Monday, October 27, 2014

ನುಡಿಸಿರಿಯನ್ನು ಒಪ್ಪಿಕೊಳ್ಳುವ ಸಿದ್ದಲಿಂಗಯ್ಯ ಮತ್ತು ನೋಬೆಲ್ ಅನ್ನು ತಿರಸ್ಕರಿಸುವ ಸರ್ತೆ

      “ಅಲ್ಜೀರಿಯಾದ ವಿರುದ್ಧ ಫ್ರಾನ್ಸ್ ನಡೆಸುತ್ತಿದ್ದ ಯುದ್ಧದ ಸಂದರ್ಭದಲ್ಲಿ ನಾವು 121 ಹೇಳಿಕೆಗೆ (Declaration of the121) ಸಹಿ ಹಾಕಿದೆವಲ್ಲ, ಆಗ ಈ ನೋಬೆಲ್ ಪಾರಿತೋಷಕವನ್ನು  ನನಗೆ ನೀಡಿರುತ್ತಿದ್ದರೆ ನಾನು ಸ್ವೀಕರಿಸಬಹುದಿತ್ತು. ಯಾಕೆಂದರೆ ಅದು ನನ್ನ ಪಾಲಿಗೆ ಮಾತ್ರವಲ್ಲ, ನಾವು ಯಾರ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದೆವೋ ಅವರೆಲ್ಲರ ಪಾಲಿಗೆ ಸಲ್ಲುವ ಗವ್ ರವ ವಾಗುತ್ತಿತ್ತು. ಆದರೆ ಆ ಸಂದರ್ಭದಲ್ಲಿ ನನ್ನನ್ನು ಪರಿಗಣಿಸದೆ ಯುದ್ಧ ಮುಗಿದ ಬಳಿಕ ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅಲ್ಲದೆ, ಪ್ರಶಸ್ತಿಯು ಪಶ್ಚಿಮದ ಸಾಹಿತಿಗಳಿಗೆ ಇಲ್ಲವೇ ಪೂರ್ವದ ಬಂಡಾಯಗಾರರಿಗೆ ಎಂಬ ರೀತಿಯಲ್ಲಿ ಯಾಕೆ ವಿತರಣೆಯಾಗುತ್ತಿದೆ ಎಂಬುದೂ ನನಗೆ ಅರ್ಥವಾಗುತ್ತಿಲ್ಲ. ನಾನು ಈ ಪ್ರಶಸ್ತಿಯನ್ನು ತಿರಸ್ಕರಿಸುತ್ತಿದ್ದೇನೆ..”
   ‘ದಿ ವಾಲ್', ‘ದಿ ಫೈಲ್ಸ್', ‘ನೋ ಎಕ್ಸಿಸ್ಟ್', ‘ದಿ ವಿಕ್ಟರ್ಸ್', ‘ಡರ್ಟಿ ಹ್ಯಾಂಡ್ಸ್', ‘ಟ್ರಬಲ್ಡ್ ಸ್ಲೀಪ್', ‘ದಿ ಡೆವಿಲ್ ಆ್ಯಂಡ್ ಗುಡ್ ಲಾರ್ಡ್', ‘ದಿ ಟ್ರೋಜನ್ ವುಮೆನ್', ‘ದಿ ಕಂಡೆಮ್‍ನ್ಡ್ ಆಫ್ ಅಲ್ ಟೋನಾ..' ಮುಂತಾದ ಮೇರು ಕೃತಿಗಳನ್ನು ಬರೆದ ಫ್ರಾನ್ಸ್ ನ ಖ್ಯಾತ ಸಾಹಿತಿ ಜೀನ್ ಪಾಲ್ ಸರ್ತೆ 1964ರಲ್ಲಿ ತನಗೆ ಸಿಕ್ಕ ನೋಬೆಲ್ ಸಾಹಿತ್ಯ ಪ್ರಶಸ್ತಿಯನ್ನು ತಿರಸ್ಕರಿಸುತ್ತಾ ಹೇಳಿದ ಮಾತುಗಳಿವು. ದಸರಾವನ್ನು ಉದ್ಘಾಟಿಸಿದ ಗಿರೀಶ್ ಕಾರ್ನಾಡ್‍ರ ಕುರಿತಂತೆ ಅಥವಾ ವಿಹಿಂಪ ಸಮ್ಮೇಳನದ ಗೌರವಾಧ್ಯಕ್ಷರಾಗಿದ್ದ ಮೋಹನ್ ಆಳ್ವರ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯನ್ನು ಒಪ್ಪಿಕೊಂಡ ಕವಿ ಸಿದ್ಧಲಿಂಗಯ್ಯನವರ ಕುರಿತಂತೆ ಉಂಟಾದ ಪರ-ವಿರುದ್ಧ ಅಭಿಪ್ರಾಯಗಳಂತೆ ಸರ್ತೆಯವರ ನಿರ್ಧಾರವೂ ಅಂದು ಸಾಹಿತ್ಯ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿತ್ತು.  