Tuesday, March 3, 2015

ಸುಡುವ ಪ್ರತಿಭಟನೆ ಮತ್ತು ಭಗವದ್ಗೀತೆ

A book is a book
It is paper, ink and print
If you stab it
It won't bleed
If you beat it
It won't bruise
If you burn it
It won't acream.....
  
    ಎಂದು ಆರಂಭವಾಗುವ ಈ ಕವನವನ್ನು ಅಮೇರಿಕದ ಪ್ರಸಿದ್ಧ ಕವಿ ಸ್ಟೀವನ್ ವಿನ್ಸೆಂಟ್ ಬೆನೆಟ್‍ರು 1942ರಲ್ಲಿ ಹಾಡಿದ್ದರು. ರೇಡಿಯೋದಲ್ಲಿ ಪ್ರಸಾರವಾದ ಅವರ ಈ ಹಾಡನ್ನು ಆಲಿಸಿ ಕೇಳುಗರು ಭಾವುಕರಾಗಿದ್ದರು. ‘They burnt the books’ (ಅವರು ಪುಸ್ತಕಗಳನ್ನು ಉರಿಸಿದರು) ಎಂಬ ಶೀರ್ಷಿಕೆಯ ಈ ಹಾಡು ಆ ಕಾಲದಲ್ಲಿ ಬಹು ಪ್ರಸಿದ್ಧಿಯನ್ನು ಪಡೆದಿತ್ತು. ಜನರು ಈ ಹಾಡಿನ ಪ್ರತಿ ಪದವನ್ನೂ ನಾಝಿ ಜರ್ಮನಿಯೊಂದಿಗೆ ತಾಳೆ ಹಾಕಿ ಅನುಭವಿಸಿದರು. ಹಿಟ್ಲರ್, ಗೋಬೆಲ್ಸ್ ರನ್ನು ನೆನೆಸಿಕೊಂಡು ಆ ಪದಗಳಿಗೆ ಜೀವ ತುಂಬಿದರು. ಪುಲಿಟ್ಝರ್ ಪ್ರಶಸ್ತಿ ವಿಜೇತರಾಗಿದ್ದ ಸ್ಟೀವನ್ ವಿನ್ಸೆಂಟ್ ಬೆನೆಟ್‍ರಿಗೆ ಸಾಕಷ್ಟು ಪ್ರಸಿದ್ಧಿಯನ್ನು ತಂದು ಕೊಟ್ಟ ಈ ಕವನದ ರಚನೆಗೆ ಒಂದು ಭಾವುಕ ಹಿನ್ನೆಲೆಯೂ ಇತ್ತು.
    ಜರ್ಮನಿಯ ಮೇಲೆ ಹಿಟ್ಲರ್ ಹಿಡಿತ ಸಾಧಿಸಿದ್ದ ಕಾಲ. ಈ ಹಿಡಿತ ಕೈ ತಪ್ಪದೇ ಇರಬೇಕಾದರೆ ಏನೇನೆಲ್ಲ ಮಾಡಬೇಕು ಎಂಬ ಬಗ್ಗೆ ಗೋಬೆಲ್ಸ್ ಕೆಲವು ಯೋಜನೆಗಳನ್ನು ರೂಪಿಸಿದ್ದ. ಸರ್ವಾಧಿಕಾರವನ್ನು ಖಂಡಿಸುವ ಮತ್ತು ಪ್ರಜಾತಂತ್ರವನ್ನು ಬೆಂಬಲಿಸುವ ಸರ್ವ ಸಾಹಿತ್ಯಗಳನ್ನೂ ಸುಡಬೇಕೆಂಬುದು ಆತನ ಯೋಜನೆಯಾಗಿತ್ತು. ಹಿಟ್ಲರ್ ವಿರೋಧಿ ಚಿಂತನೆಗಳು ಸಮಾಜದಲ್ಲಿ ಬೆಳೆಯದಂತೆ ಮಾಡುವುದಕ್ಕಾಗಿ ಪತ್ರಿಕೆ, ಸಂಗೀತ, ಸಿನಿಮಾ, ರೇಡಿಯೋ ಮುಂತಾದ ಎಲ್ಲವನ್ನೂ ಸೆನ್ಸಾರ್‍ಗೆ ಒಳಪಡಿಸಲು ಆತ ತೀರ್ಮಾನಿಸಿದ. ಸರ್ವಾಧಿಕಾರವನ್ನು ಇಷ್ಟಪಡುವ ಸಾಮಾಜಿಕ ವಾತಾವರಣವನ್ನು ನಿರ್ಮಿಸುವುದು ಆತನ ಉದ್ದೇಶವಾಗಿತ್ತು. ಅದಕ್ಕಾಗಿ ಯಾವ ಉಗ್ರ ನಿಲುವನ್ನು ತೆಗೆದುಕೊಳ್ಳುವುದಕ್ಕೂ ಹಿಂಜರಿಯಬಾರದೆಂದು ಆತ ಹಿಟ್ಲರ್‍ನಿಗೆ ಮನವರಿಕೆ ಮಾಡಿಸಿದ್ದ. ಅದರಂತೆ, ಜರ್ಮನಿಯ ಮಂದಿ ಓದಬಾರದ ಪುಸ್ತಕಗಳ ಪಟ್ಟಿ ಮಾಡುವಂತೆ ನಾಝಿ ವಿದ್ಯಾರ್ಥಿ ಸಂಘಟನೆಗಳು, ನಾಝಿ ಪರ ಪ್ರೊಫೆಸರ್‍ಗಳು ಮತ್ತು ಲೈಬ್ರರಿಯನ್‍ಗಳಿಗೆ ಗೋಬೆಲ್ಸ್ ಆದೇಶಿಸಿದ. ಹೀಗೆ ಪಟ್ಟಿ ಮಾಡಿದ ಬಳಿಕ 1983 ಮೇ 10ರಂದು ಜರ್ಮನಿಯಾದ್ಯಂತದ ಲೈಬ್ರರಿ ಮತ್ತು ಪುಸ್ತಕ ಮಾರಾಟ ಮಳಿಗೆಗಳ ಮೇಲೆ ನಾಝಿಗಳು ದಾಳಿ ಮಾಡಿದರು. ಹಿಟ್ಲರ್ ಪರ ಘೋಷಣೆಗಳನ್ನು ಕೂಗುತ್ತಾ ರಾತ್ರಿ ಟಾರ್ಚ್ ಲೈಟ್‍ನ ಸಹಾಯದಿಂದ ರಾಲಿ ನಡೆಸಿದರು. ದೊಡ್ಡದೊಂದು ಅಗ್ನಿಕುಂಡವನ್ನು ತಯಾರಿಸಿ ಸುಮಾರು 25 ಸಾವಿರಕ್ಕಿಂತಲೂ ಅಧಿಕ ಕೃತಿಗಳನ್ನು ಸುಟ್ಟು ಹಾಕಿದರು. ಜ್ಯಾಕ್ ಲಂಡನ್, ಅರ್ನೆಸ್ಟ್ ಹೆಮಿಂಗ್ವೆ, ಸಿಂಕ್ಲೇರ್ ಲೂವಿಸ್, ಹೆಲೆನ್ ಕೆಲ್ಲರ್, ಐನ್‍ಸ್ಟೀನ್ ಸಹಿತ ಹತ್ತಾರು ಪ್ರಸಿದ್ಧ ಸಾಹಿತಿಗಳ ಕೃತಿಗಳೂ ಅವುಗಳಲ್ಲಿದ್ದುವು. ಈ ಸುಡುವಿಕೆಯ ವಿರುದ್ಧ ಜಾಗತಿಕವಾಗಿಯೇ ಪ್ರತಿಭಟನೆಗಳು ಕಾಣಿಸಿಕೊಂಡವು. ಜಪಾನ್, ಚೀನಾ, ಅಮೇರಿಕ ಮುಂತಾದ ರಾಷ್ಟ್ರಗಳು ಹಿಟ್ಲರ್ ನೀತಿಯನ್ನು ತೀವ್ರವಾಗಿ ಖಂಡಿಸಿದುವು. ಸಾಹಿತಿಗಳು ಬೀದಿಗಿಳಿದರು. ಆದರೆ ಹಿಟ್ಲರ್ ಬೆದರಲಿಲ್ಲ. ಆತ ಶಾಲಾ ಪಠ್ಯದಲ್ಲೂ ಬದಲಾವಣೆಗಳನ್ನು ತಂದ. ನಾಝಿಸಂ ಮತ್ತು ಆತನನ್ನು ಬೆಂಬಲಿಸುವ ಪುಸ್ತಕಗಳನ್ನು ಶಾಲಾ ಪಠ್ಯವಾಗಿ ಸೇರಿಸಿದ. ಅವಸರ ಅವಸರವಾಗಿ ರಚಿತವಾದ ಆ ಪುಸ್ತಕಗಳು ಎಷ್ಟು ಕಳಪೆ ಗುಣಮಟ್ಟದವು ಆಗಿದ್ದುವೆಂದರೆ ನಾಝಿಸಂ ಅನ್ನು ಹೊಗಳುವುದಕ್ಕಿಂತ ಹೊರತಾದ ಯಾವ ಉದ್ದೇಶವೂ ಅವುಗಳಿಗಿರಲಿಲ್ಲ. ಮಕ್ಕಳನ್ನು ನಾಝಿಸಂನ ಬೆಂಬಲಿಗರಾಗಿ ಬೆಳೆಸುವಂತೆ ಶಾಲಾ ಸಭೆಗಳಲ್ಲಿ ಪೋಷಕರೊಂದಿಗೆ ವಿನಂತಿಸಲಾಗುತ್ತಿತ್ತು. ಹಿಟ್ಲರ್ ಹುಟ್ಟಿದ ದಿನವನ್ನು ಮತ್ತು ಅಧಿಕಾರಕ್ಕೇರಿದ ದಿನವನ್ನು ಶಾಲಾ ವಾರ್ಷಿಕ ದಿನಗಳನ್ನಾಗಿ ಆಚರಿಸುವ ವಾತಾವರಣವನ್ನು ಆತ ಹುಟ್ಟು ಹಾಕಿದ್ದ. ಒಂದು ರೀತಿಯಲ್ಲಿ, ತನ್ನ ವಿಚಾರವನ್ನು ಒಪ್ಪದ ಎಲ್ಲವನ್ನೂ ಮತ್ತು ಎಲ್ಲರನ್ನೂ ತಿರಸ್ಕರಿಸುವ ಉಗ್ರ ಮನೋಭಾವವೊಂದನ್ನು ನಾಝಿಸಂ ಪ್ರಚಾರ ಮಾಡುತ್ತಿತ್ತು. ಅದರ ಭಾಗವೇ ಸಾಹಿತ್ಯ ಕೃತಿಗಳ ಸುಡುವಿಕೆ. 1942ರಲ್ಲಿ ಸ್ಟೀವನ್ ವಿನ್ಸೆಂಟ್ ಬೆನೆಟ್‍ರು ‘ದೆ ಬರ್ನ್‍ಂಟ್ ದ ಬುಕ್ಸ್’ ಎಂಬ ಹಾಡನ್ನು ಬರೆಯುವುದಕ್ಕೆ ಕಾರಣವಾದ ಅಂಶವೂ ಇದುವೇ. ‘ಸಾಹಿತ್ಯ ಕೃತಿಗಳಿಗೆ ಬೆಂಕಿ ಕೊಡುವುದರಿಂದ ನೀವು ಏನನ್ನೂ ಸಾಧಿಸಲಾರಿರಿ’ ಎಂಬ ಸಂದೇಶವನ್ನು ಸಾರಿದ ವಿನ್ಸೆಂಟ್‍ರನ್ನು ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ-
    ಕಳೆದೆರಡು ವಾರಗಳಿಂದ ಭಗವದ್ಗೀತೆ ಸುದ್ದಿಯಲ್ಲಿದೆ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವಾಗಿ ಮಾಡಬೇಕು ಎಂಬ ಸುಶ್ಮಾ ಸ್ವರಾಜ್‍ರ ಬಯಕೆಗೆ ಪ್ರತಿರೋಧವೆಂಬಂತೆ ಅದನ್ನು ಸುಡಬೇಕೆಂಬ ಆಗ್ರಹವೊಂದು ಸಾಹಿತ್ಯ ವಲಯದಿಂದ ಕೇಳಿ ಬಂದಿದೆ. ಕೆ.ಎಸ್. ಭಗವಾನ್, ಜಿ.ಕೆ. ಗೋವಿಂದ ರಾವ್, ಅಗ್ನಿ ಶ್ರೀಧರ್, ಬಂಜಗೆರೆ ಜಯಪ್ರಕಾಶ್ ಮುಂತಾದ ಚಿಂತಕರು ಇಂಥದ್ದೊಂದು ವಾದವನ್ನು ಮುಂದಿಡುವ ಮೂಲಕ ಹೊಸ ಬಗೆಯ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾರೆ. 1927 ಡಿಸೆಂಬರ್ 27ರಂದು ಬಾಬಾ ಸಾಹೇಬ್ ಅಂಬೇಡ್ಕರ್‍ರು ಮನುಸ್ಮೃತಿಯನ್ನು ಸಾರ್ವಜನಿಕವಾಗಿಯೇ ಸುಟ್ಟು ಹಾಕಿರುವುದನ್ನು ಕೆಲವರು ಈ ಸುಡುವ ಪ್ರತಿಭಟನೆಗೆ ಸಮರ್ಥನೆಯಾಗಿ ನೀಡುತ್ತಿದ್ದಾರೆ. ಶ್ರೇಣೀಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಭಗವದ್ಗೀತೆಯನ್ನು ಸುಡುವುದು ಅದಕ್ಕೆ ತೋರಲಾಗುವ ಸರಿಯಾದ ಪ್ರತಿರೋಧ ಎಂಬ ನಿಲುವು ಸಾಹಿತಿಗಳದ್ದು. ಅಂದಹಾಗೆ, ಭಗವದ್ಗೀತೆಯ ಕುರಿತಂತೆ ಪರ-ವಿರುದ್ಧ ಅಭಿಪ್ರಾಯಗಳೇನೇ ಇರಲಿ, ಸುಡುವ ಹಂತಕ್ಕೆ ಒಂದು ಗ್ರಂಥವನ್ನು ನಾವು ಕೊಂಡೊಯ್ಯಬೇಕೇ? ವಿರೋಧವನ್ನು ವ್ಯಕ್ತಪಡಿಸುವುದಕ್ಕೆ ನೂರಾರು ದಾರಿಗಳಿರುವಾಗ ಬೆಂಕಿಯನ್ನು ಪ್ರತಿಭಟನೆಯ ಅಸ್ತ್ರವಾಗಿ ಆಯ್ಕೆ ಮಾಡಿಕೊಳ್ಳುವುದು ಎಷ್ಟು ಸಮಂಜಸ? ಸುಡುವ ಪ್ರಕ್ರಿಯೆಯಲ್ಲಿ ಒಂದು ಉಗ್ರವಾದವಿದೆ. ಸುಟ್ಟ ಬಳಿಕ ಉಳಿಯುವುದು ಬೂದಿ ಮಾತ್ರ. ಬೂದಿಯಿಂದ ಮತ್ತೆ ಆ ಗ್ರಂಥವನ್ನು ರಚಿಸಲು ಸಾಧ್ಯವಿಲ್ಲ. ಆದ್ದರಿಂದಲೇ ನಾಶ ಮಾಡುವ ಪ್ರತಿಭಟನೆಯು ಸಮಾಜ ವಿರೋಧಿಯಂತೆ ಅನಿಸುತ್ತದೆ. ಭಗವದ್ಗೀತೆಯಲ್ಲಿರುವ ನಿರ್ದಿಷ್ಟ ಶ್ಲೋಕಗಳ ಕುರಿತಂತೆ ಪೇಜಾವರ ಸ್ವಾವಿೂಜಿಗಳಂತಹ ಧರ್ಮಗುರುಗಳು ಯಾವ ವ್ಯಾಖ್ಯಾನವನ್ನು ಕೊಡುತ್ತಾರೋ ಅದನ್ನು ಪ್ರಗತಿ ಪರ ಸಾಹಿತಿಗಳು ಒಪ್ಪುವುದಿಲ್ಲ. ಪ್ರಗತಿಪರರ ಆಲೋಚನೆಗಳನ್ನು ಭಗವದ್ಗೀತೆಯ ಪರ ಇರುವವರೂ ಒಪ್ಪುವುದಿಲ್ಲ. ಇಂಥ ಸ್ಥಿತಿಯಲ್ಲಿ, ಬೆಂಕಿ ಕೊಡುವುದರಿಂದ ವೈಚಾರಿಕ ದಾರಿಯೇ ಮುಚ್ಚಿದಂತಾಗುತ್ತದೆ. ಚಾರ್ಲಿ ಹೆಬ್ಡೋದ ಮೇಲಿನ ದಾಳಿಯನ್ನು ಜಗತ್ತು ಖಂಡಿಸಿರುವುದರಲ್ಲಿ ಈ ಕಾರಣವೂ ಇದೆ. ಚಾರ್ಲಿ ಹೆಬ್ಡೋದ ನಿಲುವನ್ನು ಪ್ರಶ್ನಿಸುವುದಕ್ಕೆ ಬಂದೂಕಿಗಿಂತ ಹೊರತಾದ ಹತ್ತಾರು ದಾರಿಗಳಿದ್ದುವು. ಆ ದಾರಿಗಳ ಮೂಲಕ ಸಮಾಜವನ್ನು ಮುಟ್ಟುವುದಕ್ಕೆ ಹೆಬ್ಡೋ ವಿರೋಧಿಗಳು ಶ್ರಮಿಸಬಹುದಾಗಿತ್ತು. ಸಮಾಜದಲ್ಲಿ ಸಂವಾದದ ವಾತಾವರಣವನ್ನು ನಿರ್ಮಿಸಬಹುದಾಗಿತ್ತು. ಆದರೆ ಬಂದೂಕು ಆ ಅವಕಾಶವನ್ನೇ ಕಸಿದುಕೊಂಡಿತು. ಆ ಬಳಿಕ ನಡೆದ ಚರ್ಚೆಗಳಲ್ಲಿ ಹೆಚ್ಚಿನವು ಮುಸ್ಲಿಮ್ ಉಗ್ರವಾದದ ಸುತ್ತ ಆಗಿತ್ತೇ ಹೊರತು ಚಾರ್ಲಿ ಹೆಬ್ಡೋದ ನಿಂದನಾತ್ಮಕ ಧೋರಣೆಯ ಸುತ್ತ ಆಗಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸಲು ತಿಳಿಯದ ಸಮುದಾಯವಾಗಿ ಮುಸ್ಲಿಮ್ ಜಗತ್ತನ್ನು ಹೆಚ್ಚಿನ ಮಂದಿ ಚಿತ್ರೀಕರಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಚಾರ್ಲಿ ಹೆಬ್ಡೋದ ವ್ಯಂಗ್ಯ ಚಿತ್ರಕ್ಕೂ ನಡುವೆ ಇರುವ ಬಹುದೊಡ್ಡ ವ್ಯತ್ಯಾಸವನ್ನು ಗಮನಿಸದಂತೆ ಮಾಡುವುದಕ್ಕೆ ಬಂದೂಕು ಯಶಸ್ವಿಯಾಯಿತು. ಇದೊಂದೇ ಅಲ್ಲ. ಅಮೇರಿಕದ ಫ್ಲಾರಿಡಾದಲ್ಲಿರುವ ಕ್ರಿಶ್ಚಿಯನ್ ಡವ್ ವರ್ಲ್ಡ್ ಔಟ್‍ರೀಚ್ ಸೆಂಟರ್‍ನ ಪಾದ್ರಿ ಟೆರ್ರಿ ಜೋನ್ಸ್ ರು ಪವಿತ್ರ ಕುರ್‍ಆನಿನ 200 ಪ್ರತಿಗಳನ್ನು ಸುಡುವುದಾಗಿ 2010 ಜುಲೈಯಲ್ಲಿ ಘೋಷಿಸಿದರು. ವರ್ಲ್ಡ್  ಟ್ರೇಡ್ ಸೆಂಟರ್ ಉರುಳಿದ ದಿನವಾದ ಸೆ. 11ರಂದು ಈ ಸುಡುವ ಕಾರ್ಯಕ್ರಮ ಇಟ್ಟುಕೊಳ್ಳುವುದಾಗಿ ಅವರು ಹೇಳಿದರು. ಇದರ ವಿರುದ್ಧ ಜಾಗತಿಕವಾಗಿಯೇ ವಿರೋಧ ವ್ಯಕ್ತವಾಯಿತು. 2011 ಮಾರ್ಚ್ 20ರಂದು ಅವರು ತನ್ನ ಚರ್ಚ್‍ನಲ್ಲಿ ‘ಕುರ್‍ಆನ್‍ನ ವಿಚಾರಣೆ' (Trial of Quran) ಎಂಬ ಕಾರ್ಯಕ್ರಮವನ್ನು ಇಟ್ಟುಕೊಂಡರು. ‘ಮಾನವೀಯತೆಯ ವಿರುದ್ಧ ಕ್ರೌರ್ಯವೆಸಗಿದೆ’ (Crime against Humanity) ಎಂಬ ಆರೋಪವನ್ನು ಹೊರಿಸಿ ಅವರು ಕುರ್‍ಆನನ್ನು ಬಹಿರಂಗವಾಗಿಯೇ ಸುಟ್ಟರು. 2010ರಲ್ಲಿ ಇವರು ‘ಇಸ್ಲಾಮ್ ಈಸ್ ಆಫ್ ದ ಡೆವಿಲ್’ (Islam is of the Devil) ಎಂಬ ಕೃತಿಯನ್ನು ಪ್ರಕಟಿಸಿದರಲ್ಲದೇ ಕುರ್‍ಆನನ್ನು ಎತ್ತಿ ಹಿಡಿದು - ‘ಇದು ಧರ್ಮಗ್ರಂಥವಲ್ಲ, ಪಿಶಾಚಿಯ ಗ್ರಂಥ’ ಎಂದು ಹೇಳಿದ ವೀಡಿಯೋವನ್ನು ಯೂಟ್ಯೂಬ್‍ಗೆ ಹಾಕಿದರು. ಆದರೆ ಇದಕ್ಕೆ ಪ್ರತಿಯಾಗಿ ಅಮೇರಿಕನ್ ಮುಸ್ಲಿಮರು ಮಾಡಿದ್ದೇನೆಂದರೆ, ಸೆ. 11ನ್ನು 'ಲವ್ ಜೀಸಸ್ ಡೇ' (Love Jesus day) ಆಗಿ ಆಚರಿಸಿದ್ದು. ಜೀಸಸ್‍ರನ್ನು ಪ್ರವಾದಿಯೆಂದು ಪವಿತ್ರ ಕುರ್‍ಆನ್  ಕರೆದಿರುವುದಾಗಿ ಅವರು ಹೇಳಿದರು. ಅಲ್ಲದೇ ಸೆ. 11ನ್ನು ‘ಪವಿತ್ರ ಕುರ್‍ಆನನ್ನು ಓದುವ ದಿನ'ವಾಗಿ ಮುಸ್ಲಿಮ್ ಸಂಘಟನೆಗಳು ಆಚರಿಸಿದ್ದೂ ನಡೆಯಿತು. ಅಮೇರಿಕನ್ನರ ಮೇಲೆ ಈ ಪ್ರತಿ ಪ್ರತಿಭಟನೆ ಸಾಕಷ್ಟು ಪರಿಣಾಮವನ್ನು ಬೀರಿತು. ಟೆರ್ರಿ ಜೋನ್ಸ್ ರ ಚರ್ಚ್‍ಗೆ ನೀಡಲಾಗಿದ್ದ 1 ಲಕ್ಷದ 40 ಸಾವಿರ ಡಾಲರ್ ಸಾಲವನ್ನು ಶೀಘ್ರವೇ ಮರು ಪಾವತಿಸುವಂತೆ ಅಮೇರಿಕದ ಬ್ಯಾಂಕೊಂದು ಆದೇಶಿಸಿತಲ್ಲದೇ ಚರ್ಚ್‍ನ ಆಸ್ತಿ-ಪಾಸ್ತಿಗಳಿಗೆ ನೀಡಲಾಗಿದ್ದ ಇನ್ಶೂರೆನ್ಸನ್ನು ರದ್ದುಪಡಿಸಿತು. ಕೆನಡ, ಕ್ಯೂಬಾ, ಅಮೇರಿಕ, ಫ್ರಾನ್ಸ್, ಜರ್ಮನಿ, ಇಂಡೋನೇಷಿಯಾ, ವ್ಯಾಟಿಕನ್ ಸಹಿತ ಜಗತ್ತಿನ ಎಲ್ಲ ರಾಷ್ಟ್ರಗಳೂ ಟೆರ್ರಿ ಜೋನ್ಸ್ ರ ಸುಡುವ ಪ್ರತಿಭಟನೆಯನ್ನು ಖಂಡಿಸಿದುವು. ನಿಜವಾಗಿ, ಉಗ್ರವಾದಕ್ಕೆ ಎದುರಾದ ಸೋಲು ಇದು. ಹಾಗಂತ, ಸುಡುವ ಪ್ರತಿಭಟನೆ ಭಾರತದಲ್ಲಿ ನಡೆಯುತ್ತಿಲ್ಲ ಎಂದಲ್ಲ. 2014 ಡಿಸೆಂಬರ್ 27ರಂದು ತಮಿಳು ಸಾಹಿತಿ ಪೆರುಮಾಳ್ ಮುರುಗನ್‍ರ ಮಧೋರುಬಗನ್ ಎಂಬ ಕಾದಂಬರಿಯನ್ನು ಸಂಘಪರಿವಾರದ ಮಂದಿ ಸಾರ್ವಜನಿಕವಾಗಿಯೇ ಸುಟ್ಟು ಹಾಕಿದ್ದರು. ಕಾದಂಬರಿಯು ಅನೈತಿಕತೆಯನ್ನು ಪ್ರಚೋದಿಸುತ್ತದೆ ಮತ್ತು ಅದರಲ್ಲಿ ಶಿವನನ್ನು ಅವಮಾನಿಸಲಾಗಿದೆ ಎಂಬ ಆರೋಪವನ್ನು ಅವರು ಹೊರಿಸಿದ್ದರು. ಅಂತಿಮವಾಗಿ ಪೆಂಗ್ವಿನ್ ಪ್ರಕಾಶನ ಸಂಸ್ಥೆಯು ಕಾದಂಬರಿಯ ಎಲ್ಲ ಪ್ರತಿಗಳನ್ನೂ ಮಾರುಕಟ್ಟೆಯಿಂದ ಹಿಂಪಡೆಯಿತು. ಮಾತ್ರವಲ್ಲ, `ತಾನಿನ್ನು ಬರೆಯುವುದಿಲ್ಲ' ಎಂದು ಮುರುಗನ್ ಪೆನ್ನು ಕೆಳಗಿಟ್ಟರು. 1995ರಲ್ಲಿ ಸಲ್ಮಾನ್ ರುಶ್ದಿಯವರ ‘ದಿ ಮೂರ್ಸ್ ಲಾಸ್ಟ್ ಸೈ' ಕೃತಿಯನ್ನು ಶಿವಸೇನೆ ಮತ್ತು ಕಾಂಗ್ರೆಸ್‍ನ ಕಾರ್ಯಕರ್ತರು ಬಹಿರಂಗವಾಗಿಯೇ ಸುಟ್ಟು ಹಾಕಿದ್ದರು. ಬಾಳಾ ಠಾಕ್ರೆ ಮತ್ತು ನೆಹರೂರವರನ್ನು ಈ ಕೃತಿಯಲ್ಲಿ ಅವಮಾನಿಸಲಾಗಿದೆ ಎಂಬ ಆರೋಪವನ್ನು ಈ ಪಕ್ಷಗಳು ಇದಕ್ಕೆ ಕಾರಣವಾಗಿ ಕೊಟ್ಟಿದ್ದುವು. 1991ರ ಬೂಕರ್ ಪ್ರಶಸ್ತಿ ಪಟ್ಟಿಯಲ್ಲಿದ್ದ ರೋಹಿಂಟನ್ ಮಿಸ್ತ್ರಿಯವರ ‘ಸಚ್ ಎ ಲಾಂಗ್ ಜರ್ನಿ' ಕೃತಿಯನ್ನು 2010ರಲ್ಲಿ ಶಿವಸೇನೆಯ ವಿದ್ಯಾರ್ಥಿ ಘಟಕವು ಮುಂಬೈಯಲ್ಲಿ ಸುಟ್ಟು ಹಾಕಿತ್ತು. ಕಾದಂಬರಿಯು ಅಸಭ್ಯ ಮತ್ತು ಅಶ್ಲೀಲವಾಗಿದೆ ಹಾಗೂ ಬಾಳಾ ಠಾಕ್ರೆಯವರನ್ನು ಹಗುರವಾಗಿ ಕಾಣಲಾಗಿದೆ ಎಂದು ವಿದ್ಯಾರ್ಥಿಗಳು ಸುಡುವಿಕೆಗೆ ಕಾರಣವನ್ನು ಕೊಟ್ಟಿದ್ದರು.
    ಇವೇನೇ ಇದ್ದರೂ ಸುಡುವ ಪ್ರತಿಭಟನೆಯು ಸಂವಾದದ ವಿರೋಧಿಯಂತೆ ಕಾಣಿಸುತ್ತದೆ. ಆರೋಗ್ಯಕರ ಚರ್ಚೆ, ವೈಚಾರಿಕ ಜಗಳಕ್ಕೆ ಇರುವ ಅವಕಾಶವನ್ನು ಅದು ನಿರಾಕರಿಸಿಬಿಡುತ್ತದೆ. ಆದ್ದರಿಂದಲೇ ಈ ಪ್ರತಿಭಟನಾ ವಿಧಾನವನ್ನು ಪ್ರಶ್ನಿಸಬೇಕಾಗುತ್ತದೆ. ಸಾಹಿತ್ಯ ಕೃತಿಗಳು ಮತ್ತು ಧಾರ್ಮಿಕ ಗ್ರಂಥಗಳ ನಡುವೆ ವ್ಯತ್ಯಾಸಗಳೇನೇ ಇರಲಿ, ಸುಡುವ ಪ್ರತಿಭಟನೆ ಎಷ್ಟು ಆರೋಗ್ಯಪೂರ್ಣ? ಕೃತಿಯೊಂದಕ್ಕೆ ಬೆಂಕಿ ಕೊಡುವುದು ಪ್ರತಿಭಟನೆಯ ಸಾಂಕೇತಿಕ ರೂಪವೇ ಆಗಿರಬಹುದು. ಆದರೆ ಅದು ರವಾನಿಸುವ ಸಂದೇಶವೇನು? ಧರ್ಮಗಳ ಹೆಸರಲ್ಲಿ ಗುಡಿಸಲುಗಳಿಗೆ ಬೀಳುವ ಬೆಂಕಿ ಮತ್ತು ಉದ್ಯಮಿಗಳಿಗೆ ಜಾಗಗಳನ್ನು ಒದಗಿಸುವುದಕ್ಕಾಗಿ ಸ್ಲಂಗಳಿಗೆ ಬೀಳುವ ಬೆಂಕಿಯ ಮಧ್ಯೆ ನಾವು ಗ್ರಂಥಗಳಿಗೂ ಬೆಂಕಿ ಕೊಡಬೇಕೇ? ಅದು ಗ್ರಂಥವೊಂದರ ಮೇಲಿನ ಚರ್ಚೆಯನ್ನು ಅರ್ಥಪೂರ್ಣಗೊಳಿಸಬಲ್ಲುದೇ ಅಥವಾ ಇನ್ನಷ್ಟು ಬೆಂಕಿ ಪ್ರಕರಣಗಳಿಗೆ ಹೇತುವಾಗಬಹುದೇ?
    ಸ್ಟೀವನ್ ವಿನ್ಸೆಂಟ್ ಬೆನೆಟ್‍ರ ಹಾಡು ಯಾಕೋ ಇಷ್ಟವಾಗುತ್ತದೆ.

