Saturday, February 10, 2024

ನಿತಿನ್, ಶಹ್ನಾ ಹುಟ್ಟು ಹಾಕಿರುವ ಪ್ರಶ್ನೆಗಳು




1. ತನ್ನ ಸಹೋದರಿ ಮತ್ತು ತಾಯಿಯನ್ನು ಕೆರೆಗೆ ತಳ್ಳಿ ಹತ್ಯೆ ಮಾಡಿದ ಮಗ ನಿತಿನ್
2. ಮಗನನ್ನೇ ಗುಂಡಿಟ್ಟು ಕೊಂದ ತಂದೆ
3. ಪತಿ-ಪತ್ನಿ ಜಗಳಕ್ಕೆ 3 ವರ್ಷದ ಮಗು ಮೃತ್ಯು

ಕಳೆದವಾರ ನಡೆದ ಈ ಮೂರು ಘಟನೆಗಳಿಗಿಂತ ಭೀಭತ್ಸಕರವಾದ ಮತ್ತು ಹೃದಯ ಹಿಂಡುವ ಹತ್ತು ಹಲವು ಘಟನೆಗಳು ಈ  ಮೊದಲೂ ನಡೆದಿರ ಬಹುದು. ಮುಂದೆ ನಡೆಯಲಾರದು ಎನ್ನುವ ಖಚಿತತೆಯೂ ಇಲ್ಲ. ಬೆಂಗಳೂರಿನ ಸ್ಟಾರ್ಟಪ್ ಕಂಪೆನಿಯ ಸಿಇಒ  ಸುಚನಾ ಸೇತ್ ಎಂಬವರು ತನ್ನ ಪುಟ್ಟ ಮಗನನ್ನು ಹತ್ಯೆ ಮಾಡಿದ ಘಟನೆ ಜನವರಿ ಆರಂಭದಲ್ಲಿ ನಡೆದಿತ್ತು. ಗಂಡ ವೆಂಕಟ್ ರಾಮನ್‌ನಿಂದ ವಿವಾಹ ವಿಚ್ಛೇದನ ಪಡಕೊಂಡಿದ್ದ ಸುಚನಾಗೆ ತನ್ನ ಮಗುವನ್ನು ಅವರೊಂದಿಗೆ ಹಂಚಿಕೊಳ್ಳುವುದು ಇಷ್ಟವಿರಲಿಲ್ಲ. ಆದರೆ,  ವಾರಕ್ಕೊಂದು ಸಾರಿ ಮಗುವಿನ ಭೇಟಿಗೆ ವೆಂಕಟ್ ರಾಮನ್‌ಗೆ ಅವಕಾಶ ಕೊಡಬೇಕು ಎಂದು ಕೌಟುಂಬಿಕ ನ್ಯಾಯಾಲಯ  ಆದೇಶಿಸಿತ್ತು. ಈ ಆದೇಶವನ್ನು ಜೀರ್ಣಿಸಿಕೊಳ್ಳಲಾಗದ ಸುಚನಾ ಗೋವಾದ ಲಾಡ್ಜೊಂದರಲ್ಲಿ ತನ್ನ ಮಗುವನ್ನೇ ಹತ್ಯೆ ಮಾಡಿದ್ದಳು.  ಉನ್ನತ ಶಿಕ್ಷಣ ಪಡೆದ ಮತ್ತು ಕಂಪೆನಿಯೊಂದನ್ನು ಆರಂಭಿಸಿ ಸಿಇಒ ಆಗುವಷ್ಟು ಧೈರ್ಯ ಮತ್ತು ಮಾನಸಿಕ ಕ್ಷಮತೆಯನ್ನು ಹೊಂದಿರುವ ಸುಚನಾ ಹೀಗೇಕೆ ಮಾಡಿದಳು ಎಂಬ ಪ್ರಶ್ನೆ ಅಸಂಖ್ಯ ಮಂದಿಯನ್ನು ಕಾಡಿತು.

