ಈ ಒಂದು ವರ್ಷದ ಅವಧಿಯಲ್ಲಿ ತೀವ್ರವಾಗಿ ನಡೆದಿದೆ. ಈ ಹಿಂದೆ ಮನ್‍ಮೋಹನ್ ಸಿಂಗ್ ಮಾತ್ರ ಮೌನವಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಸಿಬಲ್, ದಿಗ್ವಿಜಯ್ ಸಿಂಗ್, ಚಿದಂಬರಮ್, ಸೋನಿಯಾ ವಾಚಾಳಿಯಾಗಿದ್ದರು. ಇವತ್ತು ಮೋದಿ ಸಹಿತ ಇಡೀ ಸಚಿವ ಸಂಪುಟವೇ ಮೌನವಾಗಿದೆ. ಮೋದಿಯವರ ವಿದೇಶ ಪ್ರಯಾಣಗಳ ಬಗ್ಗೆ ಪಾರ್ಲಿಮೆಂಟ್‍ನಲ್ಲಿ ಸುಶ್ಮಾ ಸ್ವರಾಜ್ ಹೇಳಿಕೆ ಕೊಡುವಷ್ಟೂ ಮೋದಿ ಮೌನಿಯಾಗಿದ್ದಾರೆ ಅಥವಾ ಪಾರ್ಲಿಮೆಂಟರಿ ವ್ಯವಸ್ಥೆಯ ಬಗ್ಗೆ ಅನಾದರ ತೋರಿಸುತ್ತಿದ್ದಾರೆ. ಪ್ರಜಾತಂತ್ರ ಮತ್ತು ಪಾರ್ಲಿಮೆಂಟರಿ ಸಂಸ್ಥೆಗಳಿಗೆ ಗೌರವ ಕೊಡುವುದಕ್ಕಿಂತ ಆಧ್ಯಾದೇಶಗಳ ಮೇಲೆ ಅವರು ವಿಪರೀತ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಅವರು ಗುಜರಾತ್‍ನ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ವರ್ಷದಲ್ಲಿ ಹೆಚ್ಚೆಂದರೆ 23 ದಿನಗಳಷ್ಟೇ ವಿಧಾನಸಭಾ ಕಲಾಪಗಳು ನಡೆಯುತ್ತಿದ್ದುವು ಎಂದು ಅಲ್ಲಿನ ವಿರೋಧ ಪಕ್ಷದ ನಾಯಕರಾದ ವಿಜಯ್ ಸಿಂಗ್ ಗೋಯಲ್ ಹೇಳಿರುವುದನ್ನು ಮೋದಿಯವರ ಸದ್ಯದ ವರ್ತನೆಗೆ ಹೋಲಿಸಿ ನೋಡಿದರೆ ಇದು ಹೆಚ್ಚು ಸ್ಪಷ್ಟವಾಗುತ್ತದೆ. ಸಂವಿಧಾನದ ಬೇಡಿಕೆಯನ್ನು ಈಡೇರಿಸುವುದಕ್ಕಾಗಿಯಷ್ಟೇ ಅವರು ಗುಜರಾತ್‍ನಲ್ಲಿ 6 ತಿಂಗಳಿಗೊಮ್ಮೆ ವಿಧಾನಸಭಾ ಅಧಿವೇಶನ ನಡೆಸುತ್ತಿದ್ದರು. ಅಸೆಂಬ್ಲಿಯಲ್ಲಿ ಅವರು ಮಾತಾಡುತ್ತಿದ್ದುದು ತೀರಾ ಕಡಿಮೆ. ರಾಜ್ಯಪಾಲರ ಭಾಷಣಕ್ಕೆ ಕೃತಜ್ಞತೆ ಸಲ್ಲಿಸುವುದನ್ನೂ ಅವರು ಕೈ ಬಿಟ್ಟಿದ್ದರು. 