Tuesday, February 3, 2015

‘ಸೆಕ್ಯುಲರ್’ ಕಾಣೆಯಾದದ್ದು ಆಕಸ್ಮಿಕವೋ ಉದ್ದೇಶಪೂರ್ವಕವೋ?

   ಜನವರಿ 26ರಂದು ವಿವಿಧ ಪತ್ರಿಕೆಗಳಿಗೆ ಪ್ರಧಾನಿ ಮೋದಿ ಸರಕಾರವು ಬಿಡುಗಡೆಗೊಳಿಸಿದ ಜಾಹೀರಾತಿನಲ್ಲಿ ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಕಾಣೆಯಾದದ್ದು ಹಾಗೂ ಭಾರತದ ಧಾರ್ಮಿಕ ಬಹುತ್ವವನ್ನು ಬಿಂಬಿಸುವ ಜಾಹೀರಾತಿನ ಚಿತ್ರದಲ್ಲಿ ಪೇಟ ಧರಿಸಿದ ಸಿಖ್ ಮತ್ತು ಟೋಪಿ ಧರಿಸಿದ ಮುಸ್ಲಿಮ್ ನಾಪತ್ತೆಯಾದುದನ್ನು ಕೇವಲ ಆಕಸ್ಮಿಕ ಎಂದು ತಳ್ಳಿ ಹಾಕುವಂತಿಲ್ಲ.
    ಪಹ್ಲಜ್ ನಿಹಲಾನಿ, ಜಾರ್ಜ್ ಬೇಕರ್, ವಾಣಿ ತ್ರಿಪಾಠಿ, ಜೀವಿತಾ ರಾಜಶೇಖರ್, ಎಸ್.ವಿ. ಶೇಖರ್, ರಮೇಶ್ ಪತಂಗೆ.. ಸೇರಿದಂತೆ 9 ಮಂದಿಯನ್ನು ಕೇಂದ್ರ ಸರಕಾರವು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್(ಸೆನ್ಸಾರ್ ಮಂಡಳಿ)ಗೆ ಕಳೆದವಾರ ಆಯ್ಕೆ ಮಾಡಿತು. ಕಳೆದ ಲೋಕಸಭಾ ಚುನಾವಣೆಗಿಂತ ತುಸು ಮೊದಲು 2013 ಮೇಯಲ್ಲಿ ‘ಹರ್ ಘರ್ ಮೋದಿ’ ಎಂಬ ವೀಡಿಯೋವೊಂದು ಆನ್‍ಲೈನ್‍ನಲ್ಲಿ ಪ್ರಸಾರವಾಗಿತ್ತು. ಅದನ್ನು ತಯಾರಿಸಿ ಅಪ್‍ಲೋಡ್ ಮಾಡಿದವರೇ ಪಹ್ಲಾಜ್ ನಿಹಲಾನಿ. ಬಿಜೆಪಿಯ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಮ್ ಸಿನ್ಹಾರ ಹತ್ತಿರದ ಸಂಬಂಧಿಯಾಗಿರುವ ನಿಹಲಾನಿಯವರು ಸಂಘಪರಿವಾರದ ಹಿನ್ನೆಲೆಯವರು. ಮೋದಿಯನ್ನು ಆ್ಯಕ್ಷನ್ ಹೀರೋ ಎಂದು ಕೊಂಡಾಡಿದ್ದೂ ಅವರೇ. ಜಾರ್ಜ್ ಬೇಕರ್ ಅವರು ಬಿಜೆಪಿ ಟಿಕೆಟ್‍ನಲ್ಲಿ ಪಶ್ಚಿಮ ಬಂಗಾಳದಿಂದ ಚುನಾವಣೆಗೆ ಸ್ಪರ್ಧಿಸಿದವರಾಗಿದ್ದಾರೆ. ವಾಣಿ ತ್ರಿಪಾಠಿಯಂತೂ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಜೀವಿತಾ ಶೇಖರ್‍ರು ತೆಲಂಗಾಣ ಬಿಜೆಪಿಯ ವಕ್ತಾರೆಯಾಗಿ ಕೆಲಸ ಮಾಡಿರುವರಲ್ಲದೇ ಲೋಕಸಭಾ ಚುನಾವಣೆಯಲ್ಲಿ ಮೋದಿಗಾಗಿ ಹಾಡೊಂದನ್ನು ಬಿಡುಗಡೆ ಮಾಡಿದ್ದರು. ತಮಿಳು ನಟರಾದ ಎಸ್.