ಏ ಕೆ ಕುಕ್ಕಿಲ
1. ಮುಸ್ಲಿಮರು ಕೆಟ್ಟವರು
2. ಮುಸ್ಲಿಮರು ಹಂತಕರು
ಇAಥದ್ದೊಂದು ಪ್ರಚಾರವನ್ನು ನಡೆಸುವ ಉದ್ದೇಶ ನಿಮಗಿದೆಯೆಂದಾದರೆ, 140 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಅವಕಾಶಗಳು ಬೇಕಾದಷ್ಟಿವೆ. ತನ್ನ ಸಂಗಾತಿ ಶ್ರದ್ಧಾಳನ್ನು ತುಂಡು ತುಂಡು ಮಾಡಿ ಫ್ರೀಜರ್‌ನಲ್ಲಿಟ್ಟ ದೆಹಲಿಯ ಅಫ್ತಾಬ್ ಅಮೀನ್ ಪೂನಾವಾಲನಿಂದ ಹಿಡಿದು ನೇಹಾ ಹಿರೇಮಠ್‌ಳನ್ನು ಇರಿದು ಹತ್ಯೆ ಮಾಡಿದ ಹುಬ್ಬಳ್ಳಿಯ ಫಯಾಜ್ ನವರೆಗೆ. ಹಾಗಂತ,
1. ಹಿಂದೂಗಳು ಕೆಟ್ಟವರು
2. ಹಿಂದೂಗಳು ಹಂತಕರು
ಎಂಬೊಂದು ಪ್ರಚಾರವನ್ನು ನಡೆಸುವ ಉದ್ದೇಶ ನಿಮಗಿದ್ದರೂ ಅವಕ್ಕೂ ಸರಕುಗಳು ಬೇಕಾದಷ್ಟಿವೆ. ಉಡುಪಿಯ ನೇಜಾರಿನ ತಾಯಿ-ಮಗಳನ್ನು ಹತ್ಯೆ ಮಾಡಿದ ಪ್ರವೀಣ್ ಚೌಗಲೆಯಿಂದ ಹಿಡಿದು ಬೆಂಗಳೂರಿನ ಪ್ರದೀಪ್ ವರೆಗೆ. ತಾನು ಪ್ರೀತಿಸುತ್ತಿದ್ದ ರುಕ್ಸಾನ ಎಂಬ ಹೆಣ್ಮಗಳನ್ನೇ ಈತ 2024 ಮಾರ್ಚ್ 31ರಂದು ಕೊಂದು ಸುಟ್ಟು ಹಾಕಿದ್ದ. ಅಂದಹಾಗೆ,
ಮುಸ್ಲಿಮ್ ವ್ಯಕ್ತಿಯ ಅಪರಾಧವನ್ನು ಎತ್ತಿಕೊಂಡು ಇಸ್ಲಾಮನ್ನು ಹಂತಕ ಧರ್ಮ ಎಂದು ಬಿಂಬಿಸುವಾಗ, ಹಿಂದೂ ವ್ಯಕ್ತಿಯ ಅಪರಾಧವನ್ನು ಉಲ್ಲೇಖಿಸಿ ಹಿಂದೂ ಧರ್ಮವನ್ನು ಹಂತಕ ಧರ್ಮ ಎಂದು ಬಿಂಬಿಸುವುದು ಸಹಜ. ಆದರೆ, ಹೀಗೆ ಬಿಂಬಿಸುವ ಎರಡೂ ಗುಂಪಿಗೂ ವಾಸ್ತವ ಏನು ಅನ್ನುವುದು ಗೊತ್ತಿರುತ್ತದೆ. ವ್ಯಕ್ತಿಯ ತಪ್ಪಿಗೆ ಆ ವ್ಯಕ್ತಿಯ ಧರ್ಮವೋ ಸಮುದಾಯವೋ ಹೊಣೆಯಲ್ಲ ಎಂಬುದಕ್ಕೆ ವಿಶೇಷ ಸಂಶೋಧನೆಯ ಅಗತ್ಯವೇನೂ ಇಲ್ಲ. ಪ್ರಜಾತಂತ್ರ ಭಾರತದಲ್ಲಿ ಎಲ್ಲ ಧರ್ಮಗಳ ಅನುಯಾಯಿಗಳೂ ಸಂವಿಧಾನಕ್ಕೆ ಬದ್ಧವಾಗಿ ಬದುಕಬೇಕಾಗುತ್ತದೆ. ಅಲ್ಲದೇ, ಯಾವುದೇ ವ್ಯಕ್ತಿಗೆ ಶಿಕ್ಷೆ ನೀಡುವ ಸ್ವಾತಂತ್ರ‍್ಯವನ್ನು ಸಂವಿಧಾನ ಯಾವುದೇ ಸಮುದಾಯಕ್ಕೂ ಕೊಟ್ಟಿಲ್ಲ. ಯಾವುದೇ ಧರ್ಮಗುರುವಿಗೂ ಕೊಟ್ಟಿಲ್ಲ. ಆದ್ದರಿಂದ ನೇಹಾಳನ್ನು ಹತ್ಯೆಗೈದ ಆರೋಪಿ ಫಯಾಜ್ ನ ಹತ್ಯೆಗೆ ಯಾವುದಾದರೂ ಧರ್ಮಗುರು ಫತ್ವಾ ಹೊರಡಿಸಿದರೆ ಅವರು ಇಲ್ಲಿನ ಕಾನೂನಿನ ಪ್ರಕಾರ ಅಪರಾಧಿಯಾಗುತ್ತಾರೆ. ಧರ್ಮಗುರು ಬಿಡಿ, ಸ್ವತಃ ಫಯಾಜ್ ನ ತಂದೆಯೇ ಮಗನಿಗೆ ಶಿಕ್ಷೆ ಕೊಡಲು ಹೊರಟರೆ ಅವರೂ ತಪ್ಪಿತಸ್ಥರಾಗುತ್ತಾರೆ. ಇದು ಫಯಾಜ್ ನ ಅಪರಾಧವನ್ನು ಇಸ್ಲಾಮ್‌ನ ಮೇಲೋ ಮುಸ್ಲಿಮರ ಮೇಲೋ ಹೊರಿಸುತ್ತಿರುವ ಗುಂಪಿಗೂ ಗೊತ್ತಿಲ್ಲದ್ದಲ್ಲ. ಮತ್ತೇಕೆ ಈ ಗುಂಪು ಹೀಗೆ ವರ್ತಿಸುತ್ತದೆಂದರೆ, ಅದರ ಹಿಂದೆ ರಾಜಕೀಯ ಕಾರಣಗಳಿವೆ. ಅಂದಹಾಗೆ,
ಒಂದು ಗುಂಪಿನ ಆರೋಪಕ್ಕೆ ಇನ್ನೊಂದು ಗುಂಪು ಪ್ರತಿ ಆರೋಪವನ್ನು ಮಾಡುವುದು ಆರೋಪದ ತೀವ್ರತೆಯನ್ನು ಕಡಿಮೆಗೊಳಿಸುವುದಕ್ಕೆ ನೆರವಾಗಬಹುದೇ ಹೊರತು ಅಪರಾಧ ಕೃತ್ಯವನ್ನಲ್ಲ. ಅಪರಾಧ ಕೃತ್ಯಗಳನ್ನು ಧರ್ಮಾಧಾರಿತವಾಗಿ ವಿಭಜಿಸಿ ವಿಶ್ಲೇಷಿಸುವುದರಿಂದ ಲಾಭವಾಗುವುದಿದ್ದರೆ ಅದು ಅಪರಾಧಿಗಳಿಗೆ ಮಾತ್ರ. ಒಂದು ಉದಾಹರಣೆ,
ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ ಆಸಿಫಾ ಎಂಬ 8 ವರ್ಷದ ಬಾಲೆಯ ಶವ 2018, ಜನವರಿ 17ರಂದು ಪತ್ತೆಯಾಯಿತು. ಬುಡಕಟ್ಟು ಸಮುದಾಯದ ಈ ಬಾಲೆ 7 ದಿನಗಳ ವರೆಗೆ ಕಾಣೆಯಾಗಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರಂಭದಲ್ಲಿ ಅಪ್ರಾಪ್ತ ಯುವಕನನ್ನು ಬಂಧಿಸಿದರು. ಆತ ಹೇಳಿದ ಸತ್ಯ ಮಾತ್ರ ಆಘಾತಕಾರಿಯಾಗಿತ್ತು. ಪೊಲೀಸರು ಆತನ ಹೇಳಿಕೆಯ ಜಾಡು ಹಿಡಿದು ತನಿಖಿಸಿದಾಗ ಪೊಲೀಸರು ಆಘಾತದ ಮೇಲೆ ಆಘಾತವನ್ನು ಅನುಭವಿಸಿದರು. ಈ ಕ್ರೌರ್ಯದಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜೂರಿಯಾ ಮತ್ತು ಪರ್ವೇಶ್ ಕುಮಾರ್ ಅವರ ಪಾತ್ರ ಇತ್ತು. ಅಪರಾಧಿಗಳನ್ನು ರಕ್ಷಿಸುವುದಕ್ಕಾಗಿ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ಗಳಾದ ತಿಲಕ್ ರಾಜ್ ಮತ್ತು ಅರವಿಂದ್ ದತ್ತಾ ಶ್ರಮಿಸಿದ್ದರು. ಮಾತ್ರವಲ್ಲ, ಸಾಕ್ಷ್ಯ ನಾಶಕ್ಕಾಗಿ ನೆರವಾಗಿದ್ದರು. ಈ ಕೃತ್ಯದ ಪ್ರಮುಖ ಆರೋಪಿ ಸಂಜಿರಾಮ್ ಮಂದಿರವೊಂದರ ಅರ್ಚಕನಾಗಿದ್ದ. ಈತನ ಮಗ ವಿಶಾಲ್ ಕೂಡಾ ಈ ಕ್ರೌರ್ಯದಲ್ಲಿ ಭಾಗಿಯಾಗಿದ್ದ. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ಕಥುವಾದ ಕೆಳಕೋರ್ಟಿನಲ್ಲಿ ನಡೆಯಿತಾದರೂ ಆ ಬಳಿಕ ಸುಪ್ರೀಮ್ ಕೋರ್ಟು ಮಧ್ಯಪ್ರವೇಶಿಸಿ ಪ್ರಕರಣವನ್ನು ಚಂಡೀಗಢಕ್ಕೆ ವರ್ಗಾಯಿಸಿತು. ತ್ವರಿತಗತಿ ನ್ಯಾಯಾಲಯದಲ್ಲಿ ಪ್ರಕರಣದ ತನಿಖೆ ನಡೆಯಬೇಕೆಂದು ಸುಪ್ರೀಮ್ ಕೋರ್ಟು ಆದೇಶಿಸಿತು. ಅಲ್ಲದೇ, ವಿಚಾರಣಾ ಪ್ರಕ್ರಿಯೆಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಬೇಕೆಂದು ಕೂಡಾ ಕೋರ್ಟು ಆದೇಶಿಸಿತು. ಈ ನಡುವೆ,
ತಮ್ಮ ಪರವಾಗಿ ವಾದಿಸುತ್ತಿರುವ ದೀಪಿಕಾ ರಾಜವತ್‌ರನ್ನು ತಾವು ಕೈಬಿಟ್ಟಿರುವುದಾಗಿಯೂ ಮತ್ತು ಅವರು ಇನ್ನು ಮುಂದೆ ಆಸಿಫಾ ಪ್ರಕರಣದಲ್ಲಿ ತಮ್ಮನ್ನು ಪ್ರತಿನಿಧಿಸುತ್ತಿಲ್ಲವೆಂದೂ..’ ಆಸಿಫಾಳ ತಂದೆ ಚಂಢೀಗಢ ನ್ಯಾಯಾಲಯಕ್ಕೆ ತಿಳಿಸಿದರು. ‘ಈವರೆಗೆ ನಡೆದ 100ರಷ್ಟು ವಿಚಾರಣಾ ಪ್ರಕ್ರಿಯೆಯಲ್ಲಿ ಇವರು ಕೇವಲ 2 ಬಾರಿ ಮಾತ್ರ ಹಾಜರಾಗಿದ್ದಾರೆ..’ ಎಂದು ಆ ತಂದೆ ಕಾರಣವನ್ನೂ ನೀಡಿದರು. ಕೊನೆಗೆ, 2019 ಜೂನ್ 10ರಂದು ಪ್ರಕರಣದ 7 ಮಂದಿ ಆರೋಪಿಗಳ ಪೈಕಿ 6 ಮಂದಿಯನ್ನು ಅಪರಾಧಿಗಳು ಎಂದು ನ್ಯಾಯಾಲಯ ಘೋಷಿಸಿತು. ಮಂದಿರದ ಅರ್ಚಕ ಸಂಜಿರಾಮ್ ಮತ್ತು ಪೊಲೀಸ್ ಅಧಿಕಾರಿಗಳಾದ ದೀಪಕ್ ಖಜೂರಿಯ ಮತ್ತು ಪರ್ವೇಶ್ ಕುಮಾರ್‌ರಿಗೆ 25 ವರ್ಷಗಳ ಜೀವಾವಧಿ ಶಿಕ್ಷೆ ಮತ್ತು ತಲಾ 1 ಲಕ್ಷ ರೂಪಾಯಿ ದಂಡವನ್ನು ವಿಧಿಸಿತು. ಹಾಗೆಯೇ, ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಿದ ಅಪರಾಧಕ್ಕಾಗಿ ತಿಲಕ್ ರಾಜ್, ಆನಂದ್ ದತ್ತ ಮತ್ತು ಸುರೇಂದ್ ವರ್ಮಾರಿಗೆ 5 ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿತು. ಇದೇವೇಳೆ, ಸಂಜಿರಾಮ್‌ನ ಮಗ ವಿಶಾಲ್‌ನನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನ್ಯಾಯಾಲಯ ದೋಷಮುಕ್ತಗೊಳಿಸಿತು. ಸಂಜಿರಾಮ್‌ನ ಸಂಬಂಧಿಕರಾದ ಅಪ್ರಾಪ್ತ ಯುವಕನನ್ನು ಬಾಲಾಪರಾಧ ನ್ಯಾಯಾಲಯದಲ್ಲಿ ವಿಚಾರಣೆಗೆ ಒಪ್ಪಿಸಲಾಯಿತು. ನಿಜವಾಗಿ,
ಇಲ್ಲಿನ ಉದ್ದೇಶ, ಈ ಪ್ರಕರಣವನ್ನು ವಿವರಿಸುವುದಲ್ಲ. ಈ ಅತ್ಯಾಚಾರ ಮತ್ತು ಹತ್ಯೆ ಬಹಿರಂಗವಾಗಿ, ಇಬ್ಬರು ಪೊಲೀಸ್ ಅಧಿಕಾರಿಗಳಾದ ಖಜೂರಿಯಾ ಮತ್ತು ಪರ್ವೇಶ್ ಕುಮಾರ್ ಹಾಗೂ ಸಂಜಿರಾಮ್ ಮತ್ತು ಆತನ ಮಗ ಮತ್ತು ಮೊಮ್ಮಗನನ್ನು ಪೊಲೀಸರು ಬಂಧಿಸಿದ ದಿನಗಳೊಳಗೆ ಜಮ್ಮುವಿನಲ್ಲಿ ಏನೆಲ್ಲ ಬೆಳವಣಿಗೆಗಳು ನಡೆಯಿತು ಎಂಬುದನ್ನು ವಿವರಿಸುವುದೇ ಇದರ ಉದ್ದೇಶ. ಈ ಬಂಧನಗಳು ನಡೆದ ಬೆನ್ನಿಗೇ ಹಿಂದೂ ಏಕ್ತಾ ಮಂಚ್ ಎಂಬ ಸಂಘಟನೆಯನ್ನು ರಚಿಸಲಾಯಿತಲ್ಲದೇ, ಬಂಧಿತರ ಪರ ಬೃಹತ್ ರ‍್ಯಾಲಿ ನಡೆಸಲಾಯಿತು. ಈ ರ‍್ಯಾಲಿಯಲ್ಲಿ ಆಗಿನ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಸರಕಾರದ ಅರಣ್ಯ ಸಚಿವರಾಗಿದ್ದ ಚೌದರಿ ಲಾಲ್ ಸಿಂಗ್ ಮತ್ತು ಕೈಗಾರಿಕಾ ಸಚಿವ ಚಂದರ್ ಪ್ರಕಾಶ್ ಗಂಗಾ ಭಾಗವಹಿಸಿದರು ಮತ್ತು ಪ್ರಚೋದನಕಾರಿಯಾಗಿ ಭಾಷಣ ಮಾಡಿದರು. ಪೊಲೀಸರನ್ನು ಮತ್ತು ಅಪ್ರಾಪ್ತನನ್ನು ಬಂಧಿಸಿರುವುದಕ್ಕೆ ಕಿಡಿ ಕಾರಿದರು. ಈ ಮೂಲಕ ಆರೋಪಿಗಳಲ್ಲಿ ಮತ್ತು ಜನಸಾಮಾನ್ಯರಲ್ಲಿ ಭಂಡ ಧೈರ್ಯ, ಹುಚ್ಚು ಆವೇಶವನ್ನು ಮೂಡಿಸಿದರು. ಅಂದಹಾಗೆ,