2023ರ ಡಿಸೆಂಬರ್‌ನಲ್ಲಿ ಕೇರಳದಲ್ಲಿ ಅತ್ಯಂತ ಆಘಾತಕಾರಿ ಘಟನೆ ನಡೆಯಿತು. ಶಹ್ನಾ ಎಂಬ 28ರ ಹರೆಯದ ವೈದ್ಯೆ ಆತ್ಮಹತ್ಯೆ  ಮಾಡಿಕೊಂಡರು. ತಿರುವನಂತಪುರದ  ಮೆಡಿಕಲ್ ಕಾಲೇಜಿನ ಸರ್ಜರಿ ವಿಭಾಗದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ಈಕೆಗೆ ರುವೈಸ್ ಎಂಬ ವೈದ್ಯನ ಜೊತೆ ಮದುವೆ ನಿಶ್ಚಿತವಾಗಿತ್ತು. ಈತ ಮೆಡಿಕಲ್ ಪಿಜಿ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ. ಆದರೆ ಮದುವೆ ಹತ್ತಿರ  ಬರುತ್ತಿದ್ದಂತೆಯೇ ಈತ ನಖರಾ ಪ್ರಾರಂಭಿಸಿದ. 150 ಪವನ್ ಚಿನ್ನ, 15 ಎಕ್ರೆ ಭೂಮಿ ಮತ್ತು BMW ಕಾರು ಬೇಕೆಂದು ಬೇಡಿಕೆಯಿಟ್ಟ.  ಅಷ್ಟೊಂದು ಭಾರೀ ಮೊತ್ತವನ್ನು ಕೊಡಲು ತಾನು ಅಶಕ್ತೆ ಎಂದು ಆತ್ಮಹತ್ಯೆಗಿಂತ ಮೊದಲು ಆಕೆ ಡಾ| ರುವೈಸ್‌ಗೆ ವಾಟ್ಸಪ್ ಸಂದೇಶ  ಕಳಿಸಿದ್ದೂ ನಡೆದಿತ್ತು. ಅಂದಹಾಗೆ,

ಮಸೀದಿ-ಮಂದಿರ, ಹಿಂದೂ-ಮುಸ್ಲಿಮ್, ಬಿಜೆಪಿ-ಕಾಂಗ್ರೆಸ್ ಇತ್ಯಾದಿ ನಿತ್ಯ ಸುದ್ದಿಗಳ ನಡುವೆ ಇಂಥ ಘಟನೆಗಳು ಸದ್ದಿಲ್ಲದೇ ಮತ್ತು  ಚರ್ಚೆಗಳಿಗೊಳಗಾಗದೇ ಮರೆಯಾಗುತ್ತಿವೆ. ನಾಲ್ಕು ಮಂದಿ ಸೇರಿದ ಕಡೆಯಾಗಲಿ, ವಾಟ್ಸಪ್, ಫೇಸ್‌ಬುಕ್, ಟ್ವಿಟರ್ ಗಳಲ್ಲಾಗಲಿ ಇಂಥ  ಘಟನೆಗಳು ಗಂಭೀರ ಚರ್ಚೆಗೆ ತೆರೆದುಕೊಳ್ಳುವುದು ಕಡಿಮೆ. ಮಂದಿರ-ಮಸೀದಿ ಚರ್ಚೆಯಲ್ಲಿ ತಿಂಗಳುಗಟ್ಟಲೆ ಚರ್ಚಿಸಲು ಆಸಕ್ತಿ  ತೋರುವವರಲ್ಲಿ ಒಂದು ಶೇಕಡಾ ಆಸಕ್ತಿಯೂ ಇಂಥ ಘಟನೆಗಳ ಮೇಲೆ ಇರುವುದಿಲ್ಲ. ದೇಶದಲ್ಲಿ ಮಂದಿರ-ಮಸೀದಿಗಳಿಗೆ  ಕೊರತೆಯಿಲ್ಲ. ಆದರೆ, ಮನುಷ್ಯ ಜೀವಕ್ಕೆ ಬೆಲೆಯನ್ನೇ ಕೊಡದ ಘಟನೆಗಳು ಸಾಮಾಜಿಕ ಸಂಚಲನೆಯನ್ನೇ ಸೃಷ್ಟಿಸುವುದಿಲ್ಲ ಎಂದಾದರೆ  ಅದು ಕೊಡುವ ಸಂದೇಶವೇನು?

ಮೈಸೂರಿನ ಹುಣಸೂರು ತಾಲೂಕಿನ ಮರೂರಿನ ಘಟನೆಯನ್ನೇ ಎತ್ತಿಕೊಳ್ಳಿ. ನಿತಿನ್‌ನ ಸಹೋದರಿ 19 ವರ್ಷದ ಧನುಶ್ರೀ ಮುಸ್ಲಿಮ್  ಸಮುದಾಯದ ಯುವಕನನ್ನು ಪ್ರೀತಿಸುತ್ತಿದ್ದಳು. ಇದು ನಿತಿನ್‌ಗೆ ಇಷ್ಟವಿರಲಿಲ್ಲ. ಆದರೆ ಧನುಶ್ರೀಗೆ ತನ್ನ ಪ್ರೀತಿಯ ವಿಷಯದಲ್ಲಿ ತನ್ನದೇ  ಆದ ಅಭಿಪ್ರಾಯಗಳಿದ್ದುವು. ಸಹೋದರಿಯ ಅಭಿಪ್ರಾಯ ವನ್ನು ಗೌರವಿಸುವ ಬದಲು ಆತ ಒಳಗೊಳಗೆ ದ್ವೇಷ ಬೆಳೆಸಿಕೊಂಡ.  ಹೆಮ್ಮಿಗೆ ಗ್ರಾಮದಲ್ಲಿರುವ ಮಾವನ ಮನೆಗೆಂದು ತಾಯಿ ಮತ್ತು ತಂಗಿಯನ್ನು ಬೈಕ್‌ನಲ್ಲಿ ಕೂರಿಸಿ ಹೊರಟ ಆತ ಮಾರೂರು ಕೆರೆ ಬಳಿ  ಬೈಕ್ ನಿಲ್ಲಿಸಿ ತಂಗಿಯನ್ನು ಕೆರೆಗೆ ತಳ್ಳಿದ್ದಾನೆ. ಮಗಳನ್ನು ರಕ್ಷಿಸಲು ಬಂದ ತಾಯಿಯನ್ನೂ ಕೆರೆಗೆ ತಳ್ಳಿದ್ದಾನೆ.

ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಕರೇಕಲ್‌ನಲ್ಲಿ ನಡೆದ ಇನ್ನೊಂದು ಘಟನೆಯೂ ಸರಿಸುಮಾರು ಇದನ್ನೇ ಹೋಲುತ್ತದೆ. ಇಲ್ಲಿ  ತಂದೆಯೇ ಸ್ವಂತ ಮಗನನ್ನು ಹತ್ಯೆ ಮಾಡಿದ್ದಾನೆ.  ಮದ್ಯಪಾನದ ಗೀಳಿಗೆ ಬಿದ್ದಿದ್ದ ಸುರೇಶ್ ಎಂಬ ತಂದೆ 32 ವರ್ಷದ ಮಗ  ನರ್ತನ್ ಬೋಪಣ್ಣನಲ್ಲಿ ಮದ್ಯಪಾನಕ್ಕೆ ಹಣ ಕೇಳಿದ್ದಾನೆ. ಈ ನರ್ತನ್ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ. ತಾಯಿ  ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಕುಡಿತಕ್ಕೆ ಹಣ ಕೇಳಿದ ತಂದೆಯೊಂದಿಗೆ ಮಗ ಮಾತಿಗೆ ಮಾತು ಬೆಳೆಸಿದ್ದಾನೆ. ಕೊನೆಗೆ  ತಂದೆಯನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ತಂದೆ ತಮ್ಮ ಬಳಿ ಇದ್ದ ಸಿಂಗಲ್ ಬ್ಯಾರೆಲ್ ಗನ್‌ನಿಂದ  ಬಾಗಿಲಿನತ್ತ ಗುಂಡು ಹಾರಿಸಿದ್ದು, ಅದು ಬಾಗಿಲನ್ನು ಸೀಳಿ ನರ್ತನ್‌ನ ತೊಡೆಯನ್ನು ಪ್ರವೇಶಿಸಿ ಗಂಭೀರವಾಗಿ ಗಾಯಗೊಳಿಸಿ  ಪ್ರಾಣವನ್ನೇ ಕಸಿದಿದೆ. 

