Friday, August 30, 2013

ಬಾಂಬ್ ಹಾಕುವ ಅವರು 'ಸೆಮಂತರ' ಹೊಣೆಗಾರಿಕೆಯನ್ನೇಕೆ ವಹಿಸಿಕೊಳ್ಳುತ್ತಿಲ್ಲ?

    1933-45ರ ಮಧ್ಯೆ ಜರ್ಮನಿಯಲ್ಲಿ ಹಿಟ್ಲರ್ ಸ್ಥಾಪಿಸಿದ್ದ ಯಾತನಾ ಶಿಬಿರಗಳನ್ನು (ಕಾನ್ಸನ್‍ಟ್ರೇಶನ್ ಕ್ಯಾಂಪ್) ಜಗತ್ತು ಈಗಲೂ ಭೀತಿಯಿಂದ ಸ್ಮರಿಸಿಕೊಳ್ಳುತ್ತದೆ. ಕಮ್ಯುನಿಸ್ಟರು, ಸಮಾಜವಾದಿಗಳು, ಸಲಿಂಗರತಿಯ ಪ್ರತಿಪಾದಕರು, ಯಹೂದಿ ಗಳು.. ಸೇರಿದಂತೆ ತನ್ನ ವಿರೋಧಿಗಳನ್ನೆಲ್ಲ ಆತ ಇಂಥ ಶಿಬಿರಗಳಲ್ಲಿ ಕೂಡಿ ಹಾಕಿದ್ದ. ಬಲವಂತದಿಂದ ದುಡಿಸಿದ್ದ. ಸುಮಾರು 20 ಸಾವಿರದಷ್ಟಿದ್ದ ಶಿಬಿರಗಳಲ್ಲಿ ಲಕ್ಷಾಂತರ ಮಂದಿ ಯಾತನೆಗೆ ಒಳಪಟ್ಟರು. ವೈದ್ಯರು ಅವರನ್ನು ಪ್ರಯೋಗ ಪಶುಗಳನ್ನಾಗಿ ಬಳಸಿಕೊಂಡರು. ಹಸಿವು, ಹಿಂಸೆಯಿಂದಾಗಿ ಸಾವಿರಾರು ಮಂದಿ ಸಾವಿಗೀಡಾದರು. ಇತ್ತೀಚೆಗೆ ಜರ್ಮನಿಯ ಅಧ್ಯಕ್ಷೆ ಏಂಜೆಲೋ ಮಾರ್ಕೆಲ್‍ರು ಡಚು ಎಂಬ ಯಹೂದಿ ಯಾತನಾ ಶಿಬಿರಕ್ಕೆ ಭೇಟಿ ಕೊಟ್ಟು ಆ ದಿನಗಳನ್ನು ಭಾವುಕರಾಗಿ ಸ್ಮರಿಸಿಕೊಂಡರು. ಅಂದಹಾಗೆ, ಹಿಟ್ಲರ್ ಎಂಬ ಮೂರಕ್ಷರವನ್ನು ಜಗತ್ತು ಇಂದು ಕಟುಕ ಎಂಬರ್ಥದಲ್ಲಿ ವ್ಯಾಖ್ಯಾನಿಸುತ್ತಿದೆ. ಗ್ವಾಂಟನಾಮೋ ಬೇಯಂಥ ಆಧುನಿಕ ಯಾತನಾ ಶಿಬಿರಗಳನ್ನು ಸ್ಥಾಪಿಸಿಟ್ಟ ಅಮೇರಿಕ ಹಿಟ್ಲರ್‍ನನ್ನು ಮನುಷ್ಯ ವಿರೋಧಿ ಅನ್ನುತ್ತಿದೆ! ನಿಜವಾಗಿ, ಭಯೋತ್ಪಾದನೆಯ ಹೆಸರಲ್ಲಿ ಆಧುನಿಕ ಜಗತ್ತು ತಯಾರಿಸಿಟ್ಟಿರುವ ಕಾನೂನುಗಳು ಮತ್ತು ಅದರ ಆಧಾರದಲ್ಲಿ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯಗಳಿಗೆ ಹೋಲಿಸಿದರೆ ಹಿಟ್ಲರ್ ಅಚ್ಚರಿಯ ವ್ಯಕ್ತಿತ್ವವೇನೂ ಅಲ್ಲ. ಆದರೆ ಹಿಟ್ಲರ್ ಮತ್ತು ಇವರ ನಡುವಿನ ವ್ಯತ್ಯಾಸ ಏನೆಂದರೆ- ಜಾಣತನ.. ಇವನ್ನೆಲ್ಲ ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ.
   2012 ಜೂನ್ 21ರಂದು ಆಸ್ಟ್ರೇಲಿಯದ ಸಮುದ್ರ ಮಧ್ಯದಲ್ಲಿ ಸೀವ್ 358 ಎಂಬ ದೋಣಿ ಮುಳುಗುತ್ತದೆ. ದೋಣಿಯಲ್ಲಿದ್ದ 212 ಮಂದಿಯಲ್ಲಿ ಸೆಮಂತ ರಾಣಿ, ಆಕೆಯ ಪತಿ ವಿಶ್ವನಾಥನ್ ಮತ್ತು ಅವರ 10, 6, 3 ವರ್ಷಗಳ ಮಕ್ಕಳೂ ಸೇರಿದ್ದರು. ಈ ಕುಟುಂಬದಂತೆ ಆ ದೋಣಿಯಲ್ಲಿದ್ದ ಎಲ್ಲರೂ ನಿರಾಶ್ರಿತರು. ಇರಾಕ್, ಅಫಘಾನ್, ಲಂಕಾ ಮುಂತಾದ ರಾಷ್ಟ್ರಗಳಿಂದ ಗೊತ್ತು-ಗುರಿಯಿಲ್ಲದೆ ಹೊರಟವರು. ಸೆಮಂತ ರಾಣಿ ಲಂಕಾದ ವಾವುನಿಯಾದವಳು. ಎಲ್.ಟಿ.ಟಿ.ಇ.ಯ ವಿರುದ್ಧ ಲಂಕಾ ಸರಕಾರ ಕೈಗೊಂಡ ಕಾರ್ಯಾಚರಣೆಯಲ್ಲಿ ಎಲ್ಲವನ್ನೂ ಕಳಕೊಂಡ ಸಾವಿರಾರು ಕುಟುಂಬಗಳಲ್ಲಿ ಇವಳದ್ದೂ ಒಂದು. ಬದುಕುವುದಕ್ಕೆ ಒಂದು ಉದ್ಯೋಗ ಬೇಕಲ್ಲ, 5 ಮಂದಿಯ ಕುಟುಂಬವನ್ನು ಸಾಕಬೇಕಲ್ಲ.. ಸೆಮಂತ ಮತ್ತು ವಿಶ್ವನಾಥರು ತಮ್ಮಲ್ಲಿರುವ ಅಷ್ಟಿಷ್ಟು ದುಡ್ಡನ್ನು ಒಟ್ಟು ಸೇರಿಸಿ ಊರು ಬಿಟ್ಟು ಆಸ್ಟ್ರೇಲಿಯಾದತ್ತ ಪಯಣಿಸಲು ತೀರ್ಮಾನಿಸಿದರು. ಸೀವ್ 358 ಎಂಬ ವಿೂನುಗಾರಿಕಾ ದೋಣಿಯನ್ನು ಹತ್ತಿದರು. ಅದು ಸೀಮೆಎಣ್ಣೆಯಿಂದ ಓಡುವ ದೋಣಿ. ದೋಣಿಯನ್ನು ಚಲಾಯಿಸುವವರಾದರೋ ತೀರಾ ಅನನುಭವಿಗಳು. ದೂರ ಪ್ರಯಾಣ ನಡೆಸಿ ಗೊತ್ತಿಲ್ಲದ, ಸಮುದ್ರದ ಯಾವ ಭಾಗದಿಂದ ಹೋದರೆ ಸುರಕ್ಷಿತ ಎಂಬ ಸ್ಪಷ್ಟ ಪರಿಜ್ಞಾನವಿಲ್ಲದ ಮೂವರು ಚಾಲಕರು. ಆಸ್ಟ್ರೇಲಿಯಾದಲ್ಲಿ ನಿರಾಶ್ರಿತರ ಬಗ್ಗೆ ಯಾವ ಕಾನೂನು ಇದೆ ಎಂಬುದು ಚಾಲಕರಿಗೂ ಗೊತ್ತಿಲ್ಲ, ದೋಣಿ ಯಲ್ಲಿರುವವರಿಗೂ ಗೊತ್ತಿಲ್ಲ. ಆ ಕಡೆಯ ತೀರವನ್ನು ಸೇರಿಕೊಂಡು ಏನಾದರೂ ಉದ್ಯೋಗ ನಡೆಸಿ ಬದುಕಬೇಕೆಂಬ ಏಕೈಕ ಉದ್ದೇಶದ ಹೊರತು ಆ ಬಡಪಾಯಿಗಳಲ್ಲಿ ಬೇರೇನೂ ಇದ್ದಿರಲೂ ಇಲ್ಲ. ಇಷ್ಟಕ್ಕೂ,
   ನಿರಾಶ್ರಿತರೆಂದರೆ, ಬದುಕಿ ಉಳಿಯುವ ಆಸೆಯನ್ನು ಬಹುತೇಕ ಕಳಕೊಂಡವರೇ ಅಲ್ಲವೇ? 1990-91 ಗಲ್ಫ್ ಯುದ್ಧದ ವೇಳೆ ಸುಮಾರು ಒಂದೂವರೆ ಲಕ್ಷದಷ್ಟು ಮಂದಿ ಇರಾಕ್‍ನಿಂದ ಇರಾನ್‍ಗೆ ವಲಸೆ ಹೋದರು. 2003ರ ಅಮೇರಿಕನ್ ಅತಿಕ್ರಮಣದ ಬಳಿಕ ಇರಾಕ್‍ನಿಂದ 2.2 ಮಿಲಿಯನ್ ಮಂದಿ ಸಿರಿಯಾ, ಜೋರ್ಡಾನ್‍ಗೆ ಪಲಾಯನ ಮಾಡಿದರು. ಯಾರೇ ಆಗಲಿ, ಒಂದು ಪ್ರದೇಶದಿಂದ ಅಥವಾ ರಾಷ್ಟ್ರದಿಂದ ಇನ್ನೊಂದು ರಾಷ್ಟ್ರಕ್ಕೆ ವಲಸೆ ಹೋಗಲು ತೀರ್ಮಾನಿಸುವುದು ಕೊನೇ ಹಂತದಲ್ಲಿ. ಇನ್ನು ಇಲ್ಲಿದ್ದು ಬದುಕಲು ಸಾಧ್ಯವೇ ಇಲ್ಲ ಎಂಬ ಹಂತದಲ್ಲಿ ಮನೆ, ಜವಿೂನು, ಅಂಗಡಿ.. ಎಲ್ಲವನ್ನೂ ಬಿಟ್ಟು ಬರೀ ಕೈಯಲ್ಲಿ ಹೊರಟು ನಿಲ್ಲುವ ಪೀಡಿತರ ಮನಃಸ್ಥಿತಿಯನ್ನೊಮ್ಮೆ ಅವಲೋಕಿಸಿಕೊಳ್ಳಿ. ಯಾವ ಸಂದರ್ಭದಲ್ಲೂ ಅಕ್ರಮಕ್ಕೀಡಾಗಬಹುದಾದ ವಾತಾವರಣದಲ್ಲಿ ಅವರ ನಿರೀಕ್ಷೆಗಳಾದರೂ ಏನಿದ್ದೀತು? ಲೆಬನಾನ್‍ನ ಬೈರೂತ್‍ನಲ್ಲಿ ಒಂದು ಮಿಲಿಯನ್ ಸಿರಿಯನ್ ನಿರಾಶ್ರಿತರು ಸೇರಿಕೊಂಡಿದ್ದಾರೆ. ಸಿರಿಯದಲ್ಲಾಗುವ ಬಾಂಬ್ ಸ್ಫೋಟ, ಆಂತರಿಕ ಘರ್ಷಣೆಯಿಂದ ತಪ್ಪಿಸಿಕೊಂಡು ಬೈರೂತ್‍ಗೆ ಬಂದರೆ ಅಲ್ಲೂ ಕಾರ್ ಬಾಂಬ್ ಸ್ಫೋಟಿಸುತ್ತದೆ. ಇದು ಕೇವಲ ಲೆಬನಾನ್ ಒಂದಕ್ಕೇ ಸಂಬಂಧಿಸಿದ್ದಲ್ಲ. ಇರಾಕ್‍ನಲ್ಲೂ ನಿರಾಶ್ರಿತರನ್ನು ಎದುರುಗೊಳ್ಳುತ್ತಿರುವುದು ಸ್ಫೋಟಗಳೇ. ಅಂದಹಾಗೆ,
   ಸೆಮಂತ ಮತ್ತು ಆಕೆಯ ಮೂವರು ಪುಟ್ಟ ಮಕ್ಕಳೂ ಸೇರಿದಂತೆ 200ರಷ್ಟು ನಿರಾಶ್ರಿತರನ್ನು ಹೊತ್ತುಕೊಂಡು ಹೊರಟ ದೋಣಿ, ಸಮುದ್ರದಲ್ಲಿ 29 ದಿನಗಳ ಕಾಲ ಪಯಣಿಸಿದ ಬಳಿಕ ಹಾನಿಗೀಡಾಯಿತು. 80 ಮಂದಿ ಪಯಣಿಸಬಹುದಾಗಿದ್ದ ದೋಣಿಯಲ್ಲಿ 212 ಮಂದಿಯನ್ನು ತುಂಬಿಕೊಂಡು ಬಂದಿದ್ದ ದೋಣಿಯ ಚಾಲಕರಿಗೆ ತುರ್ತು ಸಂದರ್ಭದಲ್ಲಿ ಮಾಡಬೇಕಾದ ತಯಾರಿಯ ಬಗ್ಗೆ ಅರಿವೂ ಇರಲಿಲ್ಲ. ದೋಣಿ ನಿಧಾನವಾಗಿ ಮುಳುಗತೊಡಗಿತು. ತಮ್ಮದೆಲ್ಲವನ್ನೂ ಕಳಕೊಂಡು ಅಷ್ಟಿಷ್ಟು ನಿರೀಕ್ಷೆಯೊಂದಿಗೆ ಹೊರಟಿದ್ದ ಮಂದಿ ನಿಧಾನವಾಗಿ ಮುಳುಗ ತೊಡಗಿದರು. ದೋಣಿಯ ಚಾಲಕರು ಆಸ್ಟ್ರೇಲಿಯಾದ ರಕ್ಷಣಾ ಪ್ರಾಧಿಕಾರದ ಅಧಿಕಾರಿಗಳಿಗೆ ಸಹಾಯ ಕೋರಿ ತುರ್ತು ಸಂದೇಶ ಕಳುಹಿಸಿದರು. ಆದರೆ ಆಸ್ಟ್ರೇಲಿಯಾ ನೆರವಿಗೆ ಧಾವಿಸಲಿಲ್ಲ. ಈ ಮಧ್ಯೆ, ಆ ದಾರಿಯಾಗಿ ಬಂದ ವ್ಯಾಪಾರಿ ಹಡಗೊಂದು 113 ಮಂದಿಯನ್ನು ರಕ್ಷಿಸಿತು. ಬದುಕುಳಿದವರಲ್ಲಿ ಸೆಮಂತ, ಆಕೆಯ 10ರ ಹರೆಯದ ಮಲರ್ ಹಾಗೂ 6ರ ಕೋಕಿಲ ಎಂಬ ಮಕ್ಕಳೂ ಸೇರಿದ್ದರು. ಆಕೆಯ ಪತಿ ಮತ್ತು 3ರ ಮಗು ಕಡಲಿನಲ್ಲಿ ಕಣ್ಮರೆಯಾದುವು. ಆಸ್ಟ್ರೇಲಿಯವಂತೂ ಬದುಕಿ ಉಳಿದವರನ್ನೆಲ್ಲಾ ಪಪುವ ನ್ಯೂಗಿನಿ ಮತ್ತು ಮಾನುಸ್ ದ್ವೀಪದ ಯಾತನಾ ಶಿಬಿರಗಳಿಗೆ ಅಟ್ಟಿಬಿಟ್ಟಿದೆ. ನಿಜವಾಗಿ, ಇವೆಲ್ಲ ಬಯಲಿಗೆ ಬಂದದ್ದೇ ಆಲಿಸ್ಟರ್ ಹೋಪ್ ಎಂಬ ಆಸ್ಟ್ರೇಲಿಯದ ಅಧಿಕಾರಿ ತಯಾರಿಸಿದ ವರದಿಯಿಂದ. ಅವರ ಈ ಪ್ರಯತ್ನವು ಆಸ್ಟ್ರೇಲಿಯಾದ ನಿರಾಶ್ರಿತ ಕಾನೂನುಗಳ ಬಗ್ಗೆ ದೊಡ್ಡದೊಂದು ಚರ್ಚೆಗೆ ಕಾರಣವಾಯಿತು. ಮಾತ್ರವಲ್ಲ, ಪಾಪುವ ನ್ಯೂಗಿನಿ ಮತ್ತು ಮಾನುಸ್ ದ್ವೀಪಗಳಲ್ಲಿರುವ ಹಿಟ್ಲರ್‍ನನ್ನು ನೆನಪಿಸುವ ಆಧುನಿಕ ಯಾತನಾ ಶಿಬಿರಗಳ ಬಗ್ಗೆಯೂ ಮಾಧ್ಯಮಗಳು ಚರ್ಚಿಸಿದುವು.
   ಒಂದು ರೀತಿಯಲ್ಲಿ, ಈ ಜಗತ್ತಿನಲ್ಲಿರುವ ನಿರಾಶ್ರಿತರಿಗೂ ಅಮೇರಿಕ, ಆಸ್ಟ್ರೇಲಿಯಾಕ್ಕೂ ದೊಡ್ಡದೊಂದು ಸಂಬಂಧ ಇದೆ. ಪಾಶ್ಚಾತ್ಯ ರಾಷ್ಟ್ರಗಳ ಸಾಮ್ರಾಜ್ಯಶಾಹಿ ಆಲೋಚನೆಗಳೇ ನಿರಾಶ್ರಿತರ ಉಗಮಕ್ಕೆ ಕಾರಣ. ಇವತ್ತು ಜೋರ್ಡಾನ್, ಸಿರಿಯಾ, ಈಜಿಪ್ಟ್, ಲೆಬನಾನ್, ಇರಾನ್‍ಗಳಲ್ಲಿ ನಿರಾಶ್ರಿತ ಶಿಬಿರಗಳಲ್ಲಿ ಬದುಕುತ್ತಿರುವ ಲಕ್ಷಾಂತರ ಫೆಲೆಸ್ತೀನಿಯರ ದುರಂತ ಸ್ಥಿತಿಗೆ ಕಾರಣವಾದರೂ ಯಾರು? ಇರಾಕ್‍ನಲ್ಲಿ ಸಿರಿಯಾ, ಅಫಘನ್‍ಗಳಲ್ಲಿ ಲಕ್ಷಾಂತರ ಮಂದಿಯನ್ನು ನಿರ್ವಸಿತರನ್ನಾಗಿ ಮಾಡಿದವರು ಯಾರು? ಅವರಿಗೆ ಸೂಕ್ತ ವಸತಿ, ಉದ್ಯೋಗ, ಬದುಕನ್ನು ಕೊಡಬೇಕಾದ ಜವಾಬ್ದಾರಿ ಯಾರ ಮೇಲಿದೆ? ಅಫಘಾನ್‍ನ ಮೇಲೆ ಅತಿಕ್ರಮಣ ನಡೆಸಿದ ಅಮೇರಿಕವು ಮುಂದಿನ ವರ್ಷ ಅಲ್ಲಿಂದ ಹೊರಟು ಹೋಗುತ್ತದಲ್ಲ, ಅಲ್ಲಿಯ ಸ್ಥಿತಿಯಾದರೂ ಹೇಗಿದೆ? ತಾಲಿಬಾನ್‍ಗಿಂತ ಉತ್ತಮ ಜೀವನ ಮಟ್ಟವನ್ನು ಅದು ಅಫಘನ್ನಿಗರಿಗೆ ಒದಗಿಸಿದೆಯೇ? ತಮ್ಮ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ನೆರೆಯ ರಾಷ್ಟ್ರಗಳಿಗೆ ವಲಸೆ ಹೋದವರ ಬದುಕಿನ ಬಗ್ಗೆ ಅಮೇರಿಕ ಹೊತ್ತುಕೊಂಡ ಹೊಣೆಗಾರಿಕೆಯೇನು? ಅಮೇರಿಕ ಅತಿಕ್ರಮಣ ನಡೆಸಿದ್ದು ತಾಲಿಬಾನ್ ಮತ್ತು ಸದ್ದಾಮ್ ಹುಸೈನ್‍ರ ವಿರುದ್ಧ ಎಂದಾದರೆ ಅಫಘಾನ್ ಹಾಗೂ ಇರಾಕಿ ಪ್ರಜೆಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾದದ್ದು ಕರ್ಝಾಯಿಯೋ, ನೂರ್ ಮಾಲಿಕಿಯೋ ಅಲ್ಲವಲ್ಲ. ತಮ್ಮ ಹಿತಾಸಕ್ತಿಗಾಗಿ ಅತಿಕ್ರಮಣ ನಡೆಸುವ ಪಾಶ್ಚಾತ್ಯ ರಾಷ್ಟ್ರಗಳು, ಅದರಿಂದ ಉದ್ಭವವಾಗುವ ಸಮಸ್ಯೆಗಳನ್ನೇಕೆ ಪರಿಹರಿಸುತ್ತಿಲ್ಲ? ಅಫಘಾನ್, ಇರಾಕ್, ಸಿರಿಯಾ.. ಮುಂತಾದ ರಾಷ್ಟ್ರಗಳಲ್ಲಿ ಲಕ್ಷಾಂತರ ಮಂದಿ ನಿರಾಶ್ರಿತರು ಸೃಷ್ಟಿಯಾದರಲ್ಲ, ಅವರನ್ನೇಕೆ ಅಮೇರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಸ್ವೀಕರಿಸುತ್ತಿಲ್ಲ? ಪಾಶ್ಚಾತ್ಯ ರಾಷ್ಟ್ರಗಳು ಅತಿಕ್ರಮಣ ನಡೆಸುವುದಕ್ಕೆ ಮತ್ತು ಅರಬ್ ರಾಷ್ಟ್ರಗಳು ನಿರಾಶ್ರಿತರನ್ನು ಸ್ವೀಕರಿಸುವುದಕ್ಕೆ ಎಂಬ ಸ್ಥಿತಿ ನಿರ್ಮಾಣವಾಗಿರುವುದೇಕೆ? ಹಾಗಂತ, ಲಕ್ಷಾಂತರ ನಿರಾಶ್ರಿತರನ್ನು ನಿಭಾಯಿಸುವುದು ಸಣ್ಣ ಸಂಗತಿಯಲ್ಲ. ನಿರಾಶ್ರಿತರಿಂದಾಗಿ ಆಹಾರ, ವಸತಿ, ಉದ್ಯೋಗ.. ಮುಂತಾದ ಅನೇಕಾರು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಇವಾವುದರ ಹೊಣೆಯನ್ನೂ ವಹಿಸಿಕೊಳ್ಳದೇ, ನಿರಾಶ್ರಿತರನ್ನೂ ಸೇರಿಸಿಕೊಳ್ಳದೇ ಇರಾಕ್‍ಗೋ ಅಫಘನ್‍ಗೋ ಬಾಂಬುಗಳನ್ನು ಸುರಿಸಿ ಸದ್ದಾಮ್ ಹುಸೇನ್, ಮುಲ್ಲಾ ಉಮರ್‍ರನ್ನು ಪದಚ್ಯುತಗೊಳಿಸುವುದು ಯಾರ ಉದ್ಧಾರಕ್ಕೆ? ಇದರ ಉದ್ದೇಶವೇನು? ಮುಸ್ಲಿಮ್ ರಾಷ್ಟ್ರಗಳನ್ನು ಆರ್ಥಿಕವಾಗಿ ನಾಶಪಡಿಸುವುದೇ? ಆಂತರಿಕ ಸಂಘರ್ಷವನ್ನು ಹುಟ್ಟು ಹಾಕುವುದೇ?
  
ಮಾನುಸ್ ದ್ವೀಪದ ಯಾತನಾ ಶಿಬಿರಗಳು
    ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲದೇ ತಮ್ಮದಲ್ಲದ ದೇಶಗಳಲ್ಲಿ ಕಣ್ಣೀರಿನೊಂದಿಗೆ ಬದುಕುತ್ತಿರುವ ಕೋಟ್ಯಂತರ ನಿರಾಶ್ರಿತರ ಸಂಕೇತವಾಗಿದ್ದಾರೆ ಸಮಂತ ಮತ್ತು ಆಕೆಯ ಮಕ್ಕಳು. ಅಮೇರಿಕವಾಗಲಿ, ಅದನ್ನು ಬೆಂಬಲಿಸುತ್ತಿರುವ ಆಸ್ಟ್ರೇಲಿಯಾ ಮತ್ತಿತರ ರಾಷ್ಟ್ರಗಳಾಗಲಿ ಇವರನ್ನು ಎಂದೂ ಸ್ವೀಕರಿಸುವುದಿಲ್ಲ. ಜೂಲಿಯನ್ ಅಸಾಂಜೆ, ಸ್ನೋಡನ್‍ರಂತೆ ಸುದ್ದಿ ಮಾಡಲು ಇವರಿಗೆ ಬರುವುದಿಲ್ಲವಾದ್ದರಿಂದ ಮಾಧ್ಯಮಗಳೂ ಇವರ ಬಗ್ಗೆ ಮಾತಾಡುವುದಿಲ್ಲ. ನಿರಾಶ್ರಿತರನ್ನು ಕೂಡಿಡಲೆಂದೇ ಆಸ್ಟ್ರೇಲಿಯಾ ತಯಾರಿಸಿಟ್ಟಿರುವ ಮಾನುಸ್ ದ್ವೀಪದ ಬಂಧೀಖಾನೆಗಳೂ ಚರ್ಚೆಗೊಳಗಾಗುವುದಿಲ್ಲ. ಆದ್ದರಿಂದಲೇ ಕಡಲಲ್ಲಿ ಮುಳುಗಿ ಹೋಗುವ ವಿಶ್ವನಾಥನಂತೆ ಮತ್ತು ಅಮ್ಮನ ಕಣ್ಣೀರನ್ನು ಕಂಡು ಏನೂ ತೋಚದೇ ತಾವೂ ಕಣ್ಣೀರಿಡುವ ಮಲರ್ ಮತ್ತು ಕೋಕಿಲರಂತೆ ಅವರೆಲ್ಲ ಕರಗಿ ಹೋಗುತ್ತಿದ್ದಾರೆ.

1 comment: