Saturday, April 20, 2024

ಕುರ್ ಆನ್ ನಲ್ಲಿ ಉಪವಾಸದ ವಚನಗಳ ನಡುವೆ ಪ್ರಾರ್ಥನೆಯ ವಚನ ಏಕಿದೆ?






ಪವಿತ್ರ ಕುರ್‌ಆನಿನ 185 ವಚನದಲ್ಲಿ ರಮಝಾನ್ ಮತ್ತು ಉಪವಾಸದ ಬಗ್ಗೆ ಹೇಳಿರುವ ಅಲ್ಲಾಹನು 186ನೇ ವಚನದಲ್ಲಿ ಪ್ರಾರ್ಥನೆಯ ಬಗ್ಗೆ  ಹೇಳಿದ್ದಾನೆ. ಈ ಎರಡೂ ವಚನಗಳು ಹೀಗಿವೆ:

1. ಮಾನವರಿಗೆ ಸಾದ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯ ಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳ ನ್ನೊಳಗೊಂಡಿರುವ `ಕುರ್‌ಆನ್' ಅವತೀರ್ಣಗೊಂಡ ತಿಂಗಳು `ರಮಝಾನ್' ಆಗಿರುತ್ತದೆ. ಆದುದ ರಿಂದ ಯಾವನಾದರೂ ಈ ತಿಂಗಳನ್ನು  ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು. ಯಾವನಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣಿಕನಾಗಿದ್ದರೆ ಆತನು ಇತರ ದಿನಗಳಲ್ಲಿ ಉಪವಾಸ ದಿನಗಳ ಸಂಖ್ಯೆಯನ್ನು ಪೂರ್ತಿಗೊಳಿಸಬೇಕು. ಅಲ್ಲಾಹನು ನಿಮಗೆ ಸೌಲಭ್ಯವನ್ನೀಯಲು ಬಯಸುತ್ತಾನೆ; ನಿಮ್ಮನ್ನು ಕಷ್ಟಕ್ಕೀಡು  ಮಾಡಲು ಇಚ್ಛಿಸುವುದಿಲ್ಲ. ನೀವು ಉಪವಾಸದ ಸಂಖ್ಯೆಯನ್ನು ಪೂರ್ತಿಗೊಳಿಸಲು ಅನುಕೂಲವಾಗುವಂತೆಯೂ, ಸನ್ಮಾರ್ಗದರ್ಶನದ ಮೂಲಕ  ನಿಮ್ಮನ್ನು ಪ್ರತಿಷ್ಠಿತಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾ ಅವನಿಗೆ ಕೃತಜ್ಞರಾಗಿರಲಿಕ್ಕಾಗಿಯೂ ಈ ವಿಧಾನವನ್ನು ತೋರಿಸಿ  ಕೊಡಲಾಗಿದೆ. (ಅಲ್‌ಬಕರ: 185)