ಮೂರನೇ ಪ್ರಕರಣವು ಬೆಂಗಳೂರಿನ ಸುಚನಾ ಘಟನೆಯನ್ನೇ ಹೋಲುತ್ತದೆ. ಬೆಂಗಳೂರಿನ ಹಾರೋಹಳ್ಳಿಯ  ಗೇರೂರು ಗ್ರಾಮದ ಸೋಮಕುಮಾರ್ ಮತ್ತು ಪೂರ್ಣಿಮಾ ದಂಪತಿಗಳ ನಡುವೆ ಜಗಳವಾಗಿದೆ. ಮೂರು ವರ್ಷಗಳ ಹಿಂದಷ್ಟೇ  ಮದುವೆಯಾಗಿದ್ದ ಈ ಜೋಡಿಯ ಜಗಳ ವಿಕೋಪಕ್ಕೆ ಹೋಗಿದೆ. ಕೊನೆಗೆ ಪೂರ್ಣಿಮಾ ತಾನೂ ವಿಷ ಕುಡಿದು ಮೂರು ವರ್ಷದ  ಮಗು ದೀಕ್ಷಿತ್ ಗೌಡನಿಗೂ ವಿಷ ಕುಡಿಸಿದ್ದಾಳೆ. ಮಗು ಮೃತಪಟ್ಟಿದ್ದು ತಾಯಿ ಬದುಕುಳಿದಿದ್ದಾರೆ. ಅಷ್ಟಕ್ಕೂ,

ಮುಸ್ಲಿಮ್ ಹುಡುಗನನ್ನು ಪ್ರೀತಿಸುವುದು ತನ್ನ ತಂಗಿಯನ್ನೇ ಮತ್ತು ಅಡ್ಡ ಬಂದ ತಾಯಿಯನ್ನೇ ಹತ್ಯೆ ಮಾಡುವಷ್ಟು ಭೀಕರ ಅಪರಾಧವೇ? ಇಲ್ಲಿ ಪ್ರೀತಿಯ ಮೇಲಿನ ಅಸಮಾಧಾನಕ್ಕಿಂತ ಪ್ರೀತಿಸಿದ ಯುವಕನ ಧರ್ಮವೇ ಖಳನಾಯಕ ಪಟ್ಟವನ್ನು ಪಡೆ ದಿದೆ. ಇಂಥ  ದ್ವೇಷ ನಿತಿನ್ ಒಬ್ಬನ ಸಮಸ್ಯೆಯಲ್ಲ. ಈ ದೇಶದಲ್ಲಿ ಇಂಥ ಅಸಂಖ್ಯ ಯುವಕರು ಇಂಥ ದ್ವೇಷವನ್ನು ಇಟ್ಟುಕೊಂಡು ತಿರುಗುತ್ತಿದ್ದಾರೆ.  ಹಾಗಂತ, ಪ್ರತ್ಯಕ್ಷವಾಗಿ ಅವರಿಗೆ ಮುಸ್ಲಿಮರಿಂದ ಯಾವ ತೊಂದರೆಯೂ ಆಗಿರುವುದಿಲ್ಲ. ಮಾತ್ರವಲ್ಲ, ಇಂಥ ಮಂದಿಗೆ ಮುಸ್ಲಿಮ್  ಗೆಳೆಯರೂ ಇರುತ್ತಾರೆ. ಅವರ ಜೊತೆ ಕೊಡು-ಕೊಳ್ಳುವಿಕೆಯ ಸಂಬಂಧವೂ ಇರುತ್ತದೆ. ಹಾಗಿದ್ದೂ, ಮುಸ್ಲಿಮರೆಂದರೆ ಕೆಟ್ಟವರು ಮತ್ತು  ಅವರಿಗೆ ಅನ್ಯಾಯ ಮಾಡುವುದು ಧಾರ್ಮಿಕವಾಗಿ ಸರಿ ಎಂಬಂಥ  ಭಾವದೊಂದಿಗೆ ಬದುಕುತ್ತಿರುತ್ತಾರೆ. ಅಂದಹಾಗೆ, ಇಂಥ ಭಾವ  ಯಾಕಿದೆ ಎಂಬ ಪ್ರಶ್ನೆ ಶ್ರೀಮಂತರಿಗೆ ಅಗತ್ಯ ಬೀಳುವುದಿಲ್ಲ. ಯಾಕೆಂದರೆ, ಅವರ ಮಕ್ಕಳು ಬೀದಿಯಲ್ಲಿಲ್ಲ. ಪ್ರೀತಿ-ಪ್ರೇಮಗಳ ಹೆಸರಲ್ಲಿ  ನಡೆಯುವ ಹಲ್ಲೆ, ದೌರ್ಜನ್ಯ, ಕೇಸು, ಜೈಲು ಇತ್ಯಾದಿಗಳಲ್ಲಿ ಅವರ ಮಕ್ಕಳು ಇರುವುದಿಲ್ಲ. ನಗರದ ಉನ್ನತ ಶಿಕ್ಷಣ  ಸಂಸ್ಥೆಗಳಲ್ಲಿ ಕ ಲಿಯುತ್ತಿರುವ ಅವರ ಮಕ್ಕಳನ್ನು ಅತ್ತ ಸುಳಿಯಲು ಅವರು ಬಿಡುವುದೂ ಇಲ್ಲ. ಆದರೆ, ಹೀಗೆ ಬೀದಿಯಲ್ಲಿ ಧರ್ಮರಕ್ಷಣೆ ಮಾಡುವ  ಗುಂಪು ಚಂದಾ ಸಂಗ್ರಹಕ್ಕೆಂದು  ಅವರ ಬಳಿಗೆ ಬಂದರೆ ಹಣ ಕೊಟ್ಟು ಆರಾಮವಾಗಿರುತ್ತಾರೆ. ಅದರಾಚೆಗೆ ಅವರಿಗೂ ಈ  ಧರ್ಮರಕ್ಷಣೆಗೂ ಯಾವ ಸಂಬAಧವೂ ಇರುವುದಿಲ್ಲ. ಇನ್ನು,

