Thursday, February 26, 2015

ಆಂಟನಿಯೋ ಆರಂಭಿಸಿದ ದೇಣಿಗೆ ಚರ್ಚೆ

   ರಾಜಕೀಯ ಪಕ್ಷಗಳಿಗೂ ಕಾರ್ಪೋರೇಟ್ ಕಂಪೆನಿಗಳಿಗೂ ನಡುವೆ ಯಾವ ಬಗೆಯ ಸಂಬಂಧ ಇದೆ ಮತ್ತು ಇರಬೇಕು ಎಂಬ ಕುರಿತು ಈ ದೇಶದಲ್ಲಿ ಹಲವು ಬಾರಿ ಚರ್ಚೆಗಳು ನಡೆದಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿವಿಧ ಕಾರ್ಪೋರೇಟ್ ಸಂಸ್ಥೆಗಳು ಪರಸ್ಪರ ಅತಿ ಅನ್ನುವಷ್ಟು ಆತ್ಮೀಯವಾಗಿರುವುದಕ್ಕೆ ಅನೇಕ ಬಾರಿ ಆಕ್ಷೇಪವೂ ವ್ಯಕ್ತವಾಗಿದೆ. ಈ ಮೊದಲು ಮುಖೇಶ್ ಅಂಬಾನಿಯವರು ಪ್ರಧಾನಿ ನರೇಂದ್ರ ಮೋದಿಯವರ ಭುಜಕ್ಕೆ ಕೈ ಹಾಕಿ ಸಲುಗೆಯಿಂದಿದ್ದ ಪೋಟೋ ಸಾಮಾಜಿಕ ತಾಣಗಳಲ್ಲಿ ಸುದ್ದಿಗೀಡಾಗಿತ್ತು. ಓರ್ವ ಉದ್ಯಮಿಯು ಪ್ರಧಾನಿಯ ಭುಜಕ್ಕೆ ಕೈ ಹಾಕುವುದು ಅಗೌರವ ಮತ್ತು ಅಶಿಸ್ತು ಎಂದೂ ವಾದಿಸಲಾಗಿತ್ತು. ಇದೀಗ ಈ ಬಗೆಯ ಚರ್ಚೆಗೆ ಬ್ರೆಝಿಲ್‍ನ ಮುಖ್ಯ ಚುನಾವಣಾ ಆಯುಕ್ತ ಜೋಸ್ ಆಂಟನಿಯೋ ಟೊಪೊಲಿ ಮತ್ತೊಮ್ಮೆ ಚಾಲನೆಯನ್ನು ಕೊಟ್ಟಿದ್ದಾರೆ. ಭಾರತದ ಚುನಾವಣಾ ಪದ್ಧತಿಯನ್ನು ಅಧ್ಯಯನ ನಡೆಸಲು ಇಲ್ಲಿಗೆ ಆಗಮಿಸಿರುವ ಅವರು, ಕಾರ್ಪೋರೇಟ್ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಬ್ರೆಝಿಲ್‍ನಲ್ಲಿ ಶೀಘ್ರವೇ ಇಂಥದ್ದೊಂದು ಕಾನೂನನ್ನು ಜಾರಿಗೊಳಿಸಲಾಗುವುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 ನಿಜವಾಗಿ, ಬೃಹತ್ ಕಂಪೆನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಸಂಗತಿಯು ಆಂಟನಿಯೋ ಅವರಿಂದಾಗಿ ಚರ್ಚೆಗೆ ಒಳಗಾಗಬೇಕಾದದ್ದಲ್ಲ. ಅವರೊಂದು ನಿಮಿತ್ತ ಮಾತ್ರ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರು ಆಸ್ಟ್ರೇಲಿಯಾಕ್ಕೆ ಭೇಟಿ ಕೊಟ್ಟಾಗ ಅವರ ಜೊತೆಗೆ ಉದ್ಯಮಿ ಗೌತಮ್ ಅದಾನಿಯವರು ಇದ್ದರು. ಆಸ್ಟ್ರೇಲಿಯಾ ಪ್ರಮುಖ ಗಣಿ ಪ್ರದೇಶವಾದ ಕ್ವೀನ್ಸ್ ಲ್ಯಾಂಡ್‍ನಲ್ಲಿ ಅದಾನಿ ಕಂಪೆನಿಯು 16 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ಮೊತ್ತದ ಗಣಿ ಗುತ್ತಿಗೆಯನ್ನು ಪಡಕೊಂಡದ್ದು ಆ ಬಳಿಕ ಸುದ್ದಿಗೀಡಾಗಿತ್ತು. ಗೌತಮ್ ಅದಾನಿಯವರಿಗೆ ಮೋದಿಯವರೊಂದಿಗೆ ಆತ್ಮೀಯ ಸಂಬಂಧ ಇರುವುದರಿಂದ ಇದು ಸಾಧ್ಯವಾಗಿರಬಹುದು ಎಂದೇ ಆ ಒಪ್ಪಂದವನ್ನು ವಿಶ್ಲೇಷಿಸಲಾಗಿತ್ತು. ಆದರೆ ಈ ಗಣಿ ಗುತ್ತಿಗೆಯ ಹಿಂದೆ ಕೇವಲ ಈ ಆತ್ಮೀಯ ಸಂಬಂಧಗಳಷ್ಟೇ ಕೆಲಸ ಮಾಡಿರುವುದಲ್ಲ ಎಂಬುದನ್ನು ಬಳಿಕದ ಮಾಹಿತಿಗಳು ಸ್ಪಷ್ಟಪಡಿಸಿದುವು. ಆಸ್ಟ್ರೇಲಿಯಾದಲ್ಲಿ ಈಗ ಅಧಿಕಾರದಲ್ಲಿರುವ ಅಧ್ಯಕ್ಷ ಅಬ್ಬೊಟ್ಟೊ ಅವರ ಲೇಬರ್ ಪಕ್ಷಕ್ಕೆ ಅದಾನಿಯವರು 50 ಸಾವಿರ ಆಸ್ಟ್ರೇಲಿಯನ್ ಡಾಲರ್ ಅನ್ನು ದೇಣಿಗೆಯಾಗಿ ನೀಡಿದ್ದರು. ಆ ಸಂದರ್ಭದಲ್ಲಿ ಲೇಬರ್ ಪಕ್ಷ ಅಧಿಕಾರದಲ್ಲಿರಲಿಲ್ಲ. ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಆಗ ಅಧಿಕಾರದಲ್ಲಿದ್ದ ಲಿಬರಲ್ ಪಕ್ಷಕ್ಕೂ ಅವರು 11 ಸಾವಿರ ಆಸ್ಟ್ರೇಲಿಯನ್ ಡಾಲರ್ ಅನ್ನು ದೇಣಿಗೆಯಾಗಿ ನೀಡಿದ್ದರು. ಹೀಗೆ ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಎರಡು ವರ್ಷಗಳ ಹಿಂದೆಯೇ ದೇಣಿಗೆಯನ್ನು ನೀಡಿದ ಅದಾನಿ, ಅದಕ್ಕೆ ಪ್ರತಿಫಲವಾಗಿ ಬೃಹತ್ ಗಣಿ ಗುತ್ತಿಗೆಯನ್ನು ಪಡೆದರು. ಇಲ್ಲೊಂದು ಪ್ರಶ್ನೆಯಿದೆ. ಒಂದು ವೇಳೆ ಕ್ವೀನ್ಸ್ ಲ್ಯಾಂಡ್‍ನ ಗಣಿಯ ಮೇಲೆ ಅದಾನಿಯವರಿಗೆ ಕಣ್ಣಿರದೇ ಇರುತ್ತಿದ್ದರೆ ಅವರು ಲೇಬರ್ ಮತ್ತು ಲಿಬರಲ್ ಪಕ್ಷಗಳಿಗೆ ದೇಣಿಗೆ ನೀಡುತ್ತಿದ್ದರೆ? ಉದ್ಯಮ ವಿಸ್ತರಣೆಯ ಉದ್ದೇಶವಿಲ್ಲದಿರುತ್ತಿದ್ದರೆ ಅವರೇಕೆ ಆಸ್ಟ್ರೇಲಿಯಾದ ರಾಜಕೀಯ ಪಕ್ಷಗಳ ಬಗ್ಗೆ ಅಷ್ಟೊಂದು ಕಾಳಜಿ ತೋರಬೇಕಿತ್ತು? ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಅದಾನಿಯವರು ಬಿಜೆಪಿಗೆ 4.33 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. 3.15 ಕೋಟಿ ರೂಪಾಯಿಯನ್ನು ಅವರು ಕಾಂಗ್ರೆಸ್ ಪಕ್ಷಕ್ಕೂ ನೀಡಿದ್ದಾರೆ. ಹೀಗೆ ದೇಣಿಗೆಯನ್ನು ಪಡಕೊಳ್ಳುವ ರಾಜಕೀಯ ಪಕ್ಷಗಳು ಋಣ ಸಂದಾಯ ಮಾಡಬೇಕಾದ ಒತ್ತಡಕ್ಕೆ ಸಿಲುಕುವುದಿಲ್ಲವೇ? ಕೇವಲ ಅದಾನಿ ಕಂಪೆನಿ ಎಂದಲ್ಲ. ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಕಂಪೆನಿಗಳು ಮತ್ತು ಉದ್ಯಮಿಗಳು ಅನೇಕ ಇವೆ. ಆಸ್ಟ್ರೇಲಿಯಾದ ರಾಜಕೀಯ ಪಕ್ಷಗಳಿಗೆ ಅದಾನಿ ದೇಣಿಗೆ ಕೊಟ್ಟಂತೆಯೇ ಚೀನಾದ ಪ್ರಮುಖ ಉದ್ಯಮಿ ಝಿ ಚಾನ್ ವಾಂಗ್‍ರು ಲೇಬರ್ ಪಕ್ಷಕ್ಕೆ 850,000 ಆಸ್ಟ್ರೇಲಿಯನ್ ಡಾಲರನ್ನು ನೀಡಿದ್ದರು. ಬ್ರಿಟಿಷ್ ಉದ್ಯಮಿ ಲಾರ್ಡ್ ಮೈಕಲ್ ಆ್ಯಶ್‍ಕ್ರಾಫ್ಟ್‍ರು 250,000 ಆಸ್ಟ್ರೇಲಿಯನ್ ಡಾಲರನ್ನು ಲಿಬರಲ್ ಪಕ್ಷಕ್ಕೆ ನೀಡಿದ್ದರು. ಇಂಥ ದೇಣಿಗೆಗಳು ಜಗತ್ತಿನ ಉದ್ದಕ್ಕೂ ನಡೆಯುತ್ತಿರಬಹುದು. ಬಿಜೆಪಿ, ಕಾಂಗ್ರೆಸ್ ಸಹಿತ ಇಲ್ಲಿನ ರಾಜಕೀಯ ಪಕ್ಷಗಳಿಗೆ ದೇಶದ ಮತ್ತು ವಿದೇಶಧ ಕಂಪೆನಿಗಳು ಖಂಡಿತ ದೇಣಿಗೆಯನ್ನು ನೀಡುತ್ತಿರಬಹುದು. ಅಂಥ ದೇಣಿಗೆಗಳು ರಾಜಕೀಯ ಪಕ್ಷಗಳ ಮೇಲೆ ಬೀರಬಹುದಾದ ಪರಿಣಾಮಗಳೇನು? ಅದಾನಿಯ ದೇಣಿಗೆಗೆ ಮೋದಿಯವರು ಇಲ್ಲವೇ ಸೋನಿಯಾ ಗಾಂಧಿಯವರು ಹೇಗೆ ಋಣ ಸಂದಾಯ ಮಾಡಬಹುದು? ಅಂಬಾನಿಗಳು, ಟಾಟಾಗಳು, ಬಿರ್ಲಾಗಳೆಲ್ಲ ಈ ದೇಶದಲ್ಲಿ ಪಡಕೊಂಡಿರುವ ಗುತ್ತಿಗೆಗಳಲ್ಲಿ ಈ ಋಣ ಸಂದಾಯದ ಅಂಶಗಳು ಎಷ್ಟಿರಬಹುದು?
 ರಾಜಕೀಯ ಪಕ್ಷಗಳೆಂಬುದು ಕಾರ್ಪೋರೇಟ್ ಕಂಪೆನಿಗಳಲ್ಲ. ಪ್ರಧಾನಿ, ಮುಖ್ಯಮಂತ್ರಿ, ಸಂಸದ ಎಂಬುದೆಲ್ಲ ಕಂಪೆನಿಗಳ ಸಿಇಓಗಳೂ ಅಲ್ಲ. ರಾಜಕೀಯ ಪಕ್ಷಗಳು ಜನರಿಗೆ ಉತ್ತರದಾಯಿಗಳಾಗಿವೆ. ಜನರ ಹಿತಾಸಕ್ತಿಯನ್ನು ಕಾಪಾಡುವ ಜವಾಬ್ದಾರಿಯು ಅವುಗಳ ಮೇಲಿವೆ. ಆದ್ದರಿಂದಲೇ ಚುನಾವಣೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಜನರ ಹಿತಾಸಕ್ತಿಯ ಬಗ್ಗೆ ಮಾತಾಡುತ್ತವೆಯೇ ಹೊರತು ಅಂಬಾನಿ, ಅದಾನಿಗಳ ಬಗೆಗಲ್ಲ. ಸಾಮಾನ್ಯವಾಗಿ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಇವತ್ತು ಎಲ್ಲ ಪಕ್ಷಗಳೂ ಪ್ರಚಾರ ನಡೆಸುತ್ತಿವೆ. ಸಾರ್ವಜನಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದಕ್ಕೂ ಸಾಕಷ್ಟು ದುಡ್ಡಿನ ಅಗತ್ಯವಿದೆ. ಹಾಗಂತ, ಸಾಮಾನ್ಯ ಜನರಿಂದ ದೇಣಿಗೆ ಎತ್ತುವ ಕ್ರಮ ಈ ದೇಶದಲ್ಲಿ ರೂಢಿಯಲ್ಲಿಲ್ಲ. ಕಾರ್ಪೋರೇಟ್ ಕಂಪೆನಿಗಳ ದೇಣಿಗೆಗಳನ್ನು ಬಳಸಿಕೊಂಡು ಹೆಚ್ಚಿನೆಲ್ಲಾ ಪಕ್ಷಗಳು ಸಾಮಾನ್ಯ ಜನರ ಹಿತಾಸಕ್ತಿಯ ಬಗ್ಗೆ ಮಾತಾಡುತ್ತಿವೆ. ನಿಜವಾಗಿ, ಇದೊಂದು ಬಗೆಯ ಹಿಪಾಕ್ರಸಿ, ದ್ವಂದ್ವ. ಯಾವುದೇ ರಾಜಕೀಯ ಪಕ್ಷಕ್ಕೆ ಜನರ ಹಿತಾಸಕ್ತಿಯೇ ಮುಖ್ಯ ಆಗಬೇಕಾದರೆ ಅದು ಜನರ ಹೊರತಾದ ಇತರೆಲ್ಲ ಕಂಪೆನಿ, ಉದ್ಯಮಿಗಳ ಮುಲಾಜಿನಿಂದ ಮುಕ್ತವಾಗಬೇಕು. ಋಣ ಸಂದಾಯದ ಭಾರವಿಲ್ಲದೇ ಸಂಪೂರ್ಣ ಪಾರದರ್ಶಕವಾಗಿರಬೇಕು. ಇವತ್ತು ಅಂಥದ್ದೊಂದು ಸ್ಥಿತಿ ಬಹುತೇಕ ಎಲ್ಲೂ ಇಲ್ಲ. ತಾನು ಜನಪರ ಎಂಬ ಜಾಹೀರಾತನ್ನು ರಾಜಕೀಯ ಪಕ್ಷವೊಂದು ನೀಡುವುದೇ ಕಾರ್ಪೋರೇಟ್ ಕಂಪೆನಿಗಳ ದುಡ್ಡಿನಿಂದ. ಇಂಥ ಸ್ಥಿತಿಯಲ್ಲಿ ಉದ್ದಿಮೆದಾರರ ಹಿತವನ್ನಲ್ಲದೇ ಸಾಮಾನ್ಯರ ಹಿತವನ್ನು ಕಾಪಾಡಲು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗುವುದು ಹೇಗೆ? ವಿಶೇಷ ಆರ್ಥಿಕ ವಲಯದ ಹೆಸರಲ್ಲಿ ಅದಾನಿಗೋ, ಅಂಬಾನಿಗೋ, ಟಾಟಾಕ್ಕೋ ರೈತರ ಫಸಲು ಭೂಮಿಯನ್ನು ಕೊಡದೇ ಅವು ಇನ್ನೇನು ಮಾಡಬೇಕಾಗುತ್ತದೆ? ಆಂಟನಿಯೋ ಅವರ ಅಭಿಪ್ರಾಯವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಾದದ್ದು ಈ ಕಾರಣದಿಂದಲೇ. ರಾಜಕೀಯ ಪಕ್ಷಗಳು ಕಾರ್ಪೋರೇಟ್ ಉದ್ಯಮಿಗಳ ಋಣ ಸಂದಾಯದಿಂದ ಮುಕ್ತವಾಗಬೇಕು. ಜನಸಾಮಾನ್ಯರ ದೇಣಿಗೆಯನ್ನೇ ರಾಜಕೀಯ ಪಕ್ಷಗಳು ಅವಲಂಬಿಸುವಂತಹ ವಾತಾವರಣವೊಂದು ನಿರ್ಮಾಣಗೊಳ್ಳಬೇಕು ಅಥವಾ ಚುನಾವಣಾ ಮಂಡಳಿಯೇ ಎಲ್ಲ ರಾಜಕೀಯ ಪಕ್ಷಗಳಿಗೂ ನಿರ್ದಿಷ್ಟ ಮೊತ್ತ ನೀಡುವಂತಹ ವ್ಯವಸ್ಥೆಯಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಕಂಪೆನಿಗಳಂತೆಯೂ ಮುಖ್ಯಮಂತ್ರಿ, ಪ್ರಧಾನಿಗಳೆಲ್ಲ ಈ ಕಂಪೆನಿಗಳ ಸಿಇಓಗಳಾಗಿಯೂ ಮಾರ್ಪಡಬಹುದು.

No comments:

Post a Comment