Thursday, March 25, 2021

ಗಲ್ಫ್ ನಿಂದ ಊರಿಗೆ ಬಂದ ಅವರಿಗೆ ಪತ್ನಿ ಅರ್ಥವಾದಳು



ಸಣ್ಣ ಜಗಳ
ಪುಟ್ಟ ಭಿನ್ನಾಭಿಪ್ರಾಯ
ಅವಳು ಬೆಳಗ್ಗಿನ ಉಪಾಹಾರವನ್ನು ಪತಿಗೆ ಬಡಿಸಿಟ್ಟು ತಾನು ಸೇವಿಸದೆಯೇ ಕಚೇರಿಗೆ ತೆರಳಿದಳು. ಮೊಬೈಲನ್ನು ಮನೆಯಲ್ಲೇ   ಬಿಟ್ಟು ಬಂದಿರುವುದು ಕಚೇರಿಗೆ ತಲುಪಿದ ಬಳಿಕ ಗೊತ್ತಾಯಿತು. ಛೆ ಎಂದು ಸುಮ್ಮನಾದಳು.
ಒಂದರ್ಧ ಗಂಟೆ ಕಳೆಯಿತು.
ಅಟೆಂಡರ್‌ನ ಕರೆಯನ್ನು ಅನುಸರಿಸಿ ಅವಳು ಕಚೇರಿಯಿಂದ ಹೊರಬಂದಳು. ನೋಡಿದರೆ ಪತಿ. ಆತ ಟಿಫಿನ್ ಬಾಕ್ಸನ್ನೂ  ಮೊಬೈಲನ್ನೂ ಆಕೆಯ ಕೈಗಿತ್ತ. ಬಳಿಕ ಪುಟ್ಟ ನಗುವನ್ನು ಚೆಲ್ಲಿ ಹೊರಟು ಹೋದ. ನೀವು ಉಪಾಹಾರ ಸೇವಿಸಿದಿರಾ... ಎಂಬ ಪ್ರಶ್ನೆ  ಅವಳ ಗಂಟಲಲ್ಲೇ  ಉಳಿಯಿತು.
ಉಪಾಹಾರ ಸೇವಿಸಿದ ಬಳಿಕ ಅವಳು ಮೊಬೈಲನ್ನು ಕೈಗೆತ್ತಿ ಕೊಂಡಳು. ಅವರಿಗೆ ಸಾರಿ ಅನ್ನಬೇಕು. ವಾಟ್ಸಪ್ ತೆರೆದಳು.
ಪತಿಯ ಸಂದೇಶ ಸ್ವಾಗತಿಸಿತು.
‘ನೀನು ಬಡಿಸಿಟ್ಟ ಉಪಾಹಾರ ಸೇವಿಸಬೇಕೆಂದಿದ್ದೆ. ಆದರೆ ನಿನ್ನ ನೆನಪಾಯಿತು. ಹಾಗೆಯೇ ಮುಚ್ಚಿಟ್ಟು ಬಂದಿದ್ದೇನೆ.  ಸ್ಸಾರಿ...’
ಅವಳ ಕೆನ್ನೆ ಒದ್ದೆಯಾಯಿತು.
+ + +
ವರ್ಷಗಳ ಹಿಂದೆ ನಾನೇ ಬರೆದಿರುವ ಈ ಮೇಲಿನ ಕತೆಯನ್ನು ಇಲ್ಲಿ ಹಂಚಿಕೊಳ್ಳುವುದಕ್ಕೆ ಕಾರಣವೊಂದಿದೆ-
ಇತ್ತೀಚೆಗೆ ಮದುವೆ ಕಾರ್ಯಕ್ರಮಕ್ಕೆಂದು ಹೊರಟಿದ್ದೆ. ದಾರಿಯಲ್ಲಿ ಗೆಳೆಯನನ್ನು ಕಾಯುತ್ತಾ ಬಳಿಕ ಹತ್ತಿರದ ಅಂಗಡಿ ಯಲ್ಲಿ ಕುಳಿತೆ  ಮತ್ತು ಅಂಗಡಿಯ ವ್ಯಕ್ತಿಯನ್ನು ಮಾತಿಗೆಳೆದೆ. ಅದು ಒಂದು ದೊಡ್ಡ ಕತೆ.
ಗಲ್ಫ್ ನಲ್ಲಿ   ಹಲವು ವರ್ಷಗಳ ಕಾಲ ದುಡಿದೂ ದುಡಿದೂ ಸುಸ್ತಾಗಿ ಊರಿಗೆ ಬಂದು ನೆಮ್ಮದಿಯಿಲ್ಲದೇ ಕಳೆದು ಹೋದ  ವೃತ್ತಾಂತವನ್ನು ಅಂಗಡಿಯ ವ್ಯಕ್ತಿ ಎದುರಿಟ್ಟರು. ಅಂಗಡಿ ಅವರದ್ದಲ್ಲ. ಮಾಲಿಕ ಬೇರೆ. ಅವರು ಸಂಬಳಕ್ಕಾಗಿ ದುಡಿಯುತ್ತಿದ್ದಾರೆ.  ಗಲ್ಫ್ ನಲ್ಲಿದ್ದ ಕಾಲ ಮತ್ತು ಆ ಕಾಲದ ಕಾರು-ಬಾರನ್ನು ಸ್ಮರಿಸುವಾಗ ಅವರು ಭಾವುಕರಾದರು.
ನಾಲ್ಕೈದು  ಅಣ್ಣ-ತಮ್ಮಂದಿರು ಇರುವ ತುಂಬು ಕುಟುಂಬ ಅವರದು. 50ರ ಆಸು-ಪಾಸಿನ ಪ್ರಾಯ. ಗಲ್ಫಲ್ಲಿದ್ದ ವೇಳೆ ಮನೆ  ನಿರ್ವಹಣೆಯೆಲ್ಲ ಅಣ್ಣ-ತಮ್ಮಂದಿರದ್ದೇ. ಊರಿನಲ್ಲಿ ಏನಾದರೂ ಮಾಡಿಡಬೇಕು, ಭವಿಷ್ಯಕ್ಕಾಗಿ ಏನಾದರೂ ಹೂಡಿಕೆ ಮಾಡಬೇಕು  ಎಂಬ ಯೋಚನೆಯಿಂದ ದುಡಿದದ್ದನ್ನು ಊರಿಗೆ ಕಳುಹಿಸುತ್ತಾ ಕನಸು ಕಂಡದ್ದೂ ಆಯಿತು. ಅಣ್ಣ-ತಮ್ಮಂದಿರು ಬೇರೆ ಬೇರೆ ಮನೆ  ಮಾಡಿಕೊಂಡು ಅಣು ಕುಟುಂಬವಾಗುವುದಕ್ಕಿಂತ ಒಂದೇ ಮನೆಯಲ್ಲಿದ್ದು ಅವಿಭಕ್ತ ಕುಟುಂಬವಾಗುವುದು ಅವರ ಆಸೆಯಾಗಿತ್ತು.  ಪತ್ನಿ ಏನಾದರೂ ಸಮಸ್ಯೆ, ಸಂಕಟ ಹೇಳಿಕೊಂಡರೂ ಕಿವಿಗೆ ಹಾಕಿಕೊಂಡದ್ದು ಕಡಿಮೆ. ಬೇರೆ ಮನೆ ಮಾಡುವುದರಿಂದ  ಸಂಬಂಧಗಳು ಹಾಳಾಗುತ್ತವೆ ಎಂಬ ಖಚಿತ ಅಭಿಪ್ರಾಯ ಅವರದ್ದಾದರೆ, ಪತ್ನಿಯ ಅಭಿಪ್ರಾಯ ಬೇರೆಯದೇ. ಅಣ್ಣ-ತಮ್ಮಂದಿರಿಗೆ  ಮದುವೆಯೂ ಆಯಿತು. ಒಂದೇ ಮನೆ. ಸೊಸೆಯಂದಿರ ಸಂಖ್ಯೆಯೂ ಹೆಚ್ಚಾಯಿತು. ಆದರೂ ಬೇರೆ ಮನೆ ಮಾಡುವ ಬಗ್ಗೆ  ಅವರು ಆಲೋಚಿಸಲಿಲ್ಲ. ಅಂಥ ಆಲೋಚನೆಯೇ ಕೆಟ್ಟದು ಎಂಬ ಭಾವ ಅವರದ್ದು. ಮನೆಯಲ್ಲಿ ಅಭಿಪ್ರಾಯ ಬೇಧಗಳು  ಉಂಟಾಗುವುದು, ಮಕ್ಕಳ ವಿಷಯದಲ್ಲಿ ಆಗುವ ನೋವು-ಸಂಕಟಗಳನ್ನು ಪತ್ನಿ ಹೇಳಿಕೊಳ್ಳುತ್ತಿದ್ದರೂ ಅವೆಲ್ಲವನ್ನೂ ನಿರ್ಲಕ್ಷಿಸಿದ್ದೇ   ಹೆಚ್ಚು. ದೊಡ್ಡ ಕುಟುಂಬ ಅಂದಮೇಲೆ ಇಂಥದ್ದೆಲ್ಲ ಸಾಮಾನ್ಯ ಎಂಬ ಭಾವ.
ಕೊನೆಗೂ ಊರಿಗೆ ಮರಳಲೇಬೇಕಾದ ಅನಿವಾರ್ಯತೆ ಎದುರಾಯಿತು.
ಪತ್ನಿಯ ಮಾತನ್ನೂ ಆಲಿಸಬೇಕಿತ್ತು ಎಂದು ಅವರಿಗೆ ಅನಿ ಸಿದ್ದು ಊರಿಗೆ ಬಂದ ಬಳಿಕ. ಅಣ್ಣ-ತಮ್ಮಂದಿರೇನೋ ಉದ್ಯೋಗ,  ಬದುಕು-ಭಾವ ಅಂತ ಅವರವರ ಪ್ರಪಂಚದಲ್ಲಿ ಇದ್ದರು. ನಮ್ಮದೇ ಆದ ಮನೆಯೊಂದಿರಲಿ ಎಂಬ ಪತ್ನಿಯ ಆಸೆಗೆ  ತಣ್ಣೀರೆರಚಿಕೊಂಡೇ ಬಂದ ಅವರಿಗೆ ಮೊದಲ ಬಾರಿ ಆ ಬಗ್ಗೆ ಪಶ್ಚಾತ್ತಾಪವಾಯಿತು. ಊರಲ್ಲಿ ತನ್ನದು ಅನ್ನುವ ಏನೂ ಇಲ್ಲ...
ಅಷ್ಟಕ್ಕೂ,
ಅವರಲ್ಲಿ ಹೇಳಿಕೊಳ್ಳುವುದಕ್ಕೆ ಇನ್ನಷ್ಟು ಸಂಗತಿಗಳಿದ್ದುವು. ನಿಜವಾಗಿ,
ಪತಿ ಮತ್ತು ಪತ್ನಿಯ ನಡುವೆ ವಿರಸ ಮೂಡುವುದಕ್ಕೆ ನಿರ್ದಿಷ್ಟ ಕಾರಣಗಳೇ ಬೇಕಾಗಿಲ್ಲ. ಬಾಹ್ಯನೋಟಕ್ಕೆ ತೃಣಸಮಾನ ಎಂದು  ಕಾಣುವ ಸಂಗತಿಯೇ ಪತ್ನಿಗೋ ಅಥವಾ ಪತಿಗೋ ಪರ್ವತದಂಥ ಕಾರಣ ಆಗಿ ಪರಿವರ್ತಿತವಾಗಬಹುದು. ಸಂಜೆ ಕಚೇರಿಯಿಂದ  ಮನೆಗೆ ಬಂದಾಗ ಪತ್ನಿ ಸ್ವಾಗತಿಸಲಿಲ್ಲವೆಂದೋ ಉಪಚಾರ ಮಾಡಿಲ್ಲವೆಂದೋ ಮುನಿಸಿಕೊಳ್ಳುವ ಪತಿಯಂದಿರಿದ್ದಾರೆ. ಪತ್ನಿಯೇ ಏಕೆ  ಉಪಚರಿಸಬೇಕು, ಪತ್ನಿ ಕಚೇರಿಯಿಂದ ಸಂಜೆ ಮನೆಗೆ ಬಂದಾಗ ಪತಿ ಉಪಚರಿಸುತ್ತಾರಾ, ಸ್ವಾಗತಿಸುತ್ತಾರಾ ಎಂಬ ಪ್ರಶ್ನೆ  ಆಕೆಯಲ್ಲೂ ಇರಬಹುದು. ಇವು ಎರಡರಲ್ಲಿ ಒಂದು ಗಂಭೀರ ಮತ್ತು ಇನ್ನೊಂದು ಗೌಣ ಎಂಬಂತಾಗಬೇಕಿಲ್ಲ. ಎರಡು ಪ್ರಶ್ನೆಗಳಿಗೂ ಮಹತ್ವವಿದೆ ಮತ್ತು ಎರಡನ್ನೂ ಅತ್ಯಂತ ನಾಜೂಕಿನಿಂದ ನಿಭಾಯಿಸುವ ಕಲೆ ಪತಿ ಮತ್ತು ಪತ್ನಿ ಇಬ್ಬರಿಗೂ  ಗೊತ್ತಿರಬೇಕು. ತಾನು ಹೊರಗಿನಿಂದ ಮನೆಗೆ ಬಂದಾಗ ತನ್ನನ್ನು ಸ್ವಾಗತಿಸುವುದು, ಉಪಚರಿಸುವುದು, ನೀರೋ ಇನ್ನೇನನ್ನೋ  ತಂದು ಕೊಡುವುದು ಪತ್ನಿಯ ಕಡ್ಡಾಯ ಕರ್ತವ್ಯ ಎಂದು ನಂಬಿರುವ ಪತಿಯಂದಿರಿದ್ದಾರೆ. ಮಾತ್ರವಲ್ಲ, ಅದನ್ನು ತಮ್ಮ ಕಡ್ಡಾಯ  ಕರ್ತವ್ಯ ಎಂದು ನಂಬಿರುವ ಪತ್ನಿಯಂದಿರೂ  ಇದ್ದಾರೆ. ಅದೇವೇಳೆ, ಪತ್ನಿಯನ್ನು ಹಾಗೆ ಸ್ವಾಗತಿಸುವುದು, ಉಪಚರಿಸುವುದು  ಪತಿಯ ವ್ಯಕ್ತಿತ್ವಕ್ಕೆ ಕುಂದು ಎಂದು ಭಾವಿಸುವ ಪುರುಷರಿದ್ದಾರೆ. ಸೇವೆ ಮಾಡಿಸಿಕೊಳ್ಳಬೇಕಾದವರು ಪುರುಷರು ಮತ್ತು  ಮಾಡಬೇಕಾದವರು ಮಹಿಳೆಯರು ಎಂಬ ಅಲಿಖಿತ ನಿಯಮ ಸಾಮಾಜಿಕವಾಗಿ ಇದೆ. ಇಲ್ಲಿ ಇನ್ನೂ ಒಂದು ನಾಜೂಕಿನ ನಡೆಯೂ  ಇದೆ. ದುಡಿದು ಸಂಜೆ ಮನೆಗೆ ಬರುವ ಪತಿಗೆ ನೀರು ತಂದು ಕೊಡುವುದು, ಬಾಗಿಲಲ್ಲಿ ನಿಂತು ಸ್ವಾಗತಿಸುವುದೆಲ್ಲ ಪರಸ್ಪರ ಪ್ರೀತಿ,  ಒಲುಮೆಯನ್ನು ವಿನಿಮಯ ಮಾಡಿಕೊಳ್ಳುವ ಸಂದರ್ಭವಾಗಿ ಪರಿಗಣಿಸುವ ಹೆಣ್ಣು ಮತ್ತು ಗಂಡು ಇಬ್ಬರೂ ಇದ್ದಾರೆ. ಅದು ಹೆಣ್ಣಿನ  ಕರ್ತವ್ಯ ಎಂದು ಬಗೆಯದ ಗಂಡೂ ಮತ್ತು ಹಾಗೆ ಮಾಡುವುದರಿಂದ ಪರಸ್ಪರರ ನಡುವಿನ ಸಂಬಂಧಕ್ಕೆ ಬಲ ಬರುತ್ತದೆ ಎಂದು  ನಂಬುವ ಹೆಣ್ಣೂ ಇದ್ದಾರೆ. ಅಷ್ಟಕ್ಕೂ,
ದಾಂಪತ್ಯ ಬದುಕು ತರ್ಕದ ಮೇಲೆ ನಿಂತಿಲ್ಲ. ಅದು ಪರಸ್ಪರರ ನಡುವಿನ ತಿಳುವಳಿಕೆಯ ಮೇಲೆ ನಿಂತಿದೆ. ತಾನು ಮನೆ  ಪ್ರವೇಶಿಸುವಾಗ ಸ್ವಾಗತಿಸಿದ್ದೀಯಾ, ನೀರು ತಂದು ಕೊಟ್ಟು ಪ್ರೀತಿಸಿದ್ದೀಯಾ ಎಂಬ ಪತಿಯ ಪ್ರಶ್ನೆಗೆ ಎದುರಾಗಿ, ನೀನು ಹಾಗೆ  ಎಂದಾದರೂ ಮಾಡಿದ್ದೀಯಾ ಎಂದು ಪ್ರತಿ ಪ್ರಶ್ನೆ ಮಾಡುವ ಹಕ್ಕು ಪತ್ನಿಗೆ ಇದೆ ಮತ್ತು ಪತಿ-ಪತ್ನಿ ಇಬ್ಬರೂ ಜೋಡಿಗಳು ಎಂಬ  ವ್ಯಾಖ್ಯಾನಕ್ಕೆ ಇಂಥ ಪ್ರಶ್ನೆಗಳು ತಕ್ಕುದಾಗಿಯೂ ಇವೆ. ಜೋಡಿಗಳಲ್ಲಿ ಜವಾಬ್ದಾರಿ ಇಬ್ಬರಿಗೂ ಇದೆ. ಆದರೆ, ಇಂಥ ಸಂಗತಿಗಳೆಲ್ಲ  ತರ್ಕವನ್ನೇ ಅವಲಂಬಿಸಿಕೊಂಡಿಲ್ಲ. ಇವು ತರ್ಕಗಳಾಚೆಗಿನ ಸಂಗತಿಗಳು. ಹೃದಯ ಬೆಸೆಯುವ ಸಂದರ್ಭಗಳು. ಅವನ್ನು  ತರ್ಕಗಳಾಚೆಗೆ ಕೊಂಡೊಯ್ಯಬೇಕು. ಪತಿ ಬಂದಾಗ ಪತ್ನಿ ಎದುರುಗೊಳ್ಳುವುದು ಅಥವಾ ಪತ್ನಿಯನ್ನು ಮನೆಗೆ ಸ್ವಾಗತಿಸುವುದು  ಇತ್ಯಾದಿಗಳೆಲ್ಲ ಬಾಹ್ಯನೋಟಕ್ಕೆ ಸಣ್ಣ ಸಂಗತಿಗಳಾದರೂ ಆಂತರಿಕವಾಗಿ ಪ್ರೀತಿ ಉಕ್ಕಿಸುವ ಬಹುದೊಡ್ಡ ಸನ್ನಿವೇಶಗಳು. ಇವು  ತರ್ಕಗಳಾಚೆಗೆ ನಡೆಯುತ್ತಿರಬೇಕಾದ ಸಂಗತಿಗಳು. ವಿಷಾದ ಏನೆಂದರೆ,
ದಾಂಪತ್ಯ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಮತ್ತು ಊರ್ಜಿತದಲ್ಲಿಡುವುದಕ್ಕೆ ಹೆಣ್ಣು ಬಹಳವೇ ಪಾಡು ಪಡುತ್ತಾಳೆ. ಹೆಣ್ಣಿಗೆ  ಹೋಲಿಸಿದರೆ, ಗಂಡಿನ ಪಾಡು ಕಡಿಮೆ. ಆರಂಭದಲ್ಲಿ ಉಲ್ಲೇಖಿಸಲಾದ ವ್ಯಕ್ತಿಗೆ ಸಂಬಂಧಿಸಿಯೂ ಇದು ಅನ್ವಯ. ಅವಿಭಕ್ತ  ಕುಟುಂಬದ ಸಂಕಟಗಳನ್ನು ಅವರು ಗಲ್ಫಲ್ಲಿದ್ದಾಗ ಪತ್ನಿ ಹೇಳುತ್ತಿರಲಿಲ್ಲ ಎಂದಲ್ಲ. ಆದರೆ, ಆ ಮಾತುಗಳನ್ನು ಪತ್ನಿಯೋರ್ವಳ  ಮಹತ್ವಾಕಾಂಕ್ಷೆಯ ರೂಪದಲ್ಲಿ ಅವರು ಕಂಡಿದ್ದರೇ ಹೊರತು ಅದನ್ನೊಂದು ಗಂಭೀರ ಸಂಗತಿಯಾಗಿ ಎತ್ತಿಕೊಂಡಿರಲೇ ಇಲ್ಲ.  ಅಣ್ಣ-ತಮ್ಮಂದಿರಲ್ಲೇ  ಸಹಮತಕ್ಕೆ ಬರಲು ಸಾಧ್ಯವಾಗದ ಅಸಂಖ್ಯ ವಿಷಯಗಳಿರುವಾಗ ರಕ್ತ ಸಂಬಂಧಿಗಳಲ್ಲದ ಸೊಸೆಯಂದಿರ  ನಡುವೆ ಭಿನ್ನಾಭಿಪ್ರಾಯ ಬರುವುದನ್ನು ನಿರಾಕರಿಸಲಾಗದು ಅಥವಾ ನಿರ್ಲಕ್ಷಿಸಬಾರದು ಎಂಬ ರೀತಿಯಲ್ಲಿ ಅವರು  ಆಲೋಚಿಸಿಯೂ ಇರಲಿಲ್ಲ. ಸಾಮಾನ್ಯವಾಗಿ,
ಪುರುಷರು ಬೆಳಿಗ್ಗೆ ಮನೆಯಿಂದ ಹೊರ ಹೋದರೆ ಮತ್ತೆ ಮನೆ ಮುಟ್ಟುವುದು ಸಂಜೆಯೋ ರಾತ್ರಿಯೋ ಆದಾಗ. ಆದರೆ  ಮಹಿಳೆಯರು 24 ಗಂಟೆಯೂ ಮನೆಯೊಳಗೆಯೇ ಇರುತ್ತಾರೆ. ಆದ್ದರಿಂದ, ಮನಸ್ತಾಪದ ಸಂಗತಿಗಳು ಮಹಿಳೆಯರ ನಡುವೆ  ಹೆಚ್ಚಿರುವುದಕ್ಕೆ ಅವಕಾಶ ಇದೆ. ಪುರುಷರು ಇದನ್ನು ನಿರ್ಲಕ್ಷಿಸಿದಾಗ ಕ್ರಮೇಣ ಅದು ಅವರ ನೆಮ್ಮದಿಯನ್ನೂ ಕೆಡಿಸುತ್ತದೆ. ಪತ್ನಿ  ತೀರಾ ಸಣ್ಣ ಸಂಗತಿಗೂ ಪತಿಯೊಂದಿಗೆ ಕೋಪಿಸಿಕೊಳ್ಳುತ್ತಾಳೆ. ಜಗಳ ಕಾಯುತ್ತಾಳೆ. ಮಕ್ಕಳ ಮೇಲೆ ರೇಗಾಡತೊಡಗುತ್ತಾಳೆ. ಹೆಚ್ಚಿನ  ಸಮಯ ಮನೆಯಿಂದ ಹೊರಗಿರುವ ಅಥವಾ ವಿದೇಶ ದಲ್ಲಿರುವ ಪುರುಷರಿಗೆ ಅದರ ತೀವ್ರತೆ ಅರ್ಥವಾಗುವುದಿಲ್ಲ. ಅಲ್ಲದೇ,  ಅವಿಭಕ್ತ ಕುಟುಂಬದ ಪರಂಪರೆಯನ್ನು ಕಾಯ್ದುಕೊಳ್ಳು ವುದು ತನ್ನ ಜವಾಬ್ದಾರಿ ಎಂಬ ಭಾವವೂ ಅಲ್ಲಿ ಕೆಲಸ ಮಾಡುತ್ತಿರುತ್ತದೆ.  ಎಲ್ಲಿ ತನ್ನನ್ನು ಕುಟುಂಬಿಕರು ಆಡಿಕೊಳ್ಳುತ್ತಾರೋ ಎಂಬ ಭಯವೂ ಇಂಥ ಸಂದರ್ಭವನ್ನು ಬಿಗಡಾಯಿಸುವಂತೆ ಮಾಡುತ್ತದೆ.  ಆದರೆ,
ಇದರಿಂದಾಗಿ ಆಗುವ ಹಾನಿ ಅಪಾರವಾದುದು. ದಾಂಪತ್ಯ ಸಂಬAಧವು ಸದಾ ಮುಚ್ಚಿದ ಕೆಂಡದAತೆ ನಿಗಿ ನಿಗಿ ಅನ್ನುತ್ತಿರು ತ್ತದೆ.  ಪತಿಯ ತೀರಾ ಪ್ರೇಮದ ಮಾತೂ ಇರಿಯುವ ಮಾತಾಗಿ ಪತ್ನಿಗೆ ಕೇಳಿಸಬಹುದು. ಸದಾ ನೆಮ್ಮದಿ ಕಳೆದುಕೊಂಡು ಬದು ಕುತ್ತಾ  ತನ್ನ ಆರೋಗ್ಯವನ್ನೇ ಆಕೆ ಕೆಡಿಸುತ್ತಿರಬಹುದು. ಮನೆ ಯಲ್ಲಿ ನೆಮ್ಮದಿಯೇ ಹೊರಟು ಹೋಗಿರಬಹುದು. ಬಳಿಕ ವೈದ್ಯರಿಗೆ ಹಣ  ಕೊಡುವ ಪ್ರಕ್ರಿಯೆಗೆ ಅದು ದಾರಿ ತೆರೆಯಬಹುದು. ಹಾಗಂತ,
ಅಣು ಕುಟುಂಬದಲ್ಲೂ ಪತಿ-ಪತ್ನಿ ನಡುವೆ ಸಂಬಂಧ ಬಿಗಡಾಯಿಸುವುದಿಲ್ಲವೇ ಎಂಬ ಪ್ರಶ್ನೆ ಇರಬಹುದು. ಬಿಗಡಾಯಿಸುತ್ತದೆ.  ಆದರೆ, ಅದು ಆರಂಭದಲ್ಲಿ ಉಲ್ಲೇಖಿಸಲಾದ ಗಲ್ಫ್ ವ್ಯಕ್ತಿಗೆ ಸಂಬಂಧಿಸಿದ ರೂಪದಲ್ಲಿರುವುದಿಲ್ಲ. ಇಲ್ಲಿನ ಮುನಿಸು, ಕೋಪ-ತಾ ಪಗಳು ಜಾಣ್ಮೆಯ ಒಂದು ಸ್ಸಾರಿಯಿಂದ, ಒಂದು ಚುಂಬನದಿಂದ ಅಥವಾ ಅಪ್ಪುಗೆಯಿಂದ ಕಳೆದು ಹೋಗುವಂಥದ್ದು.
ಆರಂಭದ ಕತೆ ಅದನ್ನೇ ಹೇಳುತ್ತದೆ.