ಇಂಥ ಯುವಕರನ್ನು ಧರ್ಮರಕ್ಷಣೆಯ ಹೆಸರಲ್ಲಿ ಬೀದಿಗೆ ಅಟ್ಟುವ ರಾಜಕೀಯ ಪಕ್ಷಗಳ ನಾಯಕರಿಗೂ ಇಂಥವರೊಂದಿಗೆ ಭಾವನಾತ್ಮಕ  ನಂಟಿರುವುದಿಲ್ಲ. ಅವರೂ ತಮ್ಮ ಮಕ್ಕಳನ್ನು ನಗರದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ವಿದೇಶದಲ್ಲಿ ಓದಿಸುತ್ತಿರುತ್ತಾರೆ. ತಮ್ಮ  ಮಕ್ಕಳನ್ನು ಈ ನಾಯಕರು ಎಂದೂ ಧರ್ಮರಕ್ಷಣೆಯ ಬೀದಿ ಹೋರಾಟಕ್ಕೆ ಕಳುಹಿಸುವುದೇ ಇಲ್ಲ. ಈ ಮಕ್ಕಳ ಪ್ರೀತಿ-ಪ್ರೇಮಗಳು  ಬಹಿರಂಗಕ್ಕೆ ಬರುವುದೂ ಇಲ್ಲ. ಬಂದರೂ ಅದಕ್ಕೆ ಅತ್ಯಂತ ರಸವತ್ತಾದ ಕಾರಣಗಳೊಂದಿಗೆ ಸಮ ರ್ಥಿಸಲಾಗುತ್ತದೆ. ಕೊನೆಗೆ ಈ  ಮಕ್ಕಳೇ ನೇರವಾಗಿ ರಾಜಕೀಯದ ಉನ್ನತ ಸ್ಥಾನಕ್ಕೆ ಆಯ್ಕೆಯಾಗುತ್ತಾರೆ. ಮಾತ್ರವಲ್ಲ, ಇದೇ ಬೀದಿ ಹೋರಾಟದ ಯುವಕರನ್ನು ತಮ್ಮ  ರಾಜಕೀಯ ಅಸ್ತಿತ್ವಕ್ಕಾಗಿ ಬಳಸಿಕೊಳ್ಳುತ್ತಾರೆ. ಧರ್ಮರಕ್ಷಣೆಯ ಬಹುತೇಕ ಎಲ್ಲ ಹೋರಾಟಗಳ ಪರಿಸ್ಥಿತಿ ಇದುವೇ. ಬೀದಿಯಲ್ಲಿ  ಹೋರಾಡುವ ಯುವಕರು ಬಹುತೇಕ ಬೀದಿಗೇ ಸೀಮಿತವಾಗಿ ಒಂದಷ್ಟು ಕೇಸುಗಳನ್ನು ಜಡಿಸಿಕೊಂಡು ಅತ್ತ ಕುಟುಂಬವನ್ನೂ  ಸಾಕಲಾಗದೇ ಮತ್ತು ಪ್ರಕರಣಗಳಿಂದಲೂ ಮುಕ್ತರಾಗದೇ ಸಂಕಟ ಪಡುತ್ತಿರುತ್ತಾರೆ. ಅವರ ಮಕ್ಕಳೂ ಕ್ರಮೇಣ ಇದೇ ಹಾದಿಯನ್ನು  ಹಿಡಿಯುತ್ತಾರೆ. ಅವರ ಬದುಕೂ ಕ್ರಮೇಣ ಇದೇ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ. ಹೀಗೆ ರಾಜಕಾರಣಿಯ ಮಗ ರಾಜಕಾರಣಿಯಾಗಿ  ಅಥವಾ ಉದ್ಯಮಿಯೋ ಮಲ್ಟಿ ನ್ಯಾಶನಲ್ ಕಂಪೆನಿಯ ಉದ್ಯೋಗಿಯೋ ಅಥವಾ ವಿದೇಶದಲ್ಲಿ ಕೈತುಂಬಾ ಪಗಾರ ಪಡೆಯುವ  ವ್ಯಕ್ತಿಯೋ ಆಗುವಾಗ ಬೀದಿ ಹೋರಾಟದವರ ಮಕ್ಕಳು ಅದೇ ಬೀದಿ ಹೋರಾಟಕ್ಕೆ ಸೀಮಿತವಾಗುತ್ತಾರೆ. ದ್ವೇಷ ಅಂತಿಮವಾಗಿ  ಕೊಡುವ ಫಲಿತಾಂಶ ಇದುವೇ. ಅಂದಹಾಗೆ,

