Monday, November 10, 2014

ನಂದಿತಾ ಸಾವಿನಲ್ಲಿ ‘ಅತ್ಯಾಚಾರ’ಕ್ಕೊಳಗಾದ ಮಾಧ್ಯಮ ಧರ್ಮ


    ಒಂದು ಘಟನೆಯ ಸುತ್ತ ಸುದ್ದಿ ತಯಾರಿಸುವಾಗ ಓರ್ವ ಪತ್ರಕರ್ತನ/ಳಲ್ಲಿ ಇರಲೇಬೇಕಾದ ಎಚ್ಚರಿಕೆಗಳು ಏನೆಲ್ಲ? ಪ್ರತಿ ಘಟನೆಗೂ ಒಂದಕ್ಕಿಂತ ಹೆಚ್ಚು ಆಯಾಮಗಳಿರುತ್ತವೆ. ಹತ್ತಾರು ತಿರುವುಗಳಿರುತ್ತವೆ. ಈ ಆಯಾಮ ಮತ್ತು ತಿರುವುಗಳನ್ನು ಗಮನದಲ್ಲಿಟ್ಟುಕೊಂಡೇ ಪತ್ರಕರ್ತ ಘಟನಾ ಸ್ಥಳಕ್ಕೆ ತಲುಪಬೇಕು. ಹಾಗಂತ, ಘಟನಾ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಒಂದೇ ಬಗೆಯ ವಾತಾವರಣ ಇರಬೇಕೆಂದೇನೂ ಇಲ್ಲ. ಸ್ಥಳೀಯರ ಅಭಿಪ್ರಾಯದಲ್ಲಿ ವ್ಯತ್ಯಾಸ ಇರಬಹುದು. ಹೇಳುವ ಶೈಲಿ, ಮಂಡಿಸುವ ವಾದ, ಹಾವಭಾವಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಅಂತರ ಇರಬಹುದು. ಇವರಲ್ಲಿ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದವರು, ಸಂತ್ರಸ್ತರೊಂದಿಗೆ ಕೌಟುಂಬಿಕ ಸಂಬಂಧ ಹೊಂದಿದವರು, ಮನಸ್ತಾಪ ಇರುವವರು, ನಿಷ್ಪಕ್ಷ  ನಿಲುವಿನವರು, ಸ್ವಾರ್ಥಿಗಳು.. ಎಲ್ಲರೂ ಇರಬಹುದು. ಅವರೆಲ್ಲರ ಅಭಿಪ್ರಾಯಗಳನ್ನು ಸುದ್ದಿಯ ರೂಪಕ್ಕೆ ಇಳಿಸುವ ಮೊದಲು ಈ ಅರಿವು ಸದಾ ಜೊತೆಗಿರಬೇಕು. ಅಲ್ಲದೇ, ಘಟನಾ ಸ್ಥಳದಲ್ಲೂ ಸೂಕ್ಷ್ಮ ಕುರುಹುಗಳಿರುತ್ತವೆ. ಈ ಕುರುಹುಗಳಿಗೂ ತಾನು ದಾಖಲಿಸಿಕೊಂಡ ಅಭಿಪ್ರಾಯಗಳಿಗೂ ತಾಳೆ ಹಾಕಿ ನೋಡುವ ಮತ್ತು ಅದರ ಆಧಾರದಲ್ಲಿ ಘಟನೆಯನ್ನು ವಿಶ್ಲೇಷಿಸುವ ತಾಳ್ಮೆಯೂ ಇರಬೇಕು. ದುರಂತ ಏನೆಂದರೆ, ಹೆಚ್ಚಿನ ಬಾರಿ ಹೀಗೆಲ್ಲ ನಡೆಯುವುದೇ ಇಲ್ಲ. ಘಟನಾ ಸ್ಥಳವನ್ನು ಪರಿಶೀಲಿಸದೆಯೇ ಮತ್ತು ಘಟನೆಯ ಒಳ-ಹೊರಗನ್ನು ಅಭ್ಯಸಿಸದೆಯೇ ನಿರ್ದಿಷ್ಟ ಮೂಲವೊಂದರ ಮಾಹಿತಿಯನ್ನಷ್ಟೇ ಆಧರಿಸಿಕೊಂಡು ಸುದ್ದಿಯನ್ನು ಕೆಲವೊಮ್ಮೆ ಹೆಣೆಯಲಾಗುತ್ತದೆ. ಕನಿಷ್ಠ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಮಾಹಿತಿಯನ್ನು ತರಿಸಿ ಸುದ್ದಿಗೆ ನಿಖರತೆಯನ್ನು ಕೊಡುವ ಪ್ರಯತ್ನಗಳೂ ನಡೆಯುವುದಿಲ್ಲ. ಭಯೋತ್ಪಾದನಾ ಪ್ರಕರಣಗಳ ಕುರಿತಾದ ವರದಿಗಳಲ್ಲಿ ಇಂಥ ಏಕಮುಖ ನಿಲುವುಗಳು ಪತ್ರಿಕೆಗಳಲ್ಲಿ ಹಲವು ಬಾರಿ ವ್ಯಕ್ತವಾಗಿವೆ. ಮದ್ರಸಗಳೂ ಇಂಥ ವರದಿ ಗಾರಿಕೆಯಿಂದ ಸಂತ್ರಸ್ತಗೊಂಡಿವೆ. ಇದೀಗ ನಂದಿತಾ ಪ್ರಕರಣ. ಅಕ್ಟೋಬರ್ 30ರಂದು ಮೃತಪಟ್ಟ ಬಾಲಕಿ ನಂದಿತಾಳ ಕುರಿತಂತೆ ನವೆಂಬರ್ 2ರಿಂದ ಕನ್ನಡ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗತೊಡ ಗಿವೆ. ಈ ಸುದ್ದಿ ಮತ್ತು ಅದಕ್ಕೆ ಕೊಡುತ್ತಿರುವ ಶೀರ್ಷಿಕೆಗಳನ್ನು ಓದುವಾಗ ಕೆಲವೊಮ್ಮೆ ದಿಗಿಲಾಗುತ್ತದೆ. ಕೆಲವೊಮ್ಮೆ ಆತಂಕ, ವಿಷಾದವೂ ಉಂಟಾಗುತ್ತದೆ. ನಂದಿತಾಳ ಹೆತ್ತವರ ಕಣ್ಣೀರು, ಆಕ್ರೋಶ ಸಹಜವಾದುದು. ಆದರೆ ಪತ್ರಿಕೆಯೊಂದಕ್ಕೆ ಅದರಾಚೆಗೂ ಕೆಲವು ಜವಾಬ್ದಾರಿಗಳಿವೆ. ಇನ್ನೂ ಖಚಿತವಾಗದ ಘಟನೆಯೊಂದರ ಮೇಲೆ ಶೀರ್ಷಿಕೆ ಕಟ್ಟುವಾಗ ಮತ್ತು ಸುದ್ದಿ ಹೆಣೆಯುವಾಗ ಅನುಮಾನಿತ ಪ್ರಜ್ಞೆಯೊಂದು ಇರಲೇಬೇಕಾಗುತ್ತದೆ. ಈ ಮಾಹಿತಿಯೇ ಅಂತಿಮ ಅಲ್ಲ ಅನ್ನುವ ಸೂಚನೆಯೊಂದು ಸುದ್ದಿಯಲ್ಲಿ ಅಲ್ಲಲ್ಲಿ ಇಣುಕಬೇಕಾಗುತ್ತದೆ. ಯಾಕೆಂದರೆ, ಪತ್ರಿಕೆಯೆಂಬುದು ಕಾಗದಗಳ ರಾಶಿಯಲ್ಲ. ಅದು ಸಮಾಜದಲ್ಲಿ ಅಭಿಪ್ರಾಯವನ್ನು ರೂಪಿಸುತ್ತದೆ. ಸಮಾಜದ ಶಾಂತಿ-ಅಶಾಂತಿಯಲ್ಲಿ ಅದಕ್ಕೂ ಒಂದು ಪಾತ್ರವಿರುತ್ತದೆ. ಈ ಕಾರಣದಿಂದಲೇ ನ. 2ರಂದು ಪ್ರಕಟವಾದ ಪತ್ರಿಕಾ ವರದಿಗಳನ್ನು ಪರಿಶೀಲಿಸಬೇಕಾಗುತ್ತದೆ.
