Tuesday, January 9, 2018

ತಲಾಕ್ ತಲಾಕ್ ತಲಾಕ್ ಹೇಳಬೇಡಿ, ಸುಮ್ಮನೆ ತ್ಯಜಿಸಿಬಿಡಿ!

     
Muslim mens are so stupid. Why say Talaq Talaq Talaq and go to Jail when you can just leave her without saying anything and become the prime minister of India.. -  ‘ಮುಸ್ಲಿಮ್ ಪುರುಷರು ಕಡು ಮೂರ್ಖರು. ಕಾರಣವನ್ನು ನೀಡದೆಯೇ ಪತ್ನಿಯನ್ನು ತ್ಯಜಿಸಲು ಮತ್ತು ಭಾರತದ ಪ್ರಧಾನಿಯಾಗಲು ಅವಕಾಶ ಇರುವಾಗ ಈ ಮುಸ್ಲಿಮ್ ಪುರುಷರು ಯಾಕೆ ತಲಾಕ್ ತಲಾಕ್ ತಲಾಕ್ ಎಂದು ಹೇಳಬೇಕು ಮತ್ತು ಜೈಲಿಗೆ ಹೋಗಬೇಕು..’
   ಗೆಳೆಯ ಕಳುಹಿಸಿಕೊಟ್ಟ ಈ ವಾಟ್ಸ್ಯಾಪ್ ಸಂದೇಶದಲ್ಲಿ ತಮಾಷೆಯನ್ನೂ ಮೀರಿದ ಕಟು ವಾಸ್ತವವಿದೆ. ಕೇಂದ್ರ ಸರಕಾರವು ಏಕಪಕ್ಷೀಯವಾಗಿ ರಚಿಸಿದ ಮತ್ತು ಪಾರ್ಲಿಮೆಂಟಲ್ಲಿ ಮಂಡಿಸಿ ಅನುಮೋದಿಸಿಕೊಂಡ ಮುಸ್ಲಿಮ್ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯು ಸಮತೋಲನದಿಂದ ಕೂಡಿದೆಯೇ? ಈ ಮಸೂದೆಯನ್ನು ರಚಿಸಿದ್ದು ಕೇಂದ್ರ ಸಚಿವ ಸಂಪುಟದ ಆಂತರಿಕ ಸಮಿತಿ. ತ್ರಿವಳಿ ತಲಾಕನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್‍ನ ಬಾಗಿಲು ಬಡಿದ ಶಾಯಿರಾ ಬಾನುವಲ್ಲಾಗಲಿ, ಈ ಪ್ರಕರಣದ ಪ್ರತಿವಾದಿಗಳಲ್ಲಿ ಒಂದಾದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಲ್ಲಾಗಲಿ, ಸಂಘಟನೆಗಳಲ್ಲಾಗಲಿ ಅಥವಾ ಮುಸ್ಲಿಮ್ ಸಮುದಾಯದಲ್ಲಿರುವ ಶರೀಅತ್ ತಜ್ಞರಲ್ಲಾಗಲಿ ಈ ಸಮಿತಿಯು ಸಮಾಲೋಚನೆಯನ್ನೇ ನಡೆಸಿಲ್ಲ. ರಾಜ್ಯಗಳ ಅಭಿ ಪ್ರಾಯವನ್ನೂ ಪಡೆದುಕೊಂಡಿಲ್ಲ. ಅಷ್ಟಕ್ಕೂ, ತ್ರಿವಳಿ ತಲಾಕನ್ನು ಸುಪ್ರೀಮ್ ಕೋರ್ಟ್ ಸಂವಿಧಾನ ಬಾಹಿರ ಎಂದು ಕರೆದಿದೆ ನಿಜ. ಹಾಗಂತ, ಸಂವಿಧಾನ ಬಾಹಿರ ಎಂಬುದಕ್ಕೆ ಅಪರಾಧ (Crime ) ಎಂಬ ಅರ್ಥವೇನೂ ಇಲ್ಲವಲ್ಲ. ಆತ್ಮಹತ್ಯೆಯನ್ನು ಇತ್ತೀಚಿನ ವರೆಗೆ ಈ ದೇಶದಲ್ಲಿ ಅಪರಾಧವಾಗಿಯೇ ಪರಿಗಣಿಸಲಾಗುತ್ತಿತ್ತು. ಆದರೆ ಇದೀಗ ನ್ಯಾಯಾಲಯವು ಅದನ್ನು ಅಪರಾಧದ ವ್ಯಾಪ್ತಿಯಿಂದ ಹೊರಗಿಟ್ಟಿದೆ ಎಂಬುದು ಏನನ್ನು ಸೂಚಿಸುತ್ತದೆ? ವಿವಾಹವೆಂಬುದು ಇಸ್ಲಾಮಿನಲ್ಲಿ ನಾಗರಿಕ ಒಪ್ಪಂದ (Civil Contract). ಹೀಗಿರುವಾಗ ನಾಗರಿಕ ಒಪ್ಪಂದವೊಂದು ಕ್ರಿಮಿನಲ್ ಕೃತ್ಯವಾಗಿ ಮಾರ್ಪಡುವುದು ಎಷ್ಟು ಸರಿ ಮತ್ತು ಎಲ್ಲಿಯವರೆಗೆ ಸರಿ? ಇದು ಬೀರಬಹುದಾದ ಪರಿಣಾಮಗಳು ಏನೇನು? 2011ರ ಜನಗಣತಿ ಪ್ರಕಾರ ಪತಿಯಿಂದ ಪರಿತ್ಯಕ್ತಗೊಂಡ ಹಿಂದೂ ಮಹಿಳೆಯರ ಸಂಖ್ಯೆಯು ತಲಾಕ್‍ಗೊಳಪಟ್ಟ (ತ್ರಿವಳಿಯೂ ಸೇರಿದಂತೆ) ಮುಸ್ಲಿಮ್ ಮಹಿಳೆಯರ ಸಂಖ್ಯೆಗಿಂತ ಎಷ್ಟೋ ಪಾಲು ಹೆಚ್ಚು. ಪ್ರಧಾನಿ ಮೋದಿಯವರಿಂದ ತ್ಯಜಿಸಲ್ಪಟ್ಟು ಏಕಾಂಗಿಯಾಗಿ ಬದುಕುತ್ತಿರುವ ಜಶೋಧ ಬೆನ್ ಇವರಲ್ಲಿ ಒಬ್ಬರು. ಆದರೆ, ಈ ಕಾರಣಕ್ಕಾಗಿ ಶಿಕ್ಷೆಗೊಳಪಟ್ಟ ಹಿಂದೂ ಪುರುಷರು ಇಲ್ಲವೇ ಇಲ್ಲ. ಇದಕ್ಕೆ ತಾಜಾ ಉದಾಹರಣೆ ಪ್ರಧಾನಿ ನರೇಂದ್ರ ಮೋದಿಯವರೇ. ಕಾರಣ ಏನೆಂದರೆ, ಪತ್ನಿಯನ್ನು ತ್ಯಜಿಸುವುದು ಅಥವಾ ಪರಿತ್ಯಕ್ತೆಯಾಗಿ ಮಹಿಳೆ ಬದುಕುವುದು ಅಪರಾಧ ಅಲ್ಲ. ಒಂದು ವೇಳೆ, ಹೀಗೆ ಪರಿತ್ಯಕ್ತಗೊಂಡು ಬದುಕುತ್ತಿರುವ ಆಕೆಯ ಮೇಲೆ ಪತಿ ಸಂಭೋಗ ನಡೆಸಿದರೆ ಅದು ಭಾರತೀಯ ದಂಡಸಂಹಿತೆ 376 ಬಿ ಪ್ರಕಾರ ಅತ್ಯಾ ಚಾರವಾಗಿ ಗುರುತಿಸಿಕೊಳ್ಳುತ್ತದೆ. ಹಾಗಂತ, ಇದು ಅಪರಾಧ ವಾಗುವುದು ಆಕೆ ದೂರು ಕೊಟ್ಟಾಗ ಮಾತ್ರ. ಇನ್ನು, ಪತ್ನಿಯನ್ನು ಹೊಂದಿರುತ್ತಾ ಹಿಂದೂ ಪುರುಷನು ಇನ್ನೊಂದು ಮದುವೆ ಯಾಗುವುದನ್ನು ಭಾರತೀಯ ದಂಡಸಂಹಿತೆಯ 494ನೇ ವಿಧಿಯು ಅಪರಾಧವಾಗಿ ಪರಿಗಣಿಸುತ್ತದೆ. ಆದರೆ ಅದೂ ತಾನಾಗಿಯೇ ಅಪರಾಧವಾಗುವುದಿಲ್ಲ. ಮೊದಲ ಪತ್ನಿಯೋ ಅಥವಾ ಆಕೆಯ ಕುಟುಂಬಿಕರೋ ಆ ಬಗ್ಗೆ ದೂರು ದಾಖಲಿಸಬೇಕಾಗುತ್ತದೆ. ಆದರೆ, ಕೇಂದ್ರ ಮಂತ್ರಿ ರವಿಶಂಕರ್ ಪ್ರಸಾದ್ ಅವರು ಲೋಕಸಭೆಯಲ್ಲಿ ಮಂಡಿಸಿದ ಮುಸ್ಲಿಮ್ ಮಹಿಳಾ ಮಸೂದೆಯಲ್ಲಿ ಈ ಯಾವ ರಿಯಾಯಿತಿಗಳೂ ಇಲ್ಲ. ತ್ರಿವಳಿ ತಲಾಕ್ ಹೇಳುವುದನ್ನು ಜಾಮೀನುರಹಿತ ಮತ್ತು ವಾರಂಟ್ ಅಗತ್ಯವಿಲ್ಲದ (Cognizable) ಅಪರಾಧವಾಗಿ ಈ ಮಸೂದೆ ಪರಿಗಣಿಸುತ್ತದೆ. ಈ ಮಸೂದೆಯ ಧಾಟಿ ನೋಡಿದರೆ ತ್ರಿವಳಿ ತಲಾಕ್ ಎಂಬುದು ತಾನಾಗಿಯೇ ಜೈಲಿಗರ್ಹ ಅಪರಾಧವೆಂಬ ರೀತಿಯಲ್ಲಿದೆ. ಯಾರು ಕೇಸು ಕೊಟ್ಟರೂ ಕೊಡದಿದ್ದರೂ ಮುಸ್ಲಿಮ್ ಪುರುಷರನ್ನು ಮನೆಗೆ ನುಗ್ಗಿ ಎಳೆದುಕೊಂಡು ಹೋಗಬಹುದು ಎಂದು ಭಾವಿಸುವುದಕ್ಕೆ ಈ ಮಸೂದೆ ಪೂರಕವಾದ ರೀತಿಯಲ್ಲಿದೆ. ಯಾರು ದೂರು ಕೊಡಬೇಕು, ದೂರು ಕೊಡದಿದ್ದರೆ ಬಂಧನ ಆಗುವುದಿಲ್ಲವೇ ಅಥವಾ ಪೊಲೀಸರೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವರೇ ಎಂಬ ಬಗ್ಗೆ ಮಸೂದೆಯಲ್ಲಿ ಅಸ್ಪಷ್ಟತೆಯಿದೆ. ಕನಿಷ್ಠ ಸಂಸದೀಯ ಮಂಡಳಿಯನ್ನು ರಚಿಸಿ ಈ ಕುರಿತಂತೆ ಚರ್ಚಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನೂ ಕೇಂದ್ರ ಸರಕಾರ ತಿರಸ್ಕರಿಸಿದೆ. ಏನಿದರ ಮರ್ಮ? ಯಾಕಿಷ್ಟು ತುರ್ತು? ಹಿಂದೂ ಕೋಡ್ ಬಿಲ್ ಅನ್ನು ಈ ದೇಶದಲ್ಲಿ ಜಾರಿಗೊಳಿಸುವುದಕ್ಕಿಂತ ಮೊದಲು ಒಂದು ವರ್ಷಕ್ಕಿಂತಲೂ ಅಧಿಕ ಸಮಯಗಳವರೆಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಚರ್ಚೆಗೆ ಒಳಪಡಿಸಲಾಗಿತ್ತು ಎಂಬುದನ್ನು ಇದರ ಜೊತೆ ಹೋಲಿಸಿ ನೋಡಿದರೆ ಏನನಿಸುತ್ತದೆ? ಇದರ ಹಿಂದೆ ಅಡಗಿರುವುದು ಮುಸ್ಲಿಮ್ ಮಹಿಳೆಯರ ಮೇಲಿನ ಕಾಳಜಿಯೋ ಅಥವಾ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಕ್ಕೆ ಪೂರಕವಾದ ವಾತಾವರಣದ ನಿರ್ಮಾಣವೋ? ಒಂದು ಕಡೆ, ಬಿಜೆಪಿ ಮತ್ತು ಅದರ ಮಾತೃ ಸಂಘಟನೆಯು ಭಾರತೀಯರೆಲ್ಲ ಹಿಂದೂಗಳು ಎಂದು ವಾದಿಸುತ್ತಿದೆ. ಭಾರತೀಯ (ಹಿಂದೂ) ಸಂಸ್ಕೃತಿಯನ್ನು ಅಳವಡಿಸಿಕೊಳ್ಳಿ ಎಂದು ಮುಸ್ಲಿಮರ ಮೇಲೆ ಒತ್ತಡ ಹೇರುತ್ತಿದೆ. ಮುಸ್ಲಿಮ್, ಕ್ರೈಸ್ತ, ಬೌದ್ಧ, ಜೈನರೂ ಸೇರಿ ಹಿಂದೂಗಳಲ್ಲಿರುವ ನೂರಾರು ಜಾತಿಗಳೆಲ್ಲವೂ ಏಕ ನಾಗರಿಕ ಸಂಹಿತೆಯನ್ನು ಬೆಂಬಲಿಸಬೇಕೆಂದು ಅದು ಕರೆ ಕೊಡುತ್ತಿದೆ. ಇನ್ನೊಂದೆಡೆ, ಅತ್ಯಂತ ತುರ್ತಾಗಿ ಮುಸ್ಲಿಮ್ ಮಹಿಳಾ ಮಸೂದೆಯನ್ನು ಪಾರ್ಲಿಮೆಂಟ್‍ನಲ್ಲಿ ಮಂಡಿಸಲಾಗುತ್ತದೆ. ಇದು ಹುನ್ನಾರದ ಭಾಗವೇ? ಮುಸ್ಲಿಮರ ವೈವಾಹಿಕ ನಿಯಮಗಳು ಕಾಲಬಾಹಿರವಾದುದು ಎಂಬುದನ್ನು ಸಾರುವುದು ಇದರ ಒಳ ಉದ್ದೇಶವೇ? ಕಳೆದ ಆಗಸ್ಟ್‍ನಲ್ಲಿ ನೀಡಿದ ಬಹುಮತದ ತೀರ್ಪಿನಲ್ಲಿ ಸುಪ್ರೀಮ್ ಕೋರ್ಟು ತ್ರಿವಳಿ ತಲಾಕನ್ನು ಸಂವಿಧಾನ ಬಾಹಿರ ಎಂದು ಹೇಳಿದೆಯೇ ಹೊರತು ಅದನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಿಲ್ಲ. ತಲಾಕ್‍ನ ವಿಷಯದಲ್ಲಿ ತಪ್ಪಾದ ಕ್ರಮವನ್ನು ಕೈಬಿಟ್ಟು ಪವಿತ್ರ ಕುರ್‍ಆನ್ ಪ್ರಸ್ತುತಪಡಿಸಿರುವ ಮೂರು ಹಂತಗಳ ಸರಿಯಾದ ಕ್ರಮದ ಕಡೆಗೆ ಮುಸ್ಲಿಮರು ಮರಳಲಿ ಎಂಬ ಭಾವವೇ ಅದರ ತೀರ್ಪಿನಲ್ಲಿ ವ್ಯಕ್ತವಾಗಿತ್ತು. ತಪ್ಪಾದ ಕ್ರಮವನ್ನು ಸರಿಪಡಿಸುವುದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಿ ಎಂದು ಅದು ಕೇಂದ್ರ ಸರಕಾರಕ್ಕೆ ನಿರ್ದೇಶನವನ್ನೂ ನೀಡಿತ್ತು. ಆದರೆ, ಕೇಂದ್ರ ಸರಕಾರ ಈಗ ಮಂಡಿಸಿರುವ ಮುಸ್ಲಿಮ್ ಮಹಿಳಾ ಮಸೂದೆಯು ಕೋರ್ಟ್‍ನ ಉದ್ದೇಶವನ್ನು ಪೂರ್ತಿಗೊಳಿಸುವ ರೀತಿಯಲ್ಲಿದೆಯೇ? ತ್ರಿವಳಿ ತಲಾಕ್‍ಗೆ ಮೂರು ವರ್ಷ ಶಿಕ್ಷೆ ವಿಧಿಸುವುದೆಂದರೇನು? ಹಾಗೆ ಶಿಕ್ಷೆಗೊಳಪಟ್ಟ ಪತಿಯಿಂದ ಸೂಕ್ತ ಪರಿಹಾರಗಳನ್ನು ಪಡಕೊಳ್ಳಲು ಪತ್ನಿಗೆ ಅವಕಾಶ ನೀಡುವುದೆಂದರೇನು? ಮಕ್ಕಳನ್ನು ತನ್ನ ಬಳಿಯೇ ಇರಿಸಿಕೊಳ್ಳುವುದಕ್ಕೆ ಪತ್ನಿಗೆ ಅವಕಾಶ ಕಲ್ಪಿಸುವುದೆಂದರೇನು? ಇದರರ್ಥ ತ್ರಿವಳಿ ತಲಾಕ್ ಎಂಬುದು ಸರಿಯಾದ ತಲಾಕ್ ಎಂದೇ ಅರ್ಥವಲ್ಲವೇ? ಒಂದು ವೇಳೆ, ತ್ರಿವಳಿ ತಲಾಕ್ ಸಂವಿಧಾನ ಬಾಹಿರ ಮತ್ತು ತಪ್ಪಾದ ಕ್ರಮ ಎಂದಾದರೆ ಶಿಕ್ಷೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪತ್ನಿಗೆ ಪರಿಹಾರ ಕೊಡುವ ಮತ್ತು ಮಕ್ಕಳನ್ನು ಆಕೆಯ ವಶದಲ್ಲೇ  ಇರಿಸಿಕೊಳ್ಳುವ ಪ್ರಶ್ನೆಯೂ ಏಳುವುದಿಲ್ಲ. ತಲಾಕ್ ಸಿಂಧುವಾದಾಗ ಮಾತ್ರ ಈ ಎಲ್ಲವೂ ಸರಿ ಎನಿಸಿಕೊಳ್ಳುತ್ತದೆ. ನಿಜವಾಗಿ, ಸುಪ್ರೀಮ್ ಕೋರ್ಟ್ ಹೇಳಿರುವುದು ಸಂವಿಧಾನ ಬಾಹಿರ ತಲಾಕನ್ನು ಸರಿಪಡಿಸಿಕೊಳ್ಳುವು ದಕ್ಕೆ. ಕೇಂದ್ರ ಸರಕಾರವಾದರೋ ಈ ಸಂವಿಧಾನಬಾಹಿರ ತಲಾಕನ್ನೇ ಸಂವಿಧಾನಬದ್ಧಗೊಳಿಸಿದಂತಿದೆ ಮತ್ತು ಅದಕ್ಕೆ ಕಾನೂನು ಮಾನ್ಯತೆಯನ್ನು ನೀಡಿದಂತಿದೆ. ನಿಜಕ್ಕೂ, ಕೇಂದ್ರದ ಉದ್ದೇಶ ತ್ರಿವಳಿ ತಲಾಕನ್ನು ರದ್ದುಗೊಳಿಸುವುದಾಗಿದೆಯೋ ಅಥವಾ ಅದರ ಹೆಸರಲ್ಲಿ ಒಂದಷ್ಟು ಗೊಂದಲವನ್ನು ಹುಟ್ಟು ಹಾಕಿ, ಮುಸ್ಲಿಮ್ ಸಮುದಾಯವನ್ನು ಸತಾಯಿಸುವುದಾಗಿದೆಯೋ? ಪ್ರತಿದಿನ ಮಾಧ್ಯಮಗಳಿಗೆ ರಸವತ್ತಾದ ಸುದ್ದಿಯನ್ನು ಒದಗಿಸುವುದು ಮತ್ತು ಅದರ ಮರೆಯಲ್ಲಿ ನಿಂತು ಸುಖ ಪಡುವುದು ಹಾಗೂ ಸರಕಾರದ ಹರಕು ಬಾಯಿಗಳಿಂದ ಆಗಾಗ ಮುಸ್ಲಿಮ್ ವೈವಾಹಿಕ ನಿಯಮಗಳನ್ನು ಅಣಕಿಸಿ ಹೇಳಿಕೆಗಳನ್ನು ಹೊರಡಿಸುವ ಹುನ್ನಾರ ಇದರ ಹಿಂದಿದೆಯೇ?
      ಪಾಕಿಸ್ತಾನದಲ್ಲಿ ತಲಾಕ್‍ಗೆ ಸಂಬಂಧಿಸಿ ಮುಸ್ಲಿಮ್ ಕೌಟುಂಬಿಕ ಕಾನೂನು ಅಸ್ತಿತ್ವದಲ್ಲಿದೆ.
ಅದರ ಪ್ರಕಾರ, ತಲಾಕ್ ನೀಡಿದ (ಯಾವ ರೀತಿಯಲ್ಲಿ ನೀಡಿದರೂ) ವ್ಯಕ್ತಿ ಅದನ್ನು ಬರಹ ರೂಪದಲ್ಲಿ ಸರಕಾರ ನೇಮಿಸಿದ ಯೂನಿಯನ್ ಕೌನ್ಸಿಲ್‍ನ ಮುಖ್ಯಸ್ಥರಿಗೆ ಸಲ್ಲಿಸಬೇಕು ಮತ್ತು ಕೌನ್ಸಿಲ್‍ನ ಮುಖ್ಯಸ್ಥರು ಆತನ ಪತ್ನಿಗೆ ಅದರ ಒಂದು ಪ್ರತಿ ಯನ್ನು ರವಾನಿಸಬೇಕು. ಈ ಪತ್ರ ಸಿಕ್ಕಿದ 30 ದಿನಗಳೊಳಗೆ ಕೌನ್ಸಿಲ್ ಮುಖ್ಯಸ್ಥರು ಪರಿಹಾರ ಸಮಿತಿಯನ್ನು ರಚಿಸಬೇಕು. ಅದರಲ್ಲಿ ಎರಡೂ ಕಡೆಯ ಒಬ್ಬೊಬ್ಬ ಪ್ರತಿನಿಧಿಗಳಿರಬೇಕು. ರಾಜಿ ಪಂಚಾಯಿತಿಕೆಯೇ ಈ ಸಮಿತಿಯ ಮುಖ್ಯ ಗುರಿ. ಕೌನ್ಸಿಲ್ ಮುಖ್ಯಸ್ಥರು ನೋಟೀಸು ಜಾರಿ ಮಾಡಿದ ದಿನದಿಂದ ಮುಂದಿನ 90 ದಿನಗಳ ವರೆಗೆ ತಲಾಕ್ ಅನೂರ್ಜಿತವಾಗಿಯೇ ಇರುತ್ತದೆ. ಪತ್ನಿ ಗರ್ಭಿಣಿಯಾಗಿದ್ದರೆ ಪ್ರಸವದ ವರೆಗೆ ತಲಾಕ್ ಅನೂರ್ಜಿತ ವಾಗಿರುತ್ತದೆ.’
    ಇದೊಂದು ಉದಾಹರಣೆ ಅಷ್ಟೇ. ಪಾಕಿಸ್ತಾನ ಇಲ್ಲಿ ನೆಪ ಮಾತ್ರ. ನಮಗೆ ಮುಖ್ಯವಾಗಬೇಕಾದುದು ತಲಾಕ್‍ನ ತಪ್ಪಾದ ರೂಪವನ್ನು ಸರಿಯಾದ ರೂಪಕ್ಕೆ ಪರಿವರ್ತಿಸುವುದು ಹೇಗೆ ಎಂಬುದು. ಜೈಲಿಗಟ್ಟುವುದು ಎಂದರೆ ಪತಿ-ಪತ್ನಿಯನ್ನು ಶಾಶ್ವತ ವೈರಿಗಳಾಗಿಸುವುದು ಎಂದೇ ಅರ್ಥ. ಆ ಬಳಿಕ ಅವರಿಬ್ಬರೂ ದಂಪತಿಗಳಾಗಿ ಉಳಿಯುವುದಕ್ಕೆ ಸಾಧ್ಯವೇ ಇಲ್ಲ. ಇದೂ ಒಂದು ಪರಿಹಾರವೇ? ತ್ರಿವಳಿ ತಲಾಕ್ ತಪ್ಪು ಎಂದಾದರೆ ಆ ತಲಾಕನ್ನು ಅನೂರ್ಜಿತಗೊಳಿಸಿ ಸರಿಯಾದ ತಲಾಕ್‍ಗೆ ವೇದಿಕೆ ಸಿದ್ಧಪಡಿಸುವುದು ಅಗತ್ಯವಾಗಿತ್ತಲ್ಲವೇ? ಅಥವಾ ಮಾತುಕತೆ, ರಾಜಿ ಪಂಚಾಯಿತಿಕೆ, ಆಪ್ತ ಸಮಾಲೋಚನೆಗಳಿಗೆ ಅವಕಾಶ ಒದಗಬಹುದಾದಂತಹ ವಾತಾವರಣ ನಿರ್ಮಿಸುವುದು ಮುಖ್ಯವಾಗಿತ್ತಲ್ಲವೇ? ವಿವಾಹ ವಿಚ್ಛೇದನವೆಂಬುದು ಕೊಲೆ ಕೃತ್ಯದಂತೆ ಅಲ್ಲವಲ್ಲ. ಬೇಡವಾದ ವಿವಾಹ ಬಂಧನದಿಂದ ಮುಕ್ತಗೊಳಿಸುವುದನ್ನು ಅಪರಾಧವಾಗಿಯೋ ಸಂಕೀರ್ಣವಾಗಿಯೋ ನೋಡಬೇಕಾಗಿಲ್ಲವಲ್ಲ. ಇದು ಸಂವಿಧಾನ ಬಾಹಿರವಾಗಿರಬಾರದು ಎಂಬುದಷ್ಟೇ ಮುಖ್ಯವಾಗಬೇಕಲ್ಲ. ಇನ್ನು, ಈ ಮಸೂದೆಯಿಂದಾಗಿ, ‘ಸರಿ’ ತಲಾಕನ್ನೇ ತ್ರಿವಳಿ ಎಂದು ಆರೋಪಿಸಿ ದೂರು ದಾಖಲಿಸಬಹುದಾದ ಸಾಧ್ಯತೆಗಳೂ ಇದೆಯಲ್ಲವೇ? ಹೀಗೆ ದುರುಪಯೋಗವಾಗದಂತೆ ತಡೆಯಲು ಈ ಮಸೂದೆಯಲ್ಲಿ ಏನು ಪರಿಹಾರವಿದೆ? ಅಂತಿಮವಾಗಿ ತಲಾಕನ್ನು ಅಸಾಧ್ಯದ ಮಟ್ಟಕ್ಕೆ ಈ ಮಸೂದೆ ತಂದು ಮುಟ್ಟಿಸಲಿದೆಯೇ? ಅಷ್ಟಕ್ಕೂ,
    ಹೈನುದ್ಯಮ ನಡೆಸುವ ವಯೋವೃದ್ಧ ಮುಸ್ಲಿಮರನ್ನೂ ಗೋಹತ್ಯೆಯ ಹೆಸರಲ್ಲಿ ಥಳಿಸಿ ಕೊಲ್ಲುವ ಮತ್ತು ಲವ್ ಜಿಹಾದ್, ನೈತಿಕ ಪೊಲೀಸ್‍ಗಿರಿ ನಡೆಸುವ ಹಾಗೂ ಗೋಮಾಂಸ ಪತ್ತೆಯಲ್ಲಿ ತೊಡಗಿರುವ ಮಂದಿ ಇನ್ನು ಮುಂದಕ್ಕೆ ತ್ರಿವಳಿ ತಲಾಕನ್ನು ಪತ್ತೆ ಹಚ್ಚುವುದಕ್ಕೂ ಮುಂದಾಗಬಹುದೇ? ಯಾವ ಮನೆ, ಯಾವ ಗ್ರಾಮ, ಯಾವ ಪ್ರದೇಶದಲ್ಲಿ ತ್ರಿವಳಿ ತಲಾಕ್ ಪ್ರಕರಣ ನಡೆದಿದೆ ಎಂಬುದನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ಕೊಡುವುದಕ್ಕೆ ತಂಡ ರಚನೆಯಾಗಬಹುದೇ? ಸರಿ ತಲಾಕನ್ನೂ ತ್ರಿವಳಿ ಎಂದು ವದಂತಿ ಹಬ್ಬಿಸಿ ಬಂಧನವಾಗುವಂತಹ ವಾತಾವರಣವನ್ನು ಹುಟ್ಟುಹಾಕಬಹುದೇ? ಈವರೆಗೆ ಗೋವಿನ ಹೆಸರಲ್ಲಿ ನಡೆಯುತ್ತಿದ್ದ ಮುಸ್ಲಿಮ್ ವಿರೋಧಿ ದೌರ್ಜನ್ಯಗಳ ಪಟ್ಟಿಗೆ ಇನ್ನು ಮುಂದೆ ತಲಾಕೂ ಒಳಪಡಲಿದೆಯೇ?
      ಈ ಮಸೂದೆಗೆ ಸಂಬಂಧಿಸಿ ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಡಿ. 30ರಂದು ಬರೆದ ಸಂಪಾದಕೀಯಕ್ಕೆ Wrong Message (ತಪ್ಪು ಸಂದೇಶ) ಎಂಬ ಶೀರ್ಷಿಕೆಯನ್ನು ಕೊಟ್ಟಿತ್ತು. ನಿಜಕ್ಕೂ, ಈ ಶೀರ್ಷಿಕೆ ಅತ್ಯಂತ ಸೂಕ್ತ ಮತ್ತು ಸಮಯೋಚಿತ. ಆ ಮಸೂದೆ ರವಾನಿಸಿರುವುದು ತಪ್ಪು ಸಂದೇಶವನ್ನೇ.

Monday, January 1, 2018

ಹೊನ್ನಾವರದ ‘ಜಿಹಾದಿ'ಗಳನ್ನು ಹುಡುಕುತ್ತಾ..

      1.I have no hesitation in apologizing to the sikh community. I apologies not only to the sikh community. But to the whole Indian nation because what took place in 1984 was a negation of the concept of enshrined in our constitution. -
“ಸಿಖ್ ಸಮುದಾಯದೊಂದಿಗೆ ಕ್ಷಮೆ ಯಾಚಿಸುವುದಕ್ಕೆ ನನಗಾವ ಹಿಂಜರಿಕೆಯೂ ಇಲ್ಲ. ನಾನು ಸಿಖ್ ಸಮುದಾಯದೊಂದಿಗೆ ಮಾತ್ರವಲ್ಲ, ಇಡೀ ದೇಶದೊಂದಿಗೆ ಕ್ಷಮೆಯಾಚಿಸು ತ್ತೇನೆ. ಯಾಕೆಂದರೆ, 1984ರಲ್ಲಿ ಏನು ನಡೆದಿದೆಯೋ ಅದು ನಮ್ಮ ಸಂವಿಧಾನದ ಮೌಲ್ಯಗಳಿಗೆ ವಿರುದ್ಧ” - ಹಾಗಂತ ಪ್ರಧಾನಿ ಮನ್‍ಮೋಹನ್ ಸಿಂಗ್ ಅವರು ಪಾರ್ಲಿಮೆಂಟ್‍ನಲ್ಲಿ ಘೋಷಿಸಿದ್ದರು. ಅದು ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವೂ ಆಗಿತ್ತು.
    2. 2012ರಲ್ಲಿ ಅಮೇರಿಕದ ವಾಲ್ ಸ್ಟ್ರೀಟ್ ಜರ್ನಲ್‍ನ ಪತ್ರಕರ್ತರೋರ್ವರು ಗುಜರಾತ್‍ನ ಮುಖ್ಯ ಮಂತ್ರಿ ನರೇಂದ್ರ ಮೋದಿಯವರ ಸಂದರ್ಶನ ನಡೆಸಿ ದ್ದರು. 2002ರ ಗುಜರಾತ್ ಹತ್ಯಾಕಾಂಡಕ್ಕೆ ಕ್ಷಮೆ ಯಾಚಿಸುತ್ತೀರಾ ಎಂದವರು ಪ್ರಶ್ನಿಸಿದ್ದರು. ಆದರೆ ಮೋದಿ ನಿರಾಕರಿಸಿದ್ದರು. ಮಾತ್ರವಲ್ಲ, 2013ರಲ್ಲಿ ರಾಯಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ‘ಗುಜರಾತ್ ಹತ್ಯಾಕಾಂಡದ ಸಂತ್ರಸ್ತರನ್ನು ಕಾರಿನಡಿಗೆ ಬೀಳುವ ನಾಯಿ ಮರಿಗೆ’ ಹೋಲಿಸಿದ್ದರು.
ಈಗ ಒಬ್ಬರು ಮಾಜಿ ಮತ್ತು ಇನ್ನೊಬ್ಬರು ಹಾಲಿ ಪ್ರಧಾನಿಗಳಾಗಿದ್ದಾರೆ. ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್‍ರು ಈಗ ಪಾರ್ಲಿಮೆಂಟ್‍ನಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಕ್ಪಮೆಯಾಚನೆಯನ್ನು ಆಗ್ರಹಿಸುತ್ತಿದ್ದಾರೆ. ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಯವರು - ಮನ್‍ಮೋಹನ್ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ, ನಿವೃತ್ತ ಸೇನಾ ಮುಖ್ಯಸ್ಥರನ್ನು ಪಾಕ್ ಏಜೆಂಟ್ ಎಂದು ಕರೆದಿದ್ದರು. ಪಾಕ್ ಜೊತೆ ಸೇರಿ ನನ್ನ ಹತ್ಯೆಗೆ ಇವರು ಸಂಚು ಹೂಡಿದ್ದಾರೆ ಎಂದು ಆರೋಪಿಸಿದ್ದರು. ಈಗ ಚುನಾವಣೆ ಮುಗಿದಿದೆ. ಆದರೆ ಈ ದೇಶದ ಪ್ರಧಾನಿ ಯನ್ನೇ ಹತ್ಯೆಗೈಯಲು ಸಂಚು ರೂಪಿಸಿದವರ ವಿರುದ್ಧ ನರೇಂದ್ರ ಮೋದಿಯವರು ಈ ವರೆಗೂ ಕೇಸು ದಾಖಲಿಸಿಲ್ಲ ಅಥವಾ ಆರೋಪಕ್ಕೆ ಪೂರಕವಾದ ದಾಖಲೆಯನ್ನೂ ಬಿಡುಗಡೆಗೊಳಿಸಿಲ್ಲ. ಇಷ್ಟೊಂದು ಗಂಭೀರ ಪ್ರಕರಣದಲ್ಲಿ ಮೋದಿಯವರು ಮೌನ ವಾಗಿರುವುದರ ಅರ್ಥವೇನು? ಅವರು ತಪ್ಪಾಗಿ ಹಾಗೆ ಹೇಳಿ ದರೇ? ಹೌದು ಎಂದಾದರೆ ಅವರೇಕೆ P್ಷÀಮೆ ಯಾಚಿಸುವ ಸೌಜನ್ಯ ತೋರುತ್ತಿಲ್ಲ ಅಥವಾ ಅದೊಂದು ಚುನಾವಣಾ ತಂತ್ರವೇ? ಹಾಗಾದರೆ 2002ರ ಹತ್ಯಾಕಾಂಡವೂ ಚುನಾವಣಾ ತಂತ್ರದ ಭಾಗವಾಗಿತ್ತೇ?
ಅಷ್ಟಕ್ಕೂ, ಕ್ಷಮೆ ಯಾಚನೆಯಿಂದ ಸಂತ್ರಸ್ತರಿಗೆ ನ್ಯಾಯ ಸಿಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಸತ್ತವರನ್ನು ಮರಳಿ ಬದುಕಿಸಲು ಸಾಧ್ಯವಿಲ್ಲದ, ಅಂಗ ಊನಗೊಂಡವರನ್ನು ಮೊದಲಿ ನಂತಾಗಿಸದ ಮತ್ತು ಅನಾಥ ಮಕ್ಕಳಿಗೆ ತಮ್ಮವರನ್ನು ಮರಳಿಸಲಾಗದಷ್ಟು ದುರ್ಬಲವಾದುದು - ಕ್ಷಮೆ. ಆದರೆ ಅಂಥದ್ದೊಂದು  ಕ್ಷಮೆ ಸಂತ್ರಸ್ತರ ಮನಸ್ಸಿಗೆ ಒಂದಿಷ್ಟು ಸಾಂತ್ವನವನ್ನು ಕೊಡುತ್ತದೆ. ಕ್ಷಮೆ ಕೋರುವವನ ಬಗ್ಗೆ ಸಮಾಜದ ಮನಸ್ಸು ತುಸುವಾದರೂ ಮೃದುವಾಗುತ್ತದೆ. ‘ನನ್ನನ್ನು ಕ್ಷಮಿಸಿ’ ಅನ್ನುವ ಮೂಲಕ ಆತನೊಳಗೆ ಪಶ್ಚಾತ್ತಾಪಭಾವ ಮೂಡುತ್ತದೆ. ಇಲ್ಲದಿದ್ದರೆ 1984ರ ಸಿಕ್ಖ್ ಹತ್ಯಾಕಾಂಡಕ್ಕೆ ಎರಡು ಶತಮಾನಗಳ ಬಳಿಕ ಮನ್‍ಮೋಹನ್ ಸಿಂಗ್ ಕ್ಷಮೆ ಯಾಚಿಸಬೇಕಾದ ಅಗತ್ಯವೇ ಇರಲಿಲ್ಲ. 2002ರ ಗುಜರಾತ್ ಹತ್ಯಾಕಾಂಡವನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ನರೇಂದ್ರ ಮೋದಿಯವರು ಸಮರ್ಥನೆಯನ್ನು, ‘ದೊಡ್ಡ ಮರ ಉರುಳುವಾಗ ಸುತ್ತಲಿನ ಭೂಮಿ ಅಲುಗಾಡುವುದು ಸಹಜ’ ಎಂಬ ರಾಜೀವ್ ಗಾಂಧಿಯವರ ತಕ್ಷಣದ ಸಮರ್ಥನೆಯೊಂದಿಗೆ ಜೋಡಿಸಿ ಸಿಕ್ಖ್ ನರಮೇಧವನ್ನು ನಿರ್ಲಕ್ಷಿಸಬಹುದಿತ್ತು. ಆದರೆ ಮನ್‍ಮೋಹನ್ ಸಿಂಗ್‍ರೊಳಗಿನ ಸಜ್ಜನಿಕೆಯು ಕಾಂಗ್ರೆಸ್ ಪಕ್ಷದ ಮೇಲೆಯೇ ಪ್ರಭಾವ ಬೀರಿತು. ಕ್ಷಮೆ ಯಾಚನೆಯಿಂದ ಮನ್‍ಮೋಹನ್‍ರದ್ದಾಗಲಿ, ಕಾಂಗ್ರೆಸ್ ಪಕ್ಷದ್ದಾಗಲಿ ವರ್ಚಸ್ಸಿಗೆ ಧಕ್ಕೆಯೇನೂ ಆಗಲಿಲ್ಲ. ನಿಜವಾಗಿ, ಕ್ಷಮೆಯಾಚನೆ ಯಿಂದ ಯಾರೂ ಸಣ್ಣವರಾಗುವುದಿಲ್ಲ. ಕಳೆದ ನವೆಂಬರ್ 28ರಂದು ಕೆನಡದ ಪ್ರಧಾನಿ ಜಸ್ಟಿನ್ ಟ್ರುಡೇವ್‍ರು ತನ್ನ ದೇಶದ ಐಉಃಖಿ ಸಮುದಾಯದೊಂದಿಗೆ ಕ್ಷಮೆ ಯಾಚಿಸಿದರು. ಸರಕಾರಿ ಪ್ರಾಯೋಜಿತ ಪೀಡನೆ ಮತ್ತು ದೌರ್ಜನ್ಯಕ್ಕಾಗಿ ತಮ್ಮನ್ನು ಕ್ಷಮಿಸಬೇಕೆಂದು ಕೋರಿಕೊಂಡರು. ಇದಕ್ಕಿಂತ ಮೊದಲು ಇದೇ ಟ್ರುಡೇವ್ ಅವರು, ಸಿಕ್ಖ್ ಮತ್ತು ಇತರ ಪ್ರಯಾಣಿಕರಿಗೆ ಕೆನಡ ಪ್ರವೇಶಕ್ಕೆ ನಿರಾಕರಿಸಲಾದ 1914ರ ಕುಖ್ಯಾತ ಕೊಮಗತ ಮರು ಘಟನೆಗೆ ಕ್ಷಮೆ ಯಾಚಿಸಿದ್ದರು. ಇತ್ತೀಚೆಗಷ್ಟೇ ನ್ಯೂಝಿಲ್ಯಾಂಡ್ ಸರಕಾರವು ಮಾವೊಲಿ ಬುಡಕಟ್ಟಿನ ಮೇಲೆ ವಸಾಹತುಶಾಹಿ ವ್ಯವಸ್ಥೆ ಎಸಗಿದ ಅನ್ಯಾಯಕ್ಕಾಗಿ ಕ್ಷಮೆ ಯಾಚಿಸಿತು. ಮಾತ್ರವಲ್ಲ, ಸಂತ್ರಸ್ತ ಪೀಳಿಗೆಗೆ ಪರಿಹಾರವನ್ನು ಕೊಡುವ ಅಭೂತಪೂರ್ವ ತೀರ್ಮಾನವನ್ನೂ ಪ್ರಕಟಿಸಿತು. ಬ್ರಿಟನ್ನಿನ ಮಾಜಿ ಪ್ರಧಾನಿ ಟೋನಿ ಬ್ಲೇರ್‍ರು 1840ರ ಐರಿಶ್ ಪೊಟಾಟೋ ಪ್ರಕರಣಕ್ಕೆ ಸಂಬಂಧಿಸಿ ಆ ಸಮುದಾಯದ ಕ್ಷಮೆ ಯಾಚಿಸಿದ್ದರು. ದುರಂತ ಏನೆಂದರೆ, ಭಾರತೀಯ ರಾಜಕಾರಣಿಗಳು ತಪ್ಪನ್ನೇ ಎಸಗದ ಮಹಾ ಸಂಭಾವಿತರಂತೆ ವರ್ತಿಸುತ್ತಾರೆ. ಕಣ್ಣೆದುರೇ ತಪ್ಪು ಸಾಬೀತಾದರೂ ಪಶ್ಚಾತ್ತಾಪರಹಿತ ಭಾವ ಪ್ರದರ್ಶಿಸುತ್ತಾರೆ. ವಾರಗಳ ಹಿಂದೆ ಹೊನ್ನಾವರ ಹೊತ್ತಿ ಉರಿಯಿತು. ಶಾಲಾ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆದ ಬಗ್ಗೆ ವದಂತಿಗಳೂ ಹಬ್ಬಿದುವು. ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಕ್ಷಣ ಹೀಗೆ ಟ್ವೀಟ್ ಮಾಡಿದರು,
Jehadist tried to rape and murder a girl studying in 9th std near Honnavara. Why is the govt silent about this incident? Arrest those who molested and injured this girl. Where are you CM @Siddaramaiah? - “9ನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಹೊನ್ನಾವರದ ಯುವತಿಯನ್ನು ಅತ್ಯಾಚಾರ ನಡೆಸಿ ಕೊಲೆಗೈಯಲು ಜಿಹಾದಿಗಳು ಯತ್ನಿಸಿದ್ದಾರೆ. ಯಾಕೆ ಸರಕಾರ ಈ ಘಟನೆಯ ಕುರಿತು ಮೌನವಾಗಿದೆ? ಈ ಹುಡುಗಿಯನ್ನು ಚುಡಾಯಿಸಿದ ಮತ್ತು ಗಾಯಗೊಳಿಸಿದವರನ್ನು ಬಂಧಿಸಿ. ಎಲ್ಲಿದ್ದೀರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ?”
    ಆದರೆ ಆ ಇಡೀ ಪ್ರಕರಣದ ಹಿಂದೆ ಗಣೇಶ್ ನಾಯ್ಕ ಎಂಬ ಯುವಕನ ಪಾತ್ರವಿದ್ದು, ಶೋಭಾರ ‘ಜಿಹಾದಿಗಳಿಗೂ’ ಆ ಪ್ರಕರಣಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದನ್ನು ಆ ಯುವತಿ ನ್ಯಾಯಾಧೀಶರೆದುರೂ ಪೊಲೀಸರೆದುರೂ ಬಹಿ ರಂಗವಾಗಿ ಹೇಳಿಕೊಂಡಳು. ಗಣೇಶ್ ನಾಯ್ಕ ಆಕೆಯನ್ನು ನಿತ್ಯ ಚುಡಾಯಿಸುತ್ತಿದ್ದ. ಜೊತೆಗೇ ಆಕೆಗೆ ಪರೀಕ್ಷಾ ಭಯವೂ ಇತ್ತು. ನಿತ್ಯ 8 ಕಿ.ಮೀ. ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುತ್ತಿದ್ದ ಹುಡುಗಿಯು ಕೈಯನ್ನು ನಿಂಬೆ ಗಿಡದ ಮುಳ್ಳಿನಿಂದ ಸ್ವತಃ ಗೀರಿ ಕೊಂಡಿದ್ದಳು. ಇದನ್ನೇ ಶೋಭಾ ಕರಂದ್ಲಾಜೆ ಜಿಹಾದಿಗಳ ಕೃತ್ಯವಾಗಿ ಟ್ವೀಟ್ ಮಾಡಿದ್ದರು. ಇಷ್ಟಿದ್ದೂ, ಶೋಭಾ ಈ ವರೆಗೆ ಕ್ಷಮೆ ಯಾಚಿಸಿಲ್ಲ. ಸಂಸದೆಯಾಗಿ ಶೋಭಾ ಹೊರಿಸಿದ ಆರೋಪ ಅತ್ಯಂತ ಗಂಭೀರವಾದುದು. ಒಂದು ಸಮುದಾಯದ ಮೇಲೆ ಸಮಾಜ ತಿರುಗಿ ಬೀಳುವುದಕ್ಕೆ ಪ್ರೇರಣೆ ಕೊಡುವಂತಹದ್ದು. ಆದರೂ ಈ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸುವುದಿಲ್ಲವೆಂದರೆ ಅದು ಸಾರುವ ಸಂದೇಶವೇನು?
    ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಈ ದೇಶದ ನ್ಯಾಯಾಂಗವು ಕ್ರಿಮಿನಲ್ ಕೃತ್ಯವಾಗಿ ಪರಿಗಣಿಸಿದೆ. ಬಿಜೆಪಿ ನಾಯಕರಾದ ಅಡ್ವಾಣಿ, ಉಮಾಭಾರತಿ, ಜೋಶಿ ಸೇರಿದಂತೆ ಹಲವು ಪ್ರಮುಖರ ಮೇಲೆ ಕೇಸು ದಾಖಲಾಗಿದೆ. ಈ ದೇಶದ ಸಂವಿಧಾನಕ್ಕೆ ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಗೆ ಧಕ್ಕೆ ತರಲಾದ ದಿನವಾಗಿ ಡಿಸೆಂಬರ್ 6ನ್ನು ಪರಿಗಣಿಸಲಾಗುತ್ತದೆ. ಅಡ್ವಾಣಿಯವರ ನಾಯಕತ್ವದಲ್ಲಿ ಹೊರಟ ರಥಯಾತ್ರೆಯಲ್ಲೇ  ಬಾಬರಿ ಮಸೀದಿ ಧ್ವಂಸಗೊಂಡಿತ್ತು. ಬಳಿಕ ಸುಮಾರು 2 ಸಾವಿರ ಮಂದಿಯ ಹತ್ಯೆಯೂ ನಡೆಯಿತು. ಆದರೂ ಬಿಜೆಪಿ ಅಧಿಕೃತವಾಗಿ ಈ ಕೃತ್ಯಕ್ಕೆ ದೇಶದ ಕ್ಷಮೆ ಯಾಚಿಸಿಲ್ಲ. ಧ್ವಂಸ ಕೃತ್ಯಕ್ಕೆ 25 ವರ್ಷಗಳು ಸಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದು ಹೀಗೆ,
    ‘ವರ್ಷಗಳಿಂದ ಒತ್ತಿಡಲಾಗಿದ್ದ ಹಿಂದೂಗಳ ಶಕ್ತಿಯನ್ನು 1992 ಈ ದಿನದಂದು (ಡಿಸೆಂಬರ್ 6) ಕರಸೇವಕರು ಪ್ರದರ್ಶಿಸಿದರು’.
    ನಿಜಕ್ಕೂ ಇದು ಹೆಮ್ಮೆ ಪಡಬೇಕಾದ ಸಂಗತಿಯೇ? ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆಯನ್ನೇ ಧಿಕ್ಕರಿಸಿ ನಡೆಸಲಾದ ಕೃತ್ಯವೊಂದು ಕ್ಷಮೆಯಾಚನೆಯ ಬದಲು ಹೆಮ್ಮೆಯ ಸಂದರ್ಭವಾಗಿ ವ್ಯಾಖ್ಯಾನಕ್ಕೆ ಒಳಗಾಗುತ್ತಿರುವುದೇಕೆ? ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳುವುದಕ್ಕೂ ತಪ್ಪನ್ನೇ ಸರಿ ಎಂದು ಸಮರ್ಥಿಸಿಕೊಳ್ಳುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಒಂದು ಸಂಸ್ಕೃತಿಯಾದರೆ ಇನ್ನೊಂದು ವಿಕೃತಿ. ಒಂದು ಮನುಷ್ಯ ಸಹಜವಾದರೆ ಇನ್ನೊಂದು ಮನುಷ್ಯ ವಿರೋಧಿ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಮನುಷ್ಯರೇ ಇz್ದÁರೆ. ಮನುಷ್ಯರೆಂದ ಮೇಲೆ ಸರಿ-ತಪ್ಪುಗಳು ಸಹಜ. ಆದರೆ ಬಿಜೆಪಿಯು ತಪ್ಪಾತೀತದಂತೆ ವರ್ತಿಸುತ್ತಿರುವುದೇಕೆ? ನೋಟು ಅಮಾನ್ಯೀಕರಣವು ಈ ದೇಶದ ಮೇಲೆ ಆಘಾತಕಾರಿ ಪರಿಣಾಮಗಳನ್ನು ಬೀರಿತು. ಇದರಿಂದಾಗಿ ಅಸಂಖ್ಯ ಮಂದಿ ಉದ್ಯೋಗ ಕಳಕೊಂಡರು. ಸಣ್ಣ ಕೈಗಾರಿಕೆಗಳು ಬಾಗಿಲು ಮುಚ್ಚಿದುವು. ನೂರಕ್ಕಿಂತಲೂ ಅಧಿಕ ಮಂದಿ ಬ್ಯಾಂಕ್‍ಗಳೆದುರು ಸಾವಿಗೀಡಾದರು. ಇಷ್ಟೆಲ್ಲ ಆಗಿಯೂ ಆ ಇಡೀ ಪ್ರಕ್ರಿಯೆಯಿಂದ ದೇಶಕ್ಕಾದ ಲಾಭ ಏನೇನೂ ಇಲ್ಲ ಎಂಬುದನ್ನು ಸ್ವತಃ ಆರ್‍ಬಿಐಯೇ ಅಂಕಿ-ಅಂಶವನ್ನು ಮುಂದಿಟ್ಟುಕೊಂಡು ಸ್ಪಷ್ಟಪಡಿಸಿತು. ಆದರೂ ಬಿಜೆಪಿ ಈ ದೇಶದ ಜನರಲ್ಲಿ ಕ್ಷಮೆ ಯಾಚಿಸುವ ಸೌಜನ್ಯವನ್ನೇ ತೋರಲಿಲ್ಲ. ಅದರ ಬದಲು ನೋಟು ಅಮಾನ್ಯಕ್ಕೆ ಒಂದು ವರ್ಷ ತುಂಬಿದುದನ್ನು ‘ಭ್ರಷ್ಟಾಚಾರ ವಿರೋಧಿ ದಿನ’ ವಾಗಿ ಆಚರಿಸಿತು. ನಿಜಕ್ಕೂ ನೋಟು ಅಮಾನ್ಯದಿಂದ ಭ್ರಷ್ಟಾಚಾರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆಯೇ? ಬೀರಿದ್ದರೆ ಅದರ ವಿವರಗಳೇನು? ನೋಟು ಅಮಾನ್ಯಕ್ಕಿಂತ ಮೊದಲು ಮತ್ತು ಆ ಬಳಿಕದ ಭ್ರಷ್ಟಾಚಾರಗಳಲ್ಲಿ ಆಗಿರುವ ಬದಲಾವಣೆಗಳೇನು.. ಇಂಥ ಯಾವ ಪ್ರಶ್ನೆಗಳಿಗೂ ಉತ್ತರವನ್ನು ನೀಡದೇ ನವೆಂಬರ್ 8ರಂದು ಸಂಭ್ರಮಿಸುವುದೆಂದರೆ, ಅದನ್ನು ಏನೆಂದು ಕರೆಯಬೇಕು?
     ಬಹುಶಃ, ಭಾರತೀಯ ರಾಜಕಾರಣಿಗಳ ಪಾಲಿಗೆ ಅದರಲ್ಲೂ ಬಿಜೆಪಿಯ ಮಟ್ಟಿಗೆ ಚಿಠಿoಟogಥಿ (ಕ್ಷಮೆಯಾಚನೆ) ಎಂಬುದು ಅನ್ಯ ಪದವಾಗಿದೆ. ಅಂದಹಾಗೆ, ಒಂದು ಪಕ್ಷ ಎಷ್ಟು ಪ್ರಾಮಾಣಿಕ ಎಂಬುದನ್ನು ಆ ಪಕ್ಷ ತನ್ನದೇ ತಪ್ಪುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಆಧಾರದ ಮೇಲೆ ಅಳೆಯಬಹುದು. ತಪ್ಪನ್ನು ತಪ್ಪು ಎಂದು ಒಪ್ಪದ ಪಕ್ಷ ಜನಸ್ನೇಹಿಯಾಗುವುದಕ್ಕೆ ಸಾಧ್ಯವಿಲ್ಲ. ಉತ್ತರ ಪ್ರದೇಶದ ಗೋರಖ್‍ಪುರದ ಸರಕಾರಿ ಆಸ್ಪತ್ರೆಯಲ್ಲಿ 70ಕ್ಕಿಂತ ಅಧಿಕ ಮಕ್ಕಳು ಎರಡು ದಿನಗಳೊಳಗೆ ಸಾವಿಗೀಡಾದಾಗ, “ಭಾರತದಂತಹ ದೊಡ್ಡ ದೇಶದಲ್ಲಿ ಇವೆಲ್ಲ ಸಾಮಾನ್ಯ” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‍ಷಾ ಹೇಳಿದ್ದರು.
      ಸಮರ್ಥನೆಯೊಂದೇ ರಾಜಕೀಯ ಅಲ್ಲ. ಪಶ್ಚಾತ್ತಾಪ ಮತ್ತು ಕ್ಷಮಾಯಾಚನೆಯೂ ರಾಜಕೀಯವೇ. ಇದನ್ನು ತಿರಸ್ಕರಿಸುವ ಪಕ್ಷ ಖಂಡಿತ ಜನವಿರೋಧಿ.


ಕ್ಷಮಿಸಿ ಬಿಡು ನನ್ನ..



1. ಮಳೆ
2. ಸಂಪತ್ತಿನಲ್ಲಿ ಹೆಚ್ಚಳ
3. ಸಂತಾನ ವೃದ್ಧಿ4. ಉದ್ಯಾನ
5. ಕಾಲುವೆ
   ಈ ಐದೂ ಸಂಗತಿಗಳು ಮನುಷ್ಯನ ಪಾಲಿಗೆ ಇಷ್ಟವಾದವುಗಳು. ಈ ಐದನ್ನೂ ಮನುಷ್ಯ ಬಯಸುತ್ತಾನೆ. ಆಧುನಿಕ ಜಗತ್ತಿನ ಆವಿಷ್ಕಾರಗಳಲ್ಲಿ ಅತೀ ಹೆಚ್ಚು ಜನಪ್ರಿಯವಾಗಿರುವ ವಾತಾಯನ (AC) ಇದ್ದೂ ಬೆವರುವ ಮನುಷ್ಯನನ್ನು ಸದಾ ತಂಪಾಗಿಡುವುದು ಮಳೆ. ಮಳೆಯು ನೀರಿನ ಒರತೆಯನ್ನಷ್ಟೇ ಚಿಮ್ಮಿಸುವುದಲ್ಲ. ಒಟ್ಟು ಜಗತ್ತನ್ನೇ ತಂಪಾಗಿಸುತ್ತದೆ. ತಂಪು ಅನ್ನುವುದು ಮನುಷ್ಯ ಪ್ರಕೃತಿ. ಬಿಸಿ ಅದರ ವಿರೋಧಿ. ಎಲ್ಲಿ ಬಿಸಿ ಇರುತ್ತೋ ಅಲ್ಲಿ ಭಯ, ಹಾಹಾಕಾರ, ಗುಂಪು ಗುಳೇ ಇರುತ್ತದೆ. ಕಾಡಿಗೆ ಬೆಂಕಿ ಹತ್ತಿಕೊಂಡಿತೆಂದರೆ ಪ್ರಾಣಿಗಳು ಭಯಭೀತವಾಗುತ್ತವೆ. ನಾಡೂ ಚಿಂತಿತವಾಗುತ್ತದೆ. ಈ ಬಿಸಿ ವ್ಯಕ್ತಿಯಲ್ಲಿ ಕಾಣಿಸಿಕೊಂಡರೆ, ಕೆಲವೊಮ್ಮೆ ಆತ ನಿಯಂತ್ರಣ ಕಳಕೊಳ್ಳುತ್ತಾನೆ. ಆಡಬಾರದ ಮಾತುಗಳನ್ನು ಆಡುತ್ತಾನೆ. ಹಲ್ಲೆ-ಹತ್ಯೆಗಳ ವರೆಗೆ ಈ ಬಿಸಿ ಕೊಂಡೊಯ್ಯುವುದೂ ಇದೆ. ಇದಕ್ಕೆ ವಿರುದ್ಧವಾಗಿ ತಂಪನ್ನು ಕಲ್ಪಿಸಿಕೊಳ್ಳಿ. ಧಾರಾಕಾರವಾಗಿ ಸುರಿಯುವ ಮಳೆಯ ಜೂಂ ನಾದಕ್ಕೆ ನಿಮ್ಮನ್ನು ಒಡ್ಡಿಕೊಳ್ಳಿ. ಅದು ತೃಪ್ತಿ, ಖುಷಿ, ನೆಮ್ಮದಿಯ ಭಾವವನ್ನು ಚಿಮ್ಮಿಸುತ್ತದೆ. ಸಾಮಾನ್ಯವಾಗಿ ಜನರು ವಿಹಾರಕ್ಕೆ ಆಯ್ಕೆ ಮಾಡಿಕೊಳ್ಳುವ ಸ್ಥಳಗಳೆಲ್ಲ ಯಾಕೆ ತಂಪಿನದ್ದಾಗಿರುತ್ತವೆ? ನವ ವಧೂ-ವರರು ಯಾಕೆ ಕಠಿಣ ಬಿಸಿ ಇರುವ ಪ್ರದೇಶಗಳನ್ನು ಹನಿಮೂನ್‍ಗೆ ಆಯ್ಕೆ ಮಾಡಿಕೊಳ್ಳುವುದಿಲ್ಲ? ಸಂಜೆಯ ಸಮಯದಲ್ಲಿ ಸಮುದ್ರ ತೀರಕ್ಕೋ ಪಾರ್ಕಿಗೋ ನಾವು ಭೇಟಿ ಕೊಡುವುದೇಕೆ? ಅದು ಮನುಷ್ಯನನ್ನು ತಂಪಾಗಿಡುತ್ತದೆ. ರಮ್ಯ ಭಾವನೆಗಳನ್ನು ಅದು ಸೃಷ್ಟಿ ಮಾಡುತ್ತದೆ. ಅತೀ ಹೆಚ್ಚು ಪ್ರೇಮ ಕಾವ್ಯಗಳು ಹುಟ್ಟು ಪಡೆದಿರುವುದೇ ತಂಪಾದ ತಾಣಗಳಲ್ಲಿ. ಮಳೆ ಅದರ ನಿರ್ಮಾತೃ. ಧಾರಾಕಾರ ಸುರಿಯುವ ಮಳೆಯ ನಾದಕ್ಕೆ ಮನುಷ್ಯ ಎಲ್ಲವನ್ನೂ ಮರೆಯುತ್ತಾನೆ. ಅದು ಮಣ್ಣನ್ನಷ್ಟೇ ಜವುಗು ಗೊಳಿಸುವುದಲ್ಲ, ಮನುಷ್ಯರ ಹೃದಯಗಳನ್ನೂ ಹದ ಮಾಡುತ್ತದೆ. ವಿಶ್ವಾಸ (ಈಮಾನ್) ಅಂದರೆ ಏನು ಎಂಬ ಅಲೀ(ರ) ಅವರ ಪ್ರಶ್ನೆಗೆ ಪ್ರವಾದಿ ಮುಹಮ್ಮದ್(ಸ)ರು ಕೊಟ್ಟ ಉತ್ತರ ಅತ್ಯಂತ ಕೌತುಕಪೂರ್ಣವಾದುದು. ‘ವಿಶ್ವಾಸ ಎಂಬುದು ನಾಲ್ಕು ಕಂಬಗಳಿಂದ ಎತ್ತರಿಸಿ ನಿಲ್ಲಿಸಲಾದ ಒಂದು ಕಟ್ಟಡ. ಆ ಕಂಬಗಳಲ್ಲಿ ಸಹನೆ ಎಂಬ ಕಂಬವೂ ಒಂದು’ ಎಂದವರು ಹೇಳುತ್ತಾರೆ. ತಾಳ್ಮೆ ವಹಿಸುವುದು ಪ್ರತೀಕಾರ ಎಸಗುವುದಕ್ಕಿಂತ ಉತ್ತಮ (16:126) ಎಂದು ಒಂದು ಕಡೆ ಹೇಳುವ ಪವಿತ್ರ ಕುರ್‍ಆನ್, ಇನ್ನೊಂದು ಕಡೆ, ಅಸಭ್ಯ ಮಾತನ್ನಾಡುವವರಿಗೆ ಪ್ರತಿಯಾಗಿ ಸಹನೆ ವಹಿಸಿರಿ (73:10) ಎಂದೂ ಹೇಳುತ್ತದೆ. ಅಲ್ಲದೇ ಈ ಕುರಿತಂತೆ ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಬದುಕಿನಲ್ಲಿ ಧಾರಾಳ ಉದಾಹರಣೆಗಳೂ ಇವೆ. ಪ್ರವಾದಿ ಮುಹಮ್ಮದ್(ಸ)ರಂತೂ ಈ ಸಹನೆಯ ಮಾಡೆಲ್ ಆಗಿ ಬದುಕಿದ್ದಾರೆ.
2. ಯಾರೂ ಕೂಡಾ ಬಡವರಾಗಿಯೇ ಉಳಿಯಬೇಕೆಂದು ಪ್ರಾರ್ಥಿಸುವುದಿಲ್ಲ. ಒಂದು ರೀತಿಯಲ್ಲಿ, ಮನುಷ್ಯ ಪ್ರತಿದಿನವೂ ತನ್ನ ಸಂಪತ್ತಿನ ವೃದ್ಧಿಗಾಗಿ ಪ್ರಯತ್ನಪಡುತ್ತಾನೆ. ಕೂಲಿ ಕಾರ್ಮಿಕನೋರ್ವ ಅಷ್ಟಿಷ್ಟು ಕೂಡಿಡುತ್ತಾ ಒಂದು ದಿನ ಆ ಮೊತ್ತ ಅಧಿಕವಾಗುವುದನ್ನು ನಿರೀಕ್ಷಿಸುತ್ತಾನೆ. ಬಡತನ ಮುಕ್ತ ಜೀವನದ ಕನಸು ಹೆಣೆಯುತ್ತಾನೆ. ಪ್ರತಿದಿನ ಒಂದು ಸಾವಿರ ರೂಪಾಯಿ ವರಮಾನವಿರುವ ವ್ಯಾಪಾರಿಯೋರ್ವ ಅಲ್ಲಿಗೇ ತನ್ನನ್ನು ನಿಯಂತ್ರಿಸಿಕೊಳ್ಳುವುದಿಲ್ಲ. ಒಂದು ಸಾವಿರವನ್ನು ಒಂದೂವರೆಯೋ ಎರಡೋ ಆಗಿ ಹೆಚ್ಚಿಸಲು ಯೋಜನೆ ಹಾಕಿಕೊಳ್ಳುತ್ತಾನೆ. ವ್ಯಾಪಾರದ ಇನ್ನೊಂದು ಶಾಖೆ ಆರಂಭಿಸುವ ಬಗ್ಗೆ ಚಿಂತಿಸುತ್ತಾನೆ. ಒಂದು ವೇಳೆ ಅದು ಕೈಗೂಡಿದರೂ ಪ್ರಯತ್ನ ಅಲ್ಲಿಗೇ ನಿಲ್ಲುವುದಿಲ್ಲ. ಇನ್ನೊಂದು ಶಾಖೆಯನ್ನು ತೆರೆಯುವ ಪ್ರಯತ್ನಗಳು ನಡೆಯುತ್ತವೆ. ಶ್ರೀಮಂತಿಕೆ, ಸಂಪತ್ತು, ಬಡತನರಹಿತ ಬದುಕು.. ಇವೆಲ್ಲ ಮಾನವ ಸಹಜ ಬಯಕೆಗಳು. ಆದ್ದರಿಂದಲೇ ಜಗತ್ತಿನಲ್ಲಿ ಸರ್ವಸಂಗ ಪರಿತ್ಯಾಗಿಗಳ ಸಂಖ್ಯೆ ಬಹಳ ಬಹಳ ಕಡಿಮೆ. ಧರ್ಮ ಯಾವುದೇ ಆಗಿದ್ದರೂ ಸಂಪತ್ತನ್ನು ತಿರಸ್ಕಾರಾರ್ಹವಾಗಿಯೋ ವಜ್ರ್ಯವಾಗಿಯೋ ಕಾಣು ವವರು ಯಾರೂ ಇಲ್ಲ. ಹಾಗಂತ, ಸಂಪತ್ತನ್ನು ಗಳಿಸುವ ವಿಷಯದಲ್ಲಿ ಭಿನ್ನ ಅಭಿಪ್ರಾಯಗಳಿರಬಹುದು. ಬಡ್ಡಿಯ ಮೂಲಕ ಸಂಪತ್ತನ್ನು ಹೆಚ್ಚುಗೊಳಿಸುವ ಮಂದಿ ಇರಬಹುದು. ಜೂಜಿನಲ್ಲಿ ಹಣ ತೊಡಗಿಸಿ ಹಣ ವೃದ್ಧಿಸುವವರು ಇರಬಹುದು. ಮದ್ಯ, ಅಕ್ರಮ ವಹಿವಾಟುಗಳಲ್ಲಿ ಹಣವನ್ನು ತೊಡಗಿಸಿ ಸಂಪತ್ತು ವೃದ್ಧಿಸುವುದಕ್ಕೆ ಪ್ರಯತ್ನಿಸುವವರೂ ಇರಬಹುದು. ಮತ್ತು ಇವೆಲ್ಲವನ್ನೂ ತಪ್ಪು ಮಾರ್ಗ ಎಂದು ಖಚಿತವಾಗಿ ನಂಬುತ್ತಲೇ ಸರಿಮಾರ್ಗಗಳಲ್ಲಿ ಸಂಪತ್ತು ಹೆಚ್ಚುಗೊಳಿಸುವ ಪ್ರಯತ್ನದಲ್ಲಿ ತೊಡಗಿರುವವರೂ ಇರಬಹುದು.
3. ಸಂತಾನವನ್ನು ಬಯಸದ ದಂಪತಿಗಳು ತೀರಾ ತೀರಾ ವಿರಳ. ಸಂತಾನ ಭಾಗ್ಯ ಅನ್ನುವ ಪದಪುಂಜವೇ ಇದೆ. ಮಕ್ಕಳಾಗದವರಿಗೆ ಮಕ್ಕಳಾಗಿಸುವ ವಿವಿಧ ಚಿಕಿತ್ಸಾ ಪದ್ಧತಿಗಳು ಮತ್ತು ವೈದ್ಯರ ವಿವರಗಳು ಮಾಧ್ಯಮಗಳಲ್ಲಂತೂ ಜಾಹೀರಾತುಗಳಾಗಿ ಪ್ರಕಟವಾಗುತ್ತಲೇ ಇರುತ್ತವೆ. ಮಕ್ಕಳಾಗದ ದಂಪತಿಗಳು ಇನ್ನಾರದೋ ಮಗುವನ್ನು ದತ್ತುಪಡಕೊಳ್ಳುತ್ತಾರೆ. ಚಿತ್ರರಂಗದಲ್ಲಂತೂ ಈ ಕ್ರಮ ಇನ್ನಷ್ಟು ವಿಪರೀತ ರೀತಿಯಲ್ಲಿ ಚಾಲ್ತಿಯಲ್ಲಿದೆ. ಗರ್ಭ ಧರಿಸಲು ಇಷ್ಟಪಡದ ನಟಿಯು ಮಕ್ಕಳನ್ನು ದತ್ತುಪಡೆದು ಸಾಕುವುದಿದೆ. ಸರಕಾರಗಳೂ ಸಂತಾನ ಸಹಿತ ಕುಟುಂಬ ಜೀವನದ ಪರವಾಗಿದೆ. ಸಂತಾನ ನಿಯಂತ್ರಣದ ಕುರಿತಂತೆ ಮಾತುಗಳೇನೇ ಇರಲಿ, ಸಂತಾನವೇ ಇರಬಾರದ ಸ್ಥಿತಿಯೊಂದನ್ನು ಯಾರೂ ಪ್ರಸ್ತಾಪಿಸುವು ದಿಲ್ಲ. ಒಂದು ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಎರಡಿರಬೇಕೋ ಮೂರಿರಬೇಕೋ.. ಎಂದು ಮುಂತಾಗಿ ಚರ್ಚೆಯಾಗುತ್ತದೆಯೇ ಹೊರತು ಒಂದು ಬೇಕೋ ಬೇಡವೋ ಎಂಬ ಚರ್ಚೆಯನ್ನು ಯಾವ ಸರಕಾರವೂ ಆರಂಭಿಸಿಲ್ಲ. ಯಾವ ಸಮಾಜವೂ ಆ ಬಗೆಯ ಚರ್ಚೆಯನ್ನು ಮಾನ್ಯ ಮಾಡುತ್ತಿಲ್ಲ. ಒಂದು ಸಮಾಜವು ಸಂತಾನರಹಿತ ಸ್ಥಿತಿಯೆಡೆಗೆ ತಲುಪುವುದೆಂದರೆ, ಚೈತನ್ಯರಹಿತವಾಗುವುದು ಎಂದರ್ಥ. ಒಂದು ಪ್ರದೇಶದ ಅಭಿವೃದ್ಧಿ ಆ ಪ್ರದೇಶ ದಲ್ಲಿರುವ ಜನಸಂಪತ್ತನ್ನು ಆಧರಿಸಿರುತ್ತದೆ. ಯುವ ಸಮೂಹ ಅಭಿವೃದ್ಧಿಯ ಸಂಕೇತ. ವೃದ್ಧರ ಸಂಖ್ಯೆ ಅಧಿಕಗೊಳ್ಳುವುದೆಂದರೆ, ಅಭಿವೃದ್ಧಿಯ ನಡೆ ಸಾವಿನೆಡೆಗೆ ಸಾಗುತ್ತಿದೆ ಎಂದರ್ಥ. ಆದ್ದರಿಂದಲೇ ಸಿದ್ಧಾಂತ, ವಿಚಾರಧಾರೆಗಳು ಏನೇ ಆಗಿರಬಹುದು, ಆದರೆ ಮಕ್ಕಳನ್ನು ಹೊಂದುವ ವಿಷಯದಲ್ಲಿ ಎಲ್ಲ ಸಿದ್ಧಾಂತಗಳ ನಿಲುವೂ ಬಹುತೇಕ ಒಂದೇ. ಪುರಾತನ ಕಾಲದ ಈಜಿಪ್ಟ್ ನಲ್ಲಿ ರಾಜ ಫರೋವನು ತನ್ನ ಸಾಮ್ರಾಜ್ಯದಲ್ಲಿರುವ ಇಸ್ರಾಈಲ್ ವಂಶದಲ್ಲಿ ಹುಟ್ಟುವ ಪ್ರತಿ ಗಂಡು ಮಗುವನ್ನೂ ಕೊಲ್ಲುವ ಆದೇಶ ಹೊರಡಿಸಿದುದನ್ನು ಪವಿತ್ರ ಕುರ್‍ಆನ್ ಉಲ್ಲೇಖಿಸಿದೆ ಮತ್ತು ಆ ಆದೇಶದ ಹೊರತಾಗಿಯೂ ಇಸ್ರಾಈಲ್ ವಂಶದ ಮಗುವೊಂದು ಫರೋವನ ರಾಜಭವನದಲ್ಲೇ ಬೆಳೆದುದನ್ನು ಮತ್ತು ಆ ಮಗುವೇ ಆ ಬಳಿಕ ಇಸ್ರಾಈಲ್ ವಂಶದ ವಿಮೋಚನೆಯ ನೇತೃತ್ವ ವಹಿಸಿದುದನ್ನೂ ಸವಿಸ್ತಾರವಾಗಿ ಹೇಳಿದೆ. ಪುರಾತನ ಕಾಲದಿಂದ ಹಿಡಿದು ಈ ಆಧುನಿಕ ಕಾಲದ ವರೆಗೆ ಸಂತಾನವೆಂಬುದು ಮೌಢ್ಯ, ಭಾಗ್ಯ, ದೌರ್ಭಾಗ್ಯ, ಅಪಾಯಗಳ ಸುರುಳಿ ಸುತ್ತುತ್ತಾ ಬಂದಿವೆ ಮತ್ತು ಬರುತ್ತಿವೆ.
ಇನ್ನು, ಉದ್ಯಾನ ಮತ್ತು ಕಾಲುವೆ ಇವೆರಡೂ ಪ್ರತ್ಯೇಕ ವಿಷಯ ಸೂಚಿಗಳಾಗಿದ್ದರೂ ಗುಣದಲ್ಲಿ ಬಹುತೇಕ ಒಂದೇ. ಮಾತ್ರವಲ್ಲ, ಕ್ರಮಸಂಖ್ಯೆ 1ರ ಭಾವನೆಯನ್ನೇ ಇವೂ ಚಿಮ್ಮಿಸುತ್ತವೆ. ಕಾಲುವೆ ಮತ್ತು ಉದ್ಯಾನಗಳು ಮನುಷ್ಯನ ಕಣ್ಣಿಗೆ ತಂಪು ಮತ್ತು ಮನಸ್ಸಿಗೆ ಮುದ ನೀಡುವವುಗಳು. ಮಳೆಯ ಗುಣವೂ ಇದುವೇ. ಪವಿತ್ರ ಕುರ್‍ಆನ್ ಸ್ವರ್ಗಕ್ಕೆ ಸಂಬಂಧಿಸಿ ವಿವಿಧೆಡೆ (15:45, 44:52, 47:15, 54:54) ಕಾಲುವೆ ಮತ್ತು ಉದ್ಯಾನಗಳ ಬಗ್ಗೆ ಪ್ರಸ್ತಾಪಿಸಿದೆ. ಅಷ್ಟಕ್ಕೂ, ಇವೆಲ್ಲವನ್ನೂ ಇಲ್ಲಿ ಪ್ರಸ್ತಾಪಿಸುವುದಕ್ಕೆ ಒಂದು ಕಾರಣ ಇದೆ. ಪವಿತ್ರ ಕುರ್‍ಆನಿನ 71ನೇ ಅಧ್ಯಾಯವಾದ ನೂಹ್‍ನ 10ರಿಂದ 12ರ ವರೆಗಿನ ವಚನಗಳು ಈ ಮೇಲಿನ  ಐದೂ ವಿಷಯಗಳ ಕುರಿತಂತೆ ಅತ್ಯಂತ ವಿಶಿಷ್ಟವಾದ ಮತ್ತು ಗಹನ ಚಿಂತನೆಗೆ ದೂಡಬಹುದಾದ ಸಂಗತಿಯೊಂದನ್ನು ಪ್ರಸ್ತಾಪಿಸುತ್ತದೆ. ಅದು ಹೀಗಿದೆ:
   ‘ನಿಮ್ಮ ಪ್ರಭುವಿನೊಡನೆ ಕ್ಪಮಾಯಾಚನೆ ಮಾಡಿರಿ. ಖಂಡಿತ ವಾಗಿಯೂ ಅವನು ಮಹಾ ಕ್ಷಮಾಶೀಲನಾಗಿದ್ದಾನೆ. ಅವನು ನಿಮ್ಮ ಮೇಲೆ ಆಕಾಶದಿಂದ ಮಳೆಯನ್ನು ಧಾರಾಳವಾಗಿ ಸುರಿಸುವನು. ನಿಮಗೆ ಸೊತ್ತು-ಸಂತಾನಗಳನ್ನು ದಯಪಾಲಿಸುವನು. ನಿಮಗಾಗಿ ಉದ್ಯಾನಗಳನ್ನು ಸೃಷ್ಟಿಸುವನು ಮತ್ತು ನಿಮಗಾಗಿ ಕಾಲುವೆಗಳನ್ನು ಹರಿಸುವನು..’
       ಇಲ್ಲಿಯ ವಚನಗಳ ವಿಶೇಷತೆ ಏನೆಂದರೆ, ದೇವನೊಂದಿಗೆ ಕ್ಷಮೆ ಯಾಚಿಸುವವರಿಗೆ ಕೊಡುಗೆಯಾಗಿ 5 ವಸ್ತುಗಳನ್ನು ನೀಡ ಲಾಗಿದೆ. 1. ಮಳೆ 2. ಸಂಪತ್ತು 3. ಸಂತಾನ 4. ಉದ್ಯಾನ 5. ಕಾಲುವೆ. ಕ್ಷಮಿಸಿ ಬಿಡು ಎಂದು ಮನಸಾರೆ ಹೇಳುವುದರಿಂದ ವ್ಯಕ್ತಿ ನಿರಾಳವಾಗುತ್ತಾನೆ. ಒತ್ತಡ ರಹಿತ ಸ್ಥಿತಿಗೆ ತಲುಪುತ್ತಾನೆ. ಇದು ಆತನ ಪಾಲಿಗೆ ಯೋಜನೆಗಳ ಜಾರಿಯನ್ನು ಸುಲಭ ಗೊಳಿಸುತ್ತದೆ. ಆತನಲ್ಲಿ ಅದು ಏಕಾಗ್ರತೆಯನ್ನು ಉಂಟು ಮಾಡುತ್ತದೆ. ನಿಜವಾಗಿ, ಮನುಷ್ಯನ ಬೇಡಿಕೆಗಳಲ್ಲಿ ಪ್ರಾಮುಖ್ಯ ಪಡೆದಿರುವುದೇ ಈ ಐದು ಸಂಗತಿಗಳು. ಇವುಗಳಿಗಾಗಿಯೇ ಮನುಷ್ಯ ಪ್ರತಿನಿತ್ಯ ಶ್ರಮ ಪಡುತ್ತಾನೆ. ಚಿಂತಿಸುತ್ತಾನೆ. ಹೋರಾಡುತ್ತಾನೆ. ಒಂದು ವೇಳೆ, ದೇವನೊಂದಿಗೆ ಕ್ಷಮೆ ಯಾಚಿಸುವುದರಿಂದ ಈ ಎಲ್ಲವೂ ಲಭ್ಯವಾಗುತ್ತದೆ ಎಂಬುದು ಮನುಷ್ಯನಿಗೆ ಮನವರಿಕೆ ಯಾದರೆ ಅದರಿಂದ ಲಭ್ಯವಾಗಬಹುದಾದ ತೃಪ್ತಿ ಯಾವ ರೀತಿ ಯಿರಬಹುದು? ಅಷ್ಟಕ್ಕೂ, ಕ್ಷಮಾಯಾಚನೆಗೂ ಸಂಪತ್ತಿನ ವೃದ್ಧಿಗೂ ನಡುವೆ ಸಂಬಂಧ ಇದೆ ಎಂದು ವಿಶ್ವಾಸಿಗೆ ಗೊತ್ತಿದೆಯೇ? ಕ್ಷಮಾಯಾಚನೆಗೂ ಮಳೆಗೂ ನಡುವೆ ಸಂಬಂಧ ಇದೆ ಎಂಬುದನ್ನು ವಿಶ್ವಾಸಿ ತಿಳಿದುಕೊಂಡಿರುವನೇ/ಳೇ? ದೇವನೊಂದಿಗಿನ ಕ್ಷಮಾಯಾಚನೆಯಿಂದ ಸಂತಾನ ಭಾಗ್ಯವಾಗುವುದೆಂಬುದನ್ನು ವಿಶ್ವಾಸಿಗಳು ತಿಳಿದುಕೊಂಡಿದ್ದಾರೆಯೇ? ಪ್ರವಾದಿ ಮುಹಮ್ಮದ್(ಸ)ರು ಪ್ರತಿದಿನ 100ರಷ್ಟು ಬಾರಿ ದೇವನೊಂದಿಗೆ ಕ್ಷಮೆ ಯಾಚಿಸುತ್ತಿದ್ದರು ಎಂಬುದನ್ನು ಅಕ್ಷರಾರ್ಥಕ್ಕಿಂತ ಹೊರಗೆ ತಂದು ನೋಡುವ ವಿಶ್ವಾಸಿಗಳು ನಮ್ಮಲ್ಲಿ ಎಷ್ಟು ಮಂದಿಯಿದ್ದಾರೆ? ಒಂದು ಕ್ಷಮಾಯಾಚನೆಯು ಓರ್ವ ವಿಶ್ವಾಸಿಯ ಪಾಲಿಗೆ 5 ಕೊಡುಗೆಗಳನ್ನು ಪಡೆದುಕೊಳ್ಳುವ ಸಂದರ್ಭವಾಗಿರುತ್ತದೆ ಎಂಬುದು ಎಷ್ಟು ಅದ್ಭುತ ಮತ್ತು ರೋಮಾಂಚನಕಾರಿ?
      ಖ್ಯಾತ ವಿದ್ವಾಂಸ ಹಸನ್ ಬಸರೀಯವರ ಬಳಿ ಬಂದು ಜನರು ಸಮಸ್ಯೆಗಳನ್ನು ಹೇಳಿಕೊಳ್ಳತೊಡಗಿದರು. ಓರ್ವ ಬರ ಪರಿಸ್ಥಿತಿಯ ಬಗ್ಗೆ ಹೇಳಿಕೊಂಡು ಪರಿಹಾರ ಕೇಳಿದ. ಅವರು, ‘ದೇವನಲ್ಲಿ ಕ್ಷಮಾಯಾಚನೆ ನಡೆಸು’ ಎಂದುತ್ತರವಿತ್ತರು. ಇನ್ನೋರ್ವ, ಬಡತನದ ಬಗ್ಗೆ ದೂರಿಕೊಂಡ. ಆತನಿಗೂ ‘ದೇವನಲ್ಲಿ ಕ್ಷಮಾ ಯಾಚನೆಯನ್ನು ನಡೆಸು’ ಎಂಬ ಉತ್ತರವನ್ನೇ ಕೊಟ್ಟರು. ಇನ್ನೋರ್ವ ಸಂತಾನವಿಲ್ಲದ ಬಗ್ಗೆ, ಮತ್ತೋರ್ವ, ಬೆಳೆನಾಶದ ಬಗ್ಗೆ.. ಹೀಗೆ ಬೇರೆ ದೂರುಗಳು ಅವರ ಮುಂದೆ ಬಂದುವು. ಅವರು ಎಲ್ಲದಕ್ಕೂ ‘ದೇವನೊಂದಿಗೆ ಕ್ಷಮಾಯಾಚನೆ ಮಾಡಿರಿ’ ಎಂಬ ಏಕ ಉತ್ತರವನ್ನೇ ಕೊಟ್ಟರು. ದೂರುದಾರರಲ್ಲಿ ಅಸಮಾಧಾನ ಕಾಣಿಸಿತು. ಅವರು ಹಸನ್ ಬಸರೀ ಅವರ ಮುಂದೆ ಅದನ್ನು ವ್ಯಕ್ತಪಡಿಸಿದರು. ಎಲ್ಲ ದೂರುಗಳಿಗೂ ಏಕ ಉತ್ತರವನ್ನೇ ಕೊಡಲು ಕಾರಣವೇನು ಎಂದವರು ಪ್ರಶ್ನಿಸಿದರು. ಆಗ ಹಸನ್ ಬಸರೀಯವರು ಈ ಮೇಲಿನ (71:10-12) ವಚನವನ್ನು ಪಠಿಸಿದರು.
    ಇದರಾಚೆಗೆ ಏನೂ ಹೇಳಬೇಕಾಗಿಲ್ಲ.





Wednesday, December 13, 2017

ಹಾದಿಯ, ಪದ್ಮಾವತಿ ಮತ್ತು ಕೆಲವು ಪ್ರಶ್ನೆಗಳು


ಪದ್ಮಾವತಿ
ಹಾದಿಯ
ಇಬ್ಬರೂ ಹೆಣ್ಮಕ್ಕಳೇ. ಒಂದು- ಐತಿಹಾಸಿಕವಾಗಿ ಪ್ರಬಲ ದಾಖಲೆಗಳಿಲ್ಲದ ಕಾಲ್ಪನಿಕ ಪಾತ್ರವಾದರೆ, ಇನ್ನೊಂದು- ಜೀವಂತ ಪಾತ್ರ. ಈ ಎರಡು ವ್ಯಕ್ತಿತ್ವಗಳ ನಡುವೆ ಸುಮಾರು ಏಳೂಕಾಲು ಶತಮಾನಗಳ ಅಂತರ ಇದೆ. ನಿಜವಾಗಿ, ಪದ್ಮಾವತಿ ಅಥವಾ ಪದ್ಮಿನಿ ಎಂಬೋರ್ವ ರಾಣಿ ಇದ್ದಳೋ ಎಂಬ ಬಗ್ಗೆ ಇತಿಹಾಸ ಕಾರರಲ್ಲಿ ಗೊಂದಲ ಇದೆ. 1540ರಲ್ಲಿ ಸೂಫಿ ಕವಿ ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದ ಮೂಲಕ ಮೊದಲ ಬಾರಿ ಪದ್ಮಿನಿ ಮುನ್ನೆಲೆಗೆ ಬರುತ್ತಾಳೆ. ಕಾವ್ಯವೆಂಬುದು ರೂಪಕ, ಸಂಕೇತ, ಕಲ್ಪಿತ ಪ್ರೇಮ, ವಿರಹ, ಸುಖಗಳ ಗುಚ್ಚವೆಂಬುದನ್ನು ನಮ್ಮೊಳಗೆ ನಾವು ಸ್ಪಷ್ಟಪಡಿಸಿಕೊಂಡರೆ, ಪದ್ಮಿನಿಯನ್ನು ಅರ್ಥೈಸಿಕೊಳ್ಳು ವುದು ಕಷ್ಟವೇನಲ್ಲ. 1303ರಲ್ಲಿ ಚಿತ್ತೂರಿನ ರಾಜ ರಾಣಾ ಜಯಸಿಂಹನ ಮೇಲೆ ಅಲ್ಲಾವುದ್ದೀನ್ ಖಿಲ್ಜಿ ದಾಳಿ ಮಾಡುತ್ತಾನೆ. ಸೋಲಿಸುತ್ತಾನೆ. 1316ರಲ್ಲಿ ಖಿಲ್ಜಿ ಸಾವಿಗೀಡಾಗುತ್ತಾನೆ. ಐತಿಹಾಸಿಕ ದಾಖಲೆಗಳಲ್ಲಿ ಈ ಇಬ್ಬರ ಹೆಸರಿದೆಯೇ ಹೊರತು ಎಲ್ಲೂ ಪದ್ಮಿನಿ ಅಥವಾ ಪದ್ಮಾವತಿಯ ಹೆಸರಿಲ್ಲ. ಆದರೆ ಕವಿ ಜಾಯಿಸಿ ಈ ಇಡೀ ಘಟನೆಗೆ ರಮ್ಯ ಹಿನ್ನೆಲೆಯೊಂದನ್ನು ಒದಗಿಸುತ್ತಾನೆ. `ಖಿಲ್ಜಿಗೆ ರಾಣಿ ಪದ್ಮಾವತಿಯ ಮೇಲೆ ಮೋಹ ಉಂಟಾಗುತ್ತದೆ, ಆ ಕಾರಣದಿಂದಲೇ ಯುದ್ಧ ಏರ್ಪಡುತ್ತದೆ, ಖಿಲ್ಜಿಯ ವಶವಾಗುವುದನ್ನು ತಪ್ಪಿಸುವುದಕ್ಕಾಗಿ ರಾಣಿ ಪದ್ಮಿನಿ ಇತರ 16 ಸಾವಿರ ಮಹಿಳೆಯರೊಂದಿಗೆ ಸಾಮೂಹಿಕ ಸತಿ ಸಹಗಮನ (ಜೋಹರ್) ಮಾಡುತ್ತಾಳೆ..’ ಇದು ಜಾಯಿಸಿಯ ಕಾವ್ಯದ ಸಾರಾಂಶ. ಇನ್ನೋರ್ವಳು ಹಾದಿಯ. ಈಕೆ ದಂತಕತೆಯಲ್ಲ. ನಮ್ಮ ನಡುವಿನ ವಾಸ್ತವ. ಕೇರಳದ ನೆಡುಂಬಾಶ್ಶೇರಿ ವಿಮಾಣ ನಿಲ್ದಾಣದಲ್ಲಿ ತನ್ನನ್ನು ಸುತ್ತುವರಿದಿರುವ ಪೊಲೀಸರ ನಡುವೆ ಮಾಧ್ಯಮದ ಮಂದಿಯನ್ನು ಕೂಗಿ ಕರೆದು- ‘ನಾನು ಮುಸ್ಲಿಮ್, ನನ್ನನ್ನು ಯಾರೂ ಬಲವಂತದಿಂದ ಮತಾಂತರಿಸಿಲ್ಲ, ನನ್ನ ಗಂಡ ಶಫಿನ್ ಜಹಾನ್...’ ಎಂದುದನ್ನು ಕಳೆದ ವಾರ ಟಿವಿ ಚಾನೆಲ್‍ಗಳು ನೇರವಾಗಿ ಪ್ರಸಾರ ಮಾಡಿದುವು. ಹಾಗಂತ, ಆಕೆ ತನ್ನನ್ನು ತಾನು ಹೀಗೆ ಪ್ರಸ್ತುತಪಡಿಸುತ್ತಿರುವುದು ಇದೇ ಮೊದಲಲ್ಲ. ಆಕೆ ಕೇರಳ ಹೈಕೋರ್ಟಿನ ಮುಂದೆ ಅದನ್ನು ಈ ಮೊದಲೇ ವ್ಯಕ್ತಪಡಿಸಿದ್ದಳು. ತನ್ನ ಹೆತ್ತವರ ಮುಂದೆ 2015ರ ನವೆಂಬರ್ ನಲ್ಲೇ ಹೇಳಿಕೊಂಡಿದ್ದಳು. 2016 ಮೇ 24 ರಂದು ಕೇರಳ ಹೈಕೋರ್ಟು ನೀಡಿದ ತೀರ್ಪಿನಲ್ಲಿ ಆಕೆಯ ಇಸ್ಲಾಮ್ ಸ್ವೀಕಾರದ ಬಗ್ಗೆ ವಿವರವಾಗಿ ಹೇಳಲಾಗಿತ್ತು. ತಮಿಳುನಾಡಿನ ಸೇಲಂನಲ್ಲಿರುವ ಶಿವರಾಜ್ ಹೋಮಿಯೋಪತಿ ಮೆಡಿಕಲ್ ಕಾಲೇಜ್‍ನಲ್ಲಿ ಓದುವಲ್ಲಿಂದ ಹಿಡಿದು 2015ರಲ್ಲಿ ದೊಡ್ಡಪ್ಪ ಸತ್ತಾಗ ನಡೆದ ಪ್ರಸಂಗಗಳ ವರೆಗೆ ಅದು ಹಾದಿಯಾಳ ಬದುಕು ಸಾಗಿ ಬಂದ ದೃಶ್ಯಗಳನ್ನು ಕಟ್ಟಿಕೊಟ್ಟಿತ್ತು. ಸೇಲಂನ ಮೆಡಿಕಲ್ ಕಾಲೇಜ್‍ನ ಹತ್ತಿರದಲ್ಲೇ ಇರುವ ಬಾಡಿಗೆ ಮನೆಯೊಂದರಲ್ಲಿ ಇತರ ನಾಲ್ವರು ಹೆಣ್ಣು ಮಕ್ಕಳೊಂದಿಗೆ ಅಖಿಲ ಎಂಬ ಹಾದಿಯ ವಾಸವಾಗಿದ್ದಳು. ನಾಲ್ವರು ರೂಮ್‍ಮೇಟ್‍ಗಳಲ್ಲಿ ಫಸೀನ ಮತ್ತು ಜಸೀನ ಎಂಬಿಬ್ಬರು ಮುಸ್ಲಿಂ ವಿದ್ಯಾರ್ಥಿನಿಯರೂ ಇದ್ದರು. ಜಸೀನಳ ಮನೆಗೆ ಅಖಿಲ ಹಲವು ಬಾರಿ ಹೋಗಿದ್ದಾಳೆ. ಇವರಿಬ್ಬರ ನಡತೆ ಅಖಿಲಳನ್ನು ತೀವ್ರವಾಗಿ ಆಕರ್ಷಿಸಿದೆ. ಅವರು ಮಾಡುತ್ತಿರುವ ನಮಾಝ್‍ನಿಂದ ಅಖಿಲ ಪ್ರಭಾವಿತಳಾಗಿದ್ದಾಳೆ. ಬಹುದೇವತ್ವಕ್ಕಿಂತ ಏಕದೇವತ್ವದ ಪರಿಕಲ್ಪನೆ ಆಕೆಗೆ ಹೆಚ್ಚು ಆಪ್ತವಾಗಿ ಕಂಡಿದೆ. ಇಸ್ಲಾಮ್‍ಗೆ ಸಂಬಂಧಿಸಿದ ಪುಸ್ತಕಗಳು ಮತ್ತು ವೀಡಿಯೋಗಳನ್ನು ಆಕೆ ವೀಕ್ಷಿಸ ತೊಡಗಿದ್ದಾಳೆ. ನಮಾಝನ್ನು ಅಭ್ಯಾಸ ಮಾಡತೊಡಗಿದ್ದಾಳೆ. ಮನೆಯಲ್ಲಿ ತಾನು ನಮಾಝ್ ಮಾಡಿದುದನ್ನು ನೋಡಿ ಅಪ್ಪ ಅಶೋಕನ್ ಗದರಿಸಿಯೂ ಇದ್ದಾರೆ. ಇನ್ನೊಮ್ಮೆ ಈ ಭಂಗಿ ಪುನರಾವರ್ತಿಸಬಾರದು ಎಂದೂ ತಾಕೀತು ಮಾಡಿದ್ದಾರೆ. ಆದರೆ 2015 ನವೆಂಬರ್ ನಲ್ಲಿ ದೊಡ್ಡಪ್ಪ ಮೃತಪಟ್ಟ ಸಮಯದಲ್ಲಿ ಅಖಿಲಳ ನಿಜ ರೂಪ ಮನೆಯವರಿಗೆ ಗೊತ್ತಾಗಿದೆ. ದೊಡ್ಡಪ್ಪರ ಸದ್ಗತಿಗಾಗಿ ಮನೆಯಲ್ಲಿ ಹಮ್ಮಿಕೊಂಡ 40 ದಿನಗಳ ಕಾಲದ ಪೂಜಾ ಕಾರ್ಯಗಳಲ್ಲಿ ಭಾಗವಹಿಸಲು ಅಖಿಲಾ ನಿರಾಕರಿಸಿದ್ದಾಳೆ. ತಂದೆ ಒತ್ತಾಯಿಸಿದಾಗ ಆಕೆ ತನ್ನ ಧರ್ಮ ವಿಶ್ವಾಸವನ್ನು ಬಹಿರಂಗ ಪಡಿಸಿದ್ದಾಳೆ. ‘ತಾನು ಪ್ರೌಢೆ ಮತ್ತು ಅಕ್ಷರಸ್ಥೆ’ ಎಂದು ಆಕೆ ನ್ಯಾಯಾಲಯದ ಮುಂದೆ ಹೇಳಿಕೊಳ್ಳುತ್ತಾಳೆ. ಕೋರ್ಟು ಒಪ್ಪಿಕೊಳ್ಳುತ್ತದೆ. ಇದಾದ ಬಳಿಕ 2016 ಆಗಸ್ಟ್ 16 ರಂದು ಮಗಳ ಸುರಕ್ಷತತೆಯ ಭಯವನ್ನು ಮುಂದಿಟ್ಟುಕೊಂಂಡು ತಂದೆ ಅಶೋಕನ್ ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತಾರೆ. ಮಗಳನ್ನು ವಿದೇಶಕ್ಕೆ ರವಾನಿಸುವ ಆತಂಕವನ್ನು ಅವರು ತೋಡಿಕೊಳ್ಳುತ್ತಾರೆ. ನಿಜ ಏನೆಂದರೆ, ಆಕೆಯಿನ್ನೂ ಪಾಸ್‍ ಪೋರ್ಟೇ ಮಾಡಿಕೊಂಡಿರಲಿಲ್ಲ. ಅಖಿಲ ತನ್ನ ಹೆತ್ತವರೊಂದಿಗೆ ಹೋಗಲು ನಿರಾಕರಿಸುತ್ತಾಳೆ.  ಮುಂದಿನ ವಿಚಾರಣೆಗಾಗಿ 2016 ಡಿ. 21 ರಂದು ಅಖಿಲ ಕೋರ್ಟ್‍ಗೆ ಹಾಜರಾಗುವಾಗ ತನಗೆ ಮದುವೆಯಾಗಿರುವುದಾಗಿ ಹೇಳಿಕೊಳ್ಳುತ್ತಾಳೆ. ಜೊತೆಗಿದ್ದ ಶಫಿನ್ ಜಹಾನ್ ತನ್ನ ಪತಿ ಎಂದೂ ಸ್ಪಷ್ಟಪಡಿಸುತ್ತಾಳೆ. ಮದುವೆಯಾದ ಸ್ಥಳ, ನೋಂದಣಿಯ ವಿವರಗಳನ್ನು ಆಕೆ ನ್ಯಾಯಾಲಯದ ಮುಂದಿಡುತ್ತಾಳೆ. ಜಸ್ಟೀಸ್ ಕೆ. ಸುರೇಂದ್ರ ಮೋಹನ್ ಮತ್ತು ಕೆ. ಅಬ್ರಹಾಂ ಅವರಿದ್ದ ನ್ಯಾಯಾಂಗೀಯ ಪೀಠ ಈ ಬೆಳವಣಿಗೆಗೆ ಅಚ್ಚರಿ ವ್ಯಕ್ತಪಡಿಸುತ್ತದೆ. ನೋಂದಣಿಯಲ್ಲಿ Shafin Jahan ಎಂಬುದರ ಬದಲು Jefin Jahan  ಎಂದಿರುವುದನ್ನು ಪೀಠ ಗಂಭೀರವಾಗಿ ಪರಿಗಣಿಸಿ ವಿವಾಹವನ್ನೇ ರದ್ದುಪಡಿಸುವ ಅಭೂತಪೂರ್ವ ತೀರ್ಮಾನ ಕೈಗೊಳ್ಳುತ್ತದೆ. ಮಾತ್ರವಲ್ಲ,
    `ಹಾದಿಯ ಪ್ರಬುದ್ಧಳಾಗಿರಬಹುದು, ಆದರೆ 20ರ ಹರೆಯವು ಚಂಚಲವಾದುದು. ಹೆತ್ತವರಿಗೆ ಆಕೆಯ ಸುರಕ್ಷಿತತೆಯ ಬಗ್ಗೆ ಭಯವಿದೆ. ಭಾರತೀಯ ಸಂಸ್ಕೃತಿಯ ಪ್ರಕಾರ ಮಗಳನ್ನು ಮದುವೆ ಮಾಡಿಕೊಡುವ ಹಕ್ಕು ಹೆತ್ತವರಿಗಿದೆ...’ಎಂದೂ ಅದು  ತೀರ್ಪು ನೀಡುತ್ತದೆ. ಇಲ್ಲಿ ಕಾಡುವ ಪ್ರಶ್ನೆ ಏನೆಂದರೆ, ಹಾದಿಯಾಳ ಸ್ಥಾನದಲ್ಲಿ ಓರ್ವ ಗಂಡು ಇರುತ್ತಿದ್ದರೆ ವಿಚಾರಣಾ ಪ್ರಕ್ರಿಯೆಯ ಸ್ವರೂಪ ಹೇಗಿರುತ್ತಿತ್ತು? ಅವನನ್ನು ಹೆತ್ತವರ ಸುಪರ್ದಿಗೆ ಕೊಡಲಾಗುತ್ತಿತ್ತೆ? ಆತನ ವಿವಾಹವನ್ನು ರದ್ದುಪಡಿಸಲಾಗುತ್ತಿತ್ತೆ? ಆತನ ವಿವಾಹದ ಹೊಣೆಗಾರಿಕೆ ಹೆತ್ತವರದ್ದು ಎಂಬ ಸಮರ್ಥನೆ ಲಭಿಸುತ್ತಿತ್ತೆ? ಅಂದಹಾಗೆ, ಪ್ರೌಢರಾದ ಹೆಣ್ಣು ಮತ್ತು ಗಂಡು ತಮ್ಮಗಿಷ್ಟವಾದ ಧರ್ಮವನ್ನು ಸ್ವೀಕರಿಸುವುದು ಮತ್ತು ತಮಗಿಷ್ಟವಾದವರನ್ನು ವರಿಸುವುದನ್ನು ಈ ಸಮಾಜ ಹೇಗೆ ಪರಿಗಣಿಸಬೇಕು? ಒಂದುಕಡೆ, ಮರ್ಯಾದೆಗೇಡು ಹತ್ಯೆ ನಡೆಯುತ್ತಿದೆ. ಕುಟುಂಬ, ಜಾತಿ, ಸಮಾಜದ ಮರ್ಯಾದೆಯೇ ಅದರ ಕೇಂದ್ರ ಬಿಂದು. ಅದನ್ನು ತೀರ್ಮಾನಿಸುವುದು ಪುರುಷರೇ ತುಂಬಿಕೊಂಡಿರುವ ಖಾಪ್ ಪಂಚಾಯತ್. ಅಲ್ಲೂ ಹೆಣ್ಣೇ ಬಲಿಪಶು. ಪದ್ಮಾವತಿ ಪ್ರಕರಣದಲ್ಲಿ ವಿಜೃಂಬಿಸುತ್ತಿರುವುದೂ ಪುರುಷರೇ. ಹಾದಿಯಾಳ ಪ್ರಕರಣದಲ್ಲಿ ‘ಹೆಣ್ಣಿನ ಮೇಲಿನ ಹೆತ್ತವರ ಹಕ್ಕು ಆಕೆಯ ವಿವಾಹದವರೆಗಿದೆ...’ ಎಂಬರ್ಥದಲ್ಲಿ ತೀರ್ಪು ನೀಡಿದ ಹೈಕೋರ್ಟಿನ ನ್ಯಾಯಾಧೀಶರಿಬ್ಬರೂ ಪುರುಷರೇ. ಇದು ಅನುದ್ದೇಶಿತವೇ ಆಗಿರಬಹುದು. ಆದರೂ ಕೆಲವು ಪ್ರಶ್ನೆಗಳಿಗಂತೂ ನಾವು ಉತ್ತರಗಳನ್ನು ಹುಡುಕಲೇಬೇಕು. ಹೆಣ್ಣಿನ ಮೇಲಿನ ಕಾಳಜಿಯ ನೆಪದಲ್ಲಿ ಹೆಣ್ಣನ್ನು ಪುರುಷ ವಿಚಾರಧಾರೆಯು ಆಪೋಶನ ತೆಗೆದುಕೊಳ್ಳುತ್ತಿದೆಯೇ? ಪುರಾತನ ಕಾಲದಲ್ಲಿ ಹೆಣ್ಣು ಹೇಗೆ ದುರ್ಬಲತೆಯ ಸಂಕೇತವೋ ಹಾಗೆಯೇ ಈ 21ನೇ ಶತಮಾನದಲ್ಲೂ ಹೆಣ್ಣು ದುರ್ಬಲಳೇ ಆಗಿರುವುದೇಕೆ? ಇದು ನಿಜಕ್ಕೂ ಅವಳ ಸ್ಥಿತಿಯೋ ಅಥವಾ ಪುರುಷ ಪ್ರಧಾನ ಸಮಾಜವು ಬಲವಂತದಿಂದ ಆಕೆಯ ಮೇಲೆ ಹೇರಿದ ಸ್ಥಿತಿಯೋ? ಒಂದು ಕಡೆ, ಮಹಿಳಾ ಹಕ್ಕು, ಸ್ವಾತಂತ್ರ್ಯ, ಸಮಾನತೆ... ಇತ್ಯಾದಿಗಳ ಕುರಿತಂತೆ ನ್ಯಾಯಾಲಯವೂ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಕರ್ಣಾನಂದಕರ ಹೇಳಿಕೆಗಳು ಹೊರ ಬೀಳುತ್ತಿವೆ. ಇನ್ನೊಂದೆಡೆ, ಪ್ರೌಢ ಹೆಣ್ಣನ್ನು ಚಂಚಲೆಯೆಂದೋ ನಿರ್ಧಾರ ತಳೆಯುವ ಸಾಮರ್ಥ್ಯ ಇಲ್ಲದವಳೆಂದೋ ಹೇಳಿ ಅದುಮಲಾಗುತ್ತದೆ. ಪದ್ಮಿನಿಯ ವಿಚಾರವಾಗಿ ಬೀದಿಯಲ್ಲಿರುವುದು ಮಹಿಳೆಯರಲ್ಲ, ಪುರುಷರೇ. ಹಾದಿಯಾಳ ಪ್ರಕರಣವನ್ನು ಲವ್ ಜಿಹಾದ್ ಆಗಿ ಪರಿವರ್ತಿಸಿ ಗದ್ದಲ ಎಬ್ಬಿಸುತ್ತಿರುವುದೂ ಪುರು ಷರೇ. ಪುರಾತನ ಕಾಲದ ಪುರುಷ ಪ್ರಧಾನ ಮನಸ್ಥಿತಿಯು ಆಧುನಿಕ ಕಾಲದಲ್ಲಿ ಹೀಗೆ ವೇಷ ಬದಲಿಸಿ ಅಸ್ತಿತ್ವ ಪಡಕೊಳ್ಳುತ್ತಿದೆಯೇ? ಜೊತೆಗೆ, 1829 ಡಿಸೆಂಬರ್ 8 ರಂದು ನಿಷೇಧಕ್ಕೊಳಗಾದ ಸತಿ ಪದ್ಧತಿಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುವ ವಿಚಾರಧಾರೆಯೊಂದು ಈಗಲೂ ಅಸ್ತಿತ್ವದಲ್ಲಿದೆಯೇ? ಪದ್ಮಾವತಿಯನ್ನು `ರಾಷ್ಟ್ರ ಮಾತಾ ಪದ್ಮಾವತಿ' ಎಂದು ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಕರೆದಿರುವುದರಲ್ಲಿ ಸತಿ ಸಹಗಮನದ ಆರಾಧನೆಯೂ ಇದೆಯಲ್ಲವೇ? ‘ಯಾಕೆ ಹೆಣ್ಣೇ ಸತಿ ಹೋಗಬೇಕು, ಪುರುಷ ಯಾಕೆ ಸತಿ ಹೋಗಬಾರದು’ ಎಂಬ ಪ್ರಶ್ನೆ ಎತ್ತಬೇಕಾದ ಕಡೆ, ಸತಿಯನ್ನೇ ವೈಭವೀಕರಿಸುವ ಮತ್ತು ಇನ್ನೋರ್ವ ಹೆಣ್ಣಿನ (ದೀಪಿಕಾ ಪಡುಕೋಣೆ) ಮೂಗು ಕೊಯ್ಯುವ, ತಲೆ ಕತ್ತರಿಸುವ ಹೇಳಿಕೆಗಳು ಬರುತ್ತವಲ್ಲ, ಏನಿದರ ಅರ್ಥ? ಹಾದಿಯ ಎತ್ತುವ ಪ್ರಶ್ನೆಯೂ ಬಹುತೇಕ ಇದರ ಸುತ್ತಲೇ ಇದೆ. ಆಕೆ ಯಾವ ಕ್ರಿಮಿನಲ್ ಕಾರ್ಯದಲ್ಲೂ ಭಾಗಿಯಾಗಿಲ್ಲ. ಸಂವಿಧಾನ ಒದಗಿಸಿರುವ ವೈಯಕ್ತಿಕ ಹಕ್ಕನ್ನು ಚಲಾಯಿಸಿದ್ದಾಳೆ ಎಂದ ಮಾತ್ರಕ್ಕೇ ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿ ಒಂದೂವರೆ ಗಂಟೆಗಳ ಕಾಲ ಆಕೆಯ ಪರ, ವಿರುದ್ಧ ಮತ್ತು ಆಕೆ ಇಷ್ಟಪಟ್ಟ ಯುವಕನ ಬಗ್ಗೆ ವಾದಗಳನ್ನು ಆಲಿಸುವಂತೆ ಸುಪ್ರೀಮ್ ಕೋರ್ಟ್ ಆಕೆಯನ್ನು ಬಲವಂತ ಪಡಿಸಿದುದು ಎಷ್ಟು ಸರಿ? ಆಕೆಯ ಮೇಲೆ ಯಾವ ಆರೋಪವೂ ಇಲ್ಲ. ಪ್ರೌಢೆ ಹೆಣ್ಣು ಮಗಳೊಬ್ಬಳು ತನಗಿಷ್ಟ ಬಂದ ಧರ್ಮವನ್ನು ಸ್ವೀಕರಿಸುವುದು ಮತ್ತು ತನಗಿಷ್ಟ ಬಂದವರನ್ನು ವಿವಾಹವಾಗುವುದು ನ್ಯಾಯಿಕ ಭಾಷೆಯಲ್ಲೂ ಅಪರಾಧವಲ್ಲ. ಹೀಗಿದ್ದರೂ ಆಕೆಯನ್ನು ಪೊಲೀಸು ಕಾವಲಿನಲ್ಲಿ ದಿಗ್ಬಂಧನದಲ್ಲಿಟ್ಟುದುದು ಮತ್ತು ದೆಹಲಿವರೆಗೆ ಕೊಂಡೊಯ್ದು ಕೋರ್ಟಿನಲ್ಲಿ ಹಾಜರುಗೊಳಿಸಿದುದನ್ನು ಹೇಗೆಂದು ವ್ಯಾಖ್ಯಾನಿಸಬೇಕು? ಅಷ್ಟಕ್ಕೂ,
     ರಾಣಾ ಮತ್ತು ಖಿಲ್ಜಿಯ ನಡುವೆ 13ನೇ ಶತಮಾನದಲ್ಲಿ ನಡೆದ ಯುದ್ಧದ ಐತಿಹಾಸಿಕ ವಿವರಗಳಲ್ಲಿ ಇರದ ಪದ್ಮಿನಿಯನ್ನು, 21ನೇ ಶತಮಾನದ ಹಾದಿಯಳಿಗೆ ಹೋಲಿಸುವಾಗ ಏನನಿಸುತ್ತದೆ? `ಪೊಲೀಸರ ತನಿಖೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಪತ್ತೆಯಾಗಿಲ್ಲ’ ಎಂದು ಸು. ಕೋರ್ಟಿನಲ್ಲಿ ಕೇರಳ ಸರಕಾರವು ಕಳೆದ ಅಕ್ಟೋಬರ್ ನಲ್ಲಿ ಅಫಿದವಿತ್ ಸಲ್ಲಿಸಿದ್ದರೂ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ತನಿಖಿಸುವಂತೆ ಸುಪ್ರೀಮ್ ಕೋರ್ಟ್ ರಾಷ್ಟ್ರೀಯ ತನಿಖಾ ದಳಕ್ಕೆ (NIO) ಆದೇಶಿಸಿರುವುದು ಇಲ್ಲದ ಪದ್ಮಿನಿಯನ್ನು ಹುಡುಕಲು ಹೇಳಿದಂತೆ ಆಗಬಹುದೇ? ಮಲಿಕ್ ಮುಹಮ್ಮದ್ ಜಾಯಿಸಿಯ ಕಾವ್ಯದಲ್ಲಿ ಹುಟ್ಟಿಕೊಂಡವಳು ಪದ್ಮಿನಿಯಾದರೆ ರಾಜಕೀಯ ಹಿತಸಕ್ತಿಗಾಗಿ ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಅದರ ಪರಿವಾರದಿಂದ ಸೃಷ್ಟಿಯಾಗಿರುವುದೇ ಲವ್ ಜಿಹಾದ್. ಇಲ್ಲದ ಪದ್ಮಿನಿಯ ನೆಪದಲ್ಲಿ ಹೆಣ್ಣಿನ ಮೇಲೆ ದಾಳಿ ಎಸಗುವ ಬೆದರಿಕೆ ಒಡ್ಡಿದವರೇ ಹಾದಿಯ ಪ್ರಕರಣವನ್ನು ಲವ್ ಜಿಹಾದ್ ಗೊಳಿಸುವಲ್ಲೂ ಮುಂಚೂಣಿಯಲ್ಲಿದ್ದಾರೆ. ಬಾಹ್ಯ ನೋಟಕ್ಕೆ ಹೆಣ್ಣಿನ ಮೇಲಿನ ಕಾಳಜಿಯಂತೆ ಈ ಎಲ್ಲ ಬೆಳವಣಿಗೆಗಳು ಕಂಡು ಬಂದರೂ ಆಳದಲ್ಲಿ ಇದು ಹೆಣ್ಣನ್ನು ಬಂಧಿಸಿಡುವ ಪುರುಷ ಪ್ರಧಾನ ಮನಸ್ಥಿತಿಯ ಇನ್ನೊಂದು ರೂಪದಂತೆ ಕಾಣಿಸುತ್ತಿದೆ. ಆಯ್ಕೆ ಮಾಡುವ ಸಾಮರ್ಥ್ಯ ಹೆಣ್ಣಿಗಿಲ್ಲ.. ಎಂದು ಸಾರುವುದೇ ಈ ಎಲ್ಲವುಗಳ ಒಟ್ಟು ಸಾರಾಂಶ.
      ಮನಸ್ಥಿತಿ ಪುರಾತನ ಕಾಲದ್ದೇ. ಪಾತ್ರಗಳು ಮಾತ್ರ ಬೇರೆ.

Monday, December 4, 2017

ಅಲೆಕ್ಸಾಂಡರ್‍ನನ್ನು ಕಣ್ಣೀರಾಗಿಸಿದ ಆ ಕ್ಷಮೆ...

    1. ತನ್ನ ಸಂಬಂಧಿಕನನ್ನು ಕೊಲೆಗೈದ ವ್ಯಕ್ತಿಯೊಂದಿಗೆ ಓರ್ವನು ಪ್ರವಾದಿ ಮುಹಮ್ಮದ್‍ರ(ಸ) ಬಳಿಗೆ ಬರುತ್ತಾನೆ. ನಡೆದ ವಿಷಯವನ್ನು ಹೇಳುತ್ತಾನೆ. ಆರೋಪಿ ತಪ್ಪೊಪ್ಪಿಕೊಳ್ಳುತ್ತಾನೆ. ಪ್ರವಾದಿ(ಸ) ಹೇಳುತ್ತಾರೆ, ಅಪರಾಧಿಯನ್ನು ಕ್ಷಮಿಸು. ವ್ಯಕ್ತಿ ಒಪ್ಪಿಕೊಳ್ಳುವುದಿಲ್ಲ. ಪ್ರವಾದಿ(ಸ) ಮತ್ತೆ ಹೇಳುತ್ತಾರೆ, ಆತನಿಂದ ರಕ್ತ ಪರಿಹಾರವನ್ನು ಪಡೆದುಕೊಂಡು ಆತನನ್ನು ಕ್ಷಮಿಸು. ವ್ಯಕ್ತಿ ಅದಕ್ಕೂ ಒಪ್ಪುವುದಿಲ್ಲ. ಆಗ ಪ್ರವಾದಿ(ಸ) ಹೇಳುತ್ತಾರೆ, ಹಾಗಾ ದರೆ ಆತನನ್ನು ವಧಿಸು. ನೀನೂ ಆತನಂತೆ ಆಗಬಯಸುವಿ ಯೆಂದಾದರೆ ಹಾಗೆ ಮಾಡು. (ಅಬೂದಾವೂದ್- 4497)
2. ಓರ್ವ ವ್ಯಕ್ತಿ ಪ್ರವಾದಿಯವರ ಬಳಿಗೆ ಬಂದು ಹೇಳುತ್ತಾನೆ,
ನನ್ನ ಕೆಲಸಗಾರನನ್ನು ನಾನು ಎಷ್ಟು ಬಾರಿ ಕ್ಷಮಿಸಬೇಕು?’
ಪ್ರವಾದಿ ಹೇಳುತ್ತಾರೆ,
ಪ್ರತಿದಿನ 70 ಬಾರಿ (ತಿರ್ಮಿದಿ: 1424).
ಪವಿತ್ರ ಕುರ್‍ಆನ್ ಹೇಳುತ್ತದೆ,
1. ಇತರರ ಅಪರಾಧಗಳನ್ನು ಕ್ಷಮಿಸುವ ಸಜ್ಜನರು ಅಲ್ಲಾಹನಿಗೆ ಅತ್ಯಂತ ಮೆಚ್ಚುಗೆಯವರು. (3: 134)
2. ಅಲ್ಲಾಹನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. (42: 5)
ಎರಡು ಪ್ರವಾದಿ ವಚನಗಳು ಮತ್ತು ಎರಡು ಕುರ್‍ಆನ್ ವಚನಗಳನ್ನು ಇಲ್ಲಿ ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
ಕಳೆದ ತಿಂಗಳು ಅಮೇರಿಕದ ಕೆಂಟುಕಿಯ ಕೋರ್ಟ್‍ನಲ್ಲಿ ಅಚ್ಚರಿಯ ಘಟನೆಯೊಂದು ನಡೆಯಿತು. 2015 ಎಪ್ರಿಲ್‍ನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿ ಅಂತಿಮ ತೀರ್ಪು ಪ್ರಕಟವಾಗುವುದಕ್ಕೆ ಎಲ್ಲವೂ ಸಿದ್ಧವಾಗಿತ್ತು. ಸಲಾಹುದ್ದೀನ್ ಜಿತ್‍ಮೌದ್ ಎಂಬ 22 ವರ್ಷದ ತರುಣನನ್ನು ಹತ್ಯೆ ಮಾಡಿದ ಪ್ರಕರಣದ ತೀರ್ಪು. ಸಲಾಹುದ್ದೀನನ ತಂದೆ ಅಬ್ದುಲ್ ಮುನೀಮ್ ಸಂಬಾಟ್ ಜಿತ್‍ಮೌದ್ ತನ್ನ ಕುಟುಂಬ ಸಮೇತ ಕೋರ್ಟ್‍ನಲ್ಲಿದ್ದರು. ಅಪರಾಧಿ ಟ್ರೆ ಅಲ್‍ಕ್ಸಾಂಡರ್ ರೆಲ್ ಫೋರ್ಡ್ ಕೂಡ ಕಟಕಟೆಯಲ್ಲಿದ್ದ. ಆತನ ಕುಟುಂಬವು ತೀರ್ಪನ್ನು ನಿರೀಕ್ಷಿಸುತ್ತಾ ನ್ಯಾಯಾಲಯದಲ್ಲಿತ್ತು. ನ್ಯಾಯಾಧೀಶೆ ಕಿಂಬರ್ಲಿ ಬಿನ್ನೆಲ್ ಇನ್ನೇನು ತೀರ್ಪು ಘೋಷಿಸಲು ಮುಂದಾಗುತ್ತಿರುವಂತೆಯೇ, 64 ವರ್ಷದ ಇಸ್ಲಾಮೀ ವಿದ್ವಾಂಸ ಮತ್ತು ಅಮೇರಿಕದ ಲೆಕ್ಸಿಂಗ್ಟನ್ ಯುನಿವರ್ಸಲ್ ಅಕಾಡಮಿ ಮತ್ತು ಸೈಂಟ್ ಲೂಯಿಸ್‍ನ ಅಲ್ ಸಲಾಮ್ ಡೇ ಸ್ಕೂಲ್ ಸೇರಿದಂತೆ ಹಲವಾರು ಇಸ್ಲಾಮಿಕ್ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಸದ್ಯ ನಿವೃತ್ತರಾಗಿರುವ ಮೂಲತಃ ಥಾೈಲೆಂಡ್‍ನವರಾದ ಅಬ್ದುಲ್ ಮುನೀಮ್ ಜಿತ್‍ಮೌದ್ ಅವರು ಎದ್ದು ನಿಂತರಲ್ಲದೇ ತಾನು ಅಲೆಕ್ಸಾಂಡರ್‍ನನ್ನು ಕ್ಷಮಿಸಿದ್ದೇನೆ ಎಂದು ತುಂಬಿದ ಕಣ್ಣೀರಿನೊಂದಿಗೆ ಘೋಷಿಸಿದರು.
“ನಾನು ನಿನ್ನ ಮೇಲೆ ಕೋಪಿಸಲಾರೆ. ನಿನ್ನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿದ ಶೈತಾನನೇ ನಿಜವಾದ ಅಪರಾಧಿ. ನಿನ್ನನ್ನು ಅಂಥ ಕ್ರೂರ ಕೃತ್ಯಕ್ಕೆ ಪ್ರೇರೇಪಿಸಿದ ಶೈತಾನನ ಮೇಲೆ ನಾನು ಸಿಟ್ಟಾಗುವೆ. ಈ ಜಗತ್ತಿನಲ್ಲಿ ಸಂತ್ರಸ್ತನು ಪಾಪಿಯನ್ನು ಕ್ಷಮಿಸದಿದ್ದರೆ ದೇವನೂ ಪಾಪಿಯನ್ನು ಕ್ಷಮಿಸಲಾರ ಅನ್ನುವುದು ನನ್ನ ವಿಶ್ವಾಸ. ಆದ್ದರಿಂದ ನಾನು ನಿನ್ನನ್ನು ಕ್ಷಮಿಸಿದ್ದೇನೆ..” ಎಂದವರು ನಡುಗುವ ದನಿಯೊಂದಿಗೆ ಹೇಳಿದರು. ಜೊತೆಗೇ, ಪವಿತ್ರ ಕುರ್‍ಆನಿನ 9ನೇ ಅಧ್ಯಾಯದ 51ನೇ ವಚನದಲ್ಲಿ ಹೇಳಲಾಗಿರುವ, “ಅಲ್ಲಾಹನು ನಮಗಾಗಿ ಲಿಖಿತಗೊಳಿಸಿರುವುದರ ಹೊರತು ಬೇರಾವುದೂ (ಒಳಿತು ಮತ್ತು ಕೆಡುಕು) ನಮ್ಮನ್ನು ಬಾಧಿಸುವುದಿಲ್ಲ. ಅಲ್ಲಾಹನೇ ನಮ್ಮ ಮಾಲಿಕನಾಗಿದ್ದಾನೆ. ಸತ್ಯವಿಶ್ವಾಸಿಗಳು ಅವನ ಮೇಲೆಯೇ ಭರವಸೆಯನ್ನಿರಿಸಬೇಕು..” ಎಂಬ ವಚನವೇ ನನ್ನ ಈ ನಿರ್ಧಾರಕ್ಕೆ ಕಾರಣ ಎಂದೂ ಹೇಳಿದರು. ಅವರು ಹೀಗೆ ಹೇಳಿ ಮುಗಿಸುತ್ತಿರುವಂತೆಯೇ ನ್ಯಾಯಾಲಯದ ವಾತಾವರಣ ಸಂಪೂರ್ಣ ಬದಲಾಯಿತು. ತೀರ್ಪು ಹುಟ್ಟು ಹಾಕಿದ್ದ ಕುತೂಹಲವು ಭಾವುಕ ಸನ್ನಿವೇಶವಾಗಿ ಮಾರ್ಪಾಟಾಯಿತು. ಸ್ವತಃ ನ್ಯಾಯಾಧೀಶರಾದ ಕಿಂಬರ್ಲಿ ಬಿನ್ನೆಲ್ ಅವರೇ ಭಾವುಕರಾದರು. ಅವರ ಗಂಟಲು ಕಟ್ಟಿಕೊಂಡಿತು. ತೀರ್ಪು ಘೋಷಣೆ ಸಾಧ್ಯವಾಗದೇ ಸ್ವಲ್ಪ ಸಮಯ ಕಲಾಪ ಮುಂದೂಡಿ ಬಳಿಕ ಹಿಂತಿರುಗಿ ಬಂದು ಅಪರಾಧಿ ಅಲೆಕ್ಸಾಂಡರ್‍ಗೆ 31 ವರ್ಷಗಳ ಶಿಕ್ಷೆಯನ್ನು ಘೋಷಿಸಿ ದರು. ಬಳಿಕ ಅಬ್ದುಲ್ ಮುನೀಮ್ ಜಿತ್‍ಮೌದ್‍ರು ಅಲೆಕ್ಸಾಂಡರ್ ನನ್ನು ತಬ್ಬಿಕೊಂಡರು. ಅಲೆಕ್ಸಾಂಡರ್ ಪಶ್ಚಾತ್ತಾಪ ಭಾವದಿಂದ ಕಣ್ಣೀರಿಳಿಸಿದ. ತನ್ನನ್ನು ಕ್ಷಮಿಸುವಂತೆ ಕೋರಿಕೊಂಡ.
2015 ಎಪ್ರಿಲ್ 19ರಂದು 22 ವರ್ಷದ ಸಲಾಹುದ್ದೀನ್‍ನನ್ನು ಅಲೆಕ್ಸಾಂಡರ್ ಸಹಿತ ಒಟ್ಟು ಮೂರು ಮಂದಿ ಸೇರಿ ಇರಿದು ಹತ್ಯೆಗೈದು ದರೋಡೆ ನಡೆಸಿದ್ದರೆಂದು ಆರೋಪಿಸಲಾಗಿತ್ತು. ಲೆಕ್ಸಿಂಗ್ಟನ್ ಕೋರ್ಟ್ ಅಪಾರ್ಟ್‍ಮೆಂಟ್ ಕಾಂಪ್ಲೆಕ್ಸ್ ನಲ್ಲಿ ಈ ಘಟನೆ ನಡೆದಿತ್ತು. ಆರೋಪಿಗಳು ರೆಸ್ಟೋರೆಂಟ್ ಒಂದಕ್ಕೆ ಪಿಝ್ಝಾಕ್ಕೆ ಆರ್ಡರ್ ಮಾಡಿದ್ದರು. ಪಿಝ್ಝಾ ಡೆಲಿವರಿ ಮಾಡಲು ಸಲಾಹುದ್ದೀನ್ ಬಂದಿದ್ದ. ಪೊಲೀಸರ ಪ್ರಕಾರ ಸಲಾಹುದ್ದೀನ್‍ನ ಧರ್ಮವನ್ನು ನೋಡಿಕೊಂಡು ಈ ಹತ್ಯೆ ನಡೆಸಲಾಗಿದೆ.ಕ್ಷಮೆ ಎಂಬುದು ಎರಡಕ್ಷರಗಳ ಆಚೆಗೆ ಆಲದ ಮರದಂತೆ ವಿಶಾಲವಾಗಿ ಚಾಚಿಕೊಂಡಿರುವ ವಸ್ತು. ಕ್ಷಮೆಯ ಕುರಿತಂತೆ ಗಂಟೆಗಟ್ಟಲೆ ಭಾಷಣ ಮಾಡಿದವರು ಕೂಡ ಕ್ಷಮಿಸಲೇಬೇಕಾದ ನಿರ್ಣಾಯಕ ಸನ್ನಿವೇಶ ಎದುರಾದಾಗ ಸಂದಿಗ್ಧಕ್ಕೆ ಸಿಲುಕಿದ್ದುಂಟು. ಪ್ರವಾದಿ ಮುಹಮ್ಮದ್‍ರ(ಸ) ಬದುಕಿನಲ್ಲಿ ಕ್ಷಮೆಯ ಧಾರಾಳ ಸನ್ನಿವೇಶಗಳು ಸಿಗುತ್ತವೆ. ತಾಯಿಫ್‍ನಿಂದ ಹಿಡಿದು ತನ್ನ ಕತ್ತಿನ ಶಾಲನ್ನು ಹಿಡಿದೆಳೆದ ಬುಡಕಟ್ಟು ವ್ಯಕ್ತಿಯವರೆಗೆ, ಹಿಂದ್‍ಳಿಂದ ಹಿಡಿದು ತನ್ನ ಮೇಲೆ ಕಸ ಎಸೆಯುತ್ತಿದ್ದ ಯುವತಿಯ ವರೆಗೆ. ವೈಯಕ್ತಿಕ ಪ್ರಕರಣಗಳನ್ನು ಅವರು ಕ್ಷಮೆ ಎಂಬ ಚೌಕಟ್ಟಿನೊಳಗಿಟ್ಟು ನೋಡುತ್ತಿದ್ದರು. ಶಿಕ್ಷೆಗೂ ಕ್ಷಮೆಗೂ ನಡುವೆ ಇರುವ ಬಹುದೊಡ್ಡ ವ್ಯತ್ಯಾಸ ಏನೆಂದರೆ, ಶಿಕ್ಷೆಯಿಂದ ಸಂತ್ರಸ್ತ ಕುಟುಂಬ ಪಡೆಯುವ ಸುಖ ತಾತ್ಕಾಲಿಕವಾದುದು. ಸಲಾಹುದ್ದೀನ್ ಪ್ರಕರಣವನ್ನೇ ಎತ್ತಿ ಕೊಳ್ಳೋಣ. 22 ವರ್ಷದ ಯುವಕ ಎಂಬ ನೆಲೆಯಲ್ಲಿ ಆತನ ಮೇಲೆ ಹೆತ್ತವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿರಬಹುದು. ವರಮಾನದ ನೆಲೆಯಲ್ಲೂ ಆತನ ಅಗತ್ಯ ಹೆತ್ತವರಿಗೆ ಇದ್ದಿರಬಹುದು. ಏಕೈಕ ಮಗನಾಗಿದ್ದರಂತೂ ಸಲಾಹುದ್ದೀನ್‍ಗೆ ಇನ್ನಷ್ಟು ಮಹತ್ವ ಲಭ್ಯವಾಗುತ್ತದೆ. ಹೀಗಿರುವಾಗ, ಆತನನ್ನು ಕಳಕೊಳ್ಳುವುದು ಸಣ್ಣ ಆಘಾತಕಾರಿ ಸಂಗತಿಯಲ್ಲ. ಮನೆಯಲ್ಲಿ ಸದಾ ಶೂನ್ಯ  ಕಾಡಬಹುದಾದ ಸನ್ನಿವೇಶವನ್ನು ಅದು ಹುಟ್ಟು ಹಾಕುತ್ತದೆ. ಮೆಟ್ಟು, ಪೆನ್ನು, ಶರ್ಟು, ಕನ್ನಡಕ, ಫೋಟೋ, ಪುಸ್ತಕ.. ಹೀಗೆ ಸಲಾಹುದ್ದೀನ್‍ಗೆ ಸಂಬಂಧಿಸಿದ ಪ್ರತಿಯೊಂದೂ ಆತನನ್ನು ಮರು ನೆನಪಿಸುತ್ತಾ ಚುಚ್ಚುತ್ತಿರುತ್ತದೆ. ಸಲಾಹುದ್ದೀನ್‍ನ ಗೆಳೆಯರು ಸಿಕ್ಕಾಗ ಆತ ನೆನಪಾಗುತ್ತಾನೆ. ಆತನ ಇಷ್ಟದ ವಸ್ತುಗಳನ್ನು ನೋಡಿದಾಗ ಆತ ನೆನಪಾಗುತ್ತಾನೆ. ಆತ ದಿನಾ ಕುಳಿತುಕೊಳ್ಳುತ್ತಿದ್ದ ಚಯರೋ, ಸೋಫಾವೋ ಇನ್ನೇನೋ ಆತನನ್ನು ಅನುಕ್ಷಣ ನೆನಪಿಸಿ ಇರಿಯುತ್ತಿರುತ್ತವೆ. ಆದ್ದರಿಂದ ಸಲಾಹುದ್ದೀನ್‍ನ ಹತ್ಯೆಗೆ ಕಾರಣರಾದವರ ಮೇಲೆ ಆತನ ಹೆತ್ತವರಲ್ಲಿ ಅಸಾಧ್ಯ ಸಿಟ್ಟು ಹೊಮ್ಮಲೇ ಬೇಕಾದುದು ಅಸಹಜವಲ್ಲ. ಅವರಿಗೆ ಶಿಕ್ಷೆ ದೊರಕಲೇ ಬೇಕೆಂದು ಹೋರಾಟ ನಡೆಸುವುದೂ ಅಚ್ಚರಿಯದ್ದಲ್ಲ. ಅದೊಂದು ರೀತಿಯಲ್ಲಿ ವಿಚಿತ್ರ ಸುಖ ಕೊಡುವ ಘಳಿಗೆ. ಆರೋಪಿಗಳನ್ನು ದಂಡಿಸಲೇಬೇಕು ಎಂಬ ಹಠದ ಹಿಂದೆ ಇರುವುದು ಇಲ್ಲದ ಮಗನ ನೆನಪು. ಒಂದು ವೇಳೆ ಇವೆಲ್ಲವೂ ನಿರೀಕ್ಷಿಸಿದಂತೆಯೇ ಸಾಗಿ ಅಂತಿಮವಾಗಿ ಆರೋಪಿಗಳ ಕೃತ್ಯ ಸಾಬೀತಾಯಿತು ಎಂಬಲ್ಲಿಗೆ ತಲುಪಿದಾಗಲೇ ನಿಜವಾದ ಸವಾಲು ಎದುರುಗೊಳ್ಳುತ್ತದೆ. ಅಲ್ಲಿಯವರೆಗೆ ಅವರ ಜೊತೆ ಒಂದು ಹಠ ಇತ್ತು. ಮಗನಿಗಾಗಿ ಈ ಹಠ ಎಂಬ ಸಮರ್ಥನೆಯೂ ಇತ್ತು. ಮಾತ್ರವಲ್ಲ, ಮಗನನ್ನು ಪ್ರತಿನಿತ್ಯ ಆ ಹಠ ನೆನಪಿಸುತ್ತಲೂ ಇತ್ತು. ಆದರೆ ಆರೋಪ ಸಾಬೀತಾಗಿ ಶಿಕ್ಷೆ ಘೋಷಿಸಲ್ಪಟ್ಟ ಮೇಲೆ ಉಂಟಾಗುವ ಶೂನ್ಯ ಇದೆಯಲ್ಲ, ಅದು ಅತ್ಯಂತ ಅಸಹನೀಯವಾದುದು. ತನ್ನ ಹೋರಾಟದಲ್ಲಿ ಯಶಸ್ವಿಯಾದೆ ಅನ್ನುವ ನೆಮ್ಮದಿಯ ಜೊತೆಜೊತೆಗೇ ಮಗನಿಗಾಗಿ ಮಾಡುವುದಕ್ಕೆ ಇನ್ನೇನೂ ಉಳಿದಿಲ್ಲವಲ್ಲ ಎಂಬ ಹತಾಶೆ ಆ ಬಳಿಕದ ದಿನಗಳಲ್ಲಿ ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಮಗನೂ ಇಲ್ಲ, ಅಪರಾಧಿಯೂ ಇಲ್ಲ ಎಂಬ ಎರಡು ಇಲ್ಲಗಳ ಬದುಕು ಒಟ್ಟಾಗಿ ಕಾಡುವ ಸನ್ನಿವೇಶ ಅದು. ನಿಜವಾಗಿ, ಪ್ರತೀಕಾರ ಭಾವವು ಎಲ್ಲ ಸಂದರ್ಭಗಳಲ್ಲೂ ನೆಮ್ಮದಿಯನ್ನೇ ಕೊಡಬೇಕೆಂದಿಲ್ಲ. ಕೆಲವೊಮ್ಮೆ ಪ್ರತೀಕಾರದ ಬಳಿಕ ಉಂಟಾಗುವ ಭಾವವು ಪ್ರತೀಕಾರಕ್ಕಿಂತ ಮೊದಲಿನ ಭಾವಕ್ಕಿಂತಲೂ ವೇದನಾಜನಕ ವಾಗಿರುತ್ತದೆ. ಅಪರಾಧಿಯ ಕುಟುಂಬವನ್ನು ಒಲಿಸಲಾಗದ ಮತ್ತು ಮಗನನ್ನೂ ಪಡಕೊಳ್ಳಲಾಗದ ವಿಚಿತ್ರ ಸಂಕಟ ಎದುರಾಗುತ್ತದೆ. ಸಲಾಹುದ್ದೀನ್ ಪ್ರಕರಣವು ಇದಕ್ಕೆ ಉತ್ತಮ ನಿದರ್ಶನ. ಸಲಾಹುದ್ದೀನ್ ಮತ್ತು ಅಲೆಕ್ಸಾಂಡರ್‍ನ ಎರಡೂ ಕುಟುಂಬಗಳು ನ್ಯಾಯಾಲಯದ ತೀರ್ಪಿನ ವೇಳೆ ಉಪಸ್ಥಿತವಿದ್ದವು. ಮೂವರು ಆರೋಪಿಗಳಲ್ಲಿ ಇಬ್ಬರನ್ನು ಕೋರ್ಟು ಆ ಮೊದಲೇ ದೋಷಮುಕ್ತ ಗೊಳಿಸಿದ್ದುದರಿಂದ ಅಲೆಕ್ಸಾಂಡರ್ ಕುಟುಂಬ ಮಾತ್ರ ಅಲ್ಲಿ ಉಪಸ್ಥಿತವಿತ್ತು. ಅಬ್ದುಲ್ ಮುನೀಮ್ ಜಿತ್‍ಮೌಂದ್‍ರ ಕ್ಷಮೆ ಆ ಕ್ಷಣದಲ್ಲಿ ಅನಿರೀಕ್ಷಿತವಾಗಿತ್ತು. ಅದು ನ್ಯಾಯಾಲಯ ಮತ್ತು ಅಲೆಕ್ಸಾಂಡರ್ ಕುಟುಂಬದ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, 31 ವರ್ಷದ ಶಿಕ್ಷೆಯನ್ನೇ ನಗಣ್ಯಗೊಳಿಸುವಷ್ಟು. ಅಲೆಕ್ಸಾಂಡರ್‍ನ ಕುಟುಂಬ ಸಲಾಹುದ್ದೀನ್ ಕುಟುಂಬವನ್ನು ಆಲಿಂಗಿಸಿತು. ಅಲೆಕ್ಸಾಂಡರ್ ಮಾದಕ ವ್ಯಸನಿಯಾಗಿದ್ದ ಎಂಬುದನ್ನು ಆ ವೇಳೆ ಆ ಕುಟುಂಬ ಒಪ್ಪಿಕೊಂಡಿತು. ಅಂದಿನವರೆಗೆ ಪೊಲೀಸರಲ್ಲಾಗಲಿ, ನ್ಯಾಯಾಲಯದಲ್ಲಾಗಲಿ ಹೇಳಿರದ ಸತ್ಯ ಅದು. ಅಂಥದ್ದೊಂದು ಸತ್ಯವನ್ನು ಹೇಳಿಸಿದ್ದು ಅಬ್ದುಲ್ ಮುನೀಮ್ ಜಿತ್‍ಮೌಂದ್‍ರ ಕ್ಷಮಾ ಘೋಷಣೆ. ಆ ಕ್ಷಮೆಯು ಕೋರ್ಟಿನ ತೀರ್ಪಿನ ಮೇಲೆ ಯಾವ ಪರಿಣಾಮವನ್ನು ಬೀರದೇ ಇದ್ದರೂ ಅದು ಅಲೆಕ್ಸಾಂಡರ್ ಕುಟುಂಬದ ಮೇಲೆ ಮತ್ತು ಸ್ವತಃ ಅಲೆಕ್ಸಾಂಡರ್‍ನ ಮೇಲೆ ತೀವ್ರ ಪರಿಣಾಮವನ್ನು ಬೀರಿತು. ಟಿಶ್ಯೂ ಪೇಪರ್‍ನಿಂದ ಮತ್ತೆ ಮತ್ತೆ ಕಣ್ಣುಜ್ಜಿಕೊಳ್ಳುವ ಆತ ಇಡೀ ಘಟನೆಯ ಕೇಂದ್ರ ಬಿಂದುವಾದ. ತನ್ನನ್ನು ಕ್ಷಮಿಸಿ ಎಂದು ಬೇಡಿಕೊಂಡ. ಕೋರ್ಟ್‍ನ ಶಿಕ್ಷೆಯಿಂದ ಹೇಳಿಸಲಾಗದ ಮಾತುಗಳನ್ನು 64 ವರ್ಷದ ಗಡ್ಡದಾರಿ ವ್ಯಕ್ತಿಯ ಕ್ಷಮೆ ಹೇಳಿಸಿತು. ಪವಿತ್ರ ಕುರ್‍ಆನ್ ಘೋಷಿಸುವುದೇನೆಂದರೆ, ‘ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ’ (24:22, 22:42), ಓ ಪೈಗಂಬರರೇ ಕ್ಷಮಾಶೀಲರಾಗಿರಿ (7: 199), ಅವರ ವರ್ತನೆಗೆ ಪ್ರತಿಯಾಗಿ ಸೌಜನ್ಯಪೂರ್ಣ ಕ್ಷಮೆಯೊಂದಿಗೆ ವರ್ತಿಸಿರಿ (15: 85) ಎಂದೇ ಆಗಿದೆ. ಹಾಗಂತ,    ಪವಿತ್ರ ಕುರ್‍ಆನ್ ಪ್ರತೀಕಾರದ ಮಾರ್ಗವನ್ನು ಸಂಪೂರ್ಣ ಮುಚ್ಚಿದೆ ಎಂದಲ್ಲ. ಕ್ಷಮೆ ಮತ್ತು ಪ್ರತೀಕಾರ ಎರಡನ್ನೂ ಸಮಾ ನಾಂತರ ರೇಖೆಯಾಗಿ ಗೌರವಿಸುತ್ತಲೇ ಕ್ಷಮೆಗೆ ಒಂದಷ್ಟು ಹೆಚ್ಚು ಒತ್ತು ಕೊಟ್ಟಿರುವುದರಲ್ಲಿ ದೂರದೃಷ್ಟಿಯಿದೆ ಎಂದೇ ಅನಿಸುತ್ತದೆ. ಪವಿತ್ರ ಕುರ್‍ಆನ್‍ನ ಪ್ರಕಾರ, ‘ಪ್ರತೀಕಾರ ಎಸಗುವುದಿದ್ದರೆ ನಿಮ್ಮ ಮೇಲೆ ಅತಿರೇಕ ಎಸಗಿರುವಷ್ಟು ಮಾತ್ರ. ಆದರೆ ನೀವು ತಾಳ್ಮೆ ವಹಿಸಿದರೆ ನಿಶ್ಚಯವಾಗಿಯೂ ಇದು ಸಹನಾಶೀಲರಿಗೆ ಅತ್ಯುತ್ತಮ’ (16: 26), ‘ಯಾರಾದರೂ ಪ್ರತೀಕಾರವನ್ನು ದಾನ ಮಾಡಿದರೆ ಅದು ಅವರ ಪಾಲಿಗೆ ಪ್ರಾಯಶ್ಚಿತ್ತವಾಗುವುದು’ (5: 45), ‘ಕೆಡುಕಿನ ಪ್ರತಿಫಲ ಅದಕ್ಕೆ ಸಮಾನವಾದ ಕೆಡುಕಾಗಿದೆ. ಇನ್ನು ಯಾರಾದರೂ ಕ್ಷಮಿಸಿ ಬಿಟ್ಟರೆ ಹಾಗೂ ಸುಧಾರಿಸಿಕೊಂಡರೆ ಅದರ ಪ್ರತಿಫಲದ ಹೊಣೆ ಅಲ್ಲಾಹನ ಮೇಲಿದೆ’ (42: 40). ಒಂದು ವೇಳೆ,
    ಕ್ಷಮೆ ಮತ್ತು ಪ್ರತೀಕಾರ-ಎಂಬೆರಡು ಸಹಜ ಆಯ್ಕೆಗಳಲ್ಲಿ ಸಲಾಹುದ್ದೀನ್‍ನ ತಂದೆ ಪ್ರತೀಕಾರವನ್ನೇ ಆಯ್ದುಕೊಂಡಿದ್ದರೆ ಅಲೆಕ್ಸಾಂಡರ್‍ನು ಸುದ್ದಿಗೇ ಒಳಗಾಗುತ್ತಿರಲಿಲ್ಲವೇನೋ..



Monday, November 13, 2017

ಟಿಪ್ಪು ವಿರೋಧಿಗಳಿಗೆ ಧನ್ಯವಾದ

ನಾಲ್ಕು ಪ್ರಶ್ನೆಗಳಿವೆ
1. ಟಿಪ್ಪುವನ್ನು ಮೆಚ್ಚಿಕೊಳ್ಳುವ, ಹೊಗಳುವ, ಸಂತನಾಗಿಸುವ - ಒಂದು ರೀತಿಯಲ್ಲಿ, ಟಿಪ್ಪು ಪರ ಎಂದು ಹೇಳಬಹುದಾದ ಹೇಳಿಕೆ, ದಾಖಲೆ, ವಾದಗಳು ಒಂದು ಕಡೆಯಾದರೆ, ಟಿಪ್ಪುವನ್ನು ಮತಾಂಧ, ಮತಾಂತರಿ, ಕ್ರೂರಿ, ದೇಗುಲ ಭಂಜಕ.. ಹೀಗೆ ಟಿಪ್ಪು ವಿರೋಧಿ ಎಂದು ಮುದ್ರೆಯೊತ್ತಬಹುದಾದ ಹೇಳಿಕೆ, ವಾದ, ದಾಖಲೆಗಳು ಇನ್ನೊಂದು ಕಡೆ. ಈ ಎರಡರಲ್ಲಿ ನಿಜ ಟಿಪ್ಪು ಯಾರು? ಆತನನ್ನು ಪತ್ತೆ ಹಚ್ಚುವುದು ಹೇಗೆ? ಈ ವರ್ತಮಾನದಲ್ಲಿ ಬದುಕುತ್ತಿರುವ ನಮಗೆ ಭೂತಕಾಲದ ಟಿಪ್ಪುವನ್ನು ನಿಜ ನೆಲೆಯಲ್ಲಿ ಅರಿತುಕೊಳ್ಳುವುದಕ್ಕೆ ಯಾವ ದುರ್ಬೀನು ಸೂಕ್ತವಾಗಬಹುದು?
2. ಟಿಪ್ಪುವನ್ನು ನಾವು ನೋಡಬೇಕಾದ ರೀತಿ ಯಾವುದು? (ಅ) ಆಡಳಿತಗಾರ, (ಆ) ಪುರೋಹಿತ, (ಇ) ಧರ್ಮ ಪ್ರಚಾರಕ? ಇದನ್ನೇ ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ, ಪ್ರಧಾನಿ ನರೇಂದ್ರ ಮೋದಿ ಅಥವಾ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ನೋಡಿದ ರೀತಿಯಲ್ಲಿ ಟಿಪ್ಪುವನ್ನು ನೋಡಬೇಕೇ ಅಥವಾ ಪೇಜಾವರ ಶ್ರೀಯವರನ್ನು ನೋಡುವ ರೀತಿಯಲ್ಲೇ ಅಥವಾ ವಿವೇಕಾನಂದರನ್ನು ನೋಡುವ ರೀತಿಯಲ್ಲೇ ಅಥವಾ ಈ ಮೂರಕ್ಕೂ ಹೊಂದದ ಬೇರೆಯದೇ ಆದ ರೀತಿಯಲ್ಲೇ? ಟಿಪ್ಪು ಬದುಕಿದ್ದು 17ನೇ ಶತಮಾನದ ದ್ವಿತೀಯ ಭಾಗದಲ್ಲಿ. ಟಿಪ್ಪುವಿನ ಪರ ಅಥವಾ ವಿರುದ್ಧ ಅಥವಾ ತಟಸ್ಥ ವಾದವನ್ನು ಮಂಡಿಸುತ್ತಿರುವ ನಾವು ಇರುವುದೋ 21ನೇ ಶತಮಾನದಲ್ಲಿ. ಈ ಶತಮಾನಕ್ಕೂ ಟಿಪ್ಪು ಬದುಕಿದ ಶತಮಾನಕ್ಕೂ ನಡುವೆ ಬಲುದೊಡ್ಡ ವ್ಯತ್ಯಾಸವೊಂದಿದೆ. ಅದುವೇ ಪ್ರಜಾತಂತ್ರ. 19ನೇ ಶತಮಾನದ ದ್ವಿತೀಯ ಭಾಗದಲ್ಲಿ ಚಾಲ್ತಿಗೆ ಬಂದ ಜಾತ್ಯತೀತ ಎಂಬ ಪರಿಕಲ್ಪನೆಯ  ಕನ್ನಡಿಯೊಳಗಿಟ್ಟು 17ನೇ ಶತಮಾನದ ಟಿಪ್ಪುವನ್ನು ಪರಿಶೀಲಿಸುವುದು ಎಷ್ಟು ನೈತಿಕ ಮತ್ತು ನ್ಯಾಯಪೂರ್ಣ? ಒಂದು ಉದಾಹರಣೆ: ತಲೆ ಮರೆಸಿಕೊಂಡಿದ್ದ ಕೊಡಗಿನ ನಾಯಕರಲ್ಲೊಬ್ಬನಾದ ರಂಗ ನಾಯಕ ಎಂಬಾತನು ಟಿಪ್ಪುವಿನ ಆಹ್ವಾನದ ಮೇರೆಗೆ ಹಿಂತಿರುಗಿ ಇಸ್ಲಾಮ್ ಧರ್ಮವನ್ನು ಸ್ವೀಕರಿಸುತ್ತಾನೆ (ಸಲ್ದಾನ, ದಿ ಕ್ಯಾಪ್ಟಿವಿಟಿ ಆಫ್ ಕೆನರಾ ಕ್ರಿಶ್ಚಿಯನ್ ಅಂಡರ್ ಟಿಪ್ಪೂ ಇನ್ 1784, ಮಂಗಳೂರು, 933 ಪುಟ 18ರ ಅಡಿ ಟಿಪ್ಪಣಿ ಬಿ ಯಲ್ಲಿ ಹೇಳಲಾಗಿದೆ). ಇನ್ನೊಂದು ಉದಾಹರಣೆ: ಮಲಬಾರ್ ಮತ್ತು ಕೊಡಗು ಪ್ರದೇಶದ ಖಾಝಿಗೆ ಪತ್ರ ಬರೆದ ಟಿಪ್ಪು ತನ್ನ ಪ್ರಭುತ್ವದ ವಿರುದ್ಧ ದಂಗೆ ಏಳುವವರಿಗೆ ಶಿಕ್ಷೆಯಾಗಿ ಮತಾಂತರವನ್ನು ಆದೇಶಿಸುತ್ತಾನೆ. (ಸುಲ್ತಾನುಲ್ ತವಾರಿಖ್, ಪುಟ: 47-51) ಇವೆರಡನ್ನೂ ವಿಶ್ಲೇಷಿಸುವಾಗ ನಾವು 17ನೇ ಶತಮಾನದ ದ್ವಿತೀಯ ಭಾಗದಲ್ಲಿದ್ದುಕೊಂಡೇ ಓದಬೇಕು. ಟಿಪ್ಪುವಿನ ಪ್ರಭುತ್ವದ ವಿರುದ್ಧ ಆಗಾಗ ದಂಗೆಗಳಾಗುತ್ತಿದ್ದ ಪ್ರದೇಶಗಳೆಂದರೆ ಮಲಬಾರ್ ಮತ್ತು ಕೊಡಗು. ಆ ದಂಗೆಯನ್ನು ಅಡಗಿಸುವ ದಾರಿಯಾಗಿ ಆತ ಆಯ್ದುಕೊಂಡ ಮಾರ್ಗ ಮತಾಂತರವೇ ಹೊರತು ಅದು ಆತನ ಮತಾಂಧತೆಗೆ ಪುರಾವೆ ಆಗುವುದಿಲ್ಲ. ಒಂದು ವೇಳೆ ಇದನ್ನೇ ನಾವು ಪುರಾವೆಯಾಗಿ ಎತ್ತಿಕೊಳ್ಳುವುದಾದರೆ ಆತನ ಸಾಮ್ರಾಜ್ಯದ ಇನ್ನಿತರ ಕಡೆ ವ್ಯಾಪಕ ಮಟ್ಟದಲ್ಲಿ ಇದು ಕಾಣಿಸಿಕೊಳ್ಳಬೇಕಿತ್ತು. ದೇವಸ್ಥಾನಗಳ ನೆಲಸಮ ಆಗಬೇಕಿತ್ತು. ಇದರ ಬದಲು ಓರ್ವ ಮತಾಂಧ ಮುಸ್ಲಿಮನಿಂದ ಎಂದೂ ನಿರೀಕ್ಷಿಸಲಾಗದ ಹತ್ತು-ಹಲವು ಉದಾರ ನೀತಿಗಳು ಆತನಲ್ಲಿ ವ್ಯಕ್ತವಾಗಿದೆ. ಅದರಲ್ಲಿ ಒಂದು: ಮರಾಠ ಜನರಲ್ ಪರಶುರಾಂಭು ಎಂಬವ ಶೃಂಗೇರಿಯ ಶ್ರೀ ಶಾರದಾ ಮಂದಿರದ ಮೇಲೆ ದಾಳಿ ಮಾಡಿ, ಶಾರದಾ ದೇವಿ ಮೂರ್ತಿಯನ್ನು ಪಾದ ಪೀಠದಿಂದ ಸ್ಥಳಾಂತರಿಸಿ 60 ಲಕ್ಷ ರೂಪಾಯಿ ದೋಚಿದ ಮತ್ತು ಪೀಠದ ಸ್ವಾಮೀಜಿಯು ಕಾರ್ಕಳಕ್ಕೆ ಪಲಾಯನಗೈದ ಘಟನೆಯ ತರುವಾಯ ಸ್ವಾಮೀಜಿಗೆ ಟಿಪ್ಪು ಒಂದಕ್ಕಿಂತ ಹೆಚ್ಚು ಪತ್ರ ಬರೆಯುತ್ತಾನೆ. ಶಾರದಾ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸುವುದಲ್ಲದೇ ಮಂದಿರದ ಕಾವಲಿಗೆ ಸೇನಾ ತುಕಡಿಯನ್ನು ಇರಿಸುತ್ತಾನೆ. ಮಾತ್ರವಲ್ಲ, ವೈರಿಗಳ ದಮನದ ಉದ್ದೇಶವನ್ನಿಟ್ಟುಕೊಂಡು ಮಠದಲ್ಲಿ ಧಾರ್ಮಿಕ ಕ್ರಿಯೆಗಳಾದ ಶತಚಂಡಿ ಜಪ ಮತ್ತು ಸಹಸ್ರ ಚಂಡಿ ಜಪಗಳನ್ನು ನೆರವೇರಿಸುವಂತೆ ನಿವೇದಿಸಿಕೊಳ್ಳುತ್ತಾನೆ. ಶೃಂಗೇರಿ ಮಠದಲ್ಲಿ 1000 ಬ್ರಾಹ್ಮಣರಿಗೆ ಪ್ರತಿದಿನ ಭೋಜನ ವ್ಯವಸ್ಥೆಯನ್ನು ಏರ್ಪಡಿಸುವಂತೆ ಪತ್ರದಲ್ಲಿ ವಿನಂತಿಸುತ್ತಾನೆ. 1791 ರಲ್ಲಿ ಬರೆದ ಇನ್ನೊಂದು ಪತ್ರದಲ್ಲಿ, ವಿರೋಧಿಗಳು ವಿಫಲಗೊಳ್ಳುವಂತೆ ಪ್ರಾರ್ಥಿಸಿ 48 ದಿನಗಳ ಕಾಲ ಸತತ ಪೂಜೆ ಮತ್ತು ಸಹಸ್ರ ಚಂಡಿಯಾಗ ನಡೆಸುವಂತೆ ಕೋರಿಕೊಳ್ಳುತ್ತಾನೆ. (ಮೈಸೂರು ಆರ್ಡಿಯಾಲಾಜಿಕಲ್ ರಿಪೋರ್ಟ್ 42-75). ಇನ್ನೊಂದು ಉದಾಹರಣೆ: ದೇವಸ್ಥಾನಗಳಿಗೆ ಆತ ಬಿಟ್ಟುಕೊಟ್ಟ ಉಂಬಳಿ, ದಾನ ಮತ್ತು ದತ್ತಿ ನೀಡುವಿಕೆ. 1780ರಲ್ಲಿ ಹೈದರಾಲಿಯು ಕರ್ನಾಟಕವನ್ನು ಮುತ್ತಿದಾಗ ಕಾಂಚೀಪುರದ ದೇವಸ್ಥಾನವೊಂದಕ್ಕೆ ಆಸ್ಥಿಭಾರವನ್ನು ಹಾಕಿದ್ದನಾದರೂ ಅದನ್ನು ಆತ ಮುಗಿಸಿರಲಿಲ್ಲ. ಮೂರನೇ ಆಂಗ್ಲೋ-ಮೈಸೂರು ಯುದ್ಧದ ಸಮಯದಲ್ಲಿ ಅಲ್ಲಿಗೆ ಹೋಗಿದ್ದ ಟಿಪ್ಪು ಆ ದೇವಸ್ಥಾನದ ಕಟ್ಟಡಕ್ಕಾಗಿ 10,000 ಹೊನ್ನುಗಳನ್ನು ಕೊಟ್ಟ. ಅಲ್ಲದೇ ಅವನು ಅಲ್ಲಿನ ರಥೋತ್ಸವದಲ್ಲಿ ಭಾಗವಹಿಸಿ ಆ ಸಂದರ್ಭದ ಬಾಣ ಬಿರುಸುಗಳ ವೆಚ್ಚವನ್ನು ಆತನೇ ವಹಿಸಿದ (ಎಂ.ಎ.ಆರ್. 1938, ಪುಟ: 123-125). ತುಂಗಭದ್ರಾ ದಂಡೆಯ ಮೇಲಿನ ದೇವಾಯಲಗಳಿಗೆ ಮತ್ತು ಅಲ್ಲಿನ ಬ್ರಾಹ್ಮಣರಿಗೆ ಟಿಪ್ಪು ಭೂಮಿಯನ್ನು ದಾನವಾಗಿ ನೀಡಿರುವುದನ್ನು ಕನ್ನಡದಲ್ಲಿರುವ ಸಂಸ್ಕೃತ ಶ್ಲೋಕವು ಹೇಳುತ್ತದೆ. (ಬರ ಮಹಲಿನ ದಾಖಲೆಗಳು, ಭಾಗ:5, ಪುಟ: 39-116). ಊರತೂರು ಪ್ರಸನ್ನ ವೆಂಕಟೇಶ್ವರ ದೇವಾಲಯದಲ್ಲಿ ಮೂರ್ತಿ ಸ್ಥಾಪನೆ ಮಾಡಿ, ಅಲ್ಲಿನ ದೈನಂದಿನ ಪೂಜೆಗೆ, ಅರ್ಚಕರಿಗೆ ಮತ್ತು ಇತರ ಸೇವಕರಿಗೆ ಇನಾಮ್ ಭೂಮಿಯನ್ನು ದಾನವಾಗಿ ನೀಡಿದನು (ಎಂ.ಎ.ಆರ್. 1935, ಪುಟ 61). ಅರ್ನಾಡು ತಾಲೂಕಿನ ಚೇಲಾಂಬರ ಅಮಸೋವಿನ ಪುಣ್ಣೂರು ದೇವಾಲಯಕ್ಕೆ 70.42 ಎಕರೆಗಳ ಗದ್ದೆ ಮತ್ತು 3.29 ಎಕರೆ ತೋಟದ ಭೂಮಿ, ಪೊನ್ನವಿ ತಾಲೂಕಿನ ಪೈಲತ್ತೂರು ಅಮತೋಮಿನ ತಿರುವಂಚಿಕುಳದ ಶಿವದೇವಾಲಯಕ್ಕೆ 208.82 ಎಕರೆ ಜಮೀನು ಮತ್ತು 3.20 ಎಕರೆ ತೋಟದ ಭೂಮಿಯನ್ನು ನೀಡಿದನು. ಇಂಥ ಡಜನ್‍ಗಟ್ಟಲೆ ಉಲ್ಲೇಖಗಳು ಐತಿಹಾಸಿಕವಾಗಿ ನಿರೂಪಿತವಾಗಿವೆ. ಒಂದು ವೇಳೆ, ಆತ ಮತಾಂಧನೇ ಆಗಿರುತ್ತಿದ್ದರೆ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದು, ಜಪ-ತಪಗಳನ್ನು ಏರ್ಪಡಿಸುವುದು ಮತ್ತು ದೇವಾಲಯಕ್ಕೆ ಭೂಮಿ ಕೊಡುವುದೆಲ್ಲ ಸಾಧ್ಯವಿತ್ತೇ? ಅಷ್ಟಕ್ಕೂ, ಟಿಪ್ಪುವಿನ ಪ್ರಭುತ್ವವಿದ್ದುದು ಬಹುಸಂಖ್ಯಾತ ಹಿಂದೂಗಳ ನಡುವೆ. ಆಗ ಸಂಖ್ಯೆಯಲ್ಲಿ ಮುಸ್ಲಿಮರು ತೀರಾ ತೀರಾ ನಗಣ್ಯ. ಹೀಗಿರುವಾಗ, ದೇವಸ್ಥಾನಗಳನ್ನು ನೆಲಸಮಗೊಳಿಸುವುದೆಂದರೆ, ತನ್ನ ಪ್ರಭುತ್ವದ ವಿರುದ್ಧ ದಂಗೆಗೆ ಪ್ರಚೋದನೆ ಕೊಡುವುದೆಂದೇ ಅರ್ಥ. ಒಂದು ಕಡೆ, ದೇವಸ್ಥಾನಗಳಿಗೆ ಭೂಮಿ ಕೊಡುತ್ತಾ ಮತ್ತು ಜಪ-ತಪಗಳನ್ನು ಮಾಡಿಸುತ್ತಾ ಇನ್ನೊಂದು ಕಡೆ ಅವುಗಳನ್ನು ಉರುಳಿಸುವುದು ಸಾಧ್ಯವೇ? ಆತನ ಮಂತ್ರಿಮಂಡಲದಲ್ಲಿ ಪ್ರಮುಖ ಸ್ಥಾನದಲ್ಲಿದ್ದ ಪೂರ್ಣಯ್ಯ, ಕೃಷ್ಣರಾಯ, ಚಾಮಯ್ಯ ಅಯ್ಯಂಗಾರ, ನರಸಿಂಹರಾಯ, ಶ್ರೀನಿವಾಸ ರಾಯ, ಮೂಲಚಂದ್, ಸುಬ್ಬರಾಯ, ಶ್ರೀಪತಿರಾಯ, ರಾಮರಾಯ.. ಇವರೆಲ್ಲ ಈ ಮಂದಿರ ಭಂಜನೆಯನ್ನು ನೋಡುತ್ತಾ ಸುಮ್ಮನಿರುತ್ತಿದ್ದರೆ? ಹಾಗಂತ, ಮಂದಿರ ಧ್ವಂಸ ಕಾರ್ಯ ನಡೆದಿಲ್ಲ ಎಂದಲ್ಲ. ಗಡಿಭಾಗದ ಮಂದಿರಗಳ ಮೇಲೆ ಆತ ದಾಳಿ ಮಾಡಿದ್ದಾನೆ. ಆತನ ಅರಮನೆಯ ಗಜಗಳಷ್ಟು ದೂರದಲ್ಲಿರುವ ರಂಗನಾಥ ದೇವಾಲಯವಾಗಲಿ, ಮೇಲುಕೋಟೆಯ ನರಸಿಂಹ ದೇವಸ್ಥಾನ ಮತ್ತು ಶ್ರೀರಂಗಪಟ್ಟಣದ ನಾರಾಯಣ ಸ್ವಾಮಿ ದೇವಸ್ಥಾನವಾಗಲಿ ಅಥವಾ ಇಂಥ ಹತ್ತಾರು ದೇವಸ್ಥಾನಗಳಿಗೆ ಯಾವ ಹಾನಿಯನ್ನೂ ಮಾಡದ ಮತ್ತು ಯಥೇಚ್ಛ ಉಡುಗೊರೆಗಳನ್ನು ನೀಡಿದ ಟಿಪ್ಪು ಗಡಿಭಾಗದ ಮಂದಿರಗಳ ಮೇಲೆ ದಾಳಿ ಮಾಡಿರುವುದೇಕೆ ಅನ್ನುವ ಪ್ರಶ್ನೆ ಸಹಜ. ಇದಕ್ಕಿರುವ ಉತ್ತರ ರಾಜಕೀಯವೇ ಹೊರತು ಬೇರೆ ಯಾವುದೂ ಕಾಣಿಸುತ್ತಿಲ್ಲ. ಟಿಪ್ಪುವಿನ ಪ್ರಭುತ್ವದ ವಿರುದ್ಧ ಸಂಚು ನಡೆಸಲು ಬಳಕೆಯಾಗುತ್ತಿದ್ದ ಮಂದಿರಗಳನ್ನು ಆತ ಧ್ವಂಸ ಮಾಡಿದ್ದಾನೆ. ಪ್ರಜಾತಂತ್ರ ಭಾಷೆಯಲ್ಲಿ ಹೇಳುವುದಾದರೆ ಖಾಲಿಸ್ತಾನ್ ಪ್ರತ್ಯೇಕತಾವಾದಿಗಳನ್ನು ದಮನಿಸುವುದಕ್ಕಾಗಿ ಇಂದಿರಾಗಾಂಧಿಯವರು ಸ್ವರ್ಣ ಮಂದಿರದ ಮೇಲೆ ಹೇಗೆ ಬ್ಲ್ಯೂ ಸ್ಟಾರ್ ಕಾರ್ಯಾಚರಣೆ ನಡೆಸಿದರೋ ಹಾಗೆ. ಬ್ಲ್ಯೂ ಸ್ಟಾರ್ ಕಾರ್ಯಾಚರಣೆ ಸಂಚುಕೋರರ ವಿರುದ್ಧ ಆಗಿತ್ತೇ ಹೊರತು ಸ್ವರ್ಣ ಮಂದಿರದ ವಿರುದ್ಧ ಆಗಿರಲಿಲ್ಲ, ಅಷ್ಟಕ್ಕೂ, ಬರೇ ಲೂಟಿಯನ್ನೇ ಉದ್ದೇಶವಾಗಿಟ್ಟುಕೊಂಡು ಹಿಂದೂ ರಾಜರುಗಳು ದೇವಸ್ಥಾನಗಳ ಮೇಲೆ ಮಾಡಿದ ಹತ್ತು-ಹಲವು ದಾಳಿಗಳ ಬಗ್ಗೆ ಯಾಕೆ ಟಿಪ್ಪು ವಿರೋಧಿಗಳು ಮೌನ ಪಾಲಿಸುತ್ತಾರೆ? ಭಾರತಕ್ಕೆ ಮುಸ್ಲಿಮ್ ದೊರೆಗಳು ಆಗಮಿಸುವುದಕ್ಕಿಂತ ಮೊದಲೇ (1193-1210) ಪರ್ಮರ ರಾಜನಾದ ಸುಭಟ ವರ್ಮನು ಗುಜರಾತ್‍ನ ಮೇಲೆ ದಾಳಿ ಮಾಡಿ ಅನೇಕ ಜೈನ ದೇವಾಲಯಗಳನ್ನು ಲೂಟಿ ಮಾಡಿದನಲ್ಲ, ಯಾಕೆ ಟಿಪ್ಪು ವಿರೋಧಿಗಳಿಗೆ ಸುಭಟ ವರ್ಮನು ದೇಗುಲ ಭಂಜಕನಾಗಿ ಕಾಣಿಸುವುದಿಲ್ಲ? ಕಾಶ್ಮೀರದ ರಾಜನಾದ ಹರ್ಷನು ತನ್ನ ಸಾಮ್ರಾಜ್ಯದೊಳಗೆ ಇದ್ದ 4 ದೇವಾಲಯಗಳನ್ನು ಬಿಟ್ಟು ಉಳಿದೆಲ್ಲ ದೇವಾಲಯಗಳನ್ನು ಸೂರೆ ಮಾಡಿದನಲ್ಲ ಮತ್ತು ದೇವಾಲಯಗಳ ಮೇಲೆ ದಾಳಿ, ಲೂಟಿ ಮತ್ತು ಧ್ವಂಸದ ಪ್ರಕ್ರಿಯೆಯನ್ನು ಸುಗಮವಾಗಿ ನೋಡಿಕೊಳ್ಳಲು ‘ದೇವೋತ್ಪಾಟಕ ನಾಯಕ’ ಎಂಬ ಹೆಸರಿನ ಅಧಿಕಾರಿ  ಯನ್ನೇ ನೇಮಿಸಿದ್ದನಲ್ಲ, ಯಾಕೆ ಟಿಪ್ಪುವನ್ನು ಮಂದಿರ ಭಂಜಕ ಅನ್ನುವವರು ಈ ಬಗ್ಗೆ ಚಕಾರವೆತ್ತುವುದಿಲ್ಲ? ಕೊನೆಗೆ ಜನರು ಈತನ ಕಾಟ ತಾಳಲಾರದೇ ಶ್ರೀನಗರದ ಬೀದಿಯಲ್ಲಿ ಅಟ್ಟಿಸಿಕೊಂಡು ಹೋಗಿ ಕಲ್ಲು ಹೊಡೆದು ಕೊಂದುದು ಏನನ್ನು ಸೂಚಿಸುತ್ತದೆ - ಮಂದಿರ ಧ್ವಂಸದಂಥ ಕೃತ್ಯಗಳನ್ನು ಜನರು ಸಹಿಸುವುದಿಲ್ಲ ಎಂಬುದನ್ನೇ ಅಲ್ಲವೇ? ಹೀಗಿದ್ದೂ ಮುಸಲ್ಮಾನನಾದ ಟಿಪ್ಪು ಧಾರ್ಮಿಕ ಕಾರಣಕ್ಕಾಗಿ ದೇಗುಲ ಭಂಜನೆ ಮಾಡಿದ್ದಿದ್ದರೆ ಅದನ್ನು ಹಿಂದೂಗಳು ಸಹಿಸಿಕೊಳ್ಳುತ್ತಿದ್ದರೇ? ಇಲ್ಲಿ ಇನ್ನೂ ಒಂದು ಪ್ರಶ್ನೆಯನ್ನು ಎತ್ತಬೇಕಿದೆ. ರಾಜ ಅಶೋಕನು ಬೌದ್ಧ ಮತ ಪ್ರಚಾರಕ್ಕಾಗಿ ತನ್ನ ಇಡೀ ಆಡಳಿತ ಯಂತ್ರವನ್ನೇ ಬಳಸಿದನಲ್ಲ, ಹಿಂದೂ ಧರ್ಮೀಯರ ಮೇಲೆ ಬೌದ್ಧ ಮತವನ್ನು ಹೇರಿದನಲ್ಲ, ಇದು ಸಹ್ಯವೇ? ಇದು ಬಲವಂತದ ಮತಾಂತರ ಅನ್ನಿಸಿಕೊಳ್ಳುವುದಿಲ್ಲವೇ? ಪ್ರಭುತ್ವವೇ ಮುಂದೆ ನಿಂತು ಬೌದ್ಧ ಧರ್ಮವನ್ನು ಪ್ರಚಾರ ಮಾಡುವುದು ರಾಜನೀತಿಗೆ ಸೂಕ್ತವೇ? ಮರಾಠರು ಶೃಂಗೇರಿಯ ಶಾರದಾ ದೇವಿ ಮಂದಿರದ ಮೇಲೆ ಮಾಡಿದ ದಾಳಿ ಮತ್ತು ಅನೇಕ ಹಿಂದೂ ರಾಜವಂಶಗಳು ಮಾಡಿದ ಮಂದಿರ ದಾಳಿಗಳೆಲ್ಲ ಯಾಕೆ ಟಿಪ್ಪು ವಿರೋಧಿಗಳು ಉಲ್ಲೇಖಿಸುವ ‘ಮಂದಿರ ಧ್ವಂಸಗಳ ಪಟ್ಟಿಯಲ್ಲಿ’ ಕಾಣಿಸಿಕೊಳ್ಳುವುದಿಲ್ಲ?
3. ಟಿಪ್ಪುವನ್ನು ಇದಮಿತ್ಥಂ ಎಂದು ತೀರ್ಮಾನಿಸುವುದಕ್ಕೆ ನಮ್ಮಲ್ಲಿರುವ ಆಧಾರ ಗ್ರಂಥಗಳು ಯಾವುವು? ಅವನ್ನು ಬರೆದವರು ಯಾರು? ಅವರು ಎಲ್ಲಿಯವರು? ಅವರೆಷ್ಟು ನಿಷ್ಪಕ್ಷಪಾತಿಗಳು? ನಿಜ ಏನೆಂದರೆ, ಟಿಪ್ಪು ಮತ್ತು ಹೈದರಾಲಿಯನ್ನು ಮತಾಂಧ, ದೇಗುಲ ಭಂಜಕ, ಜನಪೀಡಕ, ಮತಾಂತರಿ.. ಇತ್ಯಾದಿ ಇತ್ಯಾದಿಯಾಗಿ ಚಿತ್ರೀಕರಿಸಿದವರು ಒಂದೋ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಹುದ್ದೆಯಲ್ಲಿದ್ದವರು ಅಥವಾ ಕಕಂಪೆನಿಗೆ ಬೆಂಗಾವಲಾಗಿ ನಿಂತ ಇತಿಹಾಸಕಾರರಾದ ಅಲೆಕ್ಸಾಂಡರ್ ಡೌವ್, ಜೇಮ್ಸ್ ಮಿಲ್, ಮೌಂಟಿ ಸ್ಟುವರ್ಟ್ ಎಲ್‍ಫಿನ್‍ಸ್ಟನ್, ಹೆನ್ರಿ ಎಲಿಯಟ್, ಜಾನ್ ಡೌಸನ್ ಮತ್ತು ಇನ್ನಿತರರೇ ಹೊರತು ಬ್ರಿಟಿಷ್ ವಸಾಹತುಶಾಹಿಯನ್ನು ಪ್ರಶ್ನಿಸಿದವರಲ್ಲ ಎಂಬುದು ಬಹಳ ಮುಖ್ಯ. ಬ್ರಿಟಿಷ್ ಇತಿಹಾಸಕಾರರು ಅತ್ಯಂತ ಹೆಚ್ಚು ನಕಾರಾತ್ಮಕವಾಗಿ ಬರೆದಿರುವುದು ಇವರಿಬ್ಬರ ಬಗ್ಗೆ. ಅದಕ್ಕಿರುವ ಕಾರಣ ಇವರು ಈಸ್ಟ್ ಇಂಡಿಯಾ ಕಂಪೆನಿಗೆ ಕೊಟ್ಟಷ್ಟು ಎದಿರೇಟು ಇನ್ನಾರೂ ಕೊಟ್ಟಿರಲಿಲ್ಲ ಎಂಬುದಾಗಿದೆ. ಮೈಸೂರಿನ ಒಡೆಯರ್ ವಂಶದವರು ಬ್ರಿಟಿಷರಿಗೆ ಕಪ್ಪ ಕೊಟ್ಟು ಸಾಮಂತ ರಾಜರಾಗಿ ಬದುಕುತ್ತಿದ್ದ ವೇಳೆ, ಮೈಸೂರು ಸೇನೆಯಲ್ಲಿದ್ದ ಹೈದರ್ ಅದಕ್ಕೆ ತಡೆ ಒಡ್ಡಿದನಲ್ಲದೇ ಬ್ರಿಟಿಷರಿಗೆ ಎದುರಾಡಿದ. ಟಿಪ್ಪೂ ಅದನ್ನೇ ಮಾಡಿದ. ಇವರಿಬ್ಬರ ಪತನದ ಬಳಿಕ ಬ್ರಿಟಿಷ್ ನಿಯೋಜಿತ ಒಡೆಯರ್ ರಾಜವಂಶವು ಕಪ್ಪ ಕೊಡುತ್ತಾ ಸಾಮಂತರಾಗಿ ಮುಂದುವರಿಯಿತು. ಸದ್ಯ ಟಿಪ್ಪುವನ್ನು ಮತಾಂಧ ಅನ್ನುವ ವರ್ಗ ತಮ್ಮ ವಾದಕ್ಕಾಗಿ ಎತ್ತಿಕೊಳ್ಳುತ್ತಿರುವುದು ಇದೇ ಬ್ರಿಟಿಷ್ ಇತಿಹಾಸಕಾರರ ಗ್ರಂಥಗಳನ್ನು. ನಿಜವಾಗಿ, ಇವರ ಉದ್ದೇಶಶುದ್ಧಿಯನ್ನು ಅಳೆಯುವುದಕ್ಕೆ ಇದುವೇ ದಾರಾಳ ಸಾಕು.
4. ಈ ದೇಶದಲ್ಲಿ ಮುಸ್ಲಿಮ್ ದೊರೆಗಳು ಸುಮಾರು 700 ವರ್ಷಗಳ ವರೆಗೆ ಆಧಿಪತ್ಯ ಸ್ಥಾಪಿಸಿದ್ದರು. ಬ್ರಿಟಿಷರು 250 ವರ್ಷಗಳ ವರೆಗೆ ಆಳಿದ್ದರು. ಆದರೆ, ಟಿಪ್ಪುವೂ ಸೇರಿ ಮುಸ್ಲಿಮ್ ದೊರೆಗಳನ್ನೆಲ್ಲ ಸಾರಾಸಗಟು ಮತಾಂಧ ಎಂದೋ ಮತಾಂತರಿ ಎಂದೋ ಹಿಂದೂ ವಿರೋಧಿ ಎಂದೋ ಮುದ್ರೆ ಒತ್ತುವವರು ಬ್ರಿಟಿಷರ ವಿರುದ್ಧ ಒಂದೇ ಒಂದು ಹೇಳಿಕೆಯನ್ನೂ ಕೊಡುತ್ತಿಲ್ಲವಲ್ಲ, ಯಾಕೆ? ಇತ್ತೀಚೆಗೆ ಷಹಜಹಾನ್ ಕೂಡ ಕಪ್ಪುಪಟ್ಟಿಗೆ ಸೇರಿಕೊಂಡ. ಮುಸ್ಲಿಮ್ ದೊರೆಗಳೇ ಯಾಕೆ ಪ್ರತಿಕ್ಷಣವೂ ಅಪಖ್ಯಾತಿಗೆ ಒಳಗಾಗುತ್ತಾರೆ? ಐತಿಹಾಸಿಕ ತಪ್ಪುಗಳು, ಪ್ರಮಾದಗಳು, ಎಡವಟ್ಟುಗಳು ಅವರಿಂದ ಮಾತ್ರ ಸಂಭವಿಸಿವೆಯೇ? ಹಿಂದೂ ದೊರೆಗಳು ಮತ್ತು ಬ್ರಿಟಿಷ್ ವೈಸರಾಯ್‍ಗಳು ಪುಟಕ್ಕಿಟ್ಟ ಚಿನ್ನವೇ? ಈ ಪ್ರಶ್ನೆಯನ್ನು ಇನ್ನಷ್ಟು ವಿಸ್ತರಿಸಿ ನೋಡುವುದಾದರೆ, ಇತ್ತೀಚಿನ ಪಟಾಕಿ ಮತ್ತು ಮೀನು ಪ್ರಕರಣಗಳನ್ನು ಎತ್ತಿಕೊಳ್ಳಬಹುದು. ದೆಹಲಿಯಲ್ಲಿ ದೀಪಾವಳಿಯ ಸಮಯದಲ್ಲಿ ಪಟಾಕಿ ಸಿಡಿಸಬಾರದೆಂದು ಸುಪ್ರೀಮ್ ಕೋರ್ಟ್ ಆದೇಶಿಸಿದಾಗ, ತಕ್ಷಣ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಏನೆಂದರೆ, ಮುಸ್ಲಿಮರ ಪ್ರಾಣಿ ಬಲಿಯ ವಿರುದ್ಧ ಯಾಕೆ ಇಂಥ ನಿಷೇಧವಿಲ್ಲ ಎಂದಾಗಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೀನೂಟ ಮಾಡಿ ಧರ್ಮಸ್ಥಳದ ಶ್ರೀ ಮಂಜುನಾಥನನ್ನು ಸಂದರ್ಶಿಸಲು ಹೋದುದಕ್ಕೆ ಬಿಜೆಪಿ ಮತ್ತು ಪರಿವಾರ ಎತ್ತಿದ ಆಕ್ಷೇಪ ಏನೆಂದರೆ, ಹಂದಿ ಮಾಂಸವನ್ನು ತಿಂದು ಮಸೀದಿ ಪ್ರವೇಶಿಸಬಹುದೇ ಎಂದು. ಯಾಕೆ ಪ್ರತಿ ಘಟನೆಯನ್ನೂ ಮುಸ್ಲಿಮೀಕರಿಸಲಾಗುತ್ತಿದೆ? ಪಟಾಕಿ ನಿಷೇಧಿಸಿದ್ದು ಮುಸ್ಲಿಮರಲ್ಲ. ಮೀನು ತಿಂದದ್ದೂ ಮುಸ್ಲಿಮರಲ್ಲ. ಆದರೂ ಇವೆರಡನ್ನೂ ಮುಸ್ಲಿಮರಿಗೆ ತಳಕು ಹಾಕುವ ಮತ್ತು ಹಿಂದೂ ವರ್ಸಸ್ ಮುಸ್ಲಿಮ್ ಎಂಬಂತಾಗಿಸುವ ತಂತ್ರ ಇದೆಯಲ್ಲ, ಇದು ಕೊಡುವ ಸೂಚನೆ ಏನು? ಪ್ರತಿ ಘಟನೆಗೂ ಇಂಥದ್ದೊಂದು ತಿರುವು ಕೊಡುವುದರ ಹಿಂದಿನ ಉದ್ದೇಶ ಏನು? ಅವರು ಏನನ್ನು ಬಯಸುತ್ತಿದ್ದಾರೆ? ಏನೇ ಆದರೂ,
           ಟಿಪ್ಪುವಿನ ಬಗ್ಗೆ ಆಳ ಅಧ್ಯಯನ ನಡೆಸಲು ಮತ್ತು ಅದನ್ನು ಜನರಿಗೆ ತಿಳಿಸಲು ಸಂದರ್ಭ ಸೃಷ್ಟಿಸಿದ ‘ಟಿಪ್ಪು ವಿರೋಧಿ’ ಗುಂಪಿಗೆ ಹೃದಯಪೂರ್ವಕ ಧನ್ಯವಾದಗಳು.



Monday, November 6, 2017

ಲೂಟಿಕೋರರು ಇಲ್ಲೇ ಜೀವಂತ ಇರುವಾಗ ಇಲ್ಲದ ಷಹಜಹಾನ್ ಏಕೋ?

      ಸ್ವಾತಂತ್ರ್ಯಪೂರ್ವದಲ್ಲಿ ಭಾರತವನ್ನಾಳಿದ ಮುಸ್ಲಿಮ್ ದೊರೆಗಳನ್ನು ಎತ್ತಿಕೊಂಡು ಸ್ವಾತಂತ್ರ್ಯಾ ನಂತರದ ಭಾರತೀಯ ಮುಸ್ಲಿಮರನ್ನು ಹಳಿಯುತ್ತಿರುವವರೊಂದಿಗೆ ಕೆಲವು ಪ್ರಶ್ನೆಗಳಿವೆ.
1. ಕಲ್ಲಿದ್ದಲು ಹಗರಣ - 1.86 ಲಕ್ಷ ಕೋಟಿ ರೂಪಾಯಿ
2. 2ಜಿ ಸ್ಪೆಕ್ಟ್ರಂ ಹಗರಣ - 1.76 ಲಕ್ಷ ಕೋಟಿ ರೂಪಾಯಿ
3. ಕಾಮನ್‍ವೆಲ್ತ್ ಗೇಮ್ಸ್ ಹಗರಣ - 70 ಸಾವಿರ ಕೋಟಿ
4. ಸತ್ಯಂ ಹಗರಣ - 14 ಸಾವಿರ ಕೋಟಿ
5. ಷೇರು ಹಗರಣ - 1 ಸಾವಿರ ಕೋಟಿ
6. ಹವಾಲಾ ಹಗರಣ - 200 ಕೋಟಿ
7. ಬೋಫೋರ್ಸ್ ಹಗರಣ - 100 ಕೋಟಿ
8. ವಾಯುಪಡೆ ರಹಸ್ಯ ಸೋರಿಕೆ ಹಗರಣ - 18 ಸಾವಿರ ಕೋಟಿ ರೂಪಾಯಿ
         .... ಇತ್ಯಾದಿ ಹಗರಣಗಳಲ್ಲಿ ಭಾಗಿಯಾದವರು ಯಾರು? ಮುಖ್ಯ ರೂವಾರಿಗಳು ಯಾರು? ಆರೋಪಿಗಳು, ಜೈಲು ಪಾಲಾದವರು ಮತ್ತು ಬಿಡುಗಡೆಗೊಂಡವರ ಹೆಸರುಗಳು ಏನೇನು? ಇಷ್ಟವಿಲ್ಲದಿದ್ದರೂ ಇನ್ನೊಂದು ಪ್ರಶ್ನೆಯನ್ನೂ ಕೇಳಬೇಕಾಗುತ್ತದೆ. ಇದರಲ್ಲಿ ಭಾರತೀಯ ಮುಸ್ಲಿಮರ ಪಾತ್ರ ಏನು? ಮುಸ್ಲಿಮ್ ಫಲಾನುಭವಿಗಳ ಸಂಖ್ಯೆ ಎಷ್ಟು? ಈ ಹಗರಣಗಳ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ. 2012ರ ಶಸ್ತ್ರಾಸ್ತ್ರ ಹಗರಣ, 2013ರ ಶಾರದಾ ಗ್ರೂಪ್ ಹಣಕಾಸು ಹಗರಣ, 2010ರ ಇಸ್ರೋ ಎಸ್‍ಬ್ರ್ಯಾಂಡ್ ಹಗರಣ, 2009ರ ಗುಜರಾತ್ ಕಬ್ಬು ಹಗರಣ, 2011ರ ಕರ್ನಾಟಕ ಗಣಿ ಹಗರಣ, 2012ರ ಆದರ್ಶ್ ಸೊಸೈಟಿ ಹಗರಣ, 2013ರ ಮಧ್ಯಪ್ರದೇಶ ವ್ಯಾಪಂ ಹಗರಣ, ವೊಡಾಫೋನ್ ತೆರಿಗೆ ವಂಚನೆ ಹಗರಣ, ಮಧ್ಯಪ್ರದೇಶ ಸ್ಕಾಲರ್‍ಶಿಪ್ ಹಗರಣ, ತಾಜ್ ಕಾರಿಡಾರ್ ಹಗರಣ, ಗೋವಾ ವಿಶೇಷ ಆರ್ಥಿಕ ವಲಯ ಹಗರಣ, ವಸುಂದರಾ ರಾಜೆ ದೀನ್‍ದಯಾಳ್ ಉಪಾಧ್ಯಾಯ ಭೂಹಗರಣ, ಮಹಾರಾಷ್ಟ್ರ ನೀರಾವರಿ ಹಗರಣ, ಶವಪೆಟ್ಟಿಗೆ ಹಗರಣ, ಪ್ರಶ್ನೆಗಾಗಿ ಲಂಚ ಹಗರಣ, ಲ್ಯಾವ್ಲಿನ್ ಹಗರಣ.. ಇತ್ಯಾದಿ ಇತ್ಯಾದಿಗಳ ಫಲಾನುಭವಿಗಳು ಯಾರು? ರೂವಾರಿಗಳು ಯಾರು? ಮೊಗಲ್ ಮತ್ತಿತರ ರಾಜವಂಶಗಳು ಈ ದೇಶದ ಸಂಪತ್ತು ಲೂಟಿವೆ ಎಂದು ಹೇಳುತ್ತಾ ಪರೋಕ್ಷವಾಗಿ ಇಲ್ಲಿನ ಮುಸ್ಲಿಮರನ್ನು ಹಳಿಯುತ್ತಿರುವವರು ಯಾಕೆ ಈ ಲೂಟಿಯ ಬಗ್ಗೆ ಮಾತಾಡುತ್ತಿಲ್ಲ? ಈ ದೇಶವನ್ನಾಳಿದ ಮುಸ್ಲಿಮ್ ದೊರೆಗಳು ದೋಚಿದರೆಂದೇ ಹೇಳಲಾಗುವ ಸಂಪತ್ತಿಗೆ ಹೋಲಿಸಿದರೆ ಸ್ವಾತಂತ್ರ್ಯಾನಂತರದ ಈ 70 ವರ್ಷಗಳಲ್ಲಿ ಜನಪ್ರತಿನಿಧಿಗಳೇ ಆಡಳಿತ ನಡೆಸುತ್ತಿರುವ ಈ ದೇಶದಲ್ಲಿ ದೋಚಲಾದ ಸಂಪತ್ತು ಎಷ್ಟು ಪಟ್ಟು ಹೆಚ್ಚಿರಬಹುದು? ಯಾಕೆ ಇಷ್ಟು ದೊಡ್ಡ ಮಟ್ಟದಲ್ಲಿ ದೇಶವನ್ನು ಲೂಟಿದವರ ಹೆಸರು ಮತ್ತು ಅವರ ಧರ್ಮವನ್ನು ಉಲ್ಲೇಖಿಸಿ ಇಲ್ಲಿ ಚರ್ಚೆ ನಡೆಯುವುದಿಲ್ಲ? ಎಂದೋ ಆಗಿ ಹೋದ ಮುಸ್ಲಿಮ್ ದೊರೆಗಳ ಬೆನ್ನ ಹಿಂದೆ ನಿಂತು ಈಗಿನ ಮುಸ್ಲಿಮರ ಮೇಲೆ ಬಾಣ ಎಸೆಯುವವರಿಗೆ ಯಾಕೆ ಈ ಹಗರಣಗಳು ದೇಶದ್ರೋಹಿಯಾಗಿ ಕಾಣಿಸುತ್ತಿಲ್ಲ? ಇದರಲ್ಲಿ ಭಾಗಿಯಾದವರನ್ನು ಮತ್ತು ಅವರ ಧರ್ಮವನ್ನು ಕಪ್ಪುಪಟ್ಟಿಗೆ ಸೇರಿಸುವುದಿಲ್ಲ? ಸುರೇಶ್ ಕಲ್ಮಾಡಿ, ಪ್ರತಾಪ್ ಸಿಂಗ್ ಕೈಲಾಸ್, ಕನ್ನಿಮೋಳಿ, ರಾಜಾ, ಬಾಲಕೃಷ್ಣ ಪಿಳ್ಳೈ, ಸುಖ್‍ರಾಂ, ಜಗನ್ಮೋಹನ್ ರೆಡ್ಡಿ, ಲಾಲೂ ಪ್ರಸಾದ್ ಯಾದವ್, ಯಡಿಯೂರಪ್ಪ, ಜನಾರ್ಧನ್ ರೆಡ್ಡಿ, ಶಿವರಾಜ್ ಸಿಂಗ್ ಚೌಹಾಣ್, ವೀರಭದ್ರ ಸಿಂಗ್, ಜಯಲಲಿತಾ, ಶಶಿಕಲಾ, ವಸುಂಧರಾ, ಚೌಟಾಲ, ಲಲಿತ್ ಮೋದಿ.. ಮುಂತಾದ ಹೆಸರುಗಳು ಮತ್ತು ಇತ್ತೀಚಿನ ಜಯ್‍ಶಾ ಎಂಬ ಹೆಸರು ಯಾವ ಧರ್ಮವನ್ನು ಪ್ರತಿನಿಧಿಸುತ್ತದೆ? ಮೊಗಲರನ್ನೇ, ಟಿಪ್ಪುವನ್ನೇ ಬಾಬರ್‍ನನ್ನೇ?
         ಇನ್ನೂ ಒಂದು ಪ್ರಶ್ನೆಯನ್ನು ಕೇಳಬೇಕು..
1969ರ ಗುಜರಾತ್ ಹತ್ಯಾಕಾಂಡ - 430 ಮುಸ್ಲಿಮರ ಹತ್ಯೆ
1983ರ ನೆಲ್ಲಿ ಹತ್ಯಾಕಾಂಡ - 2,191 ಮುಸ್ಲಿಮರ ಹತ್ಯೆ
1980ರ ಮೊರಾದಾಬಾದ್ ಹತ್ಯಾಕಾಂಡ - 200 ಮುಸ್ಲಿಮರ ಹತ್ಯೆ
1980ರ ಭಾಗಲ್ಪುರ್ ಹತ್ಯಾಕಾಂಡ - 900 ಮುಸ್ಲಿಮರ ಹತ್ಯೆ
2002ರ ಗುಜರಾತ್ ಹತ್ಯಾಕಾಂಡ - 2000 ಮುಸ್ಲಿಮರ ಹತ್ಯೆ
2013ರ ಮುಝಫ್ಫರ್ ನಗರ್ ಹತ್ಯಾಕಾಂಡ - 42 ಮುಸ್ಲಿಮರ ಹತ್ಯೆ
1992ರ ಮುಂಬೈ ಯೋಜಿತ ಗಲಭೆ - 600 ಮುಸ್ಲಿಮರ ಹತ್ಯೆ
..ಇವೆಲ್ಲ ಏನು? ಸ್ವಾತಂತ್ರ್ಯ ಪೂರ್ವದ ದೊರೆಗಳನ್ನು ಎತ್ತಿಕೊಂಡು ಮಾತಾಡುವವರೆಲ್ಲ ಈ ಪ್ರಜಾತಂತ್ರ ಭಾರತದ ಹತ್ಯಾಕಾಂಡಗಳ ಬಗ್ಗೆ ಮತ್ತು ಅದರಲ್ಲಿ ಭಾಗಿಯಾದವರ ಬಗ್ಗೆ ಯಾಕೆ ಮಾತಾಡುವುದಿಲ್ಲ? ಮುಸ್ಲಿಮ್ ದೊರೆಗಳನ್ನು ಕ್ರೂರಿಗಳೋ ವಂಚಕರೋ ಲೂಟಿಕೋರರೋ ಇನ್ನೇನೋ ಅನ್ನಿ. ಆದರೆ ಅದೇ ಉತ್ಸಾಹದಿಂದ ಈ ಮಂದಿಯನ್ನೂ ಲೂಟಿಕೋರರು, ಕ್ರೂರಿಗಳು, ವಂಚಕರು ಎಂದು ಕರೆಯುವುದಕ್ಕೆ ಯಾಕೆ ಈ ಮಂದಿ ಉಮೇದು ತೋರುತ್ತಿಲ್ಲ? ಈ ಹಗರಣ ಮತ್ತು ಹತ್ಯಾಕಾಂಡಗಳಲ್ಲಿ ಭಾಗಿಯಾದವರು ಮುಸ್ಲಿಮರಲ್ಲ ಎಂಬುದು ಇದಕ್ಕೆ ಕಾರಣವೇ? ಮುಸ್ಲಿಮನದ್ದಾದರೂ ಹಿಂದೂವಿನದ್ದಾದರೂ ಹತ್ಯೆ ಹತ್ಯೆಯೇ. ರಾಜ ಕೊಂದರೂ ಪ್ರಜೆ ಕೊಂದರೂ ಸಾವು ಸಾವೇ. ಆದರೂ ರಾಜಪ್ರಭುತ್ವಕ್ಕೂ ಪ್ರಜಾತಂತ್ರಕ್ಕೂ ಹೋಲಿಕೆಗೆ ಸಿಗದಷ್ಟು ವ್ಯತ್ಯಾಸಗಳಿವೆ. ರಾಜ ಯಾರಿಗೂ ಉತ್ತರದಾಯಿಯಲ್ಲ. ಆತನೇ ಸಂವಿಧಾನ. ಆತನೇ ನ್ಯಾಯಾಧೀಶ. ರಾಜ ಸಾವಿಗೀಡಾದರೆ ಆತನ ಮಗ ಉತ್ತರಾಧಿಕಾರಿಯಾಗಬಲ್ಲ/ಳು. ಆತ ಪ್ರಶ್ನಾತೀತ. ಬಹುಶಃ ಇವೆಲ್ಲಕ್ಕೂ ಅಪವಾದವೆಂಬಂತೆ ಕೆಲವೇ ಕೆಲವು ರಾಜರುಗಳು ನಡೆದುಕೊಂಡಿರಬಹುದಾದರೂ ಅದು ಅವರ ವೈಯಕ್ತಿಕ ಹೆಚ್ಚುಗಾರಿಕೆಯೇ ಹೊರತು ರಾಜಪ್ರಭುತ್ವದ ಅನಿವಾರ್ಯತೆಯಲ್ಲ ಅನ್ನುವುದು ಎಲ್ಲರಿಗೂ ಗೊತ್ತು. ಆದರೆ ಪ್ರಜಾತಂತ್ರ ಹಾಗಲ್ಲವಲ್ಲ. ಅದಕ್ಕೊಂದು ಸಂವಿಧಾನ, ವ್ಯವಸ್ಥಿತ ಆಡಳಿತ ಯಂತ್ರ, ಆಯ್ಕೆ ವಿಧಾನ, ಸರ್ವರೂ ಸಮಾನರು, ಸರ್ವರೂ ಉತ್ತರದಾಯಿಗಳು.. ಇತ್ಯಾದಿಗಳೂ ಇವೆಯಲ್ಲ. ನರೇಂದ್ರ ಮೋದಿಯವರಾಗಲಿ, ಮನ್‍ಮೋಹನ್ ಸಿಂಗ್ ಆಗಲಿ ಅಥವಾ ದೇವೇಗೌಡರೇ ಆಗಲಿ ಯಾರದಾದರೋ ತಂದೆ, ಮಗ, ವಂಶ, ಕುಲ, ಧರ್ಮ ಇತ್ಯಾದಿಗಳ ಕಾರಣಕ್ಕಾಗಿ ಪ್ರಧಾನಿಗಳಾದುದು ಅಲ್ಲವಲ್ಲ. ಒಂದು ವೇಳೆ ನೆಹರೂರ ಮಗಳು ಇಂದಿರಾಗಾಂಧಿ ಮತ್ತು ಅವರ ಮಗ ರಾಜೀವ್ ಗಾಂಧಿ ಪ್ರಧಾನಿಯಾಗಿ ಆಳ್ವಿಕೆ ನಡೆಸಿದ್ದರೂ ಕೇವಲ ತಂದೆ, ಮಗಳು, ಮಗ ಎಂಬ ಕಾರಣ ವೊಂದರಿಂದಲೇ ಅವರು ಆ ಸ್ಥಾನಕ್ಕೆ ಏರಿದ್ದಲ್ಲ. ಅವರು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸೋಲನ್ನೂ ಕಂಡಿದ್ದಾರೆ. ವಿಚಾರಣೆಗೂ ಒಳಗಾಗಿದ್ದಾರೆ. ಪ್ರಜೆಗಳಿಗೆ ಅವರನ್ನು ಟೀಕಿಸುವ ಮತ್ತು ಪ್ರಶಂಸಿಸುವ ಸ್ವಾತಂತ್ರ್ಯವೂ ಇತ್ತು. ದೊರೆಗಳ ಜಗತ್ತಿನಿಂದ ಭಾರತವು ಇಂಥ ಪ್ರಜೆಗಳೇ ಪ್ರತಿನಿಧಿಗಳಾಗುವ ಸ್ಥಿತಿಗೆ ಹೊರಳಿಕೊಂಡ ಬಳಿಕವೂ ಈ ದೇಶದ ಮುಸ್ಲಿಮರು ಎಂದೋ ಆಗಿ ಹೋದ ದೊರೆಗಳ ಪಾಪಕೃತ್ಯಗಳಿಗೆ ಹೊಣೆಗಾರರು ಎಂದಾದರೆ, ಈ ಮೇಲಿನ ಹಗರಣ ಮತ್ತು ಹತ್ಯಾಕಾಂಡಗಳಿಗೆ ಯಾರು ಹೊಣೆಯಾಗಬೇಕು? ಯಾವ ಧರ್ಮಾನುಯಾಯಿಗಳನ್ನು ಹೊಣೆಯಾಗಿಸಬೇಕು? ಈ ಹಗರಣದಲ್ಲಿ ಭಾಗಿಯಾದವರು ಕಟ್ಟಿರಬಹುದಾದ ಅಥವಾ ದೇಣಿಗೆಯನ್ನೋ ಉಡುಗೊರೆಯನ್ನೋ ನೀಡಿರಬಹುದಾದ ಎಷ್ಟು ಮಂದಿರಗಳು ‘ಕಪ್ಪು ಚುಕ್ಕೆ’ ಪಟ್ಟಿಯಲ್ಲಿ ಸೇರಬೇಕು? ಎಷ್ಟು ನೆಲಸಮಕ್ಕೆ ಅರ್ಹವಾಗಬೇಕು?
      ನಿಜವಾಗಿ, ಸ್ವಾತಂತ್ರ್ಯಾನಂತರದ ಭಾರತದಲ್ಲಿ 60 ಸಾವಿರಕ್ಕಿಂತ ಹೆಚ್ಚು ಸಣ್ಣ ಮತ್ತು ದೊಡ್ಡ ಮಟ್ಟದ ಕೋಮುಗಲಭೆಗಳು ನಡೆದಿವೆ ಎಂದು ಹೇಳಲಾಗುತ್ತದೆ. ಈ ಕೋಮುಗಲಭೆಗಳ ಅಂತಿಮ ಫಲಿತಾಂಶ ಏನು ಎಂಬುದು ಎಲ್ಲರಿಗೂ ಗೊತ್ತು. ಗಲಭೆ ಎಂಬ ಶೀರ್ಷಿಕೆಯಿದ್ದರೂ ಬಹುತೇಕ ಎಲ್ಲ ಸಂದರ್ಭಗಳಲ್ಲೂ ನಡೆದಿರುವುದು ಏಕಮುಖ ಹಿಂಸಾಚಾರವೇ ಹೊರತು ಗಲಭೆಯಲ್ಲ. 2002ರ ಗುಜರಾತ್ ಹತ್ಯಾಕಾಂಡವನ್ನೂ ಗುರುತಿಸುವುದು ‘ಗುಜರಾತ್ ಗಲಭೆ’ ಎಂದೇ. 1992 ಮುಂಬೈ ಹತ್ಯಾಕಾಂಡಕ್ಕೂ ‘ಮುಂಬೈ ಗಲಭೆ’ ಎಂಬ ಹೆಸರನ್ನೇ ನೀಡಲಾಗಿದೆ. ಒಂದು ವೇಳೆ, ಈ ಎಲ್ಲ ಗಲಭೆ ಅಥವಾ ಹತ್ಯಾಕಾಂಡಗಳಲ್ಲಿ ಮೃತಪಟ್ಟವರು, ಗಾಯಗೊಂಡವರು ಮತ್ತು ನಿರಾಶ್ರಿತರಾದವರ ಪಟ್ಟಿಯನ್ನೊಮ್ಮೆ ಪರಿಶೀಲಿಸಿದರೆ, ರಾಜಪ್ರಭುತ್ವವನ್ನೂ ನಾಚಿಸುವ ಫಲಿತಾಂಶ ಲಭ್ಯವಾದೀತು. ಈ ಹಿಂದಿನ ರಾಜರುಗಳ ತಪ್ಪುಗಳನ್ನು ಉಲ್ಲೇಖಿಸಿಕೊಂಡು ಕೇವಲ 70 ವರ್ಷಗಳೊಳಗೆ ಇಷ್ಟು ದೊಡ್ಡ ಸಂತ್ರಸ್ತರ ಗುಂಪನ್ನು ತಯಾರಿಸಿಯೂ ಇನ್ನೂ ಅದರ ಪ್ರತೀಕಾರ ಮುಗಿದಿಲ್ಲವೆಂಬಂತೆ ಆಡುತ್ತಿರುವವರು ನಿಜಕ್ಕೂ ಏನನ್ನು ಬಯಸುತ್ತಿದ್ದಾರೆ? ತಾಜ್‍ಮಹಲ್ ಈಗಿನ ವಿವಾದ. ಸದ್ಯ ಮುಸ್ಲಿಮ್ ದೊರೆಗಳ ಕ್ರೌರ್ಯವನ್ನು ಪಟ್ಟಿ ಮಾಡುವುದು ಮತ್ತು ಅದರ ಹೊಣೆಯನ್ನು ಈಗಿನ ಮುಸ್ಲಿಮರು ಹೊರಬೇಕೆಂದು ಪರೋಕ್ಷವಾಗಿ ಆಜ್ಞಾಪಿಸುವ ಹೇಳಿಕೆಗಳು ಕೇಳಿಬರುತ್ತಿವೆ. ನಿಜಕ್ಕೂ, ತಾಜ್‍ಮಹಲ್ ಅನ್ನು ವಿವಾದಿತಗೊಳಿಸಿರುವುದಕ್ಕೆ ಕಾರಣ ಹಿಂದೂ ಹಿತಾಸಕ್ತಿಯೇ? ಅದನ್ನು ಕಟ್ಟಿಸಿದ್ದು ಷಹಜಹಾನ್. ಆತ ಬಲವಂತದಿಂದಲೇ ಆ ಭೂಮಿಯನ್ನು ಆಕ್ರಮಿಸಿ ತಾಜ್ ಕಟ್ಟಿದ ಎಂದೇ ಇಟ್ಟುಕೊಳ್ಳೋಣ. ಕೇವಲ ಕರ್ನಾಟಕವೊಂದರಲ್ಲೇ  ಡಿನೋಟಿಫಿಕೇಶನ್ ಮಾಡಿಕೊಂಡು ಭೂಮಿ ಹೊಡೆದ ರಾಜಕಾರಣಿಗಳ ಸಂಖ್ಯೆ ಎಷ್ಟಿಲ್ಲ? ಎಷ್ಟು ಶ್ರೀಮಂತರು ಬಡವರ ಭೂಮಿಯನ್ನು ಅಕ್ರಮಿಸಿ ಅನುಭವಿಸುತ್ತಿಲ್ಲ? ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡವರಿಲ್ಲ? ಕೇವಲ ಕರ್ನಾಟಕದ ಸ್ಥಿತಿಯೇ ಹೀಗಿರುವಾಗ ಇನ್ನು ಇಡೀ ದೇಶಕ್ಕೆ ಸಂಬಂಧಿಸಿ ಹೇಳುವುದಕ್ಕೇನಿದೆ? ಪ್ರಜಾಪ್ರಭುತ್ವ ರಾಷ್ಟ್ರದಲ್ಲೇ  ಇಷ್ಟೆಲ್ಲ ಸಾಧ್ಯ ಎಂದಾದರೆ ಇನ್ನು ತಾನು ಹೇಳಿದ್ದೇ  ಶಾಸನ ಅನ್ನುವ ಕಾಲದಲ್ಲಿ ಬದುಕಿದ್ದ ಷಹಜಹಾನ್ ಏನು ಮಹಾ?
      ತಾಜ್‍ಮಹಲ್ ಅನ್ನು ವಿವಾದಾಸ್ಪದಗೊಳಿಸಿದವರು ಸದ್ಯ ಮಾಡಬೇಕಿರುವುದೇನೆಂದರೆ, ಪ್ರಜಾತಂತ್ರ ರಾಷ್ಟ್ರದಲ್ಲಿದ್ದೂ ಷಹಜಹಾನ್‍ನನ್ನೂ ಮೀರಿಸುವ ರೀತಿಯಲ್ಲಿ ಭೂಮಿ ಅಕ್ರಮಿಸಿ ಕೊಂಡಿರುವರಲ್ಲ, ಅವರನ್ನು ಮತ್ತು ಅವರು ಪ್ರತಿನಿಧಿಸುವ ಧರ್ಮವನ್ನು ಕಟಕಟೆಯಲ್ಲಿ ನಿಲ್ಲಿಸುವುದು. ಷಹಜಹಾನ್‍ನ ‘ತಪ್ಪಿಗೆ’ ಇಲ್ಲಿನ ಈಗಿನ ಮುಸ್ಲಿಮರನ್ನು ಹೇಗೆ ಹೊಣೆ ಮಾಡ ಲಾಗುತ್ತದೋ ಅದೇ ರೀತಿಯಲ್ಲಿ ಈ ಮಂದಿಯನ್ನು ಮತ್ತು ಅವರ ಧರ್ಮವನ್ನು ಹೊಣೆ ಮಾಡುವುದು. ಇನ್ನೊಂದು ಏನೆಂದರೆ, ಷಹಜಹಾನ್ ಈ ದೇಶದ ಸಂಪತ್ತನ್ನು ಲೂಟಿ ಮಾಡಿದ್ದರೆ ಅದು ರಾಜಪ್ರಭುತ್ವದ ಕಾಲದಲ್ಲಿ. ಆದರೂ ಅದು ತಪ್ಪೇ. ಆದರೆ, ಪ್ರಜಾತಂತ್ರ ಭಾರತದಲ್ಲಿ ಷಹಜಹಾನ್‍ನನ್ನೂ ಮೀರಿಸುವ ಪ್ರಮಾಣದಲ್ಲಿ ಈ ದೇಶದ ಸಂಪತ್ತನ್ನು ಲೂಟಿ ಮಾಡಿದವರಿದ್ದಾರಲ್ಲ, ಅವರನ್ನು ಮತ್ತು ಆ ಮೂಲಕ ಅವರ ಧರ್ಮಾನುಯಾಯಿಗಳನ್ನು ಸಾರ್ವತ್ರಿಕವಾಗಿ ಕಟಕಟೆಯಲ್ಲಿ ನಿಲ್ಲಿಸುವುದು. ಮುಸ್ಲಿಮರ ವಿರುದ್ಧ ಬಳಸುವ ಭಾಷೆ, ಆಕ್ರಮಣಕಾರಿ ಧೋರಣೆ, ವ್ಯಂಗ್ಯಗಳನ್ನು ಅವರ ಮೇಲೆ ಮತ್ತು ಅವರು ಪ್ರತಿನಿಧಿಸುವ ಧರ್ಮಾನುಯಾಯಿಗಳ ಮೇಲೆ ಬಳಸುವುದು. ಇದರ ಸಾಧ್ಯಾಸಾಧ್ಯತೆಯ ಮೇಲೆಯೇ ತಾಜ್ ವಿವಾದದ ಹಿತಾಸಕ್ತಿಯ ಪ್ರಶ್ನೆಯೂ ಪರಿಹಾರವಾಗುತ್ತದೆ. ಆದರೆ, ತಾಜ್ ಆಗಲಿ, ಬಾಬರಿ ಆಗಲಿ ಅಥವಾ ಮಥುರಾವೇ ಆಗಲಿ- ಬರೇ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಪ್ರಚೋದಿಸುವುದಕ್ಕೆ ಉಪಯೋಗಕ್ಕೀಡಾಗಿದೆಯೇ ಹೊರತು ಬೇರೇನಕ್ಕಲ್ಲ ಎಂಬುದು ಅತ್ಯಂತ ಸ್ಪಷ್ಟ. ದೊರೆಗಳ ತಪ್ಪುಗಳಿಗಿಂತ ಎಷ್ಟೋ ಪಟ್ಟು ಅಧಿಕ ಪ್ರಮಾಣದಲ್ಲಿ ತಪ್ಪು ಮಾಡಿದವರು ಈ ದೇಶದಲ್ಲಿ ಈಗ ಬದುಕುತ್ತಿದ್ದರೂ ಅವರನ್ನು ಮತ್ತು ಅವರು ಪ್ರತಿನಿಧಿಸುವ ಧರ್ಮವನ್ನು ಗುರಿಯಾಗಿಸಿ ಒಂದೇ ಒಂದು ಮಾತನ್ನೂ ಇಲ್ಲಿ ಆಡಲಾಗಿಲ್ಲ. ದೇಶದ ಸಂಪತ್ತನ್ನು ಲೂಟಿದವರು ಮತ್ತು ದೊರೆಗಳ ಕಾಲದ ಕ್ರೌರ್ಯಕ್ಕೆ ಸಮಗಟ್ಟುವಂತೆ ಕ್ರೌರ್ಯವೆಸಗಿ ದವರು ನಮ್ಮ ನಡುವೆ ಇದ್ದೂ ಅವರನ್ನು ವಿರೋಧಿಸುವು ದಾಗಲಿ ಅವರ ಧರ್ಮವನ್ನು ಅದಕ್ಕೆ ಹೊಣೆ ಮಾಡುವುದಾಗಲಿ ಎಂದೂ ನಡೆದಿಲ್ಲ. ಇದುವೇ ಈ ಎಲ್ಲ ವಿವಾದ, ಹೇಳಿಕೆ, ಚಳವಳಿಗಳ ಒಟ್ಟು ಸಾರಾಂಶವನ್ನು ಹೇಳುತ್ತದೆ. ಇವುಗಳ ಹಿಂದಿರುವುದು ಧರ್ಮ ಹಿತಾಸಕ್ತಿ ಅಲ್ಲ. ದೇಶಪ್ರೇಮವೂ ಅಲ್ಲ. ಬರೇ ರಾಜಕೀಯ ಹಿತಾಸಕ್ತಿ.
           ಒಂದು ವೇಳೆ ಷಹಜಹಾನ್ ಇವತ್ತು ಸಮಾಧಿಯಿಂದ ಎದ್ದು ಬಂದರೆ ಈ ಮಂದಿ ಆತನನ್ನು ತಮ್ಮ ಪಕ್ಷಕ್ಕೇ ಸೇರ್ಪಡೆ ಗೊಳಿಸಿಯಾರು.