Saturday, January 23, 2021

ಪಾಕಿಸ್ತಾನ್ ಝಿಂದಾಬಾದ್' ಯಾರ ಅಗತ್ಯ?



ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗುವುದು ಕಾನೂನು ವಿರೋಧಿಯೇ ಎಂಬ ಪ್ರಶ್ನೆಯು ಇನ್ನೆರಡು ಉಪ ಪ್ರಶ್ನೆಗಳಿಗೂ ಜನ್ಮ ನೀಡುತ್ತದೆ.
1. ಅಂಥದ್ದೊಂದು ಘೋಷಣೆಯ ಅಗತ್ಯ ಏನಿದೆ?
2. ಬರೇ ಕಾನೂನಿನ ದೃಷ್ಟಿಯಿಂದ ಮಾತ್ರ ಇದನ್ನು ನೋಡುವುದು ಸರಿಯೇ?
ಇಲ್ಲಿ ಮುಖ್ಯ ಪ್ರಶ್ನೆಗಿಂತ ಉಪ ಪ್ರಶ್ನೆಗಳೇ ಹೆಚ್ಚಿನ ವ್ಯಾಖ್ಯಾನವನ್ನೂ ಬಯಸುತ್ತವೆ.
ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗುವುದರ ಅಗತ್ಯ ಏನಿದೆ ಎಂಬ ಪ್ರಶ್ನೆಯ ಜೊತೆಜೊತೆಗೇ, ನಿಜಕ್ಕೂ ಇಂಥದ್ದೊಂದು ಘೋಷಣೆಯನ್ನು ಈ ದೇಶದಲ್ಲಿ ಕೂಗಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯವಾಗುತ್ತದೆ. ಇದಕ್ಕೆ ಕಾರಣವೂ ಇದೆ.
ಕನ್ಹಯ್ಯ ಕುಮಾರ್ ರಾಷ್ಟ್ರೀಯ ವ್ಯಕ್ತಿತ್ವವಾದದ್ದೇ ಇಂಥ ಪ್ರಕರಣದಲ್ಲಿ. ಪಾರ್ಲಿಮೆಂಟ್ ದಾಳಿಯ ಅಪರಾಧದಲ್ಲಿ ನೇಣು ಶಿಕ್ಷೆಗೀಡಾದ ಅಫ್ಝಲ್ ಗುರುವಿಗೆ ಸಂಬಂಧಿಸಿ ಜೆನ್‌ಯುವಿನಲ್ಲಿ ಫೆ. 9, 2016ರಂದು ಸಭೆ ನಡೆಸಲಾಗಿತ್ತು. ಅದರಲ್ಲಿ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ಹಲವು ವಿದ್ಯಾರ್ಥಿ ನಾಯಕರು ಭಾಗವಹಿಸಿದ್ದರು. ಆ ಸಭೆಯಲ್ಲಿ ದೇಶದ್ರೋಹಿ ಘೋಷಣೆಯನ್ನು ಕೂಗಿದ್ದಾರೆ ಎಂದು ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಸಹಿತ ಹಲವು ವಿದ್ಯಾರ್ಥಿಗಳ ಮೇಲೆ ಆರೋಪವನ್ನು ಹೊರಿಸಲಾಯಿತು. ಆಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿತ್ತಷ್ಟೇ. ಅದೇ ಆರೋಪದಲ್ಲಿ ಫೆ. 12, 2016ರಂದು ಕನ್ಹಯ್ಯರ ಬಂಧನವೂ ನಡೆಯಿತು. ಫೆ. 24ರಂದು ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯರ ಬಂಧನವೂ ನಡೆಯಿತು. ಆ ಬಂಧನದ ಸಮಯದಲ್ಲಿ ಓರ್ವ ನ್ಯಾಯವಾದಿ ಕನ್ಹಯ್ಯರ ಮೇಲೆ ಹಲ್ಲೆ ನಡೆಸಿದ್ದರು. ಕನ್ಹಯ್ಯ ಪದೇ ಪದೇ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದರು. ತನ್ನ ಘೋಷಣೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಹೇಳಿದರು. ಉಮರ್ ಖಾಲಿದ್‌ರನ್ನೂ ದೃಶ್ಯ ಮಾಧ್ಯಮಗಳು ಬೆನ್ನಟ್ಟಿದುವು. ಅವರು ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿರುವುದಾಗಿಯೂ ಹೇಳಿದುವು. ಅಸಲಿಗೆ ಅವರಲ್ಲಿ ಪಾಸ್‌ಪೋರ್ಟೇ ಇರಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಪರ ಸುದ್ದಿಯನ್ನು ನೀಡುವುದಕ್ಕೆ ಮತ್ತು ಎಡಪಂಥೀಯ ವಿಚಾರಧಾರೆಯನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಹಣಿಯುವುದಕ್ಕೆ ಆಂಗ್ಲ ಮತ್ತು ಹಿಂದಿ ದೃಶ್ಯ ಮಾಧ್ಯಮಗಳು ಜಿದ್ದಿಗೆ ಬಿದ್ದಂತೆ ವರ್ತಿಸುತ್ತಿದ್ದ ಕಾಲ ಅದು. ಮಾರ್ಚ್ 3, 2016ರಂದು ಕನ್ಹಯ್ಯ ಜಾಮೀನಿನ ಮೇಲೆ ಹೊರಬಂದರೆ, ಫೆ. 17ರಂದು ಉಮರ್ ಮತ್ತು ಅನಿರ್ಬನ್ ಕೂಡ ಜೈಲಿನಿಂದ ಹೊರಬಂದರು. 2019ರಲ್ಲಿ ದೆಹಲಿ ಪೊಲೀಸರು 1200ರಷ್ಟು ಪುಟಗಳ ಚಾರ್ಜ್ ಶೀಟನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದರು. 2020 ಫೆಬ್ರವರಿಯಲ್ಲಿ ದೆಹಲಿ ಸರಕಾರವು ಈ ದೇಶದ್ರೋಹಿ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದಕ್ಕೆ ಅನುಮತಿಯನ್ನೂ ನೀಡಿತು. ಫೆ. 9, 2016ರ ಬಳಿಕದ ಈ ಸುಮಾರು 5 ವರ್ಷಗಳಲ್ಲಿ ನಡೆದಿರುವ ಬೆಳವಣಿಗೆ ಇಷ್ಟೇ. ಆದರೆ,
ಈ ಇಡೀ ಗದ್ದಲದಿಂದ ಅತ್ಯಂತ ಹೆಚ್ಚು ಲಾಭ ಮಾಡಿಕೊಂಡಿರುವುದು ಬಿಜೆಪಿ. ದೇಶದ್ರೋಹಿ ಘೋಷಣೆಯನ್ನು ಇವರೆಲ್ಲ ಕೂಗಿದ್ದಾರೋ ಇಲ್ಲವೋ ಎಂಬುದು ಇನ್ನೂ ನಿರ್ಣಯವಾಗಿಲ್ಲ. ಕನ್ಹಯ್ಯ ಆಗಲಿ, ಉಮರ್, ಅನಿರ್ಬನ್ ಆಗಲಿ ಈ ಆರೋಪವನ್ನು ಒಪ್ಪುತ್ತಲೂ ಇಲ್ಲ. ಆ ಸಭೆಯ ವೀಡಿಯೊವನ್ನು ಪೂರ್ಣವಾಗಿ ತಿರುಚಲಾಗಿದೆ ಎಂಬ ಆರೋಪ ಆವತ್ತಿನಿಂದ ಇವತ್ತಿನವರೆಗೂ ಹಾಗೆಯೇ ಉಳಿದುಕೊಂಡಿದೆ. ಆದರೆ,
ಜೆಎನ್‌ಯುವನ್ನು ದೇಶದ್ರೋಹಿಗಳ ಅಡ್ಡೆ ಎಂದು ಹೇಳುವುದಕ್ಕೆ, ಅದನ್ನು ಗುರಿಯಾಗಿಸಿಕೊಂಡು ದೇಶಪ್ರೇಮದ ಡಯಲಾಗ್‌ಗಳನ್ನು ದೇಶದಾದ್ಯಂತ ಬಿತ್ತುವುದಕ್ಕೆ ಬಿಜೆಪಿಗೆ ಸಾಧ್ಯವಾಗಿದೆ. ನಿಧಾನವಾಗಿ ಜೆಎನ್‌ಯುವಿನ ಮೇಲೆ ಎಂಥ ಕಪ್ಪು ಮಸಿ ಅಂಟಿಕೊಂಡಿತೆಂದರೆ, ಅಲ್ಲಿನ ವಿದ್ಯಾರ್ಥಿಗಳ ಮೇಲೆ ಜನವರಿ 5, 2020ರಂದು ಆಯುಧಧಾರಿಗಳಿಂದ ಮಾರಣಾಂತಿಕ ಹಲ್ಲೆಯೂ ನಡೆಯಿತು. ಮೈಯಿಡೀ ಗಾಯ ಮಾಡಿಕೊಂಡ ವಿದ್ಯಾರ್ಥಿ ನಾಯಕಿ ಐಶೆ ಘೋಷ್ ಮತ್ತಿತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜಾಗತಿಕ ಗಮನ ಸೆಳೆದರು. ದಾಳಿಕೋರರು ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗಿದ್ದರು ಎಂಬುದನ್ನು ಸಾಬೀತುಪಡಿಸುವ ಹಲವು ಸಾಕ್ಷ್ಯಗಳು ಸಿಕ್ಕವು. ಅದು ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳಾಗುತ್ತಿದ್ದ ಸಮಯವೂ ಹೌದು. ನಿಜವಾಗಿ,
ದೇಶದ್ರೋಹದ ಆರೋಪವನ್ನು ಹೊರಿಸುವುದರಿಂದ ಇತರೆಲ್ಲ ಆರೋಪಗಳಿಗಿಂತ ಹೆಚ್ಚಿನ ರಾಜಕೀಯ ಮತ್ತು ಸಾಂಸ್ಕೃತಿಕ ಲಾಭವನ್ನು ಪಡೆದುಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದ ಪ್ರಕರಣ ಇದು. ಈ ಆರೋಪ ಸಾಬೀತುಗೊಳ್ಳುತ್ತದೋ ಬಿಡುತ್ತದೋ ಎಂಬುದು ಅಮುಖ್ಯ. ಆರೋಪವೇ ಮುಖ್ಯ. ಆರೋಪ ಹೊರಿಸಲಾದ ಸಮಯದಲ್ಲಿ ಉಂಟಾಗುವ ಗದ್ದಲವು ಬರೇ ಕಾನೂನಾತ್ಮಕವಾದುವಾಗಿರುವುದಿಲ್ಲ. ಅದಕ್ಕೆ ರಾಜಕೀಯ ಆಯಾಮ ಇರುತ್ತದೆ. ಸಾಂಸ್ಕೃತಿಕ ಮತ್ತು ಧ್ರುವೀಕರಣ ರಾಜಕಾರಣದಲ್ಲಿ ನಂಬಿಕೆಯನ್ನಿಟ್ಟ ಪಕ್ಷಕ್ಕೆ ಹುಲಸಾದ ಬೆಳೆಯನ್ನು ಕೊಯ್ಯಲು ಆ ಆರೋಪವೊಂದೇ ಸಾಕಾಗುತ್ತದೆ. ಅಂದಹಾಗೆ,
ಇಂಥ  ರಾಜಕಾರಣದಲ್ಲಿ ನಂಬಿಕೆಯಿಟ್ಟವರಿಗೆ ಎದುರು ಭಾಗದಲ್ಲಿ ದೇಶದ್ರೋಹಿಗಳ ಒಂದು ಗುಂಪು ಬೇಕೇ ಬೇಕಾಗುತ್ತದೆ. ತಾವು ದೇಶಪ್ರೇಮಿಗಳಾಗುವುದೇ ಆ ಎದುರು ಭಾಗದಲ್ಲಿರುವ ದೇಶದ್ರೋಹಿಗಳನ್ನು ತೋರಿಸಿ. ಭ್ರಷ್ಟಾಚಾರ, ಅತ್ಯಾಚಾರ, ವಂಚನೆ ಇತ್ಯಾದಿ ಆರೋಪಗಳನ್ನು ಹೊರಿಸಿ ಸಮಾಜದ ಗಮನ ಸೆಳೆಯುವುದು ಎಷ್ಟು ಕಷ್ಟವೋ ದೇಶದ್ರೋಹದ ಆರೋಪ ಹೊರಿಸಿ ಸಮಾಜವನ್ನು ಸೆಳೆಯುವುದು ಅಷ್ಟೇ ಸುಲಭ. ಇವನ್ನು ಸಾಬೀತು ಪಡಿಸುವುದಕ್ಕೆ ಇನ್ನೆರಡು ಪ್ರಕರಣಗಳನ್ನು ಉದಾಹರಿಸಬಹುದು-
2020 ನವೆಂಬರ್ 7ರಂದು ಅಸ್ಸಾಮ್ ಬಿಜೆಪಿ ಶಾಸಕ ಮತ್ತು ಪ್ರಮುಖ ನಾಯಕ ಹಿಮಾಂಶು ಬಿಸ್ವ ಶರ್ಮ ಒಂದು ಟ್ವೀಟ್ ಮಾಡುತ್ತಾರೆ. ಅಸ್ಸಾಮ್‌ನ ಪ್ರಮುಖ ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF)ನ ಅಧ್ಯಕ್ಷ ಮೌಲಾನಾ ಬದ್ರುದ್ದೀನ್ ಅಜ್ಮಲ್‌ಗೆ ಸಂಬಂಧಿಸಿದ ಟ್ವೀಟ್ ಅದು. 2020 ನವೆಂಬರ್ 7 ರಂದು ಅಸ್ಸಾಮ್‌ನ ಸಿಲ್‌ಚಾರ್ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸುತ್ತಾರೆ ಮತ್ತು ಜೊತೆಗೆ ಶಾಸಕ ಅಝೀಝï ಖಾನ್ ಕೂಡ ಇರುತ್ತಾರೆ. ಇವರನ್ನು ಸ್ವಾಗತಿಸುವುದಕ್ಕಾಗಿ ಹೊರಗಡೆ ಸೇರಿದ್ದ ಪಕ್ಷದ ಬೆಂಬಲಿಗರು ಪಾಕಿಸ್ತಾನ್ ಝಿಂದಾಬಾದ್ ಕೂಗಿದ್ದಾರೆ ಎಂದು ಹಿಮಾಂಶು ಬಿಸ್ವ ಶರ್ಮ ಟ್ವೀಟ್ ಮಾಡುತ್ತಾರೆ. ಆ ಬಳಿಕ ಅಂಥದ್ದೇ  ಟ್ವೀಟನ್ನು ಬಿಜೆಪಿಯ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ, ಅಸ್ಸಾಮ್‌ನ ಶಾಸಕರಾದ ರಾಜ್‌ದೀಪ್ ರಾಯ್ ಮತ್ತು ಅಶೋಕ್ ಸಿಂಘಾಲ್ ಕೂಡ ಮಾಡುತ್ತಾರೆ. ರಾಷ್ಟ್ರೀಯ ಆಂಗ್ಲ ಮತ್ತು ಹಿಂದಿ ದೃಶ್ಯಮಾಧ್ಯಮಗಳು ಭಾರೀ ಮಹತ್ವ ಕೊಟ್ಟು ಆ ವೀಡಿಯೋವನ್ನು ಮತ್ತು ಸುದ್ದಿಯನ್ನು ಹಂಚಿಕೊಳ್ಳುತ್ತವೆ. ಈ ಗದ್ದಲದ ನಡುವೆ AIUDF  ಪತ್ರಿಕಾಗೋಷ್ಠಿಯನ್ನು ಕರೆದು ನಿಜ ಏನೆಂದು ಹೇಳುತ್ತದೆ. ಫ್ಯಾಕ್ಟ್ ಚೆಕ್ ವಿವರಗಳೂ ಹೊರಬೀಳುತ್ತವೆ. ಅಸಲಿ ಸಂಗತಿ ಏನೆಂದರೆ,
ಮೌಲಾನಾ ಅಜ್ಮಲ್‌ರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಸೇರಿದ್ದ ಜನರು ಅಜ್ಮಲ್‌ರಿಗೆ ಝಿಂದಾಬಾದ್ ಎಂದು ಕೂಗಿದಂತೆಯೇ ಅಝೀಝï ಖಾನ್ ಝಿಂದಾಬಾದ್ ಎಂದೂ ಕೂಗಿದ್ದರು. ಈ ಅಝೀಝï ಖಾನ್ ಝಿಂದಾಬಾದ್ ಎಂಬ ಕೂಗನ್ನೇ ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಹೇಳಲಾಗಿದೆ. ಈ ಕಾರಣದಿಂದಲೇ ಆ ಬಳಿಕ ಹಿಮಾಂಶು ಬಿಸ್ವ ಶರ್ಮ ಅವರ ಮೇಲೆ ವಿವಿಧ ಸಮುದಾಯದ ಮೇಲೆ ಸಂಘರ್ಷ ಹುಟ್ಟು ಹಾಕಲು ಪ್ರಚೋದಿ ಸಿದ ಕೇಸು ದಾಖಲಿಸಿರುವುದಾಗಿ ನವೆಂಬರ್ 11ರಂದು ಪಿಟಿಐ ಮಾಡಿರುವ ವರದಿಯನ್ನು ದಿ ವೈರ್ ಸುದ್ದಿ ಜಾಲತಾಣ ಉಲ್ಲೇಖಿಸಿತ್ತು. ವಿಶೇಷ ಏನೆಂದರೆ, ಹಿಮಾಂಶು ಬಿಸ್ವ ಅವರು ನವೆಂಬರ್ 7ರಂದು ಮಾಡಿದ ಟ್ವೀಟ್‌ನಲ್ಲಿಯ ವಿಷಯಗಳು-
This throughly exposes @ INC India which is encouraging such forces by forging an alliance. We shall fight them tooth and nail. Jai Hind.
ಈ ಟ್ವೀಟ್‌ನಲ್ಲಿ ಕಾಂಗ್ರೆಸನ್ನು ಎಳೆದು ತಂದಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಯಾಕೆಂದರೆ, 2021ರಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎಐಯುಡಿಎಫ್ ಮತ್ತು ಕಮ್ಯುನಿಸ್ಟ್ ಪಕ್ಷಗಳೊಂದಿಗೆ ಕಾಂಗ್ರೆಸ್ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಎಲ್ಲಿ ಸವಾಲಾಗುತ್ತೋ ಎಂಬ ಭೀತಿ ಹಿಮಾಂಶುರದ್ದು.
ಇದೀಗ, ಈ ಹಿನ್ನೆಲೆಯಲ್ಲಿ ಆ ಇಡೀ ಪ್ರಕರಣವನ್ನೊಮ್ಮೆ ಪುನಃ ಅವಲೋಕಿಸಿ ನೋಡಿ. ಆ ಆರೋಪದ ಹಿನ್ನೆಲೆ ನಿಮಗೆ ಸುಲಭದಲ್ಲಿ ಮನವರಿಕೆಯಾಗಬಹುದು.
ಇನ್ನೊಂದು ಪ್ರಕರಣವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ಉತ್ತರ ಪ್ರದೇಶದ ಲಕ್ನೋದಲ್ಲಿ 2019 ಡಿಸೆಂಬರ್ 13ರಂದು ಎನ್‌ಆರ್‌ಸಿ, ಸಿಎಎ ವಿರೋಧಿ ಪ್ರತಿಭಟನೆ ನಡೆಯಿತು. ಇದಕ್ಕೆ ನೇತೃತ್ವ ನೀಡಿದವರು ಓವೈಸಿ ಪಕ್ಷದ ಮುಖಂಡ ಕಾಶಿಫ್ ಅಹ್ಮದ್ ಎಂಬವರು. ಈ ಸಭೆಯಲ್ಲಿ ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಲಾಗಿದೆ ಎಂಬುದಾಗಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ ಡಿಸೆಂಬರ್ 28ರಂದು ಟ್ವೀಟ್ ಮಾಡಿದ್ದರು. ಅಲ್ಬ್ ನ್ಯೂಸ್ ಆ ಕಾರ್ಯಕ್ರಮದ ವೀಡಿಯೋವನ್ನು ನಿಕಷಕ್ಕೆ ಒಡ್ಡಿತು ಮತ್ತು ಅದರ ಫಲಿತಾಂಶವನ್ನು ದ ವೈರ್ ಸುದ್ದಿ ಜಾಲತಾಣ ಕೂಡ ಪ್ರಕಟಿಸಿತು. ಆ ಸಭೆಯಲ್ಲಿ ಕಾಶಿಫ್ ಸಾಬ್ ಝಿಂದಾಬಾದ್, ಹಿಂದೂಸ್ತಾನ್ ಝಿಂದಾಬಾದ್, ಅಕ್ಬರ್ ಓವೈಸಿ ಝಿಂದಾಬಾದ್ ಎಂದು ಕೂಗಲಾಗಿದೆಯೇ ಹೊರತು ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಲಾಗಿಲ್ಲ ಎಂದು ಅದು ಹೇಳಿತು. ಮಾತ್ರವಲ್ಲ, ಉತ್ತರ ಪ್ರದೇಶದ ಪೊಲೀಸರು ಕೂಡ ದೇಶದ್ರೋಹದ ಕೇಸನ್ನು ಕೈಬಿಟ್ಟು ಶಾಂತಿ ಕದಡಿದ ಪ್ರಕರಣವನ್ನಷ್ಟೇ ದಾಖಲಿಸಿದರು. ಆದರೆ, ಅಮಿತ್ ಮಾಲವೀಯ ಅವರ ಟ್ವೀಟ್ ನಿಂದ ಏನನ್ನು ಪಡೆದುಕೊಳ್ಳಬೇಕೋ ಅವೆಲ್ಲವನ್ನೂ ಪಡೆದುಕೊಳ್ಳ ಬೇಕಾದವರು ಪಡೆದುಕೊಂಡರು.
ನಿಜ ಏನೆಂದರೆ,
ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆಂದು ಯಾರ ಮೇಲಾದರೂ ಆರೋಪ ಹೊರಿಸುವುದರಲ್ಲಿ ಒಂದು ಥ್ರಿಲ್ ಇದೆ. ಇದು ಓರ್ವರನ್ನು ಭ್ರಷ್ಟಾಚಾರಿ ಎಂದು ಆರೋಪಿಸಿ ದಂತಲ್ಲ. ಆದ್ದರಿಂದಲೇ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮೇಲೂ ಇದೇ ಆರೋಪವನ್ನು ಬಿಜೆಪಿ ಹೊರಿಸಿದ್ದು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಶಂತ್ ಕುಮಾರ್ ಗೌತಂ ಅವರು ನವೆಂಬರ್ 29, 2020ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತುಗಳನ್ನು ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. ರೈತ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಝಿಂದಾಬಾದ್, ಖಾಲಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಲಾಗಿದೆ ಎಂದವರು ಆರೋಪಿಸಿದ್ದರು. ಹಾಗಂತ, ನಿಜಕ್ಕೂ ಹಾಗೆ ರೈತರು ಘೋಷಿಸಿದ್ದಾರೆಯೇ, ಅದಕ್ಕೆ ಏನು ಪುರಾವೆಗಳಿವೆ ಮತ್ತು ಅವು ಎಷ್ಟು ದೋಷರಹಿತ ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ತಕ್ಷಣಕ್ಕೆ ಲಭ್ಯವಾಗುವುದಕ್ಕೆ ಸಾಧ್ಯವಿಲ್ಲ. ಈ ಸತ್ಯ ಆರೋಪ ಹೊರಿಸುವವರಿಗೆ ಚೆನ್ನಾಗಿ ಗೊತ್ತು. ಆರೋಪಿತರು ಆ ಕ್ಷಣ ದಂಗಾಗುತ್ತಾರೆ. ನಾಲ್ಕೂ ಕಡೆಯಿಂದ ತೂರಿ ಬರುವ ಪ್ರಶ್ನೆಗಳಿಗೆ ನಿರಾಕರಣೆಯ ಉತ್ತರ ನೀಡಿ ನೀಡಿ ಸುಸ್ತಾಗುತ್ತಾರೆ ಮತ್ತು ಇಂಥ ನಿರಾಕರಣೆಯ ಉತ್ತರವನ್ನು ಅವರು ನೀಡುತ್ತಿರಬೇಕು ಎಂಬುದು ಆರೋಪ ಹೊರಿಸುವವರ ಉದ್ದೇಶವೂ ಆಗಿರುತ್ತದೆ. ಮುಂದೊಂದು ದಿನ ಆ ಆರೋಪ ತಪ್ಪೆಂದು ಸಾಬೀತಾದರೂ ಅದು ಸಾಸಿವೆಯಷ್ಟು ಸದ್ದು ಮಾಡುವುದಕ್ಕೂ ಸಮರ್ಥವಿರುವುದಿಲ್ಲ.
ಅಷ್ಟಕ್ಕೂ,
ಪಾಕಿಸ್ತಾನ್ ಝಿಂದಾಬಾದ್ ಎಂಬುದು ಶ್ರೀಲಂಕಾ ಝಿಂದಾ ಬಾದ್ ಎಂದು ಕೂಗಿದಷ್ಟೇ ಸಹಜವಾದುದು ಮತ್ತು ಸಮಾನ ಸ್ಥಾನಮಾನವುಳ್ಳದ್ದು ಎಂದು ವಾದಿಸುವುದನ್ನು ಒಪ್ಪಲಾಗದು. ಪಾಕ್ ಮತ್ತು ಭಾರತದ ನಡುವಿನ ಸಂಬಂಧ ಸಹಜವಾಗಿಲ್ಲದೇ ಇರುವಾಗ ಮತ್ತು ಈ ಎರಡು ರಾಷ್ಟ್ರಗಳ ನಡುವೆ ನಾಲ್ಕನೇ ಯುದ್ಧ ಯಾವ ಸಂದರ್ಭದಲ್ಲೂ ಘಟಿಸಬಹುದು ಎಂಬ ವಾತಾವರಣ ಸಣ್ಣ ಪ್ರಮಾಣದಲ್ಲಾದರೂ ಇರುವಾಗ ಪಾಕ್ ಝಿಂದಾಬಾದ್ ಮತ್ತು ಲಂಕಾ ಝಿಂದಾಬಾದ್ ಘೋಷಣೆಗಳನ್ನು ಏಕಪ್ರಕಾರವಾಗಿ ಪರಿಗಣಿಸಲು ಅಸಾಧ್ಯ. ಕಾನೂನಿನ ಪ್ರಕಾರ ಪಾಕಿಸ್ತಾನ್ ಝಿಂದಾಬಾದ್ ಎಂದು ಹೇಳುವುದು ನೇರವಾಗಿ ತಪ್ಪಲ್ಲದೇ ಇರಬಹುದು. ಆದರೆ, ಎರಡೂ ದೇಶಗಳ ನಡುವಿನ ಸಂಬಂಧ ಮತ್ತು ಅದು ಹುಟ್ಟು ಹಾಕಿರುವ ಪರಿಣಾಮಗಳು ಕಾನೂನಿನ ಹೊರತಾದ ಜಿಜ್ಞಾಸೆಗೂ ಕಾರಣವಾಗುತ್ತದೆ. ಅಂದಹಾಗೆ,
ಪಾಕಿಸ್ತಾನ್ ಝಿಂದಾಬಾದ್ ಎಂದು ಹೇಳುವುದರಿಂದ ಭಾರತೀಯರಿಗೆ ದಕ್ಕುವುದು ಏನೂ ಇಲ್ಲ. ಈ ಸತ್ಯ ಭಾರತೀಯರಿಗೆ ಗೊತ್ತಿರುತ್ತದೆ, ಗೊತ್ತಿರಬೇಕು. ಆದರೆ, ಪಾಕಿಸ್ತಾನ್ ಝಿಂದಾಬಾದ್ ಕೂಗಿದ್ದಾರೆಂದು ಆರೋಪ ಹೊರಿಸುವುದರಿಂದ ಏನೆಲ್ಲ ದಕ್ಕುತ್ತದೆ ಎಂಬುದಂತೂ ಹೊರಿಸುವವರಿಗೆ ಚೆನ್ನಾಗಿಯೇ ಗೊತ್ತಿದೆ. ಅಷ್ಟಕ್ಕೂ,
ದ.ಕ. ಜಿಲ್ಲೆಯಲ್ಲಿ ಎಸ್‌ಡಿಪಿಐ ಬೆಂಬಲಿಗರು ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ್ದಾರೆಂಬ ಆರೋಪ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಇವೆಲ್ಲ ನೆನಪಾಯಿತು.

Saturday, January 9, 2021

ಕಡಲ ‘ಮೀನುಗಳು' ಮಾತಾಡಿದುವು, ಮನಸ್ಸು ಆರ್ದ್ರಗೊಂಡಿತು..


 ಏ.ಕೆ. ಕುಕ್ಕಿಲ
ಆ 5 ಮಂದಿ ಮೀನುಗಾರರು ಕಚೇರಿಗೆ ಬಂದಿದ್ದರು. ಕೂರಿಸಿ ಮಾತಾಡಿಸಿದೆ. ಮಂಗಳೂರಿನ ಕಡಲಲ್ಲಿ ಮುಳುಗಿದ ಶ್ರೀರಕ್ಷಾ  ಪರ್ಸಿನ್ ಬೋಟ್‍ನಿಂದ ಪವಾಡಸದೃಶವಾಗಿ ಪಾರಾಗಿ ಬಂದ 19 ಮಂದಿಯಲ್ಲಿ ಈ ಯುವಕರೂ ಇದ್ದರು ಅಥವಾ ಆ 19 ಮಂದಿ  ಬದುಕಿ ಉಳಿದುದರಲ್ಲಿ ಈ 5 ಮಂದಿಯ ಪಾತ್ರ ಬಹಳ ದೊಡ್ಡದು. ಆಳ ಮೀನುಗಾರಿಕೆಗೆ ತೆರಳುವ ಪರ್ಸಿನ್ ಬೋಟ್‍ಗೆ ಸಣ್ಣ  ಬೋಟನ್ನೂ ಕಟ್ಟಲಾಗಿರುತ್ತದೆ. ಇದಕ್ಕೆ ಡಿಂಗಿ ಬೋಟ್ ಎಂದು ಹೆಸರು. ಪರ್ಸಿನ್ ಬೋಟು ಅವಘಡಕ್ಕೆ ಈಡಾದರೆ ಆಪತ್ಕಾಲಕ್ಕೆ  ಇರಲಿ ಎಂಬ ಉದ್ದೇಶದಿಂದ ಈ ಬೋಟನ್ನು ಜೊತೆಗೊಯ್ಯಲಾಗುತ್ತದೆ. ಶ್ರೀರಕ್ಷಾ ಬೋಟು ದಿಢೀರ್ ಆಗಿ ಕವುಚಿ ಬೀಳುವ  ಸೂಚನೆ ನೀಡಿದಾಗ ಅದರಲ್ಲಿದ್ದ ಈ 25ರಷ್ಟು ಮೀನುಗಾರರಿಗೆ ಕಡಲಿಗೆ ಧುಮುಕದೇ ಬೇರೆ ದಾರಿಯಿರಲಿಲ್ಲ. ಅರ್ಧರಾತ್ರಿ. ಒಬ್ಬನನ್ನು ಮತ್ತೊಬ್ಬ ಗುರುತಿಸಲಾಗದ ಮತ್ತು ಪತ್ತೆಹಚ್ಚಲಾಗದಂಥ ಸ್ಥಿತಿ. ಅಲ್ಲದೇ ತೀವ್ರ ಚಳಿ. ಕಡಲಿನ ಯಾವುದೋ ಒಂದು ಮಧ್ಯಭಾಗ.

ಪರ್ಸಿನ್ ಬೋಟು ನಿಧಾನಕ್ಕೆ ಮುಳುಗಲು ಪ್ರಾರಂಭಿಸಿದಾಗ ಅದರ ಜೊತೆಗೇ ಆ ಡಿಂಗಿ ಬೋಟೂ ಮುಳುಗಲು ಪ್ರಾರಂಭಿಸಿತು.  ಡಿಂಗಿ ಬೋಟನ್ನು ಪರ್ಸಿನ್ ಬೋಟ್‍ಗೆ ಹಗ್ಗದಿಂದ ಕಟ್ಟಿರುವ ಕಾರಣ ಇದು ಸಹಜವೂ ಆಗಿತ್ತು. ಸುಮಾರು 18 ಟನ್ ಮೀನನ್ನು  ತುಂಬಿಸಿಕೊಂಡಿರುವ ಬೋಟೊಂದು ನಿಧಾನಕ್ಕೆ ಕವುಚಿ ಬೀಳಲು ತೊಡಗುವುದು ಮತ್ತು ಅದರ ಜೊತೆಗೇ ಆಪತ್ಕಾಲದ ಬೋಟೂ  ಮುಳುಗುತ್ತಿರುವುದನ್ನು ಕಡಲಿಗೆ ಬಿದ್ದ ಹೆಚ್ಚಿನ ಮೀನುಗಾರರು ಹೊಲಬರಿಯದೇ ನೋಡುತ್ತಿದ್ದಾಗ ಈ 5 ಮಂದಿ ಯುವಕರು  ಅಸಾಧಾರಣ ಧೈರ್ಯ ತೋರಿ ಮುಳುಗುತ್ತಿದ್ದ ಪರ್ಸಿನ್ ಬೋಟ್‍ನಿಂದ ಕತ್ತಿಯನ್ನು ತಂದು ಹಗ್ಗ ಕತ್ತರಿಸತೊಡಗಿದರು. ಬಹುಶಃ  ಪರ್ಸಿನ್ ಬೋಟು ಕವುಚಿ ಬೀಳದೇ ಇರುತ್ತಿದ್ದರೆ ಈ ಹಗ್ಗ ಕತ್ತರಿಸುವುದಕ್ಕೂ ಸಮಯವೇ ಸಿಗುತ್ತಿರಲಿಲ್ಲವೇನೋ?
ಒಬ್ಬನ ನಂತರ ಒಬ್ಬ ಹೀಗೆ ಹಗ್ಗ ಕತ್ತರಿಸಿ ಡಿಂಗಿ ಬೋಟನ್ನು ಪರ್ಸಿನ್ ಬೋಟ್‍ನಿಂದ ಬೇರ್ಪಡಿಸುವ ಸಾಹಸಕ್ಕೆ ಧುಮುಕಿದರು.  ಹಾಗೆ ಬೇರ್ಪಡಿಸಿದ ಪರಿಣಾಮ ನೀರಲ್ಲಿದ್ದ 19 ಮಂದಿ ಈ ಬೋಟನ್ನು ಸೇರಿಕೊಂಡು ಬದುಕಿ ಬಂದರು. ವಿಷಾದ ಏನೆಂದರೆ,  

ಹಿಂದಿನ ದಿನ ಮುಂಜಾನೆ 3 ಗಂಟೆಗೆ ಎರಡು ಪರೋಟ ತಿಂದು ಅವರು ಈ ಪರ್ಸಿನ್ ಬೋಟನ್ನು ಹತ್ತಿದ್ದರು. ಯಥೇಚ್ಛವಾಗಿ  ಸಿಕ್ಕ ಮೀನುಗಳ ನಡುವೆ ಇವರಿಗೆ ಊಟ ಮಾಡುವುದಕ್ಕೂ ಸಮಯ ಸಿಕ್ಕಿರಲಿಲ್ಲ. ನಿಜವಾಗಿ,

ಆ ದಿನ ಮೀನಿನ ಹಬ್ಬವೇ ಆಗಿತ್ತು. ಇವರು ಹರಡಿದ್ದ ಬಲೆಯಲ್ಲಿ ಮೀನುಗಳು ಭಾರೀ ಸಂಖ್ಯೆಯಲ್ಲಿ ಬಿದ್ದಿತಲ್ಲದೇ ಬೇರೆ ಎರಡು  ಬೋಟುಗಳ ಮಂದಿ ಬಲೆ ಎಳೆಯಲು ನೆರವಾಗುವಷ್ಟು ಮೀನು ಯಥೇಚ್ಛವಾಗಿ ಸಿಕ್ಕಿತ್ತು ಮತ್ತು ಆ ಬೋಟುಗಳಿಗೆ ಧಾರಾಳ ಮೀನನ್ನೂ ಕೊಟ್ಟು ಕಳುಹಿಸಿದ್ದರು. ಆ ಬೋಟುಗಳು ಹೋದ ಬಳಿಕ ಇವರಿದ್ದ ಬೋಟು ಮುಳುಗಲು ಪ್ರಾರಂಭಿಸಿತ್ತು.

ಇವೆಲ್ಲ ಅವರೊಂದಿಗೆ ಮಾತನಾಡುತ್ತಾ ಅಲ್ಲಲ್ಲಿ ಸಿಕ್ಕ ಮಾಹಿತಿಗಳೇ ಹೊರತು ಅವರ ನಿಜ ಉದ್ದೇಶ ಈ ಮಾಹಿತಿಯನ್ನು ಹಂಚಿ ಕೊಳ್ಳುವುದಲ್ಲ ಎಂಬುದು ಅವರ ಮುಖಭಾವಗಳೇ ಹೇಳುತ್ತಿತ್ತು. ಅವರ ಪ್ರತಿ ಮಾತಿನಲ್ಲೂ ಕಳಕೊಂಡ ಗೆಳೆಯರ ಬಗೆಗಿನ  ಸಂಕಟಗಳ ಜೊತೆಜೊತೆಗೇ ತಾವೆಷ್ಟು ಅಪಾಯಕಾರಿ ಸ್ಥಿತಿಯಲ್ಲಿ ದುಡಿಯುತ್ತಿದ್ದೇವೆ ಎಂಬುದು ವ್ಯಕ್ತವಾಗುತ್ತಿತ್ತು. ಮೀನುಗಾರರ  ಪಾಲಿಗೆ ಕಡಲು ಇನ್ನೊಂದು ಮನೆ. ಮೀನಿನ ಜೊತೆ ಸದಾ ಸಂವಾದ ಅವರ ದಿನನಿತ್ಯದ ಬದುಕು. ಕಡಲಿನಲ್ಲೇ  ಅವರು ರಾತ್ರಿಯ ನ್ನು ಕಳೆಯುತ್ತಾರೆ. ಹಗಲನ್ನೂ ಕಳೆಯುತ್ತಾರೆ. ಅಲ್ಲೇ ಊಟ ಮಾಡುತ್ತಾರೆ. ನಿದ್ದೆ ಮಾಡುತ್ತಾರೆ. ತಮಾಷೆ, ನಗು, ಈ ಹಿಂದಿನವರ  ಸಾಹಸಗಾಥೆಗಳ ವರ್ಣನೆ, ಈಗಿನ ಅಪಾಯ... ಎಲ್ಲವುಗಳೂ ಅಲ್ಲಿ ಚರ್ಚೆಯಾಗುತ್ತಿರುತ್ತವೆ. ಮದುವೆಯಾಗದವರ ಮಾತು-ಕತೆಗಳ  ಸ್ವರೂಪ ಒಂದು ರೀತಿಯಾದರೆ, ಮದುವೆಯಾಗಿ ಮಕ್ಕಳು-ಸಂಸಾರ ಎಂಬವುಗಳನ್ನು ಜೊತೆಗೆ ಕಟ್ಟಿಕೊಂಡವರ ಮಾತು-ಕತೆಗಳು  ಇನ್ನೊಂದು ರೀತಿ. ಶಾಲಾ ಫೀಸು, ಆರೋಗ್ಯ, ಮನೆ ನಿರ್ವಹಣೆ, ಮನೆ ಬಾಡಿಗೆ ಇತ್ಯಾದಿಗಳೆಲ್ಲವೂ ಇವರ ಮಾತುಕತೆಗಳ ಮುಖ್ಯ  ಭಾಗವೂ ಆಗಿರುತ್ತದೆ. ಹಾಗಂತ,

ಕಡಲನ್ನೇ ಮನೆಯಾಗಿಸಿಕೊಂಡಿರುವ ಈ ಮೀನುಗಾರರಲ್ಲಿ ಹೆಚ್ಚಿನವರಿಗೆ ಸಹಜ ಮನೆಯಲ್ಲಿರುವ ಯಾವ ಜೀವನ ಭದ್ರತೆಯೂ  ಇರುವುದಿಲ್ಲ. ಕಡಲಿನ ಹೊರಗಡೆ ಇರುವ ಮನೆ ಯಲ್ಲಿ ಸಾಮಾನ್ಯ ಅಪಾಯವನ್ನು ಎದುರಿಸುವುದಕ್ಕೆ ತಕ್ಕಮಟ್ಟಿನ ಏ ರ್ಪಾಡುಗಳಾದರೂ ಇರುತ್ತವೆ. ಬೆಂಕಿ ಹೊತ್ತಿಕೊಂಡು ಜೀವಕ್ಕೆ ಅಪಾಯ ಎದುರಾಗುವಂತಿದ್ದರೆ ಏನಿಲ್ಲವೆಂದರೂ ಬೆಂಕಿ ನಂದಿಸುವು  ದಕ್ಕೆ ನೀರು ಇರುತ್ತದೆ. ತಲೆನೋವು, ಶೀತ, ಗ್ಯಾಸ್ಟ್ರಿಕ್ ಇತ್ಯಾದಿ ಗಳನ್ನು ಎದುರಿಸುವುದಕ್ಕೆ ಮೊದಲೇ ಔಷಧಿಗಳನ್ನು ತಂದಿಡಲಾಗುತ್ತದೆ. ಮನೆಮದ್ದುಗಳಿಗೆ ಬೇಕಾದ ಬೇರೆ ಬೇರೆ ಔಷಧೀಯ ವಸ್ತುಗಳನ್ನೂ ಮನೆಯಲ್ಲಿ ತಂದಿಡುವುದಿದೆ. ಇವೆಲ್ಲ ಮುಂಜಾಗರೂ  ಕತಾ ಕ್ರಮಗಳು. ಏನಾದರೂ ಅಪಾಯ ಸಂಭವಿಸಿ ಬಿಟ್ಟರೆ ಅಥವಾ ತುರ್ತು ಸಂದರ್ಭ ಸೃಷ್ಟಿಯಾದರೆ ಎಂಬ ಮುನ್ನೆಚ್ಚರಿಕೆಯೇ  ಇವು ಮನೆಯಲ್ಲಿರುವುದಕ್ಕೆ ಕಾರಣ. ದುರಂತ ಏನೆಂದರೆ,

ಕಡಲನ್ನೇ ಮನೆ ಮಾಡಿಕೊಂಡಿರುವ ಈ ಮೀನುಗಾರರಲ್ಲಿ ಹೆಚ್ಚಿನವರಿಗೆ ಅಪಾಯಕಾರಿ ಸಂದರ್ಭವನ್ನು ಎದುರಿಸುವುದಕ್ಕೆ ಯಾವ  ಸೌಲಭ್ಯಗಳೂ ಇಲ್ಲ. ಈ ಯುವಕರನ್ನೇ ಎತ್ತಿಕೊಳ್ಳಿ. ಪರ್ಸಿನ್ ಬೋಟು ಕವುಚಿ ಬೀಳುವ ಬದಲು ಸಹಜ ಮುಳುಗಡೆಗೆ  ಒಳಗಾಗಿರುತ್ತಿದ್ದರೆ ಆ ಡಿಂಗಿ ಬೋಟನ್ನು ಬೇರ್ಪಡಿಸುವುದು ಸುಲಭವಿತ್ತೇ ಎಂಬ ಪ್ರಶ್ನೆ ನಿರ್ಲಕ್ಷಿಸುವಂಥದ್ದಲ್ಲ. ಲೈಫ್ ಜಾಕೆಟ್  ಎಂಬುದು ಇಂಥ ಸಂದರ್ಭಗಳಲ್ಲಿ ಮೀನುಗಾರರ ಜೀವವನ್ನು ಉಳಿಸಬಲ್ಲದು. ಕಡಲಿನ ಆಳ-ಅಗಲ ತಿಳಿಯದ ಮತ್ತು ನಾವು ಎ ಲ್ಲಿದ್ದೇವೆಂದೇ ಗೊತ್ತಾಗದಂಥ ಕಾಳ ರಾತ್ರಿಯಲ್ಲಿ ಅವಘಡ ಸಂಭವಿಸುವುದನ್ನು ಊಹಿಸಿಕೊಳ್ಳುವಾಗಲೇ ಭಯವಾಗುತ್ತದೆ. ಇಂಥ ಸಂದರ್ಭದಲ್ಲಿ ಲೈಫ್ ಜಾಕೆಟ್ ಇಲ್ಲದೇ ನೀರಿಗೆ  ಧುಮುಕುವುದೆಂದರೆ, ಸಾವನ್ನು ಆರಿಸಿಕೊಂಡಂತೆ. ಅಪಾಯಕಾರಿ ಸನ್ನಿವೇಶದ ನಡುವೆಯೂ ಈ ಯುವಕರು ಸ್ಥಿಮಿತ ಕಳಕೊಳ್ಳದೇ  ಇರುತ್ತಿದ್ದರೆ ಈ 19 ಮಂದಿಯ ಸ್ಥಿತಿ ಏನಾಗಿರುತ್ತಿತ್ತೋ ಏನೋ? ಅಷ್ಟಕ್ಕೂ,

ಕಡಲು ಮಾತ್ರ ಇವರ ಪಾಲಿಗೆ ಅಸುರಕ್ಷಿತ ಮನೆಯಲ್ಲ. ಬೋಟು ತುಂಬಾ ಟನ್ನುಗಟ್ಟಲೆ ಮೀನು ತಂದು ತೀರಕ್ಕೆ ತಲುಪಿದ  ಬಳಿಕವೂ ಇವರ ಬದುಕು ಅಸುರಕ್ಷಿತವೇ. ಒಂದು ರೀತಿಯಲ್ಲಿ ಇವರೆಲ್ಲ ಅಸುರಕ್ಷಿತ ಕಾರ್ಮಿಕರು. ಹೊಟ್ಟೆಯ ಹಸಿವೇ ಇವರನ್ನು  ಈ ಅಸುರಕ್ಷಿತ ಸನ್ನಿವೇಶಕ್ಕೆ ಒಗ್ಗಿಕೊಳ್ಳುವಂತೆ ಮಾಡಿದೆ. ಒಂದು ಕಾಳರಾತ್ರಿಯಲ್ಲಿ ಹೊಟ್ಟೆಗೇನನ್ನೋ ತುಂಬಿಸಿ ಕೊಂಡು ತೀರ  ಬಿಡುವ ಇಂಥ ಛಲಗಾರ ಮೀನುಗಾರರು ಕಡಲ ಮಧ್ಯೆ ರಾತ್ರಿ-ಹಗಲನ್ನು ಕಳೆದು ತೀರಕ್ಕೆ ಬಂದರೆ, ಜುಜುಬಿ ಅನ್ನುವ ವೇತನವಷ್ಟೇ  ಸಿಗುತ್ತದೆ. ಅವರ ಸಾಹಸ, ಸಮಯ, ಕೆಲಸ ಮತ್ತು ಅಪಾಯಕಾರಿ ಸನ್ನಿವೇಶಕ್ಕೆ ಹೋಲಿಸಿದರೆ ಇವರು ಪಡೆಯುವ ವೇತನ ಬಹಳ  ಚಿಕ್ಕದು. ಇದರ ಜೊತೆಗೇ ಇವರು ತಮ್ಮ ಆರೋಗ್ಯವನ್ನೂ ಕೆಡಿಸಿಕೊಂಡಿರುತ್ತಾರೆ. ಸರಿಯಾದ ಸಮಯಕ್ಕೆ ಸರಿಯಾದ ಆಹಾರವನ್ನು  ತೆಗೆದು ಕೆಲಸ ಮಾಡುವುದಕ್ಕೆ ಇದು ಸೂಟು-ಬೂಟಿನ ಉದ್ಯೋಗ ಅಲ್ಲವಲ್ಲ. ಹೊಟ್ಟೆಪಾಡಿನ ಅನಿವಾರ್ಯತೆ ಇಲ್ಲದಿದ್ದರೆ ಈ ಮೀನುಗಳು ಸಮುದ್ರಕ್ಕೆ ಇಳಿಯುವ ಸಾಧ್ಯತೆಯೂ ಇಲ್ಲ.

ನನ್ನೆದುರು ಕುಳಿತು ಮಾತಿಗೆ ನಿಂತ ಈ ಮೀನುಗಳನ್ನು ಆಲಿಸುತ್ತಾ ಹೋದಂತೆ ಮೂರು ಪ್ರಮುಖ ಅಂಶಗಳು ಗೋಚರಿಸಿದುವು.