ವಿ. ಶೇಖರ್ ಅವರು 2013ರಲ್ಲಿ ಬಿಜೆಪಿಯನ್ನು ಸೇರಿದ್ದರು. ಮರಾಠಿ ವಾರಪತ್ರಿಕೆಯ ಸಂಪಾದಕರಾಗಿರುವ ರಮೇಶ್ ಪತಂಗೆ ಸಂಘಪರಿವಾರದ ಬೌದ್ಧಿಕ್ ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ. ಸಂಘದ ಅಂಗಸಂಸ್ಥೆಯಾದ ಸಾಮಾಜಿಕ್ ಸಮರಸತಾ ಮಂಚ್‍ನ ಸ್ಥಾಪಕ ಸದಸ್ಯರೂ ಆಗಿದ್ದಾರೆ.. ಏನಿವೆಲ್ಲ? ಸೆನ್ಸಾರ್ ಮಂಡಳಿಗೆ ಅದರದ್ದೇ ಆದ ಘನತೆ, ಗೌರವವಿದೆ. ಅದು ಬಿಜೆಪಿಯದ್ದೋ ಕಾಂಗ್ರೆಸ್ಸಿನದ್ದೋ ಅಂಗಸಂಸ್ಥೆಯಲ್ಲ. ಈ ದೇಶದಲ್ಲಿ ಯಾವುದೇ ಸಿನಿಮಾ, ಟಿ.ವಿ. ಜಾಹೀರಾತು, ಟಿ.ವಿ. ಕಾರ್ಯಕ್ರಮಗಳು ಪ್ರಸಾರವಾಗಬೇಕಾದರೆ ಅದಕ್ಕೆ ಸೆನ್ಸಾರ್ ಮಂಡಳಿಯ ಒಪ್ಪಿಗೆ ಬೇಕು. ಅಷ್ಟರ ಮಟ್ಟಿಗೆ ಅದು ಈ ದೇಶದ ಸಾಂಸ್ಕøತಿಕ ಕ್ಷೇತ್ರವನ್ನು ಪ್ರತಿನಿಧಿಸುತ್ತದೆ. ಇಂಥದ್ದೊಂದು ಸ್ವತಂತ್ರ ಸಂಸ್ಥೆಯನ್ನು ಬಿಜೆಪಿಯು ತನ್ನ ಅಂಗಸಂಸ್ಥೆಯಂತೆ ನಡೆಸಿಕೊಳ್ಳುವುದೆಂದರೇನು? ಸೆನ್ಸಾರ್ ಮಂಡಳಿಯ ಸರ್ಟಿಫಿಕೇಟ್‍ಗಾಗಿ ವಿವಿಧ ವಿಚಾರಗಳನ್ನು ಪ್ರತಿನಿಧಿಸುವ ಸಿನಿಮಾಗಳು, ಕಿರುಚಿತ್ರಗಳು, ಟಿ.ವಿ. ಕಾರ್ಯಕ್ರಮಗಳು ಬರಬಹುದು. ವಿವಿಧ ಪಕ್ಷಗಳೊಂದಿಗೆ ಗುರುತಿಸಿಕೊಂಡವರ ಚಿತ್ರಗಳೂ ಅದರಲ್ಲಿರಬಹುದು. ಸಂಘಪರಿವಾರದ ಸಾಂಸ್ಕøತಿಕ ನಿಲುವುಗಳನ್ನು ಪ್ರಶ್ನಿಸುವಂತಹ ಪ್ರಖರ ವೈಚಾರಿಕತೆಯುಳ್ಳವೂ ಅವುಗಳಲ್ಲಿರಬಹುದು. ಇಂಥ ಸಂದರ್ಭಗಳಲ್ಲೆಲ್ಲಾ ಪಹ್ಲಾಜ್ ನಿಹಲಾನಿ ಮತ್ತು ಸಂಗಡಿಗರಿಗೆ ಹಿತಾಸಕ್ತಿಯ ಸಂಘರ್ಷ ಎದುರಾಗಲಾರದೇ? ಮೋದಿಯನ್ನು ಆ್ಯಕ್ಷನ್ ಹೀರೋ ಅನ್ನುವವ, ಮೋದಿಗಾಗಿ ಹಾಡನ್ನು