2. ಓ ಪೈಗಂಬರರೇ, ನನ್ನ ದಾಸರು ನಿಮ್ಮೊಡನೆ ನನ್ನ ಬಗ್ಗೆ ಕೇಳಿದರೆ, ನಾನು ಅವರಿಗೆ ನಿಕಟನಾಗಿದ್ದೇನೆಂದೂ, ಪ್ರಾರ್ಥಿಸುವವನು ನನ್ನನ್ನು  ಪ್ರಾರ್ಥಿಸಿದಾಗ ಅವನ ಪ್ರಾರ್ಥನೆಯನ್ನು ಆಲಿಸುತ್ತೇನೆಂದೂ ಅದಕ್ಕೆ ಉತ್ತರಿಸುತ್ತೇನೆಂದೂ ಅವರಿಗೆ ಹೇಳಿರಿ. ಆದುದರಿಂದ ಅವರು ನನ್ನ ಕರೆಗೆ  ಓಗೊಡಲಿ ಮತ್ತು ನನ್ನ ಮೇಲೆ ವಿಶ್ವಾಸವಿರಿಸಲಿ. (ಇದನ್ನು ಅವರಿಗೆ ತಿಳಿಸಿಬಿಡಿರಿ) ಅವರು ಸನ್ಮಾರ್ಗ ಪಡೆಯಲೂಬಹುದು. (ಅಲ್‌ಬಕರ:  186)

ಇದರ ನಂತರದ 187ನೇ ವಚನದಲ್ಲಿ ಅಲ್ಲಾಹನು ಪುನಃ ಉಪವಾಸದಲ್ಲಿ ಏನು ಮಾಡಬಹುದು ಮತ್ತು ಮಾಡಬಾರದು ಎಂಬುದನ್ನು  ಹೇಳಿದ್ದಾನೆ. ಅಂದರೆ ಉಪವಾಸದ ಬಗ್ಗೆ ವಿವರಿಸುತ್ತಾ ಮಧ್ಯದಲ್ಲಿ ತುಂಡರಿಸಿ ಪ್ರಾರ್ಥನೆಯ ಬಗ್ಗೆ ಹೇಳಿ ಪುನಃ ಉಪವಾಸದ ಕುರಿತಾದ  ಮಾರ್ಗದರ್ಶನವನ್ನು ಅಲ್ಲಾಹನು ನೀಡಿದ್ದಾನೆ. ಅಲ್ಲಾಹನು ಹೀಗೇಕೆ ಮಾಡಿದ? 186ನೇ ವಚನದಲ್ಲಿ ಉಪವಾಸ ಅನ್ನುವ ಪದವೇ ಇಲ್ಲ.  ಅದರ ಹಿಂದೆ ಮತ್ತು ಮುಂದಿನ ವಚನಗಳೆರಡೂ ಉಪವಾಸವನ್ನೇ ಕೇಂದ್ರೀಕರಿಸಿವೆ. ಹಾಗಿದ್ದರೆ ಮಧ್ಯದ ವಚನದಲ್ಲಿ ಉಪವಾಸಕ್ಕೆ ಸಂಬಂಧವೇ  ಇಲ್ಲದಂತೆ ಕಾಣುವ ವಚನವೊಂದನ್ನು ಅಲ್ಲಾಹನು ಹೇಳಲು ಕಾರಣವೇನು? ಬಹುಶಃ,

ಪ್ರಾರ್ಥನೆಗೆ ಇಲ್ಲಿರುವ ಮಹತ್ವವನ್ನು ಸಾರುವುದಕ್ಕಾಗಿಯೇ ಉಪವಾಸದ ವಚನಗಳನ್ನು ತುಂಡರಿಸಿಕೊಂಡು ಈ ವಚನ ನಡುವೆ ಬಂದಿರಬೇಕು  ಎಂದೇ ಅನಿಸುತ್ತದೆ. ಈ 186ನೇ ವಚನ ವನ್ನು ನೀವು ಮತ್ತೊಮ್ಮೆ ಗಮನವಿಟ್ಟು ತಾಳ್ಮೆಯಿಂದ ಓದಿ. ‘ನನ್ನ ದಾಸರು’ ಎಂಬ ಪದದಿಂದ ಈ  ವಚನವನ್ನು ಅಲ್ಲಾಹನು ಆರಂಭಿಸಿದ್ದಾನೆ. ನನ್ನ ದಾಸನು ನನ್ನಲ್ಲಿ ಪ್ರಾರ್ಥಿಸಿದರೆ ನಾನು ಉತ್ತರಿಸುತ್ತೇನೆ ಮತ್ತು ಅವರಿಗೆ ತೀರಾ ನಿಕಟನಾಗಿರುತ್ತೇನೆ ಎಂದು ಅಲ್ಲಾಹನು ಹೇಳುತ್ತಾನೆ. ನಿಜವಾಗಿ,