Saturday, February 27, 2021

ನಮಸ್ಕಾರ, ಅಸ್ಸಲಾಮು ಅಲೈಕುಂ ಮತ್ತು ಮನದೊಳಗಿನ ನೂರು ಭಾವಗಳು...




 ಏ.ಕೆ. ಕುಕ್ಕಿಲ
ಈ ಘಟನೆಗೆ ಒಂದು ತಿಂಗಳ ಪ್ರಾಯವೂ ಆಗಿಲ್ಲ.
ನನ್ನ ಸಂಬಂಧಿಯೋರ್ವರ ಮಗಳಿಗೆ ಇತ್ತೀಚೆಗೆ ಮದುವೆ ನಡೆಯಿತು. ಅವರು ಮುಸ್ಲಿಮ್. ಕಳೆದ ಎರಡು ದಶಕಗಳಿಂದಲೂ  ಅವರು ಬ್ರಾಹ್ಮಣ ಮಾಲಕತ್ವದ ಕಂಪೆನಿಯೊಂದಕ್ಕೆ ಕಚ್ಚಾ ಮಾಲು ಗಳನ್ನು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದಾರೆ. ಸ್ವಂತದ್ದೊಂದು  ಲಾರಿಯಲ್ಲಿ ಕಂಪೆನಿಗೆ ಬೇಕಾದ ಕಚ್ಚಾ ಮಾಲುಗಳನ್ನು ಸರಬರಾಜು ಮಾಡುತ್ತಾ ಎರಡು ದಶಕಗಳನ್ನು ಕಳೆದಿದ್ದಾರೆ.  ಇವರದ್ದೂ ಮತ್ತು ಆ ಬ್ರಾಹ್ಮಣರದ್ದೂ ಒಂದೇ ಊರು. ಗ್ರಾಮೀಣ ಪ್ರದೇಶ. ಮದುವೆಗಿಂತ ವಾರ ಮೊದಲು ಆ ಬ್ರಾಹ್ಮಣರು ಇವರ  ಮನೆಗೆ ಬರುತ್ತಾರೆ. ಇವರ ಕೈಗೆ ಆರೂವರೆ ಲಕ್ಷ ರೂಪಾಯಿಯನ್ನು ಇಡುತ್ತಾರೆ. ನನ್ನ ಸಂಬಂಧಿಗೆ ಆಶ್ಚರ್ಯ. ಅದು ಅನಿರೀಕ್ಷಿತ  ವಿದ್ಯಮಾನ. ಹಣ ಪಡಕೊಂಡರೂ ಆ ಬಗ್ಗೆ ಇರುವ ಅನುಮಾನ ಅವರಿಂದ ದೂರವಾಗಿರಲಿಲ್ಲ. ಹಣವನ್ನು ಸಾಲವಾಗಿ ಕೊಟ್ಟರೋ  ದಾನವಾಗಿ ಕೊಟ್ಟರೋ? ಒಂದುವೇಳೆ ಸಾಲ ಎಂದಾದರೆ ಇದನ್ನು ಹಿಂತಿರುಗಿಸುವ ಬಗೆ ಹೇಗೆ ಎಂಬ ಪ್ರಶ್ನೆಯೊಂದು ಅವರೊಳಗೆ  ಸುಳಿದು ಸೂಚ್ಯವಾಗಿ ವ್ಯಕ್ತವೂ ಆಯಿತು. ಅದನ್ನು ಆ ಬ್ರಾಹ್ಮಣ ಮಾಲಕ ಗ್ರಹಿಸಿದರು. ಮಾತ್ರವಲ್ಲ, ಈ ಹಣ ನನ್ನ ವತಿಯಿಂದ ನಿಮ್ಮ  ಮದುವೆಗೆ ಉಡುಗೊರೆ ಎಂದರು. ಇನ್ನೇನಾದರೂ ಬೇಕಿದ್ದರೆ ಮುಲಾಜಿಲ್ಲದೇ ಹೇಳು, ನಾನು ಕೊಡುತ್ತೇನೆ ಎಂದು ಭರವಸೆ  ನೀಡಿದರು. ಮಾತ್ರವಲ್ಲ, ಮದುವೆ ದಿನದಂದು ಕುಟುಂಬ ಸಹಿತ ಸಂಭ್ರಮದಲ್ಲಿ ಭಾಗಿಯಾದರು. ಅಷ್ಟಕ್ಕೂ,
ಇಂಥ ಮಾನವೀಯ ಘಟನೆಗಳು ಸಮಾಜದಲ್ಲಿ ದಿನನಿತ್ಯ ನಡೆಯುತ್ತಿರುತ್ತವೆ. ಹಿಂದೂಗಳಿಗೆ ಮುಸ್ಲಿಮರು ಮತ್ತು ಮುಸ್ಲಿಮರಿಗೆ  ಹಿಂದೂಗಳು ಪರಸ್ಪರ ನೆರವಾಗುತ್ತಾ, ಸಾಂತ್ವನ ನೀಡುತ್ತಾ ಬದುಕುತ್ತಲೂ ಇದ್ದಾರೆ. ಹೀಗೆ ನೆರವಾಗುವಾಗ ಆತ ಮುಸ್ಲಿಮ್, ಆತ  ಬ್ರಾಹ್ಮಣ, ಆತ ಶೂದ್ರ, ಆತ ಲಿಂಗಾಯಿತ, ಒಕ್ಕಲಿಗ ಎಂಬೆಲ್ಲ ಗುರುತುಗಳು ಅಡ್ಡ ಬರುವುದೂ ಇಲ್ಲ. ದುರಂತ ಏನೆಂದರೆ,
ಇಂಥ ಪಾಸಿಟಿವ್ ಘಟನೆಗಳು ನೆಗೆಟಿವ್ ಘಟನೆಗಳಷ್ಟು ವಿಫಲವಾಗಿ ಹಂಚಿಕೆಯಾಗುತ್ತಿಲ್ಲ ಎಂಬುದು. ಇವತ್ತಿನ ಸಮಾಜದಲ್ಲಿ  ನೆಗೆಟಿವ್ ಸುದ್ದಿಗಳಿಗೆ ದೊಡ್ಡ ಮಾರ್ಕೆಟ್ ಇದೆ. ಓರ್ವರು ನಮಸ್ಕಾರ ಎಂದು ಮುಗುಳ್ನಕ್ಕು ಹೇಳಿದರೆ ಅದನ್ನು  ಸ್ವೀಕರಿಸಬೇಕಾದವರಲ್ಲಿ ನೂರು ಭಾವಗಳು ಇನ್ನೋರ್ವರಲ್ಲಿ ಸೃಷ್ಟಿಯಾಗುತ್ತವೆ. ಇಬ್ಬರು ಮುಖಾಮುಖಿಯಾದಾಗ ಮಾತಿನ  ಆರಂಭವೆಂಬಂತೆ ನಮಸ್ಕಾರ ಹೇಳುವುದು ರೂಢಿ. ಮುಸ್ಲಿಮರು ಈ ಮುಖಾಮುಖಿಯನ್ನು ಪ್ರಾರ್ಥನೆಯ ಮೂಲಕ  ಆರಂಭಿಸುತ್ತಾರೆ. ಅಸ್ಸಲಾಮು ಅಲೈಕುಮ್ ಎಂದರೆ ನಿಮ್ಮನ್ನು ದೇವನು ಚೆನ್ನಾಗಿಟ್ಟಿರಲಿ ಎಂದಷ್ಟೇ ಅರ್ಥ. ಇಬ್ಬರ  ಮುಖಾಮುಖಿಯಲ್ಲಿ ಹೇಳ ಲಾಗುವ ಈ ಅಸ್ಸಲಾಮು ಅಲೈಕುಮ್ ಅಥವಾ ಈ ನಮಸ್ಕಾರವನ್ನು ಇನ್ನೊಬ್ಬರು ಅದೇ ಭಾವದಲ್ಲಿ  ಮತ್ತು ಅದೇ ಸ್ಫೂರ್ತಿಯಲ್ಲಿ ಸ್ವೀಕರಿಸಬೇಕೆಂದಿಲ್ಲ. ಈತ ನನಗೆ ಯಾಕೆ ನಮಸ್ಕಾರ ಹೇಳಿದ ಎಂಬ ಪ್ರಶ್ನೆಯೊಂದಿಗೆ ಅದನ್ನು  ಸ್ವೀಕರಿಸಬಹುದು. ಈತನ ಅಸ್ಸಲಾಮು ಅಲೈಕುಮ್‌ನ ಹಿಂದೆ ಬೇರೆ ಉದ್ದೇಶಗಳಿರಬಹುದೇ ಎಂಬ ಪ್ರಶ್ನೆಯೊಂದಿಗೂ ಅದನ್ನು  ಸ್ವೀಕರಿಸಬಹುದು. ಇಂಥ ಸಾಧ್ಯತೆಯನ್ನು ನಿರಾಕರಿಸುವಂತಿಲ್ಲ. ಆದರೆ, ಈ ಬಗೆಯ ಪ್ರಶ್ನೆಗಳೊಂದಿಗೆ ಇಂಥ ನಮಸ್ಕಾರ ಅಥವಾ  ಅಸ್ಸಲಾಮು ಅಲೈಕುಮನ್ನು ಸ್ವೀಕರಿಸುವ ಮಂದಿ ಎಷ್ಟಿರಬಹುದು? ಈ ಪ್ರಶ್ನೆ ಬಹಳ ಮಹತ್ವದ್ದು. ಯಾಕೆಂದರೆ,
ಇಂಥವರ ಸಂಖ್ಯೆ ಜುಜುಬಿಯಲ್ಲಿ ಜುಜುಬಿ ಎಂಬುದು ಸ್ಪಷ್ಟ. ಬಹಳ ಬಹಳ ಪುಟ್ಟ ಗುಂಪೊಂದು ಇಂಥ ಪ್ರಶ್ನೆಗಳೊಂದಿಗೆ  ನಮಸ್ಕಾರವನ್ನೋ ಅಸ್ಸಲಾಮು ಅಲೈಕುಮನ್ನೋ ಸ್ವೀಕರಿಸುತ್ತಿರ ಬಹುದು. ಉಳಿದ ಪರ್ವತದಷ್ಟು ದೊಡ್ಡ ಗುಂಪು ಇವನ್ನು ಯಾವ  ಪ್ರಶ್ನೆಗಳ ಗೊಂದಲವೂ ಇಲ್ಲದೇ ಸಹಜವಾಗಿ ಸ್ವೀಕರಿಸು ತ್ತಾರೆ. ಮರು ಉತ್ತರಿಸುತ್ತಾರೆ. ಹಾಗಿದ್ದರೂ ಇವರು ಸಾರ್ವಜನಿಕ ಚರ್ಚೆಗೆ  ಒಳಗಾಗುವುದು ಕಡಿಮೆ. ಅದರ ಬದಲು ಯಾರೋ ಒಬ್ಬರು ನಮಸ್ಕಾರವನ್ನು ವಿವಿಧ ಪ್ರಶ್ನೆಗಳ ಭಾವದೊಂದಿಗೆ ಸ್ವೀಕರಿಸುವುದು  ದೊಡ್ಡ ಸುದ್ದಿಯಾಗುತ್ತದೆ. ಬದಲಾವಣೆ ಆಗಬೇಕಾದದ್ದೂ ಇಲ್ಲೇ.
ಸದ್ಯದ ಸಮಸ್ಯೆ ಏನೆಂದರೆ,
ಸುದ್ದಿಗಳ ಸಂತೆಯಲ್ಲಿ ಇರುವ ಪಾಸಿಟಿವ್ ಸುದ್ದಿಗಳ ಕೊರತೆ. ನಾವು ಸುದ್ದಿ ಎಂದು ಏನನ್ನು ಓದುತ್ತೇವೋ ಮತ್ತು ವೀಕ್ಷಿಸುತ್ತೇವೋ
ಅಲ್ಲೆಲ್ಲಾ ನಕಾರಾತ್ಮಕ ಸುದ್ದಿಗಳೇ ವಿಜೃಂಭಿಸುತ್ತಿರುತ್ತವೆ. ನಿಜವಾಗಿ,
ಯಾವುದೇ ಸುದ್ದಿಗೂ ಒಂದು ಮೂಲ ಇರುತ್ತದೆ. ಆರಂಭ ದಲ್ಲಿ ಉಲ್ಲೇಖಿಸಲಾದ ಘಟನೆಗೂ ಒಂದು ಮೂಲ ಇದೆ. ಆ  ಮೂಲದಿಂದ ಸುದ್ದಿಯನ್ನು ಹೆಕ್ಕಿಕೊಂಡು ಅದನ್ನು ಸಾರ್ವಜನಿಕರ ಅವಗಾಹನೆಗೆ ತರುವಲ್ಲಿ ವರೆಗೆ ಆ ಸುದ್ದಿ ಆ ಮೂಲ ವ್ಯಕ್ತಿಗೆ  ಮಾತ್ರ ಗೊತ್ತಿರುತ್ತದೆ. ಅದನ್ನು ಆ ವ್ಯಕ್ತಿಯಿಂದ ಪಡೆದು, ಪರಿಶೀಲಿಸಿ ಸಾರ್ವಜನಿಕರಿಗೆ ಗೊತ್ತುಪಡಿಸುವ ಪ್ರಕ್ರಿಯೆಯೊಂದು  ನಡೆಯದೇ ಹೋದರೆ, ಅಷ್ಟರ ಮಟ್ಟಿಗೆ ಸಾರ್ವಜನಿಕರು ಆ ಪಾಸಿಟಿವ್ ಸುದ್ದಿಯೊಂದರಿಂದ ವಂಚಿತರಾದಂತೆ. ಇಲ್ಲಿ ಇನ್ನೊಂದು  ಪ್ರಶ್ನೆಯೂ ಇದೆ. ಆರಂಭದಲ್ಲಿ ಉಲ್ಲೇಖಿಸಲಾದ ಘಟನೆಯ ಕೇಂದ್ರೀಯ ವ್ಯಕ್ತಿಯ ಮನಸ್ಥಿತಿಯೂ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.  ಇಂಥ ವಿಷಯ ಸಾರ್ವಜನಿಕ ಅವಗಾಹನೆಗೆ ಬರುವ ಮತ್ತು ಬರದೇ ಇರುವುದಕ್ಕೂ ಅವರ ಮನಸ್ಥಿತಿಗೂ ಸಂಬಂಧ ಇರುತ್ತದೆ. ಆ  ವ್ಯಕ್ತಿ ಇಂಥ ಘಟನೆಯನ್ನು ಹೇಗೆ ನೋಡುತ್ತಾನೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ. ತನಗೆ ನೆರವು ನೀಡಿದ ಘಟನೆ ತೀರಾ  ಖಾಸಗಿಯಾದದ್ದು, ಅದನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವುದು ತರವಲ್ಲ ಎಂದು ಆತ ನಿರ್ಧರಿಸಿದರೆ ಇಂಥದ್ದೊಂದು ಅ ಪೂರ್ವ ಅಂತರ್ಧರ್ಮೀಯ ಮಾನವೀಯ ಘಟನೆ ಅವರಿಬ್ಬರೊಳಗೆಯೇ ಸತ್ತು ಹೋಗುತ್ತದೆ. ಹಾಗಂತ,
ಅದರಿಂದ ಅವರಿಬ್ಬರಿಗೆ ನಷ್ಟವೇನೂ ಇಲ್ಲದಿರಬಹುದು. ಆದರೆ, ಸಂಘರ್ಷದ ಸ್ಥಿತಿ ಇರುವ ಇಂದಿನ ಸಾಮಾಜಿಕ ಸ್ಥಿತಿಯಲ್ಲಿ  ಅವರಿಬ್ಬರ ಲಾಭ-ನಷ್ಟವಷ್ಟೇ ಮುಖ್ಯವಾಗುವುದಿಲ್ಲ. ಒಟ್ಟು ಸಮಾಜದ ಲಾಭ-ನಷ್ಟವನ್ನೂ ಪರಿಗಣಿಸಬೇಕಾಗುತ್ತದೆ. ಅಂಥ ಸ್ಥಿತಿಯಲ್ಲಿ  ಅವರಿಬ್ಬರ ಲಾಭ-ನಷ್ಟವನ್ನು ನಿರ್ಲಕ್ಷಿಸಿ ಇಂಥ ಘಟನೆಗಳನ್ನು ಸುದ್ದಿಯಾಗಿಸಿ ಸಮಾಜದ ಮುಂದಿಟ್ಟು ಪಾಸಿಟಿವ್ ಶಕ್ತಿಯನ್ನು ಜ ನರಲ್ಲಿ ಹಂಚಬೇಕಾದ ಅಗತ್ಯ ಇದೆ. ಆದರೆ,
ನಕಾರಾತ್ಮಕ ಸುದ್ದಿಗಳು ಹೀಗಲ್ಲ. ಸುದ್ದಿಗಳ ಸಂತೆಯಲ್ಲಿ ಇವು ಗಳದೇ ಕಾರುಬಾರು ಇದೆ. ಯಾಕೆಂದರೆ, ನಕಾರಾತ್ಮಕ ಸುದ್ದಿ ಯನ್ನು  ಯಾರೂ ಪ್ರಚಾರ ಮಾಡಬೇಕಿಲ್ಲ. ಅದು ಸಹಜವಾಗಿಯೇ ಪ್ರಚಾರಕ್ಕೆ ಬರುತ್ತದೆ. ಹಿಂದೂ-ಮುಸ್ಲಿಮರ ನಡುವೆ ಪುಟ್ಟ ಮಾತಿನ  ಸಮರ, ಬಳಿಕ ಹೊಡೆದಾಟ, ಬಳಿಕ ಘರ್ಷಣೆ.. ಹೀಗೆ ಏನೇ ನಡೆದರೂ ಅದು ಇಬ್ಬರ ನಡುವಿನ ಘಟನೆಯಾಗಿಯಷ್ಟೇ ಉಳಿ ದಿರುವುದಿಲ್ಲ. ಅದಕ್ಕೆ ಹತ್ತು ಮಂದಿ ನೋಡುಗರು ಇರು ತ್ತಾರೆ. ಬಾಯಿಂದ ಬಾಯಿಗೆ, ಕಣ್ಣಿಂದ ಕಣ್ಣಿಗೆ ಮತ್ತು ಕಿವಿಯಿಂದ ಕಿವಿಗೆ  ಅದು ರವಾನೆಯಾಗುತ್ತಲೇ ಹೋಗಿ ಸುದ್ದಿಯ ಸ್ವರೂಪವನ್ನು ಪಡೆದಿರುತ್ತದೆ. ಹೆಚ್ಚಿನ ಯಾವುದೇ ನಕಾರಾತ್ಮಕ ಸುದ್ದಿಗೂ ಹಲವು  ಜೋಡಿ ಕಣ್ಣು, ಕಿವಿ, ಮೂಗು, ಬಾಯಿ, ಕಾಲು, ಕೈಗಳು ಸಾಕ್ಷ್ಯಗಳಾಗಿರುವುದೇ ಹೆಚ್ಚು. ಆದ್ದರಿಂದ ಅವು ಸಹಜ ವಾಗಿಯೇ ಸು ದ್ದಿಗೀಡಾಗುತ್ತವೆ. ಆದರೆ, ಸಕಾರಾತ್ಮಕ ಸುದ್ದಿಗಳು ಹಾಗಲ್ಲ. ಅವು ಶಾಂತಿಯುತ ಸ್ಥಿತಿಯಲ್ಲಿ ಜನ್ಮ ಪಡೆಯುತ್ತದೆ. ಶಾಂತಿಯ  ವಾತಾವರಣವನ್ನು ಇನ್ನಷ್ಟು ವಿಸ್ತರಿಸುತ್ತದೆ. ಶಾಂತಿಯಲ್ಲಿ ರೋಷ, ತಾಪ, ದ್ವೇಷ, ಹಗೆತನಗಳು ಇಲ್ಲವಾದ್ದರಿಂದ ಅದು ಅಲ್ಲಿಯೇ  ಕೊನೆಗೊಳ್ಳುತ್ತದೆ. ಅಂದಹಾಗೆ,
ಕೊರೋನಾ ಕಾಲದಲ್ಲಿ ಬೆಳಕಿಗೆ ಬಂದಷ್ಟು ಮಾನವೀಯ ಘಟನೆಗಳು ಕೊರೋನಾ ಪೂರ್ವ ಕಾಲದಲ್ಲಿ ಬೆಳಕಿಗೆ ಬಂದದ್ದೋ  ಚರ್ಚಿತವಾದದ್ದೋ  ಬಹಳ ಕಡಿಮೆ ಎಂದೇ ಹೇಳಬಹುದು. ಯಾಕೆ ಹೀಗೆ ಎಂದರೆ, ಕೊರೋನಾದ ಉಚ್ಚ್ರಾಯ ಕಾಲವು ಒಂದು  ದುರಿತ ಕಾಲವಾಗಿ ಸಾರ್ವತ್ರಿಕವಾಗಿ ಗುರುತಿಗೀಡಾಯಿತು. ಕೊರೋನಾಕ್ಕೆ ಧರ್ಮ ಇರಲಿಲ್ಲ. ರಾಜಕಾರಣಿಗಳು ಅದಕ್ಕೆ ಧರ್ಮವನ್ನು  ಅಂಟಿಸಲೆತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ಕೊರೋನಾ ಯಾವಾಗ ಸರ್ವರನ್ನೂ ಭೀತಿಯಲ್ಲಿ ಕೆಡವತೊಡಗಿತೋ ಮಾನವರ ನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಪ್ರಯತ್ನಿಸಿದವರು ಮರೆಗೆ ಸರಿಯುವುದು ಅನಿವಾರ್ಯವಾಯಿತು. ನಾಗರಿಕರು  ಪರಸ್ಪರ ಸಹಕಾರವಿಲ್ಲದೇ ಬದುಕುವುದು ಅಸಾಧ್ಯ ಎಂಬ ವಾತಾವರಣ ಸೃಷ್ಟಿಯಾಗುವುದೆಂದರೆ, ವಿಭಜನೆಯ ಷಡ್ಯಂತ್ರ ಹೊತ್ತು  ತಿರುಗುವವರು ಸೋಲೊಪ್ಪಿಕೊಳ್ಳುವುದು ಎಂದೇ ಅರ್ಥ. ಅನಾಹುತಗಳು, ಪ್ರಕೃತಿ ವಿಕೋಪಗಳೆಲ್ಲ ಇಂಥ ಸನ್ನಿವೇಶಗಳನ್ನು ಹುಟ್ಟು  ಹಾಕುತ್ತಲೇ ಇರುತ್ತವೆ. ವಲಸೆ ಹೋಗುತ್ತಿರುವ ಕಾರ್ಮಿಕರಿಗೆ ಹಿಂದೂಗಳು-ಮುಸ್ಲಿಮರು ಎಂಬ ಬೇಧ ನೋಡದೆಯೇ  ನೆರವಾದರು. ಆಹಾರ ಪೊಟ್ಟಣಗಳು, ನೀರು, ಚಪ್ಪಲಿ, ತಂಗಲು ವ್ಯವಸ್ಥೆ ಇತ್ಯಾದಿಗಳನ್ನು ಒದಗಿಸುವ ಲಕ್ಷಾಂತರ ಮಂದಿಯಲ್ಲಿ  ಯಾರು ಹಿಂದೂ, ಯಾರು ಮುಸ್ಲಿಮ್ ಎಂಬುದು ಮುಖ್ಯವಾಗಲೇ ಇಲ್ಲ. ಕೊರೋನಾದ ಆರಂಭದಲ್ಲಿ ಹರಡಲಾದ ನಕಾರಾತ್ಮಕ  ಸುದ್ದಿಗಳನ್ನು ಆ ಬಳಿಕದ ಸಕಾರಾತ್ಮಕ ಸುದ್ದಿಗಳು ಗುಡಿಸಿ ಹಾಕಿದುವು. ಸುದ್ದಿಗಳ ಸಂತೆಯಲ್ಲಿ ಸಕಾರಾತ್ಮಕ ಸುದ್ದಿಗಳದೇ ಸಾಮ್ರಾಜ್ಯ.  ಮಾಧ್ಯಮಗಳಲ್ಲೂ ಸಕಾರಾತ್ಮಕ ಸುದ್ದಿಗಳದೇ ಪ್ರಾಬಲ್ಯವಿತ್ತು. ಹೀಗೇಕಾಯಿತೆಂದರೆ,
ಕೊರೋನಾ ಎಲ್ಲರ ಪಾಲಿಗೂ ಅಪಾಯಕಾರಿಯಾಗಿತ್ತು. ಭೂಕಂಪ, ಪ್ರವಾಹ, ಭೀಕರ ಅಪಘಾತದಂತಹ ಸಂದರ್ಭಗಳಲ್ಲಿ ಇಂಥ  ಅನ್ಯೋನ್ಯ ಮತ್ತು ಸಹಕಾರ ಭಾವವನ್ನು ನಾವು ಕಾಣುತ್ತಲೇ ಇರುತ್ತೇವೆ. ಇಂಥ ಸಂದರ್ಭಗಳಲ್ಲಿ ವಿಭಜನೆಯ ಸಿದ್ಧಾಂತಗಳಿಗೆ ನೆಲೆ  ಸಿಗುವುದಿಲ್ಲ. ಅಪಾಯವೊಂದು ಎಲ್ಲರ ಪಾಲಿಗೂ ಸಮಾನ ಭೀತಿಯನ್ನು ಮೂಡಿಸಿರುವಾಗ ಅಲ್ಲಿ ಸಹಕಾರ ಭಾವವೇ ಜಯ  ಗಳಿಸುತ್ತದೆ. ಅದು ಉಳಿವಿಗಾಗಿನ ಹೋರಾಟ. ಇಂಥ ಸಂದರ್ಭದಲ್ಲಿ ನಾವು-ಅವರು ಎಂಬುದಕ್ಕೆ ಮಾರುಕಟ್ಟೆ ಇರುವುದಿಲ್ಲ.  ಹೇಗಾದರೂ ಮಾಡಿ ಬದುಕುಳಿಯುವುದೇ ಮುಖ್ಯ. ಇಂಥ ಸ್ಥಿತಿಯಲ್ಲಿ ನಕಾರಾತ್ಮಕ ಭಾವಗಳು ದೂರವಾಗಿ ಪರಸ್ಪರ ಸಹಕಾರ,  ಪ್ರೀತಿ, ಸೌಹಾರ್ದ ಭಾವಗಳು ಗಟ್ಟಿಗೊಳ್ಳುತ್ತವೆ. ಕೊರೋನಾದ ಆರಂಭ ಮತ್ತು ಬಳಿಕದ ಸ್ಥಿತಿ-ಗತಿಗಳಲ್ಲಿ ಉಂಟಾದ ಭಾರೀ  ವ್ಯತ್ಯಾಸದ ಹಿಂದೆ ಇಂಥ ಭಾವಗಳು ಕೆಲಸ ಮಾಡಿವೆ.
ಸದ್ಯದ ಅಗತ್ಯ ಏನೆಂದರೆ,
ಸಕಾರಾತ್ಮಕ ಸುದ್ದಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೆಳಕಿಗೆ ತರುವುದು. ಆ ಮೂಲಕ ನಕಾರಾತ್ಮಕ ಸುದ್ದಿಗಳ ಅಶ್ವಮೇಧ  ಯಾತ್ರೆಯನ್ನು ಅಡ್ಡಗಟ್ಟಿ ನಿಲ್ಲಿಸುವುದು. ಸಕಾರಾತ್ಮಕ ಸುದ್ದಿಗಳು ಸಾರ್ವಜನಿಕವಾಗಿ ಲಭ್ಯಗೊಂಡಷ್ಟೂ ನಕಾರಾತ್ಮಕ ಸುದ್ದಿಗಳ ಪ್ರಭಾವ  ಇಳಿಯುತ್ತಾ ಹೋಗುತ್ತದೆ. ಹಿಂದೂ-ಮುಸ್ಲಿಮರನ್ನು ವಿಭಜಿಸುವಲ್ಲಿ, ಒಳಗೊಳಗೇ ದ್ವೇಷ ಹೆಚ್ಚಿಸುವಲ್ಲಿ ಸಕಾರಾತ್ಮಕ ಸುದ್ದಿಗಳ  ಅಭಾವಕ್ಕೂ ಪಾತ್ರ ಇದೆ. ನಕಾರಾತ್ಮಕ ಸುದ್ದಿಗಳನ್ನು ಪದೇ ಪದೇ ಓದುತ್ತಾ, ಆಲಿಸುತ್ತಾ ಮತ್ತು ವೀಕ್ಷಿಸುತ್ತಾ ಸಾರ್ವಜನಿಕ ಮನಸ್ಸು  ಖುದಿಗೊಂಡಿರುತ್ತದೆ. ಅದನ್ನು ತಣಿಸುವುದಕ್ಕೆ ಸಕಾರಾತ್ಮಕ ಸುದ್ದಿಗಳಿಂದಷ್ಟೇ ಸಾಧ್ಯ. ನಮ್ಮ ಗಮನಕ್ಕೆ ಬರುವ ಸಕಾರಾತ್ಮಕ ಸುದ್ದಿಗಳ ನ್ನೆಲ್ಲಾ ಹೆಕ್ಕಿ ಹೆಕ್ಕಿ ಸಾರ್ವಜನಿಕರ ಅವಗಾಹ ನೆಗೆ ತರುತ್ತಾ ಹೋದರೆ ನಕಾರಾತ್ಮಕ ಸುದ್ದಿಗಳು ಬಾಲ ಮಡಚಿ ಅಡಗಿಕೊಳ್ಳಲು  ಪ್ರಾರಂಭಿಸುತ್ತವೆ. ಇವತ್ತಿನ ಜರೂರತ್ತು ಇದು.
ಸಕಾರಾತ್ಮಕವಾಗಿ ಆಲೋಚಿಸೋಣ. ಸಕಾರಾತ್ಮಕವಾದುದನ್ನು ಹೆಚ್ಚು ಹೆಚ್ಚಾಗಿ ಹಂಚೋಣ.  