ಅರ್ಪಿಸುವವ, ವೀಡಿಯೋ ತಯಾರಿಸುವವ, ಪಕ್ಷಕ್ಕಾಗಿ ದುಡಿಯುವವ ಒಂದೇ ಸಂಸ್ಥೆಯಲ್ಲಿದ್ದರೆ, ಆ ಸಂಸ್ಥೆಯೊಳಗಿನ ವಾತಾವರಣ ಹೇಗಿರಬಹುದು? ಜಾತ್ಯತೀತ ಮತ್ತು ಸಮಾಜವಾದಿ ಎಂಬ ಸಂವಿಧಾನದ ಆಶಯವನ್ನು ಕಡೆಗಣಿಸುವ ಮೋದಿ ಸರಕಾರ ಹಾಗೂ ಸೆನ್ಸಾರ್ ಮಂಡಳಿಯನ್ನು ‘ಜಾತ್ಯತೀತ’ ಆಶಯದಿಂದ ಮುಕ್ತಗೊಳಿಸಿರುವುದು ಏನನ್ನು ಸೂಚಿಸುತ್ತದೆ? ಇದು ಆಕಸ್ಮಿಕವೇ? ಕಾಕತಾಳೀಯವೇ? ಉದ್ದೇಶಪೂರ್ವಕವೇ?
   Socialist  ಮತ್ತು Secular ಎಂಬುದು ಬರೇ ಎರಡು ಪದಗಳಲ್ಲ. 1977 ಜನವರಿಯಲ್ಲಿ ಈ ಎರಡು ಪದಗಳನ್ನು ಸಂವಿಧಾನಕ್ಕೆ ಸೇರಿಸಲಾಯಿತು ಎಂಬುದರಿಂದ ಅವೆರಡರ ಘನತೆ ತಗ್ಗುವುದೂ ಇಲ್ಲ. “We the People of India - ಭಾರತ ವಾಸಿಗಳಾದ ನಾವು, ಈ ದೇಶವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಲೋಕತಾಂತ್ರಿಕ ಗಣರಾಜ್ಯವನ್ನಾಗಿ ಸ್ಥಾಪಿಸಿ ಸಂವಿಧಾನವನ್ನು ಸ್ವೀಕರಿಸುತ್ತೇವೆ..' ಎಂಬ ಸಂವಿಧಾನದ ವಾಕ್ಯದಲ್ಲಿ ವಿಶಾಲಾರ್ಥವಿದೆ. ಒಂದು ವೇಳೆ ಈ ವಾಕ್ಯದಿಂದ  Socialist  ಮತ್ತು Secular ಎಂಬೆರಡು ಪದಗಳನ್ನು ಕಳಚಿ ಬಿಟ್ಟರೆ ಸಂವಿದಾನದಲ್ಲಿ ಉಳಿಯುವ ಸಾರ್ವಭೌಮ ಮತ್ತು ಲೋಕತಾಂತ್ರಿಕ ಪದಗಳು ತೀರಾ ಬಲಹೀನವಾಗಿ ಬಿಡಬಲ್ಲುದು. “ಭಾರತ ನಿವಾಸಿಗಳಾದ ನಾವು ಜಾತ್ಯತೀತ ಮತ್ತು ಸಮಾಜವಾದಿ ರಾಷ್ಟ್ರವನ್ನು ಕಟ್ಟುತ್ತೇವೆ..” ಎಂದು ಘೋಷಿಸುವಾಗ ಅದು ಅನೇಕಾರು ಪೂರ್ವಾಗ್ರಹಗಳನ್ನು ತೊಡೆದು ಹಾಕುತ್ತದೆ. ಹೀಗೆ ಘೋಷಿಸಿದ ಬಳಿಕ ಈ ದೇಶ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ. ಮುಸ್ಲಿಮ್, ಕ್ರೈಸ್ತ, ಸಿಕ್ಖ್ ರಾಷ್ಟ್ರವಾಗಿ ಗುರುತಿಸಿಕೊಳ್ಳುವುದಕ್ಕೂ ಅವಕಾಶವಿಲ್ಲ. ಮೇಲ್ವರ್ಗದ್ದೋ ಆರ್ಯನ್ನರದ್ದೋ ದ್ರಾವಿಡರದ್ದೋ ರಾಷ್ಟ್ರವಾಗಲೂ ಸಾಧ್ಯವಿಲ್ಲ. ಈ ದೇಶ ಎಲ್ಲರದ್ದು. ಶ್ರೀಮಂತ ಮತ್ತು ಬಡವನದ್ದು. ಗುಡಿಸಲ ವಾಸಿ ಮತ್ತು ಬಂಗಲೆ ವಾಸಿಯದ್ದು. ಹಿಂದೂ ಮತ್ತು ಮುಸ್ಲಿಮನದ್ದು. ಯಾರ ನಂಬಿಕೆಗಳೂ ಮೇಲಲ್ಲ, ಕೀಳಲ್ಲ. ಆದರೆ ಈ ಸಮಾನತೆ ಮತ್ತು ಜಾತ್ಯತೀತ ಮೌಲ್ಯವನ್ನು ಸಾರುವ ಸಂವಿಧಾನದ ತಿದ್ದುಪಡಿಯನ್ನು ಅಷ್ಟೇ ಸ್ಫೂರ್ತಿಯಿಂದ ಒಪ್ಪಿಕೊಳ್ಳುವುದಕ್ಕೆ ಮೋದಿ ಮತ್ತು ಅವರ ಬೆಂಬಲಿಗರಿಗೆ ಈ ಹಿಂದಿನಿಂದಲೂ ಸಾಧ್ಯವಾಗಿಲ್ಲ. ಈ ದೇಶ ಹಿಂದೂ ರಾಷ್ಟ್ರವಾಗಿ ಘೋಷಿಸಬೇಕಾದರೆ ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಹೊರ ಬೀಳಬೇಕಾಗುತ್ತದೆ. ಮುಸ್ಲಿಮರು ಮತ್ತು ಕ್ರೈಸ್ತರು ಅನ್ಯರಾಗಬೇಕಾಗುತ್ತದೆ. ಆರ್ಯನ್ನರು ಮತ್ತು ದ್ರಾವಿಡರು ಎಂಬ ವಿಂಗಡನೆಯನ್ನು ಅಳಿಸಬೇಕಾಗುತ್ತದೆ. ಇದೀಗ ಈ ಸಿದ್ಧಾಂತದ ಜಾರಿಯ ಸೂಚನೆಗಳು ವಿವಿಧ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿವೆ. ಗುಜರಾತ್‍ನ ಶಾಲೆಗಳಲ್ಲಿ ಹೆಚ್ಚುವರಿ ಓದಿಗಾಗಿ ಆಯ್ಕೆ ಮಾಡಲಾಗಿರುವ 9 ಪುಸ್ತಕಗಳ ಪೈಕಿ 8 ಪುಸ್ತಕಗಳೂ ಶಿಕ್ಷಾ ಬಚಾವೋ ಆಂದೋಲನ್ ಸಮಿತಿಯ ಮುಖ್ಯಸ್ಥ ದೀನನಾಥ್ ಬಾತ್ರ ಬರೆದಿರುವಂಥದ್ದು. ವೆಂಡಿ ಡೊನಿಗರ್ ಬರೆದಿರುವ ‘ದಿ ಹಿಂದೂಸ್: ಆ್ಯನ್ ಆಲ್ಟರ್ ನೇಟಿವ್ ಹಿಸ್ಟರಿ' ಎಂಬ ಕೃತಿಯನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಮಾಡುವ ವರೆಗೆ ಇವರು ಯಾರೆಂಬುದು ಈ ದೇಶದ ಹೆಚ್ಚಿನ ಮಂದಿಗೆ ಗೊತ್ತೇ ಇರಲಿಲ್ಲ. ನಿವೃತ್ತ ಪ್ರಾಧ್ಯಾಪಕರಾಗಿರುವ ಇವರು ಸಂಘಪರಿವಾರದ ಆಲೋಚನೆಗಳಿಗೆ ತಕ್ಕಂತೆ ಇತಿಹಾಸವನ್ನು ಪುನರ್ರಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಗುಜರಾತ್‍ನ ವಿದ್ಯಾರ್ಥಿಗಳ ನಡುವೆ ‘ಬಾಲ ನರೇಂದ್ರ’ ಎಂಬ ಪುಸ್ತಕ ಹೆಚ್ಚು ಜನಪ್ರಿಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯಕಾಲದ ಸಂಗತಿಗಳನ್ನು ಈ ಕೃತಿಯಲ್ಲಿ ರೋಚಕವಾಗಿ ವರ್ಣಿಸಲಾಗಿದೆ. ಅವರ ಎಲ್ಲ ಸಾಧನೆಗಳಿಗೂ ಭಾರತೀಯ ಹಿಂದೂ ಸಂಸ್ಕøತಿಯೇ ಕಾರಣವೆಂದು ಅದರಲ್ಲಿ ಹೇಳಲಾಗಿದೆ. ಅಲ್ಲದೇ ವಾರಗಳ ಹಿಂದೆ ಅಹ್ಮದಾಬಾದ್‍ನ ಮುನ್ಸಿಪಲ್ ಕಾರ್ಪೋರೇಶನ್ ಹೊರಡಿಸಿದ ಸುತ್ತೋಲೆಯಂತೂ ಸಂವಿಧಾನದ ಜಾತ್ಯತೀತ ಆಶಯವನ್ನೇ ಪ್ರಶ್ನಿಸುವಂತಿದೆ. ಈ ಕಾರ್ಪೋರೇಶನ್ನಿನ ವ್ಯಾಪ್ತಿಯಲ್ಲಿ 450 ಪ್ರಾಥಮಿಕ ಶಾಲೆಗಳು ಬರುತ್ತವೆ. ಇದರಲ್ಲಿ 64 ಉರ್ದು ಶಾಲೆಗಳಿವೆ. ಸುಮಾರು 16 ಸಾವಿರ ಮುಸ್ಲಿಮ್ ವಿದ್ಯಾರ್ಥಿಗಳು ಈ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಈ ಎಲ್ಲ ಶಾಲೆಗಳಲ್ಲಿ ವಸಂತ ಪಂಚಮಿಯಂದು ಕಡ್ಡಾಯವಾಗಿ ಸರಸ್ವತಿ ಪೂಜೆಯನ್ನು ನೆರವೇರಿಸಬೇಕೆಂದು ಕಾರ್ಪೋರೇಶನ್ನಿನ ಸುತ್ತೋಲೆಯಲ್ಲಿ ಆದೇಶಿಸಲಾಗಿತ್ತು. ವಿಗ್ರಹ ಪೂಜೆಯನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಡುವ ಈ ಸುತ್ತೋಲೆಯು ಸಂವಿಧಾನದ ಜಾತ್ಯತೀತ ಆಶಯಕ್ಕೆ ನೇರ ವಿರುದ್ಧವಾದುದು. ಆದರೆ ಸಂವಿಧಾನದ ಪೀಠಿಕೆಯಲ್ಲಿ ಜಾತ್ಯತೀತ ಪದ ಇರುವವರೆಗೆ ಇಂಥ ಸುತ್ತೋಲೆಗಳು ಮತ್ತೆ ಮತ್ತೆ ಪ್ರಶ್ನೆಗೀಡಾಗುತ್ತಲೇ ಇರುತ್ತವೆ ಎಂಬುದು ಈ ಸುತ್ತೋಲೆಯನ್ನು ಹೊರಡಿಸಿದವರಿಗೂ ಅದನ್ನು ಬೆಂಬಲಿಸಿದವರಿಗೂ ಚೆನ್ನಾಗಿ ಗೊತ್ತು. ಆದ್ದರಿಂದಲೇ, ಸಂವಿಧಾನದಿಂದಲೇ ಈ ಪದವನ್ನು ಕಿತ್ತು ಹಾಕಬೇಕೆಂದು ಅವರು ಬಯಸಿರಬೇಕು. ಅದರ ಭಾಗವಾಗಿಯೇ ಗಣರಾಜ್ಯೋತ್ಸವದ ಜಾಹೀರಾತಿನಲ್ಲಿ ಸೆಕ್ಯುಲರ್ ಮತ್ತು ಸಮಾಜವಾದಿ ಪದಗಳು ನಾಪತ್ತೆಯಾಗಿರಬೇಕು.