   1. ವಿಜಯವಾಣಿ
ಮುಖಪುಟ ಸುದ್ದಿ - ಶೀರ್ಷಿಕೆ: ವಿಷ ಕುಡಿಸಿ ಬಾಲಕಿ ಹತ್ಯೆ
“...ಪುಂಡರ ಗುಂಪೊಂದು ವಿಷ ಕುಡಿಸಿದ ಪರಿಣಾಮ ಶಾಲಾ ಬಾಲಕಿ ಮೃತಪಟ್ಟಿದ್ದು ತೀರ್ಥಹಳ್ಳಿ ಉದ್ವಿಗ್ನಗೊಂಡಿದೆ.. ಅಕ್ಟೋಬರ್ 29 ಬೆಳಿಗ್ಗೆ ಶಾಲೆಗೆ ತೆರಳಲೆಂದು ನಂದಿತಾ ಬಸ್ ನಿಲ್ದಾಣದಲ್ಲಿದ್ದಾಗ ಪರಿಚಿತನೊಬ್ಬ ಕಾರಿನಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾನೆ. ತೀರ್ಥಹಳ್ಳಿಯಲ್ಲಿ ಅದೇ ಕಾರಿಗೆ ಮತ್ತಿಬ್ಬರು ವ್ಯಕ್ತಿಗಳು ಹತ್ತಿದ್ದಾರೆ. ಬಳಿಕ ಆಕೆಯನ್ನು ಪಟ್ಟಣದ ಹೊರವಲಯದ ಆನಂದಗಿರಿ ಬೆಟ್ಟಕ್ಕೆ ಕರೆದುಕೊಂಡು ಹೋದ ಯುವಕರು ಆಕೆಗೆ ಮತ್ತು ಬರುವ ಪಾನೀಯ ಕುಡಿಸಿ ಬಾಯಿಗೆ ಬಟ್ಟೆ ತುರುಕಿ ಕಾಲ್ಕಿತ್ತಿದ್ದಾರೆ. ಸೊಪ್ಪು ತರಲೆಂದು ಬೆಟ್ಟಕ್ಕೆ ಹೋದ ಮಹಿಳೆಯರು ನಂದಿತಾಳನ್ನು ರಕ್ಷಿಸಿ ಪಾಲಕರಿಗೆ ಮಾಹಿತಿ ನೀಡಿ ಜೆಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
   2. ವಿಜಯ ಕರ್ನಾಟಕ
ಮುಖಪುಟ ಸುದ್ದಿ-ಶೀರ್ಷಿಕೆ: ಅಪಹರಣ, ಅತ್ಯಾಚಾರ - ಶಾಲಾ ಬಾಲಕಿ ಸಾವು
ತೀರ್ಥಹಳ್ಳಿ: ...ಇಲ್ಲಿನ ಸರಕಾರಿ ಶಿಕ್ಷಣ ಸಂಸ್ಥೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಳೇಬೈಲು ಗ್ರಾಮದ ಬಾಲಕಿಯ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿ ಬಲವಂತವಾಗಿ ಪ್ರಜ್ಞೆ ತಪ್ಪುವ ಔಷಧಿ ಕುಡಿಸಿದ್ದಾರೆ. ಇದರಿಂದಾಗಿ ತೀವ್ರ ಅಸ್ವಸ್ಥಗೊಂಡ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಅ. 29ರಂದು ಬೆಳಿಗ್ಗೆ 9:30ರ ಸುಮಾರಿಗೆ ಶಾಲೆಯ ಬಳಿ ಕೆಂಪು ಬಣ್ಣದ ಕಾರಿನಲ್ಲಿ ಬಂದ ಮೂವರು ಯುವಕರ ಗುಂಪು, ಬಾಲಕಿಯ ಬಾಯಿಗೆ ಬಟ್ಟೆ ತುರುಕಿ ಅಪಹರಿಸಿತ್ತು.
