Wednesday, January 31, 2018

ರದ್ದಾಗಬೇಕಾದುದು ಸಬ್ಸಿಡಿಯಲ್ಲ, ವಿಚಾರಧಾರೆ

ಇವನ್ನೆಲ್ಲ ತಪ್ಪು ಎಂದು ಹೇಳುತ್ತಿಲ್ಲ
 1. ಹಿರಿಯ ನಾಗರಿಕರಿಗಾಗಿ 'ಮುಖ್ಯಮಂತ್ರಿ ತೀರ್ಥದರ್ಶನ್ ಯೋಜನಾ' ಎಂಬ ತೀರ್ಥಯಾತ್ರೆ ಯೋಜನೆಯನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‍ರು 2012ರಲ್ಲಿ ಪ್ರಕಟಿಸಿದರು. ಮಥುರಾ, ಸಂತ ಕಬೀರರ ಜನ್ಮಸ್ಥಳ, ಕೇರಳದಲ್ಲಿರುವ ಸೈಂಟ್ ಥಾಮಸ್ ಚರ್ಚ್, ಅಯೋಧ್ಯೆ ಮುಂತಾದ ಕಡೆ ತೀರ್ಥಯಾತ್ರೆ ಕೈಗೊಳ್ಳುವವರಿಗೆ ಈ ಯೋಜನೆಯಡಿ ಸಬ್ಸಿಡಿ (ರಿಯಾಯಿತಿ) ಲಭಿಸುತ್ತದೆ.
        – ಸ್ಕ್ರೋಲ್ ಡಾಟ್ ಇನ್ 2017 ಜನವರಿ 14.
 2. ಚೀನಾದಲ್ಲಿರುವ ಕೈಲಾಸ ಮತ್ತು ಮಾನಸ ಸರೋವರಕ್ಕೆ ತೀರ್ಥಯಾತ್ರೆ ಕೈಗೊಳ್ಳುವವರಿಗೆ ಮಧ್ಯಪ್ರದೇಶ ಸರಕಾರವು 50 ಸಾವಿರ ರೂಪಾಯಿ ಸಬ್ಸಿಡಿಯನ್ನು ನೀಡುತ್ತದೆ. ಅಲ್ಲದೇ, ಪಾಕಿಸ್ತಾನದಲ್ಲಿರುವ ನಂಕಣ ಸಾಯಿಬ್ ಮಂದಿರ ಮತ್ತು ಹಿಂಗಲಜ್ ಮಠ್ ಮಂದಿರ, ಕಾಂಬೋಡಿಯಾದಲ್ಲಿರುವ ಅಂಗ್‍ಕೋರ್ ವಾಟ್, ಶ್ರೀಲಂಕಾದಲ್ಲಿರುವ ಸೀತಾ ಮಂದಿರ ಮತ್ತು ಅಶೋಕ ವಾಟಿಕಾ ತೀರ್ಥಯಾತ್ರೆಗಳಿಗೆ  ಸಬ್ಸಿಡಿಯನ್ನು ನೀಡಿ ಪ್ರೋತ್ಸಾಹಿಸುತ್ತದೆ.
       – ದ ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಮಿಲಿಂದ್ ಘಟ್‍ವಾಯಿ 2015, ಮಾರ್ಚ್ 14
  3. ಗುಜರಾತ್ ಸರಕಾರವು ಕೈಲಾಸ್ – ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಪ್ರತಿಯೋರ್ವ ಯಾತ್ರಿಕನಿಗೆ 50 ಸಾವಿರ ರೂಪಾಯಿ ¸ ಸಬ್ಸಿಡಿಯನ್ನು ನೀಡುತ್ತದೆ. ಅದೇವೇಳೆ, ಕರ್ನಾಟಕ ಸರಕಾರವು 25 ಸಾವಿರ ರೂಪಾಯಿಯನ್ನು ಸಬ್ಸಿಡಿಯಾಗಿ ನೀಡುತ್ತದೆ. ಮಾತ್ರವಲ್ಲ, ಗುಜರಾತ್‍ನ ಮಾದರಿಯಲ್ಲಿ ಈ ಸಬ್ಸಿಡಿ ಮೊತ್ತವನ್ನು 50 ಸಾವಿರಕ್ಕೆ ಹೆಚ್ಚಿಸುವಂತೆ ಮುಜರಾಯಿ ಇಲಾಖೆಯು ಸರಕಾರಕ್ಕೆ ಶಿಫಾರಸು ಮಾಡಿದೆ.
      – ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ 2013, ಫೆಬ್ರವರಿ 5
4. ಉತ್ತರ ಪ್ರದೇಶದಿಂದ ಕೈಲಾಸ – ಮಾನಸ ಸರೋವರಕ್ಕೆ ಯಾತ್ರೆಗೈಯಲು ಸುಮಾರು 1 ಲಕ್ಷ ರೂಪಾಯಿ ಬೇಕಾಗುತ್ತದೆ. ಈ ಮೊತ್ತದ ಅರ್ಧದಷ್ಟು ಹಣವನ್ನು ಸಬ್ಸಿಡಿಯಾಗಿ ನೀಡಲು (50 ಸಾವಿರ ರೂ.) ಸರಕಾರ ನಿರ್ಧರಿಸಿದೆ. ಉತ್ತರ ಪ್ರದೇಶದಿಂದ ಪ್ರತೀ ವರ್ಷ ಈ ಯಾತ್ರೆಗಾಗಿ 16 ತಂಡಗಳು ಹೊರಡುತ್ತವೆ. ಪ್ರತಿಯೊಂದು ತಂಡದಲ್ಲಿ 60 ಮಂದಿ ಇರುತ್ತಾರೆ.
     – ‘ಮೈಲ್ ಆನ್‍ಲೈನ್ ಇಂಡಿಯಾ’ದಲ್ಲಿ ಪಿಯೂಶ್ ಶ್ರೀವಾಸ್ತವ್  2012, ಜನವರಿ 22
5. ತಮಿಳುನಾಡಿನ ಜಯಲಲಿತಾ ಸರಕಾರವು ಚೀನಾದಲ್ಲಿರುವ ಮಾನಸ ಸರೋವರ ಮತ್ತು ನೇಪಾಳದಲ್ಲಿರುವ ಮುಕ್ತಿನಾಥ್ ಯಾತ್ರೆಗೆ  ಸಬ್ಸಿಡಿಯನ್ನು ನೀಡಲು ತೀರ್ಮಾನಿಸಿದೆ. ತಮಿಳುನಾಡಿನಿಂದ ಮಾನಸ ಸರೋವರಕ್ಕೆ ಯಾತ್ರೆಗೈಯಲು ಸುಮಾರು 1.40 ಲಕ್ಷ ರೂಪಾಯಿ  ಬೇಕಾಗುತ್ತದೆ. ಇದರಲ್ಲಿ 40 ಸಾವಿರ ರೂಪಾಯಿಯನ್ನು ಸರಕಾರ ಸಬ್ಸಿಡಿಯಾಗಿ ನೀಡುತ್ತದೆ. ಮುಕ್ತಿನಾಥ್ ಯಾತ್ರೆಗೆ ಸುಮಾರು 25 ಸಾವಿರ ರೂಪಾಯಿ ಖರ್ಚಾಗಲಿದ್ದು, ಇದರಲ್ಲಿ 10 ಸಾವಿರ ರೂಪಾಯಿಯನ್ನು ಸರಕಾರ ಸಬ್ಸಿಡಿ ರೂಪದಲ್ಲಿ ಭರಿಸುತ್ತದೆ. ಅಲ್ಲದೇ ಇಸ್ರೇಲ್‍ನಲ್ಲಿರುವ ಜೆರುಸಲೇಮ್ ಯಾತ್ರೆಗೂ ತಮಿಳುನಾಡು ಸರಕಾರ ಸಬ್ಸಿಡಿಯನ್ನು ನೀಡುತ್ತದೆ.
     – ದಿ ಹಿಂದೂ 2012, ಆಗಸ್ಟ್ 4
6. ಆಗ್ರಾದಲ್ಲಿ ದೀಪಾವಳಿಯನ್ನು ಆಯೋಜಿಸುವುದಕ್ಕಾಗಿ ಉತ್ತರ ಪ್ರದೇಶ ಸರಕಾರವು 165 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದೆ. ದೀಪಾವಳಿ ಆಚರಣೆಗಾಗಿ ಅಗತ್ಯವಾಗಿರುವ ತಯಾರಿ ಮತ್ತು ಅಲಂಕಾರಕ್ಕಾಗಿ ಈ ಮೊತ್ತವನ್ನು ಬಳಸಲಾಗುತ್ತದೆ.
     – ಬ್ಯುಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ 2017, ಅಕ್ಟೋಬರ್ 17
7. ಮಧ್ಯಪ್ರದೇಶದ ಉಜ್ಜೈನಿಯಲ್ಲಿ 12 ವರ್ಷಗಳಿಗೊಮ್ಮೆ ಸಿಂಹಾಸ್ತ ಕುಂಭಮೇಳ ನಡೆಯುತ್ತದೆ. ಕೇಂದ್ರ ಸರಕಾರವು 2016 ರಲ್ಲಿ ಈ ಕುಂಭಮೇಳಕ್ಕಾಗಿ 100 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದೆ. ಮಧ್ಯಪ್ರದೇಶದ ಸರಕಾರವಂತೂ 3,400 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. 2014ರಲ್ಲಿ ಕೇಂದ್ರ ಸರಕಾರವು ಉತ್ತರ ಪ್ರದೇಶದ ಅಲಹಾಬಾದ್ ಕುಂಭಮೇಳಕ್ಕೆ 1150 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ ಮತ್ತು ಉತ್ತರ ಪ್ರದೇಶದ ಅಖಿಲೇಶ್ ಯಾದವ್ ಸರಕಾರವು 11 ಕೋಟಿ ರೂಪಾಯಿಯನ್ನು ವ್ಯಯಿಸಿದೆ.
    – ಸ್ಕ್ರೋಲ್ ಡಾಟ್ ಇನ್- 2017 ಜನವರಿ 14
8. 2015 ಜುಲೈ 14ರಂದು ನಡೆದ ನಾಶಿಕ್ ಕುಂಭಮೇಳಕ್ಕೆ ಮಹಾರಾಷ್ಟ್ರ ಸರಕಾರವು 2500 ಕೋಟಿ ರೂಪಾಯಿಯನ್ನು ಬಿಡುಗಡೆಗೊಳಿಸಿದೆ.
     – ದ ಇಂಡಿಯನ್ ಎಕ್ಸ್ ಪ್ರೆಸ್‍ನಲ್ಲಿ ಶುಭಾಂಗಿ ಖಾಪ್ರೆ 2015, ಜುಲೈ 7.
ಇವಲ್ಲದೇ ಛತ್ತೀಸ್‍ಗಢ, ದೆಹಲಿ, ಉತ್ತರಾಖಂಡ ಮತ್ತಿತರ ರಾಜ್ಯಗಳೂ ತೀರ್ಥಯಾತ್ರೆಗಳಿಗೆ ಸಬ್ಸಿಡಿಯನ್ನು ನೀಡಿ ಪ್ರೋತ್ಸಾಹಿಸುತ್ತದೆ. ಹರಿದ್ವಾರ್, ಅಲಹಾಬಾದ್, ನಾಶಿಕ್ ಮತ್ತು ಉಜ್ಜೈನಿಗಳಲ್ಲಿ ನಡೆಯುವ ಮಹಾ ಕುಂಭಮೇಳಗಳಿಗಂತೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ವ್ಯಯಿಸುವ ಮೊತ್ತ ಅಗಾಧವಾದುದು. ಹಾಗಂತ ಇವನ್ನೆಲ್ಲ ತಪ್ಪು ಅನ್ನುತ್ತಿಲ್ಲ. ಆದರೆ, ಇಷ್ಟಿದ್ದೂ ಹಜ್ಜ್ ಸಬ್ಸಿಡಿ ಮಾತ್ರ ಯಾಕೆ ಅಪರಾಧಿ ಎನಿಸಿಕೊಂಡಿದೆ? ತುಷ್ಟೀಕರಣ, ಮುಸ್ಲಿಮ್ ಓಲೈಕೆ, ಓಟ್ ಬ್ಯಾಂಕ್ ರಾಜಕಾರಣ ಎಂಬಿತ್ಯಾದಿ ತಿವಿತಗಳು ಕೇವಲ ಹಜ್ಜ್ ಸಬ್ಸಿಡಿಯನ್ನು ಮಾತ್ರ ಯಾಕೆ ಬೆನ್ನಟ್ಟಿಕೊಂಡು ಬರುತ್ತಿವೆ? 2017ರಲ್ಲಿ ಕೇಂದ್ರ ಸರಕಾರವು ಹಜ್ಜ್ ಸಬ್ಸಿಡಿಯಾಗಿ 450 ಕೋಟಿ ರೂಪಾಯಿಯನ್ನು ನೀಡಿದೆ. ಅಂದರೆ, ಪ್ರತಿಯೊಬ್ಬ ಹಾಜಿಗೆ ತಲಾ 36 ಸಾವಿರ ರೂಪಾಯಿಯನ್ನು ಸರಕಾರವು ಖರ್ಚು ಮಾಡಿದಂತಾಯಿತು. ಹಾಗಂತ, ಇಲ್ಲೂ ಕೆಲವು ಪ್ರಶ್ನೆಗಳಿವೆ. ಸರಕಾರ ನೀಡುವ ಈ ಸಬ್ಸಿಡಿಯಿಂದ ಯಾತ್ರಾರ್ಥಿಗಳಿಗೆ ಆಗುವ ಪ್ರಯೋಜನವೆಷ್ಟು, ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಆಗುವ ಲಾಭವೆಷ್ಟು, ಸಬ್ಸಿಡಿ ಪಡೆದು ಹಜ್ಜ್ ಯಾತ್ರೆ ನಿರ್ವಹಿಸುವುದು ಧರ್ಮಸಮ್ಮತವೇ ಇತ್ಯಾದಿ ಪ್ರಶ್ನೆಗಳು ಹಲವು ಬಾರಿ ಚರ್ಚೆಗೊಳಾಗಾಗಿವೆ. ಮಾತ್ರವಲ್ಲ, ಹಿಂದೂ ಸಮುದಾಯದ ತೀರ್ಥಯಾತ್ರೆಗಳಿಗೆ ಇಲ್ಲಿನ ಸರಕಾರಗಳು ನೀಡುವ ಸಬ್ಸಿಡಿಯ ಎದುರು ಹಜ್ಜ್ ಸಬ್ಸಿಡಿ ಎಂಬುದು ತೀರಾ ತೀರಾ ಜುಜುಬಿ ಎಂದೂ ಸಾಬೀತಾಗಿದೆ.
      ಸದ್ಯ ಈ ಪ್ರಶ್ನೆಗಳು ಮತ್ತು ಈ ಜುಜುಬಿಗಳ ಹೊರಗೆ ನಿಂತು ಈ ಸಬ್ಸಿಡಿ ಚರ್ಚೆಯ ಸುತ್ತ ಪ್ರಾಮಾಣಿಕ ಅವಲೋಕನವೊಂದು ನಡೆಯಬೇಕು. ತೀವ್ರ ಧರ್ಮಶ್ರದ್ಧೆಯುಳ್ಳ ದೇಶವೊಂದರಲ್ಲಿ ತೀರ್ಥಯಾತ್ರೆಗೆ ಸಬ್ಸಿಡಿ ನೀಡುವುದು ಅಪರಾಧವೇ? ತುಷ್ಟೀಕರಣವೇ? ಸೆಕ್ಯುಲರ್ ವಿರೋ ಧಿಯೇ? ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸೆಕ್ಯುಲರ್ ಎಂಬ ಪದಕ್ಕೆ ಇರುವ ವ್ಯಾಖ್ಯಾನವು ಭಾರತದಲ್ಲಿಲ್ಲ. ಅಲ್ಲಿ ಆಡಳಿತ ಮತ್ತು ಧರ್ಮ ಬೇರ್ಪಟ್ಟು ನಿಂತಿದ್ದರೆ ಭಾರತದಲ್ಲಿ ಇವೆರಡೂ ಜೊತೆ ಜೊತೆ ಯಾಗಿಯೇ ಸಾಗುತ್ತಿವೆ. ಧರ್ಮವನ್ನು ಇಲ್ಲಿ ಸೆಕ್ಯುಲರ್‍ವಾದದ ಭಾಗವಾಗಿಯೇ ಸ್ವೀಕರಿಸಲಾಗಿದೆ. ಈ ಕಾರಣದಿಂದಲೇ ಕುಂಭ ಮೇಳಗಳು, ದೀಪಾವಳಿಗಳು ಸಹಿತ ವಿವಿಧ ಧಾರ್ಮಿಕ ಕಾರ್ಯಗಳಿಗೆ ಸರಕಾರಗಳು ಭಾರೀ ಮೊತ್ತದ ಹಣವನ್ನು ಬಿಡುಗಡೆಗೊಳಿಸುತ್ತದೆ. ನಾಗರಿಕರ ಧಾರ್ಮಿಕ ¨ ಭಾವನೆಗಳನ್ನು ಗೌರವಿಸುವುದು ಮತ್ತು ಆರ್ಥಿಕವಾಗಿ ನೆರವಾಗುವುದನ್ನು ತನ್ನ ಕರ್ತವ್ಯವಾಗಿ ಸರಕಾರ ಪರಿಗಣಿಸುತ್ತದೆ ಅನ್ನುವುದೇ ಇದರರ್ಥ. ಆದರೂ ಹಜ್ಜ್ ಸಬ್ಸಿಡಿಯೇಕೆ ತುಷ್ಟೀಕರಣದ ಪಟ್ಟಿಯಲ್ಲಿ ಸೇರಿ ಕೊಂಡಿದೆ ಮತ್ತು ಉಳಿದ ತೀರ್ಥಯಾತ್ರೆಗಳಿಗೆ ನೀಡುವ ಸಬ್ಸಿಡಿಯನ್ನು ಯಾಕೆ ಯಾರೂ ತುಷ್ಟೀಕರಣದ ಪಟ್ಟಿಯಲ್ಲಿಟ್ಟು ನೋಡುತ್ತಿಲ್ಲ? ಹಜ್ಜ್ ಸಬ್ಸಿಡಿ ಸೆಕ್ಯುಲರ್ ವಿರೋಧಿ ಎಂದಾದರೆ ಉಳಿದ ಸಬ್ಸಿಡಿ ಗಳೂ ಸೆಕ್ಯುಲರ್ ವಿರೋಧಿಯೇ ಆಗಬೇಕಲ್ಲವೇ? ಹಜ್ಜ್ ಸಬ್ಸಿಡಿ ಯನ್ನು ರದ್ದು ಮಾಡುವುದರಿಂದ ಉಳಿಕೆಯಾಗುವ ಮೊತ್ತವನ್ನು ಮುಸ್ಲಿಮ್ ಸಮುದಾಯ ಅಭಿವೃದ್ಧಿಗೆ ಬಳಕೆ ಮಾಡು ವಂತೆಯೇ ಕೈಲಾಸ – ಮಾನಸ ಸರೋವರವೂ ಸೇರಿದಂತೆ ವಿವಿಧ ತೀರ್ಥ ಯಾತ್ರೆಗಳಿಗೆ ನೀಡುವ ಸಬ್ಸಿಡಿ ಮೊತ್ತವನ್ನು ರದ್ದುಪಡಿಸಿ ಉಳಿಕೆ ಮೊತ್ತವನ್ನು ಹಿಂದೂ ಸಮುದಾಯದ ಅಭಿವೃದ್ಧಿಗಾಗಿ ಬಳಸಬಹು ದಲ್ಲವೇ? ತುಷ್ಟೀಕರಣ ಅನ್ನುವ ಪದವನ್ನು ಯಾಕೆ ಏಕಮುಖವಾಗಿ ಬಳಸಲಾಗುತ್ತಿದೆ? ಅಂದಹಾಗೆ, ಸಬ್ಸಿಡಿ ಹಣದಲ್ಲಿ ಹಜ್ಜ್ ನಿರ್ವಹಿ ಸುವುದು ನ್ಯಾಯೋಚಿತವಲ್ಲ ಅನ್ನುವ ವಾದದೊಂದಿಗೆ ಮುಸ್ಲಿಮ್ ಸಮುದಾಯ ಸಬ್ಸಿಡಿ ರದ್ಧತಿಯನ್ನು ಸ್ವಾಗತಿಸಿದೆ. ನಿಜವಾಗಿ, ಇಂಥದ್ದೊಂದು ವಾದದೊಂದಿಗೆ ಸಬ್ಸಿಡಿ ರದ್ಧತಿಯನ್ನು ಮುಸ್ಲಿಮರು ಸ್ವಾಗತಿಸ ಬೇಕೆಂಬುದು ರದ್ದುಪಡಿಸಿದವರ ಬಯಕೆಯಾಗಿತ್ತು. ಮುಸ್ಲಿಮ್ ತಜ್ಞರೊಂದಿಗೆ ಸಮಾಲೋಚಿಸದೆಯೇ ತಯಾರಿಸಲಾದ ತ್ರಿವಳಿ ತಲಾಕ್ ಕಾನೂನಿನ ವಿಷಯದಲ್ಲೂ ಕೇಂದ್ರ ಸರಕಾರ ಇಂಥದ್ದೇ ವಾತಾವರಣವನ್ನು ಹುಟ್ಟು ಹಾಕಿತ್ತು. ತ್ರಿವಳಿ ತ ಲಾಕ್ ಇಸ್ಲಾಮ್‍ನಲ್ಲಿಲ್ಲ ಎಂಬುದೇ ಕೇಂದ್ರೀಯ ವಿಷಯವಾಗಿ, ಕಾನೂನಿನ ಅಪದ್ಧಗಳು ಚರ್ಚೆಯಾಗದಂತೆ ನೋಡಿಕೊಳ್ಳುವುದಕ್ಕೆ ಅದು ಶ್ರಮಿಸಿತ್ತು. ಮುಸ್ಲಿಮ್ ಸಮುದಾಯದ ಸುಧಾರಣೆಯ ದೃಷ್ಟಿಯಿಂದ ‘ತಲಾಕ್ ಕಾನೂನ’ನ್ನು ಜಾರಿಗೆ ತರಲಾಗುತ್ತಿದೆ ಎಂದು ಅದು ಸಮರ್ಥಿಸಿತ್ತು. ಈಗ ಸಬ್ಸಿಡಿ ರದ್ದು ಕ್ರಮವನ್ನೂ ಹೆಚ್ಚೂ ಕಡಿಮೆ ಅದೇ ಧಾಟಿಯಲ್ಲಿ ಸಮರ್ಥಿಸಲಾಗುತ್ತಿದೆ. ಸಬ್ಸಿಡಿ ಮೊತ್ತವನ್ನು ಸಮುದಾಯದ ಅಭಿವೃದ್ಧಿಗೆ ಬಳಸ ಲಾಗುವುದು ಎಂದು ಹೇಳುತ್ತಿದೆ. ಅಷ್ಟಕ್ಕೂ, ಕೇಂದ್ರ ಸರಕಾರಕ್ಕೆ ಮುಸ್ಲಿಮ್ ಸಮುದಾಯದ ಅಭಿವೃದ್ಧಿಯ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಅದನ್ನು ತೋರಿಸಬೇಕಾ ದುದು ಸಾಚಾರ್ ವರದಿಯನ್ನು ಜಾರಿ ಮಾಡುವ ಮೂಲಕ. ಮುಸ್ಲಿಮ್ ಸಮುದಾಯದ ಸ್ಥಿತಿಗತಿಯ ಇಂಚು ಇಂಚು ವಿವರಗಳೂ ವರದಿಯಲ್ಲಿವೆ.
     ತ್ರಿವಳಿ ತಲಾಕ್ ನೀಡುವ ಪುರುಷರು ಮತ್ತು ಸಬ್ಸಿಡಿಯನ್ನು ಬಳಸಿಕೊಂಡು ಹಜ್ಜ್ ಯಾತ್ರೆ ಕೈಗೊಳ್ಳುವವರು ಮುಸ್ಲಿಮ್ ಸಮುದಾಯದ ಅಭಿವೃದ್ಧಿಗೆ ಎಷ್ಟರ ಮಟ್ಟಿಗೆ ಅಡ್ಡಿಯಾಗಿದ್ದಾರೆ ಎಂಬುದನ್ನೂ ಆ ವರದಿಯಿಂದ ಕಂಡುಕೊಳ್ಳಬಹುದು. ನಿಜವಾಗಿ, ತಲಾಕ್, ಬಹುಪತ್ನಿತ್ವ, ಭಯೋತ್ಪಾದನೆ, ಔರಂಗಜೇಬ್, ಘಸ್ನಿ, ಘೋರಿ, ಬಾಬರ್.. ಇತ್ಯಾದಿ ಇತ್ಯಾದಿಗಳ ಮೂಲಕ ಈ ಸಬ್ಸಿಡಿ ರದ್ದುಗೊಳಿಸಿದ ವಿಚಾರಧಾರೆಯು ಮುಸ್ಲಿಮ್ ಸಮುದಾಯ ವನ್ನು ಈ ಮೊದಲಿನಿಂದಲೂ ಹಣಿಯುತ್ತಲೇ ಬರಲಾಗಿದೆ. 15 ಕೋಟಿಯಷ್ಟಿರುವ ಈ ಸಮುದಾಯ ದೇಶದ ರಾಜಕೀಯವನ್ನು ನಿಯಂತ್ರಿಸುತ್ತಿದೆ ಎಂಬ ರೀತಿಯಲ್ಲಿ ಹುಯಿಲು ಎಬ್ಬಿಸುತ್ತಿದೆ. ವ್ಯವಸ್ಥೆಯ ಸರ್ವ ಲಾಭವನ್ನೂ ಪಡೆದುಕೊಂಡು ರಾಜರಂತೆ ಬದುಕುವ ವರ್ಗ ಎಂಬುದಾಗಿ ಅದು ಉದ್ದಕ್ಕೂ ಬಿಂಬಿಸುತ್ತಲೇ ಬಂದಿದೆ. ಈ ನಕಾರಾತ್ಮಕ ಪ್ರಚಾರ ಸಮಾಜದ ಮೇಲೆ ಯಾವ ರೀತಿಯ ಪರಿಣಾಮ ಬೀರತೊಡಗಿತೆಂದರೆ, ‘ಆಗಿರಬಹುದು’ ಎಂದು ಸಮಾಜ ಅಂದುಕೊಳ್ಳುವಷ್ಟು. ಅದರ ಪರಿಣಾಮವೇ ಬೀದಿಯಲ್ಲಿ ಥಳಿಸಿ ಕೊಲ್ಲುವ, ಹಿಂಸಿಸುವ, ಅವಮಾನಿಸುವ ಘಟನೆಗಳು ನಡೆದರೂ ಸಂಭಾವಿತ ಮೌನಕ್ಕೆ ಸಮಾಜ ಜಾರುವ ಸ್ಥಿತಿ ನಿರ್ಮಾಣವಾಗಿರುವುದು. ಮುಸ್ಲಿಮ್ ಸಮುದಾಯವಂತೂ ಈ ಬಗೆಯ ನಕಾರಾತ್ಮಕ ಪ್ರಚಾರದಿಂದ ತೀವ್ರ ಆಘಾತಕ್ಕೆ ಒಳಗಾಯಿತು. ಎಲ್ಲಿಯ ವರೆಗೆಂದರೆ, ಸಬ್ಸಿಡಿ ರದ್ದು ಮತ್ತು ತ್ರಿವಳಿ ತಲಾಕ್ ಬಗೆಗಿನ ಕೇಂದ್ರದ ಧೋರಣೆಯನ್ನು ಸ್ವಾಗತಿಸುವಷ್ಟು. ನಿಜವಾಗಿ, ‘ಸಬ್ಸಿಡಿ ಹಣದಿಂದ ಹಜ್ಜ್ ನಿರ್ವಹಿಸುವುದು ಧರ್ಮ ಸಮ್ಮತವಲ್ಲ’ ಎಂಬುದು ಕೇಂದ್ರದ ಸಬ್ಸಿಡಿ ರದ್ದಿಗೆ ಆಧಾರವಲ್ಲ. ಅದೊಂದು ವಿಚಾರಧಾರೆ. ಆ ವಿಚಾರಧಾರೆಯು ಮುಸ್ಲಿಮರಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ಮ್ಲೇಚ್ಛಗೊಳಿಸಬಯಸುತ್ತದೆ. ಮುಸ್ಲಿಮ್ ಸಮುದಾಯದೊಳಗೆ ಕೀಳರಿಮೆಯನ್ನು ಬೆಳೆಸ ಬಯಸುತ್ತದೆ. ಆ ಬಳಿಕ ಕಾನೂನು ರೂಪಿಸುತ್ತದೆ. ಆ ಮೂಲಕ ರಾಜಕೀಯ ಲಾಭ ಪಡಕೊಳ್ಳುವ ವಾತಾವರಣವನ್ನೂ ಅದು ನಿರ್ಮಿಸುತ್ತದೆ. ಈ ಸಬ್ಸಿಡಿ ರದ್ದಿನ ಹಿಂದಿರುವುದೂ ಇದುವೇ. ತ್ರಿವಳಿ ತಲಾಕ್‍ನ ಹಿಂದಿದ್ದುದೂ ಇದುವೇ. ಆದ್ದರಿಂದಲೇ,
ಅದಕ್ಕೆ ಸಾಚಾರ್ ವರದಿಯೆಂದರೆ ದ್ವೇಷ. 