Friday, February 12, 2021

ಕಿರುಕುಳಕ್ಕಿಂತ ಕಿರುಕುಳ ಪೋಸ್ಟ್ ಗೆ ಸಿಕ್ಕ ಲೈಕ್‌ಗಳೇ ಮುಖ್ಯವಾಗುವ ಕಾಲ




ಇತ್ತೀಚೆಗೆ ಮಂಗಳೂರಿನ ತರುಣಿಯೋರ್ವಳು ಇನ್‌ಸ್ಟಾ ಗ್ರಾಮ್‌ನಲ್ಲಿ ತನಗಾದ ಅನುಭವವೊಂದನ್ನು ಹಂಚಿಕೊಂಡಿದ್ದಳು. ನಗರದ  ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಧ್ಯ ವಯಸ್ಕ ವ್ಯಕ್ತಿ ನೀಡಿದ ಕಿರುಕುಳವನ್ನು ಆತನ ಫೋಟೋ ಸಹಿತ ಹಂಚಿಕೊಂಡಿದ್ದಳು.  ‘ನಿನ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವೆ’ ಎಂದು ಬೆದರಿಸಿದಾಗ ಆತ ಮಾಸ್ಕ್ ಸರಿಸಿ ಲಕ್ಷಣವಾಗಿ  ಪೋಸು ಕೊಟ್ಟ ಎಂದೂ ಹೇಳಿದ್ದಳು. ಮಾತ್ರವಲ್ಲ, ಇನ್ನೊಂದು ಗಂಭೀರ ಪ್ರಶ್ನೆಯೂ ಆಕೆಯ ಪೋಸ್ಟ್ ನಲ್ಲಿತ್ತು. ಆತನ ಕಿರುಕುಳವನ್ನು  ವಿರೋಧಿಸಿ ತಾನು ದೊಡ್ಡ ದನಿಯಲ್ಲಿ ಪ್ರತಿಭಟಿಸಿದರೂ ಬಸ್‌ನಲ್ಲಿರುವವರಾಗಲಿ, ಚಾಲಕ, ನಿರ್ವಾಹಕರಾಗಲಿ ಗಂಭೀರವಾಗಿ  ಪರಿಗಣಿಸಲೇ ಇಲ್ಲ ಎಂದೂ ಹೇಳಿಕೊಂಡಿದ್ದಳು. ನಿಜವಾಗಿ,
ಆಕೆಯ ಪೋಸ್ಟ್ ನಲ್ಲಿದ್ದ ಮೊದಲ ಭಾಗಕ್ಕಿಂತ ಆಘಾತಕಾರಿಯಾಗಿರುವುದು ಆ ಪೋಸ್ಟ್ ನ  ಈ ಎರಡನೇ ಭಾಗ. ಈಕೆ ಜೋರು ದನಿಯಲ್ಲಿ ಪ್ರತಿಭಟಿಸಿದ ಹೊರತಾಗಿಯೂ ಬಸ್ ನಲ್ಲಿದ್ದವರಿಂದ ಸಿಗಬೇಕಾದ ಬೆಂಬಲ ಏಕೆ ಸಿಗಲಿಲ್ಲ? ಚಾಲಕ, ನಿರ್ವಾಹಕರು ತಕ್ಷಣ  ಆ ತರುಣಿಯ ಬೆಂಬಲಕ್ಕೆ ಏಕೆ ನಿಲ್ಲಲಿಲ್ಲ?
ಇಲ್ಲಿ ಇನ್ನೊಂದು ಘಟನೆಯನ್ನೂ ಪ್ರಸ್ತಾಪಿಸಬಹುದು.

ಜನವರಿ 3ರಂದು ನಡೆದ ಘಟನೆ ಇದು. ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಕ್ಯಾವಾಲಿ ಗ್ರಾಮದ ಅಂಗನವಾಡಿ  ಕಾರ್ಯಕರ್ತೆಯನ್ನು ದೇವಾಲಯದ ಅರ್ಚಕ ಸತ್ಯನಾರಾಯಣ ಮತ್ತು ಇಬ್ಬರು ಗೆಳೆಯರು ಸೇರಿಕೊಂಡು ಬರ್ಬರವಾಗಿ  ಅತ್ಯಾಚಾರ ಮಾಡುತ್ತಾರೆ ಮತ್ತು ಆ ರಾತ್ರಿ ಆಕೆಯನ್ನು ಆಕೆಯ ಮನೆಯ ಹತ್ತಿರ ಎಸೆದು ಹೋಗುತ್ತಾರೆ. ಕ್ಯಾವಾಲಿ ಗ್ರಾಮದ  ಹತ್ತಿರದ ಮೇವ್ಲಿ ಗ್ರಾಮದಲ್ಲಿರುವ ತಾಕೂರ್ಜಿ ದೇವಾಲಯಕ್ಕೆ ಈ ಮಧ್ಯವಯಸ್ಕ ಮಹಿಳೆ ಹೋಗಿದ್ದರು. ಸಂಜೆಯ ಹೊತ್ತು. ಈ  ಮಹಿಳೆಯ ತಾಯಿಯ ಗ್ರಾಮವೂ ಅದುವೇ. 5 ಮಕ್ಕಳ ತಾಯಿಯಾದ ಆಕೆಗೆ ಆ ದೇವಾಲಯ ಹೊಸತೂ ಆಗಿರಲಿಲ್ಲ. ಊರಿನ  ಮಂದಿ ಆ ದೇವಾಲಯಕ್ಕೆ ಹೋಗಿ ಆಶೀರ್ವಾದ ಪಡಕೊಂಡು ಬರುವುದು ಸಾಮಾನ್ಯವಾಗಿತ್ತು. ಮಕ್ಕಳು ಮತ್ತು ದಂಪತಿಗಳು  ದೇವಾಲಯಕ್ಕೆ ನಡಕೊಳ್ಳುವವರ ಪೈಕಿ ಹೆಚ್ಚಿದ್ದರು. ವಿಷಾದ ಏನೆಂದರೆ,
ಈ ಘಟನೆಗೆ ಊರವರು ಮತ್ತು ಪೊಲೀಸರಿಂದ ವ್ಯಕ್ತವಾದ ಪ್ರತಿಕ್ರಿಯೆ. ಈ ಮಹಿಳೆಯ ಗುಪ್ತಾಂಗವನ್ನು ಘಾಸಿಗೊಳಿಸಲಾಗಿತ್ತು.  ತೀವ್ರ ರಕ್ತಸ್ರಾವದಿಂದಾಗಿ ಆಕೆ ಮೃತಪಟ್ಟಿದ್ದಳು. ಆದರೆ, ಅರ್ಚಕ ಒಂದು ಕತೆ ಕಟ್ಟಿದ. ಆಕೆ ದೇವಾಲಯದ ಸಮೀಪದ ಬಾವಿಗೆ ಬಿದ್ದ  ಕಾರಣದಿಂದಾಗಿ ಹೀಗಾಗಿದೆ ಎಂದು ವೀಡಿಯೋ ಮೂಲಕ ಹೇಳಿದ. ಊರವರು ನಂಬಿದರು. ಪೊಲೀಸರೂ ನಂಬಿದರು. ಎಲ್ಲಿಯ  ವರೆಗೆಂದರೆ, ಮೃತದೇಹದ ಪೋಸ್ಟ್ ಮಾರ್ಟಂ ನಡೆದಿದ್ದೇ  ಜನವರಿ 5ರಂದು. ಅದನ್ನು ವೀಡಿಯೋ ಕೂಡ ಮಾಡಲಾಗಿಲ್ಲ.  ಆರಂಭದಲ್ಲಿ ಕೇಸು ದಾಖಲಿಸುವುದಕ್ಕೂ ಪೊಲೀಸರು ಮುಂದಾಗಲಿಲ್ಲ. 48 ಗಂಟೆಗಳ ಬಳಿಕ ಪೊಲೀಸರು ಅತ್ಯಾಚಾರ ಕೇಸು  ದಾಖಲಿಸಿದರು. ಮಾತ್ರವಲ್ಲ, ಅರ್ಚಕನನ್ನು ಗ್ರಾಮದ ಪ್ರಧಾನರೇ ಪೊಲೀಸರಿಂದ ಅಡಗಿಸಿಟ್ಟಿದ್ದರು ಎಂಬ ಆರೋಪ ಇದೆ. ಆತ  ಅದೇ ಊರಲ್ಲಿದ್ದರೂ ಪೊಲೀಸರು ಪಕ್ಕದ ಜಿಲ್ಲೆಯಲ್ಲಿ ಆತನ ಪತ್ತೆಗಾಗಿ ಹುಡುಕಾಡುತ್ತಿದ್ದರು. 3 ದಿನಗಳ ಬಳಿಕ ಆತನ ಬಂಧನವಾಯಿತು.
ಒಂದುವೇಳೆ, ಜೀವಂತ ಇರುತ್ತಿದ್ದರೆ ಇವತ್ತು ಆಕೆ ಕೊರೋನಾ ವ್ಯಾಕ್ಸಿನ್ ಅಭಿಯಾನದ ಭಾಗವಾಗಿರುತ್ತಿದ್ದಳು.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಯುವತಿ ಎತ್ತಿರುವ ಪ್ರಶ್ನೆ ಮತ್ತು ಬದೌನ್‌ನಲ್ಲಿ ನಾಗರಿಕರು ತೋರಿರುವ ಪ್ರತಿಕ್ರಿಯೆಯು  ಕೆಲವು ಬಹುಮುಖ್ಯ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.
1. ಹೆಣ್ಣಿನ ಮೇಲೆ ದಾಳಿಯಾಗುತ್ತಿದ್ದರೂ ನಾಗರಿಕ ಪ್ರಜ್ಞೆಯನ್ನು ಅದು ಬಡಿದೆಬ್ಬಿಸದೇ ಇರುವುದಕ್ಕೆ ಕಾರಣ ಏನು?
2. ಕಿರುಕುಳ ನೀಡುವವರಲ್ಲಿರುವ ಭಂಡ ಧೈರ್ಯಕ್ಕೂ ನಾಗರಿಕರ ಈ ಮೌನ ವೀಕ್ಷಣೆಗೂ ಸಂಬಂಧ ಇದೆಯೇ?
3. ಹೆಣ್ಣಿನ ಕುರಿತಾದ ಅಸಡ್ಡೆ ಭಾವ ಪುರುಷರ ಈ ನಿರ್ಲಕ್ಷ್ಯ  ಧೋರಣೆಗೆ ಕಾರಣವೇ?
4. ಇಂಥ ಸ್ಥಿತಿಯನ್ನು ಬದಲಿಸುವುದಕ್ಕೆ ಕಾನೂನುಗಳಿಂದ ಸಾಧ್ಯವೇ?
ಇಂಥ ಪ್ರಶ್ನೆಗಳು ಇನ್ನೂ ಇವೆ.
ಮಂಗಳೂರಿನ ತರುಣಿಯಾಗಲಿ, ಬದೌನ್‌ನ ಮಹಿಳೆಯಾಗಲಿ ಇಬ್ಬರೂ ಒಂದು ಮನಸ್ಥಿತಿಯ ಬಲಿಪಶುಗಳು. ಮಂಗಳೂರಿನಲ್ಲಿ  ಆತ ತರುಣಿಗೆ ಕಿರುಕುಳ ಕೊಟ್ಟಿರುವುದಷ್ಟೇ ಅಲ್ಲ, ಆತನಲ್ಲಿ ಆ ಬಗ್ಗೆ ಯಾವ ಭಯವೂ ಇರಲಿಲ್ಲ. ಪಶ್ಚಾತ್ತಾಪವೂ ಇರಲಿಲ್ಲ. ಆ  ಕಾರಣದಿಂದಲೇ ಆತ ನಿರ್ಲಜ್ಜೆಯಿಂದ ಫೋಟೋಕ್ಕೆ ಪೋಸು ಕೊಟ್ಟಿದ್ದ. ತಾನು ಮಾಡುತ್ತಿರುವುದು ತಪ್ಪು ಎಂಬ ಭಾವ ಓರ್ವನ ಲ್ಲಿದ್ದರೆ ಕನಿಷ್ಠ ಅದಕ್ಕಾಗಿ ಆತ ಹೆಮ್ಮೆ ಪಡುವುದಕ್ಕೋ ಅಥವಾ ಅದನ್ನು ಸಮರ್ಥಿಸಿಕೊಳ್ಳುವ ಭಾವದಲ್ಲಿ ವರ್ತಿಸುವುದಕ್ಕೋ  ಸಾಧ್ಯವಿಲ್ಲ. ಇಲ್ಲಿ ಆ ವ್ಯಕ್ತಿಯಲ್ಲಿ ಆ ಭಾವ ವ್ಯಕ್ತವಾಗಿಲ್ಲ. ಇದಕ್ಕೆ ಎರಡು ಕಾರಣಗಳಿರಬಹುದು.
1. ಒಂದೋ ಆತ ಇಂಥ ಕಿರುಕುಳದಲ್ಲಿ ಪಳಗಿದ್ದಾನೆ. ಈ ಮೊದಲೂ ಇಂಥ ಎಷ್ಟೋ ಕಿರುಕುಳವನ್ನು ನೀಡಿದ್ದಾನೆ.
2. ಈತ ಈ ಹಿಂದೆ ಇಂಥ ಕಿರುಕುಳವನ್ನು ಕೊಟ್ಟಾಗಲೂ ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರತಿಭಟಿಸಿಲ್ಲ. ಇದುವೇ ಆತನನ್ನು  ಇಂಥದ್ದೊಂದು ಧೈರ್ಯಕ್ಕೆ ಪ್ರೇರೇಪಿಸಿದೆ.
ಈ ಎರಡೂ ಕಾರಣಗಳಲ್ಲಿ ಯಾವುದಿದ್ದರೂ ಅವು ಗಂಭೀರವೇ. ಹಾಗಂತ,
ಇಂಥ  ಮನಸ್ಥಿತಿ ಬರೇ ಒಂದು ಪ್ರದೇಶಕ್ಕೋ ಒಂದು ರಾಜ್ಯಕ್ಕೋ ಸೀಮಿತವಾಗಿಲ್ಲ ಎಂಬುದನ್ನು ಬದೌನ್ ಘಟನೆ ಸಾಬೀತು ಪಡಿಸುತ್ತಿದೆ. ಅಲ್ಲೂ ನಾಗರಿಕ ಪ್ರಜ್ಞೆಗೆ ಏನೂ ಆಗಿಲ್ಲ. ಆರೋಪಿಗಳನ್ನೇ ರಕ್ಷಿಸುವ ಮಟ್ಟಿಗೆ ಆ ಪ್ರಜ್ಞೆ ಸತ್ತು ಹೋಗಿದೆ. ಸದ್ಯ ದುರಸ್ತಿ  ಕಾರ್ಯ ನಡೆಯಬೇಕಿರುವುದು ಇಲ್ಲೇ.
ಮಹಿಳೆಯರ ಸುರಕ್ಷಿತತೆಯ ದೃಷ್ಟಿಯಿಂದ ರಚನೆಯಾದ ಕಾನೂನುಗಳನ್ನು ಪಟ್ಟಿ ಮಾಡಲು ಕುಳಿತರೆ ಕೈಯೇ ಸೋಲಬಹುದು.  ಕಾನೂನುಗಳ ಕೊರತೆಯೇನೂ ಈ ದೇಶದಲ್ಲಿಲ್ಲ. 2012ರ ನಿರ್ಭಯ ಘಟನೆಯ ಬಳಿಕವಂತೂ ಹೆಣ್ಣಿನ ಸುರಕ್ಷಿತತೆಯ ಬಗ್ಗೆ ಟನ್ನುಗಟ್ಟಲೆ ಬರಹಗಳು, ಭಾಷಣ, ವೀಡಿಯೋಗಳೂ ಪ್ರಸಾರ ವಾದುವು. ಟಿ.ವಿ. ಚಾನೆಲ್‌ಗಳಲ್ಲಿ ಅಸಂಖ್ಯ ಡಿಬೇಟ್‌ಗಳು ನಡೆದುವು.  ಕಾನೂನಿನ ಹಲ್ಲುಗಳಿಗೆ ಮತ್ತಷ್ಟು ತೀವ್ರತೆಯನ್ನು ತುಂಬಲಾಯಿತು. ಮಾತ್ರವಲ್ಲ, ನಿರ್ಭಯ ಪ್ರಕರಣದ ಆರೋಪಿಗಳನ್ನು ಗ ಲ್ಲಿಗೇರಿಸಿದ್ದೂ ನಡೆಯಿತು. ಇಷ್ಟೆಲ್ಲಾ ಆಗಿಯೂ ಈ ದೇಶದಲ್ಲಿ ಹೆಣ್ಣು ಸುರಕ್ಷಿತಳೇ ಎಂದು ಪ್ರಶ್ನಿಸಿದರೆ, ನಿರಾಸೆಯ ಉತ್ತರವನ್ನಲ್ಲದೇ  ಹೌದು, ಸುರಕ್ಷಿತೆ ಎಂದು ಹೇಳುವ ಯಾವ ವಾತಾವರಣವೂ ಇಲ್ಲ. ಹೆಣ್ಣು ರಾತ್ರಿ ಹೊರ ಹೋಗುವುದು ಸುರಕ್ಷಿತವಲ್ಲ ಎಂದು  ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೇ ಹೇಳುವಷ್ಟು ಹೆಣ್ಣು ಅಸುರಕ್ಷಿತೆ. ಅಂದಹಾಗೆ,
ಈ ಅಸುರಕ್ಷಿತತೆಗೆ ಕಾಡುಪ್ರಾಣಿಗಳೋ ಪ್ರಕೃತಿ ಮುನಿಸುವಿಕೆಯೋ ಕಾರಣ ಅಲ್ಲ. ಹೆಣ್ಣು ಮನೆಯಿಂದ ಹೊರಗಿಳಿದರೆ ಪ್ರಕೃತಿ  ಆಕೆಯನ್ನು ಅಟ್ಟಾಡಿಸಿ ಮಳೆ ಸುರಿಸುವುದಿಲ್ಲ. ಸಿಡಿಲು ಸಿಡಿಯುವುದಿಲ್ಲ. ಆಕೆಯನ್ನೇ ಗುರಿಯಾಗಿಸಿಕೊಂಡು ಪ್ರಕೃತಿ ವಿಕೋಪಗಳು  ನಡೆಯುವುದೂ ಇಲ್ಲ. ಅಲ್ಲದೇ, ಕಾಡಿನಿಂದ ಪ್ರಾಣಿಗಳು ಬಂದು ಹೆಣ್ಣಿನ ಮೇಲೆ ದಾಳಿ ಮಾಡುವುದೂ ಇಲ್ಲ. ಆಕೆಯ ಅಸುರಕ್ಷಿತತೆಗೆ  ಶಾರೀರಿಕ ರೂಪದಲ್ಲಿ ತುಸು ಭಿನ್ನವಾಗಿರುವ ಆಕೆಯಂಥ ಜೀವಿಯೇ ಕಾರಣ. ಮಾತ್ರವಲ್ಲ,
ಇದನ್ನು ತಡೆಗಟ್ಟುವುದಕ್ಕೆ ಬರೇ ಕಾನೂನುಗಳಿಂದ ಮಾತ್ರ ಸಾಧ್ಯವಾಗದು ಎಂಬುದಕ್ಕೆ ಈವರೆಗಿನ ಘಟನಾವಳಿಗಳೇ ಸಾಕ್ಷಿ. ಕಾನೂ ನು ಎಷ್ಟೇ ಬಲವಾಗಿದ್ದರೂ ಅದಕ್ಕೊಂದು ಮಿತಿಯಿದೆ. ಆ ಮಿತಿಯಾಚೆ ಅದು ಕೆಲಸ ಮಾಡಲಾರದು. ತಪ್ಪೆಸಗಿದವನಿಗೆ ಶಿಕ್ಷೆಯನ್ನಷ್ಟೇ  ಅದು ಕೊಡಬಲ್ಲುದು. ತಪ್ಪೆಸಗಿದರೂ ತಪ್ಪಿಸಿ ಕೊಳ್ಳುವುದಕ್ಕೆ ಕೆಲವೊಮ್ಮೆ ಅದರದ್ದೇ  ಆದ ನಿಯಮಗಳು ಅವಕಾಶ  ಮಾಡಿಕೊಡುವುದೂ ಇದೆ. ಆದ್ದರಿಂದ ಹೆಣ್ಣನ್ನು ಸುರಕ್ಷಿತಗೊಳಿಸುವುದಕ್ಕೆ ಕಾನೂನಿನ ಮೊರೆ ಹೋಗುವುದೊಂದೇ ಪರಿಹಾರ ಅಲ್ಲ.  ಹೆಣ್ಣು ಅಸುರಕ್ಷಿತವಾಗಿದ್ದರೆ ಅದು ಗಂಡಿನಿಂದ. ಈ ಹಿನ್ನೆಲೆಯಲ್ಲಿ ಗಂಡಿನ ಮನಸ್ಥಿತಿಯನ್ನು ಬದಲಿಸುವ ಕ್ರಮಗಳು ಅಭಿಯಾನ  ರೂಪದಲ್ಲಿ ನಡೆಯಬೇಕು. ಮನೆಯಿಂದ ಪ್ರಾರಂಭವಾಗಬೇಕಾದ ಈ ಅಭಿಯಾನ ಮಸೀದಿ, ಮಂದಿರ, ಚರ್ಚ್, ಸ್ತೂಪಗಳ ಮೂಲಕ  ದೇಶದ ಮೂಲೆಮೂಲೆಗೂ ತಲುಪಬೇಕು. ಹೆಣ್ಣು ಮತ್ತು ಗಂಡಿನ ಮೊದಲ ತರಬೇತಿ ಸ್ಥಳವೇ ಮನೆ. ಮೊದಲ ಗುರುವೇ  ಹೆತ್ತವರು. ಈ ಮನೆಯಲ್ಲಿ ಹೆಣ್ಣು ಯಾವ ರೀತಿಯ ವ್ಯಾಖ್ಯಾನಕ್ಕೆ ಒಳಗಾಗುತ್ತಾಳೆ ಎಂಬುದ ರಿಂದ ಆಕೆ ಸುರಕ್ಷಿತಳೋ ಅಲ್ಲವೋ  ಎಂಬುದು ನಿರ್ಧಾರ ವಾಗುತ್ತದೆ. ಗಂಡಿನ ಗುಲಾಮೆ ಹೆಣ್ಣು ಎಂದೋ ಆಕೆ ಗಂಡಿನ ಆಜ್ಞೆಯಂತೆ ಮತ್ತು ಆತನಿಗೆ ತಗ್ಗಿ-ಬಗ್ಗಿ  ನಡೆಯಬೇಕು ಎಂದೋ ಕಲಿಸುವ ವಾತಾವರಣ ಮನೆಯಲ್ಲಿದ್ದರೆ, ಅಲ್ಲಿಂದ ಹೊರ ಬರುವ ಪ್ರತಿ ಗಂಡೂ, ಹೆಣ್ಣಿನ ಬಗ್ಗೆ ತಾತ್ಸಾರ  ಭಾವವನ್ನು ಹೊಂದಿರಬಲ್ಲ. ಹಾಗೆಯೇ ಆ ಮನೆಯ ಹೆಣ್ಣು ಮಗಳಲ್ಲಿ ಕಿರುಕುಳವನ್ನು ಸಹಿಸುವ ಮತ್ತು ಪ್ರತಿ ಆಡದಿರುವ ಭಾವವು  ಸಹಜವಾಗಿಯೇ ಇರಬಲ್ಲುದು.
ಅಷ್ಟೇ ಅಲ್ಲ,
ಒಂದುವೇಳೆ, ಮನೆಯಲ್ಲಿ ಹೆಣ್ಣು ಮತ್ತು ಗಂಡಿನ ನಡುವೆ ಬೇಧ ಭಾವ ನಡೆಯುತ್ತಿದ್ದರೂ ಶಾಲೆಯಲ್ಲಿ ಸೂಕ್ತ ತರಬೇತಿ  ಸಿಗುವಂತಿದ್ದರೆ ಅದೂ ಉತ್ತಮ ಸಮಾಜವನ್ನು ಕಟ್ಟುವುದಕ್ಕೆ ಕಾರಣವಾಗಬಹುದು. ಹೆಣ್ಣನ್ನು ಸುರಕ್ಷಿತಗೊಳಿಸುವುದಕ್ಕೆ ಶಾಲೆಯ  ಪಾತ್ರವೂ ಸಣ್ಣದಲ್ಲ. ಆದರೆ, ಶಾಲೆಯಲ್ಲಿ ಹೇಳಲಾಗುವ ಇತಿಹಾಸದ ಕತೆಗಳಲ್ಲಿ ಪುರುಷ ಪಾತ್ರ ಹೇಗಿದೆ ಮತ್ತು ಸ್ತ್ರೀ ಪಾತ್ರ  ಹೇಗಿರುತ್ತದೆ ಎಂಬುದು ಮುಖ್ಯ. ಕೆಲವೊಮ್ಮೆ ಶಿಕ್ಷಕರು ಗ್ರಹಿಸದ ಪಾಠವನ್ನು ಇತಿಹಾಸದ ಕತೆಗಳಿಂದ ಮಕ್ಕಳು ಗ್ರಹಿಸುವ ಸಾಧ್ಯತೆ  ಇರುತ್ತದೆ. ಹಾಗೆ ಅವರು ಗ್ರಹಿಸುವಾಗ ಗಂಡು ವಿಜೃಂಭಿಸಬಲ್ಲ. ಹೆಣ್ಣು ಅಬಲೆಯಂತೆ ಕಾಣಿಸಬಲ್ಲಳು. ಆದ್ದರಿಂದ ಶಾಲೆಯಲ್ಲಿ  ಸಿಗುವ ಪಾಠವು ವಿದ್ಯಾರ್ಥಿಗಳ ಗ್ರಹಿಸುವಿಕೆಯ ಸಾಮರ್ಥ್ಯವನ್ನು ಹೊಂದಿಕೊಂಡೂ ಇರುತ್ತದೆ. ಕೆಲವೊಮ್ಮೆ ಶಿಕ್ಷಕರ ಪಾಠವನ್ನು  ಬೇರೆ ಬೇರೆ ವಿದ್ಯಾರ್ಥಿಗಳು ಬೇರೆ ಬೇರೆ ರೂಪದಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ಸಾಧ್ಯವಿದೆ. ಮನೆಯಲ್ಲಿ ಯಾವ ವಾತಾವರಣ  ಇದೆಯೋ ಅದಕ್ಕೆ ಪೂರಕವಾಗಿ ಅವರು ಅದನ್ನು ಓದಿಕೊಳ್ಳುವುದಕ್ಕೂ ಅವಕಾಶ ಇದೆ. ಸದ್ಯ ತುರ್ತಾಗಿ ಇಲ್ಲೆಲ್ಲೋ ಗಮನ  ಹರಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ,
ಕಿರುಕುಳ ಪೋಸ್ಟ್ಗೆ ಎಷ್ಟು ಲೈಕ್‌ಗಳು ಬಿದ್ದವು, ಎಷ್ಟು ಶೇರ್ ಆದುವು ಎಂಬುದು ಕಿರುಕುಳಕ್ಕಿಂತ ಮುಖ್ಯ ಸುದ್ದಿಯಾಗಿಬಿಟ್ಟೀತು.

Saturday, January 23, 2021

ಪಾಕಿಸ್ತಾನ್ ಝಿಂದಾಬಾದ್' ಯಾರ ಅಗತ್ಯ?



ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗುವುದು ಕಾನೂನು ವಿರೋಧಿಯೇ ಎಂಬ ಪ್ರಶ್ನೆಯು ಇನ್ನೆರಡು ಉಪ ಪ್ರಶ್ನೆಗಳಿಗೂ ಜನ್ಮ ನೀಡುತ್ತದೆ.
1. ಅಂಥದ್ದೊಂದು ಘೋಷಣೆಯ ಅಗತ್ಯ ಏನಿದೆ?
2. ಬರೇ ಕಾನೂನಿನ ದೃಷ್ಟಿಯಿಂದ ಮಾತ್ರ ಇದನ್ನು ನೋಡುವುದು ಸರಿಯೇ?
ಇಲ್ಲಿ ಮುಖ್ಯ ಪ್ರಶ್ನೆಗಿಂತ ಉಪ ಪ್ರಶ್ನೆಗಳೇ ಹೆಚ್ಚಿನ ವ್ಯಾಖ್ಯಾನವನ್ನೂ ಬಯಸುತ್ತವೆ.
ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗುವುದರ ಅಗತ್ಯ ಏನಿದೆ ಎಂಬ ಪ್ರಶ್ನೆಯ ಜೊತೆಜೊತೆಗೇ, ನಿಜಕ್ಕೂ ಇಂಥದ್ದೊಂದು ಘೋಷಣೆಯನ್ನು ಈ ದೇಶದಲ್ಲಿ ಕೂಗಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯವಾಗುತ್ತದೆ. ಇದಕ್ಕೆ ಕಾರಣವೂ ಇದೆ.
ಕನ್ಹಯ್ಯ ಕುಮಾರ್ ರಾಷ್ಟ್ರೀಯ ವ್ಯಕ್ತಿತ್ವವಾದದ್ದೇ ಇಂಥ ಪ್ರಕರಣದಲ್ಲಿ. ಪಾರ್ಲಿಮೆಂಟ್ ದಾಳಿಯ ಅಪರಾಧದಲ್ಲಿ ನೇಣು ಶಿಕ್ಷೆಗೀಡಾದ ಅಫ್ಝಲ್ ಗುರುವಿಗೆ ಸಂಬಂಧಿಸಿ ಜೆನ್‌ಯುವಿನಲ್ಲಿ ಫೆ. 9, 2016ರಂದು ಸಭೆ ನಡೆಸಲಾಗಿತ್ತು. ಅದರಲ್ಲಿ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ಹಲವು ವಿದ್ಯಾರ್ಥಿ ನಾಯಕರು ಭಾಗವಹಿಸಿದ್ದರು. ಆ ಸಭೆಯಲ್ಲಿ ದೇಶದ್ರೋಹಿ ಘೋಷಣೆಯನ್ನು ಕೂಗಿದ್ದಾರೆ ಎಂದು ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಸಹಿತ ಹಲವು ವಿದ್ಯಾರ್ಥಿಗಳ ಮೇಲೆ ಆರೋಪವನ್ನು ಹೊರಿಸಲಾಯಿತು. ಆಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿತ್ತಷ್ಟೇ. ಅದೇ ಆರೋಪದಲ್ಲಿ ಫೆ. 12, 2016ರಂದು ಕನ್ಹಯ್ಯರ ಬಂಧನವೂ ನಡೆಯಿತು. ಫೆ. 24ರಂದು ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯರ ಬಂಧನವೂ ನಡೆಯಿತು. ಆ ಬಂಧನದ ಸಮಯದಲ್ಲಿ ಓರ್ವ ನ್ಯಾಯವಾದಿ ಕನ್ಹಯ್ಯರ ಮೇಲೆ ಹಲ್ಲೆ ನಡೆಸಿದ್ದರು. ಕನ್ಹಯ್ಯ ಪದೇ ಪದೇ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದರು. ತನ್ನ ಘೋಷಣೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಹೇಳಿದರು. ಉಮರ್ ಖಾಲಿದ್‌ರನ್ನೂ ದೃಶ್ಯ ಮಾಧ್ಯಮಗಳು ಬೆನ್ನಟ್ಟಿದುವು. ಅವರು ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿರುವುದಾಗಿಯೂ ಹೇಳಿದುವು. ಅಸಲಿಗೆ ಅವರಲ್ಲಿ ಪಾಸ್‌ಪೋರ್ಟೇ ಇರಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಪರ ಸುದ್ದಿಯನ್ನು ನೀಡುವುದಕ್ಕೆ ಮತ್ತು ಎಡಪಂಥೀಯ ವಿಚಾರಧಾರೆಯನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಹಣಿಯುವುದಕ್ಕೆ ಆಂಗ್ಲ ಮತ್ತು ಹಿಂದಿ ದೃಶ್ಯ ಮಾಧ್ಯಮಗಳು ಜಿದ್ದಿಗೆ ಬಿದ್ದಂತೆ ವರ್ತಿಸುತ್ತಿದ್ದ ಕಾಲ ಅದು. ಮಾರ್ಚ್ 3, 2016ರಂದು ಕನ್ಹಯ್ಯ ಜಾಮೀನಿನ ಮೇಲೆ ಹೊರಬಂದರೆ, ಫೆ. 17ರಂದು ಉಮರ್ ಮತ್ತು ಅನಿರ್ಬನ್ ಕೂಡ ಜೈಲಿನಿಂದ ಹೊರಬಂದರು. 2019ರಲ್ಲಿ ದೆಹಲಿ ಪೊಲೀಸರು 1200ರಷ್ಟು ಪುಟಗಳ ಚಾರ್ಜ್ ಶೀಟನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದರು. 2020 ಫೆಬ್ರವರಿಯಲ್ಲಿ ದೆಹಲಿ ಸರಕಾರವು ಈ ದೇಶದ್ರೋಹಿ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದಕ್ಕೆ ಅನುಮತಿಯನ್ನೂ ನೀಡಿತು. ಫೆ. 9, 2016ರ ಬಳಿಕದ ಈ ಸುಮಾರು 5 ವರ್ಷಗಳಲ್ಲಿ ನಡೆದಿರುವ ಬೆಳವಣಿಗೆ ಇಷ್ಟೇ. ಆದರೆ,
ಈ ಇಡೀ ಗದ್ದಲದಿಂದ ಅತ್ಯಂತ ಹೆಚ್ಚು ಲಾಭ ಮಾಡಿಕೊಂಡಿರುವುದು ಬಿಜೆಪಿ. ದೇಶದ್ರೋಹಿ ಘೋಷಣೆಯನ್ನು ಇವರೆಲ್ಲ ಕೂಗಿದ್ದಾರೋ ಇಲ್ಲವೋ ಎಂಬುದು ಇನ್ನೂ ನಿರ್ಣಯವಾಗಿಲ್ಲ. ಕನ್ಹಯ್ಯ ಆಗಲಿ, ಉಮರ್, ಅನಿರ್ಬನ್ ಆಗಲಿ ಈ ಆರೋಪವನ್ನು ಒಪ್ಪುತ್ತಲೂ ಇಲ್ಲ. ಆ ಸಭೆಯ ವೀಡಿಯೊವನ್ನು ಪೂರ್ಣವಾಗಿ ತಿರುಚಲಾಗಿದೆ ಎಂಬ ಆರೋಪ ಆವತ್ತಿನಿಂದ ಇವತ್ತಿನವರೆಗೂ ಹಾಗೆಯೇ ಉಳಿದುಕೊಂಡಿದೆ. ಆದರೆ,
ಜೆಎನ್‌ಯುವನ್ನು ದೇಶದ್ರೋಹಿಗಳ ಅಡ್ಡೆ ಎಂದು ಹೇಳುವುದಕ್ಕೆ, ಅದನ್ನು ಗುರಿಯಾಗಿಸಿಕೊಂಡು ದೇಶಪ್ರೇಮದ ಡಯಲಾಗ್‌ಗಳನ್ನು ದೇಶದಾದ್ಯಂತ ಬಿತ್ತುವುದಕ್ಕೆ ಬಿಜೆಪಿಗೆ ಸಾಧ್ಯವಾಗಿದೆ. ನಿಧಾನವಾಗಿ ಜೆಎನ್‌ಯುವಿನ ಮೇಲೆ ಎಂಥ ಕಪ್ಪು ಮಸಿ ಅಂಟಿಕೊಂಡಿತೆಂದರೆ, ಅಲ್ಲಿನ ವಿದ್ಯಾರ್ಥಿಗಳ ಮೇಲೆ ಜನವರಿ 5, 2020ರಂದು ಆಯುಧಧಾರಿಗಳಿಂದ ಮಾರಣಾಂತಿಕ ಹಲ್ಲೆಯೂ ನಡೆಯಿತು. ಮೈಯಿಡೀ ಗಾಯ ಮಾಡಿಕೊಂಡ ವಿದ್ಯಾರ್ಥಿ ನಾಯಕಿ ಐಶೆ ಘೋಷ್ ಮತ್ತಿತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜಾಗತಿಕ ಗಮನ ಸೆಳೆದರು. ದಾಳಿಕೋರರು ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗಿದ್ದರು ಎಂಬುದನ್ನು ಸಾಬೀತುಪಡಿಸುವ ಹಲವು ಸಾಕ್ಷ್ಯಗಳು ಸಿಕ್ಕವು. ಅದು ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳಾಗುತ್ತಿದ್ದ ಸಮಯವೂ ಹೌದು. ನಿಜವಾಗಿ,
ದೇಶದ್ರೋಹದ ಆರೋಪವನ್ನು ಹೊರಿಸುವುದರಿಂದ ಇತರೆಲ್ಲ ಆರೋಪಗಳಿಗಿಂತ ಹೆಚ್ಚಿನ ರಾಜಕೀಯ ಮತ್ತು ಸಾಂಸ್ಕೃತಿಕ ಲಾಭವನ್ನು ಪಡೆದುಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದ ಪ್ರಕರಣ ಇದು. ಈ ಆರೋಪ ಸಾಬೀತುಗೊಳ್ಳುತ್ತದೋ ಬಿಡುತ್ತದೋ ಎಂಬುದು ಅಮುಖ್ಯ. ಆರೋಪವೇ ಮುಖ್ಯ. ಆರೋಪ ಹೊರಿಸಲಾದ ಸಮಯದಲ್ಲಿ ಉಂಟಾಗುವ ಗದ್ದಲವು ಬರೇ ಕಾನೂನಾತ್ಮಕವಾದುವಾಗಿರುವುದಿಲ್ಲ. ಅದಕ್ಕೆ ರಾಜಕೀಯ ಆಯಾಮ ಇರುತ್ತದೆ. ಸಾಂಸ್ಕೃತಿಕ ಮತ್ತು ಧ್ರುವೀಕರಣ ರಾಜಕಾರಣದಲ್ಲಿ ನಂಬಿಕೆಯನ್ನಿಟ್ಟ ಪಕ್ಷಕ್ಕೆ ಹುಲಸಾದ ಬೆಳೆಯನ್ನು ಕೊಯ್ಯಲು ಆ ಆರೋಪವೊಂದೇ ಸಾಕಾಗುತ್ತದೆ. ಅಂದಹಾಗೆ,
ಇಂಥ  ರಾಜಕಾರಣದಲ್ಲಿ ನಂಬಿಕೆಯಿಟ್ಟವರಿಗೆ ಎದುರು ಭಾಗದಲ್ಲಿ ದೇಶದ್ರೋಹಿಗಳ ಒಂದು ಗುಂಪು ಬೇಕೇ ಬೇಕಾಗುತ್ತದೆ. ತಾವು ದೇಶಪ್ರೇಮಿಗಳಾಗುವುದೇ ಆ ಎದುರು ಭಾಗದಲ್ಲಿರುವ ದೇಶದ್ರೋಹಿಗಳನ್ನು ತೋರಿಸಿ. ಭ್ರಷ್ಟಾಚಾರ, ಅತ್ಯಾಚಾರ, ವಂಚನೆ ಇತ್ಯಾದಿ ಆರೋಪಗಳನ್ನು ಹೊರಿಸಿ ಸಮಾಜದ ಗಮನ ಸೆಳೆಯುವುದು ಎಷ್ಟು ಕಷ್ಟವೋ ದೇಶದ್ರೋಹದ ಆರೋಪ ಹೊರಿಸಿ ಸಮಾಜವನ್ನು ಸೆಳೆಯುವುದು ಅಷ್ಟೇ ಸುಲಭ. ಇವನ್ನು ಸಾಬೀತು ಪಡಿಸುವುದಕ್ಕೆ ಇನ್ನೆರಡು ಪ್ರಕರಣಗಳನ್ನು ಉದಾಹರಿಸಬಹುದು-
2020 ನವೆಂಬರ್ 7ರಂದು ಅಸ್ಸಾಮ್ ಬಿಜೆಪಿ ಶಾಸಕ ಮತ್ತು ಪ್ರಮುಖ ನಾಯಕ ಹಿಮಾಂಶು ಬಿಸ್ವ ಶರ್ಮ ಒಂದು ಟ್ವೀಟ್ ಮಾಡುತ್ತಾರೆ. ಅಸ್ಸಾಮ್‌ನ ಪ್ರಮುಖ ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF)ನ ಅಧ್ಯಕ್ಷ ಮೌಲಾನಾ ಬದ್ರುದ್ದೀನ್ ಅಜ್ಮಲ್‌ಗೆ ಸಂಬಂಧಿಸಿದ ಟ್ವೀಟ್ ಅದು. 2020 ನವೆಂಬರ್ 7 ರಂದು ಅಸ್ಸಾಮ್‌ನ ಸಿಲ್‌ಚಾರ್ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸುತ್ತಾರೆ ಮತ್ತು ಜೊತೆಗೆ ಶಾಸಕ ಅಝೀಝï ಖಾನ್ ಕೂಡ ಇರುತ್ತಾರೆ. ಇವರನ್ನು ಸ್ವಾಗತಿಸುವುದಕ್ಕಾಗಿ ಹೊರಗಡೆ ಸೇರಿದ್ದ ಪಕ್ಷದ ಬೆಂಬಲಿಗರು ಪಾಕಿಸ್ತಾನ್ ಝಿಂದಾಬಾದ್ ಕೂಗಿದ್ದಾರೆ ಎಂದು ಹಿಮಾಂಶು ಬಿಸ್ವ ಶರ್ಮ ಟ್ವೀಟ್ ಮಾಡುತ್ತಾರೆ. ಆ ಬಳಿಕ ಅಂಥದ್ದೇ  ಟ್ವೀಟನ್ನು ಬಿಜೆಪಿಯ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ, ಅಸ್ಸಾಮ್‌ನ ಶಾಸಕರಾದ ರಾಜ್‌ದೀಪ್ ರಾಯ್ ಮತ್ತು ಅಶೋಕ್ ಸಿಂಘಾಲ್ ಕೂಡ ಮಾಡುತ್ತಾರೆ. ರಾಷ್ಟ್ರೀಯ ಆಂಗ್ಲ ಮತ್ತು ಹಿಂದಿ ದೃಶ್ಯಮಾಧ್ಯಮಗಳು ಭಾರೀ ಮಹತ್ವ ಕೊಟ್ಟು ಆ ವೀಡಿಯೋವನ್ನು ಮತ್ತು ಸುದ್ದಿಯನ್ನು ಹಂಚಿಕೊಳ್ಳುತ್ತವೆ. ಈ ಗದ್ದಲದ ನಡುವೆ AIUDF  ಪತ್ರಿಕಾಗೋಷ್ಠಿಯನ್ನು ಕರೆದು ನಿಜ ಏನೆಂದು ಹೇಳುತ್ತದೆ. ಫ್ಯಾಕ್ಟ್ ಚೆಕ್ ವಿವರಗಳೂ ಹೊರಬೀಳುತ್ತವೆ. ಅಸಲಿ ಸಂಗತಿ ಏನೆಂದರೆ,
ಮೌಲಾನಾ ಅಜ್ಮಲ್‌ರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಸೇರಿದ್ದ ಜನರು ಅಜ್ಮಲ್‌ರಿಗೆ ಝಿಂದಾಬಾದ್ ಎಂದು ಕೂಗಿದಂತೆಯೇ ಅಝೀಝï ಖಾನ್ ಝಿಂದಾಬಾದ್ ಎಂದೂ ಕೂಗಿದ್ದರು. ಈ ಅಝೀಝï ಖಾನ್ ಝಿಂದಾಬಾದ್ ಎಂಬ ಕೂಗನ್ನೇ ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಹೇಳಲಾಗಿದೆ. ಈ ಕಾರಣದಿಂದಲೇ ಆ ಬಳಿಕ ಹಿಮಾಂಶು ಬಿಸ್ವ ಶರ್ಮ ಅವರ ಮೇಲೆ ವಿವಿಧ ಸಮುದಾಯದ ಮೇಲೆ ಸಂಘರ್ಷ ಹುಟ್ಟು ಹಾಕಲು ಪ್ರಚೋದಿ ಸಿದ ಕೇಸು ದಾಖಲಿಸಿರುವುದಾಗಿ ನವೆಂಬರ್ 11ರಂದು ಪಿಟಿಐ ಮಾಡಿರುವ ವರದಿಯನ್ನು ದಿ ವೈರ್ ಸುದ್ದಿ ಜಾಲತಾಣ ಉಲ್ಲೇಖಿಸಿತ್ತು. ವಿಶೇಷ ಏನೆಂದರೆ, ಹಿಮಾಂಶು ಬಿಸ್ವ ಅವರು ನವೆಂಬರ್ 7ರಂದು ಮಾಡಿದ ಟ್ವೀಟ್‌ನಲ್ಲಿಯ ವಿಷಯಗಳು-
This throughly exposes @ INC India which is encouraging such forces by forging an alliance. We shall fight them tooth and nail. Jai Hind.
ಈ ಟ್ವೀಟ್‌ನಲ್ಲಿ ಕಾಂಗ್ರೆಸನ್ನು ಎಳೆದು ತಂದಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಯಾಕೆಂದರೆ, 2021ರಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎಐಯುಡಿಎಫ್ ಮತ್ತು ಕಮ್ಯುನಿಸ್ಟ್ ಪಕ್ಷಗಳೊಂದಿಗೆ ಕಾಂಗ್ರೆಸ್ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಎಲ್ಲಿ ಸವಾಲಾಗುತ್ತೋ ಎಂಬ ಭೀತಿ ಹಿಮಾಂಶುರದ್ದು.
ಇದೀಗ, ಈ ಹಿನ್ನೆಲೆಯಲ್ಲಿ ಆ ಇಡೀ ಪ್ರಕರಣವನ್ನೊಮ್ಮೆ ಪುನಃ ಅವಲೋಕಿಸಿ ನೋಡಿ. ಆ ಆರೋಪದ ಹಿನ್ನೆಲೆ ನಿಮಗೆ ಸುಲಭದಲ್ಲಿ ಮನವರಿಕೆಯಾಗಬಹುದು.
ಇನ್ನೊಂದು ಪ್ರಕರಣವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ಉತ್ತರ ಪ್ರದೇಶದ ಲಕ್ನೋದಲ್ಲಿ 2019 ಡಿಸೆಂಬರ್ 13ರಂದು ಎನ್‌ಆರ್‌ಸಿ, ಸಿಎಎ ವಿರೋಧಿ ಪ್ರತಿಭಟನೆ ನಡೆಯಿತು. ಇದಕ್ಕೆ ನೇತೃತ್ವ ನೀಡಿದವರು ಓವೈಸಿ ಪಕ್ಷದ ಮುಖಂಡ ಕಾಶಿಫ್ ಅಹ್ಮದ್ ಎಂಬವರು. ಈ ಸಭೆಯಲ್ಲಿ ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಲಾಗಿದೆ ಎಂಬುದಾಗಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ ಡಿಸೆಂಬರ್ 28ರಂದು ಟ್ವೀಟ್ ಮಾಡಿದ್ದರು. ಅಲ್ಬ್ ನ್ಯೂಸ್ ಆ ಕಾರ್ಯಕ್ರಮದ ವೀಡಿಯೋವನ್ನು ನಿಕಷಕ್ಕೆ ಒಡ್ಡಿತು ಮತ್ತು ಅದರ ಫಲಿತಾಂಶವನ್ನು ದ ವೈರ್ ಸುದ್ದಿ ಜಾಲತಾಣ ಕೂಡ ಪ್ರಕಟಿಸಿತು. ಆ ಸಭೆಯಲ್ಲಿ ಕಾಶಿಫ್ ಸಾಬ್ ಝಿಂದಾಬಾದ್, ಹಿಂದೂಸ್ತಾನ್ ಝಿಂದಾಬಾದ್, ಅಕ್ಬರ್ ಓವೈಸಿ ಝಿಂದಾಬಾದ್ ಎಂದು ಕೂಗಲಾಗಿದೆಯೇ ಹೊರತು ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಲಾಗಿಲ್ಲ ಎಂದು ಅದು ಹೇಳಿತು. ಮಾತ್ರವಲ್ಲ, ಉತ್ತರ ಪ್ರದೇಶದ ಪೊಲೀಸರು ಕೂಡ ದೇಶದ್ರೋಹದ ಕೇಸನ್ನು ಕೈಬಿಟ್ಟು ಶಾಂತಿ ಕದಡಿದ ಪ್ರಕರಣವನ್ನಷ್ಟೇ ದಾಖಲಿಸಿದರು. ಆದರೆ, ಅಮಿತ್ ಮಾಲವೀಯ ಅವರ ಟ್ವೀಟ್ ನಿಂದ ಏನನ್ನು ಪಡೆದುಕೊಳ್ಳಬೇಕೋ ಅವೆಲ್ಲವನ್ನೂ ಪಡೆದುಕೊಳ್ಳ ಬೇಕಾದವರು ಪಡೆದುಕೊಂಡರು.
ನಿಜ ಏನೆಂದರೆ,
ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆಂದು ಯಾರ ಮೇಲಾದರೂ ಆರೋಪ ಹೊರಿಸುವುದರಲ್ಲಿ ಒಂದು ಥ್ರಿಲ್ ಇದೆ. ಇದು ಓರ್ವರನ್ನು ಭ್ರಷ್ಟಾಚಾರಿ ಎಂದು ಆರೋಪಿಸಿ ದಂತಲ್ಲ. ಆದ್ದರಿಂದಲೇ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮೇಲೂ ಇದೇ ಆರೋಪವನ್ನು ಬಿಜೆಪಿ ಹೊರಿಸಿದ್ದು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಶಂತ್ ಕುಮಾರ್ ಗೌತಂ ಅವರು ನವೆಂಬರ್ 29, 2020ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತುಗಳನ್ನು ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. ರೈತ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಝಿಂದಾಬಾದ್, ಖಾಲಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಲಾಗಿದೆ ಎಂದವರು ಆರೋಪಿಸಿದ್ದರು. ಹಾಗಂತ, ನಿಜಕ್ಕೂ ಹಾಗೆ ರೈತರು ಘೋಷಿಸಿದ್ದಾರೆಯೇ, ಅದಕ್ಕೆ ಏನು ಪುರಾವೆಗಳಿವೆ ಮತ್ತು ಅವು ಎಷ್ಟು ದೋಷರಹಿತ ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ತಕ್ಷಣಕ್ಕೆ ಲಭ್ಯವಾಗುವುದಕ್ಕೆ ಸಾಧ್ಯವಿಲ್ಲ. ಈ ಸತ್ಯ ಆರೋಪ ಹೊರಿಸುವವರಿಗೆ ಚೆನ್ನಾಗಿ ಗೊತ್ತು. ಆರೋಪಿತರು ಆ ಕ್ಷಣ ದಂಗಾಗುತ್ತಾರೆ. ನಾಲ್ಕೂ ಕಡೆಯಿಂದ ತೂರಿ ಬರುವ ಪ್ರಶ್ನೆಗಳಿಗೆ ನಿರಾಕರಣೆಯ ಉತ್ತರ ನೀಡಿ ನೀಡಿ ಸುಸ್ತಾಗುತ್ತಾರೆ ಮತ್ತು ಇಂಥ ನಿರಾಕರಣೆಯ ಉತ್ತರವನ್ನು ಅವರು ನೀಡುತ್ತಿರಬೇಕು ಎಂಬುದು ಆರೋಪ ಹೊರಿಸುವವರ ಉದ್ದೇಶವೂ ಆಗಿರುತ್ತದೆ. ಮುಂದೊಂದು ದಿನ ಆ ಆರೋಪ ತಪ್ಪೆಂದು ಸಾಬೀತಾದರೂ ಅದು ಸಾಸಿವೆಯಷ್ಟು ಸದ್ದು ಮಾಡುವುದಕ್ಕೂ ಸಮರ್ಥವಿರುವುದಿಲ್ಲ.
ಅಷ್ಟಕ್ಕೂ,
ಪಾಕಿಸ್ತಾನ್ ಝಿಂದಾಬಾದ್ ಎಂಬುದು ಶ್ರೀಲಂಕಾ ಝಿಂದಾ ಬಾದ್ ಎಂದು ಕೂಗಿದಷ್ಟೇ ಸಹಜವಾದುದು ಮತ್ತು ಸಮಾನ ಸ್ಥಾನಮಾನವುಳ್ಳದ್ದು ಎಂದು ವಾದಿಸುವುದನ್ನು ಒಪ್ಪಲಾಗದು. ಪಾಕ್ ಮತ್ತು ಭಾರತದ ನಡುವಿನ ಸಂಬಂಧ ಸಹಜವಾಗಿಲ್ಲದೇ ಇರುವಾಗ ಮತ್ತು ಈ ಎರಡು ರಾಷ್ಟ್ರಗಳ ನಡುವೆ ನಾಲ್ಕನೇ ಯುದ್ಧ ಯಾವ ಸಂದರ್ಭದಲ್ಲೂ ಘಟಿಸಬಹುದು ಎಂಬ ವಾತಾವರಣ ಸಣ್ಣ ಪ್ರಮಾಣದಲ್ಲಾದರೂ ಇರುವಾಗ ಪಾಕ್ ಝಿಂದಾಬಾದ್ ಮತ್ತು ಲಂಕಾ ಝಿಂದಾಬಾದ್ ಘೋಷಣೆಗಳನ್ನು ಏಕಪ್ರಕಾರವಾಗಿ ಪರಿಗಣಿಸಲು ಅಸಾಧ್ಯ. ಕಾನೂನಿನ ಪ್ರಕಾರ ಪಾಕಿಸ್ತಾನ್ ಝಿಂದಾಬಾದ್ ಎಂದು ಹೇಳುವುದು ನೇರವಾಗಿ ತಪ್ಪಲ್ಲದೇ ಇರಬಹುದು. ಆದರೆ, ಎರಡೂ ದೇಶಗಳ ನಡುವಿನ ಸಂಬಂಧ ಮತ್ತು ಅದು ಹುಟ್ಟು ಹಾಕಿರುವ ಪರಿಣಾಮಗಳು ಕಾನೂನಿನ ಹೊರತಾದ ಜಿಜ್ಞಾಸೆಗೂ ಕಾರಣವಾಗುತ್ತದೆ. ಅಂದಹಾಗೆ,
ಪಾಕಿಸ್ತಾನ್ ಝಿಂದಾಬಾದ್ ಎಂದು ಹೇಳುವುದರಿಂದ ಭಾರತೀಯರಿಗೆ ದಕ್ಕುವುದು ಏನೂ ಇಲ್ಲ. ಈ ಸತ್ಯ ಭಾರತೀಯರಿಗೆ ಗೊತ್ತಿರುತ್ತದೆ, ಗೊತ್ತಿರಬೇಕು. ಆದರೆ, ಪಾಕಿಸ್ತಾನ್ ಝಿಂದಾಬಾದ್ ಕೂಗಿದ್ದಾರೆಂದು ಆರೋಪ ಹೊರಿಸುವುದರಿಂದ ಏನೆಲ್ಲ ದಕ್ಕುತ್ತದೆ ಎಂಬುದಂತೂ ಹೊರಿಸುವವರಿಗೆ ಚೆನ್ನಾಗಿಯೇ ಗೊತ್ತಿದೆ. ಅಷ್ಟಕ್ಕೂ,
ದ.ಕ. ಜಿಲ್ಲೆಯಲ್ಲಿ ಎಸ್‌ಡಿಪಿಐ ಬೆಂಬಲಿಗರು ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ್ದಾರೆಂಬ ಆರೋಪ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಇವೆಲ್ಲ ನೆನಪಾಯಿತು.

