Tuesday, November 4, 2014

 ಓಡುವ ಪಟೇಲರನ್ನು ನೋಡುತ್ತಾ ಕಸಗುಡಿಸಿ ಕಳೆದು ಹೋಗುವ ಗಾಂಧಿ

     ಮಹಾತ್ಮಾ ಗಾಂಧಿ
  ಸರ್ದಾರ್ ಪಟೇಲ್
  ಪ್ರಧಾನಿ ನರೇಂದ್ರ ಮೋದಿಯವರು ಈ ಎರಡು ಹೆಸರುಗಳನ್ನು ಬಾರಿಬಾರಿಗೂ ಸ್ಮರಿಸುತ್ತಿದ್ದಾರೆ. ಓರ್ವರನ್ನು ರನ್ ಫಾರ್ ಯುನಿಟಿಗೂ (ಏಕತೆಗಾಗಿ ಓಟ) ಇನ್ನೋರ್ವರನ್ನು ಸ್ವಚ್ಛ ಭಾರತಕ್ಕೂ ಬಳಸಿಕೊಂಡಿದ್ದಾರೆ. ‘ಸರ್ದಾರ್ ಇಲ್ಲದ ಗಾಂಧಿ ಅಪೂರ್ಣ’ ಎಂಬೊಂದು ಆಕರ್ಷಕ ನುಡಿಗಟ್ಟನ್ನೂ ಉದುರಿಸಿದ್ದಾರೆ. ಹೀಗೆ ‘ಗಾಂಧಿಯನ್ನು ಪೂರ್ಣಗೊಳಿಸುವ ಪಟೇಲರಿಗಾಗಿ’ ನರ್ಮದಾ ನದಿ ಕಣಿವೆಯಲ್ಲಿ 600 ವಿೂಟರ್ ಎತ್ತರದ ಪ್ರತಿಮೆ ನಿರ್ಮಾಣವಾಗುತ್ತಿದೆ. ಸಿಟಿಝನ್ ಫಾರ್ ಅಕೌಂಟೇಬಲ್ ಗವರ್ನ್‍ಮೆಂಟ್ ಎಂಬ ಸರಕಾರೇತರ ಸಂಸ್ಥೆಯೊಂದು ಈ ಪ್ರತಿಮೆಗಾಗಿ ಅಭಿಯಾನ ನಡೆಸುತ್ತಿದೆ. ಮನೆ ಮನೆಗೆ ಭೇಟಿ ಕೊಡುತ್ತಿದೆ. ರಾಮಮಂದಿರಕ್ಕೆ ಇಟ್ಟಿಗೆಯನ್ನು ಸಂಗ್ರಹಿಸಿದಂತೆ ಪಟೇಲ್ ಪ್ರತಿಮೆಗೆ ಪ್ರತಿಯೋರ್ವರಿಂದಲೂ ದುಡ್ಡು, ಉಕ್ಕಿನ ಸಂಗ್ರಹವಾಗುತ್ತಿದೆ. ಅದಕ್ಕೆಂದೇ www.statueofunity ಎಂಬ ವೆಬ್‍ಸೈಟ್ ಪ್ರಾರಂಭಿಸಲಾಗಿದ್ದು, 2500 ಕೋಟಿ ರೂಪಾಯಿಯ ಆ ಯೋಜನೆಯ ಬಗ್ಗೆ ಅದರಲ್ಲಿ ಸಂಪೂರ್ಣ ವಿವರಗಳನ್ನು ನೀಡಲಾಗಿದೆ. ವಿಶ್ವದಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಇದಾಗಲಿದ್ದು, ನ್ಯೂಯಾರ್ಕ್‍ನ ಲಿಬರ್ಟಿ ಪ್ರತಿಮೆಗಿಂತ ಎರಡು ಪಟ್ಟು ಮತ್ತು ಬ್ರೆಜಿಲ್‍ನ ರಿಯೋ ಡಿ ಜನಿರೋದಲ್ಲಿರುವ ಕ್ರಿಸ್ಟ್ ದಿ ರಿಡೀಮರ್‍ಗಿಂತ ನಾಲ್ಕು ಪಟ್ಟು ಹೆಚ್ಚು ಎತ್ತರವಿದೆ ಎಂದು ಹೇಳಲಾಗುತ್ತಿದೆ. ಮೋದಿಯವರ ನೇತೃತ್ವದಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ರಾಷ್ಟ್ರೀಯ ಏಕ್ತಾ ಟ್ರಸ್ಟನ್ನೂ ಇದಕ್ಕಾಗಿ ರಚಿಸಲಾಗಿದೆ. ಸಂದರ್ಶಕರ ಕೊಠಡಿ, ಅಮ್ಯೂಸ್‍ಮೆಂಟ್ ಪಾರ್ಕ್, ವಿಶಾಲ ಸಭಾಂಗಣ, ಸಂಶೋಧನಾ ಕೇಂದ್ರಗಳನ್ನು ಒಳಗೊಂಡಿರುವ ಪಟೇಲ್‍ರ ಈ ಪ್ರತಿಮೆ ಯೋಜನೆಯನ್ನು ಸ್ವಚ್ಛ ಭಾರತದ ಗಾಂಧೀಜಿಗೆ ಒಮ್ಮೆ ಹೋಲಿಸಿ ನೋಡಿ. ಯಾರು ಪೂರ್ಣವಾಗುತ್ತಿದ್ದಾರೆ? ಗಾಂಧಿಯೋ ಪಟೇಲರೋ? ಸ್ವಚ್ಛ ಭಾರತ್ ಅಭಿಯಾನವನ್ನು ಘೋಷಿಸುವ ಸಂದರ್ಭದಲ್ಲೂ ತೀವ್ರ ಬಲಪಂಥೀಯ ವ್ಯಕ್ತಿತ್ವಗಳಾದ ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ್ ಮತ್ತು ಮದನ್ ಮೋಹನ್ ಮಾಳವಿಯರನ್ನು ಮೋದಿಯವರು ಸ್ಮರಿಸಿ ಕೊಂಡಿದ್ದರು. ಗಾಂಧಿ ಎಂಬುದು ಮೋದಿ ಮತ್ತು ಅವರ ಪರಿವಾರಕ್ಕೆ ಎಂದೂ ಜೀರ್ಣಿಸಲಾಗದ ವ್ಯಕ್ತಿತ್ವ. ಗಾಂಧಿಯವರ ಅಭಿವೃದ್ಧಿ ಚಿಂತನೆಗೂ ಮೋದಿಯವರ ಅಭಿವೃದ್ಧಿ ಚಿಂತನೆಗೂ ತದ್ವಿರುದ್ಧ ಎನ್ನಬಹುದಾದಷ್ಟು ವ್ಯತ್ಯಾಸಗಳಿವೆ. ದೇಶಪ್ರೇಮ, ರಾಷ್ಟ್ರೀಯ ಭದ್ರತೆ, ಕೈಗಾರಿಕಾ ನೀತಿ, ಅರ್ಥವ್ಯವಸ್ಥೆ ಮತ್ತು ಜಾತ್ಯತೀತತೆ.. ಎಲ್ಲದರ ವಿಷಯದಲ್ಲೂ ಗಾಂಧಿ ಮತ್ತು ಮೋದಿಯವರು ಉತ್ತರ-ದಕ್ಷಿಣ. ಆದ್ದರಿಂದಲೇ, ಪ್ರಧಾನಿಯಾಗುವವರೆಗೆ ಗಾಂಧಿಯನ್ನು ಹೊರಗಿಟ್ಟೇ ಮೋದಿ ಮಾತಾಡುತ್ತಿದ್ದರು. ಗಾಂಧಿ ಎಂಬೊಂದು ವ್ಯಕ್ತಿತ್ವವು ಈ ದೇಶವನ್ನು ಮತ್ತು ಇಲ್ಲಿಯ ನಾಗರಿಕರನ್ನು ತೀವ್ರವಾಗಿ ಪ್ರಭಾವಿತಗೊಳಿಸಿದೆ ಎಂಬ ಸತ್ಯವನ್ನು ಅಲ್ಲಗಳೆಯುವ ರೀತಿಯಲ್ಲಿ ಅವರು ವರ್ತಿಸಿದ್ದರು. ಪಟೇಲ್‍ರು ಗುಜರಾತ್‍ನವರಾದಂತೆಯೇ ಗಾಂಧಿ ಕೂಡ ಗುಜರಾತ್‍ನವರೇ. ಪಟೇಲ್‍ರಿಗೆ ಪ್ರತಿಮೆ ನಿರ್ಮಾಣ ಮಾಡುವುದಕ್ಕಿಂತ ಮೊದಲೇ ಗುಜರಾತ್‍ನಲ್ಲಿ ಅವರನ್ನು ಗೌರವಾರ್ಹ ವ್ಯಕ್ತಿತ್ವವಾಗಿ ಗುರುತಿಸಲಾಗಿತ್ತು. ಸರ್ದಾರ್ ಸರೋವರ್ ಅಣೆಕಟ್ಟು, ಸರ್ದಾರ್ ಪಟೇಲ್ ಕ್ರಿಕೆಟ್ ಸ್ಟೇಡಿಯಂ, ಸರ್ದಾರ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸರ್ದಾರ್ ಪಟೇಲ್ ಯುನಿವರ್ಸಿಟಿ ಮುಂತಾದ ರೂಪದಲ್ಲಿ ಅವರ ಹೆಸರನ್ನು ಚಿರಸ್ಥಾಯಿಗೊಳಿಸಲಾಗಿತ್ತು. ಆದ್ದರಿಂದ, “ಕಾಂಗ್ರೆಸ್ ಸರಕಾರ ಪಟೇಲ್‍ರನ್ನು ನಿರ್ಲಕ್ಷಿಸಿದುದರಿಂದ ಪ್ರತಿಮೆ ನಿರ್ಮಿಸಬೇಕಾಯಿತು” ಎಂಬ ಮೋದಿವಾದ ಸುಳ್ಳು ಮತ್ತು ಅತಾರ್ಕಿಕವಾದುದು. ಒಂದು ರೀತಿಯಲ್ಲಿ, ಗುಜರಾತ್‍ನವರಾಗಿಯೂ ಗುಜರಾತ್‍ನಲ್ಲಿ ಕಳೆದು ಹೋಗಿರುವುದು ಗಾಂಧಿಯೇ. ಅವರನ್ನು ಸಬರಮತಿಯ ಆಶ್ರಮಕ್ಕೆ ಸೀಮಿತಗೊಳಿಸಿ ಬಿಡಲಾಗಿದೆ. ಧರಣಿ, ಸತ್ಯಾಗ್ರಹ, ಹಿಂದೂ-ಮುಸ್ಲಿಮ್ ಏಕತೆ ಮುಂತಾದುವುಗಳೆಲ್ಲ ನೆಲೆ ಕಳೆದುಕೊಂಡಿರುವುದೂ ಗುಜರಾತ್‍ನಲ್ಲಿಯೇ. ನಿಜವಾಗಿ, ಗುಜರಾತ್‍ನಲ್ಲಿ ಪ್ರತಿಮೆ ನಿರ್ಮಾಣ ವಾಗಲೇಬೇಕಿದ್ದರೆ (ಪ್ರತಿಮೆ ನಿರ್ಮಾಣವೇ ತಪ್ಪು) ಅದು ಗಾಂಧಿಯದ್ದಾಗಿರಬೇಕಿತ್ತು. ಆದರೆ ಗಾಂಧಿಯನ್ನು ಕಸ ಗುಡಿಸುವುದಕ್ಕೆ, ಡ್ರೈನೇಜ್ ಸ್ವಚ್ಛಗೊಳಿಸುವುದಕ್ಕೆ ಮತ್ತು ಸಾಮಾಜಿಕ ಕೆಲಸ ಕಾರ್ಯಗಳ ಮಟ್ಟಕ್ಕೆ ಇಳಿಸಿಬಿಟ್ಟು ಪಟೇಲ್‍ರನ್ನು  ಪ್ರತಿಮೆಯಲ್ಲಿ ಮೋದಿ ಎತ್ತಿ ನಿಲ್ಲಿಸಿದ್ದಾರೆ. ಈ ಮೂಲಕ ಗಾಂಧಿಯನ್ನು ರಾಜಕೀಯ ರಹಿತ ವ್ಯಕ್ತಿತ್ವವಾಗಿ ಕಟ್ಟಿಕೊಡುವ ಸಂಚು ಎದ್ದು ಕಾಣುತ್ತಿದೆ. ರಾಜಕೀಯವಾಗಿ ಗಾಂಧಿ ಎಲ್ಲಿಯವರೆಗೆ ಪ್ರಸ್ತುತವಾಗಿರುತ್ತಾರೋ ಅಲ್ಲಿಯ ವರೆಗೆ ಮೋದಿ ಮತ್ತು ಅವರ ಪರಿವಾರದ ಚಿಂತನೆಗಳಿಗೆ ಸವಾಲು ಎದುರಾಗುತ್ತಲೇ ಇರುತ್ತದೆ. 1948ರಲ್ಲಿ ಗಾಂಧಿಗೆ ಗುಂಡಿಟ್ಟ ಗೋಡ್ಸೆ ಇವತ್ತು ಕೂಡಾ ಬಹು ಚರ್ಚಿತ ವ್ಯಕ್ತಿಯಾಗಿ ಜೀವಂತ ಇದ್ದಾನೆ. ಗಾಂಧಿ ಈ ದೇಶದಲ್ಲಿ ಚರ್ಚೆಗೆ ಒಳಗಾಗುವುದು ಇತರ ನಾಯಕರಂತೆ ಪುಣ್ಯ ತಿಥಿಯಂದೋ ಹುಟ್ಟು ಹಬ್ಬದಂದೋ ಅಥವಾ ಕೆಲವು ನಿರ್ದಿಷ್ಟ ದಿನಗಳಂದೋ ಅಲ್ಲ. ಈ ದೇಶದ ಆಡಳಿತವು ತೆಗೆದುಕೊಳ್ಳುವ ಬಹುತೇಕ ಪ್ರತಿ ನಿರ್ಧಾರದ ಸಂದರ್ಭದಲ್ಲೂ ಅವರು ಒಂದಲ್ಲ ಒಂದು ರೀತಿಯಲ್ಲಿ ಉಲ್ಲೇಖಗೊಳ್ಳುತ್ತಾರೆ. ಅವರ ಆಲೋಚನೆಗಳನ್ನು ಮತ್ತು ಪ್ರಸ್ತುತ ಆಡಳಿತದ  ಆಲೋಚನೆಗಳನ್ನು ಪರಸ್ಪರ ಹೋಲಿಸಿ ನೋಡಲಾಗುತ್ತದೆ. ಒಂದು ವೇಳೆ, ಗಾಂಧಿಯವರದು