ಮಸೀದಿಯಲ್ಲಿ ಮಲಗಿರುವ ಹಿಂದೂ ಯಾತ್ರಿಕರು |
ಪ್ರವಾದಿ ಮುಹಮ್ಮದ್‍ರ(ಸ) ಕಡು ವಿರೋಧಿಗಳಾಗಿ ಗುರುತಿಸಿಕೊಂಡಿದ್ದ ಈ ಪ್ರಮುಖರೆಲ್ಲ ಕ್ರಮೇಣ ಪ್ರವಾದಿಯವರ(ಸ) ವಿಚಾರಗಳ ಬೆಂಬಲಿಗರಾಗಿ ಬದಲಾದದ್ದು ಹೇಗೆ? ಹಾಗಂತ, ಇವರ ವಿರೋಧವನ್ನು ಪರಿಗಣಿಸಿ ಪ್ರವಾದಿಯವರು(ಸ) ತಮ್ಮ ವಿಚಾರಗಳಲ್ಲಿ ಬದಲಾವಣೆ ಮಾಡಿಕೊಂಡರೇ? ವಿಗ್ರಹಾರಾಧನೆಯ ಪ್ರಬಲ ಪ್ರತಿಪಾದಕರಾಗಿದ್ದ ಈ ನಾಯಕರಿಗಾಗಿ ಪ್ರವಾದಿಯವರು ತಮ್ಮ ವಿಗ್ರಹಾರಾಧನೆ ವಿರೋಧಿ ನಿಲುವಿನಲ್ಲಿ (ಪವಿತ್ರ ಕುರ್‍ಆನ್ 22:26) ರಾಜಿ ಮಾಡಿಕೊಂಡರೇ? ಬಡ್ಡಿಯನ್ನು ಪ್ರೀತಿಸುತ್ತಿದ್ದ ಇವರಿಗಾಗಿ ತಮ್ಮ ಬಡ್ಡಿ ವಿರೋಧಿ ಸಿದ್ಧಾಂತದಲ್ಲಿ (ಪವಿತ್ರ ಕುರ್‍ಆನ್: 2:276) ಸಡಿಲಿಕೆ ತೋರಿದರೇ? ಶ್ರೇಣೀಕೃತ ಸಮಾಜ ವ್ಯವಸ್ಥೆಯನ್ನು ಪಾಲಿಸಿ, ಪೋಷಿಸಿಕೊಂಡು ಬರುತ್ತಿದ್ದ ಇವರಿಗಾಗಿ ಮನುಷ್ಯರೆಲ್ಲ ಸಮಾನರು (ಪವಿತ್ರ ಕುರ್‍ಆನ್ 49:13) ಎಂಬ ತಮ್ಮ ನಿಲುವಿನಲ್ಲಿ ಹೊಂದಾಣಿಕೆ ಮಾಡಿಕೊಂಡರೇ? ಹೆಣ್ಣು ಮಕ್ಕಳನ್ನು ಅನಿಷ್ಠ ಮತ್ತು ಹೊರೆಯಾಗಿ ಪರಿಗಣಿಸಿದ್ದ ಸಾಮಾಜಿಕ ವ್ಯವಸ್ಥೆಯನ್ನು ತಿದ್ದಲು ಪ್ರವಾದಿಯವರು ಅನುಸರಿಸಿದ ವಿಧಾನಗಳೇನು? ಮಾರುಕಟ್ಟೆಯಲ್ಲಿ ದಿನಸಿ ವಸ್ತುಗಳನ್ನು ಮಾರುವಂತೆ ಮನುಷ್ಯರನ್ನು ಮಾರುತ್ತಿದ್ದ ಸಂಪ್ರದಾಯಕ್ಕೆ ತೆರೆ ಎರೆಯಲು ಅವರು ಕೈಗೊಂಡ ಕ್ರಮಗಳೇನು? ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಿದ್ದ ಸಮಾಜದಲ್ಲಿ, ಇಷ್ಟ ಬಂದಷ್ಟು ಪತ್ನಿಯರನ್ನು ಹೊಂದಬಹುದಾಗಿದ್ದ ಸಮಾಜದಲ್ಲಿ, ಮದ್ಯದಿಂದ ತೊಯ್ದು ಹೋಗಿದ್ದ ಸಮಾಜದಲ್ಲಿ, ಉಳ್ಳವರಿಗೆ ನ್ಯಾಯ ಹಂಚಿಕೆಯಾಗುತ್ತಿದ್ದ ಸಮಾಜದಲ್ಲಿ, ಜಾತಿಗಳ ನಡುವೆ ವರ್ಷಗಟ್ಟಲೆ ಘರ್ಷಣೆ ನಡೆಯುತ್ತಿದ್ದ ಸಮಾಜದಲ್ಲಿ.. ಪ್ರವಾದಿ ಮುಹಮ್ಮದ್‍ರು(ಸ) ಹೇಗೆ ಮಾತಾಡಿದರು? ಏನು ಮಾತಾಡಿದರು? ಹೆಣ್ಣು ಮಕ್ಕಳು ಹೆತ್ತವರ ಸ್ವರ್ಗವಾಗಿದ್ದಾರೆ ಎಂಬ ಅಥವಾ ಹತ್ಯೆಗೊಳಗಾದ ಹೆಣ್ಣು ಮಗುವಿನ ಬಾಯಿಯಿಂದಲೇ ಅದಕ್ಕೆ ಕಾರಣರಾದವರ ಹೆಸರನ್ನು ಹೇಳಿಸಿ ಕೊಲೆಗಡುಕರಿಗೆ ನಾಳೆ ದೇವನು ಶಿಕ್ಷೆ ಕೊಡುವನು (ಪವಿತ್ರ ಕುರ್‍ಆನ್: 81:8-9) ಎಂಬ ತಮ್ಮ ನಿಲುವಿನಲ್ಲಿ ಗಟ್ಟಿಯಾಗಿದ್ದುಕೊಂಡೇ ವಿರೋಧಿಗಳನ್ನು ಅವರು ಮೆತ್ತಗಾಗಿಸಿದುದು ಹೇಗೆ? ಹೆಣ್ಣು ಮಕ್ಕಳಿಗೆ ಆಸ್ತಿಯ ಹಕ್ಕನ್ನು (ಪವಿತ್ರ ಕುರ್‍ಆನ್: 4:11-12, 33) ಪ್ರತಿಪಾದಿಸುತ್ತಲೇ, ಏಕ ಪತ್ನಿ ಕುಟುಂಬ ವ್ಯವಸ್ಥೆಗೆ ಒತ್ತು (ಪವಿತ್ರ ಕುರ್‍ಆನ್: 4:3) ನೀಡುತ್ತಲೇ, ಮದ್ಯಮುಕ್ತ (ಪವಿತ್ರ ಕುರ್‍ಆನ್: 2:219, 5:91), ಜಾತಿ ಮುಕ್ತ (ಪವಿತ್ರ ಕುರ್‍ಆನ್: 49:13), ನ್ಯಾಯನಿಷ್ಠ (ಪವಿತ್ರ ಕುರ್‍ಆನ್: 4:135) ಸಾಮಾಜಿಕ ವ್ಯವಸ್ಥೆಯನ್ನು ಬಲವಾಗಿ ಮಂಡಿಸುತ್ತಲೇ ಅವರು ವಿರೋಧಿಗಳನ್ನು ಹೇಗೆ ತಮ್ಮ ಬೆಂಬಲಿಗರಾಗಿ ಪರಿವರ್ತಿಸಿದರು? ಸಾಮಾನ್ಯವಾಗಿ, ವಿರೋಧಗಳನ್ನು ಎದುರಿಸುವುದಕ್ಕೆ ಎರಡು ದಾರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಒಂದು, ರಾಜಿ ಮನೋಭಾವವಾದರೆ ಇನ್ನೊಂದು ಬಲಾತ್ಕಾರ. ವಿಶೇಷ ಏನೆಂದರೆ, ಪ್ರವಾದಿ ಮುಹಮ್ಮದ್‍ರು(ಸ) ಈ ಎರಡನ್ನೂ ತಿರಸ್ಕರಿಸಿದರು. ತಾವು ಪ್ರತಿಪಾದಿಸುವ ಮೂಲ ಭೂತ ವಿಷಯಗಳಲ್ಲಿ ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ‘ಒಂದು ವರ್ಷ ನಮ್ಮ ವಿಗ್ರಹವನ್ನು ಆರಾಧಿಸಿ, ಇನ್ನೊಂದು