Thursday, February 26, 2015

ಆಂಟನಿಯೋ ಆರಂಭಿಸಿದ ದೇಣಿಗೆ ಚರ್ಚೆ

   ರಾಜಕೀಯ ಪಕ್ಷಗಳಿಗೂ ಕಾರ್ಪೋರೇಟ್ ಕಂಪೆನಿಗಳಿಗೂ ನಡುವೆ ಯಾವ ಬಗೆಯ ಸಂಬಂಧ ಇದೆ ಮತ್ತು ಇರಬೇಕು ಎಂಬ ಕುರಿತು ಈ ದೇಶದಲ್ಲಿ ಹಲವು ಬಾರಿ ಚರ್ಚೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿವಿಧ ಕಾರ್ಪೋರೇಟ್ ಸಂಸ್ಥೆಗಳು ಪರಸ್ಪರ ಅತಿ ಅನ್ನುವಷ್ಟು ಆತ್ಮೀಯವಾಗಿರುವುದಕ್ಕೆ ಅನೇಕ ಬಾರಿ ಆಕ್ಷೇಪವೂ ವ್ಯಕ್ತವಾಗಿದೆ. ಈ ಮೊದಲು ಮುಖೇಶ್ ಅಂಬಾನಿಯವರು ಪ್ರಧಾನಿ ನರೇಂದ್ರ ಮೋದಿಯವರ ಭುಜಕ್ಕೆ ಕೈ ಹಾಕಿ ಸಲುಗೆಯಿಂದಿದ್ದ ಪೋಟೋ ಸಾಮಾಜಿಕ ತಾಣಗಳಲ್ಲಿ ಸುದ್ದಿಗೀಡಾಗಿತ್ತು. ಓರ್ವ ಉದ್ಯಮಿಯು ಪ್ರಧಾನಿಯ ಭುಜಕ್ಕೆ ಕೈ ಹಾಕುವುದು ಅಗೌರವ ಮತ್ತು ಅಶಿಸ್ತು ಎಂದೂ ವಾದಿಸಲಾಗಿತ್ತು. ಇದೀಗ ಈ ಬಗೆಯ ಚರ್ಚೆಗೆ ಬ್ರೆಝಿಲ್‍ನ ಮುಖ್ಯ ಚುನಾವಣಾ ಆಯುಕ್ತ ಜೋಸ್ ಆಂಟನಿಯೋ ಟೊಪೊಲಿ ಮತ್ತೊಮ್ಮೆ ಚಾಲನೆಯನ್ನು ಕೊಟ್ಟಿದ್ದಾರೆ. ಭಾರತದ ಚುನಾವಣಾ ಪದ್ಧತಿಯನ್ನು ಅಧ್ಯಯನ ನಡೆಸಲು ಇಲ್ಲಿಗೆ ಆಗಮಿಸಿರುವ ಅವರು, ಕಾರ್ಪೋರೇಟ್ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಬ್ರೆಝಿಲ್‍ನಲ್ಲಿ ಶೀಘ್ರವೇ ಇಂಥದ್ದೊಂದು ಕಾನೂನನ್ನು ಜಾರಿಗೊಳಿಸಲಾಗುವುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 ನಿಜವಾಗಿ, ಬೃಹತ್ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಸಂಗತಿಯು ಆಂಟನಿಯೋ ಅವರಿಂದಾಗಿ ಚರ್ಚೆಗೆ ಒಳಗಾಗಬೇಕಾದದ್ದಲ್ಲ. ಅವರೊಂದು ನಿಮಿತ್ತ ಮಾತ್ರ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಸ್ಟ್ರೇಲಿಯಾಕ್ಕೆ ಭೇಟಿ ಕೊಟ್ಟಾಗ ಅವರ ಜೊತೆಗೆ ಉದ್ಯಮಿ ಗೌತಮ್ ಅದಾನಿಯವರು ಇದ್ದರು. ಆಸ್ಟ್ರೇಲಿಯಾ ಪ್ರಮುಖ ಗಣಿ ಪ್ರದೇಶವಾದ ಕ್ವೀನ್ಸ್ ಲ್ಯಾಂಡ್‍ನಲ್ಲಿ ಅದಾನಿ ಕಂಪೆನಿಯು 16 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಮೊತ್ತದ ಗಣಿ ಗುತ್ತಿಗೆಯನ್ನು ಪಡಕೊಂಡದ್ದು ಆ ಬಳಿಕ ಸುದ್ದಿಗೀಡಾಗಿತ್ತು. ಗೌತಮ್ ಅದಾನಿಯವರಿಗೆ ಮೋದಿಯವರೊಂದಿಗೆ ಆತ್ಮೀಯ ಸಂಬಂಧ ಇರುವುದರಿಂದ ಇದು ಸಾಧ್ಯವಾಗಿರಬಹುದು ಎಂದೇ ಆ ಒಪ್ಪಂದವನ್ನು ವಿಶ್ಲೇಷಿಸಲಾಗಿತ್ತು. ಆದರೆ ಈ ಗಣಿ ಗುತ್ತಿಗೆಯ ಹಿಂದೆ ಕೇವಲ ಈ ಆತ್ಮೀಯ ಸಂಬಂಧಗಳಷ್ಟೇ ಕೆಲಸ ಮಾಡಿರುವುದಲ್ಲ ಎಂಬುದನ್ನು ಬಳಿಕದ ಮಾಹಿತಿಗಳು ಸ್ಪಷ್ಟಪಡಿಸಿದುವು. ಆಸ್ಟ್ರೇಲಿಯಾದಲ್ಲಿ ಈಗ ಅಧಿಕಾರದಲ್ಲಿರುವ ಅಧ್ಯಕ್ಷ ಅಬ್ಬೊಟ್ಟೊ ಅವರ ಲೇಬರ್ ಪಕ್ಷಕ್ಕೆ ಅದಾನಿಯವರು 50 ಸಾವಿರ ಆಸ್ಟ್ರೇಲಿಯನ್ ಡಾಲರ್ ಅನ್ನು ದೇಣಿಗೆಯಾಗಿ ನೀಡಿದ್ದರು. ಆ ಸಂದರ್ಭದಲ್ಲಿ ಲೇಬರ್ ಪಕ್ಷ ಅಧಿಕಾರದಲ್ಲಿರಲಿಲ್ಲ. ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆಗ ಅಧಿಕಾರದಲ್ಲಿದ್ದ ಲಿಬರಲ್ ಪಕ್ಷಕ್ಕೂ ಅವರು 11 ಸಾವಿರ ಆಸ್ಟ್ರೇಲಿಯನ್ ಡಾಲರ್ ಅನ್ನು ದೇಣಿಗೆಯಾಗಿ ನೀಡಿದ್ದರು. ಹೀಗೆ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಎರಡು ವರ್ಷಗಳ ಹಿಂದೆಯೇ ದೇಣಿಗೆಯನ್ನು ನೀಡಿದ ಅದಾನಿ, ಅದಕ್ಕೆ ಪ್ರತಿಫಲವಾಗಿ ಬೃಹತ್ ಗಣಿ ಗುತ್ತಿಗೆಯನ್ನು ಪಡೆದರು. ಇಲ್ಲೊಂದು ಪ್ರಶ್ನೆಯಿದೆ. ಒಂದು ವೇಳೆ ಕ್ವೀನ್ಸ್ ಲ್ಯಾಂಡ್‍ನ ಗಣಿಯ ಮೇಲೆ ಅದಾನಿಯವರಿಗೆ ಕಣ್ಣಿರದೇ ಇರುತ್ತಿದ್ದರೆ ಅವರು ಲೇಬರ್ ಮತ್ತು ಲಿಬರಲ್ ಪಕ್ಷಗಳಿಗೆ ದೇಣಿಗೆ ನೀಡುತ್ತಿದ್ದರೆ? ಉದ್ಯಮ ವಿಸ್ತರಣೆಯ ಉದ್ದೇಶವಿಲ್ಲದಿರುತ್ತಿದ್ದರೆ ಅವರೇಕೆ ಆಸ್ಟ್ರೇಲಿಯಾದ ರಾಜಕೀಯ ಪಕ್ಷಗಳ ಬಗ್ಗೆ ಅಷ್ಟೊಂದು ಕಾಳಜಿ ತೋರಬೇಕಿತ್ತು? ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಅದಾನಿಯವರು ಬಿಜೆಪಿಗೆ 4.33 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. 3.15 ಕೋಟಿ ರೂಪಾಯಿಯನ್ನು ಅವರು ಕಾಂಗ್ರೆಸ್ ಪಕ್ಷಕ್ಕೂ ನೀಡಿದ್ದಾರೆ. ಹೀಗೆ ದೇಣಿಗೆಯನ್ನು ಪಡಕೊಳ್ಳುವ ರಾಜಕೀಯ ಪಕ್ಷಗಳು ಋಣ ಸಂದಾಯ ಮಾಡಬೇಕಾದ ಒತ್ತಡಕ್ಕೆ ಸಿಲುಕುವುದಿಲ್ಲವೇ? ಕೇವಲ ಅದಾನಿ ಕಂಪೆನಿ ಎಂದಲ್ಲ. ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಕಂಪೆನಿಗಳು ಮತ್ತು ಉದ್ಯಮಿಗಳು ಅನೇಕ ಇವೆ. ಆಸ್ಟ್ರೇಲಿಯಾದ ರಾಜಕೀಯ ಪಕ್ಷಗಳಿಗೆ ಅದಾನಿ ದೇಣಿಗೆ ಕೊಟ್ಟಂತೆಯೇ ಚೀನಾದ ಪ್ರಮುಖ ಉದ್ಯಮಿ ಝಿ ಚಾನ್ ವಾಂಗ್‍ರು ಲೇಬರ್ ಪಕ್ಷಕ್ಕೆ 850,000 ಆಸ್ಟ್ರೇಲಿಯನ್ ಡಾಲರನ್ನು ನೀಡಿದ್ದರು. ಬ್ರಿಟಿಷ್ ಉದ್ಯಮಿ ಲಾರ್ಡ್ ಮೈಕಲ್ ಆ್ಯಶ್‍ಕ್ರಾಫ್ಟ್‍ರು 250,000 ಆಸ್ಟ್ರೇಲಿಯನ್ ಡಾಲರನ್ನು ಲಿಬರಲ್ ಪಕ್ಷಕ್ಕೆ ನೀಡಿದ್ದರು. ಇಂಥ ದೇಣಿಗೆಗಳು ಜಗತ್ತಿನ ಉದ್ದಕ್ಕೂ ನಡೆಯುತ್ತಿರಬಹುದು. ಬಿಜೆಪಿ, ಕಾಂಗ್ರೆಸ್ ಸಹಿತ ಇಲ್ಲಿನ ರಾಜಕೀಯ ಪಕ್ಷಗಳಿಗೆ ದೇಶದ ಮತ್ತು ವಿದೇಶಧ ಕಂಪೆನಿಗಳು ಖಂಡಿತ ದೇಣಿಗೆಯನ್ನು ನೀಡುತ್ತಿರಬಹುದು. ಅಂಥ ದೇಣಿಗೆಗಳು ರಾಜಕೀಯ ಪಕ್ಷಗಳ ಮೇಲೆ ಬೀರಬಹುದಾದ ಪರಿಣಾಮಗಳೇನು? ಅದಾನಿಯ ದೇಣಿಗೆಗೆ ಮೋದಿಯವರು ಇಲ್ಲವೇ ಸೋನಿಯಾ ಗಾಂಧಿಯವರು ಹೇಗೆ ಋಣ ಸಂದಾಯ ಮಾಡಬಹುದು? ಅಂಬಾನಿಗಳು, ಟಾಟಾಗಳು, ಬಿರ್ಲಾಗಳೆಲ್ಲ ಈ ದೇಶದಲ್ಲಿ ಪಡಕೊಂಡಿರುವ ಗುತ್ತಿಗೆಗಳಲ್ಲಿ ಈ ಋಣ ಸಂದಾಯದ ಅಂಶಗಳು ಎಷ್ಟಿರಬಹುದು?
 ರಾಜಕೀಯ ಪಕ್ಷಗಳೆಂಬುದು ಕಾರ್ಪೋರೇಟ್ ಕಂಪೆನಿಗಳಲ್ಲ. ಪ್ರಧಾನಿ, ಮುಖ್ಯಮಂತ್ರಿ, ಸಂಸದ ಎಂಬುದೆಲ್ಲ ಕಂಪೆನಿಗಳ ಸಿಇಓಗಳೂ ಅಲ್ಲ. ರಾಜಕೀಯ ಪಕ್ಷಗಳು ಜನರಿಗೆ ಉತ್ತರದಾಯಿಗಳಾಗಿವೆ. ಜನರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿಯು ಅವುಗಳ ಮೇಲಿವೆ. ಆದ್ದರಿಂದಲೇ ಚುನಾವಣೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಜನರ ಹಿತಾಸಕ್ತಿಯ ಬಗ್ಗೆ ಮಾತಾಡುತ್ತವೆಯೇ ಹೊರತು ಅಂಬಾನಿ, ಅದಾನಿಗಳ ಬಗೆಗಲ್ಲ. ಸಾಮಾನ್ಯವಾಗಿ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಇವತ್ತು ಎಲ್ಲ ಪಕ್ಷಗಳೂ ಪ್ರಚಾರ ನಡೆಸುತ್ತಿವೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದಕ್ಕೂ ಸಾಕಷ್ಟು ದುಡ್ಡಿನ ಅಗತ್ಯವಿದೆ. ಹಾಗಂತ, ಸಾಮಾನ್ಯ ಜನರಿಂದ ದೇಣಿಗೆ ಎತ್ತುವ ಕ್ರಮ ಈ ದೇಶದಲ್ಲಿ ರೂಢಿಯಲ್ಲಿಲ್ಲ. ಕಾರ್ಪೋರೇಟ್ ಕಂಪೆನಿಗಳ ದೇಣಿಗೆಗಳನ್ನು ಬಳಸಿಕೊಂಡು ಹೆಚ್ಚಿನೆಲ್ಲಾ ಪಕ್ಷಗಳು ಸಾಮಾನ್ಯ ಜನರ ಹಿತಾಸಕ್ತಿಯ ಬಗ್ಗೆ ಮಾತಾಡುತ್ತಿವೆ. ನಿಜವಾಗಿ, ಇದೊಂದು ಬಗೆಯ ಹಿಪಾಕ್ರಸಿ, ದ್ವಂದ್ವ. ಯಾವುದೇ ರಾಜಕೀಯ ಪಕ್ಷಕ್ಕೆ ಜನರ ಹಿತಾಸಕ್ತಿಯೇ ಮುಖ್ಯ ಆಗಬೇಕಾದರೆ ಅದು ಜನರ ಹೊರತಾದ ಇತರೆಲ್ಲ ಕಂಪೆನಿ, ಉದ್ಯಮಿಗಳ ಮುಲಾಜಿನಿಂದ ಮುಕ್ತವಾಗಬೇಕು. ಋಣ ಸಂದಾಯದ ಭಾರವಿಲ್ಲದೇ ಸಂಪೂರ್ಣ ಪಾರದರ್ಶಕವಾಗಿರಬೇಕು. ಇವತ್ತು ಅಂಥದ್ದೊಂದು ಸ್ಥಿತಿ ಬಹುತೇಕ ಎಲ್ಲೂ ಇಲ್ಲ. ತಾನು ಜನಪರ ಎಂಬ ಜಾಹೀರಾತನ್ನು ರಾಜಕೀಯ ಪಕ್ಷವೊಂದು ನೀಡುವುದೇ ಕಾರ್ಪೋರೇಟ್ ಕಂಪೆನಿಗಳ ದುಡ್ಡಿನಿಂದ. ಇಂಥ ಸ್ಥಿತಿಯಲ್ಲಿ ಉದ್ದಿಮೆದಾರರ ಹಿತವನ್ನಲ್ಲದೇ ಸಾಮಾನ್ಯರ ಹಿತವನ್ನು ಕಾಪಾಡಲು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗುವುದು ಹೇಗೆ? ವಿಶೇಷ ಆರ್ಥಿಕ ವಲಯದ ಹೆಸರಲ್ಲಿ ಅದಾನಿಗೋ, ಅಂಬಾನಿಗೋ, ಟಾಟಾಕ್ಕೋ ರೈತರ ಫಸಲು ಭೂಮಿಯನ್ನು ಕೊಡದೇ ಅವು ಇನ್ನೇನು ಮಾಡಬೇಕಾಗುತ್ತದೆ? ಆಂಟನಿಯೋ ಅವರ ಅಭಿಪ್ರಾಯವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾದದ್ದು ಈ ಕಾರಣದಿಂದಲೇ. ರಾಜಕೀಯ ಪಕ್ಷಗಳು ಕಾರ್ಪೋರೇಟ್ ಉದ್ಯಮಿಗಳ ಋಣ ಸಂದಾಯದಿಂದ ಮುಕ್ತವಾಗಬೇಕು. ಜನಸಾಮಾನ್ಯರ ದೇಣಿಗೆಯನ್ನೇ ರಾಜಕೀಯ ಪಕ್ಷಗಳು ಅವಲಂಬಿಸುವಂತಹ ವಾತಾವರಣವೊಂದು ನಿರ್ಮಾಣಗೊಳ್ಳಬೇಕು ಅಥವಾ ಚುನಾವಣಾ ಮಂಡಳಿಯೇ ಎಲ್ಲ ರಾಜಕೀಯ ಪಕ್ಷಗಳಿಗೂ ನಿರ್ದಿಷ್ಟ ಮೊತ್ತ ನೀಡುವಂತಹ ವ್ಯವಸ್ಥೆಯಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಕಂಪೆನಿಗಳಂತೆಯೂ ಮುಖ್ಯಮಂತ್ರಿ, ಪ್ರಧಾನಿಗಳೆಲ್ಲ ಈ ಕಂಪೆನಿಗಳ ಸಿಇಓಗಳಾಗಿಯೂ ಮಾರ್ಪಡಬಹುದು.