Tuesday, January 23, 2018

ನೀವು ಅವರ ಪರವೋ ಇವರ ಪರವೋ?

    Gujrat 2017: How did the media fare? (ಗುಜರಾತ್ ಚುನಾವಣೆಯನ್ನು ಮಾಧ್ಯಮಗಳು ಹೇಗೆ ಬಿಂಬಿಸಿದುವು?) ಎಂಬ ಶೀರ್ಷಿಕೆಯಲ್ಲಿ ಖ್ಯಾತ ಪತ್ರಕರ್ತೆ ಸೇವಂತಿ ನೈನಾನ್ ಬರೆದ ಲೇಖನವು ಇಂಟರ್ನೆಟ್ ಪತ್ರಿಕೆ ದ ಹೂಟ್‍ನಲ್ಲಿ ಡಿ. 14ರಂದು ಪ್ರಕಟವಾಗಿತ್ತು. ಇದರಲ್ಲಿ ಅವರು ದೂರದರ್ಶನದ(DD) ವಾರ್ತೆಯ ಬಗ್ಗೆ ವಿಶ್ಲೇಷಣೆ ನಡೆಸಿದ್ದರು. ದೂರದರ್ಶನವೆಂಬುದು ಝೀ ನ್ಯೂಸ್, ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಇಂಡಿಯಾ ನ್ಯೂಸ್ ಚಾನೆಲ್‍ಗಳಂತೆ ಖಾಸಗಿ ಸಂಸ್ಥೆಯಲ್ಲ. ಗುಜರಾತ್ ಚುನಾವಣೆಯ ಸಮಯದಲ್ಲಿ ಈ ಎಲ್ಲ ಚಾನೆಲ್‍ಗಳು ಯಾವ ರೀತಿಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದುವು ಅನ್ನುವುದು ಎಲ್ಲರಿಗೂ ಗೊತ್ತು. ಎಲ್ಲವೂ ಬಿಜೆಪಿ ಪರ ಚಾನೆಲ್‍ಗಳಂತೆ ಒಂದರ ಮೇಲೆ ಒಂದು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು. ಝೀ ನ್ಯೂಸ್‍ನ ವರದಿಗಾರನೋರ್ವ ಕಚ್ ಪ್ರದೇಶದ ಜನರ ಬಾಯಿಗೆ ಮೈಕ್ ಹಿಡಿದರು. ಪ್ರಶ್ನೆ ಹೀಗಿತ್ತು- ‘ಇಲ್ಲಿ ಅಭಿವೃದ್ಧಿ ಆಗಿದೆಯೇ? ನಿಮ್ಮ ವಿಶ್ವಾಸಾರ್ಹ ವ್ಯಕ್ತಿ ಮೋದಿಯೋ ರಾಹುಲೋ?’ ಮೋದಿ ಎಂಬ ಉತ್ತರವನ್ನು ಬಯಸಿಯೇ ಆ ವರದಿಗಾರ ಪ್ರಶ್ನೆ ಕೇಳಿದ್ದ. ಆ ಉತ್ತರ ಸಿಗದಾಗ ಇನ್ನೊಬ್ಬರ ಬಾಯಿಗೆ ಮೈಕ್. ಮತ್ತೆ ಮತ್ತೆ ಪ್ರಶ್ನೆ. ಜೊತೆಗೇ ಪ್ರಶ್ನೆಯ ಗಾತ್ರವೂ ಕಿರಿದಾಗುತ್ತಾ ಹೋಗುತ್ತಿತ್ತು. ಕೊನೆಗೆ ಪ್ರಶ್ನೆಯು ಎಷ್ಟು ಚಿಕ್ಕದಾಯಿತೆಂದರೆ, ‘ನಿಮಗೆ ಮೋದಿಯವರಲ್ಲಿ ನಂಬಿಕೆ ಇದೆಯೇ’ ಅನ್ನುವಲ್ಲಿಗೆ ತಲುಪಿತು.
    ಹಾಗಂತ, ದೂರದರ್ಶನವು ಖಾಸಗಿ ಸಂಸ್ಥೆಯಲ್ಲವಲ್ಲ. ಅದು ಸರಕಾರಿ ಸಂಸ್ಥೆ. ಖಾಸಗಿ ಸಂಸ್ಥೆಗಳಿಗಿಂತ ಭಿನ್ನವಾಗಿ ಅದರ ವಾರ್ತೆ, ವಿಶ್ಲೇಷಣೆ, ವರದಿಗಳಿರಬೇಕಾಗುತ್ತದೆ. ಅತ್ಯಂತ ನಂಬಿಕರ್ಹ ಸುದ್ದಿಗಳಿಗಾಗಿ ವೀಕ್ಪಕರು ದೂರದರ್ಶನವನ್ನು ಆಶ್ರಯಿಸುತ್ತಾರೆ. ಗುಜರಾತ್ ಚುನಾವಣೆಯ ಸಮಯದಲ್ಲಿ ದೂರದರ್ಶನ ಹೇಗೆ ನಡಕೊಂಡಿತು ಅನ್ನುವುದನ್ನು ಸೇವಂತಿ ನೈನಾನ್ ವಿವರಿಸಿದ್ದಾರೆ. ದೂರದರ್ಶನದ ವರದಿಗಾರ ಗುಜರಾತ್‍ನ ಅಂರೇಲಿಯಿಂದ ಮಾಡಿದ ವರದಿಯ ಸ್ಯಾಂಪಲ್ ಹೀಗಿದೆ:
     ‘ಅಂರೇಲಿ ಇವತ್ತು ಸುರಕ್ಷಿತವಾಗಿದೆ. ಅರ್ಧರಾತ್ರಿಯಲ್ಲೂ ಹೆಣ್ಮಕ್ಕಳಿಗೆ ಹೊರಗೆ ತಿರುಗಾಡಬಹುದಾದಂತಹ ಸುರಕ್ಷಿತ ವಾತಾವರಣವಿದೆ. ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ವೇಳೆ ಹೀಗೆ ಇರಲಿಲ್ಲ ಎಂದು ಓರ್ವ ವಿದ್ಯಾರ್ಥಿನಿ ಅಭಿಪ್ರಾಯ ಹಂಚಿ ಕೊಂಡಿದ್ದಾರೆ.’
     ತಮಾಷೆ ಏನೆಂದರೆ, ಗುಜರಾತ್‍ನಲ್ಲಿ ಕಾಂಗ್ರೆಸ್‍ನ ಆಡಳಿತ ಕೊನೆಗೊಂಡು 22 ವರ್ಷಗಳೇ ಕಳೆದಿವೆ. ಒಂದು ಸುರಕ್ಷಿತ ವಾತಾವರಣ ನೆಲೆಗೊಳ್ಳುವುದಕ್ಕೆ 22 ವರ್ಷಗಳು ಬೇಕಾಯಿತೇ ಎಂಬ ಪ್ರಶ್ನೆಯೊಂದು ಪತ್ರಕರ್ತನಾಗಿ ಆ ವರದಿಗಾರನಲ್ಲಿ ಹುಟ್ಟಬೇಕಾದುದು ಸಹಜ. ಆದರೆ ಅಂಥದ್ದೊಂದು ಪ್ರಶ್ನೆ ಬಿಡಿ, ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಆ ವಿದ್ಯಾರ್ಥಿನಿಯ ಜನನವಾಗಿತ್ತೇ ಎಂಬ ಅನುಮಾನವನ್ನೂ ಆ ವರದಿಗಾರ ವ್ಯಕ್ತಪಡಿಸಿಲ್ಲ. ದೂರದರ್ಶನದಲ್ಲಿ ಅಭಿಪ್ರಾಯ ಮಂಡಿಸುವ ವೇಳೆ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ಕೊಡಬೇಕಾದುದು ಅನಿವಾರ್ಯ. ಆದರೆ ವಾರ್ತೆ ಮತ್ತು ಸುದ್ದಿ ವಿಶ್ಲೇಷಣೆಯ ಸಮಯದಲ್ಲಿ ಈ ಅನಿವಾರ್ಯತೆ ಇರುವುದಿಲ್ಲವಲ್ಲ. ದೂರದರ್ಶನ ಮಾಡಿದ್ದೂ ಇದನ್ನೇ. ಅದು ವಾರ್ತೆಯ ಸಮಯದಲ್ಲಿ ಹೆಚ್ಚಿನ ಅವಧಿಯನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಅವರ ಭಾಷಣಗಳಿಗೆ ಮೀಸಲಿಟ್ಟಿತು. ವಾರ್ತೆಯ ನಡುವೆ ಮೋದಿಯವರ ಭಾಷಣವನ್ನು 5 ನಿಮಿಷಗಳ ವರೆಗೂ ಪ್ರಸಾರ ಮಾಡುತ್ತಿತ್ತು. ಇದರ ಬಳಿಕ ನಿರೂಪಕನು ಈ ಭಾಷಣವನ್ನು ಸಂಕ್ಷಿಪ್ತವಾಗಿ ವೀಕ್ಷಕರ ಮುಂದಿಡುವುದು ನಡೆಯುತ್ತಿತ್ತು. ಬಳಿಕ ಹಿರಿಯ ಪತ್ರಕರ್ತ ಎಂಬ ಹೆಸರಲ್ಲಿ ಬಿಜೆಪಿ ಪರ ಪತ್ರಕರ್ತರನ್ನು ಚಾನೆಲ್‍ನಲ್ಲಿ ಕೂರಿಸಿ ಚರ್ಚೆ. ಬಳಿಕ ಗುಜರಾತ್‍ನಲ್ಲಿರುವ ವರದಿಗಾರನಿಂದ ವಿಶ್ಲೇಷಣೆ. ಹೀಗೆ ದೂರದರ್ಶನ ಹೇಗೆ ಆಡಳಿತ ಪಕ್ಷದ ಪರವಾಗಿ ಪ್ರಚಾರ ನಡೆಸಿತು ಅನ್ನುವುದನ್ನು ಸೇವಂತಿ ನೈನಾನ್ ದಾಖಲೆ ಸಮೇತ ವಿವರಿಸಿದ್ದಾರೆ.
     ನಿಜವಾಗಿ, ಇತ್ತೀಚಿನ ವರ್ಷಗಳಲ್ಲಿ ಮಾಧ್ಯಮ ಕ್ಷೇತ್ರದ ವಿಶ್ವಾಸಾರ್ಹತೆ ದೊಡ್ಡ ಮಟ್ಟದಲ್ಲಿ ಪ್ರಶ್ನೆಗೊಳಗಾಗಿದೆ. ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳನ್ನು ಓದುಗರು ನಿರ್ದಿಷ್ಟ ಪಕ್ಷ, ಜಾತಿ ಮತ್ತು ನಿರ್ದಿಷ್ಟ ವಿಚಾರಧಾರೆಯವುಗಳೆಂದು ವಿಭಜಿಸಿ ನೋಡುವಷ್ಟು ಅವುಗಳ ವಿಶ್ವಾಸಾರ್ಹತೆ ಕುಸಿದಿದೆ. ಭಾರತದಲ್ಲಿ ಮೊದಲು ಪತ್ರಿಕೆ ಪ್ರಾರಂಭವಾದದ್ದು 1870ರಲ್ಲಿ. ಬೆಂಗಾಳಿ ಗೆಝೆಟ್ ಈ ದೇಶದ ಮೊದಲ ಪತ್ರಿಕೆ. ಇದು ಪ್ರಾರಂಭವಾಗಿ ಸುಮಾರು 140 ವರ್ಷಗಳೇ ಸಂದುವು. ಸದ್ಯ ಪತ್ರಿಕೆಗಳ ಗುಣಮಟ್ಟ ಹೇಗಿದೆ? ಜನರು ಸುದ್ದಿ ಮತ್ತು ವಿಶ್ಲೇಷಣೆಗಾಗಿ ಪತ್ರಿಕೆಗಳನ್ನೇ ಅವಲಂಬಿಸಿದ್ದ ಈ ಹಿಂದಿನ ಸ್ಥಿತಿಯಲ್ಲಿ ಏನೇನು ಬದಲಾವಣೆಗಳಾಗಿವೆ? ಈ ದೇಶದಲ್ಲಿ 1927ರಲ್ಲಿ ರೇಡಿಯೋ ಪ್ರಸಾರ ಪ್ರಾರಂಭವಾಯಿತು. ಸ್ಯಾಟಲೈಟ್ ಟಿ.ವಿ. ಚಾನೆಲ್ ಪ್ರಾರಂಭಗೊಂಡದ್ದು ಬಹುತೇಕ 1990ರಲ್ಲಿ. ಬಹುಶಃ ದೇಶದಲ್ಲಿ ದೈನಿಕ, ಪಾಕ್ಷಿಕ, ಮಾಸಿಕ.. ಇತ್ಯಾದಿ ಹೆಸರಲ್ಲಿ ಪ್ರಕಟವಾಗುವ ಪತ್ರಿಕೆಗಳು ಸಾವಿರಾರು ಇವೆ. 1600ಕ್ಕಿಂತಲೂ ಅಧಿಕ ಟಿ.ವಿ. ಸಂಸ್ಥೆಗಳಿವೆ. ಸಂವಹನ ಮಾಧ್ಯಮ ಈ ದೇಶದಲ್ಲಿ ಎಷ್ಟು ಕ್ಷಿಪ್ರಗತಿಯಲ್ಲಿ ಬೆಳೆದಿದೆ ಎಂಬುದಕ್ಕೆ ಈ ಅಂಕಿ ಸಂಖ್ಯೆಗಳೇ ಉತ್ತಮ ಉದಾಹರಣೆ. ಆದರೆ ಇವತ್ತು ಈ ಸ್ಥಾಪಿತ ಮಾಧ್ಯಮಗಳಿಗೆ ಪರ್ಯಾಯವಾಗಿ ಸಾಮಾಜಿಕ ಜಾಲತಾಣಗಳು ತೀವ್ರ ಸ್ಪರ್ಧೆಯೊಡ್ಡತೊಡಗಿವೆ. ಇಂಟರ್ ನೆಟ್ ಪತ್ರಿಕೆಗಳ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿವೆ. ವೀಡಿಯೋಗಳು, ಸುದ್ದಿಗಳು, ವಿಶ್ಲೇಷಣೆಗಳು ಕ್ಷಣ ಕ್ಷಣ ಗ್ರಾಹಕರನ್ನು ತಲುಪತೊಡಗಿದೆ. ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಿಗೆ ಹೋಲಿಸಿದರೆ ಇಂಟರ್ ನೆಟ್ ಪತ್ರಿಕೆಗಳಲ್ಲಿ ಅನೇಕಾರು ಅನುಕೂಲತೆಗಳಿರುವುದು ಈ ಮಾಧ್ಯಮವನ್ನು ಜನಪ್ರಿಯಗೊಳಿಸುವಲ್ಲಿ ದೊಡ್ಡ ಪಾತ್ರ ನಿರ್ವಹಿಸುತ್ತಿದೆ ಎಂದು ಹೇಳಬಹುದು. ಇಲ್ಲಿ ಎಷ್ಟು ಬೇಕಾದರೂ ಸ್ಪೇಸ್ ಇದೆ. 2016ರಲ್ಲಿ ಭಾರತದಲ್ಲಿ 377 ಮಿಲಿಯನ್ ಇಂಟರ್ ನೆಟ್ ಬಳಕೆದಾರರು ಮತ್ತು 220 ಮಿಲಿಯನ್ ಸ್ಮಾರ್ಟ್ ಫೋನ್ ಬಳಕೆದಾರರಿದ್ದರು. 2020ರ ವೇಳೆಗೆ ಈ ಬಳಕೆದಾರರ ಸಂಖ್ಯೆ 500 ಮಿಲಿಯನ್‍ಗೇರುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತಿದೆ. ಒಂದು ವರ್ಷದ ಹಿಂದಿನ ಲೆಕ್ಕಾಚಾರದಂತೆ, ಈ ದೇಶದಲ್ಲಿ 150 ಮಿಲಿಯನ್ ಫೇಸ್‍ಬುಕ್ ಬಳಕೆದಾರರಿದ್ದರು. ವಾಟ್ಸಾಪ್ ಬಳಕೆದಾರರ ಸಂಖ್ಯೆ 160 ಮಿಲಿಯನ್. 80 ಮಿಲಿಯನ್ ಯೂಟ್ಯೂಬ್ ಬಳಕೆದಾರರು. ಆದರೆ ಕಳೆದೊಂದು ವರ್ಷದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಅಭೂತಪೂರ್ವವೆನ್ನುವಷ್ಟು ವೇಗವಾಗಿ ಬೆಳೆದಿದೆ. ವಿವಿಧ ಮೊಬೈಲ್ ಕಂಪೆನಿಗಳ ದರ ಸಮರದಿಂದಾಗಿ ಪ್ರತಿ ಪ್ರಜೆಯೂ ಸ್ಮಾರ್ಟ್  ಫೋನ್ ಖರೀದಿಸುವ ಮತ್ತು ಇಂಟರ್ ನೆಟ್ ಸೌಲಭ್ಯ ಪಡಕೊಳ್ಳುವ ಸ್ಥಿತಿಗೆ ತಲುಪಿದ್ದಾನೆ/ಳೆ. ಇದರ ನೇರ ಪರಿಣಾಮ ಎದುರಾಗಿರುವುದು ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳ ಮೇಲೆ. ಅದರಲ್ಲೂ ಮುಖ್ಯವಾಗಿ ಟಿ.ವಿ. ಚಾನೆಲ್‍ಗಳು ಈ ಬೆಳವಣಿಗೆಯ ನೇರ ಪರಿಣಾಮವನ್ನು ಎದುರಿಸಬೇಕಾದ ಆತಂಕಕ್ಕೆ ಗುರಿಯಾಗಿವೆ. ವರ್ಷದ ಹಿಂದೆ ಸುಮಾರು 650 ಮಿಲಿಯನ್ ಮನೆಗಳು ಟಿ.ವಿ. ಚಾನೆಲ್‍ಗಳ ಸಂಪರ್ಕವನ್ನು ಪಡೆದುಕೊಂಡಿದ್ದವು ಮತ್ತು 450 ಮಿಲಿಯನ್ ಇಂಟರ್ ನೆಟ್ ಗ್ರಾಹಕರು ಮತ್ತು 220 ಮಿಲಿಯನ್ ಸ್ಮಾರ್ಟ್ ಫೋನ್ ಗ್ರಾಹಕರು ಈ ದೇಶದಲ್ಲಿದ್ದರು. ಆದರೆ ಇವತ್ತು ಟಿ.ವಿ. ಸಂಪರ್ಕ ಪಡಕೊಳ್ಳುವ ಮನೆಗಳ ಸಂಖ್ಯೆಯ ಎಷ್ಟೋ ಪಟ್ಟು ಅಧಿಕ ಸಂಖ್ಯೆಯಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆ ಏರುತ್ತಿದೆ. ಇದು ಟಿ.ವಿ. ಚಾನೆಲ್‍ಗಳ ಅಸ್ತಿತ್ವದ ಮೇಲೆಯೇ ಪರಿಣಾಮ ಬೀರಬಹುದಾದಂತಹ ಬೆಳವಣಿಗೆ ಎಂದು ಹೇಳಲಾಗುತ್ತದೆ. ಜನರು ಇವತ್ತು ಸುದ್ದಿಗಾಗಿ ಚಾನೆಲ್ ಗಳ ಮೊರೆ ಹೋಗುವುದಕ್ಕಿಂತ ಇಂಟರ್‍ನೆಟ್ ಪತ್ರಿಕೆಗಳು ಮತ್ತು ಫೇಸ್‍ಬುಕ್, ವಾಟ್ಸಾಪ್, ಟ್ವಿಟರ್, ಯೂಟ್ಯೂಬ್ ಗಳತ್ತ ವಾಲುತ್ತಿದ್ದಾರೆ.
1990ರ ಕಾಲದಲ್ಲಿ ಅಚ್ಚರಿಯ ಪೆಟ್ಟಿಗೆಯಾಗಿ ಎಲ್ಲರನ್ನೂ ಆಕರ್ಷಿಸಿದ್ದ ಟಿ.ವಿ. ಇವತ್ತು ವಿಶ್ವಾಸಾರ್ಹತೆಯ ದೊಡ್ಡ ಸವಾಲನ್ನು ಎದುರಿಸುತ್ತಿದೆ. ದಿನಕ್ಕೊಂದರಂತೆ ಹುಟ್ಟಿಕೊಂಡ ಚಾನೆಲ್‍ಗಳು ಇದಕ್ಕೆ ಒಂದು ಕಾರಣವಾದರೆ, ರಾಜಕೀಯ ಮತ್ತು ಕಾರ್ಪೋರೇಟ್ ಹಿತಾಸಕ್ತಿಗಳು ಈ ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದು ಇನ್ನೊಂದು ಕಾರಣ. ಕಾರ್ಪೋರೇಟ್ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಉದ್ಯಮ ಸ್ನೇಹಿ ವಾತಾವರಣವನ್ನು ಕಂಡುಕೊಂಡಂದೇ ಈ ಕ್ಷೇತ್ರ ತನ್ನ ಕುಸಿತದ ಆರಂಭಕ್ಕೆ ಮುನ್ನುಡಿ ಬರೆಯಿತು. ಇವತ್ತು ಕನ್ನಡವಾಗಲಿ, ಇಂಗ್ಲಿಷ್ ಚಾನೆಲ್‍ಗಳಾಗಲಿ ಪ್ರತಿಯೊಂದರ ಬಗ್ಗೆಯೂ ಅವು ಹೀಗೆಯೇ ಎಂಬ ಪೂರ್ವ ನಿರ್ಧರಿತ ಅಭಿಪ್ರಾಯಗಳು ಸಾರ್ವಜನಿಕವಾಗಿ ನೆಲೆಗೊಂಡಿವೆ. ಯಾವ್ಯಾವ ಚಾನೆಲ್ ಯಾವ್ಯಾವ ಪಕ್ಷದ ಪರ ಮತ್ತು ಯಾವ್ಯಾವ ವಿಚಾರಧಾರೆಯ ಪರ ಎಂಬುದನ್ನು ಜನರು ಥಟ್ಟಂಥ ಹೇಳಿಬಿಡುವ ಸ್ಥಿತಿಯಿದೆ. ಪ್ರೈಮ್ ಟೈಮ್‍ನಲ್ಲಿ ನಡೆಯುವ ಚರ್ಚೆಗಳ ಬಗ್ಗೆ ಸಾರ್ವಜನಿಕವಾಗಿ ಉಡಾಫೆ ಭಾವವಿದೆ. ಚರ್ಚೆಯ ಆರಂಭದಲ್ಲೇ  ಈ ಚರ್ಚೆಯ ಅಂತ್ಯ ಹೀಗೆ ಎಂದು ಹೇಳಿಬಿಡುವಂತಹ ವಾತಾವರಣ ಜನರ ನಡುವೆ ಇದೆ. ಇದರ ಪರಿಣಾಮ ಏನಾಯಿತೆಂದರೆ ಜನರು ದೊಡ್ಡ ಸಂಖ್ಯೆಯಲ್ಲಿ ಇಂಟರ್ ನೆಟ್ ಪತ್ರಿಕೆ ಮತ್ತಿತರ ಪರ್ಯಾಯ ಸುದ್ದಿ ಮೂಲಗಳ ಕಡೆಗೆ ವಲಸೆ ಹೋಗುವಂತಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಜನರು ಹೆಚ್ಚಿನ ಸಮಯವನ್ನು ವ್ಯಯಿಸತೊಡಗಿದರು. ಚಾನೆಲ್‍ಗಳು ಏರ್ಪಡಿಸುವ ಚರ್ಚೆಗಳು ನೀರಸವೆನಿಸತೊಡಗಿದುವು. ಟಿ.ವಿ. ಚಾನೆಲ್‍ಗಳ ಒಂದು ಗಂಟೆಯ ಚರ್ಚೆಯಲ್ಲಿ ಸಿಗುವ ಮಾಹಿತಿ ಮತ್ತು ವಿವರಗಳಿಗಿಂತ ಫೇಸ್‍ಬುಕ್ ಮತ್ತು ಟ್ವೀಟರ್‍ಗಳಲ್ಲಿ ಕೆಲವು ನಿಮಿಷಗಳಲ್ಲೇ  ಅದಕ್ಕಿಂತ ಹೆಚ್ಚಿನವು ಸಿಗುವಂತಹ ಸನ್ನಿವೇಶ ನಿರ್ಮಾಣವಾಯಿತು. ಯುವ ಸಮೂಹವನ್ನಂತೂ ಈ ಪರ್ಯಾಯ ಮಾಧ್ಯಮ ಭಾರೀ ಪ್ರಮಾಣದಲ್ಲಿ ಆಕರ್ಷಿಸಿತು. ಸದ್ಯದ ಪರಿಸ್ಥಿತಿಯನ್ನು ಮುಂದಿಟ್ಟು ಹೇಳುವುದಾದರೆ, ಮುಂದಿನ ಒಂದೆರಡು ವರ್ಷ ಗಳಲ್ಲಿ ಸುದ್ದಿ ಚಾನೆಲ್‍ಗಳು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಲೇಬೇಕಾದ ಅನಿವಾರ್ಯತೆಯೊಂದು ಎದುರಾಗಿದೆ. ಇವುಗಳಿಗೆ ಪರ್ಯಾಯ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್ ನೆಟ್ ಪತ್ರಿಕೆಗಳು ಜನರನ್ನು ಆಕರ್ಷಿಸಲಿವೆ. ನಿರ್ದಿಷ್ಟ ಪಕ್ಷದ ಪರ ವಾದಿಸುವುದಕ್ಕಾಗಿ ಚರ್ಚೆಯನ್ನು ಹಮ್ಮಿಕೊಳ್ಳುವವರು ಕ್ರಮೇಣ ತಮ್ಮನ್ನು ಉಳಿಸಿಕೊಳ್ಳುವುದಕ್ಕಾಗಿ ಹೋರಾಟ ನಡೆಸಬೇಕಾದ ಸಂದರ್ಭ ವೊಂದು ನಿರ್ಮಾಣವಾಗಲಿದೆ.      ಕಚ್‍ನಲ್ಲಿ ನಿಂತು, ‘ನೀವು ಮೋದಿ ಪರವೋ ರಾಹುಲ್ ಪರವೋ’ ಎಂದು ಪ್ರಶ್ನಿಸುತ್ತಾ ಕೊನೆಗೆ ‘ನೀವು ಮೋದಿ ಪರವೋ’ ಎಂಬಲ್ಲಿಗೆ ಪ್ರಶ್ನೆಯನ್ನು ಸಂಕ್ಷಿಪ್ತಗೊಳಿಸಿ ‘ಹೌದು’ ಎಂದು ಉತ್ತರ ಬರುವಲ್ಲಿಗೆ ತನ್ನ ವರದಿಗಾರಿಕೆಯನ್ನು ಕೊನೆಗೊಳಿಸುವ ಪತ್ರಕರ್ತ ಮತ್ತು ಸುದ್ದಿ ಚಾನೆಲ್‍ಗಳು ಮುಂದಿನ ದಿನಗಳಲ್ಲಿ ಈ ಪರ್ಯಾಯ ಮಾಧ್ಯಮದ ಎದುರು ಅಸ್ತಿತ್ವಕ್ಕಾಗಿ ಹೋರಾಡಬೇಕಾದೀತು.