ವರ್ಷ ನಿಮ್ಮ ದೇವರನ್ನು ನಾವು ಆರಾಧಿಸುತ್ತೇವೆ’ (ಪವಿತ್ರ ಕುರ್‍ಆನ್: 109:1-6) ಎಂಬ ವಿರೋಧಿಗಳ ಆಫರ್ ಅನ್ನು ಸ್ವೀಕರಿಸುತ್ತಿದ್ದರೆ ಅವರಿಗೆ(ಸ) ವಿರೋಧಿಗಳೇ ಹುಟ್ಟಿಕೊಳ್ಳುತ್ತಿರಲಿಲ್ಲ. ಧರ್ಮದಲ್ಲಿ ಬಲಾತ್ಕಾರವಿಲ್ಲ (ಪವಿತ್ರ ಕುರ್‍ಆನ್: 2:256) ಎಂಬ ಪ್ರತಿಪಾದನೆಯು ಅವರ ಸಿದ್ಧಾಂತದ ಪ್ರಮುಖ ಅಂಶವಾಗಿದ್ದರಿಂದ ಬಲಾತ್ಕಾರ ಅವರಿಂದ ಸಾಧ್ಯವೂ ಇರಲಿಲ್ಲ. ಆದರೂ ಒಂಟಿಯಾಗಿದ್ದ ಮುಹಮ್ಮದ್(ಸ) ಬೃಹತ್ ಜನಸಮೂಹವಾಗಿ ಮಾರ್ಪಟ್ಟರು. ಇದಕ್ಕೆ ಪವಿತ್ರ ಕುರ್‍ಆನ್ ಅವರ ಉತ್ತಮ ಗುಣಗಳನ್ನೇ ಕಾರಣಗಳಾಗಿ (ಪವಿತ್ರ ಕುರ್‍ಆನ್: 68: 4, 3:159) ಮುಂದಿಡುತ್ತದೆ. ವಿರೋಧಿಗಳ ಸ್ವಭಾವವೇ ನಿಮ್ಮದೂ ಆಗಿರುತ್ತಿದ್ದರೆ ನೀವು ಗುರಿ ಮುಟ್ಟುತ್ತಿರಲಿಲ್ಲ ಎಂದೂ ಅದು ಹೇಳುತ್ತದೆ. ನಿಜವಾಗಿ, ಇಂದಿನ ದಿನಗಳಲ್ಲಿ ಗಂಭೀರ ಅವಲೋಕನಕ್ಕೆ ಒಳಗಾಗಬೇಕಾದ ಸಂಗತಿ ಇದು. ಯಾಕೆ ಮತ್ತೆ ಮತ್ತೆ ಸಮಾಜದ ಶಾಂತಿ ಕದಡುತ್ತದೆ? ರಾಲಿ, ಪಥಸಂಚಲನ, ಸಮಾ ಜೋತ್ಸವಗಳು ಅಶಾಂತಿಯ ಸಂಕೇತಗಳಾಗಿ ಗುರುತಿಗೀಡಾಗುತ್ತಿವೆ?
ಎಲ್ಲ ಸಿದ್ಧಾಂತಗಳ ಗುರಿಯೂ ಮನುಷ್ಯರೇ. ಶಂಕರ, ಬುದ್ಧ, ಬಸವ, ಪ್ರವಾದಿ(ಸ) ಸಹಿತ ಎಲ್ಲರೂ ಮನುಷ್ಯರನ್ನು ಗುರಿಯಾಗಿಸಿಕೊಂಡೇ ಮಾತಾಡಿದರು. ಅವರು ಮಾತಾಡುವಾಗ ಒಂಟಿಯಾಗಿದ್ದರು. ಎದುರಲ್ಲಿ ಗುಂಪುಗಳಿದ್ದುವು. ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದ ವಿಧಾನ ಇದು. ಈ ಗುಂಪುಗಳು ಈ ಒಂಟಿ ಮನುಷ್ಯರಿಂದ ಎಷ್ಟು ಪ್ರಭಾವಿತಗೊಂಡಿತೆಂದರೆ, ತಮ್ಮ ಸ್ವಭಾವವನ್ನು ಕೈಬಿಟ್ಟು ಒಂಟಿ ಮನುಷ್ಯರ ಸ್ವಭಾವವನ್ನು ತಮ್ಮದಾಗಿಸಿಕೊಂಡವು. ‘ನಿಮ್ಮದು