Monday, February 23, 2015

ದಯವಿಟ್ಟು 'ಇರಿ'ಯಬೇಡಿ...

ಮಸೀದಿಯಲ್ಲಿ ಮಲಗಿರುವ ಹಿಂದೂ ಯಾತ್ರಿಕರು
    ಉಮರ್ ಬಿನ್ ಖತ್ತಾಬ್, ಖಾಲಿದ್ ಬಿನ್ ವಲೀದ್, ಅಮ್ರ್ ಬಿನ್ ಆಸ್, ಉರ್ವ ಬಿನ್ ಮಸ್‍ವೂದ್, ಸುಹೈಲ್ ಬಿನ್ ಅಮ್ರ್, ಅಬೂ ಸುಫ್‍ಯಾನ್, ವಹ್ಶಿ, ಹಿಂದ್, ತುಫೈಲುದ್ದೂಸಿ, ಬುರೈದ ಬಿನ್ ಹಸೀಬ್ ಅಲ್ ಅಸ್ಲಮಿ..
    ಪ್ರವಾದಿ ಮುಹಮ್ಮದ್‍ರ(ಸ) ಕಡು ವಿರೋಧಿಗಳಾಗಿ ಗುರುತಿಸಿಕೊಂಡಿದ್ದ ಈ ಪ್ರಮುಖರೆಲ್ಲ ಕ್ರಮೇಣ ಪ್ರವಾದಿಯವರ(ಸ) ವಿಚಾರಗಳ ಬೆಂಬಲಿಗರಾಗಿ ಬದಲಾದದ್ದು ಹೇಗೆ? ಹಾಗಂತ, ಇವರ ವಿರೋಧವನ್ನು ಪರಿಗಣಿಸಿ ಪ್ರವಾದಿಯವರು(ಸ) ತಮ್ಮ ವಿಚಾರಗಳಲ್ಲಿ ಬದಲಾವಣೆ ಮಾಡಿಕೊಂಡರೇ? ವಿಗ್ರಹಾರಾಧನೆಯ ಪ್ರಬಲ ಪ್ರತಿಪಾದಕರಾಗಿದ್ದ ಈ ನಾಯಕರಿಗಾಗಿ ಪ್ರವಾದಿಯವರು ತಮ್ಮ ವಿಗ್ರಹಾರಾಧನೆ ವಿರೋಧಿ ನಿಲುವಿನಲ್ಲಿ (ಪವಿತ್ರ ಕುರ್‍ಆನ್ 22:26) ರಾಜಿ ಮಾಡಿಕೊಂಡರೇ? ಬಡ್ಡಿಯನ್ನು ಪ್ರೀತಿಸುತ್ತಿದ್ದ ಇವರಿಗಾಗಿ ತಮ್ಮ ಬಡ್ಡಿ ವಿರೋಧಿ ಸಿದ್ಧಾಂತದಲ್ಲಿ (ಪವಿತ್ರ ಕುರ್‍ಆನ್: 2:276) ಸಡಿಲಿಕೆ ತೋರಿದರೇ? ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಪಾಲಿಸಿ, ಪೋಷಿಸಿಕೊಂಡು ಬರುತ್ತಿದ್ದ ಇವರಿಗಾಗಿ ಮನುಷ್ಯರೆಲ್ಲ ಸಮಾನರು (ಪವಿತ್ರ ಕುರ್‍ಆನ್ 49:13) ಎಂಬ ತಮ್ಮ ನಿಲುವಿನಲ್ಲಿ ಹೊಂದಾಣಿಕೆ ಮಾಡಿಕೊಂಡರೇ? ಹೆಣ್ಣು ಮಕ್ಕಳನ್ನು ಅನಿಷ್ಠ ಮತ್ತು ಹೊರೆಯಾಗಿ ಪರಿಗಣಿಸಿದ್ದ ಸಾಮಾಜಿಕ ವ್ಯವಸ್ಥೆಯನ್ನು ತಿದ್ದಲು ಪ್ರವಾದಿಯವರು ಅನುಸರಿಸಿದ ವಿಧಾನಗಳೇನು? ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳನ್ನು ಮಾರುವಂತೆ ಮನುಷ್ಯರನ್ನು ಮಾರುತ್ತಿದ್ದ ಸಂಪ್ರದಾಯಕ್ಕೆ ತೆರೆ ಎರೆಯಲು ಅವರು ಕೈಗೊಂಡ ಕ್ರಮಗಳೇನು? ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಿದ್ದ ಸಮಾಜದಲ್ಲಿ, ಇಷ್ಟ ಬಂದಷ್ಟು ಪತ್ನಿಯರನ್ನು ಹೊಂದಬಹುದಾಗಿದ್ದ ಸಮಾಜದಲ್ಲಿ, ಮದ್ಯದಿಂದ ತೊಯ್ದು ಹೋಗಿದ್ದ ಸಮಾಜದಲ್ಲಿ, ಉಳ್ಳವರಿಗೆ ನ್ಯಾಯ ಹಂಚಿಕೆಯಾಗುತ್ತಿದ್ದ ಸಮಾಜದಲ್ಲಿ, ಜಾತಿಗಳ ನಡುವೆ ವರ್ಷಗಟ್ಟಲೆ ಘರ್ಷಣೆ ನಡೆಯುತ್ತಿದ್ದ ಸಮಾಜದಲ್ಲಿ.. ಪ್ರವಾದಿ ಮುಹಮ್ಮದ್‍ರು(ಸ) ಹೇಗೆ ಮಾತಾಡಿದರು? ಏನು ಮಾತಾಡಿದರು? ಹೆಣ್ಣು ಮಕ್ಕಳು ಹೆತ್ತವರ ಸ್ವರ್ಗವಾಗಿದ್ದಾರೆ ಎಂಬ ಅಥವಾ ಹತ್ಯೆಗೊಳಗಾದ ಹೆಣ್ಣು ಮಗುವಿನ ಬಾಯಿಯಿಂದಲೇ ಅದಕ್ಕೆ ಕಾರಣರಾದವರ ಹೆಸರನ್ನು ಹೇಳಿಸಿ ಕೊಲೆಗಡುಕರಿಗೆ ನಾಳೆ ದೇವನು ಶಿಕ್ಷೆ ಕೊಡುವನು (ಪವಿತ್ರ ಕುರ್‍ಆನ್: 81:8-9) ಎಂಬ ತಮ್ಮ ನಿಲುವಿನಲ್ಲಿ ಗಟ್ಟಿಯಾಗಿದ್ದುಕೊಂಡೇ ವಿರೋಧಿಗಳನ್ನು ಅವರು ಮೆತ್ತಗಾಗಿಸಿದುದು ಹೇಗೆ? ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕನ್ನು (ಪವಿತ್ರ ಕುರ್‍ಆನ್: 4:11-12, 33) ಪ್ರತಿಪಾದಿಸುತ್ತಲೇ, ಏಕ ಪತ್ನಿ ಕುಟುಂಬ ವ್ಯವಸ್ಥೆಗೆ ಒತ್ತು (ಪವಿತ್ರ ಕುರ್‍ಆನ್: 4:3) ನೀಡುತ್ತಲೇ, ಮದ್ಯಮುಕ್ತ (ಪವಿತ್ರ ಕುರ್‍ಆನ್: 2:219, 5:91), ಜಾತಿ ಮುಕ್ತ (ಪವಿತ್ರ ಕುರ್‍ಆನ್:  49:13), ನ್ಯಾಯನಿಷ್ಠ (ಪವಿತ್ರ ಕುರ್‍ಆನ್: 4:135) ಸಾಮಾಜಿಕ ವ್ಯವಸ್ಥೆಯನ್ನು ಬಲವಾಗಿ ಮಂಡಿಸುತ್ತಲೇ ಅವರು ವಿರೋಧಿಗಳನ್ನು ಹೇಗೆ ತಮ್ಮ ಬೆಂಬಲಿಗರಾಗಿ ಪರಿವರ್ತಿಸಿದರು? ಸಾಮಾನ್ಯವಾಗಿ, ವಿರೋಧಗಳನ್ನು ಎದುರಿಸುವುದಕ್ಕೆ ಎರಡು ದಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಒಂದು, ರಾಜಿ ಮನೋಭಾವವಾದರೆ ಇನ್ನೊಂದು ಬಲಾತ್ಕಾರ. ವಿಶೇಷ ಏನೆಂದರೆ, ಪ್ರವಾದಿ ಮುಹಮ್ಮದ್‍ರು(ಸ) ಈ ಎರಡನ್ನೂ ತಿರಸ್ಕರಿಸಿದರು. ತಾವು ಪ್ರತಿಪಾದಿಸುವ ಮೂಲ ಭೂತ ವಿಷಯಗಳಲ್ಲಿ ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ‘ಒಂದು ವರ್ಷ ನಮ್ಮ ವಿಗ್ರಹವನ್ನು ಆರಾಧಿಸಿ, ಇನ್ನೊಂದು ವರ್ಷ ನಿಮ್ಮ ದೇವರನ್ನು ನಾವು ಆರಾಧಿಸುತ್ತೇವೆ’ (ಪವಿತ್ರ ಕುರ್‍ಆನ್: 109:1-6) ಎಂಬ ವಿರೋಧಿಗಳ ಆಫರ್ ಅನ್ನು ಸ್ವೀಕರಿಸುತ್ತಿದ್ದರೆ ಅವರಿಗೆ(ಸ) ವಿರೋಧಿಗಳೇ ಹುಟ್ಟಿಕೊಳ್ಳುತ್ತಿರಲಿಲ್ಲ. ಧರ್ಮದಲ್ಲಿ ಬಲಾತ್ಕಾರವಿಲ್ಲ (ಪವಿತ್ರ ಕುರ್‍ಆನ್: 2:256) ಎಂಬ ಪ್ರತಿಪಾದನೆಯು ಅವರ ಸಿದ್ಧಾಂತದ ಪ್ರಮುಖ ಅಂಶವಾಗಿದ್ದರಿಂದ ಬಲಾತ್ಕಾರ ಅವರಿಂದ ಸಾಧ್ಯವೂ ಇರಲಿಲ್ಲ. ಆದರೂ ಒಂಟಿಯಾಗಿದ್ದ ಮುಹಮ್ಮದ್(ಸ) ಬೃಹತ್ ಜನಸಮೂಹವಾಗಿ ಮಾರ್ಪಟ್ಟರು. ಇದಕ್ಕೆ ಪವಿತ್ರ ಕುರ್‍ಆನ್ ಅವರ ಉತ್ತಮ ಗುಣಗಳನ್ನೇ ಕಾರಣಗಳಾಗಿ (ಪವಿತ್ರ ಕುರ್‍ಆನ್: 68: 4, 3:159) ಮುಂದಿಡುತ್ತದೆ. ವಿರೋಧಿಗಳ ಸ್ವಭಾವವೇ ನಿಮ್ಮದೂ ಆಗಿರುತ್ತಿದ್ದರೆ ನೀವು ಗುರಿ ಮುಟ್ಟುತ್ತಿರಲಿಲ್ಲ ಎಂದೂ ಅದು ಹೇಳುತ್ತದೆ. ನಿಜವಾಗಿ, ಇಂದಿನ ದಿನಗಳಲ್ಲಿ ಗಂಭೀರ ಅವಲೋಕನಕ್ಕೆ ಒಳಗಾಗಬೇಕಾದ ಸಂಗತಿ ಇದು. ಯಾಕೆ ಮತ್ತೆ ಮತ್ತೆ ಸಮಾಜದ ಶಾಂತಿ ಕದಡುತ್ತದೆ? ರಾಲಿ, ಪಥಸಂಚಲನ, ಸಮಾ ಜೋತ್ಸವಗಳು ಅಶಾಂತಿಯ ಸಂಕೇತಗಳಾಗಿ ಗುರುತಿಗೀಡಾಗುತ್ತಿವೆ?
   ಎಲ್ಲ ಸಿದ್ಧಾಂತಗಳ ಗುರಿಯೂ ಮನುಷ್ಯರೇ. ಶಂಕರ, ಬುದ್ಧ, ಬಸವ, ಪ್ರವಾದಿ(ಸ) ಸಹಿತ ಎಲ್ಲರೂ ಮನುಷ್ಯರನ್ನು ಗುರಿಯಾಗಿಸಿಕೊಂಡೇ ಮಾತಾಡಿದರು. ಅವರು ಮಾತಾಡುವಾಗ ಒಂಟಿಯಾಗಿದ್ದರು. ಎದುರಲ್ಲಿ ಗುಂಪುಗಳಿದ್ದುವು. ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದ ವಿಧಾನ ಇದು. ಈ ಗುಂಪುಗಳು ಈ ಒಂಟಿ ಮನುಷ್ಯರಿಂದ ಎಷ್ಟು ಪ್ರಭಾವಿತಗೊಂಡಿತೆಂದರೆ, ತಮ್ಮ ಸ್ವಭಾವವನ್ನು ಕೈಬಿಟ್ಟು ಒಂಟಿ ಮನುಷ್ಯರ ಸ್ವಭಾವವನ್ನು ತಮ್ಮದಾಗಿಸಿಕೊಂಡವು. ‘ನಿಮ್ಮದು ಒರಟು ಸ್ವಭಾವ ಮತ್ತು ಕಟು ಮನಸ್ಸಾಗಿರುತ್ತಿದ್ದರೆ ಜನರು ನಿಮ್ಮಿಂದ ದೂರ ಹೋಗುತ್ತಿದ್ದರು' ಎಂದು ಪವಿತ್ರ ಕುರ್‍ಆನ್ (2:159) ಪ್ರವಾದಿ ಮುಹಮ್ಮದ್‍ರನ್ನು(ಸ) ಉದ್ದೇಶಿಸಿ ಹೇಳಿದ್ದೂ ಇದನ್ನೇ ಸಮರ್ಥಿಸುತ್ತದೆ. ಆದರೆ, ಇವತ್ತು ಮುಖ್ಯವಾಗಿ ಹಿಂದೂಗಳು  ಅಥವಾ ಮುಸ್ಲಿಮರು ನಡೆಸುವ ಕಾರ್ಯಕ್ರಮಗಳು ಭಯಭೀತಿಗೆ ಕಾರಣವಾಗುತ್ತಿವೆ. ರಾಜಕೀಯ ಸಭೆಗಳಿಂದ ಆಗದ ಘರ್ಷಣೆಗಳು ಧಾರ್ಮಿಕ ಸಭೆಗಳಿಂದ ಆಗುವ ಸ್ಥಿತಿ ನಿರ್ಮಾಣಗೊಂಡಿದೆ. ನಿಜವಾಗಿ, ಘರ್ಷಣೆ, ಅಶಾಂತಿಗಳು ಆಗುವುದಕ್ಕೆ ಹೆಚ್ಚಿನ ಸಾಧ್ಯತೆ ಇರುವುದು ರಾಜಕೀಯ ಸಭೆಗಳಲ್ಲಿ. ಯಾಕೆಂದರೆ ಅಲ್ಲಿ ಮೌಲ್ಯಗಳಿಗೆ ಆಯುಷ್ಯ ಕಡಿಮೆ. ಅಧಿಕಾರ ದಾಹವೇ ರಾಜಕೀಯದ ಮುಖ್ಯ ಗುರಿ. ಅಲ್ಲದೇ, ಸಾಧು ಸಂತರು ವಿದ್ವಾಂಸರೆಲ್ಲ ಆ ಕ್ಷೇತ್ರದಲ್ಲಿರುವುದು ಕಡಿಮೆ. ಇದ್ದರೂ ನಿರ್ಣಾಯಕ ಸ್ಥಾನಕ್ಕೆ ಇನ್ನೂ ತಲುಪಿಲ್ಲ. ಆದರೂ ಅಲ್ಲಿಗಿಂತ ಈ ಕ್ಷೇತ್ರವೇ ಹೆಚ್ಚು ಅಪಾಯಕಾರಿಯಾಗಿ ಮಾರ್ಪಟ್ಟಿರುವುದೇಕೆ? ರಾಜಕೀಯ ಕಾರ್ಯಕ್ರಮಕ್ಕೆ ಮಾಡದ ಬಂದೋಬಸ್ತನ್ನು ಇಂಥ ಕಾರ್ಯಕ್ರಮಗಳ ವೇಳೆ ಮಾಡಲಾಗುತ್ತಿರುವುದೇಕೆ?. ಪೊಲೀಸ್ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿರುವುದೇಕೆ?. ಆ ದಿನ ಮದುವೆ, ಇನ್ನಿತರ ಶುಭ ಕಾರ್ಯಕ್ರಮಗಳನ್ನೂ ಇಟ್ಟುಕೊಳ್ಳಲಾಗುವುದಿಲ್ಲ. ಇದಕ್ಕೆ ಯಾರು ಹೊಣೆ? ಧರ್ಮವನ್ನು ಮತ್ತು ಅದರ ಕಾರ್ಯಕ್ರಮಗಳನ್ನು ‘ಒರಟು'ತನಕ್ಕೆ ಇಳಿಸಿದವರಾರು?  ಒಂದು ಕಾರ್ಯಕ್ರಮ ಮುಗಿಯುವಾಗ ಅದರ ಫಲಿತಾಂಶವಾಗಿ ವಿರೂಪಗೊಂಡ ಮಸೀದಿ,  ಚರ್ಚ್‍ಗಳು ಕಾಣಸಿಗುತ್ತವೆ. ಅದರ ಹೆಸರಲ್ಲಿ ಮತ್ತೆ ಸಂಘರ್ಷದ ವಾತಾವರಣ ನಿರ್ಮಾಣಗೊಳ್ಳುತ್ತದೆ.
     ಅಷ್ಟಕ್ಕೂ, ಒಂದು ಊರಿನ ಮಸೀದಿ, ಮಂದಿರ, ಚರ್ಚ್‍ಗಳ ರಕ್ಷಣೆಯ ಹೊಣೆಯನ್ನು ಆ ಊರಿನ ಮಂದಿಯೇ ವಹಿಸುವ ಸನ್ನಿವೇಶವನ್ನೊಮ್ಮೆ ಊಹಿಸಿಕೊಳ್ಳಿ. ಮಸೀದಿ, ಮಂದಿರ, ಚರ್ಚ್‍ಗಳು ಪರಸ್ಪರ ಸೌಹಾರ್ದದ ಕೇಂದ್ರಗಳಾಗಿ ಕಂಗೊಳಿಸುವುದನ್ನು ಊಹಿಸಿಕೊಳ್ಳಿ. ಯಾಕೆ ಅದು ನಮ್ಮಿಂದ ಸಾಧ್ಯವಾಗುತ್ತಿಲ್ಲ? ಮಂದಿರಕ್ಕೆ ಕಲ್ಲು ಬಿದ್ದರೆ 'ಮಸೀದಿಗಳು' ಸಂತಸಪಡುವುದು ಅಥವಾ ಮಸೀದಿಗೆ ಹಾನಿಯಾದರೆ 'ಮಂದಿರಗಳು' ಖುಷಿ ಪಡುವುದೆಲ್ಲ ಯಾಕೆ? ಪವಿತ್ರ ಕುರ್‍ಆನ್ ಅಂತೂ ಇತರರ ಆರಾಧ್ಯರನ್ನು ತೆಗಳುವುದನ್ನೇ (6:108) ನಿಷೇಧಿಸಿದೆ.
   ಖಲೀಫಾ ಉಮರ್ ಫಾರೂಕ್‍ರ(ರ) ಆಡಳಿತ ಕಾಲ. ಡಮಾಸ್ಕಸ್‍ನಲ್ಲಿ ಗ್ರೀಕರ ಜುಪಿಟರ್ ದೇವಿಯ ಮೂರ್ತಿಯಿರಿಸಿದ ಬೃಹತ್ ಆರಾಧನಾಲಯವಿತ್ತು. ಕ್ರೈಸ್ತರು ಆ ಪ್ರದೇಶವನ್ನು ಜಯಿಸಿದ ಬಳಿಕ ಆ ಆರಾಧನಾಲಯವನ್ನು ಯೋಹಾನನ ಚರ್ಚ್ ಆಗಿ ಮಾರ್ಪಡಿಸಿದ್ದರು. ಉಮರ್‍ರ ಕಾಲದಲ್ಲಿ ಆ ಪ್ರದೇಶವು ಅವರ ಆಡಳಿತ ವ್ಯಾಪ್ತಿಗೆ ಬಂತು. ಮುಸ್ಲಿಮರ ಬದುಕು-ವ್ಯವಹಾರಗಳು ಡಮಾಸ್ಕಸ್‍ನ ಮಂದಿಯನ್ನು ಪ್ರಬಲವಾಗಿ ಆಕರ್ಷಿಸಿದುವು. ಅವರು ಮುಸ್ಲಿಮರ ಬೆಂಬಲಿಗರಾದರು. ಮಾತ್ರವಲ್ಲ, ಯೋಹಾನನ ಚರ್ಚ್ ಅನ್ನು ಮಸೀದಿಯಾಗಿಸಬೇಕೆಂಬ ಒತ್ತಾಯವನ್ನೂ ಹೇರತೊಡಗಿದರು. ಆದರೆ ಉಮರ್ ಅಥವಾ ಅವರ ಆಡಳಿತ ಪ್ರತಿನಿಧಿ ಅದನ್ನು ಒಪ್ಪಿಕೊಳ್ಳಲಿಲ್ಲ. ಚರ್ಚ್‍ನಲ್ಲಿ ಯೋಹಾನನ್ನು ಆರಾಧಿಸುವುದಕ್ಕೆ ಕೊನೆಯ ವ್ಯಕ್ತಿ ಇರುವವರೆಗೆ ಅಂಥ ಪ್ರಯತ್ನಗಳು ಧರ್ಮವಿರೋಧಿ ಎಂದು ಹೇಳಿದರು. ನಿಜವಾಗಿ, ಇತರ ಧರ್ಮ ಮತ್ತು ಅದರ ಸಂಕೇತಗಳಿಗೆ ಕೊಡುವ ಬಹುದೊಡ್ಡ ಗೌರವ ಇದು. "ಮುಸ್ಲಿಮೇತರ ಪ್ರಜೆಗಳನ್ನು ಯಾರಾದರೂ ಹಿಂಸಿಸಿದರೆ, ಅವರ ಮೇಲೆ ದುಬಾರಿ ತೆರಿಗೆ ಹೇರಿದರೆ, ಅವರೊಂದಿಗೆ ಕ್ರೂರವಾಗಿ ವರ್ತಿಸಿದರೆ, ಅವರ ಹಕ್ಕುಗಳನ್ನು ಮೊಟಕುಗೊಳಿಸಿದರೆ ದೇವನ ಬಳಿ ಅಂಥವರ ವಿರುದ್ಧ ನಾನೇ ಸ್ವತಃ ದೂರು ಸಲ್ಲಿಸುವೆ" ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿರುವುದು ಇದೇ ಆಶಯದಲ್ಲಿ. ನೆರೆಯವನ ಹಸಿವನ್ನು ಅವನ ಧರ್ಮ, ಜಾತಿ, ಪಂಗಡ, ಚರ್ಮ, ಭಾಷೆಗೆ ಅತೀತವಾಗಿ ಅವರು ನೋಡಿದುದರಲ್ಲಿಯೂ ಈ ಧಾರ್ಮಿಕ ವೈಶಾಲ್ಯವೇ ಎದ್ದು ಕಾಣುತ್ತದೆ. ಬಶೀರ್ ಬಿನ್ ಉಬೈರಿಕ್ ಎಂಬ ಮುಸ್ಲಿಮನು ಇನ್ನೋರ್ವ ಮುಸ್ಲಿಮನ ಯುದ್ಧ ಕವಚವನ್ನು ಕದ್ದು ಕಳವಿನ ಆರೋಪವನ್ನು ಓರ್ವ ಯಹೂದಿಯ ಮೇಲೆ ಹೊರಿಸಿದ್ದು ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಪ್ರವಾದಿಯವರು ಯಹೂದಿಯನ್ನೇ ತಪ್ಪಿತಸ್ಥ ಎಂದು ತೀರ್ಮಾನಿಸಲು ಮುಂದಾದಾಗ ಪವಿತ್ರ ಕುರ್‍ಆನ್ ಅವರನ್ನು ತಿದ್ದಿದ ಘಟನೆಯು (4: 105) ಧರ್ಮ ಎಂದರೇನು ಎಂಬುದನ್ನು ವ್ಯಾಖ್ಯಾನಿಸುವ ಉತ್ಕೃಷ್ಟ ಸಂದರ್ಭವಾಗಿದೆ. ನ್ಯಾಯಕ್ಕೆ, ಸತ್ಯಕ್ಕೆ, ಹಿಂದೂ-ಮುಸ್ಲಿಮ್-ಕ್ರೈಸ್ತ-ಯಹೂದಿ ಎಂಬ ಬೇಧ ಇಲ್ಲ. ಅನ್ಯಾಯ ಹಿಂದೂವಿನದ್ದಾದರೂ ಮುಸ್ಲಿಮನದ್ದಾದರೂ ಅನ್ಯಾಯವೇ. ಆದರೆ ಎಷ್ಟಂಶ ಈ ಮೌಲ್ಯವನ್ನು ಇವತ್ತಿನ ಧರ್ಮಾನುಯಾಯಿಗಳಿಗೆ ಪಾಲಿಸಲು ಸಾಧ್ಯವಾಗುತ್ತಿದೆ? ಪ್ರವಾದಿಯವರನ್ನು(ಸ) ಭೇಟಿಯಾಗಲು ಇತಿಯೋಪಿಯಾದಿಂದ ಬಂದ ಕ್ರೈಸ್ತ ತಂಡಕ್ಕೆ ಮಸೀದಿಯಲ್ಲಿ ವಿಶ್ರಾಂತಿ ಪಡೆಯಲು ಅವರು ಅವಕಾಶ ಮಾಡಿಕೊಟ್ಟಿದ್ದರು. ಖಲೀಫಾ ಅಬೂಬಕರ್‍ರನ್ನು(ರ) ರಾಷ್ಟ್ರದ ಕ್ರೈಸ್ತರು ತಮ್ಮ ನೂತನ ಚರ್ಚ್ ಅನ್ನು ಉದ್ಘಾಟಿಸುವುದಕ್ಕೆ ಆಮಂತ್ರಿಸಿದರಲ್ಲದೇ ತಮ್ಮ ಕ್ರಮದಂತೆ ನಮಾಝ್ ನಿರ್ವಹಿಸಿ ಉದ್ಘಾಟಿಸಿ ಎಂದು ವಿನಂತಿಸಿದಾಗ ಅವರು ಅದನ್ನು ನಯವಾಗಿ ತಿರಸ್ಕರಿಸಿದ ಘಟನೆಯೊಂದಿದೆ. ಹಾಗೆ ಉದ್ಘಾಟಿಸಿದರೆ ನಿಜ ಸ್ಥಿತಿಯನ್ನು ಅರಿಯದವರು ಮುಂದೆ ಖಲೀಫಾ ನಮಾಝ್ ಮಾಡಿದ ಸ್ಥಳವೆಂದು ವಾದಿಸಿ ಹಕ್ಕೊತ್ತಾಯ ಮಾಡುವ ಸಾಧ್ಯತೆ ಇದೆ ಎಂದು ಅದಕ್ಕೆ ಅವರು ಕಾರಣಗಳನ್ನು ಕೊಟ್ಟಿದ್ದರು. ಇಂಥ ಉದಾತ್ತ ಮೌಲ್ಯಗಳು ಇವತ್ತು ‘ಕಾಣೆಯಾದ’ ಪಟ್ಟಿಯಲ್ಲಿ ದಿನೇ ದಿನೇ ಸೇರಿಕೊಳ್ಳುತ್ತಿರುವುದೇಕೆ? ಧರ್ಮಗಳು ಮತ್ತು ಅವುಗಳ ಆರಾಧನಾಲಯಗಳ ನಡುವೆ ಇರಬೇಕಾದ ಸೌಹಾರ್ದತೆಯನ್ನು ಕಿತ್ತು ಹಾಕುತ್ತಿರುವವರು ಯಾರು? ಅವರ ಉದ್ದೇಶವೇನು? ಪ್ರವಾದಿಗಳು ತಮ್ಮ ಗುಣ ನಡತೆಗಳಿಂದಲೇ ವಿರೋಧಿಗಳನ್ನು ಗೆಳೆಯರನ್ನಾಗಿ ಮಾರ್ಪಡಿಸಿದ್ದರು. ಇವತ್ತು?
     ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಪಾದಚಾರಿಗಳಾಗಿ ತೆರಳುತ್ತಿದ್ದ ಹಿಂದೂ ಯಾತ್ರಿಕರು ದಕ್ಷಿಣ ಕನ್ನಡ ಜಿಲ್ಲೆಯ ಸುಂಕದಕಟ್ಟೆ ಎಂಬಲ್ಲಿಯ ಮುಹ್ಯುದ್ದೀನ್ ಜುಮಾ ಮಸೀದಿಯ ಹತ್ತಿರ ತಲುಪಿದಾಗ ರಾತ್ರಿಯಾಗಿದ್ದು, ತಂಗಲು ಅವಕಾಶ ಮಾಡಿಕೊಡುವಂತೆ ಮಸೀದಿಯವರೊಂದಿಗೆ ವಿನಂತಿಸಿದಾಗ ಮಸೀದಿಯಲ್ಲೇ ಉಳಕೊಳ್ಳಲು ವ್ಯವಸ್ಥೆ ಮಾಡಿದ ಘಟನೆಯೊಂದು ಕಳೆದವಾರ ನಡೆದಿತ್ತು. ಧರ್ಮಗಳ ನಿಜ ಮೌಲ್ಯವನ್ನು ಸಾರುವ ಇಂಥ ಘಟನೆಗಳು ಇನ್ನೂ ಹೆಚ್ಚಾಗಲಿ ಮತ್ತು ಮಾಧ್ಯಮಗಳ ಮುಖಪುಟಗಳಲ್ಲಿ ಇಂಥವುಗಳಿಗೆ ಜಾಗ ಸಿಗಲಿ ಎಂದೇ ಹಾರೈಸೋಣ..

