ಮೀರತ್ ಪ್ರೇಮ ಪ್ರಕರಣದ ಯುವತಿ |
"ಹಿಂದೂಗಳು ಅಂತರ್ ಧರ್ಮೀಯ ವಿವಾಹದ ವಿರೋಧಿಗಳಲ್ಲ. ಬೌದ್ಧ, ಕ್ರೈಸ್ತ, ಯಹೂದಿ ಯುವಕರನ್ನು ಹಿಂದೂ ಯುವತಿಯರು ವಿವಾಹವಾಗುವುದನ್ನು ಅವರು ವಿರೋಧಿಸುತ್ತಲೂ ಇಲ್ಲ. ಆದರೆ ಮುಸ್ಲಿಮ್ ಯುವಕರನ್ನು ವಿವಾಹವಾಗುವುದನ್ನು ಅವರು ವಿರೋಧಿಸುತ್ತಾರೆ. ಯಾಕೆಂದರೆ, ಹಿಂದೂಗಳು ಹೆಣ್ಣು ಮಕ್ಕಳನ್ನು ಪ್ರೀತಿಸುತ್ತಾರೆ. ಬೌದ್ಧ, ಕ್ರೈಸ್ತ, ಯಹೂದಿ ಧರ್ಮಗಳು ಮಹಿಳೆಯರನ್ನು ಗೌರವಿಸುವಾಗ ಇಸ್ಲಾಮ್ ಅವರನ್ನು ತಲಾಕ್, ತಲಾಕ್, ತಲಾಕ್ ಎಂದು ಅಟ್ಟುತ್ತದೆ. ಅದರ ವಿರುದ್ಧ ಮಹಿಳೆಯರು ಏನು ಮಾಡುವಂತೆಯೂ ಇಲ್ಲ. ಮುಸ್ಲಿಮರು ಮತಾಂತರ ಮಾಡುತ್ತಾರೆ. ಕುರ್‍ಆನಿನ ದೃಷ್ಟಿಯಲ್ಲಿ ಮುಸ್ಲಿಮ್ ಮಹಿಳೆ ಸೆಕ್ಸ್ ಸ್ಲೇವ್ (ಲೈಂಗಿಕ ಗುಲಾಮಳು) ಆಗಿದ್ದಾಳೆ. ಮಾತ್ರವಲ್ಲ, ಇನ್ನೊಂದು ಧರ್ಮದಿಂದ ಮತಾಂತರ ಆದವಳ ಸ್ಥಿತಿಯಂತೂ ಇದಕ್ಕಿಂತಲೂ ಹೀನಾಯವಾದುದಾಗಿದೆ.." ಎಂದು ಇನ್ನೋರ್ವ ಉತ್ತರಿಸುತ್ತಾನೆ. ಅಕ್ಟೋಬರ್ 15ರಂದು ಇಂಡಿಯಾ ಟುಡೆ ಪತ್ರಿಕೆಯ ಆನ್‍ಲೈನ್ ವಿಭಾಗದಲ್ಲಿ ಪ್ರಕಟವಾದ, 'ಲವ್ ಜಿಹಾದ್‍ನ ನೆಪ: ಮಧ್ಯಪ್ರದೇಶದಲ್ಲಿ ಹಿಂದೂ-ಮುಸ್ಲಿಮ್ ಮದುವೆಯನ್ನು ತಡೆದ ಬಲಪಂಥೀಯ ಗುಂಪು' (Citing Love Jihad, right -wing group stops Hindu -Muslim court marriage in MP) ಎಂಬ ಶೀರ್ಷಿಕೆಯ ಲೇಖನಕ್ಕೆ ಸಂಬಂಧಿಸಿ ವ್ಯಕ್ತವಾದ ಅಭಿಪ್ರಾಯಗಳಲ್ಲಿ ಮೇಲಿನಂಥ ತುತು ಮೆಮೆ ಅನ್ನುವ ಧಾಟಿಯವು ಧಾರಾಳ ಇವೆ. ಇಸ್ಲಾಮಿನಲ್ಲಿ ಮಹಿಳೆಯ ಸ್ಥಾನಮಾನ, ತಲಾಕ್‍ನ ನಿಜವಾದ ರೂಪ, ಮದುವೆ ಮತ್ತು ಮತಾಂತರದ ವಿಧಿ-ವಿಧಾನಗಳನ್ನು ಕರ್ಮಟವಾಗಿ ಚರ್ಚಿಸಿದ ಬರಹಗಳು ಇರುವಂತೆಯೇ ಸತಿ ಹೋಗುವುದು, ಶ್ರೇಣೀಕೃತ ಜಾತಿಪದ್ಧತಿ, ವಿಧವೆಯರನ್ನು ಅಮಂಗಲೆಯರೆಂದು ದೂರ ಇಡುವುದು.. ಸೇರಿದಂತೆ ಹಿಂದೂ ಧರ್ಮದ ವಿವಿಧ ಆಚರಣೆಗಳ ವಿಮರ್ಶೆಗಳೂ ನಡೆದಿವೆ. ಲವ್ ಜಿಹಾದನ್ನು ಓರ್ವ ಅಲ್ಲಗಳೆಯುವಾಗ ಇನ್ನೋರ್ವ ಅದನ್ನು ಭಯೋತ್ಪಾದನೆಯ ಭಾಗವಾಗಿ ಕಾಣುತ್ತಾನೆ. ಅಷ್ಟಕ್ಕೂ,
ಲವ್‍ಜಿಹಾದ್ (ಈ ಪದ ಪ್ರಯೋಗವೇ ತಪ್ಪು) ಎಂದು ರಾಡಿಯೆಬ್ಬಿಸಲಾದ ಯಾವ ಪ್ರಕರಣವೂ ಅನಕ್ಷರಸ್ಥರಿಗೆ ಸಂಬಂಧಿಸಿದ್ದಲ್ಲ. ಓದು-ಬರಹ ಬಾರದ, ಮುಸ್ಲಿಮ್ ಯುವಕರ 'ಸಂಚು’ಗಳನ್ನು ತಿಳಿಯದ ಮುಗ್ಧ ಹೆಣ್ಣು ಮಕ್ಕಳ ಹೆಸರೇನೂ ಲವ್ ಜಿಹಾದ್‍ನಲ್ಲಿ ಒಳಗೊಂಡವರ ಪಟ್ಟಿಯಲ್ಲಿಲ್ಲ. ಹೆಚ್ಚಿನೆಲ್ಲ ಹೆಣ್ಣು ಮಕ್ಕಳೂ ಓದಿದವರೇ. ತಮ್ಮ ಸುತ್ತಮುತ್ತ ಮತ್ತು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುವ ಸಾಮರ್ಥ್ಯ ಇದ್ದವರೇ. ಇಷ್ಟಿದ್ದೂ, ಮುಸ್ಲಿಮ್ ಯುವಕ ಮತ್ತು ಹಿಂದೂ ಯುವತಿಯರ ಮಧ್ಯೆ ಪ್ರೇಮಾಂಕುರವಾಗುತ್ತದೆಂದರೆ ಮತ್ತು ಅವರು ಪರಸ್ಪರ ಮದುವೆಯಾಗಲು ತೀರ್ಮಾನಿಸುತ್ತಾರೆಂದರೆ, ಅದೇಕೆ ಅಪಾಯಕಾರಿಯಾಗಿ ಗುರುತಿಸಿಕೊಳ್ಳಬೇಕು? ಲವ್ ಜಿಹಾದ್‍ಗೆ ಬಲಿ ಅನ್ನುವ ಪದಪ್ರಯೋಗಗಳಿಗೇಕೆ ಅದು ಗುರಿಯಾಗಬೇಕು? ಓರ್ವ ಹೆಣ್ಣು ಮತ್ತು ಗಂಡು ಪರಸ್ಪರ ಪ್ರೀತಿಸುವ ಮೊದಲು ತಂತಮ್ಮ ಧರ್ಮದ ಪರವಾನಿಗೆ ಪಡೆದುಕೊಂಡು ಮುಂದುವರಿದ ಉದಾಹರಣೆ ಎಲ್ಲೂ ಇಲ್ಲ. ಪ್ರಾಯ ಸಹಜ ಆಕರ್ಷಣೆಯು ಹೆಣ್ಣು-ಗಂಡನ್ನು ಹತ್ತಿರ ತರುತ್ತದೆ. ಅವರು ಪರಸ್ಪರ ಮಾತಾಡುತ್ತಾರೆ. ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಹಾಗೆ ಹಂಚಿಕೊಳ್ಳುವಾಗ ತಾನು ಹಿಂದೂ ಎಂದೋ ಮುಸ್ಲಿಮ್ ಎಂದೋ ಇಬ್ಬರಿಗೂ ಗೊತ್ತಾಗುತ್ತದೆ. ಹೆಸರನ್ನು ಅಥವಾ ಧರ್ಮವನ್ನು ಮರೆಮಾಚಿ ಪ್ರೀತಿಸಲು ಸಾಧ್ಯವಿಲ್ಲ. ಯಾಕೆಂದರೆ, ಪ್ರೀತಿಸುವುದು ಮತ್ತು ಮದುವೆಯಾಗುವುದು ದಿನ ಬೆಳಗಾಗುವುದರೊಳಗಾಗಿ ನಡೆಯುವ ಸಂಗತಿಗಳಲ್ಲ. ಅದೊಂದು ದೀರ್ಘ ಪ್ರಕ್ರಿಯೆ. ಓರ್ವ ವಿದ್ಯಾವಂತ ಹೆಣ್ಣು ಮಗಳು ತನ್ನ ಪ್ರಿಯಕರನ ಧರ್ಮವನ್ನು ಮತ್ತು ವಿಚಾರಗಳನ್ನು ತಿಳಿದುಕೊಳ್ಳಲಾರದಷ್ಟು ದುರ್ಬಲಳು ಎಂದು ಹೇಳುವುದು ಆಕೆಯ ವ್ಯಕ್ತಿತ್ವಕ್ಕೆ ಮಾಡುವ ಅವಮಾನವಾಗುತ್ತದೆ. ಹಾಗಂತ, ಇವೆಲ್ಲ ಲವ್ ಜಿಹಾದ್ ಎಂದು ಕೂಗೆಬ್ಬಿಸುವವರಿಗೆ ಗೊತ್ತಿಲ್ಲ ಎಂದಲ್ಲ. 2009 ಅಕ್ಟೋಬರ್‍ನಲ್ಲಿ ಕರ್ನಾಟಕದ ಬಿಜೆಪಿ ಸರಕಾರವು ಲವ್ ಜಿಹಾದ್‍ನ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ಆದೇಶಿಸಿತ್ತು. ಲವ್ ಜಿಹಾದ್ ಸಂಘಟಿತವಾಗಿ ನಡೆಯುತ್ತಿದೆಯೇ ಎಂಬ ಅಂಶವನ್ನೂ ತನಿಖೆಯ ವೇಳೆ ಪರಿಗಣಿಸುವಂತೆ ನಿರ್ದೇಶಿಸಿತ್ತು. 2009ರ ಕೊನೆಯಲ್ಲಿ ಸಿಐಡಿ ನಿರ್ದೇಶಕ ಜಾಕೊಬ್ ಪೊನ್ನೂಸೆ ಅವರು ಲವ್ ಜಿಹಾದ್ ಕಲ್ಪನೆಯನ್ನೇ ತಿರಸ್ಕರಿಸಿ ವರದಿ ನೀಡಿದರು. ಅದಕ್ಕೆ ಯಾವ ಪುರಾವೆಯೂ ಇಲ್ಲ ಎಂದೂ ಹೇಳಿದರು. 