The 1991 Act spoke “to our history and to the future of nation.. In preserving the character of places of public worship, the parliament has mandated in no uncertain terms that history and its wrongs shall not be used an instruments to oppress the present and the future...”
ಅಥವಾ
‘ಇತಿಹಾಸ ಮತ್ತು ಅದರ ತಪ್ಪುಗಳು ವರ್ತಮಾನ ಮತ್ತು ಭವಿಷ್ಯವನ್ನು ದಮನಿಸುವ ಸಾಧನಗಳನ್ನಾಗಿ ಬಳಸಬಾರದು. ಆರಾಧನಾ ಸ್ಥಳಗಳ ಸ್ವರೂಪವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪಾರ್ಲಿಮೆಂಟ್ ಸ್ಪಷ್ಟ ಪದಗಳಲ್ಲಿ ಇದನ್ನು ನಿರ್ದೇಶಿಸಿದೆ..’
ಅಯೋಧ್ಯೆಯ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ 2019 ನವೆಂಬರ್ 9ರಂದು ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ ರಂಜನ್ ಗೊಗೋಯ್, ಎಸ್.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಝೀರ್ ಅವರನ್ನೊಳಗೊಂಡ ಐದು ಮಂದಿಯ ಸಂವಿಧಾನ ಪೀಠ ನೀಡಿದ ತೀರ್ಪಿನಲ್ಲಿ ಈ ಉಲ್ಲೇಖವೂ ಇದೆ. ಇಲ್ಲಿ ಈ ಐವರು ನ್ಯಾಯಾಧೀಶರು ಬೊಟ್ಟು ಮಾಡಿರುವುದು 1991ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು. ಪಿ.ವಿ. ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ 1991 ಸೆಪ್ಟೆಂಬರ್‌ನಲ್ಲಿ ಈ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು.
ಅದಕ್ಕೆ ಕಾರಣವೂ ಇತ್ತು.
ಅದು ಬಾಬರಿ ಮಸೀದಿ ವಿವಾದವನ್ನು ಕೈಗೊತ್ತಿಕೊಂಡ ಬಿಜೆಪಿ, ದೇಶದಾದ್ಯಂತ ಧರ್ಮ ಧ್ರುವೀಕರಣದಲ್ಲಿ ತೊಡಗಿದ್ದ ಕಾಲ. ಅಡ್ವಾಣಿ, ಜೋಶಿ, ವಾಜಪೇಯಿ ಸಹಿತ ಎಲ್ಲರೂ ರಥಯಾತ್ರೆ, ಮಂದಿರ ನಿರ್ಮಾಣದ ವಿಷಯದಲ್ಲಿ ಸಕ್ರಿಯರಾಗಿದ್ದ ಸಂದರ್ಭ. ಇದೇವೇಳೆ, ವಿಶ್ವ ಹಿಂದೂ ಪರಿಷತ್ ಮತ್ತು ಇತರ ಸಂಘಟನೆಗಳು ವಾರಣಾಸಿಯ ಜ್ಞಾನವಾಪಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿಯ ಮೇಲೂ ಹಕ್ಕು ಮಂಡಿಸಿದುವು. ಈ ಎರಡೂ ಮಸೀದಿಗಳನ್ನು ಹಿಂದೂಗಳಿಗೆ ಒಪ್ಪಿಸುವಂತೆ ಒತ್ತಾಯಿಸಿ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಘೋಷಿಸಿದುವು. ಅಲ್ಲದೇ, ದೇಶದಾದ್ಯಂತ ಇಂಥ 3000 ಮಸೀದಿಗಳಿದ್ದು, ಅವುಗಳನ್ನೂ ನಮ್ಮ ವಶಕ್ಕೆ ಒಪ್ಪಿಸಬೇಕೆಂಬ ವಾದವನ್ನು ಮುಂದಿಟ್ಟವು. ಒಂದುಕಡೆ,
ಅಯೋಧ್ಯೆಗೆ ಸಂಬಂಧಿಸಿ ರಥಯಾತ್ರೆ ಮತ್ತು ಇನ್ನೊಂದು ಕಡೆ ಜ್ಞಾನವಾಪಿ ಮತ್ತು ಶಾಹಿ ಈದ್ಗಾದ ಜೊತೆಗೆ 3000 ಮಸೀದಿಗಳ ಮೇಲೆ ಹಕ್ಕು ಸ್ಥಾಪನೆಯ ಮಾತುಗಳು ಕೇಳಿ ಬರತೊಡಗಿದಂತೆಯೇ ನರಸಿಂಹರಾವ್ ಸರಕಾರ ಎಚ್ಚೆತ್ತುಕೊಂಡಿತು. ತುರ್ತಾಗಿ ಕಾನೂನೊಂದನ್ನು ರೂಪಿಸಿತು. 1947 ಆಗಸ್ಟ್ 15ರಂದು ಈ ದೇಶದ ಆರಾಧನಾ ಸ್ಥಳಗಳು ಹೇಗಿತ್ತೋ ಅದೇ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ, ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆ 1991ನ್ನು ಪಾರ್ಲಿಮೆಂಟಲ್ಲಿ ಮಂಡಿಸಿತು. ಆದರೆ, ಈ ಕಾಯ್ದೆ ವ್ಯಾಪ್ತಿಯಿಂದ ಬಾಬರಿ ಮಸೀದಿಯನ್ನು ಹೊರಗಿಟ್ಟಿತು. ಅದಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ರುವುದರಿಂದ ಈ ವಿನಾಯಿತಿಯನ್ನು ನೀಡಲಾಗಿದೆ ಎಂದು ಮಸೂದೆ ಮಂಡಿಸುತ್ತಾ ಅಂದಿನ ಗೃಹಸಚಿವ ಎಸ್.ಬಿ. ಚವ್ಹಾಣ್ ಪಾರ್ಲಿಮೆಂಟ್‌ಗೆ ತಿಳಿಸಿದರು. ಹಾಗೆಯೇ ಜಮ್ಮು-ಕಾಶ್ಮೀರವನ್ನು ಈ ಕಾಯ್ದೆ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಹಾಗಂತ,
ಪಾರ್ಲಿಮೆಂಟ್ ಏನೂ ತಕ್ಷಣ ಇದಕ್ಕೆ ಅಂಗೀಕಾರ ನೀಡಿರಲಿಲ್ಲ.
8 ಗಂಟೆಗಿಂತಲೂ ಅಧಿಕ ಕಾಲ ಪಾರ್ಲಿಮೆಂಟ್‌ನಲ್ಲಿ ಬಿರುಸಿನ ಚರ್ಚೆ ನಡೆಯಿತು. ನಿರೀಕ್ಷೆಯಂತೆಯೇ ಬಿಜೆಪಿ ಈ ಮಸೂದೆಯನ್ನು ವಿರೋಧಿಸಿತು. ಬಿಜೆಪಿಯ ಜಸ್ವಂತ್ ಸಿಂಗ್, ರಾಮ್ನಾಯ್ಕ್ , ಉಮಾ ಭಾರತಿ ಮುಂತಾದವರು ಈ ಕಾಯ್ದೆ ಯನ್ನು ಪ್ರಶ್ನಿಸಿದರು. ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಕೇಂದ್ರ ಸರಕಾರ ಸವಾರಿ ಮಾಡುತ್ತಿದೆ ಎಂದು ಜಸ್ವಂತ್ ಸಿಂಗ್ ಆಕ್ಷೇಪಿಸಿದರು. ಇದೇವೇಳೆ, ಲಕ್ಷದ್ವೀಪದ ಕಾಂಗ್ರೆಸ್ ಸಂಸದ ಪಿ.ಎಂ. ಸಈದ್ ಅವರು ಈ ಕಾಯ್ದೆ ವ್ಯಾಪ್ತಿಯೊಳಗೆ ಬಾಬರಿ ಮಸೀದಿಯನ್ನೂ ತರಬೇಕೆಂದು ಆಗ್ರಹಿಸಿದರು. ಸಿಪಿಐಎಂನ ಸೋಮನಾಥ ಚಟರ್ಜಿಯವರೂ ಇದೇ ಪ್ರಶ್ನೆಯನ್ನು ಮುಂದಿಟ್ಟರು. ಈಗಿನ ಸಂಸದ ಅಸದುದ್ದೀನ್ ಒವೈಸಿಯ ತಂದೆ ಸುಲ್ತಾನ್ ಸಲಾಹುದ್ದೀನ್ ಒವೈಸಿ ಮತ್ತು ಮುಸ್ಲಿಮ್ ಲೀಗ್‌ನ ಸುಲೈಮಾನ್ ಸೇಠ್ ಅವರು ಮಸೂದೆಯನ್ನು ಬೆಂಬಲಿಸಿದರಾದರೂ ಜಮ್ಮು-ಕಾಶ್ಮೀರವನ್ನು ವ್ಯಾಪ್ತಿಯಿಂದ ಹೊರಗಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಅಡ್ವಾಣಿ ಪಾರ್ಲಿಮೆಂಟ್‌ನಿಂದ ಹೊರನಡೆದರು. ಹೀಗೆ ಸಾಕಷ್ಟು ಚರ್ಚೆ ನಡೆದ ಬಳಿಕ ಈ ಮಸೂದೆಯನ್ನು ಅಂಗೀಕರಿಸಿ ಕಾನೂನಾಗಿ ಜಾರಿ ಮಾಡಲಾಯಿತು. ಆದರೆ,
ಇದೀಗ ಅದೇ ಕಾಯ್ದೆ ಕಟಕಟೆಯಲ್ಲಿ ನಿಂತಿದೆ.
ವಾರಣಾಸಿಯ ಜ್ಞಾನವಾಪಿ ಮಸೀದಿಯ ವಿಷಯದಲ್ಲಿ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ವ ನೀಡಿರುವ ತೀರ್ಪು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹೀಗೆ ತೀರ್ಪು ನೀಡಿದ ದಿನದಂದೇ ಅವರು ನ್ಯಾಯಾಧೀಶ ಹೊಣೆಗಾರಿಕೆಯಿಂದ ನಿವೃತ್ತಿಯೂ ಆಗಿದ್ದಾರೆ. ಅಚ್ಚರಿ ಏನೆಂದರೆ, ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಮ್ ಕೋರ್ಟು ತೀರ್ಪಿನಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಬಾಬರಿ ಮಸೀದಿ ಇದ್ದ ಜಾಗವನ್ನು ರಾಮಮಂದಿರಕ್ಕಾಗಿ ಬಿಟ್ಟು ಕೊಡಬೇಕೆಂದು 2019 ನವೆಂಬರ್ 9ರಂದು ತೀರ್ಪು ನೀಡಿದ ಸುಪ್ರೀಮ್ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರು ನವೆಂಬರ್ 17ರಂದು