ತನ್ನ ಯುದ್ಧ ವಿರೋಧಿ ನಿಲುವನ್ನು ಪ್ರಶಸ್ತಿಯ ಆಯ್ಕೆಗೆ ಮಾನದಂಡವಾಗಿ ಬಳಸಿಕೊಳ್ಳಬೇಕಿತ್ತೆಂದು ಸರ್ತೆ ಒತ್ತಡ ಹಾಕುವುದು ಎಷ್ಟು ಸರಿ ಎಂಬ ವಾದವನ್ನು ಅಂದು ಹಲವರು ಮುಂದಿಟ್ಟಿದ್ದರು. ಪ್ರಶಸ್ತಿಯನ್ನು ಯಾವಾಗ, ಯಾವ ಸಂದರ್ಭದಲ್ಲಿ ನೀಡಬೇಕೆಂದು ಸ್ವತಃ ಸಾಹಿತಿಯೇ ತೀರ್ಮಾನಿಸುವುದು ಅಸಂಬದ್ಧ ಎಂದೂ ಹೇಳಿದವರಿದ್ದರು. ಅದೇ ವೇಳೆ, ಪ್ರಶಸ್ತಿಯನ್ನು ಸ್ವೀಕರಿಸುತ್ತಲೇ ಫ್ರಾನ್ಸಿನ ಅತಿಕ್ರಮಣ ನೀತಿಯನ್ನು ಖಂಡಿಸುವುದಕ್ಕಿಂತ ಪ್ರಶಸ್ತಿಯನ್ನು ತಿರಸ್ಕರಿಸಿ ಪ್ರತಿಭಟಿಸುವುದೇ ಹೆಚ್ಚು ಪ್ರಭಾವಶಾಲಿ ಎಂದು ಸಮರ್ಥಿಸಿದವರೂ ಇದ್ದರು. ಕಳೆದ ವಾರ ಲಂಡನ್ನಿನ ಗಾರ್ಡಿಯನ್ ಪತ್ರಿಕೆಯು, ‘ಜೀನ್ ಪಾಲ್ ಸರ್ತೆ: ಹಿಂದೆಂಗಿಂತಲೂ ಈಗ ಹೆಚ್ಚು ಪ್ರಸ್ತುತ' (Jean Paul Sartre: More relevent now than ever) ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸಿದಾಗಲೂ ಓದುಗ ವಲಯದಿಂದ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾದುವು. ಪ್ರಶಸ್ತಿಯನ್ನು ತಿರಸ್ಕರಿಸುವುದಕ್ಕಿಂತ ಸ್ವೀಕರಿಸಿ ಪ್ರಶಸ್ತಿ ಮೊತ್ತವಾದ 21 ಸಾವಿರ ಪೌಂಡ್ ಅನ್ನು ಲಂಡನ್ನಿನ ವರ್ಣಭೇದ ಸಮಿತಿಗೆ ನೀಡಿರುತ್ತಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು ಎಂದೂ ಹೇಳಿದವರಿದ್ದಾರೆ. ಅದೇ ವೇಳೆ, ಸರ್ತೆಯವರ ನಿಲುವನ್ನು ಸೈದ್ಧಾಂತಿಕ ಬದ್ಧತೆ ಎಂದು ಕರೆದು ಬೆಂಬಲಿಸಿದವರಿದ್ದಾರೆ. ನೋಬೆಲ್ ಪ್ರಶಸ್ತಿಯನ್ನು ಯುದ್ಧ, ಅತಿಕ್ರಮಣ ಮುಂತಾದುವುಗಳೊಂದಿಗೆ ಜೋಡಿಸಿ ಸಂವೇದನಾಶೀಲ ಗೊಳಿಸಿದುದಕ್ಕಾಗಿ ಅವರನ್ನು ಮೆಚ್ಚಿಕೊಂಡವರಿದ್ದಾರೆ. ನಿಜವಾಗಿ, ಸರ್ತೆಯವರ ನಿರ್ಧಾರಕ್ಕೆ ಬಲವಾದ ಕಾರಣಗಳಿದ್ದುವು.