ಪ್ರಾರ್ಥನೆ ಎಂಬುದು ಈ ಜಗತ್ತಿನ ಅತಿದೊಡ್ಡ ಅಯುಧ. ಮನುಷ್ಯ ಸಂತೋಷದಲ್ಲಿದ್ದಾಗಲೂ ದುಃಖದಲ್ಲಿದ್ದಾಗಲೂ ಸಮ ಪ್ರಮಾಣದಲ್ಲಿ  ಬಳಸಬಹುದಾದ ಪ್ರಬಲ ಆಯುಧವೊಂದಿದ್ದರೆ ಅದು ಪ್ರಾರ್ಥನೆ ಮಾತ್ರ. ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ ಒಂದೈದು ನಿಮಿಷ ಧ್ಯಾನಸ್ಥವಾಗಿ  ಪ್ರಾರ್ಥಿಸಿದ ವ್ಯಕ್ತಿ ಆ ಬಳಿಕ ಆ ಸ್ಥಿತಿಯಿಂದ ಹೊರಬಂದಾಗ ಮೊದಲಿನಂತಿರವುದಿಲ್ಲ. ಯಾವುದೋ ಒಂದು ಅವ್ಯಕ್ತ ಶಕ್ತಿ ಅವರೊಳಗೆ  ಸಂಚಯಿಸಿಕೊಂಡಿರುತ್ತದೆ. ಯಾವುದೋ ಬಗೆಯ ಆಶಾವಾದವೊಂದು ಗರಿಗೇರಿರುತ್ತದೆ. ತನ್ನ ಪ್ರಾರ್ಥನೆಯನ್ನು ಆಲಿಸಲು ಒಬ್ಬನಿದ್ದಾನೆ ಮತ್ತು  ಆತ ಪ್ರಾರ್ಥನೆಯ ಬೇಡಿಕೆಯನ್ನು ನೇರವೇರಿಸಲು ಶಕ್ತನಿದ್ದಾನೆ ಎಂದು ಭರವಸೆ ಅತ್ಯಂತ ನಿರಾಶಾದಾಯಕ ಸನ್ನಿವೇಶದಲ್ಲೂ ಶಕ್ತಿಯನ್ನು  ತುಂಬುತ್ತದೆ. ಆದರೆ ಈ ಪ್ರಾರ್ಥನೆಯ ವೇಳೆ ವ್ಯಕ್ತಿ ದಾಸನಾಗಿರಬೇಕು. ಅರ್ಥಾತ್ ದೇವನು ಒಡೆಯ ಎಂಬ ಭಾವ ವ್ಯಕ್ತಿಯೊಳಗೆ  ಶಕ್ತಿಯುತವಾಗಿ ನೆಲೆಸಿರಬೇಕು. ಪ್ರಾರ್ಥನೆಗೆ ಇರುವ ಮೊಟ್ಟಮೊದಲ ಅರ್ಹತೆ ಇದು. ಎರಡನೆಯದ್ದು, ಅಲ್ಲಾಹನು ತನಗೆ ಅತ್ಯಂತ ನಿಕಟ ನಾಗಿದ್ದಾನೆ ಎಂಬ ಬಲವಾದ ನಂಬಿಕೆ. ಪ್ರಾರ್ಥಿಸುವವರಲ್ಲಿ ಈ ಎರಡೂ ಭಾವನೆಗಳು ಜೊತೆಯಾದಾಗ ಆ ಪ್ರಾರ್ಥನೆಗೆ ಉತ್ತರಿಸುವುದಾಗಿ  ಅಲ್ಲಾಹನು ಹೇಳುತ್ತಾನೆ. ಇಲ್ಲಿರುವ ಪ್ರಶ್ನೆಯೇನೆಂದರೆ,