Tuesday, January 9, 2018

ತಲಾಕ್ ತಲಾಕ್ ತಲಾಕ್ ಹೇಳಬೇಡಿ, ಸುಮ್ಮನೆ ತ್ಯಜಿಸಿಬಿಡಿ!

     
Muslim mens are so stupid. Why say Talaq Talaq Talaq and go to Jail when you can just leave her without saying anything and become the prime minister of India.. -  ‘ಮುಸ್ಲಿಮ್ ಪುರುಷರು ಕಡು ಮೂರ್ಖರು. ಕಾರಣವನ್ನು ನೀಡದೆಯೇ ಪತ್ನಿಯನ್ನು ತ್ಯಜಿಸಲು ಮತ್ತು ಭಾರತದ ಪ್ರಧಾನಿಯಾಗಲು ಅವಕಾಶ ಇರುವಾಗ ಈ ಮುಸ್ಲಿಮ್ ಪುರುಷರು ಯಾಕೆ ತಲಾಕ್ ತಲಾಕ್ ತಲಾಕ್ ಎಂದು ಹೇಳಬೇಕು ಮತ್ತು ಜೈಲಿಗೆ ಹೋಗಬೇಕು..’
   ಗೆಳೆಯ ಕಳುಹಿಸಿಕೊಟ್ಟ ಈ ವಾಟ್ಸ್ಯಾಪ್ ಸಂದೇಶದಲ್ಲಿ ತಮಾಷೆಯನ್ನೂ ಮೀರಿದ ಕಟು ವಾಸ್ತವವಿದೆ. ಕೇಂದ್ರ ಸರಕಾರವು ಏಕಪಕ್ಷೀಯವಾಗಿ ರಚಿಸಿದ ಮತ್ತು ಪಾರ್ಲಿಮೆಂಟಲ್ಲಿ ಮಂಡಿಸಿ ಅನುಮೋದಿಸಿಕೊಂಡ ಮುಸ್ಲಿಮ್ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯು ಸಮತೋಲನದಿಂದ ಕೂಡಿದೆಯೇ? ಈ ಮಸೂದೆಯನ್ನು ರಚಿಸಿದ್ದು ಕೇಂದ್ರ ಸಚಿವ ಸಂಪುಟದ ಆಂತರಿಕ ಸಮಿತಿ. ತ್ರಿವಳಿ ತಲಾಕನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್‍ನ ಬಾಗಿಲು ಬಡಿದ ಶಾಯಿರಾ ಬಾನುವಲ್ಲಾಗಲಿ, ಈ ಪ್ರಕರಣದ ಪ್ರತಿವಾದಿಗಳಲ್ಲಿ ಒಂದಾದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಲ್ಲಾಗಲಿ, ಸಂಘಟನೆಗಳಲ್ಲಾಗಲಿ ಅಥವಾ ಮುಸ್ಲಿಮ್ ಸಮುದಾಯದಲ್ಲಿರುವ ಶರೀಅತ್ ತಜ್ಞರಲ್ಲಾಗಲಿ ಈ ಸಮಿತಿಯು ಸಮಾಲೋಚನೆಯನ್ನೇ ನಡೆಸಿಲ್ಲ. ರಾಜ್ಯಗಳ ಅಭಿ ಪ್ರಾಯವನ್ನೂ ಪಡೆದುಕೊಂಡಿಲ್ಲ. ಅಷ್ಟಕ್ಕೂ, ತ್ರಿವಳಿ ತಲಾಕನ್ನು ಸುಪ್ರೀಮ್ ಕೋರ್ಟ್ ಸಂವಿಧಾನ ಬಾಹಿರ ಎಂದು ಕರೆದಿದೆ ನಿಜ. ಹಾಗಂತ, ಸಂವಿಧಾನ ಬಾಹಿರ ಎಂಬುದಕ್ಕೆ ಅಪರಾಧ (Crime ) ಎಂಬ ಅರ್ಥವೇನೂ ಇಲ್ಲವಲ್ಲ. ಆತ್ಮಹತ್ಯೆಯನ್ನು ಇತ್ತೀಚಿನ ವರೆಗೆ ಈ ದೇಶದಲ್ಲಿ ಅಪರಾಧವಾಗಿಯೇ ಪರಿಗಣಿಸಲಾಗುತ್ತಿತ್ತು. ಆದರೆ ಇದೀಗ ನ್ಯಾಯಾಲಯವು ಅದನ್ನು ಅಪರಾಧದ ವ್ಯಾಪ್ತಿಯಿಂದ ಹೊರಗಿಟ್ಟಿದೆ ಎಂಬುದು ಏನನ್ನು ಸೂಚಿಸುತ್ತದೆ? ವಿವಾಹವೆಂಬುದು ಇಸ್ಲಾಮಿನಲ್ಲಿ ನಾಗರಿಕ ಒಪ್ಪಂದ (Civil Contract). ಹೀಗಿರುವಾಗ ನಾಗರಿಕ ಒಪ್ಪಂದವೊಂದು ಕ್ರಿಮಿನಲ್ ಕೃತ್ಯವಾಗಿ ಮಾರ್ಪಡುವುದು ಎಷ್ಟು ಸರಿ ಮತ್ತು ಎಲ್ಲಿಯವರೆಗೆ ಸರಿ? ಇದು ಬೀರಬಹುದಾದ ಪರಿಣಾಮಗಳು ಏನೇನು? 2011ರ ಜನಗಣತಿ ಪ್ರಕಾರ ಪತಿಯಿಂದ ಪರಿತ್ಯಕ್ತಗೊಂಡ ಹಿಂದೂ ಮಹಿಳೆಯರ ಸಂಖ್ಯೆಯು ತಲಾಕ್‍ಗೊಳಪಟ್ಟ (ತ್ರಿವಳಿಯೂ ಸೇರಿದಂತೆ) ಮುಸ್ಲಿಮ್ ಮಹಿಳೆಯರ ಸಂಖ್ಯೆಗಿಂತ ಎಷ್ಟೋ ಪಾಲು ಹೆಚ್ಚು. ಪ್ರಧಾನಿ ಮೋದಿಯವರಿಂದ ತ್ಯಜಿಸಲ್ಪಟ್ಟು ಏಕಾಂಗಿಯಾಗಿ ಬದುಕುತ್ತಿರುವ ಜಶೋಧ ಬೆನ್ ಇವರಲ್ಲಿ ಒಬ್ಬರು. ಆದರೆ, ಈ ಕಾರಣಕ್ಕಾಗಿ ಶಿಕ್ಷೆಗೊಳಪಟ್ಟ ಹಿಂದೂ ಪುರುಷರು ಇಲ್ಲವೇ ಇಲ್ಲ. ಇದಕ್ಕೆ ತಾಜಾ ಉದಾಹರಣೆ ಪ್ರಧಾನಿ ನರೇಂದ್ರ ಮೋದಿಯವರೇ. ಕಾರಣ ಏನೆಂದರೆ, ಪತ್ನಿಯನ್ನು ತ್ಯಜಿಸುವುದು ಅಥವಾ ಪರಿತ್ಯಕ್ತೆಯಾಗಿ ಮಹಿಳೆ ಬದುಕುವುದು ಅಪರಾಧ ಅಲ್ಲ. ಒಂದು ವೇಳೆ, ಹೀಗೆ ಪರಿತ್ಯಕ್ತಗೊಂಡು ಬದುಕುತ್ತಿರುವ ಆಕೆಯ ಮೇಲೆ ಪತಿ ಸಂಭೋಗ ನಡೆಸಿದರೆ ಅದು ಭಾರತೀಯ ದಂಡಸಂಹಿತೆ 376 ಬಿ ಪ್ರಕಾರ ಅತ್ಯಾ ಚಾರವಾಗಿ ಗುರುತಿಸಿಕೊಳ್ಳುತ್ತದೆ. ಹಾಗಂತ, ಇದು ಅಪರಾಧ ವಾಗುವುದು ಆಕೆ ದೂರು ಕೊಟ್ಟಾಗ ಮಾತ್ರ. ಇನ್ನು, ಪತ್ನಿಯನ್ನು ಹೊಂದಿರುತ್ತಾ ಹಿಂದೂ ಪುರುಷನು ಇನ್ನೊಂದು ಮದುವೆ ಯಾಗುವುದನ್ನು ಭಾರತೀಯ ದಂಡಸಂಹಿತೆಯ 494ನೇ ವಿಧಿಯು ಅಪರಾಧವಾಗಿ ಪರಿಗಣಿಸುತ್ತದೆ. ಆದರೆ ಅದೂ ತಾನಾಗಿಯೇ ಅಪರಾಧವಾಗುವುದಿಲ್ಲ. ಮೊದಲ ಪತ್ನಿಯೋ ಅಥವಾ ಆಕೆಯ ಕುಟುಂಬಿಕರೋ ಆ ಬಗ್ಗೆ ದೂರು ದಾಖಲಿಸಬೇಕಾಗುತ್ತದೆ. ಆದರೆ, ಕೇಂದ್ರ ಮಂತ್ರಿ ರವಿಶಂಕರ್ ಪ್ರಸಾದ್ ಅವರು ಲೋಕಸಭೆಯಲ್ಲಿ ಮಂಡಿಸಿದ ಮುಸ್ಲಿಮ್ ಮಹಿಳಾ ಮಸೂದೆಯಲ್ಲಿ ಈ ಯಾವ ರಿಯಾಯಿತಿಗಳೂ ಇಲ್ಲ. ತ್ರಿವಳಿ ತಲಾಕ್ ಹೇಳುವುದನ್ನು ಜಾಮೀನುರಹಿತ ಮತ್ತು ವಾರಂಟ್ ಅಗತ್ಯವಿಲ್ಲದ (Cognizable) ಅಪರಾಧವಾಗಿ ಈ ಮಸೂದೆ ಪರಿಗಣಿಸುತ್ತದೆ. ಈ ಮಸೂದೆಯ ಧಾಟಿ ನೋಡಿದರೆ ತ್ರಿವಳಿ ತಲಾಕ್ ಎಂಬುದು ತಾನಾಗಿಯೇ ಜೈಲಿಗರ್ಹ ಅಪರಾಧವೆಂಬ ರೀತಿಯಲ್ಲಿದೆ. ಯಾರು ಕೇಸು ಕೊಟ್ಟರೂ ಕೊಡದಿದ್ದರೂ ಮುಸ್ಲಿಮ್ ಪುರುಷರನ್ನು ಮನೆಗೆ ನುಗ್ಗಿ ಎಳೆದುಕೊಂಡು ಹೋಗಬಹುದು ಎಂದು ಭಾವಿಸುವುದಕ್ಕೆ ಈ ಮಸೂದೆ ಪೂರಕವಾದ ರೀತಿಯಲ್ಲಿದೆ. ಯಾರು ದೂರು ಕೊಡಬೇಕು, ದೂರು ಕೊಡದಿದ್ದರೆ ಬಂಧನ ಆಗುವುದಿಲ್ಲವೇ ಅಥವಾ ಪೊಲೀಸರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವರೇ ಎಂಬ ಬಗ್ಗೆ ಮಸೂದೆಯಲ್ಲಿ ಅಸ್ಪಷ್ಟತೆಯಿದೆ. ಕನಿಷ್ಠ ಸಂಸದೀಯ ಮಂಡಳಿಯನ್ನು ರಚಿಸಿ ಈ ಕುರಿತಂತೆ ಚರ್ಚಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನೂ ಕೇಂದ್ರ ಸರಕಾರ ತಿರಸ್ಕರಿಸಿದೆ. ಏನಿದರ ಮರ್ಮ? ಯಾಕಿಷ್ಟು ತುರ್ತು? ಹಿಂದೂ ಕೋಡ್ ಬಿಲ್ ಅನ್ನು ಈ ದೇಶದಲ್ಲಿ ಜಾರಿಗೊಳಿಸುವುದಕ್ಕಿಂತ ಮೊದಲು ಒಂದು ವರ್ಷಕ್ಕಿಂತಲೂ ಅಧಿಕ ಸಮಯಗಳವರೆಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಚರ್ಚೆಗೆ ಒಳಪಡಿಸಲಾಗಿತ್ತು ಎಂಬುದನ್ನು ಇದರ ಜೊತೆ ಹೋಲಿಸಿ ನೋಡಿದರೆ ಏನನಿಸುತ್ತದೆ? ಇದರ ಹಿಂದೆ ಅಡಗಿರುವುದು ಮುಸ್ಲಿಮ್ ಮಹಿಳೆಯರ ಮೇಲಿನ ಕಾಳಜಿಯೋ ಅಥವಾ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಕ್ಕೆ ಪೂರಕವಾದ ವಾತಾವರಣದ ನಿರ್ಮಾಣವೋ? ಒಂದು ಕಡೆ, ಬಿಜೆಪಿ ಮತ್ತು ಅದರ ಮಾತೃ ಸಂಘಟನೆಯು ಭಾರತೀಯರೆಲ್ಲ ಹಿಂದೂಗಳು ಎಂದು ವಾದಿಸುತ್ತಿದೆ. ಭಾರತೀಯ (ಹಿಂದೂ) ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ ಎಂದು ಮುಸ್ಲಿಮರ ಮೇಲೆ ಒತ್ತಡ ಹೇರುತ್ತಿದೆ. ಮುಸ್ಲಿಮ್, ಕ್ರೈಸ್ತ, ಬೌದ್ಧ, ಜೈನರೂ ಸೇರಿ ಹಿಂದೂಗಳಲ್ಲಿರುವ ನೂರಾರು ಜಾತಿಗಳೆಲ್ಲವೂ ಏಕ ನಾಗರಿಕ ಸಂಹಿತೆಯನ್ನು ಬೆಂಬಲಿಸಬೇಕೆಂದು ಅದು ಕರೆ ಕೊಡುತ್ತಿದೆ. ಇನ್ನೊಂದೆಡೆ, ಅತ್ಯಂತ ತುರ್ತಾಗಿ ಮುಸ್ಲಿಮ್ ಮಹಿಳಾ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಲಾಗುತ್ತದೆ. ಇದು ಹುನ್ನಾರದ ಭಾಗವೇ? ಮುಸ್ಲಿಮರ ವೈವಾಹಿಕ ನಿಯಮಗಳು ಕಾಲಬಾಹಿರವಾದುದು ಎಂಬುದನ್ನು ಸಾರುವುದು ಇದರ ಒಳ ಉದ್ದೇಶವೇ? ಕಳೆದ ಆಗಸ್ಟ್‍ನಲ್ಲಿ ನೀಡಿದ ಬಹುಮತದ ತೀರ್ಪಿನಲ್ಲಿ ಸುಪ್ರೀಮ್ ಕೋರ್ಟು ತ್ರಿವಳಿ ತಲಾಕನ್ನು ಸಂವಿಧಾನ ಬಾಹಿರ ಎಂದು ಹೇಳಿದೆಯೇ ಹೊರತು ಅದನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಿಲ್ಲ. ತಲಾಕ್‍ನ ವಿಷಯದಲ್ಲಿ ತಪ್ಪಾದ ಕ್ರಮವನ್ನು ಕೈಬಿಟ್ಟು ಪವಿತ್ರ ಕುರ್‍ಆನ್ ಪ್ರಸ್ತುತಪಡಿಸಿರುವ ಮೂರು ಹಂತಗಳ ಸರಿಯಾದ ಕ್ರಮದ ಕಡೆಗೆ ಮುಸ್ಲಿಮರು ಮರಳಲಿ ಎಂಬ ಭಾವವೇ ಅದರ ತೀರ್ಪಿನಲ್ಲಿ ವ್ಯಕ್ತವಾಗಿತ್ತು. ತಪ್ಪಾದ ಕ್ರಮವನ್ನು ಸರಿಪಡಿಸುವುದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಿ ಎಂದು ಅದು ಕೇಂದ್ರ ಸರಕಾರಕ್ಕೆ ನಿರ್ದೇಶನವನ್ನೂ ನೀಡಿತ್ತು. ಆದರೆ, ಕೇಂದ್ರ ಸರಕಾರ ಈಗ ಮಂಡಿಸಿರುವ ಮುಸ್ಲಿಮ್ ಮಹಿಳಾ ಮಸೂದೆಯು ಕೋರ್ಟ್‍ನ ಉದ್ದೇಶವನ್ನು ಪೂರ್ತಿಗೊಳಿಸುವ ರೀತಿಯಲ್ಲಿದೆಯೇ? ತ್ರಿವಳಿ ತಲಾಕ್‍ಗೆ ಮೂರು ವರ್ಷ ಶಿಕ್ಷೆ ವಿಧಿಸುವುದೆಂದರೇನು? ಹಾಗೆ ಶಿಕ್ಷೆಗೊಳಪಟ್ಟ ಪತಿಯಿಂದ ಸೂಕ್ತ ಪರಿಹಾರಗಳನ್ನು ಪಡಕೊಳ್ಳಲು ಪತ್ನಿಗೆ ಅವಕಾಶ ನೀಡುವುದೆಂದರೇನು? ಮಕ್ಕಳನ್ನು ತನ್ನ ಬಳಿಯೇ ಇರಿಸಿಕೊಳ್ಳುವುದಕ್ಕೆ ಪತ್ನಿಗೆ ಅವಕಾಶ ಕಲ್ಪಿಸುವುದೆಂದರೇನು? ಇದರರ್ಥ ತ್ರಿವಳಿ ತಲಾಕ್ ಎಂಬುದು ಸರಿಯಾದ ತಲಾಕ್ ಎಂದೇ ಅರ್ಥವಲ್ಲವೇ? ಒಂದು ವೇಳೆ, ತ್ರಿವಳಿ ತಲಾಕ್ ಸಂವಿಧಾನ ಬಾಹಿರ ಮತ್ತು ತಪ್ಪಾದ ಕ್ರಮ ಎಂದಾದರೆ ಶಿಕ್ಷೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪತ್ನಿಗೆ ಪರಿಹಾರ ಕೊಡುವ ಮತ್ತು ಮಕ್ಕಳನ್ನು ಆಕೆಯ ವಶದಲ್ಲೇ  ಇರಿಸಿಕೊಳ್ಳುವ ಪ್ರಶ್ನೆಯೂ ಏಳುವುದಿಲ್ಲ. ತಲಾಕ್ ಸಿಂಧುವಾದಾಗ ಮಾತ್ರ ಈ ಎಲ್ಲವೂ ಸರಿ ಎನಿಸಿಕೊಳ್ಳುತ್ತದೆ. ನಿಜವಾಗಿ, ಸುಪ್ರೀಮ್ ಕೋರ್ಟ್ ಹೇಳಿರುವುದು ಸಂವಿಧಾನ ಬಾಹಿರ ತಲಾಕನ್ನು ಸರಿಪಡಿಸಿಕೊಳ್ಳುವು ದಕ್ಕೆ. ಕೇಂದ್ರ ಸರಕಾರವಾದರೋ ಈ ಸಂವಿಧಾನಬಾಹಿರ ತಲಾಕನ್ನೇ ಸಂವಿಧಾನಬದ್ಧಗೊಳಿಸಿದಂತಿದೆ ಮತ್ತು ಅದಕ್ಕೆ ಕಾನೂನು ಮಾನ್ಯತೆಯನ್ನು ನೀಡಿದಂತಿದೆ. ನಿಜಕ್ಕೂ, ಕೇಂದ್ರದ ಉದ್ದೇಶ ತ್ರಿವಳಿ ತಲಾಕನ್ನು ರದ್ದುಗೊಳಿಸುವುದಾಗಿದೆಯೋ ಅಥವಾ ಅದರ ಹೆಸರಲ್ಲಿ ಒಂದಷ್ಟು ಗೊಂದಲವನ್ನು ಹುಟ್ಟು ಹಾಕಿ, ಮುಸ್ಲಿಮ್ ಸಮುದಾಯವನ್ನು ಸತಾಯಿಸುವುದಾಗಿದೆಯೋ? ಪ್ರತಿದಿನ ಮಾಧ್ಯಮಗಳಿಗೆ ರಸವತ್ತಾದ ಸುದ್ದಿಯನ್ನು ಒದಗಿಸುವುದು ಮತ್ತು ಅದರ ಮರೆಯಲ್ಲಿ ನಿಂತು ಸುಖ ಪಡುವುದು ಹಾಗೂ ಸರಕಾರದ ಹರಕು ಬಾಯಿಗಳಿಂದ ಆಗಾಗ ಮುಸ್ಲಿಮ್ ವೈವಾಹಿಕ ನಿಯಮಗಳನ್ನು ಅಣಕಿಸಿ ಹೇಳಿಕೆಗಳನ್ನು ಹೊರಡಿಸುವ ಹುನ್ನಾರ ಇದರ ಹಿಂದಿದೆಯೇ?
      ಪಾಕಿಸ್ತಾನದಲ್ಲಿ ತಲಾಕ್‍ಗೆ ಸಂಬಂಧಿಸಿ ಮುಸ್ಲಿಮ್ ಕೌಟುಂಬಿಕ ಕಾನೂನು ಅಸ್ತಿತ್ವದಲ್ಲಿದೆ.
ಅದರ ಪ್ರಕಾರ, ತಲಾಕ್ ನೀಡಿದ (ಯಾವ ರೀತಿಯಲ್ಲಿ ನೀಡಿದರೂ) ವ್ಯಕ್ತಿ ಅದನ್ನು ಬರಹ ರೂಪದಲ್ಲಿ ಸರಕಾರ ನೇಮಿಸಿದ ಯೂನಿಯನ್ ಕೌನ್ಸಿಲ್‍ನ ಮುಖ್ಯಸ್ಥರಿಗೆ ಸಲ್ಲಿಸಬೇಕು ಮತ್ತು ಕೌನ್ಸಿಲ್‍ನ ಮುಖ್ಯಸ್ಥರು ಆತನ ಪತ್ನಿಗೆ ಅದರ ಒಂದು ಪ್ರತಿ ಯನ್ನು ರವಾನಿಸಬೇಕು. ಈ ಪತ್ರ ಸಿಕ್ಕಿದ 30 ದಿನಗಳೊಳಗೆ ಕೌನ್ಸಿಲ್ ಮುಖ್ಯಸ್ಥರು ಪರಿಹಾರ ಸಮಿತಿಯನ್ನು ರಚಿಸಬೇಕು. ಅದರಲ್ಲಿ ಎರಡೂ ಕಡೆಯ ಒಬ್ಬೊಬ್ಬ ಪ್ರತಿನಿಧಿಗಳಿರಬೇಕು. ರಾಜಿ ಪಂಚಾಯಿತಿಕೆಯೇ ಈ ಸಮಿತಿಯ ಮುಖ್ಯ ಗುರಿ. ಕೌನ್ಸಿಲ್ ಮುಖ್ಯಸ್ಥರು ನೋಟೀಸು ಜಾರಿ ಮಾಡಿದ ದಿನದಿಂದ ಮುಂದಿನ 90 ದಿನಗಳ ವರೆಗೆ ತಲಾಕ್ ಅನೂರ್ಜಿತವಾಗಿಯೇ ಇರುತ್ತದೆ. ಪತ್ನಿ ಗರ್ಭಿಣಿಯಾಗಿದ್ದರೆ ಪ್ರಸವದ ವರೆಗೆ ತಲಾಕ್ ಅನೂರ್ಜಿತ ವಾಗಿರುತ್ತದೆ.’
    ಇದೊಂದು ಉದಾಹರಣೆ ಅಷ್ಟೇ. ಪಾಕಿಸ್ತಾನ ಇಲ್ಲಿ ನೆಪ ಮಾತ್ರ. ನಮಗೆ ಮುಖ್ಯವಾಗಬೇಕಾದುದು ತಲಾಕ್‍ನ ತಪ್ಪಾದ ರೂಪವನ್ನು ಸರಿಯಾದ ರೂಪಕ್ಕೆ ಪರಿವರ್ತಿಸುವುದು ಹೇಗೆ ಎಂಬುದು. ಜೈಲಿಗಟ್ಟುವುದು ಎಂದರೆ ಪತಿ-ಪತ್ನಿಯನ್ನು ಶಾಶ್ವತ ವೈರಿಗಳಾಗಿಸುವುದು ಎಂದೇ ಅರ್ಥ. ಆ ಬಳಿಕ ಅವರಿಬ್ಬರೂ ದಂಪತಿಗಳಾಗಿ ಉಳಿಯುವುದಕ್ಕೆ ಸಾಧ್ಯವೇ ಇಲ್ಲ. ಇದೂ ಒಂದು ಪರಿಹಾರವೇ? ತ್ರಿವಳಿ ತಲಾಕ್ ತಪ್ಪು ಎಂದಾದರೆ ಆ ತಲಾಕನ್ನು ಅನೂರ್ಜಿತಗೊಳಿಸಿ ಸರಿಯಾದ ತಲಾಕ್‍ಗೆ ವೇದಿಕೆ ಸಿದ್ಧಪಡಿಸುವುದು ಅಗತ್ಯವಾಗಿತ್ತಲ್ಲವೇ? ಅಥವಾ ಮಾತುಕತೆ, ರಾಜಿ ಪಂಚಾಯಿತಿಕೆ, ಆಪ್ತ ಸಮಾಲೋಚನೆಗಳಿಗೆ ಅವಕಾಶ ಒದಗಬಹುದಾದಂತಹ ವಾತಾವರಣ ನಿರ್ಮಿಸುವುದು ಮುಖ್ಯವಾಗಿತ್ತಲ್ಲವೇ? ವಿವಾಹ ವಿಚ್ಛೇದನವೆಂಬುದು ಕೊಲೆ ಕೃತ್ಯದಂತೆ ಅಲ್ಲವಲ್ಲ. ಬೇಡವಾದ ವಿವಾಹ ಬಂಧನದಿಂದ ಮುಕ್ತಗೊಳಿಸುವುದನ್ನು ಅಪರಾಧವಾಗಿಯೋ ಸಂಕೀರ್ಣವಾಗಿಯೋ ನೋಡಬೇಕಾಗಿಲ್ಲವಲ್ಲ. ಇದು ಸಂವಿಧಾನ ಬಾಹಿರವಾಗಿರಬಾರದು ಎಂಬುದಷ್ಟೇ ಮುಖ್ಯವಾಗಬೇಕಲ್ಲ. ಇನ್ನು, ಈ ಮಸೂದೆಯಿಂದಾಗಿ, ‘ಸರಿ’ ತಲಾಕನ್ನೇ ತ್ರಿವಳಿ ಎಂದು ಆರೋಪಿಸಿ ದೂರು ದಾಖಲಿಸಬಹುದಾದ ಸಾಧ್ಯತೆಗಳೂ ಇದೆಯಲ್ಲವೇ? ಹೀಗೆ ದುರುಪಯೋಗವಾಗದಂತೆ ತಡೆಯಲು ಈ ಮಸೂದೆಯಲ್ಲಿ ಏನು ಪರಿಹಾರವಿದೆ? ಅಂತಿಮವಾಗಿ ತಲಾಕನ್ನು ಅಸಾಧ್ಯದ ಮಟ್ಟಕ್ಕೆ ಈ ಮಸೂದೆ ತಂದು ಮುಟ್ಟಿಸಲಿದೆಯೇ? ಅಷ್ಟಕ್ಕೂ,
    ಹೈನುದ್ಯಮ ನಡೆಸುವ ವಯೋವೃದ್ಧ ಮುಸ್ಲಿಮರನ್ನೂ ಗೋಹತ್ಯೆಯ ಹೆಸರಲ್ಲಿ ಥಳಿಸಿ ಕೊಲ್ಲುವ ಮತ್ತು ಲವ್ ಜಿಹಾದ್, ನೈತಿಕ ಪೊಲೀಸ್‍ಗಿರಿ ನಡೆಸುವ ಹಾಗೂ ಗೋಮಾಂಸ ಪತ್ತೆಯಲ್ಲಿ ತೊಡಗಿರುವ ಮಂದಿ ಇನ್ನು ಮುಂದಕ್ಕೆ ತ್ರಿವಳಿ ತಲಾಕನ್ನು ಪತ್ತೆ ಹಚ್ಚುವುದಕ್ಕೂ ಮುಂದಾಗಬಹುದೇ? ಯಾವ ಮನೆ, ಯಾವ ಗ್ರಾಮ, ಯಾವ ಪ್ರದೇಶದಲ್ಲಿ ತ್ರಿವಳಿ ತಲಾಕ್ ಪ್ರಕರಣ ನಡೆದಿದೆ ಎಂಬುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ಕೊಡುವುದಕ್ಕೆ ತಂಡ ರಚನೆಯಾಗಬಹುದೇ? ಸರಿ ತಲಾಕನ್ನೂ ತ್ರಿವಳಿ ಎಂದು ವದಂತಿ ಹಬ್ಬಿಸಿ ಬಂಧನವಾಗುವಂತಹ ವಾತಾವರಣವನ್ನು ಹುಟ್ಟುಹಾಕಬಹುದೇ? ಈವರೆಗೆ ಗೋವಿನ ಹೆಸರಲ್ಲಿ ನಡೆಯುತ್ತಿದ್ದ ಮುಸ್ಲಿಮ್ ವಿರೋಧಿ ದೌರ್ಜನ್ಯಗಳ ಪಟ್ಟಿಗೆ ಇನ್ನು ಮುಂದೆ ತಲಾಕೂ ಒಳಪಡಲಿದೆಯೇ?
      ಈ ಮಸೂದೆಗೆ ಸಂಬಂಧಿಸಿ ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಡಿ. 30ರಂದು ಬರೆದ ಸಂಪಾದಕೀಯಕ್ಕೆ Wrong Message (ತಪ್ಪು ಸಂದೇಶ) ಎಂಬ ಶೀರ್ಷಿಕೆಯನ್ನು ಕೊಟ್ಟಿತ್ತು. ನಿಜಕ್ಕೂ, ಈ ಶೀರ್ಷಿಕೆ ಅತ್ಯಂತ ಸೂಕ್ತ ಮತ್ತು ಸಮಯೋಚಿತ. ಆ ಮಸೂದೆ ರವಾನಿಸಿರುವುದು ತಪ್ಪು ಸಂದೇಶವನ್ನೇ.

