Tuesday, August 6, 2013

ಅವರು ಅಮಾಯಕರೆಂದಾದರೆ ಆರೋಪ ಹೊರಿಸಿದವರನ್ನು ಏನೆನ್ನಬೇಕು?

'ಮೀಡಿಯಾ ಆಂಡ್ ಟೆರರ್: ಫ್ಯಾಕ್ಟ್ಸ್ ಆಂಡ್ ಫಿಕ್ಷನ್' ಕೃತಿಯ ಬಿಡುಗಡೆಯ ಕ್ಷಣ 
Accuracy
Brevity
Clarity
   ಪತ್ರಕರ್ತರ, ವರದಿಗಾರರ, ಸಂಪಾದಕರ.. ಎದುರು ಸದಾ ತೂಗಾಡುತ್ತಲೇ ಇರಬೇಕಾದ ಈ ಮೂರು ಮೌಲ್ಯಗಳಿಗೆ ಇವತ್ತು ಯಾವ ಸ್ಥಿತಿ ಬಂದೊದಗಿದೆ? ಮಾಧ್ಯಮ ಮಿತ್ರರಲ್ಲಿ ಎಷ್ಟು ಮಂದಿ ಇವತ್ತು ಖಚಿತತೆ, ಧೈರ್ಯಶೀಲತೆ ಮತ್ತು ಸ್ಪಷ್ಟತೆ (ABC) ಎಂಬ ಈ ಮಾಧ್ಯಮ ಸಂಹಿತೆಗೆ ಬದ್ಧವಾಗಿದ್ದಾರೆ? ಸುದ್ದಿಯ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡ ಬಳಿಕ ವರದಿ ಮಾಡುವ ಸಹನೆ ಇವತ್ತು ಎಷ್ಟು ಮಂದಿ ಪತ್ರಕರ್ತರಿಗಿದೆ?
   Sucess  is 90% about your Attitude, 10% about your talent - ‘ಯಶಸ್ಸಿನಲ್ಲಿ ಬದ್ಧತೆಯ ಪಾಲು ಶೇ. 90 ಆದರೆ ಪ್ರತಿಭೆಯ ಪಾಲು ಶೇ. 10’ - ಎಂದು ಭಯೋತ್ಪಾದನೆಯ ಆರೋಪದಲ್ಲಿ 2012 ಆಗಸ್ಟ್ ನಲ್ಲಿ ಬಂಧನಕ್ಕೀಡಾಗುವ ಒಂದು ದಿನ ಮೊದಲು ಪತ್ರಕರ್ತ ಮುತೀಉರ್ರಹ್ಮಾನ್ ತನ್ನ ಫೇಸ್‍ಬುಕ್‍ನಲ್ಲಿ ಬರೆದಿದ್ದ. ಮರುದಿನ ಟಿ.ವಿ. ಚಾನೆಲ್ ಒಂದು ಅದನ್ನು ಹೀಗೆ ವ್ಯಾಖ್ಯಾನಿಸಿತು- ‘ತನ್ನ ಭಯೋತ್ಪಾದಕ ಯೋಜನೆಯ ಬಗ್ಗೆ ಆತನಿಗೆ ಎಷ್ಟು ಭರವಸೆ ಇದೆ!' ಇನ್ನೊಂದು ಚಾನೆಲ್ - 'ಮುತೀಉರ್ರಹ್ಮಾನನ ತಂದೆ ಪಾಕಿಸ್ತಾನದಲ್ಲಿದ್ದು, ಆತನ ಭಯೋತ್ಪಾದಕ ಚಟುವಟಿಕೆಗಳಿಗೆ ಧಾರಾಳ ಹಣವನ್ನು ರವಾನಿಸುತ್ತಿದ್ದಾರೆ..' ಎಂದಿತ್ತು. ಆತನಲ್ಲಿ 50 ಕೋಟಿಯಷ್ಟು ಹಣವಿದೆ, ಹುಬ್ಬಳ್ಳಿಯ ಶಿರೂರ್ ಪಾರ್ಕ್ ನಲ್ಲಿ ಆತನಿಗೆ ದೊಡ್ಡ ಬಂಗಲೆಯಿದೆ.. ಎಂದೆಲ್ಲ ಚಾನೆಲ್‍ಗಳು ಸುದ್ದಿ ಸ್ಫೋಟಿಸಿದ್ದುವು. ನಿಜವಾಗಿ, ಮುತೀಉರ್ರಹ್ಮಾನ್‍ರ ತಂದೆ 2006 ಜೂನ್ 16ರಂದು ನಿಧನರಾಗಿದ್ದರು. ಮುತೀಉರ್ರಹ್ಮಾನ್ ಪ್ರಯಾಣಿಸುತ್ತಿದ್ದು ಬೆಂಗಳೂರಿನ ಸರಕಾರಿ ಬಸ್ಸಿನಲ್ಲಿ. ಹುಬ್ಬಳ್ಳಿಯಲ್ಲಿ ಸಣ್ಣದೊಂದು ಮನೆ ಬಿಟ್ಟರೆ ಬಂಗಲೆ -ದುಡ್ಡು ಯಾವುದೂ ಅವರಲ್ಲಿರಲಿಲ್ಲ. ಅಷ್ಟೇ ಅಲ್ಲ,
   Calls to Saudi, unravelled plot - ಎಂಬ ಶೀರ್ಷಿಕೆಯಲ್ಲಿ 2012 ಸೆಪ್ಟೆಂಬರ್ 2ರಂದು ಡೆಕ್ಕನ್ ಕ್ರಾನಿಕಲ್ ಪತ್ರಿಕೆಯು ಸುದ್ದಿಯೊಂದನ್ನು ಪ್ರಕಟಿಸಿತ್ತಲ್ಲದೇ ಮುತೀಉರ್ರಹ್ಮಾನನು  ಇಡೀ ಯೋಜನೆಯ ಮಾಸ್ಟರ್ ಮೈಂಡ್ ಎಂದು ಬರೆಯಿತು. ಕನ್ನಡದ ಪ್ರಮುಖ ಪತ್ರಿಕೆಗಳಂತೂ ಮಾಸ್ಟರ್ ಮೈಂಡ್‍ನಿಂದ ಹಿಡಿದು ಮುಂಬೈ ದಾಳಿಯ ಆರೋಪಿ ಅಬೂಜಂದಲ್‍ನ ವರೆಗೆ ಸಂಬಂಧ ಕಲ್ಪಿಸಿದುವು. 2012 ಸೆಪ್ಟೆಂಬರ್‍ನಲ್ಲಿ ಪ್ರಕಟವಾದ ಪತ್ರಿಕೆಗಳನ್ನು ಇವತ್ತು ತಿರುವಿ ಹಾಕುವಾಗ ಇಡೀ ಮಾಧ್ಯಮ ಕ್ಷೇತ್ರದ ಬಗ್ಗೆಯೇ ಅಸಹ್ಯ ಹುಟ್ಟುತ್ತದೆ. ಪತ್ರಕರ್ತರು ಮತ್ತು ಸಂಪಾದಕರುಗಳ ವಿಶ್ವಾಸಾರ್ಹತೆಯ ಬಗ್ಗೆಯೇ ಅನುಮಾನ ಮೂಡುತ್ತದೆ. ಕಳಪೆ, ಪಕ್ಷಪಾತ, ಪೂರ್ವಗ್ರಹ ಪೀಡಿತ, ನಿರ್ಲಕ್ಷ್ಯ, ಉದ್ದೇಶಪೂರ್ವಕ.. ಮುಂತಾದ ಯಾವ ಪದ ಬಳಸಿ ಅಂದಿನ ವರದಿ ಮತ್ತು ಸುದ್ದಿಯನ್ನು ಖಂಡಿಸಿದರೂ ಸಾಕಾಗಲ್ಲ ಅನ್ನಿಸುತ್ತದೆ. ಅಷ್ಟಕ್ಕೂ,
  Al Queda corrie threat - ಎಂಬ ಶೀರ್ಷಿಕೆಯಲ್ಲಿ 2010 ಡಿ. 9ರಂದು ಬ್ರಿಟನ್ನಿನ ದಿ ಸನ್ ಪತ್ರಿಕೆಯು ಸುದ್ದಿಯೊಂದನ್ನು ಪ್ರಕಟಿಸಿತ್ತು. ಅಲ್ ಕೈದಾ ದಾಳಿಯ ಭೀತಿಯಿಂದಾಗಿ ಕೊರೋನೇಶನ್ ರಸ್ತೆಯಲ್ಲಿ ಪೊಲೀಸರು ನಿನ್ನೆ ಇಡೀ ದಿನ ಕಾರ್ಯಾಚರಣೆ ನಡೆಸಿದ್ದಾರೆ.. ಎಂದು ಅದರಲ್ಲಿ ಹೇಳಲಾಗಿತ್ತು. ಆದರೆ 19 ದಿನಗಳ ಬಳಿಕ, there was no specific threat from Al Queda as we reported, we apologise for this misunderstanding. - ‘ನಮ್ಮ ಸುದ್ದಿ ತಪ್ಪಾಗಿದೆ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇವೆ..’ ಎಂದು ಬರೆಯಿತು. ಆಸ್ಟ್ರೇಲಿಯಾ ಸರಕಾರವಂತೂ ಡಾ| ಹನೀಫ್‍ರೊಂದಿಗೆ ಕ್ಷಮೆ ಯಾಚಿಸಿ ಒಂದು ಕೋಟಿ ರೂಪಾಯಿಯನ್ನು ಪರಿಹಾರವಾಗಿ ನೀಡಿದ್ದಷ್ಟೇ ಅಲ್ಲ, ಪೌರತ್ವದ ಕೊಡುಗೆಯನ್ನೂ ನೀಡಿತು. ಇಷ್ಟಿದ್ದೂ, ಮುತೀಉರ್ರಹ್ಮಾನರ ವಿಷಯದಲ್ಲಿ ಮಾಧ್ಯಮಗಳು ಮುಖ್ಯವಾಗಿ ಕನ್ನಡ ಪತ್ರಿಕೆಗಳು ಹೇಗೆ ನಡಕೊಂಡವು? ಬಂಧನದ 7 ತಿಂಗಳ ಬಳಿಕ ಮುತೀಉರ್ರಹ್ಮಾನ್ ಮತ್ತು ಇತರರು ಅಮಾಯಕರೆಂದು ಬಿಡುಗಡೆಗೊಂಡರಲ್ಲ, ಮಾಧ್ಯಮಗಳು ಅದನ್ನು ಸ್ವೀಕರಿಸಿದ್ದಾದರೂ ಹೇಗೆ? ಬಿಡುಗಡೆ ಗೊಂಡವರು ಅಮಾಯಕರೆಂದಾದರೆ, ನಾವೇ ಅಪರಾಧಿಗಳು ಎಂದು ಅವು ಘೋಷಿಸಿದುವೇ? ಅದಕ್ಕಾಗಿ ಕ್ಷಮೆ ಯಾಚಿಸಿದುವೇ? ತಪ್ಪನ್ನು ಒಪ್ಪಿಕೊಂಡು ಆತ್ಮಾವಲೋಕನಕ್ಕೆ ಇಳಿದುವೇ? 'ಸುದ್ದಿಯನ್ನು ಖಚಿತಪಡಿಸಿಕೊಳ್ಳದೇ ಊಹೆಗಳ ಆಧಾರದಲ್ಲಿ ಸುದ್ದಿ ತಯಾರಿಸಬೇಡಿ’ ಎಂಬ ಕಟ್ಟಾಜ್ಞೆಯನ್ನು ಎಲ್ಲ ಪತ್ರಕರ್ತರಿಗೂ ರವಾನಿಸಿ ತಮ್ಮನ್ನು ತಿದ್ದಿಕೊಂಡ ಬಗ್ಗೆ ಹೇಳಿದುವೇ? ಯಾವುದೂ ಇಲ್ಲ. 2012 ಸೆಪ್ಟೆಂಬರ್‍ನಲ್ಲಿ,
   The Delhi car bombing: How the police built a false case- ‘ದೆಹಲಿ ಕಾರ್ ಬಾಂಬ್ ಪ್ರಕರಣ: ಪೊಲೀಸರು ಹೇಗೆ ಸುಳ್ಳು ಕೇಸನ್ನು ಹೆಣೆದರು’ - ಎಂಬ ಶೀರ್ಷಿಕೆಯಲ್ಲಿ ಇಂಟರ್‍ಪ್ರೆಸ್ ಸರ್ವಿಸ್‍ನಲ್ಲಿ ಲೇಖನವೊಂದು ಮೂರು ಕಂತುಗಳಲ್ಲಿ ಪ್ರಕಟವಾಯಿತು. ದೆಹಲಿಯಲ್ಲಿರುವ ಇಸ್ರೇಲಿ ರಾಯಭಾರಿಯ ಕಾರಿನ ಮೇಲೆ 2012 ಫೆಬ್ರವರಿಯಲ್ಲಿ ನಡೆದ ದಾಳಿ ಮತ್ತು ಅದನ್ನು ವ್ಯವಸ್ಥೆಯು ನಿಭಾಯಿಸಿದ ರೀತಿಯನ್ನು ಖ್ಯಾತ ಪತ್ರಕರ್ತ ಗೆರೆತ್ ಪೋರ್ಟರ್ ಅದರಲ್ಲಿ ವಿವರಿಸಿದರು.
ದಾಳಿ ನಡೆದ ಬೆನ್ನಿಗೇ  ಇಸ್ರೇಲ್‍ನಿಂದ ತನಿಖಾ ತಂಡ ಮತ್ತು ಅಲ್ಲಿನ ಗುಪ್ತಚರ ಸಂಸ್ಥೆ ಮೊಸಾದ್ ಘಟನಾ ಸ್ಥಳಕ್ಕೆ ಬರುತ್ತದೆ. ಇದಾಗಿ ಕೆಲವೇ ದಿನಗಳಲ್ಲಿ ಪತ್ರಕರ್ತ ಮುಹಮ್ಮದ್ ಅಹ್ಮದ್ ಕಾಸ್ಮಿಯನ್ನು ಬಂಧಿಸಲಾಗುತ್ತದೆ. ಇರಾನ್‍ನ ಪರ ಧೋರಣೆಯುಳ್ಳ, ದೂರದರ್ಶನದಲ್ಲಿ ಉರ್ದು ಕಾರ್ಯಕ್ರಮದ ನಿರೂಪಕರಾಗಿದ್ದ ಮತ್ತು ಟಿ.ವಿ. ಸಂವಾದ ಕಾರ್ಯಕ್ರಮಗಳಲ್ಲಿ ಇರಾನನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದ ಕಾಸ್ಮಿಯವರ ಬಂಧನ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗುತ್ತದೆ. ಮಾರ್ಚ್ ನಲ್ಲಿ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರುವ ಒಂದೆರಡು ದಿನಗಳ ಮೊದಲು, ಮಾಧ್ಯಮಗಳು ಕಾಸ್ಮಿಯ ಸುತ್ತ ಮತ್ತೆ ಚರ್ಚಿಸುತ್ತವೆ. ಅವರು ತಪ್ಪೊಪ್ಪಿಕೊಂಡಿರುವುದಾಗಿ ಬರೆಯುತ್ತವೆ. ಜಾಮೀನು ತಿರಸ್ಕ್ರತಗೊಳ್ಳುತ್ತದೆ. ಆದರೆ, ಇಂಥ ನಿರ್ಣಾಯಕ ಸಮಯದಲ್ಲಿ ಅಂಥದ್ದೊಂದು ಸುಳ್ಳು ಸುದ್ದಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಕಾರಣವೇನು, ಅದರ ಹಿಂದೆ ಇರುವ ಪೊಲೀಸರ ಷಡ್ಯಂತ್ರ.. ಎಲ್ಲವನ್ನೂ ಗೆರೆತ್ ಪೋರ್ಟರ್‍ರು ತಮ್ಮ ಲೇಖನದಲ್ಲಿ ಬಹಿರಂಗ ಪಡಿಸಿದರು. ಕೆಲವರನ್ನು ವ್ಯವಸ್ಥಿತವಾಗಿ ಮಟ್ಟ ಹಾಕಲು, ಹದ್ದು ಬಸ್ತಿನಲ್ಲಿಡಲು ಹೇಗೆ ಷಡ್ಯಂತ್ರಗಳನ್ನು ಹೆಣೆಯಲಾಗುತ್ತದೆ ಮತ್ತು ಅದಕ್ಕಾಗಿ ಮಾಧ್ಯಮಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ ಎಂಬುದನ್ನೆಲ್ಲಾ ಅವರು ಇಂಚಿಂಚಾಗಿ ವಿವರಿಸಿದರು.
ಇದೊಂದೇ ಅಲ್ಲ,
   2013 ಜುಲೈ 13ರಂದು ಹೆಡ್‍ಲೈನ್ಸ್ ಟುಡೇ ಟಿ.ವಿ. ಚಾನೆಲ್‍ನಲ್ಲಿ ಒಂದು ಟೇಪ್ ಪ್ರಸಾರವಾಯಿತು. 2004ರಲ್ಲಿ ಗುಜರಾತ್‍ನಲ್ಲಿ ಎನ್‍ಕೌಂಟರ್‍ಗೆ ಒಳಗಾದ ಅಮ್ಜದ್ ಅಲಿ ರಾಣಾ ಮತ್ತು ಪಾಕ್‍ನಲ್ಲಿರುವ ಲಷ್ಕರೆ ತ್ವಯ್ಯಿಬದ ಕಮಾಂಡರ್ ನಡುವೆ ನಡೆದ ಮಾತುಕತೆ ಇದೆಂದು ಪ್ರಸಾರದ ಆರಂಭದಲ್ಲಿ ಚಾನೆಲ್ ಸ್ಪಷ್ಟಪಡಿಸಿತು. ಇಲ್ಲಿನ ತಗಾದೆ ಏನೆಂದರೆ, ಟೇಪ್ ಅನ್ನು ಪ್ರಸಾರ ಮಾಡಿದ ಸಮಯ. ಈ ಟೇಪ್ ಪ್ರಸಾರದ 24 ಗಂಟೆಗಳ ಬಳಿಕ ಸಿಬಿಐಯು ಈ ಪ್ರಕರಣದ ಕುರಿತಂತೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕಿತ್ತು. ಇಶ್ರತ್ ಜಹಾನ್ ಪ್ರಕರಣವೆಂದು ಗುರುತಿಸಿಕೊಂಡ ಈ ಎನ್‍ಕೌಂಟರ್‍ನಲ್ಲಿ ಐಬಿಯ ಮುಖ್ಯಸ್ಥರಾದ ರಾಜೇಂದ್ರ ಕುಮಾರ್ ಪ್ರಮುಖ ಆರೋಪಿ. ಆದ್ದರಿಂದಲೇ ಟೇಪ್ ಅನ್ನು ಪ್ರಸಾರ ಮಾಡಿದ ಸಂದರ್ಭದ ಬಗ್ಗೆ ಕೆಲವರು ಆಕ್ಷೇಪವೆತ್ತಿದರು. ಟೇಪ್‍ನ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಂಡಿದ್ದೀರಾ ಎಂದು ಚಾನೆಲ್‍ನ ಮುಖ್ಯಸ್ಥರನ್ನು ಪ್ರಶ್ನಿಸಿದಾಗ ಅವರು ನೋ ಕಮೆಂಟ್ ಅಂದರು. ನಿಜವಾಗಿ, ಐಬಿಯು ಅತ್ಯಂತ ವ್ಯವಸ್ಥಿತವಾಗಿ ಹೆಡ್‍ಲೈನ್ಸ್ ಟುಡೇಗೆ ಆ ಟೇಪ್ ಅನ್ನು ಸೋರಿಕೆ ಮಾಡಿತ್ತು. ರಾಜೇಂದ್ರ ಕುಮಾರ್‍ರ ಬಗ್ಗೆ ಸಾರ್ವಜನಿಕವಾಗಿ ಒಳ್ಳೆಯ ಅಭಿಪ್ರಾಯ ರೂಪಿಸಲು, ಆ ಎನ್‍ಕೌಂಟರನ್ನು ಸಾರ್ವಜನಿಕರು ಸಮರ್ಥಿಸಿಕೊಳ್ಳುವಂತಾಗಲು ಮತ್ತು ಚಾರ್ಜ್ ಶೀಟ್ ನಲ್ಲಿ ರಾಜೇಂದ್ರ ಕುಮಾರ್‍ರ ಹೆಸರು ಉಲ್ಲೇಖಗೊಳ್ಳದಿರಲು ಹೆಣೆದ ತಂತ್ರ ಅದಾಗಿತ್ತು. ಅಷ್ಟಕ್ಕೂ ಆರೋಪಿ ಸ್ಥಾನದಲ್ಲಿರುವ ಒಂದು ಸಂಸ್ಥೆಯು (I B) ಸೋರಿಕೆ ಮಾಡಿದ ಟೇಪ್ ಅನ್ನು ಪ್ರಸಾರ ಮಾಡುವಾಗ ಒಂದು ಮಾಧ್ಯಮ ಸಂಸ್ಥೆ ಯಾವ ಎಚ್ಚರಿಕೆ ವಹಿಸಬೇಕಿತ್ತು? ಆ ಟೇಪ್‍ನ ವಿಶ್ವಾಸಾರ್ಹತೆಯನ್ನು ಖಚಿತಪಡಿಸಬೇಕಿತ್ತಲ್ಲವೇ? ಸೋರಿಕೆಯಾದ ಸಂದರ್ಭ ಮತ್ತು ಅದನ್ನು ಪ್ರಸಾರ ಮಾಡು ವುದರಿಂದ ಆಗುವ ಪರಿಣಾಮಗಳ ಬಗ್ಗೆ ಆಲೋಚಿಸಬೇಕಿತ್ತಲ್ಲವೇ?
   ಆ ಟೇಪ್ ನಕಲಿ ಮತ್ತು ಕೃತಕವಾಗಿ ತಯಾರಿಸಲಾದದ್ದು ಎಂಬುದಾಗಿ ಕೆಲವು ದಿನಗಳ ಬಳಿಕ ಸುದ್ದಿ ಹೊರಬಿತ್ತು.
   ನಿಜವಾಗಿ, ಭಯೋತ್ಪಾದನೆ ಎಂಬುದು ಈ ದೇಶದ ಮಾಧ್ಯಮಗಳ ಪಾಲಿಗೆ ಅತ್ಯಂತ ಜನಪ್ರಿಯ ಇಶ್ಯೂ. ಬಡತನ, ಹಸಿವು, ನೆರೆ, ಅಪೌಷ್ಠಿಕತೆ.. ಮುಂತಾದ ವಿಷಯಗಳನ್ನು ಚರ್ಚಿಸುವಾಗ ಪಾಲಿಸಬೇಕಾದ ಜಾಗರೂಕತೆಯನ್ನು ಇಲ್ಲಿ ಪಾಲಿಸಬೇಕಿಲ್ಲ. ಮೂಲಗಳನ್ನು ಉದ್ಧರಿಸಿ ಯಾವ ಕಟ್ಟುಕತೆಯನ್ನೂ ಪ್ರಕಟಿಸಿದರೂ ಸಲ್ಲುವ ಒಂದು ಕ್ಷೇತ್ರ ಇದು. ಮೂಲಗಳನ್ನು ಪತ್ರಕರ್ತ ಓದುಗರೊಂದಿಗೆ ಹಂಚಿಕೊಳ್ಳಬೇಕಿಲ್ಲ. ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದಕ್ಕಾಗಿ ಪತ್ರಿಕೆಯ ಇಲ್ಲವೇ ಪತ್ರಕರ್ತರ ಪರವಾನಿಗೆ ರದ್ದಾಗುವ ಭೀತಿಯೂ ಇಲ್ಲ. ಯಾಕೆಂದರೆ ಅಂಥದ್ದೊಂದು ವ್ಯವಸ್ಥೆ ಮಾಧ್ಯಮ ಕ್ಷೇತ್ರದಲ್ಲೇ ಇಲ್ಲ. ಮಾಧ್ಯಮ ಕ್ಷೇತ್ರಕ್ಕಿರುವ ಈ ಅಗಣಿತ ಸ್ವಾತಂತ್ರ್ಯವೇ ಇವತ್ತು ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವುದಕ್ಕೆ ಕಾರಣವಾಗುತ್ತಿದೆ. ಅನಾಮಿಕ ಮುಲಗಳನ್ನು ಉದ್ಧರಿಸಿ ಸುದ್ದಿ ಹೆಣೆಯುವುದಕ್ಕೆ ಅಮೇರಿಕದ ದಿ ನ್ಯಾಶನಲ್ ಪಬ್ಲಿಕ್ ರೇಡಿಯೋವು ಒಂದು ನಿಯಮವನ್ನು ರೂಪಿಸಿದೆ. 'ಮೂಲಗಳು ತಿಳಿಸಿವೆ' ಎಂಬ ಉಲ್ಲೇಖದೊಂದಿಗೆ ಸುದ್ದಿ ಪ್ರಕಟಗೊಳ್ಳಬೇಕಾದರೆ ಆ ಮೂಲಗಳ ವಿಶ್ವಾಸಾರ್ಹತೆಯನ್ನು ಸಂಪಾದಕರು ಖಚಿತಪಡಿಸಿರಬೇಕು. ಒಂದು ವೇಳೆ ಪ್ರಕಟವಾಗುವ ಸುದ್ದಿಯು ಗಂಭೀರ ಆರೋಪ ಹೊರಿಸುವಂಥದ್ದಾದರೆ, ಆ ಮೂಲಗಳನ್ನು ಅಡಗಿಸದೇ ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು ಎಂದು ಆ ನಿಯಮ ಹೇಳುತ್ತದೆ. ಅಷ್ಟಕ್ಕೂ, ಈ ನಿಯಮವನ್ನು ನಮ್ಮ ಪತ್ರಿಕೆಗಳು ಅಳವಡಿಸಿಕೊಂಡದ್ದೇ ಆಗಿದ್ದರೆ ಪರಿಸ್ಥಿತಿಯಾದರೂ ಹೇಗಿರುತ್ತಿತ್ತು? ಭಯೋತ್ಪಾದನೆಯ ಹೆಸರಿನಲ್ಲಿ ಪ್ರಕಟವಾಗುವ ಶೇ. 99ರಷ್ಟು ಸುದ್ದಿಗಳೂ ಅನಾಮಿಕ ಮೂಲಗಳ ಆಧಾರದಲ್ಲೇ ರಚಿತವಾದವುಗಳಲ್ಲವೇ? ಒಂದು ವೇಳೆ, ಸುದ್ದಿಯನ್ನು ಖಚಿತಪಡಿಸಿ ಎಂದು ಓದುಗರು ಪತ್ರಿಕಾ ಕಚೇರಿಗಳ ಎದುರು ನಿಂತು ಒತ್ತಾಯಿಸಿದರೆ ಏನಾದೀತು? ಮೂಲಗಳ ವಿವರಗಳನ್ನು ಬಹಿರಂಗ ಪಡಿಸಿ ಎಂದು ಚಾನೆಲ್‍ಗಳ ಮುಂದೆ ಪ್ರತಿಭಟನೆ ನಡೆಸಿದರೆ ಅವು ಏನುತ್ತರ ಕೊಟ್ಟಾವು? ಸುದ್ಧಿಯನ್ನು ಖಚಿತಪಡಿಸಿಕೊಳ್ಳದೆ ಬಹಿರಂಗಪಡಿಸಬಾರದು  [ತೀರ್ಮಾನ ಕೈಗೊಳ್ಳಬಾರದು]  (ಪವಿತ್ರ ಕುರ್ಆನ್ : 49 - 6) ಎಂಬ ನೀತಿಸಂಹಿತೆಗೇಕೆ ಮಾಧ್ಯಮಗಳು ಬದ್ಧವಾಗುತ್ತಿಲ್ಲ? ಅಂದಹಾಗೆ,
    ಗುಜರಾತ್‍ನಲ್ಲಿ ಮುಸ್ಲಿಮರ ಜನಸಂಖ್ಯೆ ಶೇ. 10. ಆದರೆ ಶೇ. 22 ಮಂದಿ ಅಲ್ಲಿನ ಜೈಲಲ್ಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ
ಮುಸ್ಲಿಮರ ಜನಸಂಖ್ಯೆ ಶೇ. 25. ಆದರೆ ಜೈಲಲ್ಲಿರುವವರು ಶೇ. 46. ಉತ್ತರ ಪ್ರದೇಶದಲ್ಲಿ ಇವರ ಸಂಖ್ಯೆ ಶೇ. 21.. ರಾಷ್ಟ್ರೀಯ ಕ್ರೈಮ್ ಬ್ಯೂರೋವು 2011ರಲ್ಲಿ ಬಿಡುಗಡೆಗೊಳಿಸಿದ ಬಂಧಿತರ ಈ ಅಂಕಿ-ಅಂಶಗಳೆಲ್ಲ ಹೇಳುವುದಾದರೂ ಏನನ್ನು?
ನಿಜವಾಗಿ, ಮುಸ್ಲಿಮರು ವ್ಯವಸ್ಥೆಯ ಪಾಲಿಗೆ ಅತ್ಯಂತ ಸುಲಭದ ತುತ್ತು. ಭಯೋತ್ಪಾದನೆ ಅಥವಾ ಇನ್ನಿತರ ಪ್ರಕರಣಗಳಲ್ಲಿ ಮುಸ್ಲಿಮರನ್ನು ಬಂಧಿಸುವುದಕ್ಕೂ ಇತರರನ್ನು ಬಂಧಿಸುವುದಕ್ಕೂ ವ್ಯತ್ಯಾಸಗಳಿವೆ. ಮುಸ್ಲಿಮರು ಬಂಧನಕ್ಕೆ ಅರ್ಹರು ಎಂಬೊಂದು ವಾತಾವರಣವನ್ನು ದೇಶದಲ್ಲಿ ಈಗಾಗಲೇ ಸೃಷ್ಟಿಸಲಾಗಿದೆ. ಅನುಮಾನಾಸ್ಪದ ಪ್ರಕರಣಗಳಲ್ಲಿ ಜೈಲಿಗೆ ಹೋಗುವವರಲ್ಲಿ ಅತ್ಯಂತ ಹೆಚ್ಚು ಮಂದಿ ಮುಸ್ಲಿಮರೇ. ಕಾನೂನಿನ ಬಗ್ಗೆ ಮುಸ್ಲಿಮರಲ್ಲಿರುವ ತಿಳುವಳಿಕೆಯ ಕೊರತೆ, ಬಡತನ, ಪೊಲೀಸು ಠಾಣೆ- ನ್ಯಾಯಾಂಗಗಳ ಬಗೆಗಿರುವ ಭಯ, ಮಾಧ್ಯಮಗಳ ಅಪಪ್ರಚಾರಗಳು.. ಒಂದು ಹಂತದವರೆಗೆ ಮುಸ್ಲಿಮರ ಮೇಲೆ ತೀವ್ರ ಪರಿಣಾಮ ಬೀರಿವೆ. ಸಣ್ಣ-ಪುಟ್ಟ ಪ್ರಕರಣಗಳಿಗಾಗಿ ಮುಸ್ಲಿಮರನ್ನು ಬಂಧಿಸುವಂತೆ ಈ ದೇಶದಲ್ಲಿ ಇನ್ನಾರನ್ನೂ ಬಂಧಿಸುತ್ತಿಲ್ಲ. ಈ ದೇಶದಲ್ಲಿ ನಡೆದ ನಕಲಿ ಎನ್‍ಕೌಂಟರ್‍ಗಳಿಗೆ ಬಲಿಯಾಗಿರುವವರಲ್ಲಿ ಶೇ. 95ಕ್ಕಿಂತಲೂ ಹೆಚ್ಚು ಮಂದಿ ಮುಸ್ಲಿಮರೇ. ಆದರೆ ಮಾಧ್ಯಮಗಳು ಇಂಥ ಕಟು ಸತ್ಯಗಳಿಗೆ  ತನ್ನ ಕ್ಯಾಮರಾ ತಿರುಗಿಸುವುದು ತೀರಾ ಕಡಿಮೆ. ಹಾಗಂತ ಮುಸ್ಲಿಮರು ನೂರು ಶೇಕಡ ಸುಭಗರು ಎಂದು ಹೇಳುತ್ತಿಲ್ಲ. ಅಪರಾಧಿಗಳು ಅವರಲ್ಲೂ ಇದ್ದಾರೆ. ಆದರೆ ಅದನ್ನು ಉಬ್ಬಿಸಿಯೋ ತಿರುಚಿಯೋ ಅಥವಾ ವಿಕೃತಗೊಳಿಸಿಯೋ ಜನರ ಮುಂದೆ ಮಂಡಿಸುವುದೇಕೆ? ಮಾಲೆಗಾಂವ್ ಮಸೀದಿಯ ದಫನ ಭೂಮಿಯಲ್ಲಿ 2006 ಸೆ. 8ರಂದು ಬಾಂಬ್ ಸ್ಫೋಟಗೊಂಡಾಗ, ‘ಪಾಕ್ ಯುವತಿಯ ಸಹಿತ 30 ಮಂದಿ ಸಾವು..’ ಎಂದು ಆಂಗ್ಲ ಪತ್ರಿಕೆಯೊಂದು ವರದಿ  ಮಾಡಿತ್ತು. ನಿಜವಾಗಿ ಸಾವಿಗೀಡಾದವರಲ್ಲಿ ಪಾಕಿಸ್ತಾನದವರು ಯಾರೂ ಇರಲಿಲ್ಲ. ಹಾಗಿದ್ದೂ ಇಂಥ ಸುದ್ದಿಗಳು ಪ್ರಕಟವಾಗುವುದಕ್ಕೆ ಕಾರಣಗಳೇನು? ಪಾಕನ್ನು ಹೆಸರಿಸುವ ಮುಖಾಂತರ ಇಲ್ಲಿನ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದು ಅಥವಾ ತನಿಖೆಯ ಹಾದಿಯನ್ನು ತಪ್ಪಿಸುವುದರ ಹೊರತು ಇದಕ್ಕೆ ಬೇರೆ ಯಾವ ಉದ್ದೇಶಗಳಿವೆ? 2011 ಸೆಪ್ಟೆಂಬರ್ ನಲ್ಲಿ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ, ಪ್ರಮುಖ ಆಂಗ್ಲ ಪತ್ರಿಕೆಯಲ್ಲಿ ಖ್ಯಾತ ನ್ಯಾಯವಾದಿ ಸುಬ್ರಹ್ಮಣ್ಯ ಸ್ವಾಮಿಯವರು How to wipe out Islamic terror - ‘ಇಸ್ಲಾಮೀ ಭಯೋತ್ಪಾದಕತೆಯನ್ನು ನಿರ್ಮೂಲನಗೊಳಿಸುವುದು ಹೇಗೆ’- ಎಂಬ ಲೇಖನ ಬರೆದರು. ಮುಸ್ಲಿಮರ ಮತದಾನದ ಹಕ್ಕನ್ನು ಮೊಟಕುಗೊಳಿಸುವ ಬಗ್ಗೆ ಬಲವಾಗಿ ವಾದಿಸಿದರು. ಇವೆಲ್ಲ ಏನು? ಪದೇ ಪದೇ ಯಾಕೆ ಹೀಗಾಗುತ್ತದೆ?
   ಇತ್ತೀಚೆಗೆ ಎಸ್.ಐ.ಓ. ರಾಜ್ಯ ಘಟಕವು ಬಿಡುಗಡೆಗೊಳಿಸಿದ ಮೀಡಿಯಾ ಆಂಡ್ ಟೆರರ್: ಫ್ಯಾಕ್ಟ್ಸ್ ಆಂಡ್ ಫಿಕ್ಷನ್ ಎಂಬ ಕೃತಿಯನ್ನು ಓದುತ್ತಾ ಇವೆಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.

No comments:

Post a Comment