    ನಿಜವಾಗಿ, ಈ ದೇಶಕ್ಕೊಂದು ಇತಿಹಾಸವಿದೆ. ಅದು ಆರ್ಯನ್ನರು ಮತ್ತು ದ್ರಾವಿಡರ ಇತಿಹಾಸ. ಪುರಾತತ್ವ ಇಲಾಖೆಯ ಪ್ರಕಾರ, ಸಿಂಧೂ ನಾಗರಿಕತೆ ಅಥವಾ ದ್ರಾವಿಡ ನಾಗರಿಕತೆಯೇ ಭಾರತೀಯ ನಾಗರಿಕತೆಯ ಆರಂಭವಾಗಿದೆ. ಇದು ಜಾಗತಿಕವಾಗಿಯೇ ಅತ್ಯಂತ ಹೆಚ್ಚು ಮುಂದುವರಿದಿದ್ದ ನಾಗರಿಕತೆಯಾಗಿತ್ತು. ಈ ನೆಲದ ಮೂಲ ನಿವಾಸಿಗಳು ದ್ರಾವಿಡರಾಗಿದ್ದರೇ ಹೊರತು ಉತ್ತರದಿಂದ ಬಂದ ಆರ್ಯನ್ನರಾಗಿರಲಿಲ್ಲ. ಆರ್ಯನ್ನರು 1500 ವರ್ಷಗಳ ಹಿಂದೆ ಈ ನೆಲಕ್ಕೆ ಕಾಲಿರಿಸಿದಾಗ ಇಲ್ಲಿ ದ್ರಾವಿಡ ನಾಗರಿಕತೆ ಸಂಪೂರ್ಣವಾಗಿ ಸ್ಥಾಪಿತಗೊಂಡಿತ್ತು. ಆರ್ಯನ್ನರು ಸ್ವಭಾವದಲ್ಲಿ ದ್ರಾವಿಡರಿಗೆ ತೀರಾ ವಿರುದ್ಧವಾಗಿದ್ದರು. ಅವರು ತಿರುಗಾಟದ ಸ್ವಭಾವವುಳ್ಳ ಕ್ರೂರಿಗಳಾಗಿದ್ದರು. ವ್ಯಾಪಾರ ಮತ್ತು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ದ್ರಾವಿಡರ ಮೇಲೆ ಅವರು ದಾಳಿ ಮಾಡಿದರು. ಸಿಂಧೂ ನದಿಯ ದಡದಲ್ಲಿ, ಹರಪ್ಪ-ಮೊಹೆಂಜೊ ದಾರೋಗಳಲ್ಲಿ ವಾಸಿಸುತ್ತಿದ್ದ ಈ ದ್ರಾವಿಡರ ಮೇಲೆ ಆರ್ಯನ್ನರು ಪದೇ ಪದೇ ಮಾಡಿದ ದಾಳಿಯಿಂದಾಗಿ ಅವರು ದಕ್ಷಿಣಕ್ಕೆ ಪರಾರಿಯಾಗಲೇಬೇಕಾದ ಸಂದರ್ಭ ಸೃಷ್ಟಿಯಾಯಿತು. ವ್ಯವಸ್ಥಿತ ಸೇನಾ ಪದ್ಧತಿಯನ್ನೇ ಹೊಂದಿಲ್ಲದ ದ್ರಾವಿಡರನ್ನು ಮೂಲ ನೆಲೆಯಿಂದ ಅಟ್ಟಿ ಬಿಡುವುದಕ್ಕೆ ಆರ್ಯನ್ನರಿಗೆ ಕಷ್ಟವೂ ಆಗಲಿಲ್ಲ ಎಂದು ನವಂಬರ್ 2002ರ ಔಟ್‍ಲುಕ್ ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಪರಿಗಣಿಸಿದರೆ ಜಾತ್ಯತೀತ ಮತ್ತು