ಯಾವುದೇ ಕ್ರಿಮಿನಲ್ ಪ್ರಕರಣ ನಡೆದಾಗ ನಾಗರಿಕ ಸಮಾಜ ಮಾಡಬೇಕಾದುದೇನೆಂದರೆ ಕ್ರಿಮಿನಲ್‌ಗಳನ್ನು ಒಂಟಿಯಾಗಿಸುವುದು. ನಿಮಗೆ ನಮ್ಮ ಬೆಂಬಲ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರುವುದು. ಹುಬ್ಬಳ್ಳಿ ಪ್ರಕರಣ ಇದಕ್ಕೊಂದು ಉದಾಹರಣೆ.
ನೇಹಾ ಹಿರೇಮಠಳನ್ನು ಹತ್ಯೆಗೈದುದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿ ಭಾಗಿಯಾದರು. ಶುಕ್ರವಾರದ ಜುಮಾ ನಮಾಝïನ ಬಳಿಕ ಅಂಜುಮನ್ ಎ ಇಸ್ಲಾಮೀ ಸಂಘಟನೆಯ ಕುಂದಗೋಲ, ಕಲಗಟಗಿ, ಹುಬ್ಬಳ್ಳಿ, ಅಲ್‌ನವಾರ ಮತ್ತು ಧಾರವಾಡ ಘಟಕದ ಅಧ್ಯಕ್ಷರುಗಳು ಹುಬ್ಬಳ್ಳಿ ಪೊಲೀಸ್ ಕಮೀಷನರ್‌ರನ್ನು ಭೇಟಿಯಾಗಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು. ಹಾಗೆಯೇ ಮುಸ್ಲಿಮ್ ಸಮುದಾಯದ ಪರವಾಗಿ ಸಂಘಟನೆಯ ನಾಯಕರು ಕೃತ್ಯವನ್ನು ತೀವ್ರವಾಗಿ ಖಂಡಿಸಿದರು. ಇದರ ಜೊತೆಗೆ ಆರೋಪಿಗೆ ಕಠಿಣ ಶಿಕ್ಷೆ ನೀಡುವಂತೆ ಮತ್ತು ಪಕ್ಷಪಾತ ರಹಿತ ತನಿಖೆ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಂಘಟನೆಯ ನಾಯಕರು ಪತ್ರ ಬರೆದು ಒತ್ತಾಯಿಸಿದರು. ಇದರಾಚೆಗೆ ಇಡೀ ಕರ್ನಾಟಕಕ್ಕೆ ಸಂಬಂಧಿಸಿ ನೋಡುವುದಾದರೂ ಎಲ್ಲೂ ಮುಸ್ಲಿಮ್ ಸಮುದಾಯದ ಯಾರೂ ಈ ಕ್ರೌರ್ಯದ ಪರ ವಹಿಸಿ ಮಾತನಾಡಲೇ ಇಲ್ಲ. ಕಥುವಾದ ಹಿಂದೂ ಏಕ್ತಾ ಮಂಚ್ ರಚಿಸಿದಂತೆ ಮುಸ್ಲಿಮ್ ಸಮುದಾಯ ಮುಸ್ಲಿಮ್ ಏಕ್ತಾ ಮಂಚ್ ರಚಿಸಲಿಲ್ಲ. ಫಯಾಜ್ ನ ಪರ ರ‍್ಯಾಲಿ ನಡೆಸಲಿಲ್ಲ. ಎಲ್ಲಿಯ ವರೆಗೆಂದರೆ, ಆತನ ತಂದೆಯೇ ಆತನ ಪರ ನಿಲ್ಲಲಿಲ್ಲ. ಅಂದಹಾಗೆ,
140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಅಪರಾಧಗಳನ್ನು ಶೂನ್ಯ ಸಂಖ್ಯೆಗೆ ಇಳಿಸಲು ಸಾಧ್ಯವೇ ಇಲ್ಲ. ಆದರೆ ಅಪರಾಧಿಗಳ ಪರ ವಹಿಸದೇ ಇರುವುದು, ತ್ವರಿತಗತಿಯಲ್ಲಿ ವಿಚಾರಣೆ ನಡೆಸುವುದು ಮತ್ತು ಹಿಂದೂ-ಮುಸ್ಲಿಮ್-ಸಿಕ್ಖ್ ಎಂಬ ಭೇದ ಇಲ್ಲದೇ ಪ್ರತಿ ಮನೆಗಳಲ್ಲೂ ಮಕ್ಕಳಿಗೆ ನೈತಿಕ ಹಾಗೂ ಜೀವನ ಪಾಠಗಳನ್ನು ಹೇಳಿಕೊಡುವುದಕ್ಕೆ ಸಾಧ್ಯವಿದೆ. ಇವು ಅಪರಾಧ ಪ್ರಕರಣಗಳನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಬಹುದು. ಅಷ್ಟಕ್ಕೂ