ನಿವೃತ್ತರಾಗಿದ್ದರು. ಇದು ಕಾಕತಾಳೀಯವೋ ಅಥವಾ ವೃತ್ತಿಯ ಕೊನೆಯಲ್ಲಿ ಉಂಟಾಗಬಹುದಾದ ಭಾವುಕತೆ ಮತ್ತು ಧಾರ್ಮಿಕತೆಯ ಒಲವನ್ನು ದುರ್ಬಳಕೆ ಮಾಡಿಕೊಳ್ಳುವ ಸಂಚಿನ ಭಾಗವಾಗಿ ಅಂಥವರನ್ನೇ ತೀರ್ಪಿಗಾಗಿ ಉಪಾಯದಿಂದ ಬಳಸಿಕೊಳ್ಳಲಾಗುತ್ತಿದೆಯೋ ಎಂಬ ಅ ನುಮಾನವೂ ವ್ಯಕ್ತವಾಗುತ್ತಿದೆ. ಬಾಬರಿ ಮಸೀದಿ ಒಡೆದ ಪ್ರಕರಣದಿಂದ ಅಡ್ವಾಣಿಯವರನ್ನು ೨೦೨೦ರಲ್ಲಿ ದೋಷಮುಕ್ತಿಗೊಳಿಸಿದ ಸಿಬಿಐ ನ್ಯಾಯಾಲಯದ ನ್ಯಾಯಾಧೀಶರೂ ಅದೇ ದಿನ ನಿವೃತ್ತರಾಗಿದ್ದರು. ಒಂದುಕಡೆ, 1947 ಆಗಸ್ಟ್ 15ರಂದು ದೇಶದ ಆರಾಧನಾ ಸ್ಥಳಗಳು ಹೇಗಿದ್ದುವೋ ಅವೆಲ್ಲವನ್ನೂ ಹಾಗೆಯೇ ಉಳಿಸಿಕೊಳ್ಳಬೇಕು ಎಂದು ಆದೇಶಿಸುವ 1991ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆ ಮತ್ತು ಇನ್ನೊಂದು ಕಡೆ ಜ್ಞಾನವಾಪಿ ಮಸೀದಿಯ ಉತ್ಖನನಕ್ಕೆ ನ್ಯಾಯಾಲಯವೇ ಆದೇಶ ನೀಡುವುದು ಇವೆರಡೂ ಜೊತೆಜೊತೆಯಾಗಿ ಹೇಗೆ ನಡೆಯಲು ಸಾಧ್ಯ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಮಾತ್ರವಲ್ಲ, ನ್ಯಾಯಾಲಯದ ಮೇಲಿನ ಜನರ ಅಪನಂಬಿಕೆಯನ್ನು ವೃದ್ಧಿಸುತ್ತಲೂ ಇದೆ. ಹೀಗಾದರೆ, ಈ ದೇಶವನ್ನು ಧರ್ಮಗಳ ಆಧಾರದಲ್ಲಿ ಒಡೆಯುತ್ತಾ ಹೋಗಬಯಸುವವರು ವಿವಿಧ ಮಸೀದಿಗಳ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಹಾಕುತ್ತಲೇ ಹೋಗಬಹುದು. ಅಂಥ ಸನ್ನಿವೇಶ ಸೃಷ್ಟಿಯಾದರೆ ಈ ದೇಶದ ಭವಿಷ್ಯ ಏನು? 1991ರ ಕಾಯ್ದೆ ಯಾಕೆ ಮುಖ್ಯ ಅನ್ನುವುದು ಜ್ಞಾನವಾಪಿ ವಿವಾದದಿಂದ ಸ್ಪಷ್ಟವಾಗುತ್ತದೆ.
ನಿಜವಾಗಿ,
1991ರ ಈ ಕಾಯ್ದೆಯಿಂದ ತಮಗೆ ಅನಾನುಕೂಲವಾಗಬಹುದು ಎಂಬುದನ್ನು ಬಿಜೆಪಿ ಚೆನ್ನಾಗಿಯೇ ಗ್ರಹಿಸಿದೆ. ಆದ್ದರಿಂದ ಆ ಪಕ್ಷದ ಜೊತೆ ಗುರುತಿಸಿಕೊಂಡಿರುವ ಅಶ್ವಿನಿ ಉಪಾಧ್ಯಾಯ್ ಅವರು ಈ ಕಾಯ್ದೆಯ ಕಟ್ ಆಫ್ ಡೇಟ್ ಅಥವಾ 1947 ಆಗಸ್ಟ್ 15 ಎಂಬ ದಿನಾಂಕವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್ನ ಮೆಟ್ಟಲೇರಿದ್ದಾರೆ. ಈ ಕಟ್ ಆಫ್ ಡೇಟ್ ಅಪ್ರಸ್ತುತ ಮತ್ತು ಭಾರತದ ಮೇಲೆ ಮೂಲಭೂತವಾದಿಗಳ ಬರ್ಬರ ದಾಳಿ ಆರಂಭವಾದ 1192ನ್ನೇ ಕಟ್ ಆಫ್ ಡೇಟ್ ಆಗಿ ಪರಿಗಣಿಸ ಬೇಕೆಂದು ಆಗ್ರಹಿಸಿದ್ದಾರೆ. ಈ ಅರ್ಜಿ ಪರಿಗಣನೆಗೂ ಒಳಗಾಗಿದೆ. ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಅವರು ಈ ಅರ್ಜಿಗೆ ಸಂಬಂಧಿಸಿ ಕೇಂದ್ರಕ್ಕೆ ನೋಟೀಸು ಜಾರಿಗೊಳಿಸಿದ್ದಾರೆ. ಈ ಅರ್ಜಿಗೆ ಉತ್ತರಿಸುವಂತೆ 2023 ಜುಲೈಯಲ್ಲಿ ಕೇಂದ್ರಕ್ಕೆ ನೋಟೀಸು ಜಾರಿಗೊಳಿಸಿದಾಗ ಅಕ್ಟೋಬರ್ 31ರ ವರೆಗೆ ಸಮಯ ನೀಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿನಂತಿಸಿದ್ದರು. ಉತ್ತರಕ್ಕಾಗಿ ಕೇಂದ್ರ ಸರಕಾರ ಸಮಯ ಮುಂದೂಡುತ್ತಿರುವುದು ಇದು ಎರಡನೇ ಬಾರಿ ಎಂದು ಸುಬ್ರಹ್ಮಣ್ಯ ಸ್ವಾಮಿ ಆಕ್ಷೇಪಿಸಿದ್ದರು. ಅಲ್ಲದೇ, ಕಪಿಲ್ ಸಿಬಲ್ ಅವರು ಈ ಇಡೀ ಪ್ರಕ್ರಿಯೆಯನ್ನೇ ಆಕ್ಷೇಪಿಸಿದ್ದರು. ಅಯೋಧ್ಯೆ ತೀರ್ಪಿನಲ್ಲಿ ಈ 1991ರ ಈ ಕಾಯ್ದೆಯನ್ನು ಸಮರ್ಥಿಸಿರುವಾಗ ಈ ಅರ್ಜಿಯ ಪ್ರಸ್ತುತತೆ ಏನು ಎಂದು ಪ್ರಶ್ನಿಸಿದ್ದರು. ಅಂದಹಾಗೆ,
ಬಾಬರಿ ಮಸೀದಿಗೆ ಸಂಬಂಧಿಸಿ ಐವರು ನ್ಯಾಯಾಧೀಶರು ನೀಡಿರುವ ತೀರ್ಪು ಅತೀವ ಟೀಕೆ, ಪ್ರಶ್ನೆ, ವಿಮರ್ಶೆಗೆ ಒಳಗಾಗಿರುವ ಹಂತದಲ್ಲೇ ಜ್ಞಾನವಾಪಿ ಮಸೀದಿಯ ಕುರಿತಾದ ತೀರ್ಪು ಹೊರಬಿದ್ದಿದೆ. ಸ್ಥಳೀಯ ನ್ಯಾಯಾಲಯದ ತೀರ್ಪು ಎಂಬ ನೆಲೆಯಲ್ಲಿ ಇದಕ್ಕೆ ಅತೀವ ಮಹತ್ವ ನೀಡಬಾರದು ಎಂಬುದು ಸರಿಯೇ ಆದರೂ 1991ರ ಆರಾಧನಾ ಸ್ಥಳ ಸಂರಕ್ಷಣಾ ಕಾಯ್ದೆಯ ಹೊರತಾಗಿಯೂ ನ್ಯಾಯಾಲಯ ಉತ್ಖನನಕ್ಕೆ ಆದೇಶ ನೀಡುವುದು ಮತ್ತು ಪೂಜೆಗೆ ಅವಕಾಶ ನೀಡುವುದೆಲ್ಲ ನ್ಯಾಯಾಲಯಗಳ ಮೇಲಿನ ಅನುಮಾನಗಳನ್ನು ಗಟ್ಟಿಗೊಳಿಸುವ ರೀತಿಯಲ್ಲಿದೆ. ಪುರಾವೆಗಳ ಮೇಲೆ ತೀರ್ಪು ನೀಡುವುದಕ್ಕಿಂತ ಭಾವನೆಗಳು ಮತ್ತು ಧಾರ್ಮಿಕ ಬದ್ಧತೆಯ ಆಧಾರದಲ್ಲಿ ನ್ಯಾಯಾಧೀಶರುಗಳು ತೀರ್ಪು ನೀಡುತ್ತಿದ್ದಾರೋ ಎಂಬ ಪ್ರಶ್ನೆಗಳೂ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ. ಬಾಬರಿ ತೀರ್ಪು ನೀಡಿದ ವಾರದ ಬಳಿಕ ಗೊಗೋಯ್ ನಿವೃತ್ತರಾದರು. ಜ್ಞಾನವಾಪಿ ಮಸೀದಿಯ ತಳ ಅಂತಸ್ತಿನಲ್ಲಿ ಪೂಜೆಗೆ ಅನುಮತಿ ಕೊಟ್ಟು ಅದೇ ದಿನ ನ್ಯಾಯಾಧೀಶ ಅಜಯ್ ಕೃಷ್ಣ ವಿಶ್ವೇಶ್ವ ನಿವೃತ್ತರಾಗಿದ್ದಾರೆ. ಇದನ್ನು ಕಾಕತಾಳೀಯ ಎಂದು ಸಮರ್ಥಿಸಿಕೊಳ್ಳಬಹುದಾದರೂ ತೀರ್ಪಿನ ಸ್ವರೂಪವು ಈ ಸಮರ್ಥನೆಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವುದಕ್ಕೆ ಬಿಡುತ್ತಿಲ್ಲ. ಇದಕ್ಕೆ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿರುವ ಬಗ್ಗೆ ವಿಚಾರಣೆ ನಡೆಸುತ್ತಿದ್ದ ವೇಳೆ ನ್ಯಾಯಾಧೀಶ ಜೋಸೆಫ್ ನೀಡಿದ ಅಭಿಪ್ರಾಯವೂ ಆಧಾರವನ್ನು ನೀಡುತ್ತದೆ. ಅವರು ಮತ್ತು ಬಿ.ವಿ. ನಾಗರತ್ನ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಜೋಸೆಫ್ ಅವರು ಜೂನ್ 16ರಂದು ನಿವೃತ್ತರಾಗಲಿದ್ದರು. ಇವರು ವಿಚಾರಣೆ ನಡೆಸುವುದು ಕೇಂದ್ರ ಸರಕಾರಕ್ಕೆ ಬೇಕಿರಲಿಲ್ಲ. ಅದನ್ನು ಅವರು ಬಹಿರಂಗವಾಗಿಯೇ ಹೇಳಿದರು. ಈ ಪ್ರಕರಣ ಮಾರ್ಚ್ ನಲ್ಲಿ ತಮ್ಮ ಬಳಿಗೆ ಬಂದ ತಕ್ಷಣವೇ ನಾವು ಅಪರಾಧಿಗಳಿಗೆ ನೋಟೀಸು ಜಾರಿಗೊಳಿಸಲು ಆದೇಶಿಸಿದ್ದೇವೆ, ಆದರೆ ಅದು ತಲುಪಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳುತ್ತಿದ್ದಾರೆ. I think it should be more than clear to you what's happening. The problem for me is that I am retiring on June 16. It is obvious that they dont want me to wear the matter... That's more than obvious...