ಸಮಾಜವಾದಿ ಪದಗಳ ಮೇಲಿನ ಮೋದಿ ಪರಿವಾರದ ಸಿಟ್ಟು ಹೆಚ್ಚು ಸ್ಪಷ್ಟವಾಗುತ್ತದೆ. ಈ ದೇಶದ ಮೂಲ ನಿವಾಸಿಗಳು ಯಾರು ಮತ್ತು ಅನ್ಯರು ಯಾರು ಎಂಬುದಕ್ಕೆ ತರ್ಕಬದ್ಧ ಉತ್ತರವೂ ಸಿಗುತ್ತದೆ. ಮೂಲ ನಿವಾಸಿಗಳಾದ ದ್ರಾವಿಡರನ್ನು ಶ್ರೇಣೀಕೃತ ಸಮಾಜವಾಗಿ ವಿಭಜಿಸಿದ್ದು ಈ ಮಣ್ಣಿಗೆ ಅನ್ಯರಾಗಿರುವ ಆರ್ಯನ್ನರೇ. ಈ ವಿಭಜನೆಯಿಂದ ನೊಂದವರು ಬಳಿಕ ಇಸ್ಲಾಮ್, ಕ್ರೈಸ್ತ ಮುಂತಾದ ಧರ್ಮಗಳನ್ನು ಅಪ್ಪಿಕೊಂಡರು. ಆರ್ಯನ್ನರಿಂದಾಗಿ ಹುಟ್ಟಿಕೊಂಡ ಅಸ್ಪೃಶ್ಯತೆಯನ್ನು ಖಂಡಿಸಿಯೇ ಜೈನ, ಬೌದ್ಧ, ಸಿಖ್, ಬಸವ ಧರ್ಮಗಳು ಇಲ್ಲಿ ಸ್ಥಾಪಿತಗೊಂಡವು. ನಿಜವಾಗಿ, ಮುಸ್ಲಿಮರು, ಕ್ರೈಸ್ತರು ಪರಕೀಯರಲ್ಲ. ಅವರು ಇದೇ ಮಣ್ಣಿನ ಮೂಲ ನಿವಾಸಿಗಳು. ಇವರನ್ನು ಯಾರು ಇವತ್ತು ಅನ್ಯರೆಂದು ಹೇಳುತ್ತಾರೋ ಅವರೇ ನಿಜವಾದ ಪರಕೀಯರು. ಆದರೆ ಗೋಡ್ಸೆಯನ್ನು ವಿಜೃಂಭಿಸಲು ಹೊರಟವರಿಗೆ ಈ ಸತ್ಯವನ್ನು ಅರಗಿಸಲಾಗುತ್ತಿಲ್ಲ. ಅವರಿಗೆ ಮುಸ್ಲಿಮರು ಮತ್ತು ಕ್ರೈಸ್ತರು ಅನ್ಯವಾಗಬೇಕು. ಸಂವಿಧಾನದಿಂದ ಜಾತ್ಯತೀತ ಮತ್ತು ಸಮಾಜವಾದಿ ಪದಗಳು ಕಿತ್ತು ಹೋಗಬೇಕು. ಹಾಗಾದರೆ ಮಾತ್ರ ಅವರ ಕಲ್ಪನೆಯ ರಾಷ್ಟ್ರ ಸ್ಥಾಪಿತಗೊಳ್ಳುವುದಕ್ಕೆ ಸಾಧ್ಯ.
    ಸೆನ್ಸಾರ್ ಮಂಡಳಿಯು ಬಿಜೆಪಿಯ ಅಂಗಸಂಸ್ಥೆಯಂತಾದುದು ಮತ್ತು ಸೆಕ್ಯುಲರ್ ಹಾಗೂ ಸೋಶಿಯಲಿಷ್ಟ್ ಪದಗಳು ಗಣ ರಾಜ್ಯೋತ್ಸವದ ಜಾಹೀರಾತಿನಿಂದ ಕಾಣೆಯಾದುದೆಲ್ಲ ಈ ಕಲ್ಪನೆಯ ರಾಷ್ಟ್ರಕ್ಕೆ ಮಾಡಲಾಗುತ್ತಿರುವ ಸಿದ್ಧತೆಯಷ್ಟೇ.

No comments:

Post a Comment