ಜನರಲ್ಲಿ ತಾಳ್ಮೆ ಕಡಿಮೆಯಾಗುತ್ತಿದೆ. ಇನ್ನೊಬ್ಬರ ಮಾತನ್ನು ಆಲಿಸಿಕೊಳ್ಳುವ ಮತ್ತು ತಾಳ್ಮೆಯಿಂದ ಪರಾಮರ್ಶಿಸುವ ಗುಣವೇ  ಮರೆಯಾಗತೊಡಗಿದೆ. ತಕ್ಷಣವೇ ಆಕ್ರೋಶಗೊಳ್ಳುವುದು ಮತ್ತು ಸಿಟ್ಟಿನ ಕೈಯಲ್ಲಿ ತೀರ್ಮಾನ ಕೈಗೊಳ್ಳುವ ಪ್ರಕರಣಗಳು ಅಧಿಕವಾಗುತ್ತಿವೆ. ಮಗನೊಂದಿಗೆ ಜಗಳವಾಡಿ ಗುಂಡು ಹಾರಿಸಿ ಕೊಂದ ತಂದೆ ಇದಕ್ಕೆ ಒಂದು ಉದಾಹರಣೆಯಾದರೆ, ಸುಚನಾ,  ಪೂರ್ಣಿಮಾ, ಶಹ್ನಾ ಇದಕ್ಕೆ ಇನ್ನಷ್ಟು ಉದಾಹರಣೆಗಳು. ವೈದ್ಯೆಯಾಗಿರುವ ಶಹ್ನಾಗೆ ಡಾ| ರುವೈಸ್‌ನನ್ನು ಕಸದ ಬುಟ್ಟಿಗೆ ಎಸೆಯುವುದಕ್ಕೆ  ಬೇಕಾದಷ್ಟು ತಿಳುವಳಿಕೆ ಮತ್ತು ಶಿಕ್ಷಣ ಇತ್ತು. ವರದಕ್ಷಿಣೆ ಧರ್ಮವಿರೋಧಿ ಮತ್ತು ಕಾನೂನು ವಿರೋಧಿ ಎಂಬ ಪ್ರಜ್ಞೆ ಆಕೆಯಲ್ಲಿ ಇನ್ನಾರೋ ಮೂಡಿಸಬೇಕಾಗಿರಲಿಲ್ಲ. ಸ್ವತಃ ತಿಳಿದುಕೊಳ್ಳುವಷ್ಟು ಆಕೆ ಶಿಕ್ಷಿತಳಾಗಿದ್ದಳು. ವೈದ್ಯೆಯನ್ನು ಪತ್ನಿಯಾಗಿ ಪಡೆಯುವುದರ ಆಚೆಗೆ  ಹಣವೂ ಭೂಮಿಯೂ ಬೇಕು ಎಂದು ಹೇಳುವ ಗಂಡನ್ನು ‘ತೊಲಗು’ ಎಂದು ಹೇಳಿ ಕಾನೂನಿನ ಕೈಗೊಪ್ಪಿಸಬೇಕಿತ್ತು. ಆದರೆ, ಆಕೆ ಈ  ಕೆಚ್ಚನ್ನು ತೋರ್ಪಡಿಸುವ ಬದಲು ಬದುಕನ್ನೇ ಕೊನೆಗೊಳಿಸುವ ನಿರ್ಧಾರಕ್ಕೆ ಬಂದಳೇಕೆ? ಹಾಗಂತ, ಸುಚನಾಳನ್ನೂ ಇದೇ ಪಟ್ಟಿಯ  ಲ್ಲಿಟ್ಟು ವಿಶ್ಲೇಷಿಸಬಹುದು. ತಿಂಗಳಿಗೆ ಲಕ್ಷಗಟ್ಟಲೆ ಸಂಬಳ ಪಡೆಯುವ ಅವರಂಥವರ ಬದುಕಿನಲ್ಲಿ ವಿಚ್ಛೇದನ ಹೊಸತಲ್ಲ. ಸಾಮಾನ್ಯವಾಗಿ  ಇಂಥವರು ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ತರ್ಕಿಸುವುದೂ ಇಲ್ಲ. ಪರಸ್ಪರ ಮಾತಾಡಿಕೊಂಡೇ ಬೇರೆ ಬೇರೆಯಾಗುವುದು  ಮಾಮೂಲು. ಹೀಗಿರುತ್ತಾ, ಸುಚನಾ ಮಗುವನ್ನೇ ಹತ್ಯೆ ಮಾಡುವಷ್ಟು ಆಘಾತಕಾರಿ ನಿರ್ಧಾರಕ್ಕೆ ಬಂದರೇಕೆ? ಗಂಡಿಗೆ ಹೋಲಿಸಿದರೆ  ಹೆಣ್ಣು ಅಪರಾಧ ಕೃತ್ಯಗಳಲ್ಲಿ ಪಾಲುಗೊಳ್ಳುವುದು ಕಡಿಮೆ. ಹಾಗಿದ್ದೂ, ಇಂಥ ಹತ್ಯೆಯೊಂದು ಅತ್ಯಂತ ಉನ್ನತ ಸ್ಥಾನದಲ್ಲಿರುವ ಮಹಿಳೆಯಿಂದ ಘಟಿಸಿದುದು ಏಕೆ? ಬಹುಶಃ,