   1830ರಲ್ಲಿ ಅಲ್ಜೀರಿಯವನ್ನು ಅತಿಕ್ರಮಿಸಿ ವಶಪಡಿಸಿಕೊಂಡ ಫ್ರಾನ್ಸ್, ತನ್ನ ಸೇನಾ ಬಲದ ಮೂಲಕ ಸ್ಥಳೀಯತೆಯ ಮೇಲೆ ದಾಳಿ ನಡೆಸುತ್ತಲೇ ಬಂದಿತು. ಮಾರ್ಶಲ್ ಬುಗೀಡ್‍ರ ನೇತೃತ್ವದಲ್ಲಿ ಹತ್ಯಾಕಾಂಡ, ಅತ್ಯಾಚಾರಗಳೂ ನಡೆದುವು. 1834ರಲ್ಲಿ ಅಲ್ಜೀರಿಯಾವನ್ನು ಫ್ರಾನ್ಸ್ ನ ಮಿಲಿಟರಿ ಕಾಲನಿಯಾಗಿ ಘೋಷಿಸಲಾಯಿತು. 1840ರಲ್ಲಿ ಅಲೆಜೈರ್, ಓರನ್ ಮತ್ತು ಕಾನ್‍ಸ್ಟಾಂಟಿಕ್ ಎಂಬ ಹೆಸರಲ್ಲಿ ಅಲ್ಜೀರಿಯಾವನ್ನು 3 ಭಾಗಗಳಾಗಿ ವಿಭಜಿಸಲಾಯಿತು. ಹಾಗೆಯೇ ಕಾಲನಿಯಾಗಿದ್ದ ಅಲ್ಜೀರಿಯಾವನ್ನು ಫ್ರಾನ್ಸ್ ನ ಭಾಗವೆಂದೂ ಸಾರಲಾಯಿತು. ಹೀಗೆ ಫ್ರಾನ್ಸ್ ನ ಭಾಗವಾದ ಅಲ್ಜೀರಿಯಾದಲ್ಲಿ ಸ್ಪೈನ್, ಇಟಾಲಿಯನ್ ಮುಂತಾದ ಯುರೋಪಿಯನ್ ರಾಷ್ಟ್ರಗಳ ಮಂದಿ ಬಂದು ನೆಲೆಸಿದರು. ಧಾರಾಳ ಸಂಖ್ಯೆಯಲ್ಲಿ ಫ್ರೆಂಚರೂ ಈ ಹೊಸ ನಾಡಲ್ಲಿ ಬೀಡು ಕಟ್ಟತೊಡಗಿದರು. ಹೀಗಿದ್ದೂ ಪ್ರಥಮ ಜಾಗತಿಕ ಯುದ್ಧದ ವೇಳೆ ಅಲ್ಜೀರಿಯನ್ನರು ಫ್ರಾನ್ಸ್ ನ ಜೊತೆಗೂಡಿ ಹೋರಾಡಿದರು. ಒಂದು ರೀತಿಯಲ್ಲಿ, ಅಲ್ಜೀರಿಯಾದ ಮೇಲೆ ತನ್ನ ದೇಶ ನಡೆಸುತ್ತಿರುವ ದಾಳಿ ಮತ್ತು ಆ ಮಂದಿ ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡುತ್ತಾ ಬೆಳೆದವರೇ ಸರ್ತೆ. 1940ರಲ್ಲಿ ಜರ್ಮನಿಯ ಹಿಟ್ಲರ್‍ನ ಸೇನೆಯು ಫ್ರಾನ್ಸ್ ನ ಮೇಲೆ ದಾಳಿ ಮಾಡಿದಾಗ ಅವರಿಗೆ ಅತಿಕ್ರಮಣದ ನೇರ ಪರಿಚಯವಾಗಿತ್ತು. ಅವರನ್ನು ಜರ್ಮನ್ ಸೇನೆ ಬಂಧಿಸಿತು. 9 ತಿಂಗಳ ಕಾಲ ಜೈಲಲ್ಲಿದ್ದ ಅವರು 1941ರಲ್ಲಿ ಬಿಡುಗಡೆಗೊಳ್ಳುವಾಗ ಅವರೊಳಗೆ ಸಾಕಷ್ಟು ಬದಲಾವಣೆಗಳಾಗಿದ್ದುವು. ಆ ಬಳಿಕ ಅವರು ಓರ್ವ ಫ್ರಾನ್ಸಿನ ಪ್ರಜೆಯಾಗಿಯಷ್ಟೇ ಆಲೋಚಿಸಲಿಲ್ಲ. ಅಲ್ಜೀರಿಯನ್ನರೂ ಅವರದಾದರು. ಜಗತ್ತಿನ ಸಕಲ ಅತಿಕ್ರಮಣವನ್ನೂ ಅವರು ದ್ವೇಷಿಸಿದರು. ಆದ್ದರಿಂದಲೇ, 1972ರಲ್ಲಿ ಮ್ಯೂನಿಚ್ ಒಲಿಂಪಿಕ್ಸ್ ನಲ್ಲಿ 11 ಮಂದಿ ಇಸ್ರೇಲಿ ಅಥ್ಲೀಟ್‍ಗಳನ್ನು ಫೆಲೆಸ್ತೀನಿನ ಮಂದಿ ಕೊಂದು ಹಾಕಿದುದನ್ನು ಅವರು ಬೆಂಬಲಿಸಿದ್ದು. ಜಾಗತಿಕವಾಗಿಯೇ ಆ ಘಟನೆಯ ವಿರುದ್ಧ ಖಂಡನೆಗಳು ವ್ಯಕ್ತವಾಗುತ್ತಿದ್ದಾಗ ಅವರು ಆ ಹತ್ಯೆಯ ಪರ ನಿಂತದ್ದು. ಅತಿಕ್ರಮಣ ಮತ್ತು ದೌರ್ಜನ್ಯಕ್ಕೀಡಾದ ಒಂದು ಸಂತ್ರಸ್ತ ಸಮೂಹಕ್ಕೆ ಪ್ರತಿರೋಧದ ಹಕ್ಕಿದೆ ಎಂದವರು ಆ ಸಂದರ್ಭದಲ್ಲಿ ವಾದಿಸಿದರು.