Saturday, January 9, 2021

ಕಡಲ ‘ಮೀನುಗಳು' ಮಾತಾಡಿದುವು, ಮನಸ್ಸು ಆರ್ದ್ರಗೊಂಡಿತು..


 ಏ.ಕೆ. ಕುಕ್ಕಿಲ
ಆ 5 ಮಂದಿ ಮೀನುಗಾರರು ಕಚೇರಿಗೆ ಬಂದಿದ್ದರು. ಕೂರಿಸಿ ಮಾತಾಡಿಸಿದೆ. ಮಂಗಳೂರಿನ ಕಡಲಲ್ಲಿ ಮುಳುಗಿದ ಶ್ರೀರಕ್ಷಾ  ಪರ್ಸಿನ್ ಬೋಟ್‍ನಿಂದ ಪವಾಡಸದೃಶವಾಗಿ ಪಾರಾಗಿ ಬಂದ 19 ಮಂದಿಯಲ್ಲಿ ಈ ಯುವಕರೂ ಇದ್ದರು ಅಥವಾ ಆ 19 ಮಂದಿ  ಬದುಕಿ ಉಳಿದುದರಲ್ಲಿ ಈ 5 ಮಂದಿಯ ಪಾತ್ರ ಬಹಳ ದೊಡ್ಡದು. ಆಳ ಮೀನುಗಾರಿಕೆಗೆ ತೆರಳುವ ಪರ್ಸಿನ್ ಬೋಟ್‍ಗೆ ಸಣ್ಣ  ಬೋಟನ್ನೂ ಕಟ್ಟಲಾಗಿರುತ್ತದೆ. ಇದಕ್ಕೆ ಡಿಂಗಿ ಬೋಟ್ ಎಂದು ಹೆಸರು. ಪರ್ಸಿನ್ ಬೋಟು ಅವಘಡಕ್ಕೆ ಈಡಾದರೆ ಆಪತ್ಕಾಲಕ್ಕೆ  ಇರಲಿ ಎಂಬ ಉದ್ದೇಶದಿಂದ ಈ ಬೋಟನ್ನು ಜೊತೆಗೊಯ್ಯಲಾಗುತ್ತದೆ. ಶ್ರೀರಕ್ಷಾ ಬೋಟು ದಿಢೀರ್ ಆಗಿ ಕವುಚಿ ಬೀಳುವ  ಸೂಚನೆ ನೀಡಿದಾಗ ಅದರಲ್ಲಿದ್ದ ಈ 25ರಷ್ಟು ಮೀನುಗಾರರಿಗೆ ಕಡಲಿಗೆ ಧುಮುಕದೇ ಬೇರೆ ದಾರಿಯಿರಲಿಲ್ಲ. ಅರ್ಧರಾತ್ರಿ. ಒಬ್ಬನನ್ನು ಮತ್ತೊಬ್ಬ ಗುರುತಿಸಲಾಗದ ಮತ್ತು ಪತ್ತೆಹಚ್ಚಲಾಗದಂಥ ಸ್ಥಿತಿ. ಅಲ್ಲದೇ ತೀವ್ರ ಚಳಿ. ಕಡಲಿನ ಯಾವುದೋ ಒಂದು ಮಧ್ಯಭಾಗ.

ಪರ್ಸಿನ್ ಬೋಟು ನಿಧಾನಕ್ಕೆ ಮುಳುಗಲು ಪ್ರಾರಂಭಿಸಿದಾಗ ಅದರ ಜೊತೆಗೇ ಆ ಡಿಂಗಿ ಬೋಟೂ ಮುಳುಗಲು ಪ್ರಾರಂಭಿಸಿತು.  ಡಿಂಗಿ ಬೋಟನ್ನು ಪರ್ಸಿನ್ ಬೋಟ್‍ಗೆ ಹಗ್ಗದಿಂದ ಕಟ್ಟಿರುವ ಕಾರಣ ಇದು ಸಹಜವೂ ಆಗಿತ್ತು. ಸುಮಾರು 18 ಟನ್ ಮೀನನ್ನು  ತುಂಬಿಸಿಕೊಂಡಿರುವ ಬೋಟೊಂದು ನಿಧಾನಕ್ಕೆ ಕವುಚಿ ಬೀಳಲು ತೊಡಗುವುದು ಮತ್ತು ಅದರ ಜೊತೆಗೇ ಆಪತ್ಕಾಲದ ಬೋಟೂ  ಮುಳುಗುತ್ತಿರುವುದನ್ನು ಕಡಲಿಗೆ ಬಿದ್ದ ಹೆಚ್ಚಿನ ಮೀನುಗಾರರು ಹೊಲಬರಿಯದೇ ನೋಡುತ್ತಿದ್ದಾಗ ಈ 5 ಮಂದಿ ಯುವಕರು  ಅಸಾಧಾರಣ ಧೈರ್ಯ ತೋರಿ ಮುಳುಗುತ್ತಿದ್ದ ಪರ್ಸಿನ್ ಬೋಟ್‍ನಿಂದ ಕತ್ತಿಯನ್ನು ತಂದು ಹಗ್ಗ ಕತ್ತರಿಸತೊಡಗಿದರು. ಬಹುಶಃ  ಪರ್ಸಿನ್ ಬೋಟು ಕವುಚಿ ಬೀಳದೇ ಇರುತ್ತಿದ್ದರೆ ಈ ಹಗ್ಗ ಕತ್ತರಿಸುವುದಕ್ಕೂ ಸಮಯವೇ ಸಿಗುತ್ತಿರಲಿಲ್ಲವೇನೋ?
ಒಬ್ಬನ ನಂತರ ಒಬ್ಬ ಹೀಗೆ ಹಗ್ಗ ಕತ್ತರಿಸಿ ಡಿಂಗಿ ಬೋಟನ್ನು ಪರ್ಸಿನ್ ಬೋಟ್‍ನಿಂದ ಬೇರ್ಪಡಿಸುವ ಸಾಹಸಕ್ಕೆ ಧುಮುಕಿದರು.  ಹಾಗೆ ಬೇರ್ಪಡಿಸಿದ ಪರಿಣಾಮ ನೀರಲ್ಲಿದ್ದ 19 ಮಂದಿ ಈ ಬೋಟನ್ನು ಸೇರಿಕೊಂಡು ಬದುಕಿ ಬಂದರು. ವಿಷಾದ ಏನೆಂದರೆ,  

ಹಿಂದಿನ ದಿನ ಮುಂಜಾನೆ 3 ಗಂಟೆಗೆ ಎರಡು ಪರೋಟ ತಿಂದು ಅವರು ಈ ಪರ್ಸಿನ್ ಬೋಟನ್ನು ಹತ್ತಿದ್ದರು. ಯಥೇಚ್ಛವಾಗಿ  ಸಿಕ್ಕ ಮೀನುಗಳ ನಡುವೆ ಇವರಿಗೆ ಊಟ ಮಾಡುವುದಕ್ಕೂ ಸಮಯ ಸಿಕ್ಕಿರಲಿಲ್ಲ. ನಿಜವಾಗಿ,

ಆ ದಿನ ಮೀನಿನ ಹಬ್ಬವೇ ಆಗಿತ್ತು. ಇವರು ಹರಡಿದ್ದ ಬಲೆಯಲ್ಲಿ ಮೀನುಗಳು ಭಾರೀ ಸಂಖ್ಯೆಯಲ್ಲಿ ಬಿದ್ದಿತಲ್ಲದೇ ಬೇರೆ ಎರಡು  ಬೋಟುಗಳ ಮಂದಿ ಬಲೆ ಎಳೆಯಲು ನೆರವಾಗುವಷ್ಟು ಮೀನು ಯಥೇಚ್ಛವಾಗಿ ಸಿಕ್ಕಿತ್ತು ಮತ್ತು ಆ ಬೋಟುಗಳಿಗೆ ಧಾರಾಳ ಮೀನನ್ನೂ ಕೊಟ್ಟು ಕಳುಹಿಸಿದ್ದರು. ಆ ಬೋಟುಗಳು ಹೋದ ಬಳಿಕ ಇವರಿದ್ದ ಬೋಟು ಮುಳುಗಲು ಪ್ರಾರಂಭಿಸಿತ್ತು.

ಇವೆಲ್ಲ ಅವರೊಂದಿಗೆ ಮಾತನಾಡುತ್ತಾ ಅಲ್ಲಲ್ಲಿ ಸಿಕ್ಕ ಮಾಹಿತಿಗಳೇ ಹೊರತು ಅವರ ನಿಜ ಉದ್ದೇಶ ಈ ಮಾಹಿತಿಯನ್ನು ಹಂಚಿ ಕೊಳ್ಳುವುದಲ್ಲ ಎಂಬುದು ಅವರ ಮುಖಭಾವಗಳೇ ಹೇಳುತ್ತಿತ್ತು. ಅವರ ಪ್ರತಿ ಮಾತಿನಲ್ಲೂ ಕಳಕೊಂಡ ಗೆಳೆಯರ ಬಗೆಗಿನ  ಸಂಕಟಗಳ ಜೊತೆಜೊತೆಗೇ ತಾವೆಷ್ಟು ಅಪಾಯಕಾರಿ ಸ್ಥಿತಿಯಲ್ಲಿ ದುಡಿಯುತ್ತಿದ್ದೇವೆ ಎಂಬುದು ವ್ಯಕ್ತವಾಗುತ್ತಿತ್ತು. ಮೀನುಗಾರರ  ಪಾಲಿಗೆ ಕಡಲು ಇನ್ನೊಂದು ಮನೆ. ಮೀನಿನ ಜೊತೆ ಸದಾ ಸಂವಾದ ಅವರ ದಿನನಿತ್ಯದ ಬದುಕು. ಕಡಲಿನಲ್ಲೇ  ಅವರು ರಾತ್ರಿಯ ನ್ನು ಕಳೆಯುತ್ತಾರೆ. ಹಗಲನ್ನೂ ಕಳೆಯುತ್ತಾರೆ. ಅಲ್ಲೇ ಊಟ ಮಾಡುತ್ತಾರೆ. ನಿದ್ದೆ ಮಾಡುತ್ತಾರೆ. ತಮಾಷೆ, ನಗು, ಈ ಹಿಂದಿನವರ  ಸಾಹಸಗಾಥೆಗಳ ವರ್ಣನೆ, ಈಗಿನ ಅಪಾಯ... ಎಲ್ಲವುಗಳೂ ಅಲ್ಲಿ ಚರ್ಚೆಯಾಗುತ್ತಿರುತ್ತವೆ. ಮದುವೆಯಾಗದವರ ಮಾತು-ಕತೆಗಳ  ಸ್ವರೂಪ ಒಂದು ರೀತಿಯಾದರೆ, ಮದುವೆಯಾಗಿ ಮಕ್ಕಳು-ಸಂಸಾರ ಎಂಬವುಗಳನ್ನು ಜೊತೆಗೆ ಕಟ್ಟಿಕೊಂಡವರ ಮಾತು-ಕತೆಗಳು  ಇನ್ನೊಂದು ರೀತಿ. ಶಾಲಾ ಫೀಸು, ಆರೋಗ್ಯ, ಮನೆ ನಿರ್ವಹಣೆ, ಮನೆ ಬಾಡಿಗೆ ಇತ್ಯಾದಿಗಳೆಲ್ಲವೂ ಇವರ ಮಾತುಕತೆಗಳ ಮುಖ್ಯ  ಭಾಗವೂ ಆಗಿರುತ್ತದೆ. ಹಾಗಂತ,

ಕಡಲನ್ನೇ ಮನೆಯಾಗಿಸಿಕೊಂಡಿರುವ ಈ ಮೀನುಗಾರರಲ್ಲಿ ಹೆಚ್ಚಿನವರಿಗೆ ಸಹಜ ಮನೆಯಲ್ಲಿರುವ ಯಾವ ಜೀವನ ಭದ್ರತೆಯೂ  ಇರುವುದಿಲ್ಲ. ಕಡಲಿನ ಹೊರಗಡೆ ಇರುವ ಮನೆ ಯಲ್ಲಿ ಸಾಮಾನ್ಯ ಅಪಾಯವನ್ನು ಎದುರಿಸುವುದಕ್ಕೆ ತಕ್ಕಮಟ್ಟಿನ ಏ ರ್ಪಾಡುಗಳಾದರೂ ಇರುತ್ತವೆ. ಬೆಂಕಿ ಹೊತ್ತಿಕೊಂಡು ಜೀವಕ್ಕೆ ಅಪಾಯ ಎದುರಾಗುವಂತಿದ್ದರೆ ಏನಿಲ್ಲವೆಂದರೂ ಬೆಂಕಿ ನಂದಿಸುವು  ದಕ್ಕೆ ನೀರು ಇರುತ್ತದೆ. ತಲೆನೋವು, ಶೀತ, ಗ್ಯಾಸ್ಟ್ರಿಕ್ ಇತ್ಯಾದಿ ಗಳನ್ನು ಎದುರಿಸುವುದಕ್ಕೆ ಮೊದಲೇ ಔಷಧಿಗಳನ್ನು ತಂದಿಡಲಾಗುತ್ತದೆ. ಮನೆಮದ್ದುಗಳಿಗೆ ಬೇಕಾದ ಬೇರೆ ಬೇರೆ ಔಷಧೀಯ ವಸ್ತುಗಳನ್ನೂ ಮನೆಯಲ್ಲಿ ತಂದಿಡುವುದಿದೆ. ಇವೆಲ್ಲ ಮುಂಜಾಗರೂ  ಕತಾ ಕ್ರಮಗಳು. ಏನಾದರೂ ಅಪಾಯ ಸಂಭವಿಸಿ ಬಿಟ್ಟರೆ ಅಥವಾ ತುರ್ತು ಸಂದರ್ಭ ಸೃಷ್ಟಿಯಾದರೆ ಎಂಬ ಮುನ್ನೆಚ್ಚರಿಕೆಯೇ  ಇವು ಮನೆಯಲ್ಲಿರುವುದಕ್ಕೆ ಕಾರಣ. ದುರಂತ ಏನೆಂದರೆ,