ತಾಳ್ಮೆಯ ಕೊರತೆಯೇ ಈ ಎಲ್ಲಕ್ಕೂ ಕಾರಣ ಅನಿಸುತ್ತದೆ. ಇತ್ತಿತ್ತಲಾಗಿ ಆತ್ಮಹತ್ಯೆಯಂಥ ಅಪರಾಧ ಕೃತ್ಯಗಳಲ್ಲಿ ಏರಿಕೆಯಾಗುತ್ತಿರುವುದರ  ಹಿಂದೆ ತಾಳ್ಮೆಯಿಂದ ಅವಲೋಕನ ನಡೆಸುವ ಶಕ್ತಿ ಕಡಿಮೆಯಾಗುವುದನ್ನೇ ಸೂಚಿಸುತ್ತದೆ. ಯಾರಲ್ಲೂ ತಾಳ್ಮೆಯಿಲ್ಲ. ಮರು  ಅವಲೋಕಿಸುವ ವ್ಯವಧಾನವಿಲ್ಲ. ಇನ್ನೊಬ್ಬರಲ್ಲಿ ವಿಚಾರಿಸಿ ನಿರ್ಧಾರ ಕೈಗೊಳ್ಳುವ ಸಹನೆ ಇಲ್ಲ. ಕ್ರಿಯೆಗೆ ತಕ್ಷಣವೇ ಪ್ರತಿಕ್ರಿಯೆ ವ್ಯಕ್ತ ಪಡಿಸುವುದನ್ನೇ ಪರಿಹಾರವಾಗಿ ಆಧುನಿಕ ಸಮಾಜ ಕಾಣುತ್ತಿದೆ. ಇಂಥ ಪ್ರವೃತ್ತಿಯು ಮಗನನ್ನೇ ತಂದೆ ಹತ್ಯೆ ಮಾಡುವ ಅಥವಾ ತಾಯಿ,  ತಂಗಿಯನ್ನೇ ಮಗ ಹತ್ಯೆ ಮಾಡುವ ಆಘಾತಕಾರಿ ಬೆಳವಣಿಗೆಗೂ ಕಾರಣವಾಗುತ್ತಿದೆ.

No comments:

Post a Comment