ಪ್ರಾರ್ಥಿಸುವಾಗ ನಾವು ಈ ಎರಡೂ ಭಾವಗಳೊಂದಿಗೆ ಸಜ್ಜಾಗುತ್ತೇವೆಯೋ ಎಂಬುದು. ಕಡ್ಡಾಯ ನಮಾಝï ಮುಗಿದ ಬಳಿಕ ನಾವು  ಮಾಡುವ ಪ್ರಾರ್ಥನೆಗಳ ಸ್ವರೂಪ ಹೇಗಿದೆ? ಅದೊಂದು ಸಾಂಪ್ರದಾಯಿಕ ಕ್ರಿಯೆ ಎಂಬುದರ ಆಚೆಗೆ ದಾಸ ಮತ್ತು ಒಡೆಯನ ನಡುವಿನ  ಸಂಭಾಷಣೆಯಂತೆ  ಪರಿಭಾವಿಸಿಕೊಂಡು ಪ್ರಾರ್ಥಿಸುವವರು ಎಷ್ಟು ಮಂದಿ ಇದ್ದಾರೆ? ಅಲ್ಲಾಹನು ತನ್ನ ನಿಕಟ ಇದ್ದಾನೆ ಎಂದು ಭಾವಿಸಿಕೊಂಡು  ಮಾಡುವ ಪ್ರಾರ್ಥನೆಯ ಸ್ವರೂಪ ಹೇಗಿರಬಹುದು? ಅಂಥ ಭಾವ ನಮ್ಮೊಳಗಿದ್ದರೆ ನಮ್ಮ ದೇಹಭಾಷೆ ಹೇಗಿರಬಹುದು? ಏಕಾಗ್ರತೆ  ಹೇಗಿರಬಹುದು? ಎಷ್ಟು ಹೊತ್ತು ಪ್ರಾರ್ಥಿಸಬಹುದು? ಸುಮ್ಮನೆ ನಾವಿವತ್ತು ಮಾಡುವ ಪ್ರಾರ್ಥನೆಯ ಬಗ್ಗೆ ಆಲೋಚಿಸೋಣ. ನಾವೆಷ್ಟು  ಏಕಾಗ್ರತೆಯಿಂದ ಪ್ರಾರ್ಥಿಸುತ್ತೇವೆ? ದೀನವಾಗಿ ಮತ್ತು ಅಲ್ಲಾಹನು ನಿಕಟವೇ ಇದ್ದಾನೆ ಎಂಬ ಭಾವದಿಂದ ದಿನದಲ್ಲಿ ಬಿಡಿ ವಾರದಲ್ಲಿ ಒಮ್ಮೆಯಾದರೂ ಪ್ರಾರ್ಥಿಸಲು ಸಾಧ್ಯವಾಗುತ್ತಾ? ಹಾಗಂತ, ಪ್ರತಿದಿನ ಪ್ರಾರ್ಥಿಸುವುದಿಲ್ಲ ಎಂದಲ್ಲ. ಪ್ರತಿ ನಮಾಝï‌ನಲ್ಲೂ ನಾವು ಪ್ರಾರ್ಥಿಸುತ್ತೇವೆ.  ಆದರೆ, ಹೀಗೆ ಪ್ರಾರ್ಥಿಸುವಾಗ ನಮ್ಮ ಮನಸ್ಸು ಎಲ್ಲಿರುತ್ತದೆ? ನಮ್ಮ ಕಣ್ಣು, ಕೈ-ಕಾಲುಗಳ ಭಾವನೆಗಳು ಏನಿರುತ್ತವೆ? ನಾಲಗೆಗೂ  ಹೃದಯಕ್ಕೂ ಯಾವ ಸಂಬಂಧ ಇರುತ್ತದೆ? ನಾವು ಎಷ್ಟು ಬಾರಿ ದಾಸರಾಗಿ ಪ್ರಾರ್ಥಿಸಿದ್ದೇವೆ? ಒಡೆಯ ತನ್ನ ಪಕ್ಕವೇ ಇದ್ದಾನೆ ಎಂದು