2012 ಜನವರಿಯಲ್ಲಿ ಕೇರಳದ ಪೊಲೀಸರೂ ಲವ್ ಜಿಹಾದ್‍ನ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಿದರು. ಲವ್ ಜಿಹಾದ್ ಎಂಬುದು ರಾಜ್ಯದಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂದೂ ಹೇಳಿದರು. ಮಾತ್ರವಲ್ಲ, ಲವ್ ಜಿಹಾದ್‍ನ ಹೆಸರಲ್ಲಿ ಅಪಪ್ರಚಾರದಲ್ಲಿ ತೊಡಗಿರುವ ಹಿಂದೂ ಜಾಗೃತಿ ಡಾಟ್ ಆರ್ಗ್ ಮೇಲೆ ಕೇಸು ಹಾಕುವುದಾಗಿಯೂ ಘೋಷಿಸಿದರು. ಅಲ್ಲದೇ 2014 ಸೆಪ್ಟೆಂಬರ್‍ನಲ್ಲಿ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥ ಎ.ಎಲ್. ಬ್ಯಾನರ್ಜಿಯವರೂ ಲವ್ ಜಿಹಾದ್ ಅನ್ನು ತಿರಸ್ಕರಿಸಿದರು. ಹೆಚ್ಚಿನೆಲ್ಲ ಪ್ರೇಮ ವಿವಾಹಗಳೂ ಹೆತ್ತವರ ಇಚ್ಛೆಗೆ ವಿರುದ್ಧವಾಗಿ ನಡೆದಿರುವುದಾಗಿ (ರಾಯಿಟರ್ಸ್ ವರದಿ) ಅವರು ಅಭಿಪ್ರಾಯಪಟ್ಟರು. ಇಷ್ಟಿದ್ದೂ, ಮತ್ತೆ ಮತ್ತೆ ಸುಳ್ಳುಗಳನ್ನೇಕೆ ಹಬ್ಬಿಸಲಾಗುತ್ತದೆ? ‘ಮುಸ್ಲಿಮೇತರ ಹೆಸರುಗಳನ್ನು ಬಳಸಿ ಹಿಂದೂ ಯುವತಿಯರನ್ನು ಮುಸ್ಲಿಮ್ ಯುವಕರು ಪ್ರೇಮದ ಬಲೆಗೆ ಬೀಳಿಸುತ್ತಾರೆ, ಆಕೆಯ ಕುಟುಂಬವನ್ನು ಒಪ್ಪಿಸಿಯೋ ಪ್ರೇಮದ ಅಮಲಿನಲ್ಲೋ ಮದುವೆಯಾಗುತ್ತಾರೆ, ಮದುವೆಗಿಂತ ಮೊದಲೇ ಅಥವಾ ನಂತರ ಮತಾಂತರ ಮಾಡುತ್ತಾರೆ, 5-6 ಮಕ್ಕಳನ್ನು ಹುಟ್ಟಿಸಿದ ಬಳಿಕ ತಲಾಕ್ ಹೇಳುತ್ತಾರೆ, ಬಳಿಕ ಅಸಹಾಯಕ ಸ್ಥಿತಿಯಲ್ಲಿ ಭಯೋತ್ಪಾದಕರಿಗೆ ಸಹಾಯಕಿಯಾಗಿ ಅವರು ಬದುಕುತ್ತಾರೆ..' ಎಂಬಂಥ ಅಪ್ಪಟ ಸುಳ್ಳುಗಳನ್ನು ವಿೂರತ್ ಘಟನೆಯ ಬಳಿಕ ಧರ್ಮ ಜಾಗರಣ್ ಮಂಚ್ ತನ್ನ ಮುದ್ರಿತ ನೋಟೀಸುಗಳಲ್ಲಿ ಹೇಳಿರುವುದೇಕೆ? ಯಾವ ತನಿಖೆಯಲ್ಲೂ ಸಾಬೀತಾಗದ ಸಂಗತಿಗಳನ್ನು ಮತ್ತೆ ಮತ್ತೆ ಪ್ರಸ್ತಾಪಿಸುವುದರ ಕಾನೂನು ವಿಧಿ ಏನು? ಅಲ್ಲದೇ,
ಮುಸ್ಲಿಮ್ ಯುವತಿಯನ್ನು ಪ್ರೀತಿಸಿ ವಿವಾಹವಾಗಿದ್ದ ಜಹಾನಾ ಬಾದ್‍ನ ಗೈನೇರಿದಾನ್ ಗ್ರಾಮದ ಜಾಟ್ ಯುವಕನ ಮನೆಗೆ 2014 ಮೇ 20ರಂದು ನುಗ್ಗಿದ ಯುವತಿಯ ಹೆತ್ತವರು, ಆಕೆಯನ್ನು ಬಲವಂತದಿಂದ ಕರೆದುಕೊಂಡು ಹೋಗುತ್ತಾರೆ. ತಕ್ಷಣ ಸ್ಥಳೀಯ ಬಿಜೆಪಿ ನಾಯಕರು ಹಿಂದೂ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಮತ್ತು ಹುಡುಗಿಯನ್ನು ಮರಳಿ ಹಿಂದೂ ಕುಟುಂಬಕ್ಕೆ ಒಪ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಅದರಿಂದಾಗಿ ಆ ಪ್ರದೇಶದಲ್ಲಿ ಉದ್ವಿಘ್ನ ವಾತಾವರಣ ನೆಲೆಸುತ್ತದೆ. ಆದರೆ ಅದೇ ಬಿಜೆಪಿಯ ಮುಖಂಡರು ಮೇ 30ರಂದು ವಿೂರತ್ ಪ್ರಕರಣಕ್ಕೆ ಸಂಬಂಧಿಸಿ ಹಿಂದೂ ಯುವತಿಯನ್ನು ರಕ್ಷಿಸುವಂತೆ ಮತ್ತು ಮುಸ್ಲಿಮ್ ಯುವಕನನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತಾರೆ. ಯುವಕನನ್ನು ಬಂಧಿಸದಿದ್ದರೆ ಮಹಾ ಪಂಚಾಯತ್ ಕರೆಯುವುದಾಗಿ ಬೆದರಿಸುತ್ತಾರೆ (ಇಂಡಿಯನ್ ಎಕ್ಸ್ ಪ್ರೆಸ್). ‘ಹಿಂದೂ ಬಹು-ಬೇಟಿ ಬಚಾವೋ ಸಂಘರ್ಷ್ ಸಮಿತಿ’ಯನ್ನು ರಚಿಸಲಾಗುತ್ತದೆ. ಏನಿವೆಲ್ಲ? ಜಹನಾಬಾದ್‍ನ ಮುಸ್ಲಿಮ್ ಯುವತಿಯನ್ನು ಹಿಂದೂ ಕುಟುಂಬಕ್ಕೆ ಒಪ್ಪಿಸಬೇಕೆಂದು ಒತ್ತಾಯಿಸುವ ಇದೇ ರಾಜಕೀಯ ಪಕ್ಷ, ವಿೂರತ್‍ನ ಹಿಂದೂ ಯುವತಿಯನ್ನು ಮುಸ್ಲಿಮ್ ಕುಟುಂಬಕ್ಕೆ ಒಪ್ಪಿಸಿ ಎಂದು ಆಗ್ರಹಿಸದೇ ಇರುವುದನ್ನು ಏನೆಂದು ಕರೆಯಬೇಕು? ದ್ವಂದ್ವ, ಹಿಪಾಕ್ರಸಿ, ಜನಾಂಗಬೇಧ, ಮನುಷ್ಯ ವಿರೋಧಿ.. ಮುಂತಾದ ಪದಗಳಿಂದ ಆ ನಕಲಿತನವನ್ನು ಖಂಡಿಸಿದರೆ ಸಾಕೇ? ನಿಜವಾಗಿ,