ಎಂದವರು ಹೇಳಿದ್ದರು. ವಿಚಾರಣೆಯನ್ನು ಮುಂದೂಡುವಂತೆ ಮಾಡುವುದಕ್ಕಾಗಿ ನೋಟೀಸು ತಲುಪಿಲ್ಲ ಎಂಬ ನೆಪವನ್ನು ಹೂಡಲಾಗುತ್ತಿದೆ ಎಂಬುದು ಅವರ ವಾದವಾಗಿತ್ತು. ಸುಪ್ರೀಮ್ ಕೋರ್ಟ್ ನ್ಯಾಯಾಧೀಶರೇ ಇಂಥದ್ದೊಂದು ಮಾತನ್ನು ಹೇಳುತ್ತಾರೆಂದರೆ, ನ್ಯಾಯಾಲಯಗಳ ಕಾರ್ಯವೈಖರಿಯ ಬಗ್ಗೆ ಅನುಮಾನಿಸುವುದು ಹೇಗೆ ಅಪರಾಧವಾಗುತ್ತದೆ? ಜೋಸೆಫ್‌ರು ನಿವೃತ್ತರಾಗಿ ಅವರ ಸ್ಥಾನಕ್ಕೆ ತಮಗನುಕೂಲವಾದ ನ್ಯಾಯಾಧೀಶರು ಬರಬೇಕೆಂದು ಕಾಯಲು ನ್ಯಾಯಿಕ ಪ್ರಕ್ರಿಯೆಯಲ್ಲಿ ಅವಕಾಶ ಇದೆಯೆಂದಾದರೆ, ನಿವೃತ್ತರಾಗುವ ನ್ಯಾಯಾಧೀಶರನ್ನೇ ತೀರ್ಪಿಗಾಗಿ ಆಯ್ಕೆ ಮಾಡಿಕೊಳ್ಳುವ ತಂತ್ರವೂ ನಡೆಯಲಾರದೆಂದು ಹೇಗೆ ಹೇಳುವುದು? ಅಥವಾ ತಮಗೆ ಅನುಕೂಲಕರವಾದ ನ್ಯಾಯಾಧೀಶರು ಸಿಗುವವರೆಗೆ ವಿಚಾರಣಾ ಪ್ರಕ್ರಿಯೆಯನ್ನು ಮುಂದೂಡುತ್ತಾ ಸಾಗುವುದು ಮತ್ತು ಸಂದರ್ಭ, ಸನ್ನಿವೇಶ ನೋಡಿಕೊಂಡು ಪ್ರಕರಣ ವಿಚಾರಣೆಗೆ ಒಳಗಾಗುವಂತೆ ನೋಡಿಕೊಳ್ಳುವುದೆಲ್ಲ ನಡೆಯಲಾರದೆಂದು ಹೇಗೆ ನಂಬುವುದು? ನ್ಯಾಯಾಧೀಶರಾದ ಜೋಸೆಫ್ ಅವರ ಅಭಿಪ್ರಾಯ ಇಂಥ ಅನುಮಾನಗಳಿಗೆ ಪುಷ್ಠಿ ನೀಡುತ್ತದೆ.
ಅಂದಹಾಗೆ,
ಸರಕಾರಗಳು ಬದಲಾದಂತೆ ನ್ಯಾಯಾಲಯಗಳ ತೀರ್ಪುಗಳೂ ಸರಕಾರಕ್ಕೆ ಪೂರಕವಾಗುವಂತೆ ಬರುತ್ತಿರುವುದೇಕೆ ಎಂಬ ಪ್ರಶ್ನೆ ಸದ್ಯದ ದಿನಗಳಲ್ಲಿ ನಿರ್ಲಕ್ಷಿಸದಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಪ್ರಜಾತಂತ್ರ ಭಾರತದಲ್ಲಿ ನ್ಯಾಯಾಲಯಗಳೇ ಭರವಸೆಯ ಅಂತಿಮ ತಾಣ. ಅದೂ ವಿಶ್ವಾಸ ಕಳಕೊಂಡರೆ ಪ್ರಜಾತಂತ್ರ ಸತ್ತಂತೆ. ಜ್ಞಾನವಾಪಿ ಮಸೀದಿ ತೀರ್ಪು ಮತ್ತು ಅದಕ್ಕಿಂತ ಮೊದಲು ಬಾಬರಿಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ ತೀರ್ಪು ನ್ಯಾಯಾಲಯಗಳ ಮೇಲಿನ ವಿಶ್ವಾಸವನ್ನು ಕುಂದಿಸುವಂತೆ ಮಾಡಿರುವುದು ನಿಜ. ನ್ಯಾಯ ಯಾವತ್ತೂ ಜನಸಂಖ್ಯೆ, ಧರ್ಮ, ವ್ಯಕ್ತಿ, ಶಕ್ತಿಗಳ ಆಧಾರದಲ್ಲಿ ನೀಡುವಂತಿರಬಾರದು. ಅದು ಪೂರ್ಣವಾಗಿ ನ್ಯಾಯಕ್ಕೆ ಮಾತ್ರ ನಿಷ್ಠವಾಗಿರಬೇಕು. ಬಾಬರಿಯಾಗಲಿ, ಜ್ಞಾನವಾಪಿಯಾಗಲಿ ಶಾಹಿ ಈದ್ಗಾ ಆಗಲಿ ಅಥವಾ ಇನ್ನಾವುದೇ ಪ್ರಕರಣವಾಗಲಿ, ಸತ್ಯವೊಂದೇ ನ್ಯಾಯದಾನಕ್ಕೆ ಆಧಾರವಾಗಿರಬೇಕು, ಅಷ್ಟೇ.
No comments:
Post a Comment