1. ತಮ್ಮವರನ್ನು ಕಳಕೊಂಡ ದುಃಖಭಾವ

2. ಜೀವನ ಅಭದ್ರತೆ

3. ಅಸಂಘಟಿತ ಕಾರ್ಮಿಕರಲ್ಲಿರುವ ಸಹಜ ತಲ್ಲಣಗಳು

ಈ ಯುವಕರ ಸಾಹಸವನ್ನು ಮೆಚ್ಚಿಕೊಳ್ಳುವ ಮತ್ತು ಸನ್ಮಾನ ಮಾಡುವುದರ ಜೊತೆಜೊತೆಗೇ ಇವರ ಮಾತುಗಳ ಆಳದಲ್ಲಿರುವ  ಶೂನ್ಯ ಸ್ಥಿತಿಯನ್ನೂ ತುಂಬಬೇಕಾದ ಅಗತ್ಯ ಇದೆ. ಬಗೆಬಗೆಯ ಮೀನುಗಳ ರುಚಿಯನ್ನು ಸವಿದು ಅನುಭವವಿರುವ ಹೆಚ್ಚಿನವರಿಗೆ  ಈ ಮೀನುಗಳ ಹಿಂದಿನ ಕರುಣ ಕತೆ ಗೊತ್ತಿರುವುದಿಲ್ಲ. ಮೀನು ಗಳಲ್ಲಿ ಯಾವ ವಿಧದ ಜಾತಿ, ಪ್ರಬೇಧಗಳಿವೆ, ಇವುಗಳಲ್ಲಿ ಬರೇ  ಮುಳ್ಳು ಹೆಚ್ಚಿರುವ ಮೀನುಗಳಾವುವು, ಮಾಂಸವೇ ಹೆಚ್ಚಿರುವ ಮೀನುಗಳು ಯಾವುವು, ಇವುಗಳಲ್ಲಿ ಸ್ವಾದಭರಿತ ಯಾವುವು, ಭಿನ್ನ  ರುಚಿ ಯಾವುದಕ್ಕಿದೆ, ಯಾವ ಮೀನು ಎಷ್ಟು ಮೊಟ್ಟೆ ಯಿಡುತ್ತವೆ, ಯಾವ ಮೀನಿಗೆ ಎಷ್ಟು ಜಾಡೆ ಹಲ್ಲಿದೆ, ಯಾವ ಮೀನು ಫ್ರೈಗೆ  ಹೆಚ್ಚು ಸೂಕ್ತ, ಪಲ್ಯಕ್ಕೆ ಸಹಜವಾಗಿ ಹೊಂದುವ ಮೀನು ಯಾವುದು, ಮೀನಿನಲ್ಲಿರುವ ವಿಟಮಿನ್‍ಗಳು ಯಾವುವು, ಮಕ್ಕಳಿಗೆ ಯಾವ  ಮೀನನ್ನು ಕೊಡಬೇಕು, ಗರ್ಭಿಣಿಯರು ಯಾವ ಮೀನನ್ನು ತಿನ್ನಬಾರದು, ನಂಜು ಏರಿಸುವ ಮೀನು ಯಾವುದು.. ಇತ್ಯಾದಿಗಳ  ಬಗ್ಗೆ ನಮ್ಮಲ್ಲಿರುವಷ್ಟು ಮಾಹಿತಿ ಅನೇಕ ಬಾರಿ ಈ ಮೀನುಗಳನ್ನು ಕಡಲಾಳದಿಂದ ಹಿಡಿದು ತರುವ ಬಡ ಮೀನುಗಾರರ ಬಗ್ಗೆ  ಇರುವುದಿಲ್ಲ. ಹಾಗಂತ,

ಮೀನುಗಳಷ್ಟೇ ಮೀನುಗಾರರ ಬಗ್ಗೆಯೂ ಮಾಹಿತಿ ಇದ್ದರೆ ಮಾತ್ರ ಅವರು ಪರಿಪೂರ್ಣರು ಎಂದೂ ಅಲ್ಲ. ಇದೊಂದು ಸಹಜ  ಸ್ಥಿತಿ. ನಾವೊಂದು ಮನೆ ಕಟ್ಟುವಾಗ ಅಥವಾ ಕಟ್ಟಿದ ಮನೆಯಲ್ಲಿ ಬಾಡಿಗೆದಾರರಾಗಿ ವಾಸ ಮಾಡಲು ಹೊರಟಾಗ, ಆ ಮನೆಗೆ ಕಲ್ಲು  ಕೆತ್ತಿದವರು, ಸಿಮೆಂಟ್ ತಯಾರಿಸಿದ ಕಾರ್ಮಿಕರು, ಗಾರೆ ಕೆಲಸ ಮಾಡಿದವರು, ಕಾಂಕ್ರೀಟು ಕೆಲಸ ಮಾಡಿದವರು, ಜಲ್ಲಿ ಕಲ್ಲು  ಕಾರ್ಮಿಕರು ಮುಂತಾದವರ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ನಮಗೆ ಹೆಚ್ಚೆಂದರೆ ಮನೆ  ಮಾಲಿಕ ಗೊತ್ತಿರುತ್ತಾನೆ. ಅಥವಾ ಮನೆ ಕಟ್ಟಲು ಹೊರಟೆವೆಂದರೆ ನಕಾಶೆ ತಯಾರಿಸಿದವ, ಇಂಜಿನಿ ಯರ್, ಕಾಂಟ್ರಾಕ್ಟರ್  ಮುಂತಾದವರ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಮೀನುಗಾರರ ಬಗ್ಗೆಯೂ ಕಡಲಿನ ಹೊರಗಡೆಯಿರುವ ಜನರ ಸ್ಥಿತಿ ಇದುವೇ.  ಆದರೆ,

ಅಪಘಾತವೋ ಅನಾಹುತವೋ ಸಂಭವಿಸಿದಾಗ ಈ ಮೇಲು ಮೇಲಿನ ಪರದೆ ಸರಿದು ಪರದೆಯ ಆಚೆಗಿರುವ ಜನರ ದ ರ್ಶನವಾಗುತ್ತದೆ. ಕಟ್ಟಡ ಉರುಳಿದಾಗ ಅದರ ಅಡಿಯಲ್ಲಿ ಸಿಲುಕಿಕೊಂಡ ಅಸಹಾಯಕ ಕಾರ್ಮಿಕ ನಮ್ಮ ಹೃದಯವನ್ನು ಕಲಕುತ್ತಾನೆ.  ಅವರ ಕುಟುಂಬ, ಮಕ್ಕಳು, ಬಡತನ ಇತ್ಯಾದಿಗಳು ನಮ್ಮ ಕಣ್ಣನ್ನು ತೇವಗೊಳಿಸುತ್ತದೆ. ಇಂಥ ಸಂದರ್ಭದಲ್ಲಿ ಕಟ್ಟಡದ ಮಾಲಿಕ  ಸಾರ್ವಜನಿಕ ಪರೀಕ್ಷೆಗೆ ಒಳ ಗಾಗುತ್ತಾನೆ. ಜನರ ಹೃದಯ ತಟ್ಟುವ ಕಾರ್ಮಿಕನಂತೆಯೇ ಆ ಸಂದರ್ಭದಲ್ಲಿ ಮಾಲಿಕನೂ  ತಟ್ಟಬೇಕಾದರೆ ಆತನ ವಿಶೇಷ ಸ್ಪಂದನೆ ಬೇಕಾಗುತ್ತದೆ. ಕಾರ್ಮಿಕರನ್ನು ಆತ ಆವರೆಗೆ ನಡೆಸಿಕೊಂಡ ರೀತಿ  ಮೆಚ್ಚುವಂತಿರಬೇಕಾಗುತ್ತದೆ. ಇಲ್ಲದಿದ್ದರೆ ಆ ಸಂದರ್ಭದಲ್ಲಿ ಮಾಲಿಕ ಖಳನಾಗುತ್ತಾನೆ. ಕಾರ್ಮಿಕ ಹೀರೋ ಆಗುತ್ತಾನೆ... 

ಈ ಮೀನುಗಾರ ಯುವಕರ ಜೊತೆ ಮಾತನಾಡುತ್ತಾ ಹೋದಾಗ ನನ್ನೊಳಗನ್ನು ಹೀಗೆಲ್ಲ ಕಾಡಿದುವು. ಇವರಿಗೆ ಈಗ ಬೇಕಿರುವುದು  ಸನ್ಮಾನ ಅಲ್ಲ. ಮೆಚ್ಚುಗೆಯ ಜೊತೆಜೊತೆಗೇ ಇವರ ವೃತ್ತಿಗೊಂದು ಭದ್ರತೆ. ಇನ್ನೂ ಬೆಳಕು ಮೂಡುವ ಮೊದಲೇ ಮೀನು ಬೇಟೆಯ  ಬೋಟಿಗಿಳಿಯುವಾಗ ಕನಿಷ್ಠ ಲೈಫ್ ಜಾಕೆಟ್ ಎಂಬ ಆಪತ್ಕಾಲೀನ ವ್ಯವಸ್ಥೆ. ಮೀನು ತಂದು ತೀರದಲ್ಲಿಳಿದಾಗ ಗೌರವ ಮತ್ತು ವೃತ್ತಿಗೆ  ತಕ್ಕ ವೇತನ. ಇಷ್ಟು ಅಪಾಯಕಾರಿ ಕೆಲಸ ಮಾಡಿಯೂ ಒಂದು ದಿನ ದುಡಿಯ ದಿದ್ದರೆ ಅನ್ನವಿಲ್ಲ ಎಂಬ ಅಭದ್ರತೆಯಿಂದ ಮುಕ್ತಿ.  ಅನಾರೋಗ್ಯ, ಮಕ್ಕಳ ಶಾಲಾ ಫೀಸು ಮುಂತಾದ ಸಂದರ್ಭಗಳಲ್ಲಿ ಕಾಡುವ ಅಸಹಾಯಕತೆಯಿಂದ ಮುಕ್ತಿ. ಮೀನುಗಾರರಿಗೆ  ಜೀವನ ಭದ್ರತೆಗೆ ಪೂರಕವಾದ ಯೋಜನೆ.

ಬೃಹತ್ ಬೋಟಿನ ಮಾಲಿಕರು ಮನಸ್ಸು ಮಾಡಿದರೆ ಮತ್ತು ಜಿಲ್ಲಾ
ಧಿಕಾರಿಯವರು ಮುತುವರ್ಜಿ ತೋರಿದರೆ ಇದು ಖಂಡಿತ  ಅಸಾಧ್ಯ ಅಲ್ಲ.

ನನ್ನೆದುರು ಕುಳಿತ ಕಡಲ ಮೀನುಗಳಾದ ಶರಾಫತ್, ನಿಝಾಮ್, ಶಿಹಾಬ್, ಇಜಾಝï ಮತ್ತು ರುಬಾನ್‍ರಿಗೆ ಅಭಿನಂದನೆಗಳು.

Wednesday, December 9, 2020

ಲವ್: ನಿಮ್ಮಲ್ಲಿರುವ ಪಟ್ಟಿಯನ್ನು ನೀವೇ ಇಟ್ಟುಕೊಳ್ಳಿ



ಏ.ಕೆ. ಕುಕ್ಕಿಲ

'The price of saying No’ ಎಂಬ ಶೀರ್ಷಿಕೆಯಲ್ಲಿ ನವೆಂಬರ್ 7ರ ದ ಹಿಂದೂ ಪತ್ರಿಕೆಯು ವರದಿಯೊಂದನ್ನು  ಪ್ರಕಟಿಸಿತ್ತು. ಹರ್ಯಾಣದ ಬಲ್ಲಾಬ್‍ಘರ್‍ ನಲ್ಲಿರುವ ಅಗರ್ವಾಲ್ ಕಾಲೇಜಿನ ಹೊರಗಡೆ ನಿಖಿತಾ ಎಂಬ ಕಾಲೇಜು ವಿದ್ಯಾರ್ಥಿನಿ  ನಿಂತಿರುತ್ತಾಳೆ. ತನ್ನನ್ನು ಕರೆದುಕೊಂಡು ಹೋಗಲು ಬರಬೇಕಾದ ಸಹೋದರನನ್ನು ಕಾಯುತ್ತಿರುತ್ತಾಳೆ. ಅಕ್ಟೋಬರ್ 26ರಂದು  ಸಂಜೆ 3.30 ಗಂಟೆ. ತೌಸೀಫ್ ಎಂಬ 21 ವರ್ಷದ ಯುವಕ ತನ್ನ ಗೆಳೆಯ ರೆಹಾನ್‍ನೊಂದಿಗೆ ಅಲ್ಲಿಗೆ ಕಾರಲ್ಲಿ ಬರುತ್ತಾನೆ.  ನಿಖಿತಾಳನ್ನು ಕಾರಲ್ಲಿ ಎತ್ತಿಕೊಂಡು ಹೋಗಲು ಶ್ರಮಿಸುತ್ತಾನೆ. ಆಕೆ ತಪ್ಪಿಸಿಕೊಂಡಾಗ ಗುಂಡು ಹಾರಿಸುತ್ತಾನೆ. ಬಳಿಕ ಪರಾರಿ ಯಾಗುತ್ತಾನೆ. ಆಕೆ ಸಾವಿಗೀಡಾಗುತ್ತಾಳೆ.

ಮರುದಿನವೇ ಪೋಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸುತ್ತಾರೆ.

ಆ ಬಳಿಕ ಕರ್ನಿಸೇನಾದಂಥ ಅನೇಕಾರು ಸಂಘಟನೆಗಳು ಈ ಘಟನೆಯನ್ನು ಎತ್ತಿಕೊಂಡು ಪ್ರತಿಭಟನೆ ನಡೆಸಿವೆ. ಸಾಮಾಜಿಕ  ಜಾಲತಾಣಗಳಲ್ಲಿ ಲವ್‍ಜಿಹಾದ್ ಕೋನದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಸರ್ವ ಬಿರಾದಾರಿ ಸಂಘಟನ್‍ನ ನೇತೃತ್ವದಲ್ಲಿ ನವೆಂಬರ್  1ರಂದು ಹರ್ಯಾಣದ ದುಸ್ಸೆಹ್ರಾ ಮೈದಾನದಲ್ಲಿ ಪ್ರತಿಭಟನೆ ನಡೆದಿದೆ. ಸಾವಿರಕ್ಕಿಂತ ಅಧಿಕ ಮಂದಿ ಅದರಲ್ಲಿ ಭಾಗಿಯಾಗಿದ್ದಾರೆ.  ಪ್ರತಿಭಟನೆ ಹಿಂಸಾತ್ಮಕ ರೂಪ ಪಡಕೊಂಡಿತಲ್ಲದೇ 11 ಪೊಲೀಸರಿಗೂ ಗಾಯವಾಯಿತು. ಆಗ್ರಾದಿಂದ ನವದೆಹಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44ಕ್ಕೆ ತಡೆಯೊಡ್ಡಲು ಪ್ರತಿಭಟನಾಕಾರರು ಶ್ರಮಿಸಿದರು. ಅಂಗಡಿಗಳಿಗೆ ಕಲ್ಲೆಸೆತ ನಡೆಯಿತು. 32 ಮಂದಿಯ ಬಂಧನವೂ ನಡೆಯಿತು. ಬಳಿಕ ನಿಖಿತಾಳ ತಂದೆ ಮೂಲಚಂದ್ ತೋಮರ್ ಅವರ ಮನೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ  ಕುಮಾರಿ ಶೆಲ್ಜಾ ಭೇಟಿ ನೀಡಿದ ವೇಳೆ ಅವರ ಮೇಲೆ ಹಲ್ಲೆ ನಡೆಯಿತು. ಆ ಬಗ್ಗೆ ಎಫ್‍ಐಆರ್ ಕೂಡ ದಾಖಲಾಯಿತು. ಹಾಗಂತ,

ಇದು ಎರಡು ಧರ್ಮಗಳ ನಡುವಿನ ವಿಷಯ ಅಲ್ಲ ಎಂದು ನಿಖಿತಾಳ ತಂದೆ ತೋಮರ್ ಅವರೇ ಹೇಳಿದ್ದಾರೆ. ಆದರೆ ವೃತ್ತಿಯಲ್ಲಿ  ಎಲೆಕ್ಟ್ರೀಷಿಯನ್ ಆಗಿರುವ ತೋಮರ್ ಅವರಲ್ಲಿ ಇನ್ನೊಂದು ಸಂಕಟವೂ ಇದೆ. ‘ನೋ’ ಎಂದ ಕಾರಣಕ್ಕೆ ಕೊಲ್ಲುವುದನ್ನು ಹೇಗೆ  ಸಹಿಸಿಕೊಳ್ಳುವುದು?

2018ರಲ್ಲಿ ನಿಖಿತಾಳನ್ನು ಇದೇ ತೌಸೀಫ್ ಅಪಹರಣಗೊಳಿಸಿದ ಬಗ್ಗೆ ಬಲ್ಲಾಬ್‍ಘರ್ ನ  ಪೊಲೀಸ್ ಠಾಣೆಯಲ್ಲಿ ತೋಮರ್ ಕೇಸು  ದಾಖಲಿಸಿದ್ದರು. ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್‍ನ ಪ್ರಕಾರ, ನಿಖಿತಾ ತನ್ನ ಅಪಹರಣವಾಗಿರುವ ಬಗ್ಗೆ ಗೆಳೆಯ  ಅಭಿಷೇಕ್‍ಗೆ ತಿಳಿಸಿದ್ದಳು. ಆತ ತೋಮರ್‍ ಗೆ ತಿಳಿಸಿದ್ದ. ಭಾರತೀಯ ದಂಡಸಂಹಿತೆ 365ರ ಪ್ರಕಾರ ಕೇಸೂ ದಾಖಲಾಗಿತ್ತು. ಆದರೆ,  ಆ ಬಳಿಕ ಎರಡೂ ಕುಟುಂಬಗಳು ಮಾತುಕತೆ ನಡೆಸಿ ಸಮಸ್ಯೆಯನ್ನು ರಾಜಿಯಲ್ಲಿ ಪರಿಹರಿಸಿಕೊಂಡಿದ್ದುವು. ಆದರೆ ತೌಸೀಫ್‍ನ  ತಾಯಿ ಇದನ್ನು ನಿರಾಕರಿಸುತ್ತಾರೆ. ತೌಸೀಫ್‍ನ ಜೊತೆ ನಿಖಿತಾಳೇ ಹೊರಟು ಬಂದಿದ್ದಳು ಮತ್ತು ಆಕೆಯ ಅಂಕಲ್‍ನ ಜೊತೆ ಬಳಿಕ  ಕಳುಹಿಸಿಕೊಡಲಾಯಿತು ಎಂದು ಅವರು ಹೇಳುತ್ತಾರೆ. ಎಫ್‍ಐಆರ್ ಅನ್ನು ಆ ಬಳಿಕ ರದ್ದುಗೊಳಿಸಲಾಗಿತ್ತು.

ಫರೀದಾಬಾದ್‍ನ ರವಾಲ್ ಇಂಟರ್‍ನ್ಯಾಶನಲ್ ಸ್ಕೂಲ್‍ನಲ್ಲಿ ಕಲಿಯುತ್ತಿದ್ದಾಗ ನಿಖಿತಾ ಮತ್ತು ತೌಸೀಫ್ ಭೇಟಿಯಾಗಿದ್ದರು ಎಂದು  ತೋಮರ್ ಹೇಳುತ್ತಾರೆ. ಆತ ಆಗ ಹಾಸ್ಟೆಲ್‍ನಲ್ಲಿದ್ದು ಕಲಿಯುತ್ತಿದ್ದ. ತೌಸೀಫ್‍ನ ತಾಯಿಯ ಪ್ರಕಾರ ಆತ ಕಲಿಕೆಯಲ್ಲಿ ಮುಂದು.  ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಆತನಿಗೆ ಈ ಬಾರಿ ಎಂಬಿಬಿಎಸ್ ಸೀಟು ಸಿಕ್ಕಿತ್ತು. ದೂರ ಎಂಬ ಕಾರಣಕ್ಕಾಗಿ ಎಂಬಿಬಿಎಸ್  ಕಲಿಕೆಯನ್ನು ಕೈ ಬಿಡಲಾಗಿತ್ತು. ಹಾಗೆಯೇ, ನಿಖಿತಾಳ ಅಪಹರಣ ಪ್ರಕರಣ ನಡೆದ ಬಳಿಕ ಮನೆಯವರು ಆಕೆಯ ಜೊತೆ ಸದಾ  ಇರುತ್ತಿದ್ದರು. ಒಂಟಿಯಾಗಿ ಕಾಲೇಜಿಗೆ ಹೋಗುವುದಾಗಲಿ ಮತ್ತು ಹಿಂತಿರುಗುವುದಾಗಲಿ ಮಾಡುತ್ತಿರಲಿಲ್ಲ. ಅಮ್ಮ ಮತ್ತು  ಸಹೋದರ ಸದಾ ಬೆಂಗಾವಲಾಗಿ ನಿಲ್ಲುತ್ತಿದ್ದರು. ಘಟನೆ ನಡೆದ ದಿನದಂದೂ ಆಕೆ ಸಹೋದರನಿಗಾಗಿ ಕಾಯುತ್ತಿದ್ದಳು. ಈ ಎರಡು  ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಆಕೆಯನ್ನು ತೌಸೀಫ್ ಭೇಟಿಯಾಗಿದ್ದನ್ನು ತಾನು ಕಂಡಿಲ್ಲ ಎಂದು ತೋಮರ್ ಹೇಳುತ್ತಾರೆ.  ಪೊಲೀಸರು ಹೇಳುವುದೇನೆಂದರೆ, ‘ಒಂದೋ ಆಕೆ ನನಗೆ ಸಿಗಬೇಕು, ಇಲ್ಲದಿದ್ದರೆ ಯಾರಿಗೂ ಸಿಗಬಾರದು’ ಎಂಬ ಮನಸ್ಥಿತಿ ತೌಸೀಫ್‍ನದ್ದು. ನಿಜವಾಗಿ,

ಅಕ್ಟೋಬರ್ 26ರ ಆ ಘಟನೆಯನ್ನು ಇಲ್ಲಿ ಇಷ್ಟುದ್ದ ವಿವರಿಸಬೇಕಾದ ಅಗತ್ಯ ಇರಲಿಲ್ಲ. ಮತ್ತೂ ಯಾಕೆ ಇಲ್ಲಿ ಇಷ್ಟು ವಿಸ್ತೃತವಾಗಿ  ವಿವರಿಸಿದ್ದೇಕೆಂದರೆ, ಭಾರತದ ಯಾವುದೇ ಮೂಲೆಯಲ್ಲಿ ನಡೆಯಬಹುದಾದ ಕ್ರೌರ್ಯಕ್ಕಿಂತ ಈ ಕ್ರೌರ್ಯ ಯಾವ ರೀತಿಯಲ್ಲೂ ಭಿನ್ನ  ಅಲ್ಲ ಎಂಬುದಕ್ಕಾಗಿ. ಇದು ಅಪರೂಪದಲ್ಲಿ ಅಪರೂಪದ ಘಟನೆ ಅಲ್ಲ. ಇಂಥ ಕ್ರೌರ್ಯಗಳು ದೇಶದಲ್ಲಿ ಈ ಮೊದಲೂ ನಡೆದಿವೆ.  ‘ನನಗೆ ಸಿಗದವಳು ಯಾರಿಗೂ ಸಿಗಬಾರದು’ ಎಂಬ ಸ್ವಾರ್ಥವು ಅನೇಕ ಹೆಣ್ಮಕ್ಕಳನ್ನು ಬಲಿ ಪಡೆದಿದೆ. ಅಂಥ ಹೆಣ್ಮಕ್ಕಳಲ್ಲಿ ಹಿಂದುವೂ  ಇದ್ದಾರೆ. ಮುಸ್ಲಿಮೂ ಇದ್ದಾರೆ. ಕ್ರೂರಿ ಗಂಡು ಮಕ್ಕಳಲ್ಲಿ ಹಿಂದುವೂ ಇದ್ದಾರೆ, ಮುಸ್ಲಿಮೂ ಇದ್ದಾರೆ. ಸಮಾಜ ಮಾತ್ರ ತನ್ನ ಮನಸ್ಥಿತಿಗೋ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿಯೋ ಕೆಲವೊಂದನ್ನು ಲವ್ ಜಿಹಾದ್ ಎಂದೋ ಇನ್ನು ಹಲವನ್ನು ಪ್ರೇಮ  ಪ್ರಕರಣ ವೆಂದೋ ವಿಭಜಿಸಿ ಆಡಿಕೊಳ್ಳುತ್ತದೆ. ಸದ್ಯದ ಅಗತ್ಯ ಏನೆಂದರೆ, 

ನಿಖಿತಾಳಂತಹ ಕೋಟ್ಯಂತರ ಹೆಣ್ಮಕ್ಕಳ ಬದುಕು ಅ ಪಾಯಕ್ಕೆ ತುತ್ತಾಗದಂತೆ ನೋಡಿಕೊಳ್ಳುವುದು. ನಿಖಿತಾ ಎಂಬುದು ಒಂದು ಸಂಕೇತ ಮಾತ್ರ. ಧರ್ಮ ಯಾವುದೇ ಆಗಿದ್ದರೂ ಹೆಣ್ಣು  ಹೆಣ್ಣೇ. ಇಂಥ ಪ್ರಕರಣಗಳು ಅಂತಿಮವಾಗಿ ಪರಿಣಾಮ ಬೀರುವುದೂ ಹೆಣ್ಣಿನ ಮೇಲೆಯೇ. ಹೆಣ್ಮಕ್ಕಳ ಓದಿಗೆ ಇಂಥವು ತಡೆ  ಒಡ್ಡುತ್ತವೆ. ದೂರದೂರಿಗೆ ಕಲಿಕೆಗೆ ಕಳುಹಿಸಿ ಕೊಡಲು ಹೆತ್ತವರು ಭಯ ಪಡುತ್ತಾರೆ. ಮುಂದೆ ಏನಾಗುವುದೋ ಎಂಬ ಭೀತಿಯಿಂದ  ಮನೆಯಲ್ಲೇ  ಹೆಣ್ಮಕ್ಕಳನ್ನು ಹೆತ್ತವರು ಉಳಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇಂಥ ಭಯ ಇರುವ ಕಾರಣದಿಂದಲೇ ಹೆಣ್ಮಕ್ಕಳು ಮ ನೆಯವರಲ್ಲಿ ಏನನ್ನೂ ಹಂಚಿಕೊಳ್ಳುವುದಿಲ್ಲ. ಪುಂಡರ ಚುಡಾಯಿಸುವಿಕೆಯಾಗಲಿ ಏಕಮುಖ ಪ್ರೇಮಿಯ ಕುರಿತಾಗಲಿ ಮನೆಯಲ್ಲಿ  ಏನನ್ನೂ ಹೇಳಿ ಕೊಳ್ಳದೇ ಮುಚ್ಚಿಡುತ್ತಾರೆ. ಹೇಳಿಬಿಟ್ಟರೆ ಎಲ್ಲಿ ಕಲಿಕೆಗೆ ಕುತ್ತಾಗು ವುದೋ ಎಂಬ ಭೀತಿ. ಕೆಲವೊಮ್ಮೆ ಹೆಣ್ಮಕ್ಕಳು  ಹೇಳಿಕೊಂಡರೂ ಮರ್ಯಾದೆಗೆ ಅಂಜಿ ಹೆತ್ತವರು ಸುಮ್ಮನಾಗುವುದಿದೆ. ಅದು ಆರೋಪಿಗಳಲ್ಲಿ ಧೈರ್ಯವನ್ನು ಒದಗಿಸುತ್ತದೆ.