Monday, January 1, 2018

ಹೊನ್ನಾವರದ ‘ಜಿಹಾದಿ'ಗಳನ್ನು ಹುಡುಕುತ್ತಾ..

      1.I have no hesitation in apologizing to the sikh community. I apologies not only to the sikh community. But to the whole Indian nation because what took place in 1984 was a negation of the concept of enshrined in our constitution. -
“ಸಿಖ್ ಸಮುದಾಯದೊಂದಿಗೆ ಕ್ಷಮೆ ಯಾಚಿಸುವುದಕ್ಕೆ ನನಗಾವ ಹಿಂಜರಿಕೆಯೂ ಇಲ್ಲ. ನಾನು ಸಿಖ್ ಸಮುದಾಯದೊಂದಿಗೆ ಮಾತ್ರವಲ್ಲ, ಇಡೀ ದೇಶದೊಂದಿಗೆ ಕ್ಷಮೆಯಾಚಿಸು ತ್ತೇನೆ. ಯಾಕೆಂದರೆ, 1984ರಲ್ಲಿ ಏನು ನಡೆದಿದೆಯೋ ಅದು ನಮ್ಮ ಸಂವಿಧಾನದ ಮೌಲ್ಯಗಳಿಗೆ ವಿರುದ್ಧ” - ಹಾಗಂತ ಪ್ರಧಾನಿ ಮನ್‍ಮೋಹನ್ ಸಿಂಗ್ ಅವರು ಪಾರ್ಲಿಮೆಂಟ್‍ನಲ್ಲಿ ಘೋಷಿಸಿದ್ದರು. ಅದು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವೂ ಆಗಿತ್ತು.
    2. 2012ರಲ್ಲಿ ಅಮೇರಿಕದ ವಾಲ್ ಸ್ಟ್ರೀಟ್ ಜರ್ನಲ್‍ನ ಪತ್ರಕರ್ತರೋರ್ವರು ಗುಜರಾತ್‍ನ ಮುಖ್ಯ ಮಂತ್ರಿ ನರೇಂದ್ರ ಮೋದಿಯವರ ಸಂದರ್ಶನ ನಡೆಸಿ ದ್ದರು. 2002ರ ಗುಜರಾತ್ ಹತ್ಯಾಕಾಂಡಕ್ಕೆ ಕ್ಷಮೆ ಯಾಚಿಸುತ್ತೀರಾ ಎಂದವರು ಪ್ರಶ್ನಿಸಿದ್ದರು. ಆದರೆ ಮೋದಿ ನಿರಾಕರಿಸಿದ್ದರು. ಮಾತ್ರವಲ್ಲ, 2013ರಲ್ಲಿ ರಾಯಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ‘ಗುಜರಾತ್ ಹತ್ಯಾಕಾಂಡದ ಸಂತ್ರಸ್ತರನ್ನು ಕಾರಿನಡಿಗೆ ಬೀಳುವ ನಾಯಿ ಮರಿಗೆ’ ಹೋಲಿಸಿದ್ದರು.
ಈಗ ಒಬ್ಬರು ಮಾಜಿ ಮತ್ತು ಇನ್ನೊಬ್ಬರು ಹಾಲಿ ಪ್ರಧಾನಿಗಳಾಗಿದ್ದಾರೆ. ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್‍ರು ಈಗ ಪಾರ್ಲಿಮೆಂಟ್‍ನಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಕ್ಪಮೆಯಾಚನೆಯನ್ನು ಆಗ್ರಹಿಸುತ್ತಿದ್ದಾರೆ. ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಯವರು - ಮನ್‍ಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ, ನಿವೃತ್ತ ಸೇನಾ ಮುಖ್ಯಸ್ಥರನ್ನು ಪಾಕ್ ಏಜೆಂಟ್ ಎಂದು ಕರೆದಿದ್ದರು. ಪಾಕ್ ಜೊತೆ ಸೇರಿ ನನ್ನ ಹತ್ಯೆಗೆ ಇವರು ಸಂಚು ಹೂಡಿದ್ದಾರೆ ಎಂದು ಆರೋಪಿಸಿದ್ದರು. ಈಗ ಚುನಾವಣೆ ಮುಗಿದಿದೆ. ಆದರೆ ಈ ದೇಶದ ಪ್ರಧಾನಿ ಯನ್ನೇ ಹತ್ಯೆಗೈಯಲು ಸಂಚು ರೂಪಿಸಿದವರ ವಿರುದ್ಧ ನರೇಂದ್ರ ಮೋದಿಯವರು ಈ ವರೆಗೂ ಕೇಸು ದಾಖಲಿಸಿಲ್ಲ ಅಥವಾ ಆರೋಪಕ್ಕೆ ಪೂರಕವಾದ ದಾಖಲೆಯನ್ನೂ ಬಿಡುಗಡೆಗೊಳಿಸಿಲ್ಲ. ಇಷ್ಟೊಂದು ಗಂಭೀರ ಪ್ರಕರಣದಲ್ಲಿ ಮೋದಿಯವರು ಮೌನ ವಾಗಿರುವುದರ ಅರ್ಥವೇನು? ಅವರು ತಪ್ಪಾಗಿ ಹಾಗೆ ಹೇಳಿ ದರೇ? ಹೌದು ಎಂದಾದರೆ ಅವರೇಕೆ P್ಷÀಮೆ ಯಾಚಿಸುವ ಸೌಜನ್ಯ ತೋರುತ್ತಿಲ್ಲ ಅಥವಾ ಅದೊಂದು ಚುನಾವಣಾ ತಂತ್ರವೇ? ಹಾಗಾದರೆ 2002ರ ಹತ್ಯಾಕಾಂಡವೂ ಚುನಾವಣಾ ತಂತ್ರದ ಭಾಗವಾಗಿತ್ತೇ?
ಅಷ್ಟಕ್ಕೂ, ಕ್ಷಮೆ ಯಾಚನೆಯಿಂದ ಸಂತ್ರಸ್ತರಿಗೆ ನ್ಯಾಯ ಸಿಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಸತ್ತವರನ್ನು ಮರಳಿ ಬದುಕಿಸಲು ಸಾಧ್ಯವಿಲ್ಲದ, ಅಂಗ ಊನಗೊಂಡವರನ್ನು ಮೊದಲಿ ನಂತಾಗಿಸದ ಮತ್ತು ಅನಾಥ ಮಕ್ಕಳಿಗೆ ತಮ್ಮವರನ್ನು ಮರಳಿಸಲಾಗದಷ್ಟು ದುರ್ಬಲವಾದುದು - ಕ್ಷಮೆ. ಆದರೆ ಅಂಥದ್ದೊಂದು  ಕ್ಷಮೆ ಸಂತ್ರಸ್ತರ ಮನಸ್ಸಿಗೆ ಒಂದಿಷ್ಟು ಸಾಂತ್ವನವನ್ನು ಕೊಡುತ್ತದೆ. ಕ್ಷಮೆ ಕೋರುವವನ ಬಗ್ಗೆ ಸಮಾಜದ ಮನಸ್ಸು ತುಸುವಾದರೂ ಮೃದುವಾಗುತ್ತದೆ. ‘ನನ್ನನ್ನು ಕ್ಷಮಿಸಿ’ ಅನ್ನುವ ಮೂಲಕ ಆತನೊಳಗೆ ಪಶ್ಚಾತ್ತಾಪಭಾವ ಮೂಡುತ್ತದೆ. ಇಲ್ಲದಿದ್ದರೆ 1984ರ ಸಿಕ್ಖ್ ಹತ್ಯಾಕಾಂಡಕ್ಕೆ ಎರಡು ಶತಮಾನಗಳ ಬಳಿಕ ಮನ್‍ಮೋಹನ್ ಸಿಂಗ್ ಕ್ಷಮೆ ಯಾಚಿಸಬೇಕಾದ ಅಗತ್ಯವೇ ಇರಲಿಲ್ಲ. 2002ರ ಗುಜರಾತ್ ಹತ್ಯಾಕಾಂಡವನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ನರೇಂದ್ರ ಮೋದಿಯವರು ಸಮರ್ಥನೆಯನ್ನು, ‘ದೊಡ್ಡ ಮರ ಉರುಳುವಾಗ ಸುತ್ತಲಿನ ಭೂಮಿ ಅಲುಗಾಡುವುದು ಸಹಜ’ ಎಂಬ ರಾಜೀವ್ ಗಾಂಧಿಯವರ ತಕ್ಷಣದ ಸಮರ್ಥನೆಯೊಂದಿಗೆ ಜೋಡಿಸಿ ಸಿಕ್ಖ್ ನರಮೇಧವನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಮನ್‍ಮೋಹನ್ ಸಿಂಗ್‍ರೊಳಗಿನ ಸಜ್ಜನಿಕೆಯು ಕಾಂಗ್ರೆಸ್ ಪಕ್ಷದ ಮೇಲೆಯೇ ಪ್ರಭಾವ ಬೀರಿತು. ಕ್ಷಮೆ ಯಾಚನೆಯಿಂದ ಮನ್‍ಮೋಹನ್‍ರದ್ದಾಗಲಿ, ಕಾಂಗ್ರೆಸ್ ಪಕ್ಷದ್ದಾಗಲಿ ವರ್ಚಸ್ಸಿಗೆ ಧಕ್ಕೆಯೇನೂ ಆಗಲಿಲ್ಲ. ನಿಜವಾಗಿ, ಕ್ಷಮೆಯಾಚನೆ ಯಿಂದ ಯಾರೂ ಸಣ್ಣವರಾಗುವುದಿಲ್ಲ. ಕಳೆದ ನವೆಂಬರ್ 28ರಂದು ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೇವ್‍ರು ತನ್ನ ದೇಶದ ಐಉಃಖಿ ಸಮುದಾಯದೊಂದಿಗೆ ಕ್ಷಮೆ ಯಾಚಿಸಿದರು. ಸರಕಾರಿ ಪ್ರಾಯೋಜಿತ ಪೀಡನೆ ಮತ್ತು ದೌರ್ಜನ್ಯಕ್ಕಾಗಿ ತಮ್ಮನ್ನು ಕ್ಷಮಿಸಬೇಕೆಂದು ಕೋರಿಕೊಂಡರು. ಇದಕ್ಕಿಂತ ಮೊದಲು ಇದೇ ಟ್ರುಡೇವ್ ಅವರು, ಸಿಕ್ಖ್ ಮತ್ತು ಇತರ ಪ್ರಯಾಣಿಕರಿಗೆ ಕೆನಡ ಪ್ರವೇಶಕ್ಕೆ ನಿರಾಕರಿಸಲಾದ 1914ರ ಕುಖ್ಯಾತ ಕೊಮಗತ ಮರು ಘಟನೆಗೆ ಕ್ಷಮೆ ಯಾಚಿಸಿದ್ದರು. ಇತ್ತೀಚೆಗಷ್ಟೇ ನ್ಯೂಝಿಲ್ಯಾಂಡ್ ಸರಕಾರವು ಮಾವೊಲಿ ಬುಡಕಟ್ಟಿನ ಮೇಲೆ ವಸಾಹತುಶಾಹಿ ವ್ಯವಸ್ಥೆ ಎಸಗಿದ ಅನ್ಯಾಯಕ್ಕಾಗಿ ಕ್ಷಮೆ ಯಾಚಿಸಿತು. ಮಾತ್ರವಲ್ಲ, ಸಂತ್ರಸ್ತ ಪೀಳಿಗೆಗೆ ಪರಿಹಾರವನ್ನು ಕೊಡುವ ಅಭೂತಪೂರ್ವ ತೀರ್ಮಾನವನ್ನೂ ಪ್ರಕಟಿಸಿತು. ಬ್ರಿಟನ್ನಿನ ಮಾಜಿ ಪ್ರಧಾನಿ ಟೋನಿ ಬ್ಲೇರ್‍ರು 1840ರ ಐರಿಶ್ ಪೊಟಾಟೋ ಪ್ರಕರಣಕ್ಕೆ ಸಂಬಂಧಿಸಿ ಆ ಸಮುದಾಯದ ಕ್ಷಮೆ ಯಾಚಿಸಿದ್ದರು. ದುರಂತ ಏನೆಂದರೆ, ಭಾರತೀಯ ರಾಜಕಾರಣಿಗಳು ತಪ್ಪನ್ನೇ ಎಸಗದ ಮಹಾ ಸಂಭಾವಿತರಂತೆ ವರ್ತಿಸುತ್ತಾರೆ. ಕಣ್ಣೆದುರೇ ತಪ್ಪು ಸಾಬೀತಾದರೂ ಪಶ್ಚಾತ್ತಾಪರಹಿತ ಭಾವ ಪ್ರದರ್ಶಿಸುತ್ತಾರೆ. ವಾರಗಳ ಹಿಂದೆ ಹೊನ್ನಾವರ ಹೊತ್ತಿ ಉರಿಯಿತು. ಶಾಲಾ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆದ ಬಗ್ಗೆ ವದಂತಿಗಳೂ ಹಬ್ಬಿದುವು. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಕ್ಷಣ ಹೀಗೆ ಟ್ವೀಟ್ ಮಾಡಿದರು,
Jehadist tried to rape and murder a girl studying in 9th std near Honnavara. Why is the govt silent about this incident? Arrest those who molested and injured this girl. Where are you CM @Siddaramaiah? - “9ನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಹೊನ್ನಾವರದ ಯುವತಿಯನ್ನು ಅತ್ಯಾಚಾರ ನಡೆಸಿ ಕೊಲೆಗೈಯಲು ಜಿಹಾದಿಗಳು ಯತ್ನಿಸಿದ್ದಾರೆ. ಯಾಕೆ ಸರಕಾರ ಈ ಘಟನೆಯ ಕುರಿತು ಮೌನವಾಗಿದೆ? ಈ ಹುಡುಗಿಯನ್ನು ಚುಡಾಯಿಸಿದ ಮತ್ತು ಗಾಯಗೊಳಿಸಿದವರನ್ನು ಬಂಧಿಸಿ. ಎಲ್ಲಿದ್ದೀರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ?”
    ಆದರೆ ಆ ಇಡೀ ಪ್ರಕರಣದ ಹಿಂದೆ ಗಣೇಶ್ ನಾಯ್ಕ ಎಂಬ ಯುವಕನ ಪಾತ್ರವಿದ್ದು, ಶೋಭಾರ ‘ಜಿಹಾದಿಗಳಿಗೂ’ ಆ ಪ್ರಕರಣಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದನ್ನು ಆ ಯುವತಿ ನ್ಯಾಯಾಧೀಶರೆದುರೂ ಪೊಲೀಸರೆದುರೂ ಬಹಿ ರಂಗವಾಗಿ ಹೇಳಿಕೊಂಡಳು. ಗಣೇಶ್ ನಾಯ್ಕ ಆಕೆಯನ್ನು ನಿತ್ಯ ಚುಡಾಯಿಸುತ್ತಿದ್ದ. ಜೊತೆಗೇ ಆಕೆಗೆ ಪರೀಕ್ಷಾ ಭಯವೂ ಇತ್ತು. ನಿತ್ಯ 8 ಕಿ.ಮೀ. ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದ ಹುಡುಗಿಯು ಕೈಯನ್ನು ನಿಂಬೆ ಗಿಡದ ಮುಳ್ಳಿನಿಂದ ಸ್ವತಃ ಗೀರಿ ಕೊಂಡಿದ್ದಳು. ಇದನ್ನೇ ಶೋಭಾ ಕರಂದ್ಲಾಜೆ ಜಿಹಾದಿಗಳ ಕೃತ್ಯವಾಗಿ ಟ್ವೀಟ್ ಮಾಡಿದ್ದರು. ಇಷ್ಟಿದ್ದೂ, ಶೋಭಾ ಈ ವರೆಗೆ ಕ್ಷಮೆ ಯಾಚಿಸಿಲ್ಲ. ಸಂಸದೆಯಾಗಿ ಶೋಭಾ ಹೊರಿಸಿದ ಆರೋಪ ಅತ್ಯಂತ ಗಂಭೀರವಾದುದು. ಒಂದು ಸಮುದಾಯದ ಮೇಲೆ ಸಮಾಜ ತಿರುಗಿ ಬೀಳುವುದಕ್ಕೆ ಪ್ರೇರಣೆ ಕೊಡುವಂತಹದ್ದು. ಆದರೂ ಈ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸುವುದಿಲ್ಲವೆಂದರೆ ಅದು ಸಾರುವ ಸಂದೇಶವೇನು?
    ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಈ ದೇಶದ ನ್ಯಾಯಾಂಗವು ಕ್ರಿಮಿನಲ್ ಕೃತ್ಯವಾಗಿ ಪರಿಗಣಿಸಿದೆ. ಬಿಜೆಪಿ ನಾಯಕರಾದ ಅಡ್ವಾಣಿ, ಉಮಾಭಾರತಿ, ಜೋಶಿ ಸೇರಿದಂತೆ ಹಲವು ಪ್ರಮುಖರ ಮೇಲೆ ಕೇಸು ದಾಖಲಾಗಿದೆ. ಈ ದೇಶದ ಸಂವಿಧಾನಕ್ಕೆ ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಗೆ ಧಕ್ಕೆ ತರಲಾದ ದಿನವಾಗಿ ಡಿಸೆಂಬರ್ 6ನ್ನು ಪರಿಗಣಿಸಲಾಗುತ್ತದೆ. ಅಡ್ವಾಣಿಯವರ ನಾಯಕತ್ವದಲ್ಲಿ ಹೊರಟ ರಥಯಾತ್ರೆಯಲ್ಲೇ  ಬಾಬರಿ ಮಸೀದಿ ಧ್ವಂಸಗೊಂಡಿತ್ತು. ಬಳಿಕ ಸುಮಾರು 2 ಸಾವಿರ ಮಂದಿಯ ಹತ್ಯೆಯೂ ನಡೆಯಿತು. ಆದರೂ ಬಿಜೆಪಿ ಅಧಿಕೃತವಾಗಿ ಈ ಕೃತ್ಯಕ್ಕೆ ದೇಶದ ಕ್ಷಮೆ ಯಾಚಿಸಿಲ್ಲ. ಧ್ವಂಸ ಕೃತ್ಯಕ್ಕೆ 25 ವರ್ಷಗಳು ಸಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದು ಹೀಗೆ,
    ‘ವರ್ಷಗಳಿಂದ ಒತ್ತಿಡಲಾಗಿದ್ದ ಹಿಂದೂಗಳ ಶಕ್ತಿಯನ್ನು 1992 ಈ ದಿನದಂದು (ಡಿಸೆಂಬರ್ 6) ಕರಸೇವಕರು ಪ್ರದರ್ಶಿಸಿದರು’.
    ನಿಜಕ್ಕೂ ಇದು ಹೆಮ್ಮೆ ಪಡಬೇಕಾದ ಸಂಗತಿಯೇ? ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆಯನ್ನೇ ಧಿಕ್ಕರಿಸಿ ನಡೆಸಲಾದ ಕೃತ್ಯವೊಂದು ಕ್ಷಮೆಯಾಚನೆಯ ಬದಲು ಹೆಮ್ಮೆಯ ಸಂದರ್ಭವಾಗಿ ವ್ಯಾಖ್ಯಾನಕ್ಕೆ ಒಳಗಾಗುತ್ತಿರುವುದೇಕೆ? ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳುವುದಕ್ಕೂ ತಪ್ಪನ್ನೇ ಸರಿ ಎಂದು ಸಮರ್ಥಿಸಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಒಂದು ಸಂಸ್ಕೃತಿಯಾದರೆ ಇನ್ನೊಂದು ವಿಕೃತಿ. ಒಂದು ಮನುಷ್ಯ ಸಹಜವಾದರೆ ಇನ್ನೊಂದು ಮನುಷ್ಯ ವಿರೋಧಿ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಮನುಷ್ಯರೇ ಇz್ದÁರೆ. ಮನುಷ್ಯರೆಂದ ಮೇಲೆ ಸರಿ-ತಪ್ಪುಗಳು ಸಹಜ. ಆದರೆ ಬಿಜೆಪಿಯು ತಪ್ಪಾತೀತದಂತೆ ವರ್ತಿಸುತ್ತಿರುವುದೇಕೆ? ನೋಟು ಅಮಾನ್ಯೀಕರಣವು ಈ ದೇಶದ ಮೇಲೆ ಆಘಾತಕಾರಿ ಪರಿಣಾಮಗಳನ್ನು ಬೀರಿತು. ಇದರಿಂದಾಗಿ ಅಸಂಖ್ಯ ಮಂದಿ ಉದ್ಯೋಗ ಕಳಕೊಂಡರು. ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿದುವು. ನೂರಕ್ಕಿಂತಲೂ ಅಧಿಕ ಮಂದಿ ಬ್ಯಾಂಕ್‍ಗಳೆದುರು ಸಾವಿಗೀಡಾದರು. ಇಷ್ಟೆಲ್ಲ ಆಗಿಯೂ ಆ ಇಡೀ ಪ್ರಕ್ರಿಯೆಯಿಂದ ದೇಶಕ್ಕಾದ ಲಾಭ ಏನೇನೂ ಇಲ್ಲ ಎಂಬುದನ್ನು ಸ್ವತಃ ಆರ್‍ಬಿಐಯೇ ಅಂಕಿ-ಅಂಶವನ್ನು ಮುಂದಿಟ್ಟುಕೊಂಡು ಸ್ಪಷ್ಟಪಡಿಸಿತು. ಆದರೂ ಬಿಜೆಪಿ ಈ ದೇಶದ ಜನರಲ್ಲಿ ಕ್ಷಮೆ ಯಾಚಿಸುವ ಸೌಜನ್ಯವನ್ನೇ ತೋರಲಿಲ್ಲ. ಅದರ ಬದಲು ನೋಟು ಅಮಾನ್ಯಕ್ಕೆ ಒಂದು ವರ್ಷ ತುಂಬಿದುದನ್ನು ‘ಭ್ರಷ್ಟಾಚಾರ ವಿರೋಧಿ ದಿನ’ ವಾಗಿ ಆಚರಿಸಿತು. ನಿಜಕ್ಕೂ ನೋಟು ಅಮಾನ್ಯದಿಂದ ಭ್ರಷ್ಟಾಚಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆಯೇ? ಬೀರಿದ್ದರೆ ಅದರ ವಿವರಗಳೇನು? ನೋಟು ಅಮಾನ್ಯಕ್ಕಿಂತ ಮೊದಲು ಮತ್ತು ಆ ಬಳಿಕದ ಭ್ರಷ್ಟಾಚಾರಗಳಲ್ಲಿ ಆಗಿರುವ ಬದಲಾವಣೆಗಳೇನು.. ಇಂಥ ಯಾವ ಪ್ರಶ್ನೆಗಳಿಗೂ ಉತ್ತರವನ್ನು ನೀಡದೇ ನವೆಂಬರ್ 8ರಂದು ಸಂಭ್ರಮಿಸುವುದೆಂದರೆ, ಅದನ್ನು ಏನೆಂದು ಕರೆಯಬೇಕು?
     ಬಹುಶಃ, ಭಾರತೀಯ ರಾಜಕಾರಣಿಗಳ ಪಾಲಿಗೆ ಅದರಲ್ಲೂ ಬಿಜೆಪಿಯ ಮಟ್ಟಿಗೆ ಚಿಠಿoಟogಥಿ (ಕ್ಷಮೆಯಾಚನೆ) ಎಂಬುದು ಅನ್ಯ ಪದವಾಗಿದೆ. ಅಂದಹಾಗೆ, ಒಂದು ಪಕ್ಷ ಎಷ್ಟು ಪ್ರಾಮಾಣಿಕ ಎಂಬುದನ್ನು ಆ ಪಕ್ಷ ತನ್ನದೇ ತಪ್ಪುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಆಧಾರದ ಮೇಲೆ ಅಳೆಯಬಹುದು. ತಪ್ಪನ್ನು ತಪ್ಪು ಎಂದು ಒಪ್ಪದ ಪಕ್ಷ ಜನಸ್ನೇಹಿಯಾಗುವುದಕ್ಕೆ ಸಾಧ್ಯವಿಲ್ಲ. ಉತ್ತರ ಪ್ರದೇಶದ ಗೋರಖ್‍ಪುರದ ಸರಕಾರಿ ಆಸ್ಪತ್ರೆಯಲ್ಲಿ 70ಕ್ಕಿಂತ ಅಧಿಕ ಮಕ್ಕಳು ಎರಡು ದಿನಗಳೊಳಗೆ ಸಾವಿಗೀಡಾದಾಗ, “ಭಾರತದಂತಹ ದೊಡ್ಡ ದೇಶದಲ್ಲಿ ಇವೆಲ್ಲ ಸಾಮಾನ್ಯ” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‍ಷಾ ಹೇಳಿದ್ದರು.
      ಸಮರ್ಥನೆಯೊಂದೇ ರಾಜಕೀಯ ಅಲ್ಲ. ಪಶ್ಚಾತ್ತಾಪ ಮತ್ತು ಕ್ಷಮಾಯಾಚನೆಯೂ ರಾಜಕೀಯವೇ. ಇದನ್ನು ತಿರಸ್ಕರಿಸುವ ಪಕ್ಷ ಖಂಡಿತ ಜನವಿರೋಧಿ.


ಕ್ಷಮಿಸಿ ಬಿಡು ನನ್ನ..



1. ಮಳೆ
2. ಸಂಪತ್ತಿನಲ್ಲಿ ಹೆಚ್ಚಳ
3. ಸಂತಾನ ವೃದ್ಧಿ4. ಉದ್ಯಾನ
5. ಕಾಲುವೆ
   ಈ ಐದೂ ಸಂಗತಿಗಳು ಮನುಷ್ಯನ ಪಾಲಿಗೆ ಇಷ್ಟವಾದವುಗಳು. ಈ ಐದನ್ನೂ ಮನುಷ್ಯ ಬಯಸುತ್ತಾನೆ. ಆಧುನಿಕ ಜಗತ್ತಿನ ಆವಿಷ್ಕಾರಗಳಲ್ಲಿ ಅತೀ ಹೆಚ್ಚು ಜನಪ್ರಿಯವಾಗಿರುವ ವಾತಾಯನ (AC) ಇದ್ದೂ ಬೆವರುವ ಮನುಷ್ಯನನ್ನು ಸದಾ ತಂಪಾಗಿಡುವುದು ಮಳೆ. ಮಳೆಯು ನೀರಿನ ಒರತೆಯನ್ನಷ್ಟೇ ಚಿಮ್ಮಿಸುವುದಲ್ಲ. ಒಟ್ಟು ಜಗತ್ತನ್ನೇ ತಂಪಾಗಿಸುತ್ತದೆ. ತಂಪು ಅನ್ನುವುದು ಮನುಷ್ಯ ಪ್ರಕೃತಿ. ಬಿಸಿ ಅದರ ವಿರೋಧಿ. ಎಲ್ಲಿ ಬಿಸಿ ಇರುತ್ತೋ ಅಲ್ಲಿ ಭಯ, ಹಾಹಾಕಾರ, ಗುಂಪು ಗುಳೇ ಇರುತ್ತದೆ. ಕಾಡಿಗೆ ಬೆಂಕಿ ಹತ್ತಿಕೊಂಡಿತೆಂದರೆ ಪ್ರಾಣಿಗಳು ಭಯಭೀತವಾಗುತ್ತವೆ. ನಾಡೂ ಚಿಂತಿತವಾಗುತ್ತದೆ. ಈ ಬಿಸಿ ವ್ಯಕ್ತಿಯಲ್ಲಿ ಕಾಣಿಸಿಕೊಂಡರೆ, ಕೆಲವೊಮ್ಮೆ ಆತ ನಿಯಂತ್ರಣ ಕಳಕೊಳ್ಳುತ್ತಾನೆ. ಆಡಬಾರದ ಮಾತುಗಳನ್ನು ಆಡುತ್ತಾನೆ. ಹಲ್ಲೆ-ಹತ್ಯೆಗಳ ವರೆಗೆ ಈ ಬಿಸಿ ಕೊಂಡೊಯ್ಯುವುದೂ ಇದೆ. ಇದಕ್ಕೆ ವಿರುದ್ಧವಾಗಿ ತಂಪನ್ನು ಕಲ್ಪಿಸಿಕೊಳ್ಳಿ. ಧಾರಾಕಾರವಾಗಿ ಸುರಿಯುವ ಮಳೆಯ ಜೂಂ ನಾದಕ್ಕೆ ನಿಮ್ಮನ್ನು ಒಡ್ಡಿಕೊಳ್ಳಿ. ಅದು ತೃಪ್ತಿ, ಖುಷಿ, ನೆಮ್ಮದಿಯ ಭಾವವನ್ನು ಚಿಮ್ಮಿಸುತ್ತದೆ. ಸಾಮಾನ್ಯವಾಗಿ ಜನರು ವಿಹಾರಕ್ಕೆ ಆಯ್ಕೆ ಮಾಡಿಕೊಳ್ಳುವ ಸ್ಥಳಗಳೆಲ್ಲ ಯಾಕೆ ತಂಪಿನದ್ದಾಗಿರುತ್ತವೆ? ನವ ವಧೂ-ವರರು ಯಾಕೆ ಕಠಿಣ ಬಿಸಿ ಇರುವ ಪ್ರದೇಶಗಳನ್ನು ಹನಿಮೂನ್‍ಗೆ ಆಯ್ಕೆ ಮಾಡಿಕೊಳ್ಳುವುದಿಲ್ಲ? ಸಂಜೆಯ ಸಮಯದಲ್ಲಿ ಸಮುದ್ರ ತೀರಕ್ಕೋ ಪಾರ್ಕಿಗೋ ನಾವು ಭೇಟಿ ಕೊಡುವುದೇಕೆ? ಅದು ಮನುಷ್ಯನನ್ನು ತಂಪಾಗಿಡುತ್ತದೆ. ರಮ್ಯ ಭಾವನೆಗಳನ್ನು ಅದು ಸೃಷ್ಟಿ ಮಾಡುತ್ತದೆ. ಅತೀ ಹೆಚ್ಚು ಪ್ರೇಮ ಕಾವ್ಯಗಳು ಹುಟ್ಟು ಪಡೆದಿರುವುದೇ ತಂಪಾದ ತಾಣಗಳಲ್ಲಿ. ಮಳೆ ಅದರ ನಿರ್ಮಾತೃ. ಧಾರಾಕಾರ ಸುರಿಯುವ ಮಳೆಯ ನಾದಕ್ಕೆ ಮನುಷ್ಯ ಎಲ್ಲವನ್ನೂ ಮರೆಯುತ್ತಾನೆ. ಅದು ಮಣ್ಣನ್ನಷ್ಟೇ ಜವುಗು ಗೊಳಿಸುವುದಲ್ಲ, ಮನುಷ್ಯರ ಹೃದಯಗಳನ್ನೂ ಹದ ಮಾಡುತ್ತದೆ. ವಿಶ್ವಾಸ (ಈಮಾನ್) ಅಂದರೆ ಏನು ಎಂಬ ಅಲೀ(ರ) ಅವರ ಪ್ರಶ್ನೆಗೆ ಪ್ರವಾದಿ ಮುಹಮ್ಮದ್(ಸ)ರು ಕೊಟ್ಟ ಉತ್ತರ ಅತ್ಯಂತ ಕೌತುಕಪೂರ್ಣವಾದುದು. ‘ವಿಶ್ವಾಸ ಎಂಬುದು ನಾಲ್ಕು ಕಂಬಗಳಿಂದ ಎತ್ತರಿಸಿ ನಿಲ್ಲಿಸಲಾದ ಒಂದು ಕಟ್ಟಡ. ಆ ಕಂಬಗಳಲ್ಲಿ ಸಹನೆ ಎಂಬ ಕಂಬವೂ ಒಂದು’ ಎಂದವರು ಹೇಳುತ್ತಾರೆ. ತಾಳ್ಮೆ ವಹಿಸುವುದು ಪ್ರತೀಕಾರ ಎಸಗುವುದಕ್ಕಿಂತ ಉತ್ತಮ (16:126) ಎಂದು ಒಂದು ಕಡೆ ಹೇಳುವ ಪವಿತ್ರ ಕುರ್‍ಆನ್, ಇನ್ನೊಂದು ಕಡೆ, ಅಸಭ್ಯ ಮಾತನ್ನಾಡುವವರಿಗೆ ಪ್ರತಿಯಾಗಿ ಸಹನೆ ವಹಿಸಿರಿ (73:10) ಎಂದೂ ಹೇಳುತ್ತದೆ. ಅಲ್ಲದೇ ಈ ಕುರಿತಂತೆ ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಬದುಕಿನಲ್ಲಿ ಧಾರಾಳ ಉದಾಹರಣೆಗಳೂ ಇವೆ. ಪ್ರವಾದಿ ಮುಹಮ್ಮದ್(ಸ)ರಂತೂ ಈ ಸಹನೆಯ ಮಾಡೆಲ್ ಆಗಿ ಬದುಕಿದ್ದಾರೆ.
2. ಯಾರೂ ಕೂಡಾ ಬಡವರಾಗಿಯೇ ಉಳಿಯಬೇಕೆಂದು ಪ್ರಾರ್ಥಿಸುವುದಿಲ್ಲ. ಒಂದು ರೀತಿಯಲ್ಲಿ, ಮನುಷ್ಯ ಪ್ರತಿದಿನವೂ ತನ್ನ ಸಂಪತ್ತಿನ ವೃದ್ಧಿಗಾಗಿ ಪ್ರಯತ್ನಪಡುತ್ತಾನೆ. ಕೂಲಿ ಕಾರ್ಮಿಕನೋರ್ವ ಅಷ್ಟಿಷ್ಟು ಕೂಡಿಡುತ್ತಾ ಒಂದು ದಿನ ಆ ಮೊತ್ತ ಅಧಿಕವಾಗುವುದನ್ನು ನಿರೀಕ್ಷಿಸುತ್ತಾನೆ. ಬಡತನ ಮುಕ್ತ ಜೀವನದ ಕನಸು ಹೆಣೆಯುತ್ತಾನೆ. ಪ್ರತಿದಿನ ಒಂದು ಸಾವಿರ ರೂಪಾಯಿ ವರಮಾನವಿರುವ ವ್ಯಾಪಾರಿಯೋರ್ವ ಅಲ್ಲಿಗೇ ತನ್ನನ್ನು ನಿಯಂತ್ರಿಸಿಕೊಳ್ಳುವುದಿಲ್ಲ. ಒಂದು ಸಾವಿರವನ್ನು ಒಂದೂವರೆಯೋ ಎರಡೋ ಆಗಿ ಹೆಚ್ಚಿಸಲು ಯೋಜನೆ ಹಾಕಿಕೊಳ್ಳುತ್ತಾನೆ. ವ್ಯಾಪಾರದ ಇನ್ನೊಂದು ಶಾಖೆ ಆರಂಭಿಸುವ ಬಗ್ಗೆ ಚಿಂತಿಸುತ್ತಾನೆ. ಒಂದು ವೇಳೆ ಅದು ಕೈಗೂಡಿದರೂ ಪ್ರಯತ್ನ ಅಲ್ಲಿಗೇ ನಿಲ್ಲುವುದಿಲ್ಲ. ಇನ್ನೊಂದು ಶಾಖೆಯನ್ನು ತೆರೆಯುವ ಪ್ರಯತ್ನಗಳು ನಡೆಯುತ್ತವೆ. ಶ್ರೀಮಂತಿಕೆ, ಸಂಪತ್ತು, ಬಡತನರಹಿತ ಬದುಕು.. ಇವೆಲ್ಲ ಮಾನವ ಸಹಜ ಬಯಕೆಗಳು. ಆದ್ದರಿಂದಲೇ ಜಗತ್ತಿನಲ್ಲಿ ಸರ್ವಸಂಗ ಪರಿತ್ಯಾಗಿಗಳ ಸಂಖ್ಯೆ ಬಹಳ ಬಹಳ ಕಡಿಮೆ. ಧರ್ಮ ಯಾವುದೇ ಆಗಿದ್ದರೂ ಸಂಪತ್ತನ್ನು ತಿರಸ್ಕಾರಾರ್ಹವಾಗಿಯೋ ವಜ್ರ್ಯವಾಗಿಯೋ ಕಾಣು ವವರು ಯಾರೂ ಇಲ್ಲ. ಹಾಗಂತ, ಸಂಪತ್ತನ್ನು ಗಳಿಸುವ ವಿಷಯದಲ್ಲಿ ಭಿನ್ನ ಅಭಿಪ್ರಾಯಗಳಿರಬಹುದು. ಬಡ್ಡಿಯ ಮೂಲಕ ಸಂಪತ್ತನ್ನು ಹೆಚ್ಚುಗೊಳಿಸುವ ಮಂದಿ ಇರಬಹುದು. ಜೂಜಿನಲ್ಲಿ ಹಣ ತೊಡಗಿಸಿ ಹಣ ವೃದ್ಧಿಸುವವರು ಇರಬಹುದು. ಮದ್ಯ, ಅಕ್ರಮ ವಹಿವಾಟುಗಳಲ್ಲಿ ಹಣವನ್ನು ತೊಡಗಿಸಿ ಸಂಪತ್ತು ವೃದ್ಧಿಸುವುದಕ್ಕೆ ಪ್ರಯತ್ನಿಸುವವರೂ ಇರಬಹುದು. ಮತ್ತು ಇವೆಲ್ಲವನ್ನೂ ತಪ್ಪು ಮಾರ್ಗ ಎಂದು ಖಚಿತವಾಗಿ ನಂಬುತ್ತಲೇ ಸರಿಮಾರ್ಗಗಳಲ್ಲಿ ಸಂಪತ್ತು ಹೆಚ್ಚುಗೊಳಿಸುವ ಪ್ರಯತ್ನದಲ್ಲಿ ತೊಡಗಿರುವವರೂ ಇರಬಹುದು.
3. ಸಂತಾನವನ್ನು ಬಯಸದ ದಂಪತಿಗಳು ತೀರಾ ತೀರಾ ವಿರಳ. ಸಂತಾನ ಭಾಗ್ಯ ಅನ್ನುವ ಪದಪುಂಜವೇ ಇದೆ. ಮಕ್ಕಳಾಗದವರಿಗೆ ಮಕ್ಕಳಾಗಿಸುವ ವಿವಿಧ ಚಿಕಿತ್ಸಾ ಪದ್ಧತಿಗಳು ಮತ್ತು ವೈದ್ಯರ ವಿವರಗಳು ಮಾಧ್ಯಮಗಳಲ್ಲಂತೂ ಜಾಹೀರಾತುಗಳಾಗಿ ಪ್ರಕಟವಾಗುತ್ತಲೇ ಇರುತ್ತವೆ. ಮಕ್ಕಳಾಗದ ದಂಪತಿಗಳು ಇನ್ನಾರದೋ ಮಗುವನ್ನು ದತ್ತುಪಡಕೊಳ್ಳುತ್ತಾರೆ. ಚಿತ್ರರಂಗದಲ್ಲಂತೂ ಈ ಕ್ರಮ ಇನ್ನಷ್ಟು ವಿಪರೀತ ರೀತಿಯಲ್ಲಿ ಚಾಲ್ತಿಯಲ್ಲಿದೆ. ಗರ್ಭ ಧರಿಸಲು ಇಷ್ಟಪಡದ ನಟಿಯು ಮಕ್ಕಳನ್ನು ದತ್ತುಪಡೆದು ಸಾಕುವುದಿದೆ. ಸರಕಾರಗಳೂ ಸಂತಾನ ಸಹಿತ ಕುಟುಂಬ ಜೀವನದ ಪರವಾಗಿದೆ. ಸಂತಾನ ನಿಯಂತ್ರಣದ ಕುರಿತಂತೆ ಮಾತುಗಳೇನೇ ಇರಲಿ, ಸಂತಾನವೇ ಇರಬಾರದ ಸ್ಥಿತಿಯೊಂದನ್ನು ಯಾರೂ ಪ್ರಸ್ತಾಪಿಸುವು ದಿಲ್ಲ. ಒಂದು ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಎರಡಿರಬೇಕೋ ಮೂರಿರಬೇಕೋ.. ಎಂದು ಮುಂತಾಗಿ ಚರ್ಚೆಯಾಗುತ್ತದೆಯೇ ಹೊರತು ಒಂದು ಬೇಕೋ ಬೇಡವೋ ಎಂಬ ಚರ್ಚೆಯನ್ನು ಯಾವ ಸರಕಾರವೂ ಆರಂಭಿಸಿಲ್ಲ. ಯಾವ ಸಮಾಜವೂ ಆ ಬಗೆಯ ಚರ್ಚೆಯನ್ನು ಮಾನ್ಯ ಮಾಡುತ್ತಿಲ್ಲ. ಒಂದು ಸಮಾಜವು ಸಂತಾನರಹಿತ ಸ್ಥಿತಿಯೆಡೆಗೆ ತಲುಪುವುದೆಂದರೆ, ಚೈತನ್ಯರಹಿತವಾಗುವುದು ಎಂದರ್ಥ. ಒಂದು ಪ್ರದೇಶದ ಅಭಿವೃದ್ಧಿ ಆ ಪ್ರದೇಶ ದಲ್ಲಿರುವ ಜನಸಂಪತ್ತನ್ನು ಆಧರಿಸಿರುತ್ತದೆ. ಯುವ ಸಮೂಹ ಅಭಿವೃದ್ಧಿಯ ಸಂಕೇತ. ವೃದ್ಧರ ಸಂಖ್ಯೆ ಅಧಿಕಗೊಳ್ಳುವುದೆಂದರೆ, ಅಭಿವೃದ್ಧಿಯ ನಡೆ ಸಾವಿನೆಡೆಗೆ ಸಾಗುತ್ತಿದೆ ಎಂದರ್ಥ. ಆದ್ದರಿಂದಲೇ ಸಿದ್ಧಾಂತ, ವಿಚಾರಧಾರೆಗಳು ಏನೇ ಆಗಿರಬಹುದು, ಆದರೆ ಮಕ್ಕಳನ್ನು ಹೊಂದುವ ವಿಷಯದಲ್ಲಿ ಎಲ್ಲ ಸಿದ್ಧಾಂತಗಳ ನಿಲುವೂ ಬಹುತೇಕ ಒಂದೇ. ಪುರಾತನ ಕಾಲದ ಈಜಿಪ್ಟ್ ನಲ್ಲಿ ರಾಜ ಫರೋವನು ತನ್ನ ಸಾಮ್ರಾಜ್ಯದಲ್ಲಿರುವ ಇಸ್ರಾಈಲ್ ವಂಶದಲ್ಲಿ ಹುಟ್ಟುವ ಪ್ರತಿ ಗಂಡು ಮಗುವನ್ನೂ ಕೊಲ್ಲುವ ಆದೇಶ ಹೊರಡಿಸಿದುದನ್ನು ಪವಿತ್ರ ಕುರ್‍ಆನ್ ಉಲ್ಲೇಖಿಸಿದೆ ಮತ್ತು ಆ ಆದೇಶದ ಹೊರತಾಗಿಯೂ ಇಸ್ರಾಈಲ್ ವಂಶದ ಮಗುವೊಂದು ಫರೋವನ ರಾಜಭವನದಲ್ಲೇ ಬೆಳೆದುದನ್ನು ಮತ್ತು ಆ ಮಗುವೇ ಆ ಬಳಿಕ ಇಸ್ರಾಈಲ್ ವಂಶದ ವಿಮೋಚನೆಯ ನೇತೃತ್ವ ವಹಿಸಿದುದನ್ನೂ ಸವಿಸ್ತಾರವಾಗಿ ಹೇಳಿದೆ. ಪುರಾತನ ಕಾಲದಿಂದ ಹಿಡಿದು ಈ ಆಧುನಿಕ ಕಾಲದ ವರೆಗೆ ಸಂತಾನವೆಂಬುದು ಮೌಢ್ಯ, ಭಾಗ್ಯ, ದೌರ್ಭಾಗ್ಯ, ಅಪಾಯಗಳ ಸುರುಳಿ ಸುತ್ತುತ್ತಾ ಬಂದಿವೆ ಮತ್ತು ಬರುತ್ತಿವೆ.
ಇನ್ನು, ಉದ್ಯಾನ ಮತ್ತು ಕಾಲುವೆ ಇವೆರಡೂ ಪ್ರತ್ಯೇಕ ವಿಷಯ ಸೂಚಿಗಳಾಗಿದ್ದರೂ ಗುಣದಲ್ಲಿ ಬಹುತೇಕ ಒಂದೇ. ಮಾತ್ರವಲ್ಲ, ಕ್ರಮಸಂಖ್ಯೆ 1ರ ಭಾವನೆಯನ್ನೇ ಇವೂ ಚಿಮ್ಮಿಸುತ್ತವೆ. ಕಾಲುವೆ ಮತ್ತು ಉದ್ಯಾನಗಳು ಮನುಷ್ಯನ ಕಣ್ಣಿಗೆ ತಂಪು ಮತ್ತು ಮನಸ್ಸಿಗೆ ಮುದ ನೀಡುವವುಗಳು. ಮಳೆಯ ಗುಣವೂ ಇದುವೇ. ಪವಿತ್ರ ಕುರ್‍ಆನ್ ಸ್ವರ್ಗಕ್ಕೆ ಸಂಬಂಧಿಸಿ ವಿವಿಧೆಡೆ (15:45, 44:52, 47:15, 54:54) ಕಾಲುವೆ ಮತ್ತು ಉದ್ಯಾನಗಳ ಬಗ್ಗೆ ಪ್ರಸ್ತಾಪಿಸಿದೆ. ಅಷ್ಟಕ್ಕೂ, ಇವೆಲ್ಲವನ್ನೂ ಇಲ್ಲಿ ಪ್ರಸ್ತಾಪಿಸುವುದಕ್ಕೆ ಒಂದು ಕಾರಣ ಇದೆ. ಪವಿತ್ರ ಕುರ್‍ಆನಿನ 71ನೇ ಅಧ್ಯಾಯವಾದ ನೂಹ್‍ನ 10ರಿಂದ 12ರ ವರೆಗಿನ ವಚನಗಳು ಈ ಮೇಲಿನ  ಐದೂ ವಿಷಯಗಳ ಕುರಿತಂತೆ ಅತ್ಯಂತ ವಿಶಿಷ್ಟವಾದ ಮತ್ತು ಗಹನ ಚಿಂತನೆಗೆ ದೂಡಬಹುದಾದ ಸಂಗತಿಯೊಂದನ್ನು ಪ್ರಸ್ತಾಪಿಸುತ್ತದೆ. ಅದು ಹೀಗಿದೆ:
   ‘ನಿಮ್ಮ ಪ್ರಭುವಿನೊಡನೆ ಕ್ಪಮಾಯಾಚನೆ ಮಾಡಿರಿ. ಖಂಡಿತ ವಾಗಿಯೂ ಅವನು ಮಹಾ ಕ್ಷಮಾಶೀಲನಾಗಿದ್ದಾನೆ. ಅವನು ನಿಮ್ಮ ಮೇಲೆ ಆಕಾಶದಿಂದ ಮಳೆಯನ್ನು ಧಾರಾಳವಾಗಿ ಸುರಿಸುವನು. ನಿಮಗೆ ಸೊತ್ತು-ಸಂತಾನಗಳನ್ನು ದಯಪಾಲಿಸುವನು. ನಿಮಗಾಗಿ ಉದ್ಯಾನಗಳನ್ನು ಸೃಷ್ಟಿಸುವನು ಮತ್ತು ನಿಮಗಾಗಿ ಕಾಲುವೆಗಳನ್ನು ಹರಿಸುವನು..’
       ಇಲ್ಲಿಯ ವಚನಗಳ ವಿಶೇಷತೆ ಏನೆಂದರೆ, ದೇವನೊಂದಿಗೆ ಕ್ಷಮೆ ಯಾಚಿಸುವವರಿಗೆ ಕೊಡುಗೆಯಾಗಿ 5 ವಸ್ತುಗಳನ್ನು ನೀಡ ಲಾಗಿದೆ. 1. ಮಳೆ 2. ಸಂಪತ್ತು 3. ಸಂತಾನ 4. ಉದ್ಯಾನ 5. ಕಾಲುವೆ. ಕ್ಷಮಿಸಿ ಬಿಡು ಎಂದು ಮನಸಾರೆ ಹೇಳುವುದರಿಂದ ವ್ಯಕ್ತಿ ನಿರಾಳವಾಗುತ್ತಾನೆ. ಒತ್ತಡ ರಹಿತ ಸ್ಥಿತಿಗೆ ತಲುಪುತ್ತಾನೆ. ಇದು ಆತನ ಪಾಲಿಗೆ ಯೋಜನೆಗಳ ಜಾರಿಯನ್ನು ಸುಲಭ ಗೊಳಿಸುತ್ತದೆ. ಆತನಲ್ಲಿ ಅದು ಏಕಾಗ್ರತೆಯನ್ನು ಉಂಟು ಮಾಡುತ್ತದೆ. ನಿಜವಾಗಿ, ಮನುಷ್ಯನ ಬೇಡಿಕೆಗಳಲ್ಲಿ ಪ್ರಾಮುಖ್ಯ ಪಡೆದಿರುವುದೇ ಈ ಐದು ಸಂಗತಿಗಳು. ಇವುಗಳಿಗಾಗಿಯೇ ಮನುಷ್ಯ ಪ್ರತಿನಿತ್ಯ ಶ್ರಮ ಪಡುತ್ತಾನೆ. ಚಿಂತಿಸುತ್ತಾನೆ. ಹೋರಾಡುತ್ತಾನೆ. ಒಂದು ವೇಳೆ, ದೇವನೊಂದಿಗೆ ಕ್ಷಮೆ ಯಾಚಿಸುವುದರಿಂದ ಈ ಎಲ್ಲವೂ ಲಭ್ಯವಾಗುತ್ತದೆ ಎಂಬುದು ಮನುಷ್ಯನಿಗೆ ಮನವರಿಕೆ ಯಾದರೆ ಅದರಿಂದ ಲಭ್ಯವಾಗಬಹುದಾದ ತೃಪ್ತಿ ಯಾವ ರೀತಿ ಯಿರಬಹುದು? ಅಷ್ಟಕ್ಕೂ, ಕ್ಷಮಾಯಾಚನೆಗೂ ಸಂಪತ್ತಿನ ವೃದ್ಧಿಗೂ ನಡುವೆ ಸಂಬಂಧ ಇದೆ ಎಂದು ವಿಶ್ವಾಸಿಗೆ ಗೊತ್ತಿದೆಯೇ? ಕ್ಷಮಾಯಾಚನೆಗೂ ಮಳೆಗೂ ನಡುವೆ ಸಂಬಂಧ ಇದೆ ಎಂಬುದನ್ನು ವಿಶ್ವಾಸಿ ತಿಳಿದುಕೊಂಡಿರುವನೇ/ಳೇ? ದೇವನೊಂದಿಗಿನ ಕ್ಷಮಾಯಾಚನೆಯಿಂದ ಸಂತಾನ ಭಾಗ್ಯವಾಗುವುದೆಂಬುದನ್ನು ವಿಶ್ವಾಸಿಗಳು ತಿಳಿದುಕೊಂಡಿದ್ದಾರೆಯೇ? ಪ್ರವಾದಿ ಮುಹಮ್ಮದ್(ಸ)ರು ಪ್ರತಿದಿನ 100ರಷ್ಟು ಬಾರಿ ದೇವನೊಂದಿಗೆ ಕ್ಷಮೆ ಯಾಚಿಸುತ್ತಿದ್ದರು ಎಂಬುದನ್ನು ಅಕ್ಷರಾರ್ಥಕ್ಕಿಂತ ಹೊರಗೆ ತಂದು ನೋಡುವ ವಿಶ್ವಾಸಿಗಳು ನಮ್ಮಲ್ಲಿ ಎಷ್ಟು ಮಂದಿಯಿದ್ದಾರೆ? ಒಂದು ಕ್ಷಮಾಯಾಚನೆಯು ಓರ್ವ ವಿಶ್ವಾಸಿಯ ಪಾಲಿಗೆ 5 ಕೊಡುಗೆಗಳನ್ನು ಪಡೆದುಕೊಳ್ಳುವ ಸಂದರ್ಭವಾಗಿರುತ್ತದೆ ಎಂಬುದು ಎಷ್ಟು ಅದ್ಭುತ ಮತ್ತು ರೋಮಾಂಚನಕಾರಿ?
      ಖ್ಯಾತ ವಿದ್ವಾಂಸ ಹಸನ್ ಬಸರೀಯವರ ಬಳಿ ಬಂದು ಜನರು ಸಮಸ್ಯೆಗಳನ್ನು ಹೇಳಿಕೊಳ್ಳತೊಡಗಿದರು. ಓರ್ವ ಬರ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡು ಪರಿಹಾರ ಕೇಳಿದ. ಅವರು, ‘ದೇವನಲ್ಲಿ ಕ್ಷಮಾಯಾಚನೆ ನಡೆಸು’ ಎಂದುತ್ತರವಿತ್ತರು. ಇನ್ನೋರ್ವ, ಬಡತನದ ಬಗ್ಗೆ ದೂರಿಕೊಂಡ. ಆತನಿಗೂ ‘ದೇವನಲ್ಲಿ ಕ್ಷಮಾ ಯಾಚನೆಯನ್ನು ನಡೆಸು’ ಎಂಬ ಉತ್ತರವನ್ನೇ ಕೊಟ್ಟರು. ಇನ್ನೋರ್ವ ಸಂತಾನವಿಲ್ಲದ ಬಗ್ಗೆ, ಮತ್ತೋರ್ವ, ಬೆಳೆನಾಶದ ಬಗ್ಗೆ.. ಹೀಗೆ ಬೇರೆ ದೂರುಗಳು ಅವರ ಮುಂದೆ ಬಂದುವು. ಅವರು ಎಲ್ಲದಕ್ಕೂ ‘ದೇವನೊಂದಿಗೆ ಕ್ಷಮಾಯಾಚನೆ ಮಾಡಿರಿ’ ಎಂಬ ಏಕ ಉತ್ತರವನ್ನೇ ಕೊಟ್ಟರು. ದೂರುದಾರರಲ್ಲಿ ಅಸಮಾಧಾನ ಕಾಣಿಸಿತು. ಅವರು ಹಸನ್ ಬಸರೀ ಅವರ ಮುಂದೆ ಅದನ್ನು ವ್ಯಕ್ತಪಡಿಸಿದರು. ಎಲ್ಲ ದೂರುಗಳಿಗೂ ಏಕ ಉತ್ತರವನ್ನೇ ಕೊಡಲು ಕಾರಣವೇನು ಎಂದವರು ಪ್ರಶ್ನಿಸಿದರು. ಆಗ ಹಸನ್ ಬಸರೀಯವರು ಈ ಮೇಲಿನ (71:10-12) ವಚನವನ್ನು ಪಠಿಸಿದರು.
    ಇದರಾಚೆಗೆ ಏನೂ ಹೇಳಬೇಕಾಗಿಲ್ಲ.





Wednesday, December 13, 2017

ಹಾದಿಯ, ಪದ್ಮಾವತಿ ಮತ್ತು ಕೆಲವು ಪ್ರಶ್ನೆಗಳು


ಪದ್ಮಾವತಿ
ಹಾದಿಯ
ಇಬ್ಬರೂ ಹೆಣ್ಮಕ್ಕಳೇ. ಒಂದು- ಐತಿಹಾಸಿಕವಾಗಿ ಪ್ರಬಲ ದಾಖಲೆಗಳಿಲ್ಲದ ಕಾಲ್ಪನಿಕ ಪಾತ್ರವಾದರೆ, ಇನ್ನೊಂದು- ಜೀವಂತ ಪಾತ್ರ. ಈ ಎರಡು ವ್ಯಕ್ತಿತ್ವಗಳ ನಡುವೆ ಸುಮಾರು ಏಳೂಕಾಲು ಶತಮಾನಗಳ ಅಂತರ ಇದೆ. ನಿಜವಾಗಿ, ಪದ್ಮಾವತಿ ಅಥವಾ ಪದ್ಮಿನಿ ಎಂಬೋರ್ವ ರಾಣಿ ಇದ್ದಳೋ ಎಂಬ ಬಗ್ಗೆ ಇತಿಹಾಸ ಕಾರರಲ್ಲಿ ಗೊಂದಲ ಇದೆ. 1540ರಲ್ಲಿ ಸೂಫಿ ಕವಿ ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದ ಮೂಲಕ ಮೊದಲ ಬಾರಿ ಪದ್ಮಿನಿ ಮುನ್ನೆಲೆಗೆ ಬರುತ್ತಾಳೆ. ಕಾವ್ಯವೆಂಬುದು ರೂಪಕ, ಸಂಕೇತ, ಕಲ್ಪಿತ ಪ್ರೇಮ, ವಿರಹ, ಸುಖಗಳ ಗುಚ್ಚವೆಂಬುದನ್ನು ನಮ್ಮೊಳಗೆ ನಾವು ಸ್ಪಷ್ಟಪಡಿಸಿಕೊಂಡರೆ, ಪದ್ಮಿನಿಯನ್ನು ಅರ್ಥೈಸಿಕೊಳ್ಳು ವುದು ಕಷ್ಟವೇನಲ್ಲ. 1303ರಲ್ಲಿ ಚಿತ್ತೂರಿನ ರಾಜ ರಾಣಾ ಜಯಸಿಂಹನ ಮೇಲೆ ಅಲ್ಲಾವುದ್ದೀನ್ ಖಿಲ್ಜಿ ದಾಳಿ ಮಾಡುತ್ತಾನೆ. ಸೋಲಿಸುತ್ತಾನೆ. 1316ರಲ್ಲಿ ಖಿಲ್ಜಿ ಸಾವಿಗೀಡಾಗುತ್ತಾನೆ. ಐತಿಹಾಸಿಕ ದಾಖಲೆಗಳಲ್ಲಿ ಈ ಇಬ್ಬರ ಹೆಸರಿದೆಯೇ ಹೊರತು ಎಲ್ಲೂ ಪದ್ಮಿನಿ ಅಥವಾ ಪದ್ಮಾವತಿಯ ಹೆಸರಿಲ್ಲ. ಆದರೆ ಕವಿ ಜಾಯಿಸಿ ಈ ಇಡೀ ಘಟನೆಗೆ ರಮ್ಯ ಹಿನ್ನೆಲೆಯೊಂದನ್ನು ಒದಗಿಸುತ್ತಾನೆ. `ಖಿಲ್ಜಿಗೆ ರಾಣಿ ಪದ್ಮಾವತಿಯ ಮೇಲೆ ಮೋಹ ಉಂಟಾಗುತ್ತದೆ, ಆ ಕಾರಣದಿಂದಲೇ ಯುದ್ಧ ಏರ್ಪಡುತ್ತದೆ, ಖಿಲ್ಜಿಯ ವಶವಾಗುವುದನ್ನು ತಪ್ಪಿಸುವುದಕ್ಕಾಗಿ ರಾಣಿ ಪದ್ಮಿನಿ ಇತರ 16 ಸಾವಿರ ಮಹಿಳೆಯರೊಂದಿಗೆ ಸಾಮೂಹಿಕ ಸತಿ ಸಹಗಮನ (ಜೋಹರ್) ಮಾಡುತ್ತಾಳೆ..’ ಇದು ಜಾಯಿಸಿಯ ಕಾವ್ಯದ ಸಾರಾಂಶ. ಇನ್ನೋರ್ವಳು ಹಾದಿಯ. ಈಕೆ ದಂತಕತೆಯಲ್ಲ. ನಮ್ಮ ನಡುವಿನ ವಾಸ್ತವ. ಕೇರಳದ ನೆಡುಂಬಾಶ್ಶೇರಿ ವಿಮಾಣ ನಿಲ್ದಾಣದಲ್ಲಿ ತನ್ನನ್ನು ಸುತ್ತುವರಿದಿರುವ ಪೊಲೀಸರ ನಡುವೆ ಮಾಧ್ಯಮದ ಮಂದಿಯನ್ನು ಕೂಗಿ ಕರೆದು- ‘ನಾನು ಮುಸ್ಲಿಮ್, ನನ್ನನ್ನು ಯಾರೂ ಬಲವಂತದಿಂದ ಮತಾಂತರಿಸಿಲ್ಲ, ನನ್ನ ಗಂಡ ಶಫಿನ್ ಜಹಾನ್...’ ಎಂದುದನ್ನು ಕಳೆದ ವಾರ ಟಿವಿ ಚಾನೆಲ್‍ಗಳು ನೇರವಾಗಿ ಪ್ರಸಾರ ಮಾಡಿದುವು. ಹಾಗಂತ, ಆಕೆ ತನ್ನನ್ನು ತಾನು ಹೀಗೆ ಪ್ರಸ್ತುತಪಡಿಸುತ್ತಿರುವುದು ಇದೇ ಮೊದಲಲ್ಲ. ಆಕೆ ಕೇರಳ ಹೈಕೋರ್ಟಿನ ಮುಂದೆ ಅದನ್ನು ಈ ಮೊದಲೇ ವ್ಯಕ್ತಪಡಿಸಿದ್ದಳು. ತನ್ನ ಹೆತ್ತವರ ಮುಂದೆ 2015ರ ನವೆಂಬರ್ ನಲ್ಲೇ ಹೇಳಿಕೊಂಡಿದ್ದಳು. 2016 ಮೇ 24 ರಂದು ಕೇರಳ ಹೈಕೋರ್ಟು ನೀಡಿದ ತೀರ್ಪಿನಲ್ಲಿ ಆಕೆಯ ಇಸ್ಲಾಮ್ ಸ್ವೀಕಾರದ ಬಗ್ಗೆ ವಿವರವಾಗಿ ಹೇಳಲಾಗಿತ್ತು. ತಮಿಳುನಾಡಿನ ಸೇಲಂನಲ್ಲಿರುವ ಶಿವರಾಜ್ ಹೋಮಿಯೋಪತಿ ಮೆಡಿಕಲ್ ಕಾಲೇಜ್‍ನಲ್ಲಿ ಓದುವಲ್ಲಿಂದ ಹಿಡಿದು 2015ರಲ್ಲಿ ದೊಡ್ಡಪ್ಪ ಸತ್ತಾಗ ನಡೆದ ಪ್ರಸಂಗಗಳ ವರೆಗೆ ಅದು ಹಾದಿಯಾಳ ಬದುಕು ಸಾಗಿ ಬಂದ ದೃಶ್ಯಗಳನ್ನು ಕಟ್ಟಿಕೊಟ್ಟಿತ್ತು. ಸೇಲಂನ ಮೆಡಿಕಲ್ ಕಾಲೇಜ್‍ನ ಹತ್ತಿರದಲ್ಲೇ ಇರುವ ಬಾಡಿಗೆ ಮನೆಯೊಂದರಲ್ಲಿ ಇತರ ನಾಲ್ವರು ಹೆಣ್ಣು ಮಕ್ಕಳೊಂದಿಗೆ ಅಖಿಲ ಎಂಬ ಹಾದಿಯ ವಾಸವಾಗಿದ್ದಳು. ನಾಲ್ವರು ರೂಮ್‍ಮೇಟ್‍ಗಳಲ್ಲಿ ಫಸೀನ ಮತ್ತು ಜಸೀನ ಎಂಬಿಬ್ಬರು ಮುಸ್ಲಿಂ ವಿದ್ಯಾರ್ಥಿನಿಯರೂ ಇದ್ದರು. ಜಸೀನಳ ಮನೆಗೆ ಅಖಿಲ ಹಲವು ಬಾರಿ ಹೋಗಿದ್ದಾಳೆ. ಇವರಿಬ್ಬರ ನಡತೆ ಅಖಿಲಳನ್ನು ತೀವ್ರವಾಗಿ ಆಕರ್ಷಿಸಿದೆ. ಅವರು ಮಾಡುತ್ತಿರುವ ನಮಾಝ್‍ನಿಂದ ಅಖಿಲ ಪ್ರಭಾವಿತಳಾಗಿದ್ದಾಳೆ. ಬಹುದೇವತ್ವಕ್ಕಿಂತ ಏಕದೇವತ್ವದ ಪರಿಕಲ್ಪನೆ ಆಕೆಗೆ ಹೆಚ್ಚು ಆಪ್ತವಾಗಿ ಕಂಡಿದೆ. ಇಸ್ಲಾಮ್‍ಗೆ ಸಂಬಂಧಿಸಿದ ಪುಸ್ತಕಗಳು ಮತ್ತು ವೀಡಿಯೋಗಳನ್ನು ಆಕೆ ವೀಕ್ಷಿಸ ತೊಡಗಿದ್ದಾಳೆ. ನಮಾಝನ್ನು ಅಭ್ಯಾಸ ಮಾಡತೊಡಗಿದ್ದಾಳೆ. ಮನೆಯಲ್ಲಿ ತಾನು ನಮಾಝ್ ಮಾಡಿದುದನ್ನು ನೋಡಿ ಅಪ್ಪ ಅಶೋಕನ್ ಗದರಿಸಿಯೂ ಇದ್ದಾರೆ. ಇನ್ನೊಮ್ಮೆ ಈ ಭಂಗಿ ಪುನರಾವರ್ತಿಸಬಾರದು ಎಂದೂ ತಾಕೀತು ಮಾಡಿದ್ದಾರೆ. ಆದರೆ 2015 ನವೆಂಬರ್ ನಲ್ಲಿ ದೊಡ್ಡಪ್ಪ ಮೃತಪಟ್ಟ ಸಮಯದಲ್ಲಿ ಅಖಿಲಳ ನಿಜ ರೂಪ ಮನೆಯವರಿಗೆ ಗೊತ್ತಾಗಿದೆ. ದೊಡ್ಡಪ್ಪರ ಸದ್ಗತಿಗಾಗಿ ಮನೆಯಲ್ಲಿ ಹಮ್ಮಿಕೊಂಡ 40 ದಿನಗಳ ಕಾಲದ ಪೂಜಾ ಕಾರ್ಯಗಳಲ್ಲಿ ಭಾಗವಹಿಸಲು ಅಖಿಲಾ ನಿರಾಕರಿಸಿದ್ದಾಳೆ. ತಂದೆ ಒತ್ತಾಯಿಸಿದಾಗ ಆಕೆ ತನ್ನ ಧರ್ಮ ವಿಶ್ವಾಸವನ್ನು ಬಹಿರಂಗ ಪಡಿಸಿದ್ದಾಳೆ. ‘ತಾನು ಪ್ರೌಢೆ ಮತ್ತು ಅಕ್ಷರಸ್ಥೆ’ ಎಂದು ಆಕೆ ನ್ಯಾಯಾಲಯದ ಮುಂದೆ ಹೇಳಿಕೊಳ್ಳುತ್ತಾಳೆ. ಕೋರ್ಟು ಒಪ್ಪಿಕೊಳ್ಳುತ್ತದೆ. ಇದಾದ ಬಳಿಕ 2016 ಆಗಸ್ಟ್ 16 ರಂದು ಮಗಳ ಸುರಕ್ಷತತೆಯ ಭಯವನ್ನು ಮುಂದಿಟ್ಟುಕೊಂಂಡು ತಂದೆ ಅಶೋಕನ್ ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ಮಗಳನ್ನು ವಿದೇಶಕ್ಕೆ ರವಾನಿಸುವ ಆತಂಕವನ್ನು ಅವರು ತೋಡಿಕೊಳ್ಳುತ್ತಾರೆ. ನಿಜ ಏನೆಂದರೆ, ಆಕೆಯಿನ್ನೂ ಪಾಸ್‍ ಪೋರ್ಟೇ ಮಾಡಿಕೊಂಡಿರಲಿಲ್ಲ. ಅಖಿಲ ತನ್ನ ಹೆತ್ತವರೊಂದಿಗೆ ಹೋಗಲು ನಿರಾಕರಿಸುತ್ತಾಳೆ.  ಮುಂದಿನ ವಿಚಾರಣೆಗಾಗಿ 2016 ಡಿ. 21 ರಂದು ಅಖಿಲ ಕೋರ್ಟ್‍ಗೆ ಹಾಜರಾಗುವಾಗ ತನಗೆ ಮದುವೆಯಾಗಿರುವುದಾಗಿ ಹೇಳಿಕೊಳ್ಳುತ್ತಾಳೆ. ಜೊತೆಗಿದ್ದ ಶಫಿನ್ ಜಹಾನ್ ತನ್ನ ಪತಿ ಎಂದೂ ಸ್ಪಷ್ಟಪಡಿಸುತ್ತಾಳೆ. ಮದುವೆಯಾದ ಸ್ಥಳ, ನೋಂದಣಿಯ ವಿವರಗಳನ್ನು ಆಕೆ ನ್ಯಾಯಾಲಯದ ಮುಂದಿಡುತ್ತಾಳೆ. ಜಸ್ಟೀಸ್ ಕೆ. ಸುರೇಂದ್ರ ಮೋಹನ್ ಮತ್ತು ಕೆ. ಅಬ್ರಹಾಂ ಅವರಿದ್ದ ನ್ಯಾಯಾಂಗೀಯ ಪೀಠ ಈ ಬೆಳವಣಿಗೆಗೆ ಅಚ್ಚರಿ ವ್ಯಕ್ತಪಡಿಸುತ್ತದೆ. ನೋಂದಣಿಯಲ್ಲಿ Shafin Jahan ಎಂಬುದರ ಬದಲು Jefin Jahan  ಎಂದಿರುವುದನ್ನು ಪೀಠ ಗಂಭೀರವಾಗಿ ಪರಿಗಣಿಸಿ ವಿವಾಹವನ್ನೇ ರದ್ದುಪಡಿಸುವ ಅಭೂತಪೂರ್ವ ತೀರ್ಮಾನ ಕೈಗೊಳ್ಳುತ್ತದೆ. ಮಾತ್ರವಲ್ಲ,
    `ಹಾದಿಯ ಪ್ರಬುದ್ಧಳಾಗಿರಬಹುದು, ಆದರೆ 20ರ ಹರೆಯವು ಚಂಚಲವಾದುದು. ಹೆತ್ತವರಿಗೆ ಆಕೆಯ ಸುರಕ್ಷಿತತೆಯ ಬಗ್ಗೆ ಭಯವಿದೆ. ಭಾರತೀಯ ಸಂಸ್ಕೃತಿಯ ಪ್ರಕಾರ ಮಗಳನ್ನು ಮದುವೆ ಮಾಡಿಕೊಡುವ ಹಕ್ಕು ಹೆತ್ತವರಿಗಿದೆ...’ಎಂದೂ ಅದು  ತೀರ್ಪು ನೀಡುತ್ತದೆ. ಇಲ್ಲಿ ಕಾಡುವ ಪ್ರಶ್ನೆ ಏನೆಂದರೆ, ಹಾದಿಯಾಳ ಸ್ಥಾನದಲ್ಲಿ ಓರ್ವ ಗಂಡು ಇರುತ್ತಿದ್ದರೆ ವಿಚಾರಣಾ ಪ್ರಕ್ರಿಯೆಯ ಸ್ವರೂಪ ಹೇಗಿರುತ್ತಿತ್ತು? ಅವನನ್ನು ಹೆತ್ತವರ ಸುಪರ್ದಿಗೆ ಕೊಡಲಾಗುತ್ತಿತ್ತೆ? ಆತನ ವಿವಾಹವನ್ನು ರದ್ದುಪಡಿಸಲಾಗುತ್ತಿತ್ತೆ? ಆತನ ವಿವಾಹದ ಹೊಣೆಗಾರಿಕೆ ಹೆತ್ತವರದ್ದು ಎಂಬ ಸಮರ್ಥನೆ ಲಭಿಸುತ್ತಿತ್ತೆ? ಅಂದಹಾಗೆ, ಪ್ರೌಢರಾದ ಹೆಣ್ಣು ಮತ್ತು ಗಂಡು ತಮ್ಮಗಿಷ್ಟವಾದ ಧರ್ಮವನ್ನು ಸ್ವೀಕರಿಸುವುದು ಮತ್ತು ತಮಗಿಷ್ಟವಾದವರನ್ನು ವರಿಸುವುದನ್ನು ಈ ಸಮಾಜ ಹೇಗೆ ಪರಿಗಣಿಸಬೇಕು? ಒಂದುಕಡೆ, ಮರ್ಯಾದೆಗೇಡು ಹತ್ಯೆ ನಡೆಯುತ್ತಿದೆ. ಕುಟುಂಬ, ಜಾತಿ, ಸಮಾಜದ ಮರ್ಯಾದೆಯೇ ಅದರ ಕೇಂದ್ರ ಬಿಂದು. ಅದನ್ನು ತೀರ್ಮಾನಿಸುವುದು ಪುರುಷರೇ ತುಂಬಿಕೊಂಡಿರುವ ಖಾಪ್ ಪಂಚಾಯತ್. ಅಲ್ಲೂ ಹೆಣ್ಣೇ ಬಲಿಪಶು. ಪದ್ಮಾವತಿ ಪ್ರಕರಣದಲ್ಲಿ ವಿಜೃಂಬಿಸುತ್ತಿರುವುದೂ ಪುರುಷರೇ. ಹಾದಿಯಾಳ ಪ್ರಕರಣದಲ್ಲಿ ‘ಹೆಣ್ಣಿನ ಮೇಲಿನ ಹೆತ್ತವರ ಹಕ್ಕು ಆಕೆಯ ವಿವಾಹದವರೆಗಿದೆ...’ ಎಂಬರ್ಥದಲ್ಲಿ ತೀರ್ಪು ನೀಡಿದ ಹೈಕೋರ್ಟಿನ ನ್ಯಾಯಾಧೀಶರಿಬ್ಬರೂ ಪುರುಷರೇ. ಇದು ಅನುದ್ದೇಶಿತವೇ ಆಗಿರಬಹುದು. ಆದರೂ ಕೆಲವು ಪ್ರಶ್ನೆಗಳಿಗಂತೂ ನಾವು ಉತ್ತರಗಳನ್ನು ಹುಡುಕಲೇಬೇಕು. ಹೆಣ್ಣಿನ ಮೇಲಿನ ಕಾಳಜಿಯ ನೆಪದಲ್ಲಿ ಹೆಣ್ಣನ್ನು ಪುರುಷ ವಿಚಾರಧಾರೆಯು ಆಪೋಶನ ತೆಗೆದುಕೊಳ್ಳುತ್ತಿದೆಯೇ? ಪುರಾತನ ಕಾಲದಲ್ಲಿ ಹೆಣ್ಣು ಹೇಗೆ ದುರ್ಬಲತೆಯ ಸಂಕೇತವೋ ಹಾಗೆಯೇ ಈ 21ನೇ ಶತಮಾನದಲ್ಲೂ ಹೆಣ್ಣು ದುರ್ಬಲಳೇ ಆಗಿರುವುದೇಕೆ? ಇದು ನಿಜಕ್ಕೂ ಅವಳ ಸ್ಥಿತಿಯೋ ಅಥವಾ ಪುರುಷ ಪ್ರಧಾನ ಸಮಾಜವು ಬಲವಂತದಿಂದ ಆಕೆಯ ಮೇಲೆ ಹೇರಿದ ಸ್ಥಿತಿಯೋ? ಒಂದು ಕಡೆ, ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆ... ಇತ್ಯಾದಿಗಳ ಕುರಿತಂತೆ ನ್ಯಾಯಾಲಯವೂ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಕರ್ಣಾನಂದಕರ ಹೇಳಿಕೆಗಳು ಹೊರ ಬೀಳುತ್ತಿವೆ. ಇನ್ನೊಂದೆಡೆ, ಪ್ರೌಢ ಹೆಣ್ಣನ್ನು ಚಂಚಲೆಯೆಂದೋ ನಿರ್ಧಾರ ತಳೆಯುವ ಸಾಮರ್ಥ್ಯ ಇಲ್ಲದವಳೆಂದೋ ಹೇಳಿ ಅದುಮಲಾಗುತ್ತದೆ. ಪದ್ಮಿನಿಯ ವಿಚಾರವಾಗಿ ಬೀದಿಯಲ್ಲಿರುವುದು ಮಹಿಳೆಯರಲ್ಲ, ಪುರುಷರೇ. ಹಾದಿಯಾಳ ಪ್ರಕರಣವನ್ನು ಲವ್ ಜಿಹಾದ್ ಆಗಿ ಪರಿವರ್ತಿಸಿ ಗದ್ದಲ ಎಬ್ಬಿಸುತ್ತಿರುವುದೂ ಪುರು ಷರೇ. ಪುರಾತನ ಕಾಲದ ಪುರುಷ ಪ್ರಧಾನ ಮನಸ್ಥಿತಿಯು ಆಧುನಿಕ ಕಾಲದಲ್ಲಿ ಹೀಗೆ ವೇಷ ಬದಲಿಸಿ ಅಸ್ತಿತ್ವ ಪಡಕೊಳ್ಳುತ್ತಿದೆಯೇ? ಜೊತೆಗೆ, 1829 ಡಿಸೆಂಬರ್ 8 ರಂದು ನಿಷೇಧಕ್ಕೊಳಗಾದ ಸತಿ ಪದ್ಧತಿಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುವ ವಿಚಾರಧಾರೆಯೊಂದು ಈಗಲೂ ಅಸ್ತಿತ್ವದಲ್ಲಿದೆಯೇ? ಪದ್ಮಾವತಿಯನ್ನು `ರಾಷ್ಟ್ರ ಮಾತಾ ಪದ್ಮಾವತಿ' ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಕರೆದಿರುವುದರಲ್ಲಿ ಸತಿ ಸಹಗಮನದ ಆರಾಧನೆಯೂ ಇದೆಯಲ್ಲವೇ? ‘ಯಾಕೆ ಹೆಣ್ಣೇ ಸತಿ ಹೋಗಬೇಕು, ಪುರುಷ ಯಾಕೆ ಸತಿ ಹೋಗಬಾರದು’ ಎಂಬ ಪ್ರಶ್ನೆ ಎತ್ತಬೇಕಾದ ಕಡೆ, ಸತಿಯನ್ನೇ ವೈಭವೀಕರಿಸುವ ಮತ್ತು ಇನ್ನೋರ್ವ ಹೆಣ್ಣಿನ (ದೀಪಿಕಾ ಪಡುಕೋಣೆ) ಮೂಗು ಕೊಯ್ಯುವ, ತಲೆ ಕತ್ತರಿಸುವ ಹೇಳಿಕೆಗಳು ಬರುತ್ತವಲ್ಲ, ಏನಿದರ ಅರ್ಥ? ಹಾದಿಯ ಎತ್ತುವ ಪ್ರಶ್ನೆಯೂ ಬಹುತೇಕ ಇದರ ಸುತ್ತಲೇ ಇದೆ. ಆಕೆ ಯಾವ ಕ್ರಿಮಿನಲ್ ಕಾರ್ಯದಲ್ಲೂ ಭಾಗಿಯಾಗಿಲ್ಲ. ಸಂವಿಧಾನ ಒದಗಿಸಿರುವ ವೈಯಕ್ತಿಕ ಹಕ್ಕನ್ನು ಚಲಾಯಿಸಿದ್ದಾಳೆ ಎಂದ ಮಾತ್ರಕ್ಕೇ ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿ ಒಂದೂವರೆ ಗಂಟೆಗಳ ಕಾಲ ಆಕೆಯ ಪರ, ವಿರುದ್ಧ ಮತ್ತು ಆಕೆ ಇಷ್ಟಪಟ್ಟ ಯುವಕನ ಬಗ್ಗೆ ವಾದಗಳನ್ನು ಆಲಿಸುವಂತೆ ಸುಪ್ರೀಮ್ ಕೋರ್ಟ್ ಆಕೆಯನ್ನು ಬಲವಂತ ಪಡಿಸಿದುದು ಎಷ್ಟು ಸರಿ? ಆಕೆಯ ಮೇಲೆ ಯಾವ ಆರೋಪವೂ ಇಲ್ಲ. ಪ್ರೌಢೆ ಹೆಣ್ಣು ಮಗಳೊಬ್ಬಳು ತನಗಿಷ್ಟ ಬಂದ ಧರ್ಮವನ್ನು ಸ್ವೀಕರಿಸುವುದು ಮತ್ತು ತನಗಿಷ್ಟ ಬಂದವರನ್ನು ವಿವಾಹವಾಗುವುದು ನ್ಯಾಯಿಕ ಭಾಷೆಯಲ್ಲೂ ಅಪರಾಧವಲ್ಲ. ಹೀಗಿದ್ದರೂ ಆಕೆಯನ್ನು ಪೊಲೀಸು ಕಾವಲಿನಲ್ಲಿ ದಿಗ್ಬಂಧನದಲ್ಲಿಟ್ಟುದುದು ಮತ್ತು ದೆಹಲಿವರೆಗೆ ಕೊಂಡೊಯ್ದು ಕೋರ್ಟಿನಲ್ಲಿ ಹಾಜರುಗೊಳಿಸಿದುದನ್ನು ಹೇಗೆಂದು ವ್ಯಾಖ್ಯಾನಿಸಬೇಕು? ಅಷ್ಟಕ್ಕೂ,
     ರಾಣಾ ಮತ್ತು ಖಿಲ್ಜಿಯ ನಡುವೆ 13ನೇ ಶತಮಾನದಲ್ಲಿ ನಡೆದ ಯುದ್ಧದ ಐತಿಹಾಸಿಕ ವಿವರಗಳಲ್ಲಿ ಇರದ ಪದ್ಮಿನಿಯನ್ನು, 21ನೇ ಶತಮಾನದ ಹಾದಿಯಳಿಗೆ ಹೋಲಿಸುವಾಗ ಏನನಿಸುತ್ತದೆ? `ಪೊಲೀಸರ ತನಿಖೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿಲ್ಲ’ ಎಂದು ಸು. ಕೋರ್ಟಿನಲ್ಲಿ ಕೇರಳ ಸರಕಾರವು ಕಳೆದ ಅಕ್ಟೋಬರ್ ನಲ್ಲಿ ಅಫಿದವಿತ್ ಸಲ್ಲಿಸಿದ್ದರೂ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ತನಿಖಿಸುವಂತೆ ಸುಪ್ರೀಮ್ ಕೋರ್ಟ್ ರಾಷ್ಟ್ರೀಯ ತನಿಖಾ ದಳಕ್ಕೆ (NIO) ಆದೇಶಿಸಿರುವುದು ಇಲ್ಲದ ಪದ್ಮಿನಿಯನ್ನು ಹುಡುಕಲು ಹೇಳಿದಂತೆ ಆಗಬಹುದೇ? ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದಲ್ಲಿ ಹುಟ್ಟಿಕೊಂಡವಳು ಪದ್ಮಿನಿಯಾದರೆ ರಾಜಕೀಯ ಹಿತಸಕ್ತಿಗಾಗಿ ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಅದರ ಪರಿವಾರದಿಂದ ಸೃಷ್ಟಿಯಾಗಿರುವುದೇ ಲವ್ ಜಿಹಾದ್. ಇಲ್ಲದ ಪದ್ಮಿನಿಯ ನೆಪದಲ್ಲಿ ಹೆಣ್ಣಿನ ಮೇಲೆ ದಾಳಿ ಎಸಗುವ ಬೆದರಿಕೆ ಒಡ್ಡಿದವರೇ ಹಾದಿಯ ಪ್ರಕರಣವನ್ನು ಲವ್ ಜಿಹಾದ್ ಗೊಳಿಸುವಲ್ಲೂ ಮುಂಚೂಣಿಯಲ್ಲಿದ್ದಾರೆ. ಬಾಹ್ಯ ನೋಟಕ್ಕೆ ಹೆಣ್ಣಿನ ಮೇಲಿನ ಕಾಳಜಿಯಂತೆ ಈ ಎಲ್ಲ ಬೆಳವಣಿಗೆಗಳು ಕಂಡು ಬಂದರೂ ಆಳದಲ್ಲಿ ಇದು ಹೆಣ್ಣನ್ನು ಬಂಧಿಸಿಡುವ ಪುರುಷ ಪ್ರಧಾನ ಮನಸ್ಥಿತಿಯ ಇನ್ನೊಂದು ರೂಪದಂತೆ ಕಾಣಿಸುತ್ತಿದೆ. ಆಯ್ಕೆ ಮಾಡುವ ಸಾಮರ್ಥ್ಯ ಹೆಣ್ಣಿಗಿಲ್ಲ.. ಎಂದು ಸಾರುವುದೇ ಈ ಎಲ್ಲವುಗಳ ಒಟ್ಟು ಸಾರಾಂಶ.
      ಮನಸ್ಥಿತಿ ಪುರಾತನ ಕಾಲದ್ದೇ. ಪಾತ್ರಗಳು ಮಾತ್ರ ಬೇರೆ.

Monday, December 4, 2017

ಅಲೆಕ್ಸಾಂಡರ್‍ನನ್ನು ಕಣ್ಣೀರಾಗಿಸಿದ ಆ ಕ್ಷಮೆ...

    1. ತನ್ನ ಸಂಬಂಧಿಕನನ್ನು ಕೊಲೆಗೈದ ವ್ಯಕ್ತಿಯೊಂದಿಗೆ ಓರ್ವನು ಪ್ರವಾದಿ ಮುಹಮ್ಮದ್‍ರ(ಸ) ಬಳಿಗೆ ಬರುತ್ತಾನೆ. ನಡೆದ ವಿಷಯವನ್ನು ಹೇಳುತ್ತಾನೆ. ಆರೋಪಿ ತಪ್ಪೊಪ್ಪಿಕೊಳ್ಳುತ್ತಾನೆ. ಪ್ರವಾದಿ(ಸ) ಹೇಳುತ್ತಾರೆ, ಅಪರಾಧಿಯನ್ನು ಕ್ಷಮಿಸು. ವ್ಯಕ್ತಿ ಒಪ್ಪಿಕೊಳ್ಳುವುದಿಲ್ಲ. ಪ್ರವಾದಿ(ಸ) ಮತ್ತೆ ಹೇಳುತ್ತಾರೆ, ಆತನಿಂದ ರಕ್ತ ಪರಿಹಾರವನ್ನು ಪಡೆದುಕೊಂಡು ಆತನನ್ನು ಕ್ಷಮಿಸು. ವ್ಯಕ್ತಿ ಅದಕ್ಕೂ ಒಪ್ಪುವುದಿಲ್ಲ. ಆಗ ಪ್ರವಾದಿ(ಸ) ಹೇಳುತ್ತಾರೆ, ಹಾಗಾ ದರೆ ಆತನನ್ನು ವಧಿಸು. ನೀನೂ ಆತನಂತೆ ಆಗಬಯಸುವಿ ಯೆಂದಾದರೆ ಹಾಗೆ ಮಾಡು. (ಅಬೂದಾವೂದ್- 4497)
2. ಓರ್ವ ವ್ಯಕ್ತಿ ಪ್ರವಾದಿಯವರ ಬಳಿಗೆ ಬಂದು ಹೇಳುತ್ತಾನೆ,
ನನ್ನ ಕೆಲಸಗಾರನನ್ನು ನಾನು ಎಷ್ಟು ಬಾರಿ ಕ್ಷಮಿಸಬೇಕು?’
ಪ್ರವಾದಿ ಹೇಳುತ್ತಾರೆ,
ಪ್ರತಿದಿನ 70 ಬಾರಿ (ತಿರ್ಮಿದಿ: 1424).
ಪವಿತ್ರ ಕುರ್‍ಆನ್ ಹೇಳುತ್ತದೆ,
1. ಇತರರ ಅಪರಾಧಗಳನ್ನು ಕ್ಷಮಿಸುವ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು. (3: 134)
2. ಅಲ್ಲಾಹನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. (42: 5)
ಎರಡು ಪ್ರವಾದಿ ವಚನಗಳು ಮತ್ತು ಎರಡು ಕುರ್‍ಆನ್ ವಚನಗಳನ್ನು ಇಲ್ಲಿ ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
ಕಳೆದ ತಿಂಗಳು ಅಮೇರಿಕದ ಕೆಂಟುಕಿಯ ಕೋರ್ಟ್‍ನಲ್ಲಿ ಅಚ್ಚರಿಯ ಘಟನೆಯೊಂದು ನಡೆಯಿತು. 2015 ಎಪ್ರಿಲ್‍ನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಅಂತಿಮ ತೀರ್ಪು ಪ್ರಕಟವಾಗುವುದಕ್ಕೆ ಎಲ್ಲವೂ ಸಿದ್ಧವಾಗಿತ್ತು. ಸಲಾಹುದ್ದೀನ್ ಜಿತ್‍ಮೌದ್ ಎಂಬ 22 ವರ್ಷದ ತರುಣನನ್ನು ಹತ್ಯೆ ಮಾಡಿದ ಪ್ರಕರಣದ ತೀರ್ಪು. ಸಲಾಹುದ್ದೀನನ ತಂದೆ ಅಬ್ದುಲ್ ಮುನೀಮ್ ಸಂಬಾಟ್ ಜಿತ್‍ಮೌದ್ ತನ್ನ ಕುಟುಂಬ ಸಮೇತ ಕೋರ್ಟ್‍ನಲ್ಲಿದ್ದರು. ಅಪರಾಧಿ ಟ್ರೆ ಅಲ್‍ಕ್ಸಾಂಡರ್ ರೆಲ್ ಫೋರ್ಡ್ ಕೂಡ ಕಟಕಟೆಯಲ್ಲಿದ್ದ. ಆತನ ಕುಟುಂಬವು ತೀರ್ಪನ್ನು ನಿರೀಕ್ಷಿಸುತ್ತಾ ನ್ಯಾಯಾಲಯದಲ್ಲಿತ್ತು. ನ್ಯಾಯಾಧೀಶೆ ಕಿಂಬರ್ಲಿ ಬಿನ್ನೆಲ್ ಇನ್ನೇನು ತೀರ್ಪು ಘೋಷಿಸಲು ಮುಂದಾಗುತ್ತಿರುವಂತೆಯೇ, 64 ವರ್ಷದ ಇಸ್ಲಾಮೀ ವಿದ್ವಾಂಸ ಮತ್ತು ಅಮೇರಿಕದ ಲೆಕ್ಸಿಂಗ್ಟನ್ ಯುನಿವರ್ಸಲ್ ಅಕಾಡಮಿ ಮತ್ತು ಸೈಂಟ್ ಲೂಯಿಸ್‍ನ ಅಲ್ ಸಲಾಮ್ ಡೇ ಸ್ಕೂಲ್ ಸೇರಿದಂತೆ ಹಲವಾರು ಇಸ್ಲಾಮಿಕ್ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರಾಗಿರುವ ಮೂಲತಃ ಥಾೈಲೆಂಡ್‍ನವರಾದ ಅಬ್ದುಲ್ ಮುನೀಮ್ ಜಿತ್‍ಮೌದ್ ಅವರು ಎದ್ದು ನಿಂತರಲ್ಲದೇ ತಾನು ಅಲೆಕ್ಸಾಂಡರ್‍ನನ್ನು ಕ್ಷಮಿಸಿದ್ದೇನೆ ಎಂದು ತುಂಬಿದ ಕಣ್ಣೀರಿನೊಂದಿಗೆ ಘೋಷಿಸಿದರು.
“ನಾನು ನಿನ್ನ ಮೇಲೆ ಕೋಪಿಸಲಾರೆ. ನಿನ್ನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿದ ಶೈತಾನನೇ ನಿಜವಾದ ಅಪರಾಧಿ. ನಿನ್ನನ್ನು ಅಂಥ ಕ್ರೂರ ಕೃತ್ಯಕ್ಕೆ ಪ್ರೇರೇಪಿಸಿದ ಶೈತಾನನ ಮೇಲೆ ನಾನು ಸಿಟ್ಟಾಗುವೆ. ಈ ಜಗತ್ತಿನಲ್ಲಿ ಸಂತ್ರಸ್ತನು ಪಾಪಿಯನ್ನು ಕ್ಷಮಿಸದಿದ್ದರೆ ದೇವನೂ ಪಾಪಿಯನ್ನು ಕ್ಷಮಿಸಲಾರ ಅನ್ನುವುದು ನನ್ನ ವಿಶ್ವಾಸ. ಆದ್ದರಿಂದ ನಾನು ನಿನ್ನನ್ನು ಕ್ಷಮಿಸಿದ್ದೇನೆ..” ಎಂದವರು ನಡುಗುವ ದನಿಯೊಂದಿಗೆ ಹೇಳಿದರು. ಜೊತೆಗೇ, ಪವಿತ್ರ ಕುರ್‍ಆನಿನ 9ನೇ ಅಧ್ಯಾಯದ 51ನೇ ವಚನದಲ್ಲಿ ಹೇಳಲಾಗಿರುವ, “ಅಲ್ಲಾಹನು ನಮಗಾಗಿ ಲಿಖಿತಗೊಳಿಸಿರುವುದರ ಹೊರತು ಬೇರಾವುದೂ (ಒಳಿತು ಮತ್ತು ಕೆಡುಕು) ನಮ್ಮನ್ನು ಬಾಧಿಸುವುದಿಲ್ಲ. ಅಲ್ಲಾಹನೇ ನಮ್ಮ ಮಾಲಿಕನಾಗಿದ್ದಾನೆ. ಸತ್ಯವಿಶ್ವಾಸಿಗಳು ಅವನ ಮೇಲೆಯೇ ಭರವಸೆಯನ್ನಿರಿಸಬೇಕು..” ಎಂಬ ವಚನವೇ ನನ್ನ ಈ ನಿರ್ಧಾರಕ್ಕೆ ಕಾರಣ ಎಂದೂ ಹೇಳಿದರು. ಅವರು ಹೀಗೆ ಹೇಳಿ ಮುಗಿಸುತ್ತಿರುವಂತೆಯೇ ನ್ಯಾಯಾಲಯದ ವಾತಾವರಣ ಸಂಪೂರ್ಣ ಬದಲಾಯಿತು. ತೀರ್ಪು ಹುಟ್ಟು ಹಾಕಿದ್ದ ಕುತೂಹಲವು ಭಾವುಕ ಸನ್ನಿವೇಶವಾಗಿ ಮಾರ್ಪಾಟಾಯಿತು. ಸ್ವತಃ ನ್ಯಾಯಾಧೀಶರಾದ ಕಿಂಬರ್ಲಿ ಬಿನ್ನೆಲ್ ಅವರೇ ಭಾವುಕರಾದರು. ಅವರ ಗಂಟಲು ಕಟ್ಟಿಕೊಂಡಿತು. ತೀರ್ಪು ಘೋಷಣೆ ಸಾಧ್ಯವಾಗದೇ ಸ್ವಲ್ಪ ಸಮಯ ಕಲಾಪ ಮುಂದೂಡಿ ಬಳಿಕ ಹಿಂತಿರುಗಿ ಬಂದು ಅಪರಾಧಿ ಅಲೆಕ್ಸಾಂಡರ್‍ಗೆ 31 ವರ್ಷಗಳ ಶಿಕ್ಷೆಯನ್ನು ಘೋಷಿಸಿ ದರು. ಬಳಿಕ ಅಬ್ದುಲ್ ಮುನೀಮ್ ಜಿತ್‍ಮೌದ್‍ರು ಅಲೆಕ್ಸಾಂಡರ್ ನನ್ನು ತಬ್ಬಿಕೊಂಡರು. ಅಲೆಕ್ಸಾಂಡರ್ ಪಶ್ಚಾತ್ತಾಪ ಭಾವದಿಂದ ಕಣ್ಣೀರಿಳಿಸಿದ. ತನ್ನನ್ನು ಕ್ಷಮಿಸುವಂತೆ ಕೋರಿಕೊಂಡ.
2015 ಎಪ್ರಿಲ್ 19ರಂದು 22 ವರ್ಷದ ಸಲಾಹುದ್ದೀನ್‍ನನ್ನು ಅಲೆಕ್ಸಾಂಡರ್ ಸಹಿತ ಒಟ್ಟು ಮೂರು ಮಂದಿ ಸೇರಿ ಇರಿದು ಹತ್ಯೆಗೈದು ದರೋಡೆ ನಡೆಸಿದ್ದರೆಂದು ಆರೋಪಿಸಲಾಗಿತ್ತು. ಲೆಕ್ಸಿಂಗ್ಟನ್ ಕೋರ್ಟ್ ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳು ರೆಸ್ಟೋರೆಂಟ್ ಒಂದಕ್ಕೆ ಪಿಝ್ಝಾಕ್ಕೆ ಆರ್ಡರ್ ಮಾಡಿದ್ದರು. ಪಿಝ್ಝಾ ಡೆಲಿವರಿ ಮಾಡಲು ಸಲಾಹುದ್ದೀನ್ ಬಂದಿದ್ದ. ಪೊಲೀಸರ ಪ್ರಕಾರ ಸಲಾಹುದ್ದೀನ್‍ನ ಧರ್ಮವನ್ನು ನೋಡಿಕೊಂಡು ಈ ಹತ್ಯೆ ನಡೆಸಲಾಗಿದೆ.ಕ್ಷಮೆ ಎಂಬುದು ಎರಡಕ್ಷರಗಳ ಆಚೆಗೆ ಆಲದ ಮರದಂತೆ ವಿಶಾಲವಾಗಿ ಚಾಚಿಕೊಂಡಿರುವ ವಸ್ತು. ಕ್ಷಮೆಯ ಕುರಿತಂತೆ ಗಂಟೆಗಟ್ಟಲೆ ಭಾಷಣ ಮಾಡಿದವರು ಕೂಡ ಕ್ಷಮಿಸಲೇಬೇಕಾದ ನಿರ್ಣಾಯಕ ಸನ್ನಿವೇಶ ಎದುರಾದಾಗ ಸಂದಿಗ್ಧಕ್ಕೆ ಸಿಲುಕಿದ್ದುಂಟು. ಪ್ರವಾದಿ ಮುಹಮ್ಮದ್‍ರ(ಸ) ಬದುಕಿನಲ್ಲಿ ಕ್ಷಮೆಯ ಧಾರಾಳ ಸನ್ನಿವೇಶಗಳು ಸಿಗುತ್ತವೆ. ತಾಯಿಫ್‍ನಿಂದ ಹಿಡಿದು ತನ್ನ ಕತ್ತಿನ ಶಾಲನ್ನು ಹಿಡಿದೆಳೆದ ಬುಡಕಟ್ಟು ವ್ಯಕ್ತಿಯವರೆಗೆ, ಹಿಂದ್‍ಳಿಂದ ಹಿಡಿದು ತನ್ನ ಮೇಲೆ ಕಸ ಎಸೆಯುತ್ತಿದ್ದ ಯುವತಿಯ ವರೆಗೆ. ವೈಯಕ್ತಿಕ ಪ್ರಕರಣಗಳನ್ನು ಅವರು ಕ್ಷಮೆ ಎಂಬ ಚೌಕಟ್ಟಿನೊಳಗಿಟ್ಟು ನೋಡುತ್ತಿದ್ದರು. ಶಿಕ್ಷೆಗೂ ಕ್ಷಮೆಗೂ ನಡುವೆ ಇರುವ ಬಹುದೊಡ್ಡ ವ್ಯತ್ಯಾಸ ಏನೆಂದರೆ, ಶಿಕ್ಷೆಯಿಂದ ಸಂತ್ರಸ್ತ ಕುಟುಂಬ ಪಡೆಯುವ ಸುಖ ತಾತ್ಕಾಲಿಕವಾದುದು. ಸಲಾಹುದ್ದೀನ್ ಪ್ರಕರಣವನ್ನೇ ಎತ್ತಿ ಕೊಳ್ಳೋಣ. 22 ವರ್ಷದ ಯುವಕ ಎಂಬ ನೆಲೆಯಲ್ಲಿ ಆತನ ಮೇಲೆ ಹೆತ್ತವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರಬಹುದು. ವರಮಾನದ ನೆಲೆಯಲ್ಲೂ ಆತನ ಅಗತ್ಯ ಹೆತ್ತವರಿಗೆ ಇದ್ದಿರಬಹುದು. ಏಕೈಕ ಮಗನಾಗಿದ್ದರಂತೂ ಸಲಾಹುದ್ದೀನ್‍ಗೆ ಇನ್ನಷ್ಟು ಮಹತ್ವ ಲಭ್ಯವಾಗುತ್ತದೆ. ಹೀಗಿರುವಾಗ, ಆತನನ್ನು ಕಳಕೊಳ್ಳುವುದು ಸಣ್ಣ ಆಘಾತಕಾರಿ ಸಂಗತಿಯಲ್ಲ. ಮನೆಯಲ್ಲಿ ಸದಾ ಶೂನ್ಯ  ಕಾಡಬಹುದಾದ ಸನ್ನಿವೇಶವನ್ನು ಅದು ಹುಟ್ಟು ಹಾಕುತ್ತದೆ. ಮೆಟ್ಟು, ಪೆನ್ನು, ಶರ್ಟು, ಕನ್ನಡಕ, ಫೋಟೋ, ಪುಸ್ತಕ.. ಹೀಗೆ ಸಲಾಹುದ್ದೀನ್‍ಗೆ ಸಂಬಂಧಿಸಿದ ಪ್ರತಿಯೊಂದೂ ಆತನನ್ನು ಮರು ನೆನಪಿಸುತ್ತಾ ಚುಚ್ಚುತ್ತಿರುತ್ತದೆ. ಸಲಾಹುದ್ದೀನ್‍ನ ಗೆಳೆಯರು ಸಿಕ್ಕಾಗ ಆತ ನೆನಪಾಗುತ್ತಾನೆ. ಆತನ ಇಷ್ಟದ ವಸ್ತುಗಳನ್ನು ನೋಡಿದಾಗ ಆತ ನೆನಪಾಗುತ್ತಾನೆ. ಆತ ದಿನಾ ಕುಳಿತುಕೊಳ್ಳುತ್ತಿದ್ದ ಚಯರೋ, ಸೋಫಾವೋ ಇನ್ನೇನೋ ಆತನನ್ನು ಅನುಕ್ಷಣ ನೆನಪಿಸಿ ಇರಿಯುತ್ತಿರುತ್ತವೆ. ಆದ್ದರಿಂದ ಸಲಾಹುದ್ದೀನ್‍ನ ಹತ್ಯೆಗೆ ಕಾರಣರಾದವರ ಮೇಲೆ ಆತನ ಹೆತ್ತವರಲ್ಲಿ ಅಸಾಧ್ಯ ಸಿಟ್ಟು ಹೊಮ್ಮಲೇ ಬೇಕಾದುದು ಅಸಹಜವಲ್ಲ. ಅವರಿಗೆ ಶಿಕ್ಷೆ ದೊರಕಲೇ ಬೇಕೆಂದು ಹೋರಾಟ ನಡೆಸುವುದೂ ಅಚ್ಚರಿಯದ್ದಲ್ಲ. ಅದೊಂದು ರೀತಿಯಲ್ಲಿ ವಿಚಿತ್ರ ಸುಖ ಕೊಡುವ ಘಳಿಗೆ. ಆರೋಪಿಗಳನ್ನು ದಂಡಿಸಲೇಬೇಕು ಎಂಬ ಹಠದ ಹಿಂದೆ ಇರುವುದು ಇಲ್ಲದ ಮಗನ ನೆನಪು. ಒಂದು ವೇಳೆ ಇವೆಲ್ಲವೂ ನಿರೀಕ್ಷಿಸಿದಂತೆಯೇ ಸಾಗಿ ಅಂತಿಮವಾಗಿ ಆರೋಪಿಗಳ ಕೃತ್ಯ ಸಾಬೀತಾಯಿತು ಎಂಬಲ್ಲಿಗೆ ತಲುಪಿದಾಗಲೇ ನಿಜವಾದ ಸವಾಲು ಎದುರುಗೊಳ್ಳುತ್ತದೆ. ಅಲ್ಲಿಯವರೆಗೆ ಅವರ ಜೊತೆ ಒಂದು ಹಠ ಇತ್ತು. ಮಗನಿಗಾಗಿ ಈ ಹಠ ಎಂಬ ಸಮರ್ಥನೆಯೂ ಇತ್ತು. ಮಾತ್ರವಲ್ಲ, ಮಗನನ್ನು ಪ್ರತಿನಿತ್ಯ ಆ ಹಠ ನೆನಪಿಸುತ್ತಲೂ ಇತ್ತು. ಆದರೆ ಆರೋಪ ಸಾಬೀತಾಗಿ ಶಿಕ್ಷೆ ಘೋಷಿಸಲ್ಪಟ್ಟ ಮೇಲೆ ಉಂಟಾಗುವ ಶೂನ್ಯ ಇದೆಯಲ್ಲ, ಅದು ಅತ್ಯಂತ ಅಸಹನೀಯವಾದುದು. ತನ್ನ ಹೋರಾಟದಲ್ಲಿ ಯಶಸ್ವಿಯಾದೆ ಅನ್ನುವ ನೆಮ್ಮದಿಯ ಜೊತೆಜೊತೆಗೇ ಮಗನಿಗಾಗಿ ಮಾಡುವುದಕ್ಕೆ ಇನ್ನೇನೂ ಉಳಿದಿಲ್ಲವಲ್ಲ ಎಂಬ ಹತಾಶೆ ಆ ಬಳಿಕದ ದಿನಗಳಲ್ಲಿ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಮಗನೂ ಇಲ್ಲ, ಅಪರಾಧಿಯೂ ಇಲ್ಲ ಎಂಬ ಎರಡು ಇಲ್ಲಗಳ ಬದುಕು ಒಟ್ಟಾಗಿ ಕಾಡುವ ಸನ್ನಿವೇಶ ಅದು. ನಿಜವಾಗಿ, ಪ್ರತೀಕಾರ ಭಾವವು ಎಲ್ಲ ಸಂದರ್ಭಗಳಲ್ಲೂ ನೆಮ್ಮದಿಯನ್ನೇ ಕೊಡಬೇಕೆಂದಿಲ್ಲ. ಕೆಲವೊಮ್ಮೆ ಪ್ರತೀಕಾರದ ಬಳಿಕ ಉಂಟಾಗುವ ಭಾವವು ಪ್ರತೀಕಾರಕ್ಕಿಂತ ಮೊದಲಿನ ಭಾವಕ್ಕಿಂತಲೂ ವೇದನಾಜನಕ ವಾಗಿರುತ್ತದೆ. ಅಪರಾಧಿಯ ಕುಟುಂಬವನ್ನು ಒಲಿಸಲಾಗದ ಮತ್ತು ಮಗನನ್ನೂ ಪಡಕೊಳ್ಳಲಾಗದ ವಿಚಿತ್ರ ಸಂಕಟ ಎದುರಾಗುತ್ತದೆ. ಸಲಾಹುದ್ದೀನ್ ಪ್ರಕರಣವು ಇದಕ್ಕೆ ಉತ್ತಮ ನಿದರ್ಶನ. ಸಲಾಹುದ್ದೀನ್ ಮತ್ತು ಅಲೆಕ್ಸಾಂಡರ್‍ನ ಎರಡೂ ಕುಟುಂಬಗಳು ನ್ಯಾಯಾಲಯದ ತೀರ್ಪಿನ ವೇಳೆ ಉಪಸ್ಥಿತವಿದ್ದವು. ಮೂವರು ಆರೋಪಿಗಳಲ್ಲಿ ಇಬ್ಬರನ್ನು ಕೋರ್ಟು ಆ ಮೊದಲೇ ದೋಷಮುಕ್ತ ಗೊಳಿಸಿದ್ದುದರಿಂದ ಅಲೆಕ್ಸಾಂಡರ್ ಕುಟುಂಬ ಮಾತ್ರ ಅಲ್ಲಿ ಉಪಸ್ಥಿತವಿತ್ತು. ಅಬ್ದುಲ್ ಮುನೀಮ್ ಜಿತ್‍ಮೌಂದ್‍ರ ಕ್ಷಮೆ ಆ ಕ್ಷಣದಲ್ಲಿ ಅನಿರೀಕ್ಷಿತವಾಗಿತ್ತು. ಅದು ನ್ಯಾಯಾಲಯ ಮತ್ತು ಅಲೆಕ್ಸಾಂಡರ್ ಕುಟುಂಬದ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, 31 ವರ್ಷದ ಶಿಕ್ಷೆಯನ್ನೇ ನಗಣ್ಯಗೊಳಿಸುವಷ್ಟು. ಅಲೆಕ್ಸಾಂಡರ್‍ನ ಕುಟುಂಬ ಸಲಾಹುದ್ದೀನ್ ಕುಟುಂಬವನ್ನು ಆಲಿಂಗಿಸಿತು. ಅಲೆಕ್ಸಾಂಡರ್ ಮಾದಕ ವ್ಯಸನಿಯಾಗಿದ್ದ ಎಂಬುದನ್ನು ಆ ವೇಳೆ ಆ ಕುಟುಂಬ ಒಪ್ಪಿಕೊಂಡಿತು. ಅಂದಿನವರೆಗೆ ಪೊಲೀಸರಲ್ಲಾಗಲಿ, ನ್ಯಾಯಾಲಯದಲ್ಲಾಗಲಿ ಹೇಳಿರದ ಸತ್ಯ ಅದು. ಅಂಥದ್ದೊಂದು ಸತ್ಯವನ್ನು ಹೇಳಿಸಿದ್ದು ಅಬ್ದುಲ್ ಮುನೀಮ್ ಜಿತ್‍ಮೌಂದ್‍ರ ಕ್ಷಮಾ ಘೋಷಣೆ. ಆ ಕ್ಷಮೆಯು ಕೋರ್ಟಿನ ತೀರ್ಪಿನ ಮೇಲೆ ಯಾವ ಪರಿಣಾಮವನ್ನು ಬೀರದೇ ಇದ್ದರೂ ಅದು ಅಲೆಕ್ಸಾಂಡರ್ ಕುಟುಂಬದ ಮೇಲೆ ಮತ್ತು ಸ್ವತಃ ಅಲೆಕ್ಸಾಂಡರ್‍ನ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಟಿಶ್ಯೂ ಪೇಪರ್‍ನಿಂದ ಮತ್ತೆ ಮತ್ತೆ ಕಣ್ಣುಜ್ಜಿಕೊಳ್ಳುವ ಆತ ಇಡೀ ಘಟನೆಯ ಕೇಂದ್ರ ಬಿಂದುವಾದ. ತನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡ. ಕೋರ್ಟ್‍ನ ಶಿಕ್ಷೆಯಿಂದ ಹೇಳಿಸಲಾಗದ ಮಾತುಗಳನ್ನು 64 ವರ್ಷದ ಗಡ್ಡದಾರಿ ವ್ಯಕ್ತಿಯ ಕ್ಷಮೆ ಹೇಳಿಸಿತು. ಪವಿತ್ರ ಕುರ್‍ಆನ್ ಘೋಷಿಸುವುದೇನೆಂದರೆ, ‘ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ’ (24:22, 22:42), ಓ ಪೈಗಂಬರರೇ ಕ್ಷಮಾಶೀಲರಾಗಿರಿ (7: 199), ಅವರ ವರ್ತನೆಗೆ ಪ್ರತಿಯಾಗಿ ಸೌಜನ್ಯಪೂರ್ಣ ಕ್ಷಮೆಯೊಂದಿಗೆ ವರ್ತಿಸಿರಿ (15: 85) ಎಂದೇ ಆಗಿದೆ. ಹಾಗಂತ,    ಪವಿತ್ರ ಕುರ್‍ಆನ್ ಪ್ರತೀಕಾರದ ಮಾರ್ಗವನ್ನು ಸಂಪೂರ್ಣ ಮುಚ್ಚಿದೆ ಎಂದಲ್ಲ. ಕ್ಷಮೆ ಮತ್ತು ಪ್ರತೀಕಾರ ಎರಡನ್ನೂ ಸಮಾ ನಾಂತರ ರೇಖೆಯಾಗಿ ಗೌರವಿಸುತ್ತಲೇ ಕ್ಷಮೆಗೆ ಒಂದಷ್ಟು ಹೆಚ್ಚು ಒತ್ತು ಕೊಟ್ಟಿರುವುದರಲ್ಲಿ ದೂರದೃಷ್ಟಿಯಿದೆ ಎಂದೇ ಅನಿಸುತ್ತದೆ. ಪವಿತ್ರ ಕುರ್‍ಆನ್‍ನ ಪ್ರಕಾರ, ‘ಪ್ರತೀಕಾರ ಎಸಗುವುದಿದ್ದರೆ ನಿಮ್ಮ ಮೇಲೆ ಅತಿರೇಕ ಎಸಗಿರುವಷ್ಟು ಮಾತ್ರ. ಆದರೆ ನೀವು ತಾಳ್ಮೆ ವಹಿಸಿದರೆ ನಿಶ್ಚಯವಾಗಿಯೂ ಇದು ಸಹನಾಶೀಲರಿಗೆ ಅತ್ಯುತ್ತಮ’ (16: 26), ‘ಯಾರಾದರೂ ಪ್ರತೀಕಾರವನ್ನು ದಾನ ಮಾಡಿದರೆ ಅದು ಅವರ ಪಾಲಿಗೆ ಪ್ರಾಯಶ್ಚಿತ್ತವಾಗುವುದು’ (5: 45), ‘ಕೆಡುಕಿನ ಪ್ರತಿಫಲ ಅದಕ್ಕೆ ಸಮಾನವಾದ ಕೆಡುಕಾಗಿದೆ. ಇನ್ನು ಯಾರಾದರೂ ಕ್ಷಮಿಸಿ ಬಿಟ್ಟರೆ ಹಾಗೂ ಸುಧಾರಿಸಿಕೊಂಡರೆ ಅದರ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ’ (42: 40). ಒಂದು ವೇಳೆ,
    ಕ್ಷಮೆ ಮತ್ತು ಪ್ರತೀಕಾರ-ಎಂಬೆರಡು ಸಹಜ ಆಯ್ಕೆಗಳಲ್ಲಿ ಸಲಾಹುದ್ದೀನ್‍ನ ತಂದೆ ಪ್ರತೀಕಾರವನ್ನೇ ಆಯ್ದುಕೊಂಡಿದ್ದರೆ ಅಲೆಕ್ಸಾಂಡರ್‍ನು ಸುದ್ದಿಗೇ ಒಳಗಾಗುತ್ತಿರಲಿಲ್ಲವೇನೋ..