Tuesday, February 17, 2015

ಕಾರ್ಲ್ ಮಾರ್ಕ್ಸ್ ರ ಅಪ್ರಕಟಿತ ಬರಹಗಳನ್ನು ಎದುರಿಟ್ಟುಕೊಂಡು..

    1989 ಡಿಸೆಂಬರ್ 2ರಂದು ವಿ.ಪಿ. ಸಿಂಗ್‍ರು ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಹಿಂದುಳಿದ ಮತ್ತು ದಲಿತ ವರ್ಗಗಳಲ್ಲಿ ಭಾರೀ ಸಡಗರ ಕಾಣಿಸಿಕೊಂಡಿತ್ತು. ಉತ್ತರ ಪ್ರದೇಶ, ಬಿಹಾರದಂಥ ರಾಜ್ಯಗಳು ಆ ಕ್ಷಣವನ್ನು ಎಷ್ಟರ ಮಟ್ಟಿಗೆ ಸಂಭ್ರಮಿಸಿದುವು ಅಂದರೆ, ಹಿಂದುಳಿದ ವರ್ಗಗಳ ಮಸೀಹ ಎಂಬಂತೆ ವಿ.ಪಿ. ಸಿಂಗ್‍ರನ್ನು ಅವು ಕೊಂಡಾಡಿದುವು. ದಮನಿತ ವರ್ಗಗಳ ಕುರಿತಂತೆ ಅವರಿಗಿರುವ ಕಾಳಜಿ, ಅವರ ಹೋರಾಟ, ಹೆಜ್ಜೆಗುರುತುಗಳೆಲ್ಲ ಅಪಾರ ಗೌರವದೊಂದಿಗೆ ಸ್ಮರಣೆಗೀಡಾದುವು. 1978ರಲ್ಲಿ ಪ್ರಧಾನಿ ಮೊರಾರ್ಜಿ ದೇಸಾಯಿಯವರು ರಚಿಸಿದ ಮಂಡಲ್ ಆಯೋಗದ ವರದಿಯನ್ನು ವಿ.ಪಿ. ಸಿಂಗ್ ಜಾರಿ ಮಾಡುತ್ತಾರೋ ಅನ್ನುವ ಅನುಮಾನ ಮಾಧ್ಯಮಗಳೂ ಸೇರಿದಂತೆ ಉನ್ನತ ಜಾತಿಗಳಲ್ಲಿ ಕಂಡುಬಂದರೆ ಹಿಂದುಳಿದ ವರ್ಗಗಳು ಅದಕ್ಕಾಗಿ ಕಾತರದಿಂದ ಕಾದುವು. 1980 ಡಿ. 30ರಂದು ಬಿ.ಪಿ. ಮಂಡಲ್ ಅವರು ರಾಷ್ಟ್ರಪತಿಯವರಿಗೆ ಸಲ್ಲಿಸಿದ ವರದಿಯಲ್ಲಿ ಹಿಂದುಳಿದ ಜಾತಿಗಳಿಗೆ (OBC) ಸರಕಾರಿ ಮತ್ತು ವಿಶ್ವವಿದ್ಯಾಲಯಗಳ ಹುದ್ದೆಗಳಲ್ಲಿ 27% ಮೀಸಲಾತಿ ನೀಡಬೇಕೆಂದು ಶಿಫಾರಸ್ಸು ಮಾಡಿದ್ದರು. ಆದರೆ ಈ ದೇಶದ ಎಲ್ಲ ಕ್ಷೇತ್ರಗಳನ್ನು ನಿಯಂತ್ರಿಸುತ್ತಿರುವ ಉನ್ನತ ವರ್ಗವು ಈ ವರದಿಯ ವಿರುದ್ಧ ಒಂದಾಗಿ ಬಿಟ್ಟವು. ಮಂಡಲ್ ವರದಿಯ ಶಿಫಾರಸ್ಸುಗಳನ್ನು ಉತ್ಪ್ರೇಕ್ಷಿತವಾಗಿ ಜನರ ಮುಂದಿಟ್ಟವು. ‘ಪ್ರತಿಭೆ ಇಲ್ಲದ ಮಂದಿ ನಮ್ಮ ಉದ್ಯೋಗವನ್ನು ಕಸಿಯುತ್ತಿದ್ದಾರೆ..’ ಎಂದೆಲ್ಲ ವ್ಯಾಖ್ಯಾನಗಳು ಬರತೊಡಗಿದುವು. ಆದರೆ, ವಿ.ಪಿ. ಸಿಂಗ್ ಇವಾವುದಕ್ಕೂ ಕಿವಿಗೊಡಲಿಲ್ಲ. ಅವರು ಮಂಡಲ್ ವರದಿಯ ಜಾರಿಗೆ ಮುಂದಾದರು. ಮೇಲ್ವರ್ಗದ ಮಂದಿ ಇದರ ವಿರುದ್ಧ ವ್ಯಾಪಕ ಪ್ರತಿಭಟನೆಯನ್ನು ಹುಟ್ಟು ಹಾಕಿದರು. ರಸ್ತೆ ತಡೆ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ, ಬಂದ್ ಮುಂತಾದುವುಗಳು ನಡೆದುವು. ಮಾಧ್ಯಮಗಳು ಇವುಗಳಿಗೆ ಭಾರೀ ಕವರೇಜನ್ನೂ ಕೊಟ್ಟವು. ‘ಅರ್ಮಾನೋಂಕಾ ಬಲಿದಾನ್-ಆರಕ್ಷಣ್’ ಎಂಬ ಹೆಸರಿನಲ್ಲಿ ಇಮಾಜಿನ್ ಟಿ.ವಿ. ಪ್ರಸಾರ ಮಾಡುತ್ತಿದ್ದ ಧಾರಾವಾಹಿಯಲ್ಲಿ ಈ ಪ್ರತಿಭಟನೆಯನ್ನು ಬಳಸಿಕೊಳ್ಳಲಾಯಿತು. ನಿಜವಾಗಿ, ಆ ಧಾರಾವಾಹಿ ಪ್ರೀತಿ-ಪ್ರೇಮದ ಕತೆಯನ್ನಾಧರಿಸಿದ್ದಾಗಿದ್ದು ಯಾವ ರೀತಿಯಲ್ಲೂ ಆ ಪ್ರತಿಭಟನೆಗೆ ಸಂಬಂಧವೇ ಇರಲಿಲ್ಲ. ಪ್ರತಿಭಟನೆಯಲ್ಲಿ ಸಾರ್ವಜನಿಕರನ್ನು ಸೇರ್ಪಡೆಗೊಳಿಸುವ ದುರುದ್ದೇಶದಿಂದ ಆ ದೃಶ್ಯವನ್ನು ಬಳಸಿಕೊಳ್ಳಲಾಯಿತು ಎಂಬ ದೂರು ವ್ಯಾಪಕವಾಗಿ ಕೇಳಿಬಂದಿತ್ತು. ದೆಹಲಿ ವಿಶ್ವವಿದ್ಯಾನಿಲಯದ ರಾಜೀವ್ ಗೋಸ್ವಾಮಿ ಎಂಬ ವಿದ್ಯಾರ್ಥಿ 1990 ಅಕ್ಟೋಬರ್‍ನಲ್ಲಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಾಹುತಿಗೆ ಯತ್ನಿಸಿದ. ದೆಹಲಿಯ ದೇಶಬಂಧು ಸಂಜೆ ಕಾಲೇಜಿನ ವಿದ್ಯಾರ್ಥಿ ಸುರೀಂದರ್ ಸಿಂಗ್ ಚೌಹಾನ್ ಆತ್ಮಹತ್ಯೆ ಮಾಡಿಕೊಂಡ. ‘ಮೀಸಲಾತಿಯನ್ನು ಓಟ್‍ಬ್ಯಾಂಕ್ ಆಗಿ ಪರಿಗಣಿಸುತ್ತಿರುವ ವಿ.ಪಿ. ಸಿಂಗ್, ಪಾಸ್ವಾನ್, ಶರದ್ ಯಾದವ್‍ರೇ ತನ್ನ ಸಾವಿಗೆ ಕಾರಣ’ ಎಂದು ಡೆತ್ ನೋಟ್ ಬರೆದಿಟ್ಟ. ಹೀಗೆ ಮಂಡಲ್ ವರದಿಯನ್ನು ಸಮಾಧಿ ಮಾಡುವಲ್ಲಿ ಉನ್ನತ ವರ್ಗದ ಪ್ರತಿಭಟನಾ ಚಳವಳಿಯು ಯಶಸ್ವಿಯಾಯಿತು. ವಿಶೇಷ ಏನೆಂದರೆ, ಇಂಥ ಪ್ರತಿಭಟನಾ ಹಿನ್ನೆಲೆಯೊಂದು ಆಮ್ ಆದ್ಮಿಯ ಅರವಿಂದ್ ಕೇಜ್ರಿವಾಲ್‍ಗೆ ಇದೆ ಎಂಬುದು. ಮೀಸಲಾತಿ ವಿರೋಧಿ ನಿಲುವನ್ನು ಅವರು ಹೊಂದಿದ್ದಾರೆ ಎಂಬ ಅನುಮಾನವೊಂದು ಹಲವರಲ್ಲಿದೆ. ಅದಕ್ಕೆ ಪೂರಕವೆಂಬಂತೆ ಕೆಲವು ವಿಷಯಗಳಲ್ಲಿ ಅವರ ನಿಲುವು ನಿಗೂಢವಾಗಿಯೂ ಇದೆ. ಕೆಳವರ್ಗದ ಹೋರಾಟದ ದಾರಿಯನ್ನು, ಮೈತ್ರಿ ರಾಜಕಾರಣದ ಸಾಧ್ಯತೆಯನ್ನು ಒಂದು ಹಂತದವರೆಗೆ ಅಮ್ ಆದ್ಮಿ ಮುಚ್ಚಿ ಬಿಡುತ್ತಿದೆಯೇ ಎಂಬ ಭಯವೂ ಕಾಡತೊಡಗಿದೆ. ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್.. ಮುಂತಾದವರ ರಾಜಕೀಯ ನಡೆಗಳ ಕುರಿತಂತೆ ಭಿನ್ನಾಭಿಪ್ರಾಯಗಳೇನೇ ಇರಲಿ, ಅವರು ದಮನಿತ ವರ್ಗಗಳಿಗೆ ಧ್ವನಿಯಾಗುತ್ತಲೇ ಬಂದವರು. ಲಲ್ಲೂ ಪ್ರಸಾದ್ ಮುಖ್ಯಮಂತ್ರಿ ಆದರೂ ನಿತೀಶ್ ಕುಮಾರ್ ಆದರೂ ಹಿಂದುಳಿದ ಮತ್ತು ದಮನಿತ ವರ್ಗಗಳ ಕುರಿತಂತೆ ಅವರ ನಿಲುವಿನಲ್ಲಿ ದೊಡ್ಡ ವ್ಯತ್ಯಾಸಗಳಿರುವುದಿಲ್ಲ. ಅಸ್ಪ್ರಶ್ಯತೆಯನ್ನು, ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಅವರು ಪ್ರತಿಭಟಿಸುತ್ತಲೇ ಬೆಳೆದವರು. ಸಂದರ್ಭ ಸಿಕ್ಕಾಗ ಉನ್ನತ ವರ್ಗಗಳನ್ನು ಪ್ರತಿನಿಧಿಸುವವರ ವಿರುದ್ಧ ರಾಜಕೀಯ ಮೈತ್ರಿಯನ್ನು ಬೆಳೆಸಲೂ ಅವರು ಮುಂದಾಗುತ್ತಾರೆ. ಆದರೆ, ಕೇಜ್ರಿವಾಲ್ ಹೇಗೆ? ಧರ್ಮ, ಜಾತಿ, ಭಾಷೆ, ಲಿಂಗಗಳ ಬಗ್ಗೆ ಅವರ ಖಚಿತ ನಿಲುವು ಏನು? ಅವರು ಯಾರನ್ನು, ಯಾವುದನ್ನು ಪ್ರತಿನಿಧಿಸುತ್ತಿದ್ದಾರೆ? ಅಲ್ಪಸಂಖ್ಯಾತರ ಬಗ್ಗೆ ಅವರ ಅಭಿಪ್ರಾಯ ಏನು? ಘರ್ ವಾಪಸಿ, ಭಾರತೀಯರೆಲ್ಲ ಹಿಂದೂಗಳು, ಪಠ್ಯ ಪುಸ್ತಕಗಳ ಬಿಜೆಪೀಕರಣ, ಇತಿಹಾಸದ ತಿರುಚುವಿಕೆ, ಭಯೋತ್ಪಾದನೆಯ ಹೆಸರಲ್ಲಿ ಬಂಧನಕ್ಕೀಡಾಗಿರುವ ಅಮಾಯಕರು, ಮುಸ್ಲಿಮರನ್ನೇ ಗುರಿ ಮಾಡಿರುವ ಬಿಜೆಪಿ ರಾಜಕಾರಣ... ಇತ್ಯಾದಿಗಳ ಕುರಿತಂತೆ ಅವರ ನಿಲುವು ಏನು? ಕೆಲವರು ಹೇಳುವಂತೆ ಅವರ ನಿಯೋ ಲಿಬರ್‍ಲಿಸಂನ ಪ್ರತಿನಿಧಿಯೇ? ಅವರದು ಸೋಶಿಯಲ್ ಫ್ಯಾಸಿಝಮ್ಮೆ? ನೀರು, ವಿದ್ಯುತ್, ರಸ್ತೆ, ಶಾಲೆ, ಆಸ್ಪತ್ರೆಗಳಾಚೆಗೆ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಕುರಿತು, ಮೀಸಲಾತಿಯ ಕುರಿತು, ಅಲ್ಪಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳ ಕುರಿತು ಅವರೇಕೆ ಏನನ್ನೂ ಹೇಳಿಲ್ಲ? ಅಂಥದ್ದೊಂದು ಸಂದರ್ಭದಿಂದ ಅವರು ತಪ್ಪಿಸಿಕೊಳ್ಳುತ್ತಿದ್ದಾರೋ ಅಥವಾ ಅಂಥ ಸಂದರ್ಭಕ್ಕಾಗಿ ಕಾಯುತ್ತಿದ್ದಾರೋ? ಕಾರ್ಲ್ ಮಾರ್ಕ್ಸ್ ಹುಟ್ಟಿ 200 ವರ್ಷಗಳಾಗುತ್ತಿರುವ (1818) ಈ ಸಂದರ್ಭದಲ್ಲಿ ‘ಅವರ ಬರಹಗಳು ಇನ್ನೂ ಇವೆ, ಎಲ್ಲವೂ ಪ್ರಕಟಗೊಂಡಿಲ್ಲ..' ಎಂಬ ಹೇಳಿಕೆ ಅಧಿಕೃತವಾಗಿ ಇತ್ತೀಚೆಗೆ ಹೊರಬಿದ್ದಿರುವಂತೆಯೇ ಕೇಜ್ರಿವಾಲ್‍ರ ಬಗ್ಗೆಯೂ ಹೇಳಬಹುದೇ? ಕಮ್ಯೂನಿಸ್ಟ್ ಮೆನಿಫೆಸ್ಟೋವನ್ನು ಬರೆದವರು ಕಾರ್ಲ್ ಮಾಕ್ಸ್. ಶ್ರೀಮಂತರು ಬಡವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದುದರ ಬಗ್ಗೆ ಅವರು ಮಾತಾಡಿದರು. ನಿಜವಾಗಿ, ಜೀವಿತ ಕಾಲದಲ್ಲಿ ಮಾರ್ಕ್ಸ್ ಪ್ರಭಾವಿ ಬರಹಗಾರರೇನೂ ಆಗಿರಲಿಲ್ಲ. ಕಾವ್ಯಾತ್ಮಕ ಭಾಷೆಯಲ್ಲಿ ಅವರು ಬರೆಯುತ್ತಿದ್ದ ಬರಹಗಳು ಜನರ ನಡುವೆ ಚರ್ಚಿತಗೊಳ್ಳುತ್ತಲೂ ಇರಲಿಲ್ಲ. 1848ರಲ್ಲಿ ಬರೆದ ಕಮ್ಯೂನಿಸ್ಟ್ ಮೆನಿಫೆಸ್ಟೋ ಮತ್ತು ದಾಸ್ ಕ್ಯಾಪಿಟಲ್ ಅನ್ನು ಬಿಟ್ಟರೆ ಉಳಿದಂತೆ ಅವರು ಬರೆದ ಪುಸ್ತಕಗಳಲ್ಲಿ ಹೆಚ್ಚಿನವು 1930ರ ಬಳಿಕವೇ ಬೆಳಕು ಕಂಡವು. ಹಾಗಂತ, ಅವರಿಗೆ ಇತರ ವಿಷಯಗಳ ಬಗ್ಗೆ ಜಿಜ್ಞಾಸೆ ಇದ್ದಿರಲಿಲ್ಲ ಎಂದಲ್ಲ. `ಕಾನೂನು ನಿರ್ಮಾಣ' ‘ಯಹೂದಿ ಸಮಸ್ಯೆ’, ‘ತತ್ವಶಾಸ್ತ್ರಗಳ ದಾರಿದ್ರ್ಯ’, ‘ವರ್ಗ ಸಂಘರ್ಷ’, ’ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆ’, ‘ವಂಶೀಯತೆ-ದೇಶೀಯತೆ-ಒಂದು ಅಧ್ಯಯನ..’ ಮುಂತಾದ ವಿಷಯಗಳ ಮೇಲೆ ಮಾರ್ಕ್ಸ್ ನಿಖರ ಅಭಿಪ್ರಾಯಗಳನ್ನು ಮಂಡಿಸಿದ್ದರು. ಹುಟ್ಟಿದ ಜರ್ಮನಿಯಿಂದ ಫ್ರಾನ್ಸ್ ಗೆ ವಲಸೆ ಹೋಗಿ, ಅಲ್ಲಿ ಫ್ರೆಡ್ರಿಕ್ ಏಂಗಲ್ಸ್ ನನ್ನು ಭೇಟಿಯಾಗಿ, ಅಲ್ಲಿಂದ ಗಡಿಪಾರುಗೊಂಡು ಇಂಗ್ಲೆಂಡ್‍ಗೆ ಹೋಗಿ, ಅಲ್ಲಿ 30 ವರ್ಷ ಇದ್ದೂ ಇಂಗ್ಲಿಷ್ ಕಲಿಯದೇ ಅಲ್ಲೇ ಸಾವಿಗೀಡಾದ ಅವರ ಚಿಂತನೆಗಳಿಗೆ ಜಗತ್ತಿನಲ್ಲಿ ಇವತ್ತೂ ಒಂದು ಬಗೆಯ ಪ್ರಭಾವ ಇದೆ. ಸಮಾಜವನ್ನು ಅವರು ಶ್ರೀಮಂತರು ಮತ್ತು ಕಾರ್ಮಿಕರು ಎಂದು ಒಡೆದು ನೋಡಿದರು. ಅದರ ಆಧಾರದಲ್ಲಿಯೇ ಚಿಂತನೆಗಳನ್ನು ಕಟ್ಟಿದರು. ಕೇಜ್ರಿವಾಲ್ ಮಾತಾಡುತ್ತಿರುವುದು ಹೆಚ್ಚು ಕಡಿಮೆ ಇದೇ ಭಾಷೆಯಲ್ಲಿ. ಅಂಬಾನಿಯನ್ನು ಖಳನಾಯಕನಂತೆ ಬಿಂಬಿಸಿ ಅವರು ಕಾರ್ಮಿಕರ ಬಗ್ಗೆ ಕರುಣೆ ತೋರಿಸುತ್ತಿದ್ದಾರೆ. ಆದರೆ ಭಾರತೀಯ ಸಾಮಾಜಿಕ ಪರಿಸ್ಥಿತಿಯು ಇಂಗ್ಲೆಂಡ್, ಜರ್ಮನಿ, ರಷ್ಯಾಗಳಂತೆ ಅಲ್ಲವಲ್ಲ. ಕಾರ್ಲ್ ಮಾರ್ಕ್ಸ್ ಅಲ್ಲಿನ ಪರಿಸ್ಥಿತಿಗೆ ತಕ್ಕದಾಗಿ ವರ್ಗ ಸಂಘರ್ಷ ಕೃತಿಯನ್ನು ಬರೆದಿರಬಹುದು. ಅದು ಅಂದಿನ ಕಾಲದ ಅಗತ್ಯವಾಗಿರಬಹುದು. ಆದರೆ ಭಾರತದಲ್ಲಿ ಸಂಘರ್ಷವಿರುವುದು ವರ್ಗಗಳ ನಡುವೆ ಅಲ್ಲ, ಜಾತಿಗಳು ಮತ್ತು ಧರ್ಮಗಳ ನಡುವೆ. ಮತಾಂತರ, ಲವ್‍ಜಿಹಾದ್, ಭಯೋತ್ಪಾದನೆಯ ನೆಪದಲ್ಲಿ ನಿರ್ದಿಷ್ಟ ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಹಿಂಸೆಗೆ ಒಳಪಡಿಸುವ ವಾತಾವರಣವೊಂದು ಇಲ್ಲಿದೆ. ಇನ್ನೊಂದು ಕಡೆ ಬಂಡವಾಳಶಾಹಿತ್ವವನ್ನು ಪೋಷಿಸುವ ಪ್ರಯತ್ನವನ್ನೂ ಇವೇ ಮಂದಿ ನಡೆಸುತ್ತಿದ್ದಾರೆ. 1846ರಲ್ಲಿ ಕಾರ್ಲ್ ಮಾರ್ಕ್ಸ್ ಬರೆದ ದಾಸ್ ಕ್ಯಾಪಿಟಲ್‍ಗಿಂತ ಭಿನ್ನವಾದ ಬಂಡವಾಳಶಾಹಿ ಮತ್ತು ಕೋಮುವಾದಿ ಜುಗಲ್‍ಬಂದಿ ಇದು. ಈ ಸಂದರ್ಭದಲ್ಲಿ ಬರೇ ಅಂಬಾನಿಯನ್ನು, ಬಿರ್ಲಾರನ್ನು, ಟಾಟಾರನ್ನು ಪ್ರಶ್ನಿಸುತ್ತಾ ಹೋಗುವುದು ಮತ್ತು ಎಲ್ಲ ಅನಾಹುತಗಳಿಗೆ ಅವರೇ ಹೊಣೆಗಾರರು ಎಂಬಂತೆ ಮಾತಾಡುವುದರಿಂದ ಸಮಸ್ಯೆಯ ಒಂದು ಮುಖವನ್ನಷ್ಟೇ ಪ್ರತಿನಿಧಿಸಿದಂತಾಗುತ್ತದೆ. ಅಂಬಾನಿ, ಅದಾನಿಗಳಿಗೆ ಬೇಕಾದಂತೆ ಇಲ್ಲಿನ ಕಾನೂನು ಸಡಿಲಿಕೆಯೋ ಅಥವಾ ಕಾನೂನನ್ನೇ ರದ್ದು ಪಡಿಸುವುದೋ ನಡೆಯುವಾಗ ಅದರ ಬಗ್ಗೆ ಸಾರ್ವಜನಿಕ ಚರ್ಚೆ ಆಗದಂತೆ ನೋಡಿಕೊಳ್ಳುವ ಹೊಣೆಯನ್ನು ಘರ್ ವಾಪಸಿಗಳು, ರಾಮ ಮಂದಿರಗಳು, ಭಯೋತ್ಪಾದನೆಗಳು, ಐದು- ಹತ್ತು ಮಕ್ಕಳು, ದೇಶಭಕ್ತ ಗೋಡ್ಸೆಗಳು, ಸ್ವಚ್ಛ ಭಾರತಗಳೆಲ್ಲ.. ವಹಿಸಿಕೊಳ್ಳುತ್ತವೆ. ಈ ಹಿಂದೆ ಮಂಡಲ್‍ಗೆ ವಿರುದ್ಧವಾಗಿ ಕಮಂಡಲ್ (ರಾಮ ಜನ್ಮಭೂಮಿ) ಅನ್ನು ಚರ್ಚೆಗೆ ತಂದವರೇ ಇವತ್ತು ಈ ಎಲ್ಲವನ್ನೂ ಚರ್ಚೆಗೆ ತಂದಿದ್ದಾರೆ. ಮಂಡಲ್ ವರದಿಯ ಶಿಫಾರಸ್ಸುಗಳನ್ನು ‘ಹುಟ್ಟಿನಾಧಾರದ ಮೀಸಲಾತಿ’ ಎಂದು ಹೀಗಳೆದವರು ಮತ್ತು ‘ಪ್ರತಿಭೆಯಿಲ್ಲದವರಿಗೆ ಉದ್ಯೋಗ’ ಎಂದು ಟೀಕಿಸಿದವರು ಇವತ್ತು ವಿವಿಧ ಪಕ್ಷ ಮತ್ತು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರಬಹುದು. ಮಾಧ್ಯಮಗಳ ಆಯ ಕಟ್ಟಿನ ಜಾಗದಲ್ಲಿ ಗಟ್ಟಿಯಾಗಿರಬಹುದು. ಮೋದಿ ಪ್ರಣೀತ ಚಿಂತನೆಗಳಿಗೆ ಮಾರುಕಟ್ಟೆ ಒದಗಿಸಿಕೊಡುವಲ್ಲಿ ಅವರು ಶ್ರಮಪಟ್ಟಿರಲೂಬಹುದು. ಕೇಜ್ರಿವಾಲ್‍ಗೆ ಆ ಹಿನ್ನೆಲೆ ಇದೆಯೋ ಇಲ್ಲವೋ ಆದರೆ ಮೀಸಲಾತಿ, ಅಲ್ಪಸಂಖ್ಯಾತರು, ಭಯೋತ್ಪಾದನೆ, ಬಂಡವಾಳಶಾಹಿತ್ವ, ಕೋಮುವಾದ, ಧರ್ಮ, ಹಿಂದುಳಿದವರು, ಅಸ್ಪ್ರಶ್ಯರು.. ಮುಂತಾದವುಗಳ ಬಗ್ಗೆ ಈ ದೇಶದ ರಾಜಕಾರಣಿಗೆ ಅಥವಾ ರಾಜಕೀಯ ಪಕ್ಷವೊಂದಕ್ಕೆ ಖಚಿತ ನಿಲುವು ಇರಬೇಕಾದುದು ಅತ್ಯಗತ್ಯ. ತುಳಿತಕ್ಕೊಳಗಾದವರನ್ನು ಮುಖ್ಯ ವಾಹಿನಿಗೆ ತರಬೇಕಾದರೆ ಏನು ಮಾಡಬೇಕು, ಮೀಸಲಾತಿ ಪ್ರತಿಭೆಯಿಲ್ಲದವರ ಬೇಡಿಕೆಯೇ, ಮುಸ್ಲಿಮರೆಲ್ಲ ಭಯೋತ್ಪಾದಕರೋ.. ಎಂಬುದರ ಕುರಿತಂತೆಲ್ಲ ಮೌನ ಪಾಲಿಸುವುದರಿಂದ ಅನುಮಾನಗಳು ಹೆಚ್ಚುತ್ತಾ ಹೋಗುತ್ತವೆಯೇ ಹೊರತು ವಿಶ್ವಾಸವಲ್ಲ.
   ಕಾರ್ಲ್ ಮಾರ್ಕ್ಸ್ ರ ಅಪ್ರಕಟಿತ ಚಿಂತನೆಗಳು ಇನ್ನೂ ಇವೆ ಎಂಬ ಸುದ್ದಿಯಂತೆಯೇ ಕೇಜ್ರಿವಾಲ್‍ರಿಂದಲೂ ಸಮಾಜ ಸುದ್ದಿಯನ್ನು ನಿರೀಕ್ಷಿಸುತ್ತಿದೆ. ಹಾಗಂತ, ಸುರೇಂದರ್ ಸಿಂಗ್ ಚೌಹಾನ್‍ನನ್ನು ಕೇಜ್ರಿವಾಲ್ ಪ್ರತಿನಿಧಿಸದಿರಲಿ.