   “ಭಯೋತ್ಪಾದನೆಯು ಭಯಾನಕವೇ ಆಗಿರಬಹುದು. ಆದರೆ ಫೆಲೆಸ್ತೀನಿಯರಿಗೆ ಬೇರೆ ದಾರಿಯಿರಲಿಲ್ಲ. ಆಯುಧ ಮತ್ತು ಬೆಂಬಲದ ಕೊರತೆಯನ್ನು ಎದುರಿಸುತ್ತಿರುವ ಅವರು ತಮ್ಮ ಅತಿಕ್ರಮಣ ವಿರೋಧಿ ನಿಲುವನ್ನು ನಾವೆಣಿಸಿದ ರೀತಿಯಲ್ಲೇ ತೋರಬೇಕೆಂದು ಬಯಸುವುದೇ ತಪ್ಪು. ಅಲ್ಲದೇ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಇಸ್ರೇಲಿನ ಆ ಅಥ್ಲೀಟ್‍ಗಳು ಸೈನಿಕರಾಗಿದ್ದರೆಂಬುದನ್ನೂ ನಾವು ಪರಿಗಣಿಸಬೇಕು..” ಎಂದು ಸಮರ್ಥಿಸಿಕೊಂಡರು. ಅಂದಿನ ಸಾಹಿತಿಗಳಾದ ಆ್ಯಂಡರ್ಸನ್ ಮತ್ತು ವಾಲ್‍ಝೇರ್‍ರು ಇದನ್ನು ಹಿಪಾಕ್ರಸಿ ಎಂದು ಖಂಡಿಸಿದ್ದರು. ಫ್ರಾನ್ಸಿನಲ್ಲಿ ಅವರ ನಿಲುವಿನ ವಿರುದ್ಧ ತೀವ್ರ ಖಂಡನೆ ವ್ಯಕ್ತವಾದರೂ ಅವರು ತನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳಲಿಲ್ಲ. ಅವರಿಗೆ ಕಮ್ಯುನಿಸಂನ ಮೇಲೆ ಪ್ರೀತಿ ಇತ್ತಾದರೂ ಫ್ರಾನ್ಸಿನಲ್ಲಿರುವ ಕಮ್ಯುನಿಸ್ಟ್ ಪಾರ್ಟಿಯನ್ನು ಸೇರಿಕೊಳ್ಳಲಿಲ್ಲ. ಹಾಗೆಯೇ ಸೋವಿಯತ್ ಯೂನಿಯನ್‍ನಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ವ್ಯವಸ್ಥೆಯನ್ನು ತೀವ್ರವಾಗಿ ವಿಮರ್ಶೆಗೊಡ್ಡಿದರು. ಅದು ಹಂಗೇರಿಯ ಮೇಲೆ ನಡೆಸಿದ ದಾಳಿಯನ್ನು ಓರ್ವ ಕಮ್ಯುನಿಸ್ಟ್ ಪ್ರೇಮಿಯಾಗಿದ್ದುಕೊಂಡೇ ಖಂಡಿಸಿದರು. ಅಮೇರಿಕವು ವಿಯೆಟ್ನಾಂನ ಮೇಲೆ ದಾಳಿ ಮಾಡಿದುದನ್ನು ಖಂಡಿಸುತ್ತಲೇ ರಶ್ಯದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗೆ ಪ್ರಬಲ ವಿರೋಧವನ್ನು ವ್ಯಕ್ತಪಡಿಸಿದರು. ನಿಜವಾಗಿ, ಅವರು ಈ ಜಗತ್ತಿನ ಸಕಲ ಕ್ರೌರ್ಯಗಳಿಗೂ ವಿರೋಧ ಪಕ್ಷ ವಾಗಿದ್ದರು. ಸಂತ್ರಸ್ತರ ಕುರಿತಂತೆ ಅವರಲ್ಲಿ ಅಪಾರ ಕಕ್ಕುಲಾತಿಯಿತ್ತು. ಇಲ್ಲದಿದ್ದರೆ, ಅಲ್ಜೀರಿಯಾದ ಸ್ವಾತಂತ್ರ್ಯಕ್ಕಾಗಿ ಗೆರಿಲ್ಲಾ ದಾಳಿ ನಡೆಸುತ್ತಿದ್ದ ನ್ಯಾಶನಲ್ ಲಿಬರೇಶನ್ ಫ್ರಂಟ್ (FLN) ಅನ್ನು ಅವರು ಬೆಂಬಲಿಸುತ್ತಿರಲಿಲ್ಲ.