ಕಡಲನ್ನೇ ಮನೆ ಮಾಡಿಕೊಂಡಿರುವ ಈ ಮೀನುಗಾರರಲ್ಲಿ ಹೆಚ್ಚಿನವರಿಗೆ ಅಪಾಯಕಾರಿ ಸಂದರ್ಭವನ್ನು ಎದುರಿಸುವುದಕ್ಕೆ ಯಾವ  ಸೌಲಭ್ಯಗಳೂ ಇಲ್ಲ. ಈ ಯುವಕರನ್ನೇ ಎತ್ತಿಕೊಳ್ಳಿ. ಪರ್ಸಿನ್ ಬೋಟು ಕವುಚಿ ಬೀಳುವ ಬದಲು ಸಹಜ ಮುಳುಗಡೆಗೆ  ಒಳಗಾಗಿರುತ್ತಿದ್ದರೆ ಆ ಡಿಂಗಿ ಬೋಟನ್ನು ಬೇರ್ಪಡಿಸುವುದು ಸುಲಭವಿತ್ತೇ ಎಂಬ ಪ್ರಶ್ನೆ ನಿರ್ಲಕ್ಷಿಸುವಂಥದ್ದಲ್ಲ. ಲೈಫ್ ಜಾಕೆಟ್  ಎಂಬುದು ಇಂಥ ಸಂದರ್ಭಗಳಲ್ಲಿ ಮೀನುಗಾರರ ಜೀವವನ್ನು ಉಳಿಸಬಲ್ಲದು. ಕಡಲಿನ ಆಳ-ಅಗಲ ತಿಳಿಯದ ಮತ್ತು ನಾವು ಎ ಲ್ಲಿದ್ದೇವೆಂದೇ ಗೊತ್ತಾಗದಂಥ ಕಾಳ ರಾತ್ರಿಯಲ್ಲಿ ಅವಘಡ ಸಂಭವಿಸುವುದನ್ನು ಊಹಿಸಿಕೊಳ್ಳುವಾಗಲೇ ಭಯವಾಗುತ್ತದೆ. ಇಂಥ ಸಂದರ್ಭದಲ್ಲಿ ಲೈಫ್ ಜಾಕೆಟ್ ಇಲ್ಲದೇ ನೀರಿಗೆ  ಧುಮುಕುವುದೆಂದರೆ, ಸಾವನ್ನು ಆರಿಸಿಕೊಂಡಂತೆ. ಅಪಾಯಕಾರಿ ಸನ್ನಿವೇಶದ ನಡುವೆಯೂ ಈ ಯುವಕರು ಸ್ಥಿಮಿತ ಕಳಕೊಳ್ಳದೇ  ಇರುತ್ತಿದ್ದರೆ ಈ 19 ಮಂದಿಯ ಸ್ಥಿತಿ ಏನಾಗಿರುತ್ತಿತ್ತೋ ಏನೋ? ಅಷ್ಟಕ್ಕೂ,

ಕಡಲು ಮಾತ್ರ ಇವರ ಪಾಲಿಗೆ ಅಸುರಕ್ಷಿತ ಮನೆಯಲ್ಲ. ಬೋಟು ತುಂಬಾ ಟನ್ನುಗಟ್ಟಲೆ ಮೀನು ತಂದು ತೀರಕ್ಕೆ ತಲುಪಿದ  ಬಳಿಕವೂ ಇವರ ಬದುಕು ಅಸುರಕ್ಷಿತವೇ. ಒಂದು ರೀತಿಯಲ್ಲಿ ಇವರೆಲ್ಲ ಅಸುರಕ್ಷಿತ ಕಾರ್ಮಿಕರು. ಹೊಟ್ಟೆಯ ಹಸಿವೇ ಇವರನ್ನು  ಈ ಅಸುರಕ್ಷಿತ ಸನ್ನಿವೇಶಕ್ಕೆ ಒಗ್ಗಿಕೊಳ್ಳುವಂತೆ ಮಾಡಿದೆ. ಒಂದು ಕಾಳರಾತ್ರಿಯಲ್ಲಿ ಹೊಟ್ಟೆಗೇನನ್ನೋ ತುಂಬಿಸಿ ಕೊಂಡು ತೀರ  ಬಿಡುವ ಇಂಥ ಛಲಗಾರ ಮೀನುಗಾರರು ಕಡಲ ಮಧ್ಯೆ ರಾತ್ರಿ-ಹಗಲನ್ನು ಕಳೆದು ತೀರಕ್ಕೆ ಬಂದರೆ, ಜುಜುಬಿ ಅನ್ನುವ ವೇತನವಷ್ಟೇ  ಸಿಗುತ್ತದೆ. ಅವರ ಸಾಹಸ, ಸಮಯ, ಕೆಲಸ ಮತ್ತು ಅಪಾಯಕಾರಿ ಸನ್ನಿವೇಶಕ್ಕೆ ಹೋಲಿಸಿದರೆ ಇವರು ಪಡೆಯುವ ವೇತನ ಬಹಳ  ಚಿಕ್ಕದು. ಇದರ ಜೊತೆಗೇ ಇವರು ತಮ್ಮ ಆರೋಗ್ಯವನ್ನೂ ಕೆಡಿಸಿಕೊಂಡಿರುತ್ತಾರೆ. ಸರಿಯಾದ ಸಮಯಕ್ಕೆ ಸರಿಯಾದ ಆಹಾರವನ್ನು  ತೆಗೆದು ಕೆಲಸ ಮಾಡುವುದಕ್ಕೆ ಇದು ಸೂಟು-ಬೂಟಿನ ಉದ್ಯೋಗ ಅಲ್ಲವಲ್ಲ. ಹೊಟ್ಟೆಪಾಡಿನ ಅನಿವಾರ್ಯತೆ ಇಲ್ಲದಿದ್ದರೆ ಈ ಮೀನುಗಳು ಸಮುದ್ರಕ್ಕೆ ಇಳಿಯುವ ಸಾಧ್ಯತೆಯೂ ಇಲ್ಲ.

ನನ್ನೆದುರು ಕುಳಿತು ಮಾತಿಗೆ ನಿಂತ ಈ ಮೀನುಗಳನ್ನು ಆಲಿಸುತ್ತಾ ಹೋದಂತೆ ಮೂರು ಪ್ರಮುಖ ಅಂಶಗಳು ಗೋಚರಿಸಿದುವು.

1. ತಮ್ಮವರನ್ನು ಕಳಕೊಂಡ ದುಃಖಭಾವ

2. ಜೀವನ ಅಭದ್ರತೆ

3. ಅಸಂಘಟಿತ ಕಾರ್ಮಿಕರಲ್ಲಿರುವ ಸಹಜ ತಲ್ಲಣಗಳು

ಈ ಯುವಕರ ಸಾಹಸವನ್ನು ಮೆಚ್ಚಿಕೊಳ್ಳುವ ಮತ್ತು ಸನ್ಮಾನ ಮಾಡುವುದರ ಜೊತೆಜೊತೆಗೇ ಇವರ ಮಾತುಗಳ ಆಳದಲ್ಲಿರುವ  ಶೂನ್ಯ ಸ್ಥಿತಿಯನ್ನೂ ತುಂಬಬೇಕಾದ ಅಗತ್ಯ ಇದೆ. ಬಗೆಬಗೆಯ ಮೀನುಗಳ ರುಚಿಯನ್ನು ಸವಿದು ಅನುಭವವಿರುವ ಹೆಚ್ಚಿನವರಿಗೆ  ಈ ಮೀನುಗಳ ಹಿಂದಿನ ಕರುಣ ಕತೆ ಗೊತ್ತಿರುವುದಿಲ್ಲ. ಮೀನು ಗಳಲ್ಲಿ ಯಾವ ವಿಧದ ಜಾತಿ, ಪ್ರಬೇಧಗಳಿವೆ, ಇವುಗಳಲ್ಲಿ ಬರೇ  ಮುಳ್ಳು ಹೆಚ್ಚಿರುವ ಮೀನುಗಳಾವುವು, ಮಾಂಸವೇ ಹೆಚ್ಚಿರುವ ಮೀನುಗಳು ಯಾವುವು, ಇವುಗಳಲ್ಲಿ ಸ್ವಾದಭರಿತ ಯಾವುವು, ಭಿನ್ನ  ರುಚಿ ಯಾವುದಕ್ಕಿದೆ, ಯಾವ ಮೀನು ಎಷ್ಟು ಮೊಟ್ಟೆ ಯಿಡುತ್ತವೆ, ಯಾವ ಮೀನಿಗೆ ಎಷ್ಟು ಜಾಡೆ ಹಲ್ಲಿದೆ, ಯಾವ ಮೀನು ಫ್ರೈಗೆ  ಹೆಚ್ಚು ಸೂಕ್ತ, ಪಲ್ಯಕ್ಕೆ ಸಹಜವಾಗಿ ಹೊಂದುವ ಮೀನು ಯಾವುದು, ಮೀನಿನಲ್ಲಿರುವ ವಿಟಮಿನ್‍ಗಳು ಯಾವುವು, ಮಕ್ಕಳಿಗೆ ಯಾವ  ಮೀನನ್ನು ಕೊಡಬೇಕು, ಗರ್ಭಿಣಿಯರು ಯಾವ ಮೀನನ್ನು ತಿನ್ನಬಾರದು, ನಂಜು ಏರಿಸುವ ಮೀನು ಯಾವುದು.. ಇತ್ಯಾದಿಗಳ  ಬಗ್ಗೆ ನಮ್ಮಲ್ಲಿರುವಷ್ಟು ಮಾಹಿತಿ ಅನೇಕ ಬಾರಿ ಈ ಮೀನುಗಳನ್ನು ಕಡಲಾಳದಿಂದ ಹಿಡಿದು ತರುವ ಬಡ ಮೀನುಗಾರರ ಬಗ್ಗೆ  ಇರುವುದಿಲ್ಲ. ಹಾಗಂತ,

ಮೀನುಗಳಷ್ಟೇ ಮೀನುಗಾರರ ಬಗ್ಗೆಯೂ ಮಾಹಿತಿ ಇದ್ದರೆ ಮಾತ್ರ ಅವರು ಪರಿಪೂರ್ಣರು ಎಂದೂ ಅಲ್ಲ. ಇದೊಂದು ಸಹಜ  ಸ್ಥಿತಿ. ನಾವೊಂದು ಮನೆ ಕಟ್ಟುವಾಗ ಅಥವಾ ಕಟ್ಟಿದ ಮನೆಯಲ್ಲಿ ಬಾಡಿಗೆದಾರರಾಗಿ ವಾಸ ಮಾಡಲು ಹೊರಟಾಗ, ಆ ಮನೆಗೆ ಕಲ್ಲು  ಕೆತ್ತಿದವರು, ಸಿಮೆಂಟ್ ತಯಾರಿಸಿದ ಕಾರ್ಮಿಕರು, ಗಾರೆ ಕೆಲಸ ಮಾಡಿದವರು, ಕಾಂಕ್ರೀಟು ಕೆಲಸ ಮಾಡಿದವರು, ಜಲ್ಲಿ ಕಲ್ಲು  ಕಾರ್ಮಿಕರು ಮುಂತಾದವರ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ನಮಗೆ ಹೆಚ್ಚೆಂದರೆ ಮನೆ  ಮಾಲಿಕ ಗೊತ್ತಿರುತ್ತಾನೆ. ಅಥವಾ ಮನೆ ಕಟ್ಟಲು ಹೊರಟೆವೆಂದರೆ ನಕಾಶೆ ತಯಾರಿಸಿದವ, ಇಂಜಿನಿ ಯರ್, ಕಾಂಟ್ರಾಕ್ಟರ್  ಮುಂತಾದವರ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಮೀನುಗಾರರ ಬಗ್ಗೆಯೂ ಕಡಲಿನ ಹೊರಗಡೆಯಿರುವ ಜನರ ಸ್ಥಿತಿ ಇದುವೇ.  ಆದರೆ,

ಅಪಘಾತವೋ ಅನಾಹುತವೋ ಸಂಭವಿಸಿದಾಗ ಈ ಮೇಲು ಮೇಲಿನ ಪರದೆ ಸರಿದು ಪರದೆಯ ಆಚೆಗಿರುವ ಜನರ ದ ರ್ಶನವಾಗುತ್ತದೆ. ಕಟ್ಟಡ ಉರುಳಿದಾಗ ಅದರ ಅಡಿಯಲ್ಲಿ ಸಿಲುಕಿಕೊಂಡ ಅಸಹಾಯಕ ಕಾರ್ಮಿಕ ನಮ್ಮ ಹೃದಯವನ್ನು ಕಲಕುತ್ತಾನೆ.  ಅವರ ಕುಟುಂಬ, ಮಕ್ಕಳು, ಬಡತನ ಇತ್ಯಾದಿಗಳು ನಮ್ಮ ಕಣ್ಣನ್ನು ತೇವಗೊಳಿಸುತ್ತದೆ. ಇಂಥ ಸಂದರ್ಭದಲ್ಲಿ ಕಟ್ಟಡದ ಮಾಲಿಕ  ಸಾರ್ವಜನಿಕ ಪರೀಕ್ಷೆಗೆ ಒಳ ಗಾಗುತ್ತಾನೆ. ಜನರ ಹೃದಯ ತಟ್ಟುವ ಕಾರ್ಮಿಕನಂತೆಯೇ ಆ ಸಂದರ್ಭದಲ್ಲಿ ಮಾಲಿಕನೂ  ತಟ್ಟಬೇಕಾದರೆ ಆತನ ವಿಶೇಷ ಸ್ಪಂದನೆ ಬೇಕಾಗುತ್ತದೆ. ಕಾರ್ಮಿಕರನ್ನು ಆತ ಆವರೆಗೆ ನಡೆಸಿಕೊಂಡ ರೀತಿ  ಮೆಚ್ಚುವಂತಿರಬೇಕಾಗುತ್ತದೆ. ಇಲ್ಲದಿದ್ದರೆ ಆ ಸಂದರ್ಭದಲ್ಲಿ ಮಾಲಿಕ ಖಳನಾಗುತ್ತಾನೆ. ಕಾರ್ಮಿಕ ಹೀರೋ ಆಗುತ್ತಾನೆ... 

ಈ ಮೀನುಗಾರ ಯುವಕರ ಜೊತೆ ಮಾತನಾಡುತ್ತಾ ಹೋದಾಗ ನನ್ನೊಳಗನ್ನು ಹೀಗೆಲ್ಲ ಕಾಡಿದುವು. ಇವರಿಗೆ ಈಗ ಬೇಕಿರುವುದು  ಸನ್ಮಾನ ಅಲ್ಲ. ಮೆಚ್ಚುಗೆಯ ಜೊತೆಜೊತೆಗೇ ಇವರ ವೃತ್ತಿಗೊಂದು ಭದ್ರತೆ. ಇನ್ನೂ ಬೆಳಕು ಮೂಡುವ ಮೊದಲೇ ಮೀನು ಬೇಟೆಯ  ಬೋಟಿಗಿಳಿಯುವಾಗ ಕನಿಷ್ಠ ಲೈಫ್ ಜಾಕೆಟ್ ಎಂಬ ಆಪತ್ಕಾಲೀನ ವ್ಯವಸ್ಥೆ. ಮೀನು ತಂದು ತೀರದಲ್ಲಿಳಿದಾಗ ಗೌರವ ಮತ್ತು ವೃತ್ತಿಗೆ  ತಕ್ಕ ವೇತನ. ಇಷ್ಟು ಅಪಾಯಕಾರಿ ಕೆಲಸ ಮಾಡಿಯೂ ಒಂದು ದಿನ ದುಡಿಯ ದಿದ್ದರೆ ಅನ್ನವಿಲ್ಲ ಎಂಬ ಅಭದ್ರತೆಯಿಂದ ಮುಕ್ತಿ.  ಅನಾರೋಗ್ಯ, ಮಕ್ಕಳ ಶಾಲಾ ಫೀಸು ಮುಂತಾದ ಸಂದರ್ಭಗಳಲ್ಲಿ ಕಾಡುವ ಅಸಹಾಯಕತೆಯಿಂದ ಮುಕ್ತಿ. ಮೀನುಗಾರರಿಗೆ  ಜೀವನ ಭದ್ರತೆಗೆ ಪೂರಕವಾದ ಯೋಜನೆ.

ಬೃಹತ್ ಬೋಟಿನ ಮಾಲಿಕರು ಮನಸ್ಸು ಮಾಡಿದರೆ ಮತ್ತು ಜಿಲ್ಲಾ
ಧಿಕಾರಿಯವರು ಮುತುವರ್ಜಿ ತೋರಿದರೆ ಇದು ಖಂಡಿತ  ಅಸಾಧ್ಯ ಅಲ್ಲ.

ನನ್ನೆದುರು ಕುಳಿತ ಕಡಲ ಮೀನುಗಳಾದ ಶರಾಫತ್, ನಿಝಾಮ್, ಶಿಹಾಬ್, ಇಜಾಝï ಮತ್ತು ರುಬಾನ್‍ರಿಗೆ ಅಭಿನಂದನೆಗಳು.

Wednesday, December 9, 2020

ಲವ್: ನಿಮ್ಮಲ್ಲಿರುವ ಪಟ್ಟಿಯನ್ನು ನೀವೇ ಇಟ್ಟುಕೊಳ್ಳಿ



ಏ.ಕೆ. ಕುಕ್ಕಿಲ

'The price of saying No’ ಎಂಬ ಶೀರ್ಷಿಕೆಯಲ್ಲಿ ನವೆಂಬರ್ 7ರ ದ ಹಿಂದೂ ಪತ್ರಿಕೆಯು ವರದಿಯೊಂದನ್ನು  ಪ್ರಕಟಿಸಿತ್ತು. ಹರ್ಯಾಣದ ಬಲ್ಲಾಬ್‍ಘರ್‍ ನಲ್ಲಿರುವ ಅಗರ್ವಾಲ್ ಕಾಲೇಜಿನ ಹೊರಗಡೆ ನಿಖಿತಾ ಎಂಬ ಕಾಲೇಜು ವಿದ್ಯಾರ್ಥಿನಿ  ನಿಂತಿರುತ್ತಾಳೆ. ತನ್ನನ್ನು ಕರೆದುಕೊಂಡು ಹೋಗಲು ಬರಬೇಕಾದ ಸಹೋದರನನ್ನು ಕಾಯುತ್ತಿರುತ್ತಾಳೆ. ಅಕ್ಟೋಬರ್ 26ರಂದು  ಸಂಜೆ 3.30 ಗಂಟೆ. ತೌಸೀಫ್ ಎಂಬ 21 ವರ್ಷದ ಯುವಕ ತನ್ನ ಗೆಳೆಯ ರೆಹಾನ್‍ನೊಂದಿಗೆ ಅಲ್ಲಿಗೆ ಕಾರಲ್ಲಿ ಬರುತ್ತಾನೆ.  ನಿಖಿತಾಳನ್ನು ಕಾರಲ್ಲಿ ಎತ್ತಿಕೊಂಡು ಹೋಗಲು ಶ್ರಮಿಸುತ್ತಾನೆ. ಆಕೆ ತಪ್ಪಿಸಿಕೊಂಡಾಗ ಗುಂಡು ಹಾರಿಸುತ್ತಾನೆ. ಬಳಿಕ ಪರಾರಿ ಯಾಗುತ್ತಾನೆ. ಆಕೆ ಸಾವಿಗೀಡಾಗುತ್ತಾಳೆ.

ಮರುದಿನವೇ ಪೋಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸುತ್ತಾರೆ.

ಆ ಬಳಿಕ ಕರ್ನಿಸೇನಾದಂಥ ಅನೇಕಾರು ಸಂಘಟನೆಗಳು ಈ ಘಟನೆಯನ್ನು ಎತ್ತಿಕೊಂಡು ಪ್ರತಿಭಟನೆ ನಡೆಸಿವೆ. ಸಾಮಾಜಿಕ  ಜಾಲತಾಣಗಳಲ್ಲಿ ಲವ್‍ಜಿಹಾದ್ ಕೋನದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಸರ್ವ ಬಿರಾದಾರಿ ಸಂಘಟನ್‍ನ ನೇತೃತ್ವದಲ್ಲಿ ನವೆಂಬರ್  1ರಂದು ಹರ್ಯಾಣದ ದುಸ್ಸೆಹ್ರಾ ಮೈದಾನದಲ್ಲಿ ಪ್ರತಿಭಟನೆ ನಡೆದಿದೆ. ಸಾವಿರಕ್ಕಿಂತ ಅಧಿಕ ಮಂದಿ ಅದರಲ್ಲಿ ಭಾಗಿಯಾಗಿದ್ದಾರೆ.  ಪ್ರತಿಭಟನೆ ಹಿಂಸಾತ್ಮಕ ರೂಪ ಪಡಕೊಂಡಿತಲ್ಲದೇ 11 ಪೊಲೀಸರಿಗೂ ಗಾಯವಾಯಿತು. ಆಗ್ರಾದಿಂದ ನವದೆಹಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44ಕ್ಕೆ ತಡೆಯೊಡ್ಡಲು ಪ್ರತಿಭಟನಾಕಾರರು ಶ್ರಮಿಸಿದರು. ಅಂಗಡಿಗಳಿಗೆ ಕಲ್ಲೆಸೆತ ನಡೆಯಿತು. 32 ಮಂದಿಯ ಬಂಧನವೂ ನಡೆಯಿತು. ಬಳಿಕ ನಿಖಿತಾಳ ತಂದೆ ಮೂಲಚಂದ್ ತೋಮರ್ ಅವರ ಮನೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ  ಕುಮಾರಿ ಶೆಲ್ಜಾ ಭೇಟಿ ನೀಡಿದ ವೇಳೆ ಅವರ ಮೇಲೆ ಹಲ್ಲೆ ನಡೆಯಿತು. ಆ ಬಗ್ಗೆ ಎಫ್‍ಐಆರ್ ಕೂಡ ದಾಖಲಾಯಿತು. ಹಾಗಂತ,

ಇದು ಎರಡು ಧರ್ಮಗಳ ನಡುವಿನ ವಿಷಯ ಅಲ್ಲ ಎಂದು ನಿಖಿತಾಳ ತಂದೆ ತೋಮರ್ ಅವರೇ ಹೇಳಿದ್ದಾರೆ. ಆದರೆ ವೃತ್ತಿಯಲ್ಲಿ  ಎಲೆಕ್ಟ್ರೀಷಿಯನ್ ಆಗಿರುವ ತೋಮರ್ ಅವರಲ್ಲಿ ಇನ್ನೊಂದು ಸಂಕಟವೂ ಇದೆ. ‘ನೋ’ ಎಂದ ಕಾರಣಕ್ಕೆ ಕೊಲ್ಲುವುದನ್ನು ಹೇಗೆ  ಸಹಿಸಿಕೊಳ್ಳುವುದು?

2018ರಲ್ಲಿ ನಿಖಿತಾಳನ್ನು ಇದೇ ತೌಸೀಫ್ ಅಪಹರಣಗೊಳಿಸಿದ ಬಗ್ಗೆ ಬಲ್ಲಾಬ್‍ಘರ್ ನ  ಪೊಲೀಸ್ ಠಾಣೆಯಲ್ಲಿ ತೋಮರ್ ಕೇಸು  ದಾಖಲಿಸಿದ್ದರು. ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್‍ನ ಪ್ರಕಾರ, ನಿಖಿತಾ ತನ್ನ ಅಪಹರಣವಾಗಿರುವ ಬಗ್ಗೆ ಗೆಳೆಯ  ಅಭಿಷೇಕ್‍ಗೆ ತಿಳಿಸಿದ್ದಳು. ಆತ ತೋಮರ್‍ ಗೆ ತಿಳಿಸಿದ್ದ. ಭಾರತೀಯ ದಂಡಸಂಹಿತೆ 365ರ ಪ್ರಕಾರ ಕೇಸೂ ದಾಖಲಾಗಿತ್ತು. ಆದರೆ,  ಆ ಬಳಿಕ ಎರಡೂ ಕುಟುಂಬಗಳು ಮಾತುಕತೆ ನಡೆಸಿ ಸಮಸ್ಯೆಯನ್ನು ರಾಜಿಯಲ್ಲಿ ಪರಿಹರಿಸಿಕೊಂಡಿದ್ದುವು. ಆದರೆ ತೌಸೀಫ್‍ನ  ತಾಯಿ ಇದನ್ನು ನಿರಾಕರಿಸುತ್ತಾರೆ. ತೌಸೀಫ್‍ನ ಜೊತೆ ನಿಖಿತಾಳೇ ಹೊರಟು ಬಂದಿದ್ದಳು ಮತ್ತು ಆಕೆಯ ಅಂಕಲ್‍ನ ಜೊತೆ ಬಳಿಕ  ಕಳುಹಿಸಿಕೊಡಲಾಯಿತು ಎಂದು ಅವರು ಹೇಳುತ್ತಾರೆ. ಎಫ್‍ಐಆರ್ ಅನ್ನು ಆ ಬಳಿಕ ರದ್ದುಗೊಳಿಸಲಾಗಿತ್ತು.