Tuesday, February 3, 2015

‘ಸೆಕ್ಯುಲರ್’ ಕಾಣೆಯಾದದ್ದು ಆಕಸ್ಮಿಕವೋ ಉದ್ದೇಶಪೂರ್ವಕವೋ?

   ಜನವರಿ 26ರಂದು ವಿವಿಧ ಪತ್ರಿಕೆಗಳಿಗೆ ಪ್ರಧಾನಿ ಮೋದಿ ಸರಕಾರವು ಬಿಡುಗಡೆಗೊಳಿಸಿದ ಜಾಹೀರಾತಿನಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಕಾಣೆಯಾದದ್ದು ಹಾಗೂ ಭಾರತದ ಧಾರ್ಮಿಕ ಬಹುತ್ವವನ್ನು ಬಿಂಬಿಸುವ ಜಾಹೀರಾತಿನ ಚಿತ್ರದಲ್ಲಿ ಪೇಟ ಧರಿಸಿದ ಸಿಖ್ ಮತ್ತು ಟೋಪಿ ಧರಿಸಿದ ಮುಸ್ಲಿಮ್ ನಾಪತ್ತೆಯಾದುದನ್ನು ಕೇವಲ ಆಕಸ್ಮಿಕ ಎಂದು ತಳ್ಳಿ ಹಾಕುವಂತಿಲ್ಲ.
    ಪಹ್ಲಜ್ ನಿಹಲಾನಿ, ಜಾರ್ಜ್ ಬೇಕರ್, ವಾಣಿ ತ್ರಿಪಾಠಿ, ಜೀವಿತಾ ರಾಜಶೇಖರ್, ಎಸ್.ವಿ. ಶೇಖರ್, ರಮೇಶ್ ಪತಂಗೆ.. ಸೇರಿದಂತೆ 9 ಮಂದಿಯನ್ನು ಕೇಂದ್ರ ಸರಕಾರವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(ಸೆನ್ಸಾರ್ ಮಂಡಳಿ)ಗೆ ಕಳೆದವಾರ ಆಯ್ಕೆ ಮಾಡಿತು. ಕಳೆದ ಲೋಕಸಭಾ ಚುನಾವಣೆಗಿಂತ ತುಸು ಮೊದಲು 2013 ಮೇಯಲ್ಲಿ ‘ಹರ್ ಘರ್ ಮೋದಿ’ ಎಂಬ ವೀಡಿಯೋವೊಂದು ಆನ್‍ಲೈನ್‍ನಲ್ಲಿ ಪ್ರಸಾರವಾಗಿತ್ತು. ಅದನ್ನು ತಯಾರಿಸಿ ಅಪ್‍ಲೋಡ್ ಮಾಡಿದವರೇ ಪಹ್ಲಾಜ್ ನಿಹಲಾನಿ. ಬಿಜೆಪಿಯ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಮ್ ಸಿನ್ಹಾರ ಹತ್ತಿರದ ಸಂಬಂಧಿಯಾಗಿರುವ ನಿಹಲಾನಿಯವರು ಸಂಘಪರಿವಾರದ ಹಿನ್ನೆಲೆಯವರು. ಮೋದಿಯನ್ನು ಆ್ಯಕ್ಷನ್ ಹೀರೋ ಎಂದು ಕೊಂಡಾಡಿದ್ದೂ ಅವರೇ. ಜಾರ್ಜ್ ಬೇಕರ್ ಅವರು ಬಿಜೆಪಿ ಟಿಕೆಟ್‍ನಲ್ಲಿ ಪಶ್ಚಿಮ ಬಂಗಾಳದಿಂದ ಚುನಾವಣೆಗೆ ಸ್ಪರ್ಧಿಸಿದವರಾಗಿದ್ದಾರೆ. ವಾಣಿ ತ್ರಿಪಾಠಿಯಂತೂ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಜೀವಿತಾ ಶೇಖರ್‍ರು ತೆಲಂಗಾಣ ಬಿಜೆಪಿಯ ವಕ್ತಾರೆಯಾಗಿ ಕೆಲಸ ಮಾಡಿರುವರಲ್ಲದೇ ಲೋಕಸಭಾ ಚುನಾವಣೆಯಲ್ಲಿ ಮೋದಿಗಾಗಿ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ತಮಿಳು ನಟರಾದ ಎಸ್.ವಿ. ಶೇಖರ್ ಅವರು 2013ರಲ್ಲಿ ಬಿಜೆಪಿಯನ್ನು ಸೇರಿದ್ದರು. ಮರಾಠಿ ವಾರಪತ್ರಿಕೆಯ ಸಂಪಾದಕರಾಗಿರುವ ರಮೇಶ್ ಪತಂಗೆ ಸಂಘಪರಿವಾರದ ಬೌದ್ಧಿಕ್ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಸಂಘದ ಅಂಗಸಂಸ್ಥೆಯಾದ ಸಾಮಾಜಿಕ್ ಸಮರಸತಾ ಮಂಚ್‍ನ ಸ್ಥಾಪಕ ಸದಸ್ಯರೂ ಆಗಿದ್ದಾರೆ.. ಏನಿವೆಲ್ಲ? ಸೆನ್ಸಾರ್ ಮಂಡಳಿಗೆ ಅದರದ್ದೇ ಆದ ಘನತೆ, ಗೌರವವಿದೆ. ಅದು ಬಿಜೆಪಿಯದ್ದೋ ಕಾಂಗ್ರೆಸ್ಸಿನದ್ದೋ ಅಂಗಸಂಸ್ಥೆಯಲ್ಲ. ಈ ದೇಶದಲ್ಲಿ ಯಾವುದೇ ಸಿನಿಮಾ, ಟಿ.ವಿ. ಜಾಹೀರಾತು, ಟಿ.ವಿ. ಕಾರ್ಯಕ್ರಮಗಳು ಪ್ರಸಾರವಾಗಬೇಕಾದರೆ ಅದಕ್ಕೆ ಸೆನ್ಸಾರ್ ಮಂಡಳಿಯ ಒಪ್ಪಿಗೆ ಬೇಕು. ಅಷ್ಟರ ಮಟ್ಟಿಗೆ ಅದು ಈ ದೇಶದ ಸಾಂಸ್ಕøತಿಕ ಕ್ಷೇತ್ರವನ್ನು ಪ್ರತಿನಿಧಿಸುತ್ತದೆ. ಇಂಥದ್ದೊಂದು ಸ್ವತಂತ್ರ ಸಂಸ್ಥೆಯನ್ನು ಬಿಜೆಪಿಯು ತನ್ನ ಅಂಗಸಂಸ್ಥೆಯಂತೆ ನಡೆಸಿಕೊಳ್ಳುವುದೆಂದರೇನು? ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್‍ಗಾಗಿ ವಿವಿಧ ವಿಚಾರಗಳನ್ನು ಪ್ರತಿನಿಧಿಸುವ ಸಿನಿಮಾಗಳು, ಕಿರುಚಿತ್ರಗಳು, ಟಿ.ವಿ. ಕಾರ್ಯಕ್ರಮಗಳು ಬರಬಹುದು. ವಿವಿಧ ಪಕ್ಷಗಳೊಂದಿಗೆ ಗುರುತಿಸಿಕೊಂಡವರ ಚಿತ್ರಗಳೂ ಅದರಲ್ಲಿರಬಹುದು. ಸಂಘಪರಿವಾರದ ಸಾಂಸ್ಕøತಿಕ ನಿಲುವುಗಳನ್ನು ಪ್ರಶ್ನಿಸುವಂತಹ ಪ್ರಖರ ವೈಚಾರಿಕತೆಯುಳ್ಳವೂ ಅವುಗಳಲ್ಲಿರಬಹುದು. ಇಂಥ ಸಂದರ್ಭಗಳಲ್ಲೆಲ್ಲಾ ಪಹ್ಲಾಜ್ ನಿಹಲಾನಿ ಮತ್ತು ಸಂಗಡಿಗರಿಗೆ ಹಿತಾಸಕ್ತಿಯ ಸಂಘರ್ಷ ಎದುರಾಗಲಾರದೇ? ಮೋದಿಯನ್ನು ಆ್ಯಕ್ಷನ್ ಹೀರೋ ಅನ್ನುವವ, ಮೋದಿಗಾಗಿ ಹಾಡನ್ನು ಅರ್ಪಿಸುವವ, ವೀಡಿಯೋ ತಯಾರಿಸುವವ, ಪಕ್ಷಕ್ಕಾಗಿ ದುಡಿಯುವವ ಒಂದೇ ಸಂಸ್ಥೆಯಲ್ಲಿದ್ದರೆ, ಆ ಸಂಸ್ಥೆಯೊಳಗಿನ ವಾತಾವರಣ ಹೇಗಿರಬಹುದು? ಜಾತ್ಯತೀತ ಮತ್ತು ಸಮಾಜವಾದಿ ಎಂಬ ಸಂವಿಧಾನದ ಆಶಯವನ್ನು ಕಡೆಗಣಿಸುವ ಮೋದಿ ಸರಕಾರ ಹಾಗೂ ಸೆನ್ಸಾರ್ ಮಂಡಳಿಯನ್ನು ‘ಜಾತ್ಯತೀತ’ ಆಶಯದಿಂದ ಮುಕ್ತಗೊಳಿಸಿರುವುದು ಏನನ್ನು ಸೂಚಿಸುತ್ತದೆ? ಇದು ಆಕಸ್ಮಿಕವೇ? ಕಾಕತಾಳೀಯವೇ? ಉದ್ದೇಶಪೂರ್ವಕವೇ?
   Socialist  ಮತ್ತು Secular ಎಂಬುದು ಬರೇ ಎರಡು ಪದಗಳಲ್ಲ. 1977 ಜನವರಿಯಲ್ಲಿ ಈ ಎರಡು ಪದಗಳನ್ನು ಸಂವಿಧಾನಕ್ಕೆ ಸೇರಿಸಲಾಯಿತು ಎಂಬುದರಿಂದ ಅವೆರಡರ ಘನತೆ ತಗ್ಗುವುದೂ ಇಲ್ಲ. “We the People of India - ಭಾರತ ವಾಸಿಗಳಾದ ನಾವು, ಈ ದೇಶವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಲೋಕತಾಂತ್ರಿಕ ಗಣರಾಜ್ಯವನ್ನಾಗಿ ಸ್ಥಾಪಿಸಿ ಸಂವಿಧಾನವನ್ನು ಸ್ವೀಕರಿಸುತ್ತೇವೆ..' ಎಂಬ ಸಂವಿಧಾನದ ವಾಕ್ಯದಲ್ಲಿ ವಿಶಾಲಾರ್ಥವಿದೆ. ಒಂದು ವೇಳೆ ಈ ವಾಕ್ಯದಿಂದ  Socialist  ಮತ್ತು Secular ಎಂಬೆರಡು ಪದಗಳನ್ನು ಕಳಚಿ ಬಿಟ್ಟರೆ ಸಂವಿದಾನದಲ್ಲಿ ಉಳಿಯುವ ಸಾರ್ವಭೌಮ ಮತ್ತು ಲೋಕತಾಂತ್ರಿಕ ಪದಗಳು ತೀರಾ ಬಲಹೀನವಾಗಿ ಬಿಡಬಲ್ಲುದು. “ಭಾರತ ನಿವಾಸಿಗಳಾದ ನಾವು ಜಾತ್ಯತೀತ ಮತ್ತು ಸಮಾಜವಾದಿ ರಾಷ್ಟ್ರವನ್ನು ಕಟ್ಟುತ್ತೇವೆ..” ಎಂದು ಘೋಷಿಸುವಾಗ ಅದು ಅನೇಕಾರು ಪೂರ್ವಾಗ್ರಹಗಳನ್ನು ತೊಡೆದು ಹಾಕುತ್ತದೆ. ಹೀಗೆ ಘೋಷಿಸಿದ ಬಳಿಕ ಈ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ಮುಸ್ಲಿಮ್, ಕ್ರೈಸ್ತ, ಸಿಕ್ಖ್ ರಾಷ್ಟ್ರವಾಗಿ ಗುರುತಿಸಿಕೊಳ್ಳುವುದಕ್ಕೂ ಅವಕಾಶವಿಲ್ಲ. ಮೇಲ್ವರ್ಗದ್ದೋ ಆರ್ಯನ್ನರದ್ದೋ ದ್ರಾವಿಡರದ್ದೋ ರಾಷ್ಟ್ರವಾಗಲೂ ಸಾಧ್ಯವಿಲ್ಲ. ಈ ದೇಶ ಎಲ್ಲರದ್ದು. ಶ್ರೀಮಂತ ಮತ್ತು ಬಡವನದ್ದು. ಗುಡಿಸಲ ವಾಸಿ ಮತ್ತು ಬಂಗಲೆ ವಾಸಿಯದ್ದು. ಹಿಂದೂ ಮತ್ತು ಮುಸ್ಲಿಮನದ್ದು. ಯಾರ ನಂಬಿಕೆಗಳೂ ಮೇಲಲ್ಲ, ಕೀಳಲ್ಲ. ಆದರೆ ಈ ಸಮಾನತೆ ಮತ್ತು ಜಾತ್ಯತೀತ ಮೌಲ್ಯವನ್ನು ಸಾರುವ ಸಂವಿಧಾನದ ತಿದ್ದುಪಡಿಯನ್ನು ಅಷ್ಟೇ ಸ್ಫೂರ್ತಿಯಿಂದ ಒಪ್ಪಿಕೊಳ್ಳುವುದಕ್ಕೆ ಮೋದಿ ಮತ್ತು ಅವರ ಬೆಂಬಲಿಗರಿಗೆ ಈ ಹಿಂದಿನಿಂದಲೂ ಸಾಧ್ಯವಾಗಿಲ್ಲ. ಈ ದೇಶ ಹಿಂದೂ ರಾಷ್ಟ್ರವಾಗಿ ಘೋಷಿಸಬೇಕಾದರೆ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಹೊರ ಬೀಳಬೇಕಾಗುತ್ತದೆ. ಮುಸ್ಲಿಮರು ಮತ್ತು ಕ್ರೈಸ್ತರು ಅನ್ಯರಾಗಬೇಕಾಗುತ್ತದೆ. ಆರ್ಯನ್ನರು ಮತ್ತು ದ್ರಾವಿಡರು ಎಂಬ ವಿಂಗಡನೆಯನ್ನು ಅಳಿಸಬೇಕಾಗುತ್ತದೆ. ಇದೀಗ ಈ ಸಿದ್ಧಾಂತದ ಜಾರಿಯ ಸೂಚನೆಗಳು ವಿವಿಧ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಗುಜರಾತ್‍ನ ಶಾಲೆಗಳಲ್ಲಿ ಹೆಚ್ಚುವರಿ ಓದಿಗಾಗಿ ಆಯ್ಕೆ ಮಾಡಲಾಗಿರುವ 9 ಪುಸ್ತಕಗಳ ಪೈಕಿ 8 ಪುಸ್ತಕಗಳೂ ಶಿಕ್ಷಾ ಬಚಾವೋ ಆಂದೋಲನ್ ಸಮಿತಿಯ ಮುಖ್ಯಸ್ಥ ದೀನನಾಥ್ ಬಾತ್ರ ಬರೆದಿರುವಂಥದ್ದು. ವೆಂಡಿ ಡೊನಿಗರ್ ಬರೆದಿರುವ ‘ದಿ ಹಿಂದೂಸ್: ಆ್ಯನ್ ಆಲ್ಟರ್ ನೇಟಿವ್ ಹಿಸ್ಟರಿ' ಎಂಬ ಕೃತಿಯನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಮಾಡುವ ವರೆಗೆ ಇವರು ಯಾರೆಂಬುದು ಈ ದೇಶದ ಹೆಚ್ಚಿನ ಮಂದಿಗೆ ಗೊತ್ತೇ ಇರಲಿಲ್ಲ. ನಿವೃತ್ತ ಪ್ರಾಧ್ಯಾಪಕರಾಗಿರುವ ಇವರು ಸಂಘಪರಿವಾರದ ಆಲೋಚನೆಗಳಿಗೆ ತಕ್ಕಂತೆ ಇತಿಹಾಸವನ್ನು ಪುನರ್ರಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಗುಜರಾತ್‍ನ ವಿದ್ಯಾರ್ಥಿಗಳ ನಡುವೆ ‘ಬಾಲ ನರೇಂದ್ರ’ ಎಂಬ ಪುಸ್ತಕ ಹೆಚ್ಚು ಜನಪ್ರಿಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯಕಾಲದ ಸಂಗತಿಗಳನ್ನು ಈ ಕೃತಿಯಲ್ಲಿ ರೋಚಕವಾಗಿ ವರ್ಣಿಸಲಾಗಿದೆ. ಅವರ ಎಲ್ಲ ಸಾಧನೆಗಳಿಗೂ ಭಾರತೀಯ ಹಿಂದೂ ಸಂಸ್ಕøತಿಯೇ ಕಾರಣವೆಂದು ಅದರಲ್ಲಿ ಹೇಳಲಾಗಿದೆ. ಅಲ್ಲದೇ ವಾರಗಳ ಹಿಂದೆ ಅಹ್ಮದಾಬಾದ್‍ನ ಮುನ್ಸಿಪಲ್ ಕಾರ್ಪೋರೇಶನ್ ಹೊರಡಿಸಿದ ಸುತ್ತೋಲೆಯಂತೂ ಸಂವಿಧಾನದ ಜಾತ್ಯತೀತ ಆಶಯವನ್ನೇ ಪ್ರಶ್ನಿಸುವಂತಿದೆ. ಈ ಕಾರ್ಪೋರೇಶನ್ನಿನ ವ್ಯಾಪ್ತಿಯಲ್ಲಿ 450 ಪ್ರಾಥಮಿಕ ಶಾಲೆಗಳು ಬರುತ್ತವೆ. ಇದರಲ್ಲಿ 64 ಉರ್ದು ಶಾಲೆಗಳಿವೆ. ಸುಮಾರು 16 ಸಾವಿರ ಮುಸ್ಲಿಮ್ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಈ ಎಲ್ಲ ಶಾಲೆಗಳಲ್ಲಿ ವಸಂತ ಪಂಚಮಿಯಂದು ಕಡ್ಡಾಯವಾಗಿ ಸರಸ್ವತಿ ಪೂಜೆಯನ್ನು ನೆರವೇರಿಸಬೇಕೆಂದು ಕಾರ್ಪೋರೇಶನ್ನಿನ ಸುತ್ತೋಲೆಯಲ್ಲಿ ಆದೇಶಿಸಲಾಗಿತ್ತು. ವಿಗ್ರಹ ಪೂಜೆಯನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡುವ ಈ ಸುತ್ತೋಲೆಯು ಸಂವಿಧಾನದ ಜಾತ್ಯತೀತ ಆಶಯಕ್ಕೆ ನೇರ ವಿರುದ್ಧವಾದುದು. ಆದರೆ ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ ಪದ ಇರುವವರೆಗೆ ಇಂಥ ಸುತ್ತೋಲೆಗಳು ಮತ್ತೆ ಮತ್ತೆ ಪ್ರಶ್ನೆಗೀಡಾಗುತ್ತಲೇ ಇರುತ್ತವೆ ಎಂಬುದು ಈ ಸುತ್ತೋಲೆಯನ್ನು ಹೊರಡಿಸಿದವರಿಗೂ ಅದನ್ನು ಬೆಂಬಲಿಸಿದವರಿಗೂ ಚೆನ್ನಾಗಿ ಗೊತ್ತು. ಆದ್ದರಿಂದಲೇ, ಸಂವಿಧಾನದಿಂದಲೇ ಈ ಪದವನ್ನು ಕಿತ್ತು ಹಾಕಬೇಕೆಂದು ಅವರು ಬಯಸಿರಬೇಕು. ಅದರ ಭಾಗವಾಗಿಯೇ ಗಣರಾಜ್ಯೋತ್ಸವದ ಜಾಹೀರಾತಿನಲ್ಲಿ ಸೆಕ್ಯುಲರ್ ಮತ್ತು ಸಮಾಜವಾದಿ ಪದಗಳು ನಾಪತ್ತೆಯಾಗಿರಬೇಕು.
    ನಿಜವಾಗಿ, ಈ ದೇಶಕ್ಕೊಂದು ಇತಿಹಾಸವಿದೆ. ಅದು ಆರ್ಯನ್ನರು ಮತ್ತು ದ್ರಾವಿಡರ ಇತಿಹಾಸ. ಪುರಾತತ್ವ ಇಲಾಖೆಯ ಪ್ರಕಾರ, ಸಿಂಧೂ ನಾಗರಿಕತೆ ಅಥವಾ ದ್ರಾವಿಡ ನಾಗರಿಕತೆಯೇ ಭಾರತೀಯ ನಾಗರಿಕತೆಯ ಆರಂಭವಾಗಿದೆ. ಇದು ಜಾಗತಿಕವಾಗಿಯೇ ಅತ್ಯಂತ ಹೆಚ್ಚು ಮುಂದುವರಿದಿದ್ದ ನಾಗರಿಕತೆಯಾಗಿತ್ತು. ಈ ನೆಲದ ಮೂಲ ನಿವಾಸಿಗಳು ದ್ರಾವಿಡರಾಗಿದ್ದರೇ ಹೊರತು ಉತ್ತರದಿಂದ ಬಂದ ಆರ್ಯನ್ನರಾಗಿರಲಿಲ್ಲ. ಆರ್ಯನ್ನರು 1500 ವರ್ಷಗಳ ಹಿಂದೆ ಈ ನೆಲಕ್ಕೆ ಕಾಲಿರಿಸಿದಾಗ ಇಲ್ಲಿ ದ್ರಾವಿಡ ನಾಗರಿಕತೆ ಸಂಪೂರ್ಣವಾಗಿ ಸ್ಥಾಪಿತಗೊಂಡಿತ್ತು. ಆರ್ಯನ್ನರು ಸ್ವಭಾವದಲ್ಲಿ ದ್ರಾವಿಡರಿಗೆ ತೀರಾ ವಿರುದ್ಧವಾಗಿದ್ದರು. ಅವರು ತಿರುಗಾಟದ ಸ್ವಭಾವವುಳ್ಳ ಕ್ರೂರಿಗಳಾಗಿದ್ದರು. ವ್ಯಾಪಾರ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ದ್ರಾವಿಡರ ಮೇಲೆ ಅವರು ದಾಳಿ ಮಾಡಿದರು. ಸಿಂಧೂ ನದಿಯ ದಡದಲ್ಲಿ, ಹರಪ್ಪ-ಮೊಹೆಂಜೊ ದಾರೋಗಳಲ್ಲಿ ವಾಸಿಸುತ್ತಿದ್ದ ಈ ದ್ರಾವಿಡರ ಮೇಲೆ ಆರ್ಯನ್ನರು ಪದೇ ಪದೇ ಮಾಡಿದ ದಾಳಿಯಿಂದಾಗಿ ಅವರು ದಕ್ಷಿಣಕ್ಕೆ ಪರಾರಿಯಾಗಲೇಬೇಕಾದ ಸಂದರ್ಭ ಸೃಷ್ಟಿಯಾಯಿತು. ವ್ಯವಸ್ಥಿತ ಸೇನಾ ಪದ್ಧತಿಯನ್ನೇ ಹೊಂದಿಲ್ಲದ ದ್ರಾವಿಡರನ್ನು ಮೂಲ ನೆಲೆಯಿಂದ ಅಟ್ಟಿ ಬಿಡುವುದಕ್ಕೆ ಆರ್ಯನ್ನರಿಗೆ ಕಷ್ಟವೂ ಆಗಲಿಲ್ಲ ಎಂದು ನವಂಬರ್ 2002ರ ಔಟ್‍ಲುಕ್ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಪರಿಗಣಿಸಿದರೆ ಜಾತ್ಯತೀತ ಮತ್ತು ಸಮಾಜವಾದಿ ಪದಗಳ ಮೇಲಿನ ಮೋದಿ ಪರಿವಾರದ ಸಿಟ್ಟು ಹೆಚ್ಚು ಸ್ಪಷ್ಟವಾಗುತ್ತದೆ. ಈ ದೇಶದ ಮೂಲ ನಿವಾಸಿಗಳು ಯಾರು ಮತ್ತು ಅನ್ಯರು ಯಾರು ಎಂಬುದಕ್ಕೆ ತರ್ಕಬದ್ಧ ಉತ್ತರವೂ ಸಿಗುತ್ತದೆ. ಮೂಲ ನಿವಾಸಿಗಳಾದ ದ್ರಾವಿಡರನ್ನು ಶ್ರೇಣೀಕೃತ ಸಮಾಜವಾಗಿ ವಿಭಜಿಸಿದ್ದು ಈ ಮಣ್ಣಿಗೆ ಅನ್ಯರಾಗಿರುವ ಆರ್ಯನ್ನರೇ. ಈ ವಿಭಜನೆಯಿಂದ ನೊಂದವರು ಬಳಿಕ ಇಸ್ಲಾಮ್, ಕ್ರೈಸ್ತ ಮುಂತಾದ ಧರ್ಮಗಳನ್ನು ಅಪ್ಪಿಕೊಂಡರು. ಆರ್ಯನ್ನರಿಂದಾಗಿ ಹುಟ್ಟಿಕೊಂಡ ಅಸ್ಪೃಶ್ಯತೆಯನ್ನು ಖಂಡಿಸಿಯೇ ಜೈನ, ಬೌದ್ಧ, ಸಿಖ್, ಬಸವ ಧರ್ಮಗಳು ಇಲ್ಲಿ ಸ್ಥಾಪಿತಗೊಂಡವು. ನಿಜವಾಗಿ, ಮುಸ್ಲಿಮರು, ಕ್ರೈಸ್ತರು ಪರಕೀಯರಲ್ಲ. ಅವರು ಇದೇ ಮಣ್ಣಿನ ಮೂಲ ನಿವಾಸಿಗಳು. ಇವರನ್ನು ಯಾರು ಇವತ್ತು ಅನ್ಯರೆಂದು ಹೇಳುತ್ತಾರೋ ಅವರೇ ನಿಜವಾದ ಪರಕೀಯರು. ಆದರೆ ಗೋಡ್ಸೆಯನ್ನು ವಿಜೃಂಭಿಸಲು ಹೊರಟವರಿಗೆ ಈ ಸತ್ಯವನ್ನು ಅರಗಿಸಲಾಗುತ್ತಿಲ್ಲ. ಅವರಿಗೆ ಮುಸ್ಲಿಮರು ಮತ್ತು ಕ್ರೈಸ್ತರು ಅನ್ಯವಾಗಬೇಕು. ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಕಿತ್ತು ಹೋಗಬೇಕು. ಹಾಗಾದರೆ ಮಾತ್ರ ಅವರ ಕಲ್ಪನೆಯ ರಾಷ್ಟ್ರ ಸ್ಥಾಪಿತಗೊಳ್ಳುವುದಕ್ಕೆ ಸಾಧ್ಯ.
    ಸೆನ್ಸಾರ್ ಮಂಡಳಿಯು ಬಿಜೆಪಿಯ ಅಂಗಸಂಸ್ಥೆಯಂತಾದುದು ಮತ್ತು ಸೆಕ್ಯುಲರ್ ಹಾಗೂ ಸೋಶಿಯಲಿಷ್ಟ್ ಪದಗಳು ಗಣ ರಾಜ್ಯೋತ್ಸವದ ಜಾಹೀರಾತಿನಿಂದ ಕಾಣೆಯಾದುದೆಲ್ಲ ಈ ಕಲ್ಪನೆಯ ರಾಷ್ಟ್ರಕ್ಕೆ ಮಾಡಲಾಗುತ್ತಿರುವ ಸಿದ್ಧತೆಯಷ್ಟೇ.