   1954ರಲ್ಲಿ ಅಲ್ಜೀರಿಯಾದಲ್ಲಿ ಸ್ವಾತಂತ್ರ್ಯ ಹೋರಾಟ ಆರಂಭವಾಯಿತು. ಅದಕ್ಕಾಗಿಯೇ FLN ಸಂಘಟನೆಯನ್ನು ಹುಟ್ಟು ಹಾಕಲಾಯಿತು. 1956ರಲ್ಲಿ 4 ಲಕ್ಷ  ಫ್ರೆಂಚ್ ಯೋಧರು ಅಲ್ಜೀರಿಯಾದಲ್ಲಿದ್ದರು. FLNನ್ನು ನಿರ್ಮೂಲನಗೊಳಿಸುವುದಕ್ಕಾಗಿ ಫ್ರೆಂಚ್ ಸರಕಾರವು ಭೂಸೇನೆ ಮತ್ತು ವಾಯುಸೇನೆಯನ್ನು ಬಳಸಿತು. ಮಾರಕ ನೆಪಾಮ್ ಎಂಬ ರಾಸಾಯನಿಕವನ್ನು ಪ್ರಯೋಗಿಸಿತು. ಆದರೆ ಗೆರಿಲ್ಲಾ ಹೋರಾಟವನ್ನು ಸದೆಬಡಿಯಲು ಅದಕ್ಕೆ ಸಾಧ್ಯವಾಗಲಿಲ್ಲ. ಹೀಗೆ 1961ರಲ್ಲಿ ಅಧ್ಯಕ್ಷ  ಚಾರ್ಲ್ಸ್  ಡಿ ಗಲ್ಲೆಯವರು ಅಲ್ಜೀರಿಯಾಕ್ಕೆ ಸ್ವಾತಂತ್ರ್ಯ ನೀಡಲು ತೀರ್ಮಾನಿಸಿದರು. ಆದರೆ ಇದಕ್ಕೆ ಸೇನೆಯಿಂದ ತೀವ್ರ ಪ್ರತಿರೋಧ ಎದುರಾಯಿತು. ಅಧ್ಯಕ್ಷ  ಡಿ ಗಲ್ಲೆಯವರನ್ನು ಹತ್ಯೆ ಮಾಡುವ ಯತ್ನವೂ ನಡೆಯಿತು. ಅಲ್ಜೀರಿಯನ್ ಸ್ವಾತಂತ್ರ್ಯವನ್ನು ವಿರೋಧಿಸುವ ಯೋಧರು ಒಟ್ಟು ಸೇರಿ OAS  ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅದು ಅಲ್ಜೀರಿಯಾದಲ್ಲಿ ಬಾಂಬು, ಹತ್ಯೆಗಳಲ್ಲಿ ತೊಡಗಿಸಿಕೊಂಡಿತು. ಅಲ್ಜೀರಿಯಾದ ಪರ ಇರುವ  ಫ್ರೆಂಚ್ ಪ್ರಜೆಗಳನ್ನೂ ದಾಳಿಗೆ ಗುರಿಪಡಿಸಲಾಯಿತು. ಸರ್ತೆಯವರು ಎರಡು ಬಾರಿ ಹತ್ಯಾ ಯತ್ನಗಳಿಂದ ಪಾರಾದರು. ಕೊನೆಗೆ 1962ರಲ್ಲಿ ಅಲ್ಜೀರಿಯಾವು ಸ್ವತಂತ್ರಗೊಂಡಿತು. ಆ ಸಂದರ್ಭವನ್ನು ಅತ್ಯಂತ ಖುಷಿಯಿಂದ ಕಣ್ತುಂಬಿಕೊಂಡವರಲ್ಲಿ ಸರ್ತೆ ಕೂಡ ಒಬ್ಬರು. ಅಷ್ಟಕ್ಕೂ,
   ಸ್ವೀಡನ್ನಿನ ಪ್ರಮುಖ 15 ಮಂದಿ ಸಾಹಿತಿಗಳು ಒಟ್ಟು ಸೇರಿ ಆಯ್ಕೆ ಮಾಡುವ ನೋಬೆಲ್ ಪ್ರಶಸ್ತಿಯ ಬಗ್ಗೆ ಈ ಹಿಂದಿನಿಂದಲೂ ಅಪಸ್ವರಗಳು ಕೇಳಿ ಬರುತ್ತಲೇ ಇವೆ. ಒಂದು ಸಾಹಿತ್ಯವನ್ನು ಆಯ್ಕೆ ಮಾಡುವುದಕ್ಕೆ ಇರುವ ಮಾನದಂಡಗಳು, ಅಲ್ಲಿ ನಡೆಯುವ ಚರ್ಚೆಗಳ ಸ್ವರೂಪ, ಕೊಡುವ ಆದ್ಯತೆ.. ಯಾವುದನ್ನೂ ಸ್ವೀಡನ್ ಹೊರ ಜಗತ್ತಿಗೆ ಯಾವತ್ತೂ ಬಿಟ್ಟು ಕೊಡುವುದಿಲ್ಲ. ಪ್ರಶಸ್ತಿ ಸಮಿತಿಯ ಮೇಲೆ ಒತ್ತಡಗಳಿರುತ್ತವೆಯೇ ಎಂಬುದರಿಂದ ಹಿಡಿದು ಜಗತ್ತಿನ ಎಲ್ಲ ಭಾಷೆಗಳ ಎಲ್ಲ ಕೃತಿಗಳಿಗೂ ಸಮಾನ ಪ್ರಾಶಸ್ತ್ಯ ಲಭ್ಯವಾಗುತ್ತಿವೆಯೇ ಎಂಬಲ್ಲಿವರೆಗೆ ಎಲ್ಲವೂ ರಹಸ್ಯವಾಗಿಯೇ ಇರುತ್ತವೆ. ಈವರೆಗೆ ಒಟ್ಟು 111 ನೋಬೆಲ್ ಪ್ರಶಸ್ತಿ ಗಳನ್ನು ವಿತರಿಸಲಾಗಿದೆ. ಅದರಲ್ಲಿ ಅನೇಕ ಪ್ರಶಸ್ತಿಗಳು ಈಗಲೂ ವಿವಾದಾಸ್ಪದವಾಗಿಯೇ ಉಳಿದಿವೆ. 2004ರಲ್ಲಿ ಪ್ರಶಸ್ತಿ ಗೆದ್ದ ಆಸ್ಟ್ರೇಲಿಯಾದ ವಿಲ್ಫ್ರೆಡ್ ಎಲಿನೋಕ್, 1997ರಲ್ಲಿ ಗೆದ್ದ ಇಟಲಿಯ ಕವಿ ದಾರಿಯ ಫೋ, 1989ರಲ್ಲಿ ಪ್ರಶಸ್ತಿ ಗೆದ್ದ ಸ್ಪಾನಿಶ್ ಸಾಹಿತಿ ಕ್ಯಾಮಿನೊ ಜೋಸ್ ಸೆಲ್ಲಾ.. ಇವರೆಲ್ಲರ ಹಿಂದೆ ಈಗಲೂ ಅಚ್ಚರಿ ಇದೆ. 6 ವರ್ಷಗಳ ಹಿಂದೆ ಜೀನ್ ಮಾರಿಯಾ ಗುಸ್ತಾವೊ ಲಿ ಕ್ಲೇಸಿಯೋ ಎಂಬ ಅಷ್ಟೇನೂ ಪರಿಚಿತವಲ್ಲದ ಫ್ರಾನ್ಸಿನ ಸಾಹಿತಿಗೆ ಈ ಪ್ರಶಸ್ತಿ ಸಿಕ್ಕಾಗ ಹಲವರು ತಗಾದೆ ಎತ್ತಿ ದ್ದರು. ನಿಜವಾಗಿ, ‘ಗೀತಾಂಜಲಿ'ಯು ಇಂಗ್ಲಿಷ್‍ಗೆ ಅನುವಾದಗೊಳ್ಳದೇ ಇರುತ್ತಿದ್ದರೆ ಮತ್ತು ವಿಶ್ವಕವಿ ಡಬ್ಲ್ಯು.ಬಿ. ಯೇಟ್ಸ್ ರು ಮಧ್ಯಪ್ರವೇಶಿಸದೇ ಇರುತ್ತಿದ್ದರೆ ನಮ್ಮ ರವೀಂದ್ರನಾಥ ಠಾಗೋರರಿಗೆ ನೋಬೆಲ್ ಸಿಗುವುದೇ ಅನುಮಾನವಾಗಿತ್ತು. ಅಂದಹಾಗೆ, ಇಂಗ್ಲಿಷ್, ಸ್ಪಾನಿಶ್, ಫ್ರೆಂಚ್, ಜರ್ಮನ್, ಇಟಾಲಿಯನ್, ಪೋರ್ಚುಗೀಸ್, ರಶ್ಯನ್ ಭಾಷೆಗಳ ಸಾಹಿತ್ಯಗಳಿಗೆ ಸಿಗುವ ಆದ್ಯತೆಯು ಏಶ್ಯನ್ ಮತ್ತು ಆಫ್ರಿಕನ್ ಸಾಹಿತ್ಯಗಳಿಗೆ ಇವತ್ತು ಖಂಡಿತ ಸಿಗುತ್ತಿಲ್ಲ. ಪ್ರಶಸ್ತಿ ಸಮಿತಿಯ ಮೇಲೆ ಸಾಹಿತ್ಯಗಳು ಮಾತ್ರವಲ್ಲ, ಸಾಹಿತಿಯ ದೇಶ, ಭಾಷೆ, ಸಾಹಿತ್ಯದ ವಸ್ತು, ರಾಜಕೀಯ ಮುಂತಾದುವುಗಳೆಲ್ಲ ಪ್ರಭಾವ ಬೀರುತ್ತಿರುವುದಕ್ಕೆ ಅವಕಾಶವಿದ್ದೇ ಇದೆ. ಒಬಾಮರಿಗೆ ಸಿಕ್ಕ ನೋಬೆಲ್ ಶಾಂತಿ ಪ್ರಶಸ್ತಿಯು ಈ ಅನುಮಾನವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಒಂದು ವೇಳೆ 1954-62ರ ಮಧ್ಯೆ ಸರ್ತೆಗೆ ನೋಬೆಲ್ ಸಾಹಿತ್ಯ ಪ್ರಶಸ್ತಿ ಸಿಕ್ಕಿರುತ್ತಿದ್ದರೆ ಅದರ ಪರಿಣಾಮ ಏನಾಗಿರುತ್ತಿತ್ತು? ಫ್ರಾನ್ಸ್-ಅಲ್ಜೀರಿಯಾದಲ್ಲಿ ಮತ್ತು ಜಾಗತಿಕವಾಗಿ ಅದು ಮಾಡಬಹುದಾಗಿದ್ದ ಸದ್ದು ಯಾವ ಬಗೆಯದ್ದಾಗಿರುತ್ತಿತ್ತು? ಸರ್ತೆ ಅವರು ಅತಿಕ್ರಮಣ ವಿರೋಧಿ ಐಕಾನ್ ಆಗಿ ಬಿಂಬಿತಗೊಳ್ಳುತ್ತಿರಲಿಲ್ಲವೇ? ಪ್ರಶಸ್ತಿಯು ಅವರ ಯುದ್ಧ ವಿರೋಧಿ ನಿಲುವಿಗೆ ಸಿಕ್ಕ ಪುರಸ್ಕಾರ’ ಎಂಬ ರೀತಿಯಲ್ಲಿ ಚರ್ಚೆ, ವಿಮರ್ಶೆಗಳು ನಡೆಯುತ್ತಿತ್ತಲ್ಲವೇ? ಹಾಗಾಗಿರುತ್ತಿದ್ದರೆ ಇತರ ಅತಿಕ್ರಮಣಕೋರ ರಾಷ್ಟ್ರಗಳ ಮೇಲೂ ಅದು ಪರಿಣಾಮ ಬೀರುತ್ತಿತ್ತೇನೋ. ಮಾತ್ರವಲ್ಲ, ಅಲ್ಜೀರಿಯಾ

ಸ್ವತಂತ್ರಗೊಳ್ಳುವುದಕ್ಕೆ 1962ರ ವರೆಗೆ ಕಾಯಬೇಕಾಗಿಯೂ ಇರುತ್ತಿರಲಿಲ್ಲವೇನೋ. ಸರ್ತೆ ಅವರ ನೋಬೆಲ್ ತಿರಸ್ಕಾರಕ್ಕೆ ಮಹತ್ವ ಬರುವುದು ಈ ಎಲ್ಲ ಕಾರಣಗಳಿಂದಲೇ. ಮಾತ್ರವಲ್ಲ, ಗಿರೀಶ್ ಕಾರ್ನಾಡ್, ಸಿದ್ಧಲಿಂಗಯ್ಯ ಅವರ ಸುತ್ತ ನಡೆದ ಮತ್ತು ಸದ್ಯ ನಡೆಯುತ್ತಿರುವ ಚರ್ಚೆಗಳ ಇತಿ ಮತ್ತು ಮಿತಿಗಳೂ ಇವೇ. ಇವತ್ತು ಕೂಡ ಸರ್ತೆ ಅವರ ನಿಲುವನ್ನು ಪ್ರಶ್ನಿಸುವವರೂ ಮತ್ತು ಬೆಂಬಲಿಸುವವರೂ ಇಬ್ಬರೂ ಇದ್ದಾರೆ. ಅವರು ತಮ್ಮ ನಿಲುವನ್ನು ಪ್ರತಿಪಾದಿಸುವುದಕ್ಕೆ ನೋಬೆಲ್ ಸಾಹಿತ್ಯ ಪ್ರಶಸ್ತಿಯ ವೇದಿಕೆಯನ್ನು ಬಳಸಿಕೊಳ್ಳಬೇಕಿತ್ತು ಎಂದು ವಾದಿಸುವವರು ಇರುವಂತೆಯೇ ಅವರು ಆ ವೇದಿಕೆಯನ್ನು ತಿರಸ್ಕರಿಸುವ ಮೂಲಕ ಅದನ್ನು ಪ್ರತಿಪಾದಿಸಲು ಯಶಸ್ವಿಯಾಗಿದ್ದಾರೆ ಎಂದು ವಾದಿಸುವವರೂ ಇದ್ದಾರೆ. ಹೀಗಿರುವಾಗ, ಇದರಲ್ಲಿ ಒಂದು ಮಾತ್ರ ಸರಿ ಎಂದು ಪಟ್ಟು ಹಿಡಿದು ವಾದಿಸಬೇಕಿಲ್ಲ. ಎರಡರಲ್ಲೂ ಸರಿ ಇರಬಹುದು ಮತ್ತು ಯಾವುದು ಹೆಚ್ಚು ಸರಿ ಎಂಬುದನ್ನು ಮುಂದಿನ ದಿನಗಳು ನಿರ್ಧರಿಸಬಹುದು. ಸರ್ತೆ ಅವರ ನೋಬೆಲ್ ತಿರಸ್ಕಾರಕ್ಕೆ 50 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಎರಡರಲ್ಲೂ ಸರಿಯನ್ನೇ ಹುಡುಕುತ್ತಾ ಸಂವಾದದ ವೇದಿಕೆಯನ್ನು ನಿರ್ಮಲವಾಗಿಡುವುದೇ ಉತ್ತಮವೆನಿಸುತ್ತದೆ.