ಫರೀದಾಬಾದ್‍ನ ರವಾಲ್ ಇಂಟರ್‍ನ್ಯಾಶನಲ್ ಸ್ಕೂಲ್‍ನಲ್ಲಿ ಕಲಿಯುತ್ತಿದ್ದಾಗ ನಿಖಿತಾ ಮತ್ತು ತೌಸೀಫ್ ಭೇಟಿಯಾಗಿದ್ದರು ಎಂದು  ತೋಮರ್ ಹೇಳುತ್ತಾರೆ. ಆತ ಆಗ ಹಾಸ್ಟೆಲ್‍ನಲ್ಲಿದ್ದು ಕಲಿಯುತ್ತಿದ್ದ. ತೌಸೀಫ್‍ನ ತಾಯಿಯ ಪ್ರಕಾರ ಆತ ಕಲಿಕೆಯಲ್ಲಿ ಮುಂದು.  ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಆತನಿಗೆ ಈ ಬಾರಿ ಎಂಬಿಬಿಎಸ್ ಸೀಟು ಸಿಕ್ಕಿತ್ತು. ದೂರ ಎಂಬ ಕಾರಣಕ್ಕಾಗಿ ಎಂಬಿಬಿಎಸ್  ಕಲಿಕೆಯನ್ನು ಕೈ ಬಿಡಲಾಗಿತ್ತು. ಹಾಗೆಯೇ, ನಿಖಿತಾಳ ಅಪಹರಣ ಪ್ರಕರಣ ನಡೆದ ಬಳಿಕ ಮನೆಯವರು ಆಕೆಯ ಜೊತೆ ಸದಾ  ಇರುತ್ತಿದ್ದರು. ಒಂಟಿಯಾಗಿ ಕಾಲೇಜಿಗೆ ಹೋಗುವುದಾಗಲಿ ಮತ್ತು ಹಿಂತಿರುಗುವುದಾಗಲಿ ಮಾಡುತ್ತಿರಲಿಲ್ಲ. ಅಮ್ಮ ಮತ್ತು  ಸಹೋದರ ಸದಾ ಬೆಂಗಾವಲಾಗಿ ನಿಲ್ಲುತ್ತಿದ್ದರು. ಘಟನೆ ನಡೆದ ದಿನದಂದೂ ಆಕೆ ಸಹೋದರನಿಗಾಗಿ ಕಾಯುತ್ತಿದ್ದಳು. ಈ ಎರಡು  ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಆಕೆಯನ್ನು ತೌಸೀಫ್ ಭೇಟಿಯಾಗಿದ್ದನ್ನು ತಾನು ಕಂಡಿಲ್ಲ ಎಂದು ತೋಮರ್ ಹೇಳುತ್ತಾರೆ.  ಪೊಲೀಸರು ಹೇಳುವುದೇನೆಂದರೆ, ‘ಒಂದೋ ಆಕೆ ನನಗೆ ಸಿಗಬೇಕು, ಇಲ್ಲದಿದ್ದರೆ ಯಾರಿಗೂ ಸಿಗಬಾರದು’ ಎಂಬ ಮನಸ್ಥಿತಿ ತೌಸೀಫ್‍ನದ್ದು. ನಿಜವಾಗಿ,

ಅಕ್ಟೋಬರ್ 26ರ ಆ ಘಟನೆಯನ್ನು ಇಲ್ಲಿ ಇಷ್ಟುದ್ದ ವಿವರಿಸಬೇಕಾದ ಅಗತ್ಯ ಇರಲಿಲ್ಲ. ಮತ್ತೂ ಯಾಕೆ ಇಲ್ಲಿ ಇಷ್ಟು ವಿಸ್ತೃತವಾಗಿ  ವಿವರಿಸಿದ್ದೇಕೆಂದರೆ, ಭಾರತದ ಯಾವುದೇ ಮೂಲೆಯಲ್ಲಿ ನಡೆಯಬಹುದಾದ ಕ್ರೌರ್ಯಕ್ಕಿಂತ ಈ ಕ್ರೌರ್ಯ ಯಾವ ರೀತಿಯಲ್ಲೂ ಭಿನ್ನ  ಅಲ್ಲ ಎಂಬುದಕ್ಕಾಗಿ. ಇದು ಅಪರೂಪದಲ್ಲಿ ಅಪರೂಪದ ಘಟನೆ ಅಲ್ಲ. ಇಂಥ ಕ್ರೌರ್ಯಗಳು ದೇಶದಲ್ಲಿ ಈ ಮೊದಲೂ ನಡೆದಿವೆ.  ‘ನನಗೆ ಸಿಗದವಳು ಯಾರಿಗೂ ಸಿಗಬಾರದು’ ಎಂಬ ಸ್ವಾರ್ಥವು ಅನೇಕ ಹೆಣ್ಮಕ್ಕಳನ್ನು ಬಲಿ ಪಡೆದಿದೆ. ಅಂಥ ಹೆಣ್ಮಕ್ಕಳಲ್ಲಿ ಹಿಂದುವೂ  ಇದ್ದಾರೆ. ಮುಸ್ಲಿಮೂ ಇದ್ದಾರೆ. ಕ್ರೂರಿ ಗಂಡು ಮಕ್ಕಳಲ್ಲಿ ಹಿಂದುವೂ ಇದ್ದಾರೆ, ಮುಸ್ಲಿಮೂ ಇದ್ದಾರೆ. ಸಮಾಜ ಮಾತ್ರ ತನ್ನ ಮನಸ್ಥಿತಿಗೋ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿಯೋ ಕೆಲವೊಂದನ್ನು ಲವ್ ಜಿಹಾದ್ ಎಂದೋ ಇನ್ನು ಹಲವನ್ನು ಪ್ರೇಮ  ಪ್ರಕರಣ ವೆಂದೋ ವಿಭಜಿಸಿ ಆಡಿಕೊಳ್ಳುತ್ತದೆ. ಸದ್ಯದ ಅಗತ್ಯ ಏನೆಂದರೆ, 

ನಿಖಿತಾಳಂತಹ ಕೋಟ್ಯಂತರ ಹೆಣ್ಮಕ್ಕಳ ಬದುಕು ಅ ಪಾಯಕ್ಕೆ ತುತ್ತಾಗದಂತೆ ನೋಡಿಕೊಳ್ಳುವುದು. ನಿಖಿತಾ ಎಂಬುದು ಒಂದು ಸಂಕೇತ ಮಾತ್ರ. ಧರ್ಮ ಯಾವುದೇ ಆಗಿದ್ದರೂ ಹೆಣ್ಣು  ಹೆಣ್ಣೇ. ಇಂಥ ಪ್ರಕರಣಗಳು ಅಂತಿಮವಾಗಿ ಪರಿಣಾಮ ಬೀರುವುದೂ ಹೆಣ್ಣಿನ ಮೇಲೆಯೇ. ಹೆಣ್ಮಕ್ಕಳ ಓದಿಗೆ ಇಂಥವು ತಡೆ  ಒಡ್ಡುತ್ತವೆ. ದೂರದೂರಿಗೆ ಕಲಿಕೆಗೆ ಕಳುಹಿಸಿ ಕೊಡಲು ಹೆತ್ತವರು ಭಯ ಪಡುತ್ತಾರೆ. ಮುಂದೆ ಏನಾಗುವುದೋ ಎಂಬ ಭೀತಿಯಿಂದ  ಮನೆಯಲ್ಲೇ  ಹೆಣ್ಮಕ್ಕಳನ್ನು ಹೆತ್ತವರು ಉಳಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇಂಥ ಭಯ ಇರುವ ಕಾರಣದಿಂದಲೇ ಹೆಣ್ಮಕ್ಕಳು ಮ ನೆಯವರಲ್ಲಿ ಏನನ್ನೂ ಹಂಚಿಕೊಳ್ಳುವುದಿಲ್ಲ. ಪುಂಡರ ಚುಡಾಯಿಸುವಿಕೆಯಾಗಲಿ ಏಕಮುಖ ಪ್ರೇಮಿಯ ಕುರಿತಾಗಲಿ ಮನೆಯಲ್ಲಿ  ಏನನ್ನೂ ಹೇಳಿ ಕೊಳ್ಳದೇ ಮುಚ್ಚಿಡುತ್ತಾರೆ. ಹೇಳಿಬಿಟ್ಟರೆ ಎಲ್ಲಿ ಕಲಿಕೆಗೆ ಕುತ್ತಾಗು ವುದೋ ಎಂಬ ಭೀತಿ. ಕೆಲವೊಮ್ಮೆ ಹೆಣ್ಮಕ್ಕಳು  ಹೇಳಿಕೊಂಡರೂ ಮರ್ಯಾದೆಗೆ ಅಂಜಿ ಹೆತ್ತವರು ಸುಮ್ಮನಾಗುವುದಿದೆ. ಅದು ಆರೋಪಿಗಳಲ್ಲಿ ಧೈರ್ಯವನ್ನು ಒದಗಿಸುತ್ತದೆ.

ಹೆಣ್ಣು-ಗಂಡಿನ ನಡುವೆ ಆಕರ್ಷಣೆ ಪ್ರಕೃತಿ ಸಹಜ. ಮಾನವ ಜನಾಂಗ ಇರುವವರೆಗೆ ಈ ಆಕರ್ಷಣೆ ಇದ್ದೇ  ಇರುತ್ತದೆ. ಮಾತ್ರವಲ್ಲ,  ಈ ಆಕರ್ಷಣೆಗೆ ಧರ್ಮವೂ ಇರುವುದಿಲ್ಲ. ಹೆಣ್ಣು ಮತ್ತು ಗಂಡು ಎಂಬ ಪ್ರಕೃತಿ ಧರ್ಮವಷ್ಟೇ ಇರುತ್ತದೆ. ಸಮಾಜ ಮಾತ್ರ  ಹೆಣ್ಣಿಗೊಂದು ಮತ್ತು ಗಂಡಿಗೊಂದು ಧರ್ಮವನ್ನು ಕೊಟ್ಟು ಆ ಆಕರ್ಷಣೆಯಲ್ಲಿ ಸಂಚನ್ನೋ ಸಹಜತೆಯನ್ನೋ ಕಾಮವನ್ನೋ  ಹುಡುಕುತ್ತದೆ. ಲವ್ ಜಿಹಾದ್ ಎಂಬುದಕ್ಕೆ ಇದರಾಚೆಗಿನ ಮಹತ್ವ ಇಲ್ಲ ಎಂದೇ ನನ್ನ ಭಾವನೆ. ಬಹು ಧರ್ಮೀಯ  ಭಾರತದಲ್ಲಂತೂ ಹೆಣ್ಣು ಹಿಂದೂ ಆಗಿರುವುದು ಮತ್ತು ಗಂಡು ಮುಸ್ಲಿಮ್ ಆಗಿರುವುದು ಅಥವಾ ಇವು ತಿರುವು-ಮುರುವು  ಆಗಿರುವುದು ಅಚ್ಚರಿಯದ್ದೇನೂ ಅಲ್ಲ. ಮುಸ್ಲಿಮ್ ಮತ್ತು ಹಿಂದೂಗಳ ಜನಸಂಖ್ಯೆಯಲ್ಲಿ ಏರಿಳಿತ ಇರುವುದರಿಂದ ಪ್ರೇಮ  ಪ್ರಕರಣಗಳ ಅನುಪಾತದಲ್ಲೂ ಈ ಏರಿಳಿತ ಇದೆ. ಹಿಂದೂ ಯುವಕ ಮತ್ತು ಮುಸ್ಲಿಮ್ ಯುವತಿಯ ನಡುವಿನ ಪ್ರೇಮ  ಪ್ರಕರಣಕ್ಕಿಂತ ಮುಸ್ಲಿಮ್ ಯುವಕ ಮತ್ತು ಹಿಂದೂ ಯುವತಿಯ ನಡುವಿನ ಪ್ರೇಮ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೆ ಅದಕ್ಕೆ ಈ ಜ ನಸಂಖ್ಯೆಯ ಪ್ರಮಾಣ ಕಾರಣವಾಗಿರುವುದರ ಹೊರತಾಗಿ ಇನ್ನಾವುದೂ ಕಾಣಿಸುತ್ತಿಲ್ಲ. ಸದ್ಯ ಸಮಾಜದ ಅಗತ್ಯ ಏನೆಂದರೆ, 

ಯುವ  ಸಮೂಹವನ್ನು ಪ್ರೇಮದ ವಿಷಯದಲ್ಲಿ ಶಿಕ್ಷಿತರನ್ನಾಗಿ ಮಾಡುವುದು. ಪ್ರೇಮ ಸಹಜ ಸತ್ಯ ಎಂಬುದನ್ನು ಅರ್ಥ ಮಾಡಿಕೊಂಡ  ಯಾವುದೇ ಸಮಾಜ ತನ್ನ ಯುವ ಪೀಳಿಗೆಗೆ ಪ್ರೇಮವನ್ನು ವಿವರಿಸಿಕೊಡುವ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕಿದೆ. ಲವ್  ಜಿಹಾದ್ ಸುಳ್ಳು ನಿಜ. ಆದರೆ ಲವ್ ಸುಳ್ಳಲ್ಲ. ಸುಳ್ಳಲ್ಲದ ಲವ್ ಅನ್ನು ಸುಳ್ಳು ಸುಳ್ಳೇ ಎದೆಯೊಳಗೆ ಬಚ್ಚಿಟ್ಟುಕೊಂಡು ಸಂಕಟಪಡುತ್ತಾ  ಹೊರಗಡೆ ನಗುವ ಮತ್ತು ಅಮಾಯಕರಂತೆ ಬದುಕುವ ಯುವಕ-ಯುವತಿಯರಿಗೆ ಅದರ ಸರಿ-ತಪ್ಪುಗಳನ್ನು ವಿವರಿಸಿಕೊಡುವ  ವ್ಯವಸ್ಥೆಯಾಗಬೇಕು. ಹೀಗಾಗ ಬೇಕಾದರೆ ಮೊದಲು ಅವರು ತಮ್ಮ ಪ್ರೇಮವನ್ನು ಹೆತ್ತವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ  ವಾತಾವರಣ ನಿರ್ಮಾಣವಾಗಬೇಕು. ನಿಜವಾಗಿ ಇವತ್ತಿನ ದಿನಗಳ ಅತೀ ಜರೂರು ಇದು. ಮಕ್ಕಳ ಪಾಲಿಗೆ ಮನೆಯ ವಾತಾವರಣ  ಎಲ್ಲವನ್ನೂ ಹಂಚಿಕೊಳ್ಳುವಷ್ಟು ಹಿತಕರವಾಗಿರಬೇಕು. ತಮ್ಮ ಉದ್ದೇಶ, ಗುರಿ, ಹವ್ಯಾಸ, ಅಭ್ಯಾಸ, ಗೆಳೆಯರು, ಕಲಿಕೆ, ಪ್ರೇಮ.. ಏನೇ  ಇರಲಿ ಎಲ್ಲವನ್ನೂ ಹೆತ್ತವರೊಂದಿಗೆ ಹಂಚಿಕೊಂಡು ಸಲಹೆ ಪಡಕೊಳ್ಳುವ ಮುಕ್ತ ವಾತಾವರಣ ಮನೆಯದ್ದಾಗಿರಬೇಕು. ಹೆಣ್ಣಿಗೂ  ಗಂಡಿಗೂ ಈ ವಾತಾವರಣ ಪ್ರತಿ ಮನೆಯಲ್ಲೂ ಸೃಷ್ಟಿಯಾಗಬೇಕು. ಅದರಿಂದ ಎರಡು ಲಾಭ ಇದೆ-

1. ಯುವಕ ಅಥವಾ ಯುವತಿಗೆ ಅದರಿಂದ ಮಾನಸಿಕ ಬಲ ಲಭ್ಯವಾಗುತ್ತದೆ. ಭಾರ ಇಳಿಸಿಕೊಂಡ ನೆಮ್ಮದಿ ಒಂದೆಡೆ ಯಾದರೆ,  ಹೆತ್ತವರಿಂದ ಸಲಹೆ-ಸೂಚನೆ ಪಡಕೊಳ್ಳುವ ಮೂಲಕ ತಾನು ಒಂಟಿಯಲ್ಲ ಎಂಬ ಭಾವನೆ ಅವರಲ್ಲಿ ಬೆಳೆಯುತ್ತದೆ.

2. ತನ್ನ ಮಗ ಅಥವಾ ಮಗಳು ಎಂಥ ಸ್ಥಿತಿಯಲ್ಲಿದ್ದಾಳೆ/ನೆ ಎಂಬುದನ್ನು ಹೆತ್ತವರಿಗೆ ಅರಿತುಕೊಳ್ಳಲು ಸುಲಭವಾಗುತ್ತದೆ. ತನ್ನ  ಮಕ್ಕಳ ಸ್ಥಿತಿ ಸಂದಿಗ್ಧವೋ ಭವಿಷ್ಯದಲ್ಲಿ ಅಪಾಯ ಎದುರಾದೀತೋ, ಕೌನ್ಸೆಲಿಂಗ್ ನಡೆಸಬೇಕಾದೀತೋ ಇತ್ಯಾದಿಗಳ ಬಗ್ಗೆ  ವಿಶ್ಲೇಷಿಸುವುದಕ್ಕೆ ಹೆತ್ತವರಿಗೆ ಅವಕಾಶ ಸಿಗುತ್ತದೆ.

ಇಂಥ ವಾತಾವರಣವನ್ನು ಮನೆಯೊಳಗಡೆ ಉಂಟು ಮಾಡಿದರೆ ನಿಖಿತಾಳಂತಹ ಅಸಂಖ್ಯ ಹೆಣ್ಮಕ್ಕಳನ್ನು ಅಪಾಯದಿಂದ ಪಾರು  ಮಾಡುವುದಕ್ಕೆ ಅವಕಾಶ ಸಿಗಬಹುದು. ಹಾಗೆಯೇ ತೌಸೀಫ್‍ನಂಥ ಮಕ್ಕಳು ನಿರ್ಮಾಣವಾಗದಂತೆ ತಡೆಯುವುದಕ್ಕೂ  ಸಾಧ್ಯವಾಗಬಹುದು. ‘ತನಗೆ ಸಿಗದವರು ಇನ್ನಾರಿಗೂ ಸಿಗಬಾರದು’ ಎಂಬ ಭಾವ ತೀವ್ರವತೆಯು ಹೆಚ್ಚಿನ ದುರಂತ ಪ್ರೇಮ ಪ್ರಕರಣ ಗಳ ಒಳರಹಸ್ಯವೆಂಬುದು ಸತ್ಯ. ಏಕಮುಖ ಪ್ರೇಮದ ಕೊನೆಯೂ ಹೀಗೆಯೇ. ಪ್ರೇಮದ ಬಗ್ಗೆ ಮುಕ್ತವಾಗಿ ಮಾತಾಡಿಕೊಳ್ಳದ  ಸಾಮಾಜಿಕ ವಾತಾವರಣದಲ್ಲಿ ಇಂಥ ದುರಂತಗಳು ತಪ್ಪಿದ್ದಲ್ಲ. ಇವನ್ನು ಕಾನೂನೊಂದೇ ತಡೆಯದು. ಆ ಕ್ಷಣದಲ್ಲಿ ವ್ಯಕ್ತಿಯ  ಮೆದುಳು ಸಕಾರಾತ್ಮಕವಾಗಿ ಯೋಚಿಸುವುದನ್ನು ನಿಲ್ಲಿಸಿರುತ್ತದೆ. ಕಾನೂನು ಕಟ್ಟಳೆಗಳು ಆ ಸಮಯದಲ್ಲಿ ಭಯ ಉಂಟು  ಮಾಡುವುದೂ ಇಲ್ಲ. ಅದೊಂದು ಭ್ರಾಮಕ ಸ್ಥಿತಿ. ಆ ಸ್ಥಿತಿಗೆ ತಲುಪದಂತೆ ಯುವ ಸಮೂಹವನ್ನು ತಡೆಯಬೇಕಾದರೆ ಅವರು  ತಮ್ಮನ್ನು ಮುಕ್ತವಾಗಿ ಮನೆಯವರೊಂದಿಗೆ ತೆರೆದಿಡುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ. ಪ್ರೇಮದ ಉತ್ಕಟ  ಭಾವತೀವ್ರತೆಯ ಅಮಲಿನಿಂದ ಹೆಣ್ಣು ಅಥವಾ ಗಂಡನ್ನು ಹೊರತರಲು ಒಂದು ಮನೆಯಿಂದ ಸಾಧ್ಯ. ಅದು ಬಿಟ್ಟು ಪ್ರೇಮ  ಪ್ರಕರಣವನ್ನು ಲವ್‍ಜಿಹಾದ್ ಎಂದೋ ಮತಾಂತರದ ಸಂಚು ಎಂದೋ ಹುಯಿಲೆಬ್ಬಿಸುವುದು ಕಾಲಹರಣ ಅಷ್ಟೇ.

ಇನ್ನು, ಇಸ್ಲಾಮ್‍ಗೆ ಮತಾಂತರವಾದವರ ಸಂಖ್ಯೆ ಮತ್ತು ಹಿಂದೂ ಧರ್ಮಕ್ಕೆ ಮತಾಂತರವಾದವರ ಸಂಖ್ಯೆಯನ್ನು ಇಟ್ಟುಕೊಂಡು  ಚರ್ಚಿಸುವಿರಾದರೆ, ನಿಮ್ಮಿಷ್ಟ.