ನರ್ಸರಿಯಿಂದ ಡಿಗ್ರಿಯವರೆಗೆ ಮತ್ತು ಬಸ್ಸು, ರೈಲು, ವಿಮಾನ, ಸರಕಾರಿ ಕಚೇರಿಗಳಿಂದ ಹಿಡಿದು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಮತ್ತು ಕೀಡಾ ಕ್ಷೇತ್ರದ ವರೆಗೆ ಎಲ್ಲೆಲ್ಲೂ ಹೆಣ್ಣು ಮತ್ತು ಗಂಡು ಜೊತೆಯಾಗಿಯೇ ಇರುವ ಸಾಮಾಜಿಕ ವಾತಾವರಣದಲ್ಲಿ ಹಿಂದೂ ಯುವತಿ ಮುಸ್ಲಿಮ್ ಯುವಕನಿಂದ ಅಥವಾ ಮುಸ್ಲಿಮ್ ಯುವತಿ ಹಿಂದೂ ಯುವಕನಿಂದ ಆಕರ್ಷಿತವಾಗುವುದರಲ್ಲಿ ಅಚ್ಚರಿಯೂ ಇಲ್ಲ, ಅದು ಎಂಟನೇ ಅದ್ಭುತವೂ ಅಲ್ಲ. ಹರೆಯದಲ್ಲಿ ಆಕರ್ಷಣೆ ಸಹಜ. ಹೆಣ್ಣು ಮತ್ತು ಗಂಡು ಜೊತೆಯಾಗಿ ಕಲಿಯುವಾಗ, ಅವರು ಉದ್ಯೋಗ ಮಾಡುವಾಗ ಆಕರ್ಷಣೆ ಸಹಜ ಮತ್ತು ಕೆಲವೊಮ್ಮೆ ಪ್ರೇಮಾಂಕರವಾಗುವುದೂ ಸಹಜ. ಹರೆಯದಲ್ಲಾಗುವ ಈ ಬೆಳವಣಿಗೆಯನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ರಂಪಾಟ ಮಾಡುವುದರಿಂದ ರಾಜಕಾರಣಿಗಳಿಗೆ ಲಾಭವಾಗಬಹುದೇ ಹೊರತು ಇನ್ನೇನೂ ಆಗದು. ಅಂದಹಾಗೆ,
ಹಿಂದೂ ಮತ್ತು ಮುಸ್ಲಿಮರು ಈ ದೇಶದಲ್ಲಿ ವೈರಿಗಳಂತೆ ಬದುಕುವುದರಿಂದ ಈ ದೇಶದ ಅಭಿವೃದ್ಧಿಗೂ ತೊಡಕು ಮತ್ತು ಈ ಎರಡೂ ಸಮುದಾಯಗಳ ಆರೋಗ್ಯಕ್ಕೂ ಕೇಡು. ಸದ್ಯ ಆಗಬೇಕಿರುವುದು ಏನೆಂದರೆ, ಕ್ರಿಮಿನಲ್ ಕೃತ್ಯಗಳು ಎರಡೂ ಸಮುದಾಯಗಳ ಸಂಬಂಧವನ್ನು ನಿರ್ಧರಿಸುವ ಮಾನದಂಡ ಆಗದಂತೆ ನೋಡಿಕೊಳ್ಳುವುದು ಮತ್ತು ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗುವವರನ್ನು ಧರ್ಮ ನೋಡದೇ ಖಂಡಿಸಿ ಅವರಿಂದ ಅಂತರವನ್ನು ಕಾಪಾಡಿಕೊಳ್ಳುವುದು. ಹಾಗೆಯೇ ಪ್ರತಿ ಮನೆಗಳಲ್ಲೂ ಮಕ್ಕಳನ್ನು ಸಾಮಾಜಿಕ ಜವಾಬ್ದಾರಿಯೊಂದಿಗೆ ಬೆಳೆಸುವುದು.
ಪ್ರೀತಿ-ಪ್ರೇಮದ ವಿಷಯದಲ್ಲಿ ಹೆಣ್ಣಿನಷ್ಟು ಸಹನೆ ಗಂಡಿನಲ್ಲಿರುವುದಿಲ್ಲ. ಹೆಣ್ಣು ಹೆಚ್ಚು ಪ್ರಬುದ್ಧತೆಯಿಂದ ನಡಕೊಂಡರೆ ಗಂಡು ಭಾವುಕತೆಗೆ ಹೆಚ್ಚು ಒತ್ತು ನೀಡುತ್ತಾನೆ. ಹೆಣ್ಣಿನಲ್ಲಿ ಪ್ರಾಕ್ಟಿಕಲ್ ಪ್ರಜ್ಞೆ ಹೆಚ್ಚು. ಗಂಡಿನಲ್ಲಿ ಹುಚ್ಚು ಆವೇಶ ಮತ್ತು ಕ್ಷಣದ ಭಾವುಕತೆಗೇ ಹೆಚ್ಚು ಮಾರ್ಕು. ಈ ಎರಡೂ ಭಿನ್ನ ಗುಣಗಳ ಜೀವಗಳು ಪರಸ್ಪರ ಆಕರ್ಷಣೆಗೆ ಒಳಗಾಗುವಾಗ ವ್ಯತಿರಿಕ್ತ ನಡವಳಿಕೆಗಳು ವ್ಯಕ್ತವಾಗುವುದು ಅಸಹಜ ಅಲ್ಲ. ಇಂಥ ಸಂದರ್ಭಗಳಲ್ಲಿ ಯುವಕ-ಯುವತಿಯರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯ ಇರುತ್ತದೆ. ಭಾವನಾತ್ಮಕ ಸನ್ನಿವೇಶಗಳನ್ನು ನಿಭಾಯಿಸುವ ಕಲೆಯನ್ನು ಹರೆಯದ ಮಕ್ಕಳಿಗೆ ಪ್ರತಿ ಮನೆಯಲ್ಲೂ ತಿಳಿಸಿಕೊಡುವ ವ್ಯವಸ್ಥೆ ಆಗಬೇಕಿದೆ. ತನ್ನ ಮಗ ಅಥವಾ ಮಗಳು ಅಂಥವಳಲ್ಲ ಎಂಬ ಭಾವವನ್ನು ಬಿಟ್ಟು, ಪ್ರತಿ ಮಕ್ಕಳಲ್ಲೂ ಹೆಣ್ಣು-ಗಂಡಿನ ನಡುವಿನ ಆಕರ್ಷಣೆ ಮತ್ತು ಅದರಿಂದ ಎದುರಾಗುವ ಸಾಧಕ-ಬಾಧಕಗಳ ಬಗ್ಗೆ ಪೋಷಕರು ವಿವರಿಸಿಕೊಡುವ ಅಗತ್ಯವಿದೆ. ಸಾಮಾನ್ಯವಾಗಿ ಇತರೆಲ್ಲ ವಿಷಯಗಳನ್ನು ಹಂಚಿಕೊಳ್ಳುವ ಮಕ್ಕಳು ಪ್ರೇಮವನ್ನು ಹೆತ್ತವರೊಂದಿಗೆ ಹಂಚಿಕೊಳ್ಳುವುದು ಕಡಿಮೆ. ಆಕರ್ಷಣೆಯು ಪ್ರೇಮವಾಗಿ ಬಲಿತು ಬಲಿಷ್ಠವಾದ ಬಳಿಕ ಬಹುತೇಕ ಪ್ರೇಮ ಪ್ರಕರಣಗಳು ಹೆತ್ತವರ ಗಮನಕ್ಕೆ ಬರುವುದಿದೆ. ಇದು ಆ ಬಳಿಕದ ಹಲವಾರು ಸವಾಲುಗಳಿಗೂ ಕಾರಣವಾಗುತ್ತದೆ. ಆದ್ದರಿಂದ,