ಭಾವಿಸಿ  ಪ್ರಾರ್ಥಿಸಿದ ಪ್ರಾರ್ಥನೆಗಳು ಎಷ್ಟಿವೆ? ಪ್ರಾರ್ಥನೆಯ ಸಂದರ್ಭದಲ್ಲಿ ನಾವೆಷ್ಟು ಬಾರಿ ಒಡೆಯರಾಗಿಲ್ಲ? ಅಲ್ಲಾಹನು ದಾಸನೇನೋ ಎಂದು  ಭಾವಿಸುವಂತೆ ನಡಕೊಂಡಿಲ್ಲ? ನಿಜವಾಗಿ,

ಉಪವಾಸದ ದಿನಗಳಲ್ಲಿ ಮನುಷ್ಯ ದಾಸನಾಗುವಷ್ಟು ಮತ್ತು ಅಲ್ಲಾಹ್ ಒಡೆಯನಾಗುವಷ್ಟು ಇನ್ನಾವ ತಿಂಗಳಲ್ಲೂ ಆಗಲ್ಲ ಅನಿಸುತ್ತದೆ.  ರಮಝಾನ್‌ನಲ್ಲಿ ಮಾಡುವಷ್ಟು ಪ್ರಾರ್ಥನೆ ಇನ್ನಾವ ತಿಂಗಳಲ್ಲೂ ಮಾಡುವ ಸಾಧ್ಯತೆ ಇಲ್ಲ. ಉಪವಾಸ ಸ್ಥಿತಿಯು ವ್ಯಕ್ತಿಯನ್ನು ಪ್ರಾರ್ಥನೆಗೆ  ಸಜ್ಜುಗೊಳಿಸುವಷ್ಟು ಇನ್ನಾವ ಸ್ಥಿತಿಯೂ ಸಜ್ಜುಗೊಳಿಸುವುದು ಸುಲಭ ಅಲ್ಲ. ಆದ್ದರಿಂದಲೇ, ಅಲ್ಲಾಹನು ಉಪವಾಸದ ವಚನಗಳ ನಡುವೆ  ಪ್ರಾರ್ಥನೆಯ ವಚನವನ್ನೂ ಇಟ್ಟಿರಬೇಕು. ಆದರೆ, ತಂತ್ರಜ್ಞಾನದ ಈ ಉತ್ತುಂಗ ಕಾಲದಲ್ಲಿ ಉಪವಾಸಕ್ಕೂ ಸವಾಲುಗಳು ಎದುರಾಗಿವೆ. ನಾಲ್ಕೈದು  ದಶಕಗಳ ಹಿಂದೆ ಆಗಿದ್ದರೆ ನೋಡಬಾರದ್ದನ್ನು ನೋಡುವುದಕ್ಕೂ ಮತ್ತು ಆಲಿಸಬಾರದ್ದನ್ನು ಆಲಿಸುವುದಕ್ಕೂ ಮಿತಿಗಳಿದ್ದುವು. ಸಿನಿಮಾ  ನೋಡಬೇಕೆಂದರೆ ನಗರದಲ್ಲಿರುವ ಥಿಯೇಟರ್‌ಗೇ ಹೋಗಬೇಕಿತ್ತು. ಆಡಬಾರದ್ದನ್ನು ಆಡಬೇಕೆಂದರೆ ವ್ಯಕ್ತಿಯನ್ನು ಭೇಟಿಯಾಗಬೇಕಿತ್ತು.  ಕೆಡುಕುಗಳೆಂದು ನಾವು ಯಾವುದನ್ನೆಲ್ಲ ಪಟ್ಟಿ ಮಾಡುತ್ತೇವೋ ಅವೆಲ್ಲವೂ ತೀರಾ ಸುಲಭವಾಗಿ ಲಭ್ಯವಾಗದಷ್ಟು ತುಟ್ಟಿಯಾಗಿದ್ದುವು. ಉಪವಾಸದ  ಸಮಯದಲ್ಲಿ ಏನನ್ನಾದರೂ ತಿನ್ನಬೇಕೆಂದರೆ ಹೊಟೇಲಿಗೆ ಹೋಗಿಯೇ ತಿನ್ನಬೇಕಿತ್ತು. ಆದರೆ ಇವತ್ತು ಅಂಥ ಬೇಲಿಗಳೇ ಇಲ್ಲ. ಒಂದು  