ಹೆಣ್ಣು-ಗಂಡಿನ ನಡುವೆ ಆಕರ್ಷಣೆ ಪ್ರಕೃತಿ ಸಹಜ. ಮಾನವ ಜನಾಂಗ ಇರುವವರೆಗೆ ಈ ಆಕರ್ಷಣೆ ಇದ್ದೇ  ಇರುತ್ತದೆ. ಮಾತ್ರವಲ್ಲ,  ಈ ಆಕರ್ಷಣೆಗೆ ಧರ್ಮವೂ ಇರುವುದಿಲ್ಲ. ಹೆಣ್ಣು ಮತ್ತು ಗಂಡು ಎಂಬ ಪ್ರಕೃತಿ ಧರ್ಮವಷ್ಟೇ ಇರುತ್ತದೆ. ಸಮಾಜ ಮಾತ್ರ  ಹೆಣ್ಣಿಗೊಂದು ಮತ್ತು ಗಂಡಿಗೊಂದು ಧರ್ಮವನ್ನು ಕೊಟ್ಟು ಆ ಆಕರ್ಷಣೆಯಲ್ಲಿ ಸಂಚನ್ನೋ ಸಹಜತೆಯನ್ನೋ ಕಾಮವನ್ನೋ  ಹುಡುಕುತ್ತದೆ. ಲವ್ ಜಿಹಾದ್ ಎಂಬುದಕ್ಕೆ ಇದರಾಚೆಗಿನ ಮಹತ್ವ ಇಲ್ಲ ಎಂದೇ ನನ್ನ ಭಾವನೆ. ಬಹು ಧರ್ಮೀಯ  ಭಾರತದಲ್ಲಂತೂ ಹೆಣ್ಣು ಹಿಂದೂ ಆಗಿರುವುದು ಮತ್ತು ಗಂಡು ಮುಸ್ಲಿಮ್ ಆಗಿರುವುದು ಅಥವಾ ಇವು ತಿರುವು-ಮುರುವು  ಆಗಿರುವುದು ಅಚ್ಚರಿಯದ್ದೇನೂ ಅಲ್ಲ. ಮುಸ್ಲಿಮ್ ಮತ್ತು ಹಿಂದೂಗಳ ಜನಸಂಖ್ಯೆಯಲ್ಲಿ ಏರಿಳಿತ ಇರುವುದರಿಂದ ಪ್ರೇಮ  ಪ್ರಕರಣಗಳ ಅನುಪಾತದಲ್ಲೂ ಈ ಏರಿಳಿತ ಇದೆ. ಹಿಂದೂ ಯುವಕ ಮತ್ತು ಮುಸ್ಲಿಮ್ ಯುವತಿಯ ನಡುವಿನ ಪ್ರೇಮ  ಪ್ರಕರಣಕ್ಕಿಂತ ಮುಸ್ಲಿಮ್ ಯುವಕ ಮತ್ತು ಹಿಂದೂ ಯುವತಿಯ ನಡುವಿನ ಪ್ರೇಮ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೆ ಅದಕ್ಕೆ ಈ ಜ ನಸಂಖ್ಯೆಯ ಪ್ರಮಾಣ ಕಾರಣವಾಗಿರುವುದರ ಹೊರತಾಗಿ ಇನ್ನಾವುದೂ ಕಾಣಿಸುತ್ತಿಲ್ಲ. ಸದ್ಯ ಸಮಾಜದ ಅಗತ್ಯ ಏನೆಂದರೆ, 

ಯುವ  ಸಮೂಹವನ್ನು ಪ್ರೇಮದ ವಿಷಯದಲ್ಲಿ ಶಿಕ್ಷಿತರನ್ನಾಗಿ ಮಾಡುವುದು. ಪ್ರೇಮ ಸಹಜ ಸತ್ಯ ಎಂಬುದನ್ನು ಅರ್ಥ ಮಾಡಿಕೊಂಡ  ಯಾವುದೇ ಸಮಾಜ ತನ್ನ ಯುವ ಪೀಳಿಗೆಗೆ ಪ್ರೇಮವನ್ನು ವಿವರಿಸಿಕೊಡುವ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕಿದೆ. ಲವ್  ಜಿಹಾದ್ ಸುಳ್ಳು ನಿಜ. ಆದರೆ ಲವ್ ಸುಳ್ಳಲ್ಲ. ಸುಳ್ಳಲ್ಲದ ಲವ್ ಅನ್ನು ಸುಳ್ಳು ಸುಳ್ಳೇ ಎದೆಯೊಳಗೆ ಬಚ್ಚಿಟ್ಟುಕೊಂಡು ಸಂಕಟಪಡುತ್ತಾ  ಹೊರಗಡೆ ನಗುವ ಮತ್ತು ಅಮಾಯಕರಂತೆ ಬದುಕುವ ಯುವಕ-ಯುವತಿಯರಿಗೆ ಅದರ ಸರಿ-ತಪ್ಪುಗಳನ್ನು ವಿವರಿಸಿಕೊಡುವ  ವ್ಯವಸ್ಥೆಯಾಗಬೇಕು. ಹೀಗಾಗ ಬೇಕಾದರೆ ಮೊದಲು ಅವರು ತಮ್ಮ ಪ್ರೇಮವನ್ನು ಹೆತ್ತವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ  ವಾತಾವರಣ ನಿರ್ಮಾಣವಾಗಬೇಕು. ನಿಜವಾಗಿ ಇವತ್ತಿನ ದಿನಗಳ ಅತೀ ಜರೂರು ಇದು. ಮಕ್ಕಳ ಪಾಲಿಗೆ ಮನೆಯ ವಾತಾವರಣ  ಎಲ್ಲವನ್ನೂ ಹಂಚಿಕೊಳ್ಳುವಷ್ಟು ಹಿತಕರವಾಗಿರಬೇಕು. ತಮ್ಮ ಉದ್ದೇಶ, ಗುರಿ, ಹವ್ಯಾಸ, ಅಭ್ಯಾಸ, ಗೆಳೆಯರು, ಕಲಿಕೆ, ಪ್ರೇಮ.. ಏನೇ  ಇರಲಿ ಎಲ್ಲವನ್ನೂ ಹೆತ್ತವರೊಂದಿಗೆ ಹಂಚಿಕೊಂಡು ಸಲಹೆ ಪಡಕೊಳ್ಳುವ ಮುಕ್ತ ವಾತಾವರಣ ಮನೆಯದ್ದಾಗಿರಬೇಕು. ಹೆಣ್ಣಿಗೂ  ಗಂಡಿಗೂ ಈ ವಾತಾವರಣ ಪ್ರತಿ ಮನೆಯಲ್ಲೂ ಸೃಷ್ಟಿಯಾಗಬೇಕು. ಅದರಿಂದ ಎರಡು ಲಾಭ ಇದೆ-

1. ಯುವಕ ಅಥವಾ ಯುವತಿಗೆ ಅದರಿಂದ ಮಾನಸಿಕ ಬಲ ಲಭ್ಯವಾಗುತ್ತದೆ. ಭಾರ ಇಳಿಸಿಕೊಂಡ ನೆಮ್ಮದಿ ಒಂದೆಡೆ ಯಾದರೆ,  ಹೆತ್ತವರಿಂದ ಸಲಹೆ-ಸೂಚನೆ ಪಡಕೊಳ್ಳುವ ಮೂಲಕ ತಾನು ಒಂಟಿಯಲ್ಲ ಎಂಬ ಭಾವನೆ ಅವರಲ್ಲಿ ಬೆಳೆಯುತ್ತದೆ.

2. ತನ್ನ ಮಗ ಅಥವಾ ಮಗಳು ಎಂಥ ಸ್ಥಿತಿಯಲ್ಲಿದ್ದಾಳೆ/ನೆ ಎಂಬುದನ್ನು ಹೆತ್ತವರಿಗೆ ಅರಿತುಕೊಳ್ಳಲು ಸುಲಭವಾಗುತ್ತದೆ. ತನ್ನ  ಮಕ್ಕಳ ಸ್ಥಿತಿ ಸಂದಿಗ್ಧವೋ ಭವಿಷ್ಯದಲ್ಲಿ ಅಪಾಯ ಎದುರಾದೀತೋ, ಕೌನ್ಸೆಲಿಂಗ್ ನಡೆಸಬೇಕಾದೀತೋ ಇತ್ಯಾದಿಗಳ ಬಗ್ಗೆ  ವಿಶ್ಲೇಷಿಸುವುದಕ್ಕೆ ಹೆತ್ತವರಿಗೆ ಅವಕಾಶ ಸಿಗುತ್ತದೆ.

ಇಂಥ ವಾತಾವರಣವನ್ನು ಮನೆಯೊಳಗಡೆ ಉಂಟು ಮಾಡಿದರೆ ನಿಖಿತಾಳಂತಹ ಅಸಂಖ್ಯ ಹೆಣ್ಮಕ್ಕಳನ್ನು ಅಪಾಯದಿಂದ ಪಾರು  ಮಾಡುವುದಕ್ಕೆ ಅವಕಾಶ ಸಿಗಬಹುದು. ಹಾಗೆಯೇ ತೌಸೀಫ್‍ನಂಥ ಮಕ್ಕಳು ನಿರ್ಮಾಣವಾಗದಂತೆ ತಡೆಯುವುದಕ್ಕೂ  ಸಾಧ್ಯವಾಗಬಹುದು. ‘ತನಗೆ ಸಿಗದವರು ಇನ್ನಾರಿಗೂ ಸಿಗಬಾರದು’ ಎಂಬ ಭಾವ ತೀವ್ರವತೆಯು ಹೆಚ್ಚಿನ ದುರಂತ ಪ್ರೇಮ ಪ್ರಕರಣ ಗಳ ಒಳರಹಸ್ಯವೆಂಬುದು ಸತ್ಯ. ಏಕಮುಖ ಪ್ರೇಮದ ಕೊನೆಯೂ ಹೀಗೆಯೇ. ಪ್ರೇಮದ ಬಗ್ಗೆ ಮುಕ್ತವಾಗಿ ಮಾತಾಡಿಕೊಳ್ಳದ  ಸಾಮಾಜಿಕ ವಾತಾವರಣದಲ್ಲಿ ಇಂಥ ದುರಂತಗಳು ತಪ್ಪಿದ್ದಲ್ಲ. ಇವನ್ನು ಕಾನೂನೊಂದೇ ತಡೆಯದು. ಆ ಕ್ಷಣದಲ್ಲಿ ವ್ಯಕ್ತಿಯ  ಮೆದುಳು ಸಕಾರಾತ್ಮಕವಾಗಿ ಯೋಚಿಸುವುದನ್ನು ನಿಲ್ಲಿಸಿರುತ್ತದೆ. ಕಾನೂನು ಕಟ್ಟಳೆಗಳು ಆ ಸಮಯದಲ್ಲಿ ಭಯ ಉಂಟು  ಮಾಡುವುದೂ ಇಲ್ಲ. ಅದೊಂದು ಭ್ರಾಮಕ ಸ್ಥಿತಿ. ಆ ಸ್ಥಿತಿಗೆ ತಲುಪದಂತೆ ಯುವ ಸಮೂಹವನ್ನು ತಡೆಯಬೇಕಾದರೆ ಅವರು  ತಮ್ಮನ್ನು ಮುಕ್ತವಾಗಿ ಮನೆಯವರೊಂದಿಗೆ ತೆರೆದಿಡುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ. ಪ್ರೇಮದ ಉತ್ಕಟ  ಭಾವತೀವ್ರತೆಯ ಅಮಲಿನಿಂದ ಹೆಣ್ಣು ಅಥವಾ ಗಂಡನ್ನು ಹೊರತರಲು ಒಂದು ಮನೆಯಿಂದ ಸಾಧ್ಯ. ಅದು ಬಿಟ್ಟು ಪ್ರೇಮ  ಪ್ರಕರಣವನ್ನು ಲವ್‍ಜಿಹಾದ್ ಎಂದೋ ಮತಾಂತರದ ಸಂಚು ಎಂದೋ ಹುಯಿಲೆಬ್ಬಿಸುವುದು ಕಾಲಹರಣ ಅಷ್ಟೇ.

ಇನ್ನು, ಇಸ್ಲಾಮ್‍ಗೆ ಮತಾಂತರವಾದವರ ಸಂಖ್ಯೆ ಮತ್ತು ಹಿಂದೂ ಧರ್ಮಕ್ಕೆ ಮತಾಂತರವಾದವರ ಸಂಖ್ಯೆಯನ್ನು ಇಟ್ಟುಕೊಂಡು  ಚರ್ಚಿಸುವಿರಾದರೆ, ನಿಮ್ಮಿಷ್ಟ.

Tuesday, November 10, 2020

ಒಂದು ಜಾಹೀರಾತು ಮತ್ತು ಹಲವು ಡಿಬೇಟ್‍ಗಳು



ಟಿ.ವಿ. ಚಾನೆಲ್ ಒಂದರಲ್ಲಿ ಚರ್ಚೆಯನ್ನು ವೀಕ್ಷಿಸಿದೆ. ಸುಮಾರಾಗಿ ಅದು ಹೀಗೆ ಸಾಗುತ್ತದೆ-
ನಿರೂಪಕ: ಇಸ್ಲಾಮಿನಲ್ಲಿ ಸೀಮಂತ ಆಚರಣೆ ಸರಿಯೋ ತಪ್ಪೋ?
ಅತಿಥಿ: ತಪ್ಪು
ನಿರೂಪಕ: ಮುಸ್ಲಿಮ್ ಯುವಕನನ್ನು ವರಿಸಿದ ಹಿಂದೂ ಯುವತಿ ಇಸ್ಲಾಮ್‍ಗೆ ಮತಾಂತರ ಆಗದಿದ್ದರೆ ಆ ವಿವಾಹ  ಸಿಂಧುವಾಗುತ್ತದೋ ಇಲ್ಲವೋ?
ಅತಿಥಿ: ಇಲ್ಲ
ನಿರೂಪಕ: ಹಾಗಿದ್ದರೆ ತನಿಷ್ಕ್ ಜ್ಯುವೆಲ್ಲರಿಯ ಏಕತ್ವಂ ಜಾಹೀರಾತು ಇಸ್ಲಾಮ್‍ನ ವಿಧಿ-ನಿಯಮಗಳಿಗೆ ಪೂರಕವಾಗಿದೆಯೇ?
ಅತಿಥಿ: ಇಲ್ಲ
ನಿರೂಪಕ: ಹಾಗಿದ್ದರೆ ತನಿಷ್ಕ್ ಜಾಹೀರಾತ್‍ಗೆ ನಿಮ್ಮ ಬೆಂಬಲ ಇದೆಯೇ?
ಅತಿಥಿ: ಇಲ್ಲ.
ಚರ್ಚೆ ಹೇಗೆ ಕೊನೆಗೊಳ್ಳಬೇಕೆಂದು ಮೊದಲೇ ನಿರ್ಧರಿಸಿದ ನಿರೂಪಕನೋರ್ವ ಹೇಗೆ ಅತಿಥಿಗಳ ಬಾಯಿಯಿಂದ ತನಗೆ ಬೇಕಾದ  ಉತ್ತರವನ್ನು ಪಡೆದುಕೊಳ್ಳಬಹುದು ಎಂಬುದಕ್ಕೆ ಉದಾಹರಣೆಗೆ ಇದು.
ಮುಸ್ಲಿಮರಲ್ಲಿ ಇಸ್ಲಾಮಿನ ರೀತಿ-ರಿವಾಜುಗಳಿಗೆ ಸಂಬಂಧಿಸಿ ವಿಭಿನ್ನ ಧೋರಣೆಯಿದೆ. ದರ್ಗಾ ಸಂಸ್ಕೃತಿಯನ್ನು ತಪ್ಪು ಎಂದು ವಾದಿಸುವವರು ಇರುವಂತೆಯೇ ಸರಿ ಎಂದು ವಾದಿಸುವವರೂ ಇದ್ದಾರೆ. ಗರ್ಭಿಣಿಗೆ ಮಾಡುವ ಸೀಮಂತ ಆಚರಣೆಯ ಪರ ಮತ್ತು  ವಿರೋಧ ಅಭಿಪ್ರಾಯ ಉಳ್ಳವರೂ ಇದ್ದಾರೆ. ಮದುವೆಯ ಮೊದಲು ವಧುವಿನ ಮನೆಯಲ್ಲಿ ನಡೆಯುವ ಮದರಂಗಿ ಕಾರ್ಯಕ್ರಮ,  ಹುಟ್ಟು ಹಬ್ಬ ಆಚರಣೆ ಇತ್ಯಾದಿ ಆಚರಣೆಗಳ ಕುರಿತಂತೆ ಮುಸ್ಲಿಮ್ ಸಮುದಾಯದೊಳಗೆ ವೈಚಾರಿಕ ಭಿನ್ನಾಭಿಪ್ರಾಯ ಇದೆ. ವಿಶೇಷ  ಏನೆಂದರೆ, ಈ ಭಿನ್ನಾ ಭಿಪ್ರಾಯದ ವಿವರ ಗೊತ್ತಿರುವ ಚತುರ ಟಿವಿ ನಿರೂಪಕ ನೋರ್ವ ಹೇಗೆ ಈ ಸಂದರ್ಭವನ್ನು ದುರ್ಬಳಕೆ  ಮಾಡಿಕೊಳ್ಳಬಲ್ಲ ಎಂಬುದು. ಉದಾಹರಣೆಗೆ ತನಿಷ್ಕ್ ಜ್ಯುವೆಲ್ಲರಿಯ ಏಕತ್ವಂ ಜಾಹೀರಾತನ್ನೇ ಎತ್ತಿಕೊಳ್ಳೋಣ.
ಉತ್ತರ ಭಾರತದ ಮುಸ್ಲಿಮ್ ಕುಟುಂಬಕ್ಕೆ ಕೇರಳದ ಹಿಂದೂ ಯುವತಿಯೋರ್ವಳು ಸೊಸೆಯಾಗಿ ಹೋಗುತ್ತಾಳೆ. ಗರ್ಭಿಣಿಯಾಗು ತ್ತಾಳೆ ಮತ್ತು ಆಕೆಗೆ ಕೇರಳದ ಹಿಂದೂ ಕುಟುಂಬದಲ್ಲಿ ರೂಢಿ ಯಲ್ಲಿರುವಂತೆ ಸೀಮಂತ ಕಾರ್ಯಕ್ರಮ ಮಾಡಲು ಆ ಮುಸ್ಲಿಮ್  ಕುಟುಂಬ ತಯಾರಿ ನಡೆಸುತ್ತದೆ. ಆ ಹಿಂದೂ ಯುವತಿಗೆ ಆಶ್ಚರ್ಯವೂ ಆಗುತ್ತದೆ. ಮುಸ್ಲಿಮರಲ್ಲಿ ಈ ಆಚರಣೆ ಇಲ್ವಲ್ಲಾ ಎಂಬ  ಉದ್ಧಾರವೊಂದು ಆ ಹೆಣ್ಣು ಮಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮಲ್ಲಿಲ್ಲದಿದ್ದರೇನು, ನಿಮ್ಮಲ್ಲಿದೆಯಲ್ಲವೇ ಎಂಬ ರೀತಿಯಲ್ಲಿ ಆ  ಮುಸ್ಲಿಮ್ ಕುಟುಂಬ ಆಕೆಯನ್ನು ಪ್ರೀತಿಸುವ ಮತ್ತು ಸಾಂಸ್ಕೃತಿಕ ಏಕತ್ವವನ್ನು ಸಾರುವ ದೃಶ್ಯ ಆ ಜಾಹೀರಾತಿನದು.
ಕುತೂಹಲ ಇರುವುದೂ ಇಲ್ಲೇ.
ಅಕ್ಟೋಬರ್ 9 ರಂದು ಬಿಡುಗಡೆಗೊಂಡ ಆ ಜಾಹೀರಾತಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಗಳು ವ್ಯಕ್ತವಾದುವು. ತನಿಷ್ಕ್ ಆ ಜಾಹೀರಾತನ್ನು ಹಿಂತೆಗೆದುಕೊಳ್ಳ ಬೇಕೆಂಬ ಬೇಡಿಕೆಗಳು ವ್ಯಕ್ತವಾದುವು. ನಟಿ ಕಂಗನಾ ರಾಣಾವತ್ ಅವರು ಆ  ಜಾಹೀರಾತನ್ನು ಲವ್ ಜಿಹಾದ್ ಎಂದರು. ಕ್ರಿಯೇಟಿವ್ ಟೆರರಿಸ್ಟ್ ಎಂದರು. ಲವ್ ಜಿಹಾದ್‍ಗೆ ಪ್ರೇರೇಪಿಸುತ್ತದೆ ಮತ್ತು ಭಾರತೀಯ  ಸಾಂಸ್ಕೃತಿಕ ಅಸ್ಥಿತೆಗೆ ಅದು ವಿರುದ್ಧವಿದೆ ಎಂಬ ಅಭಿಪ್ರಾಯ ಬಲಪಡೆಯಿತು. ಕೊನೆಗೆ ತನಿಷ್ಕ್ ಆ ಜಾಹೀರಾತನ್ನು ಹಿಂಪಡೆಯಿತು.  ನಿಮಗೆ ಗೊತ್ತಿರಲಿ,
ಈ ಜಾಹೀರಾತನ್ನು ಮುಸ್ಲಿಮರು ಆಕ್ಷೇಪಿಸಿರಲಿಲ್ಲ. `ಸೀಮಂತ ಆಚರಣೆ ಇಸ್ಲಾಮ್‍ಗೆ ವಿರುದ್ಧ, ಆದ್ದರಿಂದ ಆ ಜಾಹೀರಾತು  ಇಸ್ಲಾಮ್ ವಿರೋಧಿ' ಎಂದು ಯಾವ ಮೌಲಾನರೂ ಫತ್ವ ಹೊರಡಿಸಿರಲಿಲ್ಲ. ಆದರೆ, ಟಿವಿ ಕಾರ್ಯಕ್ರಮವನ್ನು ಬರೇ ಆ  ಜಾಹೀರಾತು ಮತ್ತು ಅದನ್ನು ವಿರೋಧಿಸುವವರ ಮೃತ್ತದೊಳಗೆ ತಿರುಗಿಸಿದರೆ, ಅದರಲ್ಲಿ ಮಜಾ ಏನಿರುತ್ತೆ? ಅದರ ಬದಲು ಅದನ್ನು ಹಿಂದೂ-ಮುಸ್ಲಿಮ್ ಆಗಿ ಪರಿವರ್ತಿಸಿದರೆ ಮತ್ತು ಮುಸ್ಲಿಮರಿಂದಲೂ ಆ ಜಾಹೀರಾತನ್ನು ತಪ್ಪು ಎಂದು ಹೇಳಿಸಿದರೆ,  ವಿರೋಧಕ್ಕೆ ಆನೆ ಬಲ ಬರುತ್ತದೆ. ಇದಕ್ಕೆ ಮಾಡಬೇಕಾದುದೇನೆಂದರೆ, ಮುಸ್ಲಿಮರಲ್ಲಿ ಸೀಮಂತವನ್ನು ಯಾರು ವಿರೋಧಿಸುತ್ತಾರೋ  ಅವರನ್ನು ಟಿವಿ ಟಿಬೇಟ್‍ಗೆ ಆಹ್ವಾನಿಸುವುದು. ಚರ್ಚೆಯನ್ನು ಇಸ್ಲಾಂ ಧರ್ಮದೆಡೆಗೆ ಒಯ್ಯುವುದು ಮತ್ತು ಇಸ್ಲಾಮ್‍ನಲ್ಲಿ ಸೀಮಂತ  ಇದೆಯೇ ಎಂದು ಪ್ರಶ್ನಿಸುವುದು. ಅವರಿಂದ ಇಲ್ಲ ಎಂಬ ಉತ್ತರ ವನ್ನು ಪಡೆದುಕೊಂಡು ಆ ಇಡೀ ಜಾಹೀರಾತು ಹೇಗೆ ಇಸ್ಲಾಮ್  ವಿರೋಧಿ ಎಂದು ವ್ಯಾಖ್ಯಾನಿಸುವುದು ಮತ್ತು ಸದ್ಯ ದೇಶದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ 20 ಕೋಟಿ ಮುಸ್ಲಿಮರ  ಬೆಂಬಲವೂ ಇದೆ ಎಂಬ ಪರೋಕ್ಷ ಸಂದೇಶವನ್ನು ಸಾರಲು ಯತ್ನಿಸುವುದು- ಇದು ಆ ಕಾರ್ಯಕ್ರಮದ ಒಟ್ಟು ಸಾರಾಂಶ.
ನಿಜಕ್ಕೂ ತನಿಷ್ಕ್ ಜಾಹೀರಾತು ಹಿಂದೂ-ಮುಸ್ಲಿಮರಿಗೆ ಸಂಬಂಧಿಸಿದ್ದೇ?
ಈ ಪ್ರಶ್ನೆ ಒಟ್ಟು ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾದುದು. ತನಿಷ್ಕ್ ಜಾಹೀರಾತಿಗೆ ಯಾರು ವಿರೋಧ ವ್ಯಕ್ತಪಡಿಸಿದ್ದಾರೋ ಅವರಾರೂ ಇಸ್ಲಾಮ್‍ನಲ್ಲಿ ಸೀಮಂತ ಆಚರಣೆ ಇಲ್ಲ ಎಂಬುದನ್ನು ಅದಕ್ಕೆ ಕಾರಣವಾಗಿ ಕೊಟ್ಟಿಲ್ಲ. ಹಿಂದೂ  ಯುವತಿಯು ಮುಸ್ಲಿಮ್ ಕುಟುಂಬಕ್ಕೆ ವಿವಾಹವಾಗಿ ತೆರಳುವುದೇ ಅವರ ವಿರೋಧಕ್ಕೆ ಕಾರಣ. ಹಾಗಂತ, ಈ ವಿರೋಧಿ ಗುಂಪು ಅಮಾಯಕ ಏನಲ್ಲ. ಹಿಂದೂ ಯುವತಿಯನ್ನು ಮುಸ್ಲಿಮ್ ಯುವಕ ವಿವಾಹವಾಗಿರುವುದು ಅಥವಾ ಮುಸ್ಲಿಮ್ ಯುವತಿ ಹಿಂದೂ  ಯುವಕನನ್ನು ಮದುವೆಯಾಗಿರುವುದು ಈ ಗುಂಪಿಗೆ ಗೊತ್ತಿಲ್ಲ ಎಂದೂ ಅಲ್ಲ. ಮುಖ್ತಾರ್ ಅಬ್ಬಾಸ್ ನಕ್ವಿ, ಉಮರ್ ಅಬ್ದುಲ್ಲಾ,  ಕಬೀರ್ ಖಾನ್ ಜೋಡಿ, ಸಿನಿಮಾ ರಂಗದ ಅನೇಕ ನಟ-ನಟಿಯರು ಧರ್ಮಾತೀತವಾಗಿ ವಿವಾಹವಾಗಿದ್ದಾರೆ. ಭಾರತದಂತಹ  ಬಹು ಧರ್ಮೀಯ ಮತ್ತು ಬಹುಸಂಸ್ಕೃತಿಯ ರಾಷ್ಟ್ರವೊಂದ ರಲ್ಲಿ ಈ ಬಗೆಯ ವಿವಾಹ ಅಚ್ಚರಿಯ ಬೆಳವಣಿಗೆಯೂ ಅಲ್ಲ. ಇದು  ವಿರೋಧಿಸುವವರಿಗೂ ಗೊತ್ತು, ವಿರೋಧಿಸುವವರನ್ನು ಒಳಗೊಳಗೇ ಬೆಂಬಲಿಸುವವರಿಗೂ ಗೊತ್ತು. ನಿಜ ಏನೆಂದರೆ,
ಈ ವಿರೋಧ ಹುಟ್ಟಿಕೊಂಡಿರುವುದು ಸಾಂಸ್ಕೃತಿಕ ರಾಜಕಾರಣದ ಗರ್ಭದಲ್ಲಿ. ಮುಸ್ಲಿಮರನ್ನು ವಿರೋಧಿಸುವುದರಿಂದ ರಾಜಕೀಯ  ಲಾಭವಿದೆ ಎಂಬುದು 90ರ ಬಳಿಕ ಈ ದೇಶದಲ್ಲಿ ಸಿದ್ಧವಾಗುತ್ತಾ ಬಂದ ಸತ್ಯ. ಮುಸ್ಲಿಮರನ್ನು ಎಷ್ಟು ತೀವ್ರವಾಗಿ ವಿರೋ ಧಿಸುತ್ತೀರೋ ಮತ್ತು ಅವರ ಸಾಂಸ್ಕೃತಿಕ ಗುರುತುಗಳ ವಿರುದ್ಧ ಎಂಥೆಂಥ ಕಾನ್ಫಿರಸಿ ಥಿಯರಿಯನ್ನು ಹುಟ್ಟು ಹಾಕುತ್ತೀರೋ ಅಷ್ಟೇ  ಪ್ರಬಲ ವಾಗಿ ನಿಮ್ಮ ವಿಚಾರಧಾರೆಗೆ ಸಾಮಾಜಿಕ ಮನ್ನಣೆ ಲಭ್ಯವಾಗುತ್ತಾ ಹೋಗುತ್ತದೆ ಎಂಬ ವಾತಾವರಣ 90ರ ಬಳಿಕ  ದಟ್ಟವಾಗುತ್ತಾ ಹೋಯಿತು. ಟಿಪ್ಪು, ಔರಂಗಜೇಬ, ಘಸ್ನಿ, ಘೋರಿ, ನವಾಬರು ಇತ್ಯಾದಿ ದೊರೆಗಳನ್ನು ದೇಶದ್ರೋಹಿಗಳಂತೆ  ಬಿಂಬಿಸುವುದರಿಂದ ಸಾಮಾಜಿಕ ಧ್ರುವೀಕರಣ ಸಾಧ್ಯವಿದೆ ಎಂಬುದು ದಿನೇ ದಿನೇ ಗಟ್ಟಿಗೊಳ್ಳತೊಡಗಿತು. ಅವರೆಲ್ಲ ರಾಜರು