1 comment:

  1. ನುಡಿಸಿರಿಯ ಈ ಸಲದ ಅಧ್ಯಕ್ಷತೆಯನ್ನು ವಹಿಸಿದ ತಕ್ಷಣದಿಂದ ಸಿದ್ದಲಿಂಗಯ್ಯನವರ ವ್ಯಕ್ತಿತ್ವದೊಳಗಿರುವ ಕವಿ ,ಪ್ರತಿಭಟನೆಯ ಶಕ್ತಿ, ಇತ್ಯಾದಿಗಳಿಗೆಲ್ಲಾ ಮಂಕು ಕವಿಯುತ್ತದೆ ಎಂಬ ವಾದ ತಪ್ಪು. ಈ ಹಿಂದೆಯೂ ಸಿದ್ದಲಿಂಗಯ್ಯನವರು ಕರ್ನಾಟಕ ಸರ್ಕಾರದ ನಾನಾ ಅಧಿಕಾರದ ಶಕ್ತಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆಗ ಅವರಂತಹವರು ಅಂತಹ ಕಡೆ ಇದ್ದರೆ ಆ ಜಾಗಗಳಿಗೆ ಒಂದು 'ಶೋಭೆ' ಎಂದು ಅವರ ಪರ ಸಾಕಷ್ಟು ಮಂದಿ ಇದ್ದರು. ಈಗ ಮೂರ್ನಾಲಕ್ಕು ದಿನಗಳ 'ನುಡಿಸಿರಿ' ಅಂತಹ ಒಂದು ಸಾಹಿತ್ಯಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದಾಕ್ಷಣ ಅಲ್ಲೋಲಕಲ್ಲೋಲವಾದಂತೆ ಮಾತನಾಡುತ್ತಿರುವುದರ ಹಿಂದಿನ ಮರ್ಮ ಎಲ್ಲರಿಗೂ ತಿಳಿದಿರುವಂತಹುದೇ. ಆದರೆ ಅದನ್ನು ಮುಚ್ಚಿಹಾಕಲು ನಾನಾ ಪಟ್ಟುಗಳನ್ನು ಹಾಕುತ್ತಿದ್ದಾರೆ. ಸಿದ್ದಲಿಂಗಯ್ಯನವರು ನುಡಿಸಿರಿಯಲ್ಲಿ ಏನು ಮಾತಾಡುತ್ತಾರೋ ಬಿಡುತ್ತಾರೋ ಅದು ಮುಖ್ಯವಲ್ಲ. ಅಲ್ಲಿ ಹೇಳಿದ್ದನ್ನೆಲ್ಲಾ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವುದೂ ಇಲ್ಲ. ಸರ್ಕಾರಿ ಪ್ರಾಯೋಜಿತ ಕ. ಸಾ. ಪ ಸಮ್ಮೇಳನಗಳಲ್ಲಿ ಇದುವರೆಗೆ ನೂರಾರು ಗೊತ್ತುವಳಿಗಳನ್ನು. ನಿಳುವಳಿಗಳನ್ನು, ಬಿನ್ನವತ್ತಳೆಗಳನ್ನು ಮಂಡಿಸಿ ಸರ್ಕಾರಕ್ಕೆ ಅರ್ಪಿಸಿರಬಹುದು. ಅವು ವಿಧಾನಸೌಧದ ಸಾವಿರಾರು ಕಡತಗಳ ಮಧ್ಯೆ ನಿದ್ರಿಸುತ್ತಿವೆ. ಜೈಪುರ, ಧಾರವಾಡದ ಸಾಹಿತ್ಯ ಸಮ್ಮೇಳನಗಳಿಗೆ, ಅಲ್ಲಿ ಭಾಗವಹಿಸಿದರ ಬಗ್ಗೆ ಬಾರದ ವಿವಾದ ನುಡಿಸಿರಿಗೆ ಮಾತ್ರ ಏಕೆ? ನುಡಿಸಿರಿಯನ್ನು ಒಂದು ಉಗ್ರಗಾಮಿ ಕಾರ್ಯಕ್ರಮ ಎಂದು ಹುಯಿಲೆಬ್ಬಿಸುವುದರಲ್ಲಿ ಏನು ಅರ್ಥವಿದೆ?

    ReplyDelete