   3. ಉದಯವಾಣಿ
ಒಳಪುಟ ಸುದ್ದಿ - ಶೀರ್ಷಿಕೆ: ಬಾಲಕಿ ಸಾವಿಗೆ ಭುಗಿಲೆದ್ದ ಆಕ್ರೋಶ: ತೀರ್ಥಹಳ್ಳಿ ಉದ್ವಿಗ್ನ
..ತೀರ್ಥಹಳ್ಳಿ ಸವಿೂಪದ ಬಾಳೇ ಬೈಲು ನಿವಾಸಿಯೋರ್ವರ ಪುತ್ರಿ ಅಕ್ಟೋಬರ್ 29ರಂದು ಬೆಳಿಗ್ಗೆ ಬಸ್‍ಗಾಗಿ ನಿಲ್ದಾಣದಲ್ಲಿ ಕಾಯುತ್ತಿ ದ್ದಳು. ಸುಮಾರು 9;30ರ ವೇಳೆಗೆ ಕಾರೊಂದರಲ್ಲಿ ಬಂದ ನಾಲ್ವರು ಯುವಕರು ಆಕೆಯನ್ನು ಪುಸಲಾಯಿಸಿ ಶಾಲೆಗೆ ಕರೆದೊಯ್ಯುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡರು. ಬಳಿಕ ಆಕೆಗೆ ಸಾಫ್ಟ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷಧ ಬೆರೆಸಿ ಕುಡಿಸಿ ಒಂದು ಕಿ.ವಿೂ. ದೂರದ ತುಂಗಾ ಕಾಲೇಜಿನ ಕ್ಯಾಂಪಸ್ ಸವಿೂಪವಿರುವ ಆನಂದಗಿರಿ ಗುಡ್ಡಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದರು. ಬಳಿಕ ತೀವ್ರವಾಗಿ ಅಸ್ವಸ್ಥಗೊಂಡ ಆಕೆಯನ್ನು ರಸ್ತೆ ಬದಿಗೆ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
   4. ಹೊಸದಿಗಂತ
ಮುಖಪುಟ ಸುದ್ದಿ - ಶೀರ್ಷಿಕೆ: ತೀರ್ಥಹಳ್ಳಿಯಲ್ಲಿ ಪೈಶಾಚಿಕ ಕೃತ್ಯ ಬೆಳಕಿಗೆ, ಅತ್ಯಾಚಾರಕ್ಕೆ ಯತ್ನ: ಬಾಲಕಿ ದುರ್ಮರಣ
   ..ದಿನಸಿ ವ್ಯಾಪಾರಿ ಬಾಳೇಬೈಲಿನ ಕೃಷ್ಣಪ್ಪ ಎಂಬವರ ಪುತ್ರಿ ಯಾಗಿದ್ದ ನಂದಿತಾ, ತೀರ್ಥಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಅ. 29ರಂದು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ತೀರ್ಥಹಳ್ಳಿ ಪಟ್ಟಣದಲ್ಲಿ ಆಕೆಗೆ ಪರಿಚಯವಿದ್ದ ಒಂದು ಕೋಮಿಗೆ ಸೇರಿದ ನಾಲ್ವರು ಯುವಕರು ಆಕೆಯನ್ನು ಬಲಾತ್ಕಾರವಾಗಿ ಕಾರಿನಲ್ಲಿ ಹೊತ್ತೊಯ್ದಿದ್ದಾರೆ. ನಂತರ ಆನಂದಗಿರಿ ನೆಡುತೋಪಿನಲ್ಲಿ ಮತ್ತು ಬರುವ ಮಾದಕ ಪಾನೀಯ ಕುಡಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿರಬಹುದೆಂದು ಶಂಕಿಸಲಾಗಿದೆ.. ಆನಂದಗಿರಿ ಗುಡ್ಡದಲ್ಲಿ ಕಟ್ಟಿಗೆಯನ್ನು ಸಂಗ್ರಹಿಸಲು ಹೋಗಿದ್ದ ಮಹಿಳೆಯರು ಈಕೆ ನೆಡುತೋಪಿನಲ್ಲಿ ಅನಾಥವಾಗಿ ಮೂರ್ಛೆ ತಪ್ಪಿ ಬಿದ್ದಿರುವುದನ್ನು ನೋಡಿ ನಂದಿತಾಳ ಪೋಷಕರಿಗೆ ವಿಷಯ ತಿಳಿಸಿದ್ದಾರೆ.