ಎಂಬುದನ್ನು ಮರೆತು ಇಸ್ಲಾಮ್ ಧರ್ಮದ ನಿಜವಾಗಿ ಪ್ರತಿನಿಧಿಗಳು ಎಂಬಂಥ ಭಾವನೆ ಯನ್ನು ಬಿತ್ತಲಾಯಿತು. ಅವರನ್ನು ಎಷ್ಟು  ಹೀನಾಯಾಗಿ ಬಿಂಬಿಸ ಬಹುದೋ ಅಷ್ಟೆಲ್ಲಾ ಪ್ರಯತ್ನಗಳನ್ನು ಮಾಡಲಾಯಿತು. ಅವರ ರಚನೆಗಳನ್ನು ಅಳಿಸುವ ಶ್ರಮ  ನಡೆಸಲಾಯಿತು.
ಈ ಸಾಂಸ್ಕೃತಿಕ ರಾಜಕಾರಣದ ಭಾಗವೇ ತನಿಷ್ಕ್ ಜಾಹೀರಾತಿನ ವಿರೋಧ.
ನಿಜಕ್ಕೂ ಅವರ ವಿರೋಧ ಇರುವುದು ಆ ಜಾಹೀರಾತಿನ ಸೀಮಂತಕ್ಕಲ್ಲ. ಅಲ್ಲಿ ಬಿಂಬಿಸಲಾಗಿರುವ ಹಿಂದೂ-ಮುಸ್ಲಿಮ್ ಭ್ರಾತೃತ್ವ  ಭಾವಕ್ಕೆ. ಮುಸ್ಲಿಮರು ಹಿಂದೂ ಸಾಂಸ್ಕೃತಿಕ ಆಚರಣೆ ಯನ್ನು ಗೌರವಿಸುವಂಥ ವಿಶಾಲ ಹೃದಯಿಗಳು ಎಂಬ ಸಂದೇಶಕ್ಕೆ. ಈ  ಸಂದೇಶ ಅವರು ಪ್ರತಿಪಾದಿಸುವ ಸಾಂಸ್ಕøತಿಕ ರಾಜಕಾರಣಕ್ಕೆ ಬಹುದೊಡ್ಡ ಕೊಡಲಿಯೇಟು. ಹಿಂದೂ-ಮುಸ್ಲಿಮರನ್ನು ಎರಡು  ಧ್ರುವಗಳಲ್ಲಿ ಕೂರಿಸಿ ಪರಸ್ಪರ ವೈರಿಗಳಂತೆ ಸದಾ ಇರಗೊಡುವುದೇ ಅವರ ಗುರಿ. ಅವರ ಯಶಸ್ಸು ಅಡಗಿರುವುದೇ ಇದರಲ್ಲಿ.  ಯಾವಾಗ ಈ ತಂತ್ರಕ್ಕೆ ಏಟು ಕೊಡುವ ಘಟನೆಗಳು ನಡೆಯುತ್ತೋ ಅಗೆಲ್ಲ ಇವರು ವಿಚಲಿತಗೊಳ್ಳುತ್ತಾರೆ. ಎಲ್ಲಿ ತಮ್ಮ ಹಿಡಿತ  ಸಮಾಜದಿಂದ ಕೈ ತಪ್ಪಿ ಹೋಗುತ್ತೋ ಎಂದು ಭಯಪಡುತ್ತಾರೆ. ಆದ್ದರಿಂದಲೇ, ಹಿಂದೂ-ಮುಸ್ಲಿಮ್ ಸೌಹಾರ್ದವನ್ನು ಮತ್ತು  ಏಕತ್ವವನ್ನು ನೀಡುವ ಸಂದೇಶಗಳು ಯಾವಾಗೆಲ್ಲ ಬಿತ್ತರವಾಗುತ್ತೋ ಆಗೆಲ್ಲ ಅದರ ವಿರುದ್ಧ ಏನಾದರೊಂದು ನೆಪ ಹೂಡಿ ಅದನ್ನು  ವಿಫಲಗೊಳಿಸಲು ಮುಂದಾಗುತ್ತಾರೆ. ನಿಜವಾಗಿ,
ಟಿ.ವಿ. ಡಿಬೆಟ್ ಆಗಬೇಕಿದ್ದುದು ಈ ಸಾಂಸ್ಕೃತಿಕ ರಾಜಕಾರಣವನ್ನು ಕೇಂದ್ರೀಕರಿಸಿಕೊಂಡು. ಇದು ಹಿಂದೂ ಧರ್ಮ ಮತ್ತು  ಇಸ್ಲಾಮ್ ಧರ್ಮದ ನಡುವಿನ ಸಮಸ್ಯೆ ಅಲ್ಲ. ಅವರ ಮೌಲಾನಾರೋ ಸ್ವಾಮೀಜಿಗಳೋ ಆ ಜಾಹೀರಾತಿನ ವಿರುದ್ಧ ಬೀದಿಗಿಳಿದು  ಹೋರಾಟಕ್ಕೂ ಧುಮುಕಿಲ್ಲ. ಹೀಗಿರುವಾಗ, ಇದಕ್ಕೆ ಇಷ್ಟೊಂದು ದೊಡ್ಡ ಮಟ್ಟದ ವಿರೋಧ ಎಲ್ಲಿಂದ ಬಂತು ಮತ್ತು ಯಾಕೆ ಬಂತು  ಎಂಬ ಬಗ್ಗೆ ಒಳನೋಟವುಳ್ಳ ಚರ್ಚೆಯ ಅಗತ್ಯ ವಿತ್ತು. ಇಂಥ ಜಾಹೀರಾತಿನಿಂದ ಯಾರಿಗೆ, ಯಾಕೆ ತೊಂದರೆಯಿದೆ ಎಂಬ ಪ್ರಶ್ನೆ  ಮುಂಚೂಣಿಗೆ ಬರಬೇಕಿತ್ತು. ಮುಸ್ಲಿಮ್ ಕುಟುಂಬವೊಂದು ಹಿಂದೂ ಯುವತಿಯನ್ನು ಹಿಂದೂವಾಗಿಯೇ ಇರಗೊಟ್ಟು, ಆಕೆಯ  ಸಂಪ್ರದಾಯದಂತೆ ಸೀಮಂತ ಆಚರಿಸಿರುವುದರಿಂದ ಭಾರತೀಯತೆಗೆ ಏನು ಅಪಾಯ ಎಂಬ ಪ್ರಶ್ನೆ ಏಳಬೇಕಿತ್ತು? ಆ ಯುವತಿಯ ನ್ನು ಆ ಮುಸ್ಲಿಮ್ ಕುಟುಂಬ ಇಸ್ಲಾಮ್‍ಗೂ ಮತಾಂತರಿಸಿಲ್ಲ, ಅಲ್ಲದೇ ಆ ಯುವತಿಯ ಆಚರಣೆಯನ್ನು ಸ್ವತಃ ಆ ಕುಟುಂಬವೇ  ಮುಂದೆ ನಿಂತು ಮಾಡಿದೆ- ಹೀಗಿರುವಾಗ ಇಲ್ಲಿ ಲವ್ ಜಿಹಾದ್ ಹೇಗೆ ಬಂತು ಎಂದು ಪ್ರಶ್ನಿಸಬೇಕಿತ್ತು?
ದುರಂತ ಏನೆಂದರೆ,
ಟಿವಿ ಚರ್ಚೆಯಲ್ಲಿ ಭಾಗವಹಿಸುವವರು ಅನೇಕ ಬಾರಿ ಚಾನೆಲ್‍ಗಳ ಒಳ ಉದ್ದೇಶವನ್ನು ಅರಿತಿರುವುದಿಲ್ಲ. ನಿರೂಪಕರು ಚರ್ಚೆಯ ನ್ನು ಕೊಂಡೊಯ್ಯುವ ಕಡೆಗೆ ಇವರೂ ಸಾಗುತ್ತಾರೆಯೇ ಹೊರತು ಈ ಚರ್ಚೆ ಸಾಗಬೇಕಾದ ದಾರಿ ಇದುವೋ ಅಥವಾ ತಮ್ಮನ್ನು  ತಪ್ಪು ದಾರಿಯೆಡೆಗೆ ನಿರೂಪಕ ಕೊಂಡೊಯ್ಯುತ್ತಿದ್ದಾರೆಯೋ ಎಂಬುದನ್ನು ವಿಶ್ಲೇಷಿಸುವುದಿಲ್ಲ ಅಥವಾ ಆ ಕ್ಷಣದಲ್ಲಿ ಅವರಿಗೆ ಅದು  ಹೊಳೆಯುವುದಿಲ್ಲ. ಇದನ್ನೇ ನಿರೂಪಕ/ಕಿಯರು ದುರುಪ ಯೋಗಿಸುತ್ತಾರೆ. ಚರ್ಚೆಯನ್ನು ತನ್ನ ಉದ್ದೇಶಿತ ಗುರಿಯೆಡೆಗೆ  ಕೊಂಡೊಯ್ದು ತನಗೆ ಬೇಕಾದ ಫಲಿತಾಂಶವನ್ನು ಪಡಕೊಳ್ಳುತ್ತಾರೆ. ತನಿಷ್ಕ್ ಜಾಹೀರಾತಿನ ಸುತ್ತ ಟಿವಿ ಮತ್ತು ಸಾಮಾಜಿಕ  ಜಾಲತಾಣ ಗಳಲ್ಲಿ ನಡೆದಿರುವ ಚರ್ಚೆಗಳಲ್ಲಿ ಬಹುತೇಕವೂ ಧರ್ಮದ ಸುತ್ತವೇ ಗಿರಕಿ ಹೊಡೆದಿರುವುದಕ್ಕೆ ಆ ಚರ್ಚೆಯನ್ನು ಹುಟ್ಟು  ಹಾಕಿದವರು ಅಥವಾ ಅದರಲ್ಲಿ ಭಾಗವಹಿಸಿದ ಚತುರರೇ ಕಾರಣ. ಅವರು ಉಪಾಯವಾಗಿ ಚರ್ಚೆಯನ್ನು ಹಿಂದೂ ಮುಸ್ಲಿಮ್ ಆಗಿ  ಪರಿವರ್ತಿಸುತ್ತಾರೆ. ಇತರರನ್ನೂ ಆ ದಾರಿಯೆಡೆಗೆ ಸೆಳೆಯುತ್ತಾರೆ. ಕೊನೆಗೆ ಚರ್ಚೆಯ ಮೂಲ ಉದ್ದೇಶವೇ ಗೌಣವಾಗಿ  ಹಿಂದೂ-ಮುಸ್ಲಿಮ್ ಜಗಳವಾಗಿ ಅದು ಕೊನೆಗೊಳ್ಳುತ್ತದೆ.
ಆ ಟಿವಿ ಚರ್ಚೆಯಲ್ಲಿ ಆದದ್ದೂ ಇದುವೇ. 

Saturday, October 24, 2020

ಹಾಥರಸ್: Fact ಮತ್ತು Truth ಗಳು



Fact
Truth 

ಬಾಹ್ಯನೋಟಕ್ಕೆ ಈ ಎರಡೂ ಪದಗಳು ಧ್ವನಿಸುವ ಅರ್ಥ ಸಮಾನವಾದುದು. ನಿಜ, ಸತ್ಯ, ನಿಖರ ಇತ್ಯಾದಿ ಅರ್ಥಗಳಲ್ಲಿ ಈ ಮೇಲಿನ ಎರಡೂ ಪದಗಳನ್ನು ಬಳಸಲಾಗುತ್ತದೆ. ಇದು ತಪ್ಪೂ ಅಲ್ಲ. ಆದರೆ, ಎಲ್ಲ ಸಂದರ್ಭಗಳಲ್ಲಿ Fact ಎಂಬುದು Truth  ಆಗಿರುವುದಿಲ್ಲ. ಹೇಳುವುದು ಸತ್ಯವೇ (Fact) ಆಗಿರಬಹುದು. ಆದರೆ ಆ ಸತ್ಯ ಆ ಸಂದರ್ಭದಲ್ಲಿ ತಪ್ಪಾದ ಸಂದೇಶವನ್ನು  ಮತ್ತು ತಪ್ಪು ಗ್ರಹಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲೂಬಹುದು. ಅಥವಾ ಅದು ಸತ್ಯವಾಗಿದ್ದರೂ ಆ ಸಂದರ್ಭದಲ್ಲಿ  ಉದ್ದೇಶಿತ ಸತ್ಯ (Truth) ಆಗಿರುವುದಿಲ್ಲ. 

ಒಂದು ಉದಾಹರಣೆ ಕೊಡುತ್ತೇನೆ.

ಒಂದು ಮನೆ ಉರಿದು ಭಾಗಶಃ ಭಸ್ಮವಾಗಿರುತ್ತದೆ. ಆ ಮನೆಗೆ ಮತ್ತು ಆ ಮನೆಯಲ್ಲಿರುವ ಸೊತ್ತುಗಳಿಗೆ ಸಾಕಷ್ಟು ಹಾನಿ  ತಟ್ಟಿರುತ್ತದೆ. ತನಿಖಾಧಿಕಾರಿ ಆ ಮನೆಗೆ ಭೇಟಿ ಕೊಡುತ್ತಾನೆ ಮತ್ತು ಪರಿಶೀಲನೆಯ ವೇಳೆ ಅವನಿಗೆ ಸೀಮೆ ಎಣ್ಣೆ ಮತ್ತು ಬೆಂಕಿ ಪೆÇಟ್ಟಣ ಕಾಣಿಸುತ್ತದೆ. ಇದಾದ ಬಳಿಕ ಪತ್ರಕರ್ತ ಆತನನ್ನು ಕಂಡು ಹೀಗೆ ಪ್ರಶ್ನಿಸುತ್ತಾನೆ-

‘ಮನೆಗೆ ಹೇಗೆ ಬೆಂಕಿ ಹತ್ತಿಕೊಂಡಿತು?’

‘ಆ ಸ್ಥಳದಲ್ಲಿ ಆಮ್ಲಜನಕ ಇದ್ದುದರಿಂದ ಬೆಂಕಿ ಹತ್ತಿಕೊಂಡಿತು’ ಎಂದು ತನಿಖಾಧಿಕಾರಿ ಉತ್ತರಿಸುತ್ತಾನೆ.

ಅಷ್ಟಕ್ಕೂ, 

ಈ ಉತ್ತರ ಸುಳ್ಳಲ್ಲ. ಆಮ್ಲಜನಕದ ಅನುಪಸ್ಥಿತಿಯಲ್ಲಿ ಬೆಂಕಿ ಹತ್ತಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ತನಿಖಾಧಿಕಾರಿ ಸತ್ಯವ ನ್ನೇ ಹೇಳಿದ್ದಾನೆ. ಆದರೆ ಆ ಪತ್ರಕರ್ತನ ಪ್ರಶ್ನೆಗೆ ಈ ಉತ್ತರ ಸಮಂಜಸವೇ ಎಂದು ಪರಿಶೀಲಿಸಿದರೆ ಅಲ್ಲ ಎಂದೇ ಸ್ಪಷ್ಟವಾಗುತ್ತದೆ.  ಇದು ಆ ಸಂದರ್ಭಕ್ಕೆ ಅಪ್ರಸ್ತುತವಾದ, ಅನಗತ್ಯ ವಾದ ಮತ್ತು ಪತ್ರಕರ್ತನನ್ನು ತಪ್ಪುಗ್ರಹಿಕೆಗೆ ಈಡು ಮಾಡುವ ಉತ್ತರವೇ ಹೊರತು  ಖಿಡಿuಣh ಅಲ್ಲ. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬ ಪತ್ರಕರ್ತನ ಪ್ರಶ್ನೆಯಲ್ಲಿ, ಆ ಬೆಂಕಿ ಉದ್ದೇಶಪೂರ್ವಕವೋ ಆಕಸ್ಮಿಕವೋ  ಎಂಬ ಅಂಶವೂ ಒಳಗೊಂಡಿದೆ. ಒಂದುವೇಳೆ, ಉದ್ದೇಶಪೂರ್ವಕ ಎಂದಾದರೆ, ಅದಕ್ಕೆ ಏನು ಕಾರಣ ಮತ್ತು ಯಾರು ಕಾರಣ  ಎಂಬ ಪ್ರಶ್ನೆಯೂ ಇದೆ. ಅಂದಹಾಗೆ,

ಉತ್ತರ ಪ್ರದೇಶದ ಹಾಥರಸ್‍ನ ಘಟನೆ ಮುಖ್ಯವಾಗುವುದು ಇಲ್ಲೇ. ಇಲ್ಲಿ ವಿಶೇಷವಾಗಿ ನಾವು ಎರಡು ರೀತಿಯ ಮಾತುಗಳನ್ನು  ಎತ್ತಿಕೊಳ್ಳಬಹುದು.

1. ಆ ಯುವತಿಯ ಸಾವಿನಿಂದ ನನಗೆ ಅಪಾರ ನೋವಾಗಿದೆ.

2. ಹಾಥರಸ್‍ನಲ್ಲಿ ಅತ್ಯಾಚಾರಕ್ಕೀಡಾದ ಯುವತಿ.

ಈ ಮೇಲಿನ ಎರಡೂ ರೀತಿಯ ಮಾತುಗಳನ್ನು ನೀವು ಆಲಿಸಿಯೇ ಇರುತ್ತೀರಿ. ಟಿ.ವಿ. ಚರ್ಚೆಗಳಲ್ಲಿ ಮತ್ತೆ ಮತ್ತೆ ಇಂಥ ಪದ ಪ್ರಯೋಗವನ್ನು ಕೇಳಿಯೂ ಇರುತ್ತೀರಿ. ಮೇಲ್ನೋಟಕ್ಕೆ ಭಾಸವಾಗುವಂತೆ, ಈ ಬಗೆಯ ಪದಪ್ರಯೋಗದಲ್ಲಿ ಅಸತ್ಯವೇನೂ  ಕಾಣಿಸುವುದಿಲ್ಲ. ಯಾರದೇ ಸಾವಿನಲ್ಲಿ ನೋವಾಗುವುದೂ ಸಹಜ ಮತ್ತು ಯುವತಿಯರ ಮೇಲೆ ಅತ್ಯಾಚಾರವಾಗುವುದೂ ಸಹಜ.  ಈ ಮೇಲಿನ ಮಾತುಗಳಲ್ಲಿ ಸುಳ್ಳೇನೂ ಇಲ್ಲ. ಆದರೆ ಸತ್ಯವನ್ನು ಪ್ರಖರವಾಗಿ ಮತ್ತು ಸನ್ನಿವೇಶಕ್ಕೆ ಅನುಗುಣವಾಗಿ ಇಲ್ಲಿನ  ಮಾತುಗಳು ಕಟ್ಟಿ ಕೊಡುತ್ತವೆಯೇ ಎಂದು ವಿಶ್ಲೇಷಿಸಲು ಹೊರಟರೆ ಇಲ್ಲ ಎಂಬ ಉತ್ತರವೇ ಎದುರಾಗುತ್ತದೆ.
ಮೊದಲನೆಯದಾಗಿ, ‘ಹಾಥರಸ್‍ನ ಯುವತಿಯ ಸಾವಿನಿಂದ ನನಗೆ ತೀವ್ರ ನೋವಾಗಿದೆ’ ಎಂಬ ಹೇಳಿಕೆಯಲ್ಲಿ ಅನುಕಂಪ ಇದೆ,  ದುಃಖ ಇದೆ. ಅಲ್ಲದೇ ಹಾಥರಸ್‍ನ ಯುವತಿ ಸತ್ತಿರುವುದೂ ನಿಜ. ಸತ್ತವರಿಗಾಗಿ ದುಃಖಿತ ಭಾವ ವ್ಯಕ್ತಪಡಿಸುವುದೂ ಸಹಜ.  ಆದರೆ, ಸಾವು ಎಂಬ ಪದ ಹಾಥರಸ್‍ನ ಘಟನೆಗೆ ಸೂಕ್ತವೇ? ಅದು ಸಾವೇ?

ಸಾಮಾನ್ಯವಾಗಿ ಸಾವು ಎಂಬ ಪದವನ್ನು ನಾವು ಅಪಘಾತದಿಂದಾಗುವ ಅಥವಾ ಕಾಯಿಲೆಯಿಂದಾಗುವ ಸಾವಿಗೆ ಬಳಸುತ್ತೇವೆ.  ಹೆಣ್ಣಾಗಲಿ, ಗಂಡಾಗಲಿ ಸಹಜ ಮರಣವನ್ನಪ್ಪುವುದಕ್ಕೆ ಸಾವು ಎಂದು ಉಲ್ಲೇಖಿಸುತ್ತೇವೆ. ಆದರೆ ಹಾಥರಸ್‍ನಲ್ಲಿ ನಡೆದಿರುವುದೇನು? ಕೇವಲ ಸಾವು ಎಂಬ ಪದದೊಳಗೆ ತುಂಬಿಬಿಡ ಬಹುದಾದ ಸಣ್ಣ ಕೃತ್ಯವೇ ಅದು? ಆ ಯುವತಿಯನ್ನು ಬರ್ಬರವಾಗಿ  ನಡೆಸಿಕೊಳ್ಳಲಾಗಿದೆ. ಅತ್ಯಾಚಾರ ನಡೆಸಲಾಗಿದೆ ಮತ್ತು ಕ್ರೂರ ಹಿಂಸೆಗೆ ಒಳಪಡಿಸಲಾಗಿದೆ. ಅಂತಿಮವಾಗಿ ಆ ಹೆಣ್ಮಗು ಪ್ರಾಣ  ಕಳಕೊಂಡಿದೆ. ಸಾವು ಎನ್ನುವ ಪದ ಈ ಎಲ್ಲವನ್ನೂ ಬಿಂಬಿಸುತ್ತದೆಯೇ?
 ನಿಜವಾಗಿ,
‘ಹಾಥರಸ್‍ನ ಯುವತಿಯ ಸಾವಿನಿಂದ ನೋವಾಗಿದೆ’ ಎಂಬ ವಾಕ್ಯವೇ ತಪ್ಪು. ಹಾಥರಸ್‍ನಲ್ಲಿ ಯುವತಿ ಸಾವಿಗೀಡಾದದ್ದಲ್ಲ,  ಬರ್ಬರವಾಗಿ ಹತ್ಯೆ ನಡೆಸಲಾಗಿದೆ. ಅದಕ್ಕೆ ಮಾಮೂಲಿ ನೋವನ್ನು ಪ್ರಕಟಿಸಿದರೆ ಸಾಲದು. ಆ ನೋವಿನಲ್ಲಿ ಆಕ್ರೋಶ, ಸಿಟ್ಟು, ಅನ್ಯಾಯಕ್ಕೊಳಗಾದ ಭಾವ ಬಿಂಬಿತವಾಗಬೇಕು. ಇದೇ ರೀತಿಯಲ್ಲಿ ಈ ಮೇಲಿನ ಇನ್ನೊಂದು ಹೇಳಿಕೆಯನ್ನೂ ಎತ್ತಿಕೊಳ್ಳಬಹುದು.  ‘ಹಾಥರಸ್‍ನಲ್ಲಿ ಅತ್ಯಾಚಾರಕ್ಕೀಡಾದ ಯುವತಿ..’ ಎಂಬ ಮಾತು ನಿಜ (Fact) ಹೌದು. ಆದರೆ ಪೂರ್ಣ ನಿಜ ಅಲ್ಲ. ಹಾಥರಸ್ ನಲ್ಲಿ ಅತ್ಯಾಚಾರಕ್ಕೀಡಾದ ದಲಿತ ಯುವತಿ ಎಂಬುದೇ ಸಂಪೂರ್ಣ ನಿಜ (Truth).

ಈ ದೇಶದಲ್ಲಿ ನಡೆಯುವ ಅತ್ಯಾಚಾರಕ್ಕೂ ದಲಿತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರಕ್ಕೂ ವ್ಯತ್ಯಾಸ ಇದೆ. ಹಾಗೆಯೇ ಮುಸ್ಲಿಮರ  ಮೇಲಿನ ದೌರ್ಜನ್ಯಕ್ಕೂ ವ್ಯತ್ಯಾಸ ಇದೆ. ದಲಿತರ ಮೇಲಿನ ಹಲ್ಲೆಗೂ ಸಾಮಾನ್ಯ ಹಲ್ಲೆಗೂ ವ್ಯತ್ಯಾಸ ಇದೆ. ಅತ್ಯಾಚಾರ ಈ ದೇಶಕ್ಕೆ  ಹೊಸತಲ್ಲ. ದೌರ್ಜನ್ಯವೂ ಹಾಗೆಯೇ. 130 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಹತ್ಯೆಗೆ ಬೆಚ್ಚಿ ಬೀಳುವವರೂ ಇಲ್ಲ. ಆದರೆ,  ಸಾಮಾನ್ಯ ಹಲ್ಲೆಗೂ ದಲಿತರ ಮೇಲಿನ ಹಲ್ಲೆಗೂ ನಡುವೆ ಇರುವ ವ್ಯತ್ಯಾಸ ಏನೆಂದರೆ- ಜಾತಿ. ಮುಸ್ಲಿಮರಿಗೆ ಸಂಬಂಧಿಸಿ  ಹೇಳುವುದಾದರೆ ಅವರ ಧರ್ಮ. ದಲಿತೇತರ ಮತ್ತು ಮುಸ್ಲಿಮೇತರ ಹಲ್ಲೆ-ಹತ್ಯೆ, ದೌರ್ಜನ್ಯಗಳಿಗೆ ಈ ಹೆಚ್ಚುವರಿ ಕಾರಣಗಳು  ಇರುವುದಿಲ್ಲ. ಮೇಲ್ಜಾತಿಯ ಇಬ್ಬರು ಯುವಕರು ಪರಸ್ಪರ ವಾಗ್ವಾದಗಳಲ್ಲಿ ತೊಡಗುವುದಕ್ಕೂ ದಲಿತ ಯುವಕ ಮತ್ತು ಮೇಲ್ಜಾತಿಯ  ಯುವಕರಿಬ್ಬರು ವಾಗ್ವಾದಗಳಲ್ಲಿ ತೊಡಗುವುದಕ್ಕೂ ಭಿನ್ನತೆ ಇದೆ. ಮೇಲ್ಜಾತಿಯ ಯುವಕನಿಗೆ ಆ ವಾಗ್ವಾದಕ್ಕೆ ಕಾರಣವಾದ  ವಿಷಯಕ್ಕಿಂತಲೂ ತನ್ನ ಜೊತೆ ವಾಗ್ವಾದದಲ್ಲಿ ತೊಡಗಿರುವ ಯುವಕನ ಜಾತಿ ಮುಖ್ಯವಾಗುತ್ತದೆ. ಅದುವೇ ಆತನನ್ನು ಆಕ್ರೋ ಶಗೊಳ್ಳುವಂತೆಯೂ ಮಾಡುತ್ತದೆ. ಮೇಲ್ಜಾತಿ ಯುವಕರಿಬ್ಬರ ನಡುವಿನ ವಾಗ್ವಾದ ಅತಿರೇಕಕ್ಕೆ ಹೋಗದೇ ಶಾಂತವಾಗುವಾಗ ದಲಿತ  ಯುವಕ ಮತ್ತು ಮೇಲ್ಜಾತಿ ಯುವಕನ ನಡುವಿನ ವಾಗ್ವಾದ ಹೊೈ-ಕೈ, ಹಲ್ಲೆಯಲ್ಲಿ ಕೊನೆಗೊಳ್ಳುವುದಕ್ಕೆ ಅವಕಾಶ ಇದೆ. 

ಮುಸ್ಲಿಮರಿಗೆ  ಸಂಬಂಧಿಸಿಯೂ ಈ ಮಾತನ್ನು ಸಂಪೂರ್ಣ ಅಲ್ಲದಿದ್ದರೂ ಬಹುತೇಕ ಅನ್ವಯಿಸಿ ನೋಡಬಹುದು. ಇಬ್ಬರು ಮುಸ್ಲಿಮ್ ಯುವಕರ  ನಡುವಿನ ಜಗಳ ಹಿಂದೂ ಮತ್ತು ಮುಸ್ಲಿಮ್ ಯುವಕರ ನಡುವಿನ ಜಗಳದಂತೆ ಇರುವುದು ಕಡಿಮೆ. ಹಾಗೆ ಕೊನೆಗೊಳ್ಳುವುದೂ  ಕಡಿಮೆ. ಇಬ್ಬರು ಮುಸ್ಲಿಮ್ ಯುವಕರ ನಡುವಿನ ಜಗಳ ಅವರಿಬ್ಬರ ನಡುವಿನ ಜಗಳವಾಗಿ ಗುರುತಿಸಿಕೊಂಡರೆ, ಹಿಂದೂ ಮತ್ತು  ಮುಸ್ಲಿಮ್ ಯುವಕರ ನಡುವಿನ ಜಗಳವು ಎರಡು ಸಮುದಾಯಗಳ ನಡುವಿನ ಜಗಳವಾಗಿ ಮತ್ತು ಎರಡೂ ಸಮುದಾಯಗಳ  ಪಾಲಿನ ಪ್ರತಿಷ್ಠೆಯಾಗಿ ಪರಿವರ್ತಿತವಾಗುವುದೇ ಹೆಚ್ಚು. ಇವತ್ತಿನ ದಿನಗಳಂತೂ ಇಂಥ ಸಾಧ್ಯತೆಯನ್ನು ಹಲವು ಪಟ್ಟು ವೃದ್ಧಿಸಿದೆ. ಈ  ಹಿನ್ನೆಲೆಯಲ್ಲೂ, ಹಾಥರಸ್ ಅತ್ಯಾಚಾರ ಮುಖ್ಯವಾಗುತ್ತದೆ.

ದಲಿತರ ಮೇಲಿನ ಹಲ್ಲೆಗೆ ಅಥವಾ ಅತ್ಯಾಚಾರಕ್ಕೆ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಮತ್ತು ರಾಜಕೀಯ ಆಯಾಮಗಳೂ ಇರುತ್ತವೆ.  ದೇಶದ ಇವತ್ತಿನ ಪರಿಸ್ಥಿತಿಗೆ ಅನ್ವಯಿಸಿ ಹೇಳುವುದಾದರೆ, ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೂ ಈ ಆಯಾಮ ಇದೆ. ಹಾಥರಸ್  ಘಟನೆಯ ಆರೋಪಿಯಲ್ಲೋರ್ವನಾದ ಸಂದೀಪ್‍ನ ಮನೆ ಮತ್ತು ಅತ್ಯಾಚಾರಕ್ಕೀಡಾದ ದಲಿತ ಯುವತಿಯ ಮನೆ ಪರಸ್ಪರ  ಎದುರು-ಬದುರಾಗಿದೆ. ಈ ಯುವತಿಯ ಹೆತ್ತವರಿಗೆ ಉಳುಮೆಯ ಗದ್ದೆ ಇದೆ. ಮನೆಯಲ್ಲಿ ಎರಡು ಎಮ್ಮೆಗಳಿವೆ. ಆ ಪ್ರದೇಶದ  ಇತರರಿಗೆ ಹೋಲಿಸಿದರೆ ಒಂದಿಷ್ಟು ಸಬಲ ಕುಟುಂಬ ಈ ಯುವತಿಯದು. ಅಲ್ಲದೇ, ಈ ಯುವತಿಯ ಕುಟುಂಬ ಕೊಟ್ಟ ದೂರಿ ನಿಂದಾಗಿ ಸಂದೀಪನ ತಂದೆ ನ್ಯಾಯಾಂಗ ಬಂಧನಕ್ಕೂ ಒಳಗಾಗಿದ್ದರು. ದಲಿತ ಕುಟುಂಬವೊಂದು ಸಬಲವಾಗುವುದು ಮತ್ತು  ಮೇಲ್ಜಾತಿ ಕುಟುಂಬದ ವಿರುದ್ಧ ದೂರು ಕೊಟ್ಟ ಕಂಬಿ ಎಣಿಸುವಂತೆ ಮಾಡುವುದೆಲ್ಲ ಜಾತಿ ವ್ಯಸನದಿಂದ ಬಳಲುತ್ತಿರುವ ಉತ್ತರ  ಭಾರತದಲ್ಲಿ ಸಾಮಾನ್ಯ ಸಂಗತಿಯಲ್ಲ. ಮುಂದುವರಿದ ಸಮಾಜಕ್ಕೂ ಇಂಥದ್ದನ್ನು ಸ್ವೀಕರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಆ  ಯುವತಿಯ ಅಂತ್ಯಸಂಸ್ಕಾರದ ಬಳಿಕದ ಘಟನೆಗಳನ್ನೇ ಪರಿಶೀಲಿಸಿ.

ಆಕೆಯ ಮೇಲೆ ಅತ್ಯಾಚಾರವೇ ಆಗಿಲ್ಲ ಎಂದು ಅಲ್ಲಿನ ಪೊಲೀಸ್ ಮುಖ್ಯಸ್ಥರೇ ಹೇಳುತ್ತಾರೆ. ಇದಕ್ಕೆ ಆಧಾರವಾಗಿ ಅವರು ಮುಂದಿಟ್ಟಿರುವುದು- ವೀರ್ಯ. ವೀರ್ಯ ಸಿಕ್ಕಿಲ್ಲವಾದ್ದರಿಂದ ಅತ್ಯಾಚಾರವಾಗಿಲ್ಲ ಎಂಬುದು ಅವರ ವಾದ. ಇದು ನಿಜ ಇರಬಹುದು.  ಆದರೆ, ಅತ್ಯಾಚಾರವನ್ನು ಸಾಬೀತುಪಡಿಸುವುದಕ್ಕೆ ವೀರ್ಯ ಸಿಗಲೇಬೇಕೆಂದಿದೆಯೇ? ಕಾನೂನು ಹಾಗೆ ಹೇಳುತ್ತದೆಯೇ? ಈ ಪ್ರಶ್ನೆಯನ್ನು ಜಾಣತನದಿಂದ ಅವರು ಅಡಗಿಸಿದ್ದಾರೆ. ಅವರು ಹೇಳಿರುವುದು ಸತ್ಯ. ಆದರೆ Truth  ಏನೆಂದರೆ 2012ರ ನಿರ್ಭಯ  ಪ್ರಕರಣದ ಬಳಿಕ ತಿದ್ದುಪಡಿ ಮಾಡಲಾದ ಕಾನೂನಿನಂತೆ ಅತ್ಯಾಚಾರವನ್ನು ಸಾಬೀತುಪಡಿಸುವುದಕ್ಕೆ ವೀರ್ಯ ಸಿಗಬೇಕೆಂದಿಲ್ಲ.  ಹಾಗೆಯೇ ಹೆತ್ತವರಿಗೆ ಯುವತಿಯ ಮುಖವನ್ನೂ ತೋರಿಸದೆಯೇ ಮಧ್ಯರಾತ್ರಿ ಶವಸಂಸ್ಕಾರವನ್ನು ಪೊಲೀಸರೇ ನಿರ್ವಹಿಸಿದರಲ್ಲ,  ಅದಕ್ಕೆ ಕೊಡುವ ಕಾರಣ ಏನೆಂದರೆ, ಆ ಶವವನ್ನು ರಾಜಕೀಯಕ್ಕಾಗಿ ಭೀಮ್ ಆರ್ಮಿ ಸದಸ್ಯರು ಬಳಸಿಕೊಳ್ಳುವ ಸಾಧ್ಯತೆ ಇತ್ತು,  ಶವ ಅದಾಗಲೇ ಕೊಳೆಯಲು ಆರಂಭಿಸಿತ್ತು ಇತ್ಯಾದಿ ಇತ್ಯಾದಿ. ಭೀಮ್ ಆರ್ಮಿಯ ಸದಸ್ಯರು ಅಲ್ಲಿ ಇದ್ದುದು ನಿಜ (Fact).  ಆದರೆ, ತರಾತುರಿಯಿಂದ ಶವಸಂಸ್ಕಾರ ನಡೆಸುವುದಕ್ಕೆ ಅದೊಂದೇ ಕಾರಣವೇ? ಅಲ್ಲ. ಅತ್ಯಾಚಾರದಂಥ ಪ್ರಕರಣಗಳಿಗೆ ದೇಹವೇ  ಮುಖ್ಯ ಸಾಕ್ಷ್ಯ. ಆ ಸಾಕ್ಷ್ಯ ಎಲ್ಲಿಯವರೆಗೆ ಲಭ್ಯವಿರುತ್ತದೋ ಅಲ್ಲಿಯ ವರೆಗೆ ಅದೊಂದು ಟೈಂಬಾಂಬ್. ಆರೋಪಿಗಳು ಅತ್ಯಂತ  ಹೆಚ್ಚು ಭಯಪಡುವುದು ಆ ದೇಹಕ್ಕೆ. ಇದು Truth. ಇದನ್ನು ಅವರು ಹೇಳಲ್ಲ. 
ನಿಜವಾಗಿ,

ಕೆಲವೊಮ್ಮೆ ರಾಜಕಾರಣಿಗಳು ಮತ್ತು ಅಧಿಕಾರಿಗಳು ಸತ್ಯವನ್ನು ಹೇಳುವುದೇ ಪರಮ ಸತ್ಯವನ್ನು (Truth) ಅಡಗಿಸುವುದಕ್ಕಾಗಿ.  ದಲಿತ ಯುವತಿ ಎಂದು ಹೇಳ್ಬೇಡಿ, ಯುವತಿ ಎಂದು ಹೇಳಿದರೆ ಸಾಕು ಎಂಬ ಸಾಬೂನು ಮಾತನ್ನು ಕೆಲವರು ಪವಿತ್ರ ವಾಕ್ಯದಂತೆ  ಹೇಳುವುದಿದೆ. ಪಕ್ಕನೆ ನಮಗೆ ಹೌದಲ್ವಾ ಎಂದು ಅನಿಸುವುದೂ ಇದೆ. ಇದು ಈಚಿಛಿಣ ಹೌದು. ಆದರೆ Truth ಅಲ್ಲ. ದಲಿತ  ಯುವತಿಯೂ ದಲಿತೇತರ ಯುವತಿಯೂ ಹೆಣ್ಣು ಎಂಬ ನೆಲೆಯಲ್ಲಿ ಸಮಾನರೇ ಹೊರತು ಅದರಾಚೆಗಿನ ಸ್ಥಾನ-ಮಾನಗಳಲ್ಲಲ್ಲ.  ಹಾಥರಸ್ ಘಟನೆಯಲ್ಲಿ ಅಲ್ಲಿನ ಮುಖ್ಯಮಂತ್ರಿಗಳಿಂದ ಹಿಡಿದು ಪೊಲೀಸ್ ಅಧಿಕಾರಿಗಳ ವರೆಗೆ ಎಲ್ಲರೂ ನಡೆದುಕೊಂಡ  ರೀತಿಯನ್ನೊಮ್ಮೆ ಗಮನಿಸಿ. ಒಂದುವೇಳೆ, 

ಆರೋಪಿಗಳು ಮೇಲ್ಜಾತಿ ಸಮುದಾಯದವ ರಾಗದೇ ಇದ್ದಿದ್ದರೆ ಅವರೆಲ್ಲ  ಹಾಗಿರುತ್ತಿದ್ದರೆ? ಜಿಲ್ಲಾಧಿಕಾರಿಯವರು ಹಾಗೆ ನಡೆದುಕೊಳ್ಳು ತ್ತಿದ್ದರೇ? ಪೊಲೀಸರು ಮಾಧ್ಯಮದವರನ್ನು ತಡೆಯುತ್ತಿದ್ದರೇ?  ಬ್ಯಾರಿಕೇಡ್‍ಗಳನ್ನಿಟ್ಟು ಊರಿಗೆ ಊರನ್ನೇ ದ್ವೀಪ ವನ್ನಾಗಿ ಮಾಡುತ್ತಿದ್ದರೇ? ಆರೋಪಿಗಳನ್ನು ರಕ್ಷಿಸುವ ಧಾಟಿಯಲ್ಲಿ ಹೇಳಿಕೆಗಳ  ಮೇಲೆ ಹೇಳಿಕೆಗಳನ್ನು ಕೊಡಿಸುತ್ತಿದ್ದರೇ? ನಿಜಕ್ಕೂ,

ಆ ಯುವತಿಯದ್ದು ಸಾವೂ ಅಲ್ಲ, ಅದಕ್ಕೆ ಬರೇ ನೋವು ಸಾಕಾಗುವುದೂ ಇಲ್ಲ. 

Saturday, September 26, 2020

ನಾವು ಹೆಮ್ಮೆ ಪಡಬೇಕಾದುದು ಯಾವಾಗ ಅಂದರೆ?



ಮೊದಲಿಗೆ ಒಂದಿಷ್ಟು ಮಾಹಿತಿಗಳು.

ಕೇಂದ್ರ ಲೋಕಸೇವಾ ಆಯೋಗವು (UPSC) ಈ ಬಾರಿ ನಡೆಸಿದ ಪರೀಕ್ಷೆಯಲ್ಲಿ ಒಟ್ಟು 829 ಮಂದಿ ತೇರ್ಗಡೆಯಾಗಿದ್ದು, ಇವರಲ್ಲಿ 42 ಮಂದಿ ಮುಸ್ಲಿಮರು. ಟಾಪ್ 100ರಲ್ಲಿ ಸ್ಥಾನ  ಪಡೆದ ಏಕೈಕ ಮುಸ್ಲಿಮ್ ಅಭ್ಯರ್ಥಿ ಸಪ್ನಾ ನಝರುದ್ದೀನ್. ಇವರ ರಾಂಕ್ 45. ಆಗಸ್ಟ್ 4ರಂದು ಈ ಫಲಿತಾಂಶ ಬಿಡುಗಡೆಗೊಂಡಿದೆ. ಕಳೆದ ವರ್ಷ ಒಟ್ಟು 759 ಮಂದಿ ತೇರ್ಗಡೆಯಾಗಿದ್ದರು ಮತ್ತು ಇವರಲ್ಲಿ 28 ಮಂದಿಯಷ್ಟೇ ಮುಸ್ಲಿಮರಿದ್ದರು. 2016ರಲ್ಲಿ ಒಟ್ಟು ತೇರ್ಗಡೆಗೊಂಡವರ ಪೈಕಿ 50 ಮಂದಿ ಮುಸ್ಲಿಮರಿದ್ದರು. ಅಲ್ಲದೇ, ಟಾಪ್ 100ರಲ್ಲಿ 10 ಮಂದಿ  ಮುಸ್ಲಿಮರಿದ್ದರು. 2012, 13, 14, 15ರಲ್ಲಿ ಕ್ರಮವಾಗಿ 30, 34, 38, 36 ಮುಸ್ಲಿಮ್ ಅಭ್ಯರ್ಥಿಗಳು ಈ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಮೊನ್ನೆ ಆಗಸ್ಟ್ 21ರಂದು ಹೊರಬಿದ್ದ ಸಿಇಟಿ ಪರೀಕ್ಷಾ ಫಲಿತಾಂಶದ ಕತೆಯೂ ಇದುವೇ. ಐದು ವಿಭಾಗಗಳ ಮೊದಲ 50  ರಾಂಕ್ ಗಳಲ್ಲಿ ಸ್ಥಾನ ಪಡೆದಿರುವುದು ಒಬ್ಬನೇ ಒಬ್ಬ ಮುಸ್ಲಿಮ್  ಅಭ್ಯರ್ಥಿ. ಸಿಇಟಿಯ ಐದು ವಿಭಾಗಗಳಾದ ಎಂಜಿನಿಯರಿಂಗ್, ಬಿಎಸ್‍ಸಿ ಅಗ್ರಿಕಲ್ಚರ್, ಪಶು ವೈದ್ಯಕೀಯ, ಬಿ ಫಾರ್ಮ ಮತ್ತು ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸ್ ಗಳಲ್ಲಿ ಎಂ.ಡಿ.  ಅರ್ಬಾಜ್  ಅಹ್ಮದ್‍ರನ್ನು ಬಿಟ್ಟರೆ ಮೊದಲ 50 ರಾಂಕ್ ಗಳಲ್ಲಿ ಇನ್ನಾರೂ ಮುಸ್ಲಿಮರಿಲ್ಲ.
ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 73% ವಿದ್ಯಾರ್ಥಿಗಳು ಪಾಸಾಗಿದ್ದರೆ, ಪರಿಶಿಷ್ಟ ಪಂಗಡದಿಂದ 71% ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಮುಸ್ಲಿಮರು  ಒಳಗೊಂಡಿರುವ 2ಬಿ ವಿಭಾಗದ ಪರೀಕ್ಷಾ ಫಲಿತಾಂಶ 67%.

ವಿಷಾದ ಏನೆಂದರೆ, ಮುಸ್ಲಿಮ್ ಸಮುದಾಯದಲ್ಲಿ ಅತ್ಯಂತ ಕಡಿಮೆ ಚರ್ಚೆಗೆ ಒಳಗಾಗುವ ವಿಷಯಗಳು ಇವು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮುಸ್ಲಿಮ್  ವಿದ್ಯಾರ್ಥಿಗಳ ವಿವರಗಳು ಒಂದೆರಡು ದಿನಗಳ ಕಾಲ ಮುಸ್ಲಿಮರ ಮೊಬೈಲ್‍ಗಳಲ್ಲಿ ಹರಿದಾಡುತ್ತವಾದರೂ ಅದರಾಚೆಗೆ ಸಿಇಟಿ, ಯುಪಿಎಸ್‍ಸಿ, ನೀಟ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ  ವಿವರ ಹರಿದಾಡುವುದು ಶೂನ್ಯ ಅನ್ನುವಷ್ಟು ಕಡಿಮೆ. ಈ ಸಮುದಾಯದ ಹೆಚ್ಚಿನ ಮಂದಿಗೆ ಎಸ್ಸೆಸ್ಸೆಲ್ಸಿ, ಡಿಗ್ರಿ ಇತ್ಯಾದಿ ಹೆಸರುಗಳ ಹೊರತಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಅವುಗಳಲ್ಲಿ  ತೇರ್ಗಡೆಯಾಗುವ ಮೂಲಕ ಆಗುವ ಪ್ರಯೋಜನಗಳ ಕುರಿತು ಅರಿವಿಲ್ಲ. ಅಲ್ಲದೇ, ಅರಿವಿದ್ದವರಿಂದ ಅರಿವಿಲ್ಲದವರಿಗೆ ಅವು ಹಂಚಿಕೆಯಾಗುವ ಸನ್ನಿವೇಶಗಳು ದೊಡ್ಡ ಪ್ರಮಾಣದಲ್ಲಿ  ಸೃಷ್ಟಿಯಾಗುತ್ತಲೂ ಇಲ್ಲ. ಹಾಗಂತ,

ಇದಕ್ಕೆ ಬೇಕಾದ ಸಂಪನ್ಮೂಲ ವ್ಯಕ್ತಿಗಳು ಮತ್ತು ವ್ಯವಸ್ಥೆಗಳು ಇಲ್ಲ ಎಂದಲ್ಲ. ಈಗ ಇರುವ ವ್ಯವಸ್ಥೆ ಎಷ್ಟು ಅದ್ಭುತವಾಗಿದೆ ಯೆಂದರೆ, ಈ ವ್ಯವಸ್ಥೆ ಇನ್ನಾವುದಾದರೂ ಸಮುದಾಯದಲ್ಲಿ ಇ ದ್ದಿದ್ದಿದ್ದೇ ಆಗಿದ್ದರೆ ಅವು ಯಾರ ಕೈಗೂ ಸಿಗದಷ್ಟು ಎತ್ತರಕ್ಕೆ ಏರಿ ಬಿಡುತ್ತಿದ್ದುವು.