ಬೆಳಗಾತ ಮೊಬೈಲ್ ಹಿಡಿದು ಕುಳಿತರೆ ಇಫ್ತಾರ್ ವರೆಗೂ ನೋಡುವಷ್ಟು ಮತ್ತು ಆಲಿಸುವಷ್ಟು ವಿಷಯಗಳು ಅದರಲ್ಲಿರುತ್ತವೆ. ನಮ್ಮ ಇಡೀ ದಿನದ ಸಮಯವನ್ನು ಒಂದು ಮೊಬೈಲ್‌ಗೆ ಕಸಿದುಕೊಳ್ಳುವ ಸಾಮರ್ಥ್ಯವಿದೆ. ನಮಾಝï ನಲ್ಲೂ ನಮ್ಮ ಏಕತಾನತೆಯನ್ನು ಮೊಬೈಲ್  ಕಸಿಯುತ್ತದೆ. ಪ್ರಾರ್ಥನೆಯಲ್ಲೂ ಅದು ನಮ್ಮ ಏಕಾಗ್ರತೆಗೆ ಭಂಗ ತರುತ್ತದೆ. ಡ್ರೈವಿಂಗ್‌ನಲ್ಲೂ ನಮ್ಮನ್ನು ಅದು ವಿಚಲಿತಗೊಳಿಸುತ್ತದೆ. ಗಂಭೀರ  ಸಭೆ ನಡೆಯುವಾಗಲೂ ನಮ್ಮನ್ನು ಅದು ಕೆಣಕುತ್ತದೆ. ಎಂಥ ಸಂದರ್ಭಗಳಲ್ಲೂ ಅಚಾನಕ್ಕಾಗಿ ನಮ್ಮ ಕೈ ಮೊಬೈಲ್‌ನತ್ತ ಹೋಗುವಷ್ಟು ಅದು  ಪರಮಾತ್ಮವಾಗಿ ಬಿಟ್ಟಿದೆ. ದಾಸ ಮತ್ತು ಒಡೆಯನ ನಡುವಿನ ಅತ್ಯಂತ ಖಾಸಗಿ ಸಂಭಾಷಣೆಗೂ ಕತ್ತರಿ ಹಾಕುವಷ್ಟು ಬೃಹತ್ತಾಗಿ ಬೆಳೆದಿರುವ ಈ  ಮೊಬೈಲ್ ಹಾವಳಿಯಿಂದ ಮನಸ್ಸನ್ನು ತಡೆದಿಟ್ಟುಕೊಳ್ಳುವುದು ಹೇಗೆ? ನಿಜಕ್ಕೂ,

ಇವತ್ತು ನಾವು ಯಾವುದನ್ನೆಲ್ಲಾ ಅಮಲು ಪದಾರ್ಥಗಳು ಎಂದು ಪಟ್ಟಿ ಮಾಡುತ್ತೇವೆಯೋ ಅವುಗಳಲ್ಲಿ ಮೊದಲ ಸ್ಥಾನ ದಲ್ಲಿಡಬೇಕಾದ ಎಲ್ಲ  ಅರ್ಹತೆ ಮೊಬೈಲ್‌ಗಿದೆ. ಯುವ ಸಮೂಹ ವನ್ನಂತೂ ಅದು ಆವರಿಸಿಬಿಟ್ಟಿದೆ. ಇಂಥ ಸ್ಥಿತಿಯಲ್ಲಿ ಉಪವಾಸಿಗರು ಏಕಾಗ್ರಚಿತ್ತರಾಗುವುದು  ಹಾಗೂ ಒಡೆಯ ಮತ್ತು ದಾಸ ಎಂಬ ಭಾವದೊಂದಿಗೆ ಧ್ಯಾನಸ್ಥ ಸ್ಥಿತಿಗೆ ತಲುಪಿ ಪ್ರಾರ್ಥಿಸುವುದು ಬಹುದೊಡ್ಡ ಸವಾಲು. ಒಂದು ಕ್ಲಿಕ್  ಮಾಡಿದರೆ ನೀವಿರುವಲ್ಲಿಗೇ ನಿಮ್ಮಿಷ್ಟದ ಸ್ವಾದಿಷ್ಟ ಆಹಾರ ತಲುಪಿಸುವ ವ್ಯವಸ್ಥೆ ಇವತ್ತಿನದು. ಹಿಂದಿನಂತೆ  ಹೊಟೇಲಿಗೇ ಹೋಗಿ ತಿನ್ನಬೇಕಾದ  ಮುಜುಗರದ ಸ್ಥಿತಿ ಉಪವಾಸಿಗನಿಗೆ ಇವತ್ತಿಲ್ಲ. ನಿಜವಾಗಿ, ಇದನ್ನು ಸೌಲಭ್ಯ ವಾಗಿಯೂ ನೋಡಬಹುದು ಅಥವಾ ಸವಾಲಾಗಿಯೂ ನೋಡಬಹುದು. ಉಪವಾಸವನ್ನು ಭಂಗಗೊಳಿಸುವ ಎಲ್ಲವೂ ತನ್ನೆದುರು ಸುಲಭವಾಗಿ ಲಭ್ಯವಿದ್ದೂ ತಾನು ಅವುಗಳಿಂದೆಲ್ಲ ದೂರ ನಿಲ್ಲುವು ದಕ್ಕೆ  ಆಂತರಿಕ ಶಕ್ತಿ ಬೇಕು. ಒಂದುರೀತಿಯಲ್ಲಿ ಈ ದಿನಗಳ ಉಪವಾಸ ಈ ಹಿಂದಿನ ತಲೆಮಾರಿನ ಉಪವಾಸಕ್ಕೆ ಹೋಲಿಸಿದರೆ ಹೆಚ್ಚು ಸವಾಲಿನದ್ದು.  ಈ ಹಿಂದಿನ ತಲೆಮಾರಿಗೆ ಲಭ್ಯವಿಲ್ಲದ ಮತ್ತು ಉಪವಾಸ ಭಂಗಗೊಳ್ಳುವ ಅಥವಾ ಅದರ ನಿಜ ಉದ್ದೇಶವನ್ನು ತೆಳ್ಳಗಾಗಿಸುವ ಅನೇಕಾರು  ಸೌಲಭ್ಯಗಳು ಇವತ್ತಿನ ತಲೆಮಾರಿಗೆ ಲಭ್ಯವಾಗಿದೆ. ಈ ಸೌಲಭ್ಯಗಳ ಹೊರತಾಗಿಯೂ ಓರ್ವರು ವಿಚಲಿತರಾಗದೇ ಮತ್ತು ಏಕಾಗ್ರತೆಯನ್ನು  ಕಳಕೊಳ್ಳದೇ ಉಪವಾಸ ವ್ರತ ಆಚರಿಸಲು ಯಶಸ್ವಿಯಾಗುತ್ತಾರೆಂದರೆ ಅದೊಂದು ಸಾಧನೆಯೇ ಸರಿ. ಹಸಿವು ಮತ್ತು ಬಾಯಾರಿಕೆ ಎಂಬ  ಸಾಮಾನ್ಯ ಪರಿಕಲ್ಪನೆಯ ಆಚೆಗೆ ಉಪವಾಸ ಇವತ್ತು ವಿಸ್ತರಿಸಿಕೊಂಡಿದೆ. ಹಸಿವನ್ನಾದರೂ ತಡಕೊಳ್ಳಬಹುದು, ಬಾಯಾರಿಕೆಯನ್ನಾದರೂ  ಸಹಿಸಿಕೊಳ್ಳಬಹುದು, ಆದರೆ, ಈ ಮೊಬೈಲ್‌ನಿಂದ ತಡೆದುಕೊಳ್ಳುವುದು ಹೇಗೆ ಎಂಬ ಪ್ರಶ್ನೆಯೊಂದು ಇವತ್ತು ಮುನ್ನೆಲೆಗೆ ಬಂದಿದೆ. ಅದು  ಯುವಸಮೂಹವೂ ಸೇರಿ ಒಂದಿಡೀ ಸಮೂಹದ ಏಕಾಗ್ರತೆಯನ್ನು ಚೆಲ್ಲಾಪಿಲ್ಲಿಗೊಳಿಸಿದೆ. ವ್ಯಸನದ ಹೊಸ ಮಾದರಿಯನ್ನು ಪರಿಚಯಿಸಿದೆ.  ಇಂಥ ಸಂದರ್ಭದಲ್ಲಿ ಉಪವಾಸದ ಉದ್ದೇಶದೆಡೆಗೆ ನ್ಯಾಯಯುತವಾಗಿ ತಲುಪುವುದು ತೀರಾ ಸುಲಭ ಅಲ್ಲ. ನಿಜವಾಗಿ,

ಉಪವಾಸ ಪ್ರತಿವರ್ಷ ಯಾಕೆ ಅಗತ್ಯ ಎಂಬ ಪ್ರಶ್ನೆಗೆ ಪ್ರತಿವರ್ಷ ಆವಿಷ್ಕಾರಗೊಳ್ಳುವ ಈಗಿನ ಹೊಸ ಹೊಸ ತಂತ್ರಜ್ಞಾನಗಳು ಉತ್ತರವನ್ನು  ಹೇಳುತ್ತವೆ. ಈ ತಂತ್ರಜ್ಞಾನಗಳು ಮನುಷ್ಯರನ್ನು ದಾಸರನ್ನಾಗಿ ಮಾಡುತ್ತಲೂ ಇವೆ. ಅದರ ಆಕರ್ಷಣೆಯಿಂದ ಮನುಷ್ಯ ತಪ್ಪಿಸಿಕೊಳ್ಳಲಾಗದೇ  ಒದ್ದಾಡುತ್ತಿರುತ್ತಾನೆ/ಳೆ. ಇಂಥ ಸಂದರ್ಭದಲ್ಲಿ ಉಪವಾಸ ಮತ್ತೆ ದಾಸ ಮತ್ತು ಒಡೆಯನ ಸಂಬಂಧಗಳನ್ನು ನೆನಪಿಸುತ್ತದೆ. ತಂತ್ರಜ್ಞಾನದ  ದಾಸ್ಯತನದಿಂದ ಅಲ್ಲಾಹನ ದಾಸ್ಯತನದೆಡೆಗೆ ಮರಳಲು ಸಾಧ್ಯವಾ ಎಂದು ಪ್ರಶ್ನಿಸುತ್ತದೆ. ಅವುಗಳ ಗೀಳಿನಿಂದ ಹೊರಬಂದು ಒಡೆಯನಿಗಾಗಿ  ಏಕಾಗ್ರ ಚಿತ್ತನಾಗು ಎಂದು ಕರೆ ಕೊಡುತ್ತದೆ. ಇದೊಂದು ಸವಾಲು. ಯಾಕೆಂದರೆ, ಅಲ್ಲಾಹನು ಭೌತಿಕವಾಗಿ ಉಪವಾಸಿಗನ ಎದುರಿಲ್ಲ. ಆದರೆ  ಆಧುನಿಕ ತಂತ್ರಜ್ಞಾನಗಳು ಮತ್ತು ಅವು ಕೊಡುವ ಅಪರಿಮಿತ ಮನರಂಜನೆಗಳು ಭೌತಿಕವಾಗಿಯೇ ಜೊತೆಗಿವೆ. ಆದ್ದರಿಂದ ಅವುಗಳ ದಾಸ್ಯ ದಿಂದ ಹೊರಬಂದು ನೈಜ ಒಡೆಯನ ದಾಸನಾಗುವುದಕ್ಕೆ ವರ್ಷವರ್ಷವೂ ತರಬೇತಿಯ ಅಗತ್ಯ ಇದೆ. ಹಾಗೆಯೇ, ದಾಸ ಮತ್ತು ಒಡೆಯನ  ನಡುವೆ ನಿಕಟ ಸಂಪರ್ಕವೂ ಬೆಳೆಯಬೇಕಾಗಿದೆ. ಒಡೆಯನನ್ನು ಮರೆತ ದಾಸ ದಾರ ಕಡಿದು ಹೋದ ಗಾಳಿಪಟದಂತೆ. ಬಹುಶಃ,

ಉಪವಾಸದ ವಿವರಣೆಯುಳ್ಳ ವಚನಗಳ ನಡುವೆ ಪ್ರಾರ್ಥನೆಯ ವಚನವನ್ನು ಅಲ್ಲಾಹನು ಅವತೀರ್ಣಗೊಳಿಸಿರುವುದಕ್ಕೆ ಇದುವೇ ಕಾರಣ  ಇರಬೇಕು.


No comments:

Post a Comment