Tuesday, January 13, 2015

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಚಾರ್ಲಿ ಹೆಬ್ಡೊ

   ಫ್ರಾನ್ಸಿನ ಚಾರ್ಲಿ ಹೆಬ್ಡೋ ಪತ್ರಿಕೆಯ ಉದ್ದೇಶ ಶುದ್ಧಿಯನ್ನು 2012 ಸೆಪ್ಟೆಂಬರ್‍ನಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮರ ವಕ್ತಾರರು ಪ್ರಶ್ನಿಸಿದ್ದರು. ಪತ್ರಿಕೆಯ ನಿಲುವು ಪ್ರಚೋದನಕಾರಿಯಾಗಿದೆ ಎಂದಿದ್ದರು. ಫ್ರಾನ್ಸಿನ ವಿದೇಶಾಂಗ ಸಚಿವ ಲಾರೆಂಟ್ ಫ್ಯಾಬಿಸ್‍ರು ಪತ್ರಿಕೆಯ ಪ್ರಾಮಾಣಿಕತೆಯ ಬಗ್ಗೆ ಅನುಮಾನಿಸಿದ್ದರು. 'ಫ್ರಾನ್ಸಿನಲ್ಲಿ Freedom of expression (ಅಭಿವ್ಯಕ್ತಿ ಸ್ವಾತಂತ್ರ್ಯ)ಗೆ ನಿಯಮಗಳಿವೆ, ಅದನ್ನು ಕಡೆಗಣಿಸಬಾರದು' ಎಂದು ಎಚ್ಚರಿಸಿದ್ದರು. ಫ್ರಾನ್ಸ್ ನ ಯಹೂದಿ ಕೌನ್ಸಿಲ್‍ನ ಮುಖ್ಯಸ್ಥ ರಿಚರ್ಡ್ ಪ್ರೆಸ್‍ಕೈಮರ್ ಕೂಡ ಪತ್ರಿಕೆಯ ನಿಲುವನ್ನು ಖಂಡಿಸಿದ್ದರು. 2013 ಜನವರಿಯಲ್ಲಿ ಈ ಪತ್ರಿಕೆಯು ಪ್ರವಾದಿ ಮುಹಮ್ಮದ್ (ಸ)ರ  ಜೀವನವನ್ನು ಬಿಂಬಿಸುವ 65 ಪುಟಗಳ ವಿಡಂಬನೆಯ ಸಂಚಿಕೆಯನ್ನು ಪ್ರಕಟಿಸಿತ್ತು. ಪ್ರವಾದಿಯವರನ್ನು ಅವಮಾನಿಸುವ ಮತ್ತು ಅಪಹಾಸ್ಯ ಮಾಡುವ ಧಾಟಿಯಲ್ಲಿದ್ದ ಆ ಸಂಚಿಕೆಯ ವಿರುದ್ಧ ಫ್ರಾನ್ಸಿನ ಮುಸ್ಲಿಮರು ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದರು. ಆ ಸಂಚಿಕೆಯನ್ನು ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಿದ್ದರು. ‘ಸಿರಿಯನ್ ಅಸೋಸಿಯೇಶನ್ ಫಾರ್ ಲಿಬರ್ಟಿ’ ಎಂಬ ಸಂಘಟನೆಯು, 'ಚಾರ್ಲಿ ಹೆಬ್ಡೋವು ಜನಾಂಗವಾದ ಮತ್ತು ಧಾರ್ಮಿಕ ದ್ವೇಷ ವನ್ನು ಪ್ರಚೋದಿಸುತ್ತದೆ' ಎಂದು ಆರೋಪಿಸಿ ಕೋರ್ಟಿನಲ್ಲಿ ದಾವೆ ಹೂಡಿತ್ತು. ಆದರೆ ಪತ್ರಿಕೆಯ ಸಂಪಾದಕ ಸ್ಟೀಫನ್ ಚಾರ್‍ಬೊನ್ನಿರ್‍ನಿಂದ ಹಿಡಿದು ಕಾರ್ಟೂನಿಸ್ಟ್ ಗಳಾದ ಜಾರ್ಜ್ ವೊಲಿಂಸ್ಕಿ, ಜೀನ್ ಕ್ಯಾಬಟ್, ಅಕಾಕಬು, ಬೆರ್ಬಾರ್ ವೆರ್ಲಕ್‍ರವರೆಗೆ ಎಲ್ಲರೂ ಪತ್ರಿಕೆಯ ಧೋರಣೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಮರ್ಥಿಸಿಕೊಂಡರು. ಪ್ರವಾದಿಯವರನ್ನು ಅವಮಾನಿಸುವ ಕಾರ್ಟೂನ್‍ಗಳನ್ನು ಮತ್ತೆ ಮತ್ತೆ ಅವರು ಪ್ರಕಟಿಸಿದರು. 2006ರಲ್ಲಿ ಡೆನ್ಮಾರ್ಕ್‍ನ ಜಿಲ್ಲ್ಯಾಂಡ್ ಪೋಸ್ಟನ್ ಪತ್ರಿಕೆಯು ಪ್ರವಾದಿಯವರನ್ನು ಅಣಕಿಸುವ ಮತ್ತು ನಿಂದಿಸುವ ರೀತಿಯಲ್ಲಿ ಪ್ರಕಟಿಸಿದ್ದ ಕಾರ್ಟೂನನ್ನು ಚಾರ್ಲಿ ಹೆಬ್ಡೋ ಪ್ರಕಟಿಸಿತಲ್ಲದೇ 2011 ನವೆಂಬರ್ 3ರಂದು ಅದನ್ನು ಮರು ಮುದ್ರಿಸಿತು. ಮಾತ್ರವಲ್ಲ, ಚಾರ್ಲಿ ಹೆಬ್ಡೋ ಎಂಬ ಹೆಸರನ್ನು ಚರಿಯಾ ಹೆಬ್ಡೋ (ಶರಿಯಾವನ್ನು ಅಣಕಿಸುತ್ತಾ) ಎಂದು ಬರೆಯಿತು. ಗಡ್ಡ ಧರಿಸಿದ ಮತ್ತು ಪೇಟದಲ್ಲಿ ಬಾಂಬ್ ಇಟ್ಟುಕೊಂಡ ವ್ಯಕ್ತಿಯಾಗಿ ಪ್ರವಾದಿಯವರನ್ನು ಬಿಡಿಸಿದ ಆ ಕಾರ್ಟೂನಿನ ಕೆಳಗೆ, “ನಗುತ್ತಾ ಸಾಯು, ಇಲ್ಲದಿದ್ದರೆ 100 ಏಟುಗಳನ್ನು ತಿನ್ನು” (100 lashes if you're not dying of laughter ) ಎಂಬ ಒಕ್ಕಣೆಯನ್ನೂ ಸೇರಿಸಿತ್ತು. ನಿಜವಾಗಿ, ಚಾರ್ಲಿ ಹೆಬ್ಡೋ ಪತ್ರಿಕೆಯು ಎಷ್ಟು ಉಡಾಫೆಯ ಕಾರ್ಟೂನ್‍ಗಳನ್ನು ಪ್ರಕಟಿಸುತ್ತಿತ್ತೋ ಅದಕ್ಕಿಂತಲೂ ಉಡಾಫೆಯಾಗಿ ಅದರ ಸಂಪಾದಕ ಸ್ಟೀಫನ್ ಚಾರ್‍ಬೊನ್ನಿರ್ ವರ್ತಿಸುತ್ತಿದ್ದರು. “ಮುಹಮ್ಮದ್ ನನಗೆ ಪರಿಶುದ್ಧ ವ್ಯಕ್ತಿ ಅಲ್ಲ” ಎಂದು ಅವರು 2012ರಲ್ಲಿ ಅಸೋಸಿಯೇಟೆಡ್ ಪ್ರೆಸ್‍ಗೆ(AP) ಹೇಳಿಕೆ ಕೊಟ್ಟಿದ್ದರು. “ನಮ್ಮ ಕಾರ್ಟೂನ್‍ಗಳನ್ನು ನೋಡಿ ಮುಸ್ಲಿಮರು ನಗುತ್ತಿಲ್ಲ ಎಂಬುದು ಗೊತ್ತು. ಆದರೆ ಅದಕ್ಕಾಗಿ ನಾನವರನ್ನು ದೂಷಿಸುವುದಿಲ್ಲ. ನಾನು ಫ್ರೆಂಚ್ ಕಾನೂನಿನಂತೆ ಬದುಕುತ್ತಿರುವೆ. ಕುರ್‍ಆನಿನ ಕಾನೂನಿನಂತೆ ಅಲ್ಲ..” ಎಂದೂ ಹೇಳಿದ್ದರು. ಬಹುಶಃ ‘ಚಾರ್ಲಿ ಹೆಬ್ಡೋ: ಡೋಂಟ್ ಬ್ಲೇಮ್ ದಿಸ್ ಬ್ಲಡ್‍ಶೆಡ್ ಆನ್ ಫ್ರಾನ್ಸಸ್ ಮುಸ್ಲಿಮ್ಸ್’(ಚಾರ್ಲಿ ಹೆಬ್ದೋ: ಈ ರಕ್ತದೋಕುಳಿಗೆ ಫ್ರಾನ್ಸ್ ನ ಮುಸ್ಲಿಮರನ್ನು ದೂರಬೇಡಿ) ಎಂದು ಲಂಡನ್ನಿನ ಗಾರ್ಡಿಯನ್ ಪತ್ರಿಕೆಯಲ್ಲಿ ನಬಿಲಾ ರಮ್ದಾನಿ ಬರೆದಿರುವುದಕ್ಕೆ ಅಥವಾ ‘ವೈ ಐ ಆಮ್ ನಾಟ್ ಚಾರ್ಲಿ'( ನಾನೇಕೆ ಚಾರ್ಲಿಯಲ್ಲ) ಎಂದು ಗಯತಿ ಸಿಂಗ್ ಬರೆದಿರುವುದಕ್ಕೆ ಮತ್ತು, 'ಇನ್ ಇಸ್ರೇಲ್ , ಚಾರ್ಲಿ ಹೆಬ್ದೋ ವುಡ್ ನಾಟ್ ಹಾವ್ ಇವನ್ ಹಾಡ್ ದ ರೈಟ್ ಟು ಎಕ್ಸಿಸ್ಟ್'  (ಇಸ್ರೇನಲ್ಲಾಗಿರುತ್ತಿದ್ದರೆ ಚಾರ್ಲಿ ಹೆಬ್ದೋಗೆ  ಅಸ್ತಿತ್ವವೇ  ಇರುತ್ತಿರಲಿಲ್ಲ )  ...  ಎಂದು ಇಸ್ರೇಲ್ ನ ಪ್ರಮುಖ ಪತ್ರಿಕೆ ಹಾರೆಟ್ಜ್ ನಲ್ಲಿ ಇಡೋ ಅಮಿನ್ ಬರೆದಿರುವುದಕ್ಕೆಲ್ಲ ಚಾರ್ಲಿ ಹೆಬ್ಡೋ ಪತ್ರಿಕೆಯ ಈ ಎಲ್ಲ ಅಸಂಬದ್ಧತೆಗಳೇ  ಕಾರಣ ಎನ್ನಬಹುದು.
   ಚಾರ್ಲಿ ಹೆಬ್ಡೋದ ಮೇಲಿನ ದಾಳಿಯಲ್ಲಿ ಅಹ್ಮದ್ ಮೆರಾಬೆಟ್ ಮತ್ತು ಮುಸ್ತಫಾ ಔರಾದ್ ಎಂಬಿಬ್ಬರು ಮುಸ್ಲಿಮರೂ ಸಾವಿಗೀಡಾಗಿದ್ದಾರೆ. ಮೆರಾಬೆಟ್ ಪೊಲೀಸಧಿಕಾರಿಯಾಗಿದ್ದರೆ, ಮುಸ್ತಫಾ ಚಾರ್ಲಿ ಹೆಬ್ಡೋ ಪತ್ರಿಕೆಯಲ್ಲಿ  ಉದ್ಯೋಗಿಯಾಗಿದ್ದ. ಆದರೆ 12 ಮಂದಿಯನ್ನು ಕೊಂದ ಉಗ್ರರನ್ನು ಮುಂದಿಟ್ಟು ಕೊಂಡು ಇಸ್ಲಾಮನ್ನು ಮತ್ತು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುತ್ತಿರುವವರು ಮುಸ್ತಫಾನನ್ನು ಎಲ್ಲೂ ಉಲ್ಲೇಖಿಸುತ್ತಲೇ ಇಲ್ಲ. ಪತ್ರಿಕೆಯೊಂದು ಸತತವಾಗಿ ಪ್ರವಾದಿ ನಿಂದನೆಯನ್ನು ಮತ್ತು ಜನಾಂಗೀಯ ದ್ವೇಷವನ್ನು ಕಾರುತ್ತಿದ್ದರೂ ಮುಸ್ಲಿಮನೊಬ್ಬ ಅದರಲ್ಲಿ ಉದ್ಯೋಗಿಯಾಗಿ ಇರಬಲ್ಲ ಎಂಬುದು ಯಾವುದರ ಸೂಚನೆ, ಅಸಹಿಷ್ಣುತೆಯದ್ದೋ ಉದಾರತೆಯದ್ದೋ? ತೀವ್ರವಾದಿಗಳು ಮತ್ತು ಉದಾರವಾದಿಗಳು ಮುಸ್ಲಿಮರಲ್ಲಿ ಮಾತ್ರ ಇರುವುದಲ್ಲ. ತಮ್ಮ ನಿಲುವಿಗೆ ಸರಿ ಹೊಂದದ ವ್ಯಕ್ತಿಗಳನ್ನು ಕೊಲೆಗೈಯುವುದು ಇದು ಮೊದಲ ಸಲವೂ ಅಲ್ಲ. ಎಲಿಯಟ್ ರಾಡ್ಜರ್, ಆ್ಯಂಡರ್ಸ್ ಬ್ರೇವಿಕ್, ಜೇಮ್ಸ್ ಹಾಲ್‍ಮೆಸ್, ವಾಡೆ ಮೈಕೆಲ್ ಪೇಜ್, ಡ್ಯಾರೆನ್ ವಿಲ್ಸನ್, ತಿಮೋತಿ ಮೆಕ್‍ವಿಗ್.. ಇವರೆಲ್ಲ ಯಾರು? ಮುಸ್ಲಿಮರ ಬಗ್ಗೆ ಮೃದು ನಿಲುವನ್ನು ತಳೆದಿರುವರೆಂದು ಆರೋಪಿಸಿ ನಾರ್ವೆಯಲ್ಲಿ ಸುಮಾರು 80 ಮಂದಿ ಎಡಪಂಥೀಯರನ್ನು ಆ್ಯಂಡರ್ಸ್ ಬ್ರೇವಿಕ್ ಕೊಂದನಲ್ಲ, ಅವನನ್ನು ಯಾವ ಧರ್ಮಕ್ಕೆ ಸೇರಿಸೋಣ? ಅವನ ತೀವ್ರವಾದಿ ನಿಲುವಿಗೆ ಯಾವ ಧರ್ಮದ, ಯಾವ ಚಿಂತನೆಗಳು ಕಾರಣ ಎಂದು ಪಟ್ಟಿ ಮಾಡೋಣ? ‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿ’ ಎಂಬ ಸಂಘಟನೆಯನ್ನು 1989ರಲ್ಲಿ ಸ್ಥಾಪಿಸಿ ಧಾರ್ಮಿಕ ಮೌಢ್ಯಗಳ ವಿರುದ್ಧ ಹೋರಾಟ ನಡೆಸುತ್ತಿದ್ದ ನರೇಂದ್ರ ದಾಬೋಲ್ಕರ್‍ರನ್ನು 2013 ಆಗಸ್ಟ್ 20ರಂದು ಹತ್ಯೆ ಮಾಡಲಾಯಿತಲ್ಲ, ಅದು ಯಾವ ಧರ್ಮದ ತೀವ್ರವಾದ? ಔಟ್‍ಲುಕ್ ವಾರಪತ್ರಿಕೆಯಲ್ಲಿ ವ್ಯಂಗ್ಯ ಚಿತ್ರ ಬಿಡಿಸುತ್ತಿದ್ದ ಇರ್ಫಾನ್ ಹುಸೈನ್‍ರನ್ನು 1999 ಮಾರ್ಚ್ 8ರಂದು ಹತ್ಯೆ ನಡೆಸಿದ್ದಕ್ಕೆ ಯಾವ ತೀವ್ರವಾದಿ ವಿಚಾರಧಾರೆಗಳು ಕಾರಣ? ಉದಾರವಾದ ಮತ್ತು ತೀವ್ರವಾದವನ್ನು ಅಳೆಯುವುದಕ್ಕೆ ಪಾಶ್ಚಾತ್ಯ ಜಗತ್ತು ಒಂದು ತಕ್ಕಡಿಯನ್ನು ತಯಾರಿಸಿಟ್ಟುಕೊಂಡಿದೆ. ಆ ತಕ್ಕಡಿಯಲ್ಲಿ ಬಿಳಿಯರು ಮತ್ತು ಬಿಳಿಯೇತರರು ಒಂದೇ ರೀತಿಯಲ್ಲಿ ತೂಗುವುದಿಲ್ಲ. ನಾರ್ವೆಯ ಬಿಳಿ ಚರ್ಮದ ಆ್ಯಂಡರ್ಸ್ ಬ್ರೇವಿಕ್ ಓರ್ವ ಸಾಮಾನ್ಯ ಕ್ರಿಮಿನಲ್ ಆರೋಪಿಯಾಗಿ ವಿಚಾರಣೆಯನ್ನು ಎದುರಿಸಿದ. ಅಮೇರಿಕದಲ್ಲಿ ಬಿಳಿಯ ಪೊಲೀಸರು ಮತ್ತು ನ್ಯಾಯಾಲಯವು ಕರಿಯರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಪ್ರತಿಭಟಿಸಿ ಬೀದಿಗಿಳಿದ ಜನರ ಆಕ್ರೋಶ ಇನ್ನೂ ತಣಿದಿಲ್ಲ. ಎಬೋಲಾದ ಬಗ್ಗೆ ಬಿಳಿ ಜಗತ್ತು ಗಂಭೀರ ಭಾಷೆಯಲ್ಲಿ ಮಾತಾಡತೊಡಗಿದ್ದೇ ಬಿಳಿ ಮನುಷ್ಯ ಅದಕ್ಕೆ ಬಲಿಯಾದ ಬಳಿಕ. ಆದರೆ ಈ ಸಾವಿಗಿಂತ ಮೊದಲು ಆಫ್ರಿಕಾ ಖಂಡದ ಸಾವಿರಾರು ಕಪ್ಪು ಮನುಷ್ಯರು ಯಾರ ಕರುಣೆಗೂ ಪಾತ್ರರಾಗದೇ ಸಾವಿಗೀಡಾಗಿದ್ದರು. ಇರಾಕ್, ಪಾಕ್, ಸಿರಿಯಾ, ಫೆಲೆಸ್ತೀನ್‍ಗಳಲ್ಲಿ ಚಾರ್ಲಿ ಹೆಬ್ಡೋ ಪತ್ರಿಕೆಯಂತೆ ಯಾರನ್ನೂ ನಿಂದಿಸದ, ವಿಡಂಬನಾತ್ಮಕ ಕಾರ್ಟೂನ್ ರಚಿಸದ, ಪ್ರವಾದಿಗೆ 100 ಏಟುಗಳನ್ನು ಕೊಡುವೆ ಎಂದು ಹೇಳದ ಸಾಮಾನ್ಯ ಮಂದಿ ನಿತ್ಯ ಸಾಯುತ್ತಿದ್ದಾರೆ. ಅವರನ್ನು ಸಾಯಿಸುವ ತೀವ್ರವಾದಿಗಳಿಗೆ ಆಯುಧಗಳನ್ನು ಇವೇ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತಿಪಾದಕ ರಾಷ್ಟ್ರಗಳು ಒದಗಿಸುತ್ತಿವೆ. ಬಿಳಿಯ ಜಗತ್ತಿನ ಹೊರಗೆ ನಡೆಯುವ ಹತ್ಯೆಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ ತೀವ್ರವಾದವನ್ನು ಪೋಷಿಸುತ್ತಲೇ 'ಮುಸ್ಲಿಮರಿಗೆ ನಗಲು ಬರುವುದಿಲ್ಲ, ಅವರಲ್ಲಿ ಉದಾರತನ ಇಲ್ಲ' ಎಂದು ಅವೇ ಮಂದಿ ಆರೋಪಿಸುವುದನ್ನು ಏನೆಂದು ಕರೆಯಬೇಕು?
   ಫ್ರಾನ್ಸ್ ಗೆ ವಸಾಹತುಶಾಹಿತ್ವದ ದೊಡ್ಡ ಇತಿಹಾಸವೇ ಇದೆ. ಅಲ್ಜೀರಿಯಾ, ಲಿಬಿಯಾ ಮುಂತಾದ ಮುಸ್ಲಿಮ್ ರಾಷ್ಟ್ರಗಳನ್ನು ತನ್ನ ವಸಾಹತನ್ನಾಗಿ ಮಾಡಿಕೊಂಡು ಆಳಿದ ಅನುಭವ ಅದಕ್ಕಿದೆ. ಫ್ರಾನ್ಸ್ ನ 66 ಮಿಲಿಯನ್ ಜನಸಂಖ್ಯೆಯಲ್ಲಿ ಇವತ್ತು ಸುಮಾರು 6 ಮಿಲಿಯನ್ ಮುಸ್ಲಿಮರಿದ್ದಾರೆ. ಹೆಚ್ಚಿನ ಮುಸ್ಲಿಮರು ಆಫ್ರಿಕಾ ಸಹಿತ ತನ್ನ ಮಾಜಿ ವಸಾಹತುಗಳಿಂದ ವಲಸೆ ಬಂದವರು. ಇವರನ್ನು ಇವತ್ತು ಫ್ರಾನ್ಸ್ ನಲ್ಲಿ ತಾರತಮ್ಯದಿಂದ ನಡೆಸಿಕೊಳ್ಳಲಾಗುತ್ತಿದೆ. ಜನಾಂಗೀಯ ನಿಂದನೆಗೆ ಗುರಿಪಡಿಸಲಾಗುತ್ತಿದೆ. ತಮ್ಮ ಜನಾಂಗವಾದಿ ನಿಲುವಿಗಾಗಿ ಶಿಕ್ಷೆಗೀಡಾಗಿರುವ ನ್ಯಾಶನಲ್ ಫ್ರಂಟ್ ಪಕ್ಷದ ಸ್ಥಾಪಕ ಜೀನ್ ಮೇರಿ ಲಿಪೆನ್ ಎಂಬವರು ಈ ಪ್ರಚಾರಾಭಿಯಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಮಗಳಾದ ಪಕ್ಷದ ಈಗಿನ ಅಧ್ಯಕ್ಷೆ ಮರೀನೆ ಲಿಪೆನ್‍ರು ಮುಸ್ಲಿಮರನ್ನು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳನ್ನು ಅವಮಾನಿಸುವ ಮಾತುಗಳನ್ನು ನಿರಂತರ ಆಡುತ್ತಿದ್ದಾರೆ. ಫ್ರಾನ್ಸ್ ನ ವಲಸೆ ನಿಯಮವನ್ನು ವಿರೋಧಿಸುತ್ತಾ, ಜನರನ್ನು ಜನಾಂಗೀಯವಾಗಿ ಧ್ರುವೀಕರಿಸುತ್ತಿದ್ದಾರೆ. ಈ ದ್ವೇಷಪೂರಿತ ರಾಜಕಾರಣ ಎಷ್ಟು ಬಲ ಪಡೆದಿದೆಯೆಂದರೆ, ‘ರೋಮಾ ಜಿಪ್ಸಿಗಳು ಫ್ರಾನ್ಸಿನೊಂದಿಗೆ ಬೆರೆಯಲಾಗದ ಜನರಾಗಿದ್ದು, ಅವರನ್ನು ರೊಮೇನಿಯಾ ಮತ್ತು ಬಲ್ಗೇರಿಯಾಗಳಿಗೆ ಗಡೀಪಾರು ಮಾಡಬೇಕೆಂದು’ ಇತ್ತೀಚೆಗೆ ಫ್ರಾನ್ಸ್ ನ ಪ್ರಧಾನಿ ಮ್ಯಾನುವೆಲ್ ವಲ್ಲಾಸ್ ಅಭಿಪ್ರಾಯ ಪಟ್ಟಿದ್ದರು. ಈ ಹೇಳಿಕೆಯ ಬಳಿಕ ರೊಮೇನಿಯನ್ನರ ಮೇಲೆ ಹಿಂಸಾತ್ಮಕ ದಾಳಿಗಳು ನಡೆದಿದ್ದುವು. ಅದರ ಬೆನ್ನಿಗೇ ಬಲಪಂಥೀಯ ಮೇಯರ್ ಓರ್ವರು ತಮ್ಮ ಮುನ್ಸಿಪಲ್ ವ್ಯಾಪ್ತಿಯ ರುದ್ರಭೂಮಿಯಲ್ಲಿ ರೊಮೇನಿಯದ ಮಗುವಿನ ಅಂತ್ಯಸಂಸ್ಕಾರ ನಡೆಸುವುದರಿಂದ ತಡೆದಿದ್ದರು. ಒಂದು ರೀತಿಯಲ್ಲಿ, ಮುಸ್ಲಿಮ್ ದ್ವೇಷವನ್ನು ಬಿತ್ತುವ ಹಾಗೂ ಜನಾಂಗೀಯವಾದಿ ಪೂರ್ವಗ್ರಹಗಳನ್ನು ಹರಡುವ ಪ್ರಯತ್ನಗಳು ಫ್ರಾನ್ಸ್ ನಲ್ಲಿ ತೀವ್ರಗತಿಯಲ್ಲಿ ನಡೆಯುತ್ತಿರುವ ಹೊತ್ತಿನಲ್ಲಿಯೇ ಚಾರ್ಲಿ ಹೆಬ್ಡೋದ ಮೇಲೆ ದಾಳಿ ನಡೆದಿದೆ. ಇದನ್ನು ಉದಾರವಾದ ಮತ್ತು ತೀವ್ರವಾದ ಎಂದು ವಿಭಜಿಸಿ ಒಂದನ್ನು ಸರಿ ಮತ್ತು ಇನ್ನೊಂದನ್ನು ತಪ್ಪು ಎಂದು ವ್ಯಾಖ್ಯಾನಿಸುವುದು ಸುಲಭ. ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬ ಪದಪುಂಜವನ್ನು ಬಳಸಿಕೊಂಡು ಚಾರ್ಲಿ ಹೆಬ್ಡೋದ ಪರ ನಿಲ್ಲುವುದು ಕಷ್ಟವೂ ಅಲ್ಲ. ಆದರೆ, ಹೀಗೆ ವಾದಿಸುವವರಲ್ಲೂ ಕೆಲವೊಂದು ಅನುಮಾನಗಳು ಖಂಡಿತ ಇರಬಹುದು. ಚಾರ್ಲಿ ಹೆಬ್ಡೋದ ಕಾರ್ಟೂನ್‍ಗಳು ಬರೇ ಸೃಜನಶೀಲತೆಯ ಉದ್ದೇಶದಿಂದಷ್ಟೇ ಸೃಷ್ಟಿಯಾಗಿವೆಯೇ? ಡೆನ್ಮಾರ್ಕ್‍ನ ಜಿಲ್ಲ್ಯಾಂಡ್ ಪೋಸ್ಟನ್‍ನಲ್ಲಿ ಪ್ರಕಟವಾದ ಪ್ರವಾದಿ ನಿಂದನೆಯ ಕಾರ್ಟೂನನ್ನು 2006ರಲ್ಲಿ ಪ್ರಕಟಿಸಿ ಮತ್ತೆ ಪುನಃ 2011ರಲ್ಲಿ ಪ್ರಕಟಿಸಿದ್ದೇ ಅಲ್ಲದೇ 2012ರಲ್ಲಿ 65 ಪುಟಗಳ ಪ್ರವಾದಿ ಕಾರ್ಟೂನ್‍ಗಳನ್ನು ಪ್ರಕಟಿಸಿರುವುದರಲ್ಲೂ ಬರೇ ಸೃಜನಶೀಲತೆಯ ಉದ್ದೇಶವಷ್ಟೇ ಕಾಣುತ್ತಿದೆಯೇ? ಅದೇಕೆ ಪ್ರವಾದಿಯವರು ಮತ್ತು ಮುಸ್ಲಿಮರೇ ಈ ಪತ್ರಿಕೆಯ ಸೃಜನಶೀಲತೆಗೆ ವಸ್ತುವಾಗಿದ್ದಾರೆ? ಹಾಲೋಕಾಸ್ಟನ್ನು (ಹಿಟ್ಲರ್ ನಡೆಸಿದ ಯಹೂದಿ ಹತ್ಯಾಕಾಂಡ)  ತನ್ನ ಸೃಜನಶೀಲತೆಗೆ ಚಾರ್ಲಿ ಹೆಬ್ಡೋ ಬಳಸಿಕೊಂಡಿತ್ತೇ? ಅಭಿವ್ಯಕ್ತಿ ಸ್ವಾತಂತ್ರ್ಯವೆಂಬುದು ಪ್ರವಾದಿ ಮತ್ತು ಮುಸ್ಲಿಮರ ವಿಷಯದಲ್ಲಿ ಮಾತ್ರ ಘರ್ಜಿಸುವ ಮತ್ತು ಹಾಲೋಕಾಸ್ಟ್ ಹಾಗೂ ಬಿಳಿ ಜಗತ್ತಿನ ವಿಷಯದಲ್ಲಿ ಕುಂಯ್‍ಗುಡುವಂಥ ವಸ್ತುವೇ? ವಿಡಂಬನೆ, ನಿಂದನೆ, ಅಪಹಾಸ್ಯ, ವ್ಯಂಗ್ಯ ಮುಂತಾದ ಪದಗಳಿಗೆಲ್ಲ ವಿಭಿನ್ನ ಅರ್ಥಗಳಿವೆ ಎಂದಾದರೆ ಮತ್ತೇಕೆ ಚಾರ್ಲಿ ಹೆಬ್ಡೋದ ಅಗ್ಗದ ಪತ್ರಿಕೋದ್ಯಮವು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಮರ್ಥನೆ ಗೀಡಾಗುವುದು? ವಿಡಂಬನೆ ಮತ್ತು ನಿಂದನೆಯ ನಡುವೆ ಸ್ಪಷ್ಟ ನೈತಿಕ ಗೆರೆಯನ್ನು ಎಳೆಯಲು ನಾವೆಲ್ಲ ಹಿಂದೇಟು ಹಾಕುತ್ತಿರುವುದು ಯಾರ ಮತ್ತು ಯಾವುದರ ಭಯದಿಂದ! ಅವೆರಡರ ನಡುವೆ ವ್ಯತ್ಯಾಸ ಇವೆಯೇ? ಇದ್ದರೆ ಅವು ಯಾವುವು? ಅಷ್ಟಕ್ಕೂ, ಚಾರ್ಲಿ ಹೆಬ್ಡೋದ ಕಾರ್ಟೂನುಗಳಲ್ಲಿ ಎಷ್ಟು ಕಾರ್ಟೂನ್‍ಗಳು ಕೇವಲ ವಿಡಂಬನೆ ಎಂಬ ವೃತ್ತದೊಳಗೆ ನಿಲ್ಲಬಲ್ಲವು? ವೃತ್ತದಿಂದ ಹೊರಗೆ ಜಿಗಿಯುವ ಮತ್ತು ವೃತ್ತದೊಳಗೇ ಬಾರದವುಗಳಿಗೆ ನಾವು ಏನೆಂದು ಹೆಸರು ಕೊಡಬಲ್ಲೆವು? ನಿಂದನೆ, ವ್ಯಂಗ್ಯ, ಅಪಹಾಸ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು, ಮತ್ತು..
    ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿಯಲ್ಲಿ ನಡೆದ ಹತ್ಯಾ ಕಾಂಡವನ್ನು ಕನ್ನಡ ಅಕ್ಷರ ಮಾಲೆಯಲ್ಲಿ ಬರುವ ಸಕಲ ಕಟು ಪದಗಳನ್ನು ಬಳಸಿ ಖಂಡಿಸುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿ-ಮಿತಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಲೇಬೇಕಾಗಿದೆ.

Monday, January 5, 2015

ಒಂದು ವೇಳೆ ಗೋಡ್ಸೆಯ ಸ್ಥಾನದಲ್ಲಿ ಅಫ್ಝಲ್‍ಗುರು ಇರುತ್ತಿದ್ದರೆ..