ಸುಮ್ಮನೆ, ನಮ್ಮ ನಮ್ಮ ವ್ಯಾಪ್ತಿಯಲ್ಲಿರುವ ಮಸೀದಿಗಳನ್ನೊಮ್ಮೆ ಲೆಕ್ಕ ಹಾಕಿ. ಫರ್ಲಾಂಗಿಗೊಂದರಂತೆ ಮಸೀದಿಗಳಿವೆ. ಈ ಮಸೀದಿಗಳೆಲ್ಲ ಭೂಮಿಯಡಿಯಿಂದ ದಿಢೀರ್ ಆಗಿ ಉದ್ಭವವಾದವುಗಳಲ್ಲ. ಒಂದು ಪ್ರದೇಶದಲ್ಲಿ ಮಸೀದಿ ಇದೆ ಎಂದಾದರೆ, ಆ ಪ್ರದೇಶದಲ್ಲಿ ಮುಸ್ಲಿಮರಿದ್ದಾರೆ ಎಂದರ್ಥ. ಯಾವ ಸರಕಾರವೂ ಮಸೀದಿ ಕಟ್ಟಿ ಕೊಡುವುದಿಲ್ಲ. ಮಸೀದಿ ಕಟ್ಟಿಕೊಳ್ಳುವುದು  ಮುಸ್ಲಿಮರು. ಆ ಮಸೀದಿಯಲ್ಲಿ ನಿತ್ಯದ ಪ್ರಾರ್ಥನೆಗಾಗಿ ಮತ್ತು ನೀರು, ಚಾಪೆ, ವಿದ್ಯುತ್, ನೈರ್ಮಲ್ಯಗಳನ್ನು ಕಾಯ್ದುಕೊಳ್ಳುವುದಕ್ಕಾಗಿ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದೂ ಮುಸ್ಲಿಮರೇ.  ಐದು ಬಾರಿ ಅದಾನ್ ಕೊಡುವುದಕ್ಕೆ, ನಮಾಜ್ ಗೆ ನೇತೃತ್ವ ನೀಡುವು ದಕ್ಕೆ ಮತ್ತು ಮದ್ರಸದಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವುದಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡುವುದೂ ಮುಸ್ಲಿಮರೇ.  ಇವೆಲ್ಲವು ಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುವುದಕ್ಕಾಗಿ ಮಸೀದಿ ಕಮಿಟಿಯನ್ನು ರಚಿಸುವುದೂ ಮುಸ್ಲಿಮರೇ. ಆದ್ದರಿಂದಲೇ, ಪ್ರಶ್ನೆಗಳೂ ಹುಟ್ಟಿಕೊಳ್ಳೋದು.
ಇಷ್ಟೆಲ್ಲ ಸಾಧ್ಯವಿರುವ ಮುಸ್ಲಿಮರಿಗೆ ಸಿಇಟಿ, ಯುಪಿಎಸ್‍ಸಿ, ನೀಟ್-ಜೆಇಇ, ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಇತ್ಯಾದಿ ಇತ್ಯಾದಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಟಾಪರ್ ಆಗಿ ಮೂಡಿ  ಬರುವಂತೆ ಮಾಡುವುದು ಕಷ್ಟವೇ? ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಶೇ. 95ಕ್ಕಿಂತ ಹೆಚ್ಚು ತೇರ್ಗಡೆ ಹೊಂದುವಂತೆ ಮಾಡುವುದು ಅಸಾಧ್ಯವೇ? ಸ್ಪರ್ಧಾತ್ಮಕ  ಪರೀಕ್ಷೆಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಭಾರೀ ಪ್ರಮಾಣದಲ್ಲಿ ಭಾಗವಹಿಸುವಂತೆ ಮಾಡುವುದು ಮತ್ತು ಉನ್ನತ 100ರ ಪಟ್ಟಿಯಲ್ಲಿ ಪ್ರಾಬಲ್ಯವನ್ನು ಸ್ಥಾಪಿಸುವಂತೆ ಮಾಡಲಾಗದೇ?

ಖಂಡಿತ ಸಾಧ್ಯವಿದೆ.

ಎಲ್ಲ ಮಸೀದಿಯ ಆಡಳಿತ ಸಮಿತಿ ಮತ್ತು ಉಸ್ತಾದರು ಮಸೀದಿಯ ಮಿಂಬರಿನ ಪಕ್ಕ ಕುಳಿತು ಹೀಗೆ ಒಮ್ಮೆ ಅವಲೋಕನ ನಡೆಸಿಕೊಳ್ಳಲಿ-
ನಮ್ಮ ಜಮಾಅತ್‍ನಲ್ಲಿ ಎಸ್ಸೆಸ್ಸೆಲ್ಲಿ, ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಎಷ್ಟಿದ್ದಾರೆ? ಈ ಮುಗಿಸಿದವರಲ್ಲಿ ತೇರ್ಗಡೆ ಹೊಂದಿ ಮುಗಿಸಿದವರು ಎಷ್ಟು, ಅನುತ್ತೀರ್ಣರಾಗಿ ಅರ್ಧದಲ್ಲೇ   ಮುಗಿಸಿದವರು ಎಷ್ಟು? ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದವರು ಏನು ಮಾಡುತ್ತಿದ್ದಾರೆ, ಅವರಿಗೆ ಉದ್ಯೋಗ ಸಿಕ್ಕಿದೆಯೇ, ಮಗ ಹಾಳಾಗುತ್ತಿದ್ದಾನೆ ಎಂಬ ದೂರು ಮನೆಯವರಲ್ಲಿ ಇದೆಯೇ? ಮಗ ನ/ಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಅವರು ಪ್ರಯತ್ನ ಪಟ್ಟಿದ್ದಾರೆಯೇ? ಆತ/ಕೆಗೆ ಮಾರ್ಗದರ್ಶನ ಮಾಡಿದರೆ ಸಾಧನೆ ಮಾಡಬಲ್ಲನೇ/ಳೇ? ಹಾಗೆಯೇ ಎಸ್ಸೆಸ್ಸೆಲ್ಸಿಯಲ್ಲಿ  ಉತ್ತೀರ್ಣರಾದ ಹುಡುಗ/ಹುಡುಗಿಗೆ ನಾವು ಏನು ಮಾರ್ಗದರ್ಶನ ಮಾಡಿದ್ದೇವೆ? ಯಾವ ಯಾವ ಆಯ್ಕೆಗಳು ಇವರ ಮುಂದಿವೆ ಮತ್ತು ಯಾವ ಆಯ್ಕೆ ಯಾವ ವಿದ್ಯಾರ್ಥಿಗೆ ಸೂಕ್ತ  ಎಂದು ಅಂಕಗಳನ್ನು ಆಧರಿಸಿ ನಿರ್ಣಯಿಸುವ ವ್ಯವಸ್ಥೆ ಮಾಡಲಾಗಿದೆಯೇ? ನುರಿತ ವ್ಯಕ್ತಿಗಳಿಂದ ಅವರಿಗೆ ಮಾರ್ಗದರ್ಶನ ಲಭಿಸಿದೆಯೇ? ತಮ್ಮ ಮಸೀದಿ ವ್ಯಾಪ್ತಿಯ ಯಾವ ಮನೆಯಲ್ಲಿ  ಎಷ್ಟು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದಾರೆ, ಪಿಯುಸಿಗೆ ಹಾಜರಾಗಿದ್ದಾರೆ ಮತ್ತು ಯಾರ್ಯಾರು ಎಷ್ಟೆಷ್ಟು ಅಂಕಗಳನ್ನು ಪಡೆದಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆಯೇ? ಯಾವ  ಮನೆಯ ವಿದ್ಯಾರ್ಥಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾನೆ/ಳೆ ಮತ್ತು ಅವರಲ್ಲಿ ಯಾರ ಸಂಕಷ್ಟಕ್ಕೆ ನೆರವಾದರೆ ಅವರ ಭವಿಷ್ಯ ಉಜ್ವಲವಾಗಬಹುದು? ತಮ್ಮ ಮಸೀದಿ ವ್ಯಾಪ್ತಿಯಲ್ಲಿ ಎಷ್ಟು ಮಂದಿ  ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದಾರೆ ಮತ್ತು ಆ ಚಟುವಟಿಕೆಗಳು ಯಾವುವು ಹಾಗೂ ಅವನ್ನು ಇನ್ನಷ್ಟು ಹರಿತಗೊಳಿಸುವುದಕ್ಕೆ ಏನು ತೊಂದರೆಗಳಿವೆ? ಉತ್ತಮ  ತರಬೇತು ದಾರರಿಂದ ಅವರಿಗೆ ಮಾರ್ಗದರ್ಶನ ಲಭಿಸಿದರೆ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಬಲ್ಲರೇ? ಅದೇರೀತಿ,

ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಓದುವ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ಎಷ್ಟು ಗೊತ್ತಿದೆ? ಸಿಇಟಿ, ನೀಟ್, ಐಐಟಿ ಮುಂತಾದ ಪರೀಕ್ಷೆಗಳಲ್ಲಿ ಹಾಜರಾಗಲು ಈ  ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿ ಅರ್ಹರು ಮತ್ತು ಅವರನ್ನು ಹೇಗೆ ತರಬೇತುಗೊಳಿಸಬಹುದು? ಮನೆಯವರ ನಿಲುವು ಏನು? ಪದವಿ ಶಿಕ್ಷಣ ಪೂರೈಸಿದವರು ಮತ್ತು ಇನ್ನಿತರ ರೂಪದಲ್ಲಿ  ಶಿಕ್ಷಣ ಮುಗಿಸಿದವರಿಗೆ ಸರಕಾರಿ ಉದ್ಯೋಗಕ್ಕೆ ಸೇರಲು ತೊಂದರೆಯಾಗಿದೆಯೇ? ಅರ್ಹತೆಯಿದ್ದೂ ಉದ್ಯೋಗ ಸಿಗದೇ ಹತಾಶರಾಗಿದ್ದಾರೆಯೇ? ಕಲಿಕೆಗೆ ತಕ್ಕ ಉದ್ಯೋಗ ಸಿಕ್ಕಿಲ್ಲ ಎಂಬ  ಭಾವದಲ್ಲಿ ದಿನೇ ದಿನೇ ಕೊರಗುತ್ತಿದ್ದಾರೆಯೇ?
ಪ್ರಶ್ನೆಗಳು ಇನ್ನೂ ಇವೆ ಮತ್ತು ಇವೆಲ್ಲ ಬರೇ ಪ್ರಶ್ನೆಗಳೂ ಅಲ್ಲ. ಪ್ರತಿ ಮಸೀದಿ ಕಮಿಟಿಗಳೂ ಒಂದಿಷ್ಟು ಹೊತ್ತು ಚರ್ಚೆಗೆ ಮೀಸಲಿಡಬೇಕಾದ ಸಂಗತಿಗಳು. ಮಸೀದಿ ಕಮಿಟಿಗಳು ಈವರೆಗೆ  ಮಸೀದಿಗೆ ಬಳಿಯಬೇಕಾದ ಬಣ್ಣ, ರಬೀವುಲ್ ಅವ್ವಲ್‍ನಲ್ಲಿ ಮಾಡಬೇಕಾದ ಅಲಂಕಾರ, ಮಸೀದಿಯ ಮೈಕ್ ಬದಲಾವಣೆ, ಏ.ಸಿ. ಅಳವಡಿಕೆ, ಹೊಸ ಮಿನಾರ, ಮಿಂಬರ್ ಇತ್ಯಾದಿಗಳ  ಚರ್ಚೆಗಾಗಿ ಸಾಕಷ್ಟು ಸಮಯ ವಿನಿಯೋಗಿಸಿದೆ. ಅನೇಕ ಬಾರಿ ಇಂಥವುಗಳ ಚರ್ಚೆಗಾಗಿ ಮೀಟಿಂಗ್‍ಗಳ ಮೇಲೆ ಮೀಟಿಂಗ್‍ಗಳು ನಡೆದಿವೆ. ಹಣವೂ ಖರ್ಚಾಗಿವೆ. ಹಾಗಂತ,

ಇವೆಲ್ಲ ಅನಗತ್ಯ ಎಂದಲ್ಲ. ಈ ಹಿಂದೆ ಏನೆಲ್ಲಾ ನಡೆದು ಹೋಗಿವೆಯೋ ಅವೆಲ್ಲ ನಮ್ಮ ಮುಂದಿನ ಬದುಕಿಗೆ ಪಾಠವಾಗಬೇಕು. ಇನ್ನು ನಮ್ಮ ಮಸೀದಿ ಮೀಟಿಂಗ್‍ಗಳು ಈ ಮೇಲಿನ  ವಿಷಯಗಳ ಮೇಲೆ ನಡೆಯಲಿ. ಪ್ರತಿ ಮಸೀದಿಯ ಆಡಳಿತ ಕಮಿಟಿಗಳೂ ತಮ್ಮ ಮಸೀದಿ ವ್ಯಾಪ್ತಿಯಲ್ಲಿರುವ ಪ್ರತಿ ಮನೆಗಳ ಕ್ಷೇಮಾಭ್ಯುದಯಕ್ಕಾಗಿ ಮೀಟಿಂಗ್‍ಗಳ ಮೇಲೆ ಮೀಟಿಂಗ್‍ಗಳನ್ನು  ನಡೆಸುವ ಹೊಸ ಬದಲಾವಣೆಗೆ ನಾಂದಿ ಹಾಡಲಿ. ಪ್ರತಿ ಮನೆಯ ಸದಸ್ಯರ ಡಾಟಾ ಕಲೆ ಹಾಕುವ ಮತ್ತು ಆ ಡಾಟಾದಲ್ಲಿ ಆ ಮನೆಯಲ್ಲಿರುವ ವಿದ್ಯಾರ್ಥಿಗಳೆಷ್ಟು, ಉದ್ಯೋಗಿಗಳೆಷ್ಟು,  ಮಕ್ಕಳೆಷ್ಟು? ಯಾವ ಮಕ್ಕಳು ಯಾವ್ಯಾವ ತರಗತಿಯಲ್ಲಿ ಓದು ತ್ತಿದ್ದಾರೆ, ಅವರ ಅಂಕಗಳೆಷ್ಟು, ಅವರ ಆಸಕ್ತಿ ಏನು, ಯಾವ ರೀತಿಯ ಮಾರ್ಗದರ್ಶನ ಅವರಿಗೆ ಬೇಕಾಗಿದೆ, ಯಾವ ಮ ನೆಯ ವಿದ್ಯಾರ್ಥಿಯನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸಬಹುದು, ಯಾವ ವಿದ್ಯಾರ್ಥಿಗೆ ಯಾವ ಕ್ಷೇತ್ರ ಸೂಕ್ತ ಮುಂತಾದುವುಗಳ ಬಗ್ಗೆ ಸ್ಪಷ್ಟವಾದ ವಿವರಗಳಿರಲಿ. ಅವುಗಳನ್ನು  ಹರಡಿಕೊಂಡು ಮೀಟಿಂಗ್ ನಡೆಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವ ಸಭೆಗಳನ್ನು ಮದ್ರಸದಲ್ಲಿ ಏರ್ಪಡಿಸಿ. ಭವಿಷ್ಯದ ಬಗ್ಗೆ ಅವರಲ್ಲಿ ಕನಸು ಕಾಣಲು ಹೇಳಿ. ನಿಮ್ಮದೇ ಮಸೀದಿ ವ್ಯಾಪ್ತಿಯಲ್ಲಿರುವ ಉತ್ತಮ ಸಾಧಕರನ್ನು ತಂದು ಮಕ್ಕಳಿಗೆ ಪ್ರೇರಣದಾಯಕ ಮಾತುಗಳನ್ನು ಆಡಿಸಿ. ಉದ್ಯಮಿಯೂ ಮಾತಾಡಲಿ. ವೈದ್ಯನೂ  ಮಾತಾಡಲಿ. ಶಿಕ್ಷಕನೂ ಮಾತಾಡಲಿ. ಉಸ್ತಾದರೂ ಮಾತಾಡಲಿ. ನಮ್ಮ ಸಮುದಾಯದಲ್ಲಿ ಎಷ್ಟೊಂದು ಸಾಧಕರಿದ್ದಾರೆ, ಎಂಥೆಂಥ ಅದ್ಭುತ ಮನುಷ್ಯರಿದ್ದಾರೆ ಎಂಬ ಹೆಮ್ಮೆ ಮೂಡುವಂತೆ  ಮಾಡಿ. ಹಾಗಂತ,

ಇದು ಕೇವಲ ಪುರುಷರಿಂದ ಪುರುಷರಿಗೆ ಎಂಬಂಥ ಕಾರ್ಯ ಕ್ರಮ ಆಗಬಾರದು. ಮಹಿಳಾ ಸಾಧಕರನ್ನು ಕರೆತನ್ನಿ. ಮಾತಾಡಿಸಿ. ಹೆಣ್ಮಕ್ಕಳ ಸಾಧನೆಗೂ ಹೆಮ್ಮೆಪಡಿ. ಅವರನ್ನೂ  ಹುರಿದುಂಬಿಸಿ.

ರಸ್ತೆಬದಿಯಲ್ಲಿ ವ್ಯಾಪಾರ ಮಾಡುತ್ತಿರುವ ಉಸ್ತಾದರ ಪೋಟೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತ್ತು. ಅನೇಕರು ಆ ವ್ಯಾಪಾರವನ್ನು ಕೊಂಡಾಡಿದ್ದೂ ಇದೆ.  ಉಸ್ತಾದರ ಆರ್ಥಿಕ ಮುಗ್ಗಟ್ಟನ್ನು ಉಲ್ಲೇಖಿಸಿ ದುಃಖಿಸಿದ್ದೂ ಇದೆ. ನಿಜವಾಗಿ,

ನಾವು ಹೆಮ್ಮೆಪಡಬೇಕಾದದ್ದು- ಇಂಥ ವ್ಯಾಪಾರಿಗಳಿಂದ ಮುಸ್ಲಿಮ್ ಸಮುದಾಯದ ಐಎಎಸ್, ಐಪಿಎಸ್ ಅಧಿಕಾರಿಗಳು, ಇನ್ಸ್‍ಪೆಕ್ಟರ್, ವೈದ್ಯ, ಪ್ರೊಫೆಸರ್, ಸಂಶೋಧಕರು ಅಗತ್ಯ ವಸ್ತುಗಳ ನ್ನು ಖರೀದಿಸಿಕೊಂಡು ಹೋಗುವಂತಾದಾಗ. ಅಂಥ ಅಧಿಕಾರಿಗಳನ್ನು ಧಾರಾಳ ಸಂಖ್ಯೆಯಲ್ಲಿ ತಯಾರಿಸಿ ಸಮಾಜಕ್ಕೆ ಅರ್ಪಿಸಿದಾಗ. ಎಲ್ಲೆಂದರಲ್ಲಿ ಅವರ ಉಪಸ್ಥಿತಿಯೇ ಕಾಣುವಂತಾದಾಗ.

ಆ ಉಸ್ತಾದರಿಗೆ ಸಲಾಮ್.

ಮನಸ್ಸು ಮಾಡಿದರೆ ಹೆಜ್ಜೆಗೊಂದು ಹಯಾತ್ ಖಾನ್ ಮನೆ ಸೃಷ್ಟಿಯಾದೀತು



ಇತ್ತೀಚೆಗೆ ಗೆಳೆಯ ಬಶೀರ್ ಅಹ್ಮದ್‍ರು ಒಂದು ಮಾಹಿತಿಯನ್ನು ಹಂಚಿಕೊಂಡಿದ್ದರು. ಒಂದೇ ಕುಟುಂಬದ ಮೂರು ಮಂದಿ IPS ಅಧಿಕಾರಿಗಳಾಗಿರುವ ಕತೆ. ಆ ಮೂವರ  ಪೋಟೋವನ್ನು ಅವರು ಹಂಚಿಕೊಂಡಿದ್ದರು. ಓರ್ವ ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ನಿಜವಾಗಿ,


ಮುಸ್ಲಿಮ್ ಸಮುದಾಯದ ಒಳಗಡೆ ಗಂಭೀರ ಚರ್ಚೆಗೆ ಒಳಗಾಗಬೇಕಾದ ಸಂಗತಿ ಇದು. ಒಂದೇ ಕುಟುಂಬದ 3 ಮಂದಿ ಹೇಗೆ IPS ಅಧಿಕಾರಿಗಳಾದರು? ಅದರ ಹಿಂದೆ ಆ ಮಕ್ಕಳ  ಹೆತ್ತವರ ಪರಿಶ್ರಮ ಏನು? ಆ ಮಕ್ಕಳಲ್ಲಿ IPS ಕನಸನ್ನು ಹೇಗೆ ಮತ್ತು ಏಕೆ ಬಿತ್ತಿದರು? ಸ್ಪರ್ಧಾತ್ಮಕ ಪರೀಕ್ಷೆಗೆ ತಮ್ಮ ಮಕ್ಕಳನ್ನು ಹೇಗೆ ಅಣಿಗೊಳಿಸಿದರು? ಅದಕ್ಕಾಗಿ ಅವರು ಏನೇನು  ಮಾಡಿದರು? ಆ ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಅಭಿರುಚಿ ಮೂಡಿಸಿದ್ದು ಹೇಗೆ? ಎಷ್ಟು ಹಗಲು ಮತ್ತು ರಾತ್ರಿಯನ್ನು ಆ ಹೆತ್ತವರು ಈ ಮಕ್ಕಳಿಗಾಗಿ ಕಳೆದರು...

ಇವು ತಕ್ಷಣ ಹೊಳೆದ ಪ್ರಶ್ನೆಗಳು ಮಾತ್ರ. ಎಳೆ ಪ್ರಾಯದಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ IPS ಅಧಿಕಾರಿಗಳಾಗಿಸುವ ವರೆಗಿನ ಈ ದೀರ್ಘ ಪ್ರಯಾಣದ ಬಗ್ಗೆ ಆ  ಹೆತ್ತವರಲ್ಲಿ ಅನೇಕ ಸಂಗತಿಗಳಿರಬಹುದು. ಅವು ಈ ಸಮುದಾಯದ ಪಾಲಿಗೆ ಲಭ್ಯವಾಗಬೇಕಾದರೆ, ಮೊದಲು ಆ ಬಗ್ಗೆ ಸಮುದಾಯದಲ್ಲಿ ಕುತೂಹಲ ಹುಟ್ಟಿಕೊಳ್ಳಬೇಕು. ಆ ಸಾಧನೆಯೆಡೆಗೆ  ಬೆರಗಿ ನಿಂದ ನೋಡಬೇಕು. ಈ ಸಮುದಾಯದ ವಾಟ್ಸಾಪ್ ಚರ್ಚೆಗಳಲ್ಲಿ ಆ ಮೂವರ ಬಗ್ಗೆ ಚರ್ಚೆಗಳಾಗಬೇಕು. ಅವರ ಪರಿಶ್ರಮ ಮತ್ತು ಯಶಸ್ಸು ಪ್ರತಿ ಮನೆಯ ಮಾತು- ಕತೆಯಾಗಬೇಕು. ಆ ಮಾತು-ಕತೆಯನ್ನು ಪ್ರತಿ ಮನೆಯ ಮಕ್ಕಳು ಆಲಿಸಬೇಕು. ಅವರೊಳಗಡೆ IPS, IAS, IRSನಂಥ ಕನಸುಗಳು ಗರಿಗೆದರಬೇಕು. ಮಕ್ಕಳು ಫುಟ್ಬಾಲ್  ಆಡುತ್ತಲೋ ಬ್ಯಾಟು ಬೀಸುತ್ತಲೋ IPS ಕನಸು ಕಾಣಬೇಕು.

ಹಾಗಂತ,

ಬಶೀರ್ ಅಹ್ಮದ್‍ರು ಹಂಚಿಕೊಂಡ ಸಂಗತಿ ಮೊತ್ತಮೊದಲ ಪ್ರಕರಣವೂ ಅಲ್ಲ ಮತ್ತು ಸಾಧನೆಯ ಛಲ ಇದ್ದರೆ ಇದು ಅಸಾಧ್ಯವೂ ಅಲ್ಲ.

2017 ನವೆಂಬರ್‍ನಲ್ಲಿ ಆಓಂ ಪತ್ರಿಕೆಯ ಒಂದು ವರದಿಯನ್ನು ಪ್ರಕಟಿಸಿತ್ತು. ‘Jaipur: This ಕಾಯಂಖನಿ family is all IAS, IPS ಅಂಡ್ RAS’ (ಈ  ಕಾಯಮ್‍ಖಾನಿ ಕುಟುಂಬದ ಎಲ್ಲರೂ ಐಎಎಸ್, ಐಪಿಎಸ್ ಮತ್ತು ಆರ್‍ಎಎಸ್) ಎಂಬುದು ಆ ವರದಿಯ ಶೀರ್ಷಿಕೆ.

ಜೈಪುರದ ಹಯಾತ್ ಮುಹಮ್ಮದ್ ಖಾನ್ ಅವರ ಮಕ್ಕಳ ಕತೆಯಿದು. ಇದು ಸುದ್ದಿಯಾಗುವುದಕ್ಕೆ ಕಾರಣ ಏನೆಂದರೆ, ಹಯಾತ್ ಮುಹಮ್ಮದ್‍ರ ಮಗ ಝಾಕಿರ್ ಹುಸೇನ್‍ರು ಐಎಎಸ್  ಅಧಿಕಾರಿಯಾಗಿ ಭಡ್ತಿ ಹೊಂದಿದುದು. ಇವರ ದೊಡ್ಡಣ್ಣ ಅಶ್ಫಾಕ್ ಹುಸೇನ್‍ರು ಅದಾಗಲೇ ಐಎಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು. ಅಶ್ಫಾಕ್ ಹುಸೇನ್‍ರ ಮಗಳು ಅಥವಾ  ಹಝಾತ್ ಮುಹಮ್ಮದ್‍ರ ಮೊಮ್ಮಗಳಾದ ಫರ್ಹಾ ಖಾನ್ ಅವರು ಭಾರತೀಯ ಕಂದಾಯ ಸೇವಾ (RAS) ಅಧಿಕಾರಿಣಿಯಾಗಿದ್ದಾರೆ. ಹಾಗೆಯೇ ಹಯಾತ್ ಮುಹಮ್ಮದ್‍ರ ಮಗ  ಲಿಯಾಕತ್ ಅಲಿ ಖಾನ್‍ರು ನಿವೃತ್ತ ಇನ್ಸ್ ಪೆಕ್ಟರ್ ಜನರಲ್ ಆಗಿದ್ದು, ಅವರ ಮಗಳು ಶಾಹೀನ್ ಅಲಿ ಖಾನ್ ಕೂಡ ಭಾರತೀಯ ಕಂದಾಯ ಸೇವಾ ಇಲಾಖೆ (RAS)ಯಲ್ಲಿ ಅಧಿಕಾರಿಯಾಗಿದ್ದಾರೆ. ಹಯಾತ್ ಮುಹಮ್ಮದ್‍ರ ಮಗಳ ಮಗ ಸಲೀಮ್ ಕೂಡ ಭಾರತೀಯ ಕಂದಾಯ ಸೇವಾ (RAS) ಅಧಿಕಾರಿಯಾಗಿದ್ದಾರೆ. ಹಯಾತ್ ಖಾನ್‍ರ ಕಿರಿಯ  ಸಹೋದರ ಅಬ್ದುಲ್ ಸಮದ್‍ರ ಮಗ ಝಾಕಿರ್ ಅಹ್ಮದ್ ಖಾನ್ ಸೇನೆಯಲ್ಲಿ ಕರ್ನಲ್ ಆಗಿರುವುದು ಮಾತ್ರ ಅಲ್ಲ, ಅವರ ಇನ್ನಿಬ್ಬರು ಮಕ್ಕಳಾದ ಶಾಕಿಬ್ ಹಾಗೂ ಇಶ್ರತ್ ಕೂಡ ಸೇ ನೆಯಲ್ಲಿ ಕರ್ನಲ್ ಹುದ್ದೆಯಲ್ಲಿದ್ದಾರೆ. ಇದೇ ವೇಳೆ, ಹಯಾತ್ ಮುಹಮ್ಮದ್ ಖಾನ್‍ರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಅವರ ಒಟ್ಟು ಐವರು ಮಕ್ಕಳಲ್ಲಿ ಮೂವರು ಐಎಎಸ್  ಮತ್ತು ಒಬ್ಬರು ಐಪಿಎಸ್.

ಇನ್ನೊಂದು ಇಂಥದ್ದೇ  ಸಾಧಕ ಕುಟುಂಬವಿದೆ.

ಇದು 2019ರ ಸುದ್ದಿ. Four Siblings from UP crack civil services examination within 3 years  (ನಾಲ್ವರು ಸಹೋದರ-ಸಹೋದರಿಯರು 3  ವರ್ಷಗಳ ಅಂತರದಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು)- ಎಂಬ ಶೀರ್ಷಿಕೆಯಲ್ಲಿ ಈ ಸುದ್ದಿ ಪ್ರಕಟವಾಗಿತ್ತು. ಉತ್ತರ ಪ್ರದೇಶದ ಪ್ರತಾಪ್‍ಗಢ್‍ನ ಅನಿಲ್ ಮಿಶ್ರಾ ಅವರ  ಕುಟುಂಬ ಈ ಸಾಧನೆಯನ್ನು ಮೆರೆದಿತ್ತು. ಅನಿಲ್ ಮಿಶ್ರಾ ಬ್ಯಾಂಕ್ ಮ್ಯಾನೇಜರ್. ಅವರ ನಾಲ್ವರು ಮಕ್ಕಳಲ್ಲಿ ಕ್ಷಮಾ ದೊಡ್ಡವಳು. ವಿಶೇಷ ಏನೆಂದರೆ, UPSC  ಪರೀಕ್ಷೆಯನ್ನು ಎಲ್ಲರಿಗಿಂತ  ಕೊನೆಯಲ್ಲಿ ಮುಗಿಸಿದವರು ಕ್ಷಮಾ. ಅದೂ ಮದುವೆಯಾಗಿ 8 ವರ್ಷಗಳ ಬಳಿಕ- 2015ರಲ್ಲಿ. ಸತತ ನಾಲ್ಕು ಪ್ರಯತ್ನಗಳ ಬಳಿಕ ಕ್ಷಮಾರಿಗೆ ಈ ಯಶಸ್ಸು ಪ್ರಾಪ್ತವಾಗಿತ್ತು. ಇದಕ್ಕಿಂತ  ಮೊದಲು 2013ರಲ್ಲೇ  ಯೋಗೇಶ್ UPSC ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. 2014ರಲ್ಲಿ ಮಾಧವಿ UPSC ಪರೀಕ್ಷೆಯಲ್ಲಿ ಉನ್ನತ ರ್ಯಾಂಕ್ ನೊಂದಿಗೆ ತೇರ್ಗಡೆಯಾದರು. ಅದೇ  ವರ್ಷ ಲೋಕೇಶ್ ಕೂಡ ತೇರ್ಗಡೆಯಾದರು. ಮೂರು ವರ್ಷಗಳ ಅಂತರದಲ್ಲಿ ಈ ನಾಲ್ವರೂ ಉನ್ನತ ಅಧಿಕಾರಿಗಳಾಗುವ ಹಂತಕ್ಕೆ ತಲುಪಿದರು.

ಅಂದಹಾಗೆ,

ಇಂಥ ಸಾಧಕ ಕುಟುಂಬಗಳ ಪಟ್ಟಿ ಇನ್ನೂ ಇರಬಹುದು. ಸದ್ಯ ಮುಸ್ಲಿಮ್ ಸಮುದಾಯ ತನ್ನೊಳಗನ್ನು ಮುಟ್ಟಿ ನೋಡುವುದಕ್ಕೆ ಮತ್ತು ಗಂಭೀರ ಅವಲೋಕನದ ಕಡೆಗೆ ಸಜ್ಜಾಗುವುದಕ್ಕೆ  ಈ ಮೂರು ಉದಾಹರಣೆಗಳು ಧಾರಾಳ ಸಾಕು. ಕೇವಲ ಈ ಮೂರೇ ಮೂರು ಕುಟುಂಬಗಳಲ್ಲಿ ಸುಮಾರು 15ರಷ್ಟು ಉನ್ನತ ದರ್ಜೆಯ ಅಧಿಕಾರಿಗಳು ತಯಾರಾದುದು ಹೇಗೆ? ಪ್ರತಿಭೆಗಳೆಲ್ಲ ಒಂದೇ ಕಡೆ ರಾಶಿ ಬಿದ್ದದ್ದು ಹೇಗೆ? ಇದು ಅವರವರ ಅದೃಷ್ಟ ಎಂದು ತಳ್ಳಿ ಹಾಕಬಹುದಾದ ಸಂಗತಿಯೇ ಅಥವಾ ಇವರನ್ನು ಎದುರಿಟ್ಟುಕೊಂಡು ಮುಸ್ಲಿಮ್ ಸಮುದಾಯದ ಪ್ರತಿ  ಮನೆಗಳೂ ಇಂಥ ಅಧಿಕಾರಿಗಳನ್ನು ರೂಪಿಸುವುದಕ್ಕೆ ಪಣ ತೊಡಬೇಕಾದ ಸಂದರ್ಭವೇ?

ಪ್ರತಿ ಮಕ್ಕಳಲ್ಲೂ ಪ್ರತಿಭೆ ಇದ್ದೇ  ಇದೆ. ಆ ಪ್ರತಿಭೆಗೆ ನಮ್ಮಿಂದ ಎಷ್ಟು ಪೋಷಣೆ ಸಿಗುತ್ತದೆ ಎಂಬುದರ ಆಧಾರದಲ್ಲಿ ಅದರ ಭವಿಷ್ಯ ನಿರ್ಧಾರವಾಗುತ್ತದೆ. ಮಿಶ್ರಾ ಕುಟುಂಬದ ಯೋಗೇಶ್  UPSC ಪರೀಕ್ಷೆಯಲ್ಲಿ ತೇರ್ಗಡೆ ಆಗದೇ ಇರುತ್ತಿದ್ದರೆ ಉಳಿದ ಮೂವರು UPSC ಪರೀಕ್ಷೆಗೆ ಶ್ರಮ ವಹಿಸುತ್ತಿದ್ದರೋ ಅನ್ನುವ ಪ್ರಶ್ನೆ ಪ್ರಸ್ತುತ. ಯೋಗೇಶ್‍ನ ಮೇಲೆ ಮಿಶ್ರಾ ದಂಪತಿ ಹಾಕಿರು  ವಷ್ಟು ಶ್ರಮವನ್ನು ಉಳಿದ ಮೂವರು ಮಕ್ಕಳ ಮೇಲೆ ಹಾಕಿರುವ ಸಾಧ್ಯತೆ ಇಲ್ಲ. ಲೋಕೇಶ್‍ರನ್ನು UPSC  ಪರೀಕ್ಷೆಗೆ ಸಜ್ಜುಗೊಳಿಸುವುದಕ್ಕೆ ಆ ಹೆತ್ತವರು ಪಟ್ಟಿರುವ ಶ್ರಮವು ಉಳಿದ  ಮೂವರು ಮಕ್ಕಳ ಮೇಲೆ ವ್ಯಯಿಸಿರುವ ಶ್ರಮಕ್ಕಿಂತ ಹಲವು ಪಟ್ಟು ಅಧಿಕ ಇರಬಹುದು. ಯಾಕೆಂದರೆ,

UPSC ಪರೀಕ್ಷೆಯಲ್ಲಿ ಲೋಕೇಶ್ ಯಶಸ್ಸು ಪಡೆಯುವ ವರೆಗೆ ಅದೊಂದು ಕನ್ನಡಿಯ ಗಂಟು. ಆವರೆಗೆ ಆ ಗಂಟನ್ನು ಅವರ ಮಕ್ಕಳಲ್ಲಿ ಯಾರೂ ತನ್ನದಾಗಿಸಿಕೊಂಡಿಲ್ಲ. ಆದ್ದರಿಂದ  ಪರೀಕ್ಷೆಯಲ್ಲಿ ಲೋಕೇಶ್ ಯಶಸ್ಸು ಪಡೆಯುವುದು ಎಲ್ಲಕ್ಕಿಂತ ಮುಖ್ಯ. ಲೋಕೇಶ್‍ಗೂ ಹೇಳಿಕೊಳ್ಳುವುದಕ್ಕೆ ಅವರ ಕುಟುಂಬದಲ್ಲಿ ಬೇರೆ ಮಾದರಿಗಳಿರಲಿಲ್ಲ. ಆದರೆ ಯಾವಾಗ ಲೋಕೇಶ್  ಯಶಸ್ವಿಯಾದರೋ ಉಳಿದ ಮೂವರೂ ಅರ್ಧ ಯಶಸ್ಸನ್ನು ಅದಾಗಲೇ ಪಡೆದು ಕೊಂಡರು. ಇದು ಸಾಧ್ಯ ಎಂಬ ವಿಶ್ವಾಸ ಅವರಲ್ಲಿ ತನ್ನಿಂತಾನೇ ಬೆಳೆಯಿತು. ಪರೀಕ್ಷೆಯನ್ನು ಎದುರಿಸುವ  ಪಟ್ಟುಗಳನ್ನು ಹೇಳಿಕೊಡುವುದಕ್ಕೆ ಲೋಕೇಶ್ ಇದ್ದಾನೆ ಎಂಬ ಧೈರ್ಯ ಅವರಿಗೆ ಪರೀಕ್ಷೆಯ ಅರ್ಧಭಾಗವನ್ನು ಗೆಲ್ಲಿಸಿ ಕೊಟ್ಟಿತು. ಇನ್ನರ್ಧಕ್ಕಷ್ಟೇ ಹೆತ್ತವರು ಶ್ರಮ ಹಾಕಿದರೆ ಸಾಕಾಗಿತ್ತು. ಇದು  ಯಶಸ್ಸಿನ ಗುಟ್ಟು ಕೂಡ.

ಹಯಾತ್ ಮುಹಮ್ಮದ್ ಖಾನ್‍ರ ಕುಟುಂಬದ ಎಲ್ಲರೂ ಐಎಎಸ್, ಐಪಿಎಸ್, ಆರ್ ಏಎಸ್ ಇತ್ಯಾದಿ ಉನ್ನತ ಅಧಿಕಾರಿಗಳಾಗಿರುವುದರ ಹಿಂದೆ ಇರುವುದೂ ಇದೇ ಗುಟ್ಟು. ಇವರ ಐವರು  ಮಕ್ಕಳಲ್ಲಿ ಹಿರಿಯವ ಯಾವಾಗ ಐಪಿಎಸ್ ಅಧಿಕಾರಿಯಾದರೋ ಅದು ಉಳಿದ ನಾಲ್ವರು ಮಕ್ಕಳ ಮೇಲೆ ಸಕಾರಾತ್ಮಕ ಪರಿ ಣಾಮ ಮತ್ತು ಪ್ರಭಾವವನ್ನು ಬೀರಿತು. ನಮ್ಮೆದುರು ಅಣ್ಣ  ಇದ್ದಾನೆ ಎಂಬುದು ತಮ್ಮಂದಿರ ಪಾಲಿನ ದೊಡ್ಡ ಆಮ್ಲಜನಕ. ಅವರನ್ನು ಮಾನಸಿಕವಾಗಿ ಆ ಅಣ್ಣ ಆವರಿಸುತ್ತಾನೆ. ಅವರಿಗರಿವಿಲ್ಲದೆಯೇ ಅವರನ್ನು ಆತ ಮುಂದಕ್ಕೊಯ್ಯುತ್ತಾನೆ.

ಸದ್ಯ ಮುಸ್ಲಿಮ್ ಸಮುದಾಯದಲ್ಲಿ ಇಂಥದ್ದೊಂದು ಬದಲಾವಣೆ ಬರಬೇಕಾಗಿದೆ. ಪ್ರತಿ ಮನೆಯ ಹೆತ್ತವರಲ್ಲೂ ಇಂಥದ್ದೊಂದು ಕನಸನ್ನು ಬಿತ್ತಬೇಕಾಗಿದೆ. ತಮ್ಮ ಮಕ್ಕಳಲ್ಲಿ ಉನ್ನತ ಅಧಿಕಾರಿಯನ್ನು ಅವರು ಕಾಣುವಂತೆ ಮಾಡಬೇಕಾಗಿದೆ. ಅದಕ್ಕಾಗಿ ಪ್ರೇರಣೆ ನೀಡಬೇಕಾಗಿದೆ. ನಿಜವಾಗಿ,

ಇದು ಮುಸ್ಲಿಮ್ ಸಮುದಾಯದ ಪಾಲಿಗೆ ತೀರಾ ತೀರಾ ಕಠಿಣ ಅಲ್ಲ. ಸಮುದಾಯದಲ್ಲಿ ಮಸೀದಿ ಮತ್ತು ಮದ್ರಸ ಎಂಬ ವಿಶೇಷ ಸೊತ್ತು ಇದೆ. ಇತರ ಯಾವ ಸಮುದಾಯದಲ್ಲೂ ಇಲ್ಲದ  ಮತ್ತು ಬಹೂಪಯೋಗಿ ಸೌಲಭ್ಯ ಇದು. ಮಸೀದಿಯನ್ನು ಬರೇ ನಮಾಝïಗಾಗಿ ಮತ್ತು ಮದ್ರಸವನ್ನು ಬರೇ ಇಸ್ಲಾಮಿನ ಮೂಲಭೂತ ಶಿಕ್ಷಣವನ್ನು ಪಡೆಯುವುದಕ್ಕಾಗಿ ಮಾತ್ರ ಮೀಸ ಲಿಡದೇ ಸಮುದಾಯದ ಸಬಲೀಕರಣಕ್ಕಾಗಿಯೂ ಬಳಸಿಕೊಂಡರೆ ಈ ಸಾಧನೆ ಅಸಾಧ್ಯವಲ್ಲ. ಅಂದಹಾಗೆ,

ಪ್ರತಿ ಮಸೀದಿಗೂ ಒಂದು ಆಡಳಿತ ಸಮಿತಿಯಿದೆ ಮತ್ತು ಪ್ರತಿ ಮಸೀದಿ ವ್ಯಾಪ್ತಿಯಲ್ಲೂ ಒಂದಕ್ಕಿಂತ ಹೆಚ್ಚು ಸಂಘಟನೆಗಳಿವೆ. ನಮ್ಮ ಗುರಿ ತಲುಪುವ ದೃಷ್ಟಿಯಿಂದ ಇದು ಬಹಳ ಅನು  ಕೂಲಕರ ವ್ಯವಸ್ಥೆ. ಸದ್ಯ ಈ ಮಸೀದಿ ಆಡಳಿತ ಸಮಿತಿ ಮತ್ತು ಈ ಸಂಘಟನೆಗಳ ನಡುವೆ ಸಂವಹನ ಸಾಧ್ಯವಾಗಬೇಕು. ಒಂದೇ ಕಡೆ ಎಲ್ಲರೂ ಕುಳಿತು ಮಸೀದಿ ವ್ಯಾಪ್ತಿಯ ಪ್ರತಿ ಮನೆಯ ನ್ನೂ ಸಬಲೀಕರಣಗೊಳಿಸುವುದಕ್ಕೆ ಪೂರಕವಾದ ಕಾರ್ಯತಂತ್ರವನ್ನು ರೂಪಿಸಬೇಕು. ಸಂಘಟನಾತ್ಮಕ ಭಿನ್ನಾಭಿಪ್ರಾಯಗಳೋ ಆಡಳಿತ ಸಮಿತಿಯೊಂದಿಗಿನ ವೈಮನಸ್ಯವೋ ಇದಕ್ಕೆ ಅಡ್ಡಿ  ಬರಬಾರದು. ಮುಂದಿನ ಇಷ್ಟು ವರ್ಷಗಳಲ್ಲಿ ಈ ಮಸೀದಿ ವ್ಯಾಪ್ತಿಯ ಒಟ್ಟು ಮನೆಗಳಿಂದ ಇಷ್ಟು ಐಎಎಸ್, ಐಪಿಎಸ್ ಮತ್ತಿತರ ಉನ್ನತ ಅಧಿಕಾರಿಗಳು ತಯಾರಾಗಬೇಕು ಎಂಬ ಗುರಿಯ ನ್ನು ಇಟ್ಟುಕೊಳ್ಳ ಬೇಕು. ಬಳಿಕ ಆ ಗುರಿಯನ್ನು ತಲುಪುವುದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳಬೇಕು. ಮಸೀದಿ ವ್ಯಾಪ್ತಿಯ ಪ್ರತಿ ಮನೆಯ ಸಂಪೂರ್ಣ ವಿವರವೂ ಮಸೀದಿಯ ಕಂ ಪ್ಯೂಟರ್‍ನಲ್ಲಿ ದಾಖಲುಗೊಂಡಿರಬೇಕು. ಯಾವ್ಯಾವ ಮನೆಯಲ್ಲಿ ಎಷ್ಟೆಷ್ಟು ಮಂದಿಯಿದ್ದಾರೆ ಎಂಬುದರಿಂದ ಹಿಡಿದು ಆ ಮನೆಯಲ್ಲಿ ಕಲಿಯುವ ಮಕ್ಕಳೆಷ್ಟು, ವಿಧವೆ, ವಿವಾಹ ಪ್ರಾಯಕ್ಕೆ  ಬಂದ ಹೆಣ್ಣು-ಗಂಡು, ವೃದ್ಧರು, ರೋಗಿಗಳು, ಮನೆಯ ವರಮಾನ, ದುಡಿಯುವವರು, ಉದ್ಯೋಗ ಅರಸುವವರು, ಕಲಿಕೆ ನಿಲ್ಲಿಸಿದವರು ಇತ್ಯಾದಿ ಎಲ್ಲವೂ ಮಸೀದಿ ಕಂಪ್ಯೂಟರ್‍ನಲ್ಲಿ  ಸುರಕ್ಷಿತವಾಗಿ ಇರಬೇಕು. ಈ ಎಲ್ಲ ಡಾಟಾಗಳನ್ನು ಹರಡಿಕೊಂಡು ಮಸೀದಿ ಆಡಳಿತ ಸಮಿತಿ ಮತ್ತು ಸಂಘಟನೆಗಳು ಪಕ್ಕಾ ಯೋಜನೆಗಳನ್ನು ರೂಪಿಸಬೇಕು. ಮುಖ್ಯವಾಗಿ, 

ಮದ್ರಸಕ್ಕೆ  ಬರುವ ಮಕ್ಕಳಿಗೆ ಪ್ರತಿದಿನ ಸಾಧಕರ ಕುರಿತು ವಿವರಿಸುವ 15 ನಿಮಿಷದ ಸ್ಫೂರ್ತಿ ತರಗತಿ ಇರಬೇಕು. ಪ್ರತಿದಿನ ಮದ್ರಸದಿಂದ ಉನ್ನತ ಅಧಿಕಾರಿಯಾಗುವ ಕನಸಿನೊಂದಿಗೆ ಮಕ್ಕಳು ಮನೆಗೆ  ಹೊರಡಬೇಕು. ಮನೆಯಲ್ಲೂ ಹೆತ್ತವರ ಮಾತು-ಕತೆಯಲ್ಲಿ ಸಾಧಕರ ಬಗ್ಗೆ ಉಲ್ಲೇಖಗಳಾಗುತ್ತಿರಬೇಕು. ಪ್ರತಿ ಮನೆಯ ಮಕ್ಕಳೂ ಆಕಾಶ, ನಕ್ಷತ್ರ, ಸೂರ್ಯ, ಚಂದ್ರ, ವಿಮಾನ, ರಾಕೆಟ್,  ಕಂಪ್ಯೂಟರ್, ವಾಹನಗಳು, ಮಿನಾರಗಳು ಹೀಗೆ ಪ್ರತಿಯೊಂದನ್ನೂ ಬೆರಗಿನಿಂದ ನೋಡುತ್ತಾ ಬೆಳೆಯುವಂತಾಗಬೇಕು. ವೈದ್ಯರು, ವಿಜ್ಞಾನಿಗಳು, ಎಂಜಿನಿಯರ್‍ ಗಳು, ಉನ್ನತ ಶಿಕ್ಷಣ ಪಡೆದ  ವಿದ್ವಾಂಸರು, ಜರ್ನಲಿಸ್ಟ್ ಗಳು, ಅರ್ಥತಜ್ಞರ ಬಗ್ಗೆ ಓದುತ್ತಾ, ಆಲಿಸುತ್ತಾ ಬೆಳೆಯಬೇಕು. ಇದೊಂದು ದೀರ್ಘ ಪ್ರಯಾಣ. ದೂರದೃಷ್ಟಿಯ ಯೋಜನೆಗಳ ಹೊರತು ಈ ಪ್ರಯಾಣದ ಕೊನೆಯನ್ನು ತಲುಪಲಾಗದು. ಇಲ್ಲಿ ಮಕ್ಕಳ ತರಬೇತಿ ಮಾತ್ರ ಆಗಬೇಕಾದುದಲ್ಲ. ಹೆತ್ತವರ ತರಬೇತಿಯೂ ಆಗಬೇಕು. ಹೆತ್ತವರನ್ನು ಮಸೀದಿಗೋ ಮದ್ರಸಕ್ಕೋ ಆಹ್ವಾನಿಸಿ ಸ್ಫೂರ್ತಿದಾಯಕ  ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಅವರಲ್ಲಿ ಹೊಸ ಸ್ಫೂರ್ತಿ, ಭರವಸೆಯನ್ನು ತುಂಬಬೇಕು. ತಮ್ಮ ಮಕ್ಕಳಲ್ಲಿ ಉನ್ನತ ಅಧಿಕಾರಿಯನ್ನು ಕಾಣುವಂತೆ ಅವರನ್ನು ಪ್ರೇರೇಪಿಸಬೇಕು.  ಅವರಲ್ಲಿ ಕನಸನ್ನು ತುಂಬಬೇಕು. ಎಷ್ಟೆಂದರೆ, ಹಗಲೂ-ರಾತ್ರಿ ಅವರು ಈ ಕನಸಿನೊಂದಿಗೆ ಬದುಕಬೇಕು ಮತ್ತು ಅವರು ಈ ಕನಸನ್ನು ನನಸು ಮಾಡುವುದಕ್ಕಾಗಿಯೇ ಬದುಕಬೇಕು.

ಒಂದುವೇಳೆ,

ಪ್ರತೀ ಹೆತ್ತವರು, ಉಸ್ತಾದರು, ಸಂಘಟನೆಗಳು ಮತ್ತು ಮಸೀದಿ ಆಡಳಿತ ಸಮಿತಿಯವರು ಜೊತೆಯಾದರೆ ಮತ್ತು ಈ ಮೇಲಿನ ಗುರಿಯನ್ನು ತಲುಪುವ ಉದ್ದೇಶಕ್ಕಾಗಿ ಒಂದಾದರೆ, ಹಯಾತ್  ಮುಹಮ್ಮದ್ ಖಾನ್‍ರ ಮನೆ ಹೆಜ್ಜೆಗೊಂದರಂತೆ ಸೃಷ್ಟಿಯಾದೀತು.