Tuesday, November 10, 2020

ಒಂದು ಜಾಹೀರಾತು ಮತ್ತು ಹಲವು ಡಿಬೇಟ್‍ಗಳು



ಟಿ.ವಿ. ಚಾನೆಲ್ ಒಂದರಲ್ಲಿ ಚರ್ಚೆಯನ್ನು ವೀಕ್ಷಿಸಿದೆ. ಸುಮಾರಾಗಿ ಅದು ಹೀಗೆ ಸಾಗುತ್ತದೆ-
ನಿರೂಪಕ: ಇಸ್ಲಾಮಿನಲ್ಲಿ ಸೀಮಂತ ಆಚರಣೆ ಸರಿಯೋ ತಪ್ಪೋ?
ಅತಿಥಿ: ತಪ್ಪು
ನಿರೂಪಕ: ಮುಸ್ಲಿಮ್ ಯುವಕನನ್ನು ವರಿಸಿದ ಹಿಂದೂ ಯುವತಿ ಇಸ್ಲಾಮ್‍ಗೆ ಮತಾಂತರ ಆಗದಿದ್ದರೆ ಆ ವಿವಾಹ  ಸಿಂಧುವಾಗುತ್ತದೋ ಇಲ್ಲವೋ?
ಅತಿಥಿ: ಇಲ್ಲ
ನಿರೂಪಕ: ಹಾಗಿದ್ದರೆ ತನಿಷ್ಕ್ ಜ್ಯುವೆಲ್ಲರಿಯ ಏಕತ್ವಂ ಜಾಹೀರಾತು ಇಸ್ಲಾಮ್‍ನ ವಿಧಿ-ನಿಯಮಗಳಿಗೆ ಪೂರಕವಾಗಿದೆಯೇ?
ಅತಿಥಿ: ಇಲ್ಲ
ನಿರೂಪಕ: ಹಾಗಿದ್ದರೆ ತನಿಷ್ಕ್ ಜಾಹೀರಾತ್‍ಗೆ ನಿಮ್ಮ ಬೆಂಬಲ ಇದೆಯೇ?
ಅತಿಥಿ: ಇಲ್ಲ.
ಚರ್ಚೆ ಹೇಗೆ ಕೊನೆಗೊಳ್ಳಬೇಕೆಂದು ಮೊದಲೇ ನಿರ್ಧರಿಸಿದ ನಿರೂಪಕನೋರ್ವ ಹೇಗೆ ಅತಿಥಿಗಳ ಬಾಯಿಯಿಂದ ತನಗೆ ಬೇಕಾದ  ಉತ್ತರವನ್ನು ಪಡೆದುಕೊಳ್ಳಬಹುದು ಎಂಬುದಕ್ಕೆ ಉದಾಹರಣೆಗೆ ಇದು.
ಮುಸ್ಲಿಮರಲ್ಲಿ ಇಸ್ಲಾಮಿನ ರೀತಿ-ರಿವಾಜುಗಳಿಗೆ ಸಂಬಂಧಿಸಿ ವಿಭಿನ್ನ ಧೋರಣೆಯಿದೆ. ದರ್ಗಾ ಸಂಸ್ಕೃತಿಯನ್ನು ತಪ್ಪು ಎಂದು ವಾದಿಸುವವರು ಇರುವಂತೆಯೇ ಸರಿ ಎಂದು ವಾದಿಸುವವರೂ ಇದ್ದಾರೆ. ಗರ್ಭಿಣಿಗೆ ಮಾಡುವ ಸೀಮಂತ ಆಚರಣೆಯ ಪರ ಮತ್ತು  ವಿರೋಧ ಅಭಿಪ್ರಾಯ ಉಳ್ಳವರೂ ಇದ್ದಾರೆ. ಮದುವೆಯ ಮೊದಲು ವಧುವಿನ ಮನೆಯಲ್ಲಿ ನಡೆಯುವ ಮದರಂಗಿ ಕಾರ್ಯಕ್ರಮ,  ಹುಟ್ಟು ಹಬ್ಬ ಆಚರಣೆ ಇತ್ಯಾದಿ ಆಚರಣೆಗಳ ಕುರಿತಂತೆ ಮುಸ್ಲಿಮ್ ಸಮುದಾಯದೊಳಗೆ ವೈಚಾರಿಕ ಭಿನ್ನಾಭಿಪ್ರಾಯ ಇದೆ. ವಿಶೇಷ  ಏನೆಂದರೆ, ಈ ಭಿನ್ನಾ ಭಿಪ್ರಾಯದ ವಿವರ ಗೊತ್ತಿರುವ ಚತುರ ಟಿವಿ ನಿರೂಪಕ ನೋರ್ವ ಹೇಗೆ ಈ ಸಂದರ್ಭವನ್ನು ದುರ್ಬಳಕೆ  ಮಾಡಿಕೊಳ್ಳಬಲ್ಲ ಎಂಬುದು. ಉದಾಹರಣೆಗೆ ತನಿಷ್ಕ್ ಜ್ಯುವೆಲ್ಲರಿಯ ಏಕತ್ವಂ ಜಾಹೀರಾತನ್ನೇ ಎತ್ತಿಕೊಳ್ಳೋಣ.
ಉತ್ತರ ಭಾರತದ ಮುಸ್ಲಿಮ್ ಕುಟುಂಬಕ್ಕೆ ಕೇರಳದ ಹಿಂದೂ ಯುವತಿಯೋರ್ವಳು ಸೊಸೆಯಾಗಿ ಹೋಗುತ್ತಾಳೆ. ಗರ್ಭಿಣಿಯಾಗು ತ್ತಾಳೆ ಮತ್ತು ಆಕೆಗೆ ಕೇರಳದ ಹಿಂದೂ ಕುಟುಂಬದಲ್ಲಿ ರೂಢಿ ಯಲ್ಲಿರುವಂತೆ ಸೀಮಂತ ಕಾರ್ಯಕ್ರಮ ಮಾಡಲು ಆ ಮುಸ್ಲಿಮ್  ಕುಟುಂಬ ತಯಾರಿ ನಡೆಸುತ್ತದೆ. ಆ ಹಿಂದೂ ಯುವತಿಗೆ ಆಶ್ಚರ್ಯವೂ ಆಗುತ್ತದೆ. ಮುಸ್ಲಿಮರಲ್ಲಿ ಈ ಆಚರಣೆ ಇಲ್ವಲ್ಲಾ ಎಂಬ  ಉದ್ಧಾರವೊಂದು ಆ ಹೆಣ್ಣು ಮಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮಲ್ಲಿಲ್ಲದಿದ್ದರೇನು, ನಿಮ್ಮಲ್ಲಿದೆಯಲ್ಲವೇ ಎಂಬ ರೀತಿಯಲ್ಲಿ ಆ  ಮುಸ್ಲಿಮ್ ಕುಟುಂಬ ಆಕೆಯನ್ನು ಪ್ರೀತಿಸುವ ಮತ್ತು ಸಾಂಸ್ಕೃತಿಕ ಏಕತ್ವವನ್ನು ಸಾರುವ ದೃಶ್ಯ ಆ ಜಾಹೀರಾತಿನದು.
ಕುತೂಹಲ ಇರುವುದೂ ಇಲ್ಲೇ.
ಅಕ್ಟೋಬರ್ 9 ರಂದು ಬಿಡುಗಡೆಗೊಂಡ ಆ ಜಾಹೀರಾತಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಗಳು ವ್ಯಕ್ತವಾದುವು. ತನಿಷ್ಕ್ ಆ ಜಾಹೀರಾತನ್ನು ಹಿಂತೆಗೆದುಕೊಳ್ಳ ಬೇಕೆಂಬ ಬೇಡಿಕೆಗಳು ವ್ಯಕ್ತವಾದುವು. ನಟಿ ಕಂಗನಾ ರಾಣಾವತ್ ಅವರು ಆ  ಜಾಹೀರಾತನ್ನು ಲವ್ ಜಿಹಾದ್ ಎಂದರು. ಕ್ರಿಯೇಟಿವ್ ಟೆರರಿಸ್ಟ್ ಎಂದರು. ಲವ್ ಜಿಹಾದ್‍ಗೆ ಪ್ರೇರೇಪಿಸುತ್ತದೆ ಮತ್ತು ಭಾರತೀಯ  ಸಾಂಸ್ಕೃತಿಕ ಅಸ್ಥಿತೆಗೆ ಅದು ವಿರುದ್ಧವಿದೆ ಎಂಬ ಅಭಿಪ್ರಾಯ ಬಲಪಡೆಯಿತು. ಕೊನೆಗೆ ತನಿಷ್ಕ್ ಆ ಜಾಹೀರಾತನ್ನು ಹಿಂಪಡೆಯಿತು.  ನಿಮಗೆ ಗೊತ್ತಿರಲಿ,
ಈ ಜಾಹೀರಾತನ್ನು ಮುಸ್ಲಿಮರು ಆಕ್ಷೇಪಿಸಿರಲಿಲ್ಲ. `ಸೀಮಂತ ಆಚರಣೆ ಇಸ್ಲಾಮ್‍ಗೆ ವಿರುದ್ಧ, ಆದ್ದರಿಂದ ಆ ಜಾಹೀರಾತು  ಇಸ್ಲಾಮ್ ವಿರೋಧಿ' ಎಂದು ಯಾವ ಮೌಲಾನರೂ ಫತ್ವ ಹೊರಡಿಸಿರಲಿಲ್ಲ. ಆದರೆ, ಟಿವಿ ಕಾರ್ಯಕ್ರಮವನ್ನು ಬರೇ ಆ  ಜಾಹೀರಾತು ಮತ್ತು ಅದನ್ನು ವಿರೋಧಿಸುವವರ ಮೃತ್ತದೊಳಗೆ ತಿರುಗಿಸಿದರೆ, ಅದರಲ್ಲಿ ಮಜಾ ಏನಿರುತ್ತೆ? ಅದರ ಬದಲು ಅದನ್ನು ಹಿಂದೂ-ಮುಸ್ಲಿಮ್ ಆಗಿ ಪರಿವರ್ತಿಸಿದರೆ ಮತ್ತು ಮುಸ್ಲಿಮರಿಂದಲೂ ಆ ಜಾಹೀರಾತನ್ನು ತಪ್ಪು ಎಂದು ಹೇಳಿಸಿದರೆ,  ವಿರೋಧಕ್ಕೆ ಆನೆ ಬಲ ಬರುತ್ತದೆ. ಇದಕ್ಕೆ ಮಾಡಬೇಕಾದುದೇನೆಂದರೆ, ಮುಸ್ಲಿಮರಲ್ಲಿ ಸೀಮಂತವನ್ನು ಯಾರು ವಿರೋಧಿಸುತ್ತಾರೋ  ಅವರನ್ನು ಟಿವಿ ಟಿಬೇಟ್‍ಗೆ ಆಹ್ವಾನಿಸುವುದು. ಚರ್ಚೆಯನ್ನು ಇಸ್ಲಾಂ ಧರ್ಮದೆಡೆಗೆ ಒಯ್ಯುವುದು ಮತ್ತು ಇಸ್ಲಾಮ್‍ನಲ್ಲಿ ಸೀಮಂತ  ಇದೆಯೇ ಎಂದು ಪ್ರಶ್ನಿಸುವುದು. ಅವರಿಂದ ಇಲ್ಲ ಎಂಬ ಉತ್ತರ ವನ್ನು ಪಡೆದುಕೊಂಡು ಆ ಇಡೀ ಜಾಹೀರಾತು ಹೇಗೆ ಇಸ್ಲಾಮ್  ವಿರೋಧಿ ಎಂದು ವ್ಯಾಖ್ಯಾನಿಸುವುದು ಮತ್ತು ಸದ್ಯ ದೇಶದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವವರಿಗೆ 20 ಕೋಟಿ ಮುಸ್ಲಿಮರ  ಬೆಂಬಲವೂ ಇದೆ ಎಂಬ ಪರೋಕ್ಷ ಸಂದೇಶವನ್ನು ಸಾರಲು ಯತ್ನಿಸುವುದು- ಇದು ಆ ಕಾರ್ಯಕ್ರಮದ ಒಟ್ಟು ಸಾರಾಂಶ.
ನಿಜಕ್ಕೂ ತನಿಷ್ಕ್ ಜಾಹೀರಾತು ಹಿಂದೂ-ಮುಸ್ಲಿಮರಿಗೆ ಸಂಬಂಧಿಸಿದ್ದೇ?
ಈ ಪ್ರಶ್ನೆ ಒಟ್ಟು ಬೆಳವಣಿಗೆಯ ದೃಷ್ಟಿಯಿಂದ ಬಹಳ ಮುಖ್ಯವಾದುದು. ತನಿಷ್ಕ್ ಜಾಹೀರಾತಿಗೆ ಯಾರು ವಿರೋಧ ವ್ಯಕ್ತಪಡಿಸಿದ್ದಾರೋ ಅವರಾರೂ ಇಸ್ಲಾಮ್‍ನಲ್ಲಿ ಸೀಮಂತ ಆಚರಣೆ ಇಲ್ಲ ಎಂಬುದನ್ನು ಅದಕ್ಕೆ ಕಾರಣವಾಗಿ ಕೊಟ್ಟಿಲ್ಲ. ಹಿಂದೂ  ಯುವತಿಯು ಮುಸ್ಲಿಮ್ ಕುಟುಂಬಕ್ಕೆ ವಿವಾಹವಾಗಿ ತೆರಳುವುದೇ ಅವರ ವಿರೋಧಕ್ಕೆ ಕಾರಣ. ಹಾಗಂತ, ಈ ವಿರೋಧಿ ಗುಂಪು ಅಮಾಯಕ ಏನಲ್ಲ. ಹಿಂದೂ ಯುವತಿಯನ್ನು ಮುಸ್ಲಿಮ್ ಯುವಕ ವಿವಾಹವಾಗಿರುವುದು ಅಥವಾ ಮುಸ್ಲಿಮ್ ಯುವತಿ ಹಿಂದೂ  ಯುವಕನನ್ನು ಮದುವೆಯಾಗಿರುವುದು ಈ ಗುಂಪಿಗೆ ಗೊತ್ತಿಲ್ಲ ಎಂದೂ ಅಲ್ಲ. ಮುಖ್ತಾರ್ ಅಬ್ಬಾಸ್ ನಕ್ವಿ, ಉಮರ್ ಅಬ್ದುಲ್ಲಾ,  ಕಬೀರ್ ಖಾನ್ ಜೋಡಿ, ಸಿನಿಮಾ ರಂಗದ ಅನೇಕ ನಟ-ನಟಿಯರು ಧರ್ಮಾತೀತವಾಗಿ ವಿವಾಹವಾಗಿದ್ದಾರೆ. ಭಾರತದಂತಹ  ಬಹು ಧರ್ಮೀಯ ಮತ್ತು ಬಹುಸಂಸ್ಕೃತಿಯ ರಾಷ್ಟ್ರವೊಂದ ರಲ್ಲಿ ಈ ಬಗೆಯ ವಿವಾಹ ಅಚ್ಚರಿಯ ಬೆಳವಣಿಗೆಯೂ ಅಲ್ಲ. ಇದು  ವಿರೋಧಿಸುವವರಿಗೂ ಗೊತ್ತು, ವಿರೋಧಿಸುವವರನ್ನು ಒಳಗೊಳಗೇ ಬೆಂಬಲಿಸುವವರಿಗೂ ಗೊತ್ತು. ನಿಜ ಏನೆಂದರೆ,
ಈ ವಿರೋಧ ಹುಟ್ಟಿಕೊಂಡಿರುವುದು ಸಾಂಸ್ಕೃತಿಕ ರಾಜಕಾರಣದ ಗರ್ಭದಲ್ಲಿ. ಮುಸ್ಲಿಮರನ್ನು ವಿರೋಧಿಸುವುದರಿಂದ ರಾಜಕೀಯ  ಲಾಭವಿದೆ ಎಂಬುದು 90ರ ಬಳಿಕ ಈ ದೇಶದಲ್ಲಿ ಸಿದ್ಧವಾಗುತ್ತಾ ಬಂದ ಸತ್ಯ. ಮುಸ್ಲಿಮರನ್ನು ಎಷ್ಟು ತೀವ್ರವಾಗಿ ವಿರೋ ಧಿಸುತ್ತೀರೋ ಮತ್ತು ಅವರ ಸಾಂಸ್ಕೃತಿಕ ಗುರುತುಗಳ ವಿರುದ್ಧ ಎಂಥೆಂಥ ಕಾನ್ಫಿರಸಿ ಥಿಯರಿಯನ್ನು ಹುಟ್ಟು ಹಾಕುತ್ತೀರೋ ಅಷ್ಟೇ  ಪ್ರಬಲ ವಾಗಿ ನಿಮ್ಮ ವಿಚಾರಧಾರೆಗೆ ಸಾಮಾಜಿಕ ಮನ್ನಣೆ ಲಭ್ಯವಾಗುತ್ತಾ ಹೋಗುತ್ತದೆ ಎಂಬ ವಾತಾವರಣ 90ರ ಬಳಿಕ  ದಟ್ಟವಾಗುತ್ತಾ ಹೋಯಿತು. ಟಿಪ್ಪು, ಔರಂಗಜೇಬ, ಘಸ್ನಿ, ಘೋರಿ, ನವಾಬರು ಇತ್ಯಾದಿ ದೊರೆಗಳನ್ನು ದೇಶದ್ರೋಹಿಗಳಂತೆ  ಬಿಂಬಿಸುವುದರಿಂದ ಸಾಮಾಜಿಕ ಧ್ರುವೀಕರಣ ಸಾಧ್ಯವಿದೆ ಎಂಬುದು ದಿನೇ ದಿನೇ ಗಟ್ಟಿಗೊಳ್ಳತೊಡಗಿತು. ಅವರೆಲ್ಲ ರಾಜರು

ಎಂಬುದನ್ನು ಮರೆತು ಇಸ್ಲಾಮ್ ಧರ್ಮದ ನಿಜವಾಗಿ ಪ್ರತಿನಿಧಿಗಳು ಎಂಬಂಥ ಭಾವನೆ ಯನ್ನು ಬಿತ್ತಲಾಯಿತು. ಅವರನ್ನು ಎಷ್ಟು  ಹೀನಾಯಾಗಿ ಬಿಂಬಿಸ ಬಹುದೋ ಅಷ್ಟೆಲ್ಲಾ ಪ್ರಯತ್ನಗಳನ್ನು ಮಾಡಲಾಯಿತು. ಅವರ ರಚನೆಗಳನ್ನು ಅಳಿಸುವ ಶ್ರಮ  ನಡೆಸಲಾಯಿತು.
ಈ ಸಾಂಸ್ಕೃತಿಕ ರಾಜಕಾರಣದ ಭಾಗವೇ ತನಿಷ್ಕ್ ಜಾಹೀರಾತಿನ ವಿರೋಧ.
ನಿಜಕ್ಕೂ ಅವರ ವಿರೋಧ ಇರುವುದು ಆ ಜಾಹೀರಾತಿನ ಸೀಮಂತಕ್ಕಲ್ಲ. ಅಲ್ಲಿ ಬಿಂಬಿಸಲಾಗಿರುವ ಹಿಂದೂ-ಮುಸ್ಲಿಮ್ ಭ್ರಾತೃತ್ವ  ಭಾವಕ್ಕೆ. ಮುಸ್ಲಿಮರು ಹಿಂದೂ ಸಾಂಸ್ಕೃತಿಕ ಆಚರಣೆ ಯನ್ನು ಗೌರವಿಸುವಂಥ ವಿಶಾಲ ಹೃದಯಿಗಳು ಎಂಬ ಸಂದೇಶಕ್ಕೆ. ಈ  ಸಂದೇಶ ಅವರು ಪ್ರತಿಪಾದಿಸುವ ಸಾಂಸ್ಕøತಿಕ ರಾಜಕಾರಣಕ್ಕೆ ಬಹುದೊಡ್ಡ ಕೊಡಲಿಯೇಟು. ಹಿಂದೂ-ಮುಸ್ಲಿಮರನ್ನು ಎರಡು  ಧ್ರುವಗಳಲ್ಲಿ ಕೂರಿಸಿ ಪರಸ್ಪರ ವೈರಿಗಳಂತೆ ಸದಾ ಇರಗೊಡುವುದೇ ಅವರ ಗುರಿ. ಅವರ ಯಶಸ್ಸು ಅಡಗಿರುವುದೇ ಇದರಲ್ಲಿ.  ಯಾವಾಗ ಈ ತಂತ್ರಕ್ಕೆ ಏಟು ಕೊಡುವ ಘಟನೆಗಳು ನಡೆಯುತ್ತೋ ಅಗೆಲ್ಲ ಇವರು ವಿಚಲಿತಗೊಳ್ಳುತ್ತಾರೆ. ಎಲ್ಲಿ ತಮ್ಮ ಹಿಡಿತ  ಸಮಾಜದಿಂದ ಕೈ ತಪ್ಪಿ ಹೋಗುತ್ತೋ ಎಂದು ಭಯಪಡುತ್ತಾರೆ. ಆದ್ದರಿಂದಲೇ, ಹಿಂದೂ-ಮುಸ್ಲಿಮ್ ಸೌಹಾರ್ದವನ್ನು ಮತ್ತು  ಏಕತ್ವವನ್ನು ನೀಡುವ ಸಂದೇಶಗಳು ಯಾವಾಗೆಲ್ಲ ಬಿತ್ತರವಾಗುತ್ತೋ ಆಗೆಲ್ಲ ಅದರ ವಿರುದ್ಧ ಏನಾದರೊಂದು ನೆಪ ಹೂಡಿ ಅದನ್ನು  ವಿಫಲಗೊಳಿಸಲು ಮುಂದಾಗುತ್ತಾರೆ. ನಿಜವಾಗಿ,
ಟಿ.ವಿ. ಡಿಬೆಟ್ ಆಗಬೇಕಿದ್ದುದು ಈ ಸಾಂಸ್ಕೃತಿಕ ರಾಜಕಾರಣವನ್ನು ಕೇಂದ್ರೀಕರಿಸಿಕೊಂಡು. ಇದು ಹಿಂದೂ ಧರ್ಮ ಮತ್ತು  ಇಸ್ಲಾಮ್ ಧರ್ಮದ ನಡುವಿನ ಸಮಸ್ಯೆ ಅಲ್ಲ. ಅವರ ಮೌಲಾನಾರೋ ಸ್ವಾಮೀಜಿಗಳೋ ಆ ಜಾಹೀರಾತಿನ ವಿರುದ್ಧ ಬೀದಿಗಿಳಿದು  ಹೋರಾಟಕ್ಕೂ ಧುಮುಕಿಲ್ಲ. ಹೀಗಿರುವಾಗ, ಇದಕ್ಕೆ ಇಷ್ಟೊಂದು ದೊಡ್ಡ ಮಟ್ಟದ ವಿರೋಧ ಎಲ್ಲಿಂದ ಬಂತು ಮತ್ತು ಯಾಕೆ ಬಂತು  ಎಂಬ ಬಗ್ಗೆ ಒಳನೋಟವುಳ್ಳ ಚರ್ಚೆಯ ಅಗತ್ಯ ವಿತ್ತು. ಇಂಥ ಜಾಹೀರಾತಿನಿಂದ ಯಾರಿಗೆ, ಯಾಕೆ ತೊಂದರೆಯಿದೆ ಎಂಬ ಪ್ರಶ್ನೆ  ಮುಂಚೂಣಿಗೆ ಬರಬೇಕಿತ್ತು. ಮುಸ್ಲಿಮ್ ಕುಟುಂಬವೊಂದು ಹಿಂದೂ ಯುವತಿಯನ್ನು ಹಿಂದೂವಾಗಿಯೇ ಇರಗೊಟ್ಟು, ಆಕೆಯ  ಸಂಪ್ರದಾಯದಂತೆ ಸೀಮಂತ ಆಚರಿಸಿರುವುದರಿಂದ ಭಾರತೀಯತೆಗೆ ಏನು ಅಪಾಯ ಎಂಬ ಪ್ರಶ್ನೆ ಏಳಬೇಕಿತ್ತು? ಆ ಯುವತಿಯ ನ್ನು ಆ ಮುಸ್ಲಿಮ್ ಕುಟುಂಬ ಇಸ್ಲಾಮ್‍ಗೂ ಮತಾಂತರಿಸಿಲ್ಲ, ಅಲ್ಲದೇ ಆ ಯುವತಿಯ ಆಚರಣೆಯನ್ನು ಸ್ವತಃ ಆ ಕುಟುಂಬವೇ  ಮುಂದೆ ನಿಂತು ಮಾಡಿದೆ- ಹೀಗಿರುವಾಗ ಇಲ್ಲಿ ಲವ್ ಜಿಹಾದ್ ಹೇಗೆ ಬಂತು ಎಂದು ಪ್ರಶ್ನಿಸಬೇಕಿತ್ತು?
ದುರಂತ ಏನೆಂದರೆ,
ಟಿವಿ ಚರ್ಚೆಯಲ್ಲಿ ಭಾಗವಹಿಸುವವರು ಅನೇಕ ಬಾರಿ ಚಾನೆಲ್‍ಗಳ ಒಳ ಉದ್ದೇಶವನ್ನು ಅರಿತಿರುವುದಿಲ್ಲ. ನಿರೂಪಕರು ಚರ್ಚೆಯ ನ್ನು ಕೊಂಡೊಯ್ಯುವ ಕಡೆಗೆ ಇವರೂ ಸಾಗುತ್ತಾರೆಯೇ ಹೊರತು ಈ ಚರ್ಚೆ ಸಾಗಬೇಕಾದ ದಾರಿ ಇದುವೋ ಅಥವಾ ತಮ್ಮನ್ನು  ತಪ್ಪು ದಾರಿಯೆಡೆಗೆ ನಿರೂಪಕ ಕೊಂಡೊಯ್ಯುತ್ತಿದ್ದಾರೆಯೋ ಎಂಬುದನ್ನು ವಿಶ್ಲೇಷಿಸುವುದಿಲ್ಲ ಅಥವಾ ಆ ಕ್ಷಣದಲ್ಲಿ ಅವರಿಗೆ ಅದು  ಹೊಳೆಯುವುದಿಲ್ಲ. ಇದನ್ನೇ ನಿರೂಪಕ/ಕಿಯರು ದುರುಪ ಯೋಗಿಸುತ್ತಾರೆ. ಚರ್ಚೆಯನ್ನು ತನ್ನ ಉದ್ದೇಶಿತ ಗುರಿಯೆಡೆಗೆ  ಕೊಂಡೊಯ್ದು ತನಗೆ ಬೇಕಾದ ಫಲಿತಾಂಶವನ್ನು ಪಡಕೊಳ್ಳುತ್ತಾರೆ. ತನಿಷ್ಕ್ ಜಾಹೀರಾತಿನ ಸುತ್ತ ಟಿವಿ ಮತ್ತು ಸಾಮಾಜಿಕ  ಜಾಲತಾಣ ಗಳಲ್ಲಿ ನಡೆದಿರುವ ಚರ್ಚೆಗಳಲ್ಲಿ ಬಹುತೇಕವೂ ಧರ್ಮದ ಸುತ್ತವೇ ಗಿರಕಿ ಹೊಡೆದಿರುವುದಕ್ಕೆ ಆ ಚರ್ಚೆಯನ್ನು ಹುಟ್ಟು  ಹಾಕಿದವರು ಅಥವಾ ಅದರಲ್ಲಿ ಭಾಗವಹಿಸಿದ ಚತುರರೇ ಕಾರಣ. ಅವರು ಉಪಾಯವಾಗಿ ಚರ್ಚೆಯನ್ನು ಹಿಂದೂ ಮುಸ್ಲಿಮ್ ಆಗಿ  ಪರಿವರ್ತಿಸುತ್ತಾರೆ. ಇತರರನ್ನೂ ಆ ದಾರಿಯೆಡೆಗೆ ಸೆಳೆಯುತ್ತಾರೆ. ಕೊನೆಗೆ ಚರ್ಚೆಯ ಮೂಲ ಉದ್ದೇಶವೇ ಗೌಣವಾಗಿ  ಹಿಂದೂ-ಮುಸ್ಲಿಮ್ ಜಗಳವಾಗಿ ಅದು ಕೊನೆಗೊಳ್ಳುತ್ತದೆ.
ಆ ಟಿವಿ ಚರ್ಚೆಯಲ್ಲಿ ಆದದ್ದೂ ಇದುವೇ.