   5. ವಾರ್ತಾಭಾರತಿ
ಒಳಪುಟ ಸುದ್ದಿ - ಶೀರ್ಷಿಕೆ: ವಿದ್ಯಾರ್ಥಿನಿ ನಿಗೂಢ ಸಾವು
   ನಂದಿತಾ ಅಕ್ಟೋಬರ್ 29ರಂದು ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗುವ ಸಮಯದಲ್ಲಿ ಬೇರೆ ಕೋಮಿನ ಯುವಕನ ಜೊತೆಗೆ ಮಾತನಾಡಿದ್ದು, ಇದನ್ನು ಸ್ಥಳೀಯರು ನೋಡಿ ಆಕೆಯ ಮನೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಮನೆಯವರ ಬೈಗುಳಕ್ಕೆ ಅಂಜಿ ಬಾಲಕಿ ಇಂದು ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಒಂದು ಮೂಲಗಳು ತಿಳಿಸಿವೆ. ಇದೇ ಸಂದರ್ಭದಲ್ಲಿ ಆಕೆಯನ್ನು ಅ. 29ರಂದು ನಾಲ್ವರು ಯುವಕರು ಅಪಹರಿಸಿದ್ದು, ಮತ್ತು ಬರುವ ಔಷಧಿ ನೀಡಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಸ್ಥಳೀಯರು ಆಗಮಿಸಿದಾಗ ಓಡಿ ಹೋಗಿದ್ದಾರೆ. ಆಕೆಯನ್ನು ಮನೆಗೆ ತಲುಪಿಸಿದ್ದಾರೆ. ನ. 1ರಂದು ಆಕೆ ಮೃತಪಟ್ಟಿದ್ದಾಳೆ ಎಂದು ಸಂಘಪರಿವಾರದ ಸಂಘಟನೆಗಳು ಆರೋಪಿಸುತ್ತಿವೆ. ಕಳೆದೆರಡು ದಿನಗಳಿಂದ ಮೌನವಾಗಿದ್ದ ಆಕೆಯ ಪೋಷಕರು ನಾಲ್ವರು ಯುವಕರ ವಿರುದ್ಧ ಅತ್ಯಾಚಾರ ಯತ್ನ ಮತ್ತು ಕೊಲೆಯತ್ನ ದೂರು ದಾಖಲಿಸಿದ್ದಾರೆ. ಒಂದು ಮೂಲದ ಪ್ರಕಾರ, ನಾಲ್ವರು ಯುವಕರು ಬಾಲಕಿಯನ್ನು ಪುಸಲಾಯಿಸಿ ಒಂದು ಕಿ.ವಿೂ. ದೂರದ ತುಂಗಾ ಕಾಲೇಜಿನ ಕ್ಯಾಂಪಸ್ ಸವಿೂಪವಿರುವ ಆನಂದಗಿರಿ ಗುಡ್ಡಕ್ಕೆ ಕರೆದೊಯ್ದು ಮತ್ತು ಬರಿಸುವ ಔಷಧಿ ನೀಡಿ ಅತ್ಯಾಚಾರ ನಡೆಸಲು ಯತ್ನಿಸಿದರೆನ್ನಲಾಗಿದ್ದು ಬಾಲಕಿಯ ಕಿರುಚಾಟದಿಂದ ಸ್ಥಳೀಯರು ಆಗಮಿಸುತ್ತಿದ್ದಂತೆ ಆರೋಪಿಗಳು ಪರಾರಿಯಾದರೆಂದು ಹೇಳಲಾಗಿದೆ. ಆದರೆ ಸತ್ಯವೇನು ಎನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ.
   6. ಪ್ರಜಾವಾಣಿ
ಮುಖಪುಟ ಸುದ್ದಿ: ಶೀರ್ಷಿಕೆ - ವಿದ್ಯಾರ್ಥಿನಿ ಸಾವು: ತೀರ್ಥಹಳ್ಳಿಯಲ್ಲಿ ಗಲಾಟೆ
  ..ಅ. 29ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ನಂದಿತಾಳನ್ನು 4 ಮಂದಿ ಯುವಕರ ಗುಂಪು ಕಾರಿನಲ್ಲಿ ಅಪಹರಿಸಿತ್ತು. ತದ ನಂತರ ಪಟ್ಟಣದ ತುಂಗಾ ಬೆಟ್ಟದಲ್ಲಿ ವಿದ್ಯಾರ್ಥಿನಿಯನ್ನು ಬಿಟ್ಟು ಹೋಗಿತ್ತು. ಹೊಟ್ಟೆ ಮತ್ತು ತಲೆನೋವು ತಾಳಲಾರದೆ ಬಳಲಿದ್ದ ಬಾಲಕಿಯನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಳು.