ಮಕ್ಕಳೊಂದಿಗೆ ಹೆತ್ತವರು ವಿಶ್ವಾಸಾರ್ಹ ಸಂಬಂಧವನ್ನು ಬೆಳೆಸಿಕೊಳ್ಳುವತ್ತ ಗಮನಹರಿಸಬೇಕು. ಪ್ರೇಮವೂ ಸೇರಿದಂತೆ ಪ್ರತಿಯೊಂದನ್ನೂ ಹೆತ್ತವರೊಂದಿಗೆ ಹಂಚಿಕೊಳ್ಳುವುದಕ್ಕೆ ಮಕ್ಕಳು ಮನಸ್ಸು ಮಾಡುವಂಥ ಗೆಳೆತನದ ಸಂಬಂಧವನ್ನು ಬೆಳೆಸಬೇಕು. ಅಗಾಗ್ಗೆ ಮಕ್ಕಳಿಗೆ ಇಂಥ ವಿಷಯಗಳಲ್ಲಿ ಮಾರ್ಗದರ್ಶನ ಮಾಡುತ್ತಿರಬೇಕು. ಎಲ್ಲಾದರೂ ನಡೆದ ಪ್ರಕರಣವನ್ನು ನೆಪ ಮಾಡಿಕೊಂಡು ಮಕ್ಕಳನ್ನು ಹತ್ತಿರ ಕೂರಿಸಿ ತಿಳುವಳಿಕೆ ನೀಡುತ್ತಿರಬೇಕು. ಈ ತರಬೇತಿಯು ಭವಿಷ್ಯದಲ್ಲಿ ಮಕ್ಕಳಿಗೆ ನೆರವಾಗಬಹುದು. ಸಿಟ್ಟಿನ ಭರದಲ್ಲೋ ಅಥವಾ ನಿರಾಶೆಯ ಸನ್ನಿವೇಶದಲ್ಲೋ ಹುಚ್ಚು ನಿರ್ಧಾರ ತಾಳದಂತೆ ಅವರನ್ನು ತಡೆಯುವುದಕ್ಕೆ ಹೆತ್ತವರು ಎಂದೋ ನೀಡಿದ ಮಾರ್ಗದರ್ಶನ ಪ್ರಯೋಜನಕ್ಕೆ ಬರಬಹುದು. ಅಂದಹಾಗೆ,
ಹುಬ್ಬಳ್ಳಿ ಪ್ರಕರಣಕ್ಕೆ ಸಂಬಂಧಿಸಿ ಮುಸ್ಲಿಮ್ ಸಮುದಾಯ ನಡಕೊಂಡ ರೀತಿ ಅತ್ಯಂತ ಪ್ರಬುದ್ಧವಾದುದು. ‘ನ್ಯಾಯ ನಿನ್ನ ಹೆತ್ತವರ ವಿರುದ್ಧ ಇದ್ದರೆ ನೀನು ನ್ಯಾಯದ ಜೊತೆ ನಿಲ್ಲಬೇಕೇ ಹೊರತು ಹೆತ್ತವರ ಪರ ಅಲ್ಲ..’ ಎಂಬ ಪವಿತ್ರ ಕುರ್‌ಆನಿನ ಧ್ಯೇಯಕ್ಕೆ ಅನ್ವರ್ಥವಾದುದು. ಇದಕ್ಕಾಗಿ ಹುಬ್ಬಳ್ಳಿಯ ಅಂಜುಮನ್-ಎ-ಇಸ್ಲಾಮ್ ಸಂಘಟನೆಯನ್ನು ಅಭಿನಂದಿಸುವೆ.
ಸನ್ಮಾರ್ಗ
No comments:
Post a Comment