ಒರಟು ಸ್ವಭಾವ ಮತ್ತು ಕಟು ಮನಸ್ಸಾಗಿರುತ್ತಿದ್ದರೆ ಜನರು ನಿಮ್ಮಿಂದ ದೂರ ಹೋಗುತ್ತಿದ್ದರು' ಎಂದು ಪವಿತ್ರ ಕುರ್‍ಆನ್ (2:159) ಪ್ರವಾದಿ ಮುಹಮ್ಮದ್‍ರನ್ನು(ಸ) ಉದ್ದೇಶಿಸಿ ಹೇಳಿದ್ದೂ ಇದನ್ನೇ ಸಮರ್ಥಿಸುತ್ತದೆ. ಆದರೆ, ಇವತ್ತು ಮುಖ್ಯವಾಗಿ ಹಿಂದೂಗಳು ಅಥವಾ ಮುಸ್ಲಿಮರು ನಡೆಸುವ ಕಾರ್ಯಕ್ರಮಗಳು ಭಯಭೀತಿಗೆ ಕಾರಣವಾಗುತ್ತಿವೆ. ರಾಜಕೀಯ ಸಭೆಗಳಿಂದ ಆಗದ ಘರ್ಷಣೆಗಳು ಧಾರ್ಮಿಕ ಸಭೆಗಳಿಂದ ಆಗುವ ಸ್ಥಿತಿ ನಿರ್ಮಾಣಗೊಂಡಿದೆ. ನಿಜವಾಗಿ, ಘರ್ಷಣೆ, ಅಶಾಂತಿಗಳು ಆಗುವುದಕ್ಕೆ ಹೆಚ್ಚಿನ ಸಾಧ್ಯತೆ ಇರುವುದು ರಾಜಕೀಯ ಸಭೆಗಳಲ್ಲಿ. ಯಾಕೆಂದರೆ ಅಲ್ಲಿ ಮೌಲ್ಯಗಳಿಗೆ ಆಯುಷ್ಯ ಕಡಿಮೆ. ಅಧಿಕಾರ ದಾಹವೇ ರಾಜಕೀಯದ ಮುಖ್ಯ ಗುರಿ. ಅಲ್ಲದೇ, ಸಾಧು ಸಂತರು ವಿದ್ವಾಂಸರೆಲ್ಲ ಆ ಕ್ಷೇತ್ರದಲ್ಲಿರುವುದು ಕಡಿಮೆ. ಇದ್ದರೂ ನಿರ್ಣಾಯಕ ಸ್ಥಾನಕ್ಕೆ ಇನ್ನೂ ತಲುಪಿಲ್ಲ. ಆದರೂ ಅಲ್ಲಿಗಿಂತ ಈ ಕ್ಷೇತ್ರವೇ ಹೆಚ್ಚು ಅಪಾಯಕಾರಿಯಾಗಿ ಮಾರ್ಪಟ್ಟಿರುವುದೇಕೆ? ರಾಜಕೀಯ ಕಾರ್ಯಕ್ರಮಕ್ಕೆ ಮಾಡದ ಬಂದೋಬಸ್ತನ್ನು ಇಂಥ ಕಾರ್ಯಕ್ರಮಗಳ ವೇಳೆ ಮಾಡಲಾಗುತ್ತಿರುವುದೇಕೆ?. ಪೊಲೀಸ್ ವ್ಯವಸ್ಥೆಯನ್ನು ಸಜ್ಜುಗೊಳಿಸಲಾಗುತ್ತಿರುವುದೇಕೆ?. ಆ ದಿನ ಮದುವೆ, ಇನ್ನಿತರ ಶುಭ ಕಾರ್ಯಕ್ರಮಗಳನ್ನೂ ಇಟ್ಟುಕೊಳ್ಳಲಾಗುವುದಿಲ್ಲ. ಇದಕ್ಕೆ ಯಾರು ಹೊಣೆ? ಧರ್ಮವನ್ನು ಮತ್ತು ಅದರ ಕಾರ್ಯಕ್ರಮಗಳನ್ನು ‘ಒರಟು'ತನಕ್ಕೆ ಇಳಿಸಿದವರಾರು? ಒಂದು ಕಾರ್ಯಕ್ರಮ ಮುಗಿಯುವಾಗ ಅದರ ಫಲಿತಾಂಶವಾಗಿ ವಿರೂಪಗೊಂಡ ಮಸೀದಿ, ಚರ್ಚ್‍ಗಳು ಕಾಣಸಿಗುತ್ತವೆ. ಅದರ ಹೆಸರಲ್ಲಿ ಮತ್ತೆ ಸಂಘರ್ಷದ ವಾತಾವರಣ ನಿರ್ಮಾಣಗೊಳ್ಳುತ್ತದೆ.
ಅಷ್ಟಕ್ಕೂ, ಒಂದು ಊರಿನ ಮಸೀದಿ, ಮಂದಿರ, ಚರ್ಚ್‍ಗಳ ರಕ್ಷಣೆಯ ಹೊಣೆಯನ್ನು ಆ ಊರಿನ ಮಂದಿಯೇ ವಹಿಸುವ ಸನ್ನಿವೇಶವನ್ನೊಮ್ಮೆ ಊಹಿಸಿಕೊಳ್ಳಿ. ಮಸೀದಿ, ಮಂದಿರ, ಚರ್ಚ್‍ಗಳು ಪರಸ್ಪರ ಸೌಹಾರ್ದದ ಕೇಂದ್ರಗಳಾಗಿ ಕಂಗೊಳಿಸುವುದನ್ನು ಊಹಿಸಿಕೊಳ್ಳಿ. ಯಾಕೆ ಅದು ನಮ್ಮಿಂದ ಸಾಧ್ಯವಾಗುತ್ತಿಲ್ಲ? ಮಂದಿರಕ್ಕೆ ಕಲ್ಲು ಬಿದ್ದರೆ 'ಮಸೀದಿಗಳು' ಸಂತಸಪಡುವುದು ಅಥವಾ ಮಸೀದಿಗೆ ಹಾನಿಯಾದರೆ 'ಮಂದಿರಗಳು' ಖುಷಿ ಪಡುವುದೆಲ್ಲ ಯಾಕೆ? ಪವಿತ್ರ ಕುರ್‍ಆನ್ ಅಂತೂ ಇತರರ ಆರಾಧ್ಯರನ್ನು ತೆಗಳುವುದನ್ನೇ (6:108) ನಿಷೇಧಿಸಿದೆ.
ಖಲೀಫಾ ಉಮರ್ ಫಾರೂಕ್‍ರ(ರ) ಆಡಳಿತ ಕಾಲ. ಡಮಾಸ್ಕಸ್‍ನಲ್ಲಿ ಗ್ರೀಕರ ಜುಪಿಟರ್ ದೇವಿಯ ಮೂರ್ತಿಯಿರಿಸಿದ ಬೃಹತ್ ಆರಾಧನಾಲಯವಿತ್ತು. ಕ್ರೈಸ್ತರು ಆ ಪ್ರದೇಶವನ್ನು ಜಯಿಸಿದ ಬಳಿಕ ಆ ಆರಾಧನಾಲಯವನ್ನು ಯೋಹಾನನ ಚರ್ಚ್ ಆಗಿ ಮಾರ್ಪಡಿಸಿದ್ದರು. ಉಮರ್‍ರ ಕಾಲದಲ್ಲಿ ಆ ಪ್ರದೇಶವು ಅವರ ಆಡಳಿತ ವ್ಯಾಪ್ತಿಗೆ ಬಂತು. ಮುಸ್ಲಿಮರ ಬದುಕು-ವ್ಯವಹಾರಗಳು ಡಮಾಸ್ಕಸ್‍ನ ಮಂದಿಯನ್ನು ಪ್ರಬಲವಾಗಿ ಆಕರ್ಷಿಸಿದುವು. ಅವರು ಮುಸ್ಲಿಮರ ಬೆಂಬಲಿಗರಾದರು. ಮಾತ್ರವಲ್ಲ, ಯೋಹಾನನ ಚರ್ಚ್ ಅನ್ನು ಮಸೀದಿಯಾಗಿಸಬೇಕೆಂಬ ಒತ್ತಾಯವನ್ನೂ ಹೇರತೊಡಗಿದರು. ಆದರೆ ಉಮರ್ ಅಥವಾ ಅವರ ಆಡಳಿತ ಪ್ರತಿನಿಧಿ ಅದನ್ನು ಒಪ್ಪಿಕೊಳ್ಳಲಿಲ್ಲ. ಚರ್ಚ್‍ನಲ್ಲಿ ಯೋಹಾನನ್ನು ಆರಾಧಿಸುವುದಕ್ಕೆ ಕೊನೆಯ ವ್ಯಕ್ತಿ ಇರುವವರೆಗೆ ಅಂಥ ಪ್ರಯತ್ನಗಳು ಧರ್ಮವಿರೋಧಿ ಎಂದು ಹೇಳಿದರು. ನಿಜವಾಗಿ, ಇತರ ಧರ್ಮ ಮತ್ತು ಅದರ ಸಂಕೇತಗಳಿಗೆ ಕೊಡುವ ಬಹುದೊಡ್ಡ ಗೌರವ ಇದು. "ಮುಸ್ಲಿಮೇತರ ಪ್ರಜೆಗಳನ್ನು ಯಾರಾದರೂ ಹಿಂಸಿಸಿದರೆ, ಅವರ ಮೇಲೆ ದುಬಾರಿ ತೆರಿಗೆ ಹೇರಿದರೆ, ಅವರೊಂದಿಗೆ ಕ್ರೂರವಾಗಿ ವರ್ತಿಸಿದರೆ, ಅವರ ಹಕ್ಕುಗಳನ್ನು ಮೊಟಕುಗೊಳಿಸಿದರೆ ದೇವನ ಬಳಿ ಅಂಥವರ ವಿರುದ್ಧ ನಾನೇ ಸ್ವತಃ ದೂರು ಸಲ್ಲಿಸುವೆ" ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿರುವುದು ಇದೇ ಆಶಯದಲ್ಲಿ. ನೆರೆಯವನ ಹಸಿವನ್ನು ಅವನ ಧರ್ಮ, ಜಾತಿ, ಪಂಗಡ, ಚರ್ಮ, ಭಾಷೆಗೆ ಅತೀತವಾಗಿ ಅವರು ನೋಡಿದುದರಲ್ಲಿಯೂ ಈ ಧಾರ್ಮಿಕ ವೈಶಾಲ್ಯವೇ ಎದ್ದು ಕಾಣುತ್ತದೆ. ಬಶೀರ್ ಬಿನ್ ಉಬೈರಿಕ್ ಎಂಬ ಮುಸ್ಲಿಮನು ಇನ್ನೋರ್ವ ಮುಸ್ಲಿಮನ ಯುದ್ಧ ಕವಚವನ್ನು ಕದ್ದು ಕಳವಿನ ಆರೋಪವನ್ನು ಓರ್ವ ಯಹೂದಿಯ ಮೇಲೆ ಹೊರಿಸಿದ್ದು ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಪ್ರವಾದಿಯವರು ಯಹೂದಿಯನ್ನೇ ತಪ್ಪಿತಸ್ಥ ಎಂದು ತೀರ್ಮಾನಿಸಲು ಮುಂದಾದಾಗ ಪವಿತ್ರ ಕುರ್‍ಆನ್ ಅವರನ್ನು ತಿದ್ದಿದ ಘಟನೆಯು (4: 105) ಧರ್ಮ ಎಂದರೇನು ಎಂಬುದನ್ನು ವ್ಯಾಖ್ಯಾನಿಸುವ ಉತ್ಕೃಷ್ಟ ಸಂದರ್ಭವಾಗಿದೆ. ನ್ಯಾಯಕ್ಕೆ, ಸತ್ಯಕ್ಕೆ, ಹಿಂದೂ-ಮುಸ್ಲಿಮ್-ಕ್ರೈಸ್ತ-ಯಹೂದಿ ಎಂಬ ಬೇಧ ಇಲ್ಲ. ಅನ್ಯಾಯ ಹಿಂದೂವಿನದ್ದಾದರೂ ಮುಸ್ಲಿಮನದ್ದಾದರೂ ಅನ್ಯಾಯವೇ. ಆದರೆ ಎಷ್ಟಂಶ ಈ ಮೌಲ್ಯವನ್ನು ಇವತ್ತಿನ ಧರ್ಮಾನುಯಾಯಿಗಳಿಗೆ ಪಾಲಿಸಲು ಸಾಧ್ಯವಾಗುತ್ತಿದೆ? ಪ್ರವಾದಿಯವರನ್ನು(ಸ) ಭೇಟಿಯಾಗಲು ಇತಿಯೋಪಿಯಾದಿಂದ ಬಂದ ಕ್ರೈಸ್ತ ತಂಡಕ್ಕೆ ಮಸೀದಿಯಲ್ಲಿ ವಿಶ್ರಾಂತಿ ಪಡೆಯಲು ಅವರು ಅವಕಾಶ ಮಾಡಿಕೊಟ್ಟಿದ್ದರು. ಖಲೀಫಾ ಅಬೂಬಕರ್‍ರನ್ನು(ರ) ರಾಷ್ಟ್ರದ ಕ್ರೈಸ್ತರು ತಮ್ಮ ನೂತನ ಚರ್ಚ್ ಅನ್ನು ಉದ್ಘಾಟಿಸುವುದಕ್ಕೆ ಆಮಂತ್ರಿಸಿದರಲ್ಲದೇ ತಮ್ಮ ಕ್ರಮದಂತೆ ನಮಾಝ್ ನಿರ್ವಹಿಸಿ ಉದ್ಘಾಟಿಸಿ ಎಂದು ವಿನಂತಿಸಿದಾಗ ಅವರು ಅದನ್ನು ನಯವಾಗಿ ತಿರಸ್ಕರಿಸಿದ ಘಟನೆಯೊಂದಿದೆ. ಹಾಗೆ ಉದ್ಘಾಟಿಸಿದರೆ ನಿಜ ಸ್ಥಿತಿಯನ್ನು ಅರಿಯದವರು ಮುಂದೆ ಖಲೀಫಾ ನಮಾಝ್ ಮಾಡಿದ ಸ್ಥಳವೆಂದು ವಾದಿಸಿ ಹಕ್ಕೊತ್ತಾಯ ಮಾಡುವ ಸಾಧ್ಯತೆ ಇದೆ ಎಂದು ಅದಕ್ಕೆ ಅವರು ಕಾರಣಗಳನ್ನು ಕೊಟ್ಟಿದ್ದರು. ಇಂಥ ಉದಾತ್ತ ಮೌಲ್ಯಗಳು ಇವತ್ತು ‘ಕಾಣೆಯಾದ’ ಪಟ್ಟಿಯಲ್ಲಿ ದಿನೇ ದಿನೇ ಸೇರಿಕೊಳ್ಳುತ್ತಿರುವುದೇಕೆ? ಧರ್ಮಗಳು ಮತ್ತು ಅವುಗಳ ಆರಾಧನಾಲಯಗಳ ನಡುವೆ ಇರಬೇಕಾದ ಸೌಹಾರ್ದತೆಯನ್ನು ಕಿತ್ತು ಹಾಕುತ್ತಿರುವವರು ಯಾರು? ಅವರ ಉದ್ದೇಶವೇನು? ಪ್ರವಾದಿಗಳು ತಮ್ಮ ಗುಣ ನಡತೆಗಳಿಂದಲೇ ವಿರೋಧಿಗಳನ್ನು ಗೆಳೆಯರನ್ನಾಗಿ ಮಾರ್ಪಡಿಸಿದ್ದರು. ಇವತ್ತು?
ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಪಾದಚಾರಿಗಳಾಗಿ ತೆರಳುತ್ತಿದ್ದ ಹಿಂದೂ ಯಾತ್ರಿಕರು ದಕ್ಷಿಣ ಕನ್ನಡ ಜಿಲ್ಲೆಯ ಸುಂಕದಕಟ್ಟೆ ಎಂಬಲ್ಲಿಯ ಮುಹ್ಯುದ್ದೀನ್ ಜುಮಾ ಮಸೀದಿಯ ಹತ್ತಿರ ತಲುಪಿದಾಗ ರಾತ್ರಿಯಾಗಿದ್ದು, ತಂಗಲು ಅವಕಾಶ ಮಾಡಿಕೊಡುವಂತೆ ಮಸೀದಿಯವರೊಂದಿಗೆ ವಿನಂತಿಸಿದಾಗ ಮಸೀದಿಯಲ್ಲೇ ಉಳಕೊಳ್ಳಲು ವ್ಯವಸ್ಥೆ ಮಾಡಿದ ಘಟನೆಯೊಂದು ಕಳೆದವಾರ ನಡೆದಿತ್ತು. ಧರ್ಮಗಳ ನಿಜ ಮೌಲ್ಯವನ್ನು ಸಾರುವ ಇಂಥ ಘಟನೆಗಳು ಇನ್ನೂ ಹೆಚ್ಚಾಗಲಿ ಮತ್ತು ಮಾಧ್ಯಮಗಳ ಮುಖಪುಟಗಳಲ್ಲಿ ಇಂಥವುಗಳಿಗೆ ಜಾಗ ಸಿಗಲಿ ಎಂದೇ ಹಾರೈಸೋಣ..
No comments:
Post a Comment