   1. ಕುತುಬ್ ಮಿನಾರ್ ಎಂಬ ವಿಷ್ಣುಧ್ವಜ
   2. ಗಾಂಧೀಜಿಯವರ ಹತ್ಯೆ ಮತ್ತು ಆ ಬಳಿಕ
   3. ಮೆ ಇಟ್ ಪ್ಲೀಸ್ ಯುವರ್ ಆನರ್: ದಿ ಅಸಾಸಿನ್ಸ್ ಸ್ಟೇಟ್‍ಮೆಂಟ್ ಇನ್ ಕೋರ್ಟ್
   4. 1986 ಫೆ. 1ರಂದು ಬಾಬರಿ ಮಸೀದಿಯ ಗೇಟಿನ ಬೀಗ ತೆರೆಯಲು ಆದೇಶಿಸಿದ ನ್ಯಾಯಾಧೀಶರ ಕೃತಿ
‘ನೀವು ಓದಲೇಬೇಕಾದ 6 ಹೊಸ ಪುಸ್ತಕಗಳು' ಎಂಬ ಹೆಸರಿನಲ್ಲಿ ಆರೆಸ್ಸೆಸ್‍ನ ಮುಖವಾಣಿ ಆರ್ಗನೈಝರ್ ಪತ್ರಿಕೆಯು 1997 ಅಕ್ಟೋಬರ್ 5ರ ಸಂಚಿಕೆಯಲ್ಲಿ ಪ್ರಕಟಿಸಿದ ಜಾಹೀರಾತಿನಲ್ಲಿದ್ದ ಪುಸ್ತಕಗಳಿವು. ಇವುಗಳಲ್ಲಿ, ‘ಕುತುಬ್ ಮಿನಾರ್ ಎಂಬ ವಿಷ್ಣುಧ್ವಜ’ ಮತ್ತು 'ಗಾಂಧೀಜಿಯವರ ಹತ್ಯೆ ಮತ್ತು ಆ ಬಳಿಕ' ಎಂಬೆರಡು ಕೃತಿಗಳನ್ನು ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ ಗೋಡ್ಸೆ ಬರೆದಿದ್ದರು. 1948 ಜನವರಿ 30ರಂದು ತನ್ನ ಪಾಯಿಂಟ್ ಬ್ಲಾಂಕ್ ರೇಂಜ್ ಬಂದೂಕಿನಿಂದ ಗಾಂಧೀಜಿಯವರ ಎದೆಗೆ ಮೂರು ಸುತ್ತು ಗುಂಡುಹಾರಿಸಿದ ನಾಥೂರಾಮ್ ಗೋಡ್ಸೆಯ ಆ ಕೃತ್ಯಕ್ಕೆ ಈ 2015ಕ್ಕೆ ಸುಮಾರು 67 ವರ್ಷಗಳು ತಗುಲುತ್ತವೆ. ಕೃತ್ಯ ನಡೆದಾಗ ಈ ದೇಶ ಎಷ್ಟು ಆಕ್ರೋಶಗೊಂಡಿತ್ತೆಂದರೆ, ಆರೆಸ್ಸೆಸ್‍ಗೆ ನಿಷೇಧ ಹೇರಲಾಯಿತು. ಆರೆಸ್ಸೆಸ್‍ನ ಬಗ್ಗೆ ಒಲವು ಹೊಂದಿದ್ದರೆಂದು ಹೇಳಲಾಗುತ್ತಿದ್ದ ಸರ್ದಾರ್ ಪಟೇಲರೇ ಈ ನಿಷೇಧಕ್ಕೆ ಶಿಫಾರಸ್ಸು ಮಾಡಿದ್ದರು. ಮಾತ್ರವಲ್ಲ, ಆ ನಿಷೇಧವನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ‘ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು' ಎಂಬ ಷರತ್ತನ್ನು ಒಡ್ಡಿದ್ದರು. ಆರೆಸ್ಸೆಸ್‍ಗೂ ನಾಥೂರಾಮ್ ಗೋಡ್ಸೆಗೂ ನಡುವೆ ಯಾವ ಬಗೆಯ ಸಂಬಂಧ ಇತ್ತು ಎಂಬುದನ್ನು ಸಹೋದರ ಗೋಪಾಲ ಗೋಡ್ಸೆ ಹಲವು ಬಾರಿ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಗೋಡ್ಸೆಯನ್ನು 1949 ನವೆಂಬರ್ 15ರಂದು ಗಲ್ಲಿಗೇರಿಸಲಾಯಿತು. ಆ ಕಾಲದಲ್ಲಿ ಗೋಡ್ಸೆಯನ್ನು ಹೊಗಳುವುದು ಬಿಡಿ ಆತನ ಹೆಸರೆತ್ತುವುದೇ ದೇಶದ್ರೋಹವೆಂಬಂತಹ ವಾತಾವರಣ ದೇಶದೆಲ್ಲೆಡೆ ಇತ್ತು. ಬ್ರಾಹ್ಮಣನಾಗಿದ್ದ ಆತನನ್ನು ತಮ್ಮ ಜಾತಿಯವನೆಂದು ಹೆಮ್ಮೆ ಪಟ್ಟುಕೊಳ್ಳುವವರೇ ಇರಲಿಲ್ಲ. ಮಹಾರಾಷ್ಟ್ರದ ಪುಣೆಯಲ್ಲಿ ಹುಟ್ಟಿದ್ದ ಆತನ ನೆನಪಲ್ಲಿ ಜಯಂತಿ ಆಚರಿಸಿದ್ದೋ ಪ್ರತಿಮೆ ನಿರ್ಮಾಣ ಮಾಡಿದ್ದೋ ನಡೆಯಲಿಲ್ಲ. ಹೀಗೆ ರಾಷ್ಟ್ರಪಿತ ಗಾಂಧೀಜಿಯನ್ನು ಹತ್ಯೆಗೈದ ದೇಶದ್ರೋಹಿ ಎಂಬ ಐಡೆಂಟಿಟಿಯೊಂದಿಗೆ ಸಮಾಜದ ತಿರಸ್ಕಾರಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ಇದೀಗ ಗುಣಗಾನಕ್ಕೆ ಒಳಗಾಗುತ್ತಿದ್ದಾನೆ. ಕಳೆದ ಡಿಸೆಂಬರ್ ಕೊನೆಯಲ್ಲಿ ಉತ್ತರ ಪ್ರದೇಶದ ವಿೂರತ್‍ನಲ್ಲಿ ಗೋಡ್ಸೆ ದೇವಾಲಯಕ್ಕೆ ಭೂಮಿ ಪೂಜೆ ನಡೆದಿದೆ. ಹಿಂದೂ ಮಹಾಸಭಾ ತಯಾರಿಸಿರುವ ‘ದೇಶಭಕ್ತ ನಾಥೂರಾಮ್ ಗೋಡ್ಸೆ’ ಎಂಬ ಡಾಕ್ಯುಮೆಂಟರಿಯು ಇದೇ ಜನವರಿಯ ಕೊನೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಗಾಂಧಿ ಹತ್ಯೆಯಾದ ಜನವರಿ 30ನ್ನು ಶೌರ್ಯ ದಿನವನ್ನಾಗಿ ಆಚರಿಸುವುದಾಗಿ ಮಹಾಸಭಾ ಘೋಷಿಸಿದೆ. ದೇಶದಾದ್ಯಂತ ಆತನ ಪ್ರತಿಮೆ ನಿಲ್ಲಿಸುವ ಬಗ್ಗೆ ಅದು ಬಹಿರಂಗ ಹೇಳಿಕೆಗಳನ್ನು ಕೊಡುತ್ತಿದೆ. ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್‍ರು ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದಾರೆ. 'ಗೋಡ್ಸೆಯು ಗಾಂಧಿಯನ್ನಲ್ಲ ನೆಹರೂರನ್ನು ಹತ್ಯೆ ಮಾಡಬೇಕಿತ್ತು' ಎಂದು ಕೇರಳದ ಸಂಘಪರಿವಾರದ ಮುಖವಾಣಿ ಕೇಸರಿ ಪತ್ರಿಕೆಯಲ್ಲಿ ಬಿಜೆಪಿ ಮುಖಂಡ ಗೋಪಾಲಕೃಷ್ಣನ್ ಈ ಹಿಂದೆ ಆಸೆ ತೋಡಿಕೊಂಡಿದ್ದರು. ಮೊನ್ನೆ ಮೊನ್ನೆ ಟಿ.ವಿ. ಚರ್ಚೆಯಲ್ಲಿ ಭಾಗವಹಿಸಿದ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಚಾರ್ಯ ಮದನ್ ಅವರು ಗಾಂಧಿ ಹತ್ಯೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಒಂದು ಉದ್ದೇಶಕ್ಕಾಗಿ ಹತ್ಯೆ ನಡೆಸುವುದು ಅಪರಾಧ ಆಗುವುದಿಲ್ಲ ಎಂದರು. ದೇಶ ವಿಭಜನೆಯ ಸಂದರ್ಭದಲ್ಲಾದ ಎಲ್ಲ ಹತ್ಯೆಯ ಹೊಣೆಯನ್ನೂ ಗಾಂಧಿಯ ಮೇಲೆ ಹೊರಿಸಿದ ಆತ, ಗಾಂಧಿ 10 ಲಕ್ಷ ಮಂದಿಯ ಕೊಲೆಗಾರ ಎಂದರು. ಗಾಂಧಿಯನ್ನು ವಿಚಾರಣೆಗೆ ಒಳಪಡಿಸುವ ಯಾವುದೇ ಕಾನೂನು ಈ ದೇಶದಲ್ಲಿ ರಚನೆಯಾಗದೇ ಇರುವುದು ದುರದೃಷ್ಟಕರ ಎಂದೂ ಆತ ಹೇಳಿದ. ಅಷ್ಟಕ್ಕೂ, 1948ರಲ್ಲಿ ಅಪ್ಪಟ ದೇಶದ್ರೋಹಿಯಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಈ 2015ರಲ್ಲಿ ದೇಶಭಕ್ತನಾಗಿ ಪರಿವರ್ತನೆಗೊಂಡದ್ದು ಹೇಗೆ ಮತ್ತು ಯಾಕೆ? ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ಮತ್ತು ರಾಷ್ಟ್ರಪಿತನನ್ನು ಕೊಲೆಗೈದ ಅಪರಾಧಿಯೊಬ್ಬನ ಮೇಲೆ ಸಂಘಪರಿವಾರಕ್ಕೆ ಈ ಮಟ್ಟದ ಮಮಕಾರ ಯಾಕಾಗಿ? ಗೋಡ್ಸೆಯನ್ನು ಸಮರ್ಥಿಸಿಕೊಳ್ಳುವು ದೆಂದರೆ ಜೇನುಗೂಡಿಗೆ ಕೈ ಹಾಕಿದಂತೆ. ನಾಲ್ಕು ದಿಕ್ಕಿನಿಂದಲೂ ಆ ಸಮರ್ಥನೆ ಪ್ರಶ್ನೆಗೀಡಾಗುತ್ತದೆ. ಕೊಲೆಪಾತಕನನ್ನು ವೈಭವೀಕರಣಗೊಳಿಸುವವರು ಟೀಕೆಗೆ ಖಂಡಿತ ಗುರಿಯಾಗುತ್ತಾರೆ. ಇದು ಸಂಘಪರಿವಾರಕ್ಕೆ ಗೊತ್ತಿಲ್ಲ ಎಂದಲ್ಲ. ಗೊತ್ತಿದ್ದೂ ಅಂಥದ್ದೊಂದು ಧೈರ್ಯ ಪ್ರದರ್ಶಿಸುವುದಕ್ಕೆ ಗೋಡ್ಸೆಯಲ್ಲಿ ಏನಿದೆ?
   ನಿಜವಾಗಿ, ಸಂಘಪರಿವಾರಕ್ಕೆ ಮುಸ್ಲಿಮ್ ವಿರೋಧಿ ವ್ಯಕ್ತಿತ್ವ ವೊಂದರ ಅಗತ್ಯವಿದೆ. ಗಾಂಧೀಜಿಯನ್ನು ಕೊಂದವ ಎಂಬೊಂದು ಪರಿಚಿತ ಮುಖ ಗೋಡ್ಸೆಗೆ ಈಗಾಗಲೇ ಇದೆ. ಈ ಮುಖಕ್ಕೆ ಇನ್ನೊಂದು ಭಾವುಕ ವ್ಯಾಖ್ಯಾನವನ್ನು ಕೊಟ್ಟು ಒಂದು ಕಲ್ಲಿನಿಂದ ಎರಡು ಹಕ್ಕಿಗಳನ್ನು ಉದುರಿಸುವ ಆಲೋಚನೆ ಸಂಘಪರಿವಾರದ್ದು. ಸಾವರ್ಕರ್, ಹೆಡ್ಗೆವಾರ್, ಗೋಲ್ವಲ್ಕರ್‍ಗಳನ್ನು ಈ ಸಮಾಜ ಈ ವರೆಗೂ ತನ್ನೊಳಗೆ ಜೀರ್ಣಿಸಿಕೊಂಡಿಲ್ಲ. ಬಹುಸಂಖ್ಯಾತ ಸಮಾಜ ಅವರನ್ನು ಜಗಲಿಯ ಒಳಗೆ ಬಿಟ್ಟುಕೊಳ್ಳುತ್ತಲೂ ಇಲ್ಲ. ಅವರನ್ನು ಒಂದು ಸಂಘಟನೆಗೆ ಮತ್ತು ನಿರ್ದಿಷ್ಟ ಆಲೋಚನೆಗೆ ಸೀಮಿತಗೊಳಿಸಿ ಅನುಮಾನದಿಂದ ನೋಡುತ್ತಲೂ ಇದೆ. ಇವರಿಗೆ ಹೋಲಿಸಿದರೆ ಗೋಡ್ಸೆ ತುಸು ಭಿನ್ನ. ಆತ ಈ ಎಲ್ಲ ಚೌಕಟ್ಟನ್ನೂ ವಿೂರಿ ಒಂದು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದವ. ಗೋಲ್ವಾಲ್ಕರ್‍ರ ಹೆಸರಲ್ಲಿ ಒಂದು ಕಾರ್ಯಕ್ರಮ ಏರ್ಪಡಿಸುವುದಕ್ಕಿಂತ ಗೋಡ್ಸೆಯ ಹೆಸರಿನಲ್ಲಿ ಏರ್ಪಡಿಸುವ ಕಾರ್ಯಕ್ರಮದಲ್ಲಿ ಹೆಚ್ಚು ಕುತೂಹಲವಿರುತ್ತದೆ. ಆ ಕುತೂಹಲಕ್ಕೆ ಪೂರಕವಾಗಿ ಭಾವುಕ ಕತೆಯೊಂದನ್ನು ಆತನ ಸುತ್ತ ಕಟ್ಟುವುದಕ್ಕೂ ಅವಕಾಶ ಇರುತ್ತದೆ. ಗೋಡ್ಸೆಯನ್ನು ವೈಭವೀಕರಿಸುತ್ತಿರುವ ವರ್ಗ ಗಾಂಧೀಜಿಯವರನ್ನು ಸ್ವಾತಂತ್ರ್ಯ ಹೋರಾಟಗಾರನೆಂಬ ನೆಲೆಯಲ್ಲಿ ಗೌರವಿಸುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ ಅದೇ ಉಸಿರಲ್ಲಿ ಅವರೋರ್ವ ಮುಸ್ಲಿಮ್ ಪರ ಮತ್ತು ಪಾಕಿಸ್ತಾನದ ರಚನೆಗೆ ಸಮ್ಮತಿಸಿದ ವ್ಯಕ್ತಿ ಎಂದೂ ಹೇಳುತ್ತದೆ. ಟರ್ಕಿಯಲ್ಲಿ ಖಲೀಫಾ ಆಡಳಿತ ಉರುಳಿದಾಗ ಇಲ್ಲಿ ಖಿಲಾಫತ್ ಚಳವಳಿಯನ್ನು ಹುಟ್ಟು ಹಾಕಿ ಮುಸ್ಲಿಮರನ್ನು ಬೆಂಬಲಿಸಿದ ವ್ಯಕ್ತಿ ಗಾಂಧೀಜಿ ಅನ್ನುತ್ತದೆ. ದೇಶವಿಭಜನೆಯ ಸಂದರ್ಭದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಗಾಂಧೀಜಿ ಕಾರಣ ಎಂಬ ಆರೋಪವನ್ನೂ ಹೊರಿಸುತ್ತದೆ. ಹೀಗೆ ಗಾಂಧೀಜಿಯನ್ನು ಮುಸ್ಲಿಮ್ ಪರವೆಂದೂ ಮತ್ತು ಮುಸ್ಲಿಮರನ್ನು ಹಿಂದೂಗಳ ಕೊಲೆಗಾರರೆಂದೂ ಬಿಂಬಿಸುವ ಎರಡು ಉದ್ದೇಶವನ್ನು ಗೋಡ್ಸೆಯ ವೈಭವೀಕರಣವು ಪೂರ್ತಿಗೊಳಿಸುತ್ತದೆ. ಅಂದಹಾಗೆ, ಮುಸ್ಲಿಮ್ ಪರ ಇರುವವರನ್ನು ಹತ್ಯೆ ನಡೆಸುವುದು ದೇಶದ್ರೋಹವೋ ಅಪರಾಧವೋ ಆಗುವುದಿಲ್ಲ ಎಂಬ ಸಂದೇಶವೊಂದನ್ನು ರವಾನಿಸಲು ಗೋಡ್ಸೆಯಷ್ಟು ಉತ್ತಮ ವ್ಯಕ್ತಿ ಸಂಘಪರಿವಾರಕ್ಕೆ ಬೇರೊಬ್ಬರಿಲ್ಲ. ಗೋಡ್ಸೆ ಸಮರ್ಥನೆಗೀಡಾದಷ್ಟೂ ಗಾಂಧೀಜಿ ಹೆಚ್ಚೆಚ್ಚು ಮುಸ್ಲಿಮ್ ಪ್ರೇಮಿಯಾಗುತ್ತಲೇ ಹೋಗುತ್ತಾರೆ. ಅಲ್ಲದೇ, ಗೋಡ್ಸೆಯ ಪರ ಏರ್ಪಾಟಾಗುವ ಕಾರ್ಯಕ್ರಮಗಳಲ್ಲಿ ಗಾಂಧೀಜಿ ಮತ್ತು ಮುಸ್ಲಿಮರು ಚರ್ಚೆಗೀಡಾಗಲೇ ಬೇಕಾಗುತ್ತದೆ.

ಯಾಕೆಂದರೆ, ಗಾಂಧೀಜಿ ಇಲ್ಲದಿದ್ದರೆ ಗೋಡ್ಸೆಗೆ ವ್ಯಕ್ತಿತ್ವವೇ ಇಲ್ಲ. ಗಾಂಧೀಜಿಯಿಂದಾಗಿಯೇ ಗೋಡ್ಸೆ ಇವತ್ತು ಇತಿಹಾಸದ ಪುಟದಲ್ಲಿದ್ದಾನೆ. ಗಾಂಧೀಜಿಗೆ ಆತ ಗುಂಡಿಕ್ಕದೇ ಇರುತ್ತಿದ್ದರೆ ಮಹಾರಾಷ್ಟ್ರದ ಪುಣೆಯಲ್ಲಿ ‘ಅಗ್ರಣಿ' ಎಂಬ ಪತ್ರಿಕೆಯನ್ನು ನಡೆಸುತ್ತಾ ಆತ ಪರಿವಾರದ ಪ್ರಚಾರಕನಾಗಿ ಎಲ್ಲೋ ಕಳೆದು ಹೋಗುತ್ತಿದ್ದ. ಆದ್ದರಿಂದ, ಗೋಡ್ಸೆಯನ್ನು ವಿವರಿಸಲು ತೊಡಗಿದಂತೆಲ್ಲಾ ಗೋಡ್ಸೆಗಿಂತ ಹೆಚ್ಚು ಗಾಂಧೀಜಿ ಮತ್ತು ಮುಸ್ಲಿಮರು ಪ್ರಸ್ತಾಪವಾಗುತ್ತಲೇ ಇರಬೇಕಾಗುತ್ತದೆ. ಒಂದು ರೀತಿಯಲ್ಲಿ, ಇದು ಸಂಘಪರಿವಾರದ ಬಯಕೆಯೂ ಹೌದು. ಗಾಂಧೀಜಿಯನ್ನು ಈ ದೇಶದ ಗೌರವಾನ್ವಿತರ ಪಟ್ಟಿಯಿಂದ ಕಳಚಬೇಕೆಂಬುದು ಸಂಘದ ಬಹುಕಾಲದ ಕನಸು. ಬಹುಸಂಖ್ಯಾತರು ಅನುಭವಿಸುವ ಸ್ವಾತಂತ್ರ್ಯವನ್ನು ಅಷ್ಟೇ ಸಮಾನವಾಗಿ ಮುಸ್ಲಿಮ್ ಅಲ್ಪಸಂಖ್ಯಾತರು ಅನುಭವಿಸಬಾರದೆಂಬ ಅಜೆಂಡಾವನ್ನೂ ಅದು ಹೊಂದಿದೆ. ಈ ಗುರಿಯನ್ನು ತಲುಪುವುದಕ್ಕೆ ಗೋಡ್ಸೆ ಯಷ್ಟು ಸೂಕ್ತ ವ್ಯಕ್ತಿತ್ವ ಬೇರೆ ಸಿಗಲಾರದು. ಗೋಡ್ಸೆಯ ಬಗ್ಗೆ ಮಾತುಗಳನ್ನು ಆರಂಭಿಸಿ ಗಾಂಧೀಜಿ, ಮುಸ್ಲಿಮರು ಮತ್ತು ದೇಶಭಕ್ತಿಯಲ್ಲಿ ಕೊನೆಗೊಳಿಸುವುದು ಸುಲಭ ಮತ್ತು ಹೆಚ್ಚು ಪ್ರಾಯೋಗಿಕ. ಗೋಡ್ಸೆ ಗುಂಡಿಕ್ಕಿದುದು ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿಗಲ್ಲ, ದೇಶ ವಿಭಜಿಸಿದವರನ್ನು ಬೆಂಬಲಿಸಿದ ಗಾಂಧಿಗೆ ಎಂದು ಪರಿವಾರ ಇವತ್ತು ಸಮರ್ಥಿಸಿಕೊಳ್ಳುವುದನ್ನು ನೋಡಿದರೆ ಈ ವಾದಕ್ಕೆ ಹೆಚ್ಚು ಬಲ ಬರುತ್ತದೆ. ಮುಸ್ಲಿಮರ ಪರ ನಿಲ್ಲುವವರನ್ನು ಅಥವಾ ಮುಸ್ಲಿಮರನ್ನು ಹತ್ಯೆ ನಡೆಸುವುದು ಅಪರಾಧ ಆಗುವುದಿಲ್ಲ ಎಂಬ ಸಂದೇಶವನ್ನು ಗೋಡ್ಸೆಯ ಮೂಲಕ ರವಾನಿಸಲು ಸಂಘಪರಿವಾರ ತೀರ್ಮಾನಿಸಿದಂತಿದೆ. ಬಹುಶಃ, ಗೋಡ್ಸೆಯ ಪ್ರತಿಮೆಯನ್ನು ದೇಶದಾದ್ಯಂತ ನಿರ್ಮಿಸಲು ಹೊರಟಿರುವ ಹಿಂದೂ ಮಹಾಸಭಾವನ್ನು ತಡೆಯಬೇಕೆಂದು ಕೋರಿ ಕಾನೂನು ತಜ್ಞ ಮತ್ತು ಮಾನವ ಹಕ್ಕು ಕಾರ್ಯಕರ್ತರಾಗಿರುವ ಶಹ್‍ಝಾದ್‍ರು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರಕ್ಕೆ ತೂಕ ಬರುವುದೂ ಈ ಕಾರಣದಿಂದಲೇ. ಅದು ಬರೇ ಪ್ರತಿಮೆಯಲ್ಲ. ಆ ಪ್ರತಿಮೆಗೆ ಮುಸ್ಲಿಮ್ ವಿರೋಧಿಯಾದ ಇಮೇಜು ಇದೆ. ಗೋಡ್ಸೆಯ ಪ್ರತಿಮೆ ಹೆಚ್ಚಾದಷ್ಟೂ ಅಥವಾ ಆತನ ವೈಭವೀಕರಣ ವಿಸ್ತರಿಸಿದಷ್ಟೂ ಮುಸ್ಲಿಮ್ ವಿರೋಧಿ ಭಾವನೆಗಳು ಈ ದೇಶದಲ್ಲಿ ಖಂಡಿತ ಹೆಚ್ಚಾಗುತ್ತದೆ. ಒಂದು ಕಡೆ ಪಾರ್ಲಿಮೆಂಟಿನಲ್ಲಿ ಬಿಜೆಪಿ ಅತಿದೊಡ್ಡ ಪಕ್ಷ. ಹಾಗಿದ್ದರೂ ಒಬ್ಬನೇ ಒಬ್ಬ ಮುಸ್ಲಿಮ್ ಸಂಸತ್ ಸದಸ್ಯನನ್ನು ಅದು ಹೊಂದಿಲ್ಲ. ದೇಶಾದ್ಯಂತವಿರುವ ಅದರ 1058ರಷ್ಟು ಅಸೆಂಬ್ಲಿ ಸದಸ್ಯರಲ್ಲಿ ಬರೇ 4 ಮಂದಿಯಷ್ಟೇ ಮುಸ್ಲಿಮರಿದ್ದಾರೆ. ದೇಶವನ್ನಾಳುವ ಪ್ರಮುಖ ಪಕ್ಷವೊಂದರಲ್ಲಿ ಮುಸ್ಲಿಮರ ಪ್ರಾತಿನಿಧ್ಯವು ಇಷ್ಟು ದಯನೀಯ ಸ್ಥಿತಿಯಲ್ಲಿರುವಾಗಲೇ ಗೋಡ್ಸೆ ಮುನ್ನೆಲೆಗೆ ಬಂದಿದ್ದಾನೆ. ಮಾತ್ರವಲ್ಲ, ಮಾತನಾಡಲೇಬೇಕಿದ್ದ ಪ್ರಧಾನಿಯವರು ಮೌನವಾಗಿದ್ದಾರೆ. ಒಂದು ವೇಳೆ, ಪಾರ್ಲಿಮೆಂಟ್ ದಾಳಿಯ ಅಪರಾಧಿ ಅಫ್ಝಲ್ ಗುರುವನ್ನು ಗೋಡ್ಸೆಯ ಮಾದರಿಯಲ್ಲಿ ವೈಭವೀಕರಿಸಲು ಯಾವುದಾದರೊಂದು ಸಂಘಟನೆ ಮುಂದಾಗಿರುತ್ತಿದ್ದರೆ ಕೇಂದ್ರ ಸರಕಾರದ ನಿಲುವು ಏನಾಗಿರುತ್ತಿತ್ತು? 1500 ವರ್ಷಗಳ ಇಸ್ಲಾವಿೂ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಮುಸ್ಲಿಮ್ ಬಾಹುಳ್ಯದ ಕಾಶ್ಮೀರವು ಸೆಕ್ಯುಲರ್ ರಾಷ್ಟ್ರವಾದ ಭಾರದೊಂದಿಗೆ 1947ರಲ್ಲಿ ಸೇರಿಕೊಂಡರೂ ಭಾರತವು ಕಾಶ್ಮೀರಿಗಳನ್ನು ವಿಶ್ವಾಸದಿಂದ ನಡೆಸಿಕೊಳ್ಳದಿರುವುದಕ್ಕೆ; ಪಕ್ಷ
 ಪಾತ, ದೌರ್ಜನ್ಯ ನಡೆಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಅಫ್ಝಲ್ ಗುರು ಪಾರ್ಲಿಮೆಂಟ್‍ಗೆ ದಾಳಿ ನಡೆಸಿದ್ದಾನೆ ಎಂದು ವಾದಿಸಬಹುದಾದ ಸಂದರ್ಭವನ್ನೊಮ್ಮೆ ಊಹಿಸಿ. ಆತ ದಾಳಿ ಮಾಡಿದ್ದು ಪಾರ್ಲಿಮೆಂಟಿನ ಮೇಲಲ್ಲ, ಅದರೊಳಗೆ ಕುಳಿತಿರುವ ಕಾಶ್ಮೀರಿ ವಿರೋಧಿಗಳನ್ನು ಎಂಬ ಸಮರ್ಥನೆಯನ್ನು ಅವಲೋಕಿಸಿ ನೋಡಿ. ಕೇಂದ್ರ ಸರಕಾರದ ಪ್ರತಿಕ್ರಿಯೆ ಹೇಗಿದ್ದೀತು? ಗೋಡ್ಸೆಯನ್ನು ವೈಭವೀಕರಿಸುತ್ತಿರುವವರು ಏನೆನ್ನಬಹುದು?