2009ರಲ್ಲಿ ಕೇವಲ 17 ನಿಮಿಷಗಳಲ್ಲಿ 12 ಮಸೂದೆಗಳನ್ನು ಅವರು ಪಾಸು ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರನ್ನು ಅಸೆಂಬ್ಲಿಯಿಂದ ವಜಾಗೊಳ್ಳುವಂತೆ ನೋಡಿಕೊಂಡಿದ್ದರು. ಮೋದಿಯವರಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದ್ದಂತಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪಾರ್ಲಿಮೆಂಟರಿ ವ್ಯವಸ್ಥೆ ತೊಡಕು ಎಂಬ ಭಾವನೆ ಅವರಲ್ಲಿರುವಂತಿದೆ. ಬಹುಸಂಸ್ಕ್ರಿತಿಯ ಸಮಾಜವನ್ನು ಕಟ್ಟುವಲ್ಲಿ ಮತ್ತು ಆಧುನಿಕ ಪ್ರಜಾತಂತ್ರ ರಾಷ್ಟ್ರವನ್ನು ನಿರ್ಮಿಸುವಲ್ಲಿ ಅವರ ದೇಹ ಭಾಷೆ ನಕಾರಾತ್ಮಕ ಸೂಚನೆಗಳನ್ನಷ್ಟೇ ಕೊಡುತ್ತಿದೆ. ಸಂಘಪರಿವಾರದ ತತ್ವಜ್ಞಾನದಂತೆ ಅವರ ದೇಹ ಭಾಷೆಯಿದೆ. ಸೆಕ್ಯುಲರಿಸಂ ಮತ್ತು ಸಾಮಾಜಿಕ ನ್ಯಾಯಗಳ ಬಗ್ಗೆ ಹರಿತ ಒಳ ನೋಟ ಇಲ್ಲದ ವ್ಯಕ್ತಿಯಾಗಿ ಮೋದಿ ಈ 365 ದಿನಗಳಲ್ಲಿ ಗೋಚರಿಸಿದ್ದಾರೆ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬ ಅವರ ಘೋಷಣೆಯು ಗುಜರಾತ್‍ನಲ್ಲಿ ನಿಜಗೊಂಡಿಲ್ಲ ಅಥವಾ ಸ್ವತಃ ಅವರ ನೇತೃತ್ವದಲ್ಲೇ ಅದನ್ನು ವಿಫಲಗೊಳಿಸಲಾಗಿದೆ. ಅವರದೇ ಪಕ್ಷದ ಸಂಸದರು ‘ಸಬ್ ಕಾ ಸಾಥ್’ಗೆ ವಿರುದ್ಧವಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾಗಲೂ ಅವರು ಮೌನ ಮುರಿಯಲಿಲ್ಲ. ಮದರ್ ತೆರೇಸಾ ‘ಮತಾಂತರೀ’ ಸೇವಕಿಯಾದರು. ಬಹುಶಃ, ಮಾತಾಡಲೇಬೇಕಾದ ಸಂದರ್ಭಗಳಲ್ಲೆಲ್ಲಾ ಅವರು ಗಂಭೀರ ಮೌನಕ್ಕೆ ಮೊರೆ ಹೋಗುತ್ತಿದ್ದುದು ಅವರ 365 ದಿನಗಳನ್ನು ಶಂಕಿತಗೊಳಿಸಿಬಿಟ್ಟಿದೆ.  
    ಮನ್‍ಮೋಹನ್ ಸಿಂಗ್ ಹಾಗೂ ನರೇಂದ್ರ ದಾಮೋದರದಾಸ್ ಮೋದಿಯವರನ್ನು ಚುನಾವಣೆಗೆ ಮೊದಲು ಮಾಧ್ಯಮಗಳು ವೀಕೆಸ್ಟ್ (ಅತಿ ದುರ್ಬಲ) ಮತ್ತು ಸ್ಟ್ರಾಂಗೆಸ್ಟ್ (ಅತಿ ಪ್ರಬಲ) ಎಂಬುದಾಗಿ ಬಿಂಬಿಸಿದ್ದುವು. ಇದರಿಂದ ಆದ ದೊಡ್ಡ ಹಾನಿಯೆಂದರೆ, ಪ್ರಜಾತಂತ್ರ ವ್ಯವಸ್ಥೆಯ ಮೂಲ ಗುಣಗಳಾದ ಆಡಳಿತ ವಿಕೇಂದ್ರೀಕರಣವನ್ನೇ ನಗಣ್ಯವಾಗಿಸುವುದಕ್ಕೆ ಮೋದಿಯವರಿಗೆ ಅವಕಾಶ ಒದಗಿಸಿದ್ದು ಮತ್ತು ಅದನ್ನೇ ಅತಿ ಪ್ರಬಲತೆಯ ಸಂಕೇತವಾಗಿ ಜನರು ಭಾವಿಸುವಂತಾದುದು. ಪ್ರಬಲ ಎಂಬುದರಲ್ಲಿ ಎರಡು ವಿಧಗಳಿವೆ. ಒಂದು ಸರ್ವಾಧಿಕಾರಿಯ ಪ್ರಬಲತೆ. ಅದರಲ್ಲಿ ಉಳಿದವರು ಇದ್ದೂ ಇಲ್ಲದಂತಿರುತ್ತಾರೆ. ಅವರು ಮಾತೇ ಆಡುವುದಿಲ್ಲ. ನಾಯಕನ ಮಾತನ್ನು ಸಮರ್ಥಿವಲ್ಲಿ ಮತ್ತು ಆತನ ಅಣತಿಯನ್ನು ಪಾಲಿಸುವಲ್ಲಿ ವಿಪರೀತ ನಿಷ್ಠೆ ತೋರಿಸುವುದಷ್ಟೇ ಅವರ ಜವಾಬ್ದಾರಿ. ಇನ್ನೊಂದು- ನಾಯಕ ಪ್ರಶ್ನಾರ್ಹನಾಗುವುದು. ವಿಮರ್ಶಿಸುವ, ಟೀಕಿಸುವ ಮತ್ತು ಮಾತಾಡುವ ಪ್ರಜಾತಾಂತ್ರಿಕ ವಾತಾವರಣವನ್ನು ಸೃಷ್ಟಿಸುವುದು. ದಟ್ಟ ದಾರಿದ್ರ್ಯದಿಂದ ಬೀದಿಯಲ್ಲಿ ಬದುಕು ಸವೆಸುತ್ತಿದ್ದ ತತ್ವಜ್ಞಾನಿ ಡಯೋಜನಿಸ್ ಈ ಪ್ರಜಾತಾಂತ್ರಿಕ ವಾತಾವರಣದ ಸಂಕೇತ ಆಗಿದ್ದಾನೆ ಅಥವಾ ಖಲೀಫಾ ಉಮರ್ ಅದಕ್ಕೆ ಸಾಕ್ಷಿಯಾಗಿದ್ದಾರೆ. ಡಯೋಜನಿಸ್‍ನನ್ನು ಚಕ್ರವರ್ತಿ ಅಲೆಕ್ಸಾಂಡರ್ ಭೇಟಿಯಾಗಲು ಹೋದಾಗ ಆತ ಬೆಳಗಿನ ಬಿಸಿಲಿಗೆ ಮೈಯೊಡ್ಡಿದ್ದ. ‘ನಿನಗಾಗಿ ನಾನೇನಾದರೂ ಮಾಡಬಹುದೆ..’ ಎಂದು ಅಲೆಕ್ಸಾಂಡರ್ ಕೇಳಿದಾಗ, ‘ಸರಿ, ಆದರೆ ಮೊದಲು ನನ್ನ ಬಿಸಿಲಿನಿಂದ ದೂರ ನಿಲ್ಲು..’ ಎಂದು ನಿಷ್ಠುರವಾಗಿ ಹೇಳಿದ್ದ. ವಿವಾಹ ಧನಕ್ಕೆ  ಮಿತಿಯೊಂದನ್ನು ಹೇರಲು ಹೊರಟಾಗ ಖಲೀಫಾ ಉಮರ್‍ರನ್ನು ಸಾಮಾನ್ಯ ಮಹಿಳೆಯೊಬ್ಬರು ನಿಷ್ಠುರವಾಗಿ ಪ್ರಶ್ನಿಸುವುದಕ್ಕೆ ಸಾಧ್ಯವಾದದ್ದೂ ಇದೇ ಪ್ರಜಾತಾಂತ್ರಿಕ ವಾತಾವರಣದ ಉಳಿವಿನಿಂದಾಗಿ. ಆದರೆ ಮೋದಿಯವರ 365 ದಿನಗಳು ಪ್ರಜಾತಂತ್ರದ ಈ ಸೌಂದರ್ಯವನ್ನೇ ಮಸುಕುಗೊಳಿಸಿದೆ. ಸರಕಾರವನ್ನು ಮನ್‍ಕಿ ಬಾತ್ ಮತ್ತು ಸೆಲ್ಫಿಗಳಿಂದ ನಡೆಸಬಹುದೆಂಬ ಭ್ರಮೆಯೊಂದು ಅವರನ್ನು ಆವರಿಸಿದಂತಿದೆ. ನಿಜವಾಗಿ ಪ್ರಧಾನಿಯವರ ಭಾಷಣಕ್ಕೊಂದು ಘನತೆಯಿದೆ. ನಾಟಕೀಯತೆ ಮತ್ತು ಪೊಳ್ಳು ಪ್ರಭಾವಳಿಗಳಿಂದ ಅದು ಮುಕ್ತವಾಗಿರಬೇಕಾದುದು ಅತೀ ಅಗತ್ಯ.  