ತನ್ನ ಮಾತಿನಿಂದಲೋ ವಿಚಾರಗಳಿಂದಲೋ ಇನ್ನೋರ್ವರನ್ನು ಪ್ರಭಾವಿತಗೊಳಿಸುವ ಪ್ರಯತ್ನಗಳು ಹೊಸದೇನೂ ಅಲ್ಲ. ಕಂಪೆನಿಯೊಂದು ಹೆಚ್ಚಿನ ಸಂಬಳ, ಭತ್ಯೆಯ ಭರವಸೆಯನ್ನು ನೀಡಿ ಇನ್ನೊಂದು ಕಂಪೆನಿಯ ಉದ್ಯೋಗಿಗಳನ್ನು ಆಕರ್ಷಿಸುವುದಿದೆ. ಫೆಮಿನಿಸಂನ ಪ್ರತಿಪಾದಕರು ತಮ್ಮ ವಾದಗಳ ಮೂಲಕ ಇತರರನ್ನು ಪ್ರಭಾವಿತಗೊಳಿಸುವುದಕ್ಕೆ ಪ್ರಯತ್ನಿಸುವುದಿದೆ. ಪ್ರಗತಿಪರರು ಮತ್ತು ಸಂಪ್ರದಾಯವಾದಿಗಳ ಮಧ್ಯೆ ವೈಚಾರಿಕ ಚರ್ಚೆಗಳು ಸದಾ ನಡೆಯುತ್ತಲೇ ಇವೆ. ಮಾವೋವಾದ, ಮಾರ್ಕ್ಸಿಸಮ್ ನ ವಕ್ತಾರರು ಅದನ್ನು ಇತರರಿಗೂ ಹಂಚುತ್ತಿರುತ್ತಾರೆ. ಇತರೆಲ್ಲ ಆರ್ಥಿಕ ಚಿಂತನೆಗಳಿಗಿಂತ ಬಂಡವಾಳಶಾಹಿತ್ವವು ಹೇಗೆ ಉತ್ತಮ ಎಂಬುದನ್ನು ಹೇಳುವುದಕ್ಕಾಗಿ ಪ್ರತಿದಿನ ಜಾಗತಿಕ ಮಾಧ್ಯಮಗಳ ಮೂಲಕ ಪ್ರಯತ್ನಗಳು ನಡೆಯುತ್ತಲೇ ಇವೆ. ರಾಜಕಾರಣಿಗಳಂತೂ ಭರವಸೆಗಳ ಮೂಲಕ ಜನರ ಮನಪರಿವರ್ತನೆ ಮಾಡಲು ಯತ್ನಿಸುತ್ತಲೇ ಇರುತ್ತಾರೆ. ಒಂದು ರೀತಿಯಲ್ಲಿ, ಇಲ್ಲೆಲ್ಲಾ ನಡೆಯುತ್ತಿರುವುದು ಮನಪರಿವರ್ತನೆಯ ಪ್ರಯತ್ನಗಳೇ. ಫೆಮಿನಿಸ್ಟ್, ಮಾರ್ಕ್ಸಿಸ್ಟ್, ಸೋಶಿಯಲಿಸ್ಟ್, ಇಂಡಸ್ಟ್ರಿಯಲಿಸ್ಟ್, ಪೊಲಿಟಿಶಿಯನ್.. ಎಲ್ಲರೂ ತಂತಮ್ಮ ವಾದಗಳಿಗೆ ಜನರನ್ನು ಸೇರಿಸುವ ಪ್ರಯತ್ನದಲ್ಲಿ ಪ್ರತಿದಿನ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ, ಸಮಾಜವೂ ಇದನ್ನು ಅತ್ಯಂತ ಸ್ಫೂರ್ತಿಯಿಂದಲೇ ಸ್ವೀಕರಿಸಿದೆ. ಹೀಗಿರುವಾಗ ಧರ್ಮಗಳಿಗೇಕೆ ನಾವು ಇಂಥದ್ದೊಂದು ಸ್ಪೇಸ್ ಅನ್ನು ಒದಗಿಸಿಕೊಡುತ್ತಿಲ್ಲ? ಸೋಶಿಯಲಿಸಂ ಅನ್ನು ಚರ್ಚಿಸುವಷ್ಟೇ ಸ್ಫೂರ್ತಿ ಮತ್ತು ಉತ್ಸಾಹದಿಂದ ಧರ್ಮಗಳ ಬಗ್ಗೆಯೂ ಚರ್ಚಿಸುವುದಕ್ಕೇಕೆ ವಾತಾವರಣವನ್ನು ಸಜ್ಜುಗೊಳಿಸುತ್ತಿಲ್ಲ? ಸಮಾಜವಾದವನ್ನು ಪ್ರತಿಪಾದಿಸುತ್ತಿದ್ದ ವ್ಯಕ್ತಿ ಮನಪರಿವರ್ತನೆಗೊಂಡು ಬಂಡವಾಳಶಾಹಿತ್ವ ವನ್ನು ಅಪ್ಪಿಕೊಳ್ಳುವುದು ಎಷ್ಟು ಸಲಿಸಾಗಿ ನಡೆಯಬಲ್ಲುದೋ ಅಷ್ಟೇ ಸಲೀಸಾಗಿ ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟ ವ್ಯಕ್ತಿ ಮುಸ್ಲಿಮ್ ಆಗುವುದೂ ಅಥವಾ ಇದಕ್ಕೆ ವಿರುದ್ಧ ಆಗುವುದು ಯಾಕೆ ಸಾಧ್ಯವಾಗುತ್ತಿಲ್ಲ? ಫೆಮಿನಿಸಂ, ಸೋಶಿಯಲಿಸಂಗೆಲ್ಲ ಇರುವ ಅಪಾರ ಸ್ವಾತಂತ್ರ್ಯವು ಹಿಂದೂಯಿಸಂ, ಇಸ್ಲಾಮಿಸಂಗೆಲ್ಲ ನಾವು ನೀಡದಿರುವುದು ಯಾಕಾಗಿ? ಸಮಾಜವಾದ ಮತ್ತು ಬಂಡವಾಳವಾದಗಳ ನಡುವೆ ವೈಚಾರಿಕ ಸಂವಾದ ನಡೆಯುವಂತೆಯೇ ಮತ್ತು ಇಷ್ಟವಿದ್ದವರು ಇಷ್ಟ ಬಂದ ವಾದವನ್ನು ಸ್ವೀಕರಿಸಲು ಸ್ವಾತಂತ್ರ್ಯ ಇರುವಂತೆಯೇ ಇಸ್ಲಾಮ್, ಕ್ರೈಸ್ತ-ಹಿಂದೂ ಧರ್ಮಗಳ ನಡುವೆಯೂ ಸಂವಾದ ನಡೆಯುವಂತಹ ಮತ್ತು ಇಷ್ಟ ಬಂದವರು ಇಷ್ಟ ಬಂದ ಧರ್ಮವನ್ನು ಸ್ವೀಕರಿಸುವುದಕ್ಕೆ ಮುಕ್ತ ಸ್ವಾತಂತ್ರ್ಯ ಇರುವಂತಹ ವಾತಾವರಣಕ್ಕೆ ನಮ್ಮ ಮನಸ್ಸನ್ನು ತೆರೆದಿಟ್ಟರೇನು? ಅಷ್ಟಕ್ಕೂ, ಒಂದು ಕಂಪೆನಿಯ ಭರವಸೆಯು ಸುಳ್ಳು ಎಂದು ಗೊತ್ತಾದರೆ ಅದರಿಂದ ಹಿಂದೆ ಬರುವುದಕ್ಕೆ ಉದ್ಯೋಗಿಗೆ ಸಕಲ ಸ್ವಾತಂತ್ರ್ಯವೂ ಇರುತ್ತದೆ. ಫೆಮಿನಿಸಂ, ಸೋಶಿಯಲಿಸಂ.. ಎಲ್ಲವೂ ಹಾಗೆಯೇ. ಮಾತು, ವಿಚಾರಗಳಿಂದ ಪ್ರಭಾವಿತಗೊಂಡು ಓರ್ವ ವ್ಯಕ್ತಿ ಒಂದು ಇಸಂ ಅನ್ನು ಒಪ್ಪಿಕೊಂಡಾಕ್ಷಣ ಎಲ್ಲವೂ ಮುಗಿದು ಹೋಗುವುದಿಲ್ಲ. ಅದು ಸುಳ್ಳು ಮತ್ತು ಮಾತಿನ ಕಸರತ್ತು ಎಂದು ಗೊತ್ತಾದ ತಕ್ಷಣ ಆತನಿಗೆ/ಳಿಗೆ ತನ್ನ ಹಿಂದಿನ ವಾದಕ್ಕೆ ಮರಳಿ ಬರುವುದಕ್ಕೂ ಅವಕಾಶ ಇರುತ್ತದೆ. ಅಂಥ ಪ್ರಕರಣಗಳು ಇವತ್ತು ಧಾರಾಳ ನಡೆಯುತ್ತಲೂ ಇವೆ. ಈ ಸ್ವಾತಂತ್ರ್ಯ ಧಾರ್ಮಿಕವಾಗಿಯೂ ಇರಬೇಕಾದದ್ದೇ. ಇಸ್ಲಾವಿೂ ವಿಚಾರಗಳಿಂದ ಪ್ರಭಾವಿತನಾದವನಿಗೆ ಅದರ ಒಳಹೊಕ್ಕ ಬಳಿಕ ಅದು ಭ್ರಮೆ ಎಂದು ಅನಿಸಿದರೆ ಮರಳಿ ಹೋಗುವುದಕ್ಕೆ ಯಾವ ನಿರ್ಬಂಧಗಳೂ ಇರಬೇಕಿಲ್ಲ, ಇರಬಾರದು ಕೂಡ. ಈ ನಿಯಮ ಇತರ ಧರ್ಮಗಳಿಗೂ ಅನ್ವಯಿಸುತ್ತದೆ. ಆದರೂ ಈ ಕ್ಷೇತ್ರ ಇನ್ನೂ ಇಂಥ ಮುಕ್ತ ವಾತಾವರಣಕ್ಕೆ ತೆರೆದುಕೊಳ್ಳದೇ ಇರುವುದು ಯಾವ ಕಾರಣದಿಂದ?
ಅಂದಹಾಗೆ, ಲವ್ ಜಿಹಾದ್ ಆಗಿ ಬಿಂಬಿತಗೊಂಡಿದ್ದ ವಿೂರತ್‍ನ ಜಾಟ್ ಯುವತಿ ಮತ್ತು ಮುಸ್ಲಿಮ್ ಯುವಕನ ಪ್ರೇಮ ಪ್ರಕರಣವು ಇದೀಗ ಪಡೆದುಕೊಂಡ ತಿರುವನ್ನೇ ಎತ್ತಿಕೊಳ್ಳಿ. ಇದರಿಂದ ಸಿಗುವ ಪಾಠಗಳೇನು? ಧರ್ಮವನ್ನು ಉಸಿರಾಡುವುದಕ್ಕೂ ಸ್ವಾತಂತ್ರ್ಯವಿಲ್ಲದ ಗಾಜಿನ ಪಂಜರವಾಗಿ ಮಾರ್ಪಡಿಸಿದ್ದು ಯಾರು? ಸ್ವಚ್ಛ ಪರಿಸರದಲ್ಲಿ ಮುಕ್ತವಾಗಿ ಬೆಳೆಯಬೇಕಾದ ಧರ್ಮಕ್ಕೆ ಲಂಚ, ಆಮಿಷಗಳ ಬೇಲಿಗಳೇಕೆ? ಒತ್ತಡ, ಬಲವಂತದ ತಿವಿತಗಳೇಕೆ? ಇಷ್ಟವಿದ್ದವರು ಒಪ್ಪಿಕೊಳ್ಳುವ ಮತ್ತು ಇಷ್ಟವಿಲ್ಲದವರು ಒಪ್ಪಿಕೊಳ್ಳದೇ ಇರುವ ಸಹಜ ಸ್ವಾತಂತ್ರ್ಯವನ್ನು ಧರ್ಮಗಳಿಂದ ಕಿತ್ತುಕೊಂಡವರು ಯಾರು? ಅವರ ಉದ್ದೇಶವೇನು?
No comments:
Post a Comment