ಸ್ವಚ್ಛತೆ, ಸಮಾಜಸೇವಾ ಕಾರ್ಯಗಳು ಅಥವಾ ಸರಳ ಜೀವನ ಮುಂತಾದ ತೀರಾ ರಾಜಕೀಯ ರಹಿತ ವ್ಯಕ್ತಿತ್ವವಾಗಿರುತ್ತಿದ್ದರೆ ಈ 6 ದಶಕಗಳ ಬಳಿಕವೂ ಗೋಡ್ಸೆಯ ಗುಂಡು ಚರ್ಚಾರ್ಹ ಎನಿಸಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಗಾಂಧಿ ಯಾವಾಗಲೋ ಓರ್ವ ಸಮಾಜ ಸೇವಕರಾಗಿ ಕಾಣೆಯಾಗುತ್ತಿದ್ದರು. ಬಹುಶಃ ಗಾಂಧಿಗಿರುವ ಈ ವಿಶೇಷತೆಯೇ ಅವರನ್ನು ಅತ್ತ ಒಪ್ಪಿಕೊಳ್ಳಲೂ ಆಗದ ಇತ್ತ ತಿರಸ್ಕರಿಸಲೂ ಆಗದ ಸಂದಿಗ್ಧತೆಗೆ ಮೋದಿ ಮತ್ತು ಪರಿವಾರವನ್ನು ನೂಕಿಬಿಟ್ಟಿದೆ. ಈ ಹಿನ್ನೆಲೆಯಿಂದಾಗಿಯೇ ಮೋದಿಯವರು ಗಾಂಧಿಯನ್ನು ಸ್ವಚ್ಛ ಭಾರತಕ್ಕೆ ಜೋಡಿಸಿರಬೇಕು. ಓರ್ವ ಸೋಶಿಯಲ್ ವರ್ಕರ್ ಎಂಬಂತೆ ಗಾಂಧಿಯನ್ನು ಬೀದಿಬದಿಯಲ್ಲಿ ಕಸಗುಡಿಸಲು ನಿಲ್ಲಿಸುತ್ತಲೇ ಪಟೇಲ್‍ರನ್ನು ಪ್ರತಿಮೆಯ ಮೂಲಕ ರಾಜಕೀಯ ವ್ಯಕ್ತಿತ್ವವಾಗಿ ಕಟ್ಟಿಕೊಡುವುದು ಮೋದಿಯವರ ಇಂಗಿತವಾದಂತಿದೆ. ಸ್ವಚ್ಛ ಭಾರತದ ಗಾಂಧಿಯ ಎದುರು ಪ್ರತಿಮೆಯ ಪಟೇಲರನ್ನು ನಿಲ್ಲಿಸುವಾಗ ಗೆಲ್ಲುವುದು ಪಟೇಲರೇ. ಪ್ರತಿಮೆ ಸ್ಥಾಯಿಯಾದುದು. ಅದು ಅನಂತ ಕಾಲದ ವರೆಗೆ ಇರಬಲ್ಲುದು. ಆದರೆ ಸ್ವಚ್ಛ ಭಾರತಕ್ಕೆ ಸೀಮಿತತೆ ಮತ್ತು ಕಾಲಮಿತಿ ಎರಡೂ ಇದೆ. ಅದೊಂದು ಯೋಜನೆ. ಆ ಯೋಜನೆಯ ಮೂಲಕ ಗಾಂಧಿ ಚರ್ಚೆಗೀಡಾಗುವುದು ನೈರ್ಮಲ್ಯದ ಸುತ್ತ ಮಾತ್ರ. ಆ ಚರ್ಚೆ ಎಂದೂ ಗಾಂಧಿಯವರ ರಾಜಕೀಯ ಆಲೋಚನೆಗಳ ಕಡೆಗೆ ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ. ಪ್ರತಿಮೆಗಾದರೋ ಉಕ್ಕಿನ ವ್ಯಕ್ತಿತ್ವವಿದೆ. ಆ ವ್ಯಕ್ತಿತ್ವವು ಬಲಾಢ್ಯತೆ, ಶ್ರೇಷ್ಠತೆ ಮುಂತಾದ ಗುಣಗಳನ್ನೇ ಧ್ವನಿಸುತ್ತದೆ. ಬಹುಶಃ ಸ್ವಚ್ಛ ಭಾರತ ಮತ್ತು ಪ್ರತಿಮೆ ನಿರ್ಮಾಣದ ಮೂಲಕ ಗಾಂಧಿಯನ್ನು ರಾಜಕೀಯ ರಹಿತಗೊಳಿಸಿ ಪಟೇಲರನ್ನು ಮೋದಿ ಬ್ರಾಂಡಿನ ಹೊಸ ರಾಜಕೀಯ ಪ್ರತಿರೂಪವಾಗಿ ಕಟ್ಟಿಕೊಡುವ ಪ್ರಯತ್ನ ಸಾಗುತ್ತಿರುವಂತೆ ಕಾಣುತ್ತಿದೆ.
 ನಿಜವಾಗಿ, ಗಾಂಧಿ ಮತ್ತು ಪಟೇಲ್ ಇಬ್ಬರೂ ಕಾಂಗ್ರೆಸಿಗರೇ.  ಅವರಿಬ್ಬರ ಐಡಿಯಾಲಜಿಯೂ ಕಾಂಗ್ರೆಸನ್ನು ಬೆಳೆಸಿದೆ ಮತ್ತು ಬಲಿಷ್ಠಗೊಳಿಸಿದೆ. ತನ್ನ ಬದುಕಿನುದ್ದಕ್ಕೂ ಕಾಂಗ್ರೆಸಿನವರಾಗಿದ್ದುಕೊಂಡೇ ಬದುಕಿದ್ದು ಮತ್ತು ಕಾಂಗ್ರೆಸ್ ಅನ್ನು  ಸಮರ್ಥಿಸಿಕೊಂಡವರಾಗಿದ್ದರು ಪಟೇಲರು. ಆದರೆ ಮೋದಿ ಮತ್ತು ಅವರ ಬೆಂಬಲಿಗರು ಈ ಸತ್ಯವನ್ನು ಎಲ್ಲೂ ಹೇಳದೆಯೇ ಅವರನ್ನು ತಮ್ಮವರೆಂದೂ ಅವರ ಐಡಿಯಾಲಜಿಯು ತಮ್ಮದೆಂದೂ ಬಿಂಬಿಸುವ ಯತ್ನದಲ್ಲಿದ್ದಾರೆ. ಪಟೇಲರ ಐಡಿಯಾಲಜಿ ಕಾಂಗ್ರೆಸ್‍ನ ಐಡಿಯಾಲಜಿಯಾಗಿತ್ತು. ಗಾಂಧಿ, ನೆಹರೂರಂತೆಯೇ ದ್ವೇಷ ರಾಜಕೀಯವನ್ನು ಇಷ್ಟಪಡದವರು ಪಟೇಲರು. ಆದ್ದರಿಂದಲೇ, 1949ರಲ್ಲಿ ಬಾಬರಿ ಮಸೀದಿಯ ಮೇಲೆ ದಾಳಿ ಮಾಡಲಾದ ಮತ್ತು ಅಲ್ಲಿದ್ದ ಮೌಲ್ವಿಯನ್ನು ಓಡಿಸಿ ಅದರೊಳಗೆ ರಾಮ ವಿಗ್ರಹ ಪ್ರತಿಷ್ಠಾಪಿಸಲಾದ ಘಟನೆಯ ವಿರುದ್ಧ ಅವರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. “ವಿವಾದವನ್ನು ಬಲವಂತದಿಂದ ಬಗೆಹರಿಸುವುದಕ್ಕೆ ಸಾಧ್ಯವಿಲ್ಲ, ನೀವಿದಕ್ಕೆ ಆಸ್ಪದ ಕೊಡಬೇಡಿ” ಎಂದು ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಜಿ.ಬಿ. ಪಂತ್‍ರಿಗೆ ಅವರು ಖಾರ ಪತ್ರವನ್ನು ಬರೆದಿದ್ದರು. ಗಾಂಧಿ ಹತ್ಯೆಯ ತರುವಾಯ ಆರೆಸ್ಸೆಸ್‍ಗೆ ನಿಷೇಧ ವಿಧಿಸಿದ್ದೂ ಪಟೇಲರೇ. ನಿಷೇಧವನ್ನು ಹಿಂತೆಗೆದುಕೊಳ್ಳುವುದಕ್ಕೆ, “ಸಾಮಾಜಿಕ ಸಂಘಟನೆಯಾಗಿ ಚಟುವಟಿಕೆಯಲ್ಲಿರುತ್ತೇವೆ, ರಾಜಕೀಯ ಪ್ರವೇಶಿಸುವುದಿಲ್ಲ” ಎಂಬ ಮುಚ್ಚಳಿಕೆಯನ್ನು ಷರತ್ತು ಆಗಿ ಮುಂದಿಟ್ಟವರೂ ಪಟೇಲರೇ. ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ಆಗಿನ ಆರೆಸ್ಸೆಸ್ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಮುಖರ್ಜಿಯವರಿಗೆ ಖಾರ ಪತ್ರವನ್ನು ಬರೆದವರೂ ಅವರೇ. ‘ಇಂಡಿಯಾ ವಿನ್ಸ್ ಫ್ರೀಡಮ್' ಎಂಬ ಕೃತಿಯಲ್ಲಿ ಮೌಲಾನಾ ಅಬ್ದುಲ್ ಕಲಾಮ್ ಆಝಾದ್‍ರು ಭಾರತ ವಿಭಜನೆಗೊಂಡ ಬಗ್ಗೆ ಮತ್ತು ಆ ಸಮಯದಲ್ಲಿ ಪಟೇಲರ ದೃಷ್ಟಿಕೋನದ ಬಗ್ಗೆ ಬರೆದಿದ್ದಾರೆ. ನೆಹರೂ ಅವರಿಗಿಂತ 6 ತಿಂಗಳು ಮೊದಲೇ ವಿಭಜನೆಯನ್ನು ಅನಿವಾರ್ಯ ಎಂದು ಒಪ್ಪಿಕೊಂಡವರು ಪಟೇಲರಾಗಿದ್ದರು. ಅವರು 1946 ಡಿಸೆಂಬರ್‍ನಲ್ಲಿಯೇ ವಿಭಜನೆಯ ಪರ ನಿಲುವನ್ನು ಹೊಂದಿದ್ದರು. ಕೊನೆ ಕ್ಷಣದ ವರೆಗೆ ದೇಶ ವಿಭಜನೆಗೆ ವಿರುದ್ಧವಾಗಿದ್ದ ಆಝಾದ್‍ರಿಗೆ ಅತ್ಯಂತ ಆಘಾತ ಮತ್ತು ಅಚ್ಚರಿಯಾದದ್ದು ಪಟೇಲರ ಈ ನಿಲುವೇ ಆಗಿತ್ತು. ಅವರು ಪಟೇಲರ ಈ ನಿಲುವಿನ ಬಗ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. “ನಾವು ಇಷ್ಟಪಡುತ್ತೇವೋ ಇಲ್ಲವೋ ಆದರೆ ಭಾರತದಲ್ಲಿ ಎರಡು ದೇಶಗಳಿವೆ” ಎಂಬ ಪಟೇಲರ ಪತ್ರವನ್ನು ಓದಿ ನಾನು ದುಃಖಿತನಾದೆ ಎಂದು ಆಝಾದ್‍ರು ಇಂಡಿಯಾ ವಿನ್ಸ್ ಫ್ರೀಡಮ್‍ನಲ್ಲಿ ಸ್ಮರಿಸಿಕೊಂಡಿದ್ದಾರೆ. ಇಂಥ ಪಟೇಲರನ್ನು ಮೋದಿಯವರು ಇವತ್ತು ತಮ್ಮವರೆಂದು ಹೇಳಿಕೊಳ್ಳುತ್ತಿದ್ದಾರೆ. ಪಟೇಲರು ಕಾಂಗ್ರೆಸ್‍ನೊಳಗಿದ್ದೂ ಕಾಂಗ್ರೆಸ್ ಅಲ್ಲದ ವ್ಯಕ್ತಿಯಾಗಿದ್ದರು ಎಂದು ಪರೋಕ್ಷವಾಗಿ ಬಿಂಬಿಸುವ ಪ್ರಯತ್ನವೊಂದು ರನ್ ಫಾರ್ ಯುನಿಟಿ ಮತ್ತು ‘ಪಟೇಲ್ ಇಲ್ಲದ ಗಾಂಧಿ ಅಪೂರ್ಣ’ ಎಂಬ ಅವರ ಮಾತು-ಕೃತಿಯಲ್ಲಿದೆ. ನಿಜವಾಗಿ, ಪಟೇಲ್ ಇಲ್ಲದ ಕಾಂಗ್ರೆಸ್ ಹೇಗೆ ಅಪೂರ್ಣವೋ ಗಾಂಧಿ ಇಲ್ಲದ ಭಾರತೀಯ ರಾಜಕೀಯವೂ ಅಷ್ಟೇ ಅಪೂರ್ಣ. ಭಾರತೀಯ ಸ್ವಾತಂತ್ರ್ಯ ಹೋರಾಟ ಮತ್ತು ಸ್ವಾತಂತ್ರ್ಯಾನಂತರದ ನೆಹರೂ, ಆಝಾದ್, ಪಟೇಲ್, ಗಾಂಧಿ ಮುಂತಾದವರ ಕಾಲದ ಕಾಂಗ್ರೆಸ್ ಎಂದೂ ಒಂದು ಪಕ್ಷವಾಗಿರಲಿಲ್ಲ. ಅದೊಂದು
ತತ್ವ-ಸಿದ್ಧಾಂತಗಳುಳ್ಳ ಮನೆಯಾಗಿತ್ತು. ಅಲ್ಲಿ ಪಟೇಲರಿಗೂ, ನೆಹರೂರಿಗೂ ಆಝಾದ್‍ರಿಗೂ ಗಾಂಧೀಜಿಗೂ ಭಿನ್ನ ಭಿನ್ನ ಅಭಿಪ್ರಾಯಗಳಿದ್ದುವು. ಸರಿ ತಪ್ಪುಗಳ ಬಗ್ಗೆ ತಕರಾರುಗಳಿದ್ದುವು. ಆದರೆ ಅವರೆಂದೂ ಜನಾಂಗ ದ್ವೇಷಿಗಳೋ ಧಾರ್ಮಿಕ ಅಸಹಿಷ್ಣುಗಳೋ ಆಗಿರಲಿಲ್ಲ. ಭಾರತ ವಿಭಜನೆಯಾಗುವುದನ್ನು ಒಪ್ಪುವವರು ಮತ್ತು ಒಪ್ಪದವರು, ಪಾಕಿಸ್ತಾನಕ್ಕೆ ಪರಿಹಾರವಾಗಿ 50 ಕೋಟಿ ರೂಪಾಯಿ ಕೊಡಬೇಕೆನ್ನುವ ಗಾಂಧಿ ಅಭಿಪ್ರಾಯವನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರು ಅವರಲ್ಲಿ ಇದ್ದರೂ ಅದನ್ನು ಸೈದ್ಧಾಂತಿಕ ಭಿನ್ನಾಭಿಪ್ರಾಯವಾಗಿಯೇ ಅವರು ಪರಿಗಣಿಸಿದ್ದರು. ಆದರೆ ಇವತ್ತು ಮೋದಿ ಮತ್ತು ಅವರ ಪರಿವಾರವು ಕಾಂಗ್ರೆಸ್ ಮನೆಯಿಂದ ಪಟೇಲ್‍ರನ್ನು ಅಪಹರಿಸಿ ತಂದು ಅವರಿಗೆ ತನ್ನ ಬಣ್ಣ ವನ್ನು ಬಳಿಯುವ ಪ್ರಯತ್ನ ಮಾಡುತ್ತಿದೆ. ‘ಉಕ್ಕಿನ ಮನುಷ್ಯ’, ‘ದೇಶ ವಿಭಜನೆಯ ವಿರೋಧಿ’, ‘ದೇಶವನ್ನು ಒಗ್ಗೂಡಿಸಿದ ವ್ಯಕ್ತಿ’.. ಎಂಬೆಲ್ಲ ಬಿರುದುಗಳನ್ನು ನೀಡಿ ಮೆರವಣಿಗೆ ಮಾಡುತ್ತಿದೆ. ಅವರ ಪ್ರತಿಮೆಯನ್ನು ಕೆತ್ತುವ ಉತ್ಸಾಹದಲ್ಲಿದೆ. ಇದು ಹೇಗಿದೆಯೆಂದರೆ, ವಾಜಪೇಯಿಯವರನ್ನು ತಮ್ಮವರೆಂದು ಕರೆದು ಕಾಂಗ್ರೆಸಿಗರು ಪ್ರತಿಮೆ ನಿರ್ಮಿಸಿದಂತೆ. ಅವರ ಐಡಿಯಾಲಜಿಯನ್ನು ತಮ್ಮ ಐಡಿಯಾಲಜಿ ಎಂದು ಹೇಳಿಕೊಂಡಂತೆ. ನಿಜ ಏನೆಂದರೆ, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮವರೆಂದು ಹೇಳಿಕೊಳ್ಳಬಹುದಾದ ಯಾರೊಬ್ಬರೂ ಮೋದಿ ಮತ್ತು ಅವರ ಪರಿವಾರಕ್ಕಿಲ್ಲ. ಇರುವವರೆಲ್ಲ ಕಾಂಗ್ರೆಸಿಗರೇ. ಈ ಮುಜುಗರದಿಂದ ತಪ್ಪಿಸಿಕೊಳ್ಳುವುದಕ್ಕಾಗಿಯೇ ಅವರು ಪಟೇಲರನ್ನು ಹೆಕ್ಕಿಕೊಂಡಿದ್ದಾರೆ. ಮಾತ್ರವಲ್ಲ, ಅವರಿಗೆ ಬಂಡಾಯ ಕಾಂಗ್ರೆಸಿಗನ ವೇಷ ತೊಡಿಸಿ ‘ಅವರ ಆಲೋಚನೆಗಳೇ ನಮ್ಮವು' ಎಂಬ ಸುಳ್ಳನ್ನು ಹರಡುತ್ತಿದ್ದಾರೆ. ಇದೀಗ ಅವರಿಗೆ ಗಾಂಧಿ ಇಲ್ಲದ ಪಟೇಲ್ ಪರಿಣಾಮಕಾರಿಯಲ್ಲ ಎಂಬುದು ಮನವರಿಕೆಯಾಗಿರಬೇಕು. ಈ ಕಾರಣದಿಂದಲೇ ರಾಜಕೀಯ ರಹಿತ ಸಾಧು ಗಾಂಧಿಯನ್ನು ಅವರು ಸ್ವಚ್ಛ ಭಾರತದ ನೆಪದಲ್ಲಿ ದೇಶಕ್ಕೆ ಪರಿಚಯಿಸಿದ್ದಾರೆ. ಈ ಮೂಲಕ ಗಾಂಧಿ ಮತ್ತು ಪಟೇಲರನ್ನು ಒಟ್ಟಿಗೇ ತಮ್ಮ ಪಾಳಯಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಒಂದು ಕಡೆ ಪ್ರಬಲ ವ್ಯಕ್ತಿತ್ವವಾಗಿ ಪಟೇಲ್‍ರು ಮತ್ತು ಇನ್ನೊಂದು ಕಡೆ ಸಾಧು ವ್ಯಕ್ತಿತ್ವವಾಗಿ ಗಾಂಧಿ - ಹೀಗೆ ಇವರಿಬ್ಬರನ್ನು ಬಳಸಿಕೊಂಡು ಮೋದಿಯವರು ತಮ್ಮ ರಾಜಕೀಯ ಆಟವನ್ನು ಆಡುತ್ತಿದ್ದಾರೆ. ‘ಪಟೇಲ್ ಇಲ್ಲದ ಗಾಂಧಿ ಅಪೂರ್ಣ’ ಎಂಬ ಅವರು ಇಂದಿನ ಮಾತು ಮುಂದಿನ ದಿನಗಳಲ್ಲಿ, ‘ಗಾಂಧಿ ಇಲ್ಲದ ಪಟೇಲ್ ಅಪೂರ್ಣ’ ಎಂದಾಗಿ ಕೊನೆಗೆ, ಗಾಂಧಿ ಅಪೂರ್ಣವಾಗಿಯೂ ಪಟೇಲ್ ಪೂರ್ಣವಾಗಿಯೂ ವ್ಯಾಖ್ಯಾನಕ್ಕೀಡಾಗಬಹುದು. ಅಂತಿಮವಾಗಿ ಗೋಡ್ಸೆಯೇ ವಿಜೃಂಭಿಸಲೂ ಬಹುದು.

1 comment:

  1. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ ಸುಮಾರು ೫೬೦ ದೇಶಿಯ ಸಂಸ್ಥಾನಗಳನ್ನು ಒಗ್ಗೂಡಿಸಿದವರು ವಲ್ಲಭಾಯಿ ಪಟೇಲರು: ಅವರು ಉಕ್ಕಿನ ಮನುಷ್ಯ ಎಂಬುದನ್ನು ಭಾರತದಲ್ಲಿ ಕಾಂಗ್ರೆಸ್ಸ್ ಸರ್ಕಾರದ ಆಡಳಿತವಿದ್ದಾಗಲೇ ಅರವತ್ತು ವರ್ಷಗಳ ಹಿಂದೆ ನಾವು ಪ್ರೈಮರಿ,ಮಿಡ್ಲ್ ಸ್ಕೂಲ್ ನ ಪಠ್ಯಪುಸ್ತಕಗಳಲ್ಲಿ ಓದಿದ್ದೆವು. ಪಟೇಲರು ಆ ಸಮಯದಲ್ಲಿ ಗೃಹ ಮಂತ್ರಿ ಆಗದೇ ಇದ್ದಿದ್ದರೆ ಭಾರತ ಇಂದು ಅಖಂಡವಾಗಿ ಉಳಿಯುತ್ತಿರಲಿಲ್ಲ ಎಂಬುದನ್ನು ಕಾಂಗ್ರೆಸ್ಸಿಗರು,ಗಾಂಧಿವಾದಿಗಳು,ಇಂದಿನ ಪ್ರಗತಿಪರರು, ಬಿ ಜೆ ಪಿ ವಿರೋಧಿಗಳು ಇತ್ಯಾದಿ ಯಾರೂ ನಿರಾಕರಿಸಲು ಸಾಧ್ಯವಿಲ್ಲ. . ಅವರು ಹುಟ್ಟಿದ ಗುಜರಾತಿನಲ್ಲಿ ಅವರ ಪ್ರತಿಮೆ ಸ್ಥಾಪಿಸುವುದನ್ನು ತಾವು ಅನೇಕ ಪಟ್ಟುಗಳು,ವಾದಗಳನ್ನು ಮಂಡಿಸುವುದರ ಮೂಲಕ ವಿರೋಧಿಸಬಹುದು. ಪ್ರತಿಮೆ ಸ್ಥಾಪನೆ ಸರಿಯೋ ತಪ್ಪೋ ಎಂಬುದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣ ಕೊಟ್ಟು ಅನುಮೋದಿಸಬಹುದು ಇಲ್ಲವೇ ವಿರೋಧಿಸಬಹುದು. ಆದರೆ ತಾವು ನೆಹರು, ಇಂದಿರಾಗಾಂಧಿ,ಸಂಜಯಗಾಂಧಿ ಮತ್ತು ರಾಜೀವಗಾಂಧಿ ಅವರ ಹೆಸರಿನಲ್ಲಿ ಭಾರತದಾದ್ಯಂತ ಇರುವ ಸರ್ಕಾರಿ ವಿ ವಿ ಗಳು, ಸಂಶೋಧನಾ ಕೇಂದ್ರಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ಬಗ್ಗೆ ಏಕೆ ಮೌನವಹಿಸಿದ್ದೀರಿ?. ಬಿ ಜೆ ಪಿ ಮತ್ತು ಮೋದಿಯವರ ಸರ್ಕಾರ ಮಾಡಿದ್ದೆಲ್ಲಾ ತಪ್ಪು, ಭಾರತವನ್ನು ಶುಚಿಯಾಗಿಡಲು ಶ್ರಮಿಸೋಣ ಎಂದು ಹೇಳಿದ್ದೆಲ್ಲಾ ತಪ್ಪು ಎಂಬ ಮನೋಭಾವ ಸರಿಯೇ? ಎಲ್ಲದರಲ್ಲೂ ಕೊಂಕು ಹುಡುಕುವುದೇ ನಮ್ಮ ದಿನ ನಿತ್ಯದ ಕೆಲಸವಾಗಬಾರದಲ್ಲವೇ?-----ಎಂ ಎ ಶ್ರೀರಂಗ ಬೆಂಗಳೂರು.

    ReplyDelete