ಆದರೆ ಮೋದಿಯವರು ದೇಶದ ಬಹುಮುಖ್ಯ ಸಮಸ್ಯೆಗಳಾದ ಸ್ವಚ್ಛತೆ, ಜಾತಿ, ವರ್ಗ, ತಂತ್ರಜ್ಞಾನ ಎಲ್ಲವನ್ನೂ ಈ 365 ದಿನಗಳಲ್ಲಿ ವ್ಯಂಗ್ಯ ಚಿತ್ರದ ಮಟ್ಟಕ್ಕೆ ಇಳಿಸಿದರು. ಸ್ವಚ್ಛತೆಗೆ ಅವರು ಕೊಟ್ಟ ತಾಂತ್ರಿಕ ತಿರುವು ಏನೆಂದರೆ, ಮುಂಬೈಯ ಬೀದಿಯಲ್ಲಿ ಸಚಿನ್ ತೆಂಡುಲ್ಕರ್ ಗುಡಿಸುವುದು ಅಥವಾ ವಾರಣಾಸಿಯ ಸ್ಲಂಗಳನ್ನು ಇಬ್ಬರು ಯುವತಿಯರು ಶುಚಿಗೊಳಿಸುವುದು. ಅಂದಹಾಗೆ, ಇದನ್ನು ಮೋದಿಯವರ ಭಾಷಣದ ಸಾಮರ್ಥ್ಯವಾಗಿ ಕಾಣಬಹುದೇ ಹೊರತು ಪ್ರಾಯೋಗಿಕ ಬದಲಾವಣೆಯನ್ನಲ್ಲ. ಸಚಿನ್ ಗುಡಿಸುವುದು ಮೋದಿಯವರಿಗೆ ಭಾಷಣದ ಸರಕು. ಮೋದಿಯವರು ಕೊಳಕನ್ನು ಮುಚ್ಚುವುದಕ್ಕೆ ಸಾಂದರ್ಭಿಕ ಪದಗಳನ್ನು ಸೃಷ್ಟಿಸಬಲ್ಲರು. ಹಾಗಂತ, ಸಚಿನ್‍ರಿಂದ ಗುಡಿಸಿದಂತೆ ಅಮೀರ್ ಖಾನ್‍ರಿಂದ ಹೊಲದ ಉಳುಮೆಯನ್ನೂ ಮಾಡಿಸಬಹುದಿತ್ತು. 60% ಮಂದಿ ಕೃಷಿಕರಿರುವ ದೇಶದಲ್ಲಿ ಗುಡಿಸುವ ಸಚಿನ್‍ಗಿಂತ ಉಳುವ ಅಮೀರ್ ಖಾನ್ ಮುಖ್ಯವೂ ಆಗಿತ್ತು. ಸಾಲು ಸಾಲು ರೈತರು ನೇಣಿಗೆ ಕೊರಳೊಡ್ಡುತ್ತಿರುವಾಗ ಅಮೀರ್ ಒಂದು ಭರವಸೆಯ ಸಂಕೇತವಾಗುವುದಕ್ಕೆ ಅವಕಾಶವೂ ಇತ್ತು. ಆದರೆ ಸಚಿನ್‍ನ ಕೈಗೆ ಪೊರಕೆ ಕೊಟ್ಟ ಮೋದಿಯವರು ನೇಗಿಲನ್ನು ಕಂಪೆನಿಗಳ ಕೈಗೇ (ಭೂಸ್ವಾಧೀನ) ಕೊಟ್ಟರು. ಬಹುಶಃ ಮೋದಿಯವರ 365 ದಿನಗಳ ಆಡಳಿತವನ್ನು ವಿಶ್ಲೇಷಿಸುವುದಕ್ಕೆ ಈ ನೇಗಿಲು ಮತ್ತು ಪೊರಕೆ ಪರಿಣಾಮಕಾರಿ ರೂಪಕಗಳಾಗಬಹುದು.
    ಅಷ್ಟಕ್ಕೂ, ಭಾರತೀಯ ಪ್ರಜಾಸತ್ತೆಯನ್ನು ‘ಬಹುಸಂಖ್ಯಾತ ಪ್ರಜಾಸತ್ತೆ’ಯಾಗಿ ಬದಲಿಸುವಲ್ಲಿ ಅಥವಾ ಅಂಥದ್ದೊಂದು ಭಾವನೆ ಬಿತ್ತುವಲ್ಲಿ ಮೋದಿಯವರ 365 ದಿನಗಳು ಶ್ರಮಿಸಿವೆ. ಗುಜರಾತ್‍ನಲ್ಲಿ ಇದು ಯಶಸ್ವಿಯಾಗಿದೆ.