  7. ಕನ್ನಡ ಪ್ರಭ
ಒಳಪುಟ ಸುದ್ದಿ - ಶೀರ್ಷಿಕೆ: ಅತ್ಯಾಚಾರಕ್ಕೊಳಗಾದ ತೀರ್ಥಹಳ್ಳಿ ಬಾಲಕಿ ಸಾವು
   ..ಬಾಲಕಿಯ ತಂದೆ ಕೃಷ್ಣಪ್ಪ ಹೇಳುವಂತೆ, ಗುರುವಾರ ಶಾಲೆಯಿಂದ ಮರಳುತ್ತಿದ್ದ 8ನೇ ತರಗತಿಯ ಈ ಮುಗ್ಧ ಬಾಲಕಿಯನ್ನು ಪರಿಚಯದ ಹುಡುಗನೊಬ್ಬ ಓಮ್ನಿ ಕಾರಿಗೆ ಹತ್ತಿಸಿಕೊಂಡಿದ್ದಾನೆ. ಕಾರಿನಲ್ಲಿದ್ದ ಇತರ ಇಬ್ಬರು ಆಕೆಯ ನೀರಿನ ಬಾಟಲಿಗೆ ಯಾವುದೋ ವಸ್ತುವನ್ನು ಬೆರೆಸಿ ಆಕೆಗೆ ಕುಡಿಸಿದ್ದಾರೆ. ಪ್ರಜ್ಞೆ ತಪ್ಪಿದ ಆಕೆಯ ಜೊತೆಗೆ ಈ ಮೂರು ಮಂದಿ ಯುವಕರು ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಸುಮಾರು ಒಂದು ಗಂಟೆಯ ನಂತರ ಓಮ್ನಿಯಿಂದ ಬಾಲಕಿಯನ್ನು ರಸ್ತೆ ಪಕ್ಕಕ್ಕೆ ದೂಡಿ ಹೋಗಿದ್ದಾರೆ. ಆಕೆಯನ್ನು ನೋಡಿದ ಯಾರೋ ಆಕೆಯ ಗುರುತಿನ ಚೀಟಿಯಲ್ಲಿದ್ದ ಮೊಬೈಲ್ ನಂಬರ್‍ಗೆ ಕರೆ ಮಾಡಿ ತಿಳಿಸಿದ್ದಾರೆ. ಆಕೆಯನ್ನು ಮನೆಗೆ ಕೊಂಡುಹೋದ ಮೇಲೆ ಆಕೆಗೆ ಪ್ರಜ್ಞೆ ಬಂದಿದ್ದು ವಿಪರೀತ ವಾಂತಿ ಮಾಡಿದ್ದಾಳೆ..”
    ಒಂದೇ ಘಟನೆ, ಒಂದೇ ದಿನ ಬೇರೆ ಬೇರೆ ಪತ್ರಿಕೆಗಳನ್ನು ಚಿತ್ರಿತವಾದ ರೀತಿ ಇದು. ಯಾಕೆ ಹೀಗೆ? ಸುದ್ದಿಗಳಲ್ಲಿ ಈ ಮಟ್ಟದ ವೈರುಧ್ಯಗಳೇಕಿವೆ? ನಿಜವಾಗಿ, ಇಂಥ ಘಟನೆಗಳಿಗೆ ಯಾವಾಗಲೂ ಒಂದಕ್ಕಿಂತ ಹೆಚ್ಚು ಮುಖಗಳಿರುತ್ತವೆ. ವಾರ್ತಾಭಾರತಿಯನ್ನು ಬಿಟ್ಟು ಉಳಿದ ಯಾವ ಪತ್ರಿಕೆಗಳೂ ಆ ಕುರಿತಂತೆ ಆಸಕ್ತಿಯನ್ನೇ ತೋರಿಲ್ಲ. ಕನಿಷ್ಠ ಪ್ರಜಾವಾಣಿ ತೋರಿದ ಸಂಯಮವನ್ನೂ ಅವು ಪ್ರದರ್ಶಿಸಿಲ್ಲ. ಅದರ ಬದಲು ಅವೆಲ್ಲ ಅತ್ಯಾಚಾರವನ್ನು ಸಾಬೀತುಪಡಿಸಲು ಜಿದ್ದಿಗೆ ಬಿದ್ದಂತೆ ವರ್ತಿಸಿದುವು. ಮಾನ, ಘನತೆ, ಗೌರವಗಳೆಲ್ಲ ಮೃತದೇಹಕ್ಕೂ ಇರುತ್ತದೆ ಮತ್ತು ಅದನ್ನು ಗೌರವಿಸ ಬೇಕಾಗಿದೆ ಎಂಬುದನ್ನು ಮರೆತಂತೆ ಬರೆದುವು. ಅಂದಹಾಗೆ,  ಬಾಲಕಿ ನಂದಿತಾ ಪ್ರಕರಣಕ್ಕೆ ಎರಡು ವಾರಗಳು ಸಂದ ಈ ಸಂದರ್ಭದಲ್ಲಿ ಘಟನೆಯನ್ನು ಸೂಕ್ಷ್ಮವಾಗಿ ಅವಲೋಕಿಸುವಾಗ ಏನನಿಸುತ್ತದೆ? ಮಗಳ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಸ್ವತಃ ತಂದೆ ಕೃಷ್ಣಪ್ಪರೇ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದಾರೆ. ಅವರ ಮಾತು - ವರ್ತನೆಗಳಲ್ಲಿ ಅಸಹಜತೆ ವ್ಯಕ್ತವಾಗುತ್ತಿದೆ. ಘಟನೆಗೆ ಬೇರೆಯದೇ ಆದ ಆಯಾಮಗಳಿರಬಹುದು ಎಂದು ಶಂಕಿಸುವುದಕ್ಕೆ ಪೂರಕವಾದ ಅಂಶಗಳು ಗೋಚರಿಸುತ್ತಿವೆ. ಆದರೆ ನವಂಬರ್ 2ರಿಂದ ಬಹುತೇಕ ಒಂದು ವಾರಗಳ ಕಾಲ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ಇಂಥದ್ದೊಂದು ಸುಳಿವನ್ನೇ ಕೊಡದಷ್ಟು ಏಕಮುಖವಾಗಿದ್ದುವು. ಘಟನೆಗೆ ಇನ್ನೊಂದು ಮುಖವಿರಬಹುದೇ ಎಂಬ ಶಂಕೆಗೆ ಆಸ್ಪದವೇ ಇಲ್ಲದಂತೆ ವರ್ತಿಸಿದುವು. ಈ ಬೇಜವಾಬ್ದಾರಿ ವರ್ತನೆಯೇ ತೀರ್ಥಹಳ್ಳಿಯನ್ನು ಉರಿಸಿದ್ದು ಅಥವಾ ಉರಿಸಲು ಬಯಸಿದವರಿಗೆ ನೆರವಾದದ್ದು. ಅಷ್ಟಕ್ಕೂ,
   ರೋಚಕತೆ, ಸುದ್ದಿವೈಭವ, ಊಹೆ, ಅತಿರೇಕಗಳ ಹಂಗಿಲ್ಲದೇ ಒಂದು ಸುದ್ದಿಯನ್ನು ಕೇವಲ ಸುದ್ದಿಯಾಗಿಯಷ್ಟೇ ಓದುಗನಿಗೆ ಕಟ್ಟಿಕೊಡಬೇಕಾದುದು ಪತ್ರಿಕಾ ಧರ್ಮ ಎಂದಾದರೆ ಆ ಧರ್ಮ ಇವತ್ತು ಎಲ್ಲಿದೆ, ಎಷ್ಟರ ಮಟ್ಟಿಗೆ ಜೀವಂತವಾಗಿದೆ ಮತ್ತು ಯಾರೆಲ್ಲ ಅದನ್ನು ಅನುಸರಿಸುತ್ತಿದ್ದಾರೆ?

1 comment:

  1. ಕುಕ್ಕಿಲ ಅವರಿಗೆ--ಸಾವು, ಅತ್ಯಾಚಾರ, ಗಲಭೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಒಂದೊಂದು ಪತ್ರಿಕೆಯಲ್ಲಿ ಒಂದೊಂದು ರೀತಿಯ ವರದಿ ಬರುವುದು ಸಹಜ. ಏಕೆಂದರೆ ಅದು ಯಾರೋ ಮಂತ್ರಿ ಅಥವಾ ಮುಖ್ಯಮಂತ್ರಿ ಅಥವಾ ಸಿನಿಮಾ ನಟ ಕರೆದ ಪತ್ರಿಕಾ ಗೋಷ್ಟಿಯ (press meet) ವರದಿಯಲ್ಲ. ಎಲ್ಲಾ ಪತ್ರಿಕೆಗಳ ವರದಿಗಾರರು ಒಂದೇ ಸಲ ಆ ಘಟನೆ ನಡೆದ ಸ್ಥಳಕ್ಕೆ ಹೋಗಿ ಏನಾಯಿತೆಂದು ತಿಳಿದು ವರದಿ ಮಾಡುವುದೂ ಇಲ್ಲ. ಪತ್ರಿಕೆಗಳ ಜವಾಬ್ದಾರಿ ಒಂದು ಘಟನೆಯನ್ನು ವರದಿ ಮಾಡುವುದಷ್ಟೇ. ಅವು ಒಂದೇ ರೀತಿ ಇರಬೇಕೆಂದು ಹೇಳುವುದೂ ಸರಿಯಲ್ಲ. ಆದರೆ ಆ ವರದಿಯ ನಂತರ ಸರ್ಕಾರ , ಪೊಲೀಸರು, ಮತ್ತು ಇತರೆ ಸಂಬಂಧಪಟ್ಟ ಸರ್ಕಾರದ ಅಂಗಸಂಸ್ಥೆಗಳು ಯಾವ ರೀತಿ ತನಿಖೆ ಮಾಡುತ್ತವೆ ಎಂಬುದು ಮುಖ್ಯ. ಮೃತ ದೇಹಕ್ಕೂ ಮಾನ ಮರ್ಯಾದೆ ಇರುತ್ತದೆ ಎಂಬ ತತ್ವದ ಮಾತಾಡುವುದು ಸುಲಭ. ಆದರೆ ನಂದಿತಾಳಿಗೆ ತೀರ್ಥಹಳ್ಳಿ, ಶಿವಮೊಗ್ಗದ ಜಿಲ್ಲಾ ಆಸ್ಪತ್ರೆ (ಮೆಗ್ಗಾನ್) ಯಲ್ಲಿ ಸರಿಯಾದ ಚಿಕಿತ್ಸೆ ನೀಡದೆ ( ಸೌಲಭ್ಯ ಇದ್ದರೂ ಯಾವುದೋ ಕಾಣದ ಕೈಗಳ ಪ್ರಭಾವದಿಂದ ನೀಡಲಿಲ್ಲವೋ ಏನೋ? ) ಸುಮಾರು ಇನ್ನೂರೈವತ್ತು ಕಿ ಮೀ ದೂರದ ಮಣಿಪಾಲ್ ಆಸ್ಪತ್ರೆ ತನಕ ಆತಂಕದಿಂದ ತನ್ನ ಮಗಳನ್ನು ಕರೆದೊಯ್ಯುವಂತೆ ಮಾಡಿದ್ದು ಯಾರು? ಇವೆಲ್ಲಾ ನಡೆದು ಮಗಳು ಸತ್ತು ಹತ್ತು ದಿನಗಳಾದರೂ ಏನೂ ಪ್ರಯೋಜನವಾಗದೆ ಇದ್ದಾಗ ಎರಡು ಮೂರು ದಿನಗಳ ಹಿಂದೆ ನಂದಿತಾಳ ತಂದೆ ಖುದ್ದಾಗಿ ಮುಖ್ಯಮಂತ್ರಿಯವರಿಗೆ ಮನವಿ ಕೊಡಲು ಬೆಂಗಳೂರಿಗೆ ಬರುವಂತೆ ಮಾಡಿದ್ದು ಯಾರು? ಯಾವ ಕಳ್ಳ/ಅತ್ಯಾಚಾರಿ/ಇನ್ನಿತರ ಪಾತಕ ಎಸಗುವವನು ಪೊಲೀಸರಿಗೆ ಹೇಳಿದ ನಂತರ/ಸಾಕ್ಷ್ಯಗಳನ್ನು ಇಟ್ಟು ದುಷ್ಕ್ರ್ಯುತ್ಯ ಎಸಗುತ್ತಾನೆಯೇ? ಆದರೆ ಪೋಲಿಸಿನವರು, ಗೃಹ ಮಂತ್ರಿಯವರು ಹೇಳುತ್ತಿರುವುದೇನು? ಆರೋಪಿ ಯಾರೆಂದು ತಿಳಿದಿಲ್ಲ ಎಂದು!! ಅನುಮಾನ ಬಂದವರನ್ನು arrest ಮಾಡದೆ ವಿಚಾರಣೆಗೆ ಕರೆಸಬಹುದಲ್ಲ? ಸಾಕ್ಷ್ಯಗಳನ್ನು ಕಲೆ ಹಾಕಬಹುದಲ್ಲ? ಈ ಘಟನೆಗೆ ಸಂಬಂಧಪಟ್ಟಂತೆ ತಾವು ಟಿ ವಿ ೯ ಅವರು ನಡೆಸಿಕೊಟ್ಟ ಕಾರ್ಯಕ್ರಮ ನೋಡಿದಿರೋ ಇಲ್ಲವೋ ತಿಳಿಯದು. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕದ ಖ್ಯಾತ ನಿವೃತ್ತ ಪೋಲಿಸ್ ಅಧಿಕಾರಿಗಳಾದ ಶಂಕರ ಬಿದರಿ, ಅಶೋಕ್ ಕುಮಾರ್,ಮತ್ತು ನ್ಯಾಯಾಧೀಶರು, ವೈದ್ಯರು, ವಕೀಲರು ಮತ್ತಿತರರು ಪೋಲೀಸರ, ಸರ್ಕಾರದ ನಿಷ್ಕ್ರಿಯತೆಯನ್ನು ಅನುಮಾನಿಸಿದರೇ ಹೊರತು ನಂದಿತಾಳ ತಂದೆಯ ನಡೆಗಳನ್ನು ಅಲ್ಲ. ------- ಎಂ ಎ ಶ್ರೀರಂಗ